Tuesday, July 29, 2014

ನೇಪಾಳ ಅರಮನೆ ಹತ್ಯಾಕಾಂಡ 'ಹೀಗೂ' ಆಗಿರಬಹುದೇ?

ಜೂನ್ ೧, ೨೦೦೧. ನೇಪಾಳದ ಇತಿಹಾಸದಲ್ಲಿ ಕರಾಳ ದಿನ. ಯುವರಾಜ ದೀಪೇಂದ್ರ ತನ್ನ ತಂದೆ, ತಾಯಿ, ತಂಗಿ, ತಮ್ಮಂದಿರನ್ನು ಗುಂಡಿಕ್ಕಿ ಕೊಂದುಬಿಟ್ಟ. ಇನ್ನೂ ಹಲವು ಬಂಧುಗಳನ್ನು ಗುಂಡಿಕ್ಕಿ ಗಾಯಗೊಳಿಸಿದ. ಕೊನೆಗೆ ತಾನೂ ಸಹ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಇದು ಜಗತ್ತಿಗೆ ಹೇಳಿದ 'ಅಧಿಕೃತ' ಸುದ್ದಿ. ಆಗಿದ್ದು ಹೀಗೆಯೋ ಅಥವಾ ಸತ್ಯ ಕಥೆ ಬೇರೇನೋ ಇತ್ತೋ..........!?

ಇಂತಹ ದೊಡ್ಡದೊಂದು ಹತ್ಯಾಕಾಂಡ ಆಗಿದ್ದಕ್ಕೆ ಕೊಟ್ಟ ಕಾರಣ ಇಷ್ಟೇ.  ಯುವರಾಜ ದೀಪೇಂದ್ರ ದೇವಯಾನಿ ರಾಣಾ ಎಂಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ರಾಜ ಪರಿವಾರಕ್ಕೆ, ಮುಖ್ಯವಾಗಿ ತಾಯಿ ರಾಣಿ ಐಶ್ವರ್ಯ ಮತ್ತು ತಂದೆ ದೊರೆ ಬೀರೇಂದ್ರ ಇವರಿಗೆ, ಆ ಸಂಬಂಧ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ವೈಮನಸ್ಸು ಬಂದಿತ್ತು. ಆದಿನ ರಾತ್ರೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಯುವರಾಜ ತನ್ನ ಕುಟುಂಬವನ್ನು ಢಂ ಢಂ ಅಂತ ಯದ್ವಾ ತದ್ವಾ ಗುಂಡು ಹಾರಿಸಿ ನಿರ್ನಾಮ ಮಾಡಿದ.

ಈ 'ಅಧಿಕೃತ' ಮಾಹಿತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ಆವತ್ತು ರಾತ್ರಿ ಅರಮನೆಯಲ್ಲಿ ಒಂದು ಔತಣ ಕೂಟವಿತ್ತು. ಅದು ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ನಡೆಯುವ ಔತಣ ಕೂಟ. ರಾಜ ಪರಿವಾರದ ಎಲ್ಲರಿಗೆ ಆಮಂತ್ರಣ ಇರುತ್ತಿತ್ತು. ಮಹಾರಾಜನ ಕುಟುಂಬ, ಅವನ ಸಹೋದರ, ಸಹೋದರಿಯರ ಕುಟುಂಬಗಳು, ರಾಣಿ ಐಶ್ವರ್ಯಾಳ ಸಹೋದರ, ಸಹೋದರಿಯರ ಕುಟುಂಬ ಹೀಗೆ ಒಂದು ತರಹದ extended family get-together.

ಅಂತಹ ಆ ಔತಣ ಕೂಟಕ್ಕೆ ಒಬ್ಬ ಅತಿ ಮುಖ್ಯ ವ್ಯಕ್ತಿ ಗೈರು ಹಾಜರಾಗಿದ್ದ. ಅವನೇ ದೊರೆ ಬೀರೇಂದ್ರನ ಖಾಸಾ ತಮ್ಮ ಜ್ಞಾನೇಂದ್ರ! ಒಂದು ವೇಳೆ ಮಹಾರಾಜ ಬೀರೇಂದ್ರ, ಯುವರಾಜ ದೀಪೇಂದ್ರ,  ಇನ್ನೊಬ್ಬ ಯುವರಾಜ ನಿರಂಜನ ಇವರೆಲ್ಲ ಏನಾದರೂ ಮೃತರಾಗುವ ಸಂದರ್ಭ ಬಂದಿದ್ದರೆ ರಾಜನಾಗಲು ಪಾಳಿಯಲ್ಲಿ ನಿಂತವ ಯಾರು ಅಂತ ನೋಡಿದರೆ  ಔತಣ ಕೂಟಕ್ಕೆ ಬರದೇ ಕೈಯೆತ್ತಿದ್ದ ಇದೇ ಜ್ಞಾನೇಂದ್ರ! ಜ್ಞಾನೇಂದ್ರ ಏನೋ ಸಬೂಬು ಕೊಟ್ಟಿದ್ದ, 'ಬೇರೆ ಕೆಲಸದ ಮೇಲೆ ನೇಪಾಳದ ಬೇರೆ ಭಾಗದಲ್ಲಿ ಇರುತ್ತೇನೆ. ಆದ್ದರಿಂದ ಬರಲಾಗುವದಿಲ್ಲ,' ಅಂತ. ಆಗಲಿದ್ದ ಹತ್ಯಾಕಾಂಡದ ಬಗ್ಗೆ ಯಾವದೇ ಮಾಹಿತಿ ಜ್ಞಾನೇಂದ್ರನಿಗೆ ಇರಲಿಲ್ಲ ಅಂದಿಟ್ಟುಕೊಂಡರೂ, ಆದ ಹತ್ಯಾಕಾಂಡದಿಂದ ಅತಿ ಹೆಚ್ಚಿನ ಲಾಭ (ನೇಪಾಳದ ರಾಜ ಸಿಂಹಾಸನ) ಅವನಿಗೇ ಸಿಗುತ್ತಿದ್ದರಿಂದ ಆದ ಹತ್ಯಾಕಾಂಡದಲ್ಲಿ ಅವನ ಪಾತ್ರವಿತ್ತೆ ಅನ್ನುವದರ ಮೇಲೆ ಸಂಶಯವಂತೂ ಬಂದೇ ಬರುತ್ತದೆ. ಯಾವದೇ ಅಪರಾಧ ಆದಾಗ ನೋಡುವದೇ ಯಾರಿಗೆ ಅದನ್ನು ಮಾಡಲು, ಮಾಡಿಸಲು motive ಇತ್ತು ಅಂತ. motive ಇರುವದು ಬರುವ ಲಾಭದಿಂದ. ದೊರೆ ಬೀರೇಂದ್ರ ಮತ್ತು ಅವನ ಸಂತಾನ ಸಾಯುವದರಿಂದ ಜ್ಞಾನೇಂದ್ರನ ರಾಜ ಕುಟುಂಬದ ಶಾಖೆಗೆ ಮ್ಯಾಕ್ಸಿಮಮ್ ಲಾಭ ಇತ್ತು. ಅದೇ motive ಕೂಡ ಆಗಿತ್ತಾ? ಯಾರೂ ತನಿಖೆ ಮಾಡಲು ಹೋಗಿಲ್ಲ.

ಔತಣ ಕೂಟದ ಮೊದಲು, ಎಲ್ಲ ಜನ ಬಂದು ಸೇರುತ್ತಿದ್ದಂತೆಯೇ, ಯುವರಾಜ ದೀಪೇಂದ್ರನೇ ಎಲ್ಲರಿಗೂ ಕೇಳಿ ಕೇಳಿ ಅವರವರ ಡ್ರಿಂಕ್ ಮಾಡಿಕೊಡುತ್ತಿದ್ದ. ಹಾಗೆಯೇ ತಾನೂ ಸಹಿತ ವಿಸ್ಕಿ ಹೀರುತ್ತ, ಸಿಗರೇಟ್ ಸೇದುತ್ತ ಇದ್ದ. ಯುವರಾಜ ಮತ್ತು ಅವನದೇ ವಯಸ್ಸಿನ ಇತರ ಸೋದರ ಸಂಬಂಧಿಗಳು ಗಾಂಜಾ ಹೊಡೆದಿದ್ದಂತೂ ಖಾತ್ರಿಯಿತ್ತು. ಇನ್ನೂ ಮತ್ತಿತರ ಮಾದಕ ದ್ರವ್ಯಗಳನ್ನೂ ಸೇವಿಸಿದ್ದರೆ? ಇರಬಹದು. ಅವರಿಗೆ ಅದೆಲ್ಲದರ ಅಭ್ಯಾಸ, ಚಟ ಎಲ್ಲ ಇತ್ತು. ದೀಪೇಂದ್ರನ ಕುಡಿತದ, ಗಾಂಜಾ ಹೊಡೆಯುವ ಕೆಪ್ಯಾಸಿಟಿ ಸಿಕ್ಕಾಪಟ್ಟೆ ಅಪಾರ. ಬಾಟಲಿಗಟ್ಟಲೆ ಎಣ್ಣೆ ಹೊಡೆದರೂ ಸ್ಥಿಮಿತ ಮಾತ್ರ ಕಳೆದುಕೊಳ್ಳುತ್ತಿರಲಿಲ್ಲ ದೀಪೇಂದ್ರ.

ಸುಮಾರಾಗಿ ಆಪರಿ ಕುಡಿದರೂ, ಮಾದಕ ದ್ರವ್ಯ ಸೇವಿಸಿದರೂ ಏನೂ ಆಗದೇ ಆರಾಮ ಬಿಂದಾಸ್ ಇರುತ್ತಿದ್ದ ದೀಪೇಂದ್ರ ಆವತ್ತು ಮಾತ್ರ ಫುಲ್ ಔಟ್ ಆಗಿಬಿಟ್ಟ. ಔಟ್ ಅಂದ್ರೆ ಫುಲ್ ಔಟ್. ಪ್ರಜ್ಞೆ ತಪ್ಪಿದಂತೆ ಆಗಿ, ಫುಲ್ ಫ್ಲಾಟ್ ಆಗಿಬಿಟ್ಟ. ಬಿಲಿಯರ್ಡ್ಸ್ ಆಡುತ್ತಿದ್ದವ, ತಲೆಗೆ ಚಕ್ಕರ್ ಬಂದವನಂತೆ ಕೆಳಗೆ ಕೂತು, ಅಲ್ಲೇ ಫುಲ್ ಮಲಗಿಬಿಟ್ಟ. ಈಕಡೆ ಪರಿವೆ ಸಹ ಇರಲಿಲ್ಲ. ಎಲ್ಲರಿಗೂ ಅದೇ ಆಶ್ಚರ್ಯ. ಏನಾಯಿತಪ್ಪ ಇವನಿಗೆ? ಅಂತ. ಆವತ್ತು ಕುಡಿದಿದ್ದರ ಹತ್ತು ಪಟ್ಟು ಕುಡಿದರೂ ಏನೂ ಆಗದಿದ್ದವ ಏನೋ ಒಂದೆರೆಡು ಪೆಗ್ ಹಾಕಿ, ಒಂದೆರೆಡು ಗಾಂಜಾ ಜುರ್ಕಿ ಎಳೆದಿದ್ದೇ ಏನು ಫುಲ್ ಔಟ್ ಆಗಿಬಿಟ್ಟನಲ್ಲ? ಅಂತ ಎಲ್ಲರಿಗೂ ಆಶ್ಚರ್ಯ. ರಾಜ ಬೀರೇಂದ್ರ ಮತ್ತು ರಾಣಿ ಅದೇ ಟೈಮಿಗೆ ಅರಮನೆಗೆ ಎಂಟ್ರಿ ಕೊಡುತ್ತಿದ್ದರು. ಪೂರ್ತಿ ಔಟ್ ಆಗಿ, ನೆಲದ ಮೇಲೆ ಫ್ಲಾಟ್ ಆದ ಯುವರಾಜನನ್ನು ನೋಡಿದರೆ ನೊಂದುಕೊಂಡಾರು ಅಂತ ಹೇಳಿ ಸೋದರ ಸಂಬಂಧಿಗಳು, ಕೆಲಸದವರು ಎಲ್ಲ ಸೇರಿ, ಔತಣ ಕೂಟದ ಕೋಣೆಯಿಂದ ಸುಮಾರು ದೂರದಲ್ಲಿದ್ದ ದೀಪೇಂದ್ರನ ಕೋಣೆಗೆ ಅವನನ್ನು ಅನಾಮತ್ ಹೊತ್ತುಕೊಂಡು ಹೋಗಿ, ಮಂಚದ ಮೇಲೆ ಮಲಗಿಸಿ ಬಂದಿದ್ದರು. ಅವನ ಅವಸ್ಥೆ ನೋಡಿದವರು ಅವನು ಅಷ್ಟು ಬೇಗ ಏಳುತ್ತಾನೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. 'ಅಧಿಕೃತ' ಕಥೆ ಪ್ರಕಾರ ರಾಜಕುಮಾರ ದೀಪೇಂದ್ರ ಏಳುವದೊಂದೇ ಅಲ್ಲ, ಎದ್ದು ಬಂದವನೇ ಎಲ್ಲರನ್ನೂ ಗುಂಡಿಕ್ಕಿ ಸಹ ಕೊಂದುಬಿಟ್ಟ! ಅದೂ ಶಾಸ್ತ್ರೋಕ್ತವಾಗಿ ಪೂರ್ಣ ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಬಂದು ಕೊಂದಿದ್ದ. ಅದೂ ಒಂದೇ ಸಲ ಕೊಲ್ಲಲಿಲ್ಲ. ಗುಂಡು, ಮದ್ದು ಖರ್ಚಾತು ಅಂತ ಹೇಳಿ, ಎರಡು ಮೂರು ಸಲ ತನ್ನ ಕೋಣೆಗೆ ಹೋಗಿ, ಬಂದೂಕುಗಳಿಗೆ ಗುಂಡು ತುಂಬಿಕೊಂಡು ತುಂಬಿಕೊಂಡು ಬಂದು ಕೊಂದಿದ್ದ. ಇದೆಲ್ಲ ಮಾಡಿದವ ಕೆಲವೇ ನಿಮಿಷಗಳ ಹಿಂದೆ ಫುಲ್ ಚಿತ್ತಾಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದ. ಅಧಿಕೃತ ಕಥೆ ನಂಬಲು ಸ್ವಲ್ಪ ಕಷ್ಟ!

ಯುವರಾಜ ದೀಪೇಂದ್ರ ತನ್ನ ಕುಟುಂಬದ ತಂದೆ ಬೀರೇಂದ್ರ , ತಾಯಿ ಐಶ್ವರ್ಯ, ತಂಗಿ ಶ್ರುತಿ, ತಮ್ಮ ನಿರಂಜನ ಇವರನ್ನು ಕೊಂದೇ ಬಿಟ್ಟ. ಅತ್ತೆ, ಮಾವ, ಚಿಕ್ಕಪ್ಪ, ಅಜ್ಜಿ ಇತರನ್ನು ಗುಂಡಿಟ್ಟು ಗಾಯಗೊಳಿಸಿದ. ಅಲ್ಲಿ ನೆರೆದವರಲ್ಲಿ ಒಬ್ಬನೇ ಒಬ್ಬ ಏನೂ ಆಗದೇ ಬಚಾವ್! ಅವನು ಯಾರು ಅಂತ ನೋಡುತ್ತ ಹೋದರೆ ಅವನೇ ಮತ್ತೊಬ್ಬ ಯುವರಾಜ ಪಾರಸ್! ಈ ಪಾರಸ್ ಯಾರು ಅಂತ ನೋಡಿದರೆ ಅವನು ಜ್ಞಾನೇಂದ್ರನ ಮಗ! ಜ್ಞಾನೇಂದ್ರನ ನಂತರ ರಾಜನಾಗುವವ! ಈ ಪಾರಸನನ್ನು, 'ಎಲ್ಲರಿಗೂ ಗುಂಡಿಟ್ಟ ದೀಪೇಂದ್ರ ನಿನ್ನೊಬ್ಬನನ್ನೇ ಹೇಗೆ ಬಿಟ್ಟ?' ಅಂತ ಕೇಳಿದರೆ ಪಾರಸ್ ಏನೆಂದುಬಿಟ್ಟ ಗೊತ್ತೇ? 'ಪ್ಲೀಸ್, ಅಣ್ಣಾ, ನನ್ನನ್ನು ಬಿಟ್ಟು ಬಿಡು. ಏನೂ ಮಾಡಬೇಡ, ಅಂತ ಬೇಡಿಕೊಂಡೆ. ಅದಕ್ಕೇ ನನ್ನನ್ನು ಬಿಟ್ಟು ಬಿಟ್ಟ!!!!!' ತನ್ನ ಅತ್ಯಂತ ಪ್ರೀತಿಯ ಕಿರಿಯ ತಮ್ಮ ನಿರಂಜನನ ಬೆನ್ನಿಗೆ ಡಜನ್ನುಗಟ್ಟಲೆ ಗುಂಡು ನುಗ್ಗಿಸಿದ್ದ, ತಾಯಿಯ ಮುಖ ಪೂರ್ತಿ ಕೆತ್ತಿ ಹೋಗುವಂತೆ ಗುಂಡು ಹಾರಿಸಿದ್ದ ಎಂದು ಹೇಳಲಾದ ದೀಪೇಂದ್ರ ಪಾರಸ್ ಅನ್ನುವ ಸೋದರ ಸಂಬಂಧಿ (ಕಸಿನ್) ಮಾತು ಕೇಳಿ ಅವನನ್ನು ಬಿಟ್ಟು ಬಿಟ್ಟ, ಜೀವಂತ ಉಳಿಸಿಬಿಟ್ಟ!! ಇದನ್ನು ನಂಬಲು ಸಾಧ್ಯವೇ?

ಇದೆಲ್ಲ ಆಗಿದ್ದು ಮುಖ್ಯ ಅರಮನೆ ನಾರಾಯಣಹಿತಿ ಅರಮನೆಯಲ್ಲಿ. ಬೇಕಾದಷ್ಟು ಸೈನಿಕರು, ಇತರೆ ಕೆಲಸದವರು ಎಲ್ಲ ಇದ್ದರು. ಅವರೆಲ್ಲ ಏನು ಮಾಡುತ್ತಿದ್ದರು? ಇದೆಲ್ಲ ಒಂದು ಕ್ಷಣದಲ್ಲಿ ಆಗಿ ಹೋಯಿತು, ಯಾರಿಗೂ ಏನೂ ಮಾಡಲೂ ಸಾಧ್ಯವೇ ಆಗಲಿಲ್ಲ ಅಂದರೆ  ಅದು ಬೇರೆ ಮಾತು. ಇಷ್ಟೆಲ್ಲ ಹತ್ಯಾಕಾಂಡ ಆಗಿದ್ದು ಒಂದಿಷ್ಟು ನಿಮಿಷ, ಗಂಟೆಗಳ ಲೆಕ್ಕದಲ್ಲಿ. ಯಾರೂ ಏನೂ ಮಾಡಲೇ ಇಲ್ಲವೇ? ಅಲ್ಲಿದ್ದ ಕೆಲಸದವರನ್ನು, ಸೈನಿಕರನ್ನು ಕೇಳಿದರೆ, ಸ್ಟ್ಯಾಂಡರ್ಡ್ ಉತ್ತರ, 'ಗೊತ್ತಿಲ್ಲ. ನಾವೆಲ್ಲ ಹೊರಗಿದ್ದೆವು. ಒಳಗೆ ಏನಾಗುತ್ತಿತ್ತು ಅಂತ ನಮಗೆ ಗೊತ್ತಿಲ್ಲ. ಬಂದು ಏನಾದರೂ ಮಾಡಿ, ಕಾರ್ಯಾಚರಣೆ ಮಾಡಿ, ಪರಿಸ್ಥಿತಿ ಸಂಬಾಳಿಸಿ ಅಂತ ಆಜ್ಞೆ ಬರಲಿಲ್ಲ. ಇದೆಲ್ಲ ಅರಮನೆ ಕೆಲಸ. ಸರಿಯಾಗಿ ಆಜ್ಞೆ ಬರದೇ ನಾವೇ ನಾವೇ ಏನಾದರೂ ಮಾಡುವಂತಿಲ್ಲ.' ಇದಕ್ಕೆ ಏನಂತೀರಿ?

ಇನ್ನು ಗುಂಡು ತಿಂದು ಸತ್ತವರು, ಗಾಯಗೊಂಡವರು. ಅವರಲ್ಲಾದರೂ ಒಬ್ಬಿಬ್ಬರು ಎದ್ದು ಓಡಿ ಹೋಗುವದದನ್ನಾಗಲಿ ಅಥವಾ ಫೋನ್ ಅಥವಾ ಮತ್ತೆ ಬೇರೆ ರೀತಿ ಸಂಪರ್ಕ ಮಾಡಿ ಸಹಾಯವನ್ನು ಪಡೆಯುವದಾಗಲಿ ಮಾಡಲೇ ಇಲ್ಲ. sitting ducks ಅಂದ್ರೆ ಬಲಿಯ ಬಕರಾಗಳ ತರಹ ಗುಂಡು ತಿಂದು ಸತ್ತರು ಅಥವಾ ಗಾಯಗೊಂಡು ಬಿದ್ದರು. ಇದು ಸಹಜ ಅಂತ ಅನ್ನಿಸುವದಿಲ್ಲ. ಇನ್ನು ಅಲ್ಲಿದ್ದವರೆಲ್ಲ ಒಂದು ತರಹದ ಸಮೂಹ ಸನ್ನಿಗೆ ಒಳಗಾಗಿ, ಬಕರಾಗಳ ತರಹ ಏನೂ ಪ್ರತಿರೋಧ ಓಡ್ಡದೇ ಕೂತು ಗುಂಡು ತಿಂದರು ಅಂತ ನಂಬಿದರೆ ಅವರನ್ನೆಲ್ಲ ಅದು ಹೇಗೆ ಆ ತರಹದ ಸಮೂಹ ಸನ್ನಿಗೆ ಒಳಪಡಿಸಲಾಯಿತು?

ಎಲ್ಲರ ಮಾರಣ ಹೋಮ ಮುಗಿಸಿದ ಮೇಲೆ ದೀಪೇಂದ್ರ ತಾನೇ ತನ್ನ ತಲೆಗೆ ಒಂದು ಗುಂಡು ಹೊಡೆದುಕೊಂಡು ಸತ್ತ ಅಂತ ಹೇಳಲಾಯಿತು. ಸರಿ. ಇದನ್ನು ಒಪ್ಪೋಣ ಅಂತ ನೋಡಿದರೆ ಗುಂಡು ತಲೆ ಎಡಗಡೆಯಿಂದ ಹೊಕ್ಕಿತ್ತು. ಸಾಧಾರಣವಾಗಿ ಎಡಗೈ ಉಪಯೋಗ ಮಾಡುವವರು (ಎಡಚರು, ರೊಡ್ಡರು) ತಮ್ಮ ಕೈಯಾರೆ ತಲೆಗೆ ಬುಲೆಟ್ ಹೊಡೆದುಕೊಂಡ ರೀತಿಯಲ್ಲಿ. ಈಗ ಕೇಳಿ ಭಯಂಕರ ಕುತೂಹಲದ ಸಂಗತಿ! ರಾಜಕುಮಾರ ದೀಪೇಂದ್ರ ಎಡಚನಾಗಿರಲಿಲ್ಲ. ಅವನು ಪಕ್ಕಾ ಬಲಗೈ ಆಸಾಮಿ. ಇಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಮಾತ್ರ ಕೊಂಕಣ ಸುತ್ತಿ ಮೈಲಾರಕ್ಕೆ ಹೋದವನಂತೆ ಪಿಸ್ತೂಲನ್ನು ಎಡಗೈಗೆ ಕೊಟ್ಟು, ತಲೆಯ ಎಡಭಾಗಕ್ಕೆ ಗುಂಡು ಹೊಡೆದುಕೊಳ್ಳುತ್ತಾನೆ ಅಂದರೆ...........ಸಾಧ್ಯತೆ ಭಾಳ ಕಮ್ಮಿ  ಅನ್ನಿಸುವದಿಲ್ಲವೇ?

ನೇಪಾಳದ ಜನ ಹೇಳುವದೇನು? ಅನೇಕ ಥಿಯರಿಗಳಿವೆ. ಸಾಮಾನ್ಯ ಅಂಶಗಳಿಷ್ಟು. ಇದೆಲ್ಲ ಮಹಾರಾಜ ಬೀರೇಂದ್ರನ ತಮ್ಮ ಜ್ಞಾನೇಂದ್ರನ ಕುಟಿಲ ಕಾರಸ್ತಾನ. ಎಲ್ಲಿಯವರೆಗೆ ಬೀರೇಂದ್ರ ಮತ್ತು ಅವನ ಕುಟುಂಬದ ಶಾಖೆ ಇರುತ್ತದೆಯೋ ಅಲ್ಲಿಯವರೆಗೆ ಜ್ಞಾನೇಂದ್ರನಾಗಲೀ ಅವನ ಕುಟುಂಬದ ಶಾಖೆಯ ಯಾರೇ ಆಗಲಿ ಪಟ್ಟಕ್ಕೆ ಬರುವದು ಸಾಧ್ಯವೇ ಇರಲಿಲ್ಲ. ಹಾಗಾಗಿ ಇದ್ದ ಒಂದೇ ಮಾರ್ಗ ಅಂದರೆ ಬೀರೇಂದ್ರನ ಕುಟುಂಬದ ಶಾಖೆಯನ್ನು ಪೂರ್ತಿಯಾಗಿ ನಿರ್ನಾಮ ಮಾಡಿಬಿಡುವದು. ಬೀರೇಂದ್ರ, ಅವನಿಬ್ಬರು ಗಂಡು ಮಕ್ಕಳಾದ ದೀಪೇಂದ್ರ, ನಿರಂಜನ ಹೋಗಲೇ ಬೇಕು. ಅವನ ಹೆಂಡತಿ ಐಶ್ವರ್ಯ ಸಹಿತ ಹೋಗಿಬಿಡಬೇಕು. ಇಲ್ಲ ಅಂದರೆ ಪುತ್ರಶೋಕದ ತಾಯಿ ತನಿಖೆ ಅಂದು ಇದು ಅಂತ ಹಿಂದೆ ಬಿದ್ದರೆ ಕಷ್ಟ. ಕುಟುಂಬದ ಎಲ್ಲರನ್ನೂ ಕೊಂದೇ ಬಿಡಬೇಕು ಅಂದ ಮೇಲೆ ಮಗಳು ಶ್ರುತಿ ಯಾಕೆ ಇರಬೇಕು? ಆಕೆಯದು ವಿವಾಹವಾಗಿತ್ತು ನಿಜ. ಆದರೂ ರಿಸ್ಕ್ ಯಾಕೆ? ಆಕೆಯನ್ನೂ ತೆಗೆದುಬಿಟ್ಟರಾಯಿತು. ಇದು ಜ್ಞಾನೇಂದ್ರ ಹಾಕಿದ ಷಡ್ಯಂತ್ರದ ಸಾರಾಂಶವಾಗಿತ್ತೆ?

ಸರಿ, ಜ್ಞಾನೇಂದ್ರನ ತಲೆಯಲ್ಲಿ ಇಂತಹ ಭಯಂಕರ ವಿಚಾರ ಬಂದಿತ್ತು ಅಂತಲೇ ಇಟ್ಟುಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದೆಲ್ಲ ಮಾಡಲು ಸಾಧ್ಯವೇ? ಅದೂ ಸದ್ಯಕ್ಕೆ ಪಟ್ಟದಲ್ಲಿರುವ ಮಹಾರಾಜನ ವಿರುದ್ಧ ಈ ಮಟ್ಟದ ಷಡ್ಯಂತ್ರ!? ಈಗ ವಿಚಾರ ಮಾಡಬೇಕಾಗಿದ್ದು ಯಾರ ಬಗ್ಗೆ ಅಂದರೆ ಪಟ್ಟಭದ್ರ ಹಿತಾಸಕ್ತಿ ಹೊಂದಿದ್ದ ಬಲಶಾಲಿ ದೇಶಗಳು ಮತ್ತು ಅವುಗಳ ಬೇಹುಗಾರಿಕೆ ಸಂಸ್ಥೆಗಳು, covert operations, ರಾಜಕೀಯ ಹತ್ಯೆಗಳನ್ನು ಮಾಡುವ ಜನರ ಬಗ್ಗೆ. ಇಂತಹ ವಿಚಾರ ಬಂದ ಜ್ಞಾನೇಂದ್ರನೇ ಅಂತಹವರನ್ನು ಸಂಪರ್ಕಿಸಿ ಡೀಲ್ ಕುದುರಿಸಿದನೋ ಅಥವಾ ನೇಪಾಳದಲ್ಲಿ ಅಧಿಕಾರ ಬದಲು ಮಾಡಿ, ಜ್ಞಾನೇಂದ್ರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ತಮಗೆ ಬೇಕಾದ ಹಾಗೆ ನೇಪಾಳದಲ್ಲಿ ಅಂದಾ ದುಂಧಿ ಮಾಡುವ ಹುನ್ನಾರದಿಂದ ಬಲಿಷ್ಠ ದೇಶಗಳು ಜ್ಞಾನೇಂದ್ರನಿಗೆ ಇಂತಹದೊಂದು ಆಫರ್ ಕೊಟ್ಟವೋ? ಗೊತ್ತಿಲ್ಲ. ಮತ್ತೆ ಜ್ಞಾನೇಂದ್ರನನ್ನು ಒಂದು ತರಹದ ಇಕ್ಕಳಕ್ಕೆ ಸಿಕ್ಕಿ ಹಾಕಿಸಿದ್ದರೂ ಹಾಕಿರಬಹುದು ಈ ಪಟ್ಟಭದ್ರ ಹಿತಾಸಕ್ತಿಗಳು. ಯಾಕೆಂದ್ರೆ ಜ್ಞಾನೇಂದ್ರನನ್ನು ಬಿಟ್ಟರೆ ಇನ್ನೊಬ್ಬ ತಮ್ಮ ಧೀರೇಂದ್ರ ಅಂತ ಇದ್ದ. ಪರದೇಸಿ ಹೆಣ್ಣನ್ನು ಮದುವೆಯಾಗಿ ಪಟ್ಟಕ್ಕೆ ಬರುವ ಅರ್ಹತೆ ಕಳೆದುಕೊಂಡಿದ್ದ ಅವನು. ಆದ್ರೆ ಬಲಿಷ್ಠ ಶಕ್ತಿಗಳು ಹೀಗೂ ಬ್ಲಾಕ್ ಮೇಲ್ ಮಾಡಿರಬಹುದು, 'ಈಗಿನ ದೊರೆ ಬೀರೇಂದ್ರ ಹೋಗಲೇ ಬೇಕು. ಅದಂತೂ ನಿಶ್ಚಿತ. ಜ್ಞಾನೇಂದ್ರ, ನೀನು ನಮ್ಮ ಜೊತೆ ಅಡ್ಜಸ್ಟ್ ಮಾಡಿಕೊಂಡರೆ ನಿನ್ನನ್ನೇ ರಾಜನನ್ನಾಗಿ ಮಾಡುತ್ತೇವೆ. ಇಲ್ಲ ಅಂದರೆ ನಿನ್ನನ್ನೂ ಮುಗಿಸಿ ಧೀರೇಂದ್ರನನ್ನೋ ಅಥವಾ ಸಂಬಂಧವಿರದೇ ಇಲ್ಲದ ಇನ್ನ್ಯಾರನ್ನೋ ಸಿಂಹಾಸನದ ಮೇಲೆ ತಂದು ಕೂಡಿಸುವದು ಹೇಗೆ ಅಂತ ನಮಗೆ ಗೊತ್ತು. ಏನೋ ನಮ್ಮವ ಅಂತ ನಿನಗೇ ಮೊದಲ ಪ್ರಾಶಸ್ತ್ಯ. ಏನಂತೀ!?' ಅನ್ನುವ ಧಾಟಿಯಲ್ಲಿ ಯಾವದಾದರೂ ಬಲಿಷ್ಠ ದೇಶ, ಪಟ್ಟಭದ್ರ ಹಿತಾಸಕ್ತಿ ಸಿಕ್ಕಾಪಟ್ಟೆ ಒತ್ತಡ ಹಾಕಿತ್ತಾ? ಆಮಿಷ ಒಡ್ಡಿತ್ತಾ? ಹೌದಾದರೆ ಅದು ಜ್ಞಾನೇಂದ್ರನ ತಲೆಯಲ್ಲಿ ಗಿರಿಕಿ ಹೊಡೆಯುತ್ತಿದ್ದ ದುರಾಲೋಚನೆಗೆ ನೀರೆದಂತೆ. ಅಥವಾ ವಿಷದ ಬೀಜ ಬಿತ್ತಿದಂತೆ.

ಸರಿ, ಹತ್ಯಾಕಾಂಡದ ಹಿಂದಿನ ರೂವಾರಿ ಜ್ಞಾನೇಂದ್ರನೇ, ಮಾರಣ ಹೋಮ ಹೀಗೆಯೇ ಆಯಿತು ಅಂದುಕೊಳ್ಳೋಣ.  ಆಗಿದ್ದು ಹೇಗೆ? ಯಾರು ಮಾಡಿದರು? ಅದಕ್ಕೂ ನೇಪಾಳಿಗಳ ಉತ್ತರ ಇದೆ. ಆವತ್ತು ದೀಪೇಂದ್ರ ಕುಡಿಯುತ್ತಿದ್ದ ವಿಸ್ಕಿಯಲ್ಲೋ, ಸೇದುತ್ತಿದ್ದ ಗಾಂಜಾ ಸಿಗರೇಟಿನಲ್ಲೋ ಏನೋ ಬೆರೆಸಲಾಗಿತ್ತು. (ಹಾಗಂತ ಸರ್ಕಾರಿ ವರದಿ ಕೂಡ ಹೇಳಿದೆ ) ಅದಕ್ಕೇ ಅವತ್ತು, ಎಂದೂ ಕುಡಿದು ಎಚ್ಚರ ತಪ್ಪದ ದೀಪೇಂದ್ರ, ಔಟ್ ಆಗಿ ನೆಲದ ಮೇಲೆಯೇ ಅಡ್ಡವಾಗಿ ಮಲಗಿಬಿಟ್ಟ. ಅವನನ್ನು ಕೋಣೆಗೆ ಎತ್ತಿಕೊಂಡು ಹೋಗಿ ಮಲಗಿಸಿ ಬಂದಿದ್ದರು. ಅವನು ಈಕಡೆ ಖಬರೂ ಇಲ್ಲದಂತೆ ಮಲಗಿಯೇ ಇದ್ದ. ಆವಾಗ ಬಂದವನು ನಿಜವಾದ ಹಂತಕ ಅಥವಾ ಹಂತಕರು. ಬಂದವರೇ ಸಿಸ್ಟಮ್ಯಾಟಿಕ್ ಆಗಿ ಆರಿಸಿ ಆರಿಸಿ ಕೊಂದರು. ಬದುಕಿ ಉಳಿದವರು ದೀಪೇಂದ್ರನೇ ಎದ್ದು ಬಂದು ಗುಂಡಿಟ್ಟು ಕೊಂದ ಅಂತ ಸುಳ್ಳು ಹೇಳಿದರು. ಆವತ್ತು ಅವರೆಲ್ಲ ಬದುಕಿ ಉಳಿಯುಬೇಕು ಅಂತಿದ್ದರೆ ಹಾಗೆ ಸುಳ್ಳು ಹೇಳಲೇ ಬೇಕಾಗಿತ್ತು. ಇಲ್ಲವೆಂದರೆ ಅವರ್ಯಾರೂ ಬದುಕಿ ಉಳಿಯುತ್ತಿರಲಿಲ್ಲ. ಗಾಯಗೊಂಡು ಬದುಕಿ ಉಳಿದವರ ಮೇಲೆ ಹಾಗೆ ಒತ್ತಡ ಬಂದಿತ್ತಾ? ಇರಬಹದು. ಬದುಕಿ ಉಳಿದವರಾದರೂ ಯಾರು? ಪಾರಸ್ ಎಂಬ ಜ್ಞಾನೇಂದ್ರನ ಮಗ. ಅವನಂತೂ, 'ಅಣ್ಣನನ್ನು ಬೇಡಿಕೊಂಡು ಬಚಾವಾದೆ,' ಅಂತ ದೊಡ್ಡ ಭೋಂಗು ಬಿಟ್ಟಿದ್ದ. ಉಳಿದವರು ಜ್ಞಾನೇಂದ್ರನ ಪತ್ನಿ. ಆಕೆಗೂ ಗುಂಡು ಬಿತ್ತು ಅಂತ ಹೇಳಲಾಯಿತು. ಆಕೆಗೆ ನಿಜವಾಗಿಯೂ ಗುಂಡು ಬಿದ್ದಿತ್ತೆ? ಅಥವಾ ಬಿದ್ದಂತೆ ತೋರಿಸಲಾಯಿತೆ? ಅದೇ ದೊಡ್ಡ ಪ್ರಶ್ನೆ. ಇನ್ನು ಬೀರೇಂದ್ರನ ಇನ್ನೊಬ್ಬ ತಮ್ಮ ಧೀರೇಂದ್ರ ಗುಂಡು ತಿಂದು, ಆಸ್ಪತ್ರೆಯಲ್ಲಿ ಸತ್ತು ಹೋದ. ಅಥವಾ ಗಾಯಗೊಳಿಸಿ, ಆಸ್ಪತ್ರೆಯಲ್ಲಿ ಬದುಕಿಸಿಕೊಳ್ಳದೇ ಇರುವದೂ ಈ ಷಡ್ಯಂತ್ರದ ಒಂದು ಭಾಗವೇ ಆಗಿತ್ತೇ? ಇನ್ನು ರಾಜಕುಮಾರಿ ಶ್ರುತಿಯ ಗಂಡ. ಅವನಿಗೆ ಗುಂಡು ಬಿತ್ತು. ಬಿದ್ದ ಗುಂಡಿನ ಗಾಯವನ್ನೂ ತೋರಿಸುತ್ತಾನೆ. ಬೀರೇಂದ್ರನ ಪೈಕಿ ಬದುಕುಳಿದವ ಅಂದ್ರೆ ಆ ಅಳಿಯನೊಬ್ಬನೇ. ಘಟನೆ ಸ್ವಲ್ಪ ನೈಜವಾಗಿರಲಿ, ಪೂರ್ತಿ ನಕಲಿ ಅನ್ನಿಸದಿರಲಿ ಅಂತ ಅವನಿಗೆ ಪ್ರಾಣ ಹೋಗದ ಹಾಗೆ ಗುಂಡು ಹೊಡೆದು ನಂತರ ಬದುಕಿಸಿಕೊಳ್ಳಲಾಯಿತೆ?

'ಏ ಬಿಡ್ರೀ! ಇದೆಲ್ಲ ನಂಬೋ ಮಾತೆನ್ರೀ?' ಅಂತ ಚಾಲೆಂಜ್ ಮಾಡಿದರೆ ಹೀಗೆಲ್ಲ ಹೇಳುವವರು ಜಾನ್ ಎಫ್ ಕೆನಡಿ ಹತ್ಯೆಯ ಬಗ್ಗೆ ಮಾತಾಡುತ್ತಾರೆ. ಕೆನಡಿ ಪಕ್ಕ ಕೂತಿದ್ದ ಜಾನ್ ಕೋನಲಿ ಅನ್ನುವವರಿಗೆ ಸಹ ಒಂದು ಗುಂಡು ಬಿದ್ದಿತ್ತು. ಆದರೆ ಸಾಯುವಂತಹ ಗುಂಡೇಟು ಅದಾಗಿರಲಿಲ್ಲ. ಕೆನಡಿ ಹತ್ಯೆಗೆ ನೈಜತೆ ಬರಲಿ ಅಂತ ಅವರಿಗೂ ಒಂದು ಗುಂಡು ಹಾಕಲಾಗಿತ್ತಾ? ಇನ್ನು ಕೆಲವೊಂದು ಪೋಲೀಸ್ ಎನ್ಕೌಂಟರಗಳಲ್ಲಿ ರೌಡಿಗಳಿಂದ ಗುಂಡೇಟು ಬಿತ್ತು ಅಥವಾ ರೌಡಿಗಳು ಅಟ್ಯಾಕ್ ಮಾಡಿದರು ಅಂತ ಪೊಲೀಸರು ಸುಖಾ ಸುಮ್ಮನೆ ಬ್ಯಾಂಡೇಜ್ ಸುತ್ತಿಕೊಂಡು ಓಡಾಡುವದನ್ನು ಅಥವಾ ಇನ್ನೂ ನೈಜವಾಗಿರಲಿ ಅಂತ ಒಬ್ಬ ಪೋಲೀಸ್ ಅಧಿಕಾರಿ ಪೇದೆಯೊಬ್ಬನ ಕಾಲಿಗೋ ಕೈಗೋ ಒಂದು ಗುಂಡು ಲೈಟಾಗಿ ತರಚುವಂತೆ ಹೊಡೆದು, 'ನೋಡ್ರೀ, ಇದು ಫೇಕ್ ಎನ್ಕೌಂಟರ್ ಅಲ್ಲವೇ ಅಲ್ಲ. ನಮ್ಮ ಪೇದೆಯೊಬ್ಬರಿಗೂ ಗುಂಡು ಬಿದ್ದಿದೆ,' ಅಂತ ದೊಡ್ಡ ಬ್ಯಾಂಡೇಜ್ ತೋರಿಸುವ ದೃಶ್ಯಗಳು ಬೇಕಾದಷ್ಟು ಮೂವಿಗಳಲ್ಲಿ ಬಂದು ಹೋಗಿವೆ. ಅವೆಲ್ಲ ಏನೂ ಪೂರ್ತಿ ಕಪೋಲಕಲ್ಪಿತ ಅಲ್ಲ ಬಿಡಿ. ಹಾಗೆಯೇ ನೇಪಾಳದ ಹತ್ಯಾಕಾಂಡದಲ್ಲೂ ಮೊದಲೇ ಪ್ಲಾನ್ ಮಾಡಿ ಇಡಲಾಗಿತ್ತು, ಯಾರಿಗೆ ಏನು ಮಾಡಬೇಕು ಅಂತ.  ಅವೆಲ್ಲ  ಡೀಟೇಲ್ಸ್ ಗಾಯಗೊಂಡು ಬದುಕುಳಿದ ಜನರಿಗೆ ಗೊತ್ತಿರಲಿಕ್ಕಿಲ್ಲ ಬಿಡಿ. ಯಾಕೆಂದರೆ ಎಷ್ಟೇ ಲೈಟಾಗಿ, ಒಂದೇ ಒಂದು ಗುಂಡು ಹೊಡಿತೀನಿ ಅಂತ ನೀವು ಏನೇ ಹೇಳಿದರೂ, ಏನೇ ಆಶ್ವಾಸನೆ ಕೊಟ್ಟರೂ ಒಪ್ಪುವ ಜನ ಕಮ್ಮಿ. ಅಂತವರಿಗೆ ಮಾಡುವದನ್ನು ಮಾಡಿ, ಎರಡನೇ ಬಾರಿ ಬದುಕಿ ಬಂದ ಸಂತಸದಲ್ಲಿ ಇದ್ದಾಗ ಅವರನ್ನು ತಮಗೆ ಬೇಕಾದ ಹಾಗೆ ಮಣಿಸುವದು ಸಹಿತ covert operation ಗಳ ಭಾಗವೇ ಆಗಿರುತ್ತದೆ. ಗುಂಡು ತಿಂದು ಬದುಕುಳಿದ ಬೀರೇಂದ್ರ, ಜ್ಞಾನೇಂದ್ರರ ವೃದ್ಧ ತಾಯಿ, ತಂಗಿ, ಬೀರೇಂದ್ರನ ಅಳಿಯ, ಇತರೆ ಕೆಲವು ಸಂಬಂಧಿಗಳು ಎಲ್ಲ ಅದೇ ಗುಂಪಿಗೆ ಸೇರಬಹುದಾದವರು. ಅವರೆಲ್ಲ ದೀಪೇಂದ್ರನೇ ಕೊಲೆಗಾರ ಅಂತ ನಂಬಿರಲೂಬಹುದು ಯಾಕೆಂದರೆ ಹಂತಕ ದೀಪೇಂದ್ರನ ಮುಖವಾಡ ಹಾಕಿಕೊಂಡು ಬಂದಿದ್ದನೇ ಅಂತ ಕೂಡ ಸಂಶಯ ಇದೆ. ಯಾಕೆಂದ್ರೆ ಹಂತಕನ ಮುಖದಲ್ಲಿ ಯಾವದೇ ಭಾವನೆಗಳು ಇರಲೇ ಇಲ್ಲವಂತೆ. cold blooded killer killing like a killing machine. ಹೊರಗೆ ಕತ್ತಲು, ಒಳಗೆ ಮಬ್ಬುಗತ್ತಲು ಇತ್ತು. ಕೆಲವರಂತೂ ಕುಡಿದು, ಗಾಂಜಾ ಸೇದಿ, ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ hallucinate ಕೂಡ ಆಗಿ ಏನೇನೋ ಊಹೆ ಮಾಡಿಕೊಂಡರಾ? ಎಲ್ಲವೂ ಸಾಧ್ಯ.

ತನಗೆ ತಾನೇ ಗುಂಡು ಹೊಡೆದುಕೊಂಡ ದೀಪೇಂದ್ರ ಸ್ಥಳದಲ್ಲೇ ಸಾಯಲಿಲ್ಲ. ಆಸ್ಪತ್ರೆಯಲ್ಲಿ ಸುಮಾರು ತಾಸುಗಳ, ದಿನಗಳ ನಂತರ, ದೊಡ್ಡ ಸರ್ಜರಿ ಆದ ನಂತರ ಸತ್ತ. ಅವನನ್ನು ಬದಕಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಲಾಯಿತೇ ಅಥವಾ ಸಾಯಲಿ ಎಂದೇ ಆಸ್ಪತ್ರೆಗೆ ಒಯ್ಯಲಾಗಿತ್ತೆ? ಎಚ್ಚರ ತಪ್ಪಿ ಮಲಗಿದ್ದ ದೀಪೇಂದ್ರನ ತಲೆಗೆ ಗುಂಡು ಹೊಡೆಯುವ ಸಂದರ್ಭದಲ್ಲಿ ಹಂತಕ ತಪ್ಪು ಮಾಡಿಕೊಂಡು ಎಡಗಡೆಯಿಂದ ಗುಂಡು ಹೊಡೆದು ಒಂದು ಸುಳಿವು ಬಿಟ್ಟು ಬಿಟ್ಟನೆ? ಯಾಕೆಂದ್ರೆ ಮೊದಲೇ ಹೇಳಿದಂತೆ ದೀಪೇಂದ್ರ ಬಲಗೈ ಉಪಯೋಗಿಸುವವ. ಎಡಚ ಆಗಿರಲಿಲ್ಲ. ಹಂತಕ ಅದೆಂಗೆ ಆ ತಪ್ಪು ಮಾಡಿದ? ಅಥವಾ ಊಹಾಪೋಹಗಳ ದಾರಿ ತಪ್ಪಿಸಲೆಂದೇ ಹಾಗೆ ಮಾಡಲಾಯಿತೇ?

ದೀಪೇಂದ್ರನ ಹುಡುಗಿ ದೇವಯಾನಿಗೆ ಏನು ಗೊತ್ತಿತ್ತು? ಆಕೆ ಆದಿನ ಸಂಜೆ, ರಾತ್ರಿ ಸುಮಾರು ಸರೆ ದೀಪೇಂದ್ರನ ಜೊತೆ ಮಾತಾಡಿದ್ದಳು. ಅದರಲ್ಲೇನೂ ಜಾಸ್ತಿ ವಿಶೇಷ ಇರಲಿಲ್ಲ ಬಿಡಿ.  ಅವರು ಬಹಳ ಸಲ ಫೋನ್ ಮೇಲೆ ಮಾತಾಡುತ್ತಿದ್ದರು. ಆದರೆ ಆವತ್ತು ಯಾಕೋ ಏನೋ ದೇವಯಾನಿ ದೀಪೇಂದ್ರನಿಗೆ ಫೋನ್ ಮಾಡಿದ ನಂತರ ದೀಪೇಂದ್ರನ ಆಪ್ತ ಕಾರ್ಯದರ್ಶಿಗಳ ಜೊತೆ ಮಾತಾಡಿ, 'ಪ್ಲೀಸ್! ಅರಮನೆಗೆ ಹೋಗಿ ದೀಪೇಂದ್ರನ ವಿಚಾರಿಸಿಕೊಳ್ಳಿ,' ಅಂತ ಒತ್ತೊತ್ತಿ ಹೇಳಿದ್ದಳು. ಅವಳಿಗೆ ಏನಾದರೂ ಸುಳಿವು ಸಿಕ್ಕಿತ್ತಾ? ಕೇಳೋಣ ಅಂದರೆ ದೇವಯಾನಿ ಹತ್ಯೆಯ ನಂತರ ಮಾತಾಡಲೇ ಇಲ್ಲ. ಭಾರತಕ್ಕೆ ಪರಾರಿಯಾಗಿಬಿಟ್ಟಳು.

ಇಷ್ಟೆಲ್ಲ ಆದ ಮೇಲೆ ಸರ್ಕಾರಿ ತನಿಖೆ ಅಂತ ಏನೋ ಮಾಡಿ ಮುಗಿಸಿದರು. ಅದರಲ್ಲಿ ಹೊಸದೇನೂ ಇರಲಿಲ್ಲ. ಅದು ಅಲ್ಲಿಯವರೆಗೆ ಅರಮನೆ ಬಿಡುಗಡೆ ಮಾಡಿದ್ದ ಸುದ್ದಿಯನ್ನು ಸಮರ್ಥಿಸಿ ರಬ್ಬರ್ ಸ್ಟ್ಯಾಂಪ್ ಹಾಕಿತು ಅಷ್ಟೇ. ತಿಪ್ಪೆ ಸಾರಿಸಿ ರಂಗೋಲಿ ಹಾಕಿದರು. ಕಿಸ್ಸಾ ಖತಂ.

ನೇಪಾಳಕ್ಕೆ ಇದೆಲ್ಲ ಹೊಸದಲ್ಲ ಬಿಡಿ. ಕಳೆದ ನೂರೈವತ್ತು ವರ್ಷಗಳಲ್ಲಿ ನೇಪಾಳದ ಅರಮನೆಗಳಲ್ಲಿ ಕಮ್ಮಿ ಕಮ್ಮಿ ಅಂದರೂ ಸುಮಾರು ಐದಾರು 'ಅರಮನೆ ಕ್ರಾಂತಿಗಳು' (palace coups) ಆಗಿವೆ. ಕೆಲವೊಂದರಲ್ಲಿ ದೊರೆಗಳನ್ನು ಕೇವಲ ಪದಚ್ಯುತಗೊಳಿಸಿ ಓಡಿಸಿದರೆ, ಕೆಲವೊಂದರಲ್ಲಿ ರಕ್ತ ಹರಿದಿದೆ, ಕೊಲೆಗಳಾಗಿವೆ. ನೇಪಾಳದ ಅರಮನೆ ಎಲ್ಲ ಅರಮನೆಗಳಂತೆಯೇ. ಅಲ್ಲಿಯೂ ಬೇಕಾದಷ್ಟು ರಾಗ, ದ್ವೇಷ, ಅನೈತಿಕ ಸಂಬಂಧಗಳು, ಅವುಗಳಿಂದ ಪ್ರೇರೇಪಿತ ಹತ್ಯೆಗಳು ಎಲ್ಲ ಆಗಿವೆ. ನಿಜವನ್ನು ಅರಿತವರು ಅಲ್ಲಲ್ಲಿ ಗುಸು ಗುಸು ಮಾತಾಡುತ್ತಾರೆ. ಆದರೆ ಚಿಕ್ಕ ದೇಶ. ರಾಜ ಮಹಾರಾಜರ ಆಡಳಿತ, ಸಂಪ್ರದಾಯ, ಹತೋಟಿ ಇದ್ದ  ದೇಶ. ಹಾಗಾಗಿ ಹೆಚ್ಚಿನ ಸುದ್ದಿ ಹೊರಗೆ ಬರುವದೇ ಇಲ್ಲ.

ಈ ಹಿಂದೆ ಅಮೇರಿಕಾದಲ್ಲಿ ಅಧ್ಯಕ್ಷ ಜಾನ್ ಕೆನಡಿ, ಅವರ ತಮ್ಮ ರಾಬರ್ಟ್ ಕೆನಡಿ, ಕಪ್ಪು ಜನರ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರು ಹತ್ಯೆಗೀಡಾದಾಗ ಅವೆಲ್ಲ ಯಾವದೇ ತರಹದ ಷಡ್ಯಂತ್ರಗಳು ಇಲ್ಲದೇ ಆದವು ಅಂತ ತಿಪ್ಪೆ ಸಾರಿಸಿದ್ದವು ಆಗಿನ ಸರ್ಕಾರಗಳು. ಆದರೆ ಜನ ತನಿಖೆ ಮಾಡುತ್ತ ಹೋದರು. ಮಾಹಿತಿ ಕಾಯಿದೆ ಅಡಿ ಕೇಳಿ ಮಾಹಿತಿ ಪಡೆದರು. ಸರ್ಕಾರದ ಮೇಲೆ ಒತ್ತಡ  ತಂದು ಉನ್ನತ ತನಿಖಾ ಸಮಿತಿಗಳ ನೇಮಕವಾಗುವಂತೆ ನೋಡಿಕೊಂಡರು. ಅವೆಲ್ಲದರ ಫಲ ಇವತ್ತು ಕೆನಡಿ ಹತ್ಯೆಗಳ ಒಳಸಂಚು ಪೂರ್ತಿಯಾಗಿ ಬಯಲಾಗಿದೆ. ನೇಪಾಳ ಹತ್ಯಾಕಾಂಡದ ಬಗ್ಗೆಯೂ ಬೇಕಾದಷ್ಟು ಮಾಹಿತಿ ಬರುತ್ತಿತ್ತೋ ಏನೋ. ಏನು ಮಾಡುವದು ಅದು ಒಂದು ತರಹ ಬೇರೆಯೇ ತರಹದ ದೇಶ. ಅಲ್ಲಿನವರ ಸದ್ಯದ ಪ್ರಯಾರಿಟಿಗಳೇ ಬೇರೆ.

ಇದೆಲ್ಲ ಮಾಹಿತಿ ಸಿಕ್ಕಿದ್ದು - Love and Death in Kathmandu: A Strange Tale of Royal Murder ಎನ್ನುವ ಪುಸ್ತಕ ಓದಿದಾಗ. ಇನ್ನೂ ಸಾಕಷ್ಟು ವಿವರಗಳಿವೆ. ರಾಜಮನೆತನದ ಇನ್ನೂ ಅನೇಕಾನೇಕ ಕಹಾನಿಗಳಿವೆ. conspiracy theories ವರ್ಗದಲ್ಲಿ ಓದಿದ ಒಂದು ಒಳ್ಳೆ ಪುಸ್ತಕ. ಹತ್ಯಾಕಾಂಡದ ವಿವರ ಬೇಡ ಅಂದರೂ ಬೇರೆ ಸಾಕಷ್ಟು ವಿಷಯಗಳಿವೆ. ನೇಪಾಳದ ಸೋಷಿಯಾಲಜಿ ಬಗ್ಗೆ ಒಂದು ಒಳ್ಳೆ ಪುಸ್ತಕ ಕೂಡ.


Friday, July 25, 2014

ತಾರಾ ವಿವಾಹಕ್ಕೆ ಮಾಫಿಯಾ ಪೌರೋಹಿತ್ಯ

ಇನ್ಸ್ಪೆಕ್ಟರ್ ರುದ್ರಮೂರ್ತಿ ಎದ್ದಾಗ ಆಗಲೇ ಏಳು ಘಂಟೆಯಾಗಿ ಹೋಗಿತ್ತು. ನಿನ್ನೆ ಬಂದು ಮಲಗಿದಾಗ ರಾತ್ರಿ ಮೂರರ ಮೇಲಾಗಿತ್ತು. ಯಾವದೋ ಡೀಲಿನ ಕುರಿತಾಗಿ ಪಾರ್ಟಿ ಇತ್ತು. ದೊಡ್ಡ ದೊಡ್ಡ ಸಾಹೇಬರೆಲ್ಲ ಕೂಡಿದ್ದರು. ಖಾನಾ, ಪೀನಾ ಎಲ್ಲ ಮುಗಿಯುವ ಹೊತ್ತಿಗೆ ಸರಿಯಾಗಿ ಖತರ್ನಾಕ್ ಘರವಾಲಿ ಕಾವೇರಮ್ಮ ತನ್ನ ಬಣ್ಣದ ಹಕ್ಕಿಗಳೊಂದಿಗೆ ಬಂದುಬಿಟ್ಟಿದ್ದಳು. ಪಾರ್ಟಿ ಕೊಟ್ಟ ದೊಡ್ಡ ಕುಳಕ್ಕೆ ಸಾಹೇಬರುಗಳ ನಾಡಿ ಮಿಡಿತ ಎಲ್ಲ ಸರಿಯಾಗೇ ತಿಳಿದಿತ್ತು. ಹಕ್ಕಿಗಳೊಂದಿಗೆ ಕೋಣೆ ಹೊಕ್ಕ ಸಾಹೇಬರುಗಳು ಹೊರಬಂದಾಗ ಅವರ ಮೈಮೇಲೆ ಅರ್ಧ ಯುನಿಫಾರ್ಮ್ ಮಾತ್ರ ಇತ್ತು. ಉಳಿದರ್ಧ ಅವರ ಹಿಂದೆಯೇ ಬಂದ ಹಕ್ಕಿಗಳ ಕೈಯಲ್ಲಿತ್ತು. ಆಪರಿ ಚಿತ್ತಾಗಿದ್ದ ಸಾಹೇಬರುಗಳನ್ನು ಮನೆ ಮುಟ್ಟಿಸಿ ಬರುವ ತನಕ ಅಷ್ಟೊತ್ತಾಗಿತ್ತು.

ಇನ್ಸ್ಪೆಕ್ಟರ್ ರುದ್ರಮೂರ್ತಿಗೆ ನೆನಪಾಯಿತು, ಇವತ್ತು ಮಧ್ಯಾನ ಕಮಿಷನರ್ ಸಾಹೇಬರ ಮೀಟಿಂಗ್ ಇದೆ ಅಂತ. ಅಷ್ಟರಲ್ಲಿ ಅವರ ಸಹಾಯಕ ಪೇದೆ ಖಡಕ್ ಆಗಿ ಇಸ್ತ್ರಿ ಮಾಡಿದ ಯುನಿಫಾರ್ಮ್ ತಂದಿಟ್ಟ. 'ಓಕೆ, ದೊಡ್ಡ ಮೀಟಿಂಗಿಗೆ ಹೋಗಲಿಕ್ಕೆ ಸರಿಯಾದ ಬಟ್ಟೆ ಅಂತೂ ಇದೆ ಅಂತಾಯಿತು,' ಅಂತ ಅಂದುಕೊಂಡರು ರುದ್ರಮೂರ್ತಿ ಸಾಹೇಬರು. ತಲೆ ಮೇಲೆ ಕೈಯಾಡಿಸಿದರು. ಒಂದು ಖಡಕ್ ಪೋಲೀಸ್ ಕಟಿಂಗ್ ಇದ್ದರೇ ಒಳ್ಳೇದು ಅಂತ ಹೇಳಿ ಎದ್ದರು. ಲುಂಗಿ ಎತ್ತಿ, ಹವಾಯಿ ಚಪ್ಪಲ್ ಮೆಟ್ಟಿ, ಬೀದಿಯ ಕೊನೆಯಲ್ಲಿದ್ದ ತಮ್ಮ ಎಂದಿನ ಬಾರ್ಬರ್ ಶಾಪಿಗೆ ಹೊರಟರು.

ಬಾರ್ಬರ್ ವೆಂಕಿ ಸ್ವಾಗತಿಸಿದ. 'ಸರ್, ಒಂದೇ ನಿಮಿಷ. ಇವರದ್ದು ಶೇವಿಂಗ್ ಮಾಡಿ ಮುಗಿಸಿ ಬಿಡ್ತೀನಿ. ನೆಕ್ಸ್ಟ್ ನೀವೇ ಸಾರ್. ಕೂತ್ಗೊಳ್ಳಿ. ತೊಗೊಳ್ಳಿ ಪೇಪರ್,' ಅಂತ ಹೇಳಿ ಪೇಪರ್ ಕೊಟ್ಟು ಅವನ ಗಡ್ಡ ಕೆರೆಯುವ ಕೆಲಸ ಮುಂದುವರಿಸಿದ. ಇನ್ಸ್ಪೆಕ್ಟರ್ ರುದ್ರಮೂರ್ತಿ ಪೇಪರ್ ಮೇಲೆ ಕಣ್ಣಾಡಿಸತೊಡಗಿದರು.

ಮುಖಪುಟದ ಹೆಡ್ ಲೈನ್ ನೋಡಿ ಒಂದು ಕ್ಷಣ 'ಹಾಂ!' ಅಂದುಕೊಂಡರು. ಸುದ್ದಿ ಹಾಗಿತ್ತು.

'ಖ್ಯಾತ ಸಿನೆಮಾ ನಟ ಗೌರವ್ ದಿಢೀರ್ ವಿವಾಹ'.

'ಯಾರ ಜೊತೆ ಈ ಪಂಚರಂಗಿ ಪುಣ್ಯಾತ್ಮ ಗೌರವ ಮದುವೆಯಾದ?' ಅಂತ ನೋಡಲು ಸುದ್ದಿ ಓದುತ್ತ ಹೋದರು. ಸುಮಾರು ತಿಂಗಳುಗಳಿಂದ ಗೌರವನ ಹೆಸರು ಅವನ ಸಹತಾರೆಯಾದ ಪ್ರತೀಕ್ಷಾ ಜೊತೆ ತಳಕು ಹಾಕಿಕೊಂಡಿತ್ತು. ಚಿಟ್ಟೆಯಂತಹ ಗೌರವ ಒಂದು ಹೂವಿನೊಂದಿಗೆ ಸೆಟಲ್ ಆಗುತ್ತಾನೆ ಅಂತ ಯಾರಿಗೂ ಅನ್ನಿಸಿರಲಿಲ್ಲ. ಬೆಂಗಳೂರಿನಲ್ಲಿ ಪ್ರತೀಕ್ಷಾ ಗೌರವ್ ಎಲ್ಲಿ ಅಂತ ಹುಡುಕುತ್ತಿದ್ದರೆ ಮಂಗಳೂರಿನಲ್ಲಿ ಯಾವದೋ ಹೊಸ ಹೂವಿನೊಂದಿಗೆ ಮಧು ಹೀರುತ್ತ ಕೂಡೋ ಪೈಕಿ ಗಂಡು ಗೌರವ್. ಹೀಗಿರುವಾಗ 'ಸಡನ್ ಆಗಿ ಫ್ಯಾಮಿಲಿ ಮ್ಯಾನ್ ಆಗಿಬಿಟ್ಟ ಅಂದರೆ ಏನಪ್ಪಾ?' ಅಂತ ಅಂದುಕೊಂಡು ಪುಟ ತಿರುಗಿಸುತ್ತ ಹೋದರು ಇನ್ಸ್ಪೆಕ್ಟರ್ ರುದ್ರಮೂರ್ತಿ.

ನಾಲ್ಕನೇ ಪುಟದಲ್ಲಿ ಕಂಡ ಇನ್ನೊಂದು ಸುದ್ದಿ ನೋಡಿ ಮತ್ತೆ 'ಹಾಂ!' ಅಂತ ಬೆಚ್ಚಿಬಿದ್ದರು. ಅದೂ ಅಂತಹದೇ ಸುದ್ದಿಯಾಗಿತ್ತು.

'ಎನ್ಕೌಂಟರಿನಲ್ಲಿ ಡಾನ್ ಗನ್ನು ಶೆಟ್ಟಿ ಹತ್ಯೆ!'

ಗನ್ನು ಶೆಟ್ಟಿ ಉರ್ಫ್ ಗಜಾನನ ಶೆಟ್ಟಿ ಮುಂಬೈನಲ್ಲಿ ಹೆಸರು ಮಾಡಿದ್ದ ದೊಡ್ಡ ಡಾನ್. ಮೂಲತ ದಕ್ಷಿಣ ಕನ್ನಡದವನು. ಸ್ವಲ್ಪ ವರ್ಷದ ಹಿಂದೆ ಮುಂಬೈನಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟಗಳ ಹೀಟ್ ಜಾಸ್ತಿಯಾದಾಗ ಮತ್ತೆ ಮಂಗಳೂರ ಕಡೆ ಬಂದಿದ್ದ. ನಂತರ ಮತ್ತೆ ನಾಪತ್ತೆಯಾಗಿದ್ದ. ಎಲ್ಲೋ ಬ್ಯಾಂಕಾಕಿನಲ್ಲಿ ಬಾಸ್ ಛೋಟಾ ರಾಮನ್ ಜೊತೆ ಇದ್ದಾನೆ ಅಂತ ಸುದ್ದಿಯಾಗಿತ್ತು. ಮತ್ತೆ ಬೆಂಗಳೂರಿನಲ್ಲಿ ಗನ್ನು ಶೆಟ್ಟಿಯ ಹಾವಳಿ ಏನೂ ಇರಲಿಲ್ಲ. ಹಾಗಾಗಿ ಬೆಂಗಳೂರು ಪೋಲೀಸರಿಗೆ ಅವನ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ.

ಮುಂಬೈ ಪೋಲೀಸರಲ್ಲಂತೂ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳದ್ದೇ ದರ್ಬಾರು. 'ಇದ್ದ ಹತ್ತಾರು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳಲ್ಲಿ ಯಾರು ಮಾಡಿದರು ಗನ್ನು ಶೆಟ್ಟಿಯ ಎನ್ಕೌಂಟರ್?' ಅಂತ ವಿಚಾರ ಮಾಡಿದರು ರುದ್ರಮೂರ್ತಿ. ಅವರು ಯೋಚಿಸಿದಂತೆಯೇ ಮುಂಬೈನ ಖತರ್ನಾಕ್ ಇನ್ಸ್ಪೆಕ್ಟರ್ ಪಾವಸ್ಕರ್ ಗನ್ನು ಶೆಟ್ಟಿಯನ್ನು ಮುಗಿಸಿದ್ದರು.

ಇನ್ಸ್ಪೆಕ್ಟರ್ ಪಾವಸ್ಕರ್ ಅಂತ ಸುದ್ದಿ ಓದಿದ ಕೂಡಲೇ ಏನೋ ನೆನಪಾಯಿತು ರುದ್ರಮೂರ್ತಿಯವರಿಗೆ. ಇದೇ ಪಾವಸ್ಕರರೇ ಅಲ್ಲವಾ ಈಗ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು? ಮತ್ತೇ ಅದೇ ಯಾವದೋ ಎನ್ಕೌಂಟರ್ ಸಲುವಾಗಿ. ಯಾರೋ ಇಬ್ಬರು ಮುಂಬೈ ಗ್ಯಾಂಗಸ್ಟರ್ ಜನರನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದಿದ್ದರು. ಹಿರಿಯ ಅಧಿಕಾರಿ ರುದ್ರಮೂರ್ತಿಯವರನ್ನು ಕರೆದು, 'ಅವರು ಕೇಳಿದ ಎಲ್ಲ ಸಹಾಯ ಮಾಡಿ,' ಅಂತ ಆಜ್ಞೆ ಮಾಡಿದ್ದರು. ಅದರ ಪ್ರಕಾರ ಲೋಕಲ್ ಪೊಲೀಸರು ಏನು ಸಹಾಯ ಮಾಡಬೇಕೋ ಅದೆಲ್ಲ ಸಹಾಯ ಮಾಡಿದ್ದರು ರುದ್ರಮೂರ್ತಿ. ಮುಂಬೈ ಇನ್ಸ್ಪೆಕ್ಟರ್ ಪಾವಸ್ಕರ್ ಅದೆಲ್ಲಿಂದ ಎರಡು ರೌಡಿಗಳನ್ನು ಎತ್ತಾಕಿಕೊಂಡು ಬಂದಿದ್ದರೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಬೆಂಗಳೂರಿಗೆ ಬಂದು ಎನ್ಕೌಂಟರ್ ಮಾಡಿದ್ದರು. ಇನ್ಸ್ಪೆಕ್ಟರ್ ರುದ್ರಮೂರ್ತಿ ಪಂಚನಾಮೆ ಮಾಡಿಕೊಂಡು ಬೆಂಗಳೂರಲ್ಲಿ ಆದ ಎನ್ಕೌಂಟರಿಗೆ ಒಂದು ಅಂತ್ಯ ಕಾಣಿಸಿದ್ದರು. ಆವಾಗಲೇ ಇನ್ಸ್ಪೆಕ್ಟರ್ ಪಾವಸ್ಕರ್ ಜೊತೆ ಗುರ್ತು ಪರಿಚಯ ಎಲ್ಲ ಆಗಿತ್ತು. ಆಮೇಲೆ ಸಹಿತ ಆಗಾಗ ಹಲೋ, ಹಾಯ್ ಅಂತ ಸಂಪರ್ಕ ಇತ್ತು. ಒಮ್ಮೆ ದೋಸ್ತಿಯಾದ ಮೇಲೆ ಪೊಲೀಸರು ಯಾವಾಗಲೂ ಸಂಪರ್ಕದಲ್ಲಿ ಇರುತ್ತಾರೆ. ಯಾರ ಸಹಾಯ ಯಾರಿಗೆ ಯಾವಾಗ ಬೇಕಾಗುತ್ತದೆ ಅಂತ ಹೇಳಲಿಕ್ಕೆ ಆಗುವದಿಲ್ಲ ನೋಡಿ.

ಇಷ್ಟೆಲ್ಲ ನೆನಪಾಗುವ ಹೊತ್ತಿಗೆ ಬಾರ್ಬರ್ ವೆಂಕಿ ಕರೆದ. ಪೇಪರ್ ಕೆಳಗಿಟ್ಟು ಹೋಗಿ ಕೂತರು ರುದ್ರಮೂರ್ತಿ. ಫಟಾ ಫಟ್ ಅಂತ ಅವರ ರೆಗ್ಯುಲರ್ ಪೋಲೀಸ್ ಕಟಿಂಗ್ ಮಾಡಿದ ಬಾರ್ಬರ್. ತಲೆ ಸವರಿಕೊಳ್ಳುತ್ತ, ಅವನಿಗೆ ಕಾಸು ಕೊಟ್ಟು ಮನೆ ಕಡೆ ಹೊರಟು ಬಂದರು ರುದ್ರಮೂರ್ತಿ.

ಮನೆ ಕಡೆ ಬರುತ್ತಿರುವಾಗ ತಲೆಯಲ್ಲಿ ಎರಡೇ ಸುದ್ದಿ ಗಿರಕಿ ಹೊಡೆಯುತ್ತಿದ್ದವು. ಒಂದು ನಟ ಗೌರವನ ಸಡನ್ ಮದುವೆ. ಇನ್ನೊಂದು ಡಾನ್ ಗನ್ನು ಶೆಟ್ಟಿಯ ಅಂತ್ಯ.

**

ಮಧ್ಯಾನ ಸುಮಾರು ನಾಕು ಘಂಟೆಗೆ ಪೋಲೀಸ್ ಕಮಿಷನರ್ ಸಾಹೇಬರು ಕರೆದಿದ್ದ ಮೀಟಿಂಗ್ ಮುಗಿಯಿತು. ಹೊರ ಬಂದು ತಮ್ಮ ಜೀಪ್ ಹತ್ತುತ್ತಿದ್ದ ಇನ್ಸ್ಪೆಕ್ಟರ್ ರುದ್ರಮೂರ್ತಿ ಅವರ ಫೋನ್ ರಿಂಗ್ ಆಯಿತು. ಯಾರು ಅಂತ ನೋಡಿದರೆ ಕಾಲರ್ ಐಡಿ ಪಾವಸ್ಕರ್ ಅಂತ ತೋರಿಸುತ್ತಿತ್ತು.

'ಹಲೋ ಪಾವಸ್ಕರ್. ಹೇಗಿದ್ದೀರಿ? ಕಾಂಗ್ರಾಟ್ಸ್. ಮತ್ತೊಂದು ಎಂಟ್ರಿ ಆಯಿತು ನಿಮ್ಮ ಎನ್ಕೌಂಟರ್ ಪಟ್ಟಿಯಲ್ಲಿ. ಅಲ್ಲವಾ?' ಅಂದರು ರುದ್ರಮೂರ್ತಿ.

ಮುಂಬೈನ ಎನ್ಕೌಂಟರ್ ಸ್ಪೆಷಲಿಸ್ಟ್ ಪಾವಸ್ಕರ್ ಮೂಲತ ಕಾರವಾರ ಕಡೆಯವರು. ಅವರಿಗೆ ಕನ್ನಡ ಸುಮಾರು ಬರುತ್ತದೆ.

'ಹಲೋ ದೋಸ್ತ್! ಥ್ಯಾಂಕ್ಸ್. ಒಂದು ಸುದ್ದಿ ಗೊತ್ತಾ?' ಅಂತ ಅಂದರು ಆಕಡೆಯಿಂದ ಪಾವಸ್ಕರ್.

'ಏನು ಹೇಳಿ. ಗನ್ನು ಶೆಟ್ಟಿ ಎನ್ಕೌಂಟರ್ ಅಂತೂ ಓದಿದೆ. ಮತ್ಯಾವ ಸುದ್ದಿ? ಮತ್ತೆ ಬೆಂಗಳೂರು ಕಡೆ ಬರುತ್ತಿದ್ದೀರಾ ಎನ್ಕೌಂಟರ್ ಮಾಡಲು? ನೀವು ಮುಂಬೈ ಪೊಲೀಸರು ಬಿಡಿ. ಎಲ್ಲದಕ್ಕೂ ಎನ್ಕೌಂಟರ್ ಅಂತ ಒಂದು ಮದ್ದು ಕಂಡು ಹಿಡಿದು ಬಿಟ್ಟಿದ್ದೀರಿ,' ಅಂದರು ರುದ್ರಮೂರ್ತಿ.

'ನಿಮ್ಮ ನಟ ಗೌರವ್ ಮದುವೆ ಸುದ್ದಿ ಗೊತ್ತಾಯಿತಾ?' ಅಂತ ಕೇಳಿದರು ಪಾವಸ್ಕರ್.

'ಹಾಂ, ಓದಿದೆ ಇವತ್ತು. ಅದೇ ಫ್ರಂಟ್ ಪೇಜ್ ಹೆಡ್ ಲೈನ್ ಇತ್ತು. ಏನೋ ಗಡಿಬಿಡಿಯಲ್ಲಿ ಸೆಟಲ್ ಆಗಿಬಿಟ್ಟ ನಮ್ಮ ಲೋಕಲ್ ಕ್ಯಾಸಾನೋವಾ. ಒಂದಿಷ್ಟು ಹುಡುಗಿಯರು ಬಚಾವ್ ಬಿಡಿ. ಹಾ! ಹಾ!' ಅಂತ ನಕ್ಕು ಹೇಳಿದರು ಇನ್ಸ್ಪೆಕ್ಟರ್ ರುದ್ರಮೂರ್ತಿ.

'ನಿಮ್ಮ  ಇಂಡಸ್ಟ್ರಿ ನಟ ಗೌರವ್ ಸಡನ್ ಆಗಿ ಮದ್ವೆ ಆಗಲು ಕಾರಣ ಯಾರು ಗೊತ್ತಾ?' ಅಂತ ಪಾವಸ್ಕರ್ ಕೇಳಿದರು.

'ಮತ್ಯಾರು? ಅವನ ಹುಡುಗಿ ಪ್ರತೀಕ್ಷಾ. ಗಟ್ಟಿಗಿತ್ತಿ. ಹಿಡಿದವನನ್ನು ಬಿಡಲಿಲ್ಲ. ಸುಮಾರು ಜನ ಹುಡುಗಿಯರನ್ನು ಸುತ್ತಿಸಿ ಕೈಬಿಟ್ಟಿದ್ದ ಗೌರವ್. ಇವಳು ಬಿಡಲಿಲ್ಲ ನೋಡಿ,' ಅಂತ ಸಹಜವಾಗಿ ಹೇಳಿದರು ರುದ್ರಮೂರ್ತಿ. ಆದರೂ ಪಾವಸ್ಕರ್ ಏನೋ ಬೇರೇನೇ ಕ್ಲೂ ಕೊಡುತ್ತಿದ್ದಾರೆ ಅನ್ನಿಸಿತು.

'ನಿಮ್ಮ ಗೌರವ್ ಅಷ್ಟು ಗಡಿಬಿಡಿಯಲ್ಲಿ ಮದ್ವೆಯಾಗಿದ್ದು ಯಾಕೆಂದರೆ ಡಾನ್ ಗನ್ನು ಶೆಟ್ಟಿ ಅವನಿಗೆ ಧಮಕಿ ಹಾಕಿದ್ದ!' ಅಂದು ಬಿಟ್ಟರು ಪಾವಸ್ಕರ್.

ಈಗ ಫುಲ್ ಬೆಚ್ಚಿ ಬಿದ್ದರು ರುದ್ರಮೂರ್ತಿ. ಮುಂಬೈ ಡಾನ್ ಗನ್ನು ಶೆಟ್ಟಿ ನಟ ಗೌರವನಿಗೆ ಧಮಕಿ ಹಾಕಿದ್ದನಾ? ಧಮಿಕಿ ಕಾಸಿಗೂ ಅಲ್ಲ, ಸಿನೆಮಾ ಶೂಟಿಂಗ್ ಡೇಟಿಗೂ ಅಲ್ಲ. ಯಾರನ್ನೋ ಮದುವೆಯಾಗಲು. ಇದೆಂತಾ ಸುಪಾರಿಯಪ್ಪಾ? ಅಂದುಕೊಂಡರು ರುದ್ರಮೂರ್ತಿ.

'ಇದು ಭಾಳ ಇಂಟೆರೆಸ್ಟಿಂಗ್ ಆಗಿದೆ ಪಾವಸ್ಕರ್. ನಿಮ್ಮ ಮುಂಬೈ ಅಂಡರ್ವರ್ಲ್ಡ್ ಜನ ನಮ್ಮ ಸ್ಯಾಂಡಲವುಡ್ಡಿಗೆ ಸಹಿತ ಕಾಲಿಡುತ್ತಿದ್ದಾರೆ ಅಂತ ಆಯಿತು. ಒಳ್ಳೆ ಖಬರ್ ಕೊಟ್ಟಿರಿ. ನಾವೂ ಸಹ ಒಂದು ಕಣ್ಣಿಡಬೇಕಾಯಿತು ಅಂತಾಯಿತು,' ಅಂದರು ರುದ್ರಮೂರ್ತಿ.

'ಗನ್ನು ಶೆಟ್ಟಿಗೆ ಸುಪಾರಿ ಯಾರು ಕೊಟ್ಟಿದ್ದರು ಗೊತ್ತೇ?' ಅಂತ ಕೇಳಿದರು ಪಾವಸ್ಕರ್.

'ಯಾರು?!' ಅಂತ ಕೇಳಿದರು ರುದ್ರಮೂರ್ತಿ. ಈಗ ದೊಡ್ಡ ಸಸ್ಪೆನ್ಸ್ ಬಿಲ್ಡ್ ಅಪ್.

'ಖುದ್ದು ನಟಿ ಪ್ರತೀಕ್ಷಾ!!' ಅಂದು ಸ್ಪೋಟಕ ಸುದ್ದಿ ಹೇಳಿಬಿಟ್ಟರು ಪಾವಸ್ಕರ್.

'ಹಾಂ!? ನಟಿ ಪ್ರತೀಕ್ಷಾ ಗನ್ನು ಶೆಟ್ಟಿಗೆ ಸುಪಾರಿ ಕೊಟ್ಟಳಾ? ಅದೂ ನಟ ಗೌರವ್ ಕಾನಪಟ್ಟಿಗೆ ಘೋಡಾ ಇಟ್ಟು ಮದುವೆ ಆಗಲು ಹೇಳುವಂತೆ? ಬಹಳ ಆಶ್ಚರ್ಯ. ಅಲ್ಲಿ ಇಲ್ಲಿ ಅವಳ ಹೆಸರು ಬಂದಿತ್ತು. ಆದ್ರೆ ಅಂಡರ್ವರ್ಲ್ಡ್ ಜೊತೆ ಸಂಪರ್ಕ ಇದ್ದಿದ್ದು ನಮಗೆ ಗೊತ್ತಿರಲಿಲ್ಲ ಬಿಡಿ,' ಅಂದರು ರುದ್ರಮೂರ್ತಿ.

'ರುದ್ರಾ ನಿನಗೆ ಖಡಕ್ ಪ್ರೂಫ್ ಕೊಡುತ್ತೇನೆ. ಕೇಳಿಬಿಡು ಈ ರೆಕಾರ್ಡಿಂಗ್. ಒಂದು ನಿಮಿಷ,' ಅಂದ ಪಾವಸ್ಕರ್ ತಾವು ರೆಕಾರ್ಡ್ ಮಾಡಿಕೊಂಡಿದ್ದ ಒಂದು ಕ್ಲಿಪ್ ಫೋನಲ್ಲೇ ಕೇಳಿಸಿದರು.

ಇನ್ಸ್ಪೆಕ್ಟರ್ ರುದ್ರಮೂರ್ತಿ ಕ್ಲಿಪ್ ಕೇಳುತ್ತ ಹೋದರು. ಒಂದು ಧ್ವನಿ ನಟ ಗೌರವನದು ಅಂತ ತಿಳಿಯಲು ತೊಂದರೆ ಇರಲಿಲ್ಲ. ಇನ್ನೊಂದು ದನಿ ಡಾನ್ ಗನ್ನು ಶೆಟ್ಟಿಯದು ಅಂತ ತಿಳಿಯಿತು. ಸಂದರ್ಭ ಹಾಗಿತ್ತಲ್ಲ.

'ಹಲೋ' ಆಕಡೆಯಿಂದ ಗಡಸು ದನಿ.

'ಅಣ್ಣಾ. ಗನ್ನು ಅಣ್ಣಾ. ಎಂತದು ಈ ಹೊತ್ತಲ್ಲಿ ಫೋನ್ ಅಣ್ಣಾ? ಎಂತ ಸಮಾಚಾರ?'

'ಗೌರವ್ ಒಂದು ಕೆಲಸ ಆಗಬೇಕು ಮಾರಾಯ'

'ಎಂತದು ಅಣ್ಣಾ? ಹೇಳಿ ನೀವು. ಎಂತದು ಹೊಸಾ ಸಿನೆಮಾ ಮಾಡೋ ಪ್ಲಾನ್ ಉಂಟಾ? ಡೇಟ್ಸ್ ಬೇಕಾ? ನೀವು ಕೇಳಿ ಅಣ್ಣಾ. ನಿಮಗೆ ಇಲ್ಲ ಅನ್ನೋಕೆ ಉಂಟಾ?'

ಡಾನ್ ಗನ್ನು ಶೆಟ್ಟಿಯ ಅಪರಾತ್ರಿಯ ಕರೆಗೆ ಚಡ್ಡಿ ಒದ್ದೆ ಆದವನಂತೆ ಮಾತಾಡುತ್ತಿದ್ದ ನಟ ಗೌರವ್ ಗನ್ನು ಶೆಟ್ಟಿಗೆ ಇಲ್ಲದ ಬೆಣ್ಣೆ ಹಚ್ಚುತ್ತಿದ್ದ.

'ಒಂದು ಮದುವೆ ಆಗಲಿಕ್ಕಿದೆ'

'ಯಾರದ್ದು ಅಣ್ಣ ಮದುವೆ? ನಾ ಎಂತ ಮಾಡಲಿ ಅಣ್ಣಾ? ಅವರ ಮದುವೆಯಲ್ಲಿ ಡಾನ್ಸ್ ಮಾಡಲಾ? ಅಲ್ಲಿ ಬಾಲಿವುಡ್ ನಲ್ಲಿ ಶಾರುಕ್ ಖಾನ್ ಸಹಿತ ದುಡ್ಡು ಕೊಟ್ಟರೆ ಮದುವೆಯಲ್ಲಿ ಹೋಗಿ ಡಾನ್ಸ್ ಮಾಡಿ ಬರುತ್ತಾನಂತೆ. ನಾನೂ ಮಾಡ್ತೇನೆ. ನೀವು ಹೇಳಿ ಅಣ್ಣಾ. ಯಾರದ್ದು ಮದುವೆ ಅಣ್ಣಾ?'

'ಮದುವೆ ನಿನ್ನದೇ ಗೌರವ್. ತಾಪಡ್ ತೋಪ್ ಆಗಲಿಕ್ಕೆ ಉಂಟು. ಮತ್ತೊಂದು ಮಾತು ಹೇಳಲಿಕ್ಕೆ ಇಲ್ಲ. ತಿಳಿಯಿತಾ?!ಹಾಂ!?'

ಈಗ ಡಾನ್ ಗನ್ನು ಶೆಟ್ಟಿ ಒಂದು notch ದನಿ ಏರಿಸಿದ್ದ. ಫೈನಲ್ ಬೆದರಿಕೆ ಎಂಬಂತೆ ಕೊಟ್ಟ ಧಮಕಿ. ಫೋನಲ್ಲೇ ಕಾನಪಟ್ಟಿಗೆ ಘೋಡಾ ಇಟ್ಟಿದ್ದ. ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಡಾನ್ ಗಳಿಂದ ಘೋಡಾ ಇಡಿಸಿಕೊಂಡು ರೂಢಿಯಿದ್ದ ಗೌರವಗೆ ಡಾನ್ ಮಾತಿನಲ್ಲಿದ್ದ ಖತರ್ನಾಕ್ ಗಂಭೀರತೆಯ ಅರಿವಾಗಲು ಜಾಸ್ತಿ ಟೈಮ್ ಹಿಡಿಯಲಿಲ್ಲ.

'ಅಣ್ಣಾ.... ಮದುವೆ....ನಂದು....... ಯಾರ..... ಜೊತೆ?' ಅಂತ ನಟ ಗೌರವ್ ತೊದಲಿದ. ಗಟ ಗಟ ಏನೋ ಕುಡಿದ ಸೌಂಡ್ ಸಹ ರೆಕಾರ್ಡ್ ಆಗಿತ್ತು. ಡಾನ್ ಮಂದಿ ನೋಡಿಕೊಂಡೇ ಫೋನ್ ಮಾಡುತ್ತಾರೆ. ಕುಡಿದಾಗ ಎಲ್ಲರೂ vulnerable. ಅಲ್ಲವಾ?

'ಪ್ರತೀಕ್ಷಾ ಜೊತೆ. ಬೇಗನೆ ಆಗಿ ಬಿಡಬೇಕು ಗೌರವ್. ತಡವಾದರೆ ಸುದ್ದಿ ಬಾಸ್ ಛೋಟಾ ರಾಮನ್ ಗೆ ಹೋಗಿ ಮುಟ್ಟಿದರೆ ಕಷ್ಟ. ನೀನು ನಮ್ಮವ ಅಂತ ನಾನೇ ಮಾತಾಡುತ್ತಿದ್ದೇನೆ. ಗೊತ್ತಲ್ಲ ನಿನಗೆ ಛೋಟಾ ರಾಮನ್ ಬಗ್ಗೆ? ಪ್ರತೀಕ್ಷಾ ಅಂದ್ರೆ ಅವರಿಗೆ ಭಾಳ ಇಷ್ಟ.ಅವರ ಖಾಸಂ ಖಾಸ್ ಆಕೆ. ಬೇಗನೆ ಪೇಪರ್ ಒಳಗೆ ಬಂದು ಬಿಡಬೇಕು ಸುದ್ದಿ. ಉಳಿದ ಶಾಸ್ತ್ರ ಕಡೆಗೆ. ಆಯಿತು ಇಡ್ತೇನೆ ಫೋನ್. ಇನ್ನೊಂದು ಲೈನಲ್ಲಿ ಬಾಸ್ ಛೋಟಾ ರಾಮನ್ ಫೋನ್ ಬರ್ತಾ ಇದೆ'

'ಅಣ್ಣಾ! ಅಣ್ಣಾ! ಅದು.... ಅದು.....' ಅನ್ನುವಷ್ಟರಲ್ಲಿ ಫೋನ್ ಕಟ್ಟಾಗಿತ್ತು. ಈ ಕಡೆ ನಟ ಗೌರವ್ ಥರ ಥರ ನಡಗುತ್ತಿದ್ದ.

ಗನ್ನು ಶೆಟ್ಟಿ ಸರಿಯಾಗೇ ಹಣಿದಿದ್ದ. ಸರಿಯಾದ ಟೈಮ್ ನಲ್ಲಿ ಸೂಪರ್ ಡಾನ್ ಛೋಟಾ ರಾಮನ್ ಹೆಸರನ್ನು ತೇಲಿ ಬಿಟ್ಟಿದ್ದ ಗನ್ನು ಶೆಟ್ಟಿ. ತಾನು ಗೌರವನ ಫ್ರೆಂಡ್, ಹಿತಚಿಂತಕ ಅನ್ನುವ ರೀತಿಯಲ್ಲಿ ತೋರಿಸಿಕೊಂಡಿದ್ದ. ಬೇಕಂತಲೇ ಫೋನ್ ಕಟ್ ಮಾಡಿದ್ದ. ಅದೆಲ್ಲ ಅಂಡರ್ವರ್ಲ್ಡ್ ಜನರ ಟ್ರಿಕ್. ಪೂರ್ತಿ ವಿಷಯ ತಿಳಿಯದ ಮನುಷ್ಯ ಹೆದರಿಕೆಯಿಂದ ಬಗ್ಗುತ್ತಾನೆ. ಜೀವಭಯದಿಂದ ಗಡಿಬಿಡಿಯಲ್ಲಿ ಕಮಿಟ್ ಆಗಿಬಿಡುತ್ತಾನೆ.

'ಕೇಳಿದಿರಾ ರುದ್ರಮೂರ್ತಿ? ಇದೇ ನಿಮ್ಮ ಸ್ಯಾಂಡಲವುಡ್ ಮದುವೆ ಹಿಂದಿನ ಹಕೀಕತ್ತು. ನಟಿ ಪ್ರತೀಕ್ಷಾ ಪಹೂಂಚ್ ಎಷ್ಟಿದೆ ಅಂತ ಗೊತ್ತಾಯಿತಾ? ಏಕದಂ ಕುತ್ತೀ ಚೀಜ್ ಅವಳು,' ಅಂದರು ಪಾವಸ್ಕರ್.

'ನಿಮಗೆಲ್ಲಿ ಸಿಕ್ಕಿತು ಈ ಟೇಪ್ ಪಾವಸ್ಕರ್?' ಅಂದರು ರುದ್ರಮೂರ್ತಿ.

'ಈ ಸಾಲಾ ಗನ್ನು ಶೆಟ್ಟಿಯ ಎನ್ಕೌಂಟರ್ ಆರ್ಡರ್ ಮೇಲಿಂದ ಬಂದಾಗಿಂದ ಅವನ ಫೋನ್ ಟ್ಯಾಪ್ ಮಾಡುತ್ತಿದ್ದೆವು. ಒಂದರಲ್ಲಿ ಇದು ಸಿಕ್ಕಿತು ನೋಡಿ. ಮತ್ತೆ ಇನ್ನೊಂದು ವಿಷಯ ಗೊತ್ತಾ?' ಅಂದರು ಪಾವಸ್ಕರ್.

'ಏನು?' ಅಂತ ಕೇಳಿದರು ರುದ್ರಮೂರ್ತಿ.

'ಎನ್ಕೌಂಟರ್ ಮಾಡುವ ಮೊದಲು ಗನ್ನು ಶೆಟ್ಟಿಯನ್ನು ಕೇಳಿದ್ದೆ, 'ಕ್ಯಾ ರೇ ಶೆಟ್ಟಿ, ಜೀವನದಲ್ಲಿ ಒಂದಾದರೂ ಒಳ್ಳೆ ಕೆಲಸ ಮಾಡಿದ್ದಿಯೇನೋ?' ಅಂತ. ಏನು ಹೇಳಬೇಕು ಸಾಲಾ? 'ಸಾಬ್, ಒಂದು ಬೆಹೆನ್ ಶಾದಿ ಮಾಡಿಸಿದೆ ಸಾಬ್' ಅಂದ. ಯಾರದ್ದು ಅಂತ ಕೇಳಿದರೆ, 'ಈ ಕನ್ನಡ ಹೀರೋಯಿನ್ ಪ್ರತೀಕ್ಷಾ ನಮಗೆ ಸಿಸ್ಟರ್ ಇದ್ದಂಗೆ ಸಾಬ್. ನಟ ಗೌರವ್ ಆಕೆಗೆ ಕೈಕೊಡಬೇಕು ಅಂತಿದ್ದ. ನಾನೇ ನಿಪಟಾಯಿಸಿದ್ದೇನೆ ಸಾಬ್. ನೋಡ್ತಾ ಇರಿ. ನಾಳೆ ನಾಡಿದ್ದರ ಹಾಗೆ ಪೇಪರ್ ಒಳಗೆ ಬರುತ್ತದೆ,' ಅಂದ ಗನ್ನು. 'ಅಚ್ಚಾ ಕಾಮ್ ಕಿಯಾರೇ ಶೆಟ್ಟಿ. ಅಭಿ ಚಲ್ ಊಪರ್,' ಅಂದು ಮಾತು ಮುಗಿಸಿದ್ದೆ. ಒಂದು ಗುಂಡು ನುಗ್ಗಿಸಿ ಕೆಲಸ ಮುಗಿಸಿದ್ದೆ,' ಅಂದರು ಪಾವಸ್ಕರ್.

'ಇಷ್ಟಿದೆ ಅಂತಾಯಿತು ಕಥೆ. ಪ್ರತೀಕ್ಷಾಗೆ ಡಾನ್ ಛೋಟಾ ರಾಮನ್ ಕನೆಕ್ಷನ್ ಇತ್ತಾ ಪಾವಸ್ಕರ್?' ಅಂತ ಕೇಳಿದರು ರುದ್ರಮೂರ್ತಿ.

'ಅಯ್ಯೋ ಇರದೇ ಏನು? ಕನ್ನಡಕ್ಕೆ ಬರುವ ಮೊದಲು ಆಕೆ ಇಲ್ಲೇ ಬಾಲಿವುಡ್ಡಿನಲ್ಲೇ ಇದ್ದವಳು ಅಲ್ಲವೇ? ಆಗಲೇ ದುಬೈ ಟ್ರಿಪ್ ಜೋರಾಗಿತ್ತು ಅವಳದ್ದು. ಆಗಲೇ ಅವಳಿಗೆ ಛೋಟಾ ರಾಮನ್, ಗನ್ನು ಶೆಟ್ಟಿಯ ಪರಿಚಯ ಎಲ್ಲ ಆಗಿದ್ದು. ಆಗ ದುಬೈನಲ್ಲೇ ಇದ್ದ ಛೋಟಾ ರಾಮನ್ ಇವಳನ್ನು ದುಬೈಗೆ ಕರೆಸಿಕೊಂಡ ಅಂದ್ರೆ ಇವಳನ್ನು ಏರ್ಪೋರ್ಟ್ ನಲ್ಲಿ ರಿಸೀವ್ ಮಾಡುವದರಿಂದ ಹಿಡಿದು, ಕೊನೆಯ ಶಾಪಿಂಗ್ ಮಾಡಿಸಿ, ವಾಪಾಸ್ ಪ್ಲೇನ್ ಹತ್ತಿಸಿ ಕಳಿಸುವದು ಇದೇ ಗನ್ನು ಶೆಟ್ಟಿಯ ಕೆಲಸವಾಗಿತ್ತು. ಹಾಗೆ ಅವರಿಬ್ಬರ ಪರಿಚಯವಾದದ್ದು. ಮತ್ತೆ ಬಾಸ್ ಛೋಟಾ ರಾಮನ್ ಮಾಲು ಅಂದಾದ ಮೇಲೆ ಆಕೆ ಇವರೆಲ್ಲರ ರಾಖಿ ಬೆಹೆನ್ ತಾನೇ? ಅದೇ ಸಂಬಂಧ ಇಟ್ಟುಕೊಂಡು ಗನ್ನು ಭಯ್ಯಾನ ಹತ್ತಿರ ಪ್ರತೀಕ್ಷಾ ತನ್ನ ಕಷ್ಟ ಹೇಳಿಕೊಂಡಿದ್ದಳು ಅಂತ ಕಾಣಿಸುತ್ತದೆ. ತಾನೇ ನಿಪಟಾಯಿಸಲಿಲ್ಲ ಅಂದರೆ ಅದು ಬಾಸ್ ಛೋಟಾ ರಾಮನ್ ವರೆಗೆ ಹೋಗಿ ತನ್ನ ಬೆಲೆ ಕಮ್ಮಿ ಆದೀತು ಅಂತ ಹೇಳಿ ಗನ್ನು ಶೆಟ್ಟಿ ತಾನೇ ಗೌರವಗೆ ಧಮಕಿ ಕೊಟ್ಟು ಕೆಲಸ ಮುಗಿಸಿಬಿಟ್ಟಿದ್ದಾನೆ ನೋಡಿ,' ಅಂದರು ಪಾವಸ್ಕರ್.

'ಸರಿ ರುದ್ರಾ. ಫೋನ್ ಇಡ್ಲಾ? ಬನ್ನಿ ಮುಂಬೈ ಕಡೆ. ಬೇಕಾದರೆ ನಿಮ್ಮ ಕಡೆ ರೌಡಿಗಳನ್ನು ಎತ್ತಾಕಿಕೊಂಡು ಬನ್ನಿ. ಮುಂಬೈನಲ್ಲಿ ಎನ್ಕೌಂಟರ್ ಮಾಡಿ ಮುಗಿಸೋಣ. ಹಾ!!! ಹಾ!!!' ಅಂತ ಗಹಗಹಿಸಿ ನಕ್ಕ ಪಾವಸ್ಕರ್ ಫೋನ್ ಕಟ್ ಮಾಡಿದರು.

ಫೋನ್ ಸಂಭಾಷಣೆ ಮುಗಿಸಿದ ಇನ್ಸ್ಪೆಕ್ಟರ್ ರುದ್ರಮೂರ್ತಿ ಆಕಡೆ ನೋಡಿದರೆ ಒಂದು ದೊಡ್ಡ ಮೆರವಣಿಗೆ ಹೋಗುತ್ತಿತ್ತು. ಯಾರದ್ದು ಅಂತ ನೋಡಿದರೆ ನಟ ಗೌರವ್ ಅಭಿಮಾನಿಗಳದ್ದು. ದೊಡ್ಡ ಬ್ಯಾನರ್ ಬೇರೆ ಇತ್ತು. ಕಣ್ಣು ಬಿಟ್ಟು ನೋಡಿದರು ರುದ್ರಮೂರ್ತಿ. ಬ್ಯಾನರ್ ಮೇಲೆ ಬರೆದಿತ್ತು.

'ಗೌರವ್ ಅಣ್ಣಾ ಮತ್ತು ಪ್ರತೀಕ್ಷಾ ಅತ್ತಿಗೆಗೆ ಅಭಿನಂದನೆಗಳು' !

! ! ! ! ! ! !

(ಇದೊಂದು ಕಾಲ್ಪನಿಕ ಕಥೆ. ಅಲ್ಲಿ ಇಲ್ಲಿ ಓದಿದ ಭೂಗತ ಜಗತ್ತು, ಸಿನೆಮಾ ಜಗತ್ತು, ಅವುಗಳ ನಡುವಿನ ಚಿತ್ರ ವಿಚಿತ್ರ ಸಂಬಂಧಗಳು, ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಪೊಲೀಸರು, ರಾಜಕಾರಣಿಗಳು ಇತ್ಯಾದಿಗಳ ಮೇಲೆ ಆಧಾರಿತ ಕಪೋಲಕಲ್ಪಿತ ಕಥೆ)

Wednesday, July 16, 2014

ಬೋಂಗಾ ಹೊಡೆಯೋ ನೌಕರಿಗೆ ಶೇಂಗಾದಲ್ಲಿ ಪಗಾರ್ ಕೊಡ್ತಾರಾ!?

ನಮ್ಮ ಧಾರವಾಡದಲ್ಲಿ 'ಬೋಂಗಾ' ಅಂದ್ರ ಭಾಳ ಫೇಮಸ್. ದೇಶದ ಎಲ್ಲಾ ಕಡೆ IST ಅಂದ್ರ 'ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್' ಇದ್ದರ ಧಾರವಾಡ ತುಂಬಾ BST ಅಂದ್ರ 'ಬೋಂಗಾ ಸ್ಟ್ಯಾಂಡರ್ಡ್ ಟೈಮ್'. ಧಾರವಾಡದ ಕಾಲದ, ಸಮಯದ ಪರಿಜ್ಞಾನ ನಿಂತಿರುವದೇ ಈ ಬೋಂಗಾಗಳ ದಿನನಿತ್ಯದ, ಹೊತ್ತು ಹೊತ್ತಿನ ಆವಾಜ್ ಮೇಲೆ.

"ಟೈಮ್ ಎಷ್ಟಾತ್ರೀ?" ಅಂತ ಕೇಳಿದರ ಎಲ್ಲ ಟೈಮ್ is with respect to some or other ಬೋಂಗಾ. "ಹನ್ನೊಂದರ ಬೋಂಗಾ ಆಗಿ ಸುಮಾರ್ ಪೌಣೆ ತಾಸ್ ಆಗಲಿಕ್ಕೆ ಬಂತ ನೋಡ್ರೀ. ಸೂರ್ಯಾ ಬ್ಯಾರೆ ನೆತ್ತಿ ಮ್ಯಾಲೆ ಬಂದು ಧಗಾ ಧಗಾ ಹೊಡಿಲಿಕತ್ತಾನ. ಹಾಂಗಾಗಿ ಟೈಮ್ ಹನ್ನೆರೆಡು ಹೊಡಿಲಿಕತ್ತಿರಬೇಕು. ಹೆಚ್ಚೆಚ್ಚ ಅಂದ್ರ ಸವಾ ಹನ್ನೆರೆಡು ನೋಡ್ರೀ. ಅದರ ಮ್ಯಾಲೆ ಆಗಿಲ್ಲ ಬಿಡ್ರೀ," ಹೀಂಗ ಟೈಮ್ ಹೇಳ್ತಾರ ಮಂದಿ. ಸರ್ವ ಸಮಯಂ ಬೋಂಗಾಮಯಂ!

ಬೋಂಗಾ ಅಂದ್ರ ಏನ್ರೀ, ಇದೇನು ಟಾಂಗಾ ಇದ್ದಂಗ ಏನು? ಅಂತ ಕೇಳಬ್ಯಾಡ್ರೀ. ಬೋಂಗಾ ಅಂದ್ರ ಫ್ಯಾಕ್ಟರಿಗಳು ಟೈಮಿಗೆ ಸರಿಯಾಗಿ 'ಬೋಂsss!!!' ಅಂತ ಸೌಂಡ್ ಮಾಡೋ ಸೈರನ್ನುಗಳು. ಆ ಫ್ಯಾಕ್ಟರಿ ಮಂದಿ ಯಾವ್ಯಾವದೋ ಕಾರಣಕ್ಕ ತಮ್ಮ ಬೋಂಗಾ ಹೊಡಿತಾರ. ಅಂದ್ರ ಅವರ ಫ್ಯಾಕ್ಟರಿ ಬೋಂಗಾ ಸೌಂಡ್ ಮಾಡ್ತಾರ ಅಂತ. ಕೆಲಸದ ಶಿಫ್ಟ್ ಶುರು ಆತು, ಶಿಫ್ಟ್ ಮುಗೀತು, ದಿನ ಮುಗೀತು, ಫ್ಯಾಕ್ಟರಿನೇ ಬಂದಾತು, ಫ್ಯಾಕ್ಟರಿಗೆ ಬೆಂಕಿ ಬಿತ್ತು, ಎಲ್ಲಾರು ಮನಿಗೆ ಹೋಗ್ರೀ. ಹೀಂಗ ಬ್ಯಾರೆ ಬ್ಯಾರೆ ಕಾರಣಕ್ಕ ಬೋಂಗಾ. ಅದೂ ಪ್ಲೈವುಡ್ ಫ್ಯಾಕ್ಟರಿ ಬೋಂಗಾ ವರ್ಲ್ಡ್ ಫೇಮಸ್ ಅಂತ ಕೇಳಿದ್ದು. ಇರೋದs ಒಂದೆರೆಡು ಫ್ಯಾಕ್ಟರಿ. ಅಲ್ಲೆ ರೈಲ್ವೆ ಸ್ಟೇಷನ್ ಆಕಡೆ ಮೊದಲು ಬರೋದೇ ಪ್ಲೈವುಡ್ ಫ್ಯಾಕ್ಟರಿ. ನಂತರ ಇರೋದೇ ಎಲ್ಮೆಕಾ. ಮುಂದ ಜೆಮ್ ವೈರ್ ಫ್ಯಾಕ್ಟರಿ. ಈ ಮೂರು ಫ್ಯಾಕ್ಟರಿ ಒಳಗ ಬೋಂಗಾ ಯಾವ ಫ್ಯಾಕ್ಟರಿ ಹೊಡಿತದ ಅಂತ ಖಾತ್ರಿ ಇಲ್ಲ. ನಾಕು ಮಂದಿ ಕೂಡಿದಾಗ 'ದೇವರು ಕೊಟ್ಟ ಪೀಪಿಯ' ಬೋಂಗಾ ಸೌಂಡ್ ಆತು ಅಂದ್ರ ಯಾರು ಬೋಂಗಾ ಬಿಟ್ಟರು ಅಂತ ಕಂಡು ಹಿಡಿಯೋದು ಹ್ಯಾಂಗ ಭಾಳ ಕಷ್ಟದ ಕೆಲಸವೋ ಇದೂ ಹಾಂಗೇ. ಇದ್ದ ನಾಕು ಫ್ಯಾಕ್ಟರಿ ಒಳಗ ಬೋಂಗಾ ಹೊಡೆಯೋ ಫ್ಯಾಕ್ಟರಿ ಯಾವದು ಅಂತ ಯಾರಿಗೂ ಖಾತ್ರಿ ಗೊತ್ತಿಲ್ಲ. ಪ್ಲೈವುಡ್ ಫ್ಯಾಕ್ಟರಿ ಅಂತ ಸಂದೇಹ. ಯಾವದೇ ಫ್ಯಾಕ್ಟರಿ ಬೋಂಗಾ ಹೊಡಿಲಿ ಬಿಡ್ರೀ. ಟೈಮಿಗೆ ಸರಿಯಾಗಿ ಬೋಂಗಾ ಹೊಡೆದು ಧಾರವಾಡ ಮಂದಿಗೆ ಒಂದು ಸೆನ್ಸ್ ಆಫ್ ಟೈಮ್ ತಂದುಕೊಟ್ಟ ಬೋಂಗಾಗಳಿಗೆ ಒಂದು ದೊಡ್ಡ ಸಲಾಂ.

ಬೋಂಗಾ ಬಗ್ಗೆ ಇಷ್ಟೆಲ್ಲಾ ಬಿಲ್ಡ್ ಅಪ್ ಯಾಕೆ ಕೊಡಬೇಕಾತು ಅಂದ್ರ ಮೊನ್ನೆ ಚೀಪ್ಯಾನ ಮನಿಗೆ ಹೋಗಿದ್ದೆ. ಚೀಪ್ಯಾ ಒಬ್ಬನೇ ಇದ್ದ. ಯಾಕೋ ರೂಪಾ ವೈನಿ ಕಾಣಲಿಲ್ಲ.

"ಟೈಮ್ ಎಷ್ಟಾತಲೇ ಚೀಪ್ಯಾ?" ಅಂತ ಯಾಕೋ ಏನೋ ಟೈಮ್ ಕೇಳಿಬಿಟ್ಟೆ.

"ಟೈಮ? ಈಗರೇ ನಾಲ್ಕರ ಬೋಂಗಾ ಆಗಿ ಹೆಚ್ಚ ಅಂದ್ರ ಸವಾ ತಾಸ್ ಆಗಿರಬೇಕು. ಅಂದ್ರ ಸವಾ ನಾಕು ಆಗಿರಬೇಕು ನೋಡಪಾ. ಯಾಕ ಟೈಮ್ ಕೇಳಲಿಕತ್ತಿ? ಸಂಜಿ ಆರರ ಶೋ ನೋಡಲಿಕ್ಕೆ ಯಾವದರ ಹೊಲಸ್ ಮಲಯಾಳಿ ಸಿನೆಮಾಕ್ಕ ಹೊಂಟಿಯೇನು!?" ಅಂತ ಕೇಳಿಬಿಟ್ಟ ಮಂಗ್ಯಾನಿಕೆ.

"ಅಲ್ಲಲೇ ಚೀಪ್ಯಾ ಕೈಯ್ಯಾಗ ಏನು ಅದು ಅಷ್ಟು ದೊಡ್ಡದು ಕಟ್ಟಿಗೊಂಡಿ? ಸೈಜ್ ನೋಡಿದರ ಹೊನಗ್ಯಾ ಸೈಜಿನ ಉದ್ದಿನ ವಡಿ ಇದ್ದಂಗ ಅದಲ್ಲಲೇ? ಹಾಂ?" ಅಂತ ಕೇಳಿದೆ.

"ಇದs? ಇದು ರಿಸ್ಟ್ ವಾಚಲೇ ಮಂಗ್ಯಾನಿಕೆ. ಯಾವ ಯಾಂಗಲ್ ನಿಂದ ಇದು ಉದ್ದಿನ ವಡಿ ಕಂಡಂಗ ಕಾಣ್ತು ನಿನಗ? ಹಾಂ?" ಅಂತ ನನಗ ಜಬರಿಸಿದ.

"ಕೈಯ್ಯಾಗ ಅಂತಾ ಉದ್ದಿನ ವಡಿ ಸೈಜಿನ ವಾಚ್ ಕಟ್ಟಿಕೊಂಡು, ಟೈಮ್ ಎಷ್ಟು ಅಂತ ಕೇಳಿದರ ಮತ್ತ ಬೋಂಗಾದ ಮ್ಯಾಲೆ ಟೈಮ್ ಹೇಳತಿಯಲ್ಲಲೇ ಹಾಪಾ? ಹಾಂ? ಆ  ಬೋಂಗಾ ಈ ಬೋಂಗಾ ಅನ್ಕೋತ್ತ. ವಾಚ್ ನೋಡಿ ಟೈಮ್ ಹೇಳಲಿಕ್ಕೆ ಏನು ಧಾಡಿ?" ಅಂತ ನಾನೂ ರಿವರ್ಸ್ ಬಾರಿಸಿದೆ. ಏನಂತ ತಿಳ್ಕೊಂಡಾನ? ಆಟಾ ಏನ?

"ವಾಚs? ಈ ವಾಚು ಬಂದ್ ಬಿದ್ದದೋ ಮಾರಾಯ. ನಡಿಯಂಗಿಲ್ಲ. ಕೆಲಸಾ ಮಾಡಂಗಿಲ್ಲ. ಹಾಂಗಾಗಿ ಟೈಮ್ ಕೇಳಿದರ ಎಷ್ಟರ ಬೋಂಗಾ ಹೊಡೀತು ಅಂತ ನೆನಪ ಮಾಡಿಕೊಳ್ಳೋ ಪರಿಸ್ಥಿತಿ ನೋಡಪಾ," ಅಂತ ಇದ್ದ ಪರಿಸ್ಥಿತಿ ಹೇಳಿದ ಚೀಪ್ಯಾ.

ಬಂದ್ ಬಿದ್ದಂತ ವಾಚ್ ಮತ್ತೆಲ್ಲೆರೆ ಮಿರಾಕಲ್ ಆಗಿ ನಡಿಲಿಕ್ಕೆ ಶುರು ಮಾಡಿ ಬಿಟ್ಟದೋ ಏನೋ ಅಂತ ನೋಡಲಿಕ್ಕೆ ಕಿವಿ ಹತ್ತಿರ ಅದನ್ನ ತೊಗೊಂಡು ಹೋಗಿ, ಝಾಡಿಸಿ ಝಾಡಿಸಿ ನೋಡಿದ. ಟಿಕ್ ಟಿಕ್ ಅಂತ ಕೇಳಲಿಲ್ಲ ಅಂತ ಕಾಣಿಸ್ತದ. ಮಂಗ್ಯಾನ ಮಾರಿ ಮಾಡಿದ.

"ಹೋಗ್ಗೋ ನಿನ್ನ! ಬಂದ್ ಬಿದ್ದ ವಾಚ್ ಯಾಕಲೇ ಕಟ್ಟಿಕೊಂಡು ಅಡ್ಯಾಡ್ತೀ? ತೆಗೆದು ಒಗಿ ಅದನ್ನ. ಎಷ್ಟ ವರ್ಷ ಆತಲೇ ಆ ಸುಡುಗಾಡ 'ಹುಚ್ಚೆಮ್ಟೀ ಸೋನ್ಯಾ' ವಾಚ್ ತೊಗೊಂಡು? ಹಡಬಿಟ್ಟಿ ವಾಚ್!" ಅಂತ ಬೈದೆ.

HMT Sona ಅನ್ನೋ ವಾಚಿಗೆ ಹುಚ್ಚೆಮ್ಟೀ ಸೋನ್ಯಾ ಅಂತ ನಮ್ಮ ಹೆಸರು.

"ಏ! ಇದು ನಮ್ಮ ಮಾವಾ ಲಗ್ನದಾಗ ಕೊಟ್ಟ ವಾಚ್. ಹಾಂಗೆಲ್ಲಾ ತೆಗೆದು ಒಗಿಲಿಕ್ಕೆ ಬರಂಗಿಲ್ಲ. ಈ ವಾಚ್ ಬಂದ್ ಬಿದ್ದು ನಿಂತರೂ ಇದನ್ನ  ಕಟ್ಟಿಕೊಂಡೇ ಸಾಯಬೇಕು ನೋಡಪಾ ಇವನ," ಅಂದ ಚೀಪ್ಯಾ.

"ಹಾಂಗೇನ? ನಿನ್ನ ಕರ್ಮಾ. ಕಟ್ಟಿಕೊಂಡು ಕೂಡು," ಅಂತ ಹೇಳಿದೆ.

"ನಮ್ಮ ಮಾವಾ ಲಗ್ನದಾಗ ಎರಡು ಸಾಮಾನು ಕೊಟ್ಟ. ನನ್ನ ನಸೀಬಕ್ಕ ಎರಡೂ ಬಂದ್ ಬಿದ್ದು ನಿಂತು ಬಿಟ್ಟವು ನೋಡಪಾ. ಕರ್ಮ ಕರ್ಮ," ಅಂತ ಚೀಪ್ಯಾ ತಲಿ ತಲಿ ಚಚ್ಚಿಕೊಂಡ.

"ಹಾಂ!? ನಿಮ್ಮಾವ ಎರಡು ಸಾಮಾನು ಕೊಟ್ಟರಾ? ಎರಡೂ ಬಂದ್ ಬಿದ್ದಾವ? ಏನು?" ಅಂತ ಕೇಳಿದೆ.

"ಒಂದು ಈ ಹಡಬಿಟ್ಟಿ ವಾಚು. ಇನ್ನೊಂದು ನಿಮ್ಮ ರೂಪಾ ವೈನಿ. ಎರಡೂ ಬಂದ್ ಬಿದ್ದಾವ. ಒಟ್ಟ ನಡಿಯಂಗೇ ಇಲ್ಲ. ಎರಡೂ ಚೈನಾ ಮಾಲು ನೋಡಪಾ. ಅಂಥಾ ತಗಡ ಕ್ವಾಲಿಟಿ. ಮದ್ವಿ ಮುಹೂರ್ತ ಆಗಿ ಒಂದು ನಿಮಿಷಕ್ಕ ಬಂದ್ ಬಿತ್ತ ನೋಡ ಈ ವಾಚು ಮತ್ತ ಅಕಿ ರೂಪಾ. ನಂತರ ಅವೆರೆಡೂ ಎಂದರ ಕೆಲಸ ಮಾಡಿದ್ದರ ಕೇಳ ನೀ," ಅಂತ ಚೀಪ್ಯಾ ಅವನ ಮಾವ ಕೊಟ್ಟ ವಾಚು, ಮಗಳು ಎರಡೂ ಬಾದ್ ಆಗಿಬಿಟ್ಟಾವ, ಬರ್ಬಾದ್ ಆಗಿಬಿಟ್ಟಾವ ಅಂತ ಹೇಳಿದ.

"ಅಲ್ಲಲೇ ವಾಚ್ ಬಂದ್ ಬಿದ್ದದ ಅಂದ್ರ ಒಂದು ಮಾತಪಾ. ಒಪ್ಪೋಣ. ಹೋಗಿ ಹೋಗಿ ಜೀವಂತ ಇರೋ ರೂಪಾ ವೈನಿ ಬಂದ್ ಬಿದ್ದಾರ ಅಂದ್ರ ಏನಲೇ ಅರ್ಥ? ಹಾಂ? ಧರ್ಮಪತ್ನಿಗೆ ಹಾಂಗೆಲ್ಲ ಅನಬಾರದಲೇ ಹುಚ್ಚ ಮಂಗ್ಯಾನಿಕೆ," ಅಂತ ರೂಪಾ ವೈನಿ ಪರ ವಹಿಸ್ಕೊಂಡು ಮಾತಾಡಿದೆ. ಎಷ್ಟಾದರೂ ಊಟ, ತಿಂಡಿ ಎಲ್ಲ ಕೊಟ್ಟು ಸಲಹಿದ ಅನ್ನಪೂರ್ಣೇಶ್ವರಿ ಅವರು.

"ನನ್ನ ಹೆಂಡ್ತಿ ಬಂದ್ ಬಿದ್ದದ ಅಂದ್ರ ಲಗ್ನಾದ ಮ್ಯಾಲೆ ನಮ್ಮ ಮನಿಗೆ ಬಂದು ಬಿದ್ದದ ಅಂತ ಅರ್ಥ. ತಿಳೀತ?" ಅಂತ ಹೇಳಿದ ಚೀಪ್ಯಾ. ಭಾರಿ ಪಾಯಿಂಟ್ ಮಗಂದು. ವಾಚ್ 'ಬಂದ್ ಬಿದ್ದದ' ಅಂತ. ಹೆಂಡ್ತಿ 'ಬಂದು ಬಿದ್ದಾಳ' ಅಂತ. ವಾಹ್! ಭಾರಿ ಹೇಳ್ತಾನ. ಸಣ್ಣ ಡಿಫರೆನ್ಸ್ ಇಟ್ಟಿರ್ತಾನ ಮಗಾ!

"ಮತ್ತ ಲಗ್ನಾ ಮಾಡಿಕೊಂಡು ಬಂದ ಮ್ಯಾಲೆ ನಿಮ್ಮ ಮನಿಗೆ ಬಂದು ಬೀಳದ ಬಾಜೂ ಮನಿಗೆ ಹೋಗಿ ಬೀಳ್ತಾರೆನಲೇ ಹಾಪಾ? ವಾಚ್ ಬಂದ್ ಬಿದ್ದದ ಅಂತ ಸಿಟ್ಟಿನ್ಯಾಗ ಹೆಂಡ್ತೀ ಸಹಿತ ಬಂದು ಬಿದ್ದದ ಅಂತೀಯಲ್ಲಲೇ!? ಏ......" ಅಂತ ಜಬರಿಸಿದೆ.

"ಏ! ಇಕಿ ನಮ್ಮ ರೂಪಾ ವಾಚಿನ ಗತೆ ಬಂದ್ ಬೀಳೋ ಪೈಕಿ ಅಲ್ಲ ತೊಗೋ. ತಾನಂತೂ ಬಂದ್ ಬೀಳಂಗಿಲ್ಲ. ಬಾಕಿ ಮಂದಿಗೂ ಬಂದ್ ಬೀಳಲಿಕ್ಕೆ ಕೊಡಂಗಿಲ್ಲ. ಬಂದ್ ಬೀಳದಾಂಗ ಕೀಲಿ ಚುಚ್ಚಿ, ಚಾವಿ ಕೊಟ್ಟ ಕೊಟ್ಟ ಇಟ್ಟು ಬಿಡ್ತಾಳ ಪೀಡಾದಾಕಿ," ಅಂತ ಉರಕೊಂಡ ಚೀಪ್ಯಾ. ಚೀಪ್ಯಾಗ ಕೀಲಿ ಕೊಟ್ಟಾಳ ಅಂದ್ರ ಕಿವಿ ಹಿಡಿದು ಹಾಕ್ಕೊಂಡು ತಿರಿವಿರಬೇಕು. ಕಿವಿ ಹಿಡಿದು ತಿರವೋದು ಒಂದು ತರಹ ಗಡಿಯಾರಕ್ಕ ಚಾವಿ ಕೊಟ್ಟಂಗ, ಅಲಾರಂ ಕೊಟ್ಟಂಗ ಅನ್ನಸ್ತದ ನೋಡ್ರೀ. ಅದೇ  ಫೀಲಿಂಗ್ ಬರ್ತದ ನೋಡ್ರೀ. ಅದಕ್ಕ ಹಾಂಗ ಅನ್ಕೊಂಡೆ ನಾನು. ರೂಪಾ ವೈನಿ ಚೀಪ್ಯಾನ ಕಿವಿ ಗಡಿಯಾರದ ಚಾವಿ ಗತೆ ತಿರುವಿ ತಿರುವಿ ಫುಲ್ ಶೇಪ್ ಔಟ್ ಆಗಿ ಬಿಟ್ಟದ.

"ಚೀಪ್ಯಾ, ಅಂದಂಗ ರೂಪಾ ವೈನಿ ಎಲ್ಲೆ ಹೋಗ್ಯಾರ? ಕಾಣಸವಲ್ಲರು," ಅಂತ ಕೇಳಿದೆ.

"ಅಕಿ ಎಲ್ಲೋ ಹೋಗ್ಯಾಳ ನೋಡಪಾ. ಎಲ್ಲೋ ಏನೋ? ಅವೆಲ್ಲಾ ಕೇಳೋದು, ಹೇಳೋದು ಬಿಟ್ಟು ಭಾಳ ವರ್ಷ ಆಗಿ ಹೋತೋ," ಅಂತ ಹೇಳಿಬಿಟ್ಟ ಚೀಪ್ಯಾ. ಹೋಗ್ಗೋ!

ಅಷ್ಟರಾಗ ರೂಪಾ ವೈನಿನೇ ವಾಪಸ್ ಬಂದ್ರು.

"ಏನು ಕೆಟ್ಟ ಶೆಕಿ ಮಾರಾಯಾ? ಹತ್ತು ನಿಮಿಷ ಬಿಸಿಲಾಗ ಅಡ್ಯಾಡಿ ಬಂದ್ರ ತಲಿ ಗಿವ್ವ್ ಅಂತದ. ರಣಾ ರಣಾ ಬಿಸಿಲು," ಅಂತ ತಮ್ಮ ಸೀರಿ ಸೆರಗಲೆ ಗಾಳಿ ಹಾಕಿಕೋತ್ತ ಬಂದು ಪಡಸಾಲ್ಯಾಗಿನ ಆರಾಮ ಕುರ್ಚಿ ಮ್ಯಾಲೆ ಆಸೀನರಾದರು. ಆಸೀನರಾಗಿ ಪತಿ ಚೀಪ್ಯಾನ ಕಡೆ ಒಂದು ಲುಕ್ ಕೊಟ್ಟರು ನೋಡ್ರೀ. ಚೀಪ್ಯಾ ಸರ್ಕಸ್ಸಿನ್ಯಾಗ ರಿಂಗ್ ಮಾಸ್ಟರ್ ಮಾಡಿದ ಸನ್ನಿ ನೋಡಿದ ಮಂಗ್ಯಾನ ಗತೆ ಎದ್ದ ಬಿಟ್ಟ. ಎದ್ದು ಎಲ್ಲೆ ಓಡಿ ಹೊಂಟನಪಾ ಇವಾ ಅಂತ ನೋಡಿದರ ಒಳಗ ಹೋಗಿ, ಫ್ರಿಜ್ ಒಳಗಿಂದ ಒಂದು ಗ್ಲಾಸ್ ತಣ್ಣನೆ ಗ್ಲಾಸ್ ನೀರು ತಂದುಕೊಟ್ಟುಬಿಟ್ಟ. ಭಾರಿ ಅಂಡರ್ಸ್ಟ್ಯಾಂಡಿಂಗ್ ಗಂಡಾ ಹೆಂಡತಿದು. ಭಾಳ ಸಂತೋಷ ಆತು ನೋಡಿ.

"ಏನ್ ವೈನಿ, ಯಾವ ಕಡೆ ಹೋಗಿತ್ತು ನಿಮ್ಮ ಸವಾರಿ? ಇಂತಾ ಕೆಟ್ಟ ಬಿಸಿಲಿನ್ಯಾಗ? ಹಾಂ" ಅಂತ ಕೇಳಿದೆ.

"ನಾ ಒಂದು ನೌಕರಿ ಇಂಟರ್ವ್ಯೂಕ್ಕ ಹೋಗಿದ್ದೆ ನೋಡಪಾ!!!!!" ಅಂತ ರೂಪಾ ವೈನಿ ಒಂದು ಬಾಂಬ್ ಒಗೆದು ಬಿಟ್ಟರು.

"ನೌಕರಿನಾ!? ನೀವಾ? ಹಾಂ!?" ಅಂತ ಫುಲ್ ಘಾಬರಿ, ಆಶ್ಚರ್ಯದಿಂದ ಕೇಳಿದೆ.

"ಹೂಂನೋ!!! ಮಕ್ಕಳು ಬ್ಯಾರೆ ದೊಡ್ಡವು ಆಗಿ ಬಿಟ್ಟಾವ. ಅಕಿ ದೊಡ್ದಾಕಿ ಕುಂತಿ ಅಂತೂ ಮಾತೆತ್ತಿದರ ಬರೇ ಗಂಡು ಹುಡುಗರ ಬಗ್ಗೆ ಮತಾಡೋವಷ್ಟು ದೊಡ್ಡಾಕಿ ಆಗಿ ಬಿಟ್ಟಾಳ ನೋಡಪಾ ಇವನ. ಇನ್ನು ಸಣ್ಣಾಕಿ ನಿಂತಿನೂ ದೊಡ್ಡಾಕಿ ಆಗಿ ನನ್ನ ಬಾಜೂಕ ಸುದಾ ಮಲ್ಕೊಳ್ಳೋದಿಲ್ಲ ನೋಡಪಾ. ಇಬ್ಬರಿಗೂ ನಾ ಅವ್ವಾ ಅಂದ್ರಾ ದೆವ್ವಾ ಆದಂಗ ಆಗಿಬಿಟ್ಟೇನಿ ನೋಡಪಾ. ಹಾಂಗಾಗಿ ಹ್ಯಾಂಗೂ ವೇಳ್ಯಾ ಇರ್ತದ, ಹೋಗಿ ಎಲ್ಲರ ಒಂದು ನೌಕರಿ ಮಾಡಿ, ಸ್ವಲ್ಪ ರೊಕ್ಕಾ ಗಳಿಸೋಣ ಅಂತ. ಎಲ್ಲಾ ಇಷ್ಟು ತುಟ್ಟಿ ಆಗಲಿಕತ್ತಾವ ಅಂದ್ರ ಎಷ್ಟು ರೊಕ್ಕ ಬಂದರೂ ಸಾಕಾಗೋದಿಲ್ಲ. ಸೂಡ್ಲಿ ಲೈಫ್!" ಅಂತ ಹೇಳಿದರು.

"ಹಾಂಗ್ರೀ!? ಯಾವ ನೌಕರಿ ಇಂಟರ್ವ್ಯೂಗೆ ಹೋಗಿದ್ದಿರಿ? ಹ್ಯಾಂಗಾತು? ಗಂಡೋ ಹೆಣ್ಣೋ?" ಅಂತ ಕೇಳಿದೆ.

"ಪ್ಲೈವುಡ್ ಫ್ಯಾಕ್ಟರಿ ಒಳಗ ಬೋಂಗಾ ಹೊಡೆಯವರ ನೌಕರಿ ಖಾಲಿ ಆಗಿತ್ತು ನೋಡು. ಆ ನೌಕರಿಗೆ ಅರ್ಜೀ ಹಾಕಿದ್ದೆ. ಅದರ ಇಂಟರ್ವ್ಯೂಕ್ಕ ಹೋಗಿ ಬಂದೆ," ಅಂದ್ರು ರೂಪಾ ವೈನಿ.

ಹೋಗ್ಗೋ!!!!! ಬೋಂಗಾ ಅನ್ನೋ ಸೈರೆನ್ ಹೊಡೆಯೋ ನೌಕರಿ ಮಾಡ್ತಾರಂತ ರೂಪಾ ವೈನಿ. ಈಗ ಖರೇನೇ ಇವರು ಬೋಂಗವ್ವ!!!! ಜೋಗವ್ವ ಇದ್ದಂಗ ಬೋಂಗವ್ವ.

"ಪ್ಲೈವುಡ್ ಫ್ಯಾಕ್ಟರಿ ಒಳಗ ಭಾಳ ವರ್ಷಿಂದ ಬೋಂಗಾ ಹೊಡೆದು ಹೊಡೆದು, ಧಾರವಾಡ ಮಂದಿ ಕಿವಿ ಬರ್ಬಾದ ಮಾಡಿದ ಬೋಂಗಾ ಹೊಡೆಯೋ ಬೋಂಗ್ಯಾನ ಸ್ವಂತ ತಲಿ ಕೆಟ್ಟು ಹೋಗಿ, ಹೊತ್ತಿಲ್ಲ ಗೊತ್ತಿಲ್ಲ ಅನ್ನೋ ಹಾಂಗ, ಯಾವ್ಯಾವದೋ ಟೈಮಿಗೆ, ಮನಸ್ಸಿಗೆ ಬಂದಾಗ ಬೊಂಗಾ ಹೊಡಿಲಿಕ್ಕೆ ಶುರು ಮಾಡಿ ಬಿಟ್ಟಿದ್ದ ಅಂತ ಆತು. ಅವನ್ನ ಹೋಗಿ ಮೆಂಟಲ್ ಹಾಸ್ಪಿಟಲ್ಲಿಗೆ ಹಾಕಿ ಬಂದರಂತ. ಅದಕ್ಕ ಈಗ ಬೋಂಗಾ ಹೊಡೆಯೋ ನೌಕರಿ ಖಾಲಿ ಇತ್ತಂತ. ಅದಕ್ಕ ನಾ ಅರ್ಜಿ ಹಾಕಿದ್ದೆ ನೋಡಪಾ. ಇವತ್ತು ಇಂಟರ್ವ್ಯೂ ಇತ್ತು. ಈಗ ಮುಗಿಸಿ ಬಂದೆ," ಅಂತ ಮತ್ತ ಹೇಳಿದ್ರು ರೂಪಾ ವೈನಿ.

ಬೋಂಗಾ ಹೊಡೆಯವನ ಒಂದು ಪೋಸ್ಟ್ ಖಾಲಿ ಆಗಬೇಕು ಅಂದ್ರ ಅವಂಗ ಭಾಳ ವರ್ಷದಿಂದ ಬೋಂಗಾ ಹೊಡೆದೂ ಹೊಡೆದೂ, ಅದರಿಂದ ತಲಿ ಕೆಟ್ಟು ಹುಚ್ಚ ಹಿಡಿಬೇಕಾತು. ಇಲ್ಲಂದ್ರ ಸಾಯೋ ತನಕಾ ಅವನs ಬೋಂಗಾ ಹೊಡಿತಿದ್ದ ಅಂತ ಅನ್ನಸ್ತದ. occupational hazard of Bonga operator job. ಏನು ಮಾಡಲಿಕ್ಕೆ ಬರ್ತದ?

"ಮುಂದ್ರೀ ವೈನಿ? ಇಂಟರ್ವ್ಯೂ ಹ್ಯಾಂಗಾತು? ರಿಸಲ್ಟ್ ಆಗಲೇ ಹೇಳಿಬಿಟ್ಟರೋ ಅಥವಾ ನಂತರ ತಿಳಿಸ್ತಾರಂತೋ? ಹಾಂ?" ಅಂತ ಕೇಳಿದೆ.

"ಇಂಟರ್ವ್ಯೂ ಮಸ್ತಾತೋ. ಬೋಂಗಾ ಹೊಡಿ ಅಂದ್ರು ನೋಡು, ಸಿಕ್ಕಿದ್ದ ಶುಭಾ ಅಂತ ಹೇಳಿ ಹಾಕ್ಕೊಂಡು ಮನಗಂಡ ಬೋಂ!ಬೋಂ! ಪೊಂ!ಪೊಂ! ಅಂತ ಡಿಸೈನರ್ ಡಿಸೈನರ್ ಬೋಂಗಾ ಹೊಡೆದು ಬಿಟ್ಟೆ ನೋಡು. ಅಲ್ಲಿದ್ದವರೆಲ್ಲ ಫುಲ್ ಥಂಡಾ ಹೊಡೆದರು. ಹಾಂಗ ಬೋಂಗಾ ಹೊಡೆದು ತೋರಿಸಿಬಿಟ್ಟೆ. ಏನಂತ ತಿಳ್ಕೊಂಡಾರ? ಹಾಂ? ರೂಪಾ ಬಾಯಿ ಅಂದ್ರ ಸುಮ್ಮನs  ಏನ? ಹಾಂ?" ಅಂತ ರೂಪಾ ವೈನಿ ಅವರ ಬೋಂಗಾ ಹೊಡೆಯೋ ಕೌಶಲ್ಯದ ಬಗ್ಗೆ ಹೇಳಿಕೊಂಡರು. ಎಲ್ಲರಲ್ಲೂ ಒಂದಲ್ಲ ಒಂದು ತರಹದ ಪ್ರತಿಭೆ ಇದ್ದೇ ಇರ್ತದ ನೋಡ್ರೀ. ಗಿಚ್ಚಾಗಿ ಬೋಂಗಾ ಹೊಡೆಯೋದು ನಮ್ಮ ರೂಪಾ ವೈನಿ ಸ್ಪೆಷಾಲಿಟಿ ಅಂತ ಅನ್ನಸ್ತದ. ಪಡಕೊಂಡು ಬಂದಾರ ಬಿಡ್ರೀ!

"ವಾಹ್! ಭಾರಿ ಇದ್ದೀರಿ ಬಿಡ್ರೀ. ಅಂದ್ರ ನೌಕರಿ ನಿಮಗೇ ಸಿಕ್ಕಿರಬೇಕಲ್ಲಾ? ಕಂಗ್ರಾಟ್ಸ್ ರೀ ವೈನಿ. ಪೇಡೆ ಯಾವಾಗ ಹಂಚವರು? ನನಗ ಒಂದು ಪಾವ್ ಕಿಲೋ ಪೇಡೆ ಕೊಟ್ಟು ಬಿಡ್ರೀ. ಒಂದು ಶನಿವಾರದ ರಾತ್ರಿ ಫಳಾರ ನಿಮ್ಮ ಹೆಸರಾಗ, ನಿಮಗ ಸಿಕ್ಕ ಹೊಸಾ ಬೋಂಗಾ ಹೊಡೆಯೋ ನೌಕರಿ ಹೆಸರಾಗ, ನೀವು ಕೊಟ್ಟ ಪೇಡಾ ಮುಕ್ಕಿ, ನೀವು ಯಾವಾಗಲೂ ಮಸ್ತಾಗೇ ಬೋಂಗಾ ಹೊಡೆಯುತ್ತಲೇ ಇರ್ರಿ ಅಂತ ಮನ್ನತ್ ಮಾಡಿಬಿಡ್ತೇನಿ. ಬಾಕಿ ಮಂದಿಗೆಲ್ಲ ಬರೇ ಒಂದೊಂದೇ ಪೇಡಾ ಕೊಡ್ರೀ ಸಾಕು. ನನಗ ಮಾತ್ರ ಪಾವ್ ಕಿಲೋ," ಅಂತ ಹೇಳಿಬಿಟ್ಟೆ.

"ಸ್ವಲ್ಪ ತಡೀಪಾ! ಪೂರ್ತಿ ಹೇಳೋದನ್ನ ಕೇಳು ಮೊದಲು," ಅಂತ ವೈನಿ 'ಥಾಂಬಾ ರೇ ಥಾಂಬಾ' ಅಂತ ಕೈ ಎತ್ತಿದರು.

"ಹಾಂ!? ಏನಾತ್ರೀ? ಇಷ್ಟು ಮಸ್ತ ಬೋಂಗಾ ಹೊಡೆದರೂ ನಿಮಗ ನೌಕರಿ ಕೊಡದ ಯಾರರ ವಶೀಲಿ ಮಂದಿಗೆ ಕೊಟ್ಟರೇನು? ಈ ನೌಕರಿ ಒಳಗೂ ಜಾತಿ ಮ್ಯಾಲಿನ ಮೀಸಲಾತಿ ಇತ್ತೇನ್ರೀ? ಬ್ರಾಹ್ಮಣರಿಗೆ ಕಾಲ ಅಲ್ಲ ಬಿಡ್ರೀ ವೈನಿ ಇದು. ಅಲ್ಲಾ.....ಶ್ರಾದ್ಧದ ಊಟದ ನಂತರದ ಬೋಂಗಾ ಹೊಡೆಯೋದು ಬಿಟ್ಟರ ಬ್ಯಾರೆ ಬೋಂಗಾ ಹೊಡೆದು ಗೊತ್ತಿರದ ಬ್ರಾಹ್ಮಣರು ಇಂತದ್ದೆಲ್ಲ ನೌಕರಿ ಮಾಡಲಿಕ್ಕೆ ಹೋಗೋದೇ ಕಮ್ಮಿ. ಅಂತಾದ್ರಾಗ ಇಲ್ಲೂ ತಂದು ಇಡ್ತಾರಲ್ಲರೀ ವೈನಿ!? ಬ್ರಾಹ್ಮಣರು ಏನು ಮಾಡಿ ಸಾಯಬೇಕು ಅಂತ ಹೇಳಿ ಬಿಡಲೀ ಇವರು. ಸಾಕಾಗಿ ಹೋಗ್ಯದ ನೋಡ್ರೀ ಈ ರಿಸರ್ವೇಶನ್ ಅನ್ನೋದರ ಕಾಲದಾಗ. ಅಲ್ಲರೀ!?" ಅಂತ ಕೇಳಿಬಿಟ್ಟೆ.

"ಏ! ಸುಮ್ಮ ಕೂಡ ಹುಚ್ಚ ಖೋಡಿ ತಂದು. ಅದಕ್ಕಲ್ಲ......" ಅಂತ ಮಾತು ನಿಲ್ಲಿಸಿದರು ವೈನಿ.

"ಮತ್ತರೀ!!!???" ಅಂತ ಕೇಳಿ ಕೂತೆ. ಸಸ್ಪೆನ್ಸ್ ಬಿಲ್ಡಿಂಗ್ ಈಗ.

"ಇಂಟರ್ವ್ಯೂ ಛೋಲೋ ಆತು. ಮತ್ತ ನನ್ನ ಬಿಟ್ಟರ ಬ್ಯಾರೆ ಯಾರೂ ಬೋಂಗಾ ಹೊಡೆಯೋ ನೌಕರಿ ಇಂಟರ್ವ್ಯೂಕ್ಕ ಬಂದಿರಲೇ ಇಲ್ಲ. ಆದ್ರ ಪಗಾರದ ವಿಷಯದಾಗ ಹೊಂದಾಣಿಕಿ ಆಗಲಿಲ್ಲ ಬಿಡಪಾ. ಅದಕ್ಕ ಅವರ ಬೋಂಗಾ ಹೊಡೆಯೋ ನೌಕರಿ ಅವರ ಮಸಡಿ ಮ್ಯಾಲೇ ಒಗೆದು, 'ನಿಮ್ಮ ನೌಕರಿ ನೀವೇ ಇಟ್ಟಗೊಂಡು ಕೂಡ್ರೀ,' ಅಂತ ಹೇಳಿ ಬಂದೆ ನೋಡಪಾ," ಅಂತ ವೈನಿ ಸ್ವಲ್ಪ ಅಸಹನೆ ಮಿಶ್ರಿತ ಸಿಟ್ಟಿನೊಂದಿಗೆ ಹೇಳಿದರು.

"ಹಾಂ!? ಏನ್ರೀ ಹಾಂಗಂದ್ರ? ಪಗಾರ್ ಇಲ್ಲ, ಪುಗಸಟ್ಟೆ ಕೆಲಸ ಮಾಡ್ರೀ ಅಂದರೇನ್ರೀ? ಪುಕ್ಕಟ ಕೆಲಸ ಅಂದ್ರ ಏನ್ ಉಪಯೋಗ ಇಲ್ಲ ಬಿಡ್ರೀ. ಅದರ ಬದಲೀ ಆರಾಮ ಮನಿಯೊಳಗ ಕೂತು, ಟೀವಿ ಮ್ಯಾಲೆ, ಅತ್ತಿ ಸೊಸಿ ಸೀರಿಯಲ್ ನೋಡ್ರೀ. ಹಾಳಾಗಿ ಹೋಗ್ಲೀ ಬಿಡ್ರೀ ಆ ದರಿದ್ರ ಬೋಂಗಾ ಹೊಡೆಯೋ ಕೆಲಸ," ಅಂತ ಸ್ವಲ್ಪ ಸಮಾಧಾನ ಹೇಳಿದೆ.

