Monday, November 26, 2012

Winey ಆದ ವೈನಿ

ಶನಿವಾರ ಮುಂಜಾನೆ ಮುಂಜಾನೆ ಫೋನ್ ಟ್ರೋಯ್  ಟ್ರೋಯ ಅಂತು.

ಯಾರಪಾ? ಶನಿವಾರ ಮುಂಜಾನೆ ಮುಂಜಾನೆ ಫೋನ್ ಮಾಡಿದ ಶನಿ ಅಂತ ನೋಡಿದೆ. 

ಅರ್ರೇ !!! ನನ್ನ ದೋಸ್ತ ಚೀಪ್ಯಾ. ಅವನ ಶ್ರೀಪಾದ ಖಂಡುರಾವ್ ಡಕ್ಕನೆಕರ್. 

ಯಾಕ ಇಷ್ಟು ಲಗೂನ ಫೋನ್ ಮಾಡ್ಯಾನ? 

ಆವಾ ಮತ್ತ ಅವನ ಹೆಂಡ್ತಿ ರೂಪಾ ವೈನಿ ಇಬ್ಬರೂ ಪ್ರತಿ ಶನಿವಾರ ಸಪ್ತಾಪುರ ಹನುಮಪ್ಪನ ಗುಡಿಗೆ ಹೋಗಿರ್ತಾರ ಈ ಹೊತ್ತಿನ್ಯಾಗ. ಇವತ್ತ ಹೋಗಿಲ್ಲೇನು ಹಾಂಗಿದ್ರಾ?

ಹೀಂಗ ಭಾಳ ಪ್ರಶ್ನೆ ಬಂದವು.

ಇರಲಿ, ನೋಡೋಣ ಅಂತ ಫೋನ್ ಎತ್ತಿ ಹಲೋ ಅನ್ನೂದ ತಡ, ಆಕಡಿಂದ ಚೀಪ್ಯಾ ಹೊಯ್ಕೊಳ್ಳೋದು ಕೇಳಿಸ್ತು.

ಏ!!!!ಇವನ!!!!ಅದು...ಅದು....ಇಕಿ ಕುಡುದು ಕೂತಾಳೋ! ಲಗೂನ ಬಾರೋ ದೋಸ್ತ. ಅಯ್ಯೋ!!!! ನಾ ಸತ್ತೆ!!!!, ಅಂತ ಚೀಪ್ಯಾ ಹೇಳ್ಕೊತ್ತ ಇದ್ದಾಗ ಏನೋ ಆ ಕಡೆ ಧಡ್ ಅಂತ ಸದ್ದ ಬ್ಯಾರೆ ಆತು. ಬಿದ್ದಿರಬೇಕು ಗಜ್ಜು ಯಾರಿಗೋ.

ಏನ ಚೀಪ್ಯಾ? ಏನಾತೋ? ಸ್ವಲ್ಪ ಸಮಾಧಾನದಿಂದ ಹೇಳು, ಅಂತ ಹೇಳಿದೆ.

ಏನ ಸುದ್ದಿನ ಇಲ್ಲ. ಆ ಕಡೆ ಪಿನ್ಡರಾಪ್(pin drop) ಸೈಲೆನ್ಸ್.

ಚೀಪ್ಯಾ?ಚೀಪ್ಯಾ? ಇದ್ದಿಯೇನೋ? ಯಾರು ಏನು ಕುಡದರು?, ಅಂತ ಮತ್ತ ಕೇಳಿದೆ.

ಇಕಿನನೋ. ನಿಮ್ಮ ರೂಪಾ ವೈನಿ, ಅಂತ ಹೇಳಿದ ಚೀಪ್ಯಾ ಮಾತ ನಿಲ್ಲಿಸಿದ.

ಏನು!!?? ರೂಪಾ ವೈನಿ ವಿಷಾ ಕುಡದಾರ? ವೈನಿ!!........ವೈನಿ!!....ಯಾಕ್ರೀ ಹಿಂಗ ಮಾಡಿದ್ರೀ? ಚೀಪ್ಯಾ!! ಚೀಪ್ಯಾ!! ವೈನಿ ಹೋಗಿ ಬಿಟ್ರೇನೋ? ಪಾಪ....ಪಾಪ....ಆದರೂ ಮುತ್ತೈದಿ ಸಾವು ತಂದಕೊಂಡರು ಬಿಡು.....ವೈನಿ....ವೈನಿ......, ಅಂತ ನಾನೂ ಫೋನಿನ್ಯಾಗ ಸ್ವಲ್ಪ ದುಃಖ ವ್ಯಕ್ತ ಪಡಿಸಿದೆ.

ಲೇ....ಹುಸ್ಸೂಳೆಮಗನ....ವಿಷಾ ಕುಡದಿಲ್ಲೋ ನಮ್ಮಪ್ಪಾ. ಮತ್ತ ಸತ್ತಿಲ್ಲ. ಅಂತಾ ಲಕಿ ನಾ ಇಲ್ಲಪಾ. ನನಗೆಲ್ಲೆ ಅಂತಾ ಅದೃಷ್ಟ? ಸತ್ತ ಮ್ಯಾಲೂ ದೆವ್ವ ಆಗಿ ಕಾಡೋ ಪೈಕಿ ನಿಮ್ಮ ವೈನಿ. ಎಣ್ಣಿ ಕುಡಕೊಂಡ ಕೂತಾಳೋ. ಕುಡದ ಹಾಪ್ ಆಗಿ ಕೂತು ಬಿಟ್ಟಾಳ. ನೀ ಬಂದ್ರ ಅಕಿನ್ನ ಹಿಡಿಬೋದು ಅಂತ ಆಶಾ ಅದ, ಅಂದಾ ಚೀಪ್ಯಾ.

ಎಣ್ಣಿ ಕುಡದ ಕೂತಾಳ ವೈನಿ? ಏನು "ಅಯಿಲ್ ಪುಲ್ಲಿಂಗ್"(oil pulling) ಅನ್ನೋ ಚಿಕಿತ್ಸಾ ಶುರು ಮಾಡ್ಯಾರ ಏನು ವೈನಿ? ಮುಂಜಾನೆ ಎದ್ದ ಕೂಡಲೇ ಮುಖಾ ತೊಳಿಯೋಕಿಂತ ಮೊದಲು ಒಂದು ಚಮ್ಮಚ ಒಳ್ಳೆಣ್ಣಿ ಬಾಯಾಗ ಹಾಕ್ಕೊಂಡು, ಬಾಯ್ತುಂಬಾ ಓಡಾಡಿಸಿ, ಉಗಳಿದ್ರಾ ಭಾಳ ಚೊಲೋ ಅಂತ ಹೆಲ್ತಿಗೆ. ಮನ್ನೆ  "ಲಂಕೇಶ್ ಪತ್ರಿಕೆ" ಒಳಗೂ ಬಂದಿತ್ತು, ಅಂತ ನಾ ಹೇಳಿದೆ.

ಏ!!!!ಏನ್ ಪುಲ್ಲಿಂಗ ಹಚ್ಚಿ? ನಿಮ್ಮ ವೈನಿ ಅನ್ನಲಿಕತ್ತೇನಿ, ಪುಲ್ಲಿಂಗ ಅನ್ತಿಯಲ್ಲಲೇ ಹಾಪಾ. ಅಕಿ ಏನಿದ್ರೂ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅಪವಾದನಾ ಇರಬಹುದು ಅಕಿ. ಆದರೂ ಗವರ್ನಮೆಂಟ್ ಪ್ರಕಾರ್ ಅಕಿ ಸ್ತ್ರೀಲಿಂಗ. ಹಾಂಗಿದ್ದಾಗ ಆಯಿಲ್ ಮಾಡೋ ಪುಲ್ಲಿಂಗ ಅದು ಇದು ಅಂತಿಯಲ್ಲೋ! ಥತ್ ನಿನ್ನ. ಲಗೂನ ಬಾರೋ. ಇಕಿನ ಹಿಡಿಲಿಕ್ಕೆ ಆಗವಲ್ಲದು, ಅಂತ ಮತ್ತ ಹೇಳಿದ ಚೀಪ್ಯಾ.

ಚೀಪ್ಯಾ ಭಾಳ್  ಟೆನ್ಷನ್ ಒಳಗ ಇದ್ದಾಂಗ ಅನ್ನಿಸ್ತು. ಅದಕ್ಕ ನಾ ಆಯಿಲ್ ಪುಲ್ಲಿಂಗ್ (oil pulling) ಚಿಕಿತ್ಸಾ ಅಂದ್ರಾ, ಹೆಂಡ್ತಿ ಸ್ತ್ರೀಲಿಂಗ ಅಂತಾನ. ಹಾಪಾ. ಬರೇ ಹೆಸರಿಗೆ ಮಾತ್ರ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅವಮಾನ ಅಂತಾನ. ಪಾಪ! ರೂಪಾ ವೈನಿಗೆ ಅಂಥಾ ರೂಪಾ ಇರಲಿಕ್ಕೆ ಇಲ್ಲ. ಹಂಗಂತ ಗವರ್ನಮೆಂಟ್ ಸ್ತ್ರೀಲಿಂಗ ಅಂತ ಅನ್ನೋದ? ಇವಾ ಏನ ಮಹಾ ಚಂದ ಇದ್ದಾನೋ ಆಚಾರಿ! ಅದು ಇದು ಅಂತಾನ. ಏನೋ ಬ್ಯಾರೇನ ಕಾರಣ ಇರಬೇಕು ಅನ್ನಿಸ್ತು.

ಮತ್ತೆಂತಾ ಎಣ್ಣಿ ತೊಗೊಂಡಾರೋ ವೈನಿ? ಏನು ಜುಲಾಬಿಗೆ ಅಂತ ಹರಳೆಣ್ಣಿ ಅಥವಾ ಔಡಲ ಎಣ್ಣಿ ತೊಗೊಂಡು ಕೂತಾರ ಏನು? ಅದು ಒಳ್ಳೇದೋ. ವರ್ಷಕ್ಕ ಒಂದೆರೆಡು ಸಲ ಹರಳೆಣ್ಣಿ ತೊಗೊಂಡು, ಸಿಸ್ಟಮ್ ಸ್ವಚ್ಛ ಮಾಡ್ಕೊಂಡ್ರ ಭಾಳ್ ಚೊಲೋ. ಅದಕ್ಕ ನೀ ಯಾಕ್ ಚಿಟಿ ಚಿಟಿ ಚೀರ್ಲಿಕತ್ತಿಯೋ ನಮ್ಮಪ್ಪಾ?, ಅಂತ ಕೇಳಿದೆ.

ಹೋಗ್ಗೋ ನಿನ್ನ. ಎಲ್ಲಿ ಹರಳೆಣ್ಣಿ ಹಚ್ಚಿ. ನಿಮ್ಮ ರೂಪಾ ವೈನಿ ಮಸಡಿ ಯಾವಾಗಲೂ ಹರಳೆಣ್ಣಿ ಕುಡದವರಾಂಗ ಇರ್ತದ. ಆ ಎಣ್ಣಿ ಯಾವದೂ ಅಲ್ಲ. ಲಗೂನ ಬಾರೋ ದೋಸ್ತಾ. ಹಿಡಿಲಿಕ್ಕೆ ಆಗವಲ್ಲದು ಇಕಿನ. ಇಕಿ ಎಣ್ಣಿ ಕುಡದು ಯಾವ ಯಾವ್ದೋ ಭಾಷಾದಾಗ, ಏನೇನೋ ಮಾತಾಡ್ಲಿಕತ್ತಾಳ. ನೀ ಬಾರಪಾ. ಇಲ್ಲಂದ್ರಾ ನನಗ ಮೆಂಟಲ್ ಹಾಸ್ಪಿಟಲ್ ಗೆ ಫೋನ್ ಮಾಡೋ ಪರಿಸ್ಥಿತಿ ಬರ್ತದ ನೋಡೋ. ನಮ್ಮ ಮನಿತನದ ಮರ್ಯಾದಿ ಹೋಗ್ತದೋ. ನನಗ ಇಬ್ಬರು ಹೆಣ್ಣ್ಮಕ್ಕಳು ಇದ್ದಾರೋ. ಅವ್ವಾ ಮೆಂಟಲ್ ಹಾಸ್ಪಿಟಲ್ ಗೆ ಹೋಗಿ ಬಂದಾಕಿ ಅಂದ್ರಾ ಯಾರು ಅವರನ್ನ ಯಾರು ಮದ್ವಿ ಮಾಡ್ಕೊತ್ತಾರೋ? ಬಾರೋ. ಬಾರೋ, ಅಂತ ಭಾಳ ಅಂಗಾಲಾಚಿ ಬೇಡಿಕೊಂಡ ನಮ್ಮ ದೋಸ್ತ ಚೀಪ್ಯಾ.

ಮತ್ತೂ ಜಟಿಲ ಆಗುತ್ತಲೇ ಹೋತು. ಯಾವ ಎಣ್ಣಿ ತೊಗೊಂಡು ಕೂತಿರಬಹದು ರೂಪಾ ವೈನಿ?

ಚೀಪ್ಯಾ, ಚಿಂತಿ ಮಾಡಬ್ಯಾಡ ನೀ. ನಾ ಬಂದ ಬಿಟ್ಟೆ. ನಂದು ಧೋತ್ರಾ ಸುಮಾರ ಒಣಿಗ್ಯದ. ಅದರ ಮ್ಯಾಲೆ ಒಂದು ಸ್ವಲ್ಪ ಗರಂ ಇಸ್ತ್ರೀ ತಿಕ್ಕಿ, ಪೂರ್ತಿ ಒಣಿಗಿಸಿಕೊಂಡು ಹೊಂಟ ಬಿಡ್ತೇನಿ. ಓಕೆ ಏನಪಾ? ಆದ್ರಾ ಒಂದು ಮಾತು ಹೇಳೋ. ಯಾವ ಎಣ್ಣಿ ಅಂತ, ಅಂತ ಕೇಳಿದೆ.

ನಾವು ಶನಿವಾರ ಹನುಮಪ್ಪನ ವೃತಾ ಅಂತಾ ಹೇಳಿ ಇಡೀ ದಿವಸ ಧೋತ್ರಾ ಮಾತ್ರ ಧರಿಸ್ತೇವಿ. ಏನೋ ನಮ್ಮ ಮನಿ ಪದ್ಧತಿ. ನಾವೂ ನಡಸಬೇಕಲ್ಲ. ಅದಕ್ಕ. 

ಏ, ಒಳಗ ಅಂಡರ್ವೇರ್ ಇರ್ತದ್ರೀ. ಬರೇ ಧೋತ್ರಾ ಅಂದ್ರ ಶನಿವಾರ ಪ್ಯಾಂಟ್ ಹಾಕಂಗಿಲ್ಲ ಅಂತ. ಅಷ್ಟ. ಮತ್ತ ಏನರ ಏನರ ಊಹಾ ಮಾಡಿಕೊಂಡು ಕಾಡಿಸಬ್ಯಾಡ್ರೀ. ಈಗ ಹೇಳೇನಿ.

ಎಣ್ಣಿ ಅಂದ್ರಾ...ಅಂದ್ರಾ...ಶೆರೆ ಕುಡ್ಕೊಂಡು ಕೂತಾಳೋ. ನಿಮ್ಮ ರೂಪಾ ವೈನಿ ಒಂದು ಫುಲ್ ಬಾಟಲ್ ವೈನ್ ಕುಡದು ಕೂತಾಳೋ. ಅದ ಎಣ್ಣಿ. ಹೊಟ್ಟಿಯೊಳಗ ಹೋದ ಪರಮಾತ್ಮಾ ಏನೇನೋ ಮಾತಾಡ್ಸ್ಲಿಕತ್ತಾನ. ಅದ ಕಂಟ್ರೋಲಿಗೆ ಬರ್ವಲ್ಲದು. ಓಣಿ ಮಂದಿ ಎಲ್ಲಾ ಹಣಿಕಿ ಹಣಿಕಿ ನೋಡಿ, ಕಿಸಿ ಕಿಸಿ ನಗ್ಲಿಕತ್ತಾರ. ಬಾರೋ!!!!, ಅಂತ ಅಂದಾ ಚೀಪ್ಯಾ.

ಹೋಗ್ಗೋ ನಿನ್ನ, ಚೀಪ್ಯಾ. ರೂಪಾ ವೈನಿ ವೈನ್ ಕುಡದು ಖರೇನಾ winey ಆಗ್ಯಾರ ಅಂತ ಆತು. ನಾ ಬಂದಾ ಬಿಟ್ಟೆ. ಹಿಂಗ ಪರಿಸ್ಥಿತಿ ಅದ ಅಂದಾ ಮ್ಯಾಲೆ ನಾ ಧೋತ್ರಾ ಒಣಗಿಸಿಕೋತ್ತ ಕೂಡಂಗಿಲ್ಲ. ಹ್ಯಾಂಗೂ ಇವತ್ತು ನಂದು ಉಪವಾಸ ಅದ. ಹಶಿ ಧೋತ್ರಾ ಇದ್ದರೂ ಏನ ಡೇಂಜರ್ ಇಲ್ಲ. ಅದನ್ನಾ ಉಟ್ಟಗೋಂಡವನ ಬಂದ ಬಿಡ್ತೇನಿ. ನೀ ಏನ ಚಿಂತಿ ಮಾಡ ಬ್ಯಾಡ. ಓಕೆ? ಓಕೆ?, ಅಂತ ಹೇಳಿ ಸ್ವಲ್ಪ ಧೈರ್ಯ ಕೊಟ್ಟು ಫೋನ್ ಇಟ್ಟೆ.

ಹಸಿ ಧೋತ್ರ ಹಸಿ ಬಟ್ಟಿ ಯಾಕ ಹಾಕ್ಕೋಬಾರದು ಅಂತ ಮತ್ತ ಯಾವಾಗರ ಹೇಳತೇನಿ. ಈಗ ಟೈಮಿಲ್ಲ.

ಧೋತ್ರಾ ಉಟ್ಟಗೋಂಡು, ಮ್ಯಾಲೆ ಜುಬ್ಬಾ, ತಲಿ ಮ್ಯಾಲೆ ಕರಿ ಟೊಪ್ಪಿಗಿ ಹಾಕ್ಕೊಂಡು, ಓಲ್ಡ್ ಲ್ಯಾಮ್ಬ್ರೆಟ್ಟಾ ಸ್ಕೂಟರ್ ಹತ್ತಿ ಚೀಪ್ಯಾನ ಮನಿಗೆ ಬಂದು ಮುಟ್ಟಿದೆ ಅಂತ ಆತು.

ಪಡಸಾಲ್ಯಾಗ ಕೂತಿದ್ರು ವೈನಿ. ಬಾಜೂಕ ಚೀಪ್ಯಾ ಪಾಪದ ಲುಕ್ ಕೊಟ್ಟಗೋತ್ತ ನಿಂತಿದ್ದ.

ನಮಸ್ಕಾರ ವೈನಿ. ಹ್ಯಾಂಗಿದ್ದೀರಿ? ಎಲ್ಲಾ ಆರಾಮ ಏನು?, ಅಂತ ಕೇಳಿದೆ.

ರೂಪಾ ವೈನಿ ಗಹಗಹಿಸಿ ನಕ್ಕರು. ಚಾವಣಿ ಹಾರಿ ಹೋಗು ಹಾಂಗ ನಕ್ಕರು. 

ಪಕ್ಕದ ಮನಿ ಫಣಿಯಮ್ಮ ತಮ್ಮ ಬೋಡ ತಲಿ ಮ್ಯಾಲೆ ಕೆಂಪ ಸೀರಿ ಸೆರಗ ಸರಿ ಮಾಡ್ಕೋತ್ತನ ಕಿಸಿ ಕಿಸಿ ನಕ್ಕರು. ಸಂಡಾಸಕ್ಕ ಹೊಂಟಿದ್ದರು ಅಂತ ಅನ್ನಸ್ತದ. ಸೊಕ್ಕು ನೋಡ್ರೀ. 

ಬಾರೋ...ಮಂಗ್ಯಾ....ಮಂಗೇಶ್....ಬಾರಪಾ ನನ್ನ ಪ್ರೀತಿ ಮೈದುನಾ....ಏ ಮಂಗ್ಯಾ...ಅಂದವರಾ ಅವನೌನ್ ಬಾಯಾಗ ಬೆಟ್ಟ ಹೆಟ್ಟಿ ಸೀಟಿ ಹೊಡದ ವೈನಿ ಮತ್ತ ಪೆಕಪೆಕಾ ಅಂತ ನಕ್ಕರು.

ನಾ ಫುಲ್ ದಂಗಾದೆ! ಏನು ಬ್ರಾಹ್ಮರ ಮುತ್ತೈದಿ ವೈನಿ ರೆಡ್ ಲೈಟ್ ಮಂದಿ ಗತೆ ಸೀಟಿ ಹೊಡೆಯೋದು ಅಂದ್ರಾ!!!!ಶಿವ ಶಿವಾ!

ಒಹೋ! ವೈನಿ ಮ್ಯಾಲೆ ವೈನಿನ ಪ್ರಭಾವ ಜೋರ್ ಆದಂಗ ಅದ ಅಂತ ಅನ್ನಿಸ್ತು. ಸ್ಟ್ರಾಂಗ್ ವೈನ್ ಇರಬೇಕು. ಮತ್ತ ಮುಂಜಾನೆ ನಾಷ್ಟಾ ಬ್ಯಾರೆ ಆಗಿಲ್ಲ ಹೆಚ್ಚಾಗಿ. ಹಸಿದ ಹೊಟ್ಟಿಯೊಳಗ ಫುಲ್ ಬಾಟಲ್ ಎತ್ತಿ ಬಿಟ್ಟಾರ. ಅದಕ್ಕ ಮಸ್ತ ಕಿಕ್ ಕೊಟ್ಟು ವೈನಿ ಪರಿಸ್ಥಿತಿ ಹಿಂಗ ಆಗ್ಯದ ಅಂತ ಅನ್ನಿಸ್ತು.

ರೀ...ವೈನಿ.....ನಾನು ಮಹೇಶ. ಮಂಗೇಶ ನನ್ನ ಕಸಿನ್. ಯಾಕ? ಗುರ್ತು ಹತ್ತಲಿಲ್ಲ ಏನು?, ಅಂತ ಕೇಳಿದೆ.

ರೂಪಾ ವೈನಿ ಮತ್ತ ನಕ್ಕರು. ವಿಕಾರವಾಗಿ ತೊಡಿ ತಟ್ಟಿ ತಟ್ಟಿ ನಕ್ಕರು.

ಏ....ಗೊತ್ತಾತೋ. ಆದ್ರಾ ನಿನಗ ಒಂದು ಮಾತ ಗೊತ್ತದ ಏನು? ನಿನಗ ನಾವು ಮಂಗ್ಯಾ ಅಂತೇವಿ. ಎಂದರಾ ಕನ್ನಡಿ ಒಳಗ ಮಸಡಿ ನೋಡಿಕೊಂಡಿಯೇನು? ಹೆಸರು ಮಹೇಶ. ಮಂಗೇಶ ಇದ್ದಾಂಗ ಇದ್ದಿ. ಅದೂ ದೊಡ್ಡ ಸೈಜಿನ ಹೊನಗ್ಯಾ ಮಂಗ್ಯಾ, ಅಂದ ವೈನಿ ನಕ್ಕೋತ್ತನ, ಅಲ್ಲೇನ್ರೀ ಶ್ರೀಪಾದ ರಾವ್?, ಅಂತ ಅಕಿ ಗಂಡ ಉರ್ಫ್ ಚೀಪ್ಯಾನ ಕೇಳಿದಳು.

ಆವಾ ಏನು ಅಂದಾನ? ಬೆಬ್ಬೆ...ಬೆಬ್ಬೆ..ಅಂದಾ.

ಶೆರೆ ಕುಡದವರು ಸುಳ್ಳು ಹೇಳಂಗಿಲ್ಲ ನೋಡ್ರೀ. ನಮ್ಮ ರೂಪಾ ವೈನಿ ಸಹಿತ ನನ್ನ ಮ್ಯಾಲಿನ ಖರೆ ಫೀಲಿಂಗ್ ಏನು ಅಂತ ಹೇಳಿಯೇ ಬಿಟ್ಟಳು. ಭಾಳ ಏನೂ ಬೇಜಾರ ಆಗಲಿಲ್ಲ. ಹೊನಗ್ಯಾ ಹಾಂಗ ಇದ್ದಿದ್ದು ಖರೆ. ಅದರ ಮ್ಯಾಲೆ ಮಂಗ್ಯಾನ ತರಹ ಕಂಡ್ರ ನಾವೇನ ಮಾಡೋಣ?

ಏನ ವೈನಿ? ಯಾಕೋ ಮುಂಜಾನೆ ಮುಂಜಾನೆ ಫುಲ್ ಮೂಡಿನ್ಯಾಗ ಬಂದೀರಿ? ಏನು ವಿಶೇಷಾ?, ಅಂತ ಕೇಳಿದೆ.

ಏನಿಲ್ಲೋ ಮಂಗೇಶ. ಅಲ್ಲಲ್ಲ ಮಹೇಶ. ನಿನ್ನೆ ನಿಮ್ಮ ದೋಸ್ತ ಕರೀಂ ಬಂದಿದ್ದ. ಏನೋ ಒಂದು ಬಾಟಲ್ ಕೊಟ್ಟು ಇವರಿಗೆ ಕೊಡ್ರೀ ಅಂದಾ. ಏನೋ ಇದು? ಅಂತ ಕೇಳಿದೆ. ಅವಾ ಕರೀಂ, ಏನಿಲ್ಲ ಒಂದಿಷ್ಟು ಇಂಪೋರ್ಟೆಡ್ ದ್ರಾಕ್ಷಾ ರಸಾ ಅಂತ ಹೇಳಿ ಕೊಟ್ಟು ಹೋಗಿದ್ದ. ಇವತ್ತು ಮುಂಜಾನೆ ನೆನಪಾತು. ಅದಕ್ಕ ಚಾ ಕುಡಿಯೋಕಿಂತ ಮೊದಲು ಒಂದು ಸ್ವಲ್ಪ ಫ್ರುಟ್ ಜೂಸ್ ಕುಡಿಯೋಣ  ಅಂತ ಕುಡದೆ. ಏನಪಾ! ಮಸ್ತ ರುಚಿ ಇತ್ತು. ಸ್ವಲ್ಪ ಒಗರು ಒಗರು ಇತ್ತು. ಸ್ವಲ್ಪ ಉಪ್ಪಿನಕಾಯಿ ನಾಲಿಗ್ಗೆ ಹಚ್ಚಿಕೊಂಡೆ ನೋಡು ಇವನ, ಏನ ಮಸ್ತ ಟೇಸ್ಟ್ ಬಂತು ಅಂತಿ. ಹಾಂಗ ಪಾವ್ ಶೇರ್ ಉಪ್ಪಿನಕಾಯಿ ನಂಜಕೋತ್ತ  ಪೂರ್ತಿ ಬಾಟಲ್ ಕುಡಿದು ಬಿಟ್ಟೆ ಏನಪಾ. ಏನು ಮಸ್ತ ಅದನೋ!, ಅನ್ನುತ್ತ ವೈನಿ winey ಹ್ಯಾಂಗ ಆದ್ರು ಅನ್ನೋದನ್ನ ತಿಳಿಸಿದರು.

ಒಟ್ಟಿನ್ಯಾಗ ವೈನಿ ಫುಲ್ ಬಾಟಲ್ ವೈನ್ ಕುಡದು ವೈನಿ winey ಆಗಿ ಬಿಟ್ಟಿದ್ದರು.

ಚೀಪ್ಯಾನ ಈ ಕಡೆ ಕರದೆ. ಬಂದಾ.

ಚೀಪ್ಯಾ....ವೈನಿ ಗಿಚ್ಚಾಗಿ, ಕರೀಂ ನಿನಗ ಅಂತ ತಂದು ಕೊಟ್ಟ, ವೈನ್ ಕುಡದು ಫುಲ್ ಚಿತ್ತ ಆಗಿ ಬಿಟ್ಟಾರ. ಏನ ಚಿಂತಿ ಮಾಡು ಕಾರಣ ಇಲ್ಲ. ವೈನೀನ ಇರಿಟೇಟ್ ಮಾಡಬ್ಯಾಡ. ಈಗ ಅವರಿಗೆ ಮಂಪರು ಬಂದು ಸ್ವಲ್ಪ ಹೊತ್ತು ಮಲ್ಕೊತ್ತಾರ. ಮಲ್ಕೊಳ್ಳಲಿ. ಎದ್ದ ಮ್ಯಾಲೆ ಚಾ ಕಾಫಿ ಕುಡಿಸು. ಎಲ್ಲಾ ಸರಿ ಆಗ್ತದ, ಅಂತ ಹೇಳಿದೆ.

ಖರೇನಾ ಸರಿ ಆಗ್ತದ ಏನು? ಮೆಂಟಲ್ ಹಾಸ್ಪಿಟಲ್ ಗೆ ಹಾಕೋದು ಬ್ಯಾಡ ಹೌದಿಲ್ಲೋ?, ಅಂತ ಡಬಲ್ ಖಾತ್ರಿ ಮಾಡಿಕೊಂಡ ಚೀಪ್ಯಾ.

ಏ...ಚಿಂತಿ ಬ್ಯಾಡೋ. ನೋಡಲ್ಲೇ....ಅಲ್ಲೇ ವೈನಿ ಅಡ್ಡಾಗೇ ಬಿಟ್ಟರು. ಒಂದು ಕೌದಿನೋ, ದುಪ್ಪಟಿನೋ ತಂದು ಹೊದಸು. ಇನ್ನ ನಾಕ ತಾಸ್ ಏಳಂಗಿಲ್ಲ ಅಕಿ, ಅಂತ ಹೇಳಿದೆ.

ಚೀಪ್ಯಾ ದುಪ್ಪಟಿ ತರಲಿಕ್ಕೆ ಅಂತ ಒಳಗ ಹೊಂಟಾ.

ಅಣ್ಣಾ!!! ನಮಗ ಹಶಿವಿ. ಏನಾರಾ ತಿನ್ನಲಿಕ್ಕೆ ಕೊಡು. ಅವ್ವಾ ಯಾಕ ಹೀಂಗ ಮಲ್ಕೊಂಡಾಳ?, ಅಂತ ಕೇಳಿದ್ರು ಚೀಪ್ಯಾನ ಇಬ್ಬರು ಕನ್ಯಾರತ್ನಗಳು.

ಚೀಪ್ಯಾಗ ಎಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ.

ನಿಮ್ಮೌರಾ!!!!ಎಲ್ಲಾ ನಿಮ್ಮ ಅವ್ವನಿಂದ. ಇವತ್ತ ಶನಿವಾರ. ಉಪವಾಸ. ಓಡ್ರೀ. ಓಡ್ರೀ, ಅಂತ ಚೀರಿಬಿಟ್ಟ ಪಿತಾಶ್ರೀ ಚೀಪ್ಯಾ.

ಪಾಪ! frustration ಒಳಗ ಬಂದ ಆದ್ಮಿ ಇನ್ನೇನು ಮಾಡಿಯಾನು?

ಒಟ್ಟಿನಲ್ಲಿ ನಮ್ಮ ದೋಸ್ತ ಕರೀಂ ಸಾಬ್ ಚೀಪ್ಯಾಗ ಅಂತ ತಂದು ಕೊಟ್ಟಿದ್ದ ವೈನ್ ರೂಪಾ ವೈನಿಯವರ ಪಾಲಾಗಿ ವೈನಿ ಖರೇನಾ winey ಆಗಿದ್ದು ಮಾತ್ರ.....ಏನು ದುರಂತ ಅಂತೀರೇನು?

** ಚೀಪ್ಯಾ, ರೂಪಾ ವೈನಿ ಅವರ ಪಾತ್ರ ಪರಿಚಯಕ್ಕಾಗಿ ಓದಿ - ಟಗರ್ಮಂಗೋಲಿ!

** oil pulling  - http://oilpulling.com/

Tuesday, November 20, 2012

ಸಿಟ್ಟಿಗೆದ್ದ (ಮಾಜಿ) ಗಂಡ, ಸತ್ತುಬಿದ್ದ ಮಿಂಡ...ಕೆನಡಿ ಹತ್ಯೆಯ ಬಗ್ಗೆ ಹೊಸ ಮಾಹಿತಿ

ಆತ ಜಗದೇಕ ವೀರ. ಆಕೆ ಅತಿಲೋಕ ಸುಂದರಿ. ಇಬ್ಬರೂ ಕೂಡಿ ಕೇಕೆ ಹೊಡೆಯುತ್ತಿದ್ದರೆ, ಅಮೇರಿಕಾದ ಶ್ವೇತಭವನದ ತುಂಬಾ ಅದೇ ಮಾರ್ದನಿಸುತ್ತಿತ್ತು.

ಅವರಿಬ್ಬರೂ ಆಗಾಗ ಭೆಟ್ಟಿಯಾಗಿ, ಸಾಹಿತ್ಯ, ಕಲೆ ಅದು ಇದು ಎಲ್ಲಾ ಚರ್ಚೆ ಮತ್ತೊಂದು ಮಾಡಿ, ನಂತರ ಒಂದು ಫೈನಲ್ ಅನ್ನುವ ಹಾಗೆ ಕಾಮಕೇಳಿಯ ಒಂದು ಸೆಷನ್ ಕೂಡ ಮಾಡಿ ಮುಗಿಸುತ್ತಿದ್ದುದು ಹಳೆ ಮಾತಾಗಿತ್ತು. ಆದರೆ ಆವತ್ತಿನ ಸೆಷನ್ನಿಗೆ ಬೇರೆಯ ಮಹತ್ವವೇ ಇತ್ತು.

ಆಕೆ ಅವನಿಗಾಗಿಯೇ ಸ್ಪೆಷಲ್ LSD ಎಂಬ ಮಾದಕ ದ್ರವ್ಯ ದೂರದ ಬಾಸ್ಟನ್ ನಗರದಿಂದ, LSD ಪಿತಾಮಹ ಎಂದೇ ಖ್ಯಾತರಾಗಿದ್ದ ಹಾರ್ವಡ್ ಯುನಿವರ್ಸಿಟಿಯ ಡಾ. ಟಿಮೊತಿ ಲೀರಿ ಅವರಿಂದಲೇ ಇಬ್ಬರಿಗೆ ಸಾಕಾಗುವಷ್ಟು ತಂದು ಬಿಟ್ಟಿದ್ದಳು!!!!! ಅದರ ಉಪಯೋಗ ಮಾಡುವದು ಹೇಗೆ, ನಂತರ ಏನು, ಎಲ್ಲ ಸರಿಯಾಗಿ ಕೇಳಿಯೇ ಬಂದಿದ್ದಳು. ಈಗ ಇಬ್ಬರೂ ಮಸ್ತಾಗಿ LSD ಏರಿಸಿ, ಚಿತ್ತಾಗಿ,  ಮೈಗೆ ಮೈ ಹೊಸೆಯುತ್ತಿದ್ದರೆ,  ಈ ಸರಿಯ ಸುಖವೇ ಬೇರೆ ಇತ್ತು. ಎಲ್ಲೋ ಬೇರೆ ಲೋಕಕ್ಕೆ ತೇಲಿ ಹೋದ ಅನುಭವ.

ಹೀಗೆ ಸಾಹೇಬರು ಮತ್ತು ಅವರ ಡವ್ವು ಶ್ವೇತ ಭವನದಲ್ಲಿ ಜಂಗಿ ಚಕ್ಕ ಜಂಗಿ ಚಿಕ್ಕ ಮಾಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಅನತಿ ದೂರದಲ್ಲಿ ಇದ್ದ CIA ಹೆಡ್ ಕ್ವಾರ್ಟರ್ ನಲ್ಲಿ ಕೂತಿದ್ದ ಒಬ್ಬ ಆದ್ಮಿ ನಖಶಿಕಾಂತ ಉರಿಯುತ್ತಿದ್ದ. ಯಾಕಂದ್ರೆ ಆಕೆ ಆತನ ಮಾಜಿ ಪತ್ನಿ. ಡೈವೋರ್ಸ್ ಆಗಿತ್ತು. ಆದರೂ ಹಳೆ ಮಾಲು. ಒಂದು ಕಾಲದಲ್ಲಿ ತಾನು ಸಹಸ್ರಾರು ಮಂದಿಯನ್ನು ಸೋಲಿಸಿ ಗೆದ್ದಿದ್ದು. ಆಕೆ ಈಗ ಮಾಜಿ ಪತ್ನಿಯೇ ಆದರೂ ತನ್ನ ಒಂದು ಕಾಲದ ಹಳೆ ಪ್ರತಿಸ್ಪರ್ಧಿ ಆಕೆಯನ್ನು ಈಗ ಪಟಾಯಿಸಿಕೊಂಡು, ಶ್ವೇತಭವನದಲ್ಲಿ ಕೇಕೆ ಹೊಡೆಯುತ್ತ, ಬಗ್ಗಿಸಿ ಬಾರಿಸುತ್ತಿರುವದು ಸಹಿಸುವ ಮಾತಾಗಿರಲಿಲ್ಲ. ಕುದ್ದು ಹೋದ ಮಾಜಿ ಪತಿ. ಸಿಕ್ಕರೆ ಆಕೆಯ ಹೊಸ ಆಶಿಕ್ ಗೆ ಮುಹೂರ್ತ ಇಡುವ ನಿರ್ಧಾರ ಮನಸ್ಸಿನಲ್ಲೇ ಮಾಡಿದ. ಅವನಿಗೇನು ಗೊತ್ತಿತ್ತು ಅಂತಹದೊಂದು ಅವಕಾಶ ಬೇಗನೆ ಸಿಗಲಿದೆ ಅಂತ.

LSD ಮಸ್ತಾಗಿ ಹೊಡೆದು ಜಮ್ಮ ಚಕ್ಕ ಮಾಡುತ್ತಿದ್ದವರು ಆ ಕಾಲದ ಅಧ್ಯಕ್ಷ ಜಾನ್ ಕೆನಡಿ. ಅವರ ಅವತ್ತಿನ ಆ ಟೈಮ್ ನ ಕರ್ಮಪತ್ನಿ ಮೇರಿ ಪಿಂಚೊಟ ಮೇಯರ್ ಎಂಬ ಅತಿಲೋಕ ಸುಂದರಿ. ಆಕೆಯ ಮಾಜಿ ಪತಿ CIA ಬೇಹುಗಾರಿಕೆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಸಾಕಷ್ಟು ಪ್ರಳಯಾಂತಕ ಎಂದು ಹೆಸರು ಗಳಿಸಿದ್ದ ಕಾರ್ಡ್ ಮೆಯೇರ್ ಎಂಬಾತ. ಸ್ವಲ್ಪ ವರ್ಷಗಳ ಹಿಂದೆ ಇರಾನಿನಲ್ಲಿ ಸರಕಾರ ಬದಲಾವಣೆ ಟೈಮ್ನಲ್ಲಿ ಆತ ಮಾಡಿದ್ದ ಕರಾಮತ್ತಿಗೆ ಎಲ್ಲರೂ ತಲೆದೂಗಿದ್ದರು.

JFK ಮತ್ತು ಮೇರಿ ಪಿನ್ಚೋಟ್ 
ಮೇರಿ  ಪಿಂಚೊಟ ಸಿಕ್ಕಾಪಟ್ಟೆ ಪ್ರತಿಭಾಶಾಲಿ. ದೊಡ್ಡ ಶ್ರೀಮಂತ ಮನೆತನದದ ಹುಡುಗಿ. ಆ ಕಾಲದಲ್ಲೇ ಖ್ಯಾತ ವಸ್ಸಾರ್ ಕಾಲೇಜಿನಿಂದ ಬಿಎ ಮಾಡಿಕೊಂಡಿದ್ದಳು. ಸಾಕಷ್ಟು ಕವನ ಬರೆದು ಎಲ್ಲರಿಂದ ವಾಹ್ ವಾಹ್ ಅನ್ನಿಸಿಕೊಂಡಿದ್ದಳು. ಕೆನಡಿ ಅವರ ಪತ್ನಿ ಜಾಕಿ ಕೆನಡಿ ಸಹ ವಸ್ಸಾರ್ ಕಾಲೇಜಿನಲ್ಲೇ ಓದುತ್ತಿದ್ದಳು. ಮೇರಿಗಿಂತ 1-2 ವರ್ಷ ಸೀನಿಯರ್.

ಮೇರಿ ವಸ್ಸಾರ್ ನಲ್ಲಿ ಓದುತ್ತಿದ್ದಾಗಲೇ ವಾರಾಂತ್ಯಗಳಲ್ಲಿ ಎಲ್ಲ ಹುಡುಗಿಯರಂತೆ ಬಾಸ್ಟನ್ ನಗರಕ್ಕೆ ಓಡುತ್ತಿದ್ದಳು. ಅಥವಾ ಹುಡುಗರ ದಂಡಿಗೆ ದಂಡೇ ಬಂದು, ನಮ್ಮ ಕಾರಲ್ಲಿ ಬಾರಮ್ಮ, ಅಂತ ಒಬ್ಬರ ಮೇಲೆ ಒಬ್ಬರು ಪೈಪೋಟಿಯಿಂದ ಡೇಟಿಂಗ್ ಗೆ ಕರೆಯುತ್ತಿದ್ದರು. ಸುಂದರಿಯ ನಸೀಬ್ ಮಸ್ತ ಇತ್ತು. ಬಾಸ್ಟನ್ ನಗರ ಅಂದ್ರೆ ಸುಮಾರು 65-70 ಯುನಿವರ್ಸಿಟಿ, ಕಾಲೇಜುಗಳಿಂದ ತುಂಬಿದ ಸ್ಥಳ. ಜಗತ್ತಿನಲ್ಲಿಯೇ ಸೆಕಂಡ್ ಬಿಗ್ಗೆಸ್ಟ್ ಸ್ಟೂಡೆಂಟ್ ಪಾಪ್ಯುಲೇಶನ್ ಇರೋದು ಅಂದ್ರೆ ಬಾಸ್ಟನ್ ನಗರದ ಸುತ್ತ ಮುತ್ತ. ಮೊದಲನೇ ಸ್ಥಾನ ಜಪಾನಿನ ಟೋಕಿಯೋ ಅಂತೆ. ಅಲ್ಲೆಷ್ಟು ಕಾಲೇಜುಗಳಿವೆಯೋ?!

ಕೆನಡಿ ಸಾಹೇಬರೂ ಅಲ್ಲೇ ಹಾರ್ವರ್ಡ್ ನಲ್ಲಿ ಓದುತ್ತಿದ್ದರಲ್ಲ. ಅಲ್ಲೇ ಆವಾಗಲೇ ಕಾಳು ಹಾಕಿದ್ದರು ಅಂತ ಅನ್ನಿಸುತ್ತದೆ. ಆಗಲೇ ಪರಿಚಯವಂತೂ ಇತ್ತು. ಆದ್ರೆ ಇಂದೊಬ್ಬಾಕೆ, ನಾಳೆ ಇನ್ನೊಬ್ಬಾಕೆ, ಹಾಲಿವುಡ್ ಮಾಲು ಬೆಟರ್ ಅಂತ ಅನ್ನುತ್ತಿದ್ದ ಸ್ವಲ್ಪ ರಫ್ ಅಂಡ್ ಟಫ್ ಕೆನಡಿಗಳ  ಪಾಲಿಗೆ ಮೇರಿ ಸ್ವಲ್ಪ ಡೆಲಿಕೇಟ ಕಂಡಿರಬೇಕು. ಅದಕ್ಕೇ ವರ್ಕ್ ಔಟ್ ಆಗಿರಲಿಲ್ಲ ಅಂತ ಅನ್ನಿಸುತ್ತದೆ.

ಇನ್ನು ಕಾರ್ಡ್ ಮೇಯರ್. ಮಹಾನ್ ಪ್ರತಿಭಾವಂತ. ಯೇಲ್, ಹಾರ್ವರ್ಡ್ ಗಳಲ್ಲಿ ಓದಿದ್ದ. ಎಲ್ಲರೂ ಹೋದಂತೆ ಎರಡನೇ ಮಹಾ ಯುದ್ಧದಲ್ಲಿ ಹೋರಾಡಿ, ಸತ್ತು ಸತ್ತು ಬದುಕಿ ಬಂದಿದ್ದ. ಒಂದು ಕಣ್ಣು ಹೋಗಿತ್ತು. ಗಾಜಿನ ಕಣ್ಣು ಹಾಕಿಕೊಂಡಿದ್ದ. ಆದರೂ ಭಾಳ ಸ್ಮಾರ್ಟ್ ಇದ್ದ. ಆ ಪರಿ ಯುದ್ಧ ಮಾಡಿ ಸಾವನ್ನು ಗೆದ್ದು ಬಂದವನಿಗೆ ಮೇರಿ ಬಿದ್ದಿದ್ದಳು. ಪ್ಯಾರ್ ಗೆ ಆಗಿ ಬಿಟ್ಟೈತೆ ಆಗಿ, ಮನೆಯವರೂ ಒಪ್ಪಿ, ಶಾದಿ ಮಾಡಿ ಆಗಿತ್ತು. ಮಸ್ತ ಖುಷಿಯಿಂದಲೇ ಇದ್ದರು ಕಪಲ್ಸ್. ಮೊದಲಿನ ಸ್ವಲ್ಪ ದಿವಸ.

ಮುಂದೆ ಕಾರ್ಡ್ ಮೇಯರ್ CIA ಸೇರಿದ. ಫ್ರಾಂಕ್ ವೈಸ್ನರ ಎಂಬ ಹಿರಿ ತಲೆಯೊಬ್ಬ ಇವನನ್ನು ತನ್ನ ಶಿಷ್ಯನನ್ನಾಗಿ ತೆಗೆದುಕೊಂಡು ಮಸ್ತ ಮೇಲೆ ತಂದು ಬಿಟ್ಟ. ಖತರ್ನಾಕ ಕೆಲಸಗಳನ್ನು ನೀಟಾಗಿ ಮಾಡಿ, ಬಂಡವಾಳಶಾಹಿಗಳಿಗೆ ದೇಶಗಳಿಗೆ ದೇಶಗಳನ್ನೇ ಬೋಳಿಸಿ ಕಾಸು ಮಾಡಿ ಕೊಟ್ಟ ಸಿಐಎ ಮಂದಿಗಳಲ್ಲಿ ಇವನೂ ಫೇಮಸ್ ಆಗಿ, ಕೆಲಸ ಆಗ ಬೇಕು ಅಂದ್ರೆ ಕಾರ್ಡ್ ಮೇಯರ್ ಗೆ ಹೇಳಬೇಕು, ಅನ್ನುವಷ್ಟು ಪ್ರಖ್ಯಾತಿ ಬಂತು.

ಮನೆ ಕಡೆ ಪರಿಸ್ಥಿತಿ ಹಳ್ಳ ಹಿಡಿಯುತ್ತಿತ್ತು. ರಹಸ್ಯ ಕಾರ್ಯಾಚರಣೆಗಳು, ಅದಕ್ಕೇ ಇರುವ ಪಾರ್ಟಿಗಳು, ಅಲ್ಲಿ ಚಿತ್ರ ವಿಚಿತ್ರ ಜನರೊಂದಿಗೆ ಬೆರೆಯುವದು, ವಿಪರೀತ ಕುಡಿತ ಎಲ್ಲ ಶುರುವಾಗತೊಡಗಿತು. ಪತ್ನಿ ಮೇರಿಯ ತಲೆ ಕೆಡತೊಡಗಿತು. ಚಿಕ್ಕ ಮಗನೊಬ್ಬ ಕಾರಿಗೆ ಸಿಕ್ಕು ಸತ್ತು ಹೋದ. ಪಾಪ! ಮತ್ತೆ 1960 ಟೈಮ್. ಎಲ್ಲ ಕಡೆ ಫೆಮಿನಿಸಂ. ಸ್ತ್ರೀಯರಿಗೆ ಫುಲ್ ಲಿಬರಲಿಸಂ ಬೇಕು. ತಿಂದು, ಕುಡಿದು, ಸೇದಿ, ಮಲಗಿ ಎಂಜಾಯ್ ಮಾಡಿ ಅಂತ ಉಪದೇಶ ಎಲ್ಲ ಮಹಿಳೆಯರಿಗೆ. ಮೇರಿಯ ತಲೆ ಕೆಟ್ಟು ನಪರ ಏಳಲು ಇನ್ನೇನು ಬೇಕು?

ಕಾರ್ಡ್ ಮೇಯರ್ ಗೆ ಡೈವೋರ್ಸ್ ಕೊಟ್ಟೇ ಬಿಟ್ಟಳು. ಇವನೂ ಬಿಟ್ಟೇ ಬಿಟ್ಟ. ದೊಡ್ಡ ಖತರ್ನಾಕ್ ಅಧಿಕಾರಿಯಾಗಿದ್ದ ಅವನಿಗೆ ದಿನದ ಮಟ್ಟಿಗೆ ಗುಂಡು, ತುಂಡಿನ ಚಿಂತೆ ಇರಲಿಲ್ಲ. ಶ್ರೀಮಂತರು ಸಪ್ಲೈ ಮಾಡುತ್ತಿದ್ದರು.

ಹೀಗೆ ಕಾರ್ಡ್ ಮೇಯರ್ ನನ್ನು ಬಿಟ್ಟ ಮೇರಿಗೆ ವಯಸ್ಸಾದರೂ ಎಷ್ಟು ಮಹಾ? 33-34 ವರ್ಷ. ಅಲ್ಲೇ ವಾಷಿಂಗಟನ್  ಸಮೀಪ ಒಂದು ಚಿಕ್ಕ ಮನೆ ತೆಗೆದುಕೊಂಡು ಮೇರಿ ತಾನು, ತನ್ನ ಚಿತ್ರಕಲೆ, ಸಾಹಿತ್ಯ, ದೊಡ್ಡ ಜನರ ಪಾರ್ಟಿಗಳು, ದೊಡ್ಡ ದೊಡ್ಡ ಚಿಂತಕರ ಸಂಗಡ ಚಿಂತನೆ ಮಾಡುತ್ತ ಒಂದು ಲೆವೆಲ್ ನಲ್ಲಿ ಆರಾಮ್ ಇದ್ದಳು.

ಅಂತಹದೇ ಯಾವದೋ ಪಾರ್ಟಿಯಲ್ಲಿಯೇ ಕೆನಡಿ ಸಾಹೇಬರು ಸಿಕ್ಕಿದ್ದರು. ಮತ್ತೆ ಗಾಳ ಹಾಕಿ ಕಾಳು ಹಾಕಿದರು. ಈ ಸಲ ಬಿತ್ತು ಮೀನು. ಸುಂದರ ಮೀನು. ಅಫೇರ್ ಶುರು ಆಗಿಯೇ ಹೋಯಿತು.

ಕೆನಡಿ ಅವರ ಬಿಸ್ತರ್ ಗರಂ ಮಾಡಿ ಹೋದ ಮಹಿಳೆಯರ ಲೆಕ್ಕವಿಲ್ಲ. ಮರ್ಲಿನ್ ಮುನ್ರೋ ಎಂಬ ಮಹಾನ್ ನಟಿಯಿಂದ ಹಿಡಿದು ಸಾಮ್ ಜಿಯಾಂಕಾನ ಎಂಬಾ ಖತರ್ನಾಕ್ ಮಾಫಿಯಾ ದೊರೆಯ ಸಖಿ ಜೂಡೀ ಏಕ್ಸಿನರ್ ಕೂಡ ಕೆನಡಿಯವರ ಮೋಹಕ್ಕೆ ಒಳಗಾಗಿ, ಎಲ್ಲ ಸೇವೆ ಮಾಡಿ, ಧನ್ಯಾತಾ ಭಾವ ಫೀಲ್ ಮಾಡಿಕೊಳ್ಳುತ್ತ ಹೋಗಿದ್ದರು. ಅದು ಕೆನಡಿ ಕೆಪಾಸಿಟಿ. ಬನ್ನಿ ಇವರೇ, ಅನ್ನುತ್ತಲೇ ಮಂಚ ಹತ್ತಿಸುವ ಕಲೆ ಅವರಿಂದ ನೋಡಿ ಕಲಿಯಬೇಕು.

ಆದ್ರೆ ಕೆನಡಿ ಮತ್ತು ಮೇರಿ ಪಿಂಚೊಟ ಮಧ್ಯೆ ಇದ್ದ ಅಫೇರ್ ಗೆ ಒಂದು ಸ್ಟೇಟಸ್ ಇತ್ತು. ಕೇವಲ ತೀಟೆ ಹೆಚ್ಚಿದಾಗೊಮ್ಮೆ ಮಂಚದಲ್ಲಿ ಗುದುಮುರುಗಿ ಹಾಕಿ ಹುಸ್ ಹುಸ್ ಅನ್ನೋದಲ್ಲ ಅದು. ಸಿಕ್ಕಾಪಟ್ಟೆ ಓದಿಕೊಂಡಿದ್ದರು ಇಬ್ಬರೂ. ಇಬ್ಬರೂ ಏನೇನೋ ಬರೆದಿದ್ದರು. ಸಾಹಿತ್ಯ, ಚಿತ್ರಕಲೆ, ಸಂಗೀತದಲ್ಲಿ ಆಸಕ್ತಿ ಅಪಾರ. ಕೆನಡಿ ಅವರನ್ನು ಒಂದು ತರಹದಲ್ಲಿ ಅರ್ಥ ಮಾಡಿಕೊಂಡ ಗೆಳತಿ ಇದ್ದರೆ ಅದು ಮೇರಿ ಪಿನ್ಚೋಟ್ ಅನ್ನುವ ಹಾಗಿತ್ತು. ಒಂದು ತರಹದ ವಾರ್ಮ್ತ್ ಇತ್ತು.

ಹೀಗೇ ನಡೆದಿದ್ದರೆ ಚೆನ್ನಾಗಿತ್ತು. ಆದ್ರೆ ಗ್ರಹಚಾರ.

ಕೆನಡಿ ಏನೇ ಇರಲಿ ಒಂದು ರೀತಿಯಿಂದ ಶಾಂತಿ ಪ್ರಿಯ. ವಿಶ್ವಶಾಂತಿ, ಎಲ್ಲರಿಗೆ ಸರಿಯಾದ ಸ್ಥಾನ ಮಾನ, ಅಸಮಾನತೆ ದೂರ ಮಾಡುವದು, ಆ ಪರಿ ದುಡ್ಡು ಸೈನ್ಯದ ಮೇಲೆ ಹಾಕಿ, ಯಾವ್ಯಾವದೋ ದೇಶದ ಮೇಲೆ ಸುಮ್ಮ ಸುಮ್ಮನೆ ಯುದ್ಧ ಮಾಡಿ, ವಿನಾಕಾರಣ ಜನರನ್ನು ಕೊಂದು ಪಾಪ ಕಟ್ಟಿಕೊಳ್ಳುವದು  ಅವರಿಗೆ ಬೇಕಿರಲಿಲ್ಲ. ಈ ನೀತಿಯೇ ಅವರಿಗೆ ಮುಳುವಾಯಿತಾ? ಹೌದೆನ್ನುತ್ತಾರೆ ಕೆನಡಿ ಬಗ್ಗೆ ಗೊತ್ತು ಇರುವವರು.

ಕ್ಯೂಬಾದಲ್ಲಿ ಬಂದು ಕೂತಿದ್ದ ಕ್ಯಾಸ್ಟ್ರೋ ಎಂಬ ಕಮ್ಯುನಿಸ್ಟನನ್ನು ಓಡಿಸುವದು ಹೂವು ಎತ್ತಿಟ್ಟಂತೆ ಅಮೆರಿಕಾದ ಸೈನ್ಯಕ್ಕೆ. ಅಷ್ಟು ಸುಲಭ. ಅವನನ್ನ ಓಡಿಸಿ, ನಮ್ಮ ಹಡಬೆ ದಂಧೆ ನಡೆಸಲು ಮೊದಲಿನಂತೆ ಅವಕಾಶ ಮಾಡಿ ಕೊಡಿ ಅಂದ್ರೆ, ಬ್ಯಾಡ್ರೋ, ಅಲ್ಲಿ ರಶಿಯಾದ ಕ್ರುಸ್ಚೇವ್ ಮೂರನೇ ಮಹಾ ಯುದ್ಧ ಶುರು ಮಾಡುತ್ತಾನೆ, ಅಂತ ಸುಮ್ಮನಾಗಿಸಿದರು ಕೆನಡಿ. ಹಡಬೆ ದಂಧೆ ಜನ, ಮುಖ್ಯವಾಗಿ ಮಾಫಿಯಾ ಜನ, ಕೊತ ಕೊತ ಕುದ್ದರು.

ರೀ, ಪ್ರೆಸಿಡೆಂಟ್ ಸಾಹೇಬ್ರೆ, ವಿಯೆಟ್ನಾಂ ಮೇಲೆ ಯುದ್ಧ ಶುರು ಮಾಡ್ರಿ. ಅದಕ್ಕೆ ಬೇಕಾದ ಅಸ್ತ್ರ ಶಸ್ತ್ರ ಒದಗಿಸಿ, ಒಂದಕ್ಕೆ ಎರಡು ರೇಟ್ ಹಾಕಿ, ಜನ ಸಾಮಾನ್ಯರ ಮುಂಡಾಯಿಸಿ, ಕಾಸು ಮಾಡಿಕೊಳ್ಳೋಣ, ಅಂದ್ರೆ ಅದಕ್ಕೂ ಬೇಡ ಅಂದ್ರು. ದೊಡ್ಡ ದೊಡ್ಡ ಕಂಪನಿಯ ಮಾಲೀಕರು ಕುದ್ದು ಹೋದರು.

ರೀ, ಸ್ವಾಮೀ, ನಮ್ಮ ಮಾಫಿಯಾ ರೊಕ್ಕಾ, ಸಹಾಯ ತೊಗೊಂಡ ಆರಿಸಿ ಬಂದೀರಿ. ಈಗ ನಿಮ್ಮ ತಮ್ಮ ಬಾಬಿ ಕೆನಡಿನ ಅಟಾರ್ನೀ ಜನರಲ್ ಮಾಡೀರಿ. ಅವಾ ಹುಸ್ಸೂಳೆಮಗ ನಮ್ಮ ಬುಡದಾಗ ಬಗಣಿ ಗೂಟ ಬಡಿದು, ನಮ್ಮ ಬಾಸ್ ಕಾರ್ಲೋಸ್ ಮಾರ್ಸೆಲ್ಲೋ ಅವರನ್ನ ದೇಶಾ ಬಿಟ್ಟು ಗಡಿಪಾರ್ ಮಾಡಿ ಬಿಟ್ಟಾನ್. ಇದು ಸರಿ ಅಲ್ಲ ನೋಡ್ರೀ. ಹಿಂಗಾ ಆದ್ರಾ ಮುಂದ ಏನಾರಾ ಆತ ಅಂದ್ರಾ ನೋಡ್ಕೊರೀ ಮತ್ತ, ಅಂತ ಮಾಫಿಯಾ ಮಂದಿ ಗುಟುರು ಹಾಕಿದರೆ, ಹುಳ್ಳನೆ ಮಳ್ಳ ನಗೆ ನಕ್ಕು, ಮಾಫಿಯಾ ಡಾನ್ ಒಬ್ಬಾತನ ಡವ್ವನ್ನೇ ಪಟಾಯಿಸಿ, ಆಕೆಗೆ ಹೊಟ್ಟೆ ಮುಂದೆ ಬರಿಸಿ, ಅದರಪ್ಪ ನೀನಾಗಪ್ಪ ಸ್ಯಾಮ್, ಅಂತ ಅನ್ನೋ ಛಾತಿ ಅವರಲ್ಲಿತ್ತು. ಸ್ಯಾಮ್ ಜಿಯಾಂಕಾನ ಉರಿದು ಹೋಗಿದ್ದ. ಬಗರ್ ಹುಕುಂ ಜಮೀನಿನಲ್ಲಿ ಮನೆ ಕಟ್ಟೋಕೆ ಬಿಟ್ಟರೆ, ಮನೆ ಕಟ್ಟಿ ಇನ್ನೊಬ್ಬರ ಹತ್ರ ಗೃಹಪ್ರವೇಶ ಮಾಡಿ, ಅಂದ್ರೆ ಹೇಗೆ ಆಗುತ್ತೆ ನೋಡಿ ಆ ಫೀಲಿಂಗ್ ಬಂದಿರಬೇಕು ಚಿಕ್ಯಾಗೋದ ಆ ಮಾಫಿಯಾ ದೊರೆಗೆ.

ಇನ್ನು ಕ್ಯೂಬಾದ ಹಂದಿ ಕೊಲ್ಲಿ ಕಾರ್ಯಾಚರಣೆ ಹೊಲಗೇರಿ ಎಬ್ಬಿಸಿದ ಅಂತ ಸಿಟ್ಟಿಗೆದ್ದು ಆ ಕಾಲದ ಸಿಐಎ ಮುಖ್ಯಸ್ಥ ಅಲೆನ್ ಡಲ್ಲೆಸ್ ಮತ್ತು ಅವನ ಖಾಸಮ್ ಖಾಸ್ ದೊಡ್ಡ ತಲೆಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸಿ ಬಿಟ್ಟಿದ್ದರು. ಸಿಐಎ ಒಳಗೆ ದೊಡ್ಡ ಪ್ರಮಾಣದ ಅಸಮಾಧಾನ, ಸಿಟ್ಟು, ದ್ವೇಷ ಶುರುವಾಗಿತ್ತು. ಜನರಾರಿಸಿದ ಪ್ರೆಸಿಡೆಂಟ್ ಗಳನ್ನು ಗೊಂಬೆಯಂತೆ ಆಡಿಸಿದ್ದು ಸಿಐಎ ಮತ್ತು ಸೈನ್ಯ. ಈಗ ಇವರು ಬಂದು ಎಲ್ಲ ಸ್ಕ್ರೂ ಟೈಟ್ ಮಾಡುತ್ತಿದ್ದಾರೆ. ಉರಿದಿತ್ತು ಅಲ್ಲಿಯ ಮಂದಿಗೆ.

ಹೀಗೆ ಎಲ್ಲ ತರಹದ ಪಾವರಫುಲ್ ಜನರನ್ನು ಎದುರು ಹಾಕಿಕೊಂಡ ಕೆನಡಿ ಹತ್ಯೆಗೆ ಮುಹೂರ್ತ ಇಡಲು ಇದೇ ಜನಗಳು ಶುರು ಮಾಡಿದ್ದರಲ್ಲಿ ಏನು ವಿಶೇಷವಿದೆ?

ಮಾಫಿಯಾ ಕಾಸು ಕೊಡುತ್ತೇನೆ ಅಂದಿತು. ದೊಡ್ಡ ದೊಡ್ಡ ಬಂಡವಾಳಶಾಹಿಗಳು ಏನೇನೋ ಲೆಕ್ಕಾಚಾರ ಮಾಡಿ, ಈ ಯಪ್ಪಾ ಹೋದರೇ ಒಳ್ಳೇದು, ಅಂತ ಏನೇನೋ ಡೀಲ್ ಮಾಡಿ, ಓಕೆ ಕೊಟ್ಟರು. ಮುಂದೆ ಬರಬಹುದಾದ ಆಡಳಿತ ವ್ಯವಸ್ಥೆ, ಕೆನಡಿ ಹೋಗಿ ನಾವು ಬಂದ್ರೆ, ವಿಯೆಟ್ನಾಂ ಮೇಲೆ ಯುದ್ಧ ಫುಲ್ ಶುರು, ಬೇಕಾದಷ್ಟು ಕಾಸ್ ಮಾಡ್ಕೊಳ್ಳಿ ಅಂದು ಬಿಟ್ಟಿತು. ಎಲ್ಲಾ ವರ್ಕ್ ಔಟ್ ಆಯಿತು. ಕಾನೂನು, ಪೋಲಿಸ್, ತನಿಕೆ ಎಲ್ಲ ಒಂದು ಲೆವೆಲ್ ನಲ್ಲಿ ಒಳಗೆ ಹಾಕಿಕೊಂಡ ಷಡ್ಯಂತ್ರದ ಗುಂಪು ಡೀಟೇಲ್ ಪ್ಲಾನಿಂಗ್ ಶುರು ಮಾಡಿಯೇ ಬಿಟ್ಟಿತು. ಕೆನಡಿ ಹತ್ಯೆಗೆ ಕ್ಷಣಗಣನೆ ಶುರು ಆಗಿಯೇ ಬಿಟ್ಟಿತು.

ಕೆನಡಿ ಹತ್ಯೆಯ ಬಗ್ಗೆ ಸ್ವಲ್ಪ ಗೊತ್ತಿದ್ದವರಿಗೂ ಸಹ ಗೊತ್ತಿರುವ ಸಂಗತಿ ಅಂದ್ರೆ ಓಸ್ವಾಲ್ಡ್ ಅನ್ನುವ ಆದ್ಮಿಯನ್ನು ಹಂತಕ ಅಂತ ತೋರಿಸಿದ್ದು ಬರಿ ಓಳು ಅಂತ. ಯಾವದೋ ಒಂದು ತಗಡು ಬಂದೂಕು ಇಟ್ಟುಗೊಂಡು, ಅಷ್ಟು ಸಣ್ಣ ಸಮಯದಲ್ಲಿ 3-4 ಗುಂಡು ಅಷ್ಟು ಕರಾರುವಕ್ಕಾಗಿ ಹಾರಿಸಿ ಕೆನಡಿ ಬುರುಡೆ ಬಿಚ್ಚಲು ಸಾಧ್ಯವೇ ಇರಲಿಲ್ಲ ಎಂಬುದು ತುಂಬ ಹಿಂದೆಯೇ ಜನಜನಿತವಾದ ಸಂಗತಿ.

ಹಾಗಾದರೆ ಅಷ್ಟು ಕರಾರುವಕ್ಕಾಗಿ ಗುರಿಯಿಟ್ಟು ಚಲಿಸುತ್ತಿರುವ ವಾಹನದಲ್ಲಿರುವ ಮನುಷ್ಯನ ಬುರುಡೆ ಬಿಚ್ಚಲು ಸಿಕ್ಕಾಪಟ್ಟೆ ಸ್ಕಿಲ್ ಇರುವ ಗುರಿಕಾರ ಬೇಕು. ಎಲ್ಲಿಂದ ತರುವದು? ಯಾರು ತಂದು ಕೊಟ್ಟಾರು?

ಕಿತಾಪತಿಗಳು ಬೇಕು ಅಂದ್ರೆ ಪೋಲೀಸರ ಹತ್ತಿರವೇ ಹೋಗಬೇಕು. ಅವರಿಗೇ ಗೊತ್ತು ಇದೆಲ್ಲ. ಫ್ರೆಂಚ್ ಮಾಫಿಯಾದ ಸೇವೆಯಲ್ಲಿ ಅಂತಹ ನುರಿತ ಗುರಿಕಾರರು ಇದ್ದರು. ಕಾಸು ಕೊಟ್ಟರೆ ಏನೂ ಕೇಳದೆ ಕೆಲಸ ಮಾಡಿ ಕೊಟ್ಟು ಹೋಗುವ ಜನ. ಸಿಐಎ ಮಂದಿ ಕಾಂಗೋದ ನಾಯಕ ಲುಮುಂಬಾ ಎನ್ನುವನಿಗೆ ಸ್ವರ್ಗದ ದಾರಿ ತೋರಿಸಿತ್ತು ನೋಡಿ, ಅದಕ್ಕೆ ಕೆಲೊ ಜನ ಇದೇ ಭಾಡಿಗೆ ಗುರಿಕಾರರನ್ನು ಕಳಿಸಿತ್ತು. ಈಗ ಕೆನಡಿ ಸಾಹೇಬರ ಅವಸಾನಕ್ಕೂ ಅವರನ್ನೇ ಕರೆಯಿಸಿದರೆ ಹೇಗೆ? ಎಂಬ ಯೋಚನೆ ಬಂತು ಪ್ಲಾನಿಂಗ ಮಾಡುತ್ತಾ ಕುಳಿತಿದ್ದವರಿಗೆ.

ಅಂತಹ ಫ್ರೆಂಚ್ ಹಂತಕರು ಗೊತ್ತಿದ್ದದ್ದು ಯಾರಿಗೆ?

ಆವಾಗ ನೆನಪು ಆದವನೇ - ಕಾರ್ಡ್ ಮೇಯರ್. ತನ್ನ ಮಾಜಿ ಹೆಂಡತಿಯನ್ನು ಪಟಾಯಿಸಿದ್ದಾನೆ ಅಂತ ಕೆನಡಿ ಮೇಲೆ ಮೊದಲೇ ಕುದಿಯುತ್ತಿದ್ದ. ಮಸ್ತ ಅವಕಾಶ ಸಿಕ್ಕಿ ಬಿಟ್ಟಿತು. ಕಾರ್ಡ್ ಮೇಯರ್ ಪದ್ಮಾಸನ ಹಾಕಿ ಕಾರ್ಯಾಚರಣೆಗೆ ಕುಳಿತು ಬಿಟ್ಟ. ಅವನಿಗೆ ಅದನ್ನು ವಹಿಸಿದ ದೊಡ್ಡ ಮಂದಿ ಬೇರೆ ಬೇರೆ ವಿಷಯಗಳ ಬಗ್ಗೆ ಪ್ಲಾನಿಂಗ ಮುಂದು ವರಿಸಿದರು.

ಹೀಗೆ ಕ್ರುದ್ಧ ಮಾಜಿ ಪತಿಯೊಬ್ಬ ತನ್ನ ಮಾಜಿ ಪತ್ನಿಯ ಪ್ರಿಯಕರನಿಗೆ ಸ್ಕೀಮ್ ಹಾಕಿ ಬಿಟ್ಟನಾ?

ಹೌದು ಅನ್ನುತ್ತದೆ ಈಗ ತಾನೇ ಬಂದಿರುವ ಒಂದು ಹೊಸ ಪುಸ್ತಕ.  ಪುಸ್ತಕದ ಹೆಸರು - Bond of Secrecy: My Life with CIA Spy and Watergate Conspirator E. Howard Hunt.

ಹೊವರ್ಡ್ ಹಂಟ್ ಎಂಬ ಮಾಜಿ ಸಿಐಎ ಅಧಿಕಾರಿ ಸಾಯುವ ಮೊದಲು ತನ್ನ ಮಗನಿಗೆ ಹೇಳಿದ ಮಾತುಗಳ ಮೇಲೆ ಬರೆದಿರುವ ಪುಸ್ತಕ. ಬರೆದಿರುವನು ಅವನ ಮಗ ಸೇಂಟ್ ಜಾನ್ ಹಂಟ್.

ಹೊವರ್ಡ್ ಹಂಟ್ - ಜಾನ್ ಕೆನಡಿ ಹತ್ಯೆ, ಅವರ ತಮ್ಮ ರಾಬರ್ಟ್ ಕೆನಡಿ ಹತ್ಯೆ, ಪ್ರೆಸಿಡೆಂಟ್ ರಿಚರ್ಡ್ ನಿಕ್ಸನ್ ಅವರ ಪದವಿ ಕಳೆದ ವಾಟರ್ ಗೇಟ್ ಹಗರಣಗಳಲ್ಲಿ ಎದ್ದು ಕಾಣುವ ಸಿಐಎ ಅಧಿಕಾರಿ. ಕೆಲವು ಕಡೆ ಅವನೇ ಮುಖ್ಯ ರೂವಾರಿ ಅನ್ನುವ ಹಾಗೆ ಬಿಂಬಿತವಾಗಿದೆ. ಇದ್ದರೂ ಇರಬಹುದು.

ಒಟ್ಟಿನಲ್ಲಿ 1963 ನವೆಂಬರ್ 22 ರಂದು ಕೆನಡಿ ಹತರಾದರು. ಓಸ್ವಾಲ್ಡ್ ಕೊಂದ ಅಂತ ತಿಪ್ಪೆ ಸಾರಿಸಲಾಯಿತು. ಅವನನ್ನೇ ಇನ್ನೊಬ್ಬವ ಜ್ಯಾಕ್ ರೂಬಿ ಅನ್ನುವವ ಕೊಂದು ಬಿಟ್ಟ. ಒಟ್ಟಿನಲ್ಲಿ ಜನರ ಕಿವಿಯಲ್ಲಿ ಹೂವು ಇಟ್ಟ ದೊಡ್ಡ ಮಂದಿ, ಪೆಕಪಕನೆ ನಕ್ಕು, ಬಕ್ರಾ ಮಂದಿ, ಮಂಗ್ಯಾ ಮಾಡೋದು ಎಷ್ಟು ಸುಲಭ ಸಿವಾ, ಅಂತ ತಮ್ಮ ರೊಕ್ಕಾ ಮಾಡುವ ಕಾರಭಾರ್ ಮುಂದುವರಿಸಿದರು.

ಮುಂದಿನ ವರ್ಷ 1964 ರಲ್ಲಿ ಕೆನಡಿ ಪ್ರೇಯಸಿ ಮೇರಿಯನ್ನು ಒಬ್ಬ ಕರಿಯ ಕೊಂದುಬಿಟ್ಟ. ಮಟ ಮಟ ಮಧ್ಯಾನ್ಹ ವಾಕಿಂಗ್ ಹೋಗುತ್ತಿದ್ದಳು. ಒಬ್ಬ ಬಂದವನೇ ನಾಕಾರು ಗುಂಡು ಹಾಕಿ ಹೋಗಿ ಬಿಟ್ಟ. ಸ್ಥಳದಲ್ಲೇ ಸುಂದರಿ ಆಂಟಿ ಖಲಾಸ್.

ಈ ಕಡೆ ಯಾರೋ ಒಬ್ಬ ಬಡಪಾಯಿ ಕೇಸಿನಲ್ಲಿ ಫಿಟ್ ಆಗುತ್ತಿದ್ದರೆ ಸಿಐಎ ಕೌಂಟರ್ ಎಸ್ಪಿಯೋನೆಜ್ ಉನ್ನತ ಅಧಿಕಾರಿ, ಮಹಾ ವಿಕ್ಷಿಪ್ತ, ಜಿಮ್ ಅಂಗಲಟನ್ ಅನ್ನುವವ ಮೇರಿಯ ಮನೆಯ ಬೀಗ ಮುರಿದು ಆಕೆಯ ರಹಸ್ಯ ಡೈರಿಯೊಂದನ್ನು ಹುಡುಕುತ್ತಿದ್ದ. ಅಷ್ಟರಲ್ಲಿ ಮೇರಿಯ ತಂಗಿ ಗಂಡ "ವಾಷಿಂಗಟನ್ ಪೋಸ್ಟ್" ಸಂಪಾದಕ ಬೆನ್ ಬ್ರಾಡ್ಲೀ ಕೂಡ ಅಲ್ಲಿ ಬಂದು ಬಿಟ್ಟ. ಇಬ್ಬರೂ ಮಳ್ಳ ನಗೆ ನಕ್ಕರು. ಇಬ್ಬರಿಗೂ ಗೊತ್ತಿತ್ತು ಮೇರಿ ಹತ್ಯೆಯ ಹಿಂದಿನ ಸಂಚು. ಇದನ್ನು ಬಯಲು ಮಾಡಿದವ ಮತ್ತೊಬ್ಬ ಸಿಐಎ ಅಧಿಕಾರಿ ವಿಸ್ತಾರ್ ಜಾನಿ ಅನ್ನುವನ ಮಗ ಪೀಟರ್ ಜಾನಿ. ಅವನೂ ಒಂದು ಪುಸ್ತಕ ಬರೆದಿದ್ದಾನೆ. ಲಿಂಕ್ ಕೆಳಗಿದೆ. ಓದಿ ನೋಡಿ.

ಅಬ್ಬಾ!!! ಕೆನಡಿ ಸಹೋದರರ ಹತ್ಯೆಗಳು, ಅವನ್ನು ಮುಚ್ಚಲು ಮಾಡಿದ ಅಸಂಖ್ಯಾತ ಹತ್ಯೆಗಳು ಲೆಕ್ಕವಿಲ್ಲದಷ್ಟು.

ಮುಂದೆ ವಿಚಿತ್ರ ನೋಡಿ. ಕಾರ್ಡ್ ಮೇಯರ್ ಅನ್ನುವ ಮೇರಿ ಪಿಂಚೊಟಳ ಮಾಜಿ ಗಂಡ ಸಾಯುವ ಮೊದಲು, ಮೇರಿಯನ್ನು ಕೊಂದವರು ಯಾರು?, ಅಂತ ಕೇಳಿದರೆ, ಅವರೇ ಸಿಐಎ ಮಂದಿ, ಕೆನಡಿಯನ್ನು ಕೊಂದವರು. ಅವರೇ ಮೇರಿಯನ್ನು ಕೊಂದರು, ಅಂದುಬಿಟ್ಟ.

ದೇವರೇ!!!! ಯಾವ ಯಾವ ಯಾವ ಹುತ್ತದಲ್ಲಿ ಯಾವ ಯಾವ ಹಾವುಗಳಿವಿಯೋ?????

ಇದ್ರಲ್ಲಿ ಎಷ್ಟು ನಿಜ? ಎಷ್ಟು ನಿಜದಿಂದ ಸ್ವಲ್ಪ ದೂರ, ತುಂಬಾ ದೂರ? ಯಾರಿಗೆ ಗೊತ್ತು.

ಮುಂದಿನ ವರ್ಷ ಕೆನಡಿ ಹತ್ಯೆಯಾಗಿ ಬರೋಬ್ಬರಿ 50 ವರ್ಷ. ನೀರು ಮತ್ತಷ್ಟು ಬಗ್ಗಡವಾಗುತ್ತಿದೆಯೇ ವಿನಹ ಪೂರ್ಣ ಸತ್ಯ ಹೊರ ಬರುತ್ತಿಲ್ಲ.


ಹೆಚ್ಚಿನ ಮಾಹಿತಿಗೆ:

- JFK ಹತ್ಯೆ

- ಮೇರಿ ಪಿನ್ಚೋಟ್ ಮೇಯರ್  

- Mary's Mosaic: The CIA Conspiracy to Murder John F. Kennedy, Mary Pinchot Meyer, and Their Vision for World Peace

- A Very Private Woman: The Life and Unsolved Murder of Presidential Mistress Mary Meyer

- LSD ಎಂಬ ಮಾದಕ ದ್ರವ್ಯ 

Tuesday, November 06, 2012

ಸೂಪರ್ ಸೋಮಾಲಿಯೊಬ್ಬಳ ಸತ್ಯಕಥೆ


ಅಯ್ಯೋ ಬಿಡ್ರೀ. ನಮ್ಮ ಸೋಮಾಲಿಯಾದಲ್ಲಿ ಮಹಿಳೆಯರ ಮೇಲೆ ಆಗೋ ಲೈಂಗಿಕ ದೌರ್ಜನ್ಯದ ಮುಂದೆ ಬೇರೆ ಕಡೆ ಆಗೋದೆಲ್ಲ ಏನೂ ಅಲ್ಲ ಬಿಡಿ. ನಿಮ್ಮೂರಲ್ಲಿ ರಶ್ ಬಸ್ಸಿನಲ್ಲೋ, ಟ್ರೇನಿನಲ್ಲೋ ಯಾರೋ ಮೈಗೆ ಮೈ ಹೊಸೆದಾನು. ಇನ್ನೊಬ್ಬವ ಅಂಡು ಚಿಗುಟಿಯಾನು. ಮತ್ತೊಬ್ಬ ವಿಕೃತ ಎದೆ ಮೇಲೆ ಕೈ ಆಡಿಸಿಯಾನು. ಇನ್ನೊಬ್ಬ ಯಾರೂ ಸುತ್ತ ಮುತ್ತ ಇಲ್ಲ ಅಂದ್ರೆ ವಿಕೃತ ಸನ್ನೆ ಮಾಡಿ ಬಾ ಅಂದಾನು. ಒಬ್ಬನಿಗೆ ಚಪ್ಪಲಿಯಲ್ಲಿ ನಾಕು ಕೊಡ್ತೀರಿ. ಇನ್ನೊಬ್ಬನಿಗೆ ಕಪಾಳಕ್ಕೆ ಕೊಡ್ತೀರಿ. ಸುತ್ತ ಮುತ್ತ ಇರೋ ಜನ ಕೂಡ ನಿಮ್ಮ ಬೆಂಬಲಕ್ಕೆ ಬಂದು, ಅವರೂ ನಾಕು ಧರ್ಮದೇಟು ಹಾಕಿ, ನೀವು ಎಷ್ಟೋ ಮಟ್ಟಿಗೆ ಸೇಫ್. ನಮ್ಮ ಸೋಮಾಲಿಯಾದಲ್ಲಿ ಮಾತ್ರ ಮಹಿಳೆಯರ ಮೇಲೆ ಆಗುವ ಅತ್ಯಾಚಾರ ಏನಿದೆಯಲ್ಲ ಅದು ಘೋರ. ಘನ ಘೋರ.

ಮೊದಲೇ ಸಿಕ್ಕಾಪಟ್ಟೆ ಪುರುಷ ಪ್ರಧಾನ ಸಮಾಜ. ಸಿಕ್ಕಾಪಟ್ಟೆ ಮಹಿಳೆಯರ ಶೋಷಣೆ. ಏನೇ ಗೆದ್ದರೂ, ಏನೇ ಸೋತರೂ ಕಡೆಗೆ ಯಾರೋ ಪಾಪದ ಮಹಿಳೆ ಮೇಲೆ ಸಿಕ್ಕಾಪಟ್ಟೆ ದೌರ್ಜನ್ಯ ಮಾಡದಿದ್ದರೆ ದುಷ್ಟ ಬುದ್ಧಿಯ ಗಂಡಸರಿಗೆ ಸಮಾಧಾನವಿಲ್ಲ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಇರುವ ಒಂದು ಭಾವನೆ ಅಂದರೆ - ಹೆಣ್ಣು ಭೋಗದ ವಸ್ತು ಅಂತ. ಅದರ ಮೇಲೆ ಕಮ್ಮಿ ಶಿಕ್ಷಣ. ಒಂದು ತರಹದ ಅದುಮಿಟ್ಟ (repressed) ಸಮಾಜ. ಹಾಂಗಾಗಿ ಹೆಂಗಸರ ಮೇಲೆ ಆಗುವ ದೌರ್ಜನ್ಯ ಸಿಕ್ಕಾಪಟ್ಟೆ ಕ್ರೌರ್ಯಭರಿತ ಮತ್ತು ಹೇಳಲು ಕೇಳಲು ಸಹ ಕಷ್ಟ.

ಇದರ ಮೇಲೆ ಸಿಕ್ಕಾಪಟ್ಟೆ ಪಂಗಡಗಳು. ಅವರಲ್ಲೇ ಜಗಳ. ಹೊಡೆದಾಟ. ಸೋತವರ ಗಂಡಸರೆಲ್ಲರನ್ನೂ ಕೊಂದು, ಹೆಂಗಸರನ್ನು ಗೆದ್ದವರ ಹಾರೆಮ್ ಗೆ ಭರ್ತಿ ಮಾಡುವದು ಪದ್ಧತಿ. ಅದು ಹಣೆಬರಹ ಅಂತ ಒಪ್ಪಿಕೊಂಡು ಇರುವ ಮಹಿಳೆಯರೇ ಹೆಚ್ಚು.

ಇನ್ನೂ ಮದುವೆ ಆಗದ ಹುಡುಗಿಯರ ಕಥೆ ಕೇಳಲೇ ಬೇಡಿ. ಅವರ ಮೇಲೆಯೇ ಬಲಾತ್ಕಾರ ಆದರೂ ಅದಕ್ಕೂ ಅವರೇ ಹೊಣೆ. ಇದೆಲ್ಲಿಯ ನ್ಯಾಯವೋ? ಗೊತ್ತಿಲ್ಲ. ಎಲ್ಲದಕ್ಕೂ ಒಂದು ಧಾರ್ಮಿಕ ಮುದ್ರೆ ಹಾಕಿ ತಿಪ್ಪೆ ಸಾರಿಸಿ ಬಿಡುವ ಹಿರಿಯರು, ಧಾರ್ಮಿಕ ಮುಖಂಡರು. ಇದೆಲ್ಲ ಅಲ್ಲಾಹುವಿನ ಖುಷಿಗಂತೆ.

ಹೀಗೆ ಇರುವಾಗ, ನಾವು ಮಹಿಳೆಯರು ನಮ್ಮನ್ನು ಬಚಾವ್ ಮಾಡಿಕೊಳ್ಳುವ ತಂತ್ರಗಳೇ ಬೇರೆ ಇರುತ್ತವೆ. ಪಶ್ಚಿಮದ ದೇಶಗಳಲ್ಲಿ ಸ್ತ್ರೀಯರು ರಕ್ಷಣೆಗೆ ಪೆಪ್ಪರ್ ಸ್ಪ್ರೇ(pepper spray) ಇಟ್ಟುಕೊಳ್ಳುತ್ತಾರೆ. ಮತ್ತೇನೋ ಮಾಡುತ್ತಾರೆ. ನಾವು ಸೋಮಾಲಿಯಾ ಎಂಬ ಬಡ ದೇಶದವರು. ನಾವೇನು ಮಾಡೋಣ? ನಮ್ಮದು  do-or-die ಪರಿಸ್ಥಿತಿ. ಯಾಕೆಂದ್ರೆ ಹುಡುಗಿ ಬಲಾತ್ಕಾರಕ್ಕೆ ಒಳಗಾದರೆ, ಮತ್ತೆ ಒಳಗಾದ ನಂತರ ಬದುಕಿ ಉಳಿದರೆ ಸಮಾಜ ಅವಳನ್ನು ಅಂತ್ಯಂತ ಕ್ರೂರ ರೀತಿಯಲ್ಲಿ ನಡೆಸಿಕೊಂಡು ಅಣು ಅಣುವಾಗಿ ಕೊಲ್ಲುತ್ತದೆ. ಅದಕ್ಕಿಂತ do-or-die ಫೈಟ್ ಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವದು ಬೆಟರ್. ಗೆದ್ದರೆ ಬದುಕಲು ಒಂದು ಚಾನ್ಸ್. ಇಲ್ಲಾಂದ್ರೆ ಅಲ್ಲಾಕೋ ಪ್ಯಾರೆ.

ನಮ್ಮ ಅಜ್ಜಿ ಹೇಳಿ ಕೊಟ್ಟಿದ್ದ ಟೆಕ್ನಿಕ್ ಇದು. ಈ ಟೆಕ್ನಿಕ್ ಎಲ್ಲ ಹುಡುಗಿಯರಿಗೂ ಬುದ್ಧಿ ಬಂದಾಗಿಂದ ಹೇಳಿ ಕೊಡಲಾಗುತ್ತದೆ. ಹುಡುಗಿಯರಿಗೆ ಕನಸಲ್ಲೂ ಇದೆ ಕಂಡು, ಅಲ್ಲೇ ಪ್ರಾಕ್ಟಿಸ್.

ನೋಡು ಮೊಮ್ಮಗಳೇ....ಯಾರಾದರು ಬಂದು ನಿನ್ನ ಬಲಾತ್ಕಾರಕ್ಕೆ ಯತ್ನಿಸಿದರು ಅಂದುಕೋ. ಮೊದಲು ಅಲ್ಲಾಹುವಿನ ಹೆಸರು ತೆಗೆದುಕೊಂಡು, ಏನೂ ಮಾಡದೇ ಇರುವಂತೆ ಕೇಳಿಕೋ. ಅಂಗಾಲಾಚಿ ಬೇಡಿಕೋ. ಪರಿಪರಿಯಾಗಿ ಬೇಡಿಕೋ. ಕಾಲಿಗೆ ಬಿದ್ದು ಉಳ್ಳಾಡಿ ಉಳ್ಳಾಡಿ  ಕೇಳಿಕೋ. ಒಮ್ಮೊಮ್ಮೆ ಅಲ್ಲಾಹುವಿನ ಹೆಸರು ಕೇಳಿದಾಕ್ಷಣ ಕಾಮಾಂಧರ ಹುಚ್ಚು ಇಳಿದು ಏನೂ ಮಾಡದೆ ನಿಮ್ಮನ್ನು ಬಿಟ್ಟು ಬಿಡುವ ಚಾನ್ಸ್ ಇರುತ್ತದೆ. ಹಾಗೆ ಆಗಲಿ ಅಂತಾನೇ ದೇವರಲ್ಲಿ ಕೇಳಿಕೋ. ಇದಕ್ಕೆ ಬಗ್ಗಲಿಲ್ಲ ಅಂದ್ರೆ, ನೆಕ್ಸ್ಟ್ do-or-die ಫೈಟ್. ಟೆಕ್ನಿಕ್ ಇಷ್ಟೇ. ಮಿಂಚಿನ ವೇಗದಲ್ಲಿ ಅವನ ಕಡೆ ನುಗ್ಗು. ಅವನ ಸರೋಂಗ್ (ಲುಂಗಿ) ಎತ್ತೇ ಬಿಡು. ಎತ್ತಿದಾಕ್ಷಣ ಅವನ ತೊಡೆ ಮಧ್ಯೆ ಕೈ ಹಾಕಿ, ವೃಷಣಗಳ ಹಿಡಿದೇ ಬಿಡು. ಉಕ್ಕಿನ ಗ್ರಿಪ್ಪಲ್ಲಿ ಹಿಡಿದು, ಇದ್ದಷ್ಟೂ ಕಸು ಹಾಕಿ ಒತ್ತೇ ಬಿಡು. ಎರಡೂ ಕೈ, ಇದ್ದಷ್ಟೂ ಬಲ ಉಪಯೋಗಿಸು. ಗಂಡಸು ಕಾಡು ಮೃಗದಂತಾಗುತ್ತಾನೆ. ನೋವಿನಿಂದ ಅಬ್ಬರಿಸುತ್ತಾನೆ. ಒದೆಯುತ್ತಾನೆ. ಹೊಡೆಯುತ್ತಾನೆ. ನಿನ್ನ ತಲೆ ಬೊಂಡ ಒಡೆದಾನು. ಏನೇ ಆಗಲಿ ಉಕ್ಕಿನ ಹಿಡಿತ ತಪ್ಪಿಸದಿರು. ಹಿಡಿದದ್ದು ಬಿಟ್ಟಿಯೋ? ಅಮುಕೋದ ನಿಲ್ಲಿಸಿದೆಯೋ? ಸತ್ತೆ ಅಂತ ತಿಳಿ. ನೀನು ಸರಿಯಾಗಿ ಮಾಡಿದ್ದೇ ಹೌದಾದರೆ ಕೆಲವೇ ಕೆಲವು ನಿಮಿಷಗಳಲ್ಲಿ ಗಂಡು ನೋವು ತಡೆಯಲಾರದೆ ಪ್ರಜ್ಞೆ ತಪ್ಪುತ್ತಾನೆ. ಎಷ್ಟೋ ಸಲ ಗಂಡು ಗುಂಡು ಹಾರಿಸಿಯಾನು. ಕತ್ತಿಯಿಂದ ತಿವಿದಾನು. ನೆನಪಿರಲಿ ಬಲಾತ್ಕಾರ ಮಾಡಿಸಿಕೊಂಡ ಹೆಣ್ಣಿನ ಸ್ಥಿತಿ ಏನು ಅಂತ. ಅದಕ್ಕಿಂತ ಸಾಯುವದೇ ಒಳ್ಳೇದು. ಅದಕ್ಕೇ ಈ ಟೆಕ್ನಿಕ್. ತಿಳಿಯಿತಾ ಮೊಮ್ಮಗಳೇ? ತಲೆತಲಾಂತರಗಳಿಂದ ಇದೇ ನಮ್ಮ ಲಾಸ್ಟ್ ರೆಸಾರ್ಟ್ ಅನ್ನುವಂತ ಟೆಕ್ನಿಕ್. ವರ್ಕ್ ಕೂಡ ಆಗುತ್ತದೆ ಸರಿಯಾಗಿ ಮಾಡಿದರೆ! ಸಂಶಯ ಬೇಡ.

ಹೀಗಂತ ಸೀದಾ ಸೀದಾ ಯಾವದೇ ಉತ್ಪ್ರೇಕ್ಷೆ (exaggeration) ಇಲ್ಲದೆ ಬರೆಯುತ್ತ ಹೋಗುವವರು ಅಯಾನ್ ಹರ್ಸಿ ಅಲಿ ಎಂಬ ಸೋಮಾಲಿ ಮಹಿಳೆ.

ಅವರ ಆತ್ಮಕಥೆ 'Infidel' ಎಂಬ ಪುಸ್ತಕ.

ಮೈ ಗಾಡ್! ಓದಿಯೇ ತಿಳಿಯಬೇಕು ಸೋಮಾಲಿಯದ ಜನರ ಬವಣೆ. ಕಳೆದ ಸರಿ ಸುಮಾರು 35-40 ವರ್ಷದಿಂದ ನಡೆಯುತ್ತಿರುವ ಸಿವಿಲ್ ವಾರ್. ಭೀಕರ ಬರಗಾಲ. ಡಜನ್ಗಟ್ಟಲೆ ಪಂಗಡಗಳು. ಅವರಲ್ಲೇ ಜಗಳ. ಹಿಂಸೆ. ಶಿಕ್ಷಣ ಇಲ್ಲ. ಧರ್ಮಾಂಧತೆ. ಒಂದಾ, ಎರಡಾ?!!!!

ಇಂತಹದರಲ್ಲಿ ಮುಂದಿನ ಪೀಳಿಗೆಗಳಿಗೆ ಆಸೆಯ ನಕ್ಷತ್ರದಂತೆ ಎದ್ದು ಬರುವವರು ಲೇಖಕಿ - ಅಯಾನ್ ಹರ್ಸಿ ಅಲಿ.

ಅವರ ಲೈಫೇನೂ ಸ್ಮೂತ್ ಇರಲಿಲ್ಲ. ಪರದೇಶದಲ್ಲಿ ಓದಿ ಬಂದ ತಂದೆ ರಾಜಕೀಯ ಮುಖಂಡ. ವಿರೋಧ ಪಕ್ಷ. ಸರ್ವಾಧಿಕಾರಿ ಸಯ್ಯದ್ ಬ್ಯಾರೆಯ ವಿರುದ್ಧ ಹೋರಾಟ. ಬಂಧನ. ಹೇಗೋ ತಪ್ಪಿಸಿಕೊಂಡು ಓಡಿ ಪಕ್ಕದ ಇಥಿಯೋಪಿಯ, ಕೀನ್ಯಾ ದಲ್ಲಿ ನಿರಾಶ್ರಿತ್ರರ ಜೀವನ. ಅಲ್ಲಿಯೂ ಸೋಮಾಲಿ ಸಮಾಜದ ಉಸಿರುಗಟ್ಟುವ ವಾತಾವರಣ.

ಇಂತಹ ವಾತಾವರಣದಲ್ಲಿ ಲೇಖಕಿ ಮತ್ತು ಆಕೆಯ ಒಬ್ಬ ಅಣ್ಣ ಮತ್ತು ತಂಗಿ ಬೆಳೆಯುತ್ತಾರೆ. ಅಬ್ಬಾ!! ಆ ಮಕ್ಕಳು ಅನುಭವಿಸಿದ ಅನುಭವ ಓದುತ್ತ ಹೋದರೆ, ಮೈ ಗಾಡ್! ಏನು ಹೇಳಬೇಕೋ ತಿಳಿಯುವದಿಲ್ಲ. ಕೆಲವೊಂದು ಮಾತ್ರ ತುಂಬಾ ಗ್ರಾಫಿಕ್ ಇವೆ. ಲೇಖಕಿ ಹೇಳೇ ಬಿಡುತ್ತಾರೆ. ಇದ್ದದ್ದು ಇದ್ದಾಂಗೆ ಹೇಳಿದ್ದೇನೆ. ರೋಚಕ ಅಥವಾ ಭೀಭತ್ಸ ಮಾಡುವ ಇರಾದೆ ಇಲ್ಲ. ಇಷ್ಟು ಓದಿದ ಮೇಲೆ ಆದರೂ ನಮ್ಮ ಜನ ಎಚ್ಚೆತ್ತುಕೊಂಡು ಏನು ಬದಲಾಗ ಬೇಕೋ ಬದಲಾದಾರಾ ಅಂತ ಅವರ ಆಸೆ.

ಮುಂದೆ ಬಲವಂತದ ಮದುವೆಗೆ ಒಳಗಾಗುವ ಲೇಖಕಿ ಕೀನ್ಯಾ ಬಿಟ್ಟು ಓಡುತ್ತಾರೆ. ಅದೇ ಒಂದು ರೋಚಕ ಗಾಥೆ. ಹೇಗೋ ಮಾಡಿ ಹಾಲಂಡ್ ತಲಪುತ್ತಾರೆ. ಅಲ್ಲಿ ಮೊದಲು ನಿರಾಶ್ರಿತರಾಗಿ ಜೀವನ. ನಂತರ ಚಿಕ್ಕಪುಟ್ಟ ಕೆಲಸ. ಸುಮಾರು ದಿನಗಳ ನಂತರ ಅವರಿಗೆ ಅಲ್ಲಿ ರಾಜಕೀಯ ಸಂತ್ರಸ್ತರು ಅಂತ ವಲಸೆ ಪರ್ಮಿಟ್ ಸಿಕ್ಕು ಓದಲು ಶುರು ಮಾಡುತ್ತಾರೆ. ಪಾಲಿಟಿಕಲ್ ಸೈನ್ಸ್ ನಲ್ಲಿ ಓದಿ, ಗಮನಾರ್ಹ ಲೇಖನಗಳನ್ನು ಬರೆದು, ಸಿಕ್ಕಾಪಟ್ಟೆ ಭಾಷಣ ಬಿಗಿದು, ಹಾಲಂಡಿನ ರಾಜಕೀಯ ಮುತ್ಸದ್ದಿಗಳ, ಚಿಂತಕರ ಕಣ್ಣಿಗೆ ಬಿದ್ದು ಭಲೇ ಭಲೇ ಅಂತ ಅನ್ನಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಅವರಿಗೆ ಹಾಲಂಡಿನ ಪೌರತ್ವ ಕೂಡ ಸಿಗುತ್ತದೆ.

ಇವರ ಕಥೆ, ಇವರು ಮಾಡಿಧ ಸಾಧನೆಗಳನ್ನು ಗಮನಿಸಿದ ಕೆಲವು ಸಮಾನಮನಸ್ಕ ನಾಯಕರು ಇವರನ್ನು ಚುನಾವಣೆಗೆ ನಿಲ್ಲುವಂತೆ ಹೇಳುತ್ತಾರೆ. ನಿಂತು ಗೆದ್ದೇ ಬಿಡುತ್ತಾರೆ ಅಯಾನ್ ಹರ್ಸೀ ಅಲಿ!!!! ಕೆಲವೇ ವರ್ಷಗಳ ಹಿಂದೆ ಕೀನ್ಯಾದ ಕೊಳಗೇರಿಗಳಲ್ಲಿ ಇದ್ದವರು ಈಗ ಹಾಲಂಡಿನ ಪಾರ್ಲಿಮೆಂಟ್ ಮೆಂಬರ್.

ಬೇರೆ ಯಾರೋ ಆಗಿದ್ದರೆ ಗ್ರೀನ್ ಕಾರ್ಡ್ ಸಿಕ್ಕಿತು, ಪೌರತ್ವ ಸಿಕ್ಕತು, ಒಳ್ಳೆ ಸರ್ಕಾರಿ ನೌಕರಿ, ಮತ್ತೇನು ಬೇಕು? ಆರಾಮ ಇದ್ದು ಬಿಡೋಣ ಅಂತ ಹಳೆಯದ್ದೆಲ್ಲ ಮರೆತು ಇದ್ದು ಬಿಡುತ್ತಿದ್ದರೋ ಏನೋ? ಆದ್ರೆ ಹುಟ್ಟು ಹೋರಾಟಗಾರ್ತಿಯಾದ ಇವರು ಹಾಗೆ ಹೇಗೆ ಮಾಡಿಯಾರು?

ಆಗಲೇ ಸಿಗುತ್ತಾನೆ ವ್ಯಾನ್ ಗೋ ಎಂಬ ಒಬ್ಬ ಪಿರ್ಕೀ ಫಿಲಂ ಮೇಕರ್. ಇಬ್ಬರೂ ಕೂಡಿ ಧರ್ಮಾಂಧತೆಯ ಬಗ್ಗೆ Submission ಎಂಬ ಒಂದು ಚಿಕ್ಕ ಸಿನೆಮಾ ಮಾಡೇ ಬಿಡುತ್ತಾರೆ. ಸಿನೆಮಾ ರಿಲೀಸ್ ಆದ ತಕ್ಷಣ ಇಡೀ ಜಗತ್ತು, ಅದರಲ್ಲೂ ಅರಬ್ ಮುಸ್ಲಿಂ ಜಗತ್ತೇ ಫುಲ್ ತಲ್ಲಣವಾಗಿ ಬಿಡುತ್ತದೆ. ಇಬ್ಬರ ಮೇಲೂ ಫತ್ವಾ ಮೇಲೆ ಫತ್ವಾ. ತಲೆ ತೆಗದೇ  ಬಿಡಿ. ಕೊಂದೇ ಬಿಡಿ ಅಂತ.

ಆ ಪಿರ್ಕಿ ಫಿಲಂ ಮೇಕರ್ ನಸೀಬ್ ಖರಾಬಿತ್ತು. ಯಾವದೋ ಒಬ್ಬ ಮೊರೊಕ್ಕೋ ದೇಶದ ಧರ್ಮಾಂಧ ಹಾಲಂಡ್ ವಲಸಿಗ, ಯಾವದೇ ರಕ್ಷಣೆ ಇಲ್ಲದೆ ಬಿಂದಾಸ್ ಓಡಾಡುತ್ತಿದ್ದ ಅವನನ್ನು ಹಿಡಿದು ಕೊಂದೇ ಬಿಟ್ಟ. ಮತ್ತೆ ಬೇರೆಯವರಿಗೆ ಒಂದು ಪಾಠ ಅನ್ನುವಂತೆ ಒಂದು ಕಠಾರಿ ಅವನ ಎದೆಯಲ್ಲಿ ಹುಗಿಸಿ ಹೋಗಿದ್ದ. ಸತ್ಯದ ಒಂದು ಮುಖ ತೋರಿಸಿದವರಿಗೆ ಸಿಕ್ಕ ಬಹುಮಾನ.

ಪುಣ್ಯಕ್ಕೆ ಅಯಾನ್ ಹರ್ಸಿ ಅಲಿ ಮಾತ್ರ ಸಾಕಷ್ಟು ರಕ್ಷಣೆ ಇಟ್ಟುಗೊಂಡು ತಿಂಗಳು ಎರಡು ತಿಂಗಳಿಗೊಮ್ಮೆ ಮನೆ ಬದಲು ಮಾಡುತ್ತ ತಮ್ಮ ಕಾಳಗ ಮುಂದುವರೆಸಿದ್ದಾರೆ. ಅದೆಂದೂ ಮುಗಿಯದ ಕಾಳಗ. ಸೋಮಾಲಿಯ, ಅಲ್ಲಿನ ಜನ ಇತ್ಯಾದಿಗಳ ಬಗ್ಗೆ ಅವರಿಗೆ ಇರುವ ಕಾಳಜಿ ಮಾತ್ರ ಏನೂ ಕಮ್ಮಿ ಆಗಿಲ್ಲ. ಜಾಸ್ತಿನೇ ಆಗಿರಬಹುದು.

ತಣ್ಣನೆಯ ಮನಸಿಟ್ಟುಕೊಂಡು ಓದಿದರೆ ಒಂದು ಒಳ್ಳೆ ಪುಸ್ತಕ. ಕೆಲವು ಕಡೆ ತುಂಬಾ ಡಾರ್ಕ್ ಶೇಡ್ಸ್ ಅನ್ನುವಂತ ಘಟನೆ ಬರುತ್ತವೆ. ಸಿಕ್ಕಾಪಟ್ಟೆ ಕಳವಳ, ಚಡಪಡಿಕೆ, ತುಮುಲ, ನೋವು, trauma ಆದೀತು. ಜೋಕೆ.

Monday, October 29, 2012

ಹಂದಿ ಕೊಲ್ಲಿಯಲ್ಲಿ ಹಡಾಗತಿ. ಫೀಡೆಲ್ ಕ್ಯಾಸ್ಟ್ರೋಗೆ ಗುಂಡು....ಬಿದ್ದೇ ಬಿಟ್ಟಿತ್ತು.

ಕ್ಯೂಬಾದಲ್ಲಿ ಹೊಲಗೇರಿ ಎದ್ದು ಹೋಗಿತ್ತು. ಫೀಡೆಲ್ ಕಾಸ್ಟ್ರೋ ಎಂಬ ಕಮ್ಯುನಿಸ್ಟ್ ಕ್ರಾಂತಿಕಾರಿ ಬತಿಸ್ತಾ ಎಂಬ ಸರ್ವಾಧಿಕಾರಿಯನ್ನು ಓಡಿಸಿ ಕಮ್ಯುನಿಸ್ಟ್ ರಾಜ್ಯ ಸ್ಥಾಪಿಸುವದರಲ್ಲಿ ನಿರತನಾಗಿದ್ದ. ಅಮೇರಿಕಾದ ಫ್ಲೋರಿಡಾ ಕಡಲ್ತೀರದಿಂದ ಕೇವಲ 90 ಮೈಲಿ ದೂರದಲ್ಲಿರುವ ಕ್ಯೂಬಾದಲ್ಲಿ ಕಮ್ಯುನಿಸ್ಟ್ ರಾಜ್ಯ?!!!!! ಬಂಡವಾಳಶಾಹಿಗಳಿಗೆ ನುಂಗಲಾರದ ತುತ್ತು.

ಕಾಸ್ಟ್ರೋ ಬರುವ ಮೊದಲು ಕ್ಯೂಬಾ ಅಂದ್ರೆ 'ಪಾಪಗಳ ದ್ವೀಪ'. ತಿನ್ನಬಾರದ್ದು ತಿಂದು, ಕುಡಿಯಬಾರದ್ದು ಕುಡಿದು, ಸೇದಬಾರದ್ದು ಸೇದಿ, ಮಾಡಬಾರದ್ದು ಮಾಡಿ ಬರುವ ಎಲ್ಲ ತರಹದ ಅವಕಾಶ. ಹೇರಳ ಅವಕಾಶ. ಕ್ಯಾಸಿನೋಗಳಿದ್ದವು, ಕ್ಯಾಬರೆಗಳಿದ್ದವು. ಎಲ್ಲಾ ತರಹದ ವಿಕೃತಿಗಳಿಗೆ ಫುಲ್ ಅನುಮತಿ. ಕಾಸ್ ಒಂದು ಇದ್ದರೆ ಸಾಕು. ಮಾಫಿಯಾ ಸಿಕ್ಕಾಪಟ್ಟೆ ದುಡ್ಡು ಹಾಕಿತ್ತು. ಮೊದಲಿನ ಬತಿಸ್ತಾಗೆ ಇಷ್ಟು ಅಂತ ಕಟ್ ಹೋಗುತ್ತಿತ್ತು. ಅವನು ತನ್ನ ಜನರನ್ನು ಹಿಡಿದು ಚಿತ್ರಹಿಂಸೆ ಮಾಡುತ್ತಾ, ಹೆದರಿಸುತ್ತ ಒಂದು ತರಹದ ನರಕ ಸೃಷ್ಟಿ ಮಾಡಿಟ್ಟುಕೊಂಡಿದ್ದ. ಫ್ಲೋರಿಡಾದಿಂದ ಕೆಲವೇ ನಿಮಿಷಗಳ ವಿಮಾನ ಪಯಣ. ಇಲ್ಲಾ 1-2 ಘಂಟೆಗಳ ಬೋಟ್ ಪಯಣ.

ಕಾಸ್ಟ್ರೋ ಬಂದಿದ್ದು ಹಡಬೆ ದಂಧೆ ಮಾಡುವವರ ಗಂಟಲಲ್ಲಿ ಮುಳ್ಳು ಸಿಕ್ಕಿಕೊಂಡಂಗಾಗಿತ್ತು. ಅವನೇನು ದೊಡ್ಡ ಸುಬಗನಲ್ಲ. ಆದರೂ ಕಮ್ಯುನಿಸ್ಟ್, ಕಾಮ್ರೇಡ್ ಅಂತೆಲ್ಲಾ ಭೊಂಗು ಬಿಟ್ಟು, ಕ್ಯಾಸಿನೋ ಇತ್ಯಾದಿಗಳ ಮೇಲೆ ಒಂದು ತರಹದ ನಿರ್ಬಂಧ ಹೇರಿದ್ದ. ಜಾಸ್ತಿ ಕಾಸು ಕೇಳುತ್ತಿದ್ದ. ಕೆಲವೊಂದು ವಿಕೃತಿಗಳಾದ ಬಾಲ್ಯ ವೇಶ್ಯಾವೃತ್ತಿ, ಲೈವ್ ಸೆಕ್ಸ್ ಶೋ ಇತ್ಯಾದಿಗಳನ್ನು ಬಂದ್ ಮಾಡಿಸಿದ್ದ. ಸುಮಾರು ಏಳಡಿ ಮೇಲೆ ಎತ್ತರವಿದ್ದು ಜಂಬೋ ಎಂದೇ ಫೇಮಸ್ ಆಗಿದ್ದ ನೀಗ್ರೋ ಸೆಕ್ಸ್ ಶೋ ಸ್ಪೆಷಲಿಸ್ಟ ಒಬ್ಬ ಕ್ಯೂಬಾ ಬಿಟ್ಟು ಓಡಿದ್ದ. ಒಟ್ಟಿನಲ್ಲಿ ಮಜಾ ಹೋಗಿತ್ತು. ಎಲ್ಲಾ ಸಪ್ಪೆ ಸಪ್ಪೆ.

ಅದಕ್ಕೇ ಕಾಸ್ಟ್ರೋನನ್ನು ಹ್ಯಾಂಗಾರೂ ಮಾಡಿ ಓಡಿಸಿ ಅಂತ ಅಮೇರಿಕಾದ ಸರಕಾರದ ಮೇಲೆ ಪ್ರೆಶರ್. ಅದೂ ದೊಡ್ಡ ದೊಡ್ಡ ದುಡ್ಡಿರುವ ಕುಳಗಳೇ ಪ್ರೆಶರ್ ಹಾಕತೊಡಗಿದ್ದರು. ಅವರದೇ ಕಾಸಿಂದ ಆರಿಸಿ ಬಂದಿದ್ದ ಜನರು ಇನ್ನೇನು ಮಾಡಿಯಾರು? "ಹ್ಞೂ.....ಸೀಕ್ರೆಟ್ ಆಗಿ ಏನಾರು ಮಾಡಿಕೊಳ್ಳಿ. ಡೈರೆಕ್ಟ್ ಆಗಿ ಅಮೇರಿಕಾ ಕ್ಯೂಬಾ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ಯಾಕೆಂದ್ರೆ, ಕ್ಯೂಬಾ ಮೇಲೆ ಅಮೇರಿಕಾ ದಾಳಿ ಮಾಡಿದರೆ, ಅಲ್ಲಿ ಬರ್ಲಿನ್ ನಲ್ಲಿ ಸೋವಿಯೆಟ್ ಯೂನಿಯನ್ ಪಶ್ಚಿಮ ಜರ್ಮನಿಯ ಮೇಲೆ ದಾಳಿ ಮಾಡುತ್ತದೆ. ಅದೆಲ್ಲ ದೊಡ್ಡ ತಲೆನೋವು. ಹೇಗೂ ಕ್ಯೂಬಾ ಬಿಟ್ಟು ಓಡಿ ಬಂದ ಸಾಕಷ್ಟು ಜನರಿದ್ದಾರೆ. ಅವರದೇ ಒಂದು ಗೆರಿಲ್ಲಾ ಪಡೆ ಮಾಡಿ, ತರಬೇತಿ ಕೊಟ್ಟು, ಕ್ಯೂಬಾದೊಳಗೆ ನುಗ್ಗಿಸಿ. ಅವರೇ ಕ್ಯಾಸ್ಟ್ರೋನನ್ನು ಓಡಿಸಿ, ದ್ವೀಪ  ಗೆದ್ದುಕೊಂಡರೆ, ಅಮೇರಿಕಾ ಅವರ ಸರ್ಕಾರವನ್ನು ಮಾನ್ಯ ಮಾಡುತ್ತದೆ," ಅಂದ ಆ ಕಾಲದ ಅಧ್ಯಕ್ಷರಾದ ಐಸೆನ್ಹೊವರ್ ಸಾಹೇಬರು ಮುಗುಮ್ಮಾಗಿ ಹೇಳಿ ತಮ್ಮ ಎರಡನೇ ಅವಧಿ ಮುಗಿದು ಪೆನಶನ್ ಸಿಕ್ಕರೆ ಸಾಕಪ್ಪ ಅಂತ ಕೂತಿದ್ದರು.

ಐಸೆನ್ಹೊವರ್ ಸಾಹೇಬರು ಹೋದರು. ಜಾನ್ ಕೆನಡಿ ಬಂದು ಕೂತರು. ಅವರಿಗೆ ಹಿಂದಿನ ಸರ್ಕಾರದ ಕಾರಸ್ತಾನ ಎಲ್ಲ ಸರಿಯಾಗಿ ಗೊತ್ತಿರಲಿಲ್ಲ. ಕಮ್ಯುನಿಸ್ಟ ಕಾಸ್ಟ್ರೋ ಹೋದರೆ ಹೋಗಲಿ ಅಂತ ಅವರೂ ಗೆರಿಲ್ಲಾ ಪಿರಿಲ್ಲಾ ಮಾಡಿಕೊಳ್ಳಿ ಅಂತ ಬಿಟ್ಟಿದ್ದರು.

ಈ ಕಡೆ ಕ್ಯೂಬಾ ಬಿಟ್ಟು ಓಡಿ ಬಂದಿದ್ದ ಜನರಿಗೆ ನಿಕಾರಾಗುವಾ ದೇಶದ ರಹಸ್ಯ ಶಿಬಿರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಸುಮಾರು ತರಬೇತಿಯ ನಂತರ 1961 ರ ಆದಿ ಭಾಗದಲ್ಲಿ ಈ ಗೆರಿಲ್ಲಾಗಳನ್ನು ಕ್ಯೂಬಾದೊಳಗೆ ನುಗ್ಗಿಸುವದು ಅಂತ ತೀರ್ಮಾನ ಮಾಡಲಾಯಿತು. ತರಬೇತಿ ಕೊಟ್ಟವರಿಗೆ ಆ ಕಾರ್ಯಾಚರಣೆ ಪೂರ್ತಿ ಯಶಸ್ವಿ ಆಗುವ ಬಗ್ಗೆ ಖಾತ್ರಿ ಇರಲಿಲ್ಲ. ಆದ್ರೆ ಪೂರ್ತಿ ಹದಗೆಟ್ಟು ಹೋದರೆ, ಕೆನಡಿ ಅವರ ಮೇಲೆ ಒತ್ತಡ ತಂದು, ಅಮೇರಿಕಾ ಡೈರೆಕ್ಟ್ ಆಗಿ ಯುದ್ಧದೊಳಗೆ ತೊಡಗುವಂತೆ ಮಾಡಿದರಾಯಿತು ಎಂಬ ಕುತಂತ್ರಿ ಬುದ್ಧಿ ಕೆಲ ಸರ್ಕಾರಿ ಪಟ್ಟಭದ್ರ ಹಿತಾಸಕ್ತಿಗಳದು.

ಕ್ಯೂಬಾದ ಗೆರಿಲ್ಲಾಗಳನ್ನು ಅಮೇರಿಕಾ ನುಗ್ಗಿಸಿದ್ದು 'ಹಂದಿ ಕೊಲ್ಲಿ' (bay of pigs) ಎಂಬ ಜಾಗದಲ್ಲಿ. ರಾಜಧಾನಿ ಹವಾನಾ ಸಮೀಪ ಹೆಚ್ಚಿನ ಸೈನಿಕ ಬಲ ಇರುತ್ತದೆ. ಹಾಗಾಗಿ ಸ್ವಲ್ಪ ನಿರ್ಜನ ಪ್ರದೇಶ ದಾಳಿಗೆ ಬೆಟರ್. ಅಲ್ಲಿ ಹೋಗಿ ಲ್ಯಾಂಡ್ ಆದ ಮೇಲೆ ಒಂದೊಂದೇ ಜಾಗ ವಶಪಡಿಸಿಕೊಳ್ಳುತ್ತ ಹೋಗುವದು ಗೆರಿಲ್ಲಾಗಳ ಪ್ಲಾನ್.

ಕ್ಯಾಸ್ಟ್ರೋ ಏನು ಕಡಿಮೆ ಪ್ರಚಂಡನೇ? ಅವನ ಗೂಢಚಾರರು ಫ್ಲೋರಿಡಾದ ತುಂಬೆಲ್ಲ ಹರಡಿದ್ದರು. ಗೆರಿಲ್ಲಾಗಳಲ್ಲೇ ಹಲವಾರು ಒಡಕು ಬಾಯಿಯ ಜನರಿದ್ದರು. ಅವರಲ್ಲೇ ಕಚ್ಚಾಟ. ಕುಡಿದ ಮತ್ತಿನಲ್ಲಿ ಸಣ್ಣ ಪ್ರಮಾಣದ ಹಿಂಟ್ಸ ಕೊಟ್ಟಿದ್ದರು. ಸೋವಿಯೆಟ್ ಯೂನಿಯನ್ ಸಹ ಮಾಹಿತಿ ಸಂಗ್ರಹಣೆ ಮಾಡಿ ಕೊಟ್ಟಿತ್ತು. ಕಾಸ್ಟ್ರೋ ಮತ್ತು ಅವನ ಪಡೆಗಳು ಸನ್ನದ್ಧವಾಗಿ ಕೂತಿದ್ದರು. ಬಕರಾಗಳು ಬಂದು ಬಲೆಗೆ ಬೀಳಲಿ ಅಂತ.

ಗೆರಿಲ್ಲಾಗಳು ಬಂದು ಹಂದಿ ಕೊಲ್ಲಿಯ ಬಳಿ ಇಳಿದರು. ಕ್ಯೂಬಾದ ಚಿಕ್ಕ ವಾಯುಪಡೆ ಅವರನ್ನು ಇಲ್ಲದಂತೆ ಅಟ್ಟಿಸಿಕೊಂಡು ಓಡಾಡಿಸಿತು. ಮೇಲಿಂದ ಗನ್ ಶಿಪ್ಸ್ ಗುಂಡಿನ ಮಳೆಗರೆಯುತ್ತಾ ಗೆರಿಲ್ಲಾಗಳನ್ನು ಓಡಿಸುತ್ತಿದ್ದರೆ, ಗೆರಿಲ್ಲಾಗಳು ಓಡುತ್ತಾ, ಕ್ಯಾಸ್ಟ್ರೋ ಸರಿಯಾಗಿ ನಿಲ್ಲಿಸಿದ್ದ ಸ್ನೈಪರ್ ಗಳ ಗುಂಡು ತಿಂದು ನೆಲಕ್ಕೆ ಉರಳುತ್ತಿದ್ದರು. ಇತ್ತ ಕಡೆ ಅಮೇರಿಕಾದಲ್ಲಿ ಕಾರ್ಯಾಚರಣೆ ಕುಲಗೆಟ್ಟು ಹೋಗಿದ್ದರ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಪ್ರೆಸಿಡೆಂಟ್ ಕೆನಡಿ ಅವರ ಮೇಲೆ ಪ್ರೆಶರ್ ಹಾಕುವ ಕಾರ್ಯ ಆರಂಭವಾಯಿತು. ಆದ್ರೆ ಕೆನಡಿ ಅವರಿಗೆ ಅಮೇರಿಕಾದ ವಾಯುಪಡೆ ಕಳಿಸಿ ಮೂರನೇ ಮಹಾಯುದ್ಧ ಶುರು ಮಾಡುವ ದರ್ದು ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮನ್ನು ಕತ್ತಲೆಯಲ್ಲಿಟ್ಟು, ಈಗ ಒಮ್ಮೆಲೇ ವಾಯುಪಡೆ ಡಿಮಾಂಡ್ ಮಾಡುತ್ತಿದ್ದ CIA ಅಧಿಕಾರಿಗಳ ಮೇಲೆ ಸಿಕ್ಕಾಪಟ್ಟೆ ಎಗರಾಡಿ ಬಿಟ್ಟರು ಕೆನಡಿ. ಸುಮಾರು ಹಿರಿ ತಲೆಗಳು ಮನೆಗೆ ಹೋದವು.

ಕಾಸ್ಟ್ರೋನ ಪಡೆಗಳು ಗೆರಿಲ್ಲಾಗಳನ್ನು ಹಿಡಿದು ಬಡಿಯುತ್ತಿದ್ದರೆ, ತರಗೆಲೆಗಳಂತೆ ನೆಲಕ್ಕೆ ಬೀಳುತ್ತಿದ್ದರು ಗೆರಿಲ್ಲಾಗಳು. ಅಮೇರಿಕಾದಿಂದ ಸಹಾಯ ಬರುವದಿಲ್ಲ ಎಂದು ಗೊತ್ತಾದಂತೆ ಸುಮಾರು ಜನ ಶರಣಾಗತೊಡಗಿದರು. ಕೆಲವರು ಮಾತ್ರ ಫೈಟ್ ಟು ಫಿನಿಶ್ ಎಂಬಂತೆ ಹೋರಾಡುತ್ತಲೇ ಇದ್ದರು.

ಅಂತವರಲ್ಲಿ ಒಬ್ಬವ ಹ್ಯಾರಿ ವಿಲಿಯಮ್ಸ್. ಮೂಲತ ಅವನು ಒಬ್ಬ ಚನ್ನಾಗಿ ಕಲಿತ ಮೈನಿಂಗ್ ಇಂಜಿನಿಯರ್. ಕ್ಯೂಬಾದಲ್ಲಿ ಹಾಯಾಗಿದ್ದ. ಕಾಸ್ಟ್ರೋ ಅವನಿಗೆ ಗೊತ್ತು ಸಹ. ಆದರೂ ಕ್ಯಾಸ್ಟ್ರೋ ಒಳ್ಳೆ ದೋಸ್ತನೇ ಹೊರತು ಒಳ್ಳೆ ಆಡಳಿತಗಾರನಲ್ಲ ಎಂದು ಹ್ಯಾರಿ ವಿಲಿಯಮ್ಸ್ ನಂಬಿದ್ದ. ಅದಕ್ಕೇ ಕ್ಯೂಬಾ ಬಿಟ್ಟು ಓಡಿ  ಬಂದು ಫ್ಲೋರಿಡಾದಲ್ಲಿ ಸೆಟಲ್ ಆಗಿದ್ದ. ಕ್ಯಾಸ್ಟ್ರೋ ವಿರುದ್ಧದ ಚಟುವಟಿಕೆಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದ.

ಇಂತಹ ಹ್ಯಾರಿ ವಿಲಿಯಮ್ಸ್ ಮಾತ್ರ ಗುಂಡು ಹಾರಿಸುತ್ತಲೇ ಇದ್ದ. ಅವನಿಗೇ  ಸುಮಾರು ಗುಂಡುಗಳು ಬಿದ್ದಿದ್ದವು. ರಕ್ತ ಹರಿಯುತ್ತಿತ್ತು. ನಿಧಾನವಾಗಿ ಪ್ರಜ್ಞೆ ತಪ್ಪುತ್ತಿತ್ತು. ಪೂರ್ತಿ ಪ್ರಜ್ಞೆ ತಪ್ಪುವ ಮೊದಲು ಮಾಡಿದ ಆಖರೀ ಕೆಲಸವೆಂದರೆ ತನ್ನ ಪಿಸ್ತೂಲಿನಲ್ಲಿ ಗುಂಡುಗಳು ಇವೆಯೋ ಇಲ್ಲವೋ ಅಂತ ನೋಡಿಕೊಂಡಿದ್ದು. ಇದೆ ಅಂತ ಖಚಿತ ಮಾಡಿಕೊಂಡೇ ಪಿಸ್ತೂಲ್ ಸೊಂಟದಲ್ಲಿ ಸಿಗಿಸಿಕೊಂಡ ಹ್ಯಾರಿ ವಿಲಿಯಮ್ಸ್ ಪ್ರಜ್ಞೆ ತಪ್ಪಿ ಬಿದ್ದ.

ಎಷ್ಟೇ ಅಂದ್ರೂ ಯುದ್ಧ ಕೈದಿಗಳು. ಸ್ವಲ್ಪಾದರೂ ಮಾನವೀಯತೆ ತೋರಿಸಲೇ ಬೇಕು. ಅದಕ್ಕೇ ಗಾಯಾಳುಗಳನ್ನು ಹವಾನಾದ ಆಸ್ಪತ್ರೆಗೆ ಸಾಗಿಸಲಾಯಿತು. ಅಂತವರಲ್ಲಿ ಹ್ಯಾರಿ ವಿಲಿಯಮ್ಸ್ ಕೂಡ ಇದ್ದ. 

ಸ್ವಲ್ಪ ದಿವಸದ ನಂತರ ಹ್ಯಾರಿ ವಿಲಿಯಮ್ಸ್ ಗೆ  ಪ್ರಜ್ಞೆ ಬಂತು. ಬಾಡಿ ಪೂರ್ತಿ ಲ್ಯಾಪ್ಸ್ ಆಗಿತ್ತು. ಏನೇನೋ ಮುರಿದು, ಏನೇನೋ ಹರಿದು, ಒಟ್ಟಿನಲ್ಲಿ ಎಕ್ಕುಟ್ಟಿ ಹೋಗಿದ್ದ. ಜೀವಂತ ಶವ ಅಷ್ಟೇ. ಅಂತಾದ್ರಲ್ಲೂ ಹೇಗೋ ಮಾಡಿ ಪಿಸ್ತೂಲ್ ತಡವಿಕೊಂಡ ಹ್ಯಾರಿ ವಿಲಿಯಮ್ಸ್. ಕ್ಯಾಸ್ಟ್ರೋ ಸಿಕ್ಕರೆ ಗುಂಡು ಹಾಕಿಯೇ ಬಿಡಬೇಕು ಅಂತ ಹಲ್ಲು ಕಡಿದ. 

ಯಾರ ಅದೃಷ್ಟಕ್ಕೋ ಅಥವಾ ದುರಾದೃಷ್ಟಕ್ಕೋ ಒಂದಿನ ಫೀಡೆಲ್ ಕ್ಯಾಸ್ಟ್ರೋ ಆಸ್ಪತ್ರೆಗೆ ಬಂದೇ ಬಿಟ್ಟ. ಗಾಯಾಳುಗಳಲ್ಲಿ ಅವನ ಹಳೆ ಮಿತ್ರರಿದ್ದರು. ಅವನ ಅನುಚರರ ಬಂಧುಗಳಿದ್ದರು. ಮತ್ತೆ ಗಾಯಾಳುಗಳನ್ನು ಒತ್ತೆಯಿಟ್ಟುಕೊಂಡು ಅಮೇರಿಕಾದಿಂದ ಕಾಸ್ ಎತ್ತುವ ಪ್ಲಾನ್ ಕೂಡ ಇದ್ದಂಗೆ ಇತ್ತು.

ಕ್ಯಾಸ್ಟ್ರೋ ತನ್ನ ಹಸಿರು ಬಣ್ಣದ ಮಿಲಿಟರಿ ಯುನಿಫಾರ್ಮ್ ಧರಿಸಿ, ಬಾಯಲ್ಲಿ ತನ್ನ ಟ್ರೇಡ್ ಮಾರ್ಕ್ ಸಿಗಾರ್ ಕಚ್ಚಿಕೊಂಡು, ಗಡ್ಡ ಕೆರೆಯುತ್ತಾ, ದೊಡ್ಡ ದನಿಯಲ್ಲಿ ಕಮ್ಯೂನಿಸ್ಟ್, ಕಾಮ್ರೇಡ್ ಅದು ಇದು ಅನ್ನುತ್ತ ಬಂದ. ಅವನ ಹಿಂದೆ ಅವನ ಅನುಚರರು. 

ಆಸ್ಪತ್ರೆಯಲ್ಲಿದ್ದ ಗಾಯಾಳುಗಳಿಗೆ ಹಲೋ, ಹಾಯ್ ಅನ್ನುತ್ತ ಕೈ ಕುಲುಕುತ್ತ ಬಂದ ಕ್ಯಾಸ್ಟ್ರೋ. ಹ್ಯಾರಿ ವಿಲಿಯಮ್ಸ್ ಮಲಗಿದ್ದ ಹಾಸಿಗೆಯ ಪಕ್ಕ ಬಂದು ಒಂದು ಕ್ಷಣ ಜಾಸ್ತಿಯೇ ನಿಂತ. ಹಳೆ ಕಾಲದ ದೋಸ್ತಿ. ಕಲೆತ ಕಣ್ಣುಗಳು ಏನೇನು ಮಾತಾಡಿಕೊಂಡವೋ?

ಆ ಪರಿ ಗಾಯಗೊಂಡಿದ್ದರೂ ಹ್ಯಾರಿ ವಿಲಿಯಮ್ಸ್ ಕೊತ ಕೊತ ಕುದ್ದುಹೋದ. ಅದೆಲ್ಲಿಂದ ಶಕ್ತಿ ತಂದನೋ? ಅಡಗಿಸಿ ಇಟ್ಟುಕೊಂಡಿದ್ದ ಪಿಸ್ತೂಲ್ ತೆಗೆದವನೇ, ಟ್ರಿಗರ್ ಒತ್ತೇ ಬಿಟ್ಟ!!!

ರಿವಾಲ್ವರ್ ಚೇಂಬರ್ ಕ್ಲಿಕ್, ಕ್ಲಿಕ್, ಕ್ಲಿಕ್ ಅಂದಿತೇ ವಿನಹಾ ಗೋಲಿ ಹಾರಲೇ ಇಲ್ಲ. ಕೇವಲ ಎರಡು ಮೂರು ಅಡಿ ದೂರದಲ್ಲಿ ನಿಂತಿದ್ದ ಕ್ಯಾಸ್ಟ್ರೋ ಕಣ್ಣಲ್ಲಿ ಭೀತಿಯೋ, ಆಶ್ಚರ್ಯವೋ, ಮತ್ತೇನು ಭಾವವೋ ಗೊತ್ತಿಲ್ಲ. ತಕ್ಷಣ ಕ್ಯಾಸ್ಟ್ರೋನ ಅಂಗರಕ್ಷಕರು ಪಿಸ್ತೂಲ್ ವಶಪಡಿಸಿಕೊಂಡಿದ್ದರು. ಹ್ಯಾರಿ ವಿಲಿಯಮ್ಸ್ ಮಾತ್ರ ಹತಾಶೆಯಿಂದ ಹಾಸಿಗೆ ಗುದ್ದುತ್ತಾ, ಪರಿತಪಿಸುತ್ತಾ ಮಗ್ಗುಲು ಬದಲಾಯಿಸಿದ. ತಾನೇ ಗುಂಡು ತುಂಬಿಸಿ ರೆಡಿ ಇಟ್ಟಿದ್ದ ಪಿಸ್ತೂಲ್ ಕೈಕೊಟ್ಟಿತಲ್ಲ. ಛೆ!!ಛೆ!! ಅವನ ವಿಷಾದಕ್ಕೆ ಎಲ್ಲೆ ಇರಲಿಲ್ಲ.

ಆಗಿದ್ದು ಇಷ್ಟೇ. ಆ ಪರಿ ಗಾಯಗೊಂಡಿದ್ದ ಹ್ಯಾರಿ ವಿಲಿಯಮ್ಸ್ ಕಡೆ ಪೂರ್ತಿ ತುಂಬಿದ ಪಿಸ್ತೂಲ್ ನೋಡಿದ ಅವನ ಗೆಳೆಯನೊಬ್ಬ ಗುಂಡು ತೆಗೆದು ಖಾಲಿ ಪಿಸ್ತೂಲ್ ಇಟ್ಟು  ಬಿಟ್ಟಿದ್ದ. ಆ ಗೆಳಯನಿಗೆ ಒಂದೇ ಅನುಮಾನ- ಈ ಪರಿ ಗಾಯಗೊಂಡಿರುವ ಹ್ಯಾರಿ ವಿಲಿಯಮ್ಸ್ ಆತ್ಮಹತ್ಯೆ ಮಾಡಿಕೊಳ್ಳಲು ಎಂದೇ ತುಂಬಿದ ಪಿಸ್ತೂಲ್ ಇಟ್ಟುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದನೋ  ಏನೋ? ಅಷ್ಟರಲ್ಲಿ ಪ್ರಜ್ಞೆ ತಪ್ಪಿಹೋಗಿದೆ. ಇನ್ನು ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಕ್ಷಣ ಇದೇ ಪಿಸ್ತೂಲಿನಿಂದ ಕೊಂದುಕೊಂಡಾನು - ಅಂತ ಸ್ನೇಹಿತನ ಮೇಲಿನ ಕಾಳಜಿಯಿಂದ ಗುಂಡು ತೆಗೆದು ಇಟ್ಟು ಬಿಟ್ಟಿದ್ದ ಆ ಗೆಳೆಯ!!!!

ಒಟ್ಟಿನಲ್ಲಿ ಕ್ಯಾಸ್ಟ್ರೋ ಬಚಾವಾಗಿದ್ದ. ಕ್ಯಾಸ್ಟ್ರೋ ಮೇಲೆ ಆದ ಹತ್ಯಾ ಪ್ರಯತ್ನಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಇದೂ ಒಂದು ಸೇರಿ ಹೋಯಿತು. ಆದ್ರೆ ಇದಕ್ಕೆ ಬೇರೆಯದೇ ಒಂದು ಮಹತ್ವ ಬಂದು ಬಿಟ್ಟಿತು. 

ಮುಂದೆ ಎರಡೇ ವರ್ಷಗಳಲ್ಲಿ ಪ್ರೆಸಿಡೆಂಟ್ ಜಾನ್ ಕೆನಡಿ ಗುಂಡು ತಿಂದು ಸತ್ತು ಹೋದರು. ಈಗ ಹೊರಬರುತ್ತಿರುವ ಮಾಹಿತಿಗಳ ಪ್ರಕಾರ - ಕ್ಯೂಬಾದ ಗೆರಿಲ್ಲಾಗಳೇ ಅವರು ಹಂದಿ ಕೊಲ್ಲಿಯಲ್ಲಿ ಸಹಾಯ ಮಾಡಲಿಲ್ಲ ಎಂಬ ಸಿಟ್ಟಿನಿಂದ ಅವರನ್ನು ಶೂಟ್ ಮಾಡಿ ಬಿಟ್ಟರು - ಅಂತ. ಕೆನಡಿಗೆ ಗುಂಡು ಅವರೇ ಹೊಡೆದಿದ್ದರೂ ಷಡ್ಯಂತ್ರ ಮಾತ್ರ ದೊಡ್ಡದಿತ್ತು. ಹಿಂದಿನ ಸೂತ್ರಗಳನ್ನು ಎಳೆದವರು ಬೇರೆಯವರೇ ಇದ್ದರು.

ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರೋ? ಅಂತ ಅಮೇರಿಕಾದ ಅಧ್ಯಕ್ಷರುಗಳನ್ನು ಹಂಗಿಸುತ್ತಾ ಕ್ಯಾಸ್ಟ್ರೋ ಇಂದಿಗೂ ಆರಾಮ ಇದ್ದಾನೆ.


** ಬರೆದಿರುವ ಮಾಹಿತಿ ಹಲವಾರು ಪುಸ್ತಕಗಳಿಂದ ಆರಿಸಿ ಬರೆದಿದ್ದು. Lamar Waldron ಎಂಬವರು ಕ್ಯೂಬಾ, ಕೆನಡಿ ಹತ್ಯೆ, ನಿಕ್ಸನ್ ರಾಜಿನಾಮೆ ಕುರಿತಂತೆ ಹಲವಾರು ಒಳ್ಳೆಯ ಪುಸ್ತಕ ಬರೆದಿದ್ದಾರೆ. ಅವುಗಳಲ್ಲಿ ಸಿಕ್ಕ ಮಾಹಿತಿ.

**  ಹಡಾಗತಿ = fiasco

Thursday, October 25, 2012

ಟಗರ್ಮಂಗೋಲಿ

ಟಗರ್ಮಂಗೋಲಿ ಮಂಗ್ಯಾ

ಮನ್ನೆ ಚೀಪ್ಯಾ ಸಿಕ್ಕಿದ್ದ.

ಅವನ.....ಶ್ರೀಖಂಡ....ತಿಳಿಲಿಲ್ಲ?

ಶ್ರೀಪಾದ ಖಂಡುರಾವ್ ಡಕ್ಕನೆಕರ್ ಎಂಬ ರಿಗ್ವೇದಿ ದೇಶಸ್ಥ ಬ್ರಾಹ್ಮಣ ಚೀಪ್ಯಾ ಆಗಿ, ಆಗಾಗ ಶ್ರೀಖಂಡ ಅಂತ ಕೂಡ ಕರೆಯೆಲ್ಪಡುತ್ತಾನೆ.

ಅವಾ ನಾನು ಬಾಲವಾಡಿ ದೋಸ್ತರು. ಮೊದಲನೆ ದಿನ ಸಾಲಿಯೊಳಗ ಸಿಕ್ಕಿದ್ದ.

"ಏನೋ ನಿನ್ನ ಹೆಸರು?"  ಅಂತ ಕೇಳಿದ್ದೆ.

ತೊದಲ್ನುಡಿಯಾಗ, "ನನ್ನೆಸರು ಚೀಪಾದ", ಅಂದಿದ್ದ.

ಧಾರವಾಡ ಮಂದಿ ಸಂಜಯ ಅನ್ನೋವನ್ನ ಸಂಜ್ಯಾ, ಮಂಗೇಶ್ ಅನ್ನೋವನನ್ನ ಮಂಗ್ಯಾ, ಸಚಿನ್ ಅನ್ನೋವನನ್ನ ಸಚ್ಯಾ ಅಂತ ಕರೀತಾರ. ಹಾಂಗಾಗಿ ಶ್ರೀಪಾದ ಅನ್ನೋವಾ ಚೀಪಾದ ಆಗಿ ಅಲ್ಲಿಂದ ಚೀಪ್ಯಾ ಅಂತಾಗಿಬಿಟ್ಟಿದ್ದ. ಹಾಂಗಂತ ಅವಾ ಚೀಪ್  ಅಂತ ತಿಳ್ಕೋಬಾರದು.ಅದು ತಪ್ಪಾಗ್ತದ.

ಮುಂದ ಪ್ರೈಮರಿ ಸ್ಕೂಲ್ ಜಾಗ್ರಫಿ ಒಳಗ ಆಫ್ರಿಕಾ ಖಂಡಕ್ಕ ಕಪ್ಪು ಖಂಡ (dark continent) ಅಂತಾರ ಅಂತ ಒಬ್ಬರು ಮಾಸ್ತರು ಹೇಳಿದ್ರು. ಯಾವದೋ ಕಿಡಿಗೇಡಿ, "ಸಿಹಿಯಾದ ಖಂಡಕ್ಕ ಏನಂತಾರ?", ಅಂತ ಕೇಳಿದ್ದ. "ಏನಲೇ ಹಾಂಗಂದ್ರಾ?" ಅಂತ ಕೇಳಿದ್ರಾ, "ಹೀ....ಹೀ.....ಸಿಹಿಯಾದ ಖಂಡ ಅಂದ್ರ ಶ್ರೀಖಂಡ ಉರ್ಫ್ ನಮ್ಮ ಚೀಪ್ಯಾ" ಅಂತ ಹೇಳಿ ಜೋಕ್ ಹೊಡೆದಿದ್ದ.

ಶ್ರೀಖಂಡ.....ಶ್ರೀಪಾದ ಖಂಡುರಾವ್ ಡಕ್ಕನೆಕರ್......ಉರ್ಫ್ ಶ್ರೀಖಂಡ.

ಎಲ್ಲೋ ಡೆಕ್ಕನ್ ಪ್ಲೆಟ್ಯು (Deccan Plateau) ಕಡೆ ಮಂದಿ ಇರಬೇಕು. ಅದರಿಂದಾನ ಡಕ್ಕನೆಕರ್ ಅಂತ ಅವರ ಅಡ್ದೆಸರು.`

ಅವಾ ಹಾಪ್ ಮರಾಠಿ ಹಾಪ್ ಕನ್ನಡ ಬ್ರಾಹ್ಮಣ ಇದ್ದ. ಏನೋ ದೇಶಸ್ಥ ಬ್ರಾಹ್ಮಣ ಅಂತ. ನಾವು ಅವಂಗ, "ಲೇ ನೀವು ಅಲ್ಲೆಲ್ಲೋ ಮಹಾರಾಷ್ಟ್ರ ಕಡೆ ಕಿತಬಿ ಮಾಡಿ ಅಲ್ಲಿಂದ ನಿಮ್ಮನ್ನ ದೇಶಭ್ರಷ್ಟ ಮಾಡಿ ಓಡಿಸ್ಯಾರ. ಅದನ್ನ ದೇಶಸ್ಥ ಅನ್ನಕೋತ್ತ ನಮಗ ಮಂಗ್ಯಾ ಮಾಡ್ತಿ ಏನಲೇ ಚೀಪ್ಯಾ? ಹಾಂ? ಹಾಂ?", ಅಂತ ಕೂಡ ಕಾಡಿಸ್ತಿದ್ವಿ. ಅವಾ ಪಾಪ, "ಇಲ್ಲೋ....ಇಲ್ಲೋ....ನಾವ ಒಳ್ಳೆ ಬ್ರಾಹ್ಮ್ರು. ರಿಗ್ವೇದಿ ಬ್ರಾಹ್ಮ್ರು" ಅನ್ನಕೊತ್ತ ಡಿಫೆಂಡ್ ಮಾಡ್ಕೊತ್ತಿದ್ದ.

ಮನ್ನೆ ಸಿಕ್ಕಿದ್ದ ಚೀಪ್ಯಾ. ಎಲ್ಲೆ ಅಂದ್ರ ಮತ್ತೆಲ್ಲೆ? ರೆಗ್ಯುಲರ್ ಅಡ್ಡಾ. ಭೀಮ್ಯಾನ್ ಚುಟ್ಟಾ ಅಂಗಡಿ.

ಬಂದವನ ಮಾಣಿಕಚಂದ್ ಗುಟ್ಕಾದ ಒಂದು ಹತ್ತರ ಮಾಲಿ ಕೇಳಿ ತೊಗೊಂಡ. ಒಂದ ಮಾಲಿ ಇರಲಿಲ್ಲ. ಭೀಮು ನಾಕ ಚೀಟಿಂದು ಒಂದ ಮಾಲಿ, ಮೂರು ಚೀಟಿದು ಎರಡ ಮಾಲಿ ಕೊಟ್ಟು, ಒಟ್ಟು ಹತ್ತು ಗುಟ್ಕಾ ಕೊಟ್ಟ. ಇಷ್ಟೆಲ್ಲಾ ಇಸ್ಕೊಬೇಕಾದ್ರ ಒಂದು ಕೆಳಗ ಬಿದ್ದು ಬಿಡ್ತು. ಐದು ರುಪಾಯಿಗೆ ಒಂದು ಗುಟ್ಕಾ ಚೀಟಿ. ಕೆಳಗ ಬಿತ್ತು ಅಂತ ಬಿಡಲಿಕ್ಕೆ ಬರ್ತದ ಏನು? ಇಲ್ಲ. ಚೀಪ್ಯಾ ಬಗ್ಗಿ ಆರಿಸಿಕೊಳ್ಳಲಿಕ್ಕೆ ಹೋದ.

"ಬಾಬಾ....ಆಯಿರೇ.....ನಂದು ಸೊಂಟಾ ಹೋತೋ", ಅಂತ ಚೀಪ್ಯಾ ನೋವಿಂದ ಮುಲುಗಿದ.

"ಯಾಕೋ ಚೀಪ್ಯಾ? ಏನಾತು? ಯಾರರ ಸೊಂಟ ಮುರದರು ಏನು?", ಅಂತ ಕೇಳಿದೆ.

"ಇಲ್ಲಪಾ ದೋಸ್ತಾ. ಎಲ್ಲಾ ನನ್ನ ಹೆಂಡ್ತಿ ಕೃಪಾ. ಅಕಿಂದನಾ ನನ್ನ ಸೊಂಟಾ ಹೋತೋ", ಅಂದವನ ಮತ್ತ ಮರಾಠಿ ಒಳಗಾ ಆಯೀ ಬಾಬಾ ಅಂತ ಮುಲುಗಿದ.

"ಹಾಂ? ಕೃಪಾ?!!!!! ನಿನ್ನ ಮೊದಲಿನ ಹೆಂಡ್ತಿ ಹೆಸರು ರೂಪಾ ಅಲ್ಲಾ? ಈಗ ಕೃಪಾ ಯಾರು? ಮತ್ತೊಂದು ಮದ್ವೀ ಮಾಡ್ಕೊಂಡಿ ಏನು? ಏನಪಾ ಇದು ಈ ವಯಸ್ಸಿನ್ಯಾಗ?", ಅಂತ ಕೇಳಿದೆ.

"ಇಲ್ಲೋ ಮಾರಾಯ. ರೂಪಾನ ಹೆಂಡ್ತಿ. ಅಕಿ ಕೃಪಾ ಮಾಡಿದ್ದಕ್ಕ ನನ್ನ ಸೊಂಟಾ ಹೋತೋ ದೋಸ್ತಾ", ಅಂದ ಚೀಪ್ಯಾ.

ನನಗ ತಿಳಿಲಿಲ್ಲ. ಅದಕ್ಕ ನಾನೂ ಒಂದು ಗುಟ್ಕಾ ಹಾಕಿದೆ. ಅದರ ಕಿಕ್ಕಿಂದ ತಿಳಿದರೂ ತಿಳಿಬಹುದು ಅಂತ.

"ಹೋಗ್ಗೋ.....ಚೀಪ್ಯಾ....ಮತ್ತ ಏನೇನೋ  ಸೂತ್ರದ, ಶಾಸ್ತ್ರದ ಬುಕ್ಸ್  ಓದಿ ಹೊಸ ಹೊಸ ಭಂಗಿ ಟ್ರೈ ಮಾಡಿದಿ ಏನು? ಅದಕ್ಕಾ ಸೊಂಟ ಹಿಡಕೊಂಡಿರಬೇಕು. ಅಲ್ಲಾ?", ಅಂತ ಕಿಡಿಗೇಡಿ ಲುಕ್ ಕೊಟ್ಟುಗೊತ್ತ ಕೇಳಿದೆ. ಕಣ್ಣ ಹೊಡೆದೆ.

"ಏನ್ ಭಂಗಿ ಹಚ್ಚಿ? ನಮ್ಮ ಮನಿಯೊಳಗ ಈಗ ಪಾಯಖಾನಿಗೆ ಸೆಪ್ಟಿಕ್ ಟ್ಯಾಂಕ್ ಅದ. ಭಂಗಿ ಗಿಂಗಿ ಮಂದಿ ಈಗ ಬರಂಗಿಲ್ಲ", ಅಂದ ಚೀಪ್ಯಾ.

ಇವರ ಮನಿ ದೇವ್ರಾಣಿ ಇವಂಗ ನಾ ಹೇಳಿದ ಭಂಗಿ ಏನು ಅಂತ ತಿಳಿದಿಲ್ಲ ಅಂತ ಗೊತ್ತಾತು.

"ಹ್ಞೂ....ಇರಲೀ ಬಿಡಪಾ. ಭಂಗಿ ಮಂದಿ ಎಲ್ಲಾ ಜಾತಿ ಕನ್ವರ್ಟ್ ಮಾಡಿಕೊಂಡು ಕ್ರಿಸ್ಟೋಫರ್ ಶಾಂತಪ್ಪಾ ಆಗಿ ಬಿಟ್ಟಾರ. ಭಂಗಿ, ಲುಂಗಿ ಬಿಡು. ನೀ ಹೇಳಪಾ ಏನಾತು ಅಂತ", ಅಂತ ಅಂದೆ.

"ಹೌದೋ....ರಂಗೋಲಿ ಹಾಕ್ಲಿಕ್ಕೆ ಹೋಗಿ ಸೊಂಟಾ ಹೋತೋ", ಅಂದ ಚೀಪ್ಯಾ.

ರಂಗೋಲಿ
"ಏನು ನೀನು ರಂಗೋಲಿ ಹಾಕಿದ್ಯಾ? ಯಾಕ? ರಂಗೋಲಿ ಹಾಕಿ ರಂಗ್ಯಾ ಆಗಬೇಕಾಗಿತ್ತು ನೀನು. ಅದೆಲ್ಲೋ ರಂಗೋಲಿ ರಾಂಗಾಗಿ ಮಂಗ್ಯಾ ಆಗಿ ಸೊಂಟಾ ಉಳಿಕಿಸಿಕೊಂಡಿಯಲ್ಲೋ. ಇದೆಲ್ಲೋ ರಂಗೋಲಿ ಹೋಗಿ ಮಂಗೋಲಿ ಆಗಿ ಬಿಟ್ಟದಲ್ಲೋ. ಲೇ...ಮಂಗೋಲಿ ಮಂಗ್ಯಾ.....ಹೀ.....ಹೀ.....", ಅಂತ ನಕ್ಕೆ. ಅವಂಗ ಕಾಡಿಸಿದ ಫೀಲಿಂಗ ಬಂತು. ಅದೆಲ್ಲಾ ಕಾಮನ್ ದೋಸ್ತ ಮಂದಿಯೊಳಗ.

"ಹಾಂಗ ಆತೋ ದೋಸ್ತ. ಇಕಿ ರಂಗೋಲಿ, ಮುಂಜಾನೆದ್ದು ಹಾಕೋ ಕರ್ಮ ನಂದು. ಅದರಾಗ ಟಗರ್ ಬ್ಯಾರೆ ಅಲ್ಲೇ ಬರಬೇಕ. ಅದೂ ನಮ್ಮ ದೋಸ್ತ ಕರೀಂ ಬಕ್ರೀದಕ್ಕ ಅಂತ ತಂದಿದ್ದ ಟಗರು", ಅಂತ ಅಂದುಬಿಟ್ಟ ಚೀಪ್ಯಾ. ತಲಿ ಕೆಟ್ಟ ಮಸರ ಗಡಗಿ ಆತು.

ಹೆಂಡ್ತಿ ರಂಗೋಲಿ. ಇವಾ ಹಾಕವ. ಕರೀಮನ ಟಗರು. ಇವನ ಸೊಂಟಾ.............ಒಂದಕ್ಕೊಂದು ಏನು ನಂಟು? ತಿಳಿಲಿಲ್ಲ.

"ಏನಾತು ಅಂತ ಸರಿ ಮಾಡಿ ಹೇಳೋ ಚೀಪ್ಯಾ?" , ಅಂದೆ.

"ದೋಸ್ತ....ಈಗ ನಮ್ಮನಿ ಮುಂದ ಸ್ಪೆಷಲ್ ರಂಗೋಲಿ ಮಾರಾಯ. ಶ್ರೀಚಕ್ರದ ರಂಗೋಲಿ. ಅವಾ ಯಾರೋ ಪೂಜಾರಿನೋ, ಮಂತ್ರವಾದಿನೋ ನನ್ನ ಹಾಪ್ ಹೆಂಡತಿಗೆ ಹೇಳ್ಯಾನ ಅಂತ. ನಿಮ್ಮ ಮನಿ ಮುಂದ ಶ್ರೀಚಕ್ರದ ರಂಗೋಲಿ ಹಾಕಿದರ ಮಸ್ತ ರೊಕ್ಕ ಬರ್ತದ ಅಂತ. ದಿನಾ ತಪ್ಪದಂತ 21 ದಿವಸ ಮುಂಜಾನೆ ಕರೆಕ್ಟ್ ಐದು ಘಂಟೆಕ್ಕ ಎದ್ದು ಮಡಿಯೊಳಗ ಹಾಕ್ರಿ ಅಂತ ಹೇಳಿ ಎರಡ ಸಾವಿರ ರೊಕ್ಕಾ ಬೋಳಿಸಿ ಕಳ್ಸಿದ ಆವಾ. ಇಕಿ ಒಂದೋ ಎರಡೋ ದಿನ ಮುಂಜಾನೆ ಲಗೂನ ಎದ್ದು ಹಾಕಿದಳು.......", ಅಂತ ಹೇಳಿ ಗುಟ್ಕಾ ಪಿಚಕಾರಿ ಹಾರಿಸಲಿಕ್ಕೆ ಒಂದು ಸಣ್ಣ ಬ್ರೇಕ್ ತೊಗೊಂಡ ಚೀಪ್ಯಾ.

"ಗೊತ್ತಲ್ಲ ನಿನಗ ಅಕಿ ಆರಂಭಶೂರತ್ವ? ಎರಡು ದಿನ ಎದ್ದು ಹಾಕಿದಳು. ಇಕಿ ಎದ್ದು ಧಡಾ ಬಡಾ ಮಾಡೋದ್ರಾಗ ನನಗ ನಿದ್ದಿ ಇಲ್ಲ. ಮೂರನೇ ದಿನ ನನಗ ಒಂದು ಕೆಟ್ಟ ಕನಸು ಬಿದ್ದು ಏಕದಂ ಎಚ್ಚರ ಆಗಿ ಬಿಡ್ತು. ಟೈಮ್ ನೋಡಿದ್ರ 4.40 am ಆಗಿತ್ತು. ಇಕಿ ಬಾಜೂಕ ಕುಂಡಿ ಸೈಡ್ ಮಾಡಿಕೊಂಡು, ಹಿಡಂಬಿ ಗತೆ ಗೊರಕೀ ಹೊಡಕೋತ್ತ, ಮೂಗಿನ್ಯಾಗ ಬೆಟ್ಟ ಹೆಟ್ಟಿಗೊಂಡು, ಜೊಲ್ಲ ಸುರಿಸ್ಕೋತ್ತ, ಹೇಶಿ ಗತೆ  ನಿದ್ದಿ ಮಾಡ್ಲಿಕತ್ತಿದ್ದಳು. ಏಳು ಹಾಂಗ ಕಾಣಲಿಲ್ಲ. ಸ್ನಾನ ಆಗಿ ಮಡಿಯೊಳಗ ರಂಗೋಲಿ ಹಾಕ್ಬೇಕು. ತಪ್ಪಿದರ ಶ್ರೀಚಕ್ರ ಕೆಲಸ ಮಾಡೋದಿಲ್ಲ. ಅದಕ್ಕ ಅಕಿನ್ನ ಅಲುಗಾಡಿಸಿ ಎಬ್ಬಿಸೋ ಪ್ರಯತ್ನ ಮಾಡಿದೆ", ಅಂದ ಚೀಪ್ಯಾ.

"ಮುಂದ ಏನಾತು? ಎದ್ದು ಮಡಿಯೊಳಗ ರಂಗೋಲಿ ಹಾಕಿ ಬಂದು ಮತ್ತ ಗುಡಾರ್ ಹೊಚಗೊಂಡು ಮಲ್ಕೊಂಡಳು ಏನು?", ಅಂತ ಕೇಳಿದೆ.

"ಎಲ್ಲಿದು? ನನಗ ಬೈದು ಬಿಟ್ಟಳು ಅಕಿ", ಅಂತ ಮಳ್ಳ ಮಸಡಿ ಮಾಡಿದ ಚೀಪ್ಯಾ.
 
"ಏನಂತ ಬೈದಳು ಚೀಪ್ಯಾ?", ಅಂತ ಕೇಳಿದೆ.

"ನಾ ಏನ ಏಳಂಗಿಲ್ಲ. ಬೇಕಾದ್ರ ನೀವ ಎದ್ದು  ಮಡಿಯೊಳಗ ರಂಗೋಲಿ ಹಾಕ್ಕೊರೀ. ಇಲ್ಲಾ ಮಂಗೋಲಿ ಹಾಕ್ಕೊರೀ. ನೀವು ಇರೋ ಕರ್ಮಕ್ಕ ನಾ ಎಂತಾ ರಂಗೋಲಿ ಹಾಕಿದ್ರೂ ನಮ್ಮ ಕಡೆ ರೊಕ್ಕ ಬರೋದು ಅಷ್ಟರಾಗ ಅದ. ಹಾಳಾಗಿ ಹೋಗ್ರೀ. ನನಗ ನಿದ್ದಿ ಮಾಡಲಿಕ್ಕೆ ಬಿಡ್ರೀ", ಅಂತ ಬೈದಳಂತ ಚೀಪ್ಯಾನ ಹೆಂಡ್ತಿ.

"ಈಗ ಕ್ಲೀಯರ್ ಆತು ನೋಡು ಮಂಗೋಲಿ ಅಂದ್ರ ಏನು ಅಂತ", ಅಂದೆ.

"ಏನಪಾ ಅಂಥಾ ದೊಡ್ಡದು ಕ್ಲೀಯರ್ ಆತು?" ಅಂತ ಚೀಪ್ಯಾ ಚಾಲೆಂಜ್ ಮಾಡಿದ.

"ನೋಡೋ......ಮುಂಜಾನೆ ರಂಗೋಲಿ ಹಾಕ್ಲಿಕ್ಕೆ ಹೆಂಡ್ತಿ ಎಬ್ಬಿಸಿಲಿಕ್ಕೆ ಹೋಗಿ, ಅಕಿ ಕಡೆ ಯಕ್ಕಾಮಕ್ಕಾ ಬೈಸ್ಕೊಂಡು 'ಮಂಗ್ಯಾ' ಆಗಿ, ಅದ ಮಂಗ್ಯಾನ್ ಮಸಡಿ ಇಟ್ಟುಗೊಂಡು, ಕದ್ದು ಹೋಗಿ ಹಾಕೋ ರಂಗೋಲಿಗೆ ಮಂಗೋಲಿ ಅಂತಾರ. ಇದ ಕ್ಲೀಯರ್ ಆತು.", ಅಂದು 'ಹ್ಯಾಂಗಲೇ' ಅನ್ನೋ ಲುಕ್ ಕೊಟ್ಟೆ.

ಹಾಳಾಗಿ ಹೋಗು ಅನ್ನೋ ಲುಕ್ ಕೊಟ್ಟಾ ಚೀಪ್ಯಾ.

ಮಂಗೋಲಿ ಮಂಗ್ಯಾ 

"ಚೀಪ್ಯಾ....ರಂಗೋಲಿ ಹಾಕಿದ್ರಾ ಸೊಂಟಾ ಹೋಗುವಂತಾದ್ದು ಏನದನೋ? ಹಾಂ?ಹಾಂ?", ಅಂದೆ.

"ಅದನೋ....ಅದ.....ಎಲ್ಲಾ ಬಗ್ಗಿ ಹಾಕೋದ್ರಾಗನ ಅದ. ಅಂದ್ರ ಬಗ್ಗಿ ರಂಗೋಲಿ ಹಾಕೊದ್ರಾಗ ಅದ ನೋಡೋ......ಹೋತೋ ನನ್ನಾ ಸೊಂಟಾ ಹೋತೋ....." ಅಂತ ಹೇಳಿ ಮತ್ತ ಮುಲುಗಿದ. ಭಾಳ ನೋಯಿಸ್ಲಿಕತ್ತಿತ್ತು ಅಂತ ಅನ್ನಸ್ತದ.

"ಇಕಿ ಹುಚ್ಚ ಖೋಡಿ ಏನೂ ಹಾಶ್ಗಿ ಬಿಟ್ಟು ಏಳು ಹಾಂಗ ಕಾಣಲಿಲ್ಲ. ನಾನ ಎದ್ದು, ಭರಕ್ಕನ ಒಂದೆರಡು ತಂಬ್ಗಿ ಸ್ನಾನದ ಶಾಸ್ತ್ರ ಮುಗಿಸಿ, ಒದ್ದಿ ಪಂಜಾ ಉಟ್ಗೊಂಡು, ರಂಗೋಲಿ ಡಬ್ಬಿ ಹಿಡಕೊಂಡು, ಯಾರರ ನೋಡಿ ಗೀಡ್ಯಾರು ಅಂತ ಆ ಕಡೆ ಈ ಕಡೆ ನೋಡ್ಕೊತ್ತ, ನಮ್ಮ ತುಳಸಿ ಕಟ್ಟಿ ಮುಂದ ಹೋದೆ ನೋಡಪಾ. ಆಗ ಸುಮಾರ್ ಬೆಳಗ ಆಗಿತ್ತು. ಅಲ್ಲೇ ಗೇಟ್ ಮುಂದ ನಮ್ಮ ಕರೀಂ ಸಾಬನ ಕುಡ್ಡ ಕಾಕಾ ಕುರಿ ಬಿಟ್ಗೊಂಡು ನಿಂತಿದ್ದ. ಅವಂಗೇನ ಕಣ್ಣ ಕಾಣಂಗಿಲ್ಲ. ಓಕೆ ಅಂತ ಹೇಳಿ ರಂಗೋಲಿ ಹಾಕ್ಲಿಕ್ಕೆ ರೆಡಿ ಆದೆ ಏನಪಾ. ಅವನೌನ್ ತುಳಸಿ ಕಟ್ಟಿ ಮುಂದ ಬಗ್ಗಿ ಇನ್ನೇನ್ ರಂಗೋಲಿ ಹಾಕ್ಲಿಕ್ಕೆ ಶುರು ಮಾಡ್ಬೇಕು ಅನ್ನೋದ್ರಾಗ ಹಿಂದಿಂದ ಸರೀತ್ನಾಗಿ ಯಾರೋ ಕುಂಡಿಗೆ ಜಾಡ್ಸಿ ಒದ್ದಾಂಗ ಆತು. ಬ್ಯಾಲನ್ಸ್ ತಪ್ಪಿ ಮುಂದ ಬಿದ್ದೆ. ಭಾಳ್ ನೋವಾತು. ಜೀವಾ ಹೋದಂಗಾತು. ಸುಧಾರಿಸಿಕೊಂಡು ಈ ಕಡೆ ಮಗ್ಗಲಾಗಿ ಏಳೋಣ ಅಂತ ಹೊರಳಿದ್ರಾ , ಸ್ವಲ್ಪ ದೂರದಾಗ ಕರ್ರಗ ದೆವ್ವದಾಂಗ ನಿಂತಿತ್ತು!!!!!!", ಅಂದ ಚೀಪ್ಯಾ.

ಭಯಂಕರ ಸಸ್ಪೆನ್ಸ್.

"ಏನು ನಿಂತಿತ್ತೋ? ದೆವ್ವಾ? ದೆವ್ವಾ ನಿನಗ ಒದಿತಾ?", ಅಂತ ಕೇಳಿದೆ.

ಕರ್ರ ಟಗರು
 "ಇಲ್ಲೋ.....ನಾ ಬಗ್ಗಿ ನಿಂತಿದ್ದು ಅಲ್ಲೇ ಮೇಯ್ಕೊತ್ತಿದ್ದ ಟಗರಿಗೆ ಏನೋ ಫೀಲಿಂಗ್ ಕೊಟ್ಟಿರಬೇಕು. ಅದಕ್ಕ ನನ್ನ ಪಿಛವಾಡ ಇನ್ನೊಂದು ಟಗರಿನ ಹಾಂಗ ಕಂಡಿರಬೇಕು. ಅದಕ್ಕ ಬಂದು, ಟಗರು ಟಗರಿಗೆ ಟಕ್ಕರ್ ಕೊಟ್ಟು ಗುದ್ದಾಡೋದಿಲ್ಲ? ಹಾಂಗ ಕರ್ರನೆ ಟಗರ್ ಸೂಡ್ಲಿ ಬಂದು ಗುದ್ದೇ ಬಿಡ್ತು. ಆದ್ರಾ ನನ್ನ ಪಿಛವಾಡ ಸಾಫ್ಟ್. ಮತ್ತ ಕೋಡಿಲ್ಲ. ಟಗರು ಕೊಟ್ಟ ಗಜ್ಜಿಗೆ ನಾನು ಡಮಾರ್ ಅಂತ ಬಿದ್ದೆ. ಟಗರು ಮತ್ತೊಮ್ಮೆ ಕೋಡಿಗೆ ಕೋಡ ಹಚ್ಚಿ ಕುಸ್ತಿ ಮಾಡೋಣ ಬಾ, ಅನ್ನೋ ಹಾಂಗ ಸ್ವಲ್ಪ ದೂರ ಹೋಗಿ ನಿಂತು, ನಾ ತಿರಗೋದನ್ನ ವೇಟ್ ಮಾಡ್ಲಿಕತ್ತಿತ್ತು. ನಾ ಹೊಳ್ಳಿದ್ದ ನೋಡಿದ್ ಕೂಡಲೇ, ತಲಿ ಕೆಳಗ ಬಗ್ಗಿಸ್ಕೊಂಡು, ಕೋಡ್ ಮ್ಯಾಲೆ ಎಬ್ಬಿಸ್ಕೊಂಡು ಓಡಿ ಬಂದ  ಬಿಡ್ತ. ಈ ಸರೆ ಸೀದಾ ತೊಡಿ ಮಧ್ಯದ ಪೂಜಾ ಸ್ಥಾನಕ್ಕ ಗಜ್ಜು ಬಿದ್ದು, ಜನರೇಟರ್ ಜ್ಯಾಮ್ ಆಗಿ, ಪಂಚೆಯೊಳಗಿನ ಪಂಚಾಂಗ ಫುಲ್ ಲ್ಯಾಪ್ಸ್ ಆಗೋ ರಿಸ್ಕ್ ಇತ್ತು. ನಮ್ಮನಿ ದೇವರು ಪಂಡರಾಪುರದ ಪಾಂಡುರಂಗನ್ನ ನೆನೆಸಿಕೊಂಡು, ಒಂದು ಡೈವ್ ಹೊಡದ ಬಿಟ್ಟೆ ಸೈಡಿಗೆ. ಒಂದೆರಡು ಇಂಚಿನ್ಯಾಗ ಟಗರ್ ದಾಳಿಯಿಂದ ಬಚಾವ್ ಆದೆ. ಟಗರ್ ಹೋಗಿ ತುಳಸಿ ಕಟ್ಟಿಗೆ ಡಿಕ್ಕಿ ಹೊಡ್ಕೊಂಡು, ಏನ ಆಗಿಲ್ಲ ಅನ್ನೋರಾಂಗ ಮತ್ತ ತನ್ನ ಪೋಸಿಶನ್ ಗೆ ಹೋಗಿ ನಿಂತು, ಮತ್ತ ಓಡಿ ಬರಲಿಕ್ಕೆ ರೆಡಿ ಇತ್ತು. ಇದು ದೆವ್ವ ಹೊಕ್ಕ ಟಗರು ಅಂತ ಹೇಳಿ, ರಂಗೋಲಿ ಪುಡಿ ಡಬ್ಬಿ ಒಗದು, ಬರೆ ಪಟ್ಟಾಪಟ್ಟಿ ಚಡ್ಡಿಯೊಳಗ ಮನಿಯೊಳಗ ಓಡಿ ಬಂದೆ. ಇಷ್ಟು ಆಗಿದ್ದು ನೋಡಪಾ", ಅಂತ ಹೇಳಿ ಫುಲ್ ವಿವರಣೆ ಕೊಟ್ಟ.

ಫುಲ್ ಕೊಬ್ಬಿದ ಟಗರು ಹಿಂದಿಂದ ಬಂದು ಗುದ್ದಿ, ಇವಾ ಬಿದ್ದಿದ್ದಕ್ಕ ಇಷ್ಟು ದೊಡ್ಡ ಪ್ರಮಾಣದ ಸೊಂಟಾ ಝಕಮ್ ಆಗ್ಯದ ಅಂತ ಗೊತ್ತಾತು.


ಅಷ್ಟರಾಗ ಕರೀಂ ಸಹ ಅಲ್ಲೇ ಬಂದು ಬಿಟ್ಟ. ಅವನ್ನ ನೋಡಿದ ಕೂಡಲೇ ಚೀಪ್ಯಾನ ಬೀಪಿ ಸಿಕ್ಕಾಪಟ್ಟೆ ಏರಿ ಹೋತು.

"ಲೇ....ಮಂಗ್ಯಾನ್ ಕೆ....ಕರೀಂ.....ಟಗರ್ ತಂದು ರಸ್ತೆದಾಗ ಮೇಯಲಿಕ್ಕೆ ಬಿಡ್ತಿ. ಅದರ ಮ್ಯಾಲೆ ಅದನ್ನ ಕಾಯಲಿಕ್ಕೆ ನಿಮ್ಮ ಕುಡ್ಡ ಕಾಕಾ. ನಿನ್ನ ಟಗರ್ ನನ್ನ ಕೊಂದ ಬಿಟ್ಟಿತ್ತು. ಗೊತ್ತದ ಏನು? ದರಿದ್ರದವನ....." ಅಂತ ಅವಂಗ ಬೈದ.

ಕರೀಮಗ ತಲಿ ಬುಡ ತಿಳಿಲಿಲ್ಲ. ಪ್ಯಾ....ಪ್ಯಾ....ಅಂದ.

ನಾನು ಕರೀಮಗ ತಿಳಿಯುಹಾಂಗ ಹೇಳಿದೆ.

"ಓ!!!!! ಆ ಟಗರು ಕ್ಯಾ? ಬಕ್ರೀದ್ ಗೆ ಅದರದ್ದು ಕುರ್ಬಾನಿ ಮಾಡಿ, ಅದರಿಂದ ಬಿರ್ಯಾನಿ ಮಾಡಿ, ಎಲ್ಲಾ ತಿಂದು ಆಯ್ತು ಸಾಬ್....", ಅಂತ ಹೇಳಿ ಖುಷ್ ಲುಕ್ ಕೊಟ್ಟ ಕರೀಂ.

"ಗರಂ ಮಸಾಲ ಮಸ್ತ ವಾಸನಿ ಅದೇ", ಅನ್ನಕೊತ್ತ ಕೈ ಮೂಸಿ ಮೂಸಿ ಬಿರ್ಯಾನಿ ವಾಸನಿ ನೋಡ್ಕೊಂಡ ಕರೀಂ. ಹಾಪ್ಸೂಳೆಮಗ. (ಪ್ರೀತಿ ಬೈಗಳ)

ಬಕ್ರೀದ ಹಬ್ಬಕ್ಕ ತಂದ ಟಗರು ಅಲ್ಲಾ-ಕೋ-ಪ್ಯಾರೆ ಆಗಿ ಬಿಟ್ಟಿತ್ತು. ಚೀಪ್ಯಾ ಫುಲ್ ದಂಗಾಗಿ ಬಿಟ್ಟ. ಮನ್ನೆ ಮನ್ನೆ ಕುಂಡಿಗೆ ಗುದ್ದಿದ ಟಗರು ಇವತ್ತು ಎದ್ರಿಗೆ ನಿಂತ ಕರೀಮನ ಹೊಟ್ಟಿಯೊಳಗ ಅಂದ್ರ ಏನು?

ಜೀವನ ಎಷ್ಟು ನಶ್ವರ. ಅಲ್ಲ?
------------------------------------------------------------------------------------------------------
* ಟಗರು = ಆಡು, ಮೇಕೆ

* ಟಗರ್  + ಮಂಗೋಲಿ = ಟಗರ್ಮಂಗೋಲಿ (ಯಾವ ಸಂಧಿನೋ ಗೊತ್ತಿಲ್ಲ)

* ಬಗ್ಗಿದವರಿಗೆ ಬಂದು ಗುದ್ದೋದು ಟಗರುಗಳ ಸಹಜ ಧರ್ಮ. ಯಾಕೋ ಗೊತ್ತಿಲ್ಲ. ನಮ್ಮ ಬಾಜು ಮನಿ ಅಜ್ಜಾವರಿಗೂ ಸಹ ಟಗರು ಬಂದು ಗುದ್ದಿತ್ತು. ಆ ಘಟನೆಯೂ ಒಂದು ಸ್ಪೂರ್ತಿ.

* ರಂಗೋಲಿ, ಮಂಗೋಲಿ - ದೋಸ್ತರೊಂದಿಗೆ ಹರಟೆ ಹೊಡೆದಾಗ ಉತ್ಪತ್ತಿ ಮಾಡಿ ನಕ್ಕಿದ್ದು. ಆ ದೋಸ್ತರಿಗೂ ಒಂದು ಥ್ಯಾಂಕ್ಸ್.

Tuesday, October 23, 2012

ಅಂದಿನ ಮರ್ಫೀ ಬೇಬಿ ಇಂದಿನ 'ಮಂದಿ' ಗಂಡ

ಮರ್ಫೀ ಬೇಬಿ 

 ಮರ್ಫೀ ಬೇಬಿ......ಅಯ್ಯೋ!!!....ಎಷ್ಟು ಮುದ್ದಾಗಿದೆ!!!.....ಎತ್ತಿಕೊಂಡು ಕಂಡಾಪಟ್ಟೆ ಪಪ್ಪಿ ಕೊಡೊ ಹಾಗೆ ಇದೆ.

ನಮ್ಮ ಕಾಲದಲ್ಲಿ ಇದ್ದಿದ್ದು ಎರಡೇ ರೇಡಿಯೋ ಬ್ರಾಂಡ್. ಒಂದು ಫಿಲಿಪ್ಸ್. ಇನ್ನೊಂದು ಮರ್ಫಿ.

ನಮ್ಮ ತಂದೆಯವರ ಕಾಲದಲ್ಲಿ ಅಂದ್ರೆ ಅವರು ಸ್ಟುಡೆಂಟ್ ಆಗಿದ್ದಾಗ ಇನ್ನೊಂದು ಬ್ರಾಂಡ್ ಅಂದ್ರೆ ಬುಶ್. ಅವರ ಕಡೆ ಅದೇ ಬುಶ್ ರೇಡಿಯೋ ಇತ್ತು. 1950 ರ ದಶಕದಲ್ಲಿ ಮಹಾ ದುಬಾರಿ ರೇಡಿಯೋ ಅದು. 50 ವರ್ಷದ ಮೇಲಾಯಿತು. ಇನ್ನೂ ಮಸ್ತ ಇದೆ ಆ ರೇಡಿಯೋ.

ಮನೆಯಲ್ಲಿ ಬುಶ್ ರೇಡಿಯೋ. ಆ ಮ್ಯಾಲೆ ಆಪ್ತರೊಬ್ಬರು  ಸಿಂಗಾಪುರಿಂದ ತಂದು ಕೊಟ್ಟಿದ್ದ ಚಿಕ್ಕ ಪಾಕೆಟ್ ರೇಡಿಯೋ ಎಲ್ಲಾ ಇದ್ದರೂ, ಯಾಕೋ ಮರ್ಫಿ ರೇಡಿಯೋ ಮೇಲೆ ನಮ್ಮ ಕಣ್ಣು. ಆ ಸುಂದರ ಬೇಬಿ ಮಾಣಿಯಿಂದಾಗಿರಬೇಕು.

1984 ರಲ್ಲಿ ನಮ್ಮ ಅದೃಷ್ಟ ಖುಲಾಯಿಸಿಬಿಟ್ಟಿತು. ನಮಗೆ ತುಂಬಾ ಆಪ್ತರಾದ ಒಬ್ಬರು ಧಾರವಾಡದಲ್ಲಿ ಹೊಸಾ ಇಲೆಕ್ಟ್ರೋನಿಕ್ಸ್ ಉಪಕರಣಗಳ ಅಂಗಡಿ ತೆಗೆದರು. ನಾವೂ ಹೋಗಿದ್ವಿ ಓಪನಿಂಗ್ ಸೆರೆಮನಿಗೆ. ಹೋದ ಮೇಲೆ ಬೋಣಿಗೆ ಮಾಡಲೇ ಬೇಕು ನೋಡಿ. ಇಲ್ಲಾಂದ್ರೆ ಹೇಗೆ?  ನಾನು ತಂದೆಯವರಿಗೆ ಗಂಟು ಬಿದ್ದು ಕೊಡಿಸಿಕೊಂಡಿದ್ದು ಆ ಕಾಲದಲ್ಲೇ ಸುಮಾರು 150-200 ರೂಪಾಯಿ ಬೆಲೆಯ ಮರ್ಫೀ ರೇಡಿಯೋ. ಏನು ಮಸ್ತ ಇತ್ತು ಅಂತೀರಿ!!!! ಎರಡು ಬ್ಯಾಂಡ್ ಇತ್ತು. ಒಂದು ಮೀಡಿಯಂ ವೇವ್. ಮತ್ತೊಂದು ಶಾರ್ಟ್ ವೇವ್. "ನನಗೆ ಕಾಮೆಂಟರಿ ಕೇಳಲು ಬೇಕು. ದರಿದ್ರ ಧಾರವಾಡ ಆಕಾಶವಾಣಿ ಪೂರ್ತಿ ಕಾಮೆಂಟರಿ ಕೇಳಿಸೋದಿಲ್ಲ. ಸಾಂಗ್ಲಿ, ದೆಹಲಿ ಇತ್ಯಾದಿ ಸ್ಟೇಶನ್ ನಿಮ್ಮ ಹಳೆ ಬುಶ್ ರೇಡಿಯೋದಲ್ಲಿ ಸರಿ ಸಿಗೋದಿಲ್ಲ. ಅದಕ್ಕೇ ಒಂದು ಒಳ್ಳೆ ರೇಡಿಯೋ ಕೊಡಿಸಿ", ಅಂತ ನಂದು ವರಾತ. ತಂದೆಯವರಿಗೂ ಇಲೆಕ್ಟ್ರೋನಿಕ್ಸ್ ಉಪಕರಣ ಅಂದ್ರೆ ಹುಚ್ಚು. ಹ್ಞೂ...ಅಂತ ಹೇಳಿ ಕೊಡಿಸೇ ಬಿಟ್ಟರು. ದೊಡ್ಡ ಮಟ್ಟದ ಬೋಣಿಗೆ ಮಾಡಿದ್ದಕ್ಕೆ ನಮ್ಮ ಹೊಸ ಅಂಗಡಿ ಸಾವಕಾರರು ಫುಲ್ ಖುಷ್. ಅವರ ಅಂಗಡಿಯೂ ಮಸ್ತ ಉದ್ಧಾರ ಆಗಿಹೋಯಿತು. ಅದು ಬೇರೆ ಮಾತು.

ಆ ಕಾಲದಲ್ಲಿ ಇಂಟರ್ನೆಟ್ ಪಂಟರ್ನೆಟ್ ಇರಲಿಲ್ಲ. ನಮಗೂ ಗೊತ್ತಿರಲಿಲ್ಲ. ಕಾಮೆಂಟರಿ ನಿರಂತರವಾಗಿ ಸಿಕ್ಕಿದ್ದರೆ ಅದೇ ದೊಡ್ಡ ನಸೀಬ. 1983 ವಿಶ್ವಕಪ್ ಫೈನಲ್ ಇದ್ದಾಗ ದರಿದ್ರ ಧಾರವಾಡ ರೇಡಿಯೋ ಸ್ಟೇಶನ್ ಅರ್ಧಕ್ಕೆ ಕಾಮೆಂಟರಿ ಬಂದ ಮಾಡಿ, ನಮ್ಮ ತಂದೆಯವರ ಹಳೆ ಬುಶ್ ರೇಡಿಯೋದಲ್ಲಿ ಕಾಮೆಂಟರಿ ಹತ್ತದೆ, ಇಂಡಿಯಾದ ವಿನ್ನಿಂಗ್ ಮಿಸ್ ಮಾಡಿಕೊಂಡವರು ನಾವು. ದುರಾದೃಷ್ಟ. ಈಗ ಒಳ್ಳೆ ಹೊಸಾ ಮಾಡೆಲ್ ಮರ್ಫಿ ರೇಡಿಯೋ ಬಂದ ಮೇಲೆ ಯಾವ ಸ್ಟೇಶನ್ ಬೇಕಾದರೂ ಸಿಗುತಿತ್ತು. ಲಕಿ.

ಈ ಮರ್ಫೀ ಬೇಬಿ ಯಾರು ಅಂತ ಅವತ್ತೂ ಗೊತ್ತಿರಲಿಲ್ಲ. ಯಾರೋ ಬ್ರಿಟಿಶ್ ಮಾಣಿ ಇರಬೇಕು ಅಂತ ಮಾಡಿದ್ವಿ. ಎಷ್ಟು ಚಂದ ಮಾಣಿ!!!!!! ಆ ಲುಕ್ ನಮ್ಮ ದೇಸಿ ಮಂದಿಗೆ ಬರಲಿಕ್ಕೆ ಸಾಧ್ಯವೇ ಇಲ್ಲ.

ಮನ್ನೆ ಮನ್ನೆ ಗೊತ್ತಾಯಿತು ಆ ಮರ್ಫೀ ಬೇಬಿ ಯಾರು ಅಂತ. ಅವ ಈಗಿನ ಮುಂಡೆ ಗಂಡ.....ಅಲ್ಲಲ್ಲ....ಛೆ....ಛೆ..."ಮಂದಿ ಗಂಡ" ಅಂದ್ರೆ ನಂಬುತ್ತೀರಾ!!!!!!!!!? ಹಾಂ? ಹಾಂ?

ಮುಂದಿನ ಪ್ರಶ್ನೆ, ಈ "ಮಂದಿ" ಯಾರು? ಮಂದಿ ಅಂದರೆ ಜನರಾ? 

ಮಂದಿ ಅಂದ್ರೆ ಹುಡುಗಿ ಹೆಸರು. ನಮ್ಮ ಧಾರವಾಡ ಕಡೆ ಹಾಗೆಯೇ. ಸೀಮಾ ಸೀಮಿ ಆಗುತ್ತಾಳೆ. ಇಂದಿರಾ ಇಂದ್ರಿ ಆಗುತ್ತಾಳೆ. ಕಾಂಚನಾ ಕಾಂಚಿ ಆಗುತ್ತಾಳೆ. ಸಂಧ್ಯಾ ಸಂಧಿ ಆಗುತ್ತಾಳೆ. ಮಂಗಲಾ, ಕುಂಡಲಿನಿ, ಪ್ರಾಣೇಶ್ವರಿ  ಏನೇನು ಆಗುತ್ತಾರೆ ಅಂತ ನೀವೇ ವರ್ಕ್ ಔಟ್ ಮಾಡಿ.

ಮಂದಿ ಅಂದ್ರೆ ಮಂದಾಕಿನಿ. 

ಏನು? ಮರ್ಫಿ ಬೇಬಿ ಮಂದಿ ಗಂಡ ಅಂದ್ರೆ ಮಂದಾಕಿನಿ ಗಂಡನಾ?!!!!!

ಯಾವ ಮಂದಾಕಿನಿ? 

ಅದೇರೀ.....ರಾಮ್ ತೇರಿ ಗಂಗಾ ಮೈಲಿ ಹೋಗಯೀ, ಪಾಪಿಯೋನ್ ಕೆ ಪಾಪ್ ಧೋತೆ ಧೋತೆ................ ಅನ್ನುತ್ತ ಹಲವಾರು ಪಡ್ಡೆ ಹುಡುಗರ ಮನಸ್ಸನ್ನು ಮೈಲೀ ಮಾಡಿದ್ದ ಪುರಾತನ ಬಾಂಬಿಂಗ್ ನಟಿ ಮಂದಾಕಿನಿ.

1990 ದಶಕದಲ್ಲಿ ಮರ್ಫೀ ಬ್ರಾಂಡ್ ಇಲ್ಲವಾಯಿತು ಅಂತ ಅನ್ನಿಸುತ್ತದೆ. ಹಾಗಾಗಿ ಮರ್ಫೀ ಬೇಬಿ ಅಡ್ವರ್ಟೈಸ್ಮೆಂಟ್ ಎಲ್ಲೂ ಕಾಣುತ್ತಿರಲಿಲ್ಲ. ಹಾಗೆಯೇ "ರಾಮ್ ತೇರಿ ಗಂಗಾ ಮೈಲಿ" ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆದರೂ, ನಟಿ ಮಂದಾಕಿನಿ ಕೂಡ ಬಾಲಿವುಡ್ ನಿಂದ ಮಾಯವಾಗಿ ಬಿಟ್ಟಿದ್ದಳು. ಆಕೆಯ ಸುತ್ತ ಮುತ್ತ ಏನೇನೋ ಕಥೆಗಳಿದ್ದವು. ಗೂಗಲ್ ಮಾಡಿ ನೋಡಿ ರೋಚಕ ವಿವರಗಳು ಸಿಕ್ಕಾವು.

ಏನೇ ಇರಲಿ. "ರಾಮ್ ತೇರಿ ಗಂಗಾ ಮೈಲಿ" ಫಿಲಿಂ ಮಾತ್ರ ಏಕ್ದಂ ರಾಜ್ ಕಪೂರ್ ಬ್ರಾಂಡ್. ರಾಜ್ ಕಪೂರನ ಕೊನೆ ಮಗ ರಾಜೀವ್ ಕಪೂರನ ಮೊದಲ ಫಿಲಂ ಅದು. ಅವನೂ ಒಂದೆರಡು ಫಿಲಂ ಮಾಡಿ ನಾಪತ್ತೆ ಆದ. 

ನಾವು "ರಾಮ್ ತೇರಿ ಗಂಗಾ ಮೈಲಿ" ನೋಡಿದ್ದು 1987 ರಲ್ಲಿ. ಧಾರವಾಡದ ಪರಮ ಕೊಳಕ್ "ರೀಗಲ್" ಥೇಟರಿನಲ್ಲಿ. ತಗಣಿಗಳಿಗೆ ಫೇಮಸ್ ಆ ಥೇಟರ್. 6-9 pm ಫಿಲಿಂ ನೋಡಿ, ಹೋಟೆಲಿನಲ್ಲಿ ಊಟ ಮಾಡಿ ಬಂದಿದ್ದು ನೆನಪಿದೆ. ಸೈನ್ಸ್ ಎಕ್ಸಿಬಿಶನ್ ಸಲುವಾಗಿ ಊಟದ ಕೂಪನ್ ಕೊಟ್ಟಿದ್ದರು. ಅದೇ ಊರಿನವರಾದ ನಮಗೆ ಹೋಟೆಲ್ಲಿನಲ್ಲಿ ಊಟ ಮಾಡುವ ಅಗತ್ಯ ಇರಲಿಲ್ಲ. ಆದರೂ ಅಂತಹ ಹಾಟ್ ಸಿನೆಮಾ ನೋಡಿದ ಮೇಲೆ ಮನೆಯೂಟ ಸಪ್ಪೆಯಾದೀತು ಅಂತ ಬಿಟ್ಟಿ ಕೂಪನ್ನಿನಲ್ಲಿ ಊಟ ಜಡಿದು, ಕವಳ (ಎಲೆ ಅಡಿಕೆ) ಬಾಯಲ್ಲಿ ತುಂಬಿಕೊಂಡು ಮನಗೆ ಬಂದಿದ್ದು ಆಯಿತು.

ನಮ್ಮ ಇಂಗ್ಲೀಶ್ ಮಾಸ್ತರರೇ ಹೇಳಿ ಬಿಟ್ಟಿದ್ದರು, "ರಾಮ್ ತೇರಿ ಗಂಗಾ ಮೈಲಿ ಸಿನೆಮಾದಲ್ಲಿ ಗಂಗಾ ನದಿ ಹುಟ್ಟುವ ಜಾಗ ಗಂಗೊತ್ರೀ ಚೆನ್ನಾಗಿ ತೋರ್ಸಿದ್ದಾರೆ", ಅಂತ. ಅಷ್ಟು ಸಾಕಿತ್ತು ನಮಗೆ. ಯಾರಾದರು, ಯಾಕೆ ಆ ಸಿನೆಮಾಕ್ಕೆ ಹೋಗಿದ್ದೆ? ಅಂತ ಕೇಳಿದ್ರೆ ಹೇಳಲಿಕ್ಕೆ. ನೋಡಲಿಕ್ಕೆ ಹೋಗಿದ್ದು "ಬೇರೆಯದನ್ನೇ" ಅಂತ ಹೇಳೋ ಜರೂರತ್ ಇಲ್ಲ. ಅಲ್ಲವಾ?

ಇರಲಿ. 25 ವರ್ಷಗಳ ಮೇಲೆ, ಅಂದ್ರೆ ಈಗ ಏನೋ ವಿಚಾರ ಮಾಡುತ್ತ ಗೂಗಲ್ ಮಾಡಿದರೆ, ಅಂದಿನ ಮರ್ಫೀ ಬೇಬಿ ಇಂದಿನ ಮಂದಿ ಗಂಡ ಅನ್ನೋ ಸುದ್ದಿ ಸಿಗಬೇಕಾ?!!!!! ಭಯಂಕರ ಸುದ್ದಿ.

ಆ ಮರ್ಫೀ ಬೇಬಿ ಮಾಣಿ ಮೂಲತ ಟಿಬೇಟಿ ಅಂತೆ. ಈಗ ಟಿಬೇಟಿ ಸನ್ಯಾಸಿ ಆಗಿ ಯೋಗಾ, ಟಿಬೇಟಿ ಔಷಧಿ ಮತ್ತೊಂದು ಕೊಡುತ್ತಾನಂತೆ. 1992-93 ನಂತರ ನಾಪತ್ತೆ ಆಗಿದ್ದ ಮಂದಿ ಉರ್ಫ್ ಮಂದಾಕಿನಿ ಅವರ ಪತ್ನಿ.

ಒಟ್ಟಿನಲ್ಲಿ ಆರಾಮ್ ಇದ್ದಾರೆ.


ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ಸ್ ಓದಿ:


Wednesday, October 10, 2012

LTTE ಸೇರಬಾರದು. ಸೇರಿದರೆ ಪ್ರೀತಿ ಮಾಡಬಾರದು.

ಅವತ್ತೊಂದು ದಿನ ನಮ್ಮ ಜಂಗಲ್ ಶಿಬಿರದಲ್ಲಿ ಕೂತಿದ್ವಿ. ಭಾರತದ ಶಾಂತಿ ಪಡೆಯ ಹೀಟ್ ಸಿಕ್ಕಾಪಟ್ಟೆ ಜಾಸ್ತಿಯಾಗಿ, ನಾಡು ಬಿಟ್ಟು ಕಾಡು ಸೇರುವ ಪ್ರಸಂಗ ನಮಗೆ ಅಂದ್ರೆ LTTE ಮಂದಿಗೆ. ಆ ಕಾಡೋ? ಕೇಳಬೇಡಿ ನಮ್ಮ ಹಾಲತ್. ಆ ತರಹ ಆಗಿತ್ತು.

ಅಚಾನಕ್ಕಾಗಿ LTTE No.2 ಲೀಡರ್ ಆಗಿದ್ದ ಮಹತ್ತಾಯ ಬಂದು ಬಿಟ್ಟರು. ಪ್ರಭಾಕರನ್ ನಂತರ ಅವರೇ. ಭಾರತದ ಶಾಂತಿಪಡೆಯ ಜೊತೆ ಏನು ಯುದ್ಧ ಆಯಿತು ನೋಡಿ, ಅದರ ಪೂರ್ತಿ ಉಸ್ತುವಾರಿ ಅವರದ್ದೇ.

ಸ್ವಲ್ಪ ಟೆನ್ಸ್ ಆಗಿದ್ದರು ಮಹತ್ತಾಯ. ಅವರ ಪೂರ್ತಿ ಹೆಸರು ಗೋಪಾಲಸ್ವಾಮಿ ಮಹೇಂದ್ರರಾಜ ಅಂತ. ಪ್ರಭಾಕರನ್ ಅವರ ಸಂಬಂಧಿ ಕೂಡ.

ಪೂರ್ತಿ ಲೇಡೀಸ್ ಶಿಬಿರ ನಮ್ಮದು. ಲೇಡಿ ಟೈಗರ್ಸ್ ಬೇರೆ. ಜೆಂಟ್ಸ್ ಟೈಗರ್ಸ್ ಬೇರೆ. ಗೆರಿಲ್ಲಾ ಕಾರ್ಯಾಚರಣೆ ಮಾಡುವಾಗ ಒಟ್ಟಿಗೆ ಮಾಡಿದರೂ, ಶಿಬಿರ ಬೇರೆ ಬೇರೆ. LTTE ನಲ್ಲಿ ಶಿಸ್ತು, ಮಡಿ ಜಾಸ್ತಿ. ಪರಮನಾಯಕ ಪ್ರಭಾಕರನ್ ಅವರ ಅನುಮತಿ ಇಲ್ಲದೆ ಯಾರೂ ಮದುವೆ ಗಿದುವೆ ಮಾಡಿಕೊಳ್ಳೋ ಸಾಧ್ಯತೆ ಇಲ್ಲ. ಅದೂ ಸುಮಾರು ವರ್ಷ LTTE  ನಲ್ಲಿ ಸರ್ವೀಸ್ ಮಾಡಿ, ತಮ್ಮ ಲೋಯಲ್ಟಿ ಪ್ರೂವ್ ಮಾಡಿ, ಏನೋ ಸಾಧಿಸಿದವರಿಗೆ ಮಾತ್ರ ಪ್ರಭಾಕರನ್ ಮದ್ವೆ ಗಿದ್ವೆ ಮಾಡಿಕೊಳ್ಳೋಕೆ ಅನುಮತಿ ಕೊಡುತ್ತಿದ್ದರು. ಒಂದು ಕಾಲದಲ್ಲಿ LTTE ಅಂದ್ರೆ ಕೇವಲ ಅವಿವಾಹಿತ ಮಂದಿಯ ಸಂಘಟನೆ ಅಂತ ಇತ್ತು. ಆದ್ರೆ ಪರಮನಾಯಕ ಪ್ರಭಾಕರನ್ ಅವರೇ ವಿವಾಹ ಮಾಡಿಕೊಂಡ ಮೇಲೆ, ಕೆಲವರಿಗೆ, ಹಿರಿಯರಿಗೆ  ಪರ್ಮಿಶನ್ ಸಿಗತೊಡಗಿತ್ತು.

ಆದ್ರೆ ಲವ್ವು ಗಿವ್ವು ಅಂತ ಮಾತ್ರ ಹೇಳಬೇಡಿ. ಅದು ಮಾತ್ರ LTTE ಗೆ ಒಪ್ಪೋ ಮಾತಾಗಿರಲಿಲ್ಲ. ಸುಮ್ಮನೆ ಇಲ್ಲದ ಕಿರಿಕ್ ಯಾಕೆ ಬೇಕು? ಅಂತ ಅದಕ್ಕೆ ಅನುಮತಿಯೇ ಇರಲಿಲ್ಲ. LTTE ಬಿಟ್ಟು ಹೋಗಿ ಅಂತ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದರು. ಆದ್ರೆ ಬಿಟ್ಟು ಹೋಗುವದು ಎಲ್ಲಿಗೆ? ತಮಿಳರಲ್ಲೇ ಹತ್ತಾರು ಗುಂಪುಗಳು. LTTE ಬಿಟ್ಟು ಹೋದ ಅಂದ್ರೆ ತಲೆ ಮೇಲಿನ ಛತ್ರಛಾಯೆ ಹೋಗಿ ಆಪೋಸಿಟ್ ಪಾರ್ಟಿ ಆದ EPRLF, TELO, PLOTE ಹೀಗೆ ಬೇರೆ ಯಾವದೋ ಸಂಘಟನೆ ಮಂದಿ ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಾರೆ. ಇಲ್ಲಾಂದ್ರೆ ಕಾಸಿಗಾಗಿ ಹಿಡಿದು ಭಾರತದ ಶಾಂತಿ ಪಡೆಗೆ ಕೊಡುತ್ತಾರೆ. ಹಾಗಾಗಿ ಒಮ್ಮೆ LTTE ಸೇರಿದ ಮೇಲೆ ಬಿಟ್ಟು ಹೋಗೋದು ಸುಲಭ ಅಲ್ಲ.

ನಾಯಕ ಮಹತ್ತಾಯ ಬಂದವರೇ ಎಲ್ಲರಿಗೂ ಬಂದು ಕೂಡಲು ಹೇಳಿದರು. ಬಂದು ಕೂತ್ವಿ. ಮೂರು ಜನರ ಹೆಸರು ಹೇಳಿದರು. ಮೂವರು ಲೇಡಿ ಟೈಗರ್ಸ್. ಏನೋ ಲಫಡಾ ಮಾಡಿಕೊಂಡಿರಬೇಕು ಅನ್ನಿಸಿತು.

ಮೊದಲನೆಯಾಕೆ ಏನೋ ಕದಿಯುವಾಗ ಸಿಕ್ಕಿ ಬಿದ್ದಿದ್ದಳು. ಆಕೆಗೆ ಗೇಟ್ ಪಾಸ್ ಕೊಡಲಾಯಿತು. ಅಳುತ್ತ ಎದ್ದು ಹೋದಳು. ಆಕೆಯ ಪುಣ್ಯ. ಚಿತ್ರಹಿಂಸೆ ಕೊಟ್ಟು ಕೊಲ್ಲಲಿಲ್ಲ.

ಇನ್ನೊಬ್ಬಾಕೆಯ ಹೆಸರು ಹೇಳಿದರು. ಆಕೆಗೂ ಗೇಟ್ ಪಾಸು ಕೊಟ್ಟು ಡಿಸ್ಮಿಸ್ ಮಾಡಲಾಯಿತು. ಆಕೆಯೂ ತನ್ನ ಸೈನೈಡ್ ಕ್ಯಾಪ್ಸೂಲ್, ಬಂದೂಕು ಕೊಟ್ಟು ಅಳುತ್ತ ಹೋದಳು. ಈ ತರಹ ಡಿಸ್ಮಿಸ್ ಮಾಡಿಕೊಳ್ಳುವದು ಅಂದ್ರೆ ಅತಿ ಅವಮಾನದ ವಿಷಯ. ತಮಿಳ್ ಈಲಂಗೆ ಪ್ರಾಣ ಕೊಡಲು ಬಂದವರಿಗೆ ಡಿಸ್ಮಿಸ್ ಮಾಡಿಸಿಕೊಂಡು ಹೋಗುವದು ಅಂದರೇನು?

ಮೂರನೇ ಅಪರಾಧಿ ಯಾರು ಅಂತ ಎಲ್ಲರಿಗೂ ಕುತೂಹಲ ಮತ್ತೆ ಒಂದು ರೀತಿಯ ಟೆನ್ಷನ್ ಕೂಡ.

ಮಹತ್ತಾಯ ದೀರ್ಘವಾಗಿ ಉಸಿರು ಎಳೆದುಕೊಂಡು 'ನೋರಾ' ಎಂದರು. ಎಲ್ಲರೂ ನೋರಾಳ ಕಡೆ ನೋಡಿದೆವು. ಆಕೆಯ ಬಗ್ಗೆ ನನಗೇನೂ ಜಾಸ್ತಿ ಗೊತ್ತಿರಲಿಲ್ಲ.

ಮಹತ್ತಾಯ ಹೇಳುವಕಿಂತ ಮೊದಲೇ ನೋರಾಳಿಗೆ ಗೊತ್ತಾಗಿ ಅಳತೊಡಗಿದಳು. ಅದು ಭೀತಿಯ ಅಳುವಲ್ಲ. ಇದು ಒಂದು ತರಹ ಅಸಹಾಯಕತೆಯ ಅಳು. ಬಿಕ್ಕುತ್ತಿದ್ದಳು.

ಈಕೆ 'ಶಾಂತನ್' ಅನ್ನುವ ಇನ್ನೊಬ್ಬ ಟೈಗರ್ ನನ್ನು ಲವ್ ಮಾಡಿದ್ದಾಳೆ. ಅವನನ್ನ ಬೇರೆ ವಿಚಾರಿಸಿಕೊಳ್ಳುತ್ತೀನಿ. ಈಕೆಗೆ ಶಿಕ್ಷೆ ಅಂದ್ರೆ, ಮುಂದಿನ ನಾಲ್ಕಾರು ಚಕಮಕಿಯಲ್ಲಿ ಈಕೆಯೇ ಲೀಡ್ ಮಾಡಬೇಕು. ಮತ್ತೆ LTTE ಗೆ ನಿಷ್ಠೆ ಖಾತ್ರಿ ಮಾಡಲು ಭಾರತದ ಶಾಂತಿ ಪಡೆ ಕಡೆಯಿಂದ ಬಂದೂಕೋ, ರಾಕೆಟ್ ಲಾಂಚರೋ ಏನಾದರು ತರಬೇಕು. ಇದೇ ನೋರಾಗೆ ಶಿಕ್ಷೆ, ಅಂತ ಮಹತ್ತಾಯ ಘೋಷಿಸಿಯೇ ಬಿಟ್ಟರು. ದೂಸರಾ ಮಾತಿಲ್ಲ.

ಗೆರಿಲ್ಲಾ ಯುದ್ಧ ಮಾಡಿ ಗೊತ್ತಿದ್ದವರಿಗೆ ಈ ಶಿಕ್ಷೆ ಸಾವಿಗಿಂತ ಬೇರೆ ಅಲ್ಲ ಅಂತ ಗೊತ್ತಾಗಿತ್ತು. ಸೀರಿಯಲ್ಲಾಗಿ ಒಬ್ಬರೇ ನಾಲ್ಕಾರು ಚಕಮಕಿಯಲ್ಲಿ ಲೀಡ್ ಮಾಡಿದರೆ ಸಾಯುವದು ಗ್ಯಾರಂಟೀ. ಇನ್ನು ಭಾರತದ ಶಾಂತಿ ಪಡೆಯಿಂದ ಆ ಪರಿ ಗುಂಡು ಹಾರುತ್ತಿರುವಾಗ, ಯಾರನ್ನೋ ಕೊಂದು, ಅವರ ಬಂದೂಕು ಮತ್ತೊಂದು ತರೋದು ದೂರ ಉಳಿಯಿತು. ಇದಕ್ಕಿಂತ ನೋರಾಗೆ ಒಂದು ಗುಂಡು ಹಾಕಿದ್ದರೆ ಈ ಪರಿ ಮಾನಸಿಕ ತುಮುಲವಿಲ್ಲದೆ ನೆಮ್ಮದಿಯಿಂದ ಸಾಯುತ್ತಿದ್ದಳು. ಆದ್ರೆ ಅದು LTTE. ಎಲ್ಲದಕ್ಕೂ ಕ್ರೌರ್ಯ. ಮತ್ತೆ ಮಹತ್ತಯಾ ಅವರಿಗೆ ಮೊಸಳೆ ಅಂತ ಸುಮ್ಮನೆ ಹೆಸರು ಬಂದಿರಲಿಲ್ಲ. ಈ ತರಹದ ತಣ್ಣನೆಯ  ಕ್ರೌರ್ಯ ನೋಡಿಯೇ ಇರಬೇಕು ಅವರಿಗೆ ಮೊಸಳೆ ಅಂತ ಅನ್ನುತ್ತಿದ್ದುದು.

ಒಮ್ಮೆಲೇ ಒಂದು ವ್ಯಾನ್ ಜೋರಾಗಿ ಬಂತು. ಬ್ರೇಕ್ ಹಾಕಿದ ಸೌಂಡ್ ಗೆ ಏನಾಯಿತೋ ಅಂತ ಬೆಚ್ಚಿ ಬಿದ್ದೆವು. ಮುಂದಿನ ಸೀಟಿನಿಂದ ಇಬ್ಬರು ಟೈಗರ್ಸ್ ಇಳಿದರು. ಬಂದೂಕು ಸರಿ ಮಾಡಿಕೊಂಡವರೇ ವ್ಯಾನಿನ ಹಿಂದಿನ ಬಾಗಿಲು ಓಪನ್ ಮಾಡಿದರು. ಅಲ್ಲೇ ಕೂತಿದ್ದ ನೋರಾಳ ಅಮರ ಪ್ರೇಮಿ 'ಶಾಂತನ್'.

ಶಾಂತನ್ ಮುಖದ ಮೇಲೆ ಯಾವ ಭಾವನೆಯೂ ಕಾಣಲಿಲ್ಲ. ಅಥವಾ ನಮಗೆ ಭಾವನೆಗಳು ಕಂಡು ಬರಲಿಲ್ಲವೋ. ನೋರಾ ಮಾತ್ರ ಏನೋ ಅನಾಹುತ ಆಗೇ ತೀರುತ್ತದೆ ಅನ್ನುವ ಸುಳಿವು ಸಿಕ್ಕ ಹಾಗೆ ಭೋರಿಟ್ಟು ಅಳತೊಡಗಿದಳು.

ಶಾಂತನ್ ಏನೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ವ್ಯಾನಿನಿಂದ ಕೆಳಗೆ ಇಳಿದು ಬಂದ. ಉಳಿದಿಬ್ಬರು ಟೈಗರ್ಸ್ ಅವನ ಕೈ ಹಿಡಿದುಕೊಂಡು ಬಂದು ಮಹತ್ತಯಾ ಅವರ ಮುಂದೆ ನಿಲ್ಲಿಸಿದರು. ಅಲ್ಲೇ ಪಕ್ಕದಲ್ಲಿ ಹಾಕಿದ್ದ ಟೆಂಟ್ ಒಳಗೆ ಕರೆದಕೊಂಡು ಹೋಗುವಂತೆ ಹೇಳಿದರು ಮಹತ್ತಾಯ. ಹಿಂದೆ ತಾವು ಹೊರಟರು.

ಈಗ ಮಾತ್ರ ನೋರಾಳ ಅಳು ಇನ್ನೂ ಜೋರಾಯಿತು. ಅವಳ ಕಡೆ ಒಂದು ಸಾರೆ ಕೂಡ ಶಾಂತನ್ ತಿರುಗಿ ನೋಡಲಿಲ್ಲ. ಅವನೆಂತ ಪ್ರೇಮಿಯೋ? ಅಥವಾ ನಮಗೆ ಗೊತ್ತಿಲ್ಲದ್ದು ಅವನಿಗೆ ಏನಾದರು ಗೊತ್ತಿತ್ತೋ? ಗೊತ್ತಿಲ್ಲ.

ಟೆಂಟ್ ಒಳಗಿಂದ ಒಂದು ಚಿಕ್ಕ ಟಪ್ ಅನ್ನುವ ಸೌಂಡ್. ಮುಂದಿನ ಕ್ಷಣದಲ್ಲಿ ಟೈಗರ್ಸ್ ಇಬ್ಬರು ಶಾಂತನ್ ನನ್ನು ದರ ದರ ಎಳೆದುಕೊಂಡು ವಾಪಸ್ ವ್ಯಾನಿಗೆ ಕರೆದೊಯ್ಯುತ್ತಿದ್ದರು. ಹಣೆ ಮೇಲೆ ಮತ್ತೊಂದು ಕಣ್ಣು ಮೂಡಿದ ಹಾಗೆ ಒಂದು ದೊಡ್ಡ ದೊಗರು. ಅದರಿಂದ ಬಳಬಳನೆ ಸೋರುತ್ತಿದ್ದ ರಕ್ತ. ಮಹತ್ತಾಯ ಅವನ ಹಣೆಗೆ ಗುಂಡು ನುಗ್ಗಿಸಿ ಅವನ ಕಥೆ ಮುಗಿಸಿದ್ದರು!!!!!

ಈಗ ಮಾತ್ರ ನೋರಾ ಅಳಲಿಲ್ಲ. ಆಕೆಯೂ ಸತ್ತಂತೆ ಆಗಿದ್ದಳು. ಶೂನ್ಯದತ್ತ ನೋಡುತ್ತಿದ್ದಳು. ಆಕೆಗೆ ಮತಿಭ್ರಮಣೆ ಆಯಿತೋ ಅಂತ ನಮಗೆ ಅನ್ನಿಸಿತು. ಯಾರಿಗೆ ಏನೇ ಆದರೂ, ತಮಗೆ ಮಾತ್ರ ಏನೂ ಆಗಿಲ್ಲ ಅನ್ನುವಂತೆ ಟೆಂಟ್ ನಿಂದ ಹೊರಗೆ ಬಂದರು ಮಹತ್ತಾಯ. ಮೊಸಳೆ ದಂಡೆಗೆ ಬಂದ ಹಾಗೆ. ಹೆಸರು ಸರಿಯಾಗಿಯೇ ಇದೆ. ಮೊಸಳೆ ಕಣ್ಣಲ್ಲಿ ಕಣ್ಣೀರಿನ ಸುಳಿವೂ ಇರಲಿಲ್ಲ. ಮೊಸಳೆ ಕಣ್ಣೀರೂ ಇರಲಿಲ್ಲ.

ಮೀಟಿಂಗ್ ಮುಗಿಯುತು ಅನ್ನೋ ಲುಕ್ ಕೊಟ್ಟರು ಮಹತ್ತಾಯ. ಎಲ್ಲರೂ ಎದ್ದು ಹೊಂಟೆವು.

"ನಿರೋಮೀ", ಅಂತ ಕರೆದರು ಮಹತ್ತಾಯ.

ಎದೆ ಝಲ್ಲೆಂದಿತು. ನನ್ನ ಲಫಡಾ ಕೂಡಾ ಗೊತ್ತಾಗಿ ಹೋಯಿತಾ? ಅಂತ ಬೆದರಿದೆ.

ಬೆದರುತ್ತಲೇ, "ಏನಣ್ಣಾ?", ಅಂತ ಕೇಳಿದೆ. 

ನಂದೂ ಒಂದು ಚಿಕ್ಕ ಮೂಕಪ್ರೇಮ ನಡೆಯುತ್ತಿತ್ತು. ರೋಶನ್ ಇದ್ದನಲ್ಲ. ನನ್ನ ಮೇಲೆ ಫುಲ್ ಫಿದಾ ಅವನು. ಒಂದು ಲೆವೆಲ್ ಗೆ LTTE ನಾಯಕ ಅವನು. ನಾನು LTTE ಸೇರೋಕೆ ಮೊದಲಿಂದನೂ ನನಗೆ ಲೈನ್ ಹೊಡೆಯುತ್ತಿದ್ದ. ನಾನೂ ಸಣ್ಣ ಮಟ್ಟಿನ ಸಿಗ್ನಲ್ ಕೊಡುತ್ತಿದ್ದೆ. ಒಂದು ಲೆವೆಲ್ ನಲ್ಲಿ ಅವನು, ಅವನ ಪರ್ಸನಾಲಿಟಿ ತುಂಬಾ ಲೈಕ್ ಆಗಿದ್ದರೂ ಫುಲ್ ಆಗಿ ಪ್ರೇಮ ಗೀಮ ಮಾಡಲು ಧೈರ್ಯ ಇರಲಿಲ್ಲ. ಮತ್ತೆ ಒಳ್ಳೆ ಸುಸಂಸ್ಕೃತ ಮನೆತನದಿಂದ ಬಂದಿದ್ದ ನಾನು LTTE ಸೇರಿದ್ದು, ಅದೂ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ಸೇರಿದ್ದು, ತಮಿಳ್ ಈಲಂ ಮೇಲಿನ ಪ್ರೀತಿಯಿಂದಲೇ ಹೊರತು ಸುಮ್ಮನೆ ಲವ್ ಗಿವ್ ಅಂತ  ಟೈಮ್ ವೇಸ್ಟ್ ಮಾಡಲು ಅಲ್ಲ. ಹಾಂಗಾಗಿ ನನ್ನ ಮತ್ತು ರೋಶನ್ ನಡುವೆ ಕೇವಲ ಒಂದು ತರಹದ ಭೆಟ್ಟಿಯಾದಾಗೊಮ್ಮೆ ಪರಸ್ಪರ ಎಕ್ಸೈಟ್ಮೆಂಟ್ ಫೀಲ್ ಮಾಡಿಕೊಳ್ಳೋದು ಬಿಟ್ಟರೆ ಮತ್ತೇನೂ ಇರಲಿಲ್ಲ. ಈ ಯುದ್ಧದ ಮಧ್ಯೆ ಅವನನ್ನ ನೋಡದೇ ಐದಾರು ತಿಂಗಳಾಗಿ ಹೋಗಿತ್ತು. ನೆನಪಿಗೆ ಬಂದಾಗ ಮಾತ್ರ ಒಂದು ತರಹದ ಖುಷಿ ಕೊಟ್ಟು ಹೋಗುತ್ತಿದ್ದವು ರೋಶನ್ನನ ನೆನಪುಗಳು. 

ಇವೆಲ್ಲ ನೆನಪಾಯಿತು. ಇದೆಲ್ಲ ಮಹತ್ತಾಯ ಅಣ್ಣಾ ಅವರಿಗೆ ತಿಳಿದು, ನನನ್ನೂ ತರಾಟೆಗೆ ತೆಗೆದುಕೊಳ್ಳುವರು ಇದ್ದಾರೋ ಏನೋ? ಅಂತ ಭೀತಳಾದೆ. ಮತ್ತೆ, ನಿರೋಮೀ, ಈಗ ಶಾಂತನನ್ನು ಕೊಂದ ಹಾಗೆ, ರೋಶನನ್ನು ಕೂಡ ಕೊಂದಿದ್ದೇನೆ, ಅಂತ ಹೇಳಲಿದ್ದಾರೋ ಅಂತ ಊಹಿಸಿಕೊಂಡು ಎದೆ ಧಸಕ್ ಅಂದಿತು.

"ಏನಿಲ್ಲ, ನಿರೋಮೀ. ನಿನಗೂ ಅಲ್ಸರ್ ಇದೆ ಅಂತ ಗೊತ್ತಾಯಿತು. ನನಗೂ ಅಲ್ಸರ್ ಇದೆ ನೋಡು ತಂಗಿ. ಈ ನಮ್ಮ ಜನ ಬೇರೆ ಅಡುಗೆಗೆ ಸಿಕ್ಕಾಪಟ್ಟೆ ಖಾರ ಹಾಕುತ್ತಾರೆ. ನಾನು ಹೇಳಿದ್ದೇನೆ ಅಂತ ಹೇಳು ಅಡಿಗೆ ಮಾಡುವವರಿಗೆ. ಖಾರ ಹಾಕುವ ಮೊದಲು ಬೇರೆ ತೆಗದಿಡೋಕೆ ಹೇಳು. ನಿನ್ನ ಸಲುವಾಗಿ ಒಂದೆರಡು ಹಾಲಿನ ಪುಡಿಯ ಡಬ್ಬಿ ಕಳಿಸಿಕೊಡುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಇಷ್ಟೇ ನನ್ನತ್ರ ಮಾಡಲು ಸಾಧ್ಯ ತಂಗಿ", ಅಂದರು ತಣ್ಣಗೆ ಮಹತ್ತಾಯ.

ಇವರೇನಾ? ಈಗ ಕೆಲ ನಿಮಿಷದ ಹಿಂದೆ ಯಾವದೇ ಭಾವನೆಗಳಿಲ್ಲದೆ ಒಬ್ಬ ನಿಷ್ಪಾಪಿಯನ್ನು ಕೊಂದ ಮನುಷ್ಯ ಇವರೇನಾ? ಈಗ ನನ್ನ ಸಣ್ಣ ಪ್ರಮಾಣದ ಎಸಿಡಿಟಿ ಬಗ್ಗೆ ಈ ಪರಿ ಕಾಳಜಿ ತೋರಿಸುತ್ತಿದ್ದಾರೆ!!!!!!!

ಯಾವ ತರಹದ ಮನುಷ್ಯ ಈ ಮಹತ್ತಾಯ? ಅಂತ ಅನ್ನಿಸಿತು. ಅರ್ಥ ಮಾಡಿಕೊಳ್ಳುವದು ಅಸಾಧ್ಯ.

ಕೊಟ್ಟ ಮಾತಿಗೆ ತಪ್ಪದ ಮಹತ್ತಾಯ ಅಣ್ಣ ಹಾಲಿನ ಪುಡಿಯ ಡಬ್ಬಿ ಕಳಿಸಿ ಕೊಟ್ಟರು. ಆದ್ರೆ ಅವರ ತಣ್ಣನೆಯ ಕ್ರೌರ್ಯ ನೋಡಿದ್ದ ನನಗೆ ಆ ಹಾಲಿನ ಪುಡಿಯಿಂದ ಹಾಲು ಮಾಡಿಕೊಂಡು, ನನ್ನ ಅಲ್ಸರಗೆ ತಂಪು ತಂದುಕೊಳ್ಳೋ ಆಸಕ್ತಿ, ದರ್ದು ಒಂದೂ ಉಳಿದಿರಲಿಲ್ಲ. ಬೇರೆಯವರಿಗೆ ಕುಡಿದುಕೊಳ್ಳಿ ಅಂತ ಕೊಟ್ಟು ಬಿಟ್ಟೆ.

ಮೊದಲು ವೆಳ್ಳಯಿಯ ಹತ್ಯೆ, ಈಗ ಶಾಂತನ್ ಹತ್ಯೆ ನೋಡಿದ ಮೇಲೆ 'ದಿಲ್ ಉಠ್ ಗಯಾ' ಅನ್ನುವಂತೆ LTTE ಮೇಲಿನ ಭಕ್ತಿ, ಪ್ರೀತಿ, ಕಮಿಟ್ಮೆಂಟ್ ಎಲ್ಲಾ ಹೋಗಿ ಬಿಟ್ಟಿತ್ತು. ಬಿಟ್ಟು ಹೋದರೆ ಸಾಕು ಅನ್ನಿಸಿತ್ತು.

ಈ ಪರಿ ಮೆರೆದ ಮಹತ್ತಾಯ ಮುಂದೆ 1993-94 ಟೈಮ್ ನಲ್ಲಿ ಗದ್ದಾರ್ ಅನ್ನುವ ಸಂಶಯಕ್ಕೆ ಒಳಗಾದರು. ಇಂಡಿಯಾದ ಬೇಹುಗಾರಿಕೆ ಸಂಸ್ಥೆ  R&AW ಜೊತೆ ಹೊಂದಾಣಿಕೆ ಮಾಡಿಕೊಂಡು, ಪರಮ ನಾಯಕ ಪ್ರಭಾಕರನ್ ವಿರುದ್ಧ ಕಾರಸ್ತಾನ ಮಾಡುತ್ತಿದ್ದಾರೆ, ಅಂತ LTTE ಇಂಟರ್ನಲ್ ಬೇಹುಗಾರಿಕೆ ಸಂಸ್ಥೆ ಮಹತ್ತಾಯ ಮತ್ತು ಅವರ ಸಹಚರನನ್ನು ಸಂಶಯಿಸಿತು. 

ಮಹತ್ತಾಯ ಮತ್ತು ಅವರ ಸುಮಾರು 250 ಜನರನ್ನು ಹಿಡಿದು ತೀವ್ರ ಟಾರ್ಚರ್ ಗೆ ಒಳಪಡಿಸಲಾಯಿತು. ನಂತರ ತಪ್ಪಿತಸ್ತರು ಅಂತ ನಿರ್ಧರಿಸಿ ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು. ಕೆಲವರು ಅಂದರು, ಮಹತ್ತಾಯ ತುಂಬಾ ಪಾವರಫುಲ್ ಆಗುತ್ತಿದ್ದಾರೆ, ಅಂತ ಪ್ರಭಾಕರನ್ ಅವರಿಗೆ ಅನ್ನಿಸಿಬಿಟ್ಟಿತ್ತು. ಅದಕ್ಕೇ ತೆಗೆಸಿಬಿಟ್ಟರು. ಸತ್ಯ ಎಲ್ಲೋ ಮಧ್ಯ ಇರಬೇಕು.

ನಿರೋಮೀ ಡೇಸೌಜಾ ಬರೆದ Tamil Tigress: My Story as a Child Soldier in Sri Lanka's Bloody Civil War ಪುಸ್ತಕದಿಂದ ಆರಿಸಿ ಬರೆದಿದ್ದು.

ಇದೇ ಪುಸ್ತಕದ ಬಗ್ಗೆ, ಮತ್ತೊಂದು ಮನಕಲಕುವ ಘಟನೆ ಬಗ್ಗೆ ಹಿಂದಿನ ವಾರ ಬರೆದಿದ್ದೆ. ಆ ಪೋಸ್ಟ್ ಇಲ್ಲಿದೆ - ಪೋಡಿ ನಂಗಿ ತಮಿಳ್ ಪುಲಿಯಾದದ್ದು.

ಬ್ಲಾಗ್ ಪೋಸ್ಟ್ ಟೈಟಲ್ - LTTE ಸೇರಬಾರದು. ಸೇರಿದರೆ ಪ್ರೀತಿ ಮಾಡಬಾರದು- ಇದು, ರವಿಚಂದ್ರನ್ ಚಿತ್ರದ ಹಾಡು, 'ಪ್ರೀತಿ ಮಾಡಬಾರದು. ಮಾಡಿದರೆ ಜಗಕೆ ಹೆದರಬಾರದು', ಪ್ರೇರಿತ. ಹಾಡು ಎಂಜಾಯ್ ಮಾಡಿ.

ಮಹತ್ತಾಯ ಅವರ ಬಗ್ಗೆ ಮಾಹಿತಿಗೆ - http://en.wikipedia.org/wiki/Gopalaswamy_Mahendraraja

ವೇಲುಪಿಳ್ಳಯಿ ಪ್ರಭಾಕರನ್ - http://en.wikipedia.org/wiki/Prabhakaran

Saturday, October 06, 2012

ಪೋಡಿ ನಂಗಿ ತಮಿಳ್ ಪುಲಿಯಾದದ್ದು

ಅದೊಂದು ದಿನ ಕಾವಲು ಕೆಲಸದ ಪಾಳಿ ಮುಗಿಸಿ ವರಾಂಡಕ್ಕೆ ಬಂದು ಕೂತಿದ್ದೆ. 1987 ರ ಖತರ್ನಾಕ್  ದಿನಗಳು ಅವು. ಭಾರತದ ಶಾಂತಿ ಪಡೆ ಜೊತೆ ನಮ್ಮ LTTE ಗೆರಿಲ್ಲಾ ಯುದ್ಧ ನೆಡದಿತ್ತು. ನಮ್ಮ ಹುಡುಗರು ಒಬ್ಬನನ್ನ ಹಿಡಿದು ತದಕುತಿದ್ದರು. ವಿಪರೀತ ಹೊಡೆಯುತ್ತಿದ್ದರು. ಯಾರಂತ ಕಣ್ಣಗಲಿಸಿ ನೋಡಿದೆ. ಅರೇ!!!ಇವನು ನಮ್ಮ ವೆಳ್ಳಯಿ ಅಲ್ಲವಾ? ಇವನೇನು ಮಾಡಿದ? ಆ ಪರಿ ಹೊಡೆಯುತ್ತಿದ್ದಾರೆ? ಕೊಂದೇ ಬಿಡುವ ಪ್ಲಾನ್ ಇದ್ದಾಗೆ ಇದೆ. ಛೆ!!!!!

ಪಕ್ಕದಲ್ಲಿ ಇದ್ದವರು ಯಾರೋ ಹೇಳಿದರು, ಈ ವೆಳ್ಳಯಿ ದ್ರೋಹಿ. ಕದ್ದು ಮುಚ್ಚಿ ನಮ್ಮ ಮಾಹಿತಿ ಇಂಡಿಯಾದ ಶಾಂತಿ ಪಡೆಗೆ ಮುಟ್ಟಿಸುತ್ತಿದ್ದಾನೆ. ಇವನಿಂದಾಗಿಯೇ ನಮ್ಮ ಮೇಲೆ ಪದೇ ಪದೇ ದಾಳಿ ಆಗುತ್ತಿರುವದು ಮತ್ತು ನಮ್ಮ ಕಾಮ್ರೇಡಗಳು ಸಾಯುತ್ತಿರುವದು. ಮೊನ್ನೆ ನಿಜಾಮ್ ಸೆರೆ ಸಿಕ್ಕಿದ್ದು ಸಹಿತ ಇವನಿಂದೇ ಅಂತೆ. ಅಲ್ಲಿ ಪಟ್ಟಣದ ಮಧ್ಯೆ ಚೌಕ್ ನಲ್ಲಿ, ನಿಜಾಮನ ತಲೆ ಬೋಳಿಸಿ, ಬೆತ್ತಲೆ ಮಾಡಿ, ಚಿತ್ರಹಿಂಸೆ ಕೊಟ್ಟು, ಕಂಭಕ್ಕೆ ಕಟ್ಟಿ ಹಾಕಿದ್ದಾರಂತೆ. ಅಲ್ಲಿ ಮಾರುವೇಷದಲ್ಲಿ ಹೋಗಿದ್ದ ನಮ್ಮ ಕಡೆಯವನಿಗೆ ನಿಜಾಮನೇ ನರಳುತ್ತ ಕೋಡೆಡ್ ಮೆಸೇಜ್ ಕೊಟ್ಟನಂತೆ. ಯಾರೋ ನಮಕ್ ಹರಾಮ್ ಇದ್ದಾನೆ. ಅವನನ್ನು ಬಿಡಬೇಡಿ, ಅಂತ. ಅದಕ್ಕೇ ಚಚ್ಚುತ್ತಿದ್ದಾರೆ.

ಹಾಗಾ?  ಏನು ಪ್ರೂಫ್ ಇದೆ ಇವನೇ ಗದ್ದಾರ್ ಅನ್ನೋಕೆ ?, ಅಂತ ಕೇಳಿದೆ.

ಗೊತ್ತಿಲ್ಲ ಅನ್ನುವಂತೆ ಎದ್ದು ಹೋದಳು ಗೆಳತಿ.

ಈ ಕಡೆ ವೆಳ್ಳಯಿಯನ್ನು ಸಿಕ್ಕಾಪಟ್ಟೆ ಹೊಡೆದಿದ್ದ ನಮ್ಮ ಹುಡುಗರು ಮುಂದಿನ ಕೆಲಸಕ್ಕೆ ರೆಡಿ ಆದರು. ಒಬ್ಬ ಗುದ್ದಲಿ, ಸಲಿಕೆ ತಂದು ಗುಂಡಿ ತೋಡತೊಡಗಿದ. ಮತ್ಯಾರೋ ಹೇಳಿದರು, ಜೀವಂತ ಹೂತು ಬಿಡುವ ಪ್ಲಾನ್ ಇದೆ ಅಂತ. ನಮಕ್ ಹರಾಮಿ, ಗದ್ದಾರಿ ಮಾಡಿದವರಿಗೆ ಅದೇ ಶಿಕ್ಷೆ.

ಮುಂದೆ ಆಗುವದನ್ನು ಊಹಿಸ್ಕೊಂಡೆ. ಅಲ್ಲಿ ಇರಲಾಗಲಿಲ್ಲ. ಒಳಗೆ ಬಂದೆ. ಎಷ್ಟೋ ಹೊತ್ತಿನವರಗೆ ಅವರ ಚಿತ್ರಹಿಂಸೆ, ವೆಳ್ಳಯಿಯ ನರಳಾಟ ಕೇಳುತ್ತಲೇ ಇತ್ತು. ಸುಸ್ತಾದ ದೇಹಕ್ಕೆ ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ.

ಮರುದಿನ ಕೇಳಿದೆ. ವೆಳ್ಳಯಿ ಉಳಿದಿರಬಹುದಾ ಎಂಬ ಚಿಕ್ಕ ಆಸೆ ಇತ್ತು. ಚಾನ್ಸೇ ಇರಲಿಲ್ಲ. ವೆಳ್ಳಯಿ ಮೇಲೆ ಹೋದ ಅಂದ ಒಬ್ಬ. ಅಯ್ಯೋ ಜೀವಂತ ಹೂತು ಬಿಟ್ಟಿರಾ? ಅಂತ ಕಿರುಚಿ ಕೇಳಿದೆ. ಇಲ್ಲ. ಕತ್ತಿನ ತನಕ ಹುಗಿದಿವಿ. ನಂತರ ಸೈನಡ್ ಕಾಪ್ಸೂಲಿನಿಂದ ಸೈನಡ್ ತೆಗೆದು, ಅದನ್ನ ಬಿಸಿ ಮಾಡಿ, ಸೈನಡ್ ಹೊಗೆ ಕುಡಿಸಿದಿವಿ ನನ್ನ ಮಗಂಗೆ. ಉಸಿರಾಡಲು ಹ್ಯಾಂಗೆ ಚಡಪಡಿಸುತ್ತಿದ್ದ ನೋಡಬೇಕಿತ್ತು. ಗದ್ದಾರಿ ಮಾಡಿದ್ದ. ನಂತರ ಸಾಕು ಅನ್ನಿಸಿತು. ಜಸ್ಟಿನ್ ಕೊಡಲಿಂದ  ತಲೆಗೆ ಎರಡು ಕೊಟ್ಟ. ಬುರುಡೆ ಬಿಚ್ಚಿತು. ಸತ್ತ.

ಹಿಂದಿನಿಂದ ಯಾರೋ ಗಹಗಹಿಸಿ ನಕ್ಕರು. ತಿರುಗಿ ನೋಡಿದೆ. ಜಸ್ಟಿನ್ ನಿಂತಿದ್ದ. 

ಅಯ್ಯೋ ಬಿಡಕ್ಕ. ಆ ಗದ್ದಾರ್ ಸತ್ತರೆ ಯಾಕಿಷ್ಟು ಟೆನ್ಷನ್ ನಿನಗೆ? ಅವನು TELO ಅಂದ್ರೆ ನಮ್ಮ ಒಂದು ಕಾಲದ ದುಶ್ಮನ್ ಗುಂಪಿನವನಾಗಿದ್ದ. ಈಗ ನಾಕು ವರ್ಷದ ಹಿಂದೆ ಸಾಮೂಹಿಕವಾಗಿ TELO ಜನರನ್ನು ಕೊಂದಾಗಲೇ ಇವನು ಹೋಗಬೇಕಾಗಿತ್ತು. ಏನೋ ನಸೀಬ್ ಸರಿ ಇತ್ತು. ಮಾಫಿ ಸಿಕ್ಕಿ ಟೈಗರ್ ಆಗಿದ್ದ. ಈಗ ಗದ್ದಾರಿ ಮಾಡಿದ್ದ. ಅದಕ್ಕೇ ಕೊಂದ್ವಿ. ತಿಳೀತಾ? - ಅಂತ ಕೂಲಾಗಿ ಹೇಳಿದ ಜಸ್ಟಿನ್.

ಅವನೇ ಗದ್ದಾರ್ ಅನ್ನೋಕೆ ಪ್ರೂಫ್ ಏನು ಜಸ್ಟಿನ್? ನಿಜಾಮ್ ಅಣ್ಣಾ ಕೂಡ ಯಾರೋ ಗದ್ದಾರ್ ಇದ್ದಾನೆ ಅಂತ ಹೇಳಿದ್ದಾರೆಯೇ ಹೊರತು ಈ ವೆಳ್ಳಯಿಯೇ ಅಂತ ಹೇಳಿಲ್ಲವಲ್ಲ. ಅಂತದ್ರಲ್ಲಿ ಎಂತಹ ಪಾಪ ಮಾಡಿ ಬಿಟ್ರೋ ಪಾಪಿಗಳಿರಾ?, ಅಂತ ನಾನು ಸಿಡಿಮಿಡಿಗೊಂಡೆ.

ಅಯ್ಯೋ.....ಹೋಗಕ್ಕ.....ಒಂದು ಕಾಲದ ದುಶ್ಮನ್ ಇವತ್ತಿನ ಗದ್ದಾರ್. ಮತ್ತೆ ಪ್ರೂಫ್ ಅಂತೆ ಪ್ರೂಫ್. ಬೇರೆ ಕೆಲಸವಿಲ್ಲವ? ಹೋಗೋಗ್, ಅಂತ ಅಂದ ಹುಡುಗರು ಹೋಗಿ ಬಿಟ್ಟರು.

ನನಗೆ ಅವತ್ತೇ ಅನ್ನಿಸಿತ್ತು ಈ ತರದ ಸಂಶಯ, ದ್ವೇಷ, ಕ್ರೌರ್ಯ ತುಂಬಿದ ಸಂಘಟನೆಯಿಂದ ಎಂದೂ ಸ್ವಾತಂತ್ರ ಇತ್ಯಾದಿ ಸಿಗುವದಿಲ್ಲ ಅಂತ. 

ಅಲ್ಲ....ಆ ವೆಳ್ಳಯಿ  ಕೂಡ ನಮ್ಮವನೇ. ತಮಿಳ. ಯಾವದೋ ಕಾಲದಲ್ಲಿ ಯಾವದೋ ಬೇರೆ ಸಂಘಟನೆಯಲ್ಲಿ ಇದ್ದನಂತೆ. ಅದು ಅವನ ತಪ್ಪಾ? ಇಲ್ಲಿ ಜಾಫ್ನಾದಲ್ಲಿ LTTE ಜೋರು. ಪಾಪ ವೆಳ್ಳಯಿ ಮನ್ನಾರ್ ಕಡೆ ಹುಡುಗ. ಅಲ್ಲಿ TELO ಜೋರಾಗಿತ್ತು. ಅಲ್ಲ....ಅವನ ವಯಸ್ಸೇನು? ಭಾಳ ಅಂದ್ರೆ 16-17. ನನ್ನ ವಯಸ್ಸೇ. ಅವನು TELO ದಲ್ಲಿ ಇದ್ದಾಗ 10-12 ವರ್ಷದ ಬಾಲಕ. ಅವನಿಗೇನು ಗೊತ್ತು ದೊಡ್ಡವರ ದ್ವೇಷ, ಪೊಲಿಟಿಕ್ಸ್, ಪವರ್ ಗೆ ಹಪಾಹಪಿ. ಈ ಟೈಗರ್ ಗಳು ಎಂದೂ ಉದ್ಧಾರವಾಗೋದಿಲ್ಲ. ಎಕ್ಕುಟ್ಟಿ ಹೋಗುತ್ತಾರೆ.

ಹೀಗಂತ ಬರೆಯುತ್ತ ಹೋಗುವವರು ನಿರೋಮಿ ಡೇಸೌಜಾ. ಶ್ರೀಲಂಕಾದ ಮಹಿಳೆ. ಈಗ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಒಂದು ಕಾಲದಲ್ಲಿ LTTE ಲೇಡೀಸ್ ಪಡೆಯಲ್ಲಿ ಕೆಲಸ ಮಾಡಿದವರು. ಸಾಕಷ್ಟು ಗೆರಿಲ್ಲಾ ಯುದ್ಧ ಮಾಡಿದ್ದಾರೆ. ಆಲ್ಮೋಸ್ಟ್ 25 ವರ್ಷಗಳ ನಂತರ ತಮ್ಮ ಆ ಕಾಲದ ಕಥೆ ಬರೆದು ಕೊಂಡಿದ್ದಾರೆ. 


ತುಂಬ ಮನ ಕಲಕುವ ಪುಸ್ತಕ.

ತುಂಬ ಒಳ್ಳೆ ಮನೆತನದ ತಮಿಳ ಹೆಣ್ಣುಮಗಳೊಬ್ಬಳು LTTE ಸುಪ್ರಿಮೋ ಪ್ರಭಾಕರನ್ ಅವರ ಆದರ್ಶದಿಂದ ಪ್ರಭಾವಿತರಾಗಿ, LTTE ಉಗ್ರಗಾಮಿಯಾಗಿ, ಹಲವಾರು ಸಲ ಸಾವಿನ ಹತ್ತಿರಕ್ಕೆ ಬಂದು, ಪಡಬಾರದ ಕಷ್ಟ ಪಟ್ಟು, ನಂತರ ಮೇಲೆ ಹೇಳಿದ ವೆಳ್ಳಯಿ ಹತ್ಯೆಯಂತಹ ಹಲವಾರು ಅರ್ಥಹೀನ ಹತ್ಯೆಗಳನ್ನು ನೋಡಿ ಒಂದು ತರಹದ ಭ್ರಮನಿರಸನವಾಗಿ, ಕ್ರಮಬದ್ಧವಾಗಿಯೇ LTTE ಬಿಟ್ಟು, ಇಂಡಿಯನ್ ಶಾಂತಿ ಪಡೆಯಿಂದ ಹೇಗೋ ಬಚಾವ್ ಆಗಿ, ಇಂಡಿಯಾಕ್ಕೆ ಬಂದು ಎಲ್ಲೆಲ್ಲೋ ಓದಿ, ಮುಂದೆ ಆಸ್ಟ್ರೇಲಿಯಾಕ್ಕೆ ಹೋಗಿ ಒಳ್ಳೆ ರೀತಿಯಿಂದ ಸೆಟಲ್ ಆಗಿದ್ದಾರೆ ಲೇಖಕಿ.

ಪೋಡಿ ನಂಗಿ = ಚಿಕ್ಕ ಹುಡುಗಿ (ಸಿಂಹಳ ಭಾಷೆಯಲ್ಲಿ ಚಿಕ್ಕ ಹುಡುಗಿಯರನ್ನು ಕರೆಯುವ ರೀತಿ)
ಪುಲಿ = ಹುಲಿ. ತಮಿಳ್ ಪುಲಿಗಳ್ ಅಂದ್ರೆ ತಮಿಳ್ ಟೈಗರ್ಸ್.

Tuesday, October 02, 2012

ರಾಗಿ, ಸುಪಾರಿ

ಸುಪಾರಿ


ಪುರಂದರದಾಸರ ದಾಸರ ನಾಮಗಳಲ್ಲಿ ಅತ್ಯಂತ ಹಿಡಿಸಿದ್ದು ಅಂದರೆ, 'ರಾಗಿ ತಂದೀರಾ, ಭಿಕ್ಷಕೆ ರಾಗಿ ತಂದೀರಾ'. ಮೊದಲೆಲ್ಲ ಜಾಸ್ತಿ ಲಕ್ಷ ಕೊಟ್ಟಿರಲಿಲ್ಲ. ನಾವು ಭಿಕ್ಷೆ ಕೇಳಿಕೊಂಡು ಬಂದವರಿಗೆ ಅಕ್ಕಿ, ಜ್ವಾಳ, ಅಡಿಕೆ ಮತ್ತೊಂದು ಕೊಟ್ಟ ಹಾಗೆ, ಮೈಸೂರ್ ಕಡೆ ರಾಗಿ ಬೆಳೆಯುವ ಮಂದಿ ರಾಗಿ ಭಿಕ್ಷೆ ಕೊಡುತ್ತಾರೆ. ಅದರ ಬಗ್ಗೆ ದಾಸರು ಹಾಡು ಬರೆದಿದ್ದಾರೆ. ಆಕಾಶವಾಣಿ ಧಾರವಾಡದಲ್ಲಿ ಯಾರೋ 'ಸ್ವಾಳೆ ರಾಗದಲ್ಲಿ' ಅದೂ ಮೂಗಿನಲ್ಲಿ ಹಾಡುತ್ತಾರೆ. ತಿಂಗಳಿಗೆ ಕಮ್ಮಿ ಕಮ್ಮಿ ಅಂದರೂ 2-3 ಸರಿ ಮುಂಜಾನೆ ಬರುತ್ತದೆ. ಅಷ್ಟೇ ಗೊತ್ತಿದ್ದದ್ದು. 

ಮೊನ್ನಿತ್ತಲಾಗೆ ಮತ್ತೊಮ್ಮೆ ಈ ಹಾಡು ಕೇಳೋಣ ಅನ್ನಿಸಿತ್ತು. ಗೂಗಲ್ ಮಾಡಿದೆ. ಮೊದಲಿನ ಒಂದೆರಡು ಲಿಂಕುಗಳಲ್ಲಿ ಬಂದ ದಾಸರ ನಾಮ  ಅಷ್ಟೇನೂ ಖಾಸ್ ಅನ್ನಿಸಲಿಲ್ಲ. ನಂತರ ಸಿಕ್ಕ ಲಿಂಕಿನಲ್ಲಿ ತಿರುಚಿಯ ರಾಜಗೋಪಾಲ್ ಭಾಗವತ್ ಮತ್ತು ಅವರ ಮಂಡಳಿ ಹಾಡಿದ ಲಿಂಕ್ ಸಿಕ್ಕಿತು ನೋಡಿ, ದಿಲ್ ಖುಷ್ ಹೋಗಯಾ. ಮಸ್ತ ಹಾಡಿದ್ದಾರೆ. ಕಿರುಕಿನ ಸ್ವಾಳೆ ರಾಗವಿಲ್ಲ. ಎಲ್ಲೋ ದೇವಸ್ಥಾನದಲ್ಲಿ, ಭಕ್ತಿ ಪರವಶರಾಗಿ ಹಾಡಿದ್ದಾರೆ ರಾಜಗೋಪಾಲ್ ಮತ್ತು ಅವರ ಗುಂಪು. ಅಂಗಿ ಪಂಗಿ ತೆಗೆದು ಹಾಡಿದ್ದು ದೇವಸ್ಥಾನದ ಮಾಹೋಲಿಗೆ ಮಸ್ತ ಹೊಂದಿ ಹಾಡು ಮತ್ತೂ ಸೂಪರ್ ಆಗಿ ಮೂಡಿ ಬಂದಿದೆ.

ಕೆಲವು ಹಾಡುಗಳೇ ಹಾಗೆ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತವೆ. ಈ ಹಾಡು ಹಾಗೇ ಆಯಿತು. 

ಮತ್ತೆ ಮತ್ತೆ ಕೇಳಿದರೆ ನಮ್ಮ ತಲೆಗೆ ಏನೇನೋ ಲಿರಿಕ್ಸ್ ಬಂದು ಬಿಟ್ಟವು. ಹಾಡು ಗುಣುಗುಣಿಸೋಣ ಅಂದ್ರೆ ನಮ್ಮದೇ ಲಿರಿಕ್ಸ್ ಬಂತು. ಬಂದಿದ್ದು ಮರೆತು ಹೋಗದಿರಲಿ ಅಂತ ಬರೆದುಬಿಟ್ವಿ.

ದಾಸರ ರಾಗಿ ಹೋಗಿ ನಮ್ಮ ಸುಪಾರಿ ಆಯಿತು. 

ಅದರ ಮೇಲೆ ಅಡಿಕೆ ಬೆಳೆವ ಮಂದಿ ನಾವು. ಅಡಿಕೆ, ಅಂಡರ್ವರ್ಲ್ಡ್, ಸುಪಾರಿ, ಎನ್ಕೌಂಟರ್ ಎಲ್ಲ ಕೂಡಿ ಮಾಡರ್ನ್ ದಾಸರ ನಾಮವೊಂದು ತಯಾರ್. ಅದೇ ಸುಪಾರಿ.

ಸುಪಾರಿ 
==================
ಸುಪಾರಿ ಕೊಟ್ಟಿರಾ ಎನ್ಕೌಂಟರಿಗೆ ಸುಪಾರಿ ಕೊಟ್ಟಿರಾ
ಕಚ್ಚಾ ಸುಪಾರಿ ಪಕ್ಕಾ ಸುಪಾರಿ
ಕವಳಕೆ ಬೇಕೇ ಬೇಕು ಸುಪಾರಿ......ನೀವು ||ಪಲ್ಲವಿ||

ಪೊಲೀಸರು ತೊಗೊಳ್ಳೋ ಸುಪಾರಿ
ಗ್ಯಾಂಗಸ್ಟರ್ ಕೂಡ ಬಿಡದ ಸುಪಾರಿ
ವೀಳ್ಯದೆಲೆ ಜೊತೆ ಭಟ್ರಿಗೆ ಕೊಡುವ ಸುಪಾರಿ
ಎನ್ಕೌಂಟರ್ ಗೆ ಖೋಕಾ ಕೇಳೋ ಸುಪಾರಿ ||ಸುಪಾರಿ||

ಘಟ್ಟದ ಕೆಳಗಿನ ನೀರ ಸುಪಾರಿ
ಘಟ್ಟದ ಮ್ಯಾಲಿನ ಕೆಂಪ ಸುಪಾರಿ
ಸಾಗರ ಕಡೆಯ ಚಾಲಿ ಸುಪಾರಿ
ಸುಪಾರಿ ಅಲ್ಲದ ಆಮ್ಲಾಸುಪಾರಿ ||ಸುಪಾರಿ||

ಗುರಿ ತಪ್ಪಿದರೆ ಹಾಪ್ ಮರ್ಡರ್ ಮಾಡೋ ಸುಪಾರಿ
ಕೆಟ್ಟರೆ ಕೆಲಸ ರಿವರ್ಸ್ ಹೊಡೆವ ಸುಪಾರಿ
ಬೇತಾಳದಂತೆ ಕಾಡೋ ಕಿಲ್ಲರ್ ಸುಪಾರಿ
ಉಡದಂತೆ ಕಚ್ಚೋ ಪೋಲಿಸ್ಸುಪಾರಿ ||ಸುಪಾರಿ||

ಅಂಡರ್ವರ್ಲ್ಡ್ ನಲ್ಲಿ ಸಚ್ಚಾ ಸುಪಾರಿ
ಇಂಟರ್ನೆಟ್ ಮೇಲೆ ಫೇಸ್ಬುಕ್ ಸುಪಾರಿ
ಪಾಟ್ ಶಾಟ್ ಹಾಕಲು ಶಾಟ್ಪುಟ್ ಸುಪಾರಿ  
ಬಿಟ್ಟೆನೆಂದರೂ ಬಿಡದೀ ಮಾಯೆ ಸುಪಾರಿ ||ಸುಪಾರಿ||

ಕಠಿಣ ಶಬ್ದಾರ್ಥ ಕೋಶ:

* ಆಮ್ಲಾಸುಪಾರಿ - ನೆಲ್ಲಿಕಾಯಿ ಅಡಿಕೆ. ಆವಳಾ ಸುಪಾರಿ ಅಂತ ಕೂಡ ಹೇಳುತ್ತಾರೆ.
* ಖೋಕಾ - ಅಂಡರ್ವರ್ಲ್ಡ್ ಭಾಷೆಯಲ್ಲಿ ಒಂದು ಕೋಟಿ ರೂಪಾಯಿ
* ಸುಪಾರಿ - ಕಾಸು ಅಥವಾ ಮತ್ತೊಂದು ತೆಗೆದುಕೊಂಡು ಕರಾರುವಕ್ಕಾಗಿ ಮಾಡುವ ಹತ್ಯೆ. contract killing.
* ಎನ್ಕೌಂಟರ್- ಎನ್ಕೌಂಟರ್ ಹತ್ಯೆ. ಪೋಲಿಸ್ ಸುಪಾರಿ.
* ಸ್ವಾಳೆ ರಾಗ - ಎಳೆದೆಳೆದು ಕೊಯ್ಯಾ ಕೊಯ್ಯಾ ರಾಗದಲ್ಲಿ ಹಾಡುವದು. ಯಕ್ಷಗಾನದಲ್ಲಿ ಈ ರಾಗ ಒಮ್ಮೊಮ್ಮೆ ಕೇಳಿ ಬರುತ್ತದೆ.
* ಕವಳ - ಎಲೆ, ಅಡಿಕೆ, ಸುಣ್ಣ, ತಂಬಾಕು ಇತ್ಯಾದಿಗಳ ಮಿಶ್ರಣ.
* ನೀರ ಸುಪಾರಿ - ನೀರಡಿಕೆ. ನೀರಲ್ಲಿ ನೆನಸಿಟ್ಟ ಅಡಿಕೆ. ಮೃದುವಾಗಿರುವದರಿಂದ ಹಲ್ಲಿಗೆ ಸಸಾರ. ಕಿಕ್ ಜಾಸ್ತಿ. ಹೊನ್ನಾವರ, ಕುಮಟಾ ಕಡೆ ಜಾಸ್ತಿ.
* ಪೋಲಿಸ್ಸುಪಾರಿ = ಪೋಲಿಸ + ಸುಪಾರಿ. ಪೊಲೀಸರು ಸುಪಾರಿ ತೆಗೆದುಕೊಂಡು ಸಿಸ್ಟೆಮ್ಯಾಟಿಕ್ ಆಗಿ ಎನ್ಕೌಂಟರ್ ಮಾಡಿ ಗೂಂಡಾಗಳನ್ನು ಮ್ಯಾಲೆ ಕಳಿಸಿದ್ದು ಬೇಕಾದಷ್ಟು ಮೂವಿಗಳಲ್ಲಿ ವೈಭವೀಕರಣಗೊಂಡಿದೆ. 'ಕಗಾರ್', 'ಅಬ್ ತಕ್ ಛಪ್ಪನ್', 'ಆನ್.....men at work', 'ಚಾಂದಿನಿ ಬಾರ್' ಮತ್ತು ತೀರ ಇತ್ತೀಚಿನ 'ಮ್ಯಾಕ್ಸಿಮಮ್ (Maximum)' ಎಂಬ ಚಿತ್ರಗಳಲ್ಲಿ ನೋಡಬಹುದು.

ಮೇಲಿನ ದಾಸರ ನಾಮವನ್ನು ಪುರಂದರದಾಸರ "ರಾಗಿ ತಂದೀರಾ" ಹಾಡಿನಂತೆ ಹಾಡಿಕೊಳ್ಳಬಹುದು. ತಿರುಚಿಯ ರಾಜಗೋಪಾಲ್ ಮತ್ತು ಟೋಳಿಯವರು ಅದ್ಭುತವಾಗಿ ಹಾಡಿದ್ದಾರೆ. ಲಿಂಕ್ ಕೆಳಗಿದೆ.


ಪುರಂದರದಾಸರ  ಒರಿಜಿನಲ್ ಸಹ ಕೆಳಗೆ ಇದೆ ನೋಡಿ. ಅಮೋಘ ದಾಸ  ಸಾಹಿತ್ಯ! ರಾಗಿ ಎಂಬ ಪದದಿಂದ ಶುರು ಮಾಡುವ ದಾಸರು ಎಷ್ಟು ಮಹತ್ವದ, ವಿವೇಕಭರಿತ ಜ್ಞಾನವನ್ನು ಎಷ್ಟು ಸಿಂಪಲ್ ಆಗಿ ತಿಳಿಸಿದ್ದಾರೆ. ಓದಿ ನೋಡಿ. ರಾಗಿ ಮುಂದೆ ಹೋಗಿ ರಾಗಿಯೇ ಆಗಿ ಉಳಿದರೂ 'ಹೀಗೆ ಆಗಿ', 'ಹಾಗೆ ಆಗಿ' ಅನ್ನುವ ಉಪದೇಶಾಮೃತವಾಗುತ್ತದೆ. ಸಿಂಪ್ಲಿ ಹ್ಯಾಟ್ಸ್ ಆಫ್!

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಭೋಗ್ಯ ರಾಗಿ ಯೋಗ್ಯ ರಾಗಿ
ಭಾಗ್ಯವಂತರಾಗಿ ನೀವು ||ಪ||

ಅನ್ನದಾನವ ಮಾಡುವರಾಗಿ
ಅನ್ನಛತ್ರವ ಇಟ್ಟವರಾಗಿ
ಅನ್ಯ ವಾರ್ತೆಗಳ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ ||ರಾಗಿ||

ಮಾತಾ ಪಿತರನು ಸೇವಿತರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಖ್ಯಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ ||ರಾಗಿ||

ಗುರು ಕಾರುಣ್ಯವ ಪಡೆದವರಾಗಿ
ಗುರು ವಾಕ್ಯವನು ಪಾಲಿಪರಾಗಿ
ಗುರುವಿನ ಪಾದವ ಸಲಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ  ||ರಾಗಿ||

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಟೆಗಳ ಮಾಡುವರಾಗಿ
ರಾಮನಾಮವ ಜಪಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ ||ರಾಗಿ||

ಶ್ರೀರಮಣನ ಸದಾ ಸ್ಮರಿಸುವರಾಗಿ
ಗುರುವಿಗೆ ಬಾಗುವಂತವರಾಗಿ
ಕರೆಕರೆ ಭಾವವ ನೀಗುವರಾಗಿ
ಪುರಂದರ ವಿಠಲನ ಸೇವಿತರಾಗಿ ||ರಾಗಿ||

ದಾಸರ ನಾಮ ಇಂಗ್ಲಿಶ್ ಲಿಪಿಯಲ್ಲಿ ಸಿಕ್ಕಿದ್ದು ಇಲ್ಲಿ. http://sahityam.net/wiki/RAgi_tandira

ಕನ್ನಡದಲ್ಲಿ ಬರೆದಿದ್ದು ನಾನು. ತಪ್ಪಿದ್ದರೆ ತಿಳಿಸಿ.

Wednesday, September 26, 2012

ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್

ಅಲ್ಲೇ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನನ್ನ ರೆಗ್ಯುಲರ್ ಸಂಜಿ ಮಾವಾಕ್ಕ ಆರ್ಡರ್ ಮಾಡಿ ನಿಂತಿದ್ದೆ. ಭೀಮು ತಿಕ್ಕಲಿಕತ್ತಿದ್ದ. ಅದ ಮಾವಾ ತಿಕ್ಕಲಿಕತ್ತಿದ್ದ. ನೋಡಿದ್ರ ಕರೀಮ ಬರ್ಲಿಕತ್ತಿದ್ದ.

ಬಾರೋ.....ದೋಸ್ತ.....ಕರೀಂ.....ಏನಪಾ.....ಭಾಳ ಅಪರೂಪ? ಏನೋ ಅದು ಕೈಯಾಗ? ತೋರ್ಸೋ - ಅಂದೆ.

ಯಾಕೋ ಕರೀಂ ತೋರಿಸಲಿಕ್ಕೆ ಸ್ವಲ್ಪ ಹಿಂದ ಮುಂದ ನೋಡಿದ. ಸ್ವಲ್ಪ ನಾಚಿಗಿನೂ ಮಾಡ್ಕೊಂಡ ಅನ್ನಸ್ತದ.

ಲೇ...ಮಂಗ್ಯಾನ್ ಕೆ. ನನ್ನ ಜೋಡಿ ಏನೋ ನಾಚಗಿ? ತೋರ್ಸೋ ನಮ್ಮಪ್ಪಾ - ಅಂದೆ.

ಮಿಜಿ ಮಿಜಿ ಮಾಡಕೋತ್ತನಾ ತೋರ್ಸೀದ. ಮಸ್ತ ಘಮ ಘಮ ಅನ್ನು ಮಲ್ಲಿಗಿ ಹೂವಿನ ಮಾಲಿ. ಮಸ್ತ್ ಇತ್ತು. ಫ್ರೆಶ್.

ಏನು ಸಾಬ್ರಾ? ಮಲ್ಲಿಗಿ ಹೂವಿನ ಮಾಲಿ ಖರೀದಿ ಮಾಡಿಕೊಂಡು ಹೊಂಟೀರಿ. ಜೊತಿಗೆ ಸ್ವೀಟ್ಸ್, ಎಲಿ ಅಡಿಕಿ ಎಲ್ಲೇ? ಏನೋ ಬೇಗಂ ಪಟಾವೋ ಪ್ಲಾನ್ ಇದ್ದಂಗ ಅದ. ಏನು ಲಫಡಾ ಮಾಡಿಕೊಂಡಿರೀ? ಏ.....ನಿಮ್ಮ ಹಾಪ್ ಬೇಗಂ ಇದಕೆಲ್ಲ ಕರಗೋ ಪೈಕಿ ಅಲ್ಲ ಬಿಡ್ರೀ. ಅಕಿ ಮೊದಲ ಹಾಪ್. ಆದರೂ ಟ್ರೈ  ಮಾಡ್ರಿ. ನೀವು ನಂಬಿದ ದೇವರು ನಿಮಗೆ ಒಳ್ಳೇದು ಮಾಡಲಿ - ಅಂದೆ.

ಛೋಡೋಜೀ ಸಾಬ್!!! ಅಕಿ ಹಾಪ್ ಗೆ ಯಾರು ಮಲ್ಲಿಗಿ ಹೂವಾ ಕೊಡ್ತಾರೆ. ಕತ್ತಿ  ಮುಂದೆ ಕಸ್ತೂರಿ ತೊಗೊಂಡು ಹೋದ್ರೆ ಏನು ಉಪಯೋಗ ಸಾಬ್? ಇದು ಬ್ಯಾರೆ ಯಾರಿಗೋ ಸಾಬ್ - ಅಂತ ನಿಗೂಢ ಲುಕ್ ಕೊಡುತ್ತ ಏನೋ ಅದ ಅನ್ನೋವರಾಂಗ ಕಣ್ಣ ಹೊಡೆದ.

ಹೋಗ್ಗೋ ಸಾಬ್ರಾ...ಗೊತ್ತಾತ ತೊಗೊರೀ. ಇನ್ನೊಂದು ಹೊಸ ಡೌ ಏನ್ರೀ? ಹಳೇವು ಎರಡು ಸ್ಟೆಪ್ನೀ ಇನ್ನೂ ಇಟ್ಟೀರೋ ಅಥವಾ ಓಲ್ಡ್ ಮಾಡೆಲ್ ಅಂತ ಜಂಕ್ ಯಾರ್ಡಿಗೆ ಬಿಟ್ಟು ಬಂದರೋ? ಎಲ್ಲಿಂದ ಪಟಾಯಿಸ್ತೀರಿ ಆ ಪರಿ? ಬೇಗಂಗೆ ಗೊತ್ತಾದ್ರಾ, ಮತ್ತೊಮ್ಮೆ ಅಕಿ ಕಲ್ಲೂ ಮಾಮಾ ಬಂದು ಕಾಲು ಮತ್ತೊಂದು ಮುರ್ದು ಹೋದಾನು ನೋಡಕೊಳ್ಳರೀ ಮತ್ತ - ಅಂತ ವಾರ್ನಿಂಗ್ ಕೊಟ್ಟೆ.

ಕ್ಯಾ ಸಮಜಾ ಸಾಬ್? ನಾವೇನು ಹಾಪ್ ಮಂದಿ ಕ್ಯಾ? ಈಗ ಹೊಸ ಮಾಲ್ ನಾವು ಇಂಟರ್ನೆಟ್ ಮ್ಯಾಲೆ ಪಟಾಯಿಸೇವಿ. ಅದೂ ವಿಲಾಯತಿ ಮಾಲ್. ಗೊತ್ತು ಕ್ಯಾ? - ಅಂದ ಕರೀಂ.

ಹೋಗ್ಗೋ...ಮಸ್ತ ಆತಲ್ಲರೀ.....ಇಂಟರ್ನೆಟ್ ಮ್ಯಾಲೆ. ಯಾವ ದೇಶದವರು? ಏನು ಮಾಡ್ತಾರ? - ಅಂತ ಕೇಳಿದೆ.

ಸಾಬ್ ಒಬ್ಬಾಕಿ "ಅಜ್ಜಿ ಏರಿಯ" ದೇಶದಾಕಿ. ಇನ್ನೊಬ್ಬಾಕಿ, ಇನ್ನೊಬ್ಬಾಕಿ ಯಾವ ದೇಶ ಅಂದ್ರೆ....ತಡೀರಿ. ನೆನಪ ಆಗ್ತಾ ಇಲ್ಲ- ಅಂತ ನೆನಪ ಮಾಡಕೊಳ್ಳಲಿಕ್ಕೆ ಹತ್ತಿದ್ದ.

ಹೋಗ್ಗೋ ಸಾಬ್ರಾ....."ಅಜ್ಜಿ ಏರಿಯ" ಅಂದ್ರ ಯಾವ ದೇಶರೀ? ಹಾಂಗ ಯಾವ ದೇಶ ಇಲ್ಲರೀಪಾ. ಎಲ್ಲದ ಈ ದೇಶ? - ಅಂತ ಕೇಳಿದೆ. ಯಾವದೋ ದೇಶದ ಹೆಸರು ರಾಡಿ ಎಬ್ಬಿಸಿಯೇ "ಅಜ್ಜಿ ಏರಿಯ" ಅಂದಿದ್ದು ಖಾತ್ರಿ ಇತ್ತು.

ಸಾಬ್ ನೋಡಿ. ಅದು ಎಲ್ಲೋ ಉತ್ತರ ಆಫ್ರಿಕಾದಲ್ಲಿ ಇದೆ ಅಂತೆ. ಅಲ್ಲೂ ಬರೇ ನಮ್ಮದು ಮಂದೀನೇ ಇದ್ದಾರೆ ಅಂತೆ. ಅಕಿನೂ ನಮ್ಮ ಮಂದೀನೇ - ಅಂತ ಅಂದ ಕರೀಂ ಏನೋ ಹಿಂಟ ಕೊಟ್ಟ.

"ಅಜ್ಜಿ ಏರಿಯ" ಅಂತ ಉತ್ತರ ಆಫ್ರಿಕಾದಲ್ಲಿ ಯಾವ ದೇಶ ಅದ, ಅಂತ ತಲಿ ಕೆಡಿಸ್ಕೊಂಡೆ.

ಏನೋ ಹೊಳಿತು.

ಸಾಬ್ರಾ.......ಅದು ಅಲ್ಜೀರಿಯಾ ಅಂತ ಏನು? ಅದ ಇರಬೇಕು. ಅದಕ್ಕ "ಅಜ್ಜಿ ಏರಿಯ" ಅಂತೀರಿಲ್ಲರಿ. ನಿಮ್ಮ ತಲಿ. ಸ್ವಲ್ಪ ಅಟ್ಲಾಸ್ ಗಿಟ್ಲಾಸ್ ನೋಡಿ ಸರೀತ್ನಾಗೆ ಕಲೀರಿ - ಅಂತ ಬೈದೆ.

ಹ್ಮ....ಹ್ಞೂ......ಮುಂದ ಹೇಳ್ರೀ....ಇನ್ನೊಬ್ಬಾಕಿ ಯಾವ ದೇಶದಾಕಿ? -ಅಂತ ಕೇಳಿದೆ.

ಸಾಬ್...ಅಕಿ ಯಾವ ದೇಶದಾಕಿ ಅಂದ್ರೆ....ಅಂದ್ರೆ....ಅಂದವನೇ ಒಂದು ಅಸಡ್ಡಾಳ ಹೆಸರು ಹೇಳಿಯೇ ಬಿಟ್ಟ. ಒಂದು ಕ್ಷಣ ನಡುಗಿ ಹೋದೆ.

ಸಾಬ್ರಾ!!!!ಏನಂತ ಹೀಂಗ ಹೊಲಸ್ ಹೊಲಸ ಹೆಸರು ಹೇಳ್ತೀರಿ. ಅಂತ ಹೆಸರಿನ ಯಾವದೂ ದೇಶ ಇಲ್ಲ. ಆ ಶಬ್ದ ಮತ್ತೊಮ್ಮೆ ಹೇಳಬ್ಯಾಡ. ಏನು ಸ್ಪೆಲ್ಲಿಂಗ್ ಅಂತ ಹೇಳು - ಅಂತ ಝಾಡಿಸಿದೆ.

ತಡೀರಿ ಸಾಬ್...........ಅಂದವನೇ, ಹೊಚ್ಚ ಹೊಸಾ ಲೇಟೆಸ್ಟ್ ಮಾಡೆಲ್ ಸ್ಮಾರ್ಟ್ ಫೋನ್ ತೆಗೆದದವನ, ಏನೇನೋ ಚಕ್ ಚಕ್ ಅಂತ ಚೆಕ್ ಮಾಡಿ....T..U..N..I..S..I..A....ಅಂತ ಸ್ಪೆಲ್ಲಿಂಗ್ ಹೇಳಿ....ಮತ್ತ ಅವಂಗ ಬಂದಾಂಗ ಉಚ್ಚಾರ ಮಾಡಿದ.

ಶಿವಾ.....ಶಿವಾ.....ಕಿವಿ ಮುಚಗೊಂಡೆ. ಅಷ್ಟು ಖರಾಬಾಗಿ ಕೇಳಿಸಿತ್ತು ಅವನ ಉಚ್ಚಾರ.

ಸಾಬ್ರಾ....ಅದನ್ನ ಟ್ಯೂನಿಸಿಯಾ ಅಂತ ಉಚ್ಚಾರ ಮಾಡ್ತಾರ. 'ಟ'ಕಾರ....'ಟ'ಕಾರ. ನೀವು ಹೇಳಿದಂಗ 'ತ'ಕಾರ ಅಲ್ಲ. 'ತ'ಕಾರ ಹಾಕಿಬಿಟ್ಟರ, ಹೆಂಗಸೂರು ಹೋಗಲೀ, ಗಂಡಸೂರು ಬೆಚ್ಚಿ ಬಿದ್ದು ಓಡಿ ಹೋಗು ಹಾಂಗ ಅದ ಹೆಸರು. ಮತ್ತ ಅದು 'ನ'ಕಾರ. ನವಿಲು ಇದ್ದಂಗ. 'ಣ'ಕಾರ ಅಲ್ಲ. ಬೆಣ್ಣಿ, ಉಣ್ಣಿ ಉಚ್ಚಾರ ಮಾಡಿದಂಗ 'ಣ'ಕಾರ ಹಾಕಬ್ಯಾಡರೀ. ತಿಳಿತ? - ಅಂತ ಹೇಳಿ ತಿದ್ದಿದೆ.

ಯಾವ ಮಂಗ್ಯಾನ್ ಕೆ  ಟ್ಯೂನಿಸಿಯಾ ಅಂತ ಹೆಸರು ಇಟ್ಟಾನೋ? ದೇವರಿಗೆ ಗೊತ್ತು. ಕರೀಮನಂತಾ ಹಾಪ್ರು ಅವರಿಗೆ ಬಂದಂಗ ಹೇಳಿ ಕನ್ನಡದಾಗ ಮಹಾ ಅಸಡ್ಡಾಳ ಆಗಿ ಕೇಳಿಸ್ತದ.

ಅಂತೂ ಒಟ್ಟಿನಲ್ಲಿ ಅಲ್ಜೀರಿಯಾ, ಟ್ಯೂನಿಸಿಯಾ ದೇಶದ ಎರಡು ರಿಮೋಟ್ ಮಾಲ್ ಇಂಟರ್ನೆಟ್ ಮ್ಯಾಲೆ ಪಟಾಯಿಸೀರಿ ಅಂತ ಆತು. ಎಲ್ಲೆ ಸಿಕ್ಕರು? ಫೇಸ್ಬುಕ್ ಮ್ಯಾಲೆ ಏನು? ಹೊಸ ಸ್ಮಾರ್ಟ್ ಫೋನ್ ಅದಕ್ಕ ತೊಗೊಂಡಿ ಏನು? ಅವರು ಯಾಕ ನಿನ್ನಂತ ಇಂಡಿಯಾದ ಮನುಷ್ಯಾನ ಜೊತಿ ಇಂಟರ್ನೆಟ್ ಮ್ಯಾಲೆ ಮಂಗ್ಯಾತನ ಮಾಡ್ಲಿಕತ್ತಾರ? - ಅಂತ ಕೇಳಿದೆ.

ಸಾಬ್....ನೋಡಿ....ಅವರು ಅರಬ್ ಔರತ್ "ಫ್ರೀ ಸ್ಟೇಶನ್" ಗೆ ಬಂದು ನಮ್ಮಂತ ಮಂದಿ ಹಿಡ್ಕೊತ್ತಾರೆ. ನಮಗೂ ಟೈಮ್ ಪಾಸ್. ಯಾಕೆ ಬೇಡ ಅನ್ನಬೇಕು? - ಅಂದ ಕರೀಂ.

ಏನು ಇದು ಫ್ರೀ ಸ್ಟೇಶನ್? ಅವರ ಊರಿನ ರೇಲ್ವೆ ಸ್ಟೇಶನ್ ಹೆಸರು ಫ್ರೀ ಸ್ಟೇಶನ್ ಏನು? ಆ ರೇಲ್ವೆ ಸ್ಟೇಶನ್ ಕಟ್ಟಿ ಮ್ಯಾಲೆ ಕೂತು ನಿಮ್ಮ ಜೊತಿ ಫೇಸ್ಬುಕ್ ಮ್ಯಾಲೆ ಹರಟಿ ಮತ್ತೊಂದು ಹೊಡಿತಾರೇನು? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ.....ಇಲ್ಲ ಸಾರ್.....ಏನು ಬಡ್ಡ ತಲಿ ಮಂದಿ ನೀವು? ಫ್ರೀ ಸ್ಟೇಶನ್ ಅಂದ್ರೆ ರೇಲ್ವೆ ಸ್ಟೇಶನ್ ಅಂತೆ. ಹಾಪ್ ಸಾಬ್. ಫ್ರೀ ಸ್ಟೇಶನ್ ಅಂದ್ರೆ ತಲಿ ಕೆಡೋದು ಸಾಬ್. ನಿಮ್ಮದೂಕಿ ಬೀವಿ ನಿಮಗೆ ಅಥವಾ ಬೀವಿಕೋ ನೀವು ಖಾತಿರ್ ಖಿದ್ಮತ್ ಮಾಡೋದು ಬಿಟ್ಟು ಬಿಟ್ಟರೆ ಅವರಿಗೆ ಫೀಲಿಂಗ್ ಬರೋದಿಲ್ಲ ಕ್ಯಾ? ಆ ಫೀಲಿಂಗ್ ಗೆ ಫ್ರೀ ಸ್ಟೇಶನ್ ಅಂತಾರೆ - ಅಂದು ಒಂದು ಬಾಂಬ್ ಹಾಕಿಯೇ ಬಿಟ್ಟ.

ಈಗ ಗೊತ್ತಾತು ಇವ ಹಾಪ ಮಂಗ್ಯಾನ್ ಕೆ  ಫ್ರಸ್ಟ್ರೇಶನ್ (frustration) ಗೆ ಫ್ರೀ ಸ್ಟೇಶನ್ ಅಂತ ಹೇಳಿಬಿಟ್ಟಿದ್ದ.

ಸ್ವಲ್ಪ ಫೋಟೋ ತೋರ್ಸು, ನೋಡೋಣ ಹ್ಯಾಂಗ ಇದ್ದಾರ ಅಂತ ನಿನ್ನ ವಿಲಾಯತಿ ಮಾಲ್ - ಅಂತ ಕೇಳಿದೆ.

ಕರೀಂ ಮತ್ತ ತನ್ನ ಹೊಸ ಸ್ಮಾರ್ಟ್ ಫೋನ್ ತೆಗದ. ಪಟಾ ಪಟಾ ಅಂತ ಒತ್ತಿದ ಏನೋ. ನನ್ನ ಮಸಡಿ  ಮುಂದ ತಂದು ಹಿಡದ. ಎರಡೂ ಒಂದ ತರಾ ಇರೊ, ಬರೆ ಕಣ್ಣ ಮಾತ್ರ ಕಾಣೋ, ಬಾಕಿ ಎಲ್ಲಾ ಫುಲ್ ಕವರ್ ಆದ ಇಬ್ಬರು ಅರಬ್ ಮಹಿಳಾಮಣಿಗಳ ಫೋಟೋ ಬಂದವು.

ಏನ್ರೀ ಸಾಬ್ರಾ? ಇಬ್ಬರೂ ಒಂದ ತರಹ ಇದ್ದಾರ. ಫುಲ್ ಕವರ್ ಇದ್ದಿದ್ದಕ್ಕ ಏನೂ ತಿಳಿಯಂಗಿಲ್ಲ. ಇಬ್ಬರೂ ಬ್ಯಾರೆ ಬ್ಯಾರೆ ಅಂತ ಹಾಂಗ ಹೇಳತಿಯೋ? - ಅಂತ ಕೇಳಿದೆ.

ನೋಡಿ ಸಾಬ್. ಕಣ್ಣು ನೋಡಿ. ಒಬ್ಬಾಕಿದು ನೀಲಿ. ಇನ್ನೊಬ್ಬಾಕಿದು ನಿಮ್ಮ ಗತೆ ಇದೆ. ಅದೇ ವ್ಯತ್ಯಾಸ. ಮತ್ತೆ ಹೊಟ್ಟಿ ಡ್ಯಾನ್ಸ್ ಮಾಡೋವಾಗ ಬ್ಯಾರೆ ಬ್ಯಾರೆ ಅಂತ ಗೊತ್ತಾಗ್ತದೆ - ಅಂತ ಹೇಳಿ ತಲಿ ಬಗ್ಗಡ ಮಾಡಿಬಿಟ್ಟ.

ಹೊಟ್ಟಿ ಡ್ಯಾನ್ಸ್!!!!!!!!!!!!!!

ಏನಿದು? 

ಬ್ಯಾರೆ ಎಲ್ಲಾ ತರಹದ ಡ್ಯಾನ್ಸ್ ಗೊತ್ತಿತ್ತು. ಹಾವಿನ ಡ್ಯಾನ್ಸ್, ಮುಂಗುಸಿ ಡ್ಯಾನ್ಸ್, ಮಂಗ್ಯಾ ಡ್ಯಾನ್ಸ್, ಕತ್ತಿ ಡ್ಯಾನ್ಸ್. ಇದ್ಯಾವದು ಹೊಟ್ಟಿ ಡ್ಯಾನ್ಸ್?

ಕರೀಮನ ಮುಂದುವರ್ದು  ಹೇಳಿದ.

ಸಾಬ್ ನೋಡಿ. ಇವರಿಬ್ಬರೂ ಅರಬ್ ಬೇಗಂ ಇದ್ದಾರೆ ನೋಡಿ, ಇಬ್ಬರೂ ಒಬ್ಬರಕಿಂತ ಒಬ್ಬರು ಮಸ್ತ ಹೊಟ್ಟಿ ಡ್ಯಾನ್ಸ್ ಮಾಡ್ತಾರೆ. ಕಟ್ಟಿ ಮ್ಯಾಲೆ ಮಾಡ್ತಾರೆ. ಎಲ್ಲರೂ ಹರಟಿ ಕಟ್ಟಿ ಮ್ಯಾಲೆ ಹರಟಿ ಹೊಡೆದರೆ ನಾವು ಹೊಟ್ಟಿ ಡ್ಯಾನ್ಸ್ ನೋಡತೇವಿ. ತಿಳೀತು ಕ್ಯಾ? ಯಾರಿಗೆ ಐತೆ ಆ ಅದೃಷ್ಟ. ನೀವೂ ಬರ್ತೀರಿ ಕ್ಯಾ? ಅದಕ್ಕೆ ಈ ಮಲ್ಲಿಗಿ ಹೂವಾದು ಮಾಲಿ - ಅಂತ ಹೇಳಿದ ಕರೀಂ, ಮಲ್ಲಿಗಿ ಮಾಲಿ ಕಟ್ಟಿದ್ದ ಪಾಕೀಟ ಮೂಗಿನ ಹತ್ತಿರ ತಂದು ಘಮ್ಮಂತ ವಾಸನಿ ಎಳಕೊಂಡು, ಯಾ ಖುದಾ, ಯಾ ರಬ್ಬಾ, ಅಂತ ಹೇಳಿ ಒಂದು ತರಹದ ಸಂತೋಷದಿಂದ ಮುಲುಗಿದ.

ಹೋಗ್ಗೋ ನಿಮ್ಮ ಸಾಬ್ರಾ. ಹೊಟ್ಟಿ ಡ್ಯಾನ್ಸ್ ಅಂದ್ರ ಇನ್ನೂ ತಿಳಿದಿಲ್ಲ. ಅದನ್ನ ಆ ಮ್ಯಾಲೆ ನೋಡೋಣ. ಅದೆಂತರ  ಡ್ಯಾನ್ಸ್ ಇರಲಿ. ಇಷ್ಟ ಚೊಲೋ ಡ್ಯಾನ್ಸ್ ಮಾಡೋರು ಅಲ್ಲೇ ಡ್ಯಾನ್ಸ್ ಮಾಡದ ನಿನ್ನ ಮುಂದ ಇಂಟರ್ನೆಟ್ ನ್ಯಾಗಾ ಯಾಕ್ ಡ್ಯಾನ್ಸ್ ಮಾಡಿ ತೋರಸ್ತಾರ?- ಅಂತ ಕೇಳಿದೆ.

ನೋಡಿ ಸಾಬ್....ಆ ದೇಶಾ ಒಳಗೆ ಎಲ್ಲ ಭಾಳ್ ಕಟ್ಟರ್.....ಹಾಗೆ ಎಲ್ಲಾ ಔರತ್ ಮಂದಿ ಡ್ಯಾನ್ಸ್ ಮಾಡ್ಲಿಕ್ಕೆ ಆಗೋದಿಲ್ಲ. ಮತ್ತೆ ಗಂಡಾ ಮುಂದೆ ಮಾಡೋಣ ಅಂದ್ರೆ, ಅವನು, ಜಾ ಬೇ ಜಾ. ಪುರಾನಿ ಹೋ ಗಯೀ. ಕಿತನಾ ದೇಖೂ ತುಜ್ಕೋ. ತಂಗ ಮತ್ ಕರೋ, ಅಂತ ಹೇಳ್ಬಿಟ್ಟು, ಅಲ್ಲಿಂದ 2-3 ತಾಸಿನ ದೂರ ಇರುವ ದುಬೈಗೋ, ಶಾರ್ಜಾಕ್ಕೋ ಹೋಗಿ ಒಳ್ಳೆ ಒಳ್ಳೆ ಹೊಟ್ಟಿ ಡ್ಯಾನ್ಸ್ ನೋಡಿ ಬರ್ತಾರೆ. ಅದಕ್ಕೇ ಅಲ್ಲಿ ಬೇಗಂ ಮಂದಿ frustration ಗೆ ಬಂದ್ಬಿಟ್ಟಿ, ಇಂಟರ್ನೆಟ್ ಮ್ಯಾಲೆ ಯಾರಾರು ಹಂದರ್ದ್ ಆದ್ಮಿ ಸಿಗ್ತಾರೋ ಅಂತ ನೋಡ್ತಾ ಇರ್ತಾರೆ. ನಮ್ಮಂತವರು ಸಿಕ್ಕರೆ ದೋಸ್ತಿ ಮಾಡಿಕೊಂಡು, ಫಾರ್ಟಿಂಗ್ ಮಾಡ್ತಾರೆ. ತಿಳೀತು ಕ್ಯಾ? - ಅಂತ ಕೇಳಿದ ಕರೀಂ.

ಓಹೋ.....ಇವರು AA ಮಂದಿ ಅನ್ನು. ಅದು ಫಾರ್ಟಿಂಗ್(farting) ಅಲ್ಲ. ಫ್ಲರ್ಟಿಂಗ್ (flirting). ಅವತ್ತ ಹೇಳಿಕೊಟ್ಟೇನಲ್ಲೋ. ಸರೀತ್ನಾಗಿ ಅನ್ನು. - ಅಂದೆ.

AA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AA ಅಂದ್ರೆ 'ಅತೃಪ್ತ ಆಂಟಿಯರು' ಅಂತ. AAA ಅಂತ ಕೂಡ ಅದ. ಗೊತ್ತೇನು? - ಅಂತ ಹೇಳಿದೆ.

AAA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AAA ಅಂದ್ರ 'ಅತೃಪ್ತ ಆಂಟಿಯರ ಆರ್ತನಾದ'...ಹೀ.....ಹೀ.....ಹೀ.......- ಅಂತ ನಕ್ಕೋತ್ತ ಹೇಳಿದೆ.

ಕರೀಂ ಸಹಿತ ನಕ್ಕ. ಗಹಗಹಿಸಿ ನಕ್ಕ.

AAA.....ಏನು ಮಸ್ತ ಹೆಸರು ಇಟ್ಟೀರಿ ಸಾಬ್. ಹೀ.....ಹೀ.....ಹೀ.......ಅದು ಒಂದು ಕನ್ನಡಿ (ಕನ್ನಡ) ಗಾನಾ ಇತ್ತು ನೋಡಿ. ನಾದಮಯ.....ನಾದಮಯ......ಹಾಗೆ ಇದು ಆಂಟಿಯರ ಆರ್ತನಾದಮಯ......ಹೀ.....ಹೀ......- ಅಂತ ತಂದೂ ಒಂದಿಷ್ಟು ಕೂಡಿಸಿದ. ಮಸ್ತ ನಕ್ಕವೀ.

ಸಾಬ್....ಅವರು ಯಾರೋ ನಿಮ್ಮದು ಕನ್ನಡಿ ಶಾಯರ್ ಇದ್ದರು ನೋಡಿ......ಅವರೇ ನರ್ಸಿಂಗ್ ಸಾಮಿ....ಅವರ ಗಾನಾ ಇತ್ತು ನೋಡಿ. "ಬೀವಿ ಒಬ್ಬಾಕಿ ಮನ್ಯಾಗ ಇದ್ದರೆ ನಮ್ಮದೂಕೆ ಅದೇ ಕರೋಡ್ ರೂಪಾಯಿ" ಅಂತ. ಹಾಗೆ ಈಗ ನೋಡಿ ಹೊಸಾ ಗಾನಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂತ. ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್ ಮಾಡಿದ್ರೆ, ಇನ್ನೊಂದು ಎರಡು ಕರೋಡ್ ರೂಪಾಯಿ - ಅಂತ ಹೇಳಿದ ಕರೀಂ. ಮಸ್ತ ಸೆನ್ಸ್ ಆಫ್ ಹ್ಯೂಮರ್ ಮಗಂದು.

ಅಯ್ಯೋ....ಅವರು ನರ್ಸಿಂಗ್ ಸಾಮಿ ಅಲ್ಲಪಾ. ಅದ್ನಾನ್ ಸಾಮಿ ಇದ್ದಂಗ ನರ್ಸಿಂಗ್ ಸಾಮಿ ಅಂತ ತಿಳ್ಕೊಂಡಿ ಏನು? ಅವರು ದಿವಂಗತ ಕೆ.ಎಸ್. ನರಸಿಂಹಸ್ವಾಮಿ ಅಂತಪಾ. ಅವರು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ" ಅಂತ ಬರೆದಿದ್ದು ಹೌದು. ನೀ ಅದನ್ನ ನಿನ್ನ ಸ್ಟೈಲಿನ್ಯಾಗ ಭಾಳ ಚಂದಾಗಿ ಹೇಳಿದಿ. ಆದ್ರಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂದಿ ನೋಡು, ಅದನ್ನ ಕೇಳಿದ್ರ ಮಾತ್ರ ಅವರ ಆತ್ಮ ವಿಲಿವಿಲಿ ಒದ್ದಾಡ್ತದ ನೋಡು - ಅಂದೆ.

ಓಹೋ.....ನರ್ಸಿಂಹಾದು ಸ್ವಾಮಿ ಕ್ಯಾ? ನಾವು ಸುಮಾರು ಕರೆಕ್ಟ್ ಹೇಳಿದ್ವಿ ಹಾಂಗಾದ್ರೆ? - ಅಂದ ಕರೀಂ.

ಆದ್ರ ನೋಡಪಾ, ಫೇಸ್ಬುಕ್ ಮ್ಯಾಲೆ ಅಂಟಿ ಮಂದಿ ದೋಸ್ತಿ ಮಾಡಿ ಮಂಗ್ಯಾ ಆದವರು ಭಾಳ್ ಮಂದಿ ಇದ್ದಾರ. ಅವರನ್ನ ಕೇಳಿದ್ರ, ಎಲ್ಲಿ ಕರೋಡ್ ರೂಪಾಯಿ? ಫೇಸ್ಬುಕ್ ಆಂಟೀಸ್ ಎಲ್ಲಾ ಎಂದೂ ಹೊಡೆಯದ ನಾಗಾಲ್ಯಾಂಡ್ ಲಾಟರೀ ಟಿಕೆಟ್ ಅಂತಾರ. ನೋಡ್ಕೋ ಮತ್ತ. ನಿನ್ನ ಅರೇಬೀ ಆಂಟಿ ಮಂದಿ ಹೊಟ್ಟಿ ಡ್ಯಾನ್ಸ್ ಮಾಡ್ತಾರ, ಮತ್ತೊಂದು ಮಾಡ್ತಾರ ಅಂತ ಮಂಗ್ಯಾ ಆಗಬ್ಯಾಡ. ಅವೆಲ್ಲಾ ನೀರ ಮೇಲಿನ ಗುಳ್ಳೆ. ಯಾವಾಗ ಒಡಿತದ ಅಂತ ಹೇಳಲಿಕ್ಕೆ ಬರೋದಿಲ್ಲ - ಅಂದೆ.

ಹೌದು ಸಾಬ್....ಕರೆಕ್ಟ್ ಬೋಲ್ಯಾ - ಅಂಡ್ ಕರೀಂ ತನ್ನ ಒಪ್ಪಿಗಿ ಕೊಟ್ಟ.

ಈಗ ಹೇಳಪಾ.....ಹೊಟ್ಟಿ  ಡ್ಯಾನ್ಸ್ ಅಂದ್ರೆ ಏನು ಅಂತ - ಅಂದೆ. ಕೆಟ್ಟ ಕುತೂಹಲ ತಿಳ್ಕೊಬೇಕು ಅಂತ.

ಸಾಬ್...ಅದಕ್ಕೆ ಇಂಗ್ಲಿಷ್ನಲ್ಲಿ "ಬಲಿ ಡ್ಯಾನ್ಸ್" ಅಂತಾರೆ. ಹೊಟ್ಟಿ ಕುಣಿಸಿ, ಕುಣಿಸಿ, ಸೊಂಟ ತಿರುಗಿಸಿ, ತಿರುಗಿಸಿ, ಕೊಯ್ಯಾ ಕೊಯ್ಯಾ ಅನ್ನೋ ಅರಬಿ ಮ್ಯೂಸಿಕ್ ಗೆ ಮಾಡೋ ಡ್ಯಾನ್ಸ್. ಬಲಿ ಡ್ಯಾನ್ಸ್.....ಬಲಿ ಡ್ಯಾನ್ಸ್ - ಅಂತ ಹೇಳಿ, ಅಲ್ಲೇ ಸಣ್ಣ ಪ್ರಮಾಣದ ಹೊಟ್ಟಿ ಡ್ಯಾನ್ಸ್ ಮಾಡಿ ತೋರ್ಸಿದ. ಭಾಳ ನಗಿ ಬಂತು.

ಸಾಬ್ರಾ....ಅದು ಬೆಲ್ಲಿ ಡ್ಯಾನ್ಸ್ ಅಂತ ಇರಬೇಕು ನೋಡ್ರೀ. ಕನ್ನಡದಾಗ ಹೊಟ್ಟಿ ಡ್ಯಾನ್ಸ್ ಅಂದ್ರ ಕರೆಕ್ಟ್ ಅದ ತೊಗೋರಿ. ಆದ್ರಾ ಬಲಿ ಡ್ಯಾನ್ಸ್ ಅಂತ ಮಾತ್ರ ಅನಬ್ಯಾಡ್ರೀ. ಅದು ಭಾಳ ಗಲತ್ ಅರ್ಥ ಕೊಡ್ತದ - ಅಂದೆ.

ಬಲಿ ಡ್ಯಾನ್ಸ್ ಅಂದ್ರೆ ಸಾಬ್? - ಅಂತ ಕೇಳಿದ.

ನೋಡಪಾ.....ಈ ಕಾಡ ಮಂದಿ, ನರಮಾಂಸ ಭಕ್ಷಕ ಮಂದಿ ನರಬಲಿ ಕೊಡೋಕಿಂತ ಮೊದಲು ಅವರ ಹೆಂಗಸೂರ ಕಡೆ ಮಾಡಿಸೋ ಡ್ಯಾನ್ಸ್ ಗೆ 'ಬಲಿ ಡ್ಯಾನ್ಸ್' ಅಂತಾರ ನೋಡಪಾ. 'ಕಾಡಿನ ರಾಜ' ಪಿಚ್ಚರ್ ನ್ಯಾಗ ಬಾಂಬಿ ಅನುರಾಧ ಮಾಡಿದ್ದಳು. ನೆನಪಿಲ್ಲ ನಿನಗ?  ಹಾಂ....ಹಾಂ- ಅಂತ ಕೇಳಿದೆ.

ಯಾರು ಸಾಬ್ ಬಾಂಬಿ ಅನುರಾಧಾ? ನಮ್ಮ ಕ್ಲಾಸ್ಮೇಟ್ ಲಡ್ಕಿ ಕ್ಯಾ? ನಿಮ್ಮದೂಕೆ ಡೌ ಕ್ಯಾ? - ಅಂತ ಮಂಗ್ಯಾನ್ ಕೆ ಪ್ರಶ್ನೆ ಕೇಳಿದ.

ಲೇ....ಹುಸ್ಸೊಳೆ ಮಗನ.....ನಮ್ಮ ಕ್ಲಾಸಿನ್ಯಾಗ ಹಾಂಗೆಲ್ಲ ಅಸಡ್ಡಾಳ ಡ್ಯಾನ್ಸ್ ಮಾಡೋರು ಯಾರೂ ಇರಲಿಲ್ಲ. ಸಿನೆಮಾದಾಗ ಡ್ಯಾನ್ಸ್ ಅನ್ನಲಿಕತ್ತೇನಿ, ನಮ್ಮ ಕ್ಲಾಸ್ ಹುಡುಗಿ ಏನು ಅಂತ ಕೇಳಲಿಕತ್ತಿ. ಬುಧ್ಧಿ ಇಲ್ಲದವನ. ಅಕಿ ಕ್ಯಾಬರೆ ಡ್ಯಾನ್ಸರ ಅನುರಾಧಾ. ಹಳೆ ಕಾಲದಾಕಿ. ಈಗ ಅಕಿ ಮಗಳು ಭಾರಿ ಫೇಮಸ್ ಅಂತ - ಅಂತ ಫುಲ್ ವಿವರಣೆ ಕೊಟ್ಟೆ.

ಓಹೋ...ಅದು ಕ್ಯಾ? ಕಾಡಿಂದು ರಾಜಾ....ಕ್ಯಾ ಮೂವಿ ಸಾಬ್. ಕನ್ನಡಾ ಒಳಗೆ ಟಾರ್ಜನ್ ಟೈಪಿಂದು ಮೂವಿ ಅಂದ್ರೆ ಅದೇ ನೋಡಿ. ಟೈಗರ್ ಭಾಯಿಸಾಬ್ ಪ್ರಭಾಕರ್ ಏನು ಮಸ್ತ್ ಮಾಡಿದಾರೆ ಆ ಮೂವಿ ಒಳಗೆ. ಆ ಮ್ಯಾಲೆ ದೀಪಾ ಕೂಡ ಮಸ್ತ ಮಸ್ತ - ಅಂತ ಹೇಳಿ ವಿಕಾರವಾಗಿ ನಕ್ಕ ಕರೀಂ. ಒಪ್ಪಿದೆ.

ಕಾಡಿನ ರಾಜ - ಮಸ್ತ ಮೂವಿ ಇತ್ತು. ಅವೆಲ್ಲ ನಮ್ಮ 'ಜವಾನಿ ಕಿ ಕಹಾನಿ'. ಸಿಕ್ಕರ ನೋಡ್ರೀ ಇಂಟರ್ನೆಟ್ ಮ್ಯಾಲೆ.

ಒಟ್ಟಿನ್ಯಾಗ ಅರಬ್ ಅತೃಪ್ತ ಆಂಟಿಯರು ತಮ್ಮ ಬೆಲ್ಲಿ ಡ್ಯಾನ್ಸ್ ಕಲೆಯನ್ನು ನಿನ್ನ ಫೇಸ್ಬುಕ್ ಚಾಟ್ ನ್ಯಾಗ ಬಂದು ಮಾಡಿ ತೋರ್ಸತಾರ ಅಂತ ಆತು. ಅದು ನಿನಗ ಮುಜರಾ ಇದ್ದಂಗ. ಕೈಯಾಗ ಮಲ್ಲಿಗಿ ಮಾಲಿ ಹಾಕ್ಕೊಂಡು, ಶೆರೆ ಕುಡ್ಕೊತ್ತ, ಆಗಾಗ ಮಲ್ಲಿಗಿ ವಾಸನಿ ಕುಡ್ಕೊತ್ತ , ತೊಡಿ ತಟ್ಟಿಗೋತ್ತ, ಮುಜರಾ ಗತೆ ಎಂಜಾಯ್ ಮಾಡ್ತಿ ಅಂತಾತು. ಭಾರಿ ಆತ ಬಿಡಪಾ. ಯಾರಿಗೆ ಅದ ಈ ಭಾಗ್ಯ? ನೀನ ಲಕಿ - ಅಂದೆ.

ಅದಕ್ಕೆ ನೋಡೀ ಸಾಬ್....ನಾವು ಸಂಜಿ ಆತು ಅಂದ್ರೆ, ಫೇಸ್ಬುಕ್ ಮ್ಯಾಲೆ ಹತ್ತಿ ಕೂತು ಬಿಡ್ತೇವಿ. ಅಲ್ಲಿ 'ಹರಟಿ ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್' ನೋಡೋಕೆ. ನೀವು ಬನ್ನಿ ಸಾಬ್. ನಿಮಗೂ ಬೇಕಾದ್ರೆ ಅರಬ್ ಆಂಟಿ ಗುರ್ತು ಮಾಡ್ಸಿ ಕೊಡ್ತೇವಿ - ಅಂತ ಆತ್ಮೀಯ ಆಹ್ವಾನ ಕೊಟ್ಟ ಕರೀಂ.

ಥತ್ ನಿನ್ನ....ಆ ಅತೃಪ್ತ ಆಂಟೀಸ್ ಮಾಡೋ ಮಂಗ್ಯಾನ್ ಆಟ ನಾ ನೋಡೋದ? ಬ್ಯಾರೆ ಕೆಲಸ ಇಲ್ಲೇನು? ಮಂಗ್ಯಾನ್ ಕೆ....ನಡಿ......ನಡಿ ......ಖುದಾ ಹಾಫಿಜ್......- ಅಂತ ಹೇಳಿ ಹೊರಟು ಬಂದೆ.

ಫೇಸ್ಬುಕ್ ಎಂಬ ಮಾಯೆ. ಏನೇನೋ ಸಂಬಂಧಗಳನ್ನು ತಳಕು ಹಾಕಿ ಬಿಡುತ್ತದೆ. ಇಲ್ಲಂದ್ರೆ, ಎಲ್ಲಿಯ ಅವಕಾಶವಂಚಿತ, ಅತೃಪ್ತ ಅರಬ್ ಆಂಟಿಯರು, ಎಲ್ಲಿಯ ಕರೀಮಾ, ಎಲ್ಲಿಯ ಬೆಲ್ಲಿ ಡ್ಯಾನ್ಸ್ ಹುಚ್ಚು, ಏನು ಕಥೆ? ಏನೇನೋ ವಿಚಿತ್ರ.