Saturday, March 28, 2015

ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ????


೧೯೯೧ ರ ಮಾತು. ಅದೂ ೧೯೯೧, ಮೇ ತಿಂಗಳಲ್ಲಿ ಆದ ರಾಜೀವ್ ಗಾಂಧಿ ಹತ್ಯೆ ನಂತರದ ಮಾತು. ಎಲ್ಲ ಕಡೆ ಅದೇ ಸುದ್ದಿ. LTTE ತಮಿಳ ಉಗ್ರರು ರಾಜೀವ್ ಗಾಂಧಿ ಹತ್ಯೆ ಮಾಡಿದರು ಅಂತ. ಎಲ್ಲ ಕಡೆ, ಎಲ್ಲ ಪೊಲೀಸರೂ ಅವರನ್ನೇ ಹುಡುಕುತ್ತಿದ್ದರು. ಎಲ್ಲಿ ತನಕ ಅಂದರೆ ತಮಿಳರು ಅಂದ್ರೆ LTTE, LTTE  ಅಂದರೆ ತಮಿಳು ಅನ್ನುವ ಹಾಗೆ ಆಗಿಬಿಟ್ಟಿತ್ತು. ನಮ್ಮ ಧಾರವಾಡದಲ್ಲೋ ಇದ್ದಿದ್ದು, ಆ ಕಾಲದಲ್ಲಿ, ಹೆಚ್ಚೆಂದರೆ ಒಂದು ಮೂರು ನಾಲ್ಕು ತಮಿಳ ಕುಟುಂಬಗಳು. ಹೆಸರಿಗೆ ಮಾತ್ರ ತಮಿಳರು ಅಷ್ಟೇ. ಅದೆಷ್ಟೋ ವರ್ಷಗಳಿಂದ ಧಾರವಾಡದಲ್ಲಿ ಸೆಟಲ್ ಆಗಿ, ಶುದ್ಧ ಧಾರವಾಡಿಗಳೇ ಆಗಿಹೋಗಿದ್ದರು. ಬೆಂಗಳೂರು ಕೊಂಗರ ಬಿಂಕ, ಬಿಗುಮಾನ, ಭಾಷಾ ದುರಭಿಮಾನ, superiority complex ಇತ್ಯಾದಿ ಕೇಳಲೇ ಬೇಡಿ. ಅಷ್ಟು ಒಳ್ಳೆ ಕೊಂಗರು ಆ ಕಾಲದ ನಮ್ಮ ಧಾರವಾಡದ ತಮಿಳರು. ಆದರೇನು ಮಾಡೋಣ? ರಾಜೀವ್ ಗಾಂಧಿ ಕೊಂದವರು LTTE. ಅವರು ತಮಿಳರು. ಅದೂ ನಾಪತ್ತೆಯಾಗಿದ್ದಾರೆ. ದೇಶದ ಯಾವ ಮೂಲೆಯಲ್ಲಿ, ಯಾವ ತಮಿಳರು ಅವರಿಗೆ ಆಶ್ರಯ ಕೊಟ್ಟಿದ್ದಾರೋ ಏನೋ. ಹಾಗಂತ ಹೇಳಿ ಎಲ್ಲ ಕಡೆ ತಮಿಳು ಜನರ ಮೇಲೆ ಪೋಲೀಸರ ಕಣ್ಣು. ನಮ್ಮ ಧಾರವಾಡ ಪೊಲೀಸರು ಸಹ ಇದ್ದ ಬಿದ್ದ ನಾಲ್ಕಾರು ತಮಿಳು ಕುಟುಂಬಗಳ ಮೇಲೆ ಕಣ್ಣಿಟ್ಟಿದ್ದರು ಅಂತ ಸುದ್ದಿ ಅಂತೂ ಇತ್ತು. ಎಷ್ಟು ನಿಜವೋ, ಎಷ್ಟು ಗಾಳಿ ಸುದ್ದಿಯೋ ಗೊತ್ತಿಲ್ಲ. ನಮ್ಮ ಪಾಲಿಗಂತೂ ಅದು ದೊಡ್ಡ ಜೋಕ್. ಯಾಕೆಂದರೆ ಯಾರ್ಯಾರ ಮೇಲೆ ಕಣ್ಣಿಟ್ಟಿದ್ದರು ಅಂತ ಹೇಳುತ್ತಿದ್ದರೋ ಅವರೆಲ್ಲ ನಮಗೆ ಒಳ್ಳೆ ಪರಿಚಯ ಇದ್ದವರೇ. ಕೆಲವರು ದೊಡ್ಡ ದೊಡ್ಡ ನಾಮದ ಅಯ್ಯಂಗಾರರು. ಉಳಿದವರು ಮೈತುಂಬ ಭಸ್ಮ ಬಳಿದುಕೊಳ್ಳುವ ಅಯ್ಯರುಗಳು. ಯಾರೂ LTTE ಟೈಪಿನ ಜನ ಅಲ್ಲವೇ ಅಲ್ಲ. ಒಟ್ಟಿನಲ್ಲಿ ದೇಶದ ಎಲ್ಲ ಕಡೆ ತಮಿಳರ ಬಗ್ಗೆ ತಪ್ಪು ತಿಳುವಳಿಕೆ ಇದ್ದಂತೆ ನಮ್ಮ ಊರಲ್ಲೂ ಸಹ. ಅದೂ ಮತ್ತೆ ಮಾಹಿತಿಗೆ ತುಂಬ ಅಭಾವವಿದ್ದ ಕಾಲ. ಧಾರವಾಡ ತಮಿಳರೂ ಸಹ LTTE ನೇ, ಎಲ್ಲ ತಮಿಳರೂ LTTE ನೇ ಅನ್ನುವ ನಂಬಿಕೆ ಬಲವಾಗಿ ಬೇರೂರಿಬಿಟ್ಟಿತ್ತು.

ಇದೇ ಸಮಯದಲ್ಲಿ ಧಾರವಾಡದಲ್ಲಿ ನಮ್ಮ ಅಕ್ಕನಂತಹ ಹುಡುಗಿ ಒಬ್ಬಾಕೆ ತಮಿಳ ಹುಡುಗನನ್ನು ಲವ್ ಮಾಡಿ, ಮನೆಗೆ ಕರೆದುಕೊಂಡು ಬಂದು ಬಿಡಬೇಕೇ????? ಆಕೆಯೋ ಭಯಂಕರ ಪ್ರತಿಭಾವಂತೆ. ರಾಂಕ್ ಹೋಲ್ಡರ್. ಮತ್ತೆ ಸುಂದರಿ ಕೂಡ. ಎಲ್ಲೆಲ್ಲೋ ದೊಡ್ಡ ದೊಡ್ಡ ಕಾಲೇಜ್, ಯೂನಿವರ್ಸಿಟಿಯಲ್ಲಿ ಓದಿ, ದೊಡ್ಡ ದೊಡ್ಡ ಕೆಲಸ ಹಿಡಿದು, ಎಲ್ಲೋ ಪರದೇಶದಲ್ಲಿ ನೌಕರಿ ಚಾಕರಿ ಮಾಡಿಕೊಂಡಿದ್ದಳು. ಅಲ್ಲೇ ಯಾರೋ ತಮಿಳ ಮನ್ಮಥ ಸಿಕ್ಕುಬಿಟ್ಟಿದ್ದ. ಲವ್ ಮಾಡೇಬಿಟ್ಟಿದ್ದಳು. ಲವ್ ಮಾಡೋದೇನು ಬಂತು? ಲವ್ ಅನ್ನೋದು ಅದೇನೋ ಅದಾಗೇ ಆಗಿಹೋಗುತ್ತದೆಯಂತೆ. ಹಾಗಂತ ಮಾಡಿದವರ ಅಂಬೋಣ. ಇರಲಿ. ಈ ಪುಣ್ಯಾತ್ಗಿತ್ತಿಯೂ ಲವ್ ಮಾಡಿ, ಆ ತಮಿಳನನ್ನೇ ಮದುವೆಯಾಗುವದಾಗಿ ಹೇಳೇಬಿಟ್ಟಳು. ಮನೆಯವರೂ ಸಹ ದೊಡ್ಡ ಮನಸ್ಸಿನವರೇ. ಅವರೂ ದೇಶ ವಿದೇಶ ಎಲ್ಲ ನೋಡಿ ಬಂದವರೇ. ಅದರೂ ಜಾತಿ, ಪಾತಿ, ಸಂಸ್ಕೃತಿ ಎಲ್ಲ ಇರುತ್ತದೆ ನೋಡಿ. ಹೋಗಲಿ ನಮ್ಮ ಕನ್ನಡದವರೇ ಅಂದರೆ ಮಾತು ಬೇರೆ. ಹೇಗೋ ಮ್ಯಾನೇಜ್ ಮಾಡಬಹುದು. ಹೋಗಿ ಹೋಗಿ ಎಲ್ಲಿಯದೋ ಮೂಲೆಯ ತಮಿಳನನ್ನು ಅಳಿಯ ಅಂತ ಮನೆ ಮಂದಿ ಒಪ್ಪಿಕೊಂಡರೂ ರಿಶ್ತೇದಾರ ಮಂದಿಗೆ, ಸಂಬಂಧಿಕರಿಗೆ convince ಮಾಡುವದು ಹೇಗೆ? ಅದೇ ದೊಡ್ಡ ಚಿಂತೆ. ಆದರೂ ಮಗಳ ಸುಖ ಸಂತೋಷವೇ ಮುಖ್ಯ. ಮಾಡಬಾರದ ಕೆಲಸ ಏನೂ ಮಾಡಿಲ್ಲ. 'ಪ್ಯಾರ್ ಗೆ ಆಗಿ ಬುಟ್ಟೈತೆ. ಓ! ನಮ್ದೂಕೆ ಕೊಂಗನ್ನ ಜೋಡಿ ಪ್ಯಾರ್ ಗೆ ಆಗಿ ಬುಟ್ಟೈತೆ. ರೊಟ್ಟಿ, ಎಣಗಾಯಿ ಪಲ್ಯಾ ಸೇರ್ತಾ ಇಲ್ಲ ನಮ್ಮದೂಕೆ. ಅನ್ನ ಸಾಂಬಾರ್ ಸೇರ್ತಾ ಐತೆ ನಮ್ದೂಕೆ. ಜಲ್ದೀ ಶಾದಿ ಮಾಡ್ಕೋಬೇಕಾಗೈತೆ. ಹಾಯ್! ಹಾಯ್! ಪ್ಯಾರ್ ಗೆ ಆಗಿ ಬುಟ್ಟೈತೆ' ಅಂತ ಒಂದೇ ವಾರಾತ ಮಗಳದ್ದು. ಸರಿ ಅಂತ ಎಲ್ಲ ಒಪ್ಪಿದರು. ಕೊಂಗನಂತೂ ಎಲ್ಲ ಒಪ್ಪಿಸಿಕೊಂಡೇ ಬಂದಿದ್ದ ಅಂತ ಕಾಣುತ್ತದೆ. ಎಲ್ಲ ನಿಶ್ಚಯವಾಗಿ, ಆಮಂತ್ರಣ ಪತ್ರಿಕೆ ಪ್ರಿಂಟ್ ಆಗಿ ಬಂತು. ಹಾಗೆಯೇ ಒಂದು ಸುದ್ದಿ ಸಹಿತ ಹಬ್ಬಿಬಿಟ್ಟಿತು. ಅದೇನು ಸಾಮಾನ್ಯ ಸುದ್ದಿಯೇ? ಖತರ್ನಾಕ್ ಸುದ್ದಿ - ಅವರ ಬೀಗರು LTTE ಪೈಕಿಯಂತೆ!

ಶಿವ ಶಿವಾ! ಅದ್ಯಾರು ಅವರ ಬೀಗರಿಗೂ ಮತ್ತೆ LTTE ಮಂದಿಗೂ ಲಿಂಕ್ ಮಾಡಿಬಿಟ್ಟರೋ ಗೊತ್ತಿಲ್ಲ. ವಾತಾವರಣವೇ ಹಾಗಿತ್ತು ನೋಡಿ. ಯಾರೋ ಹೋಗಿ ಹಬ್ಬಿಸುವ ಜರೂರತ್ತೇ ಬರಲಿಲ್ಲ. 'ಅವರ ಬೀಗರು LTTE ಪೈಕಿಯಂತೆ' ಅನ್ನುವ ಸುದ್ದಿ ಮಾತ್ರ ಬರೋಬ್ಬರಿ ಹಬ್ಬಿಬಿಟ್ಟಿತು. ಮತ್ತೆ ನಾವು ಧಾರವಾಡ ಮಂದಿ. ಶುದ್ಧ ಜವಾರಿ. ಭಿಡೆ ಗಿಡೆ ಇಲ್ಲವೇ ಇಲ್ಲ. ಏಕ್ ಮಾರ್ ದೋ ತುಕಡಾ ತರಹದ ಭಾಷೆ. ಧಪ್ಪ ಇದ್ದವರಿಗೆ 'ಢಬ್ಬ ಸೂಳಿಮಗನೇ! ಯಾಪರಿ ಉಬ್ಬಿಯಲ್ಲಲೇ!?', ತೆಳ್ಳಗೆ ಇದ್ದವರಿಗೆ ಯಾವದೇ ಮುಲಾಜಿಲ್ಲದೆ ಕೊಳಕ, ಕೊಳಕಿ ಅಂದುಬಿಡೋದು. privacy ಗೌರವಿಸುವದು, political correctness ಎಲ್ಲ ಗೊತ್ತೇ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿಬಿಡೋದು. ಆಮ್ಯಾಲೆ ಬೇಕಾದ್ರೆ sorry ಕೇಳಿ ಕೇಳಿ ಅವರು ಓಕೆ ಅನ್ನುವ ತನಕ ಕಾಡೋದು. ಅದೆಲ್ಲ ನಮ್ಮ ಧಾರವಾಡದ 'ಆತ್ಮೀಯ' ಸಂಸ್ಕೃತಿ. ಎಲ್ಲ ಕಡೆ ಹಾಗೆಯೇ ಬಿಡಿ.

'ಅವರ ಬೀಗರು LTTE ಪೈಕಿಯಂತೆ!'  ಅನ್ನುವ ಸುದ್ದಿ ಎಲ್ಲಿಯ ತನಕ ಹಬ್ಬಿತು ಅಂದ್ರೆ ಅವರು ಹೋದಲ್ಲಿ ಬಂದಲ್ಲಿ, ನಿಂದ್ರಿಸಿ, ಕುಂದ್ರಿಸಿ ಮಂದಿ ಅವರನ್ನು ಕೇಳುತ್ತಿದ್ದುದು ಒಂದೇ ಪ್ರಶ್ನೆ - ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ???? 'ಅಲ್ಲ. ಅಲ್ಲ. ಅವರು ತಮಿಳು ಮಂದಿ ಹೌದು. ಆದ್ರ LTTE ಪೈಕಿಯಲ್ಲ' ಅಂತ ಇವರು ಹೇಳಿದರೆ ನಂಬಲು ಮಾತ್ರ ಯಾರೂ ತಯಾರಿಲ್ಲ. follow up ಅನ್ನುವಂತೆ, ಮತ್ತೆ ಪ್ರಲಾಪ - 'ಮೊನ್ನೆ ರಾಜೀವ್ ಗಾಂಧಿಗೆ ಹೆಟ್ಟಿ ಹೋದವರು ಅವರೇ LTTE ನೋಡ್ರೀ. ಅದಕ್ಕೇ ಕೇಳಿದೆ, ಎಲ್ಲಿ ನಿಮ್ಮ ಬೀಗರೂ ಸಹ LTTE ಪೈಕಿಯೇನೋ ಅಂತ. ಅಲ್ಲ ಅಂದ್ರ ಭಾಳ ಬೇಷ್ ಆತ ಬಿಡ್ರೀ.'

ಲಗ್ನ ಪತ್ರಿಕೆ ಕೊಡಲು ಹೋದಾಗಲೂ ಅದೇ ಪ್ರಶ್ನೆ, ಮುಂದೆ ಮದುವೆ ಎಲ್ಲೋ ಕೊಂಗರ ನಾಡಿನಲ್ಲಿ ಆಗಿ, ಮುಂದೆ ಧಾರವಾಡದಲ್ಲಿ reception ಒಳಗೂ ಅದೇ ಪ್ರಶ್ನೆ. ಸಾಕಾಗಿ ಹೋಯಿತು ಅವರಿಗೆ. ಇತ್ತೀಚಿಗೆ ನಿಧನರಾಗುವ ತನಕ ಇನ್ನೂ ಇದೇ ಪ್ರಶ್ನೆಗೆ ಉತ್ತರ ಕೊಡುತ್ತ ತಲೆ ಕೆಟ್ಟು ಹಾಪಾಗಿ ಹೋಗಿದ್ದರು ನಮ್ಮ ಆಪ್ತರು. ಮತ್ತೆ ಈಗ ಒಂದು ಐದಾರು ವರ್ಷದ ಹಿಂದೆ LTTE ನಿರ್ನಾಮ ಮಾಡಿದ್ದು ದೊಡ್ಡ ಸುದ್ದಿಯಾಯಿತು ನೋಡಿ. ಆವಾಗ ಹಳೆ ಸುದ್ದಿ ಮತ್ತೆ ನೆನಪಾಗಿ, ಪಾಪದ ವೃದ್ಧ ದಂಪತಿಗೆ ಮತ್ತೆ ಅದೇ ಪ್ರಶ್ನೆ - ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ????

ಇಷ್ಟೆಲ್ಲ ಬರೆದರೂ ಅಕ್ಕನಂತಹ ಹುಡುಗಿಯ ಪರಿಚಯ ನನಗೆ ಇಲ್ಲ. ನೋಡಿಯೂ ಇಲ್ಲ. ರಾಂಕ್ ಬಂದಾಗ ಪತ್ರಿಕೆಯಲ್ಲಿ ನೋಡಿ ಸಂತೋಷಪಟ್ಟು, ಆಕೆಯ ಸಾಧನೆಗಳಿಂದ inspire ಆಗಿದ್ದು ಮಾತ್ರ ಸೋಲಾ ಆಣಾ ಖರೆ. ಅವರೆಲ್ಲ ಆರಾಮ ಇರಲಿ.

4 comments:

sunaath said...

ಅಲ್ಲಪಾ ಹುಡುಗಾ, ನೀ ಏನರ LTTE ಆಗಿಯೇನ, ಮತ್ತ?

Mahesh Hegade said...

ಸುನಾಥ್ ಸರ್,

LTTE ಆಗೋಣ ಅನ್ನೋದ್ರಾಗ ಅವರೇ ಇಲ್ಲದಾಂಗ ಆಗಿಬಿಟ್ಟರು ನೋಡ್ರೀ. ಆದರೂ LTTE ಬಗ್ಗೆ ಸಿಕ್ಕಿದ್ದೆಲ್ಲ ಓದಿ, ಒಂದಿಷ್ಟು ಬರೆದಿದ್ದು ಅದ. ಟೈಮ್ ಇದ್ದಾಗ ಓದ್ರೀ.

http://maheshuh.blogspot.com/2014/09/ltte.html

http://maheshuh.blogspot.com/2012/10/blog-post_6.html

http://maheshuh.blogspot.com/2012/10/ltte.html

ವಿ.ರಾ.ಹೆ. said...

LOL LOL

Mahesh Hegade said...

Thanks Viksas.