ಐಶ್ವರ್ಯಾ ರೈ |
ಈ ಲೈಫ್ ಅಂದ್ರೆ ವಿಚಿತ್ರ. ಒಮ್ಮೊಮ್ಮೆ ಬಯಸಿದ್ದು ಸಿಕ್ಕಿಬಿಡುತ್ತದೆ. ಆದರೆ ಬಯಸಿದ ರೂಪದಲ್ಲಿ ಸಿಗುವದಿಲ್ಲ. ನೀರು ಬಯಸಿದರೆ ನೀರಿನ ರೂಪವೇ ಆದ ಆವಿ ಸಿಗುತ್ತದೆ. ಬೀರು ಬಯಸಿದರೆ ಬೀರಿನಲ್ಲಿರುವ ಬಾರ್ಲಿ ಸಿಗುತ್ತದೆ. ಹಾಗೆಯೇ Ash ಬಯಸಿದರೆ ಒಮ್ಮೊಮ್ಮೆ ಬೂದಿ ಸಿಕ್ಕುಬಿಡುತ್ತದೆ.
Ash ಅಂದರೆ ಐಶ್ವರ್ಯಾ ರೈ ದೋಸ್ತಿ ಮಾಡಬೇಕು ಅಂತ ಹೋದವನಿಗೆ ನಿಜವಾದ Ash ಅಂದರೆ ಬೂದಿಯೇ ಸಿಕ್ಕರೆ ಹೆಂಗ್ರೀ!?
ಅದು ಇಸ್ವೀ ೨೦೦೦ ರ ಸಮಯ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ಏನೋ ಜಮ್ಮ ಚಕ್ಕ, ಝಕ್ಕ ನಕ್ಕ ಅಂತ ಪತ್ರಿಕೆಗಳಲ್ಲಿ ಸುದ್ದಿಯೋ ಸುದ್ದಿ. ಎಲ್ಲ ತಾರೆಯರಂತೆ ಅವರೂ ನಿರಾಕರಿಸುತ್ತಲೇ, ನಖರಾ ಬಾಜಿ ಮಾಡುತ್ತಲೇ ಇದ್ದರು. ಕೇಳಿದರೆ, 'ಇಲ್ಲ. ಇಲ್ಲ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಅಷ್ಟೇ!' ಅಂತ ಭೋಂಗು ಬಿಟ್ಟುಕೊಂಡು ಇದ್ದರು.
'ಹೇಗೂ ಐಶು ಬೇಬಿ (ಐಶ್ವರ್ಯಾ ರೈ) ಇನ್ನೂ ಸಿಂಗಲ್ (ಅವಿವಾಹಿತೆ) ಇದ್ದಾಳೆ. ನಮ್ಮದೂ ಲಕ್ ನೋಡಿಬಿಡೋಣ,' ಅಂತ ಪ್ರಯತ್ನ ಮಾಡಿದ ಪುರುಷಶ್ರೇಷ್ಠರೆಷ್ಟೋ!? ಆ ಲೆಕ್ಕ ದೇವರಿಗೇ ಗೊತ್ತು. ಅಂತಹದ್ದೇ ಗುಂಪಿಗೆ ಸೇರುವವರು ನಮ್ಮ ಗರಂ ಆದಮೀ ಸಬೀರ್ ಭಾಟಿಯಾ. ಅಯ್ಯೋ! ಗರಮ್ ಆದಮೀ ಅಂದರೆ Hotmail ಸ್ಥಾಪಿಸಿದಂತಹ hot male. ಅದೇ ಸಬೀರ್ ಭಾಟಿಯಾ. ಅವರೂ ಸಹ ಎಲ್ಲಿಯಾದರೂ Ash ಸಿಗಬಹುದೇ ಅಂತ ನೋಡುತ್ತಿದ್ದರು ಅಂತ ಸುದ್ದಿಯಾಗಿತ್ತು. ಮತ್ತೆ ಆ ಕಾಲದಲ್ಲಿ ಅವರು most eligible bachelor ಅಂತಲೇ ಪ್ರಸಿದ್ಧರಾಗಿದ್ದರು. ಆಗ ತಾನೇ ತಮ್ಮ Hotmail ಕಂಪನಿಯನ್ನು ಸುಮಾರು ೪೫೦ ಮಿಲಿಯನ್ ಡಾಲರಿಗೆ ಮೈಕ್ರೋಸಾಫ್ಟ್ ಕಂಪನಿಗೆ ಮಾರಿ, ಕಂಡಾಪಟ್ಟೆ ರೊಕ್ಕ ಝಣಝಣ ಎಣಿಸುತ್ತ, ಭಾರತದಲ್ಲಿ ಕೂಡ ಒಂದಿಷ್ಟು ಕಂಪನಿ ಸ್ಥಾಪಿಸಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ರೊಕ್ಕವಂತೂ ಝಣಝಣ. ಜೊತೆಗೆ ನೋಡಲೂ ಸುರಸುಂದರಾಂಗ. ಹೇಳಿಕೇಳಿ ಪಂಜಾಬಿ ಮುಂಡಾ. ಎತ್ತರಕ್ಕೆ, ಕೆಂಪಕೆಂಪಗೆ ಇರುತ್ತಾರೆ. ಇವರೂ ಇದ್ದರು. ಹೀಗೆ ಎಲ್ಲ ಅರ್ಹತೆಗಳು ಇದ್ದ most eligible bachelor ಸಬೀರ್ ಭಾಟಿಯಾ ಸಾಹೇಬರು ಹೆಚ್ಚಾಗಿ ಪೇಜ್-೩ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಸುಂದರಿಯರ ಸಂಗ ಗಿಟ್ಟಬೇಕು ಅಂದರೆ ಪೇಜ್-೩ ಪಾರ್ಟಿಗಳಿಗೇ ಹೋಗಬೇಕು ತಾನೇ? ಅಂತಹದೇ ಯಾವದೋ ಪಾರ್ಟಿಯಲ್ಲಿ ಐಶು ಬೇಬಿಯನ್ನು ನೋಡಿ ಫುಲ್ ಫಿದಾ ಆಗಿಬಿಟ್ಟರು. ಪರಿಚಯ ಗಿರಿಚಯ ಕೂಡ ಸಣ್ಣ ಪ್ರಮಾಣದಲ್ಲಿ ಆಯಿತು ಅಂತ ಕಾಣುತ್ತದೆ.
ಸಬೀರ್ ಭಾಟಿಯಾ |
ಐಶು ಬೇಬಿಗೆ ಸ್ನೇಹಕ್ಕೆ, ಡೇಟಿಂಗ್ ಅದಕ್ಕೆ ಇದಕ್ಕೆ ಆಹ್ವಾನ ಕೊಟ್ಟಿರಬೇಕು. ಅದು ಹೇಗೋ ಗರಂ ಖೋಪಡಿ ಸಲ್ಲು ಮಿಯಾ ಅಂದರೆ ಸಲ್ಮಾನ್ ಕಿವಿಗೂ ಬಿದ್ದಿರಬೇಕು. ಆಕಾಲದಲ್ಲಿ ಐಶು ಬೇಬಿ ಬಗ್ಗೆ ಸಿಕ್ಕಾಪಟ್ಟೆ possessive ಆಗಿದ್ದ ಸಲ್ಲೂ ಮಿಯಾ ಕೊತಕೊತ ಕುದ್ದು, 'ಲೋ ಭಾಟಿಯಾ, ಸಿಗು ಮಗನೇ! ಮಾಡ್ತೀನಿ ನಿನಗೆ!' ಅಂತ ಆಗಲೇ ಸ್ಕೆಚ್ ಹಾಕಿದ್ದನೇ? ಗೊತ್ತಿಲ್ಲ.
ಮುಂದೆ ಸ್ವಲ್ಪ ದಿವಸಗಳ ನಂತರ ಮತ್ತೆ ಯಾವದೋ ಅದೇ ತರಹದ ಪಾರ್ಟಿಯಲ್ಲಿ ಸಲ್ಮಾನ್, ಐಶ್ವರ್ಯಾ, ಸಬೀರ್ ಭಾಟಿಯಾ ಮೂವರು ಸೇರಿದ್ದಾರೆ. ತಮ್ಮ ತಮ್ಮ ಪಾಡಿಗೆ ತಾವಿದ್ದಾರೆ. ಸಬೀರ್ ಭಾಟಿಯಾನನ್ನು ಸಲ್ಮಾನ್ ಖಾನ್ ನೋಡಿದ್ದಾನೆ. ನೋಡಿದಾಕ್ಷಣ ಏನೆನ್ನಿಸಿತೋ ಏನೋ ಸೀದಾ ಹೋಗಿಬಿಟ್ಟಿದ್ದಾನೆ ಭಾಟಿಯಾ ಬಳಿ.
ಬಂದವನೇ, ಎದುರಲ್ಲಿ ನಿಂತು, 'ನಿನಗೆ Ash ಬೇಕಾ??' ಅಂತ ಕೇಳಿದ್ದಾನೆ. ಒಮ್ಮೆಲೇ ಹಾಗೆ ಕೇಳಿದ್ದು ಸಬೀರ್ ಭಾಟಿಯಾಗೆ ಅದೆಷ್ಟು ಅರ್ಥವಾಯಿತೋ ಏನೋ ಗೊತ್ತಿಲ್ಲ. ಅವನು ಉತ್ತರಿಸುವ ಮೊದಲೇ ಸಲ್ಮಾನ್ ಖಾನ್ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟಿದ್ದಾನೆ. ತಾನು ಸೇದುತ್ತಿದ್ದ ಸಿಗರೇಟ್ ಬಾಯಿಂದ ತೆಗೆದು, ಅದನ್ನು ಕುಡುಗಿ, ಸಬೀರ್ ಭಾಟಿಯಾ ಕೈಮೇಲೆ ಬೂದಿ (ash) ಉದುರಿಸಿದ್ದಾನೆ. ಖತರ್ನಾಕ್ ಡೈಲಾಗ್ ಹೊಡೆದಿದ್ದಾನೆ. 'Ash ಬೇಕು ಅಂದಿದ್ದೆಯೆಲ್ಲ? ತಗೋ Ash,' ಅಂದವನೇ ನಿಗಿನಿಗಿ ಉರಿಯುತ್ತಿದ್ದ ಸಿಗರೇಟನ್ನು ಸಬೀರ್ ಭಾಟಿಯಾನ ಅಂಗೈ ಮೇಲೆ ಒತ್ತಿಬಿಟ್ಟಿದ್ದಾನೆ. ಶಿವಾಯ ನಮಃ! ಭಾಟಿಯಾನ ಅಂಗೈ ಎಷ್ಟು ಸುಟ್ಟಿತೋ, ಎಷ್ಟು ಉರಿಯಿತೋ ಗೊತ್ತಿಲ್ಲ. ಚುರುಕ್ ಅಂದು ಕೈ ಹಿಂದೆಳೆದುಕೊಂಡಿದ್ದರೆ ಅಷ್ಟರ ಮಟ್ಟಿಗೆ ಬಚಾವ್. ತಾನು ಬಾಲಿವುಡ್ಡಿನ ಮಹಾ ದೊಡ್ಡ ಉಡಾಳ ಅಂತ ಸಲ್ಮಾನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ.
ಇದಾದ ನಂತರ ಮಾತ್ರ ಸಬೀರ್ ಭಾಟಿಯಾ ಐಶ್ವರ್ಯಾ ಸುದ್ದಿಗೆ ಹೋದ ಮಾಹಿತಿ ಇಲ. ಮೊದಲ ಸಲ ಭೆಟ್ಟಿಯಾದ ಸಲ್ಲೂ ಮಿಯಾ ಕೇವಲ ಕೈಯನ್ನು ಸುಟ್ಟು ಹೋದ. ಮುಂದಿನ ಸಲ ಮತ್ತೇನನ್ನಾದರೂ ಸುಟ್ಟುಬಿಟ್ಟರೆ ಕಷ್ಟ ಅಂದುಕೊಂಡು ಸುಮ್ಮನಾಗಿರಬೇಕು. ಅವರು Ash ಹುಚ್ಚನ್ನು ಅಷ್ಟಕ್ಕೇ ಬಿಟ್ಟು ಬೇರೆ ಯಾರೋ ಹಕ್ಕಿಗೆ ಕಾಳು ಹಾಕಲು ಹೋಗಿರಬೇಕು.
ಇವತ್ತು ಯಾವದೋ ಒಂದು ಹಳೆ ಇಂಟರ್ನೆಟ್ ಲಿಂಕಲ್ಲಿ ಈ ಸುದ್ದಿ ಸಿಕ್ಕಿತು. ಇಲ್ಲಿದೆ ನೋಡಿ ಆ ಲಿಂಕ್ - Sabeer Bhatia's got Ash on his hands.
ನಂತರ ಸಬೀರ್ ಭಾಟಿಯಾ ವಿವಾಹ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಗೀತಾ ಒಬೆರೊಯ್ ಅನ್ನುವ ವಕೀಲೆ ಒಬ್ಬಳ ಜೊತೆಗೆ ನಿಶ್ಚಯವಾಗಿತ್ತು. ಆಗಲಿಲ್ಲ. ಮುರಿದುಬಿತ್ತು. ನಂತರ ಆಯುರ್ವೇದ ಔಷಧಗಳನ್ನು ತಯಾರು ಮಾಡುವ ಬೈದ್ಯನಾಥ ಕಂಪನಿಯ ಬಹು ಕೋಟ್ಯಾಧಿಪತಿ ಮಾಲೀಕರ ಮಗಳು ಟೀನಾರನ್ನು ವಿವಾಹವಾಗಿದ್ದಾರೆ ಅಂತ ಓದಿದ ನೆನಪು. ಈಗ ಅದು ಮುಗಿದು, ಡೈವೋರ್ಸಿನಲ್ಲಿ ಅಂತ್ಯ ಕಂಡು, ಸಬೀರ್ ಭಾಟಿಯಾ ಮತ್ತೆ ಬ್ಯಾಚುಲರ್.
ಐಶ್ ಕೂಡ ಸಲ್ಮಾನ್ ಖಾನನಿಂದ ದೂರವಾದರು. ಕೆಲಕಾಲ ನಟ ವಿವೇಕ್ ಒಬೆರೊಯ್ ಜೊತೆ ಅವರ ಹೆಸರು ಕೇಳಿಬಂತು. ನಂತರ ಎಲ್ಲರಿಗೂ ತುಂಬಾ ಆಶ್ಚರ್ಯವಾಗುವಂತೆ ಅಮಿತಾಭ್ ಬಚ್ಚನ್ನರ ಮಗ ಅಭಿಷೇಕ್ ಬಚ್ಚನ್ನರನ್ನು ಮದುವೆಯಾಗಿಬಿಟ್ಟರು. ವಿವೇಕ್ ಒಬೆರೊಯ್ ಕರ್ನಾಟಕದ ಕಲರ್ಫುಲ್ ಮಾಜಿ ರಾಜಕಾರಣಿ ದಿವಂಗತ ಜೀವರಾಜ್ ಆಳ್ವಾರ ಮಗಳನ್ನು ಮದುವೆಯಾದ. ಸಲ್ಮಾನ್ ಮಾತ್ರ ಅಜನ್ಮ ಬ್ರಹ್ಮಚಾರಿ ಹನುಮಾನನ ಭಕ್ತ. ಸಲ್ಮಾನ್, ಹನುಮಾನ್ ಮಸ್ತ ಪ್ರಾಸಬದ್ಧ ಕಾಂಬೋ. ಈಗ ಅವನು ಐವತ್ತರ ಮೇಲೆ ವಯಸ್ಸಾದ most eligible bachelor. ಅಂತವರಿಗೆಲ್ಲ ಬ್ರಹ್ಮಚಾರಿ ಅಂದರೆ ಖಡಕ್ ಬ್ರಹ್ಮಚಾರಿಗಳು ಎದ್ದು ಬಂದು ಎದೆಗೆ ಎಗಾದಿಗಾ ಒದ್ದುಬಿಟ್ಟಾರು. ಮಾಜಿ ಪ್ರಧಾನಿ ವಾಜಪೇಯಿ ಕೂಡ ತಾವು ಅವಿವಾಹಿತ ಮಾತ್ರ ಬ್ರಹ್ಮಚಾರಿ ಅಲ್ಲ ಅಂತಲೇ ಹೇಳಿಕೊಳ್ಳುತ್ತಿದ್ದರು ಅಂತ ಓದಿದ ನೆನಪು. ಖಡಕ್ ಬ್ರಹ್ಮಚರ್ಯದ ಡೆಫಿನಿಷನ್ ಈಗಿನ ಯಾವ ಅವಿವಾಹಿತರಿಗೂ, ಸಂಸಾರಸ್ಥರಿಗೂ ಅನ್ವಯವಾಗಲಿಕ್ಕಿಲ್ಲ. ಹಾಗೆ ನೋಡಿದರೆ ಬ್ರಹ್ಮಚರ್ಯ ಅನ್ನುವದು ಒಂದು elusive concept. ಕೇವಲ ದೇಹದ ಶುದ್ದಿಗೆ ಮಾತ್ರ ಸಂಬಂಧಿಸಿದ್ದಲ್ಲ ಅದು. ಚಿತ್ತ ಶುದ್ದಿಗೆ ಹೆಚ್ಚು ಮಹತ್ವ ಬ್ರಹ್ಮಚರ್ಯದಲ್ಲಿ. ಹಾಗಾಗಿ ಗೃಹಸ್ಥಾಶ್ರಮ ಸ್ವೀಕರಿಸಿ, ಅದನ್ನು ಶಾಸ್ತ್ರೋಕ್ತವಾಗಿ ಪಾಲಿಸುತ್ತ, ಅತಿ ಕಟ್ಟುನಿಟ್ಟಾಗಿ ಸಂಸಾರ ಮಾಡಿಕೊಂಡಿರುವವರಿಗೇ ಅದು ಅನ್ವಯವಾಗುವ ಚಾನ್ಸ್ ಜಾಸ್ತಿ ಅಂತ ತಿಳಿದವರು ಹೇಳುತ್ತಾರೆ. ಅಂತಹ ಗೃಹಸ್ಥರೂ ಬಹಳ ಕಮ್ಮಿ. ಹಾಗಾಗಿ ಹೆಚ್ಚಿನ ಮಂದಿ, ಸಂಸಾರಸ್ಥರೇ ಇರಬಹುದು, ಸಂಸಾರ ಇಲ್ಲದವರೇ ಇರಬಹುದು, non-ಬ್ರಹ್ಮಚಾರಿಗಳೇ. ಕನ್ನಡದ ಹಾಸ್ಯ ಬರಹಗಾರ ಎಮ್. ಪಿ. ಮನೋಹರ್ ಚಂದ್ರನ್ ತುಂಬಾ ಹಿಂದೆ ಎಲ್ಲೋ ಬರೆದುಕೊಂಡಿದ್ದರು. ಅರ್ಥ ಹೀಗಿತ್ತು. ಕೆಲವರು ಮಾತ್ರ ಬ್ರಹ್ಮಚಾರಿಗಳು. ಹೆಚ್ಚಿನವರು 'ಬ್ರಾ'ಹ್ಮಚಾರಿಗಳು!
ಸಬೀರ್ ಭಾಟಿಯಾ ಕೂಡ ನಾವು ಓದಿದ BITS, Pilani ವಿಶ್ವವಿದ್ಯಾಲಯದಲ್ಲೇ ಇಂಜಿನಿಯರಿಂಗ್ ಪದವಿಗೆ ಅಭ್ಯಾಸ ಶುರು ಮಾಡಿದ್ದರು. ಅವರದ್ದು ೧೯೮೬ - ೧೯೯೦ ರ ಬ್ಯಾಚ್. ತುಂಬಾ ಬುದ್ಧಿಶಾಲಿ, ಮೇಧಾವಿಯಾಗಿದ್ದ ಅವರು ಪಿಲಾನಿಯಲ್ಲಿ ಎರಡು ವರ್ಷ ಓದಿದ ನಂತರ ಇಡೀ ಜಗತ್ತಿನಲ್ಲೇ ನಂಬರ್ ಒನ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಅಂತ ಖ್ಯಾತಿ ಗಳಿಸಿರುವ ಅಮೇರಿಕಾದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (Caltech) ಪ್ರವೇಶ ಪಡೆದುಕೊಂಡು, ಅಲ್ಲಿಗೆ ವರ್ಗಾವಣೆ ಮಾಡಿಸಿಕೊಂಡು, ತಮ್ಮ ಇಂಜಿನಿಯರಿಂಗ್ ಪದವಿಯನ್ನು ಅಲ್ಲಿಂದ ಮುಗಿಸಿದರು. ಅದು ಅತ್ಯಂತ ಮಹಾನ್ ಸಾಧನೆ ಅಂತಲೇ ಹೇಳಬಹುದು. ಆ ತರಹದ ಅಂತರಾಷ್ಟ್ರೀಯ ವರ್ಗಾವಣೆಗಳು, ಅದೂ Caltech ನಂತಹ ಅತ್ಯುನ್ನತ ಸಂಸ್ಥೆಗಳಿಗೆ, ಭಾರತೀಯ ವಿದ್ಯಾರ್ಥಿಗಳಿಗೆ ಸಿಗುವದು ತುಂಬಾ ತುಂಬಾ ವಿರಳ. ಆಕಸ್ಮಾತ ಸಿಕ್ಕಿತು, ಅದೂ ಪೂರ್ಣ ಶಿಷ್ಯವೇತನದೊಂದಿಗೆ ಸಿಕ್ಕಿತು, ಅಂದರೆ ಆ ವಿದ್ಯಾರ್ಥಿ ವಿಶ್ವದ ಅತಿ ದೊಡ್ಡ ಮೇಧಾವಿಗಳಲ್ಲಿ ಒಬ್ಬನಾಗಿರಲೇಬೇಕು. Must be within the top 1-2 % in the whole world among his / her peers. ಆಯ್ಕೆಯ ಅರ್ಹತೆ ಇಷ್ಟು ಕಠಿಣವಿದ್ದಾಗ, ಅದನ್ನು ಪಡೆದುಕೊಂಡ ಸಬೀರ್ ಭಾಟಿಯಾ ಯಾವ ಮಟ್ಟದ ಮೇಧಾವಿಯಾಗಿರಬಹುದು ಅಂತ ವಿಚಾರ ಮಾಡಿ.
BITS, Pilani ಯಲ್ಲಿ ನಮ್ಮದು ೧೯೯೦ - ೧೯೯೪ ಬ್ಯಾಚ್. ಸಬೀರ್ ಭಾಟಿಯಾ ಅವರ ಕೆಲವು ಸಹಪಾಠಿಗಳು ನಮಗೆ ಸೂಪರ್ ಸೀನಿಯರ್ ರೂಪದಲ್ಲಿ ಇದ್ದರು. ಅವರೆಲ್ಲ ಭಾಟಿಯಾ ಜೊತೆಗೆ ೧೯೮೬ ರಲ್ಲಿ ಓದು ಶುರು ಮಾಡಿಕೊಂಡಿದ್ದರು. ಕೆಲವರು dual ಡಿಗ್ರಿ ಮಾಡುತ್ತಿದ್ದರಿಂದ ಅವರ ಶಿಕ್ಷಣ ಐದು ವರ್ಷದ್ದಾಗಿತ್ತು. ಹಾಗಾಗಿ ನಾವು ೧೯೯೦ ರಲ್ಲಿ ಸೇರಿಕೊಂಡಾಗ ಅವರೆಲ್ಲ ಅಲ್ಲೇ ಇದ್ದರು. ಅಂತಿಮ ವರ್ಷದಲ್ಲಿ ಓದುತ್ತಿದ್ದರು. ನನ್ನ ಹಿರಿಯ ಸಹೋದರ ಕೂಡ Caltech ನಲ್ಲಿಯೇ ಓದು ಮುಗಿಸಿದ್ದ. ರಾಗಿಂಗ್ (ragging) ಸಮಯದಲ್ಲಿ ಸೀನಿಯರ್ ಹುಡುಗರಿಗೆ intro ಅಂದರೆ ವಯಕ್ತಿಕ ಪರಿಚಯ ಒಪ್ಪಿಸುತ್ತಿದ್ದಾಗ, 'ನನ್ನ ಅಣ್ಣ ಕೂಡ ಪ್ರತಿಷ್ಠಿತ Caltech ನಲ್ಲಿ ಓದಿದ್ದಾನೆ,' ಅಂತ ಸಹಜವಾಗಿ ಹೇಳಿದಾಗ, ಸೀನಿಯರ್ ಹುಡುಗರು, 'ಓಹೋ! ಹಾಗೇನು? ನಮ್ಮ ಜೊತೆ ಕೂಡ ಒಬ್ಬ ಇದ್ದ. ಸಬೀರ್ ಭಾಟಿಯಾ ಅಂತ. ಎರಡು ವರ್ಷಗಳ ನಂತರ ವರ್ಗಾವಣೆ ಸಿಕ್ಕಿತು. ಅದೇ Caltech ಗೇ ಹೋದ. He was a genius!' ಅಂತ ಹೇಳುತ್ತಿದ್ದರು. ಆದರೆ ಆಗ ಭಾಟಿಯಾ ಅಷ್ಟು ಫೇಮಸ್ ಆಗಿರಲಿಲ್ಲ. ಯಾಕೆಂದರೆ Hotmail ಕಂಪನಿಯನ್ನು ಇನ್ನೂ ಸ್ಥಾಪಿಸಿರಲಿಲ್ಲ. ಮುಂದೆ ಅವರು Hotmail ಕಂಪನಿಯನ್ನು ಸ್ಥಾಪಿಸಿ, ದೊಡ್ಡ ಮಟ್ಟದಲ್ಲಿ ಬೆಳೆಸಿ, ಬೇಕು ಅಂದವರಿಗೆಲ್ಲ ಬೇಕು ಅಂದಷ್ಟು ಇಮೇಲ್ ಐಡಿಗಳನ್ನು ಪುಕ್ಕಟೆ ದಯಪಾಲಿಸಿದರು. ನಾವೆಲ್ಲಾ ಇಮೇಲ್ ಬಳಕೆ ಶುರು ಮಾಡಿದ್ದೇ Hotmail ಉಪಯೋಗಿಸಿಕೊಂಡು. ಅದೂ ೧೯೯೭ ರಲ್ಲಿ ಅಮೇರಿಕಾಗೆ ಬಂದ ಮೇಲೆ. ನಂತರ ಮೈಕ್ರೋಸಾಫ್ಟ್ ಕಂಪನಿ Hotmail ನ್ನು ಖರೀದಿ ಮಾಡಿದ ನಂತರ ತನ್ನ ದುರ್ಬುದ್ಧಿಯನ್ನು ಯಥಾ ಪ್ರಕಾರ ತೋರಿಸಿತು. Hotmail ಕೇವಲ ಅವರ Internet Explorer ಎಂಬ ವೆಬ್ ಬ್ರೌಸರ್ ನಲ್ಲಿ ಮಾತ್ರ ಸರಿಯಾಗಿ ಕೆಲಸ ಮಾಡುವಂತೆ ಅದನ್ನು ತಿರುಪಿಟ್ಟಿದ್ದರು. Netscape, Firefox ಮುಂತಾದ ಬ್ರೌಸರ್ ಗಳನ್ನು ಇಷ್ಟಪಡುವ ನಮ್ಮಂತವರಿಗೆ ಅದರಲ್ಲಿ Hotmail ಉಪಯೋಗಿಸಬೇಕು ಅಂದರೆ ಸಿಕ್ಕಾಪಟ್ಟೆ ಕಿರಿಕಿರಿ. ಅದೇ ಹೊತ್ತಿಗೆ ಗೂಗಲ್ ಕಂಪನಿಯ GMail ಬಂತು. ಬೇರೆ ಎಲ್ಲ ಉಚಿತ ಇಮೇಲ್ ಸೇವೆಗಳಿಗಿಂತ GMail ಸಾವಿರ ಪಟ್ಟು ಉತ್ತಮ ಅನ್ನಿಸಿತು. ಹಾಗಾಗಿ Hotmail ಗೆ ಸುಮಾರು ಹದಿಮೂರು - ಹದಿನಾಲ್ಕು ವರ್ಷಗಳ ನಂತರ ದೊಡ್ಡ ನಮಸ್ಕಾರ ಹಾಕಿ ಹೊರಗೆ ಬಂದೆವು.
Caltech ವಿಶ್ವವಿದ್ಯಾಲಯ ಅಂದಾಗ ನೆನಪಿಗೆ ಬರುವ ಮತ್ತೊಬ್ಬರು ಅಂದರೆ ಡಾ. ಶ್ರೀನಿವಾಸ ಕುಲಕರ್ಣಿ. ಮೂಲತಃ ಹುಬ್ಬಳ್ಳಿಯವರು. ವಿಶ್ವದ ಅತಿ ಶ್ರೇಷ್ಠ ಖಗೋಲ ಭೌತವಿಜ್ಞಾನಿಗಳಲ್ಲಿ (astrophysicist) ಒಬ್ಬರು. ಅವರೂ ಸಹ Caltech ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರು. ಈ ಕುಲಕರ್ಣಿ ಯಾರು ಅಂದರೆ ಇನ್ಫೋಸಿಸ್ ಸ್ಥಾಪಕ ನಾಣಿ ಮಾಮಾ ಉರ್ಫ್ ನಾರಾಯಣ ಮೂರ್ತಿಗಳ ಪತ್ನಿ ಸುಧಾ ಮೂರ್ತಿಯವರ ಖಾಸಾ ಸಹೋದರ. ಇನ್ಫಿ ನಾರಾಯಣ ಮೂರ್ತಿ ನಮಗೆ ಅದೆಷ್ಟು ಇಷ್ಟ ಅಂದರೆ ಅವರ ವಯಕ್ತಿಕ ಪರಿಚಯವಿಲ್ಲದಿದ್ದರೂ ಅವರ ಸರಳತೆ, ಮುಗ್ಧತೆ, ಆ ನಯ ವಿನಯಗಳಿಂದ ಅವರು ನಮಗೆ ನಾಣಿ ಮಾಮಾ ಅಂತಲೇ ಆಪ್ತರೆನಿಸುತ್ತಾರೆ. ಮತ್ತೆ ಅವರ ಪತ್ನಿ ಸುಧಾ ಹುಬ್ಬಳ್ಳಿ - ಧಾರವಾಡದವರಾಗಿದ್ದರಿಂದ ನಾಣಿ ಮಾಮಾ ಕೂಡ ನಮ್ಮವರೇ.
ನೆನಪುಗಳೇ ಹೀಗೆ. ಎಲ್ಲೋ ಶುರುವಾಗಿದ್ದು ಈ ಬ್ಲಾಗ್ ಲೇಖನ. ಒಬ್ಬ ಸಬೀರ್ ಭಾಟಿಯಾ ನೆನಪಾಗಿ ಎಲ್ಲೆಲ್ಲೋ ಹೋಗಿಬಿಟ್ಟಿತು.
2 comments:
ವಿನೋದ ಹಾಗು ಆಪ್ತಶೈಲಿಯ ಮೂಲಕ ಕೆಲವು ವ್ಯಕ್ತಿಚಿತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ. ಕೆಲವು ವ್ಯಕ್ತಿಗಳ ಬಗೆಗೆ ಒಳ್ಳೆಯ ಮಾಹಿತಿ ದೊರಕಿದಂತಾಯಿತು. ಧನ್ಯವಾದಗಳು.
Thank you, Sunaath Sir.
Post a Comment