Thursday, February 26, 2015

ಕಟಿಂಗ್ ಕಾಳಿಂಗ, ಶೇವಿಂಗ್ ಶಂಭುಲಿಂಗ

ಚಳಿಗಾಲದಲ್ಲೇ 'ಸಮ್ಮರ್ ಕಟ್' (summer cut) ಹೊಡಿಸಿಕೊಂಡು ಬಂದುಬಿಟ್ಟಿದ್ದ ದ್ಯಾಮ್ಯಾ! 'ಏನಪಾ, ಇವಾ ಎಲ್ಲೆ 'ಏಳು ಕುಂಡಲವಾಡನ' ಸನ್ನಿಧಿ ಅಂದ್ರ ತಿರುಪತಿಗೆ ಹೋಗಿ, ಮುಡಿ ಗಿಡಿ ಕೊಟ್ಟ ಬಂದಾನೇನಪಾ?' ಅಂತ ಸಂಶಯ ಬಂತು. ತಲಿ ನೋಡಿದರೆ ಕಳೆ ಕಿತ್ತ ಸ್ವಚ್ಛ ಮೈದಾನ ಆಗಿತ್ತು. ಟಕಳಾ ತಬಲಾ ತಲಿ ಆಗಿಬಿಟ್ಟಿತ್ತು!

'ಏನಲೇ ದ್ಯಾಮ್ಯಾ ಈ ವೇಷಾ? ಏನು ಇದು? ಫುಲ್ ಗುಂಡ ಹೊಡೆಸಿಬಿಟ್ಟಿಯಲ್ಲಾ??? ಹಾಂ?' ಅಂತ ಕೇಳಿದೆ.

'ಹೌದಲೇ, ಕಟಿಂಗ್ ಮಾಡಿಸಲಿಕ್ಕೆ ಅಂತ ನಮ್ಮಪ್ಪ ಅವನ ಜೋಡಿನೇ  ಕರಕೊಂಡು ಹೋಗಿದ್ದ. ಅದಕ್ಕೆ ಏನೇನೋ ಆಗಿ ಹೀಂಗ ಆಗಿ ಹೋತು,' ಅಂತ ಹೇಳಿ, ದೊಡ್ಡದಾಗಿ ಹುಸ್ ಅಂದ ದ್ಯಾಮ್ಯಾ.

ದ್ಯಾಮ್ಯಾ ಉದ್ದ ಕಥಿ ಹೇಳಿದ. ಅದರ ಸಾರಾಂಶ ಇಷ್ಟು.

ದ್ಯಾಮ್ಯಾ ಅವರಪ್ಪ ಗೌಂಡಿ ಶಂಕರಪ್ಪನ ಜೋಡಿ ಕಟಿಂಗ್ ಮಾಡಿಸಲಿಕ್ಕೆ ಹೋಗ್ಯಾನ. ಅವರಪ್ಪ ಗೌಂಡಿ ಶಂಕರಪ್ಪ ಅಂದ್ರ ಭಾರಿ ಜಾಬಾದ್ ಮನುಷ್ಯ. ಭಾರಿ ತಲಿ ಇಟ್ಟಾನ.

ಅಪ್ಪ, ಮಗ ಇಬ್ಬರೂ ಹೋಗಿ ಕಟಿಂಗ್ ಅಂಗಡಿ ಉರ್ಫ್ ಹಜಾಮತಿ ಸಲೂನ್ ಒಳಗ ಕೂತಾರ. ಖಾಲಿ ಇತ್ತು ಅಂತ ಹೇಳಿ ಅಪ್ಪ, ಮಗ ಇಬ್ಬರನ್ನೂ ಬಾಜು ಬಾಜು ಕುರ್ಚಿ ಮ್ಯಾಲೆ ಕೂಡಿಸಿ, 'ಏನು ಮಾಡ್ಲಿರೀ? ನಿಮಗೇನು? ಈ ಹುಡುಗಗ  ಏನು? ಕಟಿಂಗ್? ಶೇವಿಂಗ್?'  ಅಂತ ಕೇಳ್ಯಾರ ಸಲೂನ್ ಮಂದಿ.

'ಕಟಿಂಗಿಗೆ ಎಷ್ಟರೀ ಅಣ್ಣಾರ?' ಅಂತ ಕೇಳ್ಯಾನ ದ್ಯಾಮ್ಯಾನ ಅಪ್ಪ ಗೌಂಡಿ ಶಂಕರಪ್ಪ.

ಕಟಿಂಗ್ ಅಂಗಡಿ ಮಂದಿ ಇರಿಟೇಟ್ ಆಗ್ಯಾರ. ಏನಿದು ಹೀಂಗ ಬಂದು ಕೂತ ಮ್ಯಾಲೆ ಹಾಪರ ಗತೆ ರೇಟ್ ಕೇಳ್ತಾರ ಅಂತ.

'ಕಟಿಂಗ್ ಎಂಟು ರೂಪಾಯಿ ನೋಡ್ರೀ ಸಾವಕಾರ್ರ!' ಅಂದಾನ ಕಟಿಂಗ್ ಕಾಳಿಂಗ. ಅದು ಹಜಾಮನ ಹೆಸರು. ಸಾವಕಾರ್ರೀ ಅಂತ ಒತ್ತಿ ಹೇಳ್ಯಾನ. ಕಿಂಡಲ್ ವ್ಯಂಗ್ಯ ಮಾಡೋ ಹಾಂಗ. ಗೌಂಡಿ ಶಂಕರಪ್ಪಗೂ ಅವನ ಮಾತಿನಾಗಿನ ವ್ಯಂಗ್ಯ ಗೊತ್ತಾಗೈತಿ ಬಿಡ್ರೀ. ಅವನೂ ಮನಸ್ಸಿನ್ಯಾಗೇ ಬತ್ತಿ ಇಡೋ ಸ್ಕೀಮ್ ಹಾಕ್ಯಾನ.

'ಶೇವಿಂಗ್ ಎಷ್ಟರೀ?????' ಅಂತ ಮತ್ತ ದೂಸರಾ ಪ್ರಶ್ನೆ ಒಗದಾನ ಗೌಂಡಿ ಶಂಕರಪ್ಪ.

'ಶೇವಿಂಗ್ ಆರು ರೂಪಾಯಿ,' ಅಂತ ಹೇಳಿದ ಕಟಿಂಗ್ ಕಾಳಿಂಗ, ಮತ್ತೂ ಇರಿಟೇಟ್ ಆಗಿ, 'ನಿಮಗ ಏನು ಮಾಡ್ಲೀ? ನಿಮ್ಮ ಬಾಜೂ ಕುಂತ ಹುಡುಗಗ  ಏನು ಮಾಡ್ಲೀ? ಲಗೂ ಹೇಳರಲ್ಲಾ???' ಅಂತ ಗಡಿಬಿಡಿ ಮಾಡ್ಯಾನ. ಇವರಿಗೆ ರೇಟ್ ಕಾರ್ಡ್ ಹೇಳೋ ಟೈಮ್ ಒಳಗ ನಾಕು ಮಂದಿ ತಲಿ ಬೋಳಿಸಿ ಆಗ್ತಿತ್ತು ಅವಂಗ. ನೋಡಿದರೆ ಇವರು ಹೀಂಗ.

ಕಟಿಂಗ್ ಮತ್ತು ಶೇವಿಂಗ್ ರೇಟ್ ಕೇಳಿದ ಗೌಂಡಿ ಶಂಕರಪ್ಪ ಡೀಪ್ ಥಿಂಕಿಂಗ್ ಮೋಡಿಗೆ ಹೋಗಿ ಬಿಟ್ಟ. ಭಾರಿ ಜಾಬಾದ್ ಮನುಷ್ಯಾ ಆವಾ. ಗೌಂಡಿ ಕೆಲಸ ಬ್ಯಾರೆ ಭಾಳ ಕಮ್ಮಿ ಆಗಿಬಿಟ್ಟೈತಿ. ರೊಕ್ಕ ಇಲ್ಲದ ಕಡಕಿ ದಿನಗಳು. ಹಾಂಗಂತ ಹೇಳಿ ಅವಂಗ ದಿನಕ್ಕೆ ಮೂರು ಬಾಟಲಿ ಕಂಟ್ರಿ ಶೆರೆ, ನಾಕು ಕಟ್ಟು ಗಣೇಶ ಬೀಡಿ ಇರಲಿಲ್ಲ ಅಂದ್ರ ನಡೆಯೋದಿಲ್ಲ. ಹಾಂಗಾಗಿ ಎಲ್ಲೆಲ್ಲೋ ರೊಕ್ಕ ಉಳಿಸಲಿಕ್ಕೆ ನೋಡ್ತಾನ.

'ಕಟಿಂಗಿಗೆ ಎಂಟು, ಶೇವಿಂಗಿಗೆ ಆರು ರೂಪಾಯಿ ಅಂದ್ರ್ಯಾ?' ಅಂತ ಕಟಿಂಗ್ ಕಾಳಿಂಗನ ಮುಖ ನೋಡಿದ ಶಂಕರಪ್ಪ. ಅವ ಹೇಳಿದ್ದು, ಇವ ಕೇಳಿದ್ದು ಎಲ್ಲ ಖಾತ್ರಿ ಮಾಡಿಕೊಳ್ಳವರಾಂಗ.

'ಹೌದ್ರೀ! ಬರೋಬ್ಬರಿ ಅದ. ಹೇಳ್ರೀ ಏನು ಮಾಡಲಿ? ನಿಮ್ಮ ಹುಡುಗಗ ಏನು ಮಾಡ್ಲೀ?' ಅಂತ ಆಖ್ರೀ ಸರೆ ಅನ್ನೋವಾಂಗ ಹೇಳ್ಯಾನ ಕಟಿಂಗ್ ಕಾಳಿಂಗ.

'ಒಂದು ಕೆಲಸಾ ಮಾಡ್ರೀ ಅಣ್ಣಾರ,' ಅಂತ ಹೇಳಿ ಮತ್ತ ಬ್ರೇಕ್ ತೊಗೊಂಡ ದ್ಯಾಮ್ಯಾನ ಅಪ್ಪ ಗೌಂಡಿ ಶಂಕರಪ್ಪ. ಕಟಿಂಗ್ ಕಾಳಿಂಗ ಫುಲ್ ಹೈರಾಣ ಆಗಿ, 'ಹೇಳ್ರೀ, ಲಗೂ ಹೇಳ್ರೀ,' ಅಂತ ಅಂಬೋ ಅಂದಾನ.

'ನನಗ ಕಟಿಂಗ್ ಮಾಡ್ರೀ. ಮತ್ತ ನಮ್ಮ ಹುಡುಗಗ ಶೇವಿಂಗ್ ಮಾಡಿ ಬಿಡ್ರೀ!' ಅಂತ ಹೇಳಿ ಕಣ್ಣು ಮುಚ್ಚಿಬಿಟ್ಟ ಗೌಂಡಿ ಶಂಕರಪ್ಪ. ನಮ್ಮ ಕಡೆ ಹಾಂಗೆ. ಕಟಿಂಗ್ ಮಾಡಿಸೋವಾಗ ಕಣ್ಣು ಮುಚ್ಚಿಬಿಡೋದು. tension ಕಮ್ಮಿ ಆಗ್ತದ. ಇಲ್ಲಂದ್ರ ಆ ಹಜಾಮರ ತರತರಹದ ಆಯುಧ ಅಂದ್ರ ಕತ್ರಿ, ಕತ್ತಿ, ಲಾನ್ ಮೂವರ್ ನಂತಹ ಮಶೀನ್ ನೋಡಿ ಭಾಳ tension ಆಗಿಬಿಡ್ತದ.

ಅದನ್ನು ಕೇಳಿದ ಕಟಿಂಗ್ ಕಾಳಿಂಗ ಫುಲ್ ಘಾಬರಿಯಾಗಿಬಿಟ್ಟ. 'ಏನ್ ಮನುಷ್ಯಾ ಅದಾನಪಾ ಇವಾ? ತನಗ ಕಟಿಂಗ್ ಮಾಡು, ಬಾಜೂ ಕುಂತ, ಇನ್ನೂ ಗಡ್ಡ ಸಹಿತ ಮೂಡದ ಸಣ್ಣ ಹುಡುಗಗ ಶೇವಿಂಗ್ ಮಾಡು ಅನ್ನಾಕತ್ತಾನ. ಏನಾಗೈತಿ ಇವಂಗ?' ಅಂತ ಹೇಳಿ ತಲಿ ಕೆಡಿಸಿಕೊಂಡು, ಫುಲ್ ಹೈರಾಣ ಆದ.

'ಸಾವಕಾರ್ರ, ಏನು ಹೇಳಾಕತ್ತೀರೀ? ನಿಮಗ ಕಟಿಂಗು!? ನಿಮ್ಮ ಹುಡುಗಗ ಶೇವಿಂಗಾ!? ಹ್ಯಾಂ?! ' ಅಂತ ದೊಡ್ಡ ಉದ್ಗಾರ ಮಾಡಿದ.

'ಹೌದ್ರೀ, ನನಗ ಕಟಿಂಗ್ ಮಾಡ್ರೀ ಅಣ್ಣಾರ. ನಮ್ಮ ಹುಡುಗಗ ಶೇವಿಂಗ್ ಅಂದ್ರ ಅವನ ತಲಿ ಶೇವಿಂಗ್ ಮಾಡಿ ಬಿಡ್ರೀ ಅಂತ. ಕಟಿಂಗ್ ಕಿಂತ ಎರಡು ರುಪಾಯಿ ಸೋವಿ (ಕಡಿಮೆ) ಆಕ್ಕೈತಿ ನೋಡ್ರೀ!' ಅಂತ ಹೇಳಿದ ಗೌಂಡಿ ಶಂಕರಪ್ಪ ಗಪ್ ಆಗಿಬಿಟ್ಟ.

'ರೀ! ಸಾವಕಾರ್ರ! ಏನ್ರೀ ನೀವು ಹೇಳೋದು!? ಶೇವಿಂಗ್ ಅಂದ್ರ ದಾಡಿ ಮಾಡೋದು ಅಂತ. ತಲಿ ಬೋಳಿಸೋದು ಅಲ್ಲರೀ,' ಅಂತ ಏನೋ ವಿವರಣೆ ಕೊಡಲಿಕ್ಕೆ ಹೋದ ಕಟಿಂಗ್ ಕಾಳಿಂಗ.

ಮುಚ್ಚಿದ್ದ ಕಣ್ಣು ಸಾವಕಾಶ ಬಿಟ್ಟ ಗೌಂಡಿ ಶಂಕರಪ್ಪ. ಶಿವ ಮೂರನೇ ಕಣ್ಣು ಬಿಟ್ಟಂಗ! ಹಿಂದಿನ ರಾತ್ರಿಯ ಎರಡು ಬಾಟಲಿ ಎಣ್ಣೆಯಿಂದ ಫುಲ್ ಕೆಂಪಗಾಗಿದ್ದವು ಕಣ್ಣು. ದಿಟ್ಟಿಸಿ ನೋಡಿದ ಅಬ್ಬರಕ್ಕೆ ಫುಲ್ ಥಂಡಾ ಹೊಡೆದ ಕಟಿಂಗ್ ಕಾಳಿಂಗ.

'ಶೇವಿಂಗ್ ಅಂದ್ರ ಬೋಳಿಸೋದು ಅಂತ ಅರ್ಥ. ನೀವು ಶೇವಿಂಗ್ ಅಂದ್ರ ಗಡ್ಡ ಮಾತ್ರ ಬೋಳಿಸೋದು, ತಲಿ ಅಲ್ಲ ಅಂತ ಮೊದಲೇ ಹೇಳಬೇಕಾಗಿತ್ತು. ನೀವು ಹೇಳಲೇ ಇಲ್ಲ. ಈಗ ನಮ್ಮ ಹುಡುಗನ ತಲಿ ಶೇವಿಂಗ್ ಮಾಡ್ರೀ ಅಂದ ಮ್ಯಾಲೆ ಹೊಸ ಹೊಸ ಕರಾರು ಹಾಕಲಿಕತ್ತೀರಿ. ಇದು ಸರಿ ಏನ್ರೀ? ನ್ಯಾಯ ಏನ್ರೀ? ಏ ಹೋಗ್ರೀ. ಸುಮ್ಮ ಜಾಸ್ತಿ ಮಾತಾಡದೇ ನನಗ ಕಟಿಂಗ್,  ನಮ್ಮ ಹುಡುಗಗ ತಲಿ ಶೇವಿಂಗ್ ಮಾಡಿ ಮುಗಿಸಿಬಿಡ್ರೀ. ನಮಗ ಬ್ಯಾರೆ ಕೆಲಸ ಅದಾವ. ನಿಮಗೂ ಅಷ್ಟೇ. ಎಷ್ಟು ಮಂದಿ ಗಿರಾಕಿ ಬಂದು ಕಾಯಾಕತ್ತಾರು ನೋಡ್ರೀ!' ಅಂತ ಹೇಳಿದ ಗೌಂಡಿ ಶಂಕರಪ್ಪ, ಮತ್ತ ಕಣ್ಣು ಮುಚ್ಚಿ ಕೂತು ಬಿಟ್ಟ.

ಬರೋಬ್ಬರಿ ಇಟ್ಟುಬಿಟ್ಟಿದ್ದ ಗೌಂಡಿ ಶಂಕರಪ್ಪ. ಭಾರಿ ಲಾಜಿಕಲ್ ಪಾಯಿಂಟ್ ಇಟ್ಟುಬಿಟ್ಟಿದ್ದ.

ಕಟಿಂಗ್ ಕಾಳಿಂಗ ಫುಲ್ ಹಾಪ್ ಆಗಿಬಿಟ್ಟ. ಸರ್ರ ಅಂತ ಸಿಟ್ಟೆನೋ ಬಂತು. ಆದ್ರ ಏನು ಮಾಡಲಿಕ್ಕೆ ಬರ್ತದ? ವ್ಯತ್ಯಾಸ ಅಂದ್ರ ಎರಡು ರೂಪಾಯಿ, ಕಟಿಂಗ್ ಮತ್ತ ಶೇವಿಂಗ್ ನಡುವೆ. ಆ ಎರಡು ರೂಪಾಯಿ ಸಲುವಾಗಿ ಎಲ್ಲಿ ಜಗಳ ಮಾಡಿಕೋತ್ತ ಕೂಡೋದು ಅಂತ ಹೇಳಿ ಸುಮ್ಮನಾದ.

ತಾನು ಗೌಂಡಿ ಶಂಕರಪ್ಪನ ಕಟಿಂಗ್ ಮಾಡಲಿಕ್ಕೆ ಕತ್ತರಿ ಕಚ್!ಕಚ್! ಅಂತ ಆಡಿಸಿ, ಶಸ್ತ್ರಾಭ್ಯಾಸಕ್ಕೆ ರೆಡಿ ಆದ.

ಬಾಜೂಕೇ ನಿಂತಿದ್ದ ಅವನ ಮಗ, ಇನ್ನೂ ಹಜಾಮತಿ ಟ್ರೇನಿಂಗ ಒಳಗ ಇದ್ದ, ಶೇವಿಂಗ್ ಶಂಭುಲಿಂಗನ ಕಡೆ ನೋಡಿ, ಸಣ್ಣ ಹುಡುಗ ದ್ಯಾಮ್ಯಾನ ಶೇವಿಂಗ್, ಅದೂ ತಲಿ ಶೇವಿಂಗ್, ಮಾಡಿ ಬಿಡು ಅಂತ ಹೇಳಿದ.

ಶೇವಿಂಗ್ ಶಂಭುಲಿಂಗ ಫುಲ್ confuse ಆಗಿ ಹ್ಯಾಂ????? ಅಂದ.

'ಬೋಳಿಸೋ ನಿಮ್ಮಾಪನಾ. ಆ ಹುಡುಗನ ತಲಿ ಸ್ವಚ್ಚ ಬೋಳಿಸಿಬಿಡು. ಮೊನ್ನೆ ವನವಾಸಿ ರಾಮದೇವರ ಗುಡಿಯಾಗ ಆದ ಸಾಮೂಹಿಕ ಮುಂಜುವಿಯೊಳಗ ಎಷ್ಟು ಮಂದಿ ವಟುಗಳ ತಲಿ ಬೋಳಿಸಿ ಬಂದವಗ ಇದೇನು ಬ್ಯಾರೆ ಹೇಳಬೇಕೇನು? ಹಾಂ?' ಅಂತ ಕಟಿಂಗ್ ಕಾಳಿಂಗ ಸಣ್ಣ ಆವಾಜ್ ಹಾಕಿದ.

