Saturday, January 25, 2014

'ಮಂಗೋಲಿಯನ್ ಕಿಸ್' ಕೊಟ್ಟಿದ್ದು 'ಕಿಸ್ ಗೌತಮಿ' ಮಂಗ್ಯಾನೇ?

ರೂಪಾ ಬಾಯಾರಿಗೆ ಮಂಗ್ಯಾ ಬೆಲ್ಲಾ ಕೊಟ್ಟು ಹೋತಂತ! ಅನ್ನೋ ಸುದ್ದಿ BBC ಯಲ್ಲಿ ನ್ಯೂಸ್ ಫ್ಲಾಶ್ ತರಹ ಬಿತ್ತರವಾಯಿತು.

ಇದು ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್ BBC ಅಲ್ಲ. ಇದು ನಮ್ಮ ಧಾರವಾಡದ ಮಾಳಮಡ್ಡಿಯ ಬ್ರಾಹ್ಮಣರ ಬ್ರಾಡ್ಕಾಸ್ಟಿಂಗ್ ಕಂಪನಿ. ಇದೂ ಒಂದು ತರಹದ BBC ನೇ. ಭಾಳ ಲಗೂ ಲಗೂ ಸುದ್ದಿ ಬಿತ್ತರ ಆಗ್ತಾವ. ದೊಡ್ಡ ಚಂಡಿಕಿಗಳೆಲ್ಲ ಪ್ರಸಾರ ಮಾಡುವ ಬಾನುಲಿ ಟಾವರ್ ಆಗಿ, ಸಣ್ಣ ಸಣ್ಣ ಚಂಡಿಕಿ ಜುಟ್ಟಗಳೆಲ್ಲ ಅಂತಹ ಬಾನುಲಿ ಪ್ರಸಾರಗಳನ್ನು ಹಿಡಿಯುವ ಏರಿಯಲ್ ಗಳಾಗಿ, ಮಡಿಯಮ್ಮಗಳ ಬೋಡು ತಲೆಗಳೆಲ್ಲ ರೇಡಿಯೋ ತರಂಗಗಳ reflector ಆಗಿ, ಸುದ್ದಿ ಮಾತ್ರ ಭಾಳ ಲಗೂ ಲಗೂ ಹರಡಿಬಿಡ್ತದ.

ರೂಪಾ ಬಾಯಿ ಅಂದ್ರ ನಮ್ಮ ರೂಪಾ ವೈನಿನೇ ಅಂತ ಖಾತ್ರಿ ಇತ್ತು. ಆದ್ರ ಅವರಿಗೆ ಮಂಗ್ಯಾ ಏನು ಬೆಲ್ಲಾ ಕೊಟ್ಟು ಹೋತು? ಅಂತ ತಿಳಿಲಿಲ್ಲ. ಎಲ್ಲೋ ದೂರದ ಇಂಡೋನೇಷ್ಯಾ ಒಳಗ ಗಿಡಾ ಹತ್ತಿ, ತೆಂಗಿನಕಾಯಿ ಹರಿದು, ಕೆಳಗ ಇಳಿಸಿಕೊಡೋ ಮಂಗ್ಯಾ ಇರ್ತಾವಂತೆ. ಹಾಂಗೆ ರೂಪಾ ವೈನಿ ಕಡೆ ಸಹಿತ, ತೊರಗಲ್ಲಮಠನ ಅಂಗಡಿಗೋ, ಕೊಟ್ಯಾಳನ ಅಂಗಡಿಗೋ ಹೋಗಿ ಬೆಲ್ಲಾ, ಸಕ್ಕರಿ, ಇತ್ಯಾದಿ ಕಿರಾಣಿ ತಂದು ಕೊಡುವ ಮಂಗ್ಯಾ ಇರಬಹುದಾ? ಅಂತ ವಿಚಾರ ಬಂತು. ಇದ್ದರೂ ಇರಬಹುದು. ಕೆಲಸದವರು ಕಮ್ಮಿ ಆದ ಮ್ಯಾಲೆ ಇಂತಹ ವ್ಯವಸ್ಥಾ ಮಾಡಿಕೋಬೇಕಾಗ್ತದ. ಹೇಳಿ ಕೇಳಿ ರೂಪಾವೈನಿ. ಕೊರಳಾಗ ಮಂಗಳ ಸೂತ್ರಾ. ಕೈಯ್ಯಾಗ ಮಂಗನ ಸೂತ್ರ. ಇದ್ದರೂ ಆಶ್ಚರ್ಯ ಇಲ್ಲ ತೊಗೋರೀ.

ದಿಗ್ಭ್ರಮೆ ಆಗಿದ್ದು ಇದೇ ಸುದ್ದಿಯನ್ನು BBC ಯ ಇನ್ನೊಂದು ಚಾನೆಲ್ಲಿನಲ್ಲಿ ಕೇಳಿದಾಗ. ಅದೇ ಕಿಡಿಗೇಡಿ ಹುಡುಗರ ಚಾನೆಲ್.

ಲೇ....ಗೊತ್ತದ ಏನಲೇ? ಅಕಿ ರೂಪಾ ಕಾಕುಗ ಮಂಗ್ಯಾ ಬಂದು ಕಿಸ್ ಹೊಡೆದು ಹೋತಂತಲೇ, ಅಂತ ಪಡ್ಡೆ ಹುಡುಗರು ಮಾತಾಡುತ್ತ ಸಾಲಿ ಕಾಲೇಜಿಗೆ ಹೊಂಟಿದ್ದರು. ಅದನ್ನು ಕೇಳಿದ ಮ್ಯಾಲೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಅನ್ನಿಸ್ತು.

ಏ....ಇವನ.....ಪಲ್ಯಾ....ಬಾರಲೇ ಇಲ್ಲಿ, ಅಂತ ಹೇಳಿ ನಮ್ಮ ಪುರಾತನ ದೋಸ್ತ ಕೊಳಕ್ ಶೀನ್ಯಾನ ಮಗನಾದ ಪ್ರಹ್ಲಾದನನ್ನು ಕರದೆ.

ಏನ್ರೀ ಕಾಕಾ? ಅಂತ ಪಲ್ಯಾ ಬಂದ.

ಏನಲೇ ಅದು ರೂಪಾ ಕಾಕುಗ ಮಂಗ್ಯಾ ಏನೋ ಮಾಡಿ ಹೋತು ಅಂತ  ಮಾತಾಡಿಕೋತ್ತ ಹೊಂಟೀರಿ? ಹಾಂ? ಏನಂತ ಮಾತು ಅದು? ಅಂತ ಸ್ವಲ್ಪ ಜೋರಾಗೇ ಕೇಳಿದೆ.

ಹೌದ್ರೀ ಕಾಕಾ! ಹಾಂಗೆ ಆಗ್ಯದಂತ. ರೂಪಾ ಕಾಕು....ಅವರರೀ ನಿಮ್ಮ ಗೆಳ್ಯಾ ಚೀಪ್ಯಾನ ಹೆಂಡತಿ. ಅಕಿಗೆ ಮಂಗ್ಯಾ ಬಂದು ಕಿಸ್ ಕೊಟ್ಟು ಹೋಗಿ ಬಿಟ್ಟದ ಅಂತ ಊರ್ತುಂಬ ಸುದ್ದಿ, ಅಂತ ಹೇಳಿಬಿಟ್ಟ.

ಕಿಸ್ಸಾ? ಏನಲೇ ಕಿಸ್? ಇದರ ಕಿಸ್ಸಾ ಏನು ಅಂತ ಹೇಳಿ ಕಾಲೇಜಿಗೆ ಹೋಗೋ. ತಲಿಯಲ್ಲ ಮಾತಾಡಬ್ಯಾಡ, ಅಂತ ಹೇಳಿದೆ.

ಏನು tube light ಇದ್ದಾನ ಇವಾ? ಅನ್ನೋ ಲುಕ್ ಕೊಟ್ಟಾ ಪಲ್ಯಾ.

ರೀ...ಮಂಗೇಶ ಕಾಕಾ....ಕಿಸ್ ಅಂದ್ರ ಚುಮ್ಮಾ. ಚುಮ್ಮಾ ಚುಮ್ಮಾ ದೇ ದೇ ಹಾಡಿನಂಗ ಮಂಗ್ಯಾ ಬಂದು ರೂಪಾ ಕಾಕುಗ ಚುಮ್ಮಾ ಚುಮ್ಮಾ ಲೇ ಲೇ ಚುಮ್ಮಾ ಅಂತ ಹೇಳಿ ಕಿಸ್ ಕೊಟ್ಟು ಹೋಗಿಬಿಟ್ಟದ ಅಂತ ಸುದ್ದಿರಿ. ಮನುಷ್ಯಾರ ಕಡೆನೇ ಚುಮ್ಮಾ ಸಿಗೋದು ಕಷ್ಟ ಆಗ್ಯದ. ಹಂತಾದ್ರಾಗ ಮಂಗ್ಯಾನ ಕಡೆ ಸಹಿತ ಚುಮ್ಮಾ ಕೊಡಿಸಿಕೊಂಡಾರ ನೋಡ್ರೀ ಅವರು. ಪುಣ್ಯಾ ಮಾಡಿ ಬಂದಿರಬೇಕು ರೂಪಾ ಕಾಕಿ. ನಾ ಬರತೇನ್ರೀ, ಅಂತ ಹೇಳಿ ಪಲ್ಯಾ ಹೋದ.

ಕಿಸ್ಸಿಂಗ್ ಕಿಡಿಗೇಡಿ ಮಂಗ್ಯಾ

ಆವಾ ಏನೋ ಹೋದ. ಆದ್ರ ನಾವು ಮಾತ್ರ ಈ ಸುದ್ದಿ ಕೇಳಿ ಆದ ಶಾಕ್ ನಿಂದ ಹೊರಗ ಬರಲಿಲ್ಲ.

ರೂಪಾ ವೈನಿಗೆ ಮಂಗ್ಯಾ ಏನು ಮಾಡ್ತು? ಕಿಸ್ ಹೊಡೀತಾ? ಹಾಂ? ಖರೇ? ನಂಬೂ ಮಾತೆ? ಹಾಂ?

ಅಷ್ಟರಾಗ ಕರೀಮ ಸಹಿತ ಅಲ್ಲೇ ಬಂದು ಹಾಜರ್ ಆದ. ನಮ್ಮ ಹೆಡ್ ಕ್ವಾರ್ಟರ್ ಆದ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನಿಂತಿದ್ದಿವಿ.

ಕರೀಮಾ, ಸುದ್ದಿ ಕೇಳಿದಿ ಏನೋ? ಅಂತ ಕೇಳಿದೆ.

ಆವಾ BBC ಸ್ಟೇಷನ್ ಗೆ ರೇಡಿಯೋ ಹಚ್ಚೋದಿಲ್ಲ. ಹಚ್ಚಿದರೂ ಅವನಿಗೆ ಆ ಸುದ್ದಿ ಎಲ್ಲ ತಿಳಿಯೋದಿಲ್ಲ. ಕೇಳಿ ಉಪಯೋಗಿಲ್ಲ.

ಕ್ಯಾ ಸಾಬ್? ಅಂತ ಕೇಳಿದ ಕರೀಂ.

ಏನಿಲ್ಲ ತೊಗೋ. ನೀ ಪಾನ್ ಹಾಕು. ನನಗೂ ಒಂದು ಡ್ರೈ ಮಾವಾ ಕಟ್ಟಿಸಿಬಿಡು, ಅಂತ ಹೇಳಿ ಆ ಕಡೆ ನೋಡೋದ್ರಾಗ ಚೀಪ್ಯಾ, ರೂಪಾ ವೈನಿ ಬರೋದು ಕಾಣಿಸ್ತು. ಕನ್ಯಾರತ್ನಗಳಾದ ಕುಂತಿ, ನಿಂತಿ ಸಹಿತ ಇದ್ದರು.

ಹತ್ತಿರ ಬಂದರು. ರೂಪಾ ವೈನಿ ತುಟಿ ಕೆಳಗ ಬ್ಯಾಂಡೇಜ್ ಇತ್ತು. ಅದು ಏನೋ ಹೇಳ್ತು.

ನಮಸ್ಕಾರ ರೂಪಾ ವೈನಿ, ಚೀಪ್ಯಾ. ಏನು ಈ ಹೊತ್ತಿನ್ಯಾಗ? ಅಡಿಗಿ ಆತೇನ್ರೀ ವೈನಿ? ನಿಂದೇನು ಸೂಟಿ ಏನಲೇ ಇವತ್ತು? ಅಂತ ಕೇಳಿದೆ.

ರೂಪಾ ವೈನಿ ಹೊಟ್ಟಿ ಮ್ಯಾಲೆ ಕೈ ಆಡಿಸಿದರು.

ಏನ್ರೀ ವೈನಿ? ಹೊಟ್ಟಿ ಮ್ಯಾಲೆ ಕೈಯಾಡಿಸಲಿಕತ್ತೀರಿ? ಹಾಂ? ಊಟ ಆಗಿ ಹೋತಾ? ಹಾಂ? ಅಂತ ಕೇಳಿದೆ.

ಹುಚ್ಚಾ....ಇಂಜಕ್ಷನ್ ತೊಗೊಂಡ ನೋವಿನ್ಯಾಗ ನಾ ಹೊಟ್ಟಿ ಮ್ಯಾಲೆ ಕೈಯಾಡಿಸಿದರ ಊಟ ಆತೇನು ಅಂತ ಕೇಳ್ತಿಯಲ್ಲೋ? ಬುದ್ಧಿಗೇಡಿ, ಅಂದ್ರು ರೂಪಾ ವೈನಿ.

ಅದೇನ್ರೀ ಹೊಟ್ಟಿ ಮ್ಯಾಲೆ ಇಂಜಕ್ಷನ್? ಹಾಂ? ಕೈ ರಟ್ಟಿ ಮ್ಯಾಲೋ ಅಥವಾ ಕೈ ರಟ್ಟಿ ಮ್ಯಾಲೆ ಮಾಂಸ ಇಲ್ಲದ ನರಪೇತ ನಾರಾಯಣ ನಾರಾಯಣಿಯರಿಗೆ ಕುಂಡಿ ಮ್ಯಾಲೆ ಇಂಜಕ್ಷನ್ ಕೊಡೋದು ರೂಢಾ. ಇಂತಾದ್ರಾಗ ಹೊಟ್ಟಿ ಮ್ಯಾಲೆ ಇಂಜಕ್ಷನ್ ಕೊಟ್ಟಾರ ಅಂದ್ರ ಏನ್ರೀ? ಅಂತ ಕೇಳಿದೆ.

ಕುತ್ತಾ ಕಾಟಾ ಕ್ಯಾ ಭಾಭಿ ಜಾನ್? ಪಾಗಲ್ ಕುತ್ತಾ? ಅಂತ ಕರೀಂ ಕೇಳಿ, ಅದು ಹುಚ್ಚಿಂದು ನಾಯಿ ಕಡಿದರೆ ಹೊಟ್ಟಿನ್ಯಾಗೆ ಇಂಜಕ್ಷನ್ ಕೊಡ್ತಾರೆ ಸಾಬ್, ಅಂತ ಫುಲ್ ವಿವರಣೆ ಕೊಟ್ಟ. ಭಾರಿ GK ಮಗಂದು.

ಹಾಂ?????!!!

ಹ್ಞೂ....ಹುಚ್ಚ ನಾಯಿ ಅಲ್ಲ. ಹುಚ್ಚ ಮಂಗ್ಯಾ ಬಂದು ಕಡಿದು ಹೋತೋ....ಅಂತ ರೂಪಾ ವೈನಿ ಲಬೋ ಲಬೋ ಅಂತ ಸಣ್ಣಾಗಿ ಹೊಯ್ಕೊಂಡು ಅಳೋ ಮಾರಿ ಮಾಡಿದರು.

ಹಾಂ? ಮಂಗ್ಯಾ ಕಡೀತಾ? ಛೆ! ಛೆ! ಅದೆಂತಾ ಮಂಗ್ಯಾರೀ? ನೋಡಿ ನೋಡಿ ನಿಮ್ಮನ್ನೇ ಕಡಿದು ಹೋಗ್ಯದ ಅಂದ್ರ, ಅಂತ ಹೇಳಿದೆ.

ಈ ನಿಂತಿ ಅನ್ನೋ ಸಣ್ಣ ಹುಡುಗಿ ಮುಗಿಲ ಮೆಣಶಿನಕಾಯಿ ಗತೆ ಭಾಳ ಚುರಕ್ ಇದ್ದಾಳ. ಇಡಬಾರದ ಟೈಮ್ ಒಳಗ, ಇಡಬಾರದ ಕಡೆ ಇಟ್ಟು ಬಿಡ್ತಾಳ. ಬತ್ತಿ.

ಬರೇ ಕಡಿದು ಹೋಗಲಿಲ್ಲ. ಪಪ್ಪಿ ಕೊಟ್ಟು ಕಡಿದು ಹೋತು! ಅಂತ ಅಂದು ಬಿಟ್ಟಳು ನಿಂತಿ.

ಅಕಿ ತಲಿ ಮ್ಯಾಲೆ ರೂಪಾ ವೈನಿ ಮೊಟಕಿ, ಗಪ್ ಕೂಡ!! ಅಂತ ತಾಕೀತು ಮಾಡಿದರು. ನಿಂತಿ ಮಳ್ಳ ಮಾರಿ ಮಾಡಿ, ನಾ ಏನು ಹೇಳಬಾರದ್ದು ಹೇಳಿದೆ? ಅನ್ನೋ ಲುಕ್ ಕೊಟ್ಟಳು.

ಅಷ್ಟರಾಗ ದೊಡ್ದಾಕಿ ಕುಂತಿ ದೊಡ್ಡ ಬಾಂಬೇ ಹಾಕಿದಳು. ಅಕಿ ಕ್ವೀನ್ ಆಫ್ ಉಪದ್ವ್ಯಾಪಿತನ. ಪ್ರಿನ್ಸೆಸ್ಸ್ ಆಫ್ ಅಧಿಕಪ್ರಸಂಗಿತನ.

ಇಕಿ ಕುಂತಿ ದೊಡ್ದಾಕಿ. ಎಲ್ಲಾ terminology ಪಕ್ಕಾ ಕಲ್ತು ಬಿಟ್ಟಾಳ. ಸಿನೆಮಾ ಗಿನೆಮಾ ಹುಯ್ಯ ಅಂತ ನೋಡ್ತಾಳ. ಐದಾರ್ನೆತ್ತಾ ಕ್ವಾಣ ಆಗ್ಯಾಳ.

ಬರೆ ಪಪ್ಪಿ ಅಲ್ಲಾ. ಅವ್ವಗ ಮಂಗ್ಯಾ ಚುಮ್ಮಾನೇ ಕೊಟ್ಟು ಕಡಿದು ಹೋತು, ಅಂದು ಬಿಟ್ಟಳು. ಕಿಸ್ಸಿಂಗ್ ಕಿಡಿಗೇಡಿ ಇಕಿ ಕುಂತಿ.

ಗಪ್ ಕೂಡ ಕುಂತಿ! ಅಂತ ಹೇಳಿ ರೂಪಾ ವೈನಿ ದೊಡ್ಡ ಮಗಳ ಕುಂಡಿಗೆ ಒಂದು ಏಟಾ ಕೊಟ್ಟರು. ಅಕಿ ಜಾಬಾದ್ ಕುಂತಿ, ಮುಂದ ಜಿಗಿದು ತಪ್ಪಿಸಿಕೊಂಡಳು.

ಅಲ್ಲರೀ, ಮಂಗ್ಯಾ ಕಡಿದು ಹೋತು ಅಂದ ಮಾತ್ರಕ್ಕ ಹುಚ್ಚನಾಯಿ ಕಡದ್ರ ಕೊಡೊ ಇಂಜಕ್ಷನ್ ಕೊಟ್ಟು ಬಿಡೋದ? ಯಾವ ಡಾಕ್ಟರ್ರೀ ಅವರು? ಹಾಂ? ನಾಯಿ ಕಡದರ, ನಾಯಿ ಕಟ್ಟಿ ಹಾಕಿ ಇಟ್ಟು, ಅದನ್ನ observe ಮಾಡಿ, ನಾಯಿಗೆ ಏನರೆ ಹುಚ್ಚ ಹಿಡಿತು ಅಂತ ಖಾತ್ರಿ ಆದ್ರ ಮಾತ್ರ ಕಡಿಸಿಕೊಂಡವರಿಗೆ ಹದಿನಾಕ ಇಂಜಕ್ಷನ್ ಹೊಟ್ಟಿ ಮ್ಯಾಲೆ, ಹೊಕ್ಕಳ ಸುತ್ತಾ ಕೊಡ್ತಾರ. ಹಾಂಗಿದ್ದಾಗ ಮಂಗ್ಯಾ ಕಡೀತು ಅಂದಾಕ್ಷಣ ಹೊಟ್ಟಿ ಮ್ಯಾಲೆ ಇಂಜಕ್ಷನ್ ಶುರು ಮಾಡಿ ಬಿಡೋದ? ಹಾಂ? ಅಂತ ಕೇಳಿದೆ.

ಏ....ಹುಚ್ಚ ಮಂಗೇಶ! ಸಾಕಿದ ನಾಯಿ ಕಡದ್ರ ಹಾಂಗ ಮಾಡ್ತಾರ. ಕಿಸ್ ಕೊಟ್ಟಿದ್ದು ಅಲ್ಲಲ್ಲ ಕಡಿದು ಹೋಗಿದ್ದು ಮಂಗ್ಯಾ. ಆ ಮಂಗ್ಯಾನ್ನ ಹಿಡದು ಕಟ್ಟಿ ಹಾಕವರು ಯಾರು? ನೀನಾ? ಏನಂತ ಮಾತಾಡ್ತೀಯೋ? ಬುದ್ಧಿ ಇಲ್ಲದವನೇ? ಅಂತ ವೈನಿ ಬೊಂಬಡಾ ಹೊಡೆದರು.

ಹಾಂ! ಹೌದ ನೋಡ್ರೀ ವೈನಿ. ಮಂಗ್ಯಾ ಹೋಗಿಬಿಡ್ತು ಅಲ್ಲಾ? ಏನು ಮಾಡಲಿಕ್ಕೆ ಬರ್ತದ? ರಿಸ್ಕ್ ಯಾಕ ಅಂತ ಹೇಳಿ ಡಾಕ್ಟರ ಹುಚ್ಚ ನಾಯಿ ಇಂಜಕ್ಷನ್ ಶುರು ಮಾಡಿರಬೇಕು. ಚೊಲೋನೆ ಆತು ಬಿಡ್ರೀ. ಸುಮ್ಮನ ಯಾಕ ರಿಸ್ಕ್? ಎಲ್ಲರೆ ಆ ಮಂಗ್ಯಾಗ ಹುಚ್ಚು ಹಿಡಿದಿದ್ದರೆ ಆ ಮ್ಯಾಲೆ ನಿಮಗ ಅದು ಹಿಡಿದು, ರಾಮಾ ರಾಮಾ. ಅವೆಲ್ಲಾ ಬ್ಯಾಡೆ ಬ್ಯಾಡ. ಹದಿನಾಕು ಇಂಜೆಕ್ಷನ್ ತೊಗೊಂಡು ಮುಗಿಸಿಬಿಡ್ರೀ. ಏನೋ ಹದಿನಾಕು ದಿನದ ವೃತಾ ಮಾಡಿ ಮುಗಿಸಿದೆ ಅಂತ ತಿಳ್ಕೊಂಡು ಮಾಡಿ ಬಿಡ್ರೀ, ಅಂತ ಇಲ್ಲದ ಉದ್ರಿ ಉಪದೇಶ ಕೊಟ್ಟೆ.

ಅಲ್ಲಾ, ಮಂಗ್ಯಾ ಬಂದು ಕಿಸ್ ಕೊಟ್ಟು ಕಡಿದು ಹೋತು ಅಂದ್ರ ಏನು ಮಾಡ್ಲಿಕತ್ತಿದ್ದಿರಿ ಎಲ್ಲಾರೂ? ಅಂತ ಕೇಳಿದೆ.

ಕಿಡಿಗೇಡಿ ಕುಂತಿ ಮತ್ತ ಬಾಂಬ್ ಹಾಕೇ ಬಿಟ್ಟಳು.

ಎಲ್ಲಾರೂ ಕೂಡಿ ಸಿಗರೇಟ್ ಸೇದಲಿಕತ್ತಿದ್ದಿವಿ. ಮಂಗ್ಯಾ ಬಂದು ಅವ್ವಗ ಚುಮ್ಮಾ ಕೊಟ್ಟು, ಸಿಗರೇಟ್ ಕಸಕೊಂಡು ಹೋಗಿ ಬಿಡ್ತು!!!! ಅಂತ ಕುಂತಿಯ ಆಟಂ ಬಾಂಬ್ ಈ ಸಲ.

ಹಾಂ!!!!! ಎಲ್ಲರೂ ಸಿಗರೇಟ್ ಸೇದಲಿಕತ್ತಿದ್ದಿರಾ? ಏನಲೇ ಚೀಪ್ಯಾ ಇದು? ಹಾಂ? ಅಂತ ಕೇಳಿದೆ. ಫುಲ್ ಥಂಡಾ ಹೊಡೆದಿದ್ದೆ ನಾ. ಫುಲ್ ಫ್ಯಾಮಿಲಿ ಸಿಗರೇಟ್ ಸೇದಲಿಕತ್ತಿತಂತ. ಎಲ್ಲರೆ ನೋಡೀರಾ ಈ ಟೈಪ್ ಫ್ಯಾಮಿಲಿ?

ಏ....ಆಟಿಕಿ ಸಿಗರೇಟು ಮಾರಯಾ. ನೆನಪಿಲ್ಲೇನು ನಿನಗ? ನಾವು ಸಣ್ಣವರು ಇದ್ದಾಗ ಸೇದಿದಾಂಗ ಸ್ಟೈಲ್ ಮಾಡ್ತಿದ್ದಿವಿ. ಸೇಮ್ ಸಿಗರೇಟ್ ಇದ್ದಂಗ ಇರೋ ಟಾಫಿ ಮಾರಯಾ. ಒಳಗ ಸಿಹಿ ಇರ್ತದ. ಬಾಯಾಗ್ ಇಟಗೊಂಡು ಚೀಪೋದು. ಅಂತಾ ಸಿಗರೇಟ್ ಸೇದಲಿಕತ್ತಿದ್ದಿವಿ. ಈ ಹುಡುಗ್ಯಾರು ಆ ಸಿಗರೇಟ್ ಬೇಕು ಅಂತ ಹಟಾ ಮಾಡಿದ್ದವು. ತಂದು ಕೊಟ್ಟಿದ್ದೆ. ಎಲ್ಲರೂ ಕೂಡಿ ಕಟ್ಟಿ ಮ್ಯಾಲೆ ಆ ಟಾಫಿ ಸಿಗರೇಟ್ ಸೇದಿಕೊತ್ತ ಅಲ್ಲಲ್ಲ ಚೀಪಿಕೋತ್ತ ನಿಂತಿದ್ದಿವಿ. ಆವಾಗ ಈ ಅವಘಡ ಆತು ನೋಡಪಾ, ಅಂತ ಹೇಳಿದ ಚೀಪ್ಯಾ.

ಓ....ಆ ಆಟಿಕಿ ಸಿಗರೇಟೇನು? ಗೊತ್ತಾತು. ನೀವೇನೋ ಆಟಿಕಿ ಸಿಗರೇಟ್ ಅಂತ ಸೇದಿಕೊತ್ತ ನಿಂತ್ರೀ. ಪಾಪ ಆ ಮಂಗ್ಯಾಕ್ಕ ಏನು ಗೊತ್ತು? ಅದಕ್ಕ ಸಿಗರೇಟ್ ಬೇಕಾಗಿತ್ತು. ಅದಕ್ಕ ತಲಬು ಎದ್ದು ಬಿಟ್ಟಿತ್ತು. ತಡಕೊಳ್ಳಲಿಕ್ಕೆ ಆಗಲಿಲ್ಲ. ಬಂದಿದ್ದೆ ರೂಪಾ ವೈನಿ ನೋಡಿ, ಎಷ್ಟು ಚಂದ ಇದ್ದಾರ ಅಂತ ಹೇಳಿ, ಸಿಗರೇಟ್ ಬಾಯಿಂದ ಕಿತ್ತುಕೊಂಡು, ಸಿಗರೇಟ್ ಕೊಟ್ಟರು ಅಂತ ಖುಷಿಯೊಳಗ ಒಂದು ಚುಮ್ಮಾ ಕೊಟ್ಟು ಹೋತು ಅಂತ ಕಾಣಸ್ತದ. ಆವಾಗ ರೂಪಾ ವೈನಿ ಗುದ್ಯಾಡಿರಬೇಕು. ಅದಕ್ಕ ಕಡಿದು ಬಿಟ್ಟದ ಅಷ್ಟ. ಇಲ್ಲಂದ್ರ ಆ ಮಂಗ್ಯಾಕ್ಕ ಕಡಿಯೋ ಪ್ಲಾನ್ ಇದ್ದಂಗ ಇಲ್ಲ, ಅಂತ ವಿವರಣೆ ಕೊಟ್ಟೆ.

ಎಷ್ಟು ಚಂದ ಇದ್ದಾರ....ಅಂತ ನಾ ಹೇಳಿಬಿಟ್ಟೆ ಅಂತ ಕೇಳಿದ ರೂಪಾ ವೈನಿ ಖುಷ್ ಆಗಿಬಿಟ್ಟರು. ನಾ ಹೇಳಿದ್ದು ಮಂಗ್ಯಾಕ್ಕ ರೂಪಾ ವೈನಿ ಚಂದ ಕಂಡರು ಅಂತ. ಅವರು ಅದನ್ನ ತಿಳಿದುಕೊಳ್ಳಲೇ ಇಲ್ಲ. ಚೀಪ್ಯಾ ಅಂತು ರೂಪಾ ವೈನಿಗೆ 'ಸರ್ಕಾರಿ ಸ್ತ್ರೀಲಿಂಗ' ಅಂತ ಚ್ಯಾಸ್ಟಿ ಮಾಡ್ತಾನ. ಹಿಂದಿಂದ. ಹಂಗೆಲ್ಲಾ ಅನ್ನಬಾರದು. ಅದು ಚೊಲೊ ಅಲ್ಲ. ಏನೇ ಇರಲಿ, ಚಂದ ಇದ್ದಿ ನೋಡಪಾ, ಚಂದ ಇದ್ದಿ ನೋಡವಾ ಅಂದು ಬಿಟ್ಟರ ಎಷ್ಟು ಕೆಲಸ ಆಗ್ತಾವ ಅನ್ನೋದು ಹಾಂಗ ಅಂದು ಅಂದು ಕೆಲಸ ಮಾಡಿಸಿಕೊಂಡವರಿಗೇ ಗೊತ್ತು. ಈ ಸೀಕ್ರೆಟ್ ನಾ ನಿಮಗೂ ಹೇಳಿಬಿಟ್ಟೆ ಈಗ. ಇರ್ಲಿ.

ಪಾಪ ಆ ಮಂಗ್ಯಾಕ್ಕ ತಂಬಾಕಿನ ಚಟಾ ಹ್ಯಾಂಗ ಹತ್ತಿರಬಹುದು? ಅಂತ ಚೀಪ್ಯಾ ಕೇಳಿದ.

ಮಂದಿ ಸೇದಿ ಒಗದ ಬೀಡಿ, ಸಿಗರೇಟ್ ಎಲ್ಲಾ ಈ ಮಂಗ್ಯಾಗೋಳು ತಿಂದು, ಸೇದಿ ಚಟಾ ಹಚ್ಚಿಕೊಂಡು ಬಿಡ್ತಾವ. ಆ ಮ್ಯಾಲೆ ತಲಬು ಕಾಡ್ಲಿಕತ್ತ ಕೂಡಲೇ ಅವಗಳ ತಲಿ ಕೆಟ್ಟು ಇಂತಾ ಕೆಲಸಾ ಮಾಡ್ತಾವ. ಶೆರೆ ಕುಡಿಯೋ ಚಟದ ಆಡು, ಚಹಾ ಕುಡಿಯೋ ಚಟದ ನಾಯಿ ಎಲ್ಲ ಭಾಳ ಕಾಮನ್. ಆಗಾಗ ಪೇಪರ್ ಒಳಗ ಬರ್ತಿರ್ತದ ನೋಡು ಸುದ್ದಿ. ಹಾಂಗೇ ಈ ಮಂಗ್ಯಾ ಕೂಡ. ಹತ್ಯದ ಅದಕ್ಕ ತಂಬಾಕಿನ ಚಟಾ. ನಿಕೋಟಿನ್ ಭಾಳ ಅಡಿಕ್ಟಿವ್ ಮಾರಯಾ. ನಂದು ಕರೀಮಂದು ಎಲ್ಲಾ ಹಾಲತ್ ನೋಡು. ದವಡಿ ಮೂಲ್ಯಾಗ ಗುಟಕಾ, ಮಾವಾ ಇಲ್ಲ ಅಂದ್ರ ಹುಚ್ಚ ಹಿಡದಂಗ ಆಗಿ ಬಿಡ್ತದ, ಅಂತ ಹೇಳಿ ಮಾವಾ ಪಿಚಕಾರಿ ಉಗಳಿ ಫ್ರೆಶ್ ಮಾವಾ ಹಾಕ್ಕೊಂಡೆ.

ನೀವು ಗಂಡಸೂರು ಆ ಹುಚ್ಚ ಮಂಗ್ಯಾನ ಬಗ್ಗೆ ಹುಚ್ಚುಚ್ಚರೆ ಮಾತಾಡಿಕೋತ್ತ ನಿಂದರ್ರೀ ಬೇಕಾದ್ರ. ನನಗ ಭಾಳ ಕೆಲಸ ಅದ, ಅಂತ ಮಕ್ಕಳನ್ನು ಕರೆದುಕೊಂಡು ರೂಪಾ ವೈನಿ ಹೊಂಟು ಬಿಟ್ಟರು. ಚೀಪ್ಯಾನೂ ಹೊಂಟಿದ್ದ. ನಾವೇ ನಿಲ್ಲಿಸಿಕೊಂಡ್ವೀ.

ಲಗೂನ ಬರ್ರಿ. ತಾಸ್ ಗಟ್ಟಲೆ ಹಾಳ ಹರಟಿ ಹೊಡಕೋತ್ತ ನಿಂತು ಬಿಡಬ್ಯಾಡ್ರೀ. ಮನಿಗೆ ಬಂದು ಸ್ವಲ್ಪ ಕಟ್ಟಿಗಿ ಒಡಿರಿ. ಆ ಮಂಗೇಶಗ ಮತ್ತ ಕರೀಮಗ ಏನೂ ಕೆಲಸ ಇಲ್ಲ, ಬಗಸಿ ಇಲ್ಲ. ನಿಮಗ ಮನಿ ಮಠ ಹೆಂಡತಿ ಮಕ್ಕಳು ಇದ್ದಾರ ಅಂತ ಸ್ವಲ್ಪ ಖಬರು ಇರಲೀ, ಅಂತ ಪಾರ್ಟಿಂಗ್ ಶಾಟ್ ಕೊಟ್ಟು ರೂಪಾ ವೈನಿ ಕುಂತಿ, ನಿಂತಿ ಎಳಕೊಂಡು ಹೋಗಿ ಬಿಟ್ಟರು.

ಏನಲೇ ಚೀಪ್ಯಾ? ರೂಪಾ ವೈನಿಗೆ 'ಮಂಗೋಲಿಯನ್ ಕಿಸ್' ಸಿಕ್ಕಿತಲ್ಲಲೇ? ಹಾಂ? ನಿನಕಿಂತ ಲಕ್ಕಿ ನೋಡಲೇ ಆ ಮಂಗ್ಯಾ, ಅಂತ ಕಾಡಿಸಿದೆ. ಕರೀಮ ಸಾಥ ಕೊಟ್ಟ.

ಈಗ ಮಂಗೋಲಿಯನ್ ಕಿಸ್ ಅಂದ್ರ ಏನಪಾ? ಹಾಂ? ಫ್ರೆಂಚ್ ದೇಶದ ಮಂದಿ ಕೊಡೋದು ಫ್ರೆಂಚ್ ಕಿಸ್. ಈಗ ಮಂಗೋಲಿಯಾ ದೇಶದವರು ಕೊಡೋದು ಮಂಗೋಲಿಯನ್ ಕಿಸ್ಸಾ? ಯಾವ ಮಂಗೋಲಿಯನ್ ಬಂದು ನನ್ನ ಹೆಂಡತಿಗೆ ಕಿಸ್ ಹೊಡೆದಾ? ನಮಗ ಮಂಗೋಲಿಯಾ ದೇಶದ ಯಾವದೇ ಮಂದಿ ಗೊತ್ತಿಲ್ಲ. ಮಂಚೂರಿಯಾ ದೇಶದ ಗೋವರ್ಧನ್ ಆಚಾರ್ರು ಗೊತ್ತಿದ್ದಾರ. ಅವರು ಕಿಸ್ ಗಿಸ್ಸ್ ಕೊಡೋದಿಲ್ಲ. ಅವರು ವೇದಾಂತ ಕಲಿಲಿಕ್ಕೆ ಬಂದಾರ. ನೀನೂ ಸಹ ಅವರನ್ನ ಭೆಟ್ಟಿ ಆಗಿ. ಹಾಂಗಿದ್ದಾಗ ರೂಪಾಗ ಮಂಗೋಲಿಯನ್ ಕಿಸ್ ಅದು ಇದು ಅಂತೀ ಅಲ್ಲಾ, ನಿನಗ ನಾಚಿಗಿ ಬರೋದಿಲ್ಲಾ? ಹಾಂ? ಅಂತ ಕೇಳಿದ ಚೀಪ್ಯಾ.

ಹುಚ್ಚ ಸೂಳಿ ಮಗ. ತಲಿನೇ ಇಲ್ಲ.

ಲೇ ಹಾಪಾ! ಮಂಗೋಲಿಯನ್ ಕಿಸ್ ಅಂದ್ರ ಮಂಗ್ಯಾ ಕೊಟ್ಟ ಕಿಸ್ ಅಂತ. ಮಂಗೋಲಿಯಾದವರು ಕೊಟ್ಟಿದ್ದು ಅಂತ ಅಲ್ಲ. ಏನ ಹಾಪ್ ಇದ್ದೀಲೆ? ಫ್ರೆಂಚ್ ಕಿಸ್ ಅಂದ್ರ ಬರೆ ಫ್ರೆಂಚ್ ಮಂದಿ ಇಷ್ಟೇ ಕೊಡ್ತಾರ ಏನಲೇ? ಹಾಂಗಿದ್ರ ಆಸ್ಟ್ರೇಲಿಯನ್ ಕಿಸ್ ಬರೇ ಆಸ್ಟ್ರೇಲಿಯಾದವರು ಮಾತ್ರ ಕೊಡ್ತಾರ ಏನಲೇ? ಹಾಂ? ಏನ್ ಹಾಪ್ ಇದ್ದೀಪಾ? ಇದರ ಮ್ಯಾಲೆ ಸಂಸಾರ ಕೂಡಾ ಮಾಡ್ತೀ. ಇಷ್ಟೂ ಗೊತ್ತಿಲ್ಲ, ಅಂತ ಹೇಳಿದೆ.

ಆಸ್ಟ್ರೇಲಿಯನ್ ಕಿಸ್ ಅಂದ್ರಾ? ಅಂತ ಕೇಳಿದ ಚೀಪ್ಯಾ.

Same as french kiss but down under, ಅಂತ ಕ್ಲುಪ್ತವಾಗಿ ಹೇಳಿದೆ.

ಥೂ! ಹೊಲಸ್ ಸೂಳಿ ಮಗನ. ಏನಂತ ಹೇಳ್ತೀಲೆ? ಅಂತ ನನಗ ಬೈದಾ ಚೀಪ್ಯಾ.

ಅಯ್ಯ ಇವನ! ಆಸ್ಟ್ರೇಲಿಯನ್ ಕಿಸ್ಸಿನ ಡೆಫಿನಿಷನ್ ಕೇಳಿದವ ನೀನು. ಕೇಳಿದ್ದಕ್ಕ ಹೇಳಿದರ, ಥೂ!ಹೊಲಸ್ ಅಂತೀ ಅಲ್ಲಲೇ? ನಾ ಹೇಳಿದ್ದರ ಅರ್ಥ ಏನು? ಆಸ್ಟ್ರೇಲಿಯಾ ಎಲ್ಲದ? ಪೂರ್ತಿ ಕೆಳಗ ಅದ. down under ಅನ್ನೋದರ ಅರ್ಥ ಅಷ್ಟೇ. ಅದಕ್ಕ ಬ್ಯಾರೆ ಅರ್ಥ ಹಚ್ಚೋ ಅಗತ್ಯ ಇಲ್ಲ. ಹೀಂಗ ಭೌಗೋಳಿಕವಾಗಿ ಪೂರ್ತಿ ಕೆಳಗ ಇರೋ ಆಸ್ಟ್ರೇಲಿಯಾದ ಮಂದಿ ಫ್ರೆಂಚ್ ಕಿಸ್ ಕೊಡೋದಕ್ಕ ಆಸ್ಟ್ರೇಲಿಯನ್ ಕಿಸ್ಸಿನ ಡೆಫಿನಿಷನ್ Same as french kiss but down under ಅಂತ ಅದ. ಅಂದ್ರ Same as french kiss but down under in Australia, ಅಂತ. ನೀ ಏನೋ ತಿಳಕೊಂಡು ಥೂ! ಹೊಲಸ್! ಅಂದ್ರ ನಾ ಏನು ಮಾಡಲೀ? ನಿನಗ GK ಇಲ್ಲ. ಓದೋದಿಲ್ಲ ಬಿಡೋದಿಲ್ಲ. ಗೊತ್ತಿಲ್ಲದ್ದನ್ನ ಹೇಳಿದರ ಕೇಳೋದಿಲ್ಲ, ಅಂತ ಹೇಳಿದೆ.

down under ಅಂದ್ರ ನಾ ಏನೋ ಅಂತ ತಿಳಕೊಂಡೆ, ಅಂದಾ ಚೀಪ್ಯಾ.

ಅವರ ಅವರ ಭಾವಕ್ಕೆ, ಅವರ ಅವರ ಭಕುತಿಗೆ ಬಿಟ್ಟದ್ದು, ಅಂತ ಹೇಳಿ ಅಲ್ಲಿಗೇ ಮಾತು ನಿಲ್ಲಿಸಿದೆ.

ಅಲ್ಲಲೇ ಚೀಪ್ಯಾ, ನೀವು ನಾಕೂ ಮಂದಿ ಸಿಗರೇಟ್ ಸೇದಿಕೋತ್ತ ನಿಂತಾಗ ಮಂಗ್ಯಾ ರೂಪಾ ವೈನಿಂದನೇ ಸಿಗರೇಟ್ ಯಾಕ ಕಸಿದುಕೊಂಡು ಹೋತು? ನೀವೂ ಮೂರು ಮಂದಿ ಇದ್ದರಲ್ಲಾ? ಹಾಂ? ಅಂತ ಕೇಳಿದೆ.

ನನಗೇನು ಗೊತ್ತು? ಆ ಹುಚ್ಚ ಮಂಗ್ಯಾಗ ನನ್ನ ಹೆಂಡತಿ ಕಂಡ್ರ ಯಾಕಷ್ಟು ಪ್ರೀತಿ ಅಂತ ಮುಂದಿನ ಸರೆ ಸಿಕ್ಕಾಗ ಕೇಳ್ತೇನಿ, ಅಂದ ಚೀಪ್ಯಾ. ಇರಿಟೇಟ್ ಆತು ಅವಂಗ.

ಈಗ ಚೀಪ್ಯಾನ ಕಾಡೋ ಗುತ್ತಿಗಿ ಕರೀಮಾ ತೊಗೊಂಡ.

ಸಾಬ್, ಅದು ಯಾಕೆ ಗೊತ್ತು ಕ್ಯಾ? ಈ ಚೀಪ್ಯಾ ಇಲ್ಲಾ, ಇವನು ಹಲ್ಲು ತಿಕ್ಕೋದು ಸ್ನಾನಾಗೆ ಮಾಡೋವಾಗ. ಭಾಬಿ ಜಾನ್ ಇಲ್ಲಾ, ಅವರು ಮುಂಜಾನೆ ಮುಂಜಾನೆ ಹಲ್ಲು ತಿಕ್ಕಬಿಟ್ಟಿ, ತಲಿಗೆ ಸ್ನಾನಾಗೆ ಮಾಡಿಕೊಂಡಿ, ಮಲ್ಲಿಗಿ ಹೂವಾಗೆ ಹಾಕ್ಕೊಂಡಿ, ಅತ್ತರ್ ಪತ್ತರ್ ಹೊಡಕೊಂಡಿ, ಪೌಡರ್ ಎಲ್ಲಾ ಹಾಕ್ಕೊಂಡಿ, ಮಸ್ತ ಖುಶಬೂ ಹೊಡೀತಾ ನಿಂತಿರ್ತಾರೆ. ಈ ಚೀಪ್ಯಾ ನೋಡಿ, ಬದಬೂ ಹೊಡಿತಾನೆ. ಅದು ಆ ಬಂದರ್ ಗೆ ಕೂಡಾ ಗೊತ್ತು ಐತೆ. ಅದಕ್ಕೆ ಅದು ಈ ಚೀಪ್ಯಾನ ಬಾಯಿಂದ ಸಿಗರೇಟ್ ಕಿತ್ತುಕೊಳ್ಳಾಕೆ ಹೋಗಿ, ಬದಬೂ ಇಂದಾ ಮೂರ್ಛೆ ತಪ್ಪೀತು ಅಂತಾ ಐಡಿಯಾ ಮಾಡ್ಬಿಟ್ಟಿ, ರೂಪಾ ಭಾಭಿಯಿಂದನೇ ಸಿಗರೇಟ್ ತೊಗೊಂಡು ಹೋಗಿದೆ ಅಂತ ನಮಗೆ ಅನ್ನಸ್ತದೆ. ಕ್ಯಾ ಬೋಲ್ತಾ ಚೀಪ್ಯಾ ಭಾಯಿ? ಅಂತ ಚೀಪ್ಯಾಗ ಇರಿಟೇಟ್ ಮಾಡಿದ ಕರೀಮಾ.

ಏ....ಸಾಬಾ....ಸ್ವಲ್ಪ ಮುಚ್ಚಿಕೊಂಡು ಕೂಡಪಾ. ನಿನ್ನ ಬಾಯಿ ಒಮ್ಮೆ ತೆಗೆದು ಗಿಡದ ಮ್ಯಾಲೆ ಕೂತ ಮಂಗ್ಯಾಗೆ ತೋರಿಸಿಬಿಡು. ನೋಡಿ, ಹೆದರಿ, ಗಿಡದ ಮ್ಯಾಲಿನ ಮಂಗ್ಯಾ ಹಿಡಕೊಂಡು ಜೋತಾಡೋ ಟೊಂಗಿ ಕೈಬಿಟ್ಟು, ಕೆಳಗ ಬೀಳದಿದ್ದರ ನನ್ನಾಣಿ. ಇಪತ್ನಾಕ ತಾಸೂ ಆ ಪಾನು, ಗುಟ್ಕಾ ಜಗಿದು ಜಗಿದು, ಹಲ್ಲೆಲ್ಲ ಕೆಂಪಗ, ಖರ್ರಗ ಆಗಿ, ಬಾಯಿ ಬಿಟ್ಟರೆ ಒಳ್ಳೆ ರಕ್ತಾ ಹೀರಿದ ಡ್ರಾಕುಲಾ ಕಂಡಂಗ ಕಾಣ್ತೀ ನೋಡಲೇ, ಅಂತ ಕರೀಮಗ ರಿವರ್ಸ್ ಕೊಟ್ಟ.

ಹಲ್ಲು ಅಷ್ಟು ಖರಾಬ್ ಆಗಿ ಹೋದವೋ ಅಂತ ಕರೀಮ ಭೀಮೂನ ಪಾನ್ ಶಾಪಿನಲ್ಲಿ ಇದ್ದ ಕನ್ನಡಿಯಲ್ಲಿ ತನ್ನ ಹಲ್ಲು ಎಲ್ಲಾ ಬಿಟ್ಟು ಹೀ ಅಂತ ನೋಡಿಕೊಂಡ. ಡ್ರಾಕುಲಾ ಲುಕ್ ಏನೂ ಬಂದಿಲ್ಲ ಅಂತ ಬಾಯಿ ಮುಚ್ಚಿದ.

ಮುಂಜಾನೆ ಹಲ್ಲು ತಿಕ್ಕಿದ್ದಿಲ್ಲಾ? ಅಂತ ಕೇಳಿದೆ.

ಯಾರು? ನಾನಾ? ಅಂತ ಕೇಳಿದ ಚೀಪ್ಯಾ.

ಅಲ್ಲಾ, ಆ ಮಂಗ್ಯಾ! ಮಂಗ್ಯಾ ಮುಂಜಾನೆ ಹಲ್ಲು ತಿಕ್ಕಿಕೊಂಡು ಬಂದಿತ್ತೋ ಇಲ್ಲೋ ಅಂತ ಕೇಳಿದೆ. ಏನಲೇ ನೀನು? ಎಲ್ಲಾದಕ್ಕೂ ಯಬಡನ ಹಾಂಗ ಕೇಳ್ತೀ? ಹಾಂ? ಅಂತ ಕೇಳಿದೆ.

ನಾನು ಮುಂಜಾನೆ ಲಗೂನ ಸ್ನಾನ ಮಾಡ್ತೇನಿ ನೋಡು. ಹಾಂಗಾಗಿ ಹಲ್ಲು ತಿಕ್ಕೋದು ಸ್ನಾನದ ಮೊದಲು ಅಂತ ಅಷ್ಟೇ. ಈ ಸಾಬಾ ಏನೋ ಅಂದಾ ಅಂತ ಹೇಳಿ ನೀ ನಂಬೋದಾ? ಏನರಲೇ ನೀವೆಲ್ಲಾ? ಹಾಂ? ಅಂತ ಕೇಳಿದ ಚೀಪ್ಯಾ.

ಇದು ಈಗ ಜಟಿಲ ಆತಲ್ಲಾ? ರೂಪಾ ವೈನಿಗೇ ಯಾಕ ಮಂಗ್ಯಾ ಕಿಸ್ ಹೊಡಿತು? ಬ್ಯಾರೆ ಯಾರಿಗೆ ಯಾಕಿಲ್ಲ? ಹಾಂ?

ಚೀಪ್ಯಾ ನೀನು ಯಾವ ಟೂತ್ ಪೇಸ್ಟ್ ಹಚ್ಚಿ ಹಲ್ಲ ತಿಕ್ಕತಿ? ಅಂತ ಕೇಳಿದೆ.

ನಾನು 'ಕಾಲ್ಗೆಟ್ ಕೆಲಸಿ ಗರುಡಾ' ಹಚ್ಚಿಯೇ ಹಲ್ಲ ತಿಕ್ಕತೇನಿ ನೋಡಪಾ, ಅಂದು ಬಿಟ್ಟ ಚೀಪ್ಯಾ. ಹೋಗ್ಗೋ!!!

ಲೇ ಚೀಪ್ಯಾ...ಅದು Colgate CalciGuard ಅಂತಪಾ. ಕೆಲಸಿ ಗರುಡಾ ಅಂತೀ ಅಲ್ಲಲೇ? ಹಾಂ? ಕೆಲಸಿ ಅಂದ್ರ ಹಜಾಮ ಅಂತ. ನಮ್ಮ ಸಿರ್ಸಿ ಕಡೆ ಕೆಲಸಿ ರಾಮಾ ಅಂತಿದ್ದ. ನೀ ಕೆಲಸಿ ಗರುಡಾ ಅನ್ನೋದ ಕೇಳಿ, ನಾನು ಇವಾ ಚೀಪ್ಯಾ ಹಜಾಮನ ಕಡೆ ತಲಿ ಕೆತ್ತಿಸಿಕೊಳ್ಳೋದು ಬಿಟ್ಟು ಹಲ್ಲು ಯಾಕ ತಿಕ್ಕಿಸಿಕೊಳ್ಳತಾನ? ಅಂತ ಹೇಳಿ ವಿಚಾರ ಮಾಡೋಹಂಗ ಮಾಡಿಬಿಟ್ಟಿ ನೋಡಲೇ ಪಾಪಿ. ಕೆಲಸಿ ಗರುಡ ಅಂತ ಕೆಲಸಿ ಗರುಡ. ಹ್ಯಾಂಗ ಅಂತಾನ  ನೋಡು, ಅಂತ ಹೇಳಿದೆ. ಭಾಳ ನಗು ಬಂತು.

ಚೀಪ್ಯಾ, ರೂಪಾ ಭಾಭಿ ಜಾನ್ ಬಂದರ್ ಛಾಪ್ ಕಾಲಾ ದಂತ್ ಮಂಜನ್ ಇಸ್ತೇಮಾಲ ಮಾಡ್ತಾರೆ ಕ್ಯಾ? ಅಂತ ಕೇಳಿಬಿಟ್ಟ ಕರೀಮ.

ಹೌದಲೇ ಸಾಬಾ! ನಿನಗೆಂಗ ಗೊತ್ತು? ಅಕಿ ಮಂಕಿ ಛಾಪ್ ನೋಡು. ಅಕಿ ಏನ್ ಬಂತು? ಅವರ ಪೂರ್ತಿ ವಂಶದವರು ಮಂಕಿ ಛಾಪ್. ಹಾಂಗಾಗಿ ಅಕಿ ಹಲ್ಲು ಬಂದಾಗಿಂದ ಅದೇ ಮಂಕಿ ಬ್ರಾಂಡ್ ಹಲ್ಲು ಪುಡಿನೇ ಉಪಯೋಗ ಮಾಡೋದು. ಏನೀಗ? ಅಂತ ಕೇಳಿದ.ಕರೀಮನ ವಿಚಾರ ಲಹರಿ ನನಗ ಗೊತ್ತಾತು.

ಲೇ ಚೀಪ್ಯಾ, ರೂಪಾ ವೈನಿ ಮಂಕಿ ಬ್ರಾಂಡ್ ಹಲ್ಲುಪುಡಿ ಉಪಯೋಗಿಸ್ತಾರ ಅಂತ ಮಂಗ್ಯಾಕ್ಕ ಗೊತ್ತಾಗಿನೇ ಅದು ಅವರಿಗೆ ಪ್ರೀತಿಂದ ಕಿಸ್ ಹೊಡೆದು ಹೊಗ್ಯದ ನೋಡಲೇ. ತನ್ನ ಬ್ರಾಂಡಿನ ಮಂಕಿ ಬ್ರಾಂಡ್ ಹಲ್ಲು ಪುಡಿ ಉಪಯೋಗ ಮಾಡವರು ಇನ್ನೂ ಇದ್ದಾರ ಅಂತ ಹೇಳಿಯೇ ಆ ಮಂಗ್ಯಾ ಮುದ್ದಾಂ ರೂಪಾ ವೈನಿಂದನೇ ಸಿಗರೇಟ್ ಕಸಕೊಂಡು, brand loyalty ಗೆ ಒಂದು ಬಹುಮಾನ ಅಂತ ಹೇಳಿ ಅವರಿಗೆ ಕಿಸ್ ಕೊಟ್ಟು ಹೋಗಿ ಬಿಡ್ತು, ಅಂತ ಹೇಳಿದೆ.

ಈ ಕಿಸ್ ಕೊಟ್ಟು ಹೋದ ಮಂಗ್ಯಾ ಎಲ್ಲರೆ ಇಮ್ರಾನ ಹಷ್ಮಿದೇನು ಮತ್ತ? ಅಂತ ಕೇಳಿದೆ.

ಯಾರಲೇ ಆವಾ ಇಮ್ರಾನ್ ಹಶ್ಮಿ? ಅವಂದೇನರ ಮಂಗ್ಯಾ ಅದು ಇರಬೇಕು, ಅಷ್ಟೇ ಮತ್ತ. ಇಬ್ಬರನ್ನೂ ಮರ್ಡರ್, ಮರ್ಡರ್ ಮಾಡಿಬಿಡ್ತೇನಿ. ನಿನ್ನ ಮಂಗ್ಯಾ ನೀ ಸರಿ ಇಟ್ಟುಗೋ ಮಗನ! ನಿನ್ನ ಹೆಂಡತಿಗೆ ಬೇಕಾದ್ರ ನೀನೇ ಕಿಸ್ ಕೊಡು ಇಲ್ಲಾ ನಿನ್ನ ಮಂಗ್ಯಾ ಕೊಡೋದನ್ನ ನೋಡಿ ಮಜಾ ಮಾಡು. ಆದ್ರ ಮಂದಿ ಹೆಂಡತಿ ಮ್ಯಾಲೆ ಯಾಕ ನಿನ್ನ ಮಂಗ್ಯಾ ಬಿಡ್ತೀಲೆ ಮಂಗ್ಯಾ ಸೂಳಿಮಗನ? ಅಂತ ಬೈದೇ ಅವನ್ನ ಮತ್ತ ಅವನ್ನ ಮಂಗ್ಯಾನ್ನ ಮರ್ಡರ್ ಮಾಡಿ ಒಗಿತೇನಿ, ಅಂತ ಚೀಪ್ಯಾ ಆಕ್ರೋಶದಿಂದ ಹೇಳಿದ.

ಇವಾ ಇಮ್ರಾನ ಪಾಕಿಸ್ತಾನದವಾ ಏನು? ಅಂತ ಕೇಳಿದ ಚೀಪ್ಯಾ.

ಲೇ...ಚೀಪ್ಯಾ, ಆವಾ ಇಮ್ರಾನ ಖಾನ್. ಕ್ರಿಕೆಟರ್. ಆವಾ ಪಾಕಿಸ್ತಾನದವ, ಅಂತ ಹೇಳಿದೆ.

ಮತ್ತ ಇವಾ? ಅಂತ ಕೇಳಿದ ಚೀಪ್ಯಾ.

ಇವಾ ಇಲ್ಲಿಯವನೇ. ನೀ ಅವನ್ನ ಮರ್ಡರ್ ಮಾಡೋದು ದೂರ ಉಳಿತು. ಆ ಹುಚ್ಚ ಸೂಳಿಮಗ ಇಮ್ರಾನ ಹಶ್ಮಿಗೆ ಮರ್ಡರ್ ಮಾಡಿ ಬಾರೋ ಅಂದ್ರ ಕಿಸ್ ಮಾಡಿ ಬಂದು ಬಿಟ್ಟ ನೋಡಪಾ, ಅಂತ ಹೇಳಿದೆ.

ಹಾಂ? ಅಂದ ಚೀಪ್ಯಾ.

ಅಂದ್ರ...ಇಮ್ರಾನ ಹಶ್ಮಿ ಅನ್ನವ ಸಿನಿಮಾ ನಟ ಮಾರಾಯಾ. ಮರ್ಡರ್ ಅನ್ನೋ ಸಿನೆಮಾದಾಗ ಕಿಸ್ಸಿಂಗ್ ಮಾಡೋ ದೃಶ್ಯಗಳಿಂದ ಕಿಸ್ಸಿಂಗ್ ಕಿಂಗ್ ಅಂತ ಫೇಮಸ್ ಆಗಿಬಿಟ್ಟ ನೋಡು. ಇಷ್ಟು ಫೇಮಸ್ ಆಗಿ ಬಿಟ್ಟಾನ ಅಂದ್ರ ಕೇಳಬ್ಯಾಡಾ, ಅಂತ ಹೇಳಿದೆ.

ಇಮ್ರಾನ ಹಶ್ಮಿ

ಹಾಂಗಾ? ಎಷ್ಟು ಫೇಮಸ್? ಅಂತ ಕೇಳಿದ ಚೀಪ್ಯಾ.

ಅವನ ಜೋಡಿ ಪಾರ್ಟ್ ಮಾಡೋ ಹೀರೋಯಿನ್ನಗಳು, ಸಾಕು ಬಿಡಲೇ, ಬಿಡು ಸಾಕಲೇ, ಅನ್ನೋ ಹಾಂಗ ಕಿಸ್ ಹೊಡಿತಾನಂತ ನೋಡಪಾ. ಅವರು ಉಸಿರುಗಟ್ಟಿ, ಬಾಯಿಂದ ಉಸಿರು ಬಿಡಲಿಕ್ಕೆ ಆಗದೆ, ಮತ್ತ ಬ್ಯಾರೆ ಬ್ಯಾರೆ ಕಡೆಯಿಂದ ಉಸಿರು ಬಿಡೋ ಪರಿಸ್ಥಿತಿ ತಂದು ಇಡ್ತಾನ ನೋಡಪಾ. ಆ ಪರಿ ಹಿಡದ ಬಿಡದ ಕಿಸ್ಸಿಂಗ್ ಮಾಡ್ತಾನ ಅಂತ ಆತು. ಆ ಪರಿ ಫೇಮಸ್ ಆಗಿ ಬಿಟ್ಟಾನ ಈ ಕಿಸ್ಸಿಂಗ್ ಕಿಡಿಗೇಡಿ ಇಮ್ರಾನ ಹಶ್ಮಿ, ಅಂತ ಇಮ್ರಾನ ಹಶ್ಮಿ ಬ್ರೀಫ್ ಹಿಸ್ಟರಿ ಹೇಳಿದೆ.

ಸಾಬ್ ಆ ಚುಮ್ಮಾ ಕೊಡೋ ಮಂಗ್ಯಾ ನಮ್ಮ ಇಮ್ರಾನ್ ಭಾಯಿಜಾನ್ ಅವರದ್ದು ಅಂತ ಹ್ಯಾಂಗೆ ಹೇಳ್ತೀರಿ ನೀವು? ನಿಮ್ಮದು ಕಡೆ ಸಬೂದ್ ಅದೇ ಕ್ಯಾ? ಅಂತ ಕೇಳಿದ ಕರೀಂ.

ಸಬೂದ್ ಗಿಬೂದ್ ಇಲ್ಲಪಾ. ಮನ್ನೆ ಕಿಸ್ ಹೊಡಿಯೋ ಒಂದು ಆನಿ ಫೋಟೋ ಬಂದಿತ್ತು. ಅದರ ಕೆಳಗ ಯಾರೋ ಇದು ಹೆಚ್ಚಾಗಿ ಇಮ್ರಾನ್ ಹಶ್ಮಿ ಆನಿನೇ ಇರಬೇಕು ಅಂತ ಹೇಳಿ ಹಾಕಿದ್ದರು. ಇಮ್ರಾನ್ ಹಶ್ಮಿ ಕಡೆ ಕಿಸ್ ಹೊಡಿಯೋ ಆನಿ ಇದ್ದಂಗ ಕಿಸ್ ಹೊಡಿಯೋ ಮಂಗ್ಯಾ ಸಹಿತ ಅವನ ಕಡೆ ಇರಬಹುದು ಅಂತ ಊಹೆ ಮಾಡಿ ಹೇಳಿದೆ. ಅಷ್ಟೇ ನೋಡಪಾ, ಅಂತ ಹೇಳಿದೆ.

ಇಮ್ರಾನ್ ಹಶ್ಮಿಯ ಕಿಸ್ಸಿಂಗ ಆನೆ

ಸಾಬ್ ನಮಗೆ ಅನ್ನಿಸ್ತದೆ, ಅಂತ ಕರೀಂ ಶುರು ಮಾಡಿದ.

ಏನು ಅನ್ನಿಸ್ತದ ನಿನಗ? ಅಂತ ಕೇಳಿದೆ.

ರೂಪಾ ಭಾಬಿ ಜಾನ್ ಗೆ ಚುಮ್ಮಾ ಕೊಟ್ಟ ಮಂಗ್ಯಾ ಹೆಚ್ಚಾಗಿ 'ಕಿಸ್ ಗೌತಮಿ'ದು ಇರಬೇಕು ಸಾಬ್. ಅಕಿ ಕಡೆ ಒಂದು ಕಿಸ್ಸಿಂಗ್ ಮಂಗ್ಯಾ ಇತ್ತು ಅಲ್ಲಾ? ಅದಕ್ಕೆ ಅಕಿಗೆ ಕಿಸ್ ಗೌತಮಿ ಅಂತ ಹೆಸರು ಬಂದಿತ್ತು ಅಲ್ಲಾ? ಅಂತ ಕೇಳಿಬಿಟ್ಟ ಕರೀಮ.

ಯಾರಲೇ ಅಕಿ ಕಿಸ್ ಗೌತಮಿ? ನಮಗ ಗೊತ್ತಿದ್ದಾಕಿ ಸಿನಿಮಾ ಹೀರೋಯಿನ್ ಗೌತಮಿ ಮಾತ್ರ. ಈಗ ಅಕಿ ಕಮಲ್ ಹಾಸನ್ ಅವರ ಜೋಡಿ ಕೂಡಾವಳಿ ಮಾಡಿಕೊಂಡು ಇದ್ದಾಳ ಅಂತ. 'ಏಳು ಸುತ್ತಿನ ಕೋಟೆ' ಅನ್ನೋ ಸಿನೆಮಾದಾಗ ಆಕ್ಟ್ ಮಾಡಿದ್ದಳು ನೋಡೋ. ನೆನಪಿಲ್ಲ? ಅಂತ ಕೇಳಿದೆ.
ಗೌತಮಿ & ಕಮಲ್ ಹಾಸನ್

ಆಕಿ ಕ್ಯಾಬರೆ ಮಾಡ್ತಿದ್ದಳು ಕ್ಯಾ? ನಮಗೆ ಕೇವಲ ಐಟಂ ನಂಬರ್ ಮಾಲು ಮಾತ್ರ ನೆನಪ ಇರ್ತಾವೆ, ಅಂದ ಕರೀಂ.

ಇಲ್ಲ. ಅಕಿ ಹೀರೋಯಿನ್ ಇದ್ದಳು. ಐಟಂ ಅಲ್ಲ ಅಕಿ, ಅಂತ ಹೇಳಿದೆ.

ಸಾಬ್, ಈ ಕಿಸ್ ಗೌತಮಿ ಕಥೆ ನಿಮಗೆ ಗೊತ್ತಿಲ್ಲ ಕ್ಯಾ? ಹಾಂ? ಅಂತ ಕೇಳಿದ ಕರೀಮ.

ಏನು ಕಥಿ? ಅಂತ ಕೇಳಿದೆ.

ನೋಡಿ ಸಾಬ್, ಬಹಳ ಹಿಂದೆ ಆದ ಕಥಿ. ಕಿಸ್ಸ ಗೌತಮಿ ಅಂತ ಇದ್ದಳಂತೆ. ಅಕಿ ಕಡೆ ಒಂದು ಬಂದರ್ ಅಂದ್ರೆ ಮಂಗ್ಯಾ ಇತ್ತಂತೆ. ಆ ಮಂಗ್ಯಾ ಚುಮ್ಮಾ ಕೊಡೋದ್ರಲ್ಲಿ ಭಾಳ ಹೋಶಿಯಾರ್ ಇತ್ತಂತೆ. ಹ್ಯಾಂಗೆ ಬೇಕು ಹಾಂಗೆ, ಯಾರಿಗೆ ಬೇಕು ಅವರಿಗೆ, ಎಲ್ಲೆ ಬೇಕು ಅಲ್ಲೆ ಚುಮ್ಮಾ ಕೊಟ್ಟು ಕೊಟ್ಟು ಭಾಳ ಫೇಮಸ್ ಆಗಿ ಬಿಟ್ಟಿತ್ತು ಅಂತೆ, ಅಂತ ಕರೀಮ ಕಥಿ ಶುರು ಮಾಡಿದ.

ಮುಂದ?

ಹೀಗಿದ್ದಾಗ ಒಂದು ದಿವಸ ಆ ಗೌತಮಿಯ ಕಿಸ್ ಮಾಡೋ ಮಂಗ್ಯಾ ಸತ್ತು ಹೋಯಿತು, ಅಂದ ಕರೀಮ.

ಛೆ! ಪಾಪ! ಹತ್ತು ಮಂದಿ ಸತ್ತು ಹೋಗಲಿ. ಆದ್ರ ಕಿಸ್ ಹೊಡಿಯೋ ಮಂಗ್ಯಾ ಸತ್ತು ಹೋತು ಅಂದ್ರ ಭಾಳ ಕೆಟ್ಟಾತು. ಮುಂದ? ಅಂತ ಕೇಳಿದೆ.

ಕಿಸ್ ಗೌತಮಿ ಏನು ಮಾಡಬೇಕು ಅಂತ ತಿಳಿಯದೆ ಅಳತಾ ಕೂತಳು. ಯಾರೋ ಅವರ ರಿಶ್ತೆದಾರ ಬಂದಬಿಟ್ಟಿ, ಅಳಬ್ಯಾಡ, ಒಬ್ಬರು ಸ್ವಾಮಿಜೀ ಇದ್ದಾರೆ. ಅವರ ಕಡೆ ನಿನ್ನ ಸತ್ತ ಮಂಗ್ಯಾ ತೊಗೊಂಡು ಹೋಗು. ಅವರು ನಿನ್ನ ಮಂಗ್ಯಾಗೆ ಜೀವಾ ಮತ್ತೆ ಬರೋ ಹಾಗೆ ಮಾಡ್ತಾರೆ, ಅಂತ ಹೇಳಿ ಆ ಸ್ವಾಮೀಜೀ ಅವರ ಪತಾ ಕೊಟ್ಟರು ಅಂತ ಆತು, ಅಂತ ಹೇಳಿದ ಕರೀಮ.

ಮುಂದ?

ಕಿಸ್ ಗೌತಮಿ ಹೋಗಿ ಸ್ವಾಮೀಜಿ ಅವರನ್ನು ಭೆಟ್ಟಿ ಮಾಡಿದಳು.

ಸ್ವಾಮೀಜೀ ಮುಂಜಾನೆ ನಾಷ್ಟಾಕ್ಕೆ ಏನು ಮಾಡಬೇಕು ಅಂತ ವಿಚಾರ ಮಾಡಿ, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಿಣಿ ಹಾಕಿ ಬಿಟ್ಟರಾತು ಅಂತ ಒಗ್ಗರಿಣಿಗೆ ರೆಡಿ ಮಾಡಿಕೋತ್ತ ಕೂತಿದ್ದರು. ಆವಾಗ ಅವರಿಗೆ ಒಗ್ಗರಿಣಿ ಹಾಕಲಿಕ್ಕೆ ಸಾಸಿವಿ ಇಲ್ಲ ಅಂತ ಗೊತ್ತಾತು. ಅದೇ ಟೈಮ್ ಗೆ ಕಿಸ್ ಗೌತಮಿ ತನ್ನ ಸತ್ತ ಮಂಗ್ಯಾನ್ನ ತೊಗೊಂಡು ಬಂದಳು.

ಸ್ವಾಮೀಜೀ, ನನ್ನ ಮಂಗ್ಯಾ ಸತ್ತು ಹೋಗಿದೆ. ಬದುಕಿಸಿಕೊಡಿ, ಅಂತ ಕೇಳಿಕೊಂಡಳು ಕಿಸ್ ಗೌತಮಿ.

ನೋಡಮ್ಮಾ, ಹುಟ್ಟು ಸಾವು ಎಲ್ಲ ದೇವರ ಕೈಯಲ್ಲಿ ಇರ್ತದೆ. ನಾವು ಏನೂ ಮಾಡೋಕೆ ಆಗೋದಿಲ್ಲ. ನಿನ್ನ ಮಂಗ್ಯಾನ ಆಯಸ್ಸು ಮುಗಿದಿತ್ತು. ಅದಕ್ಕೇ ಅದು ದೇವರ ಪಾದ ಸೇರಿಕೊಂಡ್ತು. ಬೇರೆ ಮಂಗನಮರಿಯನ್ನು ತಂದುಕೋ ಮಗಳೇ, ಅಂತ ಹೇಳಿದರು ಸ್ವಾಮಿಗಳು.

ಇಲ್ಲಾ ಸ್ವಾಮಿಜೀ, ಇದು ಅಂತಾ ಇಂತಾ ಆರ್ಡಿನರಿ ಮಂಗ್ಯಾ ಅಲ್ಲಾ. ಇದು ಚುಮ್ಮಾ ಅಂದ್ರೆ ಕಿಸ್ ಕೊಡೊ ಮಂಗಾ. ಇದು ಇರೋದಕ್ಕೆ ನನಗೆ ಒಂದು ವಜೂದ್ ಅದೆ ಅಸ್ತಿತ್ವ ಅದೆ. ಇದು ಇಲ್ಲ ಅಂದ್ರೆ ನಾನು ಕಿಸ್ ಗೌತಮಿಯಿಂದ ಬರೆ ಗೌತಮಿ ಆಗಿ ಹೋಗ್ತೇನಿ. ಹಾಂಗಾಗಿ ಈ ಮಂಗ್ಯಾನ್ನ ನೀವು ಬದುಕಿಸಿ ಕೊಡಲೇ ಬೇಕು, ಅಂತ ಕಿಸ್ ಗೌತಮಿ ಹಟಾ ಹಿಡಿದಳು.

ಸ್ವಾಮಿಗಳಿಗೆ ಪೇಚಾಟಕ್ಕೆ ಬಂತು ಈಗ. ಏನು ಮಾಡೋದು?

ನೋಡು ಕಿಸ್ ಗೌತಮಿ, ಒಂದು ಕೆಲಸ ಮಾಡು. ಅದನ್ನ ಮಾಡಿಕೊಂಡು ಬಂದ್ರ ನಾ ನಿನ್ನ ಮಂಗ್ಯಾಗ ಮತ್ತ ಜೀವಾ ತುಂಬಿ ಕೊಡತೇನಿ, ಅಂತ ಅಂದ್ರು ಸ್ವಾಮಿಗಳು.

ಏನು ಕೆಲಸ ಮಾಡಬೇಕು? ಹೇಳ್ರೀ. ನನ್ನ ಕಿಸ್ಸಿಂಗ್ ಮಂಗ್ಯಾನ ಸಲುವಾಗಿ ಏನು ಬೇಕಾದರೂ ಮಾಡಲಿಕ್ಕೆ ನಾನು ತಯಾರ್ ಅಂತ ಹೇಳಿದಳು ಗೌತಮಿ.

ಸ್ವಾಮಿಗಳಿಗೆ ಬ್ಯಾರೆ ಲಗೂನ ಒಗ್ಗರಿಣಿ ಹಾಕಿ, ಒಗ್ಗರಿಣಿ ಅನ್ನ ತಿಂದು ನಾಷ್ಟಾ ಮುಗಿಸಬೇಕಾಗಿತ್ತು. ಸಾಸಿವಿ ಬ್ಯಾರೆ ಇಲ್ಲ. ಸಾಸಿವೆ ಇಲ್ಲದೆ ಹ್ಯಾಂಗ ಒಗ್ಗರಿಣಿ ಹಾಕೋದು? ಅದರಾಗ ಈ ಕಿಸ್ ಗೌತಮಿ ಬ್ಯಾರೆ ತಲಿ ತಿನ್ನಲಿಕ್ಕೆ ಶುರು ಮಾಡ್ಯಾಳ, ಅಂತ ಹೇಳಿ ಒಂದು ಉಪಾಯ ಮಾಡಿದರು.

ನೋಡು ಗೌತಮಿ, ಊರಿಗೆ ಹೋಗಿ ಯಾರದ್ದರ ಮನಿಯಿಂದ ಒಂದು ಮುಷ್ಟಿ ಸಾಸಿವಿ ತೊಗೊಂಡು ಬಾ. ಆದ್ರ ಒಂದು ಕಂಡೀಶನ್. ಕಿಸ್ಸಿಲ್ಲದ ಮನಿಯಿಂದ ಸಾಸಿವಿ ತೊಗೊಂಡು ಬಾ. ಆ ಮನಿಯೊಳಗ ಯಾರೂ, ಯಾರಿಗೂ, ಯಾವತ್ತೂ ಕಿಸ್ಸು ಗಿಸ್ಸು ಅಂತ ಮಾಡಿರಲೇ ಬಾರದು. ಅಂತಾ ಮನಿಂದ ತಂದರೆ ಆ ಸಾಸಿವಿ ಉಪಯೋಗಿಸ್ಕೊಂಡು ನಾನು ನಿನ್ನೆಯ ಅನ್ನಕ್ಕ ಒಗ್ಗರಿಣಿ ಹಾಕ್ಕೋತ್ತೇನಿ ಅಲ್ಲಲ್ಲ ನಿನ್ನ ಮಂಗ್ಯಾಕ್ಕ ಜೀವಾ ಕೊಡತೇನಿ, ಅಂತ ಹೇಳಿದರು.

ಸಾಸಿವೆ ತರಲಿಕ್ಕೆ ಅಂತ ಕಿಸ್ ಗೌತಮಿ ಊರಾಗ ಬಂದಳು.

ಮೊದಲನೇ ಮನಿ ಬಾಗಲಾ ಬಡಿದಳು. ಒಂದು ಮುಷ್ಟಿ ಸಾಸಿವಿ ಕೊಡ್ರೀ, ಅಂತ ಕೇಳಿದಳು. ಬಾಗಿಲಾ ತೆಗೆದಾಕಿ ಇಕಿನ್ನ ವಿಚಿತ್ರ ರೀತಿಯಲ್ಲಿ ನೋಡಿ, ಸಾಸಿವಿ ತಂದು ಕೊಡಲಿಕ್ಕೆ ಒಳಗ ಹೊಂಟಳು. ಗೌತಮಿ, ಏ ಬಾಯಾರ! ಅಂದಳು. ಏನು? ಅಂತ ಬಾಯಾರು ಕೇಳಿದರು. ನಿಮ್ಮನ್ಯಾಗ ಕಿಸ್ ಹೊಡೆಯಂಗಿಲ್ಲ ಹೌದಿಲ್ಲೋ? ಹಾಂ? ಕಿಸ್ ಹೊಡೆಯೋದಿಲ್ಲ ಅಂದ್ರ ಮಾತ್ರ ಸಾಸಿವಿ ಕೊಡ್ರೀ, ಅಂತ ಕೇಳಿದಳು. ಆ  ಮನಿಯಾಕಿ ಗೌತಮಿಯನ್ನ ಹುಚ್ಚರ ಗತೆ ನೋಡಿ ಹುಚ್ಚಿ ಅಂತ ಹೇಳಿ ಓಡಿಸಿ ಬಿಟ್ಟರು.

ಗೌತಮಿ ಸುಮಾರು ಮಂದಿ ಮನಿಗೆ ಹೋದಳು. ಕಿಸ್ ಹೊಡಿಯದವರ ಮನಿ ಒಟ್ಟೇ ಸಿಗಲಿಲ್ಲ. ಸಾಸಿವಿ ಕೂಡ ಸಿಗಲಿಲ್ಲ. ಸಂಸಾರಸ್ತರ ಮನಿಗೆ ಹೋದ್ರ ಉಪಯೋಗಿಲ್ಲ. ಕಿಸ್ ಹೊಡೆದು ಹೊಡೆದೆ ಸಂಸಾರ ನೆಡಸ್ತಿರ್ತಾರ ಅಂತ ಹೇಳಿ ಇನ್ನು ಹಾಸ್ಟೆಲ್ಲಿಗೆ ಹೋಗಿ ನೋಡೋಣ ಅಂತ ಬಾಯ್ಸ್ ಹಾಸ್ಟೆಲ್, ಗರ್ಲ್ಸ್ ಹಾಸ್ಟೆಲ್ಲಿಗೆ ಹೋಗಿ ನೋಡಿದಳು. ಕಾಲ ಕೆಟ್ಟು ಹೋಗಿತ್ತು. ಅಲ್ಲೂ ಎಲ್ಲಾ ಕಡೆ ಎಲ್ಲಾರೂ ಬಿಂದಾಸ್ ಕಿಸ್ ಹೊಡೆಯುವವರೇ. ಕಿಸ್ ಹೊಡೆಯದವರು ಎಲ್ಲೂ ಸಿಗಲೇ ಇಲ್ಲ. ಕಿಸ್ ಇಲ್ಲದ ಮನೆಯಿಂದ ಹೋಗ್ಲಿ ಹಾಸ್ಟೆಲ್ ಅಡಿಗಿ ಮನಿಂದನೂ ಸಾಸಿವೆ ತರೋದು ಸಾಧ್ಯವೇ ಆಗಲಿಲ್ಲ.

ತಪ್ಪೇ  ಮಾಡದವರು ಯಾರವರೆ? ತಪ್ಪೇ ಮಾಡದವರು ಎಲ್ಲವರೇ? ಅನ್ನೋ ಹಾಡನ್ನ ಕಿಸ್ಸೇ ಹೊಡೆಯದವರು ಯಾರವರೆ? ಕಿಸ್ಸೇ ಹೊಡೆಯದವರು ಎಲ್ಲವರೇ? ಅಂತ ಮಠ ಸಿನೆಮಾದ ಹಿಟ್ ಹಾಡನ್ನು ಸ್ವಲ್ಪ ಚೇಂಜ್ ಮಾಡಿಕೊಂಡು ಜಗ್ಗೇಶನ ಗತೆ ಡಾನ್ಸ್ ಮಾಡಿಕೋತ್ತ ವಾಪಸ್ ಬಂದಳು ಕಿಸ್ ಗೌತಮಿ.

ಬರಿಗೈಯಿಂದ ವಾಪಾಸ್ ಸ್ವಾಮಿಗಳ ಕಡೆ ಬಂದಳು ಕಿಸ್ ಗೌತಮಿ.

ಸಿಕ್ಕಿತೇನವಾ ಕಿಸ್ಸಿಲ್ಲದ ಮನೆಯಲ್ಲಿನ ಸಾಸಿವಿ? ಅಂತ ಸ್ವಾಮಿಗಳು ಕೇಳಿದರು.

ಎಲ್ಲಿದ ಹಚ್ಚೀರಿ? ಕಿಸ್ಸಿಲ್ಲದ ಮನಿ ಅಂತೂ ಇಲ್ಲೇ ಇಲ್ಲ. ಹಾಸ್ಟೆಲ್ ನೋಡಿದರ ಅಲ್ಲೂ ಎಲ್ಲಾ ಕಿಸ್ಸಿಂಗ್ ಕಿಡಿಗೇಡಿಗಳೇ ತುಂಬಿ ಬಿಟ್ಟಾರ. ಎಲ್ಲಿಂದ ಸಾಸಿವಿ ತರಲೀ? ಅಂತ ಕಿಸ್ ಗೌತಮಿ ಅಲವತ್ತುಕೊಂಡಳು.

ಕಿಸ್ಸಿಲ್ಲದ ಮನೆ ಹೇಗೆ ಇಲ್ಲವೋ ಹಾಗೆ ಸಾವು ತಾಯಿ. ಎಲ್ಲರಿಗೂ ಬಂದೇ ಬರುತ್ತದೆ. ನನಗೆ ಮೊದಲೇ ಗೊತ್ತಿತ್ತು ನೀನು ಸಾಸಿವೆ ತರಲು ಸಾಧ್ಯವೇ ಇಲ್ಲ ಅಂತ. ಕಿಸ್ಸಿಲ್ಲದ ಮನೆಯಿಂದ ಸಾಸಿವೆ ತರುವದು ಹೇಗೆ ಅಸಾಧ್ಯವೋ ಅದೇ ರೀತಿ ಸತ್ತವರನ್ನು ಬದುಕಿಸುವದೂ ಸಹ ಅಸಾಧ್ಯ ಗೌತಮೀ, ಅಂತ ಸ್ವಾಮಿಗಳು ಕುಟ್ಟಿದರು.

ಗೌತಮಿಗೆ ಈಗ ತಿಳಿಯಿತು. ಮಂಗ್ಯಾಂದು ಹೆಣಾಗೆ ದಫನ್ ಮಾಡಿ ಬಂದಳು. ಕಿಸ್ ಗೌತಮಿಯಿಂದ ಸಾದಾ ಗೌತಮಿಯಾಗಿ ಸ್ವಾಮಿಗಳ ಸೇವೆ ಮಾಡಿಕೊಂಡು ಇದ್ದಳು.

ಅಂತ ಹೇಳಿ ಕರೀಮಾ ಕಥಿ ಹೇಳಿ ಮುಗಿಸಿದ.

ಎಲ್ಲೋ ಈ ಕಥಿ ಕೇಳಿದ ನೆನಪು. ಎಲ್ಲೆ ಕೇಳಿದ್ದೆ? ಕಥಿ ಏನೋ ಸ್ವಲ್ಪ ಬ್ಯಾರೆ ಇತ್ತಲ್ಲಾ? ಅಂತ ವಿಚಾರ ಬಂತು.

ಅಲ್ಲಲೇ ಸಾಬಾ, ಸ್ವಾಮಿಗಳು ಅವರ ಒಗ್ಗರಿಣಿಗೆ ಸಾಸಿವಿ ಬೇಕು ಅಂತ ಕಿಸ್ ಗೌತಮಿಗೆ ಸಾಸಿವಿ ತೊಗೊಂಡು ಬಾ ಅಂತ ಹೇಳಿ ಕಳಿಸಿದರು. ಕಿಸ್ಸಿಲ್ಲದ ಮನಿಯಿಂದ ತೊಗೊಂಡು ಬಾ ಅಂತ ಯಾಕ ಹೇಳಿದರು? ಅವರಿಗೆ ಸಾಸಿವಿ ಅಂತೂ ಸಿಗಲಿಲ್ಲ. ಒಗ್ಗರಣಿ ಅನ್ನ ಹ್ಯಾಂಗ ಮಾಡಿಕೊಂಡರು? ಅಂತ ಕೇಳಿದೆ.

ಆವತ್ತು ಸಾಸಿವಿ ಇಲ್ಲದೇನೆ ಒಗ್ಗರಿಣಿ ಅನ್ನ ಮಾಡಿಕೊಂಡು ತಿಂದರು ಅಂತ ಕಾಣ್ತದೆ. ಅಲ್ಲಿ ಮೇನ್ ಪಾಯಿಂಟ್ ಅಂದ್ರೆ ಗೌತಮಿಗೆ ಪಾಠ ಕಲಿಸೋದು ಆಗಿತ್ತು, ಅಂತ ಕರೀಂ ಹೇಳಿದ.

ಅಲ್ಲಲೇ ಸಾಬಾ, ಇದು ಯಾವದೋ ಕಾಲದ ಕಥಿ ಅಂತಿ. ಮತ್ತ ಕಿಸ್ ಗೌತಮಿ ಕಿಸ್ಸಿಂಗ್ ಮಂಗ್ಯಾ ಸತ್ತು ಹೋತು, ಅದಕ್ಕ ಮರುಜೀವ ಬರಲಿಲ್ಲ ಅಂತೀ. ಹಂಗಿದ್ದಾಗ ರೂಪಾ ವೈನಿಗೆ ಕಿಸ್ ಕೊಟ್ಟ ಮಂಗ್ಯಾ ಅದೆಂಗ ಕಿಸ್ ಗೌತಮಿ ಮಂಗ್ಯಾ ಆಗ್ತದ? ಹಾಂ? ಏನೇನರೆ ಹೇಳಿಕೋತ್ತ. ಹುಚ್ಚನ ತಂದು, ಅಂತ ಹೇಳಿದೆ.

ಅಲ್ಲಾ ಸಾಬ್, ಇಮ್ರಾನ್ ಹಶ್ಮಿ ಭಾಯಿಜಾನ್ ಸಿಕ್ಕಾಪಟ್ಟೆ ಚುಮ್ಮಾಗೆ ಕೊಡ್ತಾರೆ ಅಂತ ಅಂದು ಬಿಟ್ಟಿ, ರೂಪಾ ಬಾಭಿಗೆ ಚುಮ್ಮಾ ಕೊಟ್ಟ ಮಂಗ್ಯಾ ಇಮ್ರಾನ್ ಅವರದ್ದು ಅಂತ ಹೇಗೆ ಅಂದ್ರೀ ನೋಡಿ, ನಾನೂ ಹಾಗೆ ಏನೋ ಒಂದು ಕಟ್ಟು ಕಹಾನಿ ಹೇಳಿದೆ. ಅಷ್ಟೇ. ಹೇ!ಹೇ! ಅಂತ ಹೇಳಿ ಕರೀಂ ಗಫಾ ಹೊಡೆದ.

ಮಂಗೇಶ!! ಅಂತ ಚೀಪ್ಯಾ ಏನೋ ಫ್ಲಾಶ್ ಆದವರ ಹಾಂಗ ಚೀರಿದ.

ಏನಾತಲೇ ಚೀಪ್ಯಾ? ಅಂತ ಕೇಳಿದೆ.

ಈ ಕರೀಮ ಹೇಳಿದ್ದು ಬುದ್ಧನ ಜಾತಕ ಕಥಿ ಇದ್ದಂಗ ಇಲ್ಲ? ಅಂತ ಒಂದು ಹುಳ ಬಿಟ್ಟ.

ಹೌದ ನೋಡಲೇ ಚೀಪ್ಯಾ! ಬರೋಬ್ಬರಿ! ಅದರಾಗ ಕಿಸಾ ಗೋತಮಿ ಅಂತ ಬರ್ತಾಳ. ಈ ಸಾಬಾ ಪಕ್ಕಾ ಹಾಪ್ ನೋಡಲೇ. ಕಥಿ ತಪ್ಪ ತಪ್ಪ ನೆನಪ ಇಟ್ಟಾನ. ಅದರಾಗ ಕಿಸಾ ಗೋತಮಿ ಮಗ ಸತ್ತು ಹೋಗ್ತಾನ. ಅಕಿ ಬುದ್ಧನ ಕಡೆ ಬಂದು ತನ್ನ ಮಗನ್ನ ಬದುಕಿಸಿ ಕೊಡು ಅಂತಾಳ. ಬುದ್ಧ ಆಗಂಗಿಲ್ಲವಾ ಅಂತಾನ. ಇಕಿ ಕಿಸಾ ಗೋತಮಿ ಒಪ್ಪಂಗಿಲ್ಲ. ಆವಾಗ ಅಕಿಗೆ ಸಾವಿಲ್ಲದ ಮನೆಯಿಂದ ಒಂದಿಷ್ಟು ಸಾಸಿವೆ ತೊಗೊಂಡು ಬಾ ಅಂತ ಬುದ್ಧ ಹೇಳ್ತಾನ. ಇಕಿ ಹೋಗಿ ಸಾವಿಲ್ಲದ ಮನಿ ಹುಡಕತಾಳ. ಒಟ್ಟೇ ಸಿಗಂಗಿಲ್ಲ. ವಾಪಸ್ ಬರ್ತಾಳ. ಆಮೇಲೆ ಬುದ್ಧನ ಶಿಷ್ಯಾ ಆಗಿ ಇರ್ತಾಳ. ಈ ಕಥಿ ಹೌದಿಲ್ಲೋ? ಈ ಸಾಬಾ ಫುಲ್ ತಪ್ಪ ಹೇಳ್ಯಾನ ನೋಡಲೇ. ಹಾ!!! ಹಾ!! ಏನ ಇದ್ದಾನಲೇ ಈ ಕರೀಮಾ? ಅಂತ ಬಿದ್ದು ಬಿದ್ದು ನಕ್ಕಿವಿ.

ಕ್ಯಾ ಸಾಬ್? ಕ್ಯಾ ಚೀಪ್ಯಾ ಭಾಯಿ? ಏನಾಯಿತು? ಯಾಕೆ ನಗ್ತಾರೆ ನೀವು? ಅಂತ ಕೇಳಿದ ಕರೀಮಾ.

ಏ....ಕರೀಮ, ಈ ಕಿಸ್ ಗೌತಮಿ ಕಥಿ ಎಲ್ಲೆ ಕೇಳಿದ್ದಿ ಅಥವಾ ಓದಿದ್ದಿ ನೀನು? ಹಾಂ? ಅಂತ ಕೇಳಿದೆ.

ಸಾಬ್ ಅದು ನಮ್ಮ ಸ್ಕೂಲ್ syllabus ನಲ್ಲಿ ಇತ್ತು ಅಲ್ಲಾ? ಕನ್ನಡ ಸಬ್ಜೆಕ್ಟ್ ನಲ್ಲಿ ಇತ್ತು ಅಲ್ಲಾ? ಅಂತ ಕೇಳಿದ.

ಸಾಬ್ರಾ....ನೀವು ಆ ಕಥಿ ತಪ್ಪ ತಪ್ಪ ನೆನಪ ಇಟ್ಟೀರಿ ನೋಡ್ರೀ. ಕಿಸಾ ಗೋತಮಿ ಅಂತ ಇದ್ದಿದ್ದನ್ನ ಕಿಸ್ ಗೌತಮಿ ಅಂತ ಓದಿಕೊಂಡೀರಿ. ಕಿಸಾ ಗೋತಮಿ ಸತ್ತ ಮಗನನ್ನು ತಂದಳು ಅನ್ನೋದನ್ನ ನೀವು ಸತ್ತ ಮಂಗನನ್ನು ತಂದಳು ಅಂತ ಓದಿಕೊಂಡುಬಿಟ್ಟೀರಿ. ಮಗ ಮತ್ತ ಮಂಗ ನಡುವೆ ಬರೆ ಒಂದು ಅಂ ಫರಕ್ ನೋಡ್ರೀ. ಜಾಸ್ತಿ ಫರಕ್ ಇಲ್ಲ. ತಪ್ಪು ನಿಮ್ಮದಲ್ಲ. ತಪ್ಪು ಕನ್ನಡ ಭಾಷಾದ್ದು. ಮಂಗ ಮತ್ತ ಮಗನ ನಡುವೆ ಬರೆ ಒಂದು ಪೂಜಿ ಫರಕ್. ಆ ಮ್ಯಾಲೆ ಮತ್ತೊಂದು ಅಂದ್ರ ಆ ಕಥಿ ಭಾಳ ಹಳೇದು. ನಿಮಗ ಮರ್ತು ಹೋಗ್ಯದ. ಮತ್ತ ಈಗ ಮಂಗ್ಯಾ, ಕಿಸ್ಸು ಅದು ಇದು ಅಂದು ನಿಮಗ full confuse ಆಗಿ ಕಿಸ್ ಗೌತಮಿ, ಅಕಿ ಕಿಸ್ಸಿಂಗ್ ಮಂಗ್ಯಾ ಅಂತ ಏನೇನೋ ಹೇಳಿ ಬಿಟ್ಟಿರಿ. ಆದರೂ ಭಾಳ ಮಜಾ ಬಂತು. ಮತ್ತ ಅಕಿ ಗೋತಮಿ ಹೋಗಿದ್ದು ಅಂತಿಂತ ಸ್ವಾಮಿಗಳ ಕಡೆ ಅಲ್ಲ. ಬುದ್ಧ.....ಬುದ್ಧ....ಗೌತಮ ಬುದ್ಧನ ಕಡೆ. ತಿಳೀತಾ? ಬೌದ್ಧರ ಮುಂದ ಮಾತ್ರ ಹೀಂಗ ಈ ಕಥಿ ಹೇಳಬ್ಯಾಡ್ರೀ. ಓಕೆ? ಅಂತ ಕರೀಮಗ ತಿಳಿಸಿ ಹೇಳಿದೆ.

ಕಿಸಾ ಗೋತಮಿ

ಕೌನ್ ಬುಡ್ಡಾ? ಯಾರು ಮುದಕಾ ಸಾಬ್? ಅಂತ ಕೇಳಿಬಿಟ್ಟ ಕರೀಂ. ಹೋಗ್ಗೋ!!!

ಬುದ್ಧಾ ಅಂದ್ರ ಬುಡ್ಡಾ ಅನ್ನೋ ಸಾಬಂಗ ಇನ್ನೆಲ್ಲಿ ಏನಂತ ಹೇಳಲಿ?

ಅಷ್ಟರಾಗ ಚೀಪ್ಯಾ ಹೋಗಬೇಕು ಅಂದಾ. ಕರೀಮ ಇನ್ನೊಂದು ಪಾನ್, ನನಗ ಡ್ರೈ ಮಾವಾ ಕಟ್ಟಿಸಲಿಕ್ಕೆ ಹೋದ.

ರೂಪಾ ವೈನಿಗೆ ಕಿಸ್ ಹೊಡೆದು, ಕಡಿದು ಹೋದ ಮಂಗ್ಯಾದ ರಹಸ್ಯ ಮಾತ್ರ ಬಗೆಹರಿಲಿಲ್ಲ. ಚಿದಂಬರ ರಹಸ್ಯ.

3 comments:

Vimarshak Jaaldimmi said...


You may have to use the expertise of C-9 company Jummies to catch that mangya!

Mahesh Hegade said...

haaa..haaa....K9 Jummy :)

Pankha Jaaldimmi said...


How about sending the mangya encounter specialist?