Sunday, August 05, 2012

ಗೆಲಾಕ್ಸಿ ಗುಮಟೇಶ್ವರ

ಕರೀಂ ಸಾಬರು ಮತ್ತ ಸಿಕ್ಕಿದ್ದರು.

ಆದ್ರ ಈ ಸರೆ ಲುಕ್ ಮತ್ತ ಚೇಂಜ್ ಆಗಿತ್ತು. ವಿಗ್ಗು ಹೋಗಿತ್ತು. ಬಾಲ್ಡ್ ತಲಿ ವಾಪಸ್ ಬಂದಿತ್ತು. ಆದ್ರ ಒಂದೆರಡು ಎಕ್ಸಟ್ರಾ ಫಿಟ್ಟಿಂಗ್ ಸಹಿತ ತಲಿ ಮ್ಯಾಲೆ ಕಂಡವು.

ಎರಡು ಸುಮಾರು ದೊಡ್ಡ ಗಾತ್ರದ ಗುಮಟೆ. ಪೋಟ್ಲೀ. ಅದರೀ.....ತಲಿ ಎಲ್ಲರೆ ಹೋಗಿ ಜಜ್ಜಿಕೊಂಡ್ರಾ ಅಥವಾ ಯಾರರ ಕಟ್ಟಗಿ ರೂಲರ್ ಮತ್ತೊಂದು ತೊಗೊಂಡು ತಲಿಗೆ ಹೊಡದರ, ಅಲ್ಲೇ ಉಬ್ಬಿ ಒಂದು ಗುಮಟದ ಗತೆ ಏಳ್ತಾವ್ ನೋಡ್ರೀ....ಆ ತರಹದ ಗುಮಟ.

ಸಾಬ್ರಾ.....ಏನಾತ್ರೀ.....ತಲಿ ಮ್ಯಾಲೆ ಎರಡು ಗುಮಟ ಎದ್ದು ಒಳ್ಳೆ ಗುಮಟೇಶ್ವರ ಆಗೀರಲ್ಲ.....ಏನಾತ್ರೀ?......ಅಂದೆ.

ಕ್ಯಾ ಸಾಬ್? ಗುಮಟೇಶ್ವರ ಅಂದರೆ ಜೈನರದ್ದು ಭಗವಾನ್ ಅಲ್ಲಾ? ಅಲ್ಲಿ ಶ್ರವಣಿ ಬೆಳಿಗೋಲದಲ್ಲಿ ನಿಂತಿರೋ ಮೂರ್ತಿ ಕ್ಯಾ? ಅದಕ್ಕೆ ಏನೂ ಕಪಡಾ ವಸ್ತ್ರಾ ಇಲ್ಲಾ ಸಾಬ್. ನಾವು ಫುಲ್ ಕಪಡಾ ಹಾಕಿಕೊಂಡು ಬಂದರೂ ನಿಮ್ಮ ಕಣ್ಣಿಗೆ ನಂಗಾ ಪಂಗಾ ಗೊಮಟಾದು ಈಶ್ವರ ಕಂಡಂಗೆ ಕಾಣ್ತೀವಿ ಕ್ಯಾ? ಹಾಂ....ಹಾಂ....? - ಅಂತ ಹೂಂಕರಿಸಿದ.

ಸಾಬ್ರಾ.....ಅದು ಗೋಮಟೇಶ್ವರ ಬ್ಯಾರೆ....ನಿಮ್ಮ ತಲಿ ಮ್ಯಾಲೆ ಎರಡು ಗುಮಟ ಅಂದ್ರ ಪೋಟ್ಲೀ ಎದ್ದಾವ್ ನೋಡ್ರೀ....ಅದಕ್ಕ ಸುಮ್ಮನ ಗುಮಟೇಶ್ವರ ಅಂದೆ. ಏನ್ ಮಾಡಿಕೊಂಡ್ರೀ ಈ ಪರಿ ಗುಮಟ ...ಅದೂ ಎರಡೆರಡು ಏಳೂ ಹಾಂಗ....ಹಾಂ?.....ಅಂತ ಕೊಸ್ಚನ್ ಹಾಕಿ ಕೂತೆ.

ಸಾಬ್....ಇದೆಲ್ಲಾ ಆ ಮನೆಹಾಳ್ ಗೆಲಾಕ್ಸಿ ಕಮಾಲ. ಬೇಗಂ ಗೆ ಗೆಲಾಕ್ಸಿ ತರೋಕೆ ಹೋಗಿ ನಮ್ಮದು ತಲಿ ಮ್ಯಾಲೆ ಗುಮಟ ಬಂದು ಬಿಡ್ತು ಸಾಬ್......- ಅಂದು ಗುಮಟಗಳ ಮೇಲೆ ಕೈ ಆಡಿಸಿ - ಯಾ ಅಲ್ಲಾ - ಅಂತ ಸಣ್ಣ ದನಿಲೆ ನರಳಿದ.

ಏನ್ ಗೆಲಾಕ್ಸಿರೀ ಅದು? - ಅಂದೆ.

ಸಾಬ್....ಅವತ್ತು ಬೇಗಂ ಹೇಳಿದಳು.....ನಮಗೆ ಒಂದು ಗೆಲಾಕ್ಸಿ ತಂದು ಕೊಡಿ - ಅಂತ.

ಓಕೆ....ಅದೇನು ನಮಗೆ ಹೊಸಾದು ಕ್ಯಾ? ಗಂಡಾ ಮಂದಿ ಮಾಡೋ ಗಂಡಾಗುಂಡಿ ಕೆಲಸ ನೋಡಿ. ಮಾರ್ಕೆಟ್ ಹೋದಾಗ ತಂದರೆ ಆಯಿತು ಅಂತ ಬಿಟ್ಟೆ.

ನಮ್ಮದು........ ಅಲ್ಲಿ ಅಜಾದ್ ಪಾರ್ಕ್ ರೋಡಲ್ಲಿ ಕ್ಯಾನರಾ ಶೆಟ್ಟಿ ಅಂಗಡಿ ಇಲ್ಲಾ.....ನಮ್ಮದು ಖಾಯಂ ಕಪಡಾ ಅಂಗಡಿ. ಅಲ್ಲಿ ಹೋದೆ. ಅಲ್ಲಿ ಹೋಗ್ಬಿಟ್ಟಿ ಅಲ್ಲಿ ಇರೊ ಸೇಲ್ಸ್ ಹುಡುಗಿ ಕಡೆ - ಸ್ವಲ್ಪ ಗೆಲಾಕ್ಸಿ ಕೊಡಿ ಮೇಡಂ - ಅಂದೆ. ಆಕೆ ಯಾಕೋ ಕಿಸಿಕಿಸಿ ನಕ್ಕಳು ಸಾಬ್. ಯಾಕೋ ಏನೋ?

ಯಾರಿಗೆ ಸಾಬ್ರಾ.....ಯಾವ ಸೈಜಿನದು? - ಅಂತ ಆಕೆ ಕೇಳಿದಳು.

ಓಹೋ....ಇದು ತೊಗೋಬೇಕು ಅಂದ್ರೆ ಸೈಜ್ ಬೇಕು. ನಾವು ಬೇಗಂ ಹತ್ರ ಕೇಳಿ ಬರಲಿಲ್ಲ. ಈಗ ಸೈಜಗೆ ಏನ್ ಮಾಡ್ಬೇಕು? - ಅಂತ ವಿಚಾರ ಮಾಡಿದೆ ಸಾಬ್.

ಆ ಸೇಲ್ಸ್ ಹುಡುಗಿ ನೋಡಿದೆ. ಸುಮಾರ್ ನಮ್ಮ ಬೇಗಂ ಸೈಜಿಗೆ ಇದ್ದಳು ಸಾಬ್.

ನೋಡೀ.....ಮೇಡಂ....ನಿಮ್ಮ ಸೈಜಿಂದೇ ಕೊಟ್ಟಿಬಿಡಿ - ಅಂದೆ.  ಸ್ವಲ್ಪ ಶರಮ್ ಬೇರೆ ಬರ್ತಾ ಇತ್ತು. ನ್ಯಾಚುರಲ್ ನೋಡೀ.

ಆ ಸೇಲ್ಸ್ ಹುಡುಗಿ ಏಕದಂ ರೈಸ್ ಆಗ್ಬಿಟ್ಟಿ......ಬಾಯಿ ಬಾಯಿ ಬಡ್ಕೊಂಡಿ....ಆಕಿ ಕಡೆ ಇರೊ ಕಬ್ಬಿಣದ ಮೀಟರ್ ಪಟ್ಟಿಲೆ ತಲಿಗೆ ಒಂದು ಕೊಟ್ಟೇ ಬಿಟ್ಟಳು ಸಾಬ್.

ನನಗೆ ಯಾಕೆ ಅಂತ ತಿಳಿಲಿಲ್ಲ......ಸಾಬ್......ಅಂದ ಕರೀಂ.

ಯಾಕೆ ಮೇಡಂ? ಏನಾಯಿತು?- ಅಂತ ನಾನು ಕೇಳೋದ್ರಾಗೆ ಆ ಸೇಲ್ಸ್ ಗರ್ಲ್ ಲಬೋ ಲಬೋ ಅಂತ ಹೊಯ್ಯ್ಕೊಂಡು ಮಾಲೀಕರಾದ ಶೆಟ್ಟಿ ಬಂದರು.

ಶೆಟ್ಟಿಯವರೇ.....ನೋಡಿ....ಈ ಹಲ್ಕಟ್ ಕಸ್ಟಮರ್ ನನ್ನ ಸೈಜಿನ ಗೆಲಾಕ್ಸಿ ಕೊಡು ಅಂತಾ ಅಂದು ನನ್ನ ಜೊತೆ ಮಸ್ಕಗಿರಿ ಮಾಡ್ತಾನೆ....ಬುಡ್ಡಾ ಆಗಿದಾನೆ....ಆದ್ರೆ ಬದ್ಮಾಷಿ ನೋಡಿ.....ಹಾಕಿ ನಾಕು ಶೆಟ್ರೆ ಅವನಿಗೆ......ಅಂತ ಕಂಪ್ಲೇಂಟ್ ಕೊಟ್ಟಳು ಸೇಲ್ಸ್ ಗರ್ಲ್.

ನನಗೆ ತಲೆಬುಡ ತಿಳಿದೆ ತಲಿ ತಿಕ್ಕೋತ್ತಾ ನಿಂತಿದ್ದೆ. ಒಂದು ನಿಮಿಷದಲ್ಲಿ ಒಂದು ಪೋಟ್ಲೀ ಗುಮಟ ಎದ್ದೇ ಬಿಡ್ತು ನೋಡಿ ಸಾಬ್.

ಹೋಗ್ಗೋ....ಸಾಬ್ರಾ....ಎಂಥಾ ಇನೋಸೆಂಟ್ ಮಿಸ್ಟೇಕ್ ಮಾಡಿ ಸೇಲ್ಸ್ ಗರ್ಲ್ ಕಡೆ ಬಡಿಸಿಕೊಂಡರಲ್ಲರ್ರಿ.....ಛೆ.....ಛೆ.....ಅಲ್ಲ....ನಿಮ್ಮ ಕಡೆ ಫೋನ್ ಇತ್ತು. ಒಂದು ಮಾತು ನಿಮ್ಮ ಬೇಗಂ ಫೋನ್ ಮಾಡಿ ಸೈಜ್ ಕೇಳಬಾರದಾಗಿತ್ತು ಏನು? ಹಾಂ....ಹಾಂ....ಏನ್ರೀ? - ಅಂದೆ.

ಅಯ್ಯೋ....ಬಿಡಿ ಸಾಬ್....ಅಕಿ ಹೇಳೇ ಬಿಟ್ಟಿದಾಳೆ ಗಂಡಾ ಆಗಿ ಅದೆಲ್ಲಾ ನೆನಪ ಇಲ್ಲಾ ಅಂದ್ರೆ ಹಿಡದು ಒದಿತೀನಿ ಅಂತ. ಅದಕ್ಕೇ ಬಿಟ್ಟೆ ಸಾಬ್  - ಅಂತ ನಿಟ್ಟುಸಿರು ಬಿಟ್ಟ.

ಅಷ್ಟರಲ್ಲಿ ಶೆಟ್ಟಿ ಸಾಬ್ ಗೆ ಎಲ್ಲಾ ಮಾಲೂಮ್ ಆಗಿಬಿಟ್ಟಿ, ಅವರೇ ನಮ್ಮ ಬೇಗಂ ಸೈಜಿಂದು ಗೆಲಾಕ್ಸಿ ತಂದು ಕೊಟ್ಟು....ಸಾಬ್ರಾ.....ಮೊದಲು ಇಲ್ಲಿಂದ ಜಾಗ ಖಾಲಿ ಮಾಡ್ರಿ.....ಇಲ್ಲಂದ್ರಾ ಅಕಿ ಸೇಲ್ಸ್ ಗರ್ಲ್ ಬಾಕಿ ಕಸ್ಟಮರ್ಸ್ ಸೇರ್ಸಿ ನಿಮ್ಮ ಹೆಣಾ ಹಾಕೇ ಬಿಡ್ತಾಳ್.....ಜ್ವಾಕಿ....ಹೊಂಡ್ರೀ......ಅಂತ ಗಡಿಬಿಡಿ ಮಾಡಿದ್ರು. ಅದಕ್ಕೇ ನಾವು ತಾಪಡತೊಪ್ ಅಲ್ಲಿಂದ ಕಾಲ್ಕಿತ್ತಿ ಮನಿಗೆ ಓಡಿ ಬಂದ್ವಿ ಸಾಬ್ - ಅಂತ ಕ್ಯಾನರಾ ಶೆಟ್ಟರ ಬಟ್ಟಿ ಅಂಗಡಿಯೊಳಗ ಹ್ಯಾಂಗ ಮೊದಲ ಗುಮ್ಮಟ ಬಂತು ಅನ್ನೋದನ್ನ ಫುಲ್ ತಿಳಿಸಿದ. ಇವನ ಯಬ್ಬಂಕತನಕ್ಕಾ ನಾ ತಲಿ ತಲಿ ಚಚ್ಚಿಕೊಂಡೆ. ನನ್ನ ತಲಿ ಮ್ಯಾಲೆ ಗುಮಟ ಬರೋದು ಬಾಕಿ ಇತ್ತು ಅಷ್ಟ.

ಓಹೋ....ಹೀಂಗಾತು ಅಂತ ಆತು.....ಮುಂದಿನ ಗುಮಟ ಹ್ಯಾಂಗ ಬಂತ್ರೀ ಸಾಬ್ರಾ?.....ಅಂತ ನೆಕ್ಸ್ಟ್ ಗುಮಟದ ಹಿಂದಿನ ಕಾರಣ ಕೇಳಿದೆ.

ಸಾಬ್.....ನಾನು ಗೆಲಾಕ್ಸಿ ತಗೊಂಡು ಹೋಗಿ ಬೇಗಂಗೆ ಕೊಟ್ಟೆ. ಬಿಚ್ಚಿ ನೋಡಿದವಳೇ ಚಿಟಿ ಚಿಟಿ ಅಂತ ರೂಫ್ ಕಿತ್ತಿಹೊಗೋ ಹಾಗೆ ಚೀರಿದಳು. ಕೈಯಾಗೆ ಇದ್ದ ಲಟ್ಟಣಿಗೆ ತೊಗೊಂಡು ತಲಿ ಮ್ಯಾಲೆ ಒಂದು ಕೊಟ್ಟಳು.ಅದರಿಂದ ಎರಡನೇ ಗುಮಟ ಬಂತು ಸಾಬ್......ಅಂತ ಅತ್ತ ಕರೀಂ.

ಅಲ್ರೀ....ಇದು ಅತಿ ಆತು. ಅಕಿ ಗೆಲಾಕ್ಸಿ ಬೇಕು ಅಂದಿದ್ದಕ್ಕ ನೀವು ಹೋಗಿ ತಂದು ಕೊಟ್ರೀ. ಅದೂ ಬಹಳ ಸಾಹಸ ಮಾಡಿ. ಅದಕ್ಕ ಖುಷಿ ಪಡದಾ ಯಾಕ ನಿಮಗ ಕಡತಾ ಕೊಟ್ಟಳು ಅಕಿ?.....ಅಂತ ಕೇಳಿದೆ ಸಾಬರನ್ನ.

ಸಾಬ್.....ಅಕಿಗೆ ಬೇಕಾದ ಗೆಲಾಕ್ಸಿನೇ ಬೇರೆ ಅಂತೆ....ನಾನು ತಂದ ಗೆಲಾಕ್ಸಿ ಅಕಿಗೆ ಉಪಯೋಗವಿಲ್ಲವಂತೆ. ಯಾಕಂದರೆ ಅಕಿ ಬೇಕಾದಷ್ಟು ವಿಲಾಯತಿ ಗೆಲಾಕ್ಸಿ ದುಬೈಗೆ ಹೋದಾಗ ಖರೀದಿ ಮಾಡಿ ಬಿಟ್ಟಾಳಂತೆ. ಮತ್ತೆ ಅಕಿ ದೇಸಿ ಬ್ರಾಂಡ್ ಹಾಕೊದಿಲ್ಲವಂತೆ. ಅದು ಏನು "ವಿಕ್ಟರೀ ಸಿಗರೇಟ್" (ವಿಕ್ಟೋರಿಯಾ ಸಿಕ್ರೆಟ್???) ಬ್ರಾಂಡ್ ಮಾತ್ರ ಹಾಕೋದು ಅಂತೆ.....ಹೀಗೆ ಸಾಬ್.....- ಅಂತ ತನ್ನ ದರ್ದ್ ಭರಿ ದಾಸ್ತಾನ್ ಹೇಳಿ ಮುಗಿಸಿದ.

ಸಿಕ್ಕಾಪಟ್ಟೆ ನಗು ಬಂತು. ಅಕಿ ಏನೋ ಹೇಳಿರಬೇಕು.....ಇವ ಹೋಗೀ ಏನೋ ತಂದು ಕೊಟ್ಟು....ಎಡಬಿಡಂಗಿ ಕೆಲಸ ಮಾಡಿ,ಅಕಿ ಕಡೆ ಲಟ್ಟಣಿಗೆಯಿಂದ ತಿಂದಾನ. ತಿಂದು ಗುಮಟ ಎಬ್ಬಿಸಿಕೊಂಡಾನ. ಛೆ!!!ಛೆ!!!

ಅಲ್ರೀ....ಕರೀಂ ಸಾಬ್ರಾ....ಅಕಿಗೆ ಏನು ಗೆಲಾಕ್ಸಿ ಬೇಕಾಗಿತ್ತಂತ? ತಿಳಿತೇನು?

ಸಾಬ್.....ಅದು ಯಾವದೋ ಹೊಸ ಮೊಬೈಲ್ ಫೋನ್ ಬಂದಿದೆ ಅಂತೆ. ಸ್ಯಾಮಸಂಗೀದು ಗೆಲಾಕ್ಸಿ ಅಂತ.  ಭಾಳ ದುಬಾರಿ ಅದು. ಕಂಸೆಕಂ ಸುಮಾರು ನಾಲ್ವತ್ತು ಸಾವಿರ ರೂಪಾಯಿ. ಅದು ಬೇಕಾಗಿತ್ತಂತೆ. ನಮಗೆ ಏನು ಗೊತ್ತು ಸಾಬ್? ನಮ್ಮ ಕಡೆ ಎಂಟು ವರ್ಷ ಹಳೆ ನೋಕಿಯ ಫೋನ್ ಇದೆ. ಇಕಿ ಗೆಲಾಕ್ಸಿ ಬೇಕು ಅಂದ ಕೂಡಲೇ ನಾವು ನಮಗೆ ಗೊತ್ತಿದ್ದ ಗೆಲಾಕ್ಸಿ ತಂದು ಕೊಟ್ಟರೆ, ಹೀಗೆ ಆಗಿ ಬಿಡ್ತು ಸಾಬ್......- ಅಂತ ಗುಮಟ ಸವರಿಕೊಂಡ.

ಹೋಗ್ಲಿ ಬಿಡ್ರೀ...ಸಾಬ್ರ.....ಒಂದು ಸಾಮ್ಸಂಗ್ ಗೆಲಾಕ್ಸಿ ಕೊಡಿಸಿ ಒಗಿರಿ ಅತ್ಲಾಗ......ಇಲ್ಲಾ ಅಂದ್ರ ದಿನ ಕಡತ ಬಿದ್ದವು ಅಂದ್ರ ಗುಮಟ ಬರಲಿಕ್ಕೆ ತಲಿ ಮ್ಯಾಲೆ ಜಗ ಇರಂಗಿಲ್ಲ ನೋಡ್ಕೊರೀ ಮತ್ತಾ......ಅಂತ ವಾರ್ನಿಂಗ್ ಕೊಟ್ಟೆ.

ಆಯ್ತು ಸಾಬ್....ನಮ್ಮದು ಜಾನ್ ಒತ್ತಿ ಇಟ್ಟು ಆದರೂ ಒಂದು ನಾಲ್ವತ್ತ ಸಾವಿರ ಇಕಟ್ಟಾ ಮಾಡ್ಬಿಟ್ಟಿ ಆಕಿಗೆ ಲಗೂನೆ ಒಂದು ಸ್ಯಾಮಸಂಗೀ ಗೆಲಾಕ್ಸಿ ಕೊಡಿಸೇ ಬಿಡ್ತೇನಿ ಸಾಬ್....ಈಗ ಬರಲಾ ಸಾಬ್? ಖುದಾ ಹಾಫಿಜ್ - ಅಂತ ಅಂದು ಕರೀಂ ಹೋದ.

ಪಾಪ.............. ಯಾವದೋ ಗೆಲಾಕ್ಸಿ ಕೇಳಿದರ ಇನ್ನ್ಯಾವದೋ ಗೆಲಾಕ್ಸಿ ಕೊಡಿಸಿ ಸಾಬರು "ಗೆಲಾಕ್ಸಿ ಗುಮಟೇಶ್ವರ" ಆಗಿ ಬಿಟ್ಟರು.

** ೧೯೯೦  ರ ದಶಕದಲ್ಲಿ ಬ್ರಾ ಅಂದ್ರೆ ಗೆಲಾಕ್ಸಿ, ಗೆಲಾಕ್ಸಿ ಅಂದ್ರೆ ಬ್ರಾ ಅನ್ನೋ ತರಹ ಇತ್ತು.  ನಿರ್ಮಾ ಅಂದ್ರೆ ವಾಷಿಂಗ ಪೌಡರ್, ವಾಶಿಂಗ್ ಪೌಡರ್ ಅಂದ್ರೆ ನಿರ್ಮಾ ಅನ್ನೋ ತರಹ. Brand was THE product. ಆಗಿನ್ನೂ ಬೇರೆ ಬೇರೆ ಇಂಟರ್ ನ್ಯಾಷನಲ್ ಬ್ರಾಂಡ್ ಬಂದಿರಲಿಲ್ಲ ನೋಡಿ. ಆ ಗೆಲಾಕ್ಸಿ ಬ್ರಾ ಅಡ್ವರ್ಟೈಸ್ಮೆಂಟ್ ಮಯೂರ, ಸುಧಾ, ಇತ್ಯಾದಿಗಳಲ್ಲಿ  ಬರುತ್ತಿದ್ದವು. ಹಾಕಿಕೊಂಡು ಕುಳಿತ ಯಾರೋ ಸುಂದರಿಯ ಕಪ್ಪು ಬಿಳುಪು ಚಿತ್ರ. ಹಾಗಾಗಿ ನಮ್ಮ ಜಮಾನಾ ಮಂದಿಗೆ ಗೆಲಾಕ್ಸಿ ಅಂದ ಕೂಡಲೇ ತಲಿಗೆ ಹೊಳಿಯುವದು ಅದೇ. ಈಗೇನು ವಿಧವಿಧದ ಬ್ರಾಂಡ್ ಬಂದು ಗೆಲಾಕ್ಸಿ ಎಲ್ಲಿ ಹೋಗಿದಿಯೋ ದೇವರಿಗೆ ಗೊತ್ತು. ಹಾಗಾಗಿ ಸಾಮ್ಸಂಗ್ ಗೆಲಾಕ್ಸಿ ಮೊಬೈಲ್ ಫೋನ್ ಅಂದರೂ ಸಾಬರಿಗೆ ಮೊದಲು ವಿಚಾರ ಬಂದಿದ್ದು ಅದೇ! ಈ ವಿವರಣೆಯೆಲ್ಲ ತಿಳಿಯಲಾರದವರಿಗೆ ಮಾತ್ರ.

**  ಈಗ ಮಂದಿ ಸ್ಯಾಮ್ಸಂಗ್ ಗೆಲಾಕ್ಸಿ ಫೋನು, ಟ್ಯಾಬ್ಲೆಟ್ಟು ಮತ್ತೊಂದು ತೊಗೊಂಡು - ನನ್ನ ಹೊಸ ಗೆಲಾಕ್ಸಿ ನೋಡ್ರೀ - ಅಂತ ತೋರಿಸಲಿಕ್ಕೆ  ಬಂದಾಗ ನಮ್ಮ ಹಾಪ್ ಧಾರವಾಡ ತಲಿಗೆ ನೆನಪು ಆಗೋದು ಅಂದ್ರ ಅದಾ!!!! 

1 comment:

Anonymous said...

Nice one !! Ha Ha Ha !!!