Tuesday, January 14, 2014

ಮಾರಿಷಸ್ ಬ್ಯಾಡೋ! ಹೀಗೊಂದು ಪ್ರವಾಸಕಥನ (ಭಾಗ - ೪)

(ಈ ಧಾರಾವಾಹಿಯ  ಭಾಗ - ೧, ಭಾಗ - ೨, ಭಾಗ -೩ ಇಲ್ಲಿವೆ. ಓದಿ.)

(ಇಲ್ಲಿಯವರೆಗೆ....ಚೀಪ್ಯಾ, ರೂಪಾ ವೈನಿ ಎಲ್ಲರೆ ಪ್ರವಾಸಕ್ಕೆ ಹೋಗೋಣ ಅಂತ ಹೇಳಿ ನನ್ನ ಕಡೆ ಎಲ್ಲೆ ಹೋಗಬಹುದು ಅಂತ ಕೇಳಿದರು. ರಾಮತೀರ್ಥ, ಅಂಬುತೀರ್ಥ, ಕೋಟಿತೀರ್ಥ ಅಂತ ಎಲ್ಲಾ ಐಡಿಯಾ ಕೊಟ್ಟೆ. ಅವರಿಗೆ ಸೇರಲಿಲ್ಲ. ಮಾರಿಷಸ್ ಗೆ ಹೋಗಿ ಬಂದು ಬಿಡ್ರೀ ಅಂದೆ. ಅದೂ ಸೇರಲಿಲ್ಲ. ಸವದತ್ತಿ, ನವಿಲು ತೀರ್ಥಕ್ಕ ಹೋಗಿ ಬರ್ರಿ ಅಂದೆ. ಅದು ಏನೋ ಸೇರಿ ಬಿಡ್ತು. ನನಗೂ ಬಾ ಅಂದ್ರು. ಓಕೆ ಅಂದು ಒಂದು ಶನಿವಾರ ಹೊಂಟಿವಿ. ಸವದತ್ತಿ ಬಸ್ ಹಿಡದು ಹೊಂಟಿದ್ದಿವಿ. ಬಸ್ ಅಮ್ಮಿನಭಾವಿ ದಾಟಿ ಕರಡಿಗುಡ್ಡದ ಸಮೀಪ ಬಂದಾಗ, ಒಮ್ಮೆಲೆ ರೂಪಾ ವೈನಿ, ಅವರ ಗಂಡನ್ನ ಒಂದು ಅನಾಹುತಕಾರಿ ಪ್ರಶ್ನೆ ಕೇಳಿ ಬಿಟ್ಟರು. ನೀವು ಚಡ್ಡಿ ಹಾಕ್ಕೊಂಡು ಬಂದೀರೋ ಇಲ್ಲೋ? ಅಂತ. ಚೀಪ್ಯಾ ಫುಲ್ ಥಂಡಾ ಹೊಡೆದ ಈ ಪ್ರಶ್ನೆ ಕೇಳಿ. ಮುಂದೇನಾತು? ಓದಿ ಈ ಭಾಗವನ್ನ.)

ಭರೆ ಬಸ್ಸಿನಲ್ಲಿ ಹೆಂಡತಿ ಚಡ್ಡಿ ಹಾಕ್ಕೊಂಡು ಬಂದೀರೇನು ಅಂತ ಖುಲ್ಲಂ ಖುಲ್ಲಾ ಕೇಳಿದ್ದರಿಂದ ಚೀಪ್ಯಾ ಸ್ವಲ್ಪ ಅಪ್ರತಿಭನಾಗಿದ್ದ. ಬಸ್ಸಿನ್ಯಾಗ ಮಂದಿ ಭಾಳ ಕಡಿಮಿ ಇದ್ದ ಕಾರಣ ಎಲ್ಲರಿಗೂ ಚಡ್ಡಿ ಅಂತ ಕೇಳಿ, ಎಲ್ಲರ ಕಿವಿ ನಿಮಿರಿ, ಎಲ್ಲರೂ ತಮ್ಮ ತಮ್ಮ ದೇಹ ಬೇರೆ ಬೇರೆ ಕೋನಗಳಲ್ಲಿ ತಿರುಗಿಸಿಕೊಂಡು ಚೀಪ್ಯಾ ಮತ್ತ ಕುಟುಂಬ ಇದ್ದ ಸೀಟಿನ ಕಡೆ ತಿರುಗಿ ನೋಡಲಿಕತ್ತರು. ಕೆಟ್ಟ ಅಸಹ್ಯ. ನಾ ಏನು ಮಾಡಲೀ? ಹೋಗಿ ನಿಲ್ಲಿಸಲಾ? ಹ್ಯಾಂಗ?

ಸ್ವಲ್ಪ ಸುಧಾರಿಸಿಕೊಂಡ ಚೀಪ್ಯಾ, ಹಣಿ ಮ್ಯಾಲೆ ಮೂಡಿದ್ದ ಬೆವರು ಹನಿ ಒರಸಿಕೊಂಡು, ಏನಾ ರೂಪಾ? ಏನಂತ ಕೇಳಲಿಕತ್ತಿ? ಹಾಂ? - ಅಂತ ಸಣ್ಣ ದನಿಲೆ ಕೇಳಿದ. ಏನೋ ಎಷ್ಟೋ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಪಾಪ ಗಂಡು ಪ್ರಾಣಿಯದು.

ರೂಪಾ ವೈನಿಗೆ ಅವೆಲ್ಲಾ ತಿಳಿಯಂಗಿಲ್ಲ. ಅವರು ಯಾಕೋ ಭಾಳ tension ಒಳಗ ಇದ್ದಾರ.

ಅಯ್ಯಾ ನಿಮ್ಮ....ನಾ ಕೇಳಿದ್ದಕ್ಕ ಉತ್ತರಾ ಕೊಡ್ರೀ. ಹಾಕ್ಕೊಂಡು ಬಂದೀರೋ ಇಲ್ಲೋ? ಚಡ್ಡಿ? ಹಾಂ? - ಅಂತ ಅಂದ್ರು ರೂಪಾ ವೈನಿ. ಈ ಸರೆ ಅವರು ಕಣ್ಣಾಗೇ ಏನೋ ಸನ್ನಿ ಮಾಡಿದ್ದನ್ನ ನಾ ಗ್ರಹಿಸಿದೆ. ಆದ್ರ ಏನು ಅದರ ಅರ್ಥ ಅಂತ ಮಾತ್ರ ತಿಳಿಲಿಲ್ಲ.

ಚೀಪ್ಯಾಗ ಸನ್ನಿ ಮಾಡಿದ್ದರ ಅರ್ಥ ತಿಳೀತು ಅಂತ ಕಾಣಿಸ್ತದ. ಈಗ ಚೀಪ್ಯಾನ ಮಾರಿ ಮ್ಯಾಲೆ, ಈಗ ಎಲ್ಲಾ ತಿಳೀತು ನೋಡಪಾ, ಅನ್ನೋ ಲುಕ್ ಬಂದು ಫುಲ್ ನಿರಾಳ ಆಗಿ ಬಿಟ್ಟ ಚೀಪ್ಯಾ.

ಘಾತ ಆತಲ್ಲ ರೂಪಾ! ನಾ ಚಡ್ಡಿ ಹಾಕ್ಕೊಂಡು ಬರಲೇ ಇಲ್ಲ ನೋಡು. ನೀ ಹಾಕ್ಕೊಂಡು ಬಂದಿರ್ತೀ ಅಂತ ತಿಳಕೊಂಡು ನಾ ಹಾಕ್ಕೊಂಡು ಬರಲೇ ಇಲ್ಲ. ಛೆ! ನೀ ಹಾಕ್ಕೊಂಡು ಬಂದಿಲ್ಲಾ? ಚಡ್ಡೀ? ಇಲ್ಲಾ? ಛೆ! - ಅಂತ ಕೇಳಿಬಿಟ್ಟ!

ಹೋಗ್ಗೋ!! ಏನಾಗ್ಯದ ಇವರಿಬ್ಬರು ಗಂಡಾ ಹೆಂಡತಿಗೆ? ಈ ಕರಡಿಗುಡ್ಡದ ಸುತ್ತಾ ಮುತ್ತಾ ಚಡ್ಡಿ ದೆವ್ವದ ಕಾಟ ಏನರ ಅದ ಏನು ಮತ್ತ? ಕೊಳ್ಳಿ ದೆವ್ವ ಅಂತ ಇರ್ತಾವ ಅಂತ ಕೇಳಿದ್ದೆ. ನೋಡಿರಲಿಲ್ಲ. ಚಡ್ಡಿ ದೆವ್ವ ಅಂತ ಕೇಳಿರಲಿಲ್ಲ. ಪ್ರತ್ಯಕ್ಷ ನೋಡ್ಲಿಕತ್ತೇನಿ. ಮೊದಲು ರೂಪಾ ವೈನಿಗೆ ಆ ದೆವ್ವಾ ಬಡಕೊಂಡು, ಒಮ್ಮೆಲೇ, ಗಂಡನ ಕಡೆ ಚಡ್ಡಿ ಹಾಕ್ಕೊಂಡು ಬಂದೀರೋ ಅಂತ ಕೇಳಿ ಬಿಟ್ಟರು. ಈವಾ ಚೀಪ್ಯಾ ಪುಣ್ಯಾತ್ಮಾ ಇಲ್ಲಿ ತನಕಾ ಸರಿ ಇದ್ದವಾ  ಈಗ ಇವನ ಮೈಮ್ಯಾಲೂ ಏನೋ ದೆವ್ವ ಬಂದು ಆಟಕಾಯಿಸಕೊಂಡವರಂಗ ಫುಲ್ ಎಲ್ಲಾ ಬಿಚ್ಚಿ, ಎಲ್ಲಾ ಬಿಟ್ಟು, ಚಡ್ಡಿ ಹಾಕೊಂಡು ಬಂದಿಯೋ ಇಲ್ಲ ಅಂತ ಹೆಂಡ್ತೀ ಕಡೆ ಕೇಳಲಿಕತ್ತಾನ!!!

ಅಯ್ಯೋ!!! ನಿಮಗ ಏನು ಹೇಳಿ ಸಾಯಲಿ ನಾನು? ನಾ ಚಡ್ಡಿ ಹಾಕ್ಕೊಂಡು ಬಂದಿದ್ದರ ನಿಮ್ಮನ್ನ್ಯಾಕ ಕೇಳ್ತಿದ್ದೆ ಚಡ್ಡಿ ಹಾಕ್ಕೊಂಡು ಬಂದೀರೋ ಇಲ್ಲೋ ಅಂತ. ನೀವು ಹಾಕ್ಕೊಂಡು ಬಂದೇ ಬಂದಿರ್ತೀರಿ ಅಂತ ನಾ ಹಾಕ್ಕೊಂಡು ಬರಲೇ ಇಲ್ಲೆ. ಹಾಕ್ಕೊಳ್ಳೋದು ಏನು ಬಂತು ಇವತ್ತು ಚಡ್ಡಿ ಕಡೆ ಮಾರಿ ಸಹಿತ ಹಾಕಿಲ್ಲ ನಾ. ಮುಂಜಾನೆ ಇಬ್ಬರೂ ಮಕ್ಕಳನ್ನ ರೆಡಿ ಮಾಡಿಕೊಂಡು ಬರೋದ್ರಾಗ ನನಗ ಸಾಕಾಗಿತ್ತು. ಅದಕ್ಕೇ ನಿನ್ನೆ ರಾತ್ರಿ ಸಾವಿರ ಸರೆ ಹೇಳಿ ಮಲ್ಕೊಂಡಿದ್ದೆ. ಚಡ್ಡಿ ಮರೀದೆ ಹಾಕ್ಕೊಳ್ಳರೀ, ನಾ ಹಾಕ್ಕೊಂಡು ಬರಂಗಿಲ್ಲಾ ಅಂತ. ಈಗ ನೋಡಿದರ ನೀವೂ ಹಾಕ್ಕೊಂಡು ಬಂದಿಲ್ಲ. ನಾನೂ ಹಾಕ್ಕೊಂಡು ಬಂದಿಲ್ಲಾ. ಏನ್ರೀ ಮಾಡೋದು ಈಗ? - ಅಂತ ಚಡ್ಡಿ ಬಗ್ಗೆ ಏನೇನೋ ಹೇಳಿ ಎಲ್ಲರ ತಲಿ ಕೆಡಿಸಿ ಬಿಟ್ಟರು.

ಬಸ್ಸಿನ್ಯಾಗಿನ ವಾತಾವರಣ ನೀವು ನೋಡಬೇಕಾಗಿತ್ತು. ಎಲ್ಲರೂ ಬೆಕ್ಕಸ ಬೆರಗಾಗಿ, ಏನು ನೆಡದದ ಅಂತ ತಿಳೀದೇ ಫುಲ್ ಹಾಪ್ ಆಗಿ, ಬಾಯಿ ಮತ್ತೊಂದು ಫುಲ್ ವೈಡ್ ಆಗಿ ಓಪನ್ ಮಾಡಿಕೊಂಡು ಕೂತಿದ್ದರು.

ಇವರ ಗಂಡಾ ಹೆಂಡತಿ ಚಡ್ಡಿ ಸಂಭಾಷಣೆ ಕೇಳಿ ನನಗಂತೂ ಅದೊಂದು ಹಾಡು ಇತ್ತು ನೋಡ್ರೀ ಅದು ನೆನಪಾಗಿ ಬಿಡ್ತು. ಈ ಸಂಭಾಷಣೆ, ನಮ್ಮ ಈ ಚಡ್ಡಿ ಸಂಭಾಷಣೆ. ಅತಿ ಮೌಲ್ಯಾ, ಅತಿ ಮಧುರಾ!

ಚೀಪ್ಯಾ, ರೂಪಾ ವೈನಿ ಮಾತ್ರ ತಾವು ಬಸ್ಸಿನ್ಯಾಗ ಇದ್ದೇವಿ, ಸುತ್ತ ಮುತ್ತ ಬ್ಯಾರೆ ಮಂದಿ ಇದ್ದಾರ, ಅವರು ಏನು ತಿಳ್ಕೋತ್ತಾರ, ಇತ್ಯಾದಿ ಯಾವದೇ ವಿಷಯಗಳ ಬಗ್ಗೆ ತಲಿ ಕೆಡಸಿಕೊಳ್ಳದೆ ತಾವಿಬ್ಬರು ಚಡ್ಡಿ ಹಾಕ್ಕೊಂಡು ಬರದೆ ಇರೋದರ ಬಗ್ಗೆ ಜಗಳಾ ಚರ್ಚಾ ಎಲ್ಲಾ ನೆಡಸಿದ್ದರು. ಚಡ್ಯಾತುರಾಣಾಂ ನ ಭಯಂ ನ ಲಜ್ಜಾ. ಅಂದ್ರ ಚಡ್ಡಿ ಬಗ್ಗೆ ಆತುರ ಆದವರಿಗೆ ಹೆದರಿಕಿ ನಾಚಿಗಿ ಯಾವದೂ ಇರಂಗಿಲ್ಲ ಅಂತ. ಹಾಂಗ ನೆಡದಿತ್ತು ಅವರ discussion.

ಎಲ್ಲಕಿಂತ ಮೊದಲು ಸುಧಾರಿಸ್ಕೊಂಡವರು ಚೀಪ್ಯಾನ ಸೀಟಿನ ಹಿಂದಿನ ಸೀಟಿನ್ಯಾಗ ಕೂತ ಒಬ್ಬ ಗೌಡರ ಲುಕ್ ಇದ್ದ ಹಿರೆ ಮನುಷ್ಯಾರು. ಅವರ ಜೋಡಿ ಅವರ ಹೆಂಡತಿ ಹಾಂಗ ಕಾಣೋ ಒಬ್ಬ ಹಿರಿಯ ಮುತ್ತೈದಿ ಚೀಪ್ಯಾ ಮತ್ತ ರೂಪಾ ವೈನಿಯವರ ಚಡ್ಡಿ ಪುರಾಣದಿಂದ ಹೈರಾಣ ಆಗಿ, ಸಿಕ್ಕಾಪಟ್ಟೆ ಅಸಹ್ಯ ಪಟ್ಟುಕೊಂಡು, ತಲಿ ಮ್ಯಾಲಿನ ಇಳಕಲ್ಲ ಸೀರಿ ಸೆರಗನ್ನ ಮತ್ತೂ ಮತ್ತೂ ಜಗ್ಗಿ ಜಗ್ಗಿ ಕೆಳಗ ಎಳಕೊಂಡು, ಬುರ್ಕಾ ತರಹ ಮಾಡಿಕೊಂಡು, ಶಬರಿ ಗತೆ ಕೂತು ಬಿಟ್ಟಿದ್ದರು. ಒಂದು ಪ್ರಾಯದ ಹುಡುಗಿ ಬ್ಯಾರೆ ಕೂತಿತ್ತು. ಗೌಡರ ಮಗಳು ಅಂತ ಕಾಣಿಸ್ತದ. ಚೂಡಿದಾರ್ ಹಾಕ್ಕೊಂಡಿದ್ದಳು. ಅದು ಮಾತ್ರ ಭಾಳ ಕಿಸಿ ಕಿಸಿ ನಗಲಿಕತ್ತಿತ್ತು. ಪ್ರಾಯದ ಹುಡುಗಿ ಆ ಪರಿ ನಗೋದು ನೋಡಿ ಕೆಲೊ ಮಂದಿ ಪಡ್ಡೆ ಹುಡುಗೂರು ಸಹಿತ ಬಾಯಿಯೊಳಗ ಹಾಕ್ಕೊಂಡ ಗುಟಕಾ ಬಸ್ಸಿನ ಕಿಟಕಿಯಿಂದ ಪಿಚಕಾರಿ ಹಾರಿಸಿ, ನೋಡಲೇ, ಗೌಡ್ರ ಹುಡುಗಿ ಹ್ಯಾಂಗ ನಗಾಕತ್ತೈತಿ? ಚಡ್ಡಿ ಅಂದ ಕೂಡಲೇ ಇಕಿಯಾಕ ಇಷ್ಟು ನಗಾಕತ್ಯಾಳಲೇ???? ಅದು ಇದು ಅಂತ ಹೇಳಿ ಗೌಡರ ಹುಡುಗಿಗೆ ಲೈನ್ ಹೊಡಿಯಲಿಕ್ಕೆ ಶುರು ಮಾಡಿದರು. ಹುಡುಗಿಯ ಮಂಗ್ಯಾತನ ನೋಡಿದ ಹುಡುಗುರು ಶೆರೆ ಕುಡಿಸಿದ ಮಂಗ್ಯಾನ ಗತೆ ಇನ್ನೂ ಹುಚ್ಚುಚ್ಚರೆ ಏನೇನೋ ಅನ್ನಲಿಕತ್ತರು. ಗೌಡರ ಹೆಂಡ್ರು ಮತ್ತೂ ನಾಚಿ ನೀರಾಗ್ಲಿಕತ್ತರು. ಆಗ ಗೌಡರು ನಿರ್ಧಾರ ಮಾಡಿದರು. ಇದನ್ನ ಹೀಂಗೆ ಬಿಟ್ಟರ ಅಷ್ಟೇ ಅಂತ ಹೇಳಿ intervene ಮಾಡಲಿಕ್ಕೇ ಬೇಕು ಅಂತ ಹೇಳಿ ಅವರೂ ಸಹಿತ ಕಿಡಕಿ ಹೊರಗ ಅರ್ಧಾ ದೇಹಾ ಹೊರಗ ಹಾಕಿ, ಪಿಚಕ್ ಅಂತ ಪಿಚಕಾರಿ ಹಾರಿಸಿ, position ತೊಗೊಂಡ್ರು. combat position!

ಚೀಪ್ಯಾನ ಉದ್ದೇಶಿಸಿ, ಸರ್ರಾ, ಒಂದು ಮಾತ್ರೀ, ಅಂದ್ರು ಗೌಡರು.

ನೀ ಹಾಕ್ಕೊಂಡು ಬರ್ತೀ ಅಂತ ನಾ ಚಡ್ಡಿ ಹಾಕ್ಕೊಂಡು ಬರಲಿಲ್ಲ, ಅಂತ ಇನ್ನೂ ಒಬ್ಬರಿಗೊಬ್ಬರು ಜೋರ ಜೋರ ಮಾತಾಡುತ್ತಿದ್ದ ಚೀಪ್ಯಾ ರೂಪಾ ವೈನಿ ಒಂದು ಕ್ಷಣ ಮಾತು ನಿಲ್ಲಿಸಿ, ಗೌಡರ ಕಡೆ ನೋಡಿ, ನಿಮ್ಮದು ಏನ್ರೀ ಈಗ? ನಮ್ಮದೇ ನಮಗ ಜಾಸ್ತಿ ಆಗ್ಯದ. ನಡು ನಂದು ಎಲ್ಲೆ ಇಡ್ಲೀ ಅಂತ ಇಡಲಿಕ್ಕೆ ನೀವು ಬ್ಯಾರೆ ಬಂದು ಬಿಟ್ಟರೇನು? ಅನ್ನೋ ಲುಕ್ ಗೌಡರಿಗೆ ಕೊಟ್ಟರು.

ಅಲ್ಲರೀ ಸರ್ರಾ... ನೋಡಲಿಕ್ಕೆ ಕಲ್ತವರು ಕಂಡಂಗ ಕಾಣ್ತೀರಿ. ಭರೆ ತುಂಬಿದ ಬಸ್ಸಿನ್ಯಾಗ ಏನು ಅದು ಚಡ್ಡಿ ಬಗ್ಗೆ ಅಷ್ಟು ಖುಲ್ಲಾ ಖುಲ್ಲಾ ಮಾತಾಡಾಕತ್ತೀರೀಪಾ? ಸ್ವಲ ಮುಚ್ಕೊಂಡು ಸುಮ್ಮ ಕುಂದರ್ರೆಲ್ಲಾ? ಹಾಂ? ಅಂತ ಗೌಡರು ವಿನಂತಿ ಮಾಡಿದರು. ಆದ್ರ ವಿನಂತಿಯೊಂದಿಗೆ ಒಂದು ಸಣ್ಣ ಧಮಿಕಿ ಸಹ ಇಟ್ಟಿದ್ದರು. ಚಡ್ಡಿ ಬಗ್ಗೆ ಮಾತಾಡೋದು ನಿಲ್ಲಿಸಲ್ಲಿಲ್ಲ ಅಂದ್ರ ಏನೋ ಆಗೋದು ಅದ ಅಂತ. ಅದೆಲ್ಲಿ ತಿಳಿಬೇಕು ನಮ್ಮ ಚಡ್ಡಿ ದಂಪತಿಗಳಿಗೆ?

ರೂಪಾ ವೈನಿ ಸ್ವಲ್ಪ ರಫ್ ಅಂಡ್ ಟಫ್. ಅವರಿಗೆ ಹೀಂಗೆಲ್ಲಾ ಬುದ್ಧಿ ಹೇಳಿಸಿಕೊಂಡು ರೂಢಾ ಇಲ್ಲೇ ಇಲ್ಲ.

ನೀವು ಸುಮ್ಮ ಕೂಡ್ರೀ.  ಏನು ನಿಮ್ಮ ಪ್ರಾಬ್ಲೆಮ್? ಚಡ್ಡಿ ಇಲ್ಲದ ನಾವು ಒದ್ಯಾಡ್ಲೀಕತ್ತೇವಿ. ನಿಮಗೇನು? ಧೋತ್ರದ  ಒಳಗ ಪಟ್ಟಾ ಪಟ್ಟಿ ಎಲ್ಲ ಹಾಕ್ಕೊಂಡು ಬೆಚ್ಚಗ ಕೂತೀರಿ. ನಾವೇನು ಮಾಡೋಣ? ನಮ್ಮನಿಯವರು ಚಡ್ಡಿ ಹಾಕ್ಕೊಂಡು ಬರ್ತಾರ ಅಂತ ಹೇಳಿ ನಾ ಹಾಕ್ಕೊಂಡು ಬರಲೇ ಇಲ್ಲ. ಈಗ ಕೇಳಿದರ ಇವರು ಹಾಕ್ಕೊಂಡೇ ಬಂದಿಲ್ಲಾ ಅನ್ಲೀಕತ್ತಾರ. ನಿಮಗೇನು ಗೊತ್ತು ನಮ್ಮ ಕಷ್ಟಾ? ಹಾಂ? ದೊಡ್ಡ ಹೇಳಲಿಕ್ಕೆ ಬಂದು ಬಿಟ್ಟರು. ನಿಮ್ಮ ಕೆಲಸ ನೋಡಿಕೊಂಡು ಹೋಗ್ರೀ. ಹೋಗ ಹೋಗ್ರೀ.....ನಡು ಇಡಲಿಕ್ಕೆ ಬಂದು ಬಿಟ್ಟರು...ಆ...ಆ.... ಅಂತ ರೂಪಾ ವೈನಿ ಅವರ usual ಸ್ಟೈಲಿನಲ್ಲಿ ಗೌಡರನ್ನ brush off ಮಾಡಲಿಕ್ಕೆ ನೋಡಿದರು.

ಅವರೆಲ್ಲೋ ದೊಡ್ಡ ಗೌಡರೇ ಇರಬೇಕು. ಅವರದ್ದು ತಲಿ ಫುಲ್ ಗರಂ ಆತು. ತಲಿ ಮ್ಯಾಲೆ ತತ್ತಿ ಒಡೆದು ಹಾಕಿದ್ದರೆ ಆಮ್ಲೆಟ್ ಆಗೋವಷ್ಟು ಗರಂ. ತಲಿ ಗರಂ ಆದ್ರ ಹೊಗಿ ಮಾತ್ರ ಗೌಡರ ಮೂಗಿನಿಂದ ಬರ್ಲಿಕತ್ತಿತ್ತು. ದೊಡ್ಡ ಸೈಜಿನ ಕಾಡುಕೋಣದ ಹಾಂಗ ಗೌಡರು ಕಂಡರು.

ಏ....ಕಂಡಕ್ಟರಾ!!! ಏ....ಕಂಡಕ್ಟರಾ!!!ಏ....ನಿಮ್ಮಾಪನ ಕಂಡಕ್ಟರ ಸಿದ್ದರಾಮಾ...ಎಲ್ಲೆ ಸತ್ತೀಲೆ? ಬಾ ಇಲ್ಲೆ ಈಟು. ಏನ್ ನೆಡದೈತಿ ಇಲ್ಲೆ ನೋಡು ಬಾ, ಅಂತ ಕಂಡಕ್ಟರನಿಗೆ ಗೌಡರು ಗುಟುರು ಹಾಕಿದರು. ವಾಹ್! ಗಂಡೆದೆ ಗೌಡರು. ಎಲ್ಲೋ ಭಾಳ ದೊಡ್ಡ ಮಂದಿನೇ ಇರಬೇಕು. ಕಂಡಕ್ಟರ್ ಇವರ ಮನಿಯಾಳು ಅನ್ನೋ ಹಾಂಗ ಕರಿತಾರ.

ಗೌಡರು ಹಾಕಿದ ದೊಡ್ಡ ಗುಟುರಿಗೆ ಕಂಡಕ್ಟರ್ ಸಿದ್ದರಾಮ ಬೆಚ್ಚಿ ಬಿದ್ದ. ಮಾರಿ ನೋಡಿದರ ಸಿದ್ದರಾಮ ಅಲ್ಲ ಪೆದ್ದರಾಮ ಅನ್ನೋ ಹಾಂಗ ಆಗಿತ್ತು. ಹಿಂದಿನ ಸೀಟಿನ್ಯಾಗ ಟಿಕೆಟ್ ಲೆಕ್ಕಾ ಬರಕೋತ್ತ ಕೂತಿದ್ದ ಕಂಡಕ್ಟರ್ ತನ್ನ ಪೆನ್ ಕಿವಿಗೆ ಸಿಗಿಸಿಕೊಂಡು, ತನ್ನ ಚರ್ಮದ ಚೀಲಾ ಬಗಲಾಗ ಸಿಗಿಸಿಕೊಂಡು, ಶರಣ್ರೀ ಗೌಡ್ರಾ, ಏನಾತ್ರೀ ಯಪ್ಪಾ? ಕರದ್ರೀ? ಏನ್ರೀ? ಅಂತ ಕೇಳಿಕೋತ್ತ ಬಂದ.

ಸಿದ್ದರಾಮಾ ಒಂದೀಟು ಬಸ್ ತರಬಪಾ. ತಾಪಡ್ ತೋಪ್ ತರಬು. ಒಂದ ಕೆಲಸ ಐತಿ, ಅಂತ ಗೌಡರು ಆಜ್ಞಾ ಮಾಡಿದರು.

ಸ್ಟಾಪ್ ಇಲ್ಲದ ಜಾಗಾದಾಗ ನಿಲ್ಲಿಸು ಅಂತ ಹೇಳಲಿಕತ್ತಾರ.  ಯಾಕಿರಬಹುದು? ಕಂಡಕ್ಟರ್ ಸಿದ್ದರಾಮ ತಲಿ ಓಡಿಸಿದ. ಏನು ಓಡಿಸಿದನೋ ಏನೋ?

ಯಾಕ್ರೀ ಗೌಡ್ರಾ? ಯಾರಿಗಾರ ಚರಗಿ ತೊಗೊಂಡು ಹೋಗಾದು ಬಂದೈತೇನ್ರೀ? ಬಾಟ್ಲೀ ತರ್ರಿಲ್ಲ್ಯಾ? ಹಿಂದ ಸೀಟಿನ್ಯಾಗ ಐತ್ರೀ. ಬಿಸ್ಲೇರಿ ಬಾಟ್ಲಿನೇ ಐತ್ರೀ. ಕುಡಿಯಾಕ ಅಂತ ಇಟ್ಟಿದ್ದೆ. ಈಗ ಇದಕ್ಕಾರ ಉಪಯೋಗ ಆಗಲೀ ಬಿಡ್ರೀ, ಅಂತ ಹೇಳಿದ ಸಿದ್ದರಾಮ. ಗೌಡರ ಶೌಚಕ್ಕೆ ಬಿಸ್ಲೇರಿ ನೀರು ಕೊಟ್ಟು, ಅವರ ಕೃಪೆಗೆ ಭಾಜನನಾಗಿ ಏನೋ favor ಪಡಕೊಳ್ಳುವ ಸ್ಕೆಚ್ ಹಾಕಿದ್ದಾನಾ ಸಿದ್ದರಾಮಾ? ಗೊತ್ತಿಲ್ಲ.

ಸುಮ್ಮ ಹೇಳಿದಷ್ಟು ಮಾಡಪಾ. ಗಾಡಿ ನಿಂದರ್ಸೋ ನಿಮ್ಮಾಪನಾ. ಹೊಡಿ ಸೀಟಿ. ಜಗ್ಗ ಆ ಘಂಟಿ ಹಗ್ಗಾ. ಸೀಟಿ ಏನು ಮನಿಂದ ತಂದಿ ಏನಲೇ? ಸರಕಾರ ಕೊಟ್ಟ ಸೀಟಿ. ಸೀಟಿ ಹೊಡಿಲೇ ನಿಮ್ಮಾಪನಾ, ಅಂತ ಸಿದ್ದರಾಮನಿಗೆ ಖಡಕ್ಕ ಆಗಿ ಹೇಳಿದ ಗೌಡರು, ಏ ರಾಚಪ್ಪಾ, ಬ್ರೇಕ್ ಹಚ್ಚಲೇ. ಗಾಡಿ ನಿಲ್ಲಿಸಲೇ, ಅಂತ ಒದರಿದರು. ರಾಚಪ್ಪಾ ಅಂದ್ರ ಡ್ರೈವರ್ ಅಂತ ಗೊತ್ತಾತು. ಕಂಡಕ್ಟರ್ ಸಿದ್ದರಾಮ ಸೀಟಿ ಹೊಡೆದ್ದಿದು ಕೇಳಿತೋ ಅಥವಾ ಗೌಡರು ಒದರಿದ್ದು ಕೇಳಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಡ್ರೈವರ್ ರಾಚಪ್ಪ ಮಾತ್ರ ಏಕದಂ ಬ್ರೇಕ್ ಹಾಕಿದ. ಒಮ್ಮೆಲೇ ಬ್ರೇಕ್ ಹಾಕಿದ ಹೊಡೆತಕ್ಕ ಎಲ್ಲಾರೂ ಜೋಲಿ ಹೋಗಿ ಮುಂದ ಮಾರಿ ಗುದ್ದಿ ಕೊಂಡರು. ತಲಿ ಜಜ್ಜಿ ಕೊಂಡರು. ಮತ್ತೇನೇನೋ ಮಾಡಿಕೊಂಡರು. ನಿದ್ದಿ ಹೊಡೆಯುತ್ತಿದ್ದ ನಿದ್ದಿಬಡಕರೆಲ್ಲಾ ಕಟಿಂಗ್ ಚಹಾ ಕುಡಿದವರಾಂಗ ಎದ್ದು ಕೂತರು. ಗಾಡಿ ಹಾಲ್ಟಿಗೆ ಬಂತು. ದೊಡ್ಡ ಡ್ರಾಮಾ ಶುರು ಆತು.

ಗಾಡಿ ಸೈಡಿಗೆ ತೊಗೊಂಡು ನಿಲ್ಲಿಸಿದ ಡ್ರೈವರ್ ತನ್ನ ಕುತ್ತಿಗಿಗೆ ಹಾಕಿದ್ದ ಕೆಂಪ ಕರ್ಚೀಪ್ ಒಳ್ಳೆ ಗುಂಡಾ ಮಂದಿ ಗತೆ adjust ಮಾಡಿಕೋತ್ತ ಚೀಪ್ಯಾ, ಗೌಡರು ಇರೋ ಸೀಟ್ ಕಡೆ ಬಂದ. ಬರೋವಾಗ ಮಸ್ಕಿರಿ ಮಾಡ್ತಿದ್ದ ಪಡ್ಡೆ ಹುಡುಗರ ಕಡೆ ಒಂದು ಕೆಂಗಣ್ಣು ಬಿಟ್ಟೇ ಬಂದ. ಎಲ್ಲರೂ ಗಪ್ಪ್ ಆದರು. ಕಂಡಕ್ಟರ್ ಸಿದ್ದರಾಮ ಅಂತೂ ಅಲ್ಲೇ ಇದ್ದ.

ಏನಾತ್ರೀ ಗೌಡ್ರಾ? ಯಾರಿಗೆ ಚರಿಗೆ ತೊಗೊಂಡು ಹೋಗೋದು ವತ್ರ ಆಗೈತಿ? ಅಥವಾ ಯಾರಿಗರೆ ವಾಕರಕಿ ಬಂದೈತೋ? ಹಾಂ? - ಅಂತ ಕೇಳಿದ.

ವಾಕರಕಿ ಖರೆನೇ ಬಂದೈತಿ ನೋಡಪಾ, ರಾಚಪ್ಪಾ, ಅಂತ ಹೇಳಿದ ಗೌಡರು ರೂಪಾ ವೈನಿ ಕಡೆ ನೋಡಿದರು.

ಯಾರಿಗೂ ಏನೂ ತಿಳಿಲಿಲ್ಲ.

ಯಾರಿಗೆ ಏನಾಗೈತ್ರೀ ಗೌಡ್ರಾ? ಬಸ್ ನಿಂತೈತಿ. ಹೋಗಿ ಮುಗಿಸ್ಕೊಂಡು ಬರಾಕ್ ಹೇಳ್ರೀ. ದೌಡ! ದೌಡ್! ತಡಾ ಆಕ್ಕೈತ್ರೀಪಾ. ದಯವಿಟ್ಟರೀಪಾ, ಅಂತ ರಾಚಪ್ಪಾ ಗೋಗರೆದ. ಕಂಡಕ್ಟರ್ ಹೌದ ಹೌದ ಅಂತ ತಲಿಯಾಡಿಸಿದ.

ಈ ಯಪ್ಪಾ, ಈ ಅಕ್ಕಾರು ಕೆಟ್ಟ ಅಸಹ್ಯ ಅಸಹ್ಯ ಮಾತಾಡಾಕತ್ತಾರು. ಒಂದು ಅವರಿಗೆ ಹೊಲಸ್ ಮಾತಾಡೋದು ಬಂದ ಮಾಡಿ, ಎಲ್ಲಾ ಮುಚ್ಚಿಕೊಂಡು ಕುಂದ್ರಾಕ ಹೇಳಿ ಹೋಗು. ಇಲ್ಲಂದ್ರ ಅವನೌನ್ ನಾಕು ಒದ್ದು ಕೆಳಗ ಇಳಿಸ್ರಲೇ ಇವರನ್ನು. ಒಂದು ತಾಸಿಂದ ಹಚ್ಚಿಗೊಂಡಾರ. ಇಲ್ಲೆ ನಾವೆಲ್ಲಾ ಫ್ಯಾಮಿಲಿ ಮಂದಿ ಕುಂತೇವಿ ಅಂತ ಖಬರಿಲ್ಲದ ಒದರಾಕತ್ತಾರ, ಅಂತ ಗೌಡರು ರೂಪಾ ವೈನಿ, ಚೀಪ್ಯಾ ವಿರುದ್ಧ ತಮ್ಮ ದೂರು ಹೇಳಿದರು.

ಡ್ರೈವರ್, ಕಂಡಕ್ಟರ್ ಗೆ ಏನೂ ತಿಳಿಯಲಿಲ್ಲ. ಚೀಪ್ಯಾ, ರೂಪಾ ವೈನಿ ಕಡೆ ನೋಡಿದರೆ ಆರ್ಡಿನರಿ ಸಂಸಾರಸ್ಥರ ಹಾಂಗ ಕಾಣ್ತಾರ. ಇವರೇನು ಲಫಡಾ ಮಾಡಿರಬಹುದು? ಅದೂ ಗೌಡರಿಗೆ ಈ ಪರಿ ಸಿಟ್ಟು ಬರೋ ಹಾಂಗ? ಅಂತ ಅವರಿಗೆ ತಿಳಿಲಿಲ್ಲ.

ಏನ ನೆಡದೈತ್ರೀ ಇಲ್ಲೆ? ಏನ್ ಮಾತಾಡಾಕತ್ತೀರಿ? ಗೌಡ್ರು ಯಾಕ ಇಷ್ಟು ಖುನ್ನಸ್ ಆಗ್ಯಾರ? ಹಾಂ? - ಅಂತ ಡ್ರೈವರ ರಾಚಪ್ಪಾ ರೋಪ್ ಹಾಕಿದ.

ಚೀಪ್ಯಾ ಉತ್ತರಾ ಕೊಡ್ತಾನೇನೋ ಅಂತ ಎಲ್ಲರೂ expect ಮಾಡಿದ್ದರು. ಆವಾ ಫುಲ್ ಮನಮೋಹನ್ ಸಿಂಗ್ ಮೋಡಿಗೆ ಹೋಗಿ ಬಿಟ್ಟಿದ್ದ. ಸೈಲೆಂಟ್ ಇಟ್ಟು ಹೆದರಿಕಿಲೆ ವೈಬ್ರೇಟ್ ಅಗಲಿಕತ್ತಿದ್ದ. ಶೇಕ್ ಅಬ್ದುಲ್ಲಾ ಸೂಳಿ ಮಗಾ. ಫುಲ್ ಶೇಕಿಂಗ್. ರೂಪಾ ವೈನಿನೇ ಚಾರ್ಜ್ ತೊಗೊಂಡ್ರು.

ಏ...ಡ್ರೈವರ್ ಸಾಹೇಬ್ರಾ.... ಈ ಗೌಡರಿಗೆ ಏನು ತಿಂಡಿ ಬಿಟ್ಟದೋ ಗೊತ್ತಿಲ್ಲ ನೋಡ್ರೀ. ನಾನು ನಮ್ಮ ಮನಿಯವರು ಏನೋ ಮಾತಾಡ್ಲಿಕತ್ತಿದ್ದರಾ, ಒಮ್ಮೆಲೇ ಎದ್ದು, ಕಿಡಿಕ್ಯಾಗ ಎಲಿ ಅಡಕಿ ಉಗಳಿ, ನಮ್ಮ ಜೋಡಿ ಕಾಲು ಕೆದರಿ ಜಗಳಕ್ಕ ಬಂದಾರ ನೋಡ್ರೀ. ಏನರೆ ಹೇಳೋದಿದ್ದರ ಅವರಿಗೆ ಹೇಳ್ರೀ. ಹಾಂ? ನೀವೂ ಒಳ್ಳೆ ಅವರ ಮಾತು ಕೇಳಿ ನಮಗೇ ಅಂತೀರಲ್ಲಾ? ಹಾಂ? ಅಂತ ಫುಲ್ confidence ನಿಂದ ಹೇಳಿದರು.

ಏ....ಬಾಯಾರಾ! ಇಷ್ಟೊತ್ತನಕಾ ಅಸಹ್ಯ ಮಾತಾಡಿದ್ದು ಹೌದೋ ಅಲ್ಲೋ? ಅಂತ ಕೇಳಿದ ಗೌಡರು, ಚೀಪ್ಯಾನ ಕಡೆ ತಿರುಗಿ, ಸರ್ರಾ ಖರೆ ಹೇಳ್ರೀ. ಇಲ್ಲಿ ತನಕಾ ಏನಂತ ಮಾತು ನೆಡದಿತ್ತು ನಿಮ್ಮದು? ಹಾಂ? ಹೇಳ್ರೀ, ಫುಲ್ ಅವಾಜ್ ಹಾಕಿದರು.

ಚೀಪ್ಯಾನ ಕಣಪಟ್ಟಿಗೆ ಘೋಡಾ ಇಟ್ಟ ಅನುಭವ. ಏನು ಮಾಡ್ಲೀ? ಏನು ಹೇಳಲಿ? ಅಂತ ರೂಪಾ ವೈನಿ ಮಾರಿ ನೋಡಿದ. ನೀವು ಸುಮ್ಮ ಕೂಡ್ರೀ, ನಾ ಎಲ್ಲಾ ನೋಡ್ಕೋತ್ತೀನಿ ಅನ್ನೋ ಲುಕ್ ಅವರು ಕೊಟ್ಟರು. ಚೀಪ್ಯಾ relax ಆದಾ.

ನಾವು ಏನು ಮಾತಾಡಿದಿವಿ, ಅದರಾಗ ಅಂತಾದ್ದೇನು ಇತ್ತು ಅಂತ ಕೇಳಿಸಿಕೊಂಡವರು ನೀವು. ಅದರಿಂದ ತೊಂದ್ರಿ ಆತು ಅಂದವರು ನೀವು. ಹಾಂಗಾಗಿ ನಾವು ಏನು ಮಾತಾಡ್ಲಿಕತ್ತಿದ್ದಿವಿ ಅನ್ನೋದನ್ನ ಸಹಿತ ನೀವೇ ಹೇಳಬೇಕು. ಇಲ್ಲಾ ಎಲ್ಲಾ ಮುಚ್ಕೊಂಡು, ಬೇಕಾದ್ರ ಇನ್ನೊಂದು ಎಲಿ ಅಡಕಿ ಎಲ್ಲೆ ಬೇಕೋ ಅಲ್ಲೆ ಜಡಕೊಂಡು ಗಪ್ಪ್ ಕೂಡಬೇಕು, ಅಂತ ಗೌಡರಿಗೆ ಫುಲ್ ತಾಕೀತು ಮಾಡಿದರು ರೂಪಾ ವೈನಿ. ವಾಹ್! ಝಾನ್ಸಿ ರಾಣಿ ಲಕ್ಷುಂಬಾಯಿ ಗತೆ ಕಂಡರು ರೂಪಾ ವೈನಿ.

ಗೌಡರು ಚಾಲೆಂಜ್ ತೊಗೊಂಡಿಲ್ಲ ಅಂದ್ರ ಹ್ಯಾಂಗ? ರಟ್ಟಿ ಗಾತ್ರದ ಮೀಸಿ ಮಾರಿ ಮ್ಯಾಲೆ ಬ್ಯಾರೆ.

ನೀವೇನೋ ಎಲ್ಲಾ ಬಿಟ್ಟು ಮಾತಾಡಿ ಬಿಟ್ಟಿರಿ ಅಕ್ಕಾರಾ, ಅಣ್ಣಾರಾ. ಅದನ್ನ ಯಾವ ಬಾಯಿಲೆ ನಾವು ಹೇಳೋಣರೀ? ನೀವು ಬಾಯಿ ಹೊಲಸ ಮಾಡಿಕೊಂಡು ಸುತ್ತಲಿನ ವಾತಾವರಣನೂ ರಾಡಿ ಎಬ್ಬಿಸಿದರಿ ಅಂತ ನಾವೂ ಅದನ್ನೇ ಮಾಡೋಣ ಏನು? ಏ.....ಅಂತ ಗೌಡರು avoid ಮಾಡಲಿಕ್ಕೆ ನೋಡಿದರು.

ರೂಪಾ ವೈನಿ ಬಿಡೋ ಪೈಕಿ ಏನು? ಇಲ್ಲವೇ ಇಲ್ಲ. ಕೈ ತೊಳಕೊಂಡು ಹಿಂದ ಬಿದ್ದರು.

ರೀ...ದೊಡ್ಡ ಮನುಷ್ಯಾರ....ಇಲ್ಲದ್ದು ಹೇಳಿ, ಡ್ರೈವರ್, ಕಂಡಕ್ಟರ್ ಎಲ್ಲಾ ಕರೆದು, ಬಸ್ ನಿಲ್ಲಿಸಿ, ಗದ್ದಲಾ ಎಬ್ಬಿಸಿ, ನಮಗ ಅಪಮಾನ ಮಾಡಿದವರು ನೀವು. ಈಗ ನಾವು ಅಂತಾದ್ದೇನು ಮಾತಾಡಿದಿವಿ ಅಂತ ಹೇಳಿದ್ರ ಚೊಲೋ. ದೂದ್ ಕಾ ದೂದ್, ಪಾನಿ ಕಾ ಪಾನಿ ಆಗಿ ಹೋಗ್ಲೀ. ಇಲ್ಲಂದ್ರ ನಾ ಬಾಕಿ ಮಂದಿ ಕೂಡಿಸ್ಕೊಂಡು ಧರಣಾ ಮಾಡಾಕಿ, ನಿಮ್ಮನ್ನ ಬಸ್ಸಿಂದ ಇಳಿಸಿ ಹೋಗಬೇಕು ಅಂತ. ಹೇಳ್ರೀ? ಗದ್ದಲಾ ಎಬ್ಬಿಸೋದು ಎಬ್ಬಿಸಿ ಈಗ ನೋಡು....ಅಂತ ಗೌಡರನ್ನ ಫುಲ್ ಕಂಡೆಮ್ ಮಾಡಿದರು ರೂಪಾ ವೈನಿ.

ಗೌಡರು ಸುತ್ತಾ ಮುತ್ತಾ ನೋಡಿದರು. ಕಂಡಕ್ಟರ್, ಡ್ರೈವರ್ ಕಡೆ ನೋಡಿದರು. ಹೇಳಿ ಮುಗಿಸಿಬಿಡ್ರೀ, ನೀವೇ ಎಲ್ಲಾ ಶುರು ಮಾಡಿದವರು. ಈಗ ಹೇಳಂಗಿಲ್ಲ ಅಂದ್ರಾ ನ್ಯಾಯ ಅಲ್ಲಾ, ಅನ್ನೋ ಅಭಿಪ್ರಾಯ ಎಲ್ಲರ ಮುಖದಲ್ಲಿ.

ಏನು ಮಾಡೋದು? ಮಾಡಿದವರ ಪಾಪ ಆಡಿದವರ ಬಾಯಲ್ಲಿ.

ಸಿದ್ದರಾಮಾ, ರಾಚಪ್ಪಾ, ಮತ್ತ ಸಹ ಪ್ರಯಾಣಿಕರೆ, ಅಂತ ಗೌಡ್ರು ಭಾಷಣ ಶುರು ಮಾಡಿದ್ರು. ಗ್ರಾಮ ಪಂಚಾಯತಿಯೊಳಗ ಪಂಚಾಯತಿ ಭಾಷಣ ಮಾಡಿದಂಗ.

ಏನು ಭಾಷಣ ಶುರು ಮಾಡಿದ್ರಿ? ಝೇಂಡಾ ಕೊಡಲೇನು? ಅದನ್ನೂ ಹಾರಿಸಿ ಬಿಡ್ರೀ. ಲಗೂನ ಹೇಳಿ ಮುಗಸ್ರೀ. ಥೂ ನಿಮ್ಮಾ... ಅಂತ ರೂಪಾ ವೈನಿ ಮತ್ತೂ ರೋಪ್ ಹಾಕಿದರು.

ನೋಡ್ರೀ...ಈಕಿ ಮೊದಲು ಈ ಯಪ್ಪನ ಕಡೆ, ನೀ ಚಡ್ಡಿ ಹಾಕ್ಕೊಂಡು ಬಂದಿಯೇನು ಅಂತ ಕೇಳಿದಳು. ಈ ಯಪ್ಪಾ ಏನನಬೇಕರೀ? ಈವಾ ಏನು ಹೇಳಿದ ಅನ್ನೋದನ್ನ ನಾ ಹ್ಯಾಂಗ ಹೇಳಲರೀ ಯಪ್ಪಾ. ಯಡಿಯೂರ್ ಸಿದ್ದಲಿಂಗೇಶ್ವರ ನೀನೆ ಕಾಪಾಡೋ. ಈ ಯಪ್ಪಾ ಈ ಯಕ್ಕನ ಕಡೆ, ಏನಬೆ, ನೀ ಚಡ್ಡಿ ಹಾಕ್ಕೊಂಡು ಬಂದಿರ್ತೀ ಅಂತ ಹೇಳಿ ನಾ ಹಾಕ್ಕೊಂಡು ಬರಲೇ ಇಲ್ಲ ನೋಡು, ಅಂತ ಅನ್ನಬೇಕಾ! ನೀವೇ ಹೇಳ್ರೀ ಶಿವಾ ಮೆಚ್ಚೋ ಮಾತೇನ್ರೀ ಇದು? ಒಂದು ಸಲೆ ಅಲ್ಲಾ, ಎರಡು  ಸಲೆ ಅಲ್ಲಾ, ಒಂದು ತಾಸಿಂದ ಇದೇ ಹಚ್ಚ್ಯಾರ ನೋಡ್ರೀ. ನಮ್ಮ ಮನಿಯಾಕಿನ ನೋಡ್ರೀ. ಹ್ಯಾಂಗ ಸೆರಗ ಬುರ್ಕಾ ಮಾಡಿಕೊಂಡು ಕುಂತು ಬಿಟ್ಟಾಳ. ಅಷ್ಟ ನಾಚಿಗಿ ಅಸಹ್ಯ ನಮಗೆಲ್ಲಾ ಬರಾಕತ್ತೈತಿ. ಇವರಿಬ್ಬರು ಮಾತ್ರ ಯಾರದ್ದೂ ಕ್ಯಾರೆ ಮಾಡದೇ ನೀ ಚಡ್ಡಿ ಹಾಕೊಂಡು ಬಂದಿರ್ತೀ ಅಂತ ನಾ ಹಾಕ್ಕೊಂಡು ಬರಲಿಲ್ಲ ಅಂತ ಒಬ್ಬರಿಗೊಬ್ಬರು ಒದರ್ಯಾಡಾಕತ್ತಾರ. ಈಗ ಹೇಳ್ರೀ ಇಂತಾ ಮಂದಿನ ಸಂಸಾರಸ್ಥರು ಇರೋ ಬಸ್ಸಿನ್ಯಾಗ ಕರಕೊಂಡು ಹೋಗಬೇಕೋ ಬ್ಯಾಡೋ? ಹಾಂ? ಹಾಂ? - ಅಂತ ಗೌಡರು ಹೇಳಿ ಮುಗಿಸೋದ್ರಾಗ ಧೊತ್ರಾ ಹತ್ತು ಸರೆ ಕೆಳಗ ಮ್ಯಾಲೆ ಮಾಡಿಕೊಂಡರು. ಗೌಡರ ಹೆಂಡರಂತೂ ನಾಚಿಗಿ ತಡಕೊಳ್ಳಲಿಕ್ಕಾಗದೆ ಸೀಟಿನ ಕೆಳಗೆ ಹೊಕ್ಕೊಂಡು, ಸುಮ್ಮನಿರ್ರೀ ನೀವು! ಅಂತ ಸಣ್ಣಗ ಹೊಯ್ಕೊಂಡರು. ನಗನೇನ್ ಮಜಾ ಬರಾಕತ್ತೈತಿ ಅಂತ ಮಾಡಿ ಏನಬೇ? ಆ..... ಅಂತ ಗೌಡರು ಹೆಂಡತಿನ ಗದರಿಸಿದರು. ಗೌಡರ ಮಗಳು ಸಹ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಚೂಡಿದಾರದ ಓಡ್ನಿ ಫುಲ್ ಹೊದಕೊಂಡು, ಮಂಗ್ಯಾತನ ಎಲ್ಲ ಬಿಟ್ಟು, ಬಾಳೆಹಣ್ಣು ತಿನ್ನಲು ಶುರು ಮಾಡಿ ಬಿಟ್ಟಳು!! ಅದನ್ನು ನೋಡಿ ಪಡ್ಡೆ ಹುಡುಗುರು ಏನೋ ಜೋಕ್ ಮಾಡಿಕೊಂಡು ಕಿಸಿ ಕಿಸಿ ಅಂತ ನಕ್ಕರು! ಗೌಡರು ತಿರುಗಿ ಒಂದು angry ಲುಕ್ ಕೊಟ್ಟರು. ಎಲ್ಲರೂ ಗಪ್ಪಾದರು.

ಹೋಗ್ಗೋ! ಗೌಡರು ಭಯಂಕರ ಗಂಭೀರ ಆಪಾದನೆ ಮಾಡಿಬಿಟ್ಟರು. ಡ್ರೈವರ್, ಕಂಡಕ್ಟರ್ ಗೆ ಬಂತು ಕುತ್ತಿಗ್ಗೆ. ಹ್ಯಾಂಗ ತೀರ್ಮಾನ ತೊಗೊಳ್ಳೋದು?

ಡ್ರೈವರ್ ರಾಚಪ್ಪಾ ರೋಪ್ ಹಾಕಿದ.

ಹೌದೇನ್ರೀ ನೀವು ಗೌಡರು ಹೇಳಿದಾಂಗ ಮಾತಾಡಿದ್ದು? ಹಾಂ? ಖರೆ ಹೇಳ್ರೀ, ಅಂತ ರಾಚಪ್ಪಾ ಆವಾಜ್ ಹಾಕಿದ.

ರಾಚಪ್ಪಾ ಏನು ಅವರ ಅಪ್ಪ ಇದ್ದರೂ ಮುಂದಾಗೋದನ್ನ ಯಾರೂ ನೀರಿಕ್ಷೆ ಮಾಡಿರಲಿಲ್ಲ.

ಹೌದ್ರೀ ಕೇಳಿದೆ. ನಮ್ಮನಿಯವರ ಕಡೆ ಚಡ್ಡಿ ಹಾಕ್ಕೊಂಡು ಬಂದೀರೇನು ಏನು ಅಂತ ಕೇಳಿದೆ. ಅವರು ನಾ ಚಡ್ಡಿ ಹಾಕ್ಕೊಂಡು ಬಂದಿರಬಹದು ಅಂತ ಅವರು ಚಡ್ಡಿ ಹಾಕ್ಕೊಂಡು ಬರಲೇ ಇಲ್ಲ ಅಂತ ಹೇಳಿದರು. ಇಬ್ಬರಾಗ ಒಬ್ಬರೂ ಚಡ್ಡಿ ಹಾಕ್ಕೊಂಡು ಬರಲಿಲ್ಲ ಅಂತ ನಾವು ಗಂಡಾ ಹೆಂಡತಿ ನಮ್ಮನಮ್ಮೊಳಗ ಮಾತಾಡಿಕೊಂಡರಾ ನಿಮಗೇನ್ರೀ? ಹಾಂ? ಹಾಂ? - ಅಂತ ವೈನಿ ಜೋರಾಗಿ ಹೇಳೇ ಬಿಟ್ಟರು. ಈಗ ಮಾತ್ರ ಬಸ್ಸಿನ ಎಲ್ಲರಿಗೂ ಇವರ ಚಡ್ಡಿ ಪುರಾಣ ಗೊತ್ತಾಗಿ ಬಿಡ್ತು.

ಮೊದಲು ಎಲ್ಲರೂ ಹೋ! ಅಂತ ನಕ್ಕರು. ಗೌಡರ ಕೆಂಗಣ್ಣು ನೋಡಿದ ತಕ್ಷಣ ಎಲ್ಲರೂ ಸುಮ್ಮನಾದರು. ಕೆಲವರು, ಇದು ಮಾತಾಡೋ ವಿಷಯ ಅಲ್ಲವೇ ಅಲ್ಲ, ಅನ್ನೋ ರೀತಿಯಲ್ಲಿ ತಲಿ ಅಡ್ಡಡ್ಡ ಹಾಕಿದರು.

ಏನ್ರೀ ಹೀಂಗೆಲ್ಲಾ ಮಾತಾಡೋದು ಮಾತಾಡಿ ಮತ್ತ ನಮಗೇ ಉಲ್ಟಾ ಅಂತೀರಲ್ಲಾ? ಹಾಂ? ಗೌಡರ ಮಾಫಿ ಕೇಳಿ ಸುಮ್ಮನ ಗಪ್ಪ ಕೂತರ ಕರಕೊಂಡು ಹೋಗ್ತೇನಿ. ಇಲ್ಲಂದ್ರ ನಿಮ್ಮ ಸಾಮಾನು ಎಲ್ಲ ಇಲ್ಲಿಂದಲೇ ಹೊರಗ ಒಗದು, ನಿಮ್ಮನ್ನ ಬಸ್ಸಿಂದ ಹೊರಗ ಹಾಕಿ ಬಿಡ್ತೇನಿ. ಯಾವ ನಮ್ಮನಿ ಮಂದಿರಿ ನೀವು? ಹಾಂ? ಹಾಂ? - ಅಂತ ಡ್ರೈವರ್ ರಾಚಪ್ಪಾ ಸಿಕ್ಕಾಪಟ್ಟೆ ಒದರಿದ.

ಅಯ್ಯ ಇವನ....ಏನಾಗ್ಯದೋ ನಿನಗ ಡ್ರೈವರ್? ಬರೇ ಈ ಗೌಡರಿಗಷ್ಟೇ ಹುಚ್ಚ ಅಂದ್ರ ನಿನಗೂ ಹುಚ್ಚ ಹಿಡಿತಾ? ಹಾಂ? ಚಡ್ಡಿ ಹಾಕ್ಕೊಂಡು ಬರಲೇ ಇಲ್ಲ ಅಂತ ನಮ್ಮ ಸಂಕಟದಾಗ ನಾವಿದ್ದರ ನಿಂದೊಂದು ಬ್ಯಾರೆ, ಅಂತ ರೂಪಾ ವೈನಿ ರಾಚಪ್ಪಂಗೂ ರಾಚಿ ಬಿಟ್ಟರು.

ಸಾಹೇಬ್ರಾ.....ನಿಮ್ಮ ಹೆಂಗಸೂರಿಗೆ ಒಂದು ಆಖ್ರೀ ಮಾತು ಹೇಳಿ ಸಂಬಾಳಿಸಿದ್ರೀ ಸರಿ. ಇಲ್ಲಂದ್ರ ನನಗ ನಿಮಗ ಹತ್ತೋದೈತೀ ನೋಡ್ರೀ. ನಿಮ್ಮಾಕಿಗಂತೂ ಹೇಳಿ ಏನ ಉಪಯೋಗಿಲ್ಲ ಅಂತ ಡ್ರೈವರ್ ಚೀಪ್ಯಾಂಗ ಅವಾಜ್ ಹಾಕಿದ. ಅದನ್ನ ಕೇಳಿ ಚೀಪ್ಯಾನ ದನಿಯೇ ಸತ್ತು ಹೋಗಿ, ಡ್ರೈವರ್ ಸಾಹೇಬ್ರಾ, ಅದು ಚಡ್ಡಿ ಅಂದ್ರ ಅಕಿದೂ ಅಲ್ಲಾ ನಂದಂತೂ ಅಲ್ಲೇ ಅಲ್ಲ, ಅಂತ ಹೊಸದೊಂದು ಫಿಟ್ಟಿಂಗ್ ಇಟ್ಟು ಬಿಟ್ಟ.

ಈಗಂತೂ confusion ಅನ್ನೋದು ಕ್ಲೈಮಾಕ್ಸ್ ಗೆ ಹೋಗಿ ಬಿಡ್ತು. ಒಂದು ತಾಸಿಂದ ಚಡ್ಡಿ ಹಾಕ್ಕೊಂಡು ಬಂದಿಯೇನು? ಚಡ್ಡಿ ಹಾಕ್ಕೊಂಡು ಬಂದಿಯೇನು ಅಂತ ಒಬ್ಬರಿಗೊಬ್ಬರಿಗೆ ಚೀಪ್ಯಾ, ರೂಪಾ ವೈನಿ ಪಿಟೀಲ್ ಕೊಯ್ಯಕೊಂಡಾರ. ಈಗ ಚೀಪ್ಯಾ ಹೇಳ್ತಾನ, ಅವಂದೂ ಚಡ್ಡಿ ಅಲ್ಲಂತ. ಅವನ ಹೆಂಡ್ತಿದೂ ಅಲ್ಲಂತ!!!! ಮತ್ತ ಯಾರದ್ದು?!

ಏ....ಸಾಹೇಬಾ! ಏನು ಆಟಾ ಹಚ್ಚಿ ಏನೋ? ತಡಿ ನಿನಗ ಮಾಡ್ತೇನಿ, ಅಂತ ಹೇಳಿಕೋತ್ತ ಡ್ರೈವರ್ ರಾಚಪ್ಪಾ ಡ್ರೈವರ್ ಕ್ಯಾಬಿನ್ ಗೆ ಹೋದ. ಬರೋವಾಗ ಕೈಯಾಗ ಒಂದು ರಾಡ್. ಚೀಪ್ಯಾನ ತಲಿ ಒಡಿಯೋ ಪ್ಲಾನ್ ಇದ್ದಂಗ ಇತ್ತು. ಚೀಲದಾಗಿದ್ದ ತೆಂಗಿನಕಾಯಿ ಸವದತ್ತಿ ಯಲ್ಲಮ್ಮನ ಮುಂದ ಒಡಿತಿದ್ದರೋ ಇಲ್ಲೋ ಗೊತ್ತಿಲ್ಲ. ಡ್ರೈವರ್ ರಾಡ್ ಹಿಡಕೊಂಡು ಬರೋದು ನೋಡಿ ಚೀಪ್ಯಾನ ತಲಿ ಬುರುಡಿ ಮಾತ್ರ ತೆಂಗಿನಕಾಯಿ ಗತೆ ಇಲ್ಲೇ ಬಿಚ್ಚೋದು ಖರೆ ಅನ್ನಿಸ್ತು.

ರೂಪಾ ವೈನಿ ಸತ್ಯವಾನ ಸಾವಿತ್ರಿ ಅವತಾರ ಎತ್ತಿಯೇ ಬಿಟ್ಟರು. ನಡು ಬಂದು ಥಾಂಬಾ ಅಂತ ಕೈ ಮಾಡಿದರು. ನಿಲ್ಲು ಅಂತ. ರಾಡೆತ್ತಿಕೊಂಡು ಬರುತ್ತಿದ್ದ ರಾಚಪ್ಪಾ ಗಕ್ ಅಂತ ನಿಂತಾ. ವೈನಿ ಕಣ್ಣು ಅಂದ್ರ ಕಾಳಿಕಾ ದೇವಿ ಹಾಂಗ ಫುಲ್ ಕೆಂಪ ಆಗಿ, ರೊಯ್ಯಾ ರೊಯ್ಯಾ ಅಂತ ತಿರುಗಲಿಕತ್ತಿದ್ದವು. ಅವರ ಹಿಂದ ಅಡಗಿ ನಿಂತ ಚೀಪ್ಯಾ. situation ಫುಲ್ tense!

ಏ....ಖಬರದಾರ್ ಡ್ರೈವರ್ ಹುಚ್ಚಪ್ಪಾ!

ಯವ್ವಾ... ನನ್ನ ಹಡೆದವ್ವಾ.... ರಾಚಪ್ಪಾ, ರಾಚಪ್ಪಾ, ನನ್ನ ಹೆಸರು ರಾಚಪ್ಪಾ, ಅಂತ ತನ್ನ ಹೆಸರು ರಾಡಿ ಎತ್ತು ಅಂತ ಹೇಳಿ ರಾಚಪ್ಪಾ ನೊಂದು ಹೇಳಿದ.

ರಾಚಪ್ಪನೋ ಕಾಚಪ್ಪನೋ? ಬುದ್ಧಿಯಿಲ್ಲದ ಕೆಲಸಾ ಮಾಡಲಿಕ್ಕೆ ಹೊಂಟಿ ಅಂದ ಮ್ಯಾಲೆ ನೀ ಹುಚ್ಚಪ್ಪನೇ ತೊಗೊ. ನಾವು ಯಾರ ಚಡ್ಡಿ ಬಗ್ಗೆ ಮಾತಾಡ್ಲಿಕತ್ತಿದ್ದಿವಿ ಅನ್ನೋದು ನಿನಗ ಗೊತ್ತಾದರ ನಿನ್ನ ಮ್ಯಾಲೆ ನಿನಗೇ ನಾಚಿಗಿ ಬರ್ತದ. ಹುಷಾರ್! - ಅಂದ್ರು ರೂಪಾ ವೈನಿ.

ಹಾಂ?! ಅಂದ್ರು ಎಲ್ಲಾರೂ. ಎಲ್ಲಾರೂ ಫುಲ್ excited, ಮುಂದೇನು ಅಂತ. ರೂಪಾ ವೈನಿನೇ ಮುಂದುವರಿಸಿದರು.

ಅದು ಏನಾಗಿತ್ತು ಅಂದ್ರ ನಮ್ಮ ಎರಡು ಸಣ್ಣು ಸಣ್ಣು ಹುಡುಗ್ಯಾರು ಕುಂತಿ ನಿಂತಿದು ನಾಕ್ನಾಕ ಚಡ್ಡಿ, ನಮ್ಮು ಎರಡೆರಡು ಚಡ್ಡಿ ಎಲ್ಲಾ ಒಣಾ ಹಾಕಿ, ನಮ್ಮನಿಯವರಿಗೆ ಚೀಲದಾಗ ಹಾಕ್ಕೊಂಡು ಬರ್ರಿ ಅಂತ ಹೇಳಿದ್ದೆ. ನಾ ಚಡ್ಡಿ ಹಾಕ್ಕೊಂಡು ಬಂದೀರೆನ್ರೀ ಅಂದ್ರ ಚೀಲದಾಗ ಒಣಾ ಹಾಕಿದ ಚಡ್ಡಿಗಳನ್ನ ಹಾಕ್ಕೊಂಡು ಬಂದೀರೇನು ಅಂತ. ಅವರು ಮರ್ತು ಬಿಟ್ಟಾರ. ಅದಕ್ಕ ಅವರು ನನಗ, ನೀ ಚಡ್ಡಿ ಚೀಲದಾಗ ಹಾಕ್ಕೊಂಡು ಬರ್ತೀ ಅಂತ ನಾ ಹಾಕ್ಕೊಂಡೇ ಬರಲಿಲ್ಲ ಅಂತ ಅನ್ನಲಿಕತ್ತಿದ್ದರು. ಎರಡು ದಿವಸದ ಪ್ರವಾಸಕ್ಕ ಬಂದು ಬಿಟ್ಟೇವಿ. ಈಗ ಚಡ್ಡಿಲ್ಲ. ಅವರೂ ಹಾಕ್ಕೊಂಡು ಚಡ್ಡಿ ಹಾಕ್ಕೊಂಡು ಬರಲಿಲ್ಲ, ನಾನೂ ಚಡ್ಡಿ ಹಾಕ್ಕೊಂಡು ಬರಲಿಲ್ಲ. ಅಂದ್ರ ಚೀಲದಾಗ ಹಾಕ್ಕೊಂಡು ಬರಲಿಲ್ಲ ಅಂತ. ಅಷ್ಟೇ? ತಿಳೀತಾ? ತಿಳೀತೇನ್ರೀ ದೊಡ್ಡ ಗೌಡ್ರಾ? ಹಾಂ? ನೀವೇನಂತ ತಿಳಕೊಂಡು ದೊಡ್ಡ complaint ಕೊಟ್ಟು, ಬಸ್ ನಿಲ್ಲಿಸಿದರಿ? ಹಾಂ? ನಿಮಗ ತಿಳಿಲಿಲ್ಲ ಅಂದ್ರಾ ನಮ್ಮ ಕಡೆ ಕೇಳಬೇಕು ಅಂತ ಖಬರ್ ಇಲ್ಲಾ? ಹಾಂ? - ಅಂತ ರೂಪಾ ವೈನಿ ಫೈನಲ್ ಪಾಯಿಂಟ್ ಸ್ಕೋರ್ ಮಾಡಿ ಗೇಮ್ ಹೊಡದೇ ಬಿಟ್ಟರು.

ಈಗ ಎಲ್ಲಾರಿಗೆ ತಿಳೀತು, ಈ ಗಂಡಾ ಹೆಂಡತಿ ಚಡ್ಡಿ ಹಾಕ್ಕೊಂಡು ಬಂದೀರೋ ಇಲ್ಲೋ ಅಂತ ಒಬ್ಬರಿಗೊಬ್ಬರು ಕೇಳಿದ್ದರ ರಹಸ್ಯ.

ಚಡ್ಡಿ ಚೀಲದಾಗ ತುಂಬಿಕೊಂಡು ಬಂದೀರೋ ಅಥವಾ ಚಡ್ಡಿ ಬ್ಯಾಗಿನಾಗ ಹಾಕ್ಕೊಂಡು ಬಂದೀರೋ ಅಂತ ಕೇಳೋದು ಬಿಟ್ಟು, ಚಡ್ಡಿ ಹಾಕ್ಕೊಂಡು ಬಂದೀರೇನು? ಚಡ್ಡಿ ಹಾಕ್ಕೊಂಡು ಬಂದೀರೇನು? ಅಂತ ಅಂದ್ರೀ. ನಾವು ತಿಳಕೊಂಡ್ವೀ......ಅಂತ ಗೌಡರು ಜಟ್ಟಿ ಬಿದ್ದರೂ ಮೀಸಿ ಮಣ್ಣಾಗಲಿಲ್ಲ ಅನ್ನೋ ಹಾಂಗ ಏನೋ ಪಾಯಿಂಟ್ ಇಡಲಿಕ್ಕೆ ಹೋದರು.

ಏನ್ ತಿಳಕೊಂಡ್ರೀ? ಹಾಂ? ನಿಮ್ಮ ಕೊಳೆತ ತಿಪ್ಪಿ ಗುಂಡಿ ತರಹದ ತಲಿ ಏನಂತ ವಿಚಾರ ಮಾಡಿತ್ತು? ಹಾಂ? ಅದನ್ನೂ ಹೇಳಿಬಿಡ್ರಲಾ? ಹಾಂ? - ಅಂತ ಗೌಡರನ್ನ ಅಟಕಾಯಿಸಿಕೊಂಡರು ರೂಪಾ ವೈನಿ. jugular attack.

ಹ್ಯಾಂಗ ಹೇಳ್ಯಾರು ಗೌಡರು? ಸಾಧ್ಯನೇ ಇಲ್ಲ.

ರೂಪಾ ವೈನಿ ಬಿಡೋ ಪೈಕಿನಾ? ಇಲ್ಲವೇ ಇಲ್ಲ.

ಗೌಡರನ್ನ, ಅವರು ಮೊದಲು ಮಾಡಿದ ಭಾಷಣವನ್ನ ಅಣಕಿಸೋ ರೀತಿಯಲ್ಲಿ ರೂಪಾ ವೈನಿ ಸಹಿತ, ಮಹಾಜನರೇ, ನನ್ನ ಸಹ ಪ್ರಯಾಣಿಕರೆ, ಅಂತ ಭಾಷಣ ನಾಟಕೀಯವಾಗಿ ಶುರು ಮಾಡಿದರು.

ಗೌಡರು ನಮ್ಮ ಮ್ಯಾಲೆ ಏನೇನೋ ಆಪಾದನೆ ಮಾಡೋವಾಗ ಎಲ್ಲಾರೂ ಅವರಿಗೇ ಸಪೋರ್ಟ್ ಮಾಡಿದ್ರೀ. ಈಗ ನಮಗೂ ಸಪೋರ್ಟ್ ಮಾಡ್ರೀ. ಮಾಡ್ರೀ. ಎದಿ ಮುಟ್ಟಿಕೊಂಡು ಹೇಳ್ರೀ. ಈ ಗೌಡರ ತಲಿಯಾಗ ಏನು ವಿಚಾರ ಬಂದು, ಅವರು ಇಷ್ಟೆಲ್ಲಾ ಅನಾಹುತಕ್ಕ ಕಾರಣ ಆದರು ಅನ್ನೋದನ್ನ ಅವರು ಹೇಳಲೇ ಬೇಕು. ಬೇಕೇ ಬೇಕೇ ನ್ಯಾಯಾ ಬೇಕು, ಅಂತ ಧರಣಿ ಮಾಡವರ ಹಾಂಗ ಒದರೇ ಬಿಟ್ಟರು. ಚೀಪ್ಯಾ ಸಹಿತ ಕೈ ಎತ್ತೆತ್ತಿ ಬೇಕೇ ಬೇಕೇ ಅಂತ ಘೋಷಣೆ ಕೂಗಿದ. ವಾಹ್! ಅಡಗಿ ಹೋಗಿದ್ದ ದನಿ ಮರಳಿ ಬಂತು. out of Manamohan Singh mode.

ಗೌಡರು ಫುಲ್ ಹೈರಾಣ. ಈ ಘಟವಾಣಿ ಹೆಂಗಸಿಂದ ಹ್ಯಾಂಗ ತಪ್ಪಿಸಕೋ ಬೇಕು ಅಂತ ಅವರಿಗೆ ಹೊಳಿಲಿಲ್ಲ.

ಅಕ್ಕಾರಾ...ಅಣ್ಣಾರಾ....ನೀವು ಮಾತಿಗೊಮ್ಮೆ ಚಡ್ಡಿ ಹಾಕ್ಕೊಂಡು ಬಂದಿಯೇನು? ಇಲ್ಲ ನೀ ಹಾಕ್ಕೊಂಡು ಬರ್ತೀ ಅಂತ ನಾ ಹಾಕ್ಕೊಂಡು ಬರಲಿಲ್ಲ, ಅಂತ ಅನ್ನೋದನ್ನ ಕೇಳಿ, ನಾ ತಿಳಕೊಂಡೆ ನೀವೆಲ್ಲೋ ಒಬ್ಬರು ಮಾತ್ರ ಚಡ್ಡಿ ಹಾಕ್ಕೊತ್ತೀರಿ, ಒಬ್ಬರು ಹಾಕ್ಕೊಂಡ್ರ ಇನ್ನೊಬ್ಬರು ಹಾಕ್ಕೊಳೋದಿಲ್ಲ ಅಂತ. ಯಾಕೋ ಏನೋ? ಅದನ್ನಾ ಬಸ್ಸಿನ್ಯಾಗ ಮ್ಯಾಗಿಂದ ಮ್ಯಾಗ ಹೇಳಿ ಹೇಳಿ ಆಟಾ ಆಡಾಕ ಹತ್ತೀರಿ ಅಂತ ತಿಳಕೊಂಡ ಸಿಟ್ಟಿಗೆದ್ದಿದ್ದೇರಿ. ಆ ಮ್ಯಾಕ ನೋಡಿದರ ನೀವು ನಿಮ್ಮ ಸಣ್ಣ ಕೂಸಗಳ ಚಡ್ಡಿ ಮನ್ಯಾಗೇ ಮರತು ಬಂದಿದ್ದರ ಬಗ್ಗೆ ಮಾತಾಡಾಕತ್ತೀರಿ ಅಂತ ಇಷ್ಟೆಲ್ಲಾ ಆದ ಮ್ಯಾಲೆ ಗೊತ್ತಾತ್ರೀ ಅಕ್ಕಾರ, ಅಂತ ಅಂಬೋ ಅನ್ನುವ ದನಿಯಲ್ಲಿ ಗೌಡರು ಅಲವತ್ತುಕೊಂಡರು.

ಹಾಂ!! ಅಂತ ರೂಪಾ ವೈನಿ ಅಬ್ಬರಿಸಿದರು. ಇಂತಾ ಹೊಲಸ ವಿಚಾರ ನಿಮ್ಮ ತಲಿಯಾಗ ಹ್ಯಾಂಗ ಬಂತು? ಹಾಂ? ನಿನ್ನೆ ಶುಕ್ರವಾರ ರಾತ್ರಿ ಯಾವ ಹೊಲಸ ಮಲೆಯಾಳಿ ಸಿನೆಮಾ ನೋಡಿದ್ದಿರಿ? ಹಾಂ? ಅದಕ್ಕೇ ಇಂತಾ ಗಟಾರದಂತಹ ವಿಚಾರ ನಿಮ್ಮ ತಲಿಯಾಗ. ಹಾಂ! ಅಂತ ಹೂಂಕರಿಸಿದರು.

ತಪ್ಪಾತ್ರೀ ಯಕ್ಕಾರ, ಅಂತ ಹೇಳಿಕೋತ್ತ ಗೌಡರು ತಮ್ಮ ತಲಿ ಮೇಲಿದ್ದ ಹಳದಿ ಪಗಡಿ ತೆಗೆದು ಇನ್ನೇನು ಈ ಘಟವಾಣಿ ರೂಪಾ ವೈನಿ ಕಾಲಾಗ ಇಡಲಿಕ್ಕೆ ರೆಡಿ ಆಗೇ ಬಿಟ್ಟಿದ್ದರು. ರೂಪಾ ವೈನಿನೇ, ಸಾಕ್ ಸಾಕ್! ವಯಸ್ಸಿನ್ಯಾಗ ದೊಡ್ಡವರು ಇದ್ದೀರಿ. ಇದೆಲ್ಲಾ ಏನ್ ಬೇಕಾಗಿಲ್ಲ, ಅಂತ ದೊಡ್ಡತನ ಮೆರೆದು ಬಿಟ್ಟರು. ಮಾಸ್ಟರ್ ಸ್ಟ್ರೋಕ್.

ಈಗ ಕಂಡಕ್ಟರ್ ಸಿದ್ದರಾಮನ ಸರದಿ ರೂಪಾ ವೈನಿ ಕಡೆ ಬೈಸಿಕೊಳ್ಳೋದು.

ಅಕ್ಕಾರ, ಮಕ್ಕಳ ಚಡ್ಡಿ ಬಿಟ್ಟು ಬಂದ್ರ ಏನಾತ್ರೀ? ಅದಕ್ಯಾಕ ಅಣ್ಣಾರ ಜೋಡಿ ಅಷ್ಟ ಮಾತಾಡಾಕತ್ತಿದ್ದಿರಿ? ಒಳ್ಳೆ ಚಡ್ಡಿ ಕಥಿ.... ಅಂತ ಅಂದು ಬಿಟ್ಟ.

ನಿನಗ ತಲಿ ಅದ, ಆದ್ರ ಒಳಗ ಬುದ್ಧಿ ಇಲ್ಲ ಅನ್ನೋ ಲುಕ್ ಕೊಟ್ಟರು ವೈನಿ. ಹಾಂ? ಅಂತ ಪೆದ್ದರಾಮನ ಹಾಂಗ ನೋಡಿದ ಕಂಡಕ್ಟರ್ ಸಿದ್ದರಾಮ.

ಸಣ್ಣು ಹುಡುಗುರು, ಅದೂ ಎರಡು, ದಿನಕ್ಕ ನಾಕ್ನಾಕ ಚಡ್ಡಿ ಬೇಕು. ಎರಡು ದಿವಸದ ಪ್ರವಾಸ. ಅಂದ್ರ ನಾಕ್ ಎರಡಲಾ ಎಂಟು. ನನ್ನು ಎರಡು, ನಮ್ಮನಿಯವರದ್ದು ಎರಡು. ಒಟ್ಟು ಎಷ್ಟಾತು? ಕುಂತಿದು ಎಂಟು, ನಿಂತಿದು ಎಂಟು, ಎಂಟು ಎಂಟು ಹದಿನಾರು. ನನ್ನು ಎರಡು. ಹದಿನೆಂಟು. ಇವರು ಎರಡು ಇಪ್ಪತ್ತು. ಇಪ್ಪತ್ತು ಚಡ್ಡಿಗೋಳನ್ನ ಒಣಾ ಹಾಕಿ ಬಂದಿದ್ದೆ. ಅಷ್ಟನ್ನೂ ತಂತಿಯಿಂದ ತೆಗೆದು, ಮಡಿಚಿ, ಚಡ್ಡಿ ಚೀಲದಾಗ ಹಾಕ್ಕೊಂಡು ಬರ್ರಿ ಅಂದ್ರ ನಮ್ಮನಿಯವ್ರು ಮರ್ತು ಬಂದಾರ. ನಿನಗ ಮಕ್ಕಳು ಗಿಕ್ಕಳು ಅವನೋ ಇಲ್ಲ? ಹಾಂ? ಚಡ್ಡಿ ಮರ್ತು ಬಂದ್ರ ಏನು ಮಹಾ ಅಂತ ಯಬಡನ ಗತೆ ಕೇಳ್ತೀ. ಹಾಪಾ. ತಲಿಯಿಲ್ಲಾ? - ಅಂತ ಹೇಳಿ ಚಡ್ಡಿ logistics ಬಗ್ಗೆ ವಿವರೆಣೆ ನೀಡಿದರು.

ಹೀಂಗ್ರೀ?!!! ಅಂತ ಫುಲ್ ಉದ್ಗಾರ ಮಾಡಿದ ಕಂಡಕ್ಟರ.

ಬರೇ ಇಪ್ಪತ್ತೇ ಚಡ್ಡಿರಿ? ಅಂತ ಕೇಳಿದ ಕಂಡಕ್ಟರ. ಆವಾ ಹೇಳಿ ಕೇಳಿ ಲೆಕ್ಕಾ ಮಾಡವಾ.

ಇನ್ನೇನು ಎರಡನೂರ ಚಡ್ಡಿ ತೊಗೊಂಡು ಬರಬೇಕಾಗಿತ್ತಾ? ಯಾಕಾ? ಸವದತ್ಯಾಗ ಎಲ್ಲಾರಿಗೂ ಚಡ್ಡಿ ಹಾಕಿಸೋಣ? ಹಾಂ?
ಸವದತ್ತಿ ಎಲ್ಲಮ್ಮಗ ಅಂತಾದ್ದೇನೂ ಹರಕಿ ಪರಕಿ ನಾವು ಹೊತಗೊಂಡಿಲ್ಲ. ಖಬರಗೇಡಿ ಹುಚ್ಚ ಕಂಡಕ್ಟರ್. ಲಗೂನ ಸೀಟಿ ಹೊಡಿ. ಬಸ್ ಬಿಡಲೀ, ಅಂತ ಪೆದ್ದರಾಮಗ ಬೈದು, ಡ್ರೈವರ್ ಹುಚ್ಚಪ್ಪಾ ಎಲ್ಲೆ ಹೋದಿ? ದೊಡ್ಡ ವೀರಾಧಿವೀರನ ಗತೆ ತಲಿ ಒಡಿಲಿಕ್ಕೆ ಬಂದು ಬಿಟ್ಟಿದ್ದಿ? ಹಾಂ? ಅಂತ ಡ್ರೈವರ್ ರಾಚಪ್ಪನ್ನೂ ಒಂದು ಕೈ ತೊಗೊಂಡ್ರು. ಆವಾ ಬಾಯಾಗ ಗುಟ್ಕಾ ತುಂಬಿಕೊಂಡವ ಆ ಕಡೆಯಿಂದನೇ ಕೈ ಮುಗಿದು ನನ್ನ ಬಿಡ್ರೀ ಅಂತ ವಿನಂತಿ ಮಾಡೋ ಲುಕ್ ಕೊಟ್ಟಾ. ಅವನ್ನ ಅಷ್ಟಕ್ಕೇ ಬಿಟ್ಟರು. ನಂತರ ಯಾರಿಗೆ ಹಾಕ್ಕೊಂಡು ಬೈಯ್ಯವರು ಇದ್ದಾರ ಅಂತ ಎಲ್ಲಾರೂ ರೂಪಾ ವೈನಿಯನ್ನ avoid ಮಾಡ್ಲಿಕತ್ತಿದ್ದರು. ಇನ್ಯಾವದಾರ ಪ್ರಾಣಿ ಉಳದದನೋ ಅಂತ ಸುತ್ತ ತಿರುಗಿ ರೂಪಾ ವೈನಿ ಒಂದು ಸಿಂಹಾವಲೋಕ ಮಾಡಿದರು.

ಆದ್ರ ಪೆದ್ದರಾಮನ ಬೈಸಿಕೊಳ್ಳೋ ಯೋಗ ಇನ್ನೂ ಮುಗಿದ್ದಿಲ್ಲ ಅಂತ ಅನ್ನಸ್ತದ.

ಮತ್ತ ಕೇಳಿದ್ದೆ ಕೇಳಿದ. ಬರೇ ಇಪ್ಪತ್ತೇ ಚಡ್ಡಿರಿ?................

ಹಾಂ?! ಅನ್ನೋವಾಂಗ ವೈನಿ ಕೆಕ್ಕರಿಸಿ ನೋಡಿದರು.

ಸಿಟ್ಟಿಗೇಳಬ್ಯಾಡ್ರೀ ಅಕ್ಕಾರ....ಅಂದ ಕಂಡಕ್ಟರ್, ನನ್ನ ತೋರಿಸುತ್ತ, ಆ ಅಣ್ಣಾರ ಚಡ್ಡಿನೂ ನೀವೇ ಚೀಲದಾಗ ಹಾಕ್ಕೊಂಡು ಬಂದೀರೋ? ಅಂತ ಕೇಳಿಬಿಟ್ಟ. ಹೋಗ್ಗೋ! ಹಾಪಾ ಕಂಡಕ್ಟರ್!

ಯಾರದ್ದು? ಆ ಮಂಗ್ಯಾಂದ? ಅವನ ಚಡ್ಡಿ ನಾವ್ಯಾಕ ಹಾಕ್ಕೊಂಡು ಬರೋಣ? ಅಂದ್ರ ಮಂಗೇಶನ ಚಡ್ಡಿ ನಾವ್ಯಾಕ ಚೀಲದಾಗ ಹಾಕ್ಕೊಂಡು ಬರೋಣೋ ಮಳ್ಳ ಕಂಡಕ್ಟರ್? ಏನ್ ಹಚ್ಚಿ? ಹಾಂ? - ಅಂತ ಅವಂಗ ಝಾಡಿಸಿದರು ರೂಪಾ ವೈನಿ.

ಅಲ್ರೀ ಬಾಯಾರಾ, ಅವರ ಟಿಕೆಟ್ ಸಹಿತ ಕೂಡೆ ತೊಂಗೊಂಡ್ರೀ, ಅದಕ್ಕಾ....ಅಂತ ಕಂಡಕ್ಟರ್ ರಾಗಾ ಎಳದಾ.

ಹೌದು ನಮ್ಮ ಜೋಡಿ ಬಂದಾನ. ಅದಕ್ಕೆ ಅವಂದೂ ಟಿಕೆಟ್ ನಾವೇ ತೆಗಿಸಿದ್ದಿವಿ. ಹಂಗಂತ ಅವನ ಚಡ್ಡಿನೂ ನಾವೇ ತರೋಣ? ಇದೆಲ್ಲಿಂದ ನಿನ್ನ ತಲಿಯಾಗ ಬಂತೋ ಹುಚ್ಚಾ? ಯಾರ್ ನಿನಗ ಕಂಡಕ್ಟರ್ ನೌಕರೀ ಕೊಟ್ಟಾರ? ಹಳಿಯಾಳ ಸವದತ್ತಿ ಬಸ್ಸಿಗೆ ಕಂಡಕ್ಟರ್ ಆಗೋ ಬದಲೀ ಹೋಗಿ ಧಾರವಾಡದಾಗ ಮೆಂಟಲ್ ಹಾಸ್ಪಿಟಲ್ಲಿಗೆ ಹೋಗೋ ಸಿಟಿ ಬಸ್ಸಿನ ಕಂಡಕ್ಟರ್ ಆಗು ಹೋಗು. ದಿನಾ ಹುಚ್ಚರಾಸ್ಪತ್ರಿಗೆ ಅಡ್ಯಾಡಿ ಅಡ್ಯಾಡಿ ನಿನ್ನ ತಲಿ ಸರಿ ಆದರೂ ಆದೀತು. ಏನ್ ಹುಚ್ಚ ಇದ್ದೀಪಾ? - ಅಂತ ಪೆದ್ದರಾಮಗ ಝಾಡಿಸಿದರು ರೂಪಾ ವೈನಿ.

ಹಾಂಗ ಏನ್ರೀ? ಮತ್ತ ಅವರ ಚಡ್ಡಿ? ಅಂತ ಕೇಳಿದ ಕಂಡಕ್ಟರ್. ಇವನೌನ್! ನನ್ನ ಚಡ್ಡಿ ಮ್ಯಾಲೆ ಯಾಕ ಇವನ ತಲಿ? ಅಂತ ವಿಚಾರ ನನ್ನ ತಲಿಯಾಗ ಬಂತು.

ಮಂಗೇಶಾ, ನೀ ಚಡ್ಡಿ ಹಾಕ್ಕೊಂಡು ಅಂದ್ರ ಚೀಲದಾಗ ಹಾಕ್ಕೊಂಡು ಬಂದಿಯೋ ಇಲ್ಲೋ? ಅಥವಾ ನೀನೂ ನಮ್ಮ ಗತೆ ಮರ್ತು ಬಂದು ಬಿಟ್ಟಿಯೋ? ಹಾಂ? ಅಂತ ಕೇಳಿದರು ರೂಪಾ ವೈನಿ.

ಏ....ನಾ  ನನ್ನ ಪ್ರವಾಸದ ಚೀಲಾ ರಾತ್ರಿನೇ ತಯಾರ ಮಾಡಿ ಇಟ್ಟುಕೊಂಡಿದ್ದೆರೀ ವೈನಿ, ಅಂತ ಹೇಳಿದಾಗ ಮಾತ್ರ ಚೀಲದ ನೆನಪಾತು. ಎಲ್ಲದ ಚೀಲ? ಇಲ್ಲ. ನಾಸ್ತಿ.

ಹೋಗ್ಗೋ ವೈನಿ! ಘಾತ ಆತಲ್ಲರೀ! ಅಂತ ಚೀತ್ಕಾರ ಮಾಡಿದೆ.

ಏನಾತೋ ಮಂಗೇಶ? - ಅಂತ ರೂಪಾ ವೈನಿ ಕೇಳಿದರು.

ವೈನಿ ನಾ ನನ್ನ ಚೀಲಾ ಸ್ಟೇಷನ್ ಬಸ್ ಸ್ಟಾಪಿನ್ಯಾಗೇ ಮರ್ತು ಬಂದು ಬಿಟ್ಟೆ. ಚಡ್ಡಿ ಮತ್ತೊಂದು ಎಲ್ಲಾ ಅದರಾಗೇ ಇತ್ತು. ಅಲ್ಲೆ ನೀವು ಬರೋಕಿಂತ ಮೊದಲು ಠಾಕ್ರೆ ಆಚಾರ್ರ ಜೋಡಿ ಕಿತಿಬಿ ಮಾಡಿಕೋತ್ತ, ಹರಟಿ ಹೊಡಕೋತ್ತ ಕೂತಿದ್ದೆ. ಮತ್ತ ಸಿಟಿ ಬಸ್ಸಿಗೆ ಕೈ ಬೀಸಿಕೊಂಡು ಹತ್ತಿ ರೂಢಾ ನೋಡ್ರೀ. ಚೀಲಾ ಬಿಟ್ಟು ಹತ್ತಿ ಬಿಟ್ಟೇನಿ. ನೀವು ಚೀಲದಾಗ ಚಡ್ಡಿ ಹಾಕ್ಕೋಳೋದನ್ನ ಮರ್ತು ಬಂದ್ರೀ. ನಾ ಚಡ್ಡಿ ಹಾಕ್ಕೊಂಡ ಚೀಲಾನೇ ಮರ್ತು ಬಂದೆ ನೋಡ್ರೀ. end effect ಎಲ್ಲಾ ಒಂದೇ ಆತಲ್ಲ್ರೀ ಈಗ, ಅಂತ ಹೇಳಿದೆ.

ಆತಾ? ಚೊಲೋ ಆತು. ಗೋವಿಂದಾ. ಗೋವಿಂದಾ ಗೋವಿಂದಾ, ಅಂತ ರೂಪಾ ವೈನಿ ಎರಡೂ ಕೈಯೆತ್ತಿ ನಮಸ್ಕಾರ ಮಾಡಿದರು. ಎಲ್ಲಾ ಮುಗೀತು ಅನ್ನವರಂಗ.

ನಡೀರಿ....ಎಲ್ಲಾರೂ ಇಲ್ಲೇ ಇಳಿಯೋಣ ಇನ್ನು. ಮುಗೀತು ಪ್ರವಾಸ. ರಸ್ತೆ ಆ ಬಾಜೂಕ ಹೋಗಿ ನಿಂತು ಧಾರವಾಡ ಕಡೆ ಹೋಗೋ ಬಸ್ ಹಿಡಿಯೋಣ ಇನ್ನು, ಅಂತ ರೂಪಾ ವೈನಿ ಘೋಷಿಸಿ ಸಾಮಾನು ತೆಗೆದು ಇಳಿಲಿಕ್ಕೆ ರೆಡಿ ಆದ್ರು.

ಇಷ್ಟು ದಿವಸ ಕೂಡಿ ಪ್ಲಾನ್ ಮಾಡಿದ ಟ್ರಿಪ್ ಹೀಂಗ anti climax ಒಳಗ ಮುಗಿಯೋದು ಅಂದ್ರ ಏನ್ರೀ?! ದೊಡ್ಡ tragedy.

ಯಾಕ್ರೀ ವೈನಿ? ಯಾಕ ವಾಪಸ್ ಹೋಗೋಣ ಅಂತೀರಿ? ಹಾಂ? - ಅಂತ ನಾ ಕೇಳಿದೆ. ಚೀಪ್ಯಾನೂ ಯಾಕ ಯಾಕ ಅಂತ ಅಂದ.

ಏನು ಯಾಕ ಯಾಕ? ಯಾರ ಕಡೆನೂ ಚಡ್ಡಿನೇ ಇಲ್ಲ. ಮತ್ತೇನು ಮಾಡೋದು? ಚಡ್ಡಿ ಇಲ್ಲದ ಎರಡು ದಿವಸ ಇರೋದು ಹ್ಯಾಂಗ? ಹಾಂ? ಮಂಗೇಶ ನೀ ಹಾಸ್ಟೆಲ್ ಒಳಗ ಇದ್ದಿ ಏನು? ಹಾಂ? - ಅಂತ ಕೇಳಿದರು ರೂಪಾ ವೈನಿ. ಏಕ್ದಂ ಟಾಪಿಕ್ ಚೇಂಜ್.

ಏ....ಎಲ್ಲಿ ಹಾಸ್ಟೆಲ್ ಬಿಡ್ರೀ. ನಾವು ಮನಿ ಬಿಟ್ಟು ಎಲ್ಲೂ ಹೋಗೇ ಇಲ್ಲ. ಹೋಳಿ ಹುಣ್ಣಿಮ್ಯಾಗ ಉದಯ ಹಾಸ್ಟೆಲ್ ಗೆ ಒಂದು ಹೋಗಿ ಬರತಿದ್ದೆ ನೋಡ್ರೀ, ಅಂತ ಹೇಳಿದೆ.

ಉದಯ ಹಾಸ್ಟೆಲ್ಲಾ? ಯಾಕಾ? ಅದೇನು ನಿಮ್ಮ ಮಾವನ ಮನಿ ಏನು? ಅಂತ ರೂಪಾ ವೈನಿ ಕೇಳಿದರು.

ಹಾ...ಹಾ...ಏನಿಲ್ಲರೀ....ಹೋಳಿ ಹುಣ್ಣಿಮ್ಯಾಗ ಅಲ್ಲೆ ಭಾಳ ಗದ್ದಲಾ ಅದು ಇದು ನಡಿತಿತ್ತು. ಅದಕ್ಕೆ ಜಸ್ಟ್ ಎಂಜಾಯ್ ಮಾಡಲಿಕ್ಕೆ, ಬಣ್ಣಾ ಆಡಲಿಕ್ಕೆ ಹೋಗಿ ಬರ್ತಿದ್ದೆ ನೋಡ್ರೀ ವೈನಿ, ಅಂತ ಹೇಳಿದೆ.

ಹಾಂಗಾ?

ಹೂನ್ರೀ.... ಅಂತ ಮಾತು ಮುಗಿಸಿದೆ.

ರೂಪಾ ಏ ರೂಪಾ, ಎಲ್ಲಾರೂ ಚಡ್ಡಿ ಮರೆತು ಬಂದೇವಿ ಖರೆ. ಬರೇ ಎರಡು ದಿವಸದ ಟ್ರಿಪ್. ಅಲ್ಲೇ ಸವದತ್ತಿ ಒಳಗ ನಾವೂ ಒಂದೊಂದು ಚಡ್ಡಿ ತೊಗೊಂಡು, ಈ ಸಣ್ಣ ಮಕ್ಕಳಿಗೂ ಒಂದೋ ಎರಡೋ ಜೊತಿ ಚಡ್ಡಿ ತೊಗೊಂಡು ಬಿಟ್ಟರ ಆತು. ಏನಂತಿ? ಹಾಂ? ಇಷ್ಟು ದೂರ ಬಂದು ವಾಪಸ್ ಹೋಗೋದು ಅಂದ್ರ ಹ್ಯಾಂಗಾ ರೂಪಾ? - ಅಂತ ಚೀಪ್ಯಾ ಕೇಳಿದ.

ನಿಮಗ ಬುದ್ಧಿ ಇಲ್ಲ ಅನ್ನೋದು ಇದಕ್ಕಾ ನೋಡ್ರೀ, ಅಂತ ರೂಪಾ ವೈನಿ ತಿವಿದರು.

ಯಾಕಾ? ಅಂತ ಚೀಪ್ಯಾ ಕೇಳಿದ.

ಅಲ್ರೀ...ಚಡ್ಡಿಯೇನೋ ಎಲ್ಲೆ ಬೇಕಾದರೂ ತೊಗೋಬಹುದು. ಆದ್ರಾ ಅವನ್ನ ನೀರಾಗ ಹಾಕದೆ ಹಾಕ್ಕೊಳ್ಳೋದು ಒಂದೇ, ಪ್ಯಾಟ್ಯಾಗ ತಂದ ಹರಿವಿ ಸೊಪ್ಪು ತೊಳಿದೇ ಪಲ್ಯಾ ಮಾಡೋದು ಒಂದೇ. ಎರಡೂ ಒಳ್ಳೇದು ಅಲ್ಲ. ಆರೋಗ್ಯಕ್ಕ. ಸವದತ್ಯಾಗ ಎಲ್ಲೆ ಚಡ್ಡಿ ನೀರಾಗ ಹಾಕ್ಕೋತ್ತ ಕೂಡವರು ನೀವು? ಅಲ್ಲೇನು ನಿಮ್ಮ ಕಾಕಾನ ದೋಭೀ ಅಂಗಡಿ ಅದನೋ ಅಥವಾ ನಿಮ್ಮ ಮೌಶಿ ಮನಿ ಅದನೋ? ಹಾಂ? ಇಷ್ಟೂ ಗೊತ್ತಾಗಂಗಿಲ್ಲ ನಿಮಗ? ಹಾಂ? ಎಲ್ಲಿಂದ ಗೊತ್ತಾಗಬೇಕು? ನಿಮ್ಮ ಅವ್ವಾ ನಿಮಗ ಪ್ಯಾಟ್ಯಾಗಿಂದ ತಂದ ಚಡ್ಡಿ ನೀರಿಗೆ ಹಾಕದೇ, ಹಾಂಗಂಗೆ ನಿಮಗ ಹಾಕಿಸಿದ್ದಕ್ಕೇ ನಿಮ್ಮ 'ಅದರ' ಪರಿಸ್ಥಿತಿ ಹಾಂಗ ಅದ, ಅಂತ ಹೇಳಿ ರೂಪಾ ವೈನಿ ಚೀಪ್ಯಾನ ಗಪ್ಪು ಮಾಡಿಸಿ, ಟ್ರಿಪ್ಪಿನ ಯೋಚನೆ ಬಿಡುವಂತೆ ಮಾಡಿ ಬಿಟ್ಟರು.

ಬಸ್ಸು ನಿಂತೇ ಇತ್ತು. ಕೆಳಗ ಇಳಿದಿವಿ. ಆ ಕಡೆ ಸೈಡಿಗೆ ಬಂದಿವೀ. ಧಾರವಾಡ ಕಡೆ ಹೋಗೋ ಬಸ್ ಬಂತು. ಹತ್ತಿ, ಹೊಳ್ಳಿ ವಾಪಸ್ ಬಂದಿವೀ. ಸುಮಾರು ಮಧ್ಯಾನ್ಹ ಎರಡು ಘಂಟೆ ಅಂದ್ರ ಮನಿ ಮುಟ್ಟಿದ್ದ್ವಿ.

ವಾಪಸ್ ಬರೋವಾಗ ಸುಮಾರು ಮಂದಿ ಕೇಳಿದರು, ಇಷ್ಟ ಲಗೂ ಬಂದು ಬಿಟ್ಟಿರಿ? ಹಾಂ? ಯಾಕ ಸವದತ್ತಿ ಎಲ್ಲಮ್ಮ ದರ್ಶನಾ ಕೊಡಲಿಲ್ಲ ಏನು? ಹಾಂ? ಅಂತ.

ನಾವು ದೊಡ್ಡವರು ಏನೋ ಹಾರಿಕಿ ಉತ್ತರ ಕೊಟ್ಟು ಬಚಾವ್ ಆಗಲಿಕ್ಕೆ ನೋಡಿದಿವಿ. ಈ ಸಣ್ಣು ಹುಡುಗ್ಯಾರು ಕುಂತಿ, ನಿಂತಿ ಬಿಡಬೇಕಲ್ಲಾ???

ಚಡ್ಡಿ ಹಾಕ್ಕೊಂಡು ಹೋಗೋದು ಮರತು ಬಿಟ್ಟಿದ್ದಿವಿ. ನಡು ರಸ್ತೆದಾಗ ನೆನಪ ಆತು ನಮಗ ನಾವು ಯಾರೂ ಚಡ್ಡಿ ಹಾಕ್ಕೊಂಡು ಬಂದೇ ಇಲ್ಲ ಅಂತ. ಅದಕ್ಕೇ ವಾಪಸ್ ಬಂದು ಬಿಟ್ಟಿವಿ. ಅಲ್ಲಾ ಅವ್ವಾ? ಅಲ್ಲಾ ಅಣ್ಣಾ? ಅಲ್ಲಾ ಮಂಗೇಶ ಮಾಮಾ? ಅಂತ ಹೇಳಿ ನಮ್ಮ ಅಳಿದುಳಿದ ಮಾನ ಎಲ್ಲ ಫುಲ್ ಹರಾಜ್ ಹಾಕಿ ಬಿಟ್ಟರು. ಚಿಕ್ಕ ಪೀಡೆ ಹುಡುಗಿಯರು!

ಈ ರೀತಿ ಒಂದು ಪ್ರವಾಸ ಮುಗಿಯುವದಕ್ಕಿಂತ ಮೊದಲೇ ಪ್ರಸವವಾಗಿ ಎಕ್ಕುಟ್ಟಿ ಹೋಗಿತ್ತು. ಶಿವ ಶಿವಾ!

(ಮುಗಿಯಿತು)

(ಚಡ್ಡಿ ಜೋಕನ್ನು ಮೊದಲು ತಮ್ಮ ಕಥೆಯ ಮೂಲಕ ಪರಿಚಯಿಸಿದವರು ಕಥೆಗಾರ ಸುಬ್ರಮಣ್ಯ ಹೆಗಡೆ ಅವರು. original credit ಎಲ್ಲ ಅವರಿಗೇ)


1 comment:

Vimarshak Jaaldimmi said...


Ha! Ha!!

Humorous!!!