25 ಸೆಪ್ಟೆಂಬರ್ 1997. ಟೆಲ್ ಅವಿವ್ - ಇಸ್ರೇಲಿನ ರಾಜಧಾನಿ. ವಾತಾವರಣ ಫುಲ್ ಗರಂ. ಫುಲ್ ಟೆನ್ಸ್.
ಪ್ರಧಾನಿ ಬೆಂಜಮಿನ್ ನೆತನ್ಯಾಹು ದೊಡ್ಡ ಮಟ್ಟದ "ಕ್ರೈಸಿಸ್ ಮ್ಯಾನೇಜ್ಮೆಂಟ್" (crisis management) ಅನ್ನುತ್ತಾರೆ ನೋಡಿ ಅದರಲ್ಲಿ ತೊಡಗಿದ್ದರು. ಒಂದು ಅತಿ ರಹಸ್ಯ ಕಾರ್ಯಾಚರಣೆ ಪೂರ್ತಿ ಎಕ್ಕುಟ್ಟಿ ಹೋಗಿ, ಫುಲ್ ಮಿಡಿಯಾದಲ್ಲಿ ಬಂದು, ಇಸ್ರೇಲ್ ಅತಿ ದೊಡ್ಡ ಪ್ರಮಾಣದಲ್ಲಿ ಮುಜುಗರ ಅನುಭವಿಸುತ್ತಿತ್ತು. ಇಡೀ ಇಸ್ರೇಲಿಗೆ ಇಸ್ರೇಲೇ ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುವಂತಹ ಅವಗಢವೊಂದು ಆಗಿ ಹೋಗಿತ್ತು. ಬರೀ ಕಾರ್ಯಾಚರಣೆ ಎಕ್ಕುಟ್ಟಿ ಹೋಗಿದ್ದರೆ, ಯಾವಾಗಲೂ ಮಾಡುವಂತೆ - ಇಸ್ರೇಲಿಗೆ ಮತ್ತೆ ಆದ ಘಟನೆಗೆ ಸಂಬಂಧವೇ ಇಲ್ಲ. ಇಸ್ರೇಲ್ ಖಂಡಿಸುತ್ತದೆ - ಅಂತ ಒಂದು ರೈಲು ಬಿಟ್ಟು ತಪ್ಪಿಸಿಕೊಳ್ಳಬಹುದಿತ್ತು. ಆದ್ರೆ ರಹಸ್ಯ ಕಾರ್ಯಾಚರಣೆ ಮಾಡಿದ ವಿಶೇಷ ಕಾರ್ಯಪಡೆಯ ಕೆಲವು ಜನ ಕೂಡ ಹೊರ ದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಹಾಗಾಗಿ ದೊಡ್ಡ ಮಟ್ಟಿನ ಕ್ರೈಸಿಸ್ ಪ್ರಧಾನಿ ನೆತನ್ಯಾಹು ಅವರಿಗೆ.
ಅವರ ಜೊತೆ ಕೂತಿದ್ದವನು ಡ್ಯಾನಿ ಯೋಟಂ - ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ನ ಮುಖಂಡ. ಅಕಾಲಕ್ಕೆ ವೈಧವ್ಯ ಬಂದ ಹಾಗಿತ್ತು ಅವನ ಮುಖ. ಎಕ್ಕಾ ಮಕ್ಕಾ ಬೈಸಿಕೊಂಡಿದ್ದ. ಆಗಿದ್ದೇನು ಸಣ್ಣ ಪ್ರಮಾಣದ ಪ್ರಮಾದವೇ? ಅವನಿಗೆ ತನ್ನ ಶಿರೋಮುಂಡನವಾಗುವದರ ಬಗ್ಗೆ ಖಾತ್ರಿ ಇತ್ತು. ಆದ್ರೆ ಗಬ್ಬೆದ್ದು ಹೋಗಿದ್ದ ಸ್ಥಿತಿಯನ್ನು, ಆದ ರಾಡಿಯನ್ನು ಆದಷ್ಟು ಮಟ್ಟಿಗೆ ಕ್ಲೀನ್ ಮಾಡುವವರೆಗಾದರೂ ಅವನು ಬೇಕಿತ್ತು. ಅದಕ್ಕೇ ಅವನನ್ನು ಮುಂದೆ ಕೂಡಿಸಿಕೊಂಡು ಉಗಿಯುತ್ತ, ಪ್ರಧಾನಿ ಇತರೆ ಜನರೊಂದಿಗೆ ಮಾತಾಡುತ್ತ ಪರಿಸ್ಥಿತಿ ಸಂಭಾಳಿಸುತ್ತಿದ್ದರು. ಮುಂದೆ ಇದ್ದ ಟಿವಿಗಳಲ್ಲಿ ಅದೇ ಸುದ್ದಿ. ಇಸ್ರೇಲಿನ ಮಾನ ಫುಲ್ ಹರಾಜು.
ಪ್ರಧಾನಿಗಳ ಆಪ್ತ ಸಹಾಯಕಿ ಫೋನ್ ಮಾಡಿ - ಆ ಕಡೆಯಿಂದ ಅಮೇರಿಕಾದ ಗೃಹ ಕಾರ್ಯದರ್ಶಿ ಶ್ರೀಮತಿ ಮೆಡಲಿನ್ ಅಲ್ಬ್ರಾಯಿಟ್ ಲೈನ್ ಮೇಲೆ ಇದ್ದಾರೆ. ಅರ್ಜೆಂಟ್ ಮಾತಾಡಬೇಕಂತೆ - ಅಂದಳು.
ಅಯ್ಯೋ....ಶಿವನೇ....ಇಷ್ಟು ಬೇಗ ಸುದ್ದಿ ಅವರಿಗೂ ಮುಟ್ಟಿ, ಅವರಿಗೂ ಬಿಸಿ ಹತ್ತಿ, ಫೋನ್ ಮಾಡಿಯೇ ಬಿಟ್ಟರೆ? ಕರ್ಮ....ಕರ್ಮ....ಎಲ್ಲಾ ನಿನ್ನಂತಹ ಬೇಕಾರ್ ಮಂದಿಯಿಂದ. ದನ ಕಾಯಿರಿ....- ಅಂತ ಮತ್ತೊಂದು ರೌಂಡ್ ಉಗಿದರು ಫ್ರೆಶ್ ಸರ್ಕಾರಿ ವಿಧವೆ ಡ್ಯಾನಿ ಯೋಟಂ ಗೆ. ಅವನು ಕೂತಲ್ಲಿಯೇ ಮಿಸುಗಿದ. ಬೆಬ್ಬೆ ಅಂದ. ಚುಪ್! - ಅಂತ ಅಂದ ಪ್ರಧಾನಿ ಫೋನೆತ್ತಿಕೊಂಡರು.
ಶ್ರೀಮತಿ ಮೆಡಲಿನ್ ಅಲ್ಬ್ರಾಯಿಟ್ - ಆಗಿನ ಅಧ್ಯಕ್ಷ ಕ್ಲಿಂಟನ್ ಅವರ ಗೃಹ ಕಾರ್ಯದರ್ಶಿ. ಅವರ ಖಾಯಂ ವೇಷವಾದ ಸ್ಕರ್ಟ್ ಡ್ರೆಸ್ ಬಿಟ್ಟು ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಮನೆಯ ಹಿರಿಯ ಮುತ್ತೈದೆ ತರಹ ಲುಕ್ ಇರೋ ಒಳ್ಳೆ ಹಿರಿಯಕ್ಕನೋ, ಅತ್ತಿಗೆಯೋ, ಅಜ್ಜಿಯೋ ಅನ್ನುವಂತ ಆತ್ಮೀಯತೆ ಸೂಸುವ ಪರ್ಸನಾಲಿಟಿ ಆಕೆಯದು. ಹಾಗಂತ ಮೃದುವಲ್ಲ.
ಹಲೋ....ಮೇಡಂ....ಅದು ಏನಾಯಿತು ಅಂದ್ರೆ......ಅಂತ ಪ್ರಧಾನಿ ನೆತನ್ಯಾಹು ವಿವರಣೆ ಕೊಡಲು ಹೋದರು.
ನೋಡೀ ಇವರೇ....ಎಲ್ಲಾ ಗೊತ್ತಾಯಿತು.....ಜೋರ್ಡಾನ್ ನಿಮ್ಮ ನಮ್ಮ ಮಿತ್ರ ದೇಶ. ಅವರ ದೇಶದಲ್ಲಿ ಉಗ್ರಗಾಮಿಗಳ ಹತ್ಯೆ ಮುಂತಾದವನ್ನು ಮಾಡುವದಿಲ್ಲ ಅಂತ ನೀವು ನಮಗೆ ಮತ್ತೆ ಜೋರ್ಡಾನಿನ ರಾಜ ಕಿಂಗ್ ಹುಸೇನ್ ಅವರಿಗೆ ಭರವಸೆ ಕೊಟ್ಟಿದ್ದಿರಿ. ಅದಕ್ಕೆ ತಪ್ಪಿ ಅಲ್ಲಿಯೇ ಹೋಗಿ ಹಮಾಸ್ ಸಂಘಟನೆಯ ಮುಖ್ಯಸ್ಥ ಖಾಲಿದ್ ಮಿಶಾಲ್ ನನ್ನು ಮುಗಿಸುವ ಪ್ರಯತ್ನ ಮಾಡಿದಿರಿ. ಅದು ಗಬ್ಬೆದ್ದು ಹೋಗಿದೆ. ಈಗ ಕಿಂಗ್ ಹುಸೇನ್ ನಮಗೆ, ಕ್ಲಿಂಟನ್ ಸಾಹೇಬರಿಗೆ ಫೋನ್ ಮಾಡಿ ನ್ಯಾಯ ಒದಗಿಸಿ ಅಂತ ಬೊಂಬಡಾ ಬಜಾಯಿಸುತ್ತಿದ್ದಾರೆ. ಪ್ರೆಶರ್ ತುಂಬಾ ಬರುತ್ತಿದೆ. ಕಿಂಗ್ ಹುಸೇನ್ ಕೇಳಿದ್ದು ಕೊಟ್ಟು, ವ್ಯವಹಾರ ಬಗೆಹರಿಸಿಕೊಳ್ಳಿ. ತಿಳೀತಾ?- ಅಂತ ಅಕ್ಕನಂತೆ ಹೇಳಿ ಫೋನ್ ಇಟ್ಟೇ ಬಿಟ್ಟರು ಮೆಡಲಿನ್ ಅಲ್ಬ್ರಾಯಿಟ್.
ಮೇಡಂ....ಕಿಂಗ್ ಹುಸೇನ್ ಬೇಡಿಕೆಗಳು ತುಂಬಾ ವಿಪರೀತ. ಅವನ್ನು ಪೂರೈಸುವದು ಕಷ್ಟ....ಅದು ....- ಅಂತ ಏನೋ ಹೇಳಲು ಹೊರಟವರಿಗೆ ಆ ಕಡೆಯಿಂದ ಫೋನಿಟ್ಟ ಸದ್ದು ಕೇಳಿತು. ಇವರೂ ಉಸ್ ಅನ್ನುತ್ತ ಫೋನ್ ಇಟ್ಟರು. ಮತ್ತೊಮ್ಮೆ - ಎಲ್ಲ ನಿನ್ನಿಂದ - ಅನ್ನೋ ಲುಕ್ ಕೊಟ್ಟರು ತಮ್ಮ ಹಾಲಿ, ಬೇಗನೆ ಮಾಜಿ ಆಗಲಿದ್ದ, ಮೊಸ್ಸಾದ್ ಮುಖಂಡನಿಗೆ.
ಮತ್ತೇನಾದರು ಹೊಸ ಬೆಳವಣಿಗೆ ಆಗಿದೆಯಾ ಅಂತ ನೋಡೋಣ ಅಂತ ಒಂದು ಕ್ಷಣ ಕುಕ್ಕರಿಸಿದರೆ ಮತ್ತೆ ಫೋನ್. ಈ ಸಲ ಕ್ಲಿಂಟನ್ ಅವರೇ ಲೈನ್ ಮೇಲೆ ಇದ್ದಾರೆ ಅಂತ ಗೊತ್ತಾಯಿತು. ಅಯ್ಯೋ.....ಅವಳು ಬಂದು ಬತ್ತಿ ಇಟ್ಟು ಹೋದಳು, ಈಗ ಈ ಕ್ಲಿಂಟನ್ ಸಾಹೇಬರು ಬಂದು ಬೆಂಕಿ ಹಚ್ಚಿದರೆ, ಬತ್ತಿ ಸರ ಸರ ಉರಿದು ಬ್ಯಾಕ್ ಬ್ಲಾಸ್ಟ್. ಶಿವನೇ ಶಂಭುಲಿಂಗ.
