Friday, April 07, 2023

ತುಪ್ಪದ ದೀಪ

1979-80. ಎರಡನೇ ಕ್ಲಾಸು. ಮಾಳಮಡ್ಡಿ ರಾಯರಮಠದ ಸಮೀಪ ನಮ್ಮ ಮನೆ. ಮಹಿಷಿ ಕಾಂಪೌಂಡ್.  ಜೂನಿಯರ್ ಮಿತ್ರ ರವಿ ಶೂರ್ಪಾಲಿಯ ಇಂದಿನ ಮನೆ ಎದುರಲ್ಲಿ. 

ಮಿತ್ರ ಮನೋಜ್ ಕರ್ಜಗಿ ತುಂಬಾ ಆತ್ಮೀಯ. ಅವನ ಮನೆ ಅಲ್ಲಿ ಕೊಂಚ ಮೇಲೆ ಮಾಸೂರ್ ನಾಯಕ್ ಕಾಂಪೌಂಡಿನಲ್ಲಿ ಇತ್ತು. 

ಒಂದು ದಿನ ಸಂಜೆ ನಾನು ಮತ್ತು ನಮ್ಮ ತಾಯಿಯವರು ಮಾಳಮಡ್ಡಿಯ ಸ್ಟೇಷನ್ ರಸ್ತೆ ಗುಂಟ ಎಮ್ಮಿಕೇರಿ ಕಡೆ ಹೊರಟಿದ್ದೆವು. ದಾರಿಯಲ್ಲಿ ಗುಂಜಾಳ್ ಕಿರಾಣಿ ಅಂಗಡಿ ಮುಂದೆ ಸಿಕ್ಕನಲ್ಲ ನಮ್ಮ ಭೂಪ ಮಿತ್ರ ಕರ್ಜಗಿ ಮನ್ಯಾ. ಬಾಯಲ್ಲಿ ಬುರ್ರ್ ಅಂತ ಮೋಟಾರ ಬಿಡುತ್ತ ಕೈಯಲ್ಲಿ ಸ್ಟಿಯರಿಂಗ್ ತಿರುಗಿಸುತ್ತಾ ಸಿಕ್ಕಾಪಟ್ಟೆ ಸ್ಪೀಡಿನಲ್ಲಿ ಓಡಿ ಬರುತ್ತಿದ್ದ. ನಮ್ಮನ್ನು ನೋಡಿ ಗಕ್ಕನೆ ಬ್ರೇಕ್ ಹಾಕಿದ.

'ಏನೋ? ಎಲ್ಲಿ ಹೊಂಟಿ ಇಷ್ಟ ಜೋರ್ ಗಾಡಿ ಬಿಟ್ಟುಕೊಂಡು?' ನಮ್ಮ ಮಾತಾಶ್ರೀ ಉವಾಚ.

'ಅಂಗಡಿಗೆ ಸಾಮಾನು ತರಲಿಕ್ಕೆ ಕಳಿಸ್ಯಾರ್ರೀ…' ಮನ್ಯಾ ಉವಾಚ.

'ಏನು ಸಾಮಾನು??'

'ಡಾಲ್ಡಾ ತೊಗೊಂಡು ಬಾ ಅಂದಾರ್ರೀ.'

'ಡಾಲ್ಡಾನೇ?? ಯಾಕ??'

'ತುಪ್ಪದ ದೀಪಕ್ಕೆ ಹಾಕಲಿಕ್ಕೆ ಬೇಕಂತ್ರೀ.'

'ತುಪ್ಪದ ದೀಪ ಅಂತಿ. ಅದಕ್ಕ ಡಾಲ್ಡಾ ಹಾಕ್ತಿಯೇನು?' ಜಸ್ಟ್ ಲೈಟಾಗಿ ಕಾಲೆಳೆದರು ಅಂತ ಕಾಣುತ್ತದೆ.

ಮನ್ಯಾ ಮುಂದೆ ಒಗೆಯಲಿರುವ ಬಾಂಬಿಗೆ ಅವರೂ ರೆಡಿ ಆಗಿರಲಿಕ್ಕಿಲ್ಲ.

'ಏ, ತುಪ್ಪದ ದೀಪಕ್ಕೆ ತುಪ್ಪ ಸ್ವಾಮಿಗಳು ಬಂದಾಗ ಅಷ್ಟರೀ. ಬಾಕಿ ವೇಳ್ಯಾದಾಗ ಡಾಲ್ಡಾನೇ ರೀ,' ಅಂದುಬಿಟ್ಟ ಮನ್ಯಾ.

ನಮ್ಮ ಮಾತಾಜಿ ತುಂಬಾ ನಕ್ಕರು.

'ಆತು. ಶಾಣ್ಯಾ ಇದ್ದಿ. ತೊಗೊಂಡು ಹೋಗು. ಸಾವಕಾಶ ಹೋಗು,'

'ಹೂನ್ರೀ,' ಅಂದವನೇ ಮನ್ಯಾ ಮತ್ತೆ ತನ್ನ ಮೋಟರನ್ನು ಬರ್ರ್ ಅಂತ ಬಿಟ್ಟುಕೊಂಡು ಹೋದ. ಅಂದು ಗುಂಜಾಳ್ ಎಷ್ಟು ಡಾಲ್ಡಾ ಮಾರಿದ??

ತುಪ್ಪದ ದೀಪ -ಅದು ಹಾಗೆಯೇ. ಹೆಸರಿಗೆ ಮಾತ್ರ.

ದೀಪದ ತುಂಬಾ ಒಳ್ಳೆಣ್ಣೆ (ರೇಷನ್ ನಲ್ಲಿ ಸಿಗುತ್ತಿದ್ದ) ತುಂಬಿ, ಒಂದು ಚಮಚ ತುಪ್ಪ ಹಾಕಿದರೆ ಅದು ತುಪ್ಪದ ದೀಪವೇ. ನಮ್ಮ ಮನೆಯಲ್ಲೂ ಹಾಗೆಯೇ. ಡಾಲ್ಡಾ ಇರಲಿಲ್ಲ. ಬದಲಿಗೆ ರೇಷನ್ ಪಾಮ್ ಆಯಿಲ್. ತುಪ್ಪವೂ ಅಂಗಡಿಯಲ್ಲಿ ಸಿಗುತ್ತಿದ್ದ ನಂದಿನಿ, ಹಂದಿನಿ ಮಾದರಿಯ ಕಲಬೆರಕೆ ತುಪ್ಪ. ಶಿರಸಿಯಿಂದ ಬರುತ್ತಿದ್ದ ಖರೆ ತುಪ್ಪ ನಾವು ಸ್ವಾಹಾ ಮಾಡಲು ಮಾತ್ರ. ಶಿರಸಿಯಿಂದ ಹೊಸ ತುಪ್ಪ ಬಂದಾಗ ಶಾಸ್ತ್ರಕ್ಕೆ ದೇವರಿಗೆ ಒಂದು ಚಮ್ಮಚೆ ದೀಪಕ್ಕೆ ಹಾಕಿ ನಂತರ ಅವನಿಗೆ ನಂದಿನಿ + ಒಳ್ಳೆಣ್ಣೆ ದೀಪವೇ ಗತಿ. ಹಬ್ಬಕ್ಕೋ ಪಬ್ಬಕ್ಕೋ ಪೂರ್ತಿ ದಿವಸ ತುಪ್ಪದ ದೀಪ ಇರುತ್ತಿತ್ತೋ ಏನೋ . 

ಡಾಲ್ಡಾದಲ್ಲಿ ಎಮ್ಮೆ ಚರ್ಬಿ ಹಾಕುತ್ತಾರೆ ಎಂದು ಪತ್ರಿಕೆಗಳಲ್ಲಿ ಬಂದ ಮೇಲೆ ಡಾಲ್ಡಾ ಉಪಯೋಗ ಬಹಳ ಜನ ಬಿಟ್ಟರು. ಹೆಸರಿಗೆ ಮಾತ್ರ ವನಸ್ಪತಿ. ನೋಡಿದರೆ ಎಮ್ಮೆ ಚರ್ಬಿ ಹಾಕಿದ ಪ್ರಾಣಿಸ್ಪತಿ.

**

ಪೇಜಾವರ ಮಠದ ವಿಶ್ವೇಶತೀರ್ಥರನ್ನು ನನಗೆ ಮೊದಲು ಬಾರಿ ಭೇಟಿ ಮಾಡಿಸಿದವನೇ ಮನೋಜ್ ಕರ್ಜಗಿ. 

1979-80 ರಲ್ಲಿ ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರು. ಮನ್ಯಾ ಕರೆದುಕೊಂಡು ಹೋಗಿ ಮೊದಲನೇ ಸಾಲಿನಲ್ಲಿ ಪಕ್ಕದಲ್ಲೇ ಕೂಡಿಸಿಕೊಂಡು ಸ್ವಾಮಿಗಳಿಂದ ನನ್ನನ್ನೂ, ನನ್ನಿಂದ ಸ್ವಾಮಿಗಳನ್ನೂ ಕಾಪಾಡಿದ್ದ. 😂😂😂😂😂

**

ವಿ. ಸೂ: ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಮಿತ್ರರ virtual 'ಅಭಿನಂದನಾ ಸಮಾರಂಭ' ನಡೆಯುತ್ತಿರುತ್ತದೆ. ನಾನು ಮಿತ್ರ ಮನೋಜ್ ಕರ್ಜಗಿಯ 'ಗುಣಗಾನ' ಮಾಡಿದ್ದು ಹೀಗೆ.

2 comments:

sunaath said...

ಸಂಪೂರ್ಣ ತುಪ್ಪದಲ್ಲಿಯೇ ಮಾಡಿದ ಮಂಡಿಗೆಯಂತಹ ಲೇಖನ! ಧನ್ಯವಾದಗಳು, ಮಹೇಶ!

Mahesh Hegade said...

ಧನ್ಯವಾದ ಸುನಾಥ್ ಸರ್!