Monday, August 06, 2012

ಬೋರ್ಡೆಸ್ ಎಂಬ ಬ್ಯೂಟಿ ಬುರುಡೇಲಿ ಏನಿತ್ತು ಶಿವಾ?

ಲಂಡನ್ ಗೆ ಹೋಗಿ ಅಲ್ಲಿಯ ರಾಜಕೀಯ ಮೊಗಸಾಲೆಗಳಲ್ಲಿ "ಪಮೇಲಾ ಸಿಂಗ್ ಚೌಧರಿ" ಅಂತ ಅಂದು ನೋಡಿ. ಯಾರೂ ನಿಮಗೆ ಹೆಚ್ಚಿಗೆ ಏನೂ ಭಾವ್ ಕೊಡಲಿಕ್ಕಿಲ್ಲ. 

ಅದೇ  "ಪಮೇಲಾ ಬೋರ್ಡೆಸ್" ಅಂದು ಬಿಡಿ. ಸುಮಾರು ಹಳೆಹಳೆ ಬ್ರಿಟಿಶ್ ರಾಜಕಾರಣಿಗಳು ಚಿತ್ರ ವಿಚಿತ್ರ ಲುಕ್ ಕೊಟ್ಟು ವರೈಟಿ ವರೈಟಿ ಮುಖ ಮತ್ತೊಂದು ಮಾಡುತ್ತಾರೆ. ಕೆಲವರಿಗೆ ಎಂದೋ ಅನುಭವಿಸಿದ ಏನೇನೋ ಸುಖದ ನೆನಪು ಬಂದು "ಸವಿ ನೆನಪುಗಳು ಬೇಕು" ಅನ್ನೋ ಹಾಡು ನೆನಪು ಆದರೆ, ಇನ್ನು ಕೆಲವರಿಗೆ ಹೆಸರು ಕೇಳಿಯೇ ನಗ್ನರಾದ ಫೀಲಿಂಗ್ ಬಂದು ಪ್ಯಾಂಟಿನ ಬೆಲ್ಟ್ ಗಟ್ಟಿ ಮಾಡಿಕೊಂಡರೂ ಆಶ್ಚರ್ಯವಿಲ್ಲ.

ಯಾರ್ರೀ ಈ ಪುಣ್ಯಾತಗಿತ್ತಿ "ಪಮೇಲಾ ಬೋರ್ಡೆಸ್"?

ಒಂದು ಕಾಲದ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆ. 1982 ರಲ್ಲಿ ಈಕೆಯೇ ಫೆಮಿನಾ ಮಿಸ್ ಇಂಡಿಯಾ. ಮಿಸ್ ಯುನಿವರ್ಸ ಗೆ ಹೋದಳು. ಅಲ್ಲಿ ಏನೂ ಗಿಟ್ಟಲಿಲ್ಲ ಅಂತ ಅನ್ನಿಸುತ್ತದೆ. ಮುಂದೆ ಸ್ವಲ್ಪ ದಿನ ಇಂಡಿಯಾದಲ್ಲೇ ಒತ್ಲಾ ಹೊಡೆದಳು. ಆಮೇಲೆ ಏನಾಯಿತೋ ಏನೋ....ಯಾರು ಕರೆದರೋ ಏನೋ....ಸೀದಾ ಇಂಗ್ಲೆಂಡ್ ಗೆ ಹೋಗಿ ಬಿಟ್ಟಳು. ಆಮೇಲೆ ಸ್ವಲ್ಪ ದಿವಸ ಅವಳ ಸುದ್ದಿ ಇರಲಿಲ್ಲ.

ಆಮೇಲೆ ಸುಮಾರು ೧೯೮೮ -೮೯ ಟೈಮ್ ನಲ್ಲಿ ಬ್ರಿಟಿಶ್ ಟ್ಯಾಬ್ಲೋಯಿಡ್ ಗಳು ಸ್ಪೋಟಕ ಸುದ್ದಿ ಪ್ರಕಟಿಸಿದವು. ಅದರಲ್ಲಿ ಯಾರೋ "ಪಮೇಲಾ ಬೋರ್ಡೆಸ್" ಎಂಬ ನಾರಿಮಣಿಯ ಕಾರ್ನಾಮೆಗಳ ಬಗ್ಗ ಅತ್ಯಂತ ರೋಚಕವಾಗಿ ಬರೆಯಲಾಗಿತ್ತು. ಕಡೆಗೆ ಯಾರಪ್ಪಾ ಈಕೆ ಬೋರ್ಡೆಸ್ ಅಂತ ನೋಡಿದರೆ ನಮ್ಮ ಮಿಸ್ ಇಂಡಿಯಾ ಆಗಿದ್ದ "ಪಮೇಲಾ ಸಿಂಗ್ ಚೌಧರಿ" ಎಂಬಾಕೆಯೇ!!!!

ಇಂಡಿಯಾ ಬಿಟ್ಟು ಹೋದ ಪಮೇಲಾ ಬೋರ್ಡೆಸ್ ಮಧ್ಯೆ ಬೋರ್ಡಿಗೆ ಒಬ್ಬ ಗಂಡಾ ಅಂತ ಇರಲಿ ಅಂತ ಯಾರೋ ಹೆನ್ರಿ ಬೋರ್ಡೆಸ್ ಎಂಬ ಫೋಟೋಗ್ರಾಫರ್ ಒಬ್ಬನನ್ನು ಮದುವೆ ಆದಳು. ಆಮೇಲೆ ಮಾಡಿದ್ದಷ್ಟೂ ಖರ್ತರ್ನಾಕ್ ಕೆಲಸಗಳೇ.

ಹೋದಾಗಿಂದ ಪೇಜ್-3 ಮಹಿಳೆ ಅಂತ ಫೇಮಸ್ ಆಗಿ ಬಿಟ್ಟಳು. ಮಿಸ್ ಇಂಡಿಯಾ ಎಂಬ ಕಿರೀಟ ಬೇರೆ. ದೊಡ್ಡ ದೊಡ್ಡ ಜನಗಳೇ ಗಂಟು ಬೀಳತೊಡಗಿದರು. ಸುಮಾರು ದೊಡ್ಡ ದೊಡ್ಡ ಮಂದಿಗೆ ಎಸ್ಕಾರ್ಟ್ ಅಂತ ಕಂಪನಿ ಕೊಟ್ಟಳು. ಅದ್ನಾನ್ ಕಶೋಗೀ ಎಂಬಾತ ಆ ಕಾಲದ ದೊಡ್ಡ ವೆಪನ್ ಡೀಲರ್. ಬಿಲಿಯನ್ ಡಾಲರ್ ಲೆಕ್ಕದಲ್ಲಿ ವ್ಯವಹಾರ ಅವನದು. ಅಷ್ಟು ದೊಡ್ಡ ವ್ಯವಹಾರಗಳಲ್ಲಿ ಯಾವ ಲೆವೆಲ್ಲಿನ ಗುಂಡು, ತುಂಡು, ಮತ್ತೊಂದು ಇರುತ್ತದೆ ಅಂತ ಊಹಿಸಿ. ಅವನ ಪಾರ್ಟಿಗಳಲ್ಲಿ ಹಮೇಶಾ ಕಾಣತೊಡಗಿದಳು ಪಮೇಲಾ. ಮಿಸ್ ಇಂಡಿಯಾ ಎಂಬಾಕೆ ದೊಡ್ಡ ಮಟ್ಟದ ಐಟಂ ಆಗಿ ಲಂಡನ್ ನಲ್ಲಿ ಚಲಾವಣೆಗೆ ಬಂದು ಬಿಟ್ಟಳು.

ಪಮೇಲಾ ಬೋರ್ಡೆಸ್ ಮತ್ತು ಹೆದರ್ ಮಿಲ್ಲ್ಸ್ ಅಂತ ಇಬ್ಬರು ಸುಂದರಿಯರ ಹೆಸರು ಕೇಳಿದರೆ ದೊಡ್ಡ ದೊಡ್ಡ ಜನರೆಲ್ಲಾ ಚಿತ್ರವಿಚಿತ್ರವಾಗಿ ಆಡತೊಡಗಿದ್ದರು ಅಂದ್ರೆ ಊಹಿಸಿಕೊಳ್ಳಿ ಅವರು ಮಾಡಿದ ಹಾವಳಿಯ.

ಆವಾಗಲೇ ಗಂಟು ಬಿದ್ದವರು ಇಬ್ಬರು ಬ್ರಿಟಿಶ್ ಸಂಸದರು. ಏನು ಕಮಾಲ್ ಮಾಡಿದಳೋ ಏನೋ? ಒಟ್ಟಿನಲ್ಲಿ ಆ ಇಬ್ಬರು ಹುಚ್ಚ ರಾಜಕಾರಣಿಗಳು ಈಕೆ ಹೇಳಿದ ಹಾಗೆ ಕುಣಿದರು. ಅವರಿಗೇನು ಗೊತ್ತಿತ್ತು ಈಕೆಯ ಸಂಗ ಮುಂದೊಂದು ದಿನ ಬುಡಕ್ಕೇ ಬಿಸಿನೀರು ತರುತ್ತದೆ ಅಂತ.

ಮೊದಲೇ ಹೇಳಿದಂತೆ ವೆಪನ್ ಡೀಲರ್ ಮುಂತಾದ ಆಕ್ಷೇಪಾರ್ಹ ಮಂದಿ ಜೊತೆನೂ ಒಡನಾಟ ಮತ್ತೊಂದು ಇತ್ತು ಅಂತ. ಆ ಟೈಮ್ ನಲ್ಲಿ ಭೆಟ್ಟಿ ಆದವನೇ ಒಬ್ಬ ಲಿಬಿಯಾದ ದೊಡ್ಡ ಮಟ್ಟದ ಸೈನ್ಯಾಧಿಕಾರಿ. ಲಿಬಿಯಾ. ಅದೂ ಆ ಕಾಲದ ಗಡಾಫಿಯ ಲಿಬಿಯಾ. ಎಲ್ಲಾ ತರಹದ ಉಗ್ರಗಾಮಿಗಳ ಸ್ವರ್ಗ. ಅಲ್ಲಿ ಪರಮ ಕ್ರೂರ ಉಗ್ರವಾದಿ ಅಬು ನಿದಾಲ್ ಇದ್ದ. ಬೇರೆ ಬೇರೆ ಉಗ್ರಗಾಮಿಗಳೂ ಇದ್ದರು. ಅಂತಹ ದೇಶವೊಂದರ ದೊಡ್ಡ ಸೈನ್ಯಾಧಿಕಾರಿಯೊಂದಿಗೆ ಈಕೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾಳೆ ಎಂಬುದು ಮತ್ತು ಸೈಡ್ ಬೈ ಸೈಡ್ ಇಬ್ಬರು ಬ್ರಿಟಿಸ್ ಸಂಸದರ ಸಂಗಡ ಕೂಡ ಸಂಬಂಧ ಎಂಬ ವಿಷಯ ಆ ಸಮಯದಲ್ಲಿ ತುಂಬಾ ಸ್ಪೋಟಕ ವಿಷಯ. ಈಕೆ ಯಾರು? ಈಕೆ ಲಿಬ್ಯಾದ ಪರವಾದ ಗೂಢಚಾರಿಣೆಯೇ ಹೇಗೆ? ಬ್ರಿಟಿಶ್ ಸಂಸದರ ಜೊತೆ ಸಂಗ ಮಾಡಿ, ಅವರನ್ನು ಇಕ್ಕಟ್ಟಿನ ಸ್ಥಿತಿಗೆ ತಳ್ಳಿ, ಬ್ಲಾಕಮೇಲ್ ಮಾಡಿ, ಮಾಹಿತಿ ವಸೂಲ್ ಮಾಡಿ ಲಿಬ್ಯಾಕ್ಕೆ ತಲುಪಿಸುವ ಹುನ್ನಾರವೇ ಹೇಗೆ?.......ಅಂತೆಲ್ಲ ತಲೆ ಕೆಡಿಸಿಕೊಂಡಿದ್ದು ಇಂಗ್ಲಂಡ, ಅಮೆರಿಕ, ಇಸ್ರೇಲ್ ಮುಂತಾದ ದೇಶಗಳ ಬೇಹುಗಾರಿಕೆ ಸಂಸ್ಥೆಗಳು.

ಇದಕ್ಕೆ ಪೂರಕವೆಂಬಂತೆ ಆ ಇಬ್ಬರು ಸಂಸದರು ಕೂಡಿ ಈಕೆಗೆ ಅತ್ಯಂತ ಹೈ ಸೆಕ್ಯುರಿಟಿ ಪಾಸ್ ಬೇರೆ ಕೊಡಿಸಿಬಿಟ್ಟಿದ್ದರು. ಕೇಳಬೇಕೆ......ಪತ್ರಿಕೆಗಳಿಗೆ ಹಬ್ಬವೋ ಹಬ್ಬ. ಇದ್ದಿದ್ದು ಇಲ್ಲದಿದ್ದು ಕೂಡಿ ಬರದೇ ಬರೆದರು. ಪಮೇಲಾ ಹತ್ತಿರ ಪಾಸ್ ಇದೆ. ಅದನ್ನು ಉಪಯೋಗಿಸಿ ಆಕೆ ಉಗ್ರಗಾಮಿಗಳನ್ನು ಪಾರ್ಲಿಮೆಂಟ್ಗೆ  ಕಳಿಸಿದರೆ ಏನು ಗತಿ? ಆಕೆಗೆ ಪಾಸ್ ಕೊಟ್ಟ ಪುಣ್ಯಾತ್ಮರಾರು? ಅವರ ಪ್ಯಾಂಟ್ ಬಿಚ್ಚಿ ಓಡಿಸಿ....ರಾಮಾ....ರಾಮಾ....

ಈ ಕಡೆ ಪಮೇಲಾ ತನ್ನ ಗಂಡ ಬೋರ್ಡೆಸ್ ನನ್ನು ಕಟ್ಟಿಗೊಂಡು ಇಂಗ್ಲೆಂಡ್ ಬಿಟ್ಟು ಓಡಿದಳು. ಆ ಇಬ್ಬರು ರಾಜಕಾರಣಿಗಳು ನಡುಬೀದಿಯಲ್ಲಿ ನಂಗಾ ಆಗಿ ಮುಖ ಮತ್ತೊಂದು ಮುಚ್ಚಿಗೊಂಡು ಮನೆಗೆ ಹೋದರು. ಮುಂದಿನ ಚುನಾವಣೆಯಲ್ಲಿ ಅವರಿಗೆ ಡೆಪಾಸಿಟ್ ವಾಪಸ್ ಬಂದಿರಲಿಕ್ಕಿಲ್ಲ.

ಯೂರೋಪಿನ ಪಾಪರಾಜಿಗಳು ಅಂದ್ರೆ ಗೊತ್ತಲ್ಲ.....ಹಿಂದೆ ಬಿದ್ದರು ಅಂದ್ರೆ ಅವರಿಗೆ ಬೇಕಾದ ಫೋಟೋ ಮತ್ತು ವರದಿ ಸಿಗುವ ತನಕ ನಿಮ್ಮನ್ನು ಬಿಡೋದಿಲ್ಲ. ರಾಜಕುಮಾರಿ ಡಯಾನಾಳನ್ನೇ ಆ ಪರಿ ಹಿಂಬಾಲಿಸಿ ಆಕೆಯ ಅಪಘಾತ ಮತ್ತು ಸಾವಿಗೆ ಕಾರಣರಾದವರು ಅಲ್ಲಿನ ಟ್ಯಾಬ್ಲೋಯಿಡ್ ಪತ್ರಕರ್ತರು ಮತ್ತು ಫೋಟೋಗ್ರಾಫರ್ಗಳು.

ಪಮೇಲಾ ಹಿಂದೆಯೂ ಬಿದ್ದರು. ಎಲ್ಲೋ ಇಂಡೋನೆಶಿಯಾದಲ್ಲೋ ಎಲ್ಲೋ.....ಹಿಂದೆ ಬಿದ್ದಾಗ ತಪ್ಪಿಸಿಕೊಳ್ಳಲು ಮೋಟರ್ ಸೈಕಲ್ ಹತ್ತಿ ಓಡಿದಳು. ಅಪಘಾತವಾಯಿತು. ಸಿಕ್ಕಾಪಟ್ಟೆ ಸ್ಕ್ರಾಪ್ ಆಗಿ ಹೋದಳು ಸುಂದರಿ. 

ಚೇತರಸಿಕೊಳ್ಳುವ ಹೊತ್ತಿಗೆ ಸುದ್ದಿ ತಣ್ಣಗಾಗಿತ್ತು. ವಯಸ್ಸೂ ಆಗಿತ್ತು. ಮತ್ತೆ ಹಳೆ ಇಂಡಿಯಾನೇ ಗತಿ ಅಂತ ಬಂದಳು ವಾಪಸ್. ಬಂದು ಫೋಟೋಗ್ರಾಫರ್ ಅಂತ ಏನೇನೋ ಶುರು ಮಾಡಿದಳು. ಸುಮಾರು ಫೇಮಸ್ ಕೂಡ ಆದಳಂತೆ.

ಸುಮಾರು ವರ್ಷದ ಹಿಂದೆ ಒಬ್ಬ ಬ್ರಿಟಿಶ್ ಪತ್ರಕರ್ತ ಬರೆದಿದ್ದ. "ಈ ಬ್ಯೂಟಿ ಪೆಜೆಂಟ್ ಸ್ಪರ್ಧೆಗಳು ಕಾಲ್ ಗರ್ಲ್ಸ್ ಗಳನ್ನು ತಯಾರು ಮಾಡುವ ಕಾರ್ಖಾನೆಗಳೇ  ಹೇಗೆ?" ಅಂತ ಅವನ ಜಿಜ್ಞಾಸೆ. ಸುಮಾರು ಉದಾಹರಣೆ ಸಮೇತ ಬರೆದಿದ್ದ. ಈ ಬೋರ್ಡೆಸ್ ಕಥೆ ಓದಿದಾಗ ಅದೇ ನೆನಪಾಯಿತು. 

ಸುಮಾರು ೧೫-೨೦ ವರ್ಷದ ಹಿಂದೆ ಕನ್ನಡದ ಒಬ್ಬ ನಟನಿಗೆ ದುಬೈಯಿಂದ ಒಂದು ಬೆದರಿಕೆ ಕಾಲ್ ಬಂದಿತ್ತು ಅಂತ ಪೇಪರ್ ನಲ್ಲಿ ಸುದ್ದಿ ಆಗಿತ್ತು. ಆದದ್ದು ಇಷ್ಟೇ. ಆಕೆಯೂ ಇನ್ನೊಬ್ಬ ಮಿಸ್ ಇಂಡಿಯಾ. ಎಲ್ಲೂ ಚಾನ್ಸ್ ಗಿಟ್ಟಲಿಲ್ಲ. ಕನ್ನಡದ ಸಿನೆಮಾ ಮಂದಿ ಕರಕೊಂಡು ಬಂದು ಚಾನ್ಸ್ ಕೊಟ್ಟರು. ಯಾರೋ ಹೀರೋ ಆಕೆಗೆ ಕ್ಲೋಸ್ ಆದನಂತೆ. ಆಕೆಯೂ ಕ್ಲೋಸ್ ಆದಳು. ಆದ್ರೆ ಆಕೆ ಆ ಕಾಲದ ದುಬೈ ಮೂಲದ ಯಾವದೋ ಅಂಡರ್ವರ್ಲ್ಡ್ ಡಾನ್ ನ ರಖಾವ್ ಅಂತೆ. ಅವನಿಗೆ ಉರಿಯಿತು. ಫೋನ್ ಎತ್ತಿದವನೇ ಹೀರೋ ಗೆ ವಾರ್ನಿಂಗ್ ಕೊಟ್ಟನಂತೆ. ಹೀರೋ ಆಕೆಯ ಸುದ್ದಿ ಬಿಟ್ಟ.

ಆಗಾಗ  ಈ ಹೀರೋಯಿನ್ ಆ ಗೂಂಡಾ ಅದು ಇದು ಅಂತ ಸುದ್ದಿ ಬರುತ್ತಲೇ ಇರುತ್ತದೆ. ಗುಸು ಗುಸು ಸುದ್ದಿ ಆಗುತ್ತಲೇ ಇರುತ್ತದೆ.

ಒಟ್ಟಿನಲ್ಲಿ ಬಿಸಿನೆಸ್ ಡೀಲಿಂಗ್ ಮಾಡೋವಾಗ ಗುಂಡು, ತುಂಡು, ಮತ್ತೊಂದು ಇದ್ದರೇನೇ ಕೆಲಸ ಆಗೋದು. ಲಕ್ಷ, ಕೋಟಿ ಇದ್ದಾಗ ಯಾರೋ ಲೋಕಲ್ ಮಾಲು. ಬಿಲಿಯನ್ ಗಟ್ಟಲೆ ಇದ್ದಾಗ ಯಾರೋ ಇಂಟರನ್ಯಾಷನಲ್ ಮಾಲು. ಅಷ್ಟೇ ವ್ಯತ್ಯಾಸ.

ಹೆಚ್ಚಿನ ಮಾಹಿತಿಗೆ:


What Pamella Bordes did next: From society call-girl to life in a hippy haven

"Pamella Bordes" ಅಂತ ಗೂಗಲ್ ಮಾಡಿ. ಸುಮಾರು ಹೊಸ ಹೊಸ ಒಳ್ಳೆ ಸುದ್ದಿ ಇದ್ದ ಹಾಗಿದೆ.




No comments: