Friday, August 12, 2016

ಆಚಾರಿ ಮಸ್ತಿ!

ಅದು ೧೯೭೯ ನೇ ಇಸ್ವಿ. ಆಗಿನ್ನೂ ನಾವು ಎರಡನೆ ಕ್ಲಾಸ್. ಆಗ ನಮ್ಮ ಕ್ಲಾಸಿನ ತರಗತಿಗಳು ಮುಂಜಾನೆ ಎಂಟರಿಂದ ಮಧ್ಯಾನ್ಹ ಹನ್ನೆರೆಡರವರೆಗೆ ನಡೆಯುತ್ತಿದ್ದವು. ಅದೇನೋ ಜಾಗದ ಅಭಾವವಂತೆ. ಹಾಗಾಗಿ ಬೆಳಿಗ್ಗೆ ಶಿಫ್ಟ್, ಮಧ್ಯಾನ್ಹದ ಶಿಫ್ಟ್ ಅಂತೆಲ್ಲ ಶಾಲೆ ನಡೆಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವದೇ ಒಂದು ತೊಂದರೆ ಅನ್ನುವದನ್ನು ಬಿಟ್ಟರೆ ಬಾಕಿ ಎಲ್ಲ ಮಜಾನೇ. ಯಾಕೆಂದರೆ ಫುಲ್ ಮಧ್ಯಾನ್ಹ ಫ್ರೀ. ಆಟವಾಡಿಕೊಂಡು ಆರಾಮಾಗಿರಬಹುದಾಗಿತ್ತು.

ಒಂದು ದಿನ ಮಧ್ಯಾನ್ಹ ಶಾಲೆ ಮುಗಿಸಿ ವಾಪಾಸ್ ಮನೆಗೆ ಬರುತ್ತಿದ್ದೆ. ಎಂದಿನಂತೆ ಜೊತೆಗಿದ್ದವ ಆತ್ಮೀಯ ಗೆಳೆಯ ನಮ್ಯಾ. ನಮ್ಮಿಬ್ಬರ ಮನೆಗಳು ಹತ್ತಿರವೇ ಇದ್ದವು. ಶಾಲೆಯಿಂದ ಸೀದಾ ನಡೆದು ಬಂದರೆ ಒಂದು ಹತ್ತು ನಿಮಿಷದ ಹಾದಿ. ನಾವ್ಯಾಕೆ ಸೀದಾ ಬರೋಣ? ನಮಗೇನು ಅವಸರ? ನಾನು ಮತ್ತು ನಮ್ಯಾ ಊರೆಲ್ಲ, ಅಂದರೆ ನಮ್ಮ ಮಾಳಮಡ್ಡಿ ಬಡಾವಣೆಯನ್ನೆಲ್ಲ, ಸುತ್ತಾಡಿಕೊಂಡು, ಏನೇನೋ ಸುದ್ದಿ ಹೇಳಿಕೊಂಡು, ಕೇಳಿಕೊಂಡು, ಒಂದು ತಾಸಿನ ನಂತರ ಮನೆ ಮುಟ್ಟಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ನಮ್ಮ ಕ್ಲಾಸಿನ ಮಾಸ್ತರರನ್ನೂ ಅವರ ಮನೆ ಮುಟ್ಟಿಸಿಬರುವ ಇಲ್ಲದ ಉಸಾಬರಿ ಬೇರೆ. ಅವರೂ ಅದೇ ಏರಿಯಾದಲ್ಲಿ ಇದ್ದರಲ್ಲ. ಹಾಗಾಗಿ ಶಾಲೆ ಬಿಟ್ಟ ನಂತರ ಅವರ ಜೊತೆಯೇ ಹೊರಟು, ಅವರ ಸೊಗಸಾದ ಮಾತುಗಳನ್ನು ಕೇಳುತ್ತ, ಅವರಿಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತ, ಅವರಿಗೆ ಮನೆ ಕಡೆ ಸುದ್ದಿ ಸಹಿತ ಹೇಳಿ, ಅವರ ಮನೆ ಹತ್ತಿರ ಬಂದಾಗ ಸರ್ ಅವರಿಗೊಂದು ಆಖ್ರೀ ನಮಸ್ಕಾರ ಹಾಕಿ, ಮತ್ತೆ ಮನೆ ಕಡೆ ಪಯಣ. ಹೀಗೆ ಮಜವಾಗಿರುತ್ತಿತ್ತು ಗೆಳೆಯ ನಮ್ಯಾನ ಜೊತೆ ಮನೆ ಕಡೆ ಬರುವ ಪಯಣ.

ಅನೇಕ ವಿಷಯಗಳಲ್ಲಿ ನಮ್ಯಾ ನನಗಿಂತ 'ಮುಂದುವರೆದಿದ್ದ'. ದೊಡ್ಡ ಕುಟುಂಬ ಅವರದ್ದು. ಕಮ್ಮಿಯೆಂದರೂ ಒಂದು ಹತ್ತು ಹನ್ನೆರೆಡು ಜನ ಇದ್ದರು ಅವರ ಮನೆಯಲ್ಲಿ ಅಂತ ನೆನಪು. ಹಾಗಾಗಿ ಅವನಿಗೆ ಬೇಕಾದಷ್ಟು ಸಹೋದರ, ಸಹೋದರಿಯರಿದ್ದರು. ಕಸಿನ್ನುಗಳ ಲೆಕ್ಕ ಕೇಳಬೇಡಿ. ಐವತ್ತು ನೂರು ಜನ ಕಸಿನ್ಸ್ ಅವನಿಗೆ. ಮತ್ತೆ ಮಾಳಮಡ್ಡಿಯ ದೊಡ್ಡ ಆಚಾರ್ (ಆಚಾರ್ಯ) ಕುಟುಂಬದ ಹುಡುಗ ನಮ್ಯಾ. ಹಾಗಾಗಿ ಹೆಚ್ಚಿನ ಸಂಪರ್ಕಗಳು ಬೇರೆ. ಹಾಗಾಗಿ ಮಾಳಮಡ್ಡಿ ಎಂಬ ಬ್ರಾಹ್ಮಣರ, ಅದರಲ್ಲೂ ಮೆಜಾರಿಟಿ ವೈಷ್ಣವ ಬ್ರಾಹ್ಮಣರ, ಏರಿಯಾದ ಆಗುಹೋಗುಗಳೆಲ್ಲ ನಮ್ಯಾನಿಗೆ ಬರೋಬ್ಬರಿ ಗೊತ್ತಿರುತ್ತಿತ್ತು. ನಮಗೆ ಅವೆಲ್ಲ ಏನೂ ಗೊತ್ತಿರುತ್ತಿರಲಿಲ್ಲ. ಈ ನಮ್ಯಾ ಚಿತ್ರವಿಚಿತ್ರ ಸುದ್ದಿಗಳನ್ನು ಹೇಳುತ್ತಿದ್ದರೆ ಏನೂ ಸರಿಯಾಗಿ ತಿಳಿಯದೆ, ಅವನನ್ನೇ ಏನೇನೋ ಪ್ರಶ್ನೆ ಕೇಳಿ ಅವನ ಬೋಳು ತಲೆಯನ್ನೇ ಕೆಡಿಸಿಬಿಡುತ್ತಿದ್ದೆ. ದೊಡ್ಡ ಆಚಾರಿ ಮನೆತನದ ನಮ್ಯಾ ತಲೆ ಬೋಳಿಸಿಕೊಂಡು ದೊಡ್ಡ ಚಂಡಿಕೆ ಬಿಟ್ಟಿರುತ್ತಿದ್ದ. ಎಲ್ಲೋ ಅಪರೂಪಕ್ಕೆ ಒಮೊಮ್ಮೆ ಮಾತ್ರ ಸಾದಾ ಕೇಶವಿನ್ಯಾಸ ಇರುತ್ತಿತ್ತು ಅವನದು. ನಮ್ಯಾ ಅಂದರೆ ಅಷ್ಟೊಂದು ಯಾಕಿಷ್ಟ ಅಂದರೆ ಅವನ ಬೋಳು ತಲೆಗೆ 'ಪ್ರೀತಿಯಿಂದ' ಕೈ ತಿಕ್ಕಿ, 'ನಮ್ಯಾ, ನಿನ್ನ ಬೋಳು ತಲಿಗೆ ಕೈ ತಿಕ್ಕಲಿಕ್ಕೆ ಮಸ್ತ ಆಗ್ತದಲೇ,' ಅಂತ ಕಾಡಿದರೂ ನಾನು ಅವನ 'ಪಾಪದ' ಆತ್ಮೀಯ ಗೆಳೆಯ ಅಂತ ನಮ್ಯಾ ಸುಮ್ಮನಿರುತ್ತಿದ್ದ. ಬೇರೆ ಯಾರಾದರೂ ಆಗಿದ್ದರೆ ಅವರ ಬೋಳು ತಲೆಗೆ ಕೈಹಾಕಿದ್ದರೆ ನಮ್ಮ ಕೂದಲಿದ್ದ ಬುರುಡೆಗೆ ಎರಡು ತಟ್ಟಿ ಕಳಿಸುತ್ತಿದ್ದರು. ಆದರೆ ಅಂದಿನ ಏಕ್ದಂ ಖಾಸ್ ದೋಸ್ತ ನಮ್ಯಾ ಸಿಕ್ಕಾಪಟ್ಟೆ ಕ್ಲೋಸ್. ಹಾಗಾಗಿ ಬಾರಾ ಖೂನ್ ಮಾಫ್.

ಸರಿ. ಜೊತೆಗಿದ್ದ ಗುರುಗಳು ಅವರ ಮನೆ ಕಡೆ ಕಳಚಿಕೊಂಡರು. ನಾನು, ನಮ್ಯಾ ಮನೆ ಕಡೆ ಹೊರಟಿದ್ದೆವು. ಯಾರೋ, 'ಏ!' ಅಂತ ಕರೆದಂತಾಯಿತು. ತಲೆಯೆತ್ತಿ ನೋಡಿದರೆ ರಸ್ತೆ ಆಕಡೆ, ಒಂದು ಮನೆಯ ಮುಂದಿನ ಕಟ್ಟೆ ಮೇಲೆ ಕೂತಿದ್ದ ಆಕೃತಿಯೊಂದು ನನ್ನನ್ನು ಕರೆಯುತ್ತಿತ್ತು. ನೋಡಿದರೆ ಒಂದು ವಿಚಿತ್ರ ಪುರುಷಾಕೃತಿ. ವಿಚಿತ್ರ. ರಂಗುರಂಗಾದ ಬಟ್ಟೆ ಹಾಕಿತ್ತು. ಅಂಗಿಯ ಕೆಳಗಿನ ಎರಡು ಗುಂಡಿಗಳನ್ನು ಬಿಟ್ಟರೆ ಉಳಿದ ಅಷ್ಟೂ ಗುಂಡಿಗಳನ್ನು ಬಿಚ್ಚಿಕೊಂಡು ಎದೆ ತೋರಿಸುತ್ತಿತ್ತು. ಏನೋ ಲಾಕೆಟ್ ಎದೆ ಮುಂದೆ ನೇತಾಡುತ್ತಿತ್ತು. ಅಮಿತಾಭ್ ಬಚ್ಚನ್ ಮಾದರಿಯ ಉದ್ದನೆಯ ಹಿಪ್ಪಿ ಸ್ಟೈಲಿನಲ್ಲಿ ಕೂದಲು ಬಿಟ್ಟಿತ್ತು. ಇಂತಹ ಪುರುಷಾಕೃತಿ ಬಾಯಲ್ಲಿ ಅಡಿಕೆಯನ್ನೋ ಅಥವಾ ಬೇರೆ ಏನನ್ನೋ ಜಗಿಯುತ್ತ ಅಸಡ್ಡಾಳ ಅವತಾರದಲ್ಲಿ ಮನೆ ಮುಂದೆ ಕಟ್ಟೆ ಮೇಲೆ ಅಪಶಕುನದ ಮಾದರಿಯಲ್ಲಿ ಕೂತಿತ್ತು. ಕೂತಿದ್ದು ಈಗ ನಮ್ಮನ್ನು ಕರೆಯುತ್ತಿದೆ ಬೇರೆ.

ಆ ಆಕೃತಿ ಕಡೆ ನೋಡಿದೆ. 'ಇಲ್ಲಿ ಬಾ,' ಅನ್ನುವಂತೆ ಸನ್ನೆ ಮಾಡಿತು ಆ ಆಕೃತಿ. ನಮ್ಯಾನ ಕಡೆಗೆ ನೋಡಿದೆ. ಅವನೇನೆಂದಾನು? ಏನೂ ಹೇಳಲಿಲ್ಲ. ಕರೆದ ಮೇಲೆ ಹೋಗಲೇಬೇಕು. ಆ ಮನುಷ್ಯ ನೋಡಲು ವಿಚಿತ್ರವಾಗಿದ್ದರೂ ನನ್ನನ್ನೇನೂ ತಿಂದುಹಾಕುವಷ್ಟು ಖರಾಬ್ ಆಗಿ ಕಾಣಲಿಲ್ಲ. ರಸ್ತೆ ದಾಟಿ ಹೋದೆ. ಅವರ ಮನೆ ಕಾಂಪೌಂಡ್ ಗೋಡೆ ಮಳೆಗಾಲದಲ್ಲಿ ಅರ್ಧಕ್ಕರ್ಧ ಕುಸಿದುಹೋಗಿತ್ತು. ಹಾಗಾಗಿಯೇ ರಸ್ತೆ ಮೇಲೆ ಹೋಗುತ್ತಿದ್ದವರು ಕಟ್ಟೆ ಮೇಲೆ ಕೂತಿದ್ದ ಈ ಪುಣ್ಯಾತ್ಮನಿಗೆ ಕಾಣುತ್ತಿದ್ದರು. ನಾನೂ ಗೋಡೆ ಕಡೆ ಹೋಗಿ ಗೋಡೆ ಇತ್ತಕಡೆ ನಿಂತೆ.

'ನೀ ಹೆಗಡೆ ಶೈಲ್ಯಾನ ತಮ್ಮ. ಹೌದಿಲ್ಲೋ???' ಅಂತ ಕೇಳಿದ.

ಹೆಗಡೆ ಶೈಲ್ಯಾ ಅಂದರೆ ಅಣ್ಣ. ಏಳು ವರ್ಷಕ್ಕೆ ದೊಡ್ಡವನು. ಹೌದು. ಅವನ ತಮ್ಮ ನಾನು. ಹಾಗಾಗಿ 'ಹೌದು. ಅವನ ತಮ್ಮನೇ ನಾನು,' ಅನ್ನುವಂತೆ ತಲೆಯಾಡಿಸಿದೆ.

'ಎಷ್ಟನೇತ್ತಾ??'  ಎಂದು ಕೇಳಿದ. 'ಎಷ್ಟನೇತ್ತಾ??' ಅಂದರೆ 'ಎಷ್ಟನೇ ಕ್ಲಾಸ್?' ಅಂತ ಅರ್ಥ.

'ಎರಡನೇತ್ತಾ' ಅಂತ ಹೇಳಲು ಎರಡು ಬೆರಳು ತೋರಿಸುವದು ನಿಷಿದ್ಧ. ಎರಡು ಬೆರಳು ತೋರಿಸುವದು ನಂಬರ್ ಟೂ ಕಾರ್ಯಕ್ರಮಕ್ಕೆ ಮಾತ್ರ. ಹಾಗಾಗಿ ಈಗ ಮಾತಾಡಲೇಬೇಕು.

ಮುಗುಮ್ಮಾಗಿ, 'ಎರಡನೇತ್ತಾ,' ಅಂದು ನೆಲ ನೋಡುತ್ತ ನಿಂತೆ. ಅಂದಿನ ದಿನಗಳಲ್ಲಿ ಅಪರಿಚಿತರನ್ನು ಕಂಡರೆ ವಿಪರೀತ ಸಂಕೋಚ ನನಗೆ.

'ಹೂಂ. ಹೋಗ್ರಿ ಮನಿಗೆ. ಸೀದಾ ಮನಿಗೇ ಹೋಗ್ರಿ ಮತ್ತ!' ಅಂತ ಹೇಳಿದ ಆ ಪುಣ್ಯಾತ್ಮ ಮನೆಗೆ ಹೋಗಲು ಅನುಮತಿ ಕೊಟ್ಟ. ನೋಡಲು ಒಂದು ತರಹದ ರೌಡಿ ಲುಕ್ಕಿದ್ದರೂ ಸುಂದರನಾಗಿದ್ದ. ಲಕ್ಷಣವಂತನಾಗಿದ್ದ. ಮಾತೂ ಓಕೆ. ಏನೂ ಜಬರಿಸಿ, ಹೆದರಿಸಿ, ಬೈದು ಮಾತಾಡಿರಲಿಲ್ಲ. ಅಣ್ಣನ ಪರಿಚಯದವನು ಅಂತ ಕಾಣುತ್ತದೆ. ಹಾಗಾಗಿ ನನ್ನನ್ನು ನೋಡಿ, ಕರೆದು, ಮಾತಾಡಿಸಿದ್ದ ಅಂತ ಅಂದುಕೊಂಡೆ.

ಆ ಪುಣ್ಯಾತ್ಮನ ಕೂಗಳತೆಯಿಂದ ದೂರ ಬಂದೆವು. ನಾವು ಮಾತಾಡಿದ್ದು ಅವನಿಗೇನೂ ಕೇಳುವದಿಲ್ಲ ಅಂತ ಗೊತ್ತಾದ ಮೇಲೆ ನಮ್ಯಾ ತನ್ನ ಮಾತು ಶುರುವಿಟ್ಟುಕೊಂಡ. ಸೊಗಸಾಗಿ, ನವರಸಗಳನ್ನು ಬರೋಬ್ಬರಿ ಸೇರಿಸಿ ಮಾತಾಡುವದು ನಮ್ಯಾನ ಸ್ಪೆಷಾಲಿಟಿ. 'ರಸ' ಅವನ ಪ್ರೀತಿಯ ಅಡುಗೆ ಕೂಡ. ರಸವನ್ನು ಪೊಗದಸ್ತಾಗಿ ಉಂಡೂ ಉಂಡೂ ಅಷ್ಟು ರಸವತ್ತಾಗಿ ಮಾತಾಡುತ್ತಿದ್ದ ಅಂತ ಕಾಣುತ್ತದೆ.

'ಆಂವಾ ಯಾರು ಗೊತ್ತದ ಏನು?' ಅಂತ ಕೇಳಿದ ನಮ್ಯಾ. ನನ್ನನ್ನು ಈಗಷ್ಟೇ ಮಾತಾಡಿಸಿದ್ದ ಮನುಷ್ಯನ ಬಗ್ಗೆ ಕೇಳುತ್ತಿದ್ದ.

ಮನೆ ಮುಂದಿನ ಕಟ್ಟೆ ಮೇಲೆ ಕೂತಿದ್ದ ಆ ವಿಚಿತ್ರ ಪುರುಷಾಕೃತಿ ಕರೆದಾಗ, ಅವನ ಅವತಾರವನ್ನು ನೋಡಿದಾಗ ಏನೂ ನೆನಪಾಗಿರಲಿಲ್ಲ. ಆಮೇಲೆ ನೆನಪಾಗಿತ್ತು. 'ಇವನನ್ನು ಸಾಕಷ್ಟು ಸಾರಿ ನೋಡಿದ್ದೇನೆ. ಮಾಳಮಡ್ಡಿ ತುಂಬಾ ತಿರುಗುತ್ತಲೇ ಇರುತ್ತಾನೆ. ಅಂಡಿನಲ್ಲಿ ಒಂದು ಸೈಕಲ್ ಸಿಕ್ಕಾಕಿಸಿಕೊಂಡು ಊರ ತುಂಬಾ ಓಡಾಡುತ್ತಿರುತ್ತಾನೆ. ಆಗಾಗ ಶೆಟ್ಟಿಯ ಚುಟ್ಟಾ ಅಂಗಡಿ ಮುಂದೆ, ಪಠಾಣನ ಪಾನ್ ಅಂಗಡಿ ಮುಂದೆ ಗೌಪ್ಯವಾಗಿ ಬೀಡಿ, ಸಿಗರೇಟ್ ಸಹಿತ ಸೇದುತ್ತಿರುತ್ತಾನೆ. ಸದಾ ರಂಗೀನ್ ರಂಗೀನ್ ಢಾಳು ಬಣ್ಣದ ಸ್ಟೈಲಿಶ್ ಅಂಗಿ, ಪ್ಯಾಂಟ್ ಹಾಕಿರುತ್ತಾನೆ,' ಅಂತೆಲ್ಲ ನೆನಪಾಯಿತು. ಆದರೆ ಅವನು ಯಾರು ಅಂತ ಗೊತ್ತಿರಲಿಲ್ಲ.

'ಇಲ್ಲಲೇ ನಮ್ಯಾ. ಯಾರಂತ ಗೊತ್ತಿಲ್ಲ. ಯಾರಲೇ ಆಂವಾ?' ಅಂತ ಕೇಳಿದೆ.

ಅವನ ಹೆಸರು ಹೇಳಿದ. ಅದೇನೋ ಕಪ್ಯಾನೋ, ಸಪ್ಯಾನೋ ಅಂದ. ನನಗಂತೂ ಗೊತ್ತಿರಲಿಲ್ಲ. ಕಪ್ಯಾ ಅಂದನೋ ಅಥವಾ ಸಪ್ಯಾ ಅಂದನೋ ಅಂತ ಈಗ ನೆನಪಿಲ್ಲ. ಏನೋ ಒಂದು. ಅದೇ ಮಾದರಿಯ ಹೆಸರು. ಮುಂದುವರೆದ ನಮ್ಯಾ ಕೇಳಿದ. 'ಆಂವಾ ಏನ ಮಾಡ್ತಾನ ಅಂತ ಗೊತ್ತದ ಏನು??' ಅಂತ ಕೇಳಿ, ಹುಬ್ಬು ಕುಣಿಸಿದ. ಅದರಲ್ಲಿ ಬರೋಬ್ಬರಿ ತುಂಟತನ. ಅದು ನಮ್ಯಾನ ಸ್ಪೆಷಾಲಿಟಿ. 

ಆ ಕಟ್ಟೆ ಮೇಲೆ ಕೂತಿದ್ದ ಕಪ್ಯಾನೋ, ಸಪ್ಯಾನೋ ಅನ್ನುವ ಪುಣ್ಯಾತ್ಮ ಏನು ಮಾಡುತ್ತಾನೋ ಯಾರಿಗೆ ಗೊತ್ತು!?

'ಗೊತ್ತಿಲ್ಲಲೇ. ಯಾಕ? ಏನು ಮಾಡ್ತಾನ?' ಅಂತ ಕೇಳಿದೆ.

'ಹುಡುಗ್ಯಾರ ಮಲಿ ಹಿಚಕ್ತಾನ!' ಅಂತ ಹೇಳಿಬಿಟ್ಟ ನಮ್ಯಾ. ಬಾಂಬ್ ಹಾಕಿಬಿಟ್ಟ.

ಏನೂ!? ಕಟ್ಟೆ ಮೇಲೆ ಕೂತಿದ್ದ ಆ ಮಹಾನುಭಾವ ಏನು ಮಾಡುತ್ತಾನೆ ಅಂತ ಹೇಳಲು ಹೊರಟಿದ್ದ ಈ ನಮ್ಯಾ ಏನು ಹೇಳಿದ? ಏನು ಹೇಳಿಬಿಟ್ಟ? ಆ ಕಟ್ಟೆ ಮೇಲಿ ಕೂತಿದ್ದ ಆಸಾಮಿ, 'ಹುಡುಗಿಯರ ಮೊಲೆ ಹಿಚಕುತ್ತಾನೆ' ಅಂದನೇ ನಮ್ಯಾ?? ಅಥವಾ ನಾನು ಹಾಗೆ ಕೇಳಿಸಿಕೊಂಡೆನೋ? ಡೌಟ್ ಬಂತು.

ಖಾತ್ರಿ ಮಾಡಿಕೊಳ್ಳೋಣ ಅಂತ ಸ್ವಲ್ಪ ಗಾಬರಿಯಿಂದ ಕೇಳಿದೆ, 'ಏನಲೇ ನಮ್ಯಾ!? ಏನಂದೀ? ಏನು ಮಾಡ್ತಾನ ಆಂವಾ? ಮತ್ತೊಮ್ಮೆ ಹೇಳಲೇ!?'

'ಅದನೋ. ಆ ಮಂಗ್ಯಾನಮಗ ಹುಡುಗ್ಯಾರ ಮಲಿ ಹಿಚಕ್ತಾನ ಅಂತ ಹೇಳಿದೆ. ಶ್ಯಾಮ್ಯಾ ಅವರ ಅಕ್ಕಂದೂ ಹಿಚುಕಿಬಿಟ್ಟಾನ' ಅಂದುಬಿಟ್ಟ.

ಈಗ ಖಾತ್ರಿಯಾಯಿತು. ನಮ್ಯಾ ಹೇಳಿದ್ದು, ನಾ ಕೇಳಿಸಿಕೊಂಡಿದ್ದು ಎಲ್ಲ ಒಂದೇ ಅಂತ. ಆದರೆ ಸಿಕ್ಕಾಪಟ್ಟೆ confusion ಆಗಿಬಿಟ್ಟಿತು. ಒಮ್ಮೆಲೇ ಡೀಪ್ ಥಿಂಕಿಂಗ್ ಮೋಡಿಗೆ ಹೋಗಿಬಿಟ್ಟೆ. ನಿಂತುಬಿಟ್ಟೆ. ನಾನು ನಿಂತಿದ್ದು ನೋಡಿ ನಮ್ಯಾನೂ ನಿಂತ. 'ಏನಾತೋ ಈಗ?' ಅನ್ನುವ ಹಾಗೆ ನೋಡಿದ.

ಈ ದೋಸ್ತ ನಮ್ಯಾನ ಇಂತಹ ಖತರ್ನಾಕ್ ಮಾತುಗಳನ್ನು ಕೇಳಿ ತಲೆಯಲ್ಲಿ ಸಿಕ್ಕಾಪಟ್ಟೆ ಆಲೋಚನೆಗಳು ಗಿರಕಿ ಹೊಡೆಯಲಾರಂಭಿಸಿದವು. ಅದೂ ಬಾಂಬ್ ಹಾಕಿದಂತಹ ಮಾತುಗಳನ್ನು ಕೇಳಿ. ಆಗಿನ್ನೂ ಎರಡನೆ ಕ್ಲಾಸ್ ಮಾತ್ರ. ಮೊಲೆ ಹಾಲು ಕುಡಿದು, ಎಷ್ಟೋ ವರ್ಷಗಳ ಹಿಂದೆಯೇ ಬಿಟ್ಟು ಮಾತ್ರ ಗೊತ್ತಿತ್ತು. ಹಾಲು ಕುಡಿಸುವ ಅಮ್ಮಂದಿರೂ, ಕುಡಿಯುವ ಹಸುಗೂಸುಗಳು ಗೊತ್ತಿದ್ದವು. ಅಲ್ಲಿಲ್ಲಿ ಕಾಣುತ್ತಿದ್ದವು. ಹಲ್ಲು ಬರುತ್ತಿರುವ ಕೂಸುಗಳು ಅಮ್ಮನ ಮೊಲೆ ಕಡಿದುಬಿಡುತ್ತವೆ ಅನ್ನುವದನ್ನು ಕಡಿಸಿಕೊಂಡು ಅಂತಹ ಮಗುವಿಗೆ ಪ್ರೀತಿಯಿಂದ ಶಾಪ ಹಾಕುತ್ತಿದ್ದ ಅಮ್ಮಂದಿರ ಬಾಯಿಯಿಂದಲೇ ಕೇಳಿದ್ದೆ. ತನ್ನ ತಮ್ಮನ ಮೊಲೆಯುಣ್ಣುವ ಚಟ ಬಿಡಿಸಿಲು ಅವಳ ಅಮ್ಮನಿಗೆ ಬೇವಿನ ತೊಪ್ಪಲು ತರಲು ಹೊರಟಿದ್ದ ಗೆಳತಿಯೊಬ್ಬಳಿಗೆ ಕಂಪನಿ ಕೊಟ್ಟಿದ್ದೆ. ಬೇವಿನ ಸೊಪ್ಪನ್ನು ಖುದ್ದಾಗಿ ಹರಿದುಕೊಟ್ಟಿದ್ದೆ. 'ಯಾಕ ಬೇಕಾಗ್ಯಾವ ಈ ಕೆಟ್ಟ ಕಹಿ ಬೇವಿನ ತೊಪ್ಪಲ?' ಅಂತ ಕೇಳಿದರೆ, ನನ್ನದೇ ವಯಸ್ಸಿನ ಓಣಿಯ ಗೆಳತಿ, 'ನಮ್ಮ ತಮ್ಮಗ ಮಮ್ಮು ಉಣ್ಣೋದು ಬಿಡಿಸಬೇಕಾಗ್ಯದ,' ಅಂದಿದ್ದಳು. 'ಅಂದ್ರ ಮಮ್ಮು ಬದ್ಲಿ ಬೇವಿನ ತೊಪ್ಪಲಾ ತಿನ್ನಸ್ತೀರಿ ನಿಮ್ಮ ತಮ್ಮಗ?' ಅಂತ ಯಬಡನಂತೆ ಕೇಳಿದ್ದೆ. ಬಿದ್ದು ಬಿದ್ದು ನಕ್ಕ ಗೆಳತಿ ಬೇವಿನ ತೊಪ್ಪಲ ಉಪಯೋಗಿಸಿ ಮಕ್ಕಳ ಮೊಲೆ ಹೇಗೆ ಬಿಡಿಸುತ್ತಾರೆ ಅಂತ ಶಾರ್ಟ್ & ಸ್ವೀಟಾಗಿ ಹೇಳಿದ್ದಳು. ಆಶ್ಚರ್ಯವೆನಿಸಿತ್ತು. ಪಾಪ ಸಣ್ಣ ಮಗು. ಬಾಯಿ ಹಾಕಿದರೆ ಬೇವಿನ ಕೆಟ್ಟ ಕಹಿ. ತಾನಾಗಿಯೇ ಚಟ ಬಿಡುತ್ತದೆ. ಅದೇ ಪ್ಲಾನ್. ಇದೆಲ್ಲ ಈ ನಮ್ಯಾನ ಮಾತು ಕೇಳಿ ನೆನಪಾಯಿತು. ಹೀಗೆ ಮೊಲೆಗಳೇನಿದ್ದರೂ ಅವು ಸಣ್ಣ ಹುಡುಗರಿಗೆ ಮಾತ್ರ ಅಂತ ಅಂದುಕೊಂಡಿದ್ದ ಭೋಳೆ ತಿಳುವಳಿಕೆಯ ಮುಗ್ಧ ಸ್ವಭಾವದ ದಿನಗಳು ಅವು. ಹಾಗಿದ್ದಾಗ ಸುಮಾರು ಹದಿನೇಳು ಹದಿನೆಂಟು ವಯಸ್ಸಿನ, ನೋಡಿದರೆ ಪುಂಡನಂತಿರುವ, ಕಟ್ಟೆ ಮೇಲೆ ಕೂತಿದ್ದ ಆ ವ್ಯಕ್ತಿಗೂ ಮೊಲೆಗಳ ಜರೂರತ್ತಿದೆ. ಅದರಲ್ಲೂ ಆತ ಅವನ್ನು ಹಿಚಕುತ್ತಾನೆ ಅಂತ ಕೇಳಿ ತಲೆ ಪೂರ್ತಿ ಕಡೆದಿಟ್ಟ ಮೊಸರು ಗಡಿಗೆಯಾಗಿಬಿಟ್ಟಿತು. ನಮ್ಯಾನ ಜೊತೆಗೇ ಮಾತಾಡಿ ಸಂದೇಹ ಬಗೆಹರಿಸಿಕೊಳ್ಳಬೇಕು.

'ಯಾಕ ನಮ್ಯಾ? ಆಂವಾ ಹಾಂಗ್ಯಾಕ ಮಾಡ್ತಾನ? ಆಂವಾ ಇನ್ನೂ ಮಮ್ಮು ಹಾಲು ಕುಡಿತಾನ? ಅವ್ವನ ಹಾಲು ಬಿಟ್ಟಿಲ್ಲಾ ಆಂವಾ? ಇಷ್ಟು ದೊಡ್ಡವ ಆಗ್ಯಾನ ಮತ್ತ?' ಅಂತ ಕೇಳಿಬಿಟ್ಟೆ. ನಾನು ಫುಲ್ ಮುಗ್ಧ. ಇದೇ ಮೊದಲು ಇಂತಹ ವಿಚಿತ್ರಗಳ ಬಗ್ಗೆ ಕೇಳಿದ್ದು.

ನಮ್ಯಾ 'ಹ್ಯಾಂ!?!?' ಅಂತ ಬಾಯಿ ತೆಗೆದು ನಿಂತ. ನನ್ನ ಯಬಡತನದ ಬಗ್ಗೆ ಅವನ ಮುಖದ ಮೇಲೆ ಸಂತಾಪ. ಅದು ಅಂದು ಗೊತ್ತಾಗಲಿಲ್ಲ. ಈಗ ನೆನಪಾದಾಗ ಅದು ಅಂತಹ ಸಂತಾಪವೇ ಅಂತ ಗೊತ್ತಾಯಿತು.

ನಾನೇ ಮುಂದುವರೆದು ಮಾತಾಡಿದೆ. 'ಅಲ್ಲಲೇ ನಮ್ಯಾ. ಇಷ್ಟು ದೊಡ್ಡವ ಆದರೂ ಮಮ್ಮುನಿಂದ ಹಾಲು ಕುಡಿಯವಾ ಅಂದ್ರ ಇವನೊಬ್ಬನೇ ಇರಬೇಕು ನೋಡಲೇ. ಹಾ!! ಹಾ!! ನಮ್ಮ ಅಣ್ಣನ ದೋಸ್ತ ಇರಬೇಕು. ಅವನಿಗಿಂತ ದೊಡ್ಡವ ಇದ್ದಾನ. ಆದರೂ ಇನ್ನೂ ಮಮ್ಮು ತಿಂತಾನ. ಅವ್ವನದು ಸಾಕಾಗಿಲ್ಲ ಅಂತ ಕಾಣಿಸ್ತದ. ಹಾಂಗಾಗಿ ಈಗ ಯಾರೋ ಹುಡುಗಿ ಮಮ್ಮು ತಿಂತಾನ ಅಂತ ಕಾಣಿಸ್ತದ. ಅಲ್ಲಾ??' ಅಂತ ಕೇಳಿಬಿಟ್ಟೆ.

ನಮ್ಮ ಅಂದಿನ ಚಿಣ್ಣ ಮನಸ್ಸಿನ ಊಹೆ ಏನೆಂದರೆ ಆ ಕಟ್ಟೆ ಆಸಾಮಿ ಇನ್ನೂ ಅಮ್ಮನ ಮೊಲೆಹಾಲನ್ನೇ ಬಿಟ್ಟಿಲ್ಲ. ಹುಟ್ಟಿ ಇಷ್ಟು ವರ್ಷಗಳ ಬಳಿಕ ಅದ್ಯಾವ ತಾಯಿಯ ಮೊಲೆಯಲ್ಲಿ ಹಾಲಿರಬೇಕು. ಇವನಿಗೋ ಮೊಲೆಹಾಲು ಬೇಕೇಬೇಕು. ಅಮ್ಮನಲ್ಲಿಲ್ಲ. ಹಾಗಾಗಿ ಯಾವದೋ ಹುಡುಗಿಯ ಮೊಲೆಯಿಂದ ಮೊಲೆಹಾಲು ಕುಡಿಯುತ್ತಾನೆ. ಅಷ್ಟೇ. ವಿಚಿತ್ರ ಮನುಷ್ಯ. ಇಷ್ಟು ದೊಡ್ಡವನಾದರೂ ಇನ್ನೂ ಮೊಲೆಹಾಲು ಬಿಟ್ಟಿಲ್ಲ. ಹುಚ್ಚ!

ನಮ್ಮ ವಿವರಣೆ ಕೇಳಿದ ನಮ್ಯಾ ತಲೆಯನ್ನು ಆಚೀಚೆ ಅಲ್ಲಾಡಿಸಿದ. ನನ್ನ ಊಹೆ ತಪ್ಪು ಅಂತ ಅದರ ಅರ್ಥ. ಅವನ ಉದ್ದ ಚಂಡಿಕೆ ಆಕಡೆ ಈಕಡೆ ಅಲ್ಲಾಡಿತು. ನಮ್ಯಾನ ಬೋಳು ತಲೆಗೆ 'ಪ್ರೀತಿಯಿಂದ' ಕೈ ತಿಕ್ಕಿ, 'ಲೇ, ನಮ್ಯಾ, ನಮ್ಯಾ ಏನಾತಲೇ? ಏನಂತ ಹೇಳಲೇ? ಫುಲ್ ಎಲ್ಲಾ ಹೇಳಲೇ. ಪ್ಲೀಸ್ ಹೇಳಲೇ,' ಅಂತ ಕಾಡಿದೆ. ಮಾಹಿತಿಗಾಗಿ ಸಿಕ್ಕಾಪಟ್ಟೆ ಹಸಿವು.

ನಾನು, ನನ್ನ ವಿವರಣೆ, ನನ್ನ ಸಹವಾಸ ಎಲ್ಲ ಸಾಕಾಗಿತ್ತು ಅವನಿಗೆ. ಅದೂ ಶಾಲೆ ಬಿಟ್ಟು ಒಂದು ತಾಸಿನ ಮೇಲಾಗಿಹೋಗಿತ್ತು. ಹೊಟ್ಟೆ ಕೂಡ ಬರೋಬ್ಬರಿ ಹಸಿವಾಗುತ್ತಿತ್ತು. ಹಾಗಿದ್ದಾಗ ಅವನು ಏನೋ ಹೇಳಿದರೆ ನಾನು ಏನೋ ತಿಳಿದುಕೊಂಡು, ಈಗ ಅದರ ಬಗ್ಗೆ ವಿವರಣೆ ಕೇಳುತ್ತಿದ್ದೇನೆ. full explanation ಡಿಮ್ಯಾಂಡ್ ಮಾಡುತ್ತಿದ್ದೇನೆ. ಪಾಪ ನಮ್ಯಾ. ಇಕ್ಕಳದಲ್ಲಿ ಸಿಕ್ಕಿಬಿದ್ದ. ಹೇಳದೇ ಗತಿಯಿಲ್ಲ. ಮಾಳಮಡ್ಡಿ ಹಿಟ್ಟಿನ ಗಿರಣಿ ಮುಂದೆ ವಿವರಣೆ ಶುರು ಹಚ್ಚಿಕೊಂಡ. ನಾನು ಬೇರೆಯೇ ಲೋಕಕ್ಕೆ ಹೋಗಲು ರೆಡಿಯಾಗಿಬಿಟ್ಟೆ.

'ಅಯ್ಯೋ! ಹಾಲು ಕುಡಿಲಿಕ್ಕೆ ಅಲ್ಲೋ. ಆಂವಾ ಮಾಲ್ ಇಟ್ಟಾನ. ಅಕಿದು ಮಲಿ ಹಿಚಕ್ತಾನ. ಮಲಿ ಹಿಚಕೋದು ಅಂದ್ರ ಮಮ್ಮು ತಿನ್ನೋದು ಅಂತಿಯಲ್ಲಪಾ??? ಹಾಂ?' ಅಂದುಬಿಟ್ಟ. ಧ್ವನಿಯಲ್ಲಿ 'ಇಷ್ಟೂ ಗೊತ್ತಿಲ್ಲ ನಿನಗೆ?!' ಅನ್ನುವ ಸಣ್ಣ ಆಕ್ಷೇಪ.

'ಮಾಲ್ ಅಂದ್ರ?' ಅಂತ ನಮ್ಮ ಮುಂದಿನ ಪ್ರಶ್ನೆ. ಮಾಲ್ ಗಾಡಿ ಉರ್ಫ್ ಗೂಡ್ಸ್ ಟ್ರೈನ್ ಬಿಟ್ಟರೆ ಬೇರೆ ಯಾವದೇ ತರಹದ ಮಾಲ್ ಬಗ್ಗೆ ಗೊತ್ತಿರದ ದಿನಗಳು ಅವು.

'ಮಾಲ್ ಅಂದ್ರ ಲವರ್. ಅಕಿ ಇವನ ಲವರ್. ಇಂವಾ ಅಕಿ ಲವರ್. ಲವ್ ಮಾಡ್ಯಾರ!' ಅಂದುಬಿಟ್ಟ.

ಹಾಂ! ಈಗ ಗೊತ್ತಾಯಿತು. 'ಲವ್ ಮಾಡ್ಯಾರ!' ಅಂದ್ರ ಅಲ್ಲಿಗೆ ಮುಗಿಯಿತು. ಆಗಿನ ಕಾಲದಲ್ಲಿ ಲವ್ ಅಂದರೆ ಸಿನೆಮಾದಲ್ಲಿ ಹೀರೋ ಹೀರೋಯಿಣಿ ಮಾಡುವದು. ಅದೇ ಲವ್. ಆ ಲವ್ ಬಿಟ್ಟರೆ ಬೇರೆ ಲವ್ ಗೊತ್ತಿಲ್ಲ. ಲವ್ ಅಂದರೆ ಚುಮ್ಮಾಚುಮ್ಮಿ, ಡಾನ್ಸ್, ನೃತ್ಯ, ಸಂಗೀತ, ಹಾಡು, ಜಗಳ, ಹೊಡೆದಾಟ, ಮುಂದೆ ಏನೋ ಒಂದು. ದಿ ಎಂಡ್.

ಒಟ್ಟಿನಲ್ಲಿ ಆ ಕಟ್ಟೆ ಮೇಲೆ ಕೂತಿದ್ದ ಆಸಾಮಿ ಯಾವದೋ ಹುಡುಗಿಯನ್ನು ಲವ್ ಮಾಡಿಬಿಟ್ಟಿದ್ದಾನೆ. ಲವ್ ಮಾಡಿದವ ಡಾನ್ಸ್ ಮಾಡಬೇಕು, ಹಾಡು ಹಾಡಬೇಕು, ಫೈಟ್ ಮಾಡಬೇಕು. ಅದು ಬಿಟ್ಟು ಹೋಗಿ ಹೋಗಿ ಮೊಲೆ ಯಾಕೆ ಹಿಚಕುತ್ತಾನೆ. ಮೊದಲು ಇವನಿಗೆಲ್ಲೊ ಅಮ್ಮನ ಹಾಲಿನ ಹುಚ್ಚು ಇನ್ನೂ ಬಿಟ್ಟಿಲ್ಲ. ಹಾಗಾಗಿ ಕಂಡ ಕಂಡ ಸ್ತ್ರೀಯರ ಮೊಲೆಗೆ ಬಾಯಿ ಹಾಕುತ್ತಾನೆ ಅಂದುಕೊಂಡೆ. ನೋಡಿದರೆ ವಿಷಯ ಅದಲ್ಲ. ಇವನದು ಲವ್ ಕೇಸಂತೆ. ಲವ್ ಕೇಸಿನಲ್ಲಿ ಮೊಲೆಗೇನು ಕೆಲಸ ಶಿವನೇ? ಯಾವ ಸಿನೆಮಾದಲ್ಲೂ ಯಾರೂ ಹೀಗೆ 'ಲವ್' ಮಾಡಿಯೇ ಇಲ್ಲವಲ್ಲ? ಮೊಲೆ ಹಿಚಕುವ ಈ ಆಸಾಮಿಯದು ಬೇರೆಯೇ ತರಹದ ಲವ್ ಇರಬೇಕು ಅಂದುಕೊಂಡೆ.

ನನ್ನ ಅಂದಿನ ಸಣ್ಣ ವಯಸ್ಸಿನ ತಲೆಯಲ್ಲಿ ಇಷ್ಟೆಲ್ಲ ವಿಷಯಗಳು process ಆಗುವತನಕವೂ ನಮ್ಯಾ ಹಾಗೆಯೇ ನಿಂತಿದ್ದ. ನನ್ನ processing ಮುಗಿಯಿತು ಅಂತಾದಾಗ 'ಮುಂದುವರೆಯಲೇ?' ಅಂತ ಲುಕ್ ಕೊಟ್ಟ. 'ಪ್ಲೀಸ್ proceed,' ಅಂತ ವಾಪಸ್ ಲುಕ್ ಕೊಟ್ಟೆ.

'ಅಷ್ಟss ಅಲ್ಲಾ! ರೊಕ್ಕಾ ಕೊಟ್ಟರ ಕಪ್ಯಾ 'ಅದನ್ನೂ' ತೋರಸ್ತಾನಂತ. ನಮ್ಮ ಕಾಕಾನ ಮಗ ಹೋಗಿ ನೋಡಿಬಂದಾನ. ಅವನೇ ಹೇಳಿದ! ಗೊತ್ತದ???' ಅಂತ ದೊಡ್ಡ ರಹಸ್ಯವೊಂದನ್ನು ಹೇಳುವವನಂತೆ ಹೇಳಿ ಮತ್ತೊಂದು ಬಾಂಬ್, ಈ ಸಲ, ಆಟಂ ಬಾಂಬ್ ಹಾಕಿಬಿಟ್ಟ.

ಕೇಳಿ ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ಸಾರಾಂಶ ಇಷ್ಟು. ಕಟ್ಟೆ ಮೇಲೆ ಕೂತಿದ್ದ ಕಪ್ಯಾ ಅಲ್ಲೆಲ್ಲೋ ದೇವಸ್ಥಾನದ ಹಿಂದೆ ಒಂದು ಕೋಣೆ ಬುಕ್ ಮಾಡಿರುತ್ತಾನಂತೆ. ಗುಡಿಯ ಆಚಾರ್ರಿಗೆ ಭರ್ಜರಿ ದಕ್ಷಿಣೆ ಕೊಟ್ಟಿರಬೇಕು. ಅದಕ್ಕಾಗಿಯೇ ಇವನ 'ಪುಣ್ಯ ಕಾರ್ಯಕ್ಕೆ' ಗುಡಿಯ ಹಿಂದಿನ ಕೋಣೆ ಬಿಟ್ಟುಕೊಟ್ಟಿದ್ದಾರೆ. ಈ ಆಸಾಮಿ ಅವನ ಮಾಲ್ ಉರ್ಫ್ ಲವರ್ ಹುಡುಗಿಯನ್ನು ಕರೆದುಕೊಂಡು ಅಲ್ಲಿ ಹೋಗಿಬಿಡುತ್ತಾನೆ. ಶೃಂಗಾರ ಕ್ರಿಯೆ ಶುರುಮಾಡಿಬಿಡುತ್ತಾನೆ. ಕಿಟಕಿಯನ್ನು ಕೊಂಚ ತೆರೆದಿಟ್ಟಿರುತ್ತಾನೆ. ಹೊರಗಿಂದ ಬೇಕಾದವರು ನೋಡಬಹದು via ಕಿಟಕಿ ಸಂದಿ. ಶೃಂಗಾರ ಕ್ರಿಯೆಯ ದರ್ಶನಕ್ಕೆ ಸಣ್ಣ ಫೀ ಅಂತ ಇಟ್ಟಿರುತ್ತಾನೆ. ಒಟ್ಟಿನಲ್ಲಿ ಲೈವ್ ಬ್ಲೂ ಫಿಲಂ ಶೋ ಮಾದರಿಯಲ್ಲಿ.

ನನ್ನ ಮಿತ್ರ ನಮ್ಯಾನ ಕಸಿನ್ ಯಾರೋ ಕೂಡ ಈ ಲೈವ್ ಶೋ ನೋಡಿಬಂದಿದ್ದಾನೆ. ಅದನ್ನು ನಮ್ಯಾನಿಗೆ ಹೇಳಿದ್ದಾನೆ. ನಮ್ಯಾ ನಮಗೆ ಹೇಳಿ ದೊಡ್ಡ ಬಾಂಬ್ ಹಾಕಿಬಿಟ್ಟಿದ್ದಾನೆ. ಅದಕ್ಕೇ ನಮ್ಯಾ ನನ್ನ ಕ್ಲೋಸ್ ಫ್ರೆಂಡ್. ನನಗೆ ಇಂತವೆಲ್ಲ ಸುದ್ದಿ ಗೊತ್ತಿರುತ್ತಲೇ ಇರಲಿಲ್ಲ. ನಮ್ಯಾನಂತಹ ದೋಸ್ತರು ಇದ್ದಿದ್ದಕ್ಕೆ ಲೈಫಿನಲ್ಲಿ ಒಂದಿಷ್ಟು ಮಜಾ. ಇಲ್ಲವಾದರೆ ಸಪ್ಪೆ ಸಪ್ಪೆ.

ಎರಡನೆ ಕ್ಲಾಸಿನ ಮುಗ್ಧ ತಲೆಗೆ ಜಾಸ್ತಿ ಏನೂ ಹೊಳೆಯಲಿಲ್ಲ. ಮೊಲೆಗಳು ಚಿಕ್ಕಮಕ್ಕಳಿಗೆ ಮಾತ್ರ, ಅದೂ ಹಾಲು ಕುಡಿಯಲು  ಮಾತ್ರ, ಅನ್ನುವ 'ತಪ್ಪು ಕಲ್ಪನೆ'ಯ ಅಡಿಪಾಯವೇ ನಮ್ಯಾನ ಬಾಂಬಿನಿಂದ ಉಡೀಸ್ ಆಗಿಹೋಗಿತ್ತು. ಆದರೂ ಲವ್ ಮಾಡುವ ಮಂದಿ ಅದ್ಯಾಕೆ ಹಾಗೆ ಮಾಡುತ್ತಾರೆ? ಅದರಲ್ಲೂ ಹಾಗೆ ಮಾಡುವವರು ಬೇರೆಯವರಿಗೆಲ್ಲ ಯಾಕೆ ಪ್ರದರ್ಶನ ಮಾಡುತ್ತಾರೆ? ಅಂತ ಗೊತ್ತಾಗಲಿಲ್ಲ. ಸಿನೆಮಾದಲ್ಲಿ ಲವ್ ಮಾಡುವವರು ಎಲ್ಲರ ಮುಂದೆಯೇ ಚುಮ್ಮಾ ಚುಮ್ಮಿ ಮಾಡುವದಿಲ್ಲವೇ? ಹಾಡಿ ಕುಣಿಯುವದಿಲ್ಲವೇ? ಅದನ್ನು ನಾವೆಲ್ಲ ರೊಕ್ಕ ಕೊಟ್ಟು ನೋಡಿಬರುವದಿಲ್ಲವೇ? ಹಾಗೆಯೇ ಇದೂ ಸಹಿತ ಇರಬೇಕು ಅಂತ ಅಂದುಕೊಂಡು ಆ ವಿಷಯಕ್ಕೆ ಅಲ್ಲಿಗೇ ಎಳ್ಳುನೀರು ಬಿಟ್ಟೆ. ಪುಣ್ಯಕ್ಕೆ ಕಟ್ಟೆ ಮಹಾಪುರುಷನ ಶೃಂಗಾರ ಸಾಹಸದ ಬಗ್ಗೆ ಹೆಚ್ಚಿನ ವಿವರಣೆಯನ್ನು ಪಾಲಕರ ಹತ್ತಿರ, ಗುರುಗಳ ಹತ್ತಿರ ಅಥವಾ ಬೇರೆ ಯಾರೋ ಹಿರಿಯರ ಹತ್ತಿರ ಕೇಳಲಿಲ್ಲ. ಅದು ಆಗಿನ ಆಸಕ್ತಿಯ ವಿಷಯವೇ ಅಲ್ಲ.

ನಮ್ಯಾನಿಗೆ ಒಂದು ಲಾಸ್ಟ್ ಬೈ ಬೈ ಹೇಳಿ ಮನೆ ಕಡೆ ಬಂದೆ. ಆಗಿನ ದಿನಗಳಲ್ಲಿ ನಮ್ಯಾ ನಾನು ಅದೆಷ್ಟು ಕ್ಲೋಸ್ ದೋಸ್ತರೆಂದರೆ ಮನೆಗೆ ಹೋಗಿ ಊಟ ಮುಗಿಸಿ ನಮ್ಯಾ ಆಟವಾಡಲು ಮತ್ತೆ ನಮ್ಮ ಮನೆ ಕಡೆ ಬಂದೇಬಿಡುತಿದ್ದ. ನಮ್ಮ ಮನೆಯಲ್ಲೇ ಒಂದಿಷ್ಟು ಟೈಮ್ ಟೇಬಲ್ ಅಂತ ಇತ್ತು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ಒಂದಿಷ್ಟು ಮಲಗಿ, ನಂತರ ಏನಾದರೂ ಮಾಡಿಕೊಳ್ಳಿ ಅಂತ ಮನೆ ಮಂದಿ ಕರಾರು. ಅದಕ್ಕೆ ನಾನು homework ಕೂಡ ಸೇರಿಸಿಕೊಳ್ಳುತ್ತಿದ್ದೆ. ಎಲ್ಲ ಲೆಕ್ಕ ಮಾಡಿ ಎಷ್ಟೊತ್ತಿಗೆ ಮನೆಗೆ ಬರಬೇಕು ಅಂತ ನಮ್ಯಾಗೆ ಬರೋಬ್ಬರಿ ಹೇಳಿರುತ್ತಿದ್ದೆ. ಅಷ್ಟರವರೆಗೆ ಸಿಕ್ಕಾಪಟ್ಟೆ ತ್ರಾಸು ಪಟ್ಟು ಕಾದು, ಮನೆ ಮುಂದೆ ಬೇಕಾದರೆ ನಾಲ್ಕಾರು ಬಾರಿ ಓಡಾಡಿ ಕೂಡ ಹೋಗಿರುತ್ತಿದ್ದ ನಮ್ಯಾ ಹೇಳಿದ ವೇಳೆಗೆ ಬರೋಬ್ಬರಿ  ಹಾಜರಾಗುತ್ತಿದ್ದ. ಮುಂದೆ ಆಟೋಟಗಳಲ್ಲಿ ಫುಲ್ ಮಸ್ತಿ.

ಮುಂದೆ ಎಷ್ಟೋ ವರ್ಷಗಳ ನಂತರ ನಮ್ಯಾನ ಜೊತೆ ಮಾತಾಡುವಾಗಲೂ ಇದೇ ಸುದ್ದಿ ಬರುತ್ತಿತ್ತು. ಆ ಹೊತ್ತಿಗೆ ನಮ್ಮ ತಲೆಯೂ ಒಂದಿಷ್ಟು ಬಲಿತು ಕಟ್ಟೆ ಮೇಲೆ ಕುಳಿತಿದ್ದ ಕಪ್ಯಾನ ಅಂದಿನ 'ಕುಚಮರ್ದನದ' ವಿಚಿತ್ರ ವರ್ತನೆಗೊಂದು ನಮ್ಮದೇ ವಿವರಣೆ ದೊರೆತಿತ್ತು.

ಅದು ೧೯೭೯-೮೦ ರ ದಶಕ. ಆವಾಗ pornography material (ಅಶ್ಲೀಲ ಕಾಮದ ಬಗೆಗಿನ ವಸ್ತುಗಳು) ಏನೂ ಸಿಗುತ್ತಿರಲಿಲ್ಲ. ಇಂಟರ್ನೆಟ್ ಪಂಟರ್ನೆಟ್ ಇಲ್ಲ ಆವಾಗ. ಆಂಗ್ಲ ಭಾಷೆಯ ಅಶ್ಲೀಲ ಸಾಹಿತ್ಯ ಕೂಡ ಧಾರವಾಡದಂತಹ ಸಣ್ಣ ಊರುಗಳಲ್ಲಿ ದುರ್ಲಭ. ಇಷ್ಟಕ್ಕೂ ಮೀರಿ ಅಂತವನ್ನು ಓದಬೇಕೆಂದೆರೆ ಸಿಗುತ್ತಿದ್ದವು ಸುರತಿ, ರತಿ ವಿಜ್ಞಾನ ಮುಂತಾದ ಮಹಾ ತಗಡು ಪತ್ರಿಕೆಗಳು. ಅವುಗಳಲ್ಲಿ ಅಶ್ಲೀಲತೆ ಹಾಳಾಗಿ ಹೋಗಲಿ ಕೇವಲ ವಿಕೃತಿಯೇ ತುಂಬಿರುತ್ತಿತ್ತಂತೆ. ಮತ್ತೆ ಅಂತಹ ತಗಡು ಪತ್ರಿಕೆಗಳನ್ನು ಓದಲೂ ರೊಕ್ಕ ಕೊಡಬೇಕು. ಸಾಧ್ಯವಿಲ್ಲ. ಇವೆಲ್ಲ shortages ಗಳನ್ನೇ ಸಣ್ಣ ಪ್ರಮಾಣದಲ್ಲಿ encash ಮಾಡಿಕೊಂಡಿದ್ದ ನಮ್ಮ ಕಟ್ಟೆ ಸುಂದರ. ಅವನ ಅಫೇರ್, ಅವನ ಹುಡುಗಿ, ಗುಡಿ ಹಿಂದಿನ ರಹಸ್ಯ ಕೋಣೆಯಲ್ಲಿ ಅವರ ಶೃಂಗಾರ ಕಾವ್ಯ ವಾಚನ, ಮರ್ದನ ಮಾಡುವ ಮರ್ದಾನಗಿ ಎಲ್ಲ ಸೊಗಸಾಗಿ ಸಾಗಿತ್ತು. ಎಲ್ಲೋ ಅವನ ಸ್ನೇಹಿತರು ಅವನ escapades ಗಳ ಬಗ್ಗೆ, ಲಫಡಾಗಳ ಬಗ್ಗೆ ತಿಳಿಯುವ ಕುತೂಹಲ ವ್ಯಕ್ತಪಡಿಸಿರಬೇಕು. ಮತ್ತೆ ಮಾಲು ಪಟಾಯಿಸಿ ಬಹಳ ಮುಂದುವರೆದ ಮಹನೀಯರಿಗೆ ಸಕಲರಿಗೆ ಎಲ್ಲವನ್ನೂ ತೋರಿಸಿ, 'ನಿಮ್ಮೆಲ್ಲರಿಗಿಂತ ನಾನು ಎಷ್ಟು ಮುಂದುವರೆದಿದ್ದೇನೆ ನೋಡಿ. ನಿಮಗಿಲ್ಲ ಈ ಭಾಗ್ಯ' ಅಂತ ಸಾಹಸ ಮೆರೆಯುವ ಆಸೆ ಬೇರೆ. ಹೀಗಾಗಿ ಕಿಡಕಿಯನ್ನು ಚಿಕ್ಕದಾಗಿ ತೆರೆದಿಟ್ಟೇ 'ದೇವರ ಕೆಲಸಕ್ಕೆ' ಶುರುವಿಟ್ಟುಕೊಳ್ಳುತ್ತಿದ್ದ. ಅವನ ದೋಸ್ತ ಮಂದಿ ಚಿಲ್ಲರೆ ರೊಕ್ಕ ಕೊಟ್ಟು ನೋಡಿ ಜೊಲ್ಲು ಸುರಿಸುತ್ತಿದ್ದರು. ಮತ್ತೇನು ಮಾಡುತ್ತಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮಾಲಿನಿಂದ ಸಣ್ಣ ಪ್ರಮಾಣದ ಕಮಾಯಿಯನ್ನೂ ಮಾಡಿಬಿಟ್ಟಿದ್ದ ಈ ಭೂಪ.

ಕಟ್ಟೆ ಆಸಾಮಿಯ ಮಾಲು ಕೂಡ ನಮಗೆ ಗೊತ್ತು. ಮತ್ತೊಬ್ಬ ಗೆಳೆಯ ಶ್ಯಾಮ್ಯಾನ ಅಕ್ಕ. ಕಸಿನ್. ಆ ಕಾಲದ ಬಾಂಬ್ ಸುಂದರಿಯಂತೆ. ನೋಡಿದ ನೆನಪಿಲ್ಲ. ಅಂತವಳಿಗೇ ಗಾಳ ಹಾಕಿದ್ದ ನಮ್ಮ ಆಸಾಮಿ. ನೋಡಲಿಕ್ಕೆ ಒಳ್ಳೆ ರೌಡಿಯಂತಿದ್ದ ಅವನಲ್ಲಿ ಏನು ಕಂಡಿದ್ದಳೋ ಗೊತ್ತಿಲ್ಲ.

ಎಷ್ಟೋ ವರ್ಷಗಳ ಬಳಿಕ ಶ್ಯಾಮ್ಯಾ ಕೂಡ ಸಿಕ್ಕಿದ್ದ. 'ಏನಲೇ, ನಿಮ್ಮ ಭಾವ ಏನಂತಾನ?' ಅಂತ ಕೇಳಿದ್ದೆ. 'ಭಾವಾ???!!' ಅಂತ ಬಹಳ confuse ಆದವರಂತೆ ಕೇಳಿದ್ದ. ಧಾರವಾಡ ಕಡೆ ಜನ ಅಕ್ಕನ ಗಂಡ ಭಾವನಿಗೆ ಮಾಮಾ ಅನ್ನುತ್ತಾರೆ ಎಂದು ಆವಾಗ ನೆನಪಾಯಿತು. 'ಅವನಲೇ, ನಿಮ್ಮ ಮಾಮಾ. ನಿಮ್ಮ ಅಕ್ಕನ, ನಿಮ್ಮ ಕಸಿನ್ ಗಂಡ. ಲಗ್ನಾ ಮಾಡಿಕೊಂಡರಂತ. ಎಲ್ಲಿದ್ದಾರ? ಹ್ಯಾಂಗಿದ್ದಾರ?' ಅಂತ ಕೇಳಿದೆ. ಆವಾಗ ಅವನಿಗೆ ಗೊತ್ತಾಯಿತು ಯಾರ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ ಎಂದು.

ಹಳೆಯದೆಲ್ಲವನ್ನೂ ನೆನಪಿಸಿಕೊಂಡು ಶ್ಯಾಮ್ಯಾ ಕೂಡ ನಕ್ಕ. ಅವರ ಮನೆತನದವರೋ ಊರಿಗೇ ದೊಡ್ಡ ಶ್ರೀಮಂತರು. ಅಂತವರ ಮಗಳಿಗೆ ಗಾಳ ಹಾಕಿದ್ದ ಭೂಪ ನಮ್ಮ ಕಟ್ಟೆ ಆಸಾಮಿ. ಅವನೋ ಓದದ ಬರೆಯದ ಅಂಗುಠಾ ಛಾಪ್ ಆಸಾಮಿ. ಪೋಲಿ ಅಲೆದುಕೊಂಡಿದ್ದ. ಅದು ಹೇಗೋ ದೊಡ್ಡ ಶ್ರೀಮಂತರ ಅತಿ ಸುಂದರ ಮಗಳನ್ನು ಪಟಾಯಿಸಿಬಿಟ್ಟಿದ್ದ. ಮುಂದೆ ಅದು ಮನೆಯವರಿಗೂ ತಿಳಿಯಿತು. ತಮ್ಮ ಭಾವಿ ಅಳಿಯನನ್ನು ನೋಡಿ ಹುಡುಗಿಯ ಮನೆಯವರು ಲಬೋ ಲಬೋ ಅಂತ ಬಾಯಿಬಾಯಿ ಬಡೆದುಕೊಂಡರು. ಕೃಷ್ಣ ಪರಮಾತ್ಮ ರೌಡಿ ಅವತಾರ ಎತ್ತಿದಂತಿದ್ದ ಭಾವಿ ಅಳಿಯ. ಹುಡುಗಿ ಮಾತ್ರ ಅಚಲ ನಿರ್ಧಾರ ತೆಗೆದುಕೊಂಡು ಕೂತುಬಿಟ್ಟಿದ್ದಳು. ಕಟ್ಟೆ ಕಪ್ಯಾಗೆ ಪರಿಪರಿಯಾಗಿ ಹೇಳಿದರು. 'ನಿನಗ ಕೈ ಮುಗಿತೀವಿ. ನಿನ್ನ ಕಾಲಿಗೆ ಬೀಳ್ತೀವಿ. ಬೇಕಾದ್ರ ಕೇಳಿದಷ್ಟು ರೊಕ್ಕಾ ಕೊಡತೇವಿ. ನಮ್ಮ ಹುಡುಗಿ ಸಹವಾಸ ಬಿಡಪಾ. ಅಕಿನ್ನ ಬ್ಯಾರೆ ಯಾರೋ ಒಳ್ಳೆ ಮನಿತನದ, ಕಲಿತು, ಒಳ್ಳೆ ರೀತಿ ಸೆಟಲ್ ಆದ ಹುಡುಗಗ ಕೊಟ್ಟು ಲಗ್ನ ಮಾಡ್ತೇವಿ. ನೀ ಅಕಿನ್ನ ಬಿಟ್ಟು ಬಿಡಪಾ,' ಅಂತ ಅಂಬೋ ಅಂದರು. ದೊಡ್ಡ ಸನ್ಯಾಸಿ ಗೆಟಪ್ ಹಾಕಿದ ಇವನು, 'ಅಯ್ಯ! ನಾ ಎಲ್ಲೆ ಅಕಿನ್ನ ಹಿಡಕೊಂಡೇನ್ರೀ? ಅಕಿ ಬ್ಯಾಡ ಅಂತ ಹೇಳಿ ಬಿಟ್ಟು ಹೋಗಲಿ. ನಾ ಏನೂ ಅಕಿ ಹಿಂದ ಬಂದು ಅಕಿಗೆ ತ್ರಾಸು ಕೊಂಡಗಿಲ್ಲ. ಬಿಟ್ಟು ಹೋಗು ಅಂತ ಹೇಳ್ರೀ ನಿಮ್ಮ ಮಗಳಿಗೆ,' ಅಂತ ವಾಪಸ್ ಸವಾಲ್ ಒಗೆದು ಗೋಡೆಗೊರಗಿ ಕೂತುಬಿಟ್ಟ. ಪಂಚಾಯಿತಿ ಮಾಡಲಿಕ್ಕೆ ಕೂತಿದ್ದ ಹಿರಿಯರು ಮಗಳ ಕಡೆ ನೋಡಿದರು. 'ನಾ ಇವನ್ನ ಬಿಟ್ಟು ಬ್ಯಾರೆ ಯಾರನ್ನೂ ಲಗ್ನಾ ಆಗಂಗಿಲ್ಲ. ಆದ್ರ ಇವನ ಜೋಡಿನೇ. ಇಲ್ಲಂದ್ರ ಭಾವ್ಯಾಗ ಜಿಗಿತೀನಿ! ಸತ್ತುಹೋಗ್ತೇನಿ!' ಅಂದುಬಿಟ್ಟಳು. ಅವರ ಮಹಾ ದೊಡ್ಡ ಕಂಪೌಂಡಿನಲ್ಲಿದ್ದ ಹಾಳು ಭಾವಿ ನೆನಪಾಯಿತು. ಆ ಭಾವಿಗೆ ಆಗಲೇ ನಾಲ್ಕಾರು ಅತೃಪ್ತ ಜೀವಗಳು ಬಿದ್ದು ಆತ್ಮಹತ್ಯೆ ಮಾಡಿಕೊಂಡು ಅದು ಡೇಂಜರ್ ಭಾವಿ ಅಂತ ಹೆಸರಾಗಿಬಿಟ್ಟಿತ್ತು. ಇನ್ನೂ ಒತ್ತಾಯ ಮಾಡಿದರೆ ಮಗಳು, ಅದೂ ಹಿರಿಮಗಳನ್ನು, ಕಳೆದುಕೊಳ್ಳಬೇಕಾಗುತ್ತದೆ ಅಂತ ವಿಚಾರ ಮಾಡಿ ಹಿರಿಯರೂ ಹೂಂ ಅಂದರು. ಪುಣ್ಯಕ್ಕೆ ಜಾತಿ ಒಂದೇಯಾಗಿತ್ತು. ಒಂದೇ ಮಠ ಕೂಡ. ಆ ಮಟ್ಟಿಗೆ ತೊಂದರೆಯಿಲ್ಲ.

'ನಮ್ಮ ಕಾಕಾ ಆ ಹುಚ್ಚ ಸೂಳಿಮಗ್ಗ ಜಗ್ಗೆ ರೊಕ್ಕಾ ಕೊಟ್ಟು ಜೀವನಕ್ಕ ಏನೋ ಒಂದು ವ್ಯವಸ್ಥಾ ಮಾಡಿಕೊಟ್ಟ ನೋಡಪಾ. ಏನೋ ಬಿಸಿನೆಸ್ ಹಾಕಿಕೊಟ್ಟಾ. ಫುಲ್ ಬೋಳಿಸ್ಕೊಂಡು ಹೋದಾ ನಮ್ಮ ಕಾಕಾ,' ಅಂದ ಶ್ಯಾಮ್ಯಾ.

'ಇರಲಿ ಬಿಡಲೇ. ಯಾರಿಗೆ ಕೊಟ್ಟರು ನಿಮ್ಮ ಕಾಕಾ? ನಿಮ್ಮ ಅಕ್ಕ, ನಿಮ್ಮ ಮಾಮಾಗೇ ಕೊಟ್ಟರು. ಹೌದಿಲ್ಲೋ? ಈಗ ಹ್ಯಾಂಗ ಇದ್ದಾರ ಎಲ್ಲಾ? ಎಲ್ಲಾ ಆರಾಮ್ ಇದ್ದಾರೋ ಇಲ್ಲೋ??' ಅಂತ ಕೇಳಿದೆ.

'ಯಾರಿಗ್ಗೊತ್ತೋ ಮಾರಾಯಾ ಅವರ ಸುದ್ದಿ? ಜಾಸ್ತಿ ಟಚ್ಚಿನಾಗ ಇಲ್ಲ. ಆವಾ ಹುಚ್ಚಸೂಳಿಮಗ, ಅವನೇ ನಮ್ಮ so called ಮಾಮಾ ಮನ್ನೆ ಸಾಯಲಿಕ್ಕೆ ಬಿದ್ದಿದ್ದನಂತ!' ಅಂದುಬಿಟ್ಟ.

'ಯಾಕಲೇ!? ಏನಾಗಿತ್ತು?? ಈಗ!? ಆರಾಮಾತ?' ಎಂದು ಕೇಳಿದ್ದೆ. ಪಾಪ! ನಮ್ಮ ಕಟ್ಟೇಶ್ವರ ಕಪ್ಯಾ ಹೇಗಿದ್ದಾನೋ ಅಂತ ಆತಂಕ.

'ಚಿಕನ್ ಗುನ್ಯಾ ಆಗಿತ್ತಂತ. ಈಗ ಆರಾಮ್ ಆಗ್ಯಾನಂತ,' ಅಂದ ದೋಸ್ತ ಮುಂದುವರೆದು, ಕೊಂಚ ಉರಿದುಕೊಂಡು 'ಮೂರೂ ಹೊತ್ತು ಚಿಕನ್ ತಿಂದು, ಶೆರೆ ಕುಡದ್ರ ಚಿಕನ್ ಗುನ್ಯಾನೂ ಬರ್ತದ ಮತ್ತೊಂದೂ ಬರ್ತದ' ಅಂದುಬಿಟ್ಟ. ಶಿವಾಯ ನಮಃ!

ಹೋಗ್ಗೋ! ಚಿಕನ್ ತಿನ್ನುವದರಿಂದ ಚಿಕನ್ ಗುನ್ಯಾ ಬರೋದಿಲ್ಲ ಮಾರಾಯಾ ಎಂದು ಹೇಳೋಣ ಅಂತ ಮಾಡಿದೆ. at least ಚಿಕನ್ ತಿಂದರೆ ಚಿಕನ್ ಗುನ್ಯಾ ಬರುತ್ತದೆ ಅಂತ ತಪ್ಪು ತಿಳಿದಾದರೂ ಕೆಲವು ಮಂದಿ ಚಿಕನ್ ಬಿಟ್ಟಿದ್ದಾರೆ. ಅದೇ ಪುಣ್ಯ. ಎಷ್ಟೋ ಕೋಳಿಗಳು ಬಚಾವಾಗಿ ಕೋ ಕೋ ಕೊಕ್ಕೋ ಕೋ ಅಂತ ನಲಿದುಕೊಂಡಿವೆ. ಆ ತಪ್ಪು ಮಾಹಿತಿ ಹಾಗೇ ಇರಲಿ ಅಂತ ತಿದ್ದುಪಡಿ ಮಾಡದೇ ಅಲ್ಲಿಗೇ ಬಿಟ್ಟೆ.

ಹೀಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಕೇಳಿದ್ದ 'ಮಲಿ ಹಿಚಕ್ತಾನ' ಅನ್ನುವ ಖತರ್ನಾಕ್ ಕಥೆಗೊಂದು ಅಂತ್ಯ ಸಿಕ್ಕಿತ್ತು.ಭಾರತದಲ್ಲಿ ಅದೇನೋ 'ಅಚಾರಿ ಮಸ್ತಿ' ಅನ್ನುವ ಉಪ್ಪಿನಕಾಯಿ (ಅಚಾರ್) ರುಚಿಯ ಪೊಟಾಟೋ ವೇಫರ್ ಸಿಗುತ್ತದೆಯಂತೆ. ನಾನು ಆ 'ಅಚಾರಿ ಮಸ್ತಿ' ಅನ್ನುವದನ್ನು ನಗುತ್ತ 'ಆಚಾರಿ ಮಸ್ತಿ' ಅಂತಲೇ ಓದಿಕೊಳ್ಳುತ್ತೇನೆ. ಹೇಳಿಕೇಳಿ ಆಚಾರಿ ಜನಗಳ ಭದ್ರಕೋಟೆಯಾದ ಧಾರವಾಡದ ಮಾಳಮಡ್ಡಿಯಲ್ಲಿ ಬಾಲ್ಯವನ್ನು ಕಳೆದವನು ನಾನು. ಹಾಗಾಗಿ ಆಚಾರಿಗಳ ಮಸ್ತಿ ಬರೋಬ್ಬರಿ ಗೊತ್ತು ಕೂಡ.

ಮಾಳಮಡ್ಡಿ ಆಚಾರಿಗಳ ಅಂದಿನ ಮಸ್ತಿ ನೆನಪಾದಾಗ ಹಳೆ ಗೆಳೆಯ ನಮ್ಯಾ ನೆನಪಾಗುತ್ತಾನೆ. ನಮ್ಯಾ ಆಚಾರಿಯದು ಇಂತಹ ರೋಚಕ ಕಥೆ ಹೇಳುವ ಮಸ್ತಿ. ಕಟ್ಟೆ ಕಪ್ಯಾ ಆಚಾರಿಯದು ಶೃಂಗಾರ ಕಾವ್ಯ, ಕುಚಮರ್ದನದ ಮಸ್ತಿ. ಇತರೇ ಆಚಾರಿಗಳದ್ದು ರೊಕ್ಕ ಕೊಟ್ಟು ಅದನ್ನು ನೋಡಿ, ಜೊಲ್ಲು ಸುರಿಸುವ ಮಸ್ತಿ. ಒಟ್ಟಿನಲ್ಲಿ ಆಚಾರಿ ಮಸ್ತಿ! ಏನಂತೀರಿ?

Friday, August 05, 2016

ಅಮೇರಿಕಾದ ಸ್ವಾತಂತ್ರ್ಯ ದಿವಸ ಅಂದಾಗ ದುಶ್ಶಾಸನನೊಬ್ಬ ನೆನಪಾದ...

ಜುಲೈ ೪. ನಮ್ಮ ಅಮೇರಿಕಾ ದೇಶದ ಸ್ವಾತಂತ್ರ್ಯ ದಿನ. ಅಮೇರಿಕಾದ ಸ್ವಾತಂತ್ರ್ಯ ದಿವಸ ಅಂದ ಕೂಡಲೇ ಅಮೇರಿಕಾದ ಕ್ರಾಂತಿ ನೆನಪಾಗುತ್ತದೆ. ಒಂಬತ್ತನೇ ತರಗತಿಯಲ್ಲಿ ಓದಿದ್ದ ಸಮಾಜಶಾಸ್ತ್ರ ಅದರಲ್ಲೂ ಚರಿತ್ರೆ ನೆನಪಾಗುತ್ತದೆ.

ನಮ್ಮ ಜಮಾನದಲ್ಲಿ ಅಂದರೆ ೧೯೮೬-೮೭ ರ ಜಮಾನದಲ್ಲಿ ನೀವು ಕರ್ನಾಟಕದಲ್ಲಿ ಒಂಬತ್ತನೇ ಕ್ಲಾಸ್ ಓದಿದ್ದರೆ ನಿಮಗೆ ನೆನಪಿರಬಹದು. ಇತಿಹಾಸದ ಪಾಠದಲ್ಲಿ ಎರಡು ಕ್ರಾಂತಿಗಳಿದ್ದವು. ಒಂದು ಅಮೆರಿಕನ್ ಕ್ರಾಂತಿ. ಇನ್ನೊಂದು ಫ್ರೆಂಚ್ ಕ್ರಾಂತಿ. ಅಮೇರಿಕನ್ ಕ್ರಾಂತಿಯಿಂದಲೇ ಅಮೇರಿಕಾ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು. ಹಡಬೆ ಬ್ರಿಟಿಷರ ಅಂಡಿನ ಮೇಲೆ ಅಮೇರಿಕಾದ ಕ್ರಾಂತಿಕಾರಿಗಳು ಅದ್ಯಾವ ರೀತಿಯಲ್ಲಿ ಒದ್ದರು ಅಂದರೆ ಹೆಟ್ಟಿಕೊಳ್ಳಬಾರದ ಜಾಗದಲ್ಲಿ ಬಾಲ ಹೆಟ್ಟಿಕೊಂಡ ಬ್ರಿಟಿಷರು ಪೂರ್ತಿ ಅಮ್ಮಾತಾಯಿಯಾಗಿ ಅಮೇರಿಕಾ ಬಿಟ್ಟು ಓಡಿಹೋದರು. ಅಮೇರಿಕಾ ಸ್ವಾತಂತ್ರ್ಯ ಪಡೆದುಕೊಂಡ ರೋಚಕ ಕಥೆ ಓದುತ್ತಿದ್ದರೆ ಇವತ್ತಿಗೂ ರೋಮಾಂಚನ. ಸಿಕ್ಕಾಪಟ್ಟೆ ಹೆಮ್ಮೆ ಅನ್ನಿಸುತ್ತದೆ.

ಸರಿ. ನಾವು ಒಂಬತ್ತನೇ ಕ್ಲಾಸಿಗೆ ಬಂದಾಗ ನಮಗೆ ಇತಿಹಾಸ ಮತ್ತು ಪೌರಶಾಸ್ತ್ರ (Civics) ಪಾಠ ಮಾಡಲು ಬಂದವರು ಒಬ್ಬ ಮಂಗೇಶಿ ಪೈಕಿ ಮೇಡಂ. ಅಯ್ಯೋ! ಗೋವಾ ಕಡೆ ಕೊಂಕಣಿ ಮಂದಿ ಅಂತ. ಅವರ ದೇವರು ಮಂಗೇಶ ಅಲ್ಲವೇನ್ರೀ? ಹಾಗಾಗಿ ಮಂಗೇಶಿ ಪೈಕಿ ಮೇಡಂ ಅಂದೆ.

ಅವರಿಗೋ ಸರಿಯಾಗಿ ಕನ್ನಡವೇ ಬರುತ್ತಿರಲಿಲ್ಲ. ಕೊಂಕಣಿ, ಇಂಗ್ಲಿಷ್ ಧಾಟಿಯಲ್ಲಿ ಅಕ್ಷರ ಅಕ್ಷರ ಕೂಡಿಸಿ, ಪದ ಪದ ಜೋಡಿಸಿ ಕನ್ನಡ ಮಾತಾಡುತ್ತಿದ್ದರು. ಅದೂ ಯಾವಾಗ? ಇಂಗ್ಲಿಷ್ ವರ್ಕೌಟ್ ಆಗಲಿಲ್ಲ ಅಂತಾದಾಗ ಮಾತ್ರ.

ನಾವೋ ಧಾರವಾಡ ಮಂದಿ. ಶುದ್ಧ ಕನ್ನಡ ಮೀಡಿಯಂನಲ್ಲಿ ಓದಿದವರು. ಎಂಟನೇ ಕ್ಲಾಸಿಗೆ ಬಂದಾಗ ಗುಂಪಿನಲ್ಲಿ ಗೋವಿಂದ ಎಂಬಂತೆ ಇಂಗ್ಲಿಷ್ ಮಾಧ್ಯಮಕ್ಕೆ ಶಿಫ್ಟ್ ಆದವರು. ಓದಲು, ಬರೆಯಲು ಸುಮಾರು ಇಂಗ್ಲಿಷ್ ಬರುತ್ತಿತ್ತೇ ವಿನಃ ಮಾತಾಡಲು ಇಲ್ಲ. ತಲೆಯಲ್ಲಿ ಕನ್ನಡದಲ್ಲಿ ವಿಚಾರ ಮಾಡಿ, ಅದನ್ನು ಇಂಗ್ಲೀಷಿಗೆ ರೂಪಾಂತರಿಸಿ, ಅದರ ಅಂದ ಚಂದ ಹಾಳಾಗಿ ಹೋಗಿ, ನಾವು ಗಾವಟಿ ಶೈಲಿಯಲ್ಲಿ ಹರಕು ಮುರುಕು ಇಂಗ್ಲಿಷ್ ಮಾತಾಡುವಷ್ಟರಲ್ಲಿ ಎದುರಿಗಿನ ಜನರಿಗೆ ನಿದ್ದೆ ಬಂದಿರುತ್ತಿತ್ತು. ಅಥವಾ ನಮ್ಮ ಕಚಡಾ ಇಂಗ್ಲಿಷ್ ಭರಿಸಲಾಗದೇ, 'ಇಂಗ್ಲಿಷ್ ಏನೂ ಬೇಡಪ್ಪಾ. ಕನ್ನಡದಲ್ಲಿ ಮಾತಾಡು ಸಾಕು,' ಅನ್ನುತ್ತಿದ್ದರು. ಮತ್ತೆ ಇತರೆ ಮಾಸ್ತರ್, ಟೀಚರ್ ಮಂದಿಯೆಲ್ಲ ಹೆಚ್ಚಾಗಿ ಕನ್ನಡ, ಅದೂ ಶುದ್ಧ ಧಾರವಾಡ ಕನ್ನಡದಲ್ಲಿಯೇ, ಮಾತಾಡುತ್ತಿದ್ದರು.

ಈಗ ಇತಿಹಾಸದ ಮಂಗೇಶಿ ಮೇಡಂ ಕಾಲದಲ್ಲಿ ತೊಂದರೆಯಾಯಿತು. ಯಾವಾಗ ಅತಿ ಹೆಚ್ಚಿನ ತೊಂದರೆಯಾಗುತ್ತಿತ್ತು ಅಂದರೆ ಪರೀಕ್ಷೆ ಮುಗಿದು, ಉತ್ತರ ಪತ್ರಿಕೆಗಳನ್ನು ತಿದ್ದಿ ಕೊಟ್ಟ ನಂತರ. ಆವಾಗಲೇ ನಮ್ಮಂತಹ 'ಉತ್ತರ ಕುಮಾರ'ನ ಪೌರುಷ ಶುರುವಾಗುತ್ತಿತ್ತು. ಗಣಿತದ ಉತ್ತರ ಪತ್ರಿಕೆಯೊಂದರಲ್ಲಿ ಮಾತ್ರ ಕೊಟ್ಟ ಅಂಕದ ಬಗ್ಗೆ ನಮ್ಮ ತಕರಾರು ಇರುತ್ತಿರಲಿಲ್ಲ. ಆಕಸ್ಮಾತ ತಕರಾರಿದ್ದರೂ ಬೇಗ ಬಗೆಹರಿಯುತ್ತಿತ್ತು. ಇತಿಹಾಸ, ಭಾಷೆಗಳು, ಭೂಗೋಳ, ಇತ್ಯಾದಿ ವಿಷಯಗಳು very subjective. ನಮ್ಮ ಪ್ರಕಾರ ನಾವು ಬರೆದಿದ್ದ ಉತ್ತರ ಏಕ್ದಂ ಬರೋಬ್ಬರಿ ಇದ್ದರೂ ಒಮ್ಮೊಮ್ಮೆ ಮಾಸ್ತರ್, ಟೀಚರ್ ಮಂದಿ ಕೊಟ್ಟ ಅಂಕಗಳ ಬಗ್ಗೆ ನಮಗೆ ಸಮಾಧಾನ ಇರುತ್ತಿರಲಿಲ್ಲ. ಆವಾಗ ಹಾಕ್ಕೊಂಡು ಕಿತ್ತಾಟ ಶುರು. ಬಹಳಷ್ಟು ಮಾಸ್ತರ್ ಮೇಡಂ ಜನ ಬಹಳ ಪ್ರೀತಿಯಿಂದ ಎಲ್ಲಾ ವಿವರಿಸಿ, ಒಂದೊಂದು ಅಂಕ ಕೊಟ್ಟಿದ್ದಕ್ಕೆ ಮತ್ತು ಅದಕ್ಕಿಂತ ಹೆಚ್ಚಾಗಿ ಅಂಕಗಳನ್ನು ಕಡಿತ ಮಾಡಿದ ಕಾರಣಗಳನ್ನು ತಿಳಿಸಿ ಹೇಳುತ್ತಿದ್ದರು. ಆದರೂ ಕೆಲವೊಂದರ ಬಗ್ಗೆ ಏನು ಮಾಡಿದರೂ ನಾವು convince ಆಗುತ್ತಿರಲಿಲ್ಲ. ಪಠ್ಯಪುಸ್ತಕವನ್ನೇ ಆಯುಧದಂತೆ ಝಳಪಿಸುತ್ತ, ಏನಾದರೂ ಹೆಚ್ಚಿನ reference ಪುಸ್ತಕ ಕೂಡ ಓದಿಬಿಟ್ಟಿದ್ದರೆ ಅದನ್ನೂ ಗುರಾಣಿಯಂತೆ ತಿರುಗಿಸುತ್ತ ನಮ್ಮ ಯುದ್ಧ ನಡೆಯುತ್ತಿತ್ತು. ಒಮ್ಮೊಮ್ಮೆ ನಮ್ಮ ವಾದಕ್ಕೆ ಒಪ್ಪಿಯೋ ಅಥವಾ 'ಹಾಳಾಗಿ ಹೋಗು. ತೊಗೋ ಇನ್ನೂ ದೀಡ್ (೧.೫) ಮಾರ್ಕ್ಸ್. ಮತ್ತ ಬಂದು ತಲಿ ತಿನ್ನಬ್ಯಾಡ ಮಾರಾಯ,' ಅಂತ ಸಾಕಾಗಿ ಮಾರ್ಕ್ಸ್ ಕೊಟ್ಟು ಕಳಿಸುತ್ತಿದ್ದರು. ಮಾತಿಗೆ ಹಾಗೆ ಹೇಳಿದರೂ ಯಾವದೇ ಮಾಸ್ತರ್, ಟೀಚರ್ ಎಂದೂ ಬಿಟ್ಟಿಯಲ್ಲಿ ಮಾರ್ಕ್ಸ್ ಕೊಡಲಿಲ್ಲ. ನಾವು ಕೇಳಲೂ ಇಲ್ಲ. Marks must be commanded and never demanded ಅಂತ ಬೇರೆ ಮೊಳೆ ಹೊಡೆದು ಇಟ್ಟಿರುತ್ತಿದ್ದರಲ್ಲ? ನಾವು ಬರೋಬ್ಬರಿ ಪಾಯಿಂಟ್ ಹಾಕಿ, 'ಯಾಕ ಕಟ್ ಮಾಡೀರಿ? ಹಾಂ?' ಅಂತ ಅಬ್ಬರಿಸಿದಾಗಲೇ ಕೊಡಬೇಕಾಗಿದ್ದನ್ನು ಬರೋಬ್ಬರಿ ಕೊಟ್ಟು, ನಂತರ ಅದು ಇದು ಅಂತ ತ್ಯಾಪೆ ಹಚ್ಚಿದವರೇ ಹೆಚ್ಚು.

ಸರಿ. ಈಗ ಈ ಗೋವಾ ಕಡೆಗಿನ ಕೊಂಕಣಿ ಮಂಗೇಶಿ ಮೇಡಂ ಬಂದಿದ್ದು ತೊಂದರೆಗೆ ತಂದು ಇಟ್ಟುಬಿಟ್ಟಿತು. ಮೊದಲನೇ ತ್ರೈಮಾಸಿಕ ಪರೀಕ್ಷೆಯಲ್ಲಿ ಇತಿಹಾಸ ಮತ್ತು ಪೌರಶಾಸ್ತ್ರದ ಪೇಪರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಎರಡೋ ಮೂರೋ ಮಾರ್ಕ್ಸ್ ಕಮ್ಮಿ ಬಂತು. ಅಕಟಕಟಾ! ನೋಡಿದರೆ ಎರ್ರಾ ಬಿರ್ರಿ ಪೇಪರ್ ತಿದ್ದಿಬಿಟ್ಟಿದ್ದಾರೆ. ಮತ್ತೆ ನಮ್ಮಲ್ಲಿನ 'ಉತ್ತರ' ಕುಮಾರನ ಪೌರುಷ ಜಾಗೃತವಾಗಿಬಿಟ್ಟಿತು. ಜಬರ್ದಸ್ತ್ 'ಉತ್ತರ' ಬರೆದವನೇ ಉತ್ತರ ಕುಮಾರ.

ಮಂಗೇಶಿ ಮೇಡಂ ಹತ್ತಿರ ಹೋಗಿ, ಉತ್ತರ ಪತ್ರಿಕೆಯನ್ನು ಅವರ ಮುಖದ ಮುಂದೆ ಅಲ್ಲಾಡಿಸುತ್ತ ಹಲಲಾಹಲಲಾ ಅಂತ ವಾದ ಮಾಡಿಬಿಟ್ಟೆ. ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಮಂಗೇಶಿ ಮೇಡಂ ನಕ್ಕುಬಿಟ್ಟರು. ಅವರ ದಾಳಿಂಬರಿ ಬೀಜಗಳಂತಹ ಸುಂದರ ದಂತಪಂಕ್ತಿ ಲಕಲಕ ಹೊಳೆಯಿತು. ಒಸಡುಗಳು (gums) ಅಷ್ಟು ಉದ್ದವಾಗಿರದಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿದ್ದರು ಮೇಡಂ ಅಂತ ಅನ್ನಿಸಿತು ಒಂದು ಕ್ಷಣ. ನಾನೇನು ಅವರ ರೂಪವನ್ನು ತಾರೀಫು ಮಾಡಲು ಹೋಗಿದ್ದೆನೇ? ಇಲ್ಲ. ಯಾಕೆ ಮಾರ್ಕ್ಸ್ ಕಮ್ಮಿ ಹಾಕಿದ್ದೀರಿ ಅಂತ ಕೇಳಿ, ಕಟ್ ಮಾಡಿದ್ದ ಮಾರ್ಕುಗಳನ್ನು ಹಾಕಿಸಿಕೊಂಡು ಬರಬೇಕಾಗಿತ್ತು.

ಈಗ ನೋಡಿದರೆ - ಅಯ್ಯೋ! ಶಿವಾ! ಶಂಭೋ ಶಂಕರಾ! ಇವರಿಗೆ ಕನ್ನಡವೇ ಬರುವದಿಲ್ಲ. ಹಾಗಂತ ವಾದ ಮಾಡುವದನ್ನು ನಿಲ್ಲಿಸಲಿಕ್ಕೆ ಆಗುತ್ತದೆಯೇ? 'Why you cut 2 marks here? Why cut here also? Everywhere you cutting cutting. I wrote properly. Give marks no?' ಅಂತ ಏನೋ ಒಂದು ತರಹದ ಇಂಗ್ಲಿಷ್ ಹೊಡೆದುಬಿಟ್ಟೆ. ಭಾಷೆಗಿಂತ ಭಾವನೆಗಳು ಜೋರಾಗಿದ್ದವು. ಭಾಷೆ ಕನ್ನಡದ ಧಾಟಿಯಲ್ಲಿಯೇ ಇತ್ತು. ಆದರೂ ಸಾತ್ವಿಕ ಶಕ್ತಿ ಅಂತ ಇರುತ್ತದೆ ನೋಡಿ. ಅದು ನಮ್ಮ ಕೊಂಕಣಿ ಟೀಚರ್ ಮೇಲೆ ಪ್ರಭಾವ ಬೀರಿರಬೇಕು. ನನ್ನ ಕೈಯಲ್ಲಿದ್ದ ಉತ್ತರ ಪತ್ರಿಕೆಯನ್ನು ಇಸಿದುಕೊಂಡು, ಎಲ್ಲೆಲ್ಲಿ ನನಗೆ ಆಕ್ಷೇಪಣೆ ಇದೆ ಅಂತ ನೋಡತೊಡಗಿದರು. ತೋರಿಸುತ್ತ ಹೋದೆ.

'ಇದು ನೋಡು. ಕೇವಲ ನಾಲ್ಕೇ sentence ನಲ್ಲಿ ಬರೆದರೆ ಸಾಲುವದಿಲ್ಲ. more ಜಾಸ್ತಿ detail ಆಗಿ ಬರಿಬೇಕು. Then I give full marks. ಮುಂದೆ ಹಾಗೆ ಬರಿಬೇಕು. OK?' ಅಂದು ಮತ್ತೆ ನಕ್ಕರು. ನಮಗೆ ಇಲ್ಲಿ ಮಾರ್ಕ್ಸ್ ಕಳೆದುಕೊಂಡ ಸಂಕಟ. ಇವರು ನೋಡಿದರೆ ನಗುತ್ತಿದ್ದಾರೆ. ಬಾಕಿ ಯಾರಾದರೂ ಆಗಿದ್ದರೆ ಚಡಾಬಡಾ ಅಂತ ಬೈದುಬಿಡುತ್ತಿದ್ದೆ. ಆದರೆ ಇವರು ಮಾಸ್ತರಿಣಿ.

'ಅಲ್ಲ ಟೀಚರ್, 'ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ,' ಅಂತ ಸೂಚನೆ ಇದೆ. ಅದರ ಪ್ರಕಾರ ನಾಲ್ಕು ವಾಕ್ಯಗಳಲ್ಲಿ ಎಲ್ಲ ಬರುವಂತೆ ಮಾಡಿ ಬರೆದಿದ್ದೇನೆ. ಈಗ ಇನ್ನೂ ಜಾಸ್ತಿ ಬರಿಬೇಕಾಗಿತ್ತು ಅಂದರೆ ಹೆಂಗೆ? ಹಾಂ?' ಅಂತ ಏನೋ ಝಾಡಿಸಲು ನೋಡಿದೆ. ಅವರಿಗೆ ಕನ್ನಡ ಬರುವದಿಲ್ಲ  ಅಂತ ನೆನಪಾಗಿ ಅಷ್ಟಕ್ಕೇ ಬಿಟ್ಟೆ. ಕೆಟ್ಟ ಮುಖ ಮಾಡಿಕೊಂಡು ಬಂದು ಲಾಸ್ಟ್ ಬೆಂಚಿನ ನನ್ನ ಸೀಟಿನಲ್ಲಿ ಕುಕ್ಕರಿಸಿದೆ. 'ಮುಂದಿನ ಪರೀಕ್ಷಾ ಒಳಗ ನಿಮಗ ಮಾಡ್ತೀನಿ ತಡೀರಿ!' ಅಂತ ಏನೋ ಒಂದು ಪ್ರತಿಜ್ಞೆ ಮಾಡಿಕೊಂಡೆ.

ಬೇರೆ ಎಲ್ಲ ಮಾಸ್ತರ್, ಟೀಚರ್ ಮಂದಿ ನನಗೆ feedback ಕೊಟ್ಟಿದ್ದರು. 'ಅದೇನು ಹುಚ್ಚನ ಗತೆ ಕಥೆ ಬರಿತಿಯೋ ಮಾರಾಯ? ಒಂದು ಮಾರ್ಕಿನ ಪ್ರಶ್ನೆಗೂ ಪೇಜ್ ಮ್ಯಾಲೆ ಪೇಜ್ ತುಂಬಿಸಿಬಿಡ್ತಿಯಲ್ಲೋ. ಎಷ್ಟು ಕೇಳಿರ್ತಾರ ಅಷ್ಟು ಬರಿ ಸಾಕು. ಭಾಳ ಶಾಣ್ಯಾತನ ತೋರಿಸೋದು ಏನೂ ಬೇಕಾಗಿಲ್ಲ,' ಅಂತ ಕೂಡ ಹೇಳಿದ್ದರು. ನಮಗೇನು ಬರೆಯುವ ಹುಚ್ಚು. ಅದೂ ಹಸ್ತಾಕ್ಷರ ಕೂಡ ಬಹಳ ಸುಂದರವಾಗಿದೆ ಅಂತ ಬೇರೆ ಎಲ್ಲರೂ ಹೇಳಿಬಿಟ್ಟಿದ್ದರು. ಮೇಲಿಂದ ಒಳ್ಳೊಳ್ಳೆ ಶಾಯಿ ಪೆನ್ನುಗಳಿದ್ದವು. ಉತ್ತರ ಪತ್ರಿಕೆ ಕೈಗೆ ಬಂತು ಅಂದರೆ ಬರೆದು ಬರೆದು, ಹೆಚ್ಚಿನ ಕಾಗದ ಕಟ್ಟಿ ಕಟ್ಟಿ ಒಗೆದುಬಿಡುವದು. ಹಾಗಾಗಿಯೇ, 'ಮಾರಾಯಾ ಕಮ್ಮಿ ಬರಿ!' ಅಂತ ಕೆಲವು ಮಾಸ್ತರ್, ಟೀಚರ್ ಮಂದಿ ಕೇಳಿಕೊಂಡಿದ್ದರು. ನಮಗೇನೋ ಉದ್ದುದ್ದ ಬರಿಯಲಿಕ್ಕೆ ಖುಷಿ. ಆದರೆ ನೂರಾರು ವಿದ್ಯಾರ್ಥಿಗಳ ತಲೆಬುಡವಿಲ್ಲದ ಪೇಪರ್ ತಿದ್ದಿಕೊಡುವ ಕರ್ಮ ಅವರದ್ದು ನೋಡಿ. ಹಾಗಿದ್ದಾಗ ನಮ್ಮಂತಹ ಯಬಡರು ಹೀಗೆ ರೀಮುಗಟ್ಟಲೇ ಬರೆದು ತಲೆ ತಿಂದರೆ ಅವರ ತಲೆಯೇನಾಗಬೇಕು?

ಹೀಗೆ ಹೇಳಿದ್ದರು, ಪಾಲಕರಿಗೂ ಸಹ ಸುದ್ದಿ ಮುಟ್ಟಿಸಿದ್ದರು ಅಂತೆಲ್ಲ ಆಗಿ ಕೇಳಿದಷ್ಟು ಬರೆಯುವ ರೂಢಿ ಮಾಡಿಕೊಳ್ಳುತ್ತಿದ್ದೆ. ಹಾಗಿರುವಾಗ ಈ ಇತಿಹಾಸದ ಮೇಡಂ ಕೇಳಿದಷ್ಟೇ ಬರೆದರೆ ಮಾರ್ಕ್ಸ್ ಕಟ್ ಮಾಡುತ್ತೇನೆ. ಸ್ವಲ್ಪ ಜಾಸ್ತಿ ಬರೀಬೇಕು ಅಂತ ಉಲ್ಟಾ ಹೊಡೆದುಬಿಟ್ಟಿದ್ದರು.

ಮುಂದೆ ಅರ್ಧ ವಾರ್ಷಿಕ ಪರೀಕ್ಷೆ ಬಂತು. ಪೂರ್ತಿ ಪುಸ್ತಕವನ್ನೇ ಬಾಯಿಪಾಠ (ಕಂಠಪಾಠ) ಹೊಡೆದುಬಿಟ್ಟಿದ್ದೆ. ನಾನು ಬಾಯಿಪಾಠ ಮಾಡುವದು ಕಮ್ಮಿ. ಬಾಯಿಪಾಠ ಮಾಡುವವರಿಗೆ ವಿಷಯ ಗೊತ್ತಿರುವದಿಲ್ಲ. ಅವರು ದಡ್ಡರು. ವಿಷಯ ತಿಳಿದುಕೊಂಡು ಸ್ವಂತ ಶೈಲಿಯಲ್ಲಿ ಬರಿಯಬೇಕು ಅಂತ ನಮ್ಮ ಖಯಾಲು. ಹಾಗೆಯೇ ಮಾಡುತ್ತಿದ್ದೆ. ಆದರೆ ಇತಿಹಾಸ ಒಂದು ವಿಷಯವನ್ನು ಪೂರ್ಣ ವಿರಾಮ, ಅಲ್ಪ ವಿರಾಮ, ಅದು, ಇದು ಎಲ್ಲ ಹಿಡಿದು ಪೂರ್ತಿಯಾಗಿ ಬಾಯಿಪಾಠ. ಕೇಳಿದರೆ ಮಂತ್ರದಂತೆ ಉದುರಿಸುತ್ತಿದ್ದೆ. ಬರೆಯುತ್ತಿದ್ದೆ. ಎಲ್ಲ ಈ ಮಂಗೇಶಿ ಟೀಚರ್ ಸಲುವಾಗಿ.

ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮತ್ತೆ ಇತಿಹಾಸದ ಪೇಪರ್ ಬಂತು. ವೇಳೆ ಕೂಡ ಜಾಸ್ತಿ ಇರುತ್ತಿತ್ತು. ಹಾಗಾಗಿ ಬರೆದಿದ್ದೇ ಬರೆದಿದ್ದು. ಪೂರ್ತಿ ಪಠ್ಯವನ್ನು ಭಟ್ಟಿ ಇಳಿಸಿಬಿಟ್ಟೆ.

ಅಕ್ಟೋಬರ್ ರಜೆ ಮುಗಿಸಿ ಬಂದೆವು. ಇತಿಹಾಸದ ಟೀಚರ್ ಮತ್ತೆ ತಿದ್ದಿದ ಉತ್ತರ ಪತ್ರಿಕೆ ಕೊಟ್ಟರು. ಆವಾಗಲೂ ಅಲ್ಲಿಲ್ಲಿ ಒಂದೆರೆಡು ಮಾರ್ಕ್ಸ್ ಕಟ್ ಮಾಡಿದ್ದರು. ಈ ಸಲ ಪಠ್ಯಪುಸಕ್ತವನ್ನೂ ತೆಗೆದುಕೊಂಡೇ ಹೋದೆ. ಲೈನ್ ಬೈ ಲೈನ್ ತೋರಿಸಿದೆ. ಪುಸ್ತಕದಲ್ಲಿದ್ದ ಹಾಗೆಯೇ ಮಕ್ಕಿ-ಕಾ-ಮಕ್ಕಿ ಭಟ್ಟಿ ಇಳಿಸಿರುವಾಗ ಹೇಗೆ ಕಟ್ ಮಾಡಿದಿರಿ ಅಂತ ಆವಾಜ್ ಹಾಕುವ ಪ್ರಶ್ನೆಯೇ ಬರಲಿಲ್ಲ. ಮತ್ತೆರೆಡು ಮಾರ್ಕ್ಸ್ ಕೊಟ್ಟು ಕಳಿಸಿದ್ದರು. ಕೊಡಲಿಕ್ಕೇನು ಅದು ದಾನವೇ? ಎರಡು ವಾಕ್ಯದಲ್ಲಿ ಬರೆಯಿರಿ ಅಂತ ಇದ್ದರೆ ಮೊದಲಿನ ಎರಡು ವಾಕ್ಯಗಳಲ್ಲಿ ಬರೆಯಬೇಕಾಗಿದ್ದನ್ನು ಬರೆದು ನಂತರ ಇಡೀ ಪಾಠವನ್ನೇ ಭಟ್ಟಿ ಇಳಿಸಿಬಿಟ್ಟಿದ್ದೆ. ಯಾವ 'ಎರಡು' ವಾಕ್ಯ ಬೇಕಾದರೂ ಓದಿಕೊಂಡು ಫುಲ್ ಮಾರ್ಕ್ಸ್ ಕೊಡ್ರಿ ಅಷ್ಟೇ! ಅನ್ನುವ ಧಾಟಿಯಲ್ಲಿ.

ಹೀಗೆ ನಮ್ಮ ಗೋವಾ ಕೊಂಕಣಿ ಟೀಚರಿಗೇ ನೀರು ಕುಡಿಸಿಬಿಟ್ಟೆ ಅಂತ ಬೀಗುತ್ತಿರುವ ಹೊತ್ತಿಗೆ ಮೂರನೇ ತ್ರೈಮಾಸಿಕ ಅಂದರೆ preliminary ಪರೀಕ್ಷೆ ಬಂತು. ೧೯೮೬ ಡಿಸೆಂಬರ್. ಮತ್ತೆ ಇತಿಹಾಸದ ಪೇಪರ್ ಬಂತು. ಕೆಲವೇ ದಿವಸಗಳ ಹಿಂದೆ ಮಾತ್ರ ಅಮೇರಿಕನ್ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿಗಳ ಪಾಠ ಆಗಿತ್ತು. ಅವುಗಳ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆಗಳು ಬರುವದು ಖಾತ್ರಿ ಇತ್ತು. ಬರೋಬ್ಬರಿ ಬಾಯಿಪಾಠ ಹೊಡೆದಿಟ್ಟಿದ್ದೆ. ಯಾಕೆಂದರೆ ಮಕ್ಕಿ-ಕಾ-ಮಕ್ಕಿ ಬರೆದು ಟೀಚರ್ ಮುಖಕ್ಕೆ ಹಿಡಿಯಬೇಕಲ್ಲ? ಮಾರ್ಕ್ಸ್ ಕಟ್ ಮಾಡಿದರೆ ಜಗಳ ಮಾಡಲು ಸಪೋರ್ಟ್ ಬೇಕಲ್ಲ?

ಪರೀಕ್ಷೆಯ ಹಿಂದಿನ ದಿನ ಕೂಡ ರಾತ್ರಿ ಎರಡು ಘಂಟೆ ವರೆಗೆ ಓದಿ, ಶಿವಾಯ ನಮಃ ಅಂತ ಮಲಗಿದ್ದೆ. 'ಏನೂ ಒಂಬತ್ತನೇ ಕ್ಲಾಸಿನ ಹುಡುಗರಿಗೆ ಅಷ್ಟೆಲ್ಲ ಏನು ಓದುವದು ಇರುತ್ತದೆ!?' ಅಂತ ಕೇಳಿದರೆ ನೀವು ನಮ್ಮ ಜಮಾನಾದಲ್ಲಿ, ನಮ್ಮ ಶಾಲೆಗೆ ಹೋಗಬೇಕಿತ್ತು. ಸಿಕ್ಕಾಪಟ್ಟೆ ಓದೋದು, ಬರೆಯೋದು ಇರುತ್ತಿತ್ತು. of course, ಆಸಕ್ತಿ ಇದ್ದವರಿಗೆ, ಶ್ರದ್ಧೆ ಇದ್ದವರಿಗೆ ಮಾತ್ರ.

ಈ ತ್ರೈಮಾಸಿಕ ಪರೀಕ್ಷೆಗಳು ಅಂದರೆ ಒಂದು ತರಹದ ತಲೆನೋವು. ಎಲ್ಲ ಪೇಪರ್ ಐವತ್ತು ಮಾರ್ಕಿನವು. ಅದರಲ್ಲಿ ಮೂವತ್ತೈದು ಅಂಕಗಳು ಇತಿಹಾಸ ಮತ್ತು ಪೌರನೀತಿ ಕೂಡಿ. ಹದಿನೈದು ಅಂಕ ಭೂಗೋಳಕ್ಕೆ. ಇಡೀ ಪರೀಕ್ಷಾ ಸಮಯ ಒಂದೂವರೆ ಅಥವಾ ಎರಡು ತಾಸು ಮಾತ್ರ. ಆದರೆ ಬರೆಯುವದು ಸಾಕಷ್ಟು ಇರುತ್ತಿತ್ತು. ವಾರ್ಷಿಕ, ಅರ್ಧವಾರ್ಷಿಕ ಪರೀಕ್ಷೆಗಳೇ ಎಷ್ಟೋ ಬೆಟರ್. ನೂರು ಮಾರ್ಕಿನವು ಇರುತ್ತಿದ್ದವು. ಅರವತ್ತೈದು ಮಾರ್ಕಿನ ಇತಿಹಾಸ + ಪೌರನೀತಿ ಪೇಪರಿಗೆ ಫುಲ್ ಎರಡೂವರೆ ತಾಸು ಇರುತ್ತಿತ್ತು. ಭೂಗೋಳಕ್ಕೆ ಮತ್ತೊಂದು ಎರಡು ತಾಸು. ಬೇಕಾದಷ್ಟು ಟೈಮ್. ಸಕತ್ತಾಗಿ ನಲುಮೆಯಿಂದ ಒಲುಮೆಯಿಂದ ಬರೆದು, ಮತ್ತೆ ಮತ್ತೆ ಚೆಕ್ ಮಾಡಿ, ತಿದ್ದಿ, ಮೂಡ್ ಬಂದರೆ ಮತ್ತೂ ಒಂದಿಷ್ಟು ಗೀಚಿ, ನೀಟಾಗಿ ಎಲ್ಲಾ ಕಟ್ಟಿ, ಪೇಪರ್ ಕೊಟ್ಟು ಬರಬಹುದಿತ್ತು. ಈ ಐವತ್ತು ಮಾರ್ಕಿನ, ಒಂದೂವರೆ ತಾಸಿನ ಪೇಪರ್ ಅಂದರೆ ವೇಳೆಯೇ ಸಾಕಾಗುತ್ತಿರಲಿಲ್ಲ.

ಸಮಾಜಶಾಸ್ತ್ರದ ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಫುಲ್ ಸ್ಪೀಡಿನಲ್ಲಿ ಬರೆಯಲು ಆರಂಭಿಸಿಬಿಟ್ಟೆ. ಯಾಕೆಂದರೆ ಗೊತ್ತಿತ್ತು, ಅಷ್ಟು ಸ್ಪೀಡ್ ಇರಲಿಲ್ಲ ಅಂದರೆ ಕೊನೆಗೆ ಭೂಗೋಳದ ಪ್ರಶ್ನೆಗಳನ್ನು ಉತ್ತರಿಸುವದು ದೂರದ ಮಾತು, ಇತಿಹಾಸ ಮುಗಿಸಿ ಪೌರನೀತಿ ಶುರು ಮಾಡುವ ಹೊತ್ತಿಗೆ ಪರೀಕ್ಷೆ ಮುಗಿದ ಘಂಟೆ ಬಾರಿಸಿ ನಮ್ಮ ಬ್ಯಾಂಡ್ ಬಾರಿಸಿ ಹೋಗುತ್ತಿತ್ತು. ಆ ಕಾಲದ ನಮ್ಮ ಪರೀಕ್ಷಾ ತಯಾರಿ ಹೀಗಿರುತ್ತಿತ್ತು ಅಂದರೆ ಎಲ್ಲವೂ perfectly timed. ಇಷ್ಟು ನಿಮಿಷಗಳಾದಾಗ ಇಷ್ಟನೇ ಪ್ರಶ್ನೆಯಲ್ಲಿರಬೇಕು. ಇರಲಿಲ್ಲ ಅಂದರೆ ಸಿಕ್ಕಾಪಟ್ಟೆ ಆತಂಕ.

ಊಹಿಸಿದಂತೆ ಒಂದು 'ಕ್ರಾಂತಿಯ' ಬಗೆಗೂ ಪ್ರಶ್ನೆ ಕೇಳಿದ್ದರು. ಅದೂ ಐದು ಮಾರ್ಕಿನ ಪ್ರಶ್ನೆ. ಕಮ್ಮಿಕಮ್ಮಿಯೆಂದರೂ ಒಂದು ಫುಲ್ ಪುಟ ಬರೆಯಲಿಕ್ಕೇಬೇಕು. ಅದೂ ಮಂಗೇಶಿ ಮೇಡಂ ಬೇರೆ. ಹಾಗಾಗಿ ಮಿನಿಮಮ್ ಮೂರು ಪುಟ ಬರೆಯಬೇಕು. ಮತ್ತೆ ಪೂರ್ತಿ ಪಠ್ಯದ ಭಟ್ಟಿ ಇಳಿಸಿದರೂ ಮೂರು ಪುಟವೇ ಆಗುತ್ತಿತ್ತು.

ಕ್ರಾಂತಿಯ ಬಗ್ಗೆ ಬರೆಯಲು ಕೂತೆ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆದು ಬರೆದು ಬಿಸಾಡಿಬಿಟ್ಟೆ. ಆ ಫ್ರೆಂಚರೇ ತಮ್ಮ ಕ್ರಾಂತಿಯ ಬಗ್ಗೆ ಅಷ್ಟು ಬರೆದುಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಅದೆಷ್ಟು ಉದ್ದಕ್ಕೆ ಬರೆದೆ ಅಂದರೆ ಕೊನೆಗೆ ಭೂಗೋಳಕ್ಕೆ ಬಂದಾಗ ಕೇವಲ ಇಪ್ಪತ್ತು ನಿಮಿಷ ಮಾತ್ರ ಉಳಿದಿತ್ತು. ಹೇಗೋ ಮಾಡಿ, ಹಲ್ಲು ಕಚ್ಚಿ ಹಿಡಿದು, ಚಿತ್ರ ವಿಚಿತ್ರ ಅವತಾರ ಮಾಡಿಕೊಂಡು ಸಿಕ್ಕಾಪಟ್ಟೆ ಸ್ಪೀಡಿನಲ್ಲಿ ಬರೆದು ಪೇಪರ್ ಮುಗಿಸಿದೆ. ನನ್ನ ಪರಮಮಿತ್ರ ಅರುಣ ಭಟ್ಟ ಈಗಲೂ ತಮಾಷೆ ಮಾಡುತ್ತಿರುತ್ತಾನೆ. 'ಮಹೇಶಾ, ಪರೀಕ್ಷೆಯ ಲಾಸ್ಟ್ ಹತ್ತು ನಿಮಿಷ ನಿನ್ನ ಅವತಾರ ನೋಡುವ ಹಾಗಿರುತ್ತಿತ್ತು ಮಾರಾಯಾ. ಅದೇನು intensity! ಅದೇನು focus! ಅದೆಂತಹ ವಿಚಿತ್ರ ಮುಖ ಮಾಡಿಕೊಂಡು ಅವಡುಗಚ್ಚಿ ಬರೆಯುತ್ತಿದ್ದೆ ಮಾರಾಯಾ!' ಅನ್ನುತ್ತ ಪೆಕಪೆಕಾ ನಗುತ್ತಾನೆ. 'ಈ ಭಟ್ಟ ನನ್ನನ್ನು ಹೊಗಳುತ್ತಿದ್ದಾನೋ ಅಥವಾ ಗೇಲಿ ಮಾಡುತ್ತಿದ್ದಾನೋ?' ಅಂತ ಅರ್ಥವಾಗುವದಿಲ್ಲ.

ಸರಿ, ಪೇಪರ್ ಮುಗಿಸಿ ಹೊರಗೆ ಬಂದೆ. ನಮ್ಮ ಖಾಸಂ ಖಾಸ್ ದೋಸ್ತರನ್ನು ಭೆಟ್ಟಿ ಮಾಡಿ ಮುಂದಿನ ಸ್ಕೆಚ್ ಹಾಕಬೇಕು. ಅದೇ ಕೊನೆಯ ಪೇಪರ್ ಆಗಿತ್ತು. ಮತ್ತೆ ಸುಮಾರು ಮಧ್ಯಾಹ್ನ ಹನ್ನೆರೆಡು ಘಂಟೆ ಹೊತ್ತಿಗೇ ಮುಗಿದುಬಿಟ್ಟಿತ್ತು. ಮಧ್ಯಾಹ್ನವಿಡೀ ಫ್ರೀ.

ಯಾರೋ ಮಿತ್ರರು ಸಿಕ್ಕರು. ಸಮಾಜಶಾಸ್ತ್ರದ ಪೇಪರ್ ಬಗ್ಗೆ ಮಾತಾಡಿದೆವು. ಫ್ರೆಂಚ್ ಕ್ರಾಂತಿಯ ಬಗ್ಗೆ ಸಿಕ್ಕಾಪಟ್ಟೆ ಬರೆದು ಕ್ರಾಂತಿ ಮಾಡಿ ಬಂದ್ದಿದ ನಾನು, 'ಏನ್ರಿಲೇ, ಹ್ಯಾಂಗಾತು ಪೇಪರ್? french revolution ಬಗ್ಗೆ ಐದು ಮಾರ್ಕಿನ ದೊಡ್ಡ ಪ್ರಶ್ನೆ ಬಂದಿತ್ತು. ಎಲ್ಲಾರೂ ಮಸ್ತ ಬರೆದು ಬಂದ್ರೋ ಇಲ್ಲೋ???' ಅಂತ ದೊಡ್ಡ ಆವಾಜ್ ಹಾಕಿ ಕೇಳಿದೆ.

ಮಿತ್ರರು ನನ್ನ ಮುಖವನ್ನು ಪಿಕಿಪಿಕಿ ನೋಡಿದರು. 'ಯಾಕ್ರಿಲೇ, ಏನಾತು? ಫ್ರೆಂಚ್ ಕ್ರಾಂತಿ ಬಗ್ಗೆ ಐದು ಮಾರ್ಕಿನ ಪ್ರಶ್ನೆ ಇತ್ತಲ್ಲರೋ!? ಅದರ ಬಗ್ಗೆ ಕೇಳಿದೆ. ನಾ ಅಂತೂ ಹಾಕ್ಕೊಂಡು ಮೂರು ಪೇಜ್ ಬರೆದು ಒಗಾಯಿಸಿಬಿಟ್ಟೆ ನೋಡ್ರಿಲೇ. ಈ ಸರೆ ಟೀಚರ್ ಏನರೆ ಮಾರ್ಕ್ಸ್ ಕಟ್ ಮಾಡಬೇಕು. ಅಷ್ಟೇ ಮತ್ತ. ಆಮ್ಯಾಲೆ ಅವರಿಗೆ ನನಗ ಅದ,' ಅಂತ ಹೇಳಿ, ಮುಂದೆ ಮಂಗೇಶಿ ಮೇಡಂ ಜೊತೆ ಆಗಬಹುದಾದ ನಮ್ಮ ಹಡಾಗತಿ ಕ್ರಾಂತಿಯ ಬಗ್ಗೆ ಹೇಳಿಕೊಂಡೆ.

'ಮಹೇಶಾ........ ' ಅಂದ ಒಬ್ಬವ. ಎಳೆದ.

'ಏನಲೇ??????' ಅಂತ ಕೊಂಚ ಅಸಹನೆಯಿಂದ ಕೇಳಿದೆ.

'ಏನು ಫ್ರೆಂಚ್ ಕ್ರಾಂತಿ ಬಗ್ಗೆ ಹೇಳಲಿಕತ್ತಿ? ಅಮೇರಿಕನ್ ಕ್ರಾಂತಿ ಬಗ್ಗೆ ಅಲ್ಲೇನೋ ಐದು ಮಾರ್ಕಿನ ಪ್ರಶ್ನೆ ಬಂದಿದ್ದು? ನೋಡಿಲ್ಲೆ,' ಅನ್ನುತ್ತ ಪ್ರಶ್ನೆ ಪತ್ರಿಕೆಯನ್ನು ಚಡ್ಡಿ ಜೇಬಿಂದ ತೆಗೆದು ತೋರಿಸಿದ. ನಾವೆಲ್ಲಾ ಆಗಲೇ ಪ್ಯಾಂಟ್ ಹಾಕುತ್ತಿದ್ದರೆ ಇವನ್ಯಾವನೋ ಇನ್ನೂ ಚೊಣ್ಣ ಹಾಕುತ್ತಿದ್ದ. ಈಡಿಯಟ್ ಹಳ್ಳಿ ಹುಂಬ. ಹಾಗಂತ ಅಂದಿನ ಭಾವನೆ. ಈಗ ನಾವೇ ಯಾವಾಗಲೂ ಚೊಣ್ಣ ಹಾಕುತ್ತೇವೆ. ಆಫೀಸಿಗೆ ಚೊಣ್ಣ ಹಾಕಿಕೊಂಡು ಹೋಗುವದಕ್ಕೆ ಅವಕಾಶವಿಲ್ಲವೆಂಬುದೇ ದೊಡ್ಡ ದುಃಖ. ಕಾಲ ಹೇಗೆ ಬದಲಾಗುತ್ತದೆ ನೋಡಿ.

ಅವನು ತೋರಿಸಿದ ಪ್ರಶ್ನೆಪತ್ರಿಕೆ ನೋಡಿದ ನಾನು ಎಚ್ಚರ ತಪ್ಪಿ ಬೀಳಲಿಲ್ಲ ಅನ್ನುವದೇ ದೊಡ್ಡ ಮಾತು. ಹೌದು. ನಿಜವಾಗಿಯೂ ಹೌದು. ಪ್ರಶ್ನೆ ಕೇಳಿದ್ದು ಅಮೇರಿಕನ್ ಕ್ರಾಂತಿಯ ಕುರಿತಾಗಿಯೇ ಇತ್ತು. ನಾನು ದೀಡ್ ಪಂಡಿತ ಪ್ರಶ್ನೆಯನ್ನು ಸರಿಯಾಗಿ ಓದದೇ ಫ್ರೆಂಚ್ ಕ್ರಾಂತಿಯ ಬಗ್ಗೆ ಪ್ರಬಂಧದಷ್ಟು ಉದ್ದವಾಗಿ ಉತ್ತರ ಬರೆದು ಬಂದಿದ್ದೇನೆ. ಅಲ್ಲಿಗೆ ಐದು ಮಾರ್ಕ್ಸ್ ಪೂರ್ತಿ ಶಿವಾಯ ನಮಃ!

ಮುಖ ಮಂಗ್ಯಾನ ಮುಖವಾಯಿತು. ಏನೂ ಹೇಳಲಿಲ್ಲ. ಮೊದಲೇ ಸಿಕ್ಕಾಪಟ್ಟೆ ಬೇಸರವಾಗಿತ್ತು. ಮಾಡಿದ ತಪ್ಪನ್ನು ಇವರ ಹತ್ತಿರ ಹೇಳಿಕೊಂಡರೆ ಅಷ್ಟೇ ಮತ್ತೆ. ಮತ್ತೊಂದಿಷ್ಟು ಗೇಲಿ ಮಾಡಿಕೊಂಡು ನಗುತ್ತಾರೆ. ಗಾಯದ ಮೇಲೆ ಉಪ್ಪು. ಯಾವನಿಗೆ ಬೇಕು ಆ ಉಸಾಬರಿ.

ನಾನು ನನ್ನ ಖಾಸಮ್ ಖಾಸ್ ದೋಸ್ತರಾಗಿದ್ದ ಅರವಿಂದ ಪಾಟೀಲ ಮತ್ತು ಮಹೇಶ ಮುದಗಲ್ಲರಿಗಾಗಿ ಕಾದು ನಿಂತೆ. ಉಳಿದ ದೋಸ್ತರು ಮನೆ ಕಡೆ ಹೋದರು.

'ಅರೇ ಇಸ್ಕಿ! ಇದೆಂಗೆ ಹೀಗಾಯಿತು? ಅಮೇರಿಕನ್ ಕ್ರಾಂತಿ ಬಗ್ಗೆ ಪ್ರಶ್ನೆ ಕೇಳಿದರೆ ನಾನು ಅದು ಹೇಗೆ confuse ಮಾಡಿಕೊಂಡು ಫ್ರೆಂಚ್ ಕ್ರಾಂತಿ ಬಗ್ಗೆ ಬರೆದು ಬಂದೆ? ಮಂಗ್ಯಾ ಆದೆ?' ಅಂತ ವಿಚಾರ ಮಾಡಿದೆ. ಹೊಳೆಯಿತು. ರಾತ್ರಿ ಕೊನೆಯಲ್ಲಿ ಓದಿ ಮುಗಿಸಿದ್ದು ಅದೇ ಆಗಿತ್ತು. ಫ್ರೆಂಚ್ ಕ್ರಾಂತಿ. ಅಪರಾತ್ರಿ ಎರಡು ಘಂಟೆಗೆ ಫೆಂಚ್ ಕ್ರಾಂತಿಯನ್ನು ಕೊನೆಯ ಬಾರಿಗೆ ಬಾಯಿಪಾಠ ಮಾಡಿ ಮಲಗಿದ್ದೇನೆ. ತಲೆಯಲ್ಲಿ ಅದೇ ಗಿರಿಕಿ ಹೊಡೆದಿದೆ. ಮರುದಿನ ಪೇಪರ್ ಬರೆಯುವಾಗ ಗಡಿಬಿಡಿ ಬೇರೆ. ಪ್ರಶ್ನೆಯಲ್ಲಿ Revolution ಅಂತ ಕಂಡ ಕೂಡಲೇ subconscious ಮನಸ್ಸಿನ ಆಳದಿಂದ 'ಫ್ರೆಂಚ್' ಅಂತ auto-suggestion ಬಂದಿರಬೇಕು. ಹಾಗಾಗಿ ಅಲ್ಲಿ American revolution ಬಗ್ಗೆ ಪ್ರಶ್ನೆ ಕೇಳಿದ್ದರೂ, ಕಣ್ಣುಗಳು ಹಾಗೆಯೇ ಓದಿದ್ದರೂ, french revolution ಬಗ್ಗೆ ಬರೆದು ಬಂದಿದ್ದೇನೆ. ಶಿವಾಯ ನಮಃ! ಅದ್ಯಾವ ಫ್ರೆಂಚ್ ದೆವ್ವ ಆ ರಾತ್ರಿ ಬಡಿದುಕೊಂಡಿತ್ತೋ ಏನೋ. ಒಟ್ಟಿನಲ್ಲಿ ಸುಖಾಸುಮ್ಮನೆ ಐದು ಮಾರ್ಕಿಗೆ ಕೊಕ್ಕೆ.

ಅಷ್ಟರಲ್ಲಿ ಅರವಿಂದ ಪಾಟೀಲ ಬಂದ. ಮಹೇಶ ಮುದುಗಲ್ಲ ಆಗಲೇ ಮನೆ ಕಡೆ ರೈಟ್ ಹೇಳಿಬಿಟ್ಟಿದ್ದ ಅಂತ ಕಾಣುತ್ತದೆ. ಕಾಣಲಿಲ್ಲ.

ಕೊನೆಯ ಪರೀಕ್ಷೆ ಮುಗಿದ ಮೇಲೆ ಏನು ಮಾಡದಿದ್ದರೂ ಒಂದು ಸಿನೆಮಾ ನೋಡಬೇಕು. ಅದು ಪದ್ಧತಿ. ನಂತರ ಅವರವರ ಸಂಸ್ಕಾರಾನುಸಾರ ಕೆಲವರು ಹೋಟೆಲ್ಲಿಗೆ ಹೋಗಿ ತಿಂಡಿ ತಿಂದು ಬಂದರೆ ನಮ್ಮಂತವರು ತಿಂಡಿ ತಿಂದ ಮೇಲೆ ಒಂದು ಜರ್ದಾ ಪಾನ್ / ಸಾದಾ ಪಾನ್ ಕೂಡ ಹಾಕುತ್ತಿದ್ದೆವು. ಇನ್ನೂ ಕೆಲವರು ಸಿಗರೇಟ್ ಸಹಿತ ಸೇದುತ್ತಿದ್ದರು. ಇನ್ನೂ ಮುಂದುವರೆದವರು ಸಂಜೆಯಾಗುವವರೆಗೂ ಕಾದಿದ್ದು, ಯಾವದೋ ಬಾರಿನ ಕತ್ತಲೆಯಲ್ಲಿ ಹೊಟ್ಟೆಗೆ ಒಂದಿಷ್ಟು ಎಣ್ಣೆ (mostly beer ಮಾತ್ರ) ಸುರುವಿಕೊಂಡು, ನಾನ್ವೆಜ್ ಊಟ ಮಾಡಿ, ಮನೆಗೂ ಹೋಗದೇ, ಎಲ್ಲೋ ಮಲಗಿ ಮರು ದಿನ ಎದ್ದು ಬರುತ್ತಿದ್ದರು. ಇನ್ನೂ ಮುಂದುವರೆದವರು ರಾಮನಗರ ಬಡಾವಣೆಯ ಘರವಾಲಿಯೊಬ್ಬಳ ಮನೆಗೆ ಹೋಗಿ blue-film ಸಹಿತ ನೋಡಿ ಬರುತ್ತಿದ್ದರಂತೆ. ಅವರು ಸಿಕ್ಕಾಪಟ್ಟೆ ಮುಂದುವರೆದವರು. ಈ ಮಂಗ್ಯಾನಮಕ್ಕಳು ದಂಧೆ (ವೇಶ್ಯಾವಾಟಿಕೆ) ನಡೆಸುವ ಘರವಾಲಿಯೊಬ್ಬಳ ಮನೆಗೆ ಹೋಗಿ ಕೇವಲ blue-film ಮಾತ್ರ ನೋಡಿಬರುತ್ತಾರೋ ಅಥವಾ ಮತ್ತೇನಾದರೂ 'ಮಾಡಿ' ಕೂಡ ಬರುತ್ತಾರೋ... ಅಂತ ವಿಚಾರ ಬರುತ್ತಿತ್ತು. ಯಾರಿಗೆ ಗೊತ್ತು? ನಮ್ಮ ಸ್ನೇಹಿತರಲ್ಲಿ ಯಾರೂ ಅಂತವರು ಇರಲಿಲ್ಲ. ನಮ್ಮದೇನಿದ್ದರೂ ಕೇವಲ ಮೂವಿ ಮತ್ತು ಹೋಟೆಲ್  ಅಷ್ಟೇ.

ಸಿನೆಮಾಕ್ಕೆ ಹೋಗುವದು ಅಂತ ವಿಚಾರ ಮಾಡಿಯಾಯಿತು. ಆವಾಗ ಸಂಜಯ್ ದತ್ ಮತ್ತು ಬಾಂಬ್ ಸುಂದರಿ ಅನಿತಾ ರಾಜ್ ನಟಿಸಿದ್ದ 'ಮೇರಾ ಹಕ್' (ನನ್ನ ಹಕ್ಕು) ಅನ್ನುವ ಹಿಂದಿ ಸಿನೆಮಾ ಜಬರ್ದಸ್ತಾಗಿ ಓಡುತ್ತಿತ್ತು. ಆಗಾಗ ಟೀವಿ ಮೇಲೆ ಅದರಲ್ಲಿನ ಹಾಡುಗಳನ್ನು ತೋರಿಸಿ, ರೇಡಿಯೋದಲ್ಲಿ ಕೇಳಿಸಿ ನಮ್ಮಂತವರನ್ನು ಮಂಗ್ಯಾ ಮಾಡಿಟ್ಟಿದ್ದರು. ಮೊದಲೇ ಸುಂದರ ಸುಪನಾತಿ ಅನಿತಾ ರಾಜ್ ಅಂದರೆ ನಮ್ಮ ಅಂದಿನ ಕನಸಿನ ಕನ್ಯೆ. ಆಗತಾನೆ ಒದ್ದುಕೊಂಡು ಬರುತ್ತಿದ್ದ ನಮ್ಮ ಜವಾನಿಗೆ ಬೆಂಕಿ ಹಚ್ಚಿದ ಬಿನ್ನಾಣಗಿತ್ತಿ ಅಂದರೆ ಅನಿತಾ ರಾಜ್. ಮುಂದೆ ಮಾಧುರಿ ದೀಕ್ಷಿತ್ ಬರುವವರೆಗೆ ಜೈ ಅನಿತಾ ರಾಜ್. ಮತ್ತೆ ಕೆಲವೇ ತಿಂಗಳುಗಳ ಹಿಂದೆ ಇದೇ ಅನಿತಾ ರಾಜ್ ಸಿಕ್ಕಾಪಟ್ಟೆ hot ಆಗಿ ನಟಿಸಿದ್ದ 'ಇಲ್ಜಾಮ್' ನೋಡಿ ಫುಲ್ ಮಂಗ್ಯಾ ಆಗಿದ್ದೆವು. ಎಲ್ಲಿಯವರೆಗೆ ಅಂದರೆ  ನಮ್ಮದೇ ಕ್ಲಾಸಿನ B ವಿಭಾಗದ ಚಿಣ್ಣ ಬಾಂಬ್ ಸುಂದರಿಯೊಬ್ಬಳಿಗೆ ಅನಿತಾ ರಾಜ್ ಅಂತಲೇ ಹೆಸರಿಟ್ಟು ಆಕೆಯ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು.

ಅರವಿಂದ ಪಾಟೀಲನ ಜೊತೆ ಮಾತಾಡಿ, ಮೂವಿಗೆ ಹೋಗುವ ಪ್ಲಾನ್ ಮಾಡಿ, ಇನ್ನೇನು ಮನೆ ಕಡೆ ಸೈಕಲ್ ಎತ್ತೋಣ ಅನ್ನುವಷ್ಟರಲ್ಲಿ ಗಿರೀಶ ಕಿತ್ತೂರ ಅನ್ನುವ ಮತ್ತೊಬ್ಬ ಮಿತ್ರ ಬಂದ. ಅದೇನೋ ಅವತ್ತು ಅವನೂ ನಮ್ಮ ಜೊತೆ ಮೂವಿಗೆ ಬರುತ್ತೇನೆ ಅಂದ. 'ಆಯಿತು ಮಾರಾಯ. ನೀನೂ ಬಾ,' ಅಂದೆವು. ಮನೆಗೆ ಹೋಗಿ, ಮಧ್ಯಾಹ್ನ ಎರಡೂವರೆ ಹೊತ್ತಿಗೆ, ಧಾರವಾಡದ ಪೇಟೆ ಮಧ್ಯದಲ್ಲಿರುವ ಶ್ರೀನಿವಾಸ್-ಪದ್ಮಾ ಥಿಯೇಟರ್ ಹತ್ತಿರ ಭೆಟ್ಟಿಯಾಗೋಣ ಅಂತ ನಿರ್ಧರಿಸಿ ಎಲ್ಲರೂ ಮನೆ ಕಡೆ ಪೋಯಾಚ್ ಆದೆವು.

ಸರಿ. ಮಧ್ಯಾಹ್ನ ಮೂವರೂ ಕೂಡಿ 'ಮೇರಾ ಹಕ್' ಅನ್ನುವ ತಗಡು ಮೂವಿ ನೋಡಿದೆವು. ಈಗ ತಗಡು. ಆವಾಗ ಫುಲ್ ಪೈಸಾ ವಸೂಲ್. ಫುಲ್ ನಾಚ್ ಗಾನಾ. ದಿವ್ಯ ಸುಂದರಿ ಅನಿತಾ ರಾಜ್......ಅಬ್ಬಬ್ಬಾ..... ಅದೇನು ಒನಪು, ಅದೇನು ವೈಯಾರ....ಝಕಾಸ್ ಡಾನ್ಸ್? ಅದನ್ನಂತೂ ಕೇಳಲೇಬೇಡಿ. ಬಾಂಬ್ ಸುಂದರಿ! ನೋಡಿ ಫುಲ್ ಗರಮ್ ನಾವು. ಜೊತೆಗೆ ಸಂಜಯ ದತ್ತ. ಸದಾ ನಶೆಯ ಕಣ್ಣುಗಳಲ್ಲೇ ಇರುತ್ತಿದ್ದ. ಆ ಪುಣ್ಯಾತ್ಮ ಇರುವದೇ ಹಾಗೋ ಅಥವಾ ಏನಾದರೂ ತೆಗೆದುಕೊಂಡೇ ಇರುತ್ತಿದ್ದನೋ ಗೊತ್ತಿಲ್ಲ. ಅವನಿಗೊಬ್ಬ ಮಾಮಾ.... ಶಕ್ತಿ ಕಪೂರ. ಮಾವನನ್ನು ಸಿನೆಮಾದಲ್ಲಿ ಮಾತಿಗೊಮ್ಮೆ,'ಮಾಮೇ, ಮಾಮೇ,' ಅಂತ ಅದೊಂದು ತರಹ ಟ್ರೇಡ್ಮಾರ್ಕ್ ಶೈಲಿಯಲ್ಲಿ ಕರೆಯುವದೇ ಒಂದು ದೊಡ್ಡ ಮಜಾ. ನಮ್ಮ ಕ್ಲಾಸಿನ ಮಹಾ ದೊಡ್ಡ ವಿದೂಷಕನಾಗಿದ್ದ ಗಿರೀಶ ಕಿತ್ತೂರ ಅದನ್ನು ಬರೋಬ್ಬರಿ ಕರಗತ ಮಾಡಿಕೊಂಡು ಮುಂದಿನ ಎರಡು ತಿಂಗಳು ಸಿಕ್ಕಾಪಟ್ಟೆ ನಗಿಸಿದ. ಅದು ಕಿತ್ತೂರನ ಕರಾಮತ್ತು. ಅವನು ಸಹಜವಾಗಿ ಮಾತಾಡಿದರೇ ನಗು ಬರುತ್ತಿತ್ತು. ಇನ್ನು ಇಂತಹ ಮಂಗ್ಯಾನ ವೇಷ ಮಾಡಿಬಿಟ್ಟರಂತೂ ಮುಗಿದೇಹೋಯಿತು. ಇಂತಹ ಅದ್ಭುತ ಹಾಸ್ಯಗಾರ ಗಿರೀಶ ಕಿತ್ತೂರ ಅನ್ನುವ ಮಿತ್ರ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿಯೇ (೧೯೯೭,೯೮) ಈ ಜಗತ್ತಿನ ಬಂಧ ಕಿತ್ತುಕೊಂಡು ಹೋಗಿದ್ದು ನಮ್ಮ ಬ್ಯಾಚಿನ ದೊಡ್ಡ ದುರಂತ. ದೊಡ್ಡ ಹೃದಯಾಘಾತವಾಗಿ ಖಲಾಸ್. ಆದರೂ ಅವನ ಕ್ಲಾಸಿಕ್ ಮಂಗ್ಯಾತನದ ನೆನಪುಗಳು ಇನ್ನೂ ಹಸಿರಾಗಿವೆ. ನೆನಪಾದಾಗೊಮ್ಮೆ ಮುಖದ ಮೇಲೆ ನಗೆ. ಒಮ್ಮೊಮ್ಮೆ ಸುತ್ತಮುತ್ತಲು ಯಾರೂ ಇಲ್ಲದಿದ್ದರೆ ಜೋರಾಗಿಯೇ ಪೆಕಪೆಕಾ ಅಂತ ನಕ್ಕುಬಿಡುತ್ತೇನೆ. 'ಮೇರಾ ಹಕ್' ನೋಡಿ ಮಾಮೇ, ಮಾಮೇ ಅಂತ ವಿಚಿತ್ರವಾಗಿ ಕೂಗುವದನ್ನು ಕಲಿತಿದ್ದ ಆಸ್ಥಾನ ವಿದೂಷಕ ಕಿತ್ತೂರ ಕ್ಲಾಸಿಗೆ ಬಂದು ಹೋಗುತ್ತಿದ್ದ ಮಾಸ್ತರ್ ಮಂದಿಗೆಲ್ಲ ಮಾಮೇ, ಮಾಮೇ ಅಂದುಬಿಡುತ್ತಿದ್ದ. ಅದೂ ನಮಗಷ್ಟೇ ಕೇಳಿಸುವ ಹಾಗೆ. ನಮಗೆ ನಗು ತಡೆಯಲಾಗುತ್ತಿರಲಿಲ್ಲ. ನಕ್ಕರೆ ಎದುರಿಗೆ ಆಗತಾನೇ ಫ್ರೆಶ್ ಆಗಿ ಮಾಮೇ ಅನ್ನಿಸಿಕೊಂಡಿದ್ದ ಮಾಸ್ತರ್ ನಿಂತಿರುತ್ತಿದ್ದರು. ಏನು ಹೇಳಲಿ?

ಸರಿ. ಮೂವಿ ನೋಡಿ ಪಕ್ಕದ ಕಾಮತ್ ಹೋಟೆಲ್ಲಿನಲ್ಲಿ ಒಂದಿಷ್ಟು ಬರೋಬ್ಬರಿ ತಿಂಡಿ ಗದುಮಿ, ಪಕ್ಕದ ಪಾನ್ ಶಾಪಿನಲ್ಲಿ ಒಂದು ಪಾನ್ (ಸಾದಾ ಮತ್ತೆ. ಜರ್ದಾ ಅಲ್ಲ) ಹೆಟ್ಟಿ, ಒಂದಿಷ್ಟು ಪೇಟೆ ಸುತ್ತಾಡಿ, ಒಂದಿಷ್ಟು ಪುಸ್ತಕ ಪತ್ರಿಕೆ ಖರೀದಿ ಮಾಡಿ, ರೆಡಿಮೇಡ್ ಬಟ್ಟೆಗಳ ಅಂಗಡಿಗಳ ಮುಂದೆ ವಿಂಡೋ ಶಾಪಿಂಗ್ ಮಾಡಿ, ಮುಂದೆ ಬರಲಿರುವ ಸಂಕ್ರಾಂತಿ ಹಬ್ಬಕ್ಕೆ ತಂದೆತಾಯಿಗಳಿಂದ ಯಾವ ಹೊಸ ಪ್ಯಾಂಟ್ ಖರೀದಿ ಮಾಡಿಸಿಕೊಳ್ಳಬೇಕು ಅಂತ ಒಂದಿಷ್ಟು ಆಯ್ಕೆಗಳನ್ನು ಪಟ್ಟಿ ಮಾಡಿಕೊಂಡು, ಆರಾಮಾಗಿ ರಾತ್ರೆ ಒಂಬತ್ತರ ಮೇಲೆ ಮನೆಗೆ ಬಂದು ಮುಟ್ಟಿಕೊಂಡೆ. ನಾವು ಹಾಗೆಲ್ಲ ಬೀದಿ, ಪೇಟೆ ಸುತ್ತಲು ಹೋಗುವದು ಕಮ್ಮಿ. ಪರೀಕ್ಷೆ ಮುಗಿದ ನಂತರದ ಮೂವಿ, ಹೋಟೆಲ್, ಪಾನ್, ಪೇಟೆ ಸುತ್ತಾಟ, ಹೀಗೆ ಎಲ್ಲ ಬಾರಾ ಖೂನ್ ಮಾಫ್ ಮಾದರಿ.

ಇಷ್ಟೆಲ್ಲಾ ಮಜಾ ಮಾಡಿ ಬಂದರೂ ಬೆಳಿಗ್ಗೆ ಇತಿಹಾಸದ ಪೇಪರಿನಲ್ಲಿ ಏನೋ ಪ್ರಶ್ನೆ ಕೇಳಿದರೆ ಏನೋ ಉತ್ತರ ಬರೆದು ಬಂದಿದ್ದರ ಕಹಿ ಮಾತ್ರ ಏನೇ ಮಾಡಿದರೂ ಹೋಗುತ್ತಿರಲಿಲ್ಲ. ಮತ್ತೆ ಮತ್ತೆ, 'ಛೇ! ಛೇ! ಏನಾಗಿಹೋಯಿತು??' ಅನ್ನುವ ಹತಾಶ ಫೀಲಿಂಗ್.

ಮೂರ್ನಾಲ್ಕು ದಿವಸಗಳ ನಂತರ ತಿದ್ದಿದ ಉತ್ತರ ಪತ್ರಿಕೆಗಳು ಸಿಗಲಾರಂಭಿಸಿದವು. ನಮ್ಮ ಇತಿಹಾಸದ ಮಂಗೇಶಿ ಟೀಚರ್ ಬರೋಬ್ಬರಿ ಚೆಕ್ ಮಾಡಿದ್ದರು. ತಪ್ಪುತ್ತರ ಬರೆದ ಪ್ರಶ್ನೆಯೊಂದನ್ನು ಬಿಟ್ಟರೆ ಬೇರೆಲ್ಲದಕ್ಕೆ ಫುಲ್ ಮಾರ್ಕ್ಸ್. ತಪ್ಪುತ್ತರ ಬರೆದಿದ್ದರೂ ಭಯಂಕರ ಚೆನ್ನಾಗಿ ಬರಿದ್ದಿದ್ದಕ್ಕೆ, 'Very good! Wrong answer to the right question!' ಅಂತ ರಿಮಾರ್ಕ್ ಬೇರೆ ಹಾಕಿ ಒಂದು ಸೊನ್ನೆಯನ್ನು ಅದ್ಯಾವ ರೀತಿ ಸುತ್ತಿದ್ದರು ಅಂದರೆ ಆ ಸೊನ್ನೆ ಜೀವನದಲ್ಲಿ ಗಳಿಸಿದ ಸೊನ್ನೆಗಳಲ್ಲಿಯೇ ಮೊದಲನೇಯದು ಅಂತ ನೆನಪು. ತುಂಬಾ ಮುದ್ದಾಗಿ ಅಂದವಾಗಿ ಸುತ್ತಿದ್ದರು. ಝೀರೋ. ನಮ್ಮ ಧಾರವಾಡ ಭಾಷೆಯಲ್ಲಿ ಪೂಜಿ!

ಇತಿಹಾಸದ ಪೇಪರಿನಲ್ಲಿ ಒಂದು ಪ್ರಶ್ನೆಗೆ ಸೊನ್ನೆ ಸುತ್ತಿದ್ದು ಹಾಳಾಗಿ ಹೋಗಲಿ. ಮುಂದೊಂದಿಷ್ಟು ದಿನ ಟೀಚರ್ ಎದುರಿಗೆ ಕಂಡಾಗೊಮ್ಮೆ ನಾನು ರೂಢಿ ಪ್ರಕಾರ ಶುದ್ಧ ಧಾರವಾಡ ಕನ್ನಡದಲ್ಲಿ, 'ನಮಸ್ಕಾರ್ರೀ, ಟೀಚರ್,' ಅಂತ ಎಂದಿನಂತೆ ವಂದಿಸುತ್ತಿದ್ದೆ. ಅವರಿಗೆ ನನ್ನ ಅದ್ಭುತ ತಪ್ಪು ಉತ್ತರ ನೆನಪಿಗೆ ಬರುತ್ತಿತ್ತು ಅಂತ ಕಾಣುತ್ತದೆ. ಹಿಂದೆ ಅವರೊಂದಿಗೆ ಮಾಡಿದ್ದ ಹಳೆಯ ಜಗಳಗಳು ನೆನಪಿಗೆ ಬಂದು, 'ಇವನು ಬರೋಬ್ಬರಿ ಪಾಠ ಕಲಿತ. ನಾನೇನೂ ಮಾಡಬೇಕಾಗಿ ಬರಲಿಲ್ಲ,' ಅಂತ ಅನ್ನಿಸುತ್ತಿತ್ತೇನೋ ಗೊತ್ತಿಲ್ಲ. ಸಿಕ್ಕಾಪಟ್ಟೆ ಕಿಸಿಕಿಸಿ ಅಂತ ಹದಿಹರೆಯದ ಹುಡುಗಿ ತರಹ ನಗುತ್ತ ಹೋಗುತ್ತಿದ್ದರು. ಹಾಗೆ ಕಿಸಿಕಿಸಿ ನಕ್ಕರೂ ನನ್ನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳದೇ ಹೋಗಲಿಲ್ಲ. ಆ ಮಟ್ಟಿನ ಸಂಸ್ಕಾರ ಇತ್ತು ಮಂಗೇಶಿ ಮೇಡಂ ಅವರಲ್ಲಿ. ಆದರೆ ನನ್ನ ನೋಡಿದಾಗೊಮ್ಮೆ ಅವರಿಗೆ ಸಿಕ್ಕಾಪಟ್ಟೆ ನಗು ಮಾತ್ರ ಬರುತ್ತಿತ್ತು. ತಡೆಯಲು ಆಗುತ್ತಿರಲಿಲ್ಲ. 'ಟೀಚರ್, ನಮಗೂ ಒಮ್ಮೊಮ್ಮೆ ಕ್ಲಾಸಿನಲ್ಲಿ ಹೀಗೇ ಆಗುತ್ತದೆ. ನಿಮ್ಮಂತಾ ಟೀಚರ್, ಮಾಸ್ತರ್ ಮಂದಿ ನೋಡಿದಾಗ, ಯಾರೋ ಏನೋ ಜೋಕ್ ಹೊಡೆದಾಗ ಹೀಗೇ ನಗು ಬರುತ್ತದೆ. ತಡೆದುಕೊಳ್ಳಲು ಆಗುವದಿಲ್ಲ. ನಕ್ಕರೆ ನೀವು ಒಂದೋ ಬಾರಿಸುತ್ತೀರಿ. ನಿಮ್ಮ ಕಡೆ ಆಗುವದಿಲ್ಲ ಅಂತಾದರೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಮಂದಿಯನ್ನು ಕರೆದುಕೊಂಡು ಬಂದು ನಮ್ಮ ದೇಹದ ರಿವೆಟ್ ಎಲ್ಲಾ ಲೂಸ್ ಮಾಡಿಸುತ್ತೀರಿ. ಈಗ ನೀವು ನಮ್ಮನ್ನು ನೋಡಿ ಏನೋ ನೆನಪಿಸಿಕೊಂಡು ಕಿಸಿಕಿಸಿ ನಕ್ಕಾಗ ನಾವೇನು ಮಾಡಬೇಕು???' ಅಂತ ನನಗೆ ಅನ್ನಿಸುತ್ತಿತ್ತು. ಏನು ಮಾಡೋದು? ಮಂಗ್ಯಾ ಆಗಿದ್ದೆ. ಅದೂ ಸ್ವಂತ ಯಬಡತನದಿಂದ ಆಗಿದ್ದ ಮಂಗ್ಯಾ. self made ಮಂಗ್ಯಾ.

ಆಗ ನನಗಾಗುತ್ತಿದ್ದ ಸಂಕಟ ಅರ್ಥ ಮಾಡಿಕೊಂಡವ ಮತ್ತೆ ಅದೇ ಮಿತ್ರ ಅರವಿಂದ ಪಾಟೀಲ. ಅವಂದು ನಂದು yin-yang ಮಾದರಿಯ ದೋಸ್ತಿ. 'ಮಹೇಶಾ, ಅಕಿ ಮಂಗೇಶಿ ಟೀಚರ್ ಮಾರ್ಕ್ಸ್ ಕಮ್ಮಿ ಕೊಟ್ಟಾಳ ಅಂತ ಭಾಳ ತಲಿ ಕೆಡಿಸಿಕೋಬ್ಯಾಡ. ಹ್ಯಾಂಗೂ ಇನ್ನ ಎರಡು ತಿಂಗಳದಾಗ ಫೈನಲ್ ಎಜ್ಜಾಮ್ (exam) ಬರತೈತಿ. ಬರೋಬ್ಬರಿ ಬರೆದು ಒಗೆದು ಬಾ. ಈಗ ನಿನ್ನ ನೋಡಿ, ನೀ ಮಂಗ್ಯಾ ಆಗಿದ್ದು ನೋಡಿ, ಭಾಳ ಕಿಸಿಕಿಸಿ ನಗಾಕತ್ತಾಳ. ನಗಲಿ ಬಿಡು. ವಾರ್ಷಿಕ ಪರೀಕ್ಷಾ ಹೀಂಗ ಬರೆದು ಬಾ ಅಂದ್ರ ಹೀಂಗ ನಕ್ಕೋತ್ತ ನಕ್ಕೋತ್ತ ಹುಚ್ಚರ ಗತೆ ನಗಬೇಕು ನಿನ್ನ ಪೇಪರ್ ನೋಡಿ ಅಕಿ. ಹಾಂಗ ಬರೆದು ಬಾ,' ಅಂದುಬಿಟ್ಟ. ಶಿವಾಯ ನಮಃ! ಈ ಪುಣ್ಯಾತ್ಮ ಏನು ಹೇಳಿದ ಅಂತ ಅರ್ಥವಾಗಲಿಕ್ಕೆ ಸ್ವಲ್ಪ ಟೈಮ್ ಬೇಕಾಯಿತು. ಅವೆಲ್ಲ ಶುದ್ಧ ಧಾರವಾಡ ಭಾಷೆಯಲ್ಲಿನ ಉಪಮೆ. ನಾನು ಪರೀಕ್ಷೆಯಲ್ಲಿ ಹೇಗೆ ಬರೆಯಬೇಕು ಅಂದರೆ ನನ್ನ ಪೇಪರ್ ಚೆಕ್ ಮಾಡಿದ ಮೇಡಂ ಹುಚ್ಚರಾಗಿಬಿಡಬೇಕು! ಆ ರೀತಿಯಲ್ಲಿ ಬರೆದು ಅವರಿಗೆ ಬರೋಬ್ಬರಿ ಉತ್ತರ ಕೊಡಬೇಕಂತೆ. ಹೀಗೆ ಹೇಳುವ ಮಿತ್ರರು ನಮ್ಮ ಧಾರವಾಡ ಕಡೆ ಮಾತ್ರ ಇರಬೇಕು.

'ಸರಿ ಮಾರಾಯಾ. ನೀನಾದರೂ ಸ್ವಲ್ಪ ಸಮಾಧಾನ ಹೇಳಿದೆಯೆಲ್ಲ. ಥ್ಯಾಂಕ್ಸ್!' ಅಂದೆ. ಅಷ್ಟರಲ್ಲಿ ಎಲ್ಲೋ ಇದ್ದ ಗಿರೀಶ ಕಿತ್ತೂರ ದೂರದಿಂದಲೇ, 'ಮಾಮೇ! ಮಾಮೇ!' ಅಂತ ಒದರಿದ. ಯಾಕೆ ಅಂತ ನೋಡಿದರೆ ನಮ್ಮ ಬ್ಯಾಚಿನ ಬಾಂಬ್ ಸುಂದರಿ ಸೈಕಲ್ ಹತ್ತುತ್ತಿದ್ದಳು. ಅನಿತಾ ರಾಜ್ ಸೈಕಲ್ ಹತ್ತುತ್ತಿದ್ದರೆ ಮಾಮೇ ಮಾಮೇ ಅಂತ ಒದರದಿದ್ದರೆ ಹೇಗೆ!?

ಮುಂದೆ ಸ್ವಲ್ಪ ದಿನಗಳಲ್ಲಿ ಒಂದು ವಿಚಿತ್ರ ಘಟನೆ ನಡೆದುಹೋಯಿತು. ನೆನಪು ಸ್ವಲ್ಪ ಮಸುಕಾಗಿದೆ. ಈ ಘಟನೆ ಒಂಬತ್ತನೆ ಕ್ಲಾಸಿನಲ್ಲಿದ್ದಾಗಲೇ ನಡೆಯಿತೋ ಅಥವಾ ಒಂಬತ್ತು ಮುಗಿದು ಹತ್ತನೆ ಕ್ಲಾಸಿಗೆ ಬಂದಾಗ ನಡೆಯಿತೋ ಸರಿ ನೆನಪಿಲ್ಲ.

ಒಂದು ದಿನ ಶಾಲೆ ಎಂದಿನಂತೆ ಆರಂಭವಾಗಿತ್ತು. ಪ್ರಾರ್ಥನೆ ಮುಗಿದಿತ್ತು. ಹೆಡ್ ಮಾಸ್ಟರ್, ಮತ್ತ ಕೆಲವು ಬೇರೆ ಬೇರೆ ಶಿಕ್ಷಕರು ಏನೇನೋ ಸೂಚನೆ, ಸಲಹೆ ಇತ್ಯಾದಿಗಳನ್ನು ಮೈಕಿನಲ್ಲಿ ಹೇಳುತ್ತಿದ್ದರು. ಎಂದಿನಂತೆ. ಆಗ ಸಡನ್ನಾಗಿ ಸ್ಟೇಜಿನ ಮೇಲೆ ವಿಚಿತ್ರವಾಗಿ ಕೂಗುತ್ತ, ಎತ್ತರ ಪತ್ತರ ಕೈಯಾಡಿಸುತ್ತ ಓಡಿಬಂದವರು ಒಬ್ಬ ಮಹಿಳಾ ಟೀಚರ್. ಸಡನ್ನಾಗಿ ಎಂಟ್ರಿ ಕೊಟ್ಟವರೇ ಒಂದು ದೊಡ್ಡ scene ಸೃಷ್ಟಿ ಮಾಡಿಬಿಟ್ಟರು. ನವರಸಗಳಿರುವ ಸನ್ನಿವೇಶ. ಎಲ್ಲರೂ ಫುಲ್ ಥಂಡಾ. ಆ ಮಹಿಳಾ ಟೀಚರ್ ಏನು ಹೇಳುತ್ತಿದ್ದಾರೆ, ಯಾರನ್ನು ಕುರಿತು ಹೇಳುತ್ತಿದ್ದಾರೆ, ಯಾಕೆ ಅಂತಹ ಭಾವಾವೇಶ, ಏನಾಗಿದೆ ಇವರಿಗೆ, ಅದೂ ಸುಮಾರು ಐನೂರು, ಆರನೂರು ವಿದ್ಯಾರ್ಥಿಗಳು, ಅರವತ್ತು ಎಪ್ಪತ್ತು ಶಿಕ್ಷಕರು ಎಲ್ಲ ನಿಂತಿರುವಾಗ ಏನಿದು ಇಂತಹ ವಿಚಿತ್ರ scene? ಅಂತ ಎಲ್ಲರಿಗೂ ಆಶ್ಚರ್ಯ.

'ಏನ್ರೀ ಸರ್!? ಹೀಂಗಾದ್ರ ಹ್ಯಾಂಗ್ರೀ? ಹ್ಯಾಂಗ ಜೀವನಾ ಮಾಡಬೇಕರೀ?' ಅಂತ ಏನೇನೋ ಅನ್ನುತ್ತ ಗೊಳೋ ಅಂತ ಅತ್ತುಬಿಟ್ಟರು. ಒಂದು ಕ್ಷಣ ಅಪ್ರತಿಭರಾದ ಹೆಡ್ ಮಾಸ್ಟರ್ ಸಾವರಿಸಿಕೊಂಡು, ಒಂದು ತರಹದ embarrassment ಫೀಲ್ ಮಾಡಿಕೊಂಡು, ಆ ಮೇಡಂ ಅವರನ್ನು ಸ್ವಂತ ಸಹೋದರಿಯಂತೆಯೇ ಲೈಟಾಗಿ ತಬ್ಬಿಕೊಂಡು ಸ್ಟೇಜ್ ಮೇಲೆಯೇ ಏನೋ ಒಂದು ತರಹದ ಸಮಾಧಾನ ಮಾಡಿದ್ದರು. ತುಂಬಾ uneasy ಅನ್ನಿಸಿತ್ತು ಹೆಡ್ ಮಾಸ್ಟರ್ ಅವರಿಗೆ. ಅಳುತ್ತ ಬಂದಿದ್ದ ಟೀಚರ್ ಅಳುತ್ತಲೇ, ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಳ್ಳುತ್ತ, ಸ್ಟೇಜ್ ಬಿಟ್ಟು ಹೋದರು. ಹೆಡ್ ಮಾಸ್ಟರ್ ಕೋಣೆ ಸೇರಿಕೊಂಡರು. ಅಲ್ಲಿಗೆ ಆವತ್ತಿನ prayer assembly ಅನ್ನುವ ದಿನದ ರೂಟೀನ್ ಮುಗಿದಿತ್ತು. ನಮ್ಮ ನಮ್ಮ ಕ್ಲಾಸ್ ಕಡೆ ಹೊರಟೆವು. ಮಂಗೇಶಿ ಟೀಚರ್ ಆವತ್ತು ಶಾಲೆಗೆ ಬಂದಿರಲಿಲ್ಲ! ನಾವು ಅದನ್ನು ಗಮನಿಸಿರಲೂ ಇಲ್ಲ.

'ಏ, ಆ ಟೀಚರ್ ಹಾಂಗ್ಯಾಕ ಮಾಡಿದ್ರಲೇ? ಏನಾತು ಅವರಿಗೆ ಒಮ್ಮೆಲೇ? ಅದೂ ಮೈ ಮ್ಯಾಲೆ ದೆವ್ವ ಬಂದಾಂಗ ಮಾಡಿಬಿಟ್ಟರಲ್ಲಲ್ಲೇ? ಯಾರಿಗೆ ಏನಾತು ಅಂತ ಆ ಟೀಚರ್ ಆಪರಿ ಹೊಯ್ಕೊಂಡು, ಚೀರಾಡಿ, ಅತ್ತು, ಕರೆದು, ಕಣ್ಣಾಗ ನೀರು ತಂದುಕೊಂಡ್ರು?? ಯಾಕ ಚೀರಾಡಿದರು? ಏನಾತು? ಏನು ಲಫಡಾ ಆಗ್ಯದ್ರಲೇ??' ಅಂತ ಕೇಳಿದರೆ ಒಂದು ದೊಡ್ಡ ಲಫಡಾ ಆಗಿದ್ದರ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.

ಏನಾಗಿತ್ತು ಅಂದರೆ.....ಹಿಂದಿನ ದಿನ ನಿಡವ್ಯಾ ಅನ್ನುವ D ವಿಭಾಗದ ವಿದ್ಯಾರ್ಥಿಯೊಬ್ಬ ದುಶ್ಶಾಸನನ ಅವತಾರ ತಾಳಿಬಿಟ್ಟಿದ್ದ. ನಮ್ಮ ಶಾಲೆಯ ಇತಿಹಾಸದಲ್ಲೇ ಅದು ಮೊದಲಿರಬೇಕು. ಅಲ್ಲಿಯ ತನಕ ಬೇರೆ ಬೇರೆ ರೀತಿಯ ಸಣ್ಣ ಪ್ರಮಾಣದ ರೌಡಿಸಂ, ಗಲಾಟೆ, ಚೇಷ್ಟೆ, ಕೀಟಲೆ ಎಲ್ಲ ಕೇಳಿ ಗೊತ್ತಿತ್ತು. ಆದರೆ ಈ ಮಾದರಿಯ ಹರಕತ್ತನ್ನು ಮಾತ್ರ ಯಾರೂ ಮಾಡಿರಲಿಲ್ಲ.

ನಿಡವ್ಯಾ ಉರ್ಫ್ ನಿಡವಣಿ. ಕೊಂಚ upstart ಮಾದರಿಯ ಹುಡುಗ. ನಮಗಿಂತ ಹಿರಿಯ ಅಂತ ಕಾಣಿಸುತ್ತದೆ. ನಮ್ಮೆಲ್ಲರಿಗಿಂತ ಒಂದು ನಾಲ್ಕು ಇಂಚು ಎತ್ತರವಿದ್ದ. ಆಗಲೇ ಢಾಳಾಗಿ ಗಡ್ಡ ಮೀಸೆ ಬಂದಿದ್ದವು. ಪುಂಡರ ಟೈಪಿನ ಮನುಷ್ಯ. ಶ್ರೀಮಂತರ ಮನೆಯ ಹುಡುಗ. ಹಾಗಾಗಿ ಅವನು ಎಸೆಯುತ್ತಿದ್ದ ಬಿಸ್ಕೀಟ್ ಸಲುವಾಗಿ ಅವನ ಸುತ್ತ ರೌಡಿ ಟೈಪಿನ ಮಂದಿ ಇರುತ್ತಿದ್ದರು. ಅವರ್ಯಾರೂ ಶಾಲೆಯ ವಿದ್ಯಾರ್ಥಿಗಳು ಅಲ್ಲ. ನಿಡವ್ಯಾನ ಸ್ನೇಹಿತರು. ಅಂತಹ ಮಂದಿಯ ಸಪೋರ್ಟ್ ಇದೆ ಅಂತ ಕೊಂಚ ಬೀಗುತ್ತ ರೋಪ್ ಜಮಾಯಿಸಿಕೊಂಡಿದ್ದ ನಿಡವ್ಯಾ. ನಮ್ಮ ಜೊತೆ ಅವನ ಸಂಪರ್ಕವಿರಲಿಲ್ಲ. ಆದರೆ ಶಾಲೆಯಲ್ಲಿ ಕೊಂಚ ಮಟ್ಟಿಗೆ ಹವಾ maintain ಮಾಡಿದ್ದಕ್ಕೆ ನಿಡವ್ಯಾ ಅಂದರೆ ಯಾರು ಅಂತ ಗೊತ್ತಿತ್ತು.

ಇಂತಹ ನಟೋರಿಯಸ್ ನಿಡವ್ಯಾ ಹಿಂದಿನ ದಿನ ಮಂಗೇಶಿ ಮೇಡಂ ಅವರಿಗೆ ಕೊಡಬಾರದ ಕಾಟ ಕೊಟ್ಟಿದ್ದನಂತೆ. ಅವರು ಸಂಜೆ ಶಾಲೆ ಬಿಟ್ಟು ಮನೆಗೆ ಹೊರಟ ನಿಮಿಷದಿಂದ ಕಾಟ ಕೊಡುತ್ತ ಅವರನ್ನು ಹಿಂಬಾಲಿಸಿದ್ದಾನೆ. ರೇಗಿಸುತ್ತ, ಅಸಹ್ಯವಾಗಿ ಮಾತಾಡುತ್ತ ಅವರ ಹಿಂದೆ ಹೋಗಿದ್ದಾನೆ. ಅವರು ಕ್ಯಾರೇ ಅಂದಿಲ್ಲ. ಸೀರೆ ಸೆರಗನ್ನು ಇನ್ನೂ ಬಿಗಿಯಾಗಿ ಕಟ್ಟಿಕೊಂಡು ಬಿರಬಿರನೆ ಮನೆ ಕಡೆ ನಡೆದಿದ್ದಾರೆ. ಅಷ್ಟೆಲ್ಲಾ ಕಾಡಿದರೂ ಏನೂ ಪ್ರತಿಕ್ರಿಯೆ ಬಂದಿಲ್ಲ ಅಂತ ನಿಡವ್ಯಾ ಫುಲ್ ಹಾಪ್ ಆಗಿದ್ದಾನೆ. ವ್ಯಗ್ರನಾಗಿದ್ದಾನೆ. ದುಶ್ಶಾಸನನ ಅವತಾರ ತಾಳಿಬಿಟ್ಟಿದ್ದಾನೆ. ಅಕ್ಷಮ್ಯ ಕಾರ್ಯಕ್ಕೆ ಕೈಹಾಕಿದ್ದಾನೆ. ಮಂಗೇಶಿ ಟೀಚರ್ ಸೀರೆಗೇ ಕೈಹಾಕಿಬಿಟ್ಟಿದ್ದಾನೆ!

ಮುಂದೇನಾಯಿತು ಎನ್ನುವದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಿನಲ್ಲಿ ದೊಡ್ಡ ಲಫಡಾ. ಶಾಲಾ ಶಿಕ್ಷಕಿ ಒಬ್ಬರ ಸೀರೆ ಮೇಲೆ ಕೈಹಾಕುವದು ಅಂದರೆ  ಸಣ್ಣ ಮಾತೇ? ಅದೂ ಸಭ್ಯರ ಊರಾದ ಧಾರವಾಡದಲ್ಲಿ? ಒಟ್ಟಿನಲ್ಲಿ ಮರುದಿನ ಶಿಕ್ಷಕ ಶಿಕ್ಷಕಿಯರ ಸಮುದಾಯದಲ್ಲಿ ತಲ್ಲಣ ಮತ್ತು ಆಕ್ರೋಶ.

ತಮ್ಮ ಸಹೋದ್ಯೋಗಿಗಾಗಿದ್ದ ಅವಮಾನ, ಅವರ ಮೇಲಾಗಿದ್ದ ಹಲ್ಲೆ, molestation ಪ್ರಯತ್ನದಿಂದ ಆ ಮತ್ತೊಬ್ಬ ಮಹಿಳಾ ಟೀಚರ್ ಬಹಳ ನೊಂದಿದ್ದರು ಅಂತ ಕಾಣುತ್ತದೆ. ಅವರಿಗೆ ತಡೆಯಲಾಗಿಲ್ಲ. ಮೊದಲೇ ಭಾವುಕರು ಅವರು. ವೈಯಕ್ತಿಕ ಜೀವನದಲ್ಲಿ ನೊಂದವರು ಕೂಡ. ಭಾವನೆಗಳು, ನೋವು ಉಕ್ಕಿ ಬಂದಿವೆ. prayer assembly ನಡೆದಿದೆ ಅನ್ನುವದನ್ನೂ ಕಡೆಗಣಿಸಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಸಹೋದ್ಯೋಗಿಯ ಮೇಲಾಗಿದ್ದ ಹಲ್ಲೆಯ ಬಗ್ಗೆ ಹೇಳುತ್ತ, ಅಳುತ್ತ ಎಲ್ಲರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ಒಂದು ತರಹದ ಫುಲ್ ಪಿಕ್ಚರ್ ಬಂತು.

ಆದರೆ ಯಬಡ ನಿಡವ್ಯಾ ಹಾಗೇಕೆ ಮಾಡಿದ? ಅದಕ್ಕೆ ಉತ್ತರ ಸಿಗಲಿಲ್ಲ. ಅದೆಂತಹದೇ ಪುಂಡ ಅಂದುಕೊಂಡರೂ ಆ ಮಟ್ಟಕ್ಕೆ ಇಳಿಯಬಹುದು ಅಂತ ಯಾರೂ ಅಂದುಕೊಂಡಿರಲಿಲ್ಲ. ಅದು ನಮ್ಮ ಶಾಲೆಯ, ನಮ್ಮ ಊರಿನ ಸಂಸ್ಕೃತಿಯೇ ಅಲ್ಲ.

ಮಂಗೇಶಿ ಮೇಡಂ ಒಂದೆರೆಡು ದಿನ ಕಾಣದಿದ್ದವರು ಮತ್ತೆ ಶಾಲೆಗೆ ಬರಲಾರಂಭಿಸಿದರು. ಅವರು ಮೊದಲಿಂದಲೂ ಸ್ವಲ್ಪ ಗಂಭೀರ ಸ್ವಭಾವದವರೇ. ವಯಸ್ಸು ಕೇವಲ ಇಪತ್ತೈದು ಚಿಲ್ಲರೆ ವರ್ಷ ಅಷ್ಟೇ ಆಗಿದ್ದರೂ, ಮದುವೆಯಾಗಿರದೇ ಇದ್ದರೂ, ನೋಡಲು ಸಾಕಷ್ಟು ಚೆನ್ನಾಗಿಯೇ ಇದ್ದರೂ ಮಂಗೇಶಿ ಮೇಡಂ ಮಾತ್ರ ಸದಾ ಗಂಭೀರವದನೆ. ನೋಡಲು ಅಷ್ಟು ಚೆನ್ನಾಗಿದ್ದವರು ಸ್ವಲ್ಪ ಚೆಲ್ಲು ಚೆಲ್ಲಾಗಿದ್ದರೆ 'ಮೈ ಹೂ ನಾ' ಚಿತ್ರದಲ್ಲಿ ಖತರ್ನಾಕ್ flirting ಮೇಡಂ ಪಾತ್ರ ಮಾಡಿರುವ ಸುಶ್ಮಿತಾ ಸೇನ್ ಆಗುತ್ತಿದ್ದರೋ ಏನೋ. ಆದರೆ ಇವರು ಹಾಗಲ್ಲ. ಫುಲ್ ಗೌರವಾನ್ವಿತ ಗೌರಮ್ಮ. ಅವರು ಪೆಕಪೆಕಾ ಕಿಸಕಿಸಾ ಅಂತ ನಕ್ಕಿದ್ದೇನಾದರೂ ಇದ್ದರೆ ಅವರು ಕೇಳಿದ್ದ ಪ್ರಶ್ನೆಯೇ ಒಂದಾದರೆ ನಾನು ಬರೆದುಬಂದಿದ್ದ ಉತ್ತರವೇ ಒಂದಾಗಿದ್ದ ಭಾನಗಡಿ ಆದಾಗ ಮಾತ್ರ. ನಾನು ಮಾಡಿಕೊಂಡಿದ್ದ ಮಂಗ್ಯಾತನ ಅಷ್ಟಕ್ಕಾದರೂ ಉಪಯೋಗವಾಯಿತು. ಬುದ್ಧ ನಕ್ಕ ಎಂಬಂತೆ ಮಂಗೇಶಿ ಟೀಚರ್ ನಕ್ಕಿದ್ದರು. ಅಪರೂಪಕ್ಕೆ. ಅದೂ ಬಿಚ್ಚಿ, ಅಂದರೆ ಮನಸ್ಸು ಬಿಚ್ಚಿ, ನಕ್ಕಿದ್ದರು.

ವಾಪಸ್ ಬಂದ ಮೇಡಂ ನೋಡಿ ಪಾಪ ಅನ್ನಿಸಿತು. ಅವರು ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಆ ವರ್ಷವೇನೂ ನಮಗೆ ಅವರು ಪಾಠ ಮಾಡಲಿಲ್ಲ. ಸಿಕ್ಕಾಗೊಮ್ಮೆ ನಮಸ್ಕಾರ ಹಾಕಿದರೆ ಅವರ ಪ್ರತಿ ನಮಸ್ಕಾರ ಈಗ ಮತ್ತೂ ಒಣಒಣ ಆಗಿತ್ತು.

ಲಫಡಾ ಮಾಡಿಕೊಂಡಿದ್ದ ನಿಡವ್ಯಾ ಶಾಲೆ ಕಡೆ ಹಾಯಲೇ ಇಲ್ಲ. ಎಲ್ಲೋ ಎಸ್ಕೇಪ್. ಮಾಡಬಾರದ ಲಫಡಾ ಮಾಡಿಕೊಂಡು ಕೂತಿದ್ದ. ನಂತರ ಅರಿವಾಗಿರಬೇಕು ಶಾಲೆಗೆ ವಾಪಸ್ ಬಂದರೆ ಏನಾದೀತು ಎನ್ನುವ ಪರಿಣಾಮದ ಬಗ್ಗೆ. ಬಂದಿದ್ದರೆ ಶಿಕ್ಷಕ ಸಮೂಹ ಅದ್ಯಾವ ರೀತಿಯಲ್ಲಿ ಒಂದಾಗಿ ಕೆರಳಿ ನಿಂತಿತ್ತು ಅಂದರೆ ಎಲ್ಲರೂ ಕೂಡಿಯೇ ಅವನ ಎನ್ಕೌಂಟರ್ ಮಾಡಿಬಿಡುತ್ತಿದ್ದರು. ಎಷ್ಟೋ ಸಲ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರುಗಳ ಹತ್ತಿರ ಮೈ ಹದ ಮಾಡಿಸಿಕೊಂಡಿದ್ದ ನಿಡವ್ಯಾ ಶಾಲೆಗೆ ಬರುವ ತಪ್ಪು ಮಾಡಲಿಲ್ಲ. ಆದರೂ ಶಾಲೆಯ ಸುತ್ತಮುತ್ತ ಕಾಣುತ್ತಿದ್ದ. ಯಾರೋ ಹೇಳಿದರು, 'ನಿಡವ್ಯಾಂದು ಮಾಲ್ ಐತಿ. ಅದಕ್ಕೇ ಬರ್ತಾನ!' ಶಿವಾಯ ನಮಃ! ನಿಡವ್ಯಾ ಅದ್ಯಾರೋ ಚಿಣ್ಣ ಕ್ಲಾಸಿನ ಹುಡುಗಿಯನ್ನು ಮಾಲ್ ಅಂದರೆ ಗರ್ಲ್ ಫ್ರೆಂಡ್ ಅಂತ ಮಾಡಿಕೊಂಡಿದ್ದನಂತೆ. ಅದಕ್ಕೇ ಶಾಲೆ ಕಡೆ ಬರುತ್ತಿದ್ದನಂತೆ. ಆ ವಯಸ್ಸಿನಲ್ಲಿ ಮಾಲು? ಹ್ಯಾಂ? ಬೇಬಿ ಲವ್ ಇರಬೇಕು. ಮತ್ತೆ ನಿಡವ್ಯಾ ನಮಗಿಂತ ದೊಡ್ಡವನಲ್ಲವೇ? ಇದ್ದರೂ ಇದ್ದೀತು.

ಒಂದು ದಿನ ಮಧ್ಯಾಹ್ನ ಯಾವದೋ ಬೋರಿಂಗ್ ಪಿರಿಯಡ್ ನಡೆದಿತ್ತು. ನಮ್ಮಲ್ಲಿ ಸುಮಾರಷ್ಟು ಜನ ಕಿಡಕಿಯಿಂದ, ತೆರೆದ ಬಾಗಿಲಿನಿಂದ ಹೊರಗೆ ನೋಡುತ್ತ ಕುಳಿತಿದ್ದೆವು. ಒಂದು ಫೀಯಟ್ ಕಾರ್ ಬಂದು ನಿಂತಿತು. ಹೆಡ್ ಮಾಸ್ಟರ್ ಕೋಣೆಯಿಂದ ಸಾಕಷ್ಟು ದೂರದಲ್ಲಿಯೇ ಪಾರ್ಕ್ ಮಾಡಿದ ಆ ಕಾರಿನಿಂದ ಯಾರೋ ಒಬ್ಬ ಮಧ್ಯವಯಸ್ಕ ವ್ಯಕ್ತಿ ಇಳಿದರು. ನಾಶಿಪುಡಿ ಬಣ್ಣದ ಸಫಾರಿ ಸೂಟ್ ಹಾಕಿದ್ದರು. ನೋಡಿದರೆ ಗೊತ್ತಾಗುತ್ತಿತ್ತು ಯಾರೋ ದೊಡ್ಡ ಮನುಷ್ಯರು. ಮಾಲ್ದಾರ್ ಆದ್ಮಿ.

ಹಾಗೆ ಕಾರಿನಿಂದ ಇಳಿದವರು ಹೆಗಲ ಮೇಲೆ ಜಗದ ಭಾರವನ್ನೇ ಹೊತ್ತಿದ್ದಾರೋ ಎಂಬಂತೆ ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ತಗ್ಗಿಸಿದ್ದ ತಲೆ ಎತ್ತದೇ, ಹೆಡ್ ಮಾಸ್ಟರ್ ಚೇಂಬರ್ ಕಡೆ ಸಾಗಿದರು. ಯಾರೋ ಅಂದರು, 'ಅವರು ನಿಡವ್ಯಾನ ಅಪ್ಪಾರು!' ನಿಡವ್ಯಾ ಲಫಡಾ ಮಾಡಿಕೊಂದು ಒಂದು ವಾರವಾಗಿರಬಹುದು. ಅಷ್ಟರಲ್ಲೇ ಅವನ ಶ್ರೀಮಂತ ಪಿತಾಜಿ ಶಾಲೆಗೆ ಎಂಟ್ರಿ ಕೊಟ್ಟಿದ್ದರು.

ಸುಮಾರು ಹದಿನೈದು ಇಪ್ಪತ್ತು ನಿಮಿಷಗಳ ನಂತರ ಆ ಹಿರಿಯರು ಮತ್ತೆ ಹೊರಗೆ ಬಂದರು. ಜೊತೆಗೆ ನಮ್ಮ ಹೆಡ್ ಮಾಸ್ಟರ್ ಕೂಡ ಅವರ ಜೊತೆಗೆ ಹೊರಗೆ ಬಂದರು. ಇಬ್ಬರೂ ಕೂಡಿಯೇ ಕಾರಿನತ್ತ ನಡೆದು ಬಂದರು. ಕಾರಿನಲ್ಲಿ ತೂರಿಕೊಳ್ಳುವ ಮೊದಲು ನಮ್ಮ ಹೆಡ್ ಮಾಸ್ಟರ್ ಕೈಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ನಿಡವ್ಯಾನ ಅಪ್ಪ ಅವುಗಳನ್ನು ಕಣ್ಣಿಗೊತ್ತಿಕೊಳ್ಳಲು ಹೋದರು. ಹೆಡ್ ಮಾಸ್ಟರ್, 'ಬೇಡ, ಬೇಡ. ಅದೆಲ್ಲ ಬೇಡ,' ಅನ್ನುವ ಮಾದರಿಯಲ್ಲಿ ಆಕ್ಷನ್ ಮಾಡುತ್ತ ನಿಡವ್ಯಾನ ತಂದೆಯ ಭುಜ ತಟ್ಟಿ ಸಂತೈಸಿದರು. ಮಗ ನಿಡವ್ಯಾ ಮಾಡಿದ ಲಫಡಾವನ್ನು ಕ್ಷಮಿಸುವಂತೆ ಹೆಡ್ ಮಾಸ್ಟರ್ ಅವರನ್ನು ಪರಿಪರಿಯಾಗಿ ಬೇಡಿಕೊಂಡಿದ್ದರು ಅಂತ ಕಾಣುತ್ತದೆ. ಹೋಗುವ ಮುನ್ನ ಮತ್ತೊಮ್ಮೆ ಕ್ಷಮಿಸಿಬಿಡಿ ಅಂತ ಪರಿಪರಿಯಾಗಿ ವಿನಂತಿ ಮಾಡಿಕೊಳ್ಳುತ್ತಿದ್ದರು ಅಂತ ಅನ್ನಿಸಿತು. ಹಾಗೇ ಇರಬೇಕು. ಮಗನೇನು ಸಣ್ಣ ಲಫಡಾ ಮಾಡಿಕೊಂಡು ಕೂತಿದ್ದನೇ? ಅವನ ಸಲುವಾಗಿ ಪಾಪದ ಅಪ್ಪ ಮಾಸ್ತರರ ಕೈಕಾಲು ಕಟ್ಟುತ್ತಿದ್ದರು. ಪಾಪ! ಆ ಹಿರಿಯರಿಗೆ ಹಾಗಾಗಬಾರದಿತ್ತು.

ಇಷ್ಟೆಲ್ಲಾ ಆದ ಮೇಲೂ ನಿಡವ್ಯಾ ಶಾಲೆಗೆ ಬಂದಿದ್ದು ನನಗೆ ನೆನಪಿಲ್ಲ. ನೆನಪಿರಲಿಕ್ಕೆ ನಾನು ಶಾಲೆಗೆ ಹೋಗಿದ್ದೂ ಅಷ್ಟಕಷ್ಟೇ ಇತ್ತು. ಅದೂ SSLC ಬೇರೆ. ಓದಿದ್ದೇ ಮುಗಿಯುತ್ತಿರಲಿಲ್ಲ. ಮತ್ತೆ ನಮ್ಮದು ಎಲ್ಲದೂ self study. ಶಾಲೆಯಲ್ಲಿ ಪರೀಕ್ಷೆಯ ಕೊನೇ ದಿವಸದವರೆಗೂ ಪಾಠ ಎಳೆದುಬಿಡುತ್ತಾರೆ. portion ಮುಗಿಯುವದೇ ಇಲ್ಲ. ನಮಗೆ revision ಮಾಡಲು ವೇಳೆಯೇ ಇರುವದಿಲ್ಲ ಅಂತ ರಗಳೆ ಮಾಡಿ ಎಲ್ಲ ಮನೆಯಲ್ಲೇ ಓದಿ, ಶಾಲೆ ಟೈಮಿನಲ್ಲಿ revision ಮಾಡುತ್ತಾ ಕೂತಿರುತ್ತಿದ್ದೆ. ಹಾಗಾಗಿ ಎಲ್ಲೋ ವಾರಕ್ಕೆ ಒಂದು ದಿನ ಹೋಗಿ, ನಾಲ್ಕು ಪಿರಿಯಡ್ ಆದ ಮೇಲೆ ಎದ್ದೋಡಿ ಬಂದರೆ ಅದೇ ದೊಡ್ಡ ಮಾತು. ಅದೂ ದೋಸ್ತರ ಜೊತೆ ಹರಟೆ ಹೊಡೆದು, ಆಗುಹೋಗುಗಳ ಬಗ್ಗೆ ಲೇಟೆಸ್ಟ್ ಮಾಹಿತಿ ಪಡೆದು ಬರಲು ಮಾತ್ರ. ಅಷ್ಟೂ ಮಾಡಲಿಲ್ಲ ಅಂದರೆ ಸಿಕ್ಕಾಪಟ್ಟೆ ಬೋರ್ ಹೊಡೆದು ಬೋರಲಿಂಗಾಯ ನಮಃ ಆಗಿಬಿಡುತ್ತಿತ್ತು.

SSLC ಮುಗಿದು ಒಂದು ದೊಡ್ಡ ರಜೆಯ ನಂತರ PUC ಶುರುವಾಯಿತು. ಈಗ ಮಂಗೇಶಿ ಟೀಚರ್, ಶಾಲೆ ಎಲ್ಲ ಕೇವಲ ನೆನಪು ಮಾತ್ರ. ಆದರೆ ನೆನಪಾಗುತ್ತಿರಲಿಲ್ಲ. ಕರ್ನಾಟಕ ಕಾಲೇಜಿನ ಹೊಸ ತರಹದ ಜಗಮಗದ ಮುಂದೆ ಎಲ್ಲಿ ಹಳೆ ಭಟ್ಟರ ಶಾಲೆ ನೆನಪಾಗಬೇಕು? ಹೊಸ ಮಿತ್ರರು ಸಿಕ್ಕು ಪಿಯೂಸಿ ಮೊದಲ ವರ್ಷ ಅಂದರೆ ಫುಲ್ ರಂಗೀನ್ ಟೈಮ್ ಅದು.

ಆಗ ಒಂದು ಭೀಕರ ಸುದ್ದಿ ಬಂತು. ನಿಡವ್ಯಾ ಖಲಾಸ್! ರಸ್ತೆ ಅಪಘಾತವೊಂದರಲ್ಲಿ ನಿಡವ್ಯಾ ಹೋಗಿಬಿಟ್ಟಿದ್ದ. ಆಗಲೇ ಪರಮ ದುಬಾರಿಯಾಗಿದ್ದ ಕಾವಾಸಾಕಿ - ಬಜಾಜ್ ಎಂಬ ಸಕತ್ ಮೋಟಾರ್ ಬೈಕಿನ ಒಡೆಯ ಅವನು. ಶ್ರೀಮಂತರ ಮುದ್ದಿನ ಮಗ. ತೆಗೆಸಿಕೊಟ್ಟಿದ್ದರು. ಮಂಗ್ಯಾನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಯಿತು. ಆ ಮಹಾ ಶಕ್ತಿಶಾಲಿ ಬೈಕನ್ನು ಅದ್ಯಾವ ಮಾದರಿಯಲ್ಲಿ ಓಡಿಸುತ್ತಿದ್ದ ಅಂದರೆ ನೋಡುವವರ ಮೈ ಜುಮ್ ಅನ್ನಬೇಕು. ಅದೇ ರೀತಿ ಧಾರವಾಡ ಮೂಲಕ ಹಾದುಹೋಗುವ ರಾಷ್ಟೀಯ ಹೆದ್ದಾರಿ - ೪ ಮೇಲೆ ಓಡಿಸಿದ್ದಾನೆ. ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಮರಾಮೋಸವಾಗಿದೆ. ಎದುರಿನಿಂದ ಬಂದ ದೊಡ್ಡ ಲಾರಿ ಗುದ್ದಿದ ಅಬ್ಬರಕ್ಕೆ ನಿಡವ್ಯಾ ಖಲಾಸ್. ರಸ್ತೆಗೆ ಮೇಣದಂತೆ ತಿಕ್ಕಿ ಹೋಗಿದ್ದಾನೆ. ಆತನ ಪ್ರೀತಿಯ ಬೈಕಂತೂ ಅದ್ಯಾವ ಮಟ್ಟಿಗೆ ಬರ್ಬಾದಾಗಿತ್ತು, ಮೋಡ್ಕಾಗಿತ್ತು ಅಂದರೆ ಸೀದಾ ಗುಜರಿಗೆ ಹಾಕಿಬಿಡಿ ಅಂದರಂತೆ ಮನೆಯವರು.

ಅವನ ಕರ್ಮ ಫಲ ಅಂದರು ಮಂದಿ. ಮಾಡಬಾರದ ಕರ್ಮ ಮಾಡಿದ್ದ, ಅದರ ಫಲ ಅನುಭವಿಸಿದ ಅಂತ ಹೇಳಿ ಕೈತೊಳೆದುಕೊಂಡರು. ನಮಗೂ ಹಾಗೇ ಅನ್ನಿಸಿತ್ತೇ ಅಂದು? ನೆನಪಿಲ್ಲ. ಕರ್ಮ ಸಿದ್ಧಾಂತ ಅಷ್ಟು ಸರಳವಲ್ಲ. ಒಂದು particular ಕರ್ಮ ಮಾಡಿದ್ದಕ್ಕೇ ಒಂದು particular ಫಲ ಬಂತು ಹೇಳಲು ಸಾಧ್ಯವಿಲ್ಲ. ಕರ್ಮಕ್ಕೆ ಫಲ ಇರುತ್ತದೆ ಆದರೆ ಇದೇ ಆ ಫಲ ಅಂತ ಹೇಳುವ ಜ್ಞಾನ ಸಾಮಾನ್ಯರಿಗೆ ಇರುವದಿಲ್ಲ. ಅದನ್ನೆಲ್ಲ ತಿಳಿದವರಿಗೆ ಕರ್ಮ ಸಿದ್ಧಾಂತದ ಅವಶ್ಯಕತೆಯೇ ಇರುವದಿಲ್ಲ. ಈ ಜಗತ್ತಿದೆ, ಸೃಷ್ಟಿಯಾಗಿದೆ, ಸೃಷ್ಟಿಯಾಗಿದೆ ಅಂತ ತಿಳಿದು, ಅದನ್ನು ನಂಬುವ ಸಾಮಾನ್ಯ ಜನ ಇದ್ದಾರೆ ಅನ್ನುವ ಕಾರಣಕ್ಕೆ ಜಗತ್ತಿನಲ್ಲಿ ನಡೆಯುವ ಸಮಸ್ತ ಗೋಟಾವಳಿಗಳನ್ನು ವಿವರಿಸಬೇಕು ಅಂತಾದರೂ ಒಂದು ಸಿದ್ಧಾಂತ ಬೇಕಾಗುತ್ತದೆ. ಅದಕ್ಕಾಗಿಯೇ ಪರಮ ಸತ್ಯ ಅರಿಯುವ ಮೊದಲು ಒಂದು intermediate ಸಿದ್ಧಾಂತ ಬೇಕು ಅಂತ ಹೇಳಿ ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತಗಳನ್ನು ಮಾಡಿಕೊಂಡಿದ್ದು. ಏಣಿ ಹತ್ತುವಾಗ ಒಂದೊಂದೇ ಮೆಟ್ಟಲುಗಳನ್ನು ಹತ್ತುತ್ತ ಹೋಗುವದಿಲ್ಲವೇ? ಹಾಗೇ ಇದು. ವೇದಾಂತದ, ಅದರಲ್ಲೂ ಅದ್ವೈತ ವೇದಾಂತದ, ಶಿಖರದ ತುದಿಯಲ್ಲಿ ಕರ್ಮ ಸಿದ್ಧಾಂತದ ಅವಶ್ಯಕತೆಯೇ ಇರುವದಿಲ್ಲ. ಯಾಕೆಂದರೆ ಅಲ್ಲಿ ಎಲ್ಲವೂ ಮಿಥ್ಯೆ. ಬ್ರಹ್ಮಚೈತನ್ಯವೊಂದನ್ನು ಬಿಟ್ಟರೆ ಎಲ್ಲವೂ ಮಿಥ್ಯೆ. ಎಲ್ಲವೂ ಮಾಯೆ. ಮಾಯೆಯೊಳಗಿನಲ್ಲೇ ಬರುತ್ತದೆ ಕರ್ಮ ಸಿದ್ಧಾಂತ. ಹಾಗಾಗಿ ಮಂಗೇಶಿ ಟೀಚರ್ ಮೇಲೆ ಕೈಹಾಕಿದ್ದಕ್ಕೇ ನಿಡವ್ಯಾ ಆ ರೀತಿಯಲ್ಲಿ ಭಯಾನಕವಾಗಿ ಸತ್ತುಹೋದ ಅಂತ ಹೇಳುವವರು ನಿಡವ್ಯಾನ ಮೊದಲಿನ ದಿನಗಳ ಅದೃಷ್ಟಕ್ಕೆ ಕಾರಣವಾದ  ಅವನ ಒಳ್ಳೆ ಕರ್ಮಗಳ ಬಗ್ಗೆ ಮಾತಾಡುವದಿಲ್ಲ. ಇವತ್ತು ಮಾತಿಗೊಮ್ಮೆ ಕರ್ಮ, instant ಕರ್ಮ ಅಂತೆಲ್ಲ ಮಂದಿ ಹೇಳುತ್ತ ಹುಚ್ಚರಂತೆ ತಿರುಗುವದನ್ನು ನೋಡಿದರೆ ನಗು ಬರುತ್ತದೆ. ಸತ್ಯ ಅರಿತ ಮೇಲೆ ಬೇಕಾಗದ ಸಿದ್ಧಾಂತ ಅದು. ಅಂತಹ ತಾತ್ಕಾಲಿಕ ಸಿದ್ಧಾಂತವನ್ನೂ ಮತ್ತೂ ಹದಗೆಡಿಸಿ ಮಂದಿ ಉಪಯೋಗಿಸುತ್ತಾರೆ. ತಮಗೆ ಯಾರೋ ಏನೋ ತೊಂದರೆ ಮಾಡಿದರೆ, ತ್ರಾಸು ಕೊಟ್ಟಿದ್ದರೆ, ಅಥವಾ ಇವರು ಹಾಗಂತ ಊಹೆ ಮಾಡಿಕೊಂಡಿದ್ದರೆ, you will pay for your karma, ಅಂತ ಫೇಸ್ಬುಕ್ ಮೇಲೆ ಸ್ಟೇಟಸ್ ಹಾಕಿಕೊಂಡು ನಿಡುಸುಯ್ಯುತ್ತಾರೆ. ಇನ್ನೊಬ್ಬರಿಂದ ಅಂತಹ ತೊಂದರೆ ಬರುವಂತಹ ಕೆಟ್ಟ ಕರ್ಮ ತಾವೇನು ಮಾಡಿದ್ದೆವು ಎನ್ನುವದರ ಬಗ್ಗೆ ವಿಚಾರ ಮಾಡುವವರು ಕಮ್ಮಿ. ಕರ್ಮ ಸಿದ್ಧಾಂತ, ಅದರ ಫಲ ಎಲ್ಲ ಇತರರಿಗೆ ಮಾತ್ರ. ತಮ್ಮ ಬುಡಕ್ಕೆ ಬಂದಾಗ ಮಾತ್ರ ಎಲ್ಲ ಒಳ್ಳೆ ಸುಕರ್ಮಗಳೇ.

ಇರಲಿ. ಆವಾಗ ಇದೆಲ್ಲ ಗೊತ್ತಿರಲಿಲ್ಲ. ಒಟ್ಟಿನಲ್ಲಿ ದುಶ್ಶಾಸನನ ಮಾದರಿಯಲ್ಲಿ ಕಿರಿಕ್ ಮಾಡಿಕೊಂಡಿದ್ದ ನಿಡವ್ಯಾ ಮಾತ್ರ ಅಕಾಲ ಮರಣಕ್ಕೆ ತುತ್ತಾದ. ನಿಡವ್ಯಾನಿಗಿಂತ ಜಾಸ್ತಿ ನೆನಪಾದವರು ಆವತ್ತು ದೈನೇಸಿ ಸ್ಥಿತಿಯಲ್ಲಿ, ಅಷ್ಟು ದೊಡ್ಡ ಶ್ರೀಮಂತರಾದರೂ, ಮಗ ಮಾಡಿದ ಮಹಾತಪ್ಪಿಗೆ ಮೈಯನ್ನಷ್ಟೂ ಹಿಡಿಯಾಗಿ ಮಾಡಿಕೊಂಡು, ಮಗನ ತಪ್ಪಿಗೆ ಪ್ರಾಯಶ್ಚಿತವೆಂಬಂತೆ ಹೆಡ್ ಮಾಸ್ಟರ್ ಕೈಗಳನ್ನು ಕಣ್ಣಿಗೊತ್ತಿಕೊಳ್ಳಲು ಹೋಗಿದ್ದ ನಿಡವ್ಯಾನ ತಂದೆ. ಆ ಹಿರಿಯರಿಗೆ ಪುತ್ರಶೋಕದ ನೋವೆಷ್ಟಾಯಿತೋ! ನೆನೆದು ಸಂಕಟವಾಯಿತು. ತಲೆ ತಗ್ಗಿಸಿ, ನಿಧಾನವಾಗಿ ನಡೆದು ಬರುತ್ತಿದ್ದ ಆ ನಾಶಿಪುಡಿ ಸಫಾರಿ ಸೂಟ್ ತೊಟ್ಟಿದ್ದ ಹಿರಿಯ ನನ್ನ ಮನಃಪಟಲದಲ್ಲಿ ಇನ್ನೂ ಇದ್ದಾರೆ. ಆದರೆ ಅವರಿನ್ನೂ ಭೌತಿಕವಾಗಿ ಇದ್ದಾರೆಯೋ ಇಲ್ಲವೋ ಗೊತ್ತಿಲ್ಲ.

ಇದೆಲ್ಲವೂ ಮರೆತುಹೋಗಿತ್ತು. ೨೦೧೨ ರಲ್ಲಿ ಧಾರವಾಡದಲ್ಲಿ ನಮ್ಮ SSLC ಬ್ಯಾಚಿನ ರಜತಮಹೋತ್ಸವ ಸಮಾರಂಭವಿತ್ತು. ನಮಗೆ ಬಾಲವಾಡಿಯಿಂದ ಹಿಡಿದು ಹತ್ತನೇಯ ತರಗತಿಯವರೆಗೆ ಪಾಠ ಮಾಡಿದ್ದ ಗುರುವೃಂದಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮ ಇತ್ತು. ಅದಕ್ಕಾಗಿ ಎಲ್ಲ ಶಿಕ್ಷಕ ಶಿಕ್ಷಕಿಯರನ್ನೂ ಆಮಂತ್ರಿಸಬೇಕು ಮತ್ತು ಎಲ್ಲರೂ ಬರುವಂತೆ ಮಾಡಬೇಕು ಅನ್ನುವದು ನಮ್ಮೆಲ್ಲರ ಮಹದಾಸೆ. ಸುಮಾರು ಜನ ಸಿಕ್ಕರು. ಎಲ್ಲೋ ಒಂದಿಷ್ಟು ಜನ ಶಿವನ ಪಾದ ಸೇರಿಕೊಂಡಿದ್ದರು. ಆದರೆ ಮಂಗೇಶಿ ಟೀಚರ್ ಮಾತ್ರ ಸಿಗಲಿಲ್ಲ. ಮತ್ತೆ ಅವರು ನಮ್ಮ ಶಾಲೆಯಲ್ಲಿಯೂ ನೌಕರಿ ಮಾಡಿಕೊಂಡಿರಲಿಲ್ಲ. ಇನ್ನೂ ರಿಟೈರ್ ಆಗುವ ವಯಸ್ಸೂ ಅವರದ್ದಲ್ಲ. ವಿಚಾರಣೆ ಮಾಡಿದಾಗ ತಿಳಿಯಿತು ಅವರು ಅವರಾಗಿಯೇ ನೌಕರಿ ಬಿಟ್ಟಿದ್ದಾರೆ ಎಂದು. ಅಷ್ಟೊಳ್ಳೆ ಸರ್ಕಾರಿ ನೌಕರಿಯೇಕೆ ಬಿಟ್ಟರು ಟೀಚರ್? ಉತ್ತರ ಸಿಗಲಿಲ್ಲ.

ಉತ್ತರ ಸಿಗಲಿಲ್ಲ ಮತ್ತು ಟೀಚರ್ ಕೂಡ ಸಿಗಲಿಲ್ಲ ಅಂದರೆ ಹಾಗೇ ಬಿಡಲಿಕ್ಕೆ ಆಗುತ್ತದೆಯೇ? ಅವರನ್ನು ಹುಡಕಲಿಕ್ಕೆ ಒಂದಿಬ್ಬರು ದೋಸ್ತರನ್ನು ನೇಮಕ ಮಾಡಿದೆ. ಅವರಲ್ಲೊಬ್ಬ ಆ ಟೀಚರನ್ನು ಎಲ್ಲೋ ಪೇಟೆಯಲ್ಲಿ ನೋಡಿದನಂತೆ. 'ಮಹೇಶಾ, ಅಚಾನಕ್ ಕಂಡ್ರು ಮಾರಾಯಾ. ಅವರೇ ಟೀಚರ್ ಅಂತ ನಂಬಾಕ ಆಗಲಿಲ್ಲ ದೋಸ್ತ. ಫುಲ್ ಬದಲಾಗಿಬಿಟ್ಟಾರ,' ಅಂತ ಈಗ ಮಂಗೇಶಿ ಟೀಚರ್ ಹೇಗಿದ್ದಾರೆ ಅಂತ ವರ್ಣಿಸಿದ. ಮಾನವ ದೇಹ ಅಂದ ಮೇಲೆ ಬದಲಾಗದೇ ಇದ್ದೀತೇ? ಅದನ್ನು ಅಷ್ಟು ಡೀಟೇಲ್ ಆಗಿ ವರ್ಣಿಸುವದೇನಿದೆಯೋ?

'ಮುಂದ? ಟೀಚರಿಗೆ ಸಮಾರಂಭಕ್ಕೆ ಬರಲಿಕ್ಕೆ ಹೇಳಿದಿಯೋ ಇಲ್ಲೋ?' ಅಂತ ಕೇಳಿದ್ದೆ.

'ಮಹೇಶಾ, ನಾ ಮೊದಲೇ ಎನ್ಕ್ವೈರಿ ಮಾಡಿಟ್ಟಿದ್ದೆ. ಆ ಟೀಚರ್ ಈಗ ನಮ್ಮ ಶಾಲೆಯ ಯಾವದೇ ಸಮಾರಂಭಕ್ಕೂ ಬರೋದಿಲ್ಲಂತೆ. ಒಟ್ಟೇ ಬರೋದಿಲ್ಲಂತೆ. ನೌಕರಿ ಕೂಡ ಬಿಟ್ಟಾರ. ಗೊತ್ತಿರಬೇಕಲ್ಲಾ?' ಅಂದ.

'ಯಾಕೋ? ನೌಕರಿ ಬಿಟ್ಟರು ಓಕೆ. ಸಮಾರಂಭಕ್ಕೆ ಬರಲಿಕ್ಕೆ ಏನಾಗ್ತದ? ಸರಿ. ನಿನಗ ಪ್ಯಾಟ್ಯಾಗ ಸಿಕ್ಕಾಗ ಅಂತೂ ಆಮಂತ್ರಣ ಕೊಡಲಿಲ್ಲ. ಅವರ ಮನೆ ಹುಡುಕಿರಿ. ಎಲ್ಲರಿಗೂ ಆಮಂತ್ರಣ ಕೊಡುವಾಗ ಅವರ ಮನೆಗೂ ಹೋಗಿ ಕೊಟ್ಟು ಬರೋಣ. ಓಕೆ?' ಅಂತ ಹೇಳಿದೆ. ಹೇಗಾದರೂ ಮಾಡಿ ಆದಷ್ಟೂ ಎಲ್ಲ ಶಿಕ್ಷಕ ಶಿಕ್ಷಕಿಯರನ್ನು ಕರೆಯಿಸಿಬಿಡುವ ಉಮೇದಿ ನನಗೆ. ಮತ್ತೆ ನೋಡುವ, ಭೇಟಿಯಾಗುವ ಅವಕಾಶ ಯಾವಾಗೋ?

'ಇಲ್ಲ ಮಹೇಶಾ. ನಾ ಹೇಳಾಕತ್ತೇನಿ ಸ್ವಲ್ಪ ಕೇಳು. ಅವರು ನಮ್ಮ ಶಾಲೆ ಜೊತೆ ಯಾವದೇ ತಾಲೂಕಾತ್ ಬ್ಯಾಡ ಅಂದುಬಿಟ್ಟಾರಂತ. ಮೊದಲೂ ಯಾರೋ ಬೇರೆಯವರು ಬೇರೆ ಬೇರೆ function ಗಳಿಗೆ ಕರಿಯಾಕ ಹೋಗಿದ್ದರಂತ. ಅವರು ಬರಂಗಿಲ್ಲ ಅಂತ ಕಡ್ಡಿ ಮುರಿದಾಂಗ ಹೇಳಿಬಿಟ್ಟಾರಂತ. ಹೀಂಗಿದ್ದಾಗ ಮತ್ತೆ ಮತ್ತೆ ಹೋಗಿ ಕರೆಯೋದು ಸರಿ ಆಗ್ತದೇನು? ಬ್ಯಾಡ ಬಿಡಪಾ. ಆರಾಮ ಇರ್ಲಿ. ಪಾಪ ಅವರ old mother ಅದಾರಂತ. ಅವರ ಸೇವಾ ಮಾಡಿಕೊಂಡು ಅದಾರಂತ ಟೀಚರ್. ಲಗ್ನ ಮಾಡಿಕೊಳ್ಳಲಿಲ್ಲ ಅಂತ ಅವರು,' ಅಂದುಬಿಟ್ಟ. ದೋಸ್ತನ ಮಾತಿನಲ್ಲಿ ವಿಷಾದವಿತ್ತು.

ಹೇಳುತ್ತಿರುವವ ಖಾಸ್ ದೋಸ್ತ. ನಂಬಲು ಕಷ್ಟ. ಆದರೆ ನಂಬದಿರಲು ಕಾರಣವೇ ಇಲ್ಲ. ಮತ್ತೇನು? ಪಾಪ ಮಂಗೇಶಿ ಟೀಚರ್ ಅವರದ್ದು ಏನು ಕತೆಯೋ? ಕತೆಯಂದಾಕ್ಷಣ ದುರಂತ ಕತೆಯೆಂದು ನಿರ್ಣಯಿಸಬೇಕು ಅಂತಿಲ್ಲ. ದೋಸ್ತ ಹೇಳಿದ್ದೆಲ್ಲ ನಿಜವಾಗಿದ್ದರೆ ಅವರು ತಮ್ಮ ವೃದ್ಧೆ ತಾಯಿಯ ಸೇವೆ ಮಾಡಿಕೊಂಡು ಆರಾಮಾಗಿಯೇ ಇದ್ದಿರಬಹುದು. ಆರಾಮಾಗೇ ಇರಲಿ.

ಪ್ರತಿ ವರ್ಷ ಇಲ್ಲಿ ಜುಲೈ ನಾಲ್ಕರಂದು ಅಮೇರಿಕನ್ ಸ್ವಾತಂತ್ರ್ಯ ದಿವಸ ಬಂದಾಗ ನನಗೆ ಇದೆಲ್ಲ ನೆನಪಾಗುತ್ತದೆ. ಅಮೇರಿಕನ್ ಕ್ರಾಂತಿಯ ಬಗ್ಗೆ ಪ್ರಶ್ನೆ ಕೇಳಿದರೆ ಫ್ರೆಂಚ್ ಕ್ರಾಂತಿಯ ಬಗ್ಗೆ ಉತ್ತರ ಬರೆದು ಬಂದಿದ್ದು ಒಂದು ಒಳ್ಳೆ ಪಾಠವನ್ನು ಕಲಿಸಿತ್ತು. ಎರಡು ಬಾರಿ ಪ್ರಶ್ನೆ ಓದಿಕೊಂಡು ಒಂದೇ ಬಾರಿ ಉತ್ತರ, ಅದೂ ಸರಿಯುತ್ತರ, ಬರೆಯಬೇಕು ಅನ್ನುವ ಪಾಠ. ಅದಕ್ಕೆ ಋಣಿ. ಆ ನನ್ನ ಭಾನಗಡಿ ಕಾರಣದಿಂದಾದರೂ ಸದಾ ಗಂಭೀರವದನೆಯಾಗಿರುತ್ತಿದ್ದ ಮಂಗೇಶಿ ಟೀಚರ್ ಟೀನೇಜ್ ಹುಡುಗಿಯಂತೆ ಕಿಸಿಕಿಸಿ ನಕ್ಕಿದ್ದರು. ಒಂದು ತರಹದ ರೂಪಸಿಯಾಗಿದ್ದ ಅವರು ನಕ್ಕಾಗ ತುಂಬಾ ಚೆನ್ನಾಗಿ ಕಾಣುತ್ತಿದ್ದರು despite ಅವರ oversize ಒಸಡುಗಳು. ಇರಲಿ. ಶಿಕ್ಷಕ ಶಿಕ್ಷಕಿಯರ ತಲೆ ಮತ್ತು ಅದರೊಳಗಿನ ಜ್ಞಾನ ನೋಡಬೇಕೇ ವಿನಃ ರೂಪವನ್ನಲ್ಲ. ಆದರೂ easy on the eyes ಇದ್ದವರ ಮೇಲೆ ಜಾಸ್ತಿಯೇ ಭಕ್ತಿ, ಗೌರವ. ಅದು ಮಾನವ ಸಹಜ ಸ್ವಭಾವ.

ಹಾಂ! ಆಗಿನ ಕಾಲದಲ್ಲಿ ನಿಡವ್ಯಾನಿಗೊಬ್ಬಳು ಗರ್ಲ್ ಫ್ರೆಂಡ್ ಇದ್ದಳು ಅಂದೆನಲ್ಲ. ಯಾರಾಗಿದ್ದಳು ಅವಳು? ನನಗಂತೂ ಗೊತ್ತಿರಲಿಲ್ಲ. ಈಗೂ ಗೊತ್ತಿಲ್ಲ. ಮೊನ್ನಿತ್ತಲಾಗೆ ಯಾವಾಗಲೋ ದೋಸ್ತರ ಹತ್ತಿರ ನಿಡವ್ಯಾನ ಶಾಲೆ ಕಾಲದ ಮಾಲಿನ ವಿಷಯ ತೆಗೆದು, 'ಲೇ, ಆ ನಿಡವ್ಯಾಗ ಒಂದು ಮಾಲಿತ್ತಂತ. ಯಾರಲೇ ಅಕಿ?' ಅಂತ ಕೇಳಿದರೆ ದೋಸ್ತರು ಏನು ಹೇಳಬೇಕು? 'ಹೂಂನಪಾ. ಇದ್ದಳು. ಈಗ ಎಲ್ಲಿದ್ದಾಳ ಅದೆಲ್ಲಾ ಗೊತ್ತಿಲ್ಲ. ಆವಾಗ ಮಾತ್ರ ಇದ್ದಿದ್ದು ಖರೆ. ಸತ್ತಾ ನಿಡವ್ಯಾ. ಪಾಪ,' ಅಂದರು. 'ಯಾರಲೇ ಅಕಿ? ಯಾರ ಪೈಕಿ?' ಅಂತ ಕೇಳಿದರೆ ಉತ್ತರ ಮತ್ತೂ ಖತರ್ನಾಕ್. 'ಆವಾ ಇದ್ದನಲ್ಲೋ. ಆವಾ. ಅವನೇ. ಅವನ ಮೊಮ್ಮಗಳು. ಅಕಿನೇ ನಿಡವ್ಯಾನ ಮಾಲು,' ಅನ್ನುತ್ತ ತೀರ್ಥದ ಗ್ಲಾಸ್ ಎತ್ತಿದರು. ನಶೆ ಏರುವ ಸಮಯ. ಮಾತು ತೊದಲುವ ಸಮಯ. 'ಏ, ನಿಮ್ಮ! ಸರಿಯಾಗಿ ಹೇಳ್ರಿಲೇ. ಆವಾ. ಅವನ ಮೊಮ್ಮಗಳು ಅನ್ಕೋತ್ತ. ಏನಂತ ತಿಳ್ಕೋಬೇಕು?' ಅಂತ ಸಣ್ಣಗೆ ಆಕ್ಷೇಪಿಸಿದೆ. 'ಅವನನೋ. ಅವನೇ. ಮುದುಕರ ಒಲಂಪಿಕ್ಕಿನಲ್ಲಿ ಗೋಲ್ಡ್ ಮೆಡಲ್ ಹೊಡಕೊಂಡು ಬಂದಿದ್ದ ನೋಡು. ಆ ಅಜ್ಜನ ಮೊಮ್ಮಗಳು ನಿಡವ್ಯಾನ ಮಾಲಾಗಿದ್ದಳು. ಮುದುಕರ ಒಲಂಪಿಕ್ಕಿನ್ಯಾಗ ಮಸ್ತ ರನ್ನಿಂಗ್ ಮಾಡಿ ಗೋಲ್ಡ್ ಮೆಡಲ್ ಹೊಡಕೊಂಡು ಬಂದಿದ್ದ ಅಕಿ ಅಜ್ಜಾ. ಮೊಮ್ಮಗಳು ನೋಡಿದ್ರ ಹುಚ್ಚ ನಿಡವ್ಯಾನ ಹಿಂದ ಒಲಂಪಿಕ್ಕಿನ್ಯಾಗ ಓಡಿದಾಂಗ ಓಡ್ಲಿಕತ್ತಿದ್ದಳು ನೋಡಪಾ,' ಅಂದುಬಿಟ್ಟರು.

ಅದು ಯಾವ ಅಜ್ಜನೋ, ಅದ್ಯಾವ ಮುದುಕರ ಒಲಂಪಿಕ್ಕಿನಲ್ಲಿ ಓಡಿ ಯಾವಾಗ ಪದಕ ಗೆದ್ದುಕೊಂಡು ಬಂದಿದ್ದನೋ, ಯಾರು ಅವನ ಮೊಮ್ಮಗಳೋ, ಅವಳೇ ನಿಡವ್ಯಾನಿಗೆ ಗಂಟು ಬಿದ್ದಳೋ ಅಥವಾ ನಿಡವ್ಯಾನೇ ಆಕೆಗೆ ಕಾಳು ಹಾಕಿದ್ದಕ್ಕೆ ಇವಳು ಗುಟುರ್ ಗುಟುರ್ ಅಂದಳೋ ಗೊತ್ತಿಲ್ಲ. ನಿಡವ್ಯಾನ ಅಕಾಲಿಕ ಮರಣದಿಂದ, ನುಚ್ಚುನೂರಾಗಿಹೋದ ಬೇಬಿ ಲವ್ ನೆನೆದು ಅದೆಷ್ಟು ನೋವುಂಡಿತ್ತೋ ಆ ಬಾಲ ಹೃದಯ? ಪಾಪ.

ನೆನಪುಗಳೇ ಹೀಗೆ. ಎಲ್ಲೋ ಶುರುವಾಗಿ ಎಲ್ಲೋ ಅಂತ್ಯವಾಗುತ್ತವೆ.

ಅಮೇರಿಕಾದ ಸ್ವಾತಂತ್ರ್ಯ ದಿವಸ ಜುಲೈ ನಾಲ್ಕರಂದೇ ಇಷ್ಟು ಬರೆದು ಮುಗಿಸೋಣ ಅಂತ ಕೂತೆ. ಮುಗಿಸಿದ್ದು ಒಂದು ತಿಂಗಳ ನಂತರ. ಆಗಸ್ಟ್ ಐದರಂದು.