Monday, April 06, 2015

ನಮ್ಮ, ನಮ್ಮ ಎನ್ನುವ ಚಟ!



>> ತನಗೆ ಬಹುವಚನವನ್ನು ಪೀಠಾಧಿಪತಿಗಳು ಮತ್ತು ರಾಜರು ಮಾತ್ರ ಉಪಯೋಗಿಸುತ್ತಾರೆ.

ಸೀತಾರಾಂ ಭಟ್ಟರ ಒಂದು ಪೋಸ್ಟಿನಲ್ಲಿ ಈ ಮಾತು ಕಂಡಿತು.

ROTFL....ನಮಗೂ ಸಹ ನಮ್ಮ, ನಮ್ಮ ಅಂತ ಬರೆಯುವ ಚಾಳಿ ಇತ್ತು, ಇನ್ನೂ ಇದೆ. ಹಿಂದೆ ಒಬ್ಬರು ಕೇಳಿದ್ದರು, 'ಏನು ನೀ ಬರೇ ನಮ್ಮ ನಮ್ಮ ಅಂತೀ??? ನೀ ಏನು ರಾಯಲ್ ಏನು? ದೊಡ್ಡ ರಾಜಾ ಏನು????' ಅಂತ. ಅದಕ್ಕೆ ಹೇಳಿದ್ದೆ, 'ರಾಯಲ್ ಅಂತೂ ಹೌದು ನೋಡವಾ. ಏಕ್ದಂ ರಾಯಲ್!' ಅಂತ. ಆಕೆ ಆಶ್ಚರ್ಯದಿಂದ 'ಏನು ರಾಯಲ್??? ಹಾಂ???' ಅಂತ ಕೇಳಿದ್ದಳು. 'ಧಾರವಾಡದ ಮಾಳಮಡ್ಡಿಯಲ್ಲಿದ್ದ ಹಜಾಮ್ ಪಾಂಡುವಿನ ರಾಯಲ್ ಹೇರ್ ಕಟಿಂಗ್ ಸಲೂನಿನಲ್ಲಿ ಕಮ್ಮಿ ಕಮ್ಮಿ ಅಂದರೂ ಇಪ್ಪತ್ತೆರೆಡು ವರ್ಷ ಅಂದರೆ ಕಮ್ಮಿ ಕಮ್ಮಿ ಅಂದರೂ ೨೪೦ ಸಾರೆ ಹಜಾಮತಿ ಮಾಡಿಸಿದ ರಾಯಲ್ ತಲೆ ನಮ್ಮದು. ಅದಕ್ಕೇ ನಾವು ರಾಯಲ್' ಎಂದು ಹೇಳಿ ನಮ್ಮ ನಮ್ಮ ಅನ್ನುವ ನಮ್ಮ ಚಟದ ಡಿಫೆಂಡ್ ಮಾಡಿಕೊಂಡಿದ್ದೆ.

ಏನೇ ಇರಲಿ. ಆಗಿನ ಧಾರವಾಡ ಮಾಳಮಡ್ಡಿಯ ರಾಯಲ್ ಹೇರ್ ಕಟಿಂಗ್ ಸಲೂನ್ ಈಗ ಗೌಳಿಗರ ದಡ್ಡಿಗೆ ಶಿಫ್ಟ್ ಆಗಿದೆಯಂತೆ. ಜಸ್ಟ್ ಸ್ವಲ್ಪ ಉದ್ದ ಕೂದಲು ಬಿಟ್ಟುಕೊಂಡು ಬಂದ ವಿದ್ಯಾರ್ಥಿಗಳಿಗೆ ಖಡಕ್ ಗುಂಜೀಕರ್ ಸರ್ ಸಿಟ್ಟಿಗೆದ್ದು, 'ಅಲ್ಲೆ ಗೌಳ್ಯಾರ ದಡ್ಡಿಯಾಗ ಎಮ್ಮಿ ಬೋಳಿಸುತ್ತಿರುತ್ತಾರೆ. ಅವರ ಕಡೆ ಹೋಗು. ಪುಕಸಟ್ಟೆ ಬೋಳಿಸಿ ಕಳಿಸುತ್ತಾರೆ. ನಾಳೆ ಸಾಲಿಗೆ ಬರೋವಾಗ ನಿನ್ನ ಕಟಿಂಗ ಆಗಿದ್ದಿಲ್ಲ ಅಂದ್ರ ನೋಡು ಮತ್ತ! ನಾನೇ ಮುದ್ದಾಂ ನಿನ್ನ ಗೌಳಿಗರ ದಡ್ಡಿಗೆ ಕರಕೊಂಡು ಹೋಗಿ, ಎಮ್ಮಿ ಬೋಳಿಸೋ ಮಂದಿ ಕೈಯಾಗ ಕೊಟ್ಟು ಬರ್ತೇನಿ. ಎಮ್ಮಿ ಬೋಳಿಸವರು ನಿನ್ನೂ ಬೋಳಿಸಿ ಕಳಿಸ್ತಾರೆ,' ಅಂತ ಒದರುತ್ತಿದ್ದರು. ದೊಡ್ಡ ಮೀಸೆ ಗುಂಜೀಕರ್ ಸರ್ ಅಬ್ಬರಿಸಿದ ಅಬ್ಬರಕ್ಕೆ ಹೆದರಿ, ಹೇತಾಡಿಕೊಂಡ ಮಂದಿ ತಪ್ಪದೇ ಮರುದಿವಸ ಭಟ್ಟರ ಶಾಲೆಯ ಟ್ರೇಡ್ ಮಾರ್ಕ್ ಸಣ್ಣ ಕಟಿಂಗ್ ಮಾಡಿಸಿಕೊಂಡು ಬಂದು, ಬಗ್ಗಿಸಿ, ಅಂದ್ರೆ ತಲೆ ಬಗ್ಗಿಸಿ, ಸರ್ ಅವರಿಗೆ ನಮಸ್ಕಾರ ಮಾಡುತ್ತಿದ್ದರು. ಸ್ವಲ್ಪ ಜಾಸ್ತಿಯೇ ಬಗ್ಗಿಸಿ ಮಾಡುತ್ತಿದ್ದರು. ಯಾಕೆಂದರೆ ಸರ್ ತಲೆ ನೋಡಿ, ಕಟಿಂಗ್ ಬರೋಬ್ಬರಿ ಆಗಿದೆಯೋ ಇಲ್ಲವೋ ಅಂತ ಹೇಳಲಿ ಅಂತ. ತಲೆ ಮೇಲೆ ಲೈಟಾಗಿ ತಬಲಾ ಬಾರಿಸಿದ ಸರ್, 'ಹಾಂ! ಬರೋಬ್ಬರಿ ಅದ' ಅಂತ ಹೇಳಿದ ಮೇಲೆಯೇ ಒಂದು ರೀತಿ ಸಮಾಧಾನ ಶಿಷ್ಯರಿಗೆ.

ನನಗೆ ಆವಾಗಲೂ ಯೋಚನೆ ಬರುತ್ತಿತ್ತು. ಈಗಲೂ ಬರುತ್ತದೆ. 'ಸರಿ ಸರ್. ಉದ್ದ ಕೂದಲು ಬಿಡಬೇಡ ಅಂದಿರಿ. ಓಕೆ. ಬೋಳಿಸಿಕೊಂಡು ಬಂದೆವು. ಉದ್ದ ಉಗುರು ಬಿಡಬೇಡ ಅಂದಿರಿ. ಓಕೆ. ಕತ್ತರಿಸಿಕೊಂಡು ಬಂದೆವು. ಎಲ್ಲವೂ ಓಕೆ. ನಾವೂ ಸಹ ನಿಮಗೆ ಒಂದು ಮಾತು ಹೇಳೋಣವೇ ಅಂತ ಅನ್ನಿಸುತ್ತದೆ. ನೀವು ಮಾಸ್ತರ್ ಮಂದಿ ಸಿಕ್ಕಾಪಟ್ಟೆ ಹೊಟ್ಟೆ ಬಿಟ್ಟುಬಿಟ್ಟಿದ್ದೀರಿ. ನಾಳೆಯಿಂದ ನಮಗೆ ಕಟಿಂಗ್ ಮಾಡಿಸಿಕೊಂಡು ಬಾ ಅನ್ನುವಂತೆ ನೀವೂ ಸಹ ನಿಮ್ಮ ಹೊಟ್ಟೆ ಕರಗಿಸಿಕೊಂಡು ಬನ್ನಿ ಅಂತ ನಾವು ನಿಮಗೆ ಹೇಳಿದರೆ ಹೇಗೆ?' ಅಂತ. 'ಮಹೇಶಾ, ನೀ ಹಾಂಗ ಏನರೆ ಹೇಳಿದ್ದರೆ ನಿನಗ TC (Transfer Certificate) ಕೊಟ್ಟು, ಸಾಲಿ ಬಿಟ್ಟು, ಓಡಸ್ತಿದ್ದರು' ಅಂದರು ದೋಸ್ತರು. ಹೌದೇ? ಗೊತ್ತಿಲ್ಲ. ಮಾಸ್ತರ್ ಮಂದಿಗೆ ಏನೇನೋ ಅಂದು ದಕ್ಕಿಸಿಕೊಂಡಿದ್ದ ನಾವು ಅದೊಂದು ಮಾತು ಹೇಳಲೇ ಇಲ್ಲ. ಇರಲಿ ಬಿಡಿ. ಅಷ್ಟು ಪಾಪ ಕಮ್ಮಿಯಾಯಿತು. ಈಗ ಹೋಗಿ ಹೇಳು ಅಂದರು ದೋಸ್ತರು. ನಮ್ಮ ಹೊಟ್ಟೆಯೇ ನಮಗೆ ಅಡ್ಡ ಬಂದು ಬೇಡ ಅಂದಿತು.

ಸೀತಾರಾಂ ಭಟ್ಟರ ಒಂದು ಮಾತು ಇಷ್ಟೆಲ್ಲ ನೆನಪು ತಂದಿತು. ಅವರಿಗೊಂದು ಥ್ಯಾಂಕ್ಸ್. 

ಸೀತಾರಾಂ ಭಟ್ಟರ ವ್ಯಾಕರಣ ಮಾತ್ರ ನೆನಪಿಡಬೇಕು. ಅದೂ ಹೆಂಡತಿ ಬಗ್ಗೆ ಮಾತಾಡುವಾಗ. ಅಂದರೆ ಸ್ವಂತ ಹೆಂಡತಿ ಇದ್ದವರು ಅವರ ಹೆಂಡತಿ ಬಗ್ಗೆ ಮಾತಾಡುವಾಗ ಅಂತ. ಅಷ್ಟೇ  ;)

3 comments:

sunaath said...

‘ನಮ್ಮ ಹೆಂಡ್ರು’ ಅನ್ನುವ ಪ್ರಯೋಗ ಕೂಡ ಚಾಲ್ತಿಯಲ್ಲಿದೆ, ‘ನನ್ನ ಹೆಂಡತಿ’ಎನ್ನುವ ಅರ್ಥದಲ್ಲಿ!

Mahesh Hegade said...

ಹೌದು ಸರ್.

'ನಮ್ಮ ಮನೆಯವರು', 'ನಮ್ಮ ಯಜಮಾನರು' ಅನ್ನುವ ಪದಗಳು ಚಾಲ್ತಿಯಲ್ಲಿವೆ.

Jaggeshwaranda Swami said...


Very funny!