Thursday, April 13, 2023

ಲೈಫು ಇಷ್ಟೇನೇ... ಘಂಟೆ ಬದುಕು

ಒಮ್ಮೊಮ್ಮೆ ಗುಡಿಯ ಘಂಟೆ. ಬಂದವರೆಲ್ಲ ಬಾರಿಸಿ ಹೋಗುತ್ತಾರೆ. ಕೈಗೆ ಎಟುಕದವರು ಜಿಗಿಜಿಗಿದು ಎಗರಿ ಬಾರಿಸಿ ಹೋಗುತ್ತಾರೆ. ಜಿಗಿದೆಗರಿದರೂ ನಿಲುಕದವರು ಬೇರೆಯವರಿಂದ ಎತ್ತಿಸಿಕೊಂಡಾದರೂ ಸರಿ... ಬಾರಿಸಿಯೇ ಹೋಗುತ್ತಾರೆ.  

ಒಮ್ಮೊಮ್ಮೆ ಪುರೋಹಿತರ ಘಂಟೆ. ಅವರೂ ತೂಗುತ್ತ ಬಾರಿಸುತ್ತಾರೆ. ಒಮ್ಮೊಮ್ಮೆ ಬಿಸಿ ಮಂಗಳಾರತಿ ತಾಕಿಸಿ ಬಿಡುತ್ತಾರೆ. ತೂಗಿಸಿಕೊಂಡು ಬಾರಿಸಿಕೊಂಡ ಜೀವಕ್ಕೆ ಬಿಸಿ ಬೇರೆ ತಾಕುತ್ತದೆ. 

ಒಮ್ಮೊಮ್ಮೆ ಗಡಿಯಾರದ ಘಂಟೆ. ತಾಸಿಗೊಮ್ಮೆ ತಾಸಿಗಿಷ್ಟು ಎಂಬಂತೆ ಒಂದರಿಂದ  ಹಿಡಿದು ಹನ್ನೆರೆಡರ ತನಕ  ಬಾರಿಸುತ್ತದೆ. ಮೇಲಿಂದ ಅರ್ಧ ಗಂಟೆಗೊಮ್ಮೆ ತಪ್ಪದ ಸಿಂಗಲ್ ಘಂಟೆ ಬೋನಸ್. 

ಒಮೊಮ್ಮೆ ಶಾಲೆಯ ಘಂಟೆ. ಶುರುವಿನಲ್ಲಿ ಘಂಟೆಗಳು ಬಾರಿಸಿದಾಗ ಬೇಸರ. ವೇಳೆ ಕಳೆಯುತ್ತಾ ಹೋದಂತೆ, ಅವಧಿಗಳು ಮುಗಿಯುತ್ತಾ ಹೋದಂತೆ, ಗಂಟೆಗೊಮ್ಮೆ ಘಂಟೆ ಬಾರಿಸಿದಾಗೊಮ್ಮೆ ಖುಷಿ. ಕೊನೆಯ ಉದ್ದನೆಯ ಢಣಢಣ ಬಾರಿಸಿದಾಗ ಖುಷಿಯ ಉತ್ತುಂಗ. 

2 comments:

sunaath said...

ಅಬ್ಬಬ್ಬಾ! ಒಂದೊಂದು ಘಂಟೆಯದೂ ಒಂದೊಂದು ಕಥೆ!ಇನ್ನು ಚರ್ಚಿನ ಘಂಟೆಯು ತನ್ನ ಕಥೆಯನ್ನು ಹೇಳುವುದಿಲ್ಲ. ಅದು ಘಂಟಾನಾದವನ್ನು ಕೇಳುವವನ ಕಥೆಯನ್ನು ಹೇಳುತ್ತದೆ. ಯಾಕೆಂದರೆ : " Ask not for whom the bell tolls, it tolls for thee!"

Mahesh Hegade said...

ಚರ್ಚಿನ ಘಂಟೆಯ ಬಗ್ಗೆ ಹೇಳಿದ್ದು ಚೆನ್ನಾಗಿದೆ. ಹೊಸ ಗಾದೆ ಮಾತು ತಿಳಿಯಿತು. ಧನ್ಯವಾದ.