ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಕೆಲವು ದಿನಗಳ ಹಿಂದೆ ನಿಧನರಾದರು.
ಕೃಷ್ಣರನ್ನು ಬಲ್ಲ ಅನೇಕ ಪತ್ರಕರ್ತರು, ಪರಿಚಯಸ್ಥರು ಕೃಷ್ಣರ ದೀರ್ಘ ಜೀವನದ ಅನೇಕ ಘಟನೆಗಳ ಬಗ್ಗೆ ಬರೆದಿದ್ದಾರೆ. ನನಗೆ ನೆನಪಿಗೆ ಬಂದ ಘಟನೆ ಇದು.
೧ ೯ ೯ ೯ - ೨ ೦ ೦ ೦ ಇಸವಿಯ ಸಮಯ. ಆಗಷ್ಟೇ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ೧೯ ೯ ೪ - ೯ ೯ ರ ವರೆಗೆ ಆಡಳಿತ ನಡೆಸಿದ್ದ ಜನತಾದಳ ಚುನಾವಣೆಯಲ್ಲಿ ಅದ್ಯಾವ ದಾರುಣ ರೀತಿಯಲ್ಲಿ ನೆಲಕಚ್ಚಿತ್ತು ಎಂದರೆ ಮುಖ್ಯಮಂತ್ರಿಯಾಗಿ ಅವಧಿ ಮುಗಿಸಿದ್ದ ಜೆ. ಎಚ್. ಪಟೇಲರಂತಹ ಘಟಾನುಘಟಿ ರಾಜಕಾರಣಿ ಕೂಡ ತಮ್ಮ ಸ್ವಕ್ಷೇತ ಚನ್ನಗಿರಿಯಲ್ಲಿ ಸೋತುಹೋಗಿದ್ದರು.
ಚುನಾವಣೆಯಲ್ಲಿ ಸೋತು ಮಾಜಿ ಶಾಶಕ, ಮಾಜಿ ಮುಖ್ಯಮಂತ್ರಿಯಾಗಿದ್ದ ಪಟೇಲರು ಬೆಂಗಳೂರಿನಲ್ಲಿ ನೆಲೆಸಿದ್ದರು. ಆಗ ಒಂದು ಆಘಾತಕರ ಸುದ್ದಿ ಪಟೇಲ್ ಕುಟುಂಬಕ್ಕೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತು. ದಾವಣಗೆರೆ ಸಮೀಪದಲ್ಲಿ ಭೀಕರ ರಸ್ತೆ ಅಪಘಾತವಾಗಿತ್ತು. ಅದರಲ್ಲಿ ಪಟೇಲರ ಮಗ, ಸೊಸೆ ಮತ್ತು ಇನ್ನೂ ಹಸುಗೂಸಾಗಿದ್ದ ಮೊಮ್ಮಗು ತೀವ್ರವಾಗಿ ಗಾಯಗೊಂಡಿದ್ದರು. ಮೊಮ್ಮಗು ಬದುಕುಳಿಯಲಿಲ್ಲ.
ಸುದ್ದಿ ತಿಳಿದ ತಕ್ಷಣ ಪಟೇಲರು, ಅವರ ಪತ್ನಿ ಸರ್ವಮಂಗಳಮ್ಮ ಮತ್ತು ಇತರೆ ಕುಟುಂಬಸ್ಥರೊಂದಿಗೆ ಕಾರಿನಲ್ಲಿ ದಾವಣಗೆರೆಯತ್ತ ಹೊರಟರು. ಈ ದುರಂತದ ಸುದ್ದಿ ಹೇಗೋ ಮುಖ್ಯಮಂತ್ರಿ ಕೃಷ್ಣರಿಗೆ ತಿಳಿಯಿತು. ಒಂದು ನಿಮಿಷವೂ ತಡ ಮಾಡದೇ ಪಟೇಲರನ್ನು ಸಂಪರ್ಕಿಸಿದರು ಕೃಷ್ಣ. ಸಂತಾಪ , ಸಹಾನುಭೂತಿ ವ್ಯಕ್ತಪಡಿಸಿದ್ದು ಒಂದೇ ಅಲ್ಲ. ಕಾರಿನಲ್ಲಿ ಊರಿನತ್ತ ತೆರಳುತ್ತಿದ್ದ ಪಟೇಲರಿಗೆ ತಮ್ಮ ಸರ್ಕಾರಿ ಹೆಲಿಕಾಪ್ಟರ್ ಒದಗಿಸಿಕೊಟ್ಟರು. ಪಟೇಲರು ಅದೇನೇ ಹೇಳಿದರೂ ಕೃಷ್ಣ ಕೇಳಲಿಲ್ಲ. ಕೊನೆಗೆ ಪಟೇಲರು ಮತ್ತು ಅವರ ಹತ್ತಿರದ ಕುಟುಂಬಸ್ಥರು ಕೃಷ್ಣರು ಮಾಡಿಕೊಟ್ಟ ಸರ್ಕಾರಿ ಹೆಲಿಕಾಪ್ಟರಿನಲ್ಲೇ ದಾವಣಗೆರೆಗೆ ಹೋದರು. ಅಷ್ಟರಲ್ಲಿ ಕೃಷ್ಣ ಸ್ಥಳೀಯ ಆಡಳಿತ ವ್ಯವಸ್ಥೆಗೆ ಪಟೇಲರಿಗೆ ಎಲ್ಲ ಸಹಾಯ ಸಹಕಾರ ನೀಡುವಂತೆ ನಿರ್ದೇಶಿಸಿ ಆಗಿತ್ತು.
ಕೃಷ್ಣರು ರಾಜಕೀಯವಾಗಿ ಅಜಾತಶತ್ರುವೊಂದೇ ಆಗಿರಲಿಲ್ಲ. ಪಕ್ಷಾತೀತವಾಗಿ ಸಮಕಾಲೀನರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಪಟೇಲರಿಗೆ ದೊಡ್ಡ ಆಘಾತ ಉಂಟಾದಾಗ ಅವರು ನಡೆದುಕೊಂಡ ರೀತಿ ಅವರ ಮಾನವೀಯತೆಗೊಂದು ಸಾಕ್ಷಿ.
ನಿಮಗೊಂದು ದೊಡ್ಡ ಸಲಾಂ ಕೃಷ್ಣ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
No comments:
Post a Comment