Sunday, January 26, 2014

ನೀ ಸರ್ದಾರ್ಜೀ ಏನಲೇ? (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೧)



ಚಡ್ಡಿ ಹಾಕ್ಕೋ ಬೇಕು ಅಂತ ಅರಿವು ಮೂಡೋ ಮೊದಲೇ ಚಡ್ಡಿ ದೋಸ್ತಗಳು ಸಿಕ್ಕಿರ್ತಾರ. ಆದರೆ ಪೆನ್ ಹಿಡಿಯೋದನ್ನ ಕಲಿತ ಮೇಲೂ ಪೆನ್ ಫ್ರೆಂಡ್ಸ್ (ಪತ್ರ ಮಿತ್ರರು, Pen Friend, Pen Pal) ಸಿಗ್ತಾರ ಅಂತ ಹೇಳೋದು ಕಷ್ಟ.

The pen is mightier than the sword ಅಂತ ಒಂದು ಮಾತದ. ಪೆನ್ ಫ್ರೆಂಡ್ಸ್ ಇದ್ದು, ಅವರ ಒಡನಾಟ ಮಾಡಿದವರು Pen friends are sometimes mighty closer and dearer than nearer friends ಅಂತ ಹೇಳಿದರೆ ಅದು ದೊಡ್ಡ ಮಾತೇ ಅಲ್ಲ. Pen Friendship ಮಾಡಿ ನೋಡಿದವರಿಗೆ ಅದರ ಗಮ್ಮತ್ತು ಗೊತ್ತು.

ಅದೇನೋ ಗೊತ್ತಿಲ್ಲ. ನಮ್ಮ ಸುತ್ತ ಮುತ್ತ ಯಾರಿಗೂ ಪೆನ್ ಫ್ರೆಂಡ್ಸ್ (ಪತ್ರ ಮಿತ್ರರು) ಇರಲೇ ಇಲ್ಲ. ಹಾಗಾಗಿ ನಮಗೆ ಪತ್ರ ಮಿತ್ರರು ಅಂತ ಇರ್ತಾರ ಅಂತ ತಿಳಿದಿದ್ದು relatively ಭಾಳ ತಡವಾಗಿಯೇ.

೧೯೮೪. ಏಳನೇ ಕ್ಲಾಸ್. ಅರುಣ ಭಟ್ಟ. ಚಡ್ಡಿ ದೋಸ್ತಾ. ಅವನ ಮನೆಗೆ ಹೋಗಿದ್ದೆ. ಆವಾಗ ವಾಲ್ಟ್ ಡಿಸ್ನಿ ಕಂಪನಿಯವರು ಅದೇನೋ ಡಾಲ್ಟನ್ ಕಾಮಿಕ್ಸ್ ಅಂತ ತರ್ತಿದ್ದರು. ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಇತ್ಯಾದಿಗಳಿಗೆ ಸ್ಪರ್ಧೆ ಅನ್ನುವ ಹಾಗೆ. ಅದು ಕನ್ನಡದ ಒಳಗೇ ಇದ್ದರೂ ಏನೂ ತಿಳಿತಿರಲಿಲ್ಲ. ಯಾಕೆಂದ್ರೆ ಎಲ್ಲೋ ಪಶ್ಚಿಮ ದೇಶಗಳ ಸ್ಟೋರಿ ತಂದು ಕನ್ನಡಕ್ಕೆ ಕೇವಲ ತರ್ಜುಮೆ ಮಾಡಿ ಬಿಟ್ಟರೆ ಆಯಿತೆ? ಹಾಂಗಾಗಿ ನಾನೇನೂ ಅದನ್ನ ಓದುತ್ತಿರಲಿಲ್ಲ. ಆವತ್ತು ಭಟ್ಟನ ಮನಿಗೆ ಹೋದಾಗ ಆ ಪತ್ರಿಕೆ ಕಂಡು ಬಂತು. ಸುಮಾರು ಹಳೇದು ಆಗಿತ್ತು. ಸುಮ್ಮನ ಕಣ್ಣಾಡಿಸಿದೆ.

ಅದರಲ್ಲಿ ಪತ್ರ ಮಿತ್ರರು ಅಂತ ಒಂದು ಪುಟ ಇತ್ತು. ಜನರ ಹೆಸರು, ವಿಳಾಸ, ವಯಸ್ಸು, ಹವ್ಯಾಸ ಇತ್ಯಾದಿ. ಏನೋ ತಲಿಯಲ್ಲಿ ಬಂದು ಬಿಡ್ತು. ನಾವೂ ಯಾರನ್ನಾರ ಪತ್ರ ಮಿತ್ರನ್ನ ಮಾಡಿಕೊಂಡು ಬಿಡಬೇಕು ಅಂತ. ಹಾಂಗಂತ ವಿಚಾರ ಮಾಡಿ, ದೋಸ್ತ ಭಟ್ಟನ ಹತ್ತಿರ ಒಂದು ಕಾಗದ ಇಸಕೊಂಡು, ಒಂದ ಆರು ಏಳು ಜನರ ಹೆಸರು, ವಿಳಾಸ, ವಿವರ ಬರಕೊಂಡು ಬಂದೆ. ಇನ್ನು ಇವರೊಳಗ ವಿಚಾರ ಮಾಡಿ ಒಬ್ಬರೋ ಇಬ್ಬರಿಗೆ ಪತ್ರ ಬರೆದು, ಅವರೂ ಏನರೆ ಒಪ್ಪಿದರೆ ಪತ್ರ ಮಿತ್ರರಾಗಬೇಕು ಅಂತ.

ನಿಂದು ಬಾಕಿ ಎಲ್ಲಾ ವೇಷಾ ಮುಗೀತು. ಈಗ ಇದೊಂದು ಬಾಕಿ ಇತ್ತು, ಅಂತ ತಾಯಿಯವರು as usual ಸಿಡಿಮಿಡಿ ಮಾಡಿದರು. ವಿವಿಧ ವೇಷಾ ಹಾಕಿ ಜೀವಾ ತಿನ್ನೋದು ನಮ್ಮ ಧರ್ಮ. ಸಹಿಸಿಕೊಳ್ಳೋದು ಅವರ ಕರ್ಮ.

ವಿಳಾಸ ಬರಕೊಂಡು ಬಂದವರು ಎಲ್ಲರೂ ಹುಡುಗರೇ ಇದ್ದರು. ಹುಡುಗಿಯರ ಜೊತೆ ಮಾತಾಡಿಬಿಟ್ಟರೆ ದೊಡ್ಡ ಪಾಪ ಅನ್ನುವಂತಹ ಕರ್ಮಠ ಭಟ್ಟರ ಶಾಲೆಯಲ್ಲಿ ಹನ್ನೆರಡು ವರ್ಷ ಮಣ್ಣು ಹೊತ್ತವರು ನಾವು. ಹಾಂಗಾಗಿ ಆ ಕಾಲದಲ್ಲಿ ಹುಡುಗಿಯರ ಜೊತೆ ಪತ್ರ ಮಿತ್ರತ್ವ ಅದೆಲ್ಲ ಮಾಡುವ ಕೆಲಸವಾಗಿರಲಿಲ್ಲ.

ಅದು ಏನು ಯೋಗಾಯೋಗವೋ ಗೊತ್ತಿಲ್ಲ. ಬಳ್ಳಾರಿಯ ಒಬ್ಬ ಗೋಪಾಲ ಸಿಂಗ್ ಅನ್ನುವನನ್ನು ಯಾಕೆ ಪತ್ರ ಮಿತ್ರನನ್ನಾಗಿ ಮಾಡಿಕೊಳ್ಳಬಾರದು ಅಂತ ಅನ್ನಿಸಿಬಿಡ್ತು. ಗೋಪಾಲ ಸಿಂಗ ಅನ್ನುವ ಹೆಸರು ನೋಡಿ ನಾ ಇವಾ ಎಲ್ಲೋ ಸರ್ದಾರ್ಜೀ ಸಿಂಗನೇ ಇರಬೇಕು ಅಂತ ಖುಷ್ ಆಗಿಬಿಟ್ಟೆ. ಆಗ ಮಾತ್ರ ಸ್ವಲ್ಪೇ ದಿವಸಗಳ ಹಿಂದೆ ಇಂದಿರಾ ಗಾಂಧಿಯನ್ನು ಸಿಖ್ಖರು ಹೊಡೆದು ಹಾಕಿದ್ದರು. ಮತ್ತೆ ಪಂಜಾಬ, ಖಲಿಸ್ತಾನ, ಅಲ್ಲಿಯ ಗಲಾಟೆ ಎಲ್ಲ ಜೋರಾಗಿತ್ತು. ಪಗಡಿ ಗಿಗಡಿ ಕಟ್ಟಿಕೊಂಡು, ಖಡ್ಗ ಅದು ಇದು  ಹಿಡಿದುಕೊಂಡು, ಉದ್ದ ಕೂದಲಾ ಬಿಟ್ಟುಕೊಂಡು, ಖಡಾ ಗಿಡಾ ಹಾಕಿಕೊಂಡು ಇರುವ ಸಿಖ್ಖರ ಬಗೆ ಅದೇನೋ ಕುತೂಹಲ. ಯಾರರೆ ಸಿಖ್ಖರು ಸಿಕ್ಕರೆ ಅವರನ್ನು ಹಿಡಿದು, ಮಾತಾಡಿಸಿ, ಸಿಖ್ ಧರ್ಮದ ಬಗ್ಗೆ ತಿಳಕೊಂಡು, ಯಾಕ್ರೀಪಾ ಯಾಕ ಹೀಂಗ ಹೊಡೆದಾಟ ಮಾಡ್ತೀರಿ? ಯಾಕ ಇಂದಿರಾ ಗಾಂಧಿನ್ನ ಹೊಡೆದು ಹಾಕಿಬಿಟ್ಟಿರಿ? ಅಂತ ಏನೇನೋ ಕೇಳಬೇಕು, ನಮ್ಮ ಬಗ್ಗೆ ಹೇಳಬೇಕು ಅಂತೆಲ್ಲ ಅದೇನೇನೋ ಅಸೆ sub conscious ಆಗಿ ಇತ್ತು ಅಂತ ಅನ್ನಸ್ತದ. ಹಾಂಗಾಗಿ ಗೋಪಾಲ ಸಿಂಗ್ ಅಂತ ಹೆಸರು ನೋಡಿದ ಕೂಡಲೇ ಜೈ ಅಂತ ಅವಂಗ ಪತ್ರಾ ಬರಿಲಿಕ್ಕೇ ಬೇಕು ಅಂತ ತಲಿ ಬಂದು ಬಿಡ್ತು.

ಆ ಕಾಲದಲ್ಲಿ ನನಗ ಧಾರವಾಡದಲ್ಲಿ ಗೊತ್ತಿದ್ದವರು ಇಬ್ಬರೇ ಸಿಂಗರು. ಒಬ್ಬವ ಗುಲಶನ್ ಸಿಂಗಾ, ಇನ್ನೊಬ್ಬವ ನಮ್ಮ ಅಣ್ಣನ ಕ್ಲಾಸ್ಮೇಟ್ ಸಿಂಗಾ. ಗುಲಶನ್ ಸಿಂಗ ಸರ್ದಾರ್ಜೀ ಅಲ್ಲವೇ ಅಲ್ಲ. ಅವನ ಕಡೆ ಹೋಗಿ ನಿಮ್ಮ ಮಂದಿ ಯಾಕ ಇಂದಿರಾ ಗಾಂಧಿನ್ನ ಕೊಂದ್ರಲೇ? ಅಂತ ನಾ ಕೇಳಿದ್ದೇ ಆದರೆ, ಆವಾ ಕೈಯೆತ್ತಿ, ಏ! ಮಹೇಶಾ! ನಾವು ಲಕ್ಷ್ಮಿಸಿಂಗನ ಕೆರೆ ಖ್ಯಾತಿಯ ಲಕ್ಷ್ಮಿಸಿಂಗನ ಪೈಕಿಯವರು ಮಾರಾಯಾ. ನಾವು ಸಿಖ್ಖರಲ್ಲ. ರಜಪೂತರು, ಅಂತ ಆವಾ ಹೇಳೋದು ಬೇಕೇ ಇರಲಿಲ್ಲ. ಯಾಕಂದ್ರ ಬಾಲವಾಡಿ ದೋಸ್ತ ಗುಲಶನ್ ಬಗ್ಗೆ ಎಲ್ಲ ಗೊತ್ತಿತ್ತು. ಇನ್ನು ನಮ್ಮ ಅಣ್ಣನ ಫ್ರೆಂಡ್ ಸಿಂಗ್ ಸರ್ದಾರ್ಜೀ ಆಗಿದ್ದ. ಆದ್ರ ಅವನ ಟಚ್ ಅಷ್ಟು ಇರಲಿಲ್ಲ. ಹಾಂಗಾಗಿ ಸರ್ದಾರ್ಜೀ ಬಗ್ಗೆ ತಿಳಿದುಕೊಳ್ಳಲಿಕ್ಕೆ ಈ ಬಳ್ಳಾರಿಯ ಗೋಪಾಲ್ ಸಿಂಗ್ ಅನ್ನುವನೇ ಸರಿ ಅಂತ ಅವಂಗೇ ಪತ್ರ ಬರೆದು ಬಿಡೋದು ಅಂತ ನಿಶ್ಚಯ ಮಾಡಿ ಬಿಟ್ಟೆ. ಮುಹೂರ್ತ ಇಟ್ಟೇ ಬಿಟ್ಟೆ.

ಬಳ್ಳಾರಿ ಅಂತ ಶುದ್ಧ ಕನ್ನಡದ ಊರಿನಲ್ಲಿ ಇರೋ ಸಿಂಗ್ ಖರೆ ಸರ್ದಾರ್ಜೀ ಹೌದೋ ಅಲ್ಲೋ ಅಂತ ಒಂದು ಸಣ್ಣ ಸಂಶಯ ಮನಸ್ಸಿನಲ್ಲಿ ಇತ್ತು. ಸರ್ದಾರ್ಜೀ ಮಂದಿ ಗೋಪಾಲ, ಗಣೇಶ, ಇತ್ಯಾದಿ ಸಿಂಪಲ್ ಹೆಸರು ಇಡೋದಿಲ್ಲ. ಅವರದ್ದು ಏನಿದ್ದರೂ ಭರ್ಜರಿ ಹೆಸರು ಇರ್ತಾವ. ಜೋಗಿಂದರ್, ಹರ್ಮಿಂದರ್, ಬೂಟಾ ಸಿಂಗ, ಚಪ್ಪಲ್ ಸಿಂಗ್, ಝೈಲ್ ಸಿಂಗ್, ಜರ್ನೇಲ್ ಸಿಂಗ್ ಭಿಂದ್ರನ್ವಾಲೆ, ಅವತಾರ ಸಿಂಗ್ ಬ್ರಹ್ಮಾ, ಲೊಂಗೋವಾಲ್ (ಲುಂಗಿವಾಲ್ ಅಲ್ಲ) ಇತ್ಯಾದಿ ಇತ್ಯಾದಿ. ಆವಾಗ ಈಗಿನಷ್ಟು ಬುದ್ಧಿ ಇರಲಿಲ್ಲ ಬಿಡ್ರೀ. ಹಾಂಗಾಗಿ ಈ ಬಳ್ಳಾರಿ ಗೋಪಾಲ್ ಸಿಂಗ್ ಸಹಿತ ಸಿಖ್ಖನೇ ಇರಬೇಕು ಅಂತ ಮಾಡಿಬಿಟ್ಟೆ. ಸಿಖ್ಖರು ಎಲ್ಲಾ ಕಡೆ ಇದ್ದಾರ. ಧಾರವಾಡ ಒಳಗೂ ದೊಡ್ಡ ಸೈಕಲ್ ಡೀಲರ್ ಅಂದ್ರ ಛಡ್ಡಾ & ಸನ್ಸ್. ಅವರು ಸಿಖ್ಖರೇ. ಹಾಂಗಾಗಿ ಗೋಪಾಲ್ ಸಿಂಗ್ ಸಹಿತ ಸಿಖ್ಖನೇ ಇರಬೇಕು ಅಂತ ಹೇಳಿ ಅನಾಯಾಸ ಸಿಕ್ಕ ಸಿಖ್ಖನಿಗೆ ಪತ್ರ ಬರದೇ ಬಿಟ್ಟೆ.

ಒಂದು ಇಂಗ್ಲಂಡ್ ಲೆಟರ್ (inland letter, ಅಂತರ್ದೇಶಿ) ತೊಗೊಂಡು ಬಂದು, ಚಂದಾಗಿ ಸರಳ ಕನ್ನಡ ಒಳಗ, ಮುತ್ತಿನಂತಹ (?) ಕೈ ಬರಹದಲ್ಲಿ ಒಂದು ಪತ್ರ ಬರದೆ. ಮೊದಲನೆ ಪತ್ರದಲ್ಲೇ, ಏ ಗೋಪಾಲ್ ಸಿಂಗಾ, ನೀ ಸರ್ದಾರ್ಜೀ ಏನಲೇ? ಯಾಕ ಇಂದಿರಾ ಗಾಂಧಿಗೆ ಹೆಟ್ಟಿ ಬಿಟ್ರಲೇ? ಅಂತೆಲ್ಲಾ ಏನೂ ಬರಿಲಿಲ್ಲ. ಶುದ್ಧ ಗ್ರಂಥ ಕನ್ನಡದಲ್ಲಿ, ನಾನು ಹೀಂಗ, ನೀನು ಯಾರು? ಏನು ಮಾಡ್ತೀ? ಪತ್ರ ಮಿತ್ರ ಆಗು. ಓಕೆ. ನಮಸ್ಕಾರ, ಅಂತ ಹೇಳಿ ಪತ್ರಾ ಮುಗಿಸಿದೆ. ಪೂರ್ತಿ ಜಾಗಾ ತುಂಬಲಿಲ್ಲ ಅಂತ ಹೇಳಿ ಕೊನಿ ಕೊನಿಗೆ ದೊಡ್ಡ ಸೈಜಿನ ಅಕ್ಷರ ಮಾಡಿ ಪತ್ರಾ ತುಂಬಿಸಿ, ಅಂಟು (ಎಂಜಲು ಅಲ್ಲ) ಹಚ್ಚಿ, ಪತ್ರಾ ಸೀಲ್ ಮಾಡಿ, ಬಳ್ಳಾರಿ ಅಡ್ರೆಸ್ ಬರದು, ಪಿನ್ ಕೋಡ್ ಕರೆಕ್ಟ್ ಆಗಿ ಬರದು, ಪೋಸ್ಟ್ ಡಬ್ಬಿ ಒಳಗ ಹಾಕಿ ಬಿಟ್ಟೆ. ನಾ ಮೆಚ್ಚಿದ ಸಿಂಗನಿಗೆ ಕಾಣಿಕೆ ತಂದಿರುವೆ. ಈ ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳಿಸಿರುವೆ. ನಾ....ಚುಂಬಿಸಿ ಕಳಿಸಿರುವೆ, ಅಂತ ಮಾತ್ರ  ಹಾಡಲಿಲ್ಲ. ಅವನೌನ್! ಎಲ್ಲಿ ಚುಂಬನ? ಪತ್ರಕ್ಕ ಎಂಜಲು ಹಚ್ಚಿ ಸೀಲ್ ಮಾಡೋ ಹೇಶಿಗಳು ಎಂಜಲು ಹಚ್ಚೋದಕ್ಕ ಚುಂಬನ ಅಂತ ಹೇಳಿ ಯಾರ ಕಿವಿ ಮ್ಯಾಲೆ ಹೂವು ಇಡ್ತಾರೋ ದೇವರಿಗೆ ಗೊತ್ತು.

ಗೋಪಾಲ್ ಸಿಂಗ್ ಉತ್ತರ ಬರದೇ ಬಿಟ್ಟ. ದೇವರು ಅವಂಗ ಒಳ್ಳೇದು ಮಾಡಲಿ. ಅವನೂ ಸಿಂಪಲ್ ಕನ್ನಡ ಒಳಗ ಬರದಿದ್ದ. ಆವಾ ನನಕಿಂತ ಒಂದು ನಾಕು ವರ್ಷ ದೊಡ್ಡವ ಇದ್ದ. ಅದು ಮೊದಲೇ ಗೊತ್ತಿತ್ತು ಬಿಡ್ರೀ. ಯಾಕಂದ್ರ ಡಾಲ್ಟನ್  ಕಾಮಿಕ್ಸ್ ಒಳಗ ಅದು ಇತ್ತು. ನನಗ ನನ್ನ ವಯಸ್ಸಿನ ಹುಡುಗುರಕಿಂತ ಸ್ವಲ್ಪ ದೊಡ್ದವರೇ ಸರಿ ಆಗ್ತಿದ್ದರು. wave length ಮ್ಯಾಚ್ ಆಗ್ತಿತ್ತು. ನಮ್ಮ ವಯಸ್ಸಿನ ಹುಡಗರಿಗೆ ನಾ ಮಾತಾಡೋ ಕೆಲೊ ವಿಷಯ ತಿಳಿತಿದ್ದೂ ಇಲ್ಲ ಮತ್ತ ಅವರಿಗೆ ಅದೆಲ್ಲ ಆಸಕ್ತಿನೂ ಇರಲಿಲ್ಲ. ನನಗ ಅವೆಲ್ಲ ವಿಷಯ ಹೇಳಿ ಕೇಳಿ ಮಾಡಲಿಕ್ಕೆ ದೊಡ್ಡ ಹುಡಗರೇ ಸರಿ ಆಗ್ತಿದ್ದರು. ನಮ್ಮ ಹಿಂದಿನ ರೂಮಿನ್ಯಾಗ ಭಾಡಿಗಿ ಇದ್ದ ಯೂನಿವರ್ಸಿಟಿ ಸ್ಟೂಡೆಂಟ್ಸ್ ಅಂತಹ ಮಂದಿ. ಹಾಂಗಾಗಿ ಪತ್ರ ಮಿತ್ರ ಗೋಪಾಲ್ ಸಿಂಗ ನನಕಿಂತ ದೊಡ್ಡವ ಇದ್ದಾನ ಅಂದ್ರ ಚೊಲೋ ಆತು ಬಿಡು ಅಂತ ಅಂದುಕೊಂಡೆ.

ಗೋಪಾಲ ಸಿಂಗನೂ ಸರಳ ಬರದಿದ್ದ. ಕನ್ನಡ ಚೊಲೊ ಇತ್ತು ಅವಂದೂ. ಅಕ್ಷರ ಸಹಿತ ಚೊಲೊ ಇತ್ತು. ಭಾಳ ಚಂದ ಅಂತ ಅಲ್ಲ. ಓದಲಿಕ್ಕೆ ತೊಂದ್ರಿ ಇರಲಿಲ್ಲ. ಓದಿದೆ ಪತ್ರಾ. ಮತ್ತ ಮತ್ತ ಓದಿದೆ.

ಪತ್ರ ಬಂದದ ಅಂದ ಮ್ಯಾಲೆ ಉತ್ತರಾ ಬರಿಲಿಕ್ಕೇ ಬೇಕು. ಅದೂ ತಾಪಡ್ ತೋಪ್ ಬರಿಬೇಕು. ಮತ್ತೊಂದು ಇನ್ಲ್ಯಾಂಡ್ ಲೆಟರ್ ತೆಗದೇ ಬಿಟ್ಟೆ. ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ, ನಾ ಬರೆವೆ, ಅಂತ ಸೆಂಟಿ ಆಗಿ ಏನೂ ಬರಿಲಿಲ್ಲ. ಅದು ಇದು ಸುದ್ದಿ ಬರದೆ. ನಮ್ಮಜ್ಜಿ ಕಾಲು ಮುರಕೊಂಡು ಬಿದ್ದಿದ್ದು, ಮಣಿಪಾಲ್ ಹಾಸ್ಪಿಟಲ್ಗೆ  ಅವರನ್ನ ಹಾಕಿದ್ದು, ನಂತರ ಅವರು ನಮ್ಮ ಮನಿಗೇ ಬಂದು ನನ್ನ ರೂಮಿನ್ಯಾಗೇ ಝೇಂಡಾ ಹಾಕಿದ್ದು, ಇತ್ಯಾದಿ ಎಲ್ಲ ಬರದೆ. ನಮ್ಮಜ್ಜಿ ಜೋಡಿ ಆಗ್ತಿದ್ದ ನನ್ನ ನಿತ್ಯದ ಜಗಳದ ಬಗ್ಗೆ ಮಾತ್ರ ಬರಿಲಿಲ್ಲ. ಅದು ಬರೆದು ಬಿಟ್ಟಿದ್ದರ ಅದು ಪತ್ರ ಆಗ್ತಿದ್ದಿಲ್ಲ, ಅದು ಒಂದು ಮಹಾಯುದ್ಧದ combat report ಆಗಿಬಿಡ್ತಿತ್ತು. ಈ ಪತ್ರದಾಗೂ, ಏ ಸಿಂಗಾ! ನೀ ಸರ್ದಾರ್ಜೀ ಏನಲೇ? ಅಂತ ಕೇಳಲಿಲ್ಲ. ನನಗ patience ಅನ್ನೋದು ಆ ಕಾಲದಲ್ಲಿ ಇರಲೇ ಇಲ್ಲ. ಗೋಪಾಲ್ ಸಿಂಗನ್ನ, ನೀ ಸರ್ದಾರ್ಜೀ ಏನು? ಅಂತ ಕೇಳಿ, ಸಿಖ್ಖರ ಬಗ್ಗೆ, ಖಲಿಸ್ತಾನ ಬಗ್ಗೆ, ಇಂದಿರಾ ಗಾಂಧಿಗೆ ಗುಂಡು ಹಾಕಿದ್ದರ ಬಗ್ಗೆ, ಎಲ್ಲ ಮಾತಾಡಬೇಕು ಅಂತ ಭಾಳ ಅನ್ನಿಸಲಿಕ್ಕೆ ಹತ್ತಿತ್ತು. ಆದರೂ ಹ್ಯಾಂಗೋ ಮಾಡಿ ತಡಕೊಂಡು ಗೋಪಾಲ್ ಸಿಂಗನ ಧರ್ಮದ ಮರ್ಮ ಅರಿಯುವ ಕಿತಬಿಯಿಂದ ದೂರ ಉಳಿದೆ. ಪತ್ರಾ ಡಬ್ಯಾಗ ಒಗದೆ. ನಾ ಈ ಪರಿ ಹಾಕ್ಕೊಂಡು ಪತ್ರಾ ಬರೆಯೋದು ನೋಡಿ, ಯಾರೋ ಕಿಡಿಗೇಡಿ ಹಿರಿಯರು, ಭಾರಿ 'ಪತ್ರ'ಕರ್ತ ಆಗಿ ಬಿಟ್ಟಿಯಲ್ಲಪಾ? ಅಂತ ಜೋಕ್ ಮಾಡಿದ್ದರು ಅಂತ ನೆನಪು. ಯಾರು? ನೆನಪಿಲ್ಲ.

ಒಂದು ವಾರದ ಮ್ಯಾಲೆ ಆತು. ಗೋಪಾಲ್ ಸಿಂಗನಿಂದ ಉತ್ತರಾ ಬರಲೇ ಇಲ್ಲ. ಏನಾತಪಾ? ಅಂತ ಚಿಂತಿ ಆತು. ಹ್ಯಾಂಗಿದ್ದಾನ ನಮ್ಮ ಹೊಸಾ ಗೆಳೆಯಾ? ಜಡ್ಡು ಗಿಡ್ಡು ಬಿದ್ದಾನೇನು ಮತ್ತ? ಅಂತ ವಿಚಾರ ಸಹಿತ ಬಂತು. ಪತ್ರ ಎಲ್ಲರೆ ಪೋಸ್ಟ್ ಒಳಗ ಕಳೆದು ಹೋತೋ ಹ್ಯಾಂಗ? ಅಂತ ಸಹಿತ ವಿಚಾರ ಬಂತು. ಮತ್ತೊಂದು ಪತ್ರಾ ಬರೆದು ಹಾಕಿ ಬಿಡಲೋ ಹ್ಯಾಂಗ ಅಂತ ವಿಚಾರ ಮಾಡಿದೆ. ಇನ್ನೊಂದು ದಿವಸ  ಬಿಟ್ಟು ನೋಡೋಣ ಅಂತ ಬಿಟ್ಟೆ.

ಮರುದಿವಸ ಮಧ್ಯಾನ ಸೂಟಿಗೆ ಮನಿಗೆ ಬಂದೆ. ಸಾಧಾರಣ ಬರ್ತಿದ್ದಿಲ್ಲ. ಯಾಕಂದ್ರ ಇರೋ ನಲವತ್ತೈದು ನಿಮಿಷದ ಸೂಟಿ ಒಳಗ ನಿರ್ಮಲ ನಗರದ ಮನಿಗೆ ಸೈಕಲ್ ಹೊಡೆದು, ಊಟ ಮಾಡಿ, ವಾಪಸ್ ಬರೋದ್ರಾಗ ಟೈಮ್ ಸಾಲತಿದ್ದಿಲ್ಲ. ಅಥವಾ ಭಾಳ ಟೈಟ್ ಆಗ್ತಿತ್ತು. ಲೇಟ್ ಆದ್ರ ಮಾಸ್ತರ್ ಮಂದಿ ಕಡೆ ಬೈಸ್ಕೊ ಬೇಕು. ಬೈಸ್ಕೊಳ್ಳಿಕ್ಕೆ ಬ್ಯಾರೆ ಕಾರಣ ಬೇಕಾದಷ್ಟು ಇದ್ದಾಗ ಇದೊಂದು ಯಾಕ? ಆವತ್ತು ಮಧ್ಯಾನದ ಪೋಸ್ಟಿಗೆ ಗೋಪಾಲ್ ಸಿಂಗನ ಪತ್ರ ಬಂದಿರಬಹುದೋ ಏನೋ ಅಂತ ಕಾತುರಾ. ಆತುರಾ. ಬಂದಿರಲೇ ಇಲ್ಲ. ಬರೆ ಊಟಕ್ಕ ಹೋದಂಗ ಆತು. ಮನಿಯೊಳಗ ಊಟ ಮಾಡಿ ಬಂದಿದ್ದಕ್ಕ ಭಟ್ಟನ ಅಂಗಡಿ ಭಟ್ಟಂಗ ಆವತ್ತಿನ ನಮ್ಮ ನಾಕಾಣೆ, ಎಂಟಾಣೆ ಬಿಸಿನೆಸ್ಸ್ ಮಿಸ್ ಆತು. ಛೆ! ಆವಾಗ ದಿನಕ್ಕಎರಡು ಸರೆ ಪೋಸ್ಟ್ ಬರ್ತಿತ್ತು. ಒಂದು ಸುಮಾರು ಮಧ್ಯಾನ ಒಂದುವರಿ (1.30 pm) ಟೈಮಿಗೆ. ಇನ್ನೊಂದು ಸಂಜಿಕ್ಕ ಸುಮಾರು ನಾಕೂವರಿ (4.30 pm) ಟೈಮಿಗೆ. ಈಗ ಬಂದಿಲ್ಲ ಅಂದ್ರ ಏನಾತು? ಸೆಕೆಂಡ್ ಡೆಲಿವರಿಗೆ ಬಂದರೂ ಬರಬಹುದು ಅಂತ ಹೇಳಿ ವಾಪಸ್ ಸಾಲಿಗೆ ಬಂದೆ. ಗೋಪಾಲ್ ಸಿಂಗನ ಪತ್ರ ಬಂದಿರಲಿಲ್ಲ ಅಂತ ಹೇಳಿ, ಪಂಕಜ್ ಉದಾಸನ ಗತೆ ಉದಾಸ ಆಗಿ, ಸೈಕಲ್ ಸ್ವಲ್ಪ ನಿಧಾನ ಹೊಡದೆ. ಮೊದಲೇ ಸಾಲಿಗೆ ಹೋಗೋ ಮೂಡು ಇರ್ತಿರಲಿಲ್ಲ. ಇವತ್ತಂತೂ ಮೂಡು ಫುಲ್ ಆಫ್ ಆಗಿಬಿಟ್ಟದ. ಹಾಂಗಾಗಿ ಸಾಲಿಗೆ ಬಂದು ಮುಟ್ಟಿದಾಗ ಲೇಟ್ ಆಗಿ, ಜೋಶಿ ಟೀಚರ್ ಬೊಂಬಡಾ ಹೊಡದ್ರು. ಬೈದರು. ಅವನೆಲ್ಲಾ ಕೇರ್ ಮಾಡೋದು ಬಿಟ್ಟು ಭಾಳ ವರ್ಷ ಆಗಿತ್ತು.

ಸಾಲಿ ಮುಗಿಸಿ ಸಂಜಿಗೆ ಮನಿಗೆ ಬಂದೆ. ಮೊದಲು ಕೇಳಿದ್ದು ಅದೇ ಪ್ರಶ್ನೆ. ಏ! ನನಗ ಏನರೆ ಪತ್ರ ಬಂದದ ಏನು? ಅಂತ. ಹ್ಞೂ....ಬಂದದ ನೋಡು ಅಂತ ಉತ್ತರ ಬಂತು. ಓಡಿದೆ ಪತ್ರ ಇಡೋ ಕಡೆ. ಗೋಪಾಲ್ ಸಿಂಗ್ ವಾಪಸ್ ಪತ್ರ ಬರೆದಿದ್ದ.

ನಾ ಮತ್ತೊಂದು ಪತ್ರಾ ರಿಟರ್ನ್ ಬರದೇ ಬಿಟ್ಟ. ನಿಂದು ಇದೊಂದು ಹೊಸಾ ಮಳ್ಳು ಶುರು ಆಜು ನೋಡು. ಅದೆಂತಾ ಆ ನಮ್ನಿ ಯಾರ್ಯಾರಿಗೋ ಪತ್ರಾ ಬರಿತ್ಯನಪಾ? ಅಂತ ಅಮ್ಮ ಶುದ್ಧ ಹವ್ಯಕ ಭಾಷೆಯಲ್ಲಿ ಬೈದರು. ಅವನ್ನೆಲ್ಲಾ ಕೇರ್ ಮಾಡೋದು ಬಿಟ್ಟು ಯುಗಗಳೇ ಕಳೆದು ಹೋಗಿದ್ದವು. ಮೊದಲಿಂದಲೂ ದೇವರಿಗೆ ಬಿಟ್ಟ ಹೋರಿ ಜಾತಿ ಮಂದಿ ನಾವು. ಮಾಡಿದ್ದೇ ಕಾರಬಾರ. ನೆಡದದ್ದೇ ಹಾದಿ. ಮಾಡಿಕೊಂಡಿದ್ದೇ ದಾರಿ.

ಇದು ಮೂರನೇ ಪತ್ರ. ಈಗ ಭಾಳ ವತ್ರ ಆಗಿ, ಪ್ರೆಶರ್ ಭಾಳ ಜಾಸ್ತಿ ಆಗಿ ಬಿಡ್ತು. ಈ ಗೋಪಾಲ್ ಸಿಂಗ್ ಅನ್ನೋ ಪತ್ರ ಮಿತ್ರನನ್ನ, ಏ ಸಿಂಗಾ! ನೀ ಸರ್ದಾರ್ಜೀ ಏನಲೇ? ಅನ್ನೋ ಪ್ರಶ್ನೆ ಕೇಳದೆ ಇದ್ದರ ನಾ ಹುಚ್ಚ ಆಗಿ ಬಿಡ್ತೇನಿ ಅಂತ ಅನ್ನಿಸಿ, ಕೇಳೇ ಬಿಟ್ಟೆ. ಆದ್ರ ಭಾಳ diplomatic ಆಗಿ ಕೇಳಿದೆ. ಏನಪಾ ಗೋಪಾಲಾ? ಎಲ್ಲಾ ಆರಾಮೇನು? ಅಭ್ಯಾಸ ಎಲ್ಲ ಹ್ಯಾಂಗ ನೆಡದದ? ಬಳ್ಳಾರಿ ಕೆಟ್ಟ ಹೀಟ್ ಅಂತ. ನನ್ನ ಕ್ಲಾಸ್ಮೇಟ್ ಒಬ್ಬವ ಎಸ್. ವಿನಯ್ ಅಂತ ಇದ್ದಾನ. ಏ...ಬರೆ initial ಅದ, ಅಡ್ಡೆಸರು ಇಲ್ಲ ಅಂತ ಹೇಳಿ ಆವಾ ಮೈಸೂರ್ ಕಡೆಯೆವಾ ಅಂತ ತಿಳ್ಕೊಬ್ಯಾಡೋ. ಅವನ ಫುಲ್ ಹೆಸರು ವಿನಯ್ ಸಿಂದಗಿ ಅಂತ. ಯಾಕ ಹೇಳಿದೆ ಅಂದ್ರ ಆವಾ ಬಳ್ಳಾರಿಯವ ನೋಡು. ನಿನಗ ಅಲ್ಲೆ ನಿಮ್ಮ ಊರಾದ ಬಳ್ಳಾರಿಯೊಳಗ ಯಾರರ ಸಿಂದಗಿ ಗೊತ್ತಿದ್ದಾರೇನು? ಅದು ಇದು ಅಂತ ಒಂದು ಅರ್ಧಾ ಇನ್ಲ್ಯಾಂಡ್ ಲೆಟರ್ ಕೊರೆದು ಕೊರೆದು ತುಂಬಿಸಿಬಿಟ್ಟೆ.

ಈಗರೆ ಗೋಪಾಲ್ ಸಿಂಗನ ಧರ್ಮದ ಮರ್ಮ ಅರಿಬೇಕು ಅಂತ ಹೇಳಿ, ಮೊದಲು ಒಂದು ಫುಲ್ paragraph ಸಿಖ್ಖ್ ಧರ್ಮ ಎಷ್ಟು ಮಹಾ ಧರ್ಮ, ನನ್ನ ಕಡೆ ಅಮರಚಿತ್ರ ಕಥಾ ಒಳಗ ಬಂದಾ ಸಿಂಗ್ ಬೈರಾಗಿ ಅಮರ ಚಿತ್ರಕಥಾ ಪುಸ್ತಕನೂ ಅದ, ಅವನೂ ದೊಡ್ಡ ಸಿಖ್ಖ ಗುರು ಮತ್ತ ಯೋಧ ಇದ್ದ. ಇನ್ನೂ ಎರಡು ಮೂರು ಸಿಖ್ಖ್ ಗುರುಗಳ ಮೇಲೂ ಅಮರಚಿತ್ರ ಕಥಾ ಪುಸ್ತಕ ಅವ. ಅವನ್ನೂ ಮುಂದಿನ ಸರೆ ಭಾರತ ಬುಕ್ ಡಿಪೊ ಪುಸ್ತಕದ ಅಂಗಡಿಗೆ ಹೋದಾಗ ಮುದ್ದಾಂ ತೊಗೊತ್ತೇನಿ. ಸಿಖ್ಖ್ ಧರ್ಮ ಅಂದ್ರ ಮಸ್ತ  ನೋಡಪಾ ಗೋಪಾಲ್. ಗಂಡು ಧರ್ಮ ನೋಡೋ ಅದು. ಅವರ ಸುದ್ದಿಗೆ ಬಂದ್ರ ಹಾಕ್ಕೊಂಡು ಒದ್ದು ಕಳಿಸೋ ದಮ್ಮು ಇರೋದು ಅಂದ್ರ ಅವರಿಗೆ ಮಾತ್ರ ನೋಡು, ಅಂತ ಹೇಳಿ ಫುಲ್ ಮಸ್ಕಾ ಹೊಡದು, ನೀನೂ ಸಿಖ್ಖ್ ಏನಪಾ ಗೋಪಾಲಾ? ನೀನೂ ಪೇಟಾ ಗೀಟಾ ಕಟ್ಟಿಕೊಂಡು, ಕೃಪಾಣ ಖಡ್ಗ ಹಿಡಕೊಂಡು ಹೋಗ್ತೀ ಏನು? ಅಂತ ಕೇಳೇ ಬಿಟ್ಟೇ. ಭಾಂಗಡಾ ಡಾನ್ಸ್ ಸಹಿತ ಮಾಡ್ತೀ ಏನೋ ಗೋಪಾಲ? ಅಂತ ಕೇಳಲಿಲ್ಲ. ಯಾಕಂದ್ರ ಆವಾಗ ಬಂಗಡೆ ಅಂತ ಮೀನು ಅದ ಅಂತ ಗೊತ್ತಿತ್ತೇ ಹೊರತೂ ಭಾಂಗಡಾ ಅಂತ ಲುಂಗಿ ಉಟ್ಟುಕೊಂಡು, ಅದನ್ನ ಎತ್ತಿಕೊಂಡು ಮಾಡೋ ಡಾನ್ಸ್, ಅದೂ ಸರ್ದಾರ್ಜೀ ಮಂದಿ ಮಾಡ್ತಾರ ಅಂತ ಗೊತ್ತೇ ಇರಲಿಲ್ಲ. ಗೊತ್ತಿದ್ದರ ಕೇಳೇ ಬಿಡ್ತಿದ್ದೆ. ಮತ್ತ ಪತ್ರಾ ಡಬ್ಯಾಗ ಒಗದು ಬಿಟ್ಟೆ. ರಾತ್ರಿ ಕನಸ್ಸಿನ್ಯಾಗ ಫುಲ್ ಸರ್ದಾರ್ಜೀಗಳೇ! ಅಮೃತಸರದ ಸುವರ್ಣಮಂದಿರದ ಸುವರ್ಣ ಕನಸುಗಳೇ.

ಈ ಸರೆ ಗೋಪಾಲ್ ಸಿಂಗನ ಪತ್ರ ಬರೋದು ಮತ್ತೂ ತಡಾ ಆತು. ಎಲ್ಲರೆ ಸಿಟ್ಟಿಗೆದ್ದು ಪತ್ರ ಮಿತ್ರ 'ಛಾಳಿ ಠೂ' ಅಂತ ದೋಸ್ತಿ ಬಿಟ್ಟು ಬಿಟ್ಟನೋ ಅಂತ ಭಾಳ tension ಆತು. ಆದ್ರ ಆವಾ ಹಾಂಗಿರಲಿಕ್ಕೆ ಇಲ್ಲ ಅಂತ ಅನ್ನಿಸಿತ್ತು. ಭಾಳ ತಣ್ಣಗ ಇದ್ದ ಅಂತ ಅನ್ನಿಸಿತ್ತು. ಗೋಪಾಲ ಅಂದ್ರ ದನಾ ಕಾಯವ. ಹಾಂಗಾಗಿ ಗೋವಿನ ಹಾಂಗ ಸಾಧು ಇದ್ದ ಅಂತ ಅನ್ನಿಸಿತ್ತು. ಮತ್ತ ನಾ ಕೇಳಿದ್ದು ಏನು? ನೀ ಸರ್ದಾರ್ಜೀ ಏನಪಾ? ಅಂತ ಅಷ್ಟೇ. ನೀ ಏನು ಹೊಲೆಯಾ ಏನಲೇ? ಅಂತ ಕೇಳಿಲ್ಲ.

ಈ ಸರೆ ಸುಮಾರು ಮೂರು ವಾರದ ನಂತರ ಗೋಪಾಲ್ ಪತ್ರ ಬರೆದ. ದೋಸ್ತ ದೋಸ್ತ ನಾ ರಹಾ ಅಂತ ಹಾಡಿಕೋತ್ತ ಕೂತಿದ್ದ ನಮಗೆ ಶಬರಿಗೆ ರಾಮ ಸಿಕ್ಕಾಗ ಅಕಿ ಬೋರಿ ಹಣ್ಣು ಬುಟ್ಟಿಯನ್ನು ಭಾಡ್-ಮೇ-ಜಾ ಅಂತ ತೂರಿ ಒಗದು ರಾಮನ ಕಡೆ ಓಡಿ ಬರ್ತಾಳ ನೋಡ್ರೀ ಆ ಫೀಲಿಂಗ್ ಒಳಗ ಬಂದು ಬಿಟ್ಟೆ. ಪತ್ರ ಗಡಿಬಿಡಿ ಒಳಗ ಬಿಚ್ಚಿ ಓದಿದೆ.

ಈ ಪತ್ರದಲ್ಲಿ ಗೋಪಾಲ್ ಸಿಂಗ್ ಒಂದು ಭಾರಿ ಸೌಂಡ್ advice ಕೊಟ್ಟಿದ್ದ. ಅದು ಏನು ಅಂದ್ರ, ಪತ್ರ ಮಿತ್ರತ್ವದೊಳಗ ಆಸಕ್ತಿ ಉಳಿಬೇಕು, ಭಾಳ ವರ್ಷದ ತನಕಾ ಅದು ಮುಂದುವರಿಬೇಕು, ಗೆಳೆತನ ಬೆಳಿಬೇಕು ಅಂದ್ರ ಬರಿಯೋ ಪತ್ರದಾಗ ಸತ್ವ ಇರಬೇಕು. ಸತ್ವ ಯಾವಾಗ ಬರ್ತದ? ಸ್ವಲ್ಪ ದಿವಸ ಟೈಮ್ ಕೊಟ್ಟರ ಬರ್ತದ. ಸತ್ವ ಯಾವದರಿಂದ ಬರ್ತದ? ಹೊಸ ಹೊಸ ಅನುಭವಗಳಿಂದ ಬರ್ತದ. ಅದಕ್ಕೆಲ್ಲಾ ಟೈಮ್ ಬೇಕು. ಹಾಂಗಾಗಿ ಪತ್ರ ಮಿತ್ರತ್ವದ ಗೋಲ್ಡನ್ ರೂಲ್ ಅಂದ್ರ ಒಂದು ಪದ್ಧತಿ ಪ್ರಕಾರ, ಎರಡು ಮೂರು ತಿಂಗಳಿಗೆ ಒಂದು ಪತ್ರಾ ಬರದ್ರ ಮಜಾ ಬರ್ತದ. ಹಾಂಗಾಗೇ ನಾನು ಬೇಕಂತಲೇ ಲೇಟ್ ಮಾಡಿ ಬರದೆ. ನಿನ್ನ ಪತ್ರ ಬಂದು ಮುಟ್ಟಿದ ಕೂಡಲೇ ನಾನೂ ಬರೆದು ಬಿಟ್ಟಿದ್ದರ ಏನೂ ಸುದ್ದಿ ಇರ್ತಿದ್ದೇ ಇಲ್ಲ. ಬಳ್ಳಾರಿಯೊಳಗ ಅಲ್ಲೆ ಹೋದೆ, ಇಲ್ಲೆ ಭೇಲ್ ಪುರಿ ತಿಂದೆ, ಅಲ್ಲೆ ಪಾನಿಪುರಿ ತಿಂದೆ ಅಂತ ಬರದ್ರ ಏನು ಮಜಾ? ನೀ ಇನ್ನೂ ಸಣ್ಣವ ಇದ್ದಿ. ನಿನಗ ಯಾರೂ ಹೆಚ್ಚು ಮಂದಿ ಪತ್ರ ಮಿತ್ರರು ಇದ್ದಂಗ ಇಲ್ಲ. ಹಾಂಗಾಗಿ ನನ್ನ ಪತ್ರ ಬಂದ ಕೂಡಲೇ ಉತ್ತರಾ ಬರೆದು ಬಿಡ್ತೀ. ಬೇಕಾದ್ರ ಇನ್ನೂ ನಾಕ ಮಂದಿ ಹೊಸಾ ಪತ್ರ ಮಿತ್ರರನ್ನ ಮಾಡಿಕೊ. ತಿಂಗಳಿಗೆ ಎಲ್ಲರಿಗೂ ಒಂದೇ ಪತ್ರಾ ಬರೆದರೂ ನಾಕು ಪತ್ರಾ ಆಗಿ ಹೋತು. ಅಂದ್ರ ವಾರಕ್ಕ ಒಂದು. ಮಜಾ ಮಾಡು, ಅಂತ ಭಾಳ ಚಂದಾಗಿ ಉಪದೇಶ ಮಾಡಿದ್ದ. ಅವಂಗ ದೇಶ ವಿದೇಶದಾಗ ಸುಮಾರು ಮಂದಿ ಪತ್ರ ಮಿತ್ರರು ಇದ್ದರಂತ. ಅವರ ಬಗ್ಗೆ ಕೂಡ ಬರದಿದ್ದ. ಆವಾ ಈ ಪತ್ರ ಮಿತ್ರತ್ವ ಅನ್ನೋದನ್ನ ಸೀರಿಯಸ್ ಆಗಿ ತೊಗೊಂಡು ಒಂದು ಪದ್ಧತಿ ಪ್ರಕಾರ ಮಾಡಿಕೊಂಡು ಹೊಂಟಿದ್ದ. ನಮಗೂ ಕಲಿಸಿದ. ಅದನ್ನ ಇನ್ನೂ ಮರೆತಿಲ್ಲ.

ಅದೆಲ್ಲಾ ಹೋಗ್ಲೀ. ಈ ಗೋಪಾಲಾ ಸರ್ದಾರ್ಜೀ ಸಿಂಗನೋ ಅಲ್ಲೋ ಅಂತ ತಿಳಕೋಬೇಕಾಗಿತ್ತು. ಲಗು ಲಗು ಓದಿ ಪತ್ರದ ಕೊನಿಗೆ ಬಂದಾಗ ಎದಿ ಧಕ್ ಧಕ್ ಅಂತ ಅಂತ ಹಲಗಿ ಬಾರಿಸಲಿಕ್ಕೆ ಹತ್ತಿತ್ತು.

ನಾನು ಸಿಖ್ಖ ಅಲ್ಲಾ. ನಾನು ರಜಪೂತ, ಅಂತ ಗೋಪಾಲ್ ಸಿಂಗ್ ಬರೆದು ಬಿಟ್ಟಿದ್ದ. ಹೋಗ್ಗೋ!!! ದೊಡ್ಡ ಮಟ್ಟದ KLPD ಆಗಿ ಬಿಡ್ತು. ರಜಪೂತರ ಸಿಂಗನೇ ಬೇಕು ಅಂದ್ರ ನಮ್ಮ ಬಾಲವಾಡಿ ದೋಸ್ತ ಗುಲಶನ್ ಇದ್ದೇ ಇದ್ದ. ಅವನ ತಮ್ಮನೂ ಇದ್ದ. ಗುಲಶನ್ ಸಿಂಗಾ ಬಿ ಕ್ಲಾಸಿಗೆ ಹೋದ ಮ್ಯಾಲೆ ಅವನ ದೋಸ್ತಿ ಬಿಟ್ಟು ಹೋಗಿತ್ತು. ಬಿಟ್ಟುಕೊಂಡವ ನಾನೇ. ಎಷ್ಟ ಪ್ರೀತಿ ಮಾಡ್ತಿದ್ದ ಆವಾ? ಸಿಖ್ಖ ಸಿಂಗನ್ನ ದೋಸ್ತಿ ಮಾಡಿಕೊಳ್ಳಲಿಕ್ಕೆ ಬಳ್ಳಾರಿಗೆ ಪತ್ರಾ ಬರೆದು, (ಗೊತ್ತಿಲ್ಲದೆ) ಮಂಗ್ಯಾ ಆದೆ ಅಂತ ಒಂದು ತರಹದ ಫೀಲಿಂಗ್ ಬಂತು. ಗೋಪಾಲ್ ಸಿಂಗ್ ಭಾಳ ಚೊಲೊ ಮನುಷ್ಯಾನೇ ಇದ್ದ. ಆದ್ರ ನಮ್ಮ ತಲಿಯಾಗ ಸರ್ದಾರ್ಜೀ ದೋಸ್ತಿ ಮಾಡಿ, ಏನೇನೋ ಹೇಳಿ, ಏನೇನೋ ಕೇಳಿ ತಿಳಕೋಬೇಕು ಅಂತ ಒಂದು ದೊಡ್ಡ ಹುಳಾ ತಲಿಯೊಳಗ ಗುಂಗಿ ಹುಳದ ಗತೆ ಗುಂಯ್ ಅನ್ನಲಿಕತ್ತಿತ್ತು. ಏನು ಮಾಡೋದು? ಸರ್ದಾರ್ಜೀ ಹುಚ್ಚು ಇಷ್ಟು ಇತ್ತು ಅಂದ್ರ ಸಿಕ್ಕಿದ್ರ ಭಿಂದ್ರನವಾಲೆನ ಒಮ್ಮೆ ಭೆಟ್ಟಿ ಆಗಬೇಕು ಅಂತ ಸಹಿತ ಇತ್ತು. ಏನು ಮಾಡೋದು? ಆವಾ ಸತ್ತು ಹೋಗಿದ್ದ. ಭಿಂದ್ರನವಾಲೆ ಇಲ್ಲ ಅಂದ್ರೇನಾತು? ನಮ್ಮ ದೋಸ್ತ ಬಾಬುಸಾಬ್ ಹಾಶಿಮವಾಲೆ ಇದ್ದಾನ. ಯಾವದೋ ಒಂದು ವಾಲೇ. ಬಾಬು ಸಿಖ್ಖ ಅಲ್ಲಾ. ಆವಾ ಮುಸ್ಲಿಂ. ಆದ್ರ ಜಿಗ್ರೀ ದೋಸ್ತಾ.

ಗೋಪಾಲ್ ಸಿಂಗ್ ಭಾಳ ಚಂದ ಸಲಹೆ ಕೊಟ್ಟಿದ್ದ. ಈ ಸರೆ ನಾನೂ immediately ತಿರುಗಿ ಪತ್ರಾ ಬರಿಲಿಲ್ಲ. ಮತ್ತ ಆವಾ ಸರ್ದಾರ್ಜೀ ಅಲ್ಲ ಅಂತ ಗೊತ್ತಾದ ಮೇಲೆ ಎಲ್ಲಾ ಉತ್ಸಾಹ ಫುಲ್ ಇಳಿದು ಹೋಗಿತ್ತು. ಆದರೂ ಹ್ಯಾಂಗೋ ಮಾಡಿ motivation ತಂದುಕೊಂಡು ಒಂದು ತಿಂಗಳಾದ ಮೇಲೆ ಮತ್ತ ಒಂದು ಪತ್ರಾ ಬರೆದೆ. ಗೋಪಾಲಾ, ನೀ ಸರ್ದಾರ್ಜೀ ಅಲ್ಲ ಅಂದ್ರೂ ಓಕೆ. ನೀ ರಜಪೂತರ ಸಿಂಗ ಅಂದ್ರೂ ತೊಂದ್ರಿ ಇಲ್ಲಪಾ. ರಾಣಾ ಪ್ರತಾಪ ಸಿಂಗ ನಿಮ್ಮ ಮಂದಿನೇ ನೋಡು. ಭಾಳ ಧೀರ ರಾಜಾ ಆವಾ. ರಾಣಾ ಪ್ರತಾಪನ ಕುದುರಿ ಮಸ್ತ ಇತ್ತು ನೋಡು. ಚೇತಕ್ ಅಂತ ಅದರ ಹೆಸರು. ನೀವೂ ಕುದರಿ ಗಿದರಿ ಇಟ್ಟೀರಿ ಏನು? ನನ್ನ ಕಡೆ ರಾಣಾ ಪ್ರತಾಪನ ಅಮರ ಚಿತ್ರಕಥಾ ಪುಸ್ತಕ ಸಹಿತ ಅದ. ಅಕ್ಬರನ ಒಬ್ಬಾಕಿ ಹೆಂಡತಿ ರಜಪೂತ್ ಇದ್ದಳು. ನಿನಗ ಗೊತ್ತದ ಗೋಪಾಲ್? ಅಕಿನನೋ ಮಾನ್ ಸಿಂಗ್ ಅನ್ನೋ ಮಾನಗೇಡಿಯ ತಂಗಿ. ಆವಾ ಎಂತಾ ರಜಪೂತ ಮಾರಾಯಾ? ಹೋಗಿ ಹೋಗಿ ತನ್ನ ತಂಗಿನ್ನ ಅಕ್ಬರಂಗ ಮದ್ವಿ ಮಾಡಿ ಕೊಟ್ಟಾ? ನಿನಗ ಏನು ಅನ್ನಿಸ್ತದ? ಅಂತ ಹೇಳಿ ಅದು ಇದು ಹಾಕಿ ಬರದರೂ ಇನ್ಲ್ಯಾಂಡ್ ಲೆಟರ್ ಅರ್ಧಾ ಸಹಿತ ತುಂಬವಲ್ಲದಾಗಿತ್ತು. ದೊಡ್ಡ ದೊಡ್ಡ ಹೊನಗ್ಯಾ ಅಕ್ಷರ ಮಾಡಿದರೂ ಸಹ ಸುಮಾರು ಮುಕ್ಕಾಲು ಮಾತ್ರ ತುಂಬಿತು. ಉಳಿದ ಜಾಗಾದಾಗ ಏನೋ ಚಿತ್ರಾ ತೆಗೆದು ಬಿಟ್ಟೆ. ಅಂತೂ ಇಂತೂ ಲೆಟರ್ ತುಂಬಿಸಿ ಪೋಸ್ಟ್ ಮಾಡಿ ಬಿಟ್ಟೆ. ಆ ಚಿತ್ರಾ ನೋಡಿದ ಗೋಪಾಲ್ ಸಿಂಗಗ ಸಂಶಯ ಬಂದಿರ್ತದ. ಈ ಆಸಾಮಿ ಕೈ ಎತ್ತವ ಇದ್ದಾನ ಅಂತ. ಆವಾಗ ಆ ಉದ್ದೇಶ ಇರಲಿಲ್ಲ. ಮುಂದ ಹಾಂಗೇ ಆತು.

ಗೋಪಾಲ್ ಸಿಂಗ್ ಮಾತ್ರ ಟೈಮ್ ಟೇಬಲ್ ಹಾಕ್ಕೊಂಡಾನೋ ಅನ್ನವರಂಗ ಮತ್ತ ಉತ್ತರ ಬರೆದ. ಈ ಸರೆ ನಾನೂ ಸಹಿತ ಟೈಮ್ ತೊಗೊಂಡು, wait ಮಾಡಿ ಪತ್ರಾ ಬರೆದಿದ್ದನ್ನ ಆವಾ appreciate ಮಾಡಿದ್ದ. ಮೊದಲು ಎರಡು ಸರೆ immediate ಆಗಿ ಬರದು ಅವನ ತಲಿ ತಿಂದು ಬಿಟ್ಟಿದ್ದೆ. ಈ ಸರೆ ಟೈಮ್ ಕೊಟ್ಟಿದ್ದಕ್ಕ ಪಾಪ ಅವಂಗ ಸ್ವಲ relief ಸಿಕ್ಕಿತ್ತು ಅಂತ ಅನ್ನಸ್ತದ.

ಈ ಸರೆ ನಾನು ಸುಮಾರು ಎರಡು ತಿಂಗಳು ಬಿಟ್ಟು ಏನೋ ಒಂದು ಪತ್ರಾ ಬರದೆ. ಈ ಸರೆ ಇನ್ಲ್ಯಾಂಡ್ ಲೆಟರ್ ಅರ್ಧಾ ಅಲ್ಲ ಗಿರ್ಧಾ ತುಂಬಿಸೋದ್ರಾಗ ಸಾಕಾಗಿ ಹೋಗಿಬಿಡ್ತು. ಅಯ್ಯೋ!! ಏನು ಬರಿಲಿ? ನಾ ಚಕ್ರವರ್ತಿ ಬ್ರಾಂಡಿನ ಕ್ರಿಕೆಟ್ ಬ್ಯಾಟ್ ತೊಗೊಂಡೆ ಅಂತ ಬರೀಲಾ? ನನ್ನ ಕ್ರಿಕೆಟ್ ಕಿಟ್ ಒಳಗ 'ಸೆಂಟರ್ ಪ್ಯಾಡ್' ಒಂದು ಇರಲೇ ಇಲ್ಲ. ಅದೂ ಒಂದು ಇರಲಿ ಅಂತ ಅದನ್ನೂ ಈ ಸರೆ ಕೊಡಿಸಿಕೊಂಡು ಬಿಟ್ಟೆ. ಈಗ ನನ್ನ ಕ್ರಿಕೆಟ್ ಕಿಟ್ ಫುಲ್ ಆತು ನೋಡಪಾ. ಎರಡು ವರ್ಷ ಕೂಡಿ, ತಿಂಗಳಾ ಒಂದೊಂದೇ ಸಾಮಾನು ಕಾಡಿ ಕಾಡಿ ಕೊಡಿಸಿಕೊಂಡು ಅಂತೂ ಫುಲ್ ಕ್ರಿಕೆಟ್ ಕಿಟ್ ಮಾಡಿಕೊಂಡೆ ನೋಡೋ ಗೋಪಾಲ. ಆದ್ರ ಸೆಂಟರ್ ಪ್ಯಾಡ್ ಮೊದಲೇ ತೊಗೊಬೇಕಾಗಿತ್ತು. ಅಲ್ಲಾ? ನಾವು ಆಡೋ ಕ್ರಿಕೆಟ್ ಗ್ರೌಂಡ್ ಹಿಂದಿನ ಮನಿಯೊಳಗ ಬ್ಯಾಂಕ್ ಮ್ಯಾನೇಜರ್ ಪದ್ಮಾಕರ್ ಇದ್ದವರು ಹೇಳಿದರು. ನೀವು ಕಾರ್ಕ್ ಬಾಲ ಒಳಗ ಕ್ರಿಕೆಟ್ ಆಡವರು ಮೊದಲು ಸೆಂಟರ್ ಪ್ಯಾಡ್ ತೊಗೊಂಡು, ಅದನ್ನ ಹಾಕ್ಕೊಂಡೇ ಆಡ್ರೀ ಅಂತ. ಯಾಕಂದ್ರ ಅವರ ಬ್ಯಾಂಕ್ ಟೀಮ್ ಒಳಗ ಒಬ್ಬವಂಗ ಬಡಿ ಬಾರದ ಅದೇ ಜಾಗಕ್ಕ ಲೆದರ್ ಬಾಲ್ ಬಡಿದು, ಪಾಪ್ ಹಾಸ್ಪಿಟಲ್ ಒಳಗ ಎರಡು ಮೂರು ತಿಂಗಳು ಇದ್ದು ಬಂದ ಅಂತ. ಇವೆಲ್ಲಾ ಬರೀಲಾ? ಬರಿಬಹುದಿತ್ತು. ಬರಿಲಿಲ್ಲ. ಮೂಡು ಹೋಗಿ ಬಿಟ್ಟಿತ್ತು. ಸರ್ದಾರ್ಜೀ ಹುಚ್ಚು ನಮಗೆ. ಏನೋ ಕಾಟಾಚಾರಕ್ಕ ಒಂದು ಪತ್ರಾ ಬರೆದು ಒಗೆದುಬಿಟ್ಟೆ.

ಗೋಪಾಲ್ ಸಿಂಗ್ ಮಾತ್ರ ಮತ್ತ ಪತ್ರಾ ಬರೆದ. ಈ ಸರೆ ಅವಂದೂ ಪತ್ರ ಸಣ್ಣದಾಗಿತ್ತು. ಮಾತಾಡ್ಲಿಕ್ಕೆ ಏನೂ ಇರಲೇ ಇಲ್ಲ. ಮುಂದ ಒಂದಕ್ಕೊಂದು ಆಗಿ, ಈಗ ಬರದರೆ ಆತು, ಆ ಮ್ಯಾಲೆ ಬರಿಯೋಣ, preliminary ಎಕ್ಸಾಮ್ ಆದ ಮ್ಯಾಲೆ ನೋಡೋಣ ಅಂತ ಹೇಳಿ ನಾ ತಿರುಗಿ ಗೋಪಾಲ್ ಸಿಂಗಗ ಪತ್ರ ಬರಿಲೇ ಇಲ್ಲ. ಒಂದು ಪತ್ರ ಮಿತ್ರತ್ವ ಗೋರಿ ಸೇರಿತು. ಸರ್ದಾರ್ಜೀ ಇದ್ದರ ಸತ್ ಶ್ರೀ ಅಕಾಲ್ ಅಂತ ಹೇಳಿ ಜಿಗದ್ ಜಿಗದ್ ಪತ್ರಾ ಬರಿತಿದ್ದೆ. ಇಲ್ಲೆ ಅಕಾಲ ಟೈಮ್ ಒಳಗ ಸತ್ತು ಹೋತು ಒಂದು ಪತ್ರ ಮಿತ್ರತ್ವ. ಸತ್ತು ಶ್ರೀ ಅಕಾಲ್!!!

ಪತ್ರ ಮಿತ್ರತ್ವ reciprocal basis ಮೇಲೆ ಇರ್ತದ. ಭಾಳ ಆತ್ಮೀಯತೆ ಬಂದ ಮ್ಯಾಲೆ ಅಕಸ್ಮಾತ ನೀವು ಬರಿಲಿಲ್ಲ ಅಂದ್ರೂ ನಿಮ್ಮ ಪತ್ರ ಮಿತ್ರ ಬರಿಬಹುದು. ನೀವೂ ಸಹಿತ ಅವರು ಬರಿಲಿಲ್ಲ ಅಂದ್ರೂ ನೀವಾಗೇ ಬರಿಬಹುದು. ಆದ್ರ ಶುರು ಶುರುವಿನಲ್ಲಿ ಮಾತ್ರ pure reciprocal ಬೇಸಿಸ್. ನೀವು ಒಂದು ಬರದ್ರ ಅವರು ತಿರುಗಿ ಒಂದು ಬರಿತಾರ ಅಷ್ಟೇ. ಮತ್ತ ಗೋಪಾಲ್ ಸಿಂಗ್ ಪತ್ರ ಮಿತ್ರತ್ವ ಅನ್ನೋದನ್ನ ಸೀರಿಯಸ್ ಆಗಿ ತೊಗೊಂಡು ಭಾಳ ಮಂದಿ ಜೋಡಿ ಪತ್ರ ವ್ಯವಹಾರ ಮಾಡ್ತಿದ್ದ. ನಾನೂ ಬರಿಲಿಲ್ಲ. ಅವನೂ ವಾಪಸ್ ಬರಿಲಿಲ್ಲ. It's OK. That pen friendship was going nowhere!

ಈ ರೀತಿಯಾಗಿ ಮೊದಲನೇ ಪತ್ರ ಮಿತ್ರತ್ವ ಮುಗಿದಿತ್ತು. ನಿಜ ಜೀವನದಲ್ಲಿ ಹ್ಯಾಂಗ ಎಲ್ಲಾರ ಜೋಡಿ wavelength ಮ್ಯಾಚ್ ಆಗೋದಿಲ್ಲೋ ಹಾಂಗೆ ಆತು ಇಲ್ಲಿ ಸಹ. ಯಾವದೇ ಹಾರ್ಡ್ ಫೀಲಿಂಗ್ಸ್ ಇರಲಿಲ್ಲ. ಗೋಪಾಲ್ ಸಿಂಗಗೂ ಗೊತ್ತಾಗಿರ್ತದ. ಒಂದಿಷ್ಟು ಒಳ್ಳೆ base ಹಾಕಿಕೊಟ್ಟು ಹೋದ. ಅದಕ್ಕ ಅವಂಗ ಸದಾ ಥ್ಯಾಂಕ್ಸ್.

ಇಷ್ಟು ಹೊತ್ತಿಗೆ ನಮ್ಮ ಸರ್ದಾರ್ಜೀ ಹುಚ್ಚು ಸುಮಾರು ಬಿಟ್ಟು ಹೋಗಿತ್ತು. ಆದ್ರ ಪತ್ರ ಮಿತ್ರರ ಹುಚ್ಚು ಹಾಂಗೇ ಇತ್ತು. ಗೋಪಾಲನ ಜೋಡಿ workout ಆಗಲಿಲ್ಲ ಅಂದ್ರೇನಾತು? ಬ್ಯಾರೆ ಪತ್ರ ಮಿತ್ರರನ್ನ ಹುಡಕಿದರ ಆತು ಅಂತ ವಿಚಾರ ಮಾಡಿದೆ.

ಸಾಲಿಯೊಳಗ ಏನೋ ಮಾತಾಡಿಕೋತ್ತ ಇದ್ದಾಗ, ಲೇ! ನನಗ ಪತ್ರ ಮಿತ್ರ ಇದ್ದಾನ. ಗೊತ್ತದ  ಏನ್ರಲೇ? ಅಂತ ಕೇಳಿದರ ಸುಮಾರು ಮಂದಿ, ಈ ಹೆಗಡೆ ಏನು ಮಾತಾಡ್ತಾನೋ ಏನೋ? ಅನ್ನೋ ಲುಕ್ ಕೊಟ್ಟು, ಹೌದಾ? ಅಂತ ಬಾಯಿ ತೆಗದಿದ್ದರೆ, ಯಾರೋ ಒಬ್ಬವಾ, ನನಗೂ 'ಐತಿ' ಪತ್ರ ಮಿತ್ರ ಅಂದಿದ್ದ. ಅವಂಗ ಯಾರೋ ನಪುಂಸಕ ಲಿಂಗದ ಪತ್ರ ಮಿತ್ರ ಇರಬೇಕು. ಅದಕ್ಕೆ ಐತಿ ಅಂದುಬಿಟ್ಟಾನ. ದೇವರಾಣಿಗೂ ಅವಂಗ ಪತ್ರ ಮಿತ್ರ ಅಂದ್ರ ಏನು ಅಂತ ಗೊತ್ತಿರಲಿಲ್ಲ. ಆದ್ರ ಕೆಲೊ ಮಂದಿ ಇರ್ತಾರ ನೋಡ್ರೀ, ಕುರಾ ಆಗ್ಯದ ಅಂದ್ರ, ನನಗೂ ಆಗ್ಯದ ಅಂದು ಬಿಡ್ತಾರ. ಒಟ್ಟಿನ್ಯಾಗ ನಿಮ್ಮ ಕಡೆ ಇದ್ದಿದ್ದು ಅವರ ಕಡೆನೂ ಅದ ಅಂತ ತೋರಿಸ್ಕೋಬೇಕು. ಅರ್ಥಾ ಆಗಲಿ ಬಿಡಲಿ. ಆ ಟೈಪ್ ಮನುಷ್ಯಾ.

ಹೀಂಗ ಇದ್ದಾಗ ಸಚಿನ್ ಕೊಟ್ಟೂರ ಅನ್ನವಂಗ ಏನೋ ಫ್ಲಾಶ್ ಆತು.

ಮಹೇಶಾ! ಅಂದಾ.

ಏನಲೇ? ಅಂತ ಕೇಳಿದೆ.

ಪುಟಾಣಿ ಓದ್ತಿ ಏನು? ಅಂತ ಕೇಳಿದ.

ಏನು ಪುಟಾಣಿ ಹಚ್ಚೀಲೆ? ಹಾಂ? ಪುಟಾಣಿ ತಿಂತಾರ. ಇಲ್ಲಾ, ಪುಟಾಣೆ ಟೈಲರ್ ಇದ್ದಾನ. ಅವನ ಕಡೆ ವಸ್ತ್ರಾ ಹೊಲಸ್ತಾರ. ಹೀಂಗಿದ್ದಾಗ ಪುಟಾಣಿ ಓದೋದು ಎಲ್ಲಿಂದ ಬಂತಲೇ? ಅಂತ ಕೇಳಿದ.

ಮಹೇಶಾ, ಈ ಪುಟಾಣಿ ಅಂದ್ರ ಒಂದು monthly ಮ್ಯಾಗಜಿನ್ ಮಾರಾಯಾ. ನಮ್ಮ ವಯಸ್ಸಿನವರಿಗೆ ಮಾಡಿದ್ದು. ಒಂದು ತರಹ ಚಂದಮಾಮ ಇದ್ದಂಗ ನೋಡು, ಅಂತ ಹೇಳಿದ.

ಹಾಂಗೆನಲೇ? ಗೊತ್ತಿಲ್ಲ ಬಿಡಪಾ, ಅಂತ ಹೇಳಿದೆ.

ಪುಟಾಣಿ ಒಳಗ ಸಹಿತ ಪತ್ರ ಮಿತ್ರರು ಅಂತ ಹೇಳಿ ಒಂದಿಷ್ಟು ಮಂದಿ ಹೆಸರು, ವಿಳಾಸ, ಹವ್ಯಾಸ ಎಲ್ಲ ಹಾಕಿರ್ತಾರ ನೋಡಪಾ, ಅಂತ ಹೇಳಿದ ಸಚಿನ್ ಕೊಟ್ಟೂರ.

ಹೊಸಾ ಪತ್ರ ಮಿತ್ರನ್ನ ಯಾಕ ಪುಟಾಣಿ ಮಾಸಪತ್ರಿಕೆಯಲ್ಲಿ ಹುಡಕಬಾರದು? ಅಂತ ಒಂದು ಐಡಿಯಾ ಫ್ಲಾಶ್ ಆತು.

ಮುಂದಿನ ಪತ್ರ ಮಿತ್ರನನ್ನ ಪುಟಾಣಿ ಪತ್ರಿಕೆಯಲ್ಲಿ ಕ್ಯಾಚ್ ಹಾಕಬೇಕು ಅಂತ ವಿಚಾರ ಮಾಡಿದೆ.

(ಸಶೇಷ. ಮುಂದುವರಿಯಲಿದೆ) (ಭಾಗ - ೨ ಇಲ್ಲಿದೆ)

1 comment:

Vimarshak Jaaldimmi said...


Is it:

The pen is mightier than the sword.

or

The penis mightier than the sword?