Tuesday, July 10, 2012

ಪರಕಾಯ ಪ್ರವೇಶ

ಪರಕಾಯ ಪ್ರವೇಶ - ಅತ್ಯಂತ ಆಸಕ್ತಿ, ಕುತೂಹಲ, ಆಶ್ಚರ್ಯ, ಸಂಶಯ, ಭಯ  ಇತ್ಯಾದಿ ಭಾವನೆಗಳನ್ನ ಹುಟ್ಟಿಸುವ ವಿಷಯ.

ಯೋಗ ಸಿದ್ಧಿ ಇರುವ ಯೋಗಿಯೊಬ್ಬ ಜೀವವಿಲ್ಲದ ಶವವೊಂದರಲ್ಲಿ ಪ್ರವೇಶ ಮಾಡಿ ಹೊಸ ದೇಹವನ್ನು ಪಡೆಯುವದೇ ಪರಕಾಯ ಪ್ರವೇಶ.

ಆರನೇ ಶತಮಾನದದಲ್ಲಿ  ಪೂಜ್ಯ ಆದಿ ಶಂಕರಾಚಾರ್ಯರು ಪರಕಾಯ ಪ್ರವೇಶ ಮಾಡಿದ ಬಗ್ಗೆ ಮಾಹಿತಿ ಸಿಗುತ್ತದೆ. ಅದರ ಬಗ್ಗೆ ಕೆಲವೊಂದು ಪುಸ್ತಕಗಳಲ್ಲಿ ಓದಿದ್ದು ನೆನಪಿದೆ.

ಪರಕಾಯ ಪ್ರವೇಶದ ಬಗ್ಗೆ ಇತ್ತೀಚೆಗೆ ಯಾರೂ ಬರೆದಿಲ್ಲವಾ  ಅಂತ ನೆನಪಿಸಿಕೊಂಡಾಗ ನೆನಪಾಗಿದ್ದು ಸ್ವಾಮಿ ರಾಮ ಅವರು.

ಅವರ ಆತ್ಮಚರಿತೆಯಂತೆ ಇರುವದು -  Living with the Himalayan Masters - ಎಂಬ ಪುಸ್ತಕ. ಅದರಲ್ಲಿ ಅವರು ಪರಕಾಯ ಪ್ರವೇಶದ ಬಗ್ಗೆ ಬರೆದಿದ್ದಾರೆ. ಅದರ ಮೇಲೆ ಆಧಾರಿತ ಈ ರೈಟ್ ಅಪ್.

ನಾನು (ಸ್ವಾಮಿ ರಾಮ) ಹದಿನಾರು ವರ್ಷದವನಿರಬಹುದು. 1940 ಇಸವಿಯ ಆಸುಪಾಸು. ಒಬ್ಬ ವಯೋವೃದ್ಧ  ಸನ್ಯಾಸಿ ನಮ್ಮ ಗುರುಗಳನ್ನು ಆಗಾಗ ಬಂದು ಭೇಟಿಯಾಗುತ್ತಿದ್ದರು. ಅವರಿಗೆ ಎಲ್ಲರೂ "ಬೂಢೆ ಬಾಬಾ" (ವೃದ್ಧ ಸನ್ಯಾಸಿ) ಅನ್ನುತ್ತಿದ್ದರು. ಅವರು ಬಂದಾಗೆಲ್ಲ ನಮ್ಮ ಗುರುಗಳ ಜೊತೆ ಅತ್ಯಂತ ಉಚ್ಚಮಟ್ಟದ ಯೋಗ ಸಿದ್ಧಿಗಳ ಬಗ್ಗೆ ಮಾತಾಡುತ್ತಿದ್ದರು. ಅವರ ಮಾತುಗಳಲ್ಲಿ "ಪರಕಾಯ ಪ್ರವೇಶ" ಎಂಬ ಪದ ಆಗಾಗ ಕೇಳಿಬರುತ್ತಿತ್ತು. ನಾನು ಇನ್ನೂ ಚಿಕ್ಕ ವಯಸ್ಸಿನ ಸಾಧಕನಾಗಿದ್ದರಿಂದ, ಯಾರೂ ನನ್ನ ಜೊತೆ ಅದರ ಬಗ್ಗೆ ಮನಬಿಚ್ಚಿ ಮಾತಾಡುತ್ತಿರಲಿಲ್ಲ.

ಏನು ಯೋಗಾಯೋಗವೋ ತಿಳಿಯದು. ಒಮ್ಮೆ ನಮ್ಮ ಗುರುಗಳನ್ನು ಭೇಟಿಮಾಡಲು ಬಂದ  "ಬೂಢೆ ಬಾಬಾ" ನನ್ನನ್ನು ಕರೆದುಕೊಂಡು ಆಸ್ಸಾಮಿಗೆ ಹೊರಟರು. ಸುಮಾರು ಹತ್ತು ದಿವಸಗಳ ಪಯಣದ ನಂತರ ನಾವು ಅಸ್ಸಾಂ ಸೇರಿದೆವು. ಅಲ್ಲಿಯ ಸೇನೆಯಲ್ಲಿ ಒಬ್ಬ ಬ್ರಿಟಿಶ್ ಮೂಲದ ಅಧಿಕಾರಿಯಿದ್ದ. ಅವನು ಯೋಗ ಸಾಧನೆ ಮಾಡುತ್ತಿದ್ದ ಮತ್ತು ನಮ್ಮ ಗುರುಗಳ ಬಗ್ಗೆ ಬಹಳ ಗೌರವ ಹೊಂದಿದ್ದ. ಬೂಢೆ ಬಾಬಾ ಕೂಡ ಅವನನ್ನು ಬಲ್ಲವರಾಗಿದ್ದರು. ಹಲವಾರು ವರ್ಷಗಳಿಂದ ಯೋಗ ಸಾಧನೆ ಮಾಡಿದ್ದ ಆ ಬ್ರಿಟಿಶ್ ಅಧಿಕಾರಿ ಕೆಲವೊಂದು ಸಿದ್ಧಿಗಳನ್ನು ಗಳಿಸಿಕೊಂಡಿದ್ದ. ಅವನ ಕೆಳಗೆ ಕೆಲಸ ಮಾಡುವ ಸಿಪಾಯಿಗಳು ಅವನ ಸಿದ್ಧಿಗಳಿಂದ ಚಕಿತರಾಗಿದ್ದರು. ಆ ಅಧಿಕಾರಿಯ ಮುಂದೆ "ಬೂಢೆ ಬಾಬಾ" ಮತ್ತೆ ಪರಕಾಯ ಪ್ರವೇಶದ ಬಗ್ಗೆ ಮಾತಾಡುತ್ತಿರುವದನ್ನು ಕೇಳಿದೆ. ಅದೂ ಸದ್ಯದಲ್ಲೇ ಮಾಡುವರಿದ್ದಾರೆ ಎಂದ ತಿಳಿದ ನಂತರ ತುಂಬಾ ಕುತೂಹಲ ಉಂಟಾಯಿತು.

ಕೆಲ ದಿನಗಳ ನಂತರ ನಾವು ನಾಗ ಪರ್ವತಗಳ ಕಡೆ ಹೊರಟೆವು. ಅದು ಅತ್ಯಂತ ದುರ್ಗಮ ಕಾಡು. ಎಲ್ಲ ರೀತಿಯ ಕ್ರೂರ ಮೃಗಗಳು ಅಲ್ಲಿದ್ದವು. ನಾವು ಅಲ್ಲಿ ಸ್ವಾಮಿ ನಿಗಮಾನಂದರು ವಾಸ ಮಾಡುತ್ತಿದ್ದ ಗುಹೆಯಲ್ಲಿ ಇಳಿದುಕೊಂಡೆವು. ಸ್ವಾಮಿ ನಿಗಮಾನಂದರು ಯೋಗಿ ಗುರು, ತಾಂತ್ರಿಕ್ ಗುರು ಮತ್ತು ವೇದಾಂತ ಗುರು ಎಂಬ ಪುಸ್ತಕಗಳನ್ನು ತಮ್ಮ ಅನುಭವದ ಆಧಾರದ ಮೇಲೆ ಬರೆದವರು. ಆ ಗುಹೆಯಲ್ಲಿದ್ದ ಕಾಲದಲ್ಲಿ  ಬೂಢೆ ಬಾಬಾ ಯೋಗದ ಕೆಲವು ಗಹನವಾದ ವಿಚಾರಗಳ ಬಗ್ಗೆ ಮಾತಾಡುತ್ತಿದ್ದರು. ನಾನೋ? ದೈಹಿಕ ಕಸರತ್ತುಗಳಲ್ಲಿ ಮಗ್ನನಾಗಿರುತ್ತಿದ್ದೆ. ಬಾಬಾ ಹೇಳುತ್ತಿದ್ದರು - ಬಹಳ ಬೇಗನೆ ನಿನ್ನ ದೈಹಿಕ ಶಕ್ತಿಯ ಪರೀಕ್ಷೆ ಆಗಲಿದೆ - ಎಂದು. ಅವರ ಮಾತಿನಲ್ಲಿರುವ ಒಳಾರ್ಥ ತಿಳಿಯಲು ಸ್ವಲ್ಪ ದಿನ ಬೇಕಾದವು.

ಒಮ್ಮೊಮ್ಮೆ ನಾನು ಬೂಢೆ ಬಾಬಾರನ್ನು ತುಂಬಾ ಪ್ರಶ್ನೆ ಕೇಳುತ್ತಿದ್ದೆ.  ಹಲವಾರು ಭಾಷೆಗಳಲ್ಲಿ ಪರಿಣಿತರಾಗಿದ್ದ ಅವರು ಒಮ್ಮೊಮ್ಮೆ ನನ್ನ ಪ್ರಶ್ನೆಗಳಿಂದ ಬಳಲಿ ಸಾಕಾಗಿ  ಇಂಗ್ಲಿಷ್ನಲ್ಲಿ - ಶಟ್ ಅಪ್ - ಅಂದು ತಮ್ಮ ಇಂಗ್ಲಿಷ್ ಜ್ಞಾನವನ್ನೂ ಸಹಿತ ಪ್ರದರ್ಶಿಸುತ್ತಿದ್ದರು.

ಆ ಗುಹೆಯನ್ನು ಬಿಟ್ಟು ಹೊರಡುವ ವೇಳೆ ಬಂದಾಗ ಬೂಢೆ ಬಾಬಾರನ್ನು ಕೇಳಿಯೇ ಬಿಟ್ಟೆ - ನೀವೇಕೆ ಪರಕಾಯ ಪ್ರವೇಶ ಮಾಡಲಿದ್ದೀರಿ? - ಎಂದು.

ಈ ನನ್ನ ದೇಹಕ್ಕೆ 90 ವರ್ಷಗಳ ಮೇಲಾಯಿತು. ಇದಕ್ಕೆ ಜಾಸ್ತಿ ಹೊತ್ತು ಸಮಾಧಿಯ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಇದರ ಮೇಲಾಗಿ, ಅತಿ ಮುಖ್ಯವಾಗಿ ಒಂದು ಸುವರ್ಣಾವಕಾಶ ಅದಾಗೇ ಒದಗಿ ಬಂದಿದೆ. ನಾಳೆ ಒಂದು ಉತ್ತಮ ಸ್ಥಿತಿಯಲ್ಲಿರುವ ಶವ ಲಭ್ಯವಾಗಲಿದೆ. ಒಬ್ಬ ಯುವಕನಿಗೆ ನಾಳೆ ಹಾವು ಕಚ್ಚಿ ಅವನು  ಸಾಯಲಿದ್ದಾನೆ. ಅವನ ಶವ ನದಿಯಲ್ಲಿ 13 ಮೈಲ್ ದೂರದಲ್ಲಿ  ತೇಲಿ ಬರಲಿದೆ. ನಾಳೆ ಬೆಳಿಗ್ಗೆ ಇಲ್ಲಿಂದ ಬಿಟ್ಟು ಸಂಜೆ ಹೊತ್ತಿಗೆ ನದಿ ತೀರ ಸೇರೋಣ - ಅಂತ ಅತ್ಯಂತ ಸರಳವಾಗಿ ಹೇಳಿದರು ಬೂಢೆ ಬಾಬಾ.

ಪರಕಾಯ ಪ್ರವೇಶದ ಬಗ್ಗೆ ಬಾಬಾ ಹೇಳಿದ ಮಾತು ಕೇಳಿ ನಾನಂತೂ ಪೂರ್ತಿ ಆಶ್ಚರ್ಯಚಕಿತನಾಗಿ ಕಣ್ ಕಣ್ ಬಿಟ್ಟೆ.

ನನಗೇನು ಗೊತ್ತಿತ್ತು ಬೆಳಗಾಗುವದರಲ್ಲಿ ಏನೇನು ಅವಘಡಗಳು ಆಗಲಿವೆ ಅಂತ.

ಮುಂಜಾನೆ ಅಂದುಕೊಂಡಂತೆ ನಮಗೆ ಗುಹೆಯನ್ನು ಬಿಡಲಾಗಲಿಲ್ಲ. ಗುಹೆಯ ದ್ವಾರಕ್ಕೆ ಅಡ್ಡವಾಗಿ ಒಂದು ದೈತ್ಯ ಆನೆಯ ಕಳೇವರ ಉದ್ದಕ್ಕೂ ಅಗಲಕ್ಕೂ ಬಿದ್ದುಕೊಂಡು  ಹೊರಗೆ ಹೋಗುವಂತೆಯೇ ಇರಲಿಲ್ಲ. ಆಗಿದ್ದಿಷ್ಟೆ. ಆನೆ ರಾತ್ರಿ ಯಾವಾಗಲೋ ಬಂದು ಗುಹೆಯ ಬಾಗಿಲಲ್ಲಿ ಸೊಂಡಿಲು ಹಾಕಿದೆ. ಅಲ್ಲೇ ಇದ್ದ ವಿಷಪೂರಿತ ಚೇಳೊಂದು ಆನೆಯ ಸೊಂಡಿಲಿಗೆ ಸರಿಯಾಗಿ ಕಚ್ಚಿ, ಆನೆಗೆ  ವಿಷವೇರಿ, ಆನೆ ಮುಂದಿನಕಾಲು, ತಲೆ ಸೊಂಡಿಲು ಗುಹೆಯೊಳಗೆ ಇಟ್ಟು ಅದೇ ರೀತಿಯಲ್ಲಿ ಸತ್ತು ಹೋಗಿದೆ. ನಮಗೆ ಹೊರ ಹೋಗಲಿಕ್ಕೆ ಸಾಧ್ಯವೇ ಇಲ್ಲದಂತ ಪರಿಸ್ಥಿತಿ.

ಅಷ್ಟರಲ್ಲಿ ಬಾಬಾ ಇದಕೆಲ್ಲ ಕಾರಣವಾದ ಚೇಳನ್ನು ಬರಿಗೈಯಲ್ಲಿ ತೆಗೆದುಕೊಂಡು ಅದರ ಜೊತೆ ಮಾತಾಡುತ್ತಿದ್ದರು. ಸುಮಾರು 5 ಇಂಚ್ ಉದ್ದವಿದ್ದ, ಕಪ್ಪು ಬಣ್ಣದ,ಭಯಾನಕ ಚೇಳಾಗಿತ್ತು  ಅದು.

ಕೆಟ್ಟ ಹುಡುಗನೇ.....ನೋಡು ಏನು ಮಾಡಿ ಹಾಕಿದ್ದೀಯ ಅಂತ  - ಅಂತ ಬಾಬಾ ಚೇಳಿಗೆ  ಹುಸಿಮುನಿಸಿನಿಂದ ಗದರುತ್ತಿದ್ದರು. ಕಿಲಾಡಿ ಚಿಕ್ಕ ಮಕ್ಕಳಿಗೆ ಗದರಿದಂತೆ.

ಅಯ್ಯೋ!!! ಅದನ್ನ ಮುಟ್ಟದಿರಿ....ನಿಮಗೂ ಕಚ್ಚೀತು - ಅಂತ ಭಯದಿಂದ ಕಿರುಚಿದೆ.

ಅದು ನನ್ನನ್ನು ಕಚ್ಚಲು ಸಾಧ್ಯವೇ ಇಲ್ಲ - ಅಂತ ಚೇಳಿನ ಪೂರ್ವಾಪರ ಎಲ್ಲ ತಿಳಿದವರಂತೆ ಬಾಬಾ ಹೇಳಿದರು.

ನನ್ನ  ಕಟ್ಟಿಗೆಯ ಚಾವುಗೆಗಳಿಂದ ಚೇಳನ್ನ ಹೊಡೆದು ಕೊಲ್ಲಬೇಕೆಂದು ಹೊರಟರೆ ಬಾಬಾ ನನ್ನನ್ನು ತಡೆದರು.

ಈ ಆನೆ ಈ ಚೇಳು ತಮ್ಮ ತಮ್ಮ ಕರ್ಮಫಲ ಅನುಭವಿಸಿದರು. ಯಾವದೇ ಜೀವ ಜಂತುವನ್ನು ಕೊಲ್ಲಲು ನಮಗೆ ಹಕ್ಕಿಲ್ಲ. ಕರ್ಮದ ಕಾರಣ ಮತ್ತು ಅದರ ಫಲ ನಿನಗೆ ತಿಳಿದಾಗ ಇದೆಲ್ಲ ಅರ್ಥವಾಗುತ್ತದೆ - ಅಂತ ಹೇಳಿದ ಬಾಬಾ ಹೇಗಾದರೂ ಮಾಡಿ ಗುಹೆಯಿಂದ ಹೊರ ಹೋಗಲು ದಾರಿ ಮಾಡಲು ನನಗೆ ಹೇಳಿದರು.

ಈಗ ತಿಳಿಯಿತು ಬಾಬಾ ಸ್ವಲ್ಪ ದಿವಸದ ಹಿಂದೆ - ನಿನ್ನ ದೈಹಿಕ ಶಕ್ತಿಯ ಪರೀಕ್ಷೆ ಮಾಡುವ ಸಮಯ ಬೇಗನೇ ಬರಲಿದೆ - ಎಂದಿದ್ದರ ಅರ್ಥ.

ಹರಸಾಹಸ ಮಾಡಿ ಹೇಗೋ ಆ ದೈತ್ಯ ಆನೆಯ ಮೃತಶರೀರವನ್ನ ಒಂದೆರಡು ಅಡಿ ಸರಿಸಿ ಒಬ್ಬ ಮನುಷ್ಯ ಹಾದುಹೋಗುವಷ್ಟು ಜಾಗ ಮಾಡಿದೆ.

ಆಗಲೇ ಸಾಕಷ್ಟು ತಡವಾಗಿತ್ತು. 13 ಮೈಲ್ ನೆಡದು ನದಿ ತಲುಪಿದೆವು. ರಾತ್ರಿಯಾಗಿತ್ತು. ಬಾಬಾ ಜೊತೆಯಲ್ಲಿದ್ದರು. ನಾನು ನನ್ನ ನಿಯಮದಂತೆ ಮುಂಜಾನೆ 4.30 ಕ್ಕೆ ಎದ್ದು ನದಿಯಲ್ಲಿ ಸ್ನಾನ ಮಾಡಿ ಧ್ಯಾನಕ್ಕೆ ಕೂತೆ.

ಧ್ಯಾನ ಮುಗಿಸಿ ಎದ್ದು ನೋಡಿದಾಗ ಬಾಬಾ ಇರಲಿಲ್ಲ!! ಪೂರ್ತಿ ದಿನ ಹುಡುಕಿದೆ. ಅವರು ಸಿಗಲಿಲ್ಲ. ಹೀಗಾಗಿ ಹಿಮಾಲಯದ ಎಲ್ಲಿಂದ ಆಸ್ಸಾಮಿಗೆ ಬಂದಿದ್ದೆನೋ ಅಲ್ಲಿಗೇ  ವಾಪಸ್ ಹೊರಟೆ.

ಯಾಕೋ ಪೂರ್ತಿ ಈ ಪ್ರವಾಸ ಒಂದು ತರಹ ನಿಗೂಢ ಅನ್ನಿಸಿತು. ಫಲದಾಯಕವೂ ಆಗಲಿಲ್ಲ ಅನ್ನೊ  ನಿರಾಸೆ ಬೇರೆ.

ವಾಪಸ್ ಬರುವಾಗ ಮತ್ತೆ ಆಸ್ಸಾಮಿನ ಸೈನಿಕರ ಕ್ಯಾಂಪಿನಲ್ಲಿ ತಂಗಿದೆ.

ಅಲ್ಲಿನ ಯೋಗ ಮಾಡುತ್ತಿದ್ದ ಬ್ರಿಟಿಶ್ ಕಮಾಂಡರ್ ಬಹಳ ಉತ್ಸುಕತೆಯಿಂದ ಹೇಳಿದ - ಬೂಢೆ ಬಾಬಾ "ಮತ್ತೊಮ್ಮೆ" ಸಾಧಿಸಿ ಬಿಟ್ಟರು!!! ಪರಕಾಯ ಪ್ರವೇಶದಲ್ಲಿ ವಿಜಯರಾಗಿಬಿಟ್ಟರು!!!

ನನಗಂತೂ ಏನೂ ಸರಿ ತಿಳಿಯಲಿಲ್ಲ. ಮತ್ತೊಮ್ಮೆ ಪರಕಾಯ ಪ್ರವೇಶ ಮಾಡಿಬಿಟ್ಟರು ಅನ್ನಲು ಅವರು ಮೊದಲಿದ್ದ ದೇಹವೂ ಪರಕಾಯವೇ ಆಗಿತ್ತೆ ಎಂಬ ಯೋಚನೆ ಬಂದು ಮೈಜುಮ್ಮೆಂದಿತು.

ಆಸ್ಸಾಮಿನಿಂದ ಹೊರಟು ಮತ್ತೆ ನಮ್ಮ ಹಿಮಾಲಯದ ಆಶ್ರಮಕ್ಕೆ ಬಂದು ಮುಟ್ಟಿದೆ. ಗುರುಗಳು ಇದ್ದರು.

ಅಲ್ಲಿ ಆ ಬ್ರಿಟಿಷ್ ಕಮಾಂಡರ್ ಬೂಢೆ ಬಾಬಾ ಪರಕಾಯ ಪ್ರವೇಶ ಮಾಡಿದ್ದರು ಅಂತ ಮಾತ್ರ ಹೇಳಿದ್ದರೆ ಇಲ್ಲಿ ಗುರುಗಳು ಅದರ ಹತ್ತು ಪಟ್ಟು ಹೆಚ್ಚು ಆಶ್ಚರ್ಯವಾಗುವಂತ ಸುದ್ದಿ ಹೇಳಿದರು.

ನಿನ್ನೆ ಬೂಢೆ ಬಾಬಾ ಬಂದಿದ್ದರು. ನಿನ್ನ ಬಗ್ಗೆ ಕೇಳಿದರು - ಅಂತ ಪರಕಾಯ ಪ್ರವೇಶ ಎಲ್ಲ ಸಹಜ ಅನ್ನುವಂತೆ ಹೇಳಿದರು.

ಸ್ವಲ್ಪ ದಿವಸಗಳ ನಂತರ ಒಬ್ಬ ಯುವ ಸಾಧು ನಾವಿರುವಲ್ಲಿ ಬಂದ. ಅವನನ್ನು ಮೊದಲೆಲ್ಲೂ ನೋಡಿದ ನೆನಪಿರಲಿಲ್ಲ. ಆದ್ರೆ ಅವನು ಮಾತ್ರ ನನ್ನನ್ನು ಮೊದಲಿಂದ ಬಲ್ಲವನಂತೆ ಮಾತಾಡಿದ.

ನಂತರ ಅವನು ನಮ್ಮ ಆಸ್ಸಾಮ್ ಪ್ರವಾಸದ ವಿವರವೆಲ್ಲವನ್ನು ಇದ್ದಕ್ಕಿದ್ದಂತೆ ಹೇಳಿ - ಕ್ಷಮಿಸು. ನಾನು ಪರಕಾಯ ಪ್ರವೇಶ ಮಾಡುವಾಗ ನಿನ್ನ ಜೊತೆ ಇರಲಾಗಲಿಲ್ಲ - ಅಂದಾಗ  ಎಲ್ಲವೂ ತಿಳಿಯಿತು.  ನಂಬಲು ಅಸಾಧ್ಯವಾದರೂ ಹೇಗೆ ನಂಬದೇ ಇರಲಿ ನನ್ನೆದುರೇ ಬೇರೆ ದೇಹದಲ್ಲಿ  ಕುಳಿತ ಬೂಢೆ ಬಾಬಾರನ್ನು.

ಅವನನ್ನು ಹತ್ತಿರದಿಂದ ಗಮನಿಸಿದಾಗ ತಿಳಿದಿದ್ದು ಅಂದ್ರೆ - ಬೂಡೆ ಬಾಬಾನ ವಿವೇಕ, ತಿಳಿವಳಿಕೆ, ಜಾಣತನ, ವಿದ್ವತ್ತು, ಜ್ಞಾನ, ನೆನಪುಗಳು ಎಲ್ಲವೂ ಹಾಗೇ ಇದ್ದವು. ಏನೇನೂ ಬದಲಾಗಿರಲಿಲ್ಲ.

ನಂತರ ನಮ್ಮ ಗುರುಗಳು 'ಹೊಸ' ಬೂಢೆ ಬಾಬಾಗೆ ಹೊಸ ಹೆಸರು ಕೊಟ್ಟರು.

ಹೆಸರು ದೇಹದೊಂದಿಗೆ ಹೋಗುತ್ತದೆ. ಆತ್ಮದೊಂದಿಗೆ ಅಲ್ಲ. ಅದಕ್ಕೆ ಹೊಸ ಹೆಸರು - ಅಂದರು ನಮ್ಮ ಗುರುಗಳು.

ಬೂಢೆ ಬಾಬಾ ಈಗಲೂ ಆನಂದ ಬಾಬಾ ಅಂತ ಹಿಮಾಲಯದಲ್ಲಿ ಇದ್ದಾರೆ. ಅವರನ್ನ ಭೇಟಿಯಾದಾಗೆಲ್ಲ  ಅವರನ್ನು ಅವರ ಹಳೆ 90 ವರ್ಷದ ದೇಹದಲ್ಲಿ ಊಹಿಸಿಕೊಂಡು ಅವರ ಈಗಿನ ಯುವ ಸಾಧಕ ದೇಹದೊಂದಿಗೆ ಹೋಲಿಸಿಕೊಂಡು ಮಾತಾಡಲು ಸ್ವಲ್ಪ ಗಲಿಬಿಲಿಯಾಗುತ್ತದೆ.

ಮುಂದೆ ನಾನೇ ಬಹಳ ಯೋಗಾಭ್ಯಾಸ ಮಾಡಿದ ಮೇಲೆ ಮತ್ತು ಹಲವಷ್ಟು ಪುರಾವೆಗಳನ್ನು ಕಲೆಹಾಕಿದ ನಂತರ ನನಗೆ ಒಂದು ವಿಷಯ ಮನವರಿಕೆ ಆಗಿದೆ. ಪರಕಾಯ ಪ್ರವೇಶ ಸಾಧ್ಯ. ಆದರೆ ಕೇವಲ ಅತ್ಯುನ್ನತ ಯೋಗ ಸಿದ್ಧಿಗಳನ್ನು ಪಡೆದ ಯೋಗಿಗಳಿಗೆ ಮಾತ್ರ ಮತ್ತು ಸರಿಯಾದ ಶವ ಸಿಕ್ಕರೆ ಮಾತ್ರ. ಇದೆಲ್ಲ ತಿಳಿಯದವರಿಗೆ ಪರಕಾಯ ಪ್ರವೇಶ ಒಂದು ತರಹದ ಸಾಯಿನ್ಸ್ ಫಿಕ್ಷನ್ ಮಾತ್ರ.

ಹೀಗಂತ ಸ್ವಾಮಿ ರಾಮರು 'ಪರಕಾಯ ಪ್ರವೇಶ' ದ ಬಗ್ಗೆ ನಂಬಿದರೆ-ನಂಬಿ-ಬಿಟ್ಟರೆ-ಬಿಡಿ ಎಂಬ ರೀತಿ ಮಾತು ಮುಗಿಸುತ್ತಾರೆ.

ಪುಸ್ತಕದ ತುಂಬಾ ಇಂತಹ ಅನೇಕ ರೋಚಕ ಸಂಗತಿಗಳನ್ನು ಸ್ವಾಮಿ ರಾಮರು ತಮ್ಮ ಸಹಜ ಶೈಲಿಯಲ್ಲಿ ನಿಮ್ಮೊಡನೆ ಮಾತಾಡಿದಂತೆ ಹೇಳುತ್ತಾ ಹೋಗುತ್ತಾರೆ. ಅತ್ಯಂತ ಒಳ್ಳೆ ಪುಸ್ತಕ.

6 comments:

ಶ್ಯಾಂ ಭಟ್, ಭಡ್ತಿ said...

ಮಹೇಶಣ್ಣ... ಕುತೂಹಲಭರಿತವಾಗಿದ್ದು... ದವಾ

Mahesh Hegade said...

Thanks Bhadti for reading and taking time to comment.

Unknown said...

NICE SIR .MANY NEW THINGS I GOT FORM YOUR BLOG .THANK U VERY MUCH

Mahesh Hegade said...

Thank you very much, Omkar Engineering.

dev@9740778431 said...

where we can meet Swamy Rama

Mahesh Hegade said...

@dev@9740778431 - Swami Rama passed away a few years ago.