Saturday, February 15, 2020

ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ...

'ನನ್ನ ಮಗನಿಗೆ ಇಪ್ಪತ್ತೊಂದು ವರ್ಷವಾಗುವುದನ್ನೇ ಕಾಯುತ್ತಿದ್ದೇನೆ ಮಾರಾಯ,' ಅಂದ ಒಬ್ಬ ಪರಿಚಿತ.

'ಯಾಕೆ? ಮದುವೆ ಮಾಡೋಕಾ? ಅಷ್ಟು ಬೇಗ? ಅರ್ಜೆಂಟಾ? ಏನಾದರೂ ಲವ್ವು ಗಿವ್ವು ಅಂತ ಲಫಡಾ ಮಾಡಿಕೊಂಡು ಕೂತಿದ್ದಾನ?' ಎಂದು ನಾನು ಕೇಳಿದೆ. ನಮ್ಮ ತಲೆ ಓಡೋದೇ ಹಾಗೆ.

'ಹಾಗಲ್ಲ. ಅವನು ಇಪ್ಪತ್ತೊಂದು ವರ್ಷದವನಾಗಿಬಿಟ್ಟ ಅಂದರೆ ನನ್ನನ್ನು ಮತ್ತು ಅವರಮ್ಮನನ್ನು ಅಮೇರಿಕಾದ ಗ್ರೀನ್ ಕಾರ್ಡಿಗೆ ಸ್ಪಾನ್ಸರ್ ಮಾಡಬಹುದು. ಮಗಳೂ ಅಲ್ಲೇ ಹುಟ್ಟಿದ್ದಾಳೆ. ಆ ರೀತಿಯಲ್ಲಾದರೂ ಗ್ರೀನ್ ಕಾರ್ಡ್ ಒಂದು ಸಿಕ್ಕುಬಿಟ್ಟರೆ ಸಾಕು ಮಾರಾಯ. ವಾಪಸ್ ಬಂದು ಅಲ್ಲೇ ನೆಲೆಸಿಬಿಡೋಣ ಅಂದುಕೊಂಡಿದ್ದೇವೆ,' ಎಂದು ಉದ್ದಾಗಿ ಬಿಟ್ಟ. ಶ್ವಾಸವನ್ನು ಬಿಟ್ಟ. ಪುಣ್ಯಕ್ಕೆ ಅದೊಂದನ್ನೇ ಬಿಟ್ಟ.

ಇದು ಕಿರಿಕ್ ಪಾರ್ಟಿ ಕೇಸ್. ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷದ ಹಿಂದೆ ಅಮೇರಿಕಾಗೆ ಬಂದಿದ್ದ ಪಾರ್ಟಿ. ನಮ್ಮ ಸಮಕಾಲೀನರೇ. ಅದೇನೋ ಗೊತ್ತಿಲ್ಲ. ಒಂದು ಹತ್ತು ಹನ್ನೆರೆಡು ವರ್ಷ ಇಲ್ಲಿದ್ದರು. ಎರಡು ಮಕ್ಕಳೂ ಆದರು. ಆಗ ಆ ಕುಟುಂಬ ವಾಪಸ್ ಭಾರತಕ್ಕೆ ಹೊರಟು ನಿಂತಿತು.

ಕಾರಣ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದು ಕಾರಣ ಹೇಳಿದರು. ಒಂದೇ ಸಾಲಿಡ್ ಕಾರಣ ಇರಲಿಲ್ಲವಾದ್ದರಿಂದ ಒಬ್ಬೊಬ್ಬರ ಹತ್ತಿರ ಒಂದೊಂದು ರೀತಿಯಲ್ಲಿ ಪುಂಗಿದರು.

'ವಯಸ್ಸಾದ ತಂದೆತಾಯಿಗಳಿದ್ದಾರೆ ಧಾರವಾಡದಲ್ಲಿ. ನೋಡಿಕೊಳ್ಳಬೇಕು,' ಅಂದ. ಅದು ಶುದ್ಧ ಫೇಕ್ ಎಂದು ಕೇಳಿದಾಗಲೇ ಗೊತ್ತಾಗಿತ್ತು. ಅವನ ಅಪ್ಪ ಅಮ್ಮ ಧಾರವಾಡ ಬಿಟ್ಟು ಬೆಂಗಳೂರಿಗೆ ಬಂದು ಹೊಂದಿಕೊಳ್ಳುವ ಪೈಕಿಯವರೇ ಅಲ್ಲ. ಧಾರವಾಡದಲ್ಲೇ ಹೊಸೆಲ್ಲಾಪುರದ ಕರ್ಮಠ ಅಗ್ರಹಾರ ಬಿಟ್ಟು ಬೇರೆ ಕಡೆ ಹೋದರೆ ಅವರಿಗೆ ಸರಿಯಾಗೋದು ಡೌಟ್. ಅಂತದ್ದರಲ್ಲಿ ಈ ಪುಣ್ಯಾತ್ಮ ಹೋಗಿ ನೆಲೆಸುವ ಬೆಂಗಳೂರಿನ ಕಿಷ್ಕಿಂಧೆಯಂತಹ ಅಪಾರ್ಟ್ಮೆಂಟಿನಲ್ಲಿ ಬಂದು ಇದ್ದಾರೆಯೇ? ಸಾಧ್ಯವೇ ಇಲ್ಲ.

ಇನ್ನು ಅವನ ಪತ್ನಿ. ಅತ್ತೆ ಮಾವನನ್ನು ಜೀವಂತ ರುಬ್ಬುವ ಪೈಕಿ. ಅಮೇರಿಕಾಗೆ ಬಂದಾಗಲೇ ರುಬ್ಬಿ ಓಡಿಸಿದ್ದಾಳೆ. ಸೊಸೆ ಹತ್ತಿರ ರುಬ್ಬಿಸಿಕೊಂಡ ವೃದ್ಧ ಜೀವಗಳು ವೀಸಾ ಅವಧಿಗೆ ಮುಂಚೆಯೇ ಟಿಕೆಟ್ಟಿನ ದಿನ ಬದಲು ಮಾಡಿಸಿಕೊಂಡು ಪೋಯಾಚ್ ಆಗಿದ್ದರು. ನಂತರ ಧಾರವಾಡ ಕಡೆ ಹೋಗಿ ಮಗನನ್ನು ಮತ್ತು ಸೊಸೆಯನ್ನು ಬೇರೆ ಬೇರೆ ರೀತಿಯಲ್ಲಿ 'ಹೊಗಳಿ'ದ್ದರು. ಅರ್ಥವಾಯಿತಲ್ಲ ಸೊಸೆಗೆ ಅತ್ತೆ ಮಾವನ ಬಗ್ಗೆ ಇರುವ ಕಾಳಜಿ?

'ಹುಬ್ಬಳ್ಳಿ-ಧಾರವಾಡ ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಟೆಕ್ ಪಾರ್ಕ್, ಸಾಫ್ಟ್ವೇರ್ ಪಾರ್ಕ್ ಎಲ್ಲ ಬಂದಿವೆ. ಹುಬ್ಬಳ್ಳಿಯಲ್ಲಿ ಒಂದು ಸಾಫ್ಟ್ವೇರ್ ಕಂಪನಿ ತೆಗೆಯೋಣ ಅಂತ ವಿಚಾರ. ಹೂಡಿಕೆದಾರರು ಇದ್ದಾರೆ. ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ ಪದವೀಧರರೂ ಸಿಗುತ್ತಾರೆ. ಒಂದಿಷ್ಟು ಜನರಿಗೆ ನೌಕರಿ ಕೊಟ್ಟ ಪುಣ್ಯವೂ ಸಿಕ್ಕಂತಾಯಿತು,' ಎಂದು ಬೇರೆಯೊಬ್ಬರ ಹತ್ತಿರ ಪುಂಗಿದ.

ಹುಬ್ಬಳ್ಳಿಯಲ್ಲಿ ತೆಗೆದ ಕಂಪನಿ ಬರಕತ್ತಾಗಲಿಲ್ಲ. ಹುಬ್ಬಳ್ಳಿಗೆ ಬಂದು ನೋಡಿದ ಹೂಡಿಕೆದಾರ ವಿಮಾನನಿಲ್ದಾಣದಿಂದಲೇ ಓಡಿಹೋದ.

'ಹುಬ್ಬಳ್ಳಿ ಸಾಕಷ್ಟು ಕಾಸ್ಮೊಪಾಲಿಟನ್ ಆಗಿಲ್ಲ. ಇಲ್ಲಿ ಬೇರೆ ಕಡೆಯಿಂದ ಜನರನ್ನು ಕರೆತರುವುದು ಕಷ್ಟ,' ಅಂದ ಬಂಗಾಳಿ ಹೂಡಿಕೆದಾರ.

'ಅಯ್ಯೋ, ನಾನಿದ್ದೇನೆ. ನನ್ನ ಸ್ಥಳೀಯ ಲೋಕಲ್ ಸ್ನೇಹಿತರು ಜಾಯಿನ್ ಆಗುತ್ತಾರೆ. ಬೇರೆಯವರು ಯಾಕೆ ಬೇಕು?'ಎಂದು ಇವನು ಕೇಳಿದ.

ಇವನ ಮುಖ ನೋಡಿ ಬೆಚ್ಚಿಬಿದ್ದ ಹೂಡಿಕೆದಾರ, 'Unbelievable, Incredible' ಎಂದೆಲ್ಲ ಹಲುಬಿ, ಬಡಬಡಿಸಿ, ಉಡದಾರಕ್ಕೆ ಕಟ್ಟಿಕೊಂಡು ಬಂದಿದ್ದ ರೊಕ್ಕದ ಚೀಲವಾದರೂ ಇದೆಯೋ ಅಥವಾ ಹುಬ್ಬಳ್ಳಿಯ ಪಾಕೆಟಮಾರುಗಳು ಅದನ್ನೂ ಲಪಟಾಯಿಸಿಬಿಟ್ಟಾರು ಎಂದು ಹೆದರಿ, ರಾತ್ರೋ ರಾತ್ರಿ ಹೋಟೆಲ್ ಖಾಲಿಮಾಡಿಕೊಂಡು, ಮರುದಿನದ ವಿಮಾನಕ್ಕೂ ಕಾಯದೆ, ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರು ತಲುಪಿ ಅಲ್ಲಿಂದ ಗಾಯಬ್ ಆದವನು ಇವನಿಗೆ ಇನ್ನೂ ಸಿಕ್ಕಿಲ್ಲ. ಹೋಟೆಲ್ ಬಿಲ್ ಕೂಡ ಚುಕ್ತಾ ಮಾಡಿರಲಿಲ್ಲವಂತೆ. ಇವನೇ ಮಾಡಿ ಕೈತೊಳೆದುಕೊಳ್ಳಬೇಕಾಯಿತು.

ಆದರೂ ಹುಬ್ಬಳ್ಳಿಯಲ್ಲಿ ಸಾಫ್ಟ್ವೇರ್ ಕಂಪನಿ ತೆಗೆಯುವ ಉಮೇದಿ ಕಮ್ಮಿಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಬೇರೆ ಏನೋ ಬಿಸಿನೆಸ್ ಮಾಡಿಕೊಂಡಿದ್ದ ಭಾವ ಅಂದರೆ ಅಕ್ಕನ ಗಂಡನ ತಲೆ ಮೇಲೆ ಕೈಯಿಟ್ಟ. ಭಸ್ಮಾಸುರನ ಮಾದರಿಯಲ್ಲಿ. ಮುಗಿಯಿತು ಭಾವನ ಕಥೆ. ವ್ಯಾಪಾರಿ ಭಾವ ಒಂದು ಹತ್ತು ಹದಿನೈದು ಲಕ್ಷಕ್ಕೆ ಹಗುರವಾಗಿಹೋದ. ಅದನ್ನು ತೆಗೆದುಕೊಂಡು ಬಂದು ಟೆಕ್ ಪಾರ್ಕಿನಲ್ಲಿ ಪಾಯಿಖಾನೆ ಸೈಜಿನ ಆಫೀಸ್ ತೆಗೆದು ಕೂತ. ಅಲ್ಲೇ ಓತ್ಲಾ ಹೊಡೆದುಕೊಂಡು ಓಡಾಡಿಕೊಂಡಿದ್ದ ಉಂಡಾಡಿಗುಂಡನಂತಹ ಇಂಜಿನಿಯರಿಂಗ್ ಪದವೀಧರರು ಸಿಕ್ಕರು. ತುಂಬಾ ಚೀಪಾಗಿ ಸಿಕ್ಕರು ಎಂದು ಕರೆದುಕೊಂಡು ಬಂದ. ಅದೇನೋ ಅಂತಾರಲ್ಲ.... If you pay peanuts, you will only get monkeys. ಆ ಮಾದರಿಯ ಮಂದಿ ಸಿಕ್ಕರು. ಗಣಪತಿ ಮಾಡಿ ಅಂದರೆ ಗಣಪತಿಯ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನನ್ನು ಮಾಡಿ ಕೊಟ್ಟರು. ಅಲ್ಲಿಗೆ ಇವನನ್ನು ನಂಬಿ ಏನೋ ಚೂರುಪಾರು ಸಾಫ್ಟ್ವೇರ್ ಕೆಲಸವನ್ನು ಅಮೇರಿಕಾದಿಂದ ಕಳಿಸಿಕೊಟ್ಟಿದ್ದ ಹಳೆಯ ಕಂಪನಿ ಮಾಲೀಕ ಖಡಕ್ಕಾಗಿ ಹೇಳಿದ್ದು ಒಂದೇ ಮಾತು, 'ನೋಡು, ನೀನೇ ಖುದ್ದಾಗಿ ಕೂತು ನನ್ನ ಸಾಫ್ಟವೇರಿಗೆ ತ್ಯಾಪೆ ಹಚ್ಚಿ ಕೊಡುವದಾದರೆ ಓಕೆ. ಬೇರೆ ಯಾರಿಂದನೋ  ತ್ಯಾಪೆ ಹಚ್ಚಿಸಿ  ಕೊಡಿಸುತ್ತೇನೆ ಅಂದರೆ ಬೇಡವೇಬೇಡ. ಅವರು ಮಾಡಿಟ್ಟ ರಾಡಿಯನ್ನು ಸರಿ ಮಾಡಿಕೊಳ್ಳಲು ನಾನು ಇಲ್ಲಿ ಮತ್ತೆ ನಾಲ್ಕು ಜನರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಏನಂತೀ??'

ಹುಬ್ಬಳ್ಳಿಯಲ್ಲಿ ಉಂಡಾಡಿಗುಂಡರನ್ನು ಇಟ್ಟುಕೊಂಡು ಕೂತರೆ ಕೆಲಸವಾದಂತೆಯೇ ಸರಿ ಎಂದು ನಿರ್ಧರಿಸಿ ಟೆಕ್ ಪಾರ್ಕಿನ ಪಾಯಿಖಾನೆ ಸೈಜಿನ ಆಫೀಸಿಗೆ ಬೀಗ ಜಡಿದು, VRL ನೈಟ್ ಬಸ್ ಹಿಡಿದು ಬೆಂಗಳೂರಿಗೆ ಬಂದು ಸೇರಿಕೊಂಡ. ಅತ್ತೆ ಮಾವನ ಜೊತೆ ಧಾರವಾಡದಲ್ಲಿ ಕಿತ್ತಾಡಿಕೊಂಡಿದ್ದ ಪತ್ನಿ ಮತ್ತು ಮಕ್ಕಳು ಕೂಡ ಸೇರಿಕೊಂಡರು.

ಇವನು ಮತ್ತೆ ತನ್ನ ಹಳೆ ಕಂಪನಿಯ ಓಬಿರಾಯನ ಕಾಲದ ಸಾಫ್ಟವೇರಿಗೆ ತ್ಯಾಪೆ ಹಚ್ಚುತ್ತಾ ಕೂತಿದ್ದಾನೆ. ಇವನನ್ನು ಬಿಟ್ಟರೆ ಬೇರೆ ಯಾರಿಗೂ ಆ ತಗಡು ಸಾಫ್ಟವೇರ್ ಅರ್ಥವಾಗದ ಕಾರಣ ಇವನ ಹಳೆಯ ಮಾಲೀಕನಿಗೂ ಬೇರೆ ಗತಿಯಿಲ್ಲ. ಇವನಿಗೆ ಒಂದು ರೀತಿಯ hostage ಆತ. ಇವನ ಜುಟ್ಟು ಅವನ ಕೈಯಲ್ಲಿ ಮತ್ತು ಅವನ ಜುಟ್ಟು ಇವನ ಕೈಯಲ್ಲಿ.

ಅಮೇರಿಕಾದಲ್ಲಿದಾಗ ಅಲ್ಲಿ ಹೋದವರೇ ಕೊಳ್ಳುಬಾಕ ಸಂಸ್ಕೃತಿಗೆ ಒಳಗಾಗಿ ರೊಕ್ಕವನ್ನಷ್ಟೂ ಖರ್ಚು ಮಾಡಿಕೊಂಡರು. ಅವಶ್ಯವಿಲ್ಲದಿದ್ದರೂ ಎರಡೆರೆಡು ದುಬಾರಿ ಕಾರ್ ಕೊಂಡರು. ಮೂರು ಐದು ವರ್ಷಕ್ಕೆ ಕಾರ್ ಬದಲಾಯಿಸಿದರು. ನೆರೆಹೊರೆಯವರ ಮುಂದೆ ತಾವೇ ದೊಡ್ಡ ಸ್ಥಿತಿವಂತರು ಎನ್ನುವಂತೆ ಪೋಸ್ ಕೊಟ್ಟರು. ಅರಮನೆಯಂತಹ ಮನೆ ಕೊಂಡರು. ಅಲ್ಲೂ ಒಂದಿಷ್ಟು ರೊಕ್ಕ ಬ್ಲಾಕ್ ಆಯಿತು. ಭಾರತಕ್ಕೆ ಬರುವಾಗ ಬಂದಷ್ಟಕ್ಕೆ ಮಾರಿ ಬಂದರು. ಅಲ್ಲೂ ಒಂದಿಷ್ಟು ಖೋತಾ. ಮಲಗಿಬಿಟ್ಟಿದ್ದ ಶೇರ್ ಮಾರ್ಕೆಟ್ ಉಳಿದ ಇದ್ದ ಬಿದ್ದ ರೊಕ್ಕವನ್ನು ನುಂಗಿ ನೀರು ಕುಡಿದಿತ್ತು.

ಭಾರತಕ್ಕೆ ಬಂದ ಕೂಡಲೇ ಅಲ್ಲಿ ರಿಯಲ್ ಎಸ್ಟೇಟ್ ಬೂಮ್ ಎನ್ನುವ ಹುಚ್ಚುಮುಂಡೆ ಮದುವೆ ನಡೆದಿತ್ತು. ಇದ್ದಬಿದ್ದ ರೊಕ್ಕವನ್ನೆಲ್ಲ ಕಂಡ ಕಂಡ ಸೈಟು, ಫ್ಲಾಟ್ ಖರೀದಿ ಮಾಡಲು ಬಳಸಿದರು. ಎರಡು ಮೂರು ವರ್ಷಕ್ಕೆ ಅವುಗಳ ಬೆಲೆ ಡಬಲ್ ಆಗಿದ್ದು ನೋಡಿ ಮನಸಿನಲ್ಲೇ ಮಂಡಿಗೆ ತಿಂದರು. ಬರೋಬ್ಬರಿ ತುಪ್ಪ ಹಾಲು ಸಕ್ಕರೆಪುಡಿ ಹಾಕಿಯೇ ತಿಂದರು.

ಮೋದಿ ಸಾಹೇಬರು ಬಂದು ಕೂತರು. ಮೊದಲು ನೋಟು ಅಮಾನ್ಯೀಕರಣ  ಮಾಡಿದರು. ಒಮ್ಮೆಲೇ ಹಣದ, ಅದರಲ್ಲೂ ಕಪ್ಪುಹಣದ ಮತ್ತು ನಕಲಿ ಹಣದ, ಹರಿವು ನಿಂತಿತು. ಹಡಬಿಟ್ಟಿ ಕಪ್ಪುಹಣದ ಕಾರಣದಿಂದ ಆಕಾಶಕ್ಕೆ ಏರಿದ್ದ ರಿಯಲ್ ಎಸ್ಟೇಟ್ ಭೂಮಿಗೆ ಧಡಕ್ ಎಂದು ಬಿದ್ದು, ಅಲ್ಲೇ ನಿಲ್ಲದೆ ಸೀದಾ ಪಾತಾಳಕ್ಕೆ ಹೋಗಿ ಮಕಾಡೆ ಮಲಗಿಬಿಟ್ಟಿತು. ಬಂದ ಬೆಲೆಗೆ ಮಾರೋಣ ಅಂದರೆ ಜನರ ಹತ್ತಿರ ರೊಕ್ಕವೇ ಇಲ್ಲ. ರಿಯಲ್ ಎಸ್ಟೇಟ್ ಫುಲ್ ಠುಸ್!!

ಮೋದಿ ಸಾಹೇಬರು ಇತರ ಮೂಲಭೂತ ಬದಲಾವಣೆಗಳನ್ನು ಮಾಡಲು ಹೊರಟರು. ಅದನ್ನು ವಿರೋಧಿಸಿ ದೇಶಾದ್ಯಂತ ಹೋರಾಟ. ಒಳಗಿನ ಹಿತಶತ್ರುಗಳಿಗೆ ಮೆಣಸಿನ ಹೊಗೆ ಹಾಕಿಸಿಕೊಂಡ ಹಾಗಾಗಿದೆ. ಮೊದಲಾಗಿದ್ದರೆ ಅಲ್ಲೊಂದು ಬಾಂಬ್ ಬ್ಲಾಸ್ಟ್, ಇಲ್ಲೊಂದು ಗಲಭೆ, ಮತ್ತೊಂದು ಕಡೆ ಒಂದು ರೇಪ್ ಅಂತ ಆಗಿ ಜನರ ಗಮನವೆಲ್ಲ ಬೇರೆಡೆ ಹೋಗುತ್ತಿತ್ತು. ನಕಲಿ ರೊಕ್ಕ, ಕಪ್ಪು ಹಣ ಯಥೇಚ್ಛವಾಗಿ ಹರಿದಾಡುತ್ತಿತ್ತು. ನಿಜವಾದ ಸಮಸ್ಯೆಗಳೆಲ್ಲವೂ ಚಾಪೆ ಕೆಳಗಿ ಗುಡಿಸಿಹೋಗುತಿದ್ದವು. ಕಸ ಕಣ್ಣಿಗೆ ಕಾಣದಿದ್ದರೂ ಎಲ್ಲ ಕಸ ಚಾಪೆ ಕೆಳಗೇ ಇರುತ್ತಿತ್ತು. ಈಗ ಮೋದಿಯವರು ಚಾಪೆ, ಗುಡಾರ ಎಲ್ಲ ಎತ್ತಿ ಎಲ್ಲವನ್ನೂ ಝಾಡಿಸಿ ಝಾಡಿಸಿ ಒಗೆಯುತ್ತಿದ್ದಾರೆ ಮತ್ತು ಖದೀಮರನ್ನು ಝಾಡಿಸಿ ಝಾಡಿಸಿ ಒದೆಯುತ್ತಿದ್ದಾರೆ. ಖದೀಮರ ಅರಚಾಟ ವಿವಿಧ ಪ್ರತಿಭಟನೆಗಳ ರೂಪ ಪಡೆದುಕೊಂಡು ಎಲ್ಲ ಕಡೆ ಒಂದು ತರಹದ ಅಶಾಂತಿ ಮತ್ತು ಗದ್ದಲ.

ಹಾಗಾಗಿ ಈಗ ಭಾರತ ಬೇಸರ. 'ಇಲ್ಲಿ ಬರೇ ಗದ್ದಲ ಮಾರಾಯ. ದಿನಾ ಒಂದೊಂದು ರೀತಿಯ ಪ್ರತಿಭಟನೆ. ಸಾಕಾಗಿ ಹೋಗಿದೆ. ಅದಕ್ಕೇ ಅಮೇರಿಕಾಗೆ ವಾಪಸ್ ಬರೋಣ ಅಂತ ಮಾಡಿದ್ದೇವೆ,' ಅಂತ ಹೊಸ ವರಸೆ ಶುರುವಾಗಿದೆ. ಉಲ್ಟಾ ವಲಸೆಯ ವರಸೆ.

ಅಮೇರಿಕಾದಲ್ಲಿ ಹುಟ್ಟಿರುವ ಕಾರಣ ಇಲ್ಲಿನ ಪೌರತ್ವ ಹೊಂದಿರುವ ಮಗ ಇಪ್ಪತ್ತೊಂದು ವರ್ಷಗಳಾದ ಬಳಿಕ ಅಪ್ಪಅಮ್ಮನನ್ನು ಗ್ರೀನ್ ಕಾರ್ಡಿಗಾಗಿ ಪ್ರಾಯೋಜಿಸಬಹುದು. ಒಮ್ಮೆ ಗ್ರೀನ್ ಕಾರ್ಡ್ ಸಿಕ್ಕರೆ ಶಾಶ್ವತವಾಗಿ ಬಂದು ನೆಲೆಸಬಹುದು. ವ್ಯಾಪಾರ ಉದ್ಯೋಗಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮಾಡಬಹುದು.

ಹಾಗಾಗಿ ಇವನ ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ.  ಐವತ್ತೂ ಚಿಲ್ಲರೆ ವಯಸ್ಸಿನಲ್ಲಿ ಉಲ್ಟಾ ವಲಸೆ ಬಂದು ಇಲ್ಲಿ ನೆಲೆಸುವುದೋ ಹೇಗೋ? ಇವನ ಪತ್ನಿಗೆ ಮುಂದೊಂದು ದಿನ ಮಗ ಸೊಸೆಯ ಚಿಕೆತ್ಸೆಯ ಡೋಸ್ ಇಲ್ಲಿ ಸಿಗಲಿದೆ. ತಾನು ತನ್ನ ಅತ್ತೆ ಮಾವಂದಿರಿಗೆ ಕೊಟ್ಟ ಔಷಧದ ಡೋಸಿಗಿಂತ ಸಣ್ಣ ಡೋಸ್ ಇರಲಿ ಮತ್ತು ಔಷಧಿ ಕೊಂಚ ಸಿಹಿ ಇರಲಿ ಅಂತಾದರೂ ಆಶಿಸುವ ಬುದ್ಧಿ ಆಕೆಗಿದೆಯೋ ಎಂದು ನೋಡಿದರೆ ಆಕೆ ಆಗಲೇ ಅಮೇರಿಕಾದಲ್ಲಿ ಮುಂದೆ ಕೊಳ್ಳಬೇಕಾದ ಕಾರುಗಳ ಬಗ್ಗೆ ಮತ್ತು ಮನೆಯ ಗುಂಗಿನಲ್ಲಿ ಕಳೆದುಹೋಗಿದ್ದಾಳೆ.

ಕಾಲಾಯ ತಸ್ಮೈ ನಮಃ

Thursday, February 13, 2020

ತೆಪ್ಪದ ಮೇಲೆ ಕೆಪ್ಪನ ಮಾಡಿ ಬೆಪ್ಪನಂತೆ ತೆಪ್ಪಗೆ ಕೂಡಿಸಯ್ಯ ತಂದೆ...

ಭಾಗವತ ಪುರಾಣದಲ್ಲಿ ಒಂದು ಕಥೆ ಓದಿದ ನೆನಪು. ಎಲ್ಲ ವಿವರಗಳೂ ನೆನಪಿಲ್ಲ. ಆದರೆ ಕಥೆಯ ಸಾರಾಂಶ ಇಷ್ಟು.

ಒಬ್ಬ ಋಷಿ ತನ್ನ ದೈನಂದಿನ ಧಾರ್ಮಿಕ ಕ್ರಿಯಾವಿಧಿಗಳಲ್ಲಿ ತೊಡಗಿರುತ್ತಾನೆ. ಅದೇ ಸಮಯಕ್ಕೆ ಅವನ ಪತ್ನಿ ಅಲ್ಲಿಗೆ ಬರುತ್ತಾಳೆ. ಆಕೆ ಸರಸದ ಮೂಡಿನಲ್ಲಿ ಇರುತ್ತಾಳೆ. ಪತಿ ನೋಡಿದರೆ ಇಲ್ಲಿ ದೇವರ ಪೂಜೆಯಲ್ಲಿ ಮಗ್ನ.

ರಾ ರಾ ಸರಸಕು ರಾ ರಾ... 'ಆಪ್ತಮಿತ್ರ' ಚಿತ್ರದ ನಾಗವಲ್ಲಿಯ ಮಾದರಿಯಲ್ಲಿ ತನ್ನ ಪತಿಯನ್ನು ಸರಸಕ್ಕೆ ಆಹ್ವಾನಿಸುತ್ತಾಳೆ. ಪೂಜೆಯಲ್ಲಿ ಮುಳುಗಿದ್ದ ಪತಿ ಅದನ್ನು ನಯವಾಗಿಯೇ ನಿರಾಕರಿಸುತ್ತಾನೆ. ಪೂಜಾ ಕಾರ್ಯಗಳಲ್ಲಿ ಪುನಃ ಮಗ್ನನಾಗುತ್ತಾನೆ.

ತಾನು ಅಷ್ಟು ಪ್ರೀತಿಯಿಂದ ಸರಸಕ್ಕೆ ಕರೆದರೂ ಪತಿ ನಿರಾಕರಿಸಿಬಿಟ್ಟ ಎಂದು ಋಷಿಯ ಪತ್ನಿ ಬೇಸರಗೊಳ್ಳುತ್ತಾಳೆ. ಅಲ್ಲಿಂದ ಹೋಗುತ್ತಾಳೆ. ಪತ್ನಿ ಬೇಸರಗೊಂಡು ಹೋಗಿದ್ದನ್ನು ಋಷಿ ಗಮನಿಸುತ್ತಾನೆ.

ಸುಮಾರು ಹೊತ್ತಿನ ನಂತರ ಋಷಿಯ ಪೂಜಾಕಾರ್ಯಗಳು ಮುಗಿಯುತ್ತವೆ. ಈಗ ತುರ್ತಾಗಿ ಪತ್ನಿಯನ್ನು ಗಮನಿಸಿಕೊಳ್ಳಬೇಕು. ಆಗ ಕರೆದಾಗ ಸರಸಕ್ಕೆ ಬರಲಿಲ್ಲ ಎಂದು ಬೇಸರಗೊಂಡಿದ್ದಳು. ಈಗ ಹೋಗಿ ಮಸ್ಕಾ ಹೊಡೆದು ರಮಿಸಬೇಕು. ಅದು ತನ್ನ ಕರ್ತವ್ಯ ಎಂದುಕೊಳ್ಳುತ್ತಾನೆ ಋಷಿ.

ಪತ್ನಿಯ ಹತ್ತಿರ ಹೋಗಿ ಮಸ್ಕಾ ಹೊಡೆಯುತ್ತಾನೆ. ಆದರೂ ಆಕೆ ಅಷ್ಟು ಬೇಗ ಸಮಾಧಾನಗೊಳ್ಳುವುದಿಲ್ಲ.

ಈಗ ಋಷಿ heavy duty ಫಿಟ್ಟಿಂಗ್ ಇಡುತ್ತಾನೆ.

'ಪ್ರಿಯೆ, ಒಂದು ವಿಷಯ ಗೊತ್ತೇ?' ಎಂದು ಕೇಳಿದ ಋಷಿ.

'ಏನು??' ಎಂದು ಮುಖ ಊದಿಸಿಕೊಂಡೇ ಕೇಳಿದಳು ಪತ್ನಿ.

'ನಮ್ಮ ಧಾರ್ಮಿಕ ಗ್ರಂಥಗಳು ಏನು ಹೇಳುತ್ತವೆ ಗೊತ್ತೇ?' ಎಂದು ಕೇಳಿದ ಋಷಿ.

'ಅದೆಲ್ಲ ನಿಮಗೇ ಗೊತ್ತು. ನೀವೇ ಹೇಳಿ,' ಎಂದು ಉತ್ತರಿಸಿದಳು ಪತ್ನಿ.

'ಈ ಸಂಸಾರವೆಂಬ ಸಾಗರವನ್ನು ದಾಟಲು ಇರುವ ಅತ್ಯುತ್ತಮ ಸಾಧನವೆಂದರೆ ಪತ್ನಿ ಎಂಬ ತೆಪ್ಪ. ಪತ್ನಿಯೆಂಬ ತೆಪ್ಪವನ್ನು ಉಪಯೋಗಿಸಿಕೊಂಡು ಸಂಸಾರವೆಂಬ ಮಹಾಸಾಗರವನ್ನು ಸುಲಭವಾಗಿ ದಾಟಬಹುದು. ಪತ್ನಿಯಾದ ನಿನ್ನ ಮಹತ್ವ ಅಷ್ಟಿದೆ. ಗೊತ್ತೇ??' ಎಂದು ಫುಲ್ ಫಿಟ್ಟಿಂಗ್ ಇಡುತ್ತಾನೆ.

ಪತ್ನಿ ಫುಲ್ ಖುಷಿಯಾಗಿಬಿಡುತ್ತಾಳೆ. ಪತ್ನಿಯಾಗಿರುವ ತನಗೆ ಇರುವ ಮಹತ್ವ ತಿಳಿದು ಸಂತೋಷದಿಂದ ಉಬ್ಬಿಹೋಗುತ್ತಾಳೆ. ಮೊದಲಿನ ವಿರಸವನ್ನು ಮರೆಯುತ್ತಾಳೆ. ಋಷಿ ಮತ್ತು ಪತ್ನಿ ಸರಸದಲ್ಲಿ ತೊಡಗುತ್ತಾರೆ.

ಈ ಕಥೆಯ ಪ್ರಭಾವವೋ ಏನೋ... ತಲೆತಲಾಂತರಗಳಿಂದ ಪುರುಷರು ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ನಂಬಿಕೊಂಡಿದ್ದಾರೆ. ಆದರೆ ಎಷ್ಟು ಜನ ಯಶಸ್ವಿಯಾಗಿ ದಾಟಿದ್ದಾರೆ? ಎಷ್ಟು ಜನ ತೆಪ್ಪವನ್ನೇರಿ ನಡುನೀರಿನಲ್ಲೇ ಮುಳುಗಿಹೋಗಿ ಗೊಟಕ್ ಅಂದಿದ್ದಾರೆ?

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿ ಉತ್ತಮ ತೆಪ್ಪ ಎನ್ನುವ ಮಾತು ನಿಜವಿರಬಹುದು. ಆದರೆ ಪೂರ್ತಿ ವಿವರ ಅದಲ್ಲ ಅನ್ನಿಸುತ್ತದೆ. ಪೂರ್ತಿ ವಿವರಗಳು ಮಿಸ್ ಆಗಿರುವ ಸಂಶಯ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಎಲ್ಲವನ್ನೂ ಪೂರ್ತಿಯಾಗಿ ಬಿಡಿಸಿ ಹೇಳುವ ರೂಢಿ ಇರಲಿಲ್ಲ. ಏನು ಹೇಳಬೇಕೋ ಅದನ್ನು ಕ್ಲುಪ್ತವಾಗಿ ಸೂಚ್ಯವಾಗಿ ಹೇಳುತ್ತಿದ್ದರು. ನಂತರ ಬೇಕೆಂದರೆ ದಡ್ಡ ಶಿಷ್ಯರಿಗೆ ಗುರುಗಳು ಮಿಸ್ಸಿಂಗ್ ಡೀಟೇಲ್ಸ್ ಕೊಡುತ್ತಿದ್ದರು.

ಈಗ ಅಂತಹ ಗುರುಗಳೂ ಇಲ್ಲ. ಜನರು ಕೂಡ ಪೂರ್ತಿ ವಿವರಗಳನ್ನು ತಿಳಿಯದೇ, ತಿಳಿಯುವ ವ್ಯವಧಾನವೂ ಇಲ್ಲದೆ ಗಡಬಿಡಿ ಮಾಡಿ ಗುಂಡಾಂತರ ಮಾಡಿಕೊಂಡು ಗಂಡಾತರಕ್ಕೆ ಒಳಗಾಗುತ್ತಾರೆ.

ನೀವು ಎಂದಾದರೂ ತೆಪ್ಪದ ಮೇಲೆ ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ. ಬಿದಿರು ಅಥವಾ ಮರದ ದಿಮ್ಮಿಗಳಿಂದ ಮಾಡಿರುವ ತೆಪ್ಪ ಎಂದೂ ನೀರಲ್ಲಿ ಮುಳುಗುವುದಿಲ್ಲ. ಆದರೆ ಬುಡಮೇಲಾಗುವುದು ಜಾಸ್ತಿ. ತೆಪ್ಪದ ಮೇಲೆ ಪ್ರಯಾಣ ಮಾಡುವುದೂ ಸಹ ಒಂದು ಕಲೆ. ತೆಪ್ಪ ನಡೆಸುವ ನಾವಿಕ ನುರಿತ ವೃತ್ತಿಪರನೇ ಆಗಿದ್ದರೆ ಕಾಳಜಿ ವಹಿಸುತ್ತಾನೆ.

ದೋಣಿ ಹತ್ತಿದಂತೆ  ದುಡುಂ ಅಂತ ತೆಪ್ಪದ ಮೇಲೆ ಕುಪ್ಪಳಿಸಿ ಹತ್ತುವಂತಿಲ್ಲ. ತೆಪ್ಪದ center of gravity ಯ ಸುತ್ತಲಿಂದ ತೆಪ್ಪದ ಮೇಲೆ ಜನರು ಹತ್ತುತ್ತಾರೆ. ಬರೋಬ್ಬರಿ ಬ್ಯಾಲೆನ್ಸ್ ಇರಬೇಕು. ಒಮ್ಮೆ ತೆಪ್ಪ ಹತ್ತಿದ ಮೇಲೆ ನಿಂತ ಜಾಗದಲ್ಲೇ ತೆಪ್ಪಗೆ ನಿಂತಿರಬೇಕು. ಅಥವಾ ಕೂರುವಂತಹ ಜಾಗದಲ್ಲಿದ್ದರೆ ಕೂರಬಹುದು. ತೆಪ್ಪ ನಡುನೀರಿನಲ್ಲಿರುವಾಗ ಕುಣಿದು ಕುಪ್ಪಳಿಸುವಂತಿಲ್ಲ. ಇಳಿಯುವಾಗಲೂ ಅಷ್ಟೇ. ಸಾವಕಾಶವಾಗಿ ಇಳಿಯಬೇಕು. ಯಾವಾಗಲೂ ತೆಪ್ಪದ center of gravity ಬರೋಬ್ಬರಿ ಇರಬೇಕು. ತಪ್ಪಿದರೆ ತೆಪ್ಪ ಬುಡಮೇಲಾಗುತ್ತದೆ. ಆದರೂ ತೇಲುತ್ತಲೇ ಇರುತ್ತದೆ. ಮೇಲಿದ್ದವರು ಮಾತ್ರ ಜಲಸಮಾಧಿ ಹೊಂದುತ್ತಾರೆ.

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಅವಲಂಬಿಸುವವರೂ ಕೂಡ ಇಂತಹ ತಪ್ಪುಗಳನ್ನು ಮಾಡುತ್ತಾರೆ. ತೆಪ್ಪದ ಮೇಲೆಯೇ ಅಂದರೆ ಪತ್ನಿಯ ಜಾಸ್ತಿ ಅವಲಂಬನೆ. ತೆಪ್ಪ ನಡೆಸುವ ನಾವಿಕ  ಅಂದರೆ ದೇವರನ್ನು ಕಡೆಗಣಿಸಿಬಿಡುತ್ತಾರೆ. ಪತ್ನಿಯೆಂಬ ತೆಪ್ಪ ನಿಮ್ಮದೇ ಆದರೂ ಸಂಸಾರ ಸಾಗರದಲ್ಲಿ ಅದನ್ನು ನಡೆಸುವ ನಾವಿಕ ದೇವರು.

ತೆಪ್ಪದ ಮೇಲೆ ಸರಿಯಾಗಿ ತೆಪ್ಪಗೆ ಕುಳಿತುಕೊಳ್ಳಿ. ಕಿವಿಗಳನ್ನು ಕೆಪ್ಪನಂತೆ ಮಾಡಿಕೊಳ್ಳಿ. ಏನೂ ಮಾಡದೆ ಸುಮ್ಮನೆ ಬೆಪ್ಪನ ತರಹ ಕುಳಿತುಕೊಳ್ಳಿ. ಇಲ್ಲವಾದರೆ ತೆಪ್ಪಅಂದರೆ ನಿಮ್ಮ ಪತ್ನಿ ಬುಡಮೇಲಾಗುತ್ತಾಳೆ. ತೆಪ್ಪಕ್ಕೆ ಉರ್ಫ್ ಅವಳಿಗೆ ಏನೂ ಆಗಲಿಕ್ಕಿಲ್ಲ. ತೆಪ್ಪದ ಮೇಲೆ ಕುಳಿತಿರುವ ನೀವು ಮಾತ್ರ ಮಟಾಷ್! ತೆಪ್ಪ ಮತ್ತೆ ತೇಲುತ್ತದೆ. ನಾವಿಕನಿಗೆ ಈಜು ಬರುವ ಕಾರಣ ಆತ ಮತ್ತೆ ತೆಪ್ಪ ವಾಪಸ್ ಹತ್ತುತ್ತಾನೆ. ತೆಪ್ಪದ ಮೇಲೆ ಪ್ರಯಾಣಿಸಬಹುದಾದ ಹೊಸ ಪ್ರಯಾಣಿಕನಿಗಾಗಿ  ಕಾಯುತ್ತಾನೆ. ಪತ್ನಿಯೆಂಬ ತೆಪ್ಪವೂ ಕಾಯುತ್ತದೆ. ಹೊಸ ಪತಿಗಾಗಿ. ತೆಪ್ಪ ಬುಡಮೇಲಾಗುವುದು ಅಂದರೆ ಸೋಡಾಚೀಟಿ ಡೈವೋರ್ಸ್ ಕೇಸ್. ತೆಪ್ಪದ ಮೇಲೆ ಹೊಸ ಪ್ರಯಾಣಿಕ ಬಂದ ಎಂದರೆ ಮೊದಲಿನ ಪತ್ನಿ ಮರುವಿವಾಹ ಮಾಡಿಕೊಂಡಳು ಎಂದು ಅರ್ಥ.

ಹೀಗಾಗಿ ಸಂಸಾರ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಹತ್ತುವ ವಿಚಾರವಿರುವವರು ತೆಪ್ಪದ ಮೇಲೆ ಕೆಪ್ಪನಾಗಿ ತೆಪ್ಪಗೆ ಬೆಪ್ಪನ ಹಾಗೆ ಕುಳಿತುಕೊಳ್ಳಬೇಕು. ಹಾಗೆ ಮಾಡಿದರೆ ಸಂಸಾರ ಸಾಗರವನ್ನು ಯಶಸ್ವಿಯಾಗಿ ದಾಟುವ ಸಾಧ್ಯತೆಗಳು ಇವೆ. ಖಾತ್ರಿ ಇಲ್ಲ ಮತ್ತೆ.

ಅದಕ್ಕೇ ಅಲ್ಲವೇ ಹೇಳೋದು 'ಪತ್ನಿ ಮಾತಾಡುವಾಗ ಪತಿ ಸುಮ್ಮನಿರಬೇಕು. ಪತ್ನಿ ಸುಮ್ಮನಿದ್ದಾಗ ಪತಿ ಮಾತಾಡಬಾರದು.' ಕೆಪ್ಪನಾಗಿ ಬೆಪ್ಪನಂತೆ ಇರಬೇಕು. ಪತಿ ಜಾಸ್ತಿ ಬೆಪ್ಪನಾದಾಗ ಅಪ್ಪನಾಗುತ್ತಾನೆ. ಬೆಪ್ಪ ಅಪ್ಪ. ಅಮ್ಮನಿಗೆ ತಲೆಕೆಟ್ಟಾಗ ಗುಮ್ಮನಾಗುತ್ತಾಳೆ. ಅಮ್ಮ ಗುಮ್ಮ.

ಸಂಸಾರ ಸಾಗರವನ್ನು ದಾಟಲು ಪತ್ನಿಗಿಂತ ಉತ್ತಮವಾದ ತೆಪ್ಪವಿಲ್ಲವೇ ಎಂದು ಕೇಳಿದರೆ. ಇಲ್ಲ ಎಂದು ಹೇಳಬೇಕಾಗುತ್ತದೆ. ತೆಪ್ಪ ಇಲ್ಲ. ಆದರೆ ತೆಪ್ಪಕ್ಕಿಂತ ಉತ್ತಮವಾದ ಬೇರೆ ಸಾಧನ ಇದೆ. ಅದು ಅಧ್ಯಾತ್ಮ. ಇದು ರಾಮಕೃಷ್ಣ ಪರಮಹಂಸರು ಹೇಳಿದ್ದು.

ಒಮ್ಮೆ ರಾಮಕೃಷ್ಣರು ಶಿಷ್ಯರ ಜೊತೆ ಚಿಕ್ಕದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ರಭಸದ ಗಾಳಿಗೆ ದೋಣಿ ವಿಪರೀತವಾಗಿ ಹೊಯ್ದಾಡುತ್ತಿತ್ತು. ಪಕ್ಕದಲ್ಲೇ ಬೃಹದಾಕಾರದ ಹಡಗೊಂದು ಲಂಗರು ಹಾಕಿ ನಿಂತಿತ್ತು. ಅದನ್ನು ತೋರಿಸುತ್ತ ರಾಮಕೃಷ್ಣರು ಹೇಳಿದರು, 'ಆ ದೊಡ್ಡ ಹಡಗನ್ನು ನೋಡಿ. ಸಪ್ತಸಾಗರಗಳನ್ನೂ ಸಹ ಲೀಲಾಜಾಲವಾಗಿ ಯಾವುದೇ ಅಡೆತಡೆಗಳಿಲ್ಲದೆ ದಾಟಬಲ್ಲದು. ಗುರುಗಳು, ಪುಣ್ಯಪುರುಷರು, ದೇವರು, ಅಧ್ಯಾತ್ಮ  ಅಂದರೆ ಅಂತಹ ದೊಡ್ಡ ಹಡಗು ಇದ್ದಂತೆ. ಸಾಗರ ದಾಟಲು ಜನರು ಅಂತಹವುಗಳನ್ನು ಅವಲಂಬಿಸಬೇಕೇ ವಿನಃ ತಾತ್ಕಾಲಿಕವಾದ ಸಾಧನಗಳಾದ ಚಿಕ್ಕದೋಣಿಗಳನ್ನಲ್ಲ.' Gem of wisdom!

ತೆಪ್ಪ ಹತ್ತಿ ಸಾಗರ ದಾಟಲಿಕ್ಕೆ ಆಗಲಿಕ್ಕಿಲ್ಲ. ಆದರೆ ದೊಡ್ಡ ಹಡಗುಗಳು ದೂರದ ಸಮುದ್ರದಲ್ಲಿ ಲಂಗರು ಹಾಕಿರುವ ಕಾರಣ ಅವುಗಳ ಹತ್ತಿರ ಹೋಗಿ ಮುಟ್ಟಿಕೊಳ್ಳಲಿಕ್ಕಾದರೂ ತೆಪ್ಪ, ಚಿಕ್ಕದೋಣಿ ಮುಂತಾದ ತಾತ್ಕಾಲಿಕ ಸಾಧನಗಳ ಅವಶ್ಯಕತೆ ಇರುತ್ತದೆ. ಅವನ್ನು ಅಷ್ಟರಮಟ್ಟಿಗೆ ಉಪಯೋಗಿಸಿಕೊಂಡು, ತಕ್ಕ ಸಮಯದಲ್ಲಿ ಅವನ್ನು ತ್ಯಜಿಸಿ, ದೊಡ್ಡ ಹಡಗನ್ನು ಹತ್ತಿದವನು ಜಾಣ. ಅದು ಬಿಟ್ಟು ತೆಪ್ಪದಲ್ಲೇ ಸಾಗರ ದಾಟುತ್ತೇನೆ ಅಂತ ಹೊರಟವ ನಡುನೀರಿನಲ್ಲೇ ಮಟಾಷ್ ಆಗುವ ಸಾಧ್ಯತೆಗಳು ಹೆಚ್ಚು.

ತೆಪ್ಪ ಬಿಟ್ಟು ಹಡಗು ಹತ್ತಿ ಅಂದರೆ ಹೆಂಡತಿ ಮಕ್ಕಳನ್ನು ಎಲ್ಲ ಬಿಟ್ಟು ಸನ್ಯಾಸಿಯಾಗಿ ಗಡ್ಡ ಬಿಟ್ಟು ಗುಡ್ಡ ಹತ್ತಿ ಅಥವಾ ಹಡಗು ಹತ್ತಿ ಎಂದು ಅರ್ಥವೇ? ಆ ಅರ್ಥವೂ ಇದೆ. ಕೆಲವು ಸಂಪ್ರದಾಯಗಳಲ್ಲಿ ಕುಟುಂಬಸ್ಥರು ತಕ್ಕ ಸಮಯದಲ್ಲಿ ಕುಟುಂಬದ ಸದಸ್ಯರ ಅನುಮತಿ ಪಡೆದುಕೊಂಡು ಸನ್ಯಾಸಿಯಾಗಬಹುದು.  ಸಂಸಾರ ಸಾಗರವನ್ನು ದಾಟಲು ಅಧ್ಯಾತ್ಮವೆಂಬ ದೊಡ್ಡ ಹಡಗು ಅವಶ್ಯವಾದರೂ ಮೊದಲು ಉಪಯೋಗಿಸಿದ ತೆಪ್ಪ, ಚಿಕ್ಕದೋಣಿಗಳನ್ನು (ಕುಟುಂಬ) ಸಂಪೂರ್ಣವಾಗಿ ತ್ಯಜಿಸಬೇಕೆಂದೇನೂ ಇಲ್ಲ. ದೊಡ್ಡ ಹಡಗು ಎಲ್ಲವನ್ನೂ ಹೊತ್ತೊಯ್ಯಬಲ್ಲದು. ನಿಮ್ಮ ತೆಪ್ಪವೊಂದು ಅದಕ್ಕೆ ದೊಡ್ಡ ಮಾತಲ್ಲ. ನೀವು ಹಡಗು ಹತ್ತಿ. ನಿಮ್ಮ ತೆಪ್ಪವನ್ನೂ ತೆಪ್ಪಗೆ ಹಡಗು ಹತ್ತಿಸಿ. ಜೊತೆಯಲ್ಲಿ ಜೊತೆಜೊತೆಯಾಗಿ ಸಂಸಾರವೆಂಬ ಸಾಗರವನ್ನು ಅಧ್ಯಾತ್ಮವೆಂಬ ಹಡಗಿನಲ್ಲಿ ಯಶಸ್ವಿಯಾಗಿ ದಾಟಿ. ತೆಪ್ಪವಿಲ್ಲದವರು ಈಜಿ ಹಡಗನ್ನು ಮುಟ್ಟಿಕೊಳ್ಳಬಹುದು. ನಂತರ ಹತ್ತಬಹುದು. ಕೊಂಚ ಕಷ್ಟದ ಕೆಲಸ. ಈಜಿನಲ್ಲಿ ಪರಿಣಿತಿ ಬೇಕಾಗುತ್ತದೆ. ಸಾಕಷ್ಟು ಸಮಯ, ಶ್ರಮ, ಸಾಧನೆ ಬೇಡುತ್ತದೆ. ಹಾಗಾಗಿ ಹೆಚ್ಚಿನವರಿಗೆ ಪ್ರಾರಂಭದಲ್ಲಿ ತೆಪ್ಪವೇ ಒಳ್ಳೆಯದು. ತೆಪ್ಪದ ಸಹಾಯವಿಲ್ಲದೆ ಈಜಿ ಹಡಗನ್ನು ಮುಟ್ಟಿಕೊಳ್ಳುವುದು ಅಂದರೆ ಖಡಕ್ ಬ್ರಹ್ಮಚರ್ಯದ ಸಾಧನೆಯಿಂದ ಅಧ್ಯಾತ್ಮದತ್ತ ಸಾಗುವುದು ಎಂದರ್ಥ. ಆ ಮಾರ್ಗ ಎಲ್ಲರಿಗೂ ಹೇಳಿದ್ದಲ್ಲ. ಎಲ್ಲರಿಗೂ ಸಾಧ್ಯವಿಲ್ಲ.

ಹೊಸದಾಗಿ ತೆಪ್ಪ ಹತ್ತುವವರು ವಿಚಾರ ಮಾಡಿ ಹತ್ತಿ. ತೆಪ್ಪ ಗಮ್ಯಕ್ಕೊಂದು ಸಾಧನವೇ ವಿನಃ ಗಮ್ಯವೇ ಅಲ್ಲ.

ಪತಿಗೆ ಪತ್ನಿ ತೆಪ್ಪ. ಪತ್ನಿಗೆ ಪತಿ ತೆಪ್ಪ. ಮಕ್ಕಳಿಗೆ ಅಪ್ಪ ಅಮ್ಮ ತೆಪ್ಪ.

ತೆಪ್ಪ ಎಂದ ಕೂಡಲೇ ಬೆಪ್ಪನಾಗಿ, ಕೆಪ್ಪನಂತೆ ಮತ್ತು ತೆಪ್ಪಗೆ ಎನ್ನುವ ಶಬ್ದಗಳು ಕಿವಿಯಲ್ಲಿ ಮೊಳಗಬೇಕು. ಹಾಗಾದಾಗ ಮಾತ್ರ ತೆಪ್ಪದ ಮೇಲಿನ ಪಯಣ ಸುರಕ್ಷಿತವಾಗಿರುತ್ತದೆ.

ಕೌಲಗಿ ಟೀಚರ್ ಬರೆದ ಪುಸ್ತಕ...ಇನ್ನೂಓದಿಲ್ಲ

ಸ್ವಲ ದಿವಸಗಳ ಹಿಂದೆ ಧಾರವಾಡ ಕಡೆಯಿಂದ ಸುದ್ದಿ ಬಂತು - ಕೌಲಗಿ ಟೀಚರ್ ಪುಸ್ತಕ ಬರೆದಿದ್ದಾರೆ. ಅಷ್ಟೇ ಸುದ್ದಿ. ಯಾವ ಪುಸ್ತಕ, ಪುಸ್ತಕದ ಹೆಸರೇನು, ಯಾವ ಭಾಷೆಯಲ್ಲಿದೆ, ಇತ್ಯಾದಿ ಮಾಹಿತಿ ಕೇಳಿದರೆ ಗೊತ್ತಿಲ್ಲ. ಯಾಕೆಂದರೆ ನನ್ನ ಧಾರವಾಡ ಸ್ನೇಹಿತರು ನನ್ನ ಜೊತೆ ಎಲ್ಲ ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಮಾಹಿತಿ ಅವರಿಗೆ ಗೊತ್ತಿರುವುದಿಲ್ಲ. ಮಾಡಲಿಕ್ಕೆ ಸಾವಿರ ಕೆಲಸ ಅವರಿಗೆ. ನನ್ನ ಹಾಗೆ ಉದ್ಯೋಗಿಲ್ಲದ ಮಂದಿಯೇ ಅವರು?

ಒಟ್ಟಿನಲ್ಲಿ ನಮ್ಮ ಶಾಲಾ ಶಿಕ್ಷಕಿ ಕೌಲಗಿ ಟೀಚರ್ ಪುಸ್ತಕ ಬರೆದಿದ್ದಾರೆಂದು ತಿಳಿಯಿತು. ತಿಳಿದ ಮೇಲೆ ಅದರ ಬಗ್ಗೆ ಮಾಹಿತಿ ಹುಡುಕಬೇಕಾಯಿತು. ಎಲ್ಲಾ ಪುಸ್ತಕಗಳು ಸಿಗುವ, ಎಲ್ಲವನ್ನೂ ಕರುಣಿಸುವ ಮಾತೃಸ್ವರೂಪಿ ಅಮ್ಮಿಜಾನ್ (amazon) ಜಾಲತಾಣದಲ್ಲೂ ಕೌಲಗಿ ಟೀಚರ್ ಬರೆದ ಪುಸ್ತಕ ಇಲ್ಲ. ಸಪ್ನಾ ಆನ್ಲೈನ್ ಪುಸ್ತಕದ ಮಳಿಗೆಯಲ್ಲೂ ಇಲ್ಲ. ಕೌಲಗಿ ಅಂತ ಸರ್ಚ್ ಕೊಟ್ಟರೆ ಬೇರೆ ಯಾರೋ ಕೌಲಗಿ ಬರೆದ ಪುಸ್ತಕಗಳು ಕಂಡು ಬಂದವು. ಒಂದು ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟಿದ್ದು. ಅದು ಅವರ ಪುತ್ರ  ಬರೆದಿದ್ದು ಅಂತ ಕಾಣುತ್ತದೆ. ಇನ್ನೂ ಹೊಸ ಪುಸ್ತಕವಾದ ಕಾರಣ ಆನ್ಲೈನ್ ಮಳಿಗೆಗಳಲ್ಲಿ ಬಂದ ಹಾಗೆ ಕಾಣುವುದಿಲ್ಲ. ಇರಲಿ ಮುಂದೆ ಸಿಕ್ಕೀತು. ಅಥವಾ ಧಾರವಾಡದಲ್ಲಿ ಕನ್ನಡ ಪುಸ್ತಕಗಳ ಭಂಡಾರವನ್ನೇ ಮನೆಯಲ್ಲಿ ಇಟ್ಟುಕೊಂಡಿರುವ ನಮ್ಮ ಪರಿಚಿತ ಜನರಿದ್ದಾರೆ. ಅವರ ಖಾಸಗಿ ಸಂಗ್ರಹದಲ್ಲಿ ಟೀಚರ್ ಬರೆದ ಪುಸ್ತಕ ಸಿಕ್ಕೀತು.

ಗೂಗಲ್ ಇರುವಾಗ ಹೆಚ್ಚಿನ ಮಾಹಿತಿ ಹುಡುಕಲೇನು ಕಷ್ಟ?

ಹುಡುಕಿದರೆ ಪುಸ್ತಕದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿತು, ಅವಧಿ ಜಾಲತಾಣದಲ್ಲಿ.

ಪುಸ್ತಕದ ಹೆಸರು - 'ನೀರ ಮೇಲೆ ಅಲೆಯ ಉಂಗುರ'.

'ಬಪ್ಪರೇ! ನಮ್ಮ ಟೀಚರ್ ಭಾಳ ಶಾಣ್ಯಾ ಇದ್ದಾರ!' ಎನ್ನುವ ಭಾವನೆ ಮನದಲ್ಲಿ ಮೂಡಿತು. ಶಾಣ್ಯಾನೇ? ಯಾಕೆ?

ಅದು ನೋಡಿ..."ನೀರಿನಲ್ಲಿ" ಅಲೆಯ ಉಂಗುರು ಅಂತ ಇಟ್ಟಿಲ್ಲ. ನೀರ "ಮೇಲೆ" ಅಲೆಯ ಉಂಗುರ ಅಂತ ಇಟ್ಟಿದ್ದಾರೆ. There lies the subtle difference. ಮಾಸ್ಟರ್ ಸ್ಟ್ರೋಕ್ ಅಂದರೆ ಅದು.

'ನೀರಿನಲ್ಲಿ ಅಲೆಯ ಉಂಗುರ' ಎನ್ನುವುದು ಪುರಾತನ ಕಾಲದ ಸುಮಧುರ ಚಿತ್ರಗೀತೆಯೊಂದರ ಆರಂಭಿಕ ಸಾಲು. ಒಂದು ಚಿತ್ರಗೀತೆ ಪ್ರಖ್ಯಾತವಾಯಿತು ಅಂದರೆ ಅಷ್ಟೇ ಮತ್ತೆ. ಅದರ ಅಂದ ಚಂದಗಳನ್ನು ಪೂರ್ತಿಯಾಗಿ ರಾಡಿಯೆಬ್ಬಿಸುವ parody ಗಳು ಬರುತ್ತವೆ ಮತ್ತು ಅವೇ ಮೂಲಗೀತೆಗಿಂತ ಹೆಚ್ಚು (ಕು)ಖ್ಯಾತವಾಗಿ ಬಿಡುತ್ತವೆ. ಕೌಲಗಿ ಟೀಚರ್ ಅಪ್ಪಿತಪ್ಪಿಯಾದರೂ 'ನೀರಿನಲ್ಲಿ ಅಲೆಯ ಉಂಗುರ' ಎಂದು ಹೆಸರಿಟ್ಟಿದ್ದರೆ ಅದೂ ಕೂಡ parody ಆಗುತ್ತಿತ್ತೋ ಏನೋ. ನಮ್ಮ ಧಾರವಾಡ ಕಡೆ ಎಲ್ಲವನ್ನೂ ಅಪಭ್ರಂಶ ಮಾಡಿ ವಿಕೃತಾನಂದ ತೆಗೆದುಕೊಳ್ಳುವುದು ಧಾರವಾಡದ ಮೂಲನಿವಾಸಿಗಳ ವಿಶೇಷ ಗುಣಗಳಲ್ಲಿ ಒಂದು.

'ನೀರಿನಲ್ಲಿ ಅಲೆಯ ಉಂಗುರ... ' ಎಂತಹ ಸುಮಧುರ ಗೀತೆ. ತುಂಬಾ ಸುಂದರವಾದ ಗೀತಸಾಹಿತ್ಯ. ನಮ್ಮ ಧಾರವಾಡದಲ್ಲಿ ಕಿಡಿಗೇಡಿಗಳು ಯಾರೂ ಅದನ್ನು ಹಾಗೆ ಹಾಡುವುದಿಲ್ಲ. ಅವರ ಅಂದಾಜೇ ಬೇರೆ.

'ನೀರಿನಲ್ಲಿ ಅಲೆಯ ಉಂಗುರ
ಎಲ್ಲೆಲ್ಲೋ ಗುಂಗುರ ಕೂದಲ
ಕೈಯಾಗ ಕೊಟ್ಟನಲ್ಲ
ಬಾಯಾಗ ಇಟ್ಟನಲ್ಲ
..
..
ನೀರಿನಲ್ಲಿ ಅಲೆಯ ಉಂಗುರ'

'ಏನಲೇ, ಹೇಶಿ ಮಂಗ್ಯಾನಿಕೆ!? ಏನು ಅಸಹ್ಯ ಅಸಹ್ಯ ಮಾತಾಡ್ತೀ! ಎಂಥಾ ಛಂದ ಹಾಡಿನ ಪೂರ್ತಿ ರಾಡಿ ಎಬ್ಬಿಸಿ ಇಟ್ಟಿ ನೋಡು!' ಅಂತ ಆಕ್ಷೇಪಿಸಿದರೆ ನಿಮಗೆ ಧಾರವಾಡದ ಫೇಮಸ್ ಬೂಚ್ ಬೀಳುವುದು ಗ್ಯಾರಂಟಿ. ಅಷ್ಟು ಜಾಬಾದ್ ಇರುತ್ತಾರೆ ನಮ್ಮ ಕಡೆ ಜನ.

'ಅಲ್ಲಪಾ ಹೀರೋ, ಏನು ತಪ್ಪು ಅದ ಇದ್ರಾಗ??' ಅಂತ ನಿಮಗೇ ವಾಪಸ್ ಇಡುತ್ತಾರೆ.

ಪೂರ್ವಗ್ರಹ ಪೀಡಿತವಾಗಿರುವುದು ನಿಮ್ಮ ಮನಸ್ಸು. ನೀವು ಏನೇನೋ ವಿಚಾರ ಮಾಡಿ, 'ಏನಲೇ, ಅದೇನು ಕೆಟ್ಟ ಹೊಲಸ್ ಹೊಲಸ್ lyrics?? ಕೈಯ್ಯಾಗ ಕೊಡೋದಂತ. ಬಾಯಾಗ ಇಡೋದಂತ! ಅಸಹ್ಯ!' ಅಂತೇನಾದರೂ ಆಕ್ಷೇಪಿಸಿದಿರೋ ಅದಕ್ಕೆ ಖಡಕ್ ಬೂಚ್ ರೆಡಿ.

'ಅಲ್ಲಪಾ ದೋಸ್ತ, ಎಲ್ಲಾ ಹೊಲಸು ನಿನ್ನ ತಲಿಯಾಗದ. ನನ್ನ ಹಾಡಿಗಾಗ ಏನೂ ಹೊಲಸಿಲ್ಲ. ಕೈಯಾಗ ಕೊಡೋದು, ಬಾಯಾಗ ಇಡೋದು ಅಂದ್ರ ಪ್ರಸಾದ ಮಾರಾಯ. ದೇವರ ಪ್ರಸಾದವನ್ನು  ಒಂದೋ ಕೈಯಾಗ ಕೊಡ್ತಾರ. ಒಂದು ವೇಳೆ ಕೈ ಸ್ವಚ್ಛ ಇರಲಿಲ್ಲ ಅಂದ್ರ ಸೀದಾ ಬಾಯಾಗೇ ಇಡ್ತಾರ. ಗೊತ್ತಾತ? ಈಗರೇ ಗೊತ್ತಾತ??' ಅಂತ ನಿಮಗೆ ಬರೋಬ್ಬರಿ ಉಲ್ಟಾ ಬತ್ತಿ ಇಟ್ಟು ಬ್ಲಾಸ್ಟ್ ಮಾಡಿರುತ್ತಾರೆ.

'ನಿನ್ನ ದರಿದ್ರ ಹಾಡಿನಾಗ ಬರೋದು ದೇವರ ಪ್ರಸಾದನೇ? ನಾ ಏನೋ ಬೇರೇನೇ ತಿಳಿದುಕೊಂಡೆ... ' ಅಂತ ನೀವು ಅಂದೇ ಅನ್ನುತ್ತೀರಿ.

ಆವಾಗ ಗಾಯದ ಮೇಲೆ ಬರೋಬ್ಬರಿ ಮತ್ತೊಂದಿಷ್ಟು ಉಪ್ಪನ್ನು ತಿಕ್ಕುತ್ತಾರೆ. 'ಅದಕ್ಕೇ ಹೇಳಿದೆ ದೋಸ್ತ...ಅರ್ಥ ಅನರ್ಥ ಎಲ್ಲಾ ನಮ್ಮ ನಮ್ಮ ತಲಿಯಾಗ ಇರ್ತಾವ. ನಿನ್ನ ತಲಿಯಾಗ  ಏನು ಬಂದಿತ್ತು ಅಂತ ನಾ ಈಗ ಹೇಳಲಾ?' ಎಂದು ಬಿಡುತ್ತಾರೆ.

ಬತ್ತಿ ಇಡಿಸಿಕೊಂಡು ಬ್ಯಾಕ್ ಬ್ಲಾಸ್ಟ್ ಮಾಡಿಸಿಕೊಂಡಿರುವ ನೀವು ಅಷ್ಟಕ್ಕೇ ಸುಮ್ಮನಾಗುತ್ತೀರಿ. ಯಾರಿಗೆ ಬೇಕು ಜಾಸ್ತಿ ಗೂಟ ಬಡಿಸಿಕೊಳ್ಳೋದು ಅಂತ ಸುಮ್ಮನಾಗುತ್ತೀರಿ.

('ನೀರಿನಲ್ಲಿ ಅಲೆಯ ಉಂಗುರ... '  ಹಾಡಿನ parody ಯನ್ನು ನಮ್ಮ ಊರಿನ ಕಡೆ ಭಾಷೆಯಲ್ಲಿ ನಾನೂ ಮಾಡಿದ್ದೆ. ಅಂತ್ಯದಲ್ಲಿದೆ. ಓದಿ. ಎಂಜಾಯ್ ಮಾಡಿ.)

ನಮ್ಮ ಧಾರವಾಡಿಗಳ ಕರಾಮತ್ತು ಅಂದರೆ ಹೀಗೆ. ಗೀತೆಯೊಂದನ್ನು ರಾಡಿ ಎಬ್ಬಿಸಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವುದನ್ನು ಅವರಿಂದಲೇ ಕಲಿಯಬೇಕು.

'ನೀರಿನ ಮೇಲೆ ಅಲೆಯ ಉಂಗುರ' ಎಂದು ಹೆಸರಿಡುವ ಮೂಲಕ ಪಾಪ್ಯುಲರ್ parody ಯಿಂದ ನಮ್ಮ ಟೀಚರ್ ಪುಸ್ತಕ ಬಚಾವಾಗಿದೆ. ಇಲ್ಲವಾದರೆ ನಮ್ಮ ಉಡಾಳ ದೋಸ್ತರು ಇದಕ್ಕೂ ಒಂದು 'ಗತಿ' ಕಾಣಿಸುವುದರಲ್ಲಿ ಸಂಶಯವಿರಲಿಲ್ಲ. ಇದಕ್ಕೆ ಏನೆಂದು parody ಮಾಡುತ್ತಾರೋ ಗೊತ್ತಿಲ್ಲ. ಗೊತ್ತಾದಾಗ ತಿಳಿಸುತ್ತೇನೆ.

ಕೌಲಗಿ ಟೀಚರ್ ಬರೆದ ಪುಸ್ತಕದ ಹೆಸರು ಗೊತ್ತಾಯಿತು. ಈಗ ಸ್ವಲ್ಪ ದಿವಸಗಳ ಹಿಂದೆ ಬಿಡುಗಡೆಯಾಯಿತು ಅಂತ ತಿಳಿಯಿತು. ಇನ್ನೂ ಸಿಕ್ಕಿಲ್ಲ ಎಂದೂ ಹೇಳಿದೆ.

ಪುಸ್ತಕದ ಸಾಫ್ಟ್ ಕಾಪಿ ಎಲ್ಲಾದರೂ ಸಿಗಬಹುದೇ ಎಂದು ಹುಡುಕಿದೆ. ಸಿಗಲಿಲ್ಲ. ನಿಮಗೆ ಸಿಕ್ಕಿದರೆ ತಿಳಿಸಿ.

ಆದರೆ ಕೌಲಗಿ ಟೀಚರ್ ಬ್ಲಾಗ್ ಸಿಕ್ಕಿತು. ಲಿಂಕ್ ಇಲ್ಲಿದೆ. ಈಗಿತ್ತಲಾಗೆ update ಮಾಡಿಲ್ಲ ಎಂದು ಕಾಣುತ್ತದೆ.

ಪುಸ್ತಕ ಸಿಗಲಿಲ್ಲ. ಬ್ಲಾಗ್ ಆದರೂ ಸಿಕ್ಕಿತಲ್ಲ ಎನ್ನುವ ಸಂತೋಷ. ನಮ್ಮ ಶಿಕ್ಷಕ ಶಿಕ್ಷಕಿಯರಲ್ಲಿ ತುಂಬಾ ಜನ ಪ್ರತಿಭಾವಂತರು ಮತ್ತು ಸೃಜನಶೀಲರು ಇದ್ದರು. ಆದರೆ ನನಗೆ ತಿಳಿದ ಮಟ್ಟಿಗೆ ಯಾರೂ ಬ್ಲಾಗ್ ಇತ್ಯಾದಿ ಮಾಡಿಕೊಂಡು ಸಕ್ರಿಯರಾಗಿದ್ದು ನನಗೆ ಗೊತ್ತಿರಲಿಲ್ಲ. ಕೌಲಗಿ ಟೀಚರೇ ಮೊದಲನೆಯವರು. ಬೇರೆ ಶಿಕ್ಷಕರ ಬ್ಲಾಗ್ ಇತ್ಯಾದಿ ಸಿಕ್ಕರೆ ತಿಳಿಸಿ.

ನಿನ್ನೆ ಸುಮಾರು ಹೊತ್ತು ಕೌಲಗಿ ಟೀಚರ್ ಬ್ಲಾಗ್ ಓದಿದೆ. ಅವರ ಜೀವನದ ಅನುಭವಗಳನ್ನು ಒಳಗೊಂಡ ಲೇಖನಗಳು ನಿಜವಾಗಿಯೂ ಜ್ಞಾನದ ಖನಿಗಳು. True gems! ಅವರು ತುಂಬಾ ಕಷ್ಟ ಪಟ್ಟು ಜೀವನ ಸಾಗಿಸಿದವರು ಎಂದು ಗೊತ್ತಿತ್ತು. ಆದರೆ ಜಾಸ್ತಿ ವಿವರಗಳು ಗೊತ್ತಿರಲಿಲ್ಲ. ತಾವು ಅನುಭವಿಸಿದ ಕಷ್ಟಗಳು, ಅವನ್ನು ಎದುರಿಸಿದ ರೀತಿ, ಇತ್ಯಾದಿಗಳನ್ನು ಮನೋಜ್ಞವಾಗಿ ಬರೆದುಕೊಂಡಿದ್ದಾರೆ. ಅದಕ್ಕೆ hats off. ಅವನ್ನು ಬಿಟ್ಟು ಒಂದಿಷ್ಟು ಕವನ, ಭಾಷಾಂತರ, ಇತ್ಯಾದಿ ಇವೆ. ಅವು ನನ್ನ ಆಸಕ್ತಿಯ ವಿಷಯಗಳು ಅಲ್ಲ. ಮತ್ತೊಮ್ಮೆ ನೋಡೋಣ ಅಂತ ಬಿಟ್ಟಿದ್ದೇನೆ.

ಕೌಲಗಿ ಟೀಚರ್ ಪುಸ್ತಕ ಸಿಕ್ಕಿಲ್ಲ. ಆದರೆ ಕೌಲಗಿ ಟೀಚರ್ ಮಾತ್ರ ೧೯೮೨ ರಲ್ಲೇ ಸಿಕ್ಕಿದ್ದರು. ಅದು ನಾವು ಐದನೇ ಕ್ಲಾಸಿಗೆ ಬಂದ ವರ್ಷ. ದಿಬ್ಬದ ಕೆಳಗಿನ ಪ್ರಾಥಮಿಕ ಶಾಲೆಯಿಂದ ದಿಬ್ಬದ ಮೇಲಿನ ಮಾಧ್ಯಮಿಕ ಶಾಲೆಗೆ ಬಂದಾಗ ಅಲ್ಲಿ ಕಂಡ ಅನೇಕ ಹೊಸ ಹೊಸ ಮಾಸ್ತರ್ ಟೀಚರ್ ಪೈಕಿ ಕೌಲಗಿ ಟೀಚರ್ ಕೂಡ ಒಬ್ಬರು.

ಕೌಲಗಿ ಟೀಚರ್ ಅಣ್ಣನ ಮಗ ಮಿಳಿಂದ ನಮ್ಮ ಸಹಪಾಠಿ. ಸಹಪಾಠಿಯ ಅತ್ಯಾ (ಸೋದರತ್ತೆ) ಇಲ್ಲಿ ಟೀಚರ್ ಅನ್ನುವುದರ ಬಗ್ಗೆ ವಿಸ್ಮಯ ಪಡಬೇಕೋ ಅಥವಾ ಟೀಚರ್ ಅಳಿಯ (ಸೋದರಳಿಯ) ನಮ್ಮ ಸಹಪಾಠಿ ಅನ್ನುವುದರ ಬಗ್ಗೆ ಬೆರಗಾಗಬೇಕೋ ಎನ್ನುವ ಸಂಕೀರ್ಣತೆಯನ್ನು ವಿಶ್ಲೇಷಿಸಲಾಗದ ಚಿಣ್ಣ ವಯಸ್ಸು ಅದು.

ಕೌಲಗಿ ಟೀಚರ್ ಮಗ ಮತ್ತು ಮಗಳು ಕೂಡ ನಮ್ಮ ಶಾಲೆಯಲ್ಲೇ ಇದ್ದಾರೆ ಅಂತ ಕೂಡ ಕೆಲ ದಿವಸಗಳ ಮೇಲೆ ತಿಳಿಯಿತು. ಅವರ ಮಗ ನಮಗಿಂತ ಒಂದು ವರ್ಷಕ್ಕೆ ಹಿರಿಯ. ಮಗಳು ಒಂದು ವರ್ಷಕ್ಕೆ ಕಿರಿಯಳು. ಇಬ್ಬರೇ ಮಕ್ಕಳು ಎಂದು ಇಲ್ಲಿಯವರೆಗೆ ತಿಳಿದಿದ್ದೆ. ಬ್ಲಾಗ್ ಓದಿದ ನಂತರ ಗೊತ್ತಾಯಿತು ಇನ್ನೊಬ್ಬ ಮಗಳಿದ್ದಾಳೆ ಅಂತ. ಅವಳು ಜಾಸ್ತಿ ಕಿರಿಯಳು ಇರಬೇಕು. ಹಾಗಾಗಿ ಆಗ ಗೊತ್ತಾಗಿರಲಿಲ್ಲ.

ಟೀಚರ್ ಮಗ ಒಂದು ವರ್ಷಕ್ಕೆ ಹಿರಿಯ ಎಂದು ಹೇಳಿದೆ ನೋಡಿ. ಅವನಿಗೆ ಅವನ ಪರಿಚಿತರು ಸಂಬಂಧಿಕರು ನಾಣಿ, ನಾಣ್ಯಾ ಅನ್ನುತ್ತಿದ್ದರು. ಅವನು ಮಾತ್ರ ತನ್ನ ಹೆಸರನ್ನು ರವಿ ಎಂದು ಹೇಳಿಕೊಳ್ಳುತ್ತಿದ್ದ. ಆಗ ಮಾತ್ರ ನಮಗೆ ರೂಢನಾಮ, ಅಂಕಿತನಾಮ ಎಂದೆಲ್ಲ ಕನ್ನಡ ವ್ಯಾಕರಣ ಶುರುವಾಗಿತ್ತು. ನಾಣಿ ಅವನ ರೂಢನಾಮ ಮತ್ತು ರವಿ ಅವನ ಅಂಕಿತನಾಮ ಇರಬಹುದೇನೋ ಅಂದುಕೊಂಡಿದ್ದರೆ ಅದು ಯಾರ ತಪ್ಪೂ ಅಲ್ಲ.

ಕೌಲಗಿ ಟೀಚರ್ ಮತ್ತೊಂದು ರೀತಿಯಿಂದ ಕೂಡ ಹೆಸರುವಾಸಿ. ಅವರ ಹಿರಿಯ ಸಹೋದರ ಪ್ರೊ. ಹಂಚಿನಮನಿಯವರು. ಜನತಾ ಕಾಲೇಜಿನ ಖ್ಯಾತ ಪ್ರಾಧ್ಯಾಪಕರು. ಧಾರವಾಡದ ಮಟ್ಟಿಗೆ ಅವರು  ಪ್ರೈವೇಟ್ ಟ್ಯೂಷನ್ ಲೋಕದ ಪಿತಾಮಹ. ಮೊದಲೂ ಪ್ರೈವೇಟ್ ಟ್ಯೂಷನ್ ಇತ್ತು. ಆದರೆ ಅದನ್ನು ಒಂದು ಶಿಸ್ತುಬದ್ಧವಾದ ಕೈಗಾರಿಕೆ ತರಹ ಮಾಡಿದವರು ಪ್ರೊ. ಹಂಚಿನಮನಿ. of course, ನಮ್ಮ ಪ್ರೀತಿಯ 'ಗಣಿತಲೋಕ'ದ ಶ್ರೀನಿವಾಸ ದೇಶಪಾಂಡೆ ಸರ್ ಸಹ ಪ್ರೈವೇಟ್ ಟ್ಯೂಷನ್ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರು. ಅವರು ದುರದೃಷ್ಟವಶಾತ್ ಬೇಗ ದಿವಂಗತರಾದರು. ಪ್ರೊ. ಹಂಚಿನಮನಿ ಮೊದಲು ಟ್ಯೂಷನ್ ಮಾಡಿ, ನಂತರ ಅವರದ್ದೇ ಕಾಲೇಜು ಕೂಡ ಮಾಡಿಕೊಂಡಿದ್ದಾರೆ. ಕೌಲಗಿ ಟೀಚರ್ ಬ್ಲಾಗ್ ಓದಿದಾಗ ತಿಳಿಯಿತು ಪ್ರೊ. ಹಂಚಿನಮನಿಯವರಿಗೆ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ ಕೂಡ ಬಂದಿದೆ ಎಂದು. ಸಂತೋಷ. ಕೌಲಗಿ ಟೀಚರ್ ಅಣ್ಣನ ಮಗ ನಮ್ಮ ಸಹಪಾಠಿ ಅಂತ ಹೇಳಿದೆ ನೋಡಿ. ಆತ ಪ್ರೊ. ಹಂಚಿನಮನಿಯವರ ಮಗ. ಈ ಕೌಲಗಿ ಟೀಚರ್ ಅವನ ಅತ್ಯಾ(ಸೋದರತ್ತೆ).

ಕೌಲಗಿ ಟೀಚರ್ ಮಗಳು ನಮಗಿಂತ ಒಂದು ವರ್ಷಕ್ಕೆ ಕಿರಿಯಳು ಎಂದು ಹೇಳಿದೆ ನೋಡಿ. ನಾವು ಎಂಟನೇ ಕ್ಲಾಸಿನಲ್ಲಿ ಇದ್ದಾಗ, ಅಂದರೆ ೧೯೮೫ ರಲ್ಲಿ, ಎಂದಿನಂತೆ ವಾರ್ಷಿಕ ಕ್ರೀಡಾಕೂಟವಾಗಿತ್ತು. ಪ್ರತಿ ವರ್ಷದಂತೆ ನಾಲ್ಕು ಹೌಸ್ ಗಳು. ಕೆಂಪು, ಹಳದಿ, ನೀಲಿ, ಹಸಿರು. ನಮಗೆ ಆ ವರ್ಷ ಹಸಿರು ಹೌಸ್ ಬಂದಿತ್ತು. ನಮ್ಮ ಶಾಲೆಯ ಮಾಸ್ತರ್ ಟೀಚರ್ ಮಂದಿ ಭಯಂಕರ ಸೃಜನಶೀಲರು. Very creative! ಏನಾದರೂ ಹೊಸದನ್ನು ಪ್ರಯತ್ನ ಮಾಡುತ್ತಲೇ ಇರುತ್ತಿದ್ದರು. ಆ ವರ್ಷ ಕೂಡ ಹೊಸದೊಂದನ್ನು ಪ್ರಯತ್ನ ಮಾಡಿದ್ದರು. ಅದೇನು ಅಂದರೆ.... ಭಾರತಮಾತೆಯ ವೇಷ. ಪ್ರತಿ ಬಣ್ಣದ ಮನೆಗೂ ಒಬ್ಬಳು ಭಾರತಮಾತೆ. ಒಂದು ಚಿಣ್ಣ ಬಾಲೆಗೆ ಭಾರತಮಾತೆಯ ವೇಷ ಹಾಕಿಸಿ, ಕೈಯಲ್ಲೊಂದು ತ್ರಿಶೂಲ ಕೊಟ್ಟುಬಿಟ್ಟಿದ್ದರು. ಅವರು ತಮ್ಮ ತಮ್ಮ ಮನೆಗಳ ನಾಯಕಿಯರು. ಕ್ರೀಡಾಕೂಟದ ಮುಖ್ಯ  ಅಂಗವಾದ ಪರೇಡ್ ನಡೆದಾಗ ಪ್ರತಿಯೊಂದು ಬಣ್ಣದ ಮನೆಯ ಮುಂದೆ ಒಬ್ಬೊಬ್ಬ ಭಾರತಮಾತೆ. ಕೆಂಪು ಮನೆಯ ತಂಡದ ಮುಂದೆ ಕೆಂಪು ಭಾರತಮಾತೆ. ನೀಲಿ ಮನೆಯ  ತಂಡದ ಮುಂದೆ ನೀಲಿ ಭಾರತಮಾತೆ. ಹಳದಿ  ಮನೆಯ  ತಂಡದ ಮುಂದೆ ಹಳದಿ ಭಾರತಮಾತೆ. ಹಸಿರು ಮನೆಯ ತಂಡದ ಮುಂದೆ ಹಸಿರು ಭಾರತಮಾತೆ.

ಆ ವರ್ಷ ನನ್ನದು ಹಸಿರು ಮನೆ ಅಂದರೆ ಗ್ರೀನ್ ಹೌಸ್. ನಮ್ಮ ಮನೆಯ ಭಾರತಮಾತೆ ಆಗಿದ್ದವಳು ಇದೇ ಕೌಲಗಿ ಟೀಚರ್ ಮಗಳು. ಅವಳ ಹೆಸರು? ನಮಿತಾನೋ ಅಥವಾ ನಮ್ರತಾನೋ ಎಂದು ನೆನಪು. ಅಂಕಿತನಾಮ ಅದು ಇರಬಹುದು. ಇನ್ನು ರೂಢನಾಮ? ಆಕೆಯ ತುಂಟ ಸಹಪಾಠಿ ಹುಡುಗರನ್ನು ಕೇಳಬೇಕು. ಏನಾದರೂ ತರಲೆ ಹೆಸರು ಇಟ್ಟಿದ್ದಾರು. ರೂಢನಾಮವಿಲ್ಲದ KEB ಕನ್ಯೆಯರು ತುಂಬಾ ವಿರಳ. ಅಂದಿನ ರೂಢನಾಮಗಳನ್ನು ನೆನಸಿಕೊಂಡರೆ ಇವತ್ತಿಗೂ ನಗು ನಿರಂತರ. ಉದಾಹರಣೆಗೆ ನಮ್ಮ ಕ್ಲಾಸಿನ ಇಂದಿರಾ ಗಾಂಧಿ. B ಕ್ಲಾಸಿನ ಹಿರೋಯಿಣಿ ಅನಿತಾ ರಾಜ್. ಕೆಲವರಿಗಂತೂ 'ದೇವನೊಬ್ಬ ನಾಮ ಹಲವು' ಮಾದರಿಯಲ್ಲಿ 'ಸುಂದರಿಯೊಬ್ಬಳು ರೂಢನಾಮಗಳು ಹಲವು' ಇರುತ್ತಿದ್ದವು. ಕೊನೆಗೆ ರೂಢನಾಮವಿಟ್ಟವರೇ ನಾಮ ಹಾಕಿಸಿಕೊಂಡು ಹೋಗುತ್ತಿದ್ದುದು ಸಾರ್ವಕಾಲಿಕ ದುರಂತ ಬಿಡಿ.

ಕೌಲಗಿ ಟೀಚರ್ ಮಗಳು ಸಿಕ್ಕಳು ಒಳ್ಳೆದಾಯಿತು. ನಮ್ಮ ಹಸಿರು ಮನೆಗೊಬ್ಬ ಮಹಾಲಕ್ಷ್ಮಿ ಉರ್ಫ್ ಭಾರತಮಾತೆ ಸಿಕ್ಕಳು. ಪರೇಡಿನಲ್ಲಿ ಲೀಡ್ ಮಾಡಿದಳು. ಹಸಿರು ಭಾರತಮಾತೆ ತುಂಬಾ ಚೆನ್ನಾಗಿ ತಯಾರಾಗಿದ್ದಳು. ಆದರೆ ಕೆಂಪು ಮನೆಯ ಭಾರತಮಾತೆ ಎಲ್ಲರಿಗಿಂತ ಭರ್ಜರಿಯಾಗಿ ಚಮಕಾಯಿಸುತ್ತಿದ್ದಳು ಎಂದು ನೆನಪು. ಆ ಬಣ್ಣವೇ ಹಾಗೆ. ನನ್ನ ಫೇವರಿಟ್ ಕೂಡ. ಮತ್ತೆ ಭರ್ಜರಿ ಅಲಂಕಾರ ಶೃಂಗಾರ ಕೂಡ ಮಾಡಿರುತ್ತಿದ್ದರು. ಕೆಂಪು ಮನೆಯ ಭಾರತಮಾತೆ ಕೂಡ ಕೆಂಪುಕೆಂಪಾಗಿ ತುಂಬಾ ಮುದ್ದು ಮುದ್ದಾಗಿದ್ದಳು. ಯಾರಾಗಿದ್ದಳು ಆಕೆ? ಗೊತ್ತಿಲ್ಲ. ಕೇಳಿದರೆ ಯಾರಿಗೂ ಗೊತ್ತಿಲ್ಲ. ಈಗ ಯಾರಿಗೂ ನೆನಪೇ ಇಲ್ಲ. ನನ್ನೊಬ್ಬನನ್ನು ಬಿಟ್ಟು.

'ಮಹೇಶಾ! ಕೌಲಗಿ ಟೀಚರ್ ಮಗಳು ಸಿಕ್ಕಳು ಅಂತ ನೀ ಬಚಾವ್ ನೋಡಪಾ. ಇಲ್ಲಂದ್ರ ನಿನಗೇ ಸೀರಿ ಉಡಿಸಿ, ಇದೇ ನಮ್ಮ ಗ್ರೀನ್ ಹೌಸಿನ ಭಾರತಮಾತೆ ಅಂತ ಕಳಸ್ತಿದ್ದರು. ಅದನ್ನು ವಿಚಾರ ಮಾಡಪಾ. ಹೋಗಿ ಹೋಗಿ ನಲವತ್ತು ವರ್ಷದ ನಂತರ ಅವತ್ತು ರೆಡ್ ಹೌಸಿನ ಭಾರತಮಾತೆಯಾಗಿದ್ದ ಸುಂದರಿ ಯಾರು ಅಂತ ಈಗ ವಿಚಾರ ಮಾಡ್ತಿಯಲ್ಲಪ್ಪಾ! ಅದೆಲ್ಲಾ ಇರ್ಲಿ ಈಗ ಇನ್ನೊಂದು ಡ್ರಿಂಕ್ಸ್ ತೊಗೋ!' ಎಂದು ಧಾರವಾಡದ ದೋಸ್ತರು ಶುದ್ಧ ಮಷ್ಕಿರಿ ಮಾಡುತ್ತಾರೆ. ಶಾಲಾ ನಾಟಕಗಳಲ್ಲಿ ಕೃಷ್ಣನ ಪಾತ್ರ, ಸತ್ಯಹರಿಶ್ಚಂದ್ರನ ಪಾತ್ರ ಹಾಕಿಯಾಗಿತ್ತು. ಇನ್ನು ಸೀರೆ ಉಟ್ಟುಕೊಂಡು ಭಾರತಮಾತೆಯ ಪಾತ್ರ ಹಾಕುವುದು ಬಾಕಿ ಇತ್ತೇನೋ. ಗೆಳೆಯರ ಪ್ರಕಾರ ಕೌಲಗಿ ಟೀಚರ್ ಮಗಳು ಸಿಕ್ಕಿದ್ದಕ್ಕೆ ನಾನು  ಬಚಾವಂತೆ. ಇಲ್ಲವಾದರೆ ಅಷ್ಟೇ ಮತ್ತೆ. ಗ್ರೀನ್ ಹೌಸಿನ ಹಸಿರು ಭಾರತಮಾತೆ ವೇಷದಲ್ಲಿ ಬೃಹನ್ನಳೆ ಮಾದರಿಯಲ್ಲಿ ಕಂಗೊಳಿಸುವ 'ಭಾಗ್ಯ' ನನ್ನದಾಗುತ್ತಿತ್ತಂತೆ. ಎಣ್ಣೆ ಪರಮಾತ್ಮ ಒಳಗೆ ಸೇರಿದಾಗ ಎಂತೆಂತಹ ಜೋಕ್ಸ್ ಮಾಡುತ್ತಾರಪ್ಪಾ ನಮ್ಮ ಖತರ್ನಾಕ್ ದೋಸ್ತರು.

ಇನ್ನು ಒಂದು ವಿಷಯ ನೋಡಿ. ನೀವು ಮಾಸ್ತರ್ ಟೀಚರ್ ಮಗ ಅಥವಾ ಮಗಳಾಗಿಬಿಟ್ಟಿರಿ ಎಂದರೆ ನಿಮ್ಮ ಮೂಲ ಹೆಸರು ಯಾರಿಗೂ ಬೇಕಾಗುವುದಿಲ್ಲ. ಎಲ್ಲರಿಗೂ ನೀವು ಅಂತಹ ಟೀಚರ್ ಮಗ ಅಥವಾ ಇಂತಹ ಮಾಸ್ತರ್ ಮಗಳು. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹೆಚ್ಚಿನವರಿಗೆ ನಾನು ಹೆಗಡೆ ಸರ್ ಮಗ. ಮಾಸ್ತರರಿಗೆ "ಜಾಸ್ತಿ" ಮರ್ಯಾದೆ ಕೊಡಬೇಕು ಅನ್ನಿಸಿದಾಗ ಹೆಗಡೆನ ಮಗ. ಮಾಸ್ತರ್ ಕ್ಲಾಸಿನಿಂದ ಬೋರಾಗಿದ್ದರೆ, ಹಿಂದೆ ಮುಂದೆ ಏನೇನೋ ವಿಶೇಷಣಗಳನ್ನು ಸೇರಿಸಿ ಅಂಥಾ ಹೆಗಡೆ ಸರ್ ಮಗ ಅಥವಾ ಇಂಥಾ ಹೆಗಡೆ ಮಾಸ್ತರ್ ಮಗ ಅಂದುಬಿಡುತ್ತಾರೆ. ಮುಂದಿಂದ ಮಾತ್ರ ಹೆಗಡೆ ಸರ್ ಮಗ. ಅದು fact of life. ಅದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಅದೆಷ್ಟು ಗೌರವ ಇದೆ ಅಂದರೆ ಅವರ ಇಡೀ ವಂಶವೇ ಅವರ ಹೆಸರಿನ ಮೇಲೆ ಗುರುತಿಸಲ್ಪಡುತ್ತದೆ.

ಇದನ್ನು ಯಾಕೆ ಹೇಳಿದೆ ಅಂದರೆ ನಮ್ಮ ಇನ್ನೊಬ್ಬ ಸಹಪಾಠಿ ಇದ್ದಳು. ಆಕೆ ನಮ್ಮ ಇನ್ನೊಬ್ಬ ಶಿಕ್ಷಕಿಯಾಗಿದ್ದ ಕಲ್ಲಾಪುರ ಟೀಚರ್ ಅವರ ಮಗಳು. ಎಷ್ಟೋ ವರ್ಷಗಳ ನಂತರ ಆಕೆ ಫೇಸ್ಬುಕ್ ನಲ್ಲಿ ನಮ್ಮ ಶಾಲೆಯ ನಮ್ಮ ಬ್ಯಾಚಿನ ಗ್ರೂಪ್ಪಿನಲ್ಲಿ ಸಿಕ್ಕಿದಳು. ದೋಸ್ತರ ಮಾತಿನ ನಡುವೆ ಆಕೆಗೆ ಮೊದಲಿನಂತೆಯೇ 'ಕಲ್ಲಾಪುರ ಟೀಚರ್ ಮಗಳು' ಉರ್ಫ್  ಶಾರ್ಟ್ ಅಂಡ್ ಸ್ವೀಟಾಗಿ KTM ಎಂದು ಸಂಬೋಧಿಸಿದರೆ ಆಕೆ ಎರ್ರಾ ಬಿರ್ರಿ ರಾಂಗ್ ಆಗಿ, ಫುಲ್ ರೈಸ್ ಆಗಿ, 'ಏ, ನನ್ನ ಹೆಸರು ಪದ್ಮಮಾಧವಿ ಅಂತ ಅದ. ನಿನಗ ಗೊತ್ತದ ಅಂತ ತಿಳ್ಕೊಂಡೇನಿ. ಖಬರ್ದಾರ್! ಬರೋಬ್ಬರಿ ಹೆಸರಿಂದ ಕರೀ!' ಎಂದು ಫುಲ್ ಆವಾಜ್ ಹಾಕಿದ್ದಳು. ನಾನು ಫುಲ್ ಥಂಡಾ. ತೋಬಾ!! ತೋಬಾ!! KTM ಎಂಬ ನಾಮಧೇಯವನ್ನು ಅಷ್ಟಕ್ಕೇ ಬಿಟ್ಟು, ಅವಳಿಗೆ 'ಜೋ ತುಮ್ಕೋ  ಹೋ ಪಸಂದ್ ವಹೀ ಬಾತ್ ಕರೇಂಗೆ' ಹಾಡಿನ ಮಾದರಿಯಲ್ಲಿ'ಆತು ಮಾರಾಳ. ನೀ ಹ್ಯಾಂಗ ಹೇಳ್ತೀ ಹಾಂಗೇ ಆಗಲಿ. ಓಕೇನಾ?' ಎಂದು ಹೇಳಿ, ತಲೆಗೆ ನವರತ್ನ ತೈಲ ತಿಕ್ಕಿ, ಅವಳನ್ನು ಸಮಾಧಾನ ಮಾಡುವಷ್ಟರಲ್ಲಿ ನಮ್ಮ ತಲೆ ಬರೋಬ್ಬರಿ ಹನ್ನೆರಡಾಣೆ.

ಕೌಲಗಿ ಟೀಚರ್ ಮಗನಿಗಾಗಲಿ ಅಥವಾ ಮಗಳಿಗಾಗಲಿ ಕೌಲಗಿ ಟೀಚರ್ ಮಗ ಅಥವಾ ಮಗಳು ಎಂದು ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರ ಆವಾಗೂ ಇರಲಿಲ್ಲ ಮತ್ತು ಈಗಲೂ ಇಲ್ಲ ಎಂದು ನನ್ನ ಭಾವನೆ. On the contrary, it is a great honor to be identified in that manner. ಆದರೆ ಅದನ್ನೇ ಮತ್ತೂ ಎಳೆದು ನಮ್ಮ ಸಹಪಾಠಿ ಮಿಳಿಂದನನ್ನು ಕೌಲಗಿ ಟೀಚರ್ ಅಳಿಯ (ಸೋದರಳಿಯ) ಅಂದುಬಿಟ್ಟರೆ ಅದು  ಯಬಡತನ. ನಮ್ಮ ಸಹಪಾಠಿ ನಮ್ಮ ಸಹಪಾಠಿಯೇ. ಅವನ ವಿಷಯಕ್ಕೆ ಬಂದರೆ ಕೌಲಗಿ ಟೀಚರ್ ಅವನ ಅತ್ಯಾ ಅಂತಲೇ ಗುರುತಿಸಲ್ಪಡುತ್ತಾರೆಯೇ ವಿನಃ not the other way around!

ಐದರಿಂದ ಹತ್ತನೇ ತರಗತಿ. ಫುಲ್ ಆರು ವರ್ಷ. ಅಷ್ಟೂ ವರ್ಷ ನಾವು ಮತ್ತು ಕೌಲಗಿ ಟೀಚರ್ ಒಂದೇ ಶಾಲೆಯಲ್ಲಿ ಇದ್ದರೂ ಅವರು ನಮಗೆ ಪಾಠ ಮಾಡಲಿಲ್ಲ. ಅವರು ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಹೆಚ್ಚಾಗಿ B ವಿಭಾಗಕ್ಕೆ ಅವರೇ ಇರುತ್ತಿದ್ದರು. ನಮ್ಮದು ಮೊದಲಿಂದ A ವಿಭಾಗ. ಹಾಗಾಗಿ ಕೌಲಗಿ ಟೀಚರ್ ನಮಗೆ ಪಾಠ ಮಾಡಲಿಲ್ಲ. ಹಾಗೆ ನೋಡಿದರೆ ಅವರು ನಮ್ಮ ವರ್ಗಕ್ಕೆ absentee ಪಿರಿಯಡ್ಡುಗಳಿಗೆ ಬಂದಿದ್ದೂ ಬಹಳ ಕಮ್ಮಿಯೇ.

೧೯೮೩ ರಲ್ಲಿ ಕೌಲಗಿ ಟೀಚರ್ ಪತಿ ವಿಧಿವಶರಾದರು. ಅದು ನಮಗೆಲ್ಲ ದೊಡ್ಡ ಆಘಾತ. ಪತ್ನಿ ನಮ್ಮ ಶಿಕ್ಷಕಿ. ಅವರ ಮಕ್ಕಳಿಬ್ಬರು ನಮ್ಮ ಜೊತೆಯಲ್ಲಿ ಶಾಲೆಯಲ್ಲಿದ್ದಾರೆ. ಅಂತವರ ಪತಿ ಅಚಾನಕ್ ಆಗಿ ವಿಧಿವಶರಾಗಿಬಿಡುತ್ತಾರೆ ಅಂದರೆ ಚಿಣ್ಣ ವಯಸ್ಸಿನ ನಮಗೆಲ್ಲ ದೊಡ್ಡ ಶಾಕ್! ಕೌಲಗಿ ಟೀಚರ್ ಬ್ಲಾಗ್ ಓದಿದಾಗ ಹೆಚ್ಚಿನ ವಿವರ ತಿಳಿಯಿತು. ಅವರ ಪತಿಗೆ ಹೃದಯ ಸಂಬಂಧಿ ತೊಂದರೆಗಳು ಇದ್ದವಂತೆ. ಸಾಕಷ್ಟು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ದೇವರಾಟದ ಮುಂದೆ ಯಾರು ಏನು ಮಾಡಲಿಕ್ಕೆ ಬರುತ್ತದೆ.

ಮೂವತ್ತೈದು ವರ್ಷದ ಆಸುಪಾಸಿನಲ್ಲೇ ಪತಿಯನ್ನು ಕಳೆದುಕೊಂಡ ಕೌಲಗಿ ಟೀಚರ್ single-handedly ಸಂಸಾರ ನಡೆಸಿದರು. ಶಾಲೆಯಲ್ಲಿ ನೌಕರಿ ಅಂತ ಒಂದಿತ್ತು. ಅದೊಂದು ದೊಡ್ಡ ವರದಾನವಾಗಿತ್ತು. ಬಹಳ ಕಷ್ಟ ಪಟ್ಟು, ಅನೇಕ ತ್ಯಾಗಗಳನ್ನು ಮಾಡಿ ಜೀವನ ನಡೆಸಿದರು. ಸಂಸಾರವನ್ನು ಸಂಬಾಳಿಸಿದರು. ಮಕ್ಕಳನ್ನು ಬೆಳೆಸಿದರು. ಎಲ್ಲ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಒಂದಕ್ಕಿಂತ ಒಂದು ಕಠಿಣ ಪರೀಕ್ಷೆಗಳಲ್ಲಿ ಪಾಸಾದರು. ಅದು ಅವರ ಹಿರಿಮೆ. ಗರಿಮೆ. ಆ ದೃಷ್ಟಿಯಿಂದ ಅವರೊಬ್ಬ ದೊಡ್ಡ ರೋಲ್ ಮಾಡೆಲ್. ಅವರ ಬ್ಲಾಗ್ ಓದಿದಾಗ ಅವರ ಜೀವನದ ಸವಾಲುಗಳ, ಕಷ್ಟ ಕಾರ್ಪಣ್ಯಗಳ ಮತ್ತು ಹೋರಾಟಗಳ ಒಂದು ಝಲಕ್ ನಿಮಗೆ ಸಿಗುತ್ತದೆ. ನಿಮಗೆ ಅವರ ಪರಿಚಯವಿಲ್ಲದಿದ್ದರೂ ಸರಿ, ನಿಮಗೆ ಅರಿವಿಲ್ಲದಂತೆ ನೀವೇ ಅಂದಿರುತ್ತೀರಿ - Hats off to you madam! You are simply great!

ಕೌಲಗಿ ಟೀಚರ್ ಮೊದಲು ಹೇಗಿದ್ದರೋ ಜಾಸ್ತಿ ನೆನಪಿಲ್ಲ. ಆದರೆ ಪತಿಯನ್ನು ಕಳೆದುಕೊಂಡ ಮೇಲೆ ಅವರಲ್ಲಿ ಒಂದು marked difference ಕಂಡುಬಂದಿದ್ದು ನಿಜ. ತುಂಬಾ emotional ಆಗುತ್ತಿದ್ದರು. ಪದೇ ಪದೇ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು. ನಾವೇ ಅಂತಹ ಎರಡು ವಿಷಮ ಸಂದರ್ಭಗಳನ್ನು ಕಂಡು ಬೆಚ್ಚಿಬಿದ್ದಿದ್ದೇವೆ. 'ಟೀಚರ್ ಹೀಗ್ಯಾಕೆ? Why such an emotional outburst!?' ಎಂದು ಕೇಳಿಕೊಂಡಿದ್ದಿದೆ. ಪಾಪ! ಅವರ ಮನೋವೇದನೆಗಳ ಬಗ್ಗೆ, ತಳಮಳಗಳ ಬಗ್ಗೆ, ತಲ್ಲಣಗಳ ಬಗ್ಗೆ ಬೇರೆಯವರಿಗೆ ಹೇಗೆ ಗೊತ್ತಾಗಬೇಕು?

೧೯೮೭ - ೮೮ ರಲ್ಲಿ ಕಾಮತ್ ಟೀಚರ್ ಮೇಲೆ ವಿದ್ಯಾರ್ಥಿಯೊಬ್ಬ ದೌರ್ಜನ್ಯ ಮಾಡಿದಾಗ ತುಂಬಿದ ಪ್ರೇಯರ್ ಅಸೆಂಬ್ಲಿಯಲ್ಲಿಯೇ ಟೀಚರ್ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ನಾವೆಲ್ಲಾ ಫುಲ್ ಥಂಡಾ. ತಮ್ಮ ಸಹೋದ್ಯೋಗಿಗೆ ಆದ ತೊಂದರೆ ಕೌಲಗಿ ಟೀಚರ್ ಅವರಿಗೆ ದೊಡ್ಡ ಮಟ್ಟದ ಆಘಾತವನ್ನುಂಟುಮಾಡಿತ್ತು. ಅದರ ಬಗ್ಗೆ ಬೇರೊಂದು ಬ್ಲಾಗ್ ಪೋಸ್ಟಿನಲ್ಲಿ ಬರೆದಿದ್ದೆ. ಆಸಕ್ತರು ಅಲ್ಲಿ ಓದಬಹುದು. ಲಿಂಕ್ ಇಲ್ಲಿದೆ. ಅಲ್ಲಿ ಕೌಲಗಿ ಟೀಚರ್ ಹೆಸರು ಹಾಕಿಲ್ಲ. ಅದು ಬೇರೆ ವಿಷಯಕ್ಕೆ ಸಂಬಂಧಪಟ್ಟ ಲೇಖನವಾಗಿದ್ದರಿಂದ ಅವಶ್ಯಕತೆ ಕಂಡುಬಂದಿರಲಿಲ್ಲ. (ಆ ಲೇಖನದಲ್ಲಿ ಈ ವಿಷಯ ಹುಡುಕುವುದು ಕಷ್ಟ ಅಂದುಕೊಂಡರೆ ಆ ಮಾಹಿತಿಯನ್ನು ಕೆಳಗೆ ಹಾಕಿದ್ದೇನೆ.)

***
ಕಾಮತ್ ಟೀಚರ್ ಘಟನೆ

ಮುಂದೆ ಸ್ವಲ್ಪ ದಿನಗಳಲ್ಲಿ ಒಂದು ವಿಚಿತ್ರ ಘಟನೆ ನಡೆದುಹೋಯಿತು. ನೆನಪು ಸ್ವಲ್ಪ ಮಸುಕಾಗಿದೆ. ಈ ಘಟನೆ ಒಂಬತ್ತನೆ ಕ್ಲಾಸಿನಲ್ಲಿದ್ದಾಗಲೇ ನಡೆಯಿತೋ ಅಥವಾ ಒಂಬತ್ತು ಮುಗಿದು ಹತ್ತನೆ ಕ್ಲಾಸಿಗೆ ಬಂದಾಗ ನಡೆಯಿತೋ ಸರಿ ನೆನಪಿಲ್ಲ.

ಒಂದು ದಿನ ಶಾಲೆ ಎಂದಿನಂತೆ ಆರಂಭವಾಗಿತ್ತು. ಪ್ರಾರ್ಥನೆ ಮುಗಿದಿತ್ತು. ಹೆಡ್ ಮಾಸ್ಟರ್, ಕೆಲವು ಬೇರೆ ಬೇರೆ ಶಿಕ್ಷಕರು ಏನೇನೋ ಸೂಚನೆ, ಸಲಹೆ ಇತ್ಯಾದಿಗಳನ್ನು ಮೈಕಿನಲ್ಲಿ ಹೇಳುತ್ತಿದ್ದರು. ಎಲ್ಲ ಎಂದಿನಂತೆ. ಆಗ ಸಡನ್ನಾಗಿ ಸ್ಟೇಜಿನ ಮೇಲೆ ವಿಚಿತ್ರವಾಗಿ ಕೂಗುತ್ತ, ಎತ್ತರ ಪತ್ತರ ಕೈಯಾಡಿಸುತ್ತ ಓಡಿಬಂದವರು ಒಬ್ಬ ಮಹಿಳಾ ಟೀಚರ್. ಸಡನ್ನಾಗಿ ಎಂಟ್ರಿ ಕೊಟ್ಟವರೇ ಒಂದು ದೊಡ್ಡ scene ಸೃಷ್ಟಿ ಮಾಡಿಬಿಟ್ಟರು. ನವರಸಗಳಿರುವ ಸನ್ನಿವೇಶ. ಎಲ್ಲರೂ ಫುಲ್ ಥಂಡಾ. ಆ ಮಹಿಳಾ ಟೀಚರ್ ಏನು ಹೇಳುತ್ತಿದ್ದಾರೆ, ಯಾರನ್ನು ಕುರಿತು ಹೇಳುತ್ತಿದ್ದಾರೆ, ಯಾಕೆ ಅಂತಹ ಭಾವಾವೇಶ, ಏನಾಗಿದೆ ಇವರಿಗೆ, ಅದೂ ಸುಮಾರು ಐನೂರು, ಆರನೂರು ವಿದ್ಯಾರ್ಥಿಗಳು, ಅರವತ್ತು ಎಪ್ಪತ್ತು ಶಿಕ್ಷಕರು ಎಲ್ಲ ನಿಂತಿರುವಾಗ ಏನಿದು ಇಂತಹ ವಿಚಿತ್ರ scene? ಅಂತ ಎಲ್ಲರಿಗೂ ಆಶ್ಚರ್ಯ.

'ಏನ್ರೀ ಸರ್!? ಹೀಂಗಾದ್ರ ಹ್ಯಾಂಗ್ರೀ? ಹ್ಯಾಂಗ ಜೀವನ ಮಾಡಬೇಕರೀ?' ಅಂತ ಏನೇನೋ ಅನ್ನುತ್ತ ಗೊಳೋ ಅಂತ ಅತ್ತುಬಿಟ್ಟರು. ಒಂದು ಕ್ಷಣ ಅಪ್ರತಿಭರಾದ ಹೆಡ್ ಮಾಸ್ಟರ್ ಸಾವರಿಸಿಕೊಂಡು, ಒಂದು ತರಹದ embarrassment ಫೀಲ್ ಮಾಡಿಕೊಂಡು, ಆ ಮೇಡಂ ಅವರನ್ನು ಸ್ವಂತ ಸಹೋದರಿಯಂತೆಯೇ ಲೈಟಾಗಿ ತಬ್ಬಿಕೊಂಡು ಸ್ಟೇಜ್ ಮೇಲೆಯೇ ಏನೋ ಒಂದು ತರಹದ ಸಮಾಧಾನ ಮಾಡಿದ್ದರು. ತುಂಬಾ uneasy ಅನ್ನಿಸಿತ್ತು ಹೆಡ್ ಮಾಸ್ಟರ್ ಅವರಿಗೆ. ಅಳುತ್ತ ಬಂದಿದ್ದ ಟೀಚರ್ ಅಳುತ್ತಲೇ, ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಳ್ಳುತ್ತ, ಸ್ಟೇಜ್ ಬಿಟ್ಟು ಹೋದರು. ಹೆಡ್ ಮಾಸ್ಟರ್ ಕೋಣೆ ಸೇರಿಕೊಂಡರು. ಅಲ್ಲಿಗೆ ಆವತ್ತಿನ prayer assembly ಅನ್ನುವ ದಿನದ ರೂಟೀನ್ ಮುಗಿದಿತ್ತು. ನಮ್ಮ ನಮ್ಮ ಕ್ಲಾಸ್ ಕಡೆ ಹೊರಟೆವು. ಮಂಗೇಶಿ ಟೀಚರ್ ಆವತ್ತು ಶಾಲೆಗೆ ಬಂದಿರಲಿಲ್ಲ! ನಾವು ಅದನ್ನು ಗಮನಿಸಿರಲೂ ಇಲ್ಲ.

'ಏ, ಆ ಟೀಚರ್ ಹಾಂಗ್ಯಾಕ ಮಾಡಿದ್ರಲೇ? ಏನಾತು ಅವರಿಗೆ ಒಮ್ಮೆಲೇ? ಅದೂ ಮೈ ಮ್ಯಾಲೆ ದೆವ್ವ ಬಂದಾಂಗ ಮಾಡಿಬಿಟ್ಟರಲ್ಲಲ್ಲೇ? ಯಾರಿಗೆ ಏನಾತು ಅಂತ ಆ ಟೀಚರ್ ಆಪರಿ ಹೊಯ್ಕೊಂಡು, ಚೀರಾಡಿ, ಅತ್ತು, ಕರೆದು, ಕಣ್ಣಾಗ ನೀರು ತಂದುಕೊಂಡ್ರು?? ಯಾಕ ಚೀರಾಡಿದರು? ಏನಾತು? ಏನು ಲಫಡಾ ಆಗ್ಯದ್ರಲೇ??' ಅಂತ ಕೇಳಿದರೆ ಒಂದು ದೊಡ್ಡ ಲಫಡಾ ಆಗಿದ್ದರ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.

***

ಮತ್ತೊಂದು ಘಟನೆ ೧೯೮೬ ರಲ್ಲಿ ಆಗಿದ್ದು. ಎಂಟನೇ ಕ್ಲಾಸಿನಲ್ಲಿ ಇದ್ದೆವು. ಆಗ ನಮ್ಮ ಶಾಲೆಯವರು ಯಾವುದೋ ಕಾರಣಕ್ಕೆ ಪಾಲಕರಿಂದ ವಂತಿಗೆ ಸಂಗ್ರಹಿಸುತ್ತಿದ್ದರು. ಶಾಲಾ ಅಭಿವೃದ್ಧಿಗೆ ವಂತಿಗೆ ಎಂದು ನೆನಪು. ಶಿಕ್ಷಕ ಶಿಕ್ಷಕಿಯರನ್ನು ಆರೇಳು ಜನರ ಗುಂಪುಗಳನ್ನಾಗಿ ಮಾಡಿ ಒಂದೊಂದು ಏರಿಯಾಗಳಿಗೆ ಕಳಿಸುತ್ತಿದ್ದರು. ಅವರು ಆ ಏರಿಯಾದಲ್ಲಿರುವ ಪಾಲಕರ ಮನೆಗಳಿಗೆ ಭೇಟಿ ಕೊಟ್ಟು ವಂತಿಗೆ ಸಂಗ್ರಹಿಸಬೇಕು.

ಕೌಲಗಿ ಟೀಚರ್ ಸಹ ಅಂತಹ ಒಂದು ಗುಂಪಿನಲ್ಲಿ ಇದ್ದರು. ಒಂದು ದಿನ ನಮ್ಮ ಕ್ಲಾಸಿಗೆ ಬಂದರು ಟೀಚರ್. ತುಂಬಾ ಕೋಪದಲ್ಲಿದ್ದರು. ಯಾವುದೋ ಪಿರಿಯಡ್ ಮುಗಿದಿತ್ತು. ಮುಂದಿನ ಶಿಕ್ಷಕರು ಬಂದಿರಲಿಲ್ಲ. ದುಮುದುಮುಗುಡುತ್ತ ಬಂದ ಕೌಲಗಿ ಟೀಚರ್ ಒಬ್ಬ ವಿದ್ಯಾರ್ಥಿಯನ್ನು ಎಬ್ಬಿಸಿದರು. ಫುಲ್ ಆವಾಜ್ ಹಾಕಿಬಿಟ್ಟರು...

'ಏ, ಏನು ಮಂದಿ ಇದ್ದೀರಿ ನೀವು? ಮನಿಗೆ ಬಂದ್ರ ಒಳಗ ಕರಿಬೇಕು ಅಂತ ಬುದ್ಧಿಯಿಲ್ಲ. ಹಾಂ?? ಸಂಸ್ಕಾರ ಇಲ್ಲ. ಹಾಂ? ಯಾರವಾ ನಿಮ್ಮ ಅಣ್ಣ? ಅವನೂ ಇದೇ ಸಾಲಿ ಸ್ಟೂಡೆಂಟ್ ಹೌದಿಲ್ಲೋ? ನಾವು ಕೆಳಗ ನಿಂತು ಮ್ಯಾಲೆ ನೋಡ್ಲಿಕತ್ರ ಹಾಂಗೇ ನೋಡಿಕೋತ್ತ ನಿಂತಿದ್ದ. ಯಾರೇ ಇರಲಿ ಒಳಗ ಬರ್ರಿ ಅಂತ ಕರಿಬೇಕು ಅನ್ನೋ  ಬುದ್ಧಿಯಿಲ್ಲ? ಸಂಸ್ಕಾರ ಇಲ್ಲಾ? ಏನು ಮಂದೀನೋ ನೀವು?? ಒಂದು ನೆನಪ ಇಡು. ನಾವೇನೂ ಭಿಕ್ಷಾ ಕೇಳಲಿಕ್ಕೆ ಬಂದಿದ್ದಿಲ್ಲ. ಸಾಲಿಯಿಂದ ಕಳಿಸಿದ್ದರು ಅಂತ ಬಂದಿದ್ದಿವಿ. ವಂತಿಗೆ ಕೊಡದಿದ್ದರೂ ಚಿಂತಿರಲಿಲ್ಲ. ಮನಿ ಒಳಗ ಕರೆಯೂವಷ್ಟು ಸಂಸ್ಕಾರ ಇಲ್ಲ ಅಂದ್ರ ಹ್ಯಾಂಗ?? ಮನಿ ಮುಂದ ಬಂದವರನ್ನ ಮೊದಲು ಒಳಗ ಕರೆದು ಕೂಡಿಸೋದನ್ನ ಕಲೀರಿ. ಉಳಿದಿದ್ದು ಮುಂದಿನ ಮಾತು!' ಎಂದು ಅಬ್ಬರಿಸಿಬಿಟ್ಟರು.

ಆವಾಜ್ ಹಾಕಿಸಿಕೊಂಡ ನಮ್ಮ ಸಹಪಾಠಿಗೆ ಮೊದಮೊದಲು ಏನೂ ತಿಳಿದೇ ಇಲ್ಲ. ಬೆಬ್ಬೆ ಬೆಬ್ಬೆ ಅಂದಿದ್ದಾನೆ. ತೊದಲಿದ್ದಾನೆ. 'ನೀ ಬಾಯ್ಮುಚ್ಚು!!' ಎಂದು ಅವನನ್ನು ಗದರಿಸಿ ಮತ್ತೂ ಒಂದಿಷ್ಟು ಬೈದಿದ್ದಾರೆ.

ಆಮೇಲೆ ಫುಲ್ ವಿವರ ತಿಳಿದಿದೆ. ಏನಾಗಿತ್ತು ಅಂದರೆ...ವಂತಿಗೆ ಎತ್ತಲು ಇವರ ತಂಡ ಅವನ ಮನೆಗೆ ಹೋಗಿದೆ. ಮಹಡಿ ಮೇಲಿರುವ ಮನೆ. ಇವರು ಮಹಡಿ ಹತ್ತಿಲ್ಲ. ಕೆಳಗೇ ನಿಂತು ಮೇಲೆ ನೋಡುತ್ತಾ ನಿಂತಿದ್ದಾರೆ. ನಮ್ಮ ಸಹಪಾಠಿಯ ಅಣ್ಣ ಮೇಲಿಂದ ನೋಡಿದ್ದಾನೆ. ಅವನಿಗೆ ಗೊತ್ತಾಗಲಿಲ್ಲವೋ ಅಥವಾ ಬೇರೆಯವರ ಮನೆಗೆ ಬಂದಿರಬೇಕು ಅಂದುಕೊಂಡನೋ ಗೊತ್ತಿಲ್ಲ. ಒಟ್ಟಿನಲ್ಲಿ ಇವರನ್ನು ಮೇಲೆ ಬರುವಂತೆ ಆಹ್ವಾನಿಸಿಲ್ಲ. ಕೆಳಗೆ ಬಂದು ಮೇಲೇರುವ ಬಾಗಿಲು ತೆರೆದಿಲ್ಲ. ಅವನೇ ಬಂದು ಕರೆಯಲಿ ಅಂತನೋ ಏನೋ ಗೊತ್ತಿಲ್ಲ. ಇವರೂ ಮೇಲೆ ಹೋಗಿಲ್ಲ. ಬೆಲ್ ಒತ್ತಿಲ್ಲ. ಇಷ್ಟಾದ ಮೇಲೆ ಇದಕ್ಕೆಲ್ಲ ತಿಲಕವಿಡುವಂತೆ ಆ ಪುಣ್ಯಾತ್ಮ, ಅಂದರೆ ನಮ್ಮ ಸಹಪಾಠಿಯ ಅಣ್ಣ, ಕೆಳಗಿಳಿದು ಬಂದು ಇವರ ಮುಂದೆಯೇ, ಏನೇನೂ ಸಂಬಂಧವಿಲ್ಲದಂತೆ, ತನ್ನ ಸೈಕಲ್ ಹತ್ತಿ ಪೋಯಾಚ್ ಆಗಿಬಿಟ್ಟಿದ್ದಾನೆ. ಅವನು ಅದೆಷ್ಟು ವರ್ಷಗಳ ಹಿಂದೆ ಆ ಶಾಲೆಯ ವಿದ್ಯಾರ್ಥಿಯಾಗಿದ್ದನೋ, ಅವನಿಗೆ ಇವರ ಪರಿಚಯ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಅವನ ಮನೆಯ ಮುಂದೆ ನಿಂತ ಶಿಕ್ಷಕ ಶಿಕ್ಷಕಿಯರ ತಂಡ ಮಂಗ್ಯಾ ಆಗಿ ಮರಳಿ ಬಂದಿದೆ. ಅದೇ ಮರುದಿವಸ ದೊಡ್ಡ ಪ್ರಮಾಣದ ಆಕ್ರೋಶವಾಗಿ ಸ್ಪೋಟಗೊಂಡಿದೆ.

ಕೌಲಗಿ ಟೀಚರ್ ಫುಲ್ ಅಬ್ಬರಿಸುವ ಮೂಡಿನಲ್ಲಿ ಇದ್ದರು. ಹಾಗಾಗಿ ಮಾತು ಮುಂದುವರೆಯಿತು.

'ನಾವು ನಿನ್ನೆ, ಇಲ್ಲಿ ಇದ್ದಾನ ನೋಡು, ಇದೇ ರಮೇಶ ದೇಸಾಯಿ ಮನಿಗೆ ಕೂಡ ಹೋಗಿದ್ದಿವಿ. ಅಲ್ಲಿ ಹೋದಾಗ ಗೊತ್ತಾತು ಬೇರೆ ಟೀಚರ್ಸ್ ಆಗಲೇ ಬಂದು ರೊಕ್ಕ ತಗೊಂಡು ಹೋಗ್ಯಾರ ಅಂತ. ನಮಗ ಭಾಳ ಕೆಟ್ಟ ಅನ್ನಿಸ್ತು. ವಂತಿಗೆ ಕೇಳಲಿಕ್ಕೆ ಬಂದೆವೋ ಅಥವಾ ಡಕಾಯಿತಿ ಮಾಡಲಿಕ್ಕೆ ಬಂದೆವೋ ಅನ್ನಿಸಿಬಿಡ್ತು. ಆದ್ರೂ ರಮೇಶ್ ದೇಸಾಯಿ ಅವರ ಅಪ್ಪ ಅವ್ವ ನಮ್ಮನ್ನೆಲ್ಲಾ ಅದೆಷ್ಟು ಪ್ರೀತಿಯಿಂದ ಗೌರವದಿಂದ ಒಳಗ ಕರೆದು, ಕೂಡಿಸಿ, ಸತ್ಕಾರ ಮಾಡಿ, ಮತ್ತೊಮ್ಮೆ ವಂತಿಗೆ ಕೊಟ್ಟು ಕಳಿಸಿದರು. ಅಂತಹ ಮಂದಿ ಎಲ್ಲೇ, ಮನಿಗೆ ಬಂದ್ರ ಬಾಗಿಲಾ ತೆಗೆಯದ ನೀವು ಎಲ್ಲೇ!? ಥೂ ನಿಮ್ಮ!!'

ಒಂದು ಕಡೆ ಫುಲ್ ಸತ್ಕಾರ. ಇನ್ನೊಂದು ಕಡೆ ಫುಲ್ ತಿರಸ್ಕಾರ. ಒಟ್ಟಿನಲ್ಲಿ ಟೀಚರ್ ಮಂಡೆಗೆ ಸಾಲಿಡ್ ಮೆಣಸ್ಖಾರ. ಹಾಗಾಗಿ ತಲೆ ಫುಲ್ ಹಾಟ್. ಫುಲ್ ಗರಮ್. ಹಾಗಾಗಿ ನಮ್ಮ ಕ್ಲಾಸಿಗೆ ಬಂದು ದೊಡ್ಡ ಪ್ರಮಾಣದ ಒದರಾಟ, ಚೀರಾಟ! ಭೀಕರ ಆವಾಜ್!

ಸದಾ ಅಂತರ್ಮುಖಿಯಾಗಿರುತ್ತಿದ್ದ ಶಾಂತ ಸ್ವಭಾವದ ಕೌಲಗಿ ಟೀಚರ್ ಅವರ ರೌದ್ರಾವತಾರ ನೋಡಿದ್ದು ಅದೇ ಮೊದಲು. ಅದೇ ಕೊನೆ.

ಮೇಲೆ ಹೇಳಿದ ರಮೇಶ ದೇಸಾಯಿ ಉರ್ಫ್ ಎಲ್ಲರ ಪ್ರೀತಿಯ "ನವಿಲ ಢಬ್ಬ" ಎಲ್ಲಿ ಹೋದನೋ ಗೊತ್ತಿಲ್ಲ. ೧೯೯೦ ರ ದಶಕದಲ್ಲಿ ಅವನು ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ಭೇಟಿಯಾಗಿದ್ದ. ನಂತರ ಅವರ ಕುಟುಂಬದಲ್ಲಿ ಕೆಲವು ದುರಂತಗಳಾದವು ಎಂದು ಕೇಳಿದೆ. ನಮ್ಮ ಪ್ರೀತಿಯ "ನವಿಲ ಢಬ್ಬ" ಅವುಗಳಿಂದ ಆಘಾತಗೊಂಡನೇನೋ ಗೊತ್ತಿಲ್ಲ. ಈಗ ರಾಯಚೂರ ಕಡೆ ಎಲ್ಲೋ ಏನೋ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಕೇಳಿದೆ. ಕೌಲಗಿ ಟೀಚರ್ ಮತ್ತು ಕಂಪನಿಗೆ ಡಬಲ್ ಸತ್ಕಾರ ಸನ್ಮಾನ ಮಾಡಿದ ಪುಣ್ಯ ನಮ್ಮ ಮಿತ್ರ ನವಿಲ ಢಬ್ಬನಿಗೆ ಸಿಗಲಿ. ದೇವರು ಅವನಿಗೆ ಒಳ್ಳೇದು ಮಾಡಲಿ ಎಂಬುದೇ ನಮ್ಮ ಆಶಯ. ಕೌಲಗಿ ಟೀಚರ್ ಆಶೀರ್ವಾದವಂತೂ ಇದ್ದೇ ಇರುತ್ತದೆ. ನೀವು ಕೇಳಿ ಅಥವಾ ಬಿಡಿ. ನಂಬಿ ಅಥವಾ ಬಿಡಿ. ನಿಮಗೆ ಪಾಠ ಮಾಡಿದವರ, ಗುರುಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ನಮ್ಮೆಲ್ಲರ  ತಪ್ಪುಒಪ್ಪುಗಳನ್ನು ಮೀರಿದ್ದು ಗುರು ಕಾರುಣ್ಯ. ನಾನು ತುಂಬಾ ತಡವಾಗಿ ಅರ್ಥಮಾಡಿಕೊಂಡ ಸಂಗತಿಗಳಲ್ಲಿ ಗುರು ಕಾರುಣ್ಯವೂ ಒಂದು.

 ( "ನವಿಲ ಢಬ್ಬ" ಅನ್ನುವ ಅನ್ವರ್ಥಕನಾಮದಲ್ಲಿ ಹೆಚ್ಚಿನ ವಿಶೇಷವೇನೂ ಇಲ್ಲ. ಕೊಂಚ ಮೈಕೈ ತುಂಬಿಕೊಂಡಿದ್ದ. ಹಾಗಾಗಿ ಢಬ್ಬ. ತಲೆ ಮೇಲೆ ಹಿಂದೆ ಸುಳಿಯಲ್ಲಿ ದಟ್ಟನೆಯ ಕೂದಲಿನ ಗೊಂಚಲು ನವಿಲಿನ ತಲೆ ಮೇಲೆ ಇರುವ ಸ್ಪೆಷಲ್ ಫಿಟ್ಟಿಂಗನ್ನು ನೆನಪಿಸುತ್ತಿತ್ತು. ಹಾಗಾಗಿ  "ನವಿಲ ಢಬ್ಬ". ಚಿತ್ರವಿಚಿತ್ರ ನಾಮಕರಣ ಮಾಡುವುದರಲ್ಲಿ ನಮ್ಮ ಜನ ಎತ್ತಿದ ಕೈ!)

ಮುಂದೆ ೧೯೮೬-೮೭ ರ ಸಮಯದಲ್ಲಿ ನಾವು ಒಂಬತ್ತು ಮತ್ತು ಹತ್ತನೆಯ ಕ್ಲಾಸ್. ಆಗಲೂ ಟೀಚರ್ ನಮಗೇನೂ ಪಾಠ ಮಾಡುತ್ತಿರಲಿಲ್ಲ. ಆದರೆ ಅಚಾನಕ್ ಆಗಿ ನನ್ನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳುವುದನ್ನು ನಿಲ್ಲಿಸಿದರು. ವಂದನೆಗೆ ಪ್ರತಿವಂದನೆ ದೂರದ ಮಾತು. ವಂದನೆಯನ್ನು ಸ್ವೀಕರಿಸಿದ ಬಗ್ಗೆ acknowledgement ಕೂಡ ಇಲ್ಲ. ಯಾವಾಗಲೋ ಒಮ್ಮೆ ಪ್ರತಿ ನಮಸ್ಕಾರ ಹೇಳಲಿಲ್ಲ ಅಂದರೆ ಮಾತು ಬೇರೆ. ಮೊದಲೇ ಶಿಕ್ಷಕರು. ಎಲ್ಲರೂ ಅವರಿಗೆ ನಮಸ್ಕಾರ ಹೇಳುವವರೇ. ಒಮ್ಮೊಮ್ಮೆ ಯಾವುದೋ ಪೊರಪಾಟಿನಲ್ಲಿ ಪ್ರತಿ ನಮಸ್ಕಾರ ಹೇಳುವುದಕ್ಕೆ ಆಗಿರಲಿಕ್ಕೆ ಇಲ್ಲ ಅಂದುಕೊಳ್ಳಬಹುದು. ಆದರೆ consistent ಆಗಿ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳುವುದಿರಲಿ ದುರ್ದಾನ ತೆಗೆದುಕೊಂಡಂತೆ ಕೆಟ್ಟ ಮುಖ ಮಾಡಿಕೊಂಡು ಹೋಗುವುದಿದೆಯೆಲ್ಲ that was very obvious. ಅವರು ನಮ್ಮ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳಲಿಲ್ಲ ಅಂದ ಮಾತ್ರಕ್ಕೆ ನಾವೇನೂ ನಮಸ್ಕಾರ ಹಾಕುವುದನ್ನು ಬಿಡಲಿಲ್ಲ. 'ನಮಸ್ಕಾರ ರೀ ಟೀಚರ್' ಎಂದು ಪೂರ್ತಿ ನಮಸ್ಕಾರ ಹಾಕಿದೆ. ಹಾಪ್ ನಮಸ್ಕಾರದ ಬದಲಿ ಯಾವಾಗಲೂ ಫುಲ್ ನಮಸ್ಕಾರ.

ಆಗ ನನಗೆ ಉದ್ಧಟ, ದುರಹಂಕಾರಿ, ತಿರಸಟ್ಟ, ವಡ್ಡ, ಜಗಳಗಂಟ ಇತ್ಯಾದಿ ಬಿರುದುಗಳು ಇದ್ದವು. ಬಿರುದಿನ ಜೊತೆ ಒಂದಿಷ್ಟು ಬಾವಲಿಗಳೂ ಕೂಡ. ಅದೆಲ್ಲ ಏನೇ ಇದ್ದರೂ ನನಗೆ ಶಿಕ್ಷಕರ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಇತ್ತು. ಅವರಿಗೆ ತಿರುಗಿ ಮಾತಾಡಿದ ಅನ್ನುವ ಕಾರಣಕ್ಕೆ ಅವರ ಮೇಲೆ ನನಗೆ ಗೌರವವಿಲ್ಲ, ಪ್ರೀತಿಯಿಲ್ಲ, ಆದರವಿಲ್ಲ ಎಂದು ಯಾರೂ ಭಾವಿಸಿರಲಿಲ್ಲ. ಬಯ್ಯುವಾಗ ನನಗೆ ಅದೆಷ್ಟೇ ಬೈದರೂ  ನನ್ನ ಪ್ರಾಮಾಣಿಕ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಎಲ್ಲರೂ ಹಾಕುತ್ತಿದ್ದರು. ಪೂರ್ತಿ ನಮಸ್ಕಾರ ಹಾಕಿ ಹಾಕಿ ಸುಸ್ತಾಗಿದ್ದಾರೆ ಹಾಪ್ ನಮಸ್ಕಾರವನ್ನಾದರೂ ಹಾಕಿ ಕಳಿಸುತ್ತಿದ್ದರು.

ನಮಸ್ಕಾರದ ವಿಷಯಕ್ಕೆ ಬಂದರೆ ನಾನು ಧಾರಾಳಿ ಮತ್ತು ಶಿಸ್ತಿನ ಮನುಷ್ಯ. ಹಿರಿಯರಿಗೆ ನಮಸ್ಕಾರ ಹಾಕುವುದನ್ನು ತಪ್ಪಿಸಿದ್ದೇ ಇಲ್ಲ. ಎಲ್ಲಿಯವರೆಗೆ ಅಂದರೆ ಥೇಟ್ ಮರಳಿಹಳ್ಳಿ ಟೀಚರ್ ಅವರಂತೆಯೇ ಇದ್ದ ಅವರ ತಂಗಿಗೂ ನಮಸ್ಕಾರ ಹಾಕಿದ ಭೂಪ ನಾನು. ಆಕೆ ನಾಚಿಕೊಂಡು ಮಳ್ಳು ನಗೆ ಬೀರುತ್ತಾ ಹೋಗಿದ್ದಳು. ನಮಸ್ಕಾರ ಹಾಕಿದರೆ ಟೀಚರ್ ಯಾಕೆ ಹೀಗೆ ನಾಚಿಕೊಂಡರು ಅಂತ ವಿಚಾರ ಮಾಡುತ್ತಾ ಶಾಲೆಗೆ ಬಂದರೆ ಅಲ್ಲಿ ಒರಿಜಿನಲ್ ಮರಳಿಹಳ್ಳಿ ಟೀಚರ್ ಕಾಣಬೇಕೇ!? ಆವಾಗ ಗೊತ್ತಾಯಿತು ಆದ ಲಫಡಾ. ನೋಡಲಿಕ್ಕೆ ಇಬ್ಬರೂ ಒಂದೇ ತರಹ ಇದ್ದರು. ಹಾಪ್ ಸಾರಿಯಲ್ಲಿ (ಪರಕಾರ ಪೋಲ್ಕಾ ದಿರುಸಿನಲ್ಲಿ) ಕಂಡಾಕೆ ಟೀಚರ್ ಆಗಿರಲಿಕ್ಕಿಲ್ಲ ಎಂದು ನನಗೆ ತಿಳಿಯಬೇಕಿತ್ತು. ಆದರೂ ಯಾಕೆ ರಿಸ್ಕ್ ಎಂದು ಆಕೆಗೂ ಹಾಪ್ ನಮಸ್ಕಾರ ಹಾಕಿಯೇಬಿಟ್ಟಿದ್ದೆ. ಮರಳಿಹಳ್ಳಿ ಟೀಚರ್ ತಂಗಿಗೆ ಹಾಪ್ ನಮಸ್ಕಾರ ಹಾಕಿದ್ದನ್ನು ಹಿಂದೊಮ್ಮೆ ವಿವರವಾಗಿ ಬರೆದಿದ್ದೆ. ಲಿಂಕ್ ಇಲ್ಲಿದೆ. ಆಸಕ್ತರು ಓದಬಹುದು. 

ಬಿರುದು ಬಾವಲಿಗಳಿಂದ ಭೂಷಿತನಾಗಿ ಸಕಲ ಸದ್ಗುಣಸಂಪನ್ನನಾಗಿದ್ದ ನನ್ನ "ಸದ್ಗುಣ" ವಿಶೇಷಗಳು ಏನೇ ಇದ್ದರೂ ಕೌಲಗಿ ಟೀಚರ್ ಜೊತೆ ವಾದ ವಿವಾದ ಮಾಡಿದ್ದು, ಅವರಿಗೆ ತಿರಸಟ್ಟ ಉತ್ತರ ಕೊಟ್ಟಿದ್ದು ಅಥವಾ ಜಗಳ ಮಾಡಿದ್ದು ಅಥವಾ ಅವರು absentee ಪಿರಿಯಡ್ಡಿಗೆ ಬಂದಾಗ ಗದ್ದಲ ಹಾಕಿದ ಛಾನ್ಸೇ ಇಲ್ಲ. ಅಂತಹ ಲಫಡಾ ಆದ ಛಾನ್ಸೇ ಇಲ್ಲ. ನಾಸ್ತಿ. ನಾಸ್ತಿ. ಹಾಗಿರುವಾಗ ಅವರೇಕೆ ನನ್ನ ನಮಸ್ಕಾರಗಳಿಗೆ ಪ್ರತಿ ನಮಸ್ಕಾರ ಹೇಳಲಿಲ್ಲ? ನನಗೆ ಗೊತ್ತಿಲ್ಲ. ಈಗ ಗೊತ್ತಾಗಿ ಆಗಬೇಕಾಗಿದ್ದು ಏನೂ ಇಲ್ಲ. ಹಾಗಾಗಿ ಅದು ಹಾಗೇ ಇರಲಿ. ಅದರ ಬಗ್ಗೆ ಊಹಾಪೋಹ speculate ಮಾಡುವ ಇರಾದೆ ಇಲ್ಲ. No point.

ಕೌಲಗಿ ಟೀಚರ್ ಜೊತೆ ಏನೂ ಲಫಡಾ ಆಗದೇ ಇದ್ದರೂ ಬೇರೆ ಬೇರೆ ಟೀಚರ್ ಮಾಸ್ತರ್ ಜೊತೆ ವಾದ, ವಿವಾದ, ವಿತಂಡವಾದ, ಅವಿಧೇಯ ದುರ್ವರ್ತನೆ, ತಿರಸಟ್ಟು ಮಾತು, ಕುಹಕ, ಇತ್ಯಾದಿ ಇತ್ತು. ಅವರೂ ಸಾಕಷ್ಟು ಬಯ್ಯುತ್ತಿದ್ದರು. ನಾವೂ ವಾದವಿವಾದ ಮಾಡುತ್ತಿದ್ದೆವು. ಅಂತಹ ಅನೇಕಾನೇಕ ದುರ್ವರ್ತನೆಗಳ ನೇರ ಸಂತ್ರಸ್ತರಾದ ಶಿಕ್ಷಕ ಶಿಕ್ಷಿಕಿಯರೇ ನಮ್ಮನ್ನು ಭರಿಸಿಕೊಂಡು, ನಮ್ಮ ತಪ್ಪು ಒಪ್ಪುಗಳನ್ನೆಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು, ಅದರ ಪರಿಣಾಮವಾಗಿ ಹೊಟ್ಟೆ ವಿಪರೀತವಾಗಿ ಕೆಟ್ಟರೂ, ನಮ್ಮ ಮೇಲಿನ ಪ್ರೀತಿಯಿಂದ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹಾಕಿದ್ದಾರೆ. ಪೊರೆದಿದ್ದಾರೆ. ಕಾಪಾಡಿದ್ದಾರೆ. ಅವರ ಆಶೀರ್ವಾದ ನಮ್ಮನ್ನು ಸದಾ ಕಾಯುತ್ತಲೇ ಇರುತ್ತದೆ.

ಅವರ ಜೊತೆ ನೇರಾನೇರ ದುರ್ವರ್ತನೆ ತೋರಿಸದಿದ್ದರೂ ಅವರ ಸಹೋದ್ಯೋಗಿ ಶಿಕ್ಷಕರು ನಮ್ಮ ಬಗ್ಗೆ ಟೀಕೆಟಿಪ್ಪಣೆ ಮಾಡಿದ್ದನ್ನು ಕೇಳಿದ ಕೌಲಗಿ ಟೀಚರ್ ನಮ್ಮ ಮೇಲೆ ಮುನಿಸಿಕೊಂಡಿದ್ದರೇ? Again mere speculation. Whatever it may be, it doesn't matter now.

ಇರಲಿ. ಸುಮಾರು ಒಂದೂವರೆ ಎರಡು ವರ್ಷಗಳ ಕಾಲ ಅವರು ನನ್ನ ನಮಸ್ಕಾರಕ್ಕೆ ವಾಪಸ್ ನಮಸ್ಕಾರ ಹಾಕಿದ ನೆನಪಿಲ್ಲ. ಹಾಗಂತ ನಾನೂ ಬಿಡಲಿಲ್ಲ. ಕಂಡಾಗೆಲ್ಲ ಒಂದು ಸಿಂಪಲ್ ಫುಲ್ ನಮಸ್ಕಾರ. ಸೈಕಲ್ ಮೇಲಿದ್ದರೆ ಹಾಪ್ ನಮಸ್ಕಾರ.

SSLC ಅಂತಿಮ ಪರೀಕ್ಷೆಯಲ್ಲಿ ಯಾವುದೋ ಒಂದು ವಿಷಯಕ್ಕೆ ಕೊಠಡಿ ಮೇಲ್ವಿಚಾರಕರಾಗಿ ಬಂದಿದ್ದರು. ಪರೀಕ್ಷೆ ಮುಗಿಯುವ ಹೊತ್ತು ಬಂದಿತ್ತು. ಪರೀಕ್ಷೆಗೆ ಮೊದಲು ನಾನು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದೆ. ಪಥ್ಯದ ಆಹಾರ ತೆಗೆದುಕೊಂಡು ತಂದೆಯವರು ಬಂದು ಹೊರಗಡೆ ಕಾಯುತ್ತಿದ್ದರು. 'ಹೆಗಡೆ ಸರ್, ನಿಮ್ಮ ತಂದೆಯವರು, ಬಂದಂಗ ಕಾಣ್ತದ ನೋಡು' ಎಂದು ಸಹಜವಾಗಿ ಹೇಳಿದ್ದರು. ಆಗ ಮಾತ್ರ ಅವರ ಧ್ವನಿಯಲ್ಲಿ ತುಂಬು ವಾತ್ಸಲ್ಯವಿತ್ತು. ಅದನ್ನು ಗಮನಿಸದಷ್ಟು ದಡ್ಡ ನಾನಾಗಿರಲಿಲ್ಲ. ಎರಡು ವರ್ಷ ಪ್ರತಿ ನಮಸ್ಕಾರ ಹಾಕದೇ ignore ಮಾಡಿದ್ದ ಪೂಜ್ಯ ಟೀಚರ್ ಇವತ್ತಾದರೂ ಸಹಜವಾಗಿ ಒಂದು ಮಾತಾಡಿದರಲ್ಲ ಎನ್ನುವ ಧನ್ಯತೆಯ ಭಾವ. ಅದಕ್ಕೆ ಕಾರಣ ಅಂದು ಬಂದಿದ್ದ ನಮ್ಮ ತಂದೆಯವರೇ? ಗೊತ್ತಿಲ್ಲ. ಇರಬಹುದು. ನಮ್ಮ ತಂದೆಯವರು ಬಿಡಿ. ಅವರು ಎಲ್ಲರಿಂದಲೂ ಸನ್ಮಾನಿಸಲ್ಪಟ್ಟವರು. ಸಜ್ಜನಃ  ಸರ್ವತ್ರ ಪೂಜ್ಯತೇ ಅಂತ ಏನೋ ಮಾತಿದೆಯೆಲ್ಲ. ನಮ್ಮಂತಹ ದುರ್ಜನರನ್ನು ನೋಡಿದರೆ ಮಾತ್ರ ಸರ್ವರಿಗೂ ಎಲ್ಲೆಲ್ಲೋ ಏನೇನೋ ವತ್ರ ವತ್ರವಾಗಿ ಬರುತ್ತದೆಯೋ ಏನೋ. ವತ್ರ ವತ್ರ ಬರುತ್ತದೆ. ಬರೆದ ನಂತರ ನನಗೇ ತುಂಬಾ ನಗು ಬಂತು. Pardon my indulgence.

ಒಂಬತ್ತನೇ ಕ್ಲಾಸಿನಲ್ಲಿ ಶುರುವಾದ ನಮಸ್ಕಾರದ ಲಫಡಾ ಹತ್ತನೇ ಕ್ಲಾಸಿನಲ್ಲೂ ಮುಂದುವರೆಯಿತೇ? ಸರಿಯಾಗಿ ನೆನಪಿಲ್ಲ. ಆದರೆ ನಮಸ್ಕಾರದ ವಿಷಯವಾಗಿ ನಮ್ಮ ಶಾಲೆಯ ಫೇಮಸ್ ಎಮ್ಮೆ ಉರ್ಫ್ ಪೂಜ್ಯ ಎಂ. ಎ. ಸಿದ್ಧಾಂತಿ ಸರ್ ಒಂದು ಮಾತು ಹೇಳಿದ್ದರು. ಹತ್ತನೇ ಕ್ಲಾಸಿನಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದಾಗ ಎಮ್ಮೆ ಸರ್ ಹೇಳಿದ್ದು ಇನ್ನೂ ನೆನಪಿದೆ.

ಎಮ್ಮೆ ಸರ್ ಅಂದರೆ ಮುಗಿಯಿತು. ಭಯಂಕರ ಖಡಕ್ ಮಾಸ್ತರರು. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು. ಏಕ್ ಮಾರ್ ದೋ ತುಕಡಾ. ಅದು ಅವರ ಮಾತಿನ ಶೈಲಿ.

ಅವರು ಕ್ಲಾಸಿನಲ್ಲಿ syllabus ಪಾಠಕ್ಕಿಂತ ಜೀವನಪಾಠ ಮಾಡಿದ್ದೇ ಜಾಸ್ತಿ.

ಎಮ್ಮೆ ಸರ್ ಉವಾಚ....

ಮರ್ಯಾದೆ, ಗೌರವ ಎಲ್ಲ ಕೊಟ್ಟು ಪಡೆಯಬೇಕಾಗಿದ್ದು. ಮೊದಲು ನಾವೇ ಕೊಡಬೇಕು. ಇತರರೇ ಮೊದಲು ಕೊಡಲಿ ಎಂದು ನಿರೀಕ್ಷೆ ಮಾಡಬಾರದು. ಆದರೆ ನಾವು ಗೌರವ ಕೊಟ್ಟ ಮೇಲೂ ತಿರುಗಿ ತಕ್ಕ ಪ್ರಮಾಣದ ಗೌರವ ವಾಪಸ್ ಬರಲಿಲ್ಲವೆಂದರೆ ಮತ್ತೆ ಮತ್ತೆ ಅದೇ ಮನುಷ್ಯನಿಗೆ ಗೌರವ ಕೊಡುವ 'ತಪ್ಪು' ಮಾಡಬಾರದು.

ಎಮ್ಮೆ ಸರ್ ಅವರ ಖಡಕ್ ಜವಾರಿ ಭಾಷೆಯಲ್ಲೇ ಹೇಳಬೇಕು ಅಂದರೆ.... 'ಒಮ್ಮೆ ನಮಸ್ಕಾರ ಅನ್ನಬೇಕು. ತಿರುಗಿ ನಮಸ್ಕಾರ ಅನ್ನಲಿಲ್ಲ ಅಂದ್ರ ಮುಂದಿನ ಸರ್ತೆ ಸಿಕ್ಕಾಗ ಅವರ  ಕಡೆ ದುರುದುರು ನೋಡಿಕೋತ್ತ ಹೋಗಬೇಕು. ಆವಾಗ ಗೊತ್ತಾಗ್ತದ. ಕೆಟ್ಟ ಕಣ್ಣೀಲೇ ಕೆಕ್ಕರಿಸಿ ದುರುದುರು ನೋಡಬೇಕು!'

ಎಮ್ಮೆ ನಿನಗೆ ಸಾಟಿಯಿಲ್ಲ!! ಎಮ್ಮೆ ಸರ್ ನಿಮಗೆ ಸಾಟಿಯಿಲ್ಲ!! Hats Off!!

ಎಮ್ಮೆ ಸರ್ ಉಪದೇಶ ಕೇಳಿದ ನಾವು ಅದನ್ನು ಪಾಲಿಸಲಿಲ್ಲ. At least ಶಿಕ್ಷಕ ಶಿಕ್ಷಕಿಯರ ವಿಚಾರದಲ್ಲಂತೂ ಅದನ್ನು ಪೂರ್ತಿ ನಿರ್ಲಕ್ಷ ಮಾಡಿದ್ದಾಯಿತು. ಯಾವುದೇ ಶಿಕ್ಷಕರ ಜೊತೆ ಏನೇ ಜಗಳವಾಗಿರಲಿ, ಏನೇ ಹೇರಾಫೇರಿ ಆಗಿರಲಿ, ಏನೇ ವಿರಸವಿರಲಿ ಅವರಿಗೆ ಎಂದಿನಂತೆ ಮರುದಿವಸ ಒಂದು ನಮಸ್ಕಾರ ಗ್ಯಾರಂಟಿ. ಹಿಂದಿನ ದಿನ ಮಾಸ್ತರ್ ಟೀಚರ್ ಹಾಕಿಕೊಂಡು ಬರೋಬ್ಬರಿ ರುಬ್ಬಿ ಬೈದಿದ್ದರ ಕಹಿ ಇನ್ನೂ ಇದ್ದರೆ ಮುಖದ ಮೇಲೆ ಎಂದಿನ ತುಂಟ ನಗೆ ಇರುತ್ತಿದ್ದಿಲ್ಲ. ಆದರೆ ಗೌರವಯುತ ನಮಸ್ಕಾರ ಮಾತ್ರ ಖಾತ್ರಿ. ಅದಕ್ಕೆಂದೂ ಖೋತಾ ಇಲ್ಲ. ವಾಪಸ್ ನಮಸ್ಕಾರ ಕೂಡ ಸಿಗುತ್ತಿತ್ತು. Most of the time.

೧೯೮೮ ರಲ್ಲಿ SSLC ಮುಗಿದ ನಂತರ ಕೌಲಗಿ ಟೀಚರ್ ಅವರನ್ನು ಆಮೇಲೆ ನೋಡಿದ್ದು ೨೦೧೨ ಡಿಸೆಂಬರ್ ನಲ್ಲಿ. ನಮ್ಮ ೧೯೮೮ SSLC ಬ್ಯಾಚಿನ ರಜತಮಹೋತ್ಸವ ಸ್ನೇಹಸಮ್ಮಿಲನ ಸಮಾರಂಭದಲ್ಲಿ.

ಸಮಾರಂಭ ಕೊಂಚ ರಾಡಿಯೆದ್ದಿತ್ತು. Scheduling problem. ಅದೇ ದಿನ ಮುಂಜಾನೆ ಬೇರೆ ಬ್ಯಾಚಿನವರ ಮತ್ತೊಂದು ಸಮಾರಂಭವಿತ್ತು. ಅವರದ್ದು ಮುಗಿದ ನಂತರ ನಮ್ಮದು. ಹಾಗಾಗಿ ತಡವಾಗಿ ಆರಂಭವಾಯಿತು. ಎರಡು ದಿವಸಗಳ ಹಿಂದೆ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವವೋ ಏನೋ ಬೇರೆ ದೊಡ್ಡ ಸಮಾರಂಭವೂ ಇತ್ತು. ಹಾಗಾಗಿ ಹಾಲಿ ಮತ್ತು ಮಾಜಿ ಶಿಕ್ಷಕ ಶಿಕ್ಷಕಿಯರು ತಿಂಗಳಾನುಗಟ್ಟಲೇ ಅವುಗಳಲ್ಲಿ ತುಂಬಾ ಬ್ಯುಸಿ ಆಗಿದ್ದರು. ಮತ್ತು ಸುಸ್ತೂ ಆಗಿದ್ದರು.

ಸಮಾರಂಭದ ಊಟ ಮುಗಿದ ಮೇಲೂ ದಯವಿಟ್ಟು ಇರಬೇಕು ಮತ್ತು ಮಧ್ಯಾಹ್ನದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶಿಕ್ಷಕ ಶಿಕ್ಷಕಿಯರಲ್ಲಿ ವಿನಂತಿ ಮಾಡಿಕೊಳ್ಳಲಾಗಿತ್ತು. ಆದರೆ ಮೂರು ಶಿಕ್ಷಕರನ್ನು ಬಿಟ್ಟರೆ ಎಲ್ಲರೂ ಊಟದ ನಂತರ ಪೋಯಾಚ್. ಪರಾರಿ. ಇರಲಿ ಬಿಡಿ. ಪಾಪ ಅವರಿಗೆಲ್ಲ ತುಂಬಾ ಸುಸ್ತಾಗಿರಬೇಕು. ಬೇರೆ ಅನಿವಾರ್ಯತೆಗಳೂ ಇದ್ದಿರಬಹುದು. ಹೆಗಡೆ ಸರ್, ಟಂಕಸಾಲಿ ಸರ್, ಚಿಕ್ಕಮಠ ಸರ್, ಈ ಮೂವರು ಮಾತ್ರ ಸಂಜೆವರೆಗೂ ಕೊನೆಯವರೆಗೂ ಇದ್ದರು.

ಸುಮಾರು ಜನ ಶಿಕ್ಷಕ ಶಿಕ್ಷಕಿಯರನ್ನು ಭೇಟಿಯಾದರೂ ಕೌಲಗಿ ಟೀಚರನ್ನು ಖುದ್ದಾಗಿ ಭೇಟಿಯಾಗಿ, ಕಾಲಿಗೆ ಫುಲ್ ನಮಸ್ಕಾರ ಹಾಕಿ, ಗುರುತು ಮರೆತಿದ್ದರೆ ಮರುಪರಿಚಯ ಮಾಡಿಕೊಂಡು, ಆಶೀರ್ವಾದ ಪಡೆಯಲು ಆಗಲಿಲ್ಲ. ಊಟದ ನಂತರವೂ ಎಲ್ಲರೂ ಇರುತ್ತಾರೆ ಅಂದುಕೊಂಡಿದ್ದು ತಪ್ಪಾಗಿತ್ತು. ಹಾಗಾಗಿ ಕೌಲಗಿ ಟೀಚರ್ ಅವರನ್ನು ನೋಡಿ ಕಣ್ತುಂಬಿಕೊಂಡರೂ ಖುದ್ದಾಗಿ ಭೇಟಿಯಾಗಲು ಆಗಲಿಲ್ಲ. ಮತ್ತೂ ಒಂದಿಬ್ಬರ ಕೇಸಿನಲ್ಲೂ ಅದೇ ಆಯಿತು. ನಮ್ಮ ದೌರ್ಭಾಗ್ಯ ಅಂದುಕೊಳ್ಳೋಣ.

ಅದೇ ನಮ್ಮ ಗ್ರಾಮಪುರೋಹಿತ ಟೀಚರ್ ನೋಡಿ. ಅವರ ವರ್ತನೆಗೆ ನಾನು ಫುಲ್ ಫಿದಾ. ಐದು, ಆರು, ಏಳು ಈ ಮೂರೂ ತರಗತಿಗಳಲ್ಲಿ ಕನ್ನಡ ಕಲಿಸಿದವರು ಅವರು. ಅದ್ಭುತ ಶಿಕ್ಷಕಿ. ಅಂತವರು ಪಾಪ ನನ್ನನ್ನು ಮುದ್ದಾಂ ಹುಡುಕಿ, ಮಾತಾಡಿಸಿ, ಪ್ರೀತಿಪಟ್ಟುಕೊಂಡು ಆಶೀರ್ವಾದ ಮಾಡಿ ಹೋದರು. ನನ್ನ ಪುಣ್ಯಕ್ಕೆ ಅವರ ಎದುರಿಗೇ ಸಿಕ್ಕೆ. ಒಳ್ಳೆದಾಯಿತು. ಇಲ್ಲವಾದರೆ ಮಿಸ್ಸಾಗಿಬಿಡುತ್ತಿದ್ದರು ನಮ್ಮ ಪ್ರೀತಿಯ ಹಳ್ಳಿಭಟ್ಟ ಟೀಚರ್. ಗ್ರಾಮಪುರೋಹಿತ ಅನ್ನುವ ಶಬ್ದದ ತತ್ಸಮ ತದ್ಭವ ಹಳ್ಳಿಭಟ್ಟ
ಎಂದು ನನ್ನ ಮಹಾ ಜೋಕ್. ಕೇಳಿದ ಗೆಳೆಯ ಗೆಳತಿಯರು ಉಳ್ಳಾಡಿ ಉಳ್ಳಾಡಿ ನಕ್ಕರು. All in good
jest. ತತ್ಸಮ ತದ್ಭವ ಮೊದಲು ಪರಿಚಯಿಸಿದವರೇ ಗ್ರಾಮಪುರೋಹಿತ ಟೀಚರ್. ಅದನ್ನು ಅವರ ಮೇಲೆಯೇ ಪ್ರಯೋಗಮಾಡಿಯಾಗಿತ್ತು. ನಮ್ಮಂತಹ ಶಿಷ್ಯರು ಬೇರೆ ಎಲ್ಲಿಯಾದರೂ ಸಿಕ್ಕಾರೇ!!??

ನಾವು ಹಿಂದಿನ ದಿನ ಶಾಲೆಗೆ ಹೋದ ವಿಷಯ ತಿಳಿದ ಗ್ರಾಮಪುರೋಹಿತ ಟೀಚರ್ ಆಗಲೇ ಭೇಟಿಯಾಗಲೆಂದು ಓಡಿ ಬಂದಿದ್ದರಂತೆ. ಅವರು ಬರುವ ವಿಷಯ ನಮಗೆ ಗೊತ್ತಿರಲಿಲ್ಲ. ನಾವು ಹೋದ ಮೇಲೆ ಅವರು ಬಂದರಂತೆ. ಜಸ್ಟ್ ಮಿಸ್ಸಾಗಿತ್ತು.

'ನಿನ್ನೆ ನಿನ್ನ ಭೇಟಿಯಾಗಲಿಕ್ಕೆ ಅಂತ ಓಡೋಡಿ ಬಂದ್ರ, ನೀನೇ ಇರಲಿಲ್ಲಲ್ಲೋ!' ಎಂದು ಹುಸಿಮುನಿಸು ತೋರಿಸಿದರು ಗ್ರಾಮಪುರೋಹಿತ ಟೀಚರ್.

'ಅಯ್ಯ ಟೀಚರ್! ನೀವು ಬರೋದು ಗೊತ್ತಿರಲಿಲ್ಲ ರೀ.. ' ಅನ್ನಲೂ ಬಿಡದೇ ಅಪ್ಪಿಕೊಂಡು ಮೈದಡವಿ ಆಶೀರ್ವಾದ ಮಾಡಿ ಹೋಗಿಬಿಟ್ಟರು. ಅದು ಅವರ ದೊಡ್ಡ ಗುಣ ಮತ್ತು ನಮ್ಮ ಸೌಭಾಗ್ಯ. ಅವರ ಸೋದರಸಂಬಂಧಿಯಾದ ಗ್ರಾಮಪುರೋಹಿತ ಸರ್ ನನ್ನ ಫೇವರಿಟ್ ಸರ್. ಪ್ರೈಮರಿ ಎರಡು ಮತ್ತು ಮೂರನೇ ಕ್ಲಾಸಿನಲ್ಲಿ ಪಾಠ ಮಾಡಿದವರು. ಗುರುಗಳಾಗಿದ್ದರೂ ಪಕ್ಕಾ ಸ್ನೇಹಿತರಂತೆ ವರ್ತಿಸುತ್ತಿದ್ದರು. My most favorite sir! ಗ್ರಾಮಪುರೋಹಿತ ಟೀಚರ್ ಕೂಡ ಈಗ ಫೇವರಿಟ್ ಆಗಿಬಿಟ್ಟರು.

ನಮ್ಮ ಶಾಲೆಯ ಸಮಾರಂಭವಂತೂ ಮುಗಿದಿತ್ತು. ೨೦೧೨ ರ  ಸಮಯ. ನಾನೂ ಆಗ ಫೇಸ್ಬುಕ್ ಮೇಲೆ ಸಾಕಷ್ಟು ಸಕ್ರಿಯನಾಗಿದ್ದೆ. ಆಗ ಫೇಸ್ಬುಕ್ ಮೇಲೆ ಕಂಡರು ಕೌಲಗಿ ಟೀಚರ್. ಅವರೂ ಫೇಸ್ಬುಕ್ ಮೇಲೆ ಇದ್ದರು. ಖುಷಿಯಾಗಿ ಅವರಿಗೆ ಒಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಅದನ್ನು ಅವರು accept ಮಾಡಿರಲಿಲ್ಲ. ಎಲ್ಲಿ ಟೀಚರಿಗೆ ನನ್ನ ಪರಿಚಯ ಸಿಗಲಿಲ್ಲವೋ ಏನೋ ಎಂದು ವಿಚಾರ ಮಾಡಿ ನನ್ನ ಪರಿಚಯದ ನೆನಪು ಮಾಡಿಕೊಡಲು ಒಂದೆರೆಡು ವಾಕ್ಯದ ಚಿಕ್ಕ ಸಂದೇಶವನ್ನು ಫೇಸ್ಬುಕ್ ಮೂಲಕವೇ ಕಳಿಸಿದ್ದೆ. ಅದಕ್ಕೆ Thumbs Up ಎನ್ನುವಂತೆ ನಿಗುರಿದ ಹೆಬ್ಬೆರಳಿನ ರಿಪ್ಲೈ ಕಳಿಸಿದ್ದರು. ಆದರೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನ್ನು ಮಾತ್ರ accept ಮಾಡಿರಲಿಲ್ಲ. ಯಾಕೋ ಗೊತ್ತಿಲ್ಲ. ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ಬೇರೆ ಮಿತ್ರರು ಅವರ ಫ್ರೆಂಡ್ ಲಿಸ್ಟಿನಲ್ಲಿ ಇದ್ದರು. ಮೊದಲಿನ ಫ್ರೆಂಡ್ ರಿಕ್ವೆಸ್ಟ್ ಎಲ್ಲಿಯಾದರೂ ಡಿಲೀಟ್ ಮಾಡಿಬಿಟ್ಟರೇನೋ ಎಂದುಕೊಂಡೆ. ಒಮ್ಮೊಮ್ಮೆ by mistake ಡಿಲೀಟ್ ಆಗಿಬಿಡುತ್ತವೆ ನೋಡಿ. ಹಾಗೆಂದುಕೊಂಡು ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ. ಅದನ್ನೂ ಅವರು accept ಮಾಡಲಿಲ್ಲ. ಯಾಕೋ ಗೊತ್ತಿಲ್ಲ. ಹಿಂದೆ ನಮಸ್ಕಾರಕ್ಕೆ ವಾಪಸ್ ನಮಸ್ಕಾರ ಹಾಕದಿದ್ದಾಗ ಸ್ವಲ್ಪವಾದರೂ ತಲೆಕೆಡಿಸಿಕೊಂಡಿದ್ದೆ. ಈಗ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಏನೂ ವಿಚಾರ ಮಾಡಲಿಲ್ಲ. ಫೇಸ್ಬುಕ್ ಫ್ರೆಂಡ್ ಆಗಲಿ ಬಿಡಲಿ ಟೀಚರ್ ಟೀಚರೇ. ಅವರು ಚೆನ್ನಾಗಿರಲಿ. ಅವರ ಆಶೀರ್ವಾದವಂತೂ ಇದ್ದೇ ಇರುತ್ತದೆ. ಅದು God granted. ಅಲ್ಲವೇ?

ಮುಂದೆ ೨೦೧೪ ರಲ್ಲಿ ಪೂಜ್ಯ ಟಂಕಸಾಲಿ ಸರ್ ತೀರಿಕೊಂಡರು. 'ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ!' ಎನ್ನುವ ಶೀರ್ಷಿಕೆಯಡಿ ಅವರಿಗೊಂದು ಹಳೆಯ ನೆನಪುಗಳ ಶ್ರದ್ಧಾಂಜಲಿ ಲೇಖನ ಬರೆದಿದ್ದೆ. ಅದನ್ನು 'ಧಾರವಾಡ ಬಾಂಡ್ಸ್' ಎನ್ನುವ ಫೇಸ್ಬುಕ್ ಗ್ರೂಪ್ಪಿನಲ್ಲಿ ಶೇರ್ ಮಾಡಿದ್ದೆ. ಅದನ್ನು ಗಮನಿಸಿದ್ದ ಕೌಲಗಿ ಟೀಚರ್ ಅದಕ್ಕೆ ಕಾಮೆಂಟ್ ಹಾಕಿದ್ದರು. ಅವರ ಸಹೋದ್ಯೋಗಿಯಾಗಿದ್ದ ನಮ್ಮ ಪ್ರೀತಿಯ ಟಂಕಸಾಲಿ ಸರ್ ಬಗ್ಗೆ ತಾವೂ ಒಂದೆರೆಡು ಮಾತುಗಳನ್ನು ಹಂಚಿಕೊಂಡಿದ್ದರು. ಕೌಲಗಿ ಟೀಚರ್ ಕಾಮೆಂಟ್ ಹಾಕಿದಾಗಲೇ ನೆನಪಾಗಿದ್ದು ಅವರ ಹೆಸರು ಕೃಷ್ಣಾ ಎಂದು. ನಾನು ಶೀರ್ಷಿಕೆಯಲ್ಲಿ 'ಕೃಷ್ಣಾ' ಎಂದು ಏಕೆ ಹಾಕಿದ್ದೆ ಅಂದರೆ ನನಗೆ 'ನೀ ಸಿಗದ ಬಾಳೊಂದು ಬಾಳೆ ಕೃಷ್ಣಾ?' ಎನ್ನುವ ಭಾವಗೀತೆ ನೆನಪಾಗಿತ್ತು. ಆಮೇಲೆ ಅನ್ನಿಸಿದ್ದು... ನನಗೆ ಗೊತ್ತಿಲ್ಲದೆಯೇ ಒಂದೇ ಸಾಲಿನಲ್ಲಿ ಇಬ್ಬರು ಪೂಜ್ಯ ಶಿಕ್ಷಕರನ್ನು ನೆನದಂತಾಯಿತು. ಟಂಕಸಾಲಿ ಸರ್ ಮತ್ತು ಕೃಷ್ಣಾ ಕೌಲಗಿ ಟೀಚರ್. God's ways are strange!

೨೦೧೬ ಜೂನ್ ನಂತರ ನಾನೇ ಫೇಸ್ಬುಕ್ ಮೇಲೆ ಇಲ್ಲ. ನನಗೆ ಸಾಮಾಜಿಕ ಜಾಲತಾಣಗಳ ಅವಶ್ಯಕತೆ ಇಲ್ಲ. ಕಿರಿಕಿರಿ ಜಾಸ್ತಿ. ಸಮಯ ಹಾಳು. ಅದರಲ್ಲೂ ನಾನು ಸಿಕ್ಕಾಪಟ್ಟೆ opinionated ಮತ್ತು ಜಗಳಗಂಟ. ತಪ್ಪೋ ಸರಿಯೋ. ಎಲ್ಲ ವಿಷಯಗಳ ಮೇಲೆ ವಾದ, ವಿವಾದ, ವಾಗ್ವಾದ, ವಿತಂಡವಾದ ಮಾಡುವ ಹುಕಿ. ಅದಕ್ಕಾಗಿ ಮಂಡೆ ಬಿಸಿ. ಸಮಯ ಹಾಳು. ಬಾಂಧವ್ಯಗಳು ಹಾಳು. ಇದೆಲ್ಲಾ ಬೇಕಾಗಿಲ್ಲ ಎಂದು ನಿರ್ಧರಿಸಿ ಐದು ವರ್ಷಗಳ ಫೇಸ್ಬುಕ್ ಸಹವಾಸಕ್ಕೆ ದೊಡ್ಡ ನಮಸ್ಕಾರ ಹಾಕಿ ಮಂಗಳ ಹಾಡಿದೆ. Good riddance.

ನಾನು ಫೇಸ್ಬುಕ್ ಬಿಟ್ಟು ಬಹಳ ಸಮಯವಾಗಿದೆ. ಹಾಗಾಗಿ ಆಗಿನ ಫೇಸ್ಬುಕ್ ಮಿತ್ರರು, ಫ್ರೆಂಡ್ ರಿಕ್ವೆಸ್ಟ್ ಕಳಿಸಿದವರು, ಫ್ರೆಂಡ್ ಆದವರು, ಫ್ರೆಂಡ್ ಆಗದವರು, ಒಮ್ಮೆ ಫ್ರೆಂಡಾಗಿ ನಂತರ ತಾವೇ unfriend ಮಾಡಿದ ನಂತರವೂ ಕದ್ದು ಕದ್ದು ಹಣಿಕಿ ನೋಡುತ್ತಿದ್ದ ಕ್ರಿಮಿಕೀಟಗಳು, ಪದೇಪದೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿ accept ಮಾಡುವ ಮೊದಲೇ cancel  ಮಾಡುತ್ತಿದ್ದ ಡೀಪಿ ಮೆಂಟಲ್ ಕೇಸುಗಳು, ಫೇಸ್ಬುಕ್ ಮೇಲೆಯೇ ಸುಪಾರಿ ಕೊಟ್ಟಿದ್ದ ಮೈತುಂಬಾ ಹಾವಿನ ವಿಷ ತುಂಬಿಕೊಂಡಿರುವ ವಿಷದ ಆಂಟಿಯರು ಮತ್ತು ಹಾವುರಾಣಿಯರು, ಸುಪಾರಿ ತೆಗೆದುಕೊಂಡು ಬದರಿಯಲ್ಲಿ ನಾರಾಯಣನ ಸನ್ನಿಧಾನದಲ್ಲಿದ್ದೇನೆ ಎನ್ನುವುದನ್ನೂ ಮರೆತು ಅಲ್ಲಿಂದಲೇ ಎನ್ಕೌಂಟರ್ ಮಾಡಿ ಕೊನೆಗೆ ತಮ್ಮ ತಲೆ ಮೇಲೆ ತಾವೇ ಕೈಯಿಟ್ಟುಕೊಂಡು ಭಸ್ಮವಾಗಿ ಹೋದ ಪ್ರೋಗ್ರೆಸಿವ್ ಪುಂಗಿಯಂತಹ ಭಸ್ಮಾಸುರಿಯರು, ಕೊಂಚವೂ ಜವಾಬ್ದಾರಿಯಿಲ್ಲದ ಫೇಸ್ಬುಕ್ ಗ್ರೂಪ್ಪುಗಳ ಅವಿವೇಕಿ ಅಡ್ಮಿನ್ನುಗಳು, ವಾದ ವಿವಾದ ಮಾಡಿ ಕೊನೆಗೆ ಎಲ್ಲವನ್ನೂ ಡಿಲೀಟ್ ಮಾಡಿಬಿಡುವ ಯಡಬಿಡಂಗಿ ಹುಚ್ಚರು, ಧೋಕೆಬಾಜುಗಳು, ಇತರೇ ಕಿರಿಕ್ ಗಿರಾಕಿಗಳು. ಇವೆಲ್ಲಾ ಫೇಸ್ಬುಕ್ ಮೇಲೆ ಸಿಕ್ಕ ನಮೂನಾಗಳು. ಒಂದೇ ಎರಡೇ. ಎಲ್ಲರೂ ಈಗ ನಗಣ್ಯ. ಎಲ್ಲದರಿಂದ ಎಲ್ಲರಿಂದ ಮುಕ್ತಿ ಮುಕ್ತಿ. ಮುಕ್ತ. ಮುಕ್ತ.

ಕೌಲಗಿ ಟೀಚರ್ ಫೇಸ್ಬುಕ್ ಮೇಲೆ ಇನ್ನೂ ಇದ್ದಾರೆ ಎಂದು ಕಾಣುತ್ತದೆ. ಗೂಗಲ್ ಸರ್ಚ್ ಮಾಡಿದಾಗ ಕಾಣುತ್ತದೆ.

ಕೌಲಗಿ ಟೀಚರ್ ಪುಸ್ತಕ ಬರೆದ್ದಿದ್ದಾರೆ ಎಂದು ತಿಳಿದಾಗ ಇದೆಲ್ಲಾ ನೆನಪಾಯಿತು. ಪುಸ್ತಕ ಓದಿದ ಮೇಲೆ ಏನು ಬರೆಯುತ್ತೇನೋ ಗೊತ್ತಿಲ್ಲ. ಓದಿದ ಎಲ್ಲ ಪುಸ್ತಕಗಳ ಮೇಲೆ ವಿಮರ್ಶೆ ಬರೆಯುವ ಔಕಾತ್ ಇಲ್ಲ. ನೋಡೋಣ.

ಕೌಲಗಿ ಟೀಚರ್ ಅವರ ಬ್ಲಾಗ್ ಓದಿದಾಗ ತಿಳಿಯಿತು ಅವರಿಗೆ ಈಗ ೭೫ ವರ್ಷವಂತೆ. ನಮ್ಮ ತಾಯಿಯ ವಯಸ್ಸೇ. ಅವರಿಗೆ ಮೊದಲಿಂದಲೂ ಕಣ್ಣಿನ ತೊಂದರೆ ಇತ್ತು ಅಂತ ಬ್ಲಾಗ್ ಓದಿದಾಗ ತಿಳಿಯಿತು. ಲೇಡೀಸ್ ಟೀಚರುಗಳಲ್ಲಿ ಸದಾ ಕನ್ನಡಕ ಹಾಕಿಕೊಂಡಿರುತ್ತಿದ್ದವರು ಅವರೇ ಒಬ್ಬರು ಎಂದು ನೆನಪು. ಈಗ ಕಾರಣ ಗೊತ್ತಾಯಿತು. ವಯೋಸಹಜ ಆರೋಗ್ಯ ಸಮಸ್ಯೆಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಕೌಲಗಿ ಟೀಚರ್ ಅವರ ಅತಿದೊಡ್ಡ ಸತ್ವಬಲ ಅಂದರೆ ಅವರ ಪಾಸಿಟಿವ್ ಮನೋಭಾವ. ಏನೇ ಬಂದರೂ ಎದುರಿಸಿ ಗೆಲ್ಲುತ್ತೇನೆ ಎನ್ನುವ ಛಲ ಮತ್ತು ಆತ್ಮವಿಶ್ವಾಸ. ಹಾಗಾಗಿ ಅವರು ವಯೋಸಹಜ ತೊಂದರೆಗಳನ್ನೆಲ್ಲವನ್ನೂ ಸಮಚಿತ್ತದಿಂದ ಎದುರಿಸುತ್ತಾರೆ ಮತ್ತು ಇನ್ನೂ ಹಲವಾರು ವರ್ಷ ಬಾಳಿ ಬದುಕುತ್ತಾರೆ ಎನ್ನುವ ಬಗ್ಗೆ ಭರವಸೆ ಇದೆ. ಆ ವರದಾನವನ್ನು ಭಗವಂತ ಅವರಿಗೆ ಕರುಣಿಸಲಿ.

ಎಲ್ಲಕ್ಕಿಂತ ಮುಖ್ಯವಾಗಿ ಭಗವಂತನ ಆಶೀರ್ವಾದ ಕೌಲಗಿ ಟೀಚರ್ ಮೂಲಕ ನಮ್ಮೆಲ್ಲರ ಮೇಲೆ ಅಂದರೆ ಕೌಲಗಿ ಟೀಚರ್ ಶಿಷ್ಯವೃಂದದ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ.

ನಮ್ಮ ಪ್ರೀತಿಯ ಟೀಚರ್ ಎಂದುಕೊಂಡು ತೆರೆದ ಮನಸ್ಸಿನಿಂದ ಬರೆದಿದ್ದೇನೆ.  ಎಲ್ಲಾದರೂ ತಪ್ಪು ಅನ್ನಿಸಿದರೆ ದೊಡ್ಡ ಮನಸ್ಸಿನಿಂದ ಕ್ಷಮಿಸಿ ಹೊಟ್ಟೆಯಲ್ಲಿ ಹಾಕಿಕೊಳ್ಳಿ. ಏಕಾದಶಿ ಉಪವಾಸವಿದ್ದರೂ ತಪ್ಪನ್ನು ಹೊಟ್ಟೆಯೊಳಗೆ ಹಾಕಿಕೊಳ್ಳಬಹುದಂತೆ. ಹೀಗೆ ಬರೆದ ಮೇಲೆ ನಗು ಬಂತು. Pardon my indulgence.


*****
ಜೂನ್ ೧೮, ೨೦೧೪

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಕವಳ ತುಪ್ಪಿದ್ಮ್ಯಾಲೆ ಪಿರುತಿ ಮಾಡುದಲ್ಲದಾ......ಆ....ಆ....

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ

ಕೆಲಸ ಮುಗಿಸಿ ಹೊರಟಿದ್ದ ತಂಡದ ಹೆಣ್ಣಾಳಿಗೆ ತಂಡದ ಶೇರುಗಾರರು ದರೆ ಅಂಚಿನಲ್ಲಿ, ದೋಣಿ ಮರಿಗೆ ಎಜ್ಜೆಯಲ್ಲಿ, ಬಾಯಲ್ಲಿದ್ದ ಕವಳ ತುಪ್ಪದೇ, ಗಡಿಬಿಡಿಯಲ್ಲಿ ಪಿರುತಿ ಮಾಡೋಕೆ ಹೋಗಿ, ಆಕೆಯ ಪಲ್ಕಿ (ಬ್ಲೌಸ್) ಮೇಲೆ ಕವಳದ ಕೆಂಪು ಚಿತ್ತಾರ ಮೂಡಿಸಿದಾಗ ಹೊರಹೊಮ್ಮಿದ ಹಾಡು.