೧೯೯೦. ಮೇ, ಜೂನ್ ತಿಂಗಳ ಒಂದು ದಿವಸ. ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜ್. ಭೌತಶಾಸ್ತ್ರ ವಿಭಾಗ.
'ಏ ಇವನೇ! ಮೆತ್ತಗಿಂದು ತೊಗೊಂಡು ಬಾರss ಮತ್ತ. ಒಳ್ಳೆ ಮೆತ್ತಗಿಂದು ಇರಬೇಕು. ಹಾಕ್ಕೊಂಡು ಕುಂತ್ರ ಮಸ್ತ ಅನ್ನಿಸಬೇಕು,' ಅಂತ ಒಬ್ಬ ದೊಡ್ಡ ಮಾಸ್ತರ್ರು ತಮ್ಮ ವಿಭಾಗದ ಚಪರಾಸಿಯೊಬ್ಬನಿಗೆ ಹೇಳುತ್ತಿದ್ದರು. ಅವರು ಆ ವಿಭಾಗದ ಮುಖ್ಯಸ್ಥರು (HoD). ಅಂತವರು ಒಬ್ಬ ಚಪರಾಸಿ (peon) ಮನುಷ್ಯನೊಂದಿಗೆ ಅಷ್ಟು ಆತ್ಮೀಯತೆಯಿಂದ, ತಮ್ಮ ಮನೆಯವನೋ ಎಂಬಂತೆ ಸಲಿಗೆಯಿಂದ ಮಾತಾಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದೆ. ತಮ್ಮ ಜೊತೆ ಕೆಲಸ ಮಾಡುವ ಎಲ್ಲರನ್ನೂ, ಅವರ ಸ್ಥಾನ ದೊಡ್ದದು ಚಿಕ್ಕದು ಅಂತ ಭೇದಭಾವ ಮಾಡದೇ, ಒಳ್ಳೆ ರೀತಿಯಿಂದ ನೋಡಿಕೊಳ್ಳಬೇಕು ಅನ್ನುವ ಮ್ಯಾನೇಜ್ಮೆಂಟ್ ಪಾಠ ಆವತ್ತು ನನ್ನ ಮುಂದೆಯೇ ಆಗುತ್ತಿತ್ತು. ಆವತ್ತು ಆದರ ಮಹತ್ವ ತಿಳಿಯಿತೇ? ಗೊತ್ತಿಲ್ಲ. ಇವತ್ತು ಬರೋಬ್ಬರಿ ತಿಳಿದಿದೆ. ಅದನ್ನು ಕಾಯಾ, ವಾಚಾ, ಮನಸಾ ಆಚರಿಸಿ ತೋರಿಸಿದ ಮಹನೀಯರು ನೆನಪಾಗಿದ್ದಾರೆ. 'ಶರಣರ ಗುಣ ಮರಣದಲ್ಲಿ ಕಾಣು' ಅನ್ನುವಂತೆ ಧಾರವಾಡದ ದೊಡ್ಡ ಶರಣರೊಬ್ಬರ ನೆನಪು ಅವರ ಮರಣದಲ್ಲಿ ಜರೂರ್ ಆಗುತ್ತಿದೆ.
ಆವತ್ತು ಅಷ್ಟು ಆತ್ಮೀಯತೆಯಿಂದ, ಕಾಳಜಿಯಿಂದ, ತಮ್ಮ ಚಪ್ರಾಸಿಗೆ ತಮ್ಮ HoD ಖುರ್ಚಿಗೆ ಒಂದು ಮೆತ್ತನೆ ದಿಂಬು ತಂದು ಕೊಡು ಅಂತ ಕೇಳುತ್ತಿದ್ದವರು ಪ್ರೊ. ಭೂಸನೂರಮಠ. ಮೊನ್ನೆ ಮಾತ್ರ ಅಗಲಿದ್ದಾರೆ. ತುಂಬ ನೆನಪಿಗೆ ಬರುತ್ತಿದ್ದಾರೆ.
ಆರ್ಸೀರೇಮಠರು, ಆರ್ಸೀರೇಮಠರು ಅಂತ ಅಂದಿನ ಕವಿವಿ ಕುಲಪತಿ ದಿವಂಗತ ಆರ್. ಸೀ. ಹಿರೇಮಠ ಅವರ ನಂತರ ಯಾರಾದರೂ ಮಠರ ಹೆಸರು ಕೇಳಿದ್ದರೆ ಅದೂ ಭೂಸನೂರಮಠರೇ! ಯಾಕೆಂದರೆ ಅವರು ಕೆಸಿಡಿಯಲ್ಲಿ ತಂದೆಯವರ ಸಹೋದ್ಯೋಗಿ.
ಭೂಸನೂರುಮಠರ ಹೆಸರು ಇಷ್ಟೊಂದು ಕೇಳಿದ್ದೆ ಆದರೆ ಆವರನ್ನು ಖುದ್ದಾಗಿ ನೋಡಲಿಕ್ಕೆ ಹದಿನಾರು ವರ್ಷ ಅಂದರೆ ಪಿಯೂಸಿ ಮೊದಲನೇ ವರ್ಷದ ತನಕ ಕಾಯಬೇಕಾಯಿತು. ಮಾತಾಡಿಸಲು, ಅವರ ಸಲಹೆ, ಸೂಚನೆ, ಸಹಾಯ ಕೇಳಲು? ಇನ್ನೂ ಎರಡು ವರ್ಷ ಅಂದರೆ ಪಿಯೂಸಿ ಮುಗಿಯಬೇಕಾಯಿತು.
ಭೂಸನೂರಮಠ ತಂದೆಯವರ ಸಹೋದ್ಯೋಗಿಯಾಗಿದ್ದರು. ಕುಟುಂಬಗಳ ಮಧ್ಯೆ ಆತ್ಮೀಯತೆಯಿತ್ತು. ಅವರ ಇಬ್ಬರು ಪುತ್ರರು ನಮ್ಮ ಅಣ್ಣನಿಗೂ ಹಿರಿಯರಾಗಿದ್ದು ಅವನ ಒಳ್ಳೆ ಸ್ನೇಹಿತರಾಗಿದ್ದರು. ತರಂಗದಲ್ಲಿ, ಸುಧಾದಲ್ಲಿ ಬರುತ್ತಿದ್ದ ಅವರ ವೈಜ್ಞಾನಿಕ ಸಾಹಿತ್ಯ ಕಣ್ಣಿಗೆ ಬೀಳುತ್ತಿತ್ತು. ಆದರೆ ಆವಾಗ ನಮಗೆ ವಿಜ್ಞಾನ, ಸಾಹಿತ್ಯ ಎರಡೂ ತಿಳಿಯುತ್ತಿರಲಿಲ್ಲ. ಇವರು ಬರೆದ sci-fi ಅರ್ಥವಾಗದೇ, ನಮಗೆ ಅರ್ಥವಾದ ಪತ್ತೇದಾರಿ ಕಾದಂಬರಿಗಳಿಗೇ ಮರಳುತ್ತಿದ್ದೆವು. ಹಿರಿಯರು ಆಗಾಗ ಎಚ್ಚರಿಸುತ್ತಿದರು, 'ಭಾಳ ಪತ್ತೇದಾರಿ ಓದಿದರೆ ಕತ್ತೇದಾರ ಆಗ್ತಿ ನೋಡು. ಭಾಳ mystery ಪುಸ್ತಕ ಓದಿದರೆ ಮೇಸ್ತ್ರೀ ಆಗಿಹೊಗ್ತೀ ನೋಡು!' ಅನ್ನುವ ಎಚ್ಚರಿಕೆಗಳನ್ನು ಧಿಕ್ಕರಿಸಿ, ಅವನ್ನೇ ಓದಿ ಓದಿ, ಈಗ software ಮೇಸ್ತ್ರಿ (project manager) ಆಗಿ ಕೂತಿದ್ದೇವೆ. ಅದೆಲ್ಲ ಇರಲಿ. ಅಂದು ರಾಭೂ (ರಾಜಶೇಖರ ಭೂಸನೂರಮಠ) ಅವರ ವೈಜ್ಞಾನಿಕ ಕಥೆ ಓದಲಿಲ್ಲ. ಮುಂದೆ ಓದೋಣ. ತಾವು ಹೋದರೂ ತಮ್ಮ ಸಾಹಿತ್ಯ ಬಿಟ್ಟು ಹೋಗಿದ್ದಾರೆ ರಾಭೂ.
೧೯೯೦ ರ ಮೇ, ಜೂನ್ ವೇಳೆಯಲ್ಲಿ ರಾಭೂ ಅವರನ್ನು ಭೆಟ್ಟಿಮಾಡುವ ಸಂದರ್ಭ ಬರುತ್ತಲೇ ಇರಲಿಲ್ಲವೇನೋ. But, thanks to BITS, Pilani. ಪಿಯೂಸಿ ನಂತರ, ಪ್ರೀತಿಯ ಅಣ್ಣ ಹೇಳಿದ ಅಂತ ಕೊನೇ ಕ್ಷಣದಲ್ಲಿ ಅರ್ಜಿ ಹಾಕಿದ್ದೆ. ಹಾಕಿದ್ದು ಒಂದೇ ವಿಷಯಕ್ಕೆ. ಕಂಪ್ಯೂಟರ್ ಸೈನ್ಸ್. ಇಂಜಿನಿಯರಿಂಗ್ ಮಾಡಿದರೆ ಅದರಲ್ಲೇ ಮಾಡಬೇಕು. ಯಾಕೆ, ಏನು ಗೊತ್ತಿಲ್ಲ. ಅಣ್ಣ ಅದರಲ್ಲೇ ಮಾಡಿದ್ದಾನೆ. ಆ ಕಾರಣ ಸಾಕು. ಅದೇನು ನಮ್ಮ ನಸೀಬವೋ ಗೊತ್ತಿಲ್ಲ. ಅಲ್ಲಿ ಪ್ರವೇಶ ಸಿಕ್ಕೇ ಬಿಡಬೇಕೇ! ಪಿಯೂಸಿ ಮಾರ್ಕ್ಸ್ ಅಷ್ಟಕಷ್ಟು ಛೊಲೋ ಇತ್ತು ಅನ್ನಿ. ಒಂದೇ ಮಾರ್ಕಿನಿಂದ ಹತ್ತನೇ ರಾಂಕ್ ಮಿಸ್. ಪಿಲಾನಿಯಲ್ಲಿ ಪ್ರವೇಶ ಸಿಕ್ಕ ನಂತರ ಹೋಗಲೋ ಬೇಡವೋ ಅಂತ ದ್ವಂದ್ವ ನಮಗೆ ಮತ್ತೆ ತಂದೆತಾಯಿ ಇಬ್ಬರಿಗೂ. 'ಸಿಕ್ಕಿದೆ. ಅಲ್ಲೇ ಹೋಗು. Don't think otherwise,' ಅಂತ ಸಿಕ್ಕಾಪಟ್ಟೆ ಪ್ರೋತ್ಸಾಹ, ಉತ್ತೇಜನ ನೀಡಿದವರು ಒಬ್ಬ ನಮ್ಮ ಅಣ್ಣ, ಇನ್ನೊಬ್ಬರು ಕೆಸಿಡಿಯ ಮಾಜಿ ಪ್ರೊಫೆಸರ್ ಕೆಮಿಸ್ಟ್ರಿ ವಿಭಾಗದ ದಿವಂಗತ ಡಾ. ಜಮಖಂಡಿ. ಇನ್ನೂ ಕೆಲವು ಸಹೃದಯಿಗಳೂ, well wishers ಎಲ್ಲ ಸಕತ್ತಾಗಿ ಪಂಪ್ ಹೊಡೆದರು ಅಂತ ಹೇಳಿ ಪಿಲಾನಿಗೇ ಹೋಗಿ ಸೇರೋಣ ಅಂತ ನಿರ್ಧಾರ ಮಾಡಿದ್ದಾಯಿತು. ಆವಾಗ ನೆನಪಾದವರೇ ಇದೇ ಪ್ರೊ. ಭೂಸನೂರಮಠ. ಯಾಕೆಂದರೆ ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಎಲ್ಲ BITS, Pilani ಯಿಂದಲೇ ಡಿಗ್ರಿ ಮಾಡಿದ್ದರು. ಅದು ಗೊತ್ತಿತ್ತು. ಅದು ಬಿಟ್ಟರೆ ಮತ್ತೊಬ್ಬ ಕೆಸಿಡಿ ಪ್ರೊಫೆಸರ್ ಪ್ರೊ. ಏ. ಜಿ. ಹಿರೇಮಠ ಅವರ ಮಕ್ಕಳು ಸಹ ಅಲ್ಲಿ ಓದಿದ್ದರು ಅಂತ ನೆನಪು. ಆದರೆ ಮಾಹಿತಿ ತೆಗೆಯಲು ನಾವು ಆರಿಸಿಕೊಂಡಿದ್ದು ಪ್ರೊ. ಭೂಸನೂರಮಠ ಅವರನ್ನು. ಪ್ರೊ. ಏ. ಜಿ. ಹಿರೇಮಠ ಸಹಿತ ಒಳ್ಳೆ ಪರಿಚಯದವರೇ. ಅವರ ಮಾವ ಪ್ರೊ. ಪರಮಶಿವಯ್ಯ ನಮ್ಮ ತಂದೆಯವರಿಗೆ ಪರಮ ಗುರುಗಳು. ಪ್ರೊ. ಪರಮಶಿವಯ್ಯ ಅವರನ್ನು, ಅವರ ಸಹಾಯವನ್ನು ನೆನಪಿಸಿಕೊಂಡೇ ಇಂದಿಗೂ ಸಂಜೆಯ ದೀಪ ಹಚ್ಚುತ್ತಾರೆ ನಮ್ಮ ತಂದೆಯವರು. ಆದರೂ ಭೂಸನೂರಮಠರನ್ನೇ ಆಶ್ರಯಿಸಿದೆ.
ಇದೇ ನಿಮಿತ್ತ, ಒಂದು ದಿವಸ ತಂದೆಯವರೊಡನೆ ಕೆಸಿಡಿ ಭೌತಶಾಸ್ತ್ರ ವಿಭಾಗದಲ್ಲಿ ರಾಭೂ ಅವರನ್ನು ಕಂಡೆ. ಪಿಯೂಸಿಗೆ ಬಂದಾಗ ಅವರನ್ನು ನೋಡಿದ್ದೆ. ಆದರೆ ಮಾತಾಡಿಸಿರಲಿಲ್ಲ. ಅವರು ನಮಗೆ ಕಲಿಸಿರಲೂ ಇಲ್ಲ. ಮತ್ತೆ ನಾವು ಪಿಯೂಸಿಯಲ್ಲಿ ಪೂರ್ತಿಯಾಗಿ ನೆಚ್ಚಿಕೊಂಡಿದ್ದು 'ಗಣಿತ ಲೋಕ'ದ ದಿವಂಗತ ಪ್ರೊ. ಶ್ರೀನಿವಾಸ ದೇಶಪಾಂಡೆ ಅವರನ್ನು. ಹಾಗಾಗಿ ಪಿಯೂಸಿಯಲ್ಲಿ ಕ್ಲಾಸಿಗೆ ಹೋಗಿದ್ದು, ಕೂತಿದ್ದು ಎಲ್ಲ ಭಾಳ ಕಮ್ಮಿ. ಗತಿಯಿಲ್ಲ ಅಂತ ಪ್ರಾಕ್ಟಿಕಲ್ ಒಂದಕ್ಕೆ ಹೋಗಿ ಬಂದರೆ ಅದೇ ದೊಡ್ಡದು. 'ಮತ್ತೆ ಸಹೋದ್ಯೋಗಿಯ ಮಗ. ಕ್ಲಾಸಿಗೆ ಬರದಿದ್ದರೂ ಮನೆಯಲ್ಲಿ ಕೂತು ಓದುತ್ತಾನೆ(!),' ಅಂತ ಅರ್ಥಮಾಡಿಕೊಂಡಿದ್ದ ತಂದೆಯವರ ಅನೇಕ ಸಹೋದ್ಯೋಗಿಗಳು ನಮಗೆ 'ಬಾರಾ ಖೂನ್ ಮಾಫ್' ಅನ್ನುವಂತೆ ಎಲ್ಲ ರಿಯಾಯಿತಿ ಕೊಟ್ಟಿದ್ದರು. Except Statistics ಶೆಟ್ಟಿ ಮೇಡಂ ಮತ್ತು ಆರ್ಗಾನಿಕ್ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದ ಡಾ. ಕಟ್ಟಿ. ಅದರ ಬಗ್ಗೆಲ್ಲ ಮತ್ತೆ ಬರೆಯೋಣ ಬಿಡಿ. ಹೀಗೆಲ್ಲ ಇರುವಾಗ ರಾಭೂ ಸರ್ ನಮಗೆ ಕಲಿಸಿದ್ದರೂ ಎಷ್ಟು ಪರಿಚಯವಾಗುತ್ತಿದ್ದರೋ ಏನೋ ಗೊತ್ತಿಲ್ಲ.
ತಂದೆಯವರೊಂದಿಗೆ ಹೋಗಿ ರಾಭೂ ಅವರನ್ನು ಕಂಡೆ. ಸಹೋದ್ಯೋಗಿಯೊಂದಿಗೆ ತಂದೆಯವರೇ ಮಾತಾಡಿದರು. ನಾನು ಒಂದು ನಮಸ್ಕಾರವೋ, ಹಾಪ್ ನಮಸ್ಕಾರವೋ ಹೊಡೆದುಕೊಂಡು, ಅಪರೂಪಕ್ಕೆ ಭಕ್ತ ಪ್ರಹಲ್ಲಾದನ ಹಾಗೆ ನಿಂತಿದ್ದೆ. ಆಕಾಲದಲ್ಲಿ ನಾನು ಕೀಚಕನಂತೆ ಲುಕ್ ಕೊಡುತ್ತ ನಿಂತಿದ್ದೇ ಜಾಸ್ತಿ ಅಂತ ಗೆಳೆಯರ, ಗೆಳತಿಯರ ಇಂದಿನ ಕುಚೋದ್ಯ.
ರಾಭೂ ಒಳ್ಳೆ ರೀತಿಯಲ್ಲಿ ಮಾತಾಡಿದರು. ತಮ್ಮ ಪುತ್ರರಿಬ್ಬರ ಬಿಟ್ಸ್, ಪಿಲಾನಿ ದಿನಗಳ ಬಗ್ಗೆ ಸುದ್ದಿ ಹೇಳಿದರು. ತಮ್ಮ ಎರಡನೇ ಸೊಸೆ ಸಹಿತ ಪಿಲಾನಿಯಲ್ಲೇ ಓದಿದ್ದು. ಆಕೆಯ ತಂದೆ ಅಲ್ಲಿಯೇ ಪ್ರೊಫೆಸರ್ ಅಂತೆಲ್ಲ ಹೇಳಿದರು. ಅದೆಲ್ಲ ಗೊತ್ತೇ ಇತ್ತು ಬಿಡಿ. 'ಸರಿ, ಒಮ್ಮೆ ಮನೆಗೆ ಬಂದು ಬಿಡಿ. ಆರಾಮ್ ಕೂತು ಮಾತಾಡೋಣ. ನನ್ನ ಕೈಯಲ್ಲಿ ಎಷ್ಟಾಗತ್ತೋ ಅಷ್ಟಂತೂ ಮಾಡೇ ಮಾಡ್ತೀನಿ. ನಮ್ಮ ಹುಡುಗ,' ಅಂತ ಹೇಳಿ, ಶಭಾಶಿ ಕೊಟ್ಟು, 'ಪಿಲಾನಿಗೇ ಹೋಗಿ ಸೇರು,' ಅಂತ ಹೇಳಿ ಕಳಿಸಿದ್ದರು. ಅವರ ಮನೆಗೆ ಎಂದು, ಯಾವ ಸಮಯಕ್ಕೆ ಹೋಗಬೇಕು ಅಂತ ನಿರ್ಧರಸಿ ವಾಪಸ್ ಬಂದಾಯಿತು.
ರಾಭೂ ತಮ್ಮ ಚಪರಾಸಿಗೆ ಅವರ ಖುರ್ಚಿಗೆ ಯಾವ ತರಹದ ಮೆತ್ತಗಿನ ದಿಂಬು ಸರಿ ಹೊಂದುತ್ತದೆ ಅನ್ನುವದರ ಬಗ್ಗೆ, ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳುವದನ್ನು ಮುಂದುವರೆಸಿದರು. ಆ ಪುಣ್ಯಾತ್ಮ ತಲೆಯಾಡಿಸುತ್ತ, 'ಹೂಂನ್ರೀ ಸರ್ರಾ, ಹೂಂನ್ರೀ ಸರ್ರಾ' ಅಂತ ಅನ್ನುತ್ತ ನಿಂತಿದ್ದ. ಮುಂದೆ ಎಂತಹ ದಿಂಬು ತಂದು ಕೊಟ್ಟನೋ ಏನೋ?
***
ನಿರ್ಧರಿಸಿದ ಸಮಯಕ್ಕೆ ಸರಿಯಾಗಿ ಪ್ರೊ. ಭೂಸನೂರಮಠರ ಮನೆಗೆ ಬಂದೆವು. ನಮ್ಮನ್ನು ನಿರೀಕ್ಷೆ ಮಾಡುತ್ತಿದ್ದ ಸರ್ ಆತ್ಮೀಯವಾಗಿ ಸ್ವಾಗತಿಸಿದರು. ಚಹಾ ಇತ್ಯಾದಿ ಬಂತು. ಸರ್ ಅವರೇ ತಂದು ಕೊಟ್ಟಿದ್ದರಿಂದ ಅವರ ಮನೆಯಲ್ಲಿದ್ದ ಅವರ ಶ್ರೀಮತಿಯವರನ್ನು, ಇತರೆ ಕುಟುಂಬ ವರ್ಗದವರನ್ನು ನಾನು ನೋಡಲಿಲ್ಲ.
ಸರ್ ಸಕತ್ತಾಗಿ ಕಥೆ ಹೇಳಿದರು. ಎರಡು ಪರಿಚಯ ಪತ್ರ ಬರೆದುಕೊಡುವದಾಗಿ ಹೇಳಿದರು. ಒಂದು ಗೊತ್ತಿತ್ತು. ಆವಾಗ ಅಲ್ಲೇ ಪಿಲಾನಿಯಲ್ಲಿ ಮಾಸ್ತರಿಕೆ ಕೆಲಸ ಮಾಡಿಕೊಂಡಿದ್ದ ಅವರ ಸೊಸೆಗೆ. ಎರಡನೇ ಮಗ ಎಲ್ಲೋ ವಿದೇಶಕ್ಕೆ ಹೋಗಿದ್ದ ಅಂತ ನೆನಪು. ಹಾಗಾಗಿ ಸೊಸೆ, ತಂದೆಯ ಮನೆ ಪಿಲಾನಿಗೆ ಬಂದು, ತಾನು ಕಲಿತ ಸಂಸ್ಥೆಯಲ್ಲಿಯೇ ಮಾಸ್ತರಿಕೆ ಮಾಡಿಕೊಂಡಿದ್ದಳು. ಸರಿ ಅವರಿಗೆ ಒಂದು ಪರಿಚಯ ಪತ್ರ. ಇನ್ನೊಂದು ಪರಿಚಯ ಪತ್ರವನ್ನು ಯಾರಿಗೆ ಬರೆದು ಕೊಡುವರಿದ್ದಾರೆ ಸರ್? ಅಂತ ಸಿಕ್ಕಾಪಟ್ಟೆ ಕುತೂಹಲ. ಅವರ ಬೀಗರಿಗೆ ಬರೆದು ಕೊಡುತ್ತಾರೋ ಹೇಗೆ? ಯಾಕೆಂದರೆ ಅವರ ಸೊಸೆ ತಂದೆ, ಪ್ರೊ. ಗೋಪಾಲನ್, ಆಗ ಬಿಟ್ಸ್, ಪಿಲಾನಿಯ ಪ್ರವೇಶ ವಿಭಾಗದ (admissions department) ಮುಖ್ಯಸ್ಥರಾಗಿದ್ದರು. ನಮಗೆ ಬರುತ್ತಿದ್ದ ಪತ್ರಗಳ ಮೇಲೆಲ್ಲ ಅವರದೇ ರುಜು ಇರುತ್ತಿತ್ತು. ಯಾರಿಗೆ ಇನ್ನೊಂದು ಪತ್ರ ಬರೆದುಕೊಡುತ್ತಾರೆ ರಾಭೂ?????
ರಾಭೂ ಇನ್ನೊಂದು ಪರಿಚಯ ಪತ್ರ ಬರೆದುಕೊಡುತ್ತೇನೆ ಅಂತ ಹೇಳಿದ್ದು ಅವರಿಗೆ, ಅಂದರೆ ಸ್ವಂತ ಪ್ರೊ. ಭೂಸನೂರಮಠರಿಗೇ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಬೋಧಿಸಿ, ಕಾಲಾನಂತರ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ BITS, Pilani ಭೌತಶಾಸ್ತ್ರದ ವಿಭಾಗ ಸೇರಿದ್ದ ಅವರ ಮಾಜಿ ಗುರು ಡಾ. ಖರೆ ಅವರಿಗೆ. ಯಪ್ಪಾ! ಎಲ್ಲಿಯ ಧಾರವಾಡದ ರಾಭೂ, ಎಲ್ಲಿ ಅವರಿಗೆ ವಾರಣಾಸಿಯಲ್ಲಿ ಪಾಠ ಮಾಡಿದ್ದ ಅದ್ಯಾರೋ ಮರಾಠಿ ಆದಮೀ ಡಾ. ಖರೆ. ಇರಲಿ ಪಿಲಾನಿಯ ಮಾಸ್ತರಿಗೆ ಪರಿಚಯ ಪತ್ರ ಬರೆದುಕೊಡುತ್ತೇನೆ ಅನ್ನುತ್ತಿದ್ದಾರೆ. ಒಳ್ಳೆಯದೇ ಆಯಿತು. ಯಾಕೆಂದರೆ ನಮಗೆ ಧಾರವಾಡವಿರಲಿ, ಪಿಲಾನಿಯಿರಲಿ, ಅಮೆರಿಕಾನೇ ಇರಲಿ, ಕ್ಲಾಸಿಗೆ ಹೋಗಿ ಕೂಡಲಿಕ್ಕೆ ಸುತಾರಾಂ ಇಷ್ಟವಿಲ್ಲ. ಸ್ವಂತ ಓದಿ ಎಷ್ಟು ತಿಳಿಯಿತೋ ಅಷ್ಟೇ ಸಾಕು ಅನ್ನುವ ಸ್ವಲ್ಪ 'self study' ಹಮ್ಮು ಆವಾಗಿತ್ತು. ಹಾಗಾಗಿ ಮುಂದೆ ಎಲ್ಲಿಯಾದರೂ ಪಿಲಾನಿಯಲ್ಲಿ ಇದೇ ಡಾ. ಖರೆ ಪ್ರೊಫೆಸರ್ ಕ್ಲಾಸಿಗೆ ಚಕ್ಕರ್ ಹೊಡೆಯುವ ಸಂದರ್ಭ ಬಂದರೆ ತಮ್ಮ ಶಿಷ್ಯ ರಾಭೂನ ಶಿಷ್ಯ ಅಂತ ಸ್ವಲ್ಪ ಡಿಸ್ಕೌಂಟ್ ಕೊಟ್ಟಾರು, ಹಾಜರಾತಿ ಮುಫತ್ತಿನಲ್ಲಿ ಕೊಟ್ಟಾರು ಆತನ ದೂ(ದು)ರಾಲೋಚನೆ ನಮ್ಮ ಮನಸ್ಸಿನಲ್ಲಿ ಬಂದಿತ್ತೇ? ಈಗ ನೆನಪಿಲ್ಲ. ಪಿಲಾನಿಗೆ ಹೋದ ಮೇಲೆ ತಿಳಿಯಿತು ಅಲ್ಲಿ ಹಾಜರಾತಿ ಕಡ್ಡಾಯ ಇಲ್ಲವೇ ಇಲ್ಲ ಅಂತ. ನಂತರ ಇನ್ನೂ ಒಂದು ಸ್ವಲ್ಪ ತಡವಾಗಿಯಾದರೂ ಬರೋಬ್ಬರಿ ತಿಳಿಯಿತು. ಅದೇನೆಂದರೆ ಹಾಜರಾತಿ ಜರೂರತ್ತಿಲ್ಲ, ಹೆಚ್ಚಿನವು open book ಪರೀಕ್ಷೆಗಳು, ಮೊದಲು ಓದಿದರೂ ಅಷ್ಟೇ, ಪರೀಕ್ಷೆಯಲ್ಲಿ ಪುಸ್ತಕ ತೆಗೆದು ನೋಡಿದರೂ ಅಷ್ಟೇ. ಅವೆಲ್ಲ misunderstanding ಗಳನ್ನು ದೂರಮಾಡಿದ ಪಿಲಾನಿಯ radical ಶಿಕ್ಷಣ ಪದ್ಧತಿಗೆ ಒಂದು ದೊಡ್ಡ ಸಲಾಂ.
ಭೂಸನೂರಮಠರು ಏನೇನೋ ಸುದ್ದಿ ಹೇಳಿದರು. ಹೇಳಿ ಕೇಳಿ ಅವರು ಕಥೆಗಾರರು. ನಾವು ಕಥೆ ಓದುವವರು. ಹೀಗಾಗಿ ಓಕೆ. 'ಏ ಏಳೋ! ತಡಾ ಆಗ್ಲಿಕತ್ತದ' ಅಂತ ಲುಕ್ ಕೊಡುತ್ತ ಕೂತವರು ನಮ್ಮ ತಂದೆಯವರು. ಯಾಕೆಂದರೆ ಸ್ವಲ್ಪ ಹೊತ್ತಿಗಾಗಲೇ ಧಾರವಾಡ ರೈಲ್ವೆ ಸ್ಟೇಷನ್ ರಿಸರ್ವೇಶನ್ ಖಿಡಕಿ ಬಂದಾಗುವದರಲ್ಲಿತ್ತು. ದೆಹಲಿಗೆ ಹೋಗುವ ನಮ್ಮ ಟಿಕೆಟ್ ಇನ್ನೂ ಬುಕ್ಕಾಗಿರಲಿಲ್ಲ. ಅದೇ ವರ್ಷ ಗೋವಾ - ದೆಹಲಿ ನಿಜಾಮುದ್ದೀನ್ ಅಂತ ಒಂದು ಡೈರೆಕ್ಟ್ ಟ್ರೈನ್ ಶುರುವಾಗಿ, ಅದಕ್ಕೆ ಧಾರವಾಡದಿಂದ ಲಿಂಕ್ ಎಕ್ಸಪ್ರೆಸ್ ಮೂಲಕ ಕನೆಕ್ಷನ್ ಇದ್ದು, ದೆಹಲಿಗೆ ಹೋಗುವ ಮಂದಿಗೆ ಭಾಳ ಅನುಕೂಲ ಕೂಡ ಆಗಿತ್ತು. ಅದೂ ಸಹ ಒಂದು ಶುಭ ಸಂದೇಶ ಅಂತ ಮಂದಿ ವಿಮರ್ಶಿಸಿ ಪಿಲಾನಿಗೇ ಹೋಗಲು ಹೇಳಿದ್ದರು ಕೆಲವರು. ಇಲ್ಲ ಅಂದರೆ ಮೊದಲು ಪೂನಾಕ್ಕೆ, ಮುಂಬೈಗೆ ಅಲ್ಲಿ ಇಲ್ಲಿ ಹೋಗಿ ದೆಹಲಿ ತಲುಪಿ, ನಂತರ ಬಸ್ಸೋ, ಮತ್ತೊಂದು ಟ್ರೈನೋ ಹಿಡಿದು, ಮರಳುಗಾಡಿನ ಮೂಲೆಯಲ್ಲಿರುವ ಪಿಲಾನಿ ಮುಟ್ಟಬೇಕಾಗಿತ್ತು. ಈಗ ಗೋವಾ - ನಿಜಾಮುದ್ದೀನ್ ಟ್ರೈನ್ ಆಗಿದ್ದು ಬೆಸ್ಟ್. ಧಾರವಾಡ ಒಳಗೆ ಹತ್ತಿ ಒಮ್ಮೆ ಮೀರಜ್ ಒಳಗೆ ಬದಲು ಮಾಡಿದರೆ ಸೀದಾ ದೆಹಲಿ.
ಆದರೂ ಭೂಸನೂರಮಠ ಅವರು ಹೇಳಿದ ಪಿಲಾನಿ ಕಥೆಗಳು ಇನ್ನೂ ನೆನಪಲ್ಲಿವೆ. 'ಅಲ್ಲೆ ನೋಡಪಾ ಎಲ್ಲಾ ಭಾಳ ಶಿಸ್ತುಬದ್ಧ. Everything runs like a clockwork. ಮತ್ತ ಪ್ರತಿ ಪರೀಕ್ಷೆಯ ಉತ್ತರ ಪತ್ರಿಕೆ ನಿನ್ನ ಕೈಯಾಗ ಹಿಡಿಸೇ ಬಿಡ್ತಾರ ನೋಡು. Because they insist on transparency. ಅಕಸ್ಮಾತ ಯಾರರೆ ಮಾಸ್ತರು ನಿನ್ನ ಉತ್ತರ ಪತ್ರಿಕೆ ಬರೋಬ್ಬರಿ ತಿದ್ದಿಲ್ಲ ಅಂದ್ರ ನೀನು ಹೋಗಿ ಅವರ ಜೋಡಿ ಜಗಳ ಸಹ ಮಾಡಬಹದು. ನಮ್ಮ ಕಾಶ್ಯಾ (ಅಂದರೆ ಸಣ್ಣ ಮಗ ಕಾಶಿನಾಥ) ಮನ್ನೆ ಜರ್ಮನಿಯಿಂದ ಪತ್ರ ಬರೆದಿದ್ದ. ಆವಾ ಅಲ್ಲೆ ಯಾವದೋ ಜರ್ಮನ್ ಮಾಸ್ತರ್ ಜೋಡಿ ಹಾಕ್ಕೊಂಡು ಗುದ್ದಾಡಿದ ಅಂತ ಹೇಳಿ. ಹೇಳಿ ಕೇಳಿ ಪಿಲಾನಿಯೊಳಗ ನಾಲ್ಕು ವರ್ಷ ಮಾಸ್ತರ್ ಮಂದಿ ಜೋಡಿ ಗುದ್ದಾಡಿ, ವಾದ ಮಾಡಿ ರೂಢಿ ನೋಡು. You can be very frank with your teachers there. You can argue and if you convince them that you deserve more marks they will give you,' ಅಂತ ಹೇಳಿ ಭೂಸನೂರಮಠ ಬಿಟ್ಸ್, ಪಿಲಾನಿಯ ಶೈಕ್ಷಣಿಕ ವಾತಾವರಣದ ಬಗ್ಗೆ ಏನೋ ಒಂದು ಬಗೆಯ ಅಚ್ಚರಿ ಮೂಡಿಸಿದ್ದರು. ಆದರೆ ಅವರು ಹೇಳದ ಒಂದು ಮಾತು ನಂತರ ಅರ್ಥವಾಯಿತು. ಮಾಸ್ತರ್ ಜೋಡಿ ಹೋಗಿ ಗುದ್ದಾಡಬಹುದು. ಮಾಸ್ತರದ್ದು ತಪ್ಪಿದ್ದರೆ ತಿದ್ದಿಕೊಂಡು, ಹೆಚ್ಚಿನ ಮಾರ್ಕ್ಸ್ ಹಾಕಿ ಕಳಿಸುತ್ತಾರೆ. on the flip side, ಮಾಸ್ತರ್ ಮತ್ತೊಮ್ಮೆ ಚೆಕ್ ಮಾಡಿದಾಗ, ನಿಮ್ಮ ಹೆಚ್ಚಿನ ತಪ್ಪುಗಳು ಕಂಡು ಬಂದರೆ, ಮಾರ್ಕ್ಸ್ ಕಮ್ಮಿ ಸಹಿತ ಮಾಡಿ ಕೊಡುತ್ತಾರೆ. ಆ ಪಾಠ ನನಗೆ ಮರೆಯಲಾರದಂತೆ ಕಲಿಸಿದವರು inorganic chemistry ಕಲಿಸಿದ್ದ ಪ್ರೊ. ಎಲ್. ಕೆ. ಸಿಂಗ್. ಹೇಗೂ ಬಿಟ್ಟಿ revaluation ಇದೆ, ಕರೆದು ಕೇಳಿದರೆ ಹೋಗಿ ನಮ್ಮ ಧಾರವಾಡ ಶೈಲಿಯಲ್ಲಿ ವಾದ ಮಾಡಿ ಬಂದಾರಾಯಿತು, ಅಂತ ಒಂದು ಟೆಸ್ಟಿನ ಉತ್ತರ ಪತ್ರಿಕೆಯ ಮೌಲ್ಯಮಾಪನ ಸರಿಯಾಗಿಲ್ಲ ಅಂತ ಪ್ರೊ. ಎಲ್. ಕೆ. ಸಿಂಗ್ ಅವರಿಗೆ ವಾಪಸ್ ಕೊಟ್ಟು ಬಂದರೆ, ಒಂದು ವಾರದ ನಂತರ ಕರೆದು, ಹೊಸದಾಗಿ ಮೌಲ್ಯಮಾಪನ ಮಾಡಿದ ಪೇಪರ್ ಕೈಯಲ್ಲಿಟ್ಟಿದ್ದರು. ನೋಡಿದರೆ ಮೊದಲಿನಗಿಂತ ಎರಡು ಮಾರ್ಕ್ಸ್ ಕಡಿಮೆ. ಅಕಟಕಟಾ! ಮೊದಲು ಕಂಡಿರದಿದ್ದ ತಪ್ಪು ಈಗ ಕಂಡಿತ್ತು ಸರ್ ಅವರಿಗೆ. ಬರೋಬ್ಬರಿ ಮಾರ್ಕ್ಸ್ ಕಳೆದು ಕಳಿಸಿದ್ದರು. ಸುಖಾ ಸುಮ್ಮನೆ ಬಿಟ್ಟಿಯಲ್ಲಿ ಚಡ್ಡಿ ಕಳೆಯಿಸಿಕೊಂಡು ಬಂದ ಕೆಟ್ಟ ಫೀಲಿಂಗ್. ಅದೇ ಕೊನೆ! ನಂತರ ನಾನು ಮತ್ತೆ ಯಾವದೇ ತರಹದ ಮರುಮೌಲ್ಯಮಾಪನಕ್ಕೆ ಅರ್ಜೀ ಹಾಕಲಿಲ್ಲ. ಮುಂದಿನ ಮೂರೂವರೆ ವರ್ಷ 'ಪಾಲಿಗೆ ಬಂದಷ್ಟು ಪಂಚಾಮೃತ' ಅಂತ ಸ್ವೀಕರಿಸಿ, ತಲೆಗೂ ಪ್ರೋಕ್ಷಿಸಿಕೊಂಡು, ಡಿಗ್ರಿ ಸರ್ಟಿಫಿಕೇಟು ತೊಗೊಂಡು ಬಂದೆ. ನಂತರ ಅದಕ್ಕೆ ತರಹ ತರಹದ ಉಪ್ಪಿನಕಾಯಿ ಹಚ್ಚಿಕೊಂಡು ನೆಕ್ಕುತ್ತಿದ್ದೇನೆ. ಡಿಗ್ರಿ ಸರ್ಟಿಫಿಕೇಟ್ ಗಳ ಹಣೆಬರೆಹವೇ ಅಷ್ಟು. ಎಲ್ಲರೂ ಅದನ್ನೇ ತಾನೇ ಮಾಡುತ್ತಿರುವದು???? ;)
ಇದೆಲ್ಲ ಕಥೆ ಭೂಸನೂರುಮಠ ಅವರ ಜೊತೆ ಆದ ಮಾತುಕತೆಗಳ ಮಧ್ಯೆ ಕಳೆದುಹೋಗಿತ್ತು. ಮೊದಲೇ ಹೇಳಿದಂತೆ ಪಿಲಾನಿಯಲ್ಲಿರುವ ತಮ್ಮ ಸೊಸೆಗೆ (ಪ್ರೊ. ಸುಜಾತಾ ಗೋಪಾಲನ್ ಭೂಸನೂರಮಠ) ಮತ್ತು ಅಲ್ಲಿನ ಭೌತಶಾಸ್ತ್ರ ವಿಭಾಗದ ಡಾ. ಖರೆಯವರಿಗೆ ಪತ್ರ ಬರೆದುಕೊಡುವದಾಗಿ ಹೇಳಿದರು. ಇಂತಹ ದಿನ, ಇಷ್ಟು ಹೊತ್ತಿಗೆ ಬಂದು ಪತ್ರಗಳನ್ನು ತೆಗೆದುಕೊಂಡು ಹೋಗು ಅಂತ ಬೀಳ್ಕೊಟ್ಟರು. ಬೀಳ್ಕೊಡುವ ಮೊದಲು ಡಾ. ಖರೆ ಅವರ ಬಗ್ಗೆ ಒಂದು ಮಜವಾದ ಘಟನೆ ಹೇಳಿದರು ರಾಭೂ.
ಮೊದಲೇ ಹೇಳಿದಂತೆ ಡಾ. ಖರೆ ಭೂಸನೂರಮಠರಿಗೆ ವಾರಣಾಸಿಯಲ್ಲಿ ಭೌತಶಾಸ್ತ್ರ ಕಲಿಸಿದವರು. ನಂತರ ಪಿಲಾನಿಗೆ ಬಂದು ಅಲ್ಲಿ ಮಾಸ್ತರಿಕೆ ನಡೆಸಿದ್ದರು. ಎಂಬತ್ತರ ದಶಕದಲ್ಲಿ ಭೂಸನೂರಮಠರ ಹಿರಿಯ ಮಗ ವಿಶ್ವನಾಥ ಅವರು ಪಿಲಾನಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಲು ಹೋದರು. ಮೊದಲನೇ ಸೆಮಿಸ್ಟರ್ ನ ಯಾವದೋ ಒಂದು ಫಿಸಿಕ್ಸ್ ಕೋರ್ಸ್ ಇದೇ ಡಾ. ಖರೆ ಪಾಠ ಮಾಡುತ್ತಿದ್ದರು. ಎಂದೋ ಒಂದು ದಿವಸ ಭೂಸನೂರಮಠರ ಮಗ ಅವರ ಕಣ್ಣಿಗೆ ಬಿದ್ದಿದ್ದಾನೆ. ಅವರಿಗೆ ಏನೋ ಸಂಶಯ ಬಂದಿದೆ. ಹುಡುಗನನ್ನು ನಿಲ್ಲಿಸಿ ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ, 'Are you Bhoosnoormath's son????' ಅಷ್ಟೇ. ಡಾ. ಖರೆ ಅಂದರೆ ಖತರ್ನಾಕ್. ಸರಿ ಸುಮಾರು ಮೂವತ್ತು ವರ್ಷದ ಹಿಂದೆ ನೋಡಿದ್ದ ಅಪ್ಪ (ರಾಭೂ) ಅವರ ಚಹರಾಪಟ್ಟಿ ನೆನಪಿಟ್ಟುಕೊಂಡು, 'ಇವನು ಅವರ ಮಗನೇ ಇರಬೇಕು' ಅಂತ ಬರೋಬ್ಬರಿ ಆಟಕಾಯಿಸಿಕೊಂಡಿದ್ದರು. ಆದರೆ ಅಂತಹ ಡಾ. ಖರೆ ನಮ್ಮನ್ನು ಹಿಡಿದು, 'Are you Bhoosnoormath's student????' ಅಂತ ಮಾತ್ರ ಕೇಳಲಿಲ್ಲ. ಅಕಸ್ಮಾತ ರಾಭೂ ನಮಗೆ ಪಾಠ ಮಾಡಿ, ನಾವು ಅವರ ಕ್ಲಾಸ್ ಅಟೆಂಡ್ ಮಾಡಿ, ಏನೇನೋ ಮಾಡಿದ್ದರೆ, ಅದೇನೋ quantum effect ಆಗಿ ಕೇಳುತ್ತಿದ್ದರೋ ಏನೋ. ಆದರೆ ಹಾಗಾಗಲಿಲ್ಲ.
ಸರಿ. ರಾಭೂ ಅವರಿಗೆ ವಂದನೆ ಅರ್ಪಿಸಿ, ಧನ್ಯವಾದ ಹೇಳಿ ಅವರ ಮನೆಯಿಂದ ಹೊರಟೆವು. ದೆಹಲಿಗೆ ರೈಲ್ವೆ ಟಿಕೆಟ್ ಸಹಿತ ಸಿಕ್ಕಿತು. ಮುಂದೆ ರಾಭೂ ಹೇಳಿದ ವೇಳೆಗೆ ಹೋಗಿ, ಅವರು ನೀಟಾಗಿ ಬರೆದು, ಲಕೋಟೆಯಲ್ಲಿ ಹಾಕಿ, ಸೀಲ್ ಮಾಡಿ, ಮೇಲೆ ಹೆಸರು ಬರೆದಿಟ್ಟಿದ್ದ ಎರಡು ಪರಿಚಯ ಪತ್ರಗಳನ್ನು ತಂದೆ. ಒಂದು ಅವರ ಸೊಸೆಗೆ. ಇನ್ನೊಂದು ಅವರ ಗುರುಗಳಾದ ಡಾ. ಖರೆ ಅವರಿಗೆ.
ಪಿಲಾನಿಗೆ ಹೋಗಿ ಸೇರಿಕೊಳ್ಳಲು ಒಂದೋ ಎರಡು ವಾರಗಳಿದ್ದವು. ಧಾರವಾಡ ಬಿಟ್ಟು ಹೋಗಲು ಮನಸ್ಸೇ ಇರಲಿಲ್ಲ. ಕಾರಣ ಒಂದು ಚಿಗರೆ ಮರಿ. ಅದರೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿ ಹೋಗಿತ್ತು. ಮುಂದೆ ಅದು ಒಂದು ಟ್ರಾಜಿಡಿ ಆಗಿಹೋಯಿತು. ದೊಡ್ಡ ಟ್ರಾಜಿಡಿ. ಅದರ ಬಗ್ಗೆ ಹಿಂದೆ ಬರೆದಿದ್ದೆ. ಸಮಯವಿದ್ದಾಗ ಓದಿಕೊಳ್ಳಿ.
***
ಸರಿ, ಆಗಸ್ಟ್ ೧೯೯೦ ರ ಮೊದಲ ವಾರದಲ್ಲಿ ಪಿಲಾನಿಗೆ ಬಂದು ಮುಟ್ಟಿದ್ದಾಯಿತು. ಆಗ ಧಾರವಾಡದಲ್ಲೇ ಇದ್ದ, ನಮ್ಮ ಆತ್ಮೀಯರಾದ, ನವಲೂರಿನ ಭೋರುಕಾ ಟೆಕ್ಸ್ಟೈಲ್ MD ಆಗಿದ್ದ ಅಗ್ರವಾಲಾ ಸಾಹೇಬರು ತುಂಬ ಸಹಾಯ ಮಾಡಿದರು. ಅವರು ಸಹ ಪಿಲಾನಿ ಸಮೀಪದವರೇ. ಹಾಗಾಗಿ ಅವರ ದೆಹಲಿಯ ಮನುಷ್ಯನೊಬ್ಬನನ್ನು ನಮ್ಮ ಜೊತೆಗೇ ಕಳಿಸಿಬಿಟ್ಟರು. ಛೋಟ್ ಮಲ್ಲ ಜೋಷಿ ಅಂತ ಆತನ ಹೆಸರು. ಆ ಪುಣ್ಯಾತ್ಮರ ಬಗ್ಗೆ ಮತ್ತೆ ಬರೆಯೋಣ ಬಿಡಿ. ಅವರೇ ನಮ್ಮನ್ನು ದೆಹಲಿಯಿಂದ ಕರೆದೊಯ್ದು, ಪಿಲಾನಿಗೆ ಮುಟ್ಟಿಸಿ, ನಾವು 'ನೀವು ಹೋಗಿ. ಮುಂದಿನದು ನಾವು ನೋಡಿಕೊಳ್ಳುತ್ತೇವೇ,' ಅಂದ ಮೇಲೆ ನಮ್ಮನ್ನು ಬಿಟ್ಟು ಹೋಗಿದ್ದರು. Thanks CM Joshi Sir.
ಪಿಲಾನಿ ಅಂದರೆ ಎಲ್ಲದೂ very well organized, everything runs like a clockwork ಅಂತ ಎಲ್ಲರಿಂದ ಕೇಳಿದ್ದು, ಓದಿದ್ದು ಯಾವದರಲ್ಲೂ ಏನೂ ಅತಿಶಯೋಕ್ತಿ ಇರಲೇ ಇಲ್ಲ. ಅಷ್ಟು ಚನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. Hats off to the way they run the institution! Role model for any educational institution.
ಸರಿ. ಪಿಲಾನಿ ಸೇರಿದ್ದಾಯಿತು. ಹಾಸ್ಟೆಲ್ ರೂಂ ಸಿಕ್ಕಿದ್ದಾಯಿತು. ಎರಡು ದಿನ ಬಿಟ್ಟು ತಂದೆಯವರು ವಾಪಸ್ ಹೊರಡಲಿಕ್ಕೆ ಇದೆ. ಅಷ್ಟರೊಳಗೆ ಭೂಸನೂರಮಠ ಅವರ ಸೊಸೆ ಮತ್ತೆ ಅವರ ಬೀಗರನ್ನು ಭೆಟ್ಟಿಯಾಗಿ, ಭೂಸನೂರಮಠ ಅವರು ಕೊಟ್ಟ ಪರಿಚಯ ಪತ್ರ ಎಲ್ಲ ಕೊಟ್ಟು, ನಮ್ಮ ಪರಿಚಯ ಮಾಡಿಕೊಳ್ಳಬೇಕು. ಮುಂದಿನ ಹೆಜ್ಜೆ ಅಂದರೆ ಪಿಲಾನಿಯ ಕ್ಯಾಂಪಸ್ಸಿನಲ್ಲಿ ಭೂಸನೂರಮಠ ಅವರ ಬೀಗರ ಮನೆ ಹುಡುಕಬೇಕು. ಏನು ಮಾಡಬೇಕು? ಸರಿ ಅಂತ ಹೇಳಿ ಪಿಲಾನಿ ಕ್ಯಾಂಪಸ್ಸಿನ ತುಂಬ ಚಕ್ಕರ್ ಹೊಡೆದಿದ್ದು ಆಯಿತು. ಮೊದಲು ಹೋಗಿದ್ದು ಅವರ ಬೀಗರಾದ ಪ್ರೊ. ಗೋಪಾಲನ್ ಅವರ ಆಫೀಸ್ ಚೇಂಬರ್ ಹುಡುಕಿಕೊಂಡು. ಅದೇನೋ ಸಿಕ್ಕಿತು. ಆದರೆ ಬೀಗ ಹಾಕಿತ್ತು. ಅವರ ಸೊಸೆಯ ಚೇಂಬರ್ ಸಿಕ್ಕಿತ್ತೇ ಇಲ್ಲವೇ ಅಂತ ನೆನಪಿಲ್ಲ. ಸರಿ, ಯಾರನ್ನಾದರೂ ಹಿಡಿದು ಗೋಪಾಲನ್ ಅವರ ಸ್ಟಾಫ್ ಕ್ವಾರ್ಟರ್ ಎಲ್ಲಿದೆ ಅಂತ ಕೇಳೋಣ ಅನ್ನುವಷ್ಟರಲ್ಲಿ ಒಬ್ಬರು ಸಿಕ್ಕರು. ಅವರು ಗಣಿತ ವಿಭಾಗದ ಮಹಾ eccentric ಆದರೆ ತುಂಬಾ funny ಆದ ಡಾ. ಪೀ.ಕೆ. ರಾಮನ್ ಅಂತ ಆಮೇಲೆ ಗೊತ್ತಾಯಿತು. ಹೆಸರು ಪೀಕೆ ಆದರೂ ಎಂದೂ ಶೆರೆ ಪಿರೇ ಕುಡಿದವರೇ ಅಲ್ಲ ಅವರು. ಅಂತಹ ಡಾ. ಪೀ. ಕೆ. ರಾಮನ್ ನಾವು ಮಾತಾಡಿಸಿದಾಗ ಪ್ರೀತಿಯಿಂದ ಮಾತಾಡಿ, ಭೂಸನೂರಮಠರ ಬೀಗರಾದ ಪ್ರೊ. ಗೋಪಾಲನ್ ಅವರ ಮನೆಗೆ ಬರೋಬ್ಬರಿ ದಾರಿ ತೋರಿಸಿದ್ದರು. ಮತ್ತೆ ಪಿಲಾನಿ ಕ್ಯಾಂಪಸ್ ಅಂದರೆ ಪೂರ್ತಿ ಗ್ರಿಡ್ ಸಿಸ್ಟಮ್. ಅಡ್ರೆಸ್ ಸಿಕ್ಕರೆ ಹುಡುಕುವದು ತುಂಬ ಸುಲಭ. ಡಾ. ಪೀ. ಕೆ. ರಾಮನ್ ಅವರಿಗೆ ಥ್ಯಾಂಕ್ಸ್ ಹೇಳಿದರೆ ತಮ್ಮ ಪಕ್ಕಾ ತಮಿಳು ಶೈಲಿಯಲ್ಲಿ 'mention not. mention not' ಅಂದರು. ತಮಿಳು ಅವರ specialty ಅಂತ ಅವರ ಕೆಳಗೆ ಎರಡನೇ semester ನಲ್ಲಿ 'Probability & Statistics' ಎಂಬ ಕೋರ್ಸಿನಲ್ಲಿ ವಿಷಯ ಕಲಿಯುವದರಕಿಂತ ಹೆಚ್ಚಾಗಿ ತಮಿಳು ಕಲಿತಾಗ ಅರ್ಥವಾಯಿತು.
ಸರಿ, ಡಾ. ಪೀ. ಕೆ. ರಾಮನ್ ಕೊಟ್ಟ ದಾರಿ ಹಿಡಿದು ಭೂಸನೂರಮಠ ಅವರ ಪಿಲಾನಿ ಬೀಗರ ಮನೆ ಬಾಗಿಲು ತಟ್ಟಿದೆವು. ಬಾಗಿಲು ತೆರೆದು, ಒಳಗೆ ಸ್ವಾಗತಿಸಿದವರು ಪ್ರೊ. ಗೋಪಾಲನ್ ಅವರ ಪತ್ನಿ ಅಂತ ನೆನಪು. ನಮ್ಮ ಪರಿಚಯ ಮಾಡಿಕೊಂಡೆವು. ಧಾರವಾಡದ ತಮ್ಮ ಬೀಗರ ಪೈಕಿ ಅಂತ ತಿಳಿದ ನಮಗೆ ಸಿಕ್ಕಾಪಟ್ಟೆ ಸತ್ಕಾರವಾಯಿತು. ಭೂಸನೂರಮಠ ಅವರ ಸೊಸೆ ಸುಜಾತಾ ಮೇಡಂ ಸಹಿತ ಬಂದು, ಸಿಕ್ಕಾಪಟ್ಟೆ ಖಾತಿರ್ದಾರಿ ಮಾಡಿದರು. ಅವರು ಶುದ್ದ ತಮಿಳೆ. ಬೆಳೆದಿದ್ದು ರಾಜಸ್ಥಾನದ ಪಿಲಾನಿಯಲ್ಲಿ. ಭೂಸನೂರಮಠರ ಸೊಸೆಯಾಗಿ ಬಂದ ಮೇಲೆ ಎಲ್ಲೋ ಅಷ್ಟಿಷ್ಟು ಧಾರವಾಡ ಕನ್ನಡ ಕಲಿದ್ದರು ಅಂತ ಕಾಣುತ್ತದೆ. 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಅವರು ಆತ್ಮೀಯತೆಯಿಂದ, ಪ್ರೀತಿಯಿಂದ, ತಮಿಳ accent ನಲ್ಲಿ ಧಾರವಾಡ ಕನ್ನಡ ಮಾತಾಡಿ, ಅಷ್ಟೊಂದು ಖಾತಿರ್ದಾರಿ ಮಾಡಿದ್ದನ್ನು ಹೇಗೆ ಮರೆಯೋಣ!? ಅವರು ಎಲ್ಲೇ ಇದ್ದರೂ ತಣ್ಣಗಿರಲಿ.
ಸರಿ, ಭೂಸನೂರಮಠರ ಬೀಗರ ಆತಿಥ್ಯ ಭರ್ಜರಿಯಾಗಿತ್ತು. ಮಗ ಏನಾದರೂ ಲಫಡಾ ಮಾಡಿಕೊಂಡರೆ ಆಪತ್ಕಾಲಕ್ಕೆ ದೂರದ ಊರಿನಲ್ಲಿ ಪರಿಚಯದವರು ಯಾರಾದರೂ ಇದ್ದಾರೆ ಅಂತೆ ತಂದೆಯವರು ನೀರಾಳವಾಗಿದ್ದರೋ ಏನೋ!? ಗೊತ್ತಿಲ್ಲ. ಅವರ ಮನೆಯಿಂದ ವಾಪಸ್ ಬರುವಾಗ, 'ನಿನಗೆ ಸೈಕಲ್ ಏನಾದರೂ ಕೊಳ್ಳುವದಿದ್ದರೆ ಭೂಸನೂರಮಠ ಬಾಯಿಯನ್ನು ಕರೆದುಕೊಂಡು ಹೋಗು' ಅಂತ ಅಂದುಬಿಟ್ಟರು ತಂದೆಯವರು. ಅಕಟಕಟಾ! ಪಾಪ ಬಹಳ ಭೋಳೆ ಸ್ವಭಾವದವರು ತಂದೆಯವರು. ಪಿಲಾನಿ ಕ್ಯಾಂಪಸ್ ನಲ್ಲಿ ಎಲ್ಲರೂ ಸೈಕಲ್ ಹೊಡೆಯುತ್ತಿದ್ದಿದ್ದನ್ನು ನೋಡಿದ ಅವರು ಹೋಗುವ ಮೊದಲೇ ಒಂದು ಸೈಕಲ್ ಕೊಡಿಸಲೇ ಅಂತ ಕೇಳಿದ್ದರು. ನಾನು ಉರಿದುಕೊಂಡು ಬೈದಿದ್ದೆ. ಆದರೂ ಹೋಗೋವಾಗ ಇರಲಿ ಅಂತ ಮತ್ತೊಮ್ಮೆ ಹೇಳಿದ್ದರು. ಉದ್ರಿ ಉಪದೇಶ ಮಾಡಿದ್ದರು. ಎಲ್ಲಿಯಾದರೂ ಹಿಂದಿ ಭಾಷೆ, ವ್ಯವಹಾರಿಕೆ ಬರದ ಮಗ ೮೦೦ ರೂಪಾಯಿ ಸೈಕಲ್ಲಿಗೆ ೧೬೦೦ ರುಪಾಯಿ ಕೊಟ್ಟು, ತಮ್ಮ ತಲೆ ನುಣ್ಣಗೆ ಬೋಳಿಸಿಯಾನು ಅಂತ ಕಾಳಜಿ. 'ಅಪ್ಪಾ! ನೀ ಸುಮ್ಮ ಕೂಡೋ ಮಾರಾಯಾ. ನಮ್ಮ ಹಾಸ್ಟೆಲ್ ಬೇಕಾದಷ್ಟು ಹತ್ರ ಅದ. ಸೈಕಲ್ ಏನೂ ಸದ್ಯಕ್ಕೆ ಬ್ಯಾಡ,' ಅಂತ ತಂದೆಯವರನ್ನು ಸುಮ್ಮನಿರಿಸಿ ಸಾಗಹಾಕಿದ್ದೆ. ಅದೇನು ಅದೃಷ್ಟವೋ ಏನೋ. ನಾಲ್ಕೂ ವರ್ಷ ನಮ್ಮ ಮೂರೂ ಹಾಸ್ಟೆಲ್ ನಮಗೆ ಹೋಗಬೇಕಾದ ವಿಭಾಗಗಳಿಗೆ ಹತ್ತಿರವೇ ಇದ್ದವು. ಸೈಕಲ್ ಖರೀದಿ ಮಾಡುವ ಪ್ರಸಂಗವೇ ಬರಲಿಲ್ಲ. ಮೇಲಿಂದ ಸೈಕಲ್ ಹೊಡೆಯುವುದು ಅಂದರೆ ಒಂದು ತರಹದ lower level ಮಂದಿ ಮಾಡುವದು ಅಂತ ತಲೆಯಲ್ಲಿ ಬೇರೆ ಇತ್ತು ನೋಡಿ. ಹಾಗಾಗಿ ಒಟ್ಟೇ ಸೈಕಲ್ ಹೊಡೆಯಲೇ ಇಲ್ಲ. ಪಿಲಾನಿ ಕ್ಯಾಂಪಸ್ ತುಂಬ ನಮ್ಮದು ನಟರಾಜಾ ಸರ್ವೀಸ್. ಅಂದರೆ ಶುದ್ಧ ಕಾಲ್ನಡಿಗೆ.
ಸರಿ. ಪಿಲಾನಿಯಲ್ಲಿ ಇಷ್ಟೆಲ್ಲ ಸೆಟಲ್ ಮಾಡಿಸಿ ತಂದೆಯವರು ವಾಪಸ್ ಧಾರವಾಡ ಸೇರಿಕೊಂಡರು. ವಾರಕ್ಕೊಮ್ಮೆ ಪತ್ರ ವ್ಯವಹಾರ. 'ಆಗಾಗ ಹೋಗಿ ಭೂಸನೂರಮಠ ಬಾಯಿಯನ್ನು ತಪ್ಪದೇ ಭೆಟ್ಟಿಮಾಡುತ್ತಿರು,' ಅಂತ ಕಾಳಜಿ ಭರಿತ ಸಲಹೆ ಧಾರವಾಡದಿಂದ. ಹೋಗಿ ಭೆಟ್ಟಿ ಮಾಡಿದ್ದೂ ಆಯಿತು. ಅವರೂ ಸಹ ಧಾರವಾಡದ ಬೀಗರ ಪೈಕಿ ಹುಡುಗ ಬಂದಿದ್ದಾನೆ ಅಂತ ಸಿಕ್ಕಾಪಟ್ಟೆ ಪ್ರೀತಿಯಿಂದ ಮತ್ತೆ ಮತ್ತೆ, 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಸತ್ಕಾರ ಮಾಡಿಯೇ ಮಾಡಿದರು. ನಮಗೇನು?? ಕೊಟ್ಟಿದ್ದೆಲ್ಲವನ್ನೂ ಸ್ವಾಹಾ ಮಾಡಿ, ಒಂದಲ್ಲ ಎರಡು ಕಪ್ಪು ಚಹಾ ಕುಡಿದು ಬಂದೆವು. ಕಂಪನಿಗೆ ಇರಲಿ ಅಂತ ಸೂತ್ರ ಸಂಬಂಧವಿಲ್ಲದ ಬೆಂಗಾಲಿ ದೋಸ್ತನೊಬ್ಬನನ್ನೂ ಸಹ ಕರೆದುಕೊಂಡು ಹೋಗಿದ್ದೆ. homesick ಆಗಿ ತುಂಬಾ ಅಬ್ಬೇಪಾರಿಯಾಗಿತ್ತು ಅದು. ಅದಕ್ಕೇ ಅಂತಲೂ ಆಯಿತು, ರಾಗ್ಗಿಂಗ್ (ragging) ಸಮಯದಲ್ಲಿ ನಮ್ಮ ಕಂಪನಿಗೂ ಅಂತ ಆಯಿತು ಅಂತ ಕರೆದುಕೊಂಡು ಹೋಗಿದ್ದೆ. ಆಗಸ್ಟ್ ಮೊದಲನೇ ವಾರದಿಂದ ಹಿಡಿದು ಅಕ್ಟೋಬರ್ ಮೊದಲನೇ ವಾರದ ವರೆಗೆ ರಾಗಿಂಗ್ ಸಮಯ. ಒಬ್ಬೊಬ್ಬರೇ ಓಡಾಡುವದು ಡೇಂಜರ್. ಇಬ್ಬರಿದ್ದರೆ ಒಳ್ಳೆಯದು. ಸಿಕ್ಕೊಂಡು ಬಿದ್ದರೂ ೫೦% ೫೦% ಆಗಿಬಿಡುತ್ತದೆ. ಮತ್ತೆ ವಯಸ್ಸಿಗೆ ಮೀರಿ ಹೊನಗ್ಯಾ ಹಾಂಗೆ ಅಡ್ಡಾದಿಡ್ಡಿ ಬೆಳೆದು, ಸದ್ದಾಮ್ ಹುಸೇನ್ ಮಾದರಿ ಮೀಸೆ ಬಿಟ್ಟಿದ್ದ ನಮ್ಮನ್ನು ಎಷ್ಟೋ ಜನ ಮಾಸ್ಟರ್ ಡಿಗ್ರಿ (ME) ಮಾಡಲಿಕ್ಕೆ ಬಂದವ ಅಂತ ತಿಳಿದುಕೊಂಡು, ಸಿಳ್ಳೆ ಹೊಡೆದು ರಾಗ್ಗಿಂಗ್ ಮಾಡಲು ಕರೆಯುತ್ತಿರಲೇ ಇಲ್ಲ. ಜೊತೆಗೊಬ್ಬ ಕುರಿಯಂತಹ ಒಬ್ಬ ಅಬ್ಬೇಪಾರಿಯನ್ನು ಕರೆದುಕೊಂಡು ಹೋಗಿಬಿಟ್ಟರೆ ನಾವು ಅದೆಷ್ಟೋ ಸೇಫ್.
ಹೀಗೆ ಮೊದಲನೇ ಸೆಮಿಸ್ಟರ್ ಜೀವನ ನಡೆಯುತ್ತಿತ್ತು. ೧೯೯೦ ಸೆಪ್ಟೆಂಬರ್ ಇರಬೇಕು. ಒಂದು ದಿವಸ ನಮ್ಮ ಕೃಷ್ಣಾ ಭವನ ಹಾಸ್ಟೆಲ್ಲಿನ ರೂಂ ನಂಬರ್ ೨೪೫ ರಲ್ಲಿ ಕೂತಿದ್ದೆ. ಅದು ನನ್ನ ಖುದ್ದು ರೂಮು. ಸಂಜೆ ಸುಮಾರು ಆರು, ಆರೂವರೆ ಹೊತ್ತು. ಯಾರೋ ಬಾಗಿಲು ತಟ್ಟಿದರು. ಯಾರೋ ಸೀನಿಯರ್ ಇರಬೇಕು. ರಾಗ್ಗಿಂಗ್ ಗಾಗಿ ಎತ್ತಾಕಿಕೊಂಡು ಹೋಗಲು ಬಂದಿರಬೇಕು ಅಂತ ದೂಸರಾ ಮಾತಾಡದೇ ಬಾಗಿಲು ತೆಗೆದೆ. ಹೊರಗೆ ನಿಂತವರು ಒಬ್ಬ ಆದಮೀ. ಸೀನಿಯರ್ ಇರಬಹುದೇನೋ ಎನ್ನುವಂತೆ, ರಾಗ್ಗಿಂಗ್ ಟೈಮ್ ಪದ್ಧತಿ ಪ್ರಕಾರ, ಶಿಸ್ತಿನಿಂದ, 'Good evening, Sir,' ಅಂದುಬಿಟ್ಟೆ. ಮಳ್ಳ ಮುಖ ಮಾಡಿದೆ. 'ಹೋಗ್ಗೋ ನಿನ್ನ! ನಾ ನಿಮ್ಮ ಅಣ್ಣ ಇದ್ದಾಂಗ ಮಾರಾಯಾ. ನಾ ಕಾಶಿನಾಥ ಭೂಸನೂರಮಠ. ಪ್ರೊ. ಭೂಸನೂರಮಠ ಅವರ ಮಗ,' ಅಂತ ಹೇಳಿದ ಅವರು ಡುಬ್ಬ ಚಪ್ಪರಿಸಿ, ಚಪ್ಪರಿಸಿ ನಕ್ಕರು. ನಾನು ಮತ್ತೂ ಭಾಳ ಸಣ್ಣಾದೆ. ಕರಗಿಹೋದೆ. ಭೂಸನರಮಠ ಪ್ರೊಫೆಸರ್ ಹೇಳುತಿದ್ದ, ಮತ್ತೆ ನಮ್ಮ ಅಣ್ಣ ಯಾವಾಗಲೂ ಹೇಳುತ್ತಿದ್ದ 'ಈಶ್ಯಾ, ಕಾಶ್ಯಾ'ರಲ್ಲಿ ಇವರೇ ಕಾಶ್ಯಾ ಉರ್ಫ್ ಕಾಶಣ್ಣ ಅಂತ ಆವಾಗ ತಿಳಿಯಿತು. ಭೂಸನೂರಮಠ ಕುಟುಂಬದಲ್ಲಿ ಮೊದಲು ನೋಡಿದ್ದು ಪ್ರೊಫೆಸರ್, ನಂತರ ಅವರ ಬೀಗರು & ಸೊಸೆ ಇತ್ಯಾದಿ, ನಂತರ ಇವರೇ ಸಣ್ಣ ಮಗ ಕಾಶಿನಾಥ.
ತಮ್ಮ ಧಾರವಾಡದ ಹುಡುಗ, ಅದೂ ತಮ್ಮ ಕುಟುಂಬದ ಸ್ನೇಹಿತರ ಮಗ ಒಬ್ಬ ಪಿಲಾನಿಗೆ ಬಂದಿದ್ದಾನೆ ಅಂತ ಖುದ್ದಾಗಿ ಭೇಟಿಯಾಗಿ ಮಾತಾಡಿಸಿಕೊಂಡು ಹೋಗಲು ಬಂದಿದ್ದರು ಕಾಶಿನಾಥ ಭೂಸನೂರಮಠ. ಎಷ್ಟು ದೊಡ್ಡ ಮನಸ್ಸು ಅವರದು! ಎಷ್ಟು ಪ್ರೀತಿ! ಆಗ ಅವರು ವಿದೇಶದಲ್ಲಿ ಓದುತ್ತಿದ್ದರು ಅಂತ ನೆನಪು. ರಜೆಗಾಗಿ ಬಂದವರು ಧಾರವಾಡಕ್ಕೆ, ಮಾವನ ಮನೆ ಪಿಲಾನಿಗೆ ಬಂದಿದ್ದರು. ಧಾರವಾಡಕ್ಕೆ ಹೋದಾಗ ಹೀಗೆ ಹೆಗಡೆಯವರ ಹುಡುಗ ಒಂದು ಪಿಲಾನಿಗೆ ಹೋಗಿ ಕೂತಿದೆ ಅಂತ ತಿಳಿದಿದೆ. ಮತ್ತ ನಮ್ಮ ತಂದೆ ತಾಯಿ ಕೂಡ ಹೋಗಿ ಭೆಟ್ಟಿಯಾಗಿದ್ದಾರೆ. ನಮ್ಮ ಹುಡುಗ, ಒಂದು ಸಲ ಭೆಟ್ಟಿಯಾಗೋಣ ಅಂತ ಬಂದೇ ಬಿಟ್ಟಿದ್ದರು ಅವರು. ಭಾಳ ಖುಷಿಯಾಯಿತು ಅವರನ್ನು ಭೆಟ್ಟಿಯಾಗಿ.
'ನಡಿ, ಸ್ವಲ್ಪ ಅಡ್ಯಾಡಿ ಬರೋಣ,' ಅಂದರು ಕಾಶಿನಾಥ. ಸಂಜೆ ಹೊತ್ತು. ಓಡ್ಯಾಡಲು ಹೇಳಿ ಮಾಡಿಸಿದಂತಹ ಸುಂದರ ಕ್ಯಾಂಪಸ್. ನಮಗೆ ರಾಗ್ಗಿಂಗ್ ಕಾಟ ಅಂತ ರೂಮಿನಲ್ಲೇ ಗೂಟ ಹೊಡೆದುಕೊಂಡು ಕೂತಿದ್ದೆವು. ಈಗ ನಮ್ಮ ಸೂಪರ್ ಸೀನಿಯರ್ ಅನ್ನುವಂತಹ ವ್ಯಕ್ತಿ ಬಂದು, 'ಹೋಗೋಣ ಬಾ' ಅನ್ನುತ್ತಿದ್ದಾರೆ. ರೈಟ್ ಅಂತ ಹೇಳಿ, 'ಒನ್ ಮಿನಿಟ್ ಪ್ಲೀಸ್,' ಅಂತ ಹೇಳಿ, ಅವರನ್ನು ಹೊರಗೇ ನಿಲ್ಲಿಸಿ, ಬಾಗಿಲು ಹಾಕಿ, ಉಟ್ಟಿದ್ದ ಸಾಬರ ಚೌಕಳಿ ಲುಂಗಿ ಕಳೆದು, ಟೆರ್ರಿಕಾಟ್ ಪ್ಯಾಂಟ್ ಹಾಕಿಕೊಂಡು, ಧಾರವಾಡದ ಲೈನ್ ಬಜಾರ್ ಪುಟಾಣೆ ಟೈಲರ್ ಹೊಲೆದಿದ್ದ ಫುಲ್ ಶರ್ಟ್ ಹಾಕಿಕೊಂಡು, Nike (ಅಣ್ಣ ತಂದುಕೊಟ್ಟಿದ್ದು) ಶೂ ಹಾಕಿಕೊಂಡು ಹೊರಗೆ ಬಂದೆ. ರಾಗ್ಗಿಂಗ್ ಟೈಮ್ ನಲ್ಲಿ ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಚಪ್ಪಲ್ ಎಲ್ಲ ನಿಷಿದ್ಧ. ಶುದ್ದ ಫಾರ್ಮಲ್ ಇರಬೇಕು. ಪ್ರಾರಬ್ಧ. ಅದರ ಬಗ್ಗೆಲ್ಲ ಮತ್ತೊಮ್ಮೆ ಬರೆಯೋಣ.
ಸರಿ, ತಯಾರಾಗಿ ಹೊರಬಿದ್ದೆವು. ಕಾಶಿನಾಥ ಭೂಸನೂರಮಠ ಅವರೇ ಪಿಲಾನಿಯ ಮಾಜಿ ವಿದ್ಯಾರ್ಥಿ. ಅವರಿಗೆ ಎಲ್ಲೆಲ್ಲಿ ಓಡಾಡಿ, ಏನೇನು ನೆನಪು ಮಾಡಿಕೊಳ್ಳುವದಿತ್ತೋ? ಒಟ್ಟಿನಲ್ಲಿ ಗಿಚ್ಚಾಗಿ ಪಿಲಾನಿ ಕ್ಯಾಂಪಸ್ ತುಂಬ ಒಂದೆರೆಡು ಘಂಟೆ ಅಡ್ಯಾಡಿ, ಏನೇನೋ ಸುದ್ದಿಯೆಲ್ಲ ಮಾತಾಡಿ, ಕೊನೆಗೆ ಪಿಲಾನಿಯ ಕ್ಯಾಂಪಸ್ ಒಳಗೆ ಇರುವ Connaught Place ಸೇರಿದೆವು. ದೆಹಲಿಯಲ್ಲಿ ದೊಡ್ಡ Connaught Place ಇದ್ದರೆ ನಮ್ಮ ಪಿಲಾನಿಯದು ಸಣ್ಣ Connaught Place. ಅಲ್ಲಿ ಕಾಶಿನಾಥ ಭೂಸನೂರಮಠರು ಒತ್ತಾಯ ಮಾಡಿ, ನನ್ನಿಷ್ಟ ಕೇಳಿ, ಅದರ ಪ್ರಕಾರ milkshake ಆರ್ಡರ್ ಮಾಡಿ, ತಾವೂ ತಮ್ಮ milkshake ಆರ್ಡರ್ ಮಾಡಿ ಕಾಯುತ್ತ ಕುಳಿತೆವು. ಹರಟೆ ನಿರಂತರ. ಅದೂ ಇಬ್ಬರು ಧಾರವಾಡ ಮಂದಿ ಸಿಕ್ಕಿದರೆ ಕೇಳಬೇಕೇ?
milkshake ಇತ್ಯಾದಿ ಬಂತು. ಕುಡಿದಾಯಿತು. ಹರಟೆ ಏನೋ ಜೋರಾಗಿಯೇ ನಡೆದಿತ್ತು. ಆದರೆ ಅವರಿಗೆ ಮನೆಗೆ, ಮಾವನ ಮನೆಗೆ, ಹೋಗುವ ಅನಿವಾರ್ಯತೆ ಇತ್ತು. ನನಗೆ ಯಾವದೇ ತರಹದ ಅನಿವಾರ್ಯತೆ ಇರಲಿಲ್ಲ. ಆದರೆ ಒಬ್ಬನೇ ಹೋದರೆ ಹಾಸ್ಟೆಲ್ ಮುಟ್ಟಿಕೊಳ್ಳುವ ಚಾನ್ಸೇ ಇರಲಿಲ್ಲ. Connaught Place ನಿಂದ ನನ್ನ ಹಾಸ್ಟೆಲ್ ಆದ ಕೃಷ್ಣಾ ಭವನಕ್ಕೆ ಬರಬೇಕು ಅಂದರೆ ಕಮ್ಮಿ ಕಮ್ಮಿ ಅಂದರೂ ಅರ್ಧ ಡಜನ್ ಹಾಸ್ಟೆಲ್ ಸಿಗುತ್ತಿದ್ದವು. ಯಾರೋ ಸೀನಿಯರ್ ಗಳು ಎತ್ತಾಕಿಕೊಂಡು ಹೋಗುವದು ಖಾತ್ರಿಯಿತ್ತು. ನಂತರ ಹಾಸ್ಟೆಲ್ ಮುಟ್ಟುವದು ಎಂದೋ? ಯಾವ ಸ್ಥಿತಿಯಲ್ಲೋ? ಅದೆಲ್ಲ ಕಾಶಿನಾಥ ಭೂಸನೂರಮಠ ಅವರಿಗೆ ಗೊತ್ತೇ ಇತ್ತು. ಹಾಗಾಗಿ ಅವರ ಮಾವನ ಮನೆಯ ಪೂರ್ತಿ ವಿರುದ್ಧ ದಿಕ್ಕಿನಲ್ಲಿ, ಒಂದು ಮೂರು ಮೈಲಿ ದೂರವಿದ್ದರೂ, ನಮ್ಮ ಹಾಸ್ಟೆಲ್ ತನಕ, ರೂಂ ತನಕ ಮುಟ್ಟಿಸಿ ಹೋಗಿದ್ದರು. ಒಳ್ಳೆ ಅಣ್ಣನ ಹಾಗೆ. ಅವರು ಹೋದ ಮರುಕ್ಷಣವೇ ಸೀನಿಯರ್ ಮಂದಿ ರೈಡ್ ಮಾಡಿ, ನಾವು ರಾತ್ರಿಯೆಲ್ಲ ರಾಗ್ಗಿಂಗ್ ಮಾಡಿಸಿಕೊಂಡಿದ್ದು ಬೇರೆ ಮಾತು ಬಿಡಿ. ಆದರೆ ಅವರ ಕಾಳಜಿಗೆ, ಪ್ರೀತಿಗೆ, ಆತ್ಮೀಯತೆಗೆ ಸದಾ ಕೃತಜ್ಞ.
ಸರಿ, ಮತ್ತೊಂದು ಪರಿಚಯ ಪತ್ರ ಇತ್ತು ನೋಡಿ. ಡಾ. ಖರೆ ಅವರಿಗೆ ಕೊಡಬೇಕಾಗಿದ್ದು. ಅದು ಹಾಗೆಯೇ ಇತ್ತು. ಮೊದಲನೇ ಸೆಮಿಸ್ಟರ್ ನಲ್ಲಿ modern physics ಅನ್ನುವ ಒಂದು ವಿಷಯ ಇತ್ತು. ಅದನ್ನು ಡಾ. ಖರೆ ಪಾಠ ಮಾಡುತ್ತಿದ್ದರು. ಅಷ್ಟೇ ನಮ್ಮ ತರಗತಿಗೆ ಅಲ್ಲ. ನಮ್ಮ ತರಗತಿಗೆ ಡಾ. ಸುಬುದ್ಧಿ ಅಂತ ಒಬ್ಬರಿದ್ದರು. ಮಜಾ ಕೇಳಿ. ಈ ಸುಬುದ್ಧಿ ಸಹ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಬಂದವರೇ. ಧಾರವಾಡದಲ್ಲಿ ರಾಭೂ ಇವರ ಬಗ್ಗೆ ಕೂಡ ಹೇಳಿದ್ದರು. ಆದರೆ ಇವರಿಗೆ ಪರಿಚಯ ಪತ್ರ ಇತ್ಯಾದಿ ಕೊಟ್ಟಿರಲಿಲ್ಲ. ಪಿಲಾನಿಯಲ್ಲಿ ಇಂತಹದೇ ಮಾಸ್ತರ್ ಕ್ಲಾಸಿಗೇ ಹೋಗಿ ಕೂಡಬೇಕು ಅಂತ ಏನೂ ನಿರ್ಬಂಧನೆ ಇಲ್ಲ. ನಿಮಗೆ ಯಾರು ಇಷ್ಟವಾಗುತ್ತರೋ ಅವರ ಕ್ಲಾಸಿಗೆ ಹೋಗಿ ಕೂಡಬಹುದು. ಸುಮ್ಮನೆ ತಲುಬಿಗೆ ಅಂತ ಒಂದು ದಿವಸ ಡಾ. ಖರೆ ಕ್ಲಾಸಿಗೆ ಹೋಗಿ ಕೂತಿದ್ದೆ. ಏನೋ ಸಕತ್ತಾಗಿ ಪಾಠ ಮಾಡಿದರು. ನಾವೇನೂ ಪಾಠ ಕೇಳಲಿಕ್ಕೆ ಹೋಗಿರಲಿಲ್ಲ. ಅಕಸ್ಮಾತ ಡಾ. ಖರೆ ಸಿಕ್ಕರೆ ಭೂಸನೂರಮಠ ಅವರು ಕೊಟ್ಟಿದ್ದ ಪತ್ರ ಅವರಿಗೆ ಕೊಟ್ಟು, ನಮಸ್ಕಾರ ಹೇಳಿ ಬಂದರಾಯಿತು ಅಂತ ಹೋಗಿದ್ದೆ.
ಕ್ಲಾಸು ಮುಗಿಯಿತು. ಯಾರ್ಯಾರೋ 'ಶಾಣ್ಯಾ' ಮಂದಿ ಡಾ. ಖರೆ ಹತ್ತಿರ ಏನೇನೋ ಪ್ರಶ್ನೆ ಕೇಳುತ್ತ ನಿಂತರು. ಆವತ್ತು ನಮಗೆ ಈ quantum physics, time-travel ಇತ್ಯಾದಿ ನಿಜವಾಗಿಯೂ ಅರ್ಥವಾಗಿರಲಿಲ್ಲ. ಹಾಗಾಗಿ ಅದನ್ನು 'ಅರ್ಥ ಮಾಡಿಕೊಂಡು', ಡೌಟ್ ಕೇಳುತ್ತ ನಿಂತ ಪಿಲಾನಿಯ ಶಾಣ್ಯಾ ದೋಸ್ತರನ್ನು, 'ಹ್ಯಾಂ???????' ಅನ್ನುತ್ತ ಧಾರವಾಡ ಶೈಲಿಯಲ್ಲಿ ಬೆಚ್ಚಿ ನೋಡುತ್ತ ನಿಂತಾಯಿತು. ಅದೇ ಹೊತ್ತಿಗೆ ಸೀನಿಯರ್, ಅದೂ ಒಬ್ಬಾಕೆ ಹುಡುಗಿ, 'ಏ, ಫ್ರೆಶರ್! ಬಾ ಇಲ್ಲಿ' ಅನ್ನಬೇಕೇ? 'ಸ್ವಲ ತಡಿ. ಇಲ್ಲಿ ಡಾ. ಖರೆ ಸಾಹೇಬರನ್ನು ಭೆಟ್ಟಿ ಆಗೋದೈತಿ. ನಿಂದರ್ ಬೇ ನಿಮ್ಮೌನ್!' ಅಂತ ಆಕೆಗೆ ಸನ್ನೆ ಮಾಡಿ ಖರೆ ಸಾಹೇಬರನ್ನು ಕಾದಿದ್ದಾಯಿತು. ಅಂದು ಅವರು, ಮತ್ತೆ ಬೇರೆ ಪ್ರೊಫೆಸರುಗಳು ಯಾರೂ ಹೇಳಿದಾಗ ತಿಳಿಯದ modern physics ಇಂದು ಆದಿ ಶಂಕಾರಾಚಾರ್ಯರರ ಅದ್ವೈತ ವೇದಾಂತ ಓದಿದಾಗ ಫಟಾಕ್, ಫಟಾಕ್ ಅಂತ ಅರ್ಥವಾಗುತ್ತಿದೆ. ಇದಕ್ಕೆ ಏನೆನ್ನೋಣ? Was I not ready yet back then??? May be not.
ಡಾ. ಖರೆ ಶಾಣ್ಯಾ ಹುಡುಗರ ಸಮಸ್ಯೆ ಇತ್ಯಾದಿ ಬಗೆಹರಿಸಿ, ನಿಧಾನವಾಗಿ ಹೊರಗೆ ಬಂದರು. ಸರಕ್ಕನೆ ಹೋಗಿ, ಧಾರವಾಡ ಶೈಲಿಯಲ್ಲಿ ಆಟಕಾಯಿಸಿಕೊಂಡು, ನಮಸ್ಕಾರ ಮಾಡಿದೆ. ವಿವರ ಹೇಳಿದೆ. ಭೂಸನೂರಮಠ ಅವರಿಗೆ, ನಮ್ಮ ಕುಟುಂಬಕ್ಕೆ ಇರುವ ದೋಸ್ತಿ ಎಲ್ಲ ವಿಷಯ ಹೇಳಿದೆ. ಡಾ. ಖರೆ ಸಮಾಧಾನದಿಂದ ಎಲ್ಲ ಕೇಳಿದರು.
ಎಲ್ಲ ಸಮಾಧಾನದಿಂದ ಕೇಳಿದ ಡಾ. ಖರೆ ಶುದ್ಧ ಮರಾಠಿಯಲ್ಲಿ ಶುರು ಹಚ್ಚಿಕೊಂಡುಬಿಟ್ಟರು. ಅವರಂತೂ ಮರಾಠಿ ಮಾನುಸ್ ಬಿಡಿ. ಆದರೆ ನಾನು ಕಾನಡಿ (ಕನ್ನಡದ) ಹೆಗಡೆ. ಎಲ್ಲಿ ನನ್ನ ಅಡ್ದೆಸರು ಹೆಗಡೆಯನ್ನು ಮರಾಠಿಯ ಹೇಗಡೆ ಅಂತ ಮಾಡಿಕೊಂಡು ಮರಾಠಿಯಲ್ಲಿಯೇ ಶುರು ಹಚ್ಚಿಕೊಂಡರೋ ಏನೋ ಗೊತ್ತಿಲ್ಲ. ನಿಮಗೆ ನಿಜ ಹೇಳಬೇಕು ಅಂದರೆ ಆವತ್ತಿಗೆ ನಮಗೆ ಧಾರವಾಡ ಕನ್ನಡ ಬಿಟ್ಟರೆ ಬೇರೆ ಯಾವದೇ ಭಾಷೆ ಸರಿಯಾಗಿ ಬರುತ್ತಿದ್ದಿಲ್ಲ. ಅದೂ ಸುನೀಲ್ ಶೆಟ್ಟಿ ಹಾಗೆ ತೋತ್ಲಾ ಮಾತಾಡುವದು ಮಾತ್ರ ಬರುತ್ತಿತ್ತು. ಇವರು ಹೋಗಿ ಹೋಗಿ ಮರಾಠಿಯಲ್ಲಿ ಬ್ಲೇಡ್ ಹಾಕತೊಡಗಿದರೆ ನಾವೇನು ಮಾಡೋಣ? ಹೆಂಗೋ ಮಾಡಿ, 'ಮರಾಠಿ ಮುಲಾಂ (ಮಾಲೂಮ್) ನಹಿ,' ಅಂತ ಹೇಳಿದ್ದಾಯಿತು. ಆವಾಗ ಡಾ. ಖರೆ ಮರಾಠಿಯಲ್ಲಿ ಕೊರೆಯುವದನ್ನು ನಿಲ್ಲಿಸಿದರು.
(ಹೆಗಡೆ ಉರ್ಫ್ ಹೇಗಡೆ ಉರ್ಫ್ 'ಹೇ ಗಧೆ' ಅಂದರೆ 'ಏ ಕತ್ತೆ' ಅಂತ ಪಿಲಾನಿಯ ಉತ್ತರ ಭಾರತದ ಮಿತ್ರರು ಸುಮ್ಮನೆ ಕಿಚಾಯಿಸಲು ನಮಗಿಟ್ಟ ಹೆಸರು. Standard across all national campuses. All Hegdes have to bear with it ;))
ಇಷ್ಟೆಲ್ಲ ಆದ ಮೇಲೆ ಡಾ. ಖರೆ ವಿಷಯಕ್ಕೆ ಬಂದರು. ಪ್ರೊ. ಭೂಸನೂರಮಠ, ಅವರ ಮಕ್ಕಳನ್ನೆಲ್ಲ ತುಂಬಾ ನೆನಪಿಸಿಕೊಂಡರು. ನಾನೂ ಸಹ ಅದೇ ಘರಾಣಾದಿಂದ ಹೊರಬಿದ್ದವನು ಅಂತ ಕೇಳಿ ತುಂಬ ಖುಷಿ ಪಟ್ಟರು. ರಾಭೂ ಕೊಟ್ಟಿದ್ದ ಪತ್ರ ಕೊಟ್ಟೆ. ಓದುತ್ತ ಓದುತ್ತ ಡಾ. ಖರೆ ಅವರ ಮುಖದ ಮೇಲೆ ಮಂದಹಾಸ ಮೂಡಿತು. ಮಸ್ತಾಗಿ ಬರೆದಿರಬೇಕು ರಾಭೂ.
***
ಮನ್ನಿತ್ತಲಾಗೆ ಪ್ರೊ. ರಾಜಶೇಖರ ಭೂಸನೂರಮಠ ಉರ್ಫ್ ರಾಭೂ, ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ, ನಿಧನರಾದರು ಅಂತ ತಿಳಿಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.
ಒಮ್ಮೊಮ್ಮೆ ಒಂದು ಘಟನೆ ನಡೆದಾಗ ಮೆದುಳಿನ ಅದು ಯಾವ್ಯಾವ ಕವಾಟಗಳು ತೆಗೆದುಕೊಳ್ಳುತ್ತವೋ ಏನೋ ಗೊತ್ತಿಲ್ಲ. ನೆನಪುಗಳು ಉಕ್ಕಿ ಬಂದು ಬಿಡುತ್ತವೆ. ಬರೆದು ಹಾಕುವ ತನಕ ಸಮಾಧಾನವಿಲ್ಲ.
'ರಾಭೂ ಬಗ್ಗೆ ಇಷ್ಟೇ ನೆನಪುಗಳೇ?' ಅಂತ ಕೇಳಿದರೆ 'ಇನ್ನೂ ಭಾಳ ಇವೆ,' ಅಂತನೇ ಹೇಳಬೇಕಾಗುತ್ತದೆ. ಸದ್ಯಕ್ಕೆ ಇಷ್ಟು ಸಾಕಲ್ಲವೇ?
12 comments:
Excellent tributes mahesh. Straight from the heart. I will tell A G Hiremath sir and his sons Praveen and Sunil to read it. Gururaj
ಒಳ್ಳೆಯ ಬರಹ. ಭೂಸನೂರಮಠ ಸರ್ ನಮಗೂ ಕಲಿಸಿದ್ದರು. ಅವರು E = mC2 ದ ಮಹತ್ವವನ್ನು ತಾಸುಗಟ್ಟಲೇ ವಿವರಿಸಿದ್ದು ಇನ್ನೂ ನೆನಪಿದೆ. ಗುರುಗಳ ಆತ್ಮಕ್ಕೆ ಶಾಂತಿ ಸಿಗಲಿ.
Thank you very much, Jamkhadi Sir. Pass on my regards to Prof. AG Hiremath and family.
ಧನ್ಯವಾದ ಅಂಗಡಿ ಅವರಿಗೆ.
Great tribute!
May his soul rest in peace.
Thanks Shailesh!
Sir, thank you very much for introducing Prof. Bhoosunuru to us...I love to read all your posts from past 1year ....its completely worthy reading.
ರಾಜಶೇಖರ ಭೂಸನೂರಮಠರು ಬರೆದ ‘ಝೋಂಬೀ’ ಎನ್ನುವ sci-fi ಕಾದಂಬರಿ ಸುಧಾ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಇದು ನನ್ನ ಮೆಚ್ಚಿನ sci-fi ಕಾದಂಬರಿ. ರಾಭೂರ ಆತ್ಮೀಯತೆಯನ್ನು ಓದಿ ಮನಸ್ಸು ಆಱ್ದ್ರವಾಯಿತು.
Thank you, Hemanth Kumar
ಧನ್ಯವಾದ ಸುನಾಥ ಸರ್.
ಕನ್ನಡದಲ್ಲಿ sci-fi ಬರೆಯುತ್ತಿದ್ದ ಕೆಲವೇ ಜನರಲ್ಲಿ ಭೂಸನೂರುಮಠರು ಪ್ರಮುಖರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ. RIP.
ಅವರ ನೆನಪಲ್ಲಿ ನಿನ್ನ ಪಿಲಾನಿ ನೆನಪುಗಳ ವಿವರಣೆ ಮಸ್ತಿದ್ದು.
Thank you, Vikas.
Post a Comment