Saturday, July 14, 2012

ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು

ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು - ಕುತೂಹಲ ಸಿಕ್ಕಾಪಟ್ಟೆ ಇದೆ. ಆದರೆ ಸರಿಯಾಗಿ ತಿಳಿದಿಲ್ಲ.

ನಮಗೆ ತಿಳಿದಷ್ಟು ಇಲ್ಲಿ ಹಾಕಿದ್ದೇವೆ. ಯಾರಾದರು  ಓದಬಹುದಾದ ಪುಸ್ತಕ ಅಥವಾ ಮತ್ತ್ಯಾವದೋ ಹೆಚ್ಚಿನ ಜ್ಞಾನದ ದಾರಿ ತೋರಿಸಿದರೆ ಧನ್ಯ ಧನ್ಯ.


ಮೊದಲಿಗೆ ನನ್ನ ಅನುಭವಗಳು.


ನಮ್ಮ ಕುಟುಂಬಕ್ಕೆ ಬೇಕಾದ ಒಬ್ಬ ಮಹಿಳೆ ಇದ್ದಾರೆ. ಪ್ರಾಯದಲ್ಲೇ ಅವರ ಪತಿ ತೀರಿಕೊಂಡರು. ಆತ್ಮಹತ್ಯೆ ಮಾಡಿಕೊಂಡರು. ಅದು ಈಗ ಸುಮಾರು 40 ವರ್ಷದ ಹಿಂದಿನ ಘಟನೆ. ಆಕೆಗೆ ಈಗ ಆ ಗಂಡನ ಭೂತದ ಕಾಟ. ನಮಗೆ ಬಂದು ಹೇಳಿಕೊಂಡರು. ತಂದೆಯವರಿಗೆ ಮಾಟ-ಮಂತ್ರ ಇತ್ಯಾದಿ ಸ್ವಲ್ಪ ಗೊತ್ತು ಯಾಕಂದರೆ ಅವರ ತಂದೆ (ನಮ್ಮ ಅಜ್ಜ) ಸ್ವಲ್ಪ ಅದನ್ನು ಕಲಿತು ಹೊನ್ನಾವರ ಸೀಮೆಯಲ್ಲಿ ಜನ ಕಲ್ಯಾಣಕ್ಕೆ ತಮ್ಮ ವಿದ್ಯೆ ಉಪಯೋಗಿಸಿದವರು. ಆಯಿತು. ನಮ್ಮ ಆ ಕುಟುಂಬದ ಸ್ನೇಹಿತ ಮಹಿಳೆಗೆ ಗೋಕರ್ಣ, ಕುಕ್ಕೆ ಸುಬ್ರಮಣ್ಯ ಈ ಎರಡು ಕಡೆ ಸರಿಯಾದ ಪುರೋಹಿತರಿಂದ ಬೇಕಾದ ಪೂಜೆ ಪುನಸ್ಕಾರ ಮಾಡಿಸಿ ಅಂತ ಸಲಹೆ ಕೊಟ್ಟಾಯಿತು. ಅಂತೆಯೇ ಆಕೆ ಮಾಡಿಸಿದರೂ ಸಹ. ಈಗ ಅವರ ಪ್ರಕಾರ ಭೂತ ಚೇಷ್ಟೆ ಕಮ್ಮಿ ಆಗಿದೆ. ಆದರೆ ಸತ್ತ ಗಂಡ ಬಂದು - ಯಾಕೆ ಅದೆಲ್ಲ ಮಾಡಿಸಿದೆ? - ಅಂತಾನಂತೆ. ಕಾಡುವದಿಲ್ಲ ಮೊದಲಿನ ತರಹ. ಕುಕ್ಕೆ ಸುಬ್ರಮಣ್ಯ ಅಂದ ತಕ್ಷಣ ಗಂಡ ಭೂತ  ಗಾಯಬ್.


ಇದು ಆ ಮಹಿಳೆಯ ಸೈಕೊಲೋಜಿಯೋ? ಮತ್ತೇನೋ? ಗೊತ್ತಿಲ್ಲ. ಅವರೇನು ಅವಿದ್ಯಾವಂತರಲ್ಲ. ಮಾಸ್ಟರ್ ಡಿಗ್ರಿ. ಅದೂ ಸೈನ್ಸನಲ್ಲಿ.


ಇನ್ನು 1981 ಜೂನ್, ಜುಲೈ ನಲ್ಲಿ ಆದ ಒಂದು ಸ್ವಂತ  ಅನುಭವ. ಬೆಳಿಗ್ಗೆ ಬೆಳಿಗ್ಗೆ ಸುಮಾರು 6.30 -7.00 ಘಂಟೆ ಸಮಯ. ಹಾವೇರಿಯಿಂದನೋ, ಹುಬ್ಬಳ್ಳಿಯಿಂದನೋ ಒಬ್ಬರು ಯಜಮಾನರು ಬಂದಿದ್ದರು. ಜೊತೆಗೆ ಅವರ ಸುಮಾರು 14-16 ವರ್ಷದ ಹುಡುಗಿ. ಅವರಿಗೆ ಏನೋ ಕಷ್ಟ. ಜೋತಿಷ್ಯ ಕೇಳಬೇಕು. ಬಂದಿದ್ದರು. ನಾನೂ ಅಲ್ಲೇ ತಂದೆಯವರ ರೂಮಿನಲ್ಲಿ ಹೋಂ ವರ್ಕ್ ಮಾಡುತ್ತಾ ಕುಳಿತಿದ್ದೆ. ಅದು ನಾರ್ಮಲ್ ಆವಾಗ. 4th ಕ್ಲಾಸ್. ಆ ಯಜಮಾನರ ಸಮಸ್ಯೆ ಅವರ ಆ ಮಗಳು. ಅವಳಿಗೆ ಮೈಮೇಲೆ ದೆವ್ವ ಬರುತ್ತದೆ ಅಂತೆ. ತಂದೆಯವರು ಅವರ ಕ್ರಮದಲ್ಲಿ ಫಲ ಹೇಳುತ್ತಿದ್ದರೆ, ಈ ಹುಡುಗಿ, ಅಲ್ಲಿ ತನಕ ಸುಮ್ಮನೆ ಕೂತಿದ್ದವಳು, ಒಮ್ಮಲೆ ಇರಿಟೇಟ್ ಆದಂಗೆ ಆಗಿ - ನಾನು ಯಾರ್ ಗೊತ್ತೇನ್? ಹ್ಞೂ ....ಹಾಂ  - ಅಂತ ಪೂರ ಬದಲಾದ ದನಿಯಲ್ಲಿ ಆವಾಜ್ ಹಾಕಿ ಬಿಡೋದೇ? ಎಲ್ಲರೂ ಸ್ವಲ್ಪ ಮಟ್ಟಿಗೆ ಅಪ್ರತಿಭಾರಾಗಿದ್ದು ಹೌದು. ಆ ಹುಡುಗಿಯ ತಂದೆ - ನೋಡ್ರೀ ಸರ್ರಾ....ಇದಾ ಪ್ರಾಬ್ಲೆಮ್ ಇಕೀದು - ಅಂದ್ರು. ತಂದೆಯವರಿಗೆ ಅವರ ತಂದೆಯವರ ಸ್ವಲ್ಪ ಮಟ್ಟಿನ ಟ್ರೇನಿಂಗ್ ಇತ್ತಲ್ಲ. ಕೂಲಾಗಿ ಆ ಹುಡುಗಿಗೆ - ಶಾಂತ ಆಗು...ಶಾಂತ ಆಗು....- ಅಂದ್ರು. ಅವಳೇನು ಕೇಳು ಹಾಂಗೆ ಇರಲಿಲ್ಲ. ಹ್ಞೂ....ಹಾಂ....ಅಂತ ಅನ್ನುತ್ತಲೇ ಸಣ್ಣ ದನಿಯಲ್ಲಿ ಆವಾಜ್ ಹಾಕುತ್ತಲೇ ಇದ್ದಳು. ನಂತರ ತಂದೆಯವರು - ನಿನ್ನನ್ನು ದೇವಸ್ಥಾನಕ್ಕೆ ಕಳಿಸಿ ದೇವರ ಹತ್ತಿರ ಬಿಟ್ಟು ಬಿಡುತ್ತೇವೆ ನೋಡು - ಅಂತ ಸ್ವಲ್ಪ ದನಿ ಏರಿಸಿ ಹೇಳಿದರು ನೋಡಿ, ಆ ಹುಡುಗಿ ಏಕದಂ ಥಂಡ್. ಇದು ನಾನು ಕಣ್ಣಾರೆ ಕಂಡಿದ್ದು. ಪ್ರೂವ್ ಮಾಡಲು ತಂದೆಯವರು ಇದ್ದಾರೆ. ಆವಾಗ ಒಂದು ತರಹ ಮಜವಾಗಿ ಕಂಡಿದ್ದು ಮೈಮೇಲೆ ಬಂದ ಹುಡುಗಿಯ ಸಾಕ್ಷಾತ್ ದರ್ಶನ. ತದ ನಂತರ ಸಾಕಷ್ಟು ಸಲ ಇದರ ಬಗ್ಗೆ ವಿಚಾರ ಮಾಡಿದ್ದೇನೆ. ತಂದೆಯವರ ಜೊತೆ ಚರ್ಚೆ ಮಾಡಿದ್ದೇನೆ. ಆದರೆ ಆ ಹುಡುಗಿಗೆ ಆಗಿದ್ದು ಏನು? ಮತ್ತೆ ದೇವಸ್ಥಾನಕ್ಕೆ ಕರೆದು ಕೊಂಡು ಹೋಗಿ ದೇವರ ಹತ್ತಿರ ಬಿಡುತ್ತೇನೆ ಅಂದ ಕೂಡಲೇ ಆಕೆ ಶಾಂತವಾಗಿದ್ದು ಯಾಕೆ? ಧಾರ್ಮಿಕರಾದ ತಂದೆಯವರ ವಿವರಣೆ ತುಂಬಾ ಸರಳ. ಆಕೆಗೆ ಯಾವದೋ ಭೂತ, ಪಿಶಾಚಿ ಹಿಡಿದಿತ್ತು. ಅದರ ಬಗ್ಗೆಯೇ ಆಕೆಯ ಪೋಷಕರು ಮಾತಾಡುತ್ತಿದ್ದರು. ಆಕೆಗೆ ಮತ್ತೆ ಮೈಮೇಲೆ ಬಂತು. ನಾನು ದೇವರ ಹೆಸರು ಹೇಳಿದ್ದು ದೆವ್ವವನ್ನ ಓಡಿಸಿತು. ಇದನ್ನ ಎಲ್ಲಿಂದ ಕಲಿತಿರಿ? ಅವರ ಅಪ್ಪ (ನಮ್ಮ ಅಜ್ಜ) ಅವರಿಗೆ ಮಾಟ ಮಂತ್ರ ಕಲಿಸದಿದ್ದರೂ ಸಿಂಪಲ್ ದಿಗ್ಬಂಧನ ಕಲಿಸಿದ್ದರಂತೆ. ಅದನ್ನು ಮಾಡಿ ಪ್ರಾಬ್ಲೆಮ್ ಸಾಲ್ವ್ ಮಾಡಿದ್ದರು.


