ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ವಿಚ್ಛೇದನ ಕೊಡುವುದರ ಬಗ್ಗೆ ದಂಪತಿಯೇ ಒಪ್ಪಿಕೊಂಡಿದ್ದರು. ಬಾಕಿ ಉಳಿದ ವಿಷಯಗಳೆಂದರೆ ಆಸ್ತಿ ಹಂಚಿಕೆ ಮತ್ತು ಮಕ್ಕಳ ಕಸ್ಟಡಿ ವಿಷಯ.
ಮಕ್ಕಳ ಕಸ್ಟಡಿ ಪತಿಗೆ ಕೊಡಲೇಬಾರದು ಮತ್ತು ಎಷ್ಟು ಆಗುತ್ತದೋ ಅಷ್ಟು ಕಾಸು, ಆಸ್ತಿ ಕೆತ್ತಿಬಿಡಬೇಕು ಎಂಬುದು ಪತ್ನಿಯ ದೂ(ದು)ರಾಲೋಚನೆ. ಪತಿಯದು ಅದಕ್ಕೆ ತದ್ವಿರುದ್ಧ. ಮಕ್ಕಳ ಹೆಚ್ಚಿನ ಕಸ್ಟಡಿ ಬರುವಂತೆ ಮಾಡಿಕೊಳ್ಳಬೇಕು ಮತ್ತು ಅತಿ ಕಮ್ಮಿ ರೊಕ್ಕ, ಆಸ್ತಿ ಬೋಳಿಸಿಕೊಳ್ಳಬೇಕು.
ಪತಿ, ಪತ್ನಿ ಇಬ್ಬರ ವಕೀಲರೂ ಸಿಕ್ಕಾಪಟ್ಟೆ ವಾದ, ವಿವಾದ ಮಾಡಿದರು. ಒಂದು ಹಂತದಲ್ಲಿ ಪತಿಯ ವಕೀಲನ ವಾದ ಜೋರಾದಂತೆ ಕಂಡು ಬಂದು, ನ್ಯಾಯಾಧೀಶರು ಆ ಕಡೆ ವಾಲುತ್ತಿರುವಂತೆ ಕಂಡುಬಂತು. ಪತ್ನಿ ಆತಂಕಕ್ಕೆ ಒಳಗಾದಳು. ವಿಷಯವನ್ನು ತನ್ನ ಕೈಗೇ ತೆಗೆದುಕೊಳ್ಳಬೇಕು, ಇಲ್ಲವಾದರೆ ಕೇಸ್ ಕೈಬಿಟ್ಟುಹೋಗುತ್ತದೆ ಎಂದವಳೇ ತಾನೇ ವಾದ ಮಾಡುವುದಾಗಿ ವಿನಂತಿ ಮಾಡಿಕೊಂಡಳು. ನ್ಯಾಯಾಧೀಶರು ಒಪ್ಪಿಗೆ ಕೊಟ್ಟರು. ಪತ್ನಿಯ ವಕೀಲ ವಾಪಸ್ ಬಂದು ಸುಧಾರಿಸಿಕೊಳ್ಳುತ್ತ ಕೂತ. ಪತಿಯ ವಕೀಲ ಈ ಗೃಹಿಣಿ ಏನು ಮಹಾ ವಾದ ಮಾಡಿಯಾಳು ಎಂಬ ಕುತೂಹಲದಿಂದ ನೋಡುತ್ತಾ ನಿಂತ.
ನೋಡಿ, ಮೈ ಲಾರ್ಡ್, ಪಾತ್ರೆ ನನ್ನದು. ಹಾಲು ನನ್ನದು. ಈ ಭಡವ ಒಂದು ಹನಿ ಹೆಪ್ಪು ಹಾಕಿಬಿಟ್ಟ. ಮೊಸರು ಮಾಡಿಬಿಟ್ಟ. ಈಗ ಅಷ್ಟೂ ಮೊಸರು ತನಗೇ ಬೇಕೆನ್ನುತ್ತಾನೆ. ಇದು ನ್ಯಾಯವೇ?
ಪರಿಶುದ್ಧವಾಗಿದ್ದ ಹಾಲಿಗೆ ಹನಿ ಹೆಪ್ಪು ಬಿಟ್ಟು ಮೊಸರು ಮಾಡಿದ ದುರುಳ ಮೊಸರನ್ನು ತೂಗು ಹಾಕಿ ಶ್ರೀಖಂಡ ಮಾಡುವುದಿಲ್ಲ ಎಂಬುದರ ಬಗ್ಗೆ ಏನು ಗ್ಯಾರಂಟಿ? ಅಥವಾ ಕಡುಗೋಲಿನಿಂದ ಮೊಸರನ್ನು ಕಡೆದು ಲಸ್ಸಿ ಮಾಡಿಬಿಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?
ಸ್ವಾಮೀ, ಹಾಗಾಗಿ ಇವನಿಗೆ ಮೊಸರನ್ನು ಕೊಡಲೇಬಾರದು. ಸ್ವಾಮೀ, ಈ ಅಮೂಲ್ಯವಾದ ಮೊಸರನ್ನು ಕಾದಿಟ್ಟುಕೊಳ್ಳಲು ನನ್ನ ಹತ್ರ ಒಂದು ಒಳ್ಳೆಯ ಪಾತ್ರೆಯೂ ಇಲ್ಲ. ಅದಕ್ಕಾಗಿ ಅವನಿಂದ ಒಂದು ಪಾತ್ರೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ.
ಇವಳಅಪ್ರತಿಮ ಬಲಿಷ್ಠ ವಾದದಿಂದ ನ್ಯಾಯಾಧೀಶರು ಪ್ರಭಾವಿತರಾದರು. ದೊಡ್ಡ ವಕೀಲರು ತಾಸುಗಟ್ಟಲೆ ವಾದ ಮಾಡಿದರೂ ಇಷ್ಟುಪರಿಣಾಮಕಾರಿಯಾಗಿ ವಾದ ಮಾಡಿ, ಪಾಯಿಂಟ್ಸ್ ಬರೋಬ್ಬರಿ ಹಾಕಿರಲಿಲ್ಲ.
ಮೊಸರಿನಂತಹ ಮಕ್ಕಳ ಹತ್ತಿರ ಪತಿಯನ್ನು ಬಿಟ್ಟರೆ ಅವಕ್ಕೆ ಚಿತ್ರಹಿಂಸೆ ಕೊಟ್ಟು ಶ್ರೀಖಂಡ, ಲಸ್ಸಿ ಏನೋ ಮಾಡಿಬಿಟ್ಟಾನು. ಹಾಗಾಗಿ ಪತಿಗೆ ಮಕ್ಕಳ ಕಸ್ಟಡಿ ನಿರಾಕರಿಸಲಾಗಿದೆ. ಮೊಸರಿನನ ರಕ್ಷಣೆಗೆ ಪಾತ್ರೆ ಬೇಕು. ಮಕ್ಕಳ ರಕ್ಷಣೆಗೆ ಮನೆ ಬೇಕು. ಹಾಗಾಗಿ ಪತಿಯ ದೊಡ್ಡ ಮನೆಯನ್ನು ಪೂರ್ತಿಯಾಗಿ ಪತ್ನಿಗೆ ಕೊಡಲಾಗಿದೆ, ಎಂದು ತೀರ್ಪು ಬರೆದವರೇ ಸುತ್ತಿಗೆ ಕುಟ್ಟಿ ಎದ್ದುಬಿಟ್ಟರು.
ಮೊದಲೇ ಎಲ್ಲ ಕೊಟ್ಟು ಬೋಳಿಸಿಕೊಂಡು ಬೀದಿಗೆ ಬಂದು ಫುಟ್ಪಾತ್ ಮೇಲೆ ನಿಂತಿದ್ದ ಪತಿಯ ಹತ್ತಿರ ಇದ್ದಿದ್ದೇ ಅದೊಂದು ಮನೆಯಾಗಿತ್ತು. ಈಗ ಅದೂ ಹೋಯಿತು. ಈಗ ಪೂರ್ತಿ ರೋಡಿನ ಮೇಲೆ ಬಂದು ನಿಂತ. ಕರೋಡ್ ಪತಿಯಾಗಿದ್ದವ. ರೋಡ್ ಪತಿಯಾದ.
ಮಾಜಿ ಪ್ರೀತಿಪಾತ್ರೆಗೆ ಮೊಸರು ಕರುಣಿಸಿದ ಕಾರಣಕ್ಕೆ ತಾನೇ ತಿಕ್ಕಿದ್ದ ಪಾತ್ರೆಯೊಂದನ್ನು ಉಳಿದ ಭಾಂಡೆಗಳೊಂದಿಗೆ ಕೊಟ್ಟು ಕೈಮುಗಿದ. ಇನ್ನು ಮಂದಿ ಮನೆ ಭಾಂಡೆ ತಿಕ್ಕಬೇಕೇ ಎಂದು ತಲೆ ಮೇಲೆ ಟವೆಲ್ ಹಾಕಿಕೊಂಡ. ಅಲ್ಲೇ ಇದ್ದರೆ ಟವೆಲ್ ಜೊತೆ ಲಂಗೋಟಿ ಕೂಡ ಕೇಳಿಯಾಳು ಎಂದು ಹೆದರಿ ಕೋರ್ಟ್ ಪಕ್ಕದ ಬಾರಿನ ಕತ್ತಲೆ ಮೂಲೆಯಲ್ಲಿ ಕುಳಿತು ಕಂಟ್ರಿ ಸಂತ್ರಾ ಆರ್ಡರ್ ಮಾಡಿದ.
ವಿ. ಸೂ: ಅಂತರ್ಜಾಲದಲ್ಲಿ ಸಿಕ್ಕಿದ್ದನ್ನು ಮಾರ್ಪಡಿಸಿ ಬರೆದಿದ್ದು.
2 comments:
ನೀತಿಪಾಠ: ಪಾತ್ರೆ ಇದೆ ಎಂದು ಹಾಲಿಗೆ ಹನಿ ಮೊಸರು ಹಾಕಬಾರದು!
ಸರಿಯಾದ ಮಾತು. ಧನ್ಯವಾದ.
Post a Comment