Wednesday, November 27, 2013

'ಕರವಾ ಚೌತ್' ವೃತದ ದಿನ ಕೆರದಿಂದ ಪತಿಗೆ 'ಕೆರ'ವಾ ಪೂಜೆ ಮಾಡಿದಳಾ ಆ ಸತಿ ಶಿರೋಮಣಿ!

ಪೈಲಾ ನಶಾ. ಪೈಲಾ ಪಗಾರ್. ಕೈಯ್ಯಾಗ ರೊಕ್ಕ ಹೈ. ದಾರು ಪೀನಾ ಹೈ - ಅಂತ ಹಾಡು ಗುಣು ಗುಣು ಮಾಡಿದ ಕರೀಮ.

ಏ ಸಾಬಾ! ಅಂತಾ ಚಂದ ಪ್ಯಾರ ಭರಾ ನಗ್ಮಾ ತೊಗೊಂಡು ಹೋಗಿ ಶೆರೆ ಕುಡಿಯೋದಕ್ಕ ಜೋಡಿಸಿ ರಾಡಿ ಯಾಕ ಎಬ್ಬಸ್ತಿ? ಅಂತ ಕೇಳಿದೆ.

ಏನು ಸಾಬ್, ಭೂಲ್ ಗಯಾ ಕ್ಯಾ? ಇವತ್ತು ಯಾವ ದಿವಸ ಹೇಳಿ? - ಅಂತ ಕೇಳಿದ ಕರೀಮ.

ಯಾವ ದಿವಸ? ಹಾಂ! ಇವತ್ತು ಪೈಲಾ. ಅದರಾಗ ಏನು ಮಹಾ? ವರ್ಷಕ್ಕ ಹನ್ನೆರಡು ಪೈಲಾ ಬರ್ತಾವ, ಹೋಗ್ತಾವ. ಏನು ಮಹಾ? - ಅಂತ ಕೇಳಿದೆ.

ಸಾಬ್! ಇವತ್ತು ಪೈಲಾ. ಅಂದ್ರೆ ನಮ್ಮದು ದೋಸ್ತ ಚೀಪ್ಯಾಗೆ ಪಗಾರ್ ಆಗಿರ್ತದೆ. ಇವತ್ತು ರಾತ್ರಿ ದಾರು ಅಂದ್ರೆ ನಮಗೆ ಸ್ಕಾಚ್, ನಿಮಗೆ ಬೀಯರ್ ಮತ್ತೆ ಚೀಪ್ಯಾಗೆ 'ಹಳೆ ಮಂಗ್ಯಾ' (Old Monk) ರಮ್. ಎಲ್ಲಾ ಚೀಪ್ಯಾನ ಖರ್ಚಿನಾಗೆ. ಮರೆತು ಬಿಟ್ಟಿರಿ ಕ್ಯಾ? - ಅಂತ ಕರೀಂ ಕೇಳಿದ.

ಈಗ ನೆನಪಾತು. ಪ್ರತಿ ಪೈಲಾ ದಿನ ಪಗಾರ ಆಗೋದು ಕೇವಲ ಚೀಪ್ಯಾಗ ಮಾತ್ರ. ಕರೀಮಾ ಬಿಸಿನೆಸ್ ಮಾಡವಾ. ದಿನಾ ಪಗಾರ ಅವಂಗ. ನಾವಂತೂ ಕೆಲಸಾ ಬಗಸಿ ಬಿಟ್ಟು ಶತಮಾನಗಳೇ ಆಗಿ ಹೋದವು. ಹಾಂಗಾಗಿ ನಮಗ ಪಗಾರ ಹೋಗ್ಲೀ ಕೆಲಸವೇ ಇಲ್ಲ. ಹಾಂಗಾಗಿ ಮಂತ್ಲಿ ಮಂತ್ಲಿ ಪಗಾರ್ ಅಂದ್ರ ಚೀಪ್ಯಾಗ ಮಾತ್ರ. ಆವಾ ಹೇಳಿ ಕೇಳಿ ತಿಂಗಳಕ್ಕ ಒಮ್ಮೆ ಮಾತ್ರ ಪಗಾರ ತೊಗೊಂಡು, ಅದೇ ಪಗಾರದಲ್ಲಿ ಇಡೀ ತಿಂಗಳ ಹೆಂಡ್ತಿ ಮಕ್ಕಳ ಸಮೇತ ಜೀವನ ಮಾಡಬೇಕಾದ ಪಾಪದ ಜೀವಿ. ಹಾಂಗಾಗಿ ಚೀಪ್ಯಾಗ ಪೈಲಾಕ್ಕ ಒಂದೇ ಸಲ ಸ್ವಲ್ಪ ತೀರ್ಥ ತೊಗೊಂಡು, ನಮಗೂ ಕೊಡಿಸಲಿಕ್ಕೆ afford ಆಗ್ತದ. ಬಾಕಿ ದಿವಸ ಎಲ್ಲಾ ನಮ್ಮ ಶ್ರೀಮಂತ ಗೆಳೆಯಾ ಕರೀಮ ಕರೆದು ಕರೆದು ಎಲ್ಲಾರಿಗೂ ಮಸ್ತ ಪಾರ್ಟಿ ಮಾಡಿಸ್ತಾನ.

ಹಾಂ! ಕರೀಂ! ಕರೆಕ್ಟ್ ಹೇಳಿದಿ ನೋಡು. ಚೀಪ್ಯಾ ಹುಬ್ಬಳ್ಳಿಯಿಂದ ಬರೋ ಟೈಮ್ ಆತು. ಆರರ ಬೋಂಗಾ ಆತು. ಇನ್ನೇನು ಲೋಕಲ್ ಟ್ರೈನ್ ಸುಮಾರು ನವಲೂರ್ ದಾಟಿ ಬಿಟ್ಟಿರಬೇಕು. ಬಂದಾ ಬಿಡ್ತಾನ. ಇಲ್ಲೇ ಬರ್ತಾನ. ಇಲ್ಲಿಂದ ಸೀದಾ ನ್ಯೂ ಪ್ರಭಾತ ಬಾರಿಗೆ ಹೋಗೇ ಬಿಡೋಣ. ನಿಮ್ಮ ಭಾಂಜಾ ಮೆಹಮೂದಗ ಸುಮಾರು ರಾತ್ರಿ ಹನ್ನೊಂದರ ಹೊತ್ತಿಗೆ ಬಂದು ಆಟೋ ಒಳಗ ನಮ್ಮನ್ನೆಲ್ಲಾ ಪಿಕಪ್ ಮಾಡಿಕೊಂಡು ಹೋಗಲಿಕ್ಕೆ ಹೇಳಿಬಿಡು. ಕುಡಿಯೋದು ಸ್ವಲ್ಪೇ ಆದರೂ ಪೊಲೀಸರು ಭಾಳ ಹಡಬಿಟ್ಟಿ ಆಗ್ಯಾರ ನೋಡು. ಹಿಡದು ರೊಕ್ಕಾ ಕೆತ್ತಿ ಬಿಡ್ತಾರ. ಅದಕ್ಕಾ ಬ್ಯಾರೆ ಅವರ, ಅದೂ ಕುಡಿಯದೇ ಇದ್ದವರ, ಗಾಡಿ ಒಳಗ ಹೋಗಿ ಬಿಟ್ಟರೆ ಚಿಂತಿ ಇಲ್ಲ, ಅಂತ ಹೇಳಿದೆ.

ಎಲ್ಲಿ ಮೆಹಮೂದ್ ಸಾಬ್?! ಅವನೇ ಆ ಹೊತ್ತಿಗೆ ಕುಡಿದು  ಫುಲ್ ಚಿತ್ತಾಗಿ  ಬಿಟ್ಟಿರ್ತಾನೆ. ನೀವು ಚಿಂತಿ ನಕೊ ಕರ್ನೆಕಾ. ನಾವು ನಿಮಗೆ ಮನಿ ತನಕಾ ಡ್ರಾಪ್ ಮಾಡ್ತಾರೆ. ಪೋಲಿಸ್ ಪೋದ್ದಾರ್ ಎಲ್ಲಾ ನಮ್ಮದೂಕಿ ಕಿಸೆನಲ್ಲಿ ಇದ್ದಾರೆ. ಚಿಂತಾ ನಕೊ, ಅಂದುಬಿಟ್ಟ ಕರೀಂ.

ಬಾರಲ್ಲಾದರೂ ಹಾಕು ಜೈಲಲ್ಲಾದರೂ ಹಾಕು ರಾಘವೇಂದ್ರಾ! - ಅಂತ ಪ್ರಾರ್ಥನೆ ಮಾಡಿ ಹ್ಞೂ ಅಂದೆ.

ಅಷ್ಟರಾಗ ದೂರಿಂದ ಸ್ಟೇಷನ್ ಹೊರಗ ಚೀಪ್ಯಾ ಬರೋದು ಕಾಣಿಸ್ತು. ಮುಂದ ಒಂದೆರಡು ನಿಮಿಷದೊಳಗ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ಹಾಜರ್ ಆದ.

ಚೀಪ್ಯಾ, ಪಗಾರ್ ಆತೆನಲೇ? ಹೋಗೋಣ ತೀರ್ಥಯಾತ್ರಾಕ್ಕ? ನ್ಯೂ ಪ್ರಭಾತ ಬಾರ್ & ರೆಸ್ಟೋರೆಂಟ್. ನಾನು ಕರೀಮಾ ತಯಾರ್ ಇದ್ದೇವಿ ನೋಡಪಾ, ಅಂದೆ.

ದೋಸ್ತಾ...ಇವತ್ತು ಆಗೋದಿಲ್ಲ ನೋಡಪಾ! - ಅಂತ ಬಾಂಬ್ ಹಾಕಿದ ಚೀಪ್ಯಾ.

ಯಾಕಲೇ?!!! - ಅಂತ ನಾನು ಕರೀಮಾ ಇಬ್ಬರೂ ಜೋರಾಗಿ ಹೊಯ್ಕೊಂಡ್ವೀ. ತಿಂಗಳಕ್ಕೆ ಒಮ್ಮೆ ಮಾತ್ರ ಆಗೋವಂತಹವು, ಅವು ಏನೇ(!) ಇರಲಿ, ಟೈಮ್ ಗೆ ಸರಿ ಆಗಲಿಲ್ಲ ಅಂದ್ರ ಏನೋ ಅನಾಹುತ ಆದ ಫೀಲಿಂಗ್ ಎಲ್ಲಾರಿಗೂ ಬರೋ ಹಾಂಗ ನಮಗೂ ಬಂತು.

ಯಾಕಲೇ ಚೀಪ್ಯಾ? ಪಗಾರ್ ಆಗಲಿಲ್ಲ ಇವತ್ತು? ಅಥವಾ ಎಲ್ಲರೆ ಮತ್ತ ನಿನ್ನ ಕೆಲಸಾ ಗೊಟ್ಟಕ್ಕ ಅಂತೋ? - ಅಂತ ಕೇಳಿದೆ. ಹಿಂದೊಮ್ಮೆ ಅವನ ಕೆಲಸ ಹೋಗಿ ದೊಡ್ಡ ಅನಾಹುತ ಆಗಿತ್ತು. ಅದರ ಬಗ್ಗೆ ಮೊದಲು ಬರೆದಿದ್ದೆ. ಇಲ್ಲದ ನೋಡ್ರೀ.

ಛೆ!! ಛೆ!! ಕೆಲಸ ಗಿಲಸ ಎಲ್ಲಾ ಹರಿವಾಯುಗುರುಗಳ ಕೃಪೆಯಿಂದ ಛೊಲೋ ನೆಡದದ. ಪಗಾರನೂ ಆತು. ಆದ್ರ ಇವತ್ತು ಬಂದು ಶೆರೆ ಕುಡಿಲಿಕ್ಕೆ, ಹರಟಿಗೆ ಕೂಡಲಿಕ್ಕೆ ಆಗೋದಿಲ್ಲ ನೋಡ್ರೀಪಾ. ಬೇಕಾದ್ರ ಮುಂದಿನ ತಿಂಗಳ ಡಬಲ್ ಕುಡಿಸ್ತೇನಿ. ಓಕೆ? - ಅಂದಾ ಚೀಪ್ಯಾ.

ಮಂಗ್ಯಾನಿಕೆ!! ಬಡಿದ್ಯಲ್ಲಪಾ ಬಗಣಿ ಗೂಟಾ. ಮಹಾ ದೊಡ್ಡ KLPD ಮಾಡಿದಿ ನೋಡಲೇ ಚೀಪ್ಯಾ. ಹೀಂಗಾ ಮಾಡೋದು? ಪೈಲಾ ನಶಾ ಅಂತ ಈ ಸಾಬಾ ಈಗಲೇ ಅರ್ಧಾ ನಶಾ ಒಳಗ ಫೀಲಿಂಗ್ ಒಳಗ ಇದ್ದಾನ. ನಾನೂ ಸುಮಾರ ಹಾಂಗೆ. ಹೀಂಗಿದ್ದಾಗ ಒಮ್ಮೆಲೆ ಪಾರ್ಟಿ ಪ್ಲಾನ್ ಕ್ಯಾನ್ಸಲ್ ಮಾಡೋದು ಅಂದ್ರ ಏನಲೇ? ಯಾಕ ಬ್ಯಾಡ ಇವತ್ತು? - ಅಂತ ಕೇಳಿದೆ, ದೊಡ್ಡ ಆಕ್ಷೇಪಣೆ ಮಾಡುತ್ತ.

ಮನಿಯೊಳಗ ಕೆಲಸ ಅದನೋ. ನನ್ನ ಹೆಂಡ್ತಿ ಉರ್ಫ್ ನಿಮ್ಮ ರೂಪಾ ವೈನಿ ಕಾಯ್ತಿರ್ತಾಳ. ಉಪವಾಸ ಬ್ಯಾರೆ ಇದ್ದಾಳ. ನಾ ಹೋಗಿ, ಅಕಿ ಕಡೆ ಪೂಜಿ ಮಾಡಿಸಿಕೊಂಡ ಮ್ಯಾಲೇ ಅಕಿ ಉಪವಾಸ ಮುಗಿಸಾಕಿ ಇದ್ದಾಳ. ಅದಕ್ಕಾ ನಾ ಮುದ್ದಾಂ ಮನಿಗೆ ಹೋಗಲಿಕ್ಕೇ ಬೇಕು. ಆಕಾಶ ಸ್ವಚ್ಚ ಆಗಿ ಚಂದಪ್ಪ ಬಂದ್ರ ಸಾಕಪಾ. ನಾನು, ಚಂದಪ್ಪಾ ಇಬ್ಬರೂ ಇರಬೇಕು. ಇಬ್ಬರನ್ನೂ ನೋಡಿದ ಮ್ಯಾಲೆ ಅಕಿದು ಊಟ ಮತ್ತೊಂದು. ಹೀಂಗಿದ್ದಾಗ ನಾ ನಿಮ್ಮ ಜೋಡಿ ಬಂದು ಹ್ಯಾಂಗ ಕುಡಕೋತ್ತ ಕೂಡಲಿ? - ಅಂತ ಏನೇನೋ ಹೊಸಾ ಹೊಸಾ ಸುದ್ದಿ ಹೇಳಿಬಿಟ್ಟ ಚೀಪ್ಯಾ.

ಕ್ಯಾ ಚೀಪ್ಯಾ ಭಾಯ್, ಇವತ್ತು ನಿಮ್ಮದೂಕಿ ಏಕಾದ್ವಾಶಿ ಕ್ಯಾ? ಅದಕ್ಕೆ ಉಪವಾಸ್ ರಕ್ಕಾ ಕ್ಯಾ ಭಾಬಿ ಜಾನ್? - ಅಂತ ಕೇಳಿದ ಕರೀಂ.

ಲೇ ಹಾಪಾ.... ಅದು ಏಕಾದಶಿ ಅಂತ. ಒಂದೇ ದ್ವಾಶಿ ತಿನ್ನೊ ದಿವಸಕ್ಕ ಏಕಾದ್ವಾಶಿ ಅಂತಾರ. ಸುಮ್ಮ ಕೂಡಾಪಾ, ಅಂತ ಚೀಪ್ಯಾ ಉರಕೊಂಡ. ಅವಂಗ ಮನಿಗೆ ಹೋಗೋದು ಅರ್ಜೆಂಟ್ ಇತ್ತು.

ಮತ್ತೇನಲೇ ಚೀಪ್ಯಾ? ಏನೇನೋ ವಿಚಿತ್ರ ನೇಮಾ ನಿಷ್ಠಿ ಶುರು ಮಾಡಿಕೊಂಡಂಗ ಅದ ವೈನೀ. ಏನು ನೆಡೆಶ್ಯಾರ? ಹಾಂ? - ಅಂತ ಕೇಳಿದೆ.

ಕರವಾ ಚೌತ್! ನಿಮ್ಮ ರೂಪಾ ವೈನಿ ಅಂದ್ರ ನಮ್ಮನಿಯವರು ಅದೇನೋ ಕರವಾ ಚೌತ್ ಅಂತ ಹೊಸಾ ವೃತಾ ಮಾಡ್ಯಾಳ ಈ ಸಲೆ. ಅದರ ಪ್ರಕಾರ ಇವತ್ತು ಫುಲ್ ಉಪವಾಸ ಅಕಿದು. ಅದೇನೋ ನಾ ಹೋದ ಮ್ಯಾಲೆ ಹಿಟ್ಟಿನ ಜರಡಿ ಒಳಗ ಚಂದಪ್ಪನ ನೋಡಿ, ನನ್ನ ಕಾಲಿಗೆ ಬಿದ್ದು, ನಂತರನೇ ಅಕಿ ಉಪವಾಸ ಮುರಿಯೋದು ಅಂತ. ಏನರೆ ಇರಲಿ ಮಾರಾಯಾ, ಅಂತ ಹೇಳಿದ ಚೀಪ್ಯಾ.
ಕರವಾ ಚೌತ್ ಮಾಡುತ್ತಿರುವ ಮಹಿಳೆ

ಕ್ಯಾ? ಕೆರವಾ ಚೌತ್? ಮತ್ಲಬ್ ಚಪ್ಪಲಿ ಪೂಜಾ ಕ್ಯಾ? - ಅಂತ ಕರೀಂ ಕೇಳಿದ. ಅವಂಗ ಕರವಾ ಚೌತ್ ಅಂದಿದ್ದು ಕೆರವಾ ಅಂತ ಕೇಳಿ, ಅದನ್ನ ಆವಾ ಕೆರಾ ಅಂದ್ರ ಚಪ್ಪಲ್ಲು ಅಂತ ತಿಳಕೊಂಡು.... ರಾಮಾ.... ರಾಮಾ.....

ಸಾಬ್ರಾ....ಕೆರವಾ ಅದು ಇದು ಅಂದ್ರ ನಿಮ್ಮ ಭಾಬಿ ಜಾನ್ ನಿಮಗ ಅದ್ರಾಗೇ ನಾಕು ಹಾಕ್ತಾರ ನೋಡ್ರೀ ಮತ್ತ. ಸುಮ್ಮ ಕೂಡ್ರೀಪಾ, ಅಂತ ಹೇಳಿದೆ.

ಏನಲೇ ಚೀಪ್ಯಾ ಇದು ಹೊಸಾ ಅವತಾರ ರೂಪಾ ವೈನೀದು? ಎಲ್ಲಿಂದ ಕಲತಾರ ಈ ಹೊಸಾ ವೃತಾ? ನಮ್ಮ ಪದ್ಧತಿ ಅಲ್ಲಲ್ಲೋ ಇದೆಲ್ಲಾ, ಅಂತ ಕೇಳಿದೆ.

ಅಕಿ ಬಾಜು ಮನಿ ಪಣಿಯಮ್ಮ ಇದ್ದಾಳಲ್ಲಪ್ಪಾ. ಅಕಿದೇ ಸಹವಾಸ ದೋಷ, ಅಂತ ಚೀಪ್ಯಾ ಮುಗುಮ್ಮಾಗಿ ಹೇಳಿದ. ನನಗ ತಿಳಿಲಿಲ್ಲ.

ಏನಲೇ ಚೀಪ್ಯಾ!? ಏನೇನೋ ಅಂತೀ. ಹಾಂ? ಮುತ್ತೈದಿ ಆದ ನಿಮ್ಮ ಹೆಂಡ್ರು ಕೆಂಪ ಸೀರಿ ಪಣಿಯಮ್ಮನ ಕಡೆ ಏನು ವೃತಾ ಕಲಿಲಿಕತ್ತಾಳೋ? ಎಲ್ಲಿ ಮಹಾಲಕ್ಷ್ಮಿ ಅಂತಾ ಮುತ್ತೈದಿ ರೂಪಾ ವೈನಿ, ಎಲ್ಲಿ ಡೇಂಜರ್ ಸಿಗ್ನಲ್ ಬೋಡ ತಲಿ ಪಣಿಯಮ್ಮ? ಹಾಂ? ಎಲ್ಲೆ ಮತ್ತ ಪಣಿಯಮ್ಮನ ಕಡೆ ಈಗಿಂದನೇ ಋಷಿ ಪಂಚಮಿ ವೃತದ ಟ್ರೇನಿಂಗ ತೊಗೊಳ್ಳಿಕ್ಕೆ ಹತ್ಯಾಳೇನು ರೂಪಾ ವೈನೀ? ಹಾಂ? - ಅಂತ ಕೇಳಿದೆ.

ಏ....ಪಣಿಯಮ್ಮ ಅಂದ್ರ ನಮ್ಮ ಚಾಳಿನ ಕೆಂಪ ಸೀರಿ ಬೋಡಮ್ಮ ಅಲ್ಲಪಾ. ನಮ್ಮ ಬಾಜೂ ಮನಿಗೆ ಒಂದು ಪಂಜಾಬಿ ಫ್ಯಾಮಿಲಿ ಬಂದದ ನೋಡು, ಅವರ ಮನಿಯಾಕಿ. ಅದೇನೋ ಅಕಿ ಹೆಸರು ಪಣಿಂದರ್ ಕೌರ್ ಅಂತ. ಅಕಿನೇ ಎಲ್ಲಾ ನಮ್ಮ ಹೆಂಡ್ತೀ ತಲಿ ಫುಲ್ ಬ್ರೈನ್ ವಾಶ್ ಮಾಡಿ ಏನೇನೋ ಕಲಿಸಿ ಬಿಟ್ಟಾಳ. ನೋಡಬೇಕು ನೀ ನಿಮ್ಮ ರೂಪಾ ವೈನೀ ಪಂಜಾಬಿ ವೇಷಾ, ಅಂತ ಹೇಳಿದ ಚೀಪ್ಯಾ.

ಓಹೋ! ಪಣಿಂದರ್ ಕೌರ್ ಅಂದ್ರ ಸಿಖ್ ಮಂದಿ. ಆದ್ರ ಅವರು ಕರವಾ ಚೌತ್ ಮಾಡ್ತಾರ ಏನು? ಬರೆ ಹಿಂದೂಗಳು ಮಾತ್ರ ಅಲ್ಲೇನೋ ಅವೆಲ್ಲಾ ಮಾಡೋದು? - ಅಂತ ಕೇಳಿದೆ.

ಅಕಿ ಗಂಡಾ ಶರ್ಮಾ ಮಾರಾಯಾ. ಆವಾ ಪಂಜಾಬಿ ಬ್ರಾಹ್ಮಣ. ಹಾಂಗಾಗಿ ಇಕಿ ಪಣಿಂದರ್  ಕೌರ್ ಶರ್ಮಾ ನೋಡು. ಆ ಕಡೆ ಮುಂಜಾನೆದ್ದು 'ವಾಹೆ ಗುರು, ವಾಹೆ ಗುರು' ಅಂತ ತಾನೂ ಹೊಯ್ಕೊಂಡು, ಮನಿ ಮಂದಿ ಕಡೆ ಎಲ್ಲಾ ಹೊಯ್ಕೊಳ್ಳೋ ಹಾಂಗ ಮಾಡ್ತಾಳ. ಮತ್ತ ಕರವಾ ಚೌತ್ ಸುದಾ ಮಾಡ್ತಾಳ ಅಕಿ, ಅಂತ ಬಾಜೂ ಮನಿ ಪಣಿಂದರ್ ಕೌರ್ ತವರ ಮನಿ ಕಡೆ ಸಿಖ್ಖರ ಸಂಪ್ರದಾಯ, ಗಂಡನ ಮನಿ ಕಡೆ ಪಂಜಾಬಿ ಬ್ರಾಹ್ಮರ ಸಂಪ್ರದಾಯ ಎರಡೂ ನೆಡಿಸಿಕೊಂಡು ಹೋಗ್ತಾಳ ಅಂತ ಹೇಳಿದ ಚೀಪ್ಯಾ.

ಹೀಂಗ ಕಥಿ ಅಂತ ಆತು, ಅಂತ ಹೇಳಿ ನಿಟ್ಟುಸಿರು ಬಿಟ್ಟೆ. ಒಂದು ಪಾರ್ಟಿ ಗತಿಗೆಟ್ಟು ಹೋದ ಸಂಕಟ ಆತು. ಏನು ಮಾಡೋದು? ಅದೇನೋ ಅಂತಾರಲ್ಲ, ನಸೀಬ್ ಮೇ ಲಿಖಾ ಹೈ ಗಾಂಡು, ಕ್ಯಾ ಕರೇಗಾ ಪಾಂಡು? ಹಾಂಗಾತು ನಮ್ಮ ಗತಿ.

ಹ್ಞೂ....ಹೋಗಿ ಪೂಜಾ ಮಾಡಿಸ್ಕೋ ಹೋಗಪಾ. ಹೇಳಿ ಕೇಳಿ ಧರ್ಮಪತ್ನಿ. ಧರ್ಮಕ್ಕಾರ ಅಷ್ಟರ ಮಾಡಲಿಕ್ಕೇ ಬೇಕಲ್ಲಪಾ, ಅಂತ ಹೇಳಿ ಚೀಪ್ಯಾನ ಕಳಿಸಿಕೊಟ್ಟಿವಿ.

ಸಾಬ್ರಾ, ನಾವೇನ ಮಾಡೋನ್ರೀ? ಬಾರೋ, ಮನಿನೋ? ಏನಂತೀರಿ? - ಅಂತ ಕೇಳಿದೆ.

ಸಾಬ್......................................! - ಅಂತ ಕರೀಂ ರಾಗಾ ಎಳೆದ.

ಏನಾತಪಾ? ನಿನಗೂ ಮನಿಯೊಳಗ ಬೇಗಂ ಏನರಾ ವೃತಾ ಇಟ್ಟುಕೊಂಡು ಲಗೂ ಬಾ ಅಂತ ಹೇಳ್ಯಾರೇನು? ಹಾಂ? - ಅಂತ ಕೇಳಿದೆ.

ಸಾಬ್, ಹಾಗೇನೂ ಇಲ್ಲ. ಆದ್ರೆ ಇವತ್ತು ದಂಧಾ ಸ್ವಲ್ಪಾ ಮಂದಾ ಇತ್ತು ಸಾಬ್. ಏನೂ ಪೈಸಾ ಆಗಲೇ ಇಲ್ಲಾ. ಜೇಬ್ ಫುಲ್ ಖಾಲಿ ಸಾಬ್. ಹಾಂಗಾಗಿ...... - ಅಂತ ಕರೀಂ ರಾಗಾ ಎಳೆದೆಳದು ರೊಕ್ಕಿಲ್ಲ ಅಂತ ಫುಲ್ ಬತ್ತಲೆ ಆದವರು ಹೇಳಿದಂಗ ಹೇಳಿದ.

ರೊಕ್ಕಿಲ್ಲ? ಅಷ್ಟನಾ? ಇರ್ಲಿ ಬಿಡು. ದಿನಾ ನೀನಾ ಕುಡಿಸಿ ತಿನ್ನಿಸಿ ಮಾಡವಾ. ಇರ್ಲಿ ಬಿಡು. ನಡಿ ಹಾಂಗಿದ್ದರ. ನೀ ಮನಿ ಕಡೆ ಹೊಂಡು. ನಾನೂ ಹೊಂಟೆ, ಅಂತ ಹೇಳಿ ಬಂದೆ. ಇವತ್ತು ಹೊಟ್ಟಿ ಮ್ಯಾಲೆ ತಣ್ಣೀರು ಬಟ್ಟೆಯೇ ಗತಿ ಸಿವಾ!

ಸಾಬಾ ಖರೇನೇ ರೊಕ್ಕಿಲ್ಲ ಅಂದನೋ ಅಥವಾ ಇವತ್ತಾರ ಒಂದು ದಿವಸ ಬಿಟ್ಟಿ ಕಟಿಯೋ ನನ್ನಂತಹ ಬಿಟ್ಟಿದೇವನಿಂದ ಬಚಾವ್ ಆಗಲು ರೊಕ್ಕಿಲ್ಲ ಅಂದನೋ? ಅಂತ ಸ್ವಲ್ಪ ಸಂಶಯ ಬಂತು. ಏನರೆ ಹಾಳಾಗಿ ಹೋಗಲಿ ಅಂತ ವಾಪಸ್ ಮನಿಗೆ ಬಂದು ಮಲ್ಕೊಂಡುಬಿಟ್ಟೆ.

ಇದು ಆಗಿ ಮರುದಿವಸನಾ ಮತ್ತ ಚೀಪ್ಯಾ ಸಿಕ್ಕಾ.

ಚೀಪ್ಯಾನ ಗಲ್ಲಾ ಅಂದ್ರ ಉದ್ದಿನ ವಡಿ ಉಬ್ಬಿದಂಗ ಉಬ್ಬಿದ್ದವು! ಬಾಡಿ ಸಹಿತ ಸ್ವಲ್ಪ ವಾಕಡಾ ಮಾಡಿಕೊಂಡು ನೆಡಕೋತ್ತ ಬಂದು ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನನ್ನ ಮತ್ತ ಕರೀಮನ್ನ ಕೂಡಿಕೊಂಡಾ ಚೀಪ್ಯಾ.

ಏನು ಚೀಪ್ಯಾ ಭಾಯಿ, ನಿಮ್ಮದೂಕಿ ಶಕಲ್ ಯಾಕೆ ಉದ್ದಿಂದು ವಡಿ ಆದಂಗೆ ಆಗಿದೆ? ಮನಿಯಾಗೆ ಶ್ರದ್ಧಾಗೆ ಮಾಡಿದ್ದರಿ ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ಹಾಂ! ಅದು ನಿನಗ್ಯಾಂಗ ಗೊತ್ತಾತೋ!!!?? ನಾ ಶ್ರದ್ಧಾಗ ಏನೂ ಮಾಡಲಿಲ್ಲ ಮಾರಾಯಾ. ಅಕಿ ಊರು ತುಂಬಾ ಏನು ಹೇಳಿಕೋತ್ತ ಅಡ್ಯಾಡಲಿಕತ್ತಾಳ? ಬರೇ ಏನೋ ಅಕಿ ಕಡೆ ಕೇಳಿ, ಅಕಿ ಏನೋ ತಿಳಕೊಂಡು ಈ ಹಾಲತ್, ಅಂತ ಚೀಪ್ಯಾ ನಿಟ್ಟುಸಿರು ಬಿಟ್ಟ.

ಹಾಂ!!! ಅಂತ ಕರೀಂ ಉದ್ಗಾರ ಮಾಡಿದ.

ಚೀಪ್ಯಾ ನಾವು ನಿಮಗೆ ಶ್ರದ್ಧಾಗೆ ಮಾಡಿದಿರಿ ಕ್ಯಾ ಅಂತ ಕೇಳಿದರೆ, ನೀವು ಏನೇನೋ ಅಂತೀರಲ್ಲಾ? - ಅಂತ ಕರೀಂ ಫುಲ್ ಹಾಪ್ ಆಗಿ ಕೇಳಿದ.

ಮತ್ತಾ?!!! - ಅಂತ ಚೀಪ್ಯಾ ವಾಪಸ್ ಉದ್ಗರಿಸಿದ.

ನಿಮ್ಮದೂಕಿ ಮಂದಿಯೊಳಗೆ ಸತ್ತು ಹೋದ ಮಂದಿಗೆ ವರ್ಷಕ್ಕೊಮ್ಮೆ ಶ್ರದ್ಧಾಗೆ ಮಾಡ್ಬಿಟ್ಟಿ ಉದ್ದಿಂದು ವಡಿ ಮಾಡೋದಿಲ್ಲ ಕ್ಯಾ?  ಅದಕ್ಕೆ ಕೇಳಿದೆ, ಅಂತ ಕರೀಂ ಹೇಳಿದ.

ಶ್ರಾದ್ದ ಮಾಡಿಯೇನು ಅನ್ನಲಿಕ್ಕೆ ಶ್ರದ್ಧಾಗೆ ಮಾಡ್ಬಿಟ್ಟಿ ಅಂತಿಯಲ್ಲಲೇ ಪಾಪಿ ಮುಂಡೆ ಮಗನೇ??!! ಆ ಶ್ರದ್ಧಾನ ಹೆಸರು ಕೇಳಿದರ ನನ್ನ ಮೈ ಉರಿತದ, ಅಂತ ಹೇಳಿದ ಚೀಪ್ಯಾ.

ಯಾರಲೇ ಚೀಪ್ಯಾ ಈ ಶ್ರದ್ಧಾ? ಅಕಿ ಹೆಸರು ಕೇಳಿದರ ಯಾಕ ಹಾಂಗ ಉರಿದು ಜಿಗಿದು ಬೀಳಲಿಕತ್ತಿ? ಹಾಂ? - ಅಂತ ಕೇಳಿದ.

ಶ್ರದ್ಧಾ ಅಂದ್ರ ನನ್ನ ಕಿರೇ ನಾದಿನಿ ಮಾರಾಯಾ. ನನ್ನ ಹೆಂಡ್ತಿ ತಂಗಿ. ನಿಮ್ಮ ಪ್ರೀತಿ ರೂಪಾ ವೈನಿಯ ಕಡೀ ತಂಗಿ. ಅಕಿಂದನೇ ನನ್ನ ಹಾಲತ್ ಹೀಂಗ ಆಗ್ಯದ, ಅಂತ ಹೇಳಿಕೋತ್ತ ಚೀಪ್ಯಾ ತನ್ನ ವಾಕಡಾ ಆದ ಬಾಡಿಯನ್ನು ಸ್ವಲ್ಪ ಸೀದಾ ಮಾಡಿಕೊಳ್ಳಲಿಕ್ಕೆ ನೋಡಿದ. ನೋವು ಆತು ಚೀಪ್ಯಾಗ. ಆಯಿರೇ! ಬಾಬಾರೇ! ಅಂತ ಮುಲುಗಿದ ಚೀಪ್ಯಾ.

ಏನು ಚೀಪ್ಯಾ, ನಿಮ್ಮದೂಕಿ ಸಾಲಿ ಸಾಹೇಬಾ ನಿಮಗೆ ಆ ಪರಿ ಪ್ಯಾರಗೆ, ಮೊಹಬ್ಬತ್ ಗೆ ಮಾಡ್ಬಿಟ್ಟಿ, ನಿಮ್ಮದೂಕಿ ಗಲ್ಲಾಗೆ ಉದ್ದಿಂದು ವಡಿ ಹಾಂಗೆ ಉಬ್ಬಿಸಿ ಬಿಟ್ಟರು ಕ್ಯಾ? - ಅಂತ ಕೇಳಿದ ಕರೀಮಾ. ಆವಾ ಹಾಪ್ ಸಾಬಾ. ಕರೀಮಾ ತಾನು ತನ್ನ ಬೇಗಂ ಅಕ್ಕಾ, ತಂಗಿ ಎಲ್ಲಾರ ಜೋಡಿ ಮಸ್ಕಿರಿ ಮಾಡಿಕೋತ್ತ ಇರ್ತಾನ. ತನ್ನ ಹಾಂಗೆ ಎಲ್ಲಾರು ಅಂತ ತಿಳಕೊಂಡು ಬಿಟ್ಟಾನ.

ಸುಮ್ಮ ಕೂಡಪಾ ಕರೀಂ. ಇಲ್ಲೆ ನನ್ನ ಹಾಲತ್ ಹಳ್ಳಾ ಹಿಡದು, ನನ್ನ ನೋವು ನನಗ. ನಿನಗ  ಈಗೇ ಮಜಾಕ್ ಮಾಡ್ಬೇಕು ಅಂತ ಅನ್ನಸ್ಲಿಕತ್ತದೇನು? ಹಾಂ? ಯಾಕ ಮುಕ...ಮೈಯ್ಯಾಗಿನ ಸೊಕ್ಕಾ? ಹಾಂ? - ಅಂತ ಮೈಲ್ಡ್ ಸಿಟ್ಟಿಲೆ ಚೀಪ್ಯಾ ಕರೀಮನ ಮ್ಯಾಲೆ ಉರಕೊಂಡ.

ಮಾಮಲಾ ಸೀರಿಯಸ್ ಅದ ಅಂತ ಕರೀಮಾ ತಿಳಕೊಂಡು ಇನ್ನೊಂದು ಫೋರ್ಟ್ವೆಂಟಿ ಜರ್ದಾ ಪಾನ್ ಕಟ್ಟಿಸೋದರ ಕಡೆ ಲಕ್ಷ ಕೊಟ್ಟ. ಸಿಟ್ಟಿಗೆದ್ದ ಚೀಪ್ಯಾ ಎಲ್ಲರೆ ಕಟಿಲಿಕ್ಕೆ ಹೋಗಿ, ಅದು ರಿವರ್ಸ್ ಆಗಿ ಮತ್ತೂ ವಾಕಡಾ ಆಗಿ ಬಿಟ್ಟಾನು ಅಂತ. ಸಾಬಗ ಹೊಡಿಲಿಕ್ಕೆ ಹೋದ್ರ ಚೀಪ್ಯಾನ ಕೈನೇ ಮುರಿತಾವ ಹೊರತೂ ಸಾಬ್ಗ ಏನೂ ಆಗಂಗಿಲ್ಲ.

ಏನಾತ್ಲೇ ಚೀಪ್ಯಾ? ನಿನ್ನೆ ಕರವಾ ಚೌತ್, ಲಗೂನ ಮನಿಗೆ ಹೋಗಬೇಕು, ನಿಮ್ಮ ಹೆಂಡ್ರು ನಿನ್ನ ನೋಡಿದ ಮ್ಯಾಲೇ ಉಪವಾಸ ಮುರಿಯವರು ಇದ್ದಾರ, ಅದು ಇದು ಅಂತ ಹೇಳಿಕೋತ್ತ ಹೋದವಂಗ ಏನಾತೋ? ಈ ಪರಿ ಗಲ್ಲ ಬಾಯೋ ಹಾಂಗ, ಫುಲ್ ಬಾಡಿ ವಾಕಡಾ ಆಗೋ ಹಾಂಗ  ಏನಾತು? ಎಲ್ಲರೆ ಬಿದ್ಯೋ ಅಥವಾ ಯಾರರೆ ಹಿಡದು ನಾದಿ ಬಿಟ್ಟರೋ? ಏನಾತು ಹೇಳೋ, ಅಂತ ಕೇಳಿದೆ.

ಏ...ನಿನ್ನೆ ನನ್ನ ಬ್ಯಾಡ್ ಲಕ್ ಫುಲ್ ಖರಾಬ್ ಇತ್ತ ಮಾರಾಯಾ, ಅಂತ ಹೇಳಿದ ಚೀಪ್ಯಾ ನಿಟ್ಟುಸಿರು ಬಿಟ್ಟ.

ಏನಾತು? - ಅಂತ ಕೇಳಿದೆ.

ನಿನ್ನೆ ಸೀದಾ ಮನಿಗೆ ಹೋದ್ನಾ. ಅಲ್ಲೆ ಮನಿಯಾಗ ನನ್ನ ಹೆಂಡ್ತೀ ತಂಗಿ ಶ್ರದ್ಧಾ ಬಂದು ಕೂತಿದ್ದಳು. ಹೆಂಡ್ತಿ ಅಣ್ಣ ನಾಗಣ್ಣ ಉರ್ಫ್ ತೂತ್ ನಾಗ್ಯಾ ಸಹಿತ ಬಂದಿದ್ದ. ಮೊದಲನೇ ಸರಿ ಇಕಿ ಕರವಾ ಚೌತ್ ಮಾಡ್ಲಿಕತ್ತಾಳ. ಹ್ಯಾಂಗಿರ್ತದೋ ಏನೋ ಅಂತ ಕೆಟ್ಟ ಕುತೂಹಲ ಎಲ್ಲಾರಿಗೂ. ಒಳ್ಳೆ ದೊಂಬರಾಟ ನೋಡಲಿಕ್ಕೆ ಬಂದು ಕೂತವರ ಹಾಂಗ ಬಂದು ಕೂತಿದ್ದರು, ಅಂತ ಹೇಳಿದ ಚೀಪ್ಯಾ.

ಹ್ಞೂ...ಮುಂದಾ? - ಅಂತ ಒಂದು ಕ್ವೆಶ್ಚನ್ ಒಗದು ಕೂತೆ.

ಅಕಿನೌನ್....ಅಕಿ ಶ್ರದ್ಧಾ ಆಗಷ್ಟೇ ಫ್ರೆಶ್ ಆಗಿ ಮಾಡಿದ ಚಿಗಳಿ ಕೆಟ್ಟ ಅಸಹ್ಯ ರೀತಿಯೊಳಗ ಚೀಪಿಕೋತ್ತ ಕೂತಿದ್ದಳು. ಏನೋ ಮಜಾಕ್ ಮಾಡೋಣ ಅಂತ ಹೇಳಿ, ಏನಾ ಶ್ರದ್ಧಾ ಆ ಪರಿ ಚಿಗಳಿ ಚೀಪ್ಲಿಕತ್ತಿ? ಏನರ ವಿಶೇಷ ಅದ ಏನು? ಹಾಂ? ಅಂತ ಕೇಳಿದೆ ನೋಡಪಾ, ಅಂತ ಹೇಳಿದ ಚೀಪ್ಯಾ.

ಚಿಗಳಿ
ಹಾಂಗದ್ರ ಏನು ಮಾಮಾ? ಹಾಂ? ನಾ ಚಿಗಳಿ ಚೀಪಿದರ ಏನೀಗಾ? - ಅಂತ ಶ್ರದ್ಧಾ ಚೀಪ್ಯಾಗ ಕೇಳಿದಳು.

ಏನಿಲ್ಲ ಶ್ರದ್ಧಾ....ನೀ ಆ ಚಿಗಳಿ ಆ ಪರಿ ಹಿಡಕೊಂಡು ಚೀಪೋದು ನೋಡಿದರ ನಿನಗ ಬಯಕಿ ಎದ್ದಂಗ ಕಾಣ್ತದ? ಬಯಕಿ ಏನು? ಹಾಂ? ಹಾಂ? - ಅಂತ ಕೇಳಿಬಿಟ್ಟಾನ ಚೀಪ್ಯಾ.

ಹೋಗ್ಗೋ ಚೀಪ್ಯಾ! ಇನ್ನೂ ಪಿಯೂಸಿ ಸೆಕೆಂಡ್ ಇಯರ್ ಏನೂ ಬಲಿತಿರದ ಬಾಲೆಗೆ ಬಯಕಿ ಅದು ಇದು ಅಂತ ಕೇಳಿದ್ಯಾ? ಥತ್ ನಿನ್ನಾ. ಏನಲೇ ಸಣ್ಣು ಹುಡಿಗ್ಯಾರ ಜೋಡಿ ಏನು ನಿನ್ನ ಮಜಾಕ್ ಅಂತೇನಿ? - ಅಂತ ಮೈಲ್ಡ್ ಆಗಿ ಝಾಡಿಸಿದೆ.

ಈವಾ ಹುಸ್ಸೂಳೆಮಗ ಸಾಬಾ 'ಸಾಲಿ ಆಧಿ ಘರವಾಲಿ' ಅಂತ ಅನಕೋತ್ತ ಅವನ ನಾದಿನಿಯರ ಜೋಡಿ ಮಜಾಕ್ ಮಾಡಿಕೋತ್ತ ಇರೋದು ನೋಡಿ ನನಗೂ ಮಸ್ತಿ ಬಂದಿತ್ತು ನೋಡಪಾ. ಅದಕ್ಕಾ ಅಕಿ ಶ್ರದ್ಧಾಗ ಕೆಣಕಿದೆ ನೋಡಪಾ, ಅಂತ ಹೇಳಿದ ಚೀಪ್ಯಾ.

ಹ್ಞೂ...ಮುಂದ? - ಅಂತ ಕೇಳಿದೆ.

ಅಕಿ ಹಾಪ್ ಶ್ರದ್ಧಾಗ ಏನು ಅಂತ ತಿಳಿಲೇ ಇಲ್ಲ. ಹಾಂ? ಅಂತ ಮಂಗ್ಯಾನ ಮಾರಿ ಮಾಡಿದಳು. ಬಾ ಇಲ್ಲೆ ಅಂತ ಕರದೆ. ಬಂದಳು. ಕಿವ್ಯಾಗ ಕುಸುಪುಸು ಅಂತ ಊದಿದೆ. ಕೇಳಿಕೊಂಡು, ಫುಲ್ ನಾಚಿ, ಮಾಮಾ!!! ಅಂತ ನೌಟಂಕಿ ರಾಗಾ ತೆಗೆದು, ಏನ್ ಮಾಮಾ, ಎಷ್ಟು ಹೊಲಸ್ ಹೊಲಸ್ ಮಾತಾಡ್ತೀರಿ. ರೂಪಕ್ಕಗ ಹೇಳತೇನಿ ನೋಡ್ರೀ ಮತ್ತ, ಅಂತ ಅಕಿ ಸುಮ್ಮನ ಓಳು ಬಿಟ್ಟಳು. ನಾನೂ ಅಕಿಗೆ ಕಣ್ಣು ಹೊಡೆದು, ಅರವಿ ಚೇಂಜ್ ಮಾಡಿ, ಕೈಕಾಲ್ಮುಕ ತೊಳಕೊಳ್ಳಲಿಕ್ಕೆ ಹೋದೆ. ನನ್ನ ಹೆಂಡ್ತಿ ಕಡೆ ಪೂಜಿ ಬ್ಯಾರೆ ಮಾಡಿಸ್ಕೊಬೇಕಿತ್ತಲ್ಲಪಾ. ಅದೇ ಕರವಾ ಚೌತದ ಪೂಜಿ, ಅಂತ ಹೇಳಿದ ಚೀಪ್ಯಾ.

ಮುಂದ? - ಅಂತ ಮತ್ತ ಕೇಳಿದೆ. ಮಗಂದು ಎಲ್ಲಾ ಲಾಂಗ್ ಸ್ಟೋರಿ ಇರ್ತಾವ. ಮುಂದ, ಮುಂದ, ಮುಂದ!

ಕೈಕಾಲ್ಮುಕ ತೊಳಕೊಂಡು ಬರೋವಾಗ ಅಲ್ಲೆ ಅಲಮಾರಿ ಒಳಗ ಇದ್ದ ಕ್ಯಾಮೆರಾ ತೊಗೊಂಡು ಕೊರಳಿಗೆ ಹಾಕ್ಕೊಂಡು ಬಂದೆ. ಈಗ ನೋಡಿದರ ಇಕಿ ಶ್ರದ್ಧಾ ಚಿಗಳಿ ಚೀಪೋದು ಮುಗಿಸಿ, ನಮ್ಮ ಮದ್ವಿ ಫೋಟೋ ಫೋಟೋ ಆಲ್ಬಮ್ ನೋಡಿಕೋತ್ತ, ಖೀ ಖೀ ಅಂತ ಮಂಗ್ಯಾನ ಗತೆ ನಕ್ಕೋತ್ತ, ಅಸಡಾಬಸಡಾ ಸೋಫಾದ ಮ್ಯಾಲೆ ಬೋರಲು ಬಿದಕೊಂಡು, ಕಾಲ್ ಮ್ಯಾಲೆ ಎತ್ತಿಕೊಂಡು ಕೂತಂಗ ಮಲಗಿದ್ದಳು ಅಥವಾ ಮಲಗಿದಂಗ ಕೂತಿದ್ದಳು. ಅಕಿ ಆ ಆಲ್ಬಮ್ ನೋಡೋ ವ್ಯಾಷಾ ನೋಡಿದ್ರ ಸಾಕು, ಅಂತ ಹೇಳಿದ ಚೀಪ್ಯಾ.

ಮುಂದ?

ಏನು ಶ್ರದ್ಧಾ ಭಾಳ ನಗಲೀಕತ್ತಿ, ಏನು ವಿಷಯ? - ಅಂತ ಚೀಪ್ಯಾ ಕೇಳಿದ.

ಎದ್ದು ಕೂತಾಕಿನ ಶ್ರದ್ಧಾ, ಭರಕ್ಕನೆ ಒಂದು ಫೋಟೋ ಆಲ್ಬಮ್ ಒಳಗಿಂದ ತೆಗೆದಳು. ಒಂದು ಫೋಟೋ ತೆಗೆಯೋ ಅಬ್ಬರಕ್ಕ ಇನ್ನೂ ನಾಕು ಫೋಟೋ ಕಾಲಾಗ ಕೆಡವಿಕೊಂಡಿದ್ದು ಚೀಪ್ಯಾ ನೋಡಿದ ಆದ್ರ ಹುಚ್ಚ ಖೋಡಿ ಶ್ರದ್ಧಾ ಮಾತ್ರ ನೋಡಿರಲಿಲ್ಲ.

ನೋಡ್ರೀ ಮಾಮಾ ನಿಮ್ಮ ಲಗ್ನದ ರೆಡ್ ಅಂಡ್ ವೈಟ್ ಫೋಟೋ!! ಸೋ ಸ್ವೀಟ್!! ಸೋ ಕ್ಯೂಟ್!! ಏನ್ ಮಾಮಾ, ಬಿಳೆ ಧೋತ್ರದ ಒಳಗ ಕೆಂಪ್ ಚಡ್ಡಿ ಹಾಕ್ಕೊಂಡು ಫುಲ್ ರೆಡ್ ಅಂಡ್ ವೈಟ್ ಆಗಿ ಫುಲ್ ಚಮಕ್ ಚಮಕ್ ಲುಕ್ ಕೊಟ್ಟೀರಲ್ಲಾ!? ಖೀ ಖೀ, ಅಂತ ಚೀಪ್ಯಾನ ಅಣಗಿಸಿಕೋತ್ತ ಶ್ರದ್ಧಾ ನಕ್ಕಳು. ಚೀಪ್ಯಾನ ರೆಡ್ ಅಂಡ್ ವೈಟ್ ಕಥಿ ಬಗ್ಗೆ ಹಿಂದೆ ಬರದಿದ್ದೆ ನೋಡ್ರೀ. ಇಲ್ಲದ.

ಸಾಕು ಸುಮ್ಮ ಕೂಡವಾ ಶ್ರದ್ಧಾ. ಶ್ರದ್ಧಾ ಶ್ರದ್ಧಾ!! - ಅಂತ ಚೀಪ್ಯಾ ಒಂದು ತರಹದ ಆತಂಕ ವ್ಯಕ್ತಪಡಿಸಿದ.

ಏನಾತ್ರೀ ಮಾಮಾ? - ಅಂತ ಶ್ರದ್ಧಾ ಕೇಳ್ಯಾಳ.

ಚೀಪ್ಯಾಗ ಶ್ರದ್ಧಾನ ಕಾಲಾಗ ಬಿದ್ದು ನಲುಗಿತ್ತಿರುವ ಫೋಟೋ ಕಂಡು ಅದರ ಮ್ಯಾಲೆ ಗಮನ. ಶ್ರದ್ಧಾಗ ಮಾತ್ರ ತಾನು ಆಲ್ಬಮ್ ನಿಂದ ಫೋಟೋ ತೆಗೆಯೋವಾಗ ಫೋಟೋಗಳನ್ನು ಕೆಡವಿಕೊಂಡಿದ್ದು, ಅವು ತನ್ನ ಕಾಲಿನ ಕೆಳಗ ಬಿದ್ದು ಕಚಾಪಚಾ ಅಗ್ತಾ ಇರೋದಾಗಲಿ ಖಬರೇ ಇಲ್ಲ. ಅದೇನೋ ಅಂತಾರಲ್ಲಾ, 'ಏನೋ' ಬಂದಾಕಿಗೆ ನೆಲಾ ಕಾಣಂಗಿಲ್ಲ ಅಂತ. ನೆಲಾನೇ ಕಾಣದ ಶ್ರದ್ಧಾಗ ನೆಲದ ಮ್ಯಾಲೆ ಬಿದ್ದಿರುವ ಫೋಟೋ ಎಲ್ಲೆ  ಕಾಣಬೇಕು?

ಫೋಟೋ ಕೆಡವಿಕೊಂಡಿ, ಮ್ಯಾಲೆ ತೆಕ್ಕೋ ಅದು ಇದು ಅಂತ ಇಕಿಗೆಲ್ಲಿ ಹೇಳಿಕೋತ್ತ ಇರೋದು ಅಂತ ಹೇಳಿ, ಏ ಶ್ರದ್ಧಾ, ಸ್ವಲ್ಪ ಕಾಲೆತ್ತವಾ ಫೋಟೋ ತೆಕ್ಕೊತ್ತೇನಿ - ಅಂತ ಅಂದು ಬಿಟ್ಟಾನ ಚೀಪ್ಯಾ.

ಮಾಮಾ!!! ಏನಂದ್ರೀ???!!! - ಅಂತ ಚೀಪ್ಯಾನ ಕೊರಳಾಗ ನೇತಾಡುತ್ತಿದ್ದ ಕ್ಯಾಮೆರಾ ನೋಡಿಕೋತ್ತ, ಏನೋ ತಿಳಿದವಳಾಂಗ ಶ್ರದ್ಧಾ ಕೇಳ್ಯಾಳ. ಯಾಕೋ ಈ ಮಾಮಾನ ಮಸ್ಕಿರಿ ಜಾಸ್ತಿನೇ ಆಗ್ಲಿಕತ್ತ್ಯದ ಅಂತ ಅಕಿಗೆ ಅನ್ನಿಸಿರಬೇಕು.

ಹ್ಞೂ...ಕಾಲೆತ್ತೋದೇನು ಬ್ಯಾಡ ಬಿಡು. ಸ್ವಲ್ಪ ಲಂಗಾ ಎತ್ತಿಬಿಡು, ಫೋಟೋ ತೆಕ್ಕೊಂಡೇ ಬಿಡ್ತೇನಿ, ಅಂತ ಚೀಪ್ಯಾ desperate ಆಗಿ ಹೇಳ್ಯಾನ. ಶ್ರದ್ಧಾನ ಕಾಲಾಗ ಅವನ ಮದ್ವಿ ಫೋಟೋ ಕಚಾಪಚಾ ಆಗೋದು ನೋಡಿ ಚೀಪ್ಯಾಗ ಭಾಳ ಸಂಕಟ ಆಗ್ಲಿಕತ್ತಿತ್ತು.

ಈ ಸರೆ ಮಾತ್ರ ಶ್ರದ್ಧಾ ಊರಿಗೆಲ್ಲ ಕೇಳೋ ಹಾಂಗ, ಅಕ್ಕಾ!!! ರೂಪಕ್ಕಾ!!!ಅಣ್ಣಾ!!! ನಾಗಣ್ಣಾ!!! ಇಲ್ಲೆ ಬರ್ರಿ!!! ಲಗೂನ ಬರ್ರಿ!!! ಕಾಪಾಡ್ರೀ !!!ಬರ್ರಿ!!!! ಅಂತ ಲಬೋ ಲಬೋ ಹೊಯ್ಕೊಂಡು ಬಿಟ್ಟಾಳ.

ಚೀಪ್ಯಾ ಫುಲ್ ಘಾಬ್ರೀ. ಕಾಲಾಗ ಫೋಟೋ ಚಲ್ಲಿಕೊಂಡು, ಭಕ್ತ ಕುಂಬಾರ ಮಣ್ಣು ತುಳಿದಾಂಗ ಫೋಟೋ ತುಳಿಲಿಕತ್ತಿ, ಕಾಲೆತ್ತು, ಕಾಲಾಗ ಬಿದ್ದ ಫೋಟೋ ತೆಕ್ಕೊತ್ತೇನಿ ಅಂದ್ರ ಇಕಿ ಶ್ರದ್ಧಾ ಯಾಕ ಇಕಿ ಮಾನಭಂಗನೇ ಮಾಡಲಿಕ್ಕೆ ಬಂದೆನೋ ಅನ್ನವರಾಂಗ ಲಬೋ ಲಬೋ ಹೊಯ್ಕೊಳ್ಳಲಿಕತ್ತಾಳ ಅಂತ ತಿಳಿಯದೇ, ಏನಾತಾ ಶ್ರದ್ಧಾ? ಹೀಂಗ್ಯಾಕ ಹೊಯ್ಕೊಂಡು ಎಲ್ಲಾರನ್ನ ಕರೀಲಿಕತ್ತಿ? ಹಾಂ? ಹಾಂ? - ಅಂತ ಇನ್ನೋಸೆಂಟ್ ಆಗಿ ಚೀಪ್ಯಾ ಕೇಳ್ಯಾನ.

ಅಲ್ರೀ!!! ಕೊರಳಾಗ ಕ್ಯಾಮೆರಾ ಹಾಕ್ಕೊಂಡು, ಪ್ರಾಯದ ಹುಡುಗಿ ಮುಂದ ನಿಂತು, ಖಬರಿಲ್ಲದೆ, ಕಾಲೆತ್ತು ಫೋಟೋ ತೆಕ್ಕೊತ್ತೇನಿ, ಲಂಗಾ ಎತ್ತು ಫೋಟೋ ತೋಗೊತ್ತೇನಿ ಅಂದ್ರ ಏನ್ರೀ!!!??? ಹಾಂ???!!! ನಿಮ್ಮ ಉದ್ದೇಶ ಏನೇ ಇರಲೀ ಅಪಾರ್ಥ ಅಂತೂ ಆಗೇ ಆಗ್ತದ. ಅಲ್ಲಾ? ಇಲ್ಲೂ ಅದೇ ಆತು. ಅನಾಹುತ ಆತು. ಘೋರ ಅನಾಹುತ ಆತು.

ಶ್ರದ್ಧಾ ಅನ್ನೋ ಬಾಲೆ ಆ ಪರಿ ಕೂಗಿದ್ದನ್ನ ಕೇಳಿದ ಕರವಾ ಚೌತದ ಆಖ್ರೀ ರಸಂ ಮಾಡುತ್ತಿದ್ದ ರೂಪಾ ವೈನೀ ಮತ್ತ ಸ್ಟೋರ್ ರೂಂ ಒಳಗ ಕೂತು ಆವತ್ತಿನ ಕೋಟಾ 'ಹಳೆ ಮಂಗ್ಯಾ' ರಂ ಕುಡಿದು 'ರಂ'ಗಣ್ಣ ಆಗಿದ್ದ ನಾಗಣ್ಣ ಇಬ್ಬರೂ ಓಡಿ ಬಂದಾರ.

ಏನಾತಾ ಶ್ರದ್ಧಾ?! ಹಾಂ!? ಏನಾತು? ಆ ಪರಿ ಚೀರಿಕೊಂಡಿ. ದೆವ್ವಾ ನೋಡಿದವರ ಹಾಂಗ ಚೀರಿಕೊಂಡಿ. ಯಾಕಾ? ಏನಾತಾ? ಹೇಳಾ? - ಅಂತ ಶ್ರದ್ಧಾಗ ಕೇಳ್ಯಾರ ರೂಪಾ ಮತ್ತ ನಾಗಣ್ಣ.

ಅಕ್ಕಾ.....ಮಾಮಾ....ಮಾಮಾ.....ಅದು...ಅದು.... ಅಂತ ಚೀಪ್ಯಾನ ಒಂದು ತರಹದ ಆರೋಪಿ ತರಹ ನೋಡಿಕೋತ್ತ ಶ್ರದ್ಧಾ ಬಿಕ್ಕಳಿಸಿದಳು.

ಏನು ಮಾಡಿದ್ರು ಅವರು? - ಅಂತ ರೂಪಾ ವೈನಿ ಕೇಳ್ಯಾಳ.

ನನ್ನ ತಂಗಿಗೆ ಏನು ಮಾಡಿದ್ಯಲೇ ಚೀಪ್ಯಾ?! ಹಾಂ?! ಅಂತ ರಂ ಕುಡಿದು ರಂಗಾಗಿದ್ದ ರಂಗಣ್ಣ ಉರ್ಫ್ ನಾಗಣ್ಣ ಕೇಳ್ಯಾನ.

ಚೀಪ್ಯಾಗ ತಾನು ಮಾಡಿಕೊಂಡ ಅನಾಹುತದ ಅರಿವೇ ಇಲ್ಲ! ಹೋಗ್ಗೋ!!

ಹಾಂ?! ಏನಾತು? ನಾ ಏನ್ ಮಾಡಿನಾ ಶ್ರದ್ಧಾ? - ಅಂತ ಚೀಪ್ಯಾ ಇನ್ನೊಂಸೆಂಟ್ ಆಗಿ ಕೇಳ್ಯಾನ.

ಕೇಳೋದೆಲ್ಲಾ ಕೇಳಿ, ಮಾಡೋದೆಲ್ಲಾ ಮಾಡಿ, ಹ್ಯಾಂಗ ಕೇಳತಾರ ನೋಡು....ಅಕ್ಕಾ..... ರೂಪಕ್ಕಾ....ಅಣ್ಣಾ.... ನಾಗಣ್ಣಾ.... ಅಂತ ಶ್ರದ್ಧಾ ಮತ್ತ ಕಣ್ಣಾಗ ಮೂಗಾಗ ನೀರು ತಂದುಕೊಂಡು ಅತ್ತಾಳ.

ನೀ ಹೇಳವಾ....ಶ್ರದ್ಧಾ ಅವ್ವಿ....ಶ್ರದ್ಧಾ ಪುಟ್ಟಿ....ನೀ ಹೇಳವಾ....ಅಂತ ರೂಪಾ ವೈನಿ, ನಾಗಣ್ಣ ಇಬ್ಬರೂ ಕೂಡೆ ಶ್ರದ್ಧಾನ ರಮಿಸಿದರು.

ಅಕ್ಕಾ...ಅಕ್ಕಾ....ಈ ಮಾಮಾ....ನಿನ್ನ ಗಂಡ....ಇವತ್ತು ಸಂಜಿ ಮುಂದ ಆಫೀಸ್ ನಿಂದ ಬಂದಾಗಿಂದ ಹುಚ್ಚುಚ್ಚರೆ ಮಾತಾಡ್ಲಿಕತ್ತಾರ. ಅಸಹ್ಯ ಹೊಲಸ್ ಹೊಲಸ್ ಮಾತಾಡಿ ಏನೇನೋ ಅಂತಾರ. ಅಕ್ಕಾ.... ಅಂತ ಮತ್ತ ಶ್ರದ್ಧಾ ಹೊಯ್ಕೊಂಡಳು.

ಅವರು ಏನಂದ್ರ ಶ್ರದ್ಧಾ? - ಅಂತ ಮುಂದಿನ ವಿವರಣೆಗೆ ಕಾದಾರ.

ಮೊದಲು ಬಂದವರೇ, ಏನ್ ಶ್ರದ್ಧಾ ಚಿಗಳಿ ಏನು ಮಸ್ತ ಚೀಪಲಿಕತ್ತಿ ಏನರೆ ವಿಶೇಷ ಅದ ಏನು? ಅಂತ ಕೇಳಿದರು. ನನಗ ತಿಳಿಲೇ ಇಲ್ಲ. ಕೇಳಿದರ, ಹತ್ತರ ಕರದು, ಕಿವ್ಯಾಗ, ಶ್ರದ್ಧಾ ಹೀಂಗ ಚಿಗಳಿ ಯಾರು ಚೀಪ್ತಾರ ಹೇಳು? ಅಂತ ಅಂದ್ರು. ಗೊತ್ತಿಲ್ಲ ಅಂದ್ರ, ಕಣ್ಣು ಹೊಡೆದು, ಬಸಿರಿದ್ದವ್ರು. ಬಸರಿದ್ದಿ? ಇದ್ದೀ? ಇದ್ದೀ? ಅಂತ ಕೇಳಿದರು ಅಕ್ಕಾ..... ಅಕ್ಕಾ.... ಅಂತ ಶ್ರದ್ಧಾ ಚೀಪ್ಯಾನ ಭಾಂಡಾ ಬಿಚ್ಚಿದಳು.

ಹೌದೇನ್ರೀ? ಅಷ್ಟು ಸಣ್ಣ ಹುಡಿಗಿ ಜೋಡಿ ಇಂತಾ ಮಾತೇ ನಿಮ್ಮವು? ಹಾಂ? ಏನಾಗ್ಯದ ನಿಮಗ? ಹಾಂ? ಹೊತ್ತಿಲ್ಲಿದ ಹೊತ್ತಿನ್ಯಾಗ ಆ 'ನೈಯಾಗ್ರಾ' ಗುಳುಗಿ ತೊಗೊಂಡು ಕೂತಿರೇನು? ಆ ಹೊಲಸ್ ಗುಳಿಗಿ ಬಿಡ್ರೀ ಸಾಕು, ಅಂತ ರೂಪಾ ವೈನಿ ಚೀಪ್ಯಾಗ ಝಾಡಿಸಿದರು. ಚೀಪ್ಯಾ ನೈಯಾಗ್ರಾ ಅಂತ ಏನೋ ಗುಳಿಗಿ ತೊಗೋತ್ತಾನ. ನಿಶಕ್ತಿ ಕಮ್ಮಿ ಆಗಲಿ ಅಂತ.

ಇಲ್ಲ....ಇಲ್ಲ.. ರೂಪಾ... ಹಾಂಗೇನೂ ಇಲ್ಲ. ನನ್ನ ಮಾತ ನಂಬು ಮಾರಾಳ. ನಂಬು, ಅಂತ ಚೀಪ್ಯಾ ಏನೋ ವಿವರಣೆ ಕೊಡಲಿಕ್ಕೆ ಹೋಗ್ಯಾನ.

ಸುಮ್ಮ ಕೂಡ್ರೀ ನೀವು, ಅಂತ ಚೀಪ್ಯಾಗ ಝಾಡಿಸಿ, ನೀ ಹೇಳವಾ ಅವ್ವಿ. ಮತ್ತೇನು ಮಾಡಿದರು, ಅಂತ ರೂಪಾ ವೈನಿ ಶ್ರದ್ಧಾಗ ಕೇಳ್ಯಾರ. ಸಾಥ್ ಕೊಡಲಿಕ್ಕೆ ಕಿಕ್ ಬೇಕು ಅಂತ ಹೇಳಿ ನಾಗಣ್ಣ ಫುಲ್ 'ಹಳೆ ಮಂಗ್ಯಾ' ರಮ್ ಬಾಟಲಿಗೇ ಬಾಯಿ ಹಾಕಿ ಬಿಟ್ಟಾನ!

ಮುಂದ....ಮುಂದ....ಮಾಮಾ...ಮಾಮಾ.....ಮತ್ತಾ....ಮತ್ತಾ.....ಕ್ಯಾಮೆರಾ ತೊಗೊಂಡು ಬಂದು....ಶ್ರದ್ಧಾ ಕಾಲೆತ್ತು ಫೋಟೋ ತೆಕ್ಕೊತ್ತೇನಿ. ಲಂಗಾ ಎತ್ತು ಫೋಟೋ ತೆಕ್ಕೊತ್ತೇನಿ ಅಂತ ಅಂದ್ರು ಅಕ್ಕಾ!!!! - ಅಂತ ಶ್ರದ್ಧಾ ಫುಲ್ ಹೇಳಿ ಬಿಟ್ಟಾಳ. ಅಕಿಗೆ ಹ್ಯಾಂಗ ತಿಳದದ ಹಾಂಗ ಹೇಳಿ ಬಿಟ್ಟಾಳ.

ಈಗ ಫುಲ್ ಕೇಸ್ ಫಿಟ್ ಆಗಿ ಬಿಡ್ತು ಚೀಪ್ಯಾನ ವಿರುದ್ಧ. ಕೊರಳಾಗ ನೇತಾಡುತ್ತಿದ್ದ ಕೆಮೆರಾ ಜೀವಂತ ಸಾಕ್ಷಿ ಬ್ಯಾರೆ. ಚೀಪ್ಯಾಗ ಕೊರಳಾಗ ಕ್ಯಾಮೆರಾ ಬದಲಿ ಹಾವಾದ್ರೂ ಇರಬಾರದೇ ದೇವರೇ ಅನ್ನಿಸಿಬಿಡ್ತು. ಹೂವು ಹಾವಾದರೇನು? ಕ್ಯಾಮೆರಾ ಹಾವಾಗಲಿಲ್ಲ.

ಹೌದೇನ್ರೀ!!!!!!???????? - ಅಂತ ರೂಪಾ ವೈನಿ ಜೋರಾಗಿ ಒದರಿ ಕೇಳಿದರು.

ಹೌದೇನಲೇ ಹಲ್ಕಟ್ ಸೂಳಿಮಗನೇ!? ಹಾಂ!? ಅಕ್ಕನ್ನ ಲಗ್ನ ಆದ್ರಾ ತಂಗಿ ಫ್ರೀ ಅಂತ ತಿಳಕೊಂಡು ನನ್ನ ಸಣ್ಣ ತಂಗಿ ಜೋಡಿ ಮಸ್ಕಿರಿ ಮಾಡ್ತಿ ಏನಲೇ!? - ಅಂತ ಕೈ ಎತ್ತಿಕೊಂಡು, ಜೋಲಿ ಹೊಡಕೋತ್ತ ನಾಗಣ್ಣ ಉರ್ಫ್ ತೂತ್ ನಾಗ್ಯಾ ಬಂದು, ಜೋಲಿ ತಪ್ಪಿ, ಸೋಫಾ ಮ್ಯಾಲೆ ಧಡ್ ಅಂತ ಬಿದ್ದು, ನಿನ್ನ ಇವತ್ತು ಹೆಣಾ ಎತ್ತತೆನಲೇ ಚೀಪ್ಯಾ, ಬಿಡಂಗಿಲ್ಲ ಇವತ್ತು ನಿನ್ನ, ಹ್ಞೂ... ಹಾಂ.... ಅನಕೋತ್ತ ಫುಲ್ ಗುರ್ ಗುರ್ ಅಂತ ಗೊರಕಿ ಹೊಡಿಲಿಕ್ಕೆ ಶುರು ಮಾಡಿಬಿಟ್ಟ ನಾಗಣ್ಣ. ನಶಾ ಜಾಸ್ತಿ ಆಗಿರಬೇಕು ಹಳೆ ಮಂಗ್ಯಾ ರಮ್ಮಿಂದು.

ರೂಪಾ....ರೂಪಾ....ಇಲ್ಲೆ ಕೇಳಿಲ್ಲೆ. ನಿನ್ನ ಕರವಾ ಚೌತದ ಫೋಟೋ ತೆಗೆಯೋಣ ಅಂತ ಕ್ಯಾಮೆರಾ ಹೊರಗ ತೆಗದೆ. ಇಲ್ಲೆ ಬಂದು ನೋಡಿದರ ಇಕಿ ಶ್ರದ್ಧಾ ನಮ್ಮ ಲಗ್ನದ ಆಲ್ಬಮ್ ನಿಂದ ಫೋಟೋ ಕೆಳಗ ಕೆಡವಿಕೊಂಡು ಕೂತಿದ್ದಳು. ಕಾಲೆತ್ತು ಫೋಟೋ ತೆಕ್ಕೊತ್ತೇನಿ ಅಂದೆ. ಅಕಿಗೆ ತಿಳಿಲಿಲ್ಲ. ಹೋಗ್ಲಿ, ಸ್ವಲ್ಪ ಲಂಗಾ ಆದರೂ ಎತ್ತವಾ ಫೋಟೋ ತೆಕ್ಕೊತ್ತೇನಿ ಅಂದೆ. ನಾ ತೆಕ್ಕೊತ್ತೇನಿ ಅಂದಿದ್ದು ನೆಲದ ಮ್ಯಾಲೆ ಬಿದ್ದಂತ ಫೋಟೋ. ಅಕಿ ಏನೋ ತಿಳಕೊಂಡು, ಚೀರಿಕೊಂಡರ ನಂದು ಏನು ತಪ್ಪು ರೂಪಾ? - ಅಂತ ಚೀಪ್ಯಾ ಗೋಗರಿದಾನ ಹೆಂಡ್ತಿ ಮುಂದ. ಗಡ ಗಡ ನಡಗುತ್ತ ಗಿಡ್ಗಿಡಾಯಾ ಚೀಪ್ಯಾ!

ಕರವಾ ಚೌತದ ಕಾರಣ ಮುಂಜಾನಿಂದ ಉಪವಾಸಿದ್ದ ರೂಪಾ ವೈನಿ ತಲಿ ಈಗ ಫುಲ್ ಕೆಟ್ಟು ಹೋತು. ಮೊದಲೆದಾಗಿ ತಂಗಿ ಜೋಡಿ ಹೊಲಸ್ ಹೊಲಸ್ flirt ಮಾಡ್ಯಾರ, ಮ್ಯಾಲಿಂದ ಮುಚ್ಚಿಗೊಳ್ಳಲಿಕ್ಕೆ ಬ್ಯಾರೆ ನೋಡ್ತಾರ. ಕದ್ದು ಮೇಯೋ ಪ್ಲಾನ್ ಇದ್ದಂಗ ಅದ ಅಂತ ಸಿಟ್ಟಿಗೆದ್ದವರಾ ರೂಪಾ ವೈನಿ ಫುಲ್ ಫಾರ್ಮಿಗೆ ಬಂದು ಬಿಟ್ಟಾರ.

ನಿಮ್ಮ...ನಿಮ್ಮಾ...ನಿಮ್ಮ ಸಲುವಾಗಿ ನಾ ಮುಂಜಾನಿಂದ ಉಪವಾಸಿದ್ದು ಕರವಾ ಚೌತದ ವೃತಾ ಮಾಡಿಕೋತ್ತ ಕೂತೇನಿ. ನೀವು ನೋಡಿದರ ಇನ್ನೂ ಸ್ವೀಟ್ ಸಿಕ್ಸ್ಟೀನ್ ಕನ್ಯಾ ಆದ ನನ್ನ ತಂಗಿ ಶ್ರದ್ಧಾನ ಜೋಡಿ ಜಮ್ಮ ಚಕ್ಕ ಮಾಡಿಕೋತ್ತ, ಅಕಿ ಜೋಡಿ ಹೊಲಸ್ ಹೊಲಸ್ flirt ಮಾಡಿಕೋತ್ತ ಕೂತೀರಿ? ಹಾಂ? ನಿಮ್ಮ ಜನ್ಮಕಿಷ್ಟು ಬೆಂಕಿ ಹಾಕಾ! - ಅಂದವರೇ ಚೀಪ್ಯಾಗ ಹಿಡಕೊಂಡು ನಾಕು ತಟ್ಟಿ ಬಿಟ್ಟಾರ ರೂಪಾ ವೈನೀ.

ಹೋಗ್ಗೋ!!!!

ಕೊರಳಾಗಿನ ಕ್ಯಾಮೆರಾ ಕಿತ್ತಗೊಂಡು, ಕ್ಯಾಮೆರಾ ಒಳ್ಳೆ ಬಾರ್ಕೋಲಿನ ಹಾಂಗ ಮಾಡಿ, ದನಕ್ಕ ಬಾರುಕೋಲಿಲೆ ಕಟದಾಂಗ ಕಟಿದು ಬಿಟ್ಟಾರ ರೂಪಾ ವೈನೀ. ಸಿಟ್ಟು ಇಳದಿಲ್ಲ ಅಂತ ಸಾಂಬ್ರಾಣಿ ಚಪ್ಪಲ್ ಅಂಗಡಿಯೊಳಗ ಮನ್ನಿ ಮನ್ನಿ ಮಾತ್ರ ತೊಗೊಂಡ ಹೊಸಾ ಹೈ ಹೀಲ್ಡ್ ಚಪ್ಪಲಿ ಹೊರಗ ತಂದು, ಕೈಯ್ಯಾಗ ವಿಕೆಟ್ ಕೀಪರ್ ಗ್ಲೌಸ್ ಗತೆ ಹಾಕ್ಕೊಂಡು, ಚೀಪ್ಯಾನ ತಲಿನೇ ಮಿಡ್ಲ್ ಸ್ಟಂಪ್ ಅಂತ ಗುರಿ ಇಟ್ಟು, ಸ್ಟಂಪ್ ಔಟ್ ಮ್ಯಾಲೆ ಸ್ಟಂಪ್ ಔಟ್ ಮಾಡಿ ಬಿಟ್ಟಾರ ರೂಪಾ ವೈನೀ. ಗಲ್ಲಾ, ಮಸಡಿ, ತಲಿ ಎಲ್ಲಾ ಫುಲ್ ಸ್ಕ್ರ್ಯಾಪ್. ಸಾಂಬ್ರಾಣಿ ಚಪ್ಪಲ್ ಅಂಗಡಿ ಹೈ ಹೀಲ್ಡ್ ಚಪ್ಪಲ್ ಅಂದ್ರ ಭಾಳ ಡೇಂಜರ್. ಅದಕ್ಕಾ ಚೀಪ್ಯಾನ ಗಲ್ಲಾ ಊದಿ ಉದ್ದಿನ ವಡಿ ಶೇಪಿಗೆ ಬಂದದ ಅಂತ ಗೊತ್ತಾತು.

ಹೋಗ್ಗೋ ಚೀಪ್ಯಾ!!! ದೊಡ್ಡ ಅನಾಹುತ ಮಾಡಿಕೊಂಡು ಬಿಟ್ಟ್ಯಲ್ಲಪಾ. ಹೀಂಗ ಆಗಬಾರದಿತ್ತೋ. ನಮ್ಮ ಕರೀಮ ಸಹಿತ ಹಿಂದಿನ ವರ್ಷ ಇದೇ ಟೈಮ್ ಒಳಗ ಹೀಂಗೆ ಅವನ ನಾದನಿಗೆ ಏನೋ ಅನ್ನಲಿಕ್ಕೆ ಹೋಗಿ ಹೀಂಗ ಗಜ್ಜು ತಿಂದಿದ್ದ ನೋಡಪಾ, ಅಂತ ಹೇಳಿದೆ.

ಏನಾಗಿತ್ತು ಅವನ ಕೇಸಿನ್ಯಾಗ? - ಅಂತ ಚೀಪ್ಯಾ ಕೇಳಿದ.


ಹಾಂಗೇನು? ಅಂದ್ರ  ನಾ ಒಬ್ಬನೇ ಏನೂ ಅಲ್ಲ ತೊಗೋ, ಹೆಂಡ್ತಿ ಕಡೆ ಗಜ್ಜು ತಿಂದವಾ, ಅಂತ ಚೀಪ್ಯಾ ಸಮಾಧಾನ ಮಾಡಿಕೊಂಡ.

ಹ್ಞೂ...ಅವತ್ತು ನೀ ಕರವಾ ಚೌತ್ ಪೂಜಿಗೆ ಹೊಂಟಿ ಅಂದಾಗ 'ಕೆರ'ವಾ ಚೌತ್ ಏನಲೇ ಅಂತ ಚ್ಯಾಸ್ಟಿ ಮಾಡಿದ್ದಿವಿ. ಅದಕ್ಕ ಸರಿ ಆಗೋ ಹಾಂಗ ಕೆರದಿಂದಲೇ ಪೂಜಿ ಮಾಡಿಸಿಕೊಂಡು ಬಿಟ್ಟಿಯಲ್ಲಪಾ ಚೀಪ್ಯಾ? - ಅಂತ ಅನುಕಂಪ ವ್ಯಕ್ತಪಡಿಸಿದೆ.

ಹ್ಞೂ...ಹ್ಞೂ....ನಮ್ಮ ಬ್ಯಾಡ್ ಲುಕ್ ಫುಲ್ ಖರಾಬ್ ಇತ್ತ....ಹ್ಞೂ... ಹ್ಞೂ - ಅಂತ ಚೀಪ್ಯಾ ಗೋಣಾಡಿಸಿದ.

ವಿ. ಸೂ: ಧಾರವಾಡ ಕಡೆ ಅಕ್ಕನ ಗಂಡ ಭಾವನಿಗೆ ಮಾಮಾ ಅನ್ನುತ್ತಾರೆ. ಯಾಕೋ ಏನೋ! ಅದಕ್ಕೇ ಚೀಪ್ಯಾಗೆ ಅವನ ನಾದಿನಿ ಶ್ರದ್ಧಾ ಮಾಮಾ ಅಂದಿದ್ದು. ಮಾವ ಭಾವರಲ್ಲಿ confusion ಆಗದಿರಲೆಂದು ಈ ವಿಶೇಷ ಸೋಚನೆ.

ಮೂಲ: ಯಾವದೋ ಒಂದು ಇಂಟರ್ನೆಟ್ ಜೋಕ್. ಯಾರೋ ಬಸ್ಸಲ್ಲಿ ಹೋಗ್ತಾ ಇರೋವಾಗ, ಅವರ ಕೈಯಲ್ಲಿರುವ ಫೋಟೋಗಳು ಮುಂದೆ ನಿಂತಿರುವ ಮಹಿಳೆಯ ಕಾಲ ಕೆಳಗಡೆ ಬಿದ್ದು ಬಿಡುತ್ತವೆ. ಪಾಪ ಅವನ ಖರಾಬ್ ನಸೀಬ! ರೀ, ಮೇಡಂ, ಸ್ವಲ್ಪ ಕಾಲೆತ್ತಿ ಅಥವಾ ಸೀರೆ ಎತ್ತಿ. ಪ್ಲೀಸ್. ಫೋಟೋ ತೆಕ್ಕೊಂಡು ಬಿಡ್ತೀನಿ, ಅಂತ ಅಂದಿದ್ದೆ ಅಂದಿದ್ದು ಅವನ ಕಥೆ ಡಮಾರ್! ಎಲ್ಲರಿಂದ ಧರ್ಮದೇಟು. ಆ ಎರಡು ಲೈನ್ ಜೋಕು ಈ ಬ್ಲಾಗ್ ಪೋಸ್ಟಿಗೆ ಸ್ಪೂರ್ತಿ (!?)

1 comment:

Vimarshak Jaaldimmi said...

Excellent writing!

Not a hyperbole: Upama Kalidasasya; Blog Maheshsasya!

So far, no Kannada writer has received a Nobel prize in literature - worth recommending yours!