Saturday, December 21, 2024

ಫೈಟರ್ ಎಂಜಿನ್ ಮತ್ತು ಫೈಟರ್ ಶೆಟ್ಟಿ

Biden, Modi announce major deal on fighter jet engines, drones

ಮೋದಿ ಮತ್ತು ಬೈಡೆನ್ ಮಧ್ಯೆ ಚರ್ಚೆ ನಡೆದಿತ್ತು. ಕೊಡು ತೊಗೊಳ್ಳೋ ವಿಚಾರ. ವ್ಯಾಪಾರ ವ್ಯವಹಾರ.

ಬೈಡೆನ್: ಮೋದಿ ಸಾಬ್, ನಿಮಗ  ಫೈಟರ್ ಎಂಜಿನ್ ಕೊಡೋಣ ಅಂತ ವಿಚಾರ ಮಾಡೇವಿ. ನೀವು ನಮಗ ಏನು ಕೊಡ್ತೀರಿ???

ಮೋದಿ ರಾಜಕೀಯ ಮುತ್ಸದ್ದಿ. ಪ್ರಧಾನಿ. ವ್ಯಾಪಾರ ಗೀಪಾರ ಏನಿದ್ದರೂ ಅದರ ಉಸ್ತುವಾರಿ ಅದಾನಿ. ಹಾಗಾಗಿ ಅವನ ಕಡೆ ನೋಡಿದರು. ಅವನೋ ತಲೆ ಕಾಣದಿದ್ದರೂ ಟೋಪಿ ಇಟ್ಟುಬಿಡುವ ಖತರ್ನಾಕ್ ಗಿರಾಕಿ.

ಸರ್, ಫೈಟರ್ ಶೆಟ್ಟಿ... ಎಂದು ಉಸುರಿ ಮುಂದೆ ಏನೋ ಹೇಳಲು ಹೋದ ಅದಾನಿ. 

ಮೋದಿ ಪೂರ್ತಿ ಕೇಳಿಸಿಕೊಳ್ಳದೇ, ಅವಸರಿಸಿ, ಪ್ರೆಸಿಡೆಂಟ್ ಬೈಡೆನ್ ನೀವು ನಮಗೆ ಫೈಟರ್ ಎಂಜಿನ್ ಕೊಡಿ. ನಾವು ನಿಮಗೆ ಫೈಟರ್ ಶೆಟ್ಟಿ ಕೊಡುತ್ತೇವೆ. ಏನಂತೀರಿ?? ಅಂದುಬಿಟ್ಟರು.

ಬೈಡೆನ್ ಮೊದಲೇ ಕೆಪ್ಪ. ಕೇಳಿಸಲಿಲ್ಲ. ಕಿವಿ ಚಟ್ಟೆ ಎಳೆದುಕೊಂಡು, ಹ್ಯಾಂ?? ಏನೂ? fighter shitty ??  ಫೈಟರ್ ಶಿಟ್ಟಿ ??? ಏ ನಮಗೆ ಶಿಟ್ಟಿ ಫೈಟರ್ ಬ್ಯಾಡ. ಕೊಡೋದಿದ್ದರೆ ಒಳ್ಳೆ ಫೈಟರ್ ಕೊಡಿ ಅಂದ. ಫೈಟರ್ ಶೆಟ್ಟಿ ಅಂದರೆ  ಅವನು ಮೋದಿ ಎಲ್ಲೋ  ಪ್ರೈಜ್ ಫೈಟರ್ ಕೊಡುತ್ತಾರೆ ಎಂದುಕೊಂಡನೋ ಏನೋ.

ಈಗಲೂ ಮಾತು ಮುಗಿಸದಿದ್ದರೆ ಅನರ್ಥವಾಗುತ್ತದೆ ಎಂದು ಖಾತ್ರಿಯಾದ ಅದಾನಿ, ಸರ್, ಫೈಟರ್ ಶೆಟ್ಟಿ ಸತ್ತು ಹೋಗಿ ಭಾಳ ವರ್ಷ ಆತ್ರಿ, ಎಂದು ಉಸುರಿದ.

ಸಿಟ್ಟಿಗೆದ್ದ ಮೋದಿ, ಮಂಗ್ಯಾನಿಕೆ, ಮೊದಲೇ ಹೇಳಲಿಕ್ಕೆ ಏನು ಧಾಡಿಯಾಗಿತ್ತಲೇ? ಎಂದು ಝಾಡಿಸಬೇಕು ಎಂದುಕೊಂಡರು. ಆದರೆ ಕಿವಿ ಚಟ್ಟೆ ಎಳೆದು ನಿಂತಿದ್ದ ಬೈಡೆನ್ ಕಂಡ. ಅವನನ್ನು ಸಂಬಾಳಿಸುವ ಕೆಲಸ ಮುಖ್ಯವಿತ್ತು. 

ಮೋದಿ ಅದಾನಿಯನ್ನು ಕುರಿತು...ಈಗ ಏನು ಮಾಡೋದು? ಫೈಟರ್ ಶೆಟ್ಟಿ ಕೊಡ್ತೇನಿ ಅಂದೆ. ಅವಾ ಶಿಟ್ಟಿ ಫೈಟರ್ ಬ್ಯಾಡ. ಒಳ್ಳೆ ಫೈಟರ್ ಕೊಡೋದಿದ್ದರೆ ಕೊಡ್ರಿ ಅಂದ. ಈಗ ಏನು ಮಾಡೋದು?

ಅದಾನಿ ಖತರ್ನಾಕ್. ಫೈಟರ್ ಶೆಟ್ಟಿ ಸತ್ತರ ಸಾಯ್ಲಿ ಬಿಡ್ರೀ. ಅವನ ಮಗ ರೋಹಿತ್ ಶೆಟ್ಟಿ ಇದ್ದಾನ. ಶಿರಹಟ್ಟಿ ಗಿರಾಕಿ. ಎಲ್ಲಾರ ತಲಿ ಹಟ್ಟು ಹದಿನಾರಾಣೆ ಮಾಡುವ ಮೂವೀ ಮಾಡಿ ಮಾಡಿ ಒಗೀತಾನ. ಅವನನ್ನ ಕೊಟ್ಟು ಬಿಡೋಣ. ಅವನೂ ಫೈಟರ್ ಶೆಟ್ಟಿನೇ. ಜೂನಿಯರ್ ಫೈಟರ್ ಶೆಟ್ಟಿ ಅಂದು ಬಿಟ್ಟರಾಯಿತು.

ಈ ಸಲಹೆ ಕೇಳಿ ಮೋದಿ ಖುಷ್. ತಲಿ ಅಂದ್ರ ನಿಂದು ನೋಡಪಾ. ಆ ಫೈಟರ್ ಶೆಟ್ಟಿ ಮಗ ರೋಹಿತ್ ಶೆಟ್ಟಿನ ಅಮೆರಿಕಾಗೆ ಕಳಿಸು. ಅಲ್ಲಿ ಹಾಲಿವುಡ್ ಮೂವಿ ಮಾಡಿ ಅವರ ತಲಿ ಹಡ್ಲಿ. ಸೂಡ್ಲಿ ತಂದು. ಅವನ್ನ ಆ ಕಡೆ ಕಳಿಸಿ ನಾವು ಸ್ವಲ್ಪರೆ ತಲಿ ಸರಿ ಮಾಡಿಕೊಳ್ಳೋಣ, ಎಂದು ಅದಾನಿಗೆ ಹೇಳಿದರು. ಹೇಗೂ ಸ್ವಚ್ಛ ಭಾರತ್ ಮಾಡಿದಂತೆ ಸ್ವಚ್ಛ ಬಾಲಿವುಡ್ ಕೂಡ ಮಾಡಬೇಕಿತ್ತಲ್ಲ. ಹಾಗಾಗಿ ಶಿರಹಟ್ಟಿ ಮೂವಿ ಮಾಡುವವರನ್ನು ಓಡಿಸುವ ಜರೂರತ್ತಿತ್ತು.

ಪ್ರೆಸಿಡೆಂಟ್ ಬೈಡೆನ್, ನಾವು ನಿಮಗೆ ಶಿಟ್ಟಿ ಫೈಟರ್ ಏನೂ ಕೊಡಂಗಿಲ್ಲ. ಒಳ್ಳೆ ಶೆಟ್ಟಿ ಫೈಟರ್ ಕೊಡ್ತೀವಿ. ಫೈಟರ್ ಶೆಟ್ಟಿ. ಫೈಟರ್ ರೋಹಿತ್ ಶೆಟ್ಟಿ ಕೊಡ್ತೇವಿ. ಬಂದು ಮಸ್ತ ಮೂವಿ ಮಾಡಿ ನಿಮ್ಮೆಲ್ಲರ ಮನರಂಜನೆ ಮಾಡ್ತಾನ. ಏನಂತೀರಿ?? ಎಂದರು ಮೋದಿ.

ಶಿಟ್ಟಿ ಫೈಟರ್ ಕೊಟ್ಟು ಎಲ್ಲಿ ಟೋಪಿ ಹಾಕುತ್ತಾರೋ ಎಂದು ಗಾಬರಿಗೊಂಡಿದ್ದ ಬೈಡೆನ್ ನಿರಾಳರಾದರು. ಶಿಟ್ಟಿ ಫೈಟರ್ ಅಲ್ಲ ಒಳ್ಳೆ ಫೈಟರ್ ರೋಹಿತ್ ಶೆಟ್ಟಿ ಅಂತ ಯಾರೋ ಬಂದು ಕುಲಗೆಟ್ಟು ಹೋಗಿರುವ ಹಾಲಿವುಡ್ ಉದ್ಧಾರ ಮಾಡುತ್ತಾರೆ ಎಂದು ಖುಷಿಯಾಗಿಬಿಟ್ಟರು.

ಅಲ್ಲಿಗೆ ಫೈಟರ್ ಎಂಜಿನ್ ಗೆ ಬದಲಾಗಿ ಫೈಟರ್ ಶೆಟ್ಟಿ ಕೊಡುವ ಒಪ್ಪಂದಕ್ಕೆ ಅಧಿಕೃತ ಮೊಹರು ಬಿತ್ತು.

No comments: