Tuesday, August 06, 2024

ಮಾದಕ ನಟಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಮುಕ್ತಿ...

ಮಮತಾ ಕುಲಕರ್ಣಿ ಎನ್ನುವ ಪುರಾತನ ಬಾಲಿವುಡ್ ನಟಿಗೆ ಮುಂಬೈನ ಠಾಣೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಮಾದಕ ವಸ್ತು ಪ್ರಕರಣದಲ್ಲಿ ಉನ್ನತ ನ್ಯಾಯಾಲಯ (ಹೈಕೋರ್ಟ್) ಮುಕ್ತಿ ನೀಡಿದೆ. 

ಮಮತಾ ಕುಲಕರ್ಣಿ...ಆಕೆಯ ಸೌಂದರ್ಯ, ಬಿನ್ನಾಣ, ಮತ್ತೊಂದು ನೋಡಿ ಅದು ಯಾರು ಅವಳಿಗೆ ಮಾದಕ ನಟಿ ಎಂದು ಬಿರುದು ಕೊಟ್ಟರೋ! ಯಾವ ಶುಭ ಮುಹೂರ್ತದಲ್ಲಿ ಕೊಟ್ಟರೋ! ಮಾದಕತೆ ಅಂತೂ ಇತ್ತು. ಅದು ಸಾಕಾಗಲಿಲ್ಲ ಎಂದು ಈ ಮಮತಾ ಕುಲಕರ್ಣಿ ಮಾದಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡುವ ಅಂತರರಾಷ್ಟ್ರೀಯ ಮಾಫಿಯಾ ಕಿಲಾಡಿ ವಿಕಿ ಗೋಸ್ವಾಮಿ ಜೊತೆ ಸೇರಿಕೊಂಡು ಇವಳ ಮೇಲೂ ಮಾದಕ ವಸ್ತುಗಳ ಆರೋಪ ಇರುವುದು ಇಂದು ನಿನ್ನೆಯದಲ್ಲ. 

ವರಿಷ್ಠ ಸಿನೆಮಾ ಪತ್ರಕರ್ತೆ ಆಮ್ರಪಾಲಿ ಶರ್ಮಾ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮಮತಾ ಕುಲಕರ್ಣಿ ಬಗ್ಗೆ ನಾಲ್ಕು ಭಾಗಗಳ ಕಾರ್ಯಕ್ರಮ ಮಾಡಿದ್ದಾರೆ. ಅನೇಕ ಹೊಸ ವಿಷಯಗಳು ತಿಳಿದವು. ಆ ಮಾಹಿತಿಗಳನ್ನು ಕೂಡ ಈ ಲೇಖನದಲ್ಲಿ ಹಾಕಿದ್ದೇನೆ. ಹುಡುಕಿದರೆ ಇಂಟರ್ನೆಟ್ ಮೇಲೆ ಈ ಎಲ್ಲ ವಿಷಯ ಇದೆ. ಆಮ್ರಪಾಲಿ ಶರ್ಮಾ ಎಲ್ಲವನ್ನೂ ಕ್ರೋಢಿಕರಿಸಿ ಕೊಟ್ಟಿದ್ದಾರೆ.

ಈಗ ಸುಮಾರು ಏಳೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಠಾಣೆಯ ಪೊಲೀಸರು ಸೊಲ್ಲಾಪುರ ಮೂಲದ ಔಷಧಿ ತಯಾರಿಸುವ ಕಂಪನಿಯೊಂದರ ಬಗ್ಗೆ ಮಾದಕ ವಸ್ತುಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿ ತಯಾರಿಸಿ ಪರದೇಶಕ್ಕೆ ಸಾಗಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಭಾರತದಲ್ಲೇ ಇದ್ದ ಸುಮಾರು ಜನರನ್ನು ಬಂಧಿಸಿ ಒಳಗೆ ಕೂಡ ತಳ್ಳಿದ್ದರು. ಇದೇ ಪ್ರಕರಣದಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾದ ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ಎಂದು ಹೇಳಲಾದ ವಿಕಿ ಗೋಸ್ವಾಮಿಯನ್ನೂ ಆರೋಪಿ ಎಂದು ಹೆಸರಿಸಲಾಗಿತ್ತು. ಅವರ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟೀಸ್ ಇತ್ಯಾದಿ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. 

ಇದರ ಮಧ್ಯೆ ವಿಕಿ ಗೋಸ್ವಾಮಿಯನ್ನು ಅಮೇರಿಕಾದ ಮಾದಕ ವಸ್ತು ನಿರೋಧಕ ದಳದವರು ಎತ್ತಾಕಿಕೊಂಡು ಹೋದರು. ಕೀನ್ಯಾದ ಆಕಾಶಾ ಸಹೋದರರು ಮಾಡುತ್ತಿದ್ದ ಬೃಹತ್ ಪ್ರಮಾಣದ ಮಾದಕವಸ್ತು ಕಳ್ಳಸಾಗಾಣಿಕೆ ದಂಧೆಯನ್ನು ಮಟ್ಟ ಹಾಕಲೇಬೇಕು ಎಂದು ನಿರ್ಧರಿಸಿದ್ದ ಅಮೆರಿಕದವರು ಕೀನ್ಯಾ ಸರ್ಕಾರದ ಬುರುಡೆಗೆ ಬಂದೂಕಿಟ್ಟು ಆಕಾಶಾ ಸಹೋದರರು ಮತ್ತು ಅವರ ಅತ್ಯಂತ ನಿಕಟವರ್ತಿಯಾಗಿದ್ದ ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ತೆಗೆದುಕೊಂಡು ಹೋದರು. ಆ ಪ್ರಕರಣ ಅಮೇರಿಕಾದಲ್ಲಿ ನಡೆಯುತ್ತಲಿದೆ. ಗೋಸ್ವಾಮಿ ಸರ್ಕಾರದ ಪರವಾಗಿ ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರಿಗೆ ಕೈಯೆತ್ತಿದ್ದಾನೆ ಎಂದು ಓದಿದ ನೆನಪು. ಒಟ್ಟಿನಲ್ಲಿ ಅಮೆರಿಕದಲ್ಲೇ ಇದ್ದಾನೆ. ಸ್ವಲ್ಪ ರಿಯಾಯತಿ ಕೊಟ್ಟಿರಬೇಕು. ಅವನು ದುಬೈ ಮತ್ತಿತರ ಕಡೆ ಜೈಲಿನಲ್ಲಿದ್ದು ಏಳು ಕೆರೆಗಳ ನೀರು ಕುಡಿದು ಬಂದವ. ಏನೋ ಜುಗಾಡ್ ಮಾಡಿಕೊಂಡಿರುತ್ತಾನೆ ಬಿಡಿ.

ಅಮೆರಿಕದವರು ಕೀನ್ಯಾದ ಡ್ರಗ್ ಕಳ್ಳಸಾಗಾಣಿಕೆ ಮಾಡುವವರ ಮೇಲೆ ಮುರಿದುಕೊಂಡು ಬಿದ್ದಾಗ ಮಮತಾ ಕುಲಕರ್ಣಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಎತ್ತಾಕಿಕೊಂಡು ಹೋಗಲಿಲ್ಲ.

ಮಹಾರಾಷ್ಟ್ರದ ಠಾಣೆ ಪೊಲೀಸರು, ನ್ಯಾಯಾಲಯ ಅದೆಷ್ಟೇ ನೋಟೀಸ್, ಸಮನ್ಸ್ ಕೊಟ್ಟರೂ ಮಮತಾ ಕ್ಯಾರೇ ಎನ್ನಲಿಲ್ಲ. ಕೀನ್ಯಾ ಬಿಟ್ಟು ಕದಲಲಿಲ್ಲ. ಆಗ ಆಕೆಯ ಭಾರತದಲ್ಲಿರುವ ಆಸ್ತಿ ಪಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭವಾಯಿತು. ಮುಂಬೈನಲ್ಲಿ ಆಕೆಯ ಹೆಸರನಲ್ಲಿ ಇದ್ದ ಮೂರ್ನಾಲ್ಕು ಫ್ಲ್ಯಾಟುಗಳಿಗೆ ಬೀಗಮುದ್ರೆ ಬಿತ್ತು. ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವು. ಒಟ್ಟಿನಲ್ಲಿ ದೂರ ಕುಳಿತವಳ ಮೂಗು ಹಿಡಿದು ಬಾಯಿ ತೆರೆಸುವ ತಂತ್ರ.

ಯಾವಾಗ ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವೋ ಆಗ ದೂರದಿಂದಲೇ ಬಾಯ್ಬಾಯಿ ಬಡಿದುಕೊಂಡು ಕೇಸ್ ನಡೆಸಲು ವಕೀಲರನ್ನು ನೇಮಕ ಮಾಡಿಕೊಂಡಳು ಮಮತಾ ಕುಲಕರ್ಣಿ. ಕೋಟಿ ಕೋಟಿ ರೂಪಾಯಿಗಳು ಇದ್ದರೂ ಇಲ್ಲದಂತೆ ಆಗಿಬಿಟ್ಟಿತು. ಆಕೆ ಅಲ್ಲಿ ದೂರದ ಕೀನ್ಯಾದ ಮೊಂಬಾಸಾ ಶಹರದ ಸಮುದ್ರ ತೀರದ ಬಂಗಲೆಯಲ್ಲಿ ಆರಾಮಾಗಿದ್ದರೂ ಮುಂಬೈನಲ್ಲಿ ಖರ್ಚುಗಳು ಇದ್ದವು. ತಂದೆ ತಾಯಿ ಇದ್ದಂತಿಲ್ಲ. ಇಬ್ಬರು ಸಹೋದರಿಯರು ಇದ್ದಾರೆ. ಅದರಲ್ಲಿ ಒಬ್ಬಳಿಗೆ ಆರೋಗ್ಯದ ಸಮಸ್ಯೆ. ಚಿಕಿತ್ಸೆಗೆ ದುಡ್ಡು ಇವಳೇ ಕೊಡಬೇಕು. ಆ ಇಬ್ಬರು ಸಹೋದರಿಯರೂ ಕೂಡ ಮಮತಾಳ ಹಾದಿಯಲ್ಲೇ ನಟಿಯರಾಗಲು ಪ್ರಯತ್ನಿಸಿದರೂ ಜಾಸ್ತಿ ಏನೂ ಗಿಟ್ಟಿದ ಹಾಗೆ ಕಾಣುವುದಿಲ್ಲ. ಹಾಗಾಗಿ ಹಿರಿಯಕ್ಕ ಮಮತಾಳೇ ಖರ್ಚಿಗೆ ಕಾಸು ಕೊಡಬೇಕು. ಪುಣ್ಯಕ್ಕೆ ಹಿರಿಯಕ್ಕನ ಇತರೆ ಚಾಳಿಗಳು ಮನೆಮಂದಿಗೆಲ್ಲ ಇದ್ದಂತಿಲ್ಲ.

ಮಮತಾ ತನ್ನ ಮೇಲಿನ ಪ್ರಕರಣವನ್ನು ರದ್ದು ಪಡಿಸುವಂತೆ ಹೈಕೋರ್ಟಿಗೆ ಮೊರೆ ಹೋಗಿದ್ದಳು. ಅವಳ ಮೇಲೆ ಮಾದಕವಸ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೆಳಗಿನ ನ್ಯಾಯಾಲಯದಲ್ಲಿ ದಾಖಲಾಗಿರುವ ಆರೋಪಪಟ್ಟಿಯನ್ನು (chargesheet) ಓದಿ, ಅವಳ ವಕೀಲರ ವಾದವನ್ನು ಆಲಿಸಿ, ಮಮತಾಳ ಮೇಲೆ ಆರೋಪ ಮಾಡಲು ಬೇಕಾದ ಸಾಕ್ಷಿಗಳನ್ನು ಕೊಟ್ಟಿಲ್ಲ ಎಂದು ಅವಳ ಮೇಲಿನ ದೂರನ್ನೇ ಖಾರಿಜ್ ಮಾಡಿದೆ ಹೈಕೋರ್ಟ್. FIR has been quashed. ಅಂದರೆ ಕೆಳಗಿನ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣದಿಂದ ಇವಳ ಹೆಸರನ್ನು ಕೈಬಿಡಲಾಗುತ್ತದೆ. ಇನ್ನು ಇದಕ್ಕೆ ವಿರೋಧವಾಗಿ ಸರಕಾರ ಸುಪ್ರೀಂ ಕೋರ್ಟಿಗೆ ಹೋದರೆ ನೋಡಬೇಕು. ಅಲ್ಲಿಯವರೆಗೆ ಮಮತಾ ನಿರಾಳ. ಇನ್ನು ಜಪ್ತಿ ಮಾಡಿರುವ ಫ್ಲ್ಯಾಟುಗಳು, ಮುಚ್ಚಿಕೊಂಡಿರುವ ಬ್ಯಾಂಕ್ ಖಾತೆಗಳು ಯಾವಾಗ ಮುಕ್ತಿಗೊಂಡು, ಕಾಸು ಕೈಗೆ ಬಂದು, ಅಕ್ಕ ತಂಗಿಯರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಆಗುತ್ತದೆಯೋ ಗೊತ್ತಿಲ್ಲ. ಆಗಬಹುದು ಸದ್ಯದಲ್ಲೇ.

ಹೇಳಿಕೇಳಿ ಮಾಜಿ ಚಿತ್ರನಟಿ. ಸಾಕಷ್ಟು ದುಡ್ಡು ಕಾಸಿದೆ. ಕೇಸ್ ಜಡಿದರೆ ಏನಾದರೂ ಗಿಟ್ಟೀತೋ ಎನ್ನುವ ಹುನ್ನಾರದಲ್ಲಿ ಸಾಕ್ಷಿ ಇಲ್ಲದಿದ್ದರೂ ಕೇಸ್ ಜಡಿದರೋ ಗೊತ್ತಿಲ್ಲ. ಮತ್ತೊಬ್ಬ ಮರಾಠಿ ನಟಿ ಶ್ರದ್ಧಾ ಮೆಂಗಳೆ ಮೇಲೆ ಕೂಡ ಬೇರೆ ತರಹದ ಕೇಸ್ ಜಡಿದಿದ್ದರು. ಜಡಿದವರು ಮತ್ತದೇ ಠಾಣೆ ಪೊಲೀಸರೇ. ಜಡಿಯುವುದರ ಮೇಲ್ವಿಚಾರಣೆಯನ್ನು ನೋಡಿದವರು ಮತ್ತದೇ ವಿವಾದಾತ್ಮಕ ಕಮಿಷನರ್ ಸಾಹೇಬರೇ. ಅದೇ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣದಲ್ಲಿ ಸಿಕ್ಕಾಕಿಕೊಂಡು, ಬೇರೆಯೆಲ್ಲರನ್ನೂ ಸಿಕ್ಕಿಸಿ, ತಾವು ಹೊರಗೆ ಬಂದ ಪರಂಬೀರ್ ಸಿಂಗ್ ಎನ್ನುವ ಹೈ ಪ್ರೊಫೈಲ್ ಪೊಲೀಸ್ ಅಧಿಕಾರಿ. ಈಗ ನಿವೃತ್ತರಾಗಿದ್ದಾರೆ. ಶ್ರದ್ಧಾ ಮೆಂಗಳೆ ಎಂಬ ನಟಿಗೆ ಜಾಮೀನು ಭಾಗ್ಯವೂ ಸಿಕ್ಕಿರಲಿಲ್ಲ. ಹಸುಗೂಸಿನ ತಾಯಿಯಾಗಿದ್ದ ಆಕೆ ಗಂಡನ ಜೊತೆ ಅದ್ಯಾರೋ ದೊಡ್ಡ ಐಎಎಸ್ ಅಧಿಕಾರಿಯನ್ನು ಬ್ಲಾಕ್ಮೇಲ್ / ಹನಿಟ್ರಾಪ್ ಮಾಡಲು ಹೋಗಿದ್ದಳು ಎನ್ನುವ ಆರೋಪಕ್ಕೆ ಸಿಲುಕಿದ್ದಳು. ಅವಳು ಮತ್ತು ಖಾಸಗಿ ಪತ್ತೇದಾರಿ ಕೆಲಸ ಮಾಡುವ ಆಕೆಯ ಗಂಡನ ಮೇಲೆ ಸಾಕಷ್ಟು ಬ್ಲಾಕ್ಮೇಲ್ ಆರೋಪಗಳು ಇದ್ದವು. ಈ ಬಾರಿ ದೊಡ್ಡ ಐಎಎಸ್ ಅಧಿಕಾರಿಗೆ ಸ್ಕೀಮ್ ಹಾಕಿದ್ದರು. ಆತನೂ ಏಳು ಕೆರೆ ನೀರು ಕುಡಿದ ಆಸಾಮಿಯೇ. ತನ್ನ ವ್ಯಾಪಕ ಸಂಪರ್ಕಗಳನ್ನು ಉಪಯೋಗಿಸಿದ. ಬ್ಲಾಕ್ಮೇಲ್ ಮಾಡುವವರಿಗೆ ಏಕೆ ದುಡ್ಡು ಕೊಡಲಿ? ಅದನ್ನೇ ಬೇರೆಯದಕ್ಕೆ ಖರ್ಚು ಮಾಡಿ ಈ ಬ್ಲಾಕ್ಮೇಲ್ ದಂಪತಿಗಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪಣತೊಟ್ಟ ಪರಿಣಾಮ ಕೇಸ್ ಬಿತ್ತು. ಸಾದಾ ಕೇಸ್ ಸಾಲದ್ದಕ್ಕೆ ಡಾನ್ ರವಿ ಪೂಜಾರಿ ಬೇರೆ ಫೋನ್ ಮಾಡಿ ಆ ನಟಿಯ ಪರವಾಗಿ ಬೆದರಿಕೆ ಹಾಕಿದ ಎಂದು ಕೂಡ ಸೇರಿಸಿ, ಆಕೆ ಅತಿ ಕಠಿಣ ಮಕೋಕಾ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಒಳಗೆ ಹೋಗಿದ್ದಳು. ಎರಡು ಮೂರು ವರ್ಷದ ನಂತರ ಕೇಸಿನಿಂದಲೇ ಖುಲಾಸೆ. ಈ ಮಧ್ಯದಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದಿಂದ ಎತ್ತಾಕಿಕೊಂಡು ಬಂದರು. ಮಮತಾ ಏನಾದರೂ ಇಲ್ಲೇ ಇದ್ದರೆ ಇಂತಹದೇ ಗತಿಯಾಗುತ್ತಿತ್ತೋ ಏನೋ. ನಮ್ಮಲ್ಲಿ ಕಾನೂನು ಪ್ರಕ್ರಿಯೆ ಹೇಗೆ ಅಂದರೆ process becomes the punishment. 

ಮಮತಾ ಕುಲಕರ್ಣಿಯ ಮೂಲ ಹೆಸರು ಪದ್ಮಾವತಿ ಕುಲಕರ್ಣಿ. ಅವಳೇ ಹೇಳಿಕೊಂಡಂತೆ ಅತ್ಯಂತ ಸಂಪ್ರದಾಯಸ್ಥ ಮರಾಠಿ ಕೊಂಕಣಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು. ತಂದೆ RTO ಅಧಿಕಾರಿ. ಅವಳ ತಾಯಿಗೆ ತಾನು ಚಿತ್ರನಟಿಯಾಗಬೇಕು ಎನ್ನುವ ಆಸೆ ಇತ್ತಂತೆ. ಆಗೆಲ್ಲ ಮಹಿಳೆಯರಿಗೆ ತುಂಬಾ ಕಟ್ಟುಪಾಡು ಇರುತ್ತಿತ್ತು. ಹದಿನಾರು ಹದಿನೆಂಟು ವರ್ಷಕ್ಕೆಲ್ಲ ಮದುವೆಯಾಗಿ ನಂತರ ಬೇಗನೆ ಮಕ್ಕಳಾಗಿ ಪತಿ, ಮಕ್ಕಳು, ಕುಟುಂಬ ಎಂದು ಅದೆಷ್ಟು ಸುಂದರಿಯರ ನಟಿಯಾಗುವ ಕನಸು ಕಮರಿ ಹೋಗಿತ್ತೋ. ಹೇಮಾಮಾಲಿನಿಯ ತಾಯಿ, ದುರಂತ ಅಂತ್ಯ ಕಂಡ ದಿವ್ಯಾ ಭಾರತಿಯ ತಾಯಿ ಎಲ್ಲ ಅದೇ ವರ್ಗಕ್ಕೆ ಸೇರಿದವರು. ಅವರ ಮಕ್ಕಳಿಗೆ ನಟಿಯಾಗಬೇಕು ಎಂದು ಅದೆಷ್ಟು ಆಸೆಯಿತ್ತೋ ಗೊತ್ತಿಲ್ಲ ಆದರೆ ತಾಯಿಯಂದಿಯರಿಗೆ ಮಾತ್ರ ಆ ಆಸೆ ಉತ್ಕಟವಾಗಿತ್ತು. ಹಾಗಾಗಿಯೇ ಮಕ್ಕಳ ಹಿಂದೆ ಕೈತೊಳೆದು ಕೊಂಡು ನಟಿಯಾಗು ಎಂದು ಹಿಂದೆ ಬಿದ್ದಿದ್ದರು. ಅದೃಷ್ಟವಿದ್ದವರು ಆದರು. ಇಲ್ಲದವರು ದುರಂತ ಅಂತ್ಯ ಕಂಡರು.

ಮಮತಾಳಿಗೆ ದೇವದತ್ತವಾದ ಸೌಂದರ್ಯವಿತ್ತು. ತಂದೆ RTO ಅಧಿಕಾರಿಯಾಗಿದ್ದರಿಂದ ಅನೇಕ ಸಿನೆಮಾ ಜನರ ಪರಿಚಯವಿತ್ತು. RTO ಬಹು ಮುಖ್ಯವಾದ ಹುದ್ದೆ. ಅನೇಕ ಸಿನೆಮಾ ದೊಡ್ಡ ಮಂದಿ ಇವಳ  ತಂದೆಯ ಸಹಾಯ ತೆಗೆದುಕೊಂಡಿದ್ದರೋ ಏನೋ. ಹಾಗಾಗಿ ಮಮತಾ ನಟಿಯಾಗಲು ಸಹಾಯ ಮಾಡಿರಬಹುದು. ತಾಯಿಗೆ ಅಷ್ಟು ಸಾಕಾಯಿತು. ಮಗಳನ್ನು ಬರೋಬ್ಬರಿ ತಯಾರ್ ಮಾಡಿದಳು. ಅಪ್ರತಿಮ ಸೌಂದರ್ಯ, ತಕ್ಕಮಟ್ಟಿನ ನಟನೆ ಎಲ್ಲ ಇತ್ತು. ಮಮತಾ ಆರಂಭದಲ್ಲಿ ತೆಲುಗಿನಲ್ಲಿ ಯಶಸ್ವಿಯಾದಳು. ಹಿಂದಿ ಚಿತ್ರರಂಗದ ಗಮನ ಸೆಳೆದಳು. ೧೯೯೦ ರ ದಶಕದಲ್ಲಿ ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ಕೊಟ್ಟಳು. ಐಟಂ ಹಾಡುಗಳ ನರ್ತಕಿಯಾಗಿ ತನ್ನ ಮಾದಕತೆಯಿಂದ ಬೇಕಾದ ಬೇಡವಾದ ಎಲ್ಲರ ಗಮನವನ್ನೂ ಸೆಳೆದಳು.

ಚಿತ್ರಗಳಲ್ಲಿ ಸಾಕಷ್ಟು ಬೋಲ್ಡಾಗಿ ನಟಿಸುತ್ತಿದ್ದ ನಟಿ ಮಮತಾ ಮತ್ತೂ 'ಎದೆ'ಗಾರಿಕೆ ತೋರಿಸುವ ಕೆಲಸಕ್ಕೆ ಇಳಿದುಬಿಟ್ಟಳು. ಸ್ಟಾರ್ ಡಸ್ಟ್ ಎನ್ನುವ ಅತ್ಯಂತ ಜನಪ್ರಿಯ ಸಿನೆಮಾ ಮಾಸಪತ್ರಿಕೆಯ ಮುಖಪುಟಕ್ಕೆ ತೆರೆದೆದೆಯ (topless)  ಪೋಸ್ ಕೊಟ್ಟುಬಿಟ್ಟಳು. ೧೯೯೦ ರ ಕಾಲದಲ್ಲಿ ಅದು ಬಹಳ ಸ್ಪೋಟಕ ವಿಷಯ. ಕಾಟಾಚಾರಕ್ಕೆ ಕೈಗಳಿಂದ ಎದೆ ಮುಚ್ಚಿಕೊಂಡಂತೆ ಮಾಡಿಕೊಂಡು ತನ್ನ ಅಮೂಲ್ಯ 'ಆಸ್ತಿಗಳ' ಪುಕ್ಕಟೆ ಧರ್ಮದರ್ಶನ ಮಾಡಿಸಿ ಮಾದಕ ನೋಟ ಬೀರಿದ್ದ ಮಮತಾಳ ಫೋಟೋ ಹೊಂದಿದ್ದ ಪತ್ರಿಕೆಯ ಆ ಸಂಚಿಕೆ ದಾಖಲೆ ಮಾರಾಟ ಕಂಡಿತ್ತು. 

ಹಾಗೆ ಫೋಟೋ ಹಾಕಿದ್ದಕ್ಕೆ ಆ ಪತ್ರಿಕೆ ಮೇಲೆ, ಪೋಸ್ ಕೊಟ್ಟಿದ್ದ ಮಮತಾ ಮೇಲೆ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕೆ ಕೇಸ್ ಕೂಡ ಬಿದ್ದಿತ್ತು. ಎಷ್ಟೋ ವರ್ಷಗಳ ನಂತರ ಕ್ಷಮೆಯಾಚನೆ ಮಾಡಿದ್ದಕ್ಕೆ ಸಾಂಕೇತಿಕ ದಂಡ ಹಾಕಿ ಹಾಳಾಗಿ ಹೋಗು ಅಂದು ಬಿಟ್ಟು ಕಳಿಸಿತ್ತು ನ್ಯಾಯಾಲಯ.

ಆ ಪ್ರಚೋದಾತ್ಮಕ ಫೋಟೋ ನೋಡಿ ನಿದ್ದೆ ಬಿಟ್ಟು ಎದ್ದು ಕುಳಿತಿದ್ದು ದೇಶದ ಯುವಜನತೆ. ಆದರೆ ವಿಶೇಷ ಆಸಕ್ತಿ ತೆಗೆದುಕೊಂಡು ಠಣಾಂಗ್ ಎಂದು ತಾನಿದ್ದ ಐಷಾರಾಮಿ ಹಡಗಿನಲ್ಲೇ ಜಿಗಿದು ಕುಳಿತು ಕಾಮಾಸಕ್ತಿಯಿಂದ ಕನಲಿದವ ಭೂಗತಲೋಕದ ಡಾನ್ ಛೋಟಾ ರಾಜನ್. ಆಗ ಛೋಟಾ ರಾಜನ್ ಎಲ್ಲಿದ್ದ?? ೧೯೯೩ ರ  ಮುಂಬೈ ಸ್ಪೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗಿನಿಂದ ಹೊರಬಂದಿದ್ದ ಛೋಟಾ ರಾಜನ್ ದುಬೈ ಬಿಟ್ಟು ಓಡಿದ್ದ. ಶತ್ರುಗಳಿಂದ ಕಾಪಾಡಿಕೊಳ್ಳಲು ಕೆಲ ಕಾಲ ಮಲೇಷ್ಯಾ ದೇಶದ ಹೊರಗೆ ಅಂತರರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿದ್ದ ಐಷಾರಾಮಿ ಹಡಗೊಂದರಲ್ಲಿ ಆತ ನೆಲೆಸಿದ್ದ. ಆತನನ್ನು ತಮ್ಮ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಯೋಜನೆ ಹಾಕಿದ್ದ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳು ಆತನಿಗೆ ಆ ಸೌಭಾಗ್ಯ ಮತ್ತು ಸೌಕರ್ಯ ಕರುಣಿಸಿದ್ದವು ಎನ್ನುವ ಸುದ್ದಿ ಇತ್ತು.

ಭಾರತ ಮೂಲದ ಭೂಗತಲೋಕದ ಕುಳಗಳಿಗೆ ಧರ್ಮಪತ್ನಿಯರು ಯಾರಿದ್ದರೂ ಕರ್ಮಪತ್ನಿಯರು ಮಾತ್ರ ಬಾಲಿವುಡ್ಡಿನ ನಟಿಯರೇ ಆಗಬೇಕು. ದುಡ್ಡು ತಳ್ಳು ತಮಾಷೆ ನೋಡು. ಒಂದು ಸಿನೆಮಾದಲ್ಲಿ ಅವಕಾಶ, ಎಲ್ಲೋ ಸಿಕ್ಕಿ ಬಿದ್ದಿರುವ ದುಡ್ಡಿನ ವಸೂಲಿ, ಬೇರೆ ಗೂಂಡಾಗಳು, ರಾಜಕಾರಣಿಗಳು, ಪೊಲೀಸರಿಂದ ಉಪಟಳ ತಪ್ಪಿಸಿ...ಹೀಗೆ ಹಲವಾರು ಕಾರಣ ಹೇಳಿಕೊಂಡು ನಟಿಯರು ಭೂಗತ ಜಗತ್ತಿನ ಖದೀಮರಿಗೆ ಹತ್ತಿರವಾಗುತ್ತಿದ್ದರು. ಇನ್ನು ಕೆಲವರು ಶುದ್ಧ ಆಸೆಬುರುಕಿಯರು. ಅವರಿಗೆ ದೊಡ್ಡ ದೊಡ್ಡ ಅರಬ್ ಶ್ರೀಮಂತರಿಗೆ ಕೇಳಿದ್ದೆಲ್ಲ ಕೊಟ್ಟು, ಎಲ್ಲ ರೀತಿಯಲ್ಲಿ ಸೇವೆ ಮಾಡಿ ಭಯಂಕರ ರೊಕ್ಕ ಮಾಡಿಕೊಳ್ಳಬೇಕು. ಇರುವ ನಾಲ್ಕು ದಿನಗಳ ಯವ್ವನದಲ್ಲಿ ಸಿಕ್ಕಾಪಟ್ಟೆ ದುಡಿದುಬಿಡಬೇಕು ಎನ್ನುವ ಇರಾದೆ. ಹೇಗೂ ಅರಬ್ ಶ್ರೀಮಂತರು ಮತ್ತು ದುಬೈನಲ್ಲಿ ನೆಲೆಸಿರುವ ಡಾನ್ ಗಳು ಖಾಸಮ್ ಖಾಸ್ ಗೆಣೆಕಾರರು. ಹೀಗೆ ಬೇರೆ ಬೇರೆ ಕಾರಣಗಳಿಗೆ ದುಬೈನಲ್ಲಿ ಮಂಚ ಹತ್ತಿ ಬಂದವರು ಅನೇಕ ನಟಿಯರು. 

ಲಂಚ ಮಂಚ ಸ್ಕೀಮಿನ ಫಲಾನುಭವಿಗಳು ಅನೇಕರಾದರೂ ಹೆಸರು ಕೆಲವರದ್ದು ಮಾತ್ರ ಹೊರಗೆ ಬಂದಿದೆ. ಮಂದಾಕಿನಿ ದಾವೂದನ ಮಾಲು. ನಗ್ಮಾ, ಸೋನಿಕಾ ಗಿಲ್ ಅವನ ತಮ್ಮ ಅನೀಸ್ ಇಬ್ರಾಹಿಮ್ಮನ ಮಾಲುಗಳು. ಮೋನಿಕಾ ಬೇಡಿ ಮತ್ತೊಬ್ಬ ಪಾತಕಿ ಅಬು ಸಲೇಮನ ಮಾಲು. ಹೀನಾ ಕೌಸರ್ ಡ್ರಗ್ ಲಾರ್ಡ್ ಇಕ್ಬಾಲ್ ಮಿರ್ಚಿಯ ಅಧಿಕೃತ ಪತ್ನಿ. ಸೋನಾ ಎಂಬ ನಟಿ ಸ್ಮಗ್ಲರ್ ಹಾಜಿ ಮಸ್ತಾನನ ಪತ್ನಿ. ಶೈಲಾ ಎನ್ನುವ ನಟಿ ಇರ್ಫಾನ್ ಗೋಗಾ ಎನ್ನುವ ಕಿಡ್ನಾಪಿಂಗ್ ಕಿಂಗ್ ಪತ್ನಿ. ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದ ಸೋನಿಕಾ ಗಿಲ್ ಮತ್ತು ಕಲ್ಪನಾ ಐಯ್ಯರ್ ಎಂಬ ಮಾಜಿ ನಟಿಯರಿಗೆ ಹೋಟೆಲ್ ಹಾಕಿ ಕೊಟ್ಟವ ಅನಿಸ್ ಇಬ್ರಾಹಿಂ ಎನ್ನುವ ಗುಸುಗುಸು. ಹೀಗೆ ಒಬ್ಬಬ್ಬ ಡಾನ್ ಗಳ ಒಂದೋ ಎರಡೋ ಮಾಲುಗಳ ಹೆಸರುಗಳು ಮಾತ್ರ ಹೊರಗೆ ಬಂದಿವೆ. ಆದರೆ ಇಂಟರ್ನೆಟ್ ಸಮುದ್ರದ ಆಳದಲ್ಲಿ ಬಲೆ ಹಾಕಿ ಹುಡುಕುತ್ತಾ ಹೋದರೆ ಇನ್ನೂ ಅನೇಕ ನಟ ನಟಿಯರು ಇವತ್ತಿಗೂ ಬೇರೆ ಬೇರೆ ಪಾತಕಿಗಳ ಸೇವೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ. 

ಬಾಲಿವುಡ್ ನಟಿಯರು, ಭಾರತದ ಹೈಟೆಕ್ ವೇಶ್ಯೆಯರು ವಿಶ್ವದ ತುಂಬೆಲ್ಲಾ ಅದೆಷ್ಟು ಜನಪ್ರಿಯರು ಎಂದರೆ ದೂರದ ಆಫ್ರಿಕಾದ ನೈಜೇರಿಯಾದ ಪರಮ ಕ್ರೂರಿ ಸರ್ವಾಧಿಕಾರಿ ಸಾನಿ ಅಬಾಚಾ ಸತ್ತು ಬಿದ್ದಾಗ ಅವನ ಜೊತೆಯಲ್ಲಿ ಇದ್ದವರೂ ನಮ್ಮ ಸುಂದರಿಯರೇ ಆಗಿದ್ದರ ಬಗ್ಗೆ ಏನು ಹೇಳೋಣ?? ಹೆಮ್ಮೆ ಪಡೋಣವೇ??? ಸ್ಪೋಟಕ ವಿಷಯವೆಂದರೆ ನಾಲ್ಕಾರು ಭಾರತೀಯ ಬೆಲೆವೆಣ್ಣುಗಳ ಮಧ್ಯೆ ಕಾಮೋತ್ತೇಜಕ ಮಾತ್ರೆಗಳನ್ನು ತೆಗೆದುಕೊಂಡು ಜಿಗಿಜಿಗಿದು ಪೌರುಷ ಮೆರೆಯುತ್ತಿದ್ದ ಸರ್ವಾಧಿಕಾರಿ ಸಾನಿ ಅಬಾಚಾ ಒಮ್ಮೆಲೇ ಠಾ ಎಂದು ಉದ್ಗರಿಸಿ ಸತ್ತುಹೋಗಿದ್ದು. ಬೆಲೆವೆಣ್ಣುಗಳ ಮೂಲಕ ಅವನಿಗೆ ವಿಷಪ್ರಾಶನ ಮಾಡಿಸಿದರೇ?  ಅದರ ಉಸ್ತುವಾರಿಯನ್ನು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ವಹಿಸಿಕೊಂಡಿತ್ತೇ?? ಅದರ ಹಿಂದಿನ ಕಾರಣ ಅಬಾಚಾ ಗಳಿಸಿದ್ದ ಹಲವಾರು ಬಿಲಿಯನ್ ಡಾಲರುಗಳ ಅಕ್ರಮ ಸಂಪತ್ತಿತ್ತೇ?? ಹೀಗೆ ಅನೇಕ ಕುತೂಹಲಕಾರಿ ಅಂಶಗಳಿವೆ. ಮತ್ತೊಮ್ಮೆ ಅದರ ಬಗ್ಗೆ ಬರೆಯೋಣ. ನಮ್ಮ ಬೆಲೆವೆಣ್ಣುಗಳ ಜನಪ್ರಿಯತೆ ಬೇಡಿಕೆ ಎಲ್ಲ ಕಡೆ ಹೇಗೆಲ್ಲಾ ಇತ್ತು ಎನ್ನುವ ಮಾತಿಗೆ ಹೇಳಿದ್ದು. ಇಂತಹದೇ ವರ್ಗಕ್ಕೆ ಸೇರಿದವಳು ಮಾಜಿ ಮಿಸ್ ಇಂಡಿಯಾ ಪಮೇಲಾ ಚೌಧರಿ ಉರ್ಫ್ ಪಮೇಲಾ ಬೋರ್ಡೆಸ್. ಅವಳ ವ್ಯಾಪ್ತಿ ಲಿಬಿಯಾದ ಸರ್ವಾಧಿಕಾರಿ ಗಡಾಫಿವರೆಗೂ ಇತ್ತು. 

ಮಮತಾ ಕುಲಕರ್ಣಿಯ ವಿಷಯಕ್ಕೆ ಮರಳಿದರೆ...ಭಯಂಕರ 'ಎದೆ'ಗಾರಿಕೆ ತೋರಿಸಿ ತೆರೆದೆದೆಯ ದರ್ಶನ ಮಾಡಿಸಿದ ಮಮತಾ ಕುಲಕರ್ಣಿ ಕಾರಣದಿಂದ ಪೂರ್ತಿ ಹುಚ್ಚನಾದವ ಡಾನ್ ಛೋಟಾ ರಾಜನ್. ಅವಳನ್ನು ಅನುಭವಿಸಲೇಬೇಕು ಎಂದುಕೊಂಡು ಬಾಲಿವುಡ್ಡಿನಲ್ಲಿ ತನ್ನ ಸೂತ್ರಗಳನ್ನು ಎಳೆಯತೊಡಗಿದ. ದಾವೂದ್ ಇಬ್ರಾಹಿಂನ ರೊಕ್ಕವನ್ನು ಬಾಲಿವುಡ್ಡಿನಲ್ಲಿ ಸಂಬಾಳಿಸುತ್ತಿದ್ದ ಮುಕೇಶ್ ದುಗ್ಗಲ್ ಎಂಬ ನಿರ್ಮಾಪಕ ಕಮ್ ನಿರ್ದೇಶಕನನ್ನು ತನ್ನತ್ತ ಸೆಳೆಯಲು ನೋಡಿದ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿ ಕೂಡ ಆದ. ಆ ದುಗ್ಗಲ್ ಪುಣ್ಯಾತ್ಮ ಮಮತಾ ಕುಲಕರ್ಣಿಯನ್ನು ಛೋಟಾ ರಾಜನ್ ನಿಗೆ ಅರ್ಪಿಸಿದನೇ?? ಗೊತ್ತಿಲ್ಲ. ಇನ್ನೊಬ್ಬ ನಟಿ ಮೋನಿಕಾ ಬೇಡಿಯನ್ನು ಅಬು ಸಲೇಮನಿಗೆ ನಂಟು ಮಾಡಿ ಕೊಟ್ಟವ ಮಾತ್ರ ಅವನೇ ಎಂದು ದಾಖಲಾಗಿದೆ. ಮುಕೇಶ್ ದುಗ್ಗಲ್ ಬೇಗನೆ ಶಿವನ ಪಾದ ಸೇರಿಕೊಂಡ. ಇತ್ತ ದಾವೂದನ ರೊಕ್ಕವನ್ನೂ ತೆಗೆದುಕೊಳ್ಳುತ್ತಾ ಅತ್ತ ಕಡೆ ಛೋಟಾ ರಾಜನ್ನನಿಗೂ ಸೇವೆ ಮಾಡುತ್ತಾ ಇರುವ ವಿಷಯ ದಾವೂದ್ ಗ್ಯಾಂಗಿಗೆ ತಿಳಿಯಲು ಜಾಸ್ತಿ ವೇಳೆ ಹಿಡಿಯಲಿಲ್ಲ. ಅವನನ್ನು "ಎತ್ತಿಬಿಡಿ" ಎಂದು ಆಜ್ಞೆ ಮಾಡಿಬಿಟ್ಟ ಛೋಟಾ ಶಕೀಲ್. ಮುಕೇಶ್ ದುಗ್ಗಲ್ ಮಾಫಿಯಾ ಗುಂಡಿಗೆ ಬಲಿಯಾದ. ಇದೇ ರೀತಿ ದಿನೇಶ್ ಆನಂದ ಎನ್ನುವ ನಟ ಜೀವ ಕಳೆದುಕೊಂಡ. ಸೂಪರ್ ಸ್ಟಾರ್ ನಟಿಯರ ಕಾರ್ಯದರ್ಶಿ ಅಜಿತ್ ದೇವಾನಿ ಗುಂಡಿಗೆ ಬಲಿಯಾದ. ಅವನು ಒಂದು ಕಾಲದಲ್ಲಿ ಮಂದಾಕಿನಿ (ಅದೇ ದಾವೂದ್ ಇಬ್ರಾಹಿಂ ಕುಖ್ಯಾತಿಯ) ಮತ್ತು ನಟಿ ಮನಿಷಾ ಕೊಯಿಲಾರಾಳ ಸಿನೆಮಾ ಕರಿಯರ್ ಸಂಬಾಳಿಸಿದ ವ್ಯಕ್ತಿ. ಅಜಿತ್ ದೇವಾನಿಯ ಹತ್ಯೆ ನಟಿ ಮನಿಷಾ ಕೊಯಿರಾಲಾ ಕೊಟ್ಟ ಸುಪಾರಿಯಾಗಿತ್ತೇ ಎನ್ನುವ ಗುಲ್ಲು ಎದ್ದಿತ್ತು. ಏಕೆಂದರೆ ವಿದೇಶದಿಂದ ಬಂಧಿಸಿ ತಂದಿದ್ದ ಭೂಗತ ಪಾತಕಿ ಅಬು ಸಲೇಮನನ್ನು ಮಂಪರು ಪರೀಕ್ಷೆಗೆ ಗುರಿಪಡಿಸಿದಾಗ ಆತ ಕಾರಿಕೊಂಡಿದ್ದ ಅನೇಕ ಭಯಾನಕ ವಿಷಯಗಳಲ್ಲಿ ಅದೂ ಒಂದಾಗಿತ್ತು. ಮನಿಷಾ ಅನೀಸ್ ಇಬ್ರಾಹಿಂನಿಗೆ ತನ್ನ ಕಾರ್ಯದರ್ಶಿ ದೇವಾನಿ ದುಡ್ಡು ನುಂಗಿದ್ದಾನೆ ಎಂದು ದೂರು ಕೊಟ್ಟಿದ್ದಳು. ಅನೀಸ್ ದೇವಾನಿಯನ್ನು ಎತ್ತಿಸಿಬಿಟ್ಟ ಎಂದಿದ್ದ ಮಂಪರಿನಲ್ಲಿದ್ದ ಅಬು ಸಲೇಮ್.  ಅದಕ್ಕೆ ಪೂರಕವೆಂಬಂತೆ ಆಕೆಯನ್ನು ಯಾರೂ ಏನೂ ಕೇಳಿಯೇ ಇರಲಿಲ್ಲ. ಆದರೂ "ನಾನವಳಲ್ಲ, ನಾನವಳಲ್ಲ" ಎಂದು ಅಳುತ್ತಾ ಮನಿಷಾ ಏಕೆ ಅಂದಿನ ಮುಂಬೈ ಪೊಲೀಸ್ ಕಮಿಷನರನ್ನು ಭೇಟಿಯಾದಳು? ಮುಂದೆ ಕೆಲವೇ ದಿನಗಳಲ್ಲಿ ಆ ಕಮಿಷನರ್ ಎತ್ತಂಗಡಿ ಆಗಿದ್ದು ಕಾಕತಾಳೀಯವೇ ಎನ್ನುವ ಸಂಶಯ ಕಾಡಿತ್ತು. ಆದರೆ ಅಜಿತ್ ದೇವಾನಿ ಹತ್ಯೆಯ ತನಿಖೆ ಮಾಡಿದ ಪೊಲೀಸರು ಮನಿಷಾ ಕೊಯಿರಾಲಾಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದರಿಂದ ಆಕೆ ಬಚಾವು. ಯಾರೂ ಏನೂ ಹೇಳುವಂತಿಲ್ಲ.

ಡಾನ್ ಛೋಟಾ ರಾಜನ್ನನ ಅವಿರತ ಪ್ರಯತ್ನದಿಂದ ಮಮತಾ ಛೋಟಾ ರಾಜನ್ ಮಾಲು ಎಂದು ಬಾಲಿವುಡ್ ತುಂಬಾ ಗುಸುಗುಸು. ಹೆಚ್ಚಿನ ವಿವರಗಳಾಗಲೀ ಫೋಟೋಗಳಾಗಲೀ ಸಿಕ್ಕಿಲ್ಲ. 

ಬಾಲಿವುಡ್ಡಿನಲ್ಲಿ ಮಮತಾಳ ಜನಪ್ರಿಯತೆ ಇಳಿಮುಖವಾಗತೊಡಗಿದಾಗ ಒಂದು ಲಫಡಾ ಆಗಿ ಬಹಳ ದೊಡ್ಡ ಸುದ್ದಿ ಮಾಡಿತು. ರಾಜಕುಮಾರ್ ಸಂತೋಷಿ...ಬಾಲಿವುಡ್ಡಿನ ದೊಡ್ಡ ನಿರ್ದೇಶಕ, ನಿರ್ಮಾಪಕ. ಅನೇಕರನ್ನು ನಟ ನಟಿಯರನ್ನಾಗಿ ಮಾಡಿದ ಮತ್ತು ತನಗೆ ಬಗ್ಗದವರನ್ನು ಸದೆಬಡಿದ ಖ್ಯಾತಿ ಕುಖ್ಯಾತಿ ಎರಡೂ ಇರುವ ದೊಡ್ಡ ಮನುಷ್ಯ. ಇಂತಹ ದೊಡ್ಡ ಮನುಷ್ಯ "ಚೈನಾ ಗೇಟ್" ಎನ್ನುವ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಕೈಹಾಕಿದ. ಮಮತಾ ಕುಲಕರ್ಣಿಯನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿದ್ದ. ಮಧ್ಯೆ ಈ ಸಂತೋಷಿ ಮತ್ತು ಮಮತಾ ಮಧ್ಯೆ ಏನೋ ಕಿರಿಕ್ ಆಯಿತು. ಮಮತಾಳನ್ನು ಚಿತ್ರದಿಂದ ತೆಗೆದುಬಿಟ್ಟ. ಇವಳು ಇಲ್ಲದ ಗದ್ದಲ ಎಬ್ಬಿಸಿದಳು. "ನಿರ್ಮಾಪಕ ಸಂತೋಷಿ ನನ್ನ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದ. ನಾನು ವಿರೋಧಿಸಿದೆ. ಪ್ರತಿಕಾರವೆಂಬಂತೆ ಸಿನೆಮಾದಿಂದ ತೆಗೆದಿದ್ದಾನೆ," ಎಂದು ಮಮತಾ ಆರೋಪ ಮಾಡಿದಳು. ಆದರೆ ಅದೆಲ್ಲೂ ಹೋಗಲಿಲ್ಲ. ತಣ್ಣಗಾಯಿತು. ಸಂತೋಷಿ ಕ್ಯಾರೇ ಮಾಡದೇ ಊರ್ಮಿಳಾ ಮಾತೊಂಡಕರ್ ಎನ್ನುವ ಮತ್ತೊಬ್ಬ ನಟಿಯೊಂದಿಗೆ ಚಿತ್ರ ಮುಂದುವರೆಸಿದ.

ಆಗ ಬಂತು ನೋಡಿ ಸಂತೋಷಿಗೆ ಒಂದು ಫೋನ್ ಕಾಲ್. ಫೋನ್ ಎತ್ತಿದ ಸಂತೋಷಿಯ ಮುಖದಲ್ಲಿ ಸಂತೋಷ ಮಾಯವಾಗಿ ಮುಖ ಕಪ್ಪಿಟ್ಟಿತು. ಆಕಡೆಯಿಂದ ಡಾನ್ ಛೋಟಾ ರಾಜನ್ ಅಬ್ಬರಿಸುತ್ತಿದ್ದ. ಮುಂಬೈ ಭೂಗತ ಲೋಕದ ಭಯಂಕರ ಬೈಗಳನ್ನು ಬರೋಬ್ಬರಿ ಪೂಜೆಗೆ ಹೂವಿನಂತೆ ಎರಚುತ್ತಾ ಅಬ್ಬರಿಸುತ್ತಿದ್ದ. ಥಂಡಾ ಹೊಡೆದು ಮೈಯೆಲ್ಲಾ ಬೆವರಿದ ಸಂತೋಷಿ, "ಓಕೆ ನಾನಾ ಭಾಯ್. ಎಲ್ಲ ನೀವು ಹೇಳಿದ ತರಹವೇ ಆಗುತ್ತದೆ," ಎಂದು ಉಸುರಿ ಫೋನಿಡುವಾಗ ಥರ ಥರ ಕಂಪಿಸುತ್ತಿದ್ದ. ಮುಕೇಶ್ ದುಗ್ಗಲ್, ದಿನೇಶ ಆನಂದ, ಅಜಿತ್ ದೇವಾನಿ, ಗುಲಶನ್ ಕುಮಾರ್, ಜಾವೇದ್ ಸಿದ್ದಿಕಿ, ಅಶ್ರಫ್ ಪಟೇಲ್, ತಾಕಿಯುದ್ದೀನ್ ವಾಹಿದ್ ಮುಂತಾದ ಭೂಗತರ ಗುಂಡುಗಳಿಗೆ ಬಲಿಯಾದ ಬಾಲಿವುಡ್ ಮತ್ತು ಬಿಸಿನೆಸ್ ಜನರ ಪ್ರೇತಾತ್ಮಗಳು ಸಂತೋಷಿಯನ್ನು ಸುತ್ತುವರೆದು ಕೀ ಕೀ ಎನ್ನುತ್ತಾ ಮೆದುಳಿಗೇ ಕೈಹಾಕಿದಂತೆ ಭಾಸವಾಯಿತು. ಡಾನ್ ಛೋಟಾ ರಾಜನ್ ಮಾತು ಕೇಳದಿದ್ದರೆ ತಾನೂ ಭೂಗತರ ಗುಂಡುಗಳಿಗೆ ಬಲಿಯಾಗಿ ಆ ಪ್ರೇತಾತ್ಮಗಳ ಜೊತೆ ಸೇರಿ ಕೀ ಕೀ ಎನ್ನಬೇಕಾದೀತು ಎಂದವನೇ ಮಮತಾಳಿಗೆ ಬರಲು ಹೇಳಿಕಳಿಸಿದ ಸಂತೋಷಿ.

ಅತಿ ಆಶ್ಚರ್ಯವೆಂಬಂತೆ "ಚೈನಾ ಗೇಟ್" ಚಿತ್ರದಿಂದ ಗೇಟ್ ಪಾಸ್ ಪಡೆದು ಹೊರಗೆ ಹೋಗಿದ್ದ ಮಮತಾ ಮತ್ತೆ ಚಿತ್ರ ತಂಡಕ್ಕೆ ಮರಳಿ ಸೇರಿಕೊಂಡಳು. ಚಿತ್ರೀಕರಣದಲ್ಲಿ ಭಾಗವಹಿಸಿದಳು. ಆಕೆಯ ಭೂಗತಲೋಕದ ಗೆಳೆಯ ಛೋಟಾ ರಾಜನ್ ನಿಂದ ಬರೋಬ್ಬರಿ ಬೆಂಡೆತ್ತಿಸಿಕೊಂಡಿದ್ದ ಸಂತೋಷಿ ಕಮಕ್ ಕಿಮಕ್ ಅನ್ನದೇ ಚಿತ್ರೀಕರಣ ಮುಗಿಸಿಕೊಟ್ಟ. ಆದರೆ ಎಡಿಟಿಂಗ್ ಸಮಯದಲ್ಲಿ ಕತ್ತರಿ ಹಿಡಿದು ಕೂತ ಸಂತೋಷಿ ಮಮತಾ ಇದ್ದ ಸೀನ್ ಗಳನ್ನು ಯದ್ವಾ ತದ್ವಾ ಕತ್ತರಿಸಿ ಮಮತಾಳ ಪಾತ್ರವನ್ನು ಯಾರೋ ಯಃಕಶ್ಚಿತ ಎಕ್ಸಟ್ರಾ ನಟಿಯ ಪಾತ್ರಕ್ಕೆ ಇಳಿಸಿಬಿಟ್ಟ. ಆ ರೀತಿ ಸೇಡು ತೀರಿಸಿಕೊಂಡ. ಮತ್ತೊಬ್ಬ ನಟಿ ಊರ್ಮಿಳಾ ಮಾತೋಂಡ್ಕರ್ ಸಿಕ್ಕಾಪಟ್ಟೆ ಸ್ಕೋಪ್ ಪಡೆದುಬಿಟ್ಟಳು. ತುಂಬಾ ಜನಪ್ರಿಯವಾದ "ಛಮ್ಮಾ ಛಮ್ಮಾ" ಹಾಡು ಅವಳ ಪಾಲಾಗಿತ್ತು. ಇದೆಲ್ಲ ಮಮತಾಳಿಗೆ ಯಾವಾಗ ತಿಳಿಯಿತೋ ಗೊತ್ತಿಲ್ಲ. ಆದರೆ ಆಗ ಛೋಟಾ ರಾಜನ್ ಮತ್ತೆ ಈ ವಿಷಯದಲ್ಲಿ ತಲೆ ಹಾಕಿದಂತೆ ಕಂಡು ಬರಲಿಲ್ಲ. ಮತ್ತೆ ಎಲ್ಲ ನಿರ್ಮಾಪಕರಂತೆ ಸಂತೋಷಿ ಕೂಡ ಹೊಸ ಚಿತ್ರ ಮುಗಿದ ಬಳಿಕ ಎಲ್ಲ ಡಾನ್ ಗಳಿಗೆ ಕೊಡುವಷ್ಟು ಕಪ್ಪು ಕಾಣಿಕೆ, ತಪ್ಪು ಕಾಣಿಕೆ ಇತ್ಯಾದಿ ಕೊಟ್ಟು ಕೈಮುಗಿದು ಸಾಷ್ಟಾಂಗ ಕೂಡ ಹಾಕಿಬಿಟ್ಟಿದ್ದ. ತಾನಿದ್ದಲ್ಲಿಗೆ ಎಂದೋ ಬಂದು ಕೆಲವು ಬಾರಿ ಹಾಸಿಗೆ ಬೆಚ್ಚಗೆ ಮಾಡಿ ಸುಖ ಕೊಟ್ಟು ಹೋಗಿದ್ದ ಮಮತಾಳಿಗೆ ರಾಜನ್ ಹೆಚ್ಚಿಗೆ ಮತ್ತೇನೂ ಮಾಡಲಿಲ್ಲ. "ಚೈನಾ ಗೇಟ್" ಚಿತ್ರ ತುಂಬಾ ಯಶಸ್ವಿಯಾಯಿತು. ತನ್ನ ಮಹತ್ವ ಕಮ್ಮಿಯಾಗಿದ್ದು ಕಂಡು ಮಮತಾ ಕೊತಕೊತ ಕುದ್ದುಕೊಂಡಳು ಬಿಟ್ಟರೆ ಮತ್ತೇನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಛೋಟಾ ರಾಜನ್ನನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ನಿರ್ಮಾಪಕ ಸಂತೋಷಿ ಶಿಸ್ತುಬದ್ಧವಾಗಿ ಮಮತಾಳ ಸಿನಿಮಾ ವೃತ್ತಿಜೀವನಕ್ಕೆ ಕೊಡಲಿಯಿಟ್ಟ. ದಾವೂದ್ ಇಬ್ರಾಹಿಂನ ಮಾಲು ಮಂದಾಕಿನಿ. ಆಕೆಯನ್ನು ಹಾಕಿಕೊಂಡರೆ ಯಾವಾಗ ಏನು ತಲೆನೋವು ಬರುತ್ತದೆ ಗೊತ್ತಿಲ್ಲ. ಸುಮ್ಮನೇ ಏಕೆ ಸಮಸ್ಯೆಯನ್ನು ಕರೆಸಿಕೊಳ್ಳಬೇಕು ಎಂದು ಬಾಲಿವುಡ್ ಮಂದಿ ಮಂದಾಕಿನಿ, ಹಾಗೆಯೇ ಮೋನಿಕಾ ಬೇಡಿ, ಮುಂತಾದ ಭೂಗತರ ಗೆಳತಿಯರನ್ನು avoid ಮಾಡುತ್ತಿದ್ದರೋ ಅದೇ ಮಮತಾಳಿಗೂ ಆಯಿತು. ಅವಕಾಶಗಳು ಪೂರ್ತಿ ಒಣಗಿ ಹೋಗತೊಡಗಿದವು. ಬಾಲಿವುಡ್ ಒಳಗೇ ಮತ್ತೊಂದು ಮಾಫಿಯಾ ಇದೆ. ನಿರ್ಮಾಪಕ ನಿರ್ದೇಶಕರ ಸಾಫ್ಟ್ ಮಾಫಿಯಾ. ಅದು ತುಂಬಾ ಬಲಿಷ್ಠವಾಗಿದೆ ಮತ್ತು ಅವರೊಡನೆ ಅವರು ಹೇಳಿದ ರೀತಿಯಲ್ಲಿ ಹೊಂದಾಣಿಕೆ (compromise) ಮಾಡಿಕೊಳ್ಳದಿದ್ದರೆ ಯಾರ ಭವಿಷ್ಯವನ್ನು ಬೇಕಾದರೂ ಅವರು ಮುರಿದು ಎಸೆಯಬಲ್ಲರು ಎಂದು ಗೊತ್ತಾಗುವ ಹೊತ್ತಿಗೆ ಮಮತಾ ಬಾಲಿವುಡ್ಡಿಗೆ ಸಂಪೂರ್ಣವಾಗಿ ಅಪ್ರಸ್ತುತಳೂ ಮತ್ತು ಅಪಥ್ಯವೂ ಆಗಿದ್ದು ದುರಂತ.

2000 ಇಸ್ವಿಯಲ್ಲಿ ಥಾಯ್ಲೆಂಡಿನ ಬ್ಯಾಂಕಾಕ್ ನಲ್ಲಿ ದಾವೂದ್ ಇಬ್ರಾಹಿಂ ಕಡೆಯವರು ಮಾಡಿದ ಹತ್ಯಾ ಪ್ರಯತ್ನದಲ್ಲಿ ಗುಂಡೇಟು ತಿಂದರೂ ಪವಾಡ ಸದೃಶ್ಯ ರೀತಿಯಲ್ಲಿ ಬಚಾವಾದ ಡಾನ್ ಛೋಟಾ ರಾಜನ್ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳ ಸಹಾಯದಿಂದ ಇರಾನಿನಲ್ಲಿ ನೆಲೆಗೊಂಡ. ತೀವ್ರ ಮಧುಮೇಹಿಯಾಗಿದ್ದ ಆತ ಗುಂಡೇಟಿನಿಂದ ಆದ ಗಾಯಗಳಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಮತ್ತೆ ವೈಯಕ್ತಿಕ ಸುರಕ್ಷೆ ತುಂಬಾ ಮುಖ್ಯವಾಗಿತ್ತು. ಹಾಗಾಗಿ ಹೊರಗಿನ ಜನರ ಸಂಪರ್ಕ ಕಡಿದುಕೊಂಡ. ಭೂಗತಲೋಕವನ್ನು ಕಂಪ್ಯೂಟರ್ ಮತ್ತು ಫೋನ್ ಮೂಲಕ ಸಂಬಾಳಿಸತೊಡಗಿದ. ಇರಾನಿನಲ್ಲಿ ಆತನ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನೇ ಶಾದಿ ಮಾಡಿಕೊಂಡು ಅವಳಿಗೊಂದು ಮಗುವನ್ನೂ ಕರುಣಿಸಿಬಿಟ್ಟ. ಮಮತಾ ಮುಂತಾದ ಬಾಲಿವುಡ್ಡಿನ ಮಾಲೆಲ್ಲ ಆತನಿಗೆ ಹಳೆಯ ಸರಕಾಗಿಹೋಗಿತ್ತು.

ಈ ಸಮಯದಲ್ಲಿ ಮಮತಾಳಿಗೆ ಗಂಟು ಬಿದ್ದವ ದುಬೈನಲ್ಲಿ ಕುಳಿತು ಮೇಲ್ನೋಟಕ್ಕೆ ಎಂಪೈರ್ ಹೋಟೆಲ್ ಸಮೂಹದ ಮಾಲೀಕ ಎಂದು ಪೋಸ್ ಕೊಡುತ್ತಾ ದೊಡ್ಡ ಮಟ್ಟದ ಡ್ರಗ್ ದಂಧೆ ಮಾಡುತ್ತಿದ್ದ ವಿಕಿ ಗೋಸ್ವಾಮಿ. ಆತ ಎಂದಿನಿಂದಲೋ ಇವಳ ಫ್ಯಾನ್ ಆಗಿದ್ದನಂತೆ. ಅಷ್ಟೇ ಮೊದಲು  ಚಾನ್ಸ್ ಸಿಗಲಿಲ್ಲ. ಅವನ ಅಪ್ಪನಂತಹ ಡಾನ್ ಛೋಟಾ ರಾಜನ್ ಮಮತಾಳನ್ನು exclusive ಆಗಿ ಕಬ್ಜಾ ಮಾಡಿಕೊಂಡು ಕೂತಿದ್ದ. ಸಿಂಹದ ಮಾಲಿಗೆ ನಾಯಿ ನರಿ ಬಾಯಿ ಹಾಕುವುದಿಲ್ಲ. ಸಿಂಹ ತಿಂದು ಮುಗಿಸಿ ದೂರ ಹೋದ ನಂತರ ಅಪಾಯವಿಲ್ಲ ಎಂದಾಗ ಮಾತ್ರ ಅವು ಉಳಿದ ಬಳಿದ ಚೂರು ಪಾರಿಗೆ ಜೊಲ್ಲು ಸುರಿಸುತ್ತ ಬರುತ್ತವೆ. ವಿಕಿ ಗೋಸ್ವಾಮಿಯದು ಇದೇ ಪರಿಸ್ಥಿತಿ.

ಸಂತೋಷಿ ಹಾಕಿದ ಸ್ಕೆಚ್ ನಿಂದ ಒಂದು ರೀತಿಯಲ್ಲಿ ಬಾಲಿವುಡ್ಡಿನಿಂದ ಬಹಿಷ್ಕಾರ ಹಾಕಿಸಿಕೊಂಡು ಓತ್ಲಾ ಹೊಡೆಯುತ್ತಾ ಖಾಲಿ ಕೂತಿದ್ದ ಮಮತಾಳಿಗೆ ದುಬೈನಿಂದ ಬಿಟ್ಟೂ ಬಿಡದೆ ಫೋನ್ ಮಾಡುತ್ತಿದ್ದ ಗೋಸ್ವಾಮಿ ಅವಳನ್ನು ಪಟಾಯಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಗೋಸ್ವಾಮಿಯ ಜೊತೆಗಿರಲು 2002 ರ ಹೊತ್ತಿಗೆ ಮಮತಾ ದುಬೈಗೆ ಶಿಫ್ಟ್ ಆದಳು. ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾದಳು. ಅವಳ ಬಗ್ಗೆ ಹೆಚ್ಚಿನ ಮಾಹಿತಿ ಆಗ ಕೇಳಿದರೂ ಸಿಗುತ್ತಿರಲಿಲ್ಲ.

ದುಬೈಗೆ ಶಿಫ್ಟ್ ಆಗುವ ಮೊದಲು ಮುಂಬೈನಲ್ಲಿ ಮತ್ತೊಂದು ಲಫಡಾ ಮಾಡಿಕೊಂಡಳು ಮಮತಾ ಕುಲಕರ್ಣಿ. 

ಒಂದು ದಿನ ರಾತ್ರಿ ಕೆಲವರು ಒಬ್ಬ ಯುವತಿಯನ್ನು ಕರೆದುಕೊಂಡು ಮತ್ತು ನಾಲ್ಕಾರು ಯುವಕರನ್ನು ಎಳೆದುಕೊಂಡು ಓಶಿವಾರಾ ಪೊಲೀಸ್ ಠಾಣೆಗೆ ಬಂದರು. ಯಾವುದೋ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಒಂದು ಕಾರ್ ನಿಂತಿತ್ತು. ಅಚಾನಕ್ಕಾಗಿ ಅದರಿಂದ ಕಾಪಾಡಿ!! ಕಾಪಾಡಿ!! ಎನ್ನುವ ಮಹಿಳೆಯ ಮೊರೆ ಕೇಳಿಬಂತು. "ನನ್ನನ್ನು ಕಾಪಾಡಿ! ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಕಾಪಾಡಿ!" ಎಂದು ಮಹಿಳೆ ಕಷ್ಟಪಟ್ಟು ಹೇಗೋ ಮಾಡಿ ಕಾರಿನ ಕಿಟಕಿಯಿಂದ ಬೊಬ್ಬೆ ಹಾಕುತ್ತಿದ್ದಳು. ಒಳಗಿದ್ದ ದಾಂಡಿಗರು ಅವಳನ್ನು ಬಲವಂತದಿಂದ ಸುಮ್ಮನಿರಿಸಿ ಅಲ್ಲಿಂದ ಪರಾರಿಯಾಗಲು ನೋಡಿದರು. ಸುತ್ತುವರೆದ ಜನ ಬಿಡಲಿಲ್ಲ. ವಾಡಿಕೆಯಂತೆ ನಾಲ್ಕು ಧರ್ಮದೇಟು ಕೊಟ್ಟಿರಬಹುದು. ಎಲ್ಲರನ್ನೂ ಕರೆದುಕೊಂಡು ಓಶಿವಾರ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿದರು.

ಹಾಗೆ ಬೊಬ್ಬೆ ಹಾಕಿದ್ದ ಹುಡುಗಿ ಮಮತಾ ಕುಲಕರ್ಣಿ ಆಗಿದ್ದಳು. ತನಿಖೆಗೆ ಇಳಿದ ಪೊಲೀಸರು ಮೀಸೆ ಕೆಳಗೆ ಮುಸಿಮುಸಿ ನಕ್ಕರು. ಅಂತಹ ಅದೆಷ್ಟು ಡ್ರಾಮಾ ಅವರು ನೋಡಿಬಿಟ್ಟಿದ್ದರೋ. ಅದು ಕಿಡ್ನ್ಯಾಪ್ ಪ್ರಕರಣವೂ ಅಲ್ಲ ಎಂತ ಮಣ್ಣೂ ಅಲ್ಲ ಎಂಬುದು ನುರಿತ ಪೊಲೀಸರಿಗೆ ಕ್ಷಣಾರ್ಧದಲ್ಲಿ ತಿಳಿಯಿತು. ಅದೊಂದು ಆ ತರಹದ "ಬುಕಿಂಗ್" ಪ್ರಕರಣವಾಗಿತ್ತು ಅಷ್ಟೇ. ವ್ಯವಹಾರ ಕುದುರಿಸಿದ್ದ ಯುವಕರ ತಂಡ ಮಜಾ ಮಾಡಲು ಆಕೆಯನ್ನು ಕರೆದುಕೊಂಡು ಹೊರಟಿದ್ದರು. ಮಧ್ಯೆ ಎಲ್ಲೋ ಕೊಡು ತೆಗೆದುಕೊಳ್ಳುವ ಲೆಕ್ಕಾಚಾರ workout ಆಗಿಲ್ಲ. ರೊಕ್ಕ ವಾಪಸ್ ಕೊಟ್ಟು ರೈಟ್ ಹೇಳು ಅಂದಿರಬೇಕು ಅವರು. ರೊಕ್ಕವನ್ನು ಹಡಪ್ ಸ್ವಾಹಾ ಮಾಡಿ ಓಡೋಣ ಎಂದು ಕಿಡ್ನ್ಯಾಪ್ ಎಂದು ಸುಳ್ಳು ಬೊಬ್ಬೆ ಹೊಡೆದಳು ಎಂದು ಯುವಕರು ಅಂಬೋ ಅಂದಾಗ ಪೊಲೀಸರಿಗೆ ನಂಬದೇ ಇರಲು ಕಾರಣವೇ ಇರಲಿಲ್ಲ. ಹೈಟೆಕ್ ವೇಶ್ಯಾವೃತ್ತಿ ಬಹಳ ಸಾಮಾನ್ಯವಾಗಿತ್ತು. ಅನೇಕ ಚಿತ್ರತಾರೆಯರು, ಮಾಡೆಲ್ ಗಳು, ಇತರರು ತುಂಬಾ ರೂಟೀನ್ ಆಗಿ ಅದರಲ್ಲಿ ತೊಡಗಿಸಿಕೊಂಡಿದ್ದರು. ರೊಕ್ಕದ ವಿಷಯಕ್ಕೆ ರಂಪಾಟ ಇತ್ಯಾದಿ ಸಹಜವಾಗಿತ್ತು. ಪೊಲೀಸರು ಅದೇನು ಮಾಡಿದರೋ ಗೊತ್ತಿಲ್ಲ. ಆದರೆ ಮಮತಾ ಕೂಡ ಆ ದಂಧೆಗೆ ಇಳಿದಿದ್ದಾಳಂತೆ ಅನ್ನುವ ಸುದ್ದಿ ಗುಸುಗುಸು ಹಬ್ಬಿ ಏನಾದರೂ ಚೂರು ಪಾರು ಮರ್ಯಾದೆ ಉಳಿದಿದ್ದರೆ ಅದೂ ಕೂಡ ಮಾಯವಾಯಿತು. ಇದೇ ಸಮಯದಲ್ಲಿ ಗೋಸ್ವಾಮಿ ಬೇರೆ ಗಂಟು ಬಿದ್ದು ಬಾ ಬಾ ಎಂದು ಕರೆಯುತ್ತಿದ್ದ. ಗಂಟು ಮೂಟೆ ಕಟ್ಟಿದ ಮಮತಾ ದುಬೈಗೆ ಹಾರಿದಳು. ಸಿನಿಮಾ ಕರಿಯರ್ ಮುಗಿದಿತ್ತು. ಮಾದಕ ಸುಂದರಿಯ ಅಸಲಿ ಮಾದಕ ದುನಿಯಾ ಶುರುವಾಗಲಿತ್ತು, ವಿಕಿ ಗೋಸ್ವಾಮಿ ಎಂಬ ಡ್ರಗ್ ದೊರೆಯ ಸಾಂಗತ್ಯ ಮತ್ತು ಸಾರಥ್ಯದಲ್ಲಿ.

ದುಬೈಗೆ ಹೋಗಿ ಗೋಸ್ವಾಮಿಯ ಜೊತೆ ಸೆಟಲ್ ಆದೆ ಅನ್ನುವಷ್ಟರಲ್ಲಿ ದುಬೈ ಸರ್ಕಾರ ಗೋಸ್ವಾಮಿಯನ್ನು ಡ್ರಗ್ ಸಾಗಾಣಿಕೆ ಆರೋಪದಡಿ ಬಂಧಿಸಿ ಹದಿನೈದೋ ಇಪ್ಪತ್ತೋ ವರ್ಷದ ಸೆರೆವಾಸದ ಶಿಕ್ಷೆ ವಿಧಿಸಿ ಒಳಗೆ ತಳ್ಳಿತು. ಅಮೇರಿಕಾದಲ್ಲಿ ಆದ ೯/೧೧ ರ ದುರಂತದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಮೀಕರಣಗಳು ಬದಲಾದವು. ಅಮೆರಿಕದವರು ತಾವೇ ಪೋಷಿಸಿಕೊಂಡು ಬಂದಿದ್ದ ಉಗ್ರರು , ಡ್ರಗ್ ದಂಧೆಯವರು ಮುಂತಾದವರ ಮೇಲೆ ಅವರದ್ದೇ ಕಾರಣಕ್ಕೆ ಮುರಿದುಕೊಂಡು ಬಿದ್ದು ಸದೆಬಡಿಯತೊಡಗಿದರು. ಗೋಸ್ವಾಮಿ ಏಕೆ ಒಳಗೆ ಹೋದ ಎಂಬುದು ಸ್ಪಷ್ಟವಿಲ್ಲ. ಆದರೆ ದಾವೂದ್ ಮತ್ತು ಇತರೆ ಮುಸ್ಲಿಂ ಡ್ರಗ್ ಸಿಂಡಿಕೇಟ್ ಗಳೊಂದಿಗೆ ಸಂಬಂಧ ಹಳಸಿತ್ತು ಎಂದು ಕಾಣುತ್ತದೆ. ಮತ್ತೆ ಮೇಲಿಂದ ಹಿಂದೂ ಬೇರೆ. ಸಾಫ್ಟ್ ಟಾರ್ಗೆಟ್. ಹಾಗಾಗಿ ಬಡಿದು ಒಳಗೆ ಕಳಿಸಿರಬೇಕು. ಅದೆಷ್ಟು ಬಾರಿ ಕೊಲ್ಲಿ ರಾಷ್ಟ್ರಗಳಲ್ಲಿ ಬೇರೆ ಬೇರೆ ಮುಸ್ಲಿಂ ಮಾಫಿಯಾ ದೊರೆಗಳು, ಡ್ರಗ್ ಲಾರ್ಡುಗಳು ಬೇರೆ ಬೇರೆ ಕಾರಣಕ್ಕೆ ಬಂಧಿತರಾಗಿಲ್ಲ. ತಮ್ಮ ತಮ್ಮಲ್ಲೇ ಏನೋ ಸಂಧಾನ ಮಾಡಿಕೊಳ್ಳುತ್ತಾರೆ. ತಾವು ಡ್ರಗ್ ದಂಧೆಯನ್ನು ಯಾವದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ತೋರಿಸಿಕೊಳ್ಳಲು ತಮ್ಮ ಅವಕೃಪೆಗೆ ಪಾತ್ರರಾದವರನ್ನು ಗೋಸ್ವಾಮಿಯ ಹಾಗೆ ಬಡಿದು ಒಳಗೆ ತಳ್ಳುತ್ತಾರೆ. ಒಟ್ಟಿನಲ್ಲಿ ಮಮತಾಳ ಗೆಣೆಕಾರ ಗೋಸ್ವಾಮಿ ಒಳಗೆ ಹೋದ. 

ದುಬೈನಲ್ಲೇ ಇದ್ದ ಮಮತಾ ಗೋಸ್ವಾಮಿಯ ಹೋಟೆಲ್ ಮತ್ತಿತರ ಕಾನೂನುಬದ್ಧ ದಂಧೆಗಳನ್ನು ಸಂಬಾಳಿಸಿಕೊಂಡು ಇದ್ದಳಂತೆ. ನಡುವೆ ಒಮ್ಮೆ ಭಾರತದಲ್ಲಿ ನಡೆವ ಅಪರೂಪದ ಕುಂಭ ಮೇಳದಲ್ಲಿ ಕಂಡು ಬಂದಳು ಅಂತಲೂ ಸುದ್ದಿ ಇತ್ತು. ಮುಂದೆ ಮಮತಾಳೇ ಹೇಳಿಕೊಂಡಂತೆ ಹಿಮಾಲಯದಲ್ಲಿ ದೀಕ್ಷೆ ತೆಗೆದುಕೊಂಡು ಅಧ್ಯಾತ್ಮ ಸಾಧನೆ ಮಾಡಿದಳಂತೆ. Autobiography of a Yogini ಎನ್ನುವ ಪುಸ್ತಕ ಕೂಡ ಬರೆದಿದ್ದಾಳೆ. ಹುಡುಕಿದರೆ ಅದರ ಸಾಫ್ಟ್ ಕಾಪಿ ನಿಮಗೆ ಈಗಲೂ ಇಂಟರ್ನೆಟ್ ಮೇಲೆ ಸಿಗಬಹುದು. ಅದೊಂದು ಸ್ವಪ್ರಕಾಶಿತ e-book ಎಂದು ನನಗೆ ನೆನಪು. ಓದಲು ಸಾಧ್ಯವೇ ಇಲ್ಲದ ಹಾಗಿದೆ. ಮುದ್ರಣದೋಷಗಳು ತುಂಬಿ ತುಳುಕುತ್ತಿವೆ. ಹಾಗಾಗಿ ಈಗ ಹತ್ತಾರು ವರ್ಷಗಳ ಹಿಂದೆ ಬಿಟ್ಟಿ ಸಿಕ್ಕ ಪುಸ್ತಕವನ್ನು ಓದಲಾಗದೆ ಸೋಲೊಪ್ಪಿಕೊಂಡಿದ್ದೆ. ಈಗ ಮತ್ತೊಮ್ಮೆ ಓದಲು ಪ್ರಯತ್ನಿಸಿ ನೋಡಬೇಕು. 

ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಜೈಲಿನಿಂದ ಬೇಗ ಮುಕ್ತಿ ಸಿಗುತ್ತದೆ ಎಂದು ಯಾರೋ ಗೋಸ್ವಾಮಿಗೆ ಐಡಿಯಾ ಕೊಟ್ಟರು. ಮತಾಂತರದ ಕರಾರುಗಳು ಏನಿದ್ದವೋ ಗೊತ್ತಿಲ್ಲ. ಮಮತಾ ಕುಲಕರ್ಣಿ ಮತ್ತು ಗೋಸ್ವಾಮಿ ಇಬ್ಬರೂ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದರು. ಅದು ಕೇವಲ ಶಿಕ್ಷೆ ಕಡಿಮೆ ಮಾಡಿಸಿಕೊಂಡು ಜೈಲಿನಿಂದ ಹೊರಬರಲು ಎಂದು ಸುದ್ದಿ. 

ಆಗಲೇ ಗೋಸ್ವಾಮಿ ಹಲವಾರು ವರ್ಷ ದುಬೈ ಜೈಲಿನಲ್ಲಿ ಕಳೆದಿದ್ದ. ಮೇಲಿಂದ ಇಸ್ಲಾಂ ಕೂಡ ಸ್ವೀಕರಿಸಿದ. ಅದೂ ಮಮತಾಳ ಜೊತೆ. ಮತ್ತೆ ಬೇರೆಲ್ಲ ಏನೇನೋ ಸಮೀಕರಣಗಳು ವರ್ಕೌಟ್ ಆಗಿರಲೇ ಬೇಕು. ಅವೆಲ್ಲದರ ಫಲಶ್ರುತಿ ಎಂಬಂತೆ ದುಬೈ ಜೈಲಿನಿಂದ ಬಿಡುಗಡೆ ಹೊಂದಿದ.

ಗೋಸ್ವಾಮಿ ಆಫ್ರಿಕಾದ ತುಂಬೆಲ್ಲಾ ಮೊದಲಿಂದಲೂ ವ್ಯಾಪಕವಾಗಿ ಡ್ರಗ್ ದಂಧೆ ಮಾಡಿಕೊಂಡಿದ್ದ. ಆಫ್ರಿಕಾದ ಬೇರೆ ಬೇರೆ ದೇಶಗಳಲ್ಲಿ ಆತನ ನೆಲೆ, ಸಹಚರರು ಎಲ್ಲ ಇದ್ದರು. ಕೀನ್ಯಾ ದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸಮುದ್ರ ತೀರದ ಮೊಂಬಾಸಾ ನಗರಕ್ಕೆ ಗೋಸ್ವಾಮಿ ಮತ್ತು ಮಮತಾ ಹಾರಿದರು. ಮಾಡಿಟ್ಟುಕೊಂಡಿದ್ದ ದುಡ್ಡು ಭರಪೂರ ಇರಬೇಕು. ಸಮುದ್ರ ತಟದಲ್ಲಿ ವಿಲ್ಲಾ ಖರೀದಿಸಿ ಹೊಸ ಜೀವನ ಶುರು ಮಾಡಿದರು. 

ಗೋಸ್ವಾಮಿ ಹಳೆ ಚಾಳಿ ಬಿಡಲಿಲ್ಲ. ಬುದ್ಧಿ ಬಂದಾಗಿನಿಂದ ಆತನಿಗೆ ಗೊತ್ತಿದ್ದದ್ದು ಒಂದೇ ಉದ್ಯೋಗ. ಅದೇ ಡ್ರಗ್ ದಂಧೆ. ಗುಜರಾತಿನ ಪೊಲೀಸ್ ಅಧಿಕಾರಿಯೊಬ್ಬನ ಮಗ ಮಾಡಿದ್ದು ಅದೊಂದೇ ದಂಧೆ. ಬೀದಿಯಲ್ಲಿ ಡ್ರಗ್ ಮಾರಿಕೊಂಡಿದ್ದವ ದಾವೂದ್, ಛೋಟಾ ರಾಜನ್, ಇಕ್ಬಾಲ್ ಮಿರ್ಚಿ ಮುಂತಾದವರ ಆಶ್ರಯದಲ್ಲಿ ದೊಡ್ಡ ಡ್ರಗ್ ಕುಳವಾಗಿದ್ದ. ಜಗತ್ತಿನ ಎಲ್ಲ ಕಡೆ ವ್ಯಾಪಕವಾಗಿ ಸಂಪರ್ಕಗಳನ್ನು ಬೆಳೆಸಿಕೊಂಡ. 

ಕೀನ್ಯಾದಲ್ಲಿ ಡ್ರಗ್ ದಂಧೆಗೆ ಇಬ್ಬರು ಅಪ್ಪಂದಿರು. ಒಂದು ಆಕಾಶಾ ಸಹೋದರರ ಗ್ಯಾಂಗ್. ಮತ್ತೊಂದು ಭಾರತ ಮೂಲದವನು ಎಂದು ಹೇಳಲಾದ ಅಲಿ ಪುಂಜಾನಿ ಎಂಬಾತನ ಗ್ಯಾಂಗ್. ಅಲಿ ಪುಂಜಾನಿಯೂ ಬಾಲಿವುಡ್ ನಟಿಯರ ಹುಚ್ಚು ಹತ್ತಿಸಿಕೊಂಡವನೇ. ಒಂದು ಕಾಲದಲ್ಲಿ ಸಾಕಷ್ಟು ಮಿಂಚಿದ್ದ ಕಿಮ್ ಶರ್ಮಾ ಎಂಬ ನಟಿಯನ್ನು ಮದುವೆಯಾಗಿ ಕೀನ್ಯಾದಲ್ಲಿ ನೆಲೆಸಿದ್ದ. ಬೇರೆ ಹಕ್ಕಿ ಸಿಕ್ಕ ಮೇಲೆ ಕಿಮ್ ಶರ್ಮಾಳಿಗೆ ಸೋಡಾ ಚೀಟಿ(ವಿಚ್ಛೇದನ) ಕೊಟ್ಟ. ಮಂಗ್ಯಾ ಆದ ಕಿಮ್ ಶರ್ಮಾ ವಾಪಸ್ ಬಂದು ಬಾಲಿವುಡ್ಡಿನಲ್ಲಿ ಆಂಟಿ , ಅಜ್ಜಿ ಪಾತ್ರ ಹುಡುಕುತ್ತಿದ್ದಳು. ಹಾಗೆಯೇ ತಲೆಮಾಸಿದ ಆಸಾಮಿಗಳೊಡನೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ ಚಾಲ್ತಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಳು. ನಾಲ್ಕಾರು ಮದುವೆ ವಿಚ್ಛೇದನ ಎಲ್ಲ ಕಂಡ ಒಂದು ಕಾಲದ ಟೆನಿಸ್ ಪಟು ಲೀಯಾಂಡರ್ ಫೇಸ್ ಜೊತೆ ಆಕೆ ಠಳಾಯಿಸಿದ್ದು ಕೊನೆಯ ಬಾರಿಗೆ ಸುದ್ದಿ ಮಾಡಿತ್ತು.

ಕೀನ್ಯಾದಲ್ಲಿ ಆಕಾಶಾ ಸಹೋದರರು ಮತ್ತು ಅಲಿ ಪುಂಜಾನಿ ನಡುವೆ ಡ್ರಗ್ ದಂಧೆಯ ಕುರಿತಾಗಿ ವೈಷಮ್ಯವಿತ್ತು. ಒಮ್ಮೆ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಗುಂಡುಗಳು ಹಾರಿ ಅಂಗರಕ್ಷಕರು ಗಾಯಗೊಂಡಿದ್ದರು. ಆಗ ಆಕಾಶಾ ಸಹೋದರರ ಜೊತೆ ಗೋಸ್ವಾಮಿಯೂ ಇದ್ದ.

ಮುಂದೆ ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ ದಾಳಿ ಮಾಡಿ ಆಕಾಶಾ ಸಹೋದರರು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಕೇಸ್ ನಡೆಸುತ್ತಿದೆ. ಅದೇ ಸಮಯದಲ್ಲಿ ಅಲಿ ಪುಂಜಾನಿ ಭಾರತಕ್ಕೆ ಹಾರಿ ಬಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಅವನಿಗೇನು ನಿಜವಾದ ಆರೋಗ್ಯದ ತೊಂದರೆಯೋ ಅಥವಾ ಕಾನೂನಿನಿಂದ ಮತ್ತು ವೈರಿಗಳಿಂದ ಬಚಾವ್ ಆಗಲು ಹಾಕಿದ್ದ ಸ್ಕೀಮೋ ಗೊತ್ತಿಲ್ಲ. 

ಗೋಸ್ವಾಮಿಯನ್ನು ಅಮೆರಿಕಾಕ್ಕೆ ಎಳೆದೊಯ್ದ ಮೇಲೆ ಮಮತಾ ಕೀನ್ಯಾದಲ್ಲೇ ಇದ್ದಳು. ಕೀನ್ಯಾದಲ್ಲಿ ಆಕೆಯ ಸಂದರ್ಶನ ಮಾಡಿದ್ದ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ವಿವರವಾದ ವಿಡಿಯೋ ಸಂದರ್ಶನ ಕೊಟ್ಟಿದ್ದಳು. ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಸಾಧ್ವಿಯ ರೂಪದಲ್ಲಿ ಮಾತಾಡಿದ್ದಳು. ಅಧ್ಯಾತ್ಮದ ಮಾತುಗಳು ಕೇಳಲು ಚೆನ್ನಾಗಿತ್ತು.

ನಂತರ ಆಗಿದ್ದೇ ೨೦೧೬ ರ ಸೊಲ್ಲಾಪುರ ಡ್ರಗ್ ಪ್ರಕರಣ. ಅದರಲ್ಲಿ ಪೊಲೀಸರು ಆಕೆಯನ್ನೂ ಸೇರಿಸಿದ್ದರು. ಈಗ ಅದೇ ಪ್ರಕರಣದಲ್ಲಿ ನ್ಯಾಯಾಲಯ ಸದ್ಯಕ್ಕಂತೂ ಮುಕ್ತಿ ಕೊಟ್ಟಿದೆ. ಆದರೂ ಮಮತಾ ಮಾತ್ರ ಭಾರತಕ್ಕೆ ಬರಲಿಕ್ಕಿಲ್ಲ. ಬಂದರೆ ಸುಖಾಸುಮ್ಮನೆ ತೊಂದರೆ ಕೊಟ್ಟಾರು ಎನ್ನುವ ಆತಂಕ ಅನೇಕ ಹಾಲಿ ಮಾಜಿ ಕುಖ್ಯಾತರಲ್ಲಿದೆ. ಅದರಲ್ಲಿ ತಪ್ಪೂ ಇಲ್ಲ. ಸಿಕ್ಕಷ್ಟು ರೊಕ್ಕ ಗುಂಜಿಬಿಡೋಣ ಎಂದು ದುಷ್ಟ ವಿಚಾರಮಾಡುವ ಅಧಿಕಾರಶಾಹಿ ರಕ್ತಪಿಪಾಸುಗಳಿಗೆ ನಮ್ಮಲ್ಲಿ ಕೊರತೆ ಏನಿಲ್ಲ. ವ್ಯವಸ್ಥೆಯೇ ಹಾಗಿದೆ.

ಈಗ ಮನೆ ಮಠಕ್ಕೆ ಹಾಕಿದ್ದ ಬೀಗಮುದ್ರೆ ತೆರವಾಗಿವೆ. ಬ್ಯಾಂಕ್ ಖಾತೆಗಳು ಚಾಲೂ ಆಗಿವೆ. ಅಕ್ಕ ತಂಗಿಯರ ಜವಾಬ್ದಾರಿ ಇದೆ ಎಂದು ಕೋರ್ಟ್ ಅರ್ಜಿಯಲ್ಲಿ ಹಾಕಿಕೊಂಡಿದ್ದಳು. ಅದನ್ನೆಲ್ಲ ನಿಭಾಯಿಸಿಕೊಂಡು ಎಲ್ಲಿದ್ದರೂ ಆರಾಮಾಗಿರಲಿ. Every saint has a past and every sinner has a future ಎನ್ನುವ ಮಾತೇ ಇದೆಯೆಲ್ಲ. ಅದೇ ರೀತಿ ಮಮತಾ ಕುಲಕರ್ಣಿಯ ಇಲ್ಲಿನ ವರೆಗಿನ ಜೀವನ. ಮುಂದೆ ನೋಡಬೇಕು. ಶುಭಮಸ್ತು ಎಂದು ಹಾರೈಸಲೇನು ಅಡ್ಡಿ. ಅಲ್ಲವೇ?

ಮಮತಾ ಕುಲಕರ್ಣಿ ಬಗ್ಗೆ ಈ ಹಿಂದೆ ಬರೆದಿದ್ದ ಲೇಖನಗಳು ಕೆಳಗಿವೆ.

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ

Mamta Kulkarni, Vicky Goswami complete saga summarized for the uninitiated

Tuesday, June 11, 2024

(ನಕಲಿ) ಎನ್ಕೌಂಟರ್ ಹೇಗೆ ನಡೆಯುತ್ತದೆ...ಗುಲ್ಲು ಖಬರಿ ಹೇಳಿದ ಪೊಲೀಸ್ ಎನ್ಕೌಂಟರ್ ಕಥೆ ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಪುರಾಣ

'ಎನ್ಕೌಂಟರ್ ಮಾಡುವ ಮೊದಲು ಪೊಲೀಸ್ ತಂಡ ಬರೋಬ್ಬರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಪಾತಕಿಯನ್ನು ಕ್ಯಾಚ್ ಹಾಕಿಕೊಂಡ ನಂತರ ಬಂಧಿತನನ್ನು ರಹಸ್ಯ ಜಾಗವೊಂದರಲ್ಲಿ ಇಡುತ್ತಾರೆ. ಅದು ಫಾರ್ಮ್ ಹೌಸ್ ಇರಬಹುದು ಅಥವಾ ಮಾಹಿತಿದಾರನ ಖಾಸಗಿ ಜಾಗವಿರಬಹುದು. ನಗರದ ಹೊರಪ್ರದೇಶದಲ್ಲಿ ಅನೇಕ ಅತಿಥಿಗೃಹಗಳಿವೆ. ಅವುಗಳ ಮಾಲೀಕರೂ ಸಹ ರೂಮುಗಳನ್ನು ಪೊಲೀಸರಿಗೆ ಕೊಡುತ್ತಾರೆ. ಅವರಿಗೂ ಪೊಲೀಸರ ಕೃಪಾಶೀರ್ವಾದ ಪಡೆಯುವ ತವಕ. ಅಂತಹ ರೂಮುಗಳನ್ನೂ ಉಪಯೋಗಿಸಿಕೊಳ್ಳಲಾಗುತ್ತದೆ. ಬಂಧಿತನ ಅಪರಾಧಲೋಕದ ಸಮಗ್ರ ದಾಖಲೆಗಳನ್ನು (dossier) ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ. ಆಸಾಮಿ ಇತ್ತೀಚಿಗೆ ಜೈಲಿನಿಂದ ಹೊರಬಂದಿದ್ದರೆ ಜೈಲಿನ ವರದಿಯನ್ನು ತರಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ. ಬಂಧಿತ ಎಷ್ಟು ಕೇಸುಗಳಲ್ಲಿ ಬೇಕಾಗಿದ್ದಾನೆ, ಈ ಹಿಂದೆ ಎಷ್ಟು ಪ್ರಕರಣಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದ, ಎಷ್ಟು ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿತ್ತು, ಇತ್ಯಾದಿಗಳನ್ನು ಗಮನಿಸಲಾಗುತ್ತದೆ. ಬಂಧಿತನ ಮೇಲೆ ಒಂದಾದರೂ ೩೦೨ ಪ್ರಕರಣ (ಕೊಲೆ) ಇದ್ದರೆ ಆತ ಎನ್ಕೌಂಟರಿಗೆ ಯೋಗ್ಯ ಎಂದು ಪರಿಭಾವಿಸಲಾಗುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚೆಯಾಗುತ್ತದೆ. ಮುಂದುವರೆಯಲು ಅವರ ಅನುಮತಿಯನ್ನು ಪಡೆಯಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಡೆಯುವ ಸ್ಥಳವನ್ನು ಹೇಗೆ ನಿರ್ಧರಿಸಲಾಗುತ್ತದೆ?' ಎಂದು ಕೇಳಿದೆ.

'ಯಾವ ಪ್ರದೇಶದಲ್ಲಿ ಸುಲಿಗೆ ಮುಂತಾದ ಅಂಡರ್ವರ್ಲ್ಡ್ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆಯೋ ಅಂತಹ ಪ್ರದೇಶವನ್ನು ಆರಿಸಿಕೊಳ್ಳಲಾಗುತ್ತದೆ. ಎನ್ಕೌಂಟರ್ ರಾತ್ರಿ ನಡೆಯಲಿದ್ದರೆ ಹೆಚ್ಚು ಕತ್ತಲಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಸ್ತೆ ದೀಪಗಳು ಇದ್ದರೆ ಅವನ್ನು ತೆಗೆಸಲಾಗುತ್ತದೆ. ಆಗದಿದ್ದರೆ ಕೈಗೆ ಸಿಕ್ಕ ಕಲ್ಲಿನಿಂದ ದೀಪಗಳನ್ನು ಒಡೆದರೂ ಒಡೆದರೇ. ಎನ್ಕೌಂಟರಿಗೆ ತೆರಳುವ ಮೊದಲು ತಂಡದ ನಾಯಕ ಸ್ಟೇಷನ್ ಡೈರಿಯಲ್ಲಿ ಒಂದು ಎಂಟ್ರಿ ಮಾಡುತ್ತಾರೆ. ಇಂತಿಂತಹ ಗ್ಯಾಂಗಸ್ಟರ್ ಬಗ್ಗೆ ಮಾಹಿತಿ ಸಿಕ್ಕಿದೆ. ಇಷ್ಟೊತ್ತಿಗೆ ತನ್ನ ಸಹವರ್ತಿಯನ್ನು ಭೇಟಿಯಾಗಲು ಗ್ಯಾಂಗಸ್ಟರ್ ಇಂತಹ ಜಾಗಕ್ಕೆ  ಬರಲಿದ್ದಾನೆ. ಶಸ್ತ್ರಾಸ್ತ್ರ ಹೊಂದಿರಬಹುದಾದ ಆತನನ್ನು ಬಂಧಿಸಲು ತಂಡ ತೆರಳುತ್ತಿದೆ ಎಂಬುದು ಆ ಡೈರಿ ಎಂಟ್ರಿಯ ಸಾರಾಂಶ,' ಎಂದು ಗುಲ್ಲು ಖಬರಿ ಹೇಳಿದ.

'ಪೊಲೀಸ್ ಸ್ಟೇಷನ್ ಬಿಟ್ಟು ಹೊರಟ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎಲ್ಲ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿರುತ್ತಾರೆ. ಎನ್ಕೌಂಟರ್ ಮಾಡಬೇಕಾದ ವ್ಯಕ್ತಿಯನ್ನು ಖಾಸಗಿ ವಾಹನವೊಂದರಲ್ಲಿ ಕರೆತರಲಾಗುತ್ತದೆ. ಕೈಗೆ ಬೇಡಿ ಹಾಕಿರುತ್ತಾರೆ. ಇಬ್ಬರು ಪೊಲೀಸ್ ಪೇದೆಗಳ ಮಧ್ಯೆ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆತರುತ್ತಾರೆ. ಅಂತಹ ವಾಹನಗಳ ಗ್ಲಾಸಿಗೆ ಕಪ್ಪು ಪೊರೆ ಇರುತ್ತದೆ. ಒಳಗಿರುವವರಾರೂ ಹೊರಗೆ ಕಾಣಬಾರದಲ್ಲ. ಎನ್ಕೌಂಟರ್ ತಂಡದ ನಾಯಕ ಬೇರೆ ವಾಹನದಲ್ಲಿ ಆಗಮಿಸುತ್ತಾರೆ. ಎಲ್ಲರೂ ತುಂಬಾ ಒತ್ತಡದಲ್ಲಿ ಇರುತ್ತಾರೆ. ಎನ್ಕೌಂಟರ್ ಮಾಹಿತಿ ಸ್ವಲ್ಪ ಕೂಡ ಸೋರಿಕೆಯಾಗದಂತೆ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆಗುವ ಕೆಲವೇ ಕೆಲವು ನಿಮಿಷಗಳ ಮೊದಲು ಎನ್ಕೌಂಟರ್ ಆಗಲಿರುವ ವ್ಯಕ್ತಿಯ ವರ್ತನೆ ಹೇಗಿರುತ್ತದೆ?' ಎಂದು ಕೇಳಿದೆ. 

'ಪೊಲೀಸರು ಆತನೊಂದಿಗೆ ಅಂತಹ ದುರ್ವರ್ತನೆಯನ್ನೇನೂ ತೋರುವುದಿಲ್ಲ. ಅವನ ಜೊತೆ ಚೆನ್ನಾಗಿಯೇ ಮಾತಾಡಿ ನಯವಾಗಿಯೇ ಅವನಿಗೆ ಗೊತ್ತಿರಬಹುದಾದ ಭೂಗತಲೋಕದ ಮಾಹಿತಿಯನ್ನು ಪಡೆಯುತ್ತಾರೆ. ಒಮ್ಮೊಮ್ಮೆ ಜೋಕ್ ಹೊಡೆಯುತ್ತಾರೆ. ಆರೋಪಿ ಮತ್ತು ಪೊಲೀಸರು ಕೂಡಿಯೇ ನಗುತ್ತಾರೆ. ಅವನ ಪ್ರಿಯ ಖಾದ್ಯ ಮತ್ತು ಮದ್ಯ ತರಿಸಿಕೊಟ್ಟು ಉಪಚಾರ ಮಾಡುವುದೂ ಉಂಟು. ಎನ್ಕೌಂಟರ್ ಆಗಲಿರುವ ವ್ಯಕ್ತಿಗೆ ಅವನು ಎನ್ಕೌಂಟರಿನಲ್ಲಿ ಸಾಯಲಿದ್ದಾನೆ ಎನ್ನುವ ಸುಳಿವು ಸಿಗಬಾರದು ಎಂದು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಆದರೆ ಭೂಗತಲೋಕದಲ್ಲಿ ಪಳಗಿರುವ ಪಂಟರುಗಳಿಗೆ ಅವರ ಬಂಧನವಾದಾಗಲೇ ಗೊತ್ತಾಗಿರುತ್ತದೆ ತಮ್ಮ ಎನ್ಕೌಂಟರ್ ಆಗಲಿದೆ ಎಂದು. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ತಂಡ ಬಂಧಿಸಿತು ಅಂದರೆ ಎನ್ಕೌಂಟರ್ ಮಾಡಲೆಂದೇ ಬಂಧಿಸಿರುತ್ತಾರೆ ಎಂದು ಅರಿಯದಷ್ಟು ಮೂರ್ಖರಿರುವುದಿಲ್ಲ ಅವರು. ಅಂತವರು ತಮ್ಮ ಕೊನೆಯ ಪ್ರಯಾಣದಲ್ಲಿ ಗಡಗಡ ನಡುಗಲಾರಂಭಿಸುತ್ತಾರೆ ಮತ್ತು ಅಳುತ್ತಾರೆ ಕೂಡ. 'ಬಿಟ್ಟುಬಿಡಿ! ಪ್ಲೀಸ್!' ಎಂದು ಅಂಗಲಾಚುತ್ತಾರೆ. ಅಂಡರ್ವರ್ಲ್ಡ್ ಬಿಟ್ಟುಬಿಡುತ್ತೇವೆ ಎಂದು ಹೇಳುತ್ತಾರೆ. ಇನ್ನು ಕೆಲವರು ಬೇಕಾದಷ್ಟು ದುಡ್ಡು ಕಾಸು ಇತ್ಯಾದಿಗಳ ಆಮಿಷ ಒಡ್ಡುತ್ತಾರೆ. ಪೊಲೀಸರು ಒಮ್ಮೆ ಅವರ ಹಣೆಬರಹ ನಿರ್ಧರಿಸಿಬಿಟ್ಟಿದ್ದರೆ ಮುಗಿಯಿತು ಅಷ್ಟೇ. ಇವೆಲ್ಲಾ ಏನಕ್ಕೂ ಉಪಯೋಗವಿಲ್ಲ. ಎನ್ಕೌಂಟರ್ ಮಾಡಿ ಮಾಡಿ ಒಗ್ಗಿರುವ ಅಧಿಕಾರಿಗಳು ಯಾವುದಕ್ಕೂ ಕರಗುವುದಿಲ್ಲ. ತಂಡದ ಎಲ್ಲರೂ ಮೊಬೈಲ್ ಫೋನುಗಳನ್ನು ಆಫ್ ಮಾಡುತ್ತಾರೆ. ಸುತ್ತಮುತ್ತ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ. ರಸ್ತೆ ಬದಿಯ ವ್ಯಾಪಾರಿಗಳು, ಭಿಕ್ಷುಕರು ಅಥವಾ ಇತರರು ಯಾರಾದರೂ ಕಂಡರೆ ಅವರನ್ನು ಓಡಿಸುತ್ತಾರೆ. ಯಾರೂ ನೋಡುತ್ತಿಲ್ಲ ಎಂದು ಖಚಿತವಾದ ಮೇಲೆ ಪಾತಕಿಗೆ ಕಾರಿನಿಂದ ಹೊರಬರಲು ಹೇಳುತ್ತಾರೆ. ಕೊನೇಕ್ಷಣದ ಕೊನೆಯ ಪ್ರಯತ್ನವೆಂಬಂತೆ ಜೀವ ಉಳಿಸುವಂತೆ ಪಾತಕಿ ಮತ್ತೆ ಮತ್ತೆ ಗೋಗರಿಯುತ್ತಾನೆ. ಒಳಗಿದ್ದ ಪೊಲೀಸ್ ಪೇದೆ ಶಕ್ತಿಯೆಲ್ಲವನ್ನೂ ಹಾಕಿ ಆತನನ್ನು ಹೊರಗೆ ದೂಡುತ್ತಾನೆ. ಹಾಗೆ ಹೊರಗೆ ಉರುಳಿಬಿದ್ದವನ ಮೇಲೆ ಸುತ್ತುವರೆದಿರುವ ಪೊಲೀಸರ ಬಂದೂಕುಗಳು ಒಂದೇ ಸವನೆ ಮೊರೆಯುತ್ತವೆ. ಅಲ್ಲಿಗೆ ಆರೋಪಿ ಖಲಾಸ್. ಸಾಮಾನ್ಯವಾಗಿ ಕಾಲಿಗೆ, ಹೊಟ್ಟೆಗೆ ಮತ್ತು ತಲೆಗೆ ಗುಂಡು ಹೊಡೆದಿರುತ್ತಾರೆ. ಪಾತಕಿಯ ಶವದ ಕೈಯಲ್ಲಿ ಒಂದು ಆಯುಧವನ್ನು ಹಿಡಿಸುತ್ತಾರೆ. ಅದು ಅವನಿಂದಲೇ ವಶಪಡಿಸಿಕೊಂಡಿರುವ ಆಯುಧವಾಗಿರಲೂಬಹುದು. ಅದರಿಂದ ನಾಲ್ಕಾರು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುತ್ತಾರೆ. ಪಾತಕಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಎಂದು ಕಥೆ ಕಟ್ಟಲು ಬೇಕು ಎಂದು ಹೀಗೆ ಮಾಡುತ್ತಾರೆ. ಒಮ್ಮೊಮ್ಮೆ ಹೊಸದಾಗಿ ಸೇರಿರುವ ಪೊಲೀಸರು ಗಾಯಗಳಿಂದ ಸುರಿಯುತ್ತಿರುವ ರಕ್ತ, ಬುರುಡೆಯಿಂದ ಹೊರಸಿಡಿದಿರುವ ಮಿದುಳಿನ ಗುಲಾಬಿ ಬಣ್ಣದ ಲೋಳೆ, ಶವ ಎಲ್ಲ ನೋಡಿ ಉದ್ವಿಗ್ನತೆಯಿಂದ ಅಸ್ವಸ್ಥರಾಗಿ ಅಲ್ಲೇ ವಾಂತಿ ಮಾಡಿಕೊಂಡ ನಿದರ್ಶನಗಳೂ ಇವೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆದವ ಸತ್ತಿದ್ದಾನೆ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುತ್ತಾರೆ?' ಎಂದು ಕೇಳಿದೆ.

'ಮೊದಲು ನಾಡಿ ಬಡಿತ ನೋಡುತ್ತಾರೆ. ಮೂಗು ಮುಚ್ಚುತ್ತಾರೆ. ಬದುಕಿದ್ದರೆ ಬಾಯಿಯಿಂದ ಉಸಿರಾಡುತ್ತಾನೆ. ಎನ್ಕೌಂಟರ್ ರಾತ್ರಿ ಮಾಡಿದರೆ ಆತನ ಕಣ್ಣಿನ ಮೇಲೆ ಬ್ಯಾಟರಿ ಪ್ರಕಾಶಿಸುತ್ತಾರೆ. ಕಣ್ಣುಗುಡ್ಡೆ ಅತ್ತಿತ್ತ ಚಲಿಸದಿದ್ದರೆ ಸತ್ತಿದ್ದಾನೆ ಎಂದರ್ಥ. ಕೆಲವು ವರ್ಷಗಳ ಹಿಂದೆ ಎನ್ಕೌಂಟರ್ ಒಂದರಲ್ಲಿ ಒಬ್ಬಾತ ಸತ್ತಿರಲೇ ಇಲ್ಲ. ಹೆಣ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋದ ಮೇಲೆ ಎದ್ದು ಕುಳಿತು ಬೊಬ್ಬೆ ಹಾಕಿದ. ಅಂದಿನಿಂದ ಸ್ಥಳದಲ್ಲೇ ಸತ್ತಿರುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತಾರೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎನ್ಕೌಂಟರ್ ನಂತರ ಎಲ್ಲರ ಮೊಬೈಲ್ ಫೋನ್ ಆನ್ ಆಗುತ್ತವೆ. ಕಂಟ್ರೋಲ್ ರೂಮಿಗೆ ಕರೆ ಮಾಡಿ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಪ್ರಕ್ರಿಯೆ ಮಾಡುತ್ತಾ ಕಾಗದಪತ್ರ ತಯಾರಿಸಲು ಆರಂಭಿಸುತ್ತಾರೆ. ಶವವನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಎನ್ಕೌಂಟರ್ ತಂಡದ ಎಲ್ಲ ಸದಸ್ಯರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ಕೊಟ್ಟಿರುತ್ತಾರೆ. ಒಬ್ಬನು ಕಾಗದಪತ್ರ ತಯಾರಿಸುವಲ್ಲಿ ಸ್ಥಳೀಯ ಪೊಲೀಸರಿಗೆ ಸಹಕರಿಸುತ್ತಾನೆ. ಎನ್ಕೌಂಟರ್ ಮಾಡಿದ ತಂಡದ ನಾಯಕ ಫೋನ್ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಾನೆ. ಮತ್ತೊಬ್ಬ ಪೊಲೀಸ್ ಪತ್ರಕರ್ತರಿಗೆ ಫೋನ್ ಮಾಡಿ ವಿವರ ಕೊಡುತ್ತಾನೆ. ನಿಮ್ಮಂತಹ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಕೊಡಲು ಧಾವಿಸಿ ಬರುತ್ತೀರಿ. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ನ್ಯೂಸ್ ಬೈಟ್ ತೆಗೆದುಕೊಳ್ಳುತ್ತೀರಿ. ಹಗಲಿನಲ್ಲಿ ಎನ್ಕೌಂಟರ್ ನಡೆದರೆ, ಗ್ಯಾಂಗಸ್ಟರ್ ಯಾವುದೋ ಸಿನೆಮಾ ವ್ಯಕ್ತಿಯನ್ನೋ, ಬಿಲ್ಡರನನ್ನೋ ಅಥವಾ ವ್ಯಾಪಾರಿಯನ್ನೋ ಕೊಲ್ಲಲು ಬರುವ ಬಗ್ಗೆ ಮಾಹಿತಿ ಇತ್ತು. ಶರಣಾಗು ಎಂದು ಹೇಳಿದೆವು. ಕೇಳದೇ ಪೊಲೀಸರ ಮೇಲೆಯೇ ದಾಳಿ ಮಾಡಿದ. ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ನ್ಯೂಸ್ ಬೈಟ್ ಕೊಡುತ್ತಾರೆ. ಎನ್ಕೌಂಟರ್ ರಾತ್ರಿ ನಡೆದರೆ, ಗ್ಯಾಂಗಸ್ಟರ್ ಅವನ ಸಹವರ್ತಿಯನ್ನು ಭೇಟಿ ಮಾಡಲು ಬಂದಿದ್ದ ಎಂದು ಸ್ಕ್ರಿಪ್ಟ್ ಬದಲಾವಣೆ ಆಗುತ್ತದೆ ಅಷ್ಟೇ. ಉಳಿದ ವಿಷಯ ಸೇಮ್ ಟು ಸೇಮ್ ಇರುತ್ತದೆ. ಎನ್ಕೌಂಟರ್ ತಂಡದ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಶವಪರೀಕ್ಷೆಯನ್ನು ಮ್ಯಾನೇಜ್ ಮಾಡುತ್ತಿರುತ್ತಾರೆ. ಶವಪರೀಕ್ಷೆಯಲ್ಲಿ ವಿವಾದಾಸ್ಪದ ವಿಷಯ ಯಾವುದೂ ಬರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ,' ಎಂದು ಗುಲ್ಲು ಖಬರಿ ಹೇಳಿದ.

'ಕ್ರೈಮ್ ಬ್ರಾಂಚ್ ಪೊಲೀಸರು ಎನ್ಕೌಂಟರ್ ಮಾಡಿದ ಮೇಲೆ ಸ್ಥಳೀಯ ಪೊಲೀಸರ ಕಾರ್ಯವಿಧಾನ ಹೇಗಿರುತ್ತದೆ?' ಎಂದು ಕೇಳಿದೆ. 

'ಎನ್ಕೌಂಟರಿನಲ್ಲಿ ಸತ್ತ ವ್ಯಕ್ತಿಯ ಮೇಲೆ ೩೦೭ ಕೊಲೆ ಯತ್ನ, ೩೫೩ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಯತ್ನ ಮತ್ತು ೨೫ (A) ಅಕ್ರಮ ಶಸ್ತ್ರಾಸ್ತ್ರ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಅದರ ಆಧಾರದ ಮೇಲೆ ಸ್ಥಳೀಯ ಪೊಲೀಸರ ತನಿಖೆ ಆರಂಭವಾಗುತ್ತದೆ. ಮೃತನ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಲಾಗುತ್ತದೆ. ಮೃತ ವ್ಯಕ್ತಿ ಉಪಯೋಗಿಸಿದ್ದ ಎಂದು ತೋರಿಸಲಾದ ಪಿಸ್ತೂಲನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ತಂಡ ತುಂಬಾ ರಿಸ್ಕ್ ತೆಗೆದುಕೊಳ್ಳುತ್ತದೆ. ಅಲ್ಲವೇ?? ಎನ್ಕೌಂಟರ್ ಮಾಡಲು ತುಂಬಾ ಧೈರ್ಯ ಬೇಕಾಗಬಹುದು ಅನ್ನಿಸುತ್ತದೆ. ಅಲ್ಲವೇ?' ಎಂದು ಕೇಳಿದೆ.

'ಅದೂ ಹೌದೆನ್ನಿ. ವಾಸ್ತವದಲ್ಲಿ ಎನ್ಕೌಂಟರ್ ನಿಜವಾಗಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಂಡ ಮೇಲೆ ನಿಮಗೆನಿಸುತ್ತದೆ??'  ಎಂದು ಗುಲ್ಲು ಖಬರಿ ಕೇಳಿದ. ಈಗ ಪ್ರಶ್ನೆ ಕೇಳುವ ಬಾರಿ ಅವನದು.

'ಕೋರ್ಟು, ಕಾನೂನಿನ ಮೂಲಕ ಮಾಫಿಯಾವನ್ನು ಸದೆಬಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಎನ್ಕೌಂಟರ್ ವಿಧಾನ ತಕ್ಕ ಮಟ್ಟಿಗೆ ಮಾಫಿಯಾದ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಈ ಎನ್ಕೌಂಟರ್ ವಿಧಾನದಲ್ಲಿ ಆರೋಪಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶವಿರುವುದಿಲ್ಲ. ನನ್ನ ಆತಂಕವೇನೆಂದರೆ ಕೆಲವು ನಿಷ್ಪಾಪಿ ವ್ಯಕ್ತಿಗಳೂ ಕೂಡ ತಪ್ಪು ಗ್ರಹಿಕೆಯಿಂದ ಇಂತಹ ನಕಲಿ ಎನ್ಕೌಂಟರುಗಳಲ್ಲಿ ಕೊಲ್ಲಲ್ಪಟ್ಟಿರಬಹುದು. ಅದು ಎನ್ಕೌಂಟರ್ ಕಾರ್ಯಾಚರಣೆಗಳ ದುಷ್ಪರಿಣಾಮ ಎಂದೆನಿಸುತ್ತದೆ,' ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 

'ನೀವು ಹೇಳುವುದು ಕೂಡ ಸರಿ. ತಪ್ಪುಗಳು ಆಗಬಹುದು. ತಪ್ಪು ಮಾಡುವುದು ಮಾನವ ಸಹಜ ಗುಣ. ಆದರೆ ಕೆಲಸ ಮಾಡಲು ಪ್ರಯತ್ನ ಮಾಡುವವ ಮಾತ್ರ ತಪ್ಪು ಮಾಡಲು ಸಾಧ್ಯ. ಎನ್ಕೌಂಟರ್ ಹಿಂದಿನ ಉದ್ದೇಶ ಮುಖ್ಯ. ಸುಖಾಸುಮ್ಮನೆ ಜನರನ್ನು ಕೊಲ್ಲುವುದು ಎನ್ಕೌಂಟರುಗಳ ಉದ್ದೇಶವಲ್ಲ. ಸಮಾಜಕ್ಕೆ ಕಂಟಕಪ್ರಾಯರಾದವರನ್ನು ನಿರ್ಮೂಲನೆ ಮಾಡುವುದು ಉದ್ದೇಶ,' ಎಂದು ಗುಲ್ಲು ಖಬರಿ ಸಮರ್ಥಿಸಿಕೊಂಡ. 

'ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತಮಗಿರುವ ಪ್ರಭಾವವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕೇಳಿದ್ದೇನೆ. ಕೆಲವು ಅಧಿಕಾರಿಗಳು ಮಾಫಿಯಾ ಜೊತೆ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳಿವೆ. ಮಾಫಿಯಾದಿಂದ ರಕ್ಷಣೆ ಕೇಳಿದ ವ್ಯಕ್ತಿಗಳಿಂದಲೇ ಕೆಲವು ಅಧಿಕಾರಿಗಳು ಹಣ ವಸೂಲಿ ಕೂಡ ಮಾಡುತ್ತಾರೆ ಎನ್ನುವ ಆರೋಪವಿದೆ. ರಕ್ಷಕರೇ ಭಕ್ಷಕರಾದರೆ ಹೇಗೆ?' ಎಂದು ಕೇಳಿದೆ.

'ಒಂದು ಗ್ಯಾಂಗಿನ ಬಗ್ಗೆ ಮಾಹಿತಿ ಬೇಕು ಅಂತಾದರೆ ವಿರೋಧಿ ಗ್ಯಾಂಗಿನ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಮಾಫಿಯಾದಿಂದ ಬೆದರಿಕೆಗೆ ಒಳಗಾಗುವ ಹೆಚ್ಚಿನ ಜನ ಮಹಾ ಸುಬಗರೇನೂ ಆಗಿರುವುದಿಲ್ಲ. ಹೆಚ್ಚಿನವರು ದೋ ನಂಬರ್ ದಂಧೆಯ ಜನರೇ. ಕಪ್ಪುಹಣದ ದೊರೆಗಳೇ. ಅಂತಹ ಜನರಿಗೆ ಮಾಫಿಯಾ ಕೂಡ ಬೆದರಿಸಿ ಹಣ ವಸೂಲ್ ಮಾಡುತ್ತದೆ. ಮಾಫಿಯಾದಿಂದ ರಕ್ಷಣೆ ಕೊಡುವ ನೆಪದಲ್ಲಿ ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಕೂಡ ವಸೂಲಿ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ?' ಎಂದು ಗುಲ್ಲು ಖಬರಿ ಸಮರ್ಥಿಸಿಕೊಳ್ಳಲು ನೋಡಿದ.

'ಎನ್ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಒಬ್ಬರು ಎನ್ಕೌಂಟರಿನಲ್ಲಿ ಹತನಾದ ಪಾತಕಿಯ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ ನಿದರ್ಶನವಿದೆ. ಗೊತ್ತೇ? ಪಾತಕಿಯೊಬ್ಬನು ಎನ್ಕೌಂಟರಿನಲ್ಲಿ ಮೃತನಾದ ನಂತರ ಅಧಿಕಾರಿಗೆ ತಿಳಿಯಿತು ಆತನ ಕುಟುಂಬ ಜೀವನ ಸಾಗಿಸಲು ತುಂಬಾ ಕಷ್ಟಪಡುತ್ತಿದೆ ಎಂದು. ಆಗ ಅವರು ಆ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ್ದರು. ಅಂತಹ ಅಧಿಕಾರಿಗಳೂ ಇದ್ದಾರೆ,' ಎಂದು ಹೆಚ್ಚಿನ ಸಮರ್ಥನೆ ಕೊಡಲು ಪ್ರಯತ್ನಿಸಿದ ಗುಲ್ಲು ಖಬರಿ.

ಮತ್ತೊಂದು ಬಿಯರ್ ಮುಗಿಸಿದ ಗುಲ್ಲು ಖಬರಿ ಎದ್ದು ನಡೆದ. 

ಈ ಎಲ್ಲ ಸಂಕೀರ್ಣ ವಿಷಯಗಳ ಬಗ್ಗೆ ನನ್ನ ತಲೆಯ ತುಂಬಾ ವಿರೋಧಾತ್ಮಕ (contradictory) ಆಲೋಚನೆಗಳೇ ತುಂಬಿದ್ದವು. 

***

ಮುಂಬೈನ ಜಿತೇಂದ್ರ ದೀಕ್ಷಿತ್ ಹೊಸ ತಲೆಮಾರಿನ ತನಿಖಾ ಪತ್ರಕರ್ತರಲ್ಲಿ ಒಬ್ಬರು. ಹೆಚ್ಚಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದರೂ ಮೂರ್ನಾಲ್ಕು ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. ಈ ಲೇಖನದ ಮೇಲೆ ಬರೆದ ಭಾಗಕ್ಕೆ ಆಧಾರ ಅವರ ಪುಸ್ತಕ - Bombay 3


ಈ ಪುಸ್ತಕವನ್ನು ನೈಜ ಘಟನೆಗಳ ಮೇಲೆ ಆಧಾರಿತ ಕಾದಂಬರಿಯಂತೆ ರೂಪಿಸಿದ್ದಾರೆ ಜಿತೇಂದ್ರ ದೀಕ್ಷಿತ್. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮುಂಬೈ ಅಪರಾಧ ಪ್ರಪಂಚದ ಬಗ್ಗೆ ಸ್ವಲ್ಪ ಅರಿವಿದ್ದವರೂ ಕೂಡ ಪಾತ್ರಗಳನ್ನು ಗುರುತಿಸಬಹುದು ಮತ್ತು ಹೊಸ ವಿಷಯಗಳನ್ನು ತಿಳಿದು ಅಚ್ಚರಿ ಪಡಬಹುದು. ಅಂದಿನ ಕಾಲದಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳ  ಹಿಂದಿನ ನಿಜವಾದ ಹಿಕ್ಮತ್ತನ್ನು ಅರಿತು, ಹೇಗೆ ಮಾಧ್ಯಮದ ಮುಖ್ಯ ವಾಹಿನಿಯಲ್ಲಿ ಕೇವಲ ಬೂಸಾ ಸುದ್ದಿ ಪ್ರಕಟವಾಗುತ್ತದೆ ಎಂದು ಕೂಡ ತಿಳಿಯಬಹುದು.

ಒಮ್ಮೆ ಜಿತೇಂದ್ರ ದೀಕ್ಷಿತ್ ತಮಗೆ ಆತ್ಮೀಯರಾಗಿದ್ದ ಮುಂಬೈ ಕ್ರೈಮ್ ಬ್ರಾಂಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯೊಬ್ಬರಿಗೆ, 'ಸರ್, ನನ್ನನ್ನೂ ಕೂಡ ಒಂದು ಎನ್ಕೌಂಟರಿಗೆ ಕರೆದುಕೊಂಡು ಹೋಗಿ. ನಾನು ಖುದ್ದಾಗಿ ನೋಡಬೇಕು ಒಂದು ಎನ್ಕೌಂಟರ್ ನಿಜವಾಗಿ ಹೇಗಾಗುತ್ತದೆ ಎಂದು. ಪ್ಲೀಸ್ ಸರ್,' ಎಂದು ಇನ್ನಿಲ್ಲದಂತೆ ಗಂಟುಬಿದ್ದಿದ್ದರಂತೆ. 

ಜಿತೇಂದ್ರರನ್ನು ಅವರ ಖಾಸಾ ತಮ್ಮನಂತೆ ಇಷ್ಟಪಡುತ್ತಿದ್ದ ಅಧಿಕಾರಿ, 'ಆಯಿತು. ನಿನ್ನನ್ನು ಒಂದು ಎನ್ಕೌಂಟರಿಗೆ ಕರೆದೊಯ್ಯುತ್ತೇನೆ. ಆದರೆ ಒಂದು ಕಂಡೀಶನ್!' ಎಂದಿದ್ದರು.

'ಏನು ಕಂಡೀಶನ್ ಸರ್??' ಎಂದು ಕುತೂಹಲದಿಂದ ಕೇಳಿದ್ದರು ದೀಕ್ಷಿತ್.

'ನೀನೂ ಕೂಡ ಪಾತಕಿಯ ಮೇಲೆ ಒಂದು ಗುಂಡು ಹಾರಿಸಬೇಕು. ಒಪ್ಪಿಗೆಯೇ??' ಎಂದು ಗಂಭೀರವಾಗಿಯೇ ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

'ಸರ್ ನೀವು ಸೀರಿಯಸ್ ಆಗಿ ಈ ಮಾತು ಹೇಳುತ್ತಿದ್ದೀರಾ??' ಎಂದು ಕೇಳಿದರು ದೀಕ್ಷಿತ್.

'ಹೌದು ಮತ್ತೆ!? ಎನ್ಕೌಂಟರ್ ನೋಡಿದ ಮೇಲೆ ಭಾಗಿಯಾಗದಿದ್ದರೆ ಹೇಗೆ? ನೀನು ಎನ್ಕೌಂಟರ್ ಬಗ್ಗೆ ಇಲ್ಲದ ಸಲ್ಲದ ಸುದ್ದಿ ಮಾಡುವುದಿಲ್ಲ ಎಂಬುದಕ್ಕೆ ನಮಗೆ ಗ್ಯಾರಂಟಿ ಬೇಕಲ್ಲ. ಖಾತ್ರಿ ಬೇಕಲ್ಲ. ನೀನೂ ಒಂದು ಗುಂಡು ಹಾರಿಸಿಬಿಟ್ಟರೆ ನೀನೂ ಅದರಲ್ಲಿ ಪಾಲುದಾರನಾಗುತ್ತಿ. ಮುಂದಾಗುವ ಪರಿಣಾಮಮಗಳಿಗೆ ನೀನೂ ಬಾಧ್ಯಸ್ಥನಾಗುತ್ತಿ. ಏನಂತೀ??' ಎಂದು ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಅದೆಲ್ಲ ತಮಗೆ ಸಾಧ್ಯವಿಲ್ಲವೆಂಬತೆ ತಲೆಯಾಡಿಸಿ ಬಂದಿದ್ದರು ದೀಕ್ಷಿತ್. ಮುಗುಳ್ನಕ್ಕು ಬೀಳ್ಕೊಟ್ಟಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಮುಂಬೈನ ಕ್ರೈಂ ಬ್ರಾಂಚ್ ಕಚೇರಿಯಿಂದ ದೀಕ್ಷಿತ್ ಹೊರಟಿದ್ದರಂತೆ. ಆಗ ಓಡಿ ಬಂದವನು ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಖಾಸ್ ಮಾಹಿತಿದಾರ ಗುಲ್ಲು ಖಬರಿ. ಅನೇಕ ಎನ್ಕೌಂಟರುಗಳಿಗೆ ಖಡಕ್ ಮಾಹಿತಿ ಕೊಡುತ್ತಿದ್ದವನೇ ಅವನು. ಅವನೂ ಸಹ ಚಿಕ್ಕಮಟ್ಟದ ಪಾತಕಿಯೇ. ಆದರೂ ಪೊಲೀಸರಿಗೆ ಅವನು ಬೇಕೇಬೇಕು. ಸಣ್ಣ ಮೀನನ್ನು ಉಪಯೋಗಿಸಿಕೊಂಡು ದೊಡ್ಡ ಮೀನನ್ನು ಹಿಡಿದ ಹಾಗೆ. 

ಅಂತಹ ಗುಲ್ಲು ಖಬರಿ ಹೇಳಿದ, 'ಸಂಜೆ ಭೇಟಿಯಾಗಿ. ನಾನು ನಿಮಗೆ ಎನ್ಕೌಂಟರ್ ಬಗ್ಗೆ ಎಲ್ಲ ಮಾಹಿತಿ ಕೊಡುತ್ತೇನೆ.'

ಅದರಂತೆ ಸಂಜೆ ಗುಲ್ಲು ಖಬರಿಯನ್ನು ಭೇಟಿಯಾದರು ದೀಕ್ಷಿತ್. ಆಗ ಗುಲ್ಲು ಖಬರಿ ಬಿಚ್ಚಿಟ್ಟ ವಿವರಗಳು ಮೇಲೆ ಹೇಳಿದಂತೆ ಇದ್ದವು. ಎಲ್ಲ ಗೊತ್ತಿದ್ದ ವಿಷಯವೇ. ಗುಲ್ಲು ಖಬರಿ ಖಾತ್ರಿ ಪಡಿಸಿದ್ದ ಅಷ್ಟೇ. ಸ್ವಲ್ಪ ರಂಗೀನ್ ಆಗಿ ವರ್ಣಿಸಿದ್ದ.

ಹೆಚ್ಚಿನ ಎನ್ಕೌಂಟರುಗಳು ನಕಲಿ. ಆದರೇನು ಮಾಡುವುದು? ಭೂಗತಲೋಕದ ಉಪಟಳ ಮಿತಿಮೀರಿದಾಗ ಕಂಡುಕೊಂಡ ಉತ್ತರ ಎನ್ಕೌಂಟರ್. ಅನೇಕ ಸಲ ಎನ್ಕೌಂಟರ್ ಹೆಸರಿನಲ್ಲಿ ಊಹಿಸಲಾಗದ ದೌರ್ಜನ್ಯ ನಡೆದುಹೋಗಿದೆ. ಉದ್ದೇಶಪೂರ್ವಕವಾಗಿ ದೌರ್ಜನ್ಯ, ಶೋಷಣೆ, ವಸೂಲಿ ಎಲ್ಲ ನಡೆದಿದೆ. ಬೆಳಕು ಇದ್ದಲ್ಲಿ ಸ್ವಲ್ಪ ಮಟ್ಟಿನ ಶಾಖ ಕೂಡ ಇದ್ದೇ ಇರುತ್ತದಲ್ಲ. ಆ ಮಾದರಿ. 

ಈ ಪುಸ್ತಕದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಹೆಸರು ಬದಲಾಯಿಸಿದ್ದರೂ ಮುಂಬೈ ಭೂಗತಲೋಕದ ಬಗ್ಗೆ ಅರಿವಿದ್ದವರಿಗೆ ತಿಳಿಯುವ ವಿಷಯ ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ದಿವಂಗತ ವಿಜಯ್ ಸಲಸ್ಕರ್ ಎಂದು. ಅವರು ಮುಂದೆ ೨೬/೧೧/೨೦೦೮ ರಂದು ನಡೆದ ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವ್ಯಕ್ತಿ. ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್. ಹಾಗೆಯೇ ಉಳಿದ ಎನ್ಕೌಂಟರ್ ಸ್ಪೆಷಲಿಸ್ಟಗಳಂತೆ ಸಾಕಷ್ಟು ವಿವಾದಾತ್ಮಕ ಅಧಿಕಾರಿ ಕೂಡ. ಐವತ್ತಕ್ಕೂ ಹೆಚ್ಚು ಕುಖ್ಯಾತ ಪಾತಕಿಗಳನ್ನು ಎನ್ಕೌಂಟರುಗಳಲ್ಲಿ ಕೊಂದಿದ್ದ ಸಲಸ್ಕರ್ ತಾವು ಕೂಡ ಎನ್ಕೌಂಟರ್ ಒಂದರಲ್ಲೇ ಮೃತರಾಗಿದ್ದು ದುರಂತ ಮತ್ತು ವಿಪರ್ಯಾಸ. 

ಮುಂಬೈನಿಂದ ಬೆಂಗಳೂರಿಗೆ ಬಂದು ಮೂವರನ್ನು ಎನ್ಕೌಂಟರ್ ಮಾಡಿದ ಆಧಿಕಾರಿ ವಿಜಯ್ ಸಲಸ್ಕರ್. ೨೦೦೧ ರಲ್ಲಿ ಛೋಟಾ ರಾಜನ್ ಬಣಕ್ಕೆ ಸೇರಿದ್ದ ಮೂವರು ಪಾತಕಿಗಳಾದ ಜಗ್ಗು 'ಫಕೀರಾ' ಶೆಟ್ಟಿ, ಸುಶೀಲ್ ಗಾಂವಕರ್, ಚಿಕಣ್ಯಾ  ಎಂಬವರನ್ನು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ಹೊರಗೆ ಎನ್ಕೌಂಟರ್ ಮಾಡಿ ಢಮ್ ಅನಿಸಿದ್ದರು. 

೨೦೦೦ ಸೆಪ್ಟೆಂಬರಿನಲ್ಲಿ ಥೈಲಾಂಡಿನ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಗುಂಪು ನಡೆಸಿದ್ದ ಹತ್ಯಾ ಪ್ರಯತ್ನದ ನಂತರ ದಾವೂದ್ ಮತ್ತು ರಾಜನ್ ಗ್ಯಾಂಗಗಳ ಮಧ್ಯೆ ಗ್ಯಾಂಗ್ ವಾರ್ ವಿಕೋಪಕ್ಕೆ ಹೋಗಿತ್ತು. ಛೋಟಾ ರಾಜನ್ ಮಾರಣಾಂತಿಕವಾಗಿ ಗಾಯಗೊಂಡಿದ್ದ. ಅವನಿದ್ದ ರಹಸ್ಯ ತಾಣದ ಮಾಹಿತಿಯನ್ನು ಲೀಕ್ ಮಾಡಿದವರು ಯಾರು ಎಂದು ತನ್ನದೇ ರೀತಿಯಲ್ಲಿ ತನಿಖೆ ಮಾಡಿಸಿದ ರಾಜನ್ ಗದ್ದಾರ್ (ದ್ರೋಹಿಗಳು) ಎಂದು ಸಂಶಯ ಬಂದ ಎಲ್ಲರನ್ನೂ ಉಡಾಯಿಸಿಬಿಡುವಂತೆ ಆಜ್ಞೆ ಮಾಡಿಬಿಟ್ಟ. ನಂತರ ನಡೆದಿದ್ದು ದೊಡ್ಡ ಪ್ರಮಾಣದ ಮಾರಣಹೋಮ. 

ಮುಂಬೈನ ದೊಡ್ಡ ಹೋಟೆಲ್ ಮಾಲೀಕ ವಿನೋದ್ ಶೆಟ್ಟಿ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕೊಲ್ಲಲಾಯಿತು. ಗುಂಡಿಟ್ಟು ಕೊಂದವ ಜಗ್ಗು ಶೆಟ್ಟಿ. ಅದೇ ಜಗ್ಗು ಶೆಟ್ಟಿ ಮತ್ತು ಜೊತೆಗೆ ಮತ್ತಿಬ್ಬರು ರಾಜನ್ ಬಂಟರು ಬೆಂಗಳೂರು ಮೂಲಕ ದೇಶಬಿಟ್ಟು ಪರಾರಿಯಾಗಲಿದ್ದಾರೆ ಎನ್ನುವ ಸುಳಿವು ಸಿಕ್ಕ ಇದೇ ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಬೆಂಗಳೂರಿಗೆ ಧಾವಿಸಿ ಬಂದಿದ್ದರು. ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ವಿಮಾನ ನಿಲ್ದಾಣದ ಹೊರಗೇ ಮೂವರನ್ನು ಎನ್ಕೌಂಟರ್ ಮಾಡಿ ಎಸೆದಿದ್ದರು. ನಕಲಿ ಎನ್ಕೌಂಟರ್ ಇರಬಹುದೋ ಎನ್ನುವ ಅನುಮಾನ ಎಂದಿನಂತೆ ವ್ಯಕ್ತವಾಗಿತ್ತು. ಎನ್ಕೌಂಟರಿನಲ್ಲಿ ಸತ್ತ ಮೂವರ ಬಳಿಯೂ ಬ್ಯಾಂಕಾಕಿಗೆ ಹೋಗುವ ಬೋರ್ಡಿಂಗ್ ಪಾಸ್ ಇದ್ದವು. ವಿಮಾನದ ಬೋರ್ಡಿಂಗ್ ಪಾಸ್ ಪಡೆದವರು ವಿಮಾನ ನಿಲ್ದಾಣದಿಂದ ಹೊರಗೆ ಹೇಗೆ ಬರಲು ಸಾಧ್ಯ? ಅವರಲ್ಲಿ ಕೆಲವರು ಪಂಚೆ ಧರಿಸಿದ್ದರು. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಹೊರಟವರು ಪಂಚೆ ಧರಿಸಿ ಹೋಗುವುದು ಕೂಡ ಸಾಮಾನ್ಯವಲ್ಲ. ಹಾಗಾಗಿ ಎಂದಿನಂತೆ ನಕಲಿ ಎನ್ಕೌಂಟರ್ ಎನ್ನುವ ಹುಯಿಲು ಎದ್ದಿತ್ತು. ಆದರೇನು ಮಾಡುವುದು?? ಭೂಗತ ಪಾತಕಿಗಳ ಸಾವಿಗೆ ಅಳುವವರು ಯಾರು? ಅವರ ಮನೆಯವರು ಅತ್ತರೆ ಅದೇ ದೊಡ್ಡ ಮಾತು. 

ಬೆಂಗಳೂರಿನ ಈ ಎನ್ಕೌಂಟರ್ ಬಗ್ಗೆ, ತುಂಬಾ ವರ್ಷಗಳ ನಂತರ, ವರಿಷ್ಠ ತನಿಖಾ ಪತ್ರಕರ್ತ ಬಲಜೀತ್ ಪರಮಾರ್ ಜೊತೆ ಮಾತಾಡುತ್ತಿದ್ದ ವಿನೋದ್ ಶೆಟ್ಟಿಯ ಸಹೋದರ ಧನಂಜಯ ಶೆಟ್ಟಿ ಹೇಳಿದ್ದರು: 'ಛೋಟಾ ರಾಜನ್ನನ ಬ್ಯಾಂಕಾಕಿನ ರಹಸ್ಯ ತಾಣ ಲೀಕ್ ಆಗುವಲ್ಲಿ ನನ್ನ ಸಹೋದರ ವಿನೋದನ ಪಾತ್ರ ಏನೂ ಇರಲಿಲ್ಲ. ಸಂಶಯ ಪಿಶಾಚಿ ಛೋಟಾ ರಾಜನ್ ವಿನಾಕಾರಣ ನನ್ನ ತಮ್ಮ ವಿನೋದನನ್ನು ತೆಗೆಸಿಬಿಟ್ಟ. ಎಷ್ಟೋ ತಿಂಗಳುಗಳ ಕಾಲ ಕೊಲೆ ಮಾಡಿದ್ದ ಜಗ್ಗು ಶೆಟ್ಟಿ ಮತ್ತಿತರರ ಪತ್ತೆ ಆಗಿರಲಿಲ್ಲ. ನಮ್ಮದೇ ರೀತಿಯಲ್ಲಿ ಹುಡುಕಿದೆವು. ಸಲಸ್ಕರ್ ಸಾಹೇಬ್ರಿಗೆ ಟಿಪ್ ಕೊಟ್ಟೆವು...' ಎಂದು ಹೇಳಿ ಮೌನವಾಗುತ್ತಾರೆ. 

ಹೀಗೆ "ಟಿಪ್" ಸಿಕ್ಕ ಸಲಸ್ಕರ್ ಸಾಹೇಬರು ಎಂದಿನಂತೆ ಎನ್ಕೌಂಟರ್ ಮಾಡಿದರು ಎಂದು ಬಾಯ್ಬಿಟ್ಟು ಹೇಳಬೇಕಾಗಿಲ್ಲ ತಾನೇ? ಇದೇ ಸರಣಿಯಲ್ಲಿ ನಡೆದ ಮುಂದಿನ ಎನ್ಕೌಂಟರಿನಲ್ಲಿ ಮಾಸ್ಟರ್ ಮೈಂಡ್ ಪಣಿಯೂರು ಸಾಧು ಶೆಟ್ಟಿ ಕೂಡ ಕೆಲವೇ ತಿಂಗಳ ನಂತರ ಸಲಸ್ಕರ್ ಅವರ ಗುಂಡುಗಳಿಗೆ ಬಲಿಯಾಗಿ ಹೋದ. ಸಾಧು ಶೆಟ್ಟಿಯ ಟಿಪ್ ಕೊಟ್ಟ ಎಂದು ದಿನೇಶ್ ಶೆಟ್ಟಿ ಎಂಬಾತ ರಾಜನ್ ಬಂಟರ ಗುಂಡಿಗೆ ಬಲಿಯಾದ. ಹೀಗೆ ಮುಗಿಯದ ಸಾವಿನ ಸರಣಿ ಇದು. ಮುಂದೆ ಐದಾರು ವರ್ಷಗಳ ಬಳಿಕ, ೨೦೦೮ ರಲ್ಲಿ, ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಅವರೇ ೨೬/೧೧ ರ ಮುಂಬೈ ಉಗ್ರರ ದಾಳಿಯಲ್ಲಿ 'ಸಂಶಯಾಸ್ಪದ' ರೀತಿಯಲ್ಲಿ ಮೃತರಾದರು. ಗಾಯಗೊಂಡು ಸಹಾಯಕ್ಕೆ ಮೊರೆಯಿಡುತ್ತಿದ್ದ ಸಲಸ್ಕರ್ ಮತ್ತು ಇತರ ಪೊಲೀಸ್ ಸಿಬ್ಬಂದಿಗೆ ತಕ್ಷಣ ಏಕೆ ಸಹಾಯ ದೊರಕಲಿಲ್ಲ ಎಂಬುದು ಅನೇಕರ ಪ್ರಶ್ನೆ. ಅದರ ಬಗ್ಗೆ ಅನೇಕ ತನಿಖಾ ವರದಿಗಳು, ಪುಸ್ತಕಗಳು ನಂತರ ಬಂದವು. ಉತ್ತರ ಮಾತ್ರ ದೊರೆಯಲಿಲ್ಲ.  

ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಸಾವಿನ ಹೊತ್ತಿಗೆ ಮುಂಬೈನಲ್ಲಿ ಎನ್ಕೌಂಟರ್ ಯುಗ ಮುಗಿದಿತ್ತು. ಹಳೆಯ ಕಾಲದ ರಕ್ತಸಿಕ್ತ ಭೂಗತಲೋಕವನ್ನು ಎನ್ಕೌಂಟರ್ ಮೂಲಕ ಒಂದು ಮಟ್ಟಕ್ಕೆ ಸ್ವಚ್ಛ ಮಾಡಿಯಾಗಿತ್ತು. ಈಗ ಖಾಕಿ ಮತ್ತು ಖಾದಿಯೇ ನಾಜೂಕಿನಿಂದ ಭೂಗತಲೋಕವನ್ನು ಸಂಬಾಳಿಸುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರ ಪರದೇಶದಲ್ಲಿ ಕೂತು ಫೋನ್ ಮಾಡುತ್ತಿದ್ದ ಪಾತಕಿಗಳನ್ನು ಉಪಯೋಗಿಸಿಕೊಂಡು ವಸೂಲಿ ಮತ್ತಿತರ ದಂಧೆ ನಡೆಸಿದರು. ನಡೆಸುತ್ತಿದ್ದಾರೆ. 

ಮುಂಬೈನ ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಸಹ ತರಹೇವಾರಿ ವಿವಾದಗಳಿಗೆ ಸಿಕ್ಕು ನೇಪಥ್ಯಕ್ಕೆ ಸರಿದುಹೋದರು. ಕೆಲವರು ನಿವೃತ್ತರಾದರು. ಅರುಣ್ ಬೋರ್ಡೆ ಎಂಬ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ಅಪ್ರಾಪ್ತೆಯ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ ಆರೋಪಿಯಾಗಿ ನಾಪತ್ತೆಯಾಗಿದ್ದವರು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾದರು. ವಿಪರ್ಯಾಸವೆಂದರೆ ಮುಂದೆ ಆ ಬಲಾತ್ಕಾರ ಪ್ರಕರಣದಲ್ಲಿ ಎಲ್ಲರೂ ಖುಲಾಸೆಯಾದರು. ಆತ್ಮಹತ್ಯೆ ಮಾಡಿಕೊಂಡ ಇವರು ಮಾತ್ರ ಜೀವ ಕಳೆದುಕೊಂಡರು. ಅವರ ಹೆಣ ರೈಲ್ವೆ ಹಳಿಗಳ ಮೇಲೆ ಪತ್ತೆಯಾದ ಬಗ್ಗೆಯೂ ಸಂಶಯಗಳಿದ್ದವು. ತುಂಬಾ ಚಾಣಾಕ್ಷ ಅಧಿಕಾರಿಯಾಗಿದ್ದ ಅರುಣ್ ಬೋರ್ಡೆ ನಕಲಿ ಎನ್ಕೌಂಟರ್ ಆದಾಗ ಅದನ್ನು ನೈಜ ಎನ್ಕೌಂಟರ್ ಎಂದು ತೋರಿಸುವಂತಹ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಟೈಟ್ ಕೇಸ್ ಮಾಡಿ, ಆರೋಪ ಪೊಲೀಸರ ಮೇಲೆ ಬರದಂತೆ ನೋಡಿಕೊಳ್ಳುವಲ್ಲಿ ತುಂಬಾ ನಿಷ್ಣಾತರಾಗಿದ್ದರಂತೆ. ಹಾಗಾಗಿ ಎನ್ಕೌಂಟರ್ ಮಾಡುವ ತಂಡಗಳಲ್ಲಿ ಅವರಿಗೆ ತುಂಬಾ ಬೇಡಿಕೆ ಇತ್ತು. ತಮ್ಮ ಪೊಲೀಸ್ ವೃತ್ತಿಯ ಉತ್ತುಂಗದಲ್ಲಿದ್ದಾಗ ಬಾಲಿವುಡ್ ನಟಿಯೊಬ್ಬಳನ್ನು ಆಹುತಿ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಕೂಡ ಗುಸುಗುಸು ಇತ್ತು. ಆ ನಟಿ ದುಬೈನಲ್ಲಿ ನೆಲೆಸಿದ್ದ ಭೂಗತ ಪಾತಕಿಯೊಂದಿಗೆ ಸಂಬಂಧ ಹೊಂದಿದ್ದಳಂತೆ. ಆಕೆಯ ಫೋನ್ ಟ್ಯಾಪ್ ಮಾಡಿ, ಪಾತಕಿಯೊಂದಿಗಿನ ಸಂಭಾಷಣೆ ರೆಕಾರ್ಡ್ ಮಾಡಿಟ್ಟುಕೊಂಡು, ಆಕೆಯನ್ನು ಬ್ಲಾಕ್ಮೇಲ್ ಮಾಡಿ, ಅವಳನ್ನುಅನುಭವಿಸಿ ಚಪ್ಪರಿಸಿದ್ದರು ಎನ್ನುವ ಆರೋಪ ಅವರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಬಂದಿದ್ದು ವಿಪರ್ಯಾಸ. 

ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಎರಡು ಬಾರಿ ಇಲಾಖೆಯಿಂದ ವಜಾಗೊಂಡರೂ ಎರಡೂ ಬಾರಿ ಆಡಳಿತ ಟ್ರಿಬ್ಯೂನಲ್ ಹೋಗಿ ನೌಕರಿ ವಾಪಸ್ ಪಡೆದುಕೊಂಡು ಬಂದಿದ್ದರು. ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ನಾಲ್ಕಾರು ವರ್ಷ ಜೇಲಿನಲ್ಲಿದ್ದು ಬಂದರು. ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡರು. ತುಂಬಾ ಆಶ್ಚರ್ಯವೆಂಬಂತೆ ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಆರೋಪಿ ಇವರೊಬ್ಬರೇ ಆಗಿದ್ದರು. ಉಳಿದ ಎಲ್ಲ ಪೊಲೀಸ್ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದರು. ಮೊನ್ನೆ ಮುಕೇಶ್ ಅಂಬಾನಿ ಮನೆಯೆದುರು ಸ್ಪೋಟಕ ತುಂಬಿದ ವಾಹನ ನಿಲ್ಲಿಸಿ ನಕಲಿ ಬೆದರಿಕೆ ಹಾಕಿದ ಪ್ರಕರಣ ದೊಡ್ಡ ಸುದ್ದಿ ಮಾಡಿತ್ತಲ್ಲ. ಅದರಲ್ಲಿ ಆರೋಪಿ ಈಗ. ಜಾಮೀನ್ ಮೇಲೆ ಹೊರಗಿದ್ದರು.

ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣ ಹೈಕೋರ್ಟಿಗೆ ಹೋಗಿತ್ತು. ಅಲ್ಲಿ ಈಗ ಪ್ರದೀಪ್ ಶರ್ಮಾಗೂ ಶಿಕ್ಷೆಯಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಕೊಟ್ಟಿದೆ. ಮುಂದೆ ನೋಡಬೇಕು ನೂರಕ್ಕೂ ಹೆಚ್ಚು ಎನ್ಕೌಂಟರ್ ಮಾಡಿದ ಪ್ರದೀಪ್ ಶರ್ಮಾ ಭವಿಷ್ಯ ಏನಾಗಲಿದೆ ಎಂದು. 

ಬೆಳಗಾವಿಯಲ್ಲಿ ರಹಸ್ಯವಾಗಿ ನೆಲೆಸಿದ್ದ ಮುಂಬೈ (ಅದರಲ್ಲೂ ಠಾಣೆ ಪ್ರದೇಶದ) ಭೂಗತಲೋಕದ ಕುಖ್ಯಾತ ಪಾತಕಿ ಸುರೇಶ್ ಮಾಂಚೇಕರನನ್ನು ಎತ್ತಾಕಿಕೊಂಡು ಹೋಗಿ ಕೊಲ್ಲಾಪುರ ಸಮೀಪ ಎನ್ಕೌಂಟರ್ ಮಾಡಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ರವೀಂದ್ರ ಆಂಗ್ರೆ ಮುಂದೆ ತಾವೇ ವಸೂಲಿಗೆ ಇಳಿದರು ಎನ್ನುವ ಆರೋಪಕ್ಕೆ ಗುರಿಯಾಗಿ ಅಮಾನತ್ತಾಗಿದ್ದರು. ನಂತರ ನಿವೃತ್ತರಾಗಿದ್ದಾರೆ. 

ಹೆಚ್ಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತುಂಬಾ ಪ್ರಚಾರಪ್ರಿಯರಾಗಿದ್ದರು. ಅದಕ್ಕೆ ಆರೋಪವೆಂಬತೆ ತಣ್ಣಗೆ ಮುಂಬೈ ಭೂಗತಲೋಕವನ್ನು ಅವರದ್ದೇ ರೀತಿಯಲ್ಲಿ ಸ್ವಚ್ಛ ಮಾಡಿದವರು ಮುಂಬೈನ ಪ್ರಫುಲ್ ಭೋಸ್ಲೆ. ಅವರೂ ನೂರಕ್ಕೂ ಹೆಚ್ಚು ಜನರನ್ನು ಎನ್ಕೌಂಟರುಗಳಲ್ಲಿ 'ಮೇಲೆ' ಕಳಿಸಿದ್ದಾರೆ. ಅವರೂ ಸಹ ಖ್ವಾಜಾ ಯೂನುಸ್ ಎಂಬ ಶಂಕಿತ ಉಗ್ರ ಪೊಲೀಸ್ ಕಸ್ಟಿಡಿಯಲ್ಲಿದ್ದಾಗ ಆದ ಸಾವಿನ ಪ್ರಕರಣದ ಆರೋಪಿ. ಇಪ್ಪತ್ತು ವರ್ಷಗಳ ನಂತರವೂ ಆ ಕೇಸ್ ನಡೆಯುತ್ತಿದೆ. ಪ್ರಫುಲ್ ಭೋಸ್ಲೆ ನಿವೃತ್ತರಾಗಿದ್ದಾರೆ. ಮಾಧ್ಯಮಗಳಿಂದ ಬಹು ದೂರ ಅವರು, ಎಂದಿನಂತೆ.

ಖ್ವಾಜಾ ಯೂನುಸ್ ಲಾಕಪ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಜೆ ಎಷ್ಟೋ ವರ್ಷಗಳ ಕಾಲ ಪೊಲೀಸ್ ಇಲಾಖೆಯಿಂದ ಅಮಾನತ್ತಾಗಿ ಹೊರಗೇ ಉಳಿದಿದ್ದರು. ಇತ್ತೀಚೆಗೆ ಮರಳಿ ಬಂದವರೇ ದೊಡ್ಡ ಭಾನಗಡಿ ಮಾಡಿಕೊಂಡರು. ಅದು ಯಾವುದೋ ದೊಡ್ಡ ಮಟ್ಟದ ಸಂಚಿನ ಭಾಗವಾಗಿ ಖ್ಯಾತ ಉದ್ಯಮಿ ಮುಕೇಶ್  ಅಂಬಾನಿ ಮನೆಯ ಮುಂದೆ ಸ್ಪೋಟಕ ತುಂಬಿದ ವಾಹನ ಇಟ್ಟು ಬಂದರು. ಏನೋ ಮಾಡಲು ಹೋಗಿ ಏನೋ ಆಯಿತು. ಆ ವಾಹನದ ಮಾಲೀಕ ಮನ್ಸುಖ್ ಹರೇನನಿಗೆ ತಪ್ಪು ಒಪ್ಪಿಕೊಳ್ಳಲು ಹೇಳಿದರು. ಪೊಲೀಸರು ಕೇಳಿದ್ದಕ್ಕೆ ವಾಹನ ಕೊಟ್ಟಿದ್ದೇ ಆತನ ತಪ್ಪು. ಅದು ಬಿಟ್ಟರೆ ಈ ಪೊಲೀಸರು ಆ ಜೀಪಿನಲ್ಲಿ ಸ್ಪೋಟಕ ತುಂಬಿ ಅಂಬಾನಿ ಮನೆಯೆದುರೇಕೆ ಇಟ್ಟುಬಂದರು ಎಂಬುದರ ಬಗ್ಗೆ ಏನೂ ಗೊತ್ತಿರಲಿಲ್ಲ ಆ ನಿಷ್ಪಾಪಿ ಬಡ ಮನುಷ್ಯನಿಗೆ. ಮಾಡದ ತಪ್ಪು ನಾನೇಕೆ ಒಪ್ಪಿಕೊಳ್ಳಲಿ ಎಂದು ಆತ ರೊಳ್ಳೆ ತೆಗೆದರೆ ಆತನನ್ನು ಶಾಶ್ವತವಾಗಿ ಸುಮ್ಮನಿರಿಸುವ ಸುಪಾರಿಯನ್ನು ತಮ್ಮ ಒಂದು ಕಾಲದ ಗುರು, ನಿವೃತ್ತರಾಗಿ ರಾಜಕೀಯ ಪ್ರವೇಶಿಸಿದ್ದ ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾಗೆ ಕೊಟ್ಟುಬಿಟ್ಟರು ಇನ್ಸ್ಪೆಕ್ಟರ್ ವಜೆ. ಪ್ರದೀಪ್ ಶರ್ಮಾ ಸುಪಾರಿಯನ್ನು ತಮ್ಮ ಪರಿಚಯದ ಹಂತಕರಿಗೆ ಕೊಟ್ಟರು. ಹಂತಕರಲ್ಲಿ ಪೆರೋಲ್ ಮೇಲೆ ಹೊರಗಿದ್ದ ಮಾಜಿ ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಶಿಂದೆ ಕೂಡ ಇದ್ದ. ಈ ಪುಣ್ಯಾತ್ಮ ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಕೇಸಿನಲ್ಲಿ ಶಿಕ್ಷೆಗೆ ಒಳಗಾದವ. ಪೆರೋಲ್ ಮೇಲೆ ಹೊರಗೆ ಬಂದವ ಈ ಭಾನಗಡಿ ಮಾಡಿ ಮತ್ತೊಂದಿಷ್ಟು ಕೇಸ್ ತಲೆ ಮೇಲೆ ಎಳೆದುಕೊಂಡು ಮತ್ತೆ ಒಳಗೆ ಹೋಗಿದ್ದಾನೆ. ಟಿಪಿಕಲ್ ಭಕ್ಷಕನಾಗಿ ಪರಿವರ್ತನೆಯಾಗಿದ್ದ ಆರಕ್ಷಕ.

ಒಟ್ಟಿನಲ್ಲಿ ಮನ್ಸುಖ್ ಹಿರೇನನನ್ನು ಕತ್ತು ಹಿಸುಕಿ ಕೊಂದು ಸಮುದ್ರದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಸತ್ತ ಎಂದು ಸಾಧಿಸಲು ಹೊರಟಿದ್ದರು. ಆದರೆ ಉಬ್ಬರ ಇಳಿದು ಅವನ ಹೆಣ ಬೇಗನೆ ದಡಕ್ಕೆ ಬಂದು ಪತ್ತೆಯಾಗಿಬಿಟ್ಟಿತು. ಅಷ್ಟೊತ್ತಿಗೆ ಸ್ಥಳೀಯ ಉಗ್ರ ನಿಗ್ರಹ ಪೊಲೀಸ್ ತಂಡ  ಇವರ ಭಾಂಡಾ ಎಲ್ಲ ಬಿಚ್ಚಿತ್ತು. ಮುಂದೆ ತನಿಖೆಗೆ ಇಳಿದ NIA ಸಚಿನ್ ವಜೆ, ಪ್ರದೀಪ್ ಶರ್ಮಾರನ್ನು ಆರೋಪದ ಮೇಲೆ ಒಳಗೆ ಕಳಿಸಿದೆ. 

ಉಡುಪಿ ಮೂಲದ ದಯಾ ನಾಯಕ್ ನೇಪಥ್ಯಕ್ಕೆ ಸೇರಿಹೋದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್. ಒಂದು ಕಾಲದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾರ ನೀಲಿಗಣ್ಣಿನ ಹುಡುಗ ಅವರು. ೨೦೦೫ ರ ಸಮಯದಲ್ಲಿ ಅಕ್ರಮ ಆಸ್ತಿ ಗಳಿಕೆ ಕೇಸಿನಲ್ಲಿ ಸಿಕ್ಕಿಕೊಂಡು ಅಮಾನತ್ತಾಗಿ, ಜೇಲಿಗೆ ಹೋಗಿ, ನಂತರ ನಿರ್ದೋಷಿ ಎಂದು ಹೊರಗೆ ಬಂದಿದ್ದಾರೆ. ಮುಂಬೈನ ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿಯಾಗಿದ್ದಾರೆ. ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟಗಳ ಹಾಗೆ ಅವರ ಬಂದೂಕು ಸಹ ತಣ್ಣಗಾಗಿದೆ.

ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಚುರುಕಾಗಿ ಕೆಲಸ ಮಾಡಿ ತಮ್ಮ ಒಂದು ಕಾಲದ ಗುರು ಪ್ರದೀಪ್ ಶರ್ಮಾ ಮತ್ತು ಶರ್ಮಾರ (ಹೊಸ) ನೀಲಿಗಣ್ಣಿನ ಹುಡುಗನಾಗಿ ಬದಲಾಗಿದ್ದ ಸಚಿನ್ ವಜೇ ಇಬ್ಬರನ್ನೂ ಬಂಧಿಸಿದ್ದರು. ಹೀಗೆ ಒಂದು ಅರ್ಥದಲ್ಲಿ ದಯಾ ನಾಯಕ್ ತಮ್ಮ ಗುರುವಿಗೇ ತಿರುಮಂತ್ರ ಹಾಕಿದರೋ ಎನ್ನಿಸುತ್ತದೆ. ಮುಂದೆ ಪ್ರಕರಣದ ತನಿಖೆಯನ್ನು NIA  ವಹಿಸಿಕೊಂಡಿದೆ. 

ಬೇರೆ ನಗರಗಳ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಕಥೆಗಳೂ ವಿಚಿತ್ರವಾಗಿವೆ. ದೆಹಲಿ ಪೊಲೀಸ್ ಇಲಾಖೆಯ ಎನ್ಕೌಂಟರ್ ಸ್ಪೆಷಲಿಸ್ಟ್ ರಾಜಬೀರ್ ಸಿಂಗ್ ಮತ್ತು ಮೋಹನ್ ಚಂದ ಶರ್ಮಾ ಕೂಡ ಈ  ಲೋಕದಿಂದಲೇ ಕಳಚಿಕೊಂಡಿದ್ದಾರೆ. 

ಬೇಗ ಬಂದ ಯಶಸ್ಸು ಸೀದಾ ತಲೆಗೆ ಏರಿಬಿಡುತ್ತದೆ ಅನ್ನುತ್ತಾರಲ್ಲ ಹಾಗೆ ಯಶಸ್ಸು, ಮೆಚ್ಚುಗೆ, ಪುಕ್ಕಟೆ ಪ್ರಚಾರ ಎಲ್ಲ ರಾಜಬೀರ್ ಸಿಂಗರ ತಲೆಗೇರಿತ್ತು ಎಂದು ಕಾಣುತ್ತದೆ. ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದವರು ಮುಂದೆ ದೆಹಲಿಯ ಭೂಗತಲೋಕದಲ್ಲಿ ತಾವೇ ವ್ಯಾಪಕವಾಗಿ ಕೈಯಾಡಿಸತೊಡಗಿದರು. ದೊಡ್ಡ ಮಟ್ಟದ ವಸೂಲಿ, ಸಂಧಾನ ಎಲ್ಲ ಅವರ ಮೂಲಕವೇ ನಡೆಯತೊಡಗಿತ್ತು. ದೆಹಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತುಂಬಾ ಸಕ್ರಿಯರಾಗಿದ್ದರಂತೆ. ಅವರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಬೇನಾಮಿಯಾಗಿ ನಿರ್ವಹಣೆ ಮಾಡುತ್ತಿದ್ದ ರಿಯಲ್ ಎಸ್ಟೇಟ್ ದಳ್ಳಾಳಿಯೇ ಅವರನ್ನು ಗುಂಡಿಟ್ಟು ಕೊಂದುಬಿಟ್ಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದುಡ್ಡಿಗಾಗಿ ರಾಜಬೀರ್ ಸಿಂಗ್ ಹಾಕುತ್ತಿದ್ದ ಒತ್ತಡ ತಡೆಯಲಾಗದೇ ಕೊಂದುಬಿಟ್ಟೆ ಎಂದು ಆತ ಹೇಳಿದನಾದರೂ ಮೂಲ ಉದ್ದೇಶ ಏನಾಗಿತ್ತು?? ಕಾಣದ ಕೈಗಳ ಕೈವಾಡ ಏನಾದರೂ ಇತ್ತೇ?? ಎಂಬುದರ ಬಗ್ಗೆ ಸಂಶಯಗಳಂತೂ ಇವೆ. ಅವರ ಮಗ ಈಗ ಐಪಿಎಸ್ ಅಧಿಕಾರಿ! ವೆಲ್ ಡನ್!

ದೆಹಲಿಯ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮೋಹನ್ ಚಂದ್ ಶರ್ಮಾ ಇಸ್ಲಾಮಿಸ್ಟ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು. ಅದು 'ಬಾಟ್ಲಾ ಹೌಸ್ ಎನ್ಕೌಂಟರ್' ಎಂದೇ (ಕು)ಖ್ಯಾತವಾಗಿದೆ. ತುಂಬಾ ಜನಪ್ರಿಯರಾಗಿದ್ದ ಮೋಹನ್ ಚಂದ್ ಶರ್ಮಾ ಅವರ ಬಗ್ಗೆ ವೃತ್ತಿಮತ್ಸರ ಹೊಂದಿದ್ದ ಸಹೋದ್ಯೋಗಿಗಳೇ, ಕಾರ್ಯಾಚರಣೆ ಸಮಯದಲ್ಲಿ, ಅವರನ್ನು ಗುಂಡಿಟ್ಟು ಕೊಂದರು ಎನ್ನುವ ಸುದ್ದಿ ಕೂಡ ಹರಡಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಆದ ಪ್ರಮಾದದಿಂದ ಶರ್ಮಾ ಸಹೋದ್ಯೋಗಿಗಳ ಗುಂಡಿಗೆ ಬಲಿಯಾದರು. ಅದೊಂದು ಆಕಸ್ಮಿಕ. ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂಬುದು ಒಂದು ವಿವರಣೆ. ಮನುಷ್ಯ ಹೇಗೂ ಸತ್ತುಹೋಗಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದರು ಎಂದರೆ ಅವರಿಗೆ ಒಂದು ಮರ್ಯಾದೆ, ಗೌರವ ಎಂದು ಹಾಗೆ ಸುದ್ದಿ ಮಾಡಲಾಯಿತು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಸತ್ಯ ಮಾತ್ರ ಬೇರೆಲ್ಲೋ ಇರಬೇಕು.

ಈಗ ಎನ್ಕೌಂಟರಗಳ ಸಂಖ್ಯೆ ಕಮ್ಮಿಯಾಗಿದೆ. ರಹಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ. ಯಾರು ಹೇಗೆ ಎಲ್ಲಿ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡುಬಿಡುತ್ತಾರೋ ಎನ್ನುವ ಆತಂಕ. ಪ್ರತಿ ಎನ್ಕೌಂಟರ್ ಆದಾಗಲೂ ನಕಲಿ ಎನ್ಕೌಂಟರ್ ಎಂದು ಆರೋಪ ಬರುತ್ತಿತ್ತು. ಆಧಾರರಹಿತ ಆರೋಪ ಎಂದು ತಳ್ಳಿಹಾಕುತ್ತಿದ್ದರು. ಈಗ ಹಾಗಲ್ಲ. ವಿಡಿಯೋ ಕ್ಲಿಪ್ಪಿಂಗ್ ಸಿಕ್ಕರೆ ಕಷ್ಟ. ಹಾಗಾಗಿ ಈಗ ಎನ್ಕೌಂಟರ್ ಮಾತು ಬಿಡಿ. ಠಾಣೆಯಲ್ಲಿ ಉಡಾಳರಿಗೆ ನಾಲ್ಕು ಬಾರಿಸಲೂ ಪೊಲೀಸರು ಹಿಂದೆಮುಂದೆ ನೋಡುವಂತಾಗಿದೆ. ರಾಯಚೂರಿನಲ್ಲಿ ಕುಡಿದು ಗದ್ದಲ ಮಾಡುತ್ತಿದ್ದ ನಾಲ್ಕು ಪೋಕರಿಗಳನ್ನು ಎತ್ತಾಕಿಕೊಂಡು ಬಂದ ಮಹಿಳಾ ಅಧಿಕಾರಿಯೊಬ್ಬರು ಅವರ ಕುಂಡೆ ಮೇಲೆ ನಾಲ್ಕು ಬಾರಿಸಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಬೇಕೇ?? ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ ಆರೋಪದ ಮೇಲೆ ಠಾಣೆಗೆ ಕರೆಸಲಾಗಿದ್ದ ವ್ಯಕ್ತಿಗೆ ನಾಲ್ಕು ಬಡಿದಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಿತ್ತು. ಹೀಗಾದಾಗ ಪೊಲೀಸರಿಗೆ ತಲೆನೋವು. ಹಾಗಾಗಿ ಅವರೂ ಹಿಂದೇಟು ಹಾಕುತ್ತಾರೆ. 

ಈಗೇನಿದ್ದರೂ "ಹಾಫ್ ಎನ್ಕೌಂಟರ್" ಯುಗ ಎಂದು ಕಾಣುತ್ತದೆ. ತುಂಬಾ ಗಂಭೀರ ಪ್ರಕರಣಗಳಲ್ಲಿ, ಜನಾಕ್ರೋಶ ವಿಪರೀತವಾದಾಗ, ಕಾಲಿಗೆ ಗುಂಡು ಹೊಡೆದು ಬಿಡುತ್ತಾರಪ್ಪ. ಅದೂ ಸರಿಯಾಗಿ ಮೊಣಕಾಲ ಚಿಪ್ಪಿಗೇ ಹೊಡೆಯುತ್ತಾರೆ. ಅದು ಹೇಗೋ!!?? ಸರಿಯಾಗಿ ಮೊಣಕಾಲ ಚಿಪ್ಪಿಗೆ ಹೊಡೆದರೆ ಅವನು ಜೀವಮಾನ ಕುಂಟನಾಗುತ್ತಾನೆ. ಅದೇ ಉದ್ದೇಶವೇನೋ ಗೊತ್ತಿಲ್ಲ. ದೂರದ ಲೆಬನಾನಿನಲ್ಲಿ ಕೆಲವು ಪ್ಯಾಲೆಸ್ಟೈನ್ ಉಗ್ರರು ದಂಧೆ ನಡೆಸುವ ಸೂಳೆಯರಿಗೆ ಆ ಶಿಕ್ಷೆ ಕೊಡುತ್ತಿದ್ದ ಬಗ್ಗೆ ಓದಿದ್ದಿದೆ. ಅದು ಈಗ ನಮ್ಮಲ್ಲಿ ಬಂದಂತಿದೆ.

೨೦೧೯ ನವೆಂಬರಿನಲ್ಲಿ ಹೈದರಾಬಾದ್ ಸಮೀಪ ನಾಲ್ವರ ಎನ್ಕೌಂಟರ್ ಆಗಿದ್ದೇ ಕೊನೆಯ ದೊಡ್ಡ ಎನ್ಕೌಂಟರ್ ಇರಬಹುದು. ಪಶುವೈದ್ಯ ವೃತ್ತಿಯಲ್ಲಿದ್ದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಆರೋಪವಿತ್ತು ಆ ನಾಲ್ವರ ಮೇಲೆ. ನಿಮಗೆ ನೆನಪಿದ್ದರೆ ಆಗ ಜನಾಕ್ರೋಶ ಉತ್ತುಂಗಕ್ಕೆ ಹೋಗಿತ್ತು. ಜನಾಕ್ರೋಶವನ್ನು ನಿಯಂತ್ರಿಸಲೋ ಏನೋ ಗೊತ್ತಿಲ್ಲ. ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ಆರೋಪಿಗಳನ್ನು ಪೊಲೀಸರು ಢಮ್ ಅನಿಸಿದ್ದರು. ಜನ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರ ಮೇಲೆ ಹೂಮಳೆ ಕೂಡ ಸುರಿಸಿ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದರು. ನಕಲಿ ಎನ್ಕೌಂಟರ್ ಎಂದು ಆರೋಪ ಬಂತು. ಮುಂದೆ ನ್ಯಾಯಾಂಗ ತನಿಖೆ ಎಲ್ಲ ನಡೆಯಿತು. 

೨೦೦೭ ರಲ್ಲಿ ಬೆಳಗಾವಿಯಲ್ಲಿ ನಡೆದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆ ಎನ್ಕೌಂಟರ್ ಕೂಡ ಇದೇ ಮಾದರಿಗೆ ಸೇರಿದ್ದು. ಗೃಹಿಣಿಯೊಬ್ಬಳ ಹತ್ಯೆ ಮಾಡಲು ಸುಪಾರಿಯನ್ನು ಆಕೆಯ ಪತಿಯೇ ಖುದ್ದು ಪ್ರವೀಣ್ ಶಿಂತ್ರೆಗೆ ಕೊಟ್ಟಿದ್ದ ಎಂಬುದು ಆರೋಪ. ಶಾಪಿಂಗಿಗೆ ಎಂದು ಕರೆದುಕೊಂಡು ಬಂದು, ಇವರ ಮನೆಯಲ್ಲಿ ಸ್ವಲ್ಪ ಹೊತ್ತು ಕೂತಿರು ಎಂದು ಹಂತಕರ ಕೈಗೆ ಆ ಪಾಪದ ಮಹಿಳೆಯನ್ನು ಒಪ್ಪಿಸಿಹೋಗಿದ್ದ. ಪಶುಗಳಿಂತಲೂ ವಿಕೃತ ಕಾಮಿಯಾಗಿದ್ದ ಶಿಂತ್ರೆ ತನ್ನ ಸಂಗಡಿಗರ ಜೊತೆ ಸೇರಿ ಆ ಪಾಪದ ಮಹಿಳೆಯನ್ನು ಪಶುವಿನಂತೆ ಹಿಂಸಿಸಿ, ಸರಣಿ ಬಲಾತ್ಕಾರಕ್ಕೆ ಗುರಿಪಡಿಸಿ, ಭೀಕರವಾಗಿ ಕೊಂದು, ಸಮೀಪದ ಘಾಟಿಗೆ ಎಸೆದುಬಂದ. ಅಂತಹ ಅದೆಷ್ಟೋ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ದಕ್ಕಿಸಿಕೊಂಡು ಆರಾಮಾಗಿದ್ದ ಬೆಳಗಾವಿಯ ಲೋಕಲ್ ಡಾನ್ ಪ್ರವೀಣ್ ಶಿಂತ್ರೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಜನಾಕ್ರೋಶ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಬೆಳಗಾವಿ ಪೊಲೀಸರಿಗೆ ಆಕ್ರೋಶಗೊಂಡಿದ್ದ ಮಹಿಳೆಯರನ್ನು ಸಂಬಾಳಿಸುವುದೇ ಕಷ್ಟವಾಗಿತ್ತು. Something drastic had to be done to calm the public.

ಬೆಳಗಾವಿಯಲ್ಲಿ ಹೀಟ್ ಹೆಚ್ಚಾದ ಕೂಡಲೇ ಶಿಂತ್ರೆ ಬೆಳಗಾವಿ ಬಿಟ್ಟು ಓಡಿದ. ದೂರದ ಬೆಂಗಳೂರಿನಲ್ಲಿ ಸಿನೆಮಾ ನಟಿಯೊಬ್ಬಳ ತೆಕ್ಕೆಯೊಳಗೆ ಬಿದ್ದು ಹೊರಳಾಡುತ್ತಿದ್ದ ಪ್ರವೀಣ್ ಶಿಂತ್ರೆಯನ್ನು, ಅವನ ಬೆಳಗಾವಿಯ ಗೆಳತಿಯರನ್ನು ಬರೋಬ್ಬರಿ ರುಬ್ಬಿ, ಅವರ ಮೂಲಕವೇ ಮಾತಾಡಿಸಿ, ಮೊಬೈಲ್ ಫೋನ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು ಕೊನೆಗೆ ಅವನನ್ನು ಉಡುಪಿಯಿಂದ ಎತ್ತಾಕಿಕೊಂಡು ಬಂದಿದ್ದರು. ಅವನ ಮನೆಗೆ ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆಯೇ ಪರವಾನಿಗೆ ಇಲ್ಲದ ಬಂದೂಕಿನಿಂದ ದಾಳಿ ಮಾಡಲು ಪ್ರಯತ್ನಿಸಿದ. ಸ್ವರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು. ಪ್ರವೀಣ್ ಶಿಂತ್ರೆ ಸತ್ತ. ಇದು ಅಧಿಕೃತ ಸುದ್ದಿ. 

ವ್ಯವಸ್ಥೆಗೆ ಬಹುದೊಡ್ಡ ತಲೆನೋವಾಗಿದ್ದ ಮತ್ತು ವಿಪರೀತ ಮಹಿಳಾ ಆಕ್ರೋಶಕ್ಕೆ ಕಾರಣನಾಗಿದ್ದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆಯನ್ನು ಪಕ್ಕಕ್ಕೆ ಸರಿಸಲೇಬೇಕಾಗಿತ್ತು. ನಾಜೂಕಾಗಿ ಸರಿಸಿದರು. ಅಷ್ಟೇ ವಿಷಯ ಎಂದರು ಒಳಗಿನ ಸುದ್ದಿ ಗೊತ್ತಿದ್ದ ಕುಂದಾನಗರಿಯ ಶಾಣ್ಯಾ ಮಂದಿ. ಉಳಿದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆಯಾಗಿತ್ತು. ಹೈಕೋರ್ಟಿನ ಧಾರವಾಡ ಪೀಠ ಮುಂದೆ ಎಲ್ಲರನ್ನೂ ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಡಾನ್ ಶಿಂತ್ರೆ ಎನ್ಕೌಂಟರಿನಲ್ಲಿ ಪುಕ್ಸಟ್ಟೆ ಸತ್ತಿದ್ದೇ ಭಾಗ್ಯವೋ?? ಮೃತಳಾಗಿದ್ದ ಗೃಹಿಣಿಯ ತಾಯಿ ಮಾತ್ರ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರೋಪಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದರು. ಪ್ರಕರಣ ಸುಪ್ರೀಂ ಕೋರ್ಟ್ ವರೆಗೆ ಹೋಗಿತ್ತು ಎಂದು ಓದಿದ ನೆನಪು. ಮುಂದೇನೂ ಆದ ಹಾಗೆ ಕಾಣುವುದಿಲ್ಲ. ಒಟ್ಟಿನಲ್ಲಿ ಶಿಂತ್ರೆಯ ಎರಡು ದಶಕಗಳಿಗೂ ಮೀರಿದ ಪಾಪದ ಕೊಡ ತುಂಬಿ ಬಂದಿತ್ತು ಎಂದಷ್ಟೇ ಹೇಳಬಹುದು. ಸತ್ತ. ಬೆಳಗಾವಿಗೆ ತಾತ್ಕಾಲಿಕ ನೆಮ್ಮದಿಯಂತೂ ಸಿಕ್ಕಿತ್ತು.

ಕರ್ನಾಟಕ ಮಟ್ಟದಲ್ಲಿ ಎನ್ಕೌಂಟರ್ ಮಾಡುವಲ್ಲಿ ಬೆಳಗಾವಿ ಪೊಲೀಸರೇ ಮುಂದೆ ಎಂದು ಹೇಳಬಹುದೇನೋ. ಸಂಜಯ್ ನೇಸರಕರ್, ರಾಜು ಕಣಬರಕರ್ ಮುಂತಾದವರನ್ನು ಆ ಮೊದಲೇ ಢಮ್ ಎನಿಸಿ ರಿವಾಲ್ವರಿಗೆ ಆಗಾಗ ಕೆಲಸ ಕೊಟ್ಟಿದ್ದರು ಅಲ್ಲಿನ ಪೊಲೀಸರು.

ಉತ್ತರಪ್ರದೇಶದಲ್ಲಿ, ಬುಲ್ಡೋಜರ್ ಬಾಬಾರ ರಾಜ್ಯದಲ್ಲಿ ಮಾತ್ರ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಎನ್ಕೌಂಟರುಗಳು ನಡೆದು ಅಪರಾಧಲೋಕ ಒಂದು ಮಟ್ಟಕ್ಕೆ ಸ್ವಚ್ಛವಾಗಿದೆ. ಸಂಪೂರ್ಣವಾಗಿ ಹಡಾಲೆದ್ದು ಹೋಗಿದ್ದ ಕಾನೂನು ಸುವ್ಯವಸ್ಥೆಯನ್ನು ಹಾದಿಗೆ ತರಲು ಯೋಗಿಜೀ ಅವರಿಗೆ ಬೇರೆ ದಾರಿಯಿರಲಿಲ್ಲ ಎಂದು ಕಾಣುತ್ತದೆ. 

ಒಟ್ಟಿನಲ್ಲಿಎಲ್ಲ ತಿಳಿದ ಮೇಲೆ ನಿಷ್ಪಾಪಿಗಳ ಎನ್ಕೌಂಟರ್ ಆಗದೇ ಇರಲಿ ಶಿವಾ ಎಂದು ಹರಾ ಹರಾ ಸುಪಾರಿ ಎನ್ಕೌಂಟರೇಶ್ವರಾ ಎಂದು ಕೈಮುಗಿಯಬೇಕಷ್ಟೆ. 

Tuesday, June 04, 2024

ಜಾನ್ ಬೆನೆ ರಾಮ್ಸೆ...ಪತ್ತೆಯಾಗದ ಒಂದು ರೋಚಕ ಕೊಲೆ ಪ್ರಕರಣ

ಜಾನ್ ಬೆನೆ ರಾಮ್ಸೆ ಕೊಲೆಯಾಗಿ ೨೭ ವರ್ಷವಾಯಿತು. ಇನ್ನೂ ಕೊಲೆಗಾರ ಪತ್ತೆಯಾಗಿಲ್ಲ. ಕೊಲೊರಾಡೊ ರಾಜ್ಯದ ತನ್ನ ಮನೆಯ ನೆಲಮಾಳಿಗೆಯಲ್ಲೇ (basement) ಆಗ ಆರು ವರ್ಷದ ಮಗುವಾಗಿದ್ದ ಜಾನ್ ಬೆನೆಯ ಶವ ಪತ್ತೆಯಾಗಿತ್ತು. ತುಂಬಾ ಸದ್ದು ಮಾಡಿದ, ಇಂದಿಗೂ ಜನರ ಕುತೂಹಲವನ್ನು ಹಿಡಿದಿಟ್ಟುಕೊಂಡಿರುವ ಕೊಲೆ ಪ್ರಕರಣ ಅದು. 

ಜಾನ್ ಬೆನೆ ಕೇವಲ ಆರು ವರ್ಷದ ಹೆಣ್ಣುಮಗು. ೧೯೯೬ ರ ಕ್ರಿಸ್ಮಸ್ ಮರುದಿನ ಆಕೆಯ ಮೃತದೇಹ ಆಕೆಯ ಮನೆಯ ನೆಲಮಾಳಿಗೆಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಲಾಗಿತ್ತು. ಹೊಡೆಯಲಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕೊಲ್ಲಲಾಗಿತ್ತು. ಆಕೆ ಚಿಕ್ಕಮಕ್ಕಳ ಸೌಂದರ್ಯಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಳು. ಅನೇಕ ತನಿಖೆಗಳು ನಡೆದರೂ (ಇವತ್ತಿಗೂ ನಡೆಯುತ್ತಿದ್ದರೂ), ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆಕೆಯ ಹಂತಕ ಯಾರಿರಬಹುದು ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ. ಹೊಸ ಹೊಸ ಸಂದೇಹಗಳು ಮತ್ತು ಶಂಕಿತರು ಚಾಲ್ತಿಗೆ ಬರುತ್ತಿರುತ್ತವೆ. ತಂದೆ, ತಾಯಿ ಮತ್ತು ಸಹೋದರ ಕೂಡ ಈ ಶಂಕೆಗಳಿಂದ ಪಾರಾಗಿಲ್ಲ. 

ಜಾನ್ ಬೆನೆ ಕೊಲೆಯಾದ ರಾತ್ರಿ ಮನೆಯಲ್ಲಿ ಇದ್ದವರು ಆಕೆಯ ತಂದೆ ಜಾನ್, ತಾಯಿ ಪ್ಯಾಟ್ರಿಸಿಯಾ ಮತ್ತು ಒಂಬತ್ತು ವರ್ಷದ ಆಕೆಯ ಹಿರಿಯ ಸಹೋದರ ಬರ್ಕ್ ಮಾತ್ರ. 

೧೯೯೬, ಡಿಸೆಂಬರ್ ೨೬ ರ ಬೆಳಿಗ್ಗೆ ತಾಯಿ ಪ್ಯಾಟ್ರಿಸಿಯಾಗೆ ಗೀಚಿದ್ದ ಒಂದು ಪತ್ರ ಸಿಕ್ಕಿತ್ತು. ಅವರ ಮನೆಯ ಟೇಬಲ್ ಮೇಲಿದ್ದ ನೋಟ್ ಪ್ಯಾಡಿನ ಹಾಳೆಯೊಂದರ ಮೇಲೆ, ಅಲ್ಲೇ ಇದ್ದ ಕಪ್ಪು ಬಣ್ಣದ ದಪ್ಪ ಅಕ್ಷರ ಬರೆಯುವ ಪೆನ್ನಿನಲ್ಲಿ(black marker) ಗೀಚಿದ ಒಂದು ಹಣದ ಬೇಡಿಕೆಯ ಪತ್ರ ಅದಾಗಿತ್ತು. '೧೧೮, ೦೦೦ ಡಾಲರ್ ಹಣ ಕೊಡಿ. ಹಣ ದೊರೆತ ಕೂಡಲೇ ನಿಮ್ಮ ಮಗಳನ್ನು ಬಿಡುಗಡೆ ಮಾಡಲಾಗುತ್ತದೆ!' 

ಕೆಲವೇ ದಿನಗಳ ಹಿಂದೆ ತಂದೆ ಜಾನನಿಗೆ ಕೆಲಸದಲ್ಲಿ ವಾರ್ಷಿಕ ಬೋನಸ್ ದೊರೆತಿತ್ತು. ಆ ಬೋನಸ್ಸಿನ ಮೊತ್ತ ಕೂಡ ಕರಾರುವಕ್ಕಾಗಿ ೧೧೮,೦೦೦ ಡಾಲರೇ ಆಗಿತ್ತು! ಇತ್ತಕಡೆ ತಾಯಿಗೆ ಈ ಬೇಡಿಕೆ ಪತ್ರ ದೊರೆಯುತ್ತಿದ್ದರೆ ಅತ್ತಕಡೆ ಮಗುವೆಲ್ಲಿ ಎಂದು ಮನೆಯಲ್ಲಿ ಹುಡುಕಾಡುತ್ತಿದ್ದ ತಂದೆಗೆ ಅವಳ ಶವ ನೆಲಮಾಳಿಗೆಯಲ್ಲಿ ದೊರೆತಿತ್ತು. 

ತನಿಖೆ ಆರಂಭವಾದ ಕೂಡಲೇ ಪಾಲಕರು ಕ್ರಿಮಿನಲ್ ವಕೀಲರನ್ನು ನೇಮಕ ಮಾಡಿಕೊಂಡರು. ಪಾಲಕರು ತಾವಾಗಿಯೇ ಪೊಲೀಸರ ತನಿಖೆಗೆ ಅಷ್ಟೇನೂ ಸಹಕರಿಸಲಿಲ್ಲ. ಅದು ಅವರಿಗಿರುವ ಹಕ್ಕು. ಶಂಕಿತರು ಎಂದು ಅಧಿಕೃತವಾಗಿ  ಹೆಸರಿಸದೇ ಯಾರನ್ನೂ ತನಿಖೆಗೆ ಸಹಕರಿಸಿ, ನಿಮ್ಮ ಅಧಿಕೃತ ಹೇಳಿಕೆ ದಾಖಲಿಸಿ ಎಂದು ಬಲವಂತ ಮಾಡುವಂತಿಲ್ಲ. ಆದರೆ ತಮ್ಮ ಮಗುವಿನ ಕೊಲೆಗಾರನ(ರ)ನ್ನು ಪತ್ತೆ ಮಾಡಲು ಪಾಲಕರೇಕೆ ಸಹಕರಿಸಲಿಲ್ಲ ಎನ್ನುವ ಸಂಶಯ ಮಾತ್ರ ಮೂಡುತ್ತದೆ. ಪಾಲಕರ ಅಸಹಕಾರದ ಮಧ್ಯೆಯೂ ತನಿಖೆ ನಡೆದಿತ್ತು. 

೨೦೦೬ ರಲ್ಲಿ ತಾಯಿ ಪ್ಯಾಟ್ರಿಸಿಯಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಮೃತಳಾದಳು. ಅದಾದ ಎರಡು ವರ್ಷಗಳ ಬಳಿಕ, ೨೦೦೮ ರಲ್ಲಿ, ತನಿಖೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ, ಕುಟುಂಬಕ್ಕೆ ಪತ್ರ ಬರೆದು, ಡಿಎನ್ಎ ಪರೀಕ್ಷೆ ಮತ್ತು ಇತರೆ ಕಾರಣಗಳಿಂದ ಇಡೀ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಡಲಾಗಿದೆ ಎಂದರು. ಆಶ್ಚರ್ಯವೆಂದರೆ, ಆ ಅಧಿಕಾರಿ ಬದಲಾದ ನಂತರ ತನಿಖೆಯ ಜವಾಬ್ದಾರಿ ವಹಿಸಿಕೊಂಡ ಹೊಸ ಅಧಿಕಾರಿ ಮಾತ್ರ ಕ್ಲೀನ್ ಚಿಟ್ ಕೊಟ್ಟಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಾ, 'ಅವರಿಗೆ ಕ್ಲೀನ್ ಚಿಟ್ ಕೊಡಬಾರದಿತ್ತು. ಈ ಪ್ರಕರಣದ ತನಿಖೆಯ ಸದ್ಯದ ಸ್ಥಿತಿಗತಿ, ಲಭ್ಯವಾಗಿರುವ ಸಾಕ್ಷ್ಯಗಳು ಮತ್ತು ಪ್ರಕರಣದ ಸಂಕೀರ್ಣತೆ (complexity) ನೋಡಿದರೆ ಕ್ಲೀನ್ ಚಿಟ್ ಕೊಟ್ಟಿದ್ದು ಸರಿಯಾಗಿದೆ ಎಂದು ಅನ್ನಿಸುವುದಿಲ್ಲ,' ಎಂದುಬಿಟ್ಟರು. 

ಜಾನ್ ಬೆನೆಯ ಹಿರಿಯ ಸಹೋದರ ಬರ್ಕ್ ಅಧಿಕೃತವಾಗಿ ಶಂಕಿತ ಎಂದು ತನಿಖೆಯ ವ್ಯಾಪ್ತಿಯಲ್ಲಿ ಬಂದಿರಲಿಲ್ಲ. ಟೀವಿ ವಾಹಿನಿಯೊಂದು ಆತನೇ ಕೊಲೆಗಾರ ಎಂಬಂತೆ ಬಿಂಬಿಸಿತ್ತು. ಬ್ಯಾಟರಿಯಿಂದ ತಂಗಿಯ ತಲೆಗೆ ಹೊಡೆದ. ಆಕೆ ಸತ್ತಳು. ಮುಂದಾಗಿದ್ದೆಲ್ಲ ಸತ್ಯವನ್ನು ಮುಚ್ಚಿಡುವ ಕೆಲಸ ಅಷ್ಟೇ ಅಂದಿತ್ತು ಆ ಕಾರ್ಯಕ್ರಮ. ಜಾನ್ ಬೆನೆ ಕುಟುಂಬ ಆ ವಾಹಿನಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದಿತ್ತು. ಏನಾಯಿತೋ ಗೊತ್ತಿಲ್ಲ. 

ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪತ್ರವನ್ನು ಗಮನಿಸಿದರೆ ಹೊರಗಿನಿಂದ ಯಾರೋ ಒಳಗೆ ಬಂದು ಆಕೆಯನ್ನು ಕೊಲೆ ಮಾಡಿರಬಹುದು ಎಂದು ಸಹಜವಾಗಿ ಅನ್ನಿಸುತ್ತದೆ. ಆ ನಿಟ್ಟಿನಲ್ಲಿ ಅನೇಕ ಹೆಸರುಗಳು ಚರ್ಚೆಗೆ ಬಂದಿವೆ.

ಆ ಪೈಕಿ ಮೈಕಲ್ ಹೆಲ್ಗೋಟ್ ಎಂಬಾತ ಒಬ್ಬ. ಆತ ಧರಿಸುತ್ತಿದ್ದ ಬೂಟುಗಳ ಮಾದರಿಯ ಹೆಜ್ಜೆ ಗುರುತುಗಳು ಅಪರಾಧದ ಸ್ಥಳದಲ್ಲಿ ಕಂಡುಬಂದಿದ್ದವು. ಹಾಗಾಗಿ ಶಂಕಿತರ ಪಟ್ಟಿಯಲ್ಲಿ ಆತ ಮುಂದಿದ್ದ. ಏಕೋ ಏನೋ ಗೊತ್ತಿಲ್ಲ, ೧೯೯೭ ರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡು ಸತ್ತ. ಸತ್ತ ಮೇಲೆ ಆತನ ಬಗ್ಗೆ ತನಿಖೆಯನ್ನು ಕೈಬಿಡಲಾಯಿತು.

ಪಾಲಕರು ಒಬ್ಬ ಖಾಸಗಿ ಪತ್ತೇದಾರನನ್ನು ತನಿಖೆಗಾಗಿ ನೇಮಕ ಮಾಡಿಕೊಂಡಿದ್ದರು. ಆತ ಹೇಳುವ ಪ್ರಕಾರ: ಮೈಕಲ್ ಹೆಲ್ಗೋಟ್ ತನ್ನ ಕುಟುಂಬದೆದುರು ತಾನೇ ಕೊಲೆಗಾರ ಎಂದು ತಪ್ಪೊಪ್ಪಿಕೊಂಡಿದ್ದ. ಆತನ ತಪ್ಪೊಪ್ಪಿಕೊಂಡಿದ್ದರ ಧ್ವನಿಮುದ್ರಿಕೆ ಆತನ ಕುಟುಂಬದವರ ಬಳಿ ಇದೆ.

೨೦೦೬ ರಲ್ಲಿ ಅಲೆಕ್ಸ್ ರಿಚ್ ಎಂಬ ಹೊಸ ಶಂಕಿತ ತನ್ನ ಹೇಳಿಕೆ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದ. ಆತ ಹೇಳಿದ್ದು: ಜಾನ್ ಬೆನೆ ಸಾಯುವ ದಿನ ನಾನು ಅವಳ ಜೊತೆ ಇದ್ದೆ. ಅವಳ ಸಾವು ಒಂದು ಅಪಘಾತ.

ಮೊದಲು ಆತನ ಹೇಳಿಕೆ ಕಡೆ ಗಮನ ಕೊಡಲಾಯಿತಾದರೂ ನಂತರ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಲಾಯಿತು. ಆತನ ಪತ್ನಿಯೇ ಆತನ ಹೇಳಿಕೆಗೆ ವಿರೋಧಾತ್ಮಕ ಹೇಳಿಕೆ ಕೊಟ್ಟು, ಆತ ಎಲ್ಲೂ ಹೋಗಿರಲಿಲ್ಲ. ಜಾನ್ ಬೆನೆ ಸತ್ತ ಸ್ಥಳದಿಂದ ಸಾವಿರಾರು ಮೈಲು ದೂರದಲ್ಲಿರುವ ಅಲಬಾಮಾದ ಮನೆಯಲ್ಲಿದ್ದ ಎಂದು ಹೇಳಿದಳು. ಆತನ ಡಿಎನ್ಎ ಕೂಡ ಹೊಂದಾಣಿಕೆ ಆಗಲಿಲ್ಲ. ಹಾಗಾಗಿ ಅವನ ಹೇಳಿಕೆಯನ್ನು ತನಿಖಾ ತಂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

ಕ್ರಿಸ್ಮಸ್ ಸಮಯದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳನ್ನು ರಂಜಿಸುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬ ಜಾನ್ ಬೆನೆಯನ್ನು ಕೊಂದಿರಬಹುದೇ ಎನ್ನುವ ಸಂಶಯ ಕೂಡ ವ್ಯಕ್ತವಾಗಿತ್ತು. ದಶಕಗಳ ಹಿಂದೆ ಆ ವ್ಯಕ್ತಿಯ ಮಗು ಕೂಡ ನಿಗೂಢವಾಗಿ ಅಪಹರಿಸಲ್ಪಟ್ಟಿತ್ತು. ಆದರೆ ಆ ವ್ಯಕ್ತಿಯನ್ನು ಶಂಕಿತರ ಪಟ್ಟಿಗೆ ಸೇರಿಸಲು ಸಾಂದರ್ಭಿಕ ಸಾಕ್ಷ್ಯಗಳು ಸಿಗಲಿಲ್ಲ.

ಆರು ವರ್ಷದ ಈ ಬಾಲ ಸುಂದರಿಯ ನಿಗೂಢ ಕೊಲೆ ಪ್ರಕರಣ ಎಂದಾದರೂ ಬಗೆ ಹರಿದೀತೇ ಎಂದು ಕೇಳಿದರೆ ಗೊತ್ತಿಲ್ಲ ಎಂಬುದೇ ಉತ್ತರ. 

ಜಾನ್ ಬೆನೆಯ ತಾಯಿ ಪ್ಯಾಟ್ರಿಸಿಯಾ ತೀರಿಹೋಗಿದ್ದಾಳೆ. ತಂದೆ ಜಾನನಿಗೆ ಈಗ ೮೦ ವರ್ಷ ವಯಸ್ಸು. 

'ಡಿಎನ್ಎ ತಂತ್ರಜ್ಞಾನ ಈಗ ತುಂಬಾ ಮುಂದುವರೆದಿದೆ. ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ,' ಎಂದು ನಿಡುಸುಯ್ಯುತ್ತಾನೆ ತಂದೆ ಜಾನ್.

ಇವತ್ತಿಗೂ ತುಂಬಾ ಚರ್ಚೆಯಲ್ಲಿರುವ ಪ್ರಕರಣ ಇದು. ಈ ಪ್ರಕರಣದ ಬಗ್ಗೆ ಅಸಂಖ್ಯಾತ ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಲೇಖನಗಳು, ಕೊಲೆ ಹೇಗಾಗಿರಬಹುದು ಎಂಬುದರ ಬಗ್ಗೆ ತಜ್ಞರಿಂದ ಬೇರೆ ಬೇರೆ ತರಹದ ಸಿದ್ಧಾಂತಗಳು ಎಲ್ಲ ಬಂದಿವೆ. ಈಗಲೂ ಬರುತ್ತಿರುತ್ತವೆ. ಆದರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ. 

ಕೊಲೊರಾಡೊ ರಾಜ್ಯದ ಬೌಲ್ಡರ್ ನಗರದ ಪೊಲೀಸ್ ಇಲಾಖೆ ಮಾತ್ರ ಪ್ರಕರಣವನ್ನು ಥಂಡಿಬೊಗಸಕ್ಕೆ (cold storage) ಹಾಕದೇ ಸಕ್ರಿಯವಾಗಿ ತನಿಖೆ ಮಾಡುತ್ತಲೇ ಇದೆ. ಆಗಾಗ ಹೊಸ ಮಾಹಿತಿ ಕೊಡುತ್ತದೆ. 

ಈ ಕೊಂಡಿಯಲ್ಲಿ ಪ್ರಕರಣದ ಇತ್ತೀಚಿನ ಮಾಹಿತಿ ಸಿಗುತ್ತದೆ. 

ಒಟ್ಟಿನಲ್ಲಿ ಒಂದು ಅತಿ ನಿಗೂಢ ಕೊಲೆ ಪ್ರಕರಣ. ಮನೆಯಲ್ಲಿ ಇದ್ದವರೇ ನಾಲ್ಕು ಜನ. ಅದರಲ್ಲಿ ಒಬ್ಬರು ಕೊಲೆಯಾಗುತ್ತಾರೆ. ಮನೆಯವರ ಮೇಲೆ ಸಂಶಯ ಬಂದರೂ ಆಧಾರವಿಲ್ಲ. ಹೊರಗಿಂದ ಯಾರು, ಏಕೆ, ಹೇಗೆ ಬಂದು ಕೊಲೆಯನ್ನು ಮಾಡಿದರು? ಅಪಹರಣ ಮೂಲ ಉದ್ದೇಶವಾಗಿತ್ತೇ?? ಅಪಹರಣದ ಸಂಚು ಹಡಾಲೆದ್ದು ಹೋಗಿ ಕೊಲೆಯಲ್ಲಿ ಪರ್ಯವಸಾನವಾಯಿತೇ? ಲೈಂಗಿಕ ದೌರ್ಜನ್ಯ ಏಕೆ ಮಾಡಲಾಯಿತು? ಕರಾರುವಕ್ಕಾಗಿ ೧೧೮, ೦೦೦ ಡಾಲರುಗಳಿಗೇ ಏಕೆ ಬೇಡಿಕೆ ಇಡಲಾಗಿತ್ತು?? ಆಕಸ್ಮಿಕವೊಂದರಲ್ಲಿ ಮನೆಯ ಜನರಿಂದಲೇ ಆಕೆ ಉದ್ದೇಶವಿಲ್ಲದೇ ಕೊಲೆಯಾಗಿಬಿಟ್ಟಳೇ?? ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯವರೇ ಈ ಕಥೆ ಹೆಣೆದರೆ?? ಹೀಗೆ ಪ್ರಶ್ನೆಗಳು ಅನೇಕ. ಉತ್ತರ ಸದ್ಯಕ್ಕೆ ಇಲ್ಲ. ಎಲ್ಲ ಅಯೋಮಯ. 

ಮಾಹಿತಿ ಆಧಾರ: Who Killed Child Beauty Queen JonBenét Ramsey in Her Colorado Home 27 Years Ago Today?

Tuesday, May 28, 2024

ಆಪರೇಷನ್ ಈಗಲ್ ಕ್ಲಾ...ಎಕ್ಕುಟ್ಟಿಹೋಗಿದ್ದ ಒಂದು ರಕ್ಷಣಾ ಕಾರ್ಯಾಚರಣೆ

ಏಪ್ರಿಲ್ ೨೪, ೧೯೮೦ ಅತ್ಯಂತ ದುರದೃಷ್ಟಕರ ದಿನವಾಗಿತ್ತು. ಇರಾನಿನ ರಾಜಧಾನಿ ಟೆಹ್ರಾನಿನಲ್ಲಿ ಬಂಧಿತರಾಗಿದ್ದ ೬೬ ಒತ್ತೆಯಾಳುಗಳನ್ನು ರಕ್ಷಿಸಲು ಮಾಡಿದ ಅಮೇರಿಕಾದ ಸೇನಾ ಕಾರ್ಯಾಚರಣೆ ದಾರುಣವಾಗಿ ವಿಫಲವಾಗಿತ್ತು. ಯಾವುದೇ ಒತ್ತೆಯಾಳುಗಳನ್ನು ರಕ್ಷಿಸಲಾಗಲಿಲ್ಲ. ಎಂಟು ಜನ ಅಮೇರಿಕಾದ ಸೇನಾ ಸಿಬ್ಬಂದಿ ಆ ಆಕಸ್ಮಿಕ ಅವಘಡದಲ್ಲಿ ಮೃತರಾಗಿದ್ದರು. 

ಸುಮಾರು ಆರು ತಿಂಗಳ ಮೊದಲು ಅಂದರೆ ನವೆಂಬರ್ ೪, ೧೯೭೯ ರಂದು ಸುಮಾರು ೩೦೦೦ ಉಗ್ರಗಾಮಿ ವಿದ್ಯಾರ್ಥಿಗಳು ಟೆಹರಾನಿನಲ್ಲಿದ್ದ ಅಮೆರಿಕಾದ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದರು. ೬೩ ಅಮೇರಿಕನ್ ನಾಗರಿಕರನ್ನು ಒತ್ತೆಯಾಳಾಗಿ ವಶಮಾಡಿಕೊಂಡರು. ವಿದೇಶಾಂಗ ಇಲಾಖೆಯ ಕಚೇರಿಗೆ ಕೆಲಸದ ನಿಮಿತ್ತ ಹೋಗಿದ್ದ ಇನ್ನೂ ಮೂರು ಜನ ಕೂಡ ಬಂಧಿಗಳಾದರು. ಈ ಘಟನೆ ಆಗುವ ಎರಡು ವಾರಗಳ ಮೊದಲು, ಅಂದಿನ ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಪನಾಮಾದಲ್ಲಿಆಶ್ರಯ ಪಡೆದಿದ್ದಇರಾನಿನ ಪದಚ್ಯುತ ದೊರೆ ಮೊಹಮದ್ ರೇಜಾ ಷಾ ಪೆಹ್ಲವಿಗೆ, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯಲು, ಅಮೆರಿಕಾದೊಳಗೆ ಬರಲು ಅನುಮತಿ ನೀಡಿದ್ದರು. ಇರಾನಿನ ಹೊಸ ನಾಯಕ ಧರ್ಮಗುರು ಆಯಾತೊಲ್ಲಾ ಖೊಮೇನಿ ಮಾಜಿ ದೊರೆಯನ್ನುಇರಾನಿಗೆ ಹಸ್ತಾಂತರ ಮಾಡಲು ಮತ್ತು ಇರಾನಿನಲ್ಲಿ ಅಮೇರಿಕಾದ ಹಸ್ತಕ್ಷೇಪವನ್ನು ನಿಲ್ಲಿಸಲು ಬಲವಾದ ಕರೆಯನ್ನು ನೀಡಿದರು. ಆರಂಭಿಕ ಸಂಧಾನದ ಯಶಸ್ಸಿನ ಫಲವಾಗಿ ೧೩ ಜನ ಒತ್ತೆಯಾಳುಗಳು ನವೆಂಬರ್ ಮಧ್ಯದ ಹೊತ್ತಿಗೆ ಬಿಡುಗಡೆಯಾದರು. ಉಳಿದವರು ಮಾತ್ರ ಸೆರೆಯಲ್ಲಿಯೇ ಉಳಿದರು. 

ಅಮೇರಿಕಾದ ಸೈನ್ಯ ಒತ್ತೆಯಾಳುಗಳನ್ನು ರಕ್ಷಿಸುವ ಯೋಜನೆನ್ನು ಹಾಕಿತು. ಪೂರ್ವಾಭ್ಯಾಸಗಳನ್ನು ಮಾಡಿತು. ಏಪ್ರಿಲ್ ೧೬, ೧೯೮೦ ರಂದು ಅಧ್ಯಕ್ಷ ಕಾರ್ಟರ್ ಅಂತಿಮ ಅನುಮತಿ ನೀಡಿದರು. ಸೈನ್ಯದ ನಾಲ್ಕೂ ದಳಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದವು. ಅದು ಒಟ್ಟು ಎರಡು ದಿನಗಳ ಕಾರ್ಯಾಚರಣೆನೆಯಾಗಲಿತ್ತು. ನಾಲ್ಕು ಹೆಲಿಕಾಪ್ಟರುಗಳು ಮತ್ತು ಒಂದು C - ೧೩೦ ವಿಮಾನ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದವು. ರಾಜಧಾನಿ ಟೆಹರಾನಿನಿಂದ ಸುಮಾರು ೨೦೦ ಮೈಲಿ ದೂರವಿದ್ದ ನಿರ್ಜನ ಮರಭೂಮಿಯಲ್ಲಿ ಒಂದು ಜಾಗವನ್ನು ಗುರುತಿಸಲಾಗಿತ್ತು. ಅಲ್ಲಿ ಹೆಲಿಕಾಪ್ಟರುಗಳಿಗೆ ಇಂಧನ ಮರುಭರ್ತಿ ಮಾಡುವ ಯೋಜನೆಯಿತ್ತು. ಹೆಲಿಕಾಪ್ಟರುಗಳು ಅಲ್ಲಿಂದ ಮತ್ತೊಂದು ರಹಸ್ಯ ಜಾಗಕ್ಕೆ ಸೈನಿಕರನ್ನು ಕರೆದೊಯ್ಯಲಿದ್ದವು. ಅಲ್ಲಿಂದ ಮರುದಿನ ಸೈನಿಕರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಿದ್ದರು. ಏಪ್ರಿಲ್ ೧೯, ೧೯೮೦ ರಿಂದಲೇ ಸೈನ್ಯ ಅರಬ್ ಕೊಲ್ಲಿಯ ಒಮಾನ್ ದೇಶದಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಬಂದಿಳಿದಿತ್ತು. 

ಏಪ್ರಿಲ್ ೨೪, ೧೯೮೦ ರಂದು ಆಪರೇಷನ್ ಈಗಲ್ ಕ್ಲಾ (Operation Eagle Claw) ಆರಂಭವಾಯಿತು.  ಅರಬ್ಬೀ ಸಮುದ್ರದಲ್ಲಿ ಲಂಗರು ಹಾಕಿದ್ದ ಅಮೇರಿಕಾದ ಯುದ್ಧನೌಕೆ ನಿಮಿಟ್ಜ್ ನಿಂದ ಕಮಾಂಡೋಗಳನ್ನು ಹೊತ್ತ ನೌಕಾದಳದ ಹೆಲಿಕಾಪ್ಟರುಗಳು ೬೦೦ ಮೈಲುಗಳ ಪ್ರಯಾಣವನ್ನು ಆರಂಭಿಸಿದವು. C - ೧೩೦ ಸರಕು ಸಾಗಣೆ ವಿಮಾನಗಳು ಮೊದಲೇ ತಲುಪಿದ್ದವು. ಮಾರ್ಗಮಧ್ಯೆ ಹವಾಮಾನ ತುಂಬಾ ಕೆಟ್ಟಿತು. ಮರಭೂಮಿಯಲ್ಲಿ ಉಂಟಾಗುವ 'ಹಬೂಬ್' ಎಂಬ ಮರಳಿನ ಬಿರುಗಾಳಿ ತುಂಬಾ ತೀವ್ರವಾಗಿ ಬೀಸಿತು. ಹೆಲಿಕಾಪ್ಟರುಗಳನ್ನು ಆ ಬಿರುಗಾಳಿಯ ಮಧ್ಯೆ ಚಲಾಯಿಸುವುದು ಅಪಾಯಕಾರಿ ಮತ್ತು ಕಷ್ಟದ ಕೆಲಸವಾಗಿತ್ತು. ಕಮ್ಮಿಯಾದ ಬೆಳಕು, ಹೆಲಿಕಾಪ್ಟರು ಮತ್ತು ವಿಮಾನಗಳಿಗೆ ಆದ ಡ್ಯಾಮೇಜ್ ಮತ್ತು ಕೆಲವು ಸೈನಿಕರ ದೈಹಿಕ ಅಸ್ವಸ್ಥತೆ ಮುಂತಾದ ಕಾರಣಗಳಿಂದ ಕಾರ್ಯಾಚರಣೆಯನ್ನು ಮುಂದುವರೆಸುವುದು ದುಸ್ಸಾಹಸ ಅನ್ನಿಸಿತು. ಅಧ್ಯಕ್ಷ ಕಾರ್ಟರ್ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಕಾರ್ಯಾಚರಣೆಯನ್ನು ಅಲ್ಲಿಗೇ ನಿಲ್ಲಿಸುವುದು ಸೂಕ್ತ ಎಂದು ನಿರ್ಧರಿಸಿದರು. ಆ ಆಜ್ಞೆ ಸೈನ್ಯಕ್ಕೆ ತಲುಪಿತು.

ಇರಾನಿನ ಮರಭೂಮಿಯ ರಹಸ್ಯ ಸ್ಥಳದಲ್ಲಿ ಆಗಲೇ ಕೆಲವು ಹೆಲಿಕಾಪ್ಟರುಗಳು, ಇಂಧನ ಮರುಭರ್ತಿ ಮಾಡುವ ವಿಮಾನ ಮೊದಲೇ ಬಂದು ಇಳಿದಿದ್ದವಲ್ಲ. ಈಗ ಎಲ್ಲವೂ ತುರ್ತಾಗಿ ಅಲ್ಲಿಂದ ನಿರ್ಗಮಿಸಬೇಕಾಗಿತ್ತು. ಗಡಿಬಿಡಿಯಲ್ಲಿ ಏನು ಪೊರಪಾಟಾಯಿತೋ, ಹೆಲಿಕಾಪ್ಟರೊಂದು ಇಂಧನ ಮರುಭರ್ತಿ ಮಾಡುವ ವಿಮಾನಕ್ಕೆ ಡಿಕ್ಕಿ ಹೊಡೆಯಿತು. ಮೊದಲೇ ಪೂರ್ತಿ ಇಂಧನ ತುಂಬಿದ್ದ ವಿಮಾನ. ದೊಡ್ಡ ಸ್ಪೋಟವಾಯಿತು. ವಾಯುಸೇನೆಯ ಐದು ಮತ್ತು ಭೂಸೇನೆಯ ಮೂವರು ಸೈನಿಕರು ಆ ದುರ್ಘಟನೆಯಲ್ಲಿ ಮೃತರಾದರು. 

ಈ ವಿಫಲ ಕಾರ್ಯಾಚರಣೆಯಿಂದ ರಕ್ಷಣಾ ಇಲಾಖೆ ಅನೇಕ ಮಹತ್ವದ ಪಾಠಗಳನ್ನು ಕಲಿತು ಅನೇಕ ಸುಧಾರಣೆಗಳನ್ನು ಮಾಡಿಕೊಂಡಿತು. ಸೇನೆಯ ವಿವಿಧ ವಿಭಾಗಗಳ ಮಧ್ಯೆ ಸಮನ್ವಯತೆಯ ಕೊರತೆ ಎದ್ದು ಕಂಡಿತ್ತು. ಅದನ್ನು ನಿವಾರಿಸಲು ಒಂದು ವಿಶೇಷ ಜಂಟಿ ಕಮಾಂಡನ್ನು ಸ್ಥಾಪಿಸಲಾಯಿತು. ಅದೇ JSOC - Joint Special Operations Command. ಇದನ್ನು ಕ್ರಮಬದ್ಧವಾಗಿ ಅಭಿವೃದ್ಧಿಪಡಿಸಿ, ಸುಮಾರು ನಲವತ್ತು ವರ್ಷಗಳ ನಂತರ ಈಗ ಎಲ್ಲ ವಿಶೇಷ ಸೇನಾ ಕಾರ್ಯಾಚರಣೆಗಳು ಇದರ ಅಡಿಯಲ್ಲೇ ನಡೆಯುತ್ತವೆ. ಪ್ರತಿಯೊಂದು ಕಾರ್ಮೋಡಕ್ಕೂ ಬೆಳ್ಳಿಗೆರೆಯೊಂದು ಇರುತ್ತದೆಯಂತೆ. ಆ ರೀತಿಯಲ್ಲಿಆಪರೇಷನ್ ಈಗಲ್ ಕ್ಲಾ ದಾರುಣವಾಗಿ ವಿಫಲವಾದರೂ JSOC ಸ್ಥಾಪನೆಗೆ ಕಾರಣವಾಗಿದ್ದಕ್ಕೆ ಸಮಾಧಾನ ಪಡಬೇಕು.

ಮಾಹಿತಿ ಆಧಾರ : US Army Airborne & Special Operations Museum 

Tuesday, May 21, 2024

ವಿದೇಶಿ ನೇರ ಹೂಡಿಕೆ (Foreign Direct Investment) ಹೀಗೂ ಬರಬಹುದೇ ಶಿವಾ!!??

೧೯೭೦ ರ ದಶಕದಲ್ಲಿ ಸೌದಿಯ ದೊರೆ ಫಹಾದ್ ಇಟಲಿಯ ಪ್ರಖ್ಯಾತ ಕ್ಯಾಸಿನೊದಲ್ಲಿ ಜೂಜಾಡಲು ಕುಳಿತ. ಕುಳಿತೇಟಿಗೆ  ೬ ಮಿಲಿಯನ್ ಡಾಲರುಗಳನ್ನು ಕಳೆದುಬಿಟ್ಟ! ಅವನಿಗೇನು!? ಹೇಳಿಕೇಳಿ ಹಡಬೆ ಪೆಟ್ರೋಲ್ ದುಡ್ಡು. ಇವನು ಉಡಾಯಿಸಿದ. ಅಂದು ಸೌದಿಯ ದೊರೆಯ ತೆಕ್ಕೆಯಲ್ಲಿ ಇದ್ದವರು ವಿಶ್ವದ ಟಾಪ್ ಕ್ಲಾಸ್ ವೇಶ್ಯೆಯರು. ಈ ಘಟನೆಯ ಫೋಟೋಗಳು ಮತ್ತು ಸುದ್ದಿ ಜಗಜ್ಜಾಹೀರಾಗಿ ಸೌದಿ ರಾಜ ಕುಟುಂಬ ಮುಜುಗರಕ್ಕೆ ಒಳಗಾಯಿತು. ಇಟಲಿಯನ್ನು ಬಿಟ್ಟು ಬೇರೊಂದು ಸುರಕ್ಷಿತ ಸ್ಥಳವನ್ನು ತಮ್ಮ ವಿವಿಧ ರೀತಿಯ "ಚಟುವಟಿಕೆಗಳಿಗೆ" ಕಂಡುಕೊಳ್ಳಬೇಕಾಯಿತು. 

ಸೌದಿಗಳು ಮೋಜು ಮಸ್ತಿಗೆ ಬೇರೊಂದು ಜಾಗ ಹುಡುಕುತ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬಿದ್ದ ಕೂಡಲೇ ಜಾಗೃತರಾದವರು ಆಫ್ರಿಕಾದಲ್ಲಿರುವ ಮೊರಾಕೊ ದೇಶದ ರಾಜ ಹಸನ್. ದಿವಾಳಿ ಅಂಚಿನಲ್ಲಿದ್ದ ಮೊರಾಕೊವನ್ನು ಬಚಾವ್ ಮಾಡಲು ಅವರಿಗೆ ಬಂಡವಾಳದ ಜರೂರತ್ತು ಇತ್ತು. ಮೊರಾಕೊ ದೇಶದಲ್ಲಿ ತೈಲ ಇರಲಿಲ್ಲ. ಬೇರೆ ದೇಶಗಳಲ್ಲಿ ದುಡಿಯುತ್ತಿದ್ದ ಅಸಂಖ್ಯಾತ ಪ್ರಜೆಗಳು ಕಳಿಸುತ್ತಿದ್ದ ವಿದೇಶಿ ವಿನಿಮಯ ಅರೆಕಾಸಿನ ಮಜ್ಜಿಗೆಯಾಗಿತ್ತು ದೊರೆ ಹಸನ್ ಅವರಿಗೆ. ಇಂತಹ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಅವರು ತಮಗಿರುವ ಇಪ್ಪತ್ತು ಅರಮನೆಗಳನ್ನು ಹೇಗೆ ನಡೆಸಿಕೊಂಡು ಬಂದಾರು?? 

ಸೌದಿಗಳಿಗೆ ಫೋನ್ ಮಾಡಿದ ಕಿಂಗ್ ಹಸನ್, 'ನಮ್ಮಲ್ಲಿ ಬನ್ನಿ. ಬೇಕಾದಷ್ಟು ಜಾಗ ಇದೆ. ನಿಮಗೆ ಬೇಕಾದ ಹಾಗೆ ಇರಿ. ಮೋಜು ಮಸ್ತಿ ಮಾಡಿ,' ಎನ್ನುವ ಮುಕ್ತ ಆಹ್ವಾನವನ್ನು ಕೊಟ್ಟರು. 

ಸೌದಿ ರಾಜಕುಟುಂಬದ ಡಜನ್ನುಗಟ್ಟಲೇ ಸಣ್ಣ ದೊಡ್ಡ ರಾಜಕುಮಾರರು ಮೊರಾಕೊದ ಟಾಂಜೇರ್ ಪರ್ವತಗಳ ಸುತ್ತಮುತ್ತ ವೈಭವೋಪೇತ ಅರಮನೆಗಳನ್ನು ನಿರ್ಮಿಸಿಕೊಂಡರು. 'ರಿಫ್' ಎಂದು ಕರೆಯಲ್ಪಡುತ್ತಿದ್ದ ಆ ನಿರ್ಜನ ಪ್ರದೇಶ ಜನವಸತಿಯಿಂದ ತುಂಬಾ ದೂರದಲ್ಲಿತ್ತು. ಸೌದಿಗಳ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಿತ್ತು. ಸೌದಿ ಅರೇಬಿಯಾದಲ್ಲೇ ತಮ್ಮ ಮೋಜು ಮಸ್ತಿ ಮಾಡೋಣ ಅಂದರೆ ಅಲ್ಲೆಲ್ಲ ಕಟ್ಟರ್ ವಹಾಬಿ ಸಂಸ್ಕೃತಿ. ಮೋಜು ಮಸ್ತಿ ಎಲ್ಲ ನಿಷೇಧಿತ. ಯೂರೋಪ್ ಚೆನ್ನಾಗಿತ್ತು. ಆದರೆ ಅಲ್ಲಿ ಪಾಶ್ಚಾತ್ಯ ಮಾಧ್ಯಮಗಳ ಕಾಟ. ಯಾವ ಸುಲ್ತಾನ ಯಾವ ಕ್ಯಾಸಿನೊದಲ್ಲಿ ದಿವಾಳಿಯಾದ. ಯಾರು ಯಾವ ವಿದೇಶಿ ಸೂಪರ್ ಮಾಡೆಲ್ ವೇಶ್ಯೆ ಮೇಲೆ ದುಡ್ಡು ಸುರಿದ ಎಂಬುದೆಲ್ಲವನ್ನೂ ಫೋಟೋ ಸಮೇತ ಪ್ರಕಟಿಸಿಬಿಡುತ್ತಾರೆ. ಮೊರಾಕೊದ ದುರ್ಗಮ ಟ್ಯಾಂಜೆರ್ ಪರ್ವತ ಪ್ರದೇಶದಲ್ಲಿ ಅಂತಹ ತೊಂದರೆಗಳು ಇಲ್ಲ. ಎಲ್ಲ ಸೊಗಸಾಗಿದೆ ಎಂದುಕೊಂಡ ಸೌದಿಯ ಪುಂಡ ರಾಜಕುಮಾರರು ಓಡೋಡಿ ಬಂದು ಮೊರಾಕೊದಲ್ಲಿ ದುಡ್ಡು ಸುರಿದರು.ಆ ಜಾಗಕ್ಕೆ ಹೋಗಲು ಪತ್ರಕರ್ತರು ಪ್ರಯತ್ನಿಸಿದರೆ ಮೊರಾಕೊದ ನಿರ್ಮಾನುಷ, ಕಾನೂನೇ ಇಲ್ಲದ ಪ್ರದೇಶಗಳ ಮೂಲಕ ಬರಬೇಕಾಗುತ್ತಿತ್ತು. ಆ ಮೂಲಕ ಬರುವ ಹುಚ್ಚು ಸಾಹಸ ಮಾಡಿದವರು ಅಪಹರಣಕ್ಕೆ ಗುರಿಯಾಗುತ್ತಿದ್ದರು. ಅಪಹರಣ ಮಾಡಿದ ವ್ಯಕ್ತಿಯ ಬಳಿ ವಸೂಲಿ ಮಾಡಲು ಏನೂ ಇಲ್ಲ ಅಂತಾದರೆ ಸಿಕ್ಕಿದ್ದನ್ನು ದೋಚಿಕೊಂಡು, ಕತ್ತು ಸೀಳಿ ಹೆಣವನ್ನು ಎಲ್ಲೋ ಎಸೆಯುತ್ತಿದ್ದರು ಸ್ಥಳೀಯ ಕ್ರೂರ ದರೋಡೆಕೋರರು. ಮುಂದೆ ಹೆಣ ಕೂಡ ಸಿಗುತ್ತಿರಲಿಲ್ಲ. 

ಸೌದಿಯ ಪುಂಡ ರಾಜಕುಮಾರರು ಇಲ್ಲೂ ಲಫಡಾ ಮಾಡಿಕೊಂಡರು. ಸೌದಿಯ ರಾಜಕುಮಾರನೊಬ್ಬ ವಿಪರೀತ ಮದ್ಯ ಸೇವಿಸಿ, ಭೋಗಿಸಲು ಕರೆಸಿಕೊಂಡಿದ್ದ ಹುಡುಗಿಯೊಬ್ಬಳ ಮೊಲೆಯನ್ನು ಯರ್ರಾಬಿರ್ರಿ ಕಚ್ಚಿಬಿಟ್ಟಿದ್ದ ಎಂಬ ಸುದ್ದಿ ಯಾರಿಂದ ಮುಚ್ಚಿಟ್ಟರೂ ಸಿಐಎ ನಂತಹ ಬೇಹುಗಾರಿಕೆ ಸಂಸ್ಥೆಗಳಿಂದ ಮಾತ್ರ ಮುಚ್ಚಿಡಲಾಗಲಿಲ್ಲ. 

ಈ ಸಂದರ್ಭದಲ್ಲಿ ಮೊರಾಕೊದ ರಾಜ ಹಸನ್ ಮಾತ್ರ ತಮ್ಮ"ರಾಜಧರ್ಮ"ವನ್ನು ಚಾಚೂ ತಪ್ಪದೆ ಪಾಲಿಸಿದರು. ಹಗರಣವನ್ನು ಸೊಗಸಾಗಿ ಮುಚ್ಚಿಹಾಕಿದರು. ಆ ಮೂಲಕ ಮೊರಾಕೊ ದೇಶದಲ್ಲಿ ವಿದೇಶಿ ನೇರ ಹೂಡಿಕೆ ಮಾಡಿ ತಪ್ಪು ಮಾಡಲಿಲ್ಲ ಎಂದು ಸೌದಿಗಳಿಗೆ ಮನದಟ್ಟು ಮಾಡಿಕೊಟ್ಟರು. 

ರಾಜೋಚಿತವಾಗಿ ರಾಜಾರೋಷದಿಂದ ರಾಜಕುಮಾರನಿಂದಲೇ  ಮೊಲೆ ಕಚ್ಚಿಸಿಕೊಂಡಿದ್ದ ಯುವತಿಯ ಕಡೆಯವರಿಗೆ ಕೊಡುವಷ್ಟು ಕೊಟ್ಟು ಬಾಯಿ ಮುಚ್ಚಿಕೊಂಡಿರಿ ಇಲ್ಲವಾದರೆ ಶಾಶ್ವತವಾಗಿ ಮೊರಾಕೊದ ಜೈಲಿಗೆ ಹಾಕಿಬಿಡುತ್ತೇವೆ ಎಂಬ ಧಮಿಕಿ ಹಾಕಿದರು. ಮೊರಾಕೊದ ಕುಖ್ಯಾತ ಜೈಲಿಗೆ ಹೋದವರು ಯಾರೂ ವಾಪಸ್ ಬರುವ ಸಾಧ್ಯತೆಗಳು ಕಮ್ಮಿ ಎಂದು ಗೊತ್ತಿದ್ದ ಅವರು ಕಚ್ಚಿದ್ದು ಮೊಲೆ ಅಷ್ಟೇ ತಾನೇ, ಜೀವವನ್ನೇನೂ ತೆಗೆದಿಲ್ಲವಲ್ಲ, ಮೇಲಿಂದ ಜಾಕೆಟ್ ತುಂಬಾ ರೊಕ್ಕ ತುಂಬಿ ಕಳಿಸುತ್ತಿದ್ದಾರಲ್ಲ ಎಂದುಕೊಂಡು ರಾಜ ಹಸನ್ ಕಡೆಯವರು ಕೊಟ್ಟ ರೊಕ್ಕ ಇತ್ಯಾದಿಯನ್ನು ಪ್ರಸಾದದಂತೆ ಸ್ವೀಕರಿಸಿ ಸಲಾಂ ಮಾಡಿದರು. ಧಮಕಿ ತಂತ್ರ ಕೆಲಸ ಮಾಡಿತು. ಈ ಘಟನೆ ಎಲ್ಲೂ ಸುದ್ದಿಯಾಗಲಿಲ್ಲ.

ಮೊರಾಕೊದ ಈ ತರಹದ "ನಾಜೂಕಾದ" ರಾಜತಾಂತ್ರಿಕ ನೀತಿಯಿಂದ ಖುಷಿಯಾದ ಸೌದಿ ಅರೇಬಿಯಾ ಮತ್ತು ಇತರೆ ಕೊಲ್ಲಿ ಅರಬ್ ದೇಶಗಳು ಕಂಡಾಪಟ್ಟೆ ದುಡ್ಡನ್ನು ಮೊರಾಕೊ ದೇಶದಲ್ಲಿ ಹೂಡಿಕೆ ಮಾಡಿದವು. ಎಷ್ಟು ದುಡ್ಡು ಹರಿದು ಬಂತು ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟವಾದರೂ ಮೂಗಿನ ಮೇಲೆ ಬೆರಳಿಡುವಂತಹ ದೊಡ್ಡ ಮೊತ್ತ ಹರಿದು ಬಂದಿದ್ದು ಸುಳ್ಳಲ್ಲ. ೧೯೯೮ ರಲ್ಲಿ, ಸೌದಿ ಅರೇಬಿಯಾದ ರಕ್ಷಣಾ ಮಂತ್ರಿಯಾಗಿದ್ದ ಸುಲ್ತಾನನೊಬ್ಬ, ರಹಸ್ಯವಾಗಿ, ಮೊರಾಕೊದ ರಾಷ್ಟೀಯ ತೈಲ ಸಂಸ್ಕರಣಾಗಾರವನ್ನು ೪೨೦ ಮಿಲಿಯನ್ ಡಾಲರುಗಳಿಗೆ ಖರೀದಿಸಿದ್ದ. ಅವನದೇನು ಫೋರ್ಟ್ವೆಂಟಿ ಭಾನಗಡಿ ವ್ಯವಹಾರವೋ ಗೊತ್ತಿಲ್ಲ. ೪೨೦ ಮಿಲಿಯನ್ ಡಾಲರಿಗೇ ಖರೀದಿಸಿದ್ದು ಕಾಕತಾಳೀಯ ಇರಬಹುದು ಕೂಡ. ವ್ಯವಹಾರವನ್ನು ಮಧ್ಯವರ್ತಿಗಳ ಮೂಲಕ, ಶೆಲ್ ಕಂಪನಿಗಳ ಮೂಲಕ ಮಾಡಿ ಮೂಲ ಖರೀದಿದಾರರನ್ನು ರಹಸ್ಯವಾಗಿ ಇರಿಸಲು ಎಂದಿನಂತೆ ಪ್ರಯತ್ನ ಮಾಡಲಾಯಿತು. ಮೊರಾಕೊದ ಕಾಸಾಬ್ಲ್ಯಾಂಕಾ ಪಟ್ಟಣದ ಮಸೀದಿಯೊಂದಕ್ಕೆ ಒಂದು ಬಿಲಿಯನ್ ಡಾಲರ್ ದೇಣಿಗೆ ಕೊಟ್ಟಿತು ಸೌದಿ ಅರೇಬಿಯಾ. ಒಳೊಳಗೆ ಕಳ್ಳ ವ್ಯವಹಾರ ಎಷ್ಟೇ ಇದ್ದರೂ ಸಾರ್ವಜನಿಕವಾಗಿ ಕೂಡ ಸಮಾಜಸೇವೆ ಮಾಡಿದೆವು ಎಂದು ತೋರಿಸಿಕೊಳ್ಳಬೇಕಲ್ಲ. 

***

'ವಿದೇಶಿ ನೇರ ಹೂಡಿಕೆ'ಯ ಬಗ್ಗೆ ಸುದ್ದಿ ಬಂದಾಗೆಲ್ಲ ನನಗೆ ಸಿಐಎ ಮಾಜಿ ಹಿರಿಯ ಬೇಹುಗಾರ ರಾಬರ್ಟ್ ಬೇರ್ ಹೇಳಿದ ಈ ಘಟನೆ ನೆನಪಾಗುತ್ತದೆ. 

ಅವರ ಅದ್ಭುತ ಪುಸ್ತಕ Sleeping with the Devil: How Washington Sold Our Soul for Saudi Crude . ಅದರಲ್ಲಿ ದೊರೆತ ಮಾಹಿತಿ ಮೇಲೆ ಆಧಾರಿತ ಲೇಖನ. 

Tuesday, May 14, 2024

ಸುಲಿಗೆ ಕರೆಗಳು ಮತ್ತು 'ಎರಡೂವರೆ' (೨.೫) ಜನರ ಬಂಧನ


ಭಾರತೀಯ ಪೊಲೀಸ್ ವ್ಯವಸ್ಥೆಯ ಅನೇಕ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ, ಮಹಾರಾಷ್ಟ್ರ ಕೇಡರಿನ, ೧೯೮೧ ರ ಬ್ಯಾಚಿನ ಐಪಿಎಸ್ ಅಧಿಕಾರಿ ಶ್ರೀಮತಿ ಮೀರನ್ ಛಡ್ಡಾ ಬೋರ್ವನಕರ್ ಅವರು ತಮ್ಮ ವೃತ್ತಿಜೀವನದ ಆತ್ಮಚರಿತೆ ಬರೆದಿದ್ದಾರೆ. ಪುಸ್ತಕದ ಹೆಸರು - Madam Commissioner: The Extraordinary Life of an Indian Police Chief by Meeran Chadha Borwankar 

ಅದರಲ್ಲಿನ ಒಂದು ಆಸಕ್ತಿದಾಯಕ ಅಧ್ಯಾಯದ ಸಾರಾಂಶ ಕೆಳಗಿದೆ. ಓದಿ. ಕೊನೆಗೆ ಇನ್ನೊಂದಿಷ್ಟು ರೋಚಕ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಕೊಟ್ಟಿದ್ದೇನೆ.

***

ನಾವು ವಿಚಿತ್ರವಾದ ಕಥೆಗಳನ್ನು ಹೇಳದಿದ್ದರೆ, ಮುಂದೊಂದು ದಿನ ವಿಚಿತ್ರವೇನಾದರೂ ಸಂಭವಿಸಿದರೂ ಜನ ನಂಬುವುದಿಲ್ಲ.

-- ಶಾನನ್ ಹಾಲೆ

ಮುಂಬೈ ಭೂಗತಲೋಕದ ಪಾತಕಿಗಳ ಚಲನವಲನ, ಚಟುವಟಿಕೆ, ಕಾರ್ಯತಂತ್ರಗಳ ಮೇಲೆ ಕಣ್ಣಿಡುವ ಪ್ರಾಜೆಕ್ಟ್ - X ವಿಭಾಗದ ಸಿಬ್ಬಂದಿಗಳು ಮುಂಬೈನಲ್ಲಿ ಸುಲಿಗೆ ಬೆದರಿಕೆ ಕರೆಗಳು (extortion calls) ತುಂಬಾ ಹೆಚ್ಚಾಗುತ್ತಿವೆ ಎಂದು ವರದಿ ಮಾಡಿದ್ದರು. ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪ್ರಮುಖರೆಲ್ಲರೂ ಸಭೆ ಸೇರಿದರು. ಸಂಗ್ರಹಿಸಿದ್ದ ಮಾಹಿತಿಗಳನ್ನು ಅಭ್ಯಸಿಸಿದರು. ಹೆಚ್ಚಿನ ಕರೆಗಳು ಕಲ್ಕತ್ತಾ ನಗರದಿಂದ ಬರುತ್ತಿವೆ ಮತ್ತು ಛೋಟಾ ರಾಜನ್ ಗ್ಯಾಂಗ್ ಇದರ ಹಿಂದಿರಬಹುದು ಎಂದು ವಿಶ್ಲೇಷಿಸಿದರು. 

ಅನುಭವಿ ಪೊಲೀಸ್ ಅಧಿಕಾರಿಗಳ ತಂಡವೊಂದು ಕಲ್ಕತ್ತಾ ನಗರಕ್ಕೆ ತೆರಳಿತು. ಬೆದರಿಕೆ ಕರೆಗಳನ್ನು ಮಾಡುತ್ತಿದ್ದವನು ಛೋಟಾ ರಾಜನ್ ಬಂಟ ವಿಕ್ಕಿ ಮಲ್ಹೋತ್ರಾ ಎನ್ನುವ ಸಂದೇಹವಿತ್ತು. ವಿಕ್ಕಿ ಮಲ್ಹೋತ್ರಾ ಗಡುಸಾದ ಖತರ್ನಾಕ್ ಧ್ವನಿ ಹೊಂದಿದ್ದ. ಅವನ ಧ್ವನಿ ಕೇಳಿದರೆ ದಾವೂದ್ ಇಬ್ರಾಹಿಮ್ ಗ್ಯಾಂಗಿನ ಅಬು ಸಲೇಂ ಮಾತಾಡಿದಂತೆ ಕೇಳಿಸುತ್ತಿತ್ತು. ವಸೂಲಿ ಕರೆಗಳನ್ನು ಮಾಡಿ ಶ್ರೀಮಂತರನ್ನು ಬೆದರಿಸುವಲ್ಲಿ ನಿಷ್ಣಾತನಾಗಿದ್ದ ವಿಕ್ಕಿ. ಹೆಚ್ಚಿನ ಶ್ರೀಮಂತರು ಮತ್ತು ಉದ್ಯಮಿಗಳು ಸುಲಿಗೆ ಕರೆಗಳು ಬಂದಾಗ ಸಾಮಾನ್ಯವಾಗಿ ಪೊಲೀಸರ ಬಳಿ ಬರುವುದಿಲ್ಲ. ರೊಕ್ಕ ಕೊಟ್ಟು ಕೈಮುಗಿಯುತ್ತಾರೆ. ಇವರ ಪೀಡೆ ತಪ್ಪಿದರೆ ಸಾಕು ಎಂದುಕೊಂಡು ತಮ್ಮ ಕೆಲಸ ಮುಂದುವರೆಸುತ್ತಾರೆ. ಈ ವರ್ತನೆಯಿಂದ ಕ್ರಿಮಿನಲ್ ಗ್ಯಾಂಗುಗಳಿಗೆ ತಮ್ಮ ವಸೂಲಿ ದಂಧೆ ಮುಂದುವರೆಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. 

ಯಾರಿಗೆ ಇಂತಹ ಸುಲಿಗೆ ಕರೆಗಳು ಬರುತ್ತಿದ್ದವೋ ಅವರಂತೂ ನಮ್ಮ ಬಳಿ ಬರುತ್ತಿರಲಿಲ್ಲ. ನಾವೇ ಅವರನ್ನು ಸಂಪರ್ಕಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆವು. ಪೊಲೀಸ್ ಇಲಾಖೆ ಕರೆಗಳ ತಪಾಸಣೆ ಮಾಡುತ್ತಿರುವುದಾಗಿಯೂ ಮತ್ತು ಪಾತಕಿಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿರುವುದಾಗಿಯೂ ಅವರಿಗೆ ಹೇಳಿ ಅವರಿಗೆ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದೆವು.

ಕಾನೂನಿನ ಪ್ರಕಾರವೇ ವಿಕ್ಕಿ ಮಲ್ಹೋತ್ರಾನ ಫೋನನ್ನು ಟ್ಯಾಪ್ ಮಾಡಲಾಗಿತ್ತು. ಅವನ ಕರೆಗಳನ್ನು ಕೇಳಿದಾಗ ಒಂದು ವಿಚಿತ್ರ ಸಂಗತಿ ಹೊರಬಿತ್ತು. ಕೆಲವೊಂದು ಕರೆಗಳಲ್ಲಿ ವಿಕ್ಕಿ ವ್ಯಕ್ತಿಯೊಬ್ಬರ ಜೊತೆ ತುಂಬಾ ಗೌರವದಿಂದ ಮಾತಾಡುತ್ತಿದ್ದ. ಮಾತಿಗೊಮ್ಮೆ ಸರ್ ಸರ್ ಎನ್ನುತ್ತಿದ್ದ. ಅಪರಾಧ ವಿಭಾಗದ ಅನುಭವಿ ಪರಿಣಿತ ಅಧಿಕಾರಿಗಳಿಗೆ ಎಲ್ಲ ಮಾಫಿಯಾ ಮುಖಂಡರ ಧ್ವನಿಯ ಪರಿಚಯವಿತ್ತು. ಆದರೆ ವಿಕ್ಕಿಯಿಂದ ಸರ್ ಎಂದು ಗೌರವದಿಂದ ಕರೆಸಿಕೊಳ್ಳುತ್ತಿದ್ದ ಆ ವ್ಯಕ್ತಿ ಯಾರು ಎಂಬುದನ್ನು ಯಾರೂ ಕಂಡುಹಿಡಿಯದಾದರು. ಅದೊಂದು ಅಜ್ಞಾತ ಹೊಸ ಧ್ವನಿಯಾಗಿತ್ತು. ನಮಗೆ ಹೊಸ ಸವಾಲಾಗಿತ್ತು. 

ಕಲ್ಕತ್ತಾಗೆ ಹೋಗಿದ್ದ ತಂಡ ಒಂದು ವಾರದ ಬಳಿಕ ಮರಳಿತು. ವಿಕ್ಕಿ ಕಲ್ಕತ್ತಾದಿಂದ ಪರಾರಿಯಾಗಿದ್ದ ಎಂದು ಕಾಣುತ್ತದೆ. ಪ್ರಾಜೆಕ್ಟ್ - X ತಂಡ ಹೊಸ ಮಾಹಿತಿಯನ್ನು, ಮಾಹಿತಿ ಲಭ್ಯವಾದ ಕೂಡಲೇ, ಕಲ್ಕತ್ತಾದಲ್ಲಿದ್ದ ತಂಡಕ್ಕೆ ತ್ವರಿತವಾಗಿ ಮುಟ್ಟಿಸುತ್ತಿದ್ದರೂ ವಿಕ್ಕಿ ಪರಾರಿಯಾದ. ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದ್ದ ಮೊಬೈಲ್ ಟಾವರ್ ಮಾಹಿತಿ ಕೂಡ ಈ ಸಲ ಸಹಕಾರಿಯಾಗಲಿಲ್ಲ.

ಕೆಲ ದಿನಗಳ ನಂತರ ವಿಕ್ಕಿಯ ಫೋನ್ ದೆಹಲಿಯಿಂದ ಮಾತಾಡತೊಡಗಿತ್ತು. ವಸೂಲಿ ಕರೆಗಳು ಮತ್ತೂ ಜೋರಾದವು. ವಿಕ್ಕಿಯ ಜೊತೆ ಮತ್ತೊಬ್ಬ ಮಾಫಿಯಾ ಸಹಚರ ಸೇರಿಕೊಂಡಿದ್ದ. ಅವನು ಯಾರೆಂದು ಅವನ ಧ್ವನಿಯ ಮೂಲಕ ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿದರು. ಅವನು ಮತ್ತೊಬ್ಬ ಛೋಟಾ ರಾಜನ್ ಬಂಟ, ಖತರ್ನಾಕ್ ಪಾತಕಿ, ಫರೀದ್ ತನಾಶಾ ಆಗಿದ್ದ. ಅವರಿಬ್ಬರ ಜೋಡಿ ಆಗ ನಮಗಿದ್ದ ಅತಿ ದೊಡ್ಡ ತಲೆನೋವು. ನಾನು ನನ್ನ ಕೆಳಗಿನ ಡಿಸಿಪಿಗೆ ಸೂಚನೆ ಕೊಟ್ಟೆ. ತಂಡದ ಜೊತೆ ದೆಹಲಿಗೆ ಹೋಗಿ. ಅವರನ್ನು ಹುಡುಕಿ ಬಂಧಿಸಿ ಕರೆತನ್ನಿ. ಇದೊಂದು ಬಹುಮುಖ್ಯ ಕಾರ್ಯಾಚರಣೆಯಾಗಿದ್ದರಿಂದ ವಿಸ್ತೃತ  ಪ್ಲಾನ್ ಮಾಡಲಾಯಿತು. 

ಹೊರಡುವ ದಿನ ಡಿಸಿಪಿ ವಿಮಾನ ತಪ್ಪಿಸಿಕೊಂಡರು. ಇನ್ಸಪೆಕ್ಟರ್ ಪಾಟೀಲ್ ಮತ್ತು ತಂಡ ಮಾತ್ರ ವಿಮಾನದಲ್ಲಿ ಪ್ರಯಾಣಿಸಿ ದೆಹಲಿ ತಲುಪಿಕೊಂಡಿತು. ನಂತರ ಇನ್ಸಪೆಕ್ಟರ್ ಪಾಟೀಲ್ ನನಗೆ ಫೋನ್ ಮಾಡಿದರು. ಮಹತ್ವದ ಕಾರ್ಯಾಚರಣೆಗಳನ್ನು ಮಾಡುವಾಗ ಹಿರಿಯ ಅಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನು ನಿಯಮಿತವಾಗಿ ಕೊಡುವುದು ಪೊಲೀಸ್ ಪದ್ಧತಿ. ಡಿಸಿಪಿ ವಿಮಾನ ತಪ್ಪಿಸಿಕೊಂಡಿದ್ದರಿಂದ ಇನ್ಸಪೆಕ್ಟರ್ ಪಾಟೀಲ್ ನೇರವಾಗಿ ನನ್ನ ಸಂಪರ್ಕದಲ್ಲಿ ಇದ್ದರು. ದೆಹಲಿ ತಲುಪಿಕೊಂಡ ಕೆಲವೇ ಘಂಟೆಗಳಲ್ಲಿ ಇನ್ಸಪೆಕ್ಟರ್ ಪಾಟೀಲ್ ಮತ್ತು ಅವರ ತಂಡ ದೆಹಲಿಯ ಪ್ರಸಿದ್ಧ ಲೂಟಿಯೆನ್ಸ್ ಬಡಾವಣೆಯ ಐಷಾರಾಮಿ ಹೋಟೆಲೊಂದರಲ್ಲಿ ವಿಕ್ಕಿ ಮಲ್ಹೋತ್ರಾನನ್ನು ಪತ್ತೆ ಹಚ್ಚಿತು. ಆದರೆ ಆಗಿದಾಂಗಲೇ ಆತನನ್ನು ಅಟಕಾಯಿಸಿಕೊಂಡು ಬಂಧಿಸುವುದು ಅವರಿಗೆ ಸಮಂಜಸ ಅನ್ನಿಸಲಿಲ್ಲ. ಮುಂಬೈನ ತಂಡಕ್ಕೆ ದೆಹಲಿ ಅಷ್ಟು ಚೆನ್ನಾಗಿ ಪರಿಚಯವಿರಲಿಲ್ಲ. ಅವರ ತೊಂದರೆ ನನಗೆ ಅರ್ಥವಾಯಿತು. 

ವಿಕ್ಕಿ ಮಲ್ಹೋತ್ರಾ ಹೋಟೆಲ್ಲಿನ ಲಾಂಜಿನಲ್ಲಿ ಇದ್ದಾನೆ. ಅವನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದಾನೆ. ಇಬ್ಬರೂ ಆರಾಮಾಗಿ ಏನೋ ಮಾತಾಡಿಕೊಂಡು ಕುಳಿತ್ತಿದ್ದಾರೆ ಎಂದು ಇನ್ಸಪೆಕ್ಟರ್ ಪಾಟೀಲ್ ಮೊಬೈಲ್ ಮೂಲಕ ನನಗೆ ತಿಳಿಸಿದರು. ದೂರದಲ್ಲಿ ಕುಳಿತ ಪೊಲೀಸ್ ತಂಡ ತಾವೂ ಕೂಡ ತಂಪು ಪಾನೀಯ ಸೇವಿಸುತ್ತಾ ಅವರ ಮೇಲೆ ಒಂದು ಕಣ್ಣಿಟ್ಟು ಕುಳಿತರು. ಎಲ್ಲ ರೀತಿಯಿಂದ ವಿಚಾರ ಮಾಡಿದ ಮುಂಬೈ ಪೊಲೀಸ್ ತಂಡ, ವಿಕ್ಕಿ ಹೊಟೇಲಿಂದ ಹೊರಬಿದ್ದ ತಕ್ಷಣ ಆತನನ್ನು ಬಂಧಿಸುವುದು ಎಂಬ ಪ್ಲಾನ್ ಹಾಕಿತು. ವಿಮಾನ ತಪ್ಪಿಸಿಕೊಂಡಿದ್ದ ಡಿಸಿಪಿ ಮುಂದಿನ ವಿಮಾನ ಏರಿದ್ದಾರೆಂಬ ಮಾಹಿತಿ ಕೂಡ ಇಷ್ಟೊತ್ತಿಗೆ ಬಂದು ತಲುಪಿತು. 

ಸ್ವಲ್ಪ ಸಮಯದ ನಂತರ ಇನ್ಸಪೆಕ್ಟರ್ ಪಾಟೀಲ್ ಮತ್ತೊಂದು ಕರೆ ಮಾಡಿದರು. ವಿಕ್ಕಿ ಮತ್ತು ಆತನ ಜೊತೆಗಿದ್ದ ವ್ಯಕ್ತಿ ಹೋಟೆಲಿನಿಂದ ಹೊರಬಿದ್ದು ಕಾರಿನಲ್ಲಿ ಹೊರಟಿದ್ದಾರೆಂದೂ ಮತ್ತು ಪೊಲೀಸರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರು. 

ಮುಂದಿನ ಕೆಲವು ಕ್ಷಣಗಳಲ್ಲಿ ಮುಂಬೈ ಪೊಲೀಸರಿದ್ದ ವಾಹನ ವಿಕ್ಕಿಯಿದ್ದ ಕಾರನನ್ನು ವೇಗವಾಗಿ ಹಿಂಬಾಲಿಸಿ, ಮುಂದೆ ಹೋಗಿ ಅಡ್ಡಹಾಕಿತು. ಗಕ್ಕನೆ ನಿಂತಿತು ವಿಕ್ಕಿಯಿದ್ದ ಕಾರ್. ವಾಹನದಿಂದ ಇಳಿದವರೇ ಇನ್ಸಪೆಕ್ಟರ್ ಪಾಟೀಲ್ ವಿಕ್ಕಿಯ ಕಾರಿನ ಬಳಿ ಹೋದರು. ತಮ್ಮ ಪರಿಚಯ ತಿಳಿಸಿದರು. ಕಾರಿನಲ್ಲಿದ್ದ ಇಬ್ಬರನ್ನೂ ಬಂಧಿಸಲಾಗುತ್ತಿದೆ ಎಂದು ಕೂಡ ಹೇಳಿದರು. ಇದೆಲ್ಲಾ ಪೊಲೀಸ್ ಪದ್ಧತಿ. 

ಮತ್ತೆ ಇನ್ಸಪೆಕ್ಟರ್ ಪಾಟೀಲ್ ಫೋನ್ ಮಾಡಿದರು. ಈ ಬಾರಿ ಅವರ ಧ್ವನಿಯಲ್ಲಿ ಗಾಬರಿ ಮತ್ತು ಗೊಂದಲವಿತ್ತು. ಇನ್ಸಪೆಕ್ಟರ್ ಪಾಟೀಲ್ ಹೇಳಿದರು: ವಿಕ್ಕಿಯ ಜೊತೆಗಿದ್ದ ವ್ಯಕ್ತಿ ಅವರನ್ನು ಬಿಟ್ಟು ಕಳಿಸುವಂತೆ ಆವಾಜ್ ಹಾಕುತ್ತಿದ್ದಾನೆ. ಆತ ತನ್ನನ್ನು ಇಂಟೆಲಿಜೆನ್ಸ್ ಬ್ಯೂರೋದ (ಐಬಿ) ಮಾಜಿ ಡೈರೆಕ್ಟರ್ ಎಂದು ಬೇರೆ ಪರಿಚಯಿಸಿಕೊಳ್ಳುತ್ತಿದ್ದಾನೆ. ಏನು ಮಾಡಲಿ ಮೇಡಂ??? 

ಈಗ ಆಶ್ಚರ್ಯಗೊಳ್ಳುವ ಬಾರಿ ನನ್ನದು. ನಾನು ಆಗಿಂದಾಗಲೇ ಮುಂಬೈನ ಸ್ಥಳೀಯ ಇಂಟೆಲಿಜೆನ್ಸ್ ಬ್ಯೂರೋದ ಹಿರಿಯ ಅಧಿಕಾರಿಗೆ ಫೋನ್ ಮಾಡಿದೆ. ನಿವೃತ್ತ ಐಬಿ ಅಧಿಕಾರಿ ಯಾರಾದರೂ, ಏನಾದರೂ, ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಯೇ?  ಎಂದು ಕೇಳಿದೆ. ಅಂತಹ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದರು ಸ್ಥಳೀಯ ಐಬಿ ಅಧಿಕಾರಿ. ಆದರೆ ಅಲ್ಲಿ ದೆಹಲಿಯಲ್ಲಿ ಆ ವ್ಯಕ್ತಿ ಮಾತ್ರ ತಾನು ಐಬಿಯ ಮಾಜಿ ಡೈರೆಕ್ಟರ್ ಎಂದೂ, ತಮ್ಮನ್ನು ಬಿಟ್ಟು ಕಳಿಸಬೇಕೆಂದು ಆಗ್ರಹ ಮಾಡುತ್ತಲೇ ಇದ್ದರು.

ಮತ್ತೆ ಇನ್ಸಪೆಕ್ಟರ್ ಪಾಟೀಲ್ ಫೋನ್ ಮಾಡಿದರು. ಈ ಬಾರಿ ಆ ವ್ಯಕ್ತಿಯೇ ನನ್ನ ಜೊತೆ ಮಾತಾಡಿಸುವಂತೆ ಇನ್ಸಪೆಕ್ಟರ್ ಪಾಟೀಲರಿಗೆ ಒತ್ತಾಯ ಮಾಡುತ್ತಿದ್ದರು. ಆ ವ್ಯಕ್ತಿ ಹೇಳಿದ್ದ ಪರಿಚಯವನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿತ್ತು. ಆ ವ್ಯಕ್ತಿ ನನ್ನ ಜೊತೆ ಮಾತಾಡತೊಡಗಿದಾಗ, ನಿಮ್ಮ ಬ್ಯಾಚಿನ ಮಹಾರಾಷ್ಟ್ರಕ್ಕೆ ನಿಯೋಜಿತರಾದ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಮತ್ತು ಅವರು ಸೇವೆ ಸಲ್ಲಿಸಿದ ಕೊನೆಯ ಹುದ್ದೆಯನ್ನು ಹೇಳಿ ಎಂದೆ. ಆ ವ್ಯಕ್ತಿ ಪಟಪಟನೆ ಎಲ್ಲ ವಿವರಗಳನ್ನು ಸರಿಯಾಗಿಯೇ ಕೊಟ್ಟರು. ಆ ವ್ಯಕ್ತಿ ಒಬ್ಬ ಐಪಿಎಸ್ ಅಧಿಕಾರಿ ಮತ್ತು ಮಾಜಿ ಐಬಿ ಡೈರೆಕ್ಟರ್ ಇದ್ದರೂ ಇರಬಹುದು ಎಂದು ನನಗೆ ಅನ್ನಿಸಿತು. 

"ನೀನೇ ಸುಳ್ಳು ಹೇಳುತ್ತಿದ್ದೀಯಾ. ಯಾವ ಮಹಿಳಾ ಅಧಿಕಾರಿಯೂ  ಕ್ರೈಂ ಬ್ರಾಂಚಿನ ಮುಖ್ಯಸ್ಥರ ಹುದ್ದೆಯಲ್ಲಿಲ್ಲ," ಎಂದು ಆತ ಅಬ್ಬರಿಸಿದಾಗ ನಾನು ಅಪ್ರತಿಭಳಾದೆ. 

ಆತನ ಮಾತಿನಲ್ಲಿಯ ಅಸಹನೆ ಮತ್ತು ಅವಹೇಳನಕಾರಿ ಮಾತಿನ ಧಾಟಿ ನನಗೆ ಹಿಡಿಸಲಿಲ್ಲ. ಕೋಪವೂ ಬಂತು. ನಾನು ಮತ್ತೊಮ್ಮೆ ಆತನಿಗೆ ನನ್ನ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ಅವರು ನಾನು ಹೇಳಿದ್ದನ್ನು ಕೇಳಿಸಿಕೊಂಡಂತೆ ಕಾಣಲಿಲ್ಲ. ಇನ್ಸಪೆಕ್ಟರ್ ಪಾಟೀಲರಿಗೆ ಎಲ್ಲರನ್ನೂ ಬಿಟ್ಟು ಕಳಿಸುವಂತೆ ಆಜ್ಞೆ ಮಾಡಲು ನನಗೇ ಆಜ್ಞೆ ಮಾಡುವ ಧಾಟಿಯಲ್ಲಿ ಮಾತಾಡಿದರು. ನಾನು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದೆ. ಈ ಕಾರ್ಯಾಚರಣೆಗೆ ತುಂಬಾ ಕಷ್ಟಪಟ್ಟಿದ್ದೆವು. ಈಗ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಯಿತು ಅಂದುಕೊಳ್ಳುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿ ತನ್ನನ್ನು ತಾನು ಮಾಜಿ ಐಬಿ ನಿರ್ದೇಶಕ ಅಂದ ಮಾತ್ರಕ್ಕೆ ಖತರ್ನಾಕ್ ಗ್ಯಾಂಗಸ್ಟರಗಳನ್ನು ಬಿಟ್ಟು ಕಳಿಸಿ, ಅವರಿಗೆ ಕೈಮುಗಿದು ಬರಲು ಸಾಧ್ಯವೇ?? ಅದನ್ನು ಊಹಿಸಲೂ ಸಾಧ್ಯವಿಲ್ಲ. ಅದನ್ನೇ ಖಚಿತವಾಗಿ ಹೇಳಿದ್ದೆ. ಆಕ್ರೋಶಗೊಂಡ ಆ ವ್ಯಕ್ತಿ 'ನಿನಗೆ ಪಾಠ ಕಲಿಸುತ್ತೇನೆ. ಬಿಡುವುದಿಲ್ಲ,' ಎಂದು ಅಬ್ಬರಿಸಿದ. ಅದಕ್ಕುತ್ತರವಾಗಿ ನಾನೂ ಅಷ್ಟೇ ಕಠಿಣವಾಗಿ ಹೇಳಿದೆ , 'ನಾನು ನಿನಗೆ ಪಾಠ ಕಲಿಸುತ್ತೇನೆ.' ಅಲ್ಲಿಯವರೆಗೆ ನನಗೆ ಯಾರೂ ಹಾಗೆ ಮಾತಾಡಿರಲಿಲ್ಲ. 

ನಮ್ಮ ಮುಂದಿನ ನಡೆಯ ಬಗ್ಗೆ ಇನ್ಸಪೆಕ್ಟರ್ ಪಾಟೀಲ್ ಜೊತೆ ಚರ್ಚಿಸುತ್ತಿದ್ದೆ. ಅಷ್ಟರಲ್ಲಿ ನನ್ನ ಮುಂದಿದ್ದ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರತೊಡಗಿತು. 'ದೆಹಲಿಯಲ್ಲಿ ಮಾಜಿ ಐಬಿ ಡೈರೆಕ್ಟರ್ ಜೊತೆ ಗ್ಯಾಂಗಸ್ಟರ್ ಬಂಧನ...!!!' ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿ ದೆಹಲಿ ಪೊಲೀಸ್ ಮೊಬೈಲ್ ವ್ಯಾನ್ ಕಳಿಸುವಂತೆ ಕೋರಿದ್ದ ಎಂದು ತಿಳಿಯಿತು. ಫೋನ್ ಮಾಡಿದಾಗ ತನ್ನನ್ನು ತಾನು ಮಾಜಿ ಐಬಿ ಡೈರೆಕ್ಟರ್ ಎಂದು ಆ ವ್ಯಕ್ತಿ ಪರಿಚಯಿಸಿಕೊಂಡಿದ್ದ. ದೆಹಲಿಯ ಕಂಟ್ರೋಲ್ ರೂಮ್ ಆ ಮಾಹಿತಿಯನ್ನೇ ಮೊಬೈಲ್ ವ್ಯಾನಿಗೆ ಸಂದೇಶ ರವಾನಿಸಿತ್ತು. ಕಂಟ್ರೋಲ್ ರೂಮ್ ಸಂದೇಶಗಳ ಮೇಲೆ ಸದಾ ಕಿವಿಯಿಟ್ಟಿರುವ ಮಾಧ್ಯಮಗಳು ಅದನ್ನು ಪಿಕ್ ಮಾಡಿದ್ದವು. ಪೈಪೋಟಿಗೆ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದವು.

ಸ್ಥಳಕ್ಕೆ ಧಾವಿಸಿ ಬಂದ ದೆಹಲಿ ಪೊಲೀಸರು ಇನ್ಸಪೆಕ್ಟರ್ ಪಾಟೀಲ್, ನಮ್ಮ ಸಿಬ್ಬಂದಿ, ವಿಕ್ಕಿ ಮಲ್ಹೋತ್ರಾ, ಐಬಿಯ ಮಾಜಿ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ಆ ವ್ಯಕ್ತಿ ಎಲ್ಲರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು. ಅದೇ ಸಮಯಕ್ಕೆ, ವಿಮಾನ ತಪ್ಪಿಸಿಕೊಂಡಿದ್ದ, ನಮ್ಮ ಡಿಸಿಪಿ ಕೂಡ, ತಡವಾಗಿಯಾದರೂ, ದೆಹಲಿ ತಲುಪಿದ್ದರು. ಅವರೂ ಅಲ್ಲಿನ ಪೊಲೀಸ್ ಠಾಣೆಗೆ ಹೋದರು. ಅವರು ಅಲ್ಲಿ ಎಲ್ಲವನ್ನೂ ಸಂಬಾಳಿಸಿ, ಕಾನೂನಿನ ಔಪಚಾರಿಕತೆಗಳನ್ನು ಪೂರೈಸುತ್ತಿದ್ದಾಗ ನಾನು ಇನ್ಸಪೆಕ್ಟರ್ ಪಾಟೀಲರಿಗೆ ಕಟ್ಟುನಿಟ್ಟಾದ ಆಜ್ಞೆ ಮಾಡಿದೆ. 'ಮತ್ತೊಬ್ಬ ಗ್ಯಾಂಗಸ್ಟರ್ ಫರೀದ್ ತನಾಶಾನನ್ನೂ ಹಿಡಿದು ತರಬೇಕು. ಅಷ್ಟು ದೂರ ಹೋಗಿ ಅವನನ್ನು ತಪ್ಪಿಸಿಕೊಳ್ಳಲು ಬಿಡುವಂತಿಲ್ಲ. ಕ್ವಿಕ್. ಅವನನ್ನು ಬಂಧಿಸಲು ಹೊರಡಿ!'

ಮುಂಬೈನಲ್ಲಿ ರಿಂಗಣಿಸುತ್ತಿದ್ದ ಸುಲಿಗೆ ಬೆದರಿಕೆ ಕರೆಗಳ ಹಿಂದೆ ಫರೀದ್ ತನಾಶಾ ಇರುವುದು ಖಚಿತವಾಗಿತ್ತು. ಆತ ಕೂಡ ದೆಹಲಿಯಲ್ಲೇ ಇದ್ದ. ಬೇರೆ ಸ್ಥಳದಲ್ಲಿ ಇದ್ದ. ಈಗ ಬ್ರೇಕಿಂಗ್ ನ್ಯೂಸ್ ನೋಡಿ ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬಹುದು ಎಂಬುದು ನಮ್ಮ ಆತಂಕವಾಗಿತ್ತು. ಹಾಗಾಗಲು ಬಿಡುವಂತಿರಲಿಲ್ಲ. 

ಡಿಸಿಪಿ ಅವರನ್ನು ದೆಹಲಿಯ ಠಾಣೆಯಲ್ಲಿಯೇ ಬಿಟ್ಟು ಇನ್ಸಪೆಕ್ಟರ್ ಪಾಟೀಲ್ ಮುಂದಿನ ಪಾತಕಿಯನ್ನು ಬಂಧಿಸಲು ತಮ್ಮ ತಂಡದೊಂದಿಗೆ ಹೋದರು. ದೆಹಲಿಯ ಅಪರಿಚಿತ ರಸ್ತೆಗಳ ಮೇಲೆ ಡ್ರೈವ್ ಮಾಡುತ್ತಾ ಫರೀದನನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು. ಸಮಯದ ವಿರುದ್ಧ ಸೆಣೆಸುತ್ತಿದ್ದರು. ಫರೀದ್ ನುರಿತ ಅಂಡರ್ವರ್ಲ್ಡ್ ಕಿಲಾಡಿಯಾಗಿದ್ದ. ಆದರೆ ಇವರೂ ಸಹಿತ ನುರಿತ ಕ್ರೈಂ ಬ್ರಾಂಚ್ ತಂಡದವರಾಗಿದ್ದರು. 

ಫರೀದ್ ಇದ್ದ ಪ್ರದೇಶ ತಲುಪಿಕೊಂಡ ತಂಡ ಎಲ್ಲವನ್ನೂ ಒಂದು ಬಾರಿ ಸೂಕ್ಷ್ಮವಾಗಿ ಗಮನಿಸಿತು. ಎಲ್ಲರೂ ಮಫ್ತಿಯಲ್ಲಿ ಇದ್ದುದರಿಂದ ಯಾರಿಗೂ ಸಂಶಯ ಬರಲಿಲ್ಲ. ಅತ್ಯಂತ ಸಾಮಾನ್ಯನಂತೆ ಕಾಣುವ ಪೊಲೀಸ್ ಒಬ್ಬನನ್ನು ಇನ್ಸಪೆಕ್ಟರ್ ಪಾಟೀಲ್ ಫರೀದ್ ಇದ್ದ ಫ್ಲಾಟಿನ್ ಬಾಗಿಲು ತಟ್ಟುವಂತೆ ಕಳಿಸಿದರು. ಫರೀದ್ ಬಾಗಿಲು ತೆಗೆದಾಕ್ಷಣ ಒಳನುಗ್ಗಿದ ಪೊಲೀಸರ ತಂಡ ಫರೀದನನ್ನು ಹೆಚ್ಚಿನ ತೊಂದರೆಯಿಲ್ಲದೆ ಬಂಧಿಸಲು ಸಫಲವಾಯಿತು. ಫರೀದ್ ಟೀವಿಯಲ್ಲಿನ ಬ್ರೇಕಿಂಗ್ ನ್ಯೂಸ್ ನೋಡಿರಲಿಲ್ಲ. ಆತ ತನ್ನ ಎರಡನೇ ಹೆಂಡತಿಯೊಂದಿಗೆ ಕೌಟುಂಬಿಕ ಸಮಯ ಕಳೆಯುತ್ತಿದ್ದ. ಕಾರ್ಯಾಚರಣೆಯ ಈ ಭಾಗ ಸುಖಾಂತವಾಗಿದ್ದನ್ನು ಕೇಳಿದ ನನಗೆ ದೊಡ್ಡ ನೆಮ್ಮದಿ. 

ಇಷ್ಟಾಗುವ ಹೊತ್ತಿಗೆ ಕೇಂದ್ರದ ಮತ್ತು ಮಹಾರಾಷ್ಟ ಸರ್ಕಾರದ ಹಿರಿಯ ಅಧಿಕಾರಿಗಳ, ರಾಜಕೀಯ ನಾಯಕರ ಮಧ್ಯೆ ಚರ್ಚೆಗಳು ಆರಂಭವಾಗಿದ್ದವು. ದೆಹಲಿಯಲ್ಲಿ ನಡೆದ ಆ ಕಾರ್ಯಾಚರಣೆಯಲ್ಲಿ ಮಾಜಿ ಐಬಿ ಡೈರೆಕ್ಟರ್ ಇರಲೇ ಇಲ್ಲವೆಂಬ ಅಧಿಕೃತ ಹೇಳಿಕೆ ಹೊರಬಿತ್ತು. ಅದು ನಿರೀಕ್ಷಿತವೇ ಆಗಿತ್ತು. ಕೆಲವು ಮಾಧ್ಯಮಗಳು ಮಾಜಿ ಐಬಿ ಡೈರೆಕ್ಟರ್ ಅವರನ್ನು ಸ್ಪಷ್ಟೀಕರಣ ಕೇಳಿದಾಗ, ಕಾರ್ಯಾಚರಣೆಯ ಸಮಯದಲ್ಲಿ ಅವರು ಮನೆಯಲ್ಲಿ ಟೀವಿ ನೋಡುತ್ತಿದ್ದೆ ಎಂದು ಹೇಳಿದರು. ಅದೆಲ್ಲ ಏನೇ ಇರಲಿ, ವಿಕ್ಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ಅವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ನಮಗೆಲ್ಲ ಹೆಮ್ಮೆಯ ಮತ್ತು ಸಂತಸದ ವಿಷಯವಾಗಿತ್ತು. ಅವರೇನು ಕಮ್ಮಿ ಹಾವಳಿ ಎಬ್ಬಿಸಿದ್ದರೇ!? ಅವರ ನಿರಂತರ ಬೆದರಿಕೆ ಕರೆಗಳಿಂದ ಮುಂಬೈನ ವಾಣಿಜ್ಯಲೋಕ ತತ್ತರಿಸಿಹೋಗಿತ್ತು. 

ಕೆಲ ಸಮಯದ ನಂತರ ಬೇರೊಬ್ಬ ಹಿರಿಯ ಅಧಿಕಾರಿ ನನಗೆ ಹೆಚ್ಚಿನ ವಿವರಣೆ ಕೊಟ್ಟಿದ್ದರು. ಮುಂಬೈ ಪೊಲೀಸರ ತಂಡ ವಿಕ್ಕಿ ಮಲ್ಹೋತ್ರಾನನ್ನು ಅಡ್ಡಹಾಕಿದಾಗ, ಜೊತೆಗಿದ್ದ ಮಾಜಿ ಐಬಿ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ಮನುಷ್ಯ ಮೊದಲು ಅಂದುಕೊಂಡಿದ್ದು, ವಿರೋಧಿ ಗ್ಯಾಂಗ್ ದಾಳಿ ಮಾಡಿದೆ ಎಂದು. ಇನ್ಸಪೆಕ್ಟರ್ ಪಾಟೀಲ್ ತಮ್ಮ ಪರಿಚಯ ಮಾಡಿಕೊಂಡಾಗ ಅವರು ದೆಹಲಿ ಪೊಲೀಸ್ ಇನ್ಸಪೆಕ್ಟರ್ ಅಂದುಕೊಂಡರು. ನಂತರ ನಾನು, ಮಹಿಳೆಯೊಬ್ಬಳು, ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ಎಂದು ಪರಿಚಯ ಮಾಡಿಕೊಂಡಾಗ ಅವರು ನನ್ನ ಮಾತನ್ನು ನಂಬಲಿಲ್ಲ ಏಕೆಂದರೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಆಗ ಯಾವುದೇ ಮಹಿಳಾ ಅಧಿಕಾರಿ ಮುಖ್ಯ ಸ್ಥಾನದಲ್ಲಿ ಇರಲಿಲ್ಲ. ಎಲ್ಲರೂ ಉದ್ವಿಗ್ನ (tense) ಸ್ಥಿತಿಯಲ್ಲಿದ್ದ ಸಮಯದಲ್ಲಿ ಉಂಟಾಗಿದ್ದ ಗೊಂದಲ ಅಷ್ಟೇ. ನಮಗೂ ಈಗ ಗೊತ್ತಾಗಿತ್ತು, ವಿಕ್ಕಿ ಮಲ್ಹೋತ್ರಾ ಏಕೆ ಅವರನ್ನು 'ಸರ್' ಎಂದು ಸಂಬೋಧಿಸುತ್ತಿದ್ದ ಎಂದು. It was a big misunderstanding.

ಮಾಜಿ ಐಬಿ ಡೈರೆಕ್ಟರ್ ಎಂದು ಹೇಳಿಕೊಂಡ ಆ ವ್ಯಕ್ತಿ ದೆಹಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡದಿದ್ದರೆ ಬ್ರೇಕಿಂಗ್ ನ್ಯೂಸ್ ಸೃಷ್ಟಿಯಾಗುತ್ತಿರಲಿಲ್ಲ. ಬೇರೆ ಬೇರೆ ರಕ್ಷಣಾ ಇಲಾಖೆಗಳ ಕಾರ್ಯಾಚರಣೆಗಳು, ಕೌಂಟರ್ ಕಾರ್ಯಾಚರಣೆಗಳು ಸದಾ ನಡೆಯುತ್ತಿರುತ್ತವೆ. ಸಮನ್ವಯತೆಯನ್ನು (coordination) ಸಾಧಿಸಲು ಪ್ರಯತ್ನಿಸಿದರೂ ಒಮ್ಮೊಮ್ಮೆ ಹೀಗೆ ಸಂಘರ್ಷ ಉಂಟಾಗುತ್ತದೆ. ಆದರೆ ಈ ಸಂಘರ್ಷ ತುಂಬಾ ವಿವಾದಾತ್ಮಕ ಸ್ವರೂಪ ಪಡೆದುಕೊಂಡಿತು. ಮಾಧ್ಯಮಗಳು ತುಂಬಾ ದಿನಗಳ ಕಾಲ ಇದರ ಬಗ್ಗೆ ಊಹಾಪೋಹದ ವರ್ಣರಂಜಿತ ವರದಿಗಳನ್ನು ಪ್ರಕಟಿಸಿದವು. ಅವುಗಳಿಗೆ ಹಬ್ಬ. 

ಅನೇಕ ವರ್ಷಗಳ ನಂತರ, ಕೇಂದ್ರ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಒಬ್ಬರು ಹೇಳಿದರು: ಮಾಜಿ ಐಬಿ ಡೈರೆಕ್ಟರ್ ಅವರು ಛೋಟಾ ರಾಜನ್ ಗ್ಯಾಂಗಿನ ಸದಸ್ಯರಾದ ವಿಕ್ಕಿ ಮಲ್ಹೋತ್ರಾ, ಫರೀದ್ ತನಾಶಾ ಮುಂತಾದವರನ್ನು ದಾವೂದ್ ಇಬ್ರಾಹಿಂನನ್ನು ಅರಬ್ ಕೊಲ್ಲಿಯ ದೇಶವೊಂದರಲ್ಲಿ ರಹಸ್ಯವಾಗಿ ಹತ್ಯೆ ಮಾಡುವ ಮಹತ್ವದ ಕಾರ್ಯಾಚರಣೆಯೊಂದಕ್ಕೆ ಸಿದ್ಧಗೊಳಿಸುತ್ತಿದ್ದರು. ದಾಳಿ ಮಾಡಿ ಬಂಧಿಸುವ ಮೂಲಕ ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಆ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದರು. 

ಆದರೆ ಇದೊಂದು ಶುದ್ಧ ಸುಳ್ಳು. ಮುಂಬೈ ಪೊಲೀಸರು ತಮಗೆ ಬೇಕಾಗಿದ್ದ ಪಾತಕಿಗಳನ್ನು ಹುಡುಕಿಕೊಂಡು ಹೋಗಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದರು. ಅಷ್ಟೇ ವಿಷಯ. ದಾವೂದ್ ಇಬ್ರಾಹಿಂನ ಋಣದಲ್ಲಿದ್ದ ಮುಂಬೈ ಪೊಲೀಸರು ಅವನನ್ನು ಬಚಾವು ಮಾಡಲು ಹೀಗೆ ಮಾಡಿದರು ಎನ್ನುವ  ಕಲ್ಪಿತ ಸುದ್ದಿ ನಿಷ್ಠಾವಂತಹ ಅಧಿಕಾರಿಗಳಿಗೆ ತುಂಬಾ ಬೇಸರವನ್ನು ಉಂಟುಮಾಡಿತ್ತು. ಆದರೆ ನಮ್ಮ ಆತ್ಮಸಾಕ್ಷಿ ಸ್ವಚ್ಛವಾಗಿತ್ತು. Our conscience was clear. ಅಷ್ಟು ಸಾಕು. 

ಹಿಂದೊಮ್ಮೆ ನಾನು ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದಾಗ ನೀರಜ್ ಕುಮಾರ್ ನನ್ನ ಮೇಲಧಿಕಾರಿಯಾಗಿದ್ದರು. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಸಿಬಿಐನಲ್ಲಿ ಕೆಲಸ ಮಾಡಿದ ನಂತರ ದೆಹಲಿ ಮತ್ತು ಸುತ್ತುಮುತ್ತಲಿನ ಜಾಗಗಳಲ್ಲಿ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಈ ಕಾರ್ಯಾಚರಣೆಯ ಪ್ಲಾನಿಂಗ್ ಮಾಡುವಾಗ ನೀರಜ್ ಕುಮಾರ್ ಅವರಿಗೆ ಈ ವಿಷಯ ತಿಳಿಸಿ, ಅವರ ಮೂಲಕ ದೆಹಲಿಯಲ್ಲಿ ಸ್ಥಳೀಯ ಬೆಂಬಲ ಪಡೆಯಲೇ ಎಂದು ಒಮ್ಮೆ ಯೋಚಿಸಿದ್ದೆ. ದೆಹಲಿ ಕ್ರೈಂ ಬ್ರಾಂಚಿನ ಖ್ಯಾತ ಅಧಿಕಾರಿ ಎನ್ಕೌಂಟರ್ ಸ್ಪೆಷಲಿಸ್ಟ್ ರಾಜಬೀರ್ ಸಿಂಗ್ ನೀರಜ್ ಕುಮಾರರ ಖಾಸ್ ಅಧಿಕಾರಿಯಾಗಿದ್ದರು. ರಾಜಬೀರ್ ಸಿಂಗ್ ದೆಹಲಿ ಭೂಗತಲೋಕದ ಬಗ್ಗೆ ಅದ್ಭುತ ಮಾಹಿತಿ ಮತ್ತು ಹಿಡಿತ ಹೊಂದಿದ್ದರು. ಆದರೆ ಈ ಕಾರ್ಯಾಚರಣೆ ತುಂಬಾ ಮಹತ್ವದ್ದಾಗಿತ್ತು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಹಾಗಾಗಿ ದೆಹಲಿ ಪೊಲೀಸರನ್ನು ಸಂಪರ್ಕಿಸಿ ಸಹಕಾರ ಕೋರುವ ಆಲೋಚನೆಯನ್ನು ಕೈಬಿಟ್ಟೆ. ನಂತರ ತಿಳಿದಿದ್ದೇನೆಂದರೆ ದೆಹಲಿಯಲ್ಲಿ ವಿಕ್ಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ಬಹುಶಃ ರಾಜಬೀರ್ ಸಿಂಗರ ಮಾಹಿತಿದಾರರಾಗಿ (informants) ಕೆಲಸ ಮಾಡುತ್ತಿದ್ದರು. ಹಾಗೆ ಸಹಕರಿಸದ ಹೊರತೂ ಅವರಿಗೆ ದೆಹಲಿಯಲ್ಲಿದ್ದುಕೊಂಡು ತಮ್ಮ ಪಾತಕವೃತ್ತಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭೂಗತಲೋಕದ ಪಾತಕಿಗಳು ಕೆಲಸ ಮಾಡುವುದೇ ಹಾಗೆ. ಒಂದು ಸಂಸ್ಥೆಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಾ, ಅವರಿಗೆ ಬೇಕಾದ ಮಾಹಿತಿ ಕೊಡುತ್ತಾ, ಅವರು ಹೇಳಿದ ಕೆಲಸಗಳನ್ನು ಮಾಡಿಕೊಡುತ್ತಾ, ಅವರಿಂದ ಒಂದು ತರಹದ ಛತ್ರಛಾಯೆಯನ್ನು (protection) ಪಡೆದುಕೊಂಡು, ಬೇರೆ ಕಡೆ ಹಾವಳಿ ಮಾಡುವುದು. 

ಕೊನೆಯಲ್ಲಿ ವಿಕ್ಕಿ ಮಲ್ಹೋತ್ರಾನಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ ಕೇಸಿನಲ್ಲಿ ಶಿಕ್ಷೆಯಾಯಿತು. ಫರೀದ್ ತನಾಶಾ ಜಾಮೀನಿನ ಮೇಲೆ ಹೊರಗಿದ್ದ. ಒಂದು ದಿನ ಮುಂಬೈನ ಅವನ ಮನೆಯ ಬೆಡ್ರೂಮಿನಲ್ಲಿದ್ದ. ಅಲ್ಲಿಗೆ ಬಂದ ಭೂಗತಲೋಕದ ಹಂತಕರು ಗುಂಡಿನ ಸುರಿಮಳೆಗೈದು ಅವನನ್ನು ಕೊಂದು ಹಾಕಿದರು. 

ಕಾರ್ಯಾಚರಣೆಯ ಸಮಯದಲ್ಲಿ ನಮ್ಮ ಡಿಸಿಪಿಯವರು ವಿಮಾನವನ್ನು ತಪ್ಪಿಸಿಕೊಂಡಿದ್ದರಿಂದ ವೇದ್ಯವಾಗಿದ್ದೇನೆಂದರೆ ಕ್ರೈಂ ಬ್ರಾಂಚಿನ ನಿರ್ವಹಣೆಗೆ ಇನ್ನೊಬ್ಬ ಡಿಸಿಪಿ ಬೇಕು. ಒಬ್ಬರಿಗೇ ಕೆಲಸ ಜಾಸ್ತಿಯಾಗುತ್ತದೆ. ಹಾಗಾಗಿ ಮತ್ತೊಂದು ಡಿಸಿಪಿ ಹುದ್ದೆಯನ್ನು ಸೃಷ್ಟಿಸಲಾಯಿತು. 

ಇನ್ಸಪೆಕ್ಟರ್ ಪಾಟೀಲ್ ಎಸಿಪಿ ಹುದ್ದೆಗೆ ಬಡ್ತಿ ಪಡೆದರು. ಈಗ ನಿವೃತ್ತರಾಗಿದ್ದಾರೆ. ತಮ್ಮ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಖುಷಿಯಾಗಿದ್ದಾರೆ. 

ಅಂದ ಹಾಗೆ ಆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಿವೃತ್ತ ಐಬಿ ಡೈರೆಕ್ಟರ್ - ಅಜಿತ್ ದೋವಾಲ್. ಅವರು ಮುಂದೆ ೨೦೧೪ ರಲ್ಲಿ ರಾಷ್ಟ್ರೀಯ  ಭದ್ರತಾ ಸಲಹೆಗಾರ ಎಂದು ನಿಯೋಜಿಸಲ್ಪಟ್ಟರು. 

ಸತ್ಯ ಯಾವಾಗಲೂ ವಿಚಿತ್ರವಾಗಿರುತ್ತದೆ. ಕಲ್ಪನೆಗಿಂತಲೂ ಸತ್ಯ ವಿಚಿತ್ರವಾಗಿರುತ್ತದೆ ಎಂದು ಲಾರ್ಡ್ ಬೈರನ್ ಸುಮ್ಮನೇ ಹೇಳಿಲ್ಲ ತಾನೇ!? 

***

ಭಾರತದ ಇಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತುಂಬಾ ಪ್ರಸಿದ್ಧ ಬೇಹುಗಾರ. ಅವರ ವೃತ್ತಿಜೀವನದ 'ದಂತಕಥೆಗಳು' (legends) ಅವರಿಗಿಂತ ಖ್ಯಾತವಾಗಿದ್ದವು. His reputation preceded him. ೨೦೧೪ ರಲ್ಲಿ ಮೋದಿ ಮೊದಲ ಬಾರಿಗೆ ಗೆದ್ದು ಬಂದಾಗ ಎಲ್ಲಕ್ಕಿಂತ ಎದ್ದು ಕಂಡಿದ್ದು ಅಜಿತ್ ದೋವಲ್ ಅವರ ನೇಮಕಾತಿ. ಹತ್ತು ವರ್ಷಗಳ ಹಿಂದೆಯೇ ಅವರ ಬಗ್ಗೆ ಆಗಲೇ ಸಂಗ್ರಹಿಸಿದ್ದ ಮಾಹಿತಿ ಆಧಾರದ ಮೇಲೆ 'ಅಜಿತ್ ಕುಮಾರ್ ದೋವಲ್' ಎಂಬ ಖತರ್ನಾಕ್ ಮಾಜಿ ಗೂಢಚಾರ ಈಗ ಹೊಸ 'ರಾಷ್ಟ್ರೀಯ ಭದ್ರತಾ ಸಲಹೆಗಾರ' ಎಂಬ ಬ್ಲಾಗ್ ಲೇಖನ ಬರೆದಿದ್ದೆ.

ಆ ಲೇಖನದಲ್ಲಿ ಈ ವಿಕ್ಕಿ ಮಲ್ಹೋತ್ರಾ ಘಟನೆ ಬಗ್ಗೆ ಕೂಡ ಬರೆದಿದ್ದೆ. ಆಗಲೇ ಅದೆಲ್ಲ ವಿಷಯ ಸಾರ್ವಜನಿಕವಾಗಿ ಲಭ್ಯವಿತ್ತು. ವಿಕ್ಕಿ ಮಲ್ಹೋತ್ರಾ ಮತ್ತು ಇತರೆ ಛೋಟಾ ರಾಜನ್ ಬಂಟರನ್ನು ಉಪಯೋಗಿಸಿಕೊಂಡು ದಾವೂದ್ ಇಬ್ರಾಹಿಂನನ್ನು ಹತ್ಯೆ ಮಾಡುವ ಯೋಜನೆಯನ್ನು ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಹಾಳುಗೆಡವಿದರೇ ಎನ್ನುವ ಪಿಸುಮಾತು ಕೂಡ ಅಂತರ್ಜಾಲದಲ್ಲಿ ಕಂಡಿತ್ತು. ಆದರೆ ಆಗಿನ್ನೂ ಯಾರೂ ಅಧಿಕೃತವಾಗಿ ಹೇಳಿರಲಿಲ್ಲ.

ಆರ್ ಕೆ ಸಿಂಗ್ ಮೊದಲು ಗೃಹ ಕಾರ್ಯದರ್ಶಿಯಾಗಿದ್ದರು. ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಬಂದರು. ಬಿಜೆಪಿ ಸೇರಿ ಮಂತ್ರಿಯೂ ಆದರು. ಅವರು ಈ ಘಟನೆಯ ಬಗ್ಗೆ ಪ್ರಸ್ತಾಪಿಸುತ್ತಾ, ಮುಂಬೈ ಪೊಲೀಸರು ದಾವೂದನ ಋಣದಲ್ಲಿದ್ದರು. ಹಾಗಾಗಿ ವಿಕ್ಕಿ ಮಲ್ಹೋತ್ರಾ ಮತ್ತಿತರರನ್ನು ಬಂಧಿಸಿ, ದಾವೂದ್ ಹತ್ಯೆಯ ಪ್ರಯತ್ನವನ್ನು ವಿಫಲಗೊಳಿಸಿದ್ದರು, ಎಂದು ಹೇಳಿದ್ದು ದೊಡ್ಡ ಸಂಚಲನ ಮೂಡಿಸಿತ್ತು. 

"Former Home Secretary RK Singh alleges that Mumbai police officials deliberately sabotaged Operation Dawood because of their close ties with the underworld gangster."

ಆ ಸಮಯದಲ್ಲಿ ಮುಂಬೈನ ಕ್ರೈಂ ಬ್ರಾಂಚಿನ ಮುಖ್ಯಸ್ಥ ಯಾರಾಗಿದ್ದರು ಎಂದು ಹುಡುಕಿದರೆ ಸಿಕ್ಕ ಹೆಸರು ಈ ಮೇಡಂ ಅವರದ್ದೇ. ಶ್ರೀಮತಿ ಮೀರನ್ ಛಡ್ಡಾ ಬೋರ್ವನಕರ್. ಶುದ್ಧಹಸ್ತದ ಕಟ್ಟುನಿಟ್ಟಿನ ನಿಷ್ಠಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಅವರ ಆಡಳಿತ ಕಾಲದಲ್ಲಿ ಈ ವಿವಾದಾತ್ಮಕ ಕಾರ್ಯಾಚರಣೆಯಾಗಿತ್ತೇ ಎಂದು ಆಶ್ಚರ್ಯವಾಗಿತ್ತು. ಆಗ ಮೇಡಂ ಏನು ಪ್ರತಿಕ್ರಿಯೆ ಕೊಟ್ಟರು  ಎಂದು ಹುಡುಕಿದರೆ ಏನೂ ಸಿಕ್ಕಿರಲಿಲ್ಲ. ಪ್ರತಿಕ್ರಿಯೆಯನ್ನು ಅವರ ಪುಸ್ತಕದಲ್ಲಿ ಈಗ ಕೊಟ್ಟಿದ್ದಾರೆ. ಪುಸ್ತಕದ ಬಿಡುಗಡೆಯ ನಂತರ ಪುಸ್ತಕದ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಂವಾದ ಗೋಷ್ಠಿಗಳಲ್ಲಿಈ ಘಟನೆಯ ಬಗ್ಗೆ ಮತ್ತಿಷ್ಟು ಮಾತಾಡಿದ್ದಾರೆ ಪೊಲೀಸ್ ಮೇಡಂ. ಯೂಟ್ಯೂಬ್ ಮೇಲೆ ಹುಡುಕಿದರೆ ನಿಮಗೆ ಸಿಗುತ್ತವೆ.

ಮುಂಬೈ ಪೋಲೀಸ್ ಇಲಾಖೆಯ ಒಂದು ದೊಡ್ಡ ಬಣ ದಾವೂದನಿಗಾಗಿ ಕೆಲಸ ಮಾಡುತ್ತಿದ್ದುದು ಏನೂ ರಹಸ್ಯವಾಗಿರಲಿಲ್ಲ. ಅನಾದಿ ಕಾಲದಿಂದಲೂ ಅದು ನಡೆದುಕೊಂಡೇ ಬಂದಿದೆ. ಖುದ್ದು ಪೊಲೀಸ್ ಪೇದೆಯ ಮಗನಾದ ದಾವೂದ್ ಎಲ್ಲ ರಂಗಗಳ ಪ್ರಮುಖರ ಜೊತೆ ಸಂಬಂಧಗಳನ್ನು ತುಂಬಾ ಚೆನ್ನಾಗಿ ಬೆಳೆಸಿಕೊಂಡು, ಕಾಪಾಡಿಕೊಂಡು ಬಂದಿದ್ದಾನೆ. 

ದಾವೂದನನ್ನು ಇವತ್ತಿಗೂ ಜೀವಂತವಾಗಿ ಇಟ್ಟಿರುವುದೇ ಅವನು ದೇಶ, ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳ ಜೊತೆ ಹೊಂದಿರುವ ತುಂಬಾ ಚೆನ್ನಾಗಿರುವ ಮತ್ತು ಪರಸ್ಪರರಿಗೆ ಸಹಕಾರಿಯಾಗಿರುವ (mutually beneficial) ಸಂಬಂಧಗಳು. ೧೯೮೦ ರ ದಶಕದಲ್ಲೇ ಸಿಐಎ ದಾವೂದ್ ಇಬ್ರಾಹಿಂನನ್ನು 'ಉಪಯುಕ್ತ ವ್ಯಕ್ತಿ' ಎಂದು ತನ್ನ ಛತ್ರಛಾಯೆಯಡಿ ಎಳೆದುಕೊಂಡಿತ್ತು ಎಂದು ಲ್ಯಾರಿ ಕೋಲ್ಬ್ ಎಂಬ ಸಿಐಎ ಮಾಜಿ ಬೇಹುಗಾರ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. (ಅದನ್ನು ಆಧಾರಿಸಿ ಹಿಂದೊಮ್ಮೆ ಬರೆದ ಲೇಖನ - ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!)

ಹೀಗಾಗಿ ಮುಂಬೈ ಪೊಲೀಸರ ಒಂದು ಬಣ ಮೇಲಧಿಕಾರಿಗಳಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ, ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ದಾವೂದನಿಗೆ ಸಹಾಯ ಮಾಡಿರಬಹುದು. ಅಂತಹ ಸಾಧ್ಯತೆಗಳು ಅನೇಕ. ದಾವೂದನಿಗೆ ಮುಂಬೈ ಪೊಲೀಸರಲ್ಲಿ ಒಂದೇ ಅಲ್ಲ ಎಲ್ಲ ಕಡೆ ವ್ಯಾಪಕವಾದ ಮತ್ತು ಆಳವಾದ ಸಂಪರ್ಕಗಳು ಇವೆ. ೧೯೯೩ ರ ಬಾಂಬ್ ಸ್ಪೋಟದ ನಂತರ, ದೇಶ ತೊರೆಯಲು, ದಾವೂದ್ ಕುಟುಂಬಕ್ಕೆ ತುರ್ತಾಗಿ ಪಾಸ್ಪೋರ್ಟ್ ಮಾಡಿಸಿಕೊಡಲು ಅಂದಿನ ಕೇಂದ್ರ ಸರ್ಕಾರದ ಮಂತ್ರಿಗಳು, ಅಧಿಕಾರಿಗಳು ಸಹಾಯ ಮಾಡಿದ್ದರು. ಕಲ್ಪನಾಥ್ ರಾಯ್ ಎಂಬ ಮಾಜಿ ಕೇಂದ್ರ ಮಂತ್ರಿ ದಾವೂದ್ ಬಣಕ್ಕೆ ಸೇರಿದ ಹಂತಕರಿಗೆ ಆಶ್ರಯ ಕೊಟ್ಟಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದರು. ಹಾಗಾಗಿ ಯಾವ ಮೂಲಗಳಿಂದ ಮಾಜಿ ಐಬಿ ಡೈರೆಕ್ಟರ್ ಛೋಟಾ ರಾಜನ್ ಬಂಟರನ್ನು ಉಪಯೋಗಿಸಿಕೊಂಡು ಮಾಡುತ್ತಿದ್ದರು ಎಂದು ಹೇಳಲಾದ ಕಾರ್ಯಾಚರಣೆಯ ರಹಸ್ಯ ಬಯಲಾಯಿತು ಎಂದು ಹೇಳಲು ಸಾಧ್ಯವಿಲ್ಲ.

ಅಸ್ಲಮ್ ಮೊಮಿನ್, ಮಿಲನ್ ಕೋಯಲ್ ಎಂಬ ಮುಂಬೈ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ದಾವೂದ್ ಬಣದ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ನೌಕರಿಯಿಂದ ಡಿಸ್ಮಿಸ್ ಮಾಡಲಾಗಿತ್ತು. ಅಂತವರನ್ನು ಬಿಟ್ಟು ಇನ್ನೆಷ್ಟು ಜನರು ಶಾಮೀಲಾಗಿದ್ದರೋ ದೇವರಿಗೇ ಗೊತ್ತು. (ಕು)ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಕೂಡ ಇದೇ ಕಾರಣಕ್ಕೆ ಡಿಸ್ಮಿಸ್ ಆಗಿದ್ದರು. ಮುಂದೆ ಅವರು ಮಹಾರಾಷ್ಟ್ರ ಆಡಳಿತ ಟ್ರಿಬ್ಯೂನಲ್ಲಿಗೆ ಹೋಗಿ ನೌಕರಿ ವಾಪಸ್ ಪಡೆದುಕೊಂಡು ಬಂದರು. ಆ ಮಾತು ಬೇರೆ. 

ಮುಂಬೈನ ಕರಾಳ ರೂಪದ ಬಗ್ಗೆ 'ಮ್ಯಾಕ್ಸಿಮಮ್ ಸಿಟಿ' ಎನ್ನುವ ಅದ್ಭುತ ಪುಸ್ತಕ ಬರೆದಿರುವ ಸುಕೇತು ಮೆಹತಾ ತಮಗೆ ಖುದ್ದಾಗಿ ಗೊತ್ತಿರುವ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. ಕ್ರೈಂ ಬ್ರಾಂಚಿನ ಪೊಲೀಸರು ಛೋಟಾ ಶಕೀಲನ ಬಂಟನೊಬ್ಬನನ್ನು ಎತ್ತಾಕಿಕೊಳ್ಳುತ್ತಾರೆ. ಎನ್ಕೌಂಟರ್ ಮಾಡಿ ಎಸೆಯೋಣ ಎಂದುಕೊಳ್ಳುತ್ತಾರೆ. ಆದರೂ ಇರಲಿ ಎಂದು ಸೀದಾ ಛೋಟಾ ಶಕೀಲನಿಗೇ ಫೋನ್ ಮಾಡುತ್ತಾರೆ. ನಿನ್ನ ಬಂಟನ ಜೀವಕ್ಕೆ ಬೆಲೆ ಕಟ್ಟುತ್ತೀಯಾ ಎಂದು ವ್ಯವಹಾರಕ್ಕೆ ಇಳಿಯುತ್ತಾರೆ. ಛೋಟಾ ಶಕೀಲ್ ಅದೆಷ್ಟೋ ಲಕ್ಷ ರೂಪಾಯಿಗಳನ್ನು ಎಸೆದು ನಕಲಿ ಎನ್ಕೌಂಟರಿಗೆ ಬಲಿಯಾಗಲಿದ್ದ ತನ್ನ ಬಂಟನನ್ನು ಉಳಿಸಿಕೊಳ್ಳುತ್ತಾನೆ. ಹೇಗಿದೆ ವ್ಯವಹಾರ!?

ಪೊಲೀಸರನ್ನು ಕೇಳಿದರೆ, ಭೂಗತಲೋಕದ ಬಗೆಗಿನ ಮಾಹಿತಿಗಳು ಭೂಗತಲೋಕದವರಿಂದಲೇ ಬರುತ್ತವೆ. ಹಾಗಾಗಿ ಅವರ ಸಂಪರ್ಕದಲ್ಲಿರಬೇಕಾಗುತ್ತದೆ. ಇದೆಲ್ಲ ಮೇಲಧಿಕಾರಿಗಳಿಗೂ ಗೊತ್ತಿರುತ್ತದೆ. ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು, ಮೇಲಧಿಕಾರಿಗಳು ಬದಲಾದಾಗ ಅಥವಾ ನಮ್ಮ ಉಪಯುಕ್ತತೆ ಮುಗಿದಾಗ ನಮ್ಮನ್ನು ತಿಂದು ಮುಗಿಸಿದ ಹಣ್ಣಿನ ಸಿಪ್ಪೆಯ ಹಾಗೆ ಎಸೆಯುತ್ತಾರೆ. ಡಿಸ್ಮಿಸ್, ಸಸ್ಪೆಂಡ್ ಮಾಡುತ್ತಾರೆ ಎಂದು ಅವರ ಗೋಳು.ಒಟ್ಟಿನಲ್ಲಿ ಪೊಲೀಸರಿಗೆ ಭೂಗತಲೋಕದೊಂದಿಗೆ ವಿವಿಧ ರೀತಿಯ ಗಳಸ್ಯ ಕಂಠಸ್ಯ ಸಂಬಂಧ ಇರುವುದು ಮಾತ್ರ ಸತ್ಯ. ಕೆಲವರು ಅದನ್ನು ಸ್ವಾಮಿ ಕಾರ್ಯಕ್ಕೆ ಮಾತ್ರ ಬಳಸಿಕೊಂಡರೆ ಕೆಲವರು ಅದನ್ನು ಕೇವಲ ಸ್ವಕಾರ್ಯಗಳಿಗೂ ಬಳಸಿಕೊಳ್ಳುತ್ತಾರೆ.  

ಸಂಜಯ್ ಶಿಂಧೆ ಎಂಬ ಕುಖ್ಯಾತ ಇನ್ಸಪೆಕ್ಟರ್ ಒಬ್ಬರು ದುಬೈನಲ್ಲಿದ್ದ ಭೂಗತ ಪಾತಕಿ ಅಬು ಸಲೇಮ್ ಪರವಾಗಿ ಖುದ್ದು ಅಪಹರಣದ ಸಮನ್ವಯಕಾರ (kidnap coordinator) ಆಗಿ ನಿಂತಿದ್ದರು. ಆಗ ಅಮಾನತ್ತಾಗಿದ್ದರೂ ಪಾಠ ಕಲಿಯದೇ ಮುಂದೆ ಮತ್ತೊಬ್ಬ ಪಾತಕಿ ವಿಜಯ ಪಾಲಿಂಡೆಗೆ ಪೊಲೀಸ್ ಕಸ್ಟಡಿಯಿಂದ ಪಾರಾಗಿ ಹೋಗಲು ನೆರವಾಗಿದ್ದರು. ಹೀಗೆ ಖಾಕಿಯೊಳಗಿರಬಹುದಾದ ಖದೀಮರು ಅನೇಕರು.

ಹಾಗಾಗಿ ಮಾಜಿ ಐಬಿ ಡೈರೆಕ್ಟರ್ ರೂಪಿಸುತ್ತಿದ್ದ ರಹಸ್ಯ ಕಾರ್ಯಾಚರಣೆ ವಿಫಲವಾಗಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ. ಆದರೆ ಗಟ್ಟಿ ಸಾಕ್ಷ್ಯ ಸಿಗದ ಹೊರತೂ ಅದನ್ನು ಮುಂಬೈ ಪೋಲೀಸರ ತಲೆಗೆ ಕಟ್ಟುವಂತೆಯೂ ಇಲ್ಲ. 

***

ಶ್ರೀಮತಿ ಮೀರನ್ ಛಡ್ಡಾ ಬೋರ್ವನಕರ್ ಒಬ್ಬ ಅದ್ಭುತ ಪೊಲೀಸ್ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ೧೯೮೧ ರ ಬ್ಯಾಚಿನ ಏಕೈಕ ಮಹಿಳಾ ಐಪಿಎಸ್ ಅಧಿಕಾರಿ. ಭಾರತದ ಸ್ಕಾಟ್ಲೆಂಡ್ ಯಾರ್ಡ್ ಎಂದೇ ಬಣ್ಣಿಸಲ್ಪಡುವ ಮುಂಬೈ ಕ್ರೈಮ್ ಬ್ರಾಂಚಿನ ಪ್ರಪ್ರಥಮ ಮಹಿಳಾ ಮುಖ್ಯಸ್ಥೆ. ೨೬/೧೧ ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಪಾಕಿಸ್ತಾನಿ ಉಗ್ರ ಕಸಬ್ ನನ್ನು ಗಲ್ಲಿಗೆ ಹಾಕಿದ ಜೈಲಿನ ಉಸ್ತುವಾರಿ ಅಧಿಕಾರಿ ಕೂಡ.

ತುಂಬಾ ಕಷ್ಟದ ವೇಳೆಯಲ್ಲಿ ಮುಂಬೈ ಕ್ರೈಂ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡರು. ೨೦೦೩ ರಲ್ಲಿ ಮುಂಬೈ ಪೊಲೀಸ್ ಇಲಾಖೆಯ ಮಾನ ಮೂರಾಬಟ್ಟೆಯಾಗಿತ್ತು. ಅಬ್ದುಲ್ ಕರೀಂ ತೆಲಗಿ ಎಂಬಾತ ಅನೇಕ ಹಿರಿಯ ಅಧಿಕಾರಿಗಳ ಸಮವಸ್ತ್ರ ಕಳಚಿ ಪೂರ್ತಿ ಪೊಲೀಸ ವ್ಯವಸ್ಥೆಯನ್ನೇ ನಗ್ನಗೊಳಿಸಿ ಎಲ್ಲರೂ ನಗುವಂತೆ ಮಾಡಿದ್ದ. ೨೦೦೩ ರಲ್ಲಿ ಮುಂಬೈನ ಪೊಲೀಸ್ ಕಮಿಷನರ್  ರಂಜಿತ್  ಶರ್ಮಾ, ಕ್ರೈಂ ಬ್ರಾಂಚಿನ ಚೀಫ್ ಶ್ರೀಧರ್ ವಾಗಲ್, ಎನ್ಕೌಂಟರ್ ಸ್ಪೆಷಲಿಸ್ಟುಗಳ ರಾಜ ಪ್ರದೀಪ್ ಸಾವಂತ, ಮತ್ತೂ ಅನೇಕ ಅಧಿಕಾರಿಗಳು ನಕಲಿ ಛಾಪಾ ಕಾಗದ ಹಗರಣದಲ್ಲಿ ಕೇವಲ ನೌಕರಿಯಿಂದ ಸಸ್ಪೆಂಡ್ ಆಗಿದ್ದೊಂದೇ ಅಲ್ಲ ಜೈಲಿಗೆ ಸಹ ಕಳಿಸಲ್ಪಟ್ಟಿದ್ದರು. ನಂತರ, ನಿರೀಕ್ಷಿಸಿದಂತೆ,  ಯಾರ ಮೇಲೂ ಆರೋಪ ಸಾಬೀತಾಗಲಿಲ್ಲ. ಆ ಮಾತು ಬೇರೆ. ಆದರೆ ಮುಂಬೈ ಪೊಲೀಸ್ ವ್ಯವಸ್ಥೆಯ ಪ್ರತಿಷ್ಠೆ ಮಾತ್ರ ಆಗ ಪಾತಾಳಕ್ಕೆ ಕುಸಿದಿದ್ದು ಮುಂದೆಂದೂ ವಾಪಸ್ ಬರಲೇ ಇಲ್ಲ.

ಅಂತಹ ಕಠಿಣ ಪರಿಸ್ಥಿತಿಯಲ್ಲಿ, ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಗೃಹಮಂತ್ರಿ ಆರ್ ಆರ್ ಪಾಟೀಲರು ಖುದ್ದಾಗಿ, ಅನೇಕ ವಿರೋಧಗಳ ನಡುವೆಯೂ, ಶ್ರೀಮತಿ ಮೀರನ್ ಅವರನ್ನು ಕ್ರೈಂ ಬ್ರಾಂಚ್ ಮುಖ್ಯಸ್ಥೆ ಎನ್ನುವ ಅತಿ ಮುಖ್ಯ ಹುದ್ದೆಗೆ ನೇಮಕ ಮಾಡಿದ್ದರು. ಮಂತ್ರಿ ಪಾಟೀಲರ ಪ್ರಕಾರ ಆ ಸಮಯದಲ್ಲಿ ಕ್ರೈಂ ಬ್ರಾಂಚ್ ಸಂಬಾಳಿಸಲು ಒಬ್ಬ ತಣ್ಣನೆಯ ಮನಸ್ಥಿತಿಯ, ತೀಕ್ಷ್ಣ ಬುದ್ಧಿಯ, ನೇರ, ಖಡಕ್, ಪ್ರಚಾರಪ್ರಿಯರಲ್ಲದ ಅಧಿಕಾರಿಯ ಜರೂರತ್ತಿತ್ತು. ಮಾತಾಡದೇ ಕೆಲಸ ಮಾಡಿ ತೋರಿಸುವ ಅಧಿಕಾರಿ ಬೇಕಾಗಿತ್ತು. ಅದಕ್ಕೆ ಮೀರನ್ ಅವರಿಗಿಂತ ಒಳ್ಳೆ ಅಧಿಕಾರಿ ಸಿಗುತ್ತಿರಲಿಲ್ಲ ಎಂದರಂತೆ ಪಾಟೀಲ್. 

ಹುದ್ದೆಯನ್ನು ಒಪ್ಪಿಕೊಳ್ಳುವ ಮುನ್ನ ಮೀರನ್ ಮೇಡಂ ಹೊಸ ಹುದ್ದೆಯ ಪ್ರಮುಖ ಆದ್ಯತೆಗಳ ಬಗ್ಗೆ ಕೇಳಿದರಂತೆ. 'ತಲೆನೋವಾಗಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳನ್ನು ಸಂಬಾಳಿಸು ತಾಯೇ,' ಎಂದು ಉಧೋ ಎನ್ನುತ್ತಾ ಎದ್ದು ಹೋಗಿದ್ದರಂತೆ ಪಾಟೀಲ್. ಕೆಲವು ವರ್ಷಗಳ ಹಿಂದೆ, ನಿಯಂತ್ರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ತಲುಪಿದ್ದ ಭೂಗತಜಗತ್ತನ್ನು ಮಟ್ಟ ಹಾಕಲು ಎನ್ಕೌಂಟರ್ ಒಂದೇ ಮಾರ್ಗ ಎಂದು, ಸರಿಯಾಗೇ, ನಿರ್ಧರಿಸಿದ್ದ ಅಂದಿನ ಸರ್ಕಾರ, ಖಡಕ್ ಅಧಿಕಾರಿಗಳಿಗೆ ಕುಖ್ಯಾತ ಪಾತಕಿಗಳ ಎನ್ಕೌಂಟರ್ ಮಾಡಲು ಮೌಖಿಕ ಅನುಮತಿ ನೀಡಿತ್ತು. ೧೯೯೫ ರಿಂದ ಶುರುವಾದ ಎನ್ಕೌಂಟರ್ ಯುಗ ಸುಮಾರು ೨೦೦೫ ರ ವರೆಗೂ ನಡೆಯಿತು. ಈ ಕ್ರಮ ಭೂಗತಲೋಕವನ್ನು ಮಟ್ಟ ಹಾಕಲು ಸಹಕಾರಿಯಾದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನೇಕ ವಿವಾದಗಳಿಗೆ ಒಳಗಾದವು. ಮಾನವ ಹಕ್ಕುಗಳ ಸಂಘಟನೆಗಳು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದವು. ಮೊದಮೊದಲು ನಿಯತ್ತಾಗಿ ಎನ್ಕೌಂಟರ್ ಮಾಡಿದ ಅಧಿಕಾರಿಗಳು ತದನಂತರ ವ್ಯವಸ್ಥೆಯನ್ನೇ ಮೀರಿ ಬೆಳೆದುಬಿಟ್ಟರು. ಅವರ ಪರಿವರ್ತನೆಯನ್ನು ಗಮನಿಸಿದ ನಿವೃತ್ತ ಅಧಿಕಾರಿಯೊಬ್ಬರು, 'ರಾಕ್ಷಸ ಸಂಹಾರಕ್ಕೆ ಹೋದವರೇ ರಾಕ್ಷಸರಾಗಿದ್ದು ದೊಡ್ಡ ವಿಪರ್ಯಾಸ ಮತ್ತು ದುರಂತ,' ಎಂದು ರಕ್ಷಕರಿಂದ ಭಕ್ಷಕರಾಗಿ ಪರಿವರ್ತಿತರಾಗಿದ್ದ ಹೆಚ್ಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಬಗ್ಗೆ ವಿಷಾದದ ಮಾತಾಡಿದ್ದರು. 'ಸಂಬಾಳಿಸಲು ಅಸಾಧ್ಯವಾದ ಹಂತ ಮುಟ್ಟಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು. ಆದರೆ ಅವರಿಂದ ಉತ್ತಮ ಕೆಲಸವನ್ನೂ ತೆಗೆಯುವುದು ಮುಖ್ಯ ಆದ್ಯತೆ,' ಎಂದು ಗೃಹ ಸಚಿವ ಪಾಟೀಲ್ ಹೇಳಿದ್ದರು. ಎಲ್ಲ ಎಲ್ಲೆ ಮೀರಿದ್ದ ಎನ್ಕೌಂಟರ್ ಅಧಿಕಾರಿಗಳನ್ನು ಹೇಗೆ ಸಂಬಾಳಿಸಿದೆ ಎನ್ನುವ ಬಗ್ಗೆ ಕೂಡ ಮೀರನ್ ಮೇಡಂ ವಿವರವಾಗಿ ಬರೆದಿದ್ದಾರೆ. 

ಸಿಐಡಿ ಅಧಿಕಾರಿಯಾಗಿ ಮೀರನ್ ಮೇಡಂ ತನಿಖೆ ಮಾಡಿದ ಅತಿ ಮುಖ್ಯ ಪ್ರಕರಣ ಜಲಗಾವ್ ಸೆಕ್ಸ್ ಸ್ಕ್ಯಾಂಡಲ್ ಇರಬೇಕು. ೧೯೯೦ ರ ದಶಕದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಹಗರಣ ಅದು. ಮಹಾರಾಷ್ಟ್ರದ ಜಲಗಾವ್ ಶಹರದಲ್ಲಿ ಕೆಲವು ವಿಕೃತ ಮನಸ್ಥಿತಿಯ ಪುಂಡರು ತಯಾರಾಗಿದ್ದರು. ಅವರಲ್ಲಿ ಕೆಲವರು ಯುವತಿಯರನ್ನು ಚುಡಾಯಿಸುವ ನೆಪದಲ್ಲಿ ಅವರನ್ನು ತಬ್ಬಿಕೊಳ್ಳುವುದು, ಚುಂಬಿಸುವುದು, ಅಲ್ಲಿಲ್ಲಿ ಕೈಬಿಡುವುದು ಇತ್ಯಾದಿ ಮಾಡುತ್ತಿದ್ದರು. ಜೊತೆಗೇ ಮತ್ತೊಂದು ಖತರ್ನಾಕ್ ಕೆಲಸ ಏನು ಮಾಡುತ್ತಿದ್ದರು ಅಂದರೆ ಫೋಟೋಗ್ರಾಫರ್ ಒಬ್ಬ ಆ ದುಷ್ಕೃತ್ಯಗಳ ಫೋಟೋ ತೆಗೆದುಬಿಡುತ್ತಿದ್ದ. ಆ ಫೋಟೋಗಳನ್ನು ತೋರಿಸಿ, ಯುವತಿಯರನ್ನು ಬ್ಲಾಕಮೇಲ್ ಮಾಡಿ, ಬಲವಂತದ ಲೈಂಗಿಕ ಸಂಬಂಧಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕೆಲವು ಸ್ಥಳೀಯ ರಾಜಕೀಯ ಪುಢಾರಿಗಳು ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ರಾಜಕಾರಣಿಗಳಿಗೆ ಅನೇಕ ಯುವತಿಯರನ್ನು ಆಹುತಿ ಕೊಟ್ಟರು. ಸುದ್ದಿ ಹೊರಗೆ ಬಂದಾಗ ದೇಶದ ಅತಿ ದೊಡ್ಡ ಲೈಂಗಿಕ ಹಗರಣವಾಗಿ ಇದು ಹೊರಹೊಮ್ಮಿತು. ಈ ಪ್ರಕರಣದ ಸಂಪೂರ್ಣ ತನಿಖೆ ಮಾಡಿ, ಸಾಕ್ಷ್ಯ ಹೇಳಲು ಹಿಂದೇಟು ಹಾಕುತ್ತಿದ್ದ ಯುವತಿಯರಿಗೆ ಮತ್ತು ಕುಟುಂಬಗಳಿಗೆ ಧೈರ್ಯ ತುಂಬಿ, ಕೆಳಗಿನ ನ್ಯಾಯಾಲಯದಲ್ಲಾದರೂ ಕಠಿಣ ಶಿಕ್ಷೆಯಾಗುವಂತೆ ಮಾಡಿದ್ದು ಮೀರನ್ ಮೇಡಂ. ಮುಂದೆ ಹೈಕೋರ್ಟಿನಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವರು ಖುಲಾಸೆಯಾದರು ಮತ್ತು ಕೆಲವರ ಶಿಕ್ಷೆ ಕಮ್ಮಿಯಾಯಿತು.

ಮುಂಬೈ ಕ್ರೈಂ ಬ್ರಾಂಚಿನ ಮುಖ್ಯಸ್ಥೆಯಾದಾಗ ಅವರಿಗೆ ಸುತ್ತಿಕೊಂಡ ಮತ್ತೊಂದು ವಿವಾದವೆಂದರೆ ಮುಂಬೈನಲ್ಲಿ ತನ್ನದೇ ಹವಾ ಮಡಗಿದ್ದ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ವಿರುದ್ಧ ಪೊಲೀಸರು ಮೃದು ಧೋರಣೆ ತೋರಿದ್ದಾರೆ ಮತ್ತು ಅವಳಿಗೆ ಅವಳ ಕಪ್ಪು ಕಾರ್ನಾಮೆಗಳನ್ನು ಮುಂದುವರೆಸಿಕೊಂಡು ಹೋಗಲು ಬಿಟ್ಟಿದ್ದಾರೆ. ಇಬ್ಬರು ವರದಿಗಾರರು ಇದನ್ನು ಮುಖಪುಟದಲ್ಲಿ ಹೆಚ್ಚಿನ ಮಸಾಲೆ ಹಾಕಿ ಬರೆದುಬಿಟ್ಟರು. ಇದನ್ನು ವೈಯಕ್ತಿಕ ಸಂಗ್ರಾಮದಂತೆ ಸ್ವೀಕರಿಸಿದ ಮೀರನ್ ಮೇಡಂ ಸುಪ್ರೀಂ ಕೋರ್ಟ್ ವರೆಗೆ ಹೋಗಿ ಆ ಪತ್ರಿಕೆ ಮತ್ತು ವರದಿಗಾರರು ಮುಖಪುಟದಲ್ಲೇ ಕ್ಷಮೆಯಾಚಿಸುವಂತೆ ಮಾಡಿದ್ದು ಅವರ ನಿಯತ್ತಿಗೆ ಮತ್ತು ಪ್ರಾಮಾಣಿಕತೆಗೆ ಸಂದ ವಿಜಯ ಎಂದು ಅವರು ಭಾವಿಸುತ್ತಾರೆ. ಅವರ ಮೇಲಿನ ಅಭಿಮಾನದಿಂದ ಶುಲ್ಕ ಪಡೆಯದೇ ಕೇಸ್ ನಡೆಸಿಕೊಟ್ಟ ಖ್ಯಾತ ನ್ಯಾಯವಾದಿಗಳಿಗೆ ಕೃತಜ್ಞತೆ ಕೂಡ ಅರ್ಪಿಸುತ್ತಾರೆ. ಪತ್ರಿಕೆಯಲ್ಲಿ ಹೀಗೆ ಸುಳ್ಸುದ್ದಿ ಬಂದಿದ್ದರೆ ಇತ್ತಕಡೆ ಹಸೀನಾ ಪಾರ್ಕರ್, ಈ ಖಡಕ್ ಅಧಿಕಾರಿ ಎತ್ತಂಗಡಿ ಆಗಿಹೋದರೆ ಸಾಕು ಅಲ್ಲಾಹ್ ಎಂದು ಮಸೀದಿಯಲ್ಲಿ ವಿಶೇಷ ಪೂಜೆ ಪುನಸ್ಕಾರ ಮಾಡಿಸುತ್ತಿದ್ದಳಂತೆ. ಅದು ಆಕೆಯ ಫೋನ್ ಟ್ಯಾಪ್ ಮಾಡಿದಾಗ ತಿಳಿದುಬಂದ ವಿಷಯವಾಗಿತ್ತು, ಎಂದು ಮೇಡಂ ಬರೆಯುತ್ತಾರೆ. ವಿಪರ್ಯಾಸ ನೋಡಿ.

ಪುಸ್ತಕದಲ್ಲಿ ಬರುವ ಮತ್ತೊಂದು ರೋಚಕ ಆದರೆ ಅಷ್ಟೇ ಮೈಜುಮ್ಮೆನ್ನಿಸುವ ಮತ್ತು ಮನಸ್ಸನ್ನು ಅಸ್ಥಿರಗೊಳಿಸುವ ಘಟನೆ ಎಂದರೆ ಮಾನಸಿಕ ಅಸ್ವಸ್ಥೆಯೊಬ್ಬಳು ಮೇಡಂ ಅವರನ್ನು ಇನ್ನಿಲ್ಲದಂತೆ ಕಾಡಿದ್ದು. ಆಕೆ ಕೇವಲ ಮಾನಸಿಕ ಅಸ್ವಸ್ಥೆ ಅಷ್ಟೇ ಆಗಿದ್ದರೆ ಆ ಮಾತು ಬೇರೆ. ಇವಳು ವಿದ್ಯಾವಂತಳು, ಶ್ರೀಮಂತಳು ಕೂಡ. ಮೀರನ್ ಮೇಡಂ ಅವರ ಒಳ್ಳೆ ಕೆಲಸಗಳ ಅಭಿಮಾನಿಯಾಗಿ ಪರಿಚಿತಳಾದ ಆಕೆ ಮುಂದೊಂದು ದಿನ ಹುಚ್ಚಿಯಂತೆ ಪ್ರೇಮ ಪತ್ರ ಬರೆಯುತ್ತಾ, ಇವರ ಕುಟುಂಬದ ಸದಸ್ಯರಿಗೆ ಕಿರಿಕಿರಿ ಮಾಡುತ್ತಾ ಉಪಟಳ ಕೊಡತೊಡಗಿದಾಗ ಕಾನೂನಿನ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದರು ಮೇಡಂ ಮೀರನ್. ಆ ಹುಚ್ಚಿಯೇನು ಕಡಿಮೆ ಘಾಟಿಯೇ?? ಕೋರ್ಟಿಗೇ ಹೋಗಿ, ಕೆಳಗಿನ ನ್ಯಾಯಾಲಯ ಮೇಡಂ ಮೇಲೆಯೇ ಆಕ್ಷೇಪಣೆ (Stricture) ಎತ್ತುವಂತೆ ಮಾಡಿಬಿಟ್ಟಳು. ಮುಂದೆ ಉನ್ನತ ನ್ಯಾಯಾಲಯಕ್ಕೆ ಹೋಗಿ ಅವಳ ಕಾಟದಿಂದ ಪಾರಾಗಬೇಕಾದರೆ ಎಷ್ಟು ಕಷ್ಟ ಅನುಭವಿಸಬೇಕಾಯಿತು ಎಂದು ವಿವರಿಸಿದ್ದಾರೆ. ಅದೇನೋ ಅನ್ನುತ್ತಾರಲ್ಲ...ನಸೀಬ ಮತ್ತು ವೇಳೆ ಸರಿಯಿಲ್ಲದಾಗ ಎತೆಂತಹ ಕಷ್ಟಗಳು ಬರುತ್ತವೆ ಎಂದು.

ಹೀಗೆ ಅದ್ಭುತವಾಗಿದೆ ಪುಸ್ತಕ. ತಮ್ಮ ವೃತ್ತಿಜೀವನದ ಅನೇಕ ಸವಾಲುಗಳ ಬಗ್ಗೆ ಮತ್ತು ಮಹಿಳಾ ಅಧಿಕಾರಿಯೊಬ್ಬರು ಎದುರಿಸಬೇಕಾದ ಕೆಲವು ವಿಶಿಷ್ಟ ಸವಾಲುಗಳ ಬಗ್ಗೆ ವಿವರಿಸಿದ್ದಾರೆ. ಅವುಗಳನ್ನು ನಿಭಾಯಿಸಿದ ರೀತಿ ಅನುಕರಣೀಯ. ಹೊಸ ಮಹಿಳಾ ಅಧಿಕಾರಿಗಳಿಗೆ ಅತ್ಯುತ್ತಮ ಮಾರ್ಗದರ್ಶಿ. 

ಅತ್ಯಂತ ಸರಳ ಭಾಷೆಯಲ್ಲಿ ಬರೆದಿರುವ ಪುಸ್ತಕ. ಅದರಲ್ಲಿರುವ ಸರಳ ಇಂಗ್ಲಿಷ್ ಮುಂದೆ ನಮ್ಮ ಮಾತೃಭಾಷೆಯಲ್ಲಿ ಬರೆಯುವ ಬರಹ ಸಂಕೀರ್ಣವೆನಿಸುತ್ತದೆ. ಪುಸ್ತಕ ಬರೆದರೆ ಹಾಗೆ ಬರೆಯಬೇಕು ಎನ್ನುವಷ್ಟು ಸರಳವಾಗಿದೆ ಮತ್ತು ಓದಿಸಿಕೊಂಡು ಹೋಗುತ್ತದೆ. ಮೀರನ್ ಅವರು ಹಿಂದೆ ಬರೆದ ಒಂದೆರೆಡು ಪುಸ್ತಕಗಳಲ್ಲಿ ಕೂಡ ಅವರ ಸರಳ ಭಾಷಾಶೈಲಿ ಎದ್ದು ಕಂಡಿತ್ತು. 

ಪುಸ್ತಕದಲ್ಲಿ ಬರೆಯದ ಒಂದು ವಿಷಯವನ್ನು ಮೇಡಂ ಪುಸ್ತಕ ಪ್ರಚಾರದ ಸಂವಾದ ಗೋಷ್ಠಿಯಲ್ಲಿ ಹೇಳುತ್ತಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಅಜಿತ್ ದೋವಾಲರೊಂದಿಗೆ ಆದ ತಪ್ಪು ತಿಳುವಳಿಕೆಯನ್ನು  (misunderstanding)  ಸರಿಪಡಿಸಿಕೊಳ್ಳೋಣ, ಸಂಬಂಧವನ್ನು ತಿಳಿಗೊಳಿಸಿಕೊಳ್ಳೋಣ ಎಂಬ ಉದ್ದೇಶದಿಂದ ಅವರಲ್ಲಿ ಭೇಟಿಗೆ ಸಮಯ ಕೇಳಿದರೆ ಸಿಗಲೇ ಇಲ್ಲವಂತೆ. ಹೋಗಲಿ ಬಿಡಿ, ಎನ್ನುತ್ತಾ ಮುಗುಳ್ನಗುತ್ತಾರೆ ಮೇಡಂ. 

ಎರಡೂ"ವರೆ" ಜನರ ಬಂಧನ ಎಂಬ ಶೀರ್ಷಿಕೆಯನ್ನು ಅಧ್ಯಾಯಕ್ಕೆ ಏಕೆ ಕೊಟ್ಟರು ಎಂದು ನಿಮಗೆ ತಿಳಿಯಿತು ಎಂದುಕೊಳ್ಳುತ್ತೇನೆ. 

Tuesday, May 07, 2024

ಎಂಟೆಬ್ಬೆ ವಿಮಾನ ಅಪಹರಣ ಮತ್ತು ನಂತರದ ರಕ್ಷಣಾ ಕಾರ್ಯಾಚರಣೆ "ಮಿಥ್ಯಾಧ್ವಜ" (False flag) ಕಾರ್ಯಾಚರಣೆಯಾಗಿತ್ತೇ!?

೧೯೭೬ ರಲ್ಲಿ ಇಸ್ರೇಲ್ ಮಾಡಿದ್ದ ಆ ಖತರ್ನಾಕ್  ರಕ್ಷಣಾ ಕಾರ್ಯಾಚರಣೆಯನ್ನು ದೇಶವೊಂದು ಒತ್ತೆಯಾಳುಗಳಾಗಿದ್ದ ತನ್ನ ನಾಗರಿಕರನ್ನು ವಿಮಾನ ಅಪಹರಣಕಾರರಿಂದ ರಕ್ಷಿಸಲು ಮಾಡಿದ ಅಭೂತಪೂರ್ವ ಕಾರ್ಯಾಚರಣೆಯಂದೇ ಭಾವಿಸಲಾಗುತ್ತದೆ. ಆದರೆ ಬಿಬಿಸಿ ವರದಿಯ ಪ್ರಕಾರ, ಇಂಗ್ಲೆಂಡಿನ ಕಡತಾಗಾರ ಬಿಡುಗಡೆ ಮಾಡಿದ ರಹಸ್ಯ ಕಡತವೊಂದರ ಪ್ರಕಾರ, ೧೯೭೬ ರಲ್ಲಿ ಪ್ಯಾಲೆಸ್ಟೈನ್ ಉಗ್ರರು ಮಾಡಿದರು ಎಂದು ಹೇಳಲಾದ ಆ ವಿಮಾನ ಅಪಹರಣ, ಅಪಹೃತ ವಿಮಾನವನ್ನು ಪೂರ್ವ ಆಫ್ರಿಕಾದ ದೇಶವಾದ ಉಗಾಂಡದ ರಾಜಧಾನಿಗೆ ತೆಗೆದುಕೊಂಡು ಹೋಗಿದ್ದು, ಇಸ್ರೇಲಿನಿಂದ ವಿಮಾನ ಮೂಲಕ ಹೋದ ಇಸ್ರೇಲಿ ಕಮಾಂಡೋ ತಂಡವೊಂದು ಅಪಹರಣಕಾರರ ಜೊತೆ ಹೋರಾಡಿ, ಪ್ರಯಾಣಿಕರಿಗೆ ತುಂಬಾ ಕಡಿಮೆ  ಸಾವು ನೋವು ಉಂಟುಮಾಡಿ, ಅವರನ್ನು ರಕ್ಷಿಸಿ, ಮರಳಿ ಕರೆತಂದದ್ದು, ಎಲ್ಲ ಹೇಳಿದಂತೆ ಆಯಿತೇ ಅಥವಾ ಬೇರೇನೋ ರಹಸ್ಯ ಅಡಗಿತ್ತೋ??

ಇತ್ತೀಚಿಗೆ ಬಿಡುಗಡೆಯಾದ ಕಡತವೊಂದರ ಪ್ರಕಾರ ಇಸ್ರೇಲ್ ಖುದ್ದಾಗಿ ಈ ಘಟನೆಯ ಹಿಂದಿತ್ತು. ಹಾಗಾದರೆ ಅದೊಂದು "ಮಿಥ್ಯಾಧ್ವಜ" ಕಾರ್ಯಾಚರಣೆಯಾಗಿತ್ತೇ? (false flag operation)

ಆ ಕಡತದ ಆಧಾರ ಆ ಸಮಯದಲ್ಲಿ ಅನಾಮಧೇಯ ಮೂಲದ ಹೇಳಿಕೆ. ಯುರೋ-ಅರಬ್ ಪಾರ್ಲಿಮೆಂಟರಿ ಅಸೋಸಿಯೇಷನ್ ಎಂಬ ಸಂಘಟನೆಯ ಆ ಮೂಲದ ಪ್ರಕಾರ ಇಸ್ರೇಲಿನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್-ಬೆಟ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (PFLP ) ಎಂಬ ಉಗ್ರರ ಸಂಘಟನೆಯ ಪರಸ್ಪರರ ಸಹಕಾರದಿಂದಲೇ ಆ ವಿಮಾನದ ಯೋಜಿತ ಅಪಹರಣವಾಗಿತ್ತು(Planned hijack).

ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರದಿಂದ ಹಾರಿದ ಕೆಲವೇ ಹೊತ್ತಿನಲ್ಲಿ ವಿಮಾನವನ್ನು ಅಪಹರಣ ಮಾಡಲಾಯಿತು. ಅದನ್ನು ಉಗಾಂಡದ ಮುಖ್ಯ ವಿಮಾನನಿಲ್ದಾಣವಿದ್ದ ಎಂಟೆಬ್ಬೆ ಶಹರಕ್ಕೆ ಹಾರಿಸಿಕೊಂಡು ಹೋಗಲಾಯಿತು. ೯೮ ಪ್ರಯಾಣಿಕರಿದ್ದರು. ಹೆಚ್ಚಿನವರು ಇಸ್ರೇಲಿ ನಾಗರಿಕರಾಗಿದ್ದರು.

ದೂರದ ಇಸ್ರೇಲಿನಿಂದ ತೆರಳಿ ಕ್ಷಿಪ್ರ ಕಾರ್ಯಾಚರಣೆ ಮಾಡಿದ ಇಸ್ರೇಲಿನ ಕಮಾಂಡೋಗಳು ಏಳು ಜನ ಅಪಹರಣಕಾರರನ್ನು ಕೊಂದು ಮತ್ತು ಎಂಬತ್ತು ಜನ ಉಗಾಂಡದ ಸೈನಿಕರ ಜೊತೆ ಹೋರಾಡಿ ಪ್ರಯಾಣಿಕರ ರಕ್ಷಣೆ ಮಾಡಿದರು. ಇಡೀ ಕಾರ್ಯಾಚರಣೆ ಕೇವಲ ೩೬ ನಿಮಿಷಗಳಲ್ಲಿ ಮುಗಿದುಹೋಗಿತ್ತು. 

ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಯಾಣಿಕರು ಮೃತರಾದರು. ಗಾಯಗೊಂಡಿದ್ದ ಮತ್ತೊಬ್ಬ ಪ್ರಯಾಣಿಕರು ಪಕ್ಕದ ಕೀನ್ಯಾದ ನೈರೋಬಿಯಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಇಸ್ರೇಲಿ ಕಮಾಂಡೋ ತಂಡದ ನಾಯಕತ್ವ ವಹಿಸಿದ್ದ ಒಬ್ಬ ಅಧಿಕಾರಿ ವಿಮಾನನಿಲ್ದಾಣದ ನಿಯಂತ್ರಣಾ ಗೋಪುರದಿಂದ ಹಾರಿಬಂದ stray ಗುಂಡಿಗೆ ಬಲಿಯಾದರು. (ಅವರ ಹೆಸರು ಯೋನಾಥನ್ ನೆತನ್ಯಾಹು. ಇಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಾ ಸಹೋದರ. ಇಬ್ಬರೂ ಇಸ್ರೇಲಿನ ವಿಖ್ಯಾತ ಕಮಾಂಡೋ ಪಡೆ "ಸಾಯಾರೇಟ್ ಮಟ್ಕಾಲ"ನ ಸದಸ್ಯರಾಗಿದ್ದರು. ಎಂಟೆಬ್ಬೆ ರಕ್ಷಣಾ ಕಾರ್ಯಾಚರಣೆಗೆ ಹೋಗಲು ಇಬ್ಬರೂ ಕಾತುರರಾಗಿದ್ದರು. ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮತ್ತೊಬ್ಬ ಕಮಾಂಡೋ ಏಹೂದ್ ಬರಾಕ್ ಯೋನಾಥನ್ ಅವರನ್ನು ಆಯ್ಕೆ ಮಾಡಿದ್ದರು. ಬೇಸರಗೊಂಡಿದ್ದ ಸಹೋದರ ಬೆಂಜಮಿನನನ್ನು ತುಂಬಾ ಸಮಾಧಾನ ಮಾಡಬೇಕಾಯಿತು ಎಂದು ಎಹುದ್ ಬರಾಕ್ ಹೇಳಿಕೊಂಡಿದ್ದರು.)

ಆಗ ಉಗಾಂಡವನ್ನು ಆಳುತ್ತಿದ್ದ ಸರ್ವಾಧಿಕಾರಿ ಇದಿ ಅಮೀನ್ ಪ್ರಕಾರ ಇಸ್ರೇಲಿಗಳು ೨೦ ಜನ ಉಗಾಂಡದ ಸೈನಿಕರನ್ನು ಮತ್ತು ಎಲ್ಲ ಅಪಹರಣಕಾರರನ್ನು ಕೊಂದರು.

ಉಗಾಂಡದ ಎಂಟೆಬ್ಬೆಗೆ ವಿಮಾನವನ್ನು ತೆಗೆದುಕೊಂಡು ಹೋಗಿದ್ದ ಅಪಹರಣಕಾರರು ಅಲ್ಲಿಂದ ತಮ್ಮ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಬೇರೆ ಬೇರೆ ದೇಶಗಳಲ್ಲಿ ಬಂಧಿತರಾಗಿದ್ದ ಪ್ಯಾಲೆಸ್ಟೈನ್ ಹೋರಾಟಗಾರರ ಹೆಸರುಗಳು ಆ ಪಟ್ಟಿಯಲ್ಲಿದ್ದವು. ಅವರನ್ನು ತ್ವರಿತವಾಗಿ ಬಿಡುಗಡೆ ಮಾಡಲು ಒತ್ತಾಯಿಸಲಾಗಿತ್ತು.

ಬ್ರಿಟಿಷ್ ಕಡತಾಗಾರ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಯನ್ನು ಬರೆದವರು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಡಿ ಎಚ್ ಕೋಲ್ವಿನ್ ಎಂಬ ಬ್ರಿಟಿಷ್ ಅಧಿಕಾರಿ. ನಮೂದಾದ ತಾರೀಕು ೩೦ ಜೂನ್ ೧೯೭೬. ಆಗ ವಿಮಾನ ಅಪಹರಣ ಇನ್ನೂ ಸುಖಾಂತ್ಯವಾಗಿರಲಿಲ್ಲ. 

ಡಿ ಎಚ್ ಕೋಲ್ವಿನ್ ಬರೆಯುತ್ತಾರೆ: 

"ಯುರೋ-ಅರಬ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಂಘಟನೆಯ ಮೂಲಗಳ ಪ್ರಕಾರ ವಿಮಾನ ಅಪಹರಣವನ್ನು ಮಾಡಿದ್ದು PFLP ಸಂಘಟನೆ. ಅದಕ್ಕೆ ಸಕ್ರಿಯ ಸಹಾಯ ನೀಡಿದ್ದು ಖುದ್ದು ಇಸ್ರೇಲಿನ ಆಂತರಿಕ ಬೇಹುಗಾರಿಕೆ ಸಂಸ್ಥೆ ಶಿನ್-ಬೆಟ್. 

ಪ್ಯಾಲೆಸ್ಟೈನ್ ಹೋರಾಟದ ಪ್ರಮುಖ ಸಂಘಟನೆ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಸಂಸ್ಥೆಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದ, ಗೌರವ ಮತ್ತು ಪ್ರತಿಷ್ಠೆಯನ್ನು ಕುಗ್ಗಿಸುವುದು ಮತ್ತು ಅಮೆರಿಕ ಮತ್ತು ಪ್ಯಾಲೆಸ್ಟೀನಿಗಳ ಮಧ್ಯೆ ಮತ್ತೆ ಉತ್ತಮಗೊಳ್ಳುತ್ತಿರುವ ಬಾಂಧವ್ಯವನ್ನು ಹೊಸಕಿಹಾಕುವುದೇ ವಿಮಾನ ಅಪಹರಣದ ಉದ್ದೇಶವಾಗಿತ್ತು. 

PFLP ಸಂಘಟನೆಯಲ್ಲಿ ಇತ್ತೀಚಿಗೆ ಅನೇಕ ಸಂದೇಹಾಸ್ಪದ ವ್ಯಕ್ತಿಗಳು ಭರ್ತಿಯಾಗಿದ್ದಾರೆ. ಅವರಲ್ಲಿ ಅನೇಕರನ್ನು ಇಸ್ರೇಲಿಗಳೇ 'ತುರುಕಿದ್ದಾರೆ' (infiltrate) ಎಂಬುದರ ಬಗ್ಗೆ ಸಂದೇಹವಿದೆ."

ಈ ದಾಖಲೆ ಅಂದಿನ ಬ್ರಿಟಿಷ್ ಸರ್ಕಾರದಲ್ಲಿ ಅನೇಕ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿತ್ತು. ಅಪಹೃತ ಪ್ರಯಾಣಿಕರನ್ನು ಕಾಪಾಡಿದ ಇಸ್ರೇಲಿನ ಕಾರ್ಯಾಚರಣೆಯನ್ನು ಶ್ಲಾಘಿಸಬೇಕೋ ಬೇಡವೋ ಎಂಬುದು ಸಹ ಚರ್ಚೆಗೆ ಬಂದಿತ್ತು. 

ಉಗಾಂಡದಲ್ಲಿ ನಡೆದ ಇಸ್ರೇಲಿ ಕಾರ್ಯಾಚರಣೆ ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ನ್ಯಾಯಸಮ್ಮತವೇ ಎಂಬ ವಿಷಯದ ಮೇಲೆ ಅಂದಿನ ಬ್ರಿಟಿಷ್ ಸರ್ಕಾರ ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. 

ಇದೇ ಫೈಲಿನಲ್ಲಿರುವ ಇನ್ನೊಂದು ದಾಖಲೆಯ ಪ್ರಕಾರ: ಬ್ರಿಟಿಷ್ ಪ್ರಧಾನಿ ಇಸ್ರೇಲಿನ ಪ್ರಧಾನಿ ರಾಬಿನ್ ಅವರಿಗೆ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸದೇ ಇರುವುದರ ಬಗ್ಗೆ ಇಸ್ರೇಲಿಗಳಿಗೆ ತೀವ್ರ ಅಸಂತೋಷ  ಮತ್ತು ಅತೃಪ್ತಿ ಇದೆ. ಬ್ರಿಟನ್ ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆ ಇಸ್ರೇಲಿಗೆ ಸಮರ್ಥ ಬೆಂಬಲ ನೀಡಿಲ್ಲ ಎಂಬುದು ಕೂಡ ಇಸ್ರೇಲಿಗಳ ಆಕ್ಷೇಪಣೆ. 

ಇಸ್ರೇಲಿಗೆ ಅಭಿನಂದನೆ ಮತ್ತು ಬೆಂಬಲ ಸೂಚಿಸದೇ ಇರುವ ಸರ್ಕಾರದ ನಿಲುವನ್ನು ಸಾಮಾನ್ಯ ಬ್ರಿಟಿಷ್ ನಾಗರಿಕರು ಖಂಡಿಸಿದ್ದಾರೆ ಎನ್ನುವ ಮಾಹಿತಿ ಕೂಡ ಆ ಫೈಲಿನಲ್ಲಿ ಇದೆ.

ಮತ್ತೊಂದು ದಾಖಲೆ ಇಂತಹ ಘಟನೆಗಳ ಬಗ್ಗೆ ಬ್ರಿಟಿಷ್ ಸರ್ಕಾರ ಅಧಿಕೃತ ನಿಲುವೇನು ಎಂದು ಕೇಳುತ್ತದೆ. ಅಭಿನಂದನಾ ಹೇಳಿಕೆಯನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಆಕ್ಷೇಪಣೆ ಕೂಡ ವ್ಯಕ್ತವಾಗುತ್ತದೆ.  

ಮತ್ತೊಂದು ದಾಖಲೆಯಲ್ಲಿ ಇಸ್ರೇಲಿನ ಕಾರ್ಯಾಚರಣೆ ಕಾನೂನು ಸಮ್ಮತವೋ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲಿನ ದೀಪದಂತಹ ಉತ್ತರ. ಉಗಾಂಡಾ ದೇಶ ಅಪಹರಣಕಾರರಿಗೆ ಸಹಾಯ ಮಾಡಿತ್ತು ಅಂತಾದರೆ ಮಾತ್ರ ಇಸ್ರೇಲಿಗಳ ಕಾರ್ಯಾಚರಣೆ ಕಾನೂನು ಸಮ್ಮತವಾಗುತ್ತದೆ ಎಂಬ ಅಭಿಪ್ರಾಯ. 

ಅಪಹರಣಕಾರರ ನಡುವೆ ಮತ್ತೆ ಉಗಾಂಡದ ಅಧ್ಯಕ್ಷ ಇದಿ ಅಮೀನ್ ಮಧ್ಯೆ ಒಳಸಂಚು (collusion) ಇತ್ತು ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಅಧ್ಯಕ್ಷ ಇದಿ ಅಮೀನರ ವರ್ತನೆ ಅಪಹರಣಕಾರರಿಗೆ ಅವರ ಬೇಡಿಕೆಗಳ ಬಗ್ಗೆ ಕಠಿಣ ಮತ್ತು ಅಚಲ ನಿಲುವು ತಾಳಲು ಸಹಕಾರಿಯಾಯಿತು.

***

ಈ ಅಪಹರಣ ಮಿಥ್ಯಾಧ್ವಜ ಕಾರ್ಯಾಚರಣೆ ಆಗಿರಬಹುದೋ ಎಂದು ಅನ್ನಿಸಲು ಇನ್ನೂ ಕೆಲವು ಕಾರಣಗಳು ಇವೆ. 

ಎರಡನೇ ವಿಶ್ವಯುದ್ಧದ ನಂತರ ಯಹೂದಿಗಳಿಗೆ ಒಂದು ಪ್ರತ್ಯೇಕ ದೇಶ ಮಾಡಿಕೊಡಬೇಕು ಎನ್ನುವ ವಿಚಾರ ಅಂತರರಾಷ್ಟ್ರೀಯ ಸಮುದಾಯಕ್ಕೆ ಬಂದಾಗ ಉಗಾಂಡವನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ಯಾಲೆಸ್ಟೈನ್ ಪ್ರದೇಶದ ಜೊತೆ ಕರುಳಬಳ್ಳಿಯ ಧಾರ್ಮಿಕ ಸಂಬಂಧ ಹೊಂದಿದ್ದ ಯಹೂದಿಗಳು ತಮಗೆ ಅಲ್ಲೇ ಪ್ರತ್ಯೇಕ ದೇಶ ಬೇಕೆಂದು ಹಠ ಹಿಡಿದು ಕೂತಾಗ ಬ್ರಿಟಿಷ್ ಪ್ಯಾಲೆಸ್ಟೈನ್ ಪ್ರದೇಶವನ್ನೇ ವಿಭಾಗ ಮಾಡಿ ಇಸ್ರೇಲ್ ಎಂಬ ಹೊಸ ದೇಶವನ್ನು ಸೃಷ್ಟಿಸಿ ಯಹೂದಿಗಳಿಗೆ ಕೊಡಲಾಗಿತ್ತು. ಉಗಾಂಡವೇ ತಮ್ಮ ಮುಂದಿನ ಸ್ವತಂತ್ರ ದೇಶವಾಗಬಹುದೇನೋ ಎಂದು ಭಾವಿಸಿದ್ದ ಯಹೂದಿಗಳು ಯಾವುದಕ್ಕೂ ಇರಲಿ ಎಂದು ಉಗಾಂಡದ ಎಲ್ಲ ಕಡೆ ಎಲ್ಲ ಕ್ಷೇತ್ರಗಳಲ್ಲಿ ಕಾಣುವಂತೆ ಮತ್ತೆ ಕಾಣದಂತೆ ನೆಲೆಯೂರಿದ್ದರು. 

ಈ ಹಿನ್ನೆಲೆಯಲ್ಲಿ, ತಮಗೆ ಆ ದೇಶ ಅಷ್ಟು ಪರಿಚಿತ, ಅಲ್ಲಿ ತಮಗೆ ಸಹಾಯ ಮಾಡಬಲ್ಲ ಕಾಣದ ಕೈಗಳಿವೆ, ಹಾಗಾಗಿ ಅಪ್ರಹೃತ ವಿಮಾನವನ್ನು ಅಲ್ಲಿಗೇ ಕರೆದೊಯ್ಯಿರಿ ಎನ್ನುವ ಸೂಚನೆ ಇಸ್ರೇಲಿಗಾಗಿ ಕೆಲಸಮಾಡುತ್ತಿದ್ದ ಉಗ್ರರರಿಗೆ ಕೊಡಲಾಗಿತ್ತೇ? ಮತ್ತೊಂದು ನೆನಪಿಡಬೇಕಾದ ವಿಷಯ ಎಂದರೆ ಇಸ್ರೇಲಿಗಳು ಅಷ್ಟು ಬಿಂದಾಸಾಗಿ ಎಲ್ಲಿ ಬೇಕಾದರೂ ಹೋಗಿ ರಹಸ್ಯ ಕಾರ್ಯಾಚರಣೆ ಮಾಡಿ ಬರಲು ತುಂಬಾ ಸಹಾಯ ಮಾಡುವುದು ಅವರ ಅನಿವಾಸಿ ಸಯಾನಿಮ್ ಪಡೆ. ಸಯಾನಿಮ್ ಪಡೆ ಯಾವುದೇ ರೀತಿಯ ಸೈನಿಕ ಪಡೆಯಲ್ಲ. ಅದು ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರುವ ಯಹೂದಿಗಳ ಅನಿವಾಸಿ ಸಮುದಾಯ (diaspora). ಮಾತೃಭೂಮಿ ಇಸ್ರೇಲಿಗೆ ಎಲ್ಲ ರೀತಿಯ ಸಹಾಯ ಮಾಡುವುದೇ ಅವರ ಕೆಲಸ. ಆ ರೀತಿ ಅವರನ್ನು ಮೊದಲಿಂದಲೂ ತಯಾರು ಮಾಡಿಟ್ಟುಕೊಂಡಿರುತ್ತದೆ ಇಸ್ರೇಲ್. ಅವರಿಗೆ ಅವಶ್ಯಕತೆಗಿಂತ ಹೆಚ್ಚಿನ ಮಾಹಿತಿ ಏನೂ ಗೊತ್ತಿರುವುದಿಲ್ಲ. ರಹಸ್ಯ ಕಾರ್ಯಾಚರಣೆ ಮೇಲೆ ಬಂದಿರುವ ಇಸ್ರೇಲಿ ಬೇಹುಗಾರರಿಗೆ ಸ್ಥಳೀಯ ಬೆಂಬಲ ಕೊಡುವುದಷ್ಟೇ ಅವರ ಕೆಲಸ. ಆದರೆ ಕಾರ್ಯಾಚರಣೆಯ ಯಶಸ್ಸಿಗೆ ಅವರ ಬೆಂಬಲ ತುಂಬಾ ಮಹತ್ವದ್ದು. ಮೊದಲಿಂದಲೂ ಉಗಾಂಡಾ ದೇಶದಲ್ಲಿ ಬಲಶಾಲಿಯಾಗಿದ್ದ ಇಸ್ರೇಲಿ ಸಯಾನಿಮ್ ಪಡೆ ಇದ್ದಿರಲು ಸಾಕು. ಅದು ಎಲ್ಲ ರೀತಿಯ ಸಹಕಾರ ನೀಡಿರಬಹುದು ಈ ಮಿಥ್ಯಾಧ್ವಜ ಕಾರ್ಯಾಚರಣೆಗೆ.

ಎಂಟೆಬ್ಬೆಯ ವಿಮಾನನಿಲ್ದಾಣವನ್ನು ವಿನ್ಯಾಸ ಮಾಡಿ ನಿರ್ಮಿಸಿಕೊಟ್ಟವರೇ ಇಸ್ರೇಲಿಗಳು. ಹಾಗಾಗಿ ಅವರ ಹತ್ತಿರ ವಿಮಾನನಿಲ್ದಾಣದ ನಕ್ಷೆ ಮತ್ತು ಇತರೆ ಸಣ್ಣ ಸಣ್ಣ ವಿವರಗಳೂ ಇದ್ದವು. ಹಾಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ಲಾನ್ ಮಾಡಲು ತುಂಬಾ ಅನುಕೂಲವಾಯಿತು. 

ಉಗಾಂಡದ ಸೈನ್ಯಕ್ಕೆ ತರಬೇತಿ ಕೊಟ್ಟವರೇ ಇಸ್ರೇಲಿಗಳು. ಮೂಕಿ ಬೆಟ್ಸರ್ ಎಂಬ ಇಸ್ರೇಲಿನ ಯೋಧರೊಬ್ಬರು ಈ ಬಗ್ಗೆ ತಮ್ಮ ಆತ್ಮಚರಿತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ನನಗೆ ನೆನಪಿದ್ದಂತೆ ಮೂಕಿ ಬೆಟ್ಸರ್ ಕೂಡ ಎಂಟೆಬ್ಬೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. 

ಇನ್ನು ಉಗ್ರರ ಸಂಘಟನೆ PFLP ನಲ್ಲಿ ಇಸ್ರೇಲಿಗಳೇ ನುಗ್ಗಿಸಿದ್ದ, ಇಸ್ರೇಲಿಗಳಿಗೇ ಕೆಲಸ ಮಾಡುತ್ತಿದ್ದ ಜನರಿದ್ದರು. ಅವರು ಮೇಲ್ನೋಟಕ್ಕೆ ಉಗ್ರರ ಸಂಘಟನೆಗೆ ಕೆಲಸ ಮಾಡುವಂತೆ ಕಾಣುತ್ತಿದ್ದರೂ ಅವರ ಸೂತ್ರಧಾರರು ಮಾತ್ರ ಇಸ್ರೇಲಿಗಳಾಗಿದ್ದರು. ಅಂತವರನ್ನು ಡಬಲ್, ಟ್ರಿಪಲ್ ಏಜೆಂಟ್ ಎಂದು ಕರೆಯುತ್ತಾರೆ. 

ಪ್ರತಿಯೊಂದು ಬೇಹುಗಾರಿಕೆ ಸಂಸ್ಥೆಯೂ ತಾವು ಹಿಂದೆ ಬಿದ್ದಿರುವ ಉಗ್ರರ ಸಂಘಟನೆಯಲ್ಲಿ ತಮ್ಮ ಜನರನ್ನು ರಹಸ್ಯವಾಗಿ ಸ್ಥಾಪಿಸಲು ಬಯಸುತ್ತದೆ. ಇಂತಹ ಡಬಲ್ ಏಜೆಂಟಗಳ ಕಥಾನಕ ರೋಚಕ. ಸ್ವಲ್ಪ ಸಮತೋಲನ ತಪ್ಪಿದರೂ ಅವರಿಗೆ ಎರಡೂ ಕಡೆ ಅಪಾಯ. ಉಗ್ರರ ಸಂಘಟನೆಗಳಂತೂ ತಮ್ಮಲ್ಲೇ ಅಡಗಿರಬಹುದಾದ ಡಬಲ್ ಏಜೆಂಟರನ್ನು ಕಿತ್ತೆಸೆಯಲು, ತಮ್ಮ ಜನರಿಗೇ, ಕೇವಲ ಸಂಶಯದ ಮೇಲೆ, ಚಿತ್ರವಿಚಿತ್ರ ಹಿಂಸೆ ಕೊಡುತ್ತವೆ. ಕೊಲ್ಲುತ್ತವೆ. ಇತ್ತಕಡೆ ಬೇಹುಗಾರಿಕೆ ಸಂಸ್ಥೆಗಳು ಕೂಡ ಕೆಲಸವಾದ ನಂತರ ಅವರನ್ನು ಸಿಪ್ಪೆ ತರಹ ಬಿಸಾಡುತ್ತವೆ. ಅವರ ಗೌಪ್ಯತೆಯ ಮುಖವಾಡವನ್ನು ಕಳಚಿ (blowing the cover), ಇವರು ಅಬ್ಬೇಪಾರಿಯಾಗಿ ನಿಲ್ಲುವಂತೆ ಮಾಡಿ, ಬೀದಿನಾಯಿ ಸಾವನ್ನು ಕಾಣುವಂತೆ ಕೂಡ ಮಾಡುತ್ತವೆ. ಆದರೂ ದಿನಬೆಳಗಾದರೆ ಡಬಲ್, ಟ್ರಿಪಲ್ ಏಜೆಂಟಗಳೂ ಹುಟ್ಟುತ್ತಲೇ ಇರುತ್ತಾರೆ. ತಮ್ಮ ಸಂಘಟನೆಗೆ ಕೆಲಸ ಮಾಡುತ್ತಲೇ ದ್ರೋಹ ಬಗೆಯುತ್ತಾರೆ. ಡಬಲ್ ಏಜೆಂಟ್ ಆಗಿದ್ದೇವೆ ಎಂದು ತೋರಿಸಿಕೊಳ್ಳುತ್ತಲೇ ಬೇಹುಗಾರಿಕೆ ಸಂಸ್ಥೆಗೂ ದ್ರೋಹ ಬಗೆದು ಮಾತೃ ಸಂಘಟನೆಗೆ ನಿಯತ್ತಾಗಿರುತ್ತಾರೆ. ಅವರು ಟ್ರಿಪಲ್ ಏಜೆಂಟುಗಳು. ಬೇಹುಗಾರಿಕೆ ಸಂಸ್ಥೆಗಳ ಅಧಿಕೃತ ನೌಕರರೇ ಬೇರೆ ದೇಶಗಳಿಗೆ, ಉಗ್ರರ ಸಂಘಟನೆಗಳಿಗೆ ಡಬಲ್ ಏಜೆಂಟ್ ಆಗಿದ್ದೂ ಇದೆ. ಅಂತವರನ್ನು ಕಂಡು ಹಿಡಿಯಲೆಂದೇ ಪ್ರತಿಯೊಂದು ಬೇಹುಗಾರಿಕೆ ಸಂಸ್ಥೆಯಲ್ಲಿ ಕೌಂಟರ್ ಇಂಟೆಲಿಜೆನ್ಸ್ ಎನ್ನುವ ವಿಭಾಗವಿರುತ್ತದೆ. ಆ ವಿಭಾಗ ತುಂಬಾ ಮಹತ್ವದ ವಿಭಾಗ. (ಹಿಂದೊಮ್ಮೆ ರಷಿಯಾದ ಡಬಲ್ ಟ್ರಿಪಲ್ ಏಜೆಂಟ್ ಒಬ್ಬ ಸಿಐಎ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರನ್ನೇ ಮಂಗ್ಯಾ ಮಾಡಿ ಇಡೀ ಸಿಐಎ ತಲೆ ಹನ್ನೆರಡಾಣೆ ಆಗುವಂತೆ ಮಾಡಿದ್ದರ ಬಗ್ಗೆ ಹಿಂದೊಮ್ಮೆ ಬರೆದ ಲೇಖನ. ಆಸಕ್ತರು ಓದಿ.)

ಪ್ಯಾಲೆಸ್ಟೈನ್ ಸಂಗ್ರಾಮ ಶುರುವಾದಾಗಿಂದಲೂ ಇಸ್ರೇಲ್ ಅತ್ಯಂತ ಕ್ರಮಬದ್ಧವಾಗಿ ಮಾಡಿಕೊಂಡು ಬಂದ ಕೆಲಸವೆಂದರೆ ಪ್ರತಿಯೊಂದು ಉಗ್ರರ ಸಂಘಟನೆಯಲ್ಲಿ ತಮ್ಮ ತಮ್ಮ ಜನರನ್ನು ತುರುಕಿ, ಅವರನ್ನು ದಶಕಗಳ ಕಾಲ ಸಾಕಿ ಸಲಹಿ, ಬೇಕಾದ ಮಾಹಿತಿ ತೆಗೆದು, ಪ್ಯಾಲೆಸ್ಟೈನ್ ಉಗ್ರರನ್ನು ಬೆಂಡೆತ್ತಿ ಅವರ ಸಂಗ್ರಾಮವನ್ನು ಹತ್ತಿಕ್ಕಿದ್ದು ಮತ್ತು ಹತೋಟಿಯಲ್ಲಿ ಇಟ್ಟುಕೊಂಡಿದ್ದು.

ಕೆಲವು ಸಲವಂತೂ ಒಂದು ಪ್ಯಾಲೆಸ್ಟೈನ್ ಉಗ್ರರ ಸಂಘಟನೆಯನ್ನು ಮಟ್ಟ ಹಾಕಲು ಮತ್ತೊಂದು ಹೊಸ ಸಂಘಟನೆಯನ್ನು  ಖುದ್ದು ಇಸ್ರೇಲೇ ಹುಟ್ಟುಹಾಕಿದ್ದೂ ಇದೆ. ಇವತ್ತು ಹಮಾಸ್ ಮೇಲೆ ದೊಡ್ಡ ಯುದ್ಧ ಮಾಡುತ್ತಿರುವ ಇಸ್ರೇಲೇ ೨೦೦೦ ರ ಸಮಯದಲ್ಲಿ ಯಾಸೀರ್ ಅರಾಫತ್ ಮತ್ತು ಅವರ ಫತಾಹ್ ಬಣವನ್ನು ಹಣಿಯಲೆಂದೇ ಹಮಾಸ್ ಸಂಘಟನೆಯನ್ನು ಹುಟ್ಟುಹಾಕಿತ್ತು. ಹಾಗಾಗಿಯೇ ಯಾಸೀರ್ ಅರಾಫತ್ ಬಣಕ್ಕೆ ಗಾಝಾ ಪಟ್ಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಆಗಲೇ ಇಲ್ಲ. ಅದೇನಿದ್ದರೂ ಹಮಾಸ್ ಪ್ರಾಬಲ್ಯದ ಪ್ರದೇಶ. ಪ್ಯಾಲೆಸ್ಟೈನ್ ದೇಶದ ಭಾಗಗಳಾದ ಗಾಝಾ ಮತ್ತು ಪಶ್ಚಿಮ ತೀರದಲ್ಲಿ (West Bank) ಹಮಾಸ್ ಮತ್ತು ಫತಾಹ್ ಬಣ ಪ್ರತ್ಯೇಕವಾಗಿ ಬಲಶಾಲಿಯಾಗಿರುವಂತೆ ನೋಡಿಕೊಂಡು, ವಿಭಜಿಸಿ ಆಳುವ ನೀತಿಯನ್ನು ಪರಾಕಾಷ್ಠೆಗೆ ಒಯ್ದದ್ದು ಇಸ್ರೇಲಿನ ಹಿಕ್ಮತ್ತು. 

ಎಲ್ಲ ಉಗ್ರರ ಸಂಘಟನೆಗಳಲ್ಲಿಇಸ್ರೇಲಿನ ಡಬಲ್ ಏಜೆಂಟುಗಳಿದ್ದಾರೆ. ಪರಮನಾಯಕ ಯಾಸೀರ್ ಅರಾಫತರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಫೋರ್ಸ್ - ೧೭ ಎಂಬ ಖಾಸ್ ಅಂಗರಕ್ಷಕ ಪಡೆಯಲ್ಲಿಯೇ ಎರಡು ಮೂರು ಇಸ್ರೇಲಿ ಡಬಲ್ ಏಜೆಂಟುಗಳು ಇದ್ದರು ಎಂದರೆ ಇಸ್ರೇಲಿನ ಬೇಹುಗಾರಿಕೆ ಜಾಲ ಎಷ್ಟು ಆಳವಾಗಿ ಹೋಗಿರುತ್ತದೆ ಎಂದು ತಿಳಿಯಬಹದು. ಅನೇಕ ಪ್ಯಾಲೆಸ್ಟೈನ್ ಉಗ್ರ ನಾಯಕರು ವಿಷಪ್ರಾಶನಕ್ಕೆ ಒಳಗಾಗಿ ಸತ್ತರು ಎಂಬ ಮಾತಿದೆ. ಅತ್ಯಂತ ಖಾಸ್ ಜನರು compromise ಆಗಿರದಿದ್ದರೆ ವಿಷಪ್ರಾಶನ ಮಾಡಿಸಲು ಸಾಧ್ಯವೇ? ವಾಡಿ ಹದ್ದಾದ್ ಎಂಬ ಇದೇ PFLP ಸಂಘಟನೆಯ ನಾಯಕನಂತೂ ವಿಷಮಿಶ್ರಿತ ಚಾಕ್ಲೆಟ್ ಮೆದ್ದೇ ಸತ್ತ. ಯಾಸೀರ್ ಅರಾಫತ್ ಅವರಿಗೂ ವಿಷಪ್ರಾಶನ ಮಾಡಿಯೇ ಕೊಂದರು ಎಂಬ ಮಾತಿದೆ. ಅದರ ಬಗ್ಗೆ ಅಲ್-ಜಜೀರಾ ಒಂದು ಸಾಕ್ಷ್ಯಚಿತ್ರ ಕೂಡ ಮಾಡಿದೆ. 

ಅಂದಿನ PFLP ಎಂಬ ಪ್ಯಾಲೇಸ್ಟಿನ್ ಉಗ್ರ ಸಂಘಟನೆಯಲ್ಲಿಯೂ ಇಸ್ರೇಲಿ ಡಬಲ್ ಏಜೆಂಟುಗಳು ತುರಕಲ್ಪಟ್ಟಿರುವ ಸಾಧ್ಯತೆಗಳು ಸಾಕಷ್ಟಿದ್ದವು ಎನ್ನುವ ಮಾತಿಗೆ ಮೇಲಿನ ವಿವರಣೆ ಕೊಡಬೇಕಾಯಿತು. 

ಆ ಸಮಯದಲ್ಲಿ ಪ್ಯಾಲೆಸ್ಟೈನ್ ಉಗ್ರರು ವಿಮಾನ ಅಪಹರಣಗಳನ್ನು ಒಂದು ಪರಿಶುದ್ಧ ಕಲೆಯಂತೆ ಮಾಡಿಕೊಂಡು ಪರಿಣಿತಿ ಸಾಧಿಸಿದ್ದರು. ಆ ಮೂಲಕ ಪಾಶ್ಚಿಮಾತ್ಯ ದೇಶಗಳಿಗೇನು ಕಮ್ಮಿ ಕಾಟ ಕೊಟ್ಟರೆ!? ಆಕಸ್ಮಾತ ಅವರ ಉಗ್ರರು ಜರ್ಮನಿಯಲ್ಲೋ, ಫ್ರಾನ್ಸಿನಲ್ಲೋ, ಇಟಲಿಯಲ್ಲೋ ಬಂಧಿತರಾದರು ಅಂದುಕೊಳ್ಳಿ. ಬಿಡಿಸಿಕೊಳ್ಳಲು ಮಾಡಬೇಕಾಗಿದ್ದು ಒಂದೇ ಕೆಲಸ. ಒಂದು ವಿಮಾನವನ್ನು ಅಪಹರಣ ಮಾಡುವುದು. ನಂತರ ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ಬೆಂಬಲ ಸೂಚಿಸುತ್ತಿದ್ದ ದುಷ್ಟ ಸರ್ವಾಧಿಕಾರಿಗಳಿದ್ದ ಲಿಬಿಯಾಕ್ಕೋ, ಇರಾಕಿಗೋ, ಅಲ್ಜೇರಿಯಾಕ್ಕೋ ಮತ್ತೆಲ್ಲೋ ತೆಗೆದುಕೊಂಡು ಹೋಗಿ ಸರ್ಕಾರಗಳೊಂದಿಗೆ ಚೌಕಾಸಿಗೆ ಕೂಡುವುದು. ವಿದೇಶಗಳಲ್ಲಿ ಬಂಧಿತರಾಗಿದ್ದ ಉಗ್ರರು ಬಿಡುಗಡೆಯಾದಂತೆ ಇಲ್ಲಿ ಕೂಡ ಅಪಹೃತರು ಬಿಡುಗಡೆಯಾಗುತ್ತಿದ್ದರು. ಅಪಹರಣಕಾರರು ಸ್ಥಳೀಯ ಆಡಳಿತದ ಆತಿಥ್ಯ ಸ್ವೀಕರಿಸಿ ಮುಂದಿನ ಅಪಹರಣಕ್ಕೆ ಸ್ಕೆಚ್ ಹಾಕುತ್ತಿದ್ದರು. 

ಆದರೆ ಈ ಎಂಟೆಬ್ಬೆ ವಿಮಾನ ಅಪಹರಣವನ್ನು ನೋಡಿ. ಅಪಹರಣಕಾರರು ಗ್ರೀಸ್ ದೇಶದ ಅಥೆನ್ಸ್ ನಿಂದ ಹೊರಟ ವಿಮಾನವನ್ನು ಅಪಹರಿಸಿದರು. ಅದರಲ್ಲಿ ಹೆಚ್ಚಿನವರು ಇಸ್ರೇಲಿ ಪ್ರಯಾಣಿಕರೇ ಇದ್ದರು. ಇಲ್ಲಿ ಕೂಡ ವಿಮಾನ ಮೊದಲು ಲಿಬಿಯಾದ ಬೆಂಗಾಜಿಯಲ್ಲಿ ತಾತ್ಕಾಲಿಕವಾಗಿ ಇಳಿಯಿತು. ಆದರೆ ಮತ್ತೆ ಮೇಲೆ ಹಾರಿದ ವಿಮಾನ ನಂತರ ಇಳಿದಿದ್ದು ಉಗಾಂಡದ ಎಂಟೆಬ್ಬೆಯಲ್ಲಿ. ಬೆಂಗಾಜಿಯಲ್ಲಿ ಇಳಿಸಿದಿದ್ದು ನಾಟಕದ ಭಾಗವಾಗಿತ್ತೇ? ನಂತರ ಎಂಟೆಬ್ಬೆಗೇ ಬಂದಿಳಿದಿದ್ದು ಏಕೆ? ಬೇರೆ ಎಲ್ಲಾದರೂ ಕೂಡ ಹೋಗಬಹುದಿತ್ತಲ್ಲ. ಅಂತಹ ಪ್ರಕರಣ ಮುಂದೆಂದೂ ಉಗಾಂಡಾದಲ್ಲಿ ಆಗಿಲ್ಲ.

ವಿಮಾನ ಅಪಹರಣವಾಗಿ ಉಗಾಂಡದಲ್ಲಿ ಬಂದು ಇಳಿದಾಗ ಅಧ್ಯಕ್ಷ ಇದಿ ಅಮೀನ್, ತುಂಬಾ "ಅನುಕೂಲಕರ"ವೆನ್ನುವಂತೆ, ವಿದೇಶ ಪ್ರವಾಸದಲ್ಲಿದ್ದ. ಅವನ ವೇಳಾಪಟ್ಟಿಯನ್ನು ನೋಡಿಕೊಂಡೇ ಅಪಹರಣದ ಸ್ಕೆಚ್ ಹಾಕಲಾಗಿತ್ತೇ? ಇದಿ ಅಮೀನ್ ಮೇಲ್ನೋಟಕ್ಕೆ ಇಸ್ರೇಲಿನ ದ್ವೇಷಿಯಾಗಿದ್ದ. ಅವನ ಕೆಳಗಿನ ಅಧಿಕಾರಿಗಳು ಎಲ್ಲಿ ಇಸ್ರೇಲಿಗೆ compromise ಆಗಿದ್ದರೋ ಏನೋ? ಅವರ ಋಣದಲ್ಲಿದ್ದರೇನೋ?? 

ಇಸ್ರೇಲಿಗೆ ತನ್ನದೇ ದೇಶದ ನಾಗರಿಕರನ್ನು ಅಷ್ಟು ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳಿ ಇಂತಹ ಒಂದು ಮಿಥ್ಯಾಧ್ವಜ ಕಾರ್ಯಾಚರಣೆಯನ್ನು ಮಾಡಿಸುವ ಅಂತಹ ದರ್ದೇನಿತ್ತು? ಸರಳ ಉತ್ತರ - ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ಕಪ್ಪುಬಣ್ಣ ಬಳಿಯುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಉಂಟುಮಾಡುವುದು. ಇಸ್ರೇಲ್ ಶಾಂತಿಗಾಗಿ ಪ್ರಯತ್ನಿಸುತ್ತಿದ್ದರೆ ಪ್ಯಾಲೆಸ್ಟೈನ್ ಹೋರಾಟಗಾರರು ಹಿಂಸೆ ತ್ಯಜಿಸುತ್ತಿಲ್ಲ ಎನ್ನುವ ಭಾವನೆ ಮೂಡುವಂತೆ ಮಾಡುವುದು. ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಉಗ್ರರ ಪ್ರಾಬಲ್ಯವನ್ನು, ಅವರಿಗಿರುವ ನೈತಿಕ ಬೆಂಬಲವನ್ನು ಕುಗ್ಗಿಸುವುದು. ಅವರನ್ನು ಬೆಂಬಲಿಸುವ ದೇಶಗಳಿಗೂ ಸಹಿತ ಅನ್ನಿಸಬೇಕು, ಇಂತಹ ಹಿಂಸಾತ್ಮಕ ದುರುಳರನ್ನು ಬೆಂಬಲಿಸಿದರೆ ಅಂತರರಾಷ್ಟ್ರೀಯ ಸಮುದಾಯದಲ್ಲಿ ನಮ್ಮ ಮರ್ಯಾದೆ ಕೂಡ ಹೋಗುತ್ತದೆ. 

ಇಸ್ರೇಲ್ ಬೇರೆ ಬೇರೆ ಪ್ಯಾಲೆಸ್ಟೈನ್ ಗುಂಪುಗಳನ್ನು ಭೇದಿಸಿ (infiltrate ಮಾಡಿ) ಇಂತಹ ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸುತ್ತಲೇ ಇರುತ್ತದೆ ಎಂಬ ಆಪಾದನೆ ಇಂದು ನಿನ್ನೆಯದಲ್ಲ. ೧೯೮೦ ರ ದಶಕದಲ್ಲಿ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರರು ಭಾರತದಲ್ಲೇ ಕತಾರ್, ಕುವೈತ್ ಮುಂತಾದ ದೇಶದ ರಾಯಭಾರಿಗಳನ್ನು ಗುಂಡಿಟ್ಟು ಕೊಂದಿದ್ದರು. ಅದನ್ನು ಪ್ಯಾಲೆಸ್ಟೈನ್ ಗುಂಪುಗಳ ಮಧ್ಯದ ಅಂತರ್ಯುದ್ಧ ವಿದೇಶಗಳಿಗೂ ಹಬ್ಬಿದ ನಿದರ್ಶನ ಎಂದು ಹೇಳಲಾಯಿತು.  ಕುವೈತ್, ಕತಾರ್ ದೇಶಗಳು ಅರಾಫತ್ ಅವರ ಫತಾಹ್ ಬಣಕ್ಕೆ ಮಾತ್ರ ಹಣಕಾಸಿನ ಸಹಾಯ ಮಾಡುತ್ತಿವೆ ಎನ್ನುವ ಕೋಪದಿಂದ ಅಬು ನಿಡಾಲ್ ಬಣ ಆ ದೇಶಗಳ ರಾಯಭಾರಿಗಳ ಮೇಲೆ ದಾಳಿ ಮಾಡಿತು ಎಂಬುದು ಅಧಿಕೃತ ಸುದ್ದಿಯಾದರೂ ಅಬು ನಿಡಾಲನ ಸಂಘಟನೆಯನ್ನು ತುಂಬಾ ಆಳವಾಗಿ ಒಳಹೊಕ್ಕಿದ್ದ (penetrate ಮಾಡಿದ್ದ) ಮೊಸ್ಸಾದ್, ಸಿಐಎ ಆ ಕಾರ್ಯಾಚರಣೆಗಳನ್ನು ತಮ್ಮ ರಾಜತಾಂತ್ರಿಕ ಉದ್ದೇಶಗಳಿಗೆ ಮಿಥ್ಯಾಧ್ವಜ ಕಾರ್ಯಾಚರಣೆಗಳಂತೆ ಉಪಯೋಗಿಸಿಕೊಂಡವೇ ಎಂಬ ಸಂಚಿನ ಸಿದ್ಧಾಂತಗಳು (conspiracy theories) ಉದ್ಭವವಾಗಿದ್ದು ನಿಜ. ಮುಂಬೈನಲ್ಲಿ ಬ್ರಿಟಿಷ್ ಹೈಕಮಿಷನ್ ಅಧಿಕಾರಿ ನೊರ್ರಿಸ್ ಎಂಬಾತನನ್ನು ಬೈಕ್ ಮೇಲೆ ಬಂದ ಬಂದೂಕುಧಾರಿಗಳು ಗುಂಡಿಟ್ಟು ಕೊಂದರು. ಮುಂಬೈ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದ ಅಲಿಟಾಲಿಯಾ ಇಟಾಲಿಯನ್ ವಿಮಾನ ಸಂಸ್ಥೆಯ ಸಿಬ್ಬಂದಿ ಮೇಲೆ ಯದ್ವಾತದ್ವಾ ಗುಂಡಿನ ಮಳೆ ಸುರಿಸಿದರು. ಅವೆಲ್ಲವನ್ನೂ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರರ ತಲೆಗೆ ಕಟ್ಟಿದರು. ಆ ದಾಳಿಗಳ ಹಿಂದಿನ ಉದ್ದೇಶ ಏನಿತ್ತೋ?? ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ತಾತ್ವಿಕ ಮತ್ತು ನೈತಿಕ ಬೆಂಬಲ ಕೊಟ್ಟಿದ್ದ ಅಂದಿನ ಭಾರತೀಯ ಆಡಳಿತಕ್ಕೆ, 'ಪ್ಯಾಲೆಸ್ಟೈನ್ ಸಂಗ್ರಾಮ ಬೆಂಬಲಿಸಿ, ಇಸ್ರೇಲನ್ನು ಖಂಡಿಸುತ್ತೀರಿ ನೀವು. ಪ್ಯಾಲೆಸ್ಟೈನ್ ಉಗ್ರರು ನಿಮ್ಮ ದೇಶದಲ್ಲೇ ಹಿಂಸಾಚಾರ ಮಾಡುತ್ತಿದ್ದಾರೆ. ಅವರಿಗೆ ನೀವು ಕೊಡುವ ಬೆಂಬಲ ಯಾವ ಪುರುಷಾರ್ಥಕ್ಕೆ??' ಎನ್ನುವ ಒತ್ತಡ ಹಾಕುವ ಹುನ್ನಾರವಿತ್ತೇ? ಭಾರತ ಯಾಸೀರ್ ಅರಾಫತ್ ಅವರಿಗೆ ಮಾತ್ರ ಬೆಂಬಲ ಸೂಚಿಸಿತ್ತು. ಅದೇ ಕಾರಣಕ್ಕೆ ಅವರ ವಿರೋಧಿ ಅಬು ನಿಡಾಲ್ ಭಾರತದಲ್ಲಿ ಹಿಂಸಾಚಾರ ಮಾಡಿದ ಎನ್ನುವ ಸಂದೇಶವನ್ನು ಕಳಿಸುವ ಹುನ್ನಾರ ಕೂಡ ಇತ್ತೋ ಏನೋ!?? ಅಂತರರಾಷ್ಟೀಯ ಸಂಚುಗಳ ಚದುರಂಗದಾಟ ಸುಲಭವಾಗಿ ಅರ್ಥವಾಗುವುದಿಲ್ಲ. 

೧೯೮೧ ರಲ್ಲಿ ಲೆಬನಾನ್ ಮೇಲೆ ದೊಡ್ಡ ಪ್ರಮಾಣದ ಯುದ್ಧ ಮಾಡಲು ಇಸ್ರೇಲಿಗೆ ಒಂದು ಬರೋಬ್ಬರಿ ಕಾರಣ ಬೇಕಾಗಿತ್ತು. ಸಿಕ್ಕಿತು ಕೂಡ. ದೂರದ ಇಂಗ್ಲೆಂಡ್ ದೇಶದ ರಾಜಧಾನಿ ಲಂಡನ್ನಿನಲ್ಲಿ ಇಸ್ರೇಲ್ ರಾಯಭಾರಿಯ ಮೇಲೆ ಯಾರೋ ಗುಂಡು ಹಾರಿಸಿದರು. ಗುಂಡು ಹಾರಿಸಿದ್ದು, ಮತ್ತದೇ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರ ಎಂದಿತು ಇಸ್ರೇಲ್. ಅವರು ಲೆಬನಾನಿನಲ್ಲಿ ಅಡಗಿದ್ದಾರೆ. ಅವರ ಹುಟ್ಟಡಗಿಸಲೇಬೇಕು ಎಂದು ಲೆಬನಾನ್ ಮೇಲೆ ಮುರಿದುಕೊಂಡು ಬಿದ್ದರು. ಅಬು ನಿಡಾಲ್ ಸಂಘಟನೆಯಲ್ಲಿದ್ದ ಡಬಲ್ ಏಜೆಂಟುಗಳು ಕಾರ್ಯ ಸಾಧಿಸಿ ಕೊಟ್ಟಿದ್ದರು ಎಂಬುದು ಒಳಗಿನ ಸುದ್ದಿ. ಲಂಡನ್ನಿನ ದಾಳಿಯಲ್ಲಿ ಇಸ್ರೇಲಿ ರಾಯಭಾರಿ ಚಿಕ್ಕಪುಟ್ಟ ಗಾಯಗಳಿಂದ ಪಾರಾದ. ಆದರೆ ಇಸ್ರೇಲ್ ಲೆಬನಾನ್  ಮೇಲೆ ಮಾಡಿದ ಪೂರ್ಣಪ್ರಮಾಣದ ದಾಳಿಗೆ ಯಾರೂ ತಕರಾರು ತೆಗೆಯುವಂತಿರಲಿಲ್ಲ. ಒಟ್ಟಿನಲ್ಲಿ ಮಿಥ್ಯಾಧ್ವಜ ಕಾರ್ಯಾಚರಣೆಯೆಂದರೆ ಯಾರದ್ದೋ ಬಸಿರು, ಇನ್ನ್ಯಾರದ್ದೋ ಹೆಸರು. 

ಬೇರೆಯವರಿಗೆ ನಂಬಿಕೆ ಬರುವಂತೆ ಮಾಡಲು ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸಿ ಗುಪ್ತವಾದ ಕಾರ್ಯಸೂಚಿಯನ್ನು (hidden agenda) ಸಾಧಿಸುವುದು ಒಂದು ಮಾತು. ನೂರಾರು ಜನ ನಿಷ್ಪಾಪಿ ನಾಗರಿಕರನ್ನು ಸಾವಿನ ದವಡೆಗೆ ತಳ್ಳಿ, ಅನೇಕ ಸೈನಿಕರನ್ನು do or die ಕಾದಾಟಕ್ಕೆ ಕಳಿಸಿ, ನಿಜವೇನೋ ಅನ್ನಿಸುವಂತಹ ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸುತ್ತಾರೆಯೇ? ಅದು ಸಾಧ್ಯವೇ? ಸಿಕ್ಕಿಬಿದ್ದರೆ ತೊಂದರೆಯಲ್ಲವೇ? ಎಂಬ ಪ್ರಶ್ನೆಗಳಿಗೆ ಸಿದ್ಧ ಉತ್ತರವಿಲ್ಲ. ಅದೇನೋ ಹೇಳುತ್ತಾರಲ್ಲ...ಕುಟುಂಬದ ಹಿತಕ್ಕಾಗಿ ಒಬ್ಬ ಕುಟುಂಬದ ಸದಸ್ಯನನ್ನೂ, ಗ್ರಾಮದ ಹಿತಕ್ಕಾಗಿ ಒಂದು ಕುಟುಂಬವನ್ನೂ, ರಾಜ್ಯದ ಹಿತಕ್ಕಾಗಿ ಒಂದು ಗ್ರಾಮವನ್ನೂ ಬಲಿ ಕೊಡಬಹುದಂತೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ದೇಶಕ್ಕೆ ಲಾಭವಾಗಲಿದೆ ಎಂದು ನಮ್ಮನ್ನು ಆಳುವವರು ನಿರ್ಧರಿಸಿದರೆ ನಿಮ್ಮ explicit ಒಪ್ಪಿಗೆ ಇಲ್ಲದೆಯೂ ನಿಮ್ಮ ಆಹುತಿಯನ್ನು ಅವರು ಕೊಡುತ್ತಾರೆ. ಅದಕ್ಕೆ ಬೇಕಾದ ಅನುಮತಿ, ಶಕ್ತಿ, ಗೌಪ್ಯತೆ, ದಾಖಲೆಗೆ ಸಿಕ್ಕದ ಸಂಪನ್ಮೂಲಗಳು ಎಲ್ಲವನ್ನೂ ನಾವೇ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅವರಿಗೆ ದಯಪಾಲಿಸಿದ್ದೇವೆ ತಾನೇ??

ಅಮೆರಿಕ ಎರಡನೇ ಮಹಾಯುದ್ಧಕ್ಕೆ ನೇರವಾಗಿ ಧುಮುಕಲು ಕಾರಣವಾದ ಪರ್ಲ್ ಹಾರ್ಬರ್ ಎನ್ನುವ ಅಮೇರಿಕಾದ ನೌಕಾನೆಲೆ ಮೇಲೆ ಜಪಾನ್ ಮಾಡಿದ ದಾಳಿ ಕೂಡ ಒಂದು ತರಹದ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತು ಅನ್ನುತ್ತಾರೆ. ಜಪಾನಿಗಳು ನೌಕಾನೆಲೆ ಮೇಲೆ ದಾಳಿ ಮಾಡುವ ಬಗ್ಗೆ ಮಾಹಿತಿ ಇತ್ತು. ಅದನ್ನು ಅದನ್ನು ತಡೆಯದೇ ಬೇಕೆಂದೇ ಘಟಿಸಲು ಬಿಟ್ಟರು. ಏಕೆಂದರೆ ಅಂತದೊಂದು ಆಘಾತಕರ ದಾಳಿ ಆದ ಹೊರತೂ ಯುದ್ಧಕ್ಕೆ ಜನ ಬೆಂಬಲ ಸಿಗುತ್ತಿರಲಿಲ್ಲ. ಹಾಗೆಂದು ಕೆಲವರ ಸಂಚಿನ ಸಿದ್ಧಾಂತ (conspiracy theory).

ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕಾ ನೇರವಾಗಿ ಭಾಗವಹಿಸಲು ಕಾರಣವಾಗಿದ್ದು ಟೊಂಕಿನ್ ಕೊಲ್ಲಿಯಲ್ಲಿ ಅಮೇರಿಕಾದ ನೌಕೆಗಳ ಮೇಲಾಯಿತು ಎಂದು ಹೇಳಲಾದ ಗುಂಡಿನ ದಾಳಿ. ಆ ದಾಳಿ ಮಾಡಿದ್ದು ಉತ್ತರ ವಿಯೆಟ್ನಾಂ ಎಂದು ಘೋಷಿಸಿದ ಅಮೇರಿಕ ಅಧಿಕೃತವಾಗಿ ಯುದ್ಧಕ್ಕೆ ಇಳಿಯಿತು. ಅ ಘಟನೆ ಬಗ್ಗೆ ಕೂಡ ಸಂಶಯಗಳಿವೆ. ಆಗಿನ ಅಧ್ಯಕ್ಷ ಲಿಂಡನ್ ಜಾನ್ಸನ್ ಖಾಸಗಿಯಾಗಿ ಜೋಕ್ ಹೊಡೆದಿದ್ದರಂತೆ, ಸಮುದ್ರದಲ್ಲಿದ್ದ ತಿಮಿಂಗಲುಗಳ ಮೇಲೆ ಗುಂಡು ಹಾರಿಸಿ ಅಂತಹ ಸನ್ನಿವೇಶ ಸೃಷ್ಟಿಸಿದೆವು. ಹಾ!! ಹಾ!! ಎನ್ನುವ ಅಟ್ಟಹಾಸದ ನಗು ಬೇರೆ. ಟಿಪಿಕಲ್ ಜಾಲಿ ಫೆಲೋ ಲಿಂಡನ್ ಜಾನ್ಸನ್.

ಸೆಪ್ಟೆಂಬರ್ ೧೧, ೨೦೦೧ ರ ಅಲ್ ಖೈದಾ ದಾಳಿ ಕೂಡ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತೇ? ಇರಬಹುದೇನೋ ಎಂದು  ಪ್ರತಿಪಾದಿಸಿ ಪುಸ್ತಕ ಬರೆದವರು ತನಿಖಾ ಪತ್ರಕರ್ತ ದಿವಂಗತ ಜಿಮ್ ಮಾರ್ಸ್. Inside Job: Unmasking the 9/11 Conspiracies by  Jim Marrs

ದೇಶದ so called ಹಿತರಕ್ಷಣೆಗಾಗಿ ಮಿಥ್ಯಾಧ್ವಜ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಭಾರತದ ಪ್ರಪಥಮ ವಿಮಾನ ಅಪಹರಣ ಕೂಡ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತು ಅಂದರೆ ನೀವು ನಂಬುತ್ತೀರೋ? ೧೯೭೧ ರಲ್ಲಿ ಭಾರತದ ಮೊದಲ ವಿಮಾನ ಅಪಹರಣ ನಡೆದಾಗ ಅದನ್ನು ಪಾಕಿಸ್ತಾನಿ ಬೆಂಬಲಿತ ಕಾಶ್ಮೀರಿ ಭಯೋತ್ಪಾದಕ ಮಾಡಿದ ಎಂಬಂತೆ ಬಿಂಬಿಸಲಾಯಿತು. ಮೇಲ್ನೋಟಕ್ಕೆ ಅದು ಸರಿಯಾಗಿತ್ತು. ಭಾರತಕ್ಕೆ ಬಾಂಗ್ಲಾ ವಿಮೋಚನೆಗೆ ವೇದಿಕೆ ಸಜ್ಜು ಮಾಡಿಕೊಳ್ಳಬೇಕಿತ್ತು. ಪಾಕಿಸ್ತಾನವು ವಿಮಾನ ಅಪಹರಣಕ್ಕೆ ಸಹಕಾರ ನೀಡಿದೆ ಎಂದು ಆಪಾದಿಸಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ನಿಷ್ಕ್ರಿಯಗೊಳಿಸಬೇಕಿತ್ತು. ಭಾರತದ ಮೇಲೆ ಪಾಕಿಸ್ತಾನದ ವಿಮಾನಗಳು ಹಾರದಂತೆ ನಿರ್ಬಂಧ ವಿಧಿಸಲು ಒಂದು ಸರಿಯಾದ ಖಡಕ್ ಕಾರಣ ಬೇಕಿತ್ತು. ಹಾಗಾಗಿ ಅಂಥದೊಂದು ಮಿಥ್ಯಾಧ್ವಜ ಕಾರ್ಯಾಚರಣೆಯ ಜರೂರತ್ತಿತ್ತೇನೋ. ಅಂತ್ಯದಲ್ಲಿ ಅದು ಸುಖಾಂತವಾಯಿತು. ಪಾಕಿಸ್ತಾನಕ್ಕೆ ಅಪಹರಿಸಲ್ಪಟ್ಟಿದ್ದ ಪ್ರಯಾಣಿಕರು ಮರುದಿವಸವೇ ವಾಘಾ ಗಡಿಯ ಮೂಲಕ ಬಸ್ ಮೇಲೆ ಸುರಕ್ಷಿತವಾಗಿ ಹಿಂತಿರುಗಿದರು. ಅಪಹರಣಕಾರ ವಿಮಾನವನ್ನು ಸ್ಫೋಟಿಸಿದ. ಪಾಕಿಸ್ತಾನದ ಬಂಧಿಯಾದ. ಈಗ ಐವತ್ತು ವರ್ಷಗಳ ಬಳಿಕ ಆ ಕಾರ್ಯಾಚರಣೆಯನ್ನು ಪ್ರಶಂಸಿಸುವ, ಸಂಭ್ರಮಿಸುವ ಮಾಹಿತಿ ನಿಮಗೆ ಪುಸ್ತಕಗಳಲ್ಲಿ, ರಾಷ್ಟ್ರವಾದವನ್ನು ಹರಡುವ ಅಂತರ್ಜಾಲ ತಾಣಗಳಲ್ಲಿ ಸಿಗುತ್ತದೆ. ಸರ್ಕಾರ ಏನೂ ಹೇಳದೇ ಮುಗುಮ್ಮಾಗಿ ಇರುತ್ತದೆ. ಆ ಮಾತು ಬೇರೆ. ಅದರ ಬಗ್ಗೆ ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಬೇಹುಗಾರಿಕೆ ಅಧಿಕಾರಿಯೊಬ್ಬರು ತಮ್ಮ ಪುಸ್ತಕದಲ್ಲಿ ಅದನ್ನು ಖುಲಾಸೆ ಮಾಡಿದಾಗ ವಿವರವಾಗಿ ಬರೆದಿದ್ದೆ. ಆಸಕ್ತಿ ಇದ್ದರೆ ಓದಿ - ಭಾರತದ ಪ್ರಪ್ರಥಮ ವಿಮಾನ ಅಪಹರಣದ ಹಿಂದಿನ ಹಕೀಕತ್ತು!

ದೇಶದ ಹಿತಾಸಕ್ತಿಗಾಗಿ, ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಕ್ಕಾಗಿ, ಗಮನವನ್ನು ಬೇರೆ ಕಡೆ ಸೆಳೆಯಲು, ತಮ್ಮ ರಹಸ್ಯ ಕಾರ್ಯಪ್ರಣಾಳಿಗೆ ಪ್ರಜಾ ಬೆಂಬಲ ಪಡೆಯಲು, ಸಾಮಾನ್ಯರು ಊಹಿಸಲೇ ಆಗದ ಕಾರಣಗಳಿಗಾಗಿ, ಮತ್ತಿತರ ಕಾರಣಗಳಿಗಾಗಿ ಮಿಥ್ಯಾಧ್ವಜ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಮಿಥ್ಯಾಧ್ವಜ ಕಾರ್ಯಾಚರಣೆಯೊಂದರ ನಿಜ ಸ್ವರೂಪ ಪೂರ್ತಿಯಾಗಿ ಹೊರಬಂದಿದ್ದು ಬಹಳ ಕಡಿಮೆ. ಇಂತಹ ಕಾರ್ಯಾಚರಣೆಗಳ ಪ್ಲಾನಿಂಗ್ ಇಷ್ಟು ವಿಭಾಗೀಕರಿಸಲ್ಪಟ್ಟಿರುತ್ತದೆ (compartmentalized) ಎಂದರೆ ಅದರ ಸಂಪೂರ್ಣ ಮಾಹಿತಿ ಯಾರಿಗೂ ತಿಳಿಯದೇ ಇದ್ದರೂ ಆಶ್ಚರ್ಯವಿಲ್ಲ. ಬೇಹುಗಾರಿಕೆಯಲ್ಲಿ ಮಾಹಿತಿ ಯಾರಿಗೆ ಎಷ್ಟು ಬೇಕು ಅಷ್ಟೇ ಹಂಚಿಕೆಯಾಗುತ್ತದೆ. As needed basis only.  ಮತ್ತೆ ಜನರನ್ನು ಗೊಂದಲಕ್ಕೆ ದೂಡಲು ವ್ಯವಸ್ಥಿತವಾದ ತಪ್ಪು ಮಾಹಿತಿಯ ಅಭಿಯಾನವನ್ನು (disinformation campaign) ನಡೆಸಲಾಗುತ್ತದೆ. ಹೀಗಿರುವಾಗ 'ಯಾರ ಬಸಿರು?ಯಾರ ಹೆಸರು?' ಎಂಬ ಗೊಂದಲ ಬಗೆಹರಿಯದೇ ವಿಷಯ ಮತ್ತಿಷ್ಟು ಬಗ್ಗಡವಾಗುತ್ತದೆ ಅಷ್ಟೇ. 

***

ಮಿಥ್ಯಾಧ್ವಜ ಕಾರ್ಯಾಚರಣೆಗಳಾಗಿರಬಹುದಾದ ಘಟನೆಗಳ ಬಗ್ಗೆ ಹೀಗೊಂದಿಷ್ಟು ಆಸಕ್ತಿದಾಯಕ ಪುಸ್ತಕಗಳ ಕೊಂಡಿಗಳು ಕೆಳಗಿವೆ. 

ಒಂದೇ ಘಟನೆಯನ್ನು (೨೬/೧೧/೨೦೦೮ ರ ಮುಂಬೈ ಮೇಲಿನ ಉಗ್ರರ ದಾಳಿ), ಇಬ್ಬರು ಬೇರೆ ಬೇರೆ ಲೇಖಕರು, ವಿಭಿನ್ನ ದೃಷ್ಟಿಕೋನಗಳಿಂದ ನೋಡಿ, ಹೇಗೆ ಬೇರೆ ಬೇರೆ ತರಹದ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿರಬಹುದೋ ಎಂದು ವಿಶ್ಲೇಷಿಸಿದ್ದಾರೆ ಎಂದು ನೋಡಲು ಆರ್ ವಿ ಎಸ್ ಮಣಿ ಮತ್ತು ಮುಶ್ರೀಫ್ ಬರೆದಿರುವ ಕೆಳಗಿನ ಪುಸ್ತಕಗಳನ್ನುಓದಿ. ಇಂತಹಒಂದಕ್ಕಿಂತ ಹೆಚ್ಚಿನ (multiple) ಸಾಧ್ಯತೆಗಳು ತೆರೆದುಕೊಂಡರೆ ಮಿಥ್ಯಾಧ್ವಜ ಕಾರ್ಯಾಚರೆಣೆಯೊಂದು ಯಶಸ್ವಿಯಾದಂತೆ. ಸೂತ್ರಧಾರರಿಗೆ ಬೇಕಾಗಿದ್ದೇ ಅದು. ಮಿಥ್ಯಾಧ್ವಜ ಕಾರ್ಯಾಚರಣೆ ಎನ್ನಿಸಿದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಅನ್ನಿಸಬೇಕು. ನಿಜ ಸ್ವರೂಪ ತಟಕ್ಕನೆ ಅರಿವಿಗೆ ಬರಬಾರದು.  ಹಾಗೆನ್ನಿಸಲಿ ಎಂದೇ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು (disinformation) ಹರಡುವುದೂ ಉಂಟು. ಅದಕ್ಕಾಗಿ ನಿಯೋಜಿತ ಪತ್ರಕರ್ತರು, ಲೇಖಕರು ಕೂಡ ಇರುತ್ತಾರೆ.  

The Myth of Hindu Terror: Insider account of Ministry of Home Affairs by RVS Mani

Who Killed Karkare?: The Real Face of Terrorism in India by SM Mushrif

The Invisible Hand Behind Saffron Terrorism by Anup Sardesai 

***

False Flag Operation ಗೆ "ಮಿಥ್ಯಾಧ್ವಜ ಕಾರ್ಯಾಚರಣೆ" ಎಂಬುದು ನಾನು ಸೃಷ್ಟಿಸಿದ ಪದ. ಕನ್ನಡದಲ್ಲಿ ಇದಕ್ಕೆ ಬೇರೆ ಯಾವುದಾದರೂ ಪದ ಇದೆಯೇ? ಅಥವಾ ನಿಮಗೆ ಬೇರೆ ಯಾವುದಾರೂ ಪದ ಸೂಚಿಸಿತೇ? ತಿಳಿಸಿ.

***

ಅಬು ನಿಡಾಲ್ ಎಂಬ ಪುರಾತನ ಪ್ಯಾಲೆಸ್ಟೈನ್ ಉಗ್ರನ ಹೆಸರು ನಾಲ್ಕಾರು ಬಾರಿ ಪ್ರಸ್ತಾಪವಾಗಿದೆ. ಹಿಂದೊಮ್ಮೆ ಅವನ ಬಗ್ಗೆ ಬರೆದಿದ್ದ ಒಂದು ಲೇಖನ. ಆಸಕ್ತರು ಓದಬಹುದು.