ಅಬು ಜಿಹಾದ್ ಮೈಕೊಡವಿ ನಿಂತ. ಅರಾಫತ್ ದೊಡ್ಡ ಮಟ್ಟದ ಜವಾಬ್ದಾರಿ ವಹಿಸಿದ್ದರು. ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಬೇಕಿತ್ತು ಅವನಿಗೆ.
ಆಗಲೇ ಅಬು ಜಿಹಾದ್ ಬಗ್ಗೆ ಕೆಲ ದಂತಕಥೆಗಳಿದ್ದವು. ಬೀರೂಟಿನಲ್ಲಿ ಇದ್ದಾಗ ಒಮ್ಮೆ ಎದುರು ಬಣದವರೋ, ಇಸ್ರೇಲಿಗಳೋ ಇವನಿದ್ದ ಜಾಗಕ್ಕೆ ದಾಳಿ ಮಾಡಿದ್ದರಂತೆ. ಬಾಲ್ಕನಿಯಿಂದ ಚಿಕ್ಕ ಮಗುವಿನೊಡನೆ ಜಿಗಿದು ಪಾರಾಗಿದ್ದ ಅಂತ ಕೆಲವರು ಅಂದರೆ, ಇನ್ನು ಕೆಲವರು ಕಿರಿಚುತ್ತಿದ್ದ ಮಗುವನ್ನು ಎಸೆದಿದ್ದ ಎಂದೋ, ಉಸಿರುಗಟ್ಟಿಸಿ ಕೊಂದಿದ್ದ ಅಂದೋ, ಏನೇನೋ ಕಥೆ ಹೇಳುತ್ತಿದ್ದರು. ಒಟ್ಟಿನಲ್ಲಿ ಒಂದು ಕಾರಿಶ್ಮಾಟಿಕ್ ಪ್ರಭಾವಳಿ ಅವನ ಸುತ್ತ ಬೆಳೆದಿತ್ತು.
ಅಬು ಜಿಹಾದ್ ದೊಡ್ಡ ಮಟ್ಟದಲ್ಲಿ ಪ್ಲಾನಿಂಗ್ ಶುರು ಮಾಡಿದ. ಆ ಹೊತ್ತಿಗೆ ಆಗಲೇ ಮೊದಲನೇಯ "ಇಂತಿಫದಾ" ಚಳುವಳಿ ಶುರು ಆಗಿತ್ತು. ಅದು "ಹಮಾಸ್" ಸಂಘಟನೆಯ ಕೂಸಾಗಿದ್ದರೂ ದುಡ್ಡು, ಕಾಸು ಕೊಟ್ಟು ಅರಾಫತ್ ಅವರ ಫತಾ ಕೂಡ ಒಂದಿಷ್ಟು ಮೈಲೇಜ್ ಗಳಿಸಿಕೊಂಡಿತು. ಅದರ ಪಬ್ಲಿಕ್ ರಿಲೇಶನ್ ಎಲ್ಲ ಮ್ಯಾನೇಜ್ ಮಾಡಿದ ಅಬು ಜಿಹಾದ್ ಅರಾಫತ್ ಅವರ ಕಡೆ ಭಲೇ, ಭಲೇ ಅನ್ನಿಸಿಕೊಂಡ.
ನಾಮ್ಕೆ ವಾಸ್ತೇ ಟ್ಯೂನಿಸ್ ಗೆ ಹೋದರೂ ಪದೆ ಪದೆ ಜೋರ್ಡಾನ್ ಗೆ ಬಂದು, ಉಳಿದು ಹೋಗುತ್ತಿದ್ದ ಅಬು ಜಿಹಾದ್. ಕಿಂಗ್ ಹುಸೇನರಿಗೆ ಎಲ್ಲ ಅರಬರ ವಿರೋಧ ಕಟ್ಟಿಗೊಂಡು, ಮುಖ ಮುರಿದುಕೊಂಡು ಬರಲೇ ಬೇಡಿ ಅನ್ನುವ ಛಾತಿ ಇರಲಿಲ್ಲ. ಮೊದಲೇ ಪ್ಯಾಲೆಸ್ಟೈನ್ ವಿರೋಧಿ ಅಂತ ಅವರನ್ನು ಬ್ರಾಂಡ್ ಮಾಡಿದ್ದ ಬೇರೆ ಬೇರೆ ಬಣದವರು ಕಿಂಗ್ ಹುಸೇನ್ ಅವರ ಪೈಕಿ ಮಂದಿಯನ್ನು ಹಿಡಿಹಿಡಿದು - ಪ್ಯಾಲೆಸ್ಟೈನ್ ದ್ರೋಹಿಗಳಿರಾ! ಸಾಯಿರಿ. - ಅಂತ ಗೇಮ್ ಬಾರಿಸುತ್ತಿದ್ದರು.
ಹೀಗೆ ಜೋರ್ಡಾನಿಗೆ ಬಂದಾಗೊಮ್ಮೆ ಅಬು ಜಿಹಾದ್ ತಾನೇ ವೆಸ್ಟ್ ಬ್ಯಾಂಕ್ ಒಳಗೆ ಬಂದೋ, ಅಥವಾ ವೆಸ್ಟ್ ಬ್ಯಾಂಕಿನಲ್ಲಿ ಇರುವ ತನ್ನ ಜನರನ್ನು ಕರೆಸಿಕೊಂಡೋ ಸ್ಕೀಮ್ ಹಾಕಿ, ಸ್ಕೆಚ್ ಹಾಕಿಕೊಟ್ಟು ವಾಪಸ್ ಟ್ಯೂನಿಸ್ ಗೆ ಹೋಗುತ್ತಿದ್ದ.
ಒಮ್ಮೆ ಫತಾ ಬಣದ ಉಗ್ರಗಾಮಿಗಳು ಇಸ್ರೇಲ್ ಒಳಗೆ ನುಗ್ಗಿ ಚಿಕ್ಕಮಕ್ಕಳಿಂದ ತುಂಬಿದ್ದ ಒಂದು ಸ್ಕೂಲ್ ಬಸ್ ಅಪಹರಿಸಿಬಿಟ್ಟರು. ದೊಡ್ಡ ಮಟ್ಟದ rescue ಕಾರ್ಯಾಚರಣೆ ಮಾಡಲಾಯಿತು. ಉಗ್ರಗಾಮಿಗಳು ಬಸ್ ಬಿಟ್ಟವರೇ ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಗೊಂಡು ಯಾವದೋ ಕಟ್ಟಡ ಹೊಕ್ಕಿಬಿಟ್ಟರು. ಒತ್ತೆಯಾಳುಗಳನ್ನು ಬಿಡಿಸಲೆಂದೇ ಇದ್ದ ವಿಶೇಷ ಕಮಾಂಡೋ ಪಡೆ ದೊಡ್ಡ ಕಾರ್ಯಾಚರಣೆ ಮಾಡಿತು. ಆದ್ರೆ ಪೂರ್ತಿ ಯಶಸ್ವಿ ಆಗಲಿಲ್ಲ. ಸುಮಾರು ಮಕ್ಕಳು ಸತ್ತು ಹೋದರು. ಪಾಪ. ಇಸ್ರೇಲಿನಲ್ಲಿ ದೊಡ್ಡ ಮಟ್ಟಿನ ದುಃಖ ಮತ್ತು ಶೋಕಾಚರಣೆ.
ಆಗಲೇ ಇಸ್ರೇಲ್ ಸರ್ಕಾರ್ ಒಂದು ನಿರ್ಧಾರಕ್ಕೆ ಬಂತು - ಈ ಜನರನ್ನು ದೂರ ಟ್ಯೂನಿಸಿಯಾಕ್ಕೆ ಅಟ್ಟಿದರೂ, ಅಲ್ಲೇ ಕೂತು ಕಿತಾಪತಿ ಮಾಡುತ್ತಾರೆ. ಅಲ್ಲೇ ಹೋಗಿ ಸರಿಯಾಗಿ ಒದ್ದು ಬರಬೇಕು - ಅಂತ.
ಇಸ್ರೇಲ್ ವಾಯುಪಡೆ ಸಜ್ಜಾಯಿತು. ಟ್ಯೂನಿಸ್ ಇಸ್ರೇಲಿನಿಂದ 3000-3500 ಮೈಲ್ ದೂರ. ಇಸ್ರೇಲಿನಿಂದ ಹೊರಟ ವಿಮಾನಗಳು ಮೆಡಿಟರೇನಿಯನ್ ಸಮುದ್ರದ ಮೇಲೆ ಓರೆ ಕೋರೆಯಾಗಿ ಹಾರಿದವು. ಸ್ವಲ್ಪ ಹೆಚ್ಚು ಕಮ್ಮಿ ಆದರೆ ಶತ್ರು ದೇಶಗಳಾದ ಸೂಡಾನ್, ಲಿಬಿಯಾ, ಇಜಿಪ್ಟ್, ಅಲ್ಜೇರಿಯ ದೇಶಗಳ ರೇಡಾರಗಳ ಕಣ್ಣಿಗೆ ಬೀಳುತ್ತಿದ್ದವು ಇಸ್ರೇಲಿ ಫೈಟರ್ ವಿಮಾನಗಳು. ಈ ತರಹದ ಕಾರ್ಯಾಚರಣೆ ಮೊದಲು ಇರಾಕ್ ಮೇಲೆ ಮಾಡಿದ್ದ ಇಸ್ರೆಲಿಗಳಿಗೆ ಇದೇನೂ ದೊಡ್ಡ ಮಾತಾಗಿರಲಿಲ್ಲ. 10-12 F15 ಸಿರೀಸ್ ಅಮೇರಿಕದಿಂದ ಸಪ್ಲೈ ಆಗಿದ್ದ ವಿಮಾನಗಳು ಸೀದಾ ಟ್ಯೂನಿಸ್ ಗೆ ಹಾರಿ, ಅಲ್ಲಿ ಮೂರು ವರ್ಷದ ಹಿಂದೆ ಅರಾಫತ್ ಕಟ್ಟಿಕೊಂಡಿದ್ದ ಹೊಸ ರೆಸಾರ್ಟ್ ಹಾಗೆ ಇದ್ದ ಶಿಬಿರದ ಮೇಲೆ ಬಾಂಬಿನ ಮಳೆಗರಿದವು. ಅರಾಫತ್ ಅವರ ಕಮಾಂಡ್ ಸೆಂಟರ್ ಪೂರ್ತಿ ಚಪ್ಪಡಿ. ಅರಾಫತ್ ಅವರಿಗೆ ಮೊದಲಿಂದಲೂ ಅಂತರಾಷ್ಟ್ರೀಯ ಸಮುದಾಯದ ಅಭಯಹಸ್ತ. ಹಾಗಾಗಿ ಅವರಿಗೆ ಮೊದಲೇ ಯಾರೋ ಸುದ್ದಿ ಮುಟ್ಟಿಸಿದ್ದರು ಅಂತ ಕಾಣುತ್ತದೆ. ಅವರು ಬಚಾವ್ ಆದರು. ಸುಮಾರು 100-200 ಕೆಳಗಿನ ಸಿಪಾಯಿ ಮಟ್ಟದ ಪ್ಯಾಲೆಸ್ಟೈನ್ ಉಗ್ರವಾದಿಗಳು ಮಾತ್ರ ಸತ್ತು ಹೋದರು. ಟ್ಯೂನಿಸಿಯದ ಸರ್ಕಾರಕ್ಕೆ ಲಟಿಕೆ ಮುರಿದು ಇಸ್ರೇಲಿಗೆ ಶಾಪ ಹಾಕುವದನ್ನು ಬಿಟ್ಟರೆ ಮತ್ತೇನೂ ಮಾಡುವ ತಾಕತ್ತಿರಲಿಲ್ಲ. ಅಷ್ಟು ಮಾಡಿ ವಿಶ್ವಸಂಸ್ಥೆಗೊಂದು ಕಂಪ್ಲೇಂಟ್ ಕೊಟ್ಟು ಸುಮ್ಮನಾಯಿತು.
ಅರಾಫತ್ ಲಬೋ ಲಬೋ ಅಂತ ಬಾಯಿಬಡಕೊಂಡರು. ಇಸ್ರೇಲ್ ಸಾಕ್ಷಿ ಸಮೇತ ಅವರ ಬಣದ ಉಗ್ರಗಾಮಿಗಳು ಮಾಡುತ್ತಿದ್ದ ಕಾರ್ನಾಮೆಗಳ ಬಗ್ಗೆ ಹೇಳಿತು. ಆಮೇಲೆ ಬೇರೆ ಬೇರೆ ಅರಬ್ ದೇಶಗಳು, ಅಮೆರಿಕ, ಇತ್ಯಾದಿ ಕೂಡಿ ಒಂದು ದೊಡ್ಡ ಮಟ್ಟದ ಚಂದಾ ಎತ್ತಿ ಅರಾಫತ್ ಅವರ ಕೈಗೆ ಹಲವಾರು ಮಿಲಿಯನ್ ಡಾಲರ್ ಗಳ ಪ್ರಸಾದವನ್ನು ವೀಳ್ಯ ತಾಂಬೂಲದ ಜೊತೆ ಕೊಟ್ಟರು. ದೊಡ್ಡ ಮೊತ್ತದ ಪ್ರಸಾದ ನೋಡಿದ ಅರಾಫತ್ ಮತ್ತೆ ಫುಲ್ ಖುಷ್. ತಮ್ಮ ಮತ್ತು ತಮ್ಮ ಮ್ಯಾನೇಜ್ಮೆಂಟಿನ ಕಟ್ ತೆಗೆದಿಟ್ಟುಕೊಂಡು ಹೊಸ ರೆಸಾರ್ಟ್ ಕಟ್ಟಿಕೊಂಡರು. ಬಾಕಿ ದುಡ್ಡು ಇಸ್ರೇಲ್ ವಿರೋಧಿ ಕೃತ್ಯಗಳಿಗೆ ಮಂಜೂರ ಮಾಡಿದರು.
ಇದು ಆಗಿದ್ದು 1985 ರಲ್ಲಿ. ಇದರಿಂದ ಅಬು ಜಿಹಾದ್ ಪಾಠ ಕಲಿಯಬೇಕಾಗಿತ್ತು. ಎಲ್ಲಿಯದು? ಅವನು ವಿಮಾನ ದಾಳಿಯಲ್ಲಿ ತನಗೆ ಏನೂ ಆಗಲಿಲ್ಲ ಅಂತ ಆರಾಮಿದ್ದ. ಹೊಸ ದುಡ್ಡು ಬಂದ ಕೂಡಲೇ ಮತ್ತೊಂದು ಖತರ್ನಾಕ್ ಕೆಲಸಕ್ಕೆ ಕೈ ಹಾಕೇ ಬಿಟ್ಟ. ಅವನಿಗೇನು ಗೊತ್ತಿತ್ತು ಈ ಸಲ ಮಾತ್ರ ಇಸ್ರೇಲಿಗಳು ತನಗೆ ನಿಜವಾಗಿಯೂ ಮುಹೂರ್ತ ಇಟ್ಟು ಬಿಡುತ್ತಾರೆ ಅಂತ?
ಮತ್ತೊಂದು ಬಸ್ ಅಪಹರಣ ಮಾಡಿಸಿದ. ರಾಜಧಾನಿ ಟೆಲ್-ಅವಿವ್ ಹತ್ತಿರ ಹೋಗುತ್ತಿದ್ದ ರಸ್ತೆ ಸಾರಿಗೆ ಬಸ್ಸೊಂದನ್ನು 3 ಜನ ಅಬು ಜಿಹಾದ್ ಕಳಿಸಿದ್ದ ಉಗ್ರಗಾಮಿಗಳು ಅಪಹರಿಸಿದರು. ಈ ಸಲ ಅವರು ಇಸ್ರೇಲಿಗೆ ಇಸ್ರೇಲೇ ಬೆಚ್ಚಿ ಬೀಳುವಂತಹ ಕೆಲಸಕ್ಕೆ ಕೈ ಇಟ್ಟುಬಿಟ್ಟರು. ಅಪಹರಿಸಿದ ಬಸ್ಸನ್ನು ಅವರು ಓಡಿಸಿಕೊಂಡು ಹೋಗಿದ್ದು ಎಲ್ಲಿ ಗೊತ್ತೆ? ಇಸ್ರೇಲಿನ ಅತಿ ಮುಖ್ಯ, ಗೌಪ್ಯ ಡಿಮೋನಾ ಅಣುಸ್ಥಾವರದ ಕಡೆ. ಅಣುಸ್ಥಾವರ ಮುಟ್ಟಿ ಅಲ್ಲಿ ವಿಧ್ವಂಸಕ ಕೃತ್ಯ ಮಾಡುವದು ದೂರ ಉಳಿಯಿತು ಬಿಡಿ. ಅಲ್ಲಿಂದ ಸುಮಾರು ದೂರವಿದ್ದಾಗಲೇ ನುರಿತ ಕಮಾಂಡೋಗಳು ಸ್ಪೆಷಲಿಸ್ಟ್ ಕಾರ್ಯಾಚರಣೆ ನೆಡಸಿ, ಉಗ್ರರನ್ನು ಕೊಂದು, ಅವತ್ತಿನ ಆತಂಕವನ್ನು ದೂರಮಾಡಿದ್ದರು. ಆದ್ರೆ ಕೆಲ ಜನ ಉಗ್ರಗಾಮಿಗಳನ್ನು ಬಂಧಿಸಿದ ನಂತರ ಅವರನ್ನು ಕೋಲ್ಡ್ ಬ್ಲಡ್ ನಲ್ಲಿ ಎನ್ಕೌಂಟರ್ ಮಾಡಿದ್ದು ಮಾತ್ರ ಇಸ್ರೇಲಿಗೆ ಕೆಟ್ಟ ಹೆಸರು ತಂದಿತ್ತು.
ಇದರ ನಂತರ ದೊಡ್ಡ ಮಟ್ಟದ ತನಿಖೆ ಆಯಿತು. ಅಣುಸ್ಥಾವರದ ಮೇಲೆ ದಾಳಿ ಮಾಡಲು ಸ್ಕೀಮ್ ಹಾಕಿದ್ದ ಅಬು ಜಿಹಾದನನ್ನು ಉಳಿಸಿದರೆ ಮತ್ತೂ ಖತರ್ನಾಕ್ ಯೋಜನೆಗಳನ್ನೇ ಹಾಕಿಯಾನು ಅಂತ ಅವನಿಗೆ ಒಂದು ಸಾಲಿಡ್ ಮುಹೂರ್ತವಿಡಲು ಇಸ್ರೇಲ್ ನಿರ್ಧರಿಸಿಯೇ ಬಿಟ್ಟಿತು.
ಅಬು ಜಿಹಾದ್ ಈಗಿತ್ತಲಾಗೆ ಅಲ್ಲೇ ಟ್ಯೂನಿಸ್ ನಲ್ಲಿಯೇ ಸೆಟಲ್ ಆಗಿದ್ದ. ಅವನಿಗೂ ಸುಳಿವು ಹತ್ತಿತ್ತು ಅಂತ ಕಾಣುತ್ತದೆ. ತುಂಬಾ ಕೇರ್ಫುಲ್ ಆಗಿ ಇರುತ್ತಿದ್ದ. ಎಕ್ಸಟ್ರಾ ಸೆಕ್ಯೂರಿಟಿ ಇಟ್ಟುಗೊಂಡಿದ್ದ. ಟ್ಯೂನಿಸಿಯನ್ ಸರ್ಕಾರ ಕೂಡ ಈ ಪ್ಯಾಲೆಸ್ಟೈನ್ ಮಂದಿ ಇದ್ದ ಕಡೆ ದೊಡ್ಡ ಪ್ರಮಾಣದ ಕಾವಲು ಹಾಕಿತ್ತು.
ಈ ಅಬು ಜಿಹಾದ್ ನನ್ನು ಎನ್ಕೌಂಟರ್ ಮಾಡುವ ಪ್ರಾಜೆಕ್ಟಿನ ಪ್ರಾಜೆಕ್ಟ್ ಮ್ಯಾನೇಜರ್ ಆದವರು ಏಹೂದ್ ಬರಾಕ್. ಈಗ ಇಸ್ರೇಲಿನ ರಕ್ಷಣಾ ಮಂತ್ರಿ ಆಗಿದ್ದಾರೆ. ಆಗ ಇಸ್ರೇಲಿನ ಸೈನ್ಯದ ಮುಖ್ಯಸ್ಥರಾಗಿದ್ದರು. ಬರಾಕ್ ಮೊದಲು "ಸೆಯೇರೆಟ್ ಮಟ್ಕಾಲ್ " ಎಂಬ ಸಿಕ್ಕಾಪಟ್ಟೆ ಖತರ್ನಾಕ್ ಕಮಾಂಡೋ ಪಡೆಯಲ್ಲಿ ಕಮಾಂಡೋ ಆಗಿದ್ದರು. ನಂತರ ಅದರ ನಾಯಕರೂ ಆಗಿದ್ದರು. 1968 ರಲ್ಲಿ ಲೈಲಾ ಖಾಲೆದ್ ಎಂಬ ಪ್ಯಾಲೆಸ್ಟೈನ್ ಯುವತಿ ಮತ್ತು ಆಕೆಯ ಸಹಚರರು ವಿಮಾನ ಅಪಹರಿಸಿದಾಗ, ವಿಮಾನದ ರಿಪೇರಿ ಮಾಡುವವರ ವೇಷದಲ್ಲಿ ಕೇವಲ 8-10 ಜನ ಕಮಾಂಡೋಗಳೊಂದಿಗೆ ದಾಳಿ ಮಾಡಿ, ಕರಾರುವಕ್ಕಾಗಿ ಕೆಲ ಉಗ್ರರ ಬುರುಡೆಗೆ ಗುಂಡು ಹೊಡೆದು, ಉಳಿದವರನ್ನು ಬಂಧಿಸಿ ಎಲ್ಲ ಪ್ರಯಾಣಿಕರನ್ನು ಸೇಫಾಗಿ ಬಿಡುಗಡೆ ಮಾಡಿದ ಕಾರ್ಯಾಚರಣೆಯಿಂದ ಅವರಿಗೆ ದೊಡ್ಡ ಮಟ್ಟದ ಹೆಸರು ಬಂದಿತ್ತು.
ಮುಂದೆ ಮ್ಯೂನಿಕ್ ಒಲಂಪಿಕ್ ಇಸ್ರೇಲಿ ಕ್ರೀಡಾಪಟುಗಳ ಅಪಹರಣ ಮತ್ತು ಹತ್ಯಾಕಾಂಡದ ನಂತರ ಇಸ್ರೇಲಿ ಕಮಾಂಡೋಗಳು 1973 ರಲ್ಲಿ ಸೀದಾ ಬಿರೂಟ ನಗರದ ಹೃದಯ ಭಾಗಕ್ಕೆ ನುಗ್ಗಿ, ಅಪಾರ್ಟ್ಮೆಂಟ್ ಒಂದರಲ್ಲಿ ಇದ್ದ ನಾಕು ಜನ ದೊಡ್ಡ ಮಟ್ಟದ ಪ್ಯಾಲೆಸ್ಟೈನ್ ಉಗ್ರಗಾಮಿಗಳಿಗೆ ದೇವರ ಕಡೆ ಹೋಗುವ ಟಿಕೆಟ್ ಕೊಟ್ಟಿದ್ದರಲ್ಲ, ಅದರಲ್ಲೂ ಏಹೂದ್ ಬರಾಕ್ ತುಂಬ ಪ್ರಮುಖ ಪಾತ್ರ ವಹಿಸಿದ್ದರು. ಮುಕಿ ಬೆಟ್ಸರ್ ಎಂಬ ಮತ್ತೊಬ್ಬ ಕಮಾಂಡೋ ಮತ್ತು ಇವರು ರೋಮಾಂಟಿಕ್ ಜೋಡಿ ತರಹ ಉಗ್ರರ ಅಪಾರ್ಟ್ಮೆಂಟ್ ಹತ್ತಿರ ಹೋಗಿದ್ದರು. ಬ್ಲಾಂಡ್ ಹುಡುಗಿಯ ಕೆಂಚುಕೂದಲ ವಿಗ್ ಹಾಕಿಕೊಂಡಿದ್ದ ಬರಾಕ್ ತಮ್ಮ ಸ್ಪೆಷಲ್ ಬ್ರಾದಲ್ಲಿ ಎರಡು ಗ್ರೆನೇಡ್ ಇಟ್ಟುಕೊಂಡಿದ್ದರಂತೆ. ಲಂಗದ ಸ್ಪೆಷಲ್ ಕಿಸೆಗಳಲ್ಲಿ ಬೇರೆ ಬೇರೆ ಆಯುಧಗಳು, ನಕ್ಷೆಗಳು, ಬಾಕುಗಳು. ಕಮಾಂಡೋ ಡ್ರೆಸ್ಸಿನಲ್ಲಿ ಹೋಗುವಹಾಗಿರಲಿಲ್ಲ. ಅದಕ್ಕೆ ಹಾಕಿಕೊಂಡ ವಸ್ತ್ರಗಳನ್ನೇ ವಿಶೇಷವಾಗಿ ಮಾರ್ಪಡಿಸಿಕೊಂಡಿದ್ದರು ಕಮಾಂಡೋಗಳು. ಆ ಕಾರ್ಯಾಚರಣೆ 'operation spring of youth' ಅಂತ ಫೇಮಸ್ ಆಗಿತ್ತು. ಅದಾದ ನಂತರ ಉಗ್ರಾಗಾಮಿಗಳ ಕಾಟ ಸ್ವಲ್ಪ ಕಮ್ಮಿ ಆಗಿತ್ತು. ಅರಾಫತ್ ಮತ್ತು ಇತರ ಉಗ್ರಾಗಾಮಿಗಳಿಗೆ "ನಿಂತ್ರೆ ಕೂತ್ರೆ ಅವರದ್ದೇ ಧ್ಯಾನ, ಮನಸಿಗಿಲ್ಲ ಸಮಾಧಾನ, ಅವರಿಗೆ ಎಂತಾ ಬಿಗುಮಾನ" ಅನ್ನುವ ಹಾಡಿನ ಹಾಗೆ ಕನಸಿನಲ್ಲೂ ಇಸ್ರೇಲಿಗಳು ಬಂದು ತಮ್ಮ ಗೇಮ್ ಬಾರಿಸಿದ ಹಾಗೆ ಕೆಟ್ಟ ಕೆಟ್ಟ ಕನಸುಗಳು.
ಈ ತರಹ ಹಲವಾರು ದೊಡ್ಡ ಮಟ್ಟದ ಅತಿ ರಹಸ್ಯ, ಅತಿ ಡೇಂಜರಸ್ ಕಾರ್ಯಾಚರಣೆಗಳಲ್ಲಿ ಪಳಗಿದ್ದ ಏಹೂದ್ ಬರಾಕ್ ಸ್ಕೆಚ್ ಹಾಕಲು ಕುಳಿತರೆ ತಪ್ಪುವ ಚಾನ್ಸೇ ಇಲ್ಲ. ಅಬು ಜಿಹಾದ್ ನ ತಿಥಿಗೆ ಮುಹೂರ್ತ ಪಕ್ಕಾ ಆಗುತ್ತಿತ್ತು.
ಮೊದಲೇ ಹೇಳಿದಂತೆ ಟ್ಯೂನಿಸ್ ಇಸ್ರೇಲಿನಿಂದ ತುಂಬಾ ದೂರ. ಮತ್ತೆ ಕಮಾಂಡೋ ಕಾರ್ಯಾಚರಣೆ ಆದ್ದರಿಂದ ವಿಮಾನದಲ್ಲಿ ಹೋಗಿ ಬರುವದು ಕಷ್ಟ. ಹಾಗಾಗಿ ಸಮುದ್ರದ ಮೂಲಕ ಹೋಗುವದೆಂದು ತಿರ್ಮಾನ ಮಾಡಲಾಯಿತು. ಇಸ್ರೇಲಿ ನೇವಿಯ ಮಿಸ್ಸೈಲ್ ಬೋಟೊಂದು ಎರಡು ಕಮಾಂಡೋ ಪಡೆಗಳನ್ನು ತುಂಬಿಕೊಂಡು ಟ್ಯೂನಿಸ್ ಕಡೆ ಹೊರಟಿತು. ಒಂದು "ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳ ತಂಡ. ಇನ್ನೊಂದು ಇಸ್ರೇಲಿ ನೇವಿಯ "ಫ್ಲೋಟಿಲ್ಲಾ" ಎಂಬ ಸ್ಪೆಷಲಿಸ್ಟ್ ಕಮಾಂಡೋ ತಂಡ. ಟ್ಯೂನಿಸ್ ಹತ್ತಿರ ಹೋದ ಮಿಸ್ಸೈಲ್ ಬೋಟ್ ಅಂತರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿತು.
ಈ ಕಡೆ ಪ್ರಾಜೆಕ್ಟ್ ಮ್ಯಾನೇಜರ್ ಏಹೂದ್ ಬರಾಕ್ ಮತ್ತು ಇತರೇ ಮುಖ್ಯ ಜನರನ್ನು ಹೊತ್ತ ಒಂದು ದೊಡ್ಡ B-27 ವಿಮಾನವೊಂದು ಟೆಲ್-ಅವಿವ್ ನಿಂದ ಹಾರಿತು. ಈ ಕಾರ್ಯಾಚರಣೆಗೆಂದೇ ವಿಮಾನವನ್ನು ಸ್ಪೆಶಲ್ಲಾಗಿ ಪರಿವರ್ತಿಸಲಾಗಿತ್ತು. ಅದು ಬರಾಕ್ ಅವರ "ಹಾರುವ ಕಮಾಂಡ್ ಸೆಂಟರ್". ಅಲ್ಲಿಂದ ಅವರು ಕಾರ್ಯಾಚರಣೆ ನಿಯಂತ್ರಿಸುತ್ತಿದ್ದರು. ಟ್ಯೂನಿಸ್ ನಗರದ ಮೇಲೆ ಅತಿ ಎತ್ತರದಲ್ಲಿ ರೇಡಾರ್ ಗಳ ಪರೀಧಿಯಿಂದ ದೂರದಲ್ಲಿ ವಿಮಾನ ಸುತ್ತು ಹೊಡೆಯುತ್ತಿತ್ತು. ಇಂಧನ ಖಾಲಿಯಾದ ಹಾಗೆ ಇಂಧನ ತುಂಬುವ ಟ್ಯಾಂಕರ್ ವಿಮಾನ ಬಂದು ಇಂಧನ ತುಂಬಿಸುತ್ತಿತ್ತು. ಎಲ್ಲ ಕಡೆ ಸ್ಯಾಟೆಲೈಟ್ ಸಂಪರ್ಕ ಇತ್ತು.
ಬಹಳ ಮೊದಲೇ ಟ್ಯೂನಿಸ್ ನಲ್ಲಿ ಬೇಹುಗಾರಿಕೆ ಸಂಸ್ಥೆಯಾದ ಮೊಸ್ಸಾದ್ ನ ಜನ ಮಾರು ವೇಷದಲ್ಲಿ ಹೋಗಿ ಅಬು ಜಿಹಾದ್ ಗೆ ನೀಟಾಗಿ ಫೀಲ್ಡಿಂಗ್ ಹಾಕುತ್ತಿದ್ದರು. ಅವನ ಚಲನವಲನ, ಟೈಮಿಂಗ್, ಹ್ಯಾಬಿಟ್ಸ್ ಎಲ್ಲ ಗಮನಿಸಿ ಕರೆಕ್ಟಾಗಿ ಮಾಹಿತಿ ಸಪ್ಲೈ ಮಾಡಿದ್ದರು. ಅದನ್ನು ಉಪಯೋಗಿಸಿ ಬರಾಕ್ ಮಾಸ್ಟರ್ ಪ್ಲಾನ್ ಮಾಡಿದ್ದರು. ರಿಯಲ್ ಟೈಮ್ ಮಾಹಿತಿ ಅವರ ಕಮಾಂಡ್ ಸೆಂಟರ್ ಗೆ ಬಂದು ಮುಟ್ಟಿ , ಕಮಾಂಡೋಗಳಿಗೆ ರವಾನೆ ಆಗುತ್ತಿತ್ತು.
ಏಪ್ರಿಲ್ 16, 1988 ಮುಹೂರ್ತದ ದಿನ. ಬಂದೇ ಬಿಟ್ಟಿತು.
ರಾತ್ರಿ ಕಗ್ಗತ್ತಲಲ್ಲಿ ಮಿಸ್ಸೈಲ್ ಬೋಟಿನಿಂದ ಹೊರಟ "ಫ್ಲೋಟಿಲ್ಲಾ" ಕಮಾಂಡೋಗಳು ಟ್ಯೂನಿಸ್ ನಗರದ ನಿರ್ಜನ ಬೀಚೊಂದರ ಮೇಲೆ ತಮ್ಮ ರಬ್ಬರ್ ದೋಣಿಗಳಲ್ಲಿ ಬಂದು ಇಳಿದರು. ಬೀಚ್ ಏರಿಯಾವನ್ನು ಫುಲ್ ಕಂಟ್ರೋಲಿಗೆ ತೆಗೆದುಕೊಂಡು ಕಾರ್ಯಾಚರಣೆ ಮುಗಿಯುವರೆಗೆ ಕಾಯುವದು ಅವರ ಕೆಲಸ. ಬೀಚನ್ನು ತಮ್ಮ ವಶಕ್ಕೆ ತೆಗೆದುಕೊಂಡವರೇ ಟ್ಯೂನಿಸ್ ನಗರದಲ್ಲಿ ಕಾರು, ವ್ಯಾನುಗಳ ಜೊತೆ ತಯಾರಾಗಿದ್ದ ಮೊಸ್ಸಾದ್ ಬೇಹುಗಾರರಿಗೆ 'ಕೋಸ್ಟ್ ಇಸ್ ಕ್ಲೀರ್" ಅಂತ ಸಂದೇಶ ಕಳಿಸಿದರು. ಅವರು ಬೀಚಿನತ್ತ ಹೊರಟರು. ಇತ್ತ "ಸೆಯೇರೆಟ್ ಮಟ್ಕಾಲ್ " ಕಮಾಂಡೋ ಪಡೆಗೂ "ಹೊರಟು ಬನ್ನಿ" ಅಂತ ಮೆಸೇಜ್ ಹೋಯಿತು. ಮೇಲೆ ವಿಮಾನದಲ್ಲಿ ಕುಳಿತಿದ್ದ ಬರಾಕ್ "ಗೋ ಅಹೆಡ್" ಕೊಟ್ಟರು.
"ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳು ಸಹ ರಬ್ಬರ್ ದೋಣಿಗಳಲ್ಲಿ ಸರಸರ ಬಂದು ಬೀಚಿನ ಮೇಲೆ ಲ್ಯಾಂಡ್ ಆದರು. ಅದೇ ವೇಳೆಗೆ ಮೊಸ್ಸಾದ್ ಜನ ಸಹಿತ ತಮ್ಮ ಕಾರು ವ್ಯಾನುಗಳ ಸಮೇತ ಬೀಚಿಗೆ ಬಂದರು. "ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳು ಕಾರು ವ್ಯಾನುಗಳಲ್ಲಿ ತಮ್ಮ ಫುಲ್ ಕಿಟ್ ನೊಂದಿಗೆ ತೂರಿಕೊಂಡರು. ಆ ಕಡೆಯಿಂದ ಅಬು ಜಿಹಾದನ ಮನೆಯನ್ನು ಗಮನಿಸುತ್ತಿದ್ದ ಜನರಿಂದ "ಕ್ಲೀರ್" ಅಂತ ಮೆಸೇಜ್ ಬಂದೇ ಬಿಟ್ಟಿತು. ಈಗ ತಂಡ ಟ್ಯೂನಿಸ್ ನಗರದತ್ತ ಹೊರಟಿತು. ಫ್ಲೋಟಿಲ್ಲಾ ಕಮಾಂಡೋಗಳು ಕತ್ತಲಲ್ಲಿ ಬೀಚನ್ನು, ತಮ್ಮ ದೋಣಿಗಳನ್ನು ಕಾಯುತ್ತ ನಿಂತಿದ್ದರು.
ಅದು ಟ್ಯೂನಿಸ್ ಎಲೆಕ್ಟ್ರಿಕ್ ಬೋರ್ಡಿನ ಜನರಿಗೆ ದುಡ್ಡು ಕೊಟ್ಟು ಕರೆಂಟ್ ತೆಗೆಸಿದ್ದರೋ, ಅಥವಾ ಆ ಏರಿಯದ ಟ್ರಾನ್ಸ್ಫಾರ್ಮರಿಗೇ ಚಿಕ್ಕ ಬಾಂಬಿಟ್ಟು ಸ್ಪೊಟಿಸಿದ್ದರೋ ಗೊತ್ತಿಲ್ಲ. ರಾತ್ರಿ 1.30 ಹೊತ್ತಿಗೆ ಕಿಲ್ಲರ್ ಕಮಾಂಡೋಗಳು ಅಲ್ಲಿ ಅಬು ಜಿಹಾದ್ ಮನೆಯ ಹತ್ತಿರ ಹೊಂಚು ಹಾಕಿ ದಡಕ್ಕೆ ಬರುತ್ತಿದ್ದ ಮೊಸಳೆಗಳಂತೆ ಬರುತ್ತಿದ್ದರೆ, ಸುತ್ತ ಪೂರ್ತಿ ಕಗ್ಗತ್ತಲು ಆವರಿಸಿತ್ತು.
ಅಬು ಜಿಹಾದ್ ಮನೆಯಲ್ಲೇ ಇದ್ದಾನೆ ಅನ್ನುವದನ್ನು ಡಬಲ್, ಟ್ರಿಪಲ್ ಖಚಿತ ಮಾಡಿಕೊಳ್ಳಬೇಕಿತ್ತು. ಅವನ ಮನೆಯ ಸುತ್ತ ಗಮನಿಸುತ್ತಿದ್ದ ಮೊಸ್ಸಾದ್ ಬೇಹುಗಾರರು ಮನೆಗೆ ಬಂದಿದ್ದಾನೆ ಅಂತ ರೀಯಲ್ ಟೈಮ್ ಮಾಹಿತಿ ಕೊಟ್ಟಿದ್ದರು. ಮೇಲೆ ಸುತ್ತುತ್ತಿದ್ದ ವಿಮಾನದ ಕಮಾಂಡ್ ಸೆಂಟರ್ ನಿಂದ ಒಬ್ಬ ಅರೇಬಿಕ್ ಭಾಷಾ ತಂತ್ರಜ್ಞನೊಬ್ಬ ಅಬು ಜಿಹಾದನ ಮನೆಯ ನಂಬರಿಗೆ ಫೋನ್ ಮಾಡಿದ. ಆ ಮಟ್ಟದ ಸಂಪರ್ಕ ವ್ಯವಸ್ಥೆ ಇತ್ತು. ಹೆಚ್ಚಾಗಿ ಆ ಕಾಲ್ ವಿಮಾನದಿಂದ, ಸಾಟೆಲೈಟ್ ಮೂಲಕ, ಎಲ್ಲೆಲೋ ಹೋಗಿ, ಟ್ಯೂನಿಸ್ ಗೆ ರೌಟ್ ಆಗಿ, ಅಬು ಜಿಹಾದನ ಮನೆಯ ಏಕ್ದಂ ಖಾಸ್ ಫೋನ್ ಟ್ರಿನ್, ಟ್ರಿನ್ ಅಂದಿತ್ತು.
ಫೋನ್ ಎತ್ತಿದ ಅಬು ಜಿಹಾದ್ ಹಲೋ ಅಂದ.
ಈ ಕಡೆ ಅರೇಬಿಕ್ ಭಾಷಾ ತಂತ್ರಜ್ಞ ಪಕ್ಕಾ ಪ್ಯಾಲೆಸ್ಟೈನ್ ಜನರ ತರಹ "ಅಸಲ್ಲಾಮ್ ಅಲೈಕುಂ" ಅಂದ. ಪದ್ಧತಿಯಂತೆ ಅಬು ಜಿಹಾದ್ "ವಾಲೈಕುಂ ಸಲಾಂ" ಅಂದ. ಲೈನ್ ಕಟ್ಟಾಯಿತು. ಯಾರೋ ಪಿರ್ಕಿ ಫೋನ್ ಮಾಡಿ ಕಟ್ಟ ಮಾಡಿದ ಅಂತ ಅಬು ಜಿಹಾದ್ ಫೋನಿಟ್ಟು ಹೊರಟ.
ಚಕಚಕನೆ ಆ ಸಂಭಾಷಣೆಯನ್ನು ಅಬು ಜಿಹಾದನ ಧ್ವನಿ ಸ್ಯಾಂಪಲ್ ನೊಂದಿಗೆ ಕಂಪೇರ್ ಮಾಡಲಾಯಿತು. ಪಾಸಿಟಿವ್ ಅಂತ ಬಂತು.
ಮೇಲಿಂದ ಯೆಹುದ್ ಬರಾಕ್ "ಅಟ್ಟ್ಯಾಕ್" ಅಂತ ಫೈನಲ್ ಕ್ಲಿಯರನ್ಸ್ ಕೊಟ್ಟರು.
ಕಮಾಂಡೋಗಳು ಮೊದಲೇ ಸಾವಿರ ಸಲ ರೀಹರ್ಸಲ್ ಮಾಡಿದ್ದ ಪ್ಲಾನಿನ ಆಚರಣೆ ಶುರು ಮಾಡಿದರು. ಮೊದಲು ಗೇಟಿನ ಸುತ್ತ ಮುತ್ತ ಇದ್ದ ಕಾವಲಿನವರನ್ನು ಸೈಲೆನ್ಸರ್ ಹಚ್ಚಿದ ಪಿಸ್ತೂಲಿನಿಂದ ಖತಂ ಮಾಡಲಾಯಿತು. ಕಮಾಂಡೋಗಳು ಮೇನ್ ಡೋರಿನತ್ತ ಓಡಿದರು.ಅಲ್ಲಿ ಇನ್ನೊಬ್ಬ ಇದ್ದ. ಅವನ ಕತ್ತು ತರಿಯಲಾಯಿತು. ಸತ್ತ ಅವನು.
ಬಾಗಿಲಿನ ಹಿಂಜಿಗೆ ಸ್ಪೋಟಕ ಇಟ್ಟವರೇ ನಾಕು ಫೂಟ್ ಹಿಂದೆ ಸರಿದರು. ಚಿಕ್ಕ ಟಪ್ ಅನ್ನುವ ಶಬ್ದದೊಂದಿಗೆ ಹಿಂಜಿನ ಸಮೇತ ಬಾಗಿಲು ಕಿತ್ತು ಬಂತು. ಅದನ್ನು ಪಕ್ಕಕ್ಕೆ ಇಟ್ಟವರೇ, ತಮ್ಮ ನೈಟ್ ವಿಶನ್ ಗಾಗಲ್ ಅಡ್ಜಸ್ಟ್ ಮಾಡಿಕೊಂಡ ಮೂರು ಜನ ಕಮಾಂಡೋಗಳು ಸರಸರನೆ ಒಳಗೆ ನುಗ್ಗಿದರೆ ಉಳಿದವರು ಮನೆ ಸುತ್ತ ಸುರಕ್ಷಿತ ಪೆರಿಮೀಟರ್ ಹಾಕಿಕೊಂಡು ಕಾಯುತ್ತ ನಿಂತರು.
ಅಬು ಜಿಹಾದನ ಮನೆಯ ಮೂಲೆ ಮೂಲೆಯ ಮಾಹಿತಿ ಇತ್ತು. ಅದೇ ಮಾದರಿಯ ಮನೆಯೊಂದರ ಮಾಡೆಲ್ ಮಾಡಿಕೊಂಡು ಹಲವಾರು ಬಾರಿ ರೀಹರ್ಸಲ್ ಮಾಡಿ ಪರ್ಫೆಕ್ಟ್ ಆಗಿದ್ದರು.
ಸೀದಾ ಅಬು ಜಿಹಾದನ ಬೆಡ್ ರೂಮಿನತ್ತ ನುಗ್ಗಿದರು. ಕತ್ತಲು. ಅವನ ಬೆಡ್ರೂಮ್ ಮೊದಲ ಮಹಡಿಯಲ್ಲಿತ್ತು. ಸ್ವಲ್ಪ ಮಟ್ಟಿನ ಗದ್ದಲ ಕೇಳಿದ ಉಗ್ರಗಾಮಿ ತಡವರಿಸುತ್ತ ಸ್ಟೇರಕೇಸ್ ಹತ್ತಿರ ಬಂದ. ನೈಟ್ ವಿಶನ್ ಗಾಗಲ್ಸ್ ನಲ್ಲಿ ಕಣ್ಣಿಗೆ ಬಿದ್ದ ಕೂಡಲೇ ಗುಂಡಿನ ಮಳೆಗರಿದೇ ಬಿಟ್ಟರು ಇಬ್ಬರು ಕಮಾಂಡೋಗಳು. ಕೆಲವೇ ಸೆಕೆಂಡುಗಳಲ್ಲಿ 60-70 ಗುಂಡು ನುಗ್ಗಿಸ್ಸಿದ್ದರಂತೆ. ಒಬ್ಬ ಸ್ಪೆಷಲ್ ವೀಡಿಯೊ ಕ್ಯಾಮರಾದಲ್ಲಿ ಈ "ಶೂಟಿಂಗಿನ" ಶೂಟಿಂಗ ಮಾಡುತ್ತಿದ್ದ.
ಇತ್ತ ಕಡೆ ಅಬು ಜಿಹಾದ್ ನೆಲಕ್ಕೆ ಉರುಳುತ್ತಿದ್ದಂತೆ ಕಮಾಂಡೋಗಳು ಮನೆಯನ್ನು ಶೋಧಿಸಿ ಸುಮಾರು ದಾಖಲೆ ಇತ್ಯಾದಿ ವಶಪಡಿಸಿಕೊಂಡರು. ಅಬು ಜಿಹಾದನ ಹೆಂಡತಿ ಇಂತಿಸ್ಸಾರ್ ಮತ್ತು ಮಕ್ಕಳ ಮುಂದೆಯೇ ಹತ್ಯಾಕಾಂಡ ನೆಡದು ಹೋಗಿತ್ತು. ಅವರಿಗೆ ಏನೂ ಆಗಿರಲಿಲ್ಲ. ಗಂಡ, ಅಪ್ಪ ಹೋಗಿದ್ದು ಒಂದು ಬಿಟ್ಟರೆ.
ಕೆಲವೇ ಮಿನಿಟುಗಳಲ್ಲಿ ಮುಗಿದು ಹೋದ ಕಾರ್ಯಾಚರಣೆ ಇದು. ಅಬು ಜಿಹಾದ್ ಸ್ಟೇರ್ ಕೇಸ್ ಮೇಲೆ ಕಂಡ ನಂತರ ಕೆಲವೇ ಸೆಕೆಂಡುಗಳು. ಅಷ್ಟೇ.
ಮನೆಯಿಂದ ಹೊರ ಬಂದವರೇ ಮತ್ತ ತಮ್ಮ ತಮ್ಮ ಕಾರು ವ್ಯಾನುಗಳಲ್ಲಿ ತೂರಿಕೊಂಡು ಬೀಚಿನತ್ತ ಹೊರಟರೆ ದಾರಿಯಲ್ಲಿ ಟ್ಯೂನಿಸ್ ಪೊಲೀಸರು ಕೆಂಪು ದೀಪ ಹಾಕಿಕೊಂಡು ಅಬು ಜಿಹಾದ್ ಮನೆ ಕಡೆ ಧಾವಿಸುತ್ತಿದ್ದರು. ವಾಪಸ್ ಹೋಗುತ್ತಿದ್ದ ಇಸ್ರೇಲಿಗಳು ನಕ್ಕಿರಬೇಕು. ಹೋಗಿ ಹೆಣ ಕಾಯಲು ಹೋಗಿ - ಅಂತ.
ಬೀಚ್ ಕಾಯುತ್ತಿದ್ದ "ಫ್ಲೋಟಿಲ್ಲಾ" ಕಮಾಂಡೋಗಳು ಮತ್ತೊಮ್ಮೆ ಎಲ್ಲ ಚೆಕ್ ಮಾಡಿ ಬೀಚ್ ಕ್ಲೀರ್ ಅಂತ ಮೆಸೇಜ್ ಕೊಟ್ಟರು. ಕೊಟ್ಟ ಕೆಲವೇ ಕ್ಷಣಗಳಲ್ಲಿ ಬೀಚಿಗೆ ಬಂದು ಮುಟ್ಟಿದ್ದರು ಹಂತಕರು. ಮೊಸ್ಸಾದಿನ ಬೇಹುಗಾರರು, ಕಮಾಂಡೋಗಳನ್ನು ಜೋಡಿಯಾಕ್ ರಬ್ಬರ್ ದೋಣಿಯಲ್ಲಿ ತುಂಬಿದಾಕ್ಷಣ ಎಂಜಿನ್ ಚಾಲೂ ಮಾಡಿಯೇ ಬಿಟ್ಟ ಕಾದು ಕುಳಿತಿದ್ದ ಡ್ರೈವರ್. ಮಿಸ್ಸೈಲ್ ಬೋಟಿಗೆ ವಾಪಸ್ ಪಯಣ. ಮಿಶನ್ ಸಕ್ಸೆಸ್ಸ್.
ಲಾಸ್ಟ್ ಒಂದು ಸಲ ಎಲ್ಲ ಸರಿಯಾಗಿದೆ, ಬೀಚ್ ಮೇಲೆ ಏನೂ ಬಿಟ್ಟಿಲ್ಲ ಅಂತ ಖಚಿತ ಮಾಡಿಕೊಂಡ "ಫ್ಲೋಟಿಲ್ಲಾ" ಕಮಾಂಡೋಗಳು ಬೀಚ್ ಬಿಟ್ಟು ಹೊರಟರು. ಕೆಲ ನಿಮಿಷಗಳ ನಂತರ ಎಲ್ಲರೂ ಇಸ್ರೇಲ್ ನೇವಿಯ ನೌಕೆ ಹತ್ತಿ ಅಂತರಾಷ್ಟ್ರೀಯ ಸಮುದ್ರದಲ್ಲಿ ಶಾಂಪೇನ್ ಬಾಟಲಿ ಬಿರಡೆ ಹಾರಿಸುತ್ತಿದ್ದರೆ, "ಈಗ ತಾನೇ ಬುರುಡೆ ಹಾರಿಸಿ ಬಂದಿದ್ದೀರಿ. ಅದೂ ಅಬು ಜಿಹಾದನದು. ಈಗ ಒಂದಲ್ಲ ಹತ್ತು ಶಾಂಪೇನ್ ಬಾಟಲಿಗಳ ಬಿರಡೆ ಹಾರಿಸಿ" ಅಂತ ಮೇಲಿಂದ ಯೆಹುದ್ ಬರಾಕ್, ಆ ಕಡೆಯಿಂದ ಇಸ್ರೇಲ್ ಪ್ರಧಾನಿ ಅಭಿನಂದಿಸುತ್ತಿದ್ದರು.
ಒಟ್ಟಿನಲ್ಲಿ ಅರಾಫತ್ ಅಬು ಜಿಹಾದನ ತಿಥಿಗೆ ಏರ್ಪಾಡು ಮಾಡಿಕೊಳ್ಳುತ್ತಿದ್ದರು. ಬೇರೆ ಬೇರೆ ಉಗ್ರಗಾಮಿಗಳು ಹೆಚ್ಚಿನ ಸೆಕ್ಯೂರಿಟಿಗೆ ಆರ್ಡರ್ ಮಾಡುತ್ತಿದ್ದರು. ಅರಬ್ ಗಣ್ಯರೆಲ್ಲ ಟ್ಯೂನಿಸ್ ಗೆ ಬಂದು ಇಳಿಯತೊಡಗಿದ್ದರು - ಅಬು ಜಿಹಾದನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು.
ಹೆಚ್ಚಿನ ಮಾಹಿತಿಗೆ:
** ಇಸ್ರೇಲ್ ಆಫಿಶಿಯಲ್ ಆಗಿ ಇಂತಹ ಕಾರ್ಯಾಚರಣೆಗಳನ್ನು ತಾವು ಮಾಡಿದ್ದೇವೆ ಅಂತ ಒಪ್ಪಿಕೊಳ್ಳುವದಿಲ್ಲ. ಆದ್ರೆ ಆಪ್ತ ಪತ್ರಕರ್ತರಿಗೆ ಸೆನ್ಸಾರ್ ಮಾಡಿದ ಸುದ್ದಿ ಬಿಡುಗಡೆ ಮಾಡುತ್ತದೆ. ಅವರು ಬರೆದ ಮಾಹಿತಿ ನಾವು ಓದಿದ್ದು. ಹಾಗಾಗಿ ಬೇರೆ ಬೇರೆ ಪತ್ರಕರ್ತರು ಬರೆದ ಲೇಖನಗಳಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ. ಉದಾಹರಣೆಗೆ - ಕೆಲ ಜನ ಅಬು ಜಿಹಾದನನ್ನು ಸ್ಟೇರ್ ಕೇಸ್ ಮೇಲೆ ಮುಗಿಸಿದರು ಅಂದ್ರೆ, ಇನ್ನು ಕೆಲ ಜನ ಇಲ್ಲ ಬೆಡ್ರೂಮ್ ಬೆಡ್ಡಿನ ಮೇಲೆ ಮುಗಿಸಿದರು ಅನ್ನುತ್ತಾರೆ. ಕೆಲ ಜನ ಏಹುದ್ ಬರಾಕ್ ವಿಮಾನದಲ್ಲಿ ಕುಳಿತು ಇಡೀ ಆಪರೇಶನ್ ಮ್ಯಾನೇಜ್ ಮಾಡುತ್ತಿದ್ದರು ಅಂತ ಬರೆದರೆ, ಇನ್ನು ಕೆಲವರು ಇಲ್ಲ ಬರಾಕ್ ಮಿಸ್ಸೈಲ್ ಬೋಟಿನಲ್ಲಿ ಇದ್ದರು ಅಂತ ಬರೆಯುತ್ತಾರೆ. ವಿಮಾನದಲ್ಲಿ ಇದ್ದವರು ಇನ್ನೊಂದು ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರು ಅನ್ನುತ್ತಾರೆ. ಆದರೆ ಅವೆಲ್ಲ ಮೈನ್ಯೂಟ್ ಡೀಟೈಲ್ಸ್. ಒಂದು ಮಾತ್ರ ಖಾತ್ರಿ ಇಸ್ರೇಲಿಗಳು ಎಲ್ಲಿ ಬೇಕಾದರೂ ಹೋಗಿ ಯಾರನ್ನು ಬೇಕಾದರೂ ಎನ್ಕೌಂಟರ್ ಮಾಡಿ ಬರುತ್ತಾರೆ. ಅದು ಅವರ ಹಿಮ್ಮತ್. ಅದಕ್ಕೊಂದು ಸಲಾಂ!
2 comments:
nice article.
ಇಷ್ಟನ್ನು ಓದುವುದೇ ಕಷ್ಟ. ಇನ್ನು ಅಷ್ಟೆಲ್ಲ ನಿರ೦ತರವಾಗಿ ಹೇಗೆ ಬರೆಯುತ್ತೀರೆ೦ಬುದೇ ಆಶ್ಚರ್ಯ.
ಧನ್ಯವಾದ ಸಚಿನ್ ಭಟ್ಟ ಅವರೇ.
ಟೈಮ್ ಸಿಕ್ಕಾಗೆಲ್ಲ ಓದುವದು ಬರೆಯುವದು. ಮತ್ತೇನೂ ಜಾಸ್ತಿ ಹಾಬಿಸ್ ಇಲ್ಲ ನೋಡಿ, ಅದಕ್ಕೇ ಸ್ವಲ್ಪ ಜಾಸ್ತಿ ಓದಲಿಕ್ಕೆ ಬರಿಯಲಿಕ್ಕೆ ಟೈಮ್ ಸಿಕ್ಕಿದೆ.
ನೀವು ಓದಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್.
ಹೀಗೆ ಓದಿ, ಆವಾಗಿವಾಗ ಬಂದು ಮಾತಾಡಿ ಹೋಗಿ.
ಬೆಸ್ಟ್ ವಿಷಸ್.
-ಮಹೇಶ್
Post a Comment