Tuesday, January 06, 2015

'ಎಷ್ಟು ಎತ್ತರಕ್ಕೆ, ಎಷ್ಟು ಚಂದ ಇದ್ದಾನೆ!' ಕೂಸಿನ ಕಣ್ಣಲ್ಲಿ ಬಾಲಿವುಡ್ ಅಕ್ಕಿ, ಹೃದಯದಲ್ಲಿ ಪುಟರ್ ಪುಟರ್ ಹಕ್ಕಿ

೧೯೯೧ ಡಿಸೆಂಬರ್. ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಮುಗಿದ ನಂತರ ರಜೆಗೆ ಧಾರವಾಡಕ್ಕೆ ಬಂದಿದ್ದೆ. ಅದೊಂದು ದಿವಸ ಮಧ್ಯಾನದ ಚಹಾದ ಟೈಮಿಗೆ ಒಬ್ಬರು ಪರಿಚಯಸ್ಥ ಆಂಟಿ ಬಂದಿದ್ದರು. ಹಾಗೇ ಸುಮ್ಮನೆ. ಹುಡುಕುತ್ತ ಹೋದರೆ ನಮ್ಮ ದೂರದ ಬಳಗದವರೇ. ಅದಕ್ಕಿಂತ ಹೆಚ್ಚಿನ ಒಡನಾಟ ಇತ್ತು. ಅವರ ಜೊತೆಗೆ ಬಾಲಂಗೋಚಿ ಹಾಗೆ ಬಂದಿದ್ದಳು ಅವರ ಮಗಳು. ನಮಕಿಂತ ಒಂದೆರೆಡು ವರ್ಷಕ್ಕೆ ದೊಡ್ಡವಳು. ಮದುವೆಗೆ ಹುಡುಗನ ಹುಡುಕಾಟ ನಡೆದಿತ್ತು. ಹುಡುಗ ಸಿಗುವವರೆಗೆ ಟೈಮ್ ಪಾಸಿಗಿರಲಿ ಅಂತ ಕರ್'ನಾಟಕ' ಯೂನಿವರ್ಸಿಟಿಯಲ್ಲಿ ಓದೋ 'ನಾಟಕ' ಮಾಡುತ್ತಿದ್ದಳು. ಅಥವಾ ಹಾಗಂತ ನಮ್ಮ ಕುಚೋದ್ಯ. ಕರ್ ನಾಟಕ ಅಂದ್ರೆ ನಾಟಕ ಮಾಡು ಅಂತ ಅಂದ ಮೇಲೆ ಮತ್ತೇನು?!

ಅಕ್ಕನಂತ ಹುಡುಗಿ. ಹುಡುಗಿಯಂತ ಅಕ್ಕ ಅಲ್ಲ ಮತ್ತೆ. ಯಾಕೆ ಹೇಳಿದೆ ಅಂದರೆ ತಮ್ಮ ಕೊನೆಯ ಕಾಲದಲ್ಲಿ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಯಾರ್ಯಾರಿಗೋ 'ತಮ್ಮನಂತಹ ಹುಡುಗಿ' ಅಂತೆಲ್ಲ ಬರೆದುಕೊಂಡು ಬಿಡುತ್ತಿದ್ದರು. ಓದಿ ನಗು ಬರುತ್ತಿತ್ತು. ಹಾಗಾಗಿ ಈ ಹುಡುಗಿ ಕಂಡಾಗೊಮ್ಮೆ, 'ಅಕ್ಕನಂತಹ ಹುಡುಗಿ ಅಥವಾ ಹುಡುಗಿಯಂತಹ ಅಕ್ಕ' ಅಂತ ಹೇಳಿ ಸುಮ್ಮನೆ ತಮಾಷೆ ಮಾಡುತ್ತಿದ್ದೆ. ಆಕೆ ಹೋದ ಮೇಲೆ. ಅವಳ ಎದುರಿಗೇ ಮಾಡುವಷ್ಟು ಕೆಟ್ಟ ಬುದ್ಧಿ ಇರಲಿಲ್ಲ ಬಿಡಿ.

ಅಕ್ಕಾ ಪಕ್ಕಾ ಅನ್ನುತ್ತಿರಲಿಲ್ಲ ಬಿಡಿ. ಅಕ್ಕಾ ಪಕ್ಕಾ ಅನ್ನಲಿಕ್ಕೆ ಕಮ್ಮಿ ಕಮ್ಮಿ ಅಂದರೂ ಒಂದು ಐದು ವರ್ಷದ ವ್ಯತ್ಯಾಸ ಇರಬೇಕು. ಹಾಗಂತ ನಮ್ಮ ಕರಾರು. ಈಕೆ ಕೇವಲ ಎರಡೇ ವರ್ಷಕ್ಕೆ ದೊಡ್ಡವಳು. ಹಾಗಾಗಿ ಹೆಸರು ಹಿಡಿದೇ ಕರೆದು ಅಭ್ಯಾಸ. ತುಂಬ informal ಅನ್ನುವ ಹಾಗೆ ಇತ್ತು ದೋಸ್ತಿ ಅನ್ನಿ.

'ಏನೇ ಕೂಸೇ, ಮತ್ತೆ ಎಂತಾ ಸುದ್ದಿ?' ಅಂತ ಶುದ್ಧ ಹವ್ಯಕ ಕನ್ನಡದಲ್ಲಿ ಲೋಕಾಭಿರಾಮವಾಗಿ ಶುರುವಿಟ್ಟುಕೊಂಡೆ. ಎದುರಿಗೇ ಚಹಾ ಹೀರುತ್ತ ಕೂತಾಗ ಏನಾದರೂ ಮಾತಾಡಲೇಬೇಕಲ್ಲ. ಅಮ್ಮ ಅವರಮ್ಮನ ಜೊತೆ ಏನೋ ಮಾತಾಡುತ್ತಿದ್ದರು. ನಾವು ಇವಳ ಜೊತೆ. ಕೂಸು ಅಂದರೆ ಹವ್ಯಕ ಭಾಷೆಯಲ್ಲಿ ಹುಡುಗಿ. ಅದೆಷ್ಟು ದೊಡ್ಡ ಕ್ವಾಣ (ಕೋಣ) ಹುಡುಗಿಯಾದರೂ ಆಕೆ ಕೂಸೇ. 'ಕ್ವಾಣ ಕೂಸು' ಅನ್ನಬಹುದೇ? ಗೊತ್ತಿಲ್ಲ. ಲಂಕೇಶರನ್ನೇ ಕೇಳಬೇಕೋ ಏನೋ?!

'ಎಂತೂ ಇಲ್ಲ್ಯ. ಅದೇ ಸೇಮ್. ನಿಂದೆಂತದು ಸುದ್ದಿ?' ಅಂತ ಉಲ್ಟಾ ಕೇಳಿದಳು ಹುಡುಗಿ.

'ನಮ್ಮದೂ ಎಲ್ಲಾ ಸೇಮ್ ಸೇಮ್ ಮಾರಾಯ್ತೀ. ಇನ್ನು ಎರಡೂವರೆ ವರ್ಷ, ಇಂಜಿನಿಯರಿಂಗ್ ಮುಗಿಯಲ್ಲಿವರಿಗೆ, ಎಂತೂ ವಿಶೇಷ ಇರ್ತಿಲ್ಲೆ ನೋಡು,' ಅಂತ ಬೋರಿಂಗ್ ಇಂಜಿನಿಯರಿಂಗ್ ಬಗ್ಗೆ ಹೇಳಿದೆ.

'ಥೋ! ನಿಂದೂ ಇದೇ ಆಗೋತಲಾ,' ಅಂತು ಅಕ್ಕನಂತಹ ಹುಡುಗಿ.

'ಮತ್ತೆ? ಯಾವದಾದ್ರೂ ಸಿನೆಮಾ ಗಿನೆಮಾ ನೋಡ್ಜ್ಯನೇ ಕೂಸೇ?' ಅಂದೆ. ಆಗೆಲ್ಲ ಹುಡುಗಿಯರು ಎಲ್ಲೋ ಅಪರೂಪಕ್ಕೊಂದು ಸಿನಿಮಾ ನೋಡಿಬಿಟ್ಟರೆ ಅದು ದೊಡ್ಡ ಮಾತು.

'ಹೌದೋ! ನಿನ್ನೆ ಮಾತ್ರ ಒಂದು ಸಿನೆಮಾಕ್ಕೆ ಹೋಗಿದ್ದಿ ನೋಡು,' ಅಂದು ಬಿಟ್ಟಿತು ಕೂಸು.

ಆವಾಗ ನಮಗೂ ಸಿನೆಮಾ ಹುಚ್ಚು. ನೋಡದ ಹಿಂದಿ ಸಿನೆಮಾಗಳಿರಲಿಲ್ಲ. ಇಂಗ್ಲೀಷ್ ಸಿನೆಮಾಗಳ ಹುಚ್ಚು ಅಷ್ಟಿರಲಿಲ್ಲ. ಯಾಕೆಂದರೆ ನಾಚ್ ಗಾನಾ ಇಲ್ಲದೆ, ಕೇವಲ ಒಂದೂವರೆ ಘಂಟೆಗಳಲ್ಲಿ ಮುಗಿದು ಹೋಗುತ್ತಿದ್ದ ಇಂಗ್ಲೀಷ್ ಸಿನೆಮಾಗಳನ್ನು ನೋಡಿದರೆ ಪೂರ್ತಿ 'ಪೈಸಾ ವಸೂಲ್' ಆದ ಸಂತೃಪ್ತ ಭಾವನೆ ಬರುತ್ತಿರಲಿಲ್ಲ. ಕಥೆಯಂತೂ ಮೊದಲೇ ತಿಳಿಯುತ್ತಿರಲಿಲ್ಲ. ಅವರ ಭಾಷೆ, ಸಂಸ್ಕೃತಿ  ತಿಳಿದರೆ ತಾನೇ ಕಥೆ ತಿಳಿಯುವದು? ಆದರೆ ತಲೆಬುಡವಿಲ್ಲದ ಹಿಂದಿ ಮೂವಿಗಳು ಹಾಗಲ್ಲ. ಪೂರ್ತಿ ಮೂರು, ಮೂರುವರೆ ತಾಸು ಭರಪೂರ್ ಮನರಂಜನೆ. ಆಮೇಲೆ, ಧಾರವಾಡದ ಕೆಟ್ಟಾ ಕೊಳಕ ಭಾಷೆಯಲ್ಲಿ, 'ಅವನೌನ್! ತಲಿ ಹಡೋ ಮೂವಿ ಲೇ' ಅಂತ ಬೈಯುತ್ತ, ಬಟ್ಟೆಗೆ ಹತ್ತಿಕೊಂಡಿದ್ದ ಥೇಟರ್ ನವರು ಫ್ರೀಯಾಗಿ ಕೊಡುತ್ತಿದ್ದ ತಗಣಿ ಒರೆಯುತ್ತ ಎದ್ದು ಬಂದರೂ ಓಕೆ. ಆದರೆ ಮೂರುವರೆ ತಾಸು ಹಿಂದಿ ಮೊಳೆ ಮಾತ್ರ ಹೊಡೆಸಿಕೊಳ್ಳಲೇಬೇಕು. ಅದು ಅಂದಿನ ವೈಪರೀತ್ಯ! ಆ ಕಾಲದ ಧಾರವಾಡ ಪರಮ ಕೊಳಕ 'ರೀಗಲ್ ಥೇಟರ್' ತಗಣಿ ಅಂದ್ರೆ ಭಯಂಕರ!

ಇರಲಿ ಇವಳು ಯಾವ ಸಿನೆಮಾ ನೋಡಿ ಬಂದಿದ್ದಳೋ ಏನೋ?!

'ಹೌದ? ಜೋರು. ಯಾವ ಸಿನೆಮಾಕ್ಕೆ ಹೋಗಿದ್ಯೇ?' ಅಂತ ಕೇಳಿದೆ.

'ಕಿಲಾಡಿ!' ಅಂದು ಬಿಟ್ಟಳು.

ಶಿವನೇ ಶಂಭುಲಿಂಗ!

''ಕಿಲಾಡಿ' ಅಂತ ಹೆಸರಿನ ಸಿನೆಮಾ ಕೂಡ ಇರಬಹುದೇ ಶಿವನೇ!?' ಅನ್ನಿಸಿತು.

ಸುಮ್ಮನೆ ಹುಡುಗಿಯ ಕಿಚಾಯಿಸೋಣ ಅಂತ ಹೇಳಿ, 'ಎಂತದು? ಸಿನೆಮಾಕ್ಕೂ ಹೋಗಿ ಕಿಲಾಡಿ ಮಾಡಿಕ್ಕೆ ಬಂದ್ಯಾ? ಹಾಂ?' ಅಂದೆ. ನಮ್ಮ ಹವ್ಯಕ ಭಾಷೆಯಲ್ಲಿ ಕಿಲಾಡಿ ಅಂದರೆ ತುಂಟತನ ಅಂತ ಅರ್ಥ.

'ಥೋ! ಮಳ್ಳನೆಯಾ! ಕಿಲಾಡಿ ಹೇಳ ಸಿನೆಮಾಕ್ಕೆ ಹೋಗಿದ್ದಿ ಅಂದ್ರೆ ಕಿಲಾಡಿ ಮಾಡಿದ್ನೇ  ಹೇಳಿ ಕೇಳ್ತ್ಯಲಾ? ಎಂತಾ ಆಜಾ ನಿಂಗೆ?' ಹೇಳಿ ಹುಡುಗಿ ಸ್ವಲ್ಪ ರಾಂಗ್ ಆದಳು. ಯಾರಿಗಾದರೂ ಒಂದಿಷ್ಟು ಕಿರಿಕ್ಕು ಮಾಡಿ ಕೆರಳಿಸದಿದ್ದರೆ ನಮಗೆ ಉಂಡನ್ನ ಅರಗದ ದಿನಗಳು ಅವು. ಆ ಚಾಳಿಗೆ ಅವತ್ತಿಗೆ ಆಕೆ ಬಲಿ.

'ಓಹೋ! ಸಿನೆಮಾ ಹೆಸರೇ ಕಿಲಾಡಿ. ಯಾರ್ಯಾರ ಇದ್ದ?' ಅಂತ ತಾರಾಗಣದ ಬಗ್ಗೆ ಕೇಳಿದೆ.

'ಅಕ್ಷಯ ಕುಮಾರ ಹೇಳಿ ಯಾರೋ ಹೊಸಬ್ನಡಾ. ಮತ್ತೆ ಯಾರ್ಯಾರೋ ಇದ್ದ ಮಾರಾಯಾ,' ಅಂತ ಹೇಳಿತು ಹುಡುಗಿ. ಆಕೆಗೆ ಹೀರೋ ಒಬ್ಬನ ಹೆಸರು ನೆನಪಿತ್ತು. ಬಾಕಿ ಎಲ್ಲ ನಾಸ್ತಿ.

ಅಕ್ಷಯ ಕುಮಾರ?!

ನಾ ಅಂತೂ ಆ ಹೆಸರು ಕೇಳಿರಲಿಲ್ಲ ಬಿಡಿ. ಈಗೇ ಕೇಳಿದ್ದು.

'ಹ್ಯಾಂಗಿದ್ದಾ ಹೀರೋ?' ಅಂತ ಸಹಜ ಕೇಳಿದೆ. ಮುಂದಾಗೋದನ್ನು ನಿರೀಕ್ಷೆ ಮಾಡಿರಲಿಲ್ಲ.

'ಅಕ್ಷಯ ಕುಮಾರ ಹೇಳ ಹೀರೋ ಮಸ್ತ ಇದ್ದಾ. ಹ್ಯಾಂಗಿದ್ದಾ ಅಂದರೆ.... ಅಂದರೆ..... ಎತ್ತರಕ್ಕೇ, ಛಂ........................,' ಅಂತ ಏನೋ ಹೇಳಲಿಕ್ಕೆ ಹೊರಟವಳು, ಏನು ಹೇಳುತ್ತಿದ್ದೇನೆ ಅನ್ನುವದರ ಖಬರು ಸ್ವಲ್ಪ ಲೇಟಾಗಿ ಆಗಿ, ಅದರ implications ಅರ್ಥವಾಗಿ, ನಾಚಿಕೊಂಡು, ಕೆಂಪು ಕೆಂಪಾಗಿ, ಎತ್ಲಾಗೋ ನೋಡುತ್ತ ಕೂತು ಬಿಟ್ಟಳು. ಆಕೆ ಮುಂದೆ ಮಾತಾಡಿದರೆ ಕೇಳಿ! ನಾನೂ ಬಿಟ್ಟೆ. ಮುಂದುವರಿಸಲಿಲ್ಲ. ಪಾಪ ಹುಡುಗಿ! ಅದೂ ಅಕ್ಕನಂತಹ ಹುಡುಗಿ.

'ಅಯ್ಯೋ ಪಾಪ! ಎಷ್ಟು ಎತ್ತರಕ್ಕೆ, ಎಷ್ಟು ಚಂದಾಗಿ (ಛಂದಾಗಿ) ಇದ್ದಾನೆ ಅಂತ ಹೇಳೋಕೆ ಹೊರಟಿದ್ದಳು ಅಂತ ಕಾಣುತ್ತದೆ. ಏಕ್ದಂ ಫ್ಲಾಶ್ ಆಗಿ, ನಾಚಿ ಬ್ರೇಕ್ ಹಾಕಿ ಬಿಟ್ಟಳು,' ಅಂದುಕೊಂಡು, ಮನಸ್ಸಿನಲ್ಲೇ ಪೆಕಪೆಕಾ ಅಂತ ನಕ್ಕೆ.

ಕೆಲವೊಂದು ಕಾಮನೆಗಳೇ ಹಾಗೇ. consciously ಅದುಮಿಟ್ಟುಕೊಂಡರೂ unconsciously ಹೊರ ಬಿದ್ದುಬಿಡುತ್ತವೆ. ಆ ವಯಸ್ಸೇ ಹಾಗೋ ಏನೋ.

'ಎಷ್ಟು ಎತ್ತರಕ್ಕೆ, ಎಷ್ಟು ಚಂದ ಇದ್ದಾನೆ!'

ಕೂಸಿನ ಕಣ್ಣಲ್ಲಿ ಬಾಲಿವುಡ್ ಅಕ್ಕಿ, ಹೃದಯದಲ್ಲಿ ಪುಟರ್ ಪುಟರ್ ಹಕ್ಕಿ.


ನಂತರ ನಾವೂ 'ಖಿಲಾಡಿ' ಅನ್ನೋ ಮೂವಿ ನೋಡಾಯಿತು ಬಿಡಿ. ಒಳ್ಳೆ ಮೂವಿ. ಎಲ್ಲ ಹೊಸಬರನ್ನೇ ಹಾಕಿಕೊಂಡು ಮಾಡಿದ ಒಂದು ಒಳ್ಳೆ ಮೂವಿ. ಪಡ್ಡೆ ಹುಡುಗರ ಮಂಗ್ಯಾತನ, ಒಂದಿಷ್ಟು ಕಾಲೇಜ್ ರೋಮ್ಯಾನ್ಸ್, ನಂತರ ಒಂದು ಕೊಲೆ ಕೇಸಿನ ಸಸ್ಪೆನ್ಸ್, ಒಂದಿಷ್ಟು ಥ್ರಿಲ್ಲರ್ ಕ್ಷಣಗಳು, ಒಳ್ಳೆ ಇಂಪಾದ ಸಂಗೀತ, ಎಲ್ಲ ಬರೋಬ್ಬರಿ ಮಿಕ್ಸ್ ಮಾಡಿದ ಒಳ್ಳೆ ಟೈಮ್ ಪಾಸ್  ಮೂವಿ. ಜಾನಿ ಲೀವರ್ ಕಾಮಿಡಿಯಂತೂ - ಸಿಂಪ್ಲಿ ಸುಪರ್ಬ್.

ಕಳೆದ ವರ್ಷ ನಟ ಅಕ್ಷಯ ಕುಮಾರನಿಗೆ ನಲವತ್ತೇಳು ವರ್ಷವಾಯಿತಂತೆ. ಬಾಲಿವುಡ್ಡಿನಲ್ಲಿ ಈಗ AK - 47, ಅಂತ ಯಾರೋ ಅಂದರು. AK ಅಂದರೆ ಗೊತ್ತಾಯಿತಲ್ಲ? ಅಕ್ಷಯ ಕುಮಾರ ಅಂತ.

ಯಾಕೋ ಇಂದು ಯಾವದೋ ವಿಷಯಕ್ಕೆ AK - 47 ಬಂದೂಕು ನೆನಪಾದಾಗ ಅಕ್ಕಿ ಉರ್ಫ್ ಅಕ್ಷಯ ಕುಮಾರ ಉರ್ಫ್ AK ನೆನಪಾದ. ಅಕ್ಷಯ ಕುಮಾರ ಉರ್ಫ್ ಅಕ್ಕಿಯ ಕನಸು ಕಂಡ ಅಕ್ಕನಂತಹ ಹುಡುಗಿ ನೆನಪಾದಳು. ಆಕೆಯ ಹೃದಯದಲ್ಲಿ ಹಾರಿದ ಪುಟರ್, ಪುಟರ್ ಹಕ್ಕಿ ನೆನಪಾದವು. ಹಳಿ ತಪ್ಪಿದ ಮನಸ್ಸಿನ ರೈಲು ಎಲ್ಲೆಲ್ಲೋ ಹರಿದು ಹೋದಂತೆ ಉಳಿದೆಲ್ಲ ನೆನಪುಗಳು ಬಂದವು.

ಕೆಳಗೆ ನೋಡಿ. ೧೯೯೧-೯೨ ರಲ್ಲಿ ಬಿಡುಗಡೆಯಾದ 'ಖಿಲಾಡಿ' ಮೂವಿಯ ಒಂದು ಸಿಕ್ಕಾಪಟ್ಟೆ ಕಾಮಿಡಿ ಸೀನ್. ಎಷ್ಟು ನೋಡಿದರೂ ಬೋರ್ ಬರದು. ಬದಲಿಗೆ ಯಾವಾಗಲೂ ನಗೆ ಬುಗ್ಗೆಯ ಬೋರ್ವೆಲ್!

No comments: