Tuesday, April 04, 2023

ಟಾಂಗಾ ಸಿದ್ಯಾ...

ಏಳನೇ ಕ್ಲಾಸಿನಲ್ಲಿ ಲಂಬೂ ಜೋಶಿ ಟೀಚರ್ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ಕವನವೊಂದರ ಪಾಠ. ಟೀಚರ್ ಪದೇ ಪದೇ stanza stanza ಅನ್ನುತ್ತಿದ್ದರು. ಏಕೆಂದು ಗೊತ್ತಿಲ್ಲ. Stanza ಎಂಬ ಪದವನ್ನು ಅವರೇ ಹೊಸದಾಗಿ ಕಲಿತು ಬಂದಿದ್ದರೋ ಏನೋ

Stanza ಅಂದರೆ ಕವನದ ಚರಣ. ಏನು ಕವನವೋ, ಏನು ಚರಣವೋ… ಹಚ್ಚಿಕೊಟ್ಟ ಧಾಟಿಗೆ ಕರ್ಕಶವಾಗಿ ವಿಕಾರವಾಗಿ ಕವನ ಹಾಡುವುದನ್ನು ಬಿಟ್ಟರೆ ನಮಗೇನೂ ಹೆಚ್ಚು ಬೇಕಾಗಿರಲಿಲ್ಲ. 

ಅವರು stanza stanza ಪದೇ ಪದೇ ಅಂದಿದ್ದು ಈ ಪುಣ್ಯಾತ್ಮ ಸಿದ್ಯಾನಿಗೆ ಟಾಂಗಾ ಎಂದು ಹೇಗೆ ಕೇಳಿಸಿತೋ ಆ ಎಡೆಯೂರು ಸಿದ್ದಲಿಂಗೇಶ್ವರನೇ ಬಲ್ಲ. 

ಟೀಚರ್ ಏನ್ ಪದೇ ಪದೇ ಟಾಂಗಾ ಟಾಂಗಾ ಅನ್ನಾಕತ್ತಾರ್??? ಏನಿವತ್ತ ಟಾಂಗಾ ಹತ್ತಿ ಸಾಲಿಗೆ ಬಂದಾರೇನು???....ಎಂದು ಸಿದ್ಯಾನ ಬಾಂಬ್. 

ಆಗ ಧಾರವಾಡದಲ್ಲಿ ಟಾಂಗಾ ಕುದುರೆ ಗಾಡಿಗಳು ಇನ್ನೂ ಕಾಣುತ್ತಿದ್ದವು. ಹಾಗಾಗಿ stanza ಅಂದಾಗ ಟಾಂಗಾ ನೆನಪಾಗಿದ್ದು ಸಹಜ. 

ಸಿದ್ಯಾನ spontaneous ಮಾತು ತುಂಬಾ ನಗು ತರಿಸಿತ್ತು. ಎಲ್ಲರೂ  ಪೆಕಪೆಕ  ನಕ್ಕರೆ ಎಲ್ಲರ ಪಾಲಿನ ಕಡತ ಹೊಡೆತ ತಿಂದವ ಮಾತ್ರ ಎಂದಿನಂತೆ ವರ್ಗದ ಹುತಾತ್ಮ ಜಂಗಣ್ಣವರ. ಎಲ್ಲರ ಪರವಾಗಿ ಅವನಿಗೇ ಜಾಸ್ತಿ ಕಟಿಯುತ್ತಿದ್ದರು. ಏಕೆಂದರೆ ಶಿಲೆಯಲ್ಲಿ ಕಟಿದ ಮೂರ್ತಿಯಂತಿದ್ದ ಆತನಿಗೆ ಕಟಿಯುವುದು ಮಾಸ್ತರ್ ಟೀಚರ್ ಮಂದಿಗೆ ಉಸರಾಡಿದಷ್ಟೇ ಸಹಜವಾಗಿತ್ತು. 

ಸಿದ್ಯಾ ಈಗ ತಾನೇ ಖುದ್ದು ಇಂಗ್ಲೀಶ್ ಮಾಸ್ತರ್ ಆಗಿದ್ದಾನೆ. Stanza ಅಂದರೆ ಏನು ಅಂತ ಭರ್ಜರಿ ಪಾಠ ಮಾಡುತ್ತಿರಬಹುದು. 

ಸಿದ್ಯಾ, ಟಾಂಗಾ…ಅಲ್ಲಲ್ಲ stanza ಅಂದ್ರ ಏನಲೇ??? ಜೋಶಿ ಟೀಚರ್ ಕೇಳ್ಯಾರ್…


ವಿ.ಸೂ: ಮಿತ್ರ ಸಿದ್ದಲಿಂಗ ಪ್ರಸಾದನ ಜನ್ಮದಿನದಂದು ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಹಂಚಿಕೊಂಡ ಸಂದೇಶ.

2 comments:

sunaath said...

ಅಂದ ಹಂಗ, stanza ಅಂದರ ಏನರೀ, ಮಹೇಶ?

Mahesh Hegade said...

ಹಾ!!ಹಾ!!

ಇಂಗ್ಲಿಷ್ ಮಾಸ್ತರ್ ಸಿದ್ಯಾ ಏನೋ ವಿವರಣೆ ಕೊಟ್ಟ stanza ಎಂದರೆ ಏನು ಎಂದು. ಅದು ಶೇಕ್ಸಪಿಯರನಿಗೆ ಮಾತ್ರ ಅರ್ಥವಾಗುವ ಮಟ್ಟದಲ್ಲಿತ್ತು!!! :)

ಕಾಮೆಂಟಿಗೆ ಧನ್ಯವಾದಗಳು!