Tuesday, April 14, 2015

ಹೀಗೊಂದು ವಿಚಿತ್ರ 'ಮುತ್ತೈದೆ ಸಾವು'

ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ. ಅವರೊಬ್ಬರು ಮುತ್ತೈದೆ. ವಯಸ್ಸು ಒಂದು ೫೫ -  ೬೦ ಇರಬಹದು. ಅವರ ಗಂಡಗ ಒಂದು ಐದಾರು ವರ್ಷ ಹೆಚ್ಚು. ಒಂದು ೬೦ - ೭೦ ವರ್ಷ ಇದ್ದೀತು ಅಂತ ಅನ್ನರೀ.

ಹೀಂಗಿದ್ದಾಗ ಗಂಡಗ ಏನೋ ಸ್ವಲ್ಪ ಆರೋಗ್ಯ ಕೆಡ್ತು. ಮೊದಲು ಮನಿಯೊಳಗೇ ಟ್ರೀಟ್ಮೆಂಟ್ ಆತು. ಅನಾರೋಗ್ಯ ಜಾಸ್ತಿ ಆತು ಅಂದ ಕೂಡಲೇ ಸ್ವಲ್ಪ ದಿವಸ ಆಸ್ಪತ್ರೆಯಲ್ಲೂ ಅಡ್ಮಿಟ್ ಆದರು. ಅಲ್ಲೆ ಸ್ವಲ್ಪ ಆರಾಮಾದರು. ಮನಿಗೆ ಬಂದರು. ಮತ್ತ ಜಡ್ಡು ಬಿದ್ದರು. ಹೀಂಗೆ ಒಂದು ನಾಲ್ಕಾರು ತಿಂಗಳು ನಡೆದಿತ್ತು.

ಹೀಂಗಿದ್ದಾಗ ಯಾಕೋ ಒಂದು ಸರೆ ಗಂಡನ ಆರೋಗ್ಯ ಸ್ವಲ್ಪ ಜಾಸ್ತಿನೇ ಬಿಗಡಾಯಿಸಿಬಿಡ್ತು. ವಯಸ್ಸು ಬ್ಯಾರೆ ಎಪ್ಪತ್ತರ ಸನಿಹ ಬಂದುಬಿಟ್ಟದ. ಮತ್ತ ಎಲ್ಲೆ ಇವರ ಆಯಸ್ಸು ಮುಗಿಯೋ ಟೈಮ್ ಬಂದದೋ, ಮ್ಯಾಲೆ ಹೋಗೇ ಬಿಡ್ತಾರೋ, ಅಂತ ಮಂದಿ ಎಲ್ಲ ಮಾತಾಡಿಕೊಂಡರು. ಸಹಜ ಮಾತಾಡಿಕೊಂಡರು ಬಿಡ್ರೀ.

ಮಂದಿ ಮಾತಾಡಿದ ಅಂತಹ ಮಾತುಗಳು ಹೆಂಡತಿ ಮ್ಯಾಲೆ ಪರಿಣಾಮ ಬೀರಿದವೋ ಏನೋ ಗೊತ್ತಿಲ್ಲ. ಒಂದು ದಿವಸ ಅವರ ಹೆಂಡತಿ ಹೋದವರೇ, ಮುಂದಿನ ಮನೆ ಕಾಂಪೌಂಡ್ ನಲ್ಲಿದ್ದ ದೊಡ್ಡ ಭಾವಿಯಲ್ಲಿ ಡೈವ್ ಹೊಡದೇಬಿಟ್ಟರು. ಮುಳುಗಿ ಹೋದರು. ಮುಳಗಿ ಸತ್ತೇಹೋದರು. ಫಿನಿಶ್!

ಈ ಮುತ್ತೈದೆ ಬಾಯಾರು ಯಾಕ ಹೀಂಗ ಮಾಡಿದರು ಅಂತ ವಿವರಿಸಲಿಕ್ಕೆ ಒಂದು ಥಿಯರಿ ಬೇಕಲ್ಲ? 'ಅವರಿಗೆ ಮುತ್ತೈದೆ ಸಾವೇ ಬೇಕಾಗಿತ್ತಂತ. ಎಲ್ಲರೆ ಗಂಡ ಮೊದಲೇ ತೀರಿಕೊಂಡಾರು ಅಂತ ಹೆದರಿ ತಾವೇ ತಮ್ಮ ಪ್ರಾಣ ಮೊದಲು ಕಳೆದುಕೊಂಡುಬಿಟ್ಟರು,' ಅಂತ ಲೊಚ್ ಲೊಚ್ ಅಂದವರು ಎಲ್ಲರು. ಸತ್ತವರು ಖರೇ ಹಾಂಗೇ ವಿಚಾರ ಮಾಡಿ ಸತ್ತಿದ್ದರೇ? ಅಥವಾ ಬೇರೆ ಯಾವದೋ ಕಾರಣಕ್ಕೆ ಜೀವನಕ್ಕೆ ರೈಟ್ ಹೇಳಿ ಹೋಗಿಬಿಟ್ಟಿದ್ದರೋ? ಗೊತ್ತಿಲ್ಲ.

ವಿಚಿತ್ರ ಅಂದರೆ ಅವರ ಗಂಡ ಮಾತ್ರ ಚೇತರಿಸಿಕೊಂಡು, ಪೂರ್ತಿ ಆರಾಮಾಗಿ, ಹೆಂಡತಿ ಮುತ್ತೈದೆಯಾಗಿಯೇ ತೀರಿ ಹೋದ ಬಳಿಕವೂ ಮುಂದೆ ಹತ್ತು ಹದಿನೈದು ವರ್ಷವಿದ್ದು ನಂತರ ತೀರಿಕೊಂಡರು. ಇದಕ್ಕೇನಂತೀರೀ? 'ಕೆಟ್ಟ ಕಾಡೋ ಹೆಂಡತಿ ಅನ್ನೋ ಪೀಡಾ ಹೋತು ಅಂತ ಅಜ್ಜ ಹ್ಯಾಂಗ ಫಟಾಕ್ ಅಂತ ಎದ್ದು ಕೂತರು ನೋಡ್ರೀ!?' ಅಂತ ಕಿಡಿಗೇಡಿ ಮಂದಿ ಜೋಕ್ ಹೊಡೆದರು. ಒಮ್ಮೊಮ್ಮೆ ಸತ್ತವರ ಉಳಿದ ಆಯುಸ್ಸು ಇದ್ದವರಿಗೆ ಬಂದು ಬಿಡ್ತದ ಅನ್ನೋಹಾಂಗ ಮತ್ತೂ ಒಂದಿಷ್ಟು ವರ್ಷ ಆರಾಮಿದ್ದು ನಂತರ ಆರಾಮಾಗೇ ಹೋದರು. ಏನೋ ಎಂತೋ. ದೇವರಾಟ ಬಲ್ಲವರ್ಯಾರು!?

ಅಲ್ಲ ಇನ್ನೊಂದು ಮಾತು. ಸತ್ತುಕೊಂಡ ಮುತ್ತೈದೆ ಬಾಯಾರ ಮನಿ ಕಾಂಪೌಂಡ್ ಒಳಗೇ ಒಂದು ದೊಡ್ಡ ಭಾವಿ ಇತ್ತು. ನಮ್ಮ ಧಾರವಾಡದ ಮಾಳಮಡ್ಡಿಯ ಹಳೆ ಕಾಲದ ಕಾಂಪೌಂಡ್ ಒಳಗ ಎಲ್ಲ ಕಂಪೌಂಡ್ ಒಳಗೂ ಒಂದು ದೊಡ್ಡ ದೆವ್ವದಂತಹ ಭಾವಿ ಖಾಯಂ. ಹಾಂಗಿದ್ದಾಗ ಈ ಮುತ್ತೈದೆ ಬಾಯಾರು ಹೋಗಿ ಹೋಗಿ ತಮ್ಮ ಮುಂದಿನ ಮನಿಯವರ ಭಾವ್ಯಾಗ ಜಿಗದು ಯಾಕ ತಮ್ಮಪ್ರಾಣ ಕಳೆದುಕೊಂಡರು? ಅದು ಮಾತ್ರ ಬಗೆಹರಿಯದ ಚಿದಂಬರ ರಹಸ್ಯ.

'ಭಾಳ ಛಲೋ ಕೆಲಸ ಮಾಡಿದರು. ಇವರು ನಮ್ಮ ಮನಿ ಭಾವ್ಯಾಗ ಬೀಳದೇ, ಹೋಗಿ ಮುಂದಿನ ಮನಿ ಭಾವ್ಯಾಗ ಬಿದ್ದು ಸತ್ತರು. ನಮ್ಮ ಭಾವಿಯಾಗೇ ಬಿದ್ದು ಸತ್ತಿದ್ದರೆ ನಮಗೇ ಭಾಳ ತೊಂದ್ರಿಯಾಗಿಬಿಡ್ತಿತ್ತು. ಸಾಯೋದು ಸತ್ತರು. ಸೂಡ್ಲೀ! ಹೋಗೋವಾಗ ಅಷ್ಟರೆ ಉಪಕಾರ ಮಾಡಿ ಹೋದರು. ಅವರಿಗೊಂದು ದೊಡ್ಡ ನಮಸ್ಕಾರ,' ಅಂತ ಅವರ ಮನೆ ಜನ ಆಡಿಕೊಂಡರು. 'ಏನು ಆಗಿತ್ತು ಅಂತೇನಿ ಅವರಿಗೆ!? ಜೀವಂತ ಇದ್ದಾಗಂತೂ ಸಿಕ್ಕಾಪಟ್ಟೆ ದುರ್ಬುದ್ಧಿ ಅವರಿಗೆ. ಸಾಯೋವಾಗ ಸಹಿತ ತಮ್ಮ ಕೆಟ್ಟ ಬುದ್ಧಿ ತೋರಿಸಿಯೇ ಸತ್ತರು. ತಮ್ಮ ಮನಿಯಾಗ ಸ್ವಂತ ಭಾವಿ ಇದ್ದರೂ ನಮ್ಮ ಮನಿ ಭಾವ್ಯಾಗ ಬಂದು ಬಿದ್ದು ಸತ್ತುಕೊಂಡರು ನೋಡ್ರೀ. ಎಂತಾ ದುರ್ಬುದ್ಧಿ ಅಂತ? ಇವರು ಹೀಂಗ ಮಾಡಿದರು ಅಂತ ನಾವೇನು ಮಾಡೋಣ ಈಗ? ಇವರು ನಮ್ಮ ಭಾವಿಗೆ ಬಂದು ಬಿದ್ದರು ಅಂತ ನಾವು ಇವರ ಭಾವಿಗೆ ಹೋಗಿ ಬೀಳೋಣ ಏನು???? ಹಾಂ?' ಅಂತ ಎದುರಿನ ಮನೆಯವರು ಉರಿದುಕೊಂಡರು. ಉರಿ ಶಮನ ಮಾಡಿಕೊಳ್ಳಲಿಕ್ಕೆ ಅದೆಷ್ಟು ಬರ್ನಾಲ್ ಬೇಕಾಯಿತೋ ಪಾಪ! ಮನೆ ಭಾವಿಗೆ ಯಾರೋ ಬಂದು ಬಿದ್ದು ಸಾಯುತ್ತಾರೆ ಅಂದರೆ ಸಣ್ಣ ಮಾತೇ!? ಆ ರಾಡಿ ಸ್ವಚ್ಛ ಮಾಡೋದು ಅಂದರೆ ಸಣ್ಣ ಕೆಲಸವೇ? ಸತ್ತವರೆನೋ ಹೋಗಿಬಿಡ್ತಾರೆ. ತೊಂದ್ರೆ ಮಾತ್ರ ಇದ್ದವರಿಗೆ.

ಮುತ್ತೈದೆಯಾಗಿಯೇ ಸತ್ತವರಿಗೆ ಸ್ವರ್ಗ ಸಿಕ್ಕಿತೋ ಅಥವಾ ಆತ್ಮಹತ್ಯೆ ಮಾಡಿಕೊಂಡವರಿಗೆ ಸದ್ಗತಿ ಇಲ್ಲ ಅನ್ನುವ ಹಾಗೆ ದೆವ್ವ, ಭೂತ, ಪಿಶಾಚಿ ಇತ್ಯಾದಿ ಆಗಿ ಓಡಾಡಿಕೊಂಡಿದ್ದಾರೋ? ಗೊತ್ತಿಲ್ಲ. ಆಕಡೆಯಿಂದ ಭೂತ ಚೇಷ್ಟೆ, ಪ್ರೇತ ಬಾಧೆ ಇತ್ಯಾದಿ ಕೇಳಿಬಂದಿಲ್ಲ. ಹಾಗಾಗಿ ಸದ್ಗತಿ ಸಿಕ್ಕಿರಬಹುದು ಅಂತ ಭಾವನೆ.

* ಮುತ್ತೈದೆ ಭಾಗ್ಯದ ಬಗ್ಗೆ ಬರೆದಿದ್ದ ಹಳೆಯದೊಂದು ಲೇಖನ. 'ಮುತ್ತೈದೆ ಭಾಗ್ಯ : ಅವಳಿಗೆ ಹಾಗೆ. ಇವನಿಗೆ ಹೀಗೆ. ಆದರೆ ಯಾಕೆ? But Why?'

2 comments:

sunaath said...

ಇಂಥಾ ಮುತ್ತೈದಿ ಸಾವು ತಪ್ಪಿಸಲಿಕ್ಕೆ ಅಂತsನ, ಮುನಸಿಪಾಲಿಟಿಯವರು ಎಲ್ಲಾ ಕಡೆಗೂ ನಳಾ ಹಾಕಿಸಿದರು ಅಂತ ಕೇಳೇನಿ!

Mahesh Hegade said...

Thanks, Sir.

ನೀವು ಹೇಳಿದ್ದು ಖರೆ ಇರಬಹುದು. ಈಗ ಭಾವಿ ಸೈಜಿನ ಟಂಕಿ (tank)ಕಟ್ಟಿಸಿ, ಅದರಾಗ ನೀರು ತುಂಬಿಸಿಕೊಳ್ಳುವ ಪರಿಸ್ಥಿತಿ. ಯಾಕೆಂದ್ರೆ ಮೇಲಿನ ಮಹಡಿ ಟ್ಯಾಂಕಿಗೆ ನೀರು ಏರೋದಿಲ್ಲ. ಕೆಳಗಿಂದ ಪಂಪ್ ಮಾಡಬೇಕು. ಹಾಗಾಗಿ ಈಗ ಟ್ಯಾಂಕ್ ಒಳಗ ಮುಳುಗಬಹುದು :)