'ವಾರ ಪೂರ್ತಿ ಏನು ಮಹಾ ಕೆಲಸ ಮಾಡಿದೆ?' ಅಂತ ಖಾತೆಖಿರ್ದಿ ತೆಗೆದುಕೊಂಡು ಕೂತರೆ, ಈಗಿತ್ತಲಾಗೆ ಬರೀ ಮಂದಿ ತಲೆ ಶಾಂತ ಮಾಡಿದ್ದೇ ಎದ್ದು ಕಾಣುತ್ತಿದೆ. Monday ದಿನ ಎಲ್ಲಾರಿಗೂ ಮಂಡೆ ಬಿಸಿ. 'ನಿಮ್ಮೌರ್, ವೀಕೆಂಡ್ ಸ್ವಲ್ಪ ವಿಶ್ರಾಂತಿ ಮಾಡಿ, ಸೋಮವಾರ ಮಸ್ತ ಫ್ರೆಶ್ ಆಗಿ ಬರ್ರೋ!' ಅಂತ ಬಾಯಿಬಿಟ್ಟು ಹೇಳಲಿಕ್ಕೆ ಆಗುವದಿಲ್ಲ. ಈ ಮಂದಿ ವೀಕೆಂಡ್ ಏನು ಮಾಡಿ ಬರುತ್ತಾರೋ ಅವರಿಗೇ ಗೊತ್ತು. ವಿಶ್ರಾಂತಿಗೆ ಅಂತ ಕೊಟ್ಟ ವಾರಾಂತ್ಯದಲ್ಲಿ ವಿಶ್ರಾಂತಿಯೊಂದನ್ನು ಬಿಟ್ಟು ಬೇರೆ ಎಲ್ಲ ಮಾಡಿ ಬಂದಿರುತ್ತಾರೆ ಅಂತ ಕಾಣುತ್ತದೆ ಅವರ ಹಾಲತ್ ನೋಡಿದರೆ. ಸೋಮವಾರ ಬೆಳಿಗ್ಗೆ, 'ಓಂ ಶಾಂತಿ, ಶಾಂತಿ, ಶಾಂತಿ,' ಅಂತ ನಾವು ನಮ್ಮನ್ನು ಖುದ್ದ ಶಾಂತ ಮಾಡಿಕೊಳ್ಳಲು ಶಾಂತಿ ಮಂತ್ರ ಜಪಿಸಿದರೆ 'ಯಾರು ಶಾಂತಿ? ಯಾವ ಶಾಂತಿ? ಡಿಸ್ಕೋ ಶಾಂತಿಯೇ?? ವಿಜಯಶಾಂತಿಯೇ ????' ಅಂತ ಅಡ್ಡಬಾಯಿ ಹಾಕಿ, ಹೇಳಿದ್ದನ್ನೂ ಸರಿಯಾಗಿ ಕೇಳದೇ, ಆ ಮಳ್ಳ ಡಿಸ್ಕೋ ಶಾಂತಿಯಂತೆ, Monday ಮಂಡೆ ಬಿಸಿಯಿಂದ ಧಿಮಿಧಿಮಿ ಕುಣಿಯತೊಡಗುತ್ತಾರೆ. ಮೇಲಿನ ಬಾಸ್ ಕೂಡ ಅಷ್ಟೇ. ಅವನಿಗೆ ಮನೆ ಕಡೆ ಕಷ್ಟ, ಇಲ್ಲಿ ಆಫೀಸಿನ ಕಡೆ ನಷ್ಟ, ಎಲ್ಲ ಸಂಬಾಳಿಸಿ ಸಂಬಾಳಿಸಿ ಅಂಬೋ ಅಂದುಬಿಡುತ್ತಾನೆ. ನಡುವೆ ಸಿಕ್ಕ ನಮ್ಮಂತವರು ಯಾರಿಗೆ ಥಂಡಾ ಮಾಡಬೇಕೋ, ಯಾರಿಗೆ ಗರಂ ಮಾಡಬೇಕೋ ಅಂತ ನಮ್ಮ ತಲೆ, ಆದಷ್ಟು, ಗರಂ ಮಾಡಿಕೊಳ್ಳದೇ ಕೆಲಸ ಮಾಡುತ್ತೇವೆ. ತಲೆಗೆ ಎಣ್ಣೆ ಹಾಕಿ ತಟ್ಟುತ್ತೇವೆ. ಅಕಸ್ಮಾತ ಯಾರಾದರೂ ನಮ್ಮ ಬುರುಡೆಗೇ ತಟ್ಟಿಬಿಟ್ಟರೆ, 'ನಗು ನಗುತಾ ನಲಿ ನಲಿ, ಏನೇ ಆಗಲಿ' ಅಂತ ಹಾಡಿ, ನಕ್ಕು, ತಟ್ಟಿಸಿಕೊಂಡು, ಲೆಕ್ಕ ಪುಸ್ತಕದಲ್ಲಿ ಬರೋಬ್ಬರಿ ಬರೆದಿಟ್ಟುಕೊಂಡು ಬರುತ್ತೇವೆ. ಮುಂದೆ ಅವರ ಬುರುಡೆಗೆ ತಟ್ಟುವ ಅವಕಾಶ ಸಿಕ್ಕಾಗ ತಟ್ಟದೇ brownie point ಗಳಿಸಬೇಕು ನೋಡಿ. ಇನ್ನೊಬ್ಬರ ಬುರುಡೆಗೆ ತಟ್ಟಬಹುದಾದ ಸಮಯದಲ್ಲೂ, ದೊಡ್ಡ ಮನಸ್ಸು ಮಾಡಿ, ತಟ್ಟದೇ, 'ಪಾಪ ಅಂತ ತಟ್ಟಿಲ್ಲ ನೋಡು. you owe me one,' ಅಂತ corporate goodwill, ill will ಎಲ್ಲದರ ಲೆಕ್ಕ ಬರೋಬ್ಬರಿ ಇಟ್ಟುಕೊಳ್ಳಬೇಕಾಗುತ್ತದೆ. ಮುಂದೆ ಯಾವಾಗಾದರೂ ಕೆಲಸಕ್ಕೆ, ಸಂಬಂಧಗಳನ್ನು ವೃದ್ಧಿಸಲು, ಹೊಸ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಎಲ್ಲ ಭಾಳ ಉಪಯೋಗವಾಗುತ್ತದೆ. 'ಅಯ್ಯೋ! ಆಫೀಸ್ ಪಾಲಿಟಿಕ್ಸ್ ಇಷ್ಟವಿಲ್ಲ,' ಅಂತ ಕೂತರೆ ಮುಗಿದೇ ಹೋಯಿತು. ಇಷ್ಟವಾಗಲಿ ಬಿಡಲಿ ಅಷ್ಟಿಷ್ಟು ಪಾಲಿಟಿಕ್ಸ್ ಮಾಡಲೇ ಬೇಕಾಗುತ್ತದೆ. ಇಲ್ಲವೆಂದರೆ ನಮ್ಮ ಕಸಿನ್ ರಾಮ ಭಟ್ಟ ಹೇಳುತ್ತಿದ್ದಂತೆ, 'ಕೆಲಸ ಕೊಟ್ಟೂ ಕೊಟ್ಟೂ ಕೊಂದು ಹಾಕಿ ಬಿಡುತ್ತಾರೆ ಮಾರಾಯ,' ಅನ್ನುವ ಮಾದರಿಯಲ್ಲಿ ನಿಮ್ಮ ಕೆಲಸ, ಅವರ ಕೆಲಸ, ಮಂದಿ ಕೆಲಸ, ಹಂದಿ ಕೆಲಸ, ಎಲ್ಲ ನೀವೇ ಮಾಡಬೇಕಾಗಿ ಬಂದು, ತಿಂಗಳ ಕೊನೆಗೆ ಮಾತ್ರ ಕೇವಲ ನಿಮ್ಮ ಶೇಂಗಾ ಪಗಾರ್ (peanuts pay) ಎಣಿಸಬೇಕಾಗುತ್ತದೆ.
ಕಾರ್ಪೊರೇಟ್ ಮಂದಿಗೆ ಅದರಲ್ಲೂ ನಮ್ಮ IT (Information Technology) ಮಂದಿಗೆ ಒಂದಾದಮೇಲೊಂದು ಕಂಪ್ಲೇಂಟ್ ಮಾಡಲಿಕ್ಕೆ ಮಾತ್ರ ಬರೋಬ್ಬರಿ ಬರುತ್ತದೆ. 'ಅದು ಸರಿಯಿಲ್ಲ. ಇದು ಸರಿಯಲ್ಲ. ಆ ಟೀಮಿನವರು ಅದು ಕೊಡಲಿಲ್ಲ. ಅವನು ಅದು ಸರಿ ಮಾಡಲಿಲ್ಲ. ಇವನು ಇವತ್ತು ರಜೆ. ಆಕೆಯ ಮಗನಿಗೆ ಹುಷಾರಿಲ್ಲ. ಅದಕ್ಕೇ ಆಕೆ ಬಂದಿಲ್ಲ. ಇವನ ಮಗಳು ಹುಷಾರಾದಳು. ಆದ್ರೆ ಇವನು ಇವತ್ತು ಜಡ್ಡು ಬಿದ್ದಿದ್ದಾನೆ,' ಇದೇ ಗೋಳು. ಬಾಸ್ ನಿಗೆ ಮಾತ್ರ, 'ಕೆಲಸವಾಯಿತೇ??? ಆಗಿಲ್ಲವೇ? ಲಫಡಾ ಆಯಿತಲ್ಲ? ಹಾಂ? ಈಗ ದೊಡ್ಡ ಸಾಹೇಬರ, stakeholders ತಲೆ ತಿಕ್ಕಲು ಯಾವ ತರಹದ ನವರತ್ನ ತೈಲ ತಯಾರು ಮಾಡಬೇಕು? ಆ ತೈಲವನ್ನೂ ನೀನೇ ತಯಾರು ಮಾಡಿ ಕೊಟ್ಟುಬಿಡು. ಅದನ್ನು ನಾನು ನಿನ್ನ ತಲೆಗೇ ಮೊದಲು ತಿಕ್ಕಿ, ಬರೋಬ್ಬರಿ ಪ್ರಾಕ್ಟೀಸ್ ಮಾಡಿಕೊಂಡು ಹೋಗಿ, ಅವರ ತಲೆಗೆ ತಿಕ್ಕಿ ಬರುತ್ತೇನೆ. Hope it works,' ಅಂದುಬಿಡುತ್ತಾನೆ. ಇದು ಕಾರ್ಪೊರೇಟ್ ಮಾದರಿಯ ಅಕಟಕಟಾ ಕ್ಷಣ. ಒಂದು Powerpoint ಮಾಡಿಕೊಟ್ಟರೆ ಬಾಸ್ ಆಸಾಮಿ ಖುಷಿ. ಅದೇ ಅವನಿಗೆ ಆವತ್ತು ನವರತ್ನ ತೈಲ.
ಸರಿ ಮಧ್ಯಾನದ ಹೊತ್ತಿಗೆ, ಇಲ್ಲಿ ನಾವು ಶೇರುಗಾರರಾಗಿ ನಮ್ಮ ತಂಡಗಳ ಚಿಕ್ಕ ಹುಡುಗ, ಹುಡುಗಿಯರ ದುಃಖ ದುಮ್ಮಾನ ಇತ್ಯಾದಿ ಕೇಳಿ, ಅದೂ ತುಂಬ empathy ಅಂದರೆ ಸಹಾನುಭೂತಿಯಿಂದ, ವಿಭೂತಿ ಗಿಬೂತಿ ಹಚ್ಚಿ, ಗಮನ ಕೊಟ್ಟು ಕೇಳಿ, 'I feel your pain. Really I do,' ಅಂತ ಗ್ಲಿಸರೀನ್ ಕಣ್ಣೀರು ಸುರಿಸಿ, ಒಂದು ಸೈಕೋಥೆರಪಿ (psychotherapy) ಸೆಶನ್ ಮಾಡಿ ಮುಗಿಸಿರುತ್ತೇವೆ. 'I feel your pain' ಅನ್ನುವದರ ಬದಲು ತಪ್ಪಿ 'I understand' ಅಂದರೆ ಅದು ಒಮ್ಮೊಮ್ಮೆ ಬ್ಯಾಕ್ ಫೈರ್ ಆಗಿ ಬಂದು ನಿಮ್ಮ ಬ್ಯಾಕಿಗೇ ಕಚ್ಚಿಕೊಳ್ಳುತ್ತದೆ. ಅಲ್ಲ ರೀ, ಇನ್ನೊಬ್ಬರ ತೊಂದರೆ ನಮಗೆ ಹೇಗೆ ಅರ್ಥವಾಗಲು ಸಾಧ್ಯ? ಅದನ್ನ ಫೀಲ್ ಮಾಡಿಕೊಳ್ಳಬಹುದೇ ವಿನಹ ಅರ್ಥ ಮಾಡಿಕೊಳ್ಳುವದು ಕಷ್ಟ. 'I understand your problem' ಅಂದುಬಿಟ್ಟರೆ ಒಮ್ಮೊಮ್ಮೆ ಕೆಲವರಿಗೆ ಸಿಕ್ಕಾಪಟ್ಟೆ ಕೋಪ, ರೋಷ, frustration ಎಲ್ಲ ಬಂದು, 'you really don't understand shit. you moron,' ಅಂತ ಬೈದು ಬಿಟ್ಟಿದ್ದೂ ಇದೆ. ಮಕ್ಕಳ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವ ತಂದೆ ತಾಯಿಯಂತೆ, ನಾವು ನಮ್ಮ ಆಫೀಸ್ ಮಕ್ಕಳ, ತಮ್ಮ ತಂಗಿಯರ ಎಲ್ಲವನ್ನೂ, ಅಂದರೆ ಸಣ್ಣ ಪುಟ್ಟ ತಪ್ಪುಗಳನ್ನು, ಆಕ್ರೋಶದಿಂದ ವ್ಯಕ್ತಪಡಿಸಿದ ಮಾತುಗಳನ್ನು, ಹೊಟ್ಟೆಗೆ ಹಾಕಿಕೊಂಡು ಹೊಟ್ಟೆ ಬೆಳೆಸುತ್ತೇವೆಯೇ ಹೊರತು ತಲೆ ಕೆಡಿಸಿಕೊಳ್ಳುವದಿಲ್ಲ. ಅದಕ್ಕೆಂದೇ, 'I feel your problem, pain' ಅಂದು ಪೀಠಿಕೆ ಹಾಕಿ, ತೈಲ ತಿಕ್ಕಿ, ತಲೆ ತಣ್ಣಗೆ ಮಾಡುವ ಪ್ರಯತ್ನ ಮಾಡುತ್ತೇವೆ. ನಿಮ್ಮ understanding ಬಗ್ಗೆ ಜನ ತಕರಾರು ತೆಗೆಯಬಹುದು. ಆದರೆ ನಿಮ್ಮ feeling ಅಂದರೆ ಭಾವನೆಗಳ ಬಗ್ಗೆ ತಕರಾರು ತೆಗೆಯುವದು ಕಷ್ಟ. ತಕರಾರು ತೆಗೆಯಲು ಬಂದರೆ, 'ಅರ್ರೆ! ಫೀಲಿಂಗ್ ಗಳು ಬಂದು ಬಿಡುತ್ತವೆ ಕಣ್ರೀ. ನಿಮ್ಮ ಕಷ್ಟ ಅರ್ಥವಾಗಿರಲಿಕ್ಕಿಲ್ಲ. ಆದ್ರೆ ಫೀಲ್ ಆಯ್ತು ಕಣ್ರೀ. ಫೀಲ್ ಸಹ ಆಗಬಾರದು ಅಂದ್ರೆ ಹೆಂಗ್ರೀ? ಫೀಲಿಂಗ್ ಆಗೋದು ಬಿಡೋದು ನಮ್ಮ ಕೈಯಲ್ಲಿದ್ದರೆ ಜಗತ್ತು ಬೇರೇನೆ ತರಹ ಇರುತ್ತಿತ್ತು ಬಿಡಿ,' ಅಂತ ಉಲ್ಟಾ ರೋಪ್ ಹಾಕಬಹುದು. ಫೀಲಿಂಗ್ ಅಂದರೆ ಭಾವನೆಗಳ ಬಗ್ಗೆ ಭಾವನಾತ್ಮಕವಾಗಿ ಮಾತಾಡಿ ಭಾವನಾತ್ಮವಾಗಿ ಬೆಸುಗೆ ಹಾಕಿ, ತೇಪೆ ಹಾಕಿ ಎಲ್ಲ ಸರಿ ಮಾಡಲು ಬರುತ್ತದೆ. ಹಾಗಾಗಿ, 'I feel your problem, pain' ಅಂದುಬಿಡುವದು ಬೆಸ್ಟ್ ಅಂತ ಪರಮಗುರುವಾಗಿದ್ದ ಒಬ್ಬ ಹಳೆ ಪಂಟರ್ ಮ್ಯಾನೇಜರ್ ಹೇಳಿಕೊಟ್ಟಿದ್ದು ಬರೋಬ್ಬರಿ workout ಆಗಿದೆ. ಅಷ್ಟೇ ಯಾರಾದರೂ ಹೆರಿಗೆ ನೋವು ಅಂದರೆ ಮಾತ್ರ ಹಾಗೆನ್ನಬೇಡಿ. ತುಂಬ ಅಭಾಸವಾಗುತ್ತದೆ. ಆಸ್ಪತ್ರೆ ಮುಟ್ಟಿಸಿ. ಬೇಗ.
ವಾರ ಪೂರ್ತಿ ಇದೇ ತರಹದ ಮಾತುಕತೆ, ಮೀಟಿಂಗ್ ಗಳಲ್ಲಿ ಪೊಕಳೆ, ಎಣ್ಣೆ ಗಾಣದಲ್ಲಿ ಬೇರೆ ಬೇರೆ ರೀತಿ ತೈಲ ತೆಗೆಯುವದು, ಅವನ್ನು ನಾವೂ ಹಚ್ಚಿಕೊಂಡು, ಇನ್ನೊಬ್ಬರಿಗೂ ಹಚ್ಚಿ, ಮಂಡೆ ಹಾಳಾದ ಮಂದಿಗೆ counseling, ಮಂಡೆ ಬಿಸಿಯಾದ ಮಂದಿಗೆ psychotherapy ಮಾಡಿ ಮಾಡಿ, 'ಅಂತೂ ಶುಕ್ರವಾರ ಮಧ್ಯಾನ ಬಂತಪ್ಪಾ,' ಅಂತ ಹುಸ್! ಅಂತ ರಿಲಾಕ್ಸ್ ಆಗೋಣ ಅನ್ನುವಷ್ಟರಲ್ಲಿ invariably ಯಾರಿಗಾದರೂ, ಯಾವದೋ ಕಾರಣಕ್ಕೆ, ಶುಕ್ರವಾರ ಮಧ್ಯಾನವೇ ಹುಚ್ಚು ಹೆಚ್ಚಾಗಿ, ಅವರನ್ನು ಕಂಟ್ರೋಲ್ ಮಾಡಲಿಕ್ಕೆ ಸಾಧ್ಯವಿಲ್ಲ ಅನ್ನುವ ಪರಿಸ್ಥಿತಿ ಬರುತ್ತದೆ. ಸಾಮಾನ್ಯವಾಗಿ ಏನಾದರೂ ಒಂದು production problem ಬರುತ್ತದೆ ಅಥವಾ 'ಶುಭ ಶುಕ್ರವಾರ ಬಂದಿದೆ. ಮಂದಿಗೆ ಬತ್ತಿ ಇಡೋಣ. ವೀಕೆಂಡ್ ಮೂಡ್ ಹಾಳು ಮಾಡೋಣ,' ಅಂತ ಯಾರಾದರೂ ವಿಘ್ನಸಂತೋಷಿ ಸುಮ್ಮನೆ ಕಿರಿಕ್ ಮಾಡುತ್ತಾನೆ. ಇಲ್ಲದ ಸಲ್ಲದ ಸಮಸ್ಯೆ ತೆಗೆದುಕೊಂಡು ಕೂಡುತ್ತಾನೆ. ಆವಾಗ ಸಣ್ಣ ಪುಟ್ಟ psychotherapy ಇತ್ಯಾದಿ ಎಲ್ಲ ನಡೆಯುವದಿಲ್ಲ ಅಂತ ಹೇಳಿ ದೊಡ್ಡ ಮಟ್ಟದ ಶಾಕ್ ಟ್ರೀಟ್ಮೆಂಟ್ ಕೊಡಬೇಕಾಗುತ್ತದೆ. ಅದಕ್ಕೆಂದೇ ಒಂದಿಬ್ಬರು ಶಾಕ್ ಟ್ರೀಟ್ಮೆಂಟ್ ಕೊಡುವ ಪರಿಣಿತರಿಗೆ ಸರಿಯಾಗಿ ಬಿಸ್ಕಿಟ್ ಹಾಕಿ, ಅವರಿಗೆ ಕೊಡಬೇಕಾದ ಸಕಲ ಮರ್ಯಾದೆ, ಅವರಿಗೆ ತಿಕ್ಕಬೇಕಾದ ಸ್ಪೆಷಲ್ ತೈಲ ಎಲ್ಲ ಸರಿ ಮಾಡಿ ತಿಕ್ಕಿ ಇಟ್ಟಿರುವದರಿಂದ ಅವರೂ ಇಂತದ್ದಕ್ಕೇ ಕಾಯುತ್ತಿರುತ್ತಾರೆ. ಅವರು ನಮ್ಮ ಟೀಮಿನ ದೊಡ್ಡ ದಂಡಪಿಂಡಗಳು. ಸಿಕ್ಕಾಪಟ್ಟೆ ಮೇಧಾವಿಗಳು. ಆದರೆ ಒಂದೇ ಕೆಲಸ ಭಾಳ ವರ್ಷದಿಂದ ಮಾಡಿ ಮಾಡಿ ಅದು ಬಿಟ್ಟು ಅವರಿಗೆ ಹೊಸದೂ ಏನೂ ಬರುವದಿಲ್ಲ. ಆದರೆ ಎಲ್ಲಿಯಾದರೂ crisis ಅನ್ನುವಂತದ್ದು ಇದ್ದರೆ ಮಾತ್ರ ಇವರೇ ಬೇಕು. ಹಾಗಾಗಿ ವರ್ಷಕ್ಕೆ ನಾಲ್ಕೇ ಸಲ ಅವರು ಬಂದು ನನ್ನ ಕೆಲಸ ಮಾಡಿಕೊಟ್ಟರೂ ಸಾಕು. ಅವರಿಗೆ ಕೊಡುವ ಪಗಾರ, ಗಿಗಾರ, ಬಗ್ಗಿ ಮಾಡುವ ನಮಸ್ಕಾರ ಎಲ್ಲ ಓಕೆ. ಅಂತವರಿಗೆ ಸುಪಾರಿ ಕೊಟ್ಟು ಬಿಟ್ಟರೆ ಶುಕ್ರವಾರದ ಎಂತದೇ crisis ಇದ್ದರೂ ಕ್ಷಣಮಾತ್ರದಲ್ಲಿ ಬಗೆಹರಿಸಿ, ಯಾರಾದರೂ ಸುಮ್ಮನೆ ಕಿರಿಕ್ ಮಾಡಿದ್ದರೆ ಅವರಿಗೆ ಬರೋಬ್ಬರಿ ಶಾಕ್ ಕೊಟ್ಟು, ಅವಾಜ್ ಹಾಕಿ, ಬೈದು, ಮತ್ತೆ ನಾವೇ ಇವರ ಪರವಾಗಿ ಅವರ ಕ್ಷಮೆ ಕೇಳಿ (ನಮ್ಮದೇನು ಗಂಟು ಹೋಗುತ್ತದೆ? ಕಾರ್ಪೊರೇಟ್ ಕ್ಷಮೆ ಕೇಳುವದೂ ಸಹ ಒಂದು ತರಹದ ತೈಲ ತಿಕ್ಕಿದಂತೆಯೇ), ಆ ಪಾರ್ಟಿಗೂ ಒಂದು ಸಣ್ಣ ಸೈಕೋಥೆರಪಿ (psychotherapy) ಮಾಡಿ ಬಿಡುತ್ತೇನೆ. ಎಲ್ಲರೂ ಖುಷ್. ವೀಕೆಂಡ್ ಶುರು ಮಾಡಲು ರೆಡಿ.
ನೋಡಿದರೆ ಹೀಗೆ ವಾರ ಪೂರ್ತಿ ಒಂದು ತರಹದ ಸೈಕೋಥೆರಪಿಸ್ಟ್ (psychotherapist ಉರ್ಫ್ ಮೆಂಟಲ್ ಡಾಕ್ಟರ್) ಕೆಲಸ ನಮ್ಮದು. ಇಷ್ಟೊತ್ತಿಗೆ ನಮ್ಮ ತಲೆಯೂ ಸುಮಾರು ಹನ್ನೆರಡಾಣೆ ಆಗಿರುತ್ತದೆ. ಯಾಕೆಂದರೆ ನಾನು psychotherapist ಕೆಲಸ ಮಾಡಿದರೆ ಜೊತೆಗಿನ ಮಂದಿ psycho the rapist ಕೆಲಸ ಮಾಡಿ, ನಮ್ಮ ತಲೆ ಹಟ್ಟು, ಮಂಡೆಯ ಗ್ಯಾಂಗ್ ರೇಪ್ ಮಾಡಿ, ರಾಡಿ ಎಬ್ಬಿಸಿರುತ್ತಾರೆ. ಧಾರವಾಡ ಕಡೆ ಜವಾರಿ ಭಾಷೆಯಲ್ಲಿ, 'ಏ ಹುಚ್ಚಾ! ಎಷ್ಟು ತಲಿ ಹಡ್ತಿ ಮಾರಾಯ!' ಅನ್ನುವ ಮಾತಿಗೆ ತಕ್ಕಂತೆ ಇರುತ್ತಾರೆ ಈ psycho the rapist ಮಂದಿ. ಪ್ರೊಫೆಷನಲ್ ತಲೆ ರೇಪ್ ಮಾಡುವವರು. Psychotherapist v/s psycho the rapist.
ಹೀಗೆ ವಾರಾಂತ್ಯ ಶುರುವಾಗುತ್ತದೆ. psycho the rapist ಮಂದಿ, Psychotherapist ನಾವೂ ಎಲ್ಲ ಪೆಟ್ಟಿಗೆ ಕಟ್ಟಿಕೊಂಡು, ಮನೆ ಹಾದಿ ಹಿಡಿಯುತ್ತೇವೆ. ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಅಂತ ವಾರಾಂತ್ಯ ಕೊಟ್ಟರೆ ಹೆಚ್ಚಿನ ಜನ ವಾರಾಂತ್ಯದಲ್ಲಿ ಸಿಕ್ಕಾಪಟ್ಟೆ ಮೋಜು, ಮಸ್ತಿ ಮಾಡಿಬಿಡುತ್ತಾರೆ. ತಮ್ಮ ದೇಹದ, ಮನಸ್ಸಿನ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳುವ ಬದಲು ಪೂರ್ತಿ ಖಾಲಿ ಮಾಡಿಕೊಂಡು, Monday ಮುಂಜಾನೆ ಕುಂಡೆ ಮೇಲೆ ಕೆಂಡ ಬಿದ್ದವರಂತೆ ಚಿಟಿ ಚಿಟಿ ಚೀರುತ್ತ ಮತ್ತೆ ಸೋಮವಾರ ಬೆಳಿಗ್ಗೆ ಬರುತ್ತಾರೆ. ಸೋಮವಾರ ಬೆಳಿಗ್ಗೆ ನಾವು 'ಓಂ! ಶಾಂತಿ, ಶಾಂತಿ, ಶಾಂತಿ' ಅನ್ನೋಣ ಅಂದರೆ ಇವರು ಡಿಸ್ಕೋ ಶಾಂತಿಯಂತೆ ಧಿಮಿಧಿಮಿ ಕುಣಿಯಲು ರೆಡಿಯಾಗಿ ಬಂದಿರುತ್ತಾರೆ. ಮೊದಲೇ ಇವರ ಪೂರ್ತಿ ಖಾಲಿಯಾದ ಬ್ಯಾಟರಿ, ಮೇಲಿಂದ ಕೆಲಸದ ಒತ್ತಡ. ಡೆಡ್ಲಿ ಕಾಂಬಿನೇಶನ್. ಡಿಸ್ಕೋ ಶಾಂತಿ ಮೈಮೇಲೆ ಬಂದೇ ಬಿಡುತ್ತಾಳೆ. ತಾಪಡ್ತೋಪ್ ಸೈಕೋಥೆರಪಿ ಶುರು ಮಾಡಿಕೊಳ್ಳಬೇಕಾಗಿ ಬರುತ್ತದೆ.
ಮತ್ತೆ ಸೋಮವಾರ ನಮ್ಮ psychotherapist ಕೆಲಸ ಶುರುಮಾಡಬೇಕು ಅಂತ ನಮಗೆ ಗೊತ್ತಿರುತ್ತದೆ. ಶುಕ್ರವಾರ ಮುಗಿಯುವ ಹೊತ್ತಿಗೆ ನಮ್ಮದೂ ತಲೆ ಹನ್ನೆರಡಾಣೆ ಆಗಿರುತ್ತದೆ. ನಮಗೇ ಒಬ್ಬ ದೊಡ್ಡ psychotherapist ನ ಜರೂರತ್ತು ಇರುತ್ತದೆ. 'ಮಾನವ ಇತಿಹಾಸದಲ್ಲೇ ಪ್ರಥಮ ಮತ್ತು ಅತ್ಯುತ್ತಮ psychotherapist ಅಂದರೆ ಭಗವಾನ್ ಶ್ರೀಕೃಷ್ಣ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶಕ್ಕಿಂತ ಒಳ್ಳೆಯ psychotherapy ಇಲ್ಲವೇ ಇಲ್ಲ,' ಅಂತ ಅದೇನು ಒಂದು ಮಾತು, ಯಾವದೋ ಪ್ರವಚನದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದರೋ ಅದು ಈಗ ಸ್ವಂತ ಅನುಭವದಿಂದ, ಹದಿಮೂರು ವರ್ಷಗಳ ಗೀತಾಧ್ಯಯನದಿಂದ ಸೋಲಾ ಅಣೆ, ಶಂಬರ್ ಟಕಾ, ಸೆಂಟ್ ಪರ್ಸೆಂಟ್, ಸತ್ಯ ಅನ್ನಿಸಿದೆ. ಹಾಗಾಗಿ ನಾವು ತಗಡು ಮನುಷ್ಯರೂಪಿ psychotherapist ಗಳೆಲ್ಲರ ಗೊಡವೆ ಬಿಟ್ಟು, the best psychotherapist ಶ್ರೀಕೃಷ್ಣನ psychotherapy ಯ magnum opus ಮಹಾಗ್ರಂಥ ಭಗವದ್ಗೀತೆ, ಅದರ ಮೇಲೆ ಲಭ್ಯವಿರುವ ಒಳ್ಳೊಳ್ಳೆ ಭಾಷ್ಯಗಳು, youtube ಮೇಲೆ ಸಿಗುವ ಒಳ್ಳೊಳ್ಳೆ ಪ್ರವಚನಗಳನ್ನು ಓದುತ್ತ, ನೋಡುತ್ತ, ಅದರಲ್ಲಿ ತಲ್ಲೀನರಾಗಿ, ಎಷ್ಟು ಸಾಧ್ಯವೋ ಅಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಂಡು ಮತ್ತೆ ಸೋಮವಾರಕ್ಕೆ ತಯಾರಾಗುತ್ತೇವೆ. ಮನಸ್ಸಿಟ್ಟು, ತೆರೆದ ಮನದಿಂದ, ಶ್ರದ್ಧೆಯಿಂದ, ಭಗವದ್ಗೀತೆ, ಅದ್ವೈತ ವೇದಾಂತ ಓದುತ್ತಿದ್ದರೆ ಮೇಲಿಂದ ಮೇಲೆ ಆಗುವ 'ಆಹಾ!' ಎನ್ನುವ epiphany ಗಳ ಬಗ್ಗೆ, ಬರುವ wisdom ಬಗ್ಗೆ, sudden flashes of insights ಗಳ ಬಗ್ಗೆ, ಉತ್ತಮಗೊಳ್ಳುವ ಮಾನಸಿಕ & ಶಾರೀರಿಕ ಆರೋಗ್ಯದ ಬಗ್ಗೆ ಸಂದೇಹವೇ ಬೇಡ. ಅಷ್ಟೇ, ನಿಮ್ಮ ಮಂಡೆಯ, ನಿಮ್ಮ ಮನಸ್ಸಿನ ಭೂಮಿ ಹಸನಾಗಿದ್ದು, ಒಳ್ಳೆ ಪೋಷಕಾಂಶದಿಂದ ಕೂಡಿದ್ದು ಆಗಿರಬೇಕು ಅಷ್ಟೇ. ಇಲ್ಲದಿದ್ದರೆ ಭಗವದ್ಗೀತೆ ಉತ್ತಿದ ಬೀಜ, ಕಾದ ಹಂಚಿನಂತಿರುವ ನಮ್ಮ ನಿಮ್ಮಂತವರ ಗರ್ಮಾಗರಂ ಮಂಡೆ ಮೇಲೆ ಬಿದ್ದು, ರೋಸ್ಟ್ ಆಗಿಬಿಡುತ್ತದೆ ಅಷ್ಟೇ. ಬಾಡಿ ಹೋದ ಬಳ್ಳಿಯಿಂದ ಹೇಗೆ ಹೂವು ಅರಳಲಾರದೋ ಹಾಗೆಯೇ ರೋಸ್ಟಾದ ಬೀಜದಿಂದ ಮೊಳಕೆ ಕೂಡ ಒಡೆಯಲಾರದು. ಹಾಗಾಗಿ ಶ್ರದ್ಧೆ (faith, trust) ಭಾಳ ಮುಖ್ಯ.
Monday ಬೆಳಿಗ್ಗೆ ತುಂಬ ಮಂಡೆ ಬಿಸಿ ಅಥವಾ ಯಾವಾಗಲೂ ಮಂಡೆ ಬಿಸಿ ಅಂತ ಅನ್ನಿಸಿದರೆ ಒಂದು ಕೆಲಸ ಮಾಡಿ. ಸುಮ್ಮನೆ ತಮಾಷೆಗೆ ಅಂತ ಅಂದುಕೊಂಡರೂ ಓಕೆ. ಆದರೆ ಟ್ರೈ ಮಾಡಿ ನೋಡಿ. ವಾರಾಂತ್ಯದಲ್ಲಿ ಮೋಜು, ಮಸ್ತಿ, ಸುತ್ತಾಟ, ತಿರುಗಾಟ, ಹರಟೆ, ಪರಟೆ, ಸಿನೆಮಾ, ಮಾಲು, ಹಮಾಲು, ವಗೈರೆ ವಗೈರೆ ಸ್ವಲ್ಪ (ಜಾಸ್ತಿ ಏನೂ ಬೇಡ) ಕಮ್ಮಿ ಮಾಡಿ, ಸ್ವಲ್ಪ ಅಂತರ್ಮುಖಿಯಾಗಿ, ಮಾತುಕತೆ, ಇಂಟರ್ನೆಟ್, ಫೇಸ್ಬುಕ್, ಹಾಳುವರಿ ಬಿಟ್ಟು, ಭಗವದ್ಗೀತೆಗೆ, ಅಧ್ಯಾತ್ಮಕ್ಕೆ ತೆರೆದುಕೊಳ್ಳಿ. ಜೊತೆಗಿರುವವರನ್ನೂ ಹಾಗೆ ಮಾಡಲು ಪ್ರೇರೇಪಿಸಿ. ಹಾಗಂತ ನಮ್ಮ ಬಿಟ್ಟಿ ಸಲಹೆ, ಉದ್ರಿ ಉಪದೇಶ. ನಮಗಂತೂ ಸಿಕ್ಕಾಪಟ್ಟೆ ಉಪಯೋಗವಾಗಿದೆ. ನಿಮಗೂ ಆದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ?
(ಕೆಳಗಿನ ಕಾರ್ಟೂನ್ ನೋಡಿ. 'ಆಸೆಯೇ ದುಃಖಕ್ಕೆ ಮೂಲ,' ಅಂತ ಬುದ್ಧ ಹೇಳಿದ್ದನ್ನಂತೂ ನಾವು ಕೇಳಲಿಲ್ಲ. ಬದಲಿಗೆ ನಾವು ದುರಾಸೆಗೆ ಬಿದ್ದು, ಅವನ್ನು ಪೂರೈಸಿಕೊಳ್ಳಲಿಕ್ಕಾಗಿ ಎದ್ದೋ, ಬಿದ್ದೋ, ಸತ್ತೋ ಕಾರ್ಪೊರೇಟ್ ಕರ್ಮಿಗಳಾಗಿ, ಈ ಹಾಲತ್ತಿಗೆ ಬಂದು ಮುಟ್ಟಿ, ಸೈಕೊಥೆರಪಿಸ್ಟ್ ಮುಂದೆ ಹೇಗೆ ಬಾಯಿಬಿಟ್ಟು ಹೇಳಿಕೊಳ್ಳುತ್ತೇವೆ ನೋಡಿ. ಮೇಲಿಂದ ಆ ಪುಣ್ಯಾತ್ಮ ಸೈಕೊಥೆರಪಿಸ್ಟ್ ನಮ್ಮ ಗೋಳು ಕೇಳಿದ ಅಂತ ಅವನಿಗೆ ರೊಕ್ಕ. ಅದನ್ನೂ ಕ್ರೆಡಿಟ್ ಕಾರ್ಡಿಗೆ ಉಜ್ಜಿ ಬಂದಿರುತ್ತೇವೆ. ಅದನ್ನು ತೀರಿಸಲು ಮತ್ತೆ ಮಂಡೆ ಬಿಸಿ, Monday ಬಿಸಿ. ಅದ್ಭುತ ಕಾರ್ಟೂನ್.)
4 comments:
ಸೋಮವಾರದಿಂದ ಶುಕ್ರವಾರದವರೆಗೆ ಬಿಸಿಯಾದ ಮಂಡೆಯ ಚೂರುಗಳನ್ನು, ಶನಿವಾರ ಹಾಗು ರವಿವಾರದಂದು ಬೋಳಿಸಿಕೊಂಡು, ಸೋಮವಾರ ಮತ್ತೆ ಸೈಕೊ-ಅಭ್ಯಂಜನಕ್ಕೆ ಬರುವ ಕಾರ್ಪೋರೇಟ್ ಕರ್ಮಚಾರಿಗಳ ಅವಸ್ಥೆಯನ್ನು ಕಂಬನಿ ಬರುವಂತೆ ವರ್ಣಿಸಿದ್ದೀರಿ!
ಥ್ಯಾಂಕ್ಸ್ ಸುನಾಥ್ ಸರ್. ಎಲ್ಲ ಬ್ಲಾಗ್ ಪೋಸ್ಟ್ ಓದಿ, ಕಾಮೆಂಟ್ ಹಾಕುವ ತಮ್ಮ ಪ್ರೀತಿಗೆ, ಅಭಿಮಾನಕ್ಕೆ ಧನ್ಯವಾದ.
ತುಂಬಾ ಛೆನ್ನಾಗಿದೆ!
Typical line item in a typical job:
Ensure your boss' boss does not ask too many questions to your boss.
Post a Comment