(ಈ ಧಾರಾವಾಹಿಯ ಭಾಗ - ೧, ಭಾಗ -೨ ಇಲ್ಲಿವೆ)
(ಇಲ್ಲಿಯವರೆಗೆ.... ನಮ್ಮ ದೋಸ್ತ ಚೀಪ್ಯಾ ಮತ್ತ ಅವನ ಹೆಂಡತಿ ರೂಪಾ ವೈನಿ ಎಲ್ಲರೆ ಪ್ರವಾಸ ಹೋಗಬೇಕು, ಎಲ್ಲೆ ಹೋಗೋಣ ಅಂತ ನನ್ನ ಕಂಡೆ ಸಲಹೆ ಕೇಳಿದರು. ಅಲ್ಲೆ ಹೋಗ್ರೀ, ಇಲ್ಲೆ ಹೋಗ್ರೀ ಅಂತ ಸಲಹೆ ಕೊಟ್ಟೆ. ಅಂತೂ ಇಂತೂ ಸವದತ್ತಿ, ನವಿಲು ತೀರ್ಥಕ್ಕ ಹೋಗಿ ಬರೋಣ ಅನ್ನೋದು ಅವರಿಗೆ ಒಪ್ಪಿಗೆ ಆತು. ಮುಂದೆ ಓದಿ....)
ಅಂತೂ ಇಂತೂ ಸವದತ್ತಿ, ನವಿಲು ತೀರ್ಥಕ್ಕ ಎರಡು ದಿವಸ ಪ್ರವಾಸ ಹೋಗಿ ಬರೋದು ಅಂತ ಆತು. ಒಂದು ರಾತ್ರಿ ಸವದತ್ತಿ ಒಳಗ ಇರೋದು ಅಂತ ಕೂಡ ಆತು. ಎಲ್ಲಾ ವ್ಯವಸ್ಥಾ ನಾನೇ ಮಾಡಿ ಕೊಡತೇನಿ ಅಂದೆ. ಚೀಪ್ಯಾಗ ಬಿಟ್ಟರ ಒಂದಕ್ಕೆರಡು ಮಾಡೋದ್ರಾಗ ಮಾಹಿರ್ ಆವಾ. ಅದೆಲ್ಲ ಏನ ಬೇಕಾಗಿಲ್ಲ. ಅದೇನೋ ಅಂತಾರಲ್ಲ....ರೊಕ್ಕಾ ಕೊಟ್ಟು ಏನೋ ಕೊಯ್ಸಿಕೊಂಡರು ಅಂತ.
ಲೇ....ಚೀಪ್ಯಾ, ರೀ....ವೈನಿ, ನಾ ಎಲ್ಲಾ ವ್ಯವಸ್ಥಾ, ಪ್ಲಾನ್ ಮಾಡ್ತೇನಿ. ನೀವು MBBS ಆಗಿ, ಟೈಮ್ ಗೆ ಸರಿಯಾಗಿ ಶನಿವಾರ ಮುಂಜಾನೆ ಒಂಬತ್ತು ಘಂಟೇಕ್ಕ ಕರೆಕ್ಟಾಗಿ ಸ್ಟೇಷನ್ ಬಸ್ ಸ್ಟಾಪಿಗೆ ಬಂದುಬಿಡ್ರೀ. ಅಲ್ಲಿಂದ ಪ್ಯಾಟಿಗೆ ಹೋಗಿ ಸವದತ್ತಿ ಬಸ್ ಹಿಡಿಯೋಣ. ಆತಾ? - ಅಂತ ಕೇಳಿದೆ.
ಏನ MBBS ಅಂದೀ? ಏನೋ?! - ಅಂತ ರೂಪಾ ವೈನಿ ಕೇಳಿದರು.
MBBS ಅಂದ್ರ 'ಮಿಯಾ ಬೀವಿ ಬಚ್ಚೆ ಸಮೇತ' ಅಂತ. ಅಂದ್ರ ನೀವಿಬ್ಬರು ಮತ್ತ ನಿಮ್ಮ ಕನ್ಯಾ ರತ್ನಗಳಾದ ಕುಂತಿ, ನಿಂತಿ ಕರ್ಕೊಂಡು ಬರ್ರಿ ಅಂತ. ಹೀ!!! ಹೀ!!! ಅಂತ ಜೋಕ್ ಹೊಡದೆ.
ಸಾಕು! ಏನಂತಾನೋ ಅಂತ ನೋಡಿದರ, MBBS ಅಂತ, ಮತ್ತೊಂದು ಅಂತ. ತಲಿಯೆಲ್ಲಾ ಮಾತಾಡಬ್ಯಾಡಾ. ಎಲ್ಲಾ ಬರತೇವಿ. ಅದೇನು ಟ್ರಿಪ್ ಮಾಡಸ್ತೀಯೋ ಮಾಡ್ಸು, ಅಂತ ಹೇಳಿದರು ರೂಪಾ ವೈನಿ.
ನೀವು ಬಂದರೆ ಬರ್ರಿ. ಬಂದು ನೋಡ್ರೀ. ನೀವು ಹಿಂದೆಂದೂ ಹೋಗಿರಬಾರದು, ಮುಂದೆಂದೂ ಹೋಗಬಾರದು, ಅಂತಾ ಟ್ರಿಪ್ ಮಾಡಿಸಿಬಿಡ್ತೇನಿ. ಬಂದರಾ ಬರ್ರಿ. ಈಗ ನಾ ಹೋಗಿ ಬರ್ತೇನಿ. ಭಾಳ ತಡಾ ಆತು. ಊಟದ ಟೈಮ್ ಬ್ಯಾರೆ ಆತು. ನಾ ಬರ್ಲ್ಯಾ ಹಾಂಗಿದ್ದರಾ? ಹಾಂ? - ಅಂತ ಕೇಳಿ ಕೇಳಿ ಅಲ್ಲೇ ಕೂತೆ. ಎಲ್ಲರೆ ಊಟ ಮಾಡಿ ಹೋಗು ಅಂತಾರೇನೋ ಅಂತ ಆಶಾ!
ಹ್ಞೂ....ನಡೀಪಾ ಮಂಗೇಶ. ಹೋಗಿ ಬಾ. ಲಗೂನ ಹೊಂಡು. ಇಲ್ಲಂದ್ರ 'ಮನೋಹರ್ ನಿವಾಸ' ಹೋಟೆಲ್ ಮುಚ್ಚಿ ಬಿಡ್ತದ. ಆ ಮ್ಯಾಲೆ ಏನು ಮಾಡವಾ? ಹಶಿ ಬ್ರೆಡ್ ತಿಂದು ಮಲ್ಕೊಳ್ಳವಾ ಏನು? ಏನ ಬ್ಯಾಡಾ. ಲಗೂನ ಹೋಗಿ, ಮನೋಹರ್ ನಿವಾಸದಾಗ ಕಂಠ ಮಟಾ ಫುಲ್ ಮೀಲ್ಸನ್ನೇ ಹೊಡದು ಮಲ್ಕೋ, ಅಂತ ಇಲ್ಲದ ಉದ್ರಿ ಉಪದೇಶ ಬ್ಯಾರೆ ರೂಪಾ ವೈನಿಯಿಂದ. ಹೆಚ್ಚಾಗಿ ರೂಪಾ ವೈನಿ ಆವತ್ತು ರಾತ್ರಿಗೆ ಅಡಿಗಿ ಮಾಡಿಲ್ಲ ಅಂತ ಅನ್ನಸ್ತದ. ಎಲ್ಲಾರಿಗೂ ಅಳ್ಳಿಟ್ಟೋ ಪಳ್ಳಿಟ್ಟೋ ಏನರೆ ಕಲಿಸಿ ಕೊಟ್ಟು ಬಿಡವರು ಇರಬೇಕು. ಅದಕ್ಕಾ ನನಗ ಊಟಕ್ಕ ನಿಲ್ಲು ಅಂತ ಹೇಳವಲ್ಲರು. ಅದ್ರಕಿಂತ ಮನೋಹರ್ ನಿವಾಸ ಒಳಗ ಗಿಚ್ಚಾಗಿ ಊಟಾ ಜಡಿಯೋದು ಒಳ್ಳೇದು. ಅಲ್ಲೆ ಮತ್ತ ಕರೀಮಾ ರೂಂ ಹಾಕಿ ಕುಡಿಲಿಕತ್ತಿದ್ದರೆ ನಮಗೂ KF ಭಾಗ್ಯ ಇದ್ದರೂ ಇದ್ದೀತು ಅಂತ ಚೀಪ್ಯಾನ ಮನಿಂದ ತಳಾ ಎತ್ತಿ ಹೊಂಟೆ. ಶಿವನೇ ಶಂಭುಲಿಂಗ. ಕಾಪಾಡು ತಂದೆ!
ಟ್ರಿಪ್ಪಿಗೆ ಹೋಗೋ ಶನಿವಾರ ಬಂದೇ ಬಿಡ್ತು.
ವಾರ ಬಂತಮ್ಮಾ ಶನಿವಾರ ಬಂತಮ್ಮಾ
ಸವದತ್ತಿ ಎಲ್ಲಮ್ಮಾ
ಆಂಧ್ರದ ಮಂಗಮ್ಮಾ
ವಾರ ಬಂತಮ್ಮಾ ಶನಿವಾರ ಬಂತಮ್ಮಾ
ಅಂತ ಹಾಡಿಕೋತ್ತ, ಮುಂಜಾನೆ ಲಗೂನೆ ಎದ್ದು ತಯಾರಾಗಿ, ಶನಿ ದೇವರ ಪೂಜಾ ಮಾಡಿ, ಮನಿಂದ ಹೊರಟೆ. ಮನಿ ಹೊರಗ ಬಂದ ಕೂಡಲೇ ಕಾಗಿ ಒಂದು ಕಾವ್ ಕಾವ್ ಅಂತ ಚೀರಿ, ಮೂರು ಸರೆ ಲಗಾಟಿ ಹೊಡದು, ಕರೆಂಟ್ ತಂತಿ ಮ್ಯಾಲೆ ಹೋಗಿ ಕೂಡ್ತು. ಕಾಗಿ ಸಂಭ್ರಮ ನೋಡಿ ಅನ್ನಿಸ್ತು - ಇವತ್ತು ಶನಿದೇವರಿಗೆ ಮಾಡಿದ ಪೂಜಾ ಸರಿ ಆದಂಗ ಅದ. ಅದಕ್ಕ ಅವರ ವಾಹನವಾದ ಕಾಗಿ ಲಗಾಟಿ ಮ್ಯಾಲೆ ಲಗಾಟಿ ಹೊಡದ ಹೊಡದ ಕಾವ್ ಕಾವ್ ಅಂತ ಅನ್ನಲಿಕತ್ತದ.
ರಾಯರ ಮಠದ ಮುಂದಿಂದ ಕೆಳಗ ಇಳದು ಬಂದು ರೇಲ್ವೆ ಸ್ಟೇಷನ್ ಬಸ್ ಸ್ಟಾಪಿನ್ಯಾಗ ನಿಂತೆ. ಚೀಪ್ಯಾ ಮತ್ತ ಅವನ ಕುಟುಂಬ ಬರೋದನ್ನ ಕಾಯಿಕೋತ್ತ. ಟೈಮ್ ಪೌಣೆ ಒಂಬತ್ತು. ೮.೪೫.
ಚೀಪ್ಯಾ ಬರೋಕಿಂತ ಮೊದಲು ಇನ್ನೊಬ್ಬ ಮಹನೀಯರು ಸಕುಟುಂಬ ಸಮೇತ ಬಂದ್ರು. ಫುಲ್ MBBS. ಅವರೇ ಠಾಕ್ರೆ ಅವರು. ಅಯ್ಯೋ! ಬಾಳ್ ಠಾಕ್ರೆ ಅಲ್ಲರೀ. ಇವರು ಬಿಂದುಮಾಧವಾಚಾರ್ ಗಲಗಲಿ ಅಂತ. ಬಾಳ್ ಠಾಕ್ರೆ ಒಬ್ಬವ ಮಗನ ಹೆಸರು ಬಿಂದುಮಾಧವ ಅಂತ ಇತ್ತು. ಅದಕ್ಕೇ ಇವರಿಗೆ ಠಾಕ್ರೆ ಠಾಕ್ರೆ ಅಂತ ಕಾಡಸ್ತೇನಿ ನಾನು. ಜೊತಿಗೆ ಅವರ ಕಚ್ಚಿಧಾರಿ ಪತ್ನಿ. ಸೀರಿ ಉಟಗೊಂಡ ದೊಡ್ಡ ಹುಡುಗಿ ರಂಗಮ್ಮ (ರಂಗನಾಯಕಿ), ಹಾಪ್ ಸೀರಿ ಉಟ್ಟುಗೊಂಡ ಸಣ್ಣ ಹುಡುಗಿ ಮಂಗಮ್ಮ (ಉರ್ಫ್ ಲಕ್ಷ್ಮಿ) ಎಲ್ಲಾರೂ ಬಂದು ಬಸ್ ಸ್ಟಾಪಿನ್ಯಾಗ ಜಮಾ ಆದರು.
ನಮಸ್ಕಾರ ಠಾಕ್ರೆ ಆಚಾರ್! ಎಷ್ಟು ದೂರ ಪ್ರಯಾಣ? ನಮಸ್ಕಾರ್ರೀ ಮಾಮಿ. ಏನ ರಂಗಮ್ಮಾ, ಮಂಗಮ್ಮಾ, ಏನೋ ಜೋರ್ ತಯಾರ ಆಗಿ ಎಲ್ಲೋ ಹೊಂಟಂಗ ಅದ? ಎಲ್ಲೆ ಹೊಂಟೀರಿ? ಹಾಂ? - ಅಂತ ಕೇಳಿದೆ.
ಏ....ಶಂಕರಾಚಾರಿ! ನನಗ್ಯಾಕ ಠಾಕ್ರೆ ಅಂತೀ? ಹಾಂ? ಎಲ್ಲೆ ಹೊಂಟಿ ಅಂತ ಕೇಳಿ ಅಪಶಕುನ ಮಾಡಿಬಿಟ್ಟಿಯಲ್ಲೋ? ಹಾಂ? - ಅಂತ ಗಲಗಲಿ ಆಚಾರ್ರು ಝಾಡಿಸಿದರು. ಅದು ನಮ್ಮ ರುಟೀನ್. ಅವರು ನನಗ ಶಂಕರಾಚಾರಿ ಅಂತ ಕರೀತಾರ. ನಾ ಸ್ಮಾರ್ತ ಬ್ರಾಹ್ಮಣ ನೋಡ್ರೀ. ಅದಕ್ಕೇ.
ಏ!....ನನಗ್ಯಾಕ ಮಂಗಮ್ಮಾ ಅಂತೀ? ನಮ್ಮ ಅಕ್ಕಗ ರಂಗಮ್ಮಾ ಅಂತಾರಂತ ಹೇಳಿ ನನಗ ಮಂಗಮ್ಮಾ ಅಂತ ಅನ್ನೋದಾ? ಹಾಂ? ಚಂದಾಗಿ ಲಕ್ಷ್ಮಿ ಅಂತ ಕರಿಲಿಕ್ಕೆ ಏನು ಧಾಡಿ ನಿನಗ? ಹಾಂ? ಅಂತ ಹೇಳಿ ಸಿಟ್ಟಿಗೆದ್ದ ಬಾಲೆ, ನೋಡ ಅವ್ವಾ, ಸಿಕ್ಕಾಗೊಮ್ಮೆ ಮಂಗಮ್ಮಾ ಮಂಗಮ್ಮಾ ಅಂತ ಅಂತಾನ ನೋಡು ಇವಾ. ಬಯ್ಯಿ ಅವಂಗ, ಅಂತ ಲಕ್ಷ್ಮಿ ಅಚಾರರ ಪತ್ನಿಯಾದ ರಮಾಬಾಯಿಗೆ ಕಂಪ್ಲೇಂಟ್ ಕೊಟ್ಟಳು.
ರಮಾ ಬಾಯಾರು ಮೈಮಾ. ಅಯ್ಯೋ! ಮಹಿಮಾ ಅಲ್ಲಾ. ಮೈಮಾ ಅಂದ್ರ ಮೈಸೂರ ಮಾಧ್ವರು ಅಂತ. ಅದಕ್ಕೇ ದೊಡ್ಡ ಹುಡುಗಿಗೆ ಹೋಗಿ ಹೋಗಿ ರಂಗನಾಯಕಿ ಅಂತ ಧಾರವಾಡ ಕಡೆ ಯಾರೂ ಇಡದ ಹೆಸರು ಇಟ್ಟು ಬಿಟ್ಟಾರ!
ಸುಮ್ಮನಿರಪ್ಪಾ ನೀನು. ಯಾಕೆ ಆ ಚಿಕ್ಕ ಮಗೂನ ಕಾಡ್ತೀಯಾ? ಪಾಪ. ಸುಮ್ಮನಿರೆ ನೀನು. ಹೇಳಿದೀನಿ ಅವನಿಗೆ, ಅಂತ ರಮಾಬಾಯಿ ಬೆಂಗಳೂರ ಭಾಷೆಯಲ್ಲಿ ಹೇಳಿದರು. ಏನೋ ಸಮಾಧಾನ ಮಾಡಿದರು.
ಏ...ಹಾಪ್ ಹುಚ್ಚ ಹುಡುಗಿ ಲಕ್ಷ್ಮಿ ಬಾಯಿ. ಮಂಗಮ್ಮಾ ಅಂದ್ರ ಮಂಗ್ಯಾ ಅಂತ ಅಲ್ಲ. ಮಂಗಮ್ಮ ಅಂದ್ರ ಲಕ್ಷ್ಮಿ ಇನ್ನೊಂದು ಹೆಸರು. ಸ್ವಲ್ಪ ಜನರಲ್ ನಾಲೆಜ್ ಇಂಪ್ರೂವ್ ಮಾಡಿಕೊ. ನಿಮ್ಮ ಅಕ್ಕನ ಹೆಸರಿಗೆ ಪ್ರಾಸ ಹೊಂದಲಿ ಅಂತ ಲಕ್ಷ್ಮಿ ಬದಲಿ ಮಂಗಮ್ಮಾ ಅಂದೆ. ನಿಮ್ಮಕ್ಕ ರಂಗಮ್ಮ ನೀ ಮಂಗಮ್ಮ. ಹೀ !!! ಹೀ!!! - ಅಂತ ಫಿಟ್ಟಿಂಗ್ ಇಟ್ಟೆ.
ಮಂಗಮ್ಮ ಅಂದ್ರ ಲಕ್ಷ್ಮಿ ಹೆಸರು ಅಂತ ಅಕಿ ನಂಬಲಿಕ್ಕೆ ತಯಾರ ಇರಲಿಲ್ಲ. ಹೌದಾ?! ಅನ್ನೋ ಹಾಂಗ ಅವರವ್ವನ ಮುಖಾ ನೋಡಿದಳು. ಅವರವ್ವ, ಹೌದಮ್ಮಾ, ಅನ್ನೋ ಹಾಂಗ ಗೋಣಾಡಿಸಿದಳು. ಆವಾಗ ಈ ಹುಡುಗಿ ಲಕ್ಷ್ಮಿ ನಾ ಹೇಳಿದ್ದನ್ನ ನಂಬಿ, ಹೀ!! ಅಂತ ಹಲ್ಲು ಕಿರಿದಳು. ಮಂಗ್ಯಾ ಮಾಡಿದ ಸುಖದ ಅನುಭೂತಿ ನಮಗೆ.
ಚೀಪ್ಯಾ, ರೂಪಾ ವೈನಿ ಬರೋದರ ಲಕ್ಷಣನೇ ಇಲ್ಲ! ಎಲ್ಲೆ ಹೋದರೋ ಏನೋ? ಆದರೂ ಎರಡು ಮಕ್ಕಳನ್ನ ರೆಡಿ ಮಾಡಿಕೊಂಡು, ತಾವು ರೆಡಿ ಆಗಿ ಬರಬೇಕು. ಹಾಂಗಾಗಿ ಸ್ವಲ್ಪ ತಡಾ ಆಗಿರಬೇಕು. ಬೇಕಾದಷ್ಟು ಟೈಮ್ ಅದ. ಎರಡು ದಿವಸ ಇಟಗೊಂಡು ಹೊಂಟೇವಿ. ಉಳಿದವರು ಅರ್ಧಾ ದಿವಸದಾಗ ಎರಡೂ ಕಡೆ ನೋಡಿಕೊಂಡು ವಾಪಸ್ ಬಂದು ಬಿಡ್ತಾರ.
ಮತ್ತೇನು ಮಾಡ್ಲೀ? ರೂಪಾ ವೈನಿ & ಕಂಪನಿ ಬರೋ ತನಕಾ ಟೈಮ್ ಪಾಸಿಗೆ ಅಂತ ಠಾಕ್ರೆ ಆಚಾರರ ಜೋಡಿ, ಅವರ ಕನ್ಯಾಗಳ ಜೋಡಿ ಮಂಗ್ಯಾತನ ಮುಂದುವರಿಸಿದೆ.
ಈಗ ಗೊತ್ತಾತೇನವಾ ಲಕ್ಷ್ಮಿ ಬಾಯಿ? ಸುಮ್ಮ ಸುಮ್ಮನ ನಿನಗ ಮಂಗಮ್ಮಾ ಮಂಗಮ್ಮಾ ಅಂತಿದ್ದೆ ಅಂತ ತಿಳಕೊಂಡೀ ಏನು? ಅಂತ ಕೇಳಿದೆ. ಅವರ ಅವ್ವನ ಕಡೆ ತಿರುಗಿ, ಏನ್ರೀ ಮಾಮಿ, ದೊಡ್ದಾಕಿಗೆ ರಂಗನಾಯಕಿ ಅಂತ ಹೆಸರು ಇಟ್ಟಿರಿ. ಇಕಿಗೆ ಲಕ್ಷ್ಮಿ ಅಂತ ಹೆಸರು ಇಡೋದರ ಬದಲಿಗೆ ಲಕ್ಷ್ಮಿಯ ನಾಮವೇ ಆದ ಮಂಗಮ್ಮಾ ಉರ್ಫ್ ಮಂಗನಾಯಕಿ ಅಂತ ಇಟ್ಟು ಬಿಟ್ಟಿದ್ದರ ಮುಗಿತಿತ್ತಲ್ಲರೀ. ಹಾಂ? - ಅಂತ ಕೇಳಿದೆ.
ಏ....ಸುಮ್ಮನಿರಪ್ಪಾ, ರೇಗಿಸಬೇಡ, ಅಂತ ರಮಾಬಾಯಾರು ಕೇಳಿಕೊಂಡರು. ಮುಂಜಾನೆ ಮುಂಜಾನೆ ಸಾಕಾಗಿತ್ತು ಅವರಿಗೆ.
ನಾಮ ಅಂತ ಕೇಳಿದ ಬಿಂದುಮಾಧವಾಚಾರ್ರು ತಮ್ಮ ನಾಮಕ್ಕೇ ಎಲ್ಲರೆ ಏನರೆ ಸಂಚುಕಾರ ಬಂತೋ ಅನ್ನವರಾಂಗ ಹೆಂಡ್ತೀ ಮಾರಿ ನೋಡಿದರು. ನಿಮ್ಮ ನಾಮ ಇತ್ಯಾದಿ ಎಲ್ಲ ಸರಿ ಅದ ಅಂತ ಕಣ್ಣಾಗೇ ಅವರ ಹೆಂಡ್ತಿ ಹೇಳಿದ ಮ್ಯಾಲೆ, ಆಚಾರ್ರು ಯಾವದಕ್ಕೂ ಇರಲಿ ಅಂತ ತಮ್ಮ ಕರಿ ಟೊಪ್ಪಿಗಿ ಸರಿ ಮಾಡಿ ಲೆವೆಲಿಂಗ್ ಮಾಡಿಕೊಂಡರು.
ಎಲ್ಲೆ ಹೊಂಟೀರೀ ಆಚಾರ್ರಾ? ಥೂ....ಮತ್ತ ಎಲ್ಲೆ ಅಂತನೇ ಕೇಳಿಬಿಟ್ಟೆ. ಕ್ಷಮಾ ಮಾಡ್ರೀ. ಎಷ್ಟು ದೂರ ಪ್ರಯಾಣ ಆಚಾರ್ರದ್ದು? ಅದೂ ಫುಲ್ ಕುಟುಂಬ ಸಮೇತರಾಗಿ? ಅಂತ ಕೇಳಿದೆ.
ಇಲ್ಲೇ ಗದಗಕ್ಕ ಹೊಂಟೆವಪಾ. ಯಾವದೋ ಒಂದು ವರಾ ಅದ ಅಂತ. ನಮ್ಮ ದೊಡ್ಡ ಹುಡುಗಿ ತೋರಿಸ್ಕೊಂಡು ಬರೋಣ ಅಂತ. ಹೀಂಗಂತ ಹೇಳಿ ಹುಸ್ಸ್ ಅಂದ್ರು ಆಚಾರ್ರು.
ಹೌದೇನಾ ರಂಗಕ್ಕಾ? ಅದಕ್ಕಾ ಇಷ್ಟು ಝಕಾಸ್ ಶೃಂಗಾರ ಮಾಡಿಕೊಂಡು ತಯಾರ ಆಗಿ ಹೊಂಟೀ ಏನು? ಕನ್ಯಾ ಪರೀಕ್ಷಾದಾಗ ಯಾವ ಹಾಡು ಹಾಡಾಕಿ ನೀ? ಏನ ಮಾಡ್ತಾನ ಹುಡುಗ? ಫೋಟೋ ತೋರಸಲ್ಲಾ? ಎಷ್ಟು ನಾಚಿಗೋತ್ತಿ ಮಾರಾಳ? ಹಾ!!! ಹಾ!!! - ಅಂತ ಕಾಡಿದೆ.
ತನ್ನ ಮೊಬೈಲ್ ಫೋನಿನ್ಯಾಗ ಎಸ್ಸೆಮ್ಮೆಸ್ಸ್ ಮಾಡಿಕೋತ್ತ ಕೂತಿದ್ದ ಅಕಿ ರಂಗಮ್ಮಾ, ನಿನಗ್ಯಾಕ ಅವೆಲ್ಲಾ ಉಸಾಬರಿ? ಅನ್ನೋ ಹಾಂಗ ಕೆಕ್ಕರಿಸಿ ನೋಡಿ, ಏನೂ ಹೇಳದೆ ಸುಮ್ಮನಾದಳು. ಅಕಿದು ಗೌಳ್ಯಾರ ಹುಡುಗನ ಜೋಡಿ ಲಫಡಾ ನೆಡದದ. ಅದು ನನಗ ಗೊತ್ತದ. ನನಗ ಗೊತ್ತದ ಅಂತ ಅಕಿಗೆ ಸಹ ಗೊತ್ತದ. ಗೊತ್ತಿದ್ದರೂ ಕೇಳಲಿಕತ್ತಾನ ಅಂತ ಸಿಟ್ಟು. ಮನಸ್ಸಿಲ್ಲದ ಮನಸ್ಸಿನಿಂದ ಗದಗಕ್ಕ ಹೊಂಟದ ಹುಡುಗಿ. ಮನಸ್ಸಿನಲ್ಲಿ ಗೌಳ್ಯಾರ ಸೊಸಿ ಆಗಿ ಶಗಣಿ ಬಳಿಲಿಕ್ಕೇ ಬೇಕು ಅಂತ ನಿರ್ಧಾರ ಮಾಡಿ ಬಿಟ್ಟಾಳ ಅಂತ ಕಾಣಸ್ತದ. ಯಾರಿಗ್ಗೊತ್ತು? ಎಲ್ಲೆ ಆ ಗೌಳ್ಯಾಗೇ ಎಸ್ಸೆಮ್ಮೆಸ್ಸ ಮಾಡಿಕೋತ್ತ ಕೂತಾಳೋ ಏನೋ?
ಆಹಾ ನನ್ನ ಮದುವೆಯಂತೆ! ಓಹೋ ನನ್ನ ಮದುವೆಯಂತೆ!!
ನನಗೂ ನಿನಗೂ ಲಫಡಾ ಅಂತೆ!
ಟಾಂ ಟಾಂ ಟಾಂ!!!!
ಅಂತ ಹಾಡಿಬಿಡು ಅಪ್ಪೀ ರಂಗೀ. ಹುಡುಗ ಒಪ್ಪೇ ಬಿಡ್ತಾನ. ತಿಳೀತಾ? - ಅಂತ ಇಲ್ಲದ ಜೋಕ್ ಹೊಡದೆ. ಅಕಿ ಈ ಸರೆ ತಲಿ ಸಹಿತ ಎತ್ತಿ ನೋಡದೆ ತನ್ನ ಎಸ್ಸೆಮ್ಮೆಸ್ಸ್ ವ್ಯವಹಾರದಲ್ಲಿ ಮುಳುಗಿ ಹೋದಳು.
ಸುಮ್ಮನಿರಪ್ಪಾ ಮಂಗೇಶ. ಬೆಳಿಗ್ಗೆ ಬೆಳಿಗ್ಗೆ ಎಲ್ಲರನ್ನೂ ರೇಗಿಸ್ತಾ ಇದ್ದಿಯಲ್ಲಪ್ಪಾ? ಬೇರೆ ಯಾರೂ ಸಿಗಲಿಲ್ಲವಾ ನಿನಗೆ? ಬಸ್ ಬೇರೆ ಬರ್ತಾ ಇಲ್ಲ. ಮೇಲಿಂದ ನಿನ್ನ ಕಾಟ ಬೇರೆ, ಅಂತ ಮೈಮಾ ರಮಾ ಬಾಯಿ ಮೈಸೂರ್ ಸ್ಟೈಲಿನ್ಯಾಗ ಹೊಯ್ಕೊಂಡರು.
ಏ...ಮಂಗಮ್ಮಾ....ಅಲ್ಲಲ್ಲ ಲಕ್ಷ್ಮವ್ವಾ.... ನೀ ಯಾಕ ಹೊಂಟಿ? ನಿಂದೂ ಕನ್ಯಾ ಪರೀಕ್ಷಾ ಅದನಾ? ಅದೇ ಹುಡಗನೋ ಅಥವಾ ಬ್ಯಾರೆಯವನೋ? ಹಾಂ? ಅಥವಾ ಅಕ್ಕನ್ನ ಲಗ್ನಾ ಆದರ ತಂಗಿ ಫ್ರೀ ಅಂತ ಏನರೆ ಸ್ಕೀಮ್ ನಿಮ್ಮಪ್ಪಾ ಇಟ್ಟಾನೋ? ಹಾಂ? - ಅಂತ ಕೇಳಿದೆ.
ಏ...ಹುಚ್ಚ ಸೂಳಿ ಮಗನ....ಶಂಕ್ರಾಚಾರಿ....ಮುಂಡೆ ಗಂಡ.... ಏನಂತ ಮಾತಾಡ್ಲಿಕತ್ತಿ? ಮೈ ಮ್ಯಾಲೆ ಖಬರು ಅದನೋ ಇಲ್ಲೋ? ಹಾಂ? ಏನದು ಅಸಹ್ಯ? ಅಕ್ಕನ ಲಗ್ನಾದ್ರ ತಂಗಿ ಫ್ರೀ ಅದು ಇದು ಅಂತ ಅನಕೋತ್ತ? ಬುದ್ಧಿ ಬ್ಯಾಡ? - ಅಂತ ಬಿಂದಾಚಾರ್ರ ಗರಂ ಆದರು.
ಏ... ಠಾಕ್ರೆ ಆಚಾರ್ರಾ, ಸುಮ್ಮನ ಮಾತಿಗಂದೆ ಅಷ್ಟರೀ. ಸ್ವಲ್ಪ ಸೆನ್ಸ್ ಆಫ್ ಹ್ಯೂಮರ್ ಇರಬೇಕು. ಇಲ್ಲಂದ್ರ ಹ್ಯಾಂಗ? ಹಾಂ? ಅಂತ ಏನೋ ಹೇಳಬೇಕು ಅನ್ನೋದ್ರಾಗ ಒಂದು ಸಿಟಿ ಬಸ್ ಬಂದು ನಿಂತು. ನಾನೂ ಹತ್ತಿ ಬಿಟ್ಟಿದ್ದೆ. ಆ ಮ್ಯಾಲೆ ನೆನಪ ಆತು, ಓಹೋ! ಇನ್ನೂ ಚೀಪ್ಯಾ ಮತ್ತ ಕಂಪನಿ ಬಂದಿಲ್ಲ. ಅವರು ಬರೋ ತನಕಾ ಕಾಯಲಿಕ್ಕೇ ಬೇಕು ಅಂತ ಹೇಳಿ ಬಿಟ್ಟೆ. ಬಸ್ ಬಂತು, ಶನಿಯಂತಹ ಶಂಕರಾಚಾರಿಯಿಂದ ಮುಕ್ತಿ ಸಿಗ್ತು ಅಂತ ಹೇಳಿ ಬಿಂದಾಚಾರ ಮತ್ತು ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುತ್ತ ಬಸ್ ಹತ್ತಿ ಹೋತು.
ಆ ಬಸ್ ಆ ಕಡೆ ಹೋತು, ಈ ಕಡೆ ಚೀಪ್ಯಾ ಮತ್ತು ಕುಟುಂಬ ಬರ್ಲಿಕತ್ತಿದ್ದು ಕಾಣಿಸ್ತು. ಬರೇ ಅರ್ಧಾ ತಾಸು ಲೇಟ್. ಅಷ್ಟೇ. ಬಂದರಲ್ಲಾ? ಅಷ್ಟೇ ಸಾಕು.
ಸ್ವಲ್ಪ ತಡಾ ಆತು, ತಡಾ ಆತು, ಅಂತ ನಾ ಕೇಳೋಕಿಂತ ಮೊದಲೇ ಹೇಳಿಕೋತ್ತ ಚೀಪ್ಯಾ ಬಂದ. ಅವನ ಹಿಂದ, ಎಲ್ಲಾ ನಿಮ್ಮಿಂದಲೇ ಆಗಿದ್ದು, ಅಂತ ಭುಸು ಭುಸು ಮಾಡಿಕೋತ್ತ ಬಂದ್ರು ರೂಪಾ ವೈನಿ ವಿತ್ ನಿಂತಿ & ಕುಂತಿ. ಲೇಟ್ ಯಾಕಾತು? ಅಂತ ಕೇಳಿದರ ಮತ್ತ ಮುಂಜಾನೆ ಮುಂಜಾನೆ ಇವರಿಬ್ಬರ ಪತಿ ಪತ್ನಿ ಜಗಳಾ ನಾನೇ ಬಗೆಹರಿಸಬೇಕಾಗ್ತದ ಅಂತ ನಾ ಏನೂ ಕೇಳಲಿಲ್ಲ. ಅಷ್ಟರಾಗ ಇನ್ನೊಂದು ಸಿಟಿ ಬಸ್ ಬಂದೇ ಬಿಡ್ತು. ಹತ್ತೇ ಬಿಟ್ಟಿವಿ. ಮುಂದ ಒಂದು ಇಪ್ಪತ್ತು ನಿಮಿಷದಾಗ ಪ್ಯಾಟಿಗೆ ಬಂದು ಮುಟ್ಟಿದಿವಿ. ಇಳದು ಬ್ಯಾರೆ ಊರಿಗೆ ಹೋಗೋ ಬಸ್ ಸ್ಟ್ಯಾಂಡಿಗೆ ನೆಡದು ಹೋದಿವಿ. ಸವದತ್ತಿ ಬಸ್ ಬರೋದನ್ನ ಕಾಯಲಿಕತ್ತಿವಿ. ಆಗ ಸುಮಾರು ಮುಂಜಾನೆ ಹತ್ತರ ಟೈಮ್.
ಸವದತ್ತಿಗೆ ಹೋಗೋ ಬಸ್ ಬಂದೇ ಬಿಡ್ತು. ಹಳಿಯಾಳ - ಸವದತ್ತಿ ಬಸ್ಸು. ಹಳಿಯಾಳದಿಂದ ಬಂತು ಅಂದ ಕೂಡಲೇ 'ಬಂಧನ' ಸಿನೆಮಾದ ಹಳೆ ಹಾಡೊಂದು ನೆನಪಾಗಿ ಬಿಡ್ತು.
ನೂರೊಂದು ಬಸ್ಸು ಹಳಿಯಾಳದಿಂದ
ಹಾಳಾಗಿ ಬಂತು ಆನಂದದಿಂದ!
ಹಾಡೇ ಬಿಟ್ಟೆ.
ಏ...ಹುಚ್ಚ ಮಂಗೇಶ! ಲಗೂನ ಕರ್ಚೀಪ್ ಹಾಕೋ! ಸೀಟ್ ಹಿಡಿಯೋ, ಅಂತ ರೂಪಾ ವೈನಿ ಹೊಯ್ಕೊಂಡರು.
ಏನೂ ರಶ್ ಇರಲೇ ಇಲ್ಲ. ಯಾಕ ಅಷ್ಟು ಗುದ್ದಾಡಿ ಸೀಟ್ ಹಿಡಿಬೇಕು? ಏನೂ ಜರೂರತ್ ಇಲ್ಲ.
ವೈನೀ....ಚಿಂತಿ ಬ್ಯಾಡ್ರೀ. ಬಸ್ ಖಾಲಿ ಅದ. ಸೀಟ್ ಬೇಕಾದಂಗ ಸಿಗ್ತಾವ. ಆರಾಮ ಹತ್ತೋಣ, ಅಂತ ಹೇಳಿದೆ.
ಹಾಂಗಂತೀ???!! - ಅಂತ ವೈನಿ ಒಂದು ಕ್ವೆಶ್ಚನ್ ಮಾರ್ಕ್ ಒಗೆದರು.
ಅಂತೂ ಇಂತೂ ಸುಸೂತ್ರವಾಗಿ ಬಸ್ ಹತ್ತಿದಿವಿ ಅಂತ ಆತು. ಕಂಡಕ್ಟರ್ ರೈಟ್ ರೈಟ್ ಅಂತ ಹೇಳಿ ಘಂಟಿ ಹೊಡೆದ. ಡ್ರೈವರ್ ಕುತ್ತಿಗಿಗೆ ಬೆವರು ಬರದಿರಲಿ ಅಂತ ಹಾಕಿದ್ದ ಕೆಂಪು ಬಣ್ಣದ ಕರ್ಚೀಪ್ ಅಡ್ಜಸ್ಟ್ ಮಾಡಿಕೊಂಡು ಗಾಡಿ ಬಿಟ್ಟಾ. ನಮ್ಮ ಸವದತ್ತಿಯ ಪ್ರಯಾಣ ಶುರು ಆಗಿತ್ತು.
ಅಮ್ಮಿನಭಾವಿ ಬಿಟ್ಟು ಕರಡಿಗುಡ್ಡಾ ದಾಟಿ ಮುಂದ ಹೊಂಟಿದ್ದಿವಿ. ಆವಾಗ ರೂಪಾ ವೈನಿ ಒಂದು ಬಾಂಬ್ ಹಾಕಿದರು.
ರೀ.....ಅಂತ ರಾಗವಾಗಿ ತಮ್ಮ ಪತಿ ಚೀಪ್ಯಾನನ್ನು ರೂಪಾ ವೈನಿ ಕರೆದರು.
ಕಿವಿಗೆ ವಾಕ್ಮನ್ ಹೆಟ್ಟಿಕೊಂಡು ಭೀಮಸೇನ ಜೋಶಿ ಅವರ 'ಭಾಗ್ಯದಾ ಲಕ್ಷ್ಮಿ ಬಾರಮ್ಮಾ' ಕೇಳುತ್ತಿದ್ದ ಚೀಪ್ಯಾಗ ಒಮ್ಮಿಲೇ ರಸಭಂಗ ಆದಂಗ ಆಗಿ, ಹಾಂ? ಅನ್ನೋ ಲುಕ್ ಕೊಟ್ಟಾ.
ರೂಪಾ ವೈನಿ ಖಡಕ್ಕಾಗಿ ಏನೋ ನೆನಪು ಆದವರಂಗ ಕೇಳಿದರು.
ಹಾಕ್ಕೊಂಡು ಬಂದೀರೇನ್ರೀ?!
ಚೀಪ್ಯಾ ಏನೂ ತಿಳಿಯದೇ ಮತ್ತ ಹಾಂ? ಏನು? ಅಂತ ಕೇಳಿದ.
ಆ ದರಿದ್ರ ಕಿವ್ಯಾಗ ಹೆಟ್ಟಿಕೊಂಡ ಆ ಸುಡುಗಾಡ ಟೇಪ್ ರೆಕಾರ್ಡರ್ ತೆಗದು ಒಗೀರಿ. ನಾ ಹೇಳೋದನ್ನ ಸ್ವಲ್ಪ ಕೇಳಿಸಿಕೋರೀ.... ಅಂತ ರೂಪಾ ವೈನಿ ಚೀರಿದರು.
ಚೀಪ್ಯಾ ವಾಕ್ಮನ್ ತೆಗದಾ.
ಏನಾ? ಏನಾ ನಿಂದು? ಅಂತ ಚೀಪ್ಯಾ ಒಂದು ತರಹದ ಅಸಹನೆಯಿಂದ ಕೇಳಿದ.
ಹಾಕ್ಕೊಂಡು ಬಂದೀರೇನ್ರೀ?!! - ರೂಪಾ ವೈನಿ ಮತ್ತ ಕೇಳಿದರು.
ಏನಾ ನಿಂದು? ಏನು ಹಾಕ್ಕೊಂಡು ಬರಬೇಕಾಗಿತ್ತು? ಹಾಂ? ಹಾಂ? ಏನು ಹಾಕ್ಕೊಂಡು ಬರಬೇಕಾಗಿತ್ತು? - ಅಂತ ಚೀಪ್ಯಾ ಕೇಳಿದ. ಸಾಕಾಗಿತ್ತು ಅವಂಗ.
ಚಡ್ಡಿ. ಚಡ್ಡಿ ಹಾಕ್ಕೊಂಡು ಬಂದಿರೇನು ಅಂತ. ಹಾಕ್ಕೊಂಡು ಬಂದೀರಿ? - ಅಂತ ರೂಪಾ ವೈನಿ ಫುಲ್ tension ಒಳಗ ಎಲ್ಲರಿಗೂ ಕೆಳಿಸೋ ಹಾಂಗ ಒದರೇ ಬಿಟ್ಟರು.
ಚಡ್ಡಿ!!! ಹಾಕ್ಕೊಂಡು ಬಂದೀರಿ? ಅಂತ ಕರಡಿಗುಡ್ಡದ ಸಮೀಪ ಬಂದಾಗ ರೂಪಾ ವೈನಿ ತಮ್ಮ ಪತಿದೇವರನ್ನ ಕೇಳಲಿಕತ್ತಾರ.
ಯಾಕೆ?
ಅವರ ಮೈಯ್ಯಾಗ ಏನರೆ ದೆವ್ವ ಬಂದು ಹೊಕ್ಕೊಂಡು ಬಿಟ್ಟಿತ್ತೇನು? ಹಾಂ!
ಚಡ್ಡಿ ಹಾಕ್ಕೊಂಡು ಬಂದಿರೋ ಇಲ್ಲೋ ಅಂತ ಕೇಳಿದ ತಕ್ಷಣ ಚೀಪ್ಯಾ ಫುಲ್ ಥಂಡಾ ಹೊಡೆದ.
ಯಾಕೆ?
ಯಾಕೆ? ಯಾಕೆ?
ಎಲ್ಲ ಸವಾಲುಗಳಿಗೆ ಉತ್ತರ ಮುಂದಿನ ಕಂತಿನಲ್ಲಿ.
(ಸಶೇಷ. ಮುಂದುವರಿಯಲಿದೆ) (ಭಾಗ - ೪ ಇಲ್ಲಿದೆ. ಓದಿಕೊಳ್ಳಿ)

3 comments:
Very good flow, and a knack for keeping the reader fully engaged!
Thank you!
Excellent!
I hope Kannada literary figures - ChumKum, KumGends & Co. - get inspiration from your writings.
Post a Comment