'ಹಾಯ್! ನಿನ್ನ ಹೆಸರೇನು?' ಅಂದ ದ್ಯಾಮ್ಯಾ
ಅಕಿ ಮಹಾ ಬೆರಕಿ ಹುಡುಗಿ ಇರಬೇಕು.
'ನನ್ನ ಹೆಸರೇ? ನಿಮ್ಮಪ್ಪನ ದುಗುಸು' - ಅಂದ ಹುಡುಗಿ ಕಿಡಿಗೇಡಿ ಲುಕ್ ಕೊಟ್ಟಳು .
'ನೋಡ! ನೋಡ ಮತ್ತ! ಅಪ್ಪಾ, ಅವ್ವನ ಮ್ಯಾಗ ಬರ್ಬ್ಯಾಡ ನೀ! ನನ್ನ ತಲಿ ಕೆಡ್ತ ಅಂದ್ರ ಅಷ್ಟ ಮತ್ತ!' - ಅಂತ ಜಗಳಕ್ಕೇ ಹೊಂಟ ದ್ಯಾಮ್ಯಾ.
'ಅಯ್ಯ! ಸಿಟ್ಟ್ಯಾಕೋ??? ನನ್ನ ಹೆಸರು ಪುಷ್ಪಾ (Push Pa = ನಿಮ್ಮಪ್ಪನ ದುಗುಸು)' ಅಂದಳು ಹುಡುಗಿ.
'ಅಲೀ ಇಕಿನೌನ್! ಭಾರಿ ಜಾಬಾದ್ ಅದಾಳ' ಅಂತ ಅಂದುಕೊಂಡ ದ್ಯಾಮ್ಯಾ.
ದ್ಯಾಮ್ಯಾನ ನಶೀಬಕ್ಕೆ ಅಕಿನೂ ಇವನ ಹೆಸರು ಕೇಳೇಬಿಟ್ಟಳು. ದ್ಯಾಮ್ಯಾ ಅದೆಂಗ ತನ್ನ ಹಳೆ ಟೈಪಿನ ಹೆಸರಾದ ದ್ಯಾಮಣ್ಣ ಅಂತ ಹೇಳಿಕೊಂಡಾನು? ಏನರೆ ಮಾಡ್ರನ್, ಹೊಸ ಟೈಪಿನ ಹೆಸರು ಹೇಳೋಣ, ಅಕಿ ಹೇಳಿದಂಗೆ ಒಗಟಿನ ಮಾದರಿಯಲ್ಲೇ ಹೇಳಿ, ಅಕಿನ್ನೂ ಮಂಗ್ಯಾ ಮಾಡೋಣ ಅಂತ ಹೇಳಿ ಒಂದು ಮಸ್ತ ಐಡಿಯಾ ಹಾಕಿದ.
'ನನ್ನ ಹೆಸರೇ? 'ಕೈಯಾಗ ಕೊಡಲೋ ಅಥವಾ ಬಾಯಾಗೇ ಇಡಲೋ'????' ಅಂತ ಹೇಳಿ ಅವನೂ ಮಹಾ ಕಿಡಿಗೇಡಿ ಲುಕ್ ಕೊಟ್ಟ ದ್ಯಾಮ್ಯಾ.
ಅದನ್ನು ಕೇಳಿ ಬೆಚ್ಚಿ ಬಿದ್ದ ಹುಡುಗಿ ಒಂದು ಕೈಯಾಗ ಚಪ್ಲಿ, ಇನ್ನೊಂದು ಕೈಯಾಗ ಕಲ್ಲು ತೊಗೊಂಡು, 'ಏ! ಹಲ್ಕಟ್! ಬದ್ಮಾಶ್! ಬೇಕೇನು ಕಡತಾ? ಮೈಯಾಗ ಹೆಂಗೈತೀ!????' ಅಂತ ಲಡಾಯಿ ಮಾಡಲಿಕ್ಕೇ ಬಂದು ಬಿಟ್ಟಳು.
'ಏ! ತಡೀವಾ! ನನ್ನ ಹೆಸರು ಪ್ರಸಾದ' ಅಂದುಬಿಟ್ಟ ದ್ಯಾಮ್ಯಾ.
'ಪ್ರಸಾದ ಅಂತೇನು ನಿನ್ನ ಹೆಸರು? ನಾ ಏನೋ ಅಂತ ತಿಳ್ಕೊಂಡು ನಿನಗ ಬೈಲಿಕತ್ತಿದ್ದೆ. ಸ್ವಾರೀ!' ಅಂತು ಹುಡುಗಿ.
ದ್ಯಾಮ್ಯಾ ಖುಷ್ ಆಗಿ, 'ನೀ ಒಗಟಾ ಹಾಕಿ ಹೆಸರು ಹೇಳಿದ್ಯಲ್ಲಾ? ಅದಕ್ಕೇ ನಾನೂ ಸುಮ್ಮನೇ ಮಷ್ಕಿರಿ ಮಾಡಿದೆ. ಹೇ!!! ಹೇ!!! ಟಿಟ್ ಫಾರ್ ಟ್ಯಾಟ್! ಟ್ಯಾಟ್ ಫಾರ್ ಟಿಟ್!' ಅಂತ ಮತ್ತ ಮತ್ತ ಹೇಳಿ ಹೇಳಿ, ಚಪ್ಪಾಳಿ ತಟ್ಟಿ ತಟ್ಟಿ, ಹೆಚ್ಚಿಗಿ ಸ್ಕೋಪ್ ತೊಗೋಳ್ಳಿಕ್ಕೆ ನೋಡಿದ. ಅದು ಬ್ಯಾಡಾಗಿತ್ತು. ಅನಾಹುತ ಮಾಡಿಕೊಂಡ.
ಯಾಕೋ ಏನೋ. ಈಗ ಅಕಿಗೆ ಈ ದ್ಯಾಮ್ಯಾ ಮಹಾ ಮಿಂಡ್ರಿಕೆ ಅಂತ ಖಾತ್ರಿ ಆಗಿ ಆಕಿ, 'ಏ! ಮತ್ತ ಮಷ್ಕಿರಿ ಮಾಡ್ತೀ!???? ಏನು ಟಿಟ್, ಟ್ಯಾಟ್ ಹಚ್ಚಿ???? ಏನ್ ಬೇಕಾಗಿಲ್ಲ, ಏನೂ ಕೊಡಂಗಿಲ್ಲ,' ಅನ್ಕೋತ್ತ ಅಕಿ ಆ ಬಸ್ ಸ್ಟಾಪ್ ಬಿಟ್ಟು ಮುಂದಿನ ಸ್ಟಾಪಿಗೆ ಹೋಗಿಬಿಟ್ಟಳು.
'ಅಯ್ಯ ಇಕಿನ! ಪ್ರಸಾದ ಅಂದ ಕೂಡಲೇ ನಕ್ಕು ಮಾತಾಡಿಸಿದಾಕಿ ಈಗ್ಯಾಕ ಹೀಂಗ ಶಟಗೊಂಡು ಹೋದಳು?' ಅಂತ ದ್ಯಾಮ್ಯಾಗ ತಿಳಿಲೇ ಇಲ್ಲ.
ಆಮ್ಯಾಲೆ ಯಾರೋ ತಿಳಿಸಿ ಹೇಳಿದರು, 'ಅಷ್ಟೆಲ್ಲಾ ಮಷ್ಕಿರಿ ಮಾಡಿ ಕೊನೇ ಒಳಗ ಟಿಟ್ ಫಾರ್ ಟ್ಯಾಟ್ ಅದು ಇದು ಅಂತ ಅನ್ನಲೇಬಾರದು. ಯಾವದೇ ರೀತಿ ಅಪಾರ್ಥ ಬರದ ಶುದ್ಧ ಕನ್ನಡದ 'ಮುಯ್ಯಿಗೆ ಮುಯ್ಯಿ' ಅಂತ ಬೇಕಾದರ ಅನ್ನಬಹುದು' ಅಂತ.
ಯಾಕ ಅಂತ ದ್ಯಾಮ್ಯಾಗ ಇನ್ನೂ ತಿಳಿದಿಲ್ಲ!
No comments:
Post a Comment