ಕಾಡಿನಾಗಿದ್ದ ಮಂಗ್ಯಾವೊಂದು ನಾಡಿಗೆ ಬಂದು ಸೆಟಲ್ ಆಗಿಬಿಡ್ತು. ನಾಡಿಗೆ ಬಂದು ಸೆಟಲ್ ಏನೋ ಆತು. ಆದರ ಊಟಕ್ಕ ಏನು ಮಾಡೋದು? ಅಲ್ಲೆ ಇಲ್ಲೆ ಅಡ್ಯಾಡ್ತಿತ್ತು. ಮಂದಿ, 'ಪಾಪ ಮಂಗ್ಯಾ!' ಅಂತ ಹೇಳಿ ಬಾಳಿ ಹಣ್ಣು ಕೊಟ್ಟು ಕಳಸ್ತಿದ್ದರು. ಅದೇ ರೂಢಿ ಆಗಿಬಿಡ್ತು ಮಂಗ್ಯಾಗ. ಸಿಕ್ಕ ಕಡೆ ಹೋಗೋದು, 'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡ್ರೀ,' ಅಂತ ಕೇಳೋದು. ಇದ್ರಂತೂ ಕೊಟ್ಟೇ ಕೊಡ್ತಾರ. ಇಲ್ಲದಿದ್ದರೂ 'ಪಾಪ ಮಂಗ್ಯಾ' ಅಂತ ಹೊರಗಿಂದ ತರಿಸ್ಯಾದ್ರೂ ಕೊಡ್ತಾರ. ಮಂಗ್ಯಾ ಈ ಪದ್ಧತಿ ರೂಢಿ ಮಾಡಿಕೊಂಡು ಆರಾಮ ಇತ್ತು.
ಒಂದು ದಿವಸ ಮಂಗ್ಯಾ ಒಂದು ಬಾರ್ ಹೊಕ್ಕಿಬಿಡ್ತು. ಪಾಪ ಅದಕ್ಕೇನು ಗೊತ್ತು ಬಾರ್ ಅಂದ್ರೇನು ಅಂತ. ಬಾರಿಗೆ ಹೋಗಿ ಬಾಳಿ ಹಣ್ಣು ಕೇಳೋದು ಅಂದ್ರ ಮಟನ್ ಅಂಗಡಿಗೆ ಹೋಗಿ ಸತ್ನಾರಣ ಪ್ರಸಾದ ಕೇಳಿದಂಗ. ಆದ್ರ ಮಂಗ್ಯಾಗ ಗೊತ್ತಿಲ್ಲ.
ಯಥಾ ಪ್ರಕಾರ 'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡ್ರೀ,' ಅಂತ ಕೇಳ್ತು ಮಂಗ್ಯಾ.
'ಇಲ್ಲ. ಮುಂದ ಹೋಗು,' ಅಂದ ಬಾರಿನವ. ಅವಂಗ ರಾತ್ರಿ ಪೂರಾ ಬಾರ್ ಸಂಬಾಳಿಸಿ ಸುಸ್ತಾಗಿ, ಮತ್ತ ಮರುದಿನ ಮಧ್ಯಾನವೇ ಬಾಗಿಲ ತೆಗೆದು, ಬೋಣಿ ಆಗೋದರ ಮೊದಲೇ ಮಂಗ್ಯಾ ಬಂದು ಬಿಟ್ಟಿ ಬಾಳಿ ಹಣ್ಣು ಕೇಳ್ತದ ಅಂತ ಕೆಟ್ಟ irritate ಆತು.
ಹೇಳಿ ಕೇಳಿ ಮಂಗ್ಯಾ. ಹಾಂಗೆಲ್ಲ ಬಿಡೋ ಪೈಕಿನೇ ಅಲ್ಲ. ಮತ್ತ ಕೇಳ್ತು.
'ಬಾಳಿ ಹಣ್ಣು ಐತ್ರೀ? ಪ್ಲೀಸ್ ತರಿಸಿ ಕೊಡ್ರೆಲ್ಲಾ?'
'ಏ! ಇಲ್ಲ. ಬಾಳಿ ಗೀಳಿ ಹಣ್ಣು ಇಲ್ಲ ಅಂತ ಹೇಳಿದ್ದು ತಿಳಿಯೋದಿಲ್ಲ ನಿನಗ? ಹಾಂ? ಮುಂದ ಹೋಗು' ಅಂತ ಜೋರ್ ಮಾಡಿದ ಬಾರಿನವ.
ಅದು ಜಾಬಾದ್ ಮಂಗ್ಯಾ. ಹಾಂಗೆಲ್ಲ ಅಷ್ಟು ಸರಳ ಬಿಡುವ ಪೈಕಿ ಅಲ್ಲವೇ ಅಲ್ಲ. ಮತ್ತ ಅದನ್ನೇ ಕೇಳ್ತು.
'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡಸ್ರೀ! ಕೆಟ್ಟ ಹಶಿವ್ಯಾಗೈತಿ!'
ಈಗ ಬಾರಿನ ಯಜಮಾನಗ ಖರೆನೇ ತಲಿ ಕೆಟ್ಟ, ಹಾಪ್ ಆಗಿ, ಕೆಟ್ಟ ಸಿಟ್ಟು ಬಂತು. ಹಾಕ್ಕೊಂಡು ಬೈದುಬಿಟ್ಟ.
'ಹುಚ್ಚ ಮಂಗ್ಯಾ ಸೂಳಿಮಗನ. ಏನ್ ಬಾಳಿ ಹಣ್ಣು ಹಚ್ಚಿಲೇ?? ಇನ್ನೊಮ್ಮೆ 'ಬಾಳಿ ಹಣ್ಣು ಐತ್ರೀ? ಕೊಡಸ್ರೀ' ಅಂತ ಕೇಳಿದ್ರ ಅಷ್ಟೇ ಮತ್ತ. ಬಾಯಾಗಿಂದ ನಿನ್ನ ನಾಲಗಿ ಈಕಡೆ ಎಳದು, ಇದೇ ಟೇಬಲ್ ಮ್ಯಾಲೆ ನಿನ್ನ ನಾಲಗಿ ಇಟ್ಟು, ಉದ್ದಂದು ಮಳಿ ಹೊಡೆದು ಬಿಡ್ತೇನಿ ನೋಡು. ನಿನ್ನ ನಾಲಿಗಿ ಟೇಬಲ್ಲಿಗೆ ಜಡದೇ ಬಿಡ್ತೇನಿ. ಕಡೇ ವಾರ್ನಿಂಗ್ ಇದು!' ಅಂತ ಅಬ್ಬರಿಸಿಬಿಟ್ಟ.
ಪೆಚ್ಚಾದ ಮಂಗ್ಯಾ ಒಂದು ಕ್ಷಣ ಸುಮ್ಮಾತು. ಮತ್ತ ಕೇಳ್ತು. ಮರಳಿ ಯತ್ನವ ಮಾಡು ಅನ್ನುವ ರೀತಿಯಲ್ಲಿ.
'ಮಳಿ ಐತ್ರೀ!????' ಅಂತ ಕೇಳಿ ಬಿಡ್ತು ಮಂಗ್ಯಾ.
ಈಗ ಬಾರ್ ಮಾಲೀಕ ತಲಿ ಕರಾ ಪರಾ ಅಂತ ಕೆರಕೊಂಡ. 'ಇಷ್ಟೊತ್ತನಕಾ 'ಬಾಳಿ ಹಣ್ಣು ಐತ್ರೀ?' ಅಂತ ತಲಿ ತಿಂದ ಮಂಗ್ಯಾ, ಯಾವಾಗ, 'ಬಾಯಾಗಿಂದ ನಿನ್ನ ನಾಲಗಿ ಎಳೆದು, ಮಳಿ ಜಡಿದು ಬಿಡ್ತೇನಿ' ಅಂದ ಕೂಡಲೇ ಈಗ 'ಮಳಿ ಐತ್ರೀ?' ಅಂತ ಕೇಳಾಕ ಶುರು ಮಾಡಿ ಬಿಟ್ಟೈತಲ್ಲಾ? ಎಂತಾ ಮಂಗ್ಯಾಪಾ ಇದು?' ಅಂತ ಆಶ್ಚರ್ಯ ಆತು.
'ಮಳಿ ಇಲ್ಲ. ಮಳಿ ಎಲ್ಲಿಂದ ಬರಬೇಕಲೇ ಮಂಗ್ಯಾ? ಇದು ಬಾರ್. ಬಡಿಗ್ಯಾನ ಅಂಗಡಿ ಅಲ್ಲ' ಅಂದ ಮಾಲೀಕ. 'ಹೋಗಪಾ ಸಾಕು, ತಲಿ ತಿನ್ನಬ್ಯಾಡ,' ಅನ್ನೋ ಹಾಂಗ ಲುಕ್ ಕೊಟ್ಟ.
'ಅಬ್ಬಾ! ಒಮ್ಮೆ ಹೆದರಿಬಿಟ್ಟಿದ್ದೆ! ನನ್ನ ನಾಲಗಿ ಹೊರಗ ಎಳೆದು, ನಾಲಗಿಗೆ ಮಳಿ ಜಡಿತೇನಿ ಅಂದ ಇವನ ಕಡೆ ಎಲ್ಲರೆ ಖರೆನೇ ಮಳಿ ಐತೋ ಏನೋ ಅಂತ ಹೆದರಿದ್ದೆ. ಮಳಿ ಇಲ್ಲ ಅಂತಾತು. ಬಚಾವ್!' ಅಂತ ರಿಲ್ಯಾಕ್ಸ್ ಆದ ಮಂಗ್ಯಾ ಮತ್ತ ಕೇಳ್ತು.
'ಬಾಳಿ ಹಣ್ಣು ಐತ್ರೀ??????'
:) :)
ಮುಂದೇನಾತು ಗೊತ್ತಿಲ್ಲ. ಬಾರಿನವ ಮಂಗ್ಯಾನ ಕಾಟ ತಡೆದುಕೊಳ್ಳಲಾಗದೇ ಬಾಳಿ ಹಣ್ಣು ತರಿಸಿಕೊಟ್ಟಿರಬಹುದು ಅಂತ ನಮ್ಮ ಆಶಾ. ಯಾರಿಗೊತ್ತ? :)
ಕಲಿತ ನೀತಿ: ಮಂದಿ ಸುಮ್ಮನ ಓಳು ಬಿಡ್ತಿರ್ತಾರು. ಚೌಕ್ ಉಳ್ಳಸ್ತಿರ್ತಾರು. ಅವರು ಹೇಳಿದ್ದನ್ನ ಮತ್ತ ಮತ್ತ ಕೇಳಿ ಪಕ್ಕಾ ಮಾಡಿಕೋಬೇಕು. ಓಳು ಅಂತ ಗೊತ್ತಾದ ಕೂಡಲೇ ಮತ್ತ ಕೇಳಬೇಕು. ಕೇಳಿ ಕೇಳಿ ನಮ್ಮ ಕೆಲಸಾ ಮಾಡಿಸ್ಕೋಬೇಕು. ಕಾರ್ಪೊರೇಟ್ ಜಗತ್ತಿನಲ್ಲಂತೂ ಯಾರನ್ನೇ ಏನೇ ಕೇಳು. No. Can't. Too busy. Swamped. Plate filled to the brim. It's crazy. Crazy busy. Can't do it. Sorry, booked for next 2 weeks. ಬರೇ ಇದೇ ಓಳು. ಅಂತ ಸಂದರ್ಭದಲ್ಲಿ ಈ ಟೆಕ್ನಿಕ್ ಉಪಯೋಗಕ್ಕೆ ಬಂದರೂ ಬರಬಹುದು.
* ಮಳಿ = ಮೊಳೆ, nail
* ನಾಲಿಗಿ = ನಾಲಿಗೆ
ಮೂಲ: ಇಂಗ್ಲೀಶ್ ಜೋಕ್
7 comments:
Good lesson!
Tricky mangya! Could have delegated the task to mushyas!!
Very good!
Ideas worth implementing.
Interesting thought!
Excellent!
Interesting,please add more novels.
Post a Comment