Tuesday, October 31, 2017

ಯಾವಾಗ ಸುಳ್ಳು ಹೇಳಬಹುದು?

ಕೆಳಗಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದಂತೆ.

೧. ಪುರುಷ ಮತ್ತು ಮಹಿಳೆ ಮಿಲನಸುಖ ಅನುಭವಿಸುತ್ತಿರುವಾಗ ಪುರುಷನು ಸುಳ್ಳುಗಳನ್ನು ಹೇಳಬಹುದು. ಅವುಗಳನ್ನು ಹಾಸ್ಯೋಕ್ತಿ (Jokes) ಎಂದು ಪರಿಗಣಿಸಲಾಗುತ್ತದೆ.
೨. ಮಹಿಳೆಯನ್ನು ಗೆಲ್ಲಲು (ಪಟಾಯಿಸಲು) ಸುಳ್ಳುಗಳನ್ನು ಹೇಳಬಹುದು.
೩. ಮದುವೆ ಮಾಡಿಸಲು ಸುಳ್ಳು ಹೇಳಬಹುದು ('ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು,' ಎಂಬುದು ಇಲ್ಲಿಂದಲೇ ಬಂತೋ ಹೇಗೆ!?)
೪. ಪ್ರಾಣಾಪಾಯವಿರುವಾಗ ಪ್ರಾಣ ಉಳಿಯುತ್ತದೆ ಎಂದಾದರೆ ಸುಳ್ಳು ಹೇಳಬಹುದು.
೫. ಸಕಲ ಸಂಪತ್ತು ನಾಶವಾಗಲಿದೆ, ಕಳೆದುಹೋಗಲಿದೆ ಎಂದಾದಾಗ ಸುಳ್ಳು ಹೇಳಬಹುದು.

ಲೋಕದ ಜನ ಈ ಸಂದರ್ಭಗಳಲ್ಲೇ ಅಲ್ಲವೇ ಗರಿಷ್ಠ (ಮ್ಯಾಕ್ಸಿಮಮ್) ಸುಳ್ಳುಗಳನ್ನು ಹೇಳುವದು? ಮತ್ತು ಇದೇ ಸಂದರ್ಭಗಳಲ್ಲಿ ಜನ ಸುಳ್ಳುಗಳನ್ನು ನಂಬುತ್ತಾರೆ ಕೂಡ.

ಇದು ಭಾಗವತ ಪುರಾಣದಲ್ಲಿ (ಶ್ರೀಮದ್ಭಾಗವತದಲ್ಲಿ) ಬರುತ್ತದೆ.

ಸಂದರ್ಭದೊಡನೆ ಸ್ಪಷ್ಟೀಕರಣ: ಅಸುರ ರಾಜಕುಮಾರಿ ಶರ್ಮಿಷ್ಠಾ ಮಹಾರಾಜಾ ಯಯಾತಿಯಲ್ಲಿ ಮೋಹಗೊಳ್ಳುತ್ತಾಳೆ. ಯಯಾತಿ ಆಗಲೇ ವಿವಾಹಿತ. ಆದರೆ ಶರ್ಮಿಷ್ಠಾ ಸಿಕ್ಕಾಪಟ್ಟೆ ಸುಂದರಿ. ಅವನೂ ಆಕೆಯಲ್ಲಿ ಮೋಹಗೊಳ್ಳುತ್ತಾನೆ. ಆದರೆ ದೇವಯಾನಿಯನ್ನು ಮದುವೆಯಾಗಿರುತ್ತಾನಲ್ಲ. ಈ ದೇವಯಾನಿ ಶರ್ಮಿಷ್ಠಾಳ ಗೆಳತಿ. ದೈತ್ಯಗುರು ಶುಕ್ರಾಚಾರ್ಯರ ಮಗಳು. ಹಾಗಿರುವಾಗ ದೇವಯಾನಿಗೆ ಏನೆಂದು ಹೇಳಿ ಹೇಗೆ ಶರ್ಮಿಷ್ಠಾಳನ್ನು ಮದುವೆಯಾದಾನು ಯಯಾತಿ?

ಯಯಾತಿ ತನ್ನ ಸಂಕಷ್ಟವನ್ನು ಹೇಳಿಕೊಂಡಾಗ ಶರ್ಮಿಷ್ಠಾ ಹೇಳುತ್ತಾಳೆ, 'ಸುಳ್ಳು ಹೇಳಯ್ಯಾ!'

'ಹೇಗೆ ಸುಳ್ಳು ಹೇಳಲಿ? ಸುಳ್ಳು ಹೇಳುವದು ತಪ್ಪಲ್ಲವೇ?' ಎಂದು ಕೇಳುತ್ತಾನೆ ಯಯಾತಿ.

'ಎಲ್ಲ ಶಾಸ್ತ್ರಗಳನ್ನು ಓದಿರುವ ನಿನಗೆ ಗೊತ್ತಿಲ್ಲದೇನಿದೆ? ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎಂದು ಶಾಸ್ತ್ರಗಳಲ್ಲೇ ಹೇಳಿದ್ದಾರಲ್ಲ?' ಎನ್ನುತ್ತಾಳೆ ಶರ್ಮಿಷ್ಠಾ.

ಯಾಯಾತಿಗಂತೂ ಯಾವ ಶಾಸ್ತ್ರಗಳಲ್ಲಿ ಸುಳ್ಳು ಹೇಳುವ ಅನುಮತಿ ಇದೆ ಎಂದು ನೆನಪಾಗುವದಿಲ್ಲ.

ಆಗ ಶರ್ಮಿಷ್ಠಾ ಮೇಲಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎನ್ನುತ್ತಾಳೆ.

ಅಲ್ಲಿಗೆ ದೇವಯಾನಿಗೆ ಸವತಿ ಬರುವ ಸ್ಕೆಚ್ ತಯಾರಾಗುತ್ತದೆ.

ಆದರೆ ಸುಳ್ಳು ಹೇಳಲು ಸಮ್ಮತಿ ಯಾವ ಶಾಸ್ತ್ರದಲ್ಲಿ ಇದೆ ಎಂದು ಯಯಾತಿಯೂ ಕೇಳಿರಲಿಕ್ಕಿಲ್ಲ ಶರ್ಮಿಷ್ಠಾಳೂ ಹೇಳಿರಲಿಕ್ಕಿಲ್ಲ. ಅಲ್ಲವೇ!? ಆತುರವಾದಾಗ ರೆಫರೆನ್ಸ್ ಕೇಳುವ ಕೊಡುವ ವ್ಯವಧಾನ ಯಾರಿಗಿರುತ್ತದೆ? :)

ಭಾಗವತದಲ್ಲೇ ಬರಲಿ ಅಥವಾ ಬೇರೆ ಎಲ್ಲಾದರೂ ಬರಲಿ, ಆದಷ್ಟು ಸತ್ಯವನ್ನೇ ಹೇಳೋಣ. ಜಾಸ್ತಿ ತಲೆಬಿಸಿಯಿಲ್ಲ. ಆಕಸ್ಮಾತ್ ಸುಳ್ಳು ಹೇಳಿದ್ದರೆ ಮೇಲಿನ ಸಂದರ್ಭಗಳಲ್ಲಿ ಹೇಳಿದ್ದೀರೋ ನೋಡಿಕೊಳ್ಳಿ. ಮೇಲಿನ ಐದು ಸಂದರ್ಭಗಳಲ್ಲಿ ಬಾರಾ ಖೂನ್ ಮಾಫ್. ಬೇರೆ ಯಾವದಾದರೂ ಸಂದರ್ಭಗಳಲ್ಲಿ ಹೇಳಿದರೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೇನೋ.  ಅದಕ್ಕೂ ಶಾಸ್ತ್ರದಲ್ಲಿ ಎಲ್ಲೋ ರೆಫರೆನ್ಸ್ ಸಿಗುತ್ತದೆ ಬಿಡಿ. :)

ಸತ್ಯಮೇವ ಜಯತೆ. ಲಲ್ಲು ಸಾಹೇಬರು ಮೇವು ತಿಂದದ್ದು ನೋಡಿದ್ದಾಗ ಅದು 'ಸತ್ಯ ಮೇವು ಜಗಿತೇ!' ಎನ್ನಿಸಿತ್ತು. ಸತ್ಯವಾಗಿ ದನದ ಮೇವು ಜಗಿದು ತಿಂದು ಅರಗಿಸಿಕೊಂಡ ಭೂಪ ಅವರಲ್ಲವೇ! :)

ಮಾಹಿತಿ ಆಧಾರ: Srimad Bhagavatam by Kamala Subramaniam

3 comments:

sunaath said...

ಮಹೇಶರೆ, ಯಾವ ಯಾವ ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎನ್ನುವುದನ್ನು ತಿಳಿಸಿ, ಉಪಕಾರ ಮಾಡಿದ್ದೀರಿ. ನಾನು ಈ ಸಂದರ್ಭಗಳ ಪೈಕಿ ಒಂದರಲ್ಲಾದರೂ ಸುಳ್ಳು ಹೇಳಿದ್ದೇನೆ. (ಯಾವುದು ಎಂದು ನೀವೇ ಊಹಿಸಿಕೊಳ್ಳಿ.) ನಿಜ ಹೇಳಬೇಕೆಂದರೆ, ಭಾಷೆ ಯಾವಾಗ ಪ್ರಾರಂಭವಾಯಿತೊ, ಆ ಕಾಲದಿಂದ ಸುಳ್ಳು ಕೂಡ ಪ್ರಾರಂಭವಾಯಿತು! ಭಾಷೆ ಬಾರದ ಪ್ರಾಣಿಗಳು ಸುಳ್ಳು ಹೇಳುವುದನ್ನು ನೋಡಲು (ಅಥವಾ ಕೇಳಲು) ಸಾಧ್ಯವೆ? ಇನ್ನು ಈ ಮೊಬೈಲುಗಳು ಬಂದಾಗಿನಿಂದ ಸುಳ್ಳುಗಳ ಪ್ರಮಾಣ ಮಿತಿ ಮೀರಿ ಹೆಚ್ಚಿದೆ. ಮೊಬೈಲಿನಲ್ಲಿ ಮಾತಾಡುವವನು ತಾನಿರುವ ಸ್ಥಳವನ್ನು ಯಾವಾಗಲೂ ಬೇರೆಯದೇ ಹೇಳುತ್ತಾನೆ ಎನ್ನುವುದನ್ನು ನೀವೂ ಸಹ ಗಮನಿಸಿರಿಬಹುದು. ಕೊನೆಯದಾಗಿ, ದಾಸರೇ ಹೇಳಿಲ್ಲವೆ? "ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನಿ ದೇವರು." ದಾಸರ ಫಿಲಾಸಫಿಯನ್ನು ಬಿಡಿ; ನಮ್ಮ ಜೊತೆಗೆ ರಂಜಕವಾಗಿ ಹರಟಿದ್ದಕ್ಕಾಗಿ ಧನ್ಯವಾದಗಳು.

Mahesh Hegade said...

ಕಾಮೆಂಟಿಗೆ ಧನ್ಯವಾದಗಳು ಸುನಾಥ್ ಸರ್. ತಮ್ಮ ಕಾಮೆಂಟುಗಳು ಸ್ವಾರಸ್ಯಕರವಾದ ಮಿನಿ-ಬ್ಲಾಗ್-ಪೋಸ್ಟ್ ತರಹ ಇರುತ್ತವೆ. ಥ್ಯಾಂಕ್ಸ್.

ನಿ ಶಿ said...

ಎರಡನೆಯ ಸಂಧರ್ಭದಲ್ಲಿ ಸುಳ್ಳು ಹೇಳಬಹುದೇ..!? ಇಷ್ಟು ದಿನ ಸುಮ್ನೇ ಸಮಯ ವ್ಯರ್ಥ ಮಾಡಿದೆ ಇನ್ನು ಮೇಲೆ ಪ್ರಯತ್ನ ಪಡ್ತಿನಿ ಸಾರ್ ಮಾಹಿತಿಗೆ ಧನ್ಯವಾದಗಳು.