Sunday, January 18, 2015

ಒಂದೇ ಧೋತರಂ

ಯಾವಾಗಲೂ ಧೋತ್ರ (ಪಂಚೆ) ಉಟ್ಟುಗೊಳ್ಳುತ್ತಿದ್ದ ಮಹನೀಯರೊಬ್ಬರು ಯಾಕೋ ಬರೇ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಕಟ್ಟಿ ಮ್ಯಾಲೆ ಕೂತಿದ್ದರು.

'ಯಾಕ್ರೀ ಸರ್ರಾ? ಧೋತ್ರ ಏನಾತ್ರೀ?' ಅಂತ ಕೇಳಿದೆ.

ಅವರು ಹೇಳಿ ಕೇಳಿ ಸಾಹಿತಿಗಳು. ಅವರ ಧೋತ್ರದ ಸ್ಥಿತಿಗತಿಗಳನ್ನು ಕವನದ ರೂಪದಲ್ಲಿ ಹೇಳಿಬಿಟ್ಟರು. 'ಏನಪಾ ಇವರು ನಾ ಇವರ ಧೋತ್ರದ ಬಗ್ಗೆ ಕೇಳಿದರೆ ಇವರು 'ವಂದೇ ಮಾತರಂ' ಹಾಡ್ಲಿಕತ್ತುಬಿಟ್ಟರಲ್ಲಾ!?' ಅಂತ ಘಾಬ್ರಿಯಾದ್ರ ಅವರು ಅದೇ ಮಾದರಿಯಲ್ಲಿ 'ಒಂದೇ ಧೋತರಂ' ಅಂತ ಹಾಡಿಬಿಟ್ಟರು. ಎಷ್ಟು ಮಸ್ತ ಹೇಳ್ಯಾರ ನೋಡ್ರೀ!

ಒಂದೇ ಧೋತರಂ
ಇರುವದೊಂದೇ ಧೋತರಂ ।।ಪ।।

ಈ ಹಳೆಯ ಧೋತರಂ
ಈ ಹರಕಾ ಧೋತರಂ

ಒಂದೇ ಧೋತರಂ
ಇರುವದೊಂದೇ ಧೋತರಂ

ಉಟ್ಟುಗೊಂಡರೆ ಎಲ್ಲಾ ಕಾಣಸ್ತದಂ
ಕಂಡವರೆಲ್ಲ ಕೈ ಮುಗಿತಾರಂ
ನಾಚ್ತಾರಂ, ನಾಚಿ ನಾಚಿ ನೀರಾಗತಾರಂ
ಬೈತಾರಂ, ಉಗಿತಾರಂ, ಝಾಡಿಸಿ ಝಾಡಿಸಿ ಒದಿತಾರಂ.

ಒಂದೇ ಧೋತರಂ
ಇರುವದೊಂದೇ ಧೋತರಂ

ಒಂದೇ ಧೋತರಂ
ಇರುವದೊಂದೇ ಧೋತರಂ

**

ಒಮ್ಮೊಮ್ಮೆ ಬಲು ವಿಚಿತ್ರ ಅನ್ನುವ ಘಟನೆಗಳು ನಡೆದುಬಿಡುತ್ತವೆ. ಈ ಮಂಗಗೀತೆ (ರಂಗಗೀತೆ ಇದ್ದಂಗೆ ಮಂಗಗೀತೆ) ತಲೆಗೆ ಹೊಳೆದಿದ್ದು, ಬರೆದಿದ್ದು, ಹಾಡಿದ್ದು ಎಲ್ಲ ಆಗಸ್ಟ್ ೧೪, ೨೦೧೩ ರಂದು. ಭಾರತದಲ್ಲಿ ಆಗಲೇ ಆಗಸ್ಟ್ ೧೫ ರ  ಬೆಳಿಗ್ಗೆ ಆಗಿ ಎಲ್ಲರೂ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದರು. ನನ್ನದೇ ತರಹದ sense of humor ಇದ್ದು, ಇಂತದ್ದನ್ನೆಲ್ಲ ಓದಿ, ನಕ್ಕು ಬಿಡುವಂತಹ ಕೆಲ ಸಹೃದಯಿ ಮಿತ್ರ ಮಿತ್ರೆಯರಿಗೆ ಸುಮ್ಮನೆ ಫೇಸ್ಬುಕ್ ನಲ್ಲಿ ಫಾರ್ವರ್ಡ್ ಮಾಡಿದ್ದೆ.

ಸರಿ. ಅಂತವರಲ್ಲಿ ಒಬ್ಬ ಗೆಳತಿ ಸ್ವಾತಂತ್ರ ದಿನಾಚರಣೆಗೆ ಮುಖ್ಯ ಅತಿಥಿ ಅಂತಲೋ, ಅಧ್ಯಕ್ಷೆ ಅಂತಲೋ ಹೋಗಿ ಅವಳ ಮಗಳ ಶಾಲೆಯ ಸಮಾರಂಭದಲ್ಲಿ ವೇದಿಕೆ ಮೇಲೆ ಕೂತಿದ್ದಳು. ಆ ಊರಿನ ಗಣ್ಯ ವ್ಯಕ್ತಿಗಳಲ್ಲಿ ಅವಳೂ ಒಬ್ಬಳೂ. ಅದಕ್ಕೇ ಅಂತ ಧ್ವಜಾರೋಹಣ ಮಾಡಿ ಹೋಗಿ ಅಂತ ಕರೆದಿದ್ದರು ಅಂತ ಕಾಣುತ್ತದೆ.

ಈ ಕಾಲದ ಎಲ್ಲರಂತೆ ಈಕೆಯೂ smartphone ವಿಭೂಷಿತೆ. ಕೂತಿದ್ದಾಳೆ ವೇದಿಕೆ ಮೇಲೆ. ಏನೋ ಭಾಷಣ ಅದು ಇದು ನಡೆದಿತ್ತು ಅಂತ ಹೇಳಿ, ಎಲ್ಲರ ಹಾಗೆ smartphone ತೆಗೆದು, ಫೇಸ್ಬುಕ್ ಅದು ಇದು ಅಂತ ಕೆತ್ತೆಬಜೆ ಕಾರ್ಬಾರ್ ಮಾಡುತ್ತ ಕೂತಿದ್ದಾಳೆ. ಅದೇ ಸಮಯಕ್ಕೆ ನನ್ನ 'ಒಂದೇ ಧೋತರಂ' ಇದ್ದ ಮೆಸೇಜ್ ಹೋಗಿ, ಪಿಂಗ್ ಅಂತ ಸೌಂಡ್ ಮಾಡಬೇಕೇ? ಏನೋ ಮೆಸೇಜ್ ಬಂದಿರಬೇಕು. Happy Independence Day, ಅಂತ ಯಾರೋ ಮೆಸೇಜ್ ಕಳಿಸಿರಬಹುದು ಅಂತ ಮೆಸೇಜ್ ಓದಿದ್ದಾಳೆ. 'ಒಂದೇ ಧೋತರಂ' ಓದಿದ್ದೇ, ನಗು ತಡೆಯಲಾಗದೆ, ಅಲ್ಲೇ ಕಿಸಿಕಿಸಿ ಅಂತ ನಕ್ಕುಬಿಟ್ಟಳಂತೆ ಪುಣ್ಯಾತ್ಗಿತ್ತಿ. ಒಂದಿಷ್ಟು ನಕ್ಕ ನಂತರ, ವೇದಿಕೆ ಮೇಲಿದ್ದದ್ದು ಅರಿವಾಗಿ, ಪಕ್ಕದಲ್ಲಿ ಆಕೆಯ ಮಕ್ಕಳ ಶಿಕ್ಷಕರೂ, ಮುಂದೆ ಆಕೆಯ ಮಕ್ಕಳೂ ಸೇರಿದಂತೆ ಇತರ ವಿದ್ಯಾರ್ಥಿಗಳಿದ್ದಾರೆ ಅಂತ ಅರಿವಾಗಿ, ಹೇಗೋ ಮಾಡಿ ಬಾಯಿಗೆ ಕೈಯಿಟ್ಟುಕೊಂಡು, ನಗೆ ತಡೆದುಕೊಂಡು, ಹೇಗೋ ಸಮಾರಂಭ ಮುಗಿಸಿಬಂದಳಂತೆ.

ನಂತರ ಮೆಸೇಜ್ ಮಾಡಿ, 'ಏನೋ ನೀನು!? ಹಾಂ? ಹೀಂಗ ಮಾಡೋದು?' ಅಂದಳು.

'ಅಯ್ಯ! ನಾ ಏನ್ ಮಾಡಿದೆ ಮಾರಾಳ????' ಅಂದೆ.

'ಏನು ಅದು? ಅಂತಾ ಮೆಸೇಜ್ ಅದೂ ನಾ ಸ್ಟೇಜ್ ಮೇಲೆ ಕೂತಾಗೇ ಕಳಿಸೋದ?' ಅಂದಳು.

ಶಿವನೇ ಶಂಭುಲಿಂಗ!

'ನನಗೇನು ಗೊತ್ತ? ನೀ ಸ್ಟೇಜ್ ಮ್ಯಾಲೆ ಇರ್ತೀ ಅಂತ. ಸ್ಟೇಜ್ ಮೇಲೆ ಇದ್ದಾಗ ಸುಮ್ಮನೇ ಕೂಡದೇ smartphone ತೆಗೆದು ಕೆತ್ತೆಬಜೆ ಕಾರ್ಬಾರ್ ಮಾಡಿದ್ದು ನಿಂದೇ ತಪ್ಪು!' ಅಂತ ನಾನೂ ರಿವರ್ಸ್ ಇಟ್ಟೆ.

ಇಬ್ಬರೂ ನಕ್ಕು ಮಾತು ಮುಗಿದಿತ್ತು. ಆದರೆ ನಗು ಮಾತ್ರ ನಿರಂತರ.

*

ಗೀತಕಾರರು ಸಂಗೀತ ಸಂಯೋಜನೆ ಸಹಿತ ಮಾಡಿ ಗಾಯಕರೂ ಆಗಿ ಬಿಟ್ಟರೆ??? ನಿಮ್ಮ ಕಿವಿ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಲ್ಲಿ 'ಒಂದೇ ಧೋತರಂ' ಕೇಳಿ. ನಿಮ್ಮ ಕಿವಿ ತಮ್ಮಟೆ ಢಂ ಅಂದರೆ ಅದಕ್ಕೆ ನಾವು ಜವಾಬ್ದಾರಲ್ಲ!

'ಏ! ಇದನ್ನ ಡುಯೆಟ್ ಹಾಡೋ!' ಅಂತ ಇನ್ನೊಬ್ಬಳ ಸಲಹೆ.

'ಬ್ಯಾಡ ಮಾರಾಳ!' ಅಂದೆ.

ಕೋತಿ ತಾನು ಕೆಡೋದಷ್ಟೇ ಅಲ್ಲದೇ ವನವನ್ನೂ ಕೆಡಿಸಿತಂತೆ.

*

parody ಬರೆದಾಗ 'ಮೂಲ ಲೇಖಕರ ಕ್ಷಮೆ ಕೋರಿ' ಅಂತ ಹಾಕುವದು ರಿವಾಜು. ಅದೇ ರೀತಿ 'ವಂದೇ ಮಾತರಂ' ಬರೆದ ಬಂಕೀಮ್ ಚಂದ್ರ ಚಟರ್ಜೀ, ಸಂಗೀತ ಸಂಯೋಜಕರ ಕ್ಷಮೆ ಕೋರಿಯೇ ಬಿಡುತ್ತೇನೆ. ಒಂದು ಕಾಲದಲ್ಲಿ ರಾಷ್ಟ್ರಗೀತೆ ಆಗಬೇಕಿದ್ದ ಪವಿತ್ರ 'ವಂದೇ ಮಾತರಂ' ಗೀತೆಗೆ ಯಾವದೇ ತರಹದ ಅಗೌರವ ತೋರುವ, ಅಪಚಾರ  ಉಂಟುಮಾಡುವ ಉದ್ದೇಶ ಇತ್ಯಾದಿ ಇಲ್ಲವೇ ಇಲ್ಲ. ಅದೊಂದು ಮಾತ್ರ ಖಾತ್ರಿ. ಹಾಗಾಗಿ ತಪ್ಪು ತಿಳಿಯುವದು ಬೇಡ. ಹಾಸ್ಯ ಪ್ರಜ್ಞೆ ಜಾರಿಯಲ್ಲಿರಲಿ.

ಒಂದೇ ಧೋತರಂ! ಹೊಸ ಧೋತರಂ!

1 comment:

Sabyasaachi Chottopadhyaay said...


Creative! Really "opens up" for dhoti introspection!!

Singing raaga appears to be derived from "mega ಮಳ್ಳಹರಿ" (মেঘামাল্লাহারি / मेघमल्ल्हारी) !!!