ಹುಧಾ ಮಧ್ಯೆ ಇರುವ ನವನಗರದ ಸಲೂನ್ ಒಂದರಲ್ಲಿ ಪಿತಾಜಿಯೊಬ್ಬ ಪಿಶಾಚಿ ರೂಪ ತಾಳಿ ಮಗನಿಗೆ ಕಟಿಂಗ್ ಮಾಡಿದ ನಾಪಿತನಿಗೆ ಮನಸೋ ಇಚ್ಛೆ ಥಳಿಸಿದನಂತೆ. ಮಗನಿಗೆ ಮಾಡಿದ ಕಟಿಂಗ್ ಸರಿಯಾಗಿಲ್ಲ ಎಂದು ಅವನ ಆಕ್ಷೇಪ. "ಬೋಡಿಕೆ, ನನ್ನ ಮಗನನ್ನು ಮಂಗ ಮಾಡಿಬಿಟ್ಟೆಯಲ್ಲೋ ಭೋಕುಡ್ ಛಾಪ್!!!" ಎಂದು ಅಬ್ಬರಿಸಿ ಬೊಬ್ಬಿರಿದು ಕಟಿಂಗ್ ಮಾಡಿದವನ ಮೇಲೆ ಫುಲ್ ಧನಾ ಧನ್ ಧನಾ ಧನ್.
ಕಾಲ ಹೆಂಗೆ ಬದಲಾಗುತ್ತದೆ ನೋಡಿ. ನಮ್ಮ ಕಾಲದಲ್ಲಿ ಅಂದರೆ ಒಂದು ನಲವತ್ತು ವರ್ಷಗಳ ಹಿಂದೆ ಕೂಡ ಪಾಲಕರು ಮಕ್ಕಳ ಹೇರ್ ಕಟಿಂಗ್ ವಿಷಯವಾಗಿ ಜಗಳ ಮಾಡುತ್ತಾ ಸಲೂನಿಗೆ ಧಾವಿಸಿ ಬರುತ್ತಿದ್ದರು. ಅವರದ್ದೂ ಆಕ್ಷೇಪ ಇರುತ್ತಿತ್ತು. ಅದು ಬೇರೇನೇ ತರಹ ಇರುತ್ತಿತ್ತು. "ಇಷ್ಟ್ಯಾಕ ಉದ್ದ ಕೂದಲು ಬಿಟ್ಟು ಕಳಿಸಿಯೋ??? ಇನ್ನೂ ಸಣ್ಣ ಮಾಡು!!!" ಶಿವನೇ ಶಂಭುಲಿಂಗ!!! ಆಗಲೇ ಜೀರೋ ಮಷೀನ್ ಇಟ್ಟು almost ತಿರುಪತಿ ಗುಂಡು ಹೊಡೆದಿದ್ದರೂ ತಲೆಯನ್ನು ಇನ್ನೆಷ್ಟು ಗುಂಡು ಹೊಡೆಯಲು ಸಾಧ್ಯ ಎಂಬಂತೆ ನಾಪಿತ ಕೊಂಯ್ಯಾ ಪಂಯ್ಯಾ ಅಂದರೂ ಇವರು ಬಿಡುತ್ತಿದ್ದಿಲ್ಲ. ಕೊಟ್ಟ ಅಮೂಲ್ಯ ಎರಡು ರೂಪಾಯಿಗೆ ಬರೋಬ್ಬರಿ ವಸೂಲಿ ಆಗಲೇಬೇಕು. ಈ ಪಾಲಕರ ಕಾಟ ತಡೆಯಲಾಗದೇ ನಾಪಿತ out of turn ಈ ಬಾಲಕನನ್ನು ಹಜಾಮತಿ ಖುರ್ಚಿ ಮೇಲಿನ ಹಲಗೆ ಮೇಲೆ ಹತ್ತಿಸಿ ಮತ್ತೊಂದು ರೌಂಡು ಮಷೀನ್ ಹಚ್ಚಿ, ಇನ್ನೂ ಕೂದಲು ಉಳಿದರೆ, ಮತ್ತೂ ಸಣ್ಣ ಮಾಡು ಅಂತ ಪಿರಿ ಪಿರಿ ಮಾಡಿದರೆ ಒಣ ಒಣ ಕತ್ತಿಯಿಂದಲೇ ಬೋಳು ಕೆರೆದು ಹೆರೆದು ಬಿಡುತ್ತಿದ್ದ. ಆ ಒಣ ಒಣ ಹಜಾಮತಿ ಕತ್ತಿ ಮೃದು ಮೃದು ಚರ್ಮದ ಮೇಲೆ ಅತ್ಯಾಚಾರ ಮಾಡಿದಂತಾಗಿ ಆ ಬಾಲಕ ಅವನಿಗೇನು ಹಜಾಮತಿ ಮಾಡುತ್ತಿದ್ದಾರೋ ಅಥವಾ ಸುನ್ನತಿ ಮಾಡುತ್ತಿದ್ದರೋ ಎಂಬಂತೆ ಒದರಾಡಿ ಚೀರಾಡಿ ರಂಪ ಮಾಡಿದ್ದೂ ಇದೆ. ಮೊದಲೇ ಎಬಡೇಶಿ ಕಟಿಂಗ್ ಮಾಡಿಸಿಕೊಂಡು ಮಾನವನಿಂದ ಮಂಗನಾದ ಬೇಸರ. ಶಾಲೆಯಲ್ಲಿ ಇತರರು ಚುಡಾಯಿಸುತ್ತಾರೆ ಎಂಬ ಆತಂಕ. ಮೇಲಿಂದ ಈ ಚರ್ಮ ಸುಲಿಸಿಕೊಳ್ಳುವ ದಾರುಣ ಶಿಕ್ಷೆ. ಉಸಿರುಬಿಟ್ಟರೆ "ಇನ್ನು ಬೀಳ್ತಾವ ನೋಡು !!!" ಎನ್ನುವ ಬೆದರಿಕೆ ಪಾಲಕರಿಂದ. ಪಾಪ. ಬೀಳೋದು "ಕಡತ" (ಹೊಡೆತ) ಎಂದು ಬೀಳಿಸಿಕೊಂಡವರಿಗೆ ಗೊತ್ತಿರುತ್ತದೆ.
ಅದು ಅಂದು. ಆಗ ಮಕ್ಕಳನ್ನು ಸಲೂನಿಗೆ ವಾಪಸ್ ಕರೆತಂದು ಹಾಗೆಲ್ಲಾ ಜಗಳ ಕಾಯುತ್ತಿದ್ದರು. ಈಗ ಕಟಿಂಗ್ ಸರಿಯಾಗಿಲ್ಲ ಎಂದು ಬಂದು ಜಗಳ, ಹೊಡೆದಾಟ ಎಲ್ಲ ನಡೆದುಹೋಗುತ್ತವೆ.
ಆಗ ಧಾರವಾಡದ ಮಾಳಮಡ್ಡಿಯ ಸ್ಟೇಷನ್ ರೋಡ್ ಮೇಲಿದ್ದ ರಾಯಲ್ ಹೇರ್ ಕಟಿಂಗ್ ಸಲೂನಿಗೆ ಹೋಗಿ ಕೂತುಬಿಟ್ಟರೆ ನಿಮಗೆ ಆ ಕಾಲದ ಸಾಮಾಜಿಕ ಸ್ಥಿತಿ ಗತಿಗಳ ಸಂಪೂರ್ಣ ಪರಿಚಯವಾಗಿಬಿಡುತ್ತಿತ್ತು. ಬೆಳ್ಳಂಬೆಳಿಗ್ಗೆ ಮುಲ್ಲಾನ ಹಾಲಿನ ಡೇರಿಗೆ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದ ಗೃಹಿಣಿಯರು ಸೀದಾ ಹೇರ್ ಕಟಿಂಗ್ ಸಲೂನ್ ಒಳಗೆ ತಲೆ (ಮಾತ್ರ) ಹಾಕಿಬಿಡುತ್ತಿದ್ದರು. ದೇಹ ಹೊರಗೆ ಇರುತ್ತಿತ್ತು. ಅದರ ಉದ್ದೇಶ ಪಾಳಿ ಹಚ್ಚುವುದು. "ನಮ್ಮ ಹುಡುಗ ಬರ್ತಾನ. ನಮ್ಮ ಮನಿಯವರು ಬರ್ತಾರ. ಅಜ್ಜ ಬರ್ತದ..." ಎಂದು ಹೇಳಿ ನಾಪಿತ ಪಾಂಡ್ಯಾನ ಹತ್ತಿರ ಹಜಾಮತಿಗೆ appointment ತೆಗೆದುಕೊಳ್ಳುವುದೇ ಪಾಳಿ ಹಚ್ಚುವುದು. ಇನ್ನು ಕೆಲವು ಗೃಹಿಣಿಯರು ಮನೆಗೆ ಬರಲು ಆಹ್ವಾನ ಕೊಡುತ್ತಿದ್ದರು. "ಮುದುಕಿಗೆ ಮಾಡೋದದ ಬಾರಪಾ..." ಮನೆಗೆ ಹೋಗಿ ಪಾಂಡ್ಯಾ ಮುದುಕಿಗೆ ಏನು ಮಾಡಿಬರುತ್ತಿದ್ದ ಎಂಬ ಕೆಟ್ಟ ಕುತೂಹಲ ಮೂಡುವುದು ಸಹಜ. ಏನಿಲ್ಲ ಹೋಗಿ ಮುದುಕಿಗೆ ಫಣಿಯಮ್ಮ ಕಟ್ ಹೊಡೆದು ಬ್ರಾಹ್ಮಣ ವಿಧವೆಗೆ ಶಿರೋಮುಂಡನ ಮಾಡಿ ಉಭಯ ಕುಶಲೋಪರಿ ಮಾತಾಡಿ ಬರುತ್ತಿದ್ದ. ಅದೇ ಪಾಂಡ್ಯಾ ಮುದುಕಿಗೆ ಮಾಡುತ್ತಿದ್ದ ಕಟಿಂಗ್. ನಮ್ಮ ಕಾಲದಲ್ಲಿ ಅದು ಕಮ್ಮಿಯಾಗಿತ್ತು ಆದರೆ "ಮನಿಗೆ ಬಂದು ಮುದುಕಿಗೆ ಮಾಡಿ ಹೋಗಪಾ" ಅನ್ನುವ ಬ್ರಾಹ್ಮಣ ಮುತ್ತೈದೆಯರು ಆಗಾಗ ಕಾಣುತ್ತಿದ್ದರು. ಮಕ್ಕಳಿಗೆ ಓಕೆ. ಗಂಡನಿಗೆ ಓಕೆ. ಆದರೆ ಮುದುಕಿಗೆ ಪಾಳಿ ಹಚ್ಚಲು ತಾವೇಕೆ ಹೋಗಬೇಕು ಎನ್ನುವ ಬಿಗುಮಾನ ಕೆಲವರಿಗೆ. ಅದು ಮುದುಕಿ ಉರ್ಫ್ ಅತ್ತೆ ಮೇಲಿನ ಕೋಪವೂ ಇರಬಹುದು. ಅಂತವರು ತಮ್ಮ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ 'ಬೂಬು'ಗಳನ್ನು ಕಳಿಸುತ್ತಿದ್ದರು. ಅವು ತಮ್ಮ ಹರಕು ಮುರುಕು ಉರ್ದು ಮಿಶ್ರಿತ ಕನ್ನಡದಲ್ಲಿ ಏನು ಹೇಳುತ್ತಿದ್ದವೋ ಅದು ಮೂಲ ತೆಲುಗು ಭಾಷಿಕನಾದ ಪಾಂಡ್ಯಾನಿಗೆ ಮಾತ್ರ ತಿಳಿಯುವಂತೆ ಇರುತ್ತಿತ್ತು.
ನಾಪಿತ ಪಾಂಡ್ಯಾ ಮತ್ತು ಅವನ ಇಬ್ಬರು ಸಹೋದರರಿಗೆ ಈ ಮುಂಜಾನೆ ಹಾಲಿನ ಗಿರಾಕಿ ಗೃಹಿಣಿಯರು ಯಾರಿಗೆ ಪಾಳಿ ಹಚ್ಚುತ್ತಿದ್ದಾರೆ ಎಂದು ಅದು ಹೇಗೆ ತಿಳಿಯುತ್ತಿತ್ತೋ ಗೊತ್ತಿಲ್ಲ. ಅಷ್ಟ್ರರಲ್ಲಿ ಯಾರಾದರೂ ಮಾಮ (ಮಾಳಮಡ್ಡಿ ಮಹನೀಯ) ಒಬ್ಬರು "ನನ್ನ ಹೆಂಡ್ತಿ ಪಾಳಿ ಹಚ್ಚಿ ಹೋಗಿದ್ದಳಲ್ಲ. ಬಂದೆ ನೋಡಪಾ. ಲಗೂನ ಮಾಡಿ ಬಿಡಪಾ. ಆಪೀಸಿಗೆ ಬ್ಯಾರೆ ಹೋಗಬೇಕು," ಅನ್ನುತ್ತಾ ಒಳಗೆ ಬಂದು ಇದ್ದ ಮೂರು ಖುರ್ಚಿಗಳಲ್ಲಿ ಯಾವುದರ ಮೇಲೆ ರಾರಾಜಿಸಲಿ ಎಂದು ನೋಡಿದರೆ ಮೂರರ ಮೇಲೂ ಬೇರೆಯವರು ಇರುತ್ತಿದ್ದರು. "ಪಾಳಿ ಹಚ್ಚಿ ಬಂದೇನಿ ಅಂದಳಲ್ಲೋ ನನ್ನ ಹೆಂಡ್ತಿ !!! ತಡಾ ಆಗ್ತದೇನು ?? " ಎನ್ನುವ ಅವರ ಆಕ್ಷೇಪ ಫ್ರೀ. ಪಾಂಡ್ಯಾ ಅವರನ್ನು ರಮಿಸಿ, "ಒಂದ್ ನಿಮಿಟ್ ಪೇಪರ್ ಓದ್ರಿ," ಎಂದು ಕೂಡಿಸುತ್ತಿದ್ದ. ಬಿಟ್ಟಿಯಾಗಿ ಓದಲು ಸಿಗುತ್ತಿದ್ದ ಸಂಯುಕ್ತ ಕರ್ನಾಟಕ ಓದಲೆಂದೇ ಕೆಲವರು ಬಂದು ಕೂತಿರುತ್ತಿದ್ದರು. ರೊಕ್ಕ ಕೊಟ್ಟು ಕಟಿಂಗ್ ಮಾಡಿಸಲು ಬಂದ ಗಿರಾಕಿಗಳು ತುಂಬಿ ಜಾಗವಿಲ್ಲದಾಗ ಅವರು ಮನಸ್ಸಿಲ್ಲದ ಮನಸ್ಸಿನಿಂದ ಪೇಪರ್ ಬಿಟ್ಟು ಹೊರಗೆ ಹೋಗಬೇಕಾದ ಅನಿವಾರ್ಯತೆ ಬರುತ್ತಿತ್ತು. ಮಾಳಮಡ್ಡಿಯೇ ಒಂದು ಇಕ್ಕಟ್ಟಾದ ಕಿಷ್ಕಿಂಧೆ. ರಾಯಲ್ ಹೇರ್ ಕಟಿಂಗ್ ಸಲೂನ್ ಮತ್ತೂ ಇಕ್ಕಟ್ಟಾದ ಟಾಯ್ಲೆಟ್ಟಿಗಿಂತ ಚಿಕ್ಕದಾದ ಜಾಗ. ಮೂರು ಕಟಿಂಗ್ ಖುರ್ಚಿ. ಕಾಯುವವರಿಗೆ ಒಂದು ಬೆಂಚ್. ಅಷ್ಟೇ.
ಇನ್ನೊಮ್ಮೆ ಮತ್ತೊಬ್ಬ ಮಹನೀಯರು ತಮ್ಮ ಇಬ್ಬರು ಪುತ್ರರತ್ನಗಳನ್ನು ಕರೆದುಕೊಂಡು ಬಂದಿದ್ದರು. ಇಬ್ಬರೂ ಮಕ್ಕಳು ಸ್ವಲ್ಪ ಜಾಬಾದ್ ಇದ್ದಂತೆ ಇದ್ದರು. "ನನಗ ಸಣ್ಣನೆ ಗಾಂಧಿ ಕಟಿಂಗ್ ಬ್ಯಾಡ. ನಾ ಶಟಿಂಗ್ ಮಾಡಸ್ತೇನಿ," ಅಂತ ಮಕ್ಕಳು ಅಲ್ಲೇ ಹಠಯೋಗ ಅಂದರೆ ಹಟ ಮಾಡಲು ಆರಂಭಿಸಿದರು. ಸೆಟ್ಟಿಂಗ್ ಎಂಬುದು ಧಾರವಾಡಿಗರ ಬಾಯಲ್ಲಿ ಶಟಿಂಗ್ ಆಗಿದ್ದು ದುರಂತ ಅನ್ನಿಸಿದರೂ ಆ ಶಟಿಂಗ್ ಕೇಶವಿನ್ಯಾಸ ಮಾತ್ರ ಆಕರ್ಷಕವಾಗಿತ್ತು. ಮಿಡ್ಲ್ ಕ್ಲಾಸ್ ಅಪ್ಪ ಅವರನ್ನು ಅಲ್ಲಿಯೇ ಹಿಡಿದು ಬಡಿಯಬೇಕಾಗಿತ್ತು. ಆದರೆ ಸಲೂನ್ ಎಷ್ಟು ತುಂಬಿತ್ತು ಅಂದರೆ ಅವರನ್ನು ಅಲ್ಲೇ ಬಗ್ಗಿಸಿ ಬಗ್ಗಿಸಿ ಬಾರಿಸುವಷ್ಟು ಜಾಗ ನಿಜವಾಗಿಯೂ ಇರಲಿಲ್ಲ. ಅಪ್ಪ ತನ್ನ ಟ್ರಂಪ್ ಕಾರ್ಡ್ ಒಗೆದ. "ಪಾಂಡ್ಯಾ, ಇವರಿಗೆ ಹ್ಯಾಂಗ ಬೇಕು ಹಾಂಗ ಹಜಾಮತಿ ಮಾಡಪಾ. ರೊಕ್ಕನೂ ಅವರ ಕಡೆನೇ ಇಸ್ಕೊ. ಮಾಡಿ ಕಳಿಸು. ನಾ ಮತ್ತೊಮ್ಮೆ ಬರ್ತೇನಿ," ಎಂದು ಹೊರಡಲು ಸಿದ್ಧನಾಗಿಬಿಟ್ಟ. ಮುಂದೇನಾಯಿತು ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ!!?? ಸ್ವಲ್ಪ ಸಮಯದ ನಂತರ ಒಂದು ದೊಡ್ಡ ಗಾಂಧಿ ಮತ್ತು ಎರಡು ಸಣ್ಣ ಗಾಂಧಿಗಳು ಫ್ರೆಶ್ ಆಗಿ ಮುಂಡಾಯಿಸಿಕೊಂಡಿದ್ದ ತಲೆ ಸವರಿಕೊಳ್ಳುತ್ತಾ, "ತಲಿ ಹಗುರ ಆತಲಾ??" ಎಂದು ತಲೆ ಹಗುರ ಮಾಡಿಕೊಳ್ಳುವ ಅದ್ಭುತ ಐಡಿಯಾ ಕೊಟ್ಟ ತನ್ನ ತಲೆಯನ್ನೇ ಮೆಚ್ಚಿಕೊಂಡು ಮಕ್ಕಳ ಕಡೆ ನೋಡಿದರೆ ಅವು ರೆಕ್ಕ ಪುಕ್ಕ ತರಿದ ಉಷ್ಟ್ರಪಕ್ಷಿಗಳ ಲುಕ್ ಕೊಟ್ಟವು. "ಮಸ್ತ್ ಆಗ್ಯದಲ್ಲೇ ಪುಟ್ಯಾ ಹಜಾಮತಿ," ಎನ್ನುವ ಬಿಟ್ಟಿ ಮೆಚ್ಚುಗೆ ಪಿತಾಜಿ ಎಂಬ ಪಿಶಾಚಿಯಿಂದ.
ಈಗ ಹಿರಿಯ ಪಾಂಡ್ಯಾ ಇಲ್ಲ. ಪಾಂಡ್ಯಾನ ಇಬ್ಬರು ಸಹೋದರರು ಇದ್ದಾರಂತೆ. ಅವರ ಸಲೂನ್ ಗೌಳ್ಯಾರ (ಗೌಳಿಗರ) ದಡ್ಡಿಯ ಕಡೆ ಶಿಫ್ಟ್ ಆಗಿದೆಯಂತೆ. ಆಕಡೆ ಹೋದಾಗ ಮಾಡಿಸಿಕೊಂಡು ಬನ್ನಿ. ಕಟಿಂಗ್ ಮಾಡಿಸಿಕೊಂಡು ಬನ್ನಿ ಎಂದು. ಉದ್ದ ಕೂದಲು ಬಿಟ್ಟ ವಿದ್ಯಾರ್ಥಿಗಳನ್ನು ಕಂಡರೆ ಉರಿದುಬೀಳುತ್ತಿದ್ದ ನಮ್ಮ ಗುಂಜೀಕರ್ ಮಾಸ್ತರ್ ಒಮ್ಮೆ ಕ್ಲಾಸಿನಲ್ಲಿ ಉಗ್ರ ನರಸಿಂಹನ ಅವತಾರ ತಾಳಿ, 'ಅಲ್ಲೆ ಗೌಳ್ಯಾರ ದಡ್ಡಿಯಾಗ ಎಮ್ಮಿ ಬೋಳಿಸುತ್ತಿರುತ್ತಾರ. ಅಲ್ಲಿ ಹೋಗಿ ಬೋಳಿಸಿಕೊಂಡು ಬಾ. ನಾಳೆ ಸಾಲಿಗೆ ಬರೋದ್ರಾಗ ಹಜಾಮತಿ ಆಗಿರಬೇಕು. ಇಲ್ಲಂದ್ರ ನಾನೇ ಖುದ್ ಕರಕೊಂಡು ಹೋಗಿ ಎಮ್ಮಿ ಬೋಳಿಸುವರವರ ಕಡೆ ನಿನ್ನ ಬೋಳಿಸಿಕೊಂಡು ಬರತೇನಿ...ಮಗನss" ಎಂದು ಅಂದು ಅಬ್ಬರಿಸಿದ್ದಕ್ಕೂ ಇಂದು ರಾಯಲ್ ಹೇರ್ ಕಟಿಂಗ್ ಸಲೂನ್ ಎಮ್ಮೆ ಬೋಳಿಸುವವರ ಅಲ್ಲ ಸಾಕುವವರ ಬಡಾವಣೆಗೆ ಶಿಫ್ಟಾಗಿದ್ದೂ ಕಾಕತಾಳೀಯ ಅನ್ನಿಸುವುದಿಲ್ಲ.
***
ಇದು ಶಾಲಾ ಮಿತ್ರರ ವಾಟ್ಸಾಪ್ ಗುಂಪಿನಲ್ಲಿ ಬರೆದು ಹಾಕಿದ್ದು. ಈಗಿತ್ತಲಾಗಿನ ಚೂರು ಪಾರು ಬರವಣಿಗೆ ಎಲ್ಲ ಅಲ್ಲೇ ಆಗುತ್ತಿದೆ. ಇಲ್ಲಿ ಹಾಕಬಹುದಾದವನ್ನು ಇಲ್ಲಿಯೂ ಹಾಕಿರುತ್ತೇನೆ.
No comments:
Post a Comment