ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ ಬೂಬುಗಳ ಬಗ್ಗೆ ಬರೆದಿದ್ದೆ. ಓದಿದ ಮಿತ್ರ, ಶ್ರೀನಾಥ್ ಬೆಟಗೇರಿ (ಪುರಾತನ ಸಾಹಿತಿ ಆನಂದಕಂದ ಉರ್ಫ್ ಬೆಟಗೇರಿ ಕೃಷ್ಣಶರ್ಮರ ಮೊಮ್ಮಗ) ಹೇಳಿದ, 'ಬರೇ ಬೂಬುಗಳು ಅಷ್ಟೇ ಅಲ್ಲಪ್ಪಾ. ಗೌಳಿ ಓಣಿಯ ಗಂಗಾ ಜಮುನಾಗಳೂ ಬೇಕಾದಷ್ಟು ಮಂದಿ ಮನೆ ಕೆಲಸಕ್ಕೆ ಬರ್ತಿದ್ದವು.'
ಹೌದಲ್ಲ. ಮಾಳಮಡ್ಡಿಯ ರಾಯರ ಮಠದ ಆಕಡೆಯಿರುವ ಗೌಳಿಗರ ಓಣಿಗೆ ಅದರದ್ದೇ ಆದ ಖ್ಯಾತಿ, ವಿಶೇಷತೆ ಇದೆ. ಒಂದು ಕಾಲದಲ್ಲಿ ಎಲ್ಲ ಕಡೆ ಹಾಲು ಸರಬರಾಜು ಮಾಡುತ್ತಿದ್ದವರೇ ಅವರು. ಅದು ಸ್ವಲ್ಪ ಕಮ್ಮಿಯಾದ ಮೇಲೆ ಅವರ ಮನೆ ಹೆಂಗಸರು ಮನೆ ಕೆಲಸ ಇತ್ಯಾದಿಗಳಿಗೆ ಬರಲು ಶುರು ಮಾಡಿದರು ಎಂದು ಕಾಣುತ್ತದೆ.
ಕಲ್ಯಾಣ ನಗರದಲ್ಲಿ ನಮ್ಮ ಪಕ್ಕದ ಮನೆಯಲ್ಲಿ ಇದ್ದವರು ಬಾಸೆಲ್ ಮಿಷನ್ ಗರ್ಲ್ಸ್ ಸ್ಕೂಲಿನ ನಿವೃತ್ತ ಶಿಕ್ಷಕಿ ಉಪಾಧ್ಯೆ ಟೀಚರ್. ಅವರ ತಂದೆ ಡಾ. ಉಪಾಧ್ಯೆ ನಮ್ಮ ತಂದೆಯವರ ಮೂಲ ವೈದ್ಯರು. ಅವರೆಲ್ಲ ಕಾಲವಾಗಿದ್ದರು. ಅವಿವಾಹಿತೆ ಉಪಾಧ್ಯೆ ಟೀಚರ್ (ನಮ್ಮೆಲ್ಲರ ಪಾಲಿಗೆ ಕಮ್ಮಕ್ಕ) ತಮ್ಮ ವೃದ್ಧ ತಾಯಿಯೊಂದಿಗೆ ಇದ್ದರು. ಅವರ ಮನೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾಕೆ ಸುಂದರಾಬಾಯಿ ಎಂಬ ಬಾರಾಕೊಟ್ರಿಯ ಮರಾಠಿ ವಿಧವೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು. ಉಪಾಧ್ಯೆ ಟೀಚರ್ ಸಹ ಮರಾಠಿ ಮೂಲದವರು. ಸುಂದರಾಬಾಯಿ ಕೂಡ ಡೋಂಗ್ರೆನೋ ಪಾಂಗ್ರೇನೋ ಏನೋ. ಒಟ್ಟಿನಲ್ಲಿ ಮರಾಠಿ. ಇಬ್ಬರ ಮಧ್ಯೆ ಮರಾಠಿಯಲ್ಲಿ ಬ್ಲೇಡ್ ಹಾಕಿಕೊಳ್ಳಲು ಬೆಸ್ಟ್ ಆಗಿತ್ತು ಎಂದು ನಮ್ಮ ಜೋಕ್.
ಉಪಾಧ್ಯೆ ಟೀಚರ್ ಆಕೆಯನ್ನು ತಲೆ ಮೇಲೆ ಏರಿಸಿಕೊಂಡರೋ ಅಥವಾ ಆಕೆಯೇ ಹತ್ತಿ ಕುಳಿತಳೋ ಗೊತ್ತಿಲ್ಲ. ಒಟ್ಟಿನಲ್ಲಿ ಸಂಬಂಧ ಕೆಟ್ಟು ಆಕೆ ಕೆಲಸ ಬಿಟ್ಟು ಹೋದಳು. ಈಗ ಉಪಾಧ್ಯೆ ಟೀಚರಿಗೆ ಬೇರೆ ಕೆಲಸದ ಹೆಂಗಸಿನ ಅವಶ್ಯಕತೆ ಬಂತು. ಆವಾಗ ಬಂದಾಕೆಯೇ ಗೌಳಿಗರ ದಡ್ಡಿಯ (ಗೌಳಿ ಓಣಿಯ) ಜಮುನಾ.
ಜಮುನಾಗೆ ಆವಾಗ ಸುಮಾರು ೨೦ - ೨೫ ವರ್ಷವಿರಬಹುದು. ಇನ್ನೂ ಮದುವೆಯಾಗಿರಲಿಲ್ಲ. ತಕ್ಕಮಟ್ಟಿಗೆ ತೆಳ್ಳಗೆ ಬೆಳ್ಳಗೆ ಲಕ್ಷಣವಾಗಿದ್ದಳು. ಮತ್ತೆ ಅವರ ವೇಷ ಭೂಷಣವೂ ಬೇರೆ. ಅವರ ಮಹಿಳೆಯರು ವರ್ಣರಂಜಿತ ಬಣ್ಣಗಳ ಲಂಗ ದಾವಣಿ ಮಾದರಿಯ ದಿರುಸು ಧರಿಸಿ, ಯಾವಾಗಲೂ ಕೃಷ್ಣನೊಂದಿಗೆ ರಾಸಲೀಲೆ ಆಡಲು ಸಿದ್ಧವಿರುವ ಗೋಪಿಕೆಯರಂತೆ ಕಾಣುತ್ತಾರೆ. ಅಂತಹ ಸಂಕೀರ್ಣವಾಗಿರುವ ದಿರುಸು ಧರಿಸಿ ಅದೇಗೆ ಮನೆ ಕೆಲಸ ಮಾಡುತ್ತಾರೆ ಎನ್ನುವ ವಿಚಾರ ಈಗ ಬರುತ್ತದೆ.
ಜಮುನಾ ಸ್ವಲ್ಪ slow on uptake ಮಾದರಿಯ ಹುಡುಗಿ. ಪೆದ್ದಿ. ಮೊದ್ದು. ಮತ್ತೆ ಕನ್ನಡವೂ ಅಷ್ಟಕಷ್ಟೇ. ಮರಾಠಿ ಗೊತ್ತಿಲ್ಲ. ಒಟ್ಟಿನಲ್ಲಿ ಹೇಗೋ ಮಾಡಿ ಉಪಾಧ್ಯೆ ಟೀಚರ್ ಆಕೆಯಿಂದ ಕೆಲಸ ತೆಗೆಯುತ್ತಿದ್ದರು. ಒಬ್ಬರಿಗೊಬ್ಬರು ಹೊಂದಿಕೊಳ್ಳಲಿಕ್ಕೆ ಸುಮಾರು ಸಮಯ ಹಿಡಿಯಿತು.
ಉಪಾಧ್ಯೆ ಟೀಚರ್ ತಂಗಿಯೊಬ್ಬರು ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿದ್ದರು. ವರ್ಷಕ್ಕೊಮ್ಮೆ ಬಂದು ಧಾರವಾಡದಲ್ಲಿ ಒಂದೆರೆಡು ವಾರ ಇದ್ದು ಹೋಗುತ್ತಿದ್ದರು. ಅವರು ಸಂಸಾರ ಸಮೇತ ಬಂದರು ಅಂದರೆ ಉಪಾಧ್ಯೆ ಟೀಚರ್ ಒಬ್ಬರಿಗೇ ಅಲ್ಲ, ನಮಗೂ ಎಲ್ಲ ಸಡಗರವೇ. ಮರೆಯದೇ ಉಡುಗೊರೆ ತರುತ್ತಿದ್ದರಲ್ಲ. ಮತ್ತೆ ಎಲ್ಲರನ್ನೂ ತುಂಬಾ ಹಚ್ಚಿಕೊಂಡು, ಪ್ರೀತಿಸುತ್ತಿದ್ದ ಜನ ಅವರೆಲ್ಲ.
ಸರಿ, ಒಂದು ಸಲ ಅವರು ಎಂದಿನಂತೆ ಧಾರವಾಡಕ್ಕೆ ಬಂದರು. ವೇಳೆ ಕಳೆದರು. ವಾಪಸ್ ಹೋಗುವ ದಿನ ಬಂತು. ಅವರು ಬೆಳಗಾವಿ ತನಕ ರೈಲು, ಬಸ್ಸಿನಲ್ಲಿ ಹೋಗಿ ಅಲ್ಲಿಂದ ವಿಮಾನ ಹಿಡಿಯುತ್ತಿದ್ದರು. ಅಥವಾ ಅಲ್ಲಿದ್ದ ತಮ್ಮ ಸಂಬಂಧಿಕರ ಕಡೆ ತಂಗುತ್ತಿದ್ದರು. ಒಟ್ಟಿನಲ್ಲಿ ಧಾರವಾಡದಿಂದ ಅವರಿಗೆ ಬೆಳಗಾವಿಗೆ ಹೋಗಬೇಕು.
ಮನೆಯಿಂದ ಹೊರಡಲಿಕ್ಕೆ ಆಟೋರಿಕ್ಷಾ ಬೇಕು. ಆಗ ಈಗ ಸಿಗುವಂತೆ ಕಲ್ಯಾಣ ನಗರ ಬಡಾವಣೆಯಲ್ಲಿ ಮಾರಿಗೊಂದು ಆಟೋರಿಕ್ಷಾ ಸಿಗುತ್ತಿದ್ದಿಲ್ಲ. ಜನ ವಸತಿ ತುಂಬಾ ವಿರಳವಾಗಿತ್ತು. ಇದು ೧೯೮೩-೮೪ ಸುಮಾರಿನ ಮಾತು. ದಿನಕ್ಕೆ ೩-೪ ಸಿಟಿ ಬಸ್ ಇದ್ದವು ಅಷ್ಟೇ. ಅವು ತಪ್ಪಿದರೆ ರೈಲು ನಿಲ್ದಾಣಕ್ಕೆ ಹೋಗಿ ಬಸ್ ಹಿಡಿಯಬೇಕು. ಇಲ್ಲವಾದರೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಿ ಬಸ್ ನೋಡಬೇಕು. ಆಟೋರಿಕ್ಷಾ ಬೇಕು ಅಂದರೆ ರೈಲು ನಿಲ್ದಾಣದ ರಿಕ್ಷಾ ಸ್ಟಾಂಡಿನಿಂದಲೇ ತರಬೇಕು. ಸುಮಾರು ಒಂದು ಒಂದೂವರೆ ಕಿಲೋಮೀಟರು ದೂರ.
ರಿಕ್ಷಾ ತರಲು ಯಾರಾದರೂ ಹೋಗಬೇಕು. ಹೋಗಿ, ಭಾಡಿಗೆ ಮಾತಾಡಿ, ಅದರಲ್ಲೇ ಹತ್ತಿ, ಮನೆಗೆ ಕರೆದುಕೊಂಡು ಬರಬೇಕು.
ಕೆಲಸದಾಕೆ ಜಮುನಾಳನ್ನು ಕರೆದು, 'ಇವರು ಬೆಳಗಾವಿಗೆ ಹೊಂಟಾರ. ರೈಲ್ವೆ ಸ್ಟೇಷನ್ ಗೆ ಹೋಗು. ಅಲ್ಲಿ ರಿಕ್ಷಾ ಇರ್ತಾವ. ಒಂದು ತೊಗೊಂಡು ಬಾ. ಎರಡು ರೂಪಾಯಿಗಿಂತ ಜಾಸ್ತಿ ಕೊಡಬ್ಯಾಡ. ಚೌಕಾಸಿ ಮಾಡಿ ಎರಡು ರೂಪಾಯಿಗೆ ಅಂತ ಖಾತ್ರಿ ಮಾಡಿಕೊಂಡೇ ಕರಕೊಂಡು ಬಾ,' ಎಂದು ಹೇಳಿದ್ದಾರೆ. ಇವಳು ಅರ್ಥವಾಯಿತು ಎಂಬಂತೆ ತಲೆಯಾಡಿಸಿದ್ದಾಳೆ. ಕುಣಿಕುಣಿಯುತ್ತಾ ಸ್ಟೇಷನ್ ಕಡೆ ಹೋಗಿದ್ದಾಳೆ. ಅವಳು ನಡೆದರೂ ಕುಣಿದಂತೆ ಕಾಣುತ್ತಿತ್ತು. ಅದು ಅವಳ ಹಾರಾಡುತ್ತಿದ್ದ ದಿರುಸಿನ ಪರಿಣಾಮವೋ ಗೊತ್ತಿಲ್ಲ.
ರೈಲ್ವೆ ಸ್ಟೇಷನ್ನಿಗೆ ಹೋಗಿ, ರಿಕ್ಷಾ ತರಲು ಹೆಚ್ಚೆಂದರೆ ಅರ್ಧ ಘಂಟೆ ಸಾಕು. ಅಷ್ಟೂ ಬೇಡ. ಅರ್ಧ ಘಂಟೆ ಆಯಿತು. ಮುಕ್ಕಾಲು ಘಂಟೆ ಆಯಿತು. ರಿಕ್ಷಾ ತರಲು ಹೋದ ಜಮುನಾಳ ಪತ್ತೆಯಿಲ್ಲ. ಇವರಿಗೆ ತಡವಾಗತೊಡಗಿತು. ರಿಕ್ಷಾ ಬರಬೇಕು, ನಂತರ ಇವರ ಸಿಕ್ಕಾಪಟ್ಟೆ ಸಾಮಾನು ಅದರಲ್ಲಿ ಲೋಡ್ ಆಗಬೇಕು, ಓಣಿ ಮಂದಿಗೆಲ್ಲ ಹೋಗಿ ಬರುತ್ತೇನೆ ಎಂದು ಮತ್ತೆ ಮತ್ತೆ ಹೇಳುವ ಆಚರಣೆ ಮುಗಿಯಬೇಕು. ವೇಳೆಗೆ ಸರಿಯಾಗಿ ಹೊರಟಾಗಲೇ ಲೇಟ್ ಮಾಡಿಕೊಳ್ಳುತ್ತಿದ್ದರು. ಈಗ ಅಷ್ಟೇ ಮತ್ತೆ. ಇನ್ನೂ ಈ ಎಬಡ ಜಮುನಾಳನ್ನು ನಂಬಿಕೊಂಡರೆ ಅಷ್ಟೇ ಮತ್ತೆ ಎಂದು ವಿಚಾರ ಮಾಡಿ, ಬೇರೆ ಯಾರಿಗೋ ಹೋಗಿ ರಿಕ್ಷಾ ತರಲು ಹೇಳಿದರು.
ಅವರಿಗೆ ದಾರಿಯಲ್ಲಿಯೇ ಒಂದು ಖಾಲಿ ಆಟೋ ಸಿಕ್ಕಿತು ಎಂದು ಕಾಣುತ್ತದೆ. ಕರೆದುಕೊಂಡು ಬಂದರು. ಮನೆ ಮುಂದೆ ಬಂದು ನಿಂತ ಆಟೋ ಡ್ರೈವರ್, ತುಂಬಾ ಕ್ಯಾಶುಯಲ್ ಎಂಬಂತೆ ಹೇಳಿದ, 'ಅಲ್ಲಿ ಸ್ಟೇಷನ್ನಿನ್ಯಾಗ ಯಾವುದೋ ಒಬ್ಬಾಕಿ ಹುಚ್ಚಿ ಅಂತಾಕಿ ಬಂದಾಳ ರೀ. ಬೆಳಗಾವಿಗೆ ಹೋಗೋದೈತಿ. ಎರಡು ರೂಪಾಯಿ ಕೊಡ್ತೇನಿ. ಬರ್ತಿಯೇನು ಅಂತ ಕೇಳ್ಕೊತ್ತ ನಿಂತಾಳ್ರೀ. ಎಲ್ಲಾರೂ ನಕ್ಕೋತ್ತ ಅಕಿ ಜೋಡಿ ಮಷ್ಕಿರಿ ಮಾಡಿಕೋತ್ತ ಇದ್ದಾರ ನೋಡ್ರಿ. ಎರಡು ರೂಪಾಯಿಗೆ ಯಾರರ ಬೆಳಗಾವಿಗೆ ಬರ್ತಾರೇನ್ರೀ??' ಎಂದುಬಿಟ್ಟಿದ್ದಾನೆ.
ಅಲ್ಲಿಗೆ ವಿಷಯ ಏನೂಂತ ಎಂದು ತಿಳಿದು ಕೆಲವರು ನಕ್ಕಿದ್ದಾರೆ. ಜಮುನಾಳ ಕಾರಣಕ್ಕೆ ತಲೆ ಹನ್ನೆರಡಾಣೆ ಆದವರು ತಲೆ ತಲೆ ಚಚ್ಚಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಜಮುನಾ ಪೆದ್ದಿ. ಭಾಷೆ ಬೇರೆ ಸರಿಯಾಗಿ ಅರ್ಥವಾಗುತ್ತಿದ್ದಿಲ್ಲ. ಮತ್ತೆ ಗಡಿಬಿಡಿಯಲ್ಲಿ ಇದ್ದ ಮನೆ ಜನ ಬರೋಬ್ಬರಿ ಹೇಳಿ, ಖಾತ್ರಿ ಮಾಡಿಕೊಂಡರೋ ಅಥವಾ ಅದು ಸಾಕಾಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯ ತಲೆಯಲ್ಲಿ ಉಳಿದಿದ್ದು…ಬೆಳಗಾವಿಗೆ ಹೋಗಬೇಕು. ರಿಕ್ಷಾ ಬೇಕು. ಎರಡು ರೂಪಾಯಿಗಿಂತ ಹೆಚ್ಚಿಗೆ ಭಾಡಿಗೆ ಕೊಡುವಂತಿಲ್ಲ. ಇಷ್ಟು ವಿಷಯವನ್ನು ಗಟ್ಟಿ ಮಾಡಿಕೊಂಡಾಕೆ ಅದರ ಪ್ರಕಾರವೇ ವಾದ ಮಾಡುತ್ತಾ ಅಲ್ಲೇ ನಿಂತು ಬಿಟ್ಟಿದ್ದಾಳೆ. ಎಲ್ಲರಿಗೂ ಪುಕ್ಕಟೆ ಮನರಂಜನೆ. ಮನೆಯವರಿಗೆ ಫುಲ್ ಟೆನ್ಶನ್.
ಬಂದು ನಿಂತಿದ್ದ ಆಟೋ ರಿಕ್ಷಾದಲ್ಲಿ ರೈಲ್ವೆ ನಿಲ್ದಾಣ ತಲುಪಿ ನೋಡಿದರೆ… ಗ್ರೇಟ್ ಜಮುನಾಳ ಪ್ರಹಸನ ಮುಂದುವರೆದಿತ್ತು. ಎಲ್ಲರೂ ಬಿದ್ದು ಬಿದ್ದು ನಗುತ್ತಾ, ಆಕೆಯನ್ನೂ ಮತ್ತೂ ರೇಗಿಸುತ್ತಾ, ಮಜಾ ತೆಗೆದುಕೊಳ್ಳುತ್ತಿದ್ದರು. ಅವರು ಏನೇ ಹೇಳಿದರೂ ಈಕೆಯದು ಒಂದೇ ವಾರಾತ…ಆಟೋ ಬೇಕು. ಬೆಳಗಾವಿಗೆ. ಎರಡೇ ರೂಪಾಯಿ.
ರೈಲು ಹಿಡಿಯಬೇಕಾದವರು ಒಳಗೆ ಹೋದರು. ಉಳಿದವರು ಜಮುನಾಳನ್ನು ಸಮಾಧಾನಿಸಿ, ಇವತ್ತಿನ ಕೆಲಸ ಸಾಕು, ಮನೆಗೆ ಹೋಗು ಎಂದು ಮನೆಗೆ ಕಳಿಸಿರಬೇಕು. ಒಟ್ಟಿನಲ್ಲಿ ಎಲ್ಲ ಸುಖಾಂತ್ಯವಾದ ಮೇಲೆ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.
ಇದಾದ ನಂತರ ಆಕೆ ಎರಡು ರೂಪಾಯಿ ಗೌಳಿ ಜಮುನಾ ಅಂತಲೇ ಖ್ಯಾತಳಾದಳು. ನಾನು ಬೆಳಿಗ್ಗೆ ಹತ್ತು ಹತ್ತೂವರೆ ಸಮಯಕ್ಕೆ ಸೈಕಲ್ ಮೇಲೆ ಶಾಲೆಗೆ ಹೋಗುವಾಗ ಉಪಾಧ್ಯೆ ಟೀಚರ್ ಮನೆಗೆ ಕೆಲಸಕ್ಕೆ ಬರುತ್ತಿದ್ದ ಜಮುನಾ ಕಾಣುತ್ತಿದ್ದಳು. ರೇಗಿಸಲು ವಿಷಯ ಇಲ್ಲದಾಗಲೂ ವಿನಾಕಾರಣ ಬಡಪಾಯಿಗಳನ್ನು ರೇಗಿಸುವ ಸ್ವಭಾವ ನಮ್ಮದು. ಇನ್ನು ಇಂತಹ ಲೈಟ್ ಮೆಂಟಲ್ ಗಿರಾಕಿ ಸಿಕ್ಕರೇ? ಅಷ್ಟೇ ಮತ್ತೆ.
'ಏನ್ ಜಮುನಾ, ಎರಡು ರೂಪಾಯಿಗೆ ಬೆಳಗಾವಿಗೆ ಹೋಗಲಿಕ್ಕೆ ಆಟೋ ರಿಕ್ಷಾ ಸಿಕ್ಕಿತೇನು?' ಎಂದು ಕಿಚಾಯಿಸುತ್ತಿದ್ದೆ. ಗಹಗಹಿಸಿ ಅಟ್ಟಹಾಸ ಬೇರೆ. ಜೊತೆಗೆ ಸ್ನೇಹಿತರಿದ್ದರೆ ಅವರೂ ನಗುತ್ತಿದ್ದರು. ಅವರಿಗೂ ಎಲ್ಲ ಇವಳ ಖತರ್ನಾಕ್ ಕಾರ್ನಾಮೆ ಬಗ್ಗೆ ಹೇಳಿದ್ದೆ ನೋಡಿ.
ನಾವು ಕಿಚಾಯಿಸಿದರೆ ಪಾಪದ ಜಮುನಾ ಉರಿದುಕೊಳ್ಳುತ್ತಿದ್ದಳು. ಅವಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. 'ಏ, ನನ್ನ ಜೋಡಿ ಮಷ್ಕಿರಿ ಮಾಡಬ್ಯಾಡ. ನೋಡ ಮತ್ತ. ನಿಮ್ಮ ಅವ್ವಾಗ ಹೇಳ್ತೇನು,' ಎಂದು ಹೇಳುತ್ತಾ, ತೋರ್ಬೆರಳು ತೋರಿಸುತ್ತಾ ಎಚ್ಚರಿಕೆ ಕೊಡುತ್ತಿದ್ದಳು. ನಮಗೆ ಮತ್ತಷ್ಟು ನಗು. ಹೇಳಿ ಕೇಳಿ ಮಸ್ತಿಯ ದಿನಗಳು ಅವು. ಮೈಯ್ಯಾಗಿನ ತಿಮಿರು. ಮನಸ್ಸಿನ್ಯಾಗಿನ ಮಸ್ತಿ. ಜೊತೆಗೆ ಸ್ನೇಹಿತರಿದ್ದರೆ ಕೇಳಬೇಕೇ?
ಅಷ್ಟು ಕಿಚಾಯಿಸಿದ್ದರೂ ಆಕೆ ಮನೆವರೆಗೆ ಬಂದು ಕಂಪ್ಲೇಂಟ್ ಮಾಡಿದ್ದು ನೆನಪಿಲ್ಲ. ಮತ್ತೆ ಅಂತಹ ಕಂಪ್ಲೈಂಟ್ ನನ್ನ ಬಗ್ಗೆ ಹಲವಾರು ಜನ ಮಾಡಿರಬಹುದು. ಒಂದೋ ಕಿಚಾಯಿಸುವುದು. ಇಲ್ಲ ಉದ್ಧಟತನದಿಂದ ಮಾತಾಡಿ ನೀನು ಅಂದರೆ ನಿಮ್ಮಪ್ಪ ಅಂದುಬಿಡುವುದು ಅಂದಿನ ದಿನಗಳ ಮಾತಿನ ಶೈಲಿ. ಹಾಗಾಗಿ ಅದರ ಬಗ್ಗೆ ಯಾರೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ.ಇದು ಸುಧಾರಿಸುವ ಕೇಸಲ್ಲ. ಮತ್ತೂ ಕೆಟ್ಟು ಕೆರ ಹಿಡಿಯದಿದ್ದರೆ ಸಾಕು ಎಂದು ನನ್ನ ಪಾಡಿಗೆ ನನ್ನನ್ನು ಬಿಟ್ಟು ಕೈಮುಗಿದಿದ್ದರು.
ಮುಂದೆ ಕೆಲವು ವರ್ಷಗಳ ನಂತರ ಉಪಾಧ್ಯೆ ಟೀಚರ್ ಮತ್ತು ಡೋಂಗ್ರೆ ಸುಂದರಾಬಾಯಿ ಮಧ್ಯೆ ಮಾಂಡವಳಿ ಆಗಿ ವಾಪಸ್ ಕೆಲಸಕ್ಕೆ ಬಂದರು. ಇಬ್ಬರೂ ಸರಿಯಾದ ಪಾಠ ಕಲಿತಿದ್ದರು ಎಂದು ಕಾಣುತ್ತದೆ. ಉಪಾಧ್ಯೆ ಟೀಚರ್ ಸ್ವರ್ಗಕ್ಕೆ ಹೋಗಿಯೇ ಇಪ್ಪತ್ತು ವರ್ಷಗಳ ಮೇಲಾಗಿಹೋಯಿತು. ಸುಂದರಾಬಾಯಿ ಹೋಗಿಯೂ ಹತ್ತು ಹದಿನೈದು ವರ್ಷಗಳ ಮೇಲೆ ಆಯಿತು. ಆದರೂ ಅವರ ವಂಶಸ್ಥರು ಇನ್ನೂ ಅವರ ಮನೆ, ಆಸ್ತಿಯ ದೇಖರೇಖಿ ಮಾಡುತ್ತಾರೆ. ಉಪಾಧ್ಯೆ ಟೀಚರ್ ತಂಗಿ ಕೊಲ್ಲಿಯಲ್ಲಿ ಐವತ್ತು ವರ್ಷ ಕಳೆದ ನಂತರ ವಾಪಸ್ ಭಾರತಕ್ಕೆ ಮರಳಿದ್ದಾರೆ. ತಮ್ಮ ವೇಳೆಯನ್ನು ಧಾರವಾಡ, ನಾಸಿಕ್, ಗ್ವಾಲಿಯರ್, ಇಂಗ್ಲೆಂಡ್, ಅಮೇರಿಕಾ ಮಧ್ಯೆ ಕಳೆಯುತ್ತಾರೆ. ಈಗ ಮಾರಿಗೊಂದು ರಿಕ್ಷಾ ಸಿಕ್ಕರೂ ಅವರ ವಯಸ್ಸಿಗೆ ರಿಕ್ಷಾ ಒಗ್ಗುವುದಿಲ್ಲ. ಈಗೇನಿದ್ದರೂ ಎಸಿ ಟ್ಯಾಕ್ಸಿ. ಜಮುನಾ ಎಲ್ಲಿ ಹೋದಳೋ ಗೊತ್ತಿಲ್ಲ. ಪೆದ್ದಿಯಾದರೂ ತುಂಬಾ ಒಳ್ಳೆಯವಳಾಗಿದ್ದಳು ಆಕೆ.
ವಿ. ಸೂ: ಗೌಳಿಗರ ಗಂಗಾ, ಜಮುನಾ ಎಂದು ಹೇಳಿ ಈ ಘಟನೆ ನೆನಪಾಗಲು ಕಾರಣನಾದ ದೋಸ್ತ ಬೆಟಗೇರಿಗೆ ಧನ್ಯವಾದಗಳು. ಅವರ ಅಜ್ಜ ಆನಂದಕಂದ. ಇವನು ಆನಂದ'ಕೊಂದ' ಎಂದು ನಾವು ರೇಗಿಸುತ್ತೇವೆ. :)
6 comments:
ಜಮುನಾ-ಪ್ರವಾಹದಲ್ಲಿ ಸಿಕ್ಕಿಬಿದ್ದೀರಿ, ಹುಶಾರ್!
ಗಂಗಾ, ಜಮುನಾ, ಸರಸ್ವತಿ ತ್ರಿವೇಣಿ ಸಂಗಮದ ಪ್ರವಾಹ ಇನ್ನೂ ಮಜವಾಗಿದ್ದೀತು....:)
ತಮ್ಮ ಕಾಮೆಂಟಿಗೆ ಧನ್ಯವಾದ ಸರ್!
ಭಾರೀ ಮಸ್ತ್ ಬರದಿ ನೋಡು.
@Anonymous, ಧನ್ಯವಾದಗಳು. ಹೆಸರು ಹಾಕಿ. ಖುಷಿಯಾಗುತ್ತದೆ.
bhala khushi atu nodrepa namma dharwaed kannada dolaga oodi
@ದಯಾ ರಾಜ್, ನಿಮ್ಮ ಕಾಮೆಂಟಿಗೆ ಧನ್ಯವಾದಗಳು. ಧಾರವಾಡ ಕನ್ನಡದಲ್ಲಿ ಬರೆದಿರುವ ಇನ್ನೂ ಅನೇಕ ಲೇಖನಗಳು ಇವೆ. ಆದಾಗ ಓದಿ ಅಭಿಪ್ರಾಯ ತಿಳಿಸಿ. ನಮಸ್ಕಾರ.
Post a Comment