Thursday, August 16, 2012

ಮಾಂಗಲ್ಯ ಕಟ್ಟಬೇಡಿ ಸಾರ್.....ಕೊಟ್ಟುಬಿಡಿ ಸಾಕು

ಇಂಗ್ಲಿಷ್ ನಲ್ಲಿ ಎರಡು ಶಬ್ದ ಇವೆ. ಒಂದು ನಾಲೇಜ್  (knowledge). ಇನ್ನೊಂದು ವಿಸ್ಡಂ (wisdom).

ನಾಲೇಜ್ ಗೆ ಜ್ಞಾನ ಅನ್ನಬಹುದು. ವಿಸ್ಡಂ ಗೆ ಸಂದರ್ಭಾನುಸಾರ ವಿವೇಕ, ತಿಳುವಳಿಕೆ, ಅರಿವು, ಪ್ರಜ್ಞೆ ಹೀಗೆ ಬೇರೆ ಬೇರೆ ಶಬ್ದ ಉಪಯೋಗಿಸುತ್ತಾರೆ.

ಉದಾರಣೆ ಸಮೇತ ಹೇಳಿದರೆ ಸುಲಭ.

ಇಂಗ್ಲಿಷ್ ನಲ್ಲಿ ಒಂದು ಮಾತಿದೆ.

“Knowledge is knowing the tomato is a fruit, wisdom is not putting in your fruit salad.”

― Miles Kington 

ಅಂದ್ರೆ - ಟೊಮ್ಯಾಟೋ ಒಂದು ಹಣ್ಣು ಅಂತ ಗೊತ್ತಿರುವದು ಜ್ಞಾನ. ಟೊಮ್ಯಾಟೋವನ್ನು ಫ್ರುಟ್ ಸಾಲಡ್ ನಲ್ಲಿ ಹಾಕಬಾರದು ಅಂತ ಗೊತ್ತಿರುವದು ವಿವೇಕ, ಅರಿವು, ಪ್ರಜ್ಞೆ.

ಏನೋ..............ಸುಮಾರು ವರ್ಷದ ಹಿಂದೆ ಓದಿದ ಘಟನೆ ನೆನಪಾಯಿತು.

ಬೆಂಗಳೂರು.  2003-4-5 ರ ಮಾತು. ಪೋಲೀಸರ ಒಂದು ಕಾರ್ಯಕ್ರಮ. ನಿಮಗೆ  ಗೊತ್ತಿರುವಂತೆ ಪೊಲೀಸರು ಆಗಾಗ ವಶಪಡಿಸಿಕೊಂಡ ಕದ್ದ ಮಾಲು ಸಾರ್ವಜನಿಕರಿಗೆ ವಾಪಸ್ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.

ಇದೂ ಅಂತಹದೇ ಕಾರ್ಯಕ್ರಮ. ಪೊಲೀಸರು ಕಳ್ಳರನ್ನು ಹಿಡಿದು, ವಶಪಡಿಸಿಕೊಂಡಿದ್ದ ಮಾಲುಗಳನ್ನೆಲ್ಲ ನೀಟಾಗಿ ಅರೇಂಜ್
ಮಾಡಿ ಇಟ್ಟಿದ್ದರು. ಹೆಚ್ಚಿಗೆ ಸಂಖ್ಯೆಯಲ್ಲಿ ಇದ್ದ ಆಭರಣಗಳು ಅಂದರೆ - 'ಮಾಂಗಲ್ಯ' (ಕರಿಮಣಿ ಸರ). ಹಾಗಾಗಿ ತಮ್ಮ ಮಾಲು ವಾಪಸ್ ಪಡಿಯಲು ಬಂದಿದ್ದ ಹೆಂಗಸರಲ್ಲಿ ಮುತ್ತೈದೆಯರೇ ಜಾಸ್ತಿ ಇದ್ದರು.

ಆಗಿನ ಪೋಲಿಸ್ ಕಮೀಷನರ ಸಾಹೇಬರೂ ಬಂದಿದ್ದರು. ಅಷ್ಟು ದೊಡ್ಡ ಪ್ರೊಗ್ರಾಮ್. ಅವರು ಬಂದಿಲ್ಲ ಅಂದರೆ ಹೇಗೆ? ಅವರೇ ಸುಮಾರು ಜನರಿಗೆ ಆಭರಣ ಹಿಂದೆ ತಿರುಗಿಸುವ ಕೆಲಸ ಮಾಡಿ, ಫೋಟೋ ತೆಗಿಸಿಕೊಂಡು ಹೋಗುವ ಪ್ಲಾನ್ ನಲ್ಲಿ ಇದ್ದರು.

ಕಾರ್ಯಕ್ರಮ ಶುರು ಆಯಿತು. ಮೊದಲ ಮಹಿಳೆಯ ಹೆಸರು ಕರಿಯಲಾಯಿತು. ಆಕೆ ಬಂದರು. ಜೂನಿಯರ್ ಪೋಲಿಸ್ ಅಧಿಕಾರಿ ಆಕೆಯ ಕಳೆದು ಹೋಗಿದ್ದ 'ಮಾಂಗಲ್ಯ' ಕಮೀಷನರ ಸಾಹೇಬರ ಕೈಗೆ ಕೊಟ್ಟರು.

ಎಲ್ಲರೂ expect ಮಾಡಿದ್ದೇನು? ಕಮೀಷನರ ಸಾಹೇಬರು ಆ ಮಹಿಳೆಯ ಕೈಗೆ ಮಾಂಗಲ್ಯ ಕೊಟ್ಟು ಕೈ ಮುಗಿಯುತ್ತಾರೆ. ಆಕೆಯೂ ಮಾಂಗಲ್ಯ ಸರ ಇಸಿದುಕೊಂಡು ಧನ್ಯವಾದದ ರೂಪದಲ್ಲಿ ಕೈ ಮುಗಿದು, ವೇದಿಕೆ ಇಳಿದು ಹೋಗುತ್ತಾರೆ.

ಆದ್ರೆ ಆಗಿದ್ದೆ ಬೇರೆ. ನೋಡಿ ಜನರೆಲ್ಲ ಘಾಬರಿ ಬಿದ್ದು ಹೋದರು. ಮಾಂಗಲ್ಯ ಇಸಿದುಕೊಳ್ಳಲು ಬಂದ ಮಹಿಳೆಯ ಕೈಯಲ್ಲಿ ಅದನ್ನು ಕೊಟ್ಟು ಕಳಿಸುವ ಬದಲು, ಕೊರಳಿಗೆ ಕಟ್ಟಲು  / ಹಾಕಲು  ಹೊರಟು ಬಿಟ್ಟರು ಕಮೀಷನರ ಸಾಹೇಬರು. ಮಹಿಳೆ ಮುಜುಗರದಿಂದಲೋ, ಅಸಹ್ಯದಿಂದಲೋ ಎರಡು ಮಾರು ದೂರ ಹಾರಿದರು. ಆ ಮಹಿಳೆಗೆ ಅನ್ನಿಸಿರಬೇಕು - ಏನಪ್ಪಾ ಇವರು. ಇಷ್ಟು ದೊಡ್ಡ ಸಾಹೇಬರು. ಕಾಮನ್ ಸೆನ್ಸ್ ಇಲ್ಲವಾ ಇವರಿಗೆ? ಕರಿಮಣಿ ಸರ ಕೊರಳಿಗೆ ಹಾಕಲು ಬರುತ್ತಾರಲ್ಲ. ಅದೇನು ಸತ್ಕಾರಕ್ಕೆ ಹಾಕುವ ಹೂವಿನ ಮಾಲೆಯೇ? ಹೂವಿನ ಮಾಲೆಯೇ ಇದ್ದರೂ ಮಹಿಳೆಯರ ಕೈಗೆ ಕೊಟ್ಟು ಕೈ ಮುಗಿಯುವದು ನಮ್ಮ ಸಂಸ್ಕೃತಿ.

ಜೂನಿಯರ್ ಅಧಿಕಾರಿಗಳು - ಸಾರ್....ಸಾರ್....ಸುಮ್ಮನೆ ಕೈಗೆ ಕೊಡಿ ಸಾರ್ - ಅಂತ ಸಣ್ಣ ದನಿಯಲ್ಲಿ ಹೇಳುತ್ತಿದ್ದರು. ಏನು ಮಾಡಿಯಾರು? ಒಬ್ಬ ಸಬ್ ಇನ್ಸ್ಪೆಕ್ಟರ್ ಕಮೀಷನರ ಸಾಹೇಬರಿಗೆ ಏನಂತ ಹೇಳಿಯಾನು? ಸಣ್ಣ ದನಿಯಲ್ಲಿ ಅಲ್ಲದೆ ಮತ್ತೆ ಹೇಗೆ ಹೇಳಿಯಾನು?

ಕಮೀಷನರ ಸಾಹೇಬರಿಗೆ ಮಾತ್ರ ಫುಲ್ ಆಶ್ಚರ್ಯ. ಯಾಕೆ ಈ ಮಹಿಳೆ ದೂರ ಓಡುತ್ತಿದ್ದಾಳೆ ಅಂತ. ಇವರೂ ಒಂದೆರಡು ಹೆಜ್ಜೆ ಮುಂದೆ ಹೋದರು. ಆ ಮಹಿಳೆ ಎಲ್ಲಿ ಸಾಹೇಬರು ತಮ್ಮ ಫುಲ್ ಪೋಲಿಸ್ ಶಕ್ತಿ ಉಪಯೋಗಿಸಿ ತಾಳಿ ಕಟ್ಟಿಯೇ ಬಿಡುತ್ತಾರೋ ಅಂತ ಬೆದರಿದ ಹುಲ್ಲೆ ತರಹ ಲುಕ್ ಕೊಡುತ್ತ, ಗಡಗಡ  ನಡುಗುತ್ತ, ವೇದಿಕೆಯ ತುದಿಗೆ ಬಂದು  ಸೀರೆ ಸೆರಗನ್ನು  ಮತ್ತೂ ಗಟ್ಟಿಯಾಗಿ ಸುತ್ತಿಕೊಳ್ಳುತ್ತಾ, ಭಗವಂತಾ ಕಾಪಾಡು ಅನ್ನುತ್ತ ನಿಂತೇ ಬಿಟ್ಟರು. ಇನ್ನೊಂದು ಹೆಜ್ಜೆ ಮುಂದಿಟ್ಟರೆ ವೇದಿಕೆಯಿಂದ ಕೆಳಗೆ ಕಾಲು ಮತ್ತೊಂದು ಮೇಲ್ಮಾಡಿಕೊಂಡು ಬಿದ್ದಿರುತ್ತಿದರೋ ಏನೋ....?........ಪಾಪ.

ಇನ್ನೂ ಸುಮ್ಮನಿದ್ದರೆ ದೊಡ್ಡ ಮಟ್ಟದ ಅನಾಹುತ ಆಗೇ ಬಿಡುತ್ತದೆ ಅಂತ ಗ್ರಹಿಸಿದ ಸುಮಾರು ದೊಡ್ಡ DCP ಮಟ್ಟದ ಅಧಿಕಾರಿಯೊಬ್ಬರು ಬಂದು ಸಾಹೇಬರ ಕಿವಿಯಲ್ಲಿ ಮೆಲ್ಲಗೆ ಉಸಿರಿದರು. ಸಾರ್, ಅದನ್ನ ಕೊರಳಿಗೆ ಹಾಕಲೇ ಬಾರದು ಸಾರ್. ಕೇವಲ ಆಕೆಯ ಗಂಡ ಮಾತ್ರ ಮಾಡಬಹುದಾದ ಕೆಲಸ ಅದು. ಸುಮ್ಮನೆ ಕೈಯಲ್ಲಿ ಕೊಟ್ಟುಬಿಡಿ ಸಾರ್ - ಅಂತ ಅಂದರು.

ಕಮೀಷನರ ಸಾಹೇಬರು - ಯಾಕೆ? ಏನು ಮಹಾ? ಕಟ್ಟಿದರೆ ಏನು ತಪ್ಪು?- ಅನ್ನುವ ಲುಕ್ ಕೊಟ್ಟರು. ಮಹಿಳೆಯ ಕಡೆ ನೋಡಿದರು. ಆಕೆ ಅಳುವದೊಂದೇ ಬಾಕಿ. ಹಾಳಾಗಿ ಹೋಗಲಿ ಅಂತ ಆಕೆಯ ಕೈಯಲ್ಲಿ ತುರುಕಿ ಗಡಬಿಡಾಯಸಿ ಹೋಗೇ  ಬಿಟ್ಟರು. ಬೇರೆ ಅಧಿಕಾರಿಗಳು ಉಳಿದ ಜನರಿಗೆ ಅವರವರ ಆಭರಣ ಮುಂತಾದವನ್ನು ಹಿಂತಿರುಗಿಸಿದರು.

"ಮಾಂಗಲ್ಯ ಒಂದು ತರಹದ ಕೊರಳಲ್ಲಿ ಹಾಕಿಕೊಳ್ಳೋ ಸರ ಅಂತ ಗೊತ್ತಿರುವದು ಜ್ಞಾನ. ಕಂಡಕಂಡವರಿಗೆ ಅದನ್ನು ಕೊರಳಲ್ಲಿ ಕಟ್ಟಬಾರದು / ಹಾಕಬಾರದು ಎಂದು ತಿಳಿದಿರುವದು ವಿವೇಕ."

ಯಾಕೋ ಆ ಟೊಮ್ಯಾಟೋ ಕೊಟೇಶನ್ ಓದುತ್ತಿದ್ದಾಗ ಈ  ಪೋಪಂ(ಪೋಲಿಸ ಪಂಗಾ) ನೆನಪಾಯಿತು.

ಆ ಕಾಲದದಲ್ಲಿ ಮರುದಿವಸ ಪತ್ರಿಕೆಗಳಲ್ಲಿ ಕಮೀಷನರ "ಮಾಂಗಲ್ಯ ಕಟ್ಟಲು ಹೋದ" ಸುದ್ದಿ ರುಚಿ ರುಚಿಯಾಗಿ ಪ್ರಕಟವಾಗಿತ್ತು. ಪತ್ರಕರ್ತರು ಚೆನ್ನಾಗಿಯೇ ಸಾಹೇಬರ ಕಾಲೆಳದಿದ್ದರು. ಕಿಚಾಯಿಸಿದ್ದರು.

ಅಯ್ಯೋ.....ಪಾಪ ಸಾಹೇಬರು......ಎಲ್ಲೋ ಉತ್ತರ ಪೂರ್ವ ರಾಜ್ಯದಿಂದ ಬಂದಿದ್ದಾರೆ. ಅದೂ ಗುಡ್ಡಗಾಡು ಜನಾಂಗದವರು. ಅವರಿಗೆ ನಮ್ಮ ರೀತಿ ನೀತಿ ಗೊತ್ತಿರಲಿಕ್ಕಿಲ್ಲ. ಅವರ ಜನರಲ್ಲಿ ಕರಿಮಣಿ ಮಾಂಗಲ್ಯ ಮತ್ತೊಂದು ಕಟ್ಟೋದಿಲ್ಲ. ಅದಕ್ಕೆ ಪಾಪ ಅವರಿಗೆ confuse ಆಯಿತು - ಅಂತ ಕೆಲವರು ಬೆನಿಫಿಟ್ ಆಫ್ ಡೌಟ್ ಕೊಟ್ಟರು.

ಆದ್ರೆ IPS ಆದಾಗಿಂದ ಕರ್ನಾಟಕದಲ್ಲೇ ಇದ್ದ ಅವರಿಗೆ ಮಾಂಗಲ್ಯದ ಬಗ್ಗೆ ಇರುವ ರೀತಿ ನೀತಿ, ಸಂಪ್ರದಾಯ, ಪದ್ಧತಿ  ಗೊತ್ತಿರಲಿಲ್ಲ ಅಂದ್ರೆ....? ಏನೋಪ್ಪಾ?

ಈ ಕಮೀಷನರ ಸಾಹೇಬರು ಮಾಂಗಲ್ಯ ಹಿಡಕೊಂಡು, ಅದನ್ನ ಕಟ್ಟೋ ಪೋಸಿಶನ್ ತಗೊಂಡು, ಆ ಯಮ್ಮನ ಹತ್ತಿರ ಹೋಗೋವಾಗ,  ಆ ಯಮ್ಮನ ಮುಖ ನೋಡಿದ್ರೆ - ಮಾಂಗಲ್ಯಂ ತಂತು ನಾನೇನಾ, ಮಮ ಜೀವನ "ಹೇತು" ನಾಂ - ಅನ್ನೋ ತರಹ  ಆಗಿತ್ತು ಸಾರ್ - ಅಂತ ಕಿಡಿಗೇಡಿ ಪೋಲಿಸ ಪೇದೆಯೊಬ್ಬ ಅಂಡು ಬಡಿದುಕೊಂಡು ನಕ್ಕನಂತೆ. ಕೇಳಿಸಿಕೊಂಡ ಟ್ಯಾಬ್ಲೋಯಿಡ್ ಪತ್ರಕರ್ತ ಮುಂದಿನ ವಾರ ಚೆನ್ನಾಗಿಯೇ ಕಿಚಾಯಿಸಿದ್ದ.

ಹೀಗೆ ಇನ್ನೊಂದು ಸಮಾರಂಭವೂ ಆಗಿತ್ತಂತೆ. ಅದೆಂದರೆ ರೌಡಿ ಲಿಸ್ಟಿನಿಂದ ಮಾಜಿ ರೌಡಿಗಳನ್ನು ತೆಗೆಯುವದು ಮತ್ತು ಅವರಿಗೆ ಮುಕ್ತಿ ಕೊಡುವದು. ಗಲಾಟೆ, ಗಿಲಾಟೆ ಆದ್ರೆ ರೌಡಿ ಲಿಸ್ಟಿನಲ್ಲಿ ಇರೋ ಜನರನ್ನೇ ಮೊದಲು ಎಳೆದುಕೊಂಡು ಹೋಗಿ ವಿಚಾರಣೆ ಮಾಡುತ್ತಾರೆ. 5-10 ವರ್ಷಕ್ಕೊಮ್ಮೆ ರೌಡಿ ಲಿಸ್ಟ್ ರಿವೈಸ್ ಮಾಡಿ, ರೌಡಿಸಂ ಬಿಟ್ಟವರನ್ನ ಕರೆದು ಒಂದು ಸಮಾರಂಭ ಮಾಡಿ - ನೀವು ಈಗ ಹಾಲಿ ರೌಡಿ ಅಲ್ಲ, ಓನ್ಲಿ ಮಾಜಿ, ಚೆನ್ನಾಗಿ ಇರಿ - ಅಂತ ಹೇಳಿ ಕಳಿಸುತ್ತಾರೆ.

ಉದ್ದೇಶ ತುಂಬಾ ಒಳ್ಳೆಯದೇ. ಆದ್ರೆ ಪೊಲೀಸರಿಗೆ ಅಲ್ಲೂ ದುಡ್ಡು ಗೆಬರಲು ಒಂದು ಅವಕಾಶ. ಡೀಲಿಗೆ  ಕೂತು ಬಿಡುತ್ತಾರೆ. ನೋಡ್ರೀ...ರೌಡಿ ಲಿಸ್ಟಿನಿಂದ ನಿಮ್ಮನ್ನ ತೆಗಿಬೇಕು ಅಂದ್ರೆ ಇಷ್ಟು ಕೊಡಬೇಕಾಗುತ್ತದೆ - ಅಂತ ಚೌಕಾಶಿ ಶುರು. ಇದ್ದವರು ಕೊಡುತ್ತಾರೆ. ಕೊಟ್ಟು ರೌಡಿ ಎಂಬ ಲೇಬಲ್ಲಿಂದ ಹೊರಬರುತ್ತಾರೆ. ಇಲ್ಲದವರು ಅಷ್ಟೇ. ರೌಡಿಸಂ ಬಿಟ್ಟಿದ್ದರೂ, ರೌಡಿ ಅನ್ನಿಸಿಕೊಳ್ಳುತ್ತ, ಆಗಾಗ ಪೋಲಿಸರಿಂದ ಬೆಂಡೆತ್ತಿಸಿಕೊಳ್ಳುತ್ತ ಇರುತ್ತಾರೆ.

ರೌಡಿ ಲಿಸ್ಟಿನಿಂದ ತೆಗೆಯುವ ಒಂದು ಸಮಾರಂಭ. ಮತ್ತೆ ಇದೇ ಕಮಿಷಿನರ್ ಸಾಹೇಬರು. ಸುಮಾರು ಮಂದಿಗೆ ರೌಡಿ ಲಿಸ್ಟಿನಿಂದ ತೆಗೆದ ಬಗ್ಗೆ ಖಾತ್ರಿ ಸರ್ಟಿಫಿಕೆಟ್ ಕೊಟ್ಟರು. 

ಮಧ್ಯೆ ಒಬ್ಬ ಸರ ಸರ ವೇದಿಕೆಯತ್ತ ಬಂದ. ತಡೆಯಲು ಯತ್ನಿಸಿದರೂ ಮುನ್ನುಗ್ಗಿದ. ಸಾಹೇಬರು - ಬರಲಿ ಬಿಡಿ - ಅಂದರು. ಏನಪ್ಪಾ....ಏನು ಬೇಕು? - ಅಂತ ಕೇಳಿದರು. ಆ ವ್ಯಕ್ತಿ - ಸಾರ್......ನನಗೆ ಅನ್ಯಾಯವಾಗಿದೆ.....ಅದನ್ನ ಹೇಳಿಕೊಳ್ಳಲು ಅವಕಾಶ ಕೊಡಿ.....ಪ್ಲೀಸ್.....- ಅಂತ ಅಂಗಾಲಾಚಿದ. ಆಯಿತು.....ಬಾರಪ್ಪ.... - ಅಂತ ಅವನನ್ನು ವೇದಿಕೆ ಮೇಲೆ ಕರೆದು ಕೈಗೆ ಮೈಕ್ ಕೊಡಿಸಿದರು ಸಾಹೇಬರು. ಒಳ್ಳೆ ಎತ್ತರಕ್ಕೆ ಉದ್ದುದ್ದ ಕೂದಲು ಬಿಟ್ಟುಗೊಂಡಿದ್ದ ಅವನನ್ನು ಒಂದು ತರಹ ನೋಡಿದರು ಸಾಹೇಬರು.

ವೇದಿಕೆ ಮೇಲೆ ಬಂದವನೇ ಆ ವ್ಯಕ್ತಿ, ಮೈಕ್ ಸಿಕ್ಕ ಕೂಡಲೇ, ತನ್ನ ದರ್ದ್ ಭರಿ ದುಃಖ ಭರಿತ ಕಹಾನಿ ಹೇಳಿಕೊಳ್ಳುತ್ತ ಗೊಳೋ ಅಂತ ಅತ್ತ. ಅವನು ಯಾರೋ ರೌಡಿ ಶೀಟರ್ ಅಂತೆ. ಈಗ ಸುಮಾರು ವರ್ಷದಿಂದ ರೌಡಿಸಂ ಫುಲ್ ಬಿಟ್ಟು ತನ್ನ ಪಾಡಿಗೆ ತಾನಿದ್ದಾನಂತೆ, ಆದರೂ ಏರಿಯಾ ಪೊಲೀಸರು ಸಿಕ್ಕಾಪಟ್ಟೆ ಅನವಶ್ಯಕ ತೊಂದರೆ ಕೊಡುತ್ತಾರಂತೆ, ಈ ಸಲ ರೌಡಿ ಲಿಸ್ಟಿನಿಂದ ತೆಗೆಯಲು ಸಿಕ್ಕಾಪಟ್ಟೆ ದುಡ್ಡು ಕೇಳಿದರಂತೆ, ಕಾಸಿಲ್ಲದಿರುವದಕ್ಕೆ ಮತ್ತೆ ಕಾಡಿದರಂತೆ. ಒಟ್ಟಿನಲ್ಲಿ ಜಿಂದಗಿನೇ ಹಾಳಾಗ್ ಬುಟ್ಟೈತೆ ಅಂತ ರೌಡಿ ಗೊಳೋ ಅಂತ ಅತ್ತ.

ಕಮೀಷನರ ಸಾಹೇಬರಿಗೆ ಅವನು ಹೇಳಿದ್ದರಲ್ಲಿ ಏನೂ ಅರ್ಥವಾದಂತೆ ಕಾಣಲಿಲ್ಲ. ಕೆಲವು vested interests ಇದ್ದ ಅಧಿಕಾರಿಗಳಿಗೆ ಈ ಮನುಷ್ಯ ವೇದಿಕೆ ಬಿಟ್ಟು ಹೋದರೆ ಸಾಕಾಗಿತ್ತು. ಇಲ್ಲಾಂದ್ರೆ ಯಾರ್ಯಾರದೋ ಹೆಸರು ಹೇಳಲು ಅವನು ಶುರು ಮಾಡಿ ಖಾಕಿ ರೌಡಿಗಳ ಹೂರಣ ಹೊರಗೆ ಬಂದರೆ ಕಷ್ಟ. ಹಾಗಾಗಿ ಅವರಲ್ಲೊಬ್ಬ ಬಂದು - ಸಾರ್.....ಎಲ್ಲೋ ಹುಚ್ಚು ಪಾರ್ಟಿ....ಏನೇನೋ ಹೇಳುತ್ತಿದ್ದಾನೆ....ಓಡ್ಸಿ ಸಾರ್ ಅವನ್ನಾ....ಇನ್ನೂ ತುಂಬಾ ಜನ ರೌಡಿಗಳಿಗೆ ಸರ್ಟಿಫಿಕೆಟ್ ಕೊಡೋದಿದೆ....ಬೇಗಾ ಓಡ್ಸಿ ಸಾರ್ - ಅಂತ ಕಮೀಷಿನರ್ ಕಿವಿಯಲ್ಲಿ ಊದಿದರು.

ಕಮೀಷನರು ಎದ್ದು ಮೈಕಿನಲ್ಲಿ ಗೊಳೋ ಅನ್ನುತ್ತಿದ್ದ ರೌಡಿಯ ಹತ್ತಿರ ಬಂದರು. ಏನಯ್ಯಾ.....ನಿನ್ನ ಹೆಸರು? - ಅಂತ ಗತ್ತಿನಿಂದ ಕೇಳಿದರು.

ಆ ವ್ಯಕ್ತಿ, ಅಯ್ಯೋ....ಸಾಹೇಬ್ರೆ ಬಂದವರೆ....ಹೆಸರು ಕೇಳ್ತಾವ್ರೆ ....ಅಂತ ತಗ್ಗಿ ಬಗ್ಗಿ.....ಸಾರ್ ನನ್ನೆಸ್ರು ರಮೇಶಾ ಸಾರ್....ಅಂತ ಮತ್ತೊಮ್ಮೆ ನಮಸ್ಕಾರ ಅಂದ.

ಸಾಹೇಬರು ಜೇಬಿಗೆ ಕೈ ಹಾಕಿದವರೇ ನೂರರ ಒಂದು ನೋಟು ತೆಗೆದರು. ತೆಗೆದು ರಮೇಶನ ಕೈಯಲ್ಲಿ ತುರುಕಿದರು.

ರಮೇಶಾ ....ಇದನ್ನು ತೊಗೋ....ಹೋಗಿ ಖಟಿಂಗು ಮಾಡಿಸು.....ಹೋಗು....ಹೋಗು....- ಅಂತ ಸಾಕಿನ್ನು ನಡೆ ನಡೆ ಅನ್ನೋ ರೀತಿಯಲ್ಲಿ ಹೇಳಿದರು.

ಪಾಪ ಪ್ಯೂರ್ ಕನ್ನಡಿಗ ರಮೇಶನಿಗೆ ಈ ಸಾಹೇಬರ ಗುಡ್ಡಗಾಡು ಕನ್ನಡ ತಿಳಿಯಲಿಲ್ಲ. ಅದರಲ್ಲೂ "ಖಟಿಂಗು" ಅಂದ್ರೆ ಏನು ಅಂತ ಅವರ ಮನೆದೇವರಾಣೆಗೂ ತಿಳಿಯಲಿಲ್ಲ. ಏನು ಸಾರ್....ಏನು ಸಾರ್.....- ಅಂತ ತೊದಲಿದ ರಮೇಶ.

ಸಾಹೇಬರು ತಮ್ಮ ಮಿಲಿಟರಿ ಕಟಿಂಗ್ ತಲೆ ಮೇಲೆ ಕೈಯಾಡಿಸುತ್ತಾ ಮತ್ತೆ ಮತ್ತೆ ಖಟಿಂಗು, ಖಟಿಂಗು.....ಮಾಡಿಸು....ಮಾಡಿಸು....ಹೋಗು...ಹೋಗು....ಅಂತ ಎರಡೆರಡು ಸರ ಹೇಳುತ್ತಾ ತಮ್ಮ ಇತರೆ ಜೂನಿಯರ್ ಅಧಿಕಾರಿಗಳ ಕಡೆ ನೋಡಿದರು. ಅವರು ಬಂದು - ಯೋ....ಸಾಹೇಬರು ಹೇಳಿದ್ದು ಕೇಳಲಿಲ್ಲವಾ? ಹೋಗಪ್ಪಾ.....ಹೋಗಿ ಕಟಿಂಗ್ ಮಾಡಿಸು....ಸಾಹೇಬರು ಅದಕ್ಕೆ ಅಂತ ಕಾಸ್ ಕೊಟ್ಟವ್ರೆ....ಹೋಗು....ಹೋಗು.... - ಅಂತ ಕಳಿಸೇ ಬಿಟ್ಟರು. ರಮೇಶನ ಏರಿಯಾದ ಇನ್ಸ್ಪೆಕ್ಟರ್ ಬಹುಶಃ ತಮ್ಮ ಡೈರಿಯಲ್ಲಿ ನೋಟಾಕಿಕೊಂಡಿರಬೇಕು - ಈ ನನ್ನ ಮಗನ್ನ ಎತ್ತಾಕಿಕೊಂಡು ಬಂದು, ಏರೋಪ್ಲೇನ್ ಹತ್ತಿಸಬೇಕು. ಸಾಹೇಬರ ಮುಂದೆ ನಮ್ಮ ಮಾನ ತೆಗೆದವನೇ ಹಲ್ಕಾ ಲೋಫರ್ ....- ಅಂತ ಹಲ್ಲು ಕಡಿದಿರಬೇಕು. ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದ ರಮೇಶ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಕಮೀಷನರ ಹತ್ತಿರ ಪುಗಸಟ್ಟೆ ಅಡ್ವೈಸ್ ಮತ್ತು ನೂರು ರುಪಾಯಿ ತೆಗೆದುಕೊಂಡು ಹೋಗಬೇಕಾಯಿತು.

ಯಾಕೋ....ಇವತ್ತು ವಿಸ್ಡಂ, ನಾಲೇಜ್ , ಟೊಮ್ಯಾಟೋ, ಫ್ರುಟ್ ಸಲಾಡ್ - ಅಂದ ಕೂಡಲೇ ನಮ್ಮ ಹಳೇ ಕಮೀಷನರ ಸಾಹೇಬರು ಮತ್ತು ಅವರ ಯಡವಟ್ಟುಗಳು ನೆನಪಾದವು.

ಸಾಹೇಬರು ಈಗ ರಿಟೈರ್ ಆಗಿ ಆರಾಮ್ ಇದ್ದಾರೆ.

2 comments:

ವಿ.ರಾ.ಹೆ. said...

ಹ್ಹ ಹ್ಹ. ಸಾಹೇಬ್ರು ನಮ್ ಸಾಂಗ್ಲಿಯಾನಾವ್ರಾ? :)

Mahesh Hegade said...

ಹೌದೋ, ಹೌದು......ಹೆಸರ ಹಾಕಿರೆ ಮುಂದಿನ ಸಲ ಬೆಂಗಳೂರಿಗೆ ಬಂದಾಗ ಬಾರ್ಸಿ ಬಿಡಗು ಹೇಳಿ ಹಾಕಿದ್ನಿಲ್ಲೇ.....ಅವರು ರಿಟೈರ್ ಆದರೂ ಬಾಕಿ ಗುಡ್ಡಗಾಡು ಶಿಷ್ಯ ಇರ್ತ ನೋಡು. ಆವಾಗ "ಹೈ ಬೆಂಗಳೂರ್" ನಲ್ಲಿ ಓದಿದಿದಿ. ಹಳೆ ಇಂಗ್ಲಿಷ್ ಬ್ಲಾಗ್ ನಲ್ಲಿ ಹೆಸರೂ ಇದ್ದಿತ್ತು....ಹೀ....ಹೀ....