Saturday, July 07, 2012

ಮಂಗ್ಯಾ ಮನಸ್ಸಿನ ಹತೋಟಿಗೆ ಮಂತ್ರ ಜಪವೆಂಬ ಮಂತ್ರದಂಡ

ಕೇರಳದಲ್ಲಿ ಆನೆಗಳು ಬಹಳ.

ದೇವಸ್ಥಾನ, ಗುಡಿಗಳಲ್ಲಿ ಹಲವಾರು ಆನೆಗಳಿರುತ್ತವೆ. ಮತ್ತೆ ಕೇರಳಿಗರಿಗೆ ಆನೆಯನ್ನು ಸಿಂಗರಿಸಿ, ಅದರ ಮೇಲೆ ದೇವರನ್ನು ಸ್ಥಾಪಿಸಿ, ಊರ ತುಂಬಾ ಮೆರೆವಣಿಗೆ ತೆಗೆದುಕೊಂಡು ಹೋಗುವದರಲ್ಲಿ ಏನೋ ಉತ್ಸಾಹ. ಏನೋ ಖುಷಿ.

ನಮ್ಮ ಊರಿನ ಕಿರಿದಾದ ಹಾದಿಗಳಲ್ಲಿ ಆನೆಯ ಮೆರೆವಣಿಗೆ ತೆಗೆದುಕೊಂಡು ಹೋಗುವದೆಂದರೆ ಸಾಮಾನ್ಯ ಮಾತಾ? 

ದೇವಸ್ಥಾನದ ಸುತ್ತ ಮುತ್ತ ಇರೋ ಕಿರಿದಾದ ಬೀದಿಗಳಲ್ಲಿ ಇರೋ ಹೆಚ್ಚಿನ ಅಂಗಡಿಗಳು ಎಂದರೆ - ಹೂವು, ಹಣ್ಣು, ತೆಂಗಿನಕಾಯಿ ಮಾರೋ ಚಿಕ್ಕ ಪುಟ್ಟ ವ್ಯಾಪಾರಿಗಳದ್ದು. ಎಲ್ಲವೂ ಆನೆಗೆ ಬಹು ಪ್ರಿಯವಾದ ವಸ್ತುಗಳೇ.

ಅಂತಹ ರಸ್ತೆಯಲ್ಲಿ ಹೊರಟ ಆನೆಯ ಸೊಂಡಿಲು ಸುಮ್ಮನಿರಲು ಸಾಧ್ಯವೆ? ಎಷ್ಟೇ ತರಬೇತಿ ಇರಲಿ, ನೇತು ಹಾಕಿದ ಬಾಳೆ ಹಣ್ಣಿನ ಕೊನೆ, ರಾಶಿ ಹಾಕಿದ ತೆಂಗಿನಕಾಯಿ, ಆನೆಯನ್ನು ಸಿಕ್ಕಾ ಪಟ್ಟೆ  ಟೆಂಪ್ಟ್ ಮಾಡಿ ಬಿಡುತ್ತವೆ. ಈ ಕಡೆ ಸೊಂಡಿಲು ಎತ್ತಿ ಒಂದು ಫುಲ್ ಬಾಳೆಗೊನೆಯನ್ನೇ ಸ್ವಾಹಾ ಮಾಡುತ್ತದೆ. ಮುಂದೆ ಹೋಗುತ್ತಾ ಇನ್ನೊಂದು ಕಡೆ ಸೊಂಡಿಲು ಹಾಕಿ ಸಿಕ್ಕಷ್ಟು ತೆಂಗಿನಕಾಯನ್ನು ಬಾಯೊಳಗೆ ತುರುಕಿ ಕುರ್ರಂ ಅಂದ್ರೆ ಒಂದೇ ಹೊಡತಕ್ಕೆ ಅವೆಲ್ಲಾ ಖಲಾಸ್. ಮ್ಯಾಲೆ ಕುಳಿತ ಮಾವುತ ಅಂಕುಶದಿಂದ ತಿವಿದರೆ ಆನೆಗೆ ಸಿಟ್ಟು ಬರುತ್ತದೆಯೇ ಹೊರತು ಬುದ್ಧಿ ಬರುವದಿಲ್ಲ. ಆನೆಯ ಸೊಂಡಿಲು ಮಾತ್ರ ಆಕಡೆಯಿಂದ ಈಕಡೆ ಹೊರಳುತ್ತಾ, ಚಿಕ್ಕ ಪುಟ್ಟ ಅಂಗಡಿದಾರರ ಮಾಲನ್ನು ಮಟಾಶ್ ಮಾಡುವದರಲ್ಲೇ ನಿರತವಾಗಿರುತ್ತದೆ.

Only way to avoid temptation is to succumb to it. ಮನುಷ್ಯರಿಗೇ ಆಸೆ ಕಂಟ್ರೋಲ್ ಮಾಡಲು ಆಗೋದಿಲ್ಲಾ. ಇನ್ನು ಪಾಪ ಆನೆ ಪ್ರಾಣಿ.

ಹಲವಾರು ಶತಮಾನದಿಂದ ಗಜಶಾಸ್ತ್ರದಲ್ಲಿ ಪ್ರಾವಿಣ್ಯ ಪಡೆದಿರುವ ಕೇರಳ  ಮಾವುತರು ಆನೆಗಳ ಸೈಕೊಲಜಿ ಯನ್ನು ಒಂದು ವಿಜ್ಞಾನದಂತೆ ಸ್ಟಡಿ ಮಾಡಿ, ಕೆಲವೊಂದು ಫಾರ್ಮುಲ ತರಹದ್ದನ್ನು ಕಂಡು ಹಿಡಿದು ಅದನ್ನ ಆನೆಗೆ ತರಬೇತಿ ಕೊಡುವ ಸಮಯದಲ್ಲಿ ಉಪಯೋಗಿಸುತ್ತಾರೆ.

ಚಿಕ್ಕಂದಿನಲ್ಲೇ ಆನೆಗಳಿಗೆ ಮೆರವಣಿಗೆಯಲ್ಲಿ ಹೇಗೆ ಹೋಗಬೇಕು ಎನ್ನುವದರ ತರಬೇತಿ ಶುರು. ತರಬೇತಿಯಲ್ಲಿ ಒಂದು ಮುಖ್ಯ ವಿಧಾನ ಅಂದ್ರೆ, ಆನೆಯ ಸೊಂಡಲಿಗೆ ಒಂದು ಚಿಕ್ಕ ಬಿದರಿನ ಕೋಲು ಕೊಟ್ಟು, ಇಡೀ ಮೆರವಣಿಗೆ ಮುಗಿಯುವ ತನಕ ಹಿಡಿದುಕೊಳ್ಳುವಂತೆ ಮಾಡುವದು. 

ಪಾಪ ಆನೆಗೇನು ಗೊತ್ತು ಆ ಬಿದರಿನ ಕೋಲಿನ ಮಹತ್ವ? ಅತ್ಯಂತ ಸಾಧು ಮತ್ತು ತರಬೇತಿಗೆ ಸೂಕ್ತ ಪ್ರಾಣಿ ಆನೆ. ಸಣ್ಣದಿರುವಾಗಿಂದ ರೂಢಿ ಆಗಿದ್ದಕ್ಕೋ, ಮಾವುತನ ಮೇಲಿನ ಪ್ರೀತಿಯಿಂದಲೋ, ಆನೆ ಒಂದು ಸಲ ಬಿದರಿನ ಕೋಲು ಸೊಂಡಿಲಲ್ಲಿ ಬಂತು ಅಂದರೆ, ಮೆರವಣಿಗೆ ಮುಗಿಯುವ ತನಕ ಜಪ್ಪಯ್ಯ ಅಂದ್ರೂ ಅದನ್ನು ಬಿಟ್ಟು ಕೊಡುವದಿಲ್ಲ.

ಈ ರೀತಿ ಬಿದರಿನ ಕೋಲನ್ನು ಸೊಂಡಿಲಿನಲ್ಲಿ ಹಿಡಿದುಕೊಂಡು ಮೆರವಣಿಗೆ ಹೊರಟ ಆನೆಗೆ ಬಾಳೇಹಣ್ಣು, ತೆಂಗಿನಕಾಯಿ  ಸಿಕ್ಕಾಪಟ್ಟೆ ಟೆಂಪ್ಟ್ ಮಾಡುತ್ತವೆ. ಆದರೆ ವರ್ಷಾನುಗಟ್ಟಲೆ ತರಬೇತಿಯ ಫಲ, ಅನೆ ಸೊಡಿಲಿನಿಂದ ಬಿದರು ಕೋಲು ಬಿಡೋದಿಲ್ಲ. ಸೊಂಡಿಲು ಅತ್ತ ಇತ್ತ ಹೋಗುವದಿಲ್ಲ. ಅದಕ್ಕೆ ಅಕ್ಕ ಪಕ್ಕದ ಅಂಗಡಿ ಮತ್ತು ಅವರ ಮಾಲು ಬಚಾವ್.

ಈ ನಮ್ಮ ಮಂಗ್ಯಾ ಮನಸ್ಸು ಇದೆಯಲ್ಲ, ಅದು ಆನೆ ಸೊಂಡಿಲು ಇದ್ದಾಂಗೆ. ಜೀವನ ಒಂದು ಮೆರವಣಿಗೆ. ನಮ್ಮ ಮನಸ್ಸಿಗೆ ಟೆಂಪ್ಟ ಮಾಡೋ  ಬಾಳೆಹಣ್ಣು, ತೆಂಗಿನಕಾಯ್ಕಿಂತ ಇನ್ನೂ ಹೆಚ್ಚು ಹೆಚ್ಚು ಆಕರ್ಷಕ ವಸ್ತುಗಳು  ಮನಸ್ಸಿಗೆ ಬೀಳುತ್ತವೆ. ಯೋಚನೆಗಳು ಬರುತ್ತವೆ.

ತರಬೇತಿ ಇಲ್ಲದ, ಸೊಂಡಿಲಿನಲ್ಲಿ ಬಿದರಿನ ಕೋಲಿಲ್ಲದ  ಆನೆ ಹೇಗೆ ಸುತ್ತಾ ಮುತ್ತ ಇರೋದೆಲ್ಲವನ್ನು ಸ್ವಾಹಾ ಮಾಡುತ್ತದೆಯೋ, ಅದೇ ರೀತಿ ನಮ್ಮ ಮನಸ್ಸು ಸಹ  ಬೇಕಾಗಿದ್ದು, ಬ್ಯಾಡಾಗಿದ್ದು ಎಲ್ಲವನ್ನೂ ಸ್ವೀಕರಿಸಿ ತಲೆಯನ್ನ ಮೊಸರ ಗಡಿಗೆ ಮಾಡಿ ಹಾಕುತ್ತದೆ.

ಹತೋಟಿಯಿಲ್ಲದ ಇಲ್ಲದ ಮನಸ್ಸು ಅಂಗಡಿಗಳಿಂದ ಎತ್ತುವದಾದರು ಏನು? ಯಾವದೋ ಹಳೇ ವೈಮನಸ್ಸು. ಯಾವದೋ ಚಿಂತೆ. ಯಾವದೋ ಹಳೇ ಕಾಲದ ಸುಖ. ಅದನ್ನು ಈಗ ಅನುಭವಿಸಲಾರೆ ಅನ್ನುವದರ ಬಗ್ಗೆ ವಿಷಾದ. ಯಾರೋ ಅವರ ಪಾಡಿಗೆ ಅವರು ಸುಖವಾಗಿದ್ದರೆ ನಮಗೆ ಹೊಟ್ಟೆಕಿಚ್ಚು. ಅಥವಾ ತಿನ್ನಬಾರದ್ದು ತಿನ್ನು, ಕುಡಿಬಾರದ್ದು ಕುಡಿ, ಮಾಡಬಾರದ್ದು ಮಾಡು ಅಂತ ನಮ್ಮನ್ನು ಟೆಂಪ್ಟ್ ಮಾಡುವದು. ಹೀಗೆ ಮೆಜಾರಿಟಿ ಟೈಮ್ ಉಪಯೋಗವಿಲ್ಲದ ಆಲೋಚನೆಗಳೇ. ಕೆಲವೊಂದ ಸಲ ಫುಲ್ ಮನೆಹಾಳ್ ಯೋಚನೆಗಳು. Untrained mind over works but under performs.

ಇಂತಹ ಮಂಗ್ಯಾ ಮನಸ್ಸಿಗೆ ನಾವೂ ಸಹಿತ ಆನೆಯ ಸೊಂಡಲಿಗೆ ಕೊಟ್ಟಂತೆ ಏನಾದರೂ ಕೊಟ್ಟು ಅದು ಸ್ವಲ್ಪ ಹತೋಟಿಯಲ್ಲಿ ಇರುವಂತೆ ಮಾಡಲು ಸಾಧ್ಯವೇ?

ಇದೆ. ಅದೇ ಮಂತ್ರ. ಮಂತ್ರದ ಜಪ. ನಿಮಗೆ ಇಷ್ಟವಾದ ಮಂತ್ರ ಆರಿಸಿಕೊಂಡು, ಸಮಯ ಸಿಕ್ಕಾಗೆಲ್ಲ ಅದನ್ನ ಜಪಿಸುತ್ತ ಇದ್ದರೆ ಅದು ಅತ್ಯಂತ ಬೆನಿಫಿಟ್ ಕೊಡುತ್ತದೆ. ಆ ಮಂತ್ರ  ರಾಮ ನಾಮ ಸ್ಮರಣೆ ಆಗಿರಬಹುದು ಅಥವಾ ಮತ್ತೊಂದು ಮಂತ್ರವಾಗಿರಬಹುದು. ಮಂಗ್ಯಾ ಮನಸ್ಸಿಗೆ ಜಪ ಮಾಡೋ ಟ್ರೇನಿಂಗ್ ಕೊಟ್ಟರೆ ಅದು ಆನೆ ಹೇಗೆ ತನ್ನ ಸೊಂಡಿಲಿನಲ್ಲಿ ಇರೋ ಕೋಲನ್ನು ಬಿಡುವದಿಲ್ಲವೋ ಅದೇ ರೀತಿ ಮನಸ್ಸು ಮಂತ್ರವನ್ನೇ ಹಿಡಿದುಕೊಂಡು ಹಾಳುವರಿ ಯೋಚನೆ ಮಾಡುವದನ್ನ ಕಡಿಮೆ ಮಾಡಿ ಒಂದು ತರಹದ ಹತೋಟಿಗೆ ಬರುತ್ತದೆ. ಮೆರವಣಿಗೆ ಆನೆಗೆ 10-20 ವರ್ಷದ ಟ್ರೇನಿಂಗ್ ಇರುತ್ತದೆ. ಮನಸ್ಸಿಗೆ ಮಂತ್ರವನ್ನ ಹಿಡಿದುಕೊಳ್ಳಲು ತರಬೇತಿಯ ಒಂದೇ ವಿಧಾನ - ಮಂತ್ರ ಜಪ ಮಾಡುತ್ತಾ ಇರುವದು. ನಡು ನಡುವೆ ಜಪ ಮಾಡುವದು ಮರೆತು ಹೋಗಬಹುದು. ನೆನಪಾದ ತಕ್ಷಣ ಮತ್ತೆ ಶುರು ಮಾಡಿ ಬಿಟ್ಟರೆ, ನೆಕ್ಸ್ಟ್ ಟೈಮ್ ಇನ್ನೂ ಬೇಗನೆ ನೆನಪು ಆಗುತ್ತದೆ. ರಾತ್ರೆ ಮಲಗುವಾಗ ಅಥವಾ ಚಿಕ್ಕ ನ್ಯಾಪ್ ಮಾಡುವಾಗ ಮಂತ್ರ ಜಪ ಮಾಡುತ್ತಾ ನಿದ್ದೆ ಮಾಡಿ. ಎದ್ದ ನಂತರ ಇಫೆಕ್ಟ್ ನಿಮಗೇ ಗೊತ್ತಾಗುತ್ತದೆ.

ಯಾವದೋ ಒಂದು ಶಬ್ದ ಆರಿಸ್ಕೊಂಡು ಅದನ್ನ ಮಂತ್ರ ಅಂತ ಮೆಕಾನಿಕಲ್ ಆಗಿ ರಿಪೀಟ್ ಮಾಡ್ತಾ ಹೋದ್ರೆ ಏನು ಉಪಯೋಗ ಅನ್ನೋರಿಗೆ 'ಮಂತ್ರ ಯೋಗ' ದ ಡಿಟೆಲ್ಸ್ ಹೇಳಲು ನನಗೆ ಜಾಸ್ತಿ ಗೊತ್ತಿಲ್ಲ. ಕಾರ್ ಡ್ರೈವ್ ಮಾಡಿ ಅದರ ಲಾಭ ಪಡೆದುಕೊಳ್ಳಲು ಆಟೋಮೊಬೈಲ್ ಇಂಜಿನಿಯರ್ ತರಹ ಕಾರಿನ ಒಳಗೂ ಹೊರಗೂ ತಿಳಕೊಂಡಿರಬೇಕು ಅಂತ ಏನೂ ಇಲ್ಲ. ಅಲ್ಲವೇ? ಮಂತ್ರ ಜಪದಿಂದ ಬಹಳ ಪ್ರಯೋಜನ ಆಗಿದೆ. ಅಷ್ಟು ಸಾಕಲ್ಲ?

ಆದರೆ ನೀವು ಯಾವದೇ ಧರ್ಮದ, ಯಾವದೇ ಅಧ್ಯಾತ್ಮಿಕ ಸಿಸ್ಟಮ್ ಅನ್ನೇ ತೆಗೆದು ನೋಡಿ, ಮಂತ್ರ ಜಪ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ.

ಸದಾ ಮಂತ್ರ ಜಪ ಮಾಡುತ್ತಾ ಹೋಗಿ ಹೋಗಿ ಎಷ್ಟೋ ವರ್ಷಗಳಾದ ನಂತರ ಸಾಧಕನಿಗೆ ಜಪ ಮಾಡುವ ಅಗತ್ಯ ಇರೋದಿಲ್ಲ. ಮಂತ್ರ ಜಪ ಮಾಡುವದು ಉಸಿರಾಟದಷ್ಟೇ ಸಹಜ ಕ್ರಿಯೆಯಾಗಿ ಅದು 'ಅಜಾಪಜಪಂ' ಆಗಿ, ರಿಟೈರ್ ಆದರೂ ಪೆನ್ಶನ್ ಬರೋ ಹಾಗೆ ನಿಮಗೊಂದೇ ಅಲ್ಲ ಇಡೀ ಮನುಕುಲಕ್ಕೆ ಒಳ್ಳೆಯದನ್ನ ಮಾಡುತ್ತಾ ಇರುತ್ತದೆ.

ತಮಗಿಷ್ಟವಾದ ಮಂತ್ರವನ್ನು ಆರಿಸಿಕೊಂಡು, ಜಪ ಮಾಡಿ ಒಳ್ಳೆಯದನ್ನು ಮಾಡಿಕೊಳ್ಳುವ ಇಚ್ಛೆ ಇರುವವರು ಈ ಕೆಳಗಿನ ಲಿಂಕ್ಸ್ ರೆಫರ್ ಮಾಡಿ ಉಪಯೋಗ ಪಡೆದುಕೊಳ್ಳಬಹುದು.

1) ಶ್ರೀ  ಏಕನಾಥ್ ಈಶ್ವರನ್ ಅವರು ಬರೆದ ಪುಸ್ತಕದಲ್ಲಿ ಒಂದು ಇಡೀ ಚಾಪ್ಟರ್ ಮಂತ್ರದ ಮೇಲೆ ಇದೆ. ಅದನ್ನು ಇಲ್ಲಿ ಓದಬಹದು. 

2) ಮಂತ್ರ ಜಪದ ಮಹತ್ವ, ಅದರ ಸರಳತೆ ಮತ್ತು ಅದರಿಂದ ಆಗುವ ಬಹಳ ಉಪಯೋಗಗಳಿಂದ ಪ್ರಭಾವಿತ ಶ್ರೀ ಈಶ್ವರನ್ ಅವರು ಮಂತ್ರದ ಮೇಲೆಯೇ ಒಂದು ಪುಸ್ತಕ ಬರೆದಿದ್ದಾರೆ. The Mantram Handbook  ಅಂತ ಹೇಳಿ.

Dr. Daniel H. Lowenstein ಎಂಬ ಖ್ಯಾತ ನ್ಯೂರೋಲೋಜಿಸ್ಟ್ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ನರಮಂಡಲದ ಮೇಲೆ ಮಂತ್ರ ಹೇಗೆ ಪ್ರಭಾವ ಬೀರುತ್ತದೆ ಎನ್ನುವದರ ಮೇಲೆ ಅವರ ರಿಸರ್ಚ್. ಅವರ ಒಂದು ಆರ್ಟಿಕಲ್ ಇಲ್ಲಿದೆ.

**  ಶ್ರೀ  ಏಕನಾಥ್ ಈಶ್ವರನ್ ಅವರ ಪುಸ್ತಕಗಳು  ಮತ್ತು ಅವರ ಪ್ಯಾಸೇಜ್ ಮೆಡಿಟೇಶನ್ ಸಿಸ್ಟಮ್ ನಿಂದ ಪ್ರಭಾವಿತ ಲೇಖನ ಇದು. ಏನಾದರೂ ಉಪಯುಕ್ತತೆ ಕಂಡು ಬಂದರೆ ಅದರ ಕ್ರೆಡಿಟ್ ನಮ್ಮ ಗುರುಗಳಿಗೆ. ಭಾವಾನುವಾದ ಮಾಡುವಾಗ ತಪ್ಪು ಇದ್ದಲ್ಲಿ ಅವು  ನನ್ನವು.

2 comments:

Arunkumar said...

ನಿಜವಾದ ಮಾತು. ನಿಮ್ಮ ಉದಾಹರಣೆ ಮನಮುಟ್ಟುತ್ತದೆ

Mahesh Hegade said...

Thank you, Arunkumar for taking time to read and leave your comment. Very much appreciate it.