ಅರಬ್ ದೇಶಗಳ ಉಗ್ರಗಾಮಿಗಳ ವಲಯದಲ್ಲಿ ಒಂದೇ ಗುಸುಗುಸು. ಅದೇನೆಂದರೆ - ಇಸ್ರೇಲಿನ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮತ್ತೊಂದು ಗೇಮ್ ಬಾರಿಸಿದೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಮದಾನ್ ಶಾಲ್ಲಾ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದವ ಸೀದಾ ಕೋಮಾಗೆ ಹೋಗಿಬಿಟ್ಟಿದ್ದಾನೆ. ಇನ್ನೂ ಕೋಮಾದಲ್ಲೇ ಇದ್ದಾನೋ ಅಥವಾ ಅಲ್ಲಾನಿಗೆ ಪ್ಯಾರೇ ಆಗಿಬಿಟ್ಟಿದ್ದಾನೋ ಗೊತ್ತಿಲ್ಲ. ಹೇಗಾದರೂ ಮಾಡಿ ಮುಖ ಉಳಿಸಿಕೊಳ್ಳಬೇಕಾಗಿರುವದು ಅವನ ಸಂಘಟನೆಯಾದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಗೆ. 'ನಮ್ಮ ಬಾಸ್ ವಯೋಸಹಜ ಕಾರಣಗಳಿಂದ ಕೊಂಚ ಅಸ್ವಸ್ಥರಾಗಿದ್ದಾರೆ. ಅದು ಬಿಟ್ಟರೆ ಎಲ್ಲ ಓಕೆ,' ಎಂದು ಅದು ಪತ್ರಿಕಾ ಹೇಳಿಕೆಗಳಲ್ಲಿ ಪುಂಗುತ್ತಿದೆ. ಆದರೆ ಬೇಹುಗಾರಿಕೆ ವಲಯದಲ್ಲಿ ಮಾತ್ರ - for all practical purposes he is finished. ಇದ್ದರೂ ಅಷ್ಟೇ ಬಿಟ್ಟರೂ ಅಷ್ಟೇ. ಕೋಮಾದಲ್ಲಿದ್ದರೆ ಸುಮ್ಮನೆ ಖರ್ಚು. ಮೊದಲೇ ಕಾಸಿಲ್ಲದ ಚಿಕ್ಕ ಸಂಘಟನೆ ಇಸ್ಲಾಮಿಕ್ ಜಿಹಾದ್.
|
ರಮದಾನ್ ಶಾಲ್ಲಾ |
ಈ ರಮದಾನ್ ಶಾಲ್ಲಾ ಯಾರು ಅಂತ ನೋಡುತ್ತಾ ಹೋದರೆ ಅದೇ ಒಂದು ಅಚ್ಚರಿಯ ಕತೆ. ಇವನು ಆಕ್ರಮಿತ ಪ್ಯಾಲೆಸ್ಟೈನ್ ದೇಶದಲ್ಲಿ ಜನಿಸಿದರೂ ಇಂಗ್ಲೆಂಡಿಗೆ ಹೋಗಿ ಅರ್ಥಶಾಸ್ತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ PhD ಮಾಡಿಕೊಂಡಿದ್ದ ಪ್ರತಿಭಾವಂತ. ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿದ್ದ ಮತ್ತೊಬ್ಬ ಅಂಡೆಪಿರ್ಕಿ ಪ್ಯಾಲೆಸ್ಟೈನ್ ವಲಸಿಗ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಎಂಬಾತ ಇವನನ್ನು ಅಮೇರಿಕಾಗೆ ಕರೆದುಕೊಂಡು ಬಂದ. ತಾನು ಪಾಠ ಮಾಡಿಕೊಂಡಿದ್ದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲೇ ಪಾರ್ಟ್-ಟೈಮ್ ಉಪನ್ಯಾಸಕನ ಕೆಲಸ ಹಚ್ಚಿಕೊಟ್ಟ.
ಪ್ಯಾಲೆಸ್ಟೈನ್ ಉಗ್ರರನ್ನು ಖುಲ್ಲಂ ಖುಲ್ಲಾ ಬೆಂಬಲಿಸುತ್ತಿದ್ದ ಸಾಮಿ ಅಲ್-ಅರಿಯನ್ ಮೇಲೆ ಅಮೇರಿಕಾದ ತನಿಖಾ ಸಂಸ್ಥೆ FBI ಒಂದು ಖಡಕ್ ನಜರ್ ಮಡಗಿತ್ತು. ಯಾವಾಗ ಈ ಸಾಮಿ ಅಲ್-ಅರಿಯನ್ ಇಲ್ಲಿನ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಸಂಗ್ರಹಿಸುತ್ತಿದ್ದ ದೇಣಿಗೆ ಸೀದಾ ಮಾನವಬಾಂಬುಗಳನ್ನು ತಯಾರು ಮಾಡಿ, ದೂರದ ಇಸ್ರೇಲಿನಲ್ಲಿ ಸ್ಫೋಟಗಳಿಗೆ ಕಾರಣವಾಗಿ, ನೂರಾರು ನಿಷ್ಪಾಪಿ ಇಸ್ರೇಲಿಗಳ ಪ್ರಾಣ ತೆಗೆಯುತ್ತಿದೆ ಅಂತಾದಾಗ ಅಮೇರಿಕಾ ಅಲ್-ಅರಿಯನ್ ಎಂಬ ಅಂಡೆಪಿರ್ಕಿ ಪ್ರೊಫೆಸರನ ಅಂಡಿನ ಮೇಲೆ ಒದ್ದು ಗಡಿಪಾರು ಮಾಡಿತು. ಹಾಗೇ ಸುಮ್ಮನೆ ಹೋದಾನೆಯೇ ಪ್ರೊಫೆಸರ್? ಅವನೂ ಸಕತ್ ಕಾನೂನು ಕಾಳಗ ಮಾಡಿದ. ಮೊದಲಿನ ಕೆಲ ಸುತ್ತುಗಳಲ್ಲಿ FBI ಗೇ ನೀರು ಕುಡಿಸಿದ. ತನ್ನ ಪರವಾಗಿ ತೀರ್ಪುಗಳು ಬಂದಾಗ 'ಹೆಂಗೆ??!!' ಎಂಬಂತೆ ಗರ್ವದಿಂದ ಗಡ್ಡ ನೀವಿಕೊಂಡಿದ್ದ.
೨೦೦೧ ರಲ್ಲಿ ಬಿಲ್ ಕ್ಲಿಂಟನ್ ಸಾಹೇಬರು ಹೋಗಿ ಜಾರ್ಜ್ ಬುಷ್ ಸಾಹೇಬರು ಬಂದು ಕುಂತರು ನೋಡಿ. ಗಾಳಿ ಬೇರೆ ದಿಕ್ಕಿನಲ್ಲಿ ಬೀಸತೊಡಗಿತು. ಮೇಲಿಂದ ೯/೧೧ ದುರಂತ ಕೂಡ ಆಗಿಹೋಯಿತು. ಆವಾಗ ಇಂತಹ ಬುದ್ಧಿಜೀವಿ ಪ್ರೊಫೆಸರ್ ಮುಖವಾಡ ಧರಿಸಿ ಉಗ್ರರನ್ನು ಬೆಂಬಲಿಸುತ್ತಿದ್ದ ಮಂದಿಯ ಮೇಲಿನ ಮೃದು ಧೋರಣೆ ಬದಲಾಯಿತು. ಅಂತೂ ಸಾಮಿ ಅಲ್-ಅರಿಯನ್ನನ್ನು ಯಾವುದೋ ಕೊಲ್ಲಿ ದೇಶಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿಗೆ ಒಂದು ಪೀಡೆ ತೊಲಗಿತು.
ಅವನು ಹೋದರೇನಾಯಿತು ಆದರೆ ಇವನಿದ್ದನಲ್ಲ ಶಿಷ್ಯ - ರಮದಾನ್ ಶಾಲ್ಲಾ. ಬಹುಬೇಗನೆ ತಯಾರಾಗಿಬಿಟ್ಟಿದ್ದ. ಗುರುವಿಗಿಂತ ಜೋರಾಗಿ ದೇಣಿಗೆ ಸಂಗ್ರಹ ಮಾಡಿ ಮಾಡಿ ದೂರದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ ಫಾತಿ ಶಕಾಕಿ ಎಂಬ ದುರುಳನಿಗೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ನೀಟಾಗಿ ಬ್ಯಾಂಕ್ ವೈರ್ ಮಾಡುತ್ತಿದ್ದ. ಕಲಿತಿದ್ದ ಮತ್ತು ಕಲಿಸುತ್ತಿದ್ದ ಬ್ಯಾಂಕಿಂಗ್ ವಿದ್ಯೆ ಅಲ್ಲಿಗೆ ಸಾರ್ಥಕವಾಯಿತು.
ಆಗಲೇ ಸಾಕಷ್ಟು ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಗಳು ಇದ್ದವು. ಪ್ರತ್ಯೇಕವಾಗಿ ತನ್ನದೂ ಒಂದು ಇರಲಿ ಅಂತ ಫಾತಿ ಶಾಕಾಕಿ ಕೂಡ ಹೊಸ ಸಂಘಟನೆ ಶುರು ಮಾಡಿದ್ದ. ಎಲ್ಲರಿಗೂ ಕೈಬಿಚ್ಚಿ ಕಾಸು ಕೊಡುತ್ತಿದ್ದ ಲಿಬಿಯಾದ ಸರ್ವಾಧಿಕಾರಿ ಮೊಹಮದ್ ಗಡಾಫಿಯ ಉತ್ತುಂಗದ ದಿನಗಳು ಅವು. ಅವನ ಅಬ್ಬರ ಜೋರಾಗಿತ್ತು. ಅದರಲ್ಲೂ ೧೯೯೧ ರ ಗಲ್ಫ್ ಯುದ್ಧದಲ್ಲಿ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಮುದಿಯೆತ್ತಿನಂತಾಗಿ ಹೋದ ಮೇಲಂತೂ ಇಡೀ ಕೊಲ್ಲಿ ಪ್ರದೇಶಕ್ಕೆ ಗಡಾಫಿಯೇ ದಾದಾ! ಅವನದೇ ಫುಲ್ ಹವಾ! ಫುಲ್ ದಾದಾಗಿರಿ.
|
ಫಾತಿ ಶಾಕಾಕಿ |
ಹೀಗಿರುವಾಗ ಫಾತಿ ಶಕಾಕಿ ಎಂಬ ಗಾಜಾ ಪಟ್ಟಿಯ ಗಿರಾಕಿ ಬಂದು, 'ಸಾರ್, ಇಸ್ರೇಲ್ ವಿರುದ್ಧ ಸಂಗ್ರಾಮ ಶುರುಮಾಡುತ್ತೇನೆ. ಹೊಸ ಸಂಘಟನೆ ಆರಂಭಿಸುತ್ತೇನೆ. ಕೊಂಚ ಫಂಡಿಂಗ್ ಕೊಡಿ' ಎಂದು ಸಲಾಂ ಮಾಡಿದರೆ ಗಡಾಫಿ ಇಲ್ಲ ಅಂದಾನೆಯೇ? ಚಾನ್ಸೇ ಇಲ್ಲ. ಮತ್ತೆ ಗಡಾಫಿಗೆ ಹಳೆ ಉಗ್ರರಾಗಿದ್ದ ಯಾಸೀರ್ ಅರಾಫತ್, ಅಬು ನಿದಾಲ್ ಮುಂತಾದವರ ಮೇಲೆ ಒಂದು ತರಹದ ಭ್ರಮನಿರಸನವಾಗಿತ್ತು. ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಮುಂತಾದವರ ಪ್ರಭಾವದಲ್ಲಿ ಬಂದಿದ್ದ ಅರಾಫತ್ ಉಗ್ರವಾದವನ್ನು ಕಮ್ಮಿ ಮಾಡಿದ್ದರು. ಶಾಂತಿ ವಾಂತಿ ಅಂತ ಏನೇನೋ ಬಡಬಡಿಸುತ್ತಿದ್ದರು. ಕರೆದಲ್ಲಿ ಹೋಗಿ ಇಸ್ರೇಲ್ ಜೊತೆ ಮಾತುಕತೆಗೆ ಕೂಡುತ್ತಿದ್ದರು. ಕೂತಲ್ಲೇ ತೂಕಡಿಸುತ್ತಿದ್ದರು. ನಂತರ ಎಲ್ಲವೂ ಸರಿಹೊಂದಿ ಪ್ಯಾಲೆಸ್ಟೈನ್ ಸಮಸ್ಯೆ once for all ಪರಿಹಾರವಾಗಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ರಚ್ಛೆ ಹಿಡಿದ ಮಗುವಿನಂತೆ ಏನೋ ಒಂದು ರಗಳೆ ತೆಗೆದು ಮಾತುಕತೆಯನ್ನು ಬರಕಾಸ್ತು ಮಾಡಿ ಎದ್ದು ಹೊರಟುಬಿಡುತ್ತಿದ್ದರು. ಅರಾಫತ್ ಅವರ unpredictable ವರ್ತನೆಯಿಂದ ಎಲ್ಲರಿಗೂ ಪೂರ್ತಿ frustration.
ಅರಾಫತ್ ಬಣದವರಿಗೆ ಪ್ಯಾಲೆಸ್ಟೈನ್ ಸಂಗ್ರಾಮ ರೊಕ್ಕ ಮಾಡಿಕೊಳ್ಳುವ ದಂಧೆಯಾಗಿ ಹೋಗಿತ್ತು. ಲೆಬನಾನಿನಲ್ಲಿ ಝೇಂಡಾ ಹೊಡೆದುಕೊಂಡು ಗೂಂಡಾಗಿರಿ ಮಾಡುತ್ತಾ ಕುಳಿತಿದ್ದರು ಅರಾಫತ್ ಮತ್ತು ಅವರ ಫತಾ ಸಂಘಟನೆ. ರೋಸಿಹೋದ ಇಸ್ರೇಲ್ ಅರಾಫತ್ ಅವರನ್ನು ಲೆಬನಾನಿಂದ ಒದ್ದು ಓಡಿಸಿತ್ತು. ಮತ್ತೊಮ್ಮೆ ನಿರಾಶ್ರಿತರಾದ ಅರಾಫತ್ ಬಣಕ್ಕೆ ಅಂತಾರಾಷ್ಟ್ರೀಯ ಸಮುದಾಯ ಆಫ್ರಿಕಾದ ಚಿಕ್ಕ ದೇಶ ಟ್ಯುನೀಸಿಯಾದ ರಾಜಧಾನಿ ಟ್ಯೂನಿಸ್ಸಿನಲ್ಲಿ ಒಂದು ರೆಸಾರ್ಟ್ ಮಾದರಿಯ ಶಿಬಿರ ಮಾಡಿಕೊಟ್ಟಿತ್ತು. ಅಲ್ಲಿಂದ ಅರಾಫತ್ ಸಾಹೇಬರ ರೊಕ್ಕ ಮಾಡುವ ನಾಮ್ಕೆವಾಸ್ತೆ ಸಂಗ್ರಾಮ ನಡೆಯುತ್ತಿತ್ತು. ಇಂತಹ ಲಂಪಟ ಸ್ವಾತಂತ್ರ್ಯ ಹೋರಾಟಗಾರನಿಗೆ ಮಿಲಿಯನ್ ಗಟ್ಟಲೆ ರೊಕ್ಕ ಕೊಟ್ಟು ಮಂಗ್ಯಾ ಆದೆನಲ್ಲ ಎನ್ನುವ ವಿಷಾದ ಗಡಾಫಿಗೆ. ಕೊಟ್ಟ ರೊಕ್ಕಕ್ಕೆ ಬರೋಬ್ಬರಿ ಪಟಾಕಿ ಹಾರಿದರೆ ಮಾತ್ರ ಗಡಾಫಿಗೆ ವಿಕೃತ ಸಂತೋಷ. ಒಂದಿಷ್ಟು ವಿಮಾನಗಳು ಆಕಾಶದಲ್ಲೇ ಸಿಡಿದುಹೋಗಬೇಕು. ಮತ್ತೊಂದಿಷ್ಟು ವಿಮಾನಗಳ ಅಪಹರಣವಾಗಿ, ಪಶ್ಚಿಮ ದೇಶಗಳು ಮಂಡಿಯೂರಿ, ಜೈಲಲ್ಲಿರುವ ಪ್ಯಾಲೆಸ್ಟೈನ್ ಉಗ್ರರನ್ನು ಬಿಡುಗಡೆ ಮಾಡಿ, ತಮ್ಮ ತಮ್ಮ ವಿಮಾನಗಳನ್ನು ಮತ್ತು ನಾಗರೀಕರನ್ನು ಬಚಾವ್ ಮಾಡಿಕೊಳ್ಳಬೇಕು. ಆಗ ಗಡಾಫಿ ಗಹಗಹಿಸಿ ರಕ್ಕಸ ನಗೆ ನಗುತ್ತಿದ್ದ. ಹಾಗಾದಾಗ ಮಾತ್ರ ಉಗ್ರರ ಮೇಲೆ ಸುರಿದ ರೊಕ್ಕಕ್ಕೆ ತಕ್ಕ ಪ್ರತಿಫಲ ಬಂತು ಅಂತ ಅವನ ಭಾವನೆ.
ಅರಾಫತ್ ಸಾಹೇಬರು ಶಾಂತಿಯ ಹಿಂದೆ ಹೋದರೆ ಮತ್ತೊಬ್ಬ ಹಳೆ ಕಿರಾತಕ ಅಬು ನಿದಾಲ್ ಫುಲ್ ಸೈಕೋ ಆಗಿಹೋಗಿದ್ದ. ಅವನ ANO ಸಂಘಟನೆಯನ್ನು ತುಂಬಾ ಡೀಪಾಗಿ penetrate ಮಾಡಿದ್ದ ಮೊಸ್ಸಾದ್ ಅವನ ಅನೇಕ ಹಿರಿತಲೆಗಳನ್ನು compromise ಮಾಡಿತ್ತು. ಅವರಿಗೆ ಮೊಸ್ಸಾದ್ ಹೇಳಿದಂತೆ ಕೇಳುವುದನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ಪರಿಸ್ಥಿತಿ ಕೊನೆಗೆ ಎಲ್ಲಿಗೆ ಬಂದುಮುಟ್ಟಿತು ಅಂದರೆ ಪೂರ್ತಿ ಮತಿಭ್ರಾಂತನಾದ ಅಬು ನಿದಾ ಪ್ಯಾಲೆಸ್ಟೈನ್ ಸಂಗ್ರಾಮ ಮಾಡುವುದು ದೂರವಿರಲಿ ತನ್ನದೇ ಬಣದ ಉಗ್ರಗಾಮಿಗಳನ್ನು wholesale ರೇಟಿನಲ್ಲಿ ಕೊಲ್ಲತೊಡಗಿದ. ಎಲ್ಲರ ಮೇಲೂ ಅವನಿಗೆ ಸಂಶಯ. ಎಲ್ಲಿಯಾದರೂ ಶತ್ರುವಾದ ಇಸ್ರೇಲಿ ಮೊಸ್ಸಾದ್ ಜೊತೆ ಹೊಂದಾಣಿಕೆ ಮಾಡಿಕೊಂಡ ಈ ಮುಂಡೇಮಕ್ಕಳು ತನ್ನ ಬುಡಕ್ಕೆ ಬಾಂಬಿಟ್ಟುಬಿಟ್ಟರೆ ಏನು ಗತಿ ಎಂದು ತನ್ನದೇ ಜನರನ್ನು ಸಿಕ್ಕಾಪಟ್ಟೆ ಕೊಂದುಬಿಟ್ಟ. ಕ್ರಮಬದ್ಧವಾಗಿ disinformation campaign ಮಾಡಿ, ಸುಳ್ಳು ಸುದ್ದಿ ಹರಿಬಿಟ್ಟು, ಅಬು ನಿದಾಲನನ್ನು ಸೈಕೋ ಮಂಗ್ಯಾ ಮಾಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಪೆಕಪೆಕಾ ಎಂದು ನಕ್ಕಿತು. ಕಮ್ಮಿ ಖರ್ಚಿನಲ್ಲಿ ಅವರ ಕೆಲಸವಾಗಿತ್ತು.
ಒಮ್ಮೆಯಂತೂ ಫಂಡ್ ಎತ್ತಲು ಗಡಾಫಿಯ ಲಿಬಿಯಾಕ್ಕೆ ಹೋಗಿದ್ದ ಅಬು ನಿದಾಲ್ ಖತರ್ನಾಕ್ ಕೆಲಸ ಮಾಡಿಬಿಟ್ಟ. ಅಲ್ಲಿ ಅವನ ಉಗ್ರಗಾಮಿಗಳ ಶಿಬಿರ ಇತ್ತು. ಗಡಾಫಿಯ ಸೇನೆಯ ಜನ ಅರಬ್ ಯುವಕರಿಗೆ ಉಗ್ರಗ್ರಾಮಿಗಳ ತರಬೇತಿ ಕೊಡುತ್ತಿದ್ದರು. ಅಷ್ಟೊತ್ತಿಗೆ ಅಬು ನಿದಾಲ್ ಪೂರ್ತಿ ಸಂಶಯಪಿಶಾಚಿಯಾಗಿ ತಲೆ ಹನ್ನೆರೆಡಾಣೆ ಮಾಡಿಕೊಂಡಿದ್ದ. ಅಲ್ಲಿನ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರೆಲ್ಲ ಮೊಸ್ಸಾದಿಗೆ, ಸಿಐಎಗೆ compromise ಆಗಿಬಿಟ್ಟಿದ್ದಾರೆ ಎಂದು ತಲೆಯಲ್ಲಿ ಬಂದುಬಿಟ್ಟಿತು. ತರಬೇತಿ ಪಡೆಯುತ್ತಿದ್ದ ಆ ಜನರಿಂದಲೇ ಅಲ್ಲೇ ಒಂದು ದೊಡ್ಡ ಸಾಮೂಹಿಕ ಗೋರಿ ತೋಡಿಸಿದ. ಗೋರಿ ತೋಡಿದವರು ಗೋರಿಯಲ್ಲಿ ಹೋಗಿ ನಿಂತರು. ನೂರಾರು ಜನ. ಅವರೆಲ್ಲರನ್ನೂ ಮಷೀನ್ ಗನ್ ಹಚ್ಚಿ ನುಣ್ಣಗೆ ಬೀಸಿದಂತೆ ರುಬ್ಬಿಬಿಟ್ಟ ಕಿರಾತಕ ಅಬು ನಿದಾಲ್. ಒಂದೇ ಕ್ಷಣದಲ್ಲಿ ನೂರಾರು ಜನ ಮಟಾಷ್! ಸಂತೃಪ್ತ ವಿಕೃತ ನಗೆ ಗಹಗಹಿಸಿ ನಕ್ಕ ಅಬು ನಿದಾಲ್ ಆ ಸಾಮೂಹಿಕ ಗೋರಿ ಮುಚ್ಚಿಸಿದವನೇ ಅದರ ಮೇಲೆ ಡೇರೆ ಹಾಕಿಸಿಕೊಂಡು ಬೋರಲಾಗಿ ಮಲಗಿಬಿಟ್ಟ. ನೂರಾರು ಜನ so-called ಗದ್ದಾರರನ್ನು ಕೊಂದ ಮೇಲೆ ಏನೋ ಒಂದು ತರಹದ ನೆಮ್ಮದಿ, ಶಾಂತಿ! ಅಪರೂಪಕ್ಕೆ ನಿದ್ದೆ ಸೊಗಸಾಗಿ ಬಂತು.
ಅಬು ನಿದಾಲನ ಈ ಯಬಡತನದ ಕಾರ್ನಾಮೆಯ ಬಗ್ಗೆ ಕೇಳಿದ ಗಡಾಫಿ ತಲೆ ತಲೆ ಚಚ್ಚಿಕೊಂಡ. ತನ್ನ ದೇಶದಲ್ಲಿ ಉಗ್ರಗಾಮಿ ಶಿಬಿರ ಮಾಡಿಕೊಟ್ಟ, ಸಾವಿರಾರು ಜನ ನಿರುದ್ಯೋಗಿ ಅರಬ್ ಯುವಕರನ್ನು ಹಿಡಿದು ತರಿಸಿಕೊಟ್ಟ, ಅವರಿಗೆ ತನ್ನದೇ ಸೈನ್ಯದ ಮೂಲಕ ಉಗ್ರಗಾಮಿ ತರಬೇತಿ ಕೊಡಿಸಿದ, ಹಲವಾರು ಮಿಲಿಯನ್ ಡಾಲರುಗಳ ಫಂಡಿಂಗ್ ಕೊಟ್ಟ. ಇಷ್ಟೆಲ್ಲಾ ಕೊಟ್ಟ ಮೇಲೂ ಈ ಮತಿಭ್ರಾಂತ, ಒಂದು ಕಾಲದ ಟಾಪ್ ಉಗ್ರಗಾಮಿ, ಅಬು ನಿದಾಲ್ ಅವರೆಲ್ಲರ ಮೇಲೆ ಸಂಶಯಪಟ್ಟು ಎಲ್ಲರನ್ನೂ ಮಷೀನ್ ಗನ್ ಹಚ್ಚಿ ಉಡಾಯಿಸಿ ಉದ್ದಕ್ಕೆ ಲಂಬಾ ಲಂಬಾ ಮಲಗಿಬಿಟ್ಟ. ಅಲ್ಲಿಗೆ ಅಬು ನಿದಾಲನನ್ನೂ ತನ್ನ ಫೇವರಿಟ್ ಉಗ್ರರ ಪಟ್ಟಿಯಿಂದ ತೆಗೆದುಹಾಕಿದ ಗಡಾಫಿ.
ಹೀಗೆ ಪ್ಯಾಲೆಸ್ಟೈನ್ ಉಗ್ರರ ಹಳೆ ತಲೆಗಳಿಂದ ಭ್ರಮನಿರಸನಕ್ಕೆ ಒಳಗಾಗಿದ್ದ ಗಡಾಫಿ ಹೊಸ ತಲೆಮಾರಿನ ಉಗ್ರರಾಗಿ ಕಾದುಕುಳಿತಿದ್ದ. ಆಗಲೇ ಫಾತಿ ಶಾಕಾಕಿ ಪ್ರತ್ಯಕ್ಷನಾಗಿ ಹೊಸ ಸಂಘಟನೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದಿನ ಪ್ರಪೋಸಲ್ ಇಟ್ಟಿದ್ದ. ಸಿಕ್ಕಾಪಟ್ಟೆ excite ಆದ ಗಡಾಫಿ ನೀಟಾಗಿ ಒಂದಿಷ್ಟು ಮಿಲಿಯನ್ ಡಾಲರ್ ಕಾಣಿಕೆ ಕೊಟ್ಟಿದ್ದ.
ಗಡಾಫಿಯ ಕಾಣಿಕೆ, ದೂರದ ಅಮೇರಿಕಾದಿಂದ ಇಬ್ಬರು ಪ್ರೊಫೆಸರ್ ಜನರಾದ ಸಾಮಿ ಅಲ್-ಅರಿಯನ್ ಮತ್ತು ರಮದಾನ್ ಶಾಲ್ಲಾ ಕಳಿಸಿಕೊಡುತ್ತಿದ್ದ ಕಾಣಿಕೆ ಸಾಕಷ್ಟಾಗಿತ್ತು. ಆ ಫಂಡ್ ಎತ್ತಿಕೊಂಡ ಫಾತಿ ಶಾಕಾಕಿ ಸೀದಾ ಹೋಗಿ ಗಾಜಾ ಪಟ್ಟಿಯಲ್ಲಿ ಕುಳಿತ. ಮೊದಲೇ ನರಕಸದೃಶ ಜಾಗ ಗಾಜಾ ಪಟ್ಟಿ. ಜನರಿಗೆ ಊಟಕ್ಕೆ ಗತಿಯಿಲ್ಲ. ಗಳಿಸಿದ ಅಷ್ಟೂ ರೊಕ್ಕವನ್ನು ಪ್ಯಾಲೆಸ್ಟೈನ್ ಸ್ವಾತಂತ್ರ ಸಂಗ್ರಾಮದ ಹೆಸರಿನಲ್ಲಿ ಬೇರೆ ಬೇರೆ ದಾದಾಗಳು ಕಿತ್ತುಕೊಳ್ಳುತಿದ್ದರು. ಇವರ ರೊಕ್ಕ ಕಿತ್ತುಕೊಂಡ 'ಓರಾಟಗಾರರು' ದುಂಡಗಾಗಿ ದುಬೈ, ಶಾರ್ಜಾ ಇತ್ಯಾದಿ ಕೊಲ್ಲಿ ದೇಶಗಳಲ್ಲಿ ವ್ಯಾಪಾರ ಅದು ಇದು ಮಾಡಿಕೊಂಡು ಹಾಯಾಗಿರುತ್ತಿದ್ದರು. ಅಲ್ಲಿಗೆ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಸಂಗ್ರಾಮ ಹಳ್ಳ ಹಿಡಿದಿತ್ತು. ಗಾಜಾ ಪಟ್ಟಿಯ ಜನ ಭ್ರಮನಿರಸನಗೊಂಡಿದ್ದರು. ಹೊಸ ನಾಯಕತ್ವಕ್ಕೆ ಹಾತೊರೆಯುತ್ತಿದ್ದರು. ಆಗ ಎಂಟ್ರಿ ಕೊಟ್ಟ ಫಾತಿ ಶಾಕಾಕಿ! ಕೈಯಲ್ಲಿ ಗಡಾಫಿ ಕೊಟ್ಟಿದ್ದ ರೊಕ್ಕದ ಥೈಲಿ! 'ಬನ್ನಿ, ಹೊಸ ಸ್ವಾತಂತ್ರ್ಯ ಸಂಗ್ರಾಮ ಶುರುಮಾಡೋಣ!' ಎಂದು ಛೋಡಿದ. ಅನಕ್ಷರಸ್ಥ ಮುಗ್ಧ ಜನ. ಅವರಿಗೆ ಧರ್ಮದ ಅಫೀಮು, ದ್ವೇಷದ ಅಫೀಮುಗಳನ್ನು ಬರೋಬ್ಬರಿ ಕೊಟ್ಟ ಫಾತಿ ಶಾಕಾಕಿ, ಮಾನವ ಬಾಂಬುಗಳ ತಯಾರಿಕೆಗೆ ಕುಳಿತುಬಿಟ್ಟ.
ಗಾಜಾ ಪಟ್ಟಿಯಲ್ಲೇನು ಅಬ್ಬೇಪಾರಿಗಳಿಗೆ ಕೊರತೆಯೇ? ಸತ್ತ ಮೇಲೆ ಮನೆ ಕಡೆ, ಉಳಿಯುವ ಕುಟುಂಬದ ಕಡೆ ಗಮನಿಸಿಕೊಂಡರೆ ಸಾಕು. ಬಾಕಿ ಏನೂ ಕೇಳುವದಿಲ್ಲ ಅವರು. ಸೊಂಟಕ್ಕೆ ಬಾಂಬಿನ ಬೆಲ್ಟ್ ಕಟ್ಟಿಕೊಂಡು, 'ಅಲ್ಲಾ ಹೋ ಅಕ್ಬರ್!' ಎಂದು ಕೂಗುತ್ತ ಇಸ್ರೇಲಿಗಳ ಗುಂಪಿನ ಮೇಲೆ ಬಿದ್ದು ಸ್ಪೋಟಿಸಿಕೊಂಡುಬಿಡುತ್ತಾರೆ. ಕಮ್ಮಿ ಕಮ್ಮಿ ೧೦-೧೫ ಇಸ್ರೇಲಿ ಯಹೂದಿಗಳು ಮಟಾಷ್. ಕೆಲವೇ ಕೆಲವು ನೂರು ಡಾಲರುಗಳನ್ನು ಖರ್ಚು ಮಾಡಿದರೆ ಸಾಕು. ದೊಡ್ಡ ಪ್ರಮಾಣದ ಧಮಾಕಾ ಆಗಿಹೋಗುತ್ತದೆ. ಜಿಹಾದಿನ ಕುರ್ಬಾನಿಯ ಬಳಿಕ ೭೨ ವರ್ಜಿನ್ ಕನ್ಯೆಯರ ಸುಖ ಹುಡುಕುತ್ತ ಬಾಂಬಿನ ಬೆಂಕಿಯ ಜ್ವಾಲೆಗಳಲ್ಲಿ ಕಳೆದುಹೋಗುವ ಉಗ್ರರ ಕುರುಹು ಕೂಡ ಸಿಗುವದಿಲ್ಲ.
ಹೊಸದಾಗಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸ್ಥಾಪಿಸಿದ ಫಾತಿ ಶಾಕಾಕಿ ಕೆಲವು spectacular ಅನ್ನಿಸುವಂತಹ ಸುಯಿಸೈಡ್ ಬಾಂಬಿಂಗ್ ಕಾರ್ಯಾಚರಣೆಗಳನ್ನು ಮಾಡಿಸಿದ. ಹಲವಾರು ಬಲಿ ತೆಗೆದುಕೊಂಡ. ಲಿಬಿಯಾದ ದುರುಳ ಗಡಾಫಿ 'ಮೊಗ್ಯಾಂಬೋ ಖುಷ್ ಹುವಾ !' ಮಾದರಿಯಲ್ಲಿ ತೊಡೆ ತಟ್ಟಿಕೊಂಡು ತಟ್ಟಿಕೊಂಡು ಸಂಭ್ರಮಿಸಿದ. ವಿಕೃತ ಮನಸ್ಸು ಅವನದು. ಕೆಲವೇ ವರ್ಷಗಳ ಹಿಂದೆ ಅವನ ಉಗ್ರಗಾಮಿ ಉಪಟಳಗಳಿಂದ ಸಾಕಾಗಿ ಹೋಗಿದ್ದ ಅಂದಿನ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಸಾಹೇಬರು ಅವನ ಅರಮನೆ ಮೇಲೆ ಬಾಂಬಿನ ಮಳೆಗರೆದು ಬಂದಿದ್ದರು. ಆ ಬಾಂಬ್ ದಾಳಿಯಲ್ಲಿ ಮಗನನ್ನು ಕಳೆದುಕೊಂಡರೂ ಗಡಾಫಿ ಅದೆಲ್ಲೋ ನೆಲಮಾಳಿಗೆಯ ಪಾಯಖಾನೆಯಲಲ್ಲಿ ಬಚ್ಚಿಟ್ಟುಕೊಂಡು ಬಚಾವಾಗಿದ್ದ.
'ಇದ್ಯಾವ ಹೊಸ ಪೀಡೆ ಗಾಜಾ ಪಟ್ಟಿಗೆ ಬಂದು ವಕ್ಕರಿಸಿಕೊಂಡಿದೆ?' ಎಂದು ತಲೆಕೆಡಿಸಿಕೊಂಡವರು ಇಸ್ರೇಲಿನ ಶಿನ್-ಬೆಟ್ ಅನ್ನುವ ಆಂತರಿಕ ರಕ್ಷಣಾಸಂಸ್ಥೆಯವರು. ಮೊಸ್ಸಾದ್ ಏನಿದ್ದರೂ ಬಾಹ್ಯ ಬೇಹುಗಾರಿಕೆ ಮತ್ತು ಕಪ್ಪು ಕಾರ್ಯಾಚರಣೆಗಳ ಉಸ್ತುವಾರಿ ಮಾತ್ರ. ಆಂತರಿಕ ವಿಷಯವೆಲ್ಲವನ್ನೂ ಶಿನ್-ಬೆಟ್ ಸಂಬಾಳಿಸುತ್ತದೆ.
ಗಾಜಾ ಪಟ್ಟಿಯ ತಮ್ಮ ಮಾಹಿತಿದಾರರನ್ನು activate ಮಾಡಿದ ಶಿನ್-ಬೆಟ್ ತನಿಖಾಧಿಕಾರಿಗಳಿಗೆ ಫಾತಿ ಶಾಕಾಕಿ ಬಗ್ಗೆ ಮಾಹಿತಿ ಹನಿಹನಿಯಾಗಿ ದೊರೆಯತೊಡಗಿತು. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಗೆ ಪರೋಕ್ಷವಾಗಿ ಅಥವಾ ನೇರವಾಗಿ ಸಂಬಂಧವಿರುವ ಜನರನ್ನು ಜೊತೆಯಲ್ಲಿ ಅವರ ಗೆಳತಿಯರನ್ನು, ಹೆಂಡತಿಯರನ್ನು ಜೆರುಸಲೇಮಿನ ನೆಲಮಾಳಿಗೆ ಕಾರಾಗೃಹಗಳಿಗೆ ಎತ್ತಾಕಿಕೊಂಡು ಬಂದರು ಶಿನ್ - ಬೆಟ್ ಅಧಿಕಾರಿಗಳು. ಶಿನ್-ಬೆಟ್ ಸಂಸ್ಥೆಯ ನುರಿತ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನ ತಮ್ಮದೇ ರೀತಿಯಲ್ಲಿ ಮಾತಾಡಿಸತೊಡಗಿದಾಗ ಮೊದಲು ಏನೂ ಗೊತ್ತಿಲ್ಲ ಸಾರ್! ಎಂದು ಮೊಂಡು ಹಿಡಿದವರು ನಂತರ ಗಿಣಿಗಳಂತೆ ಹಾಡಿದ್ದರು. ಇಸ್ರೇಲಿಗಳ ತರಹತರಹದ ಚಿತ್ರಹಿಂಸೆಗಳನ್ನು ಅನುಭವಿಸುವದು ದೂರದ ಮಾತು. ಅವುಗಳ ವರ್ಣನೆ ಕೇಳಿದರೂ ಚಡ್ಡಿ ಒದ್ದೆಯಾಗಿಬಿಡುತ್ತದೆ. ಹಾಗಿರುತ್ತವೆ ಅವರ ಬಾಯಿಬಿಡಿಸುವ ವಿಧಾನಗಳು.
ಹೀಗೆ ಜೆರುಸಲೇಮ್ ಜೈಲಿನ ಕಗ್ಗತ್ತಲ ನೆಲಮಾಳಿಗೆಯಲ್ಲಿ ಶಿನ್-ಬೆಟ್ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನರಿಂದ ನುಣ್ಣಗೆ ರುಬ್ಬಿಸಿಕೊಂಡಿದ್ದ ಗಾಜಾ ಪಟ್ಟಿಯ ಅರಬರು ಫಾತಿ ಶಾಕಾಕಿ ಬಗ್ಗೆ ತಮಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು. ಈ ಫಾತಿ ಶಾಕಾಕಿ ಆಸಾಮಿ ಲಿಬಿಯಾದ ಗಡಾಫಿ ಜೊತೆ ಮತ್ತು ಮತ್ತೊಬ್ಬ ಖದೀಮ ಸಿರಿಯಾದ ಹಫೀಜ್ ಅಲ್-ಅಸಾದ್ ಜೊತೆ ಜಕ್ಕಣಕ್ಕ ಶುರುಮಾಡಿಕೊಂಡಿದ್ದಾನೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಖಿಲಾಡಿಯಾಗಿದ್ದಾನೆ ಎಂದು ಗೊತ್ತಾದ ಕೂಡಲೇ ಶಿನ್-ಬೆಟ್ ಮತ್ತೂ ತಡ ಮಾಡಲಿಲ್ಲ. ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಜೊತೆ ವಿವರ ಹಂಚಿಕೊಂಡರು. ಮೊಸ್ಸಾದ್ ತನ್ನ ಇತರೆ ಸಂಪರ್ಕಗಳನ್ನು ಉಪಯೋಗಿಸಿಕೊಂಡು ಫಾತಿ ಶಾಕಾಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿತು. ಶಿನ್-ಬೆಟ್ ಸಂಗ್ರಹಿಸಿದ್ದ ಮಾಹಿತಿ, ಮೊಸ್ಸಾದ್ ಕಲೆಹಾಕಿದ್ದ ಮಾಹಿತಿ, ಸಿಐಎ ಮತ್ತಿತರ ಫ್ರೆಂಡ್ಲಿ ಬೇಹುಗಾರಿಕೆ ಸಂಸ್ಥೆಗಳು ಕೊಟ್ಟ ಮಾಹಿತಿಯೆಲ್ಲವನ್ನೂ ಕ್ರೋಢಿಕರಿಸಿದಾಗ ಫಾತಿ ಶಾಕಾಕಿ ಬಗ್ಗೆ ಒಂದು ಫುಲ್ ಪಿಕ್ಚರ್ ಬಂತು. ಚಿತ್ರಣ ತುಂಬಾ ಖರಾಬಾಗಿತ್ತು. ಇವನನ್ನು ಹೀಗೇ ಬಿಟ್ಟರೆ ಮುಂದೆ ಕೆಲವೇ ವರ್ಷಗಳಲ್ಲಿ ಇವನು ಇಸ್ರೇಲಿಗೆ ದೊಡ್ಡ ತಲೆನೋವಾಗುತ್ತಾನೆ ಎನ್ನುವದರಲ್ಲಿ ಇಸ್ರೇಲಿನ ಹಿರಿತಲೆಗಳಿಗೆ ಯಾವುದೇ ಸಂದೇಹವಿರಲಿಲ್ಲ. ಇಂಥವನ್ನೆಲ್ಲ ಮೊಳಕೆಯಲ್ಲಿರುವಾಗಲೇ ಚಿವುಟಿಹಾಕಬೇಕು. ಅಲ್ಲಿಗೆ ಫಾತಿ ಶಾಕಾಕಿಯ ಮರಣಶಾಸನಕ್ಕೆ ಇಸ್ರೇಲಿ ಕ್ಯಾಬಿನೆಟ್ಟಿನ ಮುದ್ರೆ ಬಿದ್ದಿತ್ತು. ಇನ್ನು ಫಾತಿ ಶಾಕಾಕಿಯನ್ನು ಮೇಲೆ ಅಲ್ಲಾಹುವಿನ ಬಳಿಗೆ ಕಳಿಸುವ ಸಮಾರಂಭಕ್ಕೆ ಮುಹೂರ್ತವಿಡುವದು ಬಾಕಿ ಇತ್ತು.
ಎಂದಿನಂತೆ ಇಸ್ರೇಲಿ ಪ್ರಧಾನಿ ಸಹಿ ಹಾಕಿದ ಫಾತಿ ಶಾಕಾಕಿಯ ಮರಣಶಾಸನ ಅಂದಿನ ಮೊಸ್ಸಾದಿನ ಅರಿಭಯಂಕರ ಡೈರೆಕ್ಟರ್ ಶಾಬ್ಟೈ ಶಾವಿತ್ ಅವರ ಟೇಬಲ್ ಮೇಲೆ ಬಂದು ಬಿತ್ತು. ಅವರಿಗೆ ಅದೊಂದು ಔಪಚಾರಿಕತೆ (formality) ಅಷ್ಟೇ. ಅವರ ಏಳು ವರ್ಷದ ಅವಧಿಯಲ್ಲಿ ಅದೆಷ್ಟು ಮಂದಿ ಅರಬ್ ಉಗ್ರರಿಗೆ ಮೋಕ್ಷ ತೋರಿಸಿದ್ದರೋ ಅವರು. ಅತಿಫ್ ಬೀಸೋ ಎಂಬ ದುರುಳನನ್ನು ಪ್ಯಾರಿಸ್ ನಗರದಲ್ಲಿ ಮೊಸ್ಸಾದ್ ಗುಂಡಿಕ್ಕಿ ಕೊಂದಿತ್ತು. ಅತಿ ಮುಖ್ಯ ಉಗ್ರನಾಗಿದ್ದ ಅವನಿಗೆ ಮುಹೂರ್ತವಿಡಲು ಖುದ್ದಾಗಿ ಡೈರೆಕ್ಟರ್ ಶಾವಿತ್ ಅವರೇ ಬಾಕಿ ಹಂತಕರಂತೆ ಮಾರುವೇಷದಲ್ಲಿ ಪ್ಯಾರಿಸ್ಸಿಗೆ ಹೋಗಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪ್ಯಾರಿಸ್ ನಗರದ ಹೃದಯಭಾಗದಲ್ಲಿ ಒಂದು ಸುಳಿವೂ ಸಿಗದಂತೆ ಅತಿಫ್ ಬೀಸೋನ ಗೇಮ್ ಬಾರಿಸಿತ್ತು ಮೊಸ್ಸಾದ್. ಫ್ರೆಂಚ್ ಸರ್ಕಾರಕ್ಕೆ ಅವನ ಹೆಣ ಎತ್ತುವದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ.
ಎಂದಿನಂತೆ ಫಾತಿ ಶಾಕಾಕಿಗೆ ಒಂದು ಗತಿ ಕಾಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದು ಮೊಸ್ಸಾದಿನ ಅತಿ ಖತರ್ನಾಕ್ ಹಂತಕರ ಕಿಡೋನ್ ತಂಡ. ಅವರಿಗೆ ಬೇಕಾಗುವ ಎಲ್ಲ ಮಟ್ಟದ ಸಹಕಾರ ಬೇರೆಲ್ಲ ಸಂಸ್ಥೆಗಳಿಂದ ಸಿಗುತ್ತಿತ್ತು.
ಫಾತಿ ಶಾಕಾಕಿಗೆ ಮೊಸ್ಸಾದ್ ಮುಹೂರ್ತವಿಟ್ಟಿದ್ದು ಮಾಲ್ಟಾ ಎಂಬ ಚಿಕ್ಕ ದ್ವೀಪದಲ್ಲಿ. ಇಟಲಿ ದೇಶದ ಕೆಳಗೇ ಇದೆ ಸುಂದರ ಮಾಲ್ಟಾ ದ್ವೀಪ. ಎದುರಿನ ಕಡಲನ್ನು ದಾಟಿದರೆ ಸಿಗುತ್ತದೆ ಲಿಬಿಯಾ ದೇಶದ ಟ್ರಿಪೋಲಿ ಶಹರ. ಟ್ರಿಪೋಲಿ ಮತ್ತು ಮಾಲ್ಟಾ ನಡುವೆ ಫೆರ್ರಿ (ಹಡಗು) ಸಂಚಾರ ವ್ಯಾಪಕವಾಗಿದೆ. ಮಾಲ್ಟಾ ಒಂದು ಕೇಂದ್ರ ಹಬ್ ಇದ್ದಂತೆ. ಮಾಲ್ಟಾದಿಂದ ಎಲ್ಲಿ ಬೇಕಾದರೂ ಹೋಗಬಹುದು.
ಗಾಜಾ ಪಟ್ಟಿಯಲ್ಲಿ ಹೀಟ್ ಕೊಂಚ ಹೆಚ್ಚಾದ ಕಾರಣ ಫಾತಿ ಶಾಕಾಕಿ ಸಿರಿಯಾದ ಡಮಾಸ್ಕಸ್ಸಿಗೆ ಹಾರಿದ್ದ. ಆಗ ಅಲ್ಲಿ ಹಫೀಜ್ ಅಲ್-ಅಸಾದ್ ಇದ್ದ. ಈಗಿರುವ ಬಶೀರ್ ಅಲ್-ಅಸ್ಸಾದನ ಪಿತಾಜಿ. ಸಿರಿಯಾ ಅಂದರೆ ಸಮಸ್ತ ಅರಬ್ ಉಗ್ರರಿಗೆ ತೋಟದಪ್ಪನ ಛತ್ರ ಇದ್ದಂತೆ. ಸಿರಿಯಾದ ಅಸಾದ್ ಬಳಿ ಅವರಿಗೆ ಲಿಬಿಯಾದ ಗಡಾಫಿ, ಇರಾಕಿನ ಸದ್ದಾಮ್ ಹುಸೇನ್ ಕೊಟ್ಟಷ್ಟು ಕಾಸು ಕೊಡುವ ಹೈಸಿಯತ್ತು ಇರಲಿಲ್ಲ. ಆದರೆ ಯಾವುದೇ ಉಗ್ರರಿಗೂ ಜಾಗವಿಲ್ಲ ಎಂದು ಅವರು ಬಾಗಿಲು ಹಾಕಿರಲಿಲ್ಲ. ಬಂದ ಉಗ್ರರೆಲ್ಲರಿಗೂ ಊಟ, ವಸತಿ, ಸೂಳೆಯರನ್ನು ಒದಗಿಸುವಷ್ಟು ಕಾಸು ಮತ್ತು ಒಳ್ಳೆ ಬುದ್ಧಿಯನ್ನು ದೇವರು ಹಫೀಜ್ ಅಲ್-ಅಸಾದನಿಗೆ ಕೊಟ್ಟಿದ್ದ. ಹಾಗಾಗಿ ಅಬು ಮೂಸಾನಂತಹ ರಿಟೈರ್ಡ್ ಉಗ್ರಗಾಮಿಗಳಿಂದ ಹಿಡಿದು ಫಾತಿ ಶಕಾಕಿಯಂತಹ ಹೊಸಬರೂ ಸಹ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಗೆ ಹೋಗಿ, ಅಸಾದ್ ನ ಛತ್ರಛಾಯೆಯಲ್ಲಿ ಆತನ ತೋಟದಪ್ಪನ ಛತ್ರದಲ್ಲಿ ಝೇಂಡಾ ಹೊಡೆದು ಕೂತಿದ್ದರು. ಸಿರಿಯಾದ ಮುಖ್ಬಾರಾತ್ ಎಂಬ ಪರಮ ಕ್ರೂರಿ ರಕ್ಷಣಾ ಸಂಸ್ಥೆ ಅಲ್ಲಿ ನೆಲೆಸಿದ್ದ ಅರಬ್ ಉಗ್ರರಿಗೆ ತಕ್ಕ ಮಟ್ಟಿನ ರಕ್ಷಣೆ ಕೊಡುತ್ತಿತ್ತು. ಇಲ್ಲವಾದರೆ ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಬಿಟ್ಟರೆ ಎನ್ನುವ ಆತಂಕ. ಇಷ್ಟೆಲ್ಲಾ ಇದ್ದರೂ ಹಫೀಜ್ ಅಲ್-ಅಸಾದ್ ನ ಹಿರಿಯ ಮಗನನ್ನು ಕಾರ್ ಆಕ್ಸಿಡೆಂಟ್ ಒಂದರಲ್ಲಿ ಮುಗಿಸಿದ್ದು, ಮತ್ತದೇ, ಮೊಸ್ಸಾದ್ ಎಂದು ಊಹಾಪೋಹಗಳಿವೆ. ಮಗನನ್ನು ಕಳೆದುಕೊಂಡ ಅಸಾದ್ ಇಸ್ರೇಲ್ ಬಗ್ಗೆ ಮತ್ತೂ ಕ್ರುದ್ಧನಾಗಿದ್ದ. ಇದ್ದ ಬಿದ್ದ ಎಲ್ಲ ಉಗ್ರಗಾಮಿಗಳಿಗೆ ಕೆಂಪುಗಂಬಳಿಯ ಸ್ವಾಗತ ಕೋರಿದ್ದ.
ಫಾತಿ ಶಾಕಾಕಿ ಸಿರಿಯಾಗೆ ಹೋದ ಆದರೆ ಈ ಮೊದಲು ಹೇಳಿದಂತೆ ಸಿರಿಯಾದ ಕಡೆ ರೊಕ್ಕವಿರಲಿಲ್ಲ. ರೊಕ್ಕವಿಲ್ಲ ಅಂದರೆ ಇಸ್ರೇಲಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತು ಬಿಡುತ್ತವೆ. ರೊಕ್ಕ ಬೇಕು ಅಂದರೆ ಗಡಾಫಿಯೇ ಬೇಕು. ಹಾಗಾಗಿ ಒಂದಿಷ್ಟು ಫಂಡ್ ಎತ್ತಿಕೊಂಡು ಬರೋಣ ಎಂದು ಶಾಕಾಕಿ ಲಿಬಿಯಾಗೆ ಹೊರಟ. ಆಗಲೇ ಮೊಸ್ಸಾದ್ ಅವನನ್ನು ಟ್ರ್ಯಾಕ್ ಮಾಡಲು ಶುರುಮಾಡಿತ್ತು. ಶಾಕಾಕಿಯ ಅಂತಿಮ ಗೇಮ್ ಬಾರಿಸಲು ಕ್ಷಣಗಣನೆ ಶುರುವಾಗಿತ್ತು. ಅಷ್ಟೇ ಅದು ಶಾಕಾಕಿಗೆ ಗೊತ್ತಿರಲಿಲ್ಲ.
ಶಾಕಾಕಿ ಲಿಬಿಯಾಗೆ ಬಂದ. ಫಾತಿ ಶಾಕಾಕಿ ಹುಟ್ಟುಹಾಕಿದ್ದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಾರ್ನಾಮೆಗಳಿಂದ ಗಡಾಫಿ ಬಹಳ ಸಂತುಷ್ಟನಾಗಿದ್ದ. ಕೊಟ್ಟ ರೊಕ್ಕಕ್ಕೆ ನಿಯತ್ತಾಗಿ ಕೆಲಸ ಮಾಡಿಕೊಟ್ಟಿದ್ದ ಶಾಕಾಕಿ. ಹತ್ತಾರು ಆತ್ಮಹತ್ಯಾ ದಾಳಿಗಳಲ್ಲಿ ಹಲವಾರು ಇಸ್ರೇಲಿಗಳನ್ನು ಬರ್ಬರವಾಗಿ ಕೊಂದಿದ್ದರು ಶಾಕಾಕಿಯ ಶಿಷ್ಯರು. ಹಾಗಾಗಿ ಶಾಕಾಕಿಗೆ ಮತ್ತೊಂದಿಷ್ಟು ರೊಕ್ಕ ಕೊಡಲು ಗಡಾಫಿ ಹಿಂದೆ ಮುಂದೆ ನೋಡಲಿಲ್ಲ. ದೊಡ್ಡ ಮೊತ್ತದ ಕಾಣಿಕೆ ಕೊಟ್ಟು ಖುದಾ ಹಫೀಜ್ ಹೇಳಿ ಕಳಿಸಿದ್ದ.
ದೊಡ್ಡ ಮೊತ್ತದ ರೊಕ್ಕ ಸಿಕ್ಕಿದ್ದಕ್ಕೆ ಸಂತುಷ್ಟನಾದ ಫಾತಿ ಶಾಕಾಕಿ ತಡ ಮಾಡಲಿಲ್ಲ. ಟ್ರಿಪೋಲಿ ಶಹರಕ್ಕೆ ಬಂದವನೇ ಮಾಲ್ಟಾಗೆ ಹೋಗುವ ಫೆರ್ರಿ (ಹಡಗು) ಹತ್ತಿಬಿಟ್ಟ. ಸಮುದ್ರ ಶಾಂತವಾಗಿತ್ತು. ಅದರ ಮೌನ ಕರಾಳವಾಗಿತ್ತು. ಮುಂಬರುವ ಅನಾಹುತದ ಯಾವ ಸುಳಿವೂ ಇರಲಿಲ್ಲ ಶಾಕಾಕಿಗೆ.
ಮಾಲ್ಟಾಗೆ ಬಂದಿಳಿದ ಶಾಕಾಕಿ ಎಂದಿನಂತೆ ತನ್ನ ರೆಗ್ಯುಲರ್ ಹೋಟೆಲ್ಲಿಗೆ ಹೋದ. ಕೋಣೆಯಲ್ಲಿ ಸ್ವಲ್ಪ ಫ್ರೆಶ್ ಆದ ನಂತರ ಮಾಲ್ಟಾ ಶಹರವನ್ನು ಕೊಂಚ ಸುತ್ತಾಡಿ, ಮಕ್ಕಳಿಗೆ ಅಂಗಿ ಚಡ್ಡಿ ಶಾಪಿಂಗ್ ಮಾಡೋಣ ಅಂತ ಮಾಲ್ಟಾದ ರಸ್ತೆ ಗುಂಟ ನಡೆಯತೊಡಗಿದ. ಅವನು ಅದೆಷ್ಟು ಬಾರಿ ಆ ರಸ್ತೆಗಳ ಮೇಲೆ ಓಡಾಡಿದ್ದನೋ.
ಮೊಸ್ಸಾದಿನ ಕಿಡೋನ್ ಹಂತಕರು ಮೋಟಾರ್ ಸೈಕಲ್ ಮೇಲೆ ಕಾದಿದ್ದರು. ಬೇರೊಂದಿಷ್ಟು ಜನ ಮೊಸ್ಸಾದಿನ ಬೇಹುಗಾರರು ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿದ್ದರು. ಮಾಲ್ಟಾದಲ್ಲಿ ನೆರೆದಿದ್ದ ಹತ್ತಾರು ಮೊಸ್ಸಾದ್ ವೃತ್ತಿಪರರ ಖಾಸಗಿ ರೇಡಿಯೋ ಜಾಲದಲ್ಲಿ ಮಾಹಿತಿಗಳು ಸರಸರನೆ ವಿನಿಮಯವಾಗಿ ಮೋಟಾರ್ ಸೈಕಲ್ ಮೇಲೆ ರೊಂಯ್ ರೊಂಯ್ ಅಂತ ಆಕ್ಸಿಲರೇಟರ್ ತಿರುವುತ್ತ ಕುಳಿತಿದ್ದ ಕಿಡೊನ್ ಹಂತಕರಿಗೆ ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯ ಮಾಹಿತಿ ತಕ್ಷಣ ತಲುಪುತ್ತಿತ್ತು.
ಫಾತಿ ಶಾಕಾಕಿ ಆಯಕಟ್ಟಿನ ಜಾಗಕ್ಕೆ ಬಂದು ತಲುಪಿದ ಅನ್ನುವ ಮಾಹಿತಿ ಕಿಡೊನ್ ಹಂತಕರ ಕಿವಿಗಳಲ್ಲಿ ಅಡಗಿದ್ದ ear piece ಗಳಲ್ಲಿ ಕೇಳಿಬಂದಿದ್ದೇ ಕೊನೆ. ಮುಂದೆ ಕೆಲ ನಿಮಿಷ ಏನೂ ಕೇಳಲಿಲ್ಲ. ಸುತ್ತುಮುತ್ತಲಿನ ಜನರು ಗಾಭರಿಗೊಳ್ಳಲಿ, distract ಆಗಲಿ ಅಂತಲೇ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ಮೋಟಾರ್ ಸೈಕಲ್ ಮೇಲಿದ್ದ ಹಂತಕರು ಅತಿ ವೇಗದಿಂದ ನುಗ್ಗಿ ಬಂದರು. ಮೋಟಾರ್ ಸೈಕಲ್ ಶಬ್ದ ವಿಪರೀತ ಕರ್ಕಶವಾಗಿತ್ತು. ಜನರು ಗಲಿಬಿಲಿಗೊಂಡರು. ಇದ್ಯಾರು ಇಂತಹ ಶಾಂತ ವಾತಾವರಣದಲ್ಲಿ ಇಂತಹ ಕರ್ಕಶ ಮೋಟಾರ್ ಸೈಕಲ್ ಮೇಲೆ ಬಂದು ರಸಭಂಗ ಮಾಡುತ್ತಿದ್ದಾರೆ ಅಂದುಕೊಂಡನೇನೋ ಫಾತಿ ಶಾಕಾಕಿ. ಯಾವನಿಗೆ ಗೊತ್ತು?
ಶಾಕಾಕಿಯನ್ನು ಕ್ಷಣಮಾತ್ರದಲ್ಲಿ ಸಮೀಪಿಸಿದರು ಹಂತಕರು. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಹಿಂಬದಿಯ ಸವಾರ, ನುರಿತ ಹಂತಕ, ಮೋಟಾರ್ ಸೈಕಲ್ ಆಪಾಟಿ ವೇಗದಲ್ಲಿ ಹೋಗುತ್ತಿದ್ದರೂ, ಅರ್ಧಚಂದ್ರಾಕೃತಿಯಲ್ಲಿ ಸರ್ರ್ ಅಂತ ತಿರುಗಿದವನೇ ಒಂದು ಇಡೀ ಮ್ಯಾಗಜಿನ್ ಗುಂಡುಗಳನ್ನು ಫಾತಿ ಶಾಕಾಕಿಯ ಶರೀರದೊಳಗೆ ನುಗ್ಗಿಸಿದ್ದ. ಮೊದಲೇ ಸೈಲೆನ್ಸರ್ ಮಾರ್ಪಡಿಸಿದ್ದ ಮೋಟಾರ್ ಸೈಕಲ್. ಕಿವಿ ತಮ್ಮಟೆ ಹರಿದುಹೋಗುವಂತಹ ಅದರ ಶಬ್ದ. ಅಂತದ್ದರಲ್ಲಿ ಸೈಲೆನ್ಸರ್ ಹಾಕಿದ್ದ 'ಚಿಕ್ಕ ಆಯುಧಗಳ ವೈಢೂರ್ಯ' (jewel of small arms) ಅನ್ನಿಸಿಕೊಂಡಿರುವ ಬೆರೆಟ್ಟಾ ಇಟಾಲಿಯನ್ ಮೇಡ್ ಪಿಸ್ತೂಲಿನಿಂದ ಹಾರಿದ ಗುಂಡುಗಳು ಫಾತಿ ಶಾಕಾಕಿಯ ದೇಹವನ್ನು ಛಲ್ಲಿ ಛಲ್ಲಿ ಮಾಡಿಹಾಕಿದ್ದವು. ಶಾಕಾಕಿಯ ದೇಹ ಮಾಲ್ಟಾದ ರಸ್ತೆಯ ಫುಟ್ ಪಾತ್ ಮೇಲೆ ಬೀಳುವಷ್ಟರಲ್ಲಿ ಮೊಸ್ಸಾದಿನ ಹಂತಕರು ಚಲಾಯಿಸುತ್ತಿದ್ದ ಬೈಕ್ ಅಲ್ಲಿಂದ ಮಾಯವಾಗಿತ್ತು.
ಹೀಗೆ ಕ್ಷಣಾರ್ಧದಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮತ್ತು ಪ್ರಥಮ ಹಿರಿತಲೆ ಫಾತಿ ಶಾಕಾಕಿ ಖಲಾಸ್! ಹಿಮ್ಮಡದಲ್ಲಿ ಚುಚ್ಚಿ ಇನ್ನಿಲ್ಲದ ಉಪದ್ರವ ಕೊಡುತ್ತಿದ್ದ ಮುಳ್ಳನ್ನು ಮುಳ್ಳಿನಿಂದಲೇ ತೆಗೆದೆಸೆದಾಗ ಆಗುವ ನಿರುಮ್ಮಳ ನೆಮ್ಮದಿ ಇಸ್ರೇಲಿಗೆ.
ಹೀಗೆ ಮಾಲ್ಟಾ ಎಂಬ ಪರದೇಶದಲ್ಲಿ ಫಾತಿ ಶಾಕಾಕಿ ಇಸ್ರೇಲಿಗಳ ಗುಂಡು ತಿಂದು ರಸ್ತೆ ಬದಿಯಲ್ಲಿ ನಾಯಿಯಂತೆ ಸತ್ತಿದ್ದೇ ಸತ್ತಿದ್ದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಸಂಘಟನೆ ಬೇವರ್ಸಿಯಾಗಿಬಿಟ್ಟಿತು. ಹೊಸ ನಾಯಕನೇ ಇಲ್ಲ. ಕಾರಣವೇನೋ ಗೊತ್ತಿಲ್ಲ. ಒಳಮುಚ್ಚುಗ ಶಾಕಾಕಿ ಎರಡನೇ ಹಂತದ ನಾಯಕರನ್ನೂ ತಯಾರು ಮಾಡಿರಲಿಲ್ಲ. ಎಲ್ಲವನ್ನೂ ತನ್ನ ಹತೋಟಿಯಲ್ಲೇ ಇಟ್ಟುಕೊಂಡು ರಿಮೋಟ್ ಕಂಟ್ರೋಲ್ ಮೂಲಕ ಸಂಬಾಳಿಸುತ್ತಿದ್ದ. ಈಗ ಅವನಿಲ್ಲದೆ ಅವನ ಸಂಘಟನೆ ಅನಾಥವಾಗಿತ್ತು.
ಸಂಘಟನೆಯ ನಾಯಕತ್ವವನ್ನು ವಹಿಸಿಕೊಳ್ಳುವ ಕಾಬೀಲಿಯತ್ತು ಇರುವ ಜನರು ಯಾರೂ ಗಾಜಾ ಪಟ್ಟಿಯಲ್ಲಿ ಇರಲಿಲ್ಲ. ಇಡೀ ಮಧ್ಯಪ್ರಾಚ್ಯದಲ್ಲೇ ಇರಲಿಲ್ಲ. ಆಗಲೇ ಎಂಟ್ರಿ ಕೊಟ್ಟ ನಮ್ಮ ಕಥಾ ನಾಯಕ ರಮದಾನ್ ಶಾಲ್ಲಾ.
ಇಸ್ರೇಲ್ ಫಾತಿ ಶಾಕಾಕಿಯನ್ನು ಮಾಲ್ಟಾದಲ್ಲಿ ಉಡಾಯಿಸಿದ್ದು ೧೯೯೫ ರಲ್ಲಿ. ಆಗ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ರಮದಾನ್ ಶಾಲ್ಲಾ ಪಾರ್ಟ್ ಟೈಮ್ ಮಾಸ್ತರಿಕೆ ಮಾಡಿಕೊಂಡಿದ್ದ. ಪೂರ್ತಿ ಪ್ರಮಾಣದ ಪ್ರೊಫೆಸರ್ ಆಗಿದ್ದ ಸಾಮಿ ಆಲ್-ಅರಿಯನ್ ಅವನಿಗೆ ಗುರುವಿದ್ದಂತೆ.
ದೂರದ ಅಮೆರಿಕಾದಲ್ಲಿದ್ದರೂ ಪ್ಯಾಲೆಸ್ಟೈನ್ ಇಸ್ಲಾಮಿಕ್ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈ ಇಬ್ಬರು ಪ್ರೊಫೆಸರ್ ಮಹಾಶಯರು ತಕ್ಷಣ ಫೀಲ್ಡಿಗೆ ಇಳಿದರು. ಆಗಲೇ ಅಮೇರಿಕಾದ FBI ಜೊತೆ ತಿಕ್ಕಾಟಕ್ಕೆ ಇಳಿದಿದ್ದ ಸಾಮಿ ಅಲ್ - ಅರಿಯನ್ ರಮದಾನ್ ಶಾಲ್ಲಾನನ್ನು ಸಿರಿಯಾದ ಡಮಾಸ್ಕಸ್ ನಗರಕ್ಕೆ ಕಳಿಸಿಬಿಟ್ಟ. ಪ್ಯಾಲೆಸ್ಟೈನ್ ಉಗ್ರರ ಸಮುದಾಯದಲ್ಲಿ ಏನೇನು ಮಾತುಕತೆಗಳು ಆದವೋ, ಏನೇನು ಸಮೀಕರಣಗಳು ವರ್ಕೌಟ್ ಆದವೋ, ಗಡಾಫಿಯಂತಹ ಯಾವ್ಯಾವ ತಲೆತಿರುಕರು ತಮ್ಮ ತಮ್ಮ ಆಶೀರ್ವಾದ ಮಾಡಿದರೋ, ಒಟ್ಟಿನಲ್ಲಿ ಫ್ಲೋರಿಡಾ ಬಿಟ್ಟು ಉಟ್ಟ ಬಟ್ಟೆಯಲ್ಲಿ ಸಿರಿಯಾಕ್ಕೆ ಬಂದಿಳಿದಿದ್ದ ರಮದಾನ್ ಶಾಲ್ಲಾನಿಗೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕ ಅಂತ ಪಟ್ಟಾಭಿಷೇಕ ಮಾಡಲಾಯಿತು.
ಪಟ್ಟಾಭಿಷೇಕ ಮಾಡಿಸಿಕೊಂಡ ರಮದಾನ್ ಶಾಲ್ಲಾ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಅನಾಥ ಸಂಘಟನೆಯ ನಾಯಕತ್ವವನ್ನೇನೋ ವಹಿಸಿಕೊಂಡ. ಆದರೆ ರೊಕ್ಕವಿದ್ದ ತಿಜೋರಿಯ ಚಾವಿ ಫಾತಿ ಶಾಕಾಕಿಯ ಜೊತೆಗೇ ಅಲ್ಲಾಹುವಿನ ಪಾದ ಸೇರಿಕೊಂಡಿದೆ ಎಂದು ತಡವಾಗಿ ಗೊತ್ತಾಯಿತು.
ಯಾರನ್ನೂ ನಂಬದ ಹಿಂದಿನ ನಾಯಕ ಫಾತಿ ಶಾಕಾಕಿ ಅಷ್ಟೆಲ್ಲ ರೊಕ್ಕವಿದ್ದರೂ ಅದರ ವಿವರಗಳನ್ನು ಎಲ್ಲೂ ಕ್ರಮಬದ್ಧವಾಗಿ ರೆಕಾರ್ಡ್ ಮಾಡಿಟ್ಟಿರಲಿಲ್ಲ. ಅಲ್ಲಿಗೆ ಗಡಾಫಿ ಕೊಟ್ಟಿದ್ದ ಹಲವಾರು ಮಿಲಿಯನ್ ಡಾಲರುಗಳಿಗೆ, ಅಮೇರಿಕಾದ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಬೇಡಿದ್ದ ರೊಕ್ಕಕ್ಕೆ, ಇತರೆ ಅರಬ್ ಸೇಠು ಜನ ಕೊಟ್ಟಿದ್ದ ರೊಕ್ಕಕ್ಕೆ ಎಲ್ಲ ಶಿವಾಯ ನಮಃ! ರಮದಾನ್ ಶಾಲ್ಲಾ ಹುಚ್ಚನಂತಾಗಿ ತಲೆ ತಲೆ ಚಚ್ಚಿಕೊಂಡ. ಅದರಲ್ಲೂ ಅವನು ಬ್ಯಾಂಕಿಂಗ್ ಪಾಠ ಮಾಡುವ ಮಾಸ್ತರ್ ಬೇರೆ. ಇಲ್ಲಿ ನೋಡಿದರೆ ಸಂಘಟನೆಯ ಬ್ಯಾಂಕಿಂಗ್ ವಿವರಗಳೇ ಇಲ್ಲ. ಅವೆಲ್ಲ ಫಾತಿ ಶಾಕಾಕಿಯೊಂದಿಗೇ ಶಹೀದ್ ಆಗಿಬಿಟ್ಟಿವೆ. ಹೊಸ ಸಂಘಟನೆಗೆ ದೊಡ್ಡ ಮಟ್ಟದ ಬಾಲಗ್ರಹದ ಪೀಡೆ.
ಫಾತಿ ಶಾಕಾಕಿ ಸತ್ತ. ಸಾಯುವಾಗ ರೊಕ್ಕದ ಮೂಲಗಳನ್ನೆಲ್ಲ ಒಣಗಿಸಿಯೇ ಸತ್ತಿದ್ದ. ಆರ್ಥಿಕ ಮುಗ್ಗಟ್ಟಿನ ಆ ಹೊಡೆತದಿಂದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಮುಂದೆ ಚೇತರಿಸಿಕೊಳ್ಳಲೇ ಇಲ್ಲ. ಇತ್ತಕಡೆ ಅಮೇರಿಕಾದಲ್ಲಿ ಸಾಮಿ ಅಲ್-ಅರಿಯನ್ ಅಬ್ಬೇಪಾರಿಯಾಗಿ ಕುವೈತ್ ದೇಶಕ್ಕೋ, ಕತಾರ್ ದೇಶಕ್ಕೋ ಗಡಿಪಾರು ಮಾಡಲ್ಪಟ್ಟ. ಅಲ್ಲಿಗೆ ಅಮೇರಿಕಾದ ಮಸೀದಿಗಳಿಂದ ಬರುತ್ತಿದ್ದ ಅಷ್ಟಿಟ್ಟು ಕಾಸು ಕೂಡ ಒಣಗಿತು.
ಆದರೂ ಏನೇನೋ ಮಾಡಿ ರಮದಾನ್ ಶಾಲ್ಲಾ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದ. ವರ್ಷಕ್ಕೆ ಒಂದೆರೆಡು ಬಾರಿ ಗಾಜಾ ಪಟ್ಟಿಯಿಂದ ಇಸ್ರೇಲ್ ಒಳಗೆ ಕತ್ಯುಷಾ ರಾಕೆಟ್ ಹಾರಿಸಿ ಉಪಟಳ ಕೊಟ್ಟು, ಕೊಂಚ ಪ್ರೆಸ್ ಕವರೇಜ್ ಗಳಿಸಿ ಸುದ್ದಿಯಲ್ಲಿರುತ್ತಿದ್ದ. ಆದರೆ ತಾನು ಮಾತ್ರ ತೋಟದಪ್ಪನ ಛತ್ರ ಅಂದರೆ ಸಿರಿಯಾದಲ್ಲಿ ಇರುತ್ತಿದ್ದ. ಅಸಾದ್ ತಕ್ಕಮಟ್ಟಿನ ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದ. ಮತ್ತೆ ಇಸ್ರೇಲ್ ಕೂಡ priority ಮೇಲೆ ಉಗ್ರರ ಗೇಮ್ ಬಾರಿಸುತ್ತದೆ. ಎಲ್ಲ ಚಿಳ್ಳೆ ಪಿಳ್ಳೆ ಜನರ ಗೇಮ್ ಬಾರಿಸುತ್ತ ಹೋಗಲು ಮೊಸ್ಸಾದ್ ತನ್ನ ಲಿಮಿಟೆಡ್ ಸಂಪನ್ಮೂಲಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ. ಹಾಗಾಗಿ ರಮದಾನ್ ಶಾಲ್ಲಾನ ಗೇಮ್ ಬಾರಿಸಿರಲಿಲ್ಲ. ಆ ಮಟ್ಟದ ಕುಖ್ಯಾತಿಗೆ ಅವನೂ ಏರಿರಲಿಲ್ಲ.
ಮೊನ್ನಿತ್ತಲಾಗೆ ಏನೋ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗೆಂದು ಪಕ್ಕದ ದೇಶ ಲೆಬನಾನಿನ ರಾಜಧಾನಿ ಬಿರೂಟಿನ ಆಸ್ಪತ್ರೆಗೆ ರಹಸ್ಯವಾಗಿ ದಾಖಲಾಗಿದ್ದಾನೆ. ಇಷ್ಟಕ್ಕೂ ಈ ಹೆದರುಪುಕ್ಕ ಪುಣ್ಯಾತ್ಮ ಸಿರಿಯಾದ ತೋಟದಪ್ಪನ ಛತ್ರ ಬಿಟ್ಟು ಬಿರೂಟಿಗೆ ಯಾಕೆ ಬಂದ !!?? ಈಗ ಏಳೆಂಟು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ಶುರುವಾದಾಗಿನಿಂದ ಪರಿಸ್ಥಿತಿ ತುಂಬಾ ಹದೆಗೆಟ್ಟು ಹೋಗಿದೆ. ಬಷೀರ್ ಅಲ್-ಅಸಾದನಿಗೆ ತನ್ನನ್ನು ತಾನು ಕಾಪಾಡಿಕೊಂಡರೆ ಸಾಕಾಗಿದೆ. ಪೌರಾಡಳಿತ ಮತ್ತು ನಗರ ವ್ಯವಸ್ಥೆ ಪೂರ್ತಿ ಹಳ್ಳಹಿಡಿದು ಇಡೀ ಸಿರಿಯಾ ಒಂದು ದೊಡ್ಡ ಕೊಳಗೇರಿ ಆಗಿದೆ. ಹಾಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಒಳ್ಳೆ ಚಿಕಿತ್ಸೆ ಸಿಗುವುದು ಅಷ್ಟರಲ್ಲೇ ಇದೆ. ರೊಕ್ಕ ಕೊಟ್ಟರೂ ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ, ಔಷಧಗಳೂ ಇಲ್ಲ. ಹೀಗಿರುವಾಗಲೇ ರಮದಾನ್ ಶಾಲ್ಲಾನ ಆರೋಗ್ಯ ಬಿಗಡಾಯಿಸಿದೆ. ರಿಸ್ಕ್ ತೆಗೆದುಕೊಂಡು ಹೇಗೋ ಮಾಡಿ ಪಕ್ಕದ ಬಿರೂಟಿಗೆ ಬಂದಿದ್ದಾನೆ. ಆಪರೇಷನ್ ಥೀಯೇಟರ್ ಒಳಗೆ ಹೋಗುವಾಗ ಇದ್ದ ಪ್ರಜ್ಞೆ ನಂತರ ವಾಪಸ್ ಬಂದಿಲ್ಲ. ಕೋಮಾಗೆ ಜಾರಿದ್ದಾನೆ. ವಿಷಪ್ರಾಶನದಿಂದ ವಾಪಸ್ ತಿರುಗಿ ಬರಲಾರದಂತಹ ಕೋಮಾಕ್ಕೆ ಕಳಿಸಲಾಗಿದೆ ಅಂತ ಗುಸುಗುಸು.
ರಮದಾನ್ ಶಾಲ್ಲಾನಂತಹ ಚಿಲ್ಟು (insignificant) ಉಗ್ರಗಾಮಿಯ ಗೇಮನ್ನು ಮೊಸ್ಸಾದ್ ಖುದ್ದಾಗಿ ಬಾರಿಸಿರಲಿಕ್ಕಿಲ್ಲ. ಬಿರೂಟಿನಲ್ಲಿ ಕಾಸು ಕೊಟ್ಟರೆ ಎಂತಹ ಕೆಲಸವನ್ನು ಬೇಕಾದರೂ ಮಾಡಿಕೊಡಬಲ್ಲ ಭೂಗತಲೋಕದ ಭಾಡಿಗೆ ಜನರನ್ನು (mercenary) ಬಿಟ್ಟು ರಮದಾನ್ ಶಾಲ್ಲಾನ ಕೇಸ್ ಖತಂ ಮಾಡಿದೆ ಅಂತಲೂ ಒಂದು ಸುದ್ದಿ ಮಧ್ಯಪ್ರಾಚ್ಯದ ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಇಸ್ಲಾಮಿಕ್ ಜಿಹಾದ್ ಮಾತ್ರ 'ನಮ್ಮ ಸಾಹೇಬರು ಗುಣಮುಖರಾಗುತ್ತಿದ್ದಾರೆ. ಚಿಂತಿಸುವ ಕಾರಣವಿಲ್ಲ,' ಎಂದು ಒಣ ಒಣ ಪತ್ರಿಕಾಹೇಳಿಕೆಗಳನ್ನು ಬಿಡುಗಡೆ ಮಾಡಿ ರಮದಾನ್ ಶಾಲ್ಲಾನ ನಿಜ ಸ್ಥಿತಿಯನ್ನು obfuscate ಮಾಡಿ, ರಮದಾನ್ ಶಾಲ್ಲಾನ ಖೇಲ್ ಖತಂ ಆಗಿರಬಹುದೇ ಎನ್ನುವ ಸಂದೇಹವನ್ನು deflect ಮಾಡುತ್ತಿದೆ.
ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕಿಕೊಳ್ಳಬೇಕಾಗಿದೆ. ಅಮೇರಿಕಾದಿಂದ ಗಡಿಪಾರಾಗಿ ಅಲ್ಲೆಲ್ಲೋ ಕುವೈತಿನಲ್ಲೋ ಕತಾರಿನಲ್ಲೋ ಕುಳಿತಿರುವ ಮಾಜಿ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಬಂದು ಜುಗಾಡ್ ಮಾಡುವನಿದ್ದಾನೋ ಅಥವಾ ಇತರೆ ಅನೇಕ ಚುಲ್ಟು ಪುಲ್ಟು ಸಂಘಟನೆಗಳಂತೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಕೂಡ 'ಯಾ ಅಲ್ಲಾ!' ಎಂದು ಒಂದು ಆಖ್ರಿ ಚೀಕ್ ಹೊಡೆದು ಗೋಣು ಚಲ್ಲಿ ಶಿವಾಯ ನಮಃ ಆಗಲಿದೆಯೋ? ಕಾದು ನೋಡಬೇಕು!
ಇಸ್ರೇಲೇ ರಹಸ್ಯ ಕಾರ್ಯಾಚರಣೆ ಮಾಡಿ ರಮದಾನ್ ಶಾಲ್ಲಾನನ್ನು ಕೋಮಾಕ್ಕೆ ತಳ್ಳಿದ್ದೇ ಹೌದಾದರೆ ಅದನ್ನು ಹೇಗೆ ಸಾಧಿಸಿತು? ಈ ಪ್ರಶ್ನೆಗೆ ಉತ್ತರ ಈಗಂತೂ ಇಲ್ಲ. ಚರಿತ್ರೆ ಏನಾದರೂ ಪಾಠವಾದರೆ (If history is any lesson), ಇಸ್ರೇಲ್ ಈ ಹಿಂದೆ ೧೯೭೦ ರ ದಶಕದಲ್ಲಿ ವಾಡಿ ಹದ್ದಾದ್ ಎಂಬ ಖತರ್ನಾಕ್ ಉಗ್ರಗಾಮಿಯನ್ನು ಕಂಡುಹಿಡಿಯಲಾಗದ ವಿಷಬೆರೆತ ಪರಮ ದುಬಾರಿ ಬೆಲ್ಜಿಯನ್ ಚಾಕಲೇಟ್ ಮೂಲಕ ವಿಷಪ್ರಾಶನ ಮಾಡಿಸಿ, ಆ ದುರುಳ ಪ್ಯಾರಿಸ್ಸಿನ ದವಾಖಾನೆಯೊಂದರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಸಾಯುವಂತೆ ಮಾಡಿತ್ತು. ಚಾಕಲೇಟ್ ಪ್ರಿಯನಾಗಿದ್ದ ತಿಂಡಿಪೋತ ವಾಡಿ ಹದ್ದಾದ್ ತನ್ನ ಪ್ರೀತಿಯ ಬೆಲ್ಜಿಯನ್ ಚಾಕ್ಲೆಟ್ ಮೆದ್ದು ಗೊಟಕ್ ಅಂದಿದ್ದ. ೨೦೦೪ ರಲ್ಲಿ ಯಾಸಿರ್ ಅರಾಫತ್ ಕೂಡ ನಿಗೂಢವಾಗಿ ಕಂಡುಹಿಡಿಯಲಾಗದ ಬೇನೆ ಬಂದು ಸತ್ತರು. ಅವರನ್ನೂ ಸಹ ವಿಷ ಹಾಕಿ ಕೊಲ್ಲಲಾಯಿತು ಅನ್ನುವ ಗುಸುಗುಸು ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಿದೆ.