ಮುರಾರ್ಜೀ ದೇಸಾಯಿ. ಹಳೇ ಜಮಾನಾದ ರಾಜಕಾರಣಿ. ನೆಹರೂ, ಇಂದಿರಾ ಗಾಂಧಿ ಇತ್ಯಾದಿ ಜನಗಳ ಜೊತೆ ಕೆಲಸ ಮಾಡಿದವರು. ಮುಂದೆ ಕಾಂಗ್ರೆಸ್ಸಿನಿಂದ ಹೊರ ಬಂದು, ಜನತಾ ಪಾರ್ಟಿ ಜೊತೆ ಸೇರಿ, ಮುಂದೆ ೧೯೭೯ ರಲ್ಲಿ ಜನತಾ ಸರ್ಕಾರದ ಪ್ರಧಾನಿ ಕೂಡ ಆಗಿದ್ದರು. ಒಳಜಗಳದಿಂದ ಆ ಸರ್ಕಾರ ಜಾಸ್ತಿ ದಿನ ಬರಕತ್ತಾಗಲಿಲ್ಲ. ಮುಂದೆ ಮುರಾರಜೀ ಅವರ ಹೆಸರೂ ಜಾಸ್ತಿ ಕೇಳಿ ಬರಲಿಲ್ಲ.
"ಸ್ವಮೂತ್ರ ಪಾನ" ಎಂಬ ವಿಚಿತ್ರ ಚಿಕಿತ್ಸಾ ಪದ್ಧತಿ ಅವರು ಅನುಸರಿಸುತ್ತಿದ್ದರು. ಅದರ ಸುತ್ತ ಮುತ್ತ ಹುಟ್ಟಿದ ಜೋಕುಗಳು ತುಂಬಾ ಇದ್ದವು. ಮೂತ್ರಕ್ಕೆ "ಮುರಾರ್ಜೀ ಟಾನಿಕ್" ಅಂತ ಹಾಸ್ಯ ಕೂಡ ಮಾಡುತ್ತಿದ್ದರು.
ಅದೆಲ್ಲ ಇರಲಿ. ಮುರಾರ್ಜೀ ದೇಸಾಯಿ ಅವರಿಗೆ ಒಂದು ದೊಡ್ಡ ಕೊರಗಿತ್ತು. ಸಾಯುವ ಮೊದಲು ಅದೊಂದು ಸರಿ ಹೋಗಿಬಿಟ್ಟಿದ್ದರೆ ಪಾಪ ನೆಮ್ಮದಿಯಿಂದ ಸಾಯುತ್ತಿದ್ದರೋ ಏನೋ? ಏನದು?
ಸೀಮೊರ್ ಹರ್ಷ ಎಂಬ ಅಮೇರಿಕಾದ ಪ್ರಖ್ಯಾತ ಜರ್ನಾಲಿಸ್ಟ್ ಒಬ್ಬ ಮುರಾರ್ಜೀ ಅವರನ್ನು ತನ್ನ ಪುಸ್ತಕ ಮತ್ತು ಅಂಕಣಗಳಲ್ಲಿ - ಅವರು ಅಮೇರಿಕಾಕ್ಕೆ ಭಾರತದ ರಹಸ್ಯ ಮಾಹಿತಿ ಸಪ್ಲೈ ಮಾಡುತ್ತಿದ್ದರು. ಅಮೇರಿಕಾದ ಬೇಹುಗಾರಿಕೆ ಸಂಸ್ಥೆಯಾದ CIA ಮುರಾರ್ಜೀ ಅವರನ್ನು ಪಟಾಯಿಸಿತ್ತು. ಅವರು CIA ಏಜೆಂಟ್ ಆಗಿದ್ದರು. ಅವರು ಅತ್ಯಂತ ಉನ್ನತ ಮಟ್ಟದಲ್ಲಿ ಆಗುತ್ತಿದ್ದ ತುಂಬಾ ರಹಸ್ಯ ಮಾಹಿತಿಗಳನ್ನು ಇಮ್ಮಿಡಿಯೆಟ್ ಆಗಿ ರವಾನೆ ಮಾಡುತ್ತಿದ್ದರು. 1971 ಬಾಂಗ್ಲಾ ಯುದ್ಧದಲ್ಲಿ ಇಂದಿರಾ ಗಾಂಧಿ ತೆಗೆದುಕೊಳ್ಳುತ್ತಿದ್ದ ಮಹತ್ವದ ನಿರ್ಧಾರಗಳು ಅಮೆರಿಕಾಗೆ ತಿಳಿಯುತ್ತಿತ್ತು - ಅಂತ ಬರೆದಿದ್ದ. ಮುರಾರ್ಜೀ ಕೊಟ್ಟ ಮಾಹಿತಿ ಉಪಯೋಗಿಸಿಕೊಂಡು ಅಮೇರಿಕಾ ಇಂಡಿಯಾ ಮೇಲೆ ಒತ್ತಡ ತಂದು ಆ ಯುದ್ಧದಲ್ಲಿ ಪಾಕಿಸ್ತಾನವನ್ನು ಬಚಾವ ಮಾಡಿತು. ಒಟ್ಟಿನಲ್ಲಿ ಮುರಾರ್ಜೀ ಅಮೇರಿಕಾದ ಏಜೆಂಟ್ ಅಂತ ಬ್ರಾಂಡ್ ಆಗಿ ಬಿಟ್ಟರು. ಒಂದು ರೀತಿಯಲ್ಲಿ ತೇಜೋವಧೆ ಮಾಡಿ ರಾಜಕೀಯವಾಗಿ ಅವರನ್ನು ಆಲ್ಮೋಸ್ಟ್ ಮುಗಿಸಲಾಗಿತ್ತು.
ಯಾವದೋ ಅಬ್ಬೇಪಾರಿ ಪತ್ರಕರ್ತ ಈ ರೀತಿ ಬರೆದಿದ್ದರೆ ಹೆಚ್ಚಿನ ವಿಚಾರ ಯಾರೂ ಮಾಡುತ್ತಿರಲಿಲ್ಲ. ಬರೆದವನು ಸೀಮೊರ್ ಹರ್ಷ. ಪ್ರಳಯಾಂತಕ. ವಿಯೆಟ್ನಾಂ ಯುದ್ಧ, ಸರ್ಕಾರದ ಅತಿರೇಕಗಳು, ಮತ್ತಿತರ ಅತಿ ಸೆನ್ಸಿಟಿವ್ ಮತ್ತು ರೋಚಕ ವಿಷಯಗಳ ಮೇಲೆ ಸಿಕ್ಕಾಪಟ್ಟೆ ಕರಾರುವಕ್ಕಾಗಿ, ಖಡಕ್ಕಾಗಿ ಬರೆಯುತ್ತಿದ್ದ. ಒಮ್ಮೆ ಬರೆದ ಅಂದರೆ ಅವನು ಹಿಂದೆ ತೆಗೆಯುವ ಮಾತೇ ಇಲ್ಲ. ಯಾಕೆಂದರೆ ಎಲ್ಲ ಡಬಲ್, ಟ್ರಿಪಲ್ ಚೆಕ್ ಮಾಡಿಯೇ ಬರಿಯುತ್ತಿದ್ದ. ಪ್ರಕಟಿಸುವ ಮೊದಲು ತಾನು ಹೆಸರಿಸುವ ಜನರಿಗೆ ಕಾಮೆಂಟ ಮಾಡಿ ಅಂತ ಅವಕಾಶ ಕೊಡುತ್ತಿದ್ದ. ಅವರು ವಿವರಣೆ ಕೊಟ್ಟರೆ ಅದನ್ನೂ ಸೇರಿಸಿಯೇ ಬರೆಯುತ್ತಿದ್ದ. ಒಟ್ಟಿನಲ್ಲಿ ಅವನಿಗೆ ಒಂದು ದೊಡ್ಡ ಲೆವೆಲ್ ನಲ್ಲಿ ಗೌರವ, ಟ್ರಾಕ್ ರೆಕಾರ್ಡ್ ಇತ್ತು. ಅವನ ಸುದ್ದಿ ಮೂಲಗಳೋ? ಅತಿ ಉನ್ನತ ಮಟ್ಟದಲ್ಲಿ. ಯಾಕೆಂದರೆ ಅವನು ಸುದ್ದಿ ಮೂಲಗಳನ್ನು, ಖಬರಿಗಳನ್ನು ಕಾಪಾಡುವದರಲ್ಲಿ ಎಂದಿಗೂ ರಾಜಿ ಮಾಡಿಕೊಂಡವನಲ್ಲ.
ಇಂತಹ ಒಬ್ಬ ರಿಲೈಬಲ್ ಮನುಷ್ಯ ಒಂದು ದೊಡ್ಡ ಮಟ್ಟದ ಖತರ್ನಾಕ್ ವರದಿ ಮಾಡಿದಾಗ ಅದಕ್ಕೆ ಒಂದು ಮಟ್ಟದ ಕ್ರೆಡಿಬಿಲಿಟಿ ಅಂತ ಬಂದರೆ ಆಶ್ಚರ್ಯ ಏನಿದೆ?
ವರದಿ ಬರೆದ. ಮುರಾರಜೀ ಅವರನ್ನೂ - ನೋಡಿ....ಹೀಗೆ ನಿಮ್ಮ ಮೇಲೆ ಆಪಾದನೆ ಮಾಡುತ್ತಿದ್ದೇನೆ. CIA ಅತಿ ಉನ್ನತ ಮೂಲಗಳೇ ನನಗೆ ಮಾಹಿತಿ ಕೊಟ್ಟಿವೆ. ನೀವೇನು ಅಂತೀರಿ? - ಅಂತ ಕೇಳಿದ್ದ. ಮುರಾರಜೀ ಅವರೋ ಅಥವಾ ಅವರ ಸಹಾಯಕರೋ ಒಂದು ಸಣ್ಣ ಪ್ರಮಾಣದ ಕ್ಲಾರಿಫಿಕೆಶನ್ ಕೊಟ್ಟು, ಪ್ರಕಟಿಸಿದರೆ ಹುಷಾರ್, ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಅಂತ ವಾರ್ನಿಂಗ್ ಕೊಟ್ಟಿದ್ದರು. ಅದೆಲ್ಲ ರುಟೀನ್ ಸೀಮೊರ್ ಹರ್ಷ ತರಹದ ಪತ್ರಕರ್ತರಿಗೆ. ಮತ್ತೆ ಅವನಿಗೆ ತನ್ನ ಸುದ್ದಿ ಮೂಲಗಳ ಮೇಲೆ ವಿಪರೀತ ನಂಬಿಕೆ. ಆ ತರಹದ ಸಂಪರ್ಕ ಜಾಲ ಇತ್ತು ಅವನದು.
ಮತ್ತೆ 1971 ರಲ್ಲಿ ಬಾಂಗ್ಲಾದೇಶದ ನಿರ್ಮಾಣದ ಟೈಮ್ ನಲ್ಲಿ ಆದ ಯುದ್ಧವನ್ನು ಗಮನಿಸಿದ ಯಾರಿಗೇ ಆದರು ಅನ್ನಿಸಿದ್ದು ಅಂದರೆ ಪೂರ್ತಿಯಾಗಿ ಪಾಕಿಸ್ತಾನವನ್ನು ನಿರ್ನಾಮ ಮಾಡುವ ಅವಕಾಶ ಹೊಂದಿ, ಇಂದಿರಾ ಗಾಂಧಿಯಂತಹ ಧೀರ ನಿರ್ಣಾಯಕ (decisive) ನಾಯಕಿ ಹೊಂದಿದ್ದ ಭಾರತ ತನ್ನ ಮೂಲ ಯೋಜನೆಯಿಂದ ಹಿಂಜರಿದು, ಅಮೇರಿಕಾ ಯುದ್ಧವಿರಾಮ ಘೋಷಿಸಿ ಅಂದ ಕೂಡಲೇ ಯುದ್ಧವಿರಾಮ ಮಾಡಿ, ಪಾಕಿಸ್ತಾನಕ್ಕೆ ಮರು ಜೀವ ಕೊಟ್ಟಿದ್ದು ಯಾಕೆ? ಯಾಕೆಂದರೆ ಇಂದಿರಾ ಗಾಂಧಿಯವರ ಯೋಜನೆ ಪೂರ ಸೋರಿ ಹೋಗುತ್ತಿತ್ತು. ಅವರ ಯೋಜನೆ ಅಂದ್ರೆ ಈ ಕಡೆ ಬಾಂಗ್ಲಾ ದೇಶ ಒಡಿಯುವದು. ಆ ಕಡೆ ಪಂಜಾಬ್ ನಲ್ಲಿ ಸಹಿತ ಯುದ್ಧ ಶುರು ಮಾಡಿ ಅಲ್ಲೂ ಒಂದಿಷ್ಟು ಜಾಗವನ್ನು ಆಕ್ರಮಿಸುವದು, ಬಲೂಚಿಗಳ ದಂಗೆಗೆ ಪ್ರೋತ್ಸಾಹ ನೀಡುವದು, ಇತ್ಯಾದಿ. ಒಟ್ಟಿನಲ್ಲಿ ಪಾಕಿಸ್ತಾನ್ ಮತ್ತೆ ತಲೆಯತ್ತದಂತೆ ಮಾಡುವ ಮಾಸ್ಟರ್ ಪ್ಲಾನ್ ಇತ್ತು. ಏನು ಮಾಡುವದು? ಮಾಹಿತಿ ಎಲ್ಲ ಸೋರಿ ಅಮೆರಿಕಾಕ್ಕೆ ಸಿಕ್ಕು, ಅಮೇರಿಕಾದ ನೌಕಾಪಡೆ ಬಂಗಾಲ ಕೊಲ್ಲಿಯತ್ತ ಬಂದು, ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವಾಜ ಹಾಕಲು ಶುರು ಮಾಡಿದಾಗ ಇಂದಿರಾ ಗಾಂಧಿ ಹಿಂದೆ ಸರಿಯಲೇ ಬೇಕಾಯಿತು.
ಹೀಗಾಗಿ....ಸೀಮೊರ್ ಹರ್ಷ ಬರೆದಿದ್ದ - ಭಾರತದ ಪ್ರಮುಖ ರಾಜಕಾರಣಿ ಮುರಾರ್ಜೀ ದೇಸಾಯಿ ಅಮೇರಿಕಾದ ಏಜೆಂಟ್ - ಅನ್ನುವ ಅಪವಾದಕ್ಕೆ ಒಂದು ತರಹ ಪುಷ್ಟಿ ಸಿಕ್ಕಿತು. ಆಗಿನ್ನೂ ಮಾಹಿತಿ ಜಾಲ ಅದು ಇದು ಇರಲಿಲ್ಲ ನೋಡಿ. ಹಾಗಾಗಿ ಭಾರತದಲ್ಲಿ ಈ ಸುದ್ದಿ ಅಷ್ಟೇನೂ "ಧೂಮ್ ಮಚಾಲೇ" ಮಾಡಲಿಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಮುರಾರ್ಜೀ ಅಂದ್ರೆ ಜನ ಗುಸು ಗುಸು ಮಾತಾಡುವಂತೆ ಆಗಿದ್ದು ದುರಂತ.
ಹಾಗಾದರೆ ಸತ್ಯ ಏನು? ಮುರಾರ್ಜೀ ಏಜೆಂಟ್ ಆಗಿದ್ದರೆ? ಅವರಲ್ಲದೇ ಹೋದರೆ ಮತ್ತೆ ಬೇರೆ ಯಾರಾದರು ಅಂತಹ ದ್ರೋಹದ ಕೆಲಸ ಮಾಡಿದ್ದರೆ? ಉದ್ದೇಶಪೂರ್ವಕವಾಗಿ ಮುರಾರಜೀ ಅವರ ಹೆಸರನ್ನು ಎಳೆದು ತರಲಾಯಿತೆ?
ಈ ಪ್ರಶ್ನೆಗಳಿಗೆಲ್ಲ ಉತ್ತರ ಇದ್ದಿದ್ದು ಅತ್ಯಂತ ರಹಸ್ಯ CIA ಕಡತಗಳಲ್ಲಿ. ಅವೆಲ್ಲಾ ಕ್ಲಾಸಿಫೈಡ್. ಎಷ್ಟೋ ವರ್ಷಗಳ ನಂತರ ಕೂಲಂಕಷವಾಗಿ ವಿಚಾರ ಮಾಡಿ, ಬೇಕು ಅಂತ ಯಾರಾದರು ಕೇಳಿದರೆ, ಮಾಹಿತಿ ಕಾಯಿದೆ ಅಡಿಯಲ್ಲಿ, ಸ್ವಲ್ಪ ಮಾತ್ರ ಮಾಹಿತಿ ಬಿಡುಗಡೆ ಮಾಡಬಹದು ಅಂತ. Freedom of Information Act.
ಈಗ ಸ್ವಲ್ಪ ವರ್ಷದ ಹಿಂದೆ ಬಾಂಗ್ಲಾದೇಶದ ಯುದ್ಧದ ಕಡತಗಳು ಸ್ವಲ್ಪ ಮಟ್ಟಿಗೆ ಹೊರಗೆ ಬಂದವು. ಮತ್ತೂ ಸುಮಾರು ದಾಖಲೆಗಳೂ ಹೊರಗೆ ಬಂದವು. ಸುಮಾರು ಜನ ಪತ್ರಕರ್ತರು, ಲೇಖಕರು ಅದಕ್ಕೇ ಕಾದು ಕೂತಿದ್ದರು. ಬಿಡುಗಡೆಯಾದ ಮಾಹಿತಿ ಓದತೊಡಗಿದರು. ಓದಿ ಓದಿ ಒಂದಕ್ಕೊಂದು ಲಿಂಕ್ ಮಾಡುತ್ತಾ ಹೋದಂತೆ ಒಂದು ಅಸ್ಪಷ್ಟ ಚಿತ್ರಣ ಹೊರ ಬರತೊಡಗಿತು.
ಆ ಕಾಲದ ಅಮೇರಿಕಾದ ಏಜೆಂಟ್ ಮುರಾರ್ಜೀ ದೇಸಾಯಿ ಇರಲಿಕ್ಕಿಲ್ಲ. ಅವರು ಅಲ್ಲ ಅಂದರೆ ಮತ್ಯಾರು? ಅದಕ್ಕೂ ಒಂದು ತರಹದ ಉತ್ತರ ಸಿಕ್ಕಿತು. ನಿಖರವಾಗಿ ಸಿಗಲಿಲ್ಲ. ಮುರಾರಜೀ ಅವರ ಮೇಲೆ ಸಂಶಯ ಬಂದಂತೆ ಈಗ ಆ ಕಾಲದ ದೊಡ್ಡ ರಾಜಕಾರಣಿಗಳಾದ ಜಗಜೀವನ ರಾಮ್ ಮತ್ತು ವಾಯ್.ಬಿ. ಚವಾಣ್ ಮೇಲೂ ಈಗ ಸಂಶಯದ ದಿಕ್ಸೂಚಿ ತಿರುಗಿತು. CIA ದಾಖಲೆ ಬಿಡುಗಡೆ ಮಾಡುವಾಗ ಹೆಸರು ಮುಂತಾದವನ್ನು ಕಪ್ಪು ಮಸಿಯಲ್ಲಿ ಬ್ಲಾಕ್ ಔಟ್ ಮಾಡಿರುತ್ತಾರೆ. ಹಾಗಾಗಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಮುರಾರ್ಜೀ ದೇಸಾಯಿ ಮಾತ್ರ ಸಾಯುವ ತನಕ ತಮ್ಮ ಹೆಸರು ಕ್ಲಿಯರ್ ಮಾಡಿಕೊಳ್ಳಲು ಶತಪ್ರಯತ್ನ ಮಾಡಿದರು. ತಮ್ಮ ಅಷ್ಟೂ ಆಸ್ತಿ ಪಾಸ್ತಿ ವತ್ತೆ ಇಟ್ಟು ಅಮೇರಿಕಾದ ಕೋರ್ಟ್ಗಳಲ್ಲಿ ಸೀಮೊರ್ ಹರ್ಷ ಇತ್ಯಾದಿ ಜನರ ಮೇಲೆ ಕೇಸ್ ಮಾಡಿದರು. ಉಪಯೋಗವಾಗಲಿಲ್ಲ. ಕೇಸ್ ಬಿದ್ದು ಹೋಯಿತೇ ವಿನಹ ಮುರಾರ್ಜೀ ದೇಸಾಯಿಗೆ ನ್ಯಾಯ ಸಿಗಲಿಲ್ಲ.
ಅವರು ತೀರಿ ಹೋಗಿ ಎಷ್ಟೋ ವರ್ಷಗಳಾದ ಮೇಲೆ CIA ದಾಖಲೆಗಳು ಹೊರ ಬಿದ್ದಿವೆ. ಅವರ ಹೆಸರು ಪೂರ್ತಿಯಾಗಿ ಕ್ಲಿಯರ್ ಆಗದಿದ್ದರೂ ಇನ್ನೊಂದಿಬ್ಬರ ಹೆಸರು ಸೇರಿ ಬರ್ಡನ್ ಸ್ವಲ್ಪ ಡಿವೈಡ್ ಆಗಿದೆ.
CIA ಮಾಹಿತಿ ರಿಲೀಸ್ ಮಾಡಿದ ಕೂಡಲೇ ಅದನ್ನೆಲ್ಲ ಓದಿ, ಇಂಡಿಯಾಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಎಲ್ಲ ಒಂದು ಕ್ರಮಬದ್ಧವಾಗಿ ಜೋಡಿಸಿ - CIA's Eye on South Asia - ಅಂತ ಪುಸ್ತಕ ಬರೆದವರು ಅನುಜ್ ಧಾರ್ ಎಂಬ ಲೇಖಕರು.
ಅಯ್ಯೋ.....ಬಿಟ್ಟಿ ಮಾಹಿತಿ CIA ವೆಬ್ ಸೈಟ್ ನಲ್ಲಿ ಸಿಗುತ್ತದೆ. ಯಾಕೆ ದುಡ್ಡು ಕೊಟ್ಟು ಪುಸ್ತಕ ಖರೀದಿ ಮಾಡಬೇಕು? ಒಳ್ಳೆ ಪ್ರಶ್ನೆ. ನಿಜ ಹೇಳಬೇಕು ಅಂದರೆ ಲೇಖಕ ಧಾರ್ ಇನ್ನೂ ಸ್ವಲ್ಪ ತಮ್ಮ ಸ್ವಂತ ಕೆಲಸ ಸೇರಿಸಬಹುದಿತ್ತು. ಈ ಮುರಾರ್ಜೀ ದೇಸಾಯಿ ಬಗ್ಗೆ ಬರೆದ ಒಂದು ಎನಾಲಿಸಿಸ್ ಲೇಖನ ಬಿಟ್ಟರೆ ಪುಸ್ತಕದಲ್ಲಿ ಬಾಕಿ ಬರಹಗಳು ಇಲ್ಲವೇ ಇಲ್ಲ. CIA ವೆಬ್ ಸೈಟ್ನಿಂದ ದಾಖಲೆ ಡೌನ್ಲೋಡ್ ಮಾಡಿ, ಪುಸ್ತಕದಲ್ಲಿ ಪ್ರಿಂಟ್ ಮಾಡಿದ್ದಾರೆ. ಇಂಡಿಯಾಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಸರಿಯಾಗಿ ಓದಿ, ಕನೆಕ್ಟ್ ಮಾಡಬಹುದಾದ ಪಾಯಿಂಟ್ಸ್ ಕನೆಕ್ಟ್ ಮಾಡಿ, ಒಂದು ಸಮಗ್ರ ಚಿತ್ರಣ ಕೊಟ್ಟಿದ್ದರೆ ಇನ್ನೂ ಒಳ್ಳೆಯದಿತ್ತು.
ಆದರೂ ಖರೀದಿ ಮಾಡಿ, ಓದಿ, ಮಾರಬಹುದಾದಂತಹ ಪುಸ್ತಕ.
ಹೆಚ್ಚಿನ ಮಾಹಿತಿಗೆ:
2 comments:
ಆದರೂ ಖರೀದಿ ಮಾಡಿ, ಓದಿ, ಮಾರಬಹುದಾದಂತಹ..?
ಆದರೂ ಖರೀದಿ ಮಾಡಿ, ಓದಿ, ಮಾರಬಹುದಾದಂತಹ..? - ಅಂದರೆ ಸೆಕಂಡ ಹ್ಯಾಂಡ್ನಲ್ಲಿ ಮಾರಿಬಿಡಿ ಬೇಕಾದ್ರೆ ಅಂತ. ಒಂದು ಮುರಾರ್ಜೀ ಕಥೆ ಬಿಟ್ಟರೆ ಬಾಕಿ ಎಲ್ಲಾ ಕೇವಲ CIA ದಾಖಲೆಗಳ ಮಕ್ಕಿ-ಕ-ಮಕ್ಕಿ ಕಾಪಿ. ಅಷ್ಟೇ. ಒಮ್ಮೆ ಸುದ್ದಿ ಗೊತ್ತಾದ ಮೇಲೆ, ನೀವೇ ಹೋಗಿ, ಅಷ್ಟು ಆಸಕ್ತಿ ಇದ್ದರೆ, CIA ವೆಬ್ ಸೈಟ್ ನಲ್ಲೆ ಓದಬಹದು. :):) ಕಾಮೆಂಟಿಗೆ ಧನ್ಯವಾದ.
Post a Comment