Thursday, June 26, 2014

WFH...Working from home ಎಂಬ 'ಕರ್ಮ'ಕಾಂಡ


ನಮ್ಮ ಆಫೀಸ್ ಒಳಗ ಭಾಳ ಮಂದಿ ಗುರುವಾರ ಮಧ್ಯಾನ, ಮೂರು ಸಂಜಿ ಅತು ಅಂದ್ರ ಸಾಕು, ವಾರ ಬಂತಮ್ಮ, ಗುರುವಾರ ಬಂತಮ್ಮ, ಮನೀಗೆ ಹೊಂಡಮ್ಮಾ, ವೀಕೆಂಡ್ ಶುರು ಮಾಡಮ್ಮಾ, ಅಂತ  ಕಂಪ್ಯೂಟರ್ ಸ್ಪೀಕರ್ ಆನ್ ಮಾಡಿ ಬಿಡ್ತಾರ. ಸ್ಪೀಕರ್ ಆನ್ ಮಾಡ್ತಾರ ಅಂದ್ರ ಮ್ಯೂಸಿಕ್ ಏನೂ ಹಚ್ಚಂಗಿಲ್ಲ. ಅವನೌನ್! ಇವರ ಕಂಪ್ಯೂಟರ್ ಮ್ಯಾಲೆ ಬರೋ ಈಮೇಲ್, ಆಮೇಲ್, ಇನ್ಸ್ಟಂಟ್ ಮೆಸೇಜ್, ಮತ್ತೊಂದು ಮಗದೊಂದು ನಿರಂತರವಾಗಿ ಕೊಂಯ್, ಕೊಂಯ್ ಅಂದು, ಅದನ್ನ ಕೇಳಿ ಕೇಳಿ, ತಲಿ ಕೆಟ್ಟ ಹೋಗ್ತದ.

ಯಾಕ್ರೋ ಗುರುವಾರ ಮಧ್ಯಾನ ಬಂತ ಅಂದ್ರ ಕಂಪ್ಯೂಟರ್ ಸ್ಪೀಕರ್ ಆನ್ ಮಾಡಿಕೊಂಡು ಕೂಡ್ತೀರೀ? ಗುರವಾರ ಬಂದ ಕೂಡಲೇ ಕುಡ್ಡ ಆಗ್ತೀರೇನಪಾ? ಈಮೇಲ್, ಆಮೇಲ್, ಇನ್ಸ್ಟಂಟ್ ಮೆಸೇಜ್ ಬಂದಿದ್ದು ಕಾಣೋದಿಲ್ಲೇನು? ಅವು ಬಂದಾವ ಅಂತ ಹೇಳಲಿಕ್ಕೆ ಸಂಗ್ತೀಗೆ ಬೋಂಗಾ (ಸೌಂಡ್) ಬ್ಯಾರೆ ಹೊಡಿಬೇಕೇನು? ಅಂತ ಕೇಳಿದೆ.

ಏ! ಹಾಂಗೇನು ಇಲ್ಲ. ನಾಳೆ ಫ್ರೈಡೆ! ಅಂದ್ರು.

ಹಾಂ! ಏನು ಹಾಂಗ ಅಂದ್ರ!? ಶುಕ್ರವಾರಕ್ಕ ಮತ್ತ ನಿಮ್ಮ ಕಂಪ್ಯೂಟರ್ ಬೋಂಗಾ ಹೊಡೆಸೋದಕ್ಕೂ ಏನು ಸಂಬಂಧ? ಹಾಂ? ಶುಕ್ರವಾರ, ಲಕ್ಷ್ಮಿ ಎಲ್ಲರೆ ಸೈಲೆಂಟ್ ಆಗಿ ಬಂದು ಗಿಂದಾಳು ಅಂತೇನು? ಏ ಲಕ್ಷ್ಮಿ ಯಾವಾಗಲೂ ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ ಗೆಜ್ಜೆ ಕಾಲ್ಗಳ ಧ್ವನಿಯ ಮಾಡುತನೇ ಬರ್ತಾಳ್ರಪಾ. ಚಿಂತಿ ಬ್ಯಾಡ, ಅಂದೆ.

ಏ! ಇಲ್ಲ. ಶುಕ್ರವಾರ ವರ್ಕಿಂಗ್ ಫ್ರಾಂ ಹೋಂ. ಮನಿಂದ ಕೆಲಸ. ಅದಕ್ಕssss............ಅಂತ ರಾಗಾ ಎಳೆದರು.

ಮನಿಂದ ಕೆಲಸಾ ಮಾಡೋದಕ್ಕೂ ಕಂಪ್ಯೂಟರ್ ಸ್ಪೀಕರ್ ಆನ್ ಮಾಡೋದಕ್ಕೂ ಏನ ಸಂಬಂಧ? ಮನ್ಯಾಗಿದ್ದರ ಈಮೇಲ್, ಆಮೇಲ್, ಇನ್ಸ್ಟಂಟ್ ಮೆಸೇಜ್ ಬಂದಿದ್ದು ಕಾಣೋದಿಲ್ಲೇನು? ಅವು ಬಂದಾವ ಅಂತ ಹೇಳಲಿಕ್ಕೆ ಸಂಗ್ತೀಗೆ ಬೋಂಗಾ ಬ್ಯಾರೆ ಹೊಡಿಸಬೇಕೇನು? ಅಂತ ಕೇಳಿದೆ.

ಹೇ!! ಹೇ!!! ಅಂತ ಮಳ್ಳರ ಹಾಂಗ ನಕ್ಕರು. ಅವೆಲ್ಲಾ ಕೇಳಿ, ಹೇಳೋ ಮಾತಲ್ಲಾ ಅನ್ನೋ ಹಾಂಗ.

ಶುಕ್ರವಾರ ವರ್ಕಿಂಗ್ ಫ್ರಾಂ ಹೋಂ ಅಂದ್ರ ಕಂಪ್ಯೂಟರ್ ಮುಂದೇ ಕೂತಿರ್ತೀರಿ ಹೌದಿಲ್ಲೋ? ಅಥವಾ....ಅಂತ ಸಂಶಯ ಮಾಡಿಕೋತ್ತ ಕೇಳಿದೆ.

ಹಾಂಗೆಲ್ಲಾ ಕೇಳಬಾರದು. ಕೇಳಲೇ ಬಾರದು. ಅದೆಲ್ಲಾ ಕೇಳಿದ್ರ ಮರ್ಡರ್ ಮರ್ಡರ್ ಆಗಿ ಬಿಡ್ತೀ! ಹುಷಾರ್! ಅನ್ನೋ ಲುಕ್ ಕೊಟ್ಟರು.

ಶುಕ್ರವಾರದ ದಿವಸ ಇನ್ಸ್ಟಂಟ್ ಮೆಸೇಜಿಗೆ, ಈಮೇಲಿಗೆ ಉತ್ತರ ಸ್ವಲ್ಪ ತಡವಾಗಿ ಬರ್ತದ.

ಧ್ವನಿಯ ವೇಗ ಬೆಳಕಿನ ವೇಗಕ್ಕಿಂತ ಬಹಳ ಕಮ್ಮಿ. ಅದಕ್ಕೇ ಇರಬೇಕು.

ಹೋದ ಶುಕ್ರವಾರ ವರ್ಕಿಂಗ್ ಫ್ರಾಂ ಹೋಂ ಅಂತ ಹೇಳಿದ್ದ ಒಬ್ಬ ಮನುಷಾ, ಅದೂ ಗುರುವಾರ ಮರೀದೇ ಕಂಪ್ಯೂಟರ್ ಸ್ಪೀಕರ್ ಆನ್ ಮಾಡಿಕೊಂಡೇ ಮನಿಗೆ ಹೋದವಂಗ ಮೆಸೇಜ್ ಮಾಡಿ ಕೂತೆ. ಇನ್ಸ್ಟಂಟ್ ಮೆಸೇಜ್ ಮಾಡಿದೆ. ಆಸಾಮಿ ಪತ್ತೆ ಇಲ್ಲ. ಎದ್ದೇಳು ಮಂಜುನಾಥಾ! ಏಳು ಮೀಟಿಂಗ್ ಟೈಮಾಯಿತು! ಅಂತ ಹಾಡೇ ಹಾಡಿದೆ. ಆಸಾಮಿ ನಾಪತ್ತೆ. ಆಮ್ಯಾಲೆ ಫೋನ್ ಹಚ್ಚಿ, ಎಲ್ಲಿ ಸತ್ತೀಲೇ ಮಂಗ್ಯಾನಿಕೆ? ಈಮೇಲ್ ಮಾಡಿದೆ, ಇನ್ಸ್ಟಂಟ್ ಮೆಸೇಜ್ ಮಾಡಿದೆ, ಸುದ್ದಿನೇ ಇಲ್ಲ. ಯಾಕ ಕಂಪ್ಯೂಟರ್ ಸ್ಪೀಕರ್ ಹೋಗ್ಯದೇನು? ಕೇಳಿಸಲಿಲ್ಲೇನು? ಅಂತ ಝಾಡಿಸಿದೆ. ಆವಾ ಉತ್ತರಾ ಕೊಡೋ ಮೊದಲೇ ಗೊತ್ತಾತು. ಹ್ಯಾಂಗಂದ್ರ, ಕಂಪ್ಯೂಟರ್ ಸ್ಪೀಕರ್ ಕಿಂತಾ ಭಾಳ ದೊಡ್ಡ ಪವರಿನ ಮಹಾ ದೊಡ್ಡ ಸ್ಪೀಕರ್, ಹನೀ......ಸ್ವಲ್ಪ ಬೇಬಿ ವೈಪ್ ಮಾಡಿ ಡಯಾಪರ್ ಚೇಂಜ್ ಮಾಡೂssssssssssssss. ಹೇಳಿ ಎಷ್ಟೊತ್ತಾತು???????? ಅಂತ ಬೊಂಬಡಾ ಬಾರಿಸ್ತು. ಓಹೋ! ವರ್ಕಿಂಗ್ ಫ್ರಾಂ ಹೋಂ ಅಂದ್ರ ಮೊದಲು ಹೋಂ ವರ್ಕ್ ನಂತರ ಆಫೀಸ ವರ್ಕ್. ಹೋಂ ವರ್ಕ್ ಮಾಡಿಕೋತ್ತ ಇದ್ದಾಗ ಆಫೀಸ್ ವರ್ಕ್ ಬಂದಿದ್ದು ಗೊತ್ತಾಗಲಿ ಅಂತ ಕಂಪ್ಯೂಟರ್ ಸ್ಪೀಕರ್ ಆನ್ ಮಾಡಿಟ್ಟಿರ್ತಾರ! ಅಂತ ಒಂದು ಸಂಭವನೀಯ ಥಿಯರಿ ತಯಾರ್ ಆತು.

ಹೌದೇನ್ರೋ ಅಂತ ಕೇಳೋಣ ಅಂದ್ರ ಮರ್ಡರ್ ಮರ್ಡರ್ ಆಗಿ ಬಿಡ್ತೀ ಅನ್ನೋ ಲುಕ್ ಕೊಡ್ತಾರ. ಅಂಜಿಕಿ.

ಕಂಪ್ಯೂಟರ್ ಸ್ಪೀಕರ್ ಆನ್ ಮಾಡಿಕೊಂಡು ಸಾಯ್ರೀ. ಬೇಕಾದರ ಅದಕ್ಕ ಆಂಪ್ಲಿಫೈಯರ್ ಹಾಕ್ಕೊಂಡು, ಸರೌಂಡ್ ಸೌಂಡ್ ಸಿಸ್ಟಮ್ ಹಾಕಿಸಿಕೊಳ್ಳರೀ. ರಸ್ತೆ ಮ್ಯಾಲೆ ಯಾವ ಮೂಲಿ ತಿಪ್ಪಿ ಗುಂಡಿಗೆ ಕಸಾ ಒಗಿಲಿಕ್ಕೆ ಹೋಗಿದ್ದರೂ, ಕಂಪ್ಯೂಟರ್ ಸೌಂಡ್ ಕೇಳಿಸಬೇಕು ಹಾಂಗ. ಅಷ್ಟ ನಿಮ್ಮ ನಿಮ್ಮ ಕಂಪ್ಯೂಟರ್ ಸ್ಪೀಕರ್ ಮನೀಗೆ ಹೋದ ಮ್ಯಾಲೆ, ಶುಕ್ರವಾರ ಮುಂಜಾನೆ ಆನ್ ಮಾಡಿಕೊಳ್ಳ್ರೀ. ಗುರವಾರ ಮಧ್ಯಾನವೇ ಬ್ಯಾಡ. ಮತ್ತ ಸೋಮವಾರ ಆಫೀಸ್ ಗೆ ಬರೋಕಿಂತ ಮೊದಲು ಬಂದ್ ಮಾಡಿಕೊಂಡು ಬರ್ರೀಪಾ. ಇಲ್ಲಂದ್ರ ಕಿವುಡನ ಮಾಡಯ್ಯ ತಂದೆ ಅಂತ ಹೇಳೋ ಜರೂರತ್ ಇಲ್ಲದ ಲಗೂನ ಕಿವುಡ ಆಗಿ ಬಿಡ್ತೀವಿ. ಆ ಮ್ಯಾಲೆ ವರ್ಕಿಂಗ್ ಫ್ರಮ್ ಹೋಂ ಆನ್ ಫ್ರೈಡೆ ಬಂದ್. ನೋಡ್ಕೊಳ್ಳರೀ ಮತ್ತ!

ಸೋಮವಾರ ಮುಂಜಾನೆ ಅಂತೂ ಕೇಳಲೇ ಬ್ಯಾಡ್ರೀ. ಒಂದೇ ಸಂವಾ ಕೋರಸ್ ಒಳಗ ಆ ದರಿದ್ರ ವಿಂಡೋಸ್ ಸ್ಟಾರ್ಟ್ ಆಗೋ ಸೌಂಡ್ ಕೇಳಿ ಕೇಳಿ ಹಾಕ್ಕೊಂಡ ಸ್ಯಾಂಡೋಸ್ ಬನಿಯನ್ ಕಳದು, ಅದರಾಗs  ಒಬ್ಬೊಬ್ಬರ ಕುತ್ತಿಗಿಗೆ ಉರಳು ಹಾಕಿ ಕೊಂದ ಬಿಡಬೇಕು ಅನ್ನಸ್ತದ. ಸೋಮವಾರ ಮುಂಜಾನೆ ಎಂಟರಿಂದ ಹತ್ತರ ತನಕಾ ಒಬ್ಬರದ್ದು ಆದ ಮ್ಯಾಲೆ ಇನ್ನೊಬ್ಬರ ವಿಂಡೋಸ್ ಸೌಂಡ್ ಕೇಳಿ ಕೇಳಿ ಜೀನಾ ಹರಾಮ್. ಪ್ರಾರಬ್ಧ! ಕಂಪ್ಯೂಟರ್ ಸ್ಪೀಕರ್ ಬಂದ್ ಮಾಡಿಕೊಂಡು ಬರ್ರೋ!!! ಥೂ ನಿಮ್ಮಾ ssss!!!!

ಮತ್ತ ಇನ್ನೊಂದು....ವರ್ಕಿಂಗ್ ಫ್ರಾಂ ಹೋಂ ಮಂದಿ....ದಯವಿಟ್ಟು ಲಕ್ಷವಿಟ್ಟು ಕೇಳ್ರೀಪಾ. conference call ಮ್ಯಾಲೆ ಬಂದಾಗ ಪ್ಲೀಸ್ ಕಂಪ್ಯೂಟರ್ ಸ್ಪೀಕರ್, ಮೈಕ್ರೋಫೋನ್ ಬಂದ್ ಮಾಡಿಕೊಂಡು ಕೂಡ್ರೀಪಾ. ಸ್ಪೀಕರ್ ಆನ್ ಆದ್ರ ಮೈಕ್ರೋಫೋನ್ ಸಹ ಆನ್ ಆಗಿ, ಮಾತಾಡಿದ್ದು ಎಕೋ ಆಗಿ, ಕೋಂssssಯ್ ಅಂತ ಎಕೋ ಬರ್ತದ. ಒಳ್ಳೆ ತುಳಸಿ ರಾಮಸೇ ಹಾರರ್ ಫಿಲಂ ಮ್ಯೂಸಿಕ್ ಬರ್ತದ್ರೋ. ದೆವ್ವಗಳ ಗತೆ ಕಾಡೋದಂತೂ ಕಾಡ್ತೀರಿ. ಅದರ ಮ್ಯಾಲೆ ಆ ರಾಮಸೇ ಹಾರರ್ ಮ್ಯೂಸಿಕ್ ಫ್ರೀ ಏನ? ಹೋಗ್ಗಾ ನಿಮಾ....

ಸಾವಿರ ಸರೆ, can you please mute your computer microphone? ಅಂತ ಬಡಕೊಂಡ ಮ್ಯಾಲೆ ಬಂದ ಮಾಡ್ತಾರ. ಆದ್ರ ಗಲತ್ ಸ್ವಿಚ್ ಒತ್ತಿ ಬಿಡ್ತಾರ. ಕಂಪ್ಯೂಟರ್ ಸ್ಪೀಕರ್, ಮೈಕ್ರೋಫೋನ್ ಆನ್ ಇರ್ತದ.  ಏ! ಹುಚ್ಚಾ! ಬಂದ್ ಮಾಡೋ! ಅಂತ ಹೇಳಿದ್ರ ಫೋನ್ ಮ್ಯೂಟ್ ಮಾಡಿ ಕೂತ ಬಿಡ್ತಾರ. ಅದರ ಖಬರಿಲ್ಲದ ಒಂದು ತಾಸು ಮಾತಾಡಿ, ಗೊತ್ತಾದ ಮ್ಯಾಲೆ, sorry I was on mute ಅಂತ ಸಮಜಾಯಿಷಿ ಬ್ಯಾರೆ. ಲೇ! ಇನ್ನೊಮ್ಮೆ ಏನರೆ ಹಾಂಗ ಮಾಡಿದಿ ಅಂದ್ರ ನೋಡ್ಕೋ ಮತ್ತ! ಅಷ್ಟ ನೀ. ಮುಂದಿನ ಜುಮ್ಮಾ ನೋಡೋದಿಲ್ಲಲೇ ನೀ! ನೀ ಯಾವದೇ ಮೂಲ್ಯಾಗ ಕೂತು sorry I was on mute ಅಂದು ನೋಡು. ಶುಕ್ರವಾರ ನಿಮ್ಮ ಏರಿಯಾ ಒಳಗ ವರ್ಕಿಂಗ್ ಫ್ರಮ್ ಹೋಂ ಮಾಡೋ ಸುಪಾರಿ ಕಿಲ್ಲರ್ ಮಂದಿಗೇ ವರ್ಕಿಂಗ್ ಫ್ರಾಂ ಹೋಂ ಸುಪಾರಿ ಕೊಟ್ಟು ಬಿಡ್ತೇನಿ. ಖರ್ಬರ್ದಾರ್!

ಈಗ ಕಂಪ್ಯೂಟರ್ ಸ್ಪೀಕರ್ ಬಂದ್ ಮಾಡ್ರೀಪಾ! :) ಹ್ಯಾಪಿ ಫ್ರೈಡೆ!


Tuesday, June 24, 2014

ಉದ್ದುದ್ದ ಅತ್ತಿ, ಅಡ್ಡಡ್ಡ ಸೊಸಿ : ಅತ್ತಿ ಸೊಸಿ ಅಡ್ನಾಡಿ ಕಥಿ

"ಗೋಮತೀ, ಏ ಗೋಮತೀ, ಒಂಚೂರು ಬಾರವಾ ಇಲ್ಲೆ," ಅಂತ ಅತ್ತಿಯವರಾದ ಗೋದಾವರಿ ಬಾಯಿ ತಮ್ಮ ಸೊಸಿಯಾದ ಗೋಮತೀ ಬಾಯಿಯನ್ನು ತಮ್ಮ ಎಂದಿನ ಶಂಖಾ ಹೊಡೆಯುವ ಶೈಲಿಯಲ್ಲಿ ಕರೆದರು.

"ಏನ್ ಒದರ್ತದ ಅಂತೀನಿ ಈ ಮುದುಕಿ. ಒದರಿಕೊಂಡು ಒದರಿಕೊಂಡು ಸಾಯ್ತದ. ಈಗರೆ ಒಂದು ತುತ್ತು ಉಂಡು ಎದ್ದೆನೋ ಇಲ್ಲೋ. ಅಷ್ಟರಾಗ ಸತ್ತವರ ಗತೆ ಹೊಯ್ಕೊಳ್ಳಿಕತ್ತದ. ಸೂಡ್ಲಿ ಮುದ್ಕಿ ತಂದು. ಏನು ಪುಣ್ಯಾ(!) ಮಾಡಿ ಪಡಕೊಂಡು ಬಂದೇನಿ ಇಂಥಾ ಅತ್ತೀನ! ನನ್ನ ಖೊಟ್ಟಿ ನಸೀಬಾ!" ಅಂತ ಹಣಿ ಹಣಿ ತಟ್ಟಿಕೋತ್ತ, ಊಟ ಮಾಡಿ ತೊಳ್ಕೊಂಡ ಒದ್ದಿ ಕೈ ಎಲ್ಲಿ ಒರೆಸಿಕೊಳ್ಳಲಿ ಅಂತ ನೋಡಿಕೋತ್ತ ಸೊಸಿ ಬಂದಳು. ಹಬ್ಬಾ ಅಂತ ರೇಶ್ಮಿ ಸೀರಿ ಬ್ಯಾರೆ ಉಟ್ಟಗೊಂಡು ಬಿಟ್ಟಾಳ ಅಕಿ ಇವತ್ತು. ನಿತ್ಯ ಉಡು ಕಾಟನ್ ಸೀರಿ ಆಗಿದ್ದರ ಆಗಲೇ ಆದಕ್ಕs ಕೈ ಒರೆಸಿ ಆಗಿ ಹೋಗ್ತಿತ್ತು.

"ಏನ್ರೀ?!" ಅಂತ ಬಂದು ನಿಂತ ಗೋಮತೀ ಅತ್ತಿಯವರನ್ನ ಕೇಳಿದಳು. ಒದ್ದಿ ಕೈ ಜೋರಾಗಿ ಝಾಡಿಸಿದಳು. ನೀರು ಹೋಗಲಿ ಅಂತ. ಅದು ಮಳ್ಯಾಗ ತೊಯ್ಕೊಂಡ ಬಂದ ನಾಯಿ ಮೈ ಝಾಡಿಸಿದಂಗ ಅತ್ತಿಗೆ ಕಾಣಿಸ್ತು. ಕೆಟ್ಟ ಇರಿಟೇಟ್ ಆತ ಅವರಿಗೆ.

"ಅಲ್ಲೆ ಬಚ್ಚಲದಾಗ ಚಂದಾಗಿ ಟಾವೆಲ್ ಇಟ್ಟಿರ್ತಾರ. ಅದರಾಗ ಕೈ ಒರೆಸಿಕೊಂಡು ಬರಲಿಕ್ಕೆ ಇಕಿಗೆ ಏನು ಧಾಡಿ?" ಅಂತ ಮನಸ್ಸಿನ್ಯಾಗ ಅಂದುಕೊಂಡರು ಅತ್ತಿಯವರು. ಬಾಯಿ ಬಿಟ್ಟು ಹೇಳಲಿಲ್ಲ.

"ಏನಿಲ್ಲಾ, ಒಂಚೂರು ಗೋಮ್ಯಾ (ಗೋಮಯ) ಹಚ್ಚಿ ಬಿಡವಾ. ಎಲ್ಲಾರದ್ದೂ ಊಟ ಆತು," ಅಂತ 'ಗೋಮಯ' ಹಚ್ಚಲಿಕ್ಕೆ ತಮ್ಮ ಸೊಸಿಗೆ 'ಸುಪಾರಿ' ಕೊಟ್ಟರು ಗೋದಾವರಿ ಬಾಯಿ.

ಗೋಮಯ  ಹಾಕುವದು, ಹಚ್ಚುವದು - ಭಾಳ ಮುಖ್ಯ ಚಟುವಟಿಕೆ. ಊಟಾದ ಮ್ಯಾಲೆ ಹಚ್ಚಲಿಕ್ಕೇ ಬೇಕು. ಇಲ್ಲಂದ್ರ ಎಲ್ಲಾ ಕಡೆ ಮೈಲಿಗಿ ಮೈಲಿಗಿ. ಮುಸುರಿ ಎಲ್ಲ ಹೋಗಿ ಮೊದಲಿನ ಕುಸುರಿ ಬರಬೇಕು ಅಂದ್ರ ಗೋಮಯ ಹಚ್ಚಲಿಕ್ಕೇ ಬೇಕು. ಅದು ಬ್ರಾಹ್ಮರ ಪದ್ಧತಿ. ಸಂಪ್ರದಾಯಸ್ತ ಗೋದಾವರಿ ಬಾಯಿಯವರ ಮನಿಯೊಳಗ ನಿಂತ್ರ, ಕುಂತ್ರ, ಮಲ್ಕೊಂಡ್ರ, ಎದ್ದರ, ಹೋದ್ರ, ಬಂದ್ರ, ಏನು ಮಾಡಿದರೂ ಗೋಮಯ ಹಚ್ಚಿಬಿಟ್ಟರ 'ಬಾರಾ ಖೂನ್ ಮಾಫ್' ಅನ್ನೋಹಾಂಗ ಎಲ್ಲಾ ಓಕೆ. ಗೋಮಯದ ನಂತರ ಚಿಂತೆ ಯಾಕೆ?

"ಈ ನಮ್ಮ ಅಪ್ಪ ಎಲ್ಲಿಂದ ನನಗ ಗೋಮತೀ ಅಂತ ಹುಡುಕಿ ಹುಡುಕಿ ತಂದು ಹೆಸರು ಇಟ್ಟನೋ. ಗೋಮತೀ ಅಂತ ಹೆಸರದ ಅಂತ by default ಬರೇ ನನಗs ಗೋಮಯ ಹಚ್ಚೋ ಕೆಲಸಾ ಹಚ್ಚತಾಳ ನಮ್ಮತ್ತಿ. ನಮ್ಮಪ್ಪಗ ಏನು ತಲಿ ಕೆಟ್ಟಿತ್ತೋ ಏನೋ. ಹೋಗಿ ಹೋಗಿ ಗೋಮತಿ ಅಂತ ಹೆಸರಿಟ್ಟುಬಿಟ್ಟಾನ. ಸೂಡ್ಲಿ ತಂದು," ಅಂತ ಅವರಪ್ಪನ ಬೈಕೊಂಡು ಗೋಮಯ ಹಚ್ಚಲಿಕ್ಕೆ ತಯಾರಾದಳು ಗೋಮತಿ ಬಾಯಿ.

ಸಂಪ್ರದಾಯಸ್ತ ಬ್ರಾಹ್ಮರ ಮನಿಯೊಳಗ ಯಾವಾಗಲೂ ಸಿಗೋ ಖಾಯಂ ಸಾಮಾನುಗಳು ಅಂದ್ರ ಗೋಮೂತ್ರ, ಗೋಮಯ. ಮನ ಶುದ್ಧ ಮಾಡಿಕೊಳ್ಳಲಿಕ್ಕೆ ಗೋಮೂತ್ರ. ಮನಿ ಶುದ್ಧ ಮಾಡಲಿಕ್ಕೆ ಗೋಮಯ.

ಊಟ ಮಾಡಿದ ಎಲಿ ಎತ್ತಿ ಆಗಿತ್ತು. ಗೋಮತಿ ಬಾಯಿ ಗೋಮಯ ಹಾಕಿ, ನೀರು ಗೊಜ್ಜಿ, ಸೀರಿ ಸೊಂಟಕ್ಕ ಎತ್ತಿ ಕಟ್ಟಿಕೊಂಡು, ಒಂದು ಪ್ಲಾಸ್ಟಿಕ್ ಕಾರ್ಡ್ ತೊಗೊಂಡು, ಅದರಿಂದ ಗೋಮಯವನ್ನು ಎಲ್ಲಾ ಕಡೆ ಹರಡಿ, 'ಸರ್ವಂ ಗೋಮಯಂ' ಮಾಡಿ, ಗೋಮಯ ಹಾಕೋ ಪುಣ್ಯದ ಕೆಲಸಕ್ಕೆ ರೆಡಿ ಆದಳು. ಗಂಡನ ಹಳೆ ಕ್ರೆಡಿಟ್ ಕಾರ್ಡ್ ಗೋಮಯ ಹಾಕಲಿಕ್ಕೆ ಬೆಸ್ಟ್ ಆಗ್ತದ ಅಂತ ಹೇಳಿ ತೆಗೆದು ಇಟ್ಟುಕೊಂಡಾಳ ಅಕಿ. ಕ್ರೆಡಿಟ್ ಕಾರ್ಡಿನ ಎರಡು ದೊಡ್ಡ ಉಪಯೋಗ ಅಂದ್ರ ಒಂದು ದ್ವಾಶಿ ಮಾಡಲಿಕ್ಕೆ ಮತ್ತ ಗೋಮಯ ಹಾಕಲಿಕ್ಕೆ. ಪಿಜ್ಜಾ ಮ್ಯಾಲೆ ಟೊಮೇಟೊ ಸಾಸ್ ಸವರಲಿಕ್ಕೂ ಬೆಷ್ಟ್ ನೋಡ್ರೀ. ಎಲ್ಲೆ ಏನೇ ಸವರೋ ಕೆಲಸಿದ್ದರೂ ಒಂದು ಹಳೆ ಕ್ರೆಡಿಟ್ ಕಾರ್ಡ್ ಇದ್ದು ಬಿಟ್ಟರ ಬೆಷ್ಟ್. ಕ್ರೆಡಿಟ್ ಕಾರ್ಡ್ ಒಂದೇ ಅಲ್ಲ, ಡೆಬಿಟ್ ಕಾರ್ಡ್ ಸಹ ಓಕೆ. ಲ್ಯಾಮಿನೇಟೆಡ್ ಕಾರ್ಡ್ ಇದ್ದರ ಆತು ನೋಡ್ರೀ. ಮಸ್ತ ಸೂಟ್ ಆಗ್ತದ ಗೋಮಯದ ಕೆಲಸಕ್ಕ.

ಗೋಮತಿ ಬಾಯಿ ತನ್ನ ತವರು ಮನಿಯೊಳಗ ಹ್ಯಾಂಗ ಗೋಮಯ ಹಚ್ಚಲಿಕ್ಕೆ ಕಲ್ತಿದ್ದಳೋ ಅದರ ಪ್ರಕಾರ ಗೋಮಯ ಹಚ್ಚಲಿಕ್ಕೆ ಶುರು ಮಾಡಿದಳು.

"ಗೋಮತೀ!!!!" ಅಂತ ಅತ್ತಿ ಗೋದಾವರಿ ಬಾಯಾರು ಮತ್ತ ಸೈರೆನ್ ಮೊಳಗಿಸಿದರು.

"ಏನ್ರೀ!!?" ಅನ್ನೋಹಾಂಗ ತಲಿ ತಿರುಗಿಸಿ ನೋಡಿದಳು ಗೋಮತಿ.

"ಹ್ಯಾಂಗ ಗೋಮಯ ಹಚ್ಚಲಿಕತ್ತೀ ಮಾರಾಳಾ? ಹಾಂ? ಏನಾಗ್ಯದ ನಿನಗ ಅಂತೇನಿ? ಹಾಂ?" ಅಂತ ಒಂದು ತರಹದ ಆಕ್ಷೇಪಿಸುವ ದನಿಯೊಳಗ ಹೇಳಿದರು ಅತ್ತಿ ಗೋದಾವರಿ ಬಾಯಿ.

ಸರ್ರ್ ಅಂತ ಸಿಟ್ಟು ಬಂತು ಗೋಮತಿ ಬಾಯಿಗೆ. ಅಲ್ಲೆ ಬಿದ್ದಿದ್ದ ಗೋಮಯವನ್ನು ಉಂಡಿ ಕಟ್ಟಿ, ಅತ್ತಿ ಮಸಡಿಗೆ ಗುರಿ ಇಟ್ಟು, ಮಿಸ್ ಆಗದಂಗ ಒಗೆದು ಬಿಡುವಷ್ಟು ಸಿಟ್ಟು ಬಂತು. ಆದರೂ ದೀರ್ಘ ಉಸಿರಾಟ ಮಾಡಿ, ಬಾಬಾ ರಾಮದೇವರನ್ನು ನೆನಪ ಮಾಡಿಕೊಂಡು, ಸಿಟ್ಟು ಇಳಿಸಿಕೊಂಡಳು ಗೋಮತಿ.

"ಏನಾತ್ರೀ? ಹಚ್ಚಲಿಕತ್ತೀನಲ್ಲಾ ಗೋಮಯ? ಇನ್ನೆಂಗ ಹಚ್ಚ ಬೇಕ್ರೀ? ಅದನ್ನೂ ಹೇಳಿ ಬಿಡ್ರೀ. ಅಥವಾ ತೋರಿಸಿಯೇ ಕೊಟ್ಟ ಬಿಡ್ರಲ್ಲಾ?" ಅಂತ ವಾಪಸ್ ಪ್ರಶ್ನೆ ಒಗೆದಳು ಗೋಮತಿ ಬಾಯಿ.

ಹೊಸದಾಗಿ ಲಗ್ನಾ ಮಾಡಿಕೊಂಡು ಬಂದಾಳ. ಇನ್ನೂ ಅತ್ತಿ ಮನಿ ಎಲ್ಲಾ ಪದ್ಧತಿ ಕಲ್ತಿಲ್ಲ ಅಂತ ಕಾಣಸ್ತದ.

ಅತ್ತಿಯವರು ಅವರ ಮನಿ ಪದ್ಧತಿ ಪ್ರಕಾರ ಗೋಮಯ ಹಚ್ಚೋದನ್ನ ಹ್ಯಾಂಗ ಅಂತ ತೋರಿಸಿಕೊಟ್ಟು ಬಿಡ್ತಿದ್ದರೋ ಏನೋ. ಆದರ ಏನು ಮಾಡೋದು ಅವರಿಗೆ ಎಲ್ಲ ಕಡೆ rheumatic pain. ಅದಕ್ಕ ಅವರಿಗೆ ಅವೆಲ್ಲ ಬಗ್ಗಿ, ಮಾಡಿ, ತೋರಿಸಲಿಕ್ಕೆ ಆಗೋದಿಲ್ಲ. ಓಣಿ ತುಂಬಾ, "ನನಗ ಭಾಳ romantic pain ನೋಡ್ರೀ! ಭಾಳ ತ್ರಾಸು ಕೊಡ್ತದ. ಕೂತ್ರ ಕೂಡಲಿಕ್ಕೆ ಕೊಡೋದಿಲ್ಲ. ನಿಂತ್ರ ನಿಂದ್ರಲಿಕ್ಕೆ ಕೊಡೋದಿಲ್ಲ. ಸಾಕಾಗಿ ಹೋಗ್ಯದ ಈ ರೋಮ್ಯಾಂಟಿಕ್ ಪೇನಿನಿಂದ," ಅಂತ ಹುಚ್ಚುಚ್ಚರೆ ಇಂಗ್ಲಿಷ್ ಮಾತಾಡಲಿಕ್ಕೆ ಮಾತ್ರ ಬರ್ತದ ಗೋದಾವರಿ ಬಾಯಾರಿಗೆ. rheumatic pain ಅನ್ನೋದಕ್ಕ ರೋಮ್ಯಾಂಟಿಕ್ ಪೇನ್ ಅನ್ಕೋತ್ತ ಅಡ್ಯಾಡ್ತಾರ.

"ಗೋಮತೀ! ಗೋಮಯ ಹಾಂಗ ಅಡ್ಡಡ್ಡ ಹಚ್ಚಬಾರದವಾ. ಹೀಂಗ ಹೀಂಗ.... ಉದ್ದುದ್ದ ಉದ್ದುದ್ದ ಹಚ್ಚಬೇಕು. ತಿಳೀತಾ? ಉದ್ದುದ್ದ ಉದ್ದುದ್ದ. ಸೀದಾ ಸೀದಾ ಗೆರಿ ಹೊಡೆದಂಗ ಹಚ್ಚವಾ. ಉದ್ದುದ್ದ ಉದ್ದುದ್ದ....." ಅಂತ ಗೋಮಯ ಹ್ಯಾಂಗ ಹಚ್ಚಬೇಕು ಅನ್ನೋದರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟರು. ಆಕ್ಷನ್ ಮಾಡಿ ತೋರಿಸಿದರು.

ಗೋಮತಿ, "ಹಾಂ!" ಅಂದುಕೊಂಡಳು. "ಏನಪಾ ಇದು ವಿಚಿತ್ರ? ಗೋಮಯನೂ ಅಡ್ಡ ಉದ್ದ ಅಂತ ಹಚ್ಚತಾರ ಏನು?" ಅಂತ ಅಕಿಗೆ ಜಿಜ್ಞಾಸೆ. ಗೊತ್ತಿರಲಿಲ್ಲ. ಇನ್ನೂ 'ಸಣ್ಣ' ಹುಡುಗಿ ಅದು.

"ಉದ್ದುದ್ದ ಹಚ್ಚಬೇಕ್ರೀ? ಯಾಕ್ರೀ?" ಅಂತ ಕೇಳಿದಳು.

"ಗೊತ್ತಿಲ್ಲ ನಿನಗ!? ಹಾಂ!? ನಾವು ವೈಷ್ಣವ ಬ್ರಾಹ್ಮಂಡರು. ನಾವು ಎಲ್ಲ ಉದ್ದುದ್ದ ಹಚ್ಚವರು. ಹಣಿ ಮ್ಯಾಲೆ ಊದ್ದನೇ ನಾಮ ಉದ್ದಕ ಹಚ್ಚಿಗೊಳ್ಳೋದು. ಕಾಯಿಪಲ್ಲೆ ಹೆಚ್ಚೋದು ಉದ್ದುದ್ದ. ಅರವಿಗೆ ಸಬಕಾರ ಹಚ್ಚಿ ತಿಕ್ಕೋದು, ಅದೂ ಉದ್ದುದ್ದ. ಬಚ್ಚಲಾ, ಪಾಯಖಾನಿ ತಿಕ್ಕೋದು, ಅದೂ ಉದ್ದುದ್ದ. ಎಲ್ಲಿ ತನಕಾ ಅಂದ್ರ ನಿನ್ನ ಗಂಡ, ನಿನ್ನ ಮೈದುನಂದ್ರು ಬೂಟಿಗೆ ಪಾಲಿಶ್ ಸಹಿತ ಉದ್ದುದ್ದ ಉದ್ದುದ್ದ ಹಚ್ಚೇ ಮಾಡ್ತಾರ ನೋಡವಾ. ಒಂದು ನೆನಪಿಡ ಗೋಮತೀ, ನಮ್ಮ ಮನ್ಯಾಗ ಎಲ್ಲಾದನ್ನೂ ಉದ್ದುದ್ದ ಮಾಡಬೇಕು ನೋಡವಾ. ಅದಕs ಗೋಮಯ ಸಹಿತ ಉದ್ದುದ್ದ ಹಚ್ಚಿಬಿಡವಾ. ಎಲ್ಲಾ ಪದ್ಧತಿ ಶೀರ್ ಆಗಿಬಿಡಬೇಕು ನೋಡು. ಅಡ್ಡಡ್ಡ ಹಚ್ಚೋದೆಲ್ಲಾ ನಿಮ್ಮ ತವರು ಮನಿ ಕಡೆ ಮಂದಿ. ಸ್ಮಾರ್ತರು ಎಲ್ಲಾ ಅಡ್ಡಡ್ಡ ಹಚ್ಚತಾರ ನೋಡು. ಹಣಿ ಮ್ಯಾಲಿನ ನಿಂಬಿಹುಳಿ, ಮೈತುಂಬಾ ಬಳ್ಕೊಂಬೋ ಆ ಭಸ್ಮಾ, ಮತ್ತೊಂದು  ಎಲ್ಲಾ ಅಡ್ಡಡ್ಡ. ಆದ್ರ ನಾವು ವೈಷ್ಣವರು. ಅದಕs ಎಲ್ಲಾ ಉದ್ದುದ್ದ. ಎಲ್ಲಾ ಉದ್ದುದ್ದ.... ಉದ್ದುದ್ದ.... ತಿಳಿತೇನವಾ?" ಅಂತ ಹೇಳಿದರು. ಭಾಳ ಉದ್ದುದ್ದ ಆಗೇ ಹೇಳಿಬಿಟ್ಟರು.