ಏನ್ರೀ....ನೆತನ್ಯಾಹು? ಇದೆಂತಹ ರಾಡಿ ಎಬ್ಬಿಸಿ ಕೂತಿದ್ದೀರಿ? ಬೇಗ ಸಾಫ್ ಮಾಡಿ. ನಮಗೆ ಪ್ರೆಶರ್ ತುಂಬಾ ಬರ್ತಿದೆ. ಈ ಕಡೆ ಲೈನ್ ಮೇಲೆ ಕಿಂಗ್ ಹುಸೇನ್ ಆಶ್ವಾಸನೆ ಸಿಕ್ಕ ಹೊರತು ತಾವು ಫೋನ್ ಇಡುವದಿಲ್ಲ ಅಂತ ಮೊಂಡು ಹಿಡಿದು ಕೂತಿದ್ದಾರೆ. ಬೇರೆ ಬೇರೆ ಅರಬ್ ರಾಷ್ಟ್ರಗಳ ಮುಖಂಡರು ಫೋನ್ ಮಾಡಿ ತಲೆ ತಿನ್ನುತ್ತಿದ್ದಾರೆ. ಮೇಡಂ ಮೆಡಲಿನ್ ಅಲ್ಬ್ರಾಯಿಟ್ ಹೇಳಿದ್ದನ್ನು ತಕ್ಷಣ ಫಾಲೋ ಮಾಡಿ. ತಿಳಿತಾ? ಮತ್ತೆ ಮಾತಾಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕ್ಲೀನ್ ಆಗಿರಬೇಕು ನೋಡಿ. ನನಗೆ ಬೇರೆ ತುಂಬಾ ತಲೆಬಿಸಿಗಳಿವೆ. ಅದರಲ್ಲಿ ನಿಮ್ಮದೊಂದು. ಬೇಕಾಗಿತ್ತಾ ಇದು? ಹಾಂ....ಹಾಂ....- ಅಂತ ಅಧ್ಯಕ್ಷರ ರೀತಿಯಲ್ಲಿ ಝಾಡಿಸಿ ಫೋನ್ ಇಟ್ಟೇ ಬಿಟ್ಟರು. ಅದು ಅಮೇರಿಕಾ ಬೇರೆ ದೇಶಗಳೊಂದಿಗೆ ಮಾತಾಡುವ ಧಾಟಿ. ಚೈನಾ, ರಷಿಯ ಬಿಟ್ಟರೆ ಬಾಕಿ ಎಲ್ಲರಿಗೆ ಕೇವಲ ಆಜ್ಞೆ.
ಮತ್ತೇನೂ ಉಳಿದಿರಲಿಲ್ಲ ಪ್ರಧಾನಿ ನೆತನ್ಯಾಹು ಅವರಿಗೆ.
ಡ್ಯಾನಿ ಯೋಟಂ ಅವರೇ.....ನೀವು ಇನ್ನು ಹೊರಡಿ. ನಿಮ್ಮ ನಂಬರ್ 2 ಇದ್ದಾರೆ ನೋಡಿ ಎಫ್ರೇಮ್ ಹಾಲೇವಿ, ಡೆಪ್ಯುಟಿ ಡಿರೆಕ್ಟರ್, ಅವರನ್ನು ಸ್ವಲ್ಪ ಈ ಕಡೆ ಕಳಿಸಿ. ನೀವು ಮತ್ತೆ ಈ ಕಡೆ ಬರೋ ಜರೂರತ್ ಇಲ್ಲ. ಪೆಟ್ಟಿಗೆ ಕಟ್ಟಿ ಮನೆ ಕಡೆ ಹೋಗಬಹುದು - ಅಂತ ತಮ್ಮ ಹಾಲಿ ಮೊಸ್ಸಾದ್ ಬೇಹುಗಾರಿಕೆ ಮುಖ್ಯಸ್ಥನನ್ನು ಕ್ಷಣ ಮಾತ್ರದಲ್ಲಿ ಮಾಜಿ ಮಾಡಿ ಮನೆಗೆ ಕಳಿಸಿದರು. ಮುಂದಿನ ಕೆಲಸಕ್ಕೆ ತಯಾರಿ ಮಾಡಿಕೊಳ್ಳತೊಡಗಿದರು. ಎಲ್ಲದಕ್ಕೂ ಸಿದ್ಧರಾದರು.
ಏನಾಗಿತ್ತು ಅವತ್ತು, ಆ ಮಟ್ಟದ ಲಫಡಾ? ಅದೂ ಇಸ್ರೇಲಿನ ಮಾನ ಹೋಗುವಂತಹದ್ದು? ಸುಮಾರು ಮಂದಿಗೆ ಅವರ ನೌಕರಿಗೆ ವೈಧವ್ಯ ಬರುವಂತಹದ್ದು?
ಖಾಲಿದ್ ಮಿಶಾಲ್ - ಹಮಾಸ್ ಎಂಬ ಪ್ಯಾಲೆಸ್ಟೈನ್ ಉಗ್ರವಾದಿ ಸಂಘಟನೆಯ ಮುಖ್ಯಸ್ಥ. ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ನಾಯಕ. ಗಾಜಾ ಪಟ್ಟಿ (Gaza Strip) ಪ್ರದೇಶದಲ್ಲಿ ಹಮಾಸ್ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತಿತ್ತು. ಬೇರೆ ಬೇರೆ ಸಂಘಟನೆಗಳ ನಾಯಕರು ಬೇರೆ ಬೇರೆ ದೂರ ದೇಶದಲ್ಲಿ ಕೂತು, ಹಫ್ತಾ ವಸೂಲ್ ಮಾಡುತ್ತಾ, ಕಾಸು ಮಾಡಿಕೊಳ್ಳುತ್ತ, ನಾಮ್ಕೆವಾಸ್ತೆ ಪ್ಯಾಲೆಸ್ಟೈನ್ ಸಮರ ಮಾಡುತ್ತಿದ್ದರೆ, ಹಮಾಸ್ ವೈಖರಿ ರಿಫ್ರೆಶಿಂಗ್ ಅನ್ನಿಸುತ್ತಿತ್ತು ಸಾಕಾಗಿ ಹೋದ ಅಲ್ಲಿನ ಜನರಿಗೆ. 'ಇಂತಿಫದಾ' ಎಂಬ ಕಲ್ಲು ತೂರುವ ಹೋರಾಟ ಭಾಳ ಸ್ಕೋಪ್ ಪಡೆಯತೊಡಗಿತ್ತು. ಚಿಕ್ಕ ಚಿಕ್ಕ ಮಕ್ಕಳೂ ಸಹಿತ ಸೈನಿಕರ ಮೇಲೆ ಯದ್ವಾ ತದ್ವಾ ಕಲ್ಲು ಬೀಸುತ್ತಿದ್ದರು. ಕಲ್ಲು ತೂರುವವರ ಮೇಲೆ ಗುಂಡು ಹಾರಿಸಿದ ಇಸ್ರೇಲ್ ಇಡೀ ಜಗದ ಆಕ್ರೋಶಕ್ಕೆ ತುತ್ತಾಗಿತ್ತು. ಏನು ಮಾಡುವದು? ಹಮಾಸ್ ಅಧ್ಯಕ್ಷ, ಕರಿಶ್ಮಾಟಿಕ್ ನಾಯಕ ಖಾಲಿದ್ ಮಿಶಾಲ್ ಪಕ್ಕದ ಜೋರ್ಡಾನ್ ನಲ್ಲಿ ಕೂತು ಜನರನ್ನು ಹುರುದುಂಬಿಸುತ್ತಿದ್ದ. ಸುಮಾರು ಸೂಸೈಡ್ ಬಾಂಬಿಂಗಳು ಆಗಿ ಫುಲ್ ಟೆನ್ಶನ್ ಇಸ್ರೇಲ್ನಲ್ಲಿ. ಪ್ರಧಾನಿ ಮೇಲೆ ವಿಪರೀತ ಪ್ರೆಶರ್.
ದೊಡ್ಡ ಮಟ್ಟದಲ್ಲಿ ಸಮಾಲೋಚನೆಗಳು ಆದವು. ಖಾಲಿದ್ ಮಿಶಾಲ್ ಹೋಗಬೇಕು. ಲೋಕ ಬಿಟ್ಟೇ ಹೋಗಬೇಕು. ಸೈಲೆಂಟ್ ಆಗಿ ಹೋಗಿ ಬಿಡಬೇಕು.
ಮಿಶಾಲ್ ಗೆ ಫೀಲ್ಡಿಂಗ್ ಹಾಕಿ - ಅಂತ ಮೊಸ್ಸಾದ್ ಗೆ ನಿರ್ದೇಶನ ಹೋಯಿತು. ಅದಕ್ಕೇ ಇರುವ ಮೊಸ್ಸಾದಿನ 'ಕಿಡೋನ್ ' ಎಂಬ ಖತರ್ನಾಕ್ ಕಮಾಂಡೋ ಹಂತಕರ ಪಡೆ ಸ್ಕೆಚ್ ಶುರು ಮಾಡಿಯೇ ಬಿಟ್ಟಿತು.
ಮಿಶಾಲ್ ಇದ್ದದ್ದು ಪಕ್ಕದ ದೇಶ ಜೋರ್ಡಾನ್ ನಲ್ಲಿ. ಜೋರ್ಡಾನ್ ಮತ್ತು ಇಸ್ರೇಲ್ ಒಂದು ಲೆವೆಲ್ ನಲ್ಲಿ ಮಿತ್ರರು. ಕಿಂಗ್ ಹುಸೇನ್ ಬೇರೆ ಅರಬ್ ಲೀಡರ್ ಗಳಿಗಿಂತ ಭಿನ್ನ. ಸ್ವಲ್ಪ ಶಾಂತಿಪ್ರಿಯರು. ಕಟ್ಟರ್ ಅಲ್ಲ. ಆದರೂ ಹಮಾಸ್ ಗೆ ಆಶ್ರಯ ಕೊಟ್ಟಿದ್ದರು. ತಮ್ಮ ದೇಶದಿಂದ ಕೇವಲ ರಾಜಕೀಯವಾಗಿ ಮಾತ್ರ ಕೆಲಸ ಮಾಡಬಹುದು. ಯಾವದೇ ತರಹದ ಹಿಂಸೆ ಸಲ್ಲ ಅಂತ ಹೇಳಿದ್ದರು. ಓಕೆ ಅಂದಿದ್ದ ಹಮಾಸ್ ಹಿಂಸೆ ಗಿಂಸೆ ಎಲ್ಲಾ ಗಾಜಾ ಪಟ್ಟಿಯಿಂದಲೇ ಮಾಡುತ್ತಿತ್ತು. ಜೋರ್ಡಾನಿನ ರಾಜಧಾನಿ ಅಮ್ಮಾನ್ ನಲ್ಲಿ ಕೇವಲ ರಾಜಕೀಯ. ಇಸ್ರೇಲ್ ಕೂಡ ಜೋರ್ಡಾನಿಗೆ ಬಂದು ರಹಸ್ಯ ಹತ್ಯೆ ಮುಂತಾದ ಕೆಲಸ ಮಾಡಬಾರದು ಅಂತ ಅಲಿಖಿತ ಒಪ್ಪಂದ.
ಹೀಗಾಗಿ ಮಿಶಾಲನನ್ನು ಜೋರ್ಡಾನಿನಲ್ಲಿ ಗೇಮ್ ಬಾರಿಸುವದು ಶುರುವಿನಿಂದಲೇ ರಿಸ್ಕಿ ಇತ್ತು. ಗನ್ನು, ಬಾಂಬು ಹಾಕಿ ಹಿಂಸಾತ್ಮಕ ರೀತಿಯಲ್ಲಿ ಕೊಲ್ಲುವದಂತೂ ಬಿಗ್ ನೋ ನೋ.
ಮೊಸ್ಸಾದ್ ಅಂದ್ರೆ ಸುಮ್ಮನೇನಾ? ಸೈಲೆಂಟಾಗಿ ಕೊಲ್ಲುವ ಪ್ಲಾನ್ ಹಾಕುವದು ಅವರಿಗೆ ಹೊಸದೇ? ವಾಡಿ ಹದ್ದಾದ್ ಎಂಬ ಬೇರೊಬ್ಬ ಉಗ್ರಾಗಾಮಿ ನಾಯಕನಿಗೆ 10-12 ವರ್ಷದ ಹಿಂದೆ ಬೆಲ್ಜಿಯನ್ ದುಬಾರಿ ಚಾಕಲೇಟಿನಲ್ಲಿ ಕಂಡು ಹಿಡಿಯಲು ಬಾರದಂತಹ ವಿಷ ಸೇರಿಸಿ, ಅವನಿಗೆ ಕೊಟ್ಟಿದ್ದರು. ಚಾಕಲೇಟ್ ಪ್ರಿಯನಾಗಿದ್ದ, ಖುದ್ದು ಡಾಕ್ಟರ್ ಆಗಿದ್ದ ಹದ್ದಾದ್ ಮಸ್ತಾಗಿ ಚಾಕಲೇಟ್ ಮೆದ್ದು, 6 ತಿಂಗಳ ನಂತರ ತಿಳಿಯದ ಕಾಂಪ್ಲೆಕ್ಸ್ ರೋಗಗಳಿಂದ ಶರೀರ ಪೂರ್ತಿ ಲಡ್ಡಾಗಿ ಪ್ಯಾರಿಸ್ಸಿನ ಆಸ್ಪತ್ರೆಯೊಂದರಲ್ಲಿ ಸತ್ತು ಹೋಗಿದ್ದ. ಡಾಕ್ಟರ್ ಮಂದಿ ಏನು ಅಂತ ತಲೆ ಕೆರಕೊಂಡಿದ್ದರೆ, ಮೊಸ್ಸಾದ್ ಕೈ ಎತ್ತಿ ಹೈ ಫೈವ್ ಮಾಡಿ ಸೆಲಿಬ್ರೇಟ್ ಮಾಡಿತ್ತು. ಅದೇ ತರಹ ಮಿಶಾಲನನ್ನು ಸೈಲೆಂಟಾಗಿ ಕೊಲ್ಲಬೇಕು ಅಂತ ಪ್ಲಾನ್.
ಯಾವದೋ ಒಂದು ರಹಸ್ಯ ಕೆಮಿಕಲ್ ವಿಷ ತಯಾರ ಆಯಿತು. ಆದ್ರೆ ಆ ವಿಷ ಕೊಡುವದು ಹೇಗೆ? ಅದಕ್ಕೆ ಒಂದು ಸ್ಪ್ರೆಯರ್ ಕೂಡ ತಯಾರ್ ಆಯಿತು - ಸಿಂಪಡಿಸಲು . ಪ್ಲಾನ್ ಅಂದರೆ ಇಷ್ಟೇ - ಮಿಶಾಲ್ ದಿನಾ ಅಮ್ಮಾನ್ ಸಿಟಿಯಲ್ಲಿ ಇರುವ ಆಫೀಸಿಗೆ ಬರುತ್ತಾನೆ. ಟೂರಿಸ್ಟ ತರಹ ಅಲ್ಲಿ ಇಲ್ಲಿ ಓಡಾಡಿಕೊಂಡಂತೆ ಇರುವ ಮೊಸ್ಸಾದ್ ಹಂತಕರು ಅವನ ಹತ್ತಿರ ಹೋಗಿ ಏನೋ ಕೇಳುವ ನೆಪ ಮಾಡಿ, ಆಕಸ್ಮಿಕ ಅನ್ನುವಂತೆ ಅವನ ಕಿವಿಯೊಳಗೆ ಸೀದಾ ಹೋಗುವಂತೆ ಆ ಕೆಮಿಕಲ್ ವಿಷ ಸಿಂಪಡಿಸಿ, ಅಯ್ಯೋ ಕೋಕೋ ಕೋಲಾ ಕ್ಯಾನ್ ಓಪನ್ ಮಾಡುತ್ತಿದ್ದೆ, ಚಲ್ಲಿ ಹೋಯಿತು, ಸಾರಿ ಸಾರ್.....ಅನ್ನೋ ನಾಟಕ ಮಾಡಿ, ಕ್ಷಮೆ ಮತ್ತೊಂದು ಬೇಕಾದ್ರೆ ಕೇಳಿ, ಅಲ್ಲಿಂದ ರೈಟ್. ಕಿವಿಯ ಚರ್ಮದ ಮೂಲಕ ನರಮಂಡಲ ಪ್ರವೇಶಿಸುವ ವಿಷ 36-48 ಘಂಟೆಗಳಲ್ಲಿ ಮಿಶಾಲನನ್ನು ಸಕಲ ಅಂಗವೈಫಲ್ಯದಿಂದ (multiple organ failure) ಮೇಲೆ ಕಳಿಸಿಬಿಡುತ್ತದೆ. ಖೇಲ್ ಖತಂ. ಇಸ್ರೇಲ್ ಸೇಫ್.
ಎಲ್ಲಾ ತಯಾರ್ ಆಯಿತು. ಪೂರ ಟೀಮ್ ಬೇರೆ ಬೇರೆ ದೇಶಗಳ ನಕಲಿ ಪಾಸಪೋರ್ಟ್ ಮೇಲೆ ಅಮ್ಮಾನ್ ಗೆ ಬಂದು ಇಳಿಯಿತು. ಅಲ್ಲಿ ಮೊದಲೇ ಇದ್ದ ಬೇಹುಗಾರರು ಎಲ್ಲಾ ಸ್ಕೀಮ್ ಹಾಕಿ ಇಟ್ಟಿದ್ದರು. ಮುಹೂರ್ತಕ್ಕೆ ಎಲ್ಲರೂ ವೇಟ್ ಮಾಡುತ್ತಿದ್ದರು.
ಮುಹೂರ್ತದ ಘಳಿಗೆ ಬಂದೆ ಬಿಟ್ಟಿತು. ಪ್ಲಾನ್ ಮಾಡಿದಂತೆ ಕೋಕ್ ಡ್ರಿಂಕ್ ಬೀಳಿಸಿ, ಒರೆಸಿದ ನಾಟಕ ಮಾಡುತ್ತಾ ಮಾಡುತ್ತಾ ಮಿಶಾಲ್ ಕಿವಿಯೊಳಗೆ ಕೋಕೇ ಸಿಂಪಡಿಸಿದಂತೆ ವಿಷ ಸಿಂಪಡಿಸಿ, ಕ್ಷಮೆ ಕೇಳಿ ಹೊರಟರು ಹಂತಕರು. ಮಿಶಾಲ್ ಗೆ ಡೌಟ್ ಬಂತೋ ಇಲ್ಲವೋ, ಆದರೆ ಅವರ ಅಂಗರಕ್ಷಕನೊಬ್ಬನಿಗೆ ಮಾತ್ರ ಏನೋ ಸ್ಕೀಮ್ ಹಾಕಿದಂತೆ ಡೌಟ್ ಬಂತು. ಮಿಶಾಲ್ ಆಫೀಸ್ ಒಳಗೆ ಹೋಗುತ್ತಿದ್ದಂತೆ, ಹಂತಕರ ಕಾರ್ ಓಡುತ್ತ ಬೆನ್ನು ಹತ್ತಿಯೇ ಬಿಟ್ಟ. ಅಮ್ಮಾನ್ ನ ರಶ್ ಟ್ರಾಫಿಕ್ ನಲ್ಲಿ ಕಾರ್ ನಿಧಾನವಾಗಿ ಹೋಗುತ್ತಿತ್ತು. ಹಿಂದೆ ಓಡುತ್ತಿದ್ದ ಇವನು. ಆಗ ತಿಳಿಯಿತು ಹಂತಕರಿಗೆ - ಸ್ವಲ್ಪ ಕೆಲಸ ಕೆಟ್ಟಿದೆ ಅಂತ. ಅದಕ್ಕೂ ತಯಾರ ಆಗಿಯೇ ಬಂದಿದ್ದರು ಅವರು. ಒಮ್ಮೆ ಇಸ್ರೇಲಿ ರಾಯಭಾರ ಕಚೇರಿ ಸೇರ್ಕೊಂಡು ಬಿಟ್ಟರೆ ಎಲ್ಲ ಓಕೆ.
ಗಾಡಿ ಸ್ವಲ್ಪ ಜೋರ್ ಓಡಿಸಿದರು. ಅವರ ಕರ್ಮಕ್ಕೆ ಚಿಕ್ಕ ಅಪಘಾತವಾಗಿಬಿಟ್ಟಿತು. ಗಾಡಿ ಬಿಟ್ಟವರೇ ಓಡತೊಡಗಿದರು. ಜನ ಗುಂಪು ಗೂಡತೊಡಗಿದರು. ಅವರ ಹಿಂದೆ ಬೊಬ್ಬೆ ಹೊಡೆಯುತ್ತ - ಹಿಡೀರಿ.....ಅವರನ್ನು ಹಿಡೀರಿ - ಅಂತ ಓಡಿ ಬರುತ್ತಿದ್ದ ಮಿಶಾಲ್ ಅವರ ಅಂಗರಕ್ಷಕ. ಅವರ ಕರ್ಮಕ್ಕೆ ಜನಜಂಗುಳಿ ಇಬ್ಬರು ಮೊಸ್ಸಾದ್ ಹಂತಕರನ್ನು ಹಿಡಿದೇ ಬಿಟ್ಟಿತು. ಜೋರ್ಡಾನ್ ಪೊಲೀಸರು ಬಂದು ಠಾಣೆಗೆ ಕರೆದೊಯ್ದರು.
ಠಾಣೆಯಲ್ಲಿ ವಿಚಾರಣೆ ಆಯಿತು. ತಾವು ಕೆನೆಡಾದ ಪ್ರವಾಸಿಗರು. ಪ್ರಶ್ನೆ ಕೇಳುತ್ತ, ಕೋಕೋ ಕೋಲಾ ಕ್ಯಾನ್ ಓಪನ್ ಮಾಡಿದೆವು. ಸ್ವಲ್ಪಅವರ ಕಿವಿಗೆ ಸಿಡಿದಿರಬಹುದು. ಅಷ್ಟೇ. - ಅಂತ ತಮ್ಮ ಕವರ್ ಸ್ಟೋರಿ ಡಿಫೆಂಡ್ ಮಾಡಿಕೊಂಡರು.
ಪೊಲೀಸರಿಗೆ ನಂಬದಿರಲು ಯಾವದೇ ಕಾರಣವೂ ಇರಲಿಲ್ಲ. ಯಾವದಕಕ್ಕೂ ಇರಲಿ ಅಂತ ಕೆನೆಡಾದ ರಾಯಭಾರಿ ಕಚೇರಿಗೆ ಫೋನ್ ಮಾಡಿ, ಬಂದು ವೆರಿಫೈ ಮಾಡಿದರೆ, ನಿಮ್ಮ ಪ್ರಜೆಗಳನ್ನು ಬಿಟ್ಟು ಕಳಿಸುವದಾಗಿ ಹೇಳಿದರು.
ಬಂದರು ಒಬ್ಬ ಹಿರಿಯ ಕೆನೆಡಾ ರಾಯಭಾರಿ ಕಚೇರಿ ಅಧಿಕಾರಿ. ಪಾಸ್ಪೋರ್ಟ್ ಕೆನಡಾದೇ ಇದ್ದರೂ ಅವರಿಗೆ ಏನೋ ಸಂಶಯ. ಅಪ್ಪಟ ಕೆನಡಾದ ಜನರಿಗೆ ಮಾತ್ರ ಗೊತ್ತಿರುವಂತಹ ಕೆಲವು ಕಠಿಣ ಪ್ರಶ್ನೆ ಕೇಳಿಯೇ ಬಿಟ್ಟರು ನೋಡಿ, ಉತ್ತರ ಗೊತ್ತಿಲ್ಲದ ಇಸ್ರೇಲಿಗಳು ಪೆಪ್ಪೆ ಪೆಪ್ಪೆ ಅಂದರು. ಕೆನೆಡಾ ರಾಯಭಾರಿ ಕಚೇರಿ ಅಧಿಕಾರಿ ಜೋರ್ಡಾನಿನ ಪೊಲೀಸರಿಗೆ - ಇವರು ಯಾರೋ ಪೊರ್ಕಿಗಳು. ಕೆನಡಾ ಪ್ರಜೆಗಳು ಆಗಿರಲು ಸಾಧ್ಯವೇ ಇಲ್ಲ. ಪೂರ್ತಿ ವಿಚಾರಿಸಿ - ಅಂತ ಹೇಳಿ ಹೋಗಿ ಬಿಟ್ಟರು. ಈಗ ಇಸ್ರೇಲಿಗಳ ಪರಿಸ್ಥಿತಿ ಭಗವಾನ್ ಕೋ ಪ್ಯಾರೆ.
ಈ ಕಡೆ ಬೇರೆ ಬೇರೆ ಘಟನೆಗಳು ಆಗುತ್ತಿದ್ದವು. ಆಪರೇಶನ್ ಫೇಲ್ ಆಯಿತು ಅಂತ ಸುದ್ದಿ ಮುಟ್ಟಿತು ಇಸ್ರೇಲಿಗೆ. ತಲೆ ತಲೆ ಚಚ್ಚಿಕೊಂಡರು ಪ್ರಧಾನಿ ನೆತನ್ಯಾಹು. ಡ್ಯಾಮೇಜ್ ಕಂಟ್ರೋಲ್ ಶುರು ಆಯಿತು.
ಈ ಕಡೆ ಮಿಶಾಲ್ ಆರೋಗ್ಯ ಏಕ್ದಂ ಬಿಗಡಾಯಿಸಿತು. ಅರೆ ಬರೆ ಪ್ರಜ್ಞೆ ಇದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರಿಗೆ ಏನೂ ತಿಳಿಯಲಿಲ್ಲ. ತಿಳಿಯಲು ಸಾಧ್ಯವೇ ಇರಲಿಲ್ಲ. ಕೇವಲ ಮಲ್ಟಿಪಲ್ ಆರ್ಗನ್ ಫೆಲ್ಯೂರ್ ಲಕ್ಷಣಗಳು. ಯಾಕೆ ಅಂತ ಯಾವದೂ ಟೆಸ್ಟ್ ಗಳಲ್ಲಿ ಕಂಡು ಬರುತ್ತಿರಲಿಲ್ಲ.
ಈ ಕಡೆ ಪೋಲಿಸ್ ಸ್ಟೇಶನ್ ನಲ್ಲಿ ಸಿಕ್ಕಿ ಬಿದ್ದವರು ಇಸ್ರೇಲಿಗಳು ಅಂತ ತಿಳಿಯಿತು.
ಕಿಂಗ್ ಹುಸೇನ್ ಗೆ ಒಂದು ಸ್ಪಷ್ಟ ಚಿತ್ರಣ ಬಂತು. ಫೋನೆತ್ತಿ ಪ್ರಧಾನಿ ನೆತನ್ಯಾಹು ಅವರಿಗೆ ಯಕ್ಕಾ ಮಕ್ಕಾ ಉಗಿದವರೇ, ಪಕ್ಕದ ದೇಶಗಳ ಎಲ್ಲ ಅರಬರಿಗೆ ಫೋನ್ ಮಾಡಿ ಗೊಳೋ ಅಂದರು. ನನ್ನ ಜೊತೆ ಜೋರಾಗಿ ಬೊಂಬಡಾ ಬಜಾಯಿಸಿ, ಇಸ್ರೇಲ್ ವಿರುದ್ಧ ಜಗತ್ತು ತಿರುಗಿ ಬೀಳುವಂತೆ ಮಾಡಿ ಅಂದರು. ಅಷ್ಟು ಮಾಡಿ ಸೀದಾ ಅಮೇರಿಕಾದ ಶ್ವೇತಭವನಕ್ಕೆ ಫೋನ್ ಮಾಡಿಯೇ ಬಿಟ್ಟರು ಕಿಂಗ್ ಹುಸೇನ್.
ಈಗ ಕ್ಲಿಂಟನ್ ಅವರಿಗೆ ತಲೆನೋವು. ಎರಡನೇ ಅವಧಿಯಲ್ಲಿ ಮೋನಿಕಾ ಲೆವಿನ್ಸ್ಕಿ, ಮತ್ತೊಬ್ಬಳು ಅದು ಇದು ಅಂತ ಹಾಯಾಗಿ ಮಜಾ ಮಾಡಿಕೊಂಡ ಇದ್ದ ಅವರಿಗೆ ನಿಜವಾಗಿಯೂ ಇದು ಬೇಕಾಗಿರಲಿಲ್ಲ. ತಮ್ಮ ಗೃಹ ಕಾರ್ಯದರ್ಶಿಗೆ ವರ್ಗಾಯಿಸಿದರು. ಕಿಂಗ್ ಹುಸೇನ್ ಅವರ ತಲೆ ಸವರುತ್ತ - ಸ್ವಲ್ಪ ವೇಟ್ ಮಾಡಿ. ಅಡ್ಜಸ್ಟ್ ಮಾಡಿ....ಪ್ಲೀಸ್.....- ಅಂತ ಆ ಮಟ್ಟಿಗೆ ಮಾಡಲು ಸಾಧ್ಯವಿರುವ ಸಮಾಧಾನ ಮಾಡುತ್ತ ಕೂತರು.
ಮುಂದೆ ಎಲ್ಲರೂ ಕೂಡಿ ನೆತನ್ಯಾಹು ಅವರಿಗೆ ಜೋರ್ಡಾನ್ ಹೇಳಿದ ಶರತ್ತುಗಳಿಗೆ ಒಪ್ಪಿ, ಸಮಜೋತಾ ಮಾಡಿಕೊಳ್ಳಿ ಅಂತ ಹೇಳಿದರು.
ಈಗ ಪಿಕ್ಚರ್ ಗೆ ಬಂದವರು ಮೊಸ್ಸಾದಿನ ಡೆಪ್ಯುಟಿ ಡೈರೆಕ್ಟರ್ ಎಫ್ರೇಮ್ ಹಾಲಿವಿ. ಬಂದು ಪ್ರಧಾನಿ ಅವರನ್ನು ಭೆಟ್ಟಿ ಆದರು.
ಈ ಹೊತ್ತಿಗೆ ಜೋರ್ಡಾನ್ ತನ್ನ ಬೇಡಿಕೆಗಳಲ್ಲಿ ಅತಿ ಮುಖ್ಯವಾದ ಬೇಡಿಕೆಗಳನ್ನು ತಿಳಿಸಿತ್ತು. ಅವೆಂದರೆ - ವಿಷಕ್ಕೆ ಪ್ರತಿಮದ್ದು ಇಮ್ಮಿಡಿಯೆಟ್ ಕಳಿಸಿ. ಮತ್ತೆ ಜೈಲನಲ್ಲಿ ಇರುವ ಶೇಖ್ ಯಾಸೀನ ಮತ್ತು ಇನ್ನೊಂದಿಷ್ಟು ಉಗ್ರರ ಬಿಡುಗಡೆ ಮತ್ತು ಜೋರ್ಡಾನಿಗೆ ತಲುಪಿಸುವ ಸಿದ್ಧತೆ ಮಾಡಿ. ಇದರ ಬಗ್ಗೆ ದೂಸರಾ ಚೌಕಾಶಿ ಇಲ್ಲ. ಇಷ್ಟು ಪೂರೈಸಿದರೆ ಸೆರೆ ಸಿಕ್ಕ ನಿಮ್ಮ ಮಂದಿ ವಾಪಾಸ್ ಬರುತ್ತಾರೆ. ಇಲ್ಲಾ ಅಂದ್ರೆ ಜೋರ್ಡಾನ್ ಇಸ್ರೇಲ್ ಜೊತೆ ಎಲ್ಲ ರಾಜತಾಂತ್ರಿಕ ಸಂಬಂಧ ಇಮ್ಮಿಡಿಯೆಟ್ ಕಡಿದುಕೊಳ್ಳುತ್ತದೆ - ಅಂತ ಖಡಾ ಖಂಡಿತವಾಗಿ ತಿಳಿಸಿತ್ತು.
ಬೇರೆ ದಾರಿ ಇರಲಿಲ್ಲ. ವಿಷಕ್ಕೆ ಪ್ರತಿಮದ್ದು (antidote) ತೆಗೆದುಕೊಂಡ ಎಫ್ರೇಮ್ ಹಾಲಿವಿ ಹೆಲಿಕಾಪ್ಟರ್ ಹತ್ತಿದರು. ಕೇವಲ 40-50 ನಿಮಿಷಗಳ ಹಾದಿ ಅಮ್ಮಾನ್ ಗೆ.
ಈ ಕಡೆ ಆಸ್ಪತ್ರೆಯಲ್ಲಿ ಮಿಶಾಲ್ ಪರಿಸ್ಥಿತಿ ಕ್ಷಣಕ್ಷಣಕ್ಕೆ ಬಿಗಡಾಯಿಸುತ್ತಿತ್ತು. ಪ್ರತಿಮದ್ದು ಸಿಕ್ಕ ಕೂಡಲೇ ಅವರಿಗೆ ಅದನ್ನು ಕೊಡಲಾಯಿತು. ಪವಾಡವೆಂಬಂತೆ ಮಿಶಾಲ್ ನಾರ್ಮಲ್ ಆಗತೊಡಗಿದರು. ಕಿಂಗ್ ಹುಸೇನ್ ಆಕಾಶ ನೋಡಿ ಖುದಾನಿಗೆ ಶುಕ್ರಿಯಾ ಸಲ್ಲಿಸಿದರು. ಅವರನ್ನು ಕಂಡರೆ ಕಟ್ಟರ್ ಅರಬರಿಗೆ ಮೊದಲೇ ಆಗುತ್ತಿರಲಿಲ್ಲ. ಇನ್ನು ಅವರ ನಾಡಿನಲ್ಲಿ ಯಾರಾದರು ಪ್ಯಾಲೆಸ್ಟೈನ್ ಮುಖಂಡ ಸತ್ತಿದ್ದರೆ ಅಬು ನಿದಾಲ್ ನಂತಹ ಇತರೆ ಕ್ರೂರಿಗಳು ಅವರ ತಲೆ ಹಾರಿಸುತ್ತಿದ್ದರು. ಇಸ್ರೇಲ್ ಜೊತೆ ಸ್ನೇಹದಿಂದ ಇರುವದಕ್ಕೆ ಸುಮಾರು ಜನ ಜೋರ್ಡಾನಿನ ರಾಜತಾಂತ್ರಿಕರನ್ನು ಬೇರೆ ಬೇರೆ ಬಣದ ಪ್ಯಾಲೆಸ್ಟೈನ್ ಉಗ್ರವಾದಿಗಳು ಬೇರೆ ಬೇರೆ ದೇಶಗಳಲ್ಲಿ ಕೊಂದಿದ್ದರು. ದೆಹಲಿಯಲ್ಲಿಯೂ ಸಹ ಜೋರ್ಡಾನಿನ ರಾಯಭಾರಿ ಮೇಲೆ ಅಬು ನಿದಾಲ್ ಕಡೆ ಮಂದಿ ಹಲ್ಲೆ ಮಾಡಿದ್ದರು. ಒಟ್ಟಿನಲ್ಲಿ ಕಿಂಗ್ ಹುಸೇನ್ ಸಾಹೇಬರು ನಿರಾಳ.
ಜೈಲಿನಲ್ಲಿ ಬಂಧಿಯಾಗಿದ್ದ ಫೈರ್ ಬ್ರಾಂಡ್ ಮೌಲ್ವೀ ಶೇಖ್ ಯಾಸೀನನ್ನು ಮತ್ತು ಸುಮಾರು ಮಂದಿ ಉಗ್ರವಾದಿಗಳನ್ನು ಬಿಡುಗಡೆ ಮಾಡಲಾಯಿತು. ಹೆಲಿಕಾಪ್ಟರ್, ಬಸ್ ನಲ್ಲಿ ಅವರ ಅವರ ಲೆವೆಲ್ ಗೆ ತಕ್ಕಂತೆ ಜೋರ್ಡಾನ್ ಗೆ ರವಾನೆ ಮಾಡಲಾಯಿತು. ಇಸ್ರೇಲಿ ಸೈನ್ಯದಲ್ಲಿ, ಪೊಲೀಸರಲ್ಲಿ ವಿಪರೀತ ಕಹಿ ಕಹಿ. ಏನು ಮಾಡೋದು? ಕರ್ಮ....ಕರ್ಮ....
ಈ ಕಡೆ ಮಿಶಾಲ್ ಕೂಡ ಗುಣಮುಖರಾದರು. ಮುಂದೆ ಅವರಿಗೆ ಮತ್ತೆ ಜೋರ್ಡಾನಿಗೆ ಬಿಟ್ಟು ಹೋಯಿತು. ವಿಪರೀತ ಹಿಂಸೆ ಶುರು ಮಾಡಿದ ಹಮಾಸ್ ಮುಂದೆ ಮುಳ್ಳಾದೀತು ಅಂತ ಕಿಂಗ್ ಹುಸೇನ್ ಅವರಿಗೆ ಕಾಸು ಅದು ಇದು ಕೊಟ್ಟು ಕೈಮುಗಿದು ಹೋಗಿ ಅಂದರು. ಹಮಾಸ್ ಈಗ ಇರಾನ್, ಸಿರಿಯಾಗೆ ಹತ್ತಿರವಾಗಿತ್ತು. ಹಮಾಸ್ ಹೋಗಿ ಸಿರಿಯಾದ್ ರಾಜಧಾನಿ ಡಮಾಸ್ಕಸ್ ನಲ್ಲಿ ಸೆಟಲ್ ಆಯಿತು. ಪರಮ ಮೊಂಡ ಶೇಖ್ ಯಾಸೀನ್ ಮಾತ್ರ ಪ್ರಾಣದ ಭೀತಿಯನ್ನೂ ಲೆಕ್ಕಿಸದೆ ತಿರುಗಿ ಗಾಜಾ ಪಟ್ಟಿಗೆ ಬಂದು ಸಿಕ್ಕಾಪಟ್ಟೆ ಪ್ರಚೋದನಕಾರಿ ಭಾಷಣ ಶುರು ಮಾಡಿದ.
ಮುಂದೆ ಏನೇನೋ ಆಯಿತು. 2004 ರಲ್ಲಿ ಮೂರು ತಿಂಗಳ ಅವಧಿಯಲ್ಲಿ ನಾಲಕ್ಕು ಅತಿ ಹಿರಿಯ ಹಮಾಸ್ ನಾಯಕರನ್ನು ಗಾಜಾ ಪಟ್ಟಿಗೆ ನುಗ್ಗಿದ ಇಸ್ರೇಲಿಗಳು ಹುಡುಕಿ ಹುಡುಕಿ ಕೊಂದರು. ಸಿಕ್ಕಾಪಟ್ಟೆ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದರು ಎಂಬ ಆಪಾದನೆ. ಆವಾಗಲೇ ಶೇಖ್ ಯಾಸೀನ್ ಸಹ ಅಲ್ಲಾಗೆ ಪ್ಯಾರೆ ಆಗಿಬಿಟ್ಟ. ಅವನು ಅಂಧ ಮತ್ತು ಕ್ವಾಡ್ರೋಪ್ಲೆಜಿಕ್ ಅಂಗವಿಕಲ ಆಗಿ ಸದಾ ತಳ್ಳುಖುರ್ಚಿಗೆ ನಿರ್ಬಂಧಿತ. ಆದರೂ ಆ ನಮೂನಿ ಫೈರ್ ಬ್ರಾಂಡ್ ಭಾಷಣ ಮಾಡಿ ಇಸ್ರೇಲ್ ನಿರ್ನಾಮ ಮಾಡಿ ಅನ್ನುತ್ತಿದ್ದ. ಸಾಕಾಗಿತ್ತು ಇಸ್ರೆಲಿಗಳಿಗೆ ಅವನ ಕಾಟದಿಂದ. ಜೈಲಿಂದ ಬಿಟ್ಟರೂ ಮುಚ್ಚಿಗೊಂಡು ಸುಮ್ಮನಿರದೆ ಕಿತಾಪತಿ ಮಾಡುತ್ತಿದ್ದವನ ಕಾರ್ ಮೇಲೆ ನಾಕು ಮಿಸ್ಸೈಲ್ ಅಪಾಚಿ ಹೆಲಿಕಾಪ್ಟರ್ ನಿಂದ ಬಿಟ್ಟರು. ಕಾರು, ತಳ್ಳುಖುರ್ಚಿ ಎಲ್ಲದರ ಸಮೇತ ಶೇಖ್ ಯಾಸೀನ್ ಭಸ್ಮವಾಗಿ ಹೋದ.
ಮಿಶಾಲ್ ಮೇಲೆ ಮತ್ತೆ ಹತ್ಯಾ ಯತ್ನ ನಡೆದಿಲ್ಲ. ಅಥವಾ ನಮಗೆ ಗೊತ್ತಿಲ್ಲ. ಅವರು ಹಮಾಸ್ ಸಂಘಟನೆಯಲ್ಲಿ ಮತ್ತೂ ಪಾವರ್ಫುಲ್ ಆದರು. ಈಗಿತ್ತಲಾಗೆ ಸಿರಿಯಾ ಬಿಟ್ಟು ತಮ್ಮ ಹಮಾಸ್ ಸಂಘಟನೆಯನ್ನು ಪೆಟ್ಟಿಗೆ ಸಮೇತ ಬೇರೆ ಎಲ್ಲೋ ಕಡೆ ರವಾನೆ ಮಾಡಿದ್ದಾರಂತೆ. ಇಜಿಪ್ಟ ಗೆ ಅಂತ ಎಲ್ಲೋ ಓದಿದ ನೆನಪು. ಒಟ್ಟಿನಲ್ಲಿ ಸದ್ಯಕ್ಕೆ ಆರಾಮ ಇದ್ದಾರೆ ಖಾಲಿದ್ ಮಿಶಾಲ್.
ಹೆಚ್ಚಿನ ಮಾಹಿತಿಗೆ:
** ಸಂಭಾಷಣೆಗಳು ನನ್ನ ಊಹೆ. ಮೂಲಕ್ಕೆ ಚ್ಯುತಿ ಬರದಂತೆ.
1 comment:
Sir, tumba international mahiti kale haki namage tilisidiri. Danyavadagalu...
Post a Comment