ಜನರಲ್ ಡೇವಿಡ್ ಪೆಟ್ರೆಯಸ್ - ಅಮೇರಿಕಾ ಕಂಡ ಒಬ್ಬ ಮಹಾ ಸೇನಾನಾಯಕ. ಕೈಮೀರಿ ಹೋಗುತ್ತಿದ್ದ ಅಫ್ಘಾನಿಸ್ತಾನ್ ಮತ್ತು ಇರಾಕ್ ಯುದ್ಧಗಳನ್ನು ನಿಯಂತ್ರಿಸಿ, ಪರಿಸ್ಥಿತಿ ಅಮೇರಿಕಾಗೆ ಅನುಕೂಲಕರವಾಗುವಂತೆ ಮಾಡುವಲ್ಲಿ ಅವರದ್ದು ದೊಡ್ಡ ಪಾತ್ರವಿತ್ತು. ಅಧ್ಯಕ್ಷ ಬುಷ್ ಸಾಹೇಬರು ಶುರು ಮಾಡಿ, ರಾಡಿ ಎಬ್ಬಿಸಿದ್ದ ಯುದ್ಧಗಳನ್ನು ಒಂದು ರೀತಿಯಲ್ಲಿ ಮುಗಿಸಿ, ೨೦೦೮ ರ ಆರ್ಥಿಕ ಸಂಕಷ್ಟದಿಂದ ದಿವಾಳಿಯ ತುದಿಯಲ್ಲಿದ್ದ ಅಮೇರಿಕಾವನ್ನು ದುರಸ್ತಿ ಮಾಡುತ್ತೇನೆ ಎಂದು ಹೇಳಿಕೊಂಡೇ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದರು ಪ್ರೆಸಿಡೆಂಟ್ ಒಬಾಮಾ. ಅವರು ಜನರಲ್ ಡೇವಿಡ್ ಪೆಟ್ರೆಯಸ್ ಅವರು ಸೇನೆಯಲ್ಲಿ ಮಾಡಿದ ಕೆಲಸದಿಂದ ಬಹಳ ಸಂತುಷ್ಟರಾಗಿದ್ದರು. ಒಳ್ಳೆ ಕೆಲಸಕ್ಕೆ ಬಹುಮಾನವೆಂಬಂತೆ ಅಮೇರಿಕಾದ ಬೇಹುಗಾರಿಕೆ ಸಂಸ್ಥೆಯಾದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ) ಡೈರೆಕ್ಟರ್ ಪದವಿಗೆ ಪೆಟ್ರೆಯಸ್ ಅವರನ್ನು ೨೦೧೧ ರಲ್ಲಿ ನೇಮಕ ಮಾಡಿದರು.
ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಪೆಟ್ರೆಯಸ್ ಮಾಜಿ ಸಿಐಎ ಮುಖ್ಯಸ್ಥ ಮೈಕಲ್ ಹೈಡೆನ್ ಅವರನ್ನು ಭೇಟಿಯಾಗಲು ಬಯಸಿದರು. ಮೈಕಲ್ ಹೈಡೆನ್ ಕೂಡ ಸೇನಾಧಿಕಾರಿಯೇ. ನೌಕಾದಳದಲ್ಲಿದ್ದರು. ನಂತರ ಹಲವಾರು ಉನ್ನತ ಹುದ್ದೆಗಳ ಬಳಿಕ ಜಾರ್ಜ್ ಬುಷ್ ಕಾಲದಲ್ಲಿ ಸಿಐಎ ಸಂಸ್ಥೆಯ ನಿರ್ದೇಶಕರಾಗಿದ್ದರು. ಒಬಾಮಾ ಸರ್ಕಾರ ಬಂದಾಗ ಸಂಪ್ರದಾಯದಂತೆ ಸರ್ಕಾರದ ಹಿರಿತಲೆಗಳೆಲ್ಲ ಬದಲಾಗಿದ್ದವು. ಮೈಕಲ್ ಹೈಡೆನ್ ಸಹ ತಮ್ಮ ಪದವಿ ಬಿಟ್ಟು ಹೋಗಿದ್ದರು. ಅಂತಹ ಮಾಜಿ ಸಿಐಎ ಮುಖ್ಯಸ್ಥನನ್ನು ಅಧಿಕಾರ ವಹಿಸಿಕೊಳ್ಳಲಿರುವ ಡೇವಿಡ್ ಪೆಟ್ರೆಯಸ್ ಭೇಟಿಯಾಗಲು ಉತ್ಸುಕರಾಗಿದ್ದರು. ಇಬ್ಬರೂ ಮೊದಲಿಂದಲೂ ಪರಿಚಿತರು ಮತ್ತು ಸ್ನೇಹಿತರು ಕೂಡ ಆಗಿದ್ದರು.
ಮೈಕಲ್ ಹೈಡೆನ್ ಅವರ ಮನೆಯಲ್ಲಿ ಬೆಳಗಿನ ಉಪಹಾರಕ್ಕೆಂದು ಇಬ್ಬರೂ ಸೇರಿದ್ದರು. ಅಲ್ಲಿಯವರೆಗೆ ಕೇವಲ ಸೈನ್ಯದಲ್ಲಿ ಮಾತ್ರ ಕೆಲಸ ಮಾಡಿದ್ದ ಡೇವಿಡ್ ಪೆಟ್ರೆಯಸ್ ಅವರಿಗೆ ಸಿಐಎ ಎಂಬ ಸಂಕೀರ್ಣ ಸಂಸ್ಥೆಯ ಒಳಸುಳಿಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳನ್ನು ಹೈಡನ್ ನೀಡಿದರು. ಸಿಐಎ ಅಂದರೆ ಸೈನ್ಯವಲ್ಲ. ಸೈನ್ಯದಲ್ಲಾದರೆ ಸ್ಪಷ್ಟವಾದ ಶ್ರೇಣಿ ವ್ಯವಸ್ಥೆ ಇರುತ್ತದೆ. ಬೂಟು ಕುಟ್ಟಿ ಸಲ್ಯೂಟ್ ಹೊಡೆಯುತ್ತಾರೆ. ಮಾಡಿದ ಆಜ್ಞೆ ಪಾಲಿಸುತ್ತಾರೆ. ಆದರೆ ಸಿಐಎ ಅಂದರೆ ಅದೊಂದು ದೊಡ್ಡ ಕಾರ್ಪೊರೇಟ್ ಕಂಪನಿಯನ್ನು ಸಂಬಾಳಿಸಿದ ಹಾಗೆ. ಬೇರೆ ಬೇರೆ ತಲೆಗಳಿಗೆ ಬೇರೆ ಬೇರೆ ಎಣ್ಣೆ ತಿಕ್ಕಿ ಕೆಲಸ ತೆಗೆಯಬೇಕು. ಸಿಐಎ ವಿಶ್ಲೇಷಕರಲ್ಲಿ ಅನೇಕರು ದೊಡ್ಡ ಬುದ್ಧಿವಂತರು. ಹಾಗಾಗಿ ಕೊಂಚ ವಿಭಿನ್ನ ಸ್ವಭಾವದವರೂ ಸಹ. ತುಂಬಾ ಕಾಳಜಿಯಿಂದ ಸಂಬಾಳಿಸಿಕೊಂಡು ಹೋಗಿ ಎನ್ನುವ ಕಿವಿಮಾತುಗಳನ್ನು ಮಾಜಿ ಸಿಐಎ ಮುಖ್ಯಸ್ಥ ಹೈಡೆನ್ ಹೊಸ ಸಿಐಎ ಮುಖ್ಯಸ್ಥ ಪೆಟ್ರೆಯಸ್ ಅವರಿಗೆ ತಿಳಿಸಿದ್ದರು.
ಸಿಐಎ ಎಂಬ ಸಂಸ್ಥೆ ಮತ್ತೊಂದು ಸೈನ್ಯವಾಗುತ್ತಿದೆ. ಆದರೆ ಅದು ಸಿಐಎ ಕೆಲಸವಲ್ಲ. ಉದ್ದೇಶಿತ ಹತ್ಯೆಗಳು (targeted killings) ಮತ್ತು ರಹಸ್ಯ ಕಪ್ಪು ಕಾರ್ಯಾಚರಣೆಗಳು (black covert operations) ಸಿಐಎ ಸಂಸ್ಥೆಯ ಹೆಚ್ಚಿನ ವೇಳೆ ಮತ್ತು ಸಂಪನ್ಮೂಲಗಳನ್ನು ಖಾಲಿ ಮಾಡುತ್ತಿವೆ. ಎರಡನೇ ಮಹಾಯುದ್ಧದ ಸಮಯದಲ್ಲಾದರೂ ಸಿಐಎ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇನೆಯ ತರಹ ವರ್ತಿಸಿತ್ತೋ ಇಲ್ಲವೋ ಗೊತ್ತಿಲ್ಲ. ಸಿಐಎ ಇದೇ ತರಹ ಉದ್ದೇಶಿತ ಹತ್ಯೆಗಳು ಮತ್ತು ಕಪ್ಪು ಕಾರ್ಯಾಚರಣೆಗಳಲ್ಲಿಯೇ ತೊಡಗಿಸಿಕೊಂಡರೆ ಮುಂದೊಂದು ದಿನ ಸಿಐಎ ತನ್ನ ಮೂಲಭೂತ ಧ್ಯೇಯವಾದ ಬೇಹುಗಾರಿಕೆಯನ್ನೇ ಮರೆತುಬಿಟ್ಟೀತು. ಎಚ್ಚರ! ಎಂದು ಎಚ್ಚರಿಸಿದ್ದರು ಹೈಡೆನ್.
ದೂರ ಕುಳಿತು ಹಾರಿಸಬಹುದಾದಂತಹ ಡ್ರೋನುಗಳು ಸಿಐಎ ತಂತ್ರಜ್ಞರ ಕೈಗೆ ಬಂದಿದ್ದೇ ಬಂದಿದ್ದು ಮಕ್ಕಳ ಕೈಯಲ್ಲಿ ಹೊಸ ಆಟಿಕೆ ಬಂದಂತಾಗಿತ್ತು. ದೂರದ ದೇಶಗಳಲ್ಲಿ ಎಲ್ಲೆಲ್ಲೋ ಓಡಾಡಿಕೊಂಡಿದ್ದ ಉಗ್ರರನ್ನು ಜಿಪಿಎಸ್ ಬಳಸಿ ಟ್ರ್ಯಾಕ್ ಮಾಡುವುದು, ಕಂಪ್ಯೂಟರ್ ಪರದೆ ಮೇಲೆ ಅವರನ್ನು ಅಟ್ಟಿಸಿಕೊಂಡು ಹೋಗುವುದು, ಬರೋಬ್ಬರಿ ನಿಶಾನೆಯಲ್ಲಿ ಬಂದಾಗ ಸಾವಿರಾರು ಮೈಲು ದೂರದಿಂದ ಬಟನ್ ಒತ್ತುವದು. ಡ್ರೋನಿನಿಂದ ಒಂದು hellfire ಮಿಸೈಲ್ ಚಿಮ್ಮುತ್ತದೆ. ಉಗ್ರ ಮತ್ತು ಸಹಚರರ ಕಾರವಾನಿಗೆ ಕಾರ್ವಾನನ್ನೇ ನಾಶಮಾಡಿಬಿಡುತ್ತದೆ. ಅದನ್ನು ನೋಡಿ ವಿಡಿಯೋ ಗೇಮ್ ಗೆದ್ದ ಸಂತಸದಲ್ಲಿ ಮಕ್ಕಳು ಚಪ್ಪಾಳೆ ತಟ್ಟಿದಂತೆ ಸಂಭ್ರಮಿಸುತ್ತಾರೆ ಗೇಮ್ ಬಾರಿಸಿದ್ದ ತಂತ್ರಜ್ಞರು. ಹೀಗೇ ಮುಂದುವರೆದರೆ ಸಿಐಎ ಎಂಬುದು ಕೊಲ್ಲುವ ಯಂತ್ರವಾಗಿಬಿಟ್ಟೀತು (killing machine) ಎಂದು ಎಚ್ಚರಿಸಿದ್ದರು ಮಾಜಿ ಮುಖ್ಯಸ್ಥ ಹೈಡೆನ್.
ಎಲ್ಲಾ ಕೇಳಿಸಿಕೊಂಡ ಪೆಟ್ರೆಯಸ್ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು. ಹೊಸ ಹುದ್ದೆಯನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸಬೇಕು? ಅಂತರಾಳದಲ್ಲಿ ಸಿಐಎ ಅಷ್ಟೊಂದು ಬದಲಾಗಿದೆಯೇ? ಮೂಲ ಉದ್ದೇಶವಾದ ಬೇಹುಗಾರಿಕೆ ಪಕ್ಕಕ್ಕೆ ಹೋಗಿ ಉದ್ದೇಶಿತ ಹತ್ಯೆಗಳು ಅವುಗಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆಯೇ? ಎನ್ನುವ ವಿಚಾರಗಳು ಅವರ ತಲೆಯಲ್ಲಿ.
ಅಂದು ಪೆಟ್ರೆಯಸ್ ಅವರಿಗೇ ಗೊತ್ತಿರಕ್ಕಿಲ್ಲ, ಕೆಲವೇ ದಿವಸಗಳಲ್ಲಿ ಅವರೊಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಿದ್ದರು. ಅದನ್ನು ಅಧ್ಯಕ್ಷ ಒಬಾಮಾ ತುಂಬು ಹೃದಯದಿಂದ ಅನುಮೋದಿಸಲಿದ್ದರು. ಇಡೀ ಅಮೇರಿಕಾದ ಅಧಿಕಾರಶಾಹಿಗೇ ಅದೊಂದು ಅಭೂತಪೂರ್ವ ನಿರ್ಧಾರವಾಗಲಿತ್ತು. ಇಡೀ ದೇಶಕ್ಕೆ ಸಾಕಷ್ಟು ವಿವರಣೆ ಕೊಡುವ ಪ್ರಸಂಗ ಬರಬಹುದಿತ್ತು. ಎಲ್ಲ ಕಪ್ಪು ಕಾರ್ಯಾಚರಣೆಗಳ ಹಾಗೆ ಅದನ್ನು ಗೌಪ್ಯವಾಗಿ ಇಡಲು ಸಾಧ್ಯವಿರಲಿಲ್ಲ. ಇಷ್ಟೆಲ್ಲಾ ತಲೆಬಿಸಿ ಏಕೆಂದರೆ....ಮೊಟ್ಟ ಮೊದಲ ಬಾರಿಗೆ ಅಮೇರಿಕಾ ತನ್ನ ದೇಶದ ನಾಗರಿಕನೊಬ್ಬನನ್ನು ಉದ್ದೇಶಿತ ಹತ್ಯೆಯ ಮೂಲಕ ಕೊಲ್ಲಲಿತ್ತು. ಸ್ವಂತ ದೇಶದ ನಾಗರಿಕನಾದರೂ ಅವನನ್ನು ಕೊಲ್ಲಲೇಬೇಕಾಗಿತ್ತು. ಏಕೆಂದರೆ ಅವನೊಬ್ಬ ಅಲ್-ಕೈದಾ ಉಗ್ರನಾಗಿದ್ದ. ತುಂಬಾ ಖತರ್ನಾಕ್ ಉಗ್ರನಾಗಿದ್ದ.
ಶ್ವೇತಭವನದ ನೆಲಮಾಳಿಗೆಯಲ್ಲಿ ಕಚೇರಿ ಹೊಂದಿದ್ದ counter terrorism ಮುಖ್ಯಸ್ಥ ಜಾನ್ ಬ್ರೆನ್ನನ್ ಹತ್ಯಾಪಟ್ಟಿಯನ್ನು (kill list) ಸಂಬಾಳಿಸುತ್ತಿದ್ದರು. ಯಾರನ್ನು ಆ ಪಟ್ಟಿಗೆ ಸೇರಿಸಬೇಕು, ಯಾರನ್ನು ತೆಗೆಯಬೇಕು, ಯಾರನ್ನು ಪಟ್ಟಿಯಲ್ಲಿ ಮೇಲೆ ಕೆಳಗೆ ಮಾಡಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿಟ್ಟುಕೊಳ್ಳುವುದೇ ಅವರ ಕೆಲಸ. ಮುಂದೆ ಅವರೂ ಕೂಡ ಸಿಐಎ ಮುಖ್ಯಸ್ಥರಾದರು. ಅದು ಬೇರೆ ಮಾತು ಬಿಡಿ.
ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗಿ ಬರುವ ಹೊತ್ತಿಗೆ ಹತ್ಯಾಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದವನು ಉದ್ದವಾಗಿ ಗಡ್ಡ ಬಿಟ್ಟುಕೊಂಡಿದ್ದ ಒಬ್ಬ ಇಸ್ಲಾಮಿಕ್ ಪ್ರವಚನಕಾರ. ಅಷ್ಟೊತ್ತಿಗಾಗಲೇ ಒಸಾಮಾ ಬಿನ್ ಲಾಡೆನ್ನಿಗೆ ಒಂದು ಗತಿ ಕಾಣಿಸಿಯಾಗಿತ್ತು. ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆಯ ನಂತರ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಕಂಡ ಅಲ್-ಖೈದಾ ಉಗ್ರರನ್ನು ಡ್ರೋನ್ ಮೂಲಕ ಸಂಹಾರ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಪಾಕಿಸ್ತಾನವನ್ನು ಸ್ವಚ್ಛ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಅದು 'ಸ್ವಚ್ಛ ಪಾಕಿಸ್ತಾನ' ಅಭಿಯಾನ, ಅಮೇರಿಕಾದ ದೃಷ್ಟಿಯಲ್ಲಿ.
ಅಮೇರಿಕಾದ ಗಮನ ನಂತರ ತಿರುಗಿದ್ದು ಅರೇಬಿಯನ್ ದ್ವೀಪಕಲ್ಪದಲ್ಲಿರುವ (Arabian Peninsula) ಯೆಮೆನ್ ದೇಶದತ್ತ. ಮೊದಲೇ ಅರಾಜಕತೆ ಮತ್ತು ಅಂತರ್ಯುದ್ಧದಲ್ಲಿ ಮುಳುಗಿಹೋಗಿರುವ ದೇಶ ಯೆಮೆನ್. ಉಗ್ರರ ಬೀಡು. ಅಂತಹ ದೇಶದಲ್ಲಿದ್ದ ಅಮೇರಿಕಾದ ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸಿದ್ದ ಉಗ್ರ, ಪ್ರವಚನಕಾರ - ಅನ್ವರ್ ಅಲ್-ಅವಲಾಕಿ. ಅವನಿಗೆ ಒಂದು ಬರೋಬ್ಬರಿ ಮುಹೂರ್ತವಿಡಬೇಕಾಗಿತ್ತು.
ಈ ಅನ್ವರ್ ಅಲ್-ಅವಲಾಕಿಯದು ವಿಚಿತ್ರ ಪಯಣ. ಅಮೇರಿಕಾದಲ್ಲೇ ಹುಟ್ಟಿದ್ದ ನಾಗರಿಕ ಇವನು. ಬೇರೆ ದೇಶದಲ್ಲಿ ಹುಟ್ಟಿ, ನಂತರ ವಲಸೆ ಬಂದು, ಎಷ್ಟೋ ವರ್ಷಗಳ ನಂತರ ಅಮೇರಿಕಾದ ಪೌರತ್ವ ಪಡೆದವರಲ್ಲಿ ಕೆಲವರು ಉಗ್ರರಾಗಿರುವುದು ಉಂಟು. ಆದರೆ ಅಮೇರಿಕಾದಲ್ಲೇ ಹುಟ್ಟಿ, ಇಲ್ಲೇ ಬೆಳೆದು ದೊಡ್ಡವನಾದ ಮನುಷ್ಯನೊಬ್ಬ ಉಗ್ರನಾಗುತ್ತಾನೆ ಮತ್ತು ದೂರದ ಯೆಮೆನ್ ದೇಶಕ್ಕೆ ಹೋಗಿ ದಾಂಗುಡಿಯಿಟ್ಟು ಹುಟ್ಟಿದ ನಾಡಿಗೇ ಕಂಟಕವಾಗಿದ್ದವರಲ್ಲಿ ಇವನೇ ಮೊದಲನೆಯವನು ಇರಬೇಕು.
ಅನ್ವರ್ ಅಲ್-ಅವಲಾಕಿ ೧೯೭೧ ರಲ್ಲಿ ಅಮೇರಿಕಾದ ನ್ಯೂ ಮೆಕ್ಸಿಯೋ ರಾಜ್ಯದಲ್ಲಿ ಜನಿಸಿದ. ಅವನ ತಂದೆ ನಾಸೀರ್ ಅಲ್-ಅವಲಾಕಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ಕೃಷಿ ಅರ್ಥಶಾಸ್ತ್ರವನ್ನು ಓದಿಕೊಂಡಿದ್ದ. ಓದು ಮುಗಿಸಿದ ತಂದೆ ತನ್ನ ದೇಶವಾದ ಯೆಮನ್ ದೇಶಕ್ಕೆ ಹಿಂತಿರುಗಿದ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿದ. ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಅವರ ಅವಧಿಯಲ್ಲಿ ಕೃಷಿ ಮಂತ್ರಿ ಕೂಡ ಆಗಿದ್ದ.
ಅಮೇರಿಕಾದಲ್ಲಿ ಹುಟ್ಟಿದ್ದರಿಂದ ಅಮೇರಿಕನ್ ಪೌರತ್ವ ಸಹಜವಾಗಿ ಅನ್ವರ್ ಅಲ್-ಅವಲಾಕಿಗೆ ದೊರಕಿತ್ತು. ೧೯೯೦ ರ ಸಮಯದಲ್ಲಿ ಅನ್ವರ್ ಅಲ್-ಅವಲಾಕಿ ಮಾತೃಭೂಮಿ ಅಮೇರಿಕಾಗೆ ವಾಪಸ್ ಬಂದ. ಕೊಲೊರಾಡೊ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿಕೊಂಡ. ಅಲ್ಲಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ. ಆದರೆ ಅದು ಬೇಡವೆಂದು ಬಿಟ್ಟುಬಿಟ್ಟ. ಅವನಿಗೆ ಅವರ ಕಟ್ಟಲೆಗಳು ಅಂದು ತುಂಬಾ ಕಟ್ಟರ್ ಎನಿಸಿದ್ದವು. ಒಂದು ಹೆಂಡವಿಲ್ಲ, ಹುಡುಗಿಯಿಲ್ಲ...ಹೀಗೆ ಮಜಾ ಇಲ್ಲ ಅಂದ ಮೇಲೆ ಯಾವನಿಗೆ ಬೇಕ್ರೀ ಈ ಮುಸ್ಲಿಂ ವಿದ್ಯಾರ್ಥಿವೃಂದದ ನಾಯಕತ್ವ ಎಂದು ಅದನ್ನು ತಿರಸ್ಕರಿಸಿದ್ದ. ಇಂತಹ so called ಆಧುನಿಕ ಮನಸ್ಥಿತಿಯ ಮುಸ್ಲಿಂ ಯುವಕ ಮುಂದೊಂದು ದಿನ ಕಟ್ಟರ್ ಉಗ್ರನಾಗುತ್ತಾನೆ ಮತ್ತು ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸುತ್ತಾನೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ.
ಡಿಗ್ರಿ ಮುಗಿಯುವ ಹೊತ್ತಿಗೆ ಬದಲಾಗಿದ್ದ ಅವಲಾಕಿ. ಡಿಗ್ರಿ ಮುಗಿಸಿದ ಬಳಿಕ ಸರಿಯಾದ ನೌಕರಿ ಹಿಡಿಯುವ ಬದಲು ಕೊಲೊರಾಡೊ ರಾಜ್ಯದ ಫೋರ್ಟ್ ಕಾಲಿನ್ಸ್ ನಗರದ ಮಸೀದಿಯಲ್ಲಿ ಪ್ರವಚನಕಾರನಾಗಿ ಕೆಲಸ ಶುರು ಮಾಡಿದ. ಯೆಮೆನ್ ದೇಶದಲ್ಲಿದ್ದ ತಂದೆ ಉರಿದುಕೊಂಡ. ಸರಿಯಾದ ನೌಕರಿ ಮಾಡು ಎಂದು ಉಪದೇಶ ಮಾಡಿದ. ಮಗ ಕೇಳಲಿಲ್ಲ. ಪ್ರವಚನಕಾರನಾಗಿ ತಕ್ಕ ಮಟ್ಟಿನ ಅನುಭವ ಪಡೆದುಕೊಂಡ ಅನ್ವರ್ ಅಲ್-ಅವಲಾಕಿಗೆ ಪ್ರಮೋಷನ್ ದೊರೆಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೇಗೋ ನಗರಕ್ಕೆ ಹೊರಟುಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಇಮಾಮ್ ಎಂದು ನೇಮಕಗೊಂಡಿದ್ದ.
ನಿಧಾನವಾಗಿ ಆತನ ವಿಚಾರಗಳು ಕಟ್ಟರ್ ಇಸ್ಲಾಮಿನತ್ತ ತಿರುಗಲಾರಂಭಿಸಿದ್ದವು. ಇಸ್ಲಾಂ ಹೇಳುವಂತೆ ಎಲ್ಲರೂ ಪರಿಶುದ್ಧವಾದ ಜೀವನವನ್ನು ನಡೆಸಬೇಕು ಎಂದು ಭಯಂಕರವಾಗಿ ಉಪದೇಶ ಕುಟ್ಟುತ್ತಿದ್ದ. ಅವನ ಖುದ್ದು ಜೀವನ ನೋಡಿದರೆ ಮಾತ್ರ...ವೇದಾಂತ ಹೇಳಲು ಆದರೆ ತಿನ್ನುವುದು ಮಾತ್ರ ಬದನೇಕಾಯಿ ಎನ್ನುವಂತಾಗಿತ್ತು. ನಾಲ್ಕಾರು ಸಲ ಪೊಲೀಸರು ಎತ್ತಾಕಿಕೊಂಡು ಹೋಗಿದ್ದರು. ಏಕೆಂದರೆ ಅಂತಹ ಪವಿತ್ರ ಇಮಾಮ್ ಸಾಹೇಬರು ರಸ್ತೆ ಮೇಲೆ ಬೀದಿ ವೇಶ್ಯೆಯರೊಂದಿಗೆ ಚೌಕಾಸಿ ಮಾಡುತ್ತಾ ಕೂತುಬಿಟ್ಟಿದ್ದರು. ಪೊಲೀಸರು ರೂಟೀನಾಗಿ ದಂಡ ಹಾಕಿ ಎಚ್ಚರಿಕೆ ಕೊಟ್ಟು ಕಳಿಸಿದ್ದರು.
ಆದರೆ ೧೯೯೯ ರಲ್ಲಿ ಕೇಂದ್ರ ತನಿಖಾ ಸಂಸ್ಥೆ FBI ಅನ್ವರ್ ಅಲ್-ಅವಲಾಕಿಯ ಮೇಲೆ ಒಂದು ನಜರ್ ಮಡಗಿತು. ಈ ಇಮಾಮ್ ಯಾಕೋ ಖತರ್ನಾಕ್ ಆಗುತ್ತಿದ್ದಾನೆ ಮತ್ತು ಉಗ್ರರ ಸಂಪರ್ಕಕ್ಕೆ ಬರುತ್ತಿದ್ದಾನೆ ಎನ್ನುವ ಸುಳಿವು ಹತ್ತಿತ್ತು. ಏಕೆಂದರೆ ೯/೧೧ ರ ದಾಳಿಯಲ್ಲಿ ಪಾಲ್ಗೊಂಡ್ದಿದ್ದ ಇಬ್ಬರು ಉಗ್ರರಾದ ಖಾಲಿದ್ ಅಲ್-ಮಿಧಾರ್ ಮತ್ತು ನವಾಫ್ ಅಲ್ - ಹಜ್ಮಿ ಈ ಇಮಾಮನ ಮಸೀದಿಗೇ ಪ್ರಾರ್ಥನೆಗೆ ಬರುತ್ತಿದ್ದರು. ೯/೧೧ ರ ಉಗ್ರರಿಗೇ ಪ್ರವಚನ ಮಾಡಿದ್ದ ಕಿಲಾಡಿ ಈತ. ಅವನಿಗೆ ಅಂದು ಅದು ಗೊತ್ತಿರಲಿಕ್ಕಿಲ್ಲ ಬಿಡಿ.
FBI ತನಿಖೆ ಮಾಡಿದರೂ ಇವನ ಮೇಲೆ ಕ್ರಮ ಕೈಗೊಳ್ಳಬೇಕಾಗುವಂತಹ ಯಾವುದೇ ಪುರಾವೆ ಸಿಗಲಿಲ್ಲ. ೯/೧೧ ರ ದಾಳಿಯಾಗುವ ಹೊತ್ತಿಗೆ ಈತ ಅಮೇರಿಕಾದ ಪೂರ್ವತೀರಕ್ಕೆ ಹೋಗಿದ್ದ. ಉತ್ತರ ವರ್ಜೀನಿಯಾ ಭಾಗದ ಮಸೀದಿಯೊಂದರಲ್ಲಿ ಇಮಾಮ್ ಆಗಿ ಕೆಲಸಮಾಡಿಕೊಂಡಿದ್ದ.
ಅಷ್ಟೊತ್ತಿಗೆ ಪ್ರವಚನದ ಕಲೆ ಸಿದ್ಧಿಸಿತ್ತು. ಸ್ವಾರಸ್ಯಕರವಾಗಿ ವಿನೋದಭರಿತವಾಗಿ ಪ್ರವಚನ ಮಾಡುತ್ತಿದ್ದ. ಪ್ರಸಿದ್ಧನೂ ಆದ. ೯/೧೧ ರ ನಂತರ ಅಮೇರಿಕಾದಲ್ಲಿ ಇಸ್ಲಾಮ್ ಬಗ್ಗೆ ಒಂದು ತರಹದ ಭಯಮಿಶ್ರಿತ ಕುತೂಹಲ. ಇಸ್ಲಾಮ್ ಧರ್ಮವನ್ನು ಸ್ವಾರಸ್ಯಕರವಾಗಿ ವಿಶ್ಲೇಷಣೆ ಮಾಡಬಲ್ಲ ಜನರಿಗೆ ಸಾಕಷ್ಟು ಬೇಡಿಕೆ. ಇವನಿಗೂ ಬೇಡಿಕೆ ಬಂತು. ಆಗಾಗ ದೊಡ್ಡ ದೊಡ್ಡ ಪತ್ರಿಕೆಗಳ ವರದಿಗಾರು, ಟೀವಿ ಸುದ್ದಿಗಾರರು ಇವನಿಗೆ ಫೋನ್ ಮಾಡಿ ಬೈಟ್ಸ್ ಕೇಳುತ್ತಿದ್ದರು.
ನಾವು ಅಮೇರಿಕಾಗೆ ಬಂದಿದ್ದು 'ಬೆಳೆಸಲಿಕ್ಕೆ ಹೊರತೂ ಬೀಳಿಸಲಿಕ್ಕಲ್ಲ' ಎಂದು ದೊಡ್ಡದಾಗಿ ಪುಂಗಿದ. ವಿಶ್ವದ ಒಂದು ಬಿಲಿಯನ್ ಮುಸ್ಲಿಮರ ಮತ್ತು ಅಮೇರಿಕನ್ನರ ನಡುವೆ ಸೇತುವೆಯಾಗೋಣ ಎಂದ.
೯/೧೧ ರ ನಂತರ ಅಮೇರಿಕಾದ ಅಧಿಕಾರಶಾಹಿ ಸಂಶಯ ಬಂದ ಎಲ್ಲ ಸಂಘ ಸಂಸ್ಥೆಗಳ ಮೇಲೆ ಮುರ್ಕೊಂಡು ಬಿತ್ತು. ಸಮಗ್ರವಾಗಿ ತನಿಖೆ ಮಾಡಲು ಹೊರಟಿತು. ಹಾಗೆ ಮಾಡಿದ್ದು ಇಲಿಗಳ ಬಿಲಗಳ ಬುಡದಲ್ಲಿ ಮೆಣಸಿನ ಹೊಗೆ ಹಾಕಿದಂತಾಯಿತು. ಆ ಘಾಟಿಗೆ ಇಲಿಗಳೂ, ಹೆಗ್ಗಣಗಳೂ ಎಲ್ಲ ಪುತಪುತನೆ ಹೊರಬೀಳತೊಡಗಿದವು.
ತನ್ನ ಸಂಸ್ಥೆಗಳ ಬುಡಕ್ಕೆ ಬಂದಾಗ ಅನ್ವರ್ ಅಲ್-ಅವಲಾಕಿ ಕೂಡ ಕ್ರುದ್ಧನಾದ. ಮಾಡುತ್ತಿದ್ದ ಪ್ರವಚನಗಳ ಧಾಟಿ ಮತ್ತು ವಿಷಯ ಬದಲಾಯಿತು. ಸರ್ಕಾರದ ವಿರುದ್ಧ ಕೂಗಾಡಲು ಆರಂಭಿಸಿದ. ಅಮೇರಿಕಾ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ನಿಂತಿದೆ ಎಂದುಬಿಟ್ಟ. ಅದು ಅವನ ಹತಾಶೆಯ ಉತ್ತುಂಗವಾಗಿತ್ತು ಎಂದು ಕಾಣುತ್ತದೆ.
ಅಮೇರಿಕಾದ ಸಹವಾಸ ಸಾಕಾಯಿತು ಎಂದೆನಿಸಿರಬೇಕು. ಸೀದಾ ಲಂಡನ್ನಿಗೆ ಹಾರಿಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಶುರುಮಾಡಿದ. ಮತ್ತದನ್ನೇ - ಬೆಂಕಿಯುಗುಳುವ ಪ್ರವಚನಗಳನ್ನು. ಲಂಡನ್ನಿನ ಪಡ್ಡೆ ಪೊರ್ಕಿಗಳೆಲ್ಲ ಇವನ ಭಾಷಣಗಳಿಂದ ಸಿಕ್ಕಾಪಟ್ಟೆ ಪ್ರಭಾವಿತರಾದರು. ಇವನ ಭಾಷಣಗಳ ಸೀಡಿ ಡಿಸ್ಕುಗಳ ಕಟ್ಟು ಬಿಸಿದೋಸೆಯಂತೆ ಮಾರಾಟವಾಯಿತು. ಆದರೂ ಇವನ ಊಟ ಬಟ್ಟೆಗೆ ಮಾತ್ರ ರೊಕ್ಕ ಕಮ್ಮಿಯೇ ಆಯಿತು.
ರೊಕ್ಕ ಕಮ್ಮಿಯಾಯಿತು, ೯/೧೧ ರ ನಂತರ ಎಲ್ಲ ದೇಶಗಳೂ ಕಟ್ಟರ್ ಇಸ್ಲಾಮಿಸ್ಟುಗಳನ್ನು ಟೈಟ್ ಮಾಡುತ್ತಿದ್ದರಿಂದ ಎಲ್ಲ ಕಡೆ ಬಹಳ ಹೀಟ್. ಹಾಗಾಗಿ ಹಳೆ ಗಂಡನ ಪಾದವೇ ಸರಿ ಎನ್ನುವ ಮಾದರಿಯಲ್ಲಿ ಮತ್ತೆ ಯೆಮೆನ್ ದೇಶಕ್ಕೇ ವಾಪಸ್ ಬಂದ. ಬಂದವನೇ ಒಂದು ಕಂಪ್ಯೂಟರ್ ತೆಗೆದುಕೊಂಡ. ಇಂಟರ್ನೆಟ್ ಸಂಪರ್ಕ ಹಾಕಿಸಿದ. ಕಂಪ್ಯೂಟರ್ ಮುಂದೆ ಕುಳಿತವ ಇಂಟರ್ನೆಟ್ ಮೇಲೆ ಸಿಗುವ ಅಸಂಖ್ಯಾತ ಚಾಟ್ ರೂಮುಗಳಲ್ಲಿ ಮತ್ತು ಯೂಟ್ಯೂಬ್ ಮೇಲೆ ವರ್ಚುಯಲ್ ಪ್ರವಚನ ಶುರುಮಾಡಿಬಿಟ್ಟ.
ಅನ್ವರ್ ಅಲ್-ಅವಲಾಕಿಯ ಪ್ರವಚನಗಳು ಇಂಗ್ಲಿಷ್ ಭಾಷೆಯಲ್ಲಿ ಇರುತ್ತಿದ್ದವು. ಬೇರೆ ಯಾವ ಭಾಷೆ ಮೇಲೂ ಅವನಿಗೆ ಪ್ರಭುತ್ವ ಇರಲಿಲ್ಲ. ಈ ಕಾರಣದಿಂದ, ಅವೆಷ್ಟೇ ಖಡಕ್ ಆಗಿದ್ದರೂ, ಬಹಳ ಜನರನ್ನು ತಲುಪಲಿಲ್ಲ. ಆದರೆ ಯಾರನ್ನು ತಲುಪಿದವೋ ಅವರಲ್ಲಿ ಕೆಲವರು ಸಿಕ್ಕಾಪಟ್ಟೆ ಡೇಂಜರ್ ಉಗ್ರರಾಗಿಬಿಟ್ಟರು. ಚಡ್ಡಿ ಬಾಂಬರ್ (underwear bomber) ಎಂದೇ ಖ್ಯಾತನಾದ ನೈಜೀರಿಯಾದ ಉಮರ್ ಫಾರೂಕ್ ಅಬ್ದುಲ್ಮುತಲ್ಲಬ್ ಕೂಡ ಅಂತವರಲ್ಲಿ ಒಬ್ಬ.
ಈ ಪುಣ್ಯಾತ್ಮ ಚಡ್ಡಿಯಲ್ಲಿ ಬಾಂಬ್ ಅಡಗಿಸಿಟ್ಟುಕೊಂಡು ೨೦೦೯ ಕ್ರಿಸ್ಮಸ್ ದಿನದಂದು ನೈಜೀರಿಯಾದಿಂದ ಅಮೇರಿಕಾದ ಡೆಟ್ರಾಯಿಟ್ ನಗರಕ್ಕೆ ಬರಲಿದ್ದ ವಿಮಾನ ಹತ್ತಿಬಿಟ್ಟ. ಅದು ಅದೃಷ್ಟವಶಾತ್ ವಿಫಲವಾಯಿತು. ಅವನ ಚಡ್ಡಿಯಲ್ಲಿ ಸಣ್ಣ ಸ್ಪೋಟವಾಯಿತೇ ವಿನಃ ಇಡೀ ವಿಮಾನವೇ ಢಮ್ ಎಂದು ಎಲ್ಲರೂ ಆಕಾಶದಲ್ಲೇ ಲೀನರಾಗಿ ದೊಡ್ಡ ಅನಾಹುತವಾಗಲಿಲ್ಲ. ಅಷ್ಟರಮಟ್ಟಿಗೆ ದೇವರು ದಯೆತೋರಿದ್ದ.
ಈ ಅನಾಹುತಕ್ಕೆ ಕೈಹಾಕುವ ಕೆಲವು ದಿನಗಳ ಮೊದಲು ಇದೇ ಚಡ್ಡಿ ಬಾಂಬರ್ ಪ್ರವಚನಕಾರ ಅನ್ವರ್ ಅಲ್-ಅವಲಾಕಿಗೆ ಇಂಟರ್ನೆಟ್ ಸಂದೇಶ ಕಳಿಸಿದ್ದ. ಇತರ ಧರ್ಮಗಳ ಬಗ್ಗೆ ಮತ್ತು ಅಮೇರಿಕಾದ ಬಗ್ಗೆ ದ್ವೇಷ ಕಾರಿಕೊಂಡಿದ್ದ. ಜಿಹಾದ್ ಮಾಡುವುದಾಗಿ ಡಂಗುರ ಸಾರಿದ್ದ. ಅದೇ ಜಿಹಾದಿನ ಮೊದಲ ಭಾಗವಾಗಿ ಚಡ್ಡಿ ಬಾಂಬ್ ಸಿದ್ಧಪಡಿಸಿದ್ದ.
ಈ ಚಡ್ಡಿ ಬಾಂಬರ್ ಮಾಡಿದ ಕಾರ್ಯಾಚರಣೆ ವಿಫಲವಾದರೂ ಅಧಿಕಾರಿಗಳು ತನಿಖೆಗೆ ಕುಳಿತರು. ಒಂದನ್ನೊಂದು ಜೋಡಿಸುತ್ತ ಹೋದಂತೆ ಇದು ಅನ್ವರ್ ಅಲ್-ಅವಲಾಕಿಯ ಪಾದದ ಬುಡಕ್ಕೇ ಬಂದು ಸೇರಿತು. ಆಗಲೇ ಈ ಅಲ್-ಅವಲಾಕಿ ಅಮೇರಿಕನ್ನರ ಕಟ್ಟುನಿಟ್ಟಿನ ನಿಗರಾಣಿಯಲ್ಲಿ ಬಂದುಬಿಟ್ಟ. ಈ ಅಲ್-ಅವಲಾಕಿ ಅರೇಬಿಯನ್ ದ್ವೀಪಕಲ್ಪ ದೇಶವಾದ ಯೆಮೆನ್ನಿನಲ್ಲಿ ಕುಳಿತು ಏನೇನು ಸ್ಕೀಮ್ ಹಾಕುತ್ತಿದ್ದಾನೆ ಎನ್ನುವ ಒಂದು ಸಂಪೂರ್ಣ ಚಿತ್ರಣ ಸಿಗಲಾರಂಭಿಸಿತು. ಇವನು ಕೇವಲ ಎಲ್ಲರಂತೆ ಬಂಡಲ್ ಬಿಡುವ ಪ್ರವಚನಕಾರನಲ್ಲ. ತಾನು ಕಾರುವ ದ್ವೇಷಕ್ಕೆ ಒಂದು ನಿಖರವಾದ ರೂಪುರೇಷೆಗಳನ್ನು ಕೊಟ್ಟು, ಹಲವಾರು ಹಿಂಸಾತ್ಮಕ ಘಟನೆಗಳಿಗೆ ಮಾಸ್ಟರ್ ಪ್ಲಾನ್ ಹಾಕುತ್ತಿದ್ದಾನೆ ಎಂದು ಖಚಿತವಾಯಿತು.
ಅನ್ವರ್ ಅಲ್-ಅವಲಾಕಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಸಂಘಟನೆಯನ್ನು ಶಿಸ್ತುಬದ್ಧವಾಗಿ ಬೆಳೆಸುತ್ತಿದ್ದಾನೆ ಎಂದು ಖಚಿತವಾಯಿತು. counter terrorism ಬಾಸ್ ಜಾನ್ ಬ್ರೆನ್ನನ್ ಶ್ವೇತಭವನದ ತಮ್ಮ ಕಚೇರಿಯಿಂದಲೇ ಸೌದಿ ಅರೇಬಿಯಾಕ್ಕೆ ಫೋನ್ ಮಾಡಿದರು. ತಮ್ಮ ಸಂಪರ್ಕಗಳ ಜೊತೆ ಮಾತಾಡಿದರು. ಅನ್ವರ್ ಅಲ್-ಅವಲಾಕಿಯ ಕಾರ್ನಾಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ತರಿಸಿಕೊಂಡರು. ತಮ್ಮ ಮುಂದಿದ್ದ ಹತ್ಯಾಪಟ್ಟಿಯತ್ತ ಒಮ್ಮೆ ಗಂಭೀರವಾಗಿ ನೋಡಿದರು.
ಯೆಮೆನ್ ದ್ವೀಪಕಲ್ಪದಲ್ಲಿ ಅನ್ವರ್ ಅಲ್-ಅವಲಾಕಿಯ ಕಿತಾಪತಿಗಳು ಅಲ್-ಖೈದಾ ಸಂಘಟನೆಯನ್ನು ಅಲ್ಲಿ ಬೆಳೆಸಲು ಎಷ್ಟು ನೆರವಾಯಿತೋ ಬಿಟ್ಟಿತೋ. ಆದರೆ ಪಾಕಿಸ್ತಾನ, ಅಫ್ಘಾನಿಸ್ತಾನಗಳಿಂದ ಓಡಿಸಲ್ಪಟ್ಟಿದ್ದ ಉಗ್ರರಿಗೆ ಒಂದು ತಂಗುದಾಣವಂತೂ ಆಗತೊಡಗಿತು. ಅಲ್ಲಿಂದ ಒಂದು ಚಿಕ್ಕ ಕೊಲ್ಲಿ ದಾಟಿಬಿಟ್ಟರೆ ಎದುರಿಗೇ ಸೋಮಾಲಿಯಾ. ಅಲ್ಲಿಗೆ ತಲುಪಿಕೊಂಡರೆ ಸ್ವರ್ಗ. ಏಕೆಂದರೆ ಅಲ್ಲಿ ಯಾವಾಗಲೂ ಅರಾಜಕತೆ. ಹಾಗಾಗಿ ಅಲ್-ಖೈದಾ ಉಗ್ರರಿಗೆ ಅಲ್ಲಿ ರಾಜಾಶ್ರಯ. ಹಾಗಾಗಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಬೆಳೆಯುವುದು ತುಂಬಾ ಚಿಂತೆಯ ವಿಷಯವಾಗಿತ್ತು.
ಈ ಅನ್ವರ್ ಅಲ್-ಅವಲಾಕಿಯನ್ನು ಹತ್ಯಾಪಟ್ಟಿಗೆ ಸೇರಿಸಬೇಕೋ ಹೇಗೆ ಎನ್ನುವುದರ ಬಗ್ಗೆ ರಾಷ್ಟ್ರೀಯ ರಕ್ಷಣಾ ವ್ಯವಸ್ಥೆಯ ಸಭೆಗಳಲ್ಲಿ ವ್ಯಾಪಕವಾಗಿ ಚರ್ಚೆ ಆರಂಭವಾಯಿತು. ಇಷ್ಟೆಲ್ಲಾ ಚರ್ಚೆಗೆ ಕಾರಣವಿತ್ತು. ಯಾಕೆಂದರೆ ಈ ಅಲ್-ಅವಲಾಕಿ ಅಮೇರಿಕನ್ ನಾಗರಿಕ. ದೇಶದ ಶತ್ರು ಎಂದು ಯಾವುದೋ ದೇಶದ ಅಬ್ಬೇಪಾರಿಯನ್ನು ಉಡಾಯಿಸಿಬಿಡುವುದು ಬೇರೆ ಮಾತು. ಆದರೆ ತನ್ನದೇ ದೇಶದ ಪ್ರಜೆಯನ್ನು ಉಗ್ರ ಎಂದು ಆಪಾದಿಸಿ ಕೊಲ್ಲುವುದಿದೆಯಲ್ಲ ಅದು ದೊಡ್ಡ ಕಿರಿಕಿರಿಯ ಸಮಸ್ಯೆ. ಅಮೇರಿಕಾದಲ್ಲಿ ಪೊಲೀಸರು ಯಾರೋ ಒಬ್ಬನನ್ನು ಕೊಂಚ ತದುಕಿದರೂ ಸಾಕು ಜನ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರ ಸಮವಸ್ತ್ರ ಬಿಚ್ಚಿಸುವ ಲೆವೆಲ್ಲಿಗೆ ಕೇಸ್ ಜಡಿಯುತ್ತಾರೆ. ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ, ಆದರೆ ಮಾನವಹಕ್ಕುಗಳ ಬಗ್ಗೆ ಸಿಕ್ಕಾಪಟ್ಟೆ ಪ್ರಜ್ಞೆ ಇದೆ. of course, ತಮ್ಮ ಅನುಕೂಲಕ್ಕೆ ತಕ್ಕಂತೆ. ಆದರೆ ಅಮೇರಿಕನ್ ನಾಗರಿಕನಿಗೆ ಶಾರೀರಿಕ ಹಾನಿ ಮಾಡುವ ಮೊದಲು ಸಾವಿರಾರು ಬಾರಿ ಯೋಚನೆ ಮಾಡಬೇಕಾಗುತ್ತದೆ.
ಅಮೇರಿಕಾದ ನ್ಯಾಯಾಂಗ ವ್ಯವಸ್ಥೆಯ ವಕೀಲರ ದೊಡ್ಡ ತಂಡವೊಂದು ಅನ್ವರ್ ಅಲ್-ಅವಲಾಕಿಯ ಕೇಸ್ ಫೈಲುಗಳನ್ನು ತೆಗೆದುಕೊಂಡು ಹಗಲೂ ರಾತ್ರಿ ಅಭ್ಯಾಸ ಮಾಡಲು ಆರಂಭಿಸಿತು. ಭೂತಗನ್ನಡಿ ಹಿಡಿದು ನೋಡಿದರು. ಚಡ್ಡಿ ಬಾಂಬರ್ ಪ್ರಕರಣಕ್ಕೆ ತಾಳೆ ಹಾಕಿದರು. ಅಲ್-ಅವಲಾಕಿಯನ್ನು ಉಡಾಯಿಸಿಬಿಟ್ಟರೆ ಸಂವಿಧಾನದ ಉಲ್ಲಂಘನೆ ಆಗುತ್ತದೆಯೋ ಎನ್ನುವುದರ ಬಗ್ಗೆ ದೊಡ್ಡ ದೊಡ್ಡ ಕಾನೂನು ಪಂಡಿತರು ಸಾಕಷ್ಟು ಸಮಯ ವ್ಯಯಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. ಅಲ್-ಅವಲಾಕಿ ಅತ್ಯಂತ ಅಪಾಯಕಾರಿ ಉಗ್ರನಾಗಿ ಹೊರಹೊಮ್ಮಲಿದ್ದಾನೆ. ಅವನನ್ನು ಬೇಗನೆ 'ತಟಸ್ಥ'ಗೊಳಿಸಿದಷ್ಟು ಒಳ್ಳೆಯದು. He had to be neutralized fast!
ಅಲ್-ಅವಲಾಕಿಯ ಮರಣಶಾಸನ ಹೊರಬಿದ್ದು ಅದಕ್ಕೆ ಒಬಾಮಾ ಸಾಹೇಬರ ಅನುಮತಿಯ ಮುದ್ರೆ ಬೀಳುವ ಹೊತ್ತಿಗೆ ಈ ಮನುಷ್ಯ ಎಲ್ಲೋ ನಾಪತ್ತೆ. ಯೆಮೆನ್ ದೇಶದಲ್ಲಿ ಅಮೇರಿಕಾದ ಬೇಹುಗಾರಿಕೆ ಜಾಲ ಅಷ್ಟಾಗಿ ಇರಲಿಲ್ಲ. ಬೇಹುಗಾರಿಕೆ ಮಾಹಿತಿಗೆ ಅಮೇರಿಕಾ ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಮೇಲೆ ಅವಲಂಬಿತ. ಸೌದಿ ಅರೇಬಿಯಾದ ಬೇಹುಗಾರಿಕೆ ಸಂಸ್ಥೆ ತಕ್ಕ ಮಟ್ಟಿನ ಮಾಹಿತಿ ಕೊಡುತ್ತಿತ್ತು.
೨೦೧೦ ರಲ್ಲಿ ಒಂದು ದೊಡ್ಡ ಲಫಡಾ ಆಗಿತ್ತು. ಅಂದು ಬಂದಿದ್ದ ಮಾಹಿತಿ ತಪ್ಪಿತ್ತು. ಆ ಮಾಹಿತಿ ಪ್ರಕಾರ ಅಲ್ -ಖೈದಾ ಉಗ್ರರಿದ್ದಾರೆ ಎಂದು ಅಮೇರಿಕಾ ಬಾಂಬ್ ಹಾಕಿದರೆ ಯಾರು ಉಡೀಸ್ ಆಗಿರಬೇಕು ಊಹಿಸಿ. ಯೆಮೆನ್ ದೇಶದ ಡೆಪ್ಯುಟಿ ಗವರ್ನರ್ ಸಾಹೇಬರು ಶಿವಾಯ ನಮಃ ಆಗಿದ್ದರು. ಅಮೇರಿಕಾದವರು ಅದೇನೇ ವಿಷಾದ ವ್ಯಕ್ತಪಡಿಸಿದರೂ ಅಧ್ಯಕ್ಷ ಸಾಲೇಹ್ ಸಿಟ್ಟಿಗೆದ್ದಿದರು. ತಮ್ಮ ದೇಶದಲ್ಲಿ ಅಲ್ - ಖೈದಾ ವಿರುದ್ಧ ಕಾರ್ಯಾಚರಣೆ ಮಾಡುತ್ತೇನೆ ಎಂದು ಬಂದ ಅಮೇರಿಕಾದವರಿಗೆ ಅನುಮತಿ ಕೊಟ್ಟು, ಬೇಹುಗಾರಿಕೆ ಮಾಹಿತಿ ಕೊಟ್ಟರೆ ಹೀಗಾ ಮಾಡೋದು? ಹೋಗಿ ಹೋಗಿ ತನ್ನ ಡೆಪ್ಯುಟಿ ಗವರ್ನರ್ ಮನುಷ್ಯನನ್ನೇ ಉಡಾಯಿಸಿಬಿಡೋದೇ? ಸಿಟ್ಟಿಗೆದ್ದಿದ್ದ ಯೆಮೆನ್ ಅಧ್ಯಕ್ಷರು ಅಮೇರಿಕಾದ ರಹಸ್ಯ ಕಾರ್ಯಾಚರಣೆಗಳ ಮೇಲೆ ನಿರ್ಬಂಧ ವಿಧಿಸಿದ್ದರು.
ಮುಂದೆ ಯೆಮೆನ್ ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸತೊಡಗಿತ್ತು. ಅಂತರ್ಯುದ್ಧ ಜೋರಾಗತೊಡಗಿತ್ತು. ಅಧ್ಯಕ್ಷ ಸಾಲೇಹ್ ದೇಶದ ಮೇಲಿನ ಹತೋಟಿ ಕಳೆದುಕೊಳ್ಳಲಾರಂಭಿಸಿದರು. ಬಂಡುಕೋರರು ದೇಶವನ್ನು ಆಕ್ರಮಿಸಿಕೊಂಡರು. ಅಧ್ಯಕ್ಷ ಸಾಲೇಹ್ ಅವರ ಹಿಡಿತ ರಾಜಧಾನಿ ಸಾನಾ ಶಹರಕ್ಕೆ ಮಾತ್ರ ಎನ್ನುವಂತಾಯಿತು. ಒಮ್ಮೆಯಂತೂ ಅಧ್ಯಕ್ಷರ ಅರಮನೆ ಮೇಲೆಯೇ ಬಂಡುಕೋರರು ರಾಕೆಟ್ ದಾಳಿ ಮಾಡಿದರು. ಅಂದು ಅಧ್ಯಕ್ಷರು ಢಮ್ ಎಂದು ಮಟಾಷ್ ಆಗಬೇಕಿತ್ತು. ಅದೃಷ್ಟ ಚೆನ್ನಾಗಿತ್ತು. ಅವರ ತಲೆಗೆ ರಾಕೆಟ್ ಬಡಿದು ಬುರುಡೆ ಬಿಚ್ಚಿಕೊಂಡರೂ ಸಮಯಕ್ಕೆ ಸರಿಯಾಗಿ ಅವರನ್ನು ಪಕ್ಕದ ಸೌದಿಗೆ ಒಯ್ಯಲಾಯಿತು. ಅಲ್ಲಿ ಏಳು ಘಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಪ್ರೆಸಿಡೆಂಟ್ ಸಾಲೇಹ್ ಬಚಾವಾದರು. ಆದರೆ ಯೆಮನ್ ಅವರ ಹತೋಟಿಯಿಂದ ತಪ್ಪಿಹೋಗಿತ್ತು. ಇದರ ಜೊತೆಗೆ ಅವರು ಅಮೇರಿಕಾದ ಸೇನಾಪಡೆಗಳ ಮೇಲೆ ವಿಧಿಸಿದ್ದ ನಿರ್ಬಂಧನೆಗಳು ಕೂಡ ಗಾಳಿಗೆ ತೂರಿಹೋಗಿದ್ದವು.
ಮಾಹಿತಿ ತಪ್ಪಿನಿಂದ ಡೆಪ್ಯುಟಿ ಗವರ್ನರ್ ಕೊಲ್ಲಲ್ಪಟ್ಟ ಮೇಲೆ ಸಿಐಎ ಮತ್ತು ಸೇನಾಪಡೆಗಳಿಗೆ ಬರೋಬ್ಬರಿ ಒಂದು ವರ್ಷ ಕೆಲಸ ಮಾಡಲು ಆಗಿರಲಿಲ್ಲ. ಈಗ ಯೆಮೆನ್ ದೇಶದ ಮೇಲೆ ಹೆಚ್ಚಿನ ಸಂಪನ್ಮೂಲಗಳನ್ನು ಹಾಕಲಾಯಿತು. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಫೋರ್ಟ್ ಮೀಡ್ ಪ್ರದೇಶದಲ್ಲಿರುವ ಫೋನ್ ಟ್ಯಾಪಿಂಗ್ ಕೇಂದ್ರದಲ್ಲಿ ಯೆಮೆನ್ ದೇಶದ ಮೊಬೈಲ್ ಫೋನುಗಳ ಮೇಲೆ ನಿಗಾಯಿಡಲು ಹೆಚ್ಚಿನ ವಿಶ್ಲೇಷಕರು ನೇಮಕಗೊಂಡರು. ಕಿವಿಗೆ ಹೆಡ್-ಫೋನ್ ಸಿಕ್ಕಿಸಿಕೊಂಡು ಕಂಪ್ಯೂಟರ್ ಮೇಲೆ ಇಮೇಲ್ ಸ್ಕ್ಯಾನ್ ಮಾಡುವುದೇ ಅವರ ಕೆಲಸ. ದೊಡ್ಡ ಹುಲ್ಲಿನ ಬಣಿವೆಯಲ್ಲಿ ಅಲ್-ಅವಲಾಕಿ ಎನ್ನುವ ಸೂಜಿಯನ್ನು ಹುಡುಕಿದ ಹಾಗೆ. ಹುಡುಕಲೇ ಬೇಕಾಗಿತ್ತು. ಒಮ್ಮೆ ಲ್ಯಾಚ್ ಆದ ಮೇಲೆ ತಾನೇ ಕ್ಯಾಚ್ ಮಾಡುವುದು!?
ಇತ್ತ ಕಡೆ ಸಿಐಎ ದಕ್ಷಿಣ ಸೌದಿ ಅರೇಬಿಯಾದ ಮರಭೂಮಿ ಪ್ರದೇಶದಲ್ಲಿ ಒಂದು ರಹಸ್ಯ ಡ್ರೋನ್ ನೆಲೆಯನ್ನು ಕಟ್ಟಲಾರಂಭಿಸಿತು. ಈ ಡ್ರೋನ್ ನೆಲೆ ಪಕ್ಕದ ಯೆಮೆನ್ ದೇಶದಲ್ಲಿ ಮಾಡಬೇಕಾದ ಅಲ್ - ಖೈದಾ ಉಗ್ರರ ಬೇಟೆಯ ಕೇಂದ್ರವಾಗಲಿತ್ತು. 'ಏನಾದರೂ ಮಾಡಿಕೊಳ್ಳಿ. ಆದರೆ ನಮ್ಮ ದೇಶದಲ್ಲಿ ನಿಮ್ಮ ಡ್ರೋನ್ ನೆಲೆಯಿದೆ ಎಂದು ಯಾರಿಗೂ ಗೊತ್ತಾಗಬಾರದು,' ಎಂದು ಸೌದಿಗಳ ಕಟ್ಟಾಜ್ಞೆ. ಪಾಪ ಅವರ ಅನಿವಾರ್ಯತೆಗಳು ಒಂದೇ ಎರಡೇ. ಈಕಡೆ ಅಮೇರಿಕಾಗೆ ಎದುರಾಡುವಂತಿಲ್ಲ. ಆಕಡೆ ಇತರ ಮುಸ್ಲಿಮರನ್ನು ಎದುರಾಕಿಕೊಳ್ಳುವಂತಿಲ್ಲ. ಅಕ್ಕಿ ಮೇಲೆ ಆಸೆ. ನೆಂಟರ ಮೇಲೆ ಪ್ರೀತಿ. ನೆಂಟರನ್ನು ಕೊಲ್ಲುತ್ತೇವೆ ಎನ್ನುವ ಮಿತ್ರರು ಎಂದು ಹೇಳಿಕೊಳ್ಳುವ ಅಮೇರಿಕನ್ನರು. ಒಟ್ಟಿನಲ್ಲಿ ಸೌದಿ ಅರೇಬಿಯಾಗೆ ಕಷ್ಟ ಕಷ್ಟ ಇವರನ್ನೆಲ್ಲ ನಿಭಾಯಿಸುವುದು.
ಸೌದಿ ಅರೇಬಿಯಾದ ಡ್ರೋನ್ ನೆಲೆ ಸ್ಥಾಪಿತವಾಗುವವರೆಗೆ ಕಾಯುವಂತಿರಲಿಲ್ಲ. ಅಭ್ಯಾಸ ಶುರುವಾಗಲೇಬೇಕಿತ್ತು. ಅದಕ್ಕಾಗಿ ಇಥಿಯೋಪಿಯಾ ಮತ್ತು ಜಿಬೌಟಿ ದೇಶಗಳ ನೆಲೆಗಳಿಂದ ಡ್ರೋನುಗಳನ್ನು ಹಾರಿಸಲಾಯಿತು. ಅವು ಯೆಮೆನ್ ಮೇಲೆ ಹಾರಿ ತಕ್ಕ ಮಟ್ಟಿನ ಮಾಹಿತಿಗಳನ್ನು ಸಂಗ್ರಹಿಸಿ ತಂದವು. ಡ್ರೋನ್ ಮತ್ತು ಜಿಹಾದಿಗಳ ನಡುವೆ ಬೆಕ್ಕು ಇಲಿ ನಡುವಿನ ಬೇಟೆಯಂತಹ ಕಾಳಗ ಶುರುವಾಗಿತ್ತು.
ಜಿಹಾದಿಗಳೇನೂ ಕೈಕಟ್ಟಿ ಕುಳಿತಿರಲಿಲ್ಲ. ದಾಳಿಗಳಿಂದ ಬಚಾವಾಗುವ ಉಪಾಯಗಳನ್ನು ರೂಪಿಸಿಕೊಂಡಿದ್ದರು. ತಲೆ ಮೇಲೆ ಯೆಮೆನ್ ವಾಯುಪಡೆಯ ವಿಮಾನಗಳು ಹಾರಿದರೆ ನಿಂತಲ್ಲೇ ನಿಂತಿರುತ್ತಿದ್ದರು. ಯೆಮೆನ್ ಯುದ್ಧವಿಮಾನಗಳು ಸಾಮಾನ್ಯವಾಗಿ ತಮ್ಮ ಗುರಿ ಮೇಲೆ ಬಾಂಬ್ ಹಾಕಿದ್ದೇ ಕಮ್ಮಿ. ಯಾವಾಗಲೂ ಗುರಿ ತಪ್ಪಿ ಎಲ್ಲೋ ಹಾಕುತ್ತಿದ್ದವು. ಹಾಗಾಗಿ ಅವುಗಳಿಂದ ತಪ್ಪಿಸಿಕೊಳ್ಳುವ ಉತ್ತಮ ವಿಧಾನ ಎಂದರೆ ನಿಂತಲ್ಲೇ ನಿಂತಿರುವುದು. ಅದೇ ತಲೆ ಮೇಲೆ ಡ್ರೋನುಗಳು ಹಾರಲು ಶುರುವಾದಾಗ ಇದರ ಉಲ್ಟಾ ಉಪಾಯ. ತಮ್ಮ ತಮ್ಮ ವಾಹನ ಹತ್ತಿ ಮರಭೂಮಿಯಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುತ್ತಿದ್ದರು. ಅವರಿಗೆ ಡ್ರೋನುಗಳ ಒಂದು ಮುಖ್ಯ ನ್ಯೂನ್ಯತೆ ಗೊತ್ತಿತ್ತು. ಡ್ರೋನುಗಳಲ್ಲಿನ ಕ್ಯಾಮೆರಾಗಳಲ್ಲಿ ಚಿತ್ರ ದಾಖಲಾಗಿ, ಅದು ಸಂಸ್ಕರಿಸಲ್ಪಟ್ಟು, ಆಕಾಶದಲ್ಲಿನ ಉಪಗ್ರಹಕ್ಕೆ ಸೇರಿ, ಅಲ್ಲಿಂದ ಅಮೇರಿಕಾದ ಯಾವುದೋ ಮೂಲೆಯಲ್ಲಿನ ಡ್ರೋನ್ ಕೇಂದ್ರಕ್ಕೆ ರವಾನೆಯಾಗಿ, ಅಲ್ಲಿನ ಕಂಪ್ಯೂಟರ್ ಮೂಲಕ ಅದರ ಮುಂದೆ ಕೂತಿದ್ದ ಡ್ರೋನಾಚಾರ್ಯನ (Drone Operator) ಪರದೆ ಮೇಲೆ ಉಗ್ರರ ಚಿತ್ರ ಮೂಡಿ ಬರುವ ವರಗೆ ನಾಲ್ಕಾರು ಸೆಕೆಂಡುಗಳ ವಿಳಂಬ (latency) ಇರುತ್ತಿತ್ತು. ಹಾಗಾಗಿ ದೂರದಲ್ಲಿ ಕುಳಿತು ಡ್ರೋನ್ ಮೂಲಕ ಮಿಸೈಲ್ ಹಾರಿಸುತ್ತಿದ್ದ ಡ್ರೋನಾಚಾರ್ಯನ ಗುರಿ ತಪ್ಪುವ ಸಾಧ್ಯತೆಗಳು ಇರುತ್ತಿದ್ದವು. ಹಾಗಾಗಿ ಡ್ರೋನ್ ಕಂಡ ಕೂಡಲೇ ಶರವೇಗದಲ್ಲಿ ಗಾಡಿ ಓಡಿಸುವ ತಂತ್ರ ಅವುಗಳಿಂದ ಬಚಾವಾಗಲು ಉಪಯುಕ್ತವಾಗಿತ್ತು.
ಇದೇ ಕಾರಣದಿಂದ ಮೊದಲೊಮ್ಮೆ ಅನ್ವರ್ ಅಲ್-ಅವಲಾಕಿ ಅಮೇರಿಕನ್ ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. ಅವನನ್ನು ಅಂದು ಬಿಡಬಾರದು ಎಂದು ಡ್ರೋನ್ ಮತ್ತು ಯುದ್ಧ ವಿಮಾನ ಎರಡನ್ನೂ ಒಮ್ಮೆಲೇ ಕಳಿಸಲಾಗಿತ್ತು. ಡ್ರೋನ್ ಕಂಡಕೂಡಲೇ ತನ್ನ ವಾಹನ ಹತ್ತಿ ಮರಭೂಮಿಯಲ್ಲಿ ಪರಾರಿಯಾಗಿಬಿಟ್ಟ ಖದೀಮ ಅಲ್-ಅವಲಾಕಿ. ಮೇಲೆ ಹೇಳಿದ ತಾಂತ್ರಿಕ ವಿಳಂಬದ ಕಾರಣದಿಂದ ಡ್ರೋನ್ ಹಾರಿಸಿದ ಮಿಸೈಲ್ ಗುರಿತಪ್ಪಿತ್ತು. ಯುದ್ಧವಿಮಾನ ಟಾರ್ಗೆಟ್ ಲಾಕ್ ಮಾಡಿ ಇನ್ನೇನು ಮಿಸೈಲ್ ಹಾರಿಸೋಣ ಅನ್ನುವಷ್ಟರಲ್ಲಿ ಕಾರ್ಮೋಡ ಕವಿದುಬಿಟ್ಟಿತು. ಟಾರ್ಗೆಟ್ ಲಾಕ್ ಆಗಲೇ ಇಲ್ಲ.ಕಾರ್ಮೋಡ ಸರಿಯುವಷ್ಟರಲ್ಲಿ ಅಲ್-ಅವಲಾಕಿ ಬೇರೆ ಗಾಡಿಯನ್ನು ಹತ್ತಿ ವಿರುದ್ಧ ದಿಕ್ಕಿನಲ್ಲಿ ಓಡಿಬಿಟ್ಟ. ಮೇಲೆ ಹಾರುತ್ತಿದ್ದ ಯುದ್ಧವಿಮಾನ ಮೊದಲಿನ ಗಾಡಿಯನ್ನು ಅಟ್ಟಿಸಿಕೊಂಡು ಹೋಗಿ ಟಾರ್ಗೆಟ್ ಲಾಕ್ ಆದ ತಕ್ಷಣ ಅದರ ಮೇಲೆ ಬಾಂಬ್ ಹಾಕಿ ಅದನ್ನು ಉಡೀಸ್ ಮಾಡಿತು. ಅದರಲ್ಲಿದ್ದ ಇತರೆ ಉಗ್ರರು ಮಟಾಷ್ ಆದರು. ಆದರೆ ಅಲ್-ಅವಲಾಕಿ ಬಚಾವಾಗಿದ್ದ. ಅವನಿಗೆ ಅದೃಷ್ಟದ ಬಗ್ಗೆ ಮತ್ತು ವಿಧಿಯಾಟದ ಬಗ್ಗೆ ಹೆಚ್ಚಿನ ನಂಬುಗೆ ಬಂದಿತ್ತು. ಹುಂಬ ಧೈರ್ಯ ಮತ್ತೂ ಜಾಸ್ತಿಯಾಗಿತ್ತು.
ಅಲ್-ಅವಲಾಕಿ ಮತ್ತು ಪ್ರಮುಖ ಉಗ್ರರು ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದ ಕಾರಣ ಶ್ವೇತಭವನದಲ್ಲಿ ಅಧ್ಯಕ್ಷ ಒಬಾಮಾ ಮತ್ತು counter terrorism ಚೀಫ್ ಜಾನ್ ಬ್ರೆನ್ನನ್ ಕಳವಳಗೊಂಡಿದ್ದರು. ಉಸ್ತುವಾರಿ ವಹಿಸಿದ್ದ ಸಿಐಎ ಮತ್ತು ಸೇನಾಪಡೆಗಳ ನಾಯಕತ್ವದ ಮೇಲೆ ಅಸಮಾಧಾನಗೊಂಡಿದ್ದರು. ಯೆಮೆನ್ ದೇಶದಲ್ಲಿ ರಹಸ್ಯ ಕಾರ್ಯಾಚರಣೆಗಳಿಗೆ ಪೂರ್ತಿ ಅನುಮತಿಯನ್ನು ನೀಡಿ ಒಂದು ವರ್ಷದ ಮೇಲಾಗಿಹೋಗಿತ್ತು. ಆದರೂ ಒಂದೇ ಒಂದು ದೊಡ್ಡ ಉಗ್ರನ ಸಂಹಾರ ಆಗಿರಲಿಲ್ಲ. ಒಂದಲ್ಲ ಒಂದು ಕಾರಣದಿಂದ ಕಾರ್ಯಾಚರಣೆಗಳು ವಿಫಲವಾಗಿದ್ದವು. ಕೆಲವೊಂದರಲ್ಲಿ, ತಪ್ಪಿನಿಂದಾಗಿ, ನಾಗರಿಕರು ಬಲಿಯಾಗಿದ್ದು ದೊಡ್ಡ ಮುಜುಗರಕ್ಕೆ ಕಾರಣವಾಗಿತ್ತು. ಅದರಲ್ಲೂ ಜಿಬೌಟಿ ದೇಶ ಪ್ರತಿಯೊಂದು ಡ್ರೋನ್ ಕಾರ್ಯಾಚರಣೆಗೆ ಮುಂಗಡ ಅನುಮತಿ ಪಡೆಯಬೇಕೆಂದು ಹೇಳಿತ್ತು. ಇದೊಂದು ದೊಡ್ಡ ಕಿರಿಕಿರಿ ಸೇನಾಪಡೆಗಳಿಗೆ.
ಈ ಹೊತ್ತಿಗೆ ದಕ್ಷಿಣ ಸೌದಿ ಅರೇಬಿಯಾದಲ್ಲಿ ಸಿಐಎ ರಹಸ್ಯವಾಗಿ ಕಟ್ಟುತ್ತಿದ್ದ ಡ್ರೋನ್ ನೆಲೆ ತಯಾರಾಗಿತ್ತು. ಸಿಐಎ ಸಂಸ್ಥೆಯ ಹೊಸ ಡೈರೆಕ್ಟರ್ ಆಗಿ ಬಂದಿದ್ದ ಡೇವಿಡ್ ಪೆಟ್ರೆಯಸ್ ಪಾಕಿಸ್ತಾನದಲ್ಲಿದ್ದ ರೀಪರ್ ಡ್ರೋನುಗಳನ್ನು ಹೊಸ ನೆಲೆಗೆ ವರ್ಗಾಯಿಸಿದರು. ಡ್ರೋನ್ ಮತ್ತು ಆಕಾಶದಲ್ಲಿರುವ ಉಪಗ್ರಹಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಯಿತು. ಡ್ರೋನ್ ಮತ್ತು ಅವುಗಳನ್ನು ಚಲಾಯಿಸುತ್ತಿದ್ದ ದೂರದಲ್ಲಿನ ತಂತ್ರಜ್ಞರ ನಡುವಿನ ವಿಳಂಬ ಸಾಕಷ್ಟು ಕಡಿಮೆಯಾಯಿತು. Drones were almost ready for real-time operations!
ಹೊಸ ಡ್ರೋನ್ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ಸಿಐಎ ಅದ್ಭುತವೆನ್ನಿಸುವಂತಹ ಸಾಧನೆಯನ್ನು ಮಾಡಿತ್ತು. ಅನ್ವರ್ ಅಲ್-ಅವಲಾಕಿಯ ಅತಿ ಹತ್ತಿರದ ವಲಯದಲ್ಲಿ ಒಬ್ಬ ಗೂಢಚಾರನನ್ನು ಬೆಳೆಸಿತ್ತು. ಡ್ರೋನ್ ಇರಲಿ, ಯುದ್ಧವಿಮಾನವಿರಲಿ, ಅವೆಲ್ಲ ಒಂದು ಕಡೆಯಾದರೆ ವೈರಿಯ ಪಕ್ಕದಲ್ಲೇ ಇದ್ದುಕೊಂಡು ಮಾಹಿತಿ ಕೊಡುವ ಗೂಢಚಾರ ಎಲ್ಲವನ್ನೂ ಮೀರಿದವ. Nothing beats hum-int (human intelligence).
ಅಲ್-ಅವಲಾಕಿಯ ಬೇಟೆಗೆ ವೇದಿಕೆ ಸಜ್ಜಾಗಿತ್ತು. ಅಂದು ಸೆಪ್ಟೆಂಬರ್ ೩೦, ೨೦೧೧. ಸೌದಿ ಅರೇಬಿಯಾದ ದಕ್ಷಿಣ ಮರಭೂಮಿಯ ಡ್ರೋನ್ ನೆಲೆಯಿಂದ ಹಾರಿದ ಡ್ರೋನುಗಳು ಯೆಮೆನ್ ಪ್ರವೇಶಿಸಿದವು. ವಿಶಾಲವಾದ ಮರಭೂಮಿಯಲ್ಲಿ ಉಗ್ರರ ಹಲವಾರು ವಾಹನಗಳು ಗುಂಪಾಗಿ ಕ್ಯಾರವಾನ್ ಮಾದರಿಯಲ್ಲಿ ಹೊರಟಿದ್ದವು. ಡ್ರೋನ್ ಪಡೆ ಅವನ್ನು ಹಿಂಬಾಲಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸುತ್ತಿತ್ತು.
ಬೆಳಗಿನ ತಿಂಡಿಗೆಂದು ಕಾರವಾನ್ ನಿಂತಿತು. ತಮ್ಮ ತಮ್ಮ ವಾಹನಗಳಿಂದ ಹೊರಗಿಳಿದು ಬಂದು ನೋಡಿದರೆ... ತಲೆ ಮೇಲೆ ರುದ್ರವೀಣೆಯ ಝೇಂಕಾರ. Killer drones had arrived! ಎದ್ದೆವೋ ಬಿದ್ದೆವೋ ಸತ್ತೇವೋ ಎಂಬಂತೆ ಮತ್ತೆ ತಮ್ಮ ತಮ್ಮ ವಾಹನಗಳಲ್ಲಿ ತೂರಿಕೊಂಡರು. ಬದುಕಿದರೆ ಸಾವಿರ ಬಾರಿ ಬೆಳಗಿನ ತಿಂಡಿ ಎಂದು ತಿಂಡಿಗೆ ದೊಡ್ಡದೊಂದು ನಮಸ್ಕಾರ ಹಾಕಿದರು. ಆದರೆ ಅಷ್ಟೊತ್ತಿಗೆ ಡ್ರೋನುಗಳು ಟಾರ್ಗೆಟ್ ಲಾಕ್ ಮಾಡಿಯಾಗಿತ್ತು. ಮುಂದೆ ನಡೆದದ್ದು ಮಾರಣಹೋಮ...ಅದೂ ಸಾಂಗೋಪಾಂಗವಾಗಿ. Carefully orchestrated symphony of destruction.
ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಕಿರಣಗಳನ್ನು ಕಾರುಗಳ ಮೇಲೆ ಸೂಸಿದವು. ಅದನ್ನು ಟಾರ್ಗೆಟ್ ಪೇಂಟಿಂಗ್ ಎನ್ನುತ್ತಾರೆ. ಈ ತರಹ ಲೇಸರ್ ಕಿರಣಗಳನ್ನು ಉಪಯೋಗಿಸುವುದರಿಂದ ಮುಂದೆ ಕ್ಷಿಪಣಿ ಹಾರಿಸಿದಾಗ ಗುರಿ ಮುಟ್ಟುವ ಸಾಧ್ಯತೆಗಳು ತುಂಬಾ ಹೆಚ್ಚು. ಈ ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಉಪಯೋಗಿಸಿ ಟಾರ್ಗೆಟ್ ಲಾಕ್ ಮಾಡಿಕೊಟ್ಟರೆ ಬೇರೊಂದು ರೀಪರ್ ಡ್ರೋನ್ ತನ್ನಲ್ಲಿನ ಕ್ಷಿಪಣಿಗಳನ್ನು ಹಾರಿಸಿತು. Direct hit!
ಕಾರವಾನಿನಲ್ಲಿದ್ದ ಎಲ್ಲ ವಾಹನಗಳೂ ಉಡೀಸ್. ಎಲ್ಲ ಪ್ರಯಾಣಿಕರೂ ಮಟಾಷ್. ಅನ್ವರ್ ಅಲ್-ಅವಲಾಕಿ ಕೂಡ ಎಲ್ಲರೊಂದಿಗೆ ಭಸ್ಮವಾಗಿದ್ದ. ಜೊತೆಗೆ 'Inspire' ಎನ್ನುವ ಧಾರ್ಮಿಕ ಪತ್ರಿಕೆಯೊಂದರ ಸಂಪಾದಕ ಸಮೀರ್ ಖಾನ್ ಕೂಡ. ನಂತರ ನೋಡಿದರೆ ಅವನೂ ಅಮೇರಿಕನ್ ಪೌರನಾಗಿದ್ದ. ಹೀಗೆ ಪ್ರಪಥಮ ಬಾರಿಗೆ ಅಮೇರಿಕಾ ತನ್ನದ್ದೇ ದೇಶದ ಇಬ್ಬರು ನಾಗರಿಕರನ್ನು ಉದ್ದೇಶಿತ ಹತ್ಯಾ ಕಾರ್ಯಾಚರಣೆಯೊಂದರಲ್ಲಿ ಕೊಂದಿತ್ತು.
ಅನ್ವರ್ ಅಲ್ - ಅವಲಾಕಿ ಸತ್ತರೇನಾಯಿತು ಅವನಿಗೊಬ್ಬ ಕುಲದೀಪಕನಂತಿದ್ದ ಮಗನಿದ್ದ. ಅವನೇ ಅಬ್ದುಲ್ ರಹಮಾನ್ ಅಲ್ - ಅವಲಾಕಿ. ಅಪ್ಪ ಸತ್ತಾಗ ಅವನಿಗೆ ಹದಿನಾರು ವರ್ಷ. ಅವನೂ ಅಮೇರಿಕನ್ ಪೌರನೇ. ಅಪ್ಪ ಅವಲಾಕಿ ವಿದ್ಯಾಭ್ಯಾಸ ಮುಗಿದ ಮೇಲೆ ನೌಕರಿ ಮಾಡದಿದ್ದರೂ ಅದೆಲ್ಲೋ ಚೋಕರಿ (ಹುಡುಗಿ) ಸಂಪಾದಿಸಿ ಕುಲದೀಪಕನೊಬ್ಬನಿಗೆ ಜನ್ಮ ಕೊಟ್ಟಿದ್ದ. ತನ್ನ ಜನ್ಮ ಸಾರ್ಥಕ ಮಾಡಿಕೊಂಡಿದ್ದ.
ಅಪ್ಪ ಅವಲಾಕಿ ಅಮೇರಿಕಾ, ಇಂಗ್ಲೆಂಡ್ ಎಲ್ಲ ಸುತ್ತಾಡಿ ವಾಪಸ್ ಯೆಮನ್ ದೇಶಕ್ಕೇ ಬಂದಿದ್ದ. ಮಗ ಕೂಡ ಬಂದಿದ್ದ. ಅವನಿಗೆ ಯೆಮೆನ್ ಬಿಟ್ಟರೆ ಬೇರೆ ಯಾವ ದೇಶವೂ ಗೊತ್ತಿಲ್ಲ.
ಮಗ ಅಬ್ದುಲ್ ರಹಮಾನನಿಗೆ ಅಪ್ಪನ ಖತರ್ನಾಕ್ ಕಾರ್ನಾಮೆಗಳ ಬಗ್ಗೆ ಅದೆಷ್ಟು ಗೊತ್ತಿತ್ತೋ ಇಲ್ಲವೋ. ಅವನು ಎಲ್ಲ ಹದಿಹರೆಯದ ಹುಡುಗರ ಹಾಗೆ ಆಟೋಟಗಳು, ಸಂಗೀತ, ಸಾಮಾಜಿಕ ಜಾಲತಾಣಗಳು ಎಂದು ತನ್ನ ಪಾಡಿಗೆ ತಾನಿದ್ದ.
ತಂದೆ ಎದುರಿಗಿದ್ದಾಗ ತಂದೆಯನ್ನು ಅಷ್ಟಾಗಿ ಮಿಸ್ ಮಾಡಿಕೊಂಡಿರಲಿಕ್ಕಿಲ್ಲ. ಆದರೆ ಸೆಪ್ಟೆಂಬರ್ ೨೦೧೧ ಹೊತ್ತಿಗೆ ತಂದೆಯ ನೆನಪು ಜಾಸ್ತಿಯಾಗತೊಡಗಿತು. ತಂದೆಯನ್ನು ಹುಡುಕಲು ಮನೆ ಬಿಟ್ಟು ಹೊರಟ. ಚೀಟಿಯೊಂದನ್ನು ಬರೆದಿಟ್ಟು ಪರಾರಿ.
ತಂದೆ ಯೆಮೆನ್ ದೇಶದ ಶಾಬ್ವಾ ಪ್ರಾಂತದಲ್ಲಿ ಎಲ್ಲೋ ಅಡಗಿದ್ದಾನೆ ಅನ್ನುವ ಮಾಹಿತಿ ಇತ್ತು. ಅಲ್ಲಿಗೇ ಹೋದ. ಆದರೆ ಅಲ್ಲಿ ಆಗಿದ್ದ ಮೊದಲಿನ ಡ್ರೋನ್ / ವಿಮಾನ ದಾಳಿಯಲ್ಲಿ ಪವಾಡದ ರೀತಿಯಲ್ಲಿ ಪಾರಾಗಿದ್ದ ಅನ್ವರ್ ಅಲ್ -ಅವಲಾಕಿ ಅಲ್ಲಿಂದ ಬೇರೆ ಕಡೆ ಹೋಗಿದ್ದ.
ತಂದೆಯನ್ನು ಹುಡುಕಿಕೊಂಡು ಯೆಮೆನ್ ದೇಶದ ತುಂಬಾ ಅಲೆದ. ಎಷ್ಟೋ ದಿವಸಗಳ ನಂತರ ಸುದ್ದಿ ತಿಳಿಯಿತು. ಜಿಹಾದಿ ಪಿತಾಜಿ ಇನ್ನಿಲ್ಲ. ಡ್ರೋನ್ ದಾಳಿಯಲ್ಲಿ ಪಿತಾಜಿ ಫಿನಿಷ್ ಆಗಿದ್ದಾನೆ ಎಂದು. ಮನೆಗೆ ಫೋನ್ ಮಾಡಿ ತಿಳಿಸಿದ. ವಾಪಸ್ ಬರುತ್ತಿದ್ದೇನೆ ಎಂದು ಕೂಡ ಹೇಳಿದ.
ಆದರೆ ಅವನು ಮನೆಗೆ ಮರಳಲಿಲ್ಲ. ಅಂದು ಅಕ್ಟೋಬರ್ ೧೪, ೨೦೧೧. ತಂದೆ ಅವಲಾಕಿ ತೀರಿಹೋಗಿ ಎರಡು ವಾರಗಳಾಗಿತ್ತು. ಮನೆಗೆ ಮರಳುತ್ತಿದ್ದ ಮಗ ಅಬ್ದುಲ್ ರಹಮಾನ್ ಅವಲಾಕಿ ದಾರಿಯಲ್ಲಿ ಹೋಟೆಲೊಂದರ ಹೊರಾಂಗಣದಲ್ಲಿ ಕೂತಿದ್ದ. ಲೋಕಲ್ ಸ್ನೇಹಿತರೊಂದಿಗೆ ತಿಂಡಿ ತೀರ್ಥ ಮಾಡಿಕೊಂಡಿದ್ದ. ದೂರದಲ್ಲಿ ಮತ್ತದೇ ಆವಾಜ್ ಕೇಳಿ ಬಂತು. ಕ್ರಮೇಣ ಜೋರಾಗತೊಡಗಿತು. ಮತ್ತೆ ರುದ್ರವೀಣೆಯ ಝೇಂಕಾರ. ಆಗಸದಲ್ಲಿ ಮತ್ತೆ ಮೂಡಿಬಂದಿದ್ದವು ರಾಕ್ಷಸ ಡ್ರೋನುಗಳು.
ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ಡ್ರೋನುಗಳಿಂದ ಹಾರಿದ್ದ ಕ್ಷಿಪಣಿಗಳು ಅವಲಾಕಿ ಕುಳಿತಿದ್ದ ಹೋಟೆಲನ್ನು ಚಿಂದಿ ಚಿಂದಿ ಮಾಡಿದ್ದವು. ಫುಲ್ ಫ್ಲಾಟ್. ಹತ್ತಾರು ಜನ ಮಟಾಷ್. ಮಗ ಕೂಡ ಅಪ್ಪನಂತೆ ಡ್ರೋನ್ ದಾಳಿಯಲ್ಲಿ ಫಿನಿಷ್!
ಸುದ್ದಿ ತಿಳಿದ ಹತ್ತಾರು ಘಂಟೆಗಳ ನಂತರ ಸ್ನೇಹಿತರಾರೋ ಆತನ ಫೇಸ್ಬುಕ್ ಖಾತೆಯನ್ನು ಮರಣೋತ್ತರ ಖಾತೆಯನ್ನಾಗಿ ಬದಲಾಯಿಸಿದ್ದರು. ಅಲ್ಲಿ ಶ್ರದ್ಧಾಂಜಲಿಗಳು ಹರಿದುಬರುತ್ತಿದ್ದವು.
ಅವನ ದುರ್ದೈವ ನೋಡಿ. ಅಮೇರಿಕಾದವರಿಗೆ ಅವನನ್ನು ಕೊಲ್ಲುವ ಯಾವ ಇರಾದೆಯೂ ಇರಲಿಲ್ಲ. ಅಪ್ಪ ದೊಡ್ಡ ಉಗ್ರನಿದ್ದಾನೆ ಅಂದಾಕ್ಷಣ ಮಗ ಕೂಡ ಉಗ್ರ, ಅವನನ್ನೂ ಕೊಲ್ಲಬೇಕು ಅಂತೇನೂ ಇಲ್ಲವಲ್ಲ. ಮಗ ಅವಲಾಕಿ ಹತ್ಯಾ ಪಟ್ಟಿಯಲ್ಲಿ ಇರಲಿಲ್ಲ. ಅಂದು ನಿಜವಾಗಿ ಮುಹೂರ್ತವಿಟ್ಟಿದ್ದು ಇಬ್ರಾಹಿಂ ಅಲ್ - ಬನ್ನಾ ಎನ್ನುವ, ಈಜಿಪ್ಟ್ ಮೂಲದ, ಅಲ್ - ಖೈದಾ ಉಗ್ರನಿಗಾಗಿ. ಅವನೂ ಅವತ್ತು ಅದೇ ಹೋಟೆಲಿನಲ್ಲಿದ್ದಾನೆ ಎನ್ನುವ ಮಾಹಿತಿ ಬಂದಿತ್ತು. ಆದರೆ ಕಾರ್ಯಾಚರಣೆ ಮುಗಿದ ಎಷ್ಟೋ ದಿನಗಳ ನಂತರ ಗೊತ್ತಾಯಿತು, ಆ ಈಜಿಪ್ಟ್ ಮೂಲದ ಉಗ್ರ ಅಂದು ಅಲ್ಲಿ ಇರಲೇ ಇಲ್ಲ ಎಂದು. ಮಾಹಿತಿ ತಪ್ಪಾಗಿತ್ತು. ಅದೇನೋ ಅಂತಾರಲ್ಲ...wrong place and wrong time...ಆ ಮಾದರಿಯಲ್ಲಿ ಯಾವುದಕ್ಕೂ ಸಂಬಂಧವಿರದ ಅವಲಾಕಿ ಜೂನಿಯರ್ ಬಲಿಯಾಗಿದ್ದ. ಅಪ್ಪ ಮಾಡಿದ ಪಾಪಗಳು ಮಗನಿಗೆ ಸುತ್ತಿಗೊಂಡಿದ್ದವೇನೋ? ಯಾರಿಗೆ ಗೊತ್ತು.
ಅವನೊಬ್ಬ ಇನ್ನೂ ಇದ್ದನಲ್ಲ. ಡಾ. ನಾಸಿರ್ ಅಲ್ - ಅವಲಾಕಿ. ಯೆಮೆನ್ ದೇಶದ ರಾಜಕಾರಣಿ. ಕುಟುಂಬದ ಪಿತಾಮಹ. ಮಗ ಮತ್ತು ಮೊಮ್ಮಗ ಇಬ್ಬರನ್ನೂ ಡ್ರೋನ್ ದಾಳಿಯಲ್ಲಿ ಕಳೆದುಕೊಂಡ ಅದೃಷ್ಟಹೀನ. ಅವನು ಕಂಪ್ಯೂಟರ್ ಮುಂದೆ ಕುಳಿತು ಒಂದು ಶ್ರದ್ಧಾಂಜಲಿ ವಿಡಿಯೋ ಮಾಡಿ ಯುಟ್ಯೂಬ್ ಮೇಲೆ ಹರಿಬಿಟ್ಟ. ತನ್ನ ಮಗನ ಜೀವನ ಮತ್ತು ಆತನ ಉಪದೇಶಗಳು ವ್ಯರ್ಥವಾಗಿಹೋಗದಂತೆ ನೋಡಿಕೊಳ್ಳುವುದು ಸಮುದಾಯದ ಜವಾಬ್ದಾರಿಯೆಂದು ಹೇಳಿದ. ಅಮೇರಿಕಾವನ್ನು ಒಂದಿಷ್ಟು ಬೈದ. ಒಟ್ಟಿನಲ್ಲಿ ವೈಕುಂಠ ಸಮಾರಾಧನೆ ಮಾಡಿ ಮುಗಿಸಿದ ಮಾದರಿಯಲ್ಲಿ ಕೆಲಸ ಮುಗಿಸಿದ.
ಇವೆಲ್ಲಾ ರಹಸ್ಯ ಕಾರ್ಯಾಚರಣೆಗಳು. ಸರ್ಕಾರ ಬಹಿರಂಗವಾಗಿ ಮಾತಾಡುವುದಿಲ್ಲ. ಆದರೂ ಮಾನವಹಕ್ಕುಗಳ ಹೋರಾಟಗಾರರು ಸಿಐಎ, ಸೈನ್ಯವನ್ನು ಕೋರ್ಟಿಗೆ ಎಳೆದಿದ್ದರು. ರಾಷ್ಟೀಯ ಭದ್ರತೆ ಮತ್ತು ರಹಸ್ಯ ಕಾಪಾಡಿಕೊಳ್ಳುವ ಕಾನೂನುಗಳ ಸಹಾಯದಿಂದ ಏನೂ ದೊಡ್ಡ ಭಾನಗಡಿಯಾಗಿಲ್ಲ.
ಮಾಹಿತಿಯನ್ನು ಕೊಡದೇ ಸತಾಯಿಸುತ್ತಿದ್ದ ಸಿಐಎ ವಕೀಲರನ್ನು ಹಿಡಿದು ತೀಡಿದ ನ್ಯಾಯಾಧೀಶರು ಹೇಳಿದರಂತೆ, 'ರೀ ಸ್ವಾಮಿ, ಸಿಐಎ ಏನೂ ಮಾಡಿಲ್ಲ. ಡ್ರೋನ್ ಹಾರಿಸಿಲ್ಲ. ಉಗ್ರರನ್ನು ಕೊಂದಿಲ್ಲ ಎಂದು ಹೇಳುತ್ತೀರಿ. ಇದೊಳ್ಳೆ ರಾಜ ಮೈಮೇಲೆ ಬಟ್ಟೆಯಿದ್ದಾಗಲೂ ಬಟ್ಟೆಯಿಲ್ಲ ಅನ್ನುವಂತೆ ಇದೆಯೆಲ್ಲ!' ಎಂದು ಹತಾಶೆಯಲ್ಲಿ ತಮ್ಮ ಸುತ್ತಿಗೆ ಕುಟ್ಟಿ ಎದ್ದು ಹೋದರಂತೆ. ಅವರಾದರೂ ಎಷ್ಟಂತ ತಲೆ ಚಚ್ಚಿಕೊಂಡಾರು. ಮೊಂಡ ಸಿಐಎ ಹಾಗೆಲ್ಲ ತನ್ನ ಗುಟ್ಟುಗಳನ್ನು ಅಧಿಕೃತವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಅನಧಿಕೃತವಾಗಿ ಮಾತ್ರ ತನಗೆ ಬೇಕಾದ ವರದಿಗಾರರಿಗೆ ಬೇಕಾದಷ್ಟೇ ಮಾಹಿತಿಯನ್ನು ಕೊಡುತ್ತದೆ. ಅವರು ಅದನ್ನು ಬರೆದು, ಅದು ಜಗತ್ತಿನಲ್ಲಿ ಎಲ್ಲ ಕಡೆ ಕಡೆಗೆ ಹರಡಿ, ಉಗ್ರರಲ್ಲಿ ಒಂದು ತರಹದ ಹೆದರಿಕೆಯನ್ನು ಹುಟ್ಟಿಸಿರುತ್ತದೆ. ಹೆದರಿದ ಉಗ್ರ ಎಷ್ಟೋ ಉತ್ತಮ. ಸದಾ ತನ್ನ ಬೆನ್ನ ಹಿಂದೆ ಅಪಾಯಗಳನ್ನು ಹುಡುಕುತ್ತಾ ಇರುತ್ತಾನಾದ್ದರಿಂದ ಅವನಿಗೆ ಪೂರ್ತಿ ವೇಳೆ ಸ್ಕೀಮ್ ಹಾಕಲಾಗುವುದಿಲ್ಲ.
ಜನರಲ್ ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗುವವರೆಗೂ ಡ್ರೋನ್ ಕಾರ್ಯಾಚರಣೆಗಳಿಗೆ ಒಂದು ಶಿಸ್ತು ಬಂದಿರಲಿಲ್ಲ. ಸೇನೆ ಮತ್ತು ಸಿಐಎ ನಲ್ಲಿ ಇದ್ದ tech savvy ಜನರು ಒಳ್ಳೆ ವಿಡಿಯೋ ಗೇಮ್ ಆಡಿದಂತೆ ಡ್ರೋನ್ ಹಾರಿಸಿಕೊಂಡಿದ್ದರು. ಡ್ರೋನ್ ತಂತ್ರಜ್ಞಾನ ಕೂಡ ಪೂರ್ತಿಯಾಗಿ ಪ್ರಬುದ್ಧವಾಗಿರಲಿಲ್ಲ. latency (ವಿಳಂಬ) ಮುಂತಾದ ಅಡೆತಡೆಗಳು ಇದ್ದವು. ಹತ್ಯಾದರ (kill rate) ತೃಪ್ತಿದಾಯಕವಾಗಿರಲಿಲ್ಲ. ದೂರ ಕುಳಿತು, ಲಕ್ಷಾಂತರ ಡಾಲರ್ ಬೆಲೆಬಾಳುವ ಡ್ರೋನ್ ಕ್ಷಿಪಣಿಗಳನ್ನು ಬೇಕಾಬಿಟ್ಟಿ ಹಾರಿಸಲು ಅವು ದೀಪಾವಳಿ ಪಟಾಕಿಗಳಲ್ಲ ನೋಡಿ.
ಸೇನೆಯ ಶಿಸ್ತನ್ನು ಸಿಐಎ ಗೆ ತರಲು ಪೆಟ್ರೆಯಸ್ ಶ್ರಮಪ್ರಟ್ಟರು. ತಕ್ಕ ಮಟ್ಟಿಗೆ ಯಶಸ್ವಿ ಕೂಡ ಆದರು. ಆದರೆ ಸಿಐಎ ಮುಖ್ಯಸ್ಥರಾಗಿ ಒಂದು ವರ್ಷ ಚಿಲ್ಲರೆ ದಿನ ಇದ್ದರು ಅಷ್ಟೇ. ತಾವೇ ಮಾಡಿಕೊಂಡ ಲಫಡಾ ಅವರಿಗೆ ಮುಳುವಾಯಿತು. ಒಬಾಮಾ ಸರ್ಕಾರಕ್ಕೆ ಹೆಚ್ಚಿನ ಮುಜುಗರ ತರುವ ಮೊದಲೇ ರಾಜೀನಾಮೆ ಕೊಟ್ಟು ಮನೆಗೆ ಹೋದರು. ಅಥವಾ ರಾಜೀನಾಮೆ ಕೇಳಿ ಪಡೆದುಕೊಂಡು ಮನೆಗೆ ಕಳಿಸಲಾಯಿತು.
ತಮ್ಮ ಆತ್ಮಕಥೆಯನ್ನು ಬರೆಯಬೇಕೆಂಬ ಹುಕಿ ಅವರಿಗೂ ಇತ್ತು. ಆದರೆ ವೇಳೆ ಕಮ್ಮಿ. ಅದಕ್ಕಾಗಿ ಪೌಲಾ ಬ್ರಾಡವೆಲ್ ಎಂಬ ಲೇಖಕಿಯನ್ನು ನೇಮಕಮಾಡಿಕೊಂಡರು. ಆಕೆ ಇವರ ಕಚೇರಿಯಲ್ಲೇ ಕೂತು ಇವರ ಆತ್ಮಕಥೆ ಬರೆಯತೊಡಗಿದಳು. ಆತ್ಮಕಥೆ ಹೇಳುತ್ತಾ ಹೇಳುತ್ತಾ ಬರೆಯುತ್ತಾ ಬರೆಯುತ್ತಾ ಇಬ್ಬರ ಆತ್ಮಗಳ ಸಮ್ಮಿಲನ ಆಗಿಬಿಟ್ಟಿತು ಎಂದು ಕಾಣುತ್ತದೆ. ಅಲ್ಲೊಂದು 'ಪರಮೇಶಿ ಪ್ರೇಮಪ್ರಸಂಗ' ಶುರುವಾಗಿಬಿಟ್ಟಿತು. ಬೇಹುಗಾರಿಕೆಯಂತಹ ಅತಿಸೂಕ್ಷ್ಮ ಹುದ್ದೆಗಳಲ್ಲಿರುವ ವ್ಯಕ್ತಿಗಳಿಗೆ ಅಂತಹ ಲಫಡಾಗಳು ಸಂಪೂರ್ಣವಾಗಿ ವರ್ಜ್ಯ. ಮಧುಬಲೆ (honey trap) ಮೂಲಕವೇ ತಾನೇ ದೊಡ್ಡ ದೊಡ್ಡ ಮನುಷ್ಯರನ್ನು ಹಳ್ಳಕ್ಕೆ ಕೆಡವಿ, ಬ್ಲಾಕ್ಮೇಲ್ ಮಾಡಿ, ಮಾಹಿತಿ ಗುಂಜುವುದು? ಇಲ್ಲಿ ಆ ಅಪಾಯ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಸಾರವೊಂದಿಗ ಸಿಐಎ ಮುಖ್ಯಸ್ಥ ತನ್ನ ಆತ್ಮಕಥೆ ಬರೆಯಲು ಬಂದ ಲೇಖಕಿಯ ಆತ್ಮದಲ್ಲಿ ಲೀನನಾಗಿ ಪಡ್ಡೆ ಹುಡುಗನಂತೆ ಆಡುತ್ತಾನೆ ಅನ್ನುವುದು ಸಹಿಸಲು ಅಸಾಧ್ಯವಾದ ವಿಷಯವಾಗಿತ್ತು.
ಈ ಆತ್ಮಕಥೆಯ ಲೇಖಕಿಯಾದರೂ ಸುಮ್ಮನೆ ಜಮ್ಮಚಕ್ಕ ಮಾಡಿ ಎದ್ದು ಹೋದಳೇ? ಇಲ್ಲ. ಸಿಐಎ ಮುಖ್ಯಸ್ಥನಂತಹ ದೊಡ್ಡ ಶಕ್ತಿಶಾಲಿ ಮನುಷ್ಯನ ಸಾಂಗತ್ಯ ಸಿಕ್ಕಿದ್ದೇ ಚಾನ್ಸ್ ಎಂದು ಹೇಳಿ ಸ್ವಾಮಿಕಾರ್ಯದೊಂದಿಗೆ ಸ್ವಕಾರ್ಯವನ್ನೂ ಮಾಡಿಕೊಳ್ಳತೊಡಗಿದಳು. ಪೆಟ್ರೆಯಸ್ ಸಾಹೇಬರ ಹೆಸರನ್ನು ಹೇಳಿಕೊಂಡು ಧಮಿಕಿ ಹಾಕುವ ಮಟ್ಟಕ್ಕೆ ಬಂದಳು. ಆವಾಗ ಇದೆಲ್ಲದರ ಮೇಲೆ ಬರೋಬ್ಬರಿ ನಜರ್ ಮಡಗಿದ್ದ FBI ಎಚ್ಚರಿಕೆಯ ಗಂಟೆ ಬಾರಿಸಿತು. ಒಬಾಮಾ ಸಾಹೇಬರು ಭ್ರಮನಿರಸನಗೊಂಡಿದ್ದರು. ಪೆಟ್ರೆಯಸ್ ಅವರ ಬಾಸ್ ಆಗಿದ್ದ ಅಂದಿನ ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ (Director Of National Intelligence) ಜಿಮ್ ಕ್ಲಾಪರ್ ಅವರನ್ನು ಕರೆದು - 'ಅವರ ರಾಜೀನಾಮೆ ಪಡೆದುಕೊಳ್ಳಿ. ಇಲ್ಲವಾದರೆ ನಾನೇ ಅವರನ್ನು ಓಡಿಸಬೇಕಾಗುತ್ತದೆ. ಇದನ್ನು ತ್ವರಿತವಾಗಿ ಮಾಡಿ, ಪ್ಲೀಸ್' ಅಂದು ತಮ್ಮ ತಲೆ ಮೇಲೆ ಕೈಯಾಡಿಸಿಕೊಂಡರು. ಆದರೆ ಒಂದು ತೊಂದರೆಯೂ ಇತ್ತು. ಮುಂದಿನ ಕೆಲವೇ ತಿಂಗಳಲ್ಲಿ ಅಧ್ಯಕ್ಷರ ಚುನಾವಣೆ ಬರಲಿತ್ತು. ಒಬಾಮಾ ಎರಡನೇ ಅವಧಿಗೆ ಸಿದ್ಧರಾಗುತ್ತಿದ್ದರು. ಗೆಲ್ಲುವ ಸಾಧ್ಯತೆಗಳು ಚೆನ್ನಾಗಿದ್ದವು. ಅವು ಹಾಗೇ ಇರಲಿ ಎಂದುಕೊಂಡು ಈ ಲಫಡಾವನ್ನು ಅಲ್ಲಿಯವರೆಗೆ ಹೇಗೋ ಸಂಬಾಳಿಸಿದರು ಎಂದು ಕಾಣುತ್ತದೆ. ನವೆಂಬರ್ ೯ ರಂದು ಒಬಾಮಾ ಮತ್ತೊಮ್ಮೆ ಅಧ್ಯಕ್ಷರಾಗಿ ಚುನಾಯಿತರಾದರು. ಈಕಡೆ ಅಂದೇ ಪೆಟ್ರೆಯಸ್ ಸಾಹೇಬರು ತಮ್ಮ ಕಚೇರಿ ಖಾಲಿ ಮಾಡಿದರು. ಆತ್ಮಕಥೆ ಬರೆಯಲು ಬಂದು ಇವರ ನೌಕರಿಗೆ ಕುತ್ತು ತಂದಾಕೆ ಆಕೆ ಎಲ್ಲಿ ಹೋದಳು? ಆಕೆಯನ್ನು ಪೆಟ್ರೆಯಸ್ ಸಾಹೇಬರೇ ಮೊದಲು ಓಡಿಸಿದ್ದರು. ತಮ್ಮ ಹೆಸರಿನಲ್ಲಿ ಧಮಿಕಿ ಹಾಕುವಷ್ಟು ಮುಂದುವರೆದಿದ್ದಾಳೆ ಎಂದು ತಿಳಿದುಬಂದಾಗಲೇ ಆಕೆಗೆ ಗೇಟ್ ಪಾಸ್ ಕೊಟ್ಟು ಕಳಿಸಿದ್ದರು.
ಹೀಗೆ ಡ್ರೋನ್ ಕಾರ್ಯಾಚರಣೆಯ ಸ್ವರೂಪವನ್ನೇ ಬದಲಾಯಿಸಿದ್ದ ಪೆಟ್ರೆಯಸ್ ತಮ್ಮ ವೃತ್ತಿ ಜೀವನವನ್ನು ಮಾತ್ರ ವಿರೂಪಗೊಳಿಸಿಗೊಂಡು ಮನೆ ಸೇರಿದ್ದರು.
ಏನೇ ಇರಲಿ, ರಾಷ್ಟ್ರದ ಹಿತರಕ್ಷಣೆಗಾಗಿ ತನ್ನದೇ ದೇಶದ ನಾಗರಿಕನೊಬ್ಬನನ್ನು ಕೊಲ್ಲುವುದಿದೆಯೆಲ್ಲ ಅದು ತುಂಬಾ ಕಷ್ಟಕರ ಸಂಗತಿ. ತನ್ನ ವಿರೋಧಿಗಳನ್ನು ಮುಲಾಜಿಲ್ಲದೆ ಕೊಲ್ಲುವ ಇಸ್ರೇಲ್ ಸಹ ತನ್ನ ನಾಗರಿಕರನ್ನು ಕೊಲ್ಲುವಾಗ ಬಹಳ ಯೋಚನೆ ಮಾಡುತ್ತದೆ. ಹಾಗಾಗಿ ತಾನೇ ಮಾರ್ಡೇಚಾಯ್ ವನುನುವನ್ನು ಜಗತ್ತಿನ ತುಂಬೆಲ್ಲಾ ಹುಡುಕಿ, ಇಂಗ್ಲೆಂಡಿನಲ್ಲಿ ಪತ್ತೆ ಹಚ್ಚಿ, honey trap ಮಾಡಿ ಪುಸಲಾಯಿಸಿ ಇಟಲಿ ದೇಶಕ್ಕೆ ಒಯ್ದು, ಅಲ್ಲಿಂದ ಕಿಡ್ನಾಪ್ ಮಾಡಿ, ಇಸ್ರೇಲಿಗೆ ಕರೆತಂದು, ಕೇಸ್ ಹಾಕಿ, ಇಪ್ಪತ್ತು ಚಿಲ್ಲರೆ ವರ್ಷಗಳ ಕಾಲ ಸೆರೆಮನೆಗೆ ತಳ್ಳಿತ್ತು. ಪರಮಾಣು ವಿಜ್ಞಾನದ ರಹಸ್ಯಗಳನ್ನು ಕದ್ದು ಇಸ್ರೇಲಿನಿಂದ ಓಡಿದ್ದ ತನ್ನದೇ ದೇಶದ ನಾಗರಿಕನನ್ನು, ಮನಸ್ಸು ಮಾಡಿದ್ದರೆ, ಇಸ್ರೇಲ್ ಜಗತ್ತಿನ ಯಾವ ದೇಶದಲ್ಲಾದಾರೂ ಕೊಂದು ಬರಬಹುದಿತ್ತು. ಅವನ ಹೆಣ ಕೂಡ ಸಿಗುತ್ತಿರಲಿಲ್ಲ. ಆದರೆ ಇಸ್ರೇಲ್ ಹಾಗೆ ಮಾಡಲಿಲ್ಲ. ತನ್ನದೇ ದೇಶದ ನಾಗರಿಕನನ್ನು ಕೊಂದರೆ ಅದನ್ನು ದೇಶದಲ್ಲಿ ಜನತೆಗೆ ಸಮಜಾಯಿಸಿಕೊಟ್ಟು ವಿವರಿಸುವುದು ಕಷ್ಟ. ಸರಕಾರ ಬದಲಾಗಿಹೋದೀತು. ರಾಜಕಾರಣಿಗಳ ಭವಿಷ್ಯವೇ ಖತಂ ಆಗಿಹೋದೀತು ಎಂದೆಲ್ಲ ವಿಚಾರ ಮಾಡಿ, ಎಲ್ಲೆಲ್ಲೋ ಅಲೆದುಕೊಂಡಿದ್ದ ಕಳ್ಳನನ್ನು ಇಲ್ಲದ ತೊಂದರೆ ತೆಗೆದುಕೊಂಡು ಬಂಧಿಸಿ ವಾಪಸ್ ಕರೆತಂದಿತೇ ವಿನಃ ಎನ್ಕೌಂಟರ್ ಮಾಡಲಿಲ್ಲ.
ಮೊತ್ತಮೊದಲ ಬಾರಿಗೆ ವಿದೇಶದಲ್ಲಿ ಡ್ರೋನ್ ಉಪಯೋಗಿಸಿ ತನ್ನದೇ ದೇಶದ ನಾಗರಿಕನನ್ನು ಕೊಲ್ಲುವ ಸಂದರ್ಭ ಬಂದಾಗ ಇಂತಹದೇ ದ್ವಂದ್ವಗಳನ್ನು ಅಮೇರಿಕಾ ಕೂಡ ಎದುರಿಸಿತ್ತು. ಇದಕ್ಕಾಗಿಯೇ ಖ್ಯಾತ ವಕೀಲರ ಒಂದು ತಂಡ ಹಲವಾರು ತಿಂಗಳುಗಳ ಕಾಲ ಸಂವಿಧಾನವನ್ನು ಅಭ್ಯಾಸ ಮಾಡಿ ಒಂದು ಸಮಗ್ರ ಕಾನೂನು ಅಭಿಪ್ರಾಯವನ್ನು ಒಬಾಮಾ ಸಾಹೇಬರಿಗೆ ಕೊಟ್ಟಿತ್ತು. ಅವರೇ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಕಾನೂನು ಕಾಲೇಜಿನಲ್ಲಿ ಓದಿದ ಪ್ರತಿಭಾವಂತ ವಕೀಲರು. ಅದನ್ನು ಕಿಸೆಯಲ್ಲಿ ಸರಿಯಾಗಿ ಇಟ್ಟುಕೊಂಡೇ ವಿದೇಶದಲ್ಲಿ ಬಲಿಯುತ್ತಿದ್ದ ಸ್ವದೇಶಿ ಉಗ್ರರ ಮೇಲೆ ಡ್ರೋನ್ ದಾಳಿಯ ಅನುಮತಿ ಕೊಟ್ಟಿದ್ದರು.
ಮುಂದೆ ಡ್ರೋನ್ ದಾಳಿ ಎಂಬುದು ಸರ್ವೇಸಾಮಾನ್ಯವಾಗಿಹೋಯಿತು. ನೆವಡಾ ರಾಜ್ಯದ ವಿಶಾಲ ಮರಭೂಮಿಯಲ್ಲಿ ಡ್ರೋನ್ ಕಾರ್ಯಾಚರಣೆಗಳ ಕೇಂದ್ರಸ್ಥಾನವಿದೆಯೆಂದು ಸುದ್ದಿ. ಅಲ್ಲಿ ಕುಳಿತ ಡ್ರೋನಾಚಾರ್ಯರು ವಿಶ್ವಾದ್ಯಂತ ಉಗ್ರರ ಬೇಟೆಯನ್ನು ಇಂದಿಗೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಬಲಿಯಾದ ಇರಾನಿನ ಮಹಾದಂಡನಾಯಕ ಸುಲೇಮಾನಿ ಇದಕ್ಕೆ ಲೇಟೆಸ್ಟ್ ಉದಾಹರಣೆ. ಕಳ್ಳನಂತೆ ಬಾಗ್ದಾದಿಗೆ ಬಂದು ಇಳಿದವನಿಗೆ ಏನು ಬಂದು ಬಡಿಯಿತು ಎಂದು ಅರ್ಥವಾಗುವುದರ ಮುನ್ನವೇ ಭಸ್ಮವಾಗಿದ್ದ. ಸುತ್ತಮುತ್ತಲಿನ ಜನ ತಲೆಯೆತ್ತಿ ನೋಡಿದರೆ...ಮತ್ತೆ ಅದೇ...ಡ್ರೋನುಗಳ ರುದ್ರವೀಣೆಯ ಝೇಂಕಾರ.
ಮುಖ್ಯ ಮಾಹಿತಿ ಮೂಲ: The Way of the Knife: The CIA, a Secret Army, and a War at the Ends of the Earth by Mark Mazzetti
ಪುಸ್ತಕದ ಲೇಖಕರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತರು.