Monday, October 12, 2015

'ಅವನ ಕಾಲು ಮುರಿಯಿರಿ. ಸೊಂಟ ಮುರಿದುಬಿಡಿ!' ಅಂತ ಸುಪಾರಿ ಕೊಟ್ಟುಬಿಟ್ಟಳು ಆ ಹುಡುಗಿ

'ಅವನ ಕಾಲು ಮುರೀರಿ! ಅವನ ಸೊಂಟ ಮುರೀರಿ! ಹೀಂಗ ಬಡೀರಿ ಅಂದ್ರ ಬಡಿಸಿಕೊಂಡವ ಆರು ತಿಂಗಳು ಹಾಸ್ಪಿಟಲಿನ್ಯಾಗ ನರಳಿಕೋತ್ತ ಬಿದ್ದಿರಬೇಕು. ಬಿಡಬ್ಯಾಡ್ರಿ ಅವನ್ನ! ಹಾಕ್ಕೊಂಡು ಬಡೀರಿ! ಸರೀತ್ನಾಗಿ ನಾದಿ ಬಿಡ್ರಿ!' ಅಂತ ದೊಡ್ಡ ಆಕ್ರೋಶದಿಂದ ಅವಳು ಅಬ್ಬರಿಸಿದಳು. ದನಿಯಲ್ಲಿ ತಣ್ಣನೆಯ ಪಶು ಕ್ರೌರ್ಯ. ಆಕೆಯ ಮಾತಿಗೆ ಹೂಂಗುಟ್ಟಿದವರು ಆಕೆಯ ಸುತ್ತಲಿದ್ದ ದಾಂಡಿಗರು. ಒಬ್ಬ ಫೋನಲ್ಲಿ ಮಾತಾಡುತ್ತ, ಮಿಕವನ್ನು ಬಲೆಗೆ ಬೀಳಿಸುವ ಪ್ಲಾನನ್ನು ಕಾರ್ಯಗತ ಮಾಡುತ್ತಿದ್ದ. ಉಳಿದವರು ಬಲೆಗೆ ಬೀಳಲಿದ್ದ ಮಿಕವನ್ನು ಬಡಿಯಲು ಜುಗಾಡ್ ಮಾಡಿಕೊಂಡು ತಂದಿದ್ದ ಹಾಕಿ ಸ್ಟಿಕ್ಕು, ಕ್ರಿಕೆಟ್ ಬ್ಯಾಟು, ಕಬ್ಬಿಣದ ರಾಡು, ಇತರೆ ಆಯುಧಗಳನ್ನು ಸವರುತ್ತ ಕುಳಿತಿದ್ದರು. 'ಕಟ್!ಕಟ್! ಕಡಾಲ್' - ಇದು ಮೂಳೆ ಮುರಿದಾಗ ಬರುವ ಭಯಾನಕ ಶಬ್ದ. ಆ ನುರಿತ ಗೂಂಡಾಗಳಿಗೆ ಅದನ್ನು ಕೇಳುವ ಸುಸಂದರ್ಭ ಮುಂದಿನ ಕೆಲವು ಘಂಟೆಗಳಲ್ಲಿ ಒದಗಿ ಬರಲಿತ್ತು. ತಮ್ಮ ತಮ್ಮ ಆಯುಧಗಳಿಗೆ ಅನೇಕ ದಿನಗಳ ಬಳಿಕ ಹೊಡೆದಾಟದ ಅವಕಾಶ ಸಿಕ್ಕಿದ್ದಕ್ಕೆ ಥ್ರಿಲ್ಲಾಗಿ ಕೂತಿದ್ದರು.

ಆವಾಗ ಆಯಿತು divine intervention. ದೈವಾನುಗ್ರಹ ಆಗಿತ್ತು. ಅವರಿಗ್ಯಾರಿಗೂ ಗೊತ್ತಿರದಿದ್ದ ಸಂಗತಿಯೆಂದರೆ ಮತ್ತೊಬ್ಬರಾರೋ ಅವರ ಒಂದೊಂದು ಮಾತನ್ನೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು!

ಕೊಲ್ಲುವವರಿಗೆ ಎರಡು ಕೈಗಳಾದರೆ ಕಾಯುವವನಿಗೆ ಅದೆಷ್ಟು ಕೈಗಳೋ!

ಅಂತಹದ್ದೇನಾಗಿತ್ತು?? ಅದ್ಯಾವ ಭಯಂಕರ ಕ್ರಿಮಿನಲ್ ಸಂಚೊಂದು ಅಲ್ಲಿ ಅನಾವರಣಗೊಳ್ಳುತ್ತಿತ್ತು? ಯಾರು ಅದನ್ನು ರಹಸ್ಯವಾಗಿ ಕೇಳಿಸಿಕೊಳ್ಳುತ್ತಿದ್ದರು?? ಯಾರದಕ್ಕೆ ಬಲಿಯಾಗಲಿದ್ದರು??

***

ಆತನೊಬ್ಬ ಹವ್ಯಕ ಮಾಣಿ. ಎಲ್ಲೋ ಸಿದ್ದಾಪುರದ ಕಡೆಯವ. SSLC  ಮುಗಿದ ನಂತರ PUC ಮಾಡಲು ಧಾರವಾಡಕ್ಕೆ ಬಂದ. ಬಹುಪಾಲು ಮಾಣಿಗಳು ಮಾಡುವಂತೆ ಇವನೂ ರೂಂ ಮಾಡಿದ. ಹೊಸದಾಗಿ ಮಾಡುವ ಜರೂರತ್ತಿರಲಿಲ್ಲ. ಅವನ ಸೋದರ ಸಂಬಂಧಿಯೊಬ್ಬ ಆಗಲೇ ರೂಂ ಮಾಡಿಕೊಂಡಿದ್ದ. ಆತನ ಜೊತೆ ಈತ ಜೋಡಿಯಾದ. ಮಾಣಿಯ ಹೆಸರು ಸುಶಾಂತ.

ಕನ್ನಡ ಮಾಧ್ಯಮದಿಂದ ಬಂದವ. ಮೇಲಿಂದ ವಿಜ್ಞಾನ ಬೇರೆ ತೆಗೆದುಕೊಂಡಿದ್ದ. ಜೊತೆಗೆ ಪರ ಊರು. ದೂರದ ಕಾಲೇಜ್. ಒಂದೇ ತಿಂಗಳಲ್ಲಿ ಗೊತ್ತಾಗಿಯೇ ಹೋಯಿತು. 'ಈ ವಿಜ್ಞಾನವನ್ನು ತೆಗೆದುಕೊಂಡು ಏಗಲಿಕ್ಕೆ ಸಾಧ್ಯವಿಲ್ಲ. ಎರಡು ವರ್ಷ ಮಣ್ಣು ಹೊತ್ತ ನಂತರ ಸೆಕೆಂಡ್ ಪಿಯೂಸಿಯಲ್ಲಿ ನಪಾಸಾಗಿಯೋ ಅಥವಾ ಕಡಿಮೆ ಅಂಕ ಗಳಿಸಿ ಬೇರೆ ವಿಷಯಕ್ಕೆ ಶಿಫ್ಟ್ ಮಾಡುವ ಕರ್ಮಕ್ಕಿಂತ ಮೊದಲೇ ಬದಲು ಮಾಡುವದು ಒಳಿತು,' ಅಂತ ಅವನ ತಲೆಯಲ್ಲೇ ಬಂತು. ಹಾಗೆ ಹೊಳೆದಿದ್ದು ದೊಡ್ಡ ಅದೃಷ್ಟವೇ ಅನ್ನಿ. ಅದೇ ಪ್ರಕಾರ ದೊಡ್ಡವರ ಮರ್ಜಿ ಹಿಡಿದು, ಕಾಲೇಜಿನ ಮುಖ್ಯಸ್ಥರಿಗೆ ಶಿಫಾರಸು ಮಾಡಿಸಿ, ವಿಜ್ಞಾನದಿಂದ ಕಲಾ ವಿಷಯಕ್ಕೆ ಬದಲಾವಣೆ ಮಾಡಿಸಿಕೊಂಡ. ತಲೆಬಿಸಿ ಕಮ್ಮಿಯಾಯಿತು. ವಿಜ್ಞಾನದ ಒತ್ತಡದಿಂದ ಮುರುಟಿ ಹೋಗಿದ್ದ ಮಾಣಿ ಚಿಗಿತುಕೊಂಡ.

ಸುಶಾಂತ ದಡ್ಡನಂತೂ ಅಲ್ಲ. ತಲೆ ಇತ್ತು. ಅಷ್ಟೇ ವಿಜ್ಞಾನಕ್ಕೆ ಹೊಂದುವಂತಹ ತಲೆ ಆಗಿರಲಿಲ್ಲ. ಸಾಹಿತ್ಯ, ಕಲೆ, ಸಂಗೀತ, ಚಿತ್ರಕಲೆ, ಯಕ್ಷಗಾನ, ನಾಟಕ ಎಲ್ಲದರಲ್ಲಿ ನಂಬರ್ ಒನ್ ಸುಶಾಂತ. ಮತ್ತೆ ನೋಡಲಿಕ್ಕೂ ಸುರಸುಂದರ. ಆ ಕಡೆ ಮಂದಿಯೆಲ್ಲ ಬೆಳ್ಳಗೆ, ಕೆಂಪಗೆ ಇರುತ್ತಾರೆ ಬಿಡಿ. ಆದರೆ ಸುಶಾಂತನ ಲುಕ್ಸ್ ಒಂದು ಬೇರೆ ತರಹದ್ದೇ. ಏಕ್ದಂ ಸಿನಿಮಾ ಸ್ಟಾರ್ ಲುಕ್. ಎತ್ತರವಾಗಿ ದಿವಿನಾಗಿದ್ದ. ಮಹಾಶಿಲ್ಪಿ ಜಕಣಾಚಾರಿ ಜತನದಿಂದ ಕೆತ್ತಿಟ್ಟಂತಹ ಸುಂದರ ಶಿಲ್ಪ. Chiseled looks. ಧಾರವಾಡಕ್ಕೆ ಬಂದು ದಿನಾ ಕಾಲೇಜಿಗೆ ಆರೇಳು ಕಿಲೋಮೀಟರ್ ಸೈಕಲ್ ಹೊಡೆದು, ಸ್ವಂತ ಅಡಿಗೆ ಮಾಡಿ, ಮಾಡಿದ್ದನ್ನೆಲ್ಲ ಪಾಂಗಿತವಾಗಿ ಗುಳುಂ ಮಾಡಿದ ಪರಿಣಾಮವೋ ಏನೋ ಗೊತ್ತಿಲ್ಲ, ಆದರೆ ಮಾಣಿ ಮೊದಲಿನಗಿಂತಲೂ ಹಟ್ಟಾ ಕಟ್ಟಾ ಆಗಿ ಮಿರಮಿರ ಮಿಂಚತೊಡಗಿದ. ನಾಲ್ಕು ಜನ, 'ಏ ಹೀರೋ! ಏನು ಮಸ್ತ ಚಮಕಾಯಿಸುತ್ತಿದ್ದೀಯಾ!' ಅಂತ ಬೇರೆ ಹೊಗಳಿಬಿಟ್ಟರು. ಹಾಗಾಗಿ ಸ್ವಲ್ಪ ಜಾಸ್ತಿನೇ ಫ್ಯಾಷನ್ ಮಾಡಿ, ಸಿಂಗಾರ ಬಂಗಾರ ಮಾಡಿಕೊಂಡು, ನಾಲ್ಕು ಜನರಲ್ಲಿ ಜೋರಾಗಿ ಎದ್ದು ಕಾಣತೊಡಗಿದ.

ಸುಶಾಂತ ಸಿಂಪಲ್ ಹುಡುಗ. ಆತನದು ಎಲ್ಲರೊಂದಿಗೆ ಬೆರೆಯುವ ಸ್ವಭಾವ. ಹಳ್ಳಿಯಿಂದ ಬಂದಿದ್ದರಿಂದ ಭೋಳೆತನ ಸ್ವಲ್ಪ ಜಾಸ್ತಿಯೇ ಇತ್ತು. ದೊಡ್ಡ ಕುಟುಂಬದಿಂದ ಬಂದವ. ಅಣ್ಣ, ತಮ್ಮ, ಅಕ್ಕ, ತಂಗಿಯರ ಜೊತೆ ಜಾಯಿಂಟ್ ಫ್ಯಾಮಿಲಿಯಲ್ಲಿ ಕೂಡಿ ಬೆಳೆದವ. ಕಾಲೇಜಿನಲ್ಲಿಯೂ ಎಲ್ಲರ ಜೊತೆ ಫ್ರೆಂಡ್ಲಿಯಾಗಿ ಇರುತ್ತಿದ್ದ. ಯಾರು ಸಿಕ್ಕರೂ ಮುಖದ ಮೇಲೊಂದು ಮುಗುಳ್ನಗೆ, ನಾಲ್ಕು ಒಳ್ಳೆ ಮಾತು, ಒಂದಿಷ್ಟು ಸೌಮ್ಯ, ಸಭ್ಯ ಹಾಸ್ಯ ಎಲ್ಲ ಇದ್ದೇ ಇರುತ್ತಿತ್ತು. ಸ್ವಲ್ಪೇ ದಿವಸಗಳಲ್ಲಿ ಕಾಲೇಜಿನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿಹೋದ. ಕಾಲೇಜಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವನೇ ಫುಲ್ ಮಿಂಚಿಂಗೋ ಮಿಂಚಿಂಗು! ಸುಶಾಂತ ಇಲ್ಲದಿದ್ದರೆ ಕಾರ್ಯಕ್ರಮಗಳಿಗೆ ಕಳೆಯೇ ಇಲ್ಲ ಅನ್ನುವ ಹಾಗಾಗಿ ಹೋಯಿತು. 

ಹದಿಹರೆಯ - ಅದು ಎಲ್ಲರಿಗೂ 'ಬವ್ವಾ ಕಡಿಯುವ' ವಯಸ್ಸು. ಹುಡುಗರಿಗೂ ಹುಡುಗಿಯರಿಗೂ ಫಂಗ ಫಂಗನೆ ಪ್ಯಾರ್ ಆಗುವ ಹದಿನಾರರ ವಯಸ್ಸು. ಮೇಲಿಂದ ಹುಚ್ಚು ಖೋಡಿ ಮನಸ್ಸು. ಸುಶಾಂತ ಎದ್ದು ಕಾಣುವ ಸುಂದರ ಮಾಣಿ ಬೇರೆ. ಏನು ಆಗಬೇಕಿತ್ತೋ ಅದೇ ಆಯಿತು. ಅಷ್ಟೇ ಪೂರ್ತಿಯಾಗಲಿಲ್ಲ. ಅದೇ ದೊಡ್ಡ ಪುಣ್ಯ.

ಸುಮಾರು ಮಂದಿ ಸಹಪಾಠಿ ಹುಡುಗಿಯರು ಸುಶಾಂತನ ಮೇಲೆ ಫಿದಾ ಆಗಿಬಿಟ್ಟರು. ಕೆಲವರು ಕೇವಲ ಕಣ್ಣು, ಮೂಗು, ಮತ್ತೊಂದು ತಿರುಗಿಸಿ ಸಿಗ್ನಲ್ ಕೊಟ್ಟರೆ ಇನ್ನೊಂದಿಷ್ಟು ಮಂದಿ ಪತ್ರ ಬರೆದರು. ಹೆಸರು ಹಾಕಿ ಪತ್ರ ಬರೆದವರು ವಯಕ್ತಿವಾಗಿ ಭೆಟ್ಟಿಯಾದಾಗ ಪತ್ರ  ಕೊಟ್ಟರು. ನೋಟ್ ಪುಸ್ತಕ ಇಸಿದುಕೊಂಡಾಗ ಎಲ್ಲೋ ಪ್ರೇಮ ಪತ್ರ ಇಟ್ಟು ವಾಪಸ್ ಕೊಟ್ಟರು. ಮತ್ತೊಂದಿಷ್ಟು ಜನ ಹುಟ್ಟುಹಬ್ಬಕ್ಕೆ, ಮತ್ತೊಂದಕ್ಕೆ, ಮಣ್ಣು ಮಸಿಗೆ ಕಾರ್ಡ್ ಕೊಡುವ ಸಮಯದಲ್ಲಿ ಕಾರ್ಡ್ ಜೊತೆಗೆ ಪ್ರೇಮದ ರೆಕಾರ್ಡ್ ಕೂಡ ಇಟ್ಟು ಕೊಟ್ಟರು. ಅಷ್ಟೆಲ್ಲ ಧೈರ್ಯವಿಲ್ಲದವರು ಬೇನಾಮಿ ಪತ್ರ ಬರೆದು ಅವನಿದ್ದ ವಿಳಾಸಕ್ಕೆ ಪೋಸ್ಟ್ ಮಾಡಿದರು. ಅದು ಮೂವತ್ತು ವರ್ಷಗಳ ಹಿಂದಿನ ಧಾರವಾಡ. ಸಣ್ಣ ಊರು. ಮತ್ತೆ ಈ ಮಾಣಿ ಸುಶಾಂತ ಭಾಡಿಗೆಗೆ ಇದ್ದಿದ್ದು ಊರಿಗೆಲ್ಲ ತಕ್ಕ ಮಟ್ಟಿಗೆ ಪರಿಚಿತರಿದ್ದ ಸಣ್ಣ ಪ್ರಮಾಣದ ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ. ಹಾಗಾಗಿ ಇವನ ಹೆಸರು ಬರೆದು, ಕೇರ್ ಆಫ್ ಮನೆ ಮಾಲೀಕರ ಹೆಸರು ಬರೆದು, ಧಾರವಾಡ ಅಂತಷ್ಟೇ ಬರೆದು ಒಗೆದರೂ ಪತ್ರ ಮನೆಗೆ ಬಂದು ಬೀಳುತ್ತಿದ್ದವು.

ಕಪಿ ಬುದ್ಧಿಯ ಕನ್ಯೆಯರು ಪತ್ರ ಬರೆಯುಲು ಶುರು ಮಾಡುವ ಮೊದಲು ಸುಶಾಂತನಿಗೆ ಜಾಸ್ತಿ ಪತ್ರಗಳು ಬರುತ್ತಿದ್ದಿಲ್ಲ. ಸಿದ್ದಾಪುರದ ಮನೆ ಕಡೆಯಿಂದ ತಿಂಗಳಿಗೆ ಒಂದೋ ಎರಡೋ ಬಂದರೆ ಜಾಸ್ತಿ. ಈಗ ವಾರಕ್ಕೆ ಎರಡು ಮೂರು ಬರತೊಡಗಿದವು. ಮತ್ತೆ ಸುಶಾಂತ ಭಾಡಿಗೆಗೆ ಇದ್ದಿದ್ದು ಪರಿಚಯಸ್ಥರ ಮನೆಯಲ್ಲಿಯೇ. ಆ ಮನೆಯವರು ರೂಮುಗಳನ್ನು ಭಾಡಿಗೆಗೆ ಕೊಟ್ಟಿದ್ದರೂ ಭಾಡಿಗೆಗೆ ಇದ್ದ ಹುಡುಗರನ್ನು ಮನೆ ಮಕ್ಕಳಂತೆ ನೋಡುತ್ತಿದ್ದರು. ಎಲ್ಲ ದೃಷ್ಟಿಯಿಂದ ಮನೆ ಮಕ್ಕಳೇ. ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದರೋ ಅಷ್ಟೇ ಕಟ್ಟುನಿಟ್ಟಾಗಿಯೂ ಇಟ್ಟಿದ್ದರು. ರೂಮಿನಲ್ಲಿದ್ದ ಹುಡುಗರಿಗೆ ನಿಜವಾದ ಅರ್ಥದಲ್ಲಿ ಲೋಕಲ್ ಗಾರ್ಡಿಯನ್ಸ್ ಆಗಿದ್ದರು. ಆ ಮಕ್ಕಳ ತಂದೆತಾಯಿಗಳಿಗೂ ಅಂತವರ ದೇಖರೇಖಿಯಲ್ಲಿ ತಮ್ಮ ಮಕ್ಕಳು ಇದ್ದಾರೆ ಅನ್ನುವದೇ ಅದೆಷ್ಟೋ ನೆಮ್ಮದಿ.

ಸುಶಾಂತನ ಪತ್ರಗಳು ಮಾಲೀಕರ ಮನೆಗೇ ಬಂದು ಬೀಳುತ್ತಿದ್ದವು. ಕೇರ್ ಆಫ್ ಅವರ ವಿಳಾಸವೇ ಇದ್ದ ಮೇಲೆ ಮತ್ತೇನು? ಅವರೇ ಸಂಜೆ ಹುಡುಗರೆಲ್ಲ ತಮ್ಮ ತಮ್ಮ ರೂಮಿಗೆ ವಾಪಸ್ ಬಂದ ಮೇಲೆ ಪತ್ರ ಕೊಡುತ್ತಿದ್ದರು. ಈ ಸುಶಾಂತನಿಗೆ ವಾರಕ್ಕೆ ಮೂರು ನಾಲ್ಕು, ಅದೂ ಕಲರ್ ಕಲರ್ ಸುವಾಸಿತ ಲಕೋಟೆಗಳಲ್ಲಿ ಬರುತ್ತಿದ್ದ ಪತ್ರಗಳನ್ನು ನೋಡಿದ ಮನೆ ಮಾಲೀಕರಿಗೆ ಅವುಗಳ ಹಿಂದಿರಬಹುದಾದ ಮರ್ಮ ತಿಳಿಯದೇ ಇರಲಿಲ್ಲ. ತಿಳಿಯದಿರಲು ಅವರೇನು ಸುಖಾ ಸುಮ್ಮನೆ ಬಿಸಿಲಿನಲ್ಲಿ ಕೂದಲು ಬೆಳ್ಳಗೆ ಮಾಡಿಕೊಂಡಿದ್ದವರೇ?

'ಏ, ಮಾಣಿ, ಸುಶಾಂತಾ! ಏನೋ ಇದು?? ಏನು ನಡೆದಿದೆ? ಏನಿವು ನಿನಗೆ ವಾರಕ್ಕೆ ಮೂರು ಪತ್ರಗಳು ಬರುತ್ತಿವೆ? ಯಾರು ಬರೆಯುತ್ತಾರೆ? ಹಾಂ?' ಅಂತ ಜಬರಿಸಿ ಕೇಳಿದವರು ಅಮ್ಮ. ಅವರು ಇಡೀ ಕಂಪೌಂಡಿನ ಎಲ್ಲ ಹುಡುಗರಿಗೂ ಅಮ್ಮನೇ. ಅವರ ಮೇಲೆ ಅಷ್ಟೊಂದು ಗೌರವ, ಪ್ರೀತಿ, ಅಕ್ಕರೆ ಎಲ್ಲ ಹುಡುಗರಿಗೆ. ಅಮ್ಮ ಉರ್ಫ್ ಮಾಲೀಕರ ಪತ್ನಿಗೂ ಅಷ್ಟೇ. ಎಲ್ಲರೂ ಅವರ ಮಕ್ಕಳ ಸಮಾನವೇ.

ಅಮ್ಮ ಹಾಕಿದ ಆವಾಜಿನಿಂದ ಸುಶಾಂತ ಬೆದರಿದ. ಮತ್ತೆ ಆತ ಅಮ್ಮನ ಫೇವರಿಟ್. ಯಾಕೆಂದರೆ ಕಾಂಪೌಂಡಿನಲ್ಲಿದ್ದ ಆರು ಹುಡುಗರಲ್ಲಿ ಅವನೇ ಚಿಕ್ಕವ. ಹಾಗಾಗಿ ಆತ ಅಮ್ಮನ ಫೇವರಿಟ್. ಮತ್ತೆ ಆಗಲೇ ಎಲ್ಲರಿಗಿಂತ ಹೆಚ್ಚಿನ ವರ್ಷಗಳನ್ನು ಅವರ ಮನೆಯ ರೂಮಿನಲ್ಲಿ ಕಳೆದಿದ್ದ. ಉಳಿದವರೆಲ್ಲ ಎರಡು ಮೂರು ವರ್ಷವಿದ್ದು ಬೆಂಗಳೂರು, ಮುಂಬೈ, ಅಮೇರಿಕಾ ಅಂತ ಕಳಚಿಕೊಂಡರೆ ಸುಶಾಂತ ಮಾತ್ರ ಅಲ್ಲೇ ಉಳಿದುಕೊಂಡಿದ್ದ.

ಅಮ್ಮ ಜಬರಿಸಿ ಕೇಳಿದರು ಅಂದರೆ ಅಷ್ಟೇ ಮತ್ತೆ. ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಬಚಾವ್. ಇಲ್ಲ ಅಂದರೆ ಪೋಲಿಸ್ ತನಿಖೆ ಮಾದರಿಯಲ್ಲಿ ಅವರ ಪ್ರಶ್ನೆಗಳು ಇರುತ್ತಿದ್ದವು. ಸುಳ್ಳು ಗಿಳ್ಳು ಹೇಳಲಾರಂಭಿಸಿದರೆ ಎರಡೇ ನಿಮಿಷದಲ್ಲಿ ಫಟ್ಟಂತ ಕಂಡುಹಿಡಿದು, ಮಾತಲ್ಲೇ ಬುರುಡೆ ತಟ್ಟಿಬಿಡುತ್ತಿದ್ದರು ಅಮ್ಮ. ಹಾಗಾಗಿ ಅಮ್ಮನ ಮುಂದೆ ಮಾತಾಡಲು ನಿಂತವರು ಎಲ್ಲಾ ಖುಲ್ಲಂ ಖುಲ್ಲಾ ಒಪ್ಪಿಕೊಂಡೇಬಿಡುತ್ತಿದ್ದರು.

ಸುಶಾಂತನೂ ಒಪ್ಪಿಕೊಂಡ. 'ಅಯ್ಯೋ, ಅಮ್ಮಾ! ಯಾರ್ಯಾರೋ ಕ್ಲಾಸ್ಮೇಟ್ ಹುಡುಗಿಯರು ಪತ್ರ ಬರೆಯುತ್ತಾರೆ. ನಾನಂತೂ ಯಾರಿಗೂ ಏನೂ ಹೇಳಿಲ್ಲ. ಒಪ್ಪಿಕೊಂಡಿಲ್ಲ. ಕೆಲವರಿಗೆ ತಿಳಿಸಿ ಹೇಳಿದ್ದೇನೆ. ಬೇನಾಮಿ ಬರೆಯುವವರು ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ನಂಬು ಅಮ್ಮಾ!' ಅಂತ ದೀನನಾಗಿ ಹೇಳಿದ. ಅಮ್ಮ ದಿಟ್ಟಿಸಿ ನೋಡಿದರು. ಮಾಣಿ ಹೇಳಿದ್ದರಲ್ಲಿ ಸುಳ್ಳು ಕಂಡುಬರಲಿಲ್ಲ. ಆದರೂ ಒಂದು ಖಡಕ್ ವಾರ್ನಿಂಗ್ ಕೊಟ್ಟು ಮಾತು ಮುಗಿಸಿದರು. 'ಸರಿ. ನೀ ಹೇಳಿದ್ದನ್ನು ನಂಬೋಣ. ನಮ್ಮ ಮನೆಯಲ್ಲಿದ್ದು ಲವ್ವು, ಮತ್ತೊಂದು ಮಾಡಿಕೊಂಡು ಮಂಗ್ಯಾತನ ಮಾಡಲಿಕ್ಕಿಲ್ಲ. ಖಬರ್ದಾರ್! ಈಗ ಓದೋ ವಯಸ್ಸು. ಹೆಚ್ಚು ಕಮ್ಮಿ ಮಾಡಿದರೆ ಮೊದಲು ನಿಮ್ಮ ಅಮ್ಮ ಅಪ್ಪನಿಗೆ ತಿಳಿಸುತ್ತೇವೆ. ನಮ್ಮ ಕಾಳಜಿಯಲ್ಲಿ ನಿಮ್ಮಂತ ಸಣ್ಣ ಮಾಣಿಗಳನ್ನು ಇಲ್ಲಿ ಬಿಟ್ಟಿರುತ್ತಾರೆ. ಹೇಳಿದ್ದು ಗೊತ್ತಾಯಿತೇನೋ? ಹಾಂ?' ಅಂತ ಸಣ್ಣ ಪ್ರಮಾಣದಲ್ಲಿ ಆವಾಜ್ ಹಾಕಿದರು. 'ಹೇಳಿದೆನಲ್ಲ ಅಮ್ಮಾ. ನಂದು ಯಾರ ಜೊತೆಗೂ ಏನೂ ಲವ್ವು, ಲಫಡಾ ಇಲ್ಲ. ಅವರಾಗೇ ಪತ್ರ ಬರೆದರೆ ನಾನೇನು ಮಾಡಲಿ? ಬೇಕಾದರೆ ಮುಂದೆ ಬರುವ ಪತ್ರಗಳನ್ನು ನೀನೇ ತೆಗೆದು, ಓದಿ ನೋಡು. ನನಗೆ ಕೊಡಬಹದು ಅನ್ನಿಸಿದ, ಮನೆ ಕಡೆಯಿಂದ ಬಂದ ಪತ್ರಗಳನ್ನು ಮಾತ್ರ ಕೊಡು. ಇಂತಹ ಲವ್ ಲೆಟರುಗಳನ್ನು ನೀನೇ ಹರಿದುಹಾಕಿದರೂ ಓಕೆ ಅಮ್ಮಾ!' ಅಂತ ಎರಡೂ ಕೈಯೆತ್ತಿ ಅಂಬೋ ಅಂದ ಸುಶಾಂತ. 'ಅದೆಲ್ಲ ಓಕೆ. ನೀನು ಕೇರ್ಫುಲ್ ಆಗಿರು. ಓದಿನ ಬಗ್ಗೆ ಗಮನವಿರಲಿ!' ಅಂತ ಹೇಳಿ ಅಷ್ಟಕ್ಕೇ ಮಾತು ಮುಗಿಸಿದರು. ಮಾಣಿ ಹಳ್ಳ ಹಿಡಿದಿಲ್ಲ, ಹದಗೆಟ್ಟುಹೋಗಿಲ್ಲ ಅಂತ ಒಂದು ಮಟ್ಟಿಗೆ ಖಾತ್ರಿಯಾಯಿತು.

ಸ್ವಲ್ಪ ಸಮಯದ ನಂತರ ಆ ತರಹದ ಪತ್ರಗಳು ಬರುವದೂ ಕಮ್ಮಿಯಾಯಿತು. ಅದೆಷ್ಟೇ ಹುಚ್ಚು ಹತ್ತಿದರೂ ಹುಡುಗಿಯರು ಅದೆಷ್ಟು ಅಂತ ಮೈಮೇಲೆ ಬಿದ್ದು ಬಂದಾರು? ಸುಶಾಂತ ಕೂಡ ಕೆಲವು ಮಂದಿಗೆ ತಿಳಿಸಿ ಹೇಳಿದ. ಇನ್ನೂ ಕೆಲವು ಮಂದಿಯನ್ನು ಕಡೆಗಣಿಸಿದ. ಕೆಲವರಿಗೆ ರಾಖಿ ಭಾಯಿಯಾಗಿಬಿಟ್ಟ. ತಾನೇ ತೆಗೆದುಕೊಂಡ ಹೋದ ರಾಖಿಗಳನ್ನು 'ಸಹೋದರಿಯರಿಂದ' ಕಟ್ಟಿಸಿಕೊಂಡು ಬಂದುಬಿಟ್ಟ. ಕೆಲವೊಂದು ಸ್ನೇಹಗಳು ಅವಾಗಿಯೇ ಬಿಟ್ಟುಹೋದವು. ಒಟ್ಟಿನಲ್ಲಿ ಬಹುಪಾಲು ಕನ್ಯೆಯರಿಗೆ ಈ ಮಾಣಿ ಬಲೆಯಲ್ಲಿ ಬೀಳುವವನಲ್ಲ ಅಂತ ಖಾತ್ರಿಯಾಯಿತು. ಅದಕ್ಕೇ ಪತ್ರಗಳ ಸಂಖೆ ಕಮ್ಮಿಯಾಯಿತು.

ಈ ನಡುವೆ ಸುಶಾಂತನ ಓದು, ಶೈಕ್ಷಣಿಕೇತರ ಚಟುವಟಿಕೆಗಳು (extra curricular activities) ಎಲ್ಲ ಜೋರಾಗಿ ನಡೆದಿದ್ದವು. ನಾಟಕ ಗೀಟಕ ನಿರ್ದೇಶಿಸಿದ. ತಾನೂ ನಟಿಸಿದ. ಎಲ್ಲೆಲ್ಲೋ ಯುವಜನೋತ್ಸವಗಳಿಗೆ ಹೋಗಿ ಬಂದ. ಏನೇನೋ ಪ್ರೈಜ್ ಪಡೆದುಕೊಂಡ. ಒಟ್ಟಿನಲ್ಲಿ ಮಿಂಚುತ್ತಲೇ ನಡೆದಿದ್ದ. ಕಡಿದಿಟ್ಟ ಗ್ರೀಕ್ ಶಿಲ್ಪದ ಮಾದರಿಯ ಮಾಣಿಯನ್ನು ನೋಡಿದ ಯಾರೋ ಪೊರ್ಕಿ ಸಿನೆಮಾ ಡೈರೆಕ್ಟರ್ ಏನೋ ಒಂದು ತರಹದ ಆಫರ್ ಕೂಡ ಕೊಟ್ಟಿದ್ದ. ಆದರೆ ಸಿನೆಮಾ ಓದಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲರೂ ಹೇಳಿದರು. ತಕ್ಕಮಟ್ಟಿಗೆ ತಿಳುವಳಿಕೆ ಹೊಂದಿದ್ದ ಸುಶಾಂತ ಮಾಣಿ ಕೂಡ ಒಪ್ಪಿಕೊಂಡು ಸಿನಿಮಾ ಐಡಿಯಾಕ್ಕೆ ತಿಲಾಂಜಲಿ ಬಿಟ್ಟಿದ್ದ.

ಒಮ್ಮೆ ಕಾಲೇಜಿನಲ್ಲಿ ಜೋಗವ್ವಗಳ (ಜೋಗತಿ) ನೃತ್ಯ ಇತ್ತು. ಸುಶಾಂತನ ಕ್ಲಾಸಿನ ಹುಡುಗಿಯರೇ ಮಾಡುವವರಿದ್ದರು. ಇವನೇ ಸೂತ್ರಧಾರ. ಹಾಡಿನಿಂದ ಹಿಡಿದು ಹುಡುಗಿಯರಿಗೆ ಬೇಕಾದ ಜೋಗವ್ವನ ಡ್ರೆಸ್ಸಿನ ಡಿಸೈನ್ ವರೆಗೆ ಎಲ್ಲ ಇವನದ್ದೇ ದೇಖರೇಖಿ ಮತ್ತು ಉಸ್ತುವಾರಿ. ಬೇವಿನ ಎಲೆ ತಂದು, ಅವುಗಳನ್ನು ವಿಶಿಷ್ಟ ರೀತಿಯಲ್ಲಿ ಪೋಣಿಸಿ, ಅವುಗಳ ಮಾಲೆ ಮಾಡಿ, ಅವನ್ನು ಹುಡುಗಿಯರ ಬ್ರಾಗಳಿಗೆ, ಲಂಗಕ್ಕೆ ಹೊಲಿದು ಏನೋ ಒಂದು ತರಹದ ಜೋಗವ್ವಗಳ ಡ್ರೆಸ್ ತಯಾರು ಮಾಡಿಕೊಟ್ಟವ ಈ ಸುಶಾಂತನೇ. ಹೇಳಿಕೇಳಿ ಯಕ್ಷಗಾನದಲ್ಲಿ ವೇಷ ಹಾಕಿದವ. ಯಕ್ಷಗಾನದ ಕಾಂಪ್ಲೆಕ್ಸ್ ಡ್ರೆಸ್ ತಯಾರು ಮಾಡುವವರಿಗೆ ಬಾಕಿಯೆಲ್ಲ ಸಿಂಪಲ್ ಬಿಡಿ. ಅದರ ಮುಂದೆ ಜೋಗವ್ವಗಳ ಡ್ರೆಸ್ಸೇನು ಮಹಾ?

ಜೋಗವ್ವಗಳ ನೃತ್ಯ ರಂಗದ ಮೇಲೆ ನಡೆದಾಗ ಅದೇನು ಲಫಡಾ ಆಯಿತೋ ಗೊತ್ತಿಲ್ಲ. ಒಬ್ಬಳ ಮೇಲುಡುಪು ಮಾತ್ರ ಡಾನ್ಸ್ ಮಾಡುತ್ತಿರುವಾಗಲೇ ಕಳಚಿ ಬೀಳುವದರಲ್ಲಿತ್ತು. ರಂಗದ ಮೇಲೆ ಒಂದು ಮೂಲೆಯಲ್ಲಿ ಕುಣಿಯುತ್ತಿದ್ದ ಅವಳು ಬ್ರಾ ಕಿತ್ತು ಬೀಳುತ್ತಿದ್ದಾಗ ಹೇಗೋ ಮಾಡಿ ಹಿಡಿದುಕೊಂಡು ಸ್ಟೇಜಿನ ಹಿಂಭಾಗಕ್ಕೆ ಓಡಿಬಂದಿದ್ದಳು. wardrobe malfunction ಆಗಿಹೋಗಿತ್ತು. ಪುಣ್ಯಕ್ಕೆ ಜಗತ್ತಿಗೆ ದರ್ಶನವಾಗಿರಲಿಲ್ಲ. ರಂಗದ ಮಧ್ಯೆ ಕುಣಿಯುತ್ತಿದ್ದರೆ ಅಷ್ಟೇ ಮತ್ತೆ. ಸಕಲ ಜಗತ್ತಿಗೆ ಪೂರ್ಣಕುಂಭ ದರ್ಶನದ ಭಾಗ್ಯ. ಸ್ಟೇಜಿನ ಹಿಂಭಾಗಕ್ಕೆ ಓಡಿ ಬಂದವಳ ಬ್ರಾ ಹುಕ್ಕನ್ನು ಮತ್ತೆ ಹಾಕಿ, ಬರೋಬ್ಬರಿ ಬೆನ್ನು ತಟ್ಟಿ, ಹುರುದುಂಬಿಸಿ, ಸ್ವಲ್ಪೇ ಪರದೆ ಸರಿಸಿ, ಆಕೆಯನ್ನು ಮತ್ತೆ ರಂಗದ ಮೇಲೆ ಕಲಾತ್ಮಕವಾಗಿ ನುಗ್ಗಿಸಿ, overall ನೃತ್ಯಕ್ಕೆ ಭಂಗ ಬರದಂತೆ ನೋಡಿಕೊಂಡಿದ್ದು ಸುಶಾಂತ ಮಾಣಿಯ ಅತಿ ದೊಡ್ಡ ಸಾಧನೆ ಅಂತ ಪ್ರತೀತಿ. ಅದರ ಬಗ್ಗೆ ಬಹಳ ಹೆಮ್ಮೆ ಅವನಿಗೆ.

ಪ್ರೇಮ ದಿವಾನಿ ಹುಡುಗಿಯರ ಕಾಟ ಕಮ್ಮಿಯಾಯಿತು ಅನ್ನುವ ಹೊತ್ತಿಗೆ ಒಬ್ಬಳು ಮಹಾ ದೊಡ್ಡ ಹುಚ್ಚಿ ತಯಾರಾದಳು. ಆಕೆ ಪತ್ರದ ಗಿರಾಕಿಯಲ್ಲ. ಸೀದಾ ಫೋನು ಮಾಡಿಬಿಡುತ್ತಿದ್ದಳು. ಅದು ಹೇಗೋ ಮಾಡಿ ಮಾಲೀಕರ ಮನೆಯ ಫೋನ್ ನಂಬರನ್ನು ಸಂಪಾದಿಸಿಬಿಟ್ಟಿದ್ದಳು. ಮನಸ್ಸು ಬಂದಾಗೊಮ್ಮೆ ಫೋನ್ ಮಾಡಿ, 'ಸರ್ರಾ, ಸುಶಾಂತ ಅದಾನ್ರೀ? ಸ್ವಲ್ಪ ಕರೀರಿ,' ಅಂದುಬಿಡುತ್ತಿದ್ದಳು. ಮನೆ ಮಾಲೀಕರಿಗೆ ಕಿರಿಕಿರಿ. ಅದೂ ಮಧ್ಯಾನ ಊಟ ಮಾಡಿ ಮಲಗಿದಾಗ ಫೋನ್ ಬಂದುಬಿಟ್ಟರಂತೂ ಮಹಾ ಕಿರಿಕಿರಿ.

ಈಗ ಫೋನ್ ಮಾಡಲು ಆರಂಭಿಸಿದ ಈ ಪ್ರೇಮ ದಿವಾನಿಯದು ಹರಟೆ ಮಾರ್ಗ. ಹರಟೆ ಹೊಡೆದು ಹೊಡೆದು ನಂತರ ಮಾಣಿಯನ್ನು ಪಟಾಯಿಸಿದರಾಯಿತು ಅಂತ ಪ್ಲಾನ್ ಹಾಕಿಕೊಂಡಿದ್ದಳು ಅಂತ ಕಾಣುತ್ತದೆ. ಅದಕ್ಕೇ ಮೂಡು ಬಂದಾಗೊಮ್ಮೆ ಫೋನ್ ಮಾಡಿಯೇಬಿಡುತ್ತಿದ್ದಳು. ಎಲ್ಲರಿಗೂ ಕಿರಿಕಿರಿ. ಮಾಲೀಕರಿಗೆ ಮಹಡಿ ಮೇಲಿರುತ್ತಿದ್ದ ಮಾಣಿಯನ್ನು ಕರೆಯುವ ಕಿರಿಕಿರಿ. ಹೊತ್ತಲ್ಲದ ಹೊತ್ತಲ್ಲಿ ಸುಶಾಂತನಿಗೆ ಕೆಳಗೆ ಬಂದು ಬೇಕಾರ್ ಹಾಳು ಹರಟೆ ಹೊಡೆಯುವ ಕರ್ಮ. ಮೊದಲೇ ರೂಂ ಮಾಡಿಕೊಂಡು ಓದುತ್ತಿದ್ದ ಹುಡುಗ. ಅವನೇ ಅಡಿಗೆ ಮಾಡಿಕೊಳ್ಳಬೇಕು, ರೂಂ ಕ್ಲೀನ್ ಮಾಡಬೇಕು, ಪಾತ್ರೆ ಬಟ್ಟೆ ಮಾಡಿಕೊಳ್ಳಬೇಕು, ಕಾಲೇಜಿಗೆ ಹೋಗಬೇಕು, ಓದಬೇಕು, ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಭಾವಹಿಸಬೇಕು, etc. ಹಾಗಾಗಿ ಮೊದಲೇ ಪುರುಸೊತ್ತಿಲ್ಲ. ಮೇಲಿಂದ ಇದೊಂದು ಪೀಡೆ ಮಾದರಿಯ ಹುಡುಗಿ. ಪದೇ ಪದೇ ಫೋನ್ ಮಾಡಿ ತಲೆ ತಿನ್ನುತ್ತದೆ.

ಮತ್ತೆ ಅಮ್ಮನೇ ಮಧ್ಯ ಪ್ರವೇಶ ಮಾಡಬೇಕಾಯಿತು. ಹೊತ್ತಲ್ಲದ ಹೊತ್ತಲ್ಲಿ ಬರುತ್ತಿದ್ದ ಫೋನುಗಳು, ತಾಸುಗಟ್ಟಲೆ ನಡೆಯುತ್ತಿದ್ದ ಹರಟೆ ನೋಡಿದ ಅಮ್ಮನಿಗೆ ಏನೋ ಸಂಶಯ ಬಂದಿರಬೇಕು. ಮತ್ತೊಮ್ಮೆ ಸುಶಾಂತನನ್ನು ವಿಚಾರಿಸಿಕೊಂಡರು. 'ಏನೋ? ಮತ್ಯಾರ ಜೊತೆ ಶುರುವಾಗಿದೆ? ಹಾಂ? ಹೇಳು!' ಅಂದರು. 'ಥೋ! ಅಮ್ಮಾ, ಏನು ಹೇಳಲಿ? ಅವಳಿಗೆ ನಿಮ್ಮನೆ ಫೋನ್ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ. ನಾನಂತೂ ಕೊಡಲಿಲ್ಲ. ಫೋನ್ ಮಾಡಿ ತಲೆ ತಿನ್ನುತ್ತಾಳೆ. ಕಾಲೇಜಿನಲ್ಲಿಯೂ ಹಿಡಿದು ಬಿಡದೇ ಒಂದೇ ಸಮ ಫಾಲೋ ಮಾಡುತ್ತಾಳೆ. ಇವಳಿಂದ ತಪ್ಪಿಸಿಕೊಂಡು ಓಡಾಡುವದೇ ಕಷ್ಟವಾಗಿಬಿಟ್ಟಿದೆ. ಏನು ಮಾಡಬೇಕೋ ಗೊತ್ತಾಗುತ್ತಿಲ್ಲ,' ಅಂತ ಸುಶಾಂತ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ.

ಅಮ್ಮನೇ ಒಂದು ಪ್ಲಾನ್ ಮಾಡಿದ್ದಾರೆ. ಮುಂದೆ ಆಕೆ ಫೋನ್ ಮಾಡಿದರೆ ಸುಶಾಂತನನ್ನು ಕರೆಯುವದಿಲ್ಲವೆಂದು ಹೇಳಿದ್ದಾರೆ. ಮೆಸೇಜ್ ತೆಗೆದುಕೊಳ್ಳುತ್ತೇವೆ, ಏನಾದರೂ ಇದ್ದರೆ ನಂತರ ನಿನಗೆ ತಿಳಿಸುತ್ತೇವೆ ಅಂತ ಹೇಳಿದ್ದಾರೆ. ಸುಶಾಂತ ಮಾಣಿಗೂ ಅದು ಸರಿಯೆನಿಸಿದೆ. ಹರಟೆ ಹುಡುಗಿಯ ಕಾಟ ತಪ್ಪುತ್ತದೆ ಅಂತ ಅವನೂ ಒಪ್ಪಿದ್ದಾನೆ. ಈ ಪ್ಲಾನ್ ಮುಂದೊಂದು ದಿನ ಜ್ವಾಲಾಮುಖಿಯೊಂದನ್ನು ಸ್ಪೋಟಿಸಲಿದೆ ಅಂತ ಆತ ಕನಸಲ್ಲೂ ಎಣಿಸಿರಲಿಕ್ಕಿಲ್ಲ ಬಿಡಿ.

ಅಮ್ಮನ ಯೋಜನೆಯನ್ನು ಕಾರ್ಯಗತ ಮಾಡಿದ್ದಾರೆ. ಮುಂದಿನ ಸಲ ಮಳ್ಳ ಹುಡುಗಿ ಫೋನ್ ಮಾಡಿದಾಗ ಹಾಗೆಯೇ ಹೇಳಿದ್ದಾರೆ. ಆಕೆಯೋ ಮಹಾ ಖದೀಮಿ! 'ಸುಶಾಂತನನ್ನೇ ಕರೆಯಿರಿ. ಅವನ ಜೊತೆಗೇ ಮಾತಾಡಬೇಕು. ಮೆಸೇಜ್ ಕೊಡುವಂತದ್ದಲ್ಲ,' ಅಂತ ಮಾಲೀಕರ ಮನೆ ಮಂದಿಗೇ ರೋಪ್ ಹಾಕಿದ್ದಾಳೆ. ಕೆಲವು ಮಂದಿ ಎಷ್ಟು ಜೋರಿರುತ್ತಾರೆ ನೋಡಿ! ಆಗ ಒಂದು ದಿನ ಅಮ್ಮ ಆಕೆಗೆ ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. 'ಸುಶಾಂತನ್ನ ಬೇಕ್ಬೇಕಾದಾಗ ಕರೀಲಿಕ್ಕೆಲ್ಲ ಆಗಂಗಿಲ್ಲ. ಮೆಸೇಜ್ ಇದ್ದರ ಕೊಡು. ಇಲ್ಲಂದ್ರ ಫೋನ್ ಇಡು. ಮತ್ತ ಹೀಂಗ ಹೊತ್ತಿಲ್ಲದ ಹೊತ್ತಿನ್ಯಾಗ ಯಾಕ್ ಫೋನ್ ಮಾಡ್ತೀ?' ಅಂದು ಸ್ವಲ್ಪ ಆವಾಜ್ ಹಾಕಿದ್ದಾರೆ. ಆಕಡೆ ಆ ಯಬಡಿ ಏನೋ ಗೊಣಗುತ್ತ ಫೋನ್ ಇಟ್ಟ ಆವಾಜ್ ಬಂದಿದೆ.

ಮರುದಿನದಿಂದ ಸುಶಾಂತನಿಗೆ ಕಾಲೇಜಿನಲ್ಲಿ ವಾರಾತ ಶುರುವಾಗಿದೆ. 'ನೀ ನನ್ನ avoid ಮಾಡ್ಲಿಕತ್ತಿಯೇನು? ಯಾಕ? ನಾ ನಿನಗ ಸೇರಂಗಿಲ್ಲಾ? ಹಾಂ?' ಅಂತ ಕೊಂಯಾ ಕೊಂಯಾ ಅಂದಿದ್ದಾಳೆ. ಸುಶಾಂತ ಏನೋ ಒಂದು ರೀತಿಯಲ್ಲಿ ಸಮಾಧಾನ ಹೇಳಿದ್ದಾನೆ. ಆಕೆ ಪ್ರೇಮ ದಿವಾನಿ ಅಂತ ಗೊತ್ತಿದ್ದರೂ ಸಾದಾ ಗೆಳತಿಯ ಹಾಗೆ ಟ್ರೀಟ್ ಮಾಡಿ, ಏನೋ ರೆಗ್ಯುಲರ್ ನವರತ್ನ ತೈಲವನ್ನು ಆಕೆಯ ತಲೆಗೆ ತಿಕ್ಕಿದ್ದಾನೆ. ಆದರೆ ಆಕೆಗೆ ಜೋರಾಗಿ ಪ್ರೇಮದ ಬವ್ವಾ ಕಡಿದುಬಿಟ್ಟಿತ್ತು ಅಂತ ಕಾಣುತ್ತದೆ. ಪ್ರೇಮ ಸಂತ್ರಸ್ತೆ ಆಕೆ. ಸುಶಾಂತ ಆಕೆಯನ್ನು ನಿರ್ಲಕ್ಷ ಮಾಡಿದಷ್ಟೂ ಆಕೆ ವ್ಯಗ್ರಳಾಗತೊಡಗಿದ್ದಾಳೆ. ಮತ್ತೂ possessive ಆಗತೊಡಗಿದ್ದಾಳೆ. ತನ್ನ ಓದು, ವಿದ್ಯಾರ್ಥಿ ಯೂನಿಯನ್ನಿನ ಕೆಲಸಗಳು, ಇತರೆ ಚಟುವಟಿಕೆಗಳಲ್ಲಿ ಕಳೆದುಹೋಗಿರುವ ಸುಶಾಂತ ಆಕೆಯ ಹುಚ್ಚು ಪ್ರೇಮ ಈಗ ಖತರ್ನಾಕ್ ರೂಪಕ್ಕೆ ತಿರುಗುತ್ತಿರುವದನ್ನು ಗಮನಿಸಿಯೇ ಇಲ್ಲ.

ಒಂದು ದಿನ ಹಾಥಾಪಾಯಿ ಆಗಿಹೋಗಿದೆ. ಆ ಯಬಡ ಹುಡುಗಿ ಒಂದು ದಿನ ಕಾಲೇಜಿನಲ್ಲಿ ಸುಶಾಂತನನ್ನು ಆಟಕಾಯಿಸಿಕೊಂಡು ಪ್ರೇಮ ನಿವೇದಿಸಿಕೊಂಡುಬಿಟ್ಟಿದ್ದಾಳೆ. ಪ್ರಪೋಸ್ ಮಾಡಿಬಿಟ್ಟಿದ್ದಾಳೆ. ಸುಶಾಂತನಿಗೆ ಕಳೆದ ಎರಡು ಮೂರು ವರ್ಷಗಳಲ್ಲಿ ಅಂತವನ್ನೆಲ್ಲ ಮ್ಯಾನೇಜ್ ಮಾಡಿ ರೂಢಿಯಾಗಿಬಿಟ್ಟಿದೆ. ಪೆಕಪೆಕಾ ಅಂತ ನಕ್ಕು ತಳ್ಳಿ ಹಾಕಿದ್ದಾನೆ. ಸಾಧಾರಣದವರಾಗಿದ್ದರೆ ಪ್ರಪೋಸಲ್ ತಿರಸ್ಕರಿಸಲ್ಪಟ್ಟಿತು ಅಂತ ಮಳ್ಳ ಮುಖ ಮಾಡಿಕೊಂಡು ಹೋಗುತ್ತಿದ್ದರೋ ಏನೋ. ಆದರೆ ಈಕೆ ಸಿಂಹಿಣಿ ಮಾದರಿಯಲ್ಲಿ ಹೂಂಕರಿಸಿದ್ದಾಳೆ. ಆವಾಜ್ ಹಾಕಿದ್ದಾಳೆ. ಸುಶಾಂತ ಒಮ್ಮೆ ಅಪ್ರತಿಭನಾಗಿದ್ದಾನೆ. ಸುಧಾರಿಸಿಕೊಂಡು ಉಲ್ಟಾ ಅಬ್ಬರಿಸಿದ್ದಾನೆ. ಅರೇ ಇಸ್ಕಿ! ಇವನು ಹೇಳಿಕೇಳಿ ಸ್ಟೂಡೆಂಟ್ ಯೂನಿಯನ್ನಿನ ಮುಖಂಡ. ಅವನಿಗೂ ಬೇಕಾದಷ್ಟು ಬ್ಯಾಕಿಂಗ್, ಸಪೋರ್ಟ್ ಎಲ್ಲ ಇದೆ. ಯಾರೋ ಒಬ್ಬ ಯಬಡೇಶಿ ಹುಡುಗಿ ಕುತ್ತಿಗೆ ಹಿಡಿದು, 'ಲವ್ ಮಾಡು! ಈಗೇ ಮಾಡು! ನೀ ನನ್ನ ಲವ್ ಮಾಡಲಿಕ್ಕೇಬೇಕು,' ಅಂತ ಆವಾಜ್ ಹಾಕಿದರೆ,  ಸುಖಾಸುಮ್ಮನೆ ಲವ್ ಮಾಡಲು ಅವನಿಗೇನೂ ಬೇರೆ ಉದ್ಯೋಗವಿಲ್ಲವೇ? ಅವನೂ ಆಕೆಗೆ ಹಾಕ್ಕೊಂಡು ಬೈದುಬಿಟ್ಟಿದ್ದಾನೆ. ಮೊದಲೇ ವ್ಯಗ್ರಗೊಂಡಿದ್ದ ಸಿಂಹಿಣಿ ಈಗ ಗಾಯಗೊಂಡ ಸಿಂಹಿಣಿ. ಕೋಪ ನೆತ್ತಿಗೇರಿಬಿಟ್ಟಿದೆ. 'ನಿನ್ನ! ನಿನ್ನ! ನಿನ್ನ ಒಂದು ಕೈ ನೋಡ್ಕೋತ್ತೀನಿ! ಬಿಡಂಗಿಲ್ಲ!' ಅಂತ ಅಬ್ಬರಿಸಿದವಳೇ, ಕೂದಲು ಹಾರಿಸುತ್ತ, ಟಕ್! ಟಕ್! ಅಂತ ಚೂಪನೆ ಹೈಹೀಲ್ಡ್ ಚಪ್ಪಲಿಯ ಹೀಲು ಕುಟ್ಟುತ್ತ  ಅಲ್ಲಿಂದ ಕಳಚಿಕೊಂಡಿದ್ದಾಳೆ. ಪೀಡೆ ಕಳೆಯಿತು ಅಂತ ನಿರಾಳನಾಗಿದ್ದಾನೆ ಸುಶಾಂತ. ಅಲ್ಲಿಯವರೆಗೆ ಕೇವಲ ಪೀಡೆಯಾಗಿದ್ದಾಕೆ ಮುಂದೆ ಒಂದು ದೊಡ್ಡ ಅಪಾಯಕಾರಿ ಉಪದ್ರವವಾಗಲಿದ್ದಾಳೆ ಅಂತ ಅವನಿಗೆ ಹೇಗೆ ಗೊತ್ತಾಗಬೇಕು??

ಈ ಸಣ್ಣ  ಲಫಡಾ ಅದ ಕೆಲ ದಿನ ಎಲ್ಲ ನಾರ್ಮಲ್ ಆಗಿಯೇ ನಡೆದಿದೆ. ಮನೆಯ ಮಾಲಿಕರಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಅಷ್ಟೇ ಆ ಹುಡುಗಿಯ ಫೋನ್ ಬರುವದು ಪೂರ್ತಿ ನಿಂತು ಹೋಗಿದೆ. ಪೀಡೆ ಕಳೆಯಿತೆಂದು ಸಂತಸಪಟ್ಟಿದ್ದಾರೆ. ಒಂದೆರೆಡು ವಾರಗಳ ಕಾಲ ಮಧ್ಯಾನದ ನಿದ್ದೆಗೆ ಭಂಗ ಬಂದಿಲ್ಲ. 'ಏನೋ ಮಾಣಿ, ಫೋನ್ ಬರುವದು ನಿಂತಿದೆಯಲ್ಲ. ಯಾಕೆ?'  ಅಂತ ಸುಶಾಂತನ ಹತ್ತಿರ ಸಹಜವಾಗಿ ಕೇಳಿದ್ದಾರೆ. ಐದಾರು ವರ್ಷಗಳಿಂದ ರೂಂ ಮಾಡಿಕೊಂಡಿದ್ದ ಆತ ಮನೆಮಗನೇ ಆಗಿಹೋಗಿದ್ದ. ಸುಶಾಂತ ಏನೂ ವಿವರವಾಗಿ ಹೇಳಿಲ್ಲ. ಅಷ್ಟಕ್ಕೇ ಮಾತುಕತೆ ನಿಂತಿದೆ.

ನಂತರ ಒಂದು ದಿವಸ ಮಟಮಟ ಮಧ್ಯಾನ ಫೋನ್ ರಿಂಗಾಗಿದೆ. ನಿದ್ದೆ ಭಂಗಗೊಂಡ ಮಾಲೀಕರು ಎದ್ದು ಬಂದು ಫೋನ್ ಎತ್ತಿದ್ದಾರೆ. 'ಈ ಅಡ್ನಾಡಿ ಹೊತ್ತಿನ್ಯಾಗ ಯಾರದ್ದರೀ ಫೋನು? ಮತ್ತ ಅದೇ ಹುಚ್ಚು ಹುಡುಗಿ ಮಾಡಿದಳೋ ಏನೋ. ಅಕಿದೇ ಏನು ಮತ್ತ? ಸೂಡ್ಲಿ ತಂದು ಅಡ್ನಾಡಿ ಹೊತ್ತಿನ್ಯಾಗ ಫೋನ್ ಮಾಡ್ತದ. ಹೀಂಗೆಲ್ಲಾ ಫೋನ್ ಮಾಡಬ್ಯಾಡ ಅಂತ ಹೇಳಿ ಇಡ್ರೀ,' ಅಂತ ಪತಿಗೆ ಹೇಳಿ, ಮಲಗಿದ್ದ ಅಮ್ಮ ಮಗ್ಗುಲು ಬದಲಾಯಿಸಿದ್ದಾರೆ. ಆಕಡೆ ಮಾಲೀಕರು ಫೋನ್ ಎತ್ತಿದ್ದಾರೆ.

'ಹಲೋ!' ಅಂದರು ಮಾಲೀಕರು.

'ಹಲೋ ಸರ್! ಸುಶಾಂತನ ಜೋಡಿ ಮಾತಾಡಬೇಕಿತ್ತರಿ. ಸ್ವಲ್ಪ ಕರೀರಿ,' ಅಂತ ಧ್ವನಿ ಕೇಳಿಬಂದಿದೆ. ಧ್ವನಿ ಹುಡುಗನದು. ಅಪರಿಚಿತ ಧ್ವನಿ

ಅರೇ! ಇದು ಯಾರೋ ಬೇರೆ. ಮೊದಲಿನ ಪೀಡೆ ಹುಡುಗಿಯೋ ಅಂತ ನೋಡಿದರೆ ಯಾರೋ ಹುಡುಗ. ಇರಲಿ ವಿಚಾರಿಸೋಣ ಅಂತ ಮಾತು ಮುಂದುವರೆಸಿದ್ದಾರೆ.

'ಸುಶಾಂತ ಇದ್ದಾನೋ ಇಲ್ಲೋ ಗೊತ್ತಿಲ್ಲ. ಮೆಸೇಜ್ ಇದ್ದರೆ ಕೊಡಿ. ನಂತರ ಅವನಿಗೆ ತಿಳಿಸುತ್ತೇನೆ,' ಅಂದಿದ್ದಾರೆ. ಅದು ಎಂದಿನ ಪದ್ಧತಿ. ಸುಶಾಂತ ಕೂಡ ಹೇಳಿಯೇಬಿಟ್ಟಿದ್ದಾನೆ, 'ಮನೆ ಜನ ಫೋನ್ ಮಾಡಿದರೆ, ಅದೂ ಅರ್ಜೆಂಟ್ ಇದ್ದರೆ ಮಾತ್ರ ಕರೆಯಿರಿ. ಇಲ್ಲವಾದರೆ ಬೇಡ. ನಿಮಗೆ ಸುಮ್ಮನೇ ತೊಂದರೆ,' ಅಂತ.

ಆಕಡೆ ಪಾರ್ಟಿ ಬಿಟ್ಟಿಲ್ಲ. 'ಸರ್, ಭಾಳ ಅರ್ಜೆಂಟ್ ಮ್ಯಾಟರ್ ಐತ್ರಿ. ಈಗೇ ಮಾತಾಡ್ಲಿಕ್ಕೇಬೇಕು. ಸ್ವಲ್ಪ ಕರೀರಿ ಸುಶಾಂತನ್ನ. ಭಾಳ ಅರ್ಜೆಂಟ್ ಐತ್ರಿ,' ಅಂದಿದ್ದಾರೆ. ಫೋನ್ ಮಾಡುತ್ತಿರುವವರು ಯಾರು ಅಂತ ಕೇಳಿದರೆ ಸುಶಾಂತನ ಫ್ರೆಂಡ್ ಅಂತ ಹೇಳಿದ್ದಾನೆ. ಆಕಡೆಯಿಂದ ಏನೋ ಸ್ವಲ್ಪ ಗುಸುಗುಸು ಕೇಳಿಬಂದಿದೆ. ಹಾಗಾಗಿ ಫೋನಲ್ಲಿ ಮಾತಾಡುತ್ತಿರುವವನು ಒಬ್ಬನೇ ಆದರೂ ಇನ್ನೂ ಒಂದೆರೆಡು ಜನ ಅಲ್ಲಿ ಇದ್ದಾರೆ ಅಂತ ಮಾಲೀಕರಿಗೆ ಗೊತ್ತಾಗಿದೆ. ಕಿವಿ ನಿಮಿರಿ ನಿಂತಿವೆ.

'ಏನು ಅಷ್ಟು ಅರ್ಜೆಂಟ್ ವಿಷಯ??' ಅಂತ ಮಾಲೀಕರು ಕೇಳಿದ್ದಾರೆ.

'ಸರ್, ಅದು.... ಅದು..... ಸುಶಾಂತನ ದೋಸ್ತ ಒಬ್ಬವಂಗ ಆಕ್ಸಿಡೆಂಟ್ ಆಗೈತ್ರೀ. ಭಾಳ ಸೀರಿಯಸ್ ಐತ್ರಿ. ಅದಕ್ಕೇ ಸುಶಾಂತನ ಜೋಡಿ ಅರ್ಜೆಂಟ್ ಮಾತಾಡಬೇಕಿತ್ರೀ' ಅಂದಿದ್ದಾನೆ ಫೋನ್ ಮಾಡಿದವ.

'ಹೌದೇ? ಯಾರಿಗೆ? ಆಕ್ಸಿಡೆಂಟ್ ಆದವರು ಎಲ್ಲಿದ್ದಾರೆ? ಈಗ ಹೇಗಿದ್ದಾರೆ?' ಅಂತ ಮಾಲೀಕರು ಕೇಳಿದ್ದಾರೆ.

'ಸರ್! ಆಕ್ಸಿಡೆಂಟ್ ಆದ ದೋಸ್ತನೂ ಇಲ್ಲೇ ಅದಾನ್ರೀ. ಲಗೂನ ಸುಶಾಂತಗ ಕರೀರಿ,' ಅಂತ ಗಡಿಬಿಡಿ ಮಾಡಿದ್ದಾರೆ.

ಈಗ ಮನೆ ಮಾಲೀಕರಿಗೆ ಯಾಕೋ ಸಂಶಯ ಬಂದಿದೆ. ಮೊದಲೇ ಸಿಕ್ಕಾಪಟ್ಟೆ ಮೇಧಾವಿ ಅವರು.

'ಅಲ್ಲಪ್ಪಾ, ಆಕ್ಸಿಡೆಂಟ್ ಆಗಿದೆ ಅಂತೀರಿ. ಸೀರಿಯಸ್ ಇದೆ ಅಂತೀರಿ. ತುರಂತ ಹಾಸ್ಪಿಟಲ್ಲಿಗೆ ಹಾಕುವ ಬದಲು ಇಲ್ಲಿ ಫೋನ್ ಮಾಡಿಕೋತ್ತ ಕೂತಿರಲ್ಲಾ? ಹಾಂ? ಲಗೂನೆ ಹಾಸ್ಪಿಟಲ್ಲಿಗೆ ಸೇರಿಸಿರಿ. ಯಾರಿಗೆ ಆಕ್ಸಿಡೆಂಟ್ ಆಗಿದೆ, ಎಲ್ಲಿ, ಯಾವ ಹಾಸ್ಪಿಟಲ್ ಅಂತ ತಿಳಿಸಿರಿ. ನೋಟ್ ಮಾಡಿಕೊಳ್ಳುತ್ತೇನೆ. ಸುಶಾಂತನಿಗೆ ಮೆಸೇಜ್ ಕೊಡುತ್ತೇನೆ. ತಡ ಮಾಡಬೇಡಿ. ಆಸ್ಪತ್ರೆಗೆ ಸೇರಿಸಿ,' ಅಂತ ಮಾಲೀಕರು ಹೇಳಿದ್ದಾರೆ.

ಯಾಕೋ ಎಲ್ಲ ಸರಿಯಿಲ್ಲ. ದಾಲ್ ಮೇ ಕುಚ್ ಕಾಲಾ ಹೈ! ಅಂತ ಅವರಿಗೆ ಏನೋ ಒಂದು ತರಹದ ಸೂಟ್ ಹೊಡೆದಿದೆ. ಏನೋ ಒಂದು ತರಹದ intuition ಜಾಗೃತವಾಗಿದೆ.

ಫೋನ್ ಮಾಡಿ ಮಾತಾಡುತ್ತಿದ್ದ ಆಕಡೆಯ ಆಸಾಮಿ ಕೇಳುವ ಪರಿಸ್ಥಿಯಲ್ಲಿಲ್ಲ. ಮತ್ತೆ ಮತ್ತೆ ಅದೇ ವಾರಾತ. 'ಸರ್, ಲಗೂ ಸುಶಾಂತಗ ಕರೀರಿ. ಅರ್ಜೆಂಟ್ ಐತ್ರಿ. ಭಾಳ ಸೀರಿಯಸ್ ಐತ್ರಿ,' ಅಂತ ಹೇಳುತ್ತಲೇ ಇದ್ದಾನೆ.

ಇನ್ನೇನು ಮಾಡುವದು? ಇಷ್ಟೊಂದು ಹೇಳುತ್ತಿದ್ದಾರೆ ಅಂದ ಮೇಲೆ ಸುಶಾಂತನಿಗೆ ತಿಳಿಸಲಿಕ್ಕೇಬೇಕು. ಹಾಗಂತ ವಿಚಾರ ಮಾಡಿ, ಫೋನ್ ಟೇಬಲ್ ಮೇಲಿಟ್ಟು, ಮಹಡಿ ಹತ್ತಿ, ಸುಶಾಂತನನ್ನು ಕರೆದು ಬರಲು ಮಾಲೀಕರು ತಯಾರಾಗಿದ್ದಾರೆ.

'ಸರಿ, ನೀವು ಫೋನ್ ಹೋಲ್ಡ್ ಮಾಡಿರಿ. ಲೈನ್ ಮ್ಯಾಲೆ ಇರ್ರಿ. ನಾ ಮ್ಯಾಲೆ ಹೋಗಿ ನೋಡ್ತೇನಿ ಸುಶಾಂತ ಇದ್ದಾನೇನು ಅಂತ. ಹೋಲ್ಡ್ ಮಾಡ್ರಿ,' ಅನ್ನುತ್ತ ಫೋನನ್ನು ಕಿವಿ ಹತ್ತಿರದಿಂದ ತೆಗೆದು ಇನ್ನೇನು ಟೇಬಲ್ ಮೇಲೆ ಇಡಬೇಕು ಅನ್ನುವ ಹೊತ್ತಿಗೆ ಮತ್ತೆ ಕಿವಿಗೆ ಬಿದ್ದಿದೆ ಅದೇ ಹಳೆಯ ಧ್ವನಿ! ಸಂಶಯವೇ ಇಲ್ಲ. ಇದು ಅವಳದ್ದೇ ಧ್ವನಿ. ಗಡುಸಾದ, ಡೀಪ್ ಧ್ವನಿ. ಅವಳೇ ಅವಳೇ. ಸದಾ ಸುಶಾಂತನಿಗೆ ಫೋನ್ ಮಾಡುತ್ತಿದ್ದವಳು. ಅವಳೇ. ಈಗ ಹಿನ್ನೆಲೆಯಲ್ಲಿ ಆಕೆಯ ಧ್ವನಿ ಕೇಳಿದ ಮಾಲೀಕರು ಜಾಗೃತರಾದರು. ಎಲ್ಲ ಸರಿಯಿಲ್ಲ, ಏನೋ ಲೋಚಾ ಇದೆ ಅಂತ ಮೊದಲೇ strong intuition ಬೇರೆ ಬಂದಿತ್ತು. ಈಗ ಆಕಡೆ ಹಿನ್ನೆಲೆಯಲ್ಲಿ ಸುಶಾಂತನ ಒಂದು ಕಾಲದ ಗೆಳತಿಯ unmistakable ಧ್ವನಿ ಕೇಳಿದ ಅವರಿಗೆ ಖಚಿತವಾಗಿ ಅನ್ನಿಸಿಬಿಟ್ಟಿದೆ. 'ಏನೋ ಸ್ಕೀಮಿಂಗ್ ನಡೆಯುತ್ತಿದೆ. ಏನೋ ಸ್ಕೆಚ್ ಹಾಕುತ್ತಿದ್ದಾರೆ. ಏನಿರಬಹುದು?' ಅಂತ ಕುತೂಹಲ. ಒಂದು ತರಹದ ಆತಂಕ ಕೂಡ.

ಹಾಗಾಗಿ ಫೋನ್ ಇಟ್ಟು, ಮಹಡಿ ಹತ್ತಿ, ಮೇಲೆ  ಹೋಗಬೇಕೆಂದುಕೊಂಡವರು ಹೋಗಿಲ್ಲ. ಚುಪ್ ಚಾಪ್ ಫೋನ್ ಕಿವಿಗೆ ಹಿಡಿದುಕೊಂಡೇ ಕೂತಿದ್ದಾರೆ. ಗಟ್ಟಿಯಾಗಿ ಉಸಿರಾಡಿಲ್ಲ ಕೂಡ. ಆಕಡೆಯವರು ಕೇಳಿಸಿಕೊಂಡರೆ ಅವರಿಗೆ ಸಂಶಯ ಬರುತ್ತದೆ.

ಮಾಲೀಕರು ಫೋನ್ ಕೆಳಗಿಟ್ಟು ಸುಶಾಂತನನ್ನು ಕರೆಯಲು ಹೋಗಿದ್ದಾರೆ ಅಂತ ಊಹಿಸಿದ ಆಕಡೆಯ ಮಂದಿ ಮಾತಿಗೆ ಶುರು ಹಚ್ಚಿಕೊಂಡಿದ್ದಾರೆ. ಹುಡುಗಿಯ ಧ್ವನಿ ಜೊತೆ ಮತ್ತೆರೆಡು ಗಂಡು ಧ್ವನಿ ಕೇಳಿಬಂದಿವೆ. ಈಕಡೆ ಅವರಾಡುತ್ತಿದ್ದ ಮಾತುಗಳನ್ನು ರಹಸ್ಯವಾಗಿ ಕೇಳುತ್ತ ಕುಳಿತಿದ್ದ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಸಾವರಿಸಿಕೊಂಡು ಬಿಗಿಯಾಗಿ ಕೂತು ಪೂರ್ತಿ ಕೇಳಿಸಿಕೊಂಡಿದ್ದಾರೆ. ಆಕಡೆ ಇದ್ದ ಆ ಹುಡುಗಿ ಮತ್ತು ಮೂರ್ನಾಲ್ಕು ಹುಡುಗರಲ್ಲಿ ನಡೆದ ಮಾತುಕತೆ ಹೇಗಿತ್ತು ಗೊತ್ತೇ? ಒಂದು ಭಯಾನಕ ಕ್ರಿಮಿನಲ್ ಸಂಚಿನ ಮಾತುಕತೆಯಾಗಿತ್ತು ಅದು.

ವ್ಯಗ್ರಗೊಂಡು ಸುಪಾರಿ ಕೊಟ್ಟಿದ್ದ ಹುಡುಗಿ (ಸಾಂದರ್ಭಿಕ ಚಿತ್ರ)

'ಆ ಸುಶಾಂತ ಬರ್ತಾನ. ಬರಲಿಕ್ಕೇಬೇಕು. ಬರುವ ಹಾಂಗ ನೀವು ಮಾಡ್ಬೇಕು,' ಅಂತ ಕಾಳಸರ್ಪದಂತೆ ಫೂತ್ಕರಿಸಿದಾಕೆ ಅವಳೇ ಆ ಹುಡುಗಿ. ಅದೇ ಆಳವಾದ ಧ್ವನಿ. ಮರೆಯಲಾಗದ husky voice.

'ಏ, ಆಂವಾ ಸುಶಾಂತ ಸೂಳಿಮಗಾ ಮೊದಲು ಫೋನ್ ಮ್ಯಾಲರೆ ಬರಲಿ. ನಾ ಮಾತಾಡ್ತೇನಿ. ನಾ ಕರದೇ ಅಂದ್ರ ಬಂದೇ ಬರ್ತಾನ. ನನ್ನ ಮಾತು ತೆಗೆದು ಹಾಕಲಿಕ್ಕೆ ಸಾಧ್ಯ ಇಲ್ಲ ತೊಗೋ! ಆಕ್ಸಿಡೆಂಟ್ ಆಗೈತಿ ಅಂತ ಕೇಳಿದ ಕೂಡಲೇ ಕುಂಡ್ಯಾಗ ಸೈಕಲ್ ಹೆಟ್ಟಿಕೊಂಡು ದೌಡ್ ಬಂದೇಬಿಡ್ತಾನ. ನೀನೇ ನೋಡಿಯಂತ,' ಅಂತ ಗಂಡೊಂದು ಆಶ್ವಾಸನೆ ಕೊಟ್ಟಿದೆ.

'ಅವನ ಕಾಲು ಮುರೀರಿ. ಸೊಂಟ ಮುರಿಯೋ ಹಾಂಗ ಬಡೀರಿ. ಆರು ತಿಂಗಳು ಹಾಸ್ಪಿಟಲಿನ್ಯಾಗ ಇದ್ದು ಬರಬೇಕು. ಹಾಂಗ ಮಾಡ್ರಿ. ಹಾಕ್ಕೊಂಡು ಮನಗಂಡ ಬಡೀರಿ ಅವಂಗ. ನನ್ನ ಹೆಸರು ಹೇಳಿ ಹೇಳಿ ಬಡೀರಿ. ಜೀವನ ಪರ್ಯಂತ ನನ್ನ ಹೆಸರು ನೆನಪಿಟ್ಟಿರಬೇಕು. ಮಂಗ್ಯಾನಮಗ ಸುಶಾಂತ. ನನಗ ಅಪಮಾನ ಮಾಡ್ಯಾನ. ಭಾಳ insult ಮಾಡ್ಯಾನ!' ಅಂತ ಆ ಹುಡುಗಿ ಬರೋಬ್ಬರಿ ಸುಪಾರಿ ಕೊಡುತ್ತಿದ್ದಾಳೆ.

'ಏ, ನೀ ಚಿಂತಿ ಮಾಡಬ್ಯಾಡಾ ಡಾರ್ಲಿಂಗ್. ಅವನ್ನ ಹಿಡಿದು ಮಸ್ತಾಗಿ ಕಟಿಬೇಕು ಅಂತಲೇ ಹಾಕಿ ಸ್ಟಿಕ್, ಕ್ರಿಕೆಟ್ ಬ್ಯಾಟ್ ಎಲ್ಲಾ ತಂದೇವಿ. ಆಂವಾ ಬಂದಾದರೂ ಬರಲಿ. ಹೀಂಗ ಹಾಕ್ಕೊಂಡು ನಾದತೇವಿ ಅಂದ್ರ ಕಾಲು, ಕೈ, ಸೊಂಟ ಎಲ್ಲಾ ಫುಲ್ ಸ್ಕ್ರಾಪ್ ಆಗಿಹೋಗಬೇಕು. ದೊಡ್ಡ ಹೀರೋ ಆಗಿ ಡೌಲ್ ಬಡೀಲಿಕತ್ತಾನ ಮಂಗ್ಯಾನಮಗ. ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ ಒಳಗ ನನ್ನ ಸೋಲಿಸಿ ನನಗೂ insult ಮಾಡ್ಯಾನ. ಬಂದರೆ ಬರ್ಲಿ. ಐತಿ ಇವತ್ತು ಗಜ್ಜು ಅವಂಗ!' ಅಂತ ಗಂಡು ಧ್ವನಿಯೊಂದು ಅಬ್ಬರಿಸಿದೆ.

ಇದೆಲ್ಲವನ್ನು ಕೇಳಿಸಿಕೊಂಡ ಮಾಲೀಕರಿಗೆ ಒಂದು ಫುಲ್ ಪಿಕ್ಚರ್ ಬಂದುಬಿಟ್ಟಿದೆ. ಎಲ್ಲ ವಿವರ ಗೊತ್ತಾಗಿಲ್ಲ. ಆದರೆ ಮೋಸದಿಂದ ಸುಶಾಂತನನ್ನು ಎಲ್ಲೋ ಬರಹೇಳಿ, ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಭಯಾನಕ ಸಂಚೊಂದು ತಯಾರಾಗಿದೆ ಅಂತ ಮಾತ್ರ ಅವರಿಗೆ ತಿಳಿದುಹೋಗಿದೆ.

ಸುಶಾಂತನನ್ನು ಕರೆದು, ಫೋನಲ್ಲಿ ಮಾತಾಡಿಸುವ ಪ್ರಮೇಯವೇ ಇಲ್ಲ ಅಂತ ಗೊತ್ತಾಗಿದೆ. ಮೇಲೆ ಹೋಗಿ ವಾಪಸ್ ಬಂದವರಂತೆ ನಟಿಸಿದ್ದಾರೆ. ಮತ್ತೆ 'ಹಲೋ!' ಅಂದಿದ್ದಾರೆ. ಆಕಡೆ, 'ಶ್! ಶ್! ಎಲ್ಲಾರೂ ಗಪ್ ಕೂಡ್ರಿ!' ಅಂತ ಎಲ್ಲರನ್ನೂ ಸುಮ್ಮನಾಗಿಸಿದ್ದಾನೆ ಮೊದಲು ಫೋನ್ ಮಾಡಿದವ. 'ಹೇಳ್ರಿ ಸರ್!' ಅಂತ ಕಾತುರದಿಂದ ಕೇಳಿದ್ದಾನೆ.

'ಸುಶಾಂತ ಇಲ್ಲ. ಮ್ಯಾಲೆ ಹೋಗಿ ನೋಡಿ ಬಂದೆ. ಮೆಸೇಜ್ ಹೇಳು. ನಾ ನಂತರ ಅವಂಗ ಹೇಳತೇನಿ. ಮೊದಲು ಹೋಗಿ ಆಕ್ಸಿಡೆಂಟ್ ಆದವರನ್ನು ಹಾಸ್ಪಿಟಲ್ಲಿಗೆ ಅಡ್ಮಿಟ್ ಮಾಡ್ರಿ. ತಡಾ ಮಾಡಬ್ಯಾಡ್ರಿ,' ಅಂತ ಉದ್ರಿ ಉಪದೇಶ ಮಾಡಿದ್ದಾರೆ.

ಈ ಮಾತನ್ನು ಆಕಡೆ ಪಾರ್ಟಿ ಬಡಪಟ್ಟಿಗೆ ನಂಬಿಲ್ಲ. 'ಸುಶಾಂತ ರೂಮಿನ್ಯಾಗ ಇಲ್ಲರೀ? ಎಲ್ಲಿ ಹೋದರೀ ಇಷ್ಟೊತ್ತಿನ್ಯಾಗ? ಕಾಲೇಜಿಂದ ಮಧ್ಯಾನ ಮನಿಗೇ ಬಂದಿರ್ತಾನ. ಖರೆನೇ ಮನಿಯಾಗ ಇಲ್ಲರೀ? ಇಲ್ಲರೀ?' ಅಂತ ಮತ್ತೆ ಮತ್ತೆ ಅದನ್ನೇ ಪಿಟೀಲು ಕುಯ್ದಿದ್ದಾನೆ.

'ನಾ ಏನು ಹೇಳಿದೆ ನಿಮಗ? ಹಾಂ? 'ಈಗ ನೋಡಿ ಬಂದೆ. ಸುಶಾಂತ ಇಲ್ಲ,' ಅಂತ ಹೇಳಿದೆ. ಮತ್ತೆ ಮತ್ತೆ ಕೇಳಿದರೆ  ಬ್ಯಾರೆ ಏನು ಹೇಳಲಿ ನಾನು? ಫೋನ್ ಇಟ್ಟು, ನೀವೇ ಇಲ್ಲಿ ಬಂದುಬಿಡ್ರಿ. ನೀವೇ ನೋಡಿಕೊಂಡು ಖಾತ್ರಿ ಮಾಡಿಕೊಳ್ಳಿರಿ. ಸುಶಾಂತ ಇಲ್ಲ ಅಂತ ಹೇಳಿದರೆ ಮತ್ತ ಮತ್ತ ಅದನ್ನೇ ಕೇಳ್ತಿರಲ್ಲಾ? ಹಾಂ?' ಅಂತ ಕೊಂಚ ಅಸಹನೆಯಿಂದ ಹೇಳಿದ್ದಾರೆ. 'ನಿಮ್ಮ ಮೆಸೇಜ್ ಕೊಡ್ರಿ,' ಅಂತ ಮತ್ತೆ ಮತ್ತೆ ಹೇಳಿ ಆಕಡೆ ಮಂದಿಯ ತಲೆತಿಂದುಬಿಟ್ಟಿದ್ದಾರೆ.

ಬೇಟೆ ತಪ್ಪಿಹೋಗಿದೆ ಅಂತ ಆಕಡೆ ಮಂದಿಗೆ ಖಾತ್ರಿಯಾಗಿದೆ. ಮುಂದೆ ಏನೂ ಜಾಸ್ತಿ ಮಾತಾಡದೇ ಫೋನ್ ಇಟ್ಟಿದ್ದಾರೆ. ಆಗ ಸುಮಾರು ಮಧ್ಯಾನ ಮೂರೂವರೆ ಘಂಟೆ.

ಮಾಲೀಕರು ಫೋನ್ ಇಡುತ್ತಿದ್ದ ಹಾಗೆ ಮೇಲಿಂದ ಯಾರೋ ಕೆಳಗಿಳಿದು ಬಂದಿದ್ದಾರೆ. ಮತ್ಯಾರೂ ಅಲ್ಲ. ಅದೇ ಸುಶಾಂತ. ಮಧ್ಯಾನದ ಊಟದ ನಂತರ, ಸಣ್ಣ ನಿದ್ದೆ ಮಾಡಿ, ಕೆಳಗೆ ಪೇಪರ್ ಓದಲು ಬರುವದು ಅವನ ರೂಢಿ. ಹಾಗೆಯೇ ಬಂದಿದ್ದಾನೆ. ಅವನನ್ನು ನೋಡಿದ ಮಾಲೀಕರು ಆಗ ಏನೂ ಹೇಳಿಲ್ಲ. 'ದೇವರ ದಯೆಯಿತ್ತು ಇವತ್ತು. ಅದಕ್ಕೇ ನೀನು ಬಚಾವು. ಇಲ್ಲವಾದರೆ ನಾನೇ ನಿನ್ನನ್ನು ಗೂಂಡಾಗಳ ಕೈಯಲ್ಲಿ ಕೊಟ್ಟಂತಾಗುತ್ತಿತ್ತು' ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದಾರೆ. ಇದೆಲ್ಲ ಏನೂ ಗೊತ್ತಿರದ ಸುಶಾಂತ ಪೇಪರ್ ಓದುತ್ತ ಕುಳಿತಿದ್ದಾನೆ.

ನಂತರ ಮಾಲೀಕರು ತಮ್ಮ ಪತ್ನಿಗೆ ಸುದ್ದಿ ಹೇಳಿದ್ದಾರೆ. ಆಕೆಯೂ ಸುಶಾಂತನನ್ನು ರಕ್ಷಿಸಿದ ದೇವರಿಗೆ ಲಾಖೋ ಲಾಖ್ ನಮಸ್ಕಾರ ಹಾಕಿದ್ದಾರೆ. ಆವತ್ತು ರಾತ್ರಿಯೇ ಸುಶಾಂತನನ್ನು ಕರೆದು ಎಲ್ಲವನ್ನೂ ವಿಸ್ತಾರವಾಗಿ ಹೇಳಿದ್ದಾರೆ. ಭಯಾನಕ ಕ್ರಿಮಿನಲ್ ಸಂಚಿನ ವಿವರವನ್ನೆಲ್ಲ ಕೇಳಿದ ಸುಶಾಂತ ಮಾಣಿ ಮುಖದ ಮೇಲೆ ಪ್ರೇತಕಳೆ. ಎಲ್ಲ ಕೇಳಿ, ಅರ್ಥಮಾಡಿಕೊಂಡು, ತಲೆಯಾಡಿಸುತ್ತ ಎದ್ದು ಹೋಗಿದ್ದಾನೆ.

ಮುಂದೆ ಏನೂ ತೊಂದರೆಯಾಗಿಲ್ಲ. ಸುಶಾಂತ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಂಡನೋ ಗೊತ್ತಿಲ್ಲ. ತನ್ನ ಜನರನ್ನು ಬಿಟ್ಟು ನಿಪಟಾಯಿಸಿಕೊಂಡಿರಬೇಕು. ಅವನ ಜೊತೆಗೂ ಅವನದ್ದೇ ಕಪಿಸೈನ್ಯವಿತ್ತು ನೋಡಿ. ಹೇಳಿಕೇಳಿ ಸ್ಟೂಡೆಂಟ್ ಲೀಡರ್ ಅವನು.

ಪರ್ಫೆಕ್ಟ್ ಟೈಮಿಂಗ್ ಅಂದರೆ ಇದೇ ಇರಬೇಕು. ಮಾಲೀಕರು ಒಂದು ಕ್ಷಣ ಮೊದಲು ಫೋನಿಟ್ಟು, ಎದ್ದು ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಇದೆಲ್ಲ ತಿಳಿಯದೇ, ಸುಶಾಂತನನ್ನು ಕರೆದು, ಆತ ಫೋನಲ್ಲಿ ಮಾತಾಡಿ, ದೋಸ್ತರು ಕರೆದರು ಅಂತ ಹೋಗಿ, ಅಲ್ಲಿ ಬರೋಬ್ಬರಿ ಬಡಿಸಿಕೊಂಡು, ಫುಲ್ ಸ್ಕ್ರಾಪ್ ಆಗಿ, ಆಸ್ಪತ್ರೆ ಸೇರಿಕೊಂಡು ಪ್ರಾರಬ್ಧ ಅನುಭವಿಸುತ್ತಿದ್ದನೋ ಅಥವಾ ಏನಾದರೂ ಹೆಚ್ಚುಕಮ್ಮಿಯಾಗಿ ಕೊಲೆಯಾಗಿಯೇ ಹೋಗುತ್ತಿದ್ದನೋ? ಯಾರಿಗೆ ಗೊತ್ತು.

ಇದೆಲ್ಲ ಆದ ಮೇಲೂ ಅನೇಕ ವರ್ಷ ಸುಶಾಂತ ಅಲ್ಲೇ ಇದ್ದ. ನಂತರ ಕೆಲಸ ಹಿಡಿದು ಬೆಂಗಳೂರೋ, ಮುಂಬೈನೋ ಸೇರಿಕೊಂಡ. ಸಂಸಾರಸ್ಥನಾಗಿ ಆರಾಮ್ ಇದ್ದಾನೆ. ಕಾಲೇಜಿನಲ್ಲಿದ್ದಾಗ ಕರ್ಣಪಿಶಾಚಿಯಂತೆ ಕಾಡಿದ್ದ ಆಕೆಯಲ್ಲಿ? ಗೊತ್ತಿಲ್ಲ. ಗೊತ್ತಾಗುವದೂ ಬೇಡ.

ವಿ. ಸೂ: ಸತ್ಯಕಥೆ. ಹೆಸರುಗಳನ್ನು ಬದಲಾಯಿಸಿದ್ದೇನೆ. ಕೆಲವು ವಿಷಯ ಮರೆಮಾಚಲು ಸ್ವಲ್ಪ ಮಸಾಲೆ ಸೇರಿಸಿದ್ದೇನೆ.

11 comments:

Kushi said...

Chennagide.....hudugyaroo supari koduvangaythe......shivane shambulinga.......:-) :-) ( nimmade dialogue copy madibittidene ;-))

Kushi said...

Chennagide.....hudugyaroo supari koduvangaythe......shivane shambulinga.......:-) :-) ( nimmade dialogue copy madibittidene ;-))

Anil Talikoti said...

ಮೊದಲಾದರೆ ಹುಡಗಿಯರು ತಾಂಬೂಲ ಕೊಡ್ತಾ ಇದ್ದ್ರು, ಮೂವತ್ತು ವರುಷದ ಹಿಂದೆ ಸುಪಾರಿ ಕೊಟ್ಟ್ರು ಅಂದ್ರೆ ಈಗಿನ ಪೋರಿಯರು ಏನು ಕೊಡುತ್ತಾರೋ ಎಂಬ ಕೆಟ್ಟ ಕುತೂಹಲ ನನಗೆ-ಬರಹ ಇಷ್ಟವಾಯಿತು
-ಅನಿಲ

Mahesh Hegade said...

Thank you, Khushi.

Mahesh Hegade said...

Thank you, Anil.

ವಿ.ರಾ.ಹೆ. said...

nange gottatu ;)

Mahesh Hegade said...

@Vikas....LOL....ok.you got it.

Otiram Kengrehole said...


Ee kathe jora iddro!

sunaath said...

ಭಯಾನಕ ಸಂಗತಿ. ಧಾರವಾಡದಂತಹ ಊರಿನಲ್ಲಿ ಹೀಗೆಲ್ಲಾ...? ‘ಒಲಿದರೆ ನಾರಿ, ಮುನಿದರೆ ಮಾರಿ’ ಅನ್ನೋದು ಸುಳ್ಳಲ್ಲ!

Mahesh Hegade said...

Thank you, Sunaath Sir.

Kumar Dundkuli said...


Interesting! May be she went towards Shimoga!!