ಕೊಡಲಿಯ ಕಾವು (handle) ಕಟ್ಟಿಗೆಯ ಒಂದು ತುಂಡು ಅಷ್ಟೇ. ಆದರೆ ತುಂಬಾ ಮುಖ್ಯವಾದ ವಸ್ತು. ಕೊಡಲಿ ಅದೆಷ್ಟೇ ಹರಿತವಾಗಿದ್ದರೂ ಒಂದು ಸರಿಯಾದ ಕಾವು ಇಲ್ಲದಿದ್ದರೆ ಅದು ನಿಷ್ಪ್ರಯೋಜಕ.
ಅದೇ ಒಳ್ಳೆ ಹಿಡಿತವಿರುವ ಕಾವೊಂದನ್ನು ಕೊಡಲಿಗೆ ಹಾಕಿ ನೋಡಿ. ನೋಡನೋಡುತ್ತಿದ್ದಂತೆ ಇಡೀ ಕಾಡಿಗೆ ಕಾಡೇ ಬೋಳುಗುಡ್ಡ ಆಗಿ ಹೋಗುತ್ತದೆ. ಅದು ಕಾವಿನ ಮಹತ್ವ. ಕಾವೆಂಬ ಕಟ್ಟಿಗೆಯ ತುಂಡು ಇಡೀ ಕುಲ ಎಂದರೆ ಕಾಡಿನ ಸರ್ವನಾಶಕ್ಕೆ ಕಾರಣವಾಗುತ್ತದೆ.
ಕೃತಕ ಬುದ್ಧಿಮತ್ತೆ (artificial intelligence) ವಿಷಯದಲ್ಲಿ ಇದೇ ಆಗಿದೆ. ಬುದ್ಧಿವಂತರೆಲ್ಲ ಕೂಡಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಪಡಿಸಿದರು. ಈಗ ಅದೇ ಕೃತಕ ಬುದ್ಧಿಮತ್ತೆ ಈಗ ಬುದ್ಧಿವಂತರ ಬುದ್ಧಿವಂತಿಕೆಯ ಬುಡಕ್ಕೆ ಬತ್ತಿ ಇಡುತ್ತಿದೆ.
ನೀನೇ ಸಾಕಿದಾ ಗಿಣಿ. ನಿನ್ನಾ ಮುದ್ದಿನಾ ಗಿಣಿ. ಹದ್ದಾಗಿ ಕುಕ್ಕಿತಲ್ಲೋ. ನಿನ್ನ ಹದ್ದಾಗಿ ಕುಕ್ಕಿತಲ್ಲೋ...
ನಾವಾಗೇ ಕೋಲು ಕೊಟ್ಟು ತಾರಾಮಾರಾ ಬಡಿಸಿಕೊಂಡೆವೇ ನಾವು?
ಇದೇ ಕಾರಣಕ್ಕೋ ಏನೋ, AI ಕ್ಷೇತ್ರದಲ್ಲೂ ಕೈಯಾಡಿಸುತ್ತಲೇ ಇರುವ, ವಿಶ್ವದ ಅತಿ ದೊಡ್ಡ ಶ್ರೀಮಂತ ಈಲಾನ್ ಮಸ್ಕ್ ಮತ್ತು ಇತರ ಮಹತ್ವದ ಜನರು, ಸ್ವಲ್ಪ ದಿನ AI ಮೇಲಿನ ಸಂಶೋಧನೆ ಮತ್ತು ಅಭಿವೃದ್ಧಿ ಬಂದ್ ಮಾಡಿ ಎಂದು ಬ್ಯಾಂಡ್ ಬಾರಿಸುತ್ತಿದ್ದಾರೆ. ಅವರೇ ಬ್ಯಾಂಡ್ ಬಾರಿಸುತ್ತಿದ್ದಾರೆ ಎಂದರೆ ಉಳಿದವರ ಬ್ಯಾಂಡ್ ಜಾಸ್ತಿ ಜೋರಾಗಿಯೇ ಬಾರಿಸಿದೆ ಎಂದರ್ಥ.
Chat GPT ಮತ್ತು ಸಂಬಂಧಿಸಿದ ತಂತ್ರಜ್ಞಾನ IT ಮಂದಿಯನ್ನು ಬೀದಿಯಲ್ಲಿ ಚಾಟ್ ಅಂಗಡಿ ಇಡುವ ಪರಿಸ್ಥಿತಿಗೆ ತಂದರೂ ಏನೂ ಆಶ್ಚರ್ಯವಿಲ್ಲ.
ವಿಶ್ವದ ಎಲ್ಲ ಕಡೆ ನರೇಗಾ (MNREGA) ಮಾದರಿಯ ಯೋಜನೆಗಳು ಜಾರಿಗೆ ಬರುತ್ತದೆ. ನರೇಗಾ ಇಲ್ಲದಿದ್ದರೆ ಮರೇಗಾ!
ಭಾರತದ ರಾಹುಲ್ ಗಾಂಧಿ ಮತ್ತು ಅವನ ಆರ್ಥಿಕ ಸಲಹೆಗಾರರಾದ ರಘುರಾಮ್ ರಾಜನ್ ಇತ್ಯಾದಿ ಜನ 'ನ್ಯಾಯ' ನಂತಹ ಯೋಜನೆಗಳ ಮೂಲಕ ತಿಂಗಳಿಗೆ ಇಷ್ಟು ರೊಕ್ಕ ನಿರುದ್ಯೋಗಿಗಳಿಗೆ (ಎಲ್ಲರಿಗೆ) ಅಂದಾಗ ಮೂಗು ಮುರಿದವರೇ ಹೆಚ್ಚು. ಆದರೆ ಆ ವಿಷಯ ವಿಶ್ವದಾದ್ಯಂತ ಚರ್ಚೆಗೆ ಒಳಪಡುತ್ತಿದೆ.
AI ತಂತ್ರಜ್ಞಾನ ಹೆಚ್ಚು ಲಾಭ ತಂದುಕೊಡುತ್ತದೆ ಅಂತಾದರೆ ಆ ಲಾಭದ ಒಂದು ಭಾಗವನ್ನು ಸಮಾಜಕ್ಕೆ ಕೊಡಲೇಬೇಕಾಗಬಹುದು. ಇಲ್ಲವಾದರೆ ಸಾಧ್ಯವಾದವರು ಚಾಟ್ ಅಂಗಡಿ ಇಟ್ಟಾರು. ಆಗದವರು ಅಪರಾಧಕ್ಕೆ ಇಳಿಯುತ್ತಾರೆ. ಹಾಗಾಗಬಾರದು ಅಂದರೆ ಹೊಟ್ಟೆಗೆ, ಬಟ್ಟೆಗೆ ಮತ್ತು ಮೇಲಿನ ಖರ್ಚಿಗೆ ರೊಕ್ಕ ಕೊಡಲೇಬೇಕು. ಹೀಗೆ ಮಾಡಿದರೆ ಜನರು ಆಲಸಿ ಆಗುವುದಿಲ್ಲವೇ ಎಂದರೆ ಸದ್ಯಕ್ಕೆ ಬೇರೆ ಏನೂ ತೋಚುತ್ತಿಲ್ಲ. ಕಡಿಮೆ ಕೌಶಲ್ಯಗಳ ಕೆಲಸಗಳೇ ಮಾಯವಾಗುತ್ತಿವೆಯಲ್ಲ. ಏನು ಮಾಡೋಣ.
ಆದರೆ ಕೌಶಲ್ಯವಿದ್ದರೆ (skills) ಮತ್ತು ವೃತ್ತಿಪರತೆ (professionalism) ಇದ್ದರೆ ಆದಾಯಕ್ಕೆ ಕೊರತೆಯಿಲ್ಲ. ಇನ್ನು ಮುಂದೆ ಡಿಗ್ರಿಗೆ ಜಾಸ್ತಿ ಕಿಮ್ಮತ್ತು ಇರುವುದಿಲ್ಲ. ಆದರೆ ಕೌಶಲ್ಯ, ವೃತ್ತಿಪರತೆ ಮತ್ತು ಸಂಘಟನೆಗೆ ಹೆಚ್ಚಿನ ಮಹತ್ವ. ನೀವು ಅತ್ಯುತ್ತಮ ಕಾರ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಪ್ಲಮ್ಬರ್, ಕೇಶವಿನ್ಯಾಸಕ, ಇತ್ಯಾದಿ ಆಗಿದ್ದು ವೃತ್ತಿಪರತೆಯಿಂದ ಸೇವೆ ನೀಡುತ್ತಿರಿ ಅಂದಾದರೆ ನೀವು ಅಭಿವೃದ್ಧಿ ಪಥದಲ್ಲಿ ಇರುತ್ತೀರಿ. ಕೇವಲ ಡಿಗ್ರಿ ತೆಗೆದುಕೊಂಡು ಕೌಶಲ್ಯವಿರದ ಜನರಿಗಿಂತ ಮುಂದಿರುತ್ತೀರಿ.
ಏನಂತೀರಿ??
2 comments:
ಬುದ್ಧಿವಂತರಿಗೆ ಯಾವಾಗಲೂ ಭಯವೆನ್ನುವುದು ಇಲ್ಲ. ಚಾರ್ಲೀ ಚಾಪ್ಲಿನ್ನನ The Kid ಚಿತ್ರವನ್ನು ನೀವು ನೋಡಿರಬಹುದು. ಆ ಹುಡುಗ ಕಲ್ಲು ಒಗೆದು ಖಿಡಕಿಯ ಕಾಜು ಒಡೆಯುತ್ತಿದ್ದ. ಚಾಪ್ಲಿನ್ ಅಲ್ಲಿ ಹೋಗಿ, ಖಿಡಕಿಯ ದುರುಸ್ತಿ ಮಾಡುತ್ತಿದ್ದ!. ಅದೇ ರೀತಿಯಲ್ಲಿ ಟೆಕ್ಕೀಗಳ ಒಂದು ಗುಂಪು AIಯನ್ನು ಹ್ಯಾಕ್ ಮಾಡಬೇಕು ; ಮತ್ತೊಂದು ಗುಂಪು ಅಲ್ಲಿಗೆ ಹೊಗಿ ಅದನ್ನು ರಿಪೇರಿ ಮಾಡಬೇಕು. ಒಟ್ಟು ಜಮಾ ಹಾಗು ಒಟ್ಟು ಖರ್ಚನ್ನು ಹಂಚಿಕೊಂಡರಾಯಿತು. ಹೇಗಿದೆ ನನ್ನ ಪ್ರಳಯಾಂತಕ ಬುದ್ಧಿ!
ನೀವು ಹೇಳಿದ ಮಾತು ಸರಿ ಇದೆ. ಈ ಕಂಪ್ಯೂಟರ್ ವೈರಸ್ ಮಾಡುವವರು ಒಂದು ಗುಂಪಾದರೆ ಅದಕ್ಕೆ ಆಂಟಿ-ವೈರಸ್ ಮಾಡುವವರು ಇನ್ನೊಂದು ಗುಂಪು. ಹಾಗೆಯೇ ಇಲ್ಲೂ ಆಗಬಹುದು.
ಅತಿ ಮೇಲ್ವರ್ಗದ ೨೦% ತಂತ್ರಜ್ಞರಿಗೆ ಏನೂ ತೊಂದರೆಯಿಲ್ಲ. ಕೆಳಗಿನ ೩೦% ಅಂತೂ ಬಿಡಿ. ಅವರಿಗೆ ಈಗಲೇ ನರೇಗಾ ಮರೇಗಾ ಇದೆ. ಮಧ್ಯದ ಉಳಿದ ಜನರಿಗೇ ಕಷ್ಟ.
ಆದರೂ human race extremely resilient. ಏನಾದರೂ ಜುಗಾಡ್ ಮಾಡುತ್ತಾರೆ ಬಿಡಿ.
ನಿಮ್ಮ ಕಾಮೆಂಟಿಗೆ ಧನ್ಯವಾದ.
Post a Comment