ಜೂನಿಯರ್ ಬಾರ್ಬರ್ ಶೇವಿಂಗ್ ಶಂಭುಲಿಂಗಗ ಭಾಳ ಆಶ್ಚರ್ಯ ಆತು. confuse ಆತು. ಕೈಯ್ಯಾಗಿನ ಕತ್ತಿಯನ್ನು ತೂಗು ಹಾಕಿದ್ದ ಚರ್ಮದ ಪಟ್ಟಾ ಮ್ಯಾಲೆ ಪರಾ ಪರಾ ಅಂತ ಎಳೆದು ಮತ್ತ ಮತ್ತ ಚೂಪು ಮಾಡಿಕೊಳ್ಳೋದನ್ನ, ಬೋಳಿಸೋಕಿಂತ ಮೊದಲು ತಲಿಗೆ ನೀರು ಗೊಜ್ಜೋದನನ್ನ ಮರೆತು ಬಿಟ್ಟ. ಬಡ್ಡ ಕತ್ತಿನೇ ದ್ಯಾಮ್ಯಾನ ಒಣ ತಲಿಗೆ ಹಚ್ಚೇಬಿಟ್ಟ. ಕರ್ರss! ಅಂತ ಕ್ರಿಕೆಟ್ ಪಿಚ್ ತರಹದ ಒಂದು ಪಟ್ಟಿ ತಲಿ ಮ್ಯಾಲೆ ಎಳದೇಬಿಟ್ಟ. ಚುರ್ರ! ಅಂತ ನೋವಾತು ದ್ಯಾಮ್ಯಾಗ. ಅಲ್ಲಿ ತನಕ ಆಗುತ್ತಿದ್ದ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಟೀವಿ ಮ್ಯಾಲೆ ಬರುತ್ತಿದ್ದ 'ಮಹಾಭಾರತ' ಸೀರಿಯಲ್ ನೋಡುತ್ತ ಕೂತಿದ್ದ ದ್ಯಾಮ್ಯಾ ತಲಿ ಚುರ್ರ್ ಅಂದ ಕೂಡಲೇ, ನೋವಿಂದ ಪ್ಯಾಂ ಅಂದು, ಅತ್ಲಾಗ ಇತ್ಲಾಗ ತಲಿ ಶೇಕ್ ಮಾಡಿದರೆ, ಶೇವಿಂಗ್ ಶಂಭುಲಿಂಗ ಹುಂಬರ ಗತೆ ಸಣ್ಣ ಹುಡುಗನ ಕುತ್ತಿಗಿ ಒತ್ತಿ ಹಿಡದು, 'ಸುಮ್ಮ ಕುಂದ್ರಲೇ' ಅಂತ ಜಬರಿಸಿ, ತಲಿ ಶೇವಿಂಗ್ ಮುಂದುವರೆಸಿದ. ದ್ಯಾಮ್ಯಾಗ ಏನಾಗ್ಲಿಕತ್ತದ ಅಂತ ಅರ್ಥ ಆಗೋದ್ರಾಗ ಅರ್ಧ ತಲಿ ಬೋಳಂ ಆಗಿ, oppose ಮಾಡಲಿಕ್ಕೆ ಏನೂ ಉಳಿಯದೇ, 'ಬೋಳಂ ಶರಣಂ ಗಚ್ಚಾಮಿ, ತಲಿಗೆ ಟೊಪಿಗಿ ಹಾಕಾಮಿ,' ಅಂತ ಹೇಳಿ, ಕಣ್ಣ ಮ್ಯಾಲೆ ಬಂದು ಬಿದ್ದ ಬೋಳಿಸಿದ ಕೂದಲ ಕೊಡವಿಕೊಂಡು, 'ಸ್ವಾಮಿಯೇ ಶರಣಂ ಶೇವಿಂಗ್ ಶಂಭುಲಿಂಗಪ್ಪ', ಅಂತ ಕೂತುಬಿಟ್ಟ. When clean shaving is inevitable, enjoy it rather than resisting it!

ಪಾಪ ದ್ಯಾಮ್ಯಾ!

ಸ್ವಲ್ಪ ಹೊತ್ತಾದ ಮೇಲೆ ಗೌಂಡಿ ಶಂಕರಪ್ಪನ ಕಟಿಂಗು, ಮಗ ದ್ಯಾಮ್ಯಾನ ಶೇವಿಂಗ್ ಎರಡೂ ಮುಗಿತು. ಕಟಿಂಗಿಗೆ ಎಂಟು, ಶೇವಿಂಗಿಗೆ ಆರು ರೂಪಾಯಿ ಕೊಟ್ಟು ಎದ್ದು ಬಂದಾರಾತು ಅಂತ ತಯಾರಾದ ಗೌಂಡಿ ಶಂಕರಪ್ಪ. ಇಪ್ಪತ್ತು ರೂಪಾಯಿಯ ನೋಟು ಕೊಟ್ಟ ಶಂಕರಪ್ಪ. ಲಾಸ್ಟ್ ಒಂದು ಬಾರಿ ಟ್ರೈ ಮಾಡಿ ನೋಡೋಣ ಅಂತ ಕಟಿಂಗ್ ಕಾಳಿಂಗ ವಾಪಸ್ ಇಬ್ಬರಿಗೂ ಕಟಿಂಗ್ ರೇಟನ್ನೇ (Rs . ೮) ಚಾರ್ಜ್ ಮಾಡಿ ಬರೇ ನಾಲ್ಕೇ ರೂಪಾಯಿ ತಿರುಗಿ ಕೊಡಲಿಕ್ಕೆ ನೋಡಿದ. ಗೌಂಡಿ ಶಂಕರಪ್ಪ ಮತ್ತೊಮ್ಮೆ ದೊಡ್ಡ ಕೆಂಗಣ್ಣು ಬಿಟ್ಟ. ಕಟಿಂಗ್ ಕಾಳಿಂಗ ದೂಸರಾ ಮಾತಾಡದೇ ಮತ್ತೂ ಎರಡು ರೂಪಾಯಿ ಕೊಟ್ಟು ಕೈಮುಗಿದ. 'ಮತ್ತ ಬರ್ತೇವ್ರೀ ಅಣ್ಣಾರ,' ಅಂತ ಹೇಳಿದ ಗೌಂಡಿ ಶಂಕರಪ್ಪ, ಮಗನ ನುಣ್ಣನೆ ತಲೆ ಮ್ಯಾಲೆ ಕೈಯಾಡಿಸಿ, 'ಮಸ್ತ ಆಗೈತಲ್ಲಲೇ ದ್ಯಾಮಣ್ಣ. ಇನ್ನ ಆರು ತಿಂಗಳು ನಿನಗ ಕಟಿಂಗ್ ಬ್ಯಾಡ ನೋಡಲೇ,' ಅಂತ ಹೇಳಿದ. ಮನಸ್ಸಿನ್ಯಾಗೇ ಅಂದುಕೊಂಡ, 'ರೊಕ್ಕ ಉಳಿತು ತೊಗೋ,' ಅಂತ ಹೇಳಿ ಮಗನ್ನ ಕರಕೊಂಡು ಹೊಂಟ. ರೊಕ್ಕ ಉಳಿಸಿದ ಖುಷಿಯೊಳಗ ಬೀಡಿ ಬದಲಿ ಸಿಗರೇಟ್ ತೊಗೊಂಡ. ಅಪ್ಪನ ರೊಕ್ಕ ಉಳಿಸಲಿಕ್ಕೆ ತನ್ನ ಮುಡಿಯನ್ನೇ ಬಲಿ ಕೊಟ್ಟ ಮಗನಿಗೆ ಭಟ್ಟನ ಅಂಗಡಿಯಾಗ ಒಂದು 'ಕಂಬರಘಟ್ಟ' ಅನ್ನೋ ಖತರ್ನಾಕ ತಿಂಡಿ ಕೊಡಸಿದ. ದ್ಯಾಮ್ಯಾ ಎಂಜಾಯ್ ಮಾಡಿದ. ಕಂಬರಘಟ್ಟ ಎಂಜಾಯ್ ಮಾಡುತ್ತ, ರಫ್ ರಫ್ ಆದ ತಲಿ ಮ್ಯಾಲೆ ಕೈಯಾಡಿಸಿ, ಕಚಗುಳಿ ಇಟ್ಟ ಫೀಲಿಂಗ್ ಭಾಳ ಸೇರಿ, ಮನಿ ಮುಟ್ಟೋ ತನಕಾ ತಲಿ ಮ್ಯಾಲೆ ಕೈಯಾಡಿಸಿ ಕೈಯಾಡಿಸಿ ಕೈ ರಫ್ ಆಗಿಹೋತು. ನೀರಿಲ್ಲದೆ ಬಡ್ಡ ಕತ್ಯಾಗ ತಲಿ ಬೋಳಿಸಿದ ಅಂದ್ರ ಮತ್ತೇನು?

ಕಟಿಂಗ್ ಕಾಳಿಂಗ ಮಾತ್ರ ದೊಡ್ಡ ಪಾಠ ಕಲಿತುಬಿಟ್ಟ. ಮುಂದೆ ಅವ ಎಂದೂ ಜನರಲ್ ಆಗಿ, 'ಕಟಿಂಗ್ ಎಂಟು ರುಪಾಯಿ, ಶೇವಿಂಗ್ ಆರು ರೂಪಾಯಿ,' ಅಂತ ಹೇಳಲೇ ಇಲ್ಲ. ಪೂರ್ತಿಯಾಗಿ, 'ತಲಿ ಕೂದಲ ಕಟಿಂಗ್ ಎಂಟು ರೂಪಾಯಿ, ದಾಡಿ ಶೇವಿಂಗ್ ಆರು ರೂಪಾಯಿ' ಅಂತ ಹೇಳಲಿಕ್ಕೆ ಶುರು ಮಾಡಿದ.

ಮಾಳಮಡ್ಡಿ ಕಿಡಿಗೇಡಿ ಮಂದಿ ಮಾತ್ರ, 'ತಲಿ ಕೂದಲದ ಕಟಿಂಗ್ ಅಲ್ಲದೇ ಬ್ಯಾರೆ ಯಾವ್ಯಾವ ಕೂದಲದ ಕಟಿಂಗ್ ಮಾಡ್ತಾನಲೇ ಇವಾ? ದಾಡಿ ಬೋಳಿಸದೇ ಮತ್ತ ಎಲ್ಲೆಲ್ಲೆ ಬೋಳಿಸೋ ದಂಧಾ ಶುರು ಮಾಡ್ಯಾನ ಇವಾ?' ಅಂತ ಶುದ್ಧ ತಲೆ ಹರಟೆ ಮಾತಾಡಿಕೊಂಡರು.

* ಹಜಾಮತಿಗೆ ಸಂಬಂಧಿಸಿದ ಹಳೆ ಬ್ಲಾಗ್ ಪೋಸ್ಟಗಳು:

 - ಬಗಲೆತ್ತಿದ ಭಗವಂತ, ಬೆಚ್ಚಿಬಿದ್ದ ಬಾರ್ಬರಿಣಿ

- 'ಮುದಕ'ರಿ ನಾಯಕರು ಮಲ್ಲಿಕಾರ್ಜುನ unisex ಬ್ಯೂಟಿ ಪಾರ್ಲರ್ ಗೆ ಹೋದಾಗ!

- ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ!!

6 comments:

Kiliga Hadapad said...


Good deal - saving on shaving!

N'dnade Yd'bdange said...


Came back here after a gap. Hilarious!

Satya Poojari said...


It's recommended to take a dip in the
"Kaalingana gundi" after this.

Hetal Mukul Chodasama said...


Too phunny!!

Sabyasachi Biswadeep Chottopadhyay said...


Ha! Ha!!

Steve B said...


Excellent offer for B&B!