"ಸ್ಮಾರ್ತರ ಮನಿ ಅಡ್ನಾಡಿ ಹುಡುಗಿ. ಆ ಸ್ಮಾರ್ತ ಮಂದಿನೇ ಪಕ್ಕಾ ಅಡ್ನಾಡಿ ಮಂದಿ. ತಾವು ಹ್ಯಾಂಗ ಅಡ್ನಾಡಿ ಇದ್ದಾರೋ ಹಾಂಗ ಎಲ್ಲಾದನ್ನೂ ಅಡ್ಡಡ್ಡ ಅಡ್ಡಡ್ಡ ಹಚ್ಚತಾರ. ಅಡ್ನಾಡಿ ಇದ್ದಿದ್ದಕ್ಕ ಅಡ್ಡಡ್ಡ ಹಚ್ಚತಾರೋ ಅಥವಾ ಅಡ್ಡಡ್ಡ ಹಚ್ಚಿ ಹಚ್ಚಿ ಹಾಂಗ ಅಡ್ನಾಡಿ ಆಗಿ ಕೂತಾವೋ, ದೇವರಿಗೇ ಗೊತ್ತು. ಇಲ್ಲಾ ಅವರ ಪರಮ ದೊಡ್ಡ ಅಡ್ನಾಡಿ ಶಂಕ್ರಾಚಾರ್ರಿಗೆ ಗೊತ್ತು. ಎಲ್ಲಿಂದ ಬಂದು ಗಂಟು ಬಿದ್ದದ ನನಗ ಈ ಪೀಡಾದಂತಾ ಹುಡುಗಿ? ಹುಚ್ಚಿ ಅಡ್ಡಡ್ಡ ಹಚ್ಚಲಿಕತ್ತದ ಗೋಮಯ. ಏನ್ ಕಲಿಸ್ಯಾಳೋ ಏನೋ ಇವರವ್ವಾ!?" ಅಂತ ಮನಸ್ಸಿನ್ಯಾಗೆ ಅಡ್ಡ ನಾಮ, ಅಡ್ಡಡ್ಡ ಭಸ್ಮ ಧರಿಸುವ ಅಡ್ನಾಡಿ ಸ್ಮಾರ್ತರನ್ನ ಬೈಕೊಂಡರು. ಸೈಲೆಂಟ್ ಆಗೇ ಬೈಕೊಂಡರು.

ಗೋಮತಿ ತಲಿ ತಲಿ ಚಚ್ಚಿಕೊಂಡಳು. "ಏನು ಹಾಪ್ ಮಂದಿ ಇದ್ದಾರಪಾ ಇವರು?" ಅಂತ ಅಂದುಕೊಂಡಳು. ಅಕಿ ಸ್ಮಾರ್ತ ಬ್ರಾಹ್ಮಣರ ಪೈಕಿ ಹುಡುಗಿ. ವೈಷ್ಣವರ ಮನಿಗೆ ಸೊಸಿ ಅಂತ ಬಂದಾಳ. ಅದು ಡೆಡ್ಲಿ ಕಾಂಬಿನೇಶನ್.

"ಎಲ್ಲಾ ಉದ್ದುದ್ದ ಹಚ್ಚಬೇಕಾ? ನಿಮ್ಮನಿಯಾಗ ಎಲ್ಲಾ ಉದ್ದುದ್ದ ಏನ್ರೀ? ನೋಡೋಣ ನೋಡೋಣ," ಅಂತ ಮನಸ್ಸಿನ್ಯಾಗ ಅಂದುಕೊಂಡಳು ಗೋಮತಿ. ಅಕಿ ಪಾಪ ಒಳ್ಳೆ ಹುಡುಗಿ. ಜಗಳಾ ಗಿಗಳಾ ಮಾಡಂಗಿಲ್ಲ ಅಕಿ. ಶಾಣ್ಯಾ ಇದ್ದಾಳ. ಏನೂ ಹೆಚ್ಚಗಿ ಮಾತಾಡದೇ ಗೋಮಯ ಹಚ್ಚೋ ಶಾಸ್ತ್ರ ಮುಗಿಸಿ, ಎಲಿ ಅಡಕಿ ಹಾಕಿಕೊಂಡು, ಹಾಂಗ ಸ್ವಲ್ಪ ಲೈಟ್ ಆಗಿ ರೆಸ್ಟ್ ಮಾಡೋಣ ಅಂತ ಹೇಳಿ ಅಡ್ಡಾದಳು. ಅತ್ತಿಗೆ ಕೇಳಬೇಕು ಅಂತ ಅನ್ನಿಸ್ತು. "ನೀವು ವೈಷ್ಣವರು ಮಲ್ಕೋ ಬೇಕು ಅಂದ್ರ ಅಡ್ಡಾಗ್ತೀರೋ? ಅಥವಾ ಉದ್ದಾಗ್ತೀರೋ?" ಅಂತ. ನೋಡಲಿಕ್ಕೆ ಹೋದರ ಅತ್ತಿ ಗೋದಾವರಿ ಬಾಯಾರು ಸಹಿತ ಅಡ್ಡಾಗಿ, ಗೊರಾ ಗೊರಾ ಅಂತ ಬಾಯಿ ಬಿಟ್ಟಗೊಂಡು ಗೊರಕೀ ಹೊಡಿಲಿಕತ್ತು ಬಿಟ್ಟಿದ್ದರು. ಬ್ರಾಹ್ಮಂಡರ ಭರ್ಜರೀ ಊಟದ ನಂತರ ಗೊರಕಿ ಬ್ರಹ್ಮರಂಧ್ರದಿಂದಲೇ ಹೊರಹೊಮ್ಮತದೋ ಅನ್ನೋಹಾಂಗ ಕೆಲವು ಮಂದಿ ಗೊರಕೀ ಹೊಡಿತಾರ. ಗೋದಾವರಿ ಬಾಯಿ ಸಹಿತ ಅದೇ ರೀತಿಯಲ್ಲಿ, ಮಾರಿ ಮ್ಯಾಲೆ ಸೀರಿ ಸೆರಗು ಮುಸುಕು ಹಾಕಿಕೊಂಡು ಗೊರಕಿ ಹೊಡಿಲಿಕತ್ತಿದ್ದರು. ಬ್ಯಾಸಿಗಿ ಟೈಮ್ ಬ್ಯಾರೆ. ಕಂಡಲ್ಲೆ ಬಂದು ಕೂಡೋ ನೊಣ ಬ್ಯಾರೆ. ಅದಕs ಮಾರಿ ಮ್ಯಾಲೆ ಬುರ್ಕಾದ ಗತೆ ಸೆರಗು ಮುಚ್ಚಿಕೊಂಡಿದ್ದರು. ಗೋಮತಿನೂ, "ಸೂಡ್ಲಿ ನೊಣ. ಒಂದು ಘಳಿಗಿ ಅಡ್ಡ ಆಗಲಿಕ್ಕೆ ಬಿಡೋದಿಲ್ಲ," ಅಂತ ಅಕಿನೂ ಸೆರಗನ್ನು ಬುರ್ಕಾ ಮಾಡಿಕೊಂಡು ಮಲಗಿದಳು.

ಮರುದಿನ ಮುಂಜಾನೆ. "ಎದ್ದೇಳು ಮಂಜುನಾಥಾ. ಏಳು ಬೆಳಗಾಯಿತು," ಅನ್ನೋ ರಾಯರ ಮಠದ ಲೌಡ್ ಸ್ಪೀಕರಿನಿಂದ ಹೊರಹೊಮ್ಮುತ್ತಿದ್ದ ಸುಪ್ರಭಾತಕ್ಕೆ ಗೋಮತಿ ಎದ್ದಳು. ಎದ್ದು ಹಿತ್ತಲ ಕಡೆ ಬಂದಳು. ಬರೋವಾಗ ಬಚ್ಚಲದಿಂದ  ಹಲ್ಲು ತಿಕ್ಕೋ ಬ್ರಶ್, ಅದರ ಮ್ಯಾಲೆ ಒಂದಿಷ್ಟು ಪೇಸ್ಟ್ ಹಚ್ಚಿಕೊಂಡೇ ಬಂದಿದ್ದಳು.

ಹಿತ್ತಲದಾಗ ಅತ್ತಿ ಗೋದಾವರಿ ಬಾಯಿ ಆಗಲೇ ತಮ್ಮ ಹಲ್ಲು ತಿಕ್ಕುವ ಕಾರ್ಯಕ್ರಮ ನಡೆಸುತ್ತಿದ್ದರು.

ಆತ್ತಿ ಗೋದಾವರಿ ಬಾಯಾರು ಹ್ಯಾಂಗ ಹಲ್ಲು ತಿಕ್ಕಲಿಕತ್ತಿದ್ದರು?

ಹಲ್ಲು ಮತ್ತ ಹ್ಯಾಂಗ ತಿಕ್ಕತ್ತಾರ್ರೀ? ಬ್ರಷ್ 'ಅಡ್ಡ' ಹಿಡಕೊಂಡು, 'ಅಡ್ಡಡ್ಡ' ತಿಕ್ಕತಾರ. ಮತ್ತ ಬೇರೆ ತರಹ ಹಲ್ಲು ತಿಕ್ಕವರನ್ನ ಎಲ್ಲರೆ ನೋಡಿರೇನು?

ಗೋಮತಿಗೆ ಏನೋ ಫ್ಲಾಶ್ ಆತು. "ತಡಿ ಅತ್ತಿಯವರಿಗೆ ಒಂದು ಇಡ್ತೇನಿ. ಒಂದು ಭಯಂಕರ  ಬತ್ತಿ," ಅಂತ ತಯಾರ ಆದಳು.

"ಗುಡ್ ಮಾರ್ನಿಂಗ್," ಅಂದು ಬಿಟ್ಟಳು.

ಅತ್ತಿಯವರಿಗೆ ವಿಚಿತ್ರ ಅನ್ನಿಸ್ತು. ಎಂದೂ ಗುಡ್ ಮಾರ್ನಿಂಗ್ ಅದೂ ಇದೂ ಅನ್ನದೇ, ಸುಮ್ಮ ಬಂದು, ತನ್ನ ಪಾಡಿಗೆ ತಾನು ಹಲ್ಲು ತಿಕ್ಕಿ, ಮಾರಿ ತೊಳಕೊಂಡು ಹೋಗೋ ಸೊಸಿ ಇವತ್ಯಾಕ ಗುಡ್ ಮಾರ್ನಿಂಗ್ ಅನ್ನಲಿಕತ್ತಾಳ ಅಂತ. ಅವರು ಒಮ್ಮೆ ಹಲ್ಲು ತಿಕ್ಕಲಿಕ್ಕೆ ಶುರು ಮಾಡಿದ್ರ ನಡು ಪೇಸ್ಟ್ ಉಗಳೋದಿಲ್ಲ. ಎಲ್ಲ ಕೊನಿಗೇ ಉಗುಳಿ, ಬಾಯಿ ಮುಕ್ಕಳಿಸಿ ಬಂದು ಬಿಡ್ತಾರ. ಇವತ್ತು ಸೊಸಿ ಜೋಡಿ ಮಾತಾಡಬೇಕು ಅಂತ ಪೇಸ್ಟ್ ಉಗುಳಿ, ಬಾಯಿ ಸುತ್ತಾ ಪೇಸ್ಟಿನ ನೊರಿ ನೊರಿ ಮಾಡಿಕೊಂಡು, ಬಿಳೆ ಡ್ರಾಕುಲಾ ಗತೆ ಅವತಾರ ಮಾಡಿಕೊಂಡು ನಿಂತು ಬಿಟ್ಟರು.

"ಏನವಾ ಗೋಮತೀ? ಹ್ಯಾಂಗಿದ್ದೀ?" ಅಂತ ಸಹಜ ಕೇಳಿದರು. ಬಾಯಾಗ ಪೇಸ್ಟ್ ಇದ್ದಿದ್ದಕ್ಕ ಸ್ವಲ್ಪ ಗೊಜಾ ಗೊಜಾ ಅಂತ ಎಕ್ಸಟ್ರಾ ಸೌಂಡ್ ಬಂತು.

"ಒಂದು ಡೌಟ್ ಬಂದದರೀ," ಅಂತ ಹೇಳಿ ಗೋಮತೀ ಮಾತು ನಿಲ್ಲಿಸಿದಳು.

"ಡೌಟ? ಏನವಾ ಅಂಥಾದ್ದು? ಅದೂ ಇಷ್ಟ ಮುಂಜಾನೆ ಮುಂಜಾನೆ. ಏನರ ವಿಶೇಷ ಅದ ಏನು? ಏನರೆ ಒಳ್ಳೆ ಸುದ್ದಿ ಅದ ಏನವಾ?" ಅಂತ ಕೇಳಿ ಬಿಟ್ಟರು ಗೋದಾವರಿ ಬಾಯಿ.

"ಥತ್ ಇವರ! ಇವರಿಗೆ ಬರೇ ಅದs ತಲ್ಯಾಗ. ಯಾವಾಗ ಅಜ್ಜಿ ಆಗ್ತೇನಿ ಅಂತ. ಹುಚ್ಚ ಮುದುಕಿ," ಅಂತ ಮನಸ್ಸಿನ್ಯಾಗ ಅಂದುಕೊಂಡಳು ಗೋಮತಿ.

"ಅಲ್ಲಾ ನಿನ್ನೆ ಹೇಳಿದಿರಿ. ನಾವು ವೈಷ್ಣವರು. ಉದ್ದ ನಾಮದವರು. ಎಲ್ಲಾ ಉದ್ದುದ್ದ ಮಾಡ್ತೇವಿ. ಎಲ್ಲಾದನ್ನೂ ಉದ್ದುದ್ದ ಮಾಡಬೇಕು ಅಂತ. ಹೌದಲ್ಲರೀ?" ಅಂತ ಕೇಳಿದಳು ಗೋಮತೀ. ಖಾತ್ರಿ ಮಾಡಿಕೊಳ್ಳೋ ಹಾಂಗ.

"ಹೌದವಾ! ಬರೋಬ್ಬರಿ ಅದ. ಎಲ್ಲಾ ಉದ್ದುದ್ದ. ಎಲ್ಲಾ ಉದ್ದುದ್ದ. ಅದು ನಮ್ಮ ಪದ್ಧತಿ ಏನವಾ. ಅದಕ್ಕೇನೀಗ?" ಅಂತ ಅಂದ ಗೋದಾವರಿ ಬಾಯಾರು, "ಏನು? ಇದರಾಗ ಏನು ಡೌಟ್ ಬಂತು?!" ಅನ್ನೋ ಲುಕ್ ಕೊಟ್ಟರು.

"ಹಾಂಗಿದ್ದರ ನೀವು ಹಲ್ಲು ಅಡ್ಡಡ್ಡ ಯಾಕ ತಿಕ್ಕಲಿಕತ್ತೀರಿ!!? ಹಾಂ? ಬ್ರಷ್ ಉದ್ದುದ್ದ ಹಿಡಕೊಂಡು, ಹಲ್ಲು ಸಹಿತ ಉದ್ದುದ್ದ ತಿಕ್ಕರಿ. ಬಚ್ಚಲಾ, ಸಂಡಾಸ್ ಸಹಿತ ಉದ್ದುದ್ದ ತಿಕ್ಕಿಸಿ, ತಿಕ್ಕಿಸಿ ಸ್ವಚ್ಚ ಮಾಡಿಸವರು ನೀವು. ಈಗ ಹಲ್ಲು ಅದೆಂಗ ಅಡ್ಡಡ್ಡ ತಿಕ್ಕತೀರಿ ಅಂತ? ಹಾಂ?" ಅಂತ ಸೊಸಿ ಬತ್ತಿ ಇಟ್ಟೇ ಬಿಟ್ಟಳು.

"ಏನಂದೀ!!!??" ಅಂತ ಕೆರಳಿದ ಸಿಂಹಿಣಿ ಹಾಂಗ ಗೋದಾವರಿ ಬಾಯಿ ಹೂಂಕರಿಸಿದರು.

"ಅಯ್ಯ! ಸಿಟ್ಟ್ಯಾಕ್ರೀ? ಡೌಟ್ ಬಂತ ನೋಡ್ರೀ. ಅದಕ್ಕs ಕೇಳಿದೆ. ಏನು ತಪ್ಪ ಮಾಡಿದೆ? ಎಲ್ಲಾ ಉದ್ದುದ್ದ, ಎಲ್ಲಾ ಉದ್ದುದ್ದ, ನಾಮದಿಂದ ಹಿಡಿದು ಎಲ್ಲ ಕಾಮ್ ವರೆಗೆ ಎಲ್ಲ ಉದ್ದುದ್ದ ಅಂದಿದ್ದರಿ ನೋಡ್ರೀ. ಅದಕs ಕೇಳಿದೆ," ಅಂತ ಅಮಾಯಕಳಾಗಿ ಹೇಳಿದಳು ಗೋಮತಿ.

"ನಿನಗ! ನಿನಗ! ಮೈಯ್ಯಾಗಿನ ಸೊಕ್ಕು ಹೆಚ್ಚಾಗ್ಯದ ಅಂತ ಅನ್ನಿಸ್ತದ. ಹುಚ್ಚುಚ್ಚರೆ ಮಾತಾಡ್ಲೀಕತ್ತಿ. ಸೊಕ್ಕೆನ? ಹಾಂ? ಏನಂತ ತಿಳ್ಕೊಂಡೀ? ಹಾಂ? ತಡಿ ನಿನಗ ಮಾಡಸ್ತೇನಿ," ಅಂತ ಗುಟುರು ಹಾಕುತ್ತ ಗೋದಾವರಿ ಬಾಯಿ, "ಏ! ಬಿಂದ್ಯಾ! ಏ ಬಿಂದ್ಯಾ! ಎಲ್ಲೆ ಹೋಗಿ ಸತ್ತಿಯೋ? ರಂಡ ಮುಂಡೆ ಗಂಡ. ಇಲ್ಲೆ ಬಾ ಸ್ವಲ್ಪ. ನಿನ್ನ ಹೇಣ್ತೀ ಏನಂತ ತಲಿಯೆಲ್ಲ ಮಾತಾಡ್ಲಿಕತ್ತಾಳ ಅಂತ ಹೇಳತೇನಿ. ಏ! ಬಿಂದ್ಯಾ!" ಅಂತ ತಮ್ಮ ಮಗ ಉರ್ಫ್ ಗೋಮತಿ ಗಂಡ ಬಿಂದ್ಯಾನ ಕರೆದರು. ಬಿಂದ್ಯಾ ಉರ್ಫ್ ಬಿಂದು ಮಾಧವ. ಅವನ ತಮ್ಮ ಸರಳರೇಖೆ ಮಾಧವ. ಅವನ ಕೆಳಗಿನವ ಶಂಕು ಮಾಧವ. ಕೊನೇದವ ತ್ರಿಕೋಣ ಮಾಧವ. ಫುಲ್ ಜಾಮಿಟ್ರಿ ಆಚಾರ್ ಮಂದಿ.

"ಏ! ಅವ್ವಾ! ಈಗ ಏಕ್ದಂ ಬರಲಿಕ್ಕೆ ಆಗಂಗಿಲ್ಲ. ಪಾಳಿ ಬಿಟ್ಟು ಬಂದರ ಸಂಡಾಸದ ಪಾಳಿ ತಪ್ಪಿ ಹೋಗ್ತದ. ಕೆಲಸಾ ಮುಗಿಸಿ ಆಮೇಲೆ ಬರ್ತೇನಿ," ಅಂತ ಅಂದು, "ಸಮುದಾಯ ಸಂಡಾಸದ ಪಾಳಿ ಯಾವಾಗ ಬರ್ತದಪಾ? ವತ್ರ ಬ್ಯಾರೆ ಭಾಳ ಆಗ್ಯದ," ಅಂತ ಬಿಂದ್ಯಾ ಸಂಕಟ ಪಟ್ಟಗೋತ್ತ, ನಾಲ್ಕಾರು ಕಪ್ಪಿ ನುಂಗಿ ಉದ್ದುದ್ದ ಮಲ್ಕೊಂಡ ಹಾವಿನ ಗತೆ  ಉದ್ದ ಬೆಳೆದು ಬಿಟ್ಟಿದ್ದ ಸಂಡಾಸ್ ಪಾಳಿ ಲೈನ್ ಒಳಗ ಚಡಪಡಿಸುತ್ತ ನಿಂತಿದ್ದ. ನಿಂತೇ ಇದ್ದ. ಅವ್ವ ಕರೆದಳು ಅಂತ ಹೋಗಲೇ ಇಲ್ಲ.

ಅಕಿ ಗಂಡಂತೂ ಬರಂಗಿಲ್ಲ ಅಂತ ಗೊತ್ತಾದ ಮ್ಯಾಲೆ ಸೊಸಿ ಗೋಮತಿ ಡಿಮಾಂಡ್ ಇನ್ನೂ ಜೋರ ಆತು.

"ಏನ್ರೀ ಅತ್ತಿಯವರ? ಹಾಂ? ಏನ ಹಚ್ಚೀರಿ? ಆಟಾ ಅಂತ ತಿಳಕೊಂಡೀರಿ ಏನ? ಹಾಂ? ಎಲ್ಲಾ ಉದ್ದುದ್ದs ಮಾಡಬೇಕು ಅನಕೋತ್ತ. ಹಾಂ? ಈಗ ಹಲ್ಲು ತಿಕ್ಕರಲ್ಲಾ, ಉದ್ದುದ್ದ ನೋಡೋಣ? ಆನಿ ದಂತ ಇದ್ದಂಗ ಅವ ನಿಮ್ಮ ಕ್ವಾರಿ ಹಲ್ಲು. ಉದ್ದುದ್ದ ತಿಕ್ಕಲಿಕ್ಕೆ ಬರೋಬ್ಬರಿ ಆಗ್ತದ. ತಿಕ್ಕರೀ. ಅಥವಾ ಉದ್ದ ತಿಕ್ಕಲಿಕ್ಕೆ ಯಾರನ್ನಾರ ಕರ್ಕೊಂಡು ಬಂದು ಇಟ್ಟಗೊಳ್ಳರೀ. ಅಷ್ಟ ಅವರು ವೈಷ್ಣವರು ಹೌದೋ ಅಲ್ಲ ಅಂತ ಮೊದಲೇ ಕೇಳಿಕೊಳ್ಳರೀ. ಈ ಮನಿಗೆ ಬಂದಾಗಿಂದ ನೋಡಲೀಕತ್ತೇನಿ. ಬರೇ ಇದs ಆತು. ನಾವು ವೈಷ್ಣವರು, ನಾವು ಎಲ್ಲಾ ಉದ್ದುದ್ದ. ನೀವು ಸ್ಮಾರ್ತರು ಎಲ್ಲಾ ಅಡ್ಡಡ್ಡ ಅನಕೋತ್ತ. ಹೋಗ್ಗಾ ನಿಮ್ಮ," ಅಂತ ಹಚ್ಚಿದವಲಕ್ಕಿ ಹಚ್ಚಿದಂಗ ಹಚ್ಚಿ ಅತ್ತೀನ ಕೈತೊಗೊಂಡು ಬಿಟ್ಟಳು ಸೊಸಿ.

ಅತ್ತಿ ಗೋದಾವರಿ ಬಾಯಿ, "ಹಾಂ" ಅಂತ ಬಿಟ್ಟ ಬಾಯಿ ಬಂದ್ ಮಾಡದೇ ನಿಂತಿದ್ದಳು. ನೊರಿ ನೊರಿ ಪೇಸ್ಟ್ ಹಾಂಗೆ ಬಾಯಿಂದ ಕಟಬಾಯಿಗೆ ಇಳಿದು, ಕಟಬಾಯಿಂದ ಇನ್ನೂ ಕೆಳಗ ಇಳಿದು, ಕುತ್ಗಿ ಮ್ಯಾಲೆ ಬಂದು, ನೊರಿ ನೊರಿ ಪೇಸ್ಟ್ ತಂಪತಂಪಾಗಿ, ಗುಳು ಗುಳು ಅಂದ ಮ್ಯಾಲೇ ಅತ್ತಿಯವರಿಗೆ ಖಬರ್ ಬಂತು. ಖಬರ್ ಏನೋ ಬಂತು ಆದರ ಸೊಸಿ ಮಾತ್ರ ಕೈತಪ್ಪಿ ಹೋಗ್ಯಾಳ ಅಂತ ಖಾತ್ರಿ ಆತು.

ಮುಂದ ಸ್ವಲ್ಪ ದಿವಸದಾಗ ಮಗಾ, ಸೊಸಿ ಬ್ಯಾರೆ ಮನಿ ಮಾಡಿದರಂತ. ಈಗ ಬಿಂದ್ಯಾ ಉದ್ದುದ್ದ ನಾಮಾ, ಅಡ್ಡಡ್ಡ ಹೆಂಡತಿ ಹಾಕಿದ ಮತ್ತ ಏನೇನೋ ಹಾಕ್ಕೊಂಡು ಒಂಥರಾ ಹೈಬ್ರಿಡ್ ಆಗಿ ಬಿಟ್ಟಾನ. "ಆವಾ ಬಂದ್ರ ಮಠದಾಗ ಕಾಲಿಡಲಿಕ್ಕೆ ಬಿಡಬ್ಯಾಡ್ರೀ! ಬಿಟ್ಟರ ನೋಡ್ರೀ ಮತ್ತ!" ಅಂತ ಅತ್ತಿಯವರಾದ ಗೋದಾವರಿ ಬಾಯಿಯವರು ಮಠದ ಆಚಾರ್ರಿಗೆ ಕಟ್ಟಾಜ್ಞೆ ಮಾಡಿಬಿಟ್ಟಾರ. ಪಾಪ ಬಿಂದ್ಯಾ! ಆರಾಧನಿ ಊಟ ಅಂದ್ರ ಸಾಯ್ತಿದ್ದಾ ಆವಾ. ಅದಕ್ಕೇ ಈಗ ಕಲ್ಲು ಬಿದ್ದು ಬಿಟ್ಟಿದೆ. ಪಾಪ!

(ಧಾರವಾಡದ ಆಚಾರರೊಬ್ಬರು ತಮ್ಮ ಪ್ರವಚನಗಳಲ್ಲಿ ಇಂತಹ ಜೋಕುಗಳನ್ನು ಹೇಳಿ, ಪ್ರವಚನಗಳನ್ನು ರಸವತ್ತಾಗಿ ಮಾಡುತ್ತಾರೆ ಅಂತ ಇತ್ತೀಚಿಗೆ ಒಬ್ಬ ಆಪ್ತರಿಂದ ಕೇಳಿದ್ದು. ಉದ್ದುದ್ದ, ಅಡ್ಡಡ್ಡ, ಗೋಮಯ, ಹಲ್ಲು ತಿಕ್ಕೋ ಜೋಕ್ ಹೇಳಿದ ಅವರಿಗೊಂದು ಧನ್ಯವಾದ. ಸಣ್ಣ ಜೋಕು ಅವರದ್ದು. ದೊಡ್ಡ ಮಸಾಲೆ ನಮ್ಮದು.)

ಅತ್ತೆ ಸೊಸೆ (ಸ್ಯಾಂಪಲ್ ಮಾತ್ರ)

Sunday, June 22, 2014

ಯಕ್ಷಗಾನದ 'ಹಾಸ್ಯ ರತ್ನ' ಕುಂಜಾಲು ರಾಮಕೃಷ್ಣ

"ಏ! ಎದ್ದಕಳ್ಳರಾ! ಯಾರ್ ಬಂದ ನೋಡು! ಕುಂಜಾಲ್ ರಾಮಕೃಷ್ಣ!" ಅಂತ ಉತ್ಸುಕತೆಯಿಂದ ಹೇಳುತ್ತ, ರಪರಪಾ, ದಬದಬಾ ಅಂತ ಬೆನ್ನ ಮೇಲೆ ಮೃದಂಗವನ್ನೋ, ಕುಂಡೆ ಮೇಲೆ ಚಂಡೆಯನ್ನೋ ಬಾರಿಸುತ್ತ ಹಿರಿಯರು ಮಲಗಿದ್ದ ಸಣ್ಣ ಮಾಣಿಗಳನ್ನು ಎಬ್ಬಿಸುತ್ತಿದ್ದರೆ, ಸಣ್ಣ ಮಾಣಿಗಳು ಎಬ್ಬಿಸಲು ಬಾರಿಸಿದ್ದ ಅಬ್ಬರಕ್ಕೆ ಕೆಳಗೆ ಇಳಿದು ಹೋಗಿದ್ದ ಚಡ್ಡಿಯನ್ನು ಪುಕಳಿ ಮೇಲೆ ಎಳೆಯುತ್ತ, "ಅರೇ! ಕುಂಜಾಲ್ ಇಷ್ಟ ಲಗೂ ಬಂದ್ಬುಟ್ನಾ!?" ಅಂತ ಅಂದುಕೊಳ್ಳುತ್ತ ಎದ್ದು, ಕಣ್ಣು ತಿಕ್ಕುತ್ತ, ಕುಂಜಾಲು ರಾಮಕೃಷ್ಣ ಅನ್ನುವ ಯಕ್ಷಗಾನದ ವಿದೂಷಕನೊಬ್ಬನ ಹಾಸ್ಯ ನೋಡಿ ಬಿದ್ದು ಬಿದ್ದು ನಗುತ್ತಿದ್ದರು. ಆ ವಿದೂಷಕನ ಪಾತ್ರದ ಸೀನ್ ಮುಗಿದ ತಕ್ಷಣ ಮತ್ತೆ ವರ್ಕಾಸುರ ಆಟಕ್ಕೆ (ನಿದ್ದೆಗೆ) ವಾಪಸ್. ಯಕ್ಷಗಾನದ ಮಟ್ಟಿಗೆ ತೆನಾಲಿ ರಾಮನಷ್ಟೇ ಪ್ರಸಿದ್ಧನಾಗಿದ್ದ ಕುಂಜಾಲ್ ರಾಮನ ಹಾಸ್ಯದ ಸೀನುಗಳನ್ನು ನೋಡಿಬಿಟ್ಟರೆ ಟಿಕೆಟ್ಟಿಗೆ ಕೊಟ್ಟಿದ್ದ ಪೂರ್ತಿ ದುಡ್ಡು ವಸೂಲ್ ಆದಂತೆಯೇ.

ಸುಮಾರು ನಾಲ್ಕು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ವಿದೂಷಕರಾಗಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಕುಂಜಾಲು ರಾಮಕೃಷ್ಣ ನಾಯಕ್ ನಿಧನರಾಗಿದ್ದಾರೆ. ಆದರೆ ತುಂಬ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

ಕುಂಜಾಲು ರಾಮಕೃಷ್ಣ ನಾಯಕ್

"ಅಡ್ಡ ಬಿದ್ದೆ ಒಡೆಯಾ!" ಅಂತ ಕೀರಲು ಧ್ವನಿಯಲ್ಲಿ ಕೂಗುತ್ತ, 'ಧಡ್' ಅಂತ ಸೀದಾ ನೆಲಕ್ಕೆ ಬಿದ್ದು, ರಂಗದ ಮೇಲಿದ್ದ ಹೀರೋ ಪಾತ್ರಧಾರಿಗೆ ನಮಸ್ಕಾರ ಮಾಡುತ್ತ, ರಂಗ ಪ್ರವೇಶ ಮಾಡುತ್ತಿದ್ದ ಕುಂಜಾಲು ರಾಮಕೃಷ್ಣ ಎಂಟ್ರಿ ಕೊಡುತ್ತಿದ್ದಂತೆಯೇ ನಗುವೇ ನಗು. ದೇಹದ ಯಾವದೇ ಭಾಗವನ್ನೂ ಮಣಿಸದೆ, 'ಧಡ್' ಅಂತ ಬಿದ್ದು, ಸಾಷ್ಟಾಂಗ ನಮಸ್ಕಾರ ಹಾಕುವದಿದೆಯೆಲ್ಲ ಅದು ನೋಡಲು ಸಿಕ್ಕಾಪಟ್ಟೆ ಮಜಾ ಕಂಡರೂ ಅದನ್ನು ಪರ್ಫೆಕ್ಟ್ ಮಾಡಿಕೊಳ್ಳಲು ಬೇಕಾದ ಶ್ರಮ, ಮಾಡುವಾಗ ಇರುವ ಅಪಾಯ ಏನೂ ಕಮ್ಮಿ ಅಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಹಲ್ಲೋ, ಪಕ್ಕೆಯ ಎಲುಬೋ ಮುರಿದೇ ಹೋಗುವ ಅಪಾಯ. ಕುಂಜಾಲರ ಹಲವಾರು ಕಾಮಿಡಿ ಟ್ರಿಕ್ ಗಳಲ್ಲಿ ಇದೂ ಒಂದು.

ಯಕ್ಷಗಾನದ ವಿದೂಷಕ / ಹಾಸ್ಯಗಾರ ಪಾತ್ರ ನಿರ್ವಹಿಸುವದು ತುಂಬ ಕಷ್ಟದ ಕೆಲಸ. ಯಕ್ಷಗಾನ ಪ್ರಸಂಗಗಳೆಲ್ಲ ಪುರಾಣ ಆಧಾರಿತವಾದವು. ಮೂಲ ಕಥೆಗೆ ಚ್ಯುತಿ ಬರದಂತೆ ಹಾಸ್ಯವನ್ನು ಅಡಿಗೆಗೆ ರುಚಿಗೆ ತಕ್ಕಂತೆ ಉಪ್ಪು, ಖಾರ ಮಾತ್ತೊಂದು ಹಾಕಿದಂತೆ ರಸಭಂಗವಾಗದಂತೆ ಹಾಕಬೇಕು. ಇಲ್ಲಾಂದ್ರೆ ಸರಿಯಾಗುವದಿಲ್ಲ. ರುಚಿ ಕೆಟ್ಟು ಹೋಗುತ್ತದೆ. ಮತ್ತೆ ಹೆಂಗಸರು, ಮಕ್ಕಳು ಎಲ್ಲರೂ ಯಕ್ಷಗಾನ ನೋಡಲು ಬಂದಿರುತ್ತಾದ್ದರಿಂದ ಅಸಂಬಂದ್ಧವಾಗಿ ಅಶ್ಲೀಲವಾಗಿ ಮಾತಾಡುವಂತಿಲ್ಲ. ಇಂತದ್ದೆಲ್ಲ ಕಟ್ಟಳೆ, ಪರಿಮಿತಿಗಳ ನಡುವೆಯೇ ಹಾಸ್ಯ ರಸ  ಹರಿಸಿ ಜನರನ್ನು ನಕ್ಕು ನಲಿಸುವದು ಸಣ್ಣ ಮಾತಲ್ಲ. ಕುಂಜಾಲರಿಗೆ ಆ ಕಲೆ ಸಿದ್ಧಿಸಿತ್ತು.

"ನಮೋ ನಮಃ  ಒಡೆಯಾ" ಅಂತ ಕುಂಜಾಲು ರಂಗಸ್ಥಳಕ್ಕೆ ಎಂಟ್ರಿ ಕೊಟ್ಟರು. ಕುಳಿತಿದ್ದ ರಾಜ ಪಾತ್ರಧಾರಿಗೆ ತಮ್ಮ ಎಂದಿನ 'ಧಡ್' ಅಂತ ಬಿದ್ದು ಮಾಡುವ ನಮಸ್ಕಾರ ಮಾಡಿದರು.

"ಒಂದು ಲೆಕ್ಕ ಮಾಡಲಿಕ್ಕಿದೆ. ಮಾಡ್ತೀಯಾ?" ಅಂತ ರಾಜ ಪಾತ್ರಧಾರಿ ಕೇಳಿದ.

"ಹೇಳಿ ಒಡೆಯಾ. ನೀವು ಕೇಳೋದು ದೊಡ್ಡದೋ ಅಥವಾ ನಾವು ಮಾಡೋದೋ? ಹೀ! ಹೀ!" ಅಂತ ಕುಂಜಾಲು ಹಲ್ಲು ಕಿರಿದರು. ಮುಂದಿನ ಒಂದೆರೆಡು ಹಲ್ಲು ಉದುರಿ ಹೋಗಿ, ಅವರ ಹಾಸ್ಯಕ್ಕೆ ಅನುಕೂಲವೇ ಆಗಿತ್ತು. ನೋಡಿದರೇ ನಗು ಬರುವಂತಿದ್ದ ಕುಂಜಾಲು ಬಾಯಿ ಬಿಟ್ಟರೆ ಅಷ್ಟೇ ಮತ್ತೆ. ಆ ಮುಖ ನೋಡಿಯೇ ನಗು.

"ಒಂಬತ್ತು ಎಳೆ ಉಂಟು. ತಿಳಿಯಿತಾ?" ಅಂದ ರಾಜ ಪಾತ್ರಧಾರಿ.

"ಮುಂದೆ ಹೇಳಿ ಒಡೆಯಾ?" ಅಂದ್ರು ಕುಂಜಾಲು.

"ಇರುವ ಒಂಬತ್ತು ಎಳೆಗಳನ್ನು ನಾಲ್ಕು ಪಾಲು ಮಾಡಿದರೆ ಏನು ಬರ್ತದ್ಯೋ? ಹೇಳು ನೋಡುವಾ?" ಇದು ರಾಜನ ಲೆಕ್ಕದ ಪ್ರಶ್ನೆ.

"ಎರಡೂ ಕಾಲು ಎಳೆ" ಅನ್ನುತ್ತ ಸುಂಯ್ ಅಂತ ರಾಜನ 'ಎರಡೂ ಕಾಲು ಎಳೆ'ಯಲು ಹೋಗುವ ಹಾಸ್ಯಗಾರ ಕುಂಜಾಲು ರಾಮಕೃಷ್ಣರ ಅಭಿನಯ ನಗಿಸದೇ ಇರಲು ಸಾಧ್ಯವೇ ಇಲ್ಲ. (9/4 = 2.25. ಎರಡೂ ಕಾಲು)

ಕುಂಜಾಲರ ಅಭಿನಯದಲ್ಲಿ ಎದ್ದು ಕಾಣುತ್ತಿದ್ದುದು ಭಯಂಕರ ಸಮಯ ಪ್ರಜ್ಞೆ. ಅದೇನು witty ಅನ್ನಿಸುವಂತಹ ಡೈಲಾಗ್ಸ್ ಮಾರಾಯರೇ ಅವರದ್ದು. ಒಮ್ಮೆ ಹೀಗಾಗಿತ್ತು. ಯಾವದೋ ಪ್ರಸಂಗ. ಎದುರಿನ ಪಾತ್ರಧಾರಿ ದೊಡ್ಡ ಕಲಾವಿದ ದಿವಂಗತ ಕೆರೆಮನೆ ಶಂಭು ಹೆಗಡೆ. ಹಾಸ್ಯದ ಸೀನಿಗೆ ಎಂಟ್ರಿ ಕೊಟ್ಟರು ಕುಂಜಾಲು. ಶುರುವಾಯಿತಲ್ಲ ಮೇರು ನಟರಿಬ್ಬರ ಮಧ್ಯೆ ಜುಗಲ್ ಬಂದಿ. ಒಬ್ಬರ ಮಾತಿಗೆ ಇನ್ನೊಬ್ಬರ ಪ್ರತಿಮಾತು. ಸಂಭಾಷಣೆ ಮುಗಿಯಲು ವಿದೂಷಕ ಮಾತು ನಿಲ್ಲಿಸಬೇಕು, last word ಯಾವಾಗಲೂ ಮುಖ್ಯ ಪಾತ್ರಧಾರಿಗೇ ಸಿಗಬೇಕು. ಕುಂಜಾಲು, ಶಂಭು ಹೆಗಡೆ ಇಬ್ಬರೂ ಅಪ್ರತಿಮ ಮಾತುಗಾರರೇ. ಅದರಲ್ಲಿ ಸಂದೇಹವೇ ಇಲ್ಲ. ಸಂಭಾಷಣೆಯ ಮಟ್ಟಿಗೆ ಶಂಭು ಹೆಗಡೆ ಯಾವದೇ ತರಹದ ಚಾಲೆಂಜಿಗೂ ಸೈ ಅನ್ನುವವರು. ಮತ್ತೆ ಅವರಿಗೆ ಹಲವಾರು ವರ್ಷಗಳ ಸಹ ಕಲಾವಿದ, ಸ್ನೇಹಿತ ಕುಂಜಾಲು ಅಂದ್ರೆ ಏನೋ ಒಂದು ರೀತಿಯ ಅಕ್ಕರೆ. ಕುಂಜಾಲು ಕೊಟ್ಟ ಪ್ರತಿ ಮಾತಿನೇಟಿಗೆ ತಕ್ಕ ಉತ್ತರ ಕೊಡುತ್ತಲೇ ಹೋದರು ಶಂಭು ಹೆಗಡೆ. ಒಬ್ಬರ ಮಾತಿನಲ್ಲಿ ಇನ್ನೊಬ್ಬರಿಗೆ ಮುಂದೇನು ಮಾತಾಡಬೇಕು ಅನ್ನುವ ಸಣ್ಣ ಸುಳಿವು, ಹಿಂಟ್ ಇರುತ್ತಿತ್ತು. ಅದ್ಭುತ ಸಂಭಾಷಣೆ. ಇಬ್ಬರೂ ದಿವ್ಯ ಮೂಡಿನಲ್ಲಿ ಇದ್ದರು ಅಂತ ಕಾಣುತ್ತದೆ. ಮಾತು ಮುಗಿಯುತ್ತಲೇ ಇಲ್ಲ. ಇನ್ನು ಹೀಗೆ ಬಿಟ್ಟರೆ ಸಮಯದ ಅಭಾವವಾದೀತು ಅಂತ ಭಾಗವತ ನೆಬ್ಬೂರ ನಾರಾಯಣ ಹೆಗಡೆ ತಾಳ ಜಪ್ಪಿ, ಮುಂದಿನ ಪದ ಹಾಡೇ ಬಿಟ್ಟರು. ಕುಂಜಾಲು ಮತ್ತೆ ಶಂಭು ಹೆಗಡೆಯವರ ಮುಖದ ಮೇಲಿನ ತುಂಟ ನಗೆ ಮರೆಯುವಂತಿಲ್ಲ. 'ಮತ್ತೊಮ್ಮೆ ನೋಡಿಕೊಳ್ಳುತ್ತೀನಿ ನಿನ್ನ' ಅನ್ನುವ ತುಂಟ ಲುಕ್ ಕೊಟ್ಟು ಆ ದೃಶ್ಯಕ್ಕೆ ಮಂಗಳ ಹಾಡಿದ್ದರು ಈ ಇಬ್ಬರು ಮೇರು ಕಲಾವಿದರು.

ಕೆಳಗೆ ಹಾಕಿರುವ 'ಗದಾಯುದ್ಧ' ಪ್ರಸಂಗದ ಕ್ಲಿಪ್ ನೋಡಿ. 'ವೈಶಂಪಾಯನ ಸರೋವರದ ಸಮೀಪ ಯಾರಿದ್ದರು?' ಅಂತ ಕೇಳುತ್ತಾನೆ ಭೀಮಸೇನ. 'ಕುಪ್ಪಯ್ಯ ಆಚಾರ್ರು. ಮತ್ತೆ ಅವಸತ್ತ ಮಾಣಿ' ಅಂದು ಬಿಡುತ್ತಾನೆ ಕುಂಜಾಲು. ಜನ ಬಿದ್ದು ಬಿದ್ದು ನಗಬೇಕು. ಕೃಪಾಚಾರ್ಯ, ಅಶ್ವತ್ಥಾಮ (ದ್ರೋಣಾಚಾರ್ಯರ ಮಾಣಿ) ಅನ್ನಲಿಕ್ಕೆ ಹೋದಾಗ ಮಾಡಿದ ಅವಗಢ.

ಅವರ ವೇಷ ಭೂಷಣಗಳೂ ಅಷ್ಟೇ. ಚಿತ್ರ ವಿಚಿತ್ರ. ಮೇಕ್ಅಪ್ ಸಹಿತ ಹಾಗೆಯೇ. ಮತ್ತೆ ವಿಶಿಷ್ಟವಾದ, ನಗೆ ತರಿಸುವ 'ಮಳ್ಳು' ಕುಣಿತ. ಆದರೆ ಎಲ್ಲ ಯಕ್ಷಗಾನ ಶಾಸ್ತ್ರದ ಇತಿಮಿತಿಯಲ್ಲಿಯೇ.

ಅತ್ಯಂತ ಸುಸಂಸ್ಕೃತ ರೀತಿಯಲ್ಲಿ ಹಾಸ್ಯ ಮಾಡಿ ಎಲ್ಲರನ್ನೂ ನಗಿಸುತ್ತಿದ್ದ ಕುಂಜಾಲರ ಕಾಲ ಎಂದೋ ಮುಗಿದು ಹೋಗಿದೆ ಬಿಡಿ. ಈಗಿತ್ತಲಾಗೆ ಯಕ್ಷಗಾನ ನೋಡದಿದ್ದರೂ, ಕೆಲ ವರ್ಷದ ಹಿಂದೆ ಒಂದಿಷ್ಟು ಯಕ್ಷಗಾನ ಪ್ರಸಂಗಗಳ ಟೇಪ್ ಕ್ಯಾಸೆಟ್ಟು  ಖರೀದಿ ಮಾಡಿದ್ದೆ,  ಅದರಲ್ಲಿನ ಕೆಲವು ಹಾಸ್ಯ ಸಂಭಾಷಣೆ ಕೇಳಿದರೆ! ರಾಮಾ! ದಟ್ಟ ದರಿದ್ರ ಕನ್ನಡ ಸಿನೆಮಾದ ಡಬಲ್ ಮೀನಿಂಗ್ ಡೈಲಾಗಿಗೆ ಸಡ್ಡು ಹೊಡೆದಂತೆ ಇತ್ತು. ಆ ಒಂದು ಕ್ಷಣಕ್ಕೆ ನಗು ಬಂದರೂ, ಇದು ಫ್ಯಾಮಿಲಿ ಹಾಸ್ಯ ಮಾತ್ರ ಅಲ್ಲವೇ ಅಲ್ಲ ಅಂತ ಅನ್ನಿಸಿದ್ದು ನಿಜ. 'ಕೀಚಕ ವಧೆ' ಪ್ರಸಂಗ. ಕೀಚಕ ತನ್ನ ಬಂಟ ವಿದೂಷಕನೊಂದಿಗೆ ತನ್ನ ಅಕ್ಕನ ಅಂತಪುರಕ್ಕೆ ಬರುತ್ತಾನೆ. ಕೀಚಕನ ಅಕ್ಕನ ಸುತ್ತ ಮುತ್ತ ಹಲವಾರು ಮಹಿಳೆಯರು, ಸೇವಕಿಯರು, ಪರಮ ಸುಂದರಿ ಸೈರಂಧ್ರಿ (ದ್ರೌಪದಿ) ಎಲ್ಲ ಇರುತ್ತಾರೆ. "ಇಲ್ಲಿ ಎಷ್ಟೊಂದು ಜನ ಹೆಂಗಸರು ನೆರೆದಿದ್ದಾರೆ ಮಾರಾಯಾ" ಅಂತ ಕೀಚಕ ಉದ್ಗರಿಸುತ್ತಾನೆ. "ಇಲ್ಲಿ ನೆರೆದ ಹೆಂಗಸರೆಲ್ಲ 'ನೆರೆದವರೇ' ಮಹಾಸ್ವಾಮಿ! ಹೀ! ಹೀ!' ಅಂತ ಹಾಸ್ಯಗಾರನ ಅಸಂಬದ್ಧ ಪ್ರಲಾಪ. ಇಂದು ಇಂತಹ ಡಬಲ್ ಮೀನಿಂಗ್ ಸಹ ಯಕ್ಷಗಾನದ ಹಾಸ್ಯ ಅಂತ ಚಲಾವಣೆ ಆಗುತ್ತಿದ್ದರೆ ಅದು ಕುಂಜಾಲು ರಾಮಕೃಷ್ಣನ ನಂತರ ಬಂದ ವಿದೂಷಕರ ಬೌದ್ಧಿಕ ದಿವಾಳಿತನ, ಅಧ್ಯಯನದ ಕೊರತೆ, poor taste ಅಷ್ಟೇ. ಅಂತಹ ಅಸಂಬದ್ಧ ಮಾತುಗಳನ್ನು ಕುಂಜಾಲು ರಾಮಕೃಷ್ಣರ ಬಾಯಿಂದ ಬರುವದನ್ನು ಊಹಿಸಲು ಸಾಧ್ಯವಿಲ್ಲ.

ಮೊದಲಿಂದ ಕೆರೆಮನೆ ಮೇಳದ (ಇಡಗುಂಜಿ ಮೇಳ) ಜೊತೆಯೇ ಇದ್ದವರು ಕುಂಜಾಲು. ಧಾರವಾಡಕ್ಕೆ ಕೆರೆಮನೆ ಮೇಳ ಮೂರ್ನಾಕು ಸರಿ ಬಂದರೂ ಕುಂಜಾಲು ಮಾತ್ರ ಬಂದಿರಲಿಲ್ಲ. ಅವರು ಒಮ್ಮೆ ಯಕ್ಷಗಾನದ ಸೀಸನ್ನಿನಲ್ಲಿ ಏನು ಘಟ್ಟದ ಮೇಲೆ ಬಂದರೋ ಬಂದರು. ನಂತರ ಘಟ್ಟ ಇಳಿದು, ಉಡುಪಿ ಸಮೀಪದ ಕುಂಜಾಲು ಎಂಬ ಸಣ್ಣ ಗ್ರಾಮ ಸೇರಿಕೊಂಡರೆ ಅವರು ಮತ್ತೆ ಹೊರಡುತ್ತಿದ್ದುದು ಮುಂದಿನ ಯಕ್ಷಗಾನದ ಸೀಸನ್ ಟೈಮ್ ನಲ್ಲಿ ಮಾತ್ರ ಅಂತ ಕಾಣುತ್ತದೆ. ಹಾಗಾಗಿ ಧಾರವಾಡಕ್ಕೆ ಶಂಭು ಹೆಗಡೆ ಅವರ ಜೊತೆ ಅವರು ಬರಲಿಲ್ಲ. ನಾವಿದ್ದಾಗ ಅಂದರೆ ೧೯೯೦ ರ ವರೆಗೆ ಅಂತೂ ಬರಲಿಲ್ಲ. ಶಂಭು ಹೆಗಡೆ ಅವರನ್ನು ಭೆಟ್ಟಿ ಮಾಡುವ ಅವಕಾಶ ಎರಡು ಮೂರು ಬಾರಿ ಸಿಕ್ಕಿದರೂ ಕುಂಜಾಲರ ಭೇಟಿಯ ಅವಕಾಶ ಮಾತ್ರ ಸಿಗಲಿಲ್ಲ. ಅವರ ಹಾಸ್ಯ ನೋಡಿದ್ದೆಲ್ಲ ಬೇಸಿಗೆ ರಜೆಯಲ್ಲಿ ಸಿರ್ಸಿ ಕಡೆ ಹೋಗಿ, ಅಜ್ಜನ ಮನೆ ಸುತ್ತ ಮುತ್ತ ಆಗುತ್ತಿದ್ದ ಆಟ ನೋಡಿದಾಗ ಮಾತ್ರ. ಅದೇ ದೊಡ್ಡ ಸೌಭಾಗ್ಯ. ಊರು ಕಡೆ ಹೋದಾಗ, ಯಕ್ಷಗಾನ ಕಲಾವಿದರನ್ನು ಭೆಟ್ಟಿ ಮಾಡುವ ಉದ್ದೇಶದಿಂದ ಬಣ್ಣದ ಚೌಕಿಗೆ (ಗ್ರೀನ್ ರೂಂ) ನುಗ್ಗುವ ಪ್ರಯತ್ನ ಮಾಡುತ್ತಿದ್ದೆವಾದರೂ ಅದರಲ್ಲಿ ಜಾಸ್ತಿ ಯಶಸ್ಸು ಸಿಗುತ್ತಿರಲಿಲ್ಲ. ಬಣ್ಣದ ಚೌಕಿ ಕಲಾವಿದರ ಗುಡಿ ಇದ್ದಂತೆ. ಅಲ್ಲಿ ಹೋದರೆ ಅವರಿಗೆ ಒಂದು ತರಹದ ಕಿರಿಕಿರಿ.

ಹಾಸ್ಯ ರತ್ನ ಕುಂಜಾಲು ಜೀವನದ ಪ್ರಸಂಗ ಮುಗಿಸಿ ಮಂಗಳ ಹಾಡಿದ್ದಾರೆ. ಒಂದು ಅಮೋಘ ಪ್ರಸಂಗಕ್ಕೆ ತೆರೆ ಬಿದ್ದಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತ .............




* ಯಕ್ಷಗಾನದ ಬಗ್ಗೆ ಮಾತಾಡುತ್ತಿರುವಾಗ ನೆನಪಿಗೆ ಬರುವ ಎರಡು ವಿಶೇಷ ಪ್ರಯೋಗಗಳೆಂದರೆ ಪ್ರೇತ ನೃತ್ಯ ಮತ್ತು ಸಿಂಹ ನೃತ್ಯ.

ಪ್ರೇತ ನೃತ್ಯ:



ಸಿಂಹ ನೃತ್ಯ:

 

Friday, June 20, 2014

ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ 'ಎಲ್ಲೆಲ್ಲಿ ನೋಡಲಿ ಹಂದಿಯನೇ ಕಾಣುವೆ'

ಎಲ್ಲೆಲ್ಲಿ ನೋಡಲಿ ಹಂದಿಯನೇ ಕಾಣುವೆ
ರಸ್ತೆಯಲಿ ತುಂಬಿರುವೆ ತಿಪ್ಪೆಯಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ ಹಂದಿಯನೇ ಕಾಣುವೆ
ರಸ್ತೆಯಲಿ ತುಂಬಿರುವೆ ತಿಪ್ಪೆಯಲಿ ಮನೆ ಮಾಡಿ ಆಡುವೆ

ಆ ಕರಿ ಹಂದಿ ಆ ವಡ್ಡನಿಗಾದರೆ
ಈ ಬಿಳೆ ಹಂದಿ ಈ ವಡ್ಡನಿಗಾಸರೆ
ಆ.........ಆ.....ಆ....ಆ....ಆ
ವಡ್ಡರ ಮಂದಿಗೆ ಹಂದಿಗಳ ಆಸರೆ
ಈ ಹಂದಿ ಬಾಳಿಗೆ ನೀವು ಎಸೆದ ತ್ಯಾಜ್ಯವೇ ಆಸರೆ
ಯುಗಗಳು ಜಾರಿ ಉರುಳಿದರೇನು
ಹಂದಿ ಮಂದಿ ಮಂದಿ ಹಂದಿ
ಆದ ಮೇಲೆ ಬೇರೆ ಏನಿದೆ.....

ಎಲ್ಲೆಲ್ಲಿ ನೋಡಲಿ ಹಂದಿಯನೇ ಕಾಣುವೆ
ರಸ್ತೆಯಲಿ ತುಂಬಿರುವೆ ತಿಪ್ಪೆಯಲಿ ಮನೆ ಮಾಡಿ ಆಡುವೆ

ಹಂದಿಯನ್ನು ಹಿಡಿಯದೆ ಪಂದಿ ಕರಿ ಆಗದು
ಪಂದಿ ಕರಿ ಇಲ್ಲದೆ ಈ ಊಟ ಸೇರದು
ಗೋವಾಕ್ಕೆ ರಫ್ತಾದ ಹಂದಿಯ ಇನ್ನೆಲ್ಲಿ ಕಾಣುವೆ
ಹಂದಿಯನ್ನು ಸಾಕದೆ ನೀ ಹೇಗೆ ಬಾಳುವೆ
ಓಹ್! ಹಂದಿ ಹಿಡಿದ ನೋವ ಮರೆಯಲಿ ಜೀವ
ಕಂಟ್ರಿ ಶೆರೆ ಸಾವಜೀ ಊಟ ಸೇರಿದಂತೆ
ಪ್ರೇಮದಿಂದ ಹಂದಿ ಹಿಡಿಯುವೆ.....

ಎಲ್ಲೆಲ್ಲಿ ನೋಡಲಿ ಹಂದಿಯನೇ ಕಾಣುವೆ
ರಸ್ತೆಯಲಿ ತುಂಬಿರುವೆ ತಿಪ್ಪೆಯಲಿ ಮನೆ ಮಾಡಿ ಆಡುವೆ

ಕರಾವೋಕೆಗೆ ರೆಡಿ ಲಿರಿಕ್ಸ್!

ಮೂಲ ಗೀತೆಯ ಸಾಹಿತ್ಯ ಇಲ್ಲಿದೆ.

ಮೂಲ ಗೀತೆ: https://www.youtube.com/watch?v=wMaMGtqckS0

ಮೂಲ ಗೀತೆಯ ಮ್ಯೂಜಿಕ್ಕಿಗೆ ಬರೋಬ್ಬರಿ ಹೊಂದುವ ಸಾಹಿತ್ಯ ರಚನೆ ಮಾಡಿದವರು ಕವಿ ದೊಡ್ಡ ರಂಗೇಗೌಡರ ಚೇಲಾ ಸಣ್ಣ ಮಂಗೇಗೌಡ

ಧಾರವಾಡದಲ್ಲಿ 'ವರಾಹ'ವತಾರದ ಚಿತ್ರಗಳನ್ನು ನೋಡಲು ಇಲ್ಲಿ ಹೋಗಿ. http://goo.gl/AahkOm

ವಡ್ಡ: ಧಾರವಾಡ ಹಂದಿ ಸಾಕಾಣಿಕೆ ಕೇಂದ್ರ ಬಿಂದು ವಡ್ಡರ ಓಣಿ (ನಮ್ಮ ಕಾಲದಲ್ಲಿ)

ಪಂದಿ ಕರಿ: ಕೂರ್ಗಿ ಹಂದಿ ಕರಿ

ಗೋವಾ: ಧಾರವಾಡದ ಹಂದಿ ಗೋವಾಕ್ಕೆ ರಫ್ತಾಗುತ್ತಿದ್ದವು ಅಂತ ಕೇಳಿದ್ದು. ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಇಲ್ಲದ, ಟಿಕೆಟ್ ಬೇಡವೇ ಆದ, ಹೆಡಮುರಿಗೆ ಕಟ್ಟಿಸಿಕೊಂಡು, ರಫ್ತಾಗಲು ರೆಡಿ ವರಾಹಗಳು ಕಾಣುತ್ತಿದ್ದವು

ಕಂಟ್ರಿ ಶೆರೆ, ಸಾವಜೀ ಖಾನಾವಳಿ ಊಟ: ಎಲ್ಲ ನೋವಿಗೆ ಒಂದೇ ರಾಮಬಾಣ. ಹಂದಿ ಹಿಡಿದ ಸುಸ್ತು, ನೋವು ಎಲ್ಲ ಮಾಯ.






Wednesday, June 18, 2014

ಮೋದಿ ಸರಕಾರ, ಬಿಜೆಪಿ ಸ್ವರ್ಣಯುಗ ನೋಡಲು ಈ ಮಹನೀಯರು ಇನ್ನೊಂದಿಷ್ಟು ವರ್ಷ ಇರಬೇಕಿತ್ತು

ಪ್ರೊ. ದಯಾನಂದ ಶಾನಬಾಗ
ಮೋದಿ ಸರಕಾರ ಬಂದಿದೆ. ಹಿಂದೆಂದೂ ಬಂದಿರದಿದ್ದ ಪೂರ್ಣ ಮೆಜಾರಿಟಿ ಬಿಜೆಪಿಗೆ ಬಂದಿದೆ. ಸಂಘ ಪರಿವಾರದ ಹಲವಾರು ದಶಕಗಳ ಆಸೆ, ಆಕಾಂಕ್ಷೆ ಸಾಕಾರವಾಗಿದೆ. ಇಂತದೊಂದು ಸುವರ್ಣಯುಗ ನೋಡಲು ಧಾರವಾಡದ ಡಾ. ದಯಾನಂದ ಶಾನಬಾಗರು ಇನ್ನೂ ಇರಬೇಕಿತ್ತು.

ಯಾರಾಗಿದ್ದರು ಈ ದಯಾನಂದ ಶಾನಬಾಗ? ಅವರು ವೃತ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು. ಆದರೆ ಧಾರವಾಡದ ಮಟ್ಟಿಗೆ ಸಂಘ ಪರಿವಾರದ (RSS) ದೊಡ್ಡ ಮುಖಂಡರು. ಕೇವಲ ಹೆಸರಿನಲ್ಲಿ ಮಾತ್ರ ಅಲ್ಲ. ಸಣ್ಣ ಕೆಲಸ ಮಾಡುವದರಿಂದ ಹಿಡಿದು ಯಾವದೇ ಕೆಲಸಕ್ಕೂ ರೆಡಿ. ನಮಗಂತೂ ಧಾರವಾಡದ ಸಂಘ ಪರಿವಾರ, RSS ಚಟುವಟಿಕೆಗಳನ್ನು ನೆನಪಿಸಿಕೊಂಡಾಗ ಮೊತ್ತ ಮೊದಲು ನೆನಪಿಗೆ ಬರುವವರು ಶಾನಬಾಗ ಪ್ರೊಫೆಸರರೇ.

೧೯೭೫, ೧೯೭೬ ರ ವೇಳೆಯ ಮಾತು. ದೇಶದ ತುಂಬ ಇಂದಿರಾ ಗಾಂಧಿ ವಿಧಿಸಿದ್ದ ಕರಾಳ ತುರ್ತು ಪರಿಸ್ಥಿತಿ. ಅಕ್ಷರಶ  ಪ್ರಜಾಪ್ರಭುತ್ವದ, ನಾಗರೀಕರ ಮೂಲಭೂತ ಹಕ್ಕುಗಳ ಖುಲ್ಲಾ ಖುಲ್ಲಾ ರೇಪ್, ಬಲಾತ್ಕಾರ. ಇಂದಿರಾ ಸರ್ವಾಧಿಕಾರದ  ವಿರುದ್ಧ ಮಾತೆತ್ತಿದರೆ ಸೀದಾ ಜೈಲಿಗೆ. ದೂಸರಾ ಮಾತೇ ಇಲ್ಲ. ಮೊದಲೇ ತಯಾರು ಮಾಡಿಕೊಂಡಿದ್ದ ಲಿಸ್ಟ್ ಪ್ರಕಾರ ಎಲ್ಲರನ್ನೂ ಹಿಡಿಹಿಡಿದು ಜೈಲಿಗೆ ಹಾಕುತ್ತಿತ್ತು  ಸರಕಾರ. RSS ತರಹದ ಸಂಘಟನೆಗಳ ಸದಸ್ಯರ ಮೇಲೆ ವಿಶೇಷ ಹದ್ದಿನ ಕಣ್ಣು.

ಇಂತಹ ಕಠಿಣ ಸಂದರ್ಭದಲ್ಲಿ ಸಂಘ ಪರಿವಾರದ ಖಾಕಿ ಚಡ್ಡಿ ಕಳಚಿಟ್ಟು, ಪ್ಯಾಂಟು ಏರಿಸಿ, ಹುಳ್ಳಗೆ ದೇಶಾವರಿ ನಗೆ ಮಳ್ಳನ ಹಾಗೆ ನಕ್ಕು, "ಏ! ನಮಗೂ RSS ಗೂ ಏನೂ ಸಂಬಂಧ ಇಲ್ಲೇ ಇಲ್ಲರಿ. ನಿಮಗ ಯಾರೋ ತಪ್ಪು ಮಾಹಿತಿ ಕೊಟ್ಟಿರಬೇಕು. ನಮ್ಮನ್ನ ಬಿಡ್ರೀಪಾ!" ಅಂತ ಅಂಬೋ ಅಂದು, ಟೈಮಿಗೆ ಸರಿಯಾಗಿ ಮಂಗ್ಯಾನ ಗತೆ RSS ಬಿಟ್ಟು ಜಿಗಿದಿದ್ದ ನಕಲಿ ಸಂಘಿಗಳು ಬೇಕಾದಷ್ಟು ಜನ ಇದ್ದರು ಬಿಡಿ. ನಂತರ ಸಂಘವನ್ನೇ ಬಯ್ಯುತ್ತ, ಪೂರ್ತಿ ಪ್ರಮಾಣದ ಕಾಂಗ್ರೆಸ್ ಏಜೆಂಟರಾಗಿ, ತಮ್ಮ ಅಮೂಲ್ಯ 'ಬ್ಯಾಕ್' ಬಚಾವ್ ಮಾಡಿಕೊಂಡು, ತಮ್ಮ ಬೇಳೆ ಬೇಯಿಸಿಕೊಂಡ ಜನ ಇದ್ದರು ಬಿಡಿ. ಗೆದ್ದೆತ್ತಿನ ಬಾಲ ಹಿಡಿಯೋ ಮಂದಿ. ಸರ್ವಕಾಲೀನರು.

ಇನ್ನು ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತು ಅಂದರೆ ಕೆಲವು ಸಂಘದ ಬಿಸಿರಕ್ತದ ತರುಣರಿಗೆ ಹಿರಿಯರೇ ತಿಳಿಸಿ ಹೇಳಿ, "ಅಪ್ಪಾ! ಮಗನೇ! ಸಂಘಾ ಗಿಂಗಾ ಎಲ್ಲಾ ಆಮೇಲೆ ಮಾಡಿಯಂತ. ಖಾಕಿ ಚಡ್ಡಿ ಕಳದು, ಸ್ವಲ್ಪ ಅಭ್ಯಾಸ, ನೌಕರಿ ಬಗ್ಗೆ ಗಮನ ಕೊಡು. ಎಲ್ಲರೆ ಪೋಲೀಸ್ ಗಿಲೀಸ್ ಲಫಡಾ ಒಳಗ ಸಿಕ್ಕೊಂಡ್ರ ಪೂರ್ತಿ ಲೈಫ್ ಮುಂದ ಬರ್ಬಾದ್ ಆಗ್ತದ. ಖಾಕಿ ಚಡ್ಡಿ ಕಳದು ಪ್ಯಾಂಟ್ ಹಾಕ್ಕೋ ರಾಜಾ!" ಅಂತ ಹೇಳಿ ಎಷ್ಟೋ ಜನ ಬಿಸಿ ರಕ್ತದ ತರುಣರ RSS ಖಾಕಿ ಚಡ್ಡಿ ನಿಕಾಲಿ ಮಾಡಿ, ಪ್ಯಾಂಟೋ, ಲುಂಗಿಯನ್ನೋ ಉಡಿಸಿ ಮಕ್ಕಳನ್ನು ಬಚಾವ್ ಮಾಡಿಕೊಂಡಿದ್ದರು ಪಾಲಕರು. ಮನೆಯಲ್ಲಿ ಮಾತು ಕೇಳದ ಕೆಲ ಹುಡುಗರಿಗೆ, ಖಾಕಿ ಚಡ್ಡಿ ಬಿಚ್ಚಿ ಅನ್ನುವ ಉಪದೇಶ ಮಾಡಿಸಿಲು, ಮಂಡೆ ಬಿಸಿಯಾದ ಪಾಲಕರು ನಮ್ಮ ತಂದೆಯವರ ಬಳಿ ಮಕ್ಕಳನ್ನು ಕರೆ ತಂದಿದ್ದೂ ಇದೆ. ಪಾಲಕರ ಮಾತು ಕೇಳದವರು ಹಿರಿಯರೂ, ಮಾಸ್ತರರೂ ಆದ ನಮ್ಮ ತಂದೆಯವರ ಮಾತು ಕೇಳಿಯಾರು ಅನ್ನುವ ಒಂದು ಆಸೆ, ನೀರಿಕ್ಷೆ. ತಂದೆಯವರ ಉಪದೇಶ ಕೇಳಿ ಖಾಕಿ ಚಡ್ಡಿ ಕಳಚಿಟ್ಟವರೂ ನೆನಪಾದರು ಬಿಡಿ. "ನೋಡು! ನಿಮ್ಮ ತಂದೆಯವರು ತೀರಿಕೊಂಡಾರ. ಮನಿಗೆ ನೀನೇ ಹಿರಿ ಮಗಾ. ಸ್ವಲ್ಪ ಜವಾಬ್ದಾರಿ ತೊಗೋಬೇಕು. ಅದಕ್ಕ ಸದ್ಯಾ ಈ RSS ಅದು ಇದು ಬಿಟ್ಟು ಬಿಡಪಾ. ಮುಂದ ಬೇಕಾದ್ರ ಮಾಡಿಯಂತ. ಈಗ ಪರಿಸ್ಥಿತಿ ಬಹಳ ಕೆಟ್ಟ ಅದ. ಅದಕ್ಕ ಹೇಳಿದೆ. ಹೇಳಿದ ಮಾತ ಕೇಳಪಾ," ಅಂತ ಫುಲ್ ಸೆಂಟಿ ಹಾಕಿ ನಮ್ಮ ಪಿತಾಜಿ ಫಿಟ್ಟಿಂಗ್ ಇಡುತ್ತಿದ್ದರೆ ಹಟಮಾರಿ ಹುಡುಗರು RSS ಚಡ್ಡಿ ಕಳಚಿಟ್ಟು, "ಹೂನ್ರೀ ಸರ್!" ಅನ್ನುತ್ತ ಆ ಮಟ್ಟಿಗೆ ಸಂಘಕ್ಕೆ ನಮಸ್ಕಾರ ಹಾಕಿ ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ಹುಡುಗ ಹಾದಿಗೆ ಬಂದ ಅಂತ ಎಲ್ಲರೂ ಖುಷ್.

ಹಿರಿಯರಿಗೆ ಜೈಲು, ಯುವಕರಿಗೆ ಚಿತ್ರಹಿಂಸೆ, ಎನ್ಕೌಂಟರ್ ಹತ್ಯೆ, ಲಾಕಪ್ ಡೆತ್ ಇದು ಎಮರ್ಜೆನ್ಸಿ ಟೈಮಿನಲ್ಲಿ ನಡೆದ ಅತಿರೇಕಗಳ ಸ್ಯಾಂಪಲ್ಲು. ಧಾರವಾಡ ಮಟ್ಟಿಗೆ ಕೇವಲ ಜೈಲು, ಹೊಡೆತ, ಬಡಿತ, ಮಾನಸಿಕ ಕಿರುಕುಳ ಅಷ್ಟೇ ಅಂತ ನಮಗೆ ನೆನಪು. ಎಷ್ಟೇ ಅಂದ್ರೂ ಪೇಡಾ ನಗರಿಯ ಪೊಲೀಸರೂ ಸಹ ಸ್ವಲ್ಪ ಮೃದು, ಅಲ್ಲಿನ ಜನರಂತೆ.

ಯುವಕರು ಮುಂದೆ ಲೈಫ್ ಬರ್ಬಾದ್ ಆದೀತು ಅಂತ ಸಂಘದ ಸಹವಾಸ ಬಿಟ್ಟಿದ್ದರು. ಹಿರಿಯರು ಆಗಲೇ ಸೆಟ್ ಆಗಿದ್ದ ಲೈಫ್ ಬರ್ಬಾದ್ ಆದರೆ ಸಂಸಾರ ಬರ್ಬಾದ್ ಆಗಿ, ಬೀದಿಗೆ ಬಂದು, ಕೇರ್ ಆಫ್ ಫುಟ್ ಪಾತ್ ಆದೀತು ಅಂತ ತಿಳಿದು ಸಂಘದ ಸಹವಾಸ ಬಿಟ್ಟಿದ್ದರು. ಎಮರ್ಜೆನ್ಸಿ ವಿರುದ್ಧ ಪ್ರತಿಭಟಿಸಿದವರ ಸರಕಾರೀ ನೌಕರಿ ಹೋಗುತ್ತದೆ, ಮುಂದೆ ಎಂದಿಗೂ ಸರ್ಕಾರಿ ನೌಕರಿ ಸಿಗುವದಿಲ್ಲ ಅನ್ನುವ ಸುದ್ದಿಗೆ ವ್ಯಾಪಕ ಪ್ರಚಾರ ಸಿಕ್ಕು ಎಲ್ಲರೂ ಭಯಭೀತರಾಗಿದ್ದರು. ಆ ಕಾಲದ ಮಧ್ಯಮ ವರ್ಗದ ಮಂದಿ ಪ್ರಾಣವನ್ನಾದರೂ ಬಿಟ್ಟಾರು ಆದರೆ ಸರಕಾರಿ ನೌಕರಿ ಮಾತ್ರ ಸುತಾರಾಂ ಕಳೆದುಕೊಳ್ಳಲು ತಯಾರಿರುತ್ತಿರಲಿಲ್ಲ.

ಇಂತಹ ಸಂದರ್ಭದಲ್ಲಿ ಡಾ.ದಯಾನಂದ ಶಾನಬಾಗರು ಸಹ ಎಲ್ಲರಂತೆ ಸಂಘಕ್ಕೆ ಒಂದು ದೊಡ್ಡ ನಮಸ್ಕಾರ ಹಾಕಿ, ಇದ್ದ ಯೂನಿವರ್ಸಿಟಿ ನೌಕರಿಯಲ್ಲಿ ಆರಾಮಾಗಿದ್ದು ಬಿಡಬಹುದಿತ್ತು. ಆದರೆ ಅವರು ಆ ಟೈಪಿನ ಜನರು ಅಲ್ಲವೇ ಅಲ್ಲ. ಎಂದಿನಂತೆ ತಮ್ಮ ಸಂಘದ ಚಟುವಟಿಕೆ ಮುಂದುವರಿಸಿಕೊಂಡೇ ಇದ್ದರು. ಆ ಹೊತ್ತಿಗೆ ಅವರ ಅನೇಕ ಇತರೆ ಸ್ನೇಹಿತ ಸಂಘಿಗಳು ಸಂಘ ಬಿಟ್ಟಿದ್ದರಿಂದ ಅವರ ಎಮರ್ಜೆನ್ಸಿ ವಿರೋಧ ಆಂದೋಲನಗಳ ಕಾವು ಅಷ್ಟಿರಲಿಲ್ಲ ಅಷ್ಟೇ. ತಮ್ಮ ಪಾಡಿಗೆ ತಾವು ಎಷ್ಟು ಸಾಧ್ಯವೋ ಅಷ್ಟು ಸಂಘದ ಕೆಲಸ ಮಾಡಿಕೊಂಡು, ತಮ್ಮ ನೌಕರಿ, ಸಂಶೋಧನೆ ಮಾಡಿಕೊಂಡು ಇದ್ದರು.

ಬಿತ್ತಲ್ಲ ಸರ್ಕಾರದ ಹದ್ದಿನ ಕಣ್ಣು! ಶಾನಬಾಗರನ್ನು ಎಳಕೊಂಡು ಹೋಗಿ ಜೈಲಿಗೆ ಹಾಕೇ ಬಿಟ್ಟರು. ಮೊದಲು ಎಚ್ಚರಿಕೆ ಕೊಟ್ಟಿರಬಹುದು ಬಿಡಿ. ಎಷ್ಟೇ ಎಮರ್ಜೆನ್ಸಿ ಅತಿರೇಕಗಳು ನೆಡದರೂ ಕರ್ನಾಟಕದ ಆಡಳಿತಶಾಹಿ ಅಷ್ಟು ಕುಲಗೆಟ್ಟು ಹೋಗಿರಲಿಲ್ಲ. ಬೇರೆ ಗತಿಯಿಲ್ಲ ಅಂತ ಹೇಳಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಕಡೆಯಿಂದ ಬರುತ್ತಿದ್ದ ಉಲ್ಟಾ ಸೀದಾ ಆದೇಶಗಳನ್ನು ಪಾಲಿಸುತ್ತಿದ್ದರು. ಉತ್ತರದ ಕೆಲವು ರಾಜ್ಯಗಳಲ್ಲಿ ನಡೆದ ಕ್ರೌರ್ಯ, ಅತಿರೇಕಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಡೆದ ಅತಿರೇಕಗಳು ಏನೂ ಅಲ್ಲ.

೧೯೭೫-೭೬ ರಲ್ಲಿ ಶಾನಭಾಗ್ ಪ್ರೊಫೆಸರನ್ನು ಜೈಲಿಗೆ ಒಗೆದಾಗ  ಅವರ ಕುಟುಂಬದ ಪರಿಸ್ಥಿತಿ ನೋಡಿ. ಹತ್ತು ವರ್ಷಕ್ಕಿಂತ ಚಿಕ್ಕವರಾದ ಮೂರು ಸಣ್ಣ ಸಣ್ಣ ಮಕ್ಕಳು ಮನೆಯಲ್ಲಿ. ಅಂದಾಜು ಎರಡು, ಆರು, ಎಂಟು ವಯಸ್ಸಿನ ಮೂರು ಮಕ್ಕಳು. ಪತ್ನಿ ಸೀದಾ ಸಾದಾ ಗೃಹಿಣಿ. ಮನೆ ಬಿಟ್ಟು ಹೊರಗೆ ಹೋದವರಲ್ಲ ಆಕೆ. ಆಸ್ತಿ, ಪಾಸ್ತಿ, ದುಡ್ಡು, ಕಾಸು ಇಲ್ಲ. ಜೈಲಿಗೆ ಹಾಕಿದ್ದರಿಂದ ತಿಂಗಳ ಪಗಾರ್ ಕಟ್. ಅದು ಹೇಗೆ ಮನೆ ಕಡೆ ನಿಭಾಯಿಸಿದರೋ! ಏನೇನು ಕಷ್ಟ ಕೋಟಲೆ ಅನುಭವಿಸಿದರೋ! ಊಹಿಸಲೂ ಅಸಾಧ್ಯ. ಇದೆಲ್ಲದರ ಮೇಲೆ ಜೈಲಿಗೆ ಹೋಗಿ ಪತಿಯನ್ನು ಭೆಟ್ಟಿಯಾಗಬೇಕು. ಬಿಡಿಸುವ ಪ್ರಯತ್ನ ಮಾಡಬೇಕು. ಅಬ್ಬಾ! ಅವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಮನೆಯಲ್ಲಿ ದೊಡ್ಡವರು ಮಾತಾಡುತ್ತ ಇದ್ದಿದ್ದು ನೆನೆಪಾದರೆ ಇವತ್ತಿಗೂ ಒಂದು ತರಹದ ಕಳವಳ, ಸಂಕಟ.