"ಅಯ್ಯೋ! ಹಾಂಗಲ್ಲೋ. ಪಗಾರ್ ಇತ್ತು. ಆದ್ರ ಅದರದ್ದs ಒಂದು ದೊಡ್ಡ ಕಥಿ ಬಿಡಪಾ...." ಅಂದು ಬಿಟ್ಟರು ವೈನಿ. ಈಗ ಮತ್ತೂ ಭಾರಿ ಸಸ್ಪೆನ್ಸ್.

"ನೋಡೋ ಎಲ್ಲಾ ಹೇಳಿ ಬಿಡ್ತೇನಿ. ಸುಮ್ಮನ ಕೂತು ಕೇಳು. ನಡು ನಡು ಅಡ್ಡಬಾಯಿ ಹಾಕಬ್ಯಾಡ. ನನಗ ಆ ಬೋಂಗಾ ಫ್ಯಾಕ್ಟರಿ ಮ್ಯಾಲೆ ಇಷ್ಟು ಸಿಟ್ಟು ಬರಲಿಕತ್ತದ ಅಂದ್ರ ನಡು ನಡು ಮಾತಾಡಿದರ ಹಾಕ್ಕೊಂಡು ನಿನ್ನ ಒದ್ದು ಬಿಡ್ತೇನಿ ನೋಡು," ಅಂತ ಸಿಟ್ಟಿಲೆ ಹೇಳಿದ್ರು ವೈನಿ. ಮೊದಲೇ ಲೇಡಿ ಹೊನಗ್ಯಾ ಇದ್ದಂಗ ಇದ್ದಾರ. ಹಿಡಿದು ಒದ್ದರ ಕಷ್ಟ.

"ಹೂಂ ಹೇಳ್ರೀ. ನಾ ಗಪ್ಪ್ ಕೂತು ಕೇಳ್ತೇನಿ ನಿಮ್ಮ ಬೋಂಗಾ ನೌಕರಿ ಇಂಟರ್ವ್ಯೂ ಕಾರ್ನಾಮಾ," ಅಂತ ಹೇಳಿ ಬಾಯಿಗೆ ಜಿಪ್ ಎಳದೆ.

"ಬೋಂಗಾ ಇಂಟರ್ವ್ಯೂಕ್ಕ ಹೋದ್ನ್ಯಾ. ಮಸ್ತಾಗಿ ಬೋಂಗಾ ಹೊಡದೆ ಏನಪಾ. ಅವರೂ ಖುಷ್ ಆದರು. 'ನೀವು ಪಾಸ್ ಆಗೀರಿ. ನೌಕರಿ ಮಾಡ್ತೀರಿ ಏನು?' ಅಂತ ಕೇಳಿದರು. ನಾನು ಖುಷ್ ಆಗಿ, 'ಹೂನ್ರೀ ಮಾಡ್ತೇನಿ. ಪಗಾರ್ ಬಗ್ಗೆ ಒಂದಿಷ್ಟು ಹೇಳಿಬಿಟ್ಟರ ಒಳ್ಳೇದಿತ್ತು,' ಅಂತ ಹೇಳಿದೆ ಏನಪಾ. ಪಗಾರ್ ಬಗ್ಗೆ ಮಾತಾಡೋವಾಗ ಒಂಥರಾ ಆಗ್ಲಿಕತ್ತಿತ್ತು. ಆದ್ರೂ ನೌಕರಿ ಒಪ್ಪಿಕೊಳ್ಳೋಕಿಂತ ಮೊದಲು ಪಗಾರ್ ನಿಕ್ಕಿ ಮಾಡಿಕೊಂಡು ಬಿಡಬೇಕು ಅಂತ ಕೇಳಿಬಿಟ್ಟೆ. 'ಪಗಾರ್, ನೋಡ್ರೀ, ಒಂದು ನೂರು!' ಅಂದುಬಿಟ್ಟ ಆವಾ ಫ್ಯಾಕ್ಟರಿ ಮನುಷ್ಯ. 'ಏ, ತಿಂಗಳಕ್ಕ ಬರೇ ಒಂದು ನೂರು ರೂಪಾಯಿ, ಅದೂ ಬೋಂಗಾ ಹೊಡಿಲಿಕ್ಕೆ ಅಂದ್ರ ಭಾಳ ಕಮ್ಮಿ ಆತಲ್ಲರೀ. ನೂರು ರುಪಾಯಿ ದಿನಕ್ಕೇನ್ರೀ ಮತ್ತ?' ಅಂತ ಕೇಳಿದೆ ಏನಪಾ. 'ಪಗಾರ್ ನೂರೇ. ಅದೂ ತಿಂಗಳಕ್ಕೇ. ಆದ್ರ ರೂಪೈದಾಗ ಅಲ್ಲ ನೋಡ್ರೀ,' ಅಂದುಬಿಡಬೇಕ ಆ ಫ್ಯಾಕ್ಟರಿ ಸೂಡ್ಲಿ ಮನುಷ್ಯ. 'ರುಪೈದಾಗ ಅಲ್ಲ ಅಂದ್ರ ಡಾಲರ್ ಒಳಗ ಏನ್ರೀ? ತೊಂದ್ರೀ ಇಲ್ಲ ಬಿಡ್ರೀ. ನಮ್ಮನಿಯವರ ಗೆಳೆಯ ಒಬ್ಬವ ಕರೀಂ ಅಂತ ಇದ್ದಾನ. ಅವಂಗ ಎಲ್ಲ ಹವಾಲಾ ಮಂದಿದು ಗೊತ್ತದ. ನೀವು ಡಾಲರ್ ಒಳಗೇ ಪಗಾರ್ ಕೊಡ್ರೀ. ನಾವು ಅದನ್ನ ರುಪೈದಾಗ ಚಿಲ್ಲರ್ ಮಾಡಿಸಿಕೋತ್ತೇವಿ ತೊಗೊರೀ. ನೂರು ಡಾಲರ್ ಅಂದ್ರ, ನೂರು ಗುಣಲೇ ಆರವತ್ತು ರೂಪಾಯಿ ಅಂದ್ರ ಎಷ್ಟಾತ್ರೀ? ಅರವತ್ತು ಸಾವಿರ ರುಪಾಯಿ? ಬೋಂಗಾ ಹೊಡೆಯೋ ನೌಕರಿಗೆ ತಿಂಗಳಿಗೆ ಅರವತ್ತು ಸಾವಿರ ರುಪಾಯಿನಾ? ಹಾಂ!? ಅಲ್ಲಲ್ಲ. ಗುಣಾಕಾರ ತಪ್ಪಾತು. ಆರು ಸಾವಿರ ರುಪಾಯಿ. ಇರ್ಲಿ ತೊಗೋರಿ. ಚೊಲೋ ಪಗಾರ್ ಅದ,' ಅಂತ ಹೇಳಿದೆ ಏನಪಾ. ಆವಾ ಫ್ಯಾಕ್ಟರಿ ಮನುಷ್ಯ 'ತಪ್ಪು' ಅನ್ನವರಂಗ ಮಾರಿ ಮಾಡಿದ. 'ಅಂದ್ರ ನಿಮ್ಮ ಪಗಾರ್ ಡಾಲರ್ ಒಳಗೂ ಅಲ್ಲ? ಮತ್ಯಾವದರಾಗ? ನಿಮದೇ ಒಂದು ಬ್ಯಾರೆ ಕರೆನ್ಸಿ ಅದ ಏನ್ರೀ? ಅದನ್ನ ಛಾಪಿಸಲಿಕ್ಕೆ ನಿಮ್ಮದೇ ಟಂಕಸಾಲಿ ಸಹಿತ ಅದ ಏನ್ರೀ?' ಅಂತ ಕೇಳಿಬಿಟ್ಟೆ ಏನಪಾ ಇವನ. 'ಪಗಾರ್ ಡಾಲರ್ ಒಳಗೂ ಅಲ್ಲ. ಬ್ಯಾರೆ ಕರೆನ್ಸಿ ಒಳಗೂ ಅಲ್ಲ,' ಅಂತ ಹೇಳಿಬಿಡಬೇಕ ಆ ಸೂಡ್ಲಿ ಮನುಷ್ಯ. 'ಮತ್ತ ಯಾವದರಾಗ ನೀವು ಕೊಡೋ ಪಗಾರ್?' ಅಂತ ಕೇಳಿದರ, 'ನಾವು ಬೋಂಗಾ ಹೊಡೆಯೋ ಕೆಲಸಕ್ಕ ಪಗಾರ್ ಶೇಂಗಾದಾಗ ಕೊಡ್ತೇವಿ ನೋಡ್ರೀ. ಓಕೆ ಏನ್ರೀ? ಶೇಂಗಾದಾಗ ಪಗಾರ್ ತೊಗೊತ್ತೀರಿ? ಹಾಂ?' ಅಂತ ಕೇಳಿಬಿಟ್ಟ. ನನಗ ಹೀಂಗ ಸಿಟ್ಟ ಬಂತು ನೋಡ ಹೇಳತೇನಿ ನಿನಗ. ಆದರೂ ಕೇಳೋಣ ಅಂತ ಕೇಳಿದೆ. 'ಯಾಕ್ರೀ ಪಗಾರ್ ಶೇಂಗಾದಾಗ ಕೊಡ್ತೀರಿ? ನಾವೇನು ನೀವು ಕೊಟ್ಟ ನೂರು ಕೇಜಿ ಶೇಂಗಾ ಮಂಗಳವಾರ ಸಂತ್ಯಾಗ ಮಾರಿಕೊಂಡು ರೂಪಾಯಿ ಮಾಡಿಕೋಬೇಕೇನು? ಅಥವಾ ಸಾಲಿ ಮುಂದ ಹೋಗಿ ಶೇಂಗಾರೇ ಶೇಂಗಾರೇ ಟೈಮ್ ಪಾಸ್ ಅಂತ ಶೇಂಗಾ ಮಾರಬೇಕೇನು? ಒಂದಕ್ಕೆರೆಡು ಕೆಲಸ. ಹುಚ್ಚರ ಗತೆ.' ಅದನ್ನ ಕೇಳಿ ಇಂಟರ್ವ್ಯೂ ಮಾಡಿದವ ಫುಲ್ ಹಾಪ್ ಆಗಿಬಿಟ್ಟ. 'ಬೋಂಗಾದ ರಕ್ಷಣೆಯ ಮಾಡುವದು ಶೇಂಗಾ. ಶೇಂಗಾ ಎಲ್ಲಿದೆಯೋ ಅಲ್ಲಿದೆ ಬೋಂಗಾ. ಶೇಂಗಾ! ' ಅಂತ ಹೇಳಿಕೋತ್ತ, ಆ ಇಂಟರ್ವ್ಯೂ ಮಾಡಿದ ಮನುಷ್ಯ ನನ್ನ ಸುತ್ತ ಹುಚ್ಚರ ಗತೆ ಅದನ್ನ ಅದನ್ನ ಮತ್ತ ಮತ್ತ ಹೇಳಿಕೋತ್ತ ಹುಚ್ಚನ ಗತೆ ರೌಂಡ್ ರೌಂಡ್ ಕುಣಿಲಿಕ್ಕೆ ಶುರು ಮಾಡಿಬಿಟ್ಟ. ನನಗೋ ಎದಿ ಢವಾ ಢವಾ ಅನ್ನಲಿಕತ್ತಿತ್ತು. ರಾಮ್ ಗೋಪಾಲ್ ವರ್ಮಾನ ಸಿನೆಮಾದಾಗ  ಬರೋ ಎಲ್ಲಾ ಹುಚ್ಚರೂ ಒಮ್ಮೆಲೇ ನೆನಪಾಗಿಬಿಟ್ಟರು. ನೋಡಿದರ ಈ ಬೋಂಗಾ ಆಫೀಸರ್ ಮಾತ್ರ 'ಬೋಂಗಾದ ರಕ್ಷಣೆಯ ಮಾಡುವದು ಶೇಂಗಾ. ಶೇಂಗಾ ಎಲ್ಲಿದೆಯೋ ಅಲ್ಲಿದೆ ಬೋಂಗಾ. ಶೇಂಗಾ! ' ಅಂತ ಹಾಡಿಕೋತ್ತ ಮತ್ತೂ ಹುಚ್ಚುಚ್ಚರೆ ಮಾಡ್ಲಿಕತ್ತಾ. ಮತ್ತ ಮ್ಯಾಲಿಂದ ಕೇಳ್ತಾನ, 'ನಿಮಗ ಪಗಾರ್ ರೆಗ್ಯುಲರ್ ಶೇಂಗಾ ಒಳಗ ನಡಿತದೋ ಅಥವಾ 'ಸೀಡ್ ಲೆಸ್ ಶೇಂಗಾ' ಒಳಗ ಬೇಕೋ?' ಅಂತ. ನಾ ಹ್ಯಾಂಗೋ ಮಾಡಿ ಓಡಿ ಬಂದೆ ನೋಡಪಾ. ಅಲ್ಲಿಂದ ಕುಂಡಿಗೆ ಕಾಲು ಹಚ್ಚಿ ಓಡಲಿಕ್ಕೆ ಶುರು ಮಾಡಿದಾಕಿ ಮನಿಗೆ ಬಂದು ಮುಟ್ಟಿದರೂ ಹೆದರಿಕಿಲೆ ಕಾಲು ಕುಂಡಿಗೆ ಒದಕೋತ್ತ ಅವ ನೋಡೋ. ಎಂತಾ ವಿಚಿತ್ರ ವಿಚಿತ್ರ ಮಂದಿ ಇರ್ತಾರ ಅಂತೀನಿ. ಇಂಟರ್ವೂ ಮಾಡೋವಾಗ ಸರಿ ಇದ್ದ. ಪಗಾರ್ ಮಾತು ಬಂದು, ಪಗಾರ್ ಶೇಂಗಾದಾಗ ಕೊಡೋದು ಅಂತ ಶುರು ಮಾಡಿದ ನೋಡು. ಬ್ಯಾಡಪಾ ಬ್ಯಾಡ ಈ ಶೇಂಗಾದಾಗ ಪಗಾರ್ ತೊಗೊಂಡು ಬೋಂಗಾ ಹೊಡೆಯೋ ನೌಕರಿ," ಅಂತ ರೂಪಾ ವೈನಿ ದೊಡ್ಡ ಸುದ್ದಿ ಹೇಳಿ ಮುಗಿಸಿದರು.

ಅಷ್ಟರಾಗ ನನ್ನ ಮೊಬೈಲ್ ರಿಂಗ್ ಆತು. ಯಾರು ಅಂತ ನೋಡಿದರ ಅದೇ ಪ್ಲೈವುಡ್ ಕಂಪನಿ ದೊಡ್ಡ ಮ್ಯಾನೇಜರ್. ನಮ್ಮ ಗೆಳೆಯ. ರೂಪಾ ವೈನಿ ಈಗ ಮಾತ್ರ ಅದೇ ಫ್ಯಾಕ್ಟರಿಗೆ ಇಂಟರ್ವ್ಯೂಗೆ ಹೋಗಿ ಬಂದಾರ. ಇವ ಯಾಕ ನನಗ ಫೋನ್ ಮಾಡ್ಲೀಕತ್ತಾನ ಅಂತ ತಿಳಿಲಿಲ್ಲ. coincidence ಇರಬಹುದು ಅಂತ ಅಂದಕೊಂಡು "ಹಲೋ" ಅಂದೆ.

"ಹಾಂ! ಮಂಗೇಶ್! ನಿನ್ನ ಹೆಸರು, ಫೋನ್ ನಂಬರ್ ಅವರು ರೂಪಾ ಬಾಯಾರು ರೆಫರೆನ್ಸ್ ಅಂತ ಕೊಟ್ಟಿದ್ದರು. ಅದಕ್ಕೇ ಫೋನ್ ಮಾಡ್ಲಿಕತ್ತೇನಿ. ಅವರಿಗೇ ಡೈರೆಕ್ಟ್ ಮಾಡಲಿಕ್ಕೆ ದಮ್ಮು ಇಲ್ಲ. ಹಾಕ್ಕೊಂಡು ಒದ್ದು ಬಿಟ್ಟಾರು. ಯಾಕಂದ್ರ ಅವರು ಈಗ ಮಾತ್ರ ನಮ್ಮ ಫ್ಯಾಕ್ಟರಿಗೆ ಬೋಂಗಾ ಹೊಡೆಯೋ ನೌಕರಿಗೆ ಇಂಟರ್ವ್ಯೂಕ್ಕ ಬಂದಿದ್ದರಂತ. ಅವರ ಜೋಡಿ ಭಾಳ ಕೆಟ್ಟ ನಡೀತು ಅಂತ ಗೊತ್ತಾತು. ಸ್ವಾರೀ. ಅದು ಏನಾಗಿತ್ತು ಅಂದ್ರ....." ಅಂತ ಆವಾ ಫುಲ್ ಕಥಿ ಹೇಳಿಕೋತ್ತ ಹೋದ. ನಾ ಕೇಳಿಕೋತ್ತ ಹೋದೆ. ಕೇಳಿಕೋತ್ತ ಹೋದಂಗ ಹೋದಂಗ ನಾ ನಗಲಿಕ್ಕೆ ಶುರು ಮಾಡಿದೆ. ಭಾಳ ನಕ್ಕೆ. "ಯಾಕ? ಯಾಕ ನಗ್ಲೀಕತ್ತೀ?" ಅನ್ನೋ ಲುಕ್ ರೂಪಾ ವೈನಿ ಕೊಟ್ಟರು. "ತಡ್ರೀ. ಎಲ್ಲಾ ಕೂಡೇ ಹೇಳತೇನಿ," ಅನ್ನೋ ಲುಕ್ ರಿವರ್ಸ್ ಕೊಟ್ಟೆ. ಫೋನ್ ಕಾಲ್ ಮುಗೀತು.

"ರೀ ವೈನಿ! ಹೋಗ್ಗೋ! ದೊಡ್ಡ ಘಾತ ಆತಲ್ಲರೀ. ನಿಮ್ಮ ಜೋಡಿ ಹೀಂಗ ಆಗಬಾರದಿತ್ತು ಬಿಡ್ರೀ," ಅಂತ ಹೇಳಿದೆ.

"ಏನಾತೋ? ಹೇಳ್ಯಾರ ಸಾಯಿ. ನಗೋದು ನೋಡು. ದೊಡ್ಡ ಮಂಗ್ಯಾನ ಗತೆ ಸುಮ್ಮನೇ ನಗಬ್ಯಾಡ. ಏನಾತು ಹೇಳು," ಅಂತ ವೈನಿ ಜೋರ್ ಮಾಡಿದರು.

"ರೀ! ವೈನಿ! ನಿಮ್ಮನ್ನು ಬೋಂಗಾ ಹೊಡೆಯೋ ನೌಕರಿಗೆ ಇಂಟರ್ವ್ಯೂ ಮಾಡಿದವ ಯಾರು ಅಂತ ಗೊತ್ತೇನು? ಅವನೇ, ಹಿಂದಿನ ಬೋಂಗಾ ಆಪರೇಟರ್. ಹುಚ್ಚ ಹಿಡಿದು ಮೆಂಟಲ್ ಹಾಸ್ಪಿಟಲ್ ಗೆ ಹಾಕಿದರ ತಪ್ಪಿಸಿಕೊಂಡು ಬಂದು ಬಿಟ್ಟಾನ ಅಂತ. ಹಳೆ ನೌಕರಿ ಅಂದ್ರ ಅವಂಗ ಅಷ್ಟು ಸೇರ್ತದ ಅಂತ. ತನ್ನ ನೌಕರಿ ಯಾರಿಗೂ ಸಿಗಬಾರದು ಅಂತ ಎಲ್ಲಾರನ್ನೂ ಕಾಡ್ಲಿಕತ್ತಾನ ಅಂತ. ಹ್ಯಾಂಗೋ ಮಾಡಿ ಫ್ಯಾಕ್ಟರಿ ಒಳಗ ಹೊಕ್ಕೊಂಡು ಬಿಟ್ಟಾನಂತ ನೋಡ್ರೀ. ಯಾರೇ ಬೋಂಗಾ ಹೊಡೆಯೋ ನೌಕರಿಗೆ ಬಂದರೂ, ಹ್ಯಾಂಗೋ ಮಾಡಿ ಅವರನ್ನ ಯಾಮಾರಿಸಿ, ಹುಚ್ಚುಚ್ಚರೆ ಇಂಟರ್ವ್ಯೂ ಮಾಡಿ, ಬೋಂಗಾ ನೌಕರಿಗೆ ಶೇಂಗಾದಾಗ ಪಗಾರ್, ಅದು ಇದು ಅಂತ ಹೇಳಿ, ಮಂದೀನ ಮಂಗ್ಯಾ ಮಾಡಿ ಮಾಡಿ ಓಡಸ್ಲಿಕತ್ತಾನ ಅಂತ ನೋಡ್ರೀ. ನಿಮ್ಮ ಜೋಡಿನೂ ಅದೇ ಆಗ್ಯದ ನೋಡ್ರೀ. ಹಳೆ ಬೋಂಗ್ಯಾ ಹುಚ್ಚ ಆದರೂ ಕೆಟ್ಟವ ಅಲ್ಲಂತ ನೋಡ್ರೀ. ಮತ್ತ ಪಗಾರ್ ಶೇಂಗಾದಾಗ ಅಲ್ಲಂತ್ರೀ. ರುಪೈದಾಗ ಅಂತ್ರೀ," ಅಂತ ರೂಪಾ ವೈನಿ ಹುಚ್ಚ ಬೋಂಗ್ಯಾನಿಂದ ಹ್ಯಾಂಗ ಮಂಗ್ಯಾ ಆಗಿ ಬಂದರು ಅಂತ ವಿವರಿಸಿದೆ.

"ಹಾಂಗೇನು? ಇಷ್ಟ ಅದ ಅಂತ ಆತು ಸುದ್ದಿ. ಎಂತಾ ಹುಚ್ಚ ಮಂಗ್ಯಾನಿಕೆ ಇದ್ದಾನೋ ಆವಾ ಹಳೆ ಬೋಂಗಾ ಆಪರೇಟರ್. ಆವಾ 'ಬೋಂಗಾದ ರಕ್ಷಣೆಯ ಮಾಡುವದು ಶೇಂಗಾ. ಶೇಂಗಾ ಎಲ್ಲಿದೆಯೋ ಅಲ್ಲಿದೆ ಬೋಂಗಾ. ಶೇಂಗಾ! 'ಅಂತ ಹೇಳಿ ಹುಚ್ಚರೆ ಗತೆ ನನ್ನ ಸುತ್ತ ಕುಣಿಯೋದನ್ನ ನೆನಿಸಿಕೊಂಡ್ರ ಈಗೂ ನನ್ನ ಮೈಮ್ಯಾಲೆ ಹೆದರಿಕೆಯಿಂದ ಮುಳ್ಳು ಬರ್ತಾವ. ಹಾಂಗಿತ್ತು ನೋಡು ಅವನ ವರ್ತನಾ. ಹುಚ್ಚ ರಂಡೆ ಗಂಡ ಬೋಂಗ್ಯಾನ ತಂದು. ಸೂಡ್ಲಿ!' ಅಂತ ರೂಪಾ ವೈನಿ ಶಾಪ ಹೊಡೆದರು.

"ಹಾಂ! ಇನ್ನೊಂದು ಮಾತ್ರೀ ವೈನಿ. ಫ್ಯಾಕ್ಟರಿ ಮಂದಿ ಹೇಳಿದರು. ಇನ್ನೊಮ್ಮೆ ಎಲ್ಲರನ್ನೂ ಇಂಟರ್ವ್ಯೂಕ್ಕ ಕರಿತಾರಂತ. ಆವಾಗ ಹೋಗಬೇಕಂತ ನೋಡ್ರೀ. ಸರೀತ್ನಾಗಿ ಮತ್ತೊಮ್ಮೆ ಬರೋಬ್ಬರಿ ಇಂಟರ್ವ್ಯೂ ಮಾಡಿ ಬೋಂಗಾ ಹೊಡೆಯೋ ನೌಕರಿ ಕೊಡ್ತಾರಂತ ನೋಡ್ರೀ," ಅಂತ ಹೇಳಿದೆ.

"ಸಾಕಪಾ ಸಾಕು. ಇನ್ನೊಮ್ಮೆ ಈ ಬೋಂಗಾ ಹೊಡೆಯೋ ಸುದ್ದಿಗೆ ಹೋಗಂಗಿಲ್ಲ. ಸಾಕಾಗಿ ಹೋತು. 'ಬೋಂಗಾದ ರಕ್ಷಣೆಯ ಮಾಡುವದು ಶೇಂಗಾ. ಶೇಂಗಾ ಎಲ್ಲಿದೆಯೋ ಅಲ್ಲಿದೆ ಬೋಂಗಾ. ಶೇಂಗಾ!' ಅದನ್ನ ಒಳ್ಳೆ ಸಬಕಾರದ ಜಿಂಗಲ್ ಗತೆ ಹಾಡ್ಲಿಕತ್ತಿತ್ತು ನೋಡು ಆ ಹುಚ್ಚ ಬೋಂಗ್ಯಾ. ಸೂಡ್ಲಿ ತಂದು. ಮೆಂಟಲ್ ಹಾಸ್ಪಿಟಲ್ ಮಂದಿ ಏನ್ ಕೆಲಸಾ ಮಾಡ್ತಾರೋ ಏನೋ. ಒಂದು ಹುಚ್ಚನ್ನ ಸರೀತ್ನಾಗಿ ಒಳಗ ಹಿಡಿದು ಇಟ್ಟುಕೊಳ್ಳಲಿಕ್ಕೆ  ಆಗೋದಿಲ್ಲ ಅಂದ್ರ ಅವರನ್ನೇ ಎಲ್ಲಾ ಮೆಂಟಲ್ ಹಾಸ್ಪಿಟಲ್ ಒಳಗ ಅಂದರ್ ಮಾಡಿ ಒಗಿಬೇಕು. ಏ...... ಇವರ ತಂದು..... ಸೂಡ್ಲಿ," ಅಂತ ರೂಪಾ ವೈನಿ ಬೈಕೊಂಡರು.

'ಬೋಂಗಾದ ರಕ್ಷಣೆಯ ಮಾಡುವದು ಶೇಂಗಾ. ಶೇಂಗಾ ಎಲ್ಲಿದೆಯೋ ಅಲ್ಲಿದೆ ಬೋಂಗಾ. ಶೇಂಗಾ! ' ಇದು ಯಾವ ಸಬಕಾರದ ಜಿಂಗಲ್ ಇದು ಅಂತ ತಲಿ ಕೆರಕೊಂಡೆ.

ಹಾಂ! ನೆನಪಾತು.

'ಆರೋಗ್ಯದ ರಕ್ಷಣೆಯ ಮಾಡುವದು ಲೈಫ್ ಬಾಯ್. ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ. ಲೈಫ್ ಬಾಯ್! ' 

ಆವಾ ಹಳೆ ಬೋಂಗಾ ಆಪರೇಟರ್ ಎಲ್ಲೋ ಲೈಫ್ ಬಾಯ್ ಸಬಕಾರ ಉಪಯೋಗ ಮಾಡ್ತೀರಬೇಕು. ಅದಕ್ಕ ಆ ಜಿಂಗಲ್ ಹಾಡಿಕೋತ್ತ ಮಂಗ್ಯಾತನ ಮಾಡ್ಲಿಕತ್ತಿದ್ದ ಅಂತ ಕಾಣ್ತದ. ನಂದೇ ವಿಚಾರದಾಗ ಮುಳುಗಿದ್ದೆ.

"ಮಂಗೇಶ್! ಒಂದು ಕೇಳಬೇಕಿತ್ತು," ಅಂದ್ರು ರೂಪಾ ವೈನಿ.

'ಏನ್ ಬೇಕಾದರೂ ಕೇಳ್ರೀ,' ಅನ್ನೋ ಲುಕ್ ಕೊಟ್ಟೆ.

"ಅಲ್ಲಾ, ಬೋಂಗಾ ಹೊಡೆಯೋ ನೌಕರಿಗೆ ಪಗಾರ್ ಬೇಕಾದ್ರ ರೆಗ್ಯುಲರ್ ಶೇಂಗಾ ಅಥವಾ ಸೀಡ್ ಲೆಸ್ ಶೇಂಗಾ ಒಳಗ ಕೊಡತೇನಿ ಅಂತ ಅನ್ನಲಿಕತ್ತಿತ್ತು ಆ ಹುಚ್ಚಾ. ಯಾವ ಶೇಂಗಾ ಛೋಲೋ ಅಂತೀ? ಸೀಡ್ ಲೆಸ್ ಶೇಂಗಾನೇ ಛೊಲೋ ಅಲ್ಲಾ?" ಅಂದು ಬಿಟ್ಟರು ರೂಪಾ ವೈನಿ.

'ಸೀಡ್ ಲೆಸ್ ಶೇಂಗಾ'!!!!!!!

ಹಾ!! ಹಾ!!! ಅಂತ ತಟ್ಟಿಕೊಂಡು ನಗಬೇಕು ಅನ್ನಿಸ್ತು. ಮೊದಲೇ ಬೋಂಗಾ ಹೊಡೆಯೋ ನೌಕರಿಗೆ ಹೋಗಿ, ಮಂಗ್ಯಾ ಆಗಿ ಬಂದಾರ. ಸಿಟ್ಟಿಗೆದ್ದು ಹಿಡಿದು ಒದ್ದು ಬಿಟ್ಟಾರ ಅಂತ ಹೇಳಿ, ಹ್ಯಾಂಗೋ ಮಾಡಿ ನಗು ತಡಕೊಂಡೆ.

"ಗೊತ್ತಿಲ್ಲರೀ ವೈನಿ. ಮುಂದಿನ ಸರೆ ಕಿರಾಣಾ ಸಾಮಾನು ತರಿಸೋವಾಗ ಬೇಕಾದ್ರ ಸೀಡ್ ಲೆಸ್ ಶೇಂಗಾನೇ ತರಿಸಿ ನೋಡಿ ಬಿಡ್ರೀ," ಅಂತ ಇಲ್ಲದ ಉಪದೇಶ ಮಾಡಿದೆ.

"ಯಾಕ್ ನಗ್ಲೀಕತ್ತಿ? ಸೊಕ್ಕೆನ? ಹಾಂ?" ಅಂತ ಜಬರಿಸಿದರು ವೈನಿ. ಸೀಡ್ ಲೆಸ್ ಶೇಂಗಾ! ನಗು ಹ್ಯಾಂಗ ತಡಕೋಬೇಕು?

"ರೀ, ಶ್ರೀಪಾದ ರಾವ್, ಮುಂದಿನ ಸರೆ ನೆನಪ ಇಟ್ಟು ಮುದ್ದಾಂ ಸೀಡ್ ಲೆಸ್ ಶೇಂಗಾನೇ ತೊಗೊಂಡು ಬರ್ರಿ ಮತ್ತ. ಇಲ್ಲಂದ್ರ ನಿಮ್ಮನ್ನ ಮತ್ತ ತೊರಗಲ್ಲಮಠನ ಅಂಗಡಿಗೆ ಓಡಿಸಿಬಿಡ್ತೇನಿ. ತಿಳೀತ?" ಅಂತ ರೂಪಾ ವೈನಿ ಚೀಪ್ಯಾಗ ಆರ್ಡರ್ ಮಾಡಿದರು.

"ಸೀಡ್ ಲೆಸ್ ಶೇಂಗಾನ? ಒಳ್ಳೇದು. ಎಷ್ಟು ಕೇಜೀ ತರಲಿ ರೂಪಾ? ಸೀಡ್ ಲೆಸ್ ಅಂದ ಮ್ಯಾಲೆ ಸ್ವಲ್ಪ ಜಾಸ್ತಿನೇ ತರೋದು ಒಳ್ಳೇದು ಅನ್ನಸ್ತದ. ಸೀಡ್ ಲೆಸ್ ಅಂದ್ರ ಶೇಂಗಾ ಒಳಗ ಬೀಜ ಇರಂಗಿಲ್ಲ ಅನ್ನಸ್ತದ ನೋಡು. ಸೀಡ್ ಲೆಸ್ ದ್ರಾಕ್ಷಿ ಗತೆ ಸೀಡ್ ಲೆಸ್ ಶೇಂಗಾ ಇರ್ತದೋ ಏನೋ? ಅಲ್ಲಾ?" ಅಂತ ಕೇಳಿಬಿಟ್ಟ ಚೀಪ್ಯಾ. ಅಬ್ಬಾ! ತಲಿ ಅಂದ್ರ ಇದು!

ಚೀಪ್ಯಾ ತನ್ನ ಪೈಜಾಮಾದ ಕಿಸೆಯಿಂದ ಕಿರಾಣಾ ನೋಟ್ ಬುಕ್ ತೆಗೆದು, ಸಣ್ಣ ಅಕ್ಷರದಾಗ ಕಿರಾಣಾ ಲಿಸ್ಟ್ ಒಳಗ ಬರಕೊಂಡ. ಇನ್ನು ಮುಂದಿನ ವಾರ ಹೋಗಿ ಸೀಡ್ ಲೆಸ್ ಶೇಂಗಾ ತೊಗೊಂಡು ಬರವ ಇಂವಾ!

ಶಿವನೇ ಶಂಭುಲಿಂಗ!

ಶೇಂಗಾ!

Monday, July 14, 2014

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

೧೯೯೩ ಇಸವಿಯ ಆಗಸ್ಟ್ ತಿಂಗಳ ಒಂದು ದಿನ. ಲಂಡನ್ ನಗರದ ಮನೆಯೊಂದರಲ್ಲಿ ಫೋನ್ ರಿಂಗಾಯಿತು. ಮನೆಯಲ್ಲಿದ್ದ ಮನುಷ್ಯ ಫೋನ್ ಎತ್ತಿದರು.

"ಹಲೋ?"

"ಹಲೋ....."

"ಹಲೋ....ಹೇಳಿ?"

"ಲಾಯರ್ ರಾಮ್ ಜೇಠಮಲಾನಿ ಅವರಾ?"

"ಹೌದು. ನಾನೇ ರಾಮ್ ಜೇಠಮಲಾನಿ. ತಾವು?"

"ಸಲಾಂ ವಾಲೇಕುಂ. ಸಾಬ್, ನಾನು ದಾವೂದ್. ದಾವೂದ್ ಇಬ್ರಾಹಿಂ."

ಈಗ ಒಂದು ಕ್ಷಣ ತಬ್ಬಿಬ್ಬಾಗುವ ಸರದಿ ಭಾರತದ ಖ್ಯಾತ ಕ್ರಿಮಿನಲ್ ವಕೀಲ ರಾಮ್ ಜೇಠಮಲಾನಿ ಅವರದ್ದು. ಫೋನ್ ಮೇಲೆ ಆಕಡೆ ಇದ್ದವ ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ! ಆದರೂ ಸಾವರಿಸಿಕೊಂಡು ಮಾತು ಮುಂದುವರಿಸಿದರು.

"ಹಾಂ.....ಹೇಳಿ. ಏನು ವಿಷಯ?"

"ನಿಮಗೆ ಗೊತ್ತೇ ಇದೆ ರಾಮ್ ಸಾಬ್. ನಾನು ಈಗ most wanted ಪಟ್ಟಿಯಲ್ಲಿ ಇದ್ದೀನಿ. ನಾನಾಗೇ ವಾಪಸ್ ಭಾರತಕ್ಕೆ ಬಂದು, ಸರೆಂಡರ್ ಆಗಿಬಿಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ."

"ಬನ್ನಿ. ಅದಕ್ಕೇನು?"

"ಬರಲಿಕ್ಕೆ ನನ್ನ ಕೆಲವು ಷರತ್ತು ಇವೆ ಸಾಬ್......................."

"ಹಂ....ನನ್ನಿಂದ ಏನಾಗಬೇಕು? ಅದನ್ನು ಹೇಳಿ ದಾವೂದ್......."

"ಸಾಬ್, ನೀವು ಈ ಷರತ್ತುಗಳನ್ನು ಸರಕಾರಕ್ಕೆ ತಿಳಿಸಿ, ಸರಕಾರ ಇವುಗಳ ಬಗ್ಗೆ ಏನೆನ್ನುತ್ತದೆ ಅನ್ನೋದನ್ನ ನನಗೆ ವಾಪಸ್ ತಿಳಿಸುತ್ತೀರಾ? ಪ್ಲೀಸ್"

"ಪ್ರಯತ್ನ ಮಾಡೋಣ. ಷರತ್ತು ಹೇಳಿ....."

"೧) ನನ್ನನ್ನು ಕೇವಲ ಮುಂಬೈ ಸ್ಪೋಟಕ್ಕೆ ಸಂಬಂಧಿಸಿದ ಕೇಸುಗಳಲ್ಲಿ ಮಾತ್ರ ಬುಕ್ ಮಾಡಬೇಕು ೨) ಹಿಂಸೆಗೆ, ಟಾರ್ಚರ್ ಗೆ ಒಳಪಡಿಸಬಾರದು ೩) ಬಂಧನವನ್ನು ಗೃಹಬಂಧನಕ್ಕೆ ಮಾತ್ರ ಸೀಮಿತಗೊಳಿಸಬೇಕು"

"ಆಯಿತು. ನಿಮ್ಮ ಷರತ್ತುಗಳನ್ನ ಸರಕಾರಕ್ಕೆ ತಿಳಿಸಿ, ಸರ್ಕಾರ ಏನೆನ್ನುತ್ತದೆ ಅಂತ ತಿಳಿದುಕೊಂಡು ವಾಪಸ್ ನಿಮಗೆ ತಿಳಿಸುತ್ತೇನೆ."

"ಅಚ್ಛಾ ಸಾಬ್. ಬಡಿ ಮೆಹರ್ಬಾನಿ. ಬಹುತ್ ಶುಕ್ರಿಯಾ. ಖುದಾ ಹಾಫಿಜ್"

ಆಕಡೆ ಫೋನಿಟ್ಟ ಶಬ್ದ. ಈಕಡೆ ರಾಮ್ ಜೇಠಮಲಾನಿ ಫೋನ್ ಒಂದು ಕ್ಷಣ ತಡದೇ ಇಟ್ಟರು. ರಜಾ ಕಳೆಯಲೆಂದು ಲಂಡನ್ನಿಗೆ ಬಂದಿದ್ದರು. ಹಾಗಿರುವಾಗ ಅವರಿದ್ದ ಖಾಸಗಿ ಜಾಗದ ಫೋನ್ ನಂಬರ್ ಹುಡುಕಿ ತೆಗೆದು, ಬರೋಬ್ಬರಿ ಟೈಮಿಗೆ ಫೋನ್ ಮಾಡಿ, ಜೇಠಮಲಾನಿ ಅವರನ್ನು ಹಿಡಿದು ಮಾತಾಡಿದ್ದ ಡಾನ್ ದಾವೂದ್ ಇಬ್ರಾಹಿಂ. ಅವನ ದೊಡ್ಡ ಮಟ್ಟದ ಸಂಪರ್ಕಗಳಿಗೆ, ಅವುಗಳ ಆಪರಿ ವ್ಯಾಪ್ತಿಗೆ ಒಂದು ಮೆಚ್ಚುಗೆ ಮೂಡಿತು ಜೇಠಮಲಾನಿ ಅವರ ಮನದದಲ್ಲಿ.

ದಾವೂದ್ ಇಬ್ರಾಹಿಂ
ಸಂಭಾಷಣೆ ಮುಗಿಸಿದ ಖ್ಯಾತ ಕ್ರಿಮಿನಲ್ ವಕೀಲ ರಾಮ್ ಜೇಠಮಲಾನಿ ಒಂದು ಕ್ಷಣ ಕಣ್ಣು ಮುಚ್ಚಿ ಧ್ಯಾನಸ್ಥರಾದರು. ಫೋನ್ ಮಾಡಿ ಮಾತಾಡಿದ್ದು ದಾವೂದ್ ಅಲ್ಲ ಅಂತ ಸಂಶಯ ಪಡಲು ಕಾರಣ ಇರಲಿಲ್ಲ. ಮೊದಲೆಂದಾದರೂ ದಾವೂದ್ ತಮ್ಮ ಕಕ್ಷಿದಾರನಾಗಿದ್ದನೇ ಅಂತ ವಿಚಾರ ಮಾಡಿದರು. ಅವರ ನೆನಪಿನ ಶಕ್ತಿ ಭಯಂಕರ. ಏನನ್ನೂ ಎಂದೂ ಮರೆಯುವದಿಲ್ಲ. ದಾವೂದ್ ಇಬ್ರಾಹಿಂ ಎಂದೂ ಅವರ ನೇರ ಕಕ್ಷಿದಾರ ಆಗಿರಲೇ ಇಲ್ಲ. ಮತ್ತೆ ದಾವೂದ್ ಯಾಕೆ ಜೇಠಮಲಾನಿ ಅವರಿಗೇ ಫೋನ್ ಮಾಡಿದ?

ಹಾಂ! ಫ್ಲಾಶ್ ಆಯಿತು! ನೆನಪು ಬಂತು.

ಡೇವಿಡ್ ಪರದೇಸಿ! ದಾವೂದ್ ಗುಂಪಿನ ಒಬ್ಬ ಶಾರ್ಪ್ ಶೂಟರ್. ಅಮೀರ್ ಜಾದಾ ಪಠಾಣ್ ಎಂಬ ಎದುರಾಳಿ ಬಣದ ಗ್ಯಾಂಗಸ್ಟರನನ್ನು ಕೊಂದಿದ್ದ. ಯಾಕೆ ಕೊಂದಿದ್ದ ಅಂದ್ರೆ ಆ ಅಮೀರ್ ಜಾದಾ ಇದೇ ದಾವೂದನ ಹಿರಿಯಣ್ಣ ಶಬ್ಬೀರ್ ಇಬ್ರಾಹಿಂನನ್ನು ಕೊಂದು ಬಿಟ್ಟಿದ್ದ. ೧೯೮೦ ರ ಸಮಯ. ಅದು ಮುಂಬೈ ಭೂಗತ ಲೋಕದಲ್ಲಿ ದೊಡ್ಡ ಬದಲಾವಣೆಯ ಕಾಲ. ದಾವೂದ್ ಸಹೋದರರು ಮುಂಬೈ ಭೂಗತ ಸಾಮ್ರಾಜ್ಯದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಹಪಾಹಪಿಯಲ್ಲಿದ್ದರು. ಇದ್ದ ಒಬ್ಬ ಹಳೆಯ ಡಾನ್ ಹಾಜಿ ಮಸ್ತಾನನಿಗೆ ವಯಸ್ಸಾಗಿತ್ತು. ಗ್ಯಾಂಗ್ ಮುಂದುವರಿಸಿಕೊಂಡು ಹೋಗಬಹುದಾದ ವಂಶದ ಕುಡಿ ಇರಲಿಲ್ಲ. ದಾವೂದ್ ಇಬ್ರಾಹಿಮ್ಮನೇ ಸ್ವಂತ ಹೋಗಿ, 'ಚಾಚಾ ಜಾನ್, ನಿಮಗೆ ವಯಸ್ಸಾಯಿತು. ಸುಮ್ಮನೆ ಮಲಗಿ ಹಾಯಾಗಿರಿ,' ಅಂತ ಹೇಳಿ, ಹಾಜಿ ಮಸ್ತಾನನನ್ನು ಮಲಗಿಸಿ, ಸೊಳ್ಳೆಪರದೆ ಕಟ್ಟಿಕೊಟ್ಟು ಬಂದಿದ್ದ. ದಾವೂದನ ನಮ್ರ ವಿನಂತಿಯೊಂದಿಗೆ ಒಂದು ಫೈನಲ್ ಖಡಕ್ ಬೆದರಿಕೆ ಇದ್ದಿದ್ದನ್ನು ಗಮನಿಸದಷ್ಟು ಮೂರ್ಖನಾಗಿರಲಿಲ್ಲ ಹಾಜಿ ಮಸ್ತಾನ್. 'ಒಳ್ಳೆದಾಗಲಿ ಬೇಟಾ,' ಅಂತ ಆಶೀರ್ವಾದ ಮಾಡಿಯೇ ಕಳಿಸಿದ್ದ. ದಂಧೆಯಿಂದ ಸ್ವಯಂ ನಿವೃತ್ತನಾಗಿದ್ದ. ಇನ್ನೊಬ್ಬ ಡಾನ್ ಮದರಾಸಿ ವರದರಾಜನ್ ಮೊದಲಿಯಾರ ಪೋಲೀಸರ ಕಾಟ ತಡಿಯಲಾಗದೆ ವಾಪಸ್ ಮದ್ರಾಸಿಗೆ ಹೋಗಿಬಿಟ್ಟಿದ್ದ. ಅವನ ಆರೋಗ್ಯವೂ ಎಕ್ಕುಟ್ಟಿ ಹೋಗಿ, ಸ್ವಲ್ಪೇ ದಿವಸಗಳಲ್ಲಿ ಸತ್ತೂ ಹೋದ. ಅವನಡಿಯಲ್ಲಿದ್ದ ಧಾರಾವಿ ಸುಲಭವಾಗಿ ದಾವೂದ್ ತೆಕ್ಕೆಯೊಳಗೆ ಬಂದಿತ್ತು. ಕೊನೆಗೆ ಉಳಿದವನೆಂದರೆ ದೈತ್ಯ ಪಠಾಣ ಡಾನ್ ಕರೀಂ ಲಾಲಾ. ಅವನಿಗೂ ವಯಸ್ಸಾಗಿತ್ತು. ಆದರೆ ಅವನಿಗೆ ದೈತ್ಯ ರೂಪಿ ಮಕ್ಕಳ ಶನಿ ಸಂತಾನವಿತ್ತು. ಹಾಗಾಗಿ ಅವನು ಮುಂಬೈ ಭೂಗತ ಲೋಕದ ಮೇಲಿನ ಅಧಿಪತ್ಯವನ್ನು ಫೈಟ್ ಕೊಡದೇ ಬಿಟ್ಟು ಕೊಡುವ ಚಾನ್ಸೇ ಇರಲಿಲ್ಲ. ಅದರ ಪ್ರತಿಫಲವೇ ಒಂದು ಭಯಂಕರ ಗ್ಯಾಂಗ್ ವಾರ್! ಮೊದಲ ಬಲಿಯೇ ದಾವೂದ್ ಇಬ್ರಾಹಿಮ್ಮನ ಅಣ್ಣ ಶಬ್ಬೀರ ಇಬ್ರಾಹಿಂ. ತನ್ನ ಆವತ್ತಿನ, ಆಹೊತ್ತಿನ ಯಾವದೋ ಹುಡುಗಿ ಜೊತೆ ಕಾರಿನಲ್ಲಿ ಹೋಗುತ್ತಿದ್ದವನ್ನು ಮುಂಬೈನ ಪೆಟ್ರೋಲ್ ಬಂಕಿನಲ್ಲಿ ಕರೀಂ ಲಾಲಾನ ಮಕ್ಕಳು ಮತ್ತು ಸೋದರ ಸಂಬಂಧಿ ಸಮದ್ ಖಾನ್ ಕೂಡಿ ಕೊಂದಿದ್ದರು. ಕರೀಂ ಲಾಲಾನ ಗ್ಯಾಂಗ್ ನಿರ್ನಾಮ ಮಾಡಿಯೇ ತೀರುತ್ತೇನೆ ಅಂತ ಅವತ್ತೇ ನಿರ್ಧರಿಸಿದ ದಾವೂದ್ ಅಮೀರ್ ಜಾದಾನ ಸುಪಾರಿ ಇದೇ ಡೇವಿಡ್ ಪರದೇಸಿಗೆ ಕೊಟ್ಟಿದ್ದ. ವಕೀಲನ ವೇಷದಲ್ಲಿ ಕೋರ್ಟಿಗೆ ಬಂದ ಡೇವಿಡ್, ಬೇರೆ ಯಾವದೋ ಪ್ರಕರಣದ ವಿಚಾರಣೆಗೆ ಕೋರ್ಟಿಗೆ ಬಂದಿದ್ದ ಅಮೀರ್ ಜಾದಾನನ್ನು ಕೋರ್ಟಿನ ಕಟಕಟೆಯಲ್ಲಿಯೇ ಗುಂಡಿಕ್ಕಿ ಕೊಂದು ಬಿಟ್ಟಿದ್ದ. ಇನ್ನೊಬ್ಬನಾದ ಅಲಂ ಜೇಬ್ ಪಠಾಣನನ್ನು ಗುಜರಾತ್ ಪೊಲೀಸರು ಎನ್ಕೌಂಟರ್ ಮಾಡಿ ಕೊಂದರು. ಅವರೇ ಎನ್ಕೌಂಟರ್ ಮಾಡಿದರೋ ಅಥವಾ ದಾವೂದನೇ ಸುಪಾರಿ ಕೊಟ್ಟು ಮಾಡಿಸಿದನೋ ಗೊತ್ತಿಲ್ಲ. ಸಮದ್ ಖಾನನನ್ನು ಆ ಕಾಲದಲ್ಲಿ ದಾವೂದನ ಖಾಸ್ ಬಲಗೈ ಬಂಟ ಮತ್ತು ಈಗಿನ ಬದ್ಧ ವೈರಿ ಛೋಟಾ ರಾಜನ್ ತನ್ನ ಸಂಗಡಿಗರೊಂದಿಗೆ ಕೂಡಿ ಕೊಂದು ಬಿಟ್ಟ. ಹೀಗೆ ಗ್ಯಾಂಗ್ ನಿರ್ನಾಮವಾದ ಮೇಲೆಯೇ ಕರೀಂ ಲಾಲಾ ಶರಣಾಗತನಾಗಿ, ದಾವೂದ್ ಮುಂಬೈ ಭೂಗತ ಲೋಕದ ಏಕೈಕ ದೊರೆಯಾಗಿ ಮೆರೆಯತೊಡಗಿದ್ದು. ೧೯೮೩-೮೪ ರ ಕಾಲ. ಇದೇ ಟೈಮಿನಲ್ಲಿ ದಾವೂದ್ ಮುಂಬೈ ಬಿಟ್ಟು ದುಬೈಗೆ ಉಡ್ಕಿ ಹಾರಿದ್ದು. ದುಬೈನಲ್ಲಿ ಇದ್ದರೆ ಸುರಕ್ಷಿತ ಮತ್ತೆ ಸಕತ್ ಐಶಾರಾಮದ ಜೀವನ ಮಾಡಬಹುದು ಅಂತ ಹೇಳಿ ದಾವೂದ್ ದುಬೈ ಸೇರಿಕೊಂಡಿದ್ದ. ಮುಂಬೈ ಭೂಗತ ಜಗತ್ತನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದ್ದ.

ಇಷ್ಟೆಲ್ಲ ಇತಿಹಾಸ ಇತ್ತು ಡೇವಿಡ್ ಪರದೇಸಿ ಎಂಬ ದಾವೂದ್ ಬಂಟನ ನಾಮಧೇಯಕ್ಕೆ. ಜೇಠಮಲಾನಿ ಅವರಿಗೆ ಎಲ್ಲ ನೆನಪಾಯಿತು.

ಇಂತಹ ಡೇವಿಡ್ ಪರದೇಸಿ ಪರವಾಗಿ ಸುಮಾರು ಹತ್ತು ವರ್ಷದ ಹಿಂದೆ ಅಂದರೆ ೧೯೮೨-೮೩ ರ ಟೈಮಿನಲ್ಲಿ ವಕಾಲತ್ತು ವಹಿಸಿ, ಕೊಲೆ ಕೇಸಿಂದ ಬಿಡುಗಡೆ ಮಾಡಿಸಿದ್ದರು ಜೇಠಮಲಾನಿ. ಆದರೆ ಆಗ ದಾವೂದನ ನೇರ ಸಂಪರ್ಕ ಬಂದಿರಲಿಲ್ಲ. ಬೇರೆ ಯಾರೋ ಬಂದು ಕೇಸ್ ವಹಿಸಿ ಹೋಗಿದ್ದರು. ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಜೇಠಮಲಾನಿ ಕೇಸ್ ಗೆದ್ದು ಕೊಟ್ಟಿದ್ದರು. ಅದೇ ಆಧಾರದ ಮೇಲೆ ಈಗ ದಾವೂದ್ ಫೋನ್ ಮಾಡಿರಬೇಕು ಅಂತ ಅಂದುಕೊಂಡರು ಜೇಠಮಲಾನಿ. [ನೂರಾರು ಜನರ ಎದುರೇ, ಅದರಲ್ಲೂ ನ್ಯಾಯಾಧೀಶರೇ ಮುಂದೇ ಕೊಲೆ ಮಾಡಿದ್ದ ಡೇವಿಡ್ ಪರದೇಸಿಯನ್ನು ರಾಮ್ ಜೇಠಮಲಾನಿ ಖುಲಾಸೆ ಮಾಡಿಸಿದ್ದೇ ಒಂದು ಐತಿಹಾಸಿಕ ಕೋರ್ಟ್ ಕೇಸ್ ಮತ್ತು ತೀರ್ಪು. ಆರೋಪಿಗೆ ತಪ್ಪು ಒಪ್ಪಿಕೋ ಅಂದು ಬಿಟ್ಟರು ಜೇಠಮಲಾನಿ! ನಂತರ ಆರೋಪಿ ಕೊಲೆ ಮಾಡಲು ಏನು ಕಾರಣ ಅಂತ ಮನ ಕಲಕುವ ಕಹಾನಿ ಹೆಣೆದು, ಸಹಾನುಭೂತಿ ಮೂಡಿಸಿ ನಿರ್ದೋಷಿ ಅಂತ ಬಿಡಿಸಿಕೊಂಡು ಬಂದಿದ್ದರು. ಕಾನೂನಿನ ವಿದ್ಯಾರ್ಥಿಗಳು ಓದಲೇ ಬೇಕಾದ ಕೇಸಂತೆ ಅದು.]

ಹೀಗೆ ಲಂಡನ್ನಿನಲ್ಲಿ ಕುಳಿತು ದಾವೂದ್ ಇಬ್ರಾಹಿಮ್ಮನ ಷರತ್ತುಗಳನ್ನು ಆಲಿಸಿದ ರಾಮ್ ಜೇಠಮಲಾನಿ ಮುಂದೇನು ಮಾಡಿದರು?

ತಕ್ಷಣ ಮುಂಬೈನಲ್ಲಿದ್ದ ತಮ್ಮ ಮಗ ಮಹೇಶ ಜೇಠಮಲಾನಿಗೆ ಫೋನ್ ಮಾಡಿದರು. ವಿಷಯ ಎಲ್ಲ ತಿಳಿಸಿ, ಮುಂದೆ ಏನು ಮಾಡಬೇಕು ಅನ್ನುವ ಸೂಚನೆ ಕೊಟ್ಟರು. ದೊಡ್ಡ ವಕೀಲರಾಗಿ ಹೆಸರು ಮಾಡಿದ್ದ ಅವರ ಮಗ ಮಹೇಶ ಆ ಕಾಲದ ಮುಖ್ಯಮಂತ್ರಿ ಶರದ್ ಪವಾರ್, ಪೋಲೀಸ್ ಕಮಿಷನರ್ ಅಮರ್ಜಿತ್ ಸಾಮ್ರಾ, ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ಮಹೇಶ ನಾರಾಯಣ ಸಿಂಗ ಅವರೆಲ್ಲ ಕೂಡಿ ಕರೆದಿದ್ದ ಸಭೆಗೆ ಹೋದರು. ದಾವೂದ್ ಇಬ್ರಾಹಿಂ ವಿಧಿಸಿದ್ದ ಷರತ್ತುಗಳನ್ನು ವಿವರಿಸಿದರು. ಸರಕಾರ ವಿಚಾರಿಸಿ, ಪರಾಮರ್ಶಿಸಿ ತಿಳಿಸುತ್ತೇನೆ ಅಂತ ಹೇಳಿತು. "ದಾವೂದ್ ಇಬ್ರಾಹಿಮ್ಮನ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಷರತ್ತು ಗಿರತ್ತು ಇಲ್ಲದೆ ಬಂದು ಶರಣಾದರೆ ಸರಿಯಾಗಿ, ನ್ಯಾಯಬದ್ಧವಾಗಿ ವಿಚಾರಣೆ ನಡೆಸಿ, ಮೊಕದ್ದಮೆ ದಾಖಲಿಸಿ, ಎಲ್ಲ ನಾಗರಿಕರಿಗೆ ಇರುವ ಎಲ್ಲ ಹಕ್ಕು, ಸೌಲಭ್ಯ ಒದಗಿಸಲಾಗುವದು. ಯಾವದೇ ರೀತಿಯ ವಿಶೇಷ ಸವಲತ್ತು, ರಿಯಾಯತಿ ಕೊಡಲು ಸಾಧ್ಯವಿಲ್ಲ," ಅಂತ ಸರ್ಕಾರ ಹೇಳಿಬಿಟ್ಟಿತು. ಮಹೇಶ ಜೇಠಮಲಾನಿ ಇದನ್ನು ಲಂಡನ್ನಿನಲ್ಲಿದ್ದ ತಮ್ಮ ತಂದೆಯವರಿಗೆ ತಿಳಿಸಿದರು.

ಸ್ವಲ್ಪ ದಿವಸಗಳ ನಂತರ ದಾವೂದ್ ಮತ್ತೆ ಫೋನ್ ಮಾಡಿದ್ದ. ರಾಮ್ ಜೇಠಮಲಾನಿ ಆಗಿದ್ದ ಬೆಳವಣಿಗೆಗಳ ಬಗ್ಗೆ ವಿಷಯ ತಿಳಿಸಿದರು. ಅವರಿಗೆ ಮತ್ತೊಮ್ಮೆ ಶುಕ್ರಿಯಾ ಹೇಳಿದ ದಾವೂದನಿಂದ ಮತ್ತೊಮ್ಮೆ ಈ ತರಹದ 'ಬಂದು ಸರೆಂಡರ್ ಆಗ್ತೀನಿ' ಅನ್ನೋ ಧಾಟಿಯ ಫೋನ್ ಯಾರಿಗೂ ಬಂದಿಲ್ಲ. ಅದು ಒನ್ ಟೈಮ್ ಆಫರ್ ಆಗಿತ್ತು ಅನಿಸುತ್ತದೆ. ನಂತರ ಬಂದಿದ್ದೆಲ್ಲ ಕೇವಲ ಹಫ್ತಾ ವಸೂಲಿ, ಧಮಕಿ, ಬೆದರಿಕೆ, ಒತ್ತಡ ಹಾಕಲು ಬಂದ extortion ಟೈಪಿನ ಕರೆಗಳೇ.

ಮುಂಬೈ ಸರಣಿ ಸ್ಪೋಟಗಳು ಆಗಿದ್ದು ಮಾರ್ಚ್ ೧೯೯೩. ದಾವೂದ್ ಫೋನ್ ಮಾಡಿದ್ದು ಆಗಸ್ಟ್ ೧೯೯೩ ರಲ್ಲಿ. ಸರಣಿ ಸ್ಪೋಟದ ವರೆಗೆ ದುಬೈನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ ದಾವೂದ್, ಯಾವಾಗ ಸಂಚಿನ ಹೂರಣವೆಲ್ಲ ಹೊರಬಂದು, ತನ್ನ ಹೆಸರು ಬಂತೋ ಆವಾಗ ಪಾಕಿಸ್ತಾನಕ್ಕೆ ಓಡಿಬಿಟ್ಟ. ಅಥವಾ ಹಾಗೆ ಸುದ್ದಿಯಾಯಿತು. ಪಾಕಿಸ್ತಾನದ ISI ಬೇಹುಗಾರಿಕೆ ಸಂಸ್ಥೆ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದೆ ಅಂತ ಸುದ್ದಿಯಾಯಿತು. ನಂತರದ ಸುದ್ದಿ ಅಂದರೆ - ದಾವೂದ್ ಪಾಕಿಸ್ತಾನದಲ್ಲಿ ಅಕ್ಷರಶ ISI ಬಂಧನದಲ್ಲಿ ಇದ್ದಾನೆ. ಅವನನ್ನು ISI ಎಂದೂ ಬಿಟ್ಟು ಕೊಡಲಾರದು ಅಂತೆಲ್ಲ ಸುದ್ದಿ. ಹಾಗಿದ್ದರೆ ತಾನಾಗಿಯೇ ಬಂದು ಶರಣಾಗುವ ಪ್ರಸ್ತಾವ ದಾವೂದ್ ಹೇಗೆ ಮಾಡಿದ್ದ? ಅಂದರೆ ಅವನಿಗೆ ಆವಾಗ ಅಷ್ಟು ಸ್ವಾತಂತ್ರ ಇತ್ತೇ? ಇತ್ತು ಅಂತಾದರೆ ಅವನು ISI ಹಿಡಿತದಲ್ಲಿ ಇರಲಿಲ್ಲವೇ? ಅಥವಾ ಬೇರೆಯೇ ಏನೋ ಪ್ಲಾನ್ ಹಾಕಿದ್ದನೋ? ಯಾರಿಗೂ ಸರಿ ಮಾಹಿತಿ ಇಲ್ಲ.

ಒಂದು ವೇಳೆ ದಾವೂದ್ ಬಂದು ಶರಣಾಗಿದ್ದರೆ  ಜೇಠಮಲಾನಿ ಅವನ ವಕೀಲರಾಗುತ್ತಿದ್ದರೇ? ಶುದ್ಧ ವಕೀಲರಾದ ಅವರಿಗೆ ಯಾರೂ ವರ್ಜ್ಯರಲ್ಲ. ಇಂದಿರಾ ಗಾಂಧಿ ಹತ್ಯೆಯ ಸಂಚಿನಲ್ಲಿ  ಸುಖಾ ಸುಮ್ಮನೆ ಫಿಟ್ ಆಗಿದ್ದ, ಏನೂ ಸಂಬಂಧವೇ ಇರದಿದ್ದ ಜನರ ಪರವಾಗಿ ವಕೀಲರಾಗಿ ಇಬ್ಬರಲ್ಲಿ ಒಬ್ಬನನ್ನು ಸುಪ್ರೀಂ ಕೋರ್ಟಿನಲ್ಲಿ ಇಲ್ಲದ ಬಡಿದಾಟ ಮಾಡಿ ನಿರ್ದೋಷಿ ಅಂತ ಸಾಬೀತು ಮಾಡಿದವರು ಅವರು. ಹಾಗಾಗಿ ದಾವೂದ್ ವಕಾಲತ್ ನಾಮಾ ಕೊಟ್ಟಿದ್ದರೆ ಅವನ ವಕೀಲರೂ ಆಗುತ್ತಿದ್ದರೋ ಏನೋ. ಅದರ ಬಗ್ಗೆ ಅವರು ಹೆಚ್ಚೇನೂ ಹೇಳುವದಿಲ್ಲ. ಊಹಾಪೋಹಗಳಿಗೆ ಹೆಚ್ಚಿನ ಸ್ಕೋಪ್ ಕೊಡುವದಿಲ್ಲ ಅವರು. ಎಲ್ಲದಕ್ಕೂ may be ಅನ್ನುವಂತಹ ಉತ್ತರ.

ಮುಂಬೈ ಸ್ಪೋಟಗಳ ನಂತರ ಒಮ್ಮೆ ದಾವೂದ್ ಫೋನ್ ಮಾಡಿ, ತಾನೇ ಸರೆಂಡರ್ ಆಗುವ ಆಫರ್ ಕೊಟ್ಟಿದ್ದ ಅಂತ ಅಲ್ಲಿ ಇಲ್ಲಿ ಸ್ವಲ್ಪ ಓದಿ ತಿಳಿದಿತ್ತು. ಪೂರ್ತಿ ಮಾಹಿತಿ ತಿಳಿದಿರಲಿಲ್ಲ. ನಳಿನಿ ಗೇರಾ ಬರೆದ ರಾಮ್  ಜೇಠ್ಮಲಾನಿ ಅವರ ಅಧಿಕೃತ ಆತ್ಮಚರಿತೆ  ಓದುತ್ತಿದ್ದಾಗ ಪೂರ್ತಿ ಮಾಹಿತಿ ಸಿಕ್ಕಿತು. ತುಂಬ ಸ್ವಾರಸ್ಯಕರ ಪುಸ್ತಕ.  ಜೇಠ್ಮಲಾನಿ ಅವರ ಬಗ್ಗೆ ಹಿಂದೆಲ್ಲೂ ಬಂದಿರದಿದ್ದ ಹಲವಾರು ಸ್ವಾರಸ್ಯಕರ, ರೋಚಕ ವಿವರಗಳಿವೆ.

ಇದೇ ಪುಸ್ತಕದಿಂದ ಆಯ್ದ ಮತ್ತೊಂದು ಬ್ಲಾಗ್ ಪೋಸ್ಟ್ ಇಲ್ಲಿದೆ.


Tuesday, July 08, 2014

ಧಾರವಾಡದ ಮಹಿಷಿ ರೋಡಿನ 'ವಿಠಲ ಮಹಿಷಿ' ಎಂಬ ಹಿರಿಯ ಮಿತ್ರನ ನೆನಪಲ್ಲಿ....

"ಏ ವಿಠಲ್! ಸಾವಕಾಶೋ! ನಂದು ಹೊಸಾ ಅಟ್ಲಾಸ್ ಅದನೋ!" ಅಂತ ನಾನು, ಎಲ್ಲಿ ಈ ವಿಠಲ ಎಂಬ ಪುಣ್ಯಾತ್ಮ ನನ್ನ ಹೊಸ ಅಟ್ಲಾಸ್ ಹರಿದು, ನಾಮಾವಶೇಷ ಮಾಡಿ ಬಿಟ್ಟಾನು ಅಂತ ಆತಂಕದಿಂದ ಹೇಳುತ್ತಿದ್ದರೆ, ವಿಠಲ ಎಂಬ ಹಿರಿಯ ದೋಸ್ತ, "ಏ, ಇರಪಾ ಇವನ. ಜಾಂಬಿಯಾ ದೇಶ ಎಲ್ಲದ ಅಂತ ಹುಡುಕೋಣ. ಓಕೆ? ನಮ್ಮಕ್ಕಾ ಅಲ್ಲೇ ಇದ್ದಾಳೋ," ಅಂತ ಒಂದು ಕಡೆ ವಿಶ್ವದ ಅಟ್ಲಾಸದಲ್ಲಿ ಜಾಂಬಿಯಾ ದೇಶವನ್ನು ಹುಡುಕುತ್ತ, ಇನ್ನೊಂದು ಕಡೆ ಆ ದೇಶದಲ್ಲಿದ್ದ ಅವನ ಅಕ್ಕನ ಬಗ್ಗೆ ನಮ್ಮ ಅಮ್ಮ ಕೇಳುತ್ತಿದ್ದ ಪ್ರಶ್ನೆಗಳಿಗೆ ಅನ್ಯಮನಸ್ಕನಾಗಿ ಏನೋ ಒಂದು ಉತ್ತರ ಕೊಡುತ್ತ, "ಜಾಸ್ತಿ ಏನೂ ಗೊತ್ತಿಲ್ಲ ಮಾರಾಳಾ ಅವರ ಸುದ್ದಿ. ಯಾವಾಗೋ ಒಂದು ಐದು ವರ್ಷಕ್ಕ ಒಮ್ಮೆ ಊರಿಗೆ ಬರತಾರ. ಮಸ್ತಾಗಿ ಒಂದಿಷ್ಟು ವಸ್ತ್ರಾ ಗಿಸ್ತ್ರಾ ಕೊಟ್ಟು ಹೋಗ್ತಾರ ನೋಡವಾ. ಆರಾಮ ಇದ್ದಾಳ ಅಂತ ಅನ್ನಸ್ತದ. ಮಕ್ಕಳನ್ನ ಇಲ್ಲೇ ಊಟಿ ಒಳಗ ಸಾಲಿಗೆ ಹಾಕ್ಯಾಳ," ಅಂತೇನೋ ಹೇಳುತ್ತ ಮತ್ತೆ "ಯಾವ ಮೂಲ್ಯಾಗ ಅದನೋ ಈ ಸೂಡ್ಲಿ ಜಾಂಬಿಯಾ ಅನ್ನೋ ದೇಶ?" ಅಂತ ಹೇಳುತ್ತ, ಕಣ್ಣಿನ ಹತ್ತಿರ ಅಟ್ಲಾಸ್ ತೆಗೆದುಕೊಂಡು ಹೋಗಿ, ಹೇಗೋ ಜಾಂಬಿಯಾ ಕಂಡು ಹಿಡಿದು, "ಹಾಂ! ಈಗ ಸಿಕ್ಕತು ನೋಡು. ಇದೇ ಜಾಂಬಿಯಾ. ಇಲ್ಲೇ ಇದ್ದಾಳ ನಮ್ಮಕ್ಕ. ಗೊತ್ತೇನ?" ಅಂತ ಅಂದು ಹೇಳಿದ್ದ ವಿಠಲ ಎಂಬ ಹಿರಿಯ ದೋಸ್ತ ಸರಿಯಾಗಿ ಹತ್ತೊಂಬತ್ತು ವರ್ಷಗಳ ನಂತರ ಆಫ್ರಿಕಾದ ಮತ್ತೊಂದು ದೇಶ ಟಾಂಜಾನಿಯಾಕ್ಕೆ ಹೋಗಲೂ ಸಹ ಸಹಾಯ ಮಾಡುತ್ತಾನೆ ಅಂತ ಅವತ್ತು ಕನಸು ಮನಸಲ್ಲೂ ನೆನೆಸಿರಲಿಲ್ಲ.

೧೯೭೬-೭೭ ರ ಸಮಯ. ನಮಗೆ ನಾಕೈದು ವರ್ಷ ಅಷ್ಟೇ. ಇನ್ನೂ ಬಾಲವಾಡಿ. ಸರಿಯಾಗಿ ಓದಲು, ಬರೆಯಲು ಏನೂ ಬರುತ್ತಿರಲಿಲ್ಲ. ಆದರೆ ಪುಸ್ತಕ ಪ್ರೇಮ ಆಗಲೇ ಶುರುಗಾಗಿತ್ತು. ನೋಟ್ ಪುಸ್ತಕಗಳಲ್ಲಿ 'ಜೀರಕ್ಕೆ ಜೀರೋ' ಅಂತ ರಾಗವಾಗಿ ಹಾಡುತ್ತ, ಶೂನ್ಯದ ಮೇಲೆ ಶೂನ್ಯ ಗೀಚಿ, ಗೀಚಿ, ದಿನಕ್ಕೆರಡರಂತೆ ನೋಟ್ ಪುಸ್ತಕ ತುಂಬಿಸಿ ತುಂಬಿಸಿ, ಒಗೆದು ಒಗೆದು, "ಈ ಮಳ್ಳ ಮಾಣಿಗೆ ದಿನಕ್ಕೆರೆಡು ನೋಟ್ ಬುಕ್ ತಂದು ತಂದು ಕೊಟ್ಟು ಹೇಗೆ ಪೂರೈಸುವದು?" ಅನ್ನುವ ಸಣ್ಣ ಚಿಂತೆ ಮನೆಯವರಿಗೆ ಶುರುವಾಗಿತ್ತು. ಅದೇ ಹೊತ್ತಿನಲ್ಲಿ ಒಮ್ಮೆ ಧಾರವಾಡದ ನಮ್ಮ ಪ್ರೀತಿಯ 'ಭಾರತ ಬುಕ್ ಡಿಪೊ' ಅಂಗಡಿಗೆ ಭೆಟ್ಟಿ ಕೊಟ್ಟಾಗ ಕಣ್ಣು ಬಿದ್ದಿದ್ದು ರಂಗು ರಂಗಾದ 'ಬ್ರಿಜಬಾಸಿ ಅಟ್ಲಾಸ್' ಎಂಬ ಜಗತ್ತಿನ ಅಟ್ಲಾಸದ ಮೇಲೆ. ಕಣ್ಣು ಬಿದ್ದು, ಬೇಕು ಅಂತ ತಲೆಗೆ ಬಂದಾಕ್ಷಣ ಬೇಕೇ ಬೇಕು. ದೂಸಾರಾ ಮಾತೇ ಗೊತ್ತಿಲ್ಲ. ಕೊಡಿಸಲಿಲ್ಲ ಅಂದರೆ ಶರಂಪರ ಹಠ. ದೇಶ, ಕಾಲ, ನಿಮಿತ್ತ ಮೀರಿದ ಹಠ. ಮತ್ತೆ ಪುಸ್ತಕ ಕೊಡಿಸಲಿಕ್ಕೆ ಮನೆ ಮಂದಿ ಯಾವಾಗಲೂ ಸ್ವಲ್ಪ ಧಾರಾಳವೇ. ಹಾಗಾಗಿ ಅಮ್ಮ ಕೂಡ ಜಾಸ್ತಿ ಚೌಕಾಶಿ ಮಾಡದೇ ಆ ಅಟ್ಲಾಸ್ ಕೊಡಿಸಿಕೊಂಡು ಬಂದಿದ್ದಳು. ಭಾರತ ಬುಕ್ ಡಿಪೋದ ಮಾಲೀಕ ಹುದ್ದಾರರು ಆತ್ಮೀಯತೆಯಿಂದ ಎಲ್ಲ ಡಿಸ್ಕೌಂಟ್ ಹಾಕಿ ಕೊಟ್ಟ ನಂತರವೂ ಆ ಕಾಲದಲ್ಲೇ ಅದಕ್ಕೆ ಐದು ರೂಪಾಯಿ! ದೊಡ್ಡ ಮೊತ್ತ. ಅಟ್ಲಾಸಿಗೆ ಬ್ರೌನ್ ಪೇಪರ್ ಕವರ್ ಹಾಕಿಸಿಕೊಂಡು, ಬಹಳ ಜತನದಿಂದ ಕಾದಿಟ್ಟುಕೊಂಡು, ಒಂದೊಂದೇ ಅಕ್ಷರ ಕೂಡಿಸಿ ಕೂಡಿಸಿ, ಓದಿ, ಒಂದೊಂದೇ ದೇಶದ ಹೆಸರು ಕಲಿಯುತ್ತ ಇದ್ದಾಗ ಈ ವಿಠಲನೆಂಬ ಆಸಾಮಿ  ಮನೆಗೆ ಬಂದವ ಒಮ್ಮೆಲೇ ಅಟ್ಲಾಸ್ ಇ(ಕ)ಸಿದುಕೊಂಡು, ಜಾಂಬ್ಯಾ ಅನ್ನೋ ದೇಶ ಹುಡುಕಲು ಹೋಗಿಬಿಟ್ಟಿದ್ದ. ಕೇವಲ 'ಟಿಬೇಟಿ ಶಂಬ್ಯಾ' ಎನ್ನುವ ವಿಚಿತ್ರ ಹೆಸರಿನ, ಪಾರಿವಾಳ ಸಾಕಿದ್ದ, ಅಡ್ನಾಡಿ ಟಿಬೇಟಿ ಹುಡುಗನನ್ನು ಧಾರವಾಡದ ಮಾಳಮಡ್ಡಿಯ ನೆರೆಹೊರೆಯಲ್ಲಿ ನೋಡಿದ್ದ ನಮಗೆ ಆವತ್ತು ಈ ಜಾಂಬ್ಯಾ (ಜಾಂಬಿಯಾ) ಅನ್ನುವದು ಆ ಟಿಬೇಟಿ ಶಂಬ್ಯಾನ ಅಣ್ಣನೋ ತಮ್ಮನೋ ಅಂತ ಅನ್ನಿಸಿತ್ತೋ ಏನೋ ನೆನಪಿಲ್ಲ.

ಕೆಲ ತಿಂಗಳ ಹಿಂದೆ ಧಾರವಾಡದ ಈ ವಿಠಲ ಎಂಬ ಹಿರಿಯ ಮಿತ್ರ ತನ್ನ ಅರವತ್ತೂ ಚಿಲ್ಲರೆ ವಯಸ್ಸಿನಲ್ಲಿ ತೀರಿ ಹೋದ ಅಂದಾಕ್ಷಣ ಈ ಘಟನೆ ನೆನಪಿಗೆ ಬಂತು. ವಿಠಲನ ಬಗ್ಗೆ ನೆನಪಿರುವ ಅತೀ ಹಳೆಯ ಘಟನೆ ಅಂದರೇ ಅದೇ ಇರಬೇಕು.

ವಿಠಲ ಉರ್ಫ್ ಶ್ರೀರಾಮ. ಅವನ ಅಫೀಷಿಯಲ್ ಹೆಸರು ಶ್ರೀರಾಮನಂತೆ. ಅವನಿಗೆ ಯಾರೂ ಶ್ರೀರಾಮ ಅಂದಿದ್ದು ಕೇಳಿಲ್ಲ ಬಿಡಿ. ಎಲ್ಲರಿಗೂ ಅವನು ವಿಠಲನೇ. ಅಂತಹ ವಿಠಲ ಇಂದು ಇಲ್ಲವಾಗಿ 'ಎಲ್ಲಿ ಮರೆಯಾದೇ? ವಿಠಲ ಏಕೇ ದೂರಾದೇ? ವಿಠಲ! ವಿಠಲ!' ಅಂತ 'ಭಕ್ತ ಕುಂಬಾರ' ಚಿತ್ರದ ಹಾಡನ್ನು ಧಾರವಾಡದ ಶೈಲಿಯಲ್ಲಿ ಲಬೋ ಲಬೋ ಹೊಯ್ಕೊಂಡು ಹಾಡಿದರೂ ಹಿಂತಿರುಗಿ ಬರದ ಲೋಕಕ್ಕೆ ಹೋಗಿಬಿಟ್ಟಿದ್ದಾನೆ ಪ್ರೀತಿಯ ಗೆಳೆಯ ವಿಠಲ .

ವಿಠಲ್ ಮಹಿಷಿ ಉರ್ಫ್ ಶ್ರೀರಾಮ ಮಹಿಷಿ. ದೊಡ್ಡ ಮನೆತನದ ಹುಡುಗ. ಖ್ಯಾತ ಮಹಿಷಿ ಮನೆತನ. ಧಾರವಾಡದ ಮಾಳಮಡ್ಡಿಯಲ್ಲಿದ್ದ ಎಮ್ಮೆಕೆರೆಯನ್ನು ನ್ಯಾಷನಲ್ ಹೈವೇ - ೪ ಕ್ಕೆ ಸೇರಿಸುವ ಒಂದು ದೊಡ್ಡ ರಸ್ತೆಗೆ 'ಮಹಿಷಿ ರಸ್ತೆ' ಅಂತೇ ಹೆಸರು. ಅದೇ ಕುಟುಂಬದ ಏಕೈಕ ಕುಲದೀಪಕನೇ ಆಗಿದ್ದ ಈ ವಿಠಲ ಮಹಿಷಿ. ಏಕೈಕ ಕುಲದೀಪಕ ಏಕೆಂದರೆ ಒಬ್ಬನೇ ಗಂಡು ಮಗ. ಎಂಟೋ ಒಂಬತ್ತೋ ಅಕ್ಕಂದಿರ ನಂತರ ಹುಟ್ಟಿದ ಒಬ್ಬ ಮುದ್ದಿನ ಮಗ. ಮಹಿಷಿ ಅನ್ನುವ ಹೆಸರು ರಸ್ತೆಗೆ ಬರಲಿಕ್ಕೆ ಕಾರಣ ಇವನ ಅಜ್ಜನೋ, ಅಪ್ಪನೋ ಅಂತ ನೆನಪು. ಅವರೆಲ್ಲ ದೊಡ್ಡ ಡಾಕ್ಟರ್ ಆಗಿ ಹೆಸರು ಮಾಡಿದ್ದರು.

"ಮಾಜಿ ರಾಜಕಾರಣಿ, ಮಂತ್ರಿ  ಸರೋಜಿನಿ ಮಹಿಷಿ ಅವರ ಪೈಕಿ ಏನ್ರೀ?" ಅಂತ ಕೇಳಿದರೆ, "ಏ! ಅವರು ಬ್ಯಾರೇರೀ. ಅವರು ಶಿರಹಟ್ಟಿ ಮಹಿಷಿ. ನಾವು ಧಾರವಾಡ ಮಹಿಷಿ," ಅಂತ ವಿಠಲನ ವಿವರಣೆ ಬೇರೆ. ಧಾರವಾಡದವರೇ ಆದರೂ ಬೇರೆ ಬೇರೆ ಮಹಿಷಿ ಫ್ಯಾಮಿಲಿ ಅಂತೆ.

ಈ ವಿಠಲನ ಒಬ್ಬ ಅಕ್ಕ ನಮ್ಮ ಅಮ್ಮನ ಶಾಲೆ ಕ್ಲಾಸ್ಮೇಟ್. ಆತ್ಮೀಯ ಗೆಳತಿ. ಹಾಗಾಗಿ ಉಳಿದ ಅಕ್ಕಂದಿರೆಲ್ಲ ಅಮ್ಮನ ಗೆಳತಿಯರೇ. ಅಂತಹ ಗೆಳತಿಯರ ತಮ್ಮ, ಅಷ್ಟೊಂದು ಅಕ್ಕಂದಿರ ನಡುವೆ 'ಅಳ್ಳಿಗುಂಡಿ'ಯಂತಹ ತಮ್ಮ ಅವನೂ ಆಪ್ತನೇ ನಮ್ಮ ಕುಟುಂಬಕ್ಕೆ. ಮದುವೆಯಾಗಿ ಒಂದಿಬ್ಬರು ಅಕ್ಕಂದಿರು, ಕೆಲಸಕ್ಕೆ ಅಂತ ಉಳಿದ ಅವಿವಾಹಿತ ಅಕ್ಕಂದಿರು ಎಲ್ಲ ಬೇರೆ ಬೇರೆ ಊರು, ದೇಶ ಸೇರಿಕೊಂಡು ಧಾರವಾಡದಲ್ಲಿ ಉಳಿದವರು ಅಂದರೆ ವಿಠಲ ಮತ್ತೆ ಒಂದು ಮೂರು, ನಾಕು ಜನ ಅವಿವಾಹಿತ ಅಕ್ಕಂದಿರು, ವೃದ್ಧ ತಾಯಿ. ತಂದೆ ಬಹಳ ಮೊದಲೇ ತೀರಿ ಹೋಗಿದ್ದರು ಅಂತ ಕೇಳಿದ್ದು.

ಮಹಿಷಿ ರೋಡಿನ ರಾಯಲ್ ಕಾಂಪೌಂಡ್ ಅಂದರೆ ಅದೇ ಮಹಿಷಿ ಕಾಂಪೌಂಡ್. ಸುಮಾರು ಮೂರ್ನಾಕು ಎಕರೆಗಟ್ಟಲೆ ಇದ್ದ ದೊಡ್ಡ ಜಾಗ. ಹಲವಾರು ತರಹದ ಗಿಡ ಮರಗಳು. ಹಚ್ಚ ಹಸಿರು. ದೆವ್ವದಂತಹ ದೊಡ್ಡ ಬಂಗಲೆ. ಒಳ ಹೊಕ್ಕಿ ತಿರುಗಾಡಲು ಶುರುಮಾಡಿದರೆ ಕಳೆದು ಹೋಗುವಷ್ಟು ದೊಡ್ಡ ಬಂಗಲೆ. ಅಮ್ಮನ ಗೆಳತಿ, ವಿಠಲನ ಅಕ್ಕ ಮುಂಬೈದಲ್ಲಿದ್ದಳು. ಆಕೆ ರಜೆಗೆ ಧಾರವಾಡಕ್ಕೆ ಬಂದಾಗೊಮ್ಮೆ ಮಹಿಷಿ ಕಾಂಪೌಂಡಿಗೆ ಅಮ್ಮನ ಜೊತೆ ಒಂದು ವಿಸಿಟ್ ಗ್ಯಾರಂಟಿ. ಅಲ್ಲಿದ್ದ ದೊಡ್ಡ ಆಕರ್ಷಣೆ ಎಂದರೆ ಒಂದು ಹಳೇ ಕಾರು. ೧೯೩೦ ರ ಕಾಲದ ಕಾರನ್ನು ಹಾಗೇ ಸುಮ್ಮನೆ ಮನೆ ಮುಂದೆ ಪೋರ್ಟಿಕೋದಲ್ಲಿ ನಿಲ್ಲಿಸಿಕೊಂಡಿದ್ದರು. ನಮ್ಮಂತ ಚಿಕ್ಕ ಹುಡುಗರಿಗೆ ಅದನ್ನು ಹತ್ತಿ, ಅದರ ಸ್ಟಿಯರಿಂಗ್ ತಿರುಗಿಸುವದೇ ಒಂದು ದಿವ್ಯಾನುಭವ. ಹ್ಯಾಂಗೆ ಕಾರ್ 'ಹೊಡಿಯಬೇಕು' ಅಂತ ಉದ್ರಿ ಉಪದೇಶ ಕೊಡಲು ಅಲ್ಲೇ ಸಿಗುತ್ತಿದ್ದ ಹಿರಿಯ ಮಿತ್ರ ಇದೇ ವಿಠಲ.

ವಿಠಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೆ ದೊಡ್ಡವ. ಆದರೆ ಬಹಳ ದಿಲ್ದಾರ್ ಆದಮೀ. ಮಕ್ಕಳ ಜೊತೆ ತಾನೂ ಮಕ್ಕಳೇ ಆಗಿ, ಅವರಕಿಂತ ಒಂದು ಕೈ ಮೇಲೆಯೇ ಆಗಿ, ಜಾಸ್ತಿಯೇ ಗದ್ದಲ ಮಾಡಿ, "ವಿಠಲ್! ಏನಿದು ನಿಂದು ಗದ್ದಲಾ? ಸಣ್ಣು ಹುಡುಗೂರ ಜೋಡಿ ಕೂಡಿ ನೀನು ಸಣ್ಣ ಹುಡುಗೂರ ಗತೆ ದಾಂಧಲೆ ಹಾಕ್ತಿಯಲ್ಲಪಾ?" ಅಂತ ಅಕ್ಕಂದಿರು, ಅವನ ತಾಯಿ ಗದರಿಸಿದರೆ ನಮ್ಮೆಲ್ಲ ಚಿಕ್ಕ ಮಕ್ಕಳ ಪರವಾಗಿ ವಕಾಲತ್ತು ಮಾಡಿ, ಮಂಗ್ಯಾತನ ಮುಂದುವರಿಸಲು ಅನುಕೂಲ ಮಾಡಿಕೊಡುತ್ತಿದ್ದ ಹಿರಿಯ ಮಿತ್ರ ವಿಠಲ.

ವಿಠಲ್ ಫಾರ್ಮಸಿ ಡಿಪ್ಲೋಮಾ ಮಾಡಿಕೊಂಡಿದ್ದ ಅಂತ ನೆನಪು. ಆದರೆ ಮಾಡಿದ ದಂಧೆ LIC ಏಜನ್ಸಿ, ಪೋಸ್ಟಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮಾರಿದ್ದು, ಇತ್ಯಾದಿ. ಬೇಕಾದಷ್ಟು ಆಸ್ತಿ ಇತ್ತು. ಒಬ್ಬನೇ ಗಂಡು ಮಗ. ಅವಿವಾಹಿತ. ಆದರೂ ಇರಲಿ ಅಂತ ಒಂದು ಕೆಲಸ. ಆಸ್ತಿ ನುಂಗಿದ್ದ ಜನರೊಂದಿಗೆ ಕೋರ್ಟಿನಲ್ಲಿ ಬಡಿದಾಡಿ ಕೊನೆಗೂ ಕೇಸ್ ಗೆದ್ದುಕೊಂಡಿದ್ದು ಮಾಡಿದ ಇನ್ನೊಂದು ಕೆಲಸ. ಕೇಸ್ ಗೆದ್ದರೂ ಆಸ್ತಿ ನುಂಗಿ ಕೂತಿದ್ದ ಅತಿಕ್ರಮಣಕಾರರು ಜಾಗ ಖಾಲಿ ಮಾಡಿರಲಿಲ್ಲ. ಅವರನ್ನು ಹೇಗೆ ಒಕ್ಕಲೆಬ್ಬಿಸುವದು ಅನ್ನುವದೇ ವಿಠಲನ ಕೊನೆಯ ಚಿಂತೆಯಾಗಿತ್ತು.

ಮೊದಲೇ ಹೇಳಿದಂತೆ ವಿಠಲ ಅವಿವಾಹಿತ. ಆರಾಮಾಗಿ ತಿರುಗಾಡಿಕೊಂಡಿದ್ದ. ಒಂದು ವಯಸ್ಸಿನವೆರೆಗೆ ವಿವಾಹವಾಗಬೇಕು ಅಂತಿತ್ತು. ಯಾಕೋ ಕಂಕಣ ಬಲ ಕೂಡಿ ಬರಲಿಲ್ಲ. "ಏನೋ ವಿಠಲ ಎಲ್ಲೂ ಕನ್ಯಾ ಕೂಡಿ ಬರಲಿಲ್ಲೇನೋ?" ಅಂತ ಅಮ್ಮ ಕೇಳಿದರೆ, "ಇಲ್ಲ ಇಕಿನ. ಎಲ್ಲೂ ಕೂಡಿ ಬಂದಿಲ್ಲ. ಮತ್ತ ಮನ್ಯಾಗ ಯಾರೂ ಹಿರಿಯರಿಲ್ಲ ನೋಡು. ಅದಕs ಲಗ್ನ ಆಗವಲ್ಲತವಾ," ಅಂತ ವಿಠಲನ ಬ್ರಹ್ಮಚಾರಿ ರೋಧನ. ತಂದೆ ತೀರಿಹೋಗಿದ್ದರು. ಉಳಿದವರೆಲ್ಲ ಏಳೆಂಟು ಜನ ಅಕ್ಕಂದಿರು. ಅವರಲ್ಲೂ ಹೆಚ್ಚಿನ ಜನ ಅವಿವಾಹಿತರೇ. ಇದ್ದ ಒಬ್ಬ ಕಿಟ್ಟಿ ಕಾಕಾ ಎಂಬ ಚಿಕ್ಕಪ್ಪನೇ ಮಹಿಷಿ ಕುಟುಂಬದ ಹಿರಿಯ. ಅವರೋ ಇದ್ದಿದ್ದು ಮುಂಬೈನಲ್ಲಿ. ಮತ್ತೆ ಅವರೋ ಅಖಂಡ ಬ್ರಹ್ಮಚಾರಿ ಪ್ರೊಫೆಸರ್. ಹೀಗೆಲ್ಲ ಇರುವಾಗ ವಿಠಲ್ ಅವಿವಾಹಿತನಾಗಿ ಉಳಿದ್ದಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ನಮ್ಮ ಅಮ್ಮನೇ ಅವನಿಗೆ ನಮ್ಮ ಸಿರ್ಸಿ ಕಡೆಯ ನಮ್ಮ ಪೈಕಿಯದೇ ಒಂದು 'ಕೂಸನ್ನು' (ಹುಡುಗಿಯನ್ನು) ಕಟ್ಟೋಣ ಅಂತ ಸ್ವಲ್ಪ ಅಡ್ಯಾಡಿದ್ದರು. ಅವನ ನಸೀಬಲ್ಲಿ ಮದುವೆ ಇರಲಿಲ್ಲ ಅಂತ ಕಾಣುತ್ತದೆ. ಹಾಗಾಗಿ ವರ್ಕ್ ಔಟ್ ಆಗಿರಲಿಲ್ಲ.[೧೯೭೬ ರಲ್ಲಿ ಮೊತ್ತ ಮೊದಲ ಬಾರಿಗೆ ಮುಂಬೈಗೆ ಹೋದಾಗ, ವಿಠಲನ ಅಕ್ಕ, ಅಮ್ಮನ ಗೆಳತಿಯ ಮನೆಯಲ್ಲೂ ಇದ್ದು ಬಂದಿದ್ದು, ಮೊತ್ತ ಮೊದಲ ಬಾರಿಗೆ ಟೀವಿ ನೋಡಿದ್ದು ನೆನಪಿದೆ. ಆವಾಗ ಮುಂಬೈಯಲ್ಲಿ ವಿಮಾನ ಅಪಘಾತವಾಗಿ, ಅದರ ಭೀಕರ ದೃಶ್ಯಗಳನ್ನು ನೋಡಿದ್ದು ನೆನಪಿದೆ. ಮಕ್ಕಳು ಮನೆಗೆ ಬಂದರೆ ಕಿರಿಕಿರಿ ಅಂದುಕೊಂಡಿದ್ದ ಬ್ರಹ್ಮಚಾರಿ ಕಿಟ್ಟಿ ಕಾಕಾ,"ಭಾಳ ಚೊಲೋ ಹುಡುಗುರು ಅವ," ಅಂತ ಶಭಾಶಿ ಸಹಿತ ಕೊಟ್ಟಿದ್ದರು ಅನ್ನುವದೂ ಗೊತ್ತು. ಸಂಗ್ತಿಗೆ ಗದ್ದಲ ಹಾಕಲಿಕ್ಕೆ ವಿಠಲ ಇರಲಿಲ್ಲ ಅಂತ ಕಿಟ್ಟಿ ಕಾಕಾ ಬಚಾವು. ಇಲ್ಲಂದ್ರೆ ಅಷ್ಟೇ! :)]

ವಿಠಲ ಧಾರವಾಡದ ಮನೆಗೆ ಬಂದ ಅಂದರೆ ಏನೋ ಒಂದು ತರಹದ ಖುಷಿ. ನೋಡಿದರೆ ನಗು ಬರುವಂತೆ ಇದ್ದ. ಮೀಡಿಯಂ ಬಿಲ್ಡ್. ಸ್ವಲ್ಪ ಗುಂಡಗುಂಡಗೆ, ಕೆಂಪ ಕೆಂಪಗೆ ಇದ್ದ. ಸಣ್ಣ ಹೊಟ್ಟೆ. ಜಾರಿ ಜಾರಿ ಬೀಳುತ್ತಿದ್ದ ಪ್ಯಾಂಟ್. ಪದೇ ಪದೇ ಅದನ್ನು ಸೊಂಟದ ಮೇಲೆ ಎತ್ತಿಕೊಳ್ಳುತ್ತಿದ್ದ ಅವನ ಕಾರಬಾರೇ ನೋಡಲು ಮಜ.  ಕಿವಿ ಮುಚ್ಚುವ ಕೂದಲದ ಹಿಪ್ಪಿ ಕಟಿಂಗ್ ಹೇರ್ ಸ್ಟೈಲ್. ಕೊಂಚ ವಿರಳವಾದ ಕೂದಲು ಗಾಳಿಗೆ ಹಾರಿ ಹಾರಿ  'ಕ್ಯಾ ಬಾ?' ಅನ್ನುವಂತೆ ಉದ್ದುದ್ದ, ಅಡ್ಡಡ್ಡ ನಿಂತು 'ಎಲ್ಲೆ ವಿಠಲನಿಗೆ ಕರೆಂಟ್ ಶಾಕ್ ಹೊಡೆದದೋ ಏನೋ?' ಅನ್ನಿಸಿ ನಗು ಬರುತ್ತಿತ್ತು. ದಿನಪೂರ್ತಿ ಅಡಿಕೆ (ಹಾಲಡಿಕೆ) ಜಗಿದೂ ಜಗಿದೂ, ನಾಲಿಗೆ ದಪ್ಪವಾಗಿ, ಒಂದು ತರಹದ ವಿಶಿಷ್ಟ ತೊದಲುವಿಕೆ ಅವನ ಮಾತಿಗೊಂದು ರಂಗು ತಂದು ಕೊಡುತ್ತಿತ್ತು. ಆ ಮಾತುಗಳಲ್ಲಿ ವಿಠಲನ ಜೋಕುಗಳನ್ನು ಕೇಳುವದೇ ಒಂದು ಮಜಾ. ಜೋಕು ಬೇಕಾಗಿರಲೇ ಇಲ್ಲ. ಅವನು ಸಹಜ ಮಾತಾಡಿದರೂ ನಗು ಬರುತ್ತಿತ್ತು. ಮತ್ತೆ ಆ ಪುಣ್ಯಾತ್ಮ ಮನಸ್ಸು ಬಿಚ್ಚಿ, ಭಿಡೆ ಬಿಟ್ಟು ನಗುತ್ತಿದ್ದ ಪರಿ. ಗಹಗಹಿಸಿ ನಗುತ್ತಿದ್ದ ರಕ್ಕಸ ನಗೆ. ವಿಠಲ ಮನೆಗೆ ಬಂದನೆಂದರೆ ಒಂದೆರೆಡು ತಾಸು ಫುಲ್ ಮಜಾ. ಬಹಳ ಹಿಂದೆ ನಮ್ಮ ಶಾಲೆಗೇ ಹೋಗಿದ್ದ ವಿಠಲನಿಗೆ ನಮಗೆ ಮತ್ತೆ ಅವನಿಗೆ ಕಾಮನ್ ಆಗಿದ್ದ ಮಾಸ್ತರು, ಟೀಚರುಗಳನ್ನು ಕಂಡಾಪಟ್ಟೆ ಹಾಸ್ಯ ಮಾಡುವದು ಹವ್ಯಾಸ. ಮತ್ತೆ ಮಾಳಮಡ್ಡಿಯಲ್ಲಿಯೇ ಸದಾ ಇದ್ದು, ಎಲ್ಲ ವಿಷಯ ತಿಳಿದುಕೊಂಡಿರುತ್ತಿದ್ದ ಅವನಿಗೆ ನಮ್ಮ ಮಾಸ್ತರುಗಳು ಎಲ್ಲೋ ಕದ್ದು ಬೀಡಿ ಸೇದಿದ್ದು, ಎಲ್ಲೋ ಹೋಗಿ ಗಂಟಲಿಗೆ ಒಂದಿಷ್ಟು ಎಣ್ಣೆ ಸುರುವಿಕೊಂಡಿದ್ದು ಎಲ್ಲ ಗೊತ್ತಿರುತ್ತಿತ್ತು. ಅದನ್ನೆಲ್ಲ ತುಂಬ ಮಜವಾಗಿ ಹೇಳಿ ನಗಿಸಿದ್ದೇ ನಗಿಸಿದ್ದು ವಿಠಲನ ಸ್ಪೆಷಾಲಿಟಿ. 

ತುಂಬ ಸಣ್ಣವನಿದ್ದಾಗ ಜಗತ್ತಿನ ಅಟ್ಲಾಸಿನಲ್ಲಿ ಆಫ್ರಿಕಾದ ಜಾಂಬಿಯಾ ದೇಶ ತೋರಿಸಿದ್ದ ವಿಠಲ ೧೯೯೫ ರ ಸಮಯದಲ್ಲಿ ಟಾಂಜಾನಿಯಾಕ್ಕೆ ಹೋಗುವ ದಾರಿ ತೋರಿಸಿದ್ದ. ೧೯೯೫ ರಲ್ಲಿ ನನಗೆ ಪೂರ್ವ ಆಫ್ರಿಕಾದ ಟಾಂಜಾನಿಯಾಕ್ಕೆ ಒಂದು ವರ್ಷ ಕೆಲಸದ ಮೇಲೆ ಹೋಗುವ ಅವಕಾಶ ಬಂದಿತ್ತು. ಆದರೆ ಆಫ್ರಿಕಾದ ಬಗ್ಗೆ ಮಾಹಿತಿ ದುರ್ಲಭವಾಗಿತ್ತು. ಆಗೆಲ್ಲ ಇಂಟರ್ನೆಟ್ ಇಲ್ಲವೇ ಇಲ್ಲ. ನೌಕರಿ ಕೊಡಿಸಿದ್ದ ಅಹಮದಾಬಾದಿನ ಕನ್ಸಲ್ಟೆಂಟ್ ಸರಿಯಾಗಿ ಮಾಹಿತಿ ಕೊಡುತ್ತಿರಲಿಲ್ಲ. ನಮಗೆ ಗೊತ್ತಿದ್ದವರು ಯಾರಾದರೂ ಆಫ್ರಿಕಾದಲ್ಲಿ ಇದ್ದು ಬಂದಿದ್ದಾರಾ ಅಂತ ನೆನಪು ಮಾಡಿಕೊಳ್ಳುತ್ತ ಹೋದಾಗ ನೆನಪಾಗಿದ್ದು ಇದೇ ವಿಠಲನ ಇನ್ನೊಬ್ಬ ಅಕ್ಕ, ಖ್ಯಾತ ಸಾಹಿತಿ ಸುನಂದಾ ಬೆಳಗಾಂಕರ್ ಅವರು. ಅವರು ಹಲವಾರು ವರ್ಷ ಆಫ್ರಿಕಾದ ಜಾಂಬಿಯಾ, ಸೂಡಾನ್ ದೇಶಗಳಲ್ಲಿ ಇದ್ದು, ೧೯೯೫ ರ ಹೊತ್ತಿಗೆ ಬೆಂಗಳೂರಿಗೆ ವಾಪಸ್ ಬಂದು ನೆಲೆಸಿದ್ದರು. ಅವರ ಬೆಂಗಳೂರಿನ ಫೋನ್ ನಂಬರ್ ಸಂಪಾದಿಸಿಕೊಂಡು ಅಮ್ಮ ಬೆಂಗಳೂರಿಗೆ ಬಂದಿದ್ದಳು. ಸುನಂದಾ ಅವರೂ ಸಹ ಅಮ್ಮನಿಗೆ ಪರಿಚಯದವರೇ. ನಾನು ವಿದೇಶಕ್ಕೆ ಹೋಗುವ ಮುನ್ನ ಕಳಿಸಲು ಬೆಂಗಳೂರಿಗೆ ಬಂದಿದ್ದ ಅಮ್ಮ, ಫೋನ್ ಮಾಡಿ, ಸುನಂದಾ ಬೆಳಗಾಂಕರ್ ಜೊತೆ ಮಾತಾಡಿ, ಅವರಿಗೆ ನನ್ನ ಪರಿಚಯ ಮಾಡಿಕೊಟ್ಟಿದ್ದರು. ಅವರ ಮನೆಗೆ ಹೋಗಿ ಮಾತಾಡಿ, ಸಿಕ್ಕಷ್ಟು ಮಾಹಿತಿ ತೆಗೆದುಕೊಂಡು ಬರೋಣ ಅಂತ ವಿಚಾರ ಮಾಡಿದ್ದೆ. ಅದೇ ಹೊತ್ತಿನಲ್ಲಿ ಗೆಳೆಯ ವಿಠಲ ಕೂಡ ಬೆಂಗಳೂರಿನಲ್ಲಿಯೇ ಅಕ್ಕನ ಮನೆಯಲ್ಲಿಯೇ ಇರಬೇಕೇ! ತುಂಬ ಒಳ್ಳೆಯದೇ ಆಯಿತು. ಧಾರವಾಡದಲ್ಲಿ ವಿಠಲನ ಭೆಟ್ಟಿ ಆಗದೇ ಎರಡು ಮೂರು ವರ್ಷ ಆಗಿ ಹೋಗಿತ್ತು. ಹೋಗಿ ಅವನ ಜೊತೆ ಮಂಗ್ಯಾತನ ಮಾಡಿಯೂ ಬಂದಂತಾಯಿತು ಅಂತ ಹೇಳಿ ಅವನ ಅಕ್ಕ ಸುನಂದಾ ಬೆಳಗಾಂಕರ್ ಅವರನ್ನು ಭೆಟ್ಟಿ ಮಾಡಲು ಅವರ ಕನಿಂಗಹ್ಯಾಮ್ ರೋಡ್ ಮನೆಗೆ ಹೋದೆ. ಸುನಂದಾ, ಅವರ ಪತಿ ಬೆಳಗಾಂಕರ್, ಅವರ ಮಗ ಎಲ್ಲ ತುಂಬ ಪ್ರೀತಿಯಿಂದ ಕಂಡು, ಆಫ್ರಿಕಾ, ಟಾಂಜಾನಿಯಾ ಬಗ್ಗೆ ಎಲ್ಲ ಮಾಹಿತಿ ಕೊಟ್ಟು, ಮಸ್ತಾಗಿ ನಾಷ್ಟಾ ಮಾಡಿಸಿದ್ದರು. ಅದಕ್ಕೆ ಚಿರಋಣಿ. ಆ ಮಾಹಿತಿಯೆಲ್ಲ ಟಾಂಜಾನಿಯಾಕ್ಕೆ ಹೋಗಲು, ಹೋಗಿ ಸೆಟಲ್ ಆಗಲು ಎಲ್ಲ ತುಂಬಾ ಉಪಯೋಗವಾಯಿತು. ನಮ್ಮದೆಲ್ಲ ಮಾತುಕತೆ ನಡೆಯುತ್ತಿದ್ದಾಗ ಮಂಗ್ಯಾತನ ಮಾಡಲು ಅವಕಾಶ ಸಿಗದೇ ಚಡಪಡಿಸುತ್ತ ಕುಳಿತಿದ್ದ ವಿಠಲ! ಯಾವಾಗ ಬಂದ ಕೆಲಸ ಮುಗಿದು, ನಾನು ಮತ್ತು ವಿಠಲ ಹೊರಗೆ ಬಂದು, ಚಹಾ ಕುಡಿಯುತ್ತ ಮಂಗ್ಯಾತನ ಮಾಡಬಹುದೋ, ಹರಟೆ ಹೊಡೆಯಬಹುದೋ ಅಂತ ನಾನೂ ಕಾತುರದಲ್ಲೇ ಇದ್ದೆ ಅನ್ನಿ. ನಮ್ಮ ಟಿಪಿಕಲ್ ಧಾರವಾಡಿ ಮಂಗ್ಯಾತನ ಮತ್ತು ಹರಟೆ!

ಬಂದ ಕೆಲಸ ಮುಗಿಯಿತು. ಸುನಂದಾ ಬೆಳಗಾಂಕರ್ ಕುಟುಂಬಕ್ಕೆ ಒಂದು ದೊಡ್ಡ ಧನ್ಯವಾದ ಅರ್ಪಿಸಿ ಹೊರಡಲು ತಯಾರಾದೆ. "ಹೆಗಡೆಯವರ ಮಗನ್ನ ಇಲ್ಲೇ ಕಳಿಸಿ ಬರ್ತೇನಿ ಅಕ್ಕಾ," ಅಂತ ಹೇಳುತ್ತ ವಿಠಲ ಕೂಡ ಹೊರ ಬರಲು ಚಪ್ಪಲಿ ಮೆಟ್ಟಿದ. ಅವ ಬರದಿದ್ದರೆ ನಾನೇ, "ಏ ವಿಠಲ್ ಅಲ್ಲಿ ತನಕಾ ಬಾ ಅಲ್ಲಾ?" ಅಂತ ಕರೆಯುತ್ತಿದ್ದೆ. ಆ ಮಾತು ಬೇರೆ ಬಿಡಿ.

ಕನಿಂಗಹ್ಯಾಮ ರೋಡಿನ ಆಕಡೆ, ಎಲ್ಲೋ ಪೋಲೀಸ್ ಕಮಿಷನರ್ ಆಫೀಸಿನ ಹಿಂದುಗಡೆ, ಒಂದು ಡಬ್ಬಾ ಅಂಗಡಿಯಲ್ಲಿ ಕೂತು ಚಹಾ ಹೀರಿದೆವು. ಧಾರವಾಡದಲ್ಲಿ ಹೆಡ್ ಪೋಸ್ಟ್ ಆಫೀಸಿನ ಪಕ್ಕದ ಡಬ್ಬಾ ಅಂಗಡಿಯಲ್ಲಿ ಹಲವಾರು ಬಾರಿ ನಾನು ವಿಠಲ ಚಹಾ ಕುಡಿದಂತೆಯೇ. ವಿಠಲ ಸಿಗರೇಟು ಹಚ್ಚಿದ. ಅವನಿಗೆ ಚಹಾದ ಜೊತೆ ಅದು ಬೇಕು. ನನಗೂ ಆಫರ್ ಮಾಡಿದ. ನನಗೆ ಸಿಗರೇಟ್ ಅಭ್ಯಾಸವಿಲ್ಲ. "ಏ ಸಿಗರೇಟ್ ಬ್ಯಾಡೋ. ನಾ ಚಹಾ ಕುಡದು ಮಾಣಿಕ್ ಚಂದ್ ಹಾಕ್ಕೋತ್ತೀನಿ. ನೀ ಹೊಡಿ ದಂ," ಅಂತ ಹೇಳಿದೆ. "ಸಿಗರೇಟ್ ಅಲ್ಲದಿದ್ದರೂ ಮಾಣಿಕ್ ಚಂದ್ ಚಟಾನಾದ್ರೂ ಅದ ಅಲ್ಲ ಹುಡುಗಗ," ಅಂತ ಹೇಳಿ ವಿಠಲ ಖುಶಿಯಾದ. "ಎಲ್ಲಾ ಚಟಾ ಒಮ್ಮೆ ಮಾಡಿ ನೋಡಿಬಿಡಬೇಕು ನೋಡಪಾ ಇವನs," ಅಂತ ವಿಠಲೋಪದೇಶ.

"ಏ ವಿಠಲ್, ನಾಳೆ ನಮ್ಮನಿಗೆ ಮಧ್ಯಾನ ಊಟಕ್ಕೆ ಬಂದು ಬಿಡೋ. ನಮ್ಮ ಅಮ್ಮ ನಿನ್ನ ಊಟಕ್ಕ ಕರೆದು ಬಾ ಅಂತ ಹೇಳ್ಯಾಳ ನೋಡು," ಅಂತ ಅಮ್ಮ ಹೇಳಿದಂತೆ ಮರುದಿವಸದ ಊಟಕ್ಕೆ ಆಹ್ವಾನ ಕೊಟ್ಟೆ. "ನಿಮ್ಮ ಅವ್ವಾ ಅಂದ್ರ ಅಕಿ ಅನ್ನಪೂರ್ಣೇಶ್ವರಿ ಇದ್ದಂಗ ನೋಡು. ಮುದ್ದಾಂ ಬರ್ತೇನಿ," ಅಂತ ಹೇಳಿದ ವಿಠಲ ನನ್ನ ಮನೆ ಕಡೆ ಹೋಗುವ ಬಸ್ ಹತ್ತಿಸಿ ವಾಪಸ್ ಹೋಗಿದ್ದ.

ಮರುದಿವಸ ಡೇಟ್ ಬರೋಬ್ಬರಿ ನೆನಪಿದೆ. ೯ ಅಕ್ಟೋಬರ್ ೧೯೯೫. ಟಾಂಜಾನಿಯಾಕ್ಕೆ ಹೊರಡುವ ಹಿಂದಿನ ದಿವಸ. ಹೇಳಿದ ಟೈಮಿಗೆ ಸರಿಯಾಗಿ ವಿಠಲ್ ಹಾಜರ್. ಸುಂದರ ಹೂವಿನ ಗುಚ್ಚದೊಂದಿಗೆ ಬಂದುಬಿಟ್ಟಿದ್ದ. ಫಾರೆನ್ನಿಗೆ ಹೊರಟಿದ್ದ ನನಗೆ ಹೂಗುಚ್ಛ ಕೊಟ್ಟು ಕಳಿಸಲಿಲ್ಲ ಅಂದ್ರೆ ಹೇಗೆ? ವಿಠಲನ ಅಂತಹ ವಿಚಾರಕ್ಕೆ, ಭಾವನೆಗಳಿಗೆ, ಪ್ರೀತಿಗೆ, ವಿಶ್ವಾಸಕ್ಕೆ  ನಮೋ ನಮಃ!

ಆಗ ಬೆಂಗಳೂರಿನ ದೋಮಲೂರಿನ ಅಣ್ಣನ ಮನೆಯಲ್ಲಿ ಇದ್ದೆ. ಅಣ್ಣ, ಅತ್ತಿಗೆ ಆಫೀಸಿಗೆ ಹೋಗಿದ್ದರು. ಮನೆಯಲ್ಲಿ ನಾನು, ಅಮ್ಮ ಮತ್ತೆ ಊಟಕ್ಕೆ ಬಂದಿದ್ದ ವಿಠಲ. ಮಸ್ತ ಊಟ ಮಾಡಿ, ಪಕ್ಕಾ ಮಂಗ್ಯಾತನ ಮಾಡುತ್ತ, ಎರಡು ಮೂರು ವರ್ಷದಿಂದ ಮಾತಾಡಿರದೇ ಇದ್ದ ಎಲ್ಲ ಹಾಳು ಹರಟೆ ಹೊಡೆದು, ಒಂದರ ಮೇಲೊಂದು ಎಲೆ ಅಡಿಕೆ ಜಗಿದು ಮುಗಿಸುವ ತನಕ ಮಧ್ಯಾನದ ಚಹಾ ಕುಡಿಯುವ ಹೊತ್ತು. "ಇಬ್ಬರೂ ಕೂಡಿ ಏನು ಗದ್ದಲಾ ಹಾಕ್ಲೀಕತ್ತಿದ್ದಿರೋ!? ಹಾಂ!?" ಅಂತ ಹಾಂಗೇ ಸುಮ್ಮನೆ ಜಬರಿಸುತ್ತ ಎದ್ದು ಬಂದ ಅಮ್ಮ ಮಾಡಿಕೊಟ್ಟ ಚಹಾ ಕುಡಿದ ವಿಠಲ ಹೊರಟು ನಿಂತಿದ್ದ. ಹತ್ತಿರದ ದೋಮಲೂರ ಬಸ್ ಸ್ಟ್ಯಾಂಡಿಗೆ ಹೋಗಿ ಬಿಟ್ಟು ಬಂದಿದ್ದೆ. ಕೊನೇ ಬಾರಿಗೂ, ಏನೋ ಒಂದು ಖತರ್ನಾಕ್, ಪಕ್ಕಾ ಧಾರವಾಡಿ ಜೋಕ್, ತನ್ನದೇ ಶೈಲಿಯಲ್ಲಿ ಹೊಡೆದೇ ಬಸ್ ಹತ್ತಿದ್ದ ವಿಠಲ ಕೊನೇ ಬಾರಿಗೆ 'ಆಲ್ ದಿ ಬೆಸ್ಟ್' ಹೇಳಿ, ಕೈ ಬೀಸಿ ಮರೆಯಾಗಿದ್ದ. ೧೯೯೫, ಅಕ್ಟೋಬರ್ ೯.

ಅದೇ ಕೊನೆ. ಮತ್ತೆ ವಿಠಲನ ಭೆಟ್ಟಿ ಆಗೇ ಇಲ್ಲ. ನಂತರ ನಾವು ವಿದೇಶದಲ್ಲಿ ಸೆಟಲ್ ಆದ ಮೇಲೆ ಎರಡು ವರ್ಷಕ್ಕೋ, ಮೂರು ವರ್ಷಕ್ಕೋ ಒಂದು ಸಲ, ಎರಡು ಮೂರು ವಾರದ ಮಟ್ಟಿಗೆ ಧಾರವಾಡಕ್ಕೆ ಹೋಗುವದು ಅಷ್ಟೇ. ಮತ್ತೆ ಅದೆಲ್ಲ ಫೇಸ್ ಬುಕ್ ಇಲ್ಲದ ಕಾಲ. ಟಚ್ ತಪ್ಪಿ ಹೋದವರು ಹೋಗಿಯೇ ಬಿಟ್ಟಿದ್ದರು. ಧಾರವಾಡಕ್ಕೆ ಹೋದ ಟೈಮಿನಲ್ಲಿ ವಿಠಲನೂ ನಮ್ಮ ಮನೆಗೆ ಬಂದಿರಲಿಲ್ಲ ಅಂತ ಅನ್ನಿಸುತ್ತದೆ. ಅಲ್ಲಿ ಇಲ್ಲಿ ಅವನ, ಮಹಿಷಿಯವರ ಮನೆಯ ಸುದ್ದಿ ಬರುತ್ತಿತ್ತು ಮಾತಾಡುವಾಗ. ಅವನನ್ನು, ಅವನ ಜೋಕುಗಳನ್ನು ನೆನೆಸಿಕೊಂಡು ನಕ್ಕಿದ್ದು ಇದೆ. ಆದ್ರೆ ಮತ್ತೆ ವಿಠಲ ಮುಖತಃ ಸಿಕ್ಕಿರಲಿಲ್ಲ.

೨೦೧೧ ರಲ್ಲಿ ಫೇಸ್ ಬುಕ್ ಮೇಲೆ ಬಂದು, ಧಾರವಾಡದ ಅನೇಕಾನೇಕ ಹಳೆಯ ಸಂಪರ್ಕಗಳು ವಾಪಸ್ ಸಿಕ್ಕರೂ ವಿಠಲ ಎಲ್ಲೂ ಕಂಡು ಬರಲಿಲ್ಲ. ಆದರೆ ಆತ್ಮೀಯ ಹಳೆಯ ಮಿತ್ರ 'ಅಜೇಯ ಕುಲಕರ್ಣಿ' ಸಿಕ್ಕ. ಅವನು ವಿಠಲನಿಗೆ ದೂರದ ಸಂಬಂಧಿ ಅಂತ ನಾನೇ ಕಂಡು ಹಿಡಿದು, ಖಾತ್ರಿ ಮಾಡಿಕೊಂಡ ನಂತರ ವಿಠಲನ ಬಗ್ಗೆ ಮಾತಾಡದೇ ನಮ್ಮಿಬ್ಬರ ಮಾತುಕತೆ ಮುಗಿಯುತ್ತಿರಲಿಲ್ಲ. ಫೋನ್ ಮಾಡುತ್ತಿದ್ದುದು ಅಜೇಯನಿಗೇ ಆದರೂ ವಿಠಲನ ಸುದ್ದಿ ಕೇಳಿ, ಒಂದಿಷ್ಟು ವಿಠಲನ ಜೋಕ್ ನೆನಪಿಸಿಕೊಂಡು ಬಿದ್ದು ಬಿದ್ದು ನಗದೇ ನಮ್ಮ ಮಾತೇ ಮುಗಿಯುತ್ತಿರಲಿಲ್ಲ. ಮತ್ತೆ ಈ ಅಜೇಯ ಕುಲಕರ್ಣಿ ಒಂದು ಕಾಲದಲ್ಲಿ ವಿಠಲನ ಜೊತೆ ಇನ್ಸೂರೆನ್ಸ್ ಬಿಸಿನೆಸ್ಸ್ ಕಲಿಯುವ, ಮಾಡುವ ಶಿಷ್ಯನಾಗಿದ್ದ ಅಂತ ಕೇಳಿದಾಗಿಂದ ಅವನನ್ನು ರೇಗಿಸಿದ್ದೇ ರೇಗಿಸಿದ್ದು. ರೇಗಿಸಿಕೊಂಡು ರೇಗಿಸಿಕೊಂಡು ಸುಸ್ತಾಗಿದ್ದ ಅಜೇಯ ನನಗೆ ವಾರ್ನಿಂಗ್ ಕೊಡುತ್ತಿದ್ದ, "ಮಹೇಶ್! ಮುಂದಿನ ಸಲೆ ನೀ ಇಂಡಿಯಾಕ್ಕ ಬರೋದನ್ನ ತಿಳಿಸಿ ನೋಡು! ಹೋಗಿ ನಿನ್ನ ಪರಮ ಮಿತ್ರ ವಿಠಲಗ ಹೇಳಿ ಬಿಡ್ತೇನಿ. ಈಗ ನೀ ಹ್ಯಾಂಗ ಅವನ ಬಗ್ಗೆ ಕೇಳಿ ಕೇಳಿ ನನ್ನ ತಲಿ ತಿನ್ನಲಿಕತ್ತಿ ಹಾಂಗ ನಿನ್ನ ತಲಿ ತಿನ್ನಲಿ ಆವಾ ವಿಠಲ್!" ಅಂತ ಅಜೇಯ ಹೇಳಿದರೆ ಹುಚ್ಚರ ಹಾಗೆ ನಗುವೇ ನಮ್ಮ ಉತ್ತರ. ಇದಾದ ನಂತರವೂ ಒಂದೆರೆಡು ಬಾರಿ ಧಾರವಾಡಕ್ಕೆ ಹೋದರೂ ವಿಠಲ ಸಿಗುವ ಸಂದರ್ಭ ಬರಲಿಲ್ಲ. ಅವನನ್ನು ಹುಡುಕಿಕೊಂಡು ನಾವೂ ಹೋಗಲಿಲ್ಲ. ಹಳೆಯ ಗೆಳೆಯರ ಜೊತೆ ಕನೆಕ್ಟ್ ಆಗಿ, ಅವರ ಜೊತೆ ರಾತ್ರಿಯಿಡಿ ಪಾರ್ಟಿ ಮಾಡಿ, ಹಗಲಿಡೀ ಮಲಗಿ, ಎರಡು ವಾರ ಹೋಗಿದ್ದೇ ತಿಳಿಯಲಿಲ್ಲ. ಹೀಗಾಗಿ ಮತ್ತೊಮ್ಮೆ ವಿಠಲ ಸಿಗಲೇ ಇಲ್ಲ. ಮತ್ತೊಮ್ಮೆ ಫುಲ್ ಮಂಗ್ಯಾತನ ಮಾಡಲೇ ಇಲ್ಲ. ಇಲ್ಲದ ಹಾಳು ಹರಟೆ ಹೊಡೆಯಲೇ ಇಲ್ಲ. ಇದೆಲ್ಲ ವಿಠಲ ಪರಲೋಕವಾಸಿಯಾದ ನಂತರ ನೆನಪಾಯಿತು.

ಯಾವಾಗಲೂ ಒಂದು ತುಂಟ ಮಗುವಿನಂತಹ ನಗೆ ನಗುತ್ತ, ತಾನೂ ನಕ್ಕು, ಎಲ್ಲರನ್ನೂ ನಗಿಸುತ್ತಲೇ, ನಗೆ ಮುಗಿಸಿ ಲೋಕಕ್ಕೆ ವಿದಾಯ ಹೇಳಿದ ವಿಠಲನ ಆತ್ಮಕ್ಕೆ ಶಾಂತಿ ಸಿಗಲಿ!

[ವಿಠಲನ ಫೋಟೋ ಸಿಕ್ಕಿಲ್ಲ. ಯಾರಾದರೂ ಧಾರವಾಡಿಗಳು ಕೃಪೆ ಮಾಡಿ ಕಳಿಸಿಕೊಟ್ಟರೆ ಮುದ್ದಾಂ ಹಾಕುತ್ತೇನೆ.]

* ಇಂಟರ್ನೆಟ್ ನೋಡಿದರೆ ವಿಠಲ ಮತ್ತು ವಿಠ್ಠಲ ಎರಡೂ ತರಹ ಬರೆಯುತ್ತಾರೆ ಅಂತ ಕಾಣಿಸುತ್ತದೆ. ಯಾವದು ಹೆಚ್ಚು ಸರಿ ಅಂತ ಗೊತ್ತಿಲ್ಲ. ಧಾರವಾಡ ಕಡೆ ಮಾತಾಡುವಾಗ ವಿಠ್ಠಲ ಅಂತ ಒತ್ತು ಕೊಟ್ಟು ಮಾತಾಡುತ್ತಿದ್ದುದು ಅಂತ ನೆನಪು. ಇಲ್ಲಿನ ಕನ್ನಡ ಎಡಿಟರ್ ವಿಠಲ ಅಂತ ಬರೆದು ಹಾಗೇ ಎಲ್ಲ ಕಡೆ ಬಂದಿದೆ. 

Saturday, July 05, 2014

ಅಗಲಿದ ಪ್ರೊ.ಜಮಖಂಡಿಯವರಿಗೊಂದು ನಮನ

ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿ ರಿಟೈರ್ ಆಗಿದ್ದ ಪ್ರೊಫೆಸರ್ ಜಮಖಂಡಿ ತಮ್ಮ ಎಂಬತ್ತನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತುಂಬ ಆತ್ಮೀಯರಾಗಿದ್ದ ಅವರ ಬಗ್ಗೆ ಕೆಲ ನೆನಪುಗಳು....

ಪ್ರೊ. ಜಮಖಂಡಿ

ಸುಮಾರು ೧೯೬೦ ರಿಂದ ೧೯೯೪ ರ ವರೆಗೆ ಕರ್ನಾಟಕ ಕಾಲೇಜ್ ಆವರಣದಲ್ಲಿ ಎಲ್ಲಾದರೂ 'ಘಂ' ಅಂತ ಅತ್ತರದ ಸುವಾಸನೆ ಬಂದರೆ ಒಂದು ಖಾತ್ರಿಯಾಗುತ್ತಿತ್ತು. ಪ್ರೊ. ಜಮಖಂಡಿ ಸುತ್ತಮುತ್ತಲೆಲ್ಲೋ ಇದ್ದಾರೆ ಅಂತ. ಅವರದ್ದು ಒಂದು ಖಾಯಂ ಅತ್ತರದ ಬ್ರಾಂಡಿತ್ತು. ಕೆಮಿಸ್ಟ್ರಿ ಲ್ಯಾಬುಗಳ ಸುತ್ತ ಮುತ್ತ, ಒಳಗಿನ ಕೆಮಿಕಲ್ಲುಗಳ ಘಾಟು ವಾಸನೆ ಮೀರಿ ಸುವಾಸನೆ ಏನಾದರೂ ಬರುತ್ತಿತ್ತು ಅಂತಿದ್ದರೆ ಡೌಟೇ ಬೇಡ. ಲ್ಯಾಬ್ ಒಳಗೆ ಇದ್ದವರು ಪ್ರೊ. ಜಮಖಂಡಿಯೇ ಆಗಿರುತ್ತಿದ್ದರು. ಅಂತಹ ಅತ್ತರ್ ಸ್ಪೆಷಲಿಸ್ಟ್ ಅವರು.

ನಮಗೆ ಅವರು ಕ್ಲಾಸಿನಲ್ಲಿ ಮಾಸ್ತರಾಗಿ ಕಲಿಸಿದ್ದು ಕಡಿಮೆ. ಆದರೆ ಧಾರವಾಡದಲ್ಲಿ ಒಬ್ಬ ಅತ್ಯಂತ ಆತ್ಮೀಯರಾಗಿ, ಕುಟುಂಬದ ಸ್ನೇಹಿತರಾಗಿ, well-wisher ಆಗಿ ಅಕ್ಕರೆಯಿಂದ ಕಂಡಿದ್ದು ತುಂಬ ಜಾಸ್ತಿ.

೧೯೮೮. ಪಿಯೂಸಿ ಮೊದಲನೇ ವರ್ಷ ಕೆಮಿಸ್ಟ್ರಿ ಲ್ಯಾಬ್ ಪ್ರೊಫೆಸರ್ ಅವರೇ. ಖಡಕ್ ಮಾಸ್ತರರು. ಅತಿ ಮುತುವರ್ಜಿಯಿಂದ ಲ್ಯಾಬ್ ಜರ್ನಲ್ ಚೆಕ್ ಮಾಡುತ್ತಿದ್ದರು. ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿ, ತಿದ್ದಿ ಅವರು ಕೊಡುತ್ತಿದ್ದ feedback ಇನ್ನೂ ನೆನಪಿವೆ. ಸಣ್ಣ ಸಣ್ಣ ತಪ್ಪುಗಳಾಗಿ ದೊಡ್ಡ ದೊಡ್ಡ ಮಾರ್ಕ್ಸ್ ಕಳೆದು ಹೋಗುವದು ಬೇಡ ಅನ್ನುವ ಕಳಕಳಿ ಪ್ರೊ. ಜಮಖಂಡಿ ಅವರದ್ದು.

ಸಾಧಾರಣವಾಗಿ ಲ್ಯಾಬೋರೇಟರಿ ಕ್ಲಾಸಿಗೆ ಬರುವ ಪ್ರೊಫೆಸರಗಳು ಲೆಕ್ಚರ್ ಕೊಡುವದು, ಅದೂ ವಿಷಯದ ಹೊರತಾಗಿ ಮಾತಾಡುವದು ಬಹಳ ಕಡಿಮೆ. ಆದರೆ ಪ್ರೊ. ಜಮಖಂಡಿ ಅದಕ್ಕೊಂದು ಅಪವಾದ. ಲ್ಯಾಬಿನಲ್ಲಿ ಪ್ರಾಕ್ಟಿಕಲ್ ಶುರು ಮಾಡುವ ಮೊದಲು ಆವತ್ತಿನ ಪ್ರಾಕ್ಟಿಕಲ್ ಬಗ್ಗೆ ವಿವರಿಸಲು ಒಂದು ಹತ್ತು ಹದಿನೈದು ನಿಮಿಷ ಇರುತ್ತಿತ್ತು. ಅದನ್ನು ಹೇಳಿ ಮುಗಿಸಿದ ಪ್ರೊ. ಜಮಖಂಡಿ ನಂತರ ಒಂದಿಷ್ಟು ಹೊತ್ತು ಇತರೇ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಮುಖ್ಯವಾಗಿ ಪಿಯೂಸಿ ವಿದ್ಯಾರ್ಥಿಗಳಿಗೆ ಮುಂದೆ ಏನು ಮಾಡಬಹುದು, ಯಾವ್ಯಾವ ರೀತಿಯ ಅವಕಾಶಗಳಿವೆ, ಇತ್ಯಾದಿ. ಅದೊಂದು ವಿಷಯದಲ್ಲಿ ಅವರಿಗೆ ತುಂಬ passion ಇತ್ತು. ಕರ್ನಾಟಕ ಸೈನ್ಸ್ ಕಾಲೇಜಿನಿಂದ ಬೇರೆ ಬೇರೆ ಖ್ಯಾತ ವಿದ್ಯಾಸಂಸ್ಥೆಗಳಿಗೆ ಯಾರ್ಯಾರು ಪ್ರವೇಶ ಗಿಟ್ಟಿಸಿದ್ದರು, ಅವರು ಈಗ ಏನು ಮಾಡುತ್ತಿದ್ದಾರೆ, ಅವರು ಹೇಗೆ ಓದುತ್ತಿದ್ದರು, ಅದು ಇದು ಇತ್ಯಾದಿ. Highly motivational.

ಅವರು ಕೊಡುತ್ತಿದ್ದ ಉಪದೇಶ ಕೇವಲ IIT, AIIMS ಇಂತಹ ಎಲ್ಲರಿಗೂ ಗೊತ್ತಿದ್ದ ಕೆಲವೇ ಉನ್ನತ ವಿದ್ಯಾಸಂಸ್ಥೆಗಳ ಬಗ್ಗೆ ಮಾತ್ರ ಇರುತ್ತಿರಲಿಲ್ಲ. UDCT - Mumbai, BITS - Pilani, BIT - Ranchi, Roorkee, JIPMER - Pondicherry, Vellore Medical College, AFMC, ಹೊರ ರಾಜ್ಯದ ರೀಜನಲ್ ಇಂಜಿನಿಯರಿಂಗ್ ಕಾಲೇಜುಗಳು, ಇತ್ಯಾದಿ. ಒಂದೇ ಎರಡೇ. ಹೀಗೆ ಅನೇಕಾನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಹಲವಾರು ಅವಕಾಶಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು. ಅಂತಹ ವಿದ್ಯಾಲಯಗಳಲ್ಲಿ ಪ್ರವೇಶ ಗಿಟ್ಟಿಸಿ, ಸಾಧನೆ ಮಾಡಿದ ಅವರ ಹಳೆಯ ವಿದ್ಯಾರ್ಥಿಗಳ ಬಗ್ಗೆ ಅಪಾರ ಹೆಮ್ಮೆ ಇತ್ತು. ಹತ್ತು, ಇಪ್ಪತ್ತು ವರ್ಷ ಹಿಂದಿನ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು, 'ಇಂತವ ಇಷ್ಟು ರಾಂಕ್ ಬಂದು, ಇಲ್ಲಿ ಆ ಕೋರ್ಸ್ ಮಾಡಿ, ನಂತರ ಅಲ್ಲಿ ಇನ್ನೊಂದು ಕೋರ್ಸ್ ಮಾಡಿ, ಈಗ ಹೀಗಿದಾನೆ. ಅವರೂ ಸಹ ಒಂದು ದಿವಸ ನಿಮ್ಮಂತೆ ಇಲ್ಲೇ, ಹೀಗೇ ಕೆಮಿಸ್ಟ್ರಿ ಪ್ರಾಕ್ಟಿಕಲ್ ಮಾಡಿ ಹೋಗಿದ್ದರು. ಅವರಿಗೆ ಸಾಧ್ಯವಾಗಿದ್ದು ನಿಮಗೂ ಸಾಧ್ಯವಾಗಬಹುದು. Everyone must explore these opportunities. Don't limit yourselves to only local colleges!' ಅಂತ ಪ್ರೊ. ಜಮಖಂಡಿ ಉಪದೇಶ. ಧಾರವಾಡದ ವಿದ್ಯಾರ್ಥಿಗಳು ಮಾಹಿತಿ ಇಲ್ಲ ಅನ್ನುವ ಕಾರಣಕ್ಕೆ ಅವಕಾಶದಿಂದ ವಂಚಿತರಾಗಬಾರದು ಎಂಬ ಕಳಕಳಿ ಅವರ ಮಾತುಗಳಲ್ಲಿ. ಅವರು ಹೇಳುವ ಮೊದಲು ಎಷ್ಟೋ ವಿದ್ಯಾಲಯಗಳ ಬಗ್ಗೆ, ಅಲ್ಲಿರುವ ಕೋರ್ಸುಗಳ ಬಗ್ಗೆ ನಮಗೆಲ್ಲ ಗೊತ್ತೂ ಇರಲಿಲ್ಲ. ಹೀಗೆಲ್ಲ ಹೆಚ್ಚಿನ ಉಪದೇಶ ಮಾಡಲಿಕ್ಕೆ ಅವರಿಗೇನು ಹೆಚ್ಚಿನ ಪಗಾರ್ ಸಿಗ್ತಿದ್ದಿಲ್ಲ ಬಿಡಿ. ಅದು ಅವರ passion ಮತ್ತೆ ವಿದ್ಯಾರ್ಥಿಗಳ ಬಗ್ಗೆ ಇರುವ ಒಂದು ತರಹದ ಕಾಳಜಿ, ನಿಷ್ಠೆ.

ವಿದ್ಯಾರ್ಥಿಗಳನ್ನು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಸೇರುವಂತೆ ಪ್ರೋತ್ಸಾಹಿಸಿದ ಮಾಸ್ತರು ಅವರನ್ನು ಬಿಟ್ಟರೆ ಬೇರೆ ಯಾರೂ ಇರಲಿಕ್ಕೆ ಇಲ್ಲ. ಅವರೇ ಕರ್ನಾಟಕ ಕಾಲೇಜಿನ NCC ಕಮಾಂಡೆಂಟ್ ಕೂಡ ಆಗಿದ್ಡರಾ? ಸರಿ ನೆನಪಿಲ್ಲ. ಅವರ ಪರ್ಸನಾಲಿಟಿ ಅದಕ್ಕೆ ಸೂಟ್ ಆಗುವಂತಿತ್ತು. ಯಾವಾಗಲೂ ಸ್ಲಿಮ್ ಅಂಡ್ ಟ್ರಿಮ್, ನೀಟ್ ಆಗಿ ಡ್ರೆಸ್ ಮಾಡಿಕೊಂಡು, ಶಿಸ್ತಾಗಿ ಇರುತ್ತಿದ್ದ ಜಮಖಂಡಿ ಪ್ರೊಫೆಸರ್ ನೋಡಿದರೆ NCC ತರಬೇತಿ ಪಡೆದವರಂತೆ ಕಾಣುತ್ತಿದ್ದರು.

೧೯೯೦ ರಲ್ಲಿ ನಮ್ಮ ಪಿಯೂಸಿ ಮುಗಿದು, BITS, Pilani ಯಲ್ಲಿ ಬೇಕಾಗಿದ್ದ ಕಂಪ್ಯೂಟರ್ ಸೈನ್ಸಿಗೆ ಪ್ರವೇಶ ಸಿಕ್ಕು, ಹೋಗಲೋ ಬೇಡವೋ ಅಂತ ದ್ವಂದ್ವದಲ್ಲಿ ನಾವು, ಅಷ್ಟು ದೂರ ಕಳಿಸುವದೋ ಬೇಡವೋ ಅಂತ ಅವರದ್ದೇ ದ್ವಂದ್ವದಲ್ಲಿ ಮನೆಯವರೂ ಇದ್ದಾಗ, 'ಏ! Nothing doing. You must go there. It's a very good college. ಮಸ್ತ ಕಾಲೇಜೈತಿ. ನಮ್ಮ ಹಳೇ ಸ್ಟೂಡೆಂಟ್ಸ್ ಕೆಲವರು ಹೋಗಿ, ಭಾಳ ಚೊಲೋ ಮಾಡ್ಕೊಂಡಾರ. ಮರೀ, ಸುಮ್ಮನ ಹೋಗಪಾ ನೀ. ಏನ್ ವಿಚಾರ ಮಾಡ್ತೀ? Don't think otherwise, I say' ಅಂತ ಹೇಳಿ, 'ಏ, ಅಲ್ಲೇ ಕಳಿಸೋ ಮಾರಾಯ ನಿನ್ನ ಮಗನ್ನ. ಏನ್ ವಿಚಾರ ಮಾಡ್ತೀ?' ಅಂತ ತಂದೆಯವರಿಗೂ ಹೇಳಿ BITS, ಪಿಲಾನಿಗೇ ಹೋಗುವದು ಅಂತ ನಿರ್ಧಾರ ಮಾಡಿ, ಹೋಗಿ ಸೇರಿಕೊಂಡಿದ್ದರ ಹಿಂದೆ ಪ್ರೊ. ಜಮಖಂಡಿ ನೀಡಿದ್ದ ಪ್ರೋತ್ಸಾಹ, ಧೈರ್ಯ, ಹುರುಪು ಎಲ್ಲದಕ್ಕೆ ಸದಾ ಚಿರಋಣಿ. BITS, Pilani ಸೇರಲು, ಸೇರಿದ ನಂತರ ಸೆಟಲ್ ಆಗಲು ಎಲ್ಲ ರೀತಿಯ ಮಾಹಿತಿ, ಸಹಾಯ ನೀಡಿದ ಇನ್ನೊಬ್ಬ ಮಹನೀಯರು ಪ್ರೊ. ಭೂಸನೂರಮಠರು. ಅವರೂ ಸಹ ತಂದೆಯವರ ಸಹೋದ್ಯೋಗಿಗಳೇ. ಅವರ ಇಬ್ಬರು ಗಂಡು ಮಕ್ಕಳು, ಸೊಸೆ ಎಲ್ಲ BITS, Pilani ಯಲ್ಲೇ ಓದಿದವರು. ಪ್ರೊ. ಜಮಖಂಡಿ, ಪ್ರೊ. ಭೂಸನೂರುಮಠ ನೆರೆಹೊರೆಯವರೇ ಅಂತ ನೆನಪು. (ಕವಿವಿ ನಿರ್ಮಾತ್ಯ ಡಿ.ಸಿ. ಪಾವಟೆ ಅವರ ಪುತ್ರ ಒಂದು ಕಾಲದಲ್ಲಿ ಪಿಲಾನಿಯಲ್ಲಿ ಪ್ರೊಫೆಸರ್ ಆಗಿದ್ದರು ಅಂತ ಕೇಳಿದ್ದು. ಆ ಕಾರಣಕ್ಕೋ ಏನೋ ಕವಿವಿ, ಕೆಸಿಡಿ ಮಾಸ್ತರುಗಳಿಗೆ ಪಿಲಾನಿ ಬಗ್ಗೆ ಗೊತ್ತಿತ್ತು ಮತ್ತು ಸುಮಾರು ಜನರ ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಮಾಡಿದ್ದರು.)

೧೯೯೩, ಮಾರ್ಚ್. ಮುಂದೆ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಾಗ REC, ಕುರುಕ್ಷೇತ್ರ, ಹರ್ಯಾಣದಲ್ಲಿ ನಡೆದ ತಾಂತ್ರಿಕ ಅಧಿವೇಶನಕ್ಕೆ ಒಂದು ಪ್ರಬಂಧ ಕಳಿಸಿದ್ದೆ. ಆಯ್ಕೆ ಆಗಿತ್ತು. ಪ್ರಬಂಧ ಮಂಡಿಸಲು ಹೋಗಿದ್ದೆ. ಪ್ರಥಮ ಬಹುಮಾನ ಬಂತು. ಪತ್ರ ಬರೆದು ಧಾರವಾಡದ ಎರಡು ಗುರುಗಳ ಜೊತೆ ಸಂತಸ ಹಂಚಿಗೊಂಡಿದ್ದೆ. ಒಬ್ಬರು ಇದೇ ಪ್ರೊ. ಜಮಖಂಡಿ. ಪಿಲಾನಿಗೆ ಹೋಗಲು ಸ್ಪೂರ್ತಿ, ಪ್ರೋತ್ಸಾಹ ಎಲ್ಲ ನೀಡಿದವರೇ ಅವರು. ಅವರೊಂದಿಗೆ ಹಂಚಿಕೊಂಡಿಲ್ಲ ಅಂದರೆ ಹೇಗೆ? ಇನ್ನೊಬ್ಬರು ನಮ್ಮ 'ಗಣಿತ ಲೋಕದ' ದಿ. ದೇಶಪಾಂಡೆ ಸರ್. ಅವರಿಗಂತೂ ಸಿಕ್ಕಾಪಟ್ಟೆ ಹೆಮ್ಮೆ. ಪ್ರಥಮ ಬಹುಮಾನದ ಸರ್ಟಿಫಿಕೇಟ್ ಕಾಪಿ ಸರ್ ನೋಡಿ ಖುಷಿ ಪಡಲಿ ಅಂತ ಪತ್ರದೊಂದಿಗೆ ಕಳಿಸಿದ್ದರೆ, ದೇಶಪಾಂಡೆ ಸರ್ ಅದನ್ನ ನೋಟೀಸ್ ಬೋರ್ಡ್ ಮೇಲೆ ಹಾಕಿಸಿ, 'ನೋಡ್ರೀ ನಮ್ಮ ೧೯೯೦ ಬ್ಯಾಚಿನ ಸ್ಟೂಡೆಂಟ್!' ಅಂತ ಹಲಗಿ ಬಾರಿಸಿದ್ದೇ ಬಾರಿಸಿದ್ದು! ಅವರ ಅಭಿಮಾನ ದೊಡ್ಡದು. ಪ್ರೊ. ಜಮಖಂಡಿ ತಿರುಗಿ ಪತ್ರ ಬರೆದಿದ್ದರೋ ಇಲ್ಲವೋ ನೆನಪಿಲ್ಲ. ಆದರೆ ಪ್ರೊ. ಜಮಖಂಡಿ ಸಿಕ್ಕಾಪಟ್ಟೆ ಖುಷಿಯಾಗಿ, ಅಭಿನಂದನೆ, ಶುಭ ಹಾರೈಕೆಗಳನ್ನ ಹೇಳಿದ್ದರು ಅಂತ ಮನೆಯವರು ಮಾತ್ರ ತಿಳಿಸಿದ್ದರು. ನಮ್ಮ ಚಿಕ್ಕ ಚಿಕ್ಕ ಸಾಧನೆಗಳ ಮೇಲೆ ಇವರಿಗೆಲ್ಲ ಎಷ್ಟು ಹೆಮ್ಮೆ! ಎಷ್ಟು ದೊಡ್ಡ ಹೃದಯ, ಮನಸ್ಸು! ಅಂತೆಲ್ಲ ವಿಚಾರ ಇವತ್ತು ಮತ್ತೆ ಬಂತು.

ನಮ್ಮ ತಂದೆಯವರ ಸಹೋದ್ಯೋಗಿಯಾಗಿದ್ದರು ಅನ್ನುವದರಕಿಂತ ಹೆಚ್ಚು ಆತ್ಮೀಯ ಮಿತ್ರರಾಗಿದ್ದರು. ಸಹೋದ್ಯೋಗಿಗಳಲ್ಲಿ ತಂದೆಯವರೊಂದಿಗೆ ಆತ್ಮೀಯತೆಯಿಂದ ಏಕವಚನದಲ್ಲಿ ಮಾತಾಡುತ್ತಿದ್ದ ತುಂಬ ಕ್ಲೋಸ್ ಮಿತ್ರರು, ನನಗೆ ಗೊತ್ತಿದ್ದ ಮಟ್ಟಿಗೆ, ಇಬ್ಬರೇ. ಒಬ್ಬರು ಇವರು ಪ್ರೊ. ಜಮಖಂಡಿ, ಇನ್ನೊಬ್ಬರು ಫಿಸಿಕ್ಸ್ ವಿಭಾಗದ ಪ್ರೊ. ಹಿರೇಗೌಡರ. ಇಬ್ಬರಿಗೂ ನಮ್ಮೆಲ್ಲರ ಮೇಲೆ ತುಂಬ ಪ್ರೀತಿ, ಅಭಿಮಾನ, ಹೆಮ್ಮೆ ಎಲ್ಲ. ಅದಕ್ಕೆಲ್ಲ ತಿರುಗಿ ಏನು ಕೊಡಲು ಸಾಧ್ಯ? ಅವರಿಗೆಲ್ಲ ಜೀವನಪೂರ್ತಿ ಚಿರರುಣಿಗಳಾಗಿ ಇರಬಹುದು. ಅಷ್ಟೇ.

ಪ್ರೊ. ಜಮಖಂಡಿ ಅವರ ಮತ್ತೊಂದು ವಿಶೇಷ ಅಂದ್ರೆ ಅವರಿಗೆ ಕಾಲೇಜ್ ಎಂಬದು ಒಂದು ಫಸ್ಟ್ ಲವ್ ಇದ್ದ ಹಾಗೆ. ರಜೆ ಇದ್ದರೂ ಕಾಲೇಜಿಗೆ ಬಂದು, ತಮ್ಮ ಆಫೀಸ್ ನಲ್ಲಿ ಒಂದೆರೆಡು ತಾಸು ಕೂತು, ಯಾರಾದರೂ ಸಹೃದಯಿಗಳು ಸಿಕ್ಕರೆ ಹೆಮ್ಮಾಡಿ ಕ್ಯಾಂಟೀನಿನಲ್ಲಿ ಒಂದು ಚಹಾ ಕುಡಿದು, ಕ್ಯಾಂಪಸ್ ಒಂದು ರೌಂಡ್ ಹಾಕಿ, ನಂತರ ಮನೆಗೆ ವಾಪಸ್ ಹೋದರೆ ಅವರಿಗೊಂದು ರೀತಿಯ ಸಮಾಧಾನ. ಮತ್ತೆ ಕಾಲೇಜಿಗೆ ಹತ್ತಿರವೇ ಇದ್ದ ಕ್ವಾರ್ಟರ್ಸನಲ್ಲಿಯೇ ಅವರ ವಸತಿ. ಉದಯ ಹಾಸ್ಟೆಲ್ ಮುಂದೆ ಇದ್ದ, ಸಾಲು ಸಾಲಾದ, ದೊಡ್ಡ ಹಳೆ ಬಂಗಲೆ ತರಹದ ಒಂದು ಕ್ವಾರ್ಟರನಲ್ಲಿ ಅವರಿದ್ದರು. ಒಮ್ಮೆ ತುಂಬ ಸಣ್ಣವನಿದ್ದಾಗ ಅವರ ಮನೆಗೆ ಹೋಗಿದ್ದ ನೆನಪು. ತಂದೆಯವರ ಇತರೆ ಸಹೋದ್ಯೋಗಿಗಳಾದ ಪ್ರೊ. ಪೂಜಾರಿ, ಪ್ರೊ. ಭೂಸನೂರಮಠ, ಪ್ರೊ. ಜಾಲಿಹಾಳ್ ಎಲ್ಲ ಅದೇ ಸಾಲಿನಲ್ಲಿ ಇದ್ದವರು. ಇಂದಿಗೂ ಆ ರಸ್ತೆಗಳಲ್ಲಿ ಹೋದರೆ ಹಳೆಯ ಎಷ್ಟೊಂದು ಮಧುರ ನೆನಪುಗಳು.

ಪ್ರೊ. ಜಮಖಂಡಿ ಅವರ ಬಗ್ಗೆ ಬಹಳ ಜನರಿಗೆ ಗೊತ್ತಿರದ ಒಂದು ಸಂಗತಿ ಅಂದರೆ ಅವರು ಭೂತ ಬಂಗಲೆಯೊಂದರಲ್ಲಿ, ಭೂತಗಳನ್ನು ಓಡಿಸಿ, ಧೈರ್ಯದಿಂದ ವರ್ಷಾನುಗಟ್ಟಲೆ ಅಲ್ಲೇ ಇದ್ದು, ಸಂಸಾರ ಮಾಡಿ ಬಂದವರು!!

ಧಾರವಾಡದ ಸುಳ್ಳದಮಠ ಕಾಂಪೌಂಡ್. ಅಲ್ಲೇ ಸಪ್ತಾಪುರ ಭಾವಿಯಿಂದ ಸ್ವಲ್ಪ ಈಕಡೆ, ಸರ್ಕಲ್ ಎದುರಿಗೇ ಇದೆ. ಹಳೇ ಕಾಲದ ಬಂಗಲೆ. ದೊಡ್ಡ ಕಾಂಪೌಂಡ್. ಮರಗಿಡಗಳಿಂದ ತುಂಬಿದ್ದು. ಮೊದಲು ಸುತ್ತಮುತ್ತ ಹೆಚ್ಚು ಮನೆ ಗಿನೆ ಇಲ್ಲದೆ, ಒಂದು ತರಹದ ಗವ್ವ್ ಎನ್ನುವ ಭೂತ ಬಂಗಲೆ ವಾತಾವರಣ. ಆ ಮನೆಯಲ್ಲಿ ಭೂತ ಚೇಷ್ಟೆ. paranormal activity. ಒಣ ಹಾಕಿದ್ದ ಬಟ್ಟೆಗಳಿಗೆ ಒಮ್ಮೆಲೇ ಬೆಂಕಿ ಹತ್ತಿ ಭಸ್ಮವಾಗುವದು, ಮಡಚಿಟ್ಟ ಬಟ್ಟೆಗಳನ್ನು ಬಿಚ್ಚಿದರೆ ಕಟ್ ಕಟ್ ಆದಂತೆ ಹರಿದು ಹೋಗುವದು, ಪಾತ್ರೆಗಳ ಉರುಳುವಿಕೆ, ಹೀಗೆಲ್ಲ ಚಿತ್ರ ವಿಚಿತ್ರ. ನಮಗೆ ತುಂಬ ಬೇಕಾದವರೇ ಒಬ್ಬರು ೧೯೬೦ ರ ದಶಕದಲ್ಲಿ ಅಲ್ಲಿ ಭಾಡಿಗೆಗೆ ಇದ್ದರು. ಹೀಗಾಗಿ ನಂಬದೇ ಇರಲು ಕಾರಣಗಳೇ ಇಲ್ಲ. ನಮ್ಮ ಆಪ್ತರು ಎಲ್ಲ ಪೂಜೆ ಪುನಸ್ಕಾರ ಮಾಡಿಸಿದರು. ಆದರೂ ಭೂತ ಚೇಷ್ಟೆ ನಿಲ್ಲಲಿಲ್ಲ. ಸ್ವಲ್ಪ ವೇಳೆಯ ನಂತರ ಅವರಿಗೆ ಸಾಕಾಗಿ ಮನೆ ಖಾಲಿ ಮಾಡಿಕೊಂಡು ಹೋದರು.

ನಂತರ ಅದೇ ಮನೆಗೆ ಬಂದವರು ಇದೇ ಪ್ರೊ. ಜಮಖಂಡಿ. ಅವರಿಗೂ ಅದೇ ಅನುಭವ. ಸುಮಾರು ಅದೇ ತರಹದ ಭೂತ ಚೇಷ್ಟೆಗಳು. ಸ್ವಲ್ಪ ಹೆಚ್ಚು ಕಮ್ಮಿ.

ಪ್ರೊ. ಜಮಖಂಡಿ ಸಹ ಪೂಜೆ ಮಾಡಿಸಿದರು. ಅವರ ಮುಸ್ಲಿಂ ಪದ್ಧತಿ ಪ್ರಕಾರ ಯಾವದೋ ದರ್ಗಾಕ್ಕೆ ಹೋಗಿ, ಅಲ್ಲಿನ ಮೌಲ್ವಿಗೆ ಹೇಳಿಕೊಂಡು, ಚದ್ದರ್ ಅದು ಇದು ಹೊದೆಸಿ, ಏನೋ ತಾಯಿತ ತೆಗೆದುಕೊಂಡು ಬಂದರು. ಮಜಾ ನೋಡಿ! ಅದರ ನಂತರ ಭೂತ ಚೇಷ್ಟೆ ಫುಲ್ ಬಂದ್! ಭೂತ ಓಡಿ ಹೋಯಿತೋ, ಶಾಂತವಾಯಿತೋ! ಗೊತ್ತಿಲ್ಲ. ಒಟ್ಟಿನಲ್ಲಿ paranormal activities ನಿಂತುಹೋದವು. ಸುಮಾರು ವರ್ಷ ಅದೇ ಸುಳ್ಳದಮಠ ಕಾಂಪೌಂಡ್ ಮನೆಯಲ್ಲಿಯೇ ಇದ್ದರು ಪ್ರೊ. ಜಮಖಂಡಿ. ನಂತರ ಕೆಸಿಡಿ ಸ್ಟಾಫ್ ಕ್ವಾರ್ಟರ್ಸಗೆ ಬಂದು, ರಿಟೈರ್ ಆಗುವವರೆಗೆ ಅಲ್ಲೇ ಇದ್ದು, ಈಗ ಹುಬ್ಬಳ್ಳಿಗೆ ಹೋಗಿ ಸೆಟಲ್ ಆಗಿದ್ದರು ಅಂತ ಕೇಳಿದ್ದು.

ಆಗಾಗ ಮನೆಗೆ ಬರುತ್ತಿದ್ದರು ಪ್ರೊಫೆಸರ್. ತಮ್ಮ ಬಜಾಜ್ ಸ್ಕೂಟರ್ ಮೇಲೆ ಬಂದು, ಎದುರಿಗೆ ಬಂದ ನಮಗೆ, 'ಮರೀ! ಏನ್ ಮಾಡಾಕತ್ತೀ!? ಪಪ್ಪಾ ಮನಿಯಾಗ ಅದಾನs?' ಅಂತ ಪ್ರೀತಿಯಿಂದ ತಲೆ ಸವರುತ್ತ ಒಳಗೆ ಬರುತ್ತಿದ್ದ ಪ್ರೊ. ಜಮಖಂಡಿ ಇವತ್ತು ತುಂಬ ನೆನಪಾದರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ, ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ.

Rest In Peace, ಪ್ರೊ. ಜಮಖಂಡಿ!

*********************************************

ಜಮಖಂಡಿ ಕುಟುಂಬವನ್ನು ಸಂಪರ್ಕಿಸಿ, ಫೋಟೋ ತರಿಸಿಕೊಟ್ಟ ಧಾರವಾಡದ ಶ್ರೀಮತಿ ರಕ್ಷಾ ಭಾವಿಕಟ್ಟಿಯವರಿಗೆ ಧನ್ಯವಾದ.

ನಮ್ಮ ಪ್ರೀತಿಯ ಕರ್ನಾಟಕ ಕಾಲೇಜಿನ ಒಂದಿಷ್ಟು ಫೋಟೋ ನೋಡಲು ಇಲ್ಲಿ ಹೋಗಿ.

ಪ್ರೊ. ಜಮಖಂಡಿ ಇದ್ದ ಸುಳ್ಳದಮಠ ಬಂಗಲೆಯ ಒಂದು ಫೋಟೋ. ೨೦೧೨, ಫೆಬ್ರುವರಿಯಲ್ಲಿ ಧಾರವಾಡಕ್ಕೆ ಹೋದಾಗ, ಮುಂಜಾನೆ ವಾಕ್ ಹೋದಾಗ ತೆಗೆದಿದ್ದು. ಈಗ ಖಾಲಿ ಜಾಗ ಎಲ್ಲ ತುಂಬಿ ಹೋಗಿದ್ದು ಮೊದಲಿನ ಗತ್ತು, ಗಾಂಭೀರ್ಯ, ಗವ್ವೆನ್ನುವ ಭೂತ ಬಂಗಲೆ ಲುಕ್ ಏನೂ ಉಳಿದಿಲ್ಲ.

೧೯೯೦ ರ ಟೈಮಿನಲ್ಲಿ ಸುಳ್ಳದಮಠ ಕಾಂಪೌಂಡ್ ಬಂಗಲೆಯಲ್ಲಿ ಗ್ರಂಥಾಲಯದ ಶಾಖೆಯಿತ್ತು. ಅಲ್ಲಿ ಹೋಗಿ ಪುಸ್ತಕ ತಂದಿದ್ದು ನೆನಪಿದೆ. 

ಪ್ರೊ. ಜಮಖಂಡಿ ಕಾಲದಲ್ಲಿ ಸುಳ್ಳದಮಠ ಬಂಗಲೆ ಬಿಟ್ಟ ಭೂತ, ಅಲ್ಲೇ ಸ್ವಲ್ಪ ಮುಂದೆ ಇದ್ದ ಕೆಸಿಡಿ ಬ್ಯಾಡ್ಮಿಂಟನ್ ಕೋರ್ಟಿಗೆ ಶಿಫ್ಟ್ ಆಗಿತ್ತಾ? ಹಾಗೊಂದು ಸಂದೇಹ. ಯಾಕೆಂದರೆ ಕೆಸಿಡಿ ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಭೂತವಿದೆ ಅಂತ ಸುದ್ದಿಯಂತೂ ಇತ್ತು. :)

Wednesday, July 02, 2014

ಕಿಮಾಮು, ಹಮಾಮು. ಕವಳದ ಕಿತಾಪತಿ.

[ಹವ್ಯಕ ಭಾಷೆಯಲ್ಲಿ ಸುಮ್ಮನೆ ಮಳ್ಳ ಹಲ್ಬಾಣ]

ವನಜತ್ತಿಗೆ ಬೆಳಗಿನ ದ್ವಾಸೆ ಕಂಬಳಾ ಮುಗಿಸಿಕ್ಕೆ, ತಾನೂ ಆಸ್ರಿ ಕುಡಕಂಡು, ಬಾಳೆ ಎಲ್ಲಾ ಎತ್ತಿಕ್ಕೆ, ದನುವಿಗೆ ಕೊಟ್ಟಿಕ್ಕೆ ಬಪ್ಪನ ಹೇಳಿ ಕೊಟ್ಟಗೆ ಬದಿಗೆ ಹೋತು. ಹೋಗಿ ದನುವಿಗೆ ಕೊಟ್ಟಿಕ್ಕೆ ವಾಪಸ್ ಬಪ್ಪಕರೆ ಹಡಬೆ ಕುನ್ನಿಯೊಂದು ಹಿತ್ಲ ಬಾಗ್ಲಿಂದ ಅಡಿಗೆಮನೆ ಒಳಗೆ ಹೋಪ ಪ್ಲಾನ್ ಮಾಡ್ತಾ ಇತ್ತು. 'ಅಬಬಬಬಾ! ಹಡಬೆ ಕುನ್ನಿ. ದಿನಾ ಅನ್ನಾ ಹಾಕ್ತೀ. ಆದರೂ ಕದ್ದು ಅಡಗೆ ಒಳಕ್ಕೆ ಬಪ್ಪಲೆ ನೋಡ್ತೇ  ಅಲ್ಲದಾ? ತಡಿ ನಿನಗೆ ಮಾಡಸ್ತೀ,' ಹೇಳಿಕೆತ್ತ, ಅಲ್ಲೇ ಇಪ್ಪ ಕಟ್ಟಿಗೆ ರಾಶಿಂದ ಒಂದು ಕಟ್ಟಿಗೆ ತೆಗೆದು ಒಗತ್ತು ಹೇಳ್ಯಾತು. ಹಡಬೆ ಕುನ್ನಿಗೆ ಹನೀ ತಾಗ್ಜಾಂಗ ಆತು. ಅದು 'ಕುಂಯ್ಕ್' ಹೇಳಿ ಹಾರ್ನ್ ಮಾಡಿಕೆತ್ತ ಓಡಿ ನೆಡತ್ತು.

ಒಳಬದಿಂದ ಇನ್ನೊಂದು ಹಾರ್ನು ಸದ್ದ ಮಾಡ್ಚು. 'ಕುನ್ನಿ ಒಳ ಬಪ್ಪಲೆ ಹೊಂಟಿತ್ತನೆ ತಂಗೀ? ಯಾವ್ ಕುನ್ನಿ? ಕಾಳನಾ? ಅಥವಾ ಹಂಡಿಯಾ? ಸುಟ್ಟ ಕುನ್ಯಕ್ಕ!' ಹೇಳಿಕೆತ್ತ ವನಜತ್ತಿಗೆ ಅತ್ತೆ ಸೀತಮ್ಮಾ ಅದರದ್ದೇ ಹಾರ್ನ್ ಸದ್ದ ಮಾಡ್ಚು. ಸೀತಮ್ಮಂಗೆ ವಾತ ಜಾಸ್ತಿಯಾಗಿ ಎಲ್ಲಾ ಮನಗ್ಜಲ್ಲೇ. ಮನಗಿದ್ದರೂ ಮನೆ ಯಾವ ಮೂಲ್ಯಲ್ಲಿ ಎಂತಾ ಆದರೂ ಅದಕ್ಕೆ ಗೊತ್ತಾಗ್ತು. ಆ ನಮ್ನೀ ಸೂಟು ಸುಟ್ಟ ಮುದ್ಕಿದು.

'ಕಾಳನ, ಹಂಡಿಯ, ಯಾವ ಸುಡುಗಾಡು ಕುನ್ನಿಯಾ!? ಯಾವ್ದನ? ಹಡಬೆ ಕುನ್ಯಕ್ಕಗೂ ಹೆಸರು ಇಟಗಂಡು, ಆ ಹೆಸರಲ್ಲೇ ಅವರನ್ನ ಕರಕತ್ತ, ಪೊಕ್ಕಣ್ಣೆ ಮಾಡಿಕೆತ್ತ ಇಪ್ಪಲೇ ಎನಗೆಂತ ಬ್ಯಾರೆ ಉದ್ಯೋಗಿಲ್ಲ್ಯ? ನಿಂಗಕ್ಕಿಗೆ ಆಸ್ರೀ ಕುಡದಾತಲೀ ಅತ್ತೆ, ಒಂದು ಗಳಿಗೆ ಸುಮ್ಮನೆ ಮನಿಕ್ಯಳಿ ನೋಡನ. ಬರಿ ಹಲ್ಬದೇ ಆತು!' ಹೇಳಿ ವನಜತ್ತಿಗೆ ಸರಿ ಮಾಡಿ ಫೋರ್ಸಿಂದ ಹೇಳ್ಬುಡ್ಚು. ಅತ್ತೆ ಸೀತಮ್ಮಾ ಸುಮ್ಮಂಗಾತು.

'ಅಬಬಬಬಾ! ಏನ್ ಕೂಸೋ! ಖರೇ ಅಂದ್ರೂ ಜಮದಗ್ನಿ ಗೋತ್ರದ ಕೂಸೆಯಾ. ಸಂಶಯವೇ ಇಲ್ಲೆ. ಯಾವ ಕುನ್ನಿ ಹೇಳಿ ಕೇಳಿರೆ ಹ್ಯಾಂಗೆ ಜೋರ್ ಮಾಡ್ತು! ಅಬಬಬಬಾ! ಯಂಗನೂ ಅತ್ತೆ, ಸೊಸೆ ಎಲ್ಲಾ ನೋಡ್ಜವೆಯಾ. ಎಂತಾ ಹೇಳಿ ಈ ನಮ್ನೀ ಉರಕತ್ತ ಏನ ಮಳ್ಳ ಕೂಸು!?' ಹೇಳಿಕೆತ್ತ ಸೀತಮ್ಮಾ ಕಂಬಳಿ ಹೊದಕೆ ಮ್ಯಾಲೆ ಎಳ್ಕಂಡು ಹನಿ ವರ್ಗನ ಹೇಳಿ ಮಾಡ್ಚು.

'ಥೋ! ಈ ಮನೆ ಚಾಕ್ರಿಯೇ ಮುಗಿತಿಲ್ಲ್ಯಪಾ. ಬರೀ ಇದೇ ಆಗೋತು. ಆಸರಿ ಕುಡುದಪ್ಪ ಪುರ್ಸತ್ತಿಲ್ಲೇ ಮಧ್ಯಾನದ ಅಡಿಗಿಗೆ ಶುರು ಮಾಡ ಹೊತ್ತಾಗೋತು. ಆನೇ ಎಲ್ಲಾ ಮಾಡಿ ಮಾಡಿ ಸಾಯವು. ಹಳ್ಳಿ ಬದಿಗಿದ್ದ ಮಾಣಿ ಬ್ಯಾಡಾ ಬ್ಯಾಡಾ ಹೇಳಿ ಹೊಯ್ಕ್ಯಂಡಿ. ಬಡ್ಕಂಡಿ. ಆದರೂ ಕೆಳದ್ದೇ, ತಂಗೀ, ನೀ ಮೊದಲೇ ತಂಡದ ಆಳ ಮಾಣಿ ಸಂಗ್ತಿಗೆ ವಾರ ಗಟ್ಟಲೆ ಸಾಗರ ಬದಿಗೆ ಓಡಾಡ್ಕ್ಯಂಡು ಬ್ಯಾರೆ ಬಂದಿಗಿದೆ. ಗನಾ ಮಾಣಿ ಸಿಕ್ಕಿದ್ದಾ. ಸುಮ್ಮನೇ ಮಾಡ್ಕ್ಯ ಮಾರಾಯ್ತೀ ಹೇಳಿ ಕಟ್ಟ್ಬುಟ. ಥೋ! ಯನ್ನ ಕರ್ಮ,' ಹೇಳಿಕೆತ್ತ ಮಧ್ಯಾನಕ್ಕೆ ಎಂತಾ ಪದಾರ್ಥ ಮಾಡವು ಹೇಳಿ ವಿಚಾರ ಮಾಡಲ್ಲೆ ಶುರು ಮಾಡ್ಚು ವನಜತ್ತಿಗೆ.

"ಅಮೋ" ಹೇಳಿ ಯಾರೋ ಹಿತ್ಲಾಕಡಿಗೆ ಕೂಗ ಹಾಕ್ಜ.

'ಯಾರಾ ಅದು? ಎಂತು?' ಹೇಳಿ ಕೇಳ್ಚು ವನಜತ್ತಿಗೆ.

'ಆನ್ರಮಾ. ಗಣಪ್ ಗೌಡ' ಹೇಳಿ ಉತ್ತರ ಬಂತು.

'ಎಂತದಾ? ಎಂತಾ ಬೇಕಾಗಿತ್ತು? ಹೊಸಾ ಕತ್ತಿ ಇನ್ನೂ ಬರಲಿಲ್ಲವೋ. ಆ ಮಳ್ಳ ಆಚಾರಿ ಕತ್ತಿ ಮಾಡೋದು ಬಿಟ್ಟಿಕ್ಕೆ ಎಲ್ಲೋ ಕತ್ತೆ ಕಾಯೂಕೆ ಹೋಗಿದಾನೆ ಅಂತ ಕಾಣ್ತದೆ ಮಾರಾಯಾ,' ಹೇಳಿ ಹೇಳ್ಚು ವನಜತ್ತಿಗೆ. ವರ್ಷದ ಹೊಸ ಕತ್ತಿಗಳ  ಆರ್ಡರ್ ಇನ್ನೂ ಡೆಲಿವರಿ ಆಗಿ ಬಂದಿತ್ತಿಲ್ಲೆ. ಹೊಸ ಕತ್ತಿ ಬಪ್ಪಲ್ಲಿವರೆಗೆ ಗಣಪ್ ಗೌಡ ಅಂಡುಗೊಕ್ಕೆ ಒಳಗೆ ಕತ್ತಿ ಇಡ್ತಿನಿಲ್ಲೆ. ಅದೆಂತೋ ಆ ಮಳ್ಳ ಗೌಡನ ಪ್ರತಿಜ್ಞೆಯೋ, ಹರಕೆಯೋ ಎಂತದೋ ಹೇಳಪಾ. ಆ ಇತ್ರೆ ಜಾತಿ ಜನರ ವ್ಯಾಷಾ ಎಂತದು ಹೇಳಿ ಗೊತ್ತಾಗ್ತಿಲ್ಲೆ.

'ಹನಿ ನೀರು ಬೆಲ್ಲಾ ಕೊಡಿ ಅಮಾ' ಅಂದಾ ಗಣಪ್ ಗೌಡ.

'ಬರೀ ಇದೇ ಆತು ಈ ಮಳ್ಳ ಗೌಡಂದು. ಈಗ ಮಾತ್ರ ಆಸ್ರಿ ಕುಡಕಂಡು, ಅಂಡ್ಗೊಕ್ಕಿಗೆ ಕತ್ತಿ ಹೆಟ್ಟಿಗೆಂಬದನ್ನೂ ಮರ್ತಿಕ್ಕೆ ತ್ವಾಟದ ಬದಿಗೆ ಹೋದವಾ ಇಷ್ಟು ಲಗೂ ಬಂದ್ಬುಟ್ನಪಾ. ಎಂತಾ ವೇಷವನಾ?' ಹೇಳಿಕೆತ್ತಾ ಒಂದು ತಟ್ಯಲ್ಲಿ ಹನಿ ಬೆಲ್ಲಾ, ಒಂದು ಗಿಂಡಿಯಲ್ಲಿ ನೀರು ತಂದು, ತುದಿಗಾಲಲ್ಲಿ ಹಿತ್ಲಾಕಡಿಗೆ ಕುತ್ಗಂಡಿದ್ದ ಗಣಪ್ ಗೌಡಂಗೆ, 'ಹ್ಮಂ! ತಗ ಮಾರಾಯಾ, ನೀರು ಬೆಲ್ಲಾ. ಕವಳಕ್ಕೆ ಬೇಕಾ? ಈಗೇ ಹೇಳ್ಬುಡು ಮಾರಾಯಾ. ಕಡಿಗೆ ನಾ ಮೀಯೂಕ್ ಹೋದಾಗ ಅಲ್ಲಿ ಬಚ್ಚಲ ಮನೆ ಎದ್ರಿಗೆ ಬಂದಕಂಡು ಕವಳಾ ಕೊಡಿ ಅಮಾ ಹೇಳಿ ಕೂಗ್ಬೇಡಾ. ನಿಂದೆಲ್ಲಾ ಅಂಥದೇ ವೇಷ ಇರ್ತದೆ. ಬೇಕಾ ಕವಳಕ್ಕೆ? ಹಾಂ?' ಹೇಳಿ ವನಜತ್ತಿಗೆ ಕೇಳ್ಚು.

ತುದಿಗಾಲಲ್ಲಿ ಕುಂತಿದಿದ ಗಣಪ್ ಗೌಡ, ಅಮ್ಮ ಬಂತು ಹೇಳಿ, ತೊಡೆ ಸಂದಿ ಮ್ಯಾಲೆ ಮುಂಡು ಸರಿ ಮಾಡಿಕೆಂಡಾ. ನೀರು ಬೆಲ್ಲ ಇಸ್ಗಂಡಾ. 'ಕವಳಾನೂ ಕೊಟ್ಟೇ ಬಿಡಿ ಅಮಾ. ಕಡಿಗೆ ಮತ್ತೆಂತಕ್ಕೆ ಕರ್ಕರೆ ಮಾಡೋದು. ಅಲ್ಲ್ವರಾ?' ಹೇಳಿಕೆತ್ತ ಗೌಡಾ ತಟ್ಟೆಯಲ್ಲಿದ್ದ ಬೆಲ್ಲಾ ಗಂಟಲಿಗೆ ಬರ್ಮಾಡಿಕೆಂಡಾ. ಬೆಲ್ಲ ಕೆಳಗೆ ಇಳಿಯಕಿಂತ ಮೊದಲೇ ನೀರು ಕುಡದಾ. ವನಜತ್ತಿಗೆ ಕವಳಾ ತಪ್ಪಲೆ ಆ ಬದಿಗೆ ಹೋತು.

ನಾಕು ಕರಿಯಲೆ, ಎರಡು ಕೆಂಪಡಿಕೆ, ಒಂದು ಸುಮಾರು ದೊಡ್ಡ ಎಸಳು ತಂಬಾಕು ತಗ ಬಂತು ವನಜತ್ತಿಗೆ. 'ಸುಣ್ಣ ಅದ್ಯನಾ ಗಣಪಾ?' ಹೇಳಿ ಕೇಳ್ಚು. ಗಣಪ್ ಗೌಡ ಅದೇ ಹೊತ್ತಿಗೆ ತನ್ನ ಸುಣ್ಣದ ಕರಡಿಗೆ ಮುಚುಕಳದ ಕನ್ನಡಿಯಲ್ಲಿ ತನ್ನ ಮಂಗನ ಮಕಾ ನೋಡಿಕೆತ್ತ ನಿಂತವ, 'ಹಾಂ! ಅದೇ ಅಮಾ. ಸುಣ್ಣ ಒಂದೇ ಇರೋದು. ಬಾಕಿ ಎಂತೂ ಇಲ್ಲರಾ. ಎಲ್ಲಾ ಕರ್ಚಾಗೋಗದೇ,' ಹೇಳಿ ಸಣ್ಣ ಮಕಾ ಮಾಡ್ಜಾ.

'ಹಾಂ? ಎಲ್ಲಾ ಕರ್ಚಾಗೋಗದ್ಯಾ? ತಗ ತಗ. ಹಾಕ್ಯ ಮಾರಾಯಾ ಕವಳಾ. ಕವಳಿಲ್ಲದೆ ಕಡಿಗೆ ನಿನ್ನ ತಲೆ ಬಂದಾಗೋಕು,' ಹೇಳಿ ಕವಳಾ ಕೊಡ್ಚು.

ಗಣಪ್ ಗೌಡಾ ಕವಳಾ ಇಸಕಂಡು, ಎಲೆ ಚೊಕ್ಕಾ ಮಾಡಿಕೆತ್ತ, ಮತ್ತೆ 'ಅಮಾs' ಅಂದಾ. 'ಎಂತದಾ? ಮತ್ತೆಂತದು?' ಹೇಳಿ ಕೇಳ್ಚು ವನಜತ್ತಿಗೆ.

'ಅಮಾ ಹನಿ ಚಟ್ನೆ ಅದ್ಯಾ?' ಹೇಳಿ ಕೇಳ್ಬುಟಾ ಗೌಡ.

ಚಟ್ನೆ! ಅದೂ ಕವಳಕ್ಕೆ! ಇದೆಂತಾ ವಿಚಿತ್ರವಪಾ ಹೇಳಿ ಅಂದ್ಕಂಡ್ಚು ವನಜತ್ತಿಗೆ.

'ಎಂತಾ ಚಟ್ನೆಯಾ!? ಅಲ್ಲಾ ನೀ ದ್ವಾಸೆ ಸಂಗ್ತಿಗೆ ಸಹಿತ ಚಟ್ನೆ ಹಾಕ್ಯಂಬ ಪೈಕಿ ಅಲ್ಲ. ಇದೆಂತ ಕವಳದ ಸಂಗತಿಗೆ ಚಟ್ನೆ ಕೇಳ್ತೀಯಾ? ಹಾಂ? ಈಗ ಹನೀ ಮೊದಲು ಅಸ್ರೀ ಕುಡಿಬೇಕಾದ್ರೆ, ಚಟ್ನೆ ಬೇಕನಾ? ಹೇಳಿ ಕೇಳಿರೆ, ಬ್ಯಾಡ ಅಮಾ ಹೇಳಿ, ಆ ನಮ್ನೀ ಬೆಲ್ಲದಲ್ಲೇ ದ್ವಾಸೆ ಮುಳಿಗಿಸ್ಕೆಂಡು ಮುಳಿಗಿಸ್ಕೆಂಡು ತಿಂದ್ಕ ಹೋದ್ಯಲಾ? ಈಗ ಬಂದಕಂಡು ಕವಳದ ಸಂಗ್ತಿಗೆ ಚಟ್ನೆ ಕೇಳ್ತೀಯಲಾ? ಹಾಂ? ಎಂತಾಗ್ಯದೆ ನಿನಗೆ? ಹಾಂ?' ಹೇಳಿ ಸಮಾ ಮಾಡಿ ಜೋರ್ ಮಾಡ್ಚು ವನಜತ್ತಿಗೆ.

'ಅಯ್ಯೋ ಅಮಾ. ಕಾಯ್ ಚಟ್ನೆ ಅಲ್ಲದ್ರಾ ನಾ ಕೇಳಿದ್ದು,' ಅಂದಾ ಗೌಡಾ.

'ಕಾಯ್ ಚಟ್ನೆ ಅಲ್ಲಾ ಅಂದ್ರೆ ನಮ್ಮನೆಲ್ಲಿ ಎಂತಾರು ಸಿಗಡಿ ಚಟ್ನೆ ಮಾಡ್ತಾರೇನಾ? ಮಳ್ಳಪ್ಪಾ!' ಹೇಳಿ ಬೈತ್ತು ವನಜತ್ತಿಗೆ.

'ಇದು ಕವಳಕ್ಕೆ ಹಾಕ ಚಟ್ನೆ ಅಮಾ. ಹೆಗಡೇರ ಹತ್ತರ ಇರ್ತದೆ ನೋಡಿ. ಅದು ರುಚಿ ಇರ್ತದೆ. ಆ ಚಟ್ನೆ ಹನಿ ಕೊಡಿ ಹೇಳಿ,' ಅಂದಾ ಗೌಡ.

ಓಹೋ! ಇದು ಕವಳದ ಮಸಾಲೆ ಚಟ್ನೆ. ವನಜತ್ತಿಗೆ ಗಂಡ 'ಚಟ ಭಯಂಕರ' ರಾಂಭಾವ ಕವಳದ ಸಂಗ್ತಿಗೆ ಹಾಕ ಮಸಾಲೆ.

'ಥೋ ಮಾರಾಯಾ! ಅದೆಲ್ಲ ಹೆಗಡೇರ ಹತ್ತಿರ ಮಾತ್ರ ಇರ್ತದೆ. ಬೆಳಿಗ್ಗೆ ತೆಳ್ಳೇವಿಗೆ ಮಾಡಿದ ಕಾಯ್ ಚಟ್ನೆ ಹನಿ ಉಳ್ದದೆ. ಕೊಡ್ಲೇನಾ? ಹಾಂ? ಪಕ್ಕಾ ಮಳ್ಳಾಗೋಗಿದ್ದನಲಾ ನಾನು ನಿನ್ನ ಚಟ್ನೆ ವಿಷ್ಯ ಕೇಳಿ. ಹಾಂ?' ಹೇಳಿಕೆತ್ತ ವನಜತ್ತಿಗೆ ನೆಗ್ಯಾಡ್ಚು.

'ಕಿಮಾಮು ಅದ್ಯ?' ಹೇಳಿ ಕೇಳ್ಬುಟಾ ಗೌಡ ಈಗ.

'ಹಮಾಮು? ಅದೆಂತೆಕ್ಕೆ? ಇವತ್ತೆಂತಾ ಚೌರಾ ಮಾಡ್ಸೂಕೆ ಹೊಂಟೀಯಾ?' ಹೇಳಿ ಕೇಳ್ಚು ವನಜತ್ತಿಗೆ.

ಈಗ ಗೌಡಂಗೆ ಪೂರ್ತಿ confuse ಆತು.

'ಎಂತಾ ಚೌರಾ ಅಮಾ?' ಹೇಳಿ ಕೇಳ್ಜಾ ಗೌಡ.

'ಹಮಾಮು ಅಂದ್ರೆ ಶಾಬು ಅಲ್ಲದನಾ? ನೀನು ಮೀಯೂದು ಚೌರಾ ಮಾಡಿಸ್ದಾಗ ಮಾತ್ರ ಅಲ್ಲದನಾ ಗೌಡಾ? ಅದಕ್ಕೇ ಕೇಳ್ಜೆ' ಅಂತು ವನಜತ್ತಿಗೆ.

'ನಾ ಮೀಯೂವಾಗೆಲ್ಲ ಶಾಬು ಹಾಕೂಕಿಲ್ಲ ಅಮಾ' ಅಂದ್ಬುಟಾ ಗೌಡ. ಸರೀ ಆತು! ಮೀಯಕರೂ ಶಾಬು ಹಚ್ಗ್ಯತ್ನಿಲ್ಲೆ ಹೇಳ್ಯಾತು ಈ ಗೌಡಾ. 

'ಮತ್ತೆಂತಕ್ಕೆ ಹಮಾಮು ಕೊಡಿ ಹೇಳಿ ಕೇಳ್ತೀಯಾ? ವಸ್ತ್ರಾ ತೊಳಿಯೋ ಶಾಬು ಬೇಕಾಗಿತ್ತನಾ? ವಸ್ತ್ರಾ ತೊಳಿಯೋಕೆಲ್ಲಾ ನಾ ನಿನಗೆ ಅಷ್ಟು ಗನಾ ಮೈಗೆ ಹಾಕ ಹಮಾಮು ಶಾಬು ಕೊಡೋದಿಲ್ಲ. ಬೇಕಾದ್ರೆ ಹನಿ ಸರ್ಪಾ ಕೊಡ್ತೇನೆ. ಬೇಕಾ ಸರ್ಪಾ?' ಹೇಳಿ ಕೇಳ್ಚು ವನಜತ್ತಿಗೆ. ಸರ್ಪಾ ಅಂದ್ರೆ Surf ವಾಶಿಂಗ್ ಪೌಡರ್. ವನಜತ್ತಿಗೆ ಬಾಯಲ್ಲಿ ಸರ್ಪಾ.

'ಅಮಾ ಸರ್ಪಾ ಬ್ಯಾಡ್ರಾ. ಸರ್ಪಾ ತೆಕೆಂಡು ನಾ ಎಂತ ಮಾಡ್ಲೀ? ಕಡಿಗೆ ಸರ್ಪ ಕಚ್ಚ್ಬುಟ್ಟರೆ ಕಷ್ಟ. ಸರ್ಪ ಕಚ್ಚಿರೆ ಔಷದೀ ಇಲ್ಲವಂತೆ. ಹೌದೇನ್ರಾ?' ಹೇಳಿ ಕೇಳ್ಬುಟಾ ಗೌಡ.

'ಥೋ! ಮಾರಾಯಾ. ನಾ ಹೇಳಿದ್ದು ಸರ್ಪಾ, ಸರ್ಪಾ, ಬಟ್ಟೆ ತೊಳೆಯೋಕೆ ಹಾಕೋ ಶಾಬು ಹುಡಿ ಮಾರಾಯಾ. ಕಚ್ಚೋ ಸರ್ಪಾ ಅಲ್ಲ ಮಾರಾಯಾ. ಬಟ್ಟೆ ತೊಳೆಯೋಕೆ ಬೇಕಾದರೆ ಸರ್ಪದ ಹುಡಿ ಬೇಕಾದ್ರೆ ಕೊಡ್ತೇನೆ ಹೇಳಿ. ಹಮಾಮು ಮಾತ್ರ ಕೊಡೂಕಿಲ್ಲಾ. ತಿಳೀತಾ?' ಹೇಳ್ಚು ವನಜತ್ತಿಗೆ. ಆಖ್ರೀ ಡೀಲ್ ಕೊಡ್ಚು.

'ಅಯ್ಯೋ ಅಮಾ ನಾ ಕೇಳಿದ್ದು ಕಿಮಾಮು ಕಿಮಾಮು. ಕವಳಕ್ಕೆ ಹಾಕೋ ಕಿಮಾಮು' ಹೇಳಿ ಲಬೋ ಲಬೋ ಅಂದಾ ಗೌಡ.

ವನಜತ್ತಿಗೆ ಇನ್ನೂ ಕಿಮಾಮು ಅಂದ್ರೆ ಹಮಾಮು ಹೇಳ ಗುಂಗಲ್ಲೇ ಇತ್ತು.

'ಇದೆಂತ ವೇಷ್ವಾ? ಕವಳದ ಸಂಗ್ತಿಗೆ ಹಮಾಮು ಅಂದ್ರೆ ಶಾಬು ತಿಂತೀಯ? ಯಂತಕ್ಕಾ? ಒಳ್ಳೆ ಬಸರಿ ಬಯಕೆ ಇದ್ದಂಗೆ ಅದ್ಯಲ್ಲ. ಯಾರಿಗೆ ಬಯಕೆ? ಬೆಳ್ಳಿ ಬಸ್ರಿಯನಾ? ಬೆಳ್ಳಿ ಬಸ್ರಿಯಾದ್ರೆ ನಿಂಗೆ ಬಯಕೆಯನಾ ಗೌಡಾ? ಭಯಂಕರಾಯಿತಲಾ ನಿಂದು. ಹಾಂ?' ಹೇಳಿ ಗಣಪ್ ಗೌಡನ ಕಾಲು ಎಳತ್ತು ಅತ್ತಿಗೆ.

'ಬೆಳ್ಳಿ! ಬಸರೀ!? ಗೊತ್ತಿಲ್ಲ ಅಮಾ. ನಾಗು ಗೌಡನ ಕೇಳಬೇಕು. ಕೇಳ್ಕ್ಯ ಬಂದು ಹೇಳ್ತೇನೆ. ಈಗ ಹನಿ ಕಿಮಾಮಿದ್ದರೆ ಕೊಡಿ. ತಲಬು ಎದ್ದ್ಬುಟ್ಟದೆ. ಬೆಗ್ಗನೆ ಕವಳದ ಸಂಗತಿಗೆ ಕಿಮಾಮ್ ಹಾಕಲಿಕ್ಕೇ ಬೇಕು. ಕೊಡಿ ಅಮಾ!' ಹೇಳಿ ಗೌಡನ ವಾರಾತ.

'ಎಂತ ಮಳ್ಳ ಹಲ್ಬ್ತೀಯಾ? ಬೆಳ್ಳಿ ಬಸ್ರಿಯಾ ಹೇಳಿ ಕೇಳಿರೆ ನಾಗು ಗೌಡನ ಕೇಳ್ಕ್ಯ ಬಂದು ಹೇಳ್ತೇನೆ ಅಂತ ಮಳ್ಳ  ಹಲ್ಬ್ತೀಯಾ. ಬೆಳ್ಳಿ ನಿನ್ನ ಹೆಂಡ್ತಿಯಾ ಅಥವಾ ನಾಗು ಗೌಡನ ಹೆಂಡ್ತಿಯಾ? ಹಾಂ?' ಹೇಳಿ ವನಜತ್ತಿಗೆ ಗೌಡಂಗೆ ನೆಗಾಡಿಕೆತ್ತೆ  ಜೋರ್ ಮಾಡ್ಚು.

'ಥೋ ಅಮಾ! ಎಂತಾ ಮಾತು ಹೇಳಿ. ಬೆಳ್ಳಿ ನನ್ನ ಹೆಂಡ್ತಿಯೇ. ಆದ್ರೆ ಬಸರಿ ಹೌದಾ ಅಲ್ಲದಾ ಹೇಳಿ ನಿಕ್ಕಿ ಮಾಡಿ ಹೇಳೋದು ನಮ್ಮ ಕೇರಿಲಿ ನಾಗು ಗೌಡ ಒಬ್ಬನೇ ನೋಡಿ. ಅದಕ್ಕೇ ನಾಗು ಗೌಡನ ಕೇಳ್ಕ್ಯ ಬಂದು ಹೇಳ್ತೇನೆ ಅಂದೇ ಅಮಾ. ಕಿಮಾಮ್ ಅದ್ಯಾ?' ಹೇಳಿ ಮತ್ತೆ ಕೇಳ್ಜಾ ಗಣಪ್ ಗೌಡ.

ಈ ಗೌಡ ಕಿಮಾಮು ಹೇಳದಕ್ಕೂ ವನಜತ್ತಿಗೆ ಎಂಬ ಹೆಗಡತಿ ಹಮಾಮು ಅಂದ್ರೆ ಶಾಬು ಕೇಳ್ತಾ ಹೇಳಿ ತೆಳಕಂಡು ಅದರದ್ದೇ ಧಾಟಿಯಲ್ಲಿ ಮಳ್ಳ ಹಲಬದಕ್ಕೂ ಸರೀ ಆತು. ಅದೇ ಟೈಮಿಗೆ ಬೆಳಗಿನ ಗುಡ್ಡೆ ಬದಿಗೆ ಹೋಗಿ ಬಂದ ರೌಂಡ್ ಮುಗಿಸಿಕ್ಕೆ ವನಜತ್ತಿಗೆ ಗಂಡ ರಾಂಭಾವ ಎಂಟ್ರಿ ಕೊಟ್ಟಾ.

ಬಂದವನೇ ಕೈಕಾಲು ತೊಳಕತ್ತ ಹನೀ ಬಗ್ಗ್ಜಾ. ಅದೆಲ್ಲೋ ಹನಿ ವಾಯು ಪ್ರಕೋಪ ಹೇಳಿ ಕಾಣ್ತು. ಒಂದು ದೊಡ್ಡ ಹುರ್ಕೆ ಬಿಟ್ಬುಟಾ. ಅವಂಗೆ ಎಂತೂ ಫೀಲ್ ಆಜೇ ಇಲ್ಲೆ. ಎಲ್ಲ ಸಹಜವಪಾ ಹೇಳವರಾಂಗೆ, ಮ್ಯಾಲೆ ಎತ್ತಿ ಕಟ್ಟಿದ್ದ ಲುಂಗಿ ಕುಂಡೆ ಹಿಂದೆ ಹನೀ ಕೊಡವಿಕೆಂಡು, ಕೆಳಗೆ ಬಿಟ್ಟಗಂಡು, ಟುವಾಲಲ್ಲಿ ಕೈ ವರ್ಸಿಕೆತ್ತಾ, 'ಎಂತದಾ ಗಣಪಾ? ಹೊಸ ಕತ್ತಿ ಬಂದದ್ಯ ಹೇಳಿ ಕೇಳೂಕೆ ಬಂದಿಯನಾ? ಹಾಂ?' ಹೇಳಿ ಕೇಳ್ಜಾ.

'ಅಯ್ಯ! ನಿಂಗ ಹನಿ ಇಲ್ಲಿ ಕೇಳಿ. ಆನು ಹೇಳ್ತೀ. ಇವತ್ತು ಎಂತಾ ವೇಷ್ವನ ಈ ಗೌಡಂದು? ಕವಳಕ್ಕೆ ಎಂತೆಂತೋ ಕೇಳ್ತ್ನಪಾ. ಪಕ್ಕಾ ಮಳ್ಳರಾಂಗೆ' ಹೇಳ್ಚು ಗಂಡಂಗೆ ವನಜತ್ತಿಗೆ.

'ಎಂತದಳಾ?' ಹೇಳಿ ಹೆಂಡ್ತಿ ಕೇಳ್ಜಾ ರಾಂಭಾವ, 'ಎಂತದಾ ಗೌಡಾ? ಎಂತಾ ಕೇಳ್ತೀಯ? ಕವಳಕ್ಕೆ ಬೇಕನಾ? ಕೊಡಲಿಲ್ಲೇನಾ ಹೆಗಡತೀರು? ಹಾಂ?'

'ಹನೀ ಕಿಮಾಮು ಕೊಡಿ ಒಡ್ಯಾ,' ಅಂದಾ ಗಣಪ್ ಗೌಡ.

'ನಿಂಗೆ ಒಳ್ಳೆ ಕಿಮಾಮ್ ಹುಚ್ಚ್ ಹಿಡದಂಗೆ ಕಾಣ್ತದೆ ಮಾರಾಯಾ. ಅದೆಂತ ಅಷ್ಟು ಸೇರ್ತದ್ಯಾ ನಿಂಗೆ ಕಿಮಾಮು? ಸಂಗ್ತೀಗೆ ಚಟ್ನೆ, ಜರ್ದಾನೂ ಬೇಕನಾ? ಹಾಂ? ಹಾಕು ಮಾರಾಯಾ ಒಂದು ದೊಡ್ಡ ಚೊಲೋ ಕವಳಾವಾ,' ಹೇಳಿ ರಾಂಭಾವ ತನ್ನ ಹಡಪದ ಪೆಟ್ಟಿಗೆ ಸೈಜಿನ ಕವಳದ ಪೆಟ್ಟಿಗೆಯಿಂದ ಚಟ್ನಿ, ಕಿಮಾಮು, ಜರ್ದಾ ಎಲ್ಲಾ ತೆಗೆದು ತೆಗೆದು ಕೊಡಲ್ಲೆ ಶುರು ಮಾಡ್ಜಾ.

'ಸರೀ ಇದ್ದು ಜೋಡಿ. ನಿಂಗಕ್ಕಿಗೆ ಮತ್ತೆ ಈ ಮಳ್ಳ ಗೌಡಂಗೆ. ಅವಂಗೆ ಎಂತದು ಹೇಳಿ ಕೊಟ್ಟಿಕ್ಕೆ ಹನಿ ಒಳಗ ಬನ್ನಿ,' ಹೇಳಿಕ್ಕೆ ವನಜತ್ತಿಗೆ ಒಳಬದಿಗೆ ಹೋತು.

ರಾಂಭಾವ ಗಣಪ್ ಗೌಡಂಗೆ ಕವಳದ ಎಲ್ಲಾ ವ್ಯಂಜನಗಳಾದ ಚಟ್ನಿ, ಕಿಮಾಮು, ಜರ್ದಾ ಎಲ್ಲಾ ಕೊಟ್ಟಿಕ್ಕೆ ಒಳಬದಿಗೆ ಬಂದಾ.

'ಎಂತದೇ? ಎಂತಾ ಕರ್ದೆ? ಆನು ಈಗ ಪ್ಯಾಟಿಗೆ ಹೋಗಿ ಬರವು. ಮಾಣಿಕ್ ಚಂದ್ ಕರ್ಚಾಗೋಜು. ಇವತ್ತು ರಾತ್ರೆ ಬ್ಯಾರೆ ಮಂಗನಮನೆ ಭಾವನ ಮನೆಯಲ್ಲಿ ವರ್ಷಾಂತಕದ ಇಸ್ಪೀಟು ಮಂಡಲ ಸೇರದಿದ್ದು. ಅದಕ್ಕೇ ಹೋಗಿ ಮಾಣಿಕ್ ಚಂದಾ, ಅದು ಇದು ಹೇಳಿ ಎಲ್ಲಾ ತಂದ್ಕ ಬುಡ್ತೀ. ಎಷ್ಟು ದಿವಸ ನಡೀತನ ಮಂಡಲ. ಗೊತ್ತಿಲ್ಲೆ. ನಿಂಗೆಂತಾರು ತಪ್ಪದಿದ್ದನೆ ಪ್ಯಾಟಿಂದಾ?' ಹೇಳಿ ಕೇಳಿಕೆತ್ತ, ಲುಂಗಿ ಮ್ಯಾಲೆ ಎತ್ತಿಗೆತ್ತ ಒಳಬದಿಗೆ ಹೋದ ರಾಂಭಾವ.

'ಅದು ಎಂತಾ ವೇಷ್ವರಾ ನಿಂಗಳದ್ದು? ಆ ಕೆಲಸದವಕೆಲ್ಲಾ ಅದೆಂತಾ ಅದೆಲ್ಲ ತುಟ್ಟಿ ತುಟ್ಟಿ ಕವಳದ ಸಾಮಾನು ಎಲ್ಲ ಕೊಟ್ಟು ರೂಢಿ ಮಾಡಿ ಇಟ್ಟಿದ್ದಿ? ಕಮ್ಮಿ ಖರ್ಚು ಬತ್ತ? ಹಾಂ? ಸಾಕು ದೊಡ್ಡ ದಾನಶೂರ ಕರ್ಣ ಅಪ್ಪದು ನಿಂಗವು. ಮತ್ತ್ಮತ್ತ ಅವಂಗೆ ಆ ಚಟ್ನಿ, ಕಿಮಾಮು, ಜರ್ದಾ ಹೇಳಿ ಕೊಟ್ಟ್ಗತ್ತ ಇರಡಿ ನಿಂಗ. ನಿಂಗವು ಇಲ್ಲೇ ಅಂದ್ರೂ ಒಂದು ತಾಸಿಂದ ಯನ್ನತ್ತ್ರೆ ಕರ್ಕರೆ ಮಾಡಿಕೆತ್ತ ಕುಂತಿದಿದಾ ಮಳ್ಳ ಗೌಡಾ. ಬರಿ ಮಳ್ಳನೇಯಾ. ನೋಡಿ ಈಗಲೇ ಹನ್ನೊಂದು ಆಗೋತು. ಒಳಬದಿಗೆ ಎಂತೂ (ಕೆಲಸ) ಹಚ್ಚಿಗೆಂಡೇ ಆಜಿಲ್ಲೆ ಯಂಗೆ,' ಹೇಳಿ ಜಬರ್ದಸ್ತ್ ವಾರ್ನಿಂಗ್ ಕೊಡ್ಚು ಅತ್ತಿಗೆ.

'ಅಯ್ಯ! ಕೆಲಸಾ ಮಾಡಲ್ಲೆ ಆಳ್ಗಲೇ ಸಿಗ್ತ್ವಿಲ್ಲೇ ಮಾರಾಯ್ತೀ. ಅವು ಎಂತಾ ಕೇಳಿರೂ ಕೊಡದೇ. ತೆಳತ್ತಾ? ಇನ್ನು ಕೆಲೋ ಜನಾ, ನಿಮ್ಮ ಊಟ ನಮಗೆ ಸೇರೂಕಿಲ್ಲ. ಬಗೇಲಿ ಕುರಿ ಕೋಳಿ ಮಾಡ್ಸಿ ಅಂಬ. ಗೊತ್ತಿದ್ದಾ? ಕೇಳಿರೆ ಮಾಡಿ ಹಾಕ್ತ್ಯಾ? ಹಾಂ?' ಹೇಳಿ ರಾಂಭಾವ ಗಣಪ್ ಗೌಡನ ಬೇಡಿಕೆ ದೊಡ್ದದಲ್ಲಾ ಹೇಳಿಕೆತ್ತ ಪ್ಯಾಟಿಗೆ ಹೊಪಲೇ ಅಂಗಿ ಪ್ಯಾಂಟು ಹಾಕ್ಯಂಬಪ್ಪಲೆ ಹೇಳಿ ಒಳಬದಿಗೆ ಹೋದಾ.

ರಾಂಭಾವ ಪ್ಯಾಂಟು ಅಂಗಿ ಹಾಕ್ಯಂಡು, ತಯಾರಾಗಿ ಬಂದು, 'ಎಂತಾರು ತಪ್ಪದು ಇದ್ದನೇ? ಆನು ಹೊಂಟಿ ಈಗ ಪ್ಯಾಟಿಗೆ,' ಹೇಳಿ ಕೊನೇ ಬಾರಿಗೆ ಕೇಳ್ಜಾ.

'ಅಯ್ಯ! ಪ್ಯಾಂಟ್ ಹಾಕ್ಯಂಬುಟ್ರಾ!? ಯಂಗೆ ಇನ್ನೂ ಸಾಮಾನೇ ಸರಿಮಾಡಿ ನೋಡಿಕೆಂಡು ಆಗಿತ್ತಿಲ್ಲೆ. ಹನೀ ತಡೀರಾ. ಸಾಮಾನು ನೋಡಿಕೆಂಡು ಬಿಡ್ತೀ. ಐದೇ ನಿಮಿಷ. ಅಕಾ?' ಹೇಳಿ ವನಜತ್ತಿಗೆ ಸಾಮಾನು ಪಟ್ಟಿ ನೋಡಲ್ಲೆ ಶುರು ಮಾಡ್ಚು.

'ಥೋ ನಿನ್ನ. ಲಗೂ ನೋಡ್ಕ್ಯ ಮಾರಾಯ್ತೀ,' ಹೇಳಿ ಅಲ್ಲೇ ಜಗಲಿ ಮ್ಯಾಲೆ ಕುಕ್ಕರಿಸಿದ ರಾಂಭಾವ ಮತ್ತೊಂದು ಭೂತಗವಳವನ್ನು, ಬಾಯಿ 'ಆ' ಹೇಳಿ ದೊಡ್ಡಕೆ ಕಳದು, ದವಡೆ ಎಜ್ಜೆಯಲ್ಲಿ ಹೆಟ್ಟಿಗೆಂಡು, ಹೆಂಡತಿ ಸಾಮಾನು ಪಟ್ಟಿ ನೋಡಿಕೆಂಬಷ್ಟರಲ್ಲಿ ತಾನು ಓಸಿ ಪಟ್ಟಿ ಮಾಡಿಕೆಂಡ್ರಾತು ಹೇಳಿ, ಆವತ್ತು ಕಟ್ಟಬಹುದಾದ ಓಸಿ ನಂಬರುಗಳ ಪಟ್ಟಿ ಮಾಡಲ್ಲೆ ಶುರು ಮಾಡ್ಜಾ.

ಚಟ್ನೆ, ಕಿಮಾಮು, ಜರ್ದಾ ಎಲ್ಲ ಹಾಕಿದ ಕವಳ ಹಾಕಿ ಹ್ಯಾಪಿ ಪೋಸಿನಲ್ಲಿ ಗಣಪ್ ಗೌಡ (ಸ್ಯಾಂಪಲ್ ಚಿತ್ರ ಅಷ್ಟೇ)

Tuesday, July 01, 2014

ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

ರಾಮ್ ಜೇಠ್ಮಲಾನಿ. ಯಾರಿಗೆ ಗೊತ್ತಿಲ್ಲ. ದೊಡ್ಡ ವಕೀಲರು. ಸಂವಿಧಾನ ಶಾಸ್ತ್ರಜ್ಞರು. ಹಿಂದೆ ಕಾನೂನು ಮಂತ್ರಿ ಮತ್ತು ಇತರೆ ಮಂತ್ರಿ ಆಗಿದ್ದವರು. ತುರ್ತು ಪರಿಸ್ಥಿತಿ ಟೈಮಿನಲ್ಲಿ ಅಂಜದೇ ಇಂದಿರಾ ಗಾಂಧಿ ವಿರುದ್ಧ ತಿರುಗಿ ಬಿದ್ದು ಹೋರಾಡಿದವರು. ತೊಂಬತ್ತು ವರ್ಷವಾದರೂ ಭಯಂಕರ ಹುರುಪಿನಿಂದ ಇರುವವರು.

ರಾಮ ಜೇಠ್ಮಲಾನಿ ಹೆಸರಲ್ಲಷ್ಟೇ ರಾಮ. ಬಾಕಿ ಎಲ್ಲದರಲ್ಲಿ ಕೃಷ್ಣ ಪರಮಾತ್ಮ. ಹಾಗಂತ ಅವರೇ ಹೇಳಿಕೊಳ್ಳುತ್ತಾರೆ. ಅಧಿಕೃತವಾಗಿಯೇ ಎರಡು ಮದುವೆ ಆದವರು. 'ಅದೆಂಗ್ರೀ ಅಧಿಕೃತವಾಗಿ ಎರಡು ಮದುವೆ!?' ಅಂತ ಕೇಳಿದರೆ, 'ಏ ನಾನು ಎರಡನೇ ಮದುವೆ ಆಗಿದ್ದು ೧೯೪೭ ರಲ್ಲಿ. ಆವಾಗ ಇನ್ನೂ ನಮ್ಮ ಸಂವಿಧಾನ ಬಂದಿರಲಿಲ್ಲ. ಹಾಗಾಗಿ ಎಲ್ಲಾ ಓಕೆ,' ಅಂತ ಹೇಳಿ, ತಮ್ಮ ಪರ್ಫೆಕ್ಟ್ ಲಾ ಪಾಯಿಂಟ್ ಹಾಕಿ ನಕ್ಕು ಬಿಡುತ್ತಾರೆ. ಪಾರ್ಟಿಗೆ ಹೋದರೆ ಈ ವಯಸ್ಸಿನಲ್ಲೂ ಸುತ್ತ ಮುತ್ತ ಸಖಿಯರೇ ಸಖಿಯರು. ವರ್ಣರಂಜಿತ ಕೃಷ್ಣ ಪರಮಾತ್ಮನಂತಿರುವ ಅವರ ಕೃಷ್ಣಲೀಲೆಗಳ ಕಥೆಗಳೂ ಅಷ್ಟೇ ಮಜೇದಾರ್. 'ಅಯ್ಯೋ, ನನ್ನ ಕೃಷ್ಣಲೀಲೆಗಳ ಬಗ್ಗೆ ಮುಚ್ಚಿಡುವಂತದ್ದು ಏನೂ ಇಲ್ಲಾರೀ. ಆದ್ರೆ ಬೇರೆಯವರಿಗೆ ಮುಜುಗರವಾಗಬಾರದು ಅಂತ ನಾನು ಅದರ ಬಗ್ಗೆ ಹೆಚ್ಚು ಮಾತಾಡುವದಿಲ್ಲ. ಅವರ ಅನುಮತಿ ತೆಗೆದುಕೊಂಡು ಬನ್ರೀ. ಎಲ್ಲ ಬಿಚ್ಚಿ ಹೇಳಿ ಬಿಡ್ತೇನಿ,' ಅಂತ ತೊಂಬತ್ತರ ಈ ಅಜ್ಜ(!) ಪೆಕಪೆಕಾ ಅಂತ ತುಂಟ ನಗೆ ಬೀರುತ್ತಾರೆ. 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ, ರಜತ್ ಶರ್ಮಾ,  'ರಾಮ್ ಸಾಬ್, ನಿಮಗೆ ಇಬ್ಬರು ಹೆಂಡತಿಯರಂತೆ. ಹೌದಾ?' ಅಂತ ಕಿಚಾಯಿಸಲು ನೋಡಿದಾಗ,' ರಜತ್, ನನ್ನ ಒಂದನೇ ಹೆಂಡತಿ ನಿನ್ನ ಒಂದೇ ಹೆಂಡತಿಕಿಂತ ಸುಖವಾಗಿದ್ದಾಳೆ ಕಣಯ್ಯಾ' ಅಂತ ವಾಪಸ್ ಜೋಕ್ ಹೊಡೆದಿದ್ದರು. ಅವರ ಪಂಚ್ ಲೈನಿಗೆ, ಡೈಲಾಗ್ ಡೆಲಿವರಿ ಶೈಲಿಗೆ ಅಲ್ಲಿ ನೆರೆದಿದ್ದ ಸಭಿಕರು ಹೊಡೆದ ಸೀಟಿ, ಚಪ್ಪಾಳೆ ಅಬ್ಬರಕ್ಕೆ ರಜತ್ ಶರ್ಮಾನ ಬಕ್ಕ ತಲೆ ಮೇಲಿನ ವಿಗ್ಗು ಅಲ್ಲಾಡಿ ಹೋಗಿತ್ತು. ಅದು ಜೇಠ್ಮಲಾನಿ ತಾಕತ್ತು.

೧೯೫೦ ರ ಸಮಯ. ಆಗ ಜೇಠ್ಮಲಾನಿ ಮುಂಬೈನಲ್ಲಿ ದೊಡ್ಡ ಕ್ರಿಮಿನಲ್ ವಕೀಲರೆಂದು ಪ್ರಖ್ಯಾತರಾಗುತ್ತಿದ್ದ ಸಮಯ. ದೇಶ ವಿಭಜನೆಯಾದಾಗ ಕರಾಚಿ ಬಿಟ್ಟು ಮುಂಬೈಗೆ ಬಂದಿದ್ದರು. ಮುಂಬೈನಲ್ಲಿ ಮತ್ತೆ ವಕೀಲಿಕೆ ಶುರು ಮಾಡಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿದ್ದರು ಜೇಠ್ಮಲಾನಿ. ಆ ಸಮಯದಲ್ಲಿ ಅವರಿಗೆ ಒಂದು ಅಂತರಾಷ್ಟ್ರೀಯ ಕಾನೂನು ಸಮಾವೇಶಕ್ಕೆ ಆಹ್ವಾನ ಬಂತು. ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ನಗರಕ್ಕೆ ಹೊರಟರು ಜೇಠ್ಮಲಾನಿ. ಅದು ಅವರ ಮೊತ್ತ ಮೊದಲ ವಿದೇಶ ಪ್ರಯಾಣ ಬೇರೆ.

ಎಲ್ಲ ತಯಾರಾಗಿ ಹೊರಟರು. ಕರಾಚಿಯಲ್ಲಿ ವಿಮಾನ ನಿಂತಿತು. ಜೇಠ್ಮಲಾನಿ ಕರಾಚಿ ಮೂಲಕ ಹೋಗುತ್ತಿದ್ದಾರೆ ಅಂತ ತಿಳಿದ ಅವರ ಗೆಳೆಯ, ಹಳೆಯ ಲಾ ಪಾರ್ಟನರ್ ಮೊದಲೇ ಒಂದು ಸೂಟಿಗೆ ಆರ್ಡರ್ ಕೊಟ್ಟಿದ್ದರು. ಅವರ ಕರಾಚಿಯ ಖಾಸ್ ದರ್ಜಿ ವಿಮಾನ ನಿಲ್ದಾಣಕ್ಕೇ ಸೂಟ್ ತೆಗೆದುಕೊಂಡು ಬಂದು, ಟ್ರಯಲ್ ನೋಡಿ, ಫೈನಲ್ ಟಚ್ ಕೊಟ್ಟು, ಕರಾಚಿ ಬಿಡುವಷ್ಟರಲ್ಲಿ ಹೊಸದೊಂದು ಸೂಟು ಕೊಟ್ಟು ಹೋಗಿದ್ದ. ಕರಾಚಿ ಬಿಟ್ಟು ಬಂದಿದ್ದರೂ ಕರಾಚಿಯ ಮಿತ್ರರು, ಆತ್ಮೀಯರು ಜೇಠ್ಮಲಾನಿ ಅವರನ್ನು ಮರೆತಿರಲಿಲ್ಲ.

ಜೇಠ್ಮಲಾನಿ ಹೋಗಿ ಮುಟ್ಟಿದರು ಸಿರಿಯಾದ ಡಮಾಸ್ಕಸ್ಸಿಗೆ. ಸುಮಾರು ಹತ್ತು ಹದಿನೈದು ದಿವಸಗಳ ಅಧಿವೇಶನ, ಕೆಲಸ ಎಲ್ಲ ಇತ್ತು. ದೇಶ ವಿದೇಶಗಳ ಕಾನೂನು ಪರಿಣಿತರೆಲ್ಲ 'ಹೌದು! ಹೌದು!' ಅಂತ ತಲೆದೂಗುವಂತೆ ವಿಷಯ ಮಂಡನೆ ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದೇ ಗಳಿಸಿದ್ದು. ಭಯಂಕರ ತಲೆ ಅವರದ್ದು.

ರಾತ್ರಿ ಸ್ವಲ ಖಾನಾ ಪೀನಾ ಮಾಡಿ, ರಿಲ್ಯಾಕ್ಸ್ ಆಗಿ ಬರೋಣ ಅಂತ ಯಾವದೋ ಕ್ಲಬ್ಬಿಗೆ ಹೋಗಿ ಕುಳಿತರು ಜೇಠ್ಮಲಾನಿ. ಅಲ್ಲಿನ ಡ್ಯಾನ್ಸರ್ ಒಬ್ಬಳ ರೂಪದಲ್ಲಿ ಬಂದು ಕಾಡಿತ್ತು ಮಾಯೆ! ಫುಲ್ ಫಿದಾ ಆಗಿ ಬಿಟ್ಟರು ನಮ್ಮ ಕೃಷ್ಣ ಪರಮಾತ್ಮ. ಪೂರ್ತಿ ರಾತ್ರಿ ಆಕೆಯ ಡ್ಯಾನ್ಸನ್ನೇ ನೋಡುತ್ತ ಕುಳಿತು ಬಿಟ್ಟರು. ಬೆಳಗಿನ ಜಾವ ಕ್ಲಬ್ ಮುಚ್ಚಿ, ಎದ್ದು ಹೋಟೆಲಿಗೆ ಬಂದರೂ ನಿದ್ದೆ ಇಲ್ಲ. ಆ ಕ್ಲಬ್ಬಿನ ಡ್ಯಾನ್ಸರ್ ತನು, ಮನ ಎಲ್ಲ ಆವರಿಸಿಕೊಂಡು ಕೃಷ್ಣ ಪರಮಾತ್ಮ ಜೇಠ್ಮಲಾನಿ ಫುಲ್ ಹಾಪ್ ಆಗಿ ಬಿಟ್ಟರು. ಹೇಗೋ ಮಾಡಿ ಮರುದಿವಸದ ಅಧಿವೇಶನದ ಕೆಲಸ ಮುಗಿಸಿ ಸಂಜೆಯಾಗುವದನ್ನೇ ಕಾಯುತ್ತಿದ್ದರು. ಸಂಜೆ ಆದ ಕೂಡಲೇ ಮತ್ತೆ ಅದೇ ಕ್ಲಬ್ಬಿಗೆ ಹೋಗಿ ಅದೇ ಡ್ಯಾನ್ಸರ್ ಡಾನ್ಸ್ ನೋಡುತ್ತ ಕುಳಿತು ಬಿಡುತ್ತಿದ್ದರು.

ಒಂದೆರೆಡು ದಿವಸ ಹೀಗೆ ಆಯಿತು. ಮೂರನೇ ದಿವಸ ಹೋಗಿ, 'ಹಲೋ, ಐ ಯಾಮ್  ರಾಮ್. ಫ್ರಾಂ ಇಂಡಿಯಾ. ಯುವರ್ ಗುಡ್ ನೇಮ್ ಪ್ಲೀಸ್?' ಅಂತ ಮೆಲ್ಲಗೆ ಕಾಳು ಹಾಕಿದರು ಜೇಠ್ಮಲಾನಿ. ಕಾಳು ಹಾಕುವದನ್ನು ಅವರಿಗೆ ಹೇಳಿ ಕೊಡಬೇಕೇ? ಅದರಲ್ಲಿ ಮಾಹಿರ್ ಅವರು. ಪಾಪ ಆ ಅರಬ್ಬೀ ಸುಂದರಿಗೂ ಸಹ ಇವರ ಮೇಲೆ ಏನೋ ಅಕ್ಕರೆ. ಆದರೆ ಭಾಷೆಯದೇ ಸ್ವಲ್ಪ ತೊಂದರೆ. ಜೇಠ್ಮಲಾನಿ ಅವರಿಗೆ ಅರೇಬಿಕ್ ಭಾಷೆ ಬರುತ್ತಿದ್ದಿಲ್ಲ. ಅವಳಿಗೆ ಅರೇಬಿಕ್ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಆದರೆ ಪರಸ್ಪರ ಆಕರ್ಷಣೆ, ಲವ್ವು, ಡವ್ವಿಗೆ ಭಾಷೆ ಯಾಕೆ? ಸನ್ನೆ ಓಕೆ ಅಂತ ಹೇಳಿ, ರಾಮ ಜೇಠ್ಮಲಾನಿ ರಾಮನನ್ನು ಓಡಿಸಿ, ಪೂರ್ತಿ ಕೃಷ್ಣಾವತಾರ ಎತ್ತಿ, ರಾಧಾ ಕೃಷ್ಣ ಸರಸ ಸಲ್ಲಾಪ ಶುರು ಹಚ್ಚಿಕೊಂಡೇ ಬಿಟ್ಟರು. ಹಗಲು ಪೂರ್ತಿ ಅಧಿವೇಶನದ ಕಲಾಪ. ಸಂಜೆಯಾದ ತಕ್ಷಣ ಬೆಳಗಿನ ಜಾವದ ತನಕ ಅರಬ್ಬೀ ಸುಂದರಿಯೊಂದಿಗೆ ಸಲ್ಲಾಪ.

ಏನು ಮಾಡೋದು? ವಾಪಸ್ ಹೋಗೋ ಟೈಮ್ ಬಂತು. 'ಪತ್ರಾ ಗಿತ್ರಾ ಬರಕೊಂಡು, ಪ್ರೀತಿ ಗೀತಿ ಮಾಡಿಕೊಂಡು ಇರೋಣ. ಓಕೆ?' ಅಂತ ಅರಬ್ಬೀ ಸುಂದರಿಗೆ ಹೇಳಿ ವಾಪಾಸ್ ಬಂದರು ಜೇಠ್ಮಲಾನಿ. ಮುಂಬೈಗೆ ವಾಪಸ್ ಬಂದರೆ ಅವಳದ್ದೇ ನೆನಪು. ಏನೂ ಬೇಡ ಮತ್ತೆ ಡಮಾಸ್ಕಸ್ಸಿಗೆ ಹೋಗಿ ಬಿಡೋಣ ಅನ್ನಿಸುತ್ತಿತ್ತು. ಆದ್ರೆ ಏನು ಮಾಡೋದು? ಕರ್ಮ. ಪತ್ರ ಬರೆಯಲು ಶುರುವಿಟ್ಟುಕೊಂಡರು. ಮತ್ತೆ ಅದೇ ಭಾಷೆಯ ತೊಂದರೆ. ಇವರು ಇಂಗ್ಲೀಷ್ ನಲ್ಲಿ ಬರೆದ ಪತ್ರ ಆಕೆ ಯಾರದ್ದೋ ಹತ್ತಿರ ಓದಿಸಿ, ಅರ್ಥ ಮಾಡಿಸಿಕೊಂಡು, ಅರಬ್ಬೀ ಭಾಷೆಯಲ್ಲಿ ಇವರಿಗೆ ಉತ್ತರ ಬರೆಯುತ್ತಿದ್ದಳು. ಇವರು ಇಲ್ಲಿ ಮುಂಬೈನಲ್ಲಿ ಇನ್ಯಾರನ್ನೋ ಹಿಡಿದು, ಅರಬ್ಬೀ ಭಾಷೆಯಲ್ಲಿದ್ದ ಪತ್ರ ಓದಿಸಿಕೊಂಡು, ಮತ್ತೆ ಇಂಗ್ಲೀಷ್ ನಲ್ಲಿ ಮರು ಉತ್ತರ ಬರೆಯುತ್ತಿದ್ದರು. ದೊಡ್ಡ ತೊಂದರೆ. ದೊಡ್ಡ ತಾಪತ್ರಯ.

ಹೇಳಿ ಕೇಳಿ ಜೇಠ್ಮಲಾನಿ ಮೆದುಳು ಅಂದ್ರೆ ಅದು ಅಂತಿಂಥ ಮೆದುಳಲ್ಲ. ಸೂಪರ್ ಕಂಪ್ಯೂಟರ್ ಅದು. ತಮ್ಮ ಅರಬ್ಬೀ ಸುಂದರಿ ಜೊತೆ ಸರಾಗವಾಗಿ ಪತ್ರ ವ್ಯವಹಾರ ಮಾಡಲು ಅನುಕೂಲವಾಗುವಂತೆ ತಾವೇ ಏಕೆ ಅರೇಬಿಕ್ ಕಲಿಯಬಾರದು ಅಂತ ಜೇಠ್ಮಲಾನಿ ಯೋಚಿಸಿದರು. ತಲೆಯಲ್ಲಿ ವಿಚಾರ ಬಂದಿದ್ದೇ ತಡ ಮಾಡದೇ ಒಬ್ಬ ಅರೇಬಿಕ್ ಓದಿದ್ದ ಮೌಲ್ವಿಯನ್ನು ಅರೇಬಿಕ್ ಪಾಠಕ್ಕೆ ಗುರ್ತು ಮಾಡಿಕೊಂಡೇ ಬಿಟ್ಟರು. ಆ ಮೌಲ್ವಿ ಬಂದು ಜೇಠ್ಮಲಾನಿ ಅವರಿಗೆ ಅರೇಬಿಕ್ ಪಾಠ ಹೇಳಿಕೊಡಲು ಶುರು ಮಾಡಿದ. ತನ್ಮಯತೆಯಿಂದ ಅರೇಬಿಕ್ ಕಲಿಯಲು ಶುರು ಮಾಡಿದರು ಜೇಠ್ಮಲಾನಿ. ಒಮ್ಮೆ ಅರೇಬಿಕ್ ಬಂದರೆ ಸಾಕು, ಸಿರಿಯನ್ ಡವ್ ಜೊತೆ ಮನ ಬಿಚ್ಚಿ ಮಾತಾಡಬಹುದು. ಆಕೆಯೂ ಅಷ್ಟೇ. ಬೇಗ ಬೇಗನೆ ಅರೇಬಿಕ್ ಕಲಿಸಿಕೊಡಯ್ಯಾ! ಅಂತ ಆತುರ ಅವರದ್ದು.

ಒಂದು ದಿವಸ ಜೇಠ್ಮಲಾನಿ ಕಚೇರಿಯಲ್ಲಿದ್ದರು. ಅರೇಬಿಕ್ ಕಲಿಸುವ ಮೌಲ್ವಿ ಬಂದು ಕೂತಿದ್ದ. ಅರೇಬಿಕ್ ಪಾಠ ನಡೆದಿತ್ತು. ಯಾರೋ ಕಕ್ಷಿದಾರರು ಬಂದರು. ಅವರ್ಯಾರೋ ಆಯುರ್ವೇದ ಪಂಡಿತರಂತೆ. ಅರೇಬಿಕ್ ಕಲಿಯುವ ತರಾತುರಿಯಲ್ಲಿದ್ದ  ಜೇಠ್ಮಲಾನಿ ಬೇಗಬೇಗನೆ ಆ ಆಯುರ್ವೇದ ಪಂಡಿತರನ್ನು ನಿಪಟಾಯಿಸಿ ಕಳಿಸಿದರು. ಆಯುರ್ವೇದ ಪಂಡಿತರು ಹೋಗೋ ಮೊದಲು, ಏನೋ ಒಂದು ಔಷದಿ ತರಹದ ಬಾಟಲಿ ಕೊಟ್ಟು, 'ಒಪ್ಪಿಸಿಕೊಳ್ಳಿ ಸ್ವಾಮೀ' ಅನ್ನುವ ಧನ್ಯತಾ ಭಾವದಿಂದ ಹೇಳಿದರು. 'ಸರಿ, ಸರಿ. ಆಯಿತು ಹೋಗಿ ಬನ್ನಿ' ಅಂತ ರಾಮ್  ಜೇಠ್ಮಲಾನಿ ಅವರನ್ನು ಸಾಗಹಾಕಿದರು. ಅವರು ಕೊಟ್ಟ ಔಷದಿ ಬಾಟಲಿಯನ್ನು ಪಕ್ಕಕ್ಕೆ ಸರಿಸಿಟ್ಟರು. ಅವರಿಗೆ ಅದು ಏನು ಅಂತಲೂ ಗೊತ್ತಿರಲಿಕ್ಕೆ ಇಲ್ಲ. ಇನ್ನು ಆ ಔಷದಿ ತೆಗೆದುಕೊಳ್ಳುವದು ದೂರದ ಮಾತು. ಏನೋ ಕಕ್ಷಿದಾರರು, ಪ್ರೀತಿಯಿಂದ ಕೊಟ್ಟಿರುತ್ತಾರೆ ಅಂತ ಇಸಿದುಕೊಂಡಿದ್ದರು ಅಷ್ಟೇ.

ಅರೇಬಿಕ್ ಕಲಿಸಲು ಬಂದಿದ್ದ ಮೌಲ್ವಿ ಅಲ್ಲೇ ಕುಳಿತು ಎಲ್ಲ ನೋಡುತ್ತಿದ್ದನಲ್ಲ. ಅವನ ಕಣ್ಣುಗಳು ಇಷ್ಟಗಲ ಅರಳಿಬಿಟ್ಟವು ಆ ಔಷದಿ ಬಾಟಲಿ ನೋಡಿ. 'ನಿಮಗೆ ಅದು ಬೇಡ ಅಂತಾದರೆ ನಾನು ತೆಗೆದುಕೊಂಡು ಹೋಗಲಾ?' ಅಂತ ಕೇಳೇಬಿಟ್ಟ ಮೌಲ್ವಿ. 'ಆಯಿತಯ್ಯ. ತೊಗೋ. ತೊಗೊಂಡು ಹೋಗಿ ಮಜ್ಜಾ ಮಾಡು' ಅಂತ ಹೇಳಿ ಅವನಿಗೆ ಆ ಔಷದಿ ಬಾಟಲಿ ಕೊಟ್ಟ ಜೇಠ್ಮಲಾನಿ ತಮ್ಮ ಅರೇಬಿಕ್ ಕಲಿಕೆಯೆತ್ತ ಗಮನ ಹರಿಸಿದರು.

ಆವತ್ತಿನ ಪಾಠ ಮುಗಿಸಿ, ಔಷದಿ ಬಾಟಲಿ ತೊಗೊಂಡು ಹೋದ ಮೌಲ್ವಿ. ಅವತ್ತೇ ಕೊನೆ. ನಂತರ ನಾಪತ್ತೆಯಾಗಿಬಿಟ್ಟ. ಅರೇಬಿಕ್ ಕಲಿಯಲು ತುಂಬ ಉತ್ಸುಕರಾಗಿದ್ದ ರಾಮ್ ಜೇಠ್ಮಲಾನಿ, 'ಎಲ್ಲಿ ಹೋದನೋ ಏನೋ? ಒಳ್ಳೆ ಟೈಮ್ ನಲ್ಲಿ ಕೈಕೊಟ್ಟುಬಿಟ್ಟನಲ್ಲ ಈ ಅರೇಬಿಕ್ ಮಾಸ್ತರ್. ಥತ್ ಇವನ!' ಅಂತ ಕೈ ಕೈ ತಿಕ್ಕಿಕೊಂಡು, ಆ ಹೊತ್ತಿನ ಮಟ್ಟಿಗೆ ಅರೇಬಿಕ್ ಕಲಿಯೋ ಆಸೆ ಬಿಟ್ಟು ಕೂತಿದ್ದರು. ಸಿರಿಯನ್ ಸುಂದರಿಗೆ ಅರೇಬಿಕ್ ಭಾಷೆಯಲ್ಲಿ ಪತ್ರ ಬರೆಯೋಣ ಅಂದುಕೊಂಡರೆ ಪಾಪ ಹೀಗಾಗಿ ಬಿಡಬೇಕೆ? ಛೆ!

ಸುಮಾರು ಒಂದು ತಿಂಗಳಾದ ಮೇಲೆ ಮೌಲ್ವಿ ಪ್ರತ್ಯಕ್ಷನಾದ.

'ಏನ್ರೀ!? ಎಲ್ಲಿ ನಾಪತ್ತೆಯಾಗಿದ್ದಿರಿ ಮೌಲ್ವೀ ಸಾಬ್? ಅದೂ ಹೇಳದೇ ಕೇಳದೇ ಟೋಟಲ್ ಸಿಂಕಾಗಿ ಬಿಟ್ಟಿದ್ದಿರಿ. ಏನು ಸಮಾಚಾರ?' ಅಂತ ತಮ್ಮ ಅರೇಬಿಕ್ ಗುರುವನ್ನು ವಿಚಾರಿಕೊಂಡರು ಜೇಠ್ಮಲಾನಿ.

'ಏನು ಹೇಳೋದು ಸಾಬ್!' ಅಂತ ಏನೋ ಅನಾಹುತವಾಗಿದೆ ಅನ್ನುವಂತೆ ದೊಡ್ಡ ನಿಟ್ಟುಸಿರು ಬಿಟ್ಟ ಮೌಲ್ವಿ.

'ಏನ್ರೀ ಏನಾಯಿತು?' ಸ್ವಲ್ಪ ಘಾಬರಿ ಬಿದ್ದೇ ಕೇಳಿದರು  ಜೇಠ್ಮಲಾನಿ.

'ಅದು ಆ ಔಷದಿ......' ಅಂತ ಎಳೆದ ಮೌಲ್ವಿ.

ಜೇಠ್ಮಲಾನಿ ಅವರಿಗೆ  ಅದರ ನೆನಪೂ ಇರಲಿಲ್ಲ. ಮೌಲ್ವಿಯೇ ನೆನಪು ಮಾಡಿಕೊಟ್ಟ.

'ಹಾಂ! ಅದು. ಆವತ್ತು ಪಂಡಿತರು ಕೊಟ್ಟು ಹೋಗಿದ್ದು. ನೀವು ಆಸೆಪಟ್ಟು ಕೇಳಿ ತೆಗೆದುಕೊಂಡು ಹೋಗಿದ್ದಿರಿ. ಅದನ್ನು ತೊಗೊಂಡು ಒಂದಕ್ಕೆರೆಡು ಆಯಿತಾ? ಛೆ! ಈಗ ಹೇಗಿದ್ದೀರಿ? ಎಂತಾ ಆಯುರ್ವೇದಿ ಔಷದಿ ಆಗಿತ್ತೋ ಏನೋ!?' ಅಂತ ಸಂತಾಪ ಮತ್ತೊಂದು ವ್ಯಕ್ತಪಡಿಸಿದರು.

'ಅಯ್ಯೋ ಜೇಠ್ಮಲಾನಿಜೀ! ಅದಲ್ಲ ವಿಷಯ!' ಅಂತ ತಲೆ ಮತ್ತೂ ಕೆಡಿಸಿಬಿಟ್ಟ ಮೌಲ್ವಿ.

'ಏನ್ರೀ ಮತ್ತೆ?' ಅಂತ ಕೊಂಚ ಅಸಹನೆಯಿಂದ ಕೇಳಿದರು ಜೇಠ್ಮಲಾನಿ.

'ನನ್ನ ಹೆಂಡತಿ ಸತ್ತು ಹೋದಳು!!' ಅಂತ ಮೌಲ್ವೀ ಗೊಳೋ ಅಂದ.

'ಹಾಂ! ಔಷದಿ ತೆಗೆದುಕೊಂಡವರು ನೀವು. ಸತ್ತವರು ನಿಮ್ಮ ಹೆಂಡತಿ! ಅದೆಂತಾ ಔಷದಿರೀ?!' ಅಂತ ಅವಾಕ್ಕಾದರು ಜೇಠ್ಮಲಾನಿ.

ಮೌಲ್ವೀ ಏನೂ ಹೇಳಲಿಲ್ಲ. ಸುಮ್ಮನೆ ನಿಂತಿದ್ದ. ನಿಂತೇ ಇದ್ದ!

ಅದೆಂತ ಔಷದಿಯಾಗಿತ್ತು? ಅದನ್ನು ರಾಮ್ ಜೇಠ್ಮಲಾನಿ ಅವರಿಗೇ ಯಾಕೆ ಆ ಆಯುರ್ವೇದಿ ಪಂಡಿತರು ತಂದು ಕೊಟ್ಟಿದ್ದರು? ಅದರ ಮೇಲೆ ಮೌಲ್ವಿಯ ಕಣ್ಣು ಯಾಕೆ ಬಿತ್ತು? ಔಷದಿ ಕೇಳಿ ತೊಗೊಂಡು ಹೋದ ಮೌಲ್ವೀ ಒಂದು ತಿಂಗಳು ರಜೆ ಹಾಕಿ ಯಾಕೆ ನಾಪತ್ತೆ ಆದ? ಒಂದು ತಿಂಗಳು ಏನು ಮಾಡಿದ? ಮೌಲ್ವಿ ಔಷದಿ ತೆಗೆದುಕೊಂಡರೆ ಅವನ ಬೇಗಂ ಯಾಕೆ ಮೇಲೆ ಹೋದಳು?

ಹಲವಾರು ಪ್ರಶ್ನೆಗಳು. ಎಲ್ಲದಕ್ಕೆ ಉತ್ತರ 'ಅವರವರ ಭಾವಕ್ಕೆ. ಅವರವರ ಭಕುತಿಗೆ' ಎಂಬಂತೆ. ಸಿದ್ಧ ಉತ್ತರ ಲಭ್ಯವಿಲ್ಲ.

'ಅಯ್ಯೋ! ಮೌಲ್ವಿ ಔಷದ ತೆಗೆದುಕೊಳ್ಳುವದಕ್ಕೂ ಅವರ ಬೇಗಂ ಮೇಲೆ ಹೋಗುವದಕ್ಕೂ ಏನ್ರೀ ಸಂಬಂಧ!? ಇದು ಕಾಕತಾಳೀಯ ಇರಬೇಕು ಬಿಡ್ರೀ. just a coincidence,' ಅಂದ್ರೆ ತಮ್ಮದೇ ರೀತಿಯಲ್ಲಿ ತಲೆ ಓಡಿಸುವ ಪರಮ ತುಂಟರು 'ಇದು cockತಾಳೀಯ' ಅಂತ ಅಂದು ಪೋಲಿ ಪೋಲಿಯಾಗಿ ನಕ್ಕರು. ಪೆಕಪೆಕಾ ಅಂತ ನಕ್ಕರು. 'ತಿಳಿಲಿಲ್ಲ. ತಿಳಿಸಿ ಹೇಳಿ' ಅಂದ್ರೆ ''ಅನಂತನ ಆವಾಂತರ' ಚಿತ್ರ ನೋಡಿದ್ದೀರಾ?' ಅಂತ ಕೇಳಿದರು. 'ಹೂಂ! ನೋಡಿದ್ದೀವಿ' ಅಂದ್ರೆ 'ಅಜ್ಜಿ ಲೇಹ್ಯ! ಅಜ್ಜಿ ಲೇಹ್ಯ!' ಅಂತ ಕಣ್ಣು ಹೊಡೆದು, ಚಿತ್ರ ವಿಚಿತ್ರವಾಗಿ ನಕ್ಕು, ಅಡ್ಡ ಗೋಡೆ ಮೇಲೆಯೇ ಇದ್ದ ದೀಪವನ್ನು ಮತ್ತೂ ಅಡ್ಡಡ್ಡ ಸರಿಸಿಬಿಟ್ಟರು. ಏನರ್ಥವೋ!? ಶಿವನೇ ಬಲ್ಲ  :)

ಯಾರದ್ದೋ ಔಷದಿ, ಬೇರೆ ಯಾರೋ ತೊಗೊಂಡು, ತೊಂಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದಳ ತಂಗಿ, ಕೋಡಗನ ಕೋಳೀ ನುಂಗಿತ್ತ, ನೋಡವ್ವ ತಂಗಿ ಕೋಡಗನ ಕೋಳೀ ನುಂಗಿತ್ತ! ಅನ್ನೋ ಹಾಗಾಗಿ ಹೋಯಿತು ಈ ಕಥೆ.

ನಳಿನಿ ಗೇರಾ ಬರೆದ ರಾಮ್  ಜೇಠ್ಮಲಾನಿ ಅವರ ಅಧಿಕೃತ ಆತ್ಮಚರಿತೆಯಿಂದ ಎತ್ತಿದ್ದು. ತುಂಬ ಸ್ವಾರಸ್ಯಕರ ಪುಸ್ತಕ.  ಜೇಠ್ಮಲಾನಿ ಅವರ ಬಗ್ಗೆ ಹಿಂದೆಲ್ಲೂ ಬಂದಿರದಿದ್ದ ಹಲವಾರು ಸ್ವಾರಸ್ಯಕರ, ರೋಚಕ ವಿವರಗಳಿವೆ. ಬರೆದ ಶೈಲಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇದೇ ಪುಸ್ತಕದಿಂದ ಆರಿಸಿದ ಇನ್ನೊಂದು ಘಟನೆ ಬಗ್ಗೆ ಮತ್ತೊಂದು ಬ್ಲಾಗ್ ಪೋಸ್ಟ್ ಬರೆಯಬೇಕಿದೆ.

ಇದೇ ಪುಸ್ತಕವನ್ನು ಆಧರಿಸಿ ಬರೆದ ಇನ್ನೊಂದು ಬ್ಲಾಗ್ ಪೋಸ್ಟ್.