Monday, January 19, 2015

ಬೆಕ್ಕಿನ ಮರಿ, ಮೋಸಂಬಿ - ಲೆಕ್ಕದ ಭಾನಗಡಿ

ಭಾಳ ಹಳೆ ಮಾತು. ದ್ಯಾಮ್ಯಾ ಇನ್ನೂ ಕನ್ನಡ ಸಾಲ್ಯಾಗಿದ್ದ. ಕಟಗಿ ಸರ್ ಗಣಿತ ಕಲಸ್ತಿದ್ದರು. ಅವರ ಖರೆ ಅಡ್ದೆಸರು ಏನೋ ನೆನಪಿಲ್ಲ. ದೇವರಿಗೇ ಗೊತ್ತು. ಆದ್ರ ಅವರ ಕೈಯ್ಯಾಗ ಒಂದು ಕಟಗಿ ಮಾತ್ರ ಖಾಯಂ. ಹುಡುಗುರನ್ನ ಹಾಕ್ಕೊಂಡು ಕಟಿಲಿಕ್ಕೆ. ಅದಕ್ಕೇ ಅವರಿಗೆ ಅನ್ವರ್ಥಕನಾಮ - ಕಟಗಿ ಸರ್!

ಅದರಾಗೂ ನಮ್ಮ ದ್ಯಾಮ್ಯಾಗ ಹಿಡಿದು ಕಟಿಯೋದು ಅಂದ್ರ ಕಟಗಿ ಸರ್ ಗೆ ಭಾಳ ಖುಷಿ. 'ಅವನೌನ್! ನಾ ದೇವರಿಗೆ ಹೂವು ಏರಸೋದು ಒಂದು ದಿನಾ ಬಿಟ್ಟರೂ ಬಿಟ್ಟೆರೀ. ಆದ್ರ ನಮ್ಮ 'ಪ್ರೀತಿ'(!) ಶಿಷ್ಯಾ ದ್ಯಾಮಣ್ಣಗ ಕಟಿಯೋದು ಮಾತ್ರ ಬಿಡಂಗಿಲ್ಲ ನೋಡ್ರೀ. ಅವನೂ ಅದೇ ಮಾದರಿಯವನೇ ಅದಾನ. ಪಕ್ಕಾ 'ಉಗುಳು ಮಾರಿ ದೇವರ' ಟೈಪಿನ ದಡ್ಡ ಸೂಳೆಮಗ! ದಿನಾ ಕಟಿಸಿಕೊಳ್ಳಲಿಲ್ಲ ಅಂದ್ರ ಅವಂಗೂ ಸಮಾಧಾನ ಇಲ್ಲ ನೋಡ್ರೀ!' ಅಂತ ಹೇಳವರು ಕಟಗಿ ಸರ್. ಹಾಂಗ ಹೇಳಿ ಹೇಳೇ ಕಟಿಯವರು.

ಒಂದು ದಿನ ಕಟಗಿ ಸರ್ ಗಣಿತ ಕಲಿಸಾಕತ್ತಿದ್ದರು.

'ಲೇ ದ್ಯಾಮ್ಯಾ! ಒಂದು ಲೆಕ್ಕಾ ಕೇಳತೇನಿ. ಉತ್ತರಾ ಬರೋಬ್ಬರಿ ಹೇಳಬೇಕು ನೋಡಲೇ!' ಅಂದ್ರು ಸರ್.

ಮುಂದೆ ಬರಲಿರುವ ಗಣಿತ ಲೆಕ್ಕದ ಮಿಸೈಲ್ ಎದುರಿಸಲು ಎದ್ದು ನಿಂತ ದ್ಯಾಮ್ಯಾ. ಎದ್ದು ನಿಂತ ಕೂಡಲೇ ಅವನ ಯುನಿಫಾರ್ಮ್ ಖಾಕಿ ಚೊಣ್ಣ ಸರಕ್ ಅಂತ ಕೆಳಗ ಇಳಿದುಬಿಡ್ತು. ಸರಕ್ ಅಂತ ಚೊಣ್ಣ ಮೇಲೆ ಎಳಕೊಂಡ. ಮ್ಯಾಲೆ ಹಿಡಕೊಂಡೇ ನಿಂತ. ಅವರಪ್ಪನ ಕಡೆ 'ಏ ಯಪ್ಪಾ! ಒಂದು ಪಟ್ಟಾ ಕೊಡಸೋ. ಚೊಣ್ಣ ಜಾರಿ ಜಾರಿ ಬೀಳ್ತೈತಿ,' ಅಂದಿದ್ದ. ಅವರಪ್ಪ ದೊಡ್ಡ ಕುಡುಕ ಸೂಳೆಮಗ. 'ನಿಮ್ಮೌನ್! ಪಟ್ಟಾ ಅಂತ ಪಟ್ಟಾ. ಪಟ್ಟಾ ಬೇಕಂದ್ರ ಪಟ್ಟೆಗಾರ ಮಂದಿ ಮನ್ಯಾಗ ಹುಟ್ಟಬೇಕಿತ್ತು,' ಅಂತ ಬೈದು ದ್ಯಾಮ್ಯಾನ ಬೀಡಿ ತರಾಕ ಕಳಿಸಿದ್ದ. ಇದೆಲ್ಲ ನೆನಪಾತು ದ್ಯಾಮ್ಯಾಗ.

'ದ್ಯಾಮಣ್ಣ, ನಾ ನಿನಗ ಇವತ್ತು ಎರಡು ಬೆಕ್ಕಿನ ಮರಿ ಕೊಡತೇನಿ. ಸರಿನ? ನಾಳೆ ಮತ್ತೆ ಎರಡು ಬೆಕ್ಕಿನ ಮರಿ ಕೊಡತೇನಿ. ಸರಿನ? ಹಾಂಗಿದ್ದರ ನಿನ್ನ ಕಡೆ ಒಟ್ಟು ಎಷ್ಟು ಬೆಕ್ಕಿನ ಮರಿ ಆದವು? ಹೇಳು ನೋಡೋಣ,' ಅಂದ್ರು ಕಟಗಿ ಸರ್.

ದ್ಯಾಮ್ಯಾ ಡೀಪ್ ಥಿಂಕಿಂಗ್ ಮೋಡಿಗೆ ಹೋದ. ತಪ್ಪು ಉತ್ತರ ಹೇಳಿದರ ಸರ್ ಮನಗಂಡ ಕಟಿತಾರ. ಅದಕ್ಕೇ ಡಬಲ್, ಟ್ರಿಪಲ್ ಖಾತ್ರಿ ಮಾಡಿಕೊಂಡೇ ಉತ್ತರ ಹೇಳಬೇಕು. ಹಾಗಂತ ಹೇಳಿ ತಲಿಯೊಳಗೇ ಲೆಕ್ಕ ಮಾಡಿದ.  ಮತ್ತ ಮತ್ತ ಮಾಡಿದ. ಉತ್ತರ ಹೇಳಿಬಿಟ್ಟ!

'ಸರ್, ಐದರೀ. ಐದು ಬೆಕ್ಕಿನ ಮರಿ ಆಕ್ಕಾವ್ರೀ!' ಅಂದೇ ಬಿಟ್ಟ.

ಗೋವಿಂದಾ! ಗೋssವಿಂದಾ!

ಆವಾಗಲೇ ಕಟಗಿ ಸರ್ ಹಾಕ್ಕೊಂಡು ಕಟಿಬೇಕಿತ್ತು. ಯಾಕೋ ಕಟಿಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಅಂತ ಹೇಳಿ ವಿಚಾರ ಮಾಡಿದರು.

'ಮತ್ತೊಮ್ಮೆ ಕೇಳತೇನಿ. ಬ್ಯಾರೆ ರೀತಿಂದ ಕೇಳತೇನಿ. ನೋಡೋಣ ಈಗರೆ ಸರಿ ಉತ್ತರ ಹೇಳ್ತಿಯೋ ಅಂತ. ಸರಿನ?' ಅಂದ್ರು ಕಟಗಿ ಸರ್.

'ಹೂಂರೀ ಸರ್!' ಅಂತ ದ್ಯಾಮ್ಯಾ ರೆಡಿ ಆಗಿ ನಿಂತ.

'ನೋಡ ದ್ಯಾಮಣ್ಣ. ನಾ ಇವತ್ತು ನಿನಗ ಎರಡು ಮೋಸಂಬಿ, ನಾಳೆ ಎರಡು ಮೋಸಂಬಿ ಕೊಟ್ಟೆ ಅಂತ ತಿಳಕೋ. ನಿನ್ನ ಕಡೆ ಎಷ್ಟು ಮೋಸಂಬಿ ಆಕ್ಕಾವು? ಹೇಳು ನೋಡೋಣ?' ಅಂದ್ರು ಕಟಗಿ ಸರ್.

ಈಗ ದ್ಯಾಮ್ಯಾ ಫಟ್ ಅಂತ ಉತ್ತರ ಹೇಳಿದ.

'ಸರ್! ಒಟ್ಟ ಕೂಡಿ ನಾಲ್ಕು ಮೋಸಂಬಿರೀ ಸರ್!' ಅಂತ ಹೇಳಿ ನಿಂತ.

'ವೆರಿ ಗುಡ್! ಈ ಸರೆ ಬರೋಬ್ಬರಿ ಹೇಳಿದಿ ನೋಡು. ಸರಿ ಅದ ಉತ್ತರ. ಮೊದಲು ಕೇಳಿದ ಪ್ರಶ್ನೆ ಮತ್ತ ನೆನಪು ಮಾಡಿಕೊ. ಎರಡು ಬೆಕ್ಕಿನ ಮರಿ ಇವತ್ತು. ನಾಳೆ ಮತ್ತ ಎರಡು ಬೆಕ್ಕಿನ ಮರಿ. ಒಟ್ಟ ಎಷ್ಟು?' ಅಂತ ಕಟಗಿ ಸರ್ ಕೇಳಿದರು.

'ಮೋಸಂಬಿ ಉದಾಹರಣೆ ಕೊಟ್ಟು ರೈಟ್ ಟ್ರಾಕಿಗೆ ತಂದೇನಿ. ನೋಡೋಣ ಹುಡುಗ ಏನು ಹೇಳ್ತಾನ,' ಅಂತ ಕಾದು ಕೂತರು.

'ಐದರೀ ಸರ್! ಐದು ಬೆಕ್ಕಿನ ಮರಿ ರೀ ಸರ್!' ಅಂದು ಬಿಟ್ಟ ದ್ಯಾಮ್ಯಾ.

ಎರಡು + ಎರಡು = ಐದು!

ಕಟಗಿ ಸರ್ ಫುಲ್ ಈಗ confuse ಆಗಿ ಬಿಟ್ಟರು. ಈ ದ್ಯಾಮ್ಯಾ ಹಿಂಗ್ಯಾಕ ಅಂತ ಅವರಿಗೆ ಒಟ್ಟ ತಿಳಿಲಿಲ್ಲ. ಇನ್ನು ದಂಡ ಪ್ರಯೋಗ ಮಾಡೋದೇ ಅಂತ ವಿಚಾರ ಮಾಡಿದರು. ಆದರೂ ಒಂದು clarification ಕೇಳಿಬಿಡೋಣ ಅಂತ ಅನ್ನಿಸಿ ಕೇಳಿದರು.

'ಅಲ್ಲಲೇ ಮಂಗ್ಯಾನಿಕೆ! ಎರಡು ಪ್ಲಸ್ ಎರಡು ಮೋಸಂಬಿ ಎಷ್ಟು ಅಂತ ಕೇಳಿದರ ನಾಕು ಅಂತ ಬರೋಬ್ಬರಿ ಹೇಳ್ತಿ. ಅದೇ ಎರಡು ಪ್ಲಸ್ ಎರಡು ಬೆಕ್ಕಿನ ಮರಿ ಅಂದ್ರ ಐದು ಅಂತೀಯಲ್ಲಲೇ. ಹ್ಯಾಂ?' ಅಂತ ಜಬರಿಸಿದರು.

'ಸರ್ರ! ಅದು ನಮ್ಮನಿಯಾಗ ಆಗಲೇ ಒಂದು ಬೆಕ್ಕಿನ ಮರಿ ಐತ್ರೀ ಸರ್ರಾ. ನೀವು ಇವತ್ತು ಕೊಡೋದು ಎರಡು, ಮತ್ತ ನಾಳೆ ಕೊಡೋದು ಎರಡು ಬೆಕ್ಕಿನ ಮರಿ, ಮತ್ತ ಮನಿಯಾಗಿನ ಒಂದು ಬೆಕ್ಕಿನ ಮರಿ ಕೂಡಿಸಿದರೆ ಐದು ಆತಲ್ಲರೀ ಸರ್!?' ಅಂದು ಬಿಟ್ಟ ದ್ಯಾಮ್ಯಾ.

ಮುಂದೆ ಕಟಗಿ ಸರ್ ಮಾತಾಡಲಿಲ್ಲ. ಅವರ ಕೈಯಾಗಿನ ಕಟಗಿ ದ್ಯಾಮ್ಯಾನ ಮೈತುಂಬಾ ತಾಂಡವ ನೃತ್ಯ ಮಾಡಿಬಿಡ್ತು. ದ್ಯಾಮ್ಯಾನ ಮೈಮ್ಯಾಲೆ ಬಾಸುಂಡಿ ಬಿಸಿ ಬಿಸಿ ಬುರ್ಬುರಿ ತರಹ ಎದ್ದವು. ಬಿಸಿ ಬಿಸಿ ಕೊಟ್ಟ ಮ್ಯಾಲೆ ಮತ್ತ ಥಂಡ ಥಂಡ ಏಳ್ತಾವೇನು?

'ಮಂಗ್ಯಾ ಸೂಳಿಮಗನ! ಆಟಾ ಹಚ್ಚಿ ಏನು? ಹ್ಯಾಂ? ನಿಮ್ಮ ಮನಿಯಾಗ ಎಷ್ಟು ಬೆಕ್ಕು ಅದಾವು, ಎಷ್ಟು ನಾಯಿ ಅದಾವು ಅಂತ ನಾ ಕೇಳಿದೆ ಏನು? ಹಾಂ? ನಿಮ್ಮ ಮನಿಯಾಗ ಒಂದು ಮಂಗ್ಯಾ ಮಾತ್ರ ಖರೇನೇ ಐತಿ. ಅದು ನೀನೇ,' ಅಂದವರೇ ದ್ಯಾಮ್ಯಾನ ಉಳ್ಳಾಡಿಸಿ ಉಳ್ಳಾಡಿಸಿ ಕಟದರು. ಮನಗಂಡ ಕಟದರು. ಅವರ ಧೋತ್ರದ ಕಚ್ಚಿ ಬಿಚ್ಚಿ ಹೋಗೋವಾಂಗ ಕಟದರು. ಕಟದು ಮುಗಿಸಿದ ಮ್ಯಾಲೆ ಧೋತ್ರಾ ಸರಿ ಮಾಡಿಕೊಂಡು, 'ನೀ ಎಂದೂ ಉದ್ಧಾರ ಆಗೋದಿಲ್ಲ ನೋಡಲೇ ದ್ಯಾಮ್ಯಾ. ಹಾಳಾಗಿ ಹೋಗು!' ಅಂತ ಬೈದು ಪಾಠ ಮುಂದುವರಿಸಿದರು. ದ್ಯಾಮ್ಯಾ ದನಾ ಇದ್ದಂಗ ಇದ್ದ. ಜಬರ್ದಸ್ತ ಘಟ್ಟ ಮುಟ್ಟ ಆಸಾಮಿ. ಆ ಪರಿ ಕಡಬು ತಿಂದರೂ ಏನೂ ಆಗದವನಾಂಗ ಕಿಸಿಕಿಸಿ ನಕ್ಕೋತ್ತ ಕೂತಿದ್ದ. ಸಂಜಿ ಸಾಲಿ ಮುಗಿಯೋ ಹೊತ್ತಿಗೆ ಇದೆಲ್ಲ ಮರ್ತೂ ಹೋಗಿತ್ತು ಅವಂಗ.

**

fast forward. ಮೂವತ್ತು ವರ್ಷಗಳ ನಂತರ. ದ್ಯಾಮ್ಯಾ ಅವರ ಬ್ಯಾಚಿನ reunion ಅಂದ್ರ ಅವರು SSLC ಮುಗಿಸಿ ಇಪ್ಪತ್ತೈದು ವರ್ಷಗಳ ನಂತರದ ರಜತಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ. ಅದಕ್ಕೇ ಅಂತಲೇ ಎಲ್ಲರೂ ಶಾಲೆಯಲ್ಲಿ ಕೂಡಿದ್ದರು. ಎಲ್ಲ ಹಳೆ ಸ್ಟೂಡೆಂಟ್ಸ್ ಕುಟುಂಬ ಸಮೇತ ಬಂದಿದ್ದರು. ಹಳೆ ಮಾಸ್ತರುಗಳು, ಟೀಚರ್ ಎಲ್ಲಾ ಬಂದಿದ್ದರು.

ದ್ಯಾಮ್ಯಾನೂ ಅವನ ಹೆಂಡತಿ ಅಕ್ಕಮ್ಮನ ಜೋಡಿ ಬಂದಿದ್ದ. ಎಲ್ಲಾ ಹಳೆ ಮಾಸ್ತರ್, ಟೀಚರ್ ಗಳನ್ನು ಭೆಟ್ಟಿ ಆಕ್ಕೋತ್ತ, ಎಲ್ಲರಿಗೂ ತನ್ನ ಪರಿಚಯ, ಮರು ಪರಿಚಯ ಮಾಡುತ್ತ ನಡೆದಿದ್ದ. ಕಟ್ಟ ಕಡೆಗೆ ಕಟಗಿ ಸರ್ ಸಿಕ್ಕರು.

'ನಮಸ್ಕಾರ್ರೀ ಸರ್ರಾ! ನಾನ್ರೀ ನಿಮ್ಮ ದ್ಯಾಮ್ಯಾ? ನೆನಪಾತ್ರೀ ಸರ್?' ಅಂತ ಕೇಳಿದ.

ಭಾಳ ವರ್ಷ ಆಗಿತ್ತು. ಕಟಗಿ ಸರ್ ಗೆ ಏಕ್ದಂ ನೆನಪಿಗೆ ಬರಲಿಲ್ಲ. ದ್ಯಾಮ್ಯಾನಂತಹ ಅದೆಷ್ಟು ಮಂದಿ ಅವರ ಕಡೆ ಕಲ್ತು ಎಲ್ಲೆಲ್ಲಿ ಇದ್ದಾರೋ ಏನೋ.

ತಮ್ಮ ಚಸ್ಮಾ ಫುಲ್ ಮ್ಯಾಲೆ ಮಾಡಿಕೊಂಡು ನೋಡಿದ ಕಟಗಿ ಸರ್, 'ಯಾರಪಾ ನೀನು?' ಅಂದರು. 

'ಸರ್! ನಾನ್ರೀ. ಎರಡು ಪ್ಲಸ್ ಎರಡು ಮೋಸಂಬಿ ಕೂಡಿಸಿದರ ನಾಲ್ಕು. ಆದ್ರ ಎರಡು ಪ್ಲಸ್ ಎರಡು ಬೆಕ್ಕಿನ ಮರಿ ಕೂಡಿಸಿದರ ಐದು ಅಂತ ಉತ್ತರ ಹೇಳಿದ್ದೆ ನೋಡ್ರೀ ಸರ್! ನೆನಪಾತ್ರೀ?' ಅಂತ ನೆನಪು ಮಾಡಿಕೊಟ್ಟ.

ಈಗ ಕಟಗಿ ಸರ್ ಗೆ ಫುಲ್ ನೆನಪಾತು. ಎಲ್ಲಾ ತರಹದ ಸ್ಟೂಡೆಂಟ್ಸ್ ನೋಡಿದ್ದರು. ಆದ್ರ ದ್ಯಾಮ್ಯಾನಂತಹ ಸ್ಟೂಡೆಂಟ್ ಮತ್ತ ಅವರ ಜೀವನದಾಗ ಸಿಕ್ಕಿರಲಿಲ್ಲ.

'ಹಾಂ! ನೆನಪಾತು ನೋಡಪಾ. ಆರಾಮಿದ್ದಿ? ಇಕಿ ಯಾರು? ನಿನ್ನ ಹೇಣ್ತಿಯಾ? ಒಳ್ಳೇದು ಒಳ್ಳೇದು,' ಅಂತ ದ್ಯಾಮ್ಯಾನ ಹೆಂಡ್ತಿ ಕಡೆನೂ ನೋಡಿದರು.

ಕಟಗಿ ಸರ್ ನೋಡೋದೇ ಒಂದು ತರಹ. ಪಾಪ ಅವರು ಯಾವದೇ ತರಹ ನೋಡಿದರೂ ಒಂದು ತರಹ ಕೀಚಕ ನೋಡಿದಂಗ ಕಾಣ್ತದ ಮಂದಿಗೆ. ಯಾಕೋ ಏನೋ. ಅವರ ಪರ್ಸನಾಲಿಟಿನೇ ಹಾಂಗದನೋ ಏನೋ.

ಕಾಟಾಚಾರಕ್ಕ ಅಂತ ದ್ಯಾಮ್ಯಾನ ಹೆಂಡತಿ ಅಕ್ಕಮ್ಮ ಸಹ 'ನಮಸ್ಕಾರ್ರೀ ಸರ್,' ಅಂದಳು.

'ಏನವಾ ನಿನ್ನ ಹೆಸರು?' ಅಂತ ಕೇಳಿದರು ಕಟಗಿ ಸರ್.

'ಅಕ್ಕಮ್ಮ ಅಂತರೀ ಸರ್,' ಅಂತ ದ್ಯಾಮ್ಯಾನೇ ಹೇಳಿಬಿಟ್ಟ.

'ಅಕ್ಕಮ್ಮ ಅಂತನೇ?! ಅಂದ್ರ ಇಕಿನ್ನ ಏನಂತ ಕರಿತೀಲೇ ದ್ಯಾಮ್ಯಾ? ಅಕ್ಕ ಅಂತನೂ ಅನ್ನುವಾಂಗಿಲ್ಲ. ಅಮ್ಮ ಅಂತನೂ ಅನ್ನುವಾಂಗಿಲ್ಲ. ಹೇ! ಹೇ!' ಅಂತ ಇಲ್ಲದ ಸಲ್ಲದ ಜೋಕ್ ಹೊಡೆದರು ಸರ್. ಕಟಗಿ ಸರ್ sense of humor ಅಂದ್ರ ಅದೊಂದು ತರಹದ ವಿಚಿತ್ರ ಹಾಸ್ಯ ಪ್ರಜ್ಞೆ.

ಅಕ್ಕಮ್ಮ ಒಳಗಿಂದಲೇ ಭಗ! ಭಗ! ಅಂತ ಉರಕೊಂಡಳು. ದ್ಯಾಮ್ಯಾ ಸುಮ್ಮ ಸುಮ್ಮನೇ ನಕ್ಕ. ತಮ್ಮ ಹಳೇ ಪೆಟ್ ವಿದ್ಯಾರ್ಥಿ ಸಿಕ್ಕಾನ ಅಂತ ಹೇಳಿ ಕಟಗಿ ಸರ್ ಒಳ್ಳೆ ಮೂಡ್ ಒಳಗ ಬಂದಿದ್ದರು ಅಂತ ಕಾಣಸ್ತದ. ಅವರ ಕಣ್ಣಿಗೆ ಅಕ್ಕಮ್ಮಂದು ಏನೋ ಕಣ್ಣಿಗೆ ಬಿತ್ತು. ಮೀಸಿ ಕೆಳಗ ತುಂಟ ನಗೆ ನಕ್ಕರು. 'ಹಿಂಗ್ಯಾಕ ನಗ್ತಾನ ಈ ಹಲ್ಕಟ್ ಭಾಡ್ಯಾ ಬುಡ್ಡಾ ಮಾಸ್ತರ್ ?' ಅಂತ ಅಕ್ಕಮ್ಮ ಅಂದುಕೊಂಡಳು.

'ಲೇ ದ್ಯಾಮ್ಯಾ,' ಅಂದರು ಕಟಗಿ ಸರ್.

'ಏನ್ರೀ ಸರ್?' ಅಂದ ದ್ಯಾಮ್ಯಾ.

'ಬಹಳ ವರ್ಷದ ಹಿಂದ ನೀ ಮೋಸಂಬಿ ಲೆಕ್ಕ ಸರಿ ಹೇಳಿದ್ದಿ ಆದ್ರ ಬೆಕ್ಕಿನ ಮರಿ ಲೆಕ್ಕ ತಪ್ಪ ಹೇಳಿದ್ದಿ. ನನಗ ಅನಸ್ತೈತಿ ಈಗ ಕೇಳಿದರ ನೀ ಮೋಸಂಬಿ ಲೆಕ್ಕಾ ತಪ್ಪ ಹೇಳ್ತೀ ನೋಡಲೇ. ಜರೂರ್ ತಪ್ಪೇ ಹೇಳ್ತಿ ನೋಡಲೇ. ಬೆಟ್ ಕಟ್ಟತೀ ಏನು?' ಅಂತ ಅಂದವರೇ ಮತ್ತ 'ಹೇ! ಹೇ!' ಅಂತ ನಕ್ಕರು ಕಟಗಿ ಸರ್.

'ಯಾಕ್ರೀ ಸರ್ರಾ? ಈಗ್ಯಾಕ ಮೋಸಂಬಿ ಲೆಕ್ಕಾ ತಪ್ಪ ಹೇಳಲಿ? ಹಾಂ? ಈಗೂ ಎರಡು ಪ್ಲಸ್ ಎರಡು ಮೋಸಂಬಿ ಅಂದ್ರ ನಾಲ್ಕು ಅಂತನೇ ಹೇಳ್ತೇನ್ರೀ ಸರ್,' ಅಂದ ದ್ಯಾಮ್ಯಾ.

'ಉತ್ತರ ತಪ್ಪು ಹೇಳೇ ಬಿಟ್ಟಿಯಲ್ಲೋ ನಿನ್ನಾಪನಾ. ಹೇ! ಹೇ! ನಾ ಏನು ಹೇಳಿದ್ದೆ? ತಪ್ಪು ಹೇಳ್ತೀ ಅಂತ. ತಪ್ಪು ಹೇಳೇಬಿಟ್ಟಾ. ನನ್ನ ಕಟಗಿ ಎಲ್ಲೈತಿ? ನಿನ್ನ ಹಾಕ್ಕೊಂಡು ಕಟಿಯಾಕ? ಹೇ! ಹೇ!' ಅಂತ ಹೇಳಿಕೋತ್ತ ಕಟಗಿ ಸರ್ ಬಿದ್ದು ಬಿದ್ದು ನಕ್ಕರು.

'ಏನವಾ ಅಕ್ಕಮ್ಮ? ನಿನ್ನ ಗಂಡಗ ಇನ್ನೂ ಸರಳ ಗಣಿತ ಬರೋದಿಲ್ಲ ನೋಡವಾ. ಹೇ!ಹೇ!' ಅಂತ ವಿಚಿತ್ರವಾಗಿ ನಕ್ಕರು.

'ನಾ ಹೇಳಿದ್ರಾಗ ಏನು ತಪ್ಪು ಐತ್ರೀ ಸರ್?' ಅಂತ ಕೇಳಿದ ದ್ಯಾಮ್ಯಾ. ಅಕ್ಕಮ್ಮ ಅಂತೂ ಫುಲ್ ಉರಕೊಂಡು, 'ಯಾಕರೆ ಬಂದೆನೋ ಇವರ ಜೋಡಿ?'ಅಂದುಕೊಂಡಳು. ಅಕಿಗೆ ಇವರ ಲೆಕ್ಕದ ಭಾನಗಡಿ ಏನೂ ಗೊತ್ತಿರಲಿಲ್ಲ.

'ಅಲ್ಲಲೇ ದ್ಯಾಮ್ಯಾ. ನೀನು ಯಾವಾಗಲೂ ಮನಿಯಾಗಿನ ಸಾಮಾನು ಸಹಿತ ಕೂಡಿಸಿ ಲೆಕ್ಕ ಮಾಡಿ ಹೇಳವ. ಆವಾಗ ಮನಿಯಾಗಿನ ಒಂದು ಬೆಕ್ಕಿನ ಮರಿ ಸಹಿತ ಕೂಡಿಸಿ ಐದು ಅಂದಂಗ ಈಗ್ಯಾಕ ಮೋಸಂಬಿ ಸಹಿತ ಕೂಡಿಸಿ ಹೇಳಲಿಲ್ಲ? ಹಾಂ?' ಅಂದರು ಕಟಗಿ ಸರ್.

ದ್ಯಾಮ್ಯಾಗ ಒಟ್ಟ ತಿಳಿಲಿಲ್ಲ. 'ಮತ್ಯಾವ ಮೋಸಂಬಿ ಕೂಡಿಸಿ ಹೇಳು ಅನ್ನಾಕತ್ತಾರು ಸರ್?' ಅಂತ ತಲಿ ಕೆಡಿಸ್ಕೊಂಡ. ಹೆಂಡತಿ ಅಕ್ಕಮ್ಮನ ಕಡೆ ನೋಡಿದ. ಅಕಿ ಕೆಟ್ಟ ಮಾರಿ ಮಾಡಿ ನಿಂತಿದ್ದಳು.

ಕಟಗಿ ಸರ್ ಅವರಿಗೆ ಗೊತ್ತಾತು, 'ಈ ಹಾಪ್ ಸೂಳಿಮಗಂಗ ತಿಳಿವಲ್ತು,' ಅಂತ.

'ಲೇ ದ್ಯಾಮ್ಯಾ, ಎರಡು ಪ್ಲಸ್ ಎರಡು ಮೋಸಂಬಿ ಅಂದ್ರ ಟೋಟಲ್ ಆರು ಅಂತ ಹೇಳಲೇ. ನಿನ್ನ ಲೆಕ್ಕದ ಪ್ರಕಾರ ಅದೇ ಸರಿ!' ಅಂದವರೇ ಸಿಕ್ಕಾಪಟ್ಟೆ ನಕ್ಕರು. ದ್ಯಾಮ್ಯಾನ ಡುಬ್ಬಾ ಚಪ್ಪರಿಸಿ ಚಪ್ಪರಿಸಿ ನಕ್ಕರು. ಏನು ಅಂತಾದ್ದು ಕಂಡಿತ್ತೋ ಅವರಿಗೆ ಆ ಪರಿ ನಗಲಿಕ್ಕೆ? ದೇವರಿಗೇ ಗೊತ್ತು.

'ಎರಡು ಪ್ಲಸ್ ಎರಡು ಪ್ಲಸ್ ಮೋಸಂಬಿ ಅಂದ್ರ ಆರು ಹೆಂಗ್ರೀ ಸರ್? ಹ್ಯಾಂ? ನಾಲ್ಕು ಅಲ್ಲರೀ?' ಅಂತ ಕೇಳಿದ ದ್ಯಾಮ್ಯಾ.

'ನಿನ್ನ ಹೆಂಡತಿ ಕಡೆ ಇರೋ ಎರಡು ಮೋಸಂಬಿ ಕೂಡಿಸಿ ಹೇಳಲೇ ಮಂಗ್ಯಾನಿಕೆ. ಬೆಕ್ಕಿನ ಮರಿ ಅಂದ್ರ ಮನ್ಯಾಗಿಂದು ಕೂಡಿಸಿ ಹೇಳ್ತೀ. ಈಗ ಮೋಸಂಬಿ ಕೇಳಿದಾಗ ಮನಿಯಾಗಿರೋದು, ಇಲ್ಲೆ ಹೆಂಡತಿ ಕಡೆ ಇರೋದು ಎಲ್ಲಾ ಮರ್ತೇ ಬಿಟ್ಟಿಯೇನೋ? ಅವನ್ನೂ ಎಲ್ಲಾ ಕೂಡಿಸಿಯೇ ಹೇಳೋ ನಮ್ಮಪ್ಪಾ,' ಅಂದವರೇ ಮತ್ತ ಮತ್ತ ನಕ್ಕರು ಕಟಗಿ ಸರ್.

'ಏನು ಹಲ್ಕಟ್ ಮಾಸ್ತರ್ ಅದಾನು ಇಂವಾ? ನಮ್ಮಜ್ಜನ ವಯಸ್ಸಾಗೈತಿ ಬುಡ್ಡಾಗ. ಹ್ಯಾಂಗ ಡಬಲ್ ಮೀನಿಂಗ್ ಡೈಲಾಗ್ ಹೊಡಿತಾನ ನೋಡು ಈ ಮಾಸ್ತರ್! ಹಲ್ಕಟ್! ಮಷ್ಕಿರಿ ಹಲ್ಕಟ್! ಬದ್ಮಾಷ್ ಭಾಡಕೋವ್!' ಅಂತ ಅಕ್ಕಮ್ಮ ಉರಿದುಕೊಂಡಳು. ಸೀರಿ ಸೆರಗನ್ನು ಮತ್ತೂ ಎಳೆದೆಳೆದು, ಮತ್ತ ಮತ್ತ ಸರೀತ್ನಾಗಿ ಮುಚ್ಚಿಕೊಂಡಳು. ಮೋಸಂಬಿ ಅಂದ್ರ ಅಕಿ line of thinking ಏನೋ ಬ್ಯಾರೆನೇ ಹೊಂಟಿತ್ತು. ಏನೋ ಏನೋ. ಯಾರಿಗೆ ಗೊತ್ತು.

'ಹೆಂಡ್ತಿ ಕಡೆ ಇರೋ ಎರಡು ಮೋಸಂಬಿ ಕೂಡಿಸಿ ಹೇಳಿದರ ಆರು ಆಗ್ತಾವು ಅಂದ್ರ ಏನು?' ಅಂತ ದ್ಯಾಮ್ಯಾಗೂ ತಿಳಿಲಿಲ್ಲ.

ಕಟಗಿ ಸರ್ ಕಡೆ ನೋಡಿ, 'ಹೇಂ? ಏನು?' ಅನ್ನೋ ಲುಕ್ ಕೊಟ್ಟ.

'ಅಲ್ಲಲೇ, ನಿನ್ನ ಹೆಂಡ್ತಿ ಕೈಯಾಗ ಹಿಡಕೊಂಡ ಜಾಳಿಗಿ ಜಾಳಿಗಿ ಪ್ಲಾಸ್ಟಿಕ್ ಬುಟ್ಟಿಯಾಗ ಎರಡು ಮೋಸಂಬಿ ಅವ ನೋಡಲೇ. ಅವನೋ ಇಲ್ಲೋ? ನಾ ಇವತ್ತು ಕೊಟ್ಟ ಎರಡು ಮೋಸಂಬಿ, ನಾಳೆ ಕೊಡೋ ಎರಡು ಮೋಸಂಬಿ, ನಿನ್ನ ಹೆಂಡತಿ ಕಡೆ ಇರೋ ಎರಡು ಮೋಸಂಬಿ. ಒಟ್ಟ ಎಷ್ಟಾತು? ನಿನ್ನ ಪ್ರಕಾರನೇ ಲೆಕ್ಕ ಮಾಡಿದರ ಆರು ಆತೋ ಇಲ್ಲೋ?' ಅಂದವರೇ ಕಟಗಿ ಸರ್ ಮತ್ತ ಬಿದ್ದು ಬಿದ್ದು ನಕ್ಕರು.

ಈಗ ದ್ಯಾಮ್ಯಾನೂ ಬಿದ್ದ ಬಿದ್ದ ನಕ್ಕ. 'ಆಹಾ! ಈ ಮೋಸಂಬಿ ನೋಡಿ ಅಂದರೇನ್ರೀ ಸರ್? ಎಲ್ಲಾ ಮಾಸ್ತರ್, ಟೀಚರ್ ಮಂದಿಗೆ ಎರಡೆರೆಡು ಮೋಸಂಬಿ ಕೊಡೋಣ ಅಂತಲೇ ನಾಲ್ಕು ಡಜನ್ ತೊಗೊಂಡು ಬಂದಿದ್ದೆ ನೋಡ್ರೀ. ಎಲ್ಲಾರಿಗೆ ಕೊಟ್ಟು, ಕಡೇ ಎರಡು ಮೋಸಂಬಿ ನಿಮಗೇ ಅಂತೇ ಉಳದಾವು ನೋಡ್ರೀ ಸರ್!' ಅಂದ ದ್ಯಾಮ್ಯಾ ಹೆಂಡ್ತಿ ಕಡೆ ನೋಡಿ, 'ಆವು ಎರಡು ಮೋಸಂಬಿ ಈ ಕಡೆ ಕೊಡಬೇ. ಸರ್ ಗೆ ಕೊಡಬೇಕು,' ಅಂದ.

ಅಕ್ಕಮ್ಮ 'ಯಾವ ಮೋಸಂಬಿ?ಹ್ಯಾಂ???' ಅನ್ನೋ ಹಾಂಗ ನೋಡಿದಳು.

'ಏ ನಿನ್ನ! ನಿನ್ನ ಕೈಯ್ಯಾಗ ಇರೋ ಪ್ಲಾಸ್ಟಿಕ್ ಬುಟ್ಯಾಗಿರೋ ಎರಡು ಮೋಸಂಬಿ ಕೊಡಬೇ. ದೌಡ್ ಕೊಡಬೇ. ಇನ್ನೂ ರಗಡ ಮಂದಿ ಭೆಟ್ಟಿ ಆಗೋದೈತಿ. ಲಗೂನ ಅವು ಎರಡು ಮೋಸಂಬಿ ಕೊಡಬೇ,' ಅಂದು ಗಡಿಬಿಡಿ ಮಾಡಿದ ದ್ಯಾಮ್ಯಾ.

ಈಗ ಅಕ್ಕಮ್ಮನಿಗೆ ಫ್ಲಾಶ್ ಆತು. ಅಕಿ ಮೋಸಂಬಿ ಗೊಂದಲ ಬಗಿಹರಿತು.

'ನಿಮ್ಮ ಮಾಸ್ತರ್ರು, ನೀವು ಎಲ್ಲಾ ಈ ಮೋಸಂಬಿ ಬಗ್ಗೆ ಮಾತಾಡಾಕತ್ತಿದ್ದರಿ ಏನು? ನಾ ಏನೋ ಬ್ಯಾರೆ ಮೋಸಂಬಿ ಬಗ್ಗೆನೇ ವಿಚಾರ ಮಾಡಾಕತ್ತಿದ್ದೆ......' ಅಂತ ರಾಗ ಎಳೆದಳು. ಹಾಂಗೆ ರಾಗ ಎಳಕೋತ್ತೇ, ತನ್ನ ಕಡೆ ಬುಟ್ಟಿಯಾಗ ಇದ್ದ ಕೊನೇ ಎರಡು ಮೋಸಂಬಿ ತೆಗೆದು ಕೊಟ್ಟಳು. ಮೋಸಂಬಿ ಅಂದ್ರ ಅಕಿ ತಲಿ ಹಾಂಗ ಓಡಲಿಕತ್ತಿತ್ತು ಅದಕ್ಕೆ ಅಂತನೋ ಏನೋ ಗೊತ್ತಿಲ್ಲ. ಆದ್ರ ಕಡೆ ಎರಡು ಮೋಸಂಬಿ Siamese twins ಗತೆ ಒಂದಕ್ಕೊಂದು ಕೂಡಿಕೊಂಡು ಇದ್ದವು. ನೋಡಿದರೆ ಒಂದು ಪರ್ಫೆಕ್ಟ್ ಜೋಡಿ ಮೋಸಂಬಿ ಗತೆನೇ ಇದ್ದವು.

'ಹೋಗ್ಗ ನಿನ್ನ! ನಾವು ಮಾತಾಡಾಕತ್ತಿದ್ದು ಇವೇ ಮೋಸಂಬಿ ಬಗ್ಗೆ ಬೇ. ತಿನ್ನೋ ಮೋಸಂಬಿ,' ಅಂತ ಹೇಳಿಕೋತ್ತ ದ್ಯಾಮ್ಯಾ ಅಕಿ ಕಡೆಯಿಂದ ಮೋಸಂಬಿ ಇಸ್ಕೊಂಡ. ಎಲಿ ಮ್ಯಾಲೆ ಅಡಕಿ ಮತ್ತ ಒಂದು ಐದುನೂರಾ ಒಂದು ರೂಪಾಯಿ ಇಟ್ಟು, ಕಟಗಿ ಸರ್ ಅವರಿಗೆ ಎರಡು ಮೋಸಂಬಿ ಜೋಡಿ ಎಲ್ಲವನ್ನೂ ಮರ್ಡರ್ ಮಾಡಲು ಕೊಡುವ ಸುಪಾರಿ ಮಾದರಿಯಲ್ಲಿ ಅರ್ಪಣೆ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ತೊಗೊಂಡ. ಸರ್ ಮನತುಂಬಿ ಆಶೀರ್ವಾದ ಮಾಡಿದರು.

'ಲೇ ದ್ಯಾಮ್ಯಾ! ಒಂದು ನೆನಪಿಡ ನೀ! ನೀ ಯಾವಾಗಲೂ ಮನಿಯಾಗಿನ ಸಾಮಾನು ಕೂಡಿಸೇ ಲೆಕ್ಕಾ ಮಾಡೋದನ್ನ ಮಾತ್ರ ಮರಿಬ್ಯಾಡಲೇ!' ಅಂತ ಹೇಳಿಕೋತ್ತ, ಪೆಕಪೆಕಾ ಅಂತ ನಕ್ಕೋತ್ತ ಕಟಗಿ ಸರ್ ಹೋದರು.

ದ್ಯಾಮ್ಯಾ, ಅಕ್ಕಮ್ಮನನ್ನು ಕರಕೊಂಡು ರಜತಮಹೋತ್ಸವದ ಇತರೆ ಕಾರ್ಯಕ್ರಮಗಳಲ್ಲಿ ತಲ್ಲೀನನಾದ.

* ಸ್ಪೂರ್ತಿ: ಶಿವರಾಂ ಶಾಸ್ತ್ರಿ ಅವರು ಬರೆದಿದ್ದ ಒಂದು ಸಣ್ಣ ಜೋಕ್. ಅವರದ್ದರಲ್ಲಿ reunion ಭಾಗ ಇರಲಿಲ್ಲ. reunion ಭಾಗ ಪೂರ್ತಿ ನನ್ನದೇ ಕಲ್ಪನೆ.

ಕಟಗಿ ಸರ್ ಗೆ ಕೊಟ್ಟ ಕೊನೇ ಎರಡು ಮೋಸಂಬಿ ! Natural Twin Pack

No comments: