ಅತ್ತ ದೂರದ ಅಮೇರಿಕಾದ ಫ್ಲೋರಿಡಾದಲ್ಲಿ ಲೆಬನಾನಿನ ರಾಷ್ಟ್ರೀಯ ಸುಂದರಿ, ಮಿಸ್ ಲೆಬನಾನ್, ಮಿಸ್ ಯುನಿವರ್ಸ್ ಫೈನಲ್ಸ್ ನಲ್ಲಿ ಕ್ಯಾಟ್ ವಾಕ್ ಮಾಡುತ್ತಾ ತನ್ನ ಸೌಂದರ್ಯ ಪ್ರದರ್ಶಿಸುತ್ತಿದ್ದರೆ, ಬಿರೂಟ್(ಲೆಬನಾನಿನ ರಾಜಧಾನಿ) ನಲ್ಲಿ ಐಶಾರಾಮಿ ಬಾರನಲ್ಲಿ ಕೂತಿದ್ದ ಪ್ಯಾಲೆಸ್ತೇನಿ ಉಗ್ರಗಾಮಿಯೊಬ್ಬ ಬಿಟ್ಟ ಕಣ್ಣು ಮುಚ್ಚದೆ, ಬಾಯಿ ಬಿಟ್ಟುಗೊಂಡು ಆಕೆಯ ಸೌಂದರ್ಯ ಹೀರುತ್ತಿದ್ದ. ಆ ಕಾಲದ ದೊಡ್ಡ, ದುಬಾರಿ ಟಿವಿ ಅದರ ಸಲುವಾಗಿಯೇ ಹಾಕಿಸಿದ್ದ.
ನೋಡ್ರೀ..............ನಮ್ಮ ಝಕಾಸ್ ಮಾಲು.........ಹೇಗಿದೆ? ಅವಳೇ ಈ ವರ್ಷದ ಮಿಸ್ ಯುನಿವರ್ಸ್. ಗ್ಯಾರಂಟೀ. ಬೆಟ್ ಕಟ್ಟುತ್ತೀರಾ? ಹೇಳಿ - ಅಂತ ಅವನು ದುಬಾರಿ ಸ್ಕಾಚ್ ಹೀರುತ್ತಾ, ಪರಮ ದುಬಾರಿ ಅಮೇರಿಕನ್ ಸಿಗರೇಟ್ ಎಳೆಯುತ್ತ, ಸುಂದರಿಯ ಮಾರ್ಜಾಲ ನಡಿಗೆ ನೋಡುತ್ತಾ, ಬಳಕುತ್ತಿರುವ ಆಕೆಯ ಒರೆ ಕೋರೆಗಳಿಗೆ ತಾನೂ ಬಳಕುತ್ತಾ, ಪ್ರಚೋದನಕಾರಿಯಾಗಿ ತೊಡೆ ಕುಣಿಸುತ್ತಾ, ತುಂಟ ನಗೆ ಬೀರುತ್ತಿದ್ದರೆ, ಸುತ್ತ ಮುತ್ತ ಕುಳಿತಿದ್ದ ಅವನ ಸಹಚರ ಉಗ್ರಗಾಮಿಗಳು ಕಂಟ್ರಿ ಶೆರೆ ಕುಡಿಯುತ್ತ, ಬೀಡಿ ಸೇದುತ್ತ ತಮ್ಮ ಖೋಟಾ ನಸೀಬ್ ಶಪಿಸುತ್ತ ಅಯ್ಯೋ ನಮ್ಮ ಕರ್ಮವೇ ಅಂತ ಲುಕ್ ಕೊಡುತ್ತ ಒಂದು ತರಹ ಅಸೂಯೆ ಫೀಲ್ ಮಾಡಿಕೊಳ್ಳುತ್ತಿದ್ದರು.
ಮಿಸ್ ಲೆಬನಾನ್ ಆಗಿದ್ದ ಜಾರ್ಜಿನಾ ರಿಜ್ಕ್ ಎಂಬ ಆ ಕಾಲದ ಬಾಂಬ್ ಸುಂದರಿ ಆ ವರ್ಷದ ಮಿಸ್ ಯುನಿವರ್ಸ್ ಆಗೇ ಬಿಟ್ಟಳು. ಅದನ್ನೂ ಈ ಉಗ್ರಗಾಮಿಯೇ ಫಿಕ್ಸ್ ಮಾಡ್ಸಿದ್ದನಾ? ಗೊತ್ತಿಲ್ಲ.
ಅವನಿಗೆ ಆವಾಗಲೇ ಮಿಸ್ ಲೆಬನಾನ್ ಜೊತೆ ಅಫೇರ್ ಇತ್ತಾ....?ಅಥವಾ ಮುಂದೆ ಆಯಿತಾ....?.....ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯನ್ನು ಪಟಾಯಿಸಿದ್ದು ಹೌದು. ಆಗಲೇ ಒಂದು ವಿವಾಹವಾಗಿ ಲೆಬನಾನಿನ ಮತ್ತು ವಿಶ್ವದ ಎಲ್ಲ ದೊಡ್ಡ ಶಹರಗಳಲ್ಲಿ ಗಲ್ಲಿಗೊಬ್ಬ ಮಾಡೆಲ್ ಜೊತೆಗೋ, ಸಿನೆಮಾ ತಾರೆ ಜೊತೆಗೋ ಅಫೇರ್ ಮತ್ತೊಂದು ಇಟ್ಟುಗೊಂಡು ದೊಡ್ಡ ಮಟ್ಟದ ಪ್ಲೇಬಾಯ್ ಅಂತ ಖ್ಯಾತನಾಗಿದ್ದವನ ಹ್ಯಾರೆಮ್ ಗೆ ಮತ್ತೊಂದು ಬೆಕ್ಕು ಸೇರ್ಪಡೆ ಆಗಿ ಮ್ಯಾವ್ ಅಂದಿತ್ತು. ಈ ಉಗ್ರಗಾಮಿ ಗಡವ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಮಿಸ್ ಯುನಿವರ್ಸ ಗೆ ಒಂದು ಮಗುವನ್ನು ಕರುಣಿಸಿಯೇ ಬಿಟ್ಟಿತು.
ಅವನೇ.....ಕೆಂಪು ಯುವರಾಜ (Red Prince)....ಎಂದೇ ಪ್ರಸಿದ್ಧನಾಗಿದ್ದ ಪ್ಯಾಲೆಸ್ಟೈನ್ ಉಗ್ರಗಾಮಿ ಅಲಿ ಹಸನ್ ಸಲಾಮೆ.
ಯಾಸೀರ್ ಅರಾಫತ್ ಅವರ ಏಕ್ದಂ ಖಾಸ್ ಮನುಷ್ಯ ಅವನು. ಅವರ ಫೋರ್ಸ್ - 17 ಎಂಬ ಖಾಸಗೀ ಕಮಾಂಡೋ ಪಡೆಯ ನಾಯಕ. ಕೆಲವೊಂದು ವಲಯದಲ್ಲಿ ಅರಾಫತ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತನಾದವನು. ಅತಿ ವಿಚಿತ್ರವೆಂಬಂತೆ ಅಮೇರಿಕಕ್ಕೆ ಬೇಕಾದವನು. ಹಾಗಾಗಿಯೇ ಇಸ್ರೇಲ್ ಬೇರೆಲ್ಲಾ ಉಗ್ರಗಾಮಿಗಳನ್ನು ಹಿಡಿಹಿಡಿದು ಬ್ಯಾಂಡ್ ಬಾರಿಸುತ್ತಿದ್ದರೆ ಇವನು ಮಾತ್ರ ಅಮೇರಿಕಾದ ಕೆಲಸ ಲೆಬನಾನಿನಲ್ಲಿ ಏನೇ ಇದ್ದರೂ ಮಾಡಿಕೊಟ್ಟು ಅವರ ಛತ್ರಛಾಯೆಯಲ್ಲಿ ಆರಾಮ ಇದ್ದ.
ಅವನ ಪರ್ಸನಾಲಿಟಿಯೂ ಹಾಗೆ. ಆರು ಫೂಟಿಗೂ ಮೀರಿದ ಆಜಾನುಬಾಹು. ಗುಂಗುರು ಕೂದಲು. ಮೇಲೆ ಫುಲ್ ಬಿಲ್ಡಪ್ ಬೇರೆ. ಹಿಂದೆ ಮುಂದೆ ನೋಡದೆ ದುಡ್ಡು ಉಡಾಯಿಸುತ್ತಿದ್ದ. ಬಿರೂಟಿನ ಉನ್ನತ ಜನರ ಪಾರ್ಟಿಗಳಿಗೆ ಅವನಿಗೆ ಆಹ್ವಾನ ಎಂದೂ ತಪ್ಪುತ್ತಿದ್ದಿಲ್ಲ. ನೀರೆಯರ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಅವರೇ ಮೈಮೇಲೆ ಬಿದ್ದು ಬರುತ್ತಿದ್ದರು. Power is the ultimate aphrodisiac (ಶಕ್ತಿಯಷ್ಟು ಬಲಿಷ್ಠ ಕಾಮೋತ್ತೇಜಕ ಇನ್ನೊಂದಿಲ್ಲ)- ಅಂತ ಒಂದು ಮಾತಿದೆ. ಅದು ಅವನನ್ನೇ ನೋಡಿ ಹೇಳಿದಂಗಿತ್ತು. ಬಿರೂಟ್ ನಲ್ಲಿ ಅತ್ಯಂತ ಪವರಫುಲ್ ಆದ್ಮಿ ಅಂದ್ರೆ ಅವನು ಆವತ್ತಿನ ಮಟ್ಟಿಗೆ. ತನ್ನ ದುಬಾರಿ ಜೀಪಿನಲ್ಲಿ ಹೊರಟರೆ ಹಿಂದೆ ಮುಂದೆ 3-4 ಜೀಪ್ ತುಂಬಾ AK -47, ರಾಕೆಟ್, ಮತ್ತಿತರ ಆಯುಧ ಸಜ್ಜಿತ ಕಮಾಂಡೋಗಳು. ಒಟ್ಟಿನಲ್ಲಿ ರಾಜಕುಮಾರ್ ಜೀವನಶೈಲಿ. ನೋಡಲಿಕ್ಕೂ ಸುರಸುಂದರಾಂಗ ಇದ್ದ. ಕೆಂಪ ಕೆಂಪಗೆ. ಅದಕ್ಕೆ ಅವನಿಗೆ ನಿಕ್ ನೇಮ್ - ಕೆಂಪು ಯುವರಾಜ - Red Prince.
1970 ರ ಶುರುವಿನ ದಿನಗಳು. ಇಸ್ರೇಲ್ ಪಕ್ಕದ ಜೋರ್ಡಾನ್ ನಿಂದ ಪ್ಯಾಲೆಸ್ಟೈನ್ ಉಗ್ರಗಾಮಿಗಳನ್ನು ಅಲ್ಲಿನ ದೊರೆ ಹುಸೇನ್ ಓಡಿಸಿದ್ದರು. ಸಾಕಾಗಿ ಹೋಗಿತ್ತು ಅವರಿಗೆ. ಪಾಪ ಅಂತ ಬಿಟ್ಟರೆ.....ಇದ್ದು ತಮ್ಮ ಸ್ವಾತಂತ್ರ ಸಮರ ಮಾಡಿಕೊಳ್ಳಲಿ ಅಂತ ಬಿಟ್ಟರೆ, ಈ ಪ್ಯಾಲೆಸ್ಟೈನ್ ಮಂದಿ ಹುಸೇನರ ಬುಡಕ್ಕೇ ಬತ್ತಿ ಇಟ್ಟು ಅವರನ್ನೇ ಪದಚ್ಯುತ ಮಾಡುವ ಬಗ್ಗೆ ಸ್ಕೀಮ್ ಹಾಕುತ್ತಿದ್ದರು. ಈ ಬಗ್ಗೆ ಸುಳಿವು ಹತ್ತಿದ ಹುಸೇನ್, ಅರಾಫತ್ ಅವರ ಅಂಡಿನ ಮೇಲೆ ಒದ್ದು ಓಡಿಸಿದ್ದರು. ಹಾಗೆ ಬಡಿಸಿಕೊಂಡು ಓಡಿದ ಅರಾಫತ್ ರಿಗೆ ಕಂಡಿದ್ದು ಪಕ್ಕದ ಲೆಬನಾನ್. ಓಡಿ ಬಂದವರೇ ರಾಜಧಾನಿ ಬಿರೂಟ್ ನಲ್ಲಿ ಗುಂಡಾಗರ್ದೀ ಶುರು ಮಾಡಿಯೇ ಬಿಟ್ಟರು.
ಲೆಬನಾನಿಗೆ ಒಂದು ತರಹದ ರಾಷ್ಟ್ರೀಯತೆ ಎಂಬುದಿಲ್ಲ. ಹಲವಾರು ಧರ್ಮ, ಉಪಧರ್ಮ, ವಲಸಿಗರು, ವ್ಯಾಪಾರಿಗಳು ಮುಂತಾದವರ ಮಧ್ಯೆ ಒಗ್ಗಟ್ಟೇ ಇಲ್ಲ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡವರು ಅರಾಫತ್. ಬಂದು ಅಲ್ಲಿ ತಮ್ಮ ಬೇಸ್ ಸ್ಥಾಪನೆ ಮಾಡಿ, ಹಫ್ತಾ ವಸೂಲಿ ಮಾಡಿಕೊಂಡು, ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿಯೇ ಬಿಟ್ಟರು. ಹಾಗಂತ ಎಲ್ಲವೂ ಸಲೀಸಾಗಿ ಏನೂ ಇರಲಿಲ್ಲ. ಬೇರೆ ಬೇರೆ ಉಗ್ರಗಾಮಿ ಬಣಗಳೂ ಇದ್ದವು. ಅವರವರ ಮಧ್ಯೆ ಅತ್ಯಂತ ಕ್ರೂರ ಅಂತರ್ಯುದ್ಧಗಳು ದಿನವೂ ಸಾಕಷ್ಟು ನೆತ್ತರು ಹರಿಸುತ್ತಿದ್ದವು. ಮಧ್ಯಪ್ರಾಚ್ಯದ ಪ್ಯಾರಿಸ್ ಎಂದು ಫೇಮಸ್ ಆಗಿದ್ದ ಲೆಬನಾನಿನ ರಾಜಧಾನಿ ಬಿರೂಟ್ ಗಬ್ಬೆದ್ದುಹೋಯಿತು.
ಅಮೇರಿಕಾ ಮತ್ತು ಪಶ್ಚಿಮ ದೇಶಗಳ ವ್ಯಾಪಾರಿ ಆಸಕ್ತಿ, ಆಸ್ತಿ, ಪಾಸ್ತಿ ಸಾಕಷ್ಟು ಇದ್ದವು ಲೆಬನಾನಿನಲ್ಲಿ. ಅವರೆಲ್ಲ ತಮ್ಮ ತಮ್ಮ ಸರಕಾರಗಳ ಮೇಲೆ ಒತ್ತಡ ತಂದರು. ಪಶ್ಚಿಮದ ರಾಷ್ಟ್ರಗಳೆಲ್ಲ ತಾತ್ವಿಕವಾಗಿ ಇಸ್ರೇಲ್ ಪರ. ಆದ್ರೆ ತತ್ವ ಬೇರೆ ವಾಸ್ತವಿಕತೆ ಬೇರೆ. ಈ ಇಸ್ರೇಲಿ, ಪ್ಯಾಲೆಸ್ಟೈನ್ ಲಫಡಾ ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಹೊಡೆತ ಕೊಡತೊಡಗಿತು. ಆವಾಗ ಅಮೇರಿಕಾದ ಮಂದಿ ಇದನ್ನು ಹೇಗಪ್ಪ ಸುಧಾರ್ಸೋದು ಅಂತ ತಲೆ ಕೆಡಿಸಿಕೊಂಡರು. ಓಪನ್ ಆಗಿ ಆರಾಫತ್ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಯಾಕೆಂದ್ರೆ ಇಸ್ರೇಲ್ ಗೆ ವಚನ ಕೊಟ್ಟಾಗಿದೆ. ಇಸ್ರೇಲ್ ಲಾಬಿ ತುಂಬಾ ಸ್ಟ್ರಾಂಗ್ ಮತ್ತು ಸಾಕಷ್ಟು ಬಿಸಿನೆಸ್ಸ್ ಬೇರೆ ಇದೆ. ಈ ಉಗ್ರಗಾಮಿಗಳ ಜಗಳದಲ್ಲಿ ಬಿರೂಟ್ ನಲ್ಲಿ ಇರೋ ನಮ್ಮ ಜನ ಮತ್ತು ನಮ್ಮ ಆಸ್ತಿ ಪಾಸ್ತಿ ರಕ್ಷಿಸುವದೂ ಮುಖ್ಯ. ಆವಾಗ ಅವರಿಗೆ ಕಂಡವನು ಇದೇ ಕೆಂಪು ಯುವರಾಜ - ಅಲಿ ಹಸನ್ ಸಲಾಮೆ.
ಅವನಿಗೆ ಬಿರೂಟ್ ನಲ್ಲಿ ದೊಡ್ಡ ಮಟ್ಟದ ತಾಕತ್ತು ಇತ್ತು. ಅಮೇರಿಕಾದವರು ಅವನನ್ನು ಭೆಟ್ಟಿ ಆದರು.
ಸುಪಾರಿ ತೊಗೋತ್ತಿಯಾ? - ಅಂದರು.
ಅವನು ಎಲ್ಲರಂತೆ ಅವನ ರೇಟ್ ಹೇಳಿದ. ಇಸ್ರೇಲಿಗಳಿಂದ ಬಚಾವ್ ಮಾಡ್ಬೇಕು ಮತ್ತು ಮೇಲಿನ ಗುಂಡು, ತುಂಡು, ಮತ್ತೊಂದು ಕೊಟ್ಟು ಲೈಫ್ ಮಾಡಿ ಕೊಟ್ಟರೆ ನಿಮ್ಮ ಅಮೇರಿಕನ್ನರ ಒಂದೇ ಕೂದಲು ಲೆಬನಾನ್ ನಲ್ಲಿ ಕೊಂಕಲು ಬಿಟ್ಟರೆ ಕೇಳಿ - ಅಂತ ಭಾಷೆ ಕೊಟ್ಟ.
ಸುಪಾರಿ ತೊಗೋತ್ತಿಯಾ? - ಅಂದರು.
ಅವನು ಎಲ್ಲರಂತೆ ಅವನ ರೇಟ್ ಹೇಳಿದ. ಇಸ್ರೇಲಿಗಳಿಂದ ಬಚಾವ್ ಮಾಡ್ಬೇಕು ಮತ್ತು ಮೇಲಿನ ಗುಂಡು, ತುಂಡು, ಮತ್ತೊಂದು ಕೊಟ್ಟು ಲೈಫ್ ಮಾಡಿ ಕೊಟ್ಟರೆ ನಿಮ್ಮ ಅಮೇರಿಕನ್ನರ ಒಂದೇ ಕೂದಲು ಲೆಬನಾನ್ ನಲ್ಲಿ ಕೊಂಕಲು ಬಿಟ್ಟರೆ ಕೇಳಿ - ಅಂತ ಭಾಷೆ ಕೊಟ್ಟ.
ಅವನಿಗೆ ಇಸ್ರೇಲಿಗಳ ಭಯ ತುಂಬಾ ಇತ್ತು. ಮ್ಯೂನಿಕ್ ಒಲಂಪಿಕ್ಸ್ ನಲ್ಲಿ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಇಡೀ ಇಸ್ರೇಲಿ ತಂಡವನ್ನೇ ಕಿಡ್ನಾಪ್ ಮಾಡಿ ಎಲ್ಲರನ್ನು ಕೊಂದಿದ್ದರಲ್ಲ. ಅದರ ರೂವಾರಿಯೇ ಇವನಾಗಿದ್ದ. ಹಾಗಾಗಿ ಇಸ್ರೇಲಿನಲ್ಲಿ ಇವನನ್ನು ಕಂಡಲ್ಲಿ ಕೊಂದು ಮೇಲೆ ಕಳಿಸಲು ಆಜ್ಞೆ ಹೊರಬಿದ್ದಿತ್ತು. ಇಸ್ರೇಲಿ ಗೂಢಚಾರ ಸಂಸ್ಥೆ ಮೊಸ್ಸಾದ್ ಆಗಲೇ ಒಂದು ಲಿಸ್ಟ್ ಮಾಡಿಕೊಂಡು ಅತ್ಯಂತ ಕ್ರಮಬದ್ಧವಾಗಿ ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣರು ಎಂಬ ಉಗ್ರಾಗಾಮಿಗಳ ಬೇಟೆ ಶುರು ಮಾಡಿ ಬಿಟ್ಟಿತ್ತು. ಕೆಂಪು ಯುವರಾಜನ ನಸೀಬ್ ನೆಟ್ಟಗಿತ್ತು ಬಚಾವಾಗಿದ್ದ. ಇಲ್ಲವಾಗಿದ್ದರೆ ಇಸ್ರೇಲಿ ಕಮಾಂಡೋಗಳು ಬಿರೂಟ್ ಗೆ ನುಗ್ಗಿ ಅಪಾರ್ಟಮೆಂಟ್ ಒಂದರಲ್ಲಿ ಮೂರು ಹಿರಿಯ ಉಗ್ರಗಾಮಿಗಳ ಹತ್ಯೆ ಮಾಡಿದಾಗ ಅಲ್ಲೇ ಸಮೀಪದ ಇನ್ನೊಂದು ಅಪಾರ್ಟಮೆಂಟ್ ಒಂದರಲ್ಲಿ ಮಿಸ್ ಯುನಿವರ್ಸ್ ನೊಂದಿಗೆ ಜಮ್ಮಚಕ್ಕ ಮಾಡುತ್ತಿದ್ದ ಇವನು ಬಚಾವಾಗಿಬಿಟ್ಟಿದ್ದ.
ಮುಂದೆ ನಾರ್ವೆದಲ್ಲಿ, ನೋಡಲು ಥೇಟ್ ಇವನಂತೆ ಇದ್ದ ಮೊರೋಕ್ಕೋದ ಹೋಟೆಲ್ ವೇಟರ್ ಒಬ್ಬ ಮೊಸ್ಸಾದ್ ಬೇಟೆಗಾರರ ಗುಂಡಿಗೆ ಬಲಿಯಾದ. ಆ ತಪ್ಪು ಹತ್ಯೆ ಇಸ್ರೇಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಮುಜುಗರ ಉಂಟು ಮಾಡಿ ಆಗಿನ ಪ್ರಧಾನಿ, ಉಕ್ಕಿನ ಮಹಿಳೆ, ಗೋಲ್ಡಾ ಮೆಯಿರ್ ಅವರ ನೌಕರಿಗೇ ಕುತ್ತು ತಂದಿತಲ್ಲದೆ ಸುಮಾರು ಅಧಿಕಾರಿಗಳ ನೌಕರಿ ಸಹ ಹರೋಹರ ಅಂದುಹೋಗಿತ್ತು. ಆ ತಪ್ಪು ಆದ ಮೇಲೆ ಇಸ್ರೇಲ್ ಮೇಲೆ ತುಂಬಾ ಪ್ರೆಶರ್ ಬಂದು ಉಗ್ರಗಾಮಿಗಳನ್ನು ಕಂಡಲ್ಲಿ ಹಿಡಿದು ಕೊಲ್ಲುವ ಕಾರ್ಯಾಚರಣೆ ಸ್ವಲ್ಪ ಕಮ್ಮಿ ಆಗಿತ್ತು. ಅದಾದ ನಂತರವೇ ಕೆಂಪು ಯುವರಾಜ ತಣ್ಣನೆ ಉಸಿರು ಬಿಟ್ಟಿದ್ದು.
ಮುಂದೆ ನಾರ್ವೆದಲ್ಲಿ, ನೋಡಲು ಥೇಟ್ ಇವನಂತೆ ಇದ್ದ ಮೊರೋಕ್ಕೋದ ಹೋಟೆಲ್ ವೇಟರ್ ಒಬ್ಬ ಮೊಸ್ಸಾದ್ ಬೇಟೆಗಾರರ ಗುಂಡಿಗೆ ಬಲಿಯಾದ. ಆ ತಪ್ಪು ಹತ್ಯೆ ಇಸ್ರೇಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಮುಜುಗರ ಉಂಟು ಮಾಡಿ ಆಗಿನ ಪ್ರಧಾನಿ, ಉಕ್ಕಿನ ಮಹಿಳೆ, ಗೋಲ್ಡಾ ಮೆಯಿರ್ ಅವರ ನೌಕರಿಗೇ ಕುತ್ತು ತಂದಿತಲ್ಲದೆ ಸುಮಾರು ಅಧಿಕಾರಿಗಳ ನೌಕರಿ ಸಹ ಹರೋಹರ ಅಂದುಹೋಗಿತ್ತು. ಆ ತಪ್ಪು ಆದ ಮೇಲೆ ಇಸ್ರೇಲ್ ಮೇಲೆ ತುಂಬಾ ಪ್ರೆಶರ್ ಬಂದು ಉಗ್ರಗಾಮಿಗಳನ್ನು ಕಂಡಲ್ಲಿ ಹಿಡಿದು ಕೊಲ್ಲುವ ಕಾರ್ಯಾಚರಣೆ ಸ್ವಲ್ಪ ಕಮ್ಮಿ ಆಗಿತ್ತು. ಅದಾದ ನಂತರವೇ ಕೆಂಪು ಯುವರಾಜ ತಣ್ಣನೆ ಉಸಿರು ಬಿಟ್ಟಿದ್ದು.
ಇದೇ ಸಮಯದಲ್ಲಿ ಅಮೆರಿಕನ್ನರು ಬಂದು ತಮ್ಮ ಜನ, ತಮ್ಮ ಆಸ್ತಿ ಪಾಸ್ತಿ ಕಾಪಾಡುವಂತೆ ಸುಪಾರಿ ಕೊಟ್ಟರು. ಇಸ್ರೇಲಿಗಳಿಗೆ ಇವನನ್ನು ಮುಟ್ಟದಿರಿ ಅಂತ ಕಟ್ಟಾಜ್ಞೆ ಕೂಡ ಆಯಿತು. ಇಲ್ಲದ ಮನಸ್ಸಿನಿಂದ ಇಸ್ರೇಲಿಗಳೂ ಒಪ್ಪಿದರು. ಯಾಕೆಂದರೆ ಅವರಿಗೂ ಬಿಲಿಯನ್ ಗಟ್ಟಲೆ ಅಮೇರಿಕಾದ ಡಾಲರ್ ದುಡ್ಡು ಬೇಕಾಗಿತ್ತು ನೋಡಿ. ಇವನು ಹೋದರೆ ಹೋಗಲಿ. ಬಾಕಿ ಉಗ್ರಗಾಮಿಗಳನ್ನು ಹಿಡಿದು ಜಡಿಯುವ ಅಂತ ಬೇರೆ ಕಡೆ ಫೋಕಸ್ ಮಾಡಿದರು.
ಅಮೇರಿಕನ್ನರ ಸುಪಾರಿ ಸಿಕ್ಕ ಮೇಲಂತೂ ಕೆಂಪು ಯುವರಾಜ ತಾನು ರಾಜನೇ ಆಗಿ ಹೋದೆ ಅನ್ನುವಷ್ಟು ಸಂಭ್ರಮಿಸಿದ. ಮಿಸ್ ಯುನಿವರ್ಸ ಳನ್ನು ಮದುವೆ ಆದ. ಅಮೇರಿಕನ್ನರು - ಬಾರಯ್ಯ ದೊರೆ. ನಮ್ಮ ಆತಿಥ್ಯ ಸ್ವೀಕರಿಸು - ಅಂತ ಟಿಕೆಟ್ ಕಳಿಸಿಕೊಟ್ಟರು. ಅಮೇರಿಕಾದಲ್ಲಿ ಹನಿಮೂನ್. ಹೊರಗೆ ಅಮೇರಿಕಾ ಪ್ಯಾಲೆಸ್ಟೈನ್ ಉಗ್ರಗಾಮಿ ಅದು ಇದು ಅನ್ನುತ್ತ ಭೊಂಗು ಬಿಡುತ್ತಿದ್ದರೆ ನಿಷಿದ್ಧ ಉಗ್ರವಾದಿ ಡಿಸ್ನಿಲ್ಯಾಂಡ್ ನಲ್ಲಿ ಹೊಸ ಹೆಂಡತಿಯೊಂದಿಗೆ ಸೈಕಲ್ ಹೊಡೆಯುತ್ತಿದ್ದನಂತೆ.
ಕಾಲಚಕ್ರ ಉರುಳುತ್ತಲೇ ಇರುತ್ತದೆ ನೋಡಿ. ಈ ದೊಡ್ಡ ಮಟ್ಟದ ವಿಷಯಗಳಲ್ಲಿ ಯಾರೂ ಖಾಯಂ ವೈರಿಗಳೂ ಅಲ್ಲ. ಸ್ನೇಹಿತರೂ ಅಲ್ಲ. ಅಮೇರಿಕಾ, ಇಸ್ರೇಲ್, ಲೆಬನಾನ್ ಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುತ್ತಿದ್ದವು. ಕೆಲವೊಂದು ಕೆಂಪು ಯುವರಾಜನ ಗಮನಕ್ಕೆ ಬರಲೇ ಇಲ್ಲ. ಅವನು ಸಕ್ಕತ್ತ್ ಸಿಗುತ್ತಿದ್ದ ಗುಂಡು, ತುಂಡು, ಇಂಟರ್ನ್ಯಾಷನಲ್ ಸುಂದರಿಯರ ಮಧ್ಯೆ ಮುಳುಗಿ ಹೋಗಿದ್ದ. ಪ್ಯಾಲೆಸ್ಟೈನ್ ಸಂಗ್ರಾಮ ಸುಮಾರು ಎಲ್ಲರಿಗೂ ದುಡ್ಡು ಮಾಡುವ ದಂಧೆಯಾಗಿ ಹೋಗಿತ್ತು. ಇವನಿಗೂ ಅಷ್ಟೇ.
ಇಸ್ರೇಲಿಗಳಿಗೆ ಇವನು ಆ ಪರಿ ಮೆರೆಯುತ್ತಿರುವದು ಪಕ್ಕೆಯಲ್ಲಿ ಮುಳ್ಳು ಚುಚ್ಚಿದಂಗೆ ನೋವಾಗುತ್ತಿತ್ತು. ಸತ್ತು ಹೋದ ಕ್ರೀಡಾಪಟುಗಳ ಕುಟುಂಬ ಬಳೆ, ಸೀರೆ ಬೇಕಾ ಅಂತ ಮೂದಲಿಸುತ್ತಿದ್ದರು. ಆಗಾಗ ಅಮೇರಿಕನ್ನರ ಜೊತೆ ಚರ್ಚೆ ಆದಾಗೊಮ್ಮೆ - ಏನು? ಇನ್ನೂ ನಿಮಗೆ ಅವನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಾ ಅಥವಾ ನಾವು ಅವನನ್ನು ಡೀಲ್ ಮಾಡಲು ಓಕೆನಾ? - ಅಂತ ಕೇಳುತ್ತಲೇ ಇರುತ್ತಿದ್ದರು. ಇಸ್ರೇಲಿ ಲಾಬಿ ಕೂಡ ಸಕತ್ ಪ್ರೆಶರ್ ಹಾಕುತ್ತಿತ್ತು ಅಂತ ಕಾಣುತ್ತದೆ. ಏನೇನೋ ಆಗಿ, ಯಾವ್ಯಾವದೋ ಸಮೀಕರಣಗಳು ಹೇಗೇಗೋ ಆಗಿ, ಅಮೇರಿಕ ಕೆಂಪು ಯುವರಾಜನ ತಲೆ ಮೇಲೆ ಇಟ್ಟಿದ್ದ ಅಭಯಹಸ್ತ ತೆಗೆಯಿತು. 1978-79 ಟೈಮ್ ಇರಬೇಕು. ಇಸ್ರೇಲಿಗಳು ಅತ್ಯಂತ ದೊಡ್ಡ ಬಲಿಗೆ ಮುಹೂರ್ತ ಇಟ್ಟೇ ಬಿಟ್ಟರು.
ಕೆಲವೇ ವರ್ಷಗಳ ಹಿಂದೆ ಇವನನ್ನೇ ನಾರ್ವೆದಲ್ಲಿ ಕೊಲ್ಲಲು ಹೋಗಿ, ಬೇರೆ ಯಾರೋ ಬಡಪಾಯಿಯನ್ನು ಮಿಸ್ಟೇಕ್ ನಲ್ಲಿ ಕೊಂದು, ದೊಡ್ಡ ಲಫಡಾ ಆಗಿದ್ದು ನೆನಪಿತ್ತಲ್ಲ.....ಈ ಸಲ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಆಜ್ಞೆಗಳು ಅಷ್ಟು ಕ್ಲೀಯರ್ ಇದ್ದವು.
ಮೊಸ್ಸಾದ್ ನಿಂದ ಗೂಢಚಾರರ ದೊಡ್ಡ ಗುಂಪೊಂದು ಬಿರೂಟ್ ಗೆ ರವಾನೆಯಾಯಿತು. ಕೆಂಪು ಯುವರಾಜನ ಚಲನವಲನಗಳನ್ನು ಹಲವಾರು ತಿಂಗಳು ಗಮನಿಸಲಾಯಿತು. ಮೊಸ್ಸಾದ್ ಸಂಸ್ಥೆಯ ಲೇಡಿ ಗೂಢಚಾರಿಣಿಯೊಬ್ಬಳು ಪೇಂಟರ್ ಅಂತ ಹೇಳಿಕೊಂಡು ಬಂದು ಬಿರೂಟ್ ನಲ್ಲಿ ಝೆಂಡಾ ಹೊಡೆದಳು. ಕೆಂಪು ಯುವರಾಜ್ ದಿನಾ ಅವಳ ಮನೆ ಮುಂದಿನ ರೋಡ್ನಲ್ಲಿಯೇ ಬೆಳಿಗ್ಗೆ ತನ್ನ ಮನೆಯಿಂದ ತನ್ನ ತಾಯಿಯೋ, ಮೊದಲ ಪತ್ನಿಯೋ ಇದ್ದ ಮನೆಗೆ ಹೋಗುತ್ತಿದ್ದ. ಅಷ್ಟು ದೊಡ್ಡ ಉಗ್ರಗಾಮಿ ಯಾಕೆ ದಿನಾ ಒಂದೇ ರೋಡ್ನಲ್ಲಿ ಹೋಗುತ್ತಿದ್ದನೋ ದೇವರಿಗೇ ಗೊತ್ತು. ಕೇರ್ಲೆಸ್ ಆಗಿದ್ದ ಅಂತ ಕಾಣುತ್ತದೆ. ಸಾವು ಹತ್ತಿರ ಬಂದಾಗ ಯಾರ್ಯಾರೋ ಹೇಗೇಗೋ ಮೈಮರೆಯುತ್ತಾರೆ ನೋಡಿ.
ಸುಮಾರು ದಿವಸಗಳ ನಂತರ ಇಸ್ರೇಲಿನ ಬಾಂಬ್ ನಿಷ್ಣಾತರು ಒಂದು ಕಾರ್ ತುಂಬಾ ಸ್ಪೋಟಕ ತುಂಬಿ ಒಂದು ಕಾರ್ ಬಾಂಬ್ ಮಾಡಿದರು. ರಸ್ತೆ ಬದಿಯಲ್ಲಿ ಅದನ್ನು ಕರೆಕ್ಟಾಗಿ ಪಾರ್ಕ್ ಮಾಡಿದ್ದು ಆಯಿತು. ಬಲಿಗೆ ಎಲ್ಲವೂ ಸಿದ್ಧವಾಗಿತ್ತು. ಬಕರಾ ಬರುವದು ಬಾಕಿ ಇತ್ತು.
ಮರುದಿವಸ ಬಂತು ಬಕರಾ. ಟೈಮ್ ಗೆ ಸರಿಯಾಗಿ. ಕಾರ್ ಬಾಂಬಿನ ಪಕ್ಕದಲ್ಲಿ ಇವನ ದೊಡ್ಡ ಜೀಪ್ ಬಂತು ನೋಡಿ. ಕಿಡಕಿಯಲ್ಲಿ ನೋಡುತ್ತಾ ಕೂತಿದ್ದ ಗೂಢಚಾರಿಣಿ ರಿಮೋಟ್ ಕಂಟ್ರೋಲ್ ಒತ್ತಿಯೇ ಬಿಟ್ಟಳು. ಭಯಂಕರ ದೊಡ್ಡ ಸ್ಪೋಟವಾಯಿತು. ಸುತ್ತಮುತ್ತ ಎಲ್ಲ ಛಿದ್ರ ಛಿದ್ರ. ಕೆಂಪು ಯುವರಾಜನ ಜೀಪ್ ಗಾಳಿಯಲ್ಲಿ 20-30 ಅಡಿ ಹಾರಿತು. ಕೆಳಗೆ ಬಂದು ಅಪ್ಪಳಿಸಿತು. ಅಂಗರಕ್ಷಕರ ಅಂಗಾಂಗಳು ಸುತ್ತ ಮುತ್ತ ಹಾರಿದವು. ಅಷ್ಟಾದರೂ ಆ ಗಟ್ಟಿಗ ಕೆಂಪು ಯುವರಾಜ ಮಾತ್ರ ಸ್ಪಾಟ್ ನಲ್ಲಿ ಸಾಯಲಿಲ್ಲ. ಆಸ್ಪತ್ರೆಯಲ್ಲಿ ಸತ್ತ.
ಅವನ ಅಂತ್ಯಸಂಸ್ಕಾರಕ್ಕೆ ಇಡೀ ಬಿರೂಟ್ ಬಂದಿತ್ತು. ಬಿರೂಟಿನ ಹಲವಾರು ಪೇಜ್ -3 ಸುಂದರಿಯರಿಗೆ ಒಂದಲ್ಲ ಒಂದು ತರಹದ ಅಕಾಲ ವೈಧವ್ಯ ಬಂದಿತ್ತು. ನನ್ನ ಬಲಗೈ ಹೋಗಿಯೇ ಬಿಟ್ಟಿತು ಅಂತ ಗೋಳಿಡುತ್ತ ಅರಾಫತ್ ಅವರೇ ಬಂದಿದ್ದರು. ಕೆಂಪು ಯುವರಾಜನ 5-6 ವರ್ಷದ ಮಗನಿಗೆ ಪ್ಯಾಲಸ್ತೈನ್ ಉಗ್ರಗಾಮಿಗಳ ವೇಷ ತೊಡಿಸಿ ಕೈಯಲ್ಲಿ ಒಂದು ಆಟಿಕೆ AK-47 ಹಿಡಿಸಲಾಗಿತ್ತು. ಯಾಸಿರ್ ಅರಾಫತ್ ಅವರೇ ಆ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದರು. ಇತ್ತ ಕಡೆ ಇಸ್ರೇಲಿ ತಂಡ ಬೇರೆ ಬೇರೆಯಾಗಿ ಬಿರೂಟ್ ಏರ್ಪೋರ್ಟ್ ನಿಂದ ಬೇರೆ ಬೇರೆ ದೇಶದ ಮಾರ್ಗವಾಗಿ ಇಸ್ರೇಲ್ ಸೇರಿಕೊಳ್ಳುತ್ತಿದ್ದರು.
ಇಸ್ರೇಲ್ ನಲ್ಲಿ ಒಂದು ತರಹದ ನಿರುಮ್ಮಳ. ರಿಲೀಫ್. ಪರಮ ಪಾತಕಿಯೋಬ್ಬನಿಗೆ ತಕ್ಕ ಶಾಸ್ತಿ ಆಯಿತು ಅನ್ನೋ ಭಾವನೆ ಎಲ್ಲರಿಗೆ.
ಮೊಸ್ಸಾದ್ ಬೇಹುಗಾರರು ತಮ್ಮ ಹಿಟ್ ಲಿಸ್ಟ್ ನಲ್ಲಿ ಒಂದು ಹೆಸರಿನ ಮುಂದೆ ಕಾಟು ಹಾಕಿ, ಮುಂದಿನ ಉಗ್ರಾಗಾಮಿಗೆ ಮುಹೂರ್ತ ಇಡುವ ಪ್ಲಾನ್ ಶುರು ಮಾಡುತ್ತಿದ್ದರು.
ಹೆಚ್ಚಿನ ಮಾಹಿತಿಗೆ ಲಿಂಕ್ಸ್:
ಅಲಿ ಹಸನ್ ಸಲಾಮೆ
ಜಾರ್ಜಿನಾ ರಿಜ್ಕ್
The Quest for the Red Prince: Israel's Relentless Manhunt for One of the World's Deadliest and Most Wanted Arab Terrorists by Michael Bar Bar-Zohar, Eitan Haber
ರಿಮೋಟ್ ಕಂಟ್ರೋಲ್ ಒತ್ತಿದ ಗೂಢಚಾರಿಣಿ
ಬಡಪಾಯಿ ಮೊರೊಕ್ಕೋದ ವೇಟರ್ ನನ್ನು ಹತ್ಯೆಗೈದ ಘಟನೆ ಲಿಲ್ಲಿಹ್ಯಾಮ್ಮರ್ ಅಫೇರ್ ಅಂತ ಖ್ಯಾತವಾಯಿತು.
ಹೆಚ್ಚಿನ ಮಾಹಿತಿಗೆ ಲಿಂಕ್ಸ್:
ಅಲಿ ಹಸನ್ ಸಲಾಮೆ
ಜಾರ್ಜಿನಾ ರಿಜ್ಕ್
The Quest for the Red Prince: Israel's Relentless Manhunt for One of the World's Deadliest and Most Wanted Arab Terrorists by Michael Bar Bar-Zohar, Eitan Haber
ರಿಮೋಟ್ ಕಂಟ್ರೋಲ್ ಒತ್ತಿದ ಗೂಢಚಾರಿಣಿ
ಬಡಪಾಯಿ ಮೊರೊಕ್ಕೋದ ವೇಟರ್ ನನ್ನು ಹತ್ಯೆಗೈದ ಘಟನೆ ಲಿಲ್ಲಿಹ್ಯಾಮ್ಮರ್ ಅಫೇರ್ ಅಂತ ಖ್ಯಾತವಾಯಿತು.