ಕಣ್ಣೆದುರೇ ನೆಡದ ಘಟನೆ. 30 ವರ್ಷದ ಮೇಲಾಯಿತು. ಮಿನಿಟ್ ಟು ಮಿನಿಟ್ ಸುಮಾರು 10 ನಿಮಿಷದ ಆ ಘಟನೆ ನೆನಪು  ಫುಲ್ ಇದೆ.


ಇನ್ನು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಚೌಡಿ ಎಂಬ ಕ್ಷುದ್ರದೇವತೆ ಭಾಳ ಕಾಮನ್. ತೋಟದಲ್ಲಿ ಅಲ್ಲಿ ಇಲ್ಲಿ ಚೌಡಿ ಕಲ್ಲು ಅಂತ ಇರುತ್ತದೆ. ಅದಕ್ಕೆ ಟೈಮ್ ಟು ಟೈಮ್ ಪೂಜೆಯೂ ಸಲ್ಲುತ್ತದೆ. ಬಹಳ ಸಾರೆ  ಔಟ್ ಆಫ್ ಆರ್ಡರ್ ಪೂಜೆ ಮಾಡಬೇಕಾಗುತ್ತದೆ. ಯಾಕಂದ್ರೆ ಚೌಡಿ ಬಂದು ರಾತ್ರಿ ಅಳಲು ಶುರು ಮಾಡುತ್ತದೆ. ರಾತ್ರಿ ಯಾರೋ ಅಳುವ ಶಬ್ದ. ಬಾಗಿಲು ತೆಗೆದು ನೋಡಿದರೆ ಯಾರೂ ಇಲ್ಲ. ಅಳುವ ಶಬ್ದ ಮತ್ತೂ ಸ್ವಲ್ಪ ದೂರ ಹೋದ ಹಾಗೆ. ದಿನಾ ರಾತ್ರಿ ಇದೆ ಗೋಳು. ನಂತರ ಒಂದು ಸಮಾ ಪೂಜೆ ಮಾಡಿ ಬಂದ್ರೆ, ಅಳುವದು ಬಂದ್. ಈ ಕಥೆ ಸುಮಾರು ಜನ ಹೇಳಿದ್ದಾರೆ. ಇದರ ಹಿಂದೆ ಇರುವ ರಹಸ್ಯ ಸಹ  ಗೊತ್ತಿಲ್ಲ.


ಇನ್ನು ತೋಟ ಕಾಯಲಿಕ್ಕೆ ಹೋದವರ ಚೌಡಿ ಅನುಭವಗಳೇ ಬೇರೆ. ತೋಟ ಕಾಯಲಿಕ್ಕೆ ಹೋದವರು ಎಲ್ಲೋ ಅಡಿಕೆ ಮರಗಳ ಮಧ್ಯೆ ಕಂಬಳಿ ಹಾಸಿಕೊಂಡು ಮಲಗುತ್ತಾರೆ. ಅದೇನಾದರೂ ಚೌಡಿ ತಿರುಗಾಡೋ ದಾರಿಯಲ್ಲಿ ಇದ್ದರೆ ಮುಗೀತು. ಎದೆ ಮೇಲೆ ಬಂದು ಕುಳಿತು ಉಸಿರುಗಟ್ಟಿಸಲು ಶುರು ಮಾಡಿಯೇ ಬಿಡುತ್ತಾಳಂತೆ ಚೌಡಿ. ಅವರಿಗೆ ಅದಕ್ಕೆ ತಿರುಮಂತ್ರವೂ ಗೊತ್ತು. ಯಾವದೋ ದೇವರ ಸ್ತೋತ್ರವನ್ನೋ, ಶ್ರೀಧರ್ ಸ್ವಾಮಿಗಳ ನೆನಪನ್ನೋ ಮಾಡಿಕೊಂಡರೆ ಚೌಡಿ ಗಾಯಬ್. ಮರುದಿನ ಅಲ್ಲಿ ಮಲಗದಿದ್ದರೆ ಆಯಿತು. ಇದಕ್ಕೇನು ಅನ್ನಬೇಕು? ಹೇಳಿದವರು ಯಾರೋ ಅವಿದ್ಯಾವಂತರಲ್ಲ. ಸಾಕಷ್ಟು ಕಲಿತು ಕೃಷಿ ಮಾಡಿಕೊಂಡು ಇದ್ದ ನಮ್ಮ ಮಾವ.


ಒಬ್ಬ ಮನುಷ್ಯ ಸತ್ತ ನಂತರ ಆತ್ಮ ಒಂದು ತರಹದ ಟೆಂಪೊರರಿ ಸ್ಥಿತಿಯಲ್ಲಿ ಇರುತ್ತದೆ ಅನ್ನುತ್ತಾರೆ ಬೌದ್ಧರು. ಅದಕ್ಕೆ ಅವರು ಕೊಡುವ ಹೆಸರು '
ಬಾರ್ಡೋ'. ಅದು ಆತ್ಮಗಳ ಪಾಲಿಗೆ ಒಂದು ಗೆಸ್ಟ್ ಹೌಸ್ ತರಹ. ಆತ್ಮಕ್ಕೆ ತಕ್ಕ ಶರೀರ, ಅದರ ಪೂರ್ವ ಕರ್ಮಗಳಿಗೆ ಸರಿಹೊಂದುವಂತ ಸ್ಥಿತಿಗತಿಗಳು ಭೂಮಿಯ ಮೇಲೆ ಸೃಷ್ಟಿ ಆಗುವದಕ್ಕೆ ಸುಮಾರ್ ಟೈಮ್ ಬೇಕಾಗುತ್ತದೆ. ಅಲ್ಲಿ ತನಕ ಆತ್ಮ ಬಾರ್ಡೋನಲ್ಲಿ ರಿಲಾಕ್ಸ್  ಮಾಡಬಹುದು. ಜನ್ಮಗಳ ಮಧ್ಯೆ ಸುಮಾರು 150-200 ವರ್ಷ ಅಂತ ಪಶ್ಚಿಮದ expert ಡೆನೀಸ್ ಲಿನ್ ತಮ್ಮ ಪುಸ್ತಕದಲ್ಲಿ ಲೆಕ್ಕ ಹಾಕಿದ್ದಾರೆ. ಹೀಗಿದ್ದರೆ ಬಾರ್ಡೋನಲ್ಲಿ ಇರುವ ಆತ್ಮಗಳು ಪುನರ್ಜನ್ಮ ಸಿಗುವ ಮೊದಲು ಕಿತಾಪತಿ ಮಾಡುತ್ತವೆ ಏನು? ಆ ಕಿತಾಪತಿಯೇ ಭೂತ, ಪ್ರೇತ ಚೇಷ್ಟೆ ಅಂತ ನಮಗೆ ಕಾಣುತ್ತದಯೇ? ಗೊತ್ತಿಲ್ಲ.

ಆದರೆ ಭೂತ, ಪ್ರೇತ ಚೇಷ್ಟೆ ಅತೃಪ್ತ ಆತ್ಮಗಳ ಕಿತಾಪತಿ ಎನ್ನುವ ಧಾಟಿಯಲ್ಲಿ ಮಾತಾಡುವರು ಶ್ರೇಷ್ಠ ದಾರ್ಶನಿಕ ಮೆಹರ್ ಬಾಬಾ ಅವರು.
ಮೆಹೆರ್ ಬಾಬಾ ಬಗ್ಗೆ ಜಾಸ್ತಿ ಗೊತ್ತಿಲ್ಲ. ಆದರೆ ಅವರ - You and I are not we. But ONE - ಎನ್ನುವ  ಕೋಟ್ (quote) ಮಾತ್ರ ತುಂಬಾ ಹಿಡಿಸಿದ್ದು ಖರೆ.

ಮೆಹೆರ್ ಬಾಬಾ ಬರೆದಿದ್ದು ಕಡಿಮೆ. ಮಾತಾಡಿದ್ದು ಸ್ವಲ್ಪ. ಅದೂ ಕಡೆ ಕಡೆಗೆ ಮೌನವ್ರತ ತೆಗೆದುಕೊಂಡ ಮೇಲೆ ಕೇವಲ ಸನ್ನೆಯಲ್ಲಿ ಮತ್ತು ಬೋರ್ಡಿನ ಮೇಲೆ ಬರೆದು ತಮ್ಮ ಶಿಷ್ಯಕೋಟಿಗೆ ದಾರಿ ತೋರಿಸಿದ ಮಹಾತ್ಮ ಅವರು. ಅಂತಹದ್ದರಿಂದ ಮಾಡಿದ್ದು -
Discourses - ಎಂಬ ಒಂದು ಮೆಗಾ ಪುಸ್ತಕ. ಎಲ್ಲದರ ಬಗ್ಗೆ ಮೆಹೆರ್ ಬಾಬಾ ಮಾತಾಡಿದ್ದಾರೆ ಆ ಪುಸ್ತಕದಲ್ಲಿ. ಭೂತ ಪ್ರೇತಗಳ ಬಗ್ಗೆಯೂ.

ಬಾಬಾ ಅವರ ಪ್ರಕಾರ - ಭೂತ ಪ್ರೇತಗಳು ಅತೃಪ್ತ ಆತ್ಮಗಳು. ತೀರದ ಆಸೆಗಳು  ತುಂಬಾ ಇರುವಾಗಲೇ ಭೌತಿಕ ಶರೀರ ಬಿಡಬೇಕಾಗಿ ಬಂತು. ಆದ್ರೆ ಪೂರ್ವ ಕರ್ಮ ಫಲ, ತೀರದ ಆಸೆಗಳು, ಅಂತಹ ಅತೃಪ್ತ ಆತ್ಮಗಳನ್ನು ಬೇರೆ ಬೇರೆ ರೀತಿಯಿಂದ ಪ್ರಚೋದಿಸುತ್ತವೆ. ಮೆಹೆರ್ ಬಾಬಾ  ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಾರೆ - ನೀವು ಕಾಣದ ದೆವ್ವ, ಭೂತಗಳ ಬಗ್ಗೆ ಮಾತಾಡುತ್ತೀರಿ. ನಾನು ಹೇಳುತ್ತೇನೆ ನಿಮ್ಮ ಮೇಲೂ ಹೊತ್ತಿನಿಂದ ಹೊತ್ತಿಗೆ ದೆವ್ವ ಪ್ರೇತ ಬಂದು ಹೋಗುತ್ತಿರುತ್ತದೆ ಅಂತ. ನೀವು ಯಾವಾಗಲಾದರೂ ನೀವು ನಾರ್ಮಲ್ ಆಗಿ ಮಾಡದ ಕೆಲಸ ಮಾಡಿದ್ದೀರಾ? ಒಮ್ಮೊಮ್ಮೆ ನಿಮಗೇ ನಂತರ ನೀವು ಮಾಡಿದ್ದರ ಬಗ್ಗೆ ನಂಬಿಕೆ ಬರುವದಿಲ್ಲ. ಹಾಗಾದ್ರೆ ಯಾವ ಶಕ್ತಿ ಅದನ್ನು ಮಾಡಿಸಿತು? ಯಾವದೋ ಒಂದು ಪ್ರೇತಾತ್ಮ.


ಮೆಹರ್ ಬಾಬಾ ಕೊಡುವ ಉದಾಹರಣೆಗಳು. ಎಂದೂ ಕುಡಿಯದ ಮನುಷ್ಯ ನಿಧಾನವಾಗಿ ಕುಡಿತ ಶುರು ಮಾಡಿಕೊಳ್ಳುತ್ತಾನೆ. ಅವನಿಗೆ ಕುಡಿತವನ್ನು ಚಟವನ್ನಾಗಿ ಮಾಡಿಕೊಳ್ಳುವ ಯಾವದೇ ರೀತಿಯ ಮಾನಸಿಕ, ಕೌಟುಂಬಿಕ ಅಥವಾ ಇತರೆ ತೊಂದರೆ ಇಲ್ಲ. ಆದರೂ ಗಿಚ್ಚಿ ಕುಡಿಯುತ್ತಾನೆ. ಯಾಕಂತ ಅವನಿಗೇ ಗೊತ್ತಿಲ್ಲ. ಮೆಹೆರ್ ಬಾಬಾ ಪ್ರಕಾರ ಯಾವದೋ ಒಂದು ಆತ್ಮ ಕುಡಿಯುವ ಆಸೆಯನ್ನು ಆ ಮನುಷ್ಯನ ದೇಹದ ಮೂಲಕ ಪೂರೈಸಿಗೊಳ್ಳುತ್ತಿದೆ. ಹೀಗೆ ಬೇರೆ ಬೇರೆ ತರಹದ ವಿಕಾರಗಳು ಕಂಡು ಬಂದ್ರೆ ಅದಕ್ಕೆ ಭೂತ ಪೀಡೆ ಕಾರಣವಿರಬಹದು. ಇದೇ ರೀತಿ ಬಾಬಾ   ಹಲವಾರು ದೃಷ್ಟಾಂತ ಕೊಡುತ್ತಾರೆ. ಸುಖಿ ಸಂಸಾರ ಮಾಡುತ್ತಿದ್ದ ಗಂಡಸು/ ಹೆಂಗಸು ಅಚಾನಕ್ ಯಾರೋ ತಮಗೆ ಯಾವದೇ ರೀತಿ ಸರಿ ಇಲ್ಲದ ಜನರೊಂದಿಗೆ ಮಾಡಬಾರದ ಸಂಬಂಧ ಶುರು ಮಾಡಿ ಬಿಡುತ್ತಾರೆ. ಅವರಿಗಂತೂ ಅದರ ಖಬರೇ ಇರುವದಿಲ್ಲ. ಅವರನ್ನ ಅರಿತವರಿಗೆ ಮಾತ್ರ ಒಂದು ತರಹ ವಿಚಿತ್ರ ಕಾಣುತ್ತದೆ. ಅಗೇನ್ ಅದೇ. ಯಾವದೋ ಅತೃಪ್ತ ಆತ್ಮದ ಆರ್ತನಾದ ಇವರ ಜೀವನದಲ್ಲಿ ಮೊಳಗುತ್ತಿದೆ. ಅಷ್ಟೇ.


ಮೆಹೆರ್ ಬಾಬಾ ಪುಸ್ತಕ ಬಿಟ್ಟರೆ ಭೂತ ಪ್ರೇತದ ಮೇಲೆ ಓದಿದ್ದು ಕಡಿಮೆ. ಇದೂ ಗೋಜಲು ಗೋಜಲಾಗಿದೆ. ಮತ್ತೊಮ್ಮೆ ಆ ಪುಸ್ತಕದತ್ತ ಕಣ್ಣು ಹಾಯಿಸಿದೆ. ಮತ್ತೊಮ್ಮೆ ಕೆಲವೊಂದು selected sections ಓದಬೇಕು ಅಂತ ತೀವ್ರ ಬಯಕೆಯಾಯಿತು. ಅದು ನನ್ನ ಬಯಕೆಯೇ? ಅಥವಾ ಬಾಬಾ  ಪುಸ್ತಕ ಓದುವ ಮೊದಲೇ ಹರೋಹರ ಅಂದ ಯಾವದಾದರೂ ಅತೃಪ್ತ ಆತ್ಮದ ತೀರದ ಬಯಕೆಯಾ ಅಂತ ಸಂಶಯ ಬಂತು. :)

4 comments:

ನನ್ನಯ ಬಾಳಿನ ಪಯಣದಲ್ಲಿ said...

ಕೆಲವೊಂದಿಷ್ಟು ಘಟನೆಗಳಿಗೆ ಕಾರಣ ಇರುವುದಿಲ್ಲ...ಆದರೆ ಕಾರಣ ಹುಡುಕಿ ಹೊರಟರೆ ಉತ್ತರ ಸಿಗುವುದಿಲ್ಲ...

ವಿ.ರಾ.ಹೆ. said...

ನಾನೂ ಇಂತಹ ಹಲವು ಸಂಗತಿಗಳನ್ನು ಕೇಳಿದ್ದೇನೆ, ಆದರೆ ನಂಬಬೇಕು ಎನ್ನುವಂತಹ ಒಂದೂ ನನ್ನ ಅನುಭವಕ್ಕೆ ಬಂದಿಲ್ಲ. ನಾ ಹುಟ್ಟಿ ಬೆಳೆದಿರೋ ಪರಿಸರ ಇಂತಹ ಅನುಭವಗಳಿಗೆ ಪೂರಕ ಇಲ್ಲ ಅನ್ನಿಸುತ್ತೆ.

Mahesh Hegade said...

Vikas - phenomenon is visible. Explanation is what I am looking for. Now they are able to explain some phenomena like ESP, Telepathy using some advanced quantum physics concepts such as 'entanglement effect' etc. But how we explain this paranormal phenomenon which fits in or at least does not violate currently known body of knowledge is the questions. Will become clear after some years (100s, 1000s). Cheers!

Anonymous said...

ನೀವು ಹೇಳಿದ ಚೌಡಿಅಳುವ ಬಗ್ಗೆ ನಂಗೆಒಮ್ಮೆಅನುಭವ ಆಗಿದೆ