Friday, July 13, 2012

ಹೊಟ್ಟಿಗೇನ್ ತಿಂತೀರಿ ಅಲ್ಲ.....ಮನಸ್ಸಿಗೇನು ತಿನ್ನಸ್ತೀರಿ?...ಅದು ಮುಖ್ಯ (ಭಾಗ - 2)


ನೀವು ಮನಸ್ಸಿನೊಳಗೆ ಏನು ಹಾಕುತ್ತಿರೋ, ಅದು ನೀವು ಬಾಯಿಯ ಮೂಲಕ ದೇಹದೊಳಗೆ ಹಾಕುವ ಆಹಾರದಷ್ಟೇ ಅಥವಾ ಇನ್ನೂ ಹೆಚ್ಚು ಮುಖ್ಯ. ಮನಸ್ಸೂ ಸಹಿತ ಒಂದು ಯಂತ್ರ. ನೀವು ಕಚ್ಚಾ ವಸ್ತು ಹಾಕಿದ ತಕ್ಷಣ ಅದು ಎಚ್ಚೆತ್ತುಕೊಂಡು ತಯಾರಿಕೆ ಶುರು ಮಾಡಿಯೇ ಬಿಡುತ್ತೆ. ಮನಸ್ಸು ತಯಾರಿಸುವದು ಆಲೋಚನೆಗಳು, ವಿಚಾರಗಳು. ಒಳ್ಳೆಯ ಕಚ್ಚಾ ಮಾಲು ಮನಸಲ್ಲಿ ಹೋದರೆ, ಮನಸ್ಸೆಂಬ ಯಂತ್ರ ಸರಿ ಸ್ಥಿತಿಯಲ್ಲಿದ್ದರೆ, ಒಳ್ಳೆ ವಿಚಾರಗಳು ಬಂದಾವು. ಮನಸ್ಸೇ ಕೆಟ್ಟುಹೋಗಿದ್ದರೆ ಅದಕ್ಕೆ ಬೇರೆಯೇ  ಟ್ರೀಟ್ಮೆಂಟ್.

ನಿಮ್ಮ ಮನಸ್ಸಿಗೆ ಒಳ್ಳೆಯದನ್ನು ಯಾಕೆ ಕೊಡಬೇಕು ಅಂದರೆ ನಿಮ್ಮ ಯೋಚನೆಗಳು, ವಿಚಾರಗಳು ನಿಮ್ಮ ಭವಿಷ್ಯ ನಿರ್ಧರಿಸುತ್ತವೆ. ಬುದ್ಧ ಅದನ್ನ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದ - ನೀವಿರುವ ಇವತ್ತಿನ ಸ್ಥಿತಿ ನೀವು ಹಿಂದೆ ಮಾಡಿದ ಎಲ್ಲ ಯೋಚನೆ ವಿಚಾರಗಳ ಪ್ರತಿಫಲ. ಭವಿಷ್ಯ ಬೇರೆ ತರಹ ಬೇಕು ಅಂದ್ರೆ ಇವತ್ತಿನ ಆಲೋಚನೆಗಳು ಅದಕ್ಕೆ ತಕ್ಕಂತೆ ಇರಲಿ -  ಅಂತ.

ನಿಮ್ಮ ಯಶಸ್ಸು ಅಥವಾ ಸೋಲು, ಸುಖ ಅಥವಾ ದುಃಖ , ನಿಮ್ಮ ಸ್ಥಿತಿ ಗತಿ, ಎಲ್ಲ ನಿಮ್ಮ ಯೋಚಿಸುವ ರೀತಿ ಮೇಲೆ ನಿಂತಿದೆ. ಯಾರು ಜಾಗರೂಕತೆಯಿಂದ ತಮ್ಮ ಮನಸ್ಸಿನ ಒಳಗೆ ಹೋಗುವದನ್ನು ನಿಯಂತ್ರಿಸುವದಿಲ್ಲವೋ ಅವರ ಮನಸ್ಸು ಬರ್ಬಾದ್. ಕೇವಲ ಜಂಕ್ ಫುಡ್ ತಿಂದ ಬಾಡಿ ಹೇಗೆ ವೇಸ್ಟ್ ಬಾಡಿ ಆಗುತ್ತೋ ಹಾಗೆ ಜಂಕ್ ಫುಡ್ ಮೈಂಡ್ ಗೆ ಕೊಟ್ಟರೆ ಅದು ಜಂಕ್ ಮೈಂಡ್ ಆಗುತ್ತದೆ. ದಾರ್ಶನಿಕ ನೆಪೋಲಿಯನ್ ಹಿಲ್ ಅವರ ಬೋಧನೆಗಳ ಹಿಂದೆ ಇರುವದು ಇದೇ ಮೂಲಮಂತ್ರ. ಅವರ 'Think And Grow Rich' ಎಂಬ ಪುಸ್ತಕದ ಸಾರವೇ ಇದು.

ನಮ್ಮ ಮನಸ್ಸು ಹೇಗೆ ಯೋಚಿಸುತ್ತದೆಯೋ ಹಾಗೆ  ನಮಗೆ ವಾಸ್ತವಿಕತೆ (reality)  ಕಂಡು ಬರುತ್ತದೆ. We see the world as we are and not as it is.

ಎಲ್ಲರಿಗೂ ಗೊತ್ತಿರುವ ಹಾಗೆ ಹೊರಮನಸ್ಸು (conscious mind) ಮತ್ತು ಒಳಮನಸ್ಸು  (subconscious mind) ಮನಸ್ಸು ಅಂತ  ಇರುತ್ತದೆ. ಹೊರಮನಸ್ಸು ಏನನ್ನು ಗ್ರಹಿಸುತ್ತದೋ ಅದನ್ನು ಸಾಕಾರ ಮಾಡಿ ಒಪ್ಪಿಸುವದು ಒಳಮನಸ್ಸಿನ ಕೆಲಸ.

ಹೊರಮನಸ್ಸು ಹೇಳಿದಾಂಗೆ ಕೇಳಿ ದೂಸರಾ ಮಾತಿಲ್ಲದೆ ಕತ್ತೆ ಹಾಗೆ ದುಡಿದು ರಿಸಲ್ಟ್ ತರಿಸಿಕೊಡುವದು ಒಳಮನಸ್ಸಿನ ಕೆಲಸ. ಅದು ತಪ್ಪು ಸರಿ ಇತ್ಯಾದಿಗಳ ಯೋಚನೆ ಮಾಡುವದಿಲ್ಲ. ಬೇಕು ತಾನೇ? ತೊಗೋ....ಅಂತ ಟಕ್ ಅಂತ ಕೊಟ್ಟುಬಿಡುವದು  ಅದರ ಕೆಲಸ. ಕೊಟ್ಟಿದ್ದು ಒಳ್ಳೆಯದ್ದೋ, ಕೆಟ್ಟದ್ದೋ? ಅದೆಲ್ಲ ಹೊರಮನಸ್ಸು ಯೋಚಿಸಬೇಕು. ಹೊರಮನಸ್ಸು ಕೊಟ್ಟ ಕಚ್ಚಾ ಮಾಲಿನ ಪರಿಧಿಯಲ್ಲಿಯೇ ಒಳಮನಸ್ಸು ಯಂತ್ರ ನೆಡಿಸಬೇಕು. ಕಚ್ಚಾ ಮಾಲನ್ನು ಮನಸ್ಸಿನ ಒಳಗೆ ಬಿಡೋಕಿಂತ ಮೊದಲೇ ಯೋಚಿಸಬೇಕೆ ವಿನಹಾ ಬಿಟ್ಟುಗೊಂಡ ಮೇಲೆ ಅಲ್ಲ. ಮಾಡಿದ್ದು ಉಣ್ಣೋ ಮಹರಾಯ. ಉಂಡಿದ್ದ ಅನುಭವಿಸೋ ಮಹರಾಯ.

ಮೆಂಟಲ್ ಡೈಟ್ ಶುರು ಮಾಡೋಕಿಂತ ಮೊದಲು ಎರಡು ವಾರ ನಿಮ್ಮ 'information intake' ಬಗ್ಗೆ ಒಂದು ಡೈರಿ ತರಹದ ಲಾಗ್ ಬುಕ್ ಇಟ್ಟುಗೊಂಡರೆ ನಿಮಗೇ ಅನುಕೂಲ. ಬೆಳಿಗ್ಗೆಯಿಂದ ರಾತ್ರಿ ತನಕ ನೋಡಿದ ಎಲ್ಲ ಟೀವಿ ಪ್ರೊಗ್ರಾಮ್, ಅವುಗುಳ ಬಗ್ಗೆ ನಿಮ್ಮ ಅಭಿಪ್ರಾಯ, ಇಂಟರ್ನೆಟ್ ಸರ್ಫಿಂಗ್ ಬಗ್ಗೆ ಡೀಟೆಲ್ಸ್, ಜನರೊಡನೆ ಮಾತಾಡಿದ್ದು, ಯಾವ ತರಹದ ಮಾತು, ಇತ್ಯಾದಿ. ಒಟ್ಟಿನಲ್ಲಿ ಅದನ್ನ ಓದಿದರೆ ನಿಮಗೆ ನಿಮ್ಮ ಮನಸ್ಸಿನ ಆಹಾರದ ಬಗ್ಗೆ ಒಂದು ತರಹದ ಫುಲ್ ಪಿಕ್ಚರ್ ಬರಬೇಕು ನೋಡಿ. ಹಾಗಿರಬೇಕು ನಿಮ್ಮ ಮೆಂಟಲ್ ಫುಡ್ ಡೈರಿ.
ಈಗ ಒಂದೊಂದೆ ಜಂಕ್ ಮೆಂಟಲ್ ಫುಡ್ ಐಟಂ ತೆಗೆಯುತ್ತಾ ಬನ್ನಿ.

ಮೊದಲನೇಯದು ರೋಚಕ ಸುದ್ದಿಗಳು. ಯಾಕೆ ಬೇಕು? ಯಾರೋ ಸಿನಿಮಾ ತಾರೆ ಯಾರೋ ಜತೆ ಹೋದರೆ ನಿಮಗೇನು? ಅದೇನು ಅಷ್ಟೊಂದು ಬಾಯಿ ಚಪ್ಪರಿಸಿ ಎಂಜಾಯ್ ಮಾಡೋ ವಿಚಾರಾನಾ? ಟಿವಿ ಮೇಲೆ ಬರೊ  ಸುಮಾರು ರೋಚಕ ಸುದ್ದಿ ಅದೇ ಕ್ಯಾಟೆಗರಿ ನಲ್ಲಿ ಇರುತ್ತವೆ. ಅವನ್ನ ಮೊದಲು ಕಡಿಮೆ ಮಾಡಿ.

ನಿಮಿಷ ನಿಮಿಷದ ಜನರಲ್ ಸುದ್ದಿ ಏನೂ ಉಪಯೋಗವಿಲ್ಲ. ಸ್ಟಾಕ್ ಮಾರ್ಕೆಟ್ ಮಂದಿ ಆದ್ರೆ ಸ್ಟಾಕ್ ಮಾರ್ಕೆಟ್ ನ್ಯೂಸ್ ಫಾಲೋ ಮಾಡಿ. ಅದನ್ನ ಬಿಟ್ಟು ಘಂಟೆ ಘಂಟೆ  ಟಿವಿ ಮುಂದೆ ಕೂತು ಅವರ - ಹೇಳಿದ್ದೆ ಹಾಡು ಕಿಸಬಾಯಿ ದಾಸ - ಅನ್ನೋದನ್ನ ಅನುಭವಿಸುವ ಕರ್ಮ ನಿಮಗ್ಯಾಕೆ?

ಮತ್ತೆ ಕೆಟ್ಟ ವಿಷಯಗಳೇ ಸುದ್ದಿ ಆಗುತ್ತವೆಯೇ ಹೊರತು ಒಳ್ಳೆ ವಿಷಯಗಳಲ್ಲ. ಎಲ್ಲೋ ಆಕ್ಸಿಡೆಂಟ್, ಎಲ್ಲೋ ಭೂಕಂಪ, ಎಲ್ಲೋ ಸಾವು, ಎಲ್ಲೋ ನೆರೆಹಾವಳಿ. ಅದರ ಬಗ್ಗೆ ಎಲ್ಲ ಗೊತ್ತಿರಲಿ. ಆದ್ರೆ ಅವು ಒಂದೇ ನಿಮ್ಮ ತಲೆ ತುಂಬದಿರಲಿ.

ಗಾಸಿಪ್ ಅನ್ನೋದರಿಂದ ಸಾಂಕ್ರಾಮಿಕ ರೋಗವೋ ಎಂಬಂತೆ ದೂರವಿರಿ. ಇನ್ನೊಬ್ಬರ ತೊಂದರೆ, ತಾಪತ್ರಯಗಳು ನಿಮ್ಮ ಮನರಂಜನೆಯ ವಸ್ತು ಆಗದಿರಲಿ. ಅಂತವನ್ನು ಉಪಯೋಗಿಸಿ ಇಲ್ಲದ ರೋಚಕ ಸುದ್ದಿ ಮಾಡುವ ಟೀವಿ ಪ್ರೋಗ್ರಾಮ್, ಜಂಕ್ tabloid ಪತ್ರಿಕೆ ಇತ್ಯಾದಿ ಪೂರ್ತಿ ಬಿಟ್ಟು ಬಿಡಿ. ಇನ್ನೊಬ್ಬರ ಜೀವನದ ಬಗ್ಗೆ ಇಲ್ಲದ್ದು ಸಲ್ಲದ್ದು ಸುದ್ದಿ ಬರೆದು ನಿಮ್ಮ ಕಾಸ್ ಕೆತ್ತಿ ನಿಮ್ಮ ಮನಸ್ಸು ಕೆಡಿಸುವ ಜಂಕ್  ಮೆಂಟಲ್ ಫುಡ್ ಯಾಕೆ ಬೇಕು ಹೇಳಿ?

ಇಂಟರ್ನೆಟ್ ಹತ್ತುವ ಮೊದಲು ಒಂದು ಗೊತ್ತು ಗುರಿ ಇರಲಿ. ಸುಮ್ಮನೆ ಅಲ್ಲಿ ಇಲ್ಲಿ ಕ್ಲಿಕ್ ಮಾಡುತ್ತಾ ಕಂಡ ಕಂಡ ಸೈಟ್ ನಲ್ಲಿ ಅಲ್ಲಿ ಇಲ್ಲಿ ಚಿಕ್ಕ ಪುಟ್ಟ ಜಂಕ್ ಫುಡ್ ತುತ್ತು ತಿನ್ನದಿರಿ. ಇಲ್ಲೂ ಅಷ್ಟೆ. ಪಾಸಿಟಿವ್ ವೆಬ್ ಸೈಟ್ ಓದಿ. ನೆಗೆಟಿವ್ ಇದ್ದಾರೆ ಕಣ್ಣಾಡಿಸಿ ಜಾಗ ಖಾಲಿ ಮಾಡಿ.

ಮುಂದಿನದು ನಮ್ಮ ಅಜ್ಜಿಯ ಫೇಮಸ್ ಗೆಟ್ ಔಟ್ ಅನ್ನೋದು. ನೆಗೆಟಿವ್ ಜನರನ್ನ ಪ್ಲೇಗ್ ತರಹ ದೂರವಿಡಿ. ಅವರಂತೂ ಮಾನಸಿಕ ಕೊಚ್ಚೆಯಲ್ಲಿ ಇದ್ದಾರೆ. ಅದೇ ಕೊಚ್ಚೆಯನ್ನು ಗಾಸಿಪ್ ಮಾಡಿ ಮಂದಿ ಮೇಲೆ ಎರಚುತ್ತಾ ಇರುತ್ತಾರೆ. ಅದು ಸರಿ ಇಲ್ಲ, ಇದು ಸರಿ ಇಲ್ಲ. ಹಾಂಗೆ. ಹೀಂಗೆ - ಅಂತ. ಕೇವಲ ನೆಗೆಟಿವ್ ಮೇಲೆ ಅವರ ಎಲ್ಲ ಗಮನ. ಅವರೆಂತಹ  ಆರೋಗ್ಯಕರ ಆಹಾರ ಕೊಟ್ಟಾರು ನಿಮ್ಮ ಮನಸ್ಸಿಗೆ? ಅವರನ್ನ ಬಿಟ್ಟು ಬಿಡಿ. ಅವರ ಮೇಲೆ ದ್ವೇಷ ಅಂತ ಅಲ್ಲ. ಹಾವೂ,ಚೇಳೂ ಎಲ್ಲ ಜೀವ ಜಂತುಗಳೇ. ಹಾಗಂತ ಅವನ್ನ ಮನೆಯಲ್ಲಿ ಇಟ್ಟುಗೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ನೆಗೆಟಿವ್ ಜನರೂ ಸಹ. ಸರಸ, ಗುದ್ದಾಟ ಎಲ್ಲ ಗಂಧದವರೊಡನೆ ಇರಲಿ ಸಗಣಿ ಹೊತ್ತವರೊಂದಿಗೆ ಬೇಡ.

ನಿಮ್ಮ ಮನಸ್ಸಿನ ಆರೋಗ್ಯ ಸುಧಾರಿಸಿದ ಹಾಗೆ ನಿಮಗೆ ಒಪ್ಪುವಂತ ಸಮಾನ ಮನಸ್ಕರು ನಿಮಗೆ ಪರಿಚಯವಾಗುತ್ತಾರೆ. Law of Attraction - ಕೆಲಸ ಮಾಡಿಯೇ ಮಾಡುತ್ತದೆ.

ಇನ್ನು ಕೆಲ ಜನ ಇರುತ್ತಾರೆ. ಮೊದಲು ಇಲ್ಲದ ಕಡೆ ಸುಮ್ಮನೆ ಬೆಂಕಿ ಹಚ್ಚಿ, ದೊಡ್ಡ ಸುದ್ದಿ ಮಾಡಿ, ಏನೋ ಹಿರೋಗಿರಿ ತೋರ್ಸಿ, ಅದನ್ನ ಆರಿಸಿ, ತಮ್ಮ ಪ್ರಾಮುಖ್ಯತೆ ತೋರಿಸಿಕೊಳ್ಳುವವರು. ಅವರನ್ನೂ ದೂರವಿಡಿ. ಸುಖಾ ಸುಮ್ಮನೆ ತಲೆ ಬಿಸಿ ಜನ.

ಇನ್ನು ಸಾಮಾಜಿಕ ಮಿಲನ ತಾಣಗಳಾದ ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ. ಅಲ್ಲೂ ಅಷ್ಟೇ. ಬರುವ ಫೀಡ್ಗಳ ಬಗ್ಗೆ, ಮಾಹಿತಿ ಬಗ್ಗೆ  ಬಹಳ  ಕಾಳಜಿ ಇರಲಿ. ನೆಗೆಟಿವ್  ಫೀಡ್ಸ್ ಗಳನ್ನ ಅಡಗಿಸಿ. ಮತ್ತೆ ನಿಮ್ಮ ಫೇಸ್ಬುಕ್ ದೋಸ್ತರ ಆನಲೈನ್ ದಿನಚರಿ ಮತ್ತು ಅವರು ಪೋಸ್ಟ್ ಮಾಡುವ ಪೋಸ್ಟ್ ಗಳ ಬಗ್ಗೆ ಗಮನ ಇರಲಿ. ಯಾವಾಗಲೂ ಉಪಯೋಗವಿಲ್ಲದ ಪೋಸ್ಟ್ ಮಾಡುವವರನ್ನು ನಾಮ್-ಕೆ-ವಾಸ್ತೇ ಇಟ್ಟುಗೊಳ್ಳಿ ಸಾಕು. ಅವರ ಪೋಸ್ಟ್ ಗಳಿಗೆ unsubscribe ಮಾಡಿಕೊಳ್ಳಿ. ಬಹಳ ನೆಗೆಟಿವ್ ಮಿತ್ರರನ್ನ ನಿಜ ಜೀವನದಿಂದ ತೆಗೆದ ಹಾಗೆ, ಆನಲೈನ್ ಜೀವನದಿಂದೂ ತೆಗೆದು ಹಾಕಿ.

ಪದೇ ಪದೇ ನೀವು ನಿಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದೇ - ಈ ಮಾಹಿತಿ ನನಗೆ ಬೇಕಾ? ಬೇಡವಾ? ಮನಸ್ಸಿಗೆ ಒಳ್ಳೆಯೆದಾ ಅಥವಾ ಕೆಟ್ಟದಾ?
ನಿಮ್ಮ ಮನಸ್ಸು (ತಲೆ) ಕೆಟ್ಟರೆ  ನೀವು ಬೇರೆಯವರಿಗೆ ಆಗಲಿ, ನಿಮಗೇ ಆಗಲಿ ಸಹಾಯ ಮಾಡಲಿಕ್ಕೆ ಸಾಧ್ಯ ಇಲ್ಲ ಎಂಬುದ ನೆನಪಿಟ್ಟಿರಿ. ಇದೊಂದೇ ಅಂಶ ನಿಮ್ಮ ಎಲ್ಲ ಸರಿ ತಪ್ಪು ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಮಾರ್ಗದರ್ಶಿಯಾಗಿರಲಿ.
ಹೀಗಂತ ಟಿಮ್ ಸಾಂಡರ್ಸ ಮನಸ್ಸಿನ ಆಹಾರ ಪದ್ಧತಿಯ ಜಂಕ್ ಫುಡ್ ಬಗ್ಗೆ ಹೇಳಿ ಮುಗಿಸುತ್ತಾರೆ ತಮ್ಮ - Today We Are Rich - ಎಂಬ ಪುಸ್ತಕದಲ್ಲಿ.

ಆಯಿತು....ಮನಸ್ಸಿಗೆ ಏನು ಕೊಡಬಾರದು ಎಂಬುದು ತಿಳಿಯಿತು.  ಏನು ಕೊಡಬಹುದು?ಮನಸ್ಸಿಗೆ ಕೊಡಬಹುದಾದ ಆರೋಗ್ಯಕರ ಆಹಾರ ಯಾವದು? ಆರೋಗ್ಯಕರ ಮಾಹಿತಿ ಜೀವನಶೈಲಿ (information lifestyle) ಅಂದರೇನು?....ಅದರ ಬಗ್ಗೆ ಮುಂದಿನ ಪೋಸ್ಟಿನಲ್ಲಿ.

ಭಾಗ - 3 ಇಲ್ಲಿದೆ.

**  ಟಿಮ್ ಸಾಂಡರ್ಸ ಅವರು ಪುಸ್ತಕದಲ್ಲಿ ಹೊರಮನಸ್ಸು (conscious mind) ಮತ್ತು ಒಳಮನಸ್ಸು  (subconscious mind) ಬಗ್ಗೆ ವಿವರವಾಗಿ ಬರೆದಿದ್ದಾರೆ. ಆಸಕ್ತಿ ಇರುವವರು ಪುಸ್ತಕ ಓದಿ. ತುಂಬಾ ಒಳ್ಳೆ ಪುಸ್ತಕ.

2 comments:

ಅನಿಕೇತನ said...

thumba volleya kelasa maduthiddeeri,
DVG ravara mankuthimmana kaggavannu navaroopadalli heluthiruviri nimma kaarya kashtavadude agide. idannu haeye munduvaresi

shubhakamanegalondige
Prasanna Kumar C R

Mahesh Hegade said...

Thank you very much, Prasanna Kumar!