ಸುಮ್ಮನೆ ಜೈಲಲ್ಲಿ ಕುಳಿತೆದ್ದು ಬಂದಿರಲಿಲ್ಲ ಶಾನಬಾಗ ಪ್ರೊಫೆಸರ್. ಲಾಠಿ ಏಟು, ಬೂಟಿನ ಒದೆ ಎಲ್ಲದರ ಬೇಕಾದಷ್ಟು ಕಾಣಿಕೆ ಸಂದಾಯವಾಗಿತ್ತು ಅವರಿಗೆ. ಯಾಕೆಂದ್ರೆ ಅವರು RSS ನವರು. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ, ಪೋಲೀಸರ ಬಕೆಟ್ ಹಿಡಿಯೋ ಪೈಕಿ ಅಲ್ಲ. ಮತ್ತೆ  'RSS ಜನರನ್ನು ಬೇರೆಯ ರೀತಿಯೇ ವಿಚಾರಿಸಿಕೊಳ್ಳಿ' ಅಂತ ಅಲಿಖಿತ ಆಜ್ಞೆ ಜಾರಿಯಲ್ಲಿತ್ತು ನೋಡಿ.

ಎಮರ್ಜೆನ್ಸಿ ಶುರು ಶುರುವಿನಲ್ಲಿ ಪ್ರತಿಭಟಿಸಿದ್ದ 'ಬೇರೆ ತರಹದ ಜನ' ಎಲ್ಲ ಜೈಲಿಗೆ ಹೋಗುವ ಆಪತ್ತು ಬಂದಾಗ ಪೋಲೀಸರ ಬಕೆಟ್ ಹಿಡಿದು ಬಚಾವ್ ಆಗಿದ್ದರು. ಅವರ ಮೌಲ್ಯಗಳು, ಹೋರಾಟ, 'ಬಂಡಾಯ' ಎಲ್ಲ ಅಲ್ಲಿಗೇ ಮುಗಿದಿತ್ತು. ಎಲ್ಲೋ ಓದಿದ ನೆನಪು......ಧಾರವಾಡದ ಆ ಕಾಲದ ಬಹುಪತ್ನಿವಲ್ಲಭ ಬಂಡಾಯ ಸಾಹಿತಿಯೊಬ್ಬರು ಪೋಲೀಸ್ ಜೀಪಿನಲ್ಲಿ ಕುಳಿತು ಹೋಗುತ್ತಿರುವಾಗಲೇ ಪೊಲೀಸರೊಂದಿಗೆ ಏನೋ ಡೀಲು ಕುದರಿಸಿಕೊಂಡು ಜೈಲಿಗೆ ಹೋಗುವದನ್ನು ತಪ್ಪಿಸಿಕೊಂಡಿದ್ದರಂತೆ. ಅದರ ಪ್ರತಿಫಲವೋ ಏನೋ ಎಂಬಂತೆ ಆ ಕಾಲದ ಯಾವದೇ ರಿಟೈರ್ಡ್ ಪೋಲೀಸ್ ಪಾಪಣ್ಣ ಏನೇ ಪುಸ್ತಕ, ಮಣ್ಣು, ಮಸಿ ಬರೆದರೂ ಇವರು ಮುಫಾತ್ತಾಗಿ, ಇಲ್ಲದ ಸಲ್ಲದ ಮುನ್ನುಡಿ, ಬೆನ್ನುಡಿ, ಎಲ್ಲ ಬರೆದೂ ಬರೆದೂ, ಕೊಟ್ಟೂ ಕೊಟ್ಟೂ ತಮ್ಮ ಆವತ್ತಿನ ಋಣ ಇವತ್ತಿಗೂ ಸಂದಾಯ ಮಾಡುತ್ತಿದ್ದಾರಂತೆ. ಇದು ಆ ಬಂಡಾಯ ಸಾಹಿತಿಗಳ ಬಗ್ಗೆ ಇನ್ನೊಬ್ಬ ಬಂಡಾಯಿ ಬರೆದುಕೊಂಡಿದ್ದ. ಸುಳ್ಳೇನೂ ಇರಲಿಕ್ಕಿಲ್ಲ. ಆ ತರಹದ ಗೋಸುಂಬೆಗಳು ಬೇಕಾದಷ್ಟು ಜನ ಇದ್ದರು ಬಿಡಿ. ಆದರೆ ಶಾನಬಾಗ ಪ್ರೊಫೆಸರ್ ಆ ಪೈಕಿ ಅಲ್ಲ.

ಸುಮಾರು ಒಂದು ವರ್ಷದ ಆಸು ಪಾಸು ಜೈಲಿನಲ್ಲಿ ಇದ್ದು ಬಂದಿದ್ದರು ಶಾನಬಾಗ್ ಪ್ರೊಫೆಸರ್ ಅಂತ ನೆನಪು. ನಂತರ ಬಿಡುಗಡೆಯಾಗಿತ್ತು. ನಂತರ ಎಂದಿನಂತೆ ತಮ್ಮ ಕೆಲಸ, ಸಂಘದ ಚಟುವಟಿಕೆ ಇತ್ಯಾದಿ ನಡೆಸಿಕೊಂಡು ಹೋಗುತ್ತಿದ್ದರು.

ಕುಮಟಾ ಮೂಲದ ಅವರು ನಮ್ಮ ಕುಟುಂಬಕ್ಕೆ ತುಂಬ ಹತ್ತಿರದವರು. ತಾವು RSS ಆದರೂ ಎಂದೂ ಅವರು ಯಾರಿಗೂ RSS ಸೇರಿ, ಶಾಖೆಗೆ ಬನ್ನಿ ಅಂತ ಒಂದು ಮಾತು ಹೇಳಿದ್ದು ನೆನಪಿಲ್ಲ. ದೊಡ್ಡವರು ಮಾತಾಡುವಾಗ ಸ್ವಲ್ಪ ರಾಜಕೀಯದ ಸುದ್ದಿ ಕೇಳಿದ್ದು ನಿಜ. ಆದರೆ ತಾವು ಕಟ್ಟರ್ RSS ಆದರೂ ಇನ್ನೊಬ್ಬರ ಮೇಲೆ ಅದನ್ನು ಹೇರಬೇಕು, ಅವರನ್ನು RSS ಸೇರುವಂತೆ ಪ್ರೇರೇಪಿಸಬೇಕು ಅನ್ನುವ ಸ್ಕೀಮ್ ಗೀಮು ಎಂದೂ ಅವರು ಹಾಕಲಿಲ್ಲ. ಎಲ್ಲೋ RSS ನವರ ಪುಸ್ತಕ, ಉತ್ಥಾನ ಪತ್ರಿಕೆ ಅದು ಇದು ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಇಲ್ಲ. ನಾವು ಮಾಳಮಡ್ಡಿಯಲ್ಲಿ, ರಾಯರ ಮಠದ ರಸ್ತೆಯಲ್ಲಿಯೇ ಭಾಡಿಗೆ ಮನೆಯಲ್ಲಿ ಇದ್ದಾಗ, ಪ್ರತಿ ಗುರುವಾರ ರಾಯರ ಮಠಕ್ಕೆ ಮಕ್ಕಳ ಸಮೇತ ಬರುತ್ತಿದ್ದ ಶಾನಬಾಗ ಪ್ರೊಫೆಸರ್ ವಾಪಸ್ ಹೋಗುವಾಗ, ನಮ್ಮ ಮನೆಯಲ್ಲಿ ಒಂದು ನಿಮಿಷ ನಿಂತು, ಕಲ್ಲುಸಕ್ಕರೆ ಪ್ರಸಾದ ಕೊಡದೇ ಹೋದವರೇ ಅಲ್ಲ. ಅದಕ್ಕೇ ಏನೋ ಈಗ ಮೋದಿ ಸರಕಾರ ಬಂದಾಗ ಆ ಖಡಕ್ ಒರಿಜಿನಲ್ RSS ಮನುಷ್ಯ ತುಂಬ ನೆನಪಾಗುತ್ತಾರೆ.

೧೯೮೯ ರ ಟೈಮಿನಲ್ಲಿ ರಾಮ ಮಂದಿರ ಕಟ್ಟಲು ಶಿಲೆ ಸಂಗ್ರಹ, ದೇಣಿಗೆ ಸಂಗ್ರಹ ಮಾಡುವ ಎಲ್ಲ ಕೆಲಸದಲ್ಲಿ ಸಕ್ರೀಯರಾಗಿದ್ದರು ಅವರು.  ಆವಾಗ ನಮಗೆ ಹಿರಿಯರೊಂದಿಗೆ ಎಲ್ಲದರ ಮೇಲೆ ವಾದ ವಿವಾದ ಮಾಡುವ ಗೀಳು. ರಾಮ ಮಂದಿರ ನಿರ್ಮಾಣದ ಬಗ್ಗೆ ಒಮ್ಮೆ ಸುಮ್ಮನೆ ಅವರನ್ನು ಫ್ರೆಂಡ್ಲಿ ಆಗಿಯೇ ತಡವಿಕೊಂಡಿದ್ದೆ. ನಮ್ಮ ಆ ಕಾಲದ ಅಪ್ರಬುದ್ಧ ತರಲೆ ವಾದ ವಿವಾದಗಳನ್ನು ನಗು ನಗುತ್ತಲೇ ಕೇಳಿ, "ನಮ್ಮ ಪಾರ್ಟಿಗೆ ಫುಲ್ ಪವರ್ ಬಂದಾಗ ಇದರ ಬಗ್ಗೆ ಮತ್ತೆ ಮಾತಾಡೋಣ," ಅಂತ ಮಾತು ನಿಲ್ಲಿಸಿದ್ದರು ಶಾನಬಾಗ ಪ್ರೊಫೆಸರ್. ಈಗ ಪಾರ್ಟಿಗೆ ಫುಲ್ ಪವರ್, ಪೂರ್ಣ ಮೆಜಾರಿಟಿ ಎಲ್ಲ ಬಂದಿದೆ. ಮಾತಾಡಲು, ಮಾಡಿ ತೋರಿಸಿಲು ಅವರೇ ಇಲ್ಲ. ತೀರಿಹೋಗಿ ಐದಾರು ವರ್ಷಗಳಾದವು ಅಂತ ಕೇಳಿದ್ದು.

ತಾವು ಕಟ್ಟರ್ RSS ಆದರೂ ಪ್ರಜಾಪ್ರಭುತ್ವದಲ್ಲಿ ಫುಲ್ ವಿಶ್ವಾಸ ಅವರಿಗೆ. ನಿರಂತರವಾಗಿ ಆಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ವಾಚಾಮಗೋಚರವಾಗಿ ಬೇಕಾದಷ್ಟು ಬೈದು, ಚುನಾವಣೆ  ದಿವಸ ಮಾತ್ರ ಮತ ಹಾಕದೇ ಮುಸುಕು ಹೊದ್ದು ಮಲಗಿ ಬಿಡುವವರನ್ನು ಲೈಟಾಗಿಯೇ ಬೆಂಡೆತ್ತುತ್ತಿದ್ದರು ಅವರು. "ಕಾಂಗ್ರೆಸ್ ಆರಿಸಿ ತಂದವರು ಯಾರು? ನಾವೇ ಅಲ್ಲವೇನ್ರೀ? ಹಾಂ? ಈಗ ಬೈದು ಏನು ಉಪಯೋಗ? ಬೇರೆ ಪಾರ್ಟಿ ಆರಿಸಿ ತನ್ನಿ," ಅಷ್ಟೇ ಅವರ ಉಪದೇಶ. ಬಿಜೆಪಿಗೇ ಮತ ಹಾಕಿ ಅದು ಇದು ಅಂತ ಎಂದೂ ಮಾತಿಲ್ಲ. ಚುನಾವಣಾ ಪ್ರಚಾರಕ್ಕಾಗಲೀ, ಮತ್ಯಾವದೇ ಕಾರಣಕ್ಕೇ ಆಗಲಿ ಅವರು ಮನೆ ಮನೆ ಸುತ್ತಿದ್ದು ಇಲ್ಲವೇ ಇಲ್ಲ. ಕೇವಲ ಶುದ್ಧ RSS.

RSS ಸೇರಿ ಅಂತ ಶಾನಬಾಗ ಪ್ರೊಫೆಸರ್ ನಮಗೆ ಹೇಳದಿದ್ದರೂ ನಾವು ಒಂದೆರೆಡು ವಾರ ಒಂದು RSS ಶಾಖೆಗೆ ಹೋಗಿ ಬಂದಿದ್ದು ನೆನಪು ಇದೆ. ಅಲ್ಲೇ ಮಾಳಮಡ್ಡಿ ರಾಯರ ಮಠದ ಆಕಡೆ, ಜೇವೂರ ಮಾಸ್ತರ್ ಮನೆ ಪಕ್ಕ, ಆ ಕಾಲದಲ್ಲಿ ಖಾಲಿ ಇದ್ದ ದೊಡ್ಡ ಮೈದಾನದಲ್ಲಿ RSS ಶಾಖೆ ನಡೆಯುತ್ತಿತ್ತು. ಅರುಣ ಭಟ್ಟ ನಮ್ಮ ಖಾಸ್ ದೋಸ್ತ. ಅವನ ಸೋದರಮಾವಂದಿರಾದ ಕಿಟ್ಟಣ್ಣ, ರಾಮಣ್ಣ ಎಲ್ಲ ಕಟ್ಟರ್ RSS. ಎಮರ್ಜೆನ್ಸಿ ಟೈಮ್ ನಲ್ಲಿ ಹಿರಿಯರ ಮಾತು ಕೇಳಿ ಸ್ವಲ್ಪ RSS ಕಮ್ಮಿ ಮಾಡಿದ್ದರು. ಆದರೆ ಪೂರ್ತಿ ಬಿಟ್ಟಿರಲಿಲ್ಲ. ಹೀಗಾಗಿಯೋ ಏನೋ ಕೇವಲ ಕುತೂಹಲಕ್ಕೆ ಆ RSS ಶಾಖೆಗೆ ಹೋಗಿದ್ದೆ. ಜೊತೆಗೆ ಸುತ್ತಮುತ್ತಲಿನ ಭಟ್ಟ, ಕುಬೇರ, ಜೇವೂರ, ಮಾಲಗಾವಿ ಇತರ ಮಿತ್ರರೂ ಸೇರಿಕೊಂಡಿದ್ದರು. ಏನೋ ಹೊಸ ವೇಷ! ಏನೋ ಒಂದು ಮಜಾ! ಆವಾಗ ಇನ್ನೂ ಒಂದನೇ ಕ್ಲಾಸ್. ೧೯೭೮-೭೯ ಅಂತ ನೆನಪು. ಸಂಘದವರು ಆಡಿಸುತ್ತಿದ್ದ ಆಟ, ಹಾಡು ಏನೋ ಸ್ವಲ್ಪ ದಿವಸ ಮಜವಾಗಿ ಕಂಡಿತ್ತು.

ಆ ಸಂಘದ ಶಾಖೆ ಬಿಡಲು ಕಾರಣವಾಗಿದ್ದು ದೊಡ್ಡ ಹುಡುಗರ ಸಣ್ಣ ಪ್ರಮಾಣದ ದಬ್ಬಾಳಿಕೆ ಮತ್ತು ಕೆಟ್ಟ ನಡುವಳಿಕೆ. ಆ ಕಾಲದ ದೊಡ್ಡ ಉಡಾಳ ಹಿಂಗಮೀರೆ ಪಕ್ಯಾ ಮತ್ತು ಅವನ ಕೆಲ ಸಂಗಡಿಗರೂ ಸಹ ಅದೇ ಸಂಘದ ಶಾಖೆಗೆ ಬರಬೇಕೇ! ಶಿವನೇ ಶಂಭುಲಿಂಗ! ಹಿಂಗಮೀರೆ ಪಕ್ಯಾ, ಅವನ ಚೇಲಾ ಪಾರಿವಾಳದ ಟಿಬೇಟಿ ಶಂಬ್ಯಾ ಮುಂತಾದವರ ಇರುವಿಕೆ ಸರಿಯಾಗದೆ ನಮ್ಮ ಸಣ್ಣ ಹುಡುಗರ ಗ್ಯಾಂಗ್ ಸಂಘಕ್ಕೆ ದೊಡ್ಡ ನಮಸ್ಕಾರ ಹಾಕಿ ಬಿಟ್ಟು ಬಂತು. ಆಗಲೇ ಬೇರೆ ಬೇರೆ ಕಾರಣಕ್ಕೆ ಪೋಲೀಸರ ಬೆತ್ತದ ರುಚಿ ಕಂಡಿದ್ದ ಹಿಂಗಮೀರೆ ಪಕ್ಯಾನಂತವರು ಸಂಘದ ಶಾಖೆಯಲ್ಲಿದ್ದಾರೆ ಅಂತ ಶಾನಬಾಗ ಪ್ರೊಫೆಸರಿಗೆ ಗೊತ್ತಾಗಿದ್ದರೆ ಆ ಶಾಖಾ ಪ್ರಮುಖನ ಗ್ರಹಚಾರ ಬಿಡಿಸುತ್ತಿದ್ದರು ಬಿಡಿ. ಅಂತಹ ಜನರನ್ನೆಲ್ಲ RSS ನಲ್ಲಿ ಸೇರಿಸಿಕೊಳ್ಳುವದಕ್ಕೆ ಅವರ ತಾತ್ವಿಕ ವಿರೋಧ ಇದ್ದೇ ಇತ್ತು ಅನ್ನುವದರ ಬಗ್ಗೆ ಎರಡು ಮಾತಿಲ್ಲ. ನಾವೇ ಸಂಘದ ಶಾಖೆ ಬಿಟ್ಟು ಬಂದಿದ್ದರಿಂದ ಶಾನಬಾಗ ಪ್ರೊಫೆಸರಿಗೆ ದೊಡ್ಡ ಹುಡುಗರ ದಬ್ಬಾಳಿಕೆ ಬಗ್ಗೆ ಕಂಪ್ಲೇಂಟ್ ಮಾಡುವ ಪ್ರಮೇಯ ಬರಲಿಲ್ಲ ಬಿಡಿ.

ಮುಂದೆ ನಾವು ಮಾಳಮಡ್ಡಿ ಬಿಟ್ಟು, ಸ್ವಂತ ಮನೆ ಮಾಡಿಕೊಂಡು, ನಿರ್ಮಲ ನಗರಕ್ಕೆ ಬಂದ ಮೇಲೆ ಅಲ್ಲೂ ಸುತ್ತ ಮುತ್ತ ಸಂಘದ ಶಾಖೆ ಇದ್ದರೂ ಆ ಹೊತ್ತಿಗೆ ಓದುವ ಹುಚ್ಚು ಶುರುವಾಗಿ, ಮನೆಯಲ್ಲಿದ್ದ ಬಾಲ ಭಾರತಿ, ಅಮರ ಚಿತ್ರ ಕಥೆಗಳಲ್ಲಿ ಕಳೆದುಹೋಗುವದರಲ್ಲಿ ಇರುವ ಸುಖ ಮತ್ತೆಲ್ಲೂ ಇಲ್ಲ ಅಂತ ಅನ್ನಿಸಿ, ಮತ್ತೆ ಸಂಘ ಅದು ಇದು ಅಂತ ಸೇರಲಿಲ್ಲ. ಮುಂದೆ ಏನಿದ್ದರೂ ವರ್ಷಕ್ಕೊಮ್ಮೆ RSS ನವರು ಆಚರಿಸುತ್ತಿದ್ದ ರಕ್ಷಾ ಬಂಧನಕ್ಕೆ ಹೋಗಿ, ನೂಲಿನ ಸ್ಟ್ಯಾಂಡರ್ಡ್ ರಾಖಿ ಕಟ್ಟಿಸಿಕೊಂಡು, ಪ್ರಸಾದ ತೆಗೆದುಕೊಂಡು, ಶಾಖೆಯ ಹಿರಿಯರು ಮಾಡಿದ ಒಂದು ಭಾಷಣ ಕೇಳಿ ಬಂದರೆ RSS ನೆನಪು ಮುಂದಿನ ವರ್ಷವೇ. ಸುಮಾರು ಸಲ RSS ನವರ ರಕ್ಷಾ ಬಂಧನ ಸಮಾರಂಭದಲ್ಲೇ ಶಾನಬಾಗ ಪ್ರೊಫೆಸರ್ ಅವರನ್ನು ಕಂಡ ನೆನಪು.

ವಿಪರ್ಯಾಸ ನೋಡಿ. ಆ ಕಾಲದಲ್ಲಿ RSS ಶಾಖೆಯಲ್ಲಿ ರೋಪ್ ಹಾಕಿಕೊಂಡು ಮೆರೆಯುತ್ತಿದ್ದ ಹಿಂಗಮೀರೆ ಪಕ್ಯಾ ಮುಂದೆ ೧೯೯೦ ರ ಸಮಯದಲ್ಲಿ ಪೂರ್ತಿ ಕಾಂಗ್ರೆಸ್ ಪುಡಾರಿಯಾಗಿಬಿಟ್ಟ ಅಂತ ಪತ್ರಿಕೆಗಳಲ್ಲಿ ಓದಿ ತಿಳಿಯಿತು. ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳಲೇ ಬೇಕು. ಇಲ್ಲಂದ್ರೆ ಆತ್ಮಾಹುತಿ ಮಾಡಿಕೊಳ್ಳುತ್ತೇವೆ, ಅಂತ ಪ್ರಕಟಣೆ ಕೊಟ್ಟ ಯುವ ಕಾಂಗ್ರೆಸ್ ಮುಖಂಡರ ಹೆಸರಲ್ಲಿ ಇವನ ಹೆಸರೂ ಇತ್ತು. ಅಕಟಕಟಾ! ಸಂಘದ ಆ ರಾಯರ ಮಠದ ಶಾಖೆಯ ದೌರ್ಭಾಗ್ಯ! ಅಂದಿನ ಸಂಘದ 'ಸ್ವಯಂ ಸೇವಕ' ಈಗ ಸೋನಿಯಾ ಗಾಂಧಿಗಾಗಿ ಆತ್ಮಾಹುತಿ ಮಾಡಿಕೊಳ್ಳಲು ತಯಾರು! ಮುಂದೆ ಮರ್ಡರ್ ಕೇಸೊಂದರಲ್ಲಿ ಬಂಧಿತನಾಗಿ, ಜಾಮೀನ ಮೇಲೆ ಬಿಡುಗಡೆಯಾಗಿದ್ದ ಹಿಂಗಮೀರೆ ಪಕ್ಯಾ ಸತ್ತೂ ಹೋದ ಅಂತ ಓದಿದ್ದೆ. ಮಿತ್ರ ಶಿವಾನಂದ ಮಾಲಗಾವಿಯನ್ನು ಅನೇಕ ವರ್ಷಗಳ ನಂತರ ಫೇಸ್ ಬುಕ್ ಮೇಲೆ ಹಿಡಿದು, ಹರಟೆ ಶುರು ಮಾಡಿದಾಗ ಮೊದಲು ಕೇಳಿದ್ದು, "ಏ! ಆವಾ ಟಿಬೇಟಿ ಶಂಬ್ಯಾ ಎಲ್ಲೆ ಹೋದ ಮಾರಾಯಾ? ನಿಮ್ಮ ಮನಿ ಬಾಜೂಕ ಇದ್ದಾ ನೋಡ. ಪಾರಿವಾಳ ಸಾಕಿದ್ದಾ. ನೆನಪಾತ?" ಅಂತ. "ಮಹೇಶಾ! ಟಿಬೇಟಿ ಶಂಬ್ಯಾ ಈಗ ಮೈಸೂರಾಗ ಅದಾನೋ. ಅವರ ಸಿಸ್ಟರ ಅರವಿ ಅಂಗಡಿ ಐತಂತ ನೋಡಪಾ. ಜಾಸ್ತಿ ಏನ ಗೊತ್ತಿಲ್ಲ," ಅಂತ ಹೇಳಿ ಮಾತು ಮುಗಿಸಿದ ಮಾಲಗಾವಿ. ಅಷ್ಟರ ಮಟ್ಟಿಗೆ ಆ ಕಾಲದ ಇಬ್ಬರು ಖೊಟ್ಟಿ RSS ಮಂದಿ ಈಗ RSS ಗೆ ಹತ್ತಿರ ಕೂಡ ಇಲ್ಲ ಅಂತ ತಿಳಿದು, ಹೋಗ್ಗೋ! ಇಂತವರೂ ಒಮ್ಮೆ RSS ನಲ್ಲಿ ಹೊಕ್ಕಿದ್ದರಾ? ಅಂತ ಅನ್ನಿಸಿದ್ದು ಮಾತ್ರ ನಿಜ.

ಬಾಲ್ಯದಲ್ಲಿ ಅಮ್ಮನ ಹಾಲಿನೊಂದಿಗೆ ಒಂದಿಷ್ಟು RSS, ನಿಗಿ ನಿಗಿ ತಾರುಣ್ಯದಲ್ಲಿ ಒಗರು ಬಿಯರ್ ಜೊತೆ ಕಮ್ಯುನಿಸಂ / ಕಮ್ಯುನಿಸ್ಟ್ ಅನ್ನೋ ಗುಂಗು, ನಂತರದಲ್ಲಿ ಚುನಾವಣೆ ದಿವಸ ಗಿಚ್ಚಾಗಿ ಕಂಟ್ರಿ ಸೆರೆ ಕುಡಿದು, ಮುಸುಕೆಳೆದು ಮಲಗಿ, ಓಟು ಹಾಕಲು ಹೋಗಲಿಕ್ಕೂ ಬೇಸರ ಅನ್ನುವ ಮನಸ್ಥಿತಿ. ಇದು ನಮ್ಮ ಜನರ ಕರ್ಮ! ಅಂತ ರವಿ ಬೆಳಗೆರೆ ಎಲ್ಲೋ ಬರೆದಿದ್ದರು. ತಾರುಣ್ಯದಲ್ಲಿ ಕಮ್ಯುನಿಸಂ ಬಗ್ಗೆ ಗೊತ್ತಿಲ್ಲ. ಆದ್ರೆ ಬಾಲ್ಯದಲ್ಲಿ RSS ಮತ್ತೆ ನಂತರ ಮತ ಹಾಕಲು ನಿರುತ್ಸಾಹ ಮಾತ್ರ ಹೌದು ಅನ್ನಿಸುತ್ತದೆ ಬಹಳ ಜನರ ಕರ್ಮ ನೋಡಿದರೆ.

ಈಗ ಬಿಜೆಪಿ, ಸಂಘ ಪರಿವಾರದ ಅಮೋಘ ಯಶಸ್ಸನ್ನು ನೋಡಲು ಶಾನಬಾಗ ಪ್ರೊಫೆಸರ್ ಇರಬೇಕಿತ್ತು ಅಂತ ಅನ್ನಿಸಿದರೂ ಅವರ ಇನ್ನೊಂದು ಅಕ್ಕರೆಯ ಕೂಸಾಗಿದ್ದ ಕವಿವಿ ಸಂಸ್ಕೃತ ವಿಭಾಗದ ಹಾಲತ್ ನೋಡಿದರೆ ಮಾತ್ರ ಶಾನಬಾಗ ಪ್ರೊಫೆಸರ್ ಮಮ್ಮಲ ಮರಗುತ್ತಿದ್ದರು ಅನ್ನುವದು ಖಾತ್ರಿ. ಯಾಕೆಂದರೆ ಕವಿವಿಯ ಸಂಸ್ಕೃತ ವಿಭಾಗ ಪೂರ್ತಿಯಾಗಿ ಬಂದಾಗಿ ಹೋಗಿದೆ. ವಿದ್ಯಾರ್ಥಿಗಳು ಇಲ್ಲವೇ ಇಲ್ಲವಂತೆ. ಸ್ನಾತಕೋತ್ತರ ಪದವಿ ಪಡೆಯಲು ಒಂದೋ ಎರಡೋ ಜನ ಮಾತ್ರ ಬಂದು, ಕೆಲವೊಂದು ವರ್ಷ ಅಷ್ಟೂ ಬರದೇ ಸಂಸ್ಕೃತ ವಿಭಾಗ ಪೂರ್ತಿ ಖಾಲಿಯಾಗಿದೆ. ಅದಕ್ಕೇ ಎಲ್ಲ ಕೋರ್ಸ್ ಬಂದ್. ಇದ್ದ ಬಿದ್ದ ಸಂಸ್ಕೃತ  ಅಧ್ಯಾಪಕರನ್ನು ಆಡಳಿತ ಮತ್ತಿತರೇ ಕೆಲಸಗಳಿಗೆ ನಿಯುಕ್ತಿ ಮಾಡಿ 'ಹಜಾಮರ ಕೆಲಸ ಹಕೀಮರ ಕೈಯಲ್ಲಿ' ಮಾಡಿಸುವಂತಾಗಿದ್ದು ದೊಡ್ಡ ದುರಂತ. ಮೊದಲು ನಮ್ಮ ಹೈಸ್ಕೂಲಿನಲ್ಲಿ ಮಾಸ್ತರಾಗಿದ್ದು, PhD ಮಾಡಿದ ನಂತರ ದೊಡ್ಡ ನೌಕರಿ ಅಂತ ಯೂನಿವರ್ಸಿಟಿ ಸೇರಿದ್ದ ಮಹಾನ್ ಮೇಧಾವಿ ಜೋಶಿ ಸರ್ ಇವತ್ತು ಸಂಸ್ಕೃತ ಕಲಿಸುವದನ್ನು ಬಿಟ್ಟು, ಯೂನಿವರ್ಸಿಟಿ ಜಿಮ್ಖಾನಾದಲ್ಲಿ, ಕೈಯಲ್ಲಿ ಕ್ಲಿಪ್ ಬೋರ್ಡ್ ಹಿಡಿದುಕೊಂಡು ಕ್ರೀಡಾಪಟುಗಳ ಲೆಕ್ಕ ಬರಿಯಬೇಕಾಗಿ ಬಂದಿದ್ದು ದೊಡ್ಡ ವಿಪರ್ಯಾಸ ಮತ್ತು ದುರಂತ. ಹಾಗಂತ ಯಾರೂ ಸಂಸ್ಕೃತ ಅಧ್ಯಯನ ಮಾಡುತ್ತಿಲ್ಲ ಅಂತಲ್ಲ. ನಿಜವಾಗಿ ಶ್ರದ್ಧೆಯಿದ್ದವರು ಸರಿಯಾದ ಜಾಗಕ್ಕೇ ಹೋಗಿ, ಕಲಿಯಬೇಕಾದವರಿಂದ ಸರಿಯಾಗೇ ಕಲಿಯುತ್ತಿದ್ದಾರೆ. ಅದಕ್ಕೇ ದಿವಂಗತ ಭಾಲಚಂದ್ರ ಶಾಸ್ತ್ರಿಗಳ ಗುರುಕುಲದಂತಹ ಸಂಸ್ಕೃತ ಕಾಲೇಜು ತುಂಬಿ ತುಳುಕುತ್ತಿದೆ. ಇಲ್ಲಿ ಕವಿವಿಯ ಸಂಸ್ಕೃತ MA ಎಮ್ಮೆ ಕಾಯಲು ಹೋಗಿದೆ. ಸಂಸ್ಕೃತ ಕಲಿಸಲು ಬೇಕಾದಂತ ಸಂಸ್ಕೃತಿ ಯೂನಿವರ್ಸಿಟಿಗಳಿಂದ ಮಾಯವಾಗಿದ್ದೇ ಶ್ರದ್ಧಾವಂತ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಪಂಡಿತರ ಕೆಳಗೆ ಅಧ್ಯಯನ ಮಾಡಿ, ಹೊರಗಿಂದಲೇ ಬೇಕಾದ ಡಿಗ್ರಿ ಮತ್ತೊಂದು ಮಾಡಿಕೊಳ್ಳುತ್ತಿರುವದಕ್ಕೆ ಕಾರಣ. ಸಂಸ್ಕೃತಕ್ಕೇ ಅಂತ ಪ್ರತ್ಯೇಕ ಯೂನಿವರ್ಸಿಟಿ ಸಹಿತ ಬಂದಿದೆಯಲ್ಲ. ತಾವು ಕಟ್ಟಿ ಬೆಳೆಸಿದ ಸಂಸ್ಕೃತ ವಿಭಾಗ ಮುಚ್ಚಿಹೋಗಿರುವದನ್ನು ನೋಡಿದ ಶಾನಬಾಗ ಪ್ರೊಫೆಸರ್ ಭಾವನೆಗಳನ್ನು ಊಹಿಸಲು ಸಾಧ್ಯ ಇಲ್ಲ ಬಿಡಿ. ಅದೆಷ್ಟು ವಿಲಿವಿಲಿ ಒದ್ದಾಡಿ  ಹೋಗುತ್ತಿದ್ದರೋ ಏನೋ. ಎಮರ್ಜೆನ್ಸಿಯಲ್ಲಿ ಬೂಟಿನ ಒದೆ, ಲಾಠಿ ಏಟು ತಿಂದಿದ್ದರಿಕಿಂತ ಹೆಚ್ಚಿನ ನೋವಾಗುತ್ತಿತ್ತು ಅವರಿಗೆ.

ಮೋದಿ ಸರಕಾರ, ಬಿಜೆಪಿಯ ಸ್ವರ್ಣಯುಗ ನೋಡಲು ಇರಬೇಕಾದ ಧಾರವಾಡದ ಇನ್ನೊಬ್ಬ ಸಂಘ ಜೀವಿ ಅಂದ್ರೆ ಶಿರೂರ್ ಮಾಸ್ತರರು. ಅವರು ಭಾರತ ಹೈಸ್ಕೂಲಿನ ನಿವೃತ್ತ ಶಿಕ್ಷಕರು. ಹಲವಾರು ವರ್ಷ ಇಡೀ ಧಾರವಾಡವನ್ನು ತಮ್ಮ ಸೈಕಲ್ ಮೇಲೆ ಸುತ್ತಿ, ಸಂಘದ ಮುಖವಾಣಿಯಂತಿರುವ ಇಂಗ್ಲಿಷ್ ಪತ್ರಿಕೆ 'Organizer' ನ್ನು ಚಂದಾದಾರರಿಗೆ ಹಂಚಿದವರು ಅವರು. ಇದು ಅವರು ರಿಟೈರ್ ಆದ ಮೇಲೆ ಮಾಡಿದ ಸಂಘ ಸೇವೆ. ಮೊದಲು ಇದರ ಹತ್ತು ಪಟ್ಟು ಸಂಘದ ಸೇವೆ ಮಾಡಿರಬೇಕು ಬಿಡಿ. ಸುಮಾರು ಎಪ್ಪತ್ತು ವರ್ಷದವರೆಗೂ ಊರ ತುಂಬಾ ಸೈಕಲ್ ಹೊಡೆದು, ಪೇಪರ್ ಹಂಚಿ, ಶಿಸ್ತಾಗಿ ಚಂದಾ ಸಂಗ್ರಹಿಸಿ, ಆ RSS ಪತ್ರಿಕೆ ಧಾರವಾಡ ಜನರ ಮನೆಮನೆಗಳಲ್ಲಿ, RSS ಸಿದ್ಧಾಂತ ಸ್ವಲ್ಪ ಮಟ್ಟಿಗಾದರೂ ಜನರ ಮನಮನದಲ್ಲಿ ಇರುವಂತೆ ನೋಡಿಕೊಂಡಿದ್ದು ಶಿರೂರ್ ಮಾಸ್ತರರು ಮತ್ತು ಅವರ ಸಂಘ ನಿಷ್ಠೆ. ಅವರಾದರೂ ಇನ್ನೂ ಇದ್ದಾರಾ? ಗೊತ್ತಿಲ್ಲ. ಬದುಕಿದ್ದರೆ ಬಿಜೆಪಿಯ ಅಭೂತಪೂರ್ವ ಯಶಸ್ಸು ನೋಡಿ ಸಂಭ್ರಮಿಸುತ್ತಿರಬೇಕು ಬಿಡಿ ಶಿರೂರ್ ಮಾಸ್ತರರು.

ಶಾನಬಾಗ ಪ್ರೊಫೆಸರಂತೂ ಇಲ್ಲ. ಶಿರೂರ್ ಮಾಸ್ತರ್ ಗೊತ್ತಿಲ್ಲ. ಇರಲಿ ಬಿಡಲಿ ಅಂತಹ ನಿಸ್ಪ್ರಹ ಸಂಘ ಪರಿವಾರದ ಜನರ ಅರವತ್ತಕ್ಕೂ ಹೆಚ್ಚು ವರ್ಷಗಳ ಶ್ರಮದಾನ, ಬಲಿದಾನದಿಂದಲೇ ಇವತ್ತಿನ ಈ ಶುಭ ಪರಿಸ್ಥಿತಿ. ಅವರ ಶ್ರಮ, ಬಲಿದಾನಗಳಿಗೊಂದು ಒಳ್ಳೆಯ ಮನ್ನಣೆ ಸಿಗಲಿ. ಅಷ್ಟು ಸಾಕು.

* ಶಾನಬಾಗ ಪ್ರೊಫೆಸರ್, ಶಿರೂರ್ ಮಾಸ್ತರ್ ಫೋಟೋ ಸಿಕ್ಕಿಲ್ಲ. ಯಾರಾದರೂ ಧಾರವಾಡಿಗಳು ಕೃಪೆ ಮಾಡಿ ಕಳಿಸಿಕೊಟ್ಟರೆ ಮುದ್ದಾಂ ಹಾಕುತ್ತೇನೆ.

* ಜುಲೈ ೧೩, ೨೦೧೫: ಧಾರವಾಡದಲ್ಲಿ ನನ್ನ ಸ್ಕೂಲ್ ಮಿತ್ರನೂ, ಶಾನಬಾಗ ಪ್ರೊಫೆಸರ್ ಮನೆಯ ಪಕ್ಕದಮನೆಯವನೂ ಆದ ಸಮೀರ್ ಇನಾಂದಾರ್ ಪ್ರೊಫೆಸರ್ ಅವರ ಫೋಟೋ ಸಂಪಾದಿಸಿ ಕಳಿಸಿದ್ದಾನೆ. ಅದಕ್ಕೆ ಅವನಿಗೊಂದು ದೊಡ್ಡ ಧನ್ಯವಾದ. ಥ್ಯಾಂಕ್ಸ್, ಸಮೀರ್ ಇನಾಂದಾರ್!

Sunday, June 15, 2014

ಮಗ 'ಅರಳಿದ ಹೂ'. ಅಪ್ಪ 'ಬಾಡದ ಹೂ'. ಗುರುದತ್ತ ನಾರಾಯಣ ಹೆಗಡೆ ಎಂಬ ಐಎಎಸ್ ಟಾಪರ್.

ಗುರುದತ್ತ ನಾರಾಯಣ ಹೆಗಡೆ (ಚಿತ್ರ ಕೃಪೆ: ದೈಜಿ ವರ್ಲ್ಡ್)
ಗುರುದತ್ತ  ನಾರಾಯಣ ಹೆಗಡೆ ಎಂಬ ಧಾರವಾಡದ ಹವ್ಯಕ ಮಾಣಿಯೊಬ್ಬ ೨೦೧೩ ಸಾಲಿನ ಅಖಿಲ ಭಾರತ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಇಪ್ಪತ್ತೈದನೇ (25) ಸ್ಥಾನ ಪಡೆದು ಯಶಸ್ವಿಯಾಗಿದ್ದಾನೆ. ಧಾರವಾಡದಲ್ಲಿ ನಮ್ಮ ಆತ್ಮೀಯರ ಮಗ ಮತ್ತೆ ನಮ್ಮ ಸಂಬಂಧಿ ಅನ್ನುವದು ದೊಡ್ಡ ಹೆಮ್ಮೆಯ ವಿಷಯ. ಕನ್ನಡ ಮಾಧ್ಯಮದಲ್ಲಿಯೇ ಬರೆದು, ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವನ್ನಾಗಿ ಆರಿಸಿಕೊಂಡು, ಐಎಎಸ್ ಪರೀಕ್ಷೆಯಲ್ಲಿ ಇಷ್ಟು ಉನ್ನತ ಸ್ಥಾನ ಪಡೆದಿರುವವರು ಈ ಮೊದಲು ಯಾರೂ ಇರಲಿಕ್ಕಿಲ್ಲ.

ವಿಷಯ ಇಷ್ಟೇ ಆಗಿದ್ದರೆ ಹೆಮ್ಮೆ, ಖುಷಿ, ಸಂತೋಷ ಎಲ್ಲ ಪಟ್ಟು ಸುಮ್ಮನಾಗುತ್ತಿದ್ದೆವೋ ಏನೋ. ಆದರೆ ಈ ಮಾಣಿಯ ಯಶಸ್ಸಿನ ಸುದ್ದಿ ಕೇವಲ ಖುಷಿಯೊಂದನ್ನೇ ತರಲಿಲ್ಲ, ಅನೇಕಾನೇಕ ಹಳೆಯ ಸುಮಧುರ ನೆನಪಗಳನ್ನೂ ಸಹ ಜೊತೆಗೆ ತಂದು ಸಂತೋಷ ದುಪ್ಪಟ್ಟಾಯಿತು.

ಈ ಗುರುದತ್ತ ಹೆಗಡೆಯ ಕುಟುಂಬ ನಮಗೆ ತುಂಬ ಆಪ್ತವಾದದ್ದು. ಇವನ ತಂದೆ ನಾರಾಯಣ ಹೆಗಡೆ ನಮಗೆ ಮೊದಲಿಂದ 'ಕರ್ಜೀ ಮಾವ' ಎಂದೇ ಪರಿಚಿತರು ಮತ್ತು ಆತ್ಮೀಯರು. ಸಿರ್ಸಿ ಸಮೀಪದ ಊರು ಕರ್ಜೀಮನೆಯವರಾದ ಅವರು ೧೯೭೫-೭೬ ರ ಹೊತ್ತಿಗೆ ಧಾರವಾಡಕ್ಕೆ ಡಿಗ್ರಿ ಮಾಡಲು ಬಂದಾಗಿನಿಂದ ನಮಗೆ ಬಹಳ ಆತ್ಮೀಯರು. ನಮ್ಮ ಕಾಲದ ಹವ್ಯಕ ಹುಡುಗರಿಗೆ ಎಲ್ಲರೂ ಮಾವ, ಎಲ್ಲರೂ ಅತ್ತೆ. ಈಗಿನ ಹುಡುಗರಿಗೆ ಅಂಕಲ್ಲು, ಆಂಟಿಗಳಿದ್ದ ಹಾಗೆ. ಕರ್ಜೀಮನೆ ಅನ್ನುವ ವಿಶಿಷ್ಟ ಹೆಸರಿನ ಊರಿನಿಂದ ಬಂದ ಇವರಿಗೆ ನಾಣ (ನಾರಾಯಣ) ಮಾವ ಅನ್ನುವ ಜರೂರತ್ತೇ ಬರಲಿಲ್ಲ. ವಿಶಿಷ್ಟವಾದ 'ಕರ್ಜೀಮನೆ ಮಾವ' ಉರ್ಫ್ 'ಕರ್ಜೀ ಮಾವ' ಅನ್ನುವ ಹೆಸರೇ ಖಾಯಂ ಆಯಿತು. ಈ ಕರ್ಜಿಮನೆ ಅನ್ನುವ ಊರು ಸಿರ್ಸಿ ತಾಲೂಕಿನ ಹೊನ್ನೆಗದ್ದೆ ಎಂಬ ಹಳ್ಳಿಯ ಒಂದು ಭಾಗವೇ. ಅದು ಏನೋ, ಒಟ್ಟಿನಲ್ಲಿ ಸರಕಾರೀ ದಾಖಲೆಗಳಲ್ಲಿ ಕರ್ಜೀಮನೆ ಒಂದು ಬೇರೆ ಗ್ರಾಮ ಅಂತಿದೆ. ನಮ್ಮ ಅಜ್ಜನ ಮನೆ (ತಾಯಿಯ ತವರೂರು) ಹೊನ್ನೆಗದ್ದೆ. ಮತ್ತೆ ನಮ್ಮ ಅಜ್ಜನ ಅಣ್ಣನ ಹೆಂಡತಿ ಕರ್ಜೀಮನೆಯವರು ಅಂತ ಕೇಳಿದ್ದು. ಅವರನ್ನೆಲ್ಲ ನಾವು ನೋಡಿಲ್ಲ. ನೋಡಲು ಅವರೆಲ್ಲ ನಾವು ಹುಟ್ಟುವ ಮೊದಲೇ ತೀರಿ ಹೋಗಿದ್ದರು. ಹೀಗೆ ಕರ್ಜೀಮನೆ ಜೊತೆ ಸಂಬಂಧ ಕೂಡ ಉಂಟು.

ಸಣ್ಣವರಿದ್ದಾಗ ರಜೆ ಬಿಟ್ಟ ತಕ್ಷಣ ಅಜ್ಜನ ಮನೆಗೆ ಓಡುವ ಕಾತುರ. ಕಳಿಸಿ ಬಿಟ್ಟು ಬರಲು ಯಾರಾದರೂ ದೊಡ್ಡವರು ಬೇಕು. ಅಂತಹ ಹೊತ್ತಿನಲ್ಲಿ ಸಿರ್ಸಿ ಕಡೆ ಹೋಗಿ ಬಂದು ಮಾಡುತ್ತಿದ್ದ ಧಾರವಾಡದಲ್ಲಿ ಓದುತ್ತಿದ್ದ ಸಿರ್ಸಿ ಕಡೆಯ ಮಾಣಿ, ಕೂಸುಗಳೇ ನಮಗೆ ಆಧಾರ. ನಮ್ಮಂತ ಸಣ್ಣ ಮಾಣಿಗಳನ್ನು ಕರೆದುಕೊಂಡು ಹೋಗಿ ಅಜ್ಜನ ಮನೆ ಮುಟ್ಟಿಸುವ ಜವಾಬ್ದಾರಿ ಅಂತಹ ಹವ್ಯಕ ಮಾವಂದಿರದ್ದು. ಅದರಲ್ಲೂ ಈ ಕರ್ಜೀ ಮಾವ ನಮ್ಮ ಅಜ್ಜನ ಮನೆ ಊರಿನವರೇ ಆದ್ದರಿಂದ ಅವರೊಂದಿಗೆ ಸಿರ್ಸಿಗೆ ಹೋಗಿ, ಬಂದು ಮಾಡಿದ ನೆನಪುಗಳು ಬಹಳ ಇವೆ ಬಿಡಿ. ಆ ಕಾಲದಲ್ಲಿ ಧಾರವಾಡದಿಂದ ಸಿರ್ಸಿಗೆ ಹೋಗಿ, ಅಲ್ಲಿಂದ ಹಳ್ಳಿ ಕಡೆ ಹೋಗೋ ಬಸ್ ಹಿಡಿದು, ಹೊನ್ನೆಗದ್ದೆ ಬಸ್ಟಾಪಿನಲ್ಲಿಯೋ, ಹೊಸ್ಮನೆ ಕತ್ರಿಯಲ್ಲಿಯೋ ಇಳಿದು, ನಂತರ ಕಾಡು, ತೋಟ, ಗದ್ದೆ, ಹಳ್ಳದ ಮೇಲಿನ ಸಂಕದ ಮೇಲೆ ಒಂದು ಮೈಲಿ ನೆಡೆದು, ಮೊದಲು ಸಿಗುತ್ತಿದ್ದ ಇವರ ಕರ್ಜೀಮನೆಯಲ್ಲಿ ಒಂದು ಕುಡತೆ ಆಸ್ರೀ ಕುಡಿದು (ಸಣ್ಣ ನಾಷ್ಟಾ ಮಾಡಿ), ಅಜ್ಜನ ಮನೆ ಮುಟ್ಟುವಷ್ಟರಲ್ಲಿ ಸುಮಾರು ಏಳೆಂಟು ತಾಸು ಬೇಕಾಗುತ್ತಿತ್ತು. ಮೊತ್ತ ಮೊದಲ ಬಾರಿಗೆ ಮಿಸ್ರಿ ಜೇನುತುಪ್ಪ ತಿನ್ನಿಸಿದ್ದು ಈ ಕರ್ಜೀ ಮಾವನೇ ಅಂತ ನೆನಪು. ರಜೆಯಲ್ಲಿ ಕಾಡು ಮೇಡು ಸುತ್ತಿ, ಅಜ್ಜನ ಮನೆ ಕಡೆ ವಾಪಸ್ ಬರುತ್ತಿದ್ದಾಗ, "ಏ ಮರೀ! ಹನಿ ಬಂದೋಗಾ. ಈಗ ಮಾತ್ರ ತೆಗೆದ ಮಿಸ್ರಿ ಇದ್ದು. ಒಂದು ರಟ್ಟು ತಿಂದ್ಕ ಹೋಗು" ಅಂತ ಹೇಳಿ ಮಿಸ್ರಿ ಎಂಬ ಅಪರೂಪದ ಜೇನುತುಪ್ಪದ ಸವಿ ಸವಿದಿದ್ದು ಇವರ ಕೃಪೆಯಿಂದಲೇ. 

ಈ ಗುರುದತ್ತ ಹೆಗಡೆ ಐಎಎಸ್ ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣನಾದ ಅನ್ನುವ ಸುದ್ದಿ ಮೊದಲ ಬಾರಿಗೆ, ಯಾವದೇ ಪತ್ರಿಕೆಯಲ್ಲಿ ಬರುವ ಮೊದಲು, ತಿಳಿದಿದ್ದು ಧಾರವಾಡದ ಶ್ರೀ ಗುರುರಾಜ ಜಮಖಂಡಿ ಅವರ ಫೇಸ್ಬುಕ್ ಸ್ಟೇಟಸ್ ಅಪ್ಡೇಟ್ ನಿಂದ. ಅದು ಒಂದು ತರಹ ಬ್ರೇಕಿಂಗ್ ನ್ಯೂಸ್. ಈ ಜಮಖಂಡಿ ನಮ್ಮ ಗುರುಗಳು. ಒಂಬತ್ತನೇ ಕ್ಲಾಸಿನಲ್ಲಿ ಭೂಗೋಳ ಕಲಿಸಿದ್ದಾರೆ. NCC ನಲ್ಲಿ ನಮ್ಮ ಕಮಾಂಡಿಂಗ್ ಆಫೀಸರ್ ಅಂತ ಸಹ ಇದ್ದರು ಒಂದು ವರ್ಷ. ಮಾಸ್ತರಿಕೆಯೊಂದಿಗೆ ಪತ್ರಕರ್ತರೂ ಸಹ. ಹವ್ಯಾಸಿ ಕಲಾವಿದರಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಐಎಎಸ್ ರಿಸಲ್ಟ್ ತಿಳಿಯುತ್ತಲೇ ಇಂತಹ ಜಮಖಂಡಿ ಸರ್ ಅವರು ಗುರುದತ್ತ ಹೆಗಡೆ ಮನೆಗೆ ಹೋಗಿ, ಅವನಿಗೆ ಅಭಿನಂದನೆ ಸಲ್ಲಿಸಿ, ಒಂದೆರಡು ಫೋಟೋ ತೆಗೆದುಕೊಂಡು ಬಂದು, ಫೇಸ್ಬುಕ್ ಮೇಲೆ ಹಾಕಿ, ಒಂದು ಚಿಕ್ಕ ಬರಹ ಬರೆದಿದ್ದರು. ಆವಾಗ ಗೊತ್ತಾಯಿತು ನಮ್ಮ ಕರ್ಜೀ ಮಾವನ ಮಗ ಐಎಎಸ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾನೆ ಅಂತ. ಎಲ್ಲಕ್ಕಿಂತ ಮೊದಲಿಗೆ ಒಳ್ಳೆ ಸುದ್ದಿ ಕೊಟ್ಟ ಜಮಖಂಡಿ ಸರ್ ಅವರಿಗೊಂದು ದೊಡ್ಡ ನಮಸ್ಕಾರ ಅನಂತ ಧನ್ಯವಾದಗಳೊಂದಿಗೆ.

ಮಜಾ ನೋಡಿ....ನಮ್ಮ ಪ್ರೀತಿಯ ಕರ್ಜೀ ಮಾವ ಉರ್ಫ್ ನಾರಾಯಣ ಹೆಗಡೆ ಕೂಡ ಅವರ ವಿದ್ಯಾರ್ಥಿ ದಿನಗಳಲ್ಲಿ ಹವ್ಯಾಸಿ ರಂಗ ಕಲಾವಿದ. 'ಬಾಡದ ಹೂ' ಎಂಬ ೧೯೮೨, ೮೩ ಟೈಮ್ ನಲ್ಲಿ ಬಂದ ಚಿತ್ರವೊಂದರಲ್ಲಿ ಚಿಕ್ಕ ಸೈಡ್ ಪಾತ್ರ ಮಾಡಿದ್ದ ಕೂಡ. ಪಾತ್ರ ಮಾಡಬೇಕು ಅಂತ ಹುಡಕಿಕೊಂಡು ಹೋಗಿ ಮಾಡಿದ್ದ ಪಾತ್ರವಲ್ಲ. ಆ ಕಾಲದಲ್ಲಿ ಅವನು ಧಾರವಾಡದ ಕವಿವಿಯಲ್ಲಿ MSW (Master of Social Work) ಓದುತ್ತಿದ್ದ. ಅವರ ಗುರುಗಳಾದ ಪ್ರೊ. ಕುಲಕರ್ಣಿ ಅನ್ನುವವರು ಸಿನಿಮಾ ರಂಗದ ಜೊತೆ ಒಡನಾಟ ಹೊಂದಿದ್ದರು. ಈ 'ಬಾಡದ ಹೂ' ಚಿತ್ರದ ಒಂದು ಗೀತೆಗೆ ಹೀರೋ ಅನಂತ ನಾಗ್, ಹೀರೋಯಿನ್ ಪದ್ಮಪ್ರಿಯಾ ಜೊತೆಯಾಗಿ ಕೋರಸ್ ನಲ್ಲಿ ಹಾಡಿ, ಕುಣಿಯಲು ಒಂದಿಷ್ಟು ಜನ ಕಾಲೇಜ್ ಹುಡುಗ ಹುಡುಗಿಯರು ಬೇಕಾಗಿದ್ದರು. ಕುಲಕರ್ಣಿ ಮಾಸ್ತರರು ತಮ್ಮ ವಿದ್ಯಾರ್ಥಿಗಳ ತಂಡ ಕರೆದುಕೊಂಡು ಹೋಗಿ, ಚಿತ್ರೀಕರಣದಲ್ಲಿ ಭಾಗವಹಿಸಿ, ನಮ್ಮ ಕರ್ಜೀ ಮಾವನಂತಹ ಹುಡುಗರಿಗೆ ಸಿನಿಮಾದಲ್ಲಿ ನಟಿಸಿದ  ಒಂದು ಅನುಭವವನ್ನೂ ಮಾಡಿಸಿದ್ದರು. ಈ ಪ್ರೊ. ಕುಲಕರ್ಣಿ ಯಾರು ಅಂತ ನೋಡುತ್ತ ಹೋದರೆ ಇವರು ನಮ್ಮ ಜಮಖಂಡಿ ಸರ್ ಅವರ ಮಾವ (ಪತ್ನಿಯ ತಂದೆ). ಜಮಖಂಡಿ ಸರ್ ಅವರಿಗೆ ವಿಷಯ ತಿಳಿಸಿ ಕೇಳಿದೆ,"ಸರ್! ನಿನ್ನೆ ನೀವು ಗುರುದತ್ ಹೆಗಡೆ ಐಎಎಸ್ ಟಾಪರ್ ಆಗಿದ್ದಾನೆ ಅಂತ ನ್ಯೂಸ್ ಕೊಟ್ಟಿರಿ. ಅವರಪ್ಪ ನಾರಾಯಣ ಹೆಗಡೆ 'ಬಾಡದ ಹೂ' ಪಿಚ್ಚರ್ ಒಳಗ, ಗ್ರೂಪ್ ಸಾಂಗ್ ಒಳಗ ಇದ್ದರು. ಅದರಲ್ಲಿ ನಿಮ್ಮ ಮಾವ ಸಹಿತ ಇದ್ದರು. ಅಲ್ಲರೀ ಸರ್?" ಅಂತ. " ಹೌದಪಾ! ಕರೆಕ್ಟ್ ಹೇಳಿದಿ! ಥ್ಯಾಂಕ್ಯೂ" ಅಂತ ಜಮಖಂಡಿ ಸರ್ ಉತ್ತರ ಕೊಟ್ಟರು. ನೋಡಿ strange coincidences ಅಂದ್ರೆ ಹೇಗಿರುತ್ತವೆ ಅಂತ.

ಈ ಗುರುದತ್ತ ಹೆಗಡೆ ತಾಯಿ ಶಶಿಕಲಾ ಹೆಗಡೆ (ಭಟ್) ಕೂಡ ನಮಗೆ ಪರಿಚಿತರೇ. ಅವರ ಅಣ್ಣ ಹಾಸಣಗಿ ಗೋಪಾಲ್ ಭಟ್ಟರು ಸಹ ಧಾರವಾಡದಲ್ಲಿ ಶಿಕ್ಷಕರು. ಧಾರವಾಡದ ಕೆ.ಇ. ಬೋರ್ಡ್ ಶಾಲಾ ಸಮೂಹದಲ್ಲಿ ಸಂಸ್ಕೃತ ಗುರುಗಳಾಗಿ, ನಂತರ ಮುಖ್ಯಾಧ್ಯಾಪಕರೂ ಸಹ ಆಗಿದ್ದವರು. ಕೆ.ಇ. ಬೋರ್ಡ್ ಶಾಲಾ ಸಮೂಹಕ್ಕೆ ಬಂದು ಸೇರಿದ ಹವ್ಯಕ ಶಿಕ್ಷಕರಲ್ಲಿ ಅವರೇ ಮೊದಲನೇಯವರು. ಕೆ.ಇ. ಬೋರ್ಡ್ ಶಾಲಾ ಸಮೂಹದಲ್ಲಿ ಇರುವ ನಾಲ್ಕು ಶಾಲೆಗಳ ಪೈಕಿ ಮೂರರಲ್ಲಿ ಸಂಸ್ಕೃತ ಕಲಿಸುತ್ತಿದ್ದವರು ಹವ್ಯಕರೇ. ನಮಗೆ ಕಲಿಸಿದವರು ಶ್ರೀಪಾದ ಹೆಗಡೆ. ಕೆಎನ್ಕೆ ಗರ್ಲ್ಸ್ ಹೈಸ್ಕೂಲಿನಲ್ಲಿ ಗೋಪಾಲ್ ಭಟ್. ಕರ್ನಾಟಕ ಹೈಸ್ಕೂಲಿನಲ್ಲಿ ಶ್ರೀಧರ್ ಗಾಂವಕರ್. ಈ ಗುರುದತ್ತ ಹೆಗಡೆ ತಾಯಿ ಶಶಿಕಲಾ ಹೆಗಡೆ ಕೂಡ ಕೆ. ಇ. ಬೋರ್ಡ್ ಶಾಲಾ ಸಮೂಹದಲ್ಲಿ ಶಿಕ್ಷಕಿ. ೨೦೧೨ ಡಿಸೆಂಬರ್ ನಲ್ಲಿ ನಮ್ಮ SSLC ಬ್ಯಾಚಿನ ರಜತಮಹೋತ್ಸವ ಸಮಾರಂಭದ ಸಲುವಾಗಿ ಶಾಲೆಗೆ ಹೋದಾಗ ಹೋದಾಗ ಸಿಕ್ಕಿದ್ದರು. ಇತರ ಹವ್ಯಕ ಶಿಕ್ಷಕರಾದ ಗೋಪಾಲ್ ಭಟ್, ಶ್ರೀಧರ್ ಗಾಂವಕರ್, ಶ್ರೀಪಾದ ಹೆಗಡೆ ಸಹ ಆವಾಗಲೇ ಸಿಕ್ಕಿದ್ದರು.

ಈ ಗುರುದತ್ತ ಹೆಗಡೆಯನ್ನು ಒಂದೆರೆಡು ವರ್ಷದ ಸಣ್ಣ ಮಾಣಿಯಿದ್ದಾಗ, ತಂದೆ ತಾಯಿಯೊಂದಿಗೆ ಧಾರವಾಡದ ನಮ್ಮ ಮನೆಗೆ ಬಂದಾಗ ನೋಡಿದ ನೆನಪು.  ಮಸಕು ಮಸಕು ನೆನಪು ಅಷ್ಟೇ. ಅದೇ ಮಾಣಿ ಈಗ ಇಪ್ಪತ್ತಾರರ ಹರೆಯದಲ್ಲಿ ಇಂಜಿನಿಯರಿಂಗ್ ಪದವಿಯ ನಂತರ ಐಎಎಸ್ ನಲ್ಲಿ ಉನ್ನತ ಸ್ಥಾನ ಗಳಿಸಿದ್ದಾನೆ. ಮುಂದೆ ಎಲ್ಲ ಒಳ್ಳೆದಾಗಲಿ. ಇನ್ನೂ ಹೆಚ್ಚಿನ ಯಶಸ್ಸು ಎಲ್ಲ ರಂಗಗಳಲ್ಲಿ ಲಭ್ಯವಾಗಲಿ. ಇನ್ನೂ ಹೆಚ್ಚಿನ ಕೀರ್ತಿ, ಸುಖ, ಸಂತೋಷ ಎಲ್ಲ ಪಡೆಯಲಿ. ಇದೇ ನಮ್ಮ ಮತ್ತು ಎಲ್ಲರ ಹಾರೈಕೆ.

**


ಇಲ್ಲಿ ಹಾಕಿರುವ  'ಬಾಡದ ಹೂ' ಸಿನೆಮಾದ ಈ ಹಾಡಿನಲ್ಲಿ ನಮ್ಮ ಕರ್ಜೀ ಮಾವ ಇದ್ದಾರೆ. ಎರಡನೇ ಸಾಲಿನಲ್ಲಿ, ಅನಂತ್ ನಾಗ್ ಹಿಂದೆ, ಕೇಸರಿ ಬಣ್ಣದ ಟೀ ಶರ್ಟೋ, ಹಾಫ್ ಸ್ವೆಟರೋ ಹಾಕಿಕೊಂಡು ತುಂಬ handsome ಆಗಿ ಕಾಣುತ್ತಿದ್ದಾರೆ. 'ಬಾಡದ ಹೂ' ಸಿನೆಮಾ ಬಿಡುಗಡೆಯಾದ ಮೇಲೆ ಅವರೊಂದಿಗೆ ಎಲ್ಲರೂ ಕೂಡಿ ಧಾರವಾಡದಲ್ಲಿ ಈ ಸಿನಿಮಾ ನೋಡಿದ ನೆನಪು. "ನೋಡಾ! ಆನು ಅಲ್ಲಿದ್ದಿ. ನೋಡಾ! ಕಂಡ್ಚಾ? ಕಂಡ್ಚಾ?" ಅಂತ ಅವರು ತೋರಿಸಿಯೇ ತೋರಿಸಿದ್ದರು. ಅವತ್ತು ಸರಿಯಾಗಿ ಕಂಡಿರಲಿಲ್ಲ. ಯಾಕೆಂದ್ರೆ ಸಿನಿಮಾ ಮಂದಿರದವರು ನಮ್ಮ ಸಲುವಾಗಿ ಪ್ರೊಜೆಕ್ಟರ್ ನಿಧಾನ ಮಾಡುವದಿಲ್ಲ ನೋಡಿ. ಈಗ ಬೇಕಾದ ಹಾಗೆ ಇಂಟರ್ನೆಟ್ ಮೇಲೆ ಸ್ಟಾಪ್ ಅಂಡ್ ಗೋ ಮಾಡಿಕೊಂಡು, ಕರ್ಜೀ ಮಾವನನ್ನು ಕಂಡು ಹಿಡಿದು ಹಿಡಿದು ನೋಡಾಯಿತು ಬಿಡಿ.

ಈ ಹಾಡಿನಲ್ಲಿ ಬರುವ ಪ್ರೊಫೆಸರ್ ಪಾರ್ಟ್ ಮಾಡಿದವರು ನಿಜವಾದ ಪ್ರೊಫೆಸರ್ ಕುಲಕರ್ಣಿ ಅವರು.  ಅವರು ಅವರೇ ಅಂತ ಗೊತ್ತಾಗಿದ್ದೂ ಸಹ ಒಂದು ಮಜವಾದ ರೀತಿಯಲ್ಲಿಯೇ. ಮೊದಲೇ ಹೇಳಿದಂತೆ ಜಮಖಂಡಿ ಸರ್ ನಮಗೆ ೧೯೮೬-೮೭ ಸಮಯದಲ್ಲಿ ಒಂಬತ್ತನೇ ಕ್ಲಾಸಿನಲ್ಲಿ ಭೂಗೋಳ ಕಲಿಸುತ್ತಿದ್ದರು. ಅದೇ ವರ್ಷ ಅವರ ವಿವಾಹ ನಿಕ್ಕಿಯಾಯಿತು. ಮಿತ್ರನೊಬ್ಬನಿಗೆ ಜಮಖಂಡಿ ಸರ್ ಮಾವ ಈ ಪ್ರೊ. ಕುಲಕರ್ಣಿ ಅಂತ ಗೊತ್ತಾಗಿತ್ತು. ನನಗೆ ಹೇಳಿದ್ದ. "ಮಹೇಶಾ, ಜಮಖಂಡಿ ಸರ್ ಮಾವ ಯಾರ್ ಗೊತ್ತೇನ?" ಅಂತ. "ಯಾರಲೇ? ಗೊತ್ತಿಲ್ಲ ಬಿಡಪಾ" ಅಂದೆ. "ಅವರs ಮಾರಾಯಾ. ಬಾಡದ ಹೂ ಪಿಚ್ಚರ್ ನಾಗ ಡಾನ್ಸ್ ಹೊಡೆದ ಯೂನಿವರ್ಸಿಟಿ ಮಾಸ್ತರ್ರು. ಈಗ ಗೊತ್ತಾತ?" ಅಂತ ಕೇಳಿದ್ದ. ಆಶ್ಚರ್ಯವಾಗಿತ್ತು. "ಲೇ! ಆ ಹಾಡಿನ್ಯಾಗ ನಮ್ಮ ಮಾಮಾ ಕೂಡ ಡಾನ್ಸ್ ಹೊಡೆದ ಬಂದಾನಲೇ. ಅವರ ಸ್ಟೂಡೆಂಟ್ ಇರ್ಬೇಕು ನಮ್ಮ ಮಾಮಾ. ಭಾರಿ ಆತ ಬಿಡಪಾ" ಅಂತ ಹೇಳಿ ಮಾತು ಮುಗಿದಿತ್ತು. ಆವತ್ತೇ ಗೊತ್ತಾಗಿತ್ತು ಕರ್ಜೀ ಮಾವನ ಜೊತೆ ಡಾನ್ಸ್ ಮಾಡಿದ ಪ್ರೊಫೆಸರ್ ನಮ್ಮ ಜಮಖಂಡಿ ಸರ್ ಮಾವ ಅಂತ. ಹೀಗೇ ಮುಂದುವರಿದಿದ್ದರೆ ನಮ್ಮ ಕರ್ಜೀ ಮಾವ ಕೂಡ ಆಕ್ಟರ್ ಆಗುತ್ತಿದ್ದನೋ ಏನೋ. ಆದರೆ ಅವನು ಓದಿ, ಮೊದಲು ನೌಕರಿ ಮಾಡಿ, ಈಗ ಧಾರವಾಡದಲ್ಲಿ ಬಿಸಿನೆಸ್ ಮಾಡುತ್ತಾನೆ. ಹೆಂಡತಿ ಶಾಲಾ ಶಿಕ್ಷಕಿ. ಮಗ ಐಎಎಸ್ ನಲ್ಲಿ ಜಯಭೇರಿ ಬಾರಿಸಿ ಖುಷಿಯಲ್ಲಿದ್ದಾರೆ.

"ಕರ್ಜೀಮನೆ ನಾಣು ಪಾರ್ಟ್ ಮಾಡಿದ್ನಡಾ. ಆ ಶಿನೀಮಾ ನೋಡನ ಬನ್ನಿ," ಅಂತ ಹೇಳುತ್ತ ಸಿರ್ಸಿ ಸೀಮೆಯ ಹವ್ಯಕರು ಸುಮಾರು ಜನ 'ಬಾಡದ ಹೂ' ಪಿಚ್ಚರ್ ನೋಡಿ ಒಳ್ಳೆಯ ಕಲೆಕ್ಷನ್ ಮಾಡಿಸಿಕೊಟ್ಟಿದ್ದಾರು ಬಿಡಿ.

ಈಗ ಮಗ ಗುರುದತ್ತ ಹೆಗಡೆ ಯಶಸ್ಸಿನ ಹೂ ಅರಳಿಸಿದ್ದಾನೆ. ಅಪ್ಪ ನಾರಾಯಣ ಹೆಗಡೆ ಉರ್ಫ್ ನಮ್ಮ ಆತ್ಮೀಯ ಕರ್ಜೀ ಮಾವ ಎಂದಿನಂತೆ ಎವರ್ ಗ್ರೀನ್, ಎಂದಿಗೂ ಬಾಡದ ಹೂವಿನಂತೆಯೇ ಇದ್ದಾರೆ. ಹಾಗೇ ನೂರ್ಕಾಲ ಇರಲಿ.

ಮಗನೊಂದಿಗೆ ಸಂಭ್ರಮಿಸುತ್ತಿರುವ ಕರ್ಜೀ ಮಾವ, ಅತ್ತೆ (ಚಿತ್ರ ಕೃಪೆ: ದೈಜಿ ವರ್ಲ್ಡ್)

* ಪುಟ್ಟಣ್ಣ ಕಣಗಾಲರ ಮಾನಸ ಪುತ್ರ ಎಂದೇ ಖ್ಯಾತನಾಗಿದ್ದ ನೀರ್ನಳ್ಳಿ ರಾಮಕೃಷ್ಣ ಹೆಗಡೆ ಸಹ ಹವ್ಯಕನೇ. ನಮ್ಮ ಅಜ್ಜನ ಮನೆ ಹೊನ್ನೆಗದ್ದೆಯ  ಪಕ್ಕದ ಊರೇ ನೀರ್ನಳ್ಳಿ. ನಮ್ಮ ಸೋದರ ಮಾವಂದಿರ ವಾರಿಗೆಯವ ಆ ರಾಮಕೃಷ್ಣ. ಈಗೊಂದಿಷ್ಟು ವರ್ಷದ ಹಿಂದೆ ಧಾರವಾಡ ಹುಬ್ಬಳ್ಳಿಗೆ ಯಾವದೋ ಹವ್ಯಕ ಸಂಘದ ಸಮಾರಂಭಕ್ಕೆ ಬಂದವ ಎಲ್ಲರ ಜೊತೆ ಮಾತಾಡಿ, ಹೊನ್ನೆಗದ್ದೆ, ನೀರ್ನಳ್ಳಿ ಬದಿಗಿನ ಸುದ್ದಿ ಎಲ್ಲ ಹೇಳಿ ಕೇಳಿ  ಹೋಗಿದ್ದ ಅಂತ ಅವನನ್ನು ಭೆಟ್ಟಿಯಾಗಿದ್ದ ತಂದೆ ತಾಯಿ ಹೇಳಿದ್ದರು. ಇವತ್ತಿನ ಹಾಟ್ ನಟ ದಿಗಂತ್ ಮಂಚಾಲೆ ಕೂಡ ಹವ್ಯಕನೇ.

* ಕನ್ನಡದಲ್ಲಿ ಬರೆದು ಐಎಎಸ್ ಪಾಸ್ ಮಾಡಿದ ಮೊತ್ತ ಮೊದಲಿಗರು ಹಿಂದಿನ ಕಾಲದ ಅಧಿಕಾರಿ, ಪಾರ್ಟ್ ಟೈಮ್ ಸಿನೆಮಾ ನಟ ಶಿವರಾಮು ಅಂತ ನೆನಪು. ಅವರು ನಟಿಸಿ, ನಾಗತಿಹಳ್ಳಿ ನಿರ್ದೇಶಿಸಿದ್ದ 'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ' ಎಂಬ ಮಿಸ್ಟರಿ ಥ್ರಿಲ್ಲರ್ ಚಿತ್ರ ಹಿಟ್ಟಾಗಿತ್ತು. 

Monday, June 09, 2014

ಭಾರತದ ಪ್ರಪ್ರಥಮ ವಿಮಾನ ಅಪಹರಣದ ಹಿಂದಿನ ಹಕೀಕತ್ತು!

ಜನವರಿ ೩೦, ೧೯೭೧.

ಭಾರತದ ಇತಿಹಾಸದಲ್ಲಿ ಪ್ರಪ್ರಥಮ ವಿಮಾನ ಅಪಹರಣ ಆಗಿಹೋಗಿತ್ತು!

ಕಾಶ್ಮೀರದ ಶ್ರೀನಗರದಿಂದ ಜಮ್ಮುವಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಕಾಶ್ಮೀರಿ ಉಗ್ರವಾದಿಗಳು ಅಪಹರಿಸಿದ್ದರು. ಹಶೀಂ ಖುರೇಶಿ ಎಂಬ ಉಗ್ರವಾದಿ ತನ್ನ ಸಂಬಂಧಿಯೊಬ್ಬನೊಂದಿಗೆ ವಿಮಾನ ಅಪಹರಿಸಿ ಪಾಕಿಸ್ತಾನದ ಲಾಹೋರಿಗೆ ಅದನ್ನು ತೆಗೆದುಕೊಂಡು ಹೋದ. ಭಾರತದ ಜೈಲಿನಲ್ಲಿದ್ದ ಮೂವತ್ತು ಕಾಶ್ಮೀರಿ ಉಗ್ರವಾದಿಗಳನ್ನು ಬಿಟ್ಟರೆ ಮಾತ್ರ ಪ್ರಯಾಣಿಕರನ್ನು ಬಿಡುತ್ತೇನೆ ಅಂದ. ಭಾರತ ಮಾತ್ರ "ಏ! ಅದೆಲ್ಲ ಆಗೋದಿಲ್ಲ" ಅಂತ ಹೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಲಬೋ ಲಬೋ ಅಂತ ಬೊಬ್ಬೆ ಹಾಕಿತು. ದೊಡ್ಡ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಅದೇನು ಒತ್ತಡ ಬಂತೋ ಏನೋ. ಒಟ್ಟಿನಲ್ಲಿ ಯಾವದೇ ಉಗ್ರಗಾಮಿಗಳ ಬಿಡುಗಡೆ ಇಲ್ಲದೆ ಎಲ್ಲ ಪ್ರಯಾಣಿಕರು ಮರುದಿವಸ ಸುರಕ್ಷಿತವಾಗಿ ಅಮೃತಸರ್ ಮುಖಾಂತರ ಭಾರತಕ್ಕೆ ಮರಳಿ ಬಂದರು. ಒಟ್ಟಿನಲ್ಲಿ ಎಲ್ಲ ಸುಖಾಂತ್ಯ.

ಇಂತಹ ಹಸೀಂ ಖುರೇಷಿಯನ್ನು ಪಾಕಿಸ್ತಾನ 'ಇವನು ನಮ್ಮವನು. ನಮ್ಮ ಕಾಶ್ಮೀರದ ಸಲುವಾಗಿ ಹೋರಾಟ  ಮಾಡಿದವನು' ಅಂತ ಸನ್ಮಾನ ಮಾಡಿತು. ಭಾರತ ಈ ಘಟನೆಯಿಂದ ಸಿಕ್ಕಾಪಟ್ಟೆ ಸಿಟ್ಟಿಗೆದ್ದು, 'ಇನ್ನು ಮುಂದೆ ಯಾವದೇ ಪಾಕಿಸ್ತಾನದ ವಿಮಾನಗಳು ಭಾರತದ ವಾಯುಪ್ರದೇಶದ ಮೇಲೆ ಹಾರಿ ಹೋಗುವಂತಿಲ್ಲ,' ಅಂತ ನಿರ್ಬಂಧ ಹಾಕಿಕೊಂಡು ಕೂತು ಬಿಟ್ಟಿತು. ಅದು  ಪಾಕಿಸ್ತಾನಕ್ಕೆ ಒಂದು ಬಗಣಿ ಗೂಟ ಬಡಿದ ಹಾಗೆಯೇ. ಆಗಿನ್ನೂ ಬಾಂಗ್ಲಾದೇಶ ಪ್ರತ್ಯೇಕ ದೇಶ ಅಂತ ಆಗಿರಲಿಲ್ಲ. ಅದು ಪೂರ್ವ ಪಾಕಿಸ್ತಾನ ಅಂತಲೇ ಚಲಾವಣೆಯಲ್ಲಿತ್ತು. ದಿನಕ್ಕೆ ಹತ್ತಾರು ನಾಗರಿಕ, ಸಾಮಾನು ಸಾಗಾಣಿಕೆ ವಿಮಾನಗಳು ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಮತ್ತು ತಿರುಗಾ ವಾಪಸ್ ಹಾರಾಡುತ್ತಿದ್ದವು. ಈಗ ಭಾರತ ಹಾಕಿದ ಕೊಕ್ಕೆಯಿಂದ ಆ ವಿಮಾನಗಳೆಲ್ಲ ಅರಬೀ ಸಮುದ್ರದ ಗುಂಟ ಕೆಳಗೆ ಹಾರಿ, ಶ್ರೀಲಂಕಾ ತುದಿಯಲ್ಲಿ ರೌಂಡ್ ಹೊಡೆದು, ಬಂಗಾಳ ಕೊಲ್ಲಿಯ ಗುಂಟ ಮೇಲೆ ಕ್ರಮಿಸಿ, ಹೋಗಿ ಬಂದು ಮಾಡಬೇಕಾಗುತ್ತಿತ್ತು. ದೊಡ್ಡ ತಲೆನೋವು. ಒಂದಕ್ಕೆರೆಡು ಖರ್ಚು. ಅದರಕಿಂತ ದೊಡ್ಡ ಹೊಡೆತ ಅಂದ್ರೆ ಮೂರ್ನಾಕು ಪಟ್ಟು ಹೆಚ್ಚಿಗೆ ಟೈಮ್ ಬೇಕಾಗುತ್ತಿತ್ತು. ಕೆಲವೊಂದು ವಿಮಾನಗಳಿಗೆ ಶ್ರೀಲಂಕಾದಲ್ಲಿ ಇಂಧನದ ಮರು ಭರ್ತಿ ಕೂಡ ಮಾಡಬೇಕಾಗುತ್ತಿತ್ತು.

ಭಾರತ ವಿಧಿಸಿದ ಈ ವಿಮಾನ ಹಾರಾಟದ ಮೇಲಿನ ನಿರ್ಬಂಧ ಮುಂದೆ ಕೆಲವು ತಿಂಗಳಲ್ಲಿ ಆದ ೧೯೭೧ ರ ಭಾರತ-ಪಾಕ್ ಯುದ್ಧದ ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಪೂರ್ವ ಪಾಕಿಸ್ತಾನದಲ್ಲಿ ಯುದ್ಧ ಶುರುವಾಗಿ, ಭಾರತದ ಪಡೆಗಳು, ಬಾಂಗ್ಲಾ ಬಂಡುಕೋರರು ಕೂಡಿ ಪಾಕಿಸ್ತಾನದ ಪಡೆಗಳನ್ನು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ, ಸರಕು ಹೊತ್ತು ತಂದು, ಪಡೆಗಳಿಗೆ ಗುಂಡು, ಮದ್ದು, ಆಹಾರ ಪೂರೈಕೆ ಮಾಡಬೇಕಾಗಿದ್ದ ವಿಮಾನಗಳು ಭಾರತದ ಮೇಲಿಂದ ಸಮಯಕ್ಕೆ ಸರಿಯಾಗಿ ಹಾರಿ ಬರಲಾಗದೇ, ಪಾಕಿ ಪಡೆ ಸೋಲೊಪ್ಪಿಕೊಂಡು, ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದ ವಿಭಜನೆಯಾಗಿ, ಬಾಂಗ್ಲಾದೇಶದ ಜನ್ಮವಾಗಿತ್ತು. ೯೩,೦೦೦ ಪಾಕಿ ಸೈನಿಕರು ಯುದ್ಧಕೈದಿಗಳಾಗಿ ಬಂಧಿಯಾಗಿದ್ದರು. ಪಾಕಿಸ್ತಾನದ ಜನರಲ್ ನಿಯಾಜಿ ಶರಣಾಗತಿಯ ಪತ್ರದ ಮೇಲೆ ಸಹಿ ಹಾಕಿ, ಮಾಮೂಲಿ ಯುದ್ಧಕೈದಿಯಂತೆ ಎದ್ದು ಹೋಗಿ ಇತರೆ ಯುದ್ಧ ಕೈದಿಗಳ ಹಾಗೆ ಸಾಲಿನಲ್ಲಿ ಕೂತಿದ್ದ. ಒಟ್ಟಿನಲ್ಲಿ ಪಾಕಿಸ್ತಾನ ಕೇವಲ ಕೆಲವೇ ತಿಂಗಳ ಹಿಂದೆ ಮಾಡಿಸಿ, ಹೆಮ್ಮೆ ಪಟ್ಟುಕೊಂಡಿದ್ದ ವಿಮಾನ ಅಪಹರಣವೊಂದು ಅದರ ಮೂಲಕ್ಕೇ ಬಂದು, ಬಡಿಯಬಾರದ ರೀತಿಯಲ್ಲಿ ಬಡಿದು, ಆ ದೇಶದ ವಿಭಜನೆಯಲ್ಲಿ ಒಂದು ಮಹತ್ವದ ಪಾತ್ರ ವಹಿಸಿತ್ತು.

ಈ ವಿಮಾನದ ಅಪಹರಣ ಮೇಲೆ ಹೇಳಿದ ಹಾಗೆ ಇಷ್ಟು ಸರಳವಾಗಿ ಆಗಿಬಿಟ್ಟಿತಾ? ಅಥವಾ.......

ಈಗ ಸಿಗುತ್ತಿರುವ ಮಾಹಿತಿ ನೋಡುತ್ತ ಹೋದರೆ ಈ ಅಪಹರಣ ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ R&AW (Research & Analysis Wing) ಮಾಡಿಸಿದ್ದ ಒಂದು ರಹಸ್ಯ ಕಾರ್ಯಾಚರಣೆಯಾಗಿತ್ತು!

ಈ ಹಶೀಂ ಖುರೇಷಿ ಎಂಬ ವಿಮಾನ ಅಪಹರಣಕಾರ ಆಗಲೇ R&AW ಏಜೆಂಟ್ ಆಗಿದ್ದ. ಕಾಶ್ಮೀರ ಉಗ್ರವಾದಿಗಳ ಜೊತೆಗಿದ್ದೇ ಅವರ ವಿವರವನ್ನೆಲ್ಲ ಭಾರತದ ಬೇಹುಗಾರರಿಗೆ ಕೊಡುತ್ತಿದ್ದ. ಒಳ್ಳೆಯದೇ. ಹೀಗೇ ಮುಂದುವರಿದ್ದರೆ ಏನೂ ದೊಡ್ಡ ವಿಶೇಷವಿರಲಿಲ್ಲ. ಮುಂದೆ ಈ ಖುರೇಷಿ ಮಕಬೂಲ್ ಭಟ್ಟ್ ಎಂಬ ದೊಡ್ಡ ಉಗ್ರಗಾಮಿಯ ಸಂಪರ್ಕದಲ್ಲಿ ಬಂದ. ಆಗ ಈ ಹಶೀಂ ಖುರೇಷಿಯನ್ನು ಪಾಕಿಸ್ತಾನಕ್ಕೆ ಕಳಿಸಿದರು. ಅಲ್ಲಿ ಏನಾಯಿತೋ ಗೊತ್ತಿಲ್ಲ. ಆದರೆ ಈ ಖುರೇಶಿಯ ನಿಯತ್ತು ಮಾತ್ರ ಕೆಟ್ಟು ಹೋಗಿ ಈಗ ಪಕ್ಕಾ ಕಾಶ್ಮ್ರೀರಿ ಉಗ್ರವಾದಿಯಾಗಿಬಿಟ್ಟ. R&AW ಜೊತೆ ಎಲ್ಲ ಸಂಬಂಧ ಕಡಿದುಕೊಂಡು ಪೂರ್ತಿಯಾಗಿ ಪಾಕಿಗಳಿಗಾಗಿ ಕೆಲಸ ಶುರು ಮಾಡಿಬಿಟ್ಟ. ಅಷ್ಟೊಂದು ವರ್ಷಗಳಿಂದ, ಅಷ್ಟೆಲ್ಲ ಖರ್ಚು ಮಾಡಿ, ಅಭಿವೃದ್ಧಿ ಮಾಡಿಕೊಂಡಿದ್ದ ಒಬ್ಬ ಖಾಸ್ ಏಜೆಂಟ್ ಕೈಕೊಟ್ಟು ಹೋಗುತ್ತಾನೆ ಎಂದರೆ ಅದೊಂದು ದೊಡ್ಡ ನಷ್ಟ. ಇರಲಿ ಅಂತ R&AW ಸುಮ್ಮನಾಯಿತು. ಬೇಹುಗಾರಿಕೆಯಲ್ಲಿ ಇದೆಲ್ಲ ಇದ್ದಿದ್ದೇ.

ಹೀಗೆ ನಿಯತ್ತು ಖರಾಬ್ ಆದ ಖುರೇಷಿಗೆ ಪಾಕಿಸ್ತಾನದಲ್ಲಿ ವಿಮಾನ ಅಪಹರಣದ ತರಬೇತಿಯನ್ನು ಕೊಡಲಾಯಿತು. ಪಾಕಿ ವಾಯುಪಡೆಯಲ್ಲಿ ಇಂತಹ ತರಬೇತಿ ಕೊಡುವ ಜನರೇ ಇದ್ದರು.

ಹೀಗೆ ತರಬೇತಿ ಪಡೆದುಕೊಂಡ ಹಶೀಂ ಖುರೇಷಿ ಮತ್ತೆ ವಾಪಸ್ ಗಡಿಯೊಳಗೆ ನುಸುಳಿದ.  ಈ ಸಲ ನಿಯತ್ತು ಖರಾಬ್ ಆದವನ ನಸೀಬ್ ಸಹಿತ ಖರಾಬಾಗಿತ್ತು. ಗಡಿ ಭದ್ರತಾ ಪಡೆ (Border Security Force - BSF) ಕೈಗೆ ಸಿಕ್ಕಾಕಿಕೊಂಡ. "ಸಿಕ್ಕ್ಯಾ ನನ್ಮಗನೇ!" ಅಂತ ಸರಿಯಾಗಿ ಬಾರಿಸಿ, ಅವನನ್ನು ಮತ್ತೆ ಭಾರತದ ಬೇಹುಗಾರಿಕೆ ಸಂಸ್ಥೆ R&AW ಕೈಗೆ ಕೊಟ್ಟುಬಿಟ್ಟಿತು BSF. ತನ್ನ ಕಥೆ ಮುಗೀತು ಅಂತ ಅಂದುಕೊಂಡ ಖುರೇಷಿ. ಯಾಕಂದ್ರೆ R&AW ಜೊತೆ ಗದ್ದಾರಿ ಮಾಡಿ ಓಡಿ ಹೋಗಿದ್ದ. ಈಗ ಸಿಕ್ಕು ಬಿದ್ದಿದ್ದಾನೆ. ಇಂತವನನ್ನು ಒಂದು ಗುಂಡು ತಲೆ ಹಿಂದೆ ನುಗ್ಗಿಸಿ ಕೊಲ್ಲದೇ ಮತ್ತೇನು ಪೂಜೆ ಮಾಡುತ್ತಾರೆಯೇ? ಕಲ್ಮಾ ಓದಿಕೊಂಡು ಸಾಯಲು ತಯಾರಾಗಿದ್ದ.

ಆದರೆ ಆಗ R&AW ದ ಮುಖ್ಯಸ್ಥರಾಗಿದ್ದವರು ರಾಮೇಶ್ವರನಾಥ್ ಕಾವ್. R&AW ದ ಸ್ಥಾಪಕರೂ ಅವರೇ. ಭಾರತದ ಬೇಹುಗಾರಿಕೆಯ ಪಿತಾಮಹ ಅವರು. ಮತ್ತೆ ಸಿಕ್ಕಾಪಟ್ಟೆ ಚಾಣಾಕ್ಷ. ತಲೆ ಅಂದ್ರೆ ತಲೆ ಅವರದ್ದು. ಅವರು ಹಾಕಿದ ಮಾಸ್ಟರ್ ಪ್ಲಾನ್ ಹೇಗಿತ್ತು ಅಂದ್ರೆ ಅದು ಮಾಸ್ಟರ್ ಸ್ಟ್ರೋಕ್ ಆಗಿ, ಪಾಕಿಸ್ತಾನಕ್ಕೆ ಎಲ್ಲಿಂದ ಏನು ಬಂದು ಬಡಿಯಿತು ಅಂತ ಕೂಡ ಗೊತ್ತಾಗಲಿಲ್ಲ.

ಸಿಕ್ಕಿಬಿದ್ದಿದ್ದ ಹಶೀಂ ಖುರೇಷಿಯ ಜೊತೆ ಮಾತುಕತೆಗೆ ಕೂತರು R&AW ಚೀಫ್ ಕಾವ್. ಇಲ್ಲದ ಒತ್ತಡ ಹಾಕಿದರು. ಆಮಿಷ ಒಡ್ಡಿದರು. ಮತ್ತೆ ಭಾರತದ ಪರವಾಗಿ, ಪಾಕಿಸ್ತಾನದ ವಿರುದ್ಧವಾಗಿ ಕೆಲಸ ಮಾಡುವಂತೆ ಬ್ರೈನ್ ವಾಶ್ ಮಾಡಿಬಿಟ್ಟರು.  ಒಟ್ಟಿನಲ್ಲಿ ಒತ್ತಡದಲ್ಲಿ, ಆಮಿಷದಲ್ಲಿ ಬಂದ ಹಶೀಂ ಖುರೇಷಿ ಮತ್ತೆ ಭಾರತದ ಪರವಾಗಿ ಕೆಲಸ ಮಾಡಲು ರೆಡಿ ಆದ.

ಹಶೀಂ ಖುರೇಷಿ ಬಿಚ್ಚಿಟ್ಟ ವಿವರ ಎಲ್ಲ ಕೇಳಿ ರಾಮೇಶ್ವರನಾಥ್ ಕಾವ್ ಬೆಚ್ಚಿ ಬಿದ್ದರು. ಪಾಕಿಗಳು ಏನು ಪ್ಲಾನ್ ಹಾಕಿ ಕೊಟ್ಟಿದ್ದರು ಗೊತ್ತೆ? ಆ ಕಾಲದ ಪ್ರಧಾನಿ ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ ಹಾರಿಸುತ್ತಿದ್ದ ವಿಮಾನವನ್ನೇ ಅಪಹರಿಸಿಬಿಡು ಅಂತ ಹೇಳಿದ್ದರು! ಆಗ ರಾಜೀವ್ ಗಾಂಧಿ ಇಂಡಿಯನ್ ಏರ್ಲೈನ್ಸ್ ನಲ್ಲಿ ಪೈಲಟ್ ಅಂತ ಕೆಲಸ ಮಾಡಿಕೊಂಡಿದ್ದರು.

ರಾಮೇಶ್ವರನಾಥ್ ಕಾವ್ ವಿಚಾರ ಮಾಡಿದರು. ಮೊದಲ ಕೆಲಸ ಅಂದರೆ ಈ ಹಶೀಂ ಖುರೇಷಿ ಸಿಕ್ಕಿಬಿದ್ದಿರುವದು ಯಾರಿಗೂ ಗೊತ್ತಾಗಬಾರದು. ಮುಖ್ಯವಾಗಿ ಪಾಕಿಗಳಿಗೆ, ಕಾಶ್ಮೀರ ಉಗ್ರವಾದಿಗಳಿಗೆ ಗೊತ್ತಾಗಲೇ ಬಾರದು. ಅದಕ್ಕೆಂದು ರಹಸ್ಯವಾಗಿ ಖುರೇಶಿಯನ್ನು ಬೆಂಗಳೂರಿಗೆ ಸಾಗಿಸಿ ಅಡಗಿಸಿಡಲಾಯಿತು. ಮುಂದಿನ ಮಾಸ್ಟರ್ ಪ್ಲಾನ್ ಶುರು ಮಾಡಿತು R&AW.

ಪಾಕಿಸ್ತಾನದ ತಂತ್ರವನ್ನು ಅದಕ್ಕೇ ತಿರುಮಂತ್ರ ಮಾಡುವ ಯೋಜನೆ ರಾಮೇಶ್ವರನಾಥ್ ಕಾವ್ ಹಾಕಿದರು. ಇಂದಿರಾ ಗಾಂಧಿ 'ಓಕೆ' ಅಂತ ಅನುಮತಿ ಕೊಟ್ಟರು.

ಖುರೇಷಿಗೆ ವಿಮಾನ ಅಪಹರಣ ಮಾಡಲು R&AW ಹೇಳಿತು. ಕೇವಲ ಹೇಳಿದ್ದೊಂದೇ ಅಲ್ಲ, ಸರಿಯಾಗಿ ಪ್ಲಾನ್ ಮಾಡಿಕೊಟ್ಟು, ಆಯುಧ ಸಮೇತ ಅವನನ್ನು ಪ್ಲೇನ್ ಒಳಗೆ ನುಗ್ಗಿಸುವ ವ್ಯವಸ್ಥೆ ಕೂಡ ಮಾಡಿತು. ಅಷ್ಟೇ ಅದು ರಾಜೀವ್ ಗಾಂಧಿ ಇದ್ದ ಪ್ಲೇನ್ ಮಾತ್ರ ಆಗಿರಲಿಲ್ಲ. ಎಲ್ಲಾದ್ರೂ ಹೆಚ್ಚೂ ಕಮ್ಮಿ ಆದ್ರೆ!? ಒಂದು ದೊಡ್ಡ ಇಂಟೆಲಿಜೆನ್ಸ್ ಕಾರ್ಯಾಚರಣೆ  ಮಾಡಲು ನಮ್ಮದೇ ಒಂದು ವಿಮಾನವನ್ನು ಅಪಹರಣ ಮಾಡಿಸುವದೇ ದೊಡ್ಡ ರಿಸ್ಕಿ ಕೆಲಸ. ಅಂತದ್ದರಲ್ಲಿ ಅಮ್ಮಾವರ ಮಗನನ್ನು ಹಾಕಿಕೊಂಡು ದೊಡ್ಡ ಲಫಡಾ ಬೇಡ ಅಂತ ಬೇರೆ ಪೈಲಟ್ ಇದ್ದ ವಿಮಾನಕ್ಕೆ ಅಪಹರಣದ ಸ್ಕೆಚ್ ಹಾಕಿತು R&AW. ಅದಕ್ಕೆಂದೇ ಒಂದು ರಿಟೈರ್ ಮಾಡಿ, ಗುಜರಿಗೆ ಹಾಕಲು ರೆಡಿ ಇದ್ದ ವಿಮಾನವೊಂದನ್ನು ಮತ್ತೆ ಸೇವೆಗೆ ಕರೆತರಲಾಯಿತು. ಯಾಕೆಂದ್ರೆ ಪ್ಲಾನ್ ಪ್ರಕಾರ ಖುರೇಷಿ ಆ ವಿಮಾನವನ್ನು ಲಾಹೋರಿನಲ್ಲಿ ಧ್ವಂಸ ಮಾಡಬೇಕಿತ್ತು. ಯಾಕೆ? ಅದೇನು ರಹಸ್ಯವಿತ್ತೋ? ಗೊತ್ತಿಲ್ಲ.

R&AW ಮಾಡಿಕೊಟ್ಟ ಪ್ಲಾನ್ ಪ್ರಕಾರ ವಿಮಾನದ 'ಅಪಹರಣ'(!) ಮಾಡಿದ ಖುರೇಷಿ. ಲಾಹೋರಿನಲ್ಲಿ ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಝುಲ್ಫಿಕರ್ ಅಲಿ ಭುಟ್ಟೋ ಏನೇನೋ ಸಂಧಾನ ಮಾಡಿದರು. ಭಾರತ ಲಬೋ ಲಬೋ ಅಂತ ಬೊಬ್ಬೆ ಹಾಕಿತು. ಅಷ್ಟೊತ್ತಿಗೆ ಪಾಕಿಸ್ತಾನದ ಮೇಲೆ ಒತ್ತಡ ಕೂಡ ಸಾಕಷ್ಟು ಬಂದಿತ್ತು. ಭಾರತಕ್ಕೆ ಉಗ್ರವಾದಿಗಳನ್ನು ಬಿಡಲು ಖುರೇಷಿ 'ಒತ್ತಡ' ಹಾಕಿದನಾದರೂ, ಅವನಿಗೂ ಸಹ ಗೊತ್ತಿತ್ತು 'ಅಪಹರಣದ' ಹಿಂದಿನ ನಿಜವಾದ ಮರ್ಮ. ಗೊತ್ತಿಲ್ಲದ್ದು ಕೇವಲ ಪಾಕಿಗಳಿಗೆ ಮಾತ್ರ. ತಮ್ಮ ಪ್ಲಾನ್ ಪ್ರಕಾರ ಖುರೇಷಿ ವಿಮಾನ ಅಪಹರಣ ಮಾಡಿದ್ದಾನೆ ಅಂತ ಪಾಕಿಗಳು ಖುಷಿಯಲ್ಲಿಯೇ ಇದ್ದರು. ರಾಜೀವ್ ಗಾಂಧಿ ಇದ್ದ ಪ್ಲೇನ್ ಅಪಹರಣ ಮಾಡಲಿಲ್ಲ ಅಂತ ಒಂದು ಸಣ್ಣ ಅಸಮಾಧಾನ ಇತ್ತು. ಆದರೇನು, ಕಾಶ್ಮೀರ್ ಹೋರಾಟಕ್ಕೆ ಸಾಕಷ್ಟು ಸ್ಕೋಪ್ ಸಿಕ್ಕಿತು ಬಿಡಿ ಅಂತ ಅಷ್ಟಕ್ಕೇ ಸುಮ್ಮನಾದರು.

ಭುಟ್ಟೋ ಜೊತೆ ಏನೇನೋ 'ಸಂಧಾನ' ಮಾಡಿದ ಭೋಂಗು ಬಿಟ್ಟ ಖುರೇಷಿ, ಪ್ರಯಾಣಿಕರನ್ನು ಇಳಿಸಿ, ಬಾಂಬಿಟ್ಟು ಪ್ಲೇನ್ ಢಂ ಅನ್ನಿಸಿಬಿಟ್ಟ. ವಿಮಾನದಲ್ಲಿ ಏನಾದರೂ ಕುರುಹುಗಳಿದ್ದು, ಪಾಕಿಗಳಿಗೆ ಸಿಕ್ಕು ರಾಡಿ ಏಳುವದು ಬೇಡವೇ ಬೇಡ ಅಂತ R&AW ಎಚ್ಚರಿಕೆ ವಹಿಸಿ ಪ್ಲೇನ್ ಸ್ಫೋಟಿಸಿಬಿಡು ಅಂತ ಹೇಳಿತ್ತಾ? ಗೊತ್ತಿಲ್ಲ. ಕೆಲವರು ಹೇಳಿದರು ISI ವಿಮಾನವನ್ನು ಸ್ಪೋಟಿಸಿತು ಅಂತ. ರಾಮೇಶ್ವರನಾಥ್ ಕಾವ್ ಅವರ ತಲೆ ನೋಡಿ. ಹೋದರೂ ಲಡಕಾಸಿ ವಿಮಾನವೇ ಹೋಗಲಿ ಅಂತ ಹುಡುಕಿ ಹುಡುಕಿ ಡಕೋಟಾ ಗಾಡಿಯಂತಿದ್ದ ವಿಮಾನವನ್ನೇ ಕಳಿಸಿದ್ದರು. ಅದರ ಹೆಸರು ಗಂಗಾ!

ಬಹಳ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಆ ಹೊತ್ತಿಗಾಗಲೇ ಇಂದಿರಾ ಗಾಂಧಿ ಬಾಂಗ್ಲಾದೇಶದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಬಿಡಬೇಕು ಅನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ದಿನಕ್ಕೆ ಲಕ್ಷಗಟ್ಟಲೆ ನಿರಾಶ್ರಿತರು ಪೂರ್ವ ಪಾಕಿಸ್ತಾನದಿಂದ ಬಂದು ಭಾರತದ ಗಡಿಯಲ್ಲಿ ತುಂಬ ಅಶಾಂತಿ ನೆಲೆಸಿತ್ತು. ನಿರಾಶ್ರಿತರಿಗೆ ಊಟ, ವಸತಿ ಇತ್ಯಾದಿ ಒದಗಿಸುವದು ದೊಡ್ಡ ತಲೆನೋವು. ನಿರಾಶ್ರಿತರು ಮತ್ತೆ ಸ್ಥಳೀಯರ ನಡುವೆ ಗಲಭೆ. ಸಾಕು ಸಾಕಾಗಿತ್ತು ಭಾರತಕ್ಕೆ ಈ ಪಾಕಿಗಳ ಆಂತರಿಕ ಸಮಸ್ಯೆ. 'ಇದನ್ನು ಬಗೆಹರಿಸಿ' ಅಂತ ಇಂದಿರಾ ಗಾಂಧಿ ಅಂತರಾಷ್ಟ್ರೀಯ ಸಮುದಾಯದ ಮುಂದೆ ತಮ್ಮಟೆ ಬಾರಿಸಿದರು. ಅಮೇರಿಕಾ ವಿಯೆಟ್ನಾಂ ಯುದ್ಧದಲ್ಲಿ ಮುಳುಗಿ ಹೋಗಿತ್ತು. ಮತ್ತೆ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಗೆ ಇಂದಿರಾ ಗಾಂಧಿ ಕಂಡರೆ ಆಗುತ್ತಿರಲಿಲ್ಲ. ಬೇಕಂತಲೇ ಇಂದಿರಾ ಗಾಂಧಿಯನ್ನು ಮುಕ್ಕಾಲು ಘಂಟೆ ಕಾಯಿಸಿದ್ದ ಅವರನ್ನು ಭೆಟ್ಟಿಯಾಗಲು ಹೋದಾಗ. ಆವಾಗಲೇ ಇಂದಿರಾ ಗಾಂಧಿ ಒಂದು ನಿರ್ಧಾರಕ್ಕೆ ಬಂದು ತಮ್ಮ ಸರ್ಕಾರದ ಎಲ್ಲ ದೊಡ್ಡ ತಲೆಗಳಿಗೆ ಬಾಂಗ್ಲಾ ಯುದ್ಧದ ತಯಾರಿ ಮಾಡುವಂತೆ ಹೇಳಿದ್ದರು. ಸ್ಯಾಮ್ ಮಾಣಿಕ್ಷಾ ಎಂಬ ಸೈನ್ಯದ ಜನರಲ್ ಮಿನಿಮಂ ಆರು ತಿಂಗಳ ತಯಾರಿ ಬೇಕೇ ಬೇಕು ಅಂತ ಹೇಳಿ ತಯಾರಿ ಶುರುವಿಟ್ಟುಕೊಂಡಿದ್ದರು. ರಾಮೇಶ್ವರನಾಥ್ ಕಾವ್ ಬೇಹುಗಾರಿಕೆ ತಯಾರಿ ಮಾಡಿ, ಬಾಂಗ್ಲಾ ಬಂಡುಕೋರರಿಗೆ R&AW ಮೂಲಕ ತರಬೇತಿ ಕೊಟ್ಟು, ಪಾಕಿ ಪಡೆಗಳ ಮೇಲೆ ಗೆರಿಲ್ಲಾ ದಾಳಿ ಶುರು ಹಚ್ಚಿಕೊಂಡಿದ್ದರು.

ಟಿಕ್ಕಾ ಖಾನ್ ಎಂಬ ಪಾಕಿಸ್ತಾನದ ಜನರಲ್ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶದಲ್ಲಿ) ಅಕ್ಷರಶ ನರಮೇಧ ಶುರುಮಾಡಿಕೊಂಡಿದ್ದ. ಬಂಗಾಲಿಗಳು ತಮಗೆ ಬೇರೆ ದೇಶವೇ ಬೇಕೆಂದು ಹಟ ಹಿಡಿದು ಕೂತಿದ್ದರು. ತಲೆಕೆಟ್ಟು ಹೋಗಿದ್ದ ಯಾಹ್ಯಾ ಖಾನ್ ಎಂಬ ಪಾಕಿ ಮಿಲಿಟರಿ ಸರ್ವಾಧಿಕಾರಿ ಬಂಗಾಳಿಗಳನ್ನು ಹಿಂದೆ ಮುಂದೆ ನೋಡದೆ ಉಡಾಯಿಸಿಬಿಡುವಂತೆ ಆಜ್ಞೆ ಕೊಟ್ಟಿದ್ದ. ಅದರಲ್ಲಿ ಹಿಂದೂ, ಮುಸ್ಲಿಂ ಎಂದು ನೋಡದೆ, ಯಾರ್ಯಾರು 'ಪ್ರತ್ಯೇಕ ದೇಶ ಬೇಕು' ಅಂತ ಅಂದರೋ ಅವರೆಲ್ಲರನ್ನು ಮಷೀನ್ ಗನ್ ಹಚ್ಚಿ ಕೊಂದು ಬಿಡಿ ಅಂತ ಸೈನ್ಯಕ್ಕೆ ಬ್ಲಾಂಕೆಟ್ ಪರ್ಮಿಷನ್. ಪೂರ್ವ ಪಾಕಿಸ್ತಾನದ ಸೈನ್ಯವೇ ಒಡೆದು ಹೋಗಿತ್ತು. ಅವರೆಲ್ಲ ಬಾಂಗ್ಲಾ ಬಂಡುಕೋರರೊಂದಿಗೆ ಸೇರಿ ಪಾಕಿಸ್ತಾನದ ಅಧಿಕೃತ ಸೈನ್ಯದ ಜೊತೆ ಹೋರಾಡುತ್ತಿದ್ದರು.

ಪಶ್ಚಿಮ ಪಾಕಿಸ್ತಾನದಿಂದ ಈಗಿನ ಬಾಂಗ್ಲಾದೇಶದ ಢಾಕ್ಕಾಕ್ಕೆ ವಿಮಾನಗಳು ದಿನಕ್ಕೆ ನೂರಾರು ಟ್ರಿಪ್ ಹೊಡೆಯುತ್ತಿದ್ದವು. ಸೈನಿಕರನ್ನು, ಸಾಮಾನು ಸಾಗಿಸಲು. ಎಲ್ಲವೂ ಈಕಡೆಯಿಂದಲೇ ಹೋಗಬೇಕಾಗಿತ್ತು ನೋಡಿ. ಯಾಕೆಂದ್ರೆ ಬಂಗಾಳಿಗಳು ಹೋರಾಟಕ್ಕೆ ನಿಂತಿದ್ದರು. ಪಾಕಿ ವಿಮಾನಗಳೆಲ್ಲ ಭಾರತದ ವಾಯುಪ್ರದೇಶದ ಮೇಲೆಯೇ ಹಾರಿ, ತ್ವರಿತವಾಗಿ ಮುಟ್ಟಿಕೊಳ್ಳುತ್ತಿದ್ದವು. ಮುಂದೊಂದು ದಿವಸ ಭಾರತ ನೇರವಾಗಿ ಪಾಕಿಸ್ತಾನವನ್ನು ತಡವಿಕೊಂಡಿದ್ದೇ ಆದರೆ ಈ ಪಾಕಿಗಳು ಇಷ್ಟು ತ್ವರಿತವಾಗಿ ಲಾಹೋರ್, ಇಸ್ಲಾಮಾಬಾದ್ ಗಳಿಂದ ಢಾಕ್ಕಾಗೆ, ಚಿಟ್ಗಾಂಗಿಗೆ ಸೈನ್ಯ ಮತ್ತೆ ಮದ್ದು ಗುಂಡು ಸಾಗಿಸುವದು ಮುಂದುವರೆದಿದ್ದರೆ ಭಾರತಕ್ಕೆ ತೊಂದರೆಯಾಗುವದು ಖಾತ್ರಿ ಇತ್ತು. ಮುಂದಾಗುವದನ್ನು ಲಕ್ಷದಲ್ಲಿಟ್ಟುಕೊಂಡು ಪಾಕಿಗಳನ್ನು ಭಾರತದ ವಾಯುಪ್ರದೇಶದ ಮೇಲೆ ಹಾರುವದನ್ನು ನಿರ್ಬಂಧಿಸಲು ಒಂದು ಒಳ್ಳೆ ನೆವ ಹುಡಕಬೇಕಾಗಿತ್ತು. ಅದಕ್ಕೆ ಇಂತಹ ವಿಮಾನ ಅಪಹರಣಕ್ಕಿಂತ ಒಳ್ಳೆಯ ನೆವ ಎಲ್ಲಿಂದ ಸಿಗುತ್ತಿತ್ತು? ಅದೂ ಪಾಕಿಗಳೇ ಹಾಕಿದ್ದ ಸ್ಕೀಮು. ಅದನ್ನು ಅವರಿಗೇ ತಿರುಗಿಸಿ ಭಾರತ ಫುಲ್ ಮೈಲೇಜ್ ತೆಗೆದುಕೊಂಡಿತ್ತು. ಯಾರೂ ಏನೂ ಹೇಳುವ ಹಾಗೆಯೇ ಇರಲಿಲ್ಲ. ಮುಂದೆ ಭಾರತ ಬಾಂಗ್ಲಾ ವಿಮೋಚನೆಯಲ್ಲಿ ನೇರವಾಗಿ ತೊಡಗಿಸಿಕೊಂಡಾಗ ಆಗಲೇ ಪಾಕಿ ಸೈನ್ಯ ಬಸವಳಿದು ಹೋಗಿತ್ತು. ಒಂದು ಬೆಂಕಿ ಪೊಟ್ಟಣ ಬೇಕೆಂದರೂ ಅದೂ ಸಹ ವಿಮಾನದಲ್ಲಿಯೇ ಬರಬೇಕು. ವಿಮಾನ ಫುಲ್ ರೌಂಡ್ ಹಾಕಿ ಬರುವ ತನಕ ಅಷ್ಟೇ ಮತ್ತೆ. ಎಲ್ಲ ಖತಂ. ಎರಡೇ ವಾರದಲ್ಲಿ ಯುದ್ಧ ಮುಗಿದು, ಪಾಕಿಸ್ತಾನ ಒಡೆದು, ಬಾಂಗ್ಲಾದೇಶವೆಂಬ ಒಂದು ಬ್ರಾಂಡ್ ನ್ಯೂ ದೇಶ ತಯಾರಾಗಿ, ಲಕ್ಷದಷ್ಟು ಪಾಕಿ ಸೈನಿಕರು ಸೆರೆ ಸಿಕ್ಕು, ಪಾಕಿಸ್ತಾನ ಬರ್ಬಾದ ಆಗಲು ಒಂದು ಮುಖ್ಯ ಕಾರಣ ಹೀಗೆ ಆಗಿದ್ದರಕಿಂತ ಮಾಡಿಸಿಕೊಂಡಿದ್ದು ಅಂತ ಹೇಳಬಹುದಾದ ಒಂದು ವಿಮಾನ ಅಪಹರಣ.

ವಿಮಾನ ಅಪಹರಣವನ್ನು ಇಷ್ಟೆಲ್ಲ ರಹಸ್ಯವಾಗಿ ಮಾಡಿದ್ದರೂ ಇದೊಂದು ಭಾರತೀಯ ಬೇಹುಗಾರಿಕೆ ಸಂಸ್ಥೆಯೇ ಮಾಡಿಸಿದ ಒಂದು false flag ಕಾರ್ಯಾಚರಣೆ ಅಂತ ಗೊತ್ತಾಗಿಯೇ ಹೋಯಿತು. ಬಾಂಗ್ಲಾ ಯುದ್ಧದಲ್ಲಿ ತನ್ನ ಅಸ್ತಿತ್ವ ಕಾದುಕೊಳ್ಳಲು ಹೆಣಗಾಡುತ್ತಿದ್ದ ಪಾಕಿ ಸರ್ಕಾರಕ್ಕೆ ಸ್ವಲ್ಪ ತಡವಾಗಿ ತಿಳಿಯಿತು. ಪಾಕಿ ಜನ ಸಾಮಾನ್ಯರು ಮಾತ್ರ ಎಲ್ಲ ತಿಳಿದುಕೊಂಡು, ತಮ್ಮ ಸರಕಾರ ಎಷ್ಟು ಮಂದ ಬುದ್ಧಿಯ ಸರಕಾರ ಅಂತ ಅಂಡು ತಟ್ಟಿ ನಗುತ್ತಿದ್ದರು. ಕಾಶ್ಮೀರದಲ್ಲೇ ಕುಳಿತು ಪಾಕಿ ಏಜೆಂಟ್ ತರಹ ವರ್ತಿಸುತ್ತಿದ್ದ ಶೇಕ್ ಅಬ್ದುಲ್ಲಾ, 'ಇದು ಖಾತ್ರಿಯಾಗಿ ಭಾರತದ ಕೆಲಸ' ಅಂತ ಬೊಬ್ಬೆ ಹೊಡೆದೇ ಹೊಡೆದ. ಏನೂ ಉಪಯೋಗವಾಗಲಿಲ್ಲ. ಜನರಲ್ ಯಾಹ್ಯಾ ಖಾನ್ ಎಂಬ ಪಾಕಿಸ್ತಾನದ ಲಷ್ಕರಿ ಸರ್ವಾಧಿಕಾರಿ ಸಾಹೇಬರು ಬಂಗಾಲದ ಕಡೆಯಿಂದ ಒಂದರಮೇಲೊಂದರಂತೆ ಬರುತ್ತಿದ್ದ ಕೆಟ್ಟ ಸುದ್ದಿಗಳಿಗೆ ತತ್ತರಿಸಿ, ಅವರ ರಖಾವ್ ಆಗಿದ್ದ ಜನರಲ್ ರಾಣಿ ಎಂಬ ಅಪ್ರತಿಮ ಸುಂದರಿಯ ತೆಕ್ಕೆಯಲ್ಲಿ ಒಂದೆರೆಡು ಪೆಗ್ ಜಾಸ್ತಿಯೇ ಹಾಕಿ ಖಬರಿಲ್ಲದೆ ಪವಡಿಸಿಬಿಡುತ್ತಿದ್ದರು. ಅವರಿಗೆ ಹೊಟ್ಟೆ ತುಂಬ ತಂಗಡಿ ಕಬಾಬ್, ಕರುಳು ತುಂಬ ದುಬಾರಿ ವಿಸ್ಕಿ ಮತ್ತು ಪಾಕಿಸ್ತಾನದ ರಾಷ್ಟ್ರೀಯ ವೇಶ್ಯೆ ಎಂದೇ ಪ್ರಸಿದ್ಧವಾಗಿದ್ದ ಜನರಲ್ ರಾಣಿಯ ಸಾಂಗತ್ಯ ಸಿಕ್ಕುಬಿಟ್ಟರೆ ಏನೂ ಬೇಡ. ಕಡೆಕಡೆಗೆ ಜನರಲ್ ಯಾಹ್ಯಾ ಖಾನ್ ಯಾವ ಸ್ಥಿತಿಗೆ ಬಂದು ಮುಟ್ಟಿದರು ಅಂದರೆ ಎಲ್ಲ ವ್ಯವಹಾರ ಭುಟ್ಟೋ ಮತ್ತು ಜನರಲ್ ರಾಣಿ ಕೂಡಿ ಸಂಬಾಳಿಸುತ್ತಿದ್ದರು. ಯದ್ವಾ ತದ್ವಾ ತೀರ್ಮಾನ ತೆಗೆದುಕೊಂಡು ಪಾಕಿಸ್ತಾನದ ವಿಭಜನೆಗೆ ಕಾರಣೀಭೂತರಾಗಿದ್ದೇ ಯಾಹ್ಯಾ ಖಾನ್ ಅವರ ಸಾಧನೆ, ಹೆಗ್ಗಳಿಕೆ! ಬರ್ಬಾದ್ ಪಾಕಿಸ್ತಾನದ ನಸೀಬ್!

ಮುಂದೆ ಎಂದೋ ಒಂದು ದಿವಸ ಪಾಕಿಗಳಿಗೆ ಜ್ಞಾನೋದಯವಾಯಿತು. ತಾವು ಮೋಸ ಹೋಗಿದ್ದು ತಿಳಿಯಿತು. ಆಗ ಈ ಹಶೀಂ ಖುರೇಷಿಯನ್ನು ಬಂಧಿಸಿ, ಅವನನ್ನು ವಿಚಾರಣೆಗೆ ಒಳಪಡಿಸಿ, ಹತ್ತೊಂಬತ್ತು ವರ್ಷ ಕಾರಾಗ್ರಹವಾಸ ಶಿಕ್ಷೆ ವಿಧಿಸಲಾಯಿತು.

ನಂತರ ಭುಟ್ಟೋ ಅವರನ್ನೇ ಬೇರೆ ಕಾರಣಕ್ಕೆ ನೇಣು ಹಾಕಿ ಕೊಂದು ಬಿಟ್ಟರು ಪಾಕಿ ಸೈನ್ಯಾಧಿಕಾರಿಗಳು. ಮುಂದಿನ ಸರ್ವಾಧಿಕಾರಿ ಜಿಯಾ ಉಲ್ ಹಕ್ ಬಂದು ಅಬ್ಬರಿಸತೊಡಗಿದ್ದ.

ಅದೇನೇನೋ ಆಗಿ ೧೯೮೦ ರಲ್ಲಿ ಹಶೀಂ ಖುರೇಷಿಯ ಬಿಡುಗಡೆಯಾಯಿತು. ಪುಣ್ಯಾತ್ಮ ನೆದೆರ್ಲ್ಯಾಂಡಿಗೆ ಹೋಗಿ ಕೂತುಬಿಟ್ಟ. ತಣ್ಣನೆ ದೇಶದಲ್ಲಿ ಸ್ವಲ್ಪ ದಿವಸ ಆರಾಮಿದ್ದು ಬರೋಣ ಅಂತ ಹೇಳಿ.

ಹಶೀಂ ಖುರೇಷಿ ಹೇಳಿ ಕೇಳಿ ಡಬಲ್, ಟ್ರಿಪಲ್ ಏಜೆಂಟ್. ಆಕಡೆಯಿಂದ ಪಾಕಿಸ್ತಾನದ ISI, ಈಕಡೆಯಿಂದ R&AW ಎರಡೂ ಸಂಪರ್ಕದಲ್ಲಿದ್ದವು. ಎರಡೂ ಕಡೆಯಿಂದ ಆಮಿಷ ಬರುತ್ತಿದ್ದವು. ಏನು ತಲೆಗೆ ಬಂತೋ ಏನೋ ಇವನಿಗೆ. ಇಸ್ವಿ ೨೦೦೦ ರಲ್ಲಿ ಒಂದು ದಿವಸ ಭಾರತಕ್ಕೆ ಬಂದು ಇಳಿದುಬಿಟ್ಟ ಪುಣ್ಯಾತ್ಮ. R&AW ತನ್ನ ಪುರಾತನ ಏಜೆಂಟನನ್ನು ನಡು ನೀರಿನಲ್ಲಿ ಕೈಬಿಡದೆ ವಾಪಸ್ ಕರೆದು ತಂದು ಮತ್ತೆ ಕಾಶ್ಮೀರದಲ್ಲಿ ಸೆಟಲ್ ಮಾಡಿತು ಅಂತ ಸುದ್ದಿ. ಈಗ ಮತ್ತೆ ಕಾಶ್ಮೀರದಲ್ಲಿ ಏನೇನೋ ಅಭಿವೃದ್ಧಿ ಅದು ಇದು ಅಂತ ಕಾರ್ನಾಮೆ ಮಾಡುತ್ತಾ ಇದ್ದಾನೆ ಈ ಹಶೀಂ ಖುರೇಷಿ. ೧೯೭೧ ರಲ್ಲಿ ಮಾಡಿದ್ದ ವಿಮಾನ ಅಪಹರಣದ ಕೇಸ್ ಕೋರ್ಟಿನಲ್ಲಿ ಇನ್ನೂ ನಡೆಯುತ್ತಲೇ ಇದೆ. ನಮ್ಮ ದೇಶದ ಸಲುವಾಗೇ ವಿಮಾನ ಅಪಹರಣ ಮಾಡಿದರೂ ಅದೆಲ್ಲ ಪೂರ್ತಿ ರಹಸ್ಯ ಕಾರ್ಯಾಚರಣೆ. ಪಬ್ಲಿಕ್ ಆಗಿ ಅವನು ಒಬ್ಬ ಅಪರಾಧಿಯೇ. ಆ ಕೇಸ್ ಮುಚ್ಚಿ ಹೋಗಬಹುದು ಬಿಡಿ. ತಮ್ಮ ಪುರಾತನ ಏಜೆಂಟ್ ಬಗ್ಗೆ ಅಷ್ಟೆಲ್ಲ ಕಾಳಜಿ ವಹಿಸಿರುವ R&AW ಅಷ್ಟೂ ಮಾಡದೆ ಇದ್ದೀತೆ?

ಇದು ಭಾರತದ ಪ್ರಪ್ರಥಮ ವಿಮಾನ 'ಅಪಹರಣದ' ಹಿಂದಿನ ಹಕೀಕತ್ತು. ಅಥವಾ ಇದು ಹೊರಬಂದಿರುವಷ್ಟು ಹಕೀಕತ್ತು. ಇದರ ಹತ್ತು ಪಟ್ಟು ವಿವರಗಳು ಎಂದೂ ಹೊರಬರುವದಿಲ್ಲ ಬಿಡಿ. ಅವೆಲ್ಲ ಪರಮ ರಹಸ್ಯ. ಗೊತ್ತಿದ್ದವರು ಸತ್ತರೆಂದರೆ ಅವರೊಂದಿಗೆ ಅವೂ ಗೋರಿ ಸೇರುತ್ತವೆ.

ಹೀಗೆ ತಮ್ಮ ತಂತ್ರ ತಮಗೇ ತಿರುಮಂತ್ರವಾದಾಗಿನಿಂದ ಪಾಕಿಗಳು ಬಹಳ ಹುಶಾರಾಗಿಬಿಟ್ಟಿದ್ದಾರೆ. ತಾವೇ ಅಪಹರಣ ಮಾಡಿಸಿದರೂ ಅಪಹೃತ ವಿಮಾನಗಳು ತಮ್ಮ ದೇಶದಲ್ಲಿ ಬಂದು ಇಳಿಯಲು ಕೊಡುವದೇ ಇಲ್ಲ. ಹೆಚ್ಚೆಂದರೆ ಇಂಧನ ತುಂಬಿಸಿ, ಹತ್ಯಾರ ಬೇಕಾದರೆ ಕೊಟ್ಟು, ಬೇರೆ ಕಡೆ ಹೋಗಿ ಸಂಧಾನ ಗಿಂಧಾನ ಮಾಡಿಕೊಳ್ಳಿ ಅಂತ ಸಾಗಹಾಕಿಬಿಡುತ್ತಾರೆ. ೧೯೮೦ ರ ದಶಕದಲ್ಲಿ ಸಿಖ್ ಉಗ್ರಗಾಮಿಗಳು ಮೂರ್ನಾಕು ಅಪಹರಣ ಮಾಡಿದ್ದರು. ಆಗೆಲ್ಲ ಪಾಕಿಸ್ತಾನ ಕೇವಲ ತಾತ್ಕಾಲಿಕ ಸ್ಟಾಪ್ ಮಾತ್ರ. ಸಂಧಾನ ಆಗಿದ್ದು ದುಬೈನಲ್ಲಿ. ಇನ್ನೊಂದೆರೆಡು ಕೇಸ್ ಭಾರತದಲ್ಲೇ ಕಮಾಂಡೋ ಕಾರ್ಯಾಚರಣೆ ಮಾಡಿ ನಿವಾರಿಸಲಾಯಿತು. ೧೯೯೯ ರಲ್ಲಿ ಅಪಹರಣವಾದಾಗ  ಪಾಕಿಸ್ತಾನದಲ್ಲಿ ವಿಮಾನ ಇಳಿಸಲು ಕೂಡ ಅನುಮತಿ ಕೊಡಲಿಲ್ಲ. ಹಾಗಾಗಿಯೇ ಮೊದಲು ದುಬೈ, ನಂತರ ಕಂದಹಾರಕ್ಕೆ ಹೋಯಿತು ವಿಮಾನ. ಅದರಲ್ಲಿ ಭಾರತಕ್ಕೆ ದೊಡ್ಡ ಮಂಗಳಾರತಿ ಆಯಿತು ಬಿಡಿ. ಪಾಕಿಗಳು ಮೊದಲಾದ ಅವಮಾನಕ್ಕೆ ಸೇಡು ತೀರಿಸಿಕೊಂಡ ಹಾಗೆ ತಲೆಕೆಟ್ಟ ತಾಲಿಬಾನಿಗಳ ಮೂಲಕ ಸಂಧಾನ ಮಾಡಿಸಿ ತಮಗೆ ಬೇಕಾದ ಉಗ್ರರನ್ನು ಬಿಡಿಸಿಕೊಂಡು ಹೋಗಿದ್ದರು.

ಇದೆಲ್ಲ ವಿವರ ಸಿಕ್ಕಿದ್ದು ಇತ್ತೀಚಿಗೆ ಹೊರಬಂದ Mission R&AW ಎಂಬ ಪುಸ್ತಕದಲ್ಲಿ. R&AW ದ ಮಾಜಿ ಅಧಿಕಾರಿ ಆರ್. ಕೆ. ಯಾದವ್ ಒಂದು ಅದ್ಭುತ ಪುಸ್ತಕ ಬರೆದಿದ್ದಾರೆ. ಹಿಂದೆಲ್ಲ ಕೆಲವು R&AW ಅಧಿಕಾರಿಗಳು ಪುಸ್ತಕ ಬರೆದಿದ್ದರೂ ಅವೆಲ್ಲ ತುಂಬ superficial ಅನ್ನುವ ಹಾಗಿದ್ದವು. ಯಾಕೆಂದರೆ ಬೇಹುಗಾರಿಕೆ ಅಧಿಕಾರಿಗಳಿಗೆ ಅವರದ್ದೇ ಆದ ಕಾನೂನು, ಕಟ್ಟಳೆ, ಇತಿಮಿತಿಗಳು ಇರುತ್ತವೆ. ಬರೆದ ಪುಸ್ತಕ R&AW ಸಂಸ್ಥೆ ಮೊದಲು ಓದಿ, ತಿದ್ದುಪಡಿ ಮಾಡಿ, ಕೆಲವೊಂದು ಮಾಹಿತಿ ಬರೆಯದಂತೆ ಪ್ರತಿಬಂಧಿಸಿ, ನಂತರ ನೀರುನೀರಾದ (diluted) ಆದ ಆವೃತ್ತಿ ಹೊರಗೆ ಬರುತ್ತದೆ. ಆದರೆ ಈ ಯಾದವ್ ಸಾಹೇಬರು ತಮ್ಮ ಜೀವಮಾನ ಪೂರ್ತಿ R&AW ಜೊತೆ ಜಗಳವಾಡುತ್ತಲೇ ಕಳೆದವರು. ಹಾಗಾಗಿ ಯಾವದೇ ಭಿಡೆ ಇಲ್ಲದೆ ಎಲ್ಲ ಬರೆದು ಬಿಟ್ಟಿದ್ದಾರೆ. ಅದ್ಭುತ ವಿವರಗಳನ್ನು ದಾಖಲಿಸಿದ್ದಾರೆ. ಪುಸ್ತಕದ ಮೊದಲರ್ಧ ಸ್ವಲ್ಪ ಬೋರ್ ಹೊಡೆಸೀತು. ಆದ್ರೆ  ೧೯೭೦ ರ ದಶಕದಿಂದ ಆಗಿರುವ ಘಟನೆಗಳ ಬಗ್ಗೆ ಬರೆದಿರುವ ವಿವರಗಳು ಮೈಜುಮ್ಮೆನ್ನಿಸುವಂತೆ ಇವೆ. ಸುಮಾರು ಜನ ಇತರೆ ಅಧಿಕಾರಿಗಳು, ರಾಜಕಾರಣಿಗಳು ಬೆತ್ತಲಾಗಿದ್ದಾರೆ ಇದರಲ್ಲಿ. ಚಿತ್ರ ವಿಚಿತ್ರ ಖಾಸಗಿ ವಿವರಗಳೂ ಇವೆ. ಪತ್ರಿಕೆಗಳಲ್ಲಿ ಬರುವ, ಪಬ್ಲಿಕ್ ಆಗಿ ಲಭ್ಯವಿರುವ ಮಾಹಿತಿ ಎಷ್ಟು ಕಮ್ಮಿ ಮತ್ತು ಅಪೂರ್ಣ ಅಂತ ಅನ್ನಿಸುವದು ಇಂತಹ ಪುಸ್ತಕ ಓದಿದಾಗಲೇ!

ಹೀಗೆ ಎಷ್ಟೋ ಇಂತಹ ಪ್ರಕರಣಗಳು false flag operation ಆಗಿದ್ದರೆ ಏನೂ ಆಶ್ಚರ್ಯವಿಲ್ಲ. ಎಲ್ಲ ಓಕೆ ಬೇಹುಗಾರಿಕೆ ಎಂಬ ನಿಗೂಢ ಸಾಮ್ರಾಜ್ಯದಲ್ಲಿ.

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ೧೯೭೬ ರಲ್ಲಿ ಆದ ಇಸ್ರೇಲಿ ವಿಮಾನ ಅಪಹರಣ ಕೂಡ ಇದೇ ತರಹದ್ದು. ಇಸ್ರೇಲಿನ ಮೊಸ್ಸಾದ್ ಬೇಹುಗಾರಿಕೆ ಸಂಸ್ಥೆ PFLP ಎಂಬ ಪ್ಯಾಲೆಸ್ಟೈನ್ ಉಗ್ರರ ಗುಂಪನ್ನು infiltrate ಮಾಡಿತ್ತು. ಕೆಲವು ಟಾಪ್ ಲೆವೆಲ್ ಉಗ್ರರನ್ನು ಪಟಾಯಿಸಿ ಒಂದು ವಿಮಾನ ಅಪಹರಣ ಮಾಡಿಸಿ, ಅದನ್ನು ಉಗಾಂಡದ ಎಂಟೆಬ್ಬೆಗೆ ಅಪಹರಿಸಿ, ಅಲ್ಲಿಗೆ ಇಸ್ರೇಲಿ ಕಮಾಂಡೋಗಳು ಏನೇನೋ ಸಾಹಸ ಮಾಡಿ ಹೋಗಿ, ಉಗ್ರರನ್ನು ಕೊಂದು, ಜಗತ್ತೇ ಬೆರಗಾಗುವಂತಹ ಒಂದು surgical operation ಮಾಡಿ, ಎಲ್ಲರನ್ನೂ ಬಿಡಿಸಿಕೊಂಡು ಬಂದಿದ್ದರು. ಹಾಗಂತ ಹೇಳಿ ಜಗತ್ತಿಗೆ ತಿಳಿಸಿದ್ದು. ಒಳಗೆ ನೋಡಿದರೆ ಅದೂ ಒಂದು false flag operation. ಒಳ್ಳೆ ಮೈಲೇಜ್ ಪಡೆದುಕೊಂಡಿತು ಇಸ್ರೇಲ್.

ಈ false flag operations ಹೀಗಿರುತ್ತವೆ ಅಂದ್ರೆ ಮಾಡುವವರಿಗೆ ತಾವು ತಮ್ಮ ಧ್ಯೇಯಕ್ಕಾಗಿಯೇ, ಉದ್ದೇಶ ಸಾಧನೆಗಾಗಿಯೇ ಮಾಡುತ್ತಿದ್ದೇವೆ ಅಂತ ಅನ್ನಿಸುತ್ತದೆ. ಅವರಿಗೆ ಯಾವದೇ ತರಹದ ಸಂಶಯ ಕೂಡ ಬರುವದಿಲ್ಲ. ಪೂರ್ತಿ ಕಾರ್ಯಾಚರಣೆಯನ್ನು compartmentalize ಮಾಡಿಬಿಟ್ಟಿರುವದರಿಂದ ಸಂಪೂರ್ಣ ಮಾಹಿತಿ ಕೆಲವೇ ಕೆಲವು ಟಾಪ್ ಲೆವೆಲ್ ಜನರಿಗೆ ಬಿಟ್ಟರೆ ಯಾರಿಗೂ ಗೊತ್ತಿರುವದಿಲ್ಲ.

ಇಂತಹ false flag operation ಗಳ ಹಿಂದಿರುವ ಒಳಸಂಚು ಅರ್ಥಾತ conspiracy theory ಎಲ್ಲಿಯ ತನಕ ಹೋಗುತ್ತವೆ ಅಂದರೆ ಪ್ರತಿಯೊಂದು ಅವಘಡದ ಹಿಂದೆ 'ಹೀಗೂ ಆಗಿರಬಹುದಾ?' ಅನ್ನುವಂತಹ ವಿವರಗಳು ಹೊರಬರುತ್ತವೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗೆ ತದ್ವಿರುದ್ಧ. ಕೆಲವೊಂದು ತುಂಬ ನಿಜ ಅನ್ನಿಸಿದರೆ ಕೆಲವೊಂದು 'ಸಾಧ್ಯವೇ ಇಲ್ಲ' ಅಂತ ಅನ್ನಿಸಿಬಿಡುತ್ತವೆ. ೯/೧೧, ೨೬/೧೧, ಓಸಾಮಾ ಬಿನ್ ಲಾಡೆನ್ ಹತ್ಯೆ, ವಿಯೆಟ್ನಾಂ ಯುದ್ಧ, ಕೆನಡಿ ಹತ್ಯೆ, ಸಂಜಯ್, ಇಂದಿರಾ, ರಾಜೀವ್ ಗಾಂಧಿಗಳ ಹತ್ಯೆ, LTTE  ನಿರ್ನಾಮ, ರಾಜಕುಮಾರಿ ಡಯಾನಾ ಅಪಘಾತ, ಹೀಗೆ ಎಲ್ಲದರ ಬಗ್ಗೆ ಚಿತ್ರ ವಿಚಿತ್ರ conspiracy theory ಗಳು ಸಿಗುತ್ತವೆ. ಗೂಗಲ್ ಮಾಡಿ ನೋಡಿ. ಅವೆಲ್ಲ ಎಷ್ಟು ನಿಜ? ಎಲ್ಲ ಅವರವರ ಭಾವಕ್ಕೆ, ಭಕುತಿಗೆ ಬಿಟ್ಟಂತೆ ಅಂತ ಹೇಳಿ ಸುಮ್ಮನಾಗಬೇಕು ಅಷ್ಟೇ!

Mission R&AW ಪುಸ್ತಕ

ಹಾಗೇ ಸುಮ್ಮನೆ - 2014

ಫೇಸ್ ಬುಕ್ ನಲ್ಲಿ ಬರೆದ ಚುಟುಕುಗಳನ್ನು ಇಲ್ಲಿ ಹಾಕಿಟ್ಟಿರುತ್ತೇನೆ. ಹುಡುಕಲು ಸುಲಭ .

ಡಿಸೆಂಬರ್ ೧೮, ೨೦೧೪

ಗಿಂಡಿ ಮಾಣಿ - ಸ್ವಾಮಿಗಳ ಸೇವೆ ಮಾಡುವವ
ಗುಂಡಿ ಮಾಣಿ - ಸ್ವಾಮಿಗಳನ್ನು ಗುಂಡಿಗೆ ನೂಕುವವ
ಒಂದಿಷ್ಟು ಮಂಡೆ ಮೋಚಿದ, ಅಂಡೆ ಪಿರ್ಕಿ ಗುಂಡಿ ಮಾಣಿಗಳು ಸಾಗರದಲ್ಲಿ ಸಭೆ ಮಾಡಿ, 'ಪ್ರೇತ'ನೃತ್ಯ ಮಾಡಿ,
ಕೋಟಿ ನೂರು ನೂರು ಕೋಟಿ
ಸ್ವಾಮೀಜಿ ಓಡಿಸಲು ಮೂರು ನೂರು ಕೋಟಿ ||ಕೋಟಿ||
'ಭಾವಾಂ'ತರಂಗದಲ್ಲಿ ಅಲ್ಲೋಲ ಕಲ್ಲೋಲ,
ಪ್ರೇತಾಂತರಂಗದಲ್ಲಿ ಏನೇನೊ ಕೋಲಾಹಲ
ಅಂತ ವಿರಹ ನೂರು ನೂರು ತರಹದ ಮಾದರಿಯಲ್ಲಿ, ಕುನ್ನಿ ಹಾಳುಗರಿದಂತೆ ಊಳಿಟ್ಟವಂತೆ!
ಹರೇ ರಾಮ!
**************
ನವೆಂಬರ್ ೨೨, ೨೦೧೪

ಭಿಡೆಗೆ ಬಿದ್ದು ಬಸಿರಾದರೂ ಬಯಕೆಗಳನ್ನು ಮಾತ್ರ ಯಾರದೇ, ಯಾವದೇ ಭಿಡೆಯಿಲ್ಲದೆ ನಿರ್ಭಿಡೆಯಿಂದ ಪೂರೈಸಿಕೊಳ್ಳಬೇಕು!
-- ಬಿಟ್ಟಿದೇವಿ
**************
ನವೆಂಬರ್ ೨೧, ೨೦೧೪

ಕಾರಣವಿದ್ದೋ ಇಲ್ಲದೆಯೋ ನಿಮ್ಮನ್ನು ದ್ವೇಷಿಸುವರಿದ್ದಾರೆ ಅಂತ ಕೊರಗುವಕಿಂತ
ಯಾವದೇ ಕಾರಣವಿಲ್ಲದೆ ನಿಮ್ಮನ್ನು ಪ್ರೀತಿಸುವವರೂ ಇದ್ದಾರೆ ಅಂತ ಸಂತೋಷಿಸಿ
-- ಎಲ್ಲೋ ಓದಿದ್ದು

ಹೊಸ ರೀತಿಯಲ್ಲಿ ಆಶೀರ್ವಾದ ಮಾಡುವ ಬಗೆ:
ನೀ ಕೂತ ಕಾರೆಲ್ಲ ಮಾರುತಿ ಕಾರಾಗಲಿ!
ನೀ ಹಾಕಿದ / ಹಾಕ್ಕೊಂಡ ಟೋಪಿಗಳೆಲ್ಲ ಮಂಕಿ ಕ್ಯಾಪಾಗಲಿ!
ನೀ ಹಲ್ಲಿಗೆ ಹಾಕ್ಕೊಂಡು ತಿಕ್ಕಿದ ಪುಡಿಯೆಲ್ಲ ಮಂಕಿ ಬ್ರಾಂಡ್ ಹಲ್ಲುಪುಡಿಯಾಗಲಿ!
-- ಸ್ವಾಮೀ ಮಂಗೇಶಾನಂದ
**************
ನವೆಂಬರ್ ೨೦, ೨೦೧೪

ನಿನ್ನೆಯ 'ಅಂತರಾಷ್ಟ್ರೀಯ ಪುರುಷರ ದಿನ' (International Mens' Day) ಭಾಳ ಕಡೆ 'ಭಕ್ಕರಿ (ರೋಟಿ) ದಿನ' ಅಂತ ಕೂಡ ಆಚರಿಸಲ್ಪಟ್ಟಿದೆ ಅಂತ ಕೇಳಿಬಂದಿದೆ.

ಯಾಕ್ರೀ? ಅಂತ ರೂಪಾ ವೈನೀನ ಕೇಳಿದೆ.

ಅಲ್ಲಾ ನೀವು ದಿನಾ ಚಪಾತಿ ಕಣಕಾ ನಾದವರು ಇವತ್ಯಾಕ ಭಕ್ಕರಿ ಬಡೀಲಿ ಕತ್ತೀರಿ ವೈನೀ?

ಏ! ನೀನೆ ನಿನ್ನೆ ನಿನ್ನ ಗ್ವಾಡಿ ಮ್ಯಾಲೆ ಅಷ್ಟ ದೊಡ್ಡ ಹಾಕ್ಕೊಂಡಿದ್ಯಲ್ಲೋ? ಹಾಂ!? - ಅಂದ್ರು ವೈನಿ.

ನಾನ? ಏನು? ಏನು ಹಾಕಿದ್ದೆ?

'ಗಂಡಸೂರ ವಿರುದ್ಧ ಇವತ್ತು ಒಂದು ದಿವಸಾರ ಹಿಂಸಾಚಾರ ಬಿಡ್ರೀ' ಅಂತ. ಹಾಕ್ಕೊಂಡಿದ್ಯೋ ಇಲ್ಲೋ????

ಒಹೋ ಅದು. ಅದಕ್ಕ?!

ಅದಕ್ಕ ಇವತ್ತು ನಿಮ್ಮ ಗೆಳಯಾ ಚೀಪ್ಯಾ ಅಂದ್ರ ನಮ್ಮನಿಯವರನ್ನ ಬಡಿಯೋದು ಬಿಟ್ಟು ಭಕ್ಕರಿ ಬಡಿದು ಬಿಟ್ಟೆ ನೋಡಪಾ!!!!!!

ಹಾಂಗಿದ್ರ ಒಟ್ಟ ದಿನಾ ಏನರೆ ಒಂದು ಬಡಕೋತ್ತ ಇರಬೇಕು ಅನ್ರೀ. ಅಲ್ಲರೀ ವೈನಿ?

ಹೂಂ ಹೂಂ ಕರೆಕ್ಟ್. ಬಡಿಬೇಕು ಇಲ್ಲಾ ನಾದಬೇಕು. ಎರಡ್ರಾಗ ಒಂದು.

ಏನು? ಭಕ್ಕರಿ ಇಲ್ಲಾ ಚಪಾತಿ?

ಅಲ್ಲಾ. ನಿನ್ನ ತಲಿ. ನಿಮ್ಮ ಗೆಳಯಾ ಚೀಪ್ಯಾಗ ಇಲ್ಲದ ತಲಿ. ಅವರನ್ನೇ ಹಿಡಿದು ಬಡಿದಾರ ಬಡಿಬೇಕು ಇಲ್ಲಾ ನಾದಬೇಕು ಅಂದ್ರ ಭಕ್ಕರಿಯೋ ಚಪಾತ್ಯೋ ಅಂತಿಯಲ್ಲೋ ಹಾಪ್ ಮಂಗ್ಯಾನಿಕೆ!!!! - ಅಂತ ಬೈದರು ವೈನಿ.

ಯಪ್ಪಾ! ಇಲ್ಲೆ ಇದ್ದರೆ ನನ್ನನ್ನೇ ನಾದಿಬಿಟ್ಟಾರು ಅಂತ ಹೇಳಿ ಮಂಕಿ ಕ್ಯಾಪ್ ಹಾಕಿಕೊಂಡು ಜಗಾ ಖಾಲಿ ಮಾಡಿದೆ.

'ನಾದ'ಮಯ. ಈ ಲೋಕವೇ ಸಿಕ್ಕಿದವರ ಹಿಡಿದು ಬಡಿದು ನಾದುವವರ ನಾದುವಮಯ!!!! ಆ....ಆ.....'ನಾದ'ಮಯ!!!!

ವಿ. ಸೂ: ಇವರು ಏನೋ ಬರೆ ಭಕ್ಕರಿ ಬಡಿದರು. ಕೆಲವರು ತಂದೂರಿ ರೊಟ್ಟಿ ಟ್ರೀಟ್ಮೆಂಟ್ ಕೊಡ್ತಾರಂತ. ಬಡಿಯೋದು ಒಂದೇ ಅಲ್ಲದ ಬಡಿದ ಮ್ಯಾಲೆ ಅವನೌನ್ ಒಲ್ಯಾಗ ಅಂದ್ರ ತಂದೂರದಾಗ ಹಾಕಿ ಸುಟ್ಟ ಬಿಡೋದು. ವೈನಿಗೆ ಹೇಳಿ ಕೊಡಬೇಕು.
**************

ನವೆಂಬರ್ ೧೬

ರೈತ / ಕೃಷಿ ದೇಶದ ಬೆನ್ನೆಲಬು. ಓಕೆ.
ಕಾರ್ಮಿಕ / ಕೈಗಾರಿಕೆ ದೇಶದ ಪಕ್ಕೆಲಬು. ಅದೂ ಓಕೆ.
ಸಾಫ್ಟ್ವೇರ್ / ಸಾಫ್ಟ್ವೇರ್ ಮಂದಿ????????????????????????????????
ಕ್ರಿಯೇಟಿವ್ ಉತ್ತರಗಳಿಗೆ ಸ್ವಾಗತ!

(ನಂತರ ನಮಗೇ ಹೊಳೆದದ್ದು)

ವೈರಸ್, ವೈರಸ್!

ಏನ್ರೀ!? ವೈರಸ್ ವೈರಸ್ ಅಂತೀರಿ?

ನೀವು ಸಾಫ್ಟ್ವೇರ್ ಮಂದಿ, ನಿಮ್ಮ ಸಾಫ್ಟ್ವೇರ್ ಎಲ್ಲಾ ವೈರಸ್ ವೈರಸ್!

ಯಾಕ????????? ಸಾಫ್ಟ್ವೇರ್ ಅಂದ್ರ ಅಷ್ಟು ಕೀಳ? ಹಾಂ????

ಮತ್ತ? ಕಂಪ್ಯೂಟರ್ ವೈರಸ್ ಒಂದು ತರಹದ ಸಾಫ್ಟ್ವೇರ್ ಹೌದಿಲ್ಲೋ? ಅದನ್ನ ತಯಾರ್ ಮಾಡವರು ನೀವೇ ಹೌದಿಲ್ಲೋ? ಅದಕ್ಕೇ ನಿಮಗ, ನಿಮ್ಮ ಉದ್ಯೋಗಕ್ಕ ವೈರಸ್ ಅಂದೇ!|

ವೈರಸ್! ವೈರಸ್!!! ಎಲ್ಲಾ ವೈರಸ್!

ಯಾರೋ ಬೆನ್ನೆಲಬು ಆದ್ರು. ಯಾರೋ ಪಕ್ಕೆಲಬು ಆದರು. ಸಾಫ್ಟ್ವೇರ್ ಮಂದಿ ಏನೋ ಆಗ್ತಾರ ಅಂದ್ರ ವೈರಸ್ ಮಾಡಿ ಹಾಕಿ ಬಿಟ್ಟರಲ್ಲಪಾ!! ಶಿವನೇ ಶಂಭುಲಿಂಗ!

**************

ನವೆಂಬರ್ ೧೪

ನವೆಂಬರ್ ೧೪ ಮಕ್ಕಳ ದಿನಾಚರಣೆ ಆದರೆ ನವೆಂಬೆರ್ ೧೫ ಸಹಿತ ಮಕ್ಕಳ ದಿನಾಚರಣೆಯೇ. ಕಳ್ಳನನ್ನಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಗೆ ಮಂಜೂರಾದ ಹಣದಲ್ಲಿ ೯೫% ತಿಂದು, ಬೆಳಿಗ್ಗೆ ಮಕ್ಕಳಿಂದ ಚಾಚಾಜಿಗೆ ವಂದಿಸಿ, ಸಲ್ಯೂಟ್ ಹೊಡೆಯಿಸಿ, ಮುಖ್ಯವಾಗಿ ಬರೆ ಒಣಾ ಚುಮ್ಮುರಿ ತಿನ್ನಿಸಿ, 'ಆತ್ ನಡೀರಿ. ಓಡ್ರೀ ಇನ್ನ ಮನಿಗೆ,' ಅಂತ ಓಡಿಸಿ, ತಿಂದ ರೊಕ್ಕದಾಗ ಸಂಜಿ ಮುಂದ ಮನಗಂಡ ಪಾರ್ಟಿ ಮಾಡಿ, ಆರಾರು ಕೀಮಾ ಬಾಲ್ಸ್ ಹೆಟ್ಟಿ, ನಾಕ್ನಾಕು ೬೦ ml ಎಣ್ಣಿ ಹೊಡೆದು, ಮರುದಿನ ಮುಂಜಾನೆ, 'ಸರ್ರ, ಏಳ್ರೀ. ಸಾಲಿಗೆ ನಡೀರಿ' ಅಂದ್ರ 'ಹ್ಯಾಂಗೋವರ್ ಹತ್ತೈತಿ ತಲಿಗೆ. ಅಂತಾದ್ರಾಗ ಎಬ್ಬಸಾಕ ಬಂದಿರಲ್ಲೋ ಹಡಶೀ ಮಕ್ಕಳಾ!' ಅಂತ ಆ ಮಕ್ಕಳು, ಈ ಮಕ್ಕಳು ಅಂತ ಬೈದು ಅವರದ್ದೇ ರೀತಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸುವ ಕಳ್ಳನನ್ನಮಕ್ಕಳ ದಿನಾಚರಣೆ ಇವತ್ತು! ಅವರೂ ಒಂದು ಕಾಲದಲ್ಲಿ ಕಳ್ಳನನ್ನಮಕ್ಕಳ ಕೈಯಲ್ಲಿ ಶೋಷಣೆ ಮಾಡಿಸಿಕೊಂಡವರೇ ತಾನೇ!? 
**************
ಸೆಪ್ಟೆಂಬರ್ ೩೦, ೨೦೧೪

ಜೈಲಿನಲ್ಲಿದ್ದ ಅಮ್ಮ, ಮುಂಜಾನೆ 'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ' ಅಂತ ಹಾಡು ಕೇಳಿದಾಕ್ಷಣ, 'ಕರುಳಿನ ಕೂಗು' ಮಾದರಿಯಲ್ಲಿ, ಅಮ್ಮಾ ತಾಯಿ ಬೆಗ್ಗರ್ ಧಾಟಿಯಲ್ಲಿ, ಹೊಗೆ ಹಾಕಿಸ್ಕೊಂಡವರ ಆರ್ತನಾದದ ಸ್ವರದಲ್ಲಿ ಈ ಹಾಡು ಹಾಡಿಬಿಡಬೇಕೇ!?
ದೇಶದ ಕೊಂಗರೆಲ್ಲ ಒಂದಾಗಿ ವಾಂಗ
ವಾಂಗಿಟ್ಟ ಯನಗೆ ಬಿಡುಗಡೆ ಮಾಡಿಸಂಗ
ಜೇಠಮಲಾನಿ ವಂದಾರು ಲಕ್ಷ ಲಕ್ಷ ಕಾಸು ಸಾಪ್ಟಾರು
ಝೂಠಮಲಾನಿ ವಂದಾರು ಬರೀ ಝೂಠನ್ನೇ ಸೊಲ್ಲಾರು
ಜಾಮೀನ ಕೊಡಿಸದೇ ಹಾಂಗೇ ವಾಪಸ್ ಪೋಯಿ ವಿಟ್ಟಾರು

ದೇಶದ ಕೊಂಗರೆಲ್ಲ ಒಂದಾಗಿ ವಾಂಗ
ವಾಂಗಿಟ್ಟ ಯನಗೆ ಬಿಡುಗಡೆ ಮಾಡಿಸಂಗ
ಇದನ್ನ ಕೇಳಿದ ಪರಪ್ಪನ ಅಗ್ರಹಾರದ ಇತರ ಕೈದಿಗಳೆಲ್ಲ 'ನಾದಮಯ, ನಾದಮಯ, ಈ ಜೈಲೆಲ್ಲ ಅಮ್ಮನ ನಾದಮಯ. ಜೈಲೆಲ್ಲ ಅಮ್ಮನ ಆರ್ತನಾದಮಯ!' ಅಂತ ಕಿವಿಗೆ ಹತ್ತಿ ಹೆಟ್ಟಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮತ್ತೆ ನಿದ್ದೆಗೆ ಜಾರುವ ಪ್ರಯತ್ನ ಮಾಡಿದರಂತೆ.

**************
ಸೆಪ್ಟೆಂಬರ್ ೩೦, ೨೦೧೪

What will new Mars mission confirm?

Men are from Mars and women are from Venus.
OR
Men are from bars and women are from malls.

ಮಂಗ(ಳ)ನಿಂದ ಮಾನವ, ಶುಕ್ರನಿಂದ ಮಾನವಿ.
ಅಥವಾ
ಬಾರಿನಿಂದ ಮಾನವ, ಮಾಲಿನಿಂದ ಮಾನವಿ.


**************
ಸೆಪ್ಟೆಂಬರ್ ೨೫, ೨೦೧೪

ಫೇಸ್ ಬುಕ್ ಪ್ರಾರ್ಥನೆ
.
ಲೈಕ್ ಆದರೂ ಒತ್ತಿಸು, ಕಾಮೆಂಟ್ ಆದರೂ ಹಾಕಿಸು ರಾಘವೇಂದ್ರ
ಲೈಕ್ ಬರದಿದ್ದರೂ ಖುಷಿಯಾಗಿ, ಕಾಮೆಂಟ್ ಬರದಿದ್ದರೂ ಕುಣಿದಾಡಿ ಹಾಯಾಗಿರುವೆ ರಾಘವೇಂದ್ರ

unfriend ಆದರೂ ಮಾಡಿಸು, block ಆದರೂ ಮಾಡಿಸು ರಾಘವೇಂದ್ರ
unfriend ಮಾಡಿದವರ block ಮಾಡಿ, block ಮಾಡಿದವರ ಬ್ಯಾಕನ್ನೇ blast ಮಾಡುವೆ ರಾಘವೇಂದ್ರ

ಫ್ರೆಂಡ್ ರಿಕ್ವೆಸ್ಟ್ accept ಆದರೂ ಮಾಡಿಸು, ಫ್ರೆಂಡ್ ರಿಕ್ವೆಸ್ಟ್ ಡಿಲೀಟ್ ಆದರೂ ಮಾಡಿಸು ರಾಘವೇಂದ್ರ
accept ಮಾಡಿದವರ ಫ್ರೆಂಡ್ ಆಗಿ, ಡಿಲೀಟ್ ಮಾಡಿದವರಿಗೆ ದೆವ್ವಾಗಿ ಕಾಡುವೆ ರಾಘವೇಂದ್ರ

FB Group ನಲ್ಲಿ ಬೇಕಾದಷ್ಟು ಗುದ್ದಿಸು, admin ನಿಂದ ಪೋಸ್ಟ್ ಮಟಾಶೇ ಮಾಡಿಸು ರಾಘವೇಂದ್ರ
ಗುದ್ದಿದವರಿಗೆ ವಾಪಸ್ ಗುದ್ದಿ, admin ನನ್ನೇ ಎನ್ಕೌಂಟರ್ ಮಾಡಿಸಿ ಬಿಡುವೆ ರಾಘವೇಂದ್ರ
**
'ದೇವತಾ ಮನುಷ್ಯ' ಚಿತ್ರದ ಹಾಡು ಇದಕ್ಕೆ ಸ್ಪೂರ್ತಿ. (http://goo.gl/0u3aGF)
ಗುರುವಾರ ಅಂದರೆ ರಾಯರ ವಾರ. ಹಾಗಾಗಿ ಇವತ್ತೇ ರಾಯರ ಕೃಪೆಯಾಗಿದೆ ಅಂತ ಕಾಣುತ್ತೆ. ಯಾವಾಗಲೂ MRS ಕೃಪೆ ಇರಲಿ.
MRS = ಮಂತ್ರಾಲಯದ ರಾಘವೇಂದ್ರ ಸ್ವಾಮಿ
ಮಟಾಶ್ = ಖಲಾಸ್, ಡಿಲೀಟ್
**************
ಸೆಪ್ಟೆಂಬರ್ ೨೫, ೨೦೧೪

ಕೊಂದ ಪಾಪ ತಿಂದು ಪರಿಹಾರ
ಕಂಡ ಪಾಪ ಕೈಮುಗಿದು ಪರಿಹಾರ
ಕಾಣಬಾರದ್ದೇನಾದರೂ ಕಂಡು,'ಹೋ! ಏನೋ ಕಂಡುಬಿಡ್ತು! ಏನೋ ನೋಡಿಬಿಟ್ಟೆ!' ಅಂತ ಕೇಕೆ ಹೊಡೆಯುತ್ತಿದ್ದವರಿಗೆ ಹಿರಿಯರು ಹೇಳುತ್ತಿದ್ದುದು, 'ಕಂಡ್ರೆ ಕೈಮುಗಿ. ಸಾಕು ಸುಮ್ನಿರು!'

**************
ಸೆಪ್ಟೆಂಬರ್ ೨೪, ೨೦೧೪

ಕೊಂಬು, ಚೊಂಬು
-----------------------
ಕೈಯಲ್ಲಿ ಚೊಂಬಿದ್ದ ಮಾತ್ರಕ್ಕೆ ಚೊಂಬಲ್ಲಿ ನೀರಿರಲೇ ಬೇಕಂತಿಲ್ಲ
ಕೊರಳಲ್ಲಿ ಕೊಂಬಿದ್ದ ಮಾತ್ರಕ್ಕೆ ಕೊಂಬಲ್ಲಿ ಮುತ್ತೈದೆ ಶಕ್ತಿಯಿರಲೇ ಬೇಕಂತಿಲ್ಲ

**************
ಸೆಪ್ಟೆಂಬರ್ ೨೪, ೨೦೧೪

ರಜ್ಜೋಸರ್ಪ (ಹಗ್ಗ ಹಾವು)

ಕತ್ತಲಲ್ಲಿ ಕಂಡಿದ್ದು ಹಾವಲ್ಲ ಹಗ್ಗ ಅಂತ ಅರಿತು, ಆ ಅರಿವಿನೊಂದಿಗೆ, ಹೊಸ ವಿವೇಕದೊಂದಿಗೆ ಗಮ್ಯದತ್ತ ಮುಂದೆ ಸಾಗುವವರು ಕೆಲವರು.
ಹಾವಲ್ಲ ಹಗ್ಗ ಅಂತ ಅರಿತರೂ, ಹಗ್ಗದಲ್ಲಿ ಮೋಹಗೊಂಡು, ಹಗ್ಗದ ಉದ್ದ, ಅಗಲ, ಬಣ್ಣ, ಎಮ್ಮೆ ಕಟ್ಟೋ ಹಗ್ಗವೋ, ದನಾ ಕಟ್ಟೋ ಹಗ್ಗವೋ ಅಂತ ಹಗ್ಗದ ಸಂಗದಲ್ಲಿ ಸಂಭ್ರಮಿಸುತ್ತ ಗಮ್ಯ ಮರೆತು ಬಿಡುವವರು ಇನ್ನೂ ಕೆಲವರು.
ಹಾವೋ, ಹಗ್ಗವೋ ಅಂತ ತಿಳಿಯದೇ, ತಿಳಿಸಿ ಹೇಳಿದರೆ ಕೇಳದೇ, ಚೆಕ್ ಮಾಡಿಬಿಡುವೆ ಅಂತ ಲುಂಗಿ ಎತ್ತಿ ಪುಂಗಿ ಬಾರಿಸಲು ಕೂತು, 'ಏಳಲೇ ನಾಗ್ಯಾ! ನಿಮ್ಮೌನ್! ಹೆಡಿ ಎತ್ತಲೇ!' ಅಂತ ರಚ್ಚೆ ಹಿಡಿಯುವವರು ಮತ್ತೂ ಹಲವರು

**************

ಸೆಪ್ಟೆಂಬರ್ ೨೨, ೨೦೧೪

ಎಲ್ಲಿಂದಲೋ ಬಂದು, ರೇಷ್ಮೆ ಸೀರೆ ಬಿಚ್ಚೆಸೆದು, ನೈಟೀಗೆ ಶಿಫ್ಟಾದ ಆಂಟಿ ಹಾಡಿದಳು.
ನೈಟಿ ಒಳಗೆ ಇರೋ ಸುಖ ಗೊತ್ತೇ ಇರಲಿಲ್ಲ. ಹೂಂ ಅಂತೀಯಾ? ಊಹೂಂ ಅಂತೀಯಾ?
ಅಂಕಲ್ಲು ಸುಸ್ತಾಗಿ ಬಂದು, ಒಂದು 90 ml ಬಗ್ಗಿಸಿಕೊಂಡು, ಎರಡು ಐಸ್ ಕ್ಯೂಬ್ ಹಾಕ್ಕೊಂಡು ಹಾಡಿದನು.
ನೈಂಟಿ ಒಳಗೆ ಇರೋ ಸುಖ ಗೊತ್ತೇ ಇರಲಿಲ್ಲ. ಹೂಂ ಅಂತೀಯಾ? ಊಹೂಂ ಅಂತೀಯಾ?
ಆಂಟಿ, ಅಂಕಲ್ ಕೂಡಿ ಹಾಡಿದರು.
ನೈಟಿ ಒಳಗೆ ಇರೋ ಸುಖ ಗೊತ್ತೇ ಇರಲಿಲ್ಲ. ಹೂಂ ಅಂತೀಯಾ? ಊಹೂಂ ಅಂತೀಯಾ?
ನೈಂಟಿ ಒಳಗೆ ಇರೋ ಸುಖ ಗೊತ್ತೇ ಇರಲಿಲ್ಲ. ಹೂಂ ಅಂತೀಯಾ? ಊಹೂಂ ಅಂತೀಯಾ?
Monday ಮಂಡೆ ಬಿಸಿ ಮುಗಿಸಿ, ನೈಟೀಗೆ, ನೈಂಟಿಗೆ ರೆಡಿಯಾಗುತ್ತಿರುವವರಿಗೆ ಅಭಿನಂದನೆ. You survived another Monday. Congrats

**************

'ಹಾಯ್ ಬೆಂಗಳೂರ್!' ಪತ್ರಿಕೆ online ಓದಬೇಕೇ?
ಇಲ್ಲಿ ಓದಬಹುದು ನೋಡಿ. http://www.readwhere.com/publication/6419/Hi-Bangalore
Rs. 15 per issue.

**************

ಸೆಪ್ಟೆಂಬರ್ ೧೫, ೨೦೧೪

ದೀಪಿಕಾಳ cleavage
ಗೌಡರ ಮಗನ ಹಳೇ baggage
ಸ್ವಾಮಿಗಳ ಮೇಲೆ ಸಂಸಾರಿಗಳು ಚೆಲ್ಲಿದ garbage
ಮೀಡಿಯಾಕ್ಕೆ ಸಕತ್ coverage
ಯಾರ್ಯಾರೋ ತೊಗೊಂಡ mileage
ಸುದ್ದಿ ನೋಡಿ ಆಯಿತು ಮಂದಿ brain hemorrhage

**************
ಜುಲೈ ೧೪, ೨೦೧೪

ಇವುಗಳ ಲೆಕ್ಕ ಇಡಲೇಬಾರದು.

ಮನೆಯಲ್ಲಿ, ಮಠದಲ್ಲಿ: ಉಂಡಿದ್ದು, ತಿಂದಿದ್ದು (ಊಟ, ತಿಂಡಿ)

ಗೆಳೆತನದಲ್ಲಿ: ಕೊಟ್ಟಿದ್ದು, ತೊಗೊಂಡಿದ್ದು (ರೊಕ್ಕ)

ಪ್ರೀತಿಯಲ್ಲಿ: ಕೊಟ್ಟಿದ್ದು, ತೊಗೊಂಡಿದ್ದು (ಏನೇನೋ)

ಫೇಸ್ ಬುಕ್ ನಲ್ಲಿ: ಒತ್ತಿದ್ದು, ಹಾಕಿದ್ದು (ಲೈಕ್, ಕಾಮೆಂಟ್)

--ಎಲ್ಲೋ ಸಿಕ್ಕಿದ್ದು


**************
ಜೂನ್ ೨೬, ೨೦೧೪

ಕಾಕತಾಳೀಯ : ಕಾಗೆ ಬಂದು ಕೂಡುವದಕ್ಕೂ, ಕಾಯಿ ಉದುರಿ ಬೀಳೋದಕ್ಕೂ ಇರುವ / ಇಲ್ಲದಿರುವ ಸಂಬಂಧ.

cockತಾಳೀಯ: ಎಲ್ಲೋ ಹುಂಜ (cock) ಕೊಕ್ಕೋ ಕೊ ಅಂತ ಕೂಗೋದಕ್ಕೂ, ಯಾರೋ ಯಾರಿಗೋ ತಾಳಿ ಕಟ್ಟುವದಕ್ಕೂ ಇರುವ/ಇಲ್ಲದಿರುವ ಸಂಬಂಧ

 
**************
ಜೂನ್ ೨೧, ೨೦೧೪



ಆನೆಗೂ 'ನಾಮ'ಕರಣದ ಭಾಗ್ಯ.

ಯಾರೋ ಪಾಪ ಆನೆಗೂ 'ಎರಡು ವೈಟು ಒಂದು ರೆಡ್ಡು' ಲಾಂಗಾಗಿ ಎಳೆದು ಬುಟ್ಟವ್ರೆ!

ಈ ಆನೆಯ 'ನಾಮ'ಧೇಯ ಏನಿರಬಹುದು? 'ನಾಮ'ದೇವ ಅಂತೇ ಇರಬೇಕು

**************
ಜೂನ್ ೨೧, ೨೦೧೪

21 ಜೂನ್ - ವಿಶ್ವ ಸಂಗೀತ ದಿವಸದ ಶುಭಾಶಯಗಳು

ಹಾಡವರು, ಚಿಟಿ ಚಿಟಿ ಚೀರವರು,
(ಪುಂಗಿ) ಊದವರು, ಒದರವರು
ಮತ್ತು (ವಾದ್ಯ) ಬಾರಿಸವರು

ಎಲ್ಲರೂ ಸಂಗೀತ ದಿವಸ ನಿಮ್ಮ ನಿಮ್ಮ ರೀತಿಯಲ್ಲಿ ಆಚರಿಸಿ ಮಜಾ ಮಾಡಿ.

ಚರ್ಮದ ವಾದ್ಯ ಬಾರಿಸವರಿಗೆ ಹೋಳಿ ಹುಣ್ಣಿವಿ ನಂತರದ ಹಲಗಿ ಹಾಲತ್ ನೆನಪ ಇರಲೀ.
ಹರಿದು ಹೋಗಿ ಬ್ಯಾರೆ ಹಾಕಿಸೋ ಪರಿಸ್ಥಿತಿ ಬರ್ತಿತ್ತು.
ನೋಡಿಕೊಂಡು ಬಾರಿಸಿರಿ ಅಂತ ಅಷ್ಟ!
ಅಯ್ಯೋ! (ಹಲಗಿ) ನೋಡಿಕೋತ್ತ ಕೂತ್ರ ಎಲ್ಲಿ ಬಾರಿಸೋದಾಗ್ತದ ಅಂದ್ರ ಶಿವನೇ ಶಂಭುಲಿಂಗ!

http://en.wikipedia.org/wiki/Fête_de_la_Musique


**************

ಜೂನ್ ೨೦ ೨೦೧೪

ಓಕೆ...ವಾರ ಮುಗೀತು. ಶುಭ ವಾರಾಂತ್ಯ. HTML 5, ಹುಚ್ಟೀಎಂಲ್ 6, SDK, ಬೋSDK, ಪಿಂಗ್, ಮಂಗ್, offline, online, ಟಚ್ ಬೇಸ್, untouchable ಬೇಸ್, ಮೀಟಿಂಗ್, conference ಕಾಲ್, Sorry I was on mute, can you repeat?! ಅಂದರೆ ಫೋನಲ್ಲೇ ಒದ್ದು ಬಿಡುವಷ್ಟು ರೋಷ, ಮತ್ತೊಂದು ಮಗದೊಂದು ಅನ್ನುವ IT (ಇಟ್ಟಂಗಿ ಟೆಕ್ನಾಲಜಿ) ವಾರಕ್ಕೆ ವಿರಾಮ ಸೋಮವಾರದ ತನಕ.

* SDK = Software Development Kit



************** 
 
ಜೂನ್ ೧೯, ೨೦೧೪

ಅಮೃತಾಂಜನಿಗಳು, ಸುಪಾರಿ ಹಂತಕರು, ಎನ್ಕೌಂಟರ್ ಸ್ಪೆಷಲಿಸ್ಟಗಳು ಎಲ್ಲ ಈಗಷ್ಟೇ ರಿಲೀಸ್ ಆಗಿರುವ ಹೊಚ್ಚ ಹೊಸ ಸ್ಮಾರ್ಟ್ ಫೋನ್ Amazon Kindle Fire with head tracking ಕೊಳ್ಳಲು ಮುಗಿಬಿದ್ದಿದ್ದಾರಂತೆ.
ಯಾಕೆಂದರೆ ತಲೆ ಹಿಡಿಯುವ, ತಲೆ ತೆಗೆಯುವ ಮೊದಲು ತಲೆ ಹುಡುಕಬೇಕಾಗುತ್ತದೆ (head tracking) ನೋಡಿ. ಅದಕ್ಕೆ!

http://appleinsider.com/articles/14/06/18/amazon-announces-fire-phone-with-47-3d-head-tracking-display-firefly-smart-scanner-exclusive-to-att


************** 

ಜೂನ್ ೧೮, ೨೦೧೪

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಕವಳ ತುಪ್ಪಿದ್ಮ್ಯಾಲೆ ಪಿರುತಿ ಮಾಡುದಲ್ಲದಾ......ಆ....ಆ....

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ

ಕೆಲಸ ಮುಗಿಸಿ ಹೊರಟಿದ್ದ ತಂಡದ ಹೆಣ್ಣಾಳಿಗೆ ತಂಡದ ಶೇರುಗಾರರು ದರೆ ಅಂಚಿನಲ್ಲಿ, ದೋಣಿ ಮರಿಗೆ ಎಜ್ಜೆಯಲ್ಲಿ, ಬಾಯಲ್ಲಿದ್ದ ಕವಳ ತುಪ್ಪದೇ, ಗಡಿಬಿಡಿಯಲ್ಲಿ ಪಿರುತಿ ಮಾಡೋಕೆ ಹೋಗಿ, ಆಕೆಯ ಪಲ್ಕಿ (ಬ್ಲೌಸ್) ಮೇಲೆ ಕವಳದ ಕೆಂಪು ಚಿತ್ತಾರ ಮೂಡಿಸಿದಾಗ ಹೊರಹೊಮ್ಮಿದ ಹಾಡು.


**************

ಜೂನ್ ೧೬, ೨೦೧೪

'ಸಹಸ್ರ ಪೂರ್ಣ ಚಂದ್ರ ದರ್ಶನ' ಸಮಾರಂಭ ಮಾಡಿಸಿಕೊಳ್ಳುವವರು ಅದನ್ನು 'ಸಹಸ್ರ ಲಿಂಗ' ಕ್ಷೇತ್ರದಲ್ಲಿ ಮಾಡಿಸಿಕೊಳ್ಳದೇ ಇರುವದು ಲೇಸು.
ಯಾಕೆಂದರೆ ಆಹ್ವಾನ ಪತ್ರಿಕೆಯಲ್ಲಿ 'ಸಹಸ್ರ ಪೂರ್ಣ ಲಿಂಗ ದರ್ಶನ, ಸಹಸ್ರ ಚಂದ್ರದಲ್ಲಿ' ಅಂತ ಮುದ್ರಣ ದೋಷವಾಗುವ ಭಯಂಕರ ಅಪಾಯ ಇದೆ!

http://en.wikipedia.org/wiki/Sahasra_purna_chandrodayam
http://en.wikipedia.org/wiki/Sahasralinga


**************
ಜೂನ್ ೧೫, ೨೦೧೪

ಬಾರ್‌ಕೋಲು - ಕರುಳ ತುಂಬ ಕುಡಿದು, ಕಂಠಮಟ ಜಡಿದು, ಬಾರಿನ ಬಿಲ್ಲು ಕೊಡದೇ ಓಡಿ ಹೋಗುತ್ತಿರುವರನ್ನು ಹಿಡಿದು ಬಾರಿಸಲು ಇರುವ ಆಯುಧ 

ಬಾರ್‌ಕೋಲು


************************

ಜೂನ್ ೧೪, ೨೦೧೪

ಯಾಕ್ರೀ ಸರ್ರಾ 'ಆಳ್ವಾಸ್ ನುಡಿಸಿರಿ' ಕಾರ್ಯಕ್ರಮಕ್ಕೆ ಹೋಗಿಲ್ಲಾ ತಾವು? ಅಂತ ಕೇಳಿದರೆ, ಏ! ನಮಗ ನುಡಿಸಾಕ್ಕ ಬರಂಗಿಲ್ಲೋ ತಮ್ಮಾ. ನಮ್ಮದೇನಿದ್ದರೂ ಬಾರಿಸೋದು ನೋಡಪಾ. ಹಾಂಗಾಗಿ ಆಳ್ವಾಸ್ 'ಬಾರಿಸಿರಿ' ಅಂತ ಕಾರ್ಯಕ್ರಮ ಹಮ್ಮಿಕೊಂಡರು ಅಂದ್ರ ಮುದ್ದಾಂ ಹೋಕ್ಕೇನಿ ನೋಡಪಾ! ನುಡಿಸೋ ಮಂದಿ ನಡು ಬಾರಿಸೋರು ಹೋದ್ರ ಊದವರ ನಡು ವದರವರು ಹೊಕ್ಕೊಂಡಾಗ್ ಆಕ್ಕೈತಿ! ಅದಕ್ಕ ಬ್ಯಾಡ! ಅನ್ನುವ (ಕಾಲ್ಪನಿಕ) ಉತ್ತರ ಬಂತು.

ಸರ್ರಾ! ಅದು ನುಡಿಸಿರಿ ಅಂದ್ರ ನುಡಿಯ ಸಿರಿವಂತಿಕೆ, ಶ್ರೀಮಂತಿಕೆ ಅಂತ ಅರ್ಥ!

ಹಾಂಗೇನು!? ಹೋಗ್ಗೋ! ನಾ ನುಡಿಸಿರಿ ಅಂದ್ರ ಕರದು ಏನೋ ನುಡಿಸೋ ವಾದ್ಯಾ ಕೊಡ್ತಾರು, ನುಡಿಸಿರಿ ಅಂತಾರು, ಹ್ವಾದವರು ನುಡಿಸಿ ಬರ್ತಾರು ಅಂತ ತಿಳ್ಕೊಂಡಿದ್ದೆ ನೋಡಪಾ. ಕನ್ನಡ ನುಡಿಯ ಸಿರಿ ಬಗ್ಗೆ ಅಂದ್ರ ಬೇಕಾದ್ರ ಪ್ಯಾಂಟ್ ಕಳದು ಸಿರಿನೇ ಉಟಗೊಂಡು ಹೋಗಾಕ್ ತಯಾರ್ ನೋಡಪಾ!

ಹೂಂ! ಹೋಗಿ ಬರ್ರಿ! ಹ್ವಾದವರು ಮತ್ತ ನುಡಿಸಾಕ್ಕ್, ಬಾರಿಸಾಕ್ಕ್ ಹೋಗಬ್ಯಾಡ್ರೀ ಮತ್ತ! ಮಂದಿ ಹಿಡಿದು ಬಾರಿಸಿಬಿಟ್ಟಾರು. ಹುಶಾರ್ರೀ!

ಇಲ್ಲೋ! ಇಲ್ಲೋ! ಉಪದ್ವ್ಯಾಪಿತನಾ ಮಾಡಿ ಬಾರಿಸ್ಕೊಂಡು ರೂಢಾ ಐತಿ. ಆದರೂ ಸುಮ್ಮ ಕುಂತ ನಾಡು, ನುಡಿ ಸೇವಾ ಮಾಡಿ ಬರ್ತೇನಿ!
 

 http://kn.wikipedia.org/wiki/ಆಳ್ವಾಸ್_ನುಡಿಸಿರಿ

************************
ಜೂನ್ ೧೨, ೨೦೧೪

ಉಚ್ಚೆ ಹೊಯ್ದವರು ಒಬ್ಬರು, ಅದನ್ನ ಹೇಳಿದವರು ಇನ್ನೊಬ್ಬರು, ಅದರಲ್ಲಿ ಮೀನ ಹಿಡಿದವರು ಮಾತ್ರ ಹಲವರು!
ಫುಲ್ ಕಾಮಿಡಿ! So funny! (see all four parts)


https://www.youtube.com/watch?v=9SgN9ZH0heo&feature=share

************************

ಜೂನ್ ೧೧, ೨೦೧೪

ಬಹಳ ಹುಡುಕಿದ ಮೇಲೆ ಇನ್ಫೋಸಿಸ್ಗೆ ಅಂತೂ ಹೊಸಾ CEO 'ಸಿಕ್ಕಾ'
ಸಿಕ್ಕ(ಕ್ಕಾ)ವರಿಗೆ ಶುಭ! 


************************

ಜೂನ್ ೭, ೨೦೧೪

ಸಾವೋ ಪಾಲೋದಲ್ಲಿ ಹೊಸ ಶಾಸನವನ್ನು ವಿರೋಧಿಸಿ ಶನಿವಾರ "ಭಾರತೀಯ ಮೂಲದ" ಪ್ರತಿಭಟನಾಕಾರರು ಬಿಲ್ಲುಬಾಣಗಳನ್ನು ಹಿಡಿದು ರಸ್ತೆಗಳಲ್ಲಿ ಸಾಗಿದ ವಾಹನಗಳಿಗೆ ತಡೆಯೊಡ್ಡಿದರು

ಯಾರೋ ರೆಡ್ ಇಂಡಿಯನ್ ತರಹದ ಜನ ಪ್ರತಿಭಟನೆ ಮಾಡಿದರೆ 'ಪ್ರಜಾವಾಣಿ' ಸುದ್ದಿ ತರ್ಜುಮೆ ಮಾಡುವ ಜನ ಅದನ್ನ ಇಂಡಿಯನ್ ಅಂದಾಕ್ಷಣ 'ಭಾರತೀಯ ಮೂಲದ ಜನ' ಅಂತ ಬರೆದು ಬಿಡುವದಾ!!! ಅಕಟಕಟಾ!!

ಒರಿಜಿನಲ್ ಆರ್ಟಿಕಲ್, ಒರಿಜಿನಲ್ ಫೋಟೋ ಇಲ್ಲಿದೆ ನೋಡಿ - http://www.iol.co.za/sport/more-sport/brazilians-will-celebrate-at-kick-off-1.1700121#.U5PVXCjb4TU

ಇಲ್ಲಿ ಬಂದಿರುವ Guarani Indians ಅನ್ನುವ ಪದ ನೋಡಿದ್ದೇ ಪ್ರಜಾವಾಣಿಯ ಬುದ್ಧಿವಂತರು ಭಾರತೀಯ ಮೂಲದವರು ಅಂತ ಬರೆದಿರಬೇಕು. (http://en.wikipedia.org/wiki/Guaraní_people)

ಸ್ವಲ್ಪ ನೋಡಿಕೊಂಡು ಬರೀರಿ! ಮೊದಲೇ ನಮ್ಮ ಜನಗಳ ಮಾನ ಸ್ವಲ್ಪ ತುಟ್ಟಿಯಾಗಿದೆ ಯಾಕಂದ್ರೆ ಮಾಡಬಾರದ್ದು ಮಾಡುವ ಭಾರತೀಯ ಮೂಲದ ಕ್ರಿಮಿನಲ್ಲುಗಳು ತುಂಬ ಹೆಚ್ಚಾಗಿ ಬಿಟ್ಟಿದ್ದಾರೆ. ಉದಾಹರಣೆ - ರಜತ್ ಗುಪ್ತಾ. ಅಂತದ್ದರಲ್ಲಿ ಯಾರೋ ಆದಿವಾಸಿ ರೆಡ್ ಇಂಡಿಯನ್ ಜನರಿಗೂ ನಮಗೂ ತಳಕು ಹಾಕಿ ಬಿಡುವದಾ!? (http://maheshuh.blogspot.com/2014/04/insider-trading.html)


http://www.prajavani.net/article/ಪ್ರತಿಭಟನೆ-7
 


************************

ಜೂನ್ ೨, ೨೦೧೪

ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರು" ಇದು ಹಳೆಯದಾಯಿತು.

ಹೊಸ ವರ್ಷನ್.

"ಸ್ಕೋಡಾ ತೆಗೆಸಿಕೊಟ್ಟು ಪೋಡಾ ಅನ್ನಿಸಿಕೊಂಡರು" :)


************************

ಜೂನ್ ೧, ೨೦೧೪

ಹತ್ತೂ ವಿಕೆಟ್ ಬಿತ್ತಾ?
ಒಳ್ಳೇದು. Good riddance.
ಹೊಸಾ ಟೀಮ್ ಬ್ಯಾಟಿಂಗ್ ಶುರು ಮಾಡಿ ಮೊದಲಿನ ವೈಭವ ವಾಪಸ್ ತರಲಿ!
--
ಸ್ವಿಸ್ ಬ್ಯಾಂಕುಗಳಲ್ಲಿ 'ವಾರಸುದಾರರು' ಇಲ್ಲದ 'ಬೆವಾರಸೀ / ಬೇವರ್ಸಿ' ಹಣ ಬಹಳ ಇದೆಯಂತೆ.
Indian Overseas (ಓವರ್ಸೀಸ್) Bank ಇದ್ದ ಹಾಗೆ ಈ ಸ್ವಿಸ್ ಬ್ಯಾಂಕುಗಳಿಗೆ 'ಇಂಟರ್ನ್ಯಾಷನಲ್ ಬೆವರ್ಸೀಸ್ ಬ್ಯಾಂಕ್' ಅನ್ನಬಹುದೇನೋ ಎಂಬ ಜಿಜ್ಞಾಸೆ! (ಬೇನಾಮಿ ಖಾತೆಯಲ್ಲಿ ರೊಕ್ಕಾ ಇಟ್ಟ ಬೇವರ್ಸಿಗಳ ಬ್ಯಾಂಕ್)

*ಓವರ್ಸೀಸ್, ಬೆವರ್ಸೀಸ್ - ಮಸ್ತ ಪ್ರಾಸ! ಒರಿಜಿನಲ್ ಕ್ರೆಡಿಟ್ ಎಲ್ಲ ದಿ.ಧೀರೇಂದ್ರ ಗೋಪಾಲ್ ಅವರಿಗೆ!

--

Well (ಭಾವಿ) ತೆಗೆಯಿಸಿ ನೀರು ಕುಡಿಸುವವರ ಸಂಖೆ ಕಮ್ಮಿ ಆದರೂ,
ಬೋರ್ವೆಲ್ (bore well) ತೆಗೆಯಿಸಿ ಬೋರ್ ಹೊಡೆಸುವವರ ಸಂಖೆ ಮಾತ್ರ ಹೆಚ್ಚುತ್ತಲೇ ಇದೆ.

ಬೋರ್ ಹೊಡೆಸಿದ ಬೋರಂಗಿಗಳಿಗೆಲ್ಲ ಧನ್ಯವಾದ! :)
--
'ಶುಭವಾಗತೈತಮ್ಮೋ' ಅಂತ ಹಾಡುತ್ತ ಬರುವ 'ಜನುಮದ ಜೋಡಿ' ಪಿಚ್ಚರನಲ್ಲಿಯ 'ಕೋಲು ಮಂಡೆ ಜಂಗಮ' ಎಲ್ಲಿ, 'Love is the answer' ಅಂತ ಹೊಯ್ಕೊಳ್ಳುತ್ತ ಬರುವ ಈ 'ಬೋಳು ಕುಂ# ಜಂಗಮ' ಎಲ್ಲಿ! ಅಕಟಕಟಾ! :) :)


[ವಿ.ಸೂ: ಒರಿಜಿನಲ್ 'ಶುಭವಾಗತೈತಮ್ಮೋ' 'ಕೋಲು ಮಂಡೆ ಜಂಗಮ' ಗೀತೆಯನ್ನು ಇಲ್ಲಿ ನೋಡಿ. https://www.youtube.com/watch?v=nwLlOGpaI8c]
************************

 
ಮೇ ೩೧, ೨೦೧೪

ವಿಶ್ವ ತಂ'ಬಾಕು' ರಹಿತ ದಿನ ಎಲ್ಲರೂ ತಂ ತಂ ಬಾಕುಗಳನ್ನು ಬದಿಗಿಟ್ಟು ಏನಿದ್ದರೂ ಮಚ್ಚು, ಲಾಂಗು, ಬಂದೂಕುಗಳಲ್ಲೇ ಎಲ್ಲ ತರಹದ ಲಫಡಾಗಳನ್ನು ಮುಗಿಸಿಕೊಳ್ಳಬೇಕಾಗಿ ನಮ್ರ ವಿನಂತಿ

http://en.wikipedia.org/wiki/World_No_Tobacco_Day


************************

ಮೇ ೩೦, ೨೦೧೪

ನಾಡಿ, ಲಾಡಿ, ಕಿಲಾಡಿ!
------------------------------------
ವಿಜಯ್ ಮಲ್ಯರಿಗೆ ಕುಸಿದು ಬೀಳುತ್ತಿರುವ ಕಿಂಗ್ ಫಿಷರ್ ಏರ್ಲೈನ್ಸನ 'ನಾಡಿ'ಮಿಡಿತ ತಿಳಿಯಲೇ ಇಲ್ಲವಂತೆ.
ಈಗ ಕಳಚಿ ಬೀಳುತ್ತಿರುವ ಪೈಜಾಮದ 'ಲಾಡಿ'ಮಿಡಿತ ಮಿಸ್ ಮಾಡಿಕೊಳ್ಳದಿದ್ದರೆ ಸಾಕು ಈ ವಯ್ಯಾ!

************************

ಮೇ ೨೮, ೨೦೧೪

"ಸಿರ್ಸಿ ಹತ್ತಿರದ 'ಸಹಸ್ರ ಲಿಂಗ' ನೋಡಿ ಬರ್ರಿ" ಅಂತ ಹೇಳಿದರೆ, "ಏ! ಏನೂ ಬೇಕಾಗಿಲ್ಲ. ನಾವು ಮನ್ಯಾಗಿನ (ಶಿವ) ಲಿಂಗವನ್ನೇ ಸಹಸ್ರ ಸರೆ ನೋಡಿ ಬಿಡ್ತೇವಿ" ಅನ್ನುವವರಿಗೆ ಏನೂ ಹೇಳಲು ಬರೋದಿಲ್ಲ except ಶಿವನೇ ಶಂಭು (ಸಹಸ್ರ) ಲಿಂಗ ! 

************************

ಮೇ ೨೨, ೨೦೧೪

ಹೀಗೆ ಮುಂದುವರೆದರೆ ಹೆಚ್ಚಪೀ ಹೋಗಿ 'ಹುಚ್ಚ'ಪೀ ಆದೀತು!

************************

ಮೇ ೨೦, ೨೦೧೪

LTTE ತಮಿಳ 'ಹುಲಿ'ಗಳ ನಿರ್ನಾಮದ ನಂತರ ಬಗ್ಗಿ ನಮಿಸಿದ ರಾಜಪಕ್ಷ
ಕಾಂಗ್ರೆಸ್ 'ಇಲಿ'ಗಳ ನಿರ್ನಾಮದ ನಂತರ ಬಗ್ಗಿ ನಮಿಸಿದ ಮೋದಿ!

(ಸೊಂಟ) ಬಗ್ಗಿಸಿ ಬಾರಿಸೋರ ಸಂತತಿಗಿಂತ (ಸೊಂಟ) ಬಗ್ಗಿಸಿ ನಮಿಸೋರ ಸಂತತಿ ಹೆಚ್ಚಲಿ! 



************************

ಮೇ ೨೦, ೨೦೧೪

ಬಗ್ಗುವದು, ಬಗ್ಗಿಸುವದು ಎಲ್ಲ ಕೇವಲ 'ಬಾರಿಸಲಿಕ್ಕೆ' ಮಾತ್ರ ಅಂತ ತಿಳಿದಿದ್ದ 'ದೇಶವನ್ನೇ ಬಗ್ಗಿಸಿ ಬಾರಿಸಿದ' ಮಂದಿಗೆ ಮೋದಿಯವರನ್ನು ನೋಡಿ, ಒಹೋ! ಬಗ್ಗಿ ಬಾರಿಸಲೊಂದೇ ಅಲ್ಲ ನಮಿಸಲೂ ಬರುತ್ತದೆ, ಅಂತ ಲೇಟಾಗಿ ಹೊಳೆಯಿತಂತೆ!

************************
ಮೇ ೧೯, ೨೦೧೪
 
ಚಾಚಾ ನೆಹರು ಅವರಿಗೆ ಮಕ್ಕಳು ಅಂದ್ರೆ ಪ್ರಾಣ. ಅದಕ್ಕೇ ಅವರ ಜನ್ಮದಿವಸವನ್ನು 'ಮಕ್ಕಳ ದಿನಾಚರಣೆ' ಎಂದು ಆಚರಿಸಲಾಗುತ್ತದೆ.

'ಯಾವ ಮಕ್ಕಳು' ಅಂದ್ರೆ ಇಷ್ಟ ಅಂತ ಅವರು ಹೇಳಲೂ ಇಲ್ಲ, ಯಾರೂ ಕೇಳಿದ ಹಾಗೂ ಇಲ್ಲ.

ಅರವತ್ತೇಳು ವರ್ಷಗಳ ನಿರಂತರ ಕೊಳ್ಳೆಯ ನಂತರ ತಿಳಿದಿದ್ದು ಅವರಿಗೆ 'ಕಳ್ಳನನ್ಮಕ್ಕಳು' ಅಂದ್ರೆ ಇಷ್ಟ ಅಂತ.

ಹಾಗಾಗಿ ಈವರ್ಷದಿಂದ ನವೆಂಬರ್ ಹದಿನಾಕನ್ನು 'ಕಳ್ಳನನ್ಮಕ್ಕಳ ದಿನಾಚರಣೆ' ಅಂತ ಮರು'ನಾಮ'ಕರಣ ಮಾಡಿ ಮೋದಿ ಅಲೆಯಲ್ಲಿ ಕಳೆದು ಹೋಗಿರುವ 'ಕಳ್ಳನನ್ಮಕ್ಕಳನ್ನ' ಹಿಡಿಹಿಡಿದು ಕಳ್ಳನನ್ಮಕ್ಕಳ ದಿನಾಚರಣೆಯಂದು 'ಬರೋಬ್ಬರಿ' ಸನ್ಮಾನಿಸುವ ಯೋಜನೆ ಹಾಕಿಕೊಳ್ಳಬೇಕಾಗಿ ವಿನಂತಿ

(ಮಕ್ಕಳು, ಕಳ್ಳನನ್ಮಕ್ಕಳು - ಒರಿಜಿನಲ್ ಕ್ರೆಡಿಟ್ 'ಕನ್ನಡ ಪ್ರಭದ' ಮಾಜಿ ಸಂಪಾದಕ ದಿವಂಗತ ವೈಯನ್ಕೆ ಅವರಿಗೆ ಸಲ್ಲುವದು)
 



************************

ಮೇ ೧೭, ೨೦೧೪

'ಮೂರೂ' ಬಿಟ್ಟ ಮುದಿ ಹೋರಿಗಳ (ಎತ್ತುಗಳ) ಗುಂಪೊಂದು ಹಾಕಿಕೊಂಡಿದ್ದ 'ಮೂರನೇ ಮುಂದು' (3rd front) ಎಂಬ ಮನೆಹಾಳ ಯೋಜನೆ 'ಮೂರಾ'ಬಟ್ಟೆಯಾಗಿದ್ದು ತುಂಬ ಒಳ್ಳೆಯದಾಗಿದೆ. ಇಲ್ಲವಾದರೆ ನಮ್ಮ ಉತ್ತರ ಕನ್ನಡದ ಕಡೆ ಕೆಲಸದವರ ಬಾಯಲ್ಲಿ ಅದು "ದೇವೇಗೌಡರ 3rd ಉ ಫ್ರಂಟ್ ಬಂದದಂತೆ. ದೇವೇಗೌಡರ 3rd ಉ ಫ್ರಂಟ್ ಬಂದದಂತೆ." ಅಂತ ಆಗಿ ಆಗಿ, "ಥೋ ಮಾರಾಯಾ! ನೀ ಸೊಕಾಗಿ ದೇವೇಗೌಡರ ಪಾರ್ಟಿ ಅಂತ ಹೇಳು ಸಾಕು. ಅದೆಂತ ಆ ನಮ್ನಿ 3rd ಉ ಫ್ರಂಟ್ ಬಂದದಂತೆ, 3rd ಉ ಫ್ರಂಟ್ ಬಂದದಂತೆ ಅಂತ ಪಕ್ಕಾ ಮಳ್ಳ ಹಲಬತೀಯ ಏನ!? ಸುತ್ತ ಮುತ್ತ ಹೆಂಗಸರು ಮಕ್ಕಳು ಇರೋದು ಕಾಣೋದಿಲ್ಲ ನಿನಗೆ? ಹನಿ ನೋಡಿಕೆಂಡು ಹಲಬು ಮಾರಾಯಾ!" ಅನ್ನೋ ಕರ್ಮದಿಂದ ಜನ ಪಾರಾಗಿದ್ದಾರೆ!  

***********************

ಮೇ ೧೬, ೨೦೧೪

'ಕುರುಬನ ರಾಣಿ' ಎಂಬ ಕನ್ನಡ ಚಿತ್ರದಲ್ಲಿ ನಾಯಕಿಯಾಗಿದ್ದ ನಗ್ಮಾ ಎಂಬ ಮಾಜಿ ನಟಿ, ಭೂಗತ ದೊರೆ ಅನೀಸ್ ಇಬ್ರಾಹಿಮ್ಮನ ಡವ್ವು ಡುಮ್ಕಿ ಹೊಡೆದಿದ್ದಾಳೆ.
ಅತ್ಲಾಗೆ ಅದೇ ಸಿನೆಮಾದಲ್ಲಿ ಹೀರೋ ಆಗಿದ್ದ ಶಿವರಾಜ್ ಕುಮಾರ್ ಹೆಂಡತಿ ಕೂಡ ಡುಮ್ಕಿ ಹೊಡೆದಿದ್ದಾಳೆ.

ಹೀಗಾಗಿ ಕುರುಬನ 'ಎರಡೂ' ರಾಣಿಯರೂ ಮಟಾಶ್!!!!!


***********************

ಮೇ ೧೬, ೨೦೧೪

ಒಲವೆ ಜೀವನ ಸಾಕ್ಷಾತ್ಕಾರ.
ಬಂತು ಮೋದಿ ಸರಕಾರ.
ಮುಗೀತು 'ಇಟಲಿ ಪರಕಾರದ' ಕಾರಬಾರ!!!!!!!!!!!!!!!!!!!!!!!!

ಓಂ 'ನಮೋ' ನಾರಾಯಣ!
 


--

ನಂದನ್ ನಿಲೇ'ಕಣಿ' ಸೋತಾ!? ಹಾಂ!
ಇಲ್ಲ! ಗೆದ್ದ! ಹೋಗಿ 'ಕಣಿ' ಕೇಳು!

***********************

ಏಪ್ರಿಲ್ ೩೦, ೨೦೧೪

ಹೆತ್ತವರಿಗೆ ಹೆಗ್ಗಣ ಮುದ್ದು.
ಆಯಿತು ಸರಿ.
ತಾವು ಹೆತ್ತ ಹೆಗ್ಗಣಗಳನ್ನು ಮುದ್ದು ಮಾಡುವ ಅಬ್ಬರದಲ್ಲಿ ಇತರರು ಹೆತ್ತ 'ಮೊಲಗಳನ್ನು' ಹೆಗ್ಗಣದಂತೆ ನೋಡುವದು!?
ಅದು ತಪ್ಪು.

-- ಎಲ್ಲೋ ಸಿಕ್ಕಿದ್ದು
 


***********************

ಏಪ್ರಿಲ್ ೩೦, ೨೦೧೪

ನಿಮ್ಮ 'ಮೊಳೆ ಹೊಡೆಯುವ' ಕೌಶಲ್ಯವನ್ನು ಎಲ್ಲರ ಮುಂದೆ ಹೇಳದಿರಿ
ಕೇಳಿದವರು ಹೇಳಿಯಾರು - "ನನ್ನ ನಾಲ್ಕು ಕುದುರೆಗಳಿಗೆ ಲಾಳ ಹೊಡೆದು ಹೋಗಪ್ಪ" ಅಂತ!
ಒಮ್ಮೆ ಕೊಚ್ಚಿಕೊಂಡರೆ ಅಷ್ಟೇ. ನಂತರ ಮಾಡಿ ತೋರಿಸಬೇಕಾದೀತು!

-- ಶೇಖ್ ಸಾದಿ ಸಿರಾಜಿ (ಗುಲಿಸ್ತಾನ)