Tuesday, August 21, 2012

ಟ್ಯೂನಿಸ್ಸಿನಲ್ಲಿ ತಿಥಿಗೆ ಮುಹೂರ್ತ (ಭಾಗ 1)

1979 ರಲ್ಲಿ ಅಂದಿನ ಇಸ್ರೇಲಿನ  ಖಡಕ್  ಪ್ರಧಾನಿ ಮೆನಾಕೆಮ್ ಬೆಗಿನ್ ಮತ್ತು ಅವರ ಗರಂ ಖೋಪಡೀ ಸೇನಾನಿ ಏರಿಯಲ್ ಶರೋನ್ ಕೂಡಿ ಪಕ್ಕದ ಲೆಬನಾನನ್ನು ಮುತ್ತಿಗೆ ಹಾಕಿದ್ದರು. ಅಲ್ಲಿ  ಹೊಕ್ಕಿ ಇಸ್ರೇಲ್ ವಿರುದ್ಧ ಕಿತಬಿ ಮಾಡುತ್ತಿದ್ದ ಪ್ಯಾಲೆಸ್ಟೈನ್ ಉಗ್ರಗಾಮಿಗಳನ್ನು ಅಲ್ಲಿಂದ ಪರ್ಮನೆಂಟಲಿ ಓಡಿಸಿ ಬಿಡುವದು ಅವರ ಅಂತಿಮ ಗುರಿ.

ಸುಮಾರು ಮೂರು ವರ್ಷ ಯುದ್ಧ ನಡೆಯಿತು. ತಿಳಿದಷ್ಟು ಸುಲಭ ಆಗಿರಲಿಲ್ಲ ಬೇರೆ ಬೇರೆ ಬಣದ ಬಂಡುಕೋರರನ್ನು ಬಗ್ಗು ಬಡಿದು ಒಂದು ತರಹದ ಖಾಯಂ ಶಾಂತಿ ಸ್ಥಾಪಿಸುವದು. ಆಗಿನ ಅಮೆರಿಕನ್ನರಿಗೆ ವಿಯೆಟ್ನಾಂ ಯುದ್ಧ ಆದ ಹಾಗೆ, ಈಗ ಅಮೇರಿಕಾದವರಿಗೆ ಇರಾಕ್, ಅಫ್ಘಾನಿಸ್ತಾನ್ ಆದ ಹಾಗೆ ಮಾಡಿದಷ್ಟೂ ಮುಗಿಯದ ಯುದ್ಧವಾಗುತ್ತ ಬಂದಿತ್ತು ಈ ಲೆಬನಾನ್ ಯುದ್ಧ ಇಸ್ರೇಲಿಗೆ.

ಲೆಬನಾನಿನಲ್ಲಿ ಕೇವಲ ಯಾಸೀರ್ ಅರಾಫತ್ ಮತ್ತು ಅವರ ಫತಾ ಸಂಘಟನೆ ಒಂದೇ ಇರಲಿಲ್ಲ. ಆಗ ತಾನೇ ಸಿರಿಯಾ ಬೆಂಬಲದಿಂದ ಅರಾಫತ್ ಅವರಿಂದ ಒಡೆದು ದೂರವಾಗಿದ್ದ ಅಬು ಮುಸಾ ಇದ್ದ. ಅರಾಫತರಿಗೆ ತಿರುಗಿ ಬಾರಿಸುತ್ತಿದ್ದ. ಶಿಯಾ ಮುಸ್ಲೀಮರ ಸಂಘಟನೆ "ಹೆಜಬುಲ್ಲಾ" ವಿಪರೀತವಾಗಿ ಮೇಲೆ ಬರುತ್ತಿತ್ತು. ಅದಕ್ಕೆ ಇರಾನ್ ಬೆಂಬಲ. ಲೆಬನಾನಿನವೇ ಆದ ಬೇರೆ ಬೇರೆ ಬಣಗಳಿದ್ದವು. ಬಷೀರ್ ಗೆಮಾಯಲ್ ನೇತೃತ್ವದಲ್ಲಿ ಕ್ರಿಶ್ಚಿಯನ್ ಮಿಲಿಶಿಯಾ "ಫ್ಯಾಲಿಂಜೆ" ಕೂಡ ಇತ್ತು. ಇಸ್ರೇಲ್ ಗೆಮಾಯಲ್ ನನ್ನು ಎತ್ತಿ ಕಟ್ಟುತಿತ್ತು. ಅವನು ಪ್ಯಾಲೆಸ್ಟೈನ್ ಉಗ್ರವಾದಿಗಳನ್ನು ಲೆಬನಾನ್ ನಲ್ಲಿ ಹಿಡಿದು ಬಡಿಯುತ್ತಿದ್ದ. ಇಸ್ರೇಲಿನ ಕೆಲಸ ಮಾಡಿಕೊಡುತ್ತಿದ್ದ. ಒಟ್ಟಿನಲ್ಲಿ ರಾಮ ರಾಡಿ. ಆ ರಾಡಿಯಲ್ಲಿಯೇ ಸಿಕ್ಕ ಮೀನ ಹಿಡಿಯಲು ಅಮೇರಿಕಾದ ಪಡೆಗಳು, ಫ್ರೆಂಚ್ ಪಡೆಗಳು UN ಧ್ವಜದಡಿ ಶಾಂತಿ ಪಾಲನಾ ಪಡೆ ಎಂಬ ರೂಪ ಧರಿಸಿ ಬಂದಿದ್ದವು. ಮೊದಲೇ ಗಣಕಾಗಿದ್ದ ರಾಡಿ ನೀರು ಮತ್ತಷ್ಟು ಬಗ್ಗಡವಾಯಿತು.

ಅಂಥದರಲ್ಲಿಯೇ ಏನೇನೋ ಮಾಡಿ ಒಂದು ಚುನಾವಣೆ ಅಂತ ಮಾಡಲಾಯಿತು. ಮೊದಲೇ ಪ್ಲಾನ್ ಮಾಡಿ ಇಟ್ಟಂತೆ  ಬಷೀರ್ ಗೆಮಾಯಲ್ ಗೆದ್ದ. ಗೆದ್ದು ಇನ್ನೇನು ಪ್ರಧಾನಿ ಆಗಬೇಕು ಅನ್ನುವದರೊಳಗೆ ಅವನ ಕುರ್ಚಿ ಕೆಳಗೇ  ವಿರೋಧಿಗಳು ಇಟ್ಟಿದ್ದ ಮಹಾಬಾಂಬಿಗೆ ಸಿಕ್ಕು ಹರೋಹರೋ ಅಂದು ಮೇಲೆ ಹೋದ. ಅವನ ಪೂರ್ತಿ ಬಿಲ್ಡಿಂಗೇ ನೆಲಸಮವಾಗಿ ಧೂಳೆದ್ದು ಹೋಗಿತ್ತು. ಆ ಮಟ್ಟಿನ ಶಕ್ತಿಶಾಲಿ ಬಾಂಬಾಗಿತ್ತು ಅದು. ಗಮಾಯೆಲ್ ಗೆ ಆಗದ ವಿರೋಧಿ ಬಣಗಳು ಪಶ್ಚಿಮದ ಶಕ್ತಿಗಳಿಗೆ ಸರಿಯಾದ ಟಾಂಗ್ ಕೊಟ್ಟಿದ್ದವು. ಮುಂದೆ ಸೂಸೈಡ್ ಬಾಂಬರ್ಗಳು ಅಮೇರಿಕಾದ ಸೈನ್ಯ ಶಿಬಿರ, ಫ್ರೆಂಚ್ ಶಿಬಿರಗಳ ಮೇಲೆ ದಾಳಿ ಮಾಡಿ 283 ಅಮೆರಿಕಾದ ಸೈನಿಕರನ್ನು, 70-80 ಫ್ರೆಂಚ್ ಸೈನಿಕರನ್ನು ಕೊಂದರು. ಬಷೀರ್ ಗೆಮಾಯಲ್ ಹತ್ಯೆಯ ಪ್ರತಿಕಾರ ಎಂಬಂತೆ ಅವನ ಕಡೆ ಜನ ಪ್ಯಾಲೆಸ್ತೈನಿಯರ ನಿರಾಶ್ರಿತರ ಶಿಬಿರಗಳಿಗೆ ನುಗ್ಗಿ ಹೆಂಗಸರು, ಮಕ್ಕಳನ್ನೂ ಬಿಡದೆ 800-1000 ಜನರ ಮಾರಣಹೋಮ ಮಾಡಿ ಬಿಟ್ಟರು. ಆವಾಗ ಮಾತ್ರ ಅಂತರಾಷ್ಟ್ರೀಯ ಸಮುದಾಯ ಲಬೋ ಲಬೋ ಅಂತ ಬೊಬ್ಬೆ ಹೊಡೆಯಲು ಶುರು ಮಾಡಿತು. ಒಟ್ಟಿನಲ್ಲಿ ಒಂದು ಪರಿಹಾರ ಕಂಡು ಹಿಡಿಯಲೇ ಬೇಕಾಗಿತ್ತು.

"ನಮ್ಮ ಕೈ ಕಟ್ಟಿದ್ದೀರಿ. ಬಿಚ್ಚಿ. ಯಕ್ಕಾಮಕ್ಕಾ ಬಾಂಬಿಂಗ ಮಾಡಿ, ಇಡೀ ಬಿರೂಟ್ ನಗರವನ್ನೇ ನೆಲಸಮ ಮಾಡಿ ಬಿಡುತ್ತವೆ.
ಎಲ್ಲರೂ ಹೋಗುತ್ತಾರೆ. ಖೇಲ್ ಖತಂ. ಪ್ರಾಬ್ಲೆಮ್ ಸಾಲ್ವ್" - ಅಂತ ಅಂದವರು ಇಸ್ರೇಲಿಗಳು. ಅವರಿಗೆ ಸಿವಿಲಿಯನ್ ಜನರಿಗೆ ತೊಂದರೆಯಾಗದಂತೆ ಗಲ್ಲಿ ಗಲ್ಲಿ, ಸಂದಿ ಗೊಂದಿ  ಅಲೆಯುತ್ತ ಸಿವಿಲಿಯನ್ ಹಾಗೆ ಕಂಡು ಮರಾಮೋಸದ ದಾಳಿ ಮಾಡುತ್ತಿದ್ದ ಉಗ್ರಗಾಮಿಗಳ ಜೊತೆ ಯುದ್ಧ ಮಾಡಿ ಸಾಕಾಗಿತ್ತು. ಒಂದು ದೊಡ್ಡ ಮಟ್ಟದ ಬಾಂಬಿಂಗ ಮಾಡಿ ಮುಗಿಸಿಬಿಡೋಣ ಅಂತ ಇತ್ತು ಅವರ ಪ್ಲಾನ್. ಪೂರ್ತಿ ಹತಾಶರಾದವರ - "ಮಾಡಿ ಮುಗಿಸಿಬಿಡೋಣ" - ಅನ್ನೋ ಪ್ಲಾನ್.

"ಇಲ್ಲ....ಇಲ್ಲ....ಹಾಗೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿ ದಕ್ಕಿಸಿಕೊಳ್ಳುವದು ಅಸಾಧ್ಯ. ಬೇರೇನಾದರು  ಮಾಡಬೇಕು. ಲೆಬನಾನಿನಿಂದ ಅರಾಫತ್ ಮತ್ತು ಅವರ ಪಡೆಗಳನ್ನು ಕಳಿಸಿಬಿಟ್ಟರೆ, ದೊಡ್ಡ ಮಟ್ಟದ ತಲೆನೋವು ಕಡಿಮೆಯಾದ ಹಾಗೆ. ಅವರು ಇಸ್ರೇಲಿನಿಂದ ದೂರ ಹೋದಷ್ಟು ಒಳ್ಳೆಯದೇ. ದೂರ ಕುಳಿತು ಇಷ್ಟು ಕಿತಬಿ ಕಿತಾಪತಿ ಮಾಡುವದು ಕಷ್ಟ. ಏನೇ ಆಗಲಿ ಅರಾಫತ್ ಜೀವಂತ ಇರಬೇಕು. ಯಾಕೆಂದರೆ ಅವರನ್ನು ಬಿಟ್ಟರೆ ಬಾಕಿ ಎಲ್ಲ ನಾಯಕರು ಪಕ್ಕಾ ಹುಂಬ ಜನರೇ ಹೊರತೂ ಯಾರಿಗೂ ಒಂದು ಸಮಚಿತ್ತದಿಂದ ಕೂತು  ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಆಸಕ್ತಿ ಇಲ್ಲ. ಬಾಕಿ ಹುಂಬರು ಇರಾಕ್, ಸಿರಿಯಾ, ಇರಾನ್, ಲಿಬಿಯಾ ದೇಶಗಳ ಬಾಡಿಗೆ ಹಂತಕರಾಗಿ ಕೆಲಸ ಮಾಡಿ ದುಡ್ಡು ಮಾಡಿಕೊಳ್ಳುವದರಲ್ಲೇ ನಿರತರು. ಅವರು ಲೆಬನಾನಿನಲ್ಲಿಯೇ ಇದ್ದರೆ ಇರಲಿ. ಇದ್ದು ಹೊಡೆದಾಡಿ ಸತ್ತರೆ ಸಾಯಲಿ." - ಅಂತ ಅಮೇರಿಕ, ಬ್ರಿಟನ್, UN ಗಳ ಅಭಿಮತ.

ಅರಾಫತ್ ಅವರನ್ನು ಎಲ್ಲಿಗೆ ಕಳಿಸುವದು? ತನ್ನ ಸುತ್ತ ಮುತ್ತಲಿನ ದೇಶಗಳಲ್ಲಿ ಅರಾಫತ್ ಇರುವ ಹಾಗಿಲ್ಲ ಅಂತ ಇಸ್ರೇಲ್ ಹೇಳಿ ಬಿಟ್ಟಿತ್ತು. ಮತ್ತೆ ಜೋರ್ಡಾನ್, ಸಿರಿಯಾ, ಇಜಿಪ್ಟ್, ಇರಾಕ್  ದೇಶಗಳಿಗೆ ಅರಾಫತ್ ಸಾಕಾಗಿ ಹೋಗಿದ್ದರು. ಹಾಗಾಗಿ ಬೇರೆ ಯಾವದಾದರು ದೇಶ ಹುಡುಕಬೇಕಾಗಿತ್ತು. ಅಮೇರಿಕನ್ನರು ಒಂದಿಷ್ಟು ಮಿಲಿಯ ಡಾಲರ್ ಹಿಡಿದುಕೊಂಡು ಶಾಪ್ಪಿಂಗ್ ಗೆ ಹೊರಟರು. ತಕ್ಕ ಬೆಲೆಗೆ ಸಿಕ್ಕಿದ್ದು ಉತ್ತರ ಆಫ್ರಿಕಾದ ಚಿಕ್ಕ ದೇಶ ಟ್ಯೂನಿಸಿಯಾ. ರಾಜಧಾನಿ ಟ್ಯೂನಿಸ್ ನಲ್ಲಿ ನೂರಾರು ಎಕರೆ ಜಾಗ ಅರಾಫತ್ ಮತ್ತು ಅವರ ಕೆಲವು ಸಾವಿರ ಉಗ್ರಗಾಮಿಗಳಿಗೆ ಮಂಜೂರ್ ಮಾಡಲಾಯಿತು.

ಮೂರು ವರ್ಷಗಳಿಂದ ಬಿರೂಟ್ ನಗರದ ಯಾವದೋ ಸುಸಜ್ಜಿತ ನೆಲಮಾಳಿಗೆಯಲ್ಲಿ (ಬಂಕರ್) ಅಡಗಿಕೊಂಡು ಕೂತಿದ್ದ ಅರಾಫತ್ ಅವರಿಗೆ ಅಲ್ಲಿಂದ ಬಿಟ್ಟು ರಸ್ತೆಯಲ್ಲಿ ಎರಡು ಹೆಜ್ಜೆ ಹಾಕಲಿಕ್ಕೆ ಭಯ. ಯಾವ ಮಹಡಿಯಿಂದ ಯಾವ ಸ್ನೈಪರ್, ಶಾರ್ಪ್ ಶೂಟರ್ ಬುರುಡೆಗೆ ಗುರಿಯಿಟ್ಟು ಬುರುಡೆ ಬಿಚ್ಚಿ ಮೇಲೆ ಕಳಿಸುತ್ತಾನೋ? ರಸ್ತೆ ಬದಿಯಲ್ಲಿ ಯಾವ ಕಾರ್ ಬಾಂಬ್ ಸ್ಪೋಟವಾಗಿ ಅವರು  ಹೋಗುತ್ತಿರುವ ಕಾರ್ವಾನಿಗೆ ಕಾರವಾನೇ ಭಸ್ಮವಾಗಿ ಹೋಗುತ್ತದೆಯೋ? ಅಂತ ಜೀವ ಭಯ ಅವರಿಗೆ. ಅವರಿಗೆ ಗೊತ್ತಿಲ್ಲದ್ದು ಏನಿದೆ? ಅವರು ಮತ್ತು ಅವರ ಫತಾ ಉಗ್ರಗಾಮಿಗಳೇ ಅಂತಹ ಬೇಕಾದಷ್ಟು ಕೆಲಸ ಮಾಡಿದ್ದರು. ಜಪ್ಪಯ್ಯ ಅಂದ್ರೂ ಅವರ ಬಂಕರ್ ಬಿಟ್ಟು ಬರುವದಿಲ್ಲ ಅಂತ ಹಠ ಹಿಡಿದು ಕೂತಿದ್ದರು ಅರಾಫತ್. ಬಿರೂಟ್ ನಗರದ ಬಂದರಿಗೆ ಅವರನ್ನು ಕರೆದೊಯ್ಯಬೇಕಾಗಿತ್ತು. ಅಲ್ಲಿ ನೌಕೆಗಳು  ಅವರನ್ನು ಮತ್ತು ಅವರ ಸಹಚರರನ್ನು ಟ್ಯೂನಿಸ್  ಗೆ ಕರೆದೊಯ್ಯಲು ತಯಾರಾಗಿ ನಿಂತಿದ್ದವು.

ಹೇಗಪ್ಪಾ....ಈ ಪುಣ್ಯಾತ್ಮ ಅರಾಫತ್ ಅವರನ್ನು ಸೇಫ್ ಆಗಿ ಬಂದರಿಗೆ ಕರೆದೊಯ್ಯುವದು? ಅಂತ ಅಮೆರಿಕ ತಲೆ ಕೆಡಿಸಿಕೊಂಡಿತು. ಹೆಲಿಕಾಪ್ಟರ್ ಬಹಳ ಡೇಂಜರ್. ಒಂದು ರಾಕೆಟ್, ಯಾರೋ ಬಿಟ್ಟಿದ್ದು, ಬಂದು ತಟ್ಟಿದರೆ ಅಷ್ಟೇ. ಮುಗೀತು ಕಥೆ. ಗೋವಿಂದಾ ಗೋವಿಂದ. ಕಡೆಗೆ ಅಮೇರಿಕಾದ ಅಧ್ಯಕ್ಷರು ಉಪಯೋಗಿಸುವ ಲೆವೆಲ್ಲಿನ ಬುಲೆಟ್ ಪ್ರೂಫ್, ಬಾಂಬ್ ಪ್ರೂಫ್ ಕಾರಿನಲ್ಲಿ, ನೇವಿ  ಸೀಲ್  ಕಮಾಂಡೋಗಳ ರಕ್ಷಣೆಯ ಮಧ್ಯೆ ಅರಾಫತ್ ಅವರನ್ನು ಹಡಗುಕಟ್ಟೆಗೆ ಕಳಿಸುವದು ಅಂತ ತೀರ್ಮಾನ ಮಾಡಲಾಯಿತು. ಅಮೇರಿಕ, ಇಂಗ್ಲೆಂಡಗಳಿಂದ ದೊಡ್ಡ ಮಟ್ಟದ ಆಶ್ವಾಸನೆ ಬಂದ ನಂತರವೇ ಅರಾಫತ್ ಪ್ಯಾಂಟ್, ಶರ್ಟ್ ಹಾಕಿಕೊಂಡು, ಚೌರ ಮಾಡಿಸಿಕೊಂಡು ಬಿರೂಟ್ ಬಿಟ್ಟು ಹೊರಡಲು ತಯಾರಾದರು.

ಅವರ ಅದೃಷ್ಟಕ್ಕೆ ಅಮೆರಿಕನ್ನರು ದೊಡ್ಡ ಮಟ್ಟದ ರಕ್ಷಣಾ ವ್ಯವಸ್ಥೆ ಮಾಡಿದ್ದರು. ಅವರ ಬಂಕರನಿಂದ ಬಂದರಿನವರಗಿನ ಹಾದಿಗೆ ದೊಡ್ಡ ಮಟ್ಟದ ಕಾವಲು ಹಾಕಲಾಗಿತ್ತು. ಪ್ರತಿ ಕಟ್ಟಡದ ಮೇಲೆ ಅಮೆರಿಕ, ಫ್ರೆಂಚ್, ಇಸ್ರೇಲ್ ಇತ್ಯಾದಿ ಪಡೆಗಳ ಶಾರ್ಪ್ ಶೂಟರ್ಸ್ ನಿಂತಿದ್ದರು. ಈ ಸಲ ಒಬ್ಬ ಪ್ಯಾಲೆಸ್ಟೈನ್ ಉಗ್ರಗಾಮಿಯನ್ನು ಕಾಯಲಿಕ್ಕೆ. ದೊಡ್ಡ ಪ್ರಮಾಣದ ವಿಪರ್ಯಾಸ ಅಂದ್ರೆ ಇದೇ ಇರಬೇಕು. ಅಲ್ಲಿ ತನಕ ಕೊಲ್ಲಲು ಕಾದಿದ್ದವರೇ ಇಂದು ಕಾಯಲು ನಿಂತಿದ್ದರು.

ಅಂತೂ ಇಂತೂ ಯಾವ ಅವಘಡವಿಲ್ಲದೆ ಅರಾಫತ್ ಬಂದರಿಗೆ ಬಂದು ಮುಟ್ಟಿದರು. ಕಡೆಯಲ್ಲಿ ಒಂದು ಹತ್ತು ಹೆಜ್ಜೆ ಕಾರಿಳಿದು ನಡದೇ ಹೋಗಬೇಕಿತ್ತು. ಅಕ್ಷರಶಃ ನೇವಿ  ಸೀಲ್ ಕಮಾಂಡೋಗಳು ಅರಾಫತ್ ಅವರನ್ನು ತಬ್ಬಿಕೊಂಡು ಹಡಗು ಹತ್ತುವ ಏಣಿಗೆ  ಕರೆದೊಯ್ದರು.

ಅಂತೂ ಇಂತೂ ಟ್ಯೂನಿಸಿಯಾಕ್ಕೆ ಹೋಗುವ ಹಡಗು ಹತ್ತಿದ ಅರಾಫತ್ ಕೊನೆಗೆ ಒಂದು ಸಲ ಲೆಬನಾನ್ ಕಡೆ ತಿರುಗಿ ಕೈ ಬೀಸಿದರು. ಹೋಗಿ ಬರುತ್ತೇನೆ ಅನ್ನುವ ರೀತಿಯಲ್ಲಿ.

"ಆ ಕ್ಷಣದಲ್ಲೂ ಕೂಡ ನನ್ನ ಮತ್ತು ನನ್ನ ತಂಡದ ಶಾರ್ಪ್ ಶೂಟರ್ಗಳ ಬಂದೂಕಿನ ಟೆಲೆಸ್ಕೋಪಿಕ್ ಸೈಟಿನಲ್ಲಿ ಅರಾಫತ್ ಅವರ ಕಾಫಿಯಾ (ಅರಬ್ ಟರ್ಬನ್) ಸುತ್ತಿದ್ದ  ತಲೆಬುರುಡೆ ನೀಟಾಗಿ ಕಾಣುತ್ತಿತ್ತು. ಒಂದು ಆರ್ಡರ್ ನಾನು ಕೊಟ್ಟಿದ್ದರೆ, ನಾಕು ಗುಂಡು ಒಂದೇ ಸಲ ಹಾರಿ ಅವರ ತಲೆಯನ್ನು ಕರ್ಬೂಜಿನಂತೆ ಒಡೆದು ಚೆಲ್ಲುತ್ತಿದ್ದವು. ಹದಿನೈದು ವರ್ಷದಿಂದ ಬೇಟೆಯಾಡುತ್ತಿದ್ದ ಮೃಗವೊಂದಕ್ಕೆ ನಾವೇ ರಕ್ಷಣೆ ಕೊಟ್ಟು ಹೊರಗೆ ಹೋಗಲು ಬಿಡುತ್ತಿದ್ದೇವಾ? ಅಂತ ಅನ್ನಿಸಿತು ನಮಗೆ. ಆದರೂ ಸೈನಿಕರು ನಾವು. ಮೇಲಿಂದ ಬಂದ ಆರ್ಡರ್ ಫಾಲೋ ಮಾಡುವದೇ ನಮ್ಮ ಕೆಲಸ. ಹಾಗಾಗಿ ಆ ಮನುಷ್ಯ ಅರಾಫತ್ ಮತ್ತು ಅವನು ಮಾಡಿದ ಕುಕೃತ್ಯಗಳ ನೆನಪಾಗಿ ರಕ್ತ ಕುದ್ದರೂ, ಯಾರೂ ಬಂದೂಕಿನ ಕುದರೆಯೆಳೆಯಲಿಲ್ಲ" - ಅಂತ ಬರೆದು ಕೊಂಡವರು ಮುಕಿ ಬೆಟ್ಸರ್ ಎಂಬ ಇಸ್ರೇಲಿ ಕಮಾಂಡೋಗಳ ನಾಯಕ. ಅವರ ಅಪ್ರತಿಮ ಪಡೆ ಬಿರೂಟ್ ಬಂದರಿನ ಸುತ್ತ ಅರಾಫತ್ ಅವರನ್ನು ಕಾಪಾಡಿತ್ತು. ಈ ಬೆಟ್ಸರ್  ಮಹಾ ಪ್ರಳಯಾಂತಕ. ಎಂಟಬ್ಬೆಯಲ್ಲಿ ಅಪಹೃತ ವಿಮಾನದ ಪ್ರಯಾಣಿಕರನ್ನು ರಕ್ಷಿಸಿದ ಕಾರ್ಯಾಚರಣೆ ಮತ್ತು ಬಿರೂಟಿನ ಹೃದಯಕ್ಕೆ ಪ್ರವಾಸಿಗರ ರೂಪದಲ್ಲಿ ನುಗ್ಗಿ, ಸೀದಾ ಪ್ಯಾಲೆಸ್ಟೈನ್ ನಾಯಕರ ಅಪಾರ್ಟಮೆಂಟಗಳಿಗೆ ನುಗ್ಗಿ ನಾಲ್ವರನ್ನು ಹತ್ಯೆ ಮಾಡಿದ್ದ ತಂಡದಲ್ಲಿ ಇದ್ದವರು ಮುಕಿ ಬೆಟ್ಸರ್.

ಹೀಗೆ ಬಿರೂಟನಿಂದ ಓಡಿದ ಅರಾಫತ್ ಟ್ಯೂನಿಸ್ ಗೆ ಹೋದರು. ಸೆಟಲ್ ಆದರು. ಅವರ ಫತಾ ಸಂಘಟನೆಯೂ ಸೆಟಲ್ ಆಯಿತು. ಖಾನಾ ಪೀನಾ ಮತ್ತೊಂದು ಎಲ್ಲಾ ಅರೆಂಜ್ ಆಯಿತು. ಆದ ಮೇಲೆ ಮುಂದೇನು? ಪ್ಯಾಲೆಸ್ಟೈನ್ ಸಂಗ್ರಾಮ ಮುಂದುವರಿಸಬೇಕು. ಹೇಗೆ?

ತಾವು ಮತ್ತು ತಮ್ಮ ಖಾಸ್ ಜನ ಟ್ಯೂನಿಸ್ ಗೆ ಬಂದರೂ ಹಲವಾರು ಸಂತೃಸ್ತ ಪ್ಯಾಲೆಸ್ಟೈನ್ ಜನರು ಗಾಜಾ ಪಟ್ಟಿ, ಜೋರ್ಡಾನ್ ನದಿಯ ಪಶ್ಚಿಮ ತೀರ (ವೆಸ್ಟ್ ಬ್ಯಾಂಕ್), ಲೆಬನಾನ್ ನಲ್ಲಿ ಇದ್ದರು. ಅಂದ್ರೆ ಇಸ್ರೇಲ್ ಸುತ್ತ ಮುತ್ತ. ಅವರನ್ನು ಉತ್ತೇಜಿಸಿ ಮತ್ತೆ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಶುರು ಮಾಡಬೇಕು. ಅದನ್ನು ಇಲ್ಲಿ ಟ್ಯೂನಿಸ್ ನಲ್ಲಿ ಕೂತು ನಿಯಂತ್ರಿಸಬೇಕು. ಅದಕ್ಕೆ ಸರಿಯಾದ ವ್ಯಕ್ತಿ ಯಾರು ಅಂತ ನೋಡಿದ ಆರಾಫತ್ ಅವರಿಗೆ ಕಂಡವನೇ ಅವನು.

ಅಬು ಜಿಹಾದ್. ಅವನೇ ಸರಿ ಅನ್ನಿಸಿತು.

ದೊಡ್ಡ ಮಟ್ಟದ ಕೆಲಸಗಾರ. ದಿನ ರಾತ್ರಿ ಅನ್ನುವದರ ಖಬರಿಲ್ಲದೆ ದುಡಿಯುತ್ತಿದ್ದ. ಮಸ್ತ ಸ್ಕೆಚ್ ಹಾಕುತ್ತಿದ್ದ. ಸ್ಕೀಮಿಂಗ್ ಮಾಡುತ್ತಿದ್ದ. ದೊಡ್ಡ ಮಟ್ಟದ ಪ್ಲಾನಿಂಗ್ ಮಾಡುತ್ತಿದ್ದ.

ಅವನನ್ನು ಕರೆದ ಅರಾಫತ್ ಅವನನ್ನು ತಮ್ಮ ಮುಖ್ಯ operational ಕಮಾಂಡರ್ ಅಂತ ನೇಮಕ ಮಾಡಿ, "ಇಸ್ರೇಲಿಗಳಿಗೆ ಬತ್ತಿ ಇಡು. ಅವರು ನೆಮ್ಮದಿಯಿಂದ ನಿದ್ದೆ ಮಾಡಬಾರದು. ಹಾಕು ಸ್ಕೆಚ್. ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ಗಳ ಸುರಿಮಳೆ ಶುರುವಾಗಲಿ. ಏನು ಬೇಕೋ ಮಾಡು. ದೊಡ್ಡ ಪ್ರಮಾಣದ ಸುದ್ದಿ ಆಗಬೇಕು. ಕಾಸು ಬರಬೇಕು. ಇಸ್ರೇಲ್ ಕೊತ ಕೊತ ಕುದಿಯಬೇಕು. ತಿಳಿಯಿತಾ?" - ಅಂತ ಬ್ಲಾಂಕೆಟ್ ಪರ್ಮಿಶನ್ ಕೊಟ್ಟರು.

ಅಬು ಜಿಹಾದ್ ಹುರುಪಿನಿಂದ ಮೇಲೆದ್ದ. ಸಿಕ್ಕ ಅಧಿಕಾರದಿಂದ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ. ಇಸ್ರೇಲ್ ವಿರುದ್ಧ ಸ್ಕೆಚ್ ಹಾಕಲು ಶುರು ಮಾಡಿದ.

ಅಬು ಜಿಹಾದ್ ಏನೇನು ಮಾಡಿದ? 

ಅವನ ಕಾಟ ತಡಿಯಲಾಗದ ಇಸ್ರೇಲಿಗಳು ಅವನನ್ನು ಹೇಗೆ ಮೇಲೆ ಕಳಿಸಿಬಿಟ್ಟರು? ಹೇಗೆ "ಅಲ್ಲಾ ಕೋ ಪ್ಯಾರೆ" ಆಗುವಂತೆ ಮಾಡಿದರು? ಅನ್ನುವದೇ ಒಂದು ಅತಿ ರೋಚಕ ಕಾರ್ಯಾಚರಣೆ. ಅದೇ ಟ್ಯೂನಿಸ್ಸಿನಲ್ಲಿ  ತಿಥಿಗೆ ಮುಹೂರ್ತ (ಭಾಗ 2)

ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

[ಟ್ಯೂನಿಸ್ಸಿನಲ್ಲಿ ತಿಥಿಗೆ ಮುಹೂರ್ತ (ಭಾಗ 2)]