Sunday, August 12, 2012

ಅವನು ಬೀಯರ್ ಕುಡಿಯುತ್ತಿದ್ದ ತಣ್ಣಗೆ, ಅವರು ಕತ್ತರಿಸುತ್ತಿದ್ದರು ಸಣ್ಣಗೆ

ಲೈಬೇರಿಯಾ. ಪಶ್ಚಿಮ ಆಫ್ರಿಕಾದಲ್ಲಿರುವ ಒಂದು ಚಿಕ್ಕ ದೇಶ. ಎಲ್ಲ ಕಡೆ ಹಸಿರು. ಉದ್ದಕ್ಕೂ, ಅಗಲಕ್ಕೂ ತುಂಬಾ ನದಿಗಳು, ಹೊಳೆಗಳು. ಚಿಕ್ಕ ಚಿಕ್ಕ ದೋಣಿಗಳಲ್ಲಿ ಹೋಗುವ ಕಪ್ಪು ಜನರು. ಒಂದು ದೃಷ್ಟಿಯಿಂದ ನೋಡಿದರೆ ಸ್ವರ್ಗ. 

ಲೈಬೇರಿಯಾ ಅನ್ನುವ ದೇಶ ಮಾಡಿದ್ದು ಅಮೇರಿಕ. ಈಗ ಸುಮಾರು ೨೦೦ ವರ್ಷಗಳ ಹಿಂದೆ ಅಬ್ರಹಾಂ ಲಿಂಕನ್ನರು ಕಪ್ಪು ಗುಲಾಮರನ್ನು ಬಿಡುಗಡೆ ಮಾಡಬೇಕು, ಗುಲಾಮಗಿರಿ ಕಿತ್ತು ಒಗಿಯಬೇಕು, ಅದು ಫುಲ್ ಬಂದಾಗಬೇಕು ಅಂತ ಹೋರಾಟ ಮಾಡಿ ಮಾಡಿ ಅದೇ ಕಾರಣಕ್ಕೆ ಸತ್ತು ಹೋದರು ನೋಡಿ. ಒಟ್ಟಿನಲ್ಲಿ ಅವರ ಹೋರಾಟಕ್ಕೆ ಒಂದು ತರಹದ ಬೆಂಬಲ ಸಿಕ್ಕಿತು. ಗುಲಾಮಗಿರಿ ಒಂದು ಲೆವೆಲ್ ನಲ್ಲಿ ಬ್ಯಾನ್ ಆಯಿತು. ಅಮೇರಿಕ, ಕ್ಯಾರಿಬೀಯನ್ ದ್ವೀಪಗಳು ಇತ್ಯಾದಿ ಕಡೆ ಲಕ್ಷಾಂತರ ಕಪ್ಪು ಜನರಿಗೆ ಒಂದೇ ಸಲಕ್ಕೆ ಮುಕ್ತಿ. ಏನು ಮಾಡಬೇಕು ಅವರು? ಎಲ್ಲಿ ಹೋಗಬೇಕು?

ಅವರಿಗೇ ಅಂತ ಸ್ಥಾಪಿಸಿದ ನಾಡು ಲೈಬೇರಿಯಾ. ಪಕ್ಕದಲ್ಲೇ ಸಿಯರಾ ಲಿಯೋನ್ ಇತ್ತು. ಅದು ಅಮೇರಿಕನ್ನರು, ಬ್ರಿಟಿಷರು ಕೂಡಿ ಏನು ಮಾಡಿದರೋ? ಅಲ್ಲೇ ಒಂದು ಚಿಕ್ಕ ದೇಶ ಕೆತ್ತಿಯೇ ಬಿಟ್ಟರು. ಅದೇ ಲೈಬೇರಿಯಾ.

ಮುಕ್ತಿ  ಪಡೆದ ಕರಪರಿಗೆ ಹೇಳಲಾಯಿತು. ಬೇಕಾದ್ರೆ ಅಲ್ಲಿ ಹೋಗಿ ಸೆಟಲ್ ಆಗಿ. ನಿಮಗೆ ಹೇಗೂ ಆಫ್ರಿಕಾ ತುಂಬಾ ಮಿಸ್ ಆಗುತ್ತಿದೆ. ನಿಮಗೆ ಅಂತಾನೇ ಒಂದು ದೇಶ ಮಾಡಿದ್ದೀವಿ. ಪುಕ್ಕಟೆ ಹಡಗಿನಲ್ಲಿ ಸೀಟ್. ಬೇಕಾದವರು ಹೋಗಬಹದು.

ಕಪ್ಪು ಗುಲಾಮರ ಕಣ್ಣಿನಲ್ಲಿ ಏನೇನೋ ಕನಸಗಳು. ತಮ್ಮ ಮೂಲಕ್ಕೆ ಹೋಗುವದು. ಮತ್ತೆ ತಮ್ಮ ಹಳೆಯ ರೀತಿಯ ಬಾಳು ಕಟ್ಟಿಕೊಳ್ಳುವದು, ಈ ಕಡೆ ಪಶ್ಚಿಮದಲ್ಲಿ ಹುಟ್ಟಿದ ತಮ್ಮ ಕಪ್ಪು, ಅರೆ ಕಪ್ಪು ಮಕ್ಕಳಿಗೆ ಆಫ್ರಿಕಾದ ಜೀವನ ಶೈಲಿ ಅಂದರೆ ಏನು ಅಂತ ಪರಿಚಯಿಸುವದು, ಒಟ್ಟಿನಲ್ಲಿ ಬ್ಯಾಕ್ ಟು ರೂಟ್ಸ್ ಅನ್ನುವ ಫೀಲಿಂಗ್.

ಲೈಬೇರಿಯಾದ ರಾಜಧಾನಿಗೆ ಮೊನ್ರೋವಿಲ್ ಅಂತ ಹೆಸರಿಡಲಾಗಿತ್ತು. ಅದು ಅಮೇರಿಕಾದ ಅಧ್ಯಕ್ಷ ಜೇಮ್ಸ್ ಮನ್ರೋ ಅವರ ಗೌರವಾರ್ಥ.

ಸುಮಾರು ಜನ ಕಪ್ಪು ವರ್ಣೀಯರು ಹೋಗಿ ಅಲ್ಲಿ ಸೆಟಲ್ ಆದರು. ಎಲ್ಲಾ ಸ್ಮೂತ್ ಆಗಿ ಹೋಗಲು ಅದೇನೂ ಖಾಲಿ ಜಾಗ ಇರಲಿಲ್ಲ ನೋಡಿ. ಅಲ್ಲಿನ ಮೂಲವಾಸಿಗಳು ಇದ್ದೇ ಇದ್ದರು. ಅವರಿಗೆ ಮತ್ತೆ ಫಾರೆನ್ ರಿಟರ್ನ್ಡ್ ಕರಪರಿಗೆ ಒಂದು ತರಹ ಹಣಾಹಣಿ. ಫಾರೆನ್  ರಿಟರ್ನ್ಡ್ ಕರಪರಿಗೆ ತಾವು ಏನೋ ಒಂದು ತರಹ ಮೇಲೆ ಅನ್ನುವ ಸುಪಿರಿಯಾರಿಟಿ ಕಾಂಪ್ಲೆಕ್ಸ್. ಗುಲಾಮರಾಗಿದ್ದರೇನಂತೆ? ಇಂಗ್ಲೀಶ್ ಪಂಗ್ಲೀಶ್ ಕಲಿತು, ಮಾಂಸ ಬೇಯಿಸಿ, ಚಾಕು, ಫೋರ್ಕು ಉಪಯೋಗಿಸಿ ತಿನ್ನುವದನ್ನು ಕಲಿತ ಫಾರೆನ್ ರಿಟರ್ನ್ಡ್ ಕರಪರಿಗೆ ಅಲ್ಲಿನ ಮೂಲವಾಸಿಗಗಳನ್ನು ಕಂಡರೆ ಏನೋ ಒಂದು ತರಹದ ತಾತ್ಸಾರ. ಸಿಟಿ ಜನರಿಗೆ ಹಳ್ಳಿ ಜನರನ್ನು ಕಂಡರೆ ಬರೋ ಅಸಡ್ಡೆ ಫೀಲಿಂಗ್ ತರಹ. 

ಒಟ್ಟಿನಲ್ಲಿ  ಝಟಾಪಟಿ ಶುರುವಾಗಿಯೇ ಹೋಯಿತು. ಒಮ್ಮೆ ಈ ಕಡೆಯಿಂದ ಹೋದವರು ಅಲ್ಲಿನ ಮೂಲ ನಿವಾಸಿಗಳನ್ನು ಹಿಡಿದು ಬಡಿದರೆ, ಮತ್ತೊಮ್ಮೆ ಅಲ್ಲಿನ ಮೂಲ ನಿವಾಸಿಗಳು ಇವರನ್ನು ಹಿಡಿದು ಬಡಿಯುತ್ತಿದ್ದರು. ಅಮೇರಿಕ ತನ್ನ  ರಾಜಕೀಯ ಪಾಲಿಸಿಗಳಿಗೆ ಸರಿ ಹೋಗುವಂತೆ ಯಾರು ಸರಿಯೋ ಅವರನ್ನು ಬೇಕಾದಾಗ ಬೆಂಬಲಿಸಿ, ಕೆಲಸ ಮುಗಿದ ಮೇಲೆ ಟಾಯ್ಲೆಟ್ ಟಿಶ್ಯೂನಂತೆ ಬಿಸಾಡುತ್ತಿತ್ತು. ಅದು ಆ ಕರಪರಿಗೆ ಅರ್ಥವಾಗಬೇಕಲ್ಲ....ಅದೇ ದುರಂತ.

ಏನೋ....೧೯೭೦ ರ ಸುತ್ತಾ ಮುತ್ತಾ ಯಾರೋ ವಿಲಿಯಂ ಟೋಲ್ಬರ್ಟ್ ಅನ್ನುವ ಪ್ರೆಸಿಡೆಂಟ್ ಸುಮಾರು ಓಕೆ ಅನ್ನುವ ರೀತಿಯಲ್ಲಿ ದೇಶ ನೆಡಿಸಿಕೊಂಡು ಹೋಗುತ್ತಿದ್ದ. ಒಳ್ಳೆ ರೀತಿಯಲ್ಲಿ ಓದಿಕೊಂಡಿದ್ದ. ತಕ್ಕ ಮಟ್ಟಿಗೆ ಸುಸಂಸ್ಕ್ರುತನಾಗಿದ್ದ. ಇದ್ದುದರಲ್ಲಿಯೇ ಒಳ್ಳೆ ಒಳ್ಳೆ ಜನರನ್ನು ತನ್ನ ಸರ್ಕಾರದಲ್ಲಿ ಇಟ್ಟುಗೊಂಡು ಏನೋ ಒಂದು ತರಹದ ಶಾಂತಿ ಅನ್ನೋದನ್ನ ಸ್ಥಾಪಿಸಿದ್ದ.

ಆಫ್ರಿಕಾದಲ್ಲಿ ಭಾಳ ಕಾಮನ್ ಆಗಿ ಆಗುವಂತೆ ಸೈನಿಕ ಕ್ಷಿಪ್ರಕ್ರಾಂತಿ ಆಯಿತು. ಅದೇ coup-De-tat. ಯಾರೋ ಒಬ್ಬ ಸೈನ್ಯಾಧಿಕಾರಿ ಟ್ಯಾಂಕ್ ಜೊತೆಗೆ ಪ್ರೆಸಿಡೆಂಟ್ ಇರುವ ಅರಮನೆ ಕಡೆ ಬಂದೇ ಬಿಟ್ಟ. ಏನೇನೋ ಕುಡಿದು, ಏನೇನೋ ಸೇದಿ ಫುಲ್ ಟೈಟ್ ಆಗಿದ್ದ ಸೈನಿಕರು ಮಶೀನ್ ಗನ್ನು ಹಿಡಕೊಂಡು ಒಳಗೆ ನುಗ್ಗಿದರು. ಪಾಪ ಅಧ್ಯಕ್ಷ ಟೋಲ್ಬರ್ಟ್ ಕುರಿಯಂತೆ ಸಿಕ್ಕಿಬಿದ್ದ. ಮಲಗಿದ್ದ. ಪಾಪ. ಎಬ್ಬಿಸಿ ನಾಕು ಗುಂಡು ತಲೆಗೆ ಹಾಕೇ ಬಿಟ್ಟರು. ಅಲ್ಲಿಗೆ ಅವನ ಕಥೆ ಮುಗಿಯಿತು.

ನಂತರ ಸೈನಿಕರು ಸತ್ತ ಪ್ರೆಸಿಡೆಂಟ್ ನ ಕ್ಯಾಬಿನೆಟ್ ಎಲ್ಲ ರೌಂಡ್ ಅಪ್ ಮಾಡಿದರು. ಅದರಲ್ಲಿ ಯಾರನ್ನು ಉಳಿಸಬೇಕು, ಯಾರನ್ನು ತೆಗೆಯಿಬೇಕು ಅನ್ನುವದರ ತೀರ್ಮಾನ ಮೊದಲೇ ಆಗಿತ್ತು ಅನ್ನಿಸುತ್ತದೆ. ತೆಗಿಯಬೇಕಾದವರನ್ನು ಮರುದಿವಸ ಮೊನ್ರೋವಿಲ್ಲಿನ ಸಮುದ್ರ ದಂಡಗೆ ಕರೆದೊಯ್ದು ಖಲಾಸ ಮಾಡಲಾಯಿತು. ಸುಮಾರು ೧೯-೨೦ ಜನ ಮಶೀನ್ ಗನ್ನಿಗೆ ಆಹುತಿ ಆದರು. ಉಳಿದವರಿಗೆ ದೇಶ ಬಿಟ್ಟು ಓಡಲು ಒಂದು ಲಾಸ್ಟ್ ಅವಕಾಶ ನೀಡಲಾಯಿತು. ಹೇಳಿ ಕೇಳಿ ಮೊದಲಿನ ಪ್ರೆಸಿಡೆಂಟ್ ನ ಕ್ಯಾಬಿನೆಟ್ ನಲ್ಲಿ ಇದ್ದವರು ಅಮೇರಿಕಾದಲ್ಲಿ ಮತ್ತೊಂದು ಕಡೆ ಓದಿ ಬಂದವರು. ಬದುಕಿದೆಯಾ ಬಡ ಜೀವವೇ ಅಂತ ಓಡಿಬಿಟ್ಟರು.

ಹೀಗೆ ಸಿಕ್ಕಾಪಟ್ಟೆ ರಕ್ತ ಚಲ್ಲಿ ಲೈಬೇರಿಯಾದ ಅಧ್ಯಕ್ಷ ಪದವಿ ಅಲಂಕರಿಸಿದವ ಸ್ಯಾಮ್ಯೂಯಲ್  ಡೊ ಎಂಬಾತ. ಅಂತರಾಷ್ಟ್ರೀಯ ರಾಜಕೀಯ ಮೊಗಸಾಲೆಗಳಲ್ಲಿ ಗುಸು ಗುಸು ಸುದ್ದಿ ಎದ್ದವು. ಈ ತರಹದ ಕ್ಷಿಪ್ರಕ್ರಾಂತಿ ಮಾಡಿಸಿದ್ದು ಅಮೇರಿಕಾವೇ ಅಂತ. ಆವಾಗ ಅಮೇರಿಕ ಮತ್ತು ಸೋವಿಯತ್ ಶೀತಲ ಸಮರ ಆಫ್ರಿಕಾದಲ್ಲಿ ಗರ್ಮಾ ಗರಂ ಆಗಿ ನಡೆಯುತ್ತಿತ್ತು. ಒಂದು ಆಫ್ರಿಕಾ ದೇಶದ ಸರ್ವಾಧಿಕಾರಿ ಅಮೇರಿಕಾ ಪರವಾದರೆ, ಇನ್ನೊಬ್ಬ ಸೋವಿಯತ್ ಪರ. ಪ್ರತಿ ದೇಶದಲ್ಲೂ ಬಂಡುಕೋರರು. ಜಗಳ. ಎರಡೂ ಕಡೆ ಬಂದೂಕು, ಗುಂಡು ಕೊಟ್ಟು, ಅದರ ಬದಲಿಗೆ ಅವರ ನೈಸರ್ಗಿಕ ಸಂಪತ್ತು ಲೂಟಿ ಮಾಡಿದವರು ಪಶ್ಚಿಮದ ದೇಶಗಳು. ಹೊಸತು  ಏನೂ ಇಲ್ಲ. ಲೈಬೇರ್ಯಾದಲ್ಲೂ ಅಷ್ಟೇ.  ಟೋಲ್ಬರ್ಟ್ ಅಮೇರಿಕಾದ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಅಂತ ಅನ್ನಿಸುತ್ತದೆ. ತಾಳ ಚೇಂಜ್ ಮಾಡಿ ಬೇರೆಯವನನ್ನು ತಂದರು ಕುಣಿಯಲಿಕ್ಕೆ.

ಸ್ಯಾಮ್ಯೂಯಲ್  ಡೊ ಅನ್ನುವಾತ ಮೆರೆದೇ ಮೆರೆದ. ರೀಗನ್ನರ ಕಾಲದಲ್ಲಿ ಶ್ವೇತಭವನಕ್ಕೂ ಭೆಟ್ಟಿ ಕೊಟ್ಟು ಧನ್ಯನಾದೆ ಅನ್ನುವ  ಫೀಲಿಂಗ್ ಅನುಭವಿಸಿದ. ಮಿಲಿಯ ಗಟ್ಟಲೆ ದುಡ್ಡು ಮಾಡಿದ. ಹಾಗೆ ದುಡ್ಡು ಮಾಡುತ್ತಿರುವಾಗ ಅವನದೇ ಒಬ್ಬ ಶಿಷ್ಯ ಅವನಿಗೇ ಉಂಡೆ ನಾಮ ತಿಕ್ಕುತ್ತಿರುವ ಸುದ್ದಿ ಬಂತು. ಶಿಷ್ಯನ ಖತಂ ಮಾಡಲು ಸುಪಾರಿ ಕೊಟ್ಟ. ಶಿಷ್ಯನೋ? ಏನೇನೋ ಸಂಪರ್ಕ ಇಟ್ಟಿದ್ದ. ಸುದ್ದಿ ಗೊತ್ತಾದ ಕೂಡಲೇ ಎದ್ದು ಬಿದ್ದು ಓಡಿದ. ಎಲ್ಲಿಗೆ? ಮತ್ತೆಲ್ಲಿಗೆ? ಸೀದಾ ಅಮೇರಿಕಾಕ್ಕೆ.

ಹಾಗೆ ಓಡಿದ ಶಿಷ್ಯನೇ ಇಂದಿನ ಪರಮ ಕುಖ್ಯಾತ ಯುದ್ಧ ಅಪರಾಧಿ ಚಾರ್ಲ್ಸ್ ಟೇಲರ್. ಅಮೇರಿಕಾ ನಾಮ್ಕೆ ವಾಸ್ತೇ ಅವನನ್ನು ಹಿಡಿದು ಬಾಸ್ಟನ್ ಹತ್ತಿರ ಇರುವ ಜೇಲಿನಲ್ಲಿ ಇಟ್ಟಿತು. ಅವರಿಗೆ ಗೊತ್ತಿತ್ತು ಈ ಸ್ಯಾಮ್ಯೂಯಲ್  ಡೊ ಮುಂದೊಂದು ದಿನ ಉಪಯೋಗವಿಲ್ಲದವನು ಆಗುತ್ತಾನೆ. ಅಥವಾ ನಾವೇ ಮಾಡಬೇಕಾದ ಸಂದರ್ಭ ಬಂದರೂ ಬರಬಹುದು. ಆವಾಗ ಈ ಟೇಲರ್ ನನ್ನು ಉಪಯೋಗಿಸಿಕೊಂಡರಾಯಿತು ಅಂತ.

ಇತ್ತ ಕಡೆ ಸ್ಯಾಮ್ಯೂಯಲ್  ಡೊ ಪಾಪದ ಕೊಡ ತುಂಬುತ್ತ ಬಂದಿತ್ತು. ಸುಮಾರು ಹತ್ತು ವರ್ಷದ ಮೇಲೆ ಅಂದಾದುಂದಿ ಸರ್ವಾಧಿಕಾರ ನಡೆಸಿ ದೇಶವನ್ನು ಎಕ್ಕುಟ್ಟಿಸಿಬಿಟ್ಟಿದ್ದ ಸ್ಯಾಮ್ಯೂಯಲ್  ಡೊ. ಟೈಮ್ ಫಾರ್ ಚೇಂಜ್. ಶುರುವಾಯಿತು ನೋಡಿ ಅಂತರ್ಯುದ್ಧ. ಬಂಡುಕೋರರು. ಎರಡೂ ಕಡೆ ಬಂದೂಕ, ಗುಂಡು ಸಪ್ಲೈ ಮಾಡುವ ಮಂದಿ. ಮತ್ತದೇ ದುರಂತ.

ಈ ಕಡೆ  ಅಮೇರಿಕಾದಿಂದ ಬಂಧಿಯಾಗಿದ್ದ ಚಾರ್ಲ್ಸ್ ಟೇಲರ್ ಜೇಲಿನಿಂದ "ಪರಾರಿ" ಆದ ಅಂತ ಸುದ್ದಿ. ಪರಾರಿಯಾಗುವದಕ್ಕಿಂತ ಅವರೇ ಬಿಟ್ಟು ಕಳಿಸಿದರು. ಹೋಗಿ ಬಂಡುಕೋರರ ನಾಯಕ ಆಗು. ಮತ್ತೆ ಸ್ಯಾಮ್ಯೂಯಲ್  ಡೊ ವಿರುದ್ಧ ಕಾರ್ಯಾಚರಣೆ ಶುರು ಮಾಡು ಅಂತ.

ಈ ಕಡೆ ಇನ್ನೊಬ್ಬ ಪ್ರಿನ್ಸ್ ಜಾನ್ಸನ್ ಎಂಬ ಪರಮ ಕ್ರೂರಿ, ಸೈಕೋಪಾತ್ ಬಂಡುಕೋರರ ನಾಯಕ ಬೇರೆ ತಯಾರಾಗಿ ಸ್ಯಾಮ್ಯೂಯಲ್  ಡೊ ವಿರುದ್ಧ ವಿಪರೀತ ಕ್ರೌರ್ಯದ ಯುದ್ಧ ಶುರು ಮಾಡಿದ್ದ. ಅವನು ಮಾಡಿದ ಕ್ರೂರ ಕೆಲಸಗಳಿಗೆ ಸಾಟಿಯೇ ಇಲ್ಲ. ಸಬಲ ಜನರ ಕೈ ಕಾಲು ಕಡಿದು ವಿಕಲಾಂಗರನ್ನಾಗಿ ಸ್ಕ್ರಾಪ್ ಮಾಡುವದು. ಸಾಮೂಹಿಕ ಹತ್ಯೆ, ಅತ್ಯಾಚಾರ.

ಲೈಬೇರಿಯಾ  ಎಂಬ ಹಸಿರು ಹಸಿರು ಸ್ವರ್ಗ ನರಕವಾಯಿತು. ದಿನಾ ಸಾವು ನೋವು. ಸ್ಯಾಮ್ಯೂಯಲ್  ಡೊ ಹೇಗೋ ಮಾಡಿ ದಿನ ದೂಡುತ್ತಿದ್ದ. ತನಗೆ ಮೊದಲು ಬೆಂಬಲಿಸಿದ ಜನ ಕೈಯೆತ್ತಿದ್ದು ಗೊತ್ತಾಗಲಿಲ್ಲವೋ, ಅಥವಾ ಉಡಾಫೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಹೇಗೋ ಮಾಡಿ ಯುದ್ಧ ಮಾಡುತ್ತಿದ್ದ. ಆದ್ರೆ ಅವನಿಂದ ಬಳಲಿಹೋಗಿದ್ದ ಜನ ಮಾತ್ರ ಬದಲಾವಣೆ ಬಯಸುತ್ತಿದ್ದರು. ಒಂದು ಕಡೆಯಿಂದ ಚಾರ್ಲ್ಸ್ ಟೇಲರ್ ನುಗ್ಗಿ ಬರುತ್ತಿದ್ದರೆ, ಇನ್ನೊಂದು ಕಡೆಯಿಂದ ಪ್ರಿನ್ಸ್ ಜಾನ್ಸನ್. ರಾಜಧಾನಿ ಮೊನ್ರೋವಿಲ್ಲ ಬೀಳಲಿಕ್ಕೆ  ಜಾಸ್ತಿ ಟೈಮ್ ಇರಲಿಲ್ಲ. 

ಬಂಡುಕೋರರ ವಿಪರೀತ ಕ್ರೌರ್ಯ, ಟಾರ್ಚರ್ ಸ್ವಲ್ಪ ಸುದ್ದಿ ಮಾಡಿತು. ಹ್ಯೂಮನ್ ರೈಟ್ಸ್ ಅದು ಇದು ಅಂತ ಸಿಕ್ಕಾಪಟ್ಟೆ ಸ್ಕೋಪ್ ಸಿಕ್ಕು ಒಂದು ಶಾಂತಿ ಪಡೆ ನಿಯೋಜನೆ ಆಯಿತು. ನಾಮರ್ದ ಶಾಂತಿ ಪಡೆ. ಇಲ್ಲದ ಶಾಂತಿಯನ್ನು ಅವರು ಕಾಪಾಡಬೇಕು. ಹೇಗೋ? ದೇವರಿಗೆ ಗೊತ್ತು.

ಅಲ್ಲೇ ಸುತ್ತಾ ಮುತ್ತಾ ಇರುವ ದೇಶಗಳಿಂದ ರಿಟೈರ್ ಆಗಲು ಹತ್ತಿರ ಬಂದಿದ್ದ ಒಂದಿಷ್ಟು ಡೊಳ್ಳು ಹೊಟ್ಟೆ ಸೈನಿಕರು ಬಂದು ರಾಜಧಾನಿ ಮೊನ್ರೋವಿಲ್ಲನಲ್ಲಿ ಝೇಂಡಾ ಹೊಡೆದರು. ಅವರ ಹತ್ತಿರ ಏನೂ ಕಿಸಿಯಲು ಸಾಧ್ಯವಿಲ್ಲ ಅಂತ ಎಲ್ಲರಿಗೂ ಗೊತ್ತಿತ್ತು. ಆದರೂ ಶಾಂತಿ ಪಡೆ.

ಇತ್ತ ಕಡೆ ಸ್ಯಾಮ್ಯೂಯಲ್  ಡೊ ಮೇಲೆ ವಿಪರೀತ ಪ್ರೆಶರ್. ಯುದ್ಧ ಬಂದ್ ಮಾಡು. ಬಂಡುಕೋರರ ಜೊತೆ ರಾಜಿ ಮಾಡಿಕೋ ಅಂತ. ಅವನೇನು ರಾಜಕೀಯ ಮುತ್ಸದ್ದಿಯೇ? ಅಲ್ಲವೇ ಅಲ್ಲ.

ಒಂದು ದಿವಸ ಮರಾ ಮೋಸವಾಯಿತು. ಅಥವಾ ಮೋಸ ಮಾಡಲಾಯಿತು. ೧೯೯೦ ರ ಒಂದು ದಿವಸ. ಸ್ಯಾಮ್ಯೂಯಲ್  ಡೊ ಗೆ ಶಾಂತಿಪಡೆಯ ಜೊತೆ ಭೆಟ್ಟಿ ಮಾಡಿ ಸಮಸ್ಯೆ ಪರಿಹರಿಸಿಕೊ ಅಂತ ಹೇಳಲಾಯಿತು. ತಕ್ಕ ಮಟ್ಟಿನ ಭದ್ರತೆಯಲ್ಲಿ ತನ್ನ ಅರಮನೆ ಬಿಟ್ಟು ಹೊಂಟ. ಬಂದ ಶಾಂತಿಪಡೆಯ ಕಟ್ಟಡಕ್ಕೆ. ಅಲ್ಲಿ ಅವನಿಗೆ ಫೀಲ್ಡಿಂಗ್ ಹಾಕಲಾಗಿತ್ತು ಅಂತ ಏನು ಗೊತ್ತು ಅವನಿಗೆ.

ಅವನು ಅಲ್ಲಿ ಬರುತ್ತಲೇ ಗುಂಡಿನ ಚಕಮಕಿ ಶುರು ಆಯಿತು. ಶಾಂತಿಪಡೆ ನಾಮ್ಕೆವಾಸ್ತೆ ನಾಕು ಗುಂಡು ಹಾರಿಸಿದಂತೆ ಮಾಡಿ ಕಟ್ಟಡದೊಳಗೆ ಓಡಿ ಹೋಯಿತು. ಅವರು ರಕ್ಷಿಸಿಯಾರು ಅಂತ ಭರವಸೆಯಲ್ಲಿ ಬಂದಿದ್ದ ಸ್ಯಾಮ್ಯೂಯಲ್  ಡೊ ಪಕ್ಕಾ ಕುರಿಯಂತೆ ಪರಮ ಕ್ರೂರಿ, ಮಾನಸಿಕ ಅಸ್ವಸ್ಥ, ಸೈಕೋಪಾತ್ ಬಂಡುಕೋರ ನಾಯಕ ಪ್ರಿನ್ಸ್ ಜಾನ್ಸನ್ ಹಾಕಿದ ಜಾಲಕ್ಕೆ ಸಿಕ್ಕು ಬಿದ್ದಿದ್ದ. ಬೇರೆ ಬೇರೆ ಕಡೆಯಿಂದ ಆಶೀರ್ವಾದವೂ ಇತ್ತು ಅಂತ ಹೇಳುವ ಅವಶ್ಯಕತೆ ಇಲ್ಲ ನೋಡಿ.

ಅಲ್ಲಿಯೇ ಸುಮಾರು ಜನ ಸ್ಯಾಮ್ಯೂಯಲ್  ಡೊ ನ ಅಂಗರಕ್ಷರ ಎನ್ಕೌಂಟರ್ ಮಾಡಲಾಯಿತು. ಸ್ಯಾಮ್ಯೂಯಲ್  ಡೊ ನನ್ನು ಹಿಡಿದು ಪ್ರಿನ್ಸ್ ಜಾನ್ಸನ್ ಮುಂದೆ ತರಲಾಯಿತು. ಮುಂದೆ ಆದದ್ದು ಮಾತ್ರ ಹಿಂದೆಂದೂ ಕೇಳರಿಯದ, ಕಂಡರಿಯದ  ಭೀಭತ್ಸ, ಪರಮ ಪೈಶಾಚಿಕ ಕ್ರೌರ್ಯದ ಹೈಟ್. ಮತ್ತೇನೂ ಹೇಳಲು ಸಾಧ್ಯವೇ ಇಲ್ಲ.

ಪ್ರಿನ್ಸ್ ಜಾನ್ಸನ್ ಕಡೆಯ ಮಂದಿ ಒಳ್ಳೆ ಸರ್ಜನ್ ತರಹ ಸ್ಯಾಮ್ಯೂಯಲ್  ಡೊ ನ ಒಂದೊಂದೇ ಅಂಗಾಗದ ಡಿಸೆಕ್ಷನ್ ಮಾಡಿದರು. ಹಲಾಲ್ ಮಾಡುತ್ತಿರುವ ಪ್ರಾಣಿಯಂತೆ ಕಿರುಚುತ್ತಿದ್ದ ಅಧ್ಯಕ್ಷ. ಪ್ರಿನ್ಸ್ ಜಾನ್ಸನ್ ಎಂಬ ಪರಮ ಕ್ರೂರಿ ಮಾತ್ರ ಅಂತಹ ಪೂರ್ತಿ ಎಕ್ಕುಟ್ಟಿ ಹೋದ ಆ ಟೈಮ್ ನಲ್ಲೂ ಇಂಪೋರ್ಟೆಡ್ ಬಡ್ವೈಸರ್ ಬೀಯರ್ ಕುಡಿಯುತ್ತ, ವಿಕೃತ ಮಾತಾಡುತ್ತ, ತನ್ನ ಸೈನಿಕರಿಗೆ ಟಾರ್ಚರ್ ಬಗ್ಗೆ ಸ್ಪೆಷಲ್ ಸೂಚನೆ ಕೊಡುತ್ತ ಎಂಜಾಯ್ ಮಾಡುತ್ತಿದ್ದ.

ಆ  ಚಿತ್ರಹಿಂಸೆಯ ವಿಡಿಯೋ ಚಿತ್ರೀಕರಣ ಆಗುತ್ತಿತ್ತು. ಒಂದೊಂದೇ ಅಂಗ ಲಾಪ್ಸ್ ಮಾಡಿಸ್ಕೊಳ್ಳುತ್ತಿದ್ದ ಸ್ಯಾಮ್ಯೂಯಲ್  ಡೊ ಗೆ ಏನೇನೋ ಪ್ರಶ್ನೆ ಕೇಳಲಾಗುತ್ತಿತ್ತು, ಒಂದು ತರಹದ ಟ್ರಾನ್ಸ್ ಸ್ಥಿತಿ ತಲುಪಿದ್ದ ಅವ ಏನು ಹೇಳಿಯಾನು? ಎರಡೂ ಕಿವಿಯನ್ನು ಕರ ಕರ ಅಂತ ಚೂಪನೆ ಚಾಕುವಿಂದ ಒಬ್ಬ ಕೆತ್ತಿಬಿಟ್ಟ. ಚಿಟ್ಟಂತ ಚೀರಿದ ಸ್ಯಾಮ್ಯೂಯಲ್  ಡೊ. ಆದರೂ ಜೀವಭಿಕ್ಷೆ ಬೇಡುತ್ತಿದ್ದ. ಮತ್ತೊಬ್ಬ ಅವ ಹಾಕಿಕೊಂಡಿದ್ದ ಶರ್ಟ ಗೆ ಚಾಕು ಹಾಕಿ ಹರಿದ. ಬೆನ್ನ ಮೇಲೆ ಲಾಂಗಾಗಿ ಒಂದು ಕುರುಪು ಎಳದೇ ಬಿಟ್ಟ. ಮತ್ತೆ ಚೀರಿದ ಸ್ಯಾಮ್ಯೂಯಲ್  ಡೊ. ಈ ಕಡೆ ಪ್ರಿನ್ಸ್ ಜಾನ್ಸನ್ ಮತ್ತೊಂದು ಬೀಯರ್ ಎತ್ತಿದ. ಅವನ ವೈರ್ಲೆಸ್ಸ್ ಮೇಲೆ ಏನೋ ಸಂದೇಶ ಬಂತು. ಮಾತಾಡುತ್ತಲೇ ಮುಂದುವರಿಸಿ ಅಂತ ತನ್ನ ವಿಕೃತ ಸೈನಿಕರಿಗೆ ಆಜ್ಞೆ ನೀಡಿದ.

ಹೀಗೆ ಸುಮಾರು ಹೊತ್ತು ಟಾರ್ಚರ್ ನಡೆಯಿತು. ಕಡೆಗೆ ಸ್ಯಾಮ್ಯೂಯಲ್  ಡೊ ನ ಹೊಟ್ಟೆನೂ ಬಗೆದುಬಿಟ್ಟರು. ಆದರೂ ಸತ್ತಿರಲಿಲ್ಲ ಆ ಪುಣ್ಯಾತ್ಮ. ಮೈತುಂಬಾ ರಕ್ತ ರಕ್ತ. ಏನೇನೋ ಬಡಬಡಿಸುತ್ತಿದ್ದ. ಕಟ್ಟ ಕಡೆಗೆ ಒಬ್ಬ ದೈತ್ಯನಂತಿದ್ದ ಸಿಪಾಯಿಯೊಬ್ಬ ಅವನ ಕುತ್ತಿಗೆ ಮೇಲೆ ತನ್ನ ದಪ್ಪ ದಪ್ಪ ಬೂಟಿನ ಕಾಲಿಟ್ಟವನೇ ರಿವಾಲ್ವರ್ನಿಂದ ಒಂದೆರಡು ಗುಂಡು ಹೊಕ್ಕಿಸಿ ಸ್ಯಾಮ್ಯೂಯಲ್  ಡೊ ನ ನೋವಿಗೆ ಮಂಗಳ ಹಾಡಿದ.

ಈ  ರೀತಿ ಒಬ್ಬ ಸರ್ವಾಧಿಕಾರಿಯ ಕಥೆ ಮುಗಿದಿತ್ತು. ನಡು ರಾತ್ರಿ ಸೈನಿಕ ಕ್ರಾಂತಿ ಮಾಡಿ, ಆ ಕಾಲದ ಪ್ರೆಸಿಡೆಂಟ್ ನನ್ನು ಗುಂಡಿಟ್ಟು ಕೊಂದು, ೧೮-೨೦ ಜನ ಮಂತ್ರಿಗಳನ್ನು ಸಮುದ್ರದ ತೀರದ ಮೇಲೆ ಮಶೀನ್ ಗನ್ನು ಹಚ್ಚಿ ಕೊಂದು ಅಧಿಕಾರಕ್ಕೆ ಬಂದಿದ್ದ ಸ್ಯಾಮ್ಯೂಯಲ್  ಡೊ ಬಕ್ರೀದ ಬಕ್ರಾ ತರಹ ಅತಿ ಚಿಕ್ಕದಾಗಿ ಕತ್ತರಿಸಿಕೊಂಡ ಕೀಮಾ ತರಹ ಆಗಿ ಸತ್ತಿದ್ದ.

ಪ್ರಿನ್ಸ್ ಜಾನ್ಸನ್ ಮುಖದಲ್ಲಿ ಅದೇ ಪೈಶಾಚಿಕ ಕಳೆ. ಮತ್ತೊಂದು ಬೀಯರ್ ಕೊಡಿ ಅಂದ ಅವನು.

ಹೆಚ್ಚಿನ ಮಾಹಿತಿಗೆ:



ಚಾರ್ಲ್ಸ್ ಟೇಲರ್ 

ಬ್ರಿಟಿಶ್  ಪತ್ರಕರ್ತ ಜೇಮ್ಸ್ ಬ್ರಾಬಾಜಾನ್ ಬರೆದ - My Friend the Mercenary - ಪುಸ್ತಕ ಲೈಬೇರಿಯಾದಲ್ಲಿ ಇತ್ತೀಚಿಗೆ ನೆಡದ ಬೆಳವಣಿಗೆಗಳ ಬಗ್ಗೆ ತುಂಬಾ ಉತ್ತಮ ಮಾಹಿತಿ ನೀಡುತ್ತದೆ.

ಆವತ್ತು  ಸ್ಯಾಮ್ಯೂಯಲ್  ಡೊ ಅಧಿಕಾರಕ್ಕೆ ಬಂದಾಗ ಬಚಾವ್ ಆದ ಮಹಿಳೆ, ಮಂತ್ರಿ ಒಬ್ಬಾಕೆ ಇವತ್ತಿನ ಲೈಬೇರಿಯಾದ ಅಧ್ಯಕ್ಷೆ. ಅವರ ಆತ್ಮಚರಿತೆ - This Child Will Be Great: Memoir of a Remarkable Life by Africa's First Woman President.

** ಸ್ಯಾಮ್ಯೂಯಲ್  ಡೊ ಚಿತ್ರಹಿಂಸೆಯ ವಿಡಿಯೋ ಮತ್ತೆ ಬಂದಿವೆ ಇಂಟರ್ನೆಟ್ನಲ್ಲಿ. ನೋಡದೇ ಇರುವದೇ ಒಳ್ಳೆಯದು. ಆಸಕ್ತಿ ಇದ್ದರೆ ಸುದ್ದಿ ಓದಿ. ವಿಡಿಯೋ ನೋಡಬೇಡಿ. ಅಷ್ಟು ಖರಾಬ್ ಆಗಿದೆ.

8 comments:

prashasti said...

:-( :-(
ಮಾಡಿದ್ದುಣ್ಣೋ ಮಹರಾಯ

Mahesh Hegade said...

ಓದಿ ಕಾಮೆಂಟ್ ಹಾಕಿದ್ದಕ್ಕೆ ತುಂಬಾ ಧನ್ಯವಾದ.

Arunkumar said...

ಓಸಾಮಾ ಬಿನ್ ಲಾಡೆನ್, ಭಿಂದ್ರನ್ ವಾಲೆ, ಪ್ರಭಾಕರನ್ ಹೀಗೆ ಈ ಪಟ್ಟಿ ತುಂಬಾ ದೊಡ್ಡದು. ರಾಜಕೀಯ ಮುತ್ಸದ್ದಿಗಳ ಚದುರಂಗದಾಟದ ಬಲಿಪಶುಗಳು. ಮೊದಲಿಂದಾನೂ ಇತ್ತು. ಹುಲಿ ಸಿಂಹ ಪಳಗಿಸಿ ಯುದ್ಧದಲ್ಲಿ ಉಪಯೋಗಿಸೂದು, ಕಡೆಗೆ ಕೊಂದ್ ಹಾಕೂದು.

Mahesh Hegade said...

Thank you Arunkumar for your comments.

Agree chess pawns in the very big game of international profiteering in arms, diamond and other trades.

ವಿ.ರಾ.ಹೆ. said...

ಇಡೀ ಆಫ್ರಿಕಾ ಇದೇ ರೀತಿ ಅಮೆರಿಕಾ ಮತ್ತು ಪಶ್ಚಿಮ ದೇಶಗಳ ನೈಸರ್ಗಿಕ ಸಂಪನ್ಮೂಲಗಳ ಮತ್ತು ಪೆಟ್ರೋಲಿಯಂ ಲೂಟಿಯ ಜಾಗ ಮತ್ತು ಮಿಲಿಟರಿ ಆಟದ ಮೈದಾನವಾಗಿರುವುದು ದುರಂತ. ಮೊನ್ನೆ ಮೊನ್ನೆ ಜೀವತಾಳಿದ ದಕ್ಷಿಣ ಸುಡಾನ್, ಸತ್ತ ಲಿಬಿಯಾ ಕೂಡ ಇದರದ್ದೇ ಮುಂದುವರೆದ ಭಾಗ. ಅಲ್ಲಿನ ಭಾಷೆ ಧರ್ಮ ಸಂಸ್ಕೃತಿಯನ್ನೂ ನಾಶ ಮಾಡುತ್ತಾ , ಜನರ ಬದುಕನ್ನೂ ನರಕ ಮಾಡಿರುವುದು ಇದೇ ಪಶ್ಚಿಮ ದೇಶಗಳ ಕಾಣದ ಕೈಗಳು. :(

Mahesh Hegade said...

ವಿಕಾಸ್.....ಎಲ್ಲರಿಗೂ ಗೊತ್ತಿದ್ದ ಹಾಂಗೆ ......ಕಾಣುವ ಕೈಗಳೇ.....ಎಲ್ಲರಿಗೂ ಒಂದಲ್ಲ ಒಂದು ರೀತಿಯಿಂದ ದುಡ್ಡು ಆಗ್ತಾ ಇದ್ದು ನೋಡು,ಅದಕ್ಕೇ ಸುಮ್ಮನೆ ಇಪ್ಪದು. ನಮ್ಮ ನಮ್ಮ ರೋಟಿ, ಕಪಡಾ, ಮಕಾನ್.....ಇಲ್ಲಿ ಇಪ್ಪ ಯಾರೋ ಒಬ್ಬವ ಅಲ್ಲಿಗೆ ಸ್ಕೀಮ್ ಹಾಕ್ಜಾ ಅಂದ್ರೆ ಅದರ ಸುತ್ತಾ ಮುತ್ತ ೧೦೦ ಬೇರೆ ಬೇರೆ ಉದ್ದಿಮೆ ಬೆಳಿತು. ಹಾಂಗಾಗಿ ಯಾರೂ ಸುಬಗರಲ್ಲ. ಅಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಆ ನಮ್ಮನಿ ರಕ್ತ ಹರಿಸಿ ವಜ್ರ ತಂದರೆ, ಅತೀ ಕಡಿಮೆ ಬೆಲೆಯಲ್ಲಿ ಕಟ್ಟ ಮಾಡ್ತಿ ಹೇಳಿ ನಮ್ಮ ಸೂರತ್ ಬದಿ ಜನ ಕಾಂಟ್ರಾಕ್ಟ್ ತಗತ್ತ. ಅನಿಲದ ಲೈನ್ ಮ್ಯಾನೆಜ್ ಮಾಡಲ್ಲೆ ಐಟಿ ಜನ ಸಾಫ್ಟ್ವೇರ್ ಬರೀತ. ವೆಪನ್ ಸಿಸ್ಟಮ್ ಡಿಜೈನ್ ಮಾಡವು ದೊಡ್ಡ ದೊಡ್ಡ ತಲೆಗಳೇ. ಹೀಂಗಾಗಿ - ಹಮಾಮ್ ಮೇ ಸಬ್ ನಂಗೆ ಹೈ- ಹೇಳಿ ಆಗೋಜು.

Nagaraj said...

ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಈ ಬ್ಯುಸಿ ದಿನಚರಿಯಲ್ಲಿ ಇಷ್ಟೆಲ್ಲವನ್ನು ಮೂಲ ಆಕರದಲ್ಲಿ ಓದಿ ತಿಳಿದುಕೊಳ್ಳುವುದು ಕಷ್ಟ. ಪ್ರತಿ ವಾಕ್ಯದಲ್ಲೂ ನಿಮ್ಮ ಸ್ವಂತಿಕೆ ಕಾಣುತ್ತಿದೆ. ಎಲ್ಲೂ ವರದಿ ಅಥವಾ ನೀರಸ ಅನುವಾದ ಅನಿಸಲ್ಲ. Please keep writing.

Mahesh Hegade said...

ನಾಗರಾಜ್ ಅವರೇ,

ನಮಸ್ಕಾರ.

ಬರಹ ಓದಿ, ಪ್ರೀತಿಯಿಂದ ಒಳ್ಳೆ ಮಾತಾಡಿದ್ದೀರಿ. ಋಣಿ. ಧನ್ಯವಾದ.

ಹೀಗೇ ಓದಿ, ಅಭಿಪ್ರಾಯ ತಿಳಿಸುತ್ತ ಇರಿ.

ಶುಭ ಹಾರೈಕೆಗಳು.