ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳು. ಅವಳಿ ಜವಳಿ. ನೋಡಲೂ ಒಂದೇ ತರಹ ಇದ್ದರು. ಸ್ವಭಾವ ಮಾತ್ರ ಬೇರೆ ಬೇರೆ. ತದ್ವಿರುದ್ಧ ಅಂದರೂ ತಪ್ಪಿಲ್ಲ. ಒಬ್ಬ ಸಿಕ್ಕಾಪಟ್ಟೆ ನಿರಾಶಾವಾದಿ(pessimist). ಇನ್ನೊಬ್ಬ ಸಿಕ್ಕಾಪಟ್ಟೆ ಆಶಾವಾದಿ(optimist).
ಅವರ ಹುಟ್ಟುಹಬ್ಬ ಬಂತು. ತಂದೆಗೆ ಒಂದು ಯೋಚನೆ ಬಂತು. ಇವರ ಆಶಾವಾದ, ನಿರಾಶಾವಾದದ ಒಂದು ಪರೀಕ್ಷೆ ಮಾಡಿಬಿಡೋಣ ಅಂತ.
ಜನ್ಮದಿನದ ಹಿಂದಿನ ದಿನ ನಿರಾಶಾವಾದಿ ಮಗನ ಕೋಣೆ ತುಂಬಾ ಆಟಿಗೆಗಳನ್ನು ತುಂಬಿಸಿದ.
ಒಂದು ಲೋಡ್ ಕುದರೆ ಲದ್ದಿ ಒಂದು ಬಕೆಟ್ನಲ್ಲಿ ತುಂಬಿಸಿ ಅದನ್ನು ಆಶಾವಾದಿ ಮಗನ ಕೋಣೆಯಲ್ಲಿ ಇಡಿಸಿದ.
ಇಬ್ಬರ ಪ್ರತಿಕ್ರಿಯೆ ನೋಡಲು ಕಾದು ನಿಂತ. ಹೇಗೆ ರಿಯಾಕ್ಟ್ ಮಾಡುತ್ತಾರೆ ಮಕ್ಕಳು ತಮ್ಮ ಕೋಣೆಯಲ್ಲಿರುವ ಬರ್ತ್ ಡೆ ಪ್ರೆಸೆಂಟ್ ಗಳಿಗೆ?
ನಿರಾಶಾವಾದಿ ಮಗ ಎದ್ದ. ಕೋಣೆ ಆಟಿಕೆಗಳಿಂದ ತುಂಬಿತ್ತು. ಕೇಳಿದ್ದು, ಕೇಳದಿದ್ದು, ಊಹಿಸಿಯೂ ಇಲ್ಲದ ಆಟಿಕೆಗಳು ಬಂದು ಕೂತಿದ್ದವು.
ಒಮ್ಮೆ ಎಲ್ಲಾ ಆಟಿಕೆಗಳನ್ನು ನೋಡಿದ ಮಗನ ಮುಖದಲ್ಲಿ ಚಿಂತೆ ಆವರಿಸತೊಡಗಿತು. ಯಾಕೋ ಚಿಂತೆ ತುಂಬಾ ಹೆಚ್ಚಾಯಿತು ಅಂತ ಕಾಣುತ್ತದೆ. ಅಳಲು ಶುರು ಮಾಡಿ ಬಿಟ್ಟ. ಏನು ಮಾಡಿಕೊಂಡನೋ - ಅಂತ ಘಾಬರಿಯಾಗಿ ಹೊರಗಿಂದ ಕದ್ದು ನೋಡುತ್ತಿದ್ದ ತಂದೆ ಬಾಗಿಲು ದೂಡಿಕೊಂಡು ಒಳಗೆ ಬಂದ.
"ಏನಾಯಿತೋ.....ನಿನ್ನ ಹುಟ್ಟುಹಬ್ಬ ಇವತ್ತು. ಇಷ್ಟೆಲ್ಲಾ ಆಟಿಗೆ ತಂದು ಕೊಟ್ಟಿದ್ದೇನೆ. ಯಾಕೆ ಅಳುತ್ತಿಯೋ?"
"ಅಪ್ಪ....ಅದೇನೋ ನಿಜ. ಥ್ಯಾಂಕ್ಸ್. ಆದ್ರೆ ಈ ಆಟಿಗೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕೋ ಅಂತ. ಅದೇ ದೊಡ್ಡ ಚಿಂತೆಯಾಗಿದೆ. ನನ್ನ ಸ್ನೇಹಿತರು ಆಟಿಗೆಗಳನ್ನು ಮುರಿದುಬಿಟ್ಟರೆ? ಕದ್ದುಕೊಂಡು ಹೋಗಿಬಿಟ್ಟರೆ? ಅವೇ ಹಾಳಾಗಿ ಹೋಗಿಬಿಟ್ಟರೆ? ಬ್ಯಾಟರಿ ಖರ್ಚಾಗಿ ಹೋಗಿ ಬಿಟ್ಟರೆ?" - ಅಂತ ಅದಾಗಿ ಬಿಟ್ಟರೆ, ಇದಾಗಿ ಬಿಟ್ಟರೆ ಅಂತ ಏನೇನು ಹದಗೆಟ್ಟು ಹೋಗಬಹುದು ಅನ್ನುವದನ್ನೇ ಒತ್ತಿ ಒತ್ತಿ ಹೇಳುತ್ತಾ ಅಳುವದನ್ನ ಮುಂದುವರಿಸಿದ.
ಈ ಮಗನ ಗತಿಯೇ ಇಷ್ಟು. ಇವನ ನಿರಾಶಾವಾದಕ್ಕೆ ಮದ್ದಿಲ್ಲ. ಇನ್ನೊಬ್ಬ ಮಗನನ್ನು ಗಮನಿಸಿಕೊಂಡು ಬರೋಣ ಅಂತ ಅವನ ರೂಮಿಗೆ ಹೋರಾಟ.
ಸುಮಾರು ದೂರದಿಂದಲೇ ಕುದರೆ ಲದ್ದಿಯ ವಾಸನೆ ಹೊಡೆಯುತ್ತಿತ್ತು. ಆದರೂ ಹೋದ ಮಗನ ರೂಮಿಗೆ. ಬಾಗಿಲು ಮೆಲ್ಲನೆ ತಳ್ಳಿ ನೋಡಿದ.
ಮಗ ಎದ್ದಿದ್ದ. ಎದ್ದು ತನ್ನ ರೂಮಿನ ಎಲ್ಲ ಕಿಟಕಿ ಬಾಗಿಲು ತೆಗೆದು ಹೊರಗಡೆ ಕತ್ತು ಚಾಚಿ ಚಾಚಿ ನೋಡುತ್ತಿದ್ದ. ವರಾಂಡಕ್ಕೆ ಹೋಗಿ ಗಾರ್ಡನ್ ಸುತ್ತ ಕಣ್ಣು ಹಾಸಿದ. "ಎಲ್ಲಿ ಹೋಯಿತೋ? ಇಲ್ಲೇ ಎಲ್ಲೋ ಇರಲೇ ಬೇಕು?" ಅನ್ನುವ ಲುಕ್ ಕೊಡುತ್ತ ಮತ್ತೆ ರೂಮಿನೊಳಗೆ ಬಂದ. ತುಂಬಾ ಖುಷಿಯಾಗಿದ್ದ. ಎಕ್ಸೈಟ್ ಆಗಿದ್ದ. ಏನೋ ಹುಡುಕುತ್ತಿದ್ದ. ಮತ್ತು ಅದು ಅಲ್ಲೇ ಎಲ್ಲೋ ಇದ್ದೇ ಇದೆ ಅಂತ ಖಾತ್ರಿಯಾಗಿದ್ದ.
ತಂದೆಗೆ ಆಶ್ಚರ್ಯ. ಏನಪ್ಪಾ ಇವನ ಕಥೆ? ಕುದರೆ ಲದ್ದಿ ಇಟ್ಟು ರೂಂ ಘಂ ಅನ್ನಿಸಿದರೂ ಎದ್ದ ಕೂಡಲೇ ಇಷ್ಟು ಖುಷಿಯಾಗಿದ್ದಾನಲ್ಲ ಇವನು?
"ಏನೋ....ಏನು ಹುಡುಕುತ್ತಾ ಇದ್ದೀಯ? ಏನಿದು ವಾಸನೆ? ಕುದರೆ ಲದ್ದಿದು?" - ಅಂದ ತಂದೆ.
"ಅಯ್ಯೋ....ಅದು ಇರ್ಲಿ ಅಪ್ಪ. ಕುದರೆ ಎಲ್ಲಿ? ಲದ್ದಿ ಇಲ್ಲಿ ಹಾಕಿದೆ ಅಂದ್ರೆ ಇಲ್ಲೇ ಎಲ್ಲೋ ಇರಬೇಕು. ನನ್ನ ಬರ್ತ್ ಡೇ ಗೆ ಚಿಕ್ಕ ಕುದರೆ ಮರಿ (pony) ತಂದಿರುವೆಯಾ? ಥ್ಯಾಂಕ್ಸ್" - ಅಂತ ಅಂದು ಅಪ್ಪನಿಗೂ ಕುದರೆ ಹುಡಕಲು ಬಾ ಎಂದು ಕರೆದ.
ಇದು ಆಶಾವಾದಿಯ ಆಶಾವಾದದ ಪರಾಕಾಷ್ಠೆ. ಕುದರೆ ಲದ್ದಿ ಇದ್ದಲ್ಲಿ ಕುದರೆಯೂ ಇರಬಹುದು. ಅದು ತನಗೇ ಅಂತ ತಂದಿರಬಹದುದು. ಹುಡುಕಿದರೆ ಸಿಗಬಹುದು ಅಂತ.
ಎಲ್ಲೋ ಓದಿದ ಒಂದು ಚಿಕ್ಕ ಇಂಗ್ಲಿಷ್ ನೀತಿ ಕಥೆಯಂತಹದು. ಹಿಡಿಸಿತು. ಹಂಚಿಕೊಳ್ಳೋಣ ಅನಿಸಿತು.
ಕುದರೆ ಲದ್ದಿ ಇದ್ದರೆ ಕುದರೆ ಇರಬೇಕು ಅನ್ನುವದು, ಅದು ತನಗೇ ತಂದಿರುವದು ಅಂತ ಅಂದುಕೊಳ್ಳುವದು ಆಶಾವಾದವಲ್ಲ ಮೂರ್ಖತನ ಅಂತ ಅನ್ನಿಸಬಹುದು. ಆದರೆ 4-5 ವರ್ಷದ ಹುಡುಗನೊಬ್ಬ ಈ ತರಹ ಯೋಚಿಸಿದ ಅಂದರೆ ಗ್ರೇಟ್ ಅನ್ನಿಸಿತು. ಮುಂದೆ ದೊಡ್ಡವನಾದ ಮೇಲೆ ವಾಸ್ತವಿಕತೆ ಮಿಕ್ಸ್ ಮಾಡಿಕೊಂಡು ಆಶಾವಾದವನ್ನು ಮತ್ತೂ fine tune ಮಾಡಿಕೊಳ್ಳಬಹುದು. ಆದರೆ ಈ ತರಹದ ಆಶಾವಾದವೇ ಇಲ್ಲದಿದ್ದರೆ ಮುಂದೆ ಅದನ್ನು ರೂಢಿ ಮಾಡಿಕೊಳ್ಳುವದು ಕಷ್ಟ.
ಮತ್ತೊಂದು ಅಂದರೆ - ದೊಡ್ಡವರಿಗೂ ಸಹ ಅನ್ವಯಿಸುವದು ಅಂದರೆ, "ಅಯ್ಯೋ, ಕೋಣೆ ತುಂಬಾ ಲದ್ದಿ. ಏನು ಮಾಡುವದು? ಕರ್ಮ ಕರ್ಮ" - ಅಂತ ತಲೆ ಚಚ್ಚಿಕೊಳ್ಳುವದ ಬದಲು ಅದನ್ನು ಪಾಸಿಟಿವ್ ಆಗಿ ಹೇಗೆ ಮಾಡಿಕೊಳ್ಳಬಹುದು ಅಂತ ಯೋಚಿಸುವದು ಒಳ್ಳೆಯದು. Make lemonade if life gives you a lemon - ಅನ್ನೋ ತರಹ. ಯಾರಿಗೋ ಗೊಬ್ಬರದ ಸಲುವಾಗಿ ಕುದರೆ ಲದ್ದಿ ಬೇಕಾಗಿರಬಹುದು. ಅವರೇ ಬಂದು ರೂಮಿನಿಂದ ಎತ್ತಿಕೊಂಡು ಹೋಗುತ್ತೇವೆ ಅಂದ್ರೆ ನಿಮಗೂ ಒಂದು ಡೀಲ್ ಸಿಕ್ಕ ಹಾಗೆಯೇ.
ಆಶಾವಾದಕ್ಕೆ ಒಂದು ಜೈ. ಒಂದು ಸಲಾಂ.
ಇಂಗ್ಲಿಷ್ ಮೂಲ (ಒಂದು ವರ್ಶನ್) ಇಲ್ಲಿದೆ.
ಆಶಾವಾದಕ್ಕೆ ಒಂದು ಜೈ. ಒಂದು ಸಲಾಂ.
ಇಂಗ್ಲಿಷ್ ಮೂಲ (ಒಂದು ವರ್ಶನ್) ಇಲ್ಲಿದೆ.
No comments:
Post